ಕಾಡುಮೇಕೆ: ನಾಶವಾಗಿರಬಹುದಾದ ಒಂದು ಜಾತಿಯ ಮೇಕೆ. ಹಂಪಿ ಪರಿಸರದಲ್ಲಿ ಕಾಡು ಮೇಕೆ ಇದ್ದವೆಂದು ಕೆಲವರು ಹೇಳುವರು. ಮತ್ತೆ ಕೆಲವರು ಅಂತಹ ಪ್ರಾಣಿಯನ್ನು ಕಂಡಿಲ್ಲ ಎನ್ನುವರು. ಕದ್ದು ಮುಚ್ಚಿ ಬದುಕುವ ಕಾಡು ಮೇಕೆಯು ಹೇಗೆ ಈ ಪರಿಸರದಲ್ಲಿ ಅಳಿದು ಹೋಯಿತೊ ಜನ ವಿವರ ನೀಡಲಾರರು. ಹಾಗೆಯೆ ಕಾಡು ಕುರಿಯ ಬಗೆಗೂ ಹೀಗೇ ಹೇಳುವರು. ಬೆಟ್ಟ ಗುಡ್ಡಗಳಲ್ಲಿ ಕಾಡು ಕುರಿಗಳು ಚಿರತೆಗಳಿಗೆ ಸುಲಭ ಆಹಾರವಾಗಿದ್ದವು. ತೋಳಗಳಂತು ಚಾಣಾಕ್ಷತೆಯಲ್ಲಿ ಕಾಡು ಕುರಿ ಮೇಕೆಗಳನ್ನು ಭಕ್ಷಿಸಿ ಮುಗಿಸಿವೆ. ತಮ್ಮ ತಾತ ಮುತ್ತಾತಂದಿರು ಕಾಡು ಕುರಿ ಮೇಕೆಗಳನ್ನು ಕಂಡಿದ್ದರಂತೆ ಎಂದು ಹೇಳುವರು. ಪಶುಪಾಲಕ ಸಮುದಾಯಗಳೆ ಈ ಪ್ರಾಣಿಗಳನ್ನು ಮರೆತು ಬಿಟ್ಟಿವೆ. ಪಶುಪಾಲಕರು ಕಾಡುಕುರಿ ಮೇಕೆಗಳನ್ನೆ ಪಳಗಿಸಿ ಸಂಸ್ಕೃತಿಯನ್ನು ರೂಪಿಸಿದ್ದುದು. ಆದರೆ ಕಡಮೆ, ಕಾಡೆಮ್ಮೆ ಕಾಡಂದಿ, ಕಾಡು ಕುರಿ, ಕಾಡು ಮೇಕೆಯಂತಹ ಉಳಿದ ಹತ್ತಾರು ಪ್ರಾಣಿಗಳು ಮನುಷ್ಯರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪದ ಯಾವುದನ್ನೇ ಆದರೂ ಮನುಷ್ಯ ನಾಶಪಡಿಸಲು ಮುಂದಾಗುವನು. ಅದರ ಪರಿಣಾಮದಿಂದಲೇ ಇಂತಹ ಮುಗ್ಧ ಪ್ರಾಣಿಗಳು ಅಸ್ತಿತ್ವ ಕಳೆದುಕೊಂಡಿರುವುದು.

ಚಿಪ್ಪಂದಿ: ಅಪಾಯ ಬಂದೊದಗಿದಾಗ ಸುರಳಿಯಂತೆ ಸುತ್ತಿಕೊಂಡು ತನ್ನ ಚಿಪ್ಪಿನಲ್ಲೆ ಅಡಗಿಕೊಳ್ಳುವ ಹಂದಿಯೆ ಚಿಪ್ಪಂದಿ. ಅಪರೂಪದ ಪ್ರಾಣಿಗಳಲ್ಲಿ ಇದೂ ಒಂದು. ಬೇಟೆನಾಯಿಗಳು ತುಂಬ ಕಾಟ ಕೊಟ್ಟು ಆಟ ಆಡಿಸುವುದನ್ನು ಬೇಟೆಗಾರರು ಮನರಂಜನೆಯಂತೆ ನೋಡುವರು. ಚಾಣಾಕ್ಷತೆಯಿಂದ ಸುರುಳಿ ಸುತ್ತಿಕೊಂಡು ಸತ್ತಂತೆ ನಟಿಸುವ ಚಿಪ್ಪಂದಿಯು ಅಮಾಯಕವಾದುದೇ ಆದರೂ ಆಹಾರದ ಕಾರಣಕ್ಕೆ ಚಿಪ್ಪಂದಿಯನ್ನೂ ಅಲೆಮಾರಿಗಳು ಬೇಟೆ ಆಡುವುದಿದೆ. ಬೇಟೆಗೆ ಪೂರ್ವದಲ್ಲಿ ಚಿಪ್ಪಂದಿ ಎದಿರಾಗುವುದು ಕೂಡ ದುರದೃಷ್ಟಕರ ಎಂದೇ ತಿಳಿಯಲಾಗುತ್ತದೆ. ಚಿಪ್ಪಂದಿ ತಿಂದರೆ ಊದಿಕೊಂಡಿರುವವರ ಮೈನೀರು ಕರಗಿ ಹೋಗುವುದು ಎಂದು ನಂಬುವುದಿದೆ. ಹಂಪಿಯ ಶಿಲ್ಪಕಲೆಯ ಉಬ್ಬು ಚಿತ್ರಗಳಲ್ಲಿ ಮುಳ್ಳಂದಿ ಚಿಪ್ಪಂದಿಗಳನ್ನು ಹೋಲುವ ರಚನೆಗಳಿವೆ. ಹಂಪಿ ಜೀವಜಾಲದ ವಿಶಿಷ್ಟತೆ ಎಂಬಂತೆ ಚಿಪ್ಪಂದಿಗಳು ಉಳಿದಿವೆ. ಇಲ್ಲಿನ ಪರಿಸರವು ಬದುಕುಳಿಯಲು ಅವುಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಮುಳ್ಳಂದಿ: ಜೀವವಿಕಾಸದ ಅತಿ ಪ್ರಾಚೀನ ಪ್ರಾಣಿಗಳಲ್ಲಿ ಮುಳ್ಳಂದಿಯೂ ಒಂದು. ಬೇಟೆಗಾರರಿಗೆ ಇದು ಶುಭಕಾರಿಯಲ್ಲ. ಅಪಾಯಕಾರಿ ಪ್ರಾಣಿಯಾದರೂ ಮುಳ್ಳಂದಿಯ ಪಶುಪಾಲಕರಿಗೆ ದೊಡ್ಡ ಸವಾಲೆನೂ ಆಗಿರಲಿಲ್ಲ. ಬೇಟೆಗಾರರು ಕೂಡ ಈ ಪ್ರಾಣಿಯನ್ನು ವಿಶೇಷ ಎಂದು ಮಾನ್ಯ ಮಾಡಿಲ್ಲ. ಆದರೆ ಅದರ ಮೊನಚಾದ ಈಟಿಯಂತಹ ಮುಳ್ಳುಗಳು ನಿಜಕ್ಕೂ ಅಪಾಯಕಾರಿ ಅಸ್ತ್ರಗಳಾಗಿವೆ. ಮೂಲತಃ ಮುಳ್ಳಂದಿ ಅಪಶಕುನದ ಪ್ರಾಣಿಯಾಗಿ ಕಂಡಿದೆ. ಬೇಟೆಗೆ ಮೊದಲೇ ಈ ಪ್ರಾಣಿ ಅಡ್ಡ ಬಂದರೆ ಏನೋ ವೈಫಲ್ಯ ಕಾದಿದೆ ಎಂದು ಬೇಟೆಗಾರರು ಭಾವಿಸುವರು. ಇದರ ಮುಳ್ಳುಗಳನ್ನು ಕೊಂಡೊಯ್ದು ಮನೆಯಲ್ಲಿ ಇಟ್ಟುಕೊಂಡರೆ ಆ ಮನೆಯಲ್ಲಿ ಸದಾ ಜಗಳ ಇದ್ದೇ ಇರುತ್ತದೆ. ಎಂದು ತಿಳಿಯುತ್ತಾರೆ, ಪಶುಪಾಲಕ ಸಂಸ್ಕೃತಿಗಳಿಗೆ ಬೇಟೆ ಅನಿವಾರ್ಯವಾಗಿದ್ದರಿಂದ ಆಹಾರಕ್ಕಾಗಿಯೂ ಮುಳ್ಳಂದಿಯನ್ನು ಬೇಟೆ ಆಡುವುದಿತ್ತು. ಈ ಕಾಲದಲ್ಲಿ ಮುಳ್ಳಂದಿಗಳ ಬಗ್ಗೆ ವಿಶೇಷ ಗಮನವಿಲ್ಲ. ಬೆಟ್ಟಕ್ಕೆ ಬೆಂಕಿ ಬಿದ್ದಾಗ ಅವು ಬೆಂಕಿಗೆ ಸಿಲುಕಿ ಸಾಯುವುದಿದೆ. ಅನೇಕ ಪ್ರಾಣಿ ಪಕ್ಷಿ ಕೀಟಗಳು ಕೂಡ ಇಂತಹ ಬೆಂಕಿಯಲ್ಲಿ ಸುಟ್ಟು ಬೂದಿಯಾಗುವುದು ಮಾಮೂಲೆನಿಸಿದೆ. ಮಾಟ ಮಂತ್ರದ ಹೆಸರಲ್ಲು ಬೆಂಕಿ ಹಚ್ಚುವರೆಂಬ ವದಂತಿಗಳಿವೆ. ನಿಧಿಗಳ್ಳರು ಇಂತಹ ಬೆಂಕಿ ಹಚ್ಚುವುದಕ್ಕೂ ಮುಂದಾಗುವರು. ಮುಳ್ಳಂದಿಗಳ ಸಂಖ್ಯೆ ತುಂಬ ಕಡಿಮೆಯಾಗಿದೆ. ಮಾಟಮಂತ್ರಗಳಲ್ಲಿ ಮುಳ್ಳಂದಿಯ ತಲೆ ಬುರುಡೆಯು ಅತ್ಯಂತ ಪರಿಣಾಮಕಾರಿ ಎಂದು ಹೇಳುವರು. ಇದೊಂದು ಮಾಂತ್ರಿಕ ಪ್ರಾಣಿಯೂ ಹೌದಂತೆ. ಕೆಲವೊಮ್ಮೆ ದೆವ್ವಗಳೇ ಮುಳ್ಳಂದಿಯ ರೂಪ ಧರಿಸಿ ಎದುರಾಗುತ್ತವೆ ಎಂದು ಹೇಳುವರು. ಇಂತಹ ಕಲ್ಪನೆಗಳು ಬೃಹತ್ ಶಿಲಾಯುಗದ ಕಾಲಕ್ಕೆ ರೂಪುಗೊಂಡಿರಬೇಕು. ಅತಿಮಾನುಷ ಕಲ್ಪನೆ, ಕೇಡಿನ ಭಯ ಇಂತಹ ನಂಬಿಕೆಗಳನ್ನು ರೂಪಿಸಿವೆ.

ಕಾಡಂದಿ: ಹಂಪಿ ಪರಿಸರದಲ್ಲಿ ಕಾಡುಹಂದಿಗಳು ಮಹತ್ವದ ಸ್ಥಾನವನ್ನೆ ಪಡೆದಿವೆ. ಪಶುಪಾಲಕರಿಗೂ ಬೇಟೆ ಸಮುದಾಯದವರಿಗೂ ಕಾಡಂದಿಗಳು ವಿಪುಲ ಆಹಾರವಾಗಿದ್ದವು. ಕೃಷಿಕರಿಗೆ ಪೀಡಕವಾಗಿದ್ದ ಕಾಡುಹಂದಿಗಳು ಬೇಟೆಗೆ ಯೋಗ್ಯ ಪ್ರಾಣಿಗಳೆಂದು ಮಾನ್ಯವಾಗಿದ್ದವು. ಸಮೃದ್ದವಾಗಿ ಬೆಳೆದಿರುತ್ತಿದ್ದ ಹಂದಿಗಳ ಬೇಟೆಯೂ ಶೌರ್ಯ ಪರಾಕ್ರಮಗಳನ್ನು ಪ್ರದರ್ಶಿಸಲು ಬೇಕಾಗಿದ್ದ ತಕ್ಕ ನೈಸರ್ಗಿಕ ಸವಾಲುಗಳೇ ಆಗಿದ್ದವು. ಹಂದಿ ಬೇಟೆಯನ್ನು ಸ್ವಯಂ ಶಿವನೇ ಮಾಡಿದ ಪುರಾಣಗಳಿವೆ ಎಂತಾದರೆ ಅದು ಹಂದಿ ಹಾಗು ಮಾನವರ ನಡುವಿನ ಶಕ್ತಿ ಸಾಮರ್ಥ್ಯಗಳ ದೈವಿಕ ಲೌಖಿಕ ಸ್ಥಾನ ಮಾನಗಳನ್ನು ಸಾರುವಂತೆಯೇ ಇದೆ. ವಿಜಯನಗರ ಸಾಮ್ರಾಜ್ಯದ ರಾಜಲಾಂಛನದ ಪಟ್ಟವನ್ನೆ ಹಂದಿಗಳು ಪಡೆದಿವೆ ಎಂದರೆ ಹಂದಿಗಳ ಬಗೆಗಿನ ಮಾನವ ಸಂಬಂಧ ತಿಳಿಯುತ್ತದೆ.

