ಪ್ರಾಣಿ ಜಾನಪದದ ಮೊದಲ ಹಂತ ಬೇಟೆ ಸಂಸ್ಕೃತಿ. ಅದರ ಎರಡನೆ ಹಂತವೇ ಪಶುಪಾಲಕ ಸಂಸ್ಕೃತಿ. ಮುಂದಿನ ಮೂರನೆ ಹಂತ ಕೃಷಿ ಸಂಸ್ಕೃತಿ. ಈ ಮೂರೂ ಹಂತಗಳಲ್ಲಿ ಜೀವಜಾಲದ ಮಾನವರ ಸಂಬಂಧ ನಿಸರ್ಗದಲ್ಲಿ ವಿಶೇಷವಾಗಿ ಬೆಳೆದಿದೆ. ಪ್ರಾಣಿಗಳನ್ನು ಉಗ್ರಮಾಗಿ ಬೇಟೆ ಆಡುವ ಸ್ವಭಾವ ತಣಿಯುತ್ತಿದ್ದಂತೆ ಮಾನವರ ವಿವೇಕವು ರೂಪಾಂತರ ಹೊಂದಿದೆ. ಬರ್ಬರ ಬದುಕು ನಿಸರ್ಗದಲ್ಲಿ ಬಹಳ ಕಾಲ ತಮ್ಮನ್ನು ಉಳಿಸಲಾರದು ಎಂದು ಮನವರಿಕೆ ಆಗುತ್ತಿದ್ದಂತೆ ಜೀವಜಾಲದ ಜೊತೆ ಅಸ್ತಿತ್ವದ ಸ್ನೇಹವನ್ನು ಸಾಧಿಸಲು ಮನುಷ್ಯ ತೀರ್ಮಾನಿಸಿದ್ದಾನೆ. ಆಹಾರಕ್ಕಾಗಿ ಬೇಟೆ ಆಡುತ್ತಿದ್ದರೆ ಉಳಿದ ಸಮಯದಲ್ಲಿ ಏನು ಮಾಡುವುದು ಮತ್ತು ಎಲ್ಲ ಕಾಲದಲ್ಲೂ ರಕ್ಷಣೆಯ ತಂತ್ರಗಳನ್ನು ಹೇಗೆ ಕಾಯ್ದುಕೊಳ್ಳುವುದು ಎಂಬ ನೈಸರ್ಗಿಕ ಸವಾಲುಗಳು ಎದುರಾಗಿವೆ. ಈ ಸ್ಥಿತಿಯಲ್ಲಿ ಪ್ರಾಣಿಗಳನ್ನು ಪಳಗಿಸಿ ಅವುಗಳನ್ನು ಬೆಳೆಸಿ ತಾನೂ ಉಳಿಯುವ ಸಾಮರ್ಥ್ಯವನ್ನು ಮನುಷ್ಯ ರೂಪಿಸಿಕೊಂಡಿದ್ದಾನೆ. ಇದಕ್ಕೆ ತಕ್ಕ ಭೌಗೋಳಿಕ ಅವಕಾಶವಿರಬೇಕಾದುದೂ ಕೂಡಾ ಮನುಷ್ಯರ ವಿವೇಚನೆಗಿಂತಲೂ ಮುಖ್ಯ. ವಿವೇಚನೆ ಮತ್ತು ನಿಸರ್ಗಗಳೆರಡೂ ಸೂಕ್ತ ಜೈವಿಕ ಅವಕಾಶವನ್ನು ಹೊಂದಾಣಿಕೆಯಲ್ಲಿ ಹೊಂದಿಸಿಕೊಂಡಾಗ ಬದುಕುಳಿಯುವ ವಿಧಾನಗಳು ತೆರೆದುಕೊಳ್ಳುತ್ತವೆ. ಪಶುಪಾಲಕ ಸಂಸ್ಕೃತಿಯು ಪ್ರಾಣಿಗಳ ಜೊತೆಗೆ ಇಂತಹ ಸಾಧ್ಯತೆಗಳನ್ನು ಕಂಡುಕೊಳ್ಳುವ ಮೂಲಕ ತನ್ನದೇ ಅಸ್ತಿತ್ವವನ್ನು ರೂಪಿಸಿಕೊಂಡಿದೆ.

ಹಂಪಿ ಪರಿಸರದ ಪಶುಪಾಲಕ ಸಮುದಾಯಗಳಲ್ಲಿ ಒಂದು ವಿಶೆಷ ಉಂಟಾಗಿದೆ. ಬೇಡ ಸಮುದಾಯ ಪಶುಪಾಲಕ ಸಮುದಾಯವಾಗಿ ರೂಪಾಂತರಗೊಂಡರೂ ಅದು ಪೂರ್ಣಪ್ರಮಾಣದ ಪಶುಪಾಲಕ ಸಮುದಾಯವೂ ಆಗದೆ ಅತ್ತ ಪೂರ್ಣಪ್ರಮಾಣದ ವಕ್ಕಲು ಸಮುದಾಯವೂ ಆಗದೆ ಈ ಎರಡೂ ಜೀವನ ಕ್ರಮಗಳನ್ನು ಉಳಿಸಿಕೊಂಡು ವಿಜಯನಗರ ಸಾಮ್ರಾಜ್ಯದ ನಗರೀಕರಣ ಪ್ರಕ್ರಿಯೆಗೆ ಸಿಲುಕಿ ಅದು ಸೈನಿಕ ಸಮುದಾಯವೂ ಆಗಿ ಪ್ರಭುತ್ವದ ಸೇವಕ ಸಮಾಜವೂ ಆಗುವ ವಿಪರ್ಯಾಸಗಳಿಗೆ ಒಳಗಾಗಿದೆ. ಆದಿವಾಸಿ ಬುಡಕಟ್ಟುಗಳು ಸಹ ಈ ಬಗೆಯ ಇಕ್ಕಟ್ಟುಗಳನ್ನು ಭಾರತದ ಉದ್ದಕ್ಕೂ ಸಾಮ್ರಾಜ್ಯಗಳು ದಾಳಿ ಮಾಡಿದಲ್ಲೆಲ್ಲ ಅನುಭವಿಸಿವೆ. ಹಂಪಿ ಪರಿಸರದ ಬೇಡ ಸಮುದಾಯ ವಿಜಯನಗರ ಸಾಮ್ರಾಜ್ಯದ ನಂತರ ಭೂಮಾಲೀಕ ಸಮುದಾಯವಾಗಿ ವ್ಯಾಪಿಸುವಲ್ಲೂ ವಿಫಲವಾಯಿತು. ವಕ್ಕಲುತನದಲ್ಲಿಯೂ ಅದು ಮುಂದೆ ಬರಲಾಗಲಿಲ್ಲ. ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಹಂಪಿ ಪರಿಸರದಲ್ಲಿ ಪಡೆದಿದ್ದ ಕೃಷಿ ಭೂಮಿಯನ್ನು ಕೂಡ ಅದು ಉಳಿಸಿಕೊಳ್ಳಲು ಆಗಿರಲಿಲ್ಲ. ಜೀವಜಾಲದ ಭಾಗವಾಗಿದ್ದ ಸಮುದಾಯಗಳು ನಿಸರ್ಗದ ಹೊಂದಾಣಿಕೆಗೆ ಬದ್ಧವಾಗುತ್ತಿದ್ದಂತೆಯೇ ಸಾಮ್ರಾಜ್ಯದ ಅಂಕುಷಕ್ಕೂ ಒಳಗಾಗಬೇಕಾಯಿತು. ಸಹಜವಾಗಿದ್ದ ಜೀವಜಾಲದ ಸಂಬಂಧಗಳಲ್ಲಿ ವ್ಯತ್ಯಯ ಉಂಟಾಗಿ ಜೀವಜಾಲದ ವಿರುದ್ಧವಾಗಿಯೇ ಪ್ರಾಣಿಪಕ್ಷಿಗಳ ಮೇಲೆಯೆ ಕ್ರೂರವಾಗಿ ವರ್ತಿಸುವಂತೆ ಇಕ್ಕಟ್ಟನ್ನು ಸೃಷ್ಟಿಸಿತು. ಇದು ಸಹಜ ಬೇಟೆಯ ಕ್ರಮಕ್ಕೆ ವಿರುದ್ದವಾದುದಾಗಿತ್ತು. ಸಾಮ್ರಾಜ್ಯ ಪತನವಾಗಿ ಎಷ್ಟೋ ನೂರು ವರ್ಷಗಳು ಉರುಳಿದ ಮೇಲಾದರೂ ಅದು ತನಗೆ ಬೇಕೆನಿಸುವಷ್ಟು ಭೂಮಿಯನ್ನೂ ಪಡೆದುಕೊಳ್ಳಲಿಲ್ಲ. ಬೇಕಾಬಿಟ್ಟಿಯಾಗಿ ಬಿದ್ದಿದ್ದ ಹಂಪಿಯ ಫಲವತ್ತು ಭೂಮಿಯೆಲ್ಲವೂ ಪರರ ಪಾಲಾಯಿತು. ಒಂದು ಕಾಲಕ್ಕೆ ಪಶುಪಾಲದ ಸಮಾಜವಾಗಿ ವ್ಯಾಪಿಸಿದ್ದವರಲ್ಲಿ ಬೇಡ ಗೊಲ್ಲ ಸಮಾಜದವರೂ ಕೂಡ ಪ್ರಮುಖರಾಗಿದ್ದರು. ಕುರುಬರು ಮಾತ್ರ ತಮ್ಮ ಪ್ರಾಣಿಗಳ ಜೊತೆ ಭೂಮಿಯನ್ನೂ ಉಳಿಸಿಕೊಂಡರು. ಮೇಕೆ ಕುರು ದನಗಳನ್ನು ಕಡಿಮೆ ಪ್ರಮಾಣದಲ್ಲಿ ಸಾಕಿಕೊಂಡ ವ್ಯಾಸಬೇಡರು ಪಶುಪಾಲಕ ವೃತ್ತಿಯನ್ನು ವಕ್ಕಲುತನದ ಜೊತೆ ವಿಸ್ತರಿಸಿಕೊಳ್ಳಲು ಮುಂದಾಗಲೇ ಇಲ್ಲ. ಇದರ ಛಿದ್ರ ರೂಪಕಗಳು ಅವರ ಜೀವಜಾಲ ಜಾನಪದದಲ್ಲಿ ಅಸ್ಪಷ್ಟವಾಗಿ ವ್ಯಕ್ತವಾಗುತ್ತವೆ. ಸೈನಿಕರಂತೆ ಮುಗ್ಧ ಪ್ರಾಣಿಗಳ ಮೇಲೆ ಯುಗಾದಿ ಹಬ್ಬದ ಪ್ರಯುಕ್ತ ನಡೆಸುವ ಸಾಂಪ್ರದಾಯಿಕ ಬೇಟೆಯ ಆಚರಣೆ ಜೀವಜಾಲವನ್ನು ಕ್ರೂರವಾಗಿ ಕಾಣುವಂತೆ ಮಾಡಿದೆ.

