ಜಲಚರಗಳ ಬಗೆಗಿನ ತಿಳುವಳಿಕೆ ಭೂಮಿಯ ಮೇಲಿನ ಪ್ರಾಣಿಪಕ್ಷಿಗಳ ತಿಳುವಳಿಕೆಗಿಂತಲು ಭಿನ್ನವೇನಲ್ಲ. ಜನಪದರು ಎಲ್ಲ ಜೀವಿಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಮರುರೂಪಿಸಿಕೊಳ್ಳುವರು. ಜಲಚರಗಳು ನೇರವಾಗಿ ನಿತ್ಯವೂ ಎಲ್ಲ ಜನಪದರಿಗೆ ಸಮೀಪವಲ್ಲ. ಬೆಸ್ತ ಜನಪದವು ಜಲಚರಗಳ ಬಗ್ಗೆ ಗಾಢವಾದ ಸಂಬಂಧವನ್ನು ಪಡೆದಿರುತ್ತದೆ. ಹಂಪಿಯ ಪರಿಸರದಲ್ಲಿ ಬೆಸ್ತರ ಸಂಖ್ಯೆ ಸಾಕಷ್ಟಿದೆ. ನದಿ ಕೆರೆ ಕಾಲುವೆ ಹಳ್ಳ ತೊರೆ ಮುಂತಾದ ನೀರಿನ ಯಥೇಚ್ಛ ನೆಲೆಗಳಲ್ಲೆಲ್ಲ ಬೆಸ್ತರು ಇರುವಂತವರೇ. ಇವುಗಳೇ ಅವರ ಮಾತೃ ಸ್ಥಾನಗಳು. ಗಂಗಾ ಮತಸ್ಥರೆಂತಲೂ ಗಂಗೆಯ ಜೊತೆ ಗುರುತಿಸಿಕೊಳ್ಳುವರು. ಪ್ರಾದೇಶಿಕವಾಗಿ ಬಾರ್ ಕೇರಿಗಳು ಎಂತಲೂ ಕರೆದುಕೊಳ್ಳುವರು. ಉಪ್ಪಾರರು ಕೂಡ ನೀರಿನ ಸಂಬಂಧದ ಸಮುದಾಯವಾಗಿತ್ತು. ಅಂತೆಯೆ ಅಗಸರು ಸಹ ನೀರಿನ ಜೊತೆಗಿನ ಸಾವಯವ ಸಂಬಂಧ ರೂಢಿಸಿಕೊಂಡವರು. ನೀರಗಂಟಿಗಳು ನೀರು ನಿರ್ವಹಣೆಯ ಹೊಣೆ ಹೊತ್ತವರು. ಇವರೆಲ್ಲ ಜಲಚರಗಳ ಬಗ್ಗೆ ಸಾಕಷ್ಟು ತಿಳಿದವರು. ಇವರಿಂದಲೇ ಜಲ ಜಾನಪದ ಬೆಳೆದಿರುವುದು. ಪಶುಪಾಲನೆಯಲ್ಲಿ ಒಂದು ಬಗೆಯ ಜೀವನ ಕ್ರಮ ವಿಕಾಸವಾದರೆ ಜಲಚರಗಳನ್ನು ನಂಬಿಯೆ ಬದುಕುವವರು ಬೇರೊಂದು ರೀತಿಯ ಜೀವನಶೈಲಿಯನ್ನು ಬೆಳೆಸಿಕೊಂಡರು. ಜಲ ಸಂಸ್ಕೃತಿ ಎಂಬ ಬೃಹತ್ ಪರಿಕಲ್ಪನೆಯೊಂದು ಭಾರತೀಯ ತತ್ವಶಾಸ್ತ್ರದ ಉದ್ದಕ್ಕೂ ಬೌದ್ಧ ಧರ್ಮದ ಜೊತೆಗೂಡಿ ಬೆಳೆದು ಬಂದಿದೆ. ಜಗತ್ತಿನ ಎಲ್ಲ ನಾಗರೀಕತೆಯ ಜಲ ಮೂಲ ನೆಲೆಗಳಿಂದಲೇ ವಿಕಾಸವಾದಂತವು. ಎಲ್ಲೆಡೆ ಮೀನುಗಾರ ಸಮುದಾಯ ಬೆಳೆದಿದೆ. ಪಶುಪಾಲಕ ಸಮಾಜಗಳೂ ಹೀಗೆಯೆ ವಿಶ್ವವ್ಯಾಪಿಯಾದವು. ಇವುಗಳೆಲ್ಲವೂ ಮುಖ್ಯವಾಗಿ ನಿಸರ್ಗದ ಸಂಬಂಧವನ್ನು ಗಾಢವಾಗಿ ಮನುಷ್ಯ ಸಮಾಜಕ್ಕೆ ತಂದುಕೊಟ್ಟವು.

ಕರಕುಶಲ ಸಮಾಜಗಳು ನಾಗರೀಕತೆಯ ಉನ್ನತ ಹಂತದ ಉತ್ಪಾದನೆಗಳಿಗೆ ನಿಸರ್ಗವನ್ನು ಬಳಸಿಕೊಂಡವು. ಅಂತಹ ತಂತ್ರಜ್ಞಾನದಲ್ಲಿ ನಿಸರ್ಗದ ನೇರ ಸಂಬಂಧ ಕಾಣದು. ವ್ಯಕ್ತಿ ಕೇಂದ್ರಿತ, ನಿರ್ಧಿಷ್ಟ ವೃತ್ತಿ ಕೇಂದ್ರಿತ, ವರ್ಗ, ಲಿಂಗ, ಜಾತಿ ಕೇಂದ್ರಿತ ಕರಕುಶಲ ತಂತ್ರಜ್ಞಾನವು ನಿಸರ್ಗದ ವಿಶಿಷ್ಟ ವಿವೇಕವನ್ನು ಮಾನ್ಯ ಮಾಡುವ ಬದಲು ನಿಸರ್ಗದಲ್ಲಿ ಸಮೂಹ ನಿಷ್ಟ ಉತ್ಪಾದನೆಯೇ ಮಾನವೀಯವಾದದ್ದು ಎನ್ನುವುದನ್ನು ತೋರಿತು. ನೀರಿನ ಜೊತೆಗೆ ರೂಪಿಸಿಕೊಂಡ ಸಮುದಾಯಗಳು ಹಂಪಿ ಪರಿಸರದ ಜಲಚರಗಳ ಬಗ್ಗೆ ನೀಡುವ ನಿರೂಪಣೆಗಳು ಕರ್ನಾಟಕದ ಉಳಿದೆಡೆಯ ಜಲಚರಗಳ ವಿವರಗಳ ಜೊತೆ ಸಾಮ್ಯತೆ ಹೊಂದಿವೆ. ಜಲಚರಗಳ ಜಲ ಮಾರ್ಗ ವಿಶಿಷ್ಟವಾಗಿರುವುದರಿಂದ ಸಿಹಿ ನೀರಿನ ಈ ಜೀವಿಗಳು ಹೆಚ್ಚು ಕಡಿಮೆ ಒಂದೇ ಜಲಪರಿಸರವನ್ನು ಹೊಂದಿರುವುದರಿಂದ ಸಮಾನ ಅಂಶಗಳು ಕಂಡುಬರಲು ಕಾರಣವಾಗಿದೆ. ಬೆಸ್ತರು ಜಲಚರಗಳನ್ನು ಅವಲಂಬಿಸಿದ್ದರಿಂದ ಬದಲಾದ ಕಾಲದಲ್ಲಿ ತಮ್ಮ ಪಾರಂಪರಿಕ ನಂಬಿಕೆಗಳನ್ನು ಮರೆಯಬೇಕಾದ ಸ್ಥಿತಿ ಇದೆ. ಅಲ್ಲದೆ ಹೊಸ ಬಗೆಯ ವೃತ್ತಿ ವಿಧಾನಗಳು ತೆರೆದುಕೊಳ್ಳುತ್ತಿರುವುದರಿಂದ ಮೀನುಗಾರಿಕೆಯನ್ನು ನಂಬಿ ಬದುಕಬೇಕಾಗಿಲ್ಲ. ಹಂಪಿ ಪರಿಸರದಲ್ಲಿ ಮೀನುಗಾರಿಕೆ ಒಂದನ್ನೆ ನಂಬಿ ಬದುಕಬೇಕಾದಷ್ಟು ಉದ್ಯಮವಾಗಿ ಜಲಚರಗಳ ಸಂಬಂಧ ಬೆಳೆದಿಲ್ಲ. ಪುಟ್ಟ ಕುಟುಂಬಗಳ ವ್ಯಾಪ್ತಿಯಲ್ಲಿರುವ ಈ ವೃತ್ತಿಯು ಲಾಭದಾಯಕವಾದುದಲ್ಲ. ಹಂಪಿಯ ಬೆಸ್ತರು ಕೃಷಿಯಲ್ಲೂ ತೊಡಗಿದ್ದಂತೆ ವ್ಯಾಪಾರದಲ್ಲೂ ಆಸಕ್ತಿ ಹೊಂದಿದ್ದಾರೆ. ಮೀನು ಹಿಡಿವ ವೃತ್ತಿ ಬೆಸ್ತರಿಗೆ ಸಂಬಂಧಿಸಿದ್ದೇ ಆದರೂ ಯಾರು ಬೇಕಾದರೂ ಈ ವೃತ್ತಿಯನ್ನು ಅನುಸರಿಸಬಹುದು. ಒಂದು ಸಮುದಾಯದ ವೃತ್ತಿ ಹಕ್ಕು ಈಗ ಉಳಿದಿಲ್ಲ. ಬಹುಪಾಲು ಎಲ್ಲ ಪಾರಂಪರಿಕ ನಿಸರ್ಗಾದಾರಿತ ವೃತ್ತಿಗಳು ತಮ್ಮ ಮೂಲ ಚಹರೆ ಕಳೆದುಕೊಂಡಿದ್ದವು. ಗತಿಶೀಲತೆಯಲ್ಲಿ ಎಲ್ಲೆಲ್ಲಿಗೋ ಹೋಗಿ ಸಿಲುಕಿವೆ.

ಪಶುಪಾಲಕ ಸಮುದಾಯಗಳಿಗೆ ವೃತ್ತಿಯ ರಕ್ಷಣೆ ಇತ್ತು. ದನ ಕುರಿ ಮೇಕೆಗಳ ಪಶು ಸಂಪತ್ತಿನ ಮೇಲೆ ಹಿಡಿತವಿತ್ತು. ಸಾಮಾಜಿಕ ಸಾಂಸ್ಕೃತಿಕ ಆರ್ಥಿಕ ಹಕ್ಕು ಸ್ವಾಮ್ಯತೆ ಜಾರಿಗೊಂಡಿತ್ತು. ಜಲಚರಗಳನ್ನೆ ನಂಬಿದ್ದವರ ಪಾಡು ಹೀಗಿರಲಿಲ್ಲ. ಹಾವಾಡಿಗರು ಹಾವು ಆಡಿಸಿ ಅವುಗಳಿಂದ ಔಷಧಿ ತಯಾರಿಸಿ ಮೋಜಿನ ಆಟವಾಡಿಸುವುದಕ್ಕೆ ಸೀಮಿತವಾಗಿದ್ದರು. ಇಲಿ ತೋಡಗಳನ್ನೆ ಹಿಡಿದು ಬದುಕುವ ನತದೃಷ್ಟ ಸಮುದಾಯವು ಒಂದೆಡೆಗಿತ್ತು. ಹಕ್ಕಿ ಪಿಕ್ಕಿಗಳು ಹಕ್ಕಿಗಳ ಮೂಲಕವೆ ಬದುಕುವ ಕ್ರಮ ರೂಢಿಸಿಕೊಂಡಿದ್ದರು. ಕೋಲೆ ಬಸವನ ಆಟ, ಕರಡಿ ಕುಣಿಸುವ ಆಟಗಳಿಗೆ ಸಂಬಂಧಿಸಿದಂತೆ ಅತ್ಯಂತ ಕಡಿಮೆ ಜನಸಂಖ್ಯೆಯ ಜನವರ್ಗವೂ ಇತ್ತು. ಆದರೆ ಮೀನುಗಾರರು ಇವರೆಲ್ಲರಿಗಿಂತಲೂ ಭಿನ್ನ, ಪ್ರಾಣಿ ಪಕ್ಷಿ ಜಲಚರಗಳನ್ನು ಆಶ್ರಯಿಸಿ ಬದುಕುವ ನೈಸರ್ಗಿಕ ಪರಿಯು ಆದರ್ಶವಾದುದೇ. ಆದರೆ ಇದರ ನಡವಳಿಕೆ ಜನಸಂಖ್ಯೆ ಹೆಚ್ಚಿದಂತೆಲ್ಲ ತುಂಬ ನಷ್ಟದ ದಿಕ್ಕುತಪ್ಪುವ ಹಿಂದುಳಿಯುವ ರೀತಿಗೆ ಒಳಪಡಿಸಿದ್ದನ್ನು ಮರೆಯಲಾಗದು. ಜೀವಜಾಲದ ಜೊತೆಗಿನ ಸಾವಯವ ಸಂಬಂಧ ಕಳಚಿದಂತೆಲ್ಲ ಬದುಕುವ ಪರಿಯಲ್ಲಿ ಅನೈಸರ್ಗಿಕ ತೊಡಕು ಎದುರಾಗುತ್ತವೆ. ಆಹಾರ ಸಂಸ್ಕೃತಿ ಬೆಳೆದಂತೆಲ್ಲ ಜಲಚರಗಳ ಬಗೆಗಿನ ರೀತಿನೀತಿಗಳು ಬದಲಾದವು. ಕಡಲು ತೀರದ ಗ್ರಾಮಗಳ ಬೆಸ್ತರ ರೀತಿಗಳಿಗೂ ಉಷ್ಣವಲಯದ ಕುರುಚಲು ಕಾಡಿನ ನಡುವೆ ಹಾದು ಹೋಗುವ ತುಂಗಭದ್ರಾ ನದಿಯ ತೀರದ ಗ್ರಾಮಗಳಿಗೂ ಜೀವನಕ್ರಮದಲ್ಲಿ ತುಂಬ ವ್ಯತ್ಯಾಸವಿದೆ. ಇಲ್ಲಿನ ನೆಲ ಜಲ ಗಾಳಿ ಮಳೆಗಳಿಗೆ ತಕ್ಕಂತೆ ಜಲಚರಗಳ ಜೀವನ ರೀತಿ ನಿರ್ಮಾಣವಾಗಿದೆ. ಇಂತಹ ರೀತಿ ಇಲ್ಲೇ ವಾಸಿಸುವ ಜನರಿಗೂ ನಮ್ಮ ಅರಿವಿಗೆ ಎಟುಕದ ನೈಸರ್ಗಿಕ ಸಂಬಂಧ ಸಾಧ್ಯವಾಗಿದೆ. ಈ ಹಿನ್ನೆಲೆಯಿಂದ ಗಮನಿಸಿದರೆ ಹಂಪಿಯ ಜಲಚರ ಜಾನಪದವನ್ನೆ ಪ್ರತ್ಯೇಕವಾಗಿ ಅಧ್ಯಯನ ಮಾಡಬಹುದು. ಅಂತಹ ಕೆಲ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸುವ. ಜಲಚರಗಳಲ್ಲಿ ಗುರುತಿಸಿಕೊಂಡ ಪ್ರಧಾನ ಜೀವಿಗಳಲ್ಲಿ ಮೀನುಗಳು ಮುಖ್ಯ.