ಹಂಪಿ ಪರಿಸರದಲ್ಲಿ ಬೇಡ ಸಮುದಾಯದವರು ತಮ್ಮ ಪೂರ್ವಕಾಲದ ಬೇಟೆ ಸಂಸ್ಕೃತಿಯನ್ನು ಆಚರಿಸುವ ವೇಳೆ ಹಂದಿ ಬೇಟೆಗೆ ದೊಡ್ಡ ಸ್ಥಾನ ನೀಡುವರು. ಯುಗಾದಿ ಹಬ್ಬದ ವೇಳೆ ಅಮಾವಾಸ್ಯೆ ದಿನದಂದು ಹಂದಿ ಬೇಟೆಯನ್ನು ಕೈಗೊಳ್ಳಲಾಗುವುದು. ಆ ದಿನ ಯಾವುದೇ ಪ್ರಾಣಿಯ ಬೇಟೆ ಆಗಬಹುದಾದರೂ ಬಲಿಷ್ಠ ಕೋರೆ ಹಂದಿಯ ಬೇಟೆಯಾದರೆ ಅದು ಆ ವರ್ಷದ ಆರಂಭದ ಶುಭಕಾರ್ಯ ಎಂದಾಗುವುದು. ಕಾಡಂದಿ ಬೇಟೆಯು ಬೇಡ ಸಮುದಾಯದ ಸಾಮರ್ಥ್ಯವನ್ನು ಪ್ರತಿನಿಧಿಸುವುದೇ ಆಗಿದೆ. ಕೇವಲ ಆಹಾರಕ್ಕಾಗಿ ಹಂದಿ ಬೇಟೆಯನ್ನು ಮಾಡುವುದಿಲ್ಲ. ತಮ್ಮ ಬೇಟೆ ಸಂಸ್ಕೃತಿಯ ಸ್ಮೃತಿಗಳನ್ನು ಪರಂಪರಾಗತವಾಗಿ ಪ್ರತಿನಿಧಿಸಿ ಆಚರಿಸಿಕೊಳ್ಳಲು ಹಂದಿ ಬೇಟೆಯನ್ನು ಕೈಗೊಳ್ಳಲಾಗುವುದು. ಹಂದಿಯು ಬೇಡರಿಗೆ ಸಾಂಸ್ಕೃತಿಕ ಸಂಕೇತವೂ ಹೌದು. ಕಾಡಿನ ಗತಕಾಲದ ಜೀವನ ಕ್ರಮದಲ್ಲಿ ಹಂದಿಯು ಬೇಟೆ ಸಮುದಾಯಗಳ ಅಸ್ತಿತ್ವಕ್ಕಾಗಿ ಜೀವ ಕಳೆದುಕೊಳ್ಳುತ್ತಾ ಬಂದ ಪ್ರಾಣಿ. ಹೀಗಾಗಿ ಬೇಡರಿಗೆ ಹಂದಿ ಬೇಟೆಯು ಆಹಾರದ ಕೃತಜ್ಞತೆಯ ಪವಿತ್ರ ಆಚರಣೆಯೂ ಆಗಿದೆ. ಈಗಲೂ ಕಾಡಂದಿಗಳ ಬೇಟೆ ಆಹಾರಕ್ಕಾಗಿ ಅಪರೂಪಕ್ಕೆ ನಡೆಯುವುದಿದೆ. ಹಂಪಿ ಪರಿಸರದ ಬೇಡ ಸಮುದಾಯದ ಜಾನಪದ ಆಚರಣೆಗಳಲ್ಲಿ ಹಂದಿಯ ಪಾತ್ರ ಹಿರಿದು. ಬೇಟೆ ಸಂಸ್ಕೃತಿಯ ಕೊನೆಯ ಕೊಂಡಿಯಂತೆ ಹಂದಿ ಬೇಟೆಯ ಹಬ್ಬ ಯುಗಾದಿ ಹಬ್ಬದ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದುಕೊಂಡು ಬರುತ್ತಿದೆ.

ಕಾಡು ಬೆಕ್ಕು: ಕಾಡಿನ ಬೆಕ್ಕಿನಲ್ಲೆ ಹಲವು ಪ್ರಭೇದಗಳಿವೆ. ಇವುಗಳಲ್ಲೆಲ್ಲ ಪುನುಗಿನ ಬೆಕ್ಕು ಪ್ರಖ್ಯಾತವಾದದ್ದು. ಹಂಪಿ ಪರಿಸರದಲ್ಲಿ ಪುನುಗಿನ ಬೆಕ್ಕುಗಳಿವೆ. ಇದರಲ್ಲಿ ಸಿಗುವ ಸುವಾಸನೆಯು ತುಂಬಾ ಬೆಲೆಯುಳ್ಳದ್ದಾಗಿದೆ. ಪುನುಗಿನ ಬೆಕ್ಕು ಗುಡ್ಡ ಗಾಡುಗಳಲ್ಲಿ ವಾಸಿಸುವಂತದ್ದಾಗಿದ್ದು ಸಲೀಸಾಗಿ ಬೇಟೆಗೆ ಸಿಗುವಂತದಲ್ಲ. ಪುನುಗಿನ ಬೆಕ್ಕನ್ನು ಕೊಂದು ಸೀಳಿ ಅದರ ಗುದದ್ವಾರದ ಬಳಿ ಇರುವ ಕರುಳಿನಿಂದ ಸುಗಂಧವನ್ನು ಸಂಗ್ರಹಿಸಲಾಗುವುದು ಎಂದು ಹೇಳುವುದಿದೆ. ಕಾಡುಬೆಕ್ಕು ಪುನುಗಿನ ಬೆಕ್ಕಿಗಿಂತಲೂ ದಪ್ಪವಾಗಿದ್ದು ಆಹಾರದ ಸಲುವಾಗಿ ಕಾಡುಬೆಕ್ಕನ್ನು ಬೇಟೆ ಆಡುವುದಿದೆ, ಬಾಣಂತಿಯರು ಕಾಡುಬೆಕ್ಕನ್ನು ತಿಂದರೆ ಊದಿಕೊಂಡಿರುವ ಮೈ ಇಳಿಯುವುದೆಂದು ಜನರು ತಿಳಿದಿದ್ದಾರೆ. ಸಾಮಾನ್ಯವಾಗಿ ಎಲ್ಲೆಡೆ ಇರುವಂತೆ ಬೆಕ್ಕಿನ ಬಗೆಗಿನ ಶುಭ ಅಶುಭ ಕಲ್ಪನೆಗಳು ಹಂಪಿಯ ಪರಿಸರದಲ್ಲು ಇವೆ. ಚಿರತೆ ಬೆಕ್ಕು ಎಂಬ ಮತ್ತೊಂದು ಬಗೆಯ ಬೆಕ್ಕನ್ನು ಹಂಪಿ ಪರಿಸರದಲ್ಲಿ ಜನಪದರು ಗುರುತಿಸುವರು. ಪುಟ್ಟಗಾತ್ರದಲ್ಲಿದ್ದರೂ ಚಿರತೆಯನ್ನು ಹೋಲುವ ಬಿರತೆ ಬೆಕ್ಕು ಬೆಟ್ಟಗುಡ್ಡಗಳಲ್ಲಿ ವಾಸವಾಗಿವೆ ಎಂದು ಹೇಳುವರು.

ಮೊಲ: ಆಹಾರದ ಸಲುವಾಗಿ ಮೊಲಗಳನ್ನು ಬೇಟೆ ಆಡುವುದು ಹಂಪಿ ಪರಿಸರದಲ್ಲಿ ಸ್ವಾಭಾವಿಕ ಕ್ರಿಯೆಯಾಗಿ ಒಂದು ಕಾಲಕ್ಕೆ ಇತ್ತು. ಇಂದು ಯಾವ ಪ್ರಾಣಿ ಬೇಟೆಗೂ ಮುಕ್ತ ಅವಕಾಶ ಇಲ್ಲ. ಮುಗ್ಧ ಅಸಹಾಯಕ ಮೊಲದ ಬೇಟೆಗೆ ತೊಡಗಿ ಇಂದು ಯಾವ ಬೇಟೆ ವೀರನೂ ಮೀಸೆ ತಿರುವಿ ತೊಡೆ ತಟ್ಟಿ ಬಂದೂಕಿನ ತುದಿಗೆ ಮೊಲವನ್ನು ಚುಚ್ಚಿಕೊಂದು ಆ ವೀರ ಬೇಟೆಯ ಬಂದೂಕನ್ನು ಹೆಗಲ ಮೇಲೆ ಹಾಕಿಕೊಂಡು ಮುತ್ತೈದೆಯರಿಂದಲೊ ನವ ತರುಣೆಯರಿಂದಲೊ ಆರತಿ ಎತ್ತಿಸಿಕೊಳ್ಳಬೇಕಿಲ್ಲ. ಮೊಲದ ಬೇಟೆಯನ್ನೆ ಹುಲಿಯ ಬೇಟೆ ಎಂಬು ಬೀಗಿ ಯಾರಾದರೂ ಅಂತಹ ಬೇಟೆಯನ್ನು ಪ್ರದರ್ಶಿಸುತ್ತ ಓಣಿಗಳಲ್ಲಿ ಅಡ್ಡಾಡಿದರೆ ಅದಕ್ಕೆ ಏನೂ ಮಾಡಲಾಗುವುದಿಲ್ಲ. ವಿಜಯನಗರ ಸ್ಥಾಪನೆಯ ಹಿನ್ನೆಲೆಯಲ್ಲಿ ಮೊಲಗಳಿಗೆ ವಿಶೇಷ ಗೌರವವಿದೆ. ಹಂಪಿ ಪರಿಸರದಲ್ಲಿ ಬೇಟೆನಾಯಿಗಳನ್ನೆ ಅಟ್ಟಿಸಿಕೊಂಡು ಮೊಲಗಳು ನುಗ್ಗಿದ್ದವಂತೆ. ಇದನ್ನು ಕಂಡ ವಿದ್ಯಾರಣ್ಯರು ಹಂಪಿ ಪರಿಸರವು ವೀರ ಯೋಧರಿಗೆ ತಕ್ಕುದಾದ ನೆಲೆ ಎಂದು ಘೋಷಿಸಿದರಂತೆ. ಇಂತಹ ಐತಿಹ್ಯಗಳ ಆಶಯ ಬೇರೆ. ಅತ್ಯಂತ ದುರ್ಬಲರೇ ಶತ್ರುಗಳ ವಿರುದ್ದ ಎದ್ದು ನಿಂತು ಹಿಮ್ಮೆಟ್ಟಿಸಿದರು ಎಂಬ ಅರ್ಥಕ್ಕಾಗಿ ಈ ಬಗೆಯ ಐತಿಹ್ಯಗಳನ್ನು ಸಾಮ್ರಾಜ್ಯಗಳ ಹಿನ್ನೆಲೆಯಲ್ಲಿ ಕಟ್ಟಿಕೊಳ್ಳಲಾಗಿದೆ. ಹಂಪಿ ಪರಿಸರದಲ್ಲಿ ಈಗ ಮೊಲಗಳಿಗೆ ಒಳ್ಳೆಯ ಅವಕಾಶವೇ ಇದೆ. ಬೇಟೆಗಾರರ ಹಾವಳಿಯೂ ತಗ್ಗಿದೆ. ಕಾಡಿನಿಂದ ಮೊಲ ಹಿಡಿದು ಮನೆಗೆ ತಂದರೆ ಕೇಡು ಎಂಬ ಪ್ರತೀತಿ ಇದೆ. ಹಾಗೆಯೆ ಮೊಲ ದಾರಿ ತಪ್ಪಿ ಊರೊಳಗೆ ಬರಬಾರದು. ಅದರಿಂದ ಊರಿಗೆ ತೊಂದರೆ ಎಂತಲೂ ಭಾವಿಸುವುದಿದೆ.