ಹೀಗಾಗಿ ಪಶುಪಾಲದ ಬದುಕಿನ ಹಳೆಯ ನಂಬಿಕೆಗಳಲ್ಲೇ ಬೇಟೆ ಸಂಸ್ಕೃತಿಯ ಕ್ರಮಗಳನ್ನು ಉಳಿಸಿಕೊಳ್ಳಬೇಕಾಯಿತು. ಗತಕಾಲದ ಬೇಟೆ ಸಂಸ್ಕೃತಿಯ ಆಚರಣೆಗಳು ಈಗಲೂ ಬೇಡರಲ್ಲಿ ಉಳಿದುಕೊಂಡಿವೆ. ಪ್ರಾಣಿಗಳನ್ನು ಈ ಕಾಲದಲ್ಲಿ ಅವಲಂಬಿಸಿಯೆ ಬದುಕಬೇಕಾಗಿಲ್ಲವಾದರೂ ಬೇಡರು ಜೈವಿಕ ಆಹಾರ ಪರಂಪರೆಯ ಬೇರುಗಳನ್ನು ಅಷ್ಟು ಸುಲಭವಾಗಿ ತುಂಡರಿಸಿಕೊಳ್ಳಲಾರರು. ಹಂಪಿಯಲ್ಲೀಗ ಕಾಡು ಇಲ್ಲದಿದ್ದರೂ ಕಾಡಿನಲ್ಲು ಬದುಕಿದ್ದ ಬೇಡರ ಸ್ಮೃತಿಗಳು ಜೀವಂತವಾಗಿವೆ. ಪಶುಪಾಲಕ ನಂಬಿಕೆಗಳೂ ಬದುಕಿನ ಭಾಗವಾಗಿ ಮುಂದುವರಿದಿವೆ. ಅಲೆಮಾರಿ ಕುರುಬರು ತಮ್ಮ ಕುರಿಮಂದೆಗಳ ಜೊತೆ ಬದುಕುವ ಪರಿಯು ಬೇಟೆಯ ನೆನಪುಗಳಿಗಿಂತ ಭಿನ್ನವಾದದ್ದು. ಕುರುಬರ ಭೌಗೋಳಿಕ ನೆಲೆಗಳ ಜಾಡು ಪಶುಪಾಲನೆಯ ಜೊತೆ ಎಂದಿನಂತೆಯೇ ಸಾಗಿದೆ. ಬೇಡರ ಮತ್ತು ಕುರುಬರ ಹಾಗು ಗೊಲ್ಲರ ಪಶುಪಾಲಕ ನಂಬಿಕೆಗಳಲ್ಲು ವೈವಿಧ್ಯತೆ ಇದೆ. ಹಾಗೆಯೇ ಉಳಿದಂತೆ ಕರಕುಶಲ ಸಮುದಾಯಗಳ ಪ್ರಾಣಿ ಜಾನಪದವು ಭಿನ್ನವಾಗಿದೆ. ಇವರೆಲ್ಲರಿಗಿಂತಲೂ ಹೊಲೆಯರ ಮಾದಿಗರ ಪ್ರಾಣಿ ಸಂಬಂಧ ಹೊರತಾದುದು. ಸತ್ತ ಪ್ರಾಣಿಗಳನ್ನು ಹೊಲೆಮಾದಿಗರು ಸಂಸ್ಕಾರ ಮಾಡುವರು. ಅವುಗಳನ್ನು ಆಹಾರವಾಗಿಯೂ ಬಳಸುವರು. ಸತ್ತ ಪ್ರಾಣಿಗಳನ್ನು ಅವರು ತಿನ್ನಬಹುದು ಎಂಬ ಪರವಾನಗಿಯನ್ನೂ ಕೂಡ ಮೇಲು ಸಮಾಜ ನೀಡಿದೆ. ವೈದಿಕರಿಗೆ ಆಕಳು ಪವಿತ್ರ ಗೋಮಾತೆ. ಲಿಂಗಾಯಿತರು ಬಸವಣ್ಣನನ್ನು ಎತ್ತಿನ ಸಂಕೇತದಲ್ಲಿ ಪೂಜಿಸುವರು.

ಹಂಪಿ ಪರಿಸರದಲ್ಲಿ ಪಶುಪಾಲಕ ಸಮುದಾಯಗಳ ಪ್ರಾರಂಬಿಕ ಚಹರೆಗಳು ರೂಪುಗೊಂಡದ್ದರಿಂದ ಇಲ್ಲಿನ ಸಮುದಾಯಗಳ ಬದುಕಿನಲ್ಲಿ ಗತಕಾಲದ ಆ ಎಲ್ಲ ಸಂವೇದನೆಗಳು ರೂಪಾಂತರ ಪ್ರಕ್ರಿಯೆಗಳಲ್ಲಿ ಪ್ರತಿಫಲಿಸುತ್ತಲೆ ಇರುತ್ತವೆ. ಪ್ರಾಣಿಗಳ ಜೊತೆಗಿನ ಬದುಕನ್ನು ರೂಡಿಸಿಕೊಂಡವರು ನಿಜವಾದ ಪರಿಸರವಾದಿಗಳೇ ಇರಬೇಕು. ಪರಿಸರದ ಬಗ್ಗೆ ದೊಡ್ಡ ಮಾತನಾಡುವವರು ನಿಸರ್ಗದ ಬೇರುಗಳನ್ನೆ ಕಡಿದು ಕೊಂಡಿರುತ್ತಾರೆ. ಆದಿಮ ಸಮಾಜಗಳು ಒಂದೆಡೆ ಕಾಡಿನಲ್ಲೇ ನಿಂತುಬಿಟ್ಟಂತವು ಈಗಲೂ ಉಳಿದಿವೆ. ಅವುಗಳು ಪಶುಪಾಲಕ ಹಂತಕ್ಕೂ ಬರದೆ ಬೇಟೆಯನ್ನೂ ಮುಂದುವರಿಸದೆ ಸಹಜವಾಗಿ ಕಾಡಿನ ನಿಗೂಢಗಳನ್ನು ಅರಿತು ಬದುಕುಳಿಯುವ ಬಹುರೂಪಿ ಜೈವಿಕ ತಂತ್ರಗಳನ್ನು ಕಂಡುಕೊಂಡವು. ಹಂಪಿ ಪರಿಸರವು ಒಂದು ಕಾಲಕ್ಕೆ ಇಡಿಯಾಗಿ ಇಂತಹ ಸ್ವಭಾವದ ಆದಿವಾಸಿಗಳ ನೆಲೆಯೇ ಆಗಿದ್ದರೂ ರೂಪಾಂತರಗೊಳ್ಳುತ್ತಾ ಬಂದಂತೆ ಕೆಲವು ಆದಿವಾಸಿಗಳು ಬಹುದೂರದ ಕಾಡಿಗೆ ವಲಸೆ ಹೋಗಿವೆ. ಬೇಡರ ಸಹೋದರ ಸಂಬಂಧಿ ಆದಿವಾಸಿಗರು ದಕ್ಷಿಣ ಭಾರತದ ಉದ್ದಕ್ಕೂ ಇರುವ ಕಾಡುಗಳಲ್ಲಿ ಸಿಗಬಲ್ಲರು. ಇದನ್ನೆಲ್ಲ ಯಾಕೆ ಇಲ್ಲಿ ಪ್ರಸ್ತಾಪಿಸಬೇಕಾಯಿತೆಂದರೆ, ಹಂಪಿಯ ಜೀವಜಾಲದ ಪ್ರಾಣಿ ಜಾನಪದದ ಸಂಬಂಧವೂ ಆಷ್ಟೇ ವ್ಯಾಪಕವಾಗಿವೆ ಎಂಬ ಕಾರಣಕ್ಕಾಗಿ. ಕುರುಬ ಸಮುದಾಯವು ವಕ್ಕಲುತನವನ್ನು ರೂಢಿಸಿಕೊಂಡು ಅದು ಪ್ರಾಣಿಪಕ್ಷಿಗಳ ನೇರ ಸಂಬಂಧದಿಂದ ಹಿಂದಕ್ಕೆ ಸರಿಯಿತು. ಹೀಗಾಗಿಯೇ ಹಂಪಿಯ ಪ್ರಾಣಿ ಜಾನಪದದ ವಿವರಗಳಲ್ಲಿ ಅವರ ಗೈರುಹಾಜರಿಯು ಎದ್ದು ಕಾಣುವುದು.

ಆದರೆ ಹಂದಿಜೋಗಿಗಳು, ಕೊರಚರು ಹಂದಿ ಸಾಕಾಣಿಕೆಯ ಜೊತೆ ಪಶುಪಾಲಕ ವೃತ್ತಿಯ ಆಚೆಯೆ ಬದುಕಬೇಕಾದ ಪ್ರಮೇಯ ಎದುರಾಯಿತು. ಅತ್ಯಂತ ಕೀಳು ಪ್ರಾಣಿ ಎಂಬ ಕಾರಣಕ್ಕೆ ಅದನ್ನು ಸಾಕುವವರು ಕೂಡ ಕೀಳಾಗಬೇಕಾಯಿತು. ವಿಜಯನಗರ ಸಾಮ್ರಾಜ್ಯದ ರಾಜಲಾಂಛನವಾಗಿ ಹೇಗೆ ಇದು ಸ್ವೀಕಾರವಾಯಿತೊ ಎಂಬ ಅಚ್ಚರಿ ಸಹಜ. ವಿಷ್ಣುವಿನ ಹತ್ತು ಅವತಾರಗಳಲ್ಲಿ ವರಾಹ ಅವತಾರವೂ ಒಂದಲ್ಲವೇ! ಇದರ ಪ್ರಭಾವದಿಂದ ಹಂದಿಗಳಿಗೆ ಮಾನ್ಯತೆ ಸಿಕ್ಕರೂ ಅವನ್ನು ಸಾಕುವವರಿಗೆ ಗೌರವ ಸಿಗಲಿಲ್ಲ. ಪಶುಪಾಲಕರ ಸಂದರ್ಭದಲ್ಲಿ ಪ್ರಾಣಿಗಳ ಅವಿನಾಭಾವ ಒಂದು ಬಗೆಯಿದ್ದರೆ ಧಾರ್ಮಿಕವಾಗಿಯೂ ಪ್ರಾಣಿ ಪಕ್ಷಿಗಳು ದೈವಿಕವಾದ ಅವತಾರಗಳಲ್ಲಿ ಕಾಣಿಸಿಕೊಂಡಿವೆ. ವರಾಹ ಅವತಾರ, ಕೂರ್ಮಾವತಾರ, ನರಸಿಂಹಾವತಾರ, ಮತ್ಸ್ಯವತಾರಗಳು ಮಾನವರ ವಿಕಾಸದ ಪ್ರಾಣಿ ಸಂಬಂಧವನ್ನು ಅತಿಮಾನುಷವಾಗಿ ಹೇಳುತ್ತವೆ. ಇಂತಹ ಅವತಾರಗಳ ನಂತರವೇ ವಾಮನ ಅವತಾರ ಅಂದರೆ ಕುಬ್ಜಮಾನವಾಕೃತಿಗೆ ಬಂದು ನಂತರ ಪುರುಷೋತ್ತಮ ಶ್ರೀರಾಮನಾಗಿ ಅವತರಿಸುವುದು. ಈ ಪರಿಯು ವಿಕಾಸವನ್ನು ಭಾವಿಸುವ ಭಾವನಾತ್ಮಕ ಸರಪಳಿಯಂತಿದ್ದರೂ ಹನುಮಂತನ ಅವತಾರ ಮಾತ್ರ ವಿಶಿಷ್ಟವಾಗಿದೆ. ಜಾಂಬುವಂತ ವಾಲಿ ಸುಗ್ರೀವರ ರೂಪಗಳು ಅರೆ ಮಾನವ ಅರೆ ಪಶುಸ್ಥಿತಿಯವು. ಹಂಪಿಯ ಸ್ಮಾರಕಗಳಲ್ಲಿ ವಿಷ್ಣುವಿನ ಅವತಾರಗಳು ವಿಫುಲವಾಗಿ ಕೆತ್ತಲ್ಪಟ್ಟಿವೆ. ಜನಪದರು ಕೂಡ ಈ ಅವತಾರಗಳನ್ನು ಕೇವಲ ಪ್ರಾಣಿಯಾಗಿ ನೋಡದೆ ದೈವಿಕವಾಗಿ ಪೂಜಿಸುವುದಿದೆ.