ಮೀನುಗಳು: ಜಲಚರಗಳಿಗೆ ವಿಶ್ವಾತ್ಮಕ ವ್ಯಾಪ್ತಿಯಿದ್ದರೂ ಸ್ಥಳೀಯವಾಗಿಯು ಅವನ್ನು ಅರ್ಥೈಸಬಹುದು. ಹಂಪಿ ಪರಿಸರದಲ್ಲಿ ತುಂಗಭದ್ರಾ ನದಿ ಹರಿಯುವುದರಿಂದ ಇಲ್ಲಿ ಸಿಗುವ ಮೀನುಗಳ ಬಗೆಯನ್ನು ಬೆಸ್ತರು ವಿಭಿನ್ನವಾಗಿ ವಿಂಗಡಿಸುವರು. ಕೆರೆಕಟ್ಟೆಗಳ ಮೀನು ಮತ್ತೊಂದು ರೀತಿ. ಮಳೆನೀರಿಗೆ ವಲಸೆ ಬರುವ ಹೋಗುವ ಮೀನುಗಳ ಜೀವನ ಕ್ರಮ ಮಳೆಗಾಲದ ಹೊಳೆಗಳು ತುಂಬಿಹರಿಯುವಾಗ ಸಾಮಾನ್ಯ ನೋಟ. ಕಮಲಾಪುರದ ಕೆರೆಗೆ ಹೊಸನೀರಿನ ಮೂಲಕ ಹೊಳೆಯ ಮೀನುಗಳು ಮೇಲೇರಿ ಬರುವಂತೆಯೆ ಹಳೆನೀರನ್ನು ಬಿಟ್ಟು ಹೊಸನೀರಿನ ಜೊತೆಯ ಬೇರೆಡೆಗೆ ತೆರಳುವ ಮೀನುಗಳೂ ಇವೆ. ಮೀನು ಮೇಲೆ ಹತ್ತೋದು ಇಳಿಯೋದು ಎಂದು ಇದನ್ನು ಜನ ಹೇಳುವರು. ಹೀಗೆ ಹೊಸ ನೀರಿನ ವೇಳೆ ಮೀನು ಹತ್ತೊ ಇಳಿಯೊ ಸಹಜ ವಾಸದ ನೆಲೆಯ ಸ್ಥಾನಾಂತರ ಪ್ರಕ್ರಿಯೆಗಳಲ್ಲಿ ಮೀನು ಬೇಟೆಯು ಸಹಜವಾಗಿ ನಡೆದು ಹೋಗುತ್ತದೆ. ಇದು ನೆನ್ನೆ ಮೊನ್ನೆಯ ಅಭ್ಯಾಸವಲ್ಲ. ಹೊಳೆ ಬಂದಾಗಲೆಲ್ಲ ಹೊಸಮೀನು ಬಂದೇ ಬರುವುದು ನಿಸರ್ಗದ ಪದ್ಧತಿ. ಆ ಪದ್ಧತಿಯು ಮೀನುಗಳ ಜೀವನಚಕ್ರ ಹಾಗೂ ಬದುಕುಳಿಯುವ ಆಯ್ಕೆಯ ಸ್ಥಾನಾಂತರಗಳು. ಈ ಪ್ರಕ್ರಿಯೆಯಲ್ಲಿ ಮಾನವ ತನ್ನ ಆಹಾರದ ಕೊಂಡಿಯನ್ನು ಬೆಸೆದುಕೊಂಡಿದ್ದಾನೆ. ಅಂತಹ ಗತಕಾಲದ ಜೈವಿಕ ಪ್ರವೃತ್ತಿಯು ಕೆಲವರಲ್ಲಾದರೂ ಉಳಿದು ಮೀನುಬೇಟೆಗೆ ಒತ್ತಾಯಿಸುತ್ತದೆ. ಕಮಲಾಪುರದ ಕೆರೆಗೆ ಬರುವ ಮೀನುಗಳ ಹಾಗೂ ಹೋಗುವ ಮೀನುಗಳ ಜೈವಿಕ ಜಾಲದಲ್ಲಿ ಸ್ಥಳೀಯ ಸಂಸ್ಕೃತಿಗಳೂ ರೂಪುಗೊಂಡಿವೆ.

ತುಂಗಭದ್ರಾ ನದಿಯ ಮೀನುಗಳ ಸಂಬಂಧವಂತು ಆದಿ ಹಂಪಿಯ ಕಾಲಕ್ಕೂ ವ್ಯಾಪಿಸಬಲ್ಲದು. ಈ ನದಿಯ ಭಾಗವೇ ಆಗಿದ್ದ ಬೆಸ್ತರು ಈ ನದಿಯಲ್ಲಿ ಹಾಗೂ ಕೆರೆಗಳಲ್ಲಿ ಸಿಗುವ ಮೀನುಗಳ ಬಗ್ಗೆ ತಮ್ಮದೇ ಆದ ತಿಳುವಳಿಕೆಯನ್ನು ಹೊಂದಿದ್ದಾರೆ. ಅವರ ಪ್ರಕಾರ ಈ ಪರಿಸರದಲ್ಲಿ ಸಿಗುವ ಮುಖ್ಯ ಮೀನುಗಳೆಂದೆರೆ:

೧. ಹದ್ದು ಮೀನು ೨. ಪಾಪಾಸಿ ಮೀನು  ೩. ಕಾರೆ ಕಂದಿ ಮೀನು  ೪. ಹಾವು ಮೀನು  ೫. ಅರಿಗಿಮೀನು  ೬. ಬಾಳೆಮೀನು  ೭.ಮುಕ್ಕಡಿಗಿ ಮೀನು  ೮. ಮಲಗ ಮೀನು ೯. ಮದ್ಲಮೀನು  ೧೦. ಚಪ್ಪೆಮೀನು  ೧೧. ಎಳುಲು ಮೀನು ೧೨. ಕುರುಡು ಮೀನು  ೧೩. ಚೋಳು ಮೀನು  ೧೪. ಮೀಸೆ ಜಿರ್ಲ ಮೀನು  ೧೫. ಮಿಂಚಪರಕಿ ಮೀನು  ೧೬. ಹರಿಶಿಣ ಗೊಗ್ಗಿರ್ಗ ಮೀನು  ೧೭. ನರೆಗಲ್ಲ ಮೀನು  ೧೮. ಕಾಮುನ ಕರ್ಪೂರದ ಮೀನು  ೧೦.ರೌವು ಮೀನು ೨೦. ಕೊಳಚೆ ಮೀನು  ೨೧. ಕಾಗೆ ಮೀನು ೨೨. ಕಾಟ್ಲಮೀನು  ೨೩. ಹದ್ದು ಕುರುಡು ಮೀನು  ೨೪. ಔಲು ಮಟ್ಟಮೀನು  ೨೫. ಕಾರಕಂಠಿ ಮೀನು  ೨೬. ಹಾವು ಮೀನು.