ಮುಸಿಯ: ರಾಮಾಯಣದ ಕಿಷ್ಕಿಂದೆಯ ನೆಲೆ ಹಂಪಿಯಲ್ಲಿದೆ. ಹನುಮ ಪರಂಪರೆಯ ಅತಿ ಪ್ರಾಚೀನ ನೆಲೆಗಳಲ್ಲಿ ಹಂಪಿಯೂ ಒಂದು. ಮಂಗಗಳು ಹಂಪಿಯಲ್ಲಿ ಪವಿತ್ರ ಪ್ರಾಣಿಗಳು. ಹನುಮಂತನ ಪ್ರತಿರೂಪಗಳು ಈ ಮಂಗಗಳು ಎಂದು ಜನಪದರು ಭಾವಿಸುವರು. ಹನುಮಂತ ಗುಡಿಗಳು ಇಡೀ ಹಂಪಿಯ ಪರಿಸರದ ಉದ್ದಕ್ಕೂ ಹಬ್ಬಿವೆ. ವಿಜಯನಗರ ಸಾಮ್ರಾಜ್ಯದಲ್ಲಿ ಹನುಮಂತ ಪರಂಪರೆಗೆ ಹೆಚ್ಚಿನ ಮಾನ್ಯತೆ ಇತ್ತು. ಪ್ರಾಣಿಯನ್ನು ವೈಭವವಾಗಿ ಕಂಡ ಪ್ರಾಚೀನ ನಂಬಿಕೆ ಹಂಪಿ ಪರಿಸರದಲ್ಲೂ ಸಮಾನವಾಗಿದೆ. ಧಾರ್ಮಿಕವಾಗಿಯೂ ಈ ಪ್ರಾಣಿಯನ್ನು ಕಾಣುವುದಿದೆ. ಈ ಕಾರಣಗಳಿಂದ ಹಂಪಿಯಲಿ ಯಾವುದೇ ಮುಸಿಯ ಮಂಗವನ್ನು ಕೊಲ್ಲುವುದಿಲ್ಲ. ಕೊಂದರೆ ಮಹಾಪಾಪವನ್ನು ತಲೆ ಮೇಲೆ ಹೇರಿಕೊಂಡಂತೆ. ನರಕ ಕಟ್ಟಿಟ್ಟ ಬುತ್ತಿ. ಏಳೇಳು ಜನ್ಮಗಳಿಗೂ ಕೋತಿಯನ್ನು ಕೊಂದ ಪಾಪ ಕಳೆಯುವುದಿಲ್ಲ. ಹೀಗೆ ಮಂಗನ ಬಗ್ಗೆ ಭಯ ಭಕ್ತಿಗಳಿವೆ. ಪೂರ್ವಜರು ಮಂಗಗಳೇ ಎಂಬು ಆದಿಮ ಪ್ರಜ್ಞೆ ಇದ್ದಿದ್ದರಿಂದಲೇ ಇಂತಹ ಭಾವನೆ ಬೆಳೆದಿರುವುದು. ಮುಸಿಯ ಮಂಗ ಸತ್ತರೆ ಮನುಷ್ಯನ ಶವಸಂಸ್ಕಾರಗಳ ರೀತಿಯಲ್ಲೆ ಹೂಳುವುದನ್ನು ಹಂಪಿ ಪರಿಸರದಲ್ಲಿ ಕಾಣಬಹುದು.

ವಾಲಿ ಸುಗ್ರೀವರ ಗವಿಗಳು ಹಂಪಿಯಲ್ಲಿವೆ. ಲಂಕೆಗೆ ಸೇತುವೆಯನ್ನು ನಿರ್ಮಿಸುವಾಗ ಮಂಗಗಳೆಲ್ಲ ಬಂಡೆಗಳನ್ನು ಹೊತ್ತು ತರುತ್ತಿರುವಾಗ ಇನ್ನು ಕಲ್ಲುಬಂಡೆಗಳು ಸಾಕು ಎಂದಾಗ ಆ ಮಂಗಗಳೆಲ್ಲ ತಾವು ತರುತ್ತಿದ್ದ ಕಲ್ಲುಬಂಡೆಗಳನ್ನು ಹಂಪಿಯಲ್ಲೇ ಬಿಸಾಡಿದವಂತೆ. ಆ ಕಲ್ಲುಬಂಡೆಗಳೇ ಈಗ ಹಂಪಿಯಲ್ಲಿ ರಾಶಿರಾಶಿಯಾಗಿ ಬಿದ್ದಿರುವುದಂತೆ. ಇಷ್ಟೊಂದು ದೊಡ್ಡ ಗೌರವದಲ್ಲಿ ಸಾಮರ್ಥ್ಯದಲ್ಲಿ ಮಂಗಗಳನ್ನು ಹಂಪಿ ಜನಪದರು ಕಂಡಿದ್ದಾರೆ. ಹಂಪಿ ಪರಿಸರದಲ್ಲಿ ಮುಸಿಯ-ಕಪ್ಪು ಮುಖದ ಉದ್ದಬಾಲದ ಸ್ಥೂಲಕಾಯದ ಮಂಗಗಳು ಬಹಳವಾಗಿವೆ. ಅತಿ ಎತ್ತರದ ಬಂಡೆಗಳ ಮೇಲೆ ಇವು ರಾತ್ರಿ ವೇಳೆ ವಾಸ ಮಾಡುತ್ತವೆ. ಚಿರತೆಗಳ ಭಯದಿಂದ ಸುರಕ್ಷಿತ ಎತ್ತರದ ಬಂಡೆಗಳನ್ನೆ ಮುಸಿಯಗಳು ಆಯ್ಕೆ ಮಾಡಿಕೊಳ್ಳುತ್ತವೆ. ಇಂತಹ ಬಂಡೆಗಳನ್ನು ಕೋತಿ ಬಂಡೆ ಎಂದು ಕರೆಯಲಾಗುತ್ತದೆ. ವೈಷ್ಣವ ಪರಂಪರೆಯ ದೈವವಾಗಿ ಹನುಮಂತನ ಶಿಲ್ಪವು ವಿಜಯನಗರ ವಾಸ್ತುಶಿಲ್ಪದಲ್ಲಿ ವಿಶೇಷ ಆಕೃತಿಯನ್ನು ಪಡೆದಿರುವುದಿದೆ. ಅಂಜನಾದ್ರಿ ಪರ್ವತದಲ್ಲಿ ಆಂಜನೇಯ ಹುಟ್ಟಿದನೆಂಬ ಪ್ರತೀತಿ ಇರುವುದು ಕೂಡ ಮಂಗಗಳನ್ನು ವಿಶೇಷವಾಗಿ ಗಮನಿಸುವಂತಿದೆ. ಭಕ್ತರು ಮಂಗಗಳಿಗೆ ಹಣ್ಣು ಹಂಪಲು ನೀಡುವುದು ಮಾಮೂಲು. ಹನುಮಂತನ ವೇಷ ಕೂಡ ಮಂಗಗಳ ಬಗೆಗಿನ ದೈವಿಕ ನಂಬಿಕೆಯೇ ಆಗಿದೆ. ಹಂಪಿ ಜಾತ್ರೆಯಂದು ಹನುಮಂತನ ವೇಷ ಹಾಕುವುದಾಗಿ ಜನಪದರು ಹರಕೆ ಕಟ್ಟಿಕೊಂಡು ಬರುವುದಿದೆ. ಹನುಮಂತನ ವೇಷ ಹಾಕಿ ಹರಕೆ ಒಪ್ಪಿಸಿದರೆ ಚರ್ಮರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ವಿಜಯನಗರ ಕಾಲದಲ್ಲಿ ’ಕೋತಿ ಇನಾಂ ’ ಪ್ರದೇಶವೇ ಇತ್ತು. ತಮ್ಮ ಪೂರ್ವಿಕರಿಗೆ ನಾವು ಇಷ್ಟಾದರೂ ಇನಾಮು ಮಾಡದಿದ್ದರೆ ಹೇಗೆ ಎಂಬ ಗೌರವದಿಂದ ಕೋತಿಗಳಿಗೆ ಆಹಾರ ಒದಗಿಸಲಾಗುತ್ತಿದ್ದರಂತೆ. ಈಗಲೂ ’ಕೋತಿ ಇನಾಂ’ ಪ್ರದೇಶ ಉಳಿದಿದೆ. ಅಲ್ಲದೆ ಕೋತಿಗಳಿಗಾಗಿಯೆ ಊಟ ಬಡಿಸುವ ಸಂಪ್ರದಾಯ ಉಳಿದಿದೆ.  ’ಕೋತಿ ಊಟ ’ವನ್ನು ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿ ಹಾಕುವುದಿದೆ. ಕೋತಿ ಊಟದ ತಟ್ಟೆಗಳನ್ನು ಕಲ್ಲಿನಲ್ಲಿ ಕೆತ್ತಿಸುವ ಹರಕೆಯೂ ರಾಜರ ಕಾಲದಲ್ಲಿ ಇತ್ತಂತೆ.

ಒಟ್ಟಿನಲ್ಲಿ ಮಂಗಗಳ ಬಗ್ಗೆ ವಿವರವಾದ ಅವ್ಯಕ್ತ ಸಂಗತಿಗಳು ಹಂಪಿ ಪರಿಸರದ ಜೀವಜಾಲದಲ್ಲಿ ಕಂಡುಬರುತ್ತವೆ. ಯಾವ ಬೇರೊಂದು ಪ್ರಾಣಿಯ ಬಗೆಗೂ ಇಷ್ಟೊಂದು ವಿವರ ಸಿಗಲಾರದು. ಹಂಪಿಯ ವಾಸ್ತುಶಿಲ್ಪದಲ್ಲಿ ಹನುಮ ಪರಂಪರೆಯ ಚಿತ್ರಗಳು ಯಥೇಚ್ಛವಾಗಿವೆ. ವಿಜಯನಗರ ಸಾಮ್ರಾಜ್ಯಕ್ಕೂ ಪೂರ್ವದ ದೈವವಾಗಿ ಹನುಮಂತ ವಿಸ್ತರಿಸಿಕೊಂಡಿದ್ದರೂ ಈ ದೈವದ ಹಿಂದಿನ ಪ್ರಾಣಿ ಮಾನವ ಸಂಬಂಧ ಮಾತ್ರ ವಿಕಾಸದ ಅತಿ ಆದಿಮ ಕಾಲದ ನೆನಪನ್ನು ಬೆಸೆಯುವಂತಿದೆ.