ಇನ್ನು ಅತಿಮಾನುಷ ಕಲ್ಪನೆಯಲ್ಲಿ ಮನುಷ್ಯ ಯಾವುದೇ ಪ್ರಾಣಿಯ ರೂಪ ಧರಿಸಬಲ್ಲ. ರಾಕ್ಷಸನಾಗಿ ಎಲ್ಲ ಬಗೆಯ ಜೀವಿಯ ಆಕೃತಿಗೆ ತನ್ನನ್ನು ರೂಪಾಂತರಿಸಿಕೊಳ್ಳಬಲ್ಲ. ಹೀಗೆ ಪ್ರಾಣಿ ಪಕ್ಷಿಗಳ ರೂಪಧರಿಸುವ ಸ್ವಭಾವ ಯಾಕೆ ಹೇಗೆ ಎಲ್ಲಿಂದ ಬಂತು? ಬೇಟೆ ಯುಗದ ಮಾಂತ್ರಿಕ ಆಚರಣೆಗಳಲ್ಲಿ ಮನುಷ್ಯ ತಾನೇ ಪ್ರಾಣಿಯ ವೇಷ ಧರಿಸಿ ಪ್ರಾಣಿಯಂತೆಯೆ ವರ್ತಿಸುತ್ತಿದ್ದ. ಬೇಟೆಯ ಮಾಂತ್ರಿಕ ಕ್ರೀಡೆ ಆದ ಮೇಲೆಯೆ ಬೇಟೆಗೆ ಹೋಗಬೇಕಿತ್ತು. ಬೇಟೆ ಸಂಸ್ಕೃತಿಯ ಆದಿಮ ಹಂತದ ಈ ಬೆಳವಣಿಗೆ ಹಂಪಿಯಲ್ಲು ಇತ್ತು ಎಂಬುದಕ್ಕೆ ಆದಿ ಹಂಪಿಯ ಮಾನವ ವಸತಿ ನೆಲೆಯ ಹಿನ್ನೆಲೆಯಲ್ಲಿ ಅನೇಕ ಆಧಾರಗಳು ದೊರೆಯುತ್ತವೆ. ಜಗತ್ತಿನ ಎಲ್ಲ ಬೇಟೆ ಸಂಸ್ಕೃತಿಗಳ ಪ್ರಾಥಮಿಕ ಆಚರಣೆಗಳಲ್ಲು  ಕೆಲವಾರು ಸಾಮ್ಯತೆಗಳಿರುವಂತೆ ಹಂಪಿಯ ಪ್ರಾಣಿ ಜಾನಪದದ ಸಂಬಂಧಗಳಲ್ಲೂ ಕಂಡುಬರುತ್ತವೆ. ಮಾಂತ್ರಿಕ ವಿಧಿ ವಿಧಾನಗಳು ಪ್ರಾಣಿಗಳಲ್ಲಿ ಅತಿಮಾನುಷ ಶಕ್ತಿ ಇದೆ ಎಂದು ನಂಬಿದ್ದವು. ದುಷ್ಟ ಶಕ್ತಿ ಕೂಡ ಅವುಗಳಲ್ಲಿ ಕೂಡಿರುತ್ತದೆ ಎಂಬ ಕಲ್ಪನೆ ಬಲವಾಗಿತ್ತು. ಮಂತ್ರವಿಧಿಗಳಿಂದಲೇ ಪ್ರಾಣಿಗಳನ್ನು ಪಳಗಿಸುವ ನಿಯಂತ್ರಿಸುವ ಯತ್ನ ಬೇಟೆ ಸಂಸ್ಕೃತಿಯ ಇಕ್ಕಟ್ಟಿನ ಕಾಲದಲ್ಲಿತ್ತು. ಮಂತ್ರಕ್ಕೆ ಪ್ರಾಣಿಗಳು ಮಣಿಯಲಾರವು ಎಂದು ತಿಳಿದಂತೆಲ್ಲ ಅವುಗಳ ಜೊತೆ ಬೇರೆ ಒಪ್ಪಂದವಾಗಿ ತನ್ನ ಮೈ ಮೇಲೆಯೇ ಆ ಪ್ರಾಣಿಯನ್ನು ಆವಾಹಿಸಿಕೊಳ್ಳುವ ಗುಣ ಬೆಳೆದಿದೆ. ಅದು ಮುಂದುವರಿದು ಪ್ರಾಣಿ ಕುಲಕ್ಕೆ ದಾರಿ ಮಾಡಿದೆ. ಕೋಣವನ್ನು ಕುಲವಾಗಿಸಿಕೊಂಡ ಅನೇಕ ಬುಡಕಟ್ಟುಗಳು ಈಗಲೂ ಇವೆ. ಕ್ರೂರ ಪ್ರಾಣಿಗಳನ್ನು ಸಹ ಕುಲಚಿಹ್ನೆಯಾಗಿಸಿಕೊಂಡಿರುವ ಸಂದರ್ಭಗಳಿವೆ. ನಾಗರಹಾವು ಕೂಡ ಕುಲುಚಿಹ್ನೆ. ಮಾಂತ್ರಿಕ ವಿಧಿಗಳಲ್ಲೆಲ್ಲ ಪ್ರಾಣಿಗಳ ಪಾತ್ರವಿರುವುದನ್ನು ಗಮನಿಸಬೇಕು. ಪ್ರಾಣಿಯನ್ನೆ ದೈವವಾಗಿಸಿ ಕೊಂಡಂತಹವು ಪಶುಪಾಲಕ ಸಂಸ್ಕೃತಿಗೆ ದಾರಿ ತೋರಿವೆ. ಪ್ರಾಣಿಗಳು ತಮ್ಮ ಅನಿವಾರ್ಯ ಸಂಬಂಧಿಗಳು ಎಂಬ ಪ್ರಜ್ಞೆಯು ವಿಕಾಸಗೊಂಡಂತೆಲ್ಲ ನಿಸರ್ಗದಲ್ಲಿ ಅವುಗಳಿಗೂ ಮಾನವರಿಗೂ ಇರುವ ಬದುಕಿನ ಹೊಂದಾಣಿಕೆಗಳು ತೆರೆದುಕೊಂಡು ಸಂಸ್ಕೃತಿಯು ಹೀಗೆ ನಿಸರ್ಗನಿಮಿತ್ತ ವಿಕಾಸದ ಕ್ರಮವೇ ಆಗಿದೆ.

ಪ್ರಾಣಿಗಳ ವೇಷ ಬೇಟೆಯೆ ತಂತ್ರವಾಗಿತ್ತಾದರೂ ಆಹಾರ ದೈವದ ಅನುಕರಣವೂ ಆಗಿತ್ತು. ಸಂರಕ್ಷಣೆ ಮತ್ತು ಪ್ರತಿತಂತ್ರ ಎರಡನ್ನೂ ಒಳಗೊಂಡಿದ್ದ ಈ ಸ್ವಭಾವವು ನಿಸರ್ಗದಿಂದ ತಾನು ಅನ್ಯನಲ್ಲ ಎಂಬ ನಂಬಿಕೆಯನ್ನು ಆಧರಿಸಿತು. ತನ್ನ ಸಾಮರ್ಥ್ಯದ ವೈಫಲ್ಯತೆಯನ್ನು ಕಂಡುಕೊಂಡ ಮಾನವ ಸಮುದಾಯಗಳು ಆರಾಧನೆಯಲ್ಲಿ ಸಂಧಾನ ಮಾಡಿಕೊಂಡಿವೆ. ಇದರಿಂದ ವಿವೇಕದಿಂದ ಹೇಗೆ ವರ್ತಿಸಬೇಕೆಂಬ ಪ್ರಶ್ನೆಗೆ ನಿಸರ್ಗವೇ ಉತ್ತರ ಕೊಟ್ಟಿದೆ. ತಮ್ಮ ಆಹಾರದ ಕ್ರಮವನ್ನೂ ಬದುಕುವ ರೀತಿಯನ್ನೂ ಬದಲಿಸಿಕೊಳ್ಳದಿದ್ದರೆ ತಾವು ಉಳಿಯಲು ಸಾಧ್ಯವೇ ಇಲ್ಲ ಎಂಬುದು ಮನವರಿಕೆ ಆಗಿದೆ. ಹೀಗಾಗಿಯೆ ಕಾಡಿನ ಅಂಚಿಗೆ ಬಯಲಿಗೆ ಸುರಕ್ಷಿತ ನೆಲೆಗಳಿಗೆ ಮನುಷ್ಯ ಬರಲು ಸಾಧ್ಯವಾದದ್ದು. ಪ್ರಾಣಿಗಳು ಕೂಡ ಮಾನವರ ವಿವೇಕ ಹೆಚ್ಚಾಗಲು ಅವಕಾಶ ಮಾಡಿವೆ. ರಮ್ಯಕಲ್ಪನೆಗಳು, ಅದ್ಬುತ ಭ್ರಮೆಗಳು, ಪ್ರಾಣಿ ಪಕ್ಷಿಗಳನ್ನೆಲ್ಲ ಕನಸಿನಲ್ಲಿ ಬೇರೆಯಾಗಿ ತೋರಿಸಿವೆ. ಕನಸಿಗೆ ಬಂದು ವ್ಯಕ್ತಿಯ ಸ್ವರೂಪದಲ್ಲೆ ಸಂವಹನ ಮಾಡಿರುವ ಪ್ರಾಣಿಪಕ್ಷಿಗಳು ಅದೆಷ್ಟೋ ಆದಿ ಮಾನವರ ಸುಪ್ತ ಪ್ರಜ್ಞೆಯಲ್ಲಿ ಆ ಎಲ್ಲ ಘಟನೆಗಳ ವಿವರಗಳು ಕನಸಿನ ರೂಪಕ ಭಾಷೆಯಲ್ಲಿ ದಾಖಲಾಗಿದ್ದವು. ಆ ಸುಪ್ತಪ್ರಜ್ಞೆಯ ರೂಪಕ ಭಾಷೆಯು ಅನುವಂಶಿಕವಾಗಿ ಸಾಗಿ ಬಂದಿದೆ. ಹೀಗಾಗಿಯೇ ಮಾಯಮೃಗದಂತಹ ಕಲ್ಪನೆಗಳು ಸಾಧ್ಯವಾಗುವುದು. ನಿಸರ್ಗದ ಅನುಭವಗಳೆಲ್ಲ ಮೆದುಳಿನ ಸುಪ್ತಪ್ರಜ್ಞೆಯ ತಳದಲ್ಲಿರುವುದರಿಂದಲೇ ಕಾಡಿನ ಕಳಚಿದ ಕೊಂಡಿಯ ಪ್ರಜ್ಞೆ ಸ್ಪಷ್ಟವಾಗಿರುವುದು.

ಪುರಾಣ ಪ್ರಾಣಿಗಳ ರೂಪಗಳು ಸುಪ್ತಪ್ರಜ್ಞೆಯ ಒಳಗಿನಿಂದಲೇ ಹುಟ್ಟಿಬಂದಿವೆ. ಇದು ಜೈವಿಕ ಸಂಬಂಧದ ಸಂಕೀರ್ಣ ಸಂಯುಕ್ತ ಸ್ಥಿತಿ. ಇದರಲ್ಲಿ ಯಾವ ಗಡಿಗಳೂ ಇಲ್ಲ. ಹಂಪಿಯು ಕೂಡ ಈ ಪ್ರಜ್ಞೆಯಲ್ಲಿ ಒಂದು ಭಾಗವಾಗಿ ಬಿಟ್ಟಿರುತ್ತದೆ. ಆದ್ದರಿಂದಲೇ ಇಲ್ಲಿನ ಜನಪದರ ಪ್ರಾಣಿಯ ಸಂಬಂಧಗಳು ಆದಿಮ ಸಂಸ್ಕೃತಿಯ ವಿಕಾಸದ ಬೇರುಗಳನ್ನು ತೋರುವುದು. ಪಶುಪಾಲಕ ಸಂಸ್ಕೃತಿಯು ಪ್ರಾಣಿಗಳನ್ನು ಪಳಗಿಸುವ ಪೂರ್ವದಲ್ಲಿ ಈ ಬಗೆಯ ಎಲ್ಲ ಸಂಕೀರ್ಣತೆಯನ್ನು ಎದುರಿಸಿ ದಾಟಿಯೆ ಬಂದಿದೆ. ಸುಮ್ಮನೆ ಒಂದು ದಿನ ಬೇಟೆ ಆಡಿದ್ದರಿಂದ ಬೇಟೆ ಸಂಸ್ಕೃತಿ ಹುಟ್ಟಿಬಿಡುವುದಿಲ್ಲ. ಹಾಗೆಯೆ ಈಗ ನಾವೆಲ್ಲ ಕಾಡಿಗೆ ಹೋಗಿ ಬೇಟೆ ಆಡಿದರೂ ಆ ಕಾಲದ ಬೇಟೆ ಸಂಸ್ಕೃತಿಯ ಮಾನವ ಒತ್ತಡಗಳು ರೂಪುಗೊಳ್ಳುವುದಿಲ್ಲ. ನಿಸರ್ಗದಲ್ಲಿ ಉಂಟಾದ ಮಾನವ ಒತ್ತಡಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರಿಂದ ಆತ ವಿವೇಚನಾಶೀಲನಾದ. ಒತ್ತಡಗಳು ಕೇವಲ ಬದುಕುಳಿಯುವುದಕ್ಕೆ ಸೀಮಿತವಾಗಿರಲಿಲ್ಲ. ನಿಸರ್ಗವನ್ನೆ ಅರ್ಥಮಾಡಿಕೊಳ್ಳಬೇಕಾದ ಇಕ್ಕಟ್ಟು ವಿಕಾಸದ ಪ್ರಕ್ರಿಯೆಯಲ್ಲಿ ಬಹುದೊಡ್ಡ ಪಾಠ ಕಲಿಸಿತು. ಈ ಪಾಠ ಕಲಿವ ನಡಿಗೆಯಲ್ಲಿ ಮಾನವ ಏಳುಬೀಳಿನಲ್ಲೇ ತೊಡಗಿದ್ದಾನೆ. ಹೀಗಾಗಿ ನಿಸರ್ಗದಲ್ಲಿ ಅಸಮತೋಲನ ಉಂಟಾಗುತ್ತಲೆ ಇರುತ್ತದೆ. ಅಂತಹ ತೀವ್ರತೆಯಲ್ಲಿ ಸ್ವಾಭಾವಿಕವಾಗಿ ನಿಸರ್ಗವು ಸಮತೋಲನ ಕಂಡುಕೊಳ್ಳುವುದು. ಇವೆಲ್ಲ ಸಂಗತಿಗಳು ಮಾನವ ಕೇಂದ್ರಿತವಾದ್ದರಿಂದಲೇ ತೊಡಕುಗಳು ಎದುರಾಗುತ್ತಿರುವುದು. ಮಾನವ ಒತ್ತಡಗಳು ನಮ್ಮ ಕಾಲದಲ್ಲಿ ವ್ಯಕ್ತಿಗತವಾಗಿವೆ. ಆದಿಮ ಹಂತದ ವಿಕಾಸದಲ್ಲಿ ಒತ್ತಡಗಳು ಮಾನವ ಜನಾಂಗದ ಅಸ್ತಿತ್ವಕ್ಕೆ ಸಂಬಂಧಿಸಿದ್ದವು. ಮಾನವ ಸಮುದಾಯವೇ ಅಳಿದು ಹೋಗಬಹುದಾದ ಸ್ಥಿತಿಯಲ್ಲಿ ಆತ ನಿರ್ವಹಿಸಿದ ಒತ್ತಡ ಅಸಾಮಾನ್ಯವಾದದ್ದು. ಈ ಒತ್ತಡಗಳಲ್ಲೇ ಪೂರ್ವಿಕರಿಗೆ ಸಂಸ್ಕೃತಿಯ ಅಸಂಖ್ಯ ನೆನಪುಗಳು, ಘಟನೆಗಳು, ಪಲ್ಲಟಗಳು ವಿವೇಚನೆಗಳು ಬೆಳದದ್ದು. ಮಾನವರ ಉಳಿವಿನ ಒತ್ತಡದಿಂದಲೇ ವಿಕಾಸ ಕೂಡ ವಿಶಿಷ್ಟವಾಗಿ ಆದದ್ದು.