ಇವಿಷ್ಟು ಮೀನುಗಳು ಪ್ರಮುಖವಾಗಿವೆ. ಹೊಸ ತಳಿಯ ಮೀನುಗಳ ಕೆರೆ ಕಟ್ಟೆಗಳಲ್ಲಿ ಸಲೀಸಾಗಿವೆ. ಈ ಎಲ್ಲ ಮೀನುಗಳಿಗೂ ಔಷದೀಯ ಗುಣ ಪಡೆದಿವೆ ಎನ್ನುವುದು ಮಾಮೂಲು ಮಾತೇ. ಹದ್ದು ಮೀನು ಹದ್ದುಗಳಿಗೆ ಬಲು ಪ್ರಿಯವಾದ್ದರಿಂದ ಹದ್ದು ಮೀನೆಂದು ಕರೆಯುವರು. ತಿನ್ನಲು ಬಹಳ ರುಚಿಯಾಗಿದೆ. ಹೆಚ್ಚು ಮುಳ್ಳಿಲ್ಲ ನೋಡಲು ಆಕರ್ಷಕವಾಗಿವೆ. ಕಂದು ಬಿಳಿ ಕಪ್ಪು ಬಣ್ಣದ್ದಾಗಿದೆ. ಪಾಪಾಸಿ ಮೀನು ತುಂಬ ಮುಳ್ಳಿರುವ ಮೀನು. ಚಪ್ಪಟ್ಟೆಯಾಕಾರದಲ್ಲಿರುವುದರಿಂದ ಚಪ್ಪೆ ಮೀನು ಎಂತಲೂ ಕರೆಯುವರು. ಮುಳ್ಳಿದ್ದರೂ ಹಿಡಿಯಾಗಿ ಮೀನನ್ನು ಮುರಿದು ಅಡುಗೆ ಮಾಡುವರು. ದುರ್ಬಲ ಮುಳ್ಳಾದ್ದರಿಂದ ಮುಳ್ಳಿನ ಸಮೇತವೆ ಅಗಿದು ತಿಂದು ಬಿಡಬಹುದು. ಕೆಲವರು ತಲೆಬಾಲ ತೆಗೆದು ದೇಹದ ಮಧ್ಯಭಾಗದ ಚಪ್ಪಟ್ಟಯನ್ನೆ ಸುಲಿದು ಮುಳ್ಳನ್ನು ಪ್ರತ್ಯೇಕ ಮಾಡಿ ಅಡುಗೆ ಮಾಡುವರು. ಬಹಳ ರುಚಿ ಏನೂ ಇಲ್ಲ. ದಪ್ಪ ಚಪ್ಪೆ ಮೀನು ಸಿಕ್ಕರೆ ಮಾತ್ರ ತಿನ್ನಲು ಅನುಕೂಲ. ಚಪ್ಪಟ್ಟೆಯಾಕಾರದ ಮೀನುಗಳು ತಮ್ಮ ವಿಕಾಸದಲ್ಲಿ ಮಾಡಿಕೊಂಡ ರಕ್ಷಣಾತ್ಮಕ ಸ್ವರೂಪ ಇದೆ. ದೊಡ್ಡ ಮೀನುಗಳು ನುಂಗಿಬಿಡುವುದರಿಂದ ತಪ್ಪಿಸಿಕೊಳ್ಳಲು ದುಂಡುದೇಹವನ್ನೆ ಚಪ್ಪಟ್ಟೆಯಾಗಿಸಿಕೊಂಡು ಬಾಯಿಗೆ ಸುಲಭವಾಗಿ ಸಿಗದಂತೆ ರೂಪ ಧರಿಸಿವೆ. ಕಾರ ಕಂಠಿ ಮೀನು ಸಹ ಮುಳ್ಳಿರುವ ಮೀನು. ಎಲ ಮೀನುಗಳೂ ಮುಳ್ಳು ಸಹಜವೇ ಆದರೂ ಕೆಲವು ಅಧಿಕವಾಗಿ ಮುಳ್ಳು ಹೊಂದಿರುತ್ತವೆ. ಸಾಮಾನ್ಯವಾಗಿ ಹೊಳೆ ಕೆರೆ ನದಿಗಳ ಮೀನುಗಳಲ್ಲಿ ಮುಳ್ಳಿರುವ ಮೀನುಗಳು ಹೆಚ್ಚಾದರೂ ಮುಳ್ಳು ತುಂಬ ಕಡಿಮೆ ಇರುವ ಮೀನುಗಳೂ ಇವೆ. ಅವುಗಳ ಮುಳ್ಳಿನ ಪ್ರಮಾಣವು ನೀರಿನಲ್ಲಿ ಅವು ಆಯ್ದುಕೊಂಡ ರೂಪಿಸಿಕೊಂಡ ಜೀವನಕ್ರಮದ ಮೇಲೆ ನಿರ್ಧಾರವಾಗಿರುತ್ತದೆ. ಕಾರೆಕಂಠಿಯು ಸುಲಭವಾಗಿ ಸಿಕ್ಕಿಬೀಳುವ ಮೀನಾಗಿದೆ. ಹಾವು ಮೀನು ನೀರಿನ ತಳದ ಬದಿಯಲ್ಲಿ ಜೊಂಡಿರುವ ಸಸ್ಯಗಳ ಮರೆಯಲ್ಲಿ ಅಡಗಿರುತ್ತದೆ. ಹಾವಿನಂತೆಯೆ ಇರುವುದು. ಹಾವುಗಳು ವಿಕಾಸದ ಸಾಗರದಲ್ಲಿ ಮೀನಾಗಿ ಪರಿವರ್ತನೆಗೊಂಡ ನೆನಪನ್ನು ಹಾವು ಮೀನುಗಳಲ್ಲಿ ಮಾಡಿಕೊಳ್ಳಬಹುದು. ಹಾವು ಮೀನು ತಟ್ಟನೆ ಹಾವಿನಂತೆಯೆ ಕಾಣುತ್ತವೆ. ವಿಷಕಾರಿ ಹಾವು ಮೀನಿನ ಮುಳ್ಳು ತಾಗಿದಲ್ಲಿ ತುಂಬ ಸಮಯ ಉರಿಯುವುದು. ಇದು ಬೇಗನೆ ಸಾಯುವುದೂ ಇಲ್ಲ. ಇದರಲ್ಲಿ ರಕ್ತ ಕೂಡ ಹೆಚ್ಚು. ಬಾಲದಿಂದ ಹೊಡೆಯುತ್ತದೆ. ಎಚ್ಚರಿಕೆಯಿಂದ ಹಿಡಿಯಬೇಕು. ಉದಾಸೀನ ಮಾಡಿ ಕೈ ಹಾಕಿದರೆ ಮುಳ್ಳು ತಾಕಿಯೇ ಬಿಡುತ್ತದೆ. ಸಣ್ಣ ಹುಡುಗರು ಹಾವು ಮೀನು ಗಾಳಕ್ಕೆ ಬಿದ್ದಾಗ ತುಂಬ ಕಷ್ಟಪಟ್ಟು ಹಿಡಿವರು. ಬಲೆಗೆ ಸುಲಭವಾಗಿ ಬೀಳುವುದಿಲ್ಲ. ಹಾವು ಮೀನು ಬಿದ್ದರೆ ಕಿರಿಕಿರಿಯೆ. ಅದನ್ನು ಹಿಡಿದು ಪ್ರತ್ಯೇಕಿಸುವುದು ಕಷ್ಟ. ಹಾವು ಮೀನು ರುಚಿಕರವಾಗಿದೆ. ಔಷಧಿ ಎಂಬ ನಂಬಿಕೆಯಲ್ಲಿ ಈ ಹಾವು ಮೀನನ್ನು ತಿನ್ನುವರು. ಹೊಳೆ ಕೆರೆ ಕಟ್ಟೆಗಳೆಲ್ಲೆಲ್ಲ ಈ ಹಾವು ಮೀನು ಸಲೀಸಾಗಿ ಬದುಕುತ್ತದೆ. ಜೊಂಡು ಹುಲ್ಲಿನ ಬದಿಬಗ್ಗಡದಲ್ಲಿ ಹಾವು ಮೀನು ತೃಪ್ತಿಯಾಗಿ ಹೊರಳಾಡಿ ಆಡಿ ನೀರಿಗೆ ಜಾರಿ ಹೋಗುವುದು.