ನರಿ: ನರಿ ಸಾಮಾನ್ಯ ಕಾಡು ಪ್ರಾಣಿ ಮಾತ್ರವಲ್ಲ, ಕಾಡು ನಾಡಿನ ಜನಪದ ಸಂಬಂಧಗಳ ನಡುವಿನ ಚಾಣಾಕ್ಷ ರೂಪಕಗಳಲ್ಲಿ ಒಂದೆನಿಸಿರುವ ಪ್ರಾಣಿ. ನರಿ ಜಾಣ ಪ್ರಾಣಿ ಹೇಗೊ ಹಾಗೆಯೆ ಉಪಾಯದಿಂದ ವಂಚಿಸುವ ಪ್ರಾಣಿಯೂ ಹೌದು. ಗುಳ್ಳೆ ನರಿ ಇಂತಹ ರೀತಿಗೆ ಹೋಲಿಕೆಯಾಗುವ ಒಂದು ನರಿ. ಇದರಲ್ಲೆ ಕಂಕನರಿ ಎಂಬ ಇನ್ನೊಂದು ಪ್ರಭೇದವನ್ನು ಹಂಪಿ ಪರಿಸರದಲ್ಲಿ ಗುರುತಿಸಲಾಗುವುದು. ಜನಪದ ಕಥೆಗಳಲ್ಲೆ ಪಂಚತಂತ್ರ ಕಥೆಗಳಲ್ಲಿ ಬರುವಂತದೇ ವಿವರಗಳು ಇಲ್ಲಿನ ಜನಪದ ಕಥೆಗಳಲ್ಲಿ ಸಮನಾಗಿ ಕಂಡುಬರುವುದಿದೆ. ನರಿ ಅಪಶಕುನ ಶುಭ ಶಕುನ ಎರಡಕ್ಕೂ ಸಂಕೇತಿಸಲ್ಪಡುತ್ತದೆ. ಬೆಳಗಿನ ಜಾವ ನರಿ ಮುಖ ನೋಡಿದರೆ ಶುಭ. ಸಂಜೆ ಹಾಗೂ ರಾತ್ರಿ ವೇಳೆ ನರಿಯನ್ನು ನೋಡಬಾರದು ಎಂಬ ನಂಬಿಕೆಯಿದೆ. ಕೋಳಿ ಕಳ್ಳ ನರಿಯು ಊರೊಳಗೆ ಬಂದರೆ ಅದರ ಸೊಂಟ ಮುರಿಯದೆ ಬಿಡುವುದಿಲ್ಲ ಎಂಬ ಭರವಸೆ ಹಳ್ಳಿಗರಿಗಿದೆ. ಬಡಪಾಯಿ ನರಿಗಳ ಸಹಜ ಸ್ವಭಾವದ ಕೂಗಾಟವು ಕೇಡಾಗಿ ಜನಪದರಿಗೆ ಕಂಡಿದೆ. ಜಂಭದ ಸ್ವಭಾವವನ್ನು ಅಂತಹ ವ್ಯಕ್ತಿಗಳನ್ನು ನರಿಯ ಗುಣಕ್ಕೆ ಹೋಲಿಸುವುದಿದೆ. ಬೇಟೆಯ ವೀರಾವೇಶದ ಗುರಿಕಾರರಿಗೆ ನರಿಯು ಆಡ್ಡ ಬಂದಿದ್ದೇ ಆದರೆ ಅದು ಅವರ ಸಾಮರ್ಥ್ಯಕ್ಕೆ ಅಪಮಾನ ಎಸಗಿದಂತೆ. ಬಲಶಾಲಿ ಗುರಿಕಾರ ಅಂತಹ ನರಿಗಳ ಸಹವಾಸಕ್ಕೆ ಹೋಗುವುದಿಲ್ಲ. ತಾನೇನಿದ್ದರೂ ಬಲಾಢ್ಯ ಕೋರೆ ಹಂದಿಯನ್ನೆ ಹೊಡೆದುರುಳಿಸುವುದು ಎಂಬ ವಿಶ್ವಾಸದಲ್ಲಿ ನರಿಯ ಮೇಲೆ ಗುಂಡು ಹಾರಿಸುವುದಿಲ್ಲ. ದುರ್ಬಲ ಬೇಟೆಗಾರರು ಮಾತ್ರವೇ ತಮಗೂ ತರುಣಿಯರು ಬೇಟೆ ವೀರ ಎಂದು ಆರತಿ ತಟ್ಟೆ ಎತ್ತಿ ಬೆಳಗುವರು ಎಂದು ಮುಂದಾಗಬಹುದು. ಅಪರೂಪಕ್ಕೆ ನರಿ ಮಾಂಸವನ್ನು ಕೂಡ ತಿನ್ನುವುದುಂಟು. ನರಿ ಮಾಂಸ ಸೇವಿಸಿದರೆ ತಮಗೂ ಚಾಣಾಕ್ಷ ಬುದ್ದಿ ಬರಬಹುದೆಂಬ ಪರೋಕ್ಷ ಅಭಿಪ್ರಾಯವಿದೆ. ನರಿಗಳು ಊರೊಳಗೆ ಬಂದು ಕೋಳಿ ಕದ್ದ ಪ್ರಕರಣಗಳೇನಾದರೂ ಕಂಡು ಬಂದಿದ್ದೇ ಆದರೆ ಅದು ತಮ್ಮ ಬೇಟೆನಾಯಿಗಳ ದೌರ್ಬಲ್ಯ ಹಾಗೂ ಅಸಮರ್ಥತೆ ಎಂದು ಭಾವಿಸುವ ಬದಲು ಏನೋ ಕೇಡು ಊರೊಳಗೆ ಬರುತ್ತಿದೆ ಎಂಬು ಭಾವಿಸಲಾಗುವುದು.

ಒಟ್ಟಿನಲ್ಲಿ ಹಂಪಿಯ ಪರಿಸರದ ಜೀವಜಾಲದ ಜಾನಪದ ಸಂಬಂಧವು ಆದಿಮ ಕಾಲದಿಂದಲೂ ನಿರಂತರವಾಗಿ ಸಾಗಿ ಬಂದಿದೆ. ಆಹಾರದ ಭಾಗವಾಗಿಯೇ ಬೆಳೆದು ಬಂದ ಈ ಸಂಬಂಧವು ಬದುಕುಳಿಯಲು ಬೇಕಾದ ಅಗತ್ಯ ಹೊಂದಾಣಿಕೆಯ ನಿಸರ್ಗ ನೀತಿಯನ್ನು ಕೂಡ ಧ್ವನಿಸುತ್ತದೆ. ವಿಶೇಷವಾಗಿ ಹಂಪಿ ಪರಿಸರದ ಮಾನವ ನಿರ್ಮಿತ ಸಂಸ್ಕೃತಿಯ ಪರಿಸರವು ನಿಸರ್ಗದ ಪ್ರಾಣಿ ಪರಿಸರವನ್ನು ಬಹಳ ಕಾಲದ ಹಿಂದೆಯೆ ಗೆದ್ದು ಬಿಟ್ಟಿದೆ. ಬೇಟೆ ಸಂಸ್ಕೃತಿಯು ವನ್ಯಜೀವಿಗಳನ್ನು ನಿರ್ದಯವಾಗಿ ಹತ್ಯೆ ಮಾಡುತ್ತ ಬಂದಿದ್ದರಿಂದ ಅನೇಕ ಪ್ರಾಣಿ ಪಕ್ಷಿಗಳು ಕಣ್ಮರೆಯಾದವು. ಬೇಟೆಯ ಸಾಂಸ್ಕೃತಿಕ ಆಯಾಮಗಳು ಮಾನವರಿಗೆ ಅನನ್ಯವಾಗಿರಬಹುದಾದರೂ ಜೀವಜಾಲದ ಅನನ್ಯತೆಗೆ ಅಂತಹ ನಂಬಿಕೆಗಳು ಅತ್ಯಂತ ಅಪಾಯಕಾರಿ. ಅಷ್ಟೇ ಅಲ್ಲ ಅವು ನೈಸರ್ಗಿಕ ಸಮತೋಲನವನ್ನು ನಾಶಪಡಿಸುವ ಕ್ರಿಯೆಗಳೂ ಆಗಿಬಿಡಬಲ್ಲವು. ಹಂಪಿ ಪರಿಸರವು ನೈಸರ್ಗಿಕವಾಗಿ ರೂಪುಗೊಂಡಿರುವುದೇ ಮಾನವನ ಹಾಗೂ ಪ್ರಾಣಿಲೋಕದ ಹೊಂದಾಣಿಕೆಯ ರೀತಿನೀತಿಗಳಿಂದಲೇ. ಕಾಡು ಪ್ರಾಣಿಗಳು ಮನುಷ್ಯರ ನಾಗರೀಕತೆಗೆ ಮೃಗಗಳಾಗಿ ಕಂಡರೂ ನಿಸರ್ಗದ ಜೀವಜಾಲದ ವಿಕಾಸಕ್ಕೆ ಮೃಗಗಳು ಕೂಡ ಮುಖ್ಯ. ಹೀಗಾಗಿಯೆ ನಿಸರ್ಗದ ಜೊತೆಗಿನ ಸಂಬಂಧಗಳು ಯಾವುದೇ ಒಂದು ಜೀವಿಯ ಪ್ರಭುತ್ವಕ್ಕೆ ಒಳಗಾಗಬಾರದು. ಹಾಗೆ ಮಾನವ ಜೀವಿಯು ಜೀವಜಾಲದಲ್ಲಿ ತನ್ನ ಪ್ರಭುತ್ವ ಸಾಧಿಸಿಕೊಂಡಿರುವುದು ಭವಿಷ್ಯದಲ್ಲಿ ಮಾನವ ವಿಕಾಸದ ಪತನಕ್ಕೆ ದಾರಿ ಮಾಡಬಲ್ಲದು. ಸಾಮ್ರಾಜ್ಯಗಳ ಪತನವಾದರೆ ದೊಡ್ಡ ನಷ್ಟವಲ್ಲ. ಮಾನವ ಸಮಾಜಗಳೇ ನಿಸರ್ಗದ ಅಧಿಪತ್ಯದ ಪರಮಾಧಿಕಾರವನ್ನೆ ಕಸಿದುಕೊಳ್ಳುವಂತೆ ಬೆಳೆದಾಗ ಹಾಗೆ ಪ್ರಬಲವಾಗಿ ಬೆಳೆದ ಏಕಮುಖಿ ಶಕ್ತಿಯೇ ದುರ್ಬಲ ಶಕ್ತಿಯಾಗಿ ವಿಪರ್ಯಾಸಗೊಳ್ಳುವುದು. ನಿಸರ್ಗದಲ್ಲಿ ಅತ್ಯಂತ ದುರ್ಬಲವಾದದ್ದೇ ಮುಂದೊಂದು ಕಾಲದ ಪರಿಸರದಲ್ಲಿ ಮಹಾಶಕ್ತಿಯಾಗಿ ಬಿಡಬಲ್ಲದು. ಜೀವಜಾಲದ ಅರ್ಥಪೂರ್ಣ ಸಂಬಂಧ ಮಾತ್ರ ವಿಕಾಸ ಪಥದಲ್ಲಿ ಮಾನವರ ಗುರುತನ್ನೆ ಉಳಿಸಿಕೊಳ್ಳಬಲ್ಲದೇ ವಿನಃ ಮಾನವಕೇಂದ್ರಿತ ನಿಸರ್ಗದ ಮೇಲಿನ ಅಧಿಪತ್ಯವಲ್ಲ.

ಸಾಕು ಪ್ರಾಣಿಗಳು: ಪಶುಪಾಲಕ ಸಂಸ್ಕೃತಿಯ ಸಾಧನೆ ಏನೆಂದರೆ ಅದು ಕಾಡುಮೃಗಗಳನ್ನು ಪಶುಸಂಪತ್ತಾಗಿ ಮಾರ್ಪಡಿಸಿ ಜೀವಜಾಲದ ಜೀವನ ಕ್ರಮಗಳನ್ನು ಅಳವಡಿಸಿಕೊಂಡು ಬೇಟೆಯ ಕಠಿಣ ಜೀವನಕ್ರಮದಿಂದ ಪ್ರತ್ಯೇಕವಾದದ್ದು. ಇಲ್ಲಿಂದಲೇ ಜೀವಜಾಲದ ಜೊತೆ ಮಾನವ ಸುಧಾರಿತ ಒಪ್ಪಂದಗಳನ್ನು ಮಾಡಿಕೊಂಡದ್ದು. ಹಂಪಿಯ ಜೀವ ಪರಿಸರವೂ ಅಂತಹ ಒಪ್ಪಂದಗಳ ಒಂದು ನೆಲೆ. ಆಯಾಯ ಪರಿಸರದ ಸ್ವರೂಪವೇ ಜೀವಜಾಲದ ಒಪ್ಪಂದದ ಕ್ರಮಗಳನ್ನು ಸೂಚಿಸುತ್ತವೆ. ಬೆಟ್ಟಗುಡ್ಡಗಳ ಹುಲ್ಲುಗಾವಲುಗಳ ಸುರಕ್ಷಿತ ನೆಲೆಯು ಆ ಪರಿಸರಕ್ಕೆ ಯೋಗ್ಯವಾದ ಜೀವಜಾಲದ ಜೀವನ ಕ್ರಮವನ್ನು ರೂಪಿಸಿರುತ್ತದೆ. ಹುಲ್ಲುಗಾವಲು ಎಲ್ಲೆಲ್ಲಿ ಹೇರಳವಾಗಿದೆಯೊ ಅಲ್ಲೆಲ್ಲ ಪಶುಪಾಲಕ ಜೀವನ ಕ್ರಮ ಬೆಳೆದಿದೆ. ಹಂಪಿಯ ಸುತ್ತಮುತ್ತಲ ಪರಿಸರದ ಹುಲ್ಲುಗಾವಲು ಈ ಭಾಗದ ಮೊದಲ ಜನವರ್ಗಗಳಿಗೆ ಜೀವಿಸಲು ಅವಕಾಶ ಕೊಟ್ಟಿವೆ. ಎಲ್ಲಿ ಹೇರಳ ಆಹಾರ ಪಶುಗಳಿಗೂ ಮನುಷ್ಯರಿಗೂ ಜೀವಜಾಲಕ್ಕೂ ದಟ್ಟವಾಗಿ ಸಿಗುತ್ತದೊ ಅಲ್ಲಿ ಸಂಸ್ಕೃತಿಗಳು ಬೆಳೆಯುತ್ತವೆ ಹಾಗು ಸಮಾಜಗಳು ವಿಕಾಸಗೊಳ್ಳುತ್ತವೆ. ಪಶುಪಾಲಕ ಸಮುದಾಯಗಳು ಹಂಪಿಯಲ್ಲಿ ಇಂತಹ ಹಿನ್ನೆಲೆಯಿಂದಲೇ ಅಸ್ತಿತ್ವ ಸಾಧಿಸಿಕೊಂಡದ್ದು. ವಿಶೇಷವಾಗಿ ಬೇಟೆಯ ಜೀವನಕ್ರಮಕ್ಕೆ ಬದ್ದವಾಗಿದ್ದ ಸಮುದಾಯಗಳು ಒಂದೇ ಹೊತ್ತಿಗೆ ಬೇಟೆ ಮತ್ತು ಪಶುಪಾಲನೆ ಎರಡನ್ನೂ ಅನುಸರಿಸಿ ಉಳಿದ ವಿಶೇಷತೆಯು ಹಂಪಿ ಪರಿಸರದಲ್ಲೂ ಕಾಣುತ್ತದೆ. ಬೇಡ, ಗೊಲ್ಲ, ಕುರುಬ ಸಮುದಾಯಗಳು ಸಾಕುಪ್ರಾಣಿಗಳ ಹಿನ್ನೆಲೆಯಲ್ಲಿ ಪ್ರಮುಖವಾಗಿರುವ ವರ್ಗಗಳಾಗಿವೆ. ಇವರ ಪರಿಶ್ರಮದಿಂದಲೇ ಪಶುಸಂಪತ್ತು ಹೇರಳವಾಗಿ ಕನ್ನಡನಾಡಿನ ಭಾಗವಾಗಿ ಬೆಳೆದದ್ದು. ಪಶುಪಾಲಕ ಸಂಸ್ಕೃತಿಯು ಒಂದರ್ಥದಲ್ಲಿ ಉದ್ಯಮದ ಹಾಗೆ ಪಶುಬಂಡವಾಳವನ್ನು ನಿಸರ್ಗದ ಪೂರಕ ಪರಿಸರದಲ್ಲಿ ಬೆಳೆಸಿರುವುದು ವಿಶೇಷವಾಗಿದೆ. ಈ ಹಿನ್ನೆಲೆಗಳಲ್ಲಿ ಸಾಕುಪ್ರಾಣಿಗಳ ವಿವರಗಳನ್ನು ಹಂಪಿ ಪರಿಸರದ ಜೀವಜಾಲ ಜಾನಪದದಿಂದ ಪರಿಭಾವಿಸುವ.