ಹಂಪಿ ಪರಿಸರದ ಜನಪದರ ಸುಪ್ತಪ್ರಜ್ಞೆಯಲ್ಲಿ ಇಂತಹ ಭಾವನೆಗಳೆಲ್ಲ ಇದ್ದಿದ್ದರಿಂದಲೇ ಈ ಪರಿಸರದ ಒಂದೊಂದು ಜೀವಿಗೂ ಗತಕಾಲದ ಜೈವಿಕ ಬೇರಿನ ವಿವರಗಳನ್ನು ಹೇಳಲು ಸಾಧ್ಯವಾಗುವುದು. ಪ್ರಾಣಿ ಪಕ್ಷಿಗಳೆಲ್ಲ ತಮ್ಮದೇ ವಿಕಾಸದ ಸಂಬಂಧಿಗಳು ಎಂಬ ವಿಶ್ವಾಸದಲ್ಲಿ ಅವರಿಗೆ ಯಾವ ಅನುಮಾನವೂ ಇಲ್ಲ. ತಮಗಿಂತ ಮೊದಲೆ ಹುಟ್ಟಿ ಬೆಳೆದಿದ್ದ ಪ್ರಾಣಿಪಕ್ಷಿಗಳು ನಮ್ಮ ಪೂರ್ವಿಕರು ಎಂದೇ ನಂಬುವರು. ಭಾರತೀಯ ಮನಸ್ಸು ನಿಸರ್ಗನಿಷ್ಠ ಪುರಾಣ ಪ್ರಜ್ಞೆಯದು. ಆದ್ದರಿಂದಲೇ ಶಿಷ್ಟಧರ್ಮಗಳು ಕೂಡ ಅವತಾರಗಳನ್ನು ಮೀನು ಹಂದಿ ಸಿಂಹ ಆಮೆಗಳಿಂದಲೂ ರೂಪಿಸಿಕೊಳ್ಳುವುದು. ಬುಡಕಟ್ಟು ಸಮುದಾಯಗಳು ಕಾಡಿನ ಪ್ರಾಣಿ ಪಕ್ಷಿಗಳನ್ನು ಕುಲವಾಗಿಸಿಕೊಳ್ಳುವುದು ಸಹಜ ಸಾಮಾನ್ಯ ಸಂಗತಿ. ಪ್ರಾಣಿ ಪಕ್ಷಿ ತಿಂದುಬಿಟ್ಟಿದ್ದನ್ನು ನಾವು ತಿನ್ನಬೇಕು ಎಂಬ ಜನಪದರ ಮಾತು ಅರ್ಥಪೂರ್ಣವಾದದ್ದು. ವಾಸ್ತವದಲ್ಲಿ ನಿಸರ್ಗವೆ ರೂಪಿಸಿರುವ ನಿಯಮ ಇದು. ನಮ್ಮ ಆಹಾರದ ವೇಳಾಪಟ್ಟಿ ಕೃತಕವಾದದ್ದು. ಜೀವಜಾಲದ ಆಹಾರ ಸರಪಳಿ ಮತ್ತು ವೇಳಾಪಟ್ಟಿ ಜೈವಿಕ ನಿಷ್ಠವಾದುದು. ಆಹಾರ ಸಂಸ್ಕೃತಿಯಿಂದಲೇ ನಾವು ಅತಿಯಾಗಿ ಭೂಮಿಯನ್ನು ಆವರಿಸಿಕೊಂಡಿದ್ದೇವೆ. ಮುಂದೆ ಈ ಅತಿ ಸಂತಾನವೇ ಅತಿ ಸಂರಕ್ಷಣೆಯ ಅತಿ ಬಲವೇ ಅತಿ ಬುದ್ದಿಯೇ ನಮ್ಮ ದೌರ್ಬಲ್ಯವಾಗಿ ಅದರಿಂದಲೇ ನಾವು ನಾಶ ಹೊಂದುತ್ತೇವೆ. ನಿಸರ್ಗವು ಆ ಬಗೆಯ ಕ್ಷಣಕ್ಕೆ ಯಾವ ವೇಳಾಪಟ್ಟಿಯನ್ನು ನಿರ್ಧರಿಸಿ ಈಗಾಗಲೇ ದಿನಾಂಕ ಗುರುತಿಸಿರುವುದೊ ಗೊತ್ತಿಲ್ಲ. ಪ್ರಾಣಿ ಜಾನಪದದ ವಿವೇಚನೆಯಲ್ಲಿ ಈ ಪ್ರಶ್ನೆಯನ್ನು ಕೂಡ ಪರಿಶೀಲಿಸಬೇಕು. ಜೀವಜಾಲ ಎಂದರೆ ಅಖಂಡವಾದದ್ದೇ ವಿನಃ ಬಿಡಿಯಾದುದಲ್ಲ. ಮಾನವಕೇಂದ್ರಿತ ನಿಸರ್ಗ ತತ್ವದಿಂದ ಅನೇಕ ವಿಪತ್ತುಗಳಂತು ಖಂಡಿತ ಮುಂದೆ ಬರಲಿವೆ. ಜೀವಜಾಲದ ಪ್ರಾಣಿ ಸಂಬಂಧವನ್ನು ತಿಳಿಯುವುದು ಬದುಕುಳಿಯುವ ವಿವೇಕದ ಒಂದು ವಿಧಾನ. ಈ ನಿಟ್ಟಿನಲ್ಲಿ ಹಂಪಿ ಪರಿಸರದ ಪ್ರಾಣಿ ಜಾನಪದವನ್ನು ಕೆಳಗಿನಂತೆ ಪಟ್ಟಿ ಮಾಡಬಹುದು.

ಕಾಡು ಪ್ರಾಣಿಗಳು: ೧. ಕರಡಿ  ೨. ಚಿರತೆ  ೩. ತೋಳ  ೪.ಮುಳ್ಳಂದಿ  ೫. ಜಿಂಕೆ  ೬. ಕಡಮೆ  ೭. ಹುಲಿ  ೮. ಕಾಡುಮೇಕೆ  ೯. ಕಾಡು ಕುರಿ  ೧೦. ಚಿಪ್ಪಂದಿ  ೧೧. ಕಾಡಂದಿ  ೧೨. ಕಾಡು ಬೆಕ್ಕು  ೧೩. ಮೊಲ  ೧೪. ಮುಸಿಯ ೧೫.  ನರಿ ೧೬.ಮುಂಗೂಸಿ  ೧೭. ಏದು  ೧೮. ಕಾಡಳಿಲು.

ಸಾಕು ಪ್ರಾಣಿಗಳು : ೧. ಹಸು  ೨. ಕುರಿ  ೩. ಮೇಕೆ  ೪. ಹಂದಿ  ೫. ನಾಯಿ  ೬.ಎಮ್ಮೆ  ೭. ಕತ್ತೆ  ೮. ಕರಡಿ  ೯.ಮೊಲ  ೧೦. ಕುದುರೆ  ೧೧. ಜಿಂಕೆ  ೧೨. ಆನೆ

ಜಲಚರಗಳು: ೧.ಮೀನು  ೨. ಏಡಿ  ೩. ಕಪ್ಪೆ  ೪. ಮಿಸಳೆ  ೫. ಆಮೆ  ೬. ಸೀಗಡಿ  ೭. ನೀರುನಾಯಿ

ಉರಗಗಳು: ೧. ಹಾವು  ೨.ಚೇಳು  ೩. ಜರಿ  ೪. ವನಕೆ ಮುಂಡಿ  ೫. ದೊಣ್ಣೆಕಾಟಿ  ೬. ಹಾವುರಾಣಿ  ೭. ಹಲ್ಲಿ  ೮.ಬಂಡೆ ಲಚ್ಚಿ  ೯.ಊಸರವಳ್ಳಿ.

ಹೀಗೆ ಹತ್ತಾರು ಬಗೆಯ ಜೀವಜಾಲದ ಪಟ್ಟಿಯನ್ನು ಮಾಡಬಹುದಾದರೂ ಈ ಲೆಕ್ಕವು ಅಸಮಗ್ರವಾದುದು. ನಿಸರ್ಗದಲ್ಲಿ ಆಗಿ ಹೋದ ಜೀವಿಗಳು ಎಷ್ಟೆಷ್ಟೋ. ಹಂಪಿ ಪರಿಸರದ ಜೀವಜಾಲದ ನೆನ್ನೆಯ ಬೇರುಗಳನ್ನು ಕುರಿತು ವಿವೇಚಿಸುತ್ತಿರುವ ಸಂದರ್ಭದಲ್ಲಿ ಇದೇ ಪರಿಸರದಲ್ಲಿ ಹುಟ್ಟಿದ ವಿಜಯನಗರ ಸಾಮ್ರಾಜ್ಯವು ಬೃಹತ್ ನಗರವೊಂದನ್ನು ಇಲ್ಲಿ ಸ್ಥಾಪಿಸಿತ್ತು. ಅದರಿಂದ ಕಾಡು ನಾಶವಾಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮ್ರಾಜ್ಯವೂ ಮುಳುಗಿ ಹೋದ ಮೇಲೆ ಅಲ್ಲಿ ಮತ್ತೆ ಕಾಡಿನೋಪಾದಿಯ ಪರಿಸರ ಪುನರ್ ಸೃಷ್ಟಿಯಾಯಿತು. ಈಗ ಮತ್ತೆ ಅದು ಕೃಷಿಯಿಂದ ಗಣಿ ಉದ್ಯಮದಿಂದ ಪ್ರವಾಸೋದ್ಯಮದಿಂದ ರೂಪಾಂತರ ಹೊಂದುತ್ತಿದೆ. ಒಂದೇ ನೆಲೆಯಲ್ಲಿ ಮಾನವ ಯತ್ನದ ಪಲ್ಲಟಗಳು ನಿರಂತರವಾಗಿ ಘಟಿಸುತ್ತಲೆ ಇರುತ್ತವೆ. ಇದರಿಂದ ಜೀವಜಾಲದ ಮೇಲೆ ಏನೇನು ಪರಿಣಾಮ ಆಗಬಲ್ಲದು ಎಂಬುದನ್ನು ಸುಲಭವಾಗಿ ಗ್ರಹಿಸಬಹುದು. ಜನಪದರು ವರ್ತಮಾನದ ತುರ್ತುಗಳಲ್ಲಿ ಕಳೆದು ಹೋಗಿದ್ದಾರೆ. ಅವರ ಗತಕಾಲದ ಜೀವಜಾಲದ ಸಂಬಂಧಗಳಲ್ಲಿ ಈಗ ಆಧುನಿಕ ಉಪಕರಣಗಳು ಬಂದಿವೆ. ಪರಕೀಯರ ಜೀವನ ಕ್ರಮ ದಾಳಿಮಾಡಿದೆ. ಅವರ ಪರಿಸರದಲ್ಲಿ ಅವರೇ ಅನ್ಯರಾಗುವ, ಉಪೇಕ್ಷೆಗೆ ಈಡಾಗುವ ಪರಿಸ್ಥಿತಿ ಎದುರಾಗಿದೆ. ಒಂದು ಕಾಲದ ಪಶುಪಾಲಕ ನೆಲೆಗಳೀಗ ವಿಶ್ವ ಆರ್ಥಿಕ ಪಲ್ಲಟಗಳಿಗೆ ಬೇಕಾದ ವ್ಯಾಪಾರ ನೆಲೆಗಳಾಗುತ್ತಿವೆ. ಪಶುಪಾಲಕ ಸಂಸ್ಕೃತಿಯಿಂದ ಸಾಗಿ ಬಂದ ಸಮಾಜಗಳೀಗ ಅನಿವಾರ್ಯವಾಗಿ ಬೇರೆಯವರು ರೂಪಿಸಿರುವ ವ್ಯಾಪಾರಿ ಸಂಸ್ಕೃತಿಗೆ ಒಳಪಡಬೇಕಾಗಿದೆ. ಇವೆಲ್ಲವೂ ಒಂದರೊಳಗೊಂದು ಮೇಲುಗೈ ಸಾಧಿಸುತ್ತ ಮಾನವ ಒತ್ತಡಗಳೇ ಸೃಜನಶೀಲಗೊಳ್ಳುವ ಬದಲು ಭಗ್ನಗೊಳ್ಳುವ ದಿಕ್ಕಿನೆಡೆಗೆ ಓಡುತ್ತಿವೆ.