ಅರಿಗಿ ಮೀನು: ಅತ್ಯಂತ ವೇಗವಾಗಿ ಚಲಿಸಬಲ್ಲ ಮೀನು. ಹೊಸ ನೀರಿನ ಕಾಲದಲ್ಲಿ ಮೀನುಗಳು ವಲಸೆ ಹೋಗುವಲ್ಲಿ ಅರಿಗಿ ಮೀನು ವೇಗವಾಗಿ ಎದುರು ನೀರಿನಲ್ಲಿ ಈಜಿ ಹಾರಿ ಮೇಲೇರಿ ಹೋಗಬಲ್ಲದು ಬಹಳ ರುಚಿಯಾದ ಮೀನಿದು. ವೇಗದಲ್ಲಿ ಎಂತಹ ಪ್ರವಾಹವನ್ನೂ ದಾಟಬಲ್ಲೆ ಎಂಬಂತೆ ಜಿಗಿಯಬಲ್ಲ ಈ ಮೀನು ತುಂಗಭದ್ರಾ ಹೊಳೆಯ ಪ್ರವಾಹದಲ್ಲಿ ಉಪನದಿಗಳ ಕಡೆಗೂ ಏರಿ ಹೋಗಬಲ್ಲವು. ನದಿಯ ಆಚೆ ತುದಿಯಿಂದ ಈಚೆ ತುದಿ ತನಕ ಬೇಕಾದರೂ ಅರಿಗಿ ಮೀನು ಓಡಾಡಬಲ್ಲವು. ಬಾಳೆ ಮೀನು ಕೂಡ ಎದುರು ಬರುವ ನೀರಿಗೆ ಈಜುತ್ತ ವಲಸೆ ಬರಬಲ್ಲದು. ಹೊಸ ನೀರಿಗೆ ಮೇಲೇರುವಾಗ ಇದನ್ನು ಬೇಟೆ ಆಡುವರು. ಮೇಲೆ ಹಾರುವ ಮೀನುಗಳನ್ನು ಕುಡುಗೋಲಿನಿಂದ ಕಡಿದು ಹಿಡಿದುಕೊಳ್ಳುವರು. ಇದು ನಿಜಕ್ಕೂ ಅಪಾಯಕಾರಿ ಮೀನಿನ ಬೇಟೆ. ನೀರಿನ ಸೆಳೆತದಲ್ಲಿ ಉಪಾಯವಾಗಿ ನಿಂತು ಬಾಳೆ ಮೀನನ್ನು ಹಿಡಿಯಬೇಕು. ಹೊಸ ನೀರಿಗೆ ಬಲೆ ಒಡ್ಡಿಯೂ ಮೀನು ಬೇಟೆಯನ್ನು ಹಳ್ಳ ಪುಟ್ಟ ಹೊಳೆಗಳಲ್ಲಿ ಕೆರೆಕೋಡಿಯ ನೀರಿನಲ್ಲಿ ಮಾಡುವರು. ಬಾಳೆ ಮೀನು ಬಲೆಗೆ ಬಿದ್ದರೆ ಕೇಡು ಎಂಬ ನಂಬಿಕೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿದೆ. ಬಾಳೆ ಮೀನು ಹಿಡಿದವರ ಮನೆ ಹಾಳಾಗುತ್ತೆ ಎಂಬ ಭಯವಿದೆ. ಅದನ್ನು ತಿನ್ನುವುದೂ ಲೇಸಲ್ಲ ಎನ್ನುವರು. ಮೀನುಗಳ ಬಗ್ಗೆ ಕೆಲವಾರು ಕಥೆಗಳಿವೆ. ಅಣ್ಣತಂಗಿಯರೆ ಮೀನಾಗಿ ಕೂಡಿ ಮಕ್ಕಳು ಪಡೆದರೆಂಬ ಕಥೆಯಲ್ಲಿ ಬಾಳೆ ಮೀನು ಅಪಖ್ಯಾತಿ ಪಡೆದಿದ್ದು ಅಂತಹ ಸಂಬಂಧ ಮಾಡಿದ ಬಾಳೆ ಮೀನನ್ನು ತಿನ್ನಬಾರದು ಎಂಬ ನಿಷೇಧವಿದೆ. ಕಡಲ ಜಾನಪದದಲ್ಲಿ ಇಂತಹ ನಿಷೇಧದ ಪ್ರಸಿದ್ಧ ಕಥೆಗಳಿವೆ. ಇಂತಹ ಕಥೆಗಳು ಬಾಳೆ ಮೀನಿಗೂ ಉಳಿದ ಬೇರೆ ಮೀನಿಗೂ ಕಂಡು ಬರದಿರುವುದು ವಿಶೇಷವಾಗಿದೆ. ಬಾಳೆಯ ಮೀನು ಬಾಳೆದಿಂಡಿನಂತೆ ಉದ್ದಕ್ಕೆ ದಪ್ಪಗೆ ಆಕರ್ಷಕವಾಗಿದೆ. ತಿನ್ನಲು ಬಹಳ ರುಚಿಯುಂಟು.