ಸಾಕುಪ್ರಾಣಿಗಳಲ್ಲಿ ಹಸು ಕುರಿ ಮೇಕೆ ಎಮ್ಮೆ ಪ್ರಮುಖ. ಈ ಪ್ರಾಣಿಗಳು ಪಶುಪಾಲನ ಸಂಸ್ಕೃತಿಯ ಜೊತೆಯಾಗಿ ಮಾನವ ಸಮಾಜದ ಅಂಗವೇ ಆಗಿಬಿಟ್ಟಿವೆ. ನಿಸರ್ಗ, ಸಂಸ್ಕೃತಿ ಸಮಾಜ ಹಾಗು ಆರ್ಥಿಕ ರಚನೆಗಳ ಸಾವಯವ ಸಂಬಂಧವಾಗಿ ಸಾಕುಪ್ರಾಣಿಗಳು ವಿಕಾಸಗೊಂಡಿವೆ. ಮನುಷ್ಯ ಈ ಪ್ರಾಣಿಗಳ ಅವಲಂಬನೆಯನ್ನು ವಿಕಾಸದ ಮುಂದಿನ ಇನ್ನೆಷ್ಟೋ ಯುಗಗಳ ತನಕ ಮುಂದುವರಿಸಿಕೊಂಡೇ ಹೋಗಬೇಕಾಗಿದೆ. ಹಂಪಿ ಪರಿಸರದ ಪಶುಪಾಲಕ ಸಮುದಾಯಗಳಾದ ಬೇಡ ಗೊಲ್ಲ ಕುರುಬ ಸಮುದಾಯಗಳಲ್ಲದೆ ಜಾತಿವ್ಯವಸ್ಥೆಯ ಕೆಳಗೆ ಬರುವ ಅದೆಷ್ಟೋ ಸಮುದಾಯಗಳು ಸಾಕುಪ್ರಾಣಿಗಳ ಅವಲಂಬನೆಯಲ್ಲಿ ತೊಡಗಿರುವುದು ಮಾನವ-ಪ್ರಾಣಿ ಸಂಬಂಧಗಳ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ. ಪಶುಪಾಲಕ ಸಂಸ್ಕೃತಿಗಳು ಪಶುಸಂಪತ್ತನ್ನು ಹೆಚ್ಚಿಸಿಕೊಳ್ಳಲು ತಮ್ಮೊಳಗೇ ಹೋರಾಟ ಮಾಡಬೇಕಾದ ಕಾಲವೊಂದಿತ್ತು. ಪಶುಗಳ ಸಲುವಾಗಿ ಕಾಳಗವೇ ನಡೆಯುತ್ತಿತ್ತು. ಪಾಂಡವರು ಗೋಗ್ರಹಣ ಮಾಡಿದ ವಿವರವೇ ಇದೆ. ಮಧ್ಯಯುಗೀನ ಊಳಿಗಮಾನ್ಯ ಕದನಗಳಲ್ಲಿ ಪಶುಸಂಪತ್ತಿನ ಲೂಟಿ ವಿಶೇಷವಾಗಿ ವ್ಯಾಪಿಸಿತ್ತು. ಪಶುಪಾಲನೆಯಿಂದ ಕೃಷಿ ಸಂಸ್ಕೃತಿಗೆ ಹೊರಳಿದ್ದ ಮಧ್ಯಕಾಲೀನ ಸಮಾಜದ ಸಾಮರ್ಥ್ಯವನ್ನು ಪಶುಸಂಪತ್ತಿನ ಮೂಲಕ ಅಳೆಯಲಾಗುತ್ತಿತ್ತು. ಆ ಪಾಳೆಯಗಾರನ ಬಳಿ ಎಷ್ಟು ಪಶುಸಂಪತ್ತಿದೆ ಎಂಬುದು ಆತನ ಆರ್ಥಿಕ ಬಲಾಬಲವನ್ನು ಪ್ರದರ್ಶಿಸುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಸಾಮಂತರು, ದಳವಾಯಿಗಳು, ಪಾಳೆಯಗಾರರು, ಬಂಡುಕೋರರು ಪಶುಸಂಪತ್ತಿನ ಒಡೆತನದಲ್ಲಿ ಬಹಳ ಸಮರ್ಥರಿದ್ದರು ಎಂದು ಊಹಿಸಬಹುದು. ಇದು ಸಾಕುಪ್ರಾಣಿಗಳ ಆರ್ಥಿಕ ಚಟುವಟಿಕೆಯ ಪ್ರತಿಷ್ಠೆಯ ವಿಷಯವೂ ಆಗಿತ್ತು. ಕಪ್ಪಕಾಣಿಕೆ ಸಲ್ಲಿಸುವಾಗ ಪಶುಸಂಪತ್ತನ್ನು ಅರ್ಪಿಸುವ ವಿವರಗಳಿವೆ ದನ-ಕರು-ತುರುಗಳ ಕಾಯುವ ಸಲುವಾಗಿ ಹಳ್ಳಿಗಳಲ್ಲಿ ರಕ್ಷಿತ ಪಡೆಯೇ ಇದ್ದುದರ ಬಗ್ಗೆ ಹೇಳಲಾಗುತ್ತದೆ. ಪ್ರಾಚೀನ ಕರ್ನಾಟಕದ ಗ್ರಾಮಾಡಳಿತದಲ್ಲಿ ಗೋಮಾಳಕ್ಕೆ ವಿಶೇಷ ಅವಕಾಶವಿತ್ತು. ಅಲ್ಲದೆ ಗೋವುಗಳ ರಕ್ಷಣೆಗೆಂದು ಹೋರಾಡಿ ಮಡಿದ ವೀರರ ಬಗ್ಗೆ ಗೌರವಾರ್ಥಕವಾಗಿ ವೀರಗಲ್ಲುಗಳನ್ನು ನೆಡಿಸಲಾಗುತ್ತಿತ್ತು. ಪಶುಪಾಲಕ ಸಮಾಜ ಮಾತ್ರವಲ್ಲದೆ ಕೃಷಿ ಸಮುದಾಯಗಳು ಅಗತ್ಯವಾಗಿ ಪಶುಸಂಪತ್ತನ್ನು ಹೊಂದಿಯೇ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗಿತ್ತು.

ಹಂಪಿ ಪರಿಸರದಲ್ಲಿದ್ದ ಪ್ರಾಚೀನ ಗ್ರಾಮಗಳು ಇದೇ ಬಗೆಯ ಜೀವನಕ್ರಮಕ್ಕೆ ಒಳಪಟ್ಟಿದ್ದನ್ನು ಅನೇಕ ವೀರಗಲ್ಲುಗಳು ದಾನದತ್ತಿಗಳು ಹೇಳುತ್ತವೆ. ಸಾಮ್ರಾಜ್ಯಗಳಿಗೆ ಬೇಕಿದ್ದ ಪಶು ಉತ್ಪಾದನೆಗೆ ಪಶುಪಾಲಕ ಸಮುದಾಯಗಳನ್ನೇ ನೆಚ್ಚಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದಲ್ಲಿ ಪಶುಪಾಲಕ ಸಮುದಾಯಗಳಿಗೆ ವಿಶೇಷ ಗೌರವ ಇದ್ದುದು ಈ ಕಾರಣದಿಂದಲೂ ಕೂಡ ಎಂಬುದನ್ನು ಗಮನಿಸಬಹುದು. ಸಾಮ್ರಾಜ್ಯಗಳು ಮುತ್ತು ರತ್ನ ಭೌತಿಕ ಸಂಪತ್ತನ್ನು ಹೇರಳವಾಗಿ ಹೊಂದಿದ್ದರೂ ಪ್ರಾಚೀನ ಕರ್ನಾಟಕದ ಸಂಪತ್ತು ದನ ಕುರಿ ಮೇಕೆ ಮೊದಲಾದ ಸಾಕುಪ್ರಾಣಿಗಳೇ ಆಗಿದ್ದವೆಂಬುದು ನಿರ್ವಿವಾದ. ಗ್ರಾಮೀಣ ಕರ್ನಾಟಕದಲ್ಲಿ ಈಗಲೂ ಪಶುಸಂಪತ್ತು ಪ್ರಮುಖ ಸ್ಥಾನವನ್ನು ಪಡೆದಿದೆ. ಪಶುಪಾಲಕ ಆರ್ಥಿಕ ವ್ಯವಸ್ಥೆಯಲ್ಲಿ ಸಾಕುಪ್ರಾಣಿಗಳ ಉತ್ಪಾದನೆಯು ಹಳ್ಳಿಗಳ ಒಟ್ಟು ಸಾಮರ್ಥ್ಯವನ್ನು ಪ್ರತಿನಿಧಿಸುತ್ತಿತ್ತು. ಈಗಲೂ ಹಂಪಿ ಪರಿಸರದ ಹಳ್ಳಿಗಳಲ್ಲಿ ಗತಕಾಲದ ಇಂತಹ ಸಂಬಂಧಗಳು ಅಲ್ಲಲ್ಲಿ ಉಳಿದಿರುವುದನ್ನು ಗಮನಿಸಬಹುದು. ಅಲೆಮಾರಿ ಕುರುಬ ಸಮುದಾಯವು ಪ್ರತಿವರ್ಷ ಹಂಪಿಗೆ ಹತ್ತಾರು ಗುಂಪುಗಳಲ್ಲಿ ಮೇವಿಗಾಗಿ ಬರುವುದಿದೆ. ಪ್ರಾಚೀನ ಕರ್ನಾಟಕದ ಪಶುಪಾಲಕ ಸಂಸ್ಕೃತಿಯ ಕಳಚಿದ ದೂರದ ಅಲೆಮಾರಿ ಕೊಂಡಿಗಳಾದ ಕುರುಬರ ಒಳಗಿನ ಅಲೆಮಾರಿ ಪಶುಪಾಲಕರು ಈಗಲೂ ಬದುಕಿರುವುದು ಪಶುಪಾಲನಾ ಅರ್ಥವ್ಯವಸ್ಥೆಯಿಂದ. ಜಾಗತೀಕರಣದ ಆರ್ಥಿಕ ಪ್ರಕ್ರಿಯೆಗಳಲ್ಲಿ ಅಲೆಮಾರಿ ಕುರುಬರೂ ಬೇಡರೂ ತಮ್ಮ ಪಶುಪಾಲಕ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ಜೀವಜಾಲದ ಕಳಚಿದ ಕೊಂಡಿಯಂತೆ ಕಾಣುತ್ತದೆ.