ಇಂತಹ ಸ್ಥಿತಿಯಲ್ಲಿ ಹಂಪಿ ಪರಿಸರದ ಜನಪದವು ತನ್ನ ಗತಕಾಲದ ಪ್ರಾಣಿ ಸಂಬಂಧವನ್ನು ಗಾಢವಾಗಿ ಮೈತುಂಬಿ ಬಿಚ್ಚಿಕೊಳ್ಳಲಾರದು. ಅಳಿದುಳಿದ ನೆನಪುಗಳನ್ನು ಮಾತ್ರ ಹೇಳಬಲ್ಲಷ್ಟು ತಾಳ್ಮೆ ಉಳಿದಿದೆಯೇ ವಿನಃ ಗಂಟೆಗಟ್ಟಲೆ ಆ ಬಗ್ಗೆ ಮಾತನಾಡಲು ಪುರಸೊತ್ತಿಲ್ಲವಾಗಿದೆ. ಕಹಿ ಎಂಬ ಭಾವನೆ ಗತಕಾಲದ ಬಗ್ಗೆ ವ್ಯಕ್ತವಾಗುತ್ತದೆ. ಪರಂಪರೆಯ ಭಾಗವಾಗಿದ್ದ ಜೀವನ ಕ್ರಮದ ನೆನ್ನೆಯ ಕೊಂಡಿಗಳೆಲ್ಲ ತುಂಡಾಗಿರುವುದರಿಂದ ಅವನ್ನೆಲ್ಲ ಬೆಸುಗೆ ಹಾಕಿಕೊಂಡು ನಿರೂಪಿಸಲು ಜನಪದರಿಗೆ ಬಹಳ ಕಷ್ಟವಾಗುತ್ತದೆ. ಹಂಪಿಯ ವಾಸ್ತುಶಿಲ್ಪದಲ್ಲಿ ಮಾತ್ರ ಎಲ್ಲ ಬಗೆಯ ಪ್ರಾಣಿಗಳ ಚಿತ್ರಗಳು ಧಾರಾಳವಾಗಿವೆ. ಈ ಪರಿಸರದ ಆಚೆ ಇದ್ದ ಒಂಟೆ ಆನೆಗಳ ಚಿತ್ರಸಮೂಹ ವ್ಯಾಪಕವಾಗಿವೆ. ವ್ಯಾಳಿ ಎಂಬ ಪುರಾಣ ಪ್ರಾಣಿಯ ಚಿತ್ರ ಎಲ್ಲ ದೇವಾಲಯಗಳ ಬಾಗಿಲಲ್ಲಿ ಕಾಯುವಂತೆ ಕೂತಿದೆ. ಮಾನವ ಪ್ರಾಣಿಯ ವಿಚಿತ್ರ ಸಮ್ಮಿಶ್ರ ಎಂತಲೂ ಇದನ್ನು ಅರ್ಥೈಸುವುದಿದೆ. ಉಗ್ರನರಸಿಂಹನ ವಿರಾಟ್  ಶಿಲ್ಪವೇ ಹಂಪಿಯಲ್ಲಿದೆ. ಯುದ್ದಕ್ಕೆ ಹೊರಟು ಕಾದಾಡಿದ ಆನೆ ಕುದುರೆ ಒಂಟೆ ಹಾಗು ಆಳೆತ್ತರದ ನಾಗಶಿಲ್ಪಗಳು ಬೇಟೆ ಶಿಲ್ಪಗಳು ಧಾರಾಳವಾಗಿ ನಮ್ಮ ಮನಸ್ಸಿಗೆ ಬಂದು ಹೋಗುತ್ತವೆ. ಈಗ ಆ ಯಾವ ಪ್ರಾಣಿಗಳ ಸೈನ್ಯವೂ ನಮ್ಮಲ್ಲಿಲ್ಲ. ಮನುಷ್ಯನೆಂಬ ಸೈನಿಕ ಅವನ್ನೆಲ್ಲ ಸುಲಭವಾಗಿ ಸೋಲಿಸಿದ್ದಾನೆ. ಕಾಲದ ಬೇರೆ ಬೇರೆ ಒತ್ತಡಗಳು ಹೇಗೆಲ್ಲ ಸಂಸ್ಕೃತಿ, ನಾಗರೀಕತೆ, ಪ್ರಭುತ್ವ, ಸಾಮ್ರಾಜ್ಯದ ರಾಜಕೀಯ ಧಾರ್ಮಿಕ ಆರ್ಥಿಕ ಸ್ಥಿತಿಗಳನ್ನು ಬೆಳೆಸಿವೆ ಎಂಬುದನ್ನೆಲ್ಲ ಹಿನ್ನಲೆಯಾಗಿ ಇಟ್ಟುಕೊಂಡು ಪ್ರಾಣಿ ಜಾನಪದದ ವಿವರಗಳನ್ನು ವಿಶ್ಲೇಷಿಸಬೇಕಾಗಿದೆ. ಚರಿತ್ರೆ ಈ ಸಂಗತಿಗಳನ್ನು ಕಂಡಿರುವ ಪರಿ ಜನಪದರಿಗಿಂತಲೂ ಭಿನ್ನವಾದದ್ದು. ಹಂಪಿಯ ವಾಸ್ತುಶಿಲ್ಪಗಳ ಪ್ರಾಣಿ ವಿವರವೇ ಪ್ರತ್ಯೇಕ ಅವಕಾಶವನ್ನು ಬಯಸುವುದರಿಂದ ಅವನ್ನೆಲ್ಲ ಇಲ್ಲಿ ವಿವರಿಸಲಾಗದು. ಜನಪದ ಪರಂಪರೆ ಹೇಗೆ ಈ ಪ್ರಾಣಿಗಳನ್ನು ಭಾವಿಸಿದೆ ಎಂಬುದನ್ನು ಇಲ್ಲಿ ಒಂದೊಂದಾಗಿ ಗಮನಿಸುವ.

ಕರಡಿ : ಹಂಪಿಯು ಆದಿ ಜಾಂಬವ ನೆಲೆ ಎಂದು ಜನಪದರು ವಿವರಿಸುವರು. ಈ ನಂಬಿಕೆಗೆ ಪೂರಕವಾಗಿ ಜಾಂಬವಂತ ಪರ್ವತವೊಂದು ಹಂಪಿಯಲ್ಲಿದ್ದು ಅದು ಪ್ರಸಿದ್ಧವಾಗಿದೆ. ಆದಿ ಜಾಂಬವನ ಸ್ಥಾನದಲ್ಲಿ ಕರಡಿಯನ್ನು ನೋಡಲಾಗುತ್ತದೆ. ಹಂಪಿಯಲ್ಲಿ ಕರಡಿ ಮಟ್ಟಿ, ಕರಡಿಗುಡ್ಡ, ಕರಡಿ ಗವಿ ಎಂಬ ಹೆಸರಿನ ಅನೇಕ ಸ್ಥಳಗಳು ಇವೆ. ಇವೆಲ್ಲವೂ ಕರಡಿಗಳ ವಾಸದ ನೆಲೆಗಳು. ಹಂಪಿಯ ಸ್ಥಳೀಯ ನೆಲೆಗಳನ್ನು ವಿಂಗಡಿಸುವಾಗ ತಪ್ಪದೆ ಜನಪದರು ಕರಡಿಗುಡ್ಡದಂತಹ ವಿವರಗಳನ್ನು ನೀಡುವರು. ಈ ವಿವರಗಳಲ್ಲಿ ಮುಖ್ಯವಾಗಿ ಎರಡು ನಂಬಿಕೆಗಳಿವೆ. ಒಂದು ಕರಡಿಯನ್ನು ಪವಿತ್ರ ಪ್ರಾಣಿಯನ್ನಾಗಿ ಭಾವಿಸುವುದು, ಎರಡನೆಯದು ಕರಡಿಯ ಕ್ರೂರ ಮುಖವನ್ನು ಪರಿಚಯಿಸುವುದು. ಕನಸಿನಲ್ಲಿ ಕರಡಿ ಕಂಡರೆ ಶುಭ. ಅದೇ ಕರಡಿ ಹಗಲಿನಲ್ಲಿ ಎದುರಾದರೆ ಅದು ಕೇಡಿನ ಸೂಚನೆ. ಕರಡಿ ಹೆಂಗಸರನ್ನು ಹೊತ್ತೊಯ್ದು ಗವಿಯಲ್ಲಿ ಇಟ್ಟುಕೊಳ್ಳುವುದು ಎಂಬ ಜನಪ್ರಿಯ ನಂಬಿಕೆ ಹಂಪಿ ಪರಿಸರದಲ್ಲು ಸಮಾನವಾಗಿ ಕಂಡುಬರುತ್ತದೆ. ತಾಯಿ ಕರಡಿಯ ಕೈಗೆ ಮಾತ್ರ ಸಿಗಬಾರದು, ಸಿಕ್ಕಿ ದಾಳಿಗೆ ಎದುರಾಗಿ ಬದುಕಿ ಬಂದರೆ ನೂರು ವರ್ಷ ಆಯುಸ್ಸು ಗ್ಯಾರಂಟಿ ಎಂಬ ನಂಬಿಕೆಯಿದೆ.