ಮುಕ್ಕಡಿಗಿ ಮೀನು: ನೀರಿನ ತಳದಲ್ಲೆ ಆಡುತ್ತಿರುತ್ತದೆ. ಅಪರೂಪಕ್ಕೆ ಮೇಲೆ ಬಂದು ಒಳಹೋಗಿ ಬಚ್ಚಿಟ್ಟುಕೊಳ್ಳುವುದು. ಕಂದುಬಣ್ಣದ ಮೀನು. ಬಹಳ ಹಳೆಯ ಮೀನುಗಳಲ್ಲೊಂದು. ಮಲಗ ಮೀನು ಮುಕ್ಕಡಿಗಿ ಮೀನಿನ ಹತ್ತಿರದ ಸಂಬಂಧಿ. ಇದನ್ನು ಆರೋಗ್ಯವಾಗಿರುವ ಗಟ್ಟಿಮುಟ್ಟಾದವರೇ ತಿನ್ನಬೇಕು. ಜಡ್ಡಿರುವವರು ತಿನ್ನಬಾರದು. ತಿಂದರೆ ಖಾಯಿಲೆ ಹೆಚ್ಚಾಗುವುದು. ಮದ್ಲ ಮೀನು ಒಂದು ಬಗೆಯಲ್ಲಿ ಲೋಳೆಯಂತಹ ಮೀನು ಅಷ್ಟಾಗಿ ಮುಳ್ಳಿಲ್ಲ. ಹೇರಳವಾಗಿ ಮದ್ಲ ತುಂಗಭದ್ರಾ ನದಿಯಲ್ಲಿವೆ. ಕೆರೆಕಟ್ಟೆಗಳಲ್ಲೂ ಸಿಗುತ್ತವೆ. ಚಪ್ಪೆಮೀನು ಪಾಪಾಸಿ ಮೀನಿನ ಇನ್ನೊಂದು ವರ್ಗ. ಮುಳ್ಳಿರುವುದರಿಂದ ತಿನ್ನುವುದು ಸರಳವಲ್ಲ. ಮಕ್ಕಳಿಗೆ ಈ ಮೀನನ್ನು ಅಷ್ಟಾಗಿ ಕೊಡುವುದಿಲ್ಲ. ಎಳುಲು ಮೀನು ತುಂಬ ರುಚಿಯಾದುದು. ಇದನ್ನು ಹಳೆಕಾಲದ ಮೀನೆಂದು ಹೇಳುವರು. ಬಾರಿಗಾತ್ರದ ಮೀನೇನಲ್ಲ. ಸಾಧಾರಣ ಗಾತ್ರದ್ದು. ಆಕರ್ಷಕವಾದ ಮೀನು. ಕುರುಡು ಮೀನು ಕುರುಡಾಗಿರುವಂತೆ ವರ್ತಿಸುತ್ತದೆ. ನೆತ್ತಿ ಕಣ್ಣಿನ ಮೀನೆಂತಲೂ ಇದನ್ನು ಕರೆಯುವರು. ತಿನ್ನಲು ರುಚಿ ಹಾಗೆಯೆ ಮುಳ್ಳು ಕಡಿಮೆ. ಮಕ್ಕಳು ತಿನ್ನಲು ಅನುಕೂಲಕರವಾಗಿದೆ. ಚೋಳು ಮೀನು ಮಾತ್ರ ಹಾವು ಮೀನಿನಂತಿದೆ. ಅಪಾಯಕಾರಿ ಮೀನು. ಹಾವು ಮೀನಿನ ಕಿರಿಯ ಪ್ರಭೇದವಿದು. ನೋಡಲು ಹಾವು ಮೀನಿನಂತೆಯೇ ಕಾಣುವುದಾದರೂ ಉದ್ದವಾಗಿಲ್ಲ. ಇದಕ್ಕೂ ವಿಷದ ಮುಳ್ಳುಗಳಿವೆ. ಇದರ ದೇಹದಲ್ಲು ಹಾವುಮೀನಿನಲ್ಲಿರುವಂತೆ ರಕ್ತ ಹೆಚ್ಚು. ರುಚಿಯಾಗಿರುತ್ತದೆ. ನೋಡಲು ಆಕರ್ಷಕವಲ್ಲ. ಬದಿ ಬಗ್ಗಡದಲ್ಲಿ ಹೆಚ್ಚು ನೀರಿಲ್ಲದೆಯೂ ಬದುಕುಳಿದಿರುವ ಮೀನು. ಮೀಸಿಜುರ್ಲು ಮೀನು ಸಣ್ಣ ಮೀನು. ಹೊಳೆವ ಮಿಂಚಿನ ಬಣ್ಣದ ಮೀನು. ಬಲು ರುಚಿಯಾದ ಮೀನು. ಬರ್ಜಿಯಂತೆ ಚೂಪಾದ ಮುಳ್ಳುಗಳಿವೆ. ಚುಚ್ಚಿದರೆ ವಿಷದ ಉರಿ ಕಿರಿಕಿರಿ ಮಾಡುವುದು. ನೀರನ್ನು ಕದಡಿದರೆ ಮೇಲೆ ತೇಲಿಬರುತ್ತದೆ. ಬಗ್ಗಡದ ನೀರು ಇವುಗಳಿಗೆ ಹೊಂದದಿರುವುದರಿಂದ ಆಯಾಸಗೊಂಡು ಸುಲಭವಾಗಿ ಸಿಕ್ಕಿ ಬೀಳುತ್ತವೆ. ಮೀಸೆಯಂತೆ ಮೂತಿಯ ತುದಿಗಳಲ್ಲಿ ಇರುವುದರಿಂದ ಮೀಸೆ ಜಿರ್ಲ ಎಂದು ಕರೆಯುವರು. ಹಳೆ ಮೈಸೂರು ಕಡೆ ಗಿರ್ಲು ಮೀಸೆ ಮೀನು ಎನ್ನುವರು.