ಮಾನವ ಮತ್ತು ಪಶುಗಳ ನಡುವಿನ ಸಂಬಂಧ ಜೈವಿಕವಾದ ಒಪ್ಪಂದವೇ ಆಗಿದೆ. ನಿಸರ್ಗವು ಆ ಬಗೆಯ ಜೀವನಕ್ರಮಕ್ಕೆ ಬೇಕಾದ ಪರಿಸರವನ್ನು ರೂಪಿಸಿಕೊಟ್ಟಿದೆ. ನಿಸರ್ಗದ ಅವಿನಾಭಾವ ಸಂಬಂಧದಿಂದ ಜೀವಜಾಲದ ಸಂಬಂಧ ಅಲೆಮಾರಿ ಕುರುಬರಿಗೂ ಬೇಡರಿಗೂ ಸಾಧ್ಯವಾಗಿದೆ. ಅವರ ಪಾಲಿಗೆ ಆ ಪಶುಗಳೇ ಸಂಬಂಧಿಗಳು. ಅವೇ ಅವರ ಪಾಲಿನ ದೈವ. ಅವುಗಳಿಂದಲೇ ಅವರ ಅಸ್ತಿತ್ವ. ಹೀಗಾಗಿ ಪಶುಗಳ ಮೇಲಿನ ಅವರ ಪ್ರೀತಿಯನ್ನು ಕೇವಲ ಪ್ರಾಣಿ ಪ್ರಿಯ ನಗರವಾಸಿ ಸುಶಿಕ್ಷಿತರ ಭಾವನೆಗಳ ಜೊತೆ ಹೋಲಿಸುವುದು ಸಾಧ್ಯವೇ ಇಲ್ಲ. ಪಶುಪಾಲಕ ವೃತ್ತಿಯನ್ನಾಗಿ ಭಾವಿಸುವುದು ಈ ಅರ್ಥದಲ್ಲಿ ಗೌರವಯುತ ಗುರುತಲ್ಲ. ವೃತ್ತಿ ಪರಿಕಲ್ಪನೆ ಬಂಡವಾಳಶಾಹಿ ಮನೋಭಾವದ್ದು. ಪಶುಪಾಲನೆ ಆ ಸಮುದಾಯಗಳಿಗೆ ಕಾಯಕ, ಜೀವನ ವಿಧಾನ, ಸಂಸ್ಕೃತಿಯ ಕ್ರಮ. ಬೇಟೆಯ ಹಂತದಿಂದ ಮೇಲೆ ಬಂದು ತಮ್ಮ ಸಾಕು ಪ್ರಾಣಿಗಳನ್ನು ಅಪಾರವಾಗಿ ಭಾವಿಸುವ ಪಶುಪಾಲಕರು ನಿಜವಾದ ಅರ್ಥದಲ್ಲಿ ಪರಿಸರದ ಜೀವಜಾಲವನ್ನು ನಿಸರ್ಗದ ಕ್ರಮದಲ್ಲಿ ವಿಸ್ತರಿಸುವವರಾಗಿದ್ದಾರೆ. ಆಹಾರದ ಕ್ರಮದಲ್ಲಿ ಜೀವನ ವಿಧಾನದ ರೂಪದಲ್ಲಿ ಸಾಕುಪ್ರಾಣಿಗಳನ್ನು ಬಳಸುವುದು ನಿಸರ್ಗದ ಭಾಗವಾಗಿದೆಯೇ ವಿನಃ ಅನುಭೋಗಿ ಸ್ವಭಾವದಿಂದಲ್ಲ. ಪ್ರಾಣಿಗಳ ಜೊತೆಯೇ ಬದುಕುವ ಅಲೆಮಾರಿಗಳು ನಿಸರ್ಗದ ಎಲ್ಲ ಬದಲಾವಣೆಗಳಿಗೆ ಒಗ್ಗಿಕೊಂಡ ಪ್ರತಿರೋಧವನ್ನು ಹೆಚ್ಚಿಸಿಕೊಂಡಿದ್ದಾರೆ. ಇದು ಪಶುಪಾಲಕ ನಿಸರ್ಗ ಸಂಬಂಧದಿಂದ ಉಂಟಾದ ಬಲ. ವಿಶೇಷ ಎಂದರೆ ಕುರಿಗಳನ್ನು ಬೇಡ ಗೊಲ್ಲ ಕುರುಬ ಸಮುದಾಯಗಳು ಆಹಾರಕ್ಕೆ ಬಳಸುವುದು  ಸಹಜವಾಗಿದ್ದರೂ ಹಸು ಎಮ್ಮೆಗಳ ಮಾಂಸವನ್ನು ಬಳಸದಿರುವುದು ಕುತೂಹಲಕರವಾಗಿದೆ.

ಹಸುವನ್ನು ಪವಿತ್ರವಾಗಿ ಕಾಣುವುದರಿಂದ ಅದರ ಮಾಂಸ ಈ ಸಮುದಾಯಗಳಲ್ಲಿ ನಿಷಿದ್ಧವಾಗಿದೆ. ಬೇಡ ಸಮುದಾಯದ ಸಾಂಸ್ಕೃತಿಕ ನೆಲೆಯು ಎಲ್ಲ ಬಗೆಯ ಪ್ರಾಣಿಗಳ ಬೇಟೆಗೆ ಮುಂದಾಗುವುದಾದರೂ ಅದರ ಆಹಾರ ಕ್ರಮದಲ್ಲಿ ದನದ ಮಾಂಸದ ನಿಷೇಧ ಗಮನಾರ್ಹವಾಗಿದೆ. ವಿಜಯನಗರ ಕಾಲದ ಸಾಮ್ರಾಜ್ಯಗಳ ಸಂಬಂಧ ಕೂಡ ಈ ನಿಷೇಧದಲ್ಲಿ ಪಾತ್ರ ವಹಿಸಿರಬಹುದು. ಅಲ್ಲದೆ ಪಶುಪಾಲಕ ಸಮುದಾಯವಾಗಿ ರೂಪಾಂತರಗೊಳ್ಳುತ್ತಿದ್ದ ಬೇಡ ಗೊಲ್ಲ ಕುರುಬ ಸಮುದಾಯಗಳಿಗೆ ದನದ ಮಾಂಸ ಅಹಿತಕರವಾಗಿ ಕಂಡಿರಬೇಕು. ಕುರಿ, ಮೇಕೆ, ಕೋಳಿಗಳೇ ಸಾಕಷ್ಟು ಪ್ರಮಾಣದಲ್ಲಿ ಸುಲಭವಾಗಿ ಸಿಗುತ್ತಿದ್ದರಿಂದ ದನದ ಮಾಂಸದ ಅವಶ್ಯಕತೆ ಈ ಸಮುದಾಯಗಳಿಗೆ ಕಾಣಲಿಲ್ಲ. ಅಲ್ಲದೆ ಕೃಷಿ ಸಂಸ್ಕೃತಿಗೆ ಆಪ್ತವಾಗಿದ್ದ ದನಕರುಗಳನ್ನು ಕೇವಲ ಮಾಂಸಕ್ಕಾಗಿ ಆಶ್ರಯಿಸುವುದು ಅವರಿಗೆ ಉಚಿತವಾಗಿರಲಿಲ್ಲ. ತಮ್ಮ ಜೀವನದ ಭಾಗವೇ ಆಗಿದ್ದ ದನಕರುಗಳನ್ನು ತಿನ್ನುವುದು ಪಾಪ ಎಂಬ ಪ್ರಜ್ಞೆ ಕಾಡಿರುವುದು ಸಹಜ. ವಕ್ಕಲು ಸಮುದಾಯಗಳ ಭಾವನಾತ್ಮಕ ಸಂಬಂಧವೂ ಇಂತಹ ನಂಬಿಕೆಯನ್ನು ಬೆಳೆಸಿದೆ. ಆದರೆ ಮಧ್ಯಯುಗೀನ ದೇವದಾಸಿ ಪದ್ಧತಿಯ ಪರಿಣಾಮವು ಹಸುವಿನಂತಹ ಪ್ರಾಣಿಯನ್ನು ಕೂಡ ಬಸವಿಯನ್ನಾಗಿ ಕಂಡಿರುವ ವಿಪರ್ಯಾಸವಿದೆ. ಹಂಪಿ ಪರಿಸರದಲ್ಲಿ ಹಸುಗಳನ್ನು ಬಸವಿ ಬಿಡುವ ಪದ್ಧತಿ ಇದೆ. ಪಶುಪಾಲಕ ಸಮುದಾಯಗಳಲ್ಲಿ ಹಾಗು ಕೆಳಜಾತಿಗಳಲ್ಲಿ ಬಸವಿ ಬಿಡುವ ಕ್ರೂರ ಪದ್ಧತಿ ತಿಳಿದಿರುವ ಸಂಗತಿಯೇ. ಬಸವವನ್ನು ಬಿಡುವ ರೂಢಿ ಮಾಮೂಲಾದುದೇ. ಆದರೆ ಹಸುಗಳಲ್ಲಿ ಬಸವಿ ಲೆಕ್ಕಕ್ಕೆ ಬಿಡುವುದು ವಿಚಿತ್ರವಾಗಿದೆ. ಇಂತಹ ಬಸವಿ ಹಸುಗಳ ಹಾಲನ್ನು ಯಾರೂ ಕರೆಯುವಂತಿಲ್ಲ. ಅದಕ್ಕೆ ಪವಿತ್ರ ಸ್ಥಾನ ನೀಡಬೇಕು. ಅದರ ಕರುಗಳನ್ನು ಕೂಡ ಯಾರೂ ತಮ್ಮವೆಂದು ಬಳಸಿಕೊಳ್ಳುವಂತಿಲ್ಲ. ಬಸವಿ ಹಸು ಸತ್ತಾಗ ಅದಕ್ಕೆ ಗೌರವಯುತ ಸಂಸ್ಕಾರ ಮಾಡಬೇಕು. ಇಂಥ ಬಸವಿ ಹಸುಗಳು ಹಂಪಿ ಪರಿಸರದಲ್ಲಿ ಹೇರಳವಾಗಿ ಅಡ್ಡಾಡುತ್ತಿರುತ್ತವೆ. ವೈದಿಕರು ಗೋಮಾತೆಯನ್ನು ಪವಿತ್ರೀಕರಿಸಿ ಎಲ್ಲ ದೇನಾನುದೇವತೆಗಳನ್ನು ಗೋವಿನ ಮೂಲಕ ಗುರುತಿಸಿ ಭಜಿಸುವುದಿದೆ. ಹಂಪಿಯಲ್ಲಿ ಅದೇ ಹಸುಗಳನ್ನು ಬಸವಿಯಾಗಿ ಬಿಟ್ಟು ಪೂಜಿಸುವುದಿದೆ.

ಪಶುಪಾಲಕ ಸಂಸ್ಕೃತಿಯನ್ನು ಬಿಟ್ಟು ಕೊಡಲಾಗದವರು ತಮಗೆ ಸಾಧ್ಯವಾದ ಪ್ರಮಾಣದಲ್ಲಿ ಹಸುಗಳನ್ನು ಸಾಕುವುದಿದೆಯಾದರೂ ಒಂದೊಂದು ಮನೆಯವರು ರಾಸುಗಳನ್ನೆಲ್ಲಾ ಒಟ್ಟಾಗಿ ಸಾಕುವ ಕಾಯಕವನ್ನು ಮಾಡುವ ರೂಢಿಯಿದೆ. ಊರವರೆಲ್ಲರ ಗೋವುಗಳನ್ನು ನಿರ್ವಹಿಸಲು ಯಾರನ್ನಾದರೂ ನೇಮಿಸಿ ಅವರಿಗೆ ಎಲ್ಲ ಸೌಕರ್ಯಗಳನ್ನು ಜನರೆ ಒದಗಿಸಿಕೊಡುವರು. ಹಂಪಿಯ ಪರಿಸರದಲ್ಲಿ ಬೂದಿ ಗುಡ್ಡಗಳಿವೆ. ಇವು ಹಳೆಯ ಪಶುಪಾಲಕ ಸಂಸ್ಕೃತಿಯ ಕುರುಹುಗಳು. ಅಪಾರ ಪ್ರಮಾಣದ ಪಶುಗಳ ಸಗಣಿಯನ್ನು ರಾಶಿರಾಶಿಯಾಗಿ ವಾರ್ಷಿಕವಾಗಿ ಒಂದೆಡೆ ಸಂಗ್ರಹಿಸಿ ಸುಡಲಾಗಿದೆ. ಅವುಗಳೇ ನಂತರ ಬೂದಿ ದಿಬ್ಬಗಳಾಗಿ ಪಳೆಯುಳಿಕೆ ಸ್ವರೂಪದಲ್ಲಿ ಉಳಿದುಕೊಂಡಿವೆ. ಅತಿ ಪ್ರಾಚೀನ ಹಸುಗಳ ದೇಶೀಯ ತಳಿಯ ದನಕರುಗಳು ಹಂಪಿ ಪ್ರದೇಶದಲ್ಲಿ ಉಳಿದಿವೆ. ಒಬ್ಬೊಬ್ಬರ ದನಕರುಗಳನ್ನು ಕಿವಿಗಳ ಮೇಲೆ ಮಾಡುವ ಗುರುತುಗಳ ಮೂಲಕ ಗುರುತಿಸುವರು. ಹಸುಗಳನ್ನು ಮೇವಿಗಾಗಿ ಕಾಡಿಗೆ ಬೆಟ್ಟಗುಡ್ಡಗಳಿಗೆ ಆಟ್ಟಿಬಿಡುವ ಕ್ರಮವೂ ಇದೆ. ಬೇಸಿಗೆಯಲ್ಲಿ ಮೇವಿಗಾಗಿ ಬೆಟ್ಟಗುಡ್ಡ ಸೇರಿಕೊಳ್ಳುವ ದನಕರುಗಳು ಬೇಸಿಗೆ ಮುಗಿಸಿ ಮನೆಗಳಿಗೆ ಹಿಂತಿರುಗುವ ಕ್ರಮವಿದೆ. ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಹಾಲು ಮೊಸರು ಮಜ್ಜಿಗೆ ಬೆಣ್ಣೆ ತುಪ್ಪಗಳಿಗಾಗಿ ಪಶುಪಾಲನೆಯನ್ನು ವಿಶೇಷವಾಗಿರಿಸಿಕೊಂಡಿದ್ದ ಹಂಪಿ ಪರಿಸರವು ತದನಂತರ ಆ ವೃತ್ತಿಯನ್ನು ವಿಶೇಷವಾಗಿ ಪರಿಗಣಿಸಿಲ್ಲ. ವಿಜಯನಗರ ಸಾಮ್ರಾಜ್ಯಕ್ಕೆ ಬೇಕಿದ್ದ ಹಾಲು ಮೊಸರು ತುಪ್ಪಕ್ಕಾಗಿ ಸ್ಥಳೀಯ ತಳಿಗಳ ಪಶು ಉತ್ಪಾದನೆಯು ಮಹತ್ವವೆನಿಸಿತ್ತು.