ಹಂಪಿ ಪ್ರದೇಶದಲ್ಲಿ ಕರಡಿಗಳು ಸಾಕಷ್ಟಿವೆ. ದರೋಜಿ ಕರಡಿಧಾಮವು ಹಂಪಿಗೆ ಸಮೀಪದಲ್ಲಿಯೇ ಇದೆ. ಕರಡಿಯನ್ನು ಕೊಲ್ಲುವುದು ಪಾಪಗಳಲ್ಲಿ ಒಂದೆಂದು ಜನಪದರ ಭಾವನೆ. ಕರಡಿಗಳ ಹಾವಳಿ ಹೆಚ್ಚಾದಾಗ ಕರಡಿಗಳ ಹೆಸರಿನಲ್ಲಿ ಹಂಪಿಯ ವಿರೂಪಾಕ್ಷನ ಬಳಿ ಪೂಜೆ ಮಾಡುವ ಸಂಪ್ರದಾಯವೂ ಇದೆ. ಹಳ್ಳಿಯ ಗ್ರಾಮದೈವಗಳಲ್ಲೂ ಕರಡಿಗಳ ಹಾವಳಿಗೆ ಹರಕೆ ಸಲ್ಲಿಸುವುದಿದೆ. ಕರಡಿಗಳನ್ನು ಸಾಕುವ ರೂಢಿಯೂ ತೆರೆಮರೆಯಲ್ಲಿದೆ. ಕರಡಿ ಕುಣಿಸಿ ಜೀವನ ಮಾಡುವ ಸಮುದಾಯವೇ ಒಂದಿದೆ. ಕೊಪ್ಪಳ ಜಿಲ್ಲೆಯಲ್ಲಿ ಕರಡಿ ಸಾಕಿ ಊರೂರು ಅಲೆವವರ ಬದುಕಿನ ಜೊತೆ ಕರಡಿಗಳೂ ಸಿಲುಕಿರುವ ವಿಪರ್ಯಾಸವೂ ಇದೆ. ದಕ್ಷಿಣ ಭಾರತದಲ್ಲಿಯೇ ವಿಶೇಷವಾದ ಸ್ಲಾತ್ ಕರಡಿಗಳು ಹಂಪಿ ಪ್ರದೇಶದಲ್ಲಿ ಬದುಕಿರುವುದು ಗಮನಾರ್ಹ ಸಂಗತಿ. ಕರಡಿಗಳು ಈ ಭಾಗದ ಪ್ರಾಚೀನ ಪ್ರಾಣಿಗಳಲ್ಲಿ ಒಂದಾಗಿದ್ದು ಇಂದಿಗೂ ಮನುಷ್ಯ ಪರಿಸರದ ಜೊತೆ ಹೋರಾಟ ಮುಂದುವರಿಸಿವೆ. ಕರಡಿ ಗೊರವಯ್ಯರ ತಲೆ ಕವಚವಾದ ಕರಡಿ ಚರ್ಮದಿಂದ ಮಾಡಿದ ಟೊಪ್ಪಿಗೆಯು ಮಕ್ಕಳಲ್ಲಿರುವ ಭೀತಿಯನ್ನು ಹೋಗಲಾಡಿಸಲು ಮಾಡಿಕೊಂಡ ವಿಶಿಷ್ಟ ಉಪಕರಣವಾಗಿದೆ. ವಿಜಯನಗರ ಕಾಲದ ರಾಜರ ಅಬ್ಬರದಲ್ಲಿ ಕರಡಿಗಳ ಸದ್ದು ಅಡಗಿದ್ದಂತೆ ಕಾಣುತ್ತದೆ. ಪಶುಪಾಲಕ ಸಮಾಜದ ಆಹಾರ ಪ್ರದೇಶಕ್ಕೆ ತೊಡಕಾಗುತ್ತಿದ್ದ ಕರಡಿಗಳ ಬಗ್ಗೆ ಪಶುಪಾಲಕರಲ್ಲಿ ಅಂತಹ ವಿಶೇಷ ಮಾನ್ಯತೆಗಳು ಕಂಡುಬರುವುದಿಲ್ಲ.

ಜನಪದರು ಕರಡಿ ಉಗುರನ್ನು ಅಲಂಕಾರಿಕವಾಗಿ ರೂಪಿಸಿ ಕೊರಳಿಗೆ ಕಟ್ಟಿಕೊಳ್ಳುವ ರೂಢಿಯನ್ನು  ಅಪರೂಪಕ್ಕೆ ಮುಂದುವರಿಸಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಕರಡಿ ಚರ್ಮಕ್ಕೂ ಬೇಡಿಕೆಯಿದ್ದು ಇವುಗಳ ಬೇಟೆ ಮಾರುಕಟ್ಟೆಯ ಕಳ್ಳ ಸ್ವರೂಪವನ್ನು ಪಡೆಯುತ್ತಿದೆ. ಕರಡಿ ಆಡಿಸುವವರು ಹಳ್ಳಿಗಳಲ್ಲಿ ಹೊಟ್ಟೆಪಾಡಿಗೆ ಅಡ್ಡಾಡುವುದು ಕೂಡ ಈಗ ಮಾನ್ಯತೆ ಕಳೆದುಕೊಳ್ಳುತ್ತಿದೆ. ವಿದ್ಯುತ್ ತಂತಿಗಳ ಮೂಲಕ ಕರಡಿಗಳು ಹೊಲಗಳಿಗೆ, ತೋಟಗಳಿಗೆ ಬಾರದಂತೆ ತಡೆ ಒಡ್ಡಲಾಗುತ್ತಿದ್ದು ಆ ಮೂಲಕ ಸಾವಿಗೀಡಾದ ಕರಡಿಗಳನ್ನು ಕದ್ದು ಮುಚ್ಚಲಾಗುತ್ತಿದೆ. ಕರಡಿಗಳ ಭಯದಿಂದಲೇ ವಿಶೇಷವಾಗಿ ಬೇಟೆ ನಾಯಿಗಳನ್ನು ರೈತರು ಬೆಟ್ಟಗುಡ್ಡಗಳಿಗೆ ಕರುದುಕೊಂಡು ಹೋಗುವುದಿದೆ. ಜನಪದ ಕಥೆಗಳಲ್ಲಿ ಕೇಳಿ ಬರುವ ಕರಡಿಯ ಪ್ರಸಂಗಗಳು ವರ್ತಮಾನದಲ್ಲಿ ಅರ್ಥ ಕಳೆದುಕೊಂಡಿವೆ. ಹೀಗೆ ಹಂಪಿ ಪರಿಸರದ ಜೀವಜಾಲದಲ್ಲಿ ಕರಡಿಗಳ ಇರುವಿಕೆಯು ಜನಪದರಿಗೆ ಇಷ್ಟವಾಗದ ಒಂದು ಸಂಗತಿಯಾಗಿ ಮಾರ್ಪಟ್ಟಿದೆ. ಹಾಗೆಯೆ ಕರಡಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯು ತನ್ನದೇ ಆದ ಕ್ರಮಗಳಿಂದ ಜೀವ ಪರಿಸರದ ಬದುಕಿನ ಅವಕಾಶವನ್ನು ಕೂಡ ಕಾಯ್ದಿರಿಸಿದೆ. ಇವೆಲ್ಲವೂ ಹಂಪಿ ಪರಿಸರದ ಬಿಕ್ಕಟ್ಟಿನ ಜೊತೆಗೇ ಸಾಗಿವೆ. ಪರಿಸರ ನಾಶದ ನಿರಂತರ ದಾಳಿಯಿಂದ ಕರಡಿಯಂತಹ ಪ್ರಾಣಿ ಬದುಕುಳಿಯಲು ಹೋರಾಟ ನಡೆಸಬೇಕಾದೆ. ಸಹಜವಾಗಿ ಸಿಗುತ್ತಿದ್ದ ಕಾಡು ಹಣ್ಣುಗಳು ಹಂಪಿ ಪರಿಸರದಲ್ಲಿ ಇಲ್ಲವಾಗುತ್ತಿವೆ. ಕರಡಿಗೆ ಬಹಳ ಪ್ರಿಯವಾದ ಕವಳೆ ಹಣ್ಣು, ಸೀತಾಫಲ, ಕರಡಿ ಹಣ್ಣು ಮುಂತಾದ ಕಾಡು ಹಣ್ಣಿನ ಅನೇಕ ಗಿಡಗೆಂಟೆಗಳು ಗೆಡ್ಡೆ ಗೆಣಸುಗಳು ಕಳೆದು ಹೋಗುತ್ತಿವೆ. ವಿಪರೀತ ಕೃಷಿ ಒತ್ತಡದಿಂದ ಬೆಟ್ಟಗುಡ್ಡಗಳ ಪ್ರಾಣಿಗಳ ವಾಸದ ನೆಲೆಗಳನ್ನೆ ಕಬಳಿಸುತ್ತಿರುವುದರಿಂದ ಕರಡಿಗಳು ತೀವ್ರತರ ಬಿಕ್ಕಟ್ಟಿಗೆ ಸಿಲುಕಿವೆ. ಗಣಿಗಾರಿಕೆ ಕೂಡ ಪರೋಕ್ಷವಾಗಿ ಕರಡಿಗಳ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ.

ಚಿರತೆ: ಹಂಪಿ ಜೀವಜಾಲದಲ್ಲೀಗ ಚಿರತೆ ಅತ್ಯಪರೂಪದ ಪ್ರಾಣಿ. ಪಶುಪಾಲಕ ಸಂಸ್ಕೃತಿಯ ಬಂಡೆಗಳ ಮೇಲಿನ ಚಿತ್ರಗಳಲ್ಲಿ ಹುಲಿ ಚಿರತೆಗಳು ಪ್ರಧಾನವಾಗಿ ಎದ್ದು ಕಾಣುತ್ತವೆ. ತಮ್ಮ ಪಶುಪಾಲನೆಯ ಪ್ರಮುಖ ಶತ್ರು ಎಂದು ಹುಲಿ ಚಿರತೆಗಳನ್ನು ಪಶುಪಾಲಕರ ರೇಖಾ ಚಿತ್ರಗಳು ತೋರುತ್ತವೆ. ಹಾಗೆಯೆ ಹುಲಿಚಿರತೆಗಳನ್ನು ಕೊಲ್ಲುವ ಆಶಯವನ್ನೂ ಅದೇ ಚಿತ್ರಗಳು ಪ್ರತಿಫಲಿಸುತ್ತವೆ. ಚಿರತೆಗಳ ಗವಿಗಳನ್ನು ಈಗಲೂ ಜನಪದರು ತೋರುವುದಿದೆ. ಹಂಪಿಯ ಬೆಟ್ಟ ಸಾಲುಗಳ ನಿಗೂಢ ಸ್ಥಳಗಳಲ್ಲಿ ಚಿರತೆಗಳು ಉಳಿದೆವೆ. ಚಿರತೆಗಳು ಆಗಾಗ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುವ ಪ್ರಕರಣಗಳು ಅಲ್ಲಲ್ಲಿ ದಾಖಲಾಗುತ್ತಲೆ ಇರುತ್ತವೆ. ಬೇಟೆಯ ಬಗೆಗಿನ ಶಿಲ್ಪಚಿತ್ರಗಳಲ್ಲಿ ಹುಲಿ ಚಿರತೆಯಂತಹ ಕ್ರೂರ ಪ್ರಾಣಿಗಳನ್ನು ಕೊಲ್ಲುವ  ರೂಪಕ ಚಿತ್ರಗಳು ಹಂಪಿಯ ವಾಸ್ತುಶಿಲ್ಪದಲ್ಲೂ ಕಾಣುವುದಿದೆ. ಕರಡಿ ಗುಡ್ಡ ಎಂದು ಕರೆಯುವಂತೆಯೆ ಚಿರತೆ ಗುಡ್ಡ ಎಂದು ಕರೆಯುವರು. ಚಿರತೆಗಳ ಗವಿಗಳನ್ನು ಹಂಪಿಯ ಬಟ್ಟಸಾಲುಗಳ ಅತಿ ಇಕ್ಕಟ್ಟಾದ ನೆಲೆಗಳಲ್ಲಿ ಜನಪದರು ತೋರುವುದಿದೆ. ಚಿರತೆಯ ಚರ್ಮಕ್ಕಾಗಿ ಅದರ ಅಸ್ಥಿಗಾಗಿ ಬೇಟೆಯಾಡುವುದೂ ಇದೆ. ಚಿರತೆಗಳ ಭಯವೂ ಹಂಪಿ ಪರಿಸರದಲ್ಲಿ ಸಾಕಷ್ಟಿದೆ. ಪಾಳು ದೇವಾಲಯ, ಮಂಟಪಗಳನ್ನು ಚಿರತೆಗಳು ವಾಸದ ನೆಲೆ ಮಾಡಿಕೊಂಡಿವೆ ಎಂದು ಜನಪದರು ಹೇಳುತ್ತಾರೆ. ಚಿರತೆಯನ್ನು ಬೇಟೆ ಆಡಿದ ಹಳೆಯ ಕಾಲದ ವಿವರಗಳನ್ನು ಕೇವಲ ರಮ್ಯ ಕಥನವಾಗಿ ಹೇಳುವುದೂ ಉಂಟು. ಮಕ್ಕಳನ್ನೆ ಚಿರತೆಗಳು ಎತ್ತಿಕೊಂಡು ಹೋಗಿ ತಿನ್ನುತ್ತವೆ ಎಂಬ ಭೀತಿಯಿದೆ. ಇದೆ ಕೆಲವೊಮ್ಮೆ ನರಭಕ್ಷಕ ಚಿರತೆಗಳ ಸಂದರ್ಭದಲ್ಲಿ ನಿಜವೂ ಹೌದು. ವಿಚಿತ್ರ ಎಂದರೆ, ಹಂಪಿಯ ಪತನವಾದ ನಂತರ ದೇವರೇ ಈ ಪಾಳು ದೇಗುಲಗಳ ಕಾಯುತ್ತ ಇಲ್ಲೇ ವಾಸವಾಗಿರಿ ಎಂದು ಹೇಳಿ ಹುಲಿ ಚಿರತೆ ಕರಡಿಗಳನ್ನು ನೇಮಿಸಿತ್ತಂತೆ. ದೇವರ ಆ ಮಾತು ನಡೆಸಿಕೊಡುವ ಕಾರಣದಿಂದಲೇ ಈಗಲೂ ಹುಲಿ ಚಿರತೆಗಳು ಕೆಲವು ಗುಡಿಗಳಿಗೆ ಬಂದು ಮಲಗಿ ನಿಧಿಗಳ್ಳರನ್ನು ಹೆದರಿಸಿ ಓಡಿಸುತ್ತವೆ ಎಂದು ಹೇಳಲಾಗುತ್ತದೆ.

ಪಶುಪಾಲಕ ಸಮಾಜದ ಸಮೃದ್ದ ಆಹಾರ ಕಾಲದಲ್ಲಿ ಚಿರತೆಯಂತಹ ಮಾಂಸಾಹಾರಿ ಪ್ರಾಣಿಗೆ ಆಹಾರದ ಯಾವ ಕೊರತೆಯೂ ಇರಲಿಲ್ಲ. ಸಹಜವಾಗಿಯೆ ಅವು ಆಹಾರ ಸಂಪಾದಿಸಿ ಕೊಳ್ಳುತ್ತಿದ್ದವು. ಹಂಪಿಯ ಪರಿಸರದಲ್ಲಿ ಚಿರತೆಗೆ ಬೇಕಾಗಿದ್ದ ಜಿಂಕೆ, ಹಂದಿ, ದನ, ಕುರಿ ಮುಂತಾದವು ಸಲೀಸಾಗಿ ಸಿಗುತ್ತಿದ್ದವು. ಈಗ ಆಹಾರದ ತೊಂದರೆ ತೀವ್ರವಾಗಿರುವುದರಿಂದ ಚಿರತೆಗಳು ಹಂಪಿಯ ಪರಿಸರದಲ್ಲಿ ಅಳಿವಿನ ಕೊನೆಯ ದಿನಗಳನ್ನು ಎದುರಿಸುತ್ತಿವೆ. ಚಿರತೆ ಸಿಕ್ಕಿ ಬಿದ್ದರೆ ಮೊದಲು ಅದನು ಕೊಲ್ಲುವುದೇ ಪರಮ ಆಯ್ಕೆಯಾಗಿ ಜನಪದರಿಗೆ ಕಂಡಿದೆ. ಚಿರತೆಗಳೀಗ ಸಣ್ಣಪುಟ್ಟ, ಕಲ್ಲುಕೋಳಿ, ನವಿಲು, ಚಿಪ್ಪಂದಿ, ಮುಳ್ಳುಹಂದಿ ಹಾಗು ಸಾಕುಪ್ರಾಣಿಗಳನ್ನು ಹಿಡಿದು ತಿಂದು ಬದುಕಬೇಕಾದ ಸ್ಥಿತಿ ಇದೆ. ಕ್ರೂರ ಪ್ರಾಣಿ ಎನಿಸಿರುವ ಚಿರತೆಯ ಬಗ್ಗೆ ಜನಪದರು ರಿಯಾಯಿತಿ ತೋರುವುದಿಲ್ಲ. ಕ್ರೂರ ಮೃಗಗಳನ್ನು ಯಾವತ್ತೂ ದೂರವಿಡುವ ಭಾವನೆ ಹಂಪಿ ಪರಿಸರದ ಜನಪದದಲ್ಲೂ ಸರ್ವೇ ಸಾಮಾನ್ಯವಾಗಿದೆ.

ತೋಳ: ಹಂಪಿ ಪರಿಸರದಲ್ಲಿ ತೋಳಗಳ ಸಂಖ್ಯೆ ಬಹಳ ಕಡಿಮೆ. ಪಶುಪಾಲಕ ಸಮಾಜಗಳ ಕಾಲದಲ್ಲಿ ತೋಳಗಳಿಗೆ ಒಳ್ಳೆಯ ಆಹಾರದ ಅವಕಾಶವಿತು. ಮಾಂಸಾಹಾರಿ ಪ್ರಾಣಿಗಳಾದ ಹುಲಿ ಚಿರತೆಗಳಿಗೇ ಆಹಾರದ ಕೊರತೆ ಎದುರಾಗಿ ಆಹಾರ ಪೈಪೋಟಿ ಏರ್ಪಟ್ಟಾಗ ಸಹಜವಾಗಿಯೆ ತೋಳಗಳಿಗೆ ಹಂಪಿ ಪರಿಸರದಲ್ಲೆ ನೆಲೆ ಸಿಗದೆ ಚದುರಿವೆ. ಹೀಗಾದರೂ ಕಾಲ ಬದಲಾದ ಮೇಲೆ ತೋಳಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಂಪಿಯ ಬೆಟ್ಟಗುಡ್ಡಗಳಲ್ಲಿ ವಾಸಿಸಿರುವುದು ಕಂಡು ಬಂದಿದೆ. ಕುರುಬ ಗೊಲ್ಲ ಬೇಡ ಸಮುದಾಯಗಳು ವಾಸದ ನೆಲೆ ಕಂಡುಕೊಂಡ ಆಸುಪಾಸಿನಲ್ಲೆ ಅವರ ಪಶುಸಂಪತ್ತಿನ ಹಿನ್ನೆಲೆಯಲ್ಲಿ ತೋಳಗಳು ತಮ್ಮ ವಾಸದ ನೆಲೆಯನ್ನು ಕೂಡ ರೂಪಿಸಿಕೊಂಡವು. ಆಹಾರದ ನೆಲೆಯಲ್ಲಿ ಇದು ನಿಜವೇ. ಹಂಪಿ ಜನಪದರು ತೋಳದ ಬರ್ಬರತೆಯನ್ನು ಬಹಳ ಚೆನ್ನಾಗಿ ವಿವರಿಸುತ್ತಾರೆ. ಹಂಪಿಯ ಹುಲ್ಲುಗಾವಲಿಗೆ ಕುರಿ ಮೇಯಿಸಲು ಬಂದಿದ್ದ ಕುರುಬರ ಪ್ರಕಾರ, ತೋಳವು ತಾನು ಹಿಡಿದ ಕುರಿಯನ್ನು ಒಂದೆರಡೇ ನಿಮಿಷದಲ್ಲಿ ತುಂಡು ತುಂಡು ಮಾಡಿಬಿಡುತ್ತದೆ. ಕತ್ತನ್ನು ಬಲವಾಗಿ ಕಚ್ಚಿ ಹಿಡಿದು ಹೆಗಲ ಮೇಲೆ ಹೊತ್ತುಕೊಂಡು ಚಾಣಾಕ್ಷವಾಗಿ ಓಡಿ ಹೋಗುತ್ತದೆ. ಯಾವ ಕಾರಣಕ್ಕೂ ಹಿಡಿದ ಬಲಿ ಬದುಕಿದ್ದು ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕಾಗಿಯೇ ಮೊದಲು ಕತ್ತು ಕಾಲುಗಳನ್ನು ಮುರಿದು ಬಿಟ್ಟಿರುತ್ತದೆ. ಗುಡ್ಡದ ಮರೆಗೆ ಹಿಡಿದ ಕುರಿಯನ್ನು ಹೊತ್ತೊಯ್ಯುವಾಗ ಒಂದೊಂದು ತೋಳವೂ ಹೊತ್ತು ಸಾಗಿಸುವ ಗುರಿಯನ್ನು ಹಂಚಿಕೊಂಡಿರುತ್ತವೆ. ಬಹುಬೇಗನೆ ಬಲಿಯನ್ನು ತಿಂದು ಮುಗಿಸಿಬಿಡುತ್ತವೆ. ಹೀಗೆ ಕುರಿ ಮಂದೆಯ ಯಜಮಾನ ವಿವರಿಸುವ ಮೂಲಕ ತೋಳದ ಚಾಣಕ್ಷತೆಯನ್ನು ಅರುಹಿದ. ರಾತ್ರಿ ವೇಳೆ ಕುರಿ ಮಂದೆಗೆ ದೊಡ್ಡ ಸವಾಲು ತೋಳಗಳದೇ ಆದ್ದರಿಂದ ಕಾಯುವ ಕಷ್ಟವನ್ನು ತೋಳಗಳಿಗೆ ಹಿಡಿ ಶಾಪ ಹಾಕಿ ಆತ ಹೇಳುವಾಗ ಜೀವಜಾಲದ ಸಂಬಂಧಕ್ಕೂ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧಕ್ಕೂ ಇರುವ ವಿಪರ್ಯಾಸಗಳು ಎದುರಾದವು.

ತೋಳವನ್ನು ವಂಚಕ, ನೀಚ ಎಂಬ ಮಾನವ ಕಲ್ಪನೆಯಲ್ಲು ನೋಡಲಾಗುತ್ತದೆ. ತೋಳ ಬೇಟೆಯಿಂದ ಸತ್ತಾಗ ಅದನ್ನು ಮನುಷ್ಯರಿಗೆ ಮಾಡಿದ ಸಂಸ್ಕಾರದ ರೀತಿಯಲ್ಲೆ ಹೂಳುವ ಪದ್ಧತಿ ಇದೆ. ಪಶುಪಾಲಕ ನಯವಂಚಕ ಪ್ರಾಣಿ ತೋಳವಾದ್ದರಿಂದ ಅದಕ್ಕೆ ವಿಶೇಷ ಗೌರವವಿಲ್ಲ. ಕೊಲ್ಲಬೇಕಾದ ಪ್ರಾಣಿಗಳ ಪಟ್ಟಿಯಲ್ಲಿ ತೋಳಕ್ಕೆ ಮೂರನೆ ಸ್ಥಾನವಿದೆ. ಹುಲಿ ಚಿರತೆಗಳ ನಂತರದ ಅಪಾಯಕಾರಿ ಪ್ರಾಣಿ ಪಶುಪಾಲಕರಿಗೆ ತೋಳ. ಕನಸಿನಲ್ಲಿ ತೋಳ ಕಂಡರೆ ಮೋಸಕ್ಕೆ ಒಳಗಾಗುತ್ತೇವೆ ಎಂಬ ನಂಬಿಕೆ ಇದೆ. ಮಕ್ಕಳನ್ನು ತೋಳಗಳು ಎತ್ತಿಕೊಂಡು ಹೋಗುತ್ತವೆ ಎಂಬ ಭಯವಿದ್ದು ತೋಳವು ದುಷ್ಟ ಶಕ್ತಿಯ ಪ್ರತಿನಿಧಿ ಎಂತಲೂ ಭಾವಿಸಲಾಗುತ್ತದೆ. ತೋಳ ಮಾನವ ಕಲ್ಪನೆಯೂ ಹಂಪಿ ಪರಿಸರದಲ್ಲಿ ಇದೆ. ಜಗತ್ತಿನ ಉದ್ದಕ್ಕೂ ಇರುವ ಈ ನಂಬಿಕೆಯು ಆದಿ ಶಿಲಾಯುಗದ ಜೀವನ ನಂಬಿಕೆಗಳನ್ನು ಪ್ರತಿಬಿಂಬಿಸುತ್ತಿದೆ. ಒಟ್ಟಿನಲ್ಲಿ ಹಂಪಿ ಪರಿಸರದಲ್ಲಿ ತೋಳಗಳು ಬಹಳ ಕಡಿಮೆ ಪ್ರಮಾಣದಲ್ಲಿವೆ. ಜನ ವಸತಿಯ ಒತ್ತಡದಿಂದಾಗಿ ಅವು ದೂರದ ಪ್ರದೇಶಗಳನ್ನು ಆಯ್ದುಕೊಂಡಿವೆ. ಪುರುಷ ಪ್ರಧಾನ ಸಂಸ್ಕೃತಿಯು ಕೇಡನ್ನು ತೋಳಕ್ಕೆ ಸಂಕೇತಿಸಿರುವುದು ಗಮನಾರ್ಹ ಅಂಶವಾಗಿದೆ.

ಜಿಂಕೆ: ಹಂಪಿ ಪರಿಸರದಲ್ಲಿ ಈಗ ಜಿಂಕೆಗಳಿಲ್ಲ. ಯುಗಾದಿ ಬೇಟೆಯಲ್ಲಿ ಜಿಂಕೆಗಳನ್ನು ಕೊಂದು ಮಾಂಸಕ್ಕಾಗಿ ಹಿಂದೆ ಬಹಳವಾಗಿ ಬಳಸುತ್ತಿದ್ದರಂತೆ. ಚಿಗರೆ ಬೇಟೆ ಎಂದ ಕೂಡಲೆ ಬಾಯಲ್ಲಿ ನೀರೂರುತ್ತೆ ಎಂದು ಹೇಳುವವರು ಹಂಪಿ ಪರಿಸರದಲ್ಲಿ ಈಗ ಅವು ಸಿಗುರುವುದಿಲ್ಲವಲ್ಲಾ ಎಂದು ಕೊರಗುವುದಿದೆ. ವಿಜಯನಗರದ ಕಾಲದಲ್ಲಿ ಚಿಗರಿ ಬೇಟೆ ಮಾಡುವುದೆಂದರೆ ಸೈನಿಕರಿಗೆ ಹೆಮ್ಮೆಯ ಸಂಗತಿಯಾಗಿತ್ತಂತೆ. ಇದು ಎಷ್ಟು ನಿಜವೊ ಸುಳ್ಳೊ ಒಟ್ಟಿನಲ್ಲಿ ಆ ಕಾಲದಿಂದಲೂ ಅವ್ಯಾಹತವಾಗಿ ಜಿಂಕೆಗಳನ್ನು ಮಾಂಸಕ್ಕಾಗಿ ಬೇಟೆ ಆಡಿರುವುದಂತು ಸ್ಪಷ್ಟ. ಜಿಂಕೆ ಮಾಂಸ ಬಲು ರುಚಿ ಎಂದು ಹೇಳುವರು. ಇಪ್ಪತ್ತು ವರ್ಷಗಳ ಹಿಂದೆಯಷ್ಟೆ ಈ ಜಿಂಕೆಗಳು ಕಣ್ಮರೆಯಾದವು ಎನ್ನುವ ಜನ ಈಗಲೂ ಇವು ಮರೆಯಲ್ಲಿ ಉಳಿದಿರಬಹುದೆಂದು ಹೇಳುವರು. ಪ್ರಾಚೀನ ಪಶುಪಾಲಕರ ರೇಖಾಚಿತ್ರಗಳಲ್ಲಿ ಜಿಂಕೆಗಳ ಬಣ್ಣದ ಚಿತ್ರಗಳು ಹಂಪಿಯ ಬಂಡೆಗಳಲ್ಲಿ ಗವಿಗಳ ಗೋಡೆಗಳಲ್ಲಿ ಕಂಡು ಬರುವುದಿದೆ. ಹಂಪಿಯ ಪರಿಸರದ ನಡುಗಡ್ಡೆ ಗ್ರಾಮಗಳ ಪ್ರವಾಸೋದ್ಯಮ ಅಡ್ಡೆಗಳಲ್ಲಿ ಅಪರೂಪಕ್ಕೆ ಜಿಂಕೆಗಳನ್ನು ಸಾಕಿರುವುದೂ ಇದೆ. ಪ್ರವಾಸಿಗರ ಮನಸೆಳೆಯಲು ಇಂತಹ ಪ್ರೀತಿಯನ್ನು ಜಿಂಕೆಗಳ ಮೇಲೆ ತೋರಲಾಗುತ್ತದೆ.

ಕಡವೆ: ದನದ ಜಾತಿಯ ಕಡವೆಯನ್ನು ಪಳಗಿಸಲು ಮಾನವ ವಿಫಲನಾಗಿದ್ದಾನೆ ದನದಂತೆಯೆ ಎತ್ತರಕ್ಕೆ ಕಾಣುವ ಕಡವೆಯು ಜಿಂಕೆಗಳ ದೊಡ್ಡಣ್ಣನಂತೆಯು ಕಾಣುತ್ತವೆ. ಒಟ್ಟಿನಲ್ಲಿ ಹಸು ಮತ್ತು ಜಿಂಕೆ ಎರಡರ ನಡುವಿನ ಸಸ್ಯಾಹಾರಿ ಕಡವೆಯು ಮುಗ್ಧವಾದದ್ದು ಹಾಗೆಯೆ ಅಸಹಾಯಕವಾದದ್ದು. ಹಂಪಿ ಪರಿಸರದಲ್ಲಿ ಈಗ ಕಡವೆಗಳಿಲ್ಲ. ಅಕಸ್ಮಾತ್ ಜಿಂಕೆ ಎಲ್ಲೋ ದೂರದ ಬಂಡೆ ಸಾಲುಗಳ ಮರೆಯಲ್ಲಿ ಕಂಡರೂ ಕಡವೆ ಮಾತ್ರ ಕಾಣಲು ಸಾಧ್ಯವೇ ಇಲ್ಲ. ಸುಲಭವಾಗಿ ಬೇಟೆ ಆಡಿ ಕಡಮೆಗಳನ್ನು ಈ ಪರಿಸರದ ಜನಪದ ಮುಗಿಸಿಬಿಟ್ಟಿದೆ. ಬೇಟೆ ಸಂಸ್ಕೃತಿಯ ಕಾಲದಲ್ಲೇ ಕಡವೆಗಳು ಈ ಪ್ರದೇಶದ ಅಳಿವಿನಂಚಿನ ಪ್ರಾಣಿಗಳಾಗಿರಬೇಕು. ಪಶುಪಾಲನಾ ರೀತಿನೀತಿಗೆ ಒಗ್ಗದ ಕಡವೆಗಳನ್ನು ಬೇಟೆ ಸಂಸ್ಕೃತಿಯ ಸಮುದಾಯಗಳು ಮಾಂಸಕ್ಕಾಗಿ ಇದನ್ನು ಸೀಮಿತಗೊಳಿಸಿರಬೇಕು. ಹೆಚ್ಚಾಗಿ ಮಾಂಸ ಸಿಗುವಂತಿದ್ದು, ಕಡಿಮೆ ಶ್ರಮದಲ್ಲಿ ಅಪಾಯವಿಲ್ಲದೆ ಬೇಟೆ ಮುಗಿಸಬಹುದಾದ್ದರಿಂದ ಜನ ಕಡವೆಗಳನ್ನೇ ಬೇಟೆಗೆ ಗುರಿಯಾಗಿಸಿಕೊಂಡಿದ್ದಾರೆ. ಕೃಷಿ ಸಂಸ್ಕೃತಿಯಲ್ಲಿ ಅಕಸ್ಮಾತ್ ಬದುಕುಳಿದ ಕಡವೆಗಳು ದೂರ ಸರಿದಿವೆ. ಆದರೆ ಕಾಡಿನಲ್ಲೂ ಇವುಗಳ ಬೇಟೆ ನಿಲ್ಲಲಿಲ್ಲ. ಈಗಲೂ ನಿಂತಿಲ್ಲ. ಹೀಗಾಗಿ ಕಡಮೆಗಳ ಅತ್ಯಂತ ಅಪಾಯದಲ್ಲಿರುವ ಪ್ರಾಣಿಗಳು. ಹಂಪಿ ಪರಿಸರದಲ್ಲಿ ಕಡಮೆಗಳು ಇಲ್ಲವೇ ಇಲ್ಲ. ಕಡಮೆಗಳ ರೇಖಾಚಿತ್ರಗಳೂ ಕೂಡ ಹಂಪಿಯ ಬಂಡೆಗಳ ಮೇಲೆ ಕಾಣುತ್ತವೆ. ಇಂತಹ ಚಿತ್ರಗಳಿಂದ ಮಾತ್ರ ಹಂಪಿಯಲ್ಲಿ ಕಡವೆಗಳಿದ್ದವೆಂದು ನೋಡಬಹುದಷ್ಟೆ. ಅಲ್ಲೂ ಕೂಡ ಬೇಟೆಯ ಹಿನ್ನಲೆಯಲ್ಲಿ ಇವುಗಳನ್ನು ನೋಡಬಹುದೇ ವಿನಃ ಸಹಜ ಸುಖದಿಂದ ಅವು ಮೇಯುತ್ತಿರುವ ರೀತಿಯನ್ನಲ್ಲ.

ಹುಲಿ: ಪಶುಪಾಲಕ ಸಂಸ್ಕೃತಿ ಹುಲಿಯ ಆಹಾರಕ್ಕೆ ಯಾವ ಸವಾಲನ್ನು ಒಡ್ಡಿರಲಿಲ್ಲ. ಒಂದಿ ರೀತಿಯಲ್ಲಿ ಕಾಡಿನಿಂದ ಅಂಚಿಗೆ ಬಂದಿದ್ದ ಪಶುಪಾಲಕ ಸಮುದಾಯಗಳು ದೇವರ ಹೆಸರಲ್ಲಿ ಹತ್ತಾರು ಕಾಡುಗಳನ್ನು ಬಿಟ್ಟು ಅಲ್ಲಿರಬಹುದಾದ ಪ್ರಾಣಿಗಳಿಗೆ ಸೂಕ್ತ ಅವಕಾಶವನ್ನೆ ಬಿಟ್ಟುಕೊಟ್ಟಿತು. ಹೀಗಾಗಿ ಹುಲಿ ಸಂತಾನ ಹಂಪಿ ಪರಿಸರದ ಬೆಟ್ಟಗುಡ್ಡಗಳ ಕಾಡಲ್ಲಿ ಮುಂದುವರಿದಿತ್ತು. ಆದರೆ ವಿಜಯನಗರ ಸಾಮ್ರಾಜ್ಯ ನಗರೀಕರಣ ಪ್ರಕ್ರಿಯೆಯನ್ನು ಇಡೀ ಬೆಟ್ಟಗುಡ್ಡಗಳಿಗೆಲ್ಲ ವ್ಯಾಪಿಸಿದ ಮೇಲೆ ಹುಲಿಗಳಿಗೆ ಪಶುಪಾಲಕ ಅಥವಾ ಬೇಟೆಗಾರ ಸಮುದಾಯಗಳು ಒಡ್ಡಬಹುದಾದ ಅಪಾಯಕ್ಕಿಂತ ಮಿಗಿಲಾಗಿ ಕಂಡಿದ್ದರಿಂದ ಅವು ತಂತಾನೆ ಕಣ್ಮರೆಯಾದವು. ಸಾಮ್ರಾಜ್ಯದ ವೈಭವದ ವಿಸ್ತರಣೆಯಿಂದ ಹುಲಿಗಳು ದೂರದ ಕಾಡಿಗೆ ವಲಸೆ ಹೋಗಿವೆ. ಹೀಗಾಗಿಯೆ ಹಂಪಿ ಪರಿಸರದಲ್ಲಿ ಹುಲಿಗಳಿಲ್ಲ. ಈಗ ಅಂತಹ ಕಾಡೂ ಇಲ್ಲ. ಬೆಟ್ಟಗುಡ್ಡಗಳು ಕೂಡ ಜನ ಸಂಚಾರದಿಂದ ಜೀವಜಾಲದ ಸಂಬಂಧವನ್ನು ಕಳೆದುಕೊಳ್ಳುತ್ತಿವೆ. ಅಲ್ಲದೆ ಮನುಷ್ಯರ ಬೇಟೆಯ ದಾಹ ಹಿಂದೆ ಹುಲಿಗಳನ್ನೂ ಬಿಡುತ್ತಿರಲಿಲ್ಲ. ರಾಜ ಮಹಾರಾಜರು ಹುಲಿಬೇಟೆಗೆ ಸೈನಿಕರನ್ನೆ ಕಟ್ಟಿಕೊಂಡು ಹೋಗಿ ದಿಗ್ವಿಜಯ ಸಾಧಿಸುತ್ತಿದ್ದ ಕಥೆಗಳು ವಿಜಯನಗರ ಸಾಮ್ರಾಜ್ಯಕ್ಕೂ ಸಲ್ಲುತ್ತವೆ. ಜೊತೆಗೆ ಆಹಾರದ ಕೊರತೆಯಿಂದಲೂ ಹುಲಿಗಳು ಹಂಪಿ ಪರಿಸರವನ್ನು ಬಿಡಬೇಕಾಯಿತು. ನರಭಕ್ಷಕ ಹುಲಿಗಳ ಹಳೆಯ ಕಥೆಗಳನ್ನು ಜನ ನೆನಪಿಸುವುದಿದೆ. ಹಂಪಿಯ ವಾಸ್ತುಶಿಲ್ಪದಲ್ಲಿ ಹುಲಿಗಳ ಚಿತ್ರ ಕಂಡು ಬರುವುದು ಮಾಮೂಲು. ಇದು ಸಾಮ್ರಾಜ್ಯದ ಸಾಮರ್ಥ್ಯವನ್ನು ತೋರಿಸಿಕೊಳ್ಳಲು ಬಳಸಿದ ಪ್ರತಿಮೆ ಅಷ್ಟೆ. ಹಂಪಿಯು ಪಾಳು ಬಿದ್ದು ಎಷ್ಟೋ ವರ್ಷಗಳು ಉರುಳಿದ ಮೇಲೆ ಅಲ್ಲಿ ಹುಲಿಗಳು ಸೇರಿಕೊಂಡಿದ್ದನ್ನು ಹಿಂದಿನವರು ಕಂಡಿದ್ದರಂತೆ. ಈಗ ಅಂತಹ ನಿರೂಪಗಳು ಇಲ್ಲ.