ಕಾಲ ಬದಲಾಗಿರುವ ಈ ಸಮಯದಲ್ಲಿ ಪಶುಪಾಲಕ ಸಮುದಾಯಗಳು ಮೂಲತಳಿಯ ಹಸುಗಳನ್ನು ಮರೆಯುತ್ತಿದೆ. ಹೆಚ್ಚು ಹಾಲು ಕೊಡುವ ಹೊಸ ತಳಿಗಳ ಕಡೆ ಸಹಜವಾಗಿಯೆ ಆಕರ್ಷಿತವಾಗಿದೆ. ಸೀಮೆ ಹಸುಗಳ ಸಾಕಾಣಿಕೆ ಗಮನಾರ್ಹವಾಗಿ ಹೆಚ್ಚಿದೆ. ಎಮ್ಮೆಗಳ ಸಾಕಾಣಿಕೆ ವಿಶೇಷವಾಗಿ ಹಾಲಿಗಾಗಿ ಮತ್ತು ಗೊಬ್ಬರಕ್ಕಾಗಿ ಎಂಬುದು ತಿಳಿದ ಸಂಗತಿಯೆ. ಆದರೆ ಹಸು ಎಮ್ಮೆಗಿಂತಲೂ ಕುರಿ ಮೇಕೆಗಳನ್ನು ಸಂಪತ್ತನ್ನಾಗಿ ಪರಿಭಾವಿಸಲಾಗಿದೆ. ಮಾಂಸಾಹಾರಕ್ಕಾಗಿ ಈ ಪ್ರಾಣಿಗಳನ್ನು ಬೆಳೆಸುವುದೇ ಈಗ ಮುಖ್ಯವಾಗಿದೆ. ಆ ಮೂಲಕ ಆರ್ಥಿಕ ಸ್ವರೂಪವನ್ನು ಈ ವೃತ್ತಿಯು ಪಡೆದಿದೆ. ಕುರಿ ಮೇಕೆಗಳ ಜೊತೆಗಿನ ಅಲೆಮಾರಿ ಬದುಕು ತುಂಬ ಜಠಿಲವಾದುದು. ಕಳ್ಳಕಾಕರ ಅಪಾಯ ಇದ್ದುದೇ. ಇದಕ್ಕಾಗಿ ಬಂದೂಕನ್ನು ಬಳಸುವ ಅಗತ್ಯವಿದೆ. ಕುರಿ ಮೇಕೆಗಳಿಗೆ ಆಹಾರದ ಸಮಸ್ಯೆ ಇತ್ತೀಚೆಗೆ ವಿಪರೀತವಾಗಿದೆ. ಬೆಳೆ ಪದ್ಧತಿಗಳು ಬದಲಾಗಿ ಕೃಷಿ ಭೂಮಿಯ ವಿಸ್ತರಣೆಯಿಂದಾಗಿ ಹುಲ್ಲುಗಾವಲು ಪ್ರದೇಶಗಳೇ ಕುರಿಕಾಯುವವರಿಗೆ ಸೀಮಿತವಾಗುತ್ತಿವೆ. ಸಿಗಬೇಕಿದ್ದ ರಕ್ಷಣೆ ಇಲ್ಲದ್ದರಿಂದ ಸಮಾಜದ ಹೊರಗೇ ಅವರು ಉಳಿಯುವಂತಾಗಿದೆ. ಕುರಿಗಳಿಗೆ ತಾಗುವ ಸೋಂಕು ರೋಗಗಳು ಇಡೀ ಮಂದೆಯನ್ನೆ ಬಲಿತೆಗೆದುಕೊಳ್ಳುವಷ್ಟರ ಮಟ್ಟಿಗೆ ಅಪಾಯಕಾರಿ. ಅಗತ್ಯ ಔಷಧಗಳು ಸಕಾಲಕ್ಕೆ ದೊರೆಯದೆ  ಕುರಿ ಮೇಕೆ ಸಾಕುವವರು ತುಂಬ ನಷ್ಟಕೆ ಒಳಪಡಬೇಕಾಗಿದೆ. ಬೇಸಿಗೆಯ ಬರಗಾಲವು ನರಕವಾಗಿ ಕುರುಬರಿಗೆ ಪರಿಣಮಿಸುವುದಿದೆ. ಮ್ಯಾಸಬೇಡರು ಕೂಡ ಕುರಿಮೇಕೆಗಳ ಜೊತೆಗಿನ ಬದುಕನ್ನು ಮುಂದುವರಿಸುತ್ತಾರೆ. ತಮ್ಮ ಪ್ರಾಣಿಗಳಿಗೆ ತಗಲುವ ರೋಗಗಳಿಗೆ ತಾವೇ ನೈಸರ್ಗಿಕ ಔಷಧ ಕ್ರಮಗಳನ್ನು ಕುರಿ ಮೇಕೆ ಕಾಯುವವರು ಕಂಡುಕೊಂಡಿದ್ದಾರೆಯಾದರೂ ಆ ಔಷಧಿಗಳು ಬದಲಾದ ಕಾಲದಲ್ಲಿ ಪರಿಣಾಮ ಕಾಯ್ದುಕೊಂಡಿಲ್ಲ.

ಹಂದಿ ಸಾಕಾಣಿಕೆಯೂ ಹಂಪಿ ಪರಿಸರದಲ್ಲಿದೆ. ಕೊರಮ ಕೊರಚ ಸಮುದಾಯಗಳು ಹಂಪಿ ಸಾಕಾಣಿಕೆಯಲ್ಲಿ ಮುಂದಿವೆ. ಎಲ್ಲೆಂದರಲ್ಲಿ ಕಂಡು ಬರುವ ಹಂದಿಗಳ ಸಾಕಾಣಿಕೆಯು ತುಂಬ ಸಲೀಸಾದುದು. ಹಂದಿಯನ್ನು ಲಕ್ಷ್ಮಿ ಎಂದು ಜನ ತಿಳಿದಿದ್ದಾರೆ. ಪವಿತ್ರ ರೂಪದಲ್ಲೂ ಭಾವಿಸುವುದರಿಂದ ಹಂದಿ ಏನಾದರೂ ವಾಹನಗಳಿಗೆ ಡಿಕ್ಕಿ ಹೊಡೆದರೆ ಏನೊ ಕೇಡು ಕಾದಿದೆ ಎಂದೇ ಜನ ಭಾವಿಸುವರು. ವರಾಹ ಅವತಾರದ ಬೆಂಬಲವೂ ಊರ ಹಂದಿಗಳ ಪರವಾಗಿದೆ. ವಾಸ್ತವದಲ್ಲಿ ಹಂದಿಗಳನ್ನು ಯಾರೂ ಹಿಂದೆ ನಿಂತು ಕಾದು ಮೇಯಿಸಿ ಸಾಕುವುದಿಲ್ಲ. ಬೇಕಾಬಿಟ್ಟಿಯಾಗಿ ಹಂದಿಗಳು ಬಹುಪಾಲು ಬೇನಾಮಿಯಾಗಿಯೇ ಕೊಳಚೆ ಪ್ರದೇಶಗಳಲ್ಲಿ ಸ್ವೇಚ್ಛೆಯಾಗಿವೆ. ಹಂದಿಗಳನ್ನು ಮಾಂಸಕ್ಕಾಗಿ ಸಾಕುತ್ತಾರೆ. ಇಲ್ಲಿ ಕೂಡ ಇವು ಯಾರ ಹಂದಿಗಳು ಎಂಬುದನ್ನು ಕಿವಿಗಳ ಮೇಲೆ ಮಾಡಿಕೊಂಡ ಗುರುತಿನಿಂದ ಹಕ್ಕುಗಳನ್ನು ಕಾಯ್ದಿರಿಸಲಾಗುವುದು. ಹಂದಿ ಸಾಕಾಣಿಕೆಯು ಬಹಳ ಕೀಳು ವೃತ್ತಿ ಎಂಬ ಭಾವನೆಯೂ ಇದೆ. ಹಂದಿಗಳ ಹಾಗೆಯೆ ಕೋಳಿ ಸಾಕಾಣಿಕೆಯು ಸಾಮಾನ್ಯವಾಗಿದೆ. ಗ್ರಾಮ ಸಂಸ್ಕೃತಿಯಲ್ಲೆ ಕೋಳಿ ಸಾಕುವುದು ಮುಕ್ತ ಅಭ್ಯಾಸ. ಹಂಪಿ ಪರಿಸರದಲ್ಲೂ ನಾಟಿ ಕೋಳಿಗಳ ಮಾಂಸದ ಊಟವು ವಿಶೇಷವಾಗಿದೆ. ಗ್ರಾಮ ದೇವತೆಗಳಿಗೆ ಬದಲಾದ ಕಾಲದಲ್ಲಿ ಬಹಳ ಸಲೀಸಾದ ಹರಕೆ ಜೀವ ಎಂದರೆ ಕೋಳಿಗಳದೇ ಮುಖ್ಯವಾಗಿದೆ. ಅಲೆಮಾರಿಗಳು ಕುದುರೆ ಸಾಕುವುದಿದೆ. ಕತ್ತೆಗಳನ್ನು ಮಾಮೂಲಾಗಿ ಅಗಸರು ತಮ್ಮ ವೃತ್ತಿ ಜೀವನದ ಭಾಗವಾಗಿ ಸಾಕಿಕೊಂಡು ಬಂದಿದ್ದಾರೆ.

ಕರಡಿ ಆಡಿಸುವವರು ಕರಡಿ ಸಾಕಿ ಹೊಟ್ಟೆಪಾಡು ಮಾಡುವುದೂ ಉಂಟು. ಕೊಪ್ಪಳದ ಬಳಿ ಕರಡಿ ಸಾಕಿ ಜೀವನೋಪಾಯ ಮಾಡುವ ವರ್ಗವೇ ನೆಲೆಸಿದೆ. ಹಂಪಿ ಪರಿಸರವು ಕರಡಿಗಳಿಗೆ ಪ್ರಶಸ್ತವಾದ ನೆಲೆಯಾಗಿದ್ದು ಪ್ರಾಚೀನ ಕಾಲದಿಂದಲು ಇವನ್ನು ಹಿಡಿದು ಪಳಗಿಸುವ ರೂಢಿಯು ಬೆಳೆದು ಬಂದಂತೆ ತೋರುವುದು. ಆದರೆ ಈಗ ಅದೂ ಕೂಡ ಮರೆಯಾಗುತ್ತಿದೆ. ಇನ್ನು ನಾಯಿಗಳನ್ನು ಪ್ರತ್ಯೇಕವಾಗಿ ಸಾಕಬೇಕಾದ ಅಗತ್ಯವೇ ಇಲ್ಲ. ಹಂಪಿ ಪರಿಸರದಲ್ಲಿ ಬೇಟೆಯು ಒಂದು ಸಾಂಸ್ಕೃತಿಕ ಕ್ರಿಯೆ ಆದ್ದರಿಂದ ಬೇಡರು ನಾಯಿಗಳನ್ನು ತಮ್ಮ ಬದುಕಿನ ಅನಿವಾರ್ಯ ಸದಸ್ಯರು ಎಂಬಂತೆ ನಾಯಿಗಳನ್ನು ಪ್ರೀತಿಸುವರು. ಒಡೆಯನಿಗಾಗಿ ಜೀವವನ್ನೆ ಲೆಕ್ಕಿಸದೆ ಮೃಗಗಳ ಮೇಲೆ ಎರಗಿ ಕಾಪಾಡುವ ಮತ್ತು ಬೇಟೆಗೆ ಮುನ್ನುಗ್ಗುವ ಬೇಟೆ ನಾಯಿಗಳಿಗೆ ಬಹುದೊಡ್ಡ ಸ್ಥಾನವಿದೆ. ನಾಯಿಗಳ ನೆನಪಿನ ವೀರಗಲ್ಲುಗಳು ಕೂಡ ಸಿಕ್ಕಿವೆ. ನಾಯಿ ಆದಿಮ ಕಾಲದಿಂದಲೂ ಮನುಷ್ಯ ಸಮಾಜದ ಸದಸ್ಯತ್ವವನ್ನು ಪಡೆದು ಬಂದಿದೆ. ಪಶುಪಾಲಕರಿಗಂತು ನಾಯಿ ಖಡ್ಡಾಯವಾಗಿ ಅವರ ಮಂದೆಗಳ ಜೊತೆ ಇರಲೇಬೇಕಾದ ಸಂರಕ್ಷಕ ಪ್ರಾಣಿ. ಇಂತಹ ನಾಯಿಗಳನ್ನು ಜೊತೆಯಲ್ಲೆ ಮಲಗಿಸಿಕೊಳ್ಳುವಷ್ಟು ಸಲಿಗೆಯನ್ನು ತೋರುವರು. ನಿಷ್ಠಾವಂತ ಪ್ರಾಣಿಯಾದ ನಾಯಿಯನ್ನು ನಾರಾಯಣ ಸ್ವರೂಪದಲ್ಲೂ ಕಾಣುವರು. ಪಾಂಡವರು ಸ್ವರ್ಗಾರೋಹಣ ಕಾಲದಲ್ಲಿ ಸ್ವರ್ಗ ಹುಡುಕುತ್ತ ನಡೆದಾಗ ನಾಯಿಯೆ ಅವರಿಗೆ ದಾರಿ ತೋರಿತು ಎಂಬ ನಂಬಿಕೆ ಹಂಪಿ ಪರಿಸರದಲ್ಲೂ ಇದೆ. ಬೀದಿನಾಯಿಗಳ ಬಗೆಗೂ ಜನಪದರು ಉದಾರವಾಗಿದ್ದಾರೆ. ನಾಯಿಗೊಂದು ತುತ್ತು ನೀಡಿದರೆ ಯಮಲೋಕದಲ್ಲಿ ಎದುರಾಗುವ ಶಿಕ್ಷೆಯನ್ನು ಅದು ತಡೆಯುತ್ತದೆ ಎಂಬು ನಂಬಲಾಗುತ್ತದೆ. ನಾಯಿಗಳು ಮನುಷ್ಯರನ್ನು ಅವಲಂಬಿಸಿಯೆ ಬದುಕುವ ರೂಢಿಯನ್ನು ಬೆಳೆಸಿಕೊಂಡಿವೆ. ಹಂಪಿ ಪರಿಸರದಲ್ಲಿ ಬೇಟೆ ನಾಯಿಗಳನ್ನು ಮಾರಾಟ ಮಾಡುವುದೂ ಉಂಟು. ಒಳ್ಳೆಯ ಬಲಿಷ್ಠ ಬೇಟೆ ನಾಯಿಗೆ ಎರಡು ಸಾವಿರ ರೂಗಳ ತನಕ ಬೆಲೆ ಇದೆ.

ಈ ಬಗೆಯಲ್ಲಿ ಹಂಪಿ ಪರಿಸರದ ಜೀವಜಾಲದ ಜಾನಪದ ಸಂಬಂಧವನ್ನು ಗಮನಿಸಬಹುದು. ಪಶುಪಾಲಕ ಸಮಾಜಗಳು ಕೃಷಿಕ ಸಮುದಾಯವಾಗಿ ಈಗ ಬದಲಾದ ಕಾಲದಲ್ಲಿ ಬೇರೆಲ್ಲ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದರೂ ಕೂಡ ಆಹಾರ ಹಾಗೂ ಸಂಪತ್ತಿನ ಹಿನ್ನೆಲೆಯಲ್ಲಿ ಸಾಕು ಪ್ರಾಣಿಗಳ ಅವಿನಾಭಾವ ಸಂಬಂಧವು ಮುಂದುವರೆದಿದೆ. ಹೈಬ್ರೀಡ್ ಪ್ರಾಣಿಗಳ ಸಾಕಾಣಿಕೆಯು ಪೈಪೋಟಿಯನ್ನು ಒಡ್ಡುತ್ತಿದ್ದರೂ ದೇಶೀಯ ತಳಿಗಳ ದನಕುರಿ ಮೇಕೆಗಳು ಉಳಿದುಕೊಂಡಿವೆ. ಹಂಪಿಯ ಗಿಡ್ಡ ತಳಿಯ ದನಗಳು  ಹೈನುಗಾರಿಕೆಯ ಪಲ್ಲಟದಿಂದ ಹಿನ್ನೆಡೆ ಅನುಭವಿಸಿದ್ದರೂ ಉತ್ತಮ ಹಾಲು ನೀಡುತ್ತವೆ. ಹಾಗೆಯೆ ಬದುಕುಳಿಯುವ ಪ್ರತಿರೋಧ ಶಕ್ತಿಯನ್ನು ವಿಶೇಷವಾಗಿ ಸಾಧಿಸಿಕೊಂಡಿವೆ. ಅಲ್ಲಲ್ಲಿ ಕಾಣುವ ಇಂತಹ ದನಕರುಗಳ ಹಿಂಡು ಗತಕಾಲದ ಪಶುಪಾಲಕ ಸಂಸ್ಕೃತಿಯ ಕಳಚಿದ ಕೊಂಡಿಗಳನ್ನು ನೆನಪಿಸುವುದಿದೆ. ಪ್ರಾಣಿ ಜಾನಪದದ ಆಳವಾದ ಬೇರುಗಳನ್ನು ಹುಡುಕಬೇಕಾದುದು ಇಂತಹ ಕಳಚಿದ ಕೊಂಡಿಗಳ ಜಾಡು ಹಿಡಿದು. ಪ್ರಾಣಿಗಳ ಬಗ್ಗೆ ಜನರ ಭಾವನೆ ಒಂದು ತಿಳುವಳಿಕೆಯಾದರೆ ಈ ತಿಳುವಳಿಕೆಯ ಮರೆಯಲ್ಲಿ ಜೀವಜಾಲದ ವಿಕಾಸದ ಎಷ್ಟೋ ಸಂಗತಿಗಳು ಮರೆಗೇ ಸರಿದುಬಿಟ್ಟಿರುತ್ತವೆ. ’ದನಕಾಯೋದಿಕ್ಕೆ ಹೋಗೋ ’ ಎಂದು ಒಂದು ಜನಪ್ರಿಯ ಬೈಗುಳವಿದೆ. ಆದರೆ ದನಗಾಹಿಗಳಿಂದಲೇ ಪಶುಪಾಲಕ ಸಂಸ್ಕೃತಿ ರೂಪುಗೊಂಡದ್ದು ನಿರ್ಲಕ್ಷ್ಯಕ್ಕೆ ಒಳಗಾದವರ ಬದುಕಿನಲ್ಲಿ ಜೀವಜಾಲದ ಎಷ್ಟೋ ವಿವರಗಳು ಸುಮ್ಮನೆ ಕಳೆದು ಹೋಗುತ್ತಿರುತ್ತವೆ. ದನ ಕಾದಿದ್ದರಿಂದಲೇ ಇಂದು ನಾಗರೀಕತೆಗಳು ಅತಿ ವೇಗದಲ್ಲಿ ಆಕಾಶಕಾಯಗಳ ಸಂಬಂಧವನ್ನು ಹುಡುಕಲು ಸಾಧ್ಯವಾಗುತ್ತಿರುವುದು. ಪ್ರಾಣಿಗಳ ಯಾವ ತಿಳುವಳಿಕೆ ನಮ್ಮ ಇಂದಿನ ಅಸ್ತಿತ್ವಕ್ಕೆ ಕಾರಣವಾಗಿದೆಯೋ ಯಾರು ಬಲ್ಲರು? ಜನಪದರು ಇಂತಹ ಪ್ರಶ್ನೆಗಳಿಗೆ ತಮ್ಮ ಪರಂಪರೆಗಳಲ್ಲಿ ಉತ್ತರ ಅಡಗಿಸಿಕೊಂಡಿದ್ದಾರೆ. ಹಂಪಿ ಪರಿಸರದ ಜೀವಜಾಲದ ಜಾನಪದ ನಮ್ಮ ವಿಕಾಸದ ಪ್ರಾಣಿ ಅಂತರದ ಸಂಬಂಧವನ್ನು ವಿವರಿಸಬಲ್ಲದು. ಕಾಡು ನಾಡು ಹೇಗೆ ಅಂತರಗೊಂಡವು ಎಂಬುದನ್ನು ಈ ಬಗೆಯ ದಾರಿಯಲ್ಲಿ ಗ್ರಹಿಸಬಹುದು. ಒಟ್ಟಿನಲ್ಲಿ ಹಂಪಿ ಪರಿಸರದ ಪ್ರಾಣಿ ಜಾನಪದ ಕಥನಗಳು ಆಹಾರ ಸಂಸ್ಕೃತಿಯ ಸರಪಳಿಯನ್ನೆ ಹೇಳುತ್ತಿವೆ.

ಕಾಡಿನ ಪ್ರಾಣಿಗಳಿಗೂ ಸಾಕು ಪ್ರಾಣಿಗಳಿಗೂ ಬಹು ದೊಡ್ಡ ಅಂತರವನ್ನೇನು ಜನಪದರು ಮಾಡುವುದಿಲ್ಲ. ತಮ್ಮ ಪಾಲಿಗೆ ಬಂದ ಪ್ರಾಣಿಗಳು ತಮ್ಮ ಮಕ್ಕಳಂತೆಯೆ ಎಂದು ಭಾವಿಸುವರು. ಕಾಡಿನ ಪ್ರಾಣಿಗಳು ದೇವರ ಪ್ರಾಣಿಗಳು. ಅವನ್ನು ಪೂರ್ಣ ನಾಶಗೊಳಿಸುವುದು ಸಾಧ್ಯವಿಲ್ಲ ಎಂಬ ತಿಳುವಳಿಕೆ ಜನಪದರಿಗೆ ಇದೆ. ಸಾಕು ಪ್ರಾಣಿಗಳು ಕೂಡ ಮನುಷ್ಯರ ಬದುಕನ್ನು ಅರ್ಥ ಮಾಡಿಕೊಂಡಿವೆ. ನಾಯಿಯಂತಹ ಪ್ರಾಣಿ ಕೂಡ ತನ್ನ ಒಡೆಯನಿಲ್ಲದೆ ಬದುಕಲಾರದು ಎಂಬ  ನೈಜ ಘಟನೆಗಳು ಹಂಪಿಯಲ್ಲು ಇವೆ. ನಂಬಿಕೆಯಿಟ್ಟರೆ ಪ್ರಾಣಿಗಳು ಒಡೆಯ ಕೊಂದರೂ ಸುಮ್ಮನೆ ತಲೆ ಒಡ್ಡಬಲ್ಲವು. ಪ್ರಾಣಿಗಳು ಕ್ರೂರಿ ಎಂದು ಹೇಳುವುದನ್ನು ಇಂತಹ ಸಂದರ್ಭಗಳಲ್ಲಿ ನಂಬಲಾಗದು. ಮನುಷ್ಯರೇ ಹೆಚ್ಚು ಕ್ರೂರಿಗಳು. ಕಾಡು ಪ್ರಾಣಿಗಳು ಬದುಕುವ ಸಲುವಾಗಿ ಬೇಟೆ ಆಡುತ್ತವೆ. ಮನುಷ್ಯ ಹೀಗಲ್ಲ. ಸಾಕು ಪ್ರಾಣಿಗಳ ಬಗ್ಗೆ ದಯೆ ಇದ್ದರೂ ಎಲ್ಲರೂ ಒಂದೇ ರೀತಿ ಪ್ರೀತಿಸಲಾರರು. ಹಂಪಿ ಪರಿಸರದ ಮಠಗಳು ಗೋಶಾಲೆಗಳನ್ನು ನಡೆಸಿಕೊಂಡು ಬರುತ್ತಿವೆ. ಅವರ ಪ್ರೀತಿ ಧಾರ್ಮಿಕವಾದದ್ದು. ಒಟ್ಟಿನಲ್ಲಿ ಪ್ರಾಣಿ ಜಾನಪದದ ನೈಸರ್ಗಿಕ ಪರಂಪರೆಯ ಸಂಬಂಧವನ್ನು ಮನುಷ್ಯ ಯಾವತ್ತೂ ಉಳಿಸಿಕೊಳ್ಳಬೇಕಾಗಿದೆ.