ಮಿಂಚಿ ಪರಕಿ ಮೀನು: ಪಳಪಳನೆ ಹೊಳೆವ ಆಕರ್ಷಕ ಬಣ್ಣದ ಮೀನು. ದೊಡ್ಡಗಾತ್ರದ ಮೀನುಗಳನ್ನು ಗಾಳಹಾಕಿ ಬೇಟೆ ಆಡುವಲ್ಲಿ ಗಾಳಕ್ಕೆ ಚುಚ್ಚಿ ಬಳಸುವರು. ಬೆಳ್ಳಿ ಮೀನು ಎಂತಲೂ ಇದನ್ನು ಹಳೆ ಮೈಸೂರಿನ ಕಡೆಯ ಬೆಸ್ತರು ಕರೆಯುವರು. ಮಿಂಚಿ ಪರಕಿಯನ್ನು ವಿವಿಧ ಗಾತ್ರದ ಸಂಖ್ಯೆಯ ಗಾಳಗಳಿಗೆ ಸಿಕ್ಕಿಸುವ ಮೂಲಕ ನಿರ್ಧಿಷ್ಟ ಗಾತ್ರದ ಮೀನು ಹಿಡಿಯಬಹುದು ಎಂದು ಹೇಳುವರು. ಒಂದನೆ ನಂಬರು ಎರಡನೆ ನಂಬರು ಮೂರನೆ ನಂಬರು ಹೀಗೆ ಸಂಖ್ಯಾನುಸಾರ ಗಾತ್ರದ ಮೀನುಗಳು ಗಾಳಕ್ಕೆ ಬೀಳುತ್ತವೆ ಎಂಬ ಲೆಕ್ಕಾಚಾರವಿದೆ. ಕಟ್ಟುಗಾಣ ಎಂಬ ವಿಧಾನದಲ್ಲಿ ದೊಡ್ಡ ಮೀನುಗಳನ್ನು ಹಿಡಿಯುವರು. ಒಂದನೆ ನಂಬರಿನ ಕಟ್ಟುಗಾಣಕ್ಕೆ ಒಂದು ಕೆ.ಜಿ. ತೂಕದ ಮಿಂಚಿ ಪರಕಿಯನ್ನು ಕಟ್ಟುವರು. ಒಂದು ಕೆ.ಜಿ. ತೂಕದ ಮಿಂಚಿ ಪರಕಿ ಮೀನನ್ನು ನುಂಗಲು ಹತ್ತು ಕೆ.ಜಿ. ತೂಕದ ದೊಡ್ಡ ಮೀನು ಬರುವುದು. ಹೀಗೆ ವಿವಿಧ ಗಾತ್ರದ ದೊಡ್ಡ ದೊಡ್ಡ ಮಿಂಚಿ ಪರಕಿಗಳನ್ನು ಕಟ್ಟಿದಂತೆ ಆಯಾಯ ದೊಡ್ಡ ಗಾತ್ರದ ಮೀನುಗಳು ಸಿಗುತ್ತವೆ ಎಂದು ಬೆಸ್ತರು ಹೇಳುವರು. ಕೆರೆಕಟ್ಟೆಗಳಲ್ಲಿ ಗಾಳದ ಕೋಲು ಹಿಡಿದು ಕೂತುಕೊಳ್ಳುವ ಪರಿಗಿಂತ ಇದೆ ಬೇರೆ. ಕೆಲವೊಮ್ಮೆ ಬಾರಿ ಗಾತ್ರದ ಮೀನುಗಳು ಕಟ್ಟು ಗಾಣ ಹಾಕಿ ಕೂತವರನ್ನೆ ನೀರಿನೊಳಕ್ಕೆ ಎಳೆದುಬಿಡಬಲ್ಲವಂತೆ.  ಹದ್ದು ಕುರುಡು ಮೀನನ್ನು ಕೂಡ ಕಟ್ಟುಗಾಣದ ಮೀನು ಬೇಟೆಗೆ ಬಳಸುವರು. ಬಾರಿಗಾತ್ರದ ಮೀನುಗಳನ್ನು ಬಲೆಯಿಂದ ಹಿಡಿಯಲು ಸಾಧ್ಯವಿಲ್ಲ. ತುಂಗಭದ್ರಾ ನದಿಯಲ್ಲಿ ಒಂದು ಟನ್ನು ತೂಕದ ಮೀನುಗಳು ಕೂಡ ಇವೆ ಎಂದು ಹೇಳುವರು. ಅತ್ಯಂತ ಪ್ರಾಚೀನ ನದಿಯಾದ ತುಂಗಭದ್ರೆಯಲ್ಲಿ ಅಂತಹ ಮೀನುಗಳಿರುವುದು ಸಹಜವೇ. ಇವನ್ನು ಕಟ್ಟುಗಾಣದ ಮೂಲಕ ಅಪರೂಪಕ್ಕೆ ಹಿಡಿಯಬಹುದು. ಬಹಳ ಚಾಣಾಕ್ಷವಾದ ಬೃಹತ್ ಗಾತ್ರದ ಮೀನುಗಳು ಬೆಸ್ತರ ಎಲ್ಲ ತಂತ್ರಮಂತ್ರಗಳನ್ನು ಅರಿತು ಬಿಟ್ಟಿವೆ ಎನ್ನುವರು. ಒಂದು ಟನ್ ತೂಕದ ಮೀನು ಈಗ ಹಿಡಿದಿಲ್ಲ ಎನ್ನುವರು. ಆದಿ ಕಾಲದ ಸಿಹಿ ನೀರಿನ ಮೀನು ಇಷ್ಟು ಗಾತ್ರದಲ್ಲಿ ಬೆಳೆಯುವುದು ಅಪರೂಪದ ಸಂಗತಿಯೇ ಸರಿ. ಒಟ್ಟಿನಲ್ಲೆ ಮಿಂಚಿ ಪರಕಿ ಮೀನು ತಿಂದೇ ಬದುಕಿರುವಂತಹ ಬಾರಿ ಗಾತ್ರದ ಮೀನುಗಳು ಇರುವುದು ಹಾಗೂ ಆ ಮೀನನ್ನು ಬೇಟೆ ಆಡಲು ಮಿಂಚಿ ಪರಕಿ ಮೀನನ್ನೆ ಬಳಸುವ ಹೊಂದಾಣಿಕೆಯ ಚಾಣಾಕ್ಷತೆ ಈಗಲೂ ಮುಂದುವರಿದಿರುವುದು ವಿಶೇಷವಾಗಿದೆ. ಬಾರಿ ಗಾತ್ರದ ಮೀನನ್ನು ಪಾಲು ಮಾಡಿಕೊಂಡು ಮಾರುವುದಿದೆ. ಹಾಗೆಯೆ ತಿನ್ನುವುದು ಕೂಡ.

ಹರಿಶಿಣ ಗೊಗ್ಗಿರ್ಲ ಮೀನು: ಬಣ್ಣದ ಮೀನು. ಬಾರಿ ಗಾತ್ರವೇನಿಲ್ಲ. ಸಾಧಾರಣ ಹೊಳೆ ಮೀನಾಗಿದ್ದರೂ ರುಚಿಯಾದುದೇ. ಸುಲಭವಾಗಿ ಬಲೆಗೆ ಬೀಳುವುದು. ನರೆಗಲ್ಲು ಮೀನಿನಬಾಲ ಮಾತ್ರ ಕೆಂಪು ಬಣ್ಣ. ಉಳಿದ ಮೈ ಕಪ್ಪಾಗಿದೆ. ಆಕರ್ಷಕವಾಗಿದ್ದು ಸಾಮಾನ್ಯ ಮೀನಾಗಿದೆ. ಕಾಮುನ ಕರ್ಪೂರದ ಮೀನು ಹೊಸ ಬಗೆಯ ಮೀನು. ಹಳೆಯ ಹೊಳೆಯ ಮೀನಲ್ಲ. ಹೊಸ ತಳಿಯಿಂದ ಹೊಳೆಗೆ ಬಂದದ್ದು. ಇದರ ಮೈಯಲ್ಲಿ ರಕ್ತ ಹೆಚ್ಚು. ಕೊಯ್ದಾಗ ಹೆಚ್ಚಿನ ಪ್ರಮಾಣದ ರಕ್ತ ಹರಿಯುವುದು. ರುಚಿಯಾಗಿದೆ. ಜನ ಹೆಚ್ಚಾಗಿ ಬಳಸುವರು. ಇದರ ಹೆಸರಿನ ವಿಚಿತ್ರ ಕುರಿತು ಮಾಹಿತಿ ಸಿಗಲಿಲ್ಲ. ರೌವು ಮೀನು ಕೂಡ ಜನಪ್ರಿಯವಾದುದೇ. ರುಚಿಕರ. ಮುಳ್ಳು ಕಡಿಮೆ. ಆಕರ್ಷಕವಾಗಿದೆ. ಕೊಳಚ ಮೀನು ಚಿಕ್ಕಮೀನೇ. ಕಪ್ಪು ಬಣ್ಣದಾಗಿದೆ. ಚೋಳು ಮೀನಿನ ಒಂದು ರೂಪವಾಗಿದೆ. ಬದಿಬಗ್ಗಡದಲ್ಲಿ ಹೆಚ್ಚಾಗಿ ಕಾಲಕಳೆವ ಮೀನಿದು. ಕಾಗೆ ಮೀನು ಕಡುನೀಲಿಗಪ್ಪಿನದು. ಈ ಹಿನ್ನೆಲೆಯಲ್ಲಿ ಕಾಗೆ ಮೀನೆನ್ನುವರು. ಕಾಟ್ಲ ಮೀನು ಹೊಸ ತಳಿಯ ಕೆರೆ ಮೀನು. ಕೆರೆಗಳಲ್ಲಿ ಇದನ್ನು ಸಾಕುವರು. ಕಾಟ್ಲ ಮರಿಗಳನ್ನು ಕೆರೆಗಳಿಗೆ ಬಿಟ್ಟು ಬೆಳೆಸುವುದರಿಂದ ಸುಮ್ಮನೆ ಕೆರೆ ಮೀನುಗಳನ್ನು ಹಿಡಿಯುವಂತಿಲ್ಲ. ಕೆರೆ ಮೀನುಗಳನ್ನು ಟೆಂಡರ್ ಕರೆದು ಹೆಚ್ಚು ಹಣ ಕಟ್ಟಿದವರಿಗೆ ಪರವಾನಗಿ ಕೊಟ್ಟು. ಮೀನು ವ್ಯಾಪಾರ ನಡೆಸಲಾಗುವುದು. ಕಾಟ್ಲ್ ಮೀನು ಮುಳ್ಳು ಕಡಿಮೆ ಇರುವ ಮೀನು. ಅಲ್ಲದೆ ಬಹಳ ರುಚಿ. ಬೇಗ ಬೆಳೆಯುತ್ತದೆ. ಹತ್ತು ಕೆ.ಜಿ. ಮೆಲ್ಪಟ್ಟು ಕಾಟ್ಲ ಬೆಳೆಯಬಲ್ಲವು. ಈ ಮೀನು ಎಲ್ಲ ಕಡೆ ಸಾಧಾರಣವಾಗಿ ಸಿಗುತ್ತದೆ. ಹದ್ದು ಕುರುಡು ಮೀನು ಹದ್ದು ಮೀನಿನ ಇನ್ನೊಂದು ಪ್ರಭೇದ. ಹಾಗೆಯೆ ಕುರುಡು ಮೀನಿನ ಹತ್ತಿರದ ಸಂಬಂಧಿ. ಬಾರಿಗಾತ್ರದ ಮೀನುಗಳನ್ನು ಹಿಡಿಯುವಾಗ ಈ ಮೀನನ್ನು ಗಾಳಕ್ಕೆ ಕಟ್ಟಿ ಬೇಟೆ ಮಾಡುವರು. ಕುರುಡು ಮೀನು ಬೇಟೆ ಆದಾಗ ಅದನ್ನು ಮಾರುವಂತಿಲ್ಲ. ಅಪರೂಪದ ಮೀನಾದ್ದರಿಂದ ಹಿಡಿದವರೇ ತಿನ್ನುವರು. ಅವರ ಮನೆಯವರೇ ಬಳಸಬೇಕೆಂಬ ನಿಯಮವಿದೆ. ಬೇರೆಯವರಿಗೆ ಮಾರಿದರೆ ಕೇಡು ಹಾಗು ಮುಂದೆ ಮೀನು ಬೇಟೆ ಸರಿಯಾಗಿ ಆಗುವುದಿಲ್ಲ ಎನ್ನುವರು. ಔಲು ಮಟ್ಟ ಮೀನು ರುಚಿಯಾದುದು. ’ಶಸಿಲಾಡಿ ಕೊರಮನ ತಲೆಗೆ ತಂತು’ ಎಂಬ ಗಾದೆ ಹಳೆ ಮೈಸೂರಿನ ಸೀಮೆಯಲ್ಲಿದೆ. ಔಲು ಮೀನು ಶಸಿಲು ಮೀನಿಗೆ ಹೋಲಿಕೆಯಾಗುವಂತಿದೆ. ಸುಂದರ ಮೀನೆಂದು ಹೇಳಬಹುದು.

ಹೀಗೆ ಹಂಪಿ ಪರಿಸರದಲ್ಲಿ ಸಾಮಾನ್ಯವಾಗಿ ದೊರಕುವ ಮೀನುಗಳ ವಿವರಗಳಿವೆ. ಈ ಎಲ್ಲ ವಿವರಗಳಲ್ಲು ಆಹಾರದ ನಂಬಿಕೆಯೆ ಪ್ರಧಾನವಾಗಿ ಎದ್ದು ಕಾಣುವುದು. ಪಶುಪಾಲಕ ಸಮುದಾಯಗಳು ಕೂಡ ಇದೇ ತಾತ್ವಿಕತೆಯನ್ನು ಹೊಂದಿವೆ. ಜಲಜೀವಿಗಳು ಆಹಾರವಾದಂತೆ ದೈವಿಕವಾದ ಆಯಾಮವನ್ನು ರೂಪಿಸಬಲ್ಲವು. ಮೀನುಗಳು ಬೆಸ್ತರಿಗೆ ದೈವ ಕೊಟ್ಟ ಫಲ. ಸೃಷ್ಟಿಯಲ್ಲಿ ಬದುಕುಳಿಯಲು ಅವರೇ ಕಂಡುಕೊಂಡ ವಿವೇಕ ಕೂಡ. ಮನುಷ್ಯ ಪ್ರಯತ್ನಗಳು ನಿಸರ್ಗದ ಸಂಬಂಧಗಳನ್ನು ಜೋಡಿಸುತ್ತವೆ. ಮತ್ಸ್ಯಾವತಾರದ ವಿಷ್ಣುವಿನ ನಂಬಿಕೆ ಕೂಡ ಈ ಸಮುದಾಯದ ದೈವಿಕ ಬಲವಾಗಿದೆ. ವಿಜಯನಗರ ಕಾಲದ ಸಾಮ್ರಾಜ್ಯದ ಬಾಯಿ ರುಚಿಗೆ ತಕ್ಕ ಮತ್ಸ್ಯಾಹಾರವನ್ನು (ತುಂಗಭದ್ರ) ನದಿಯೂ, ಆ ಕಾಲದ ಅನೇಕ ಕೆರೆಕಟ್ಟೆಗಳು ಒದಗಿಸುತ್ತಿದ್ದುದಕ್ಕೆ ಸಾಕ್ಷ್ಯಗಳಿವೆ. ಪ್ರವಾಸಿಗರು ಆ ಬಗ್ಗೆ ಉಲ್ಲೇಖಿಸಿರುವರು. ವೈಷ್ಣವ ದೇವಾಲಯಗಳಲ್ಲೆಲ್ಲ ಮೀನಿನ ವಿವಿಧ ಕೆತ್ತನೆಗಳಿವೆ. ಅವು ತುಂಗಭದ್ರಾ ನದಿಯಲ್ಲಿ ಸಿಗುತ್ತಿದ್ದ ಮೀನಿನ ಪ್ರತಿರೂಪವೇ ಆಗಿದ್ದವೆಂಬುದನ್ನು ಈಗ ದೊರೆಯುವ ಮೀನುಗಳ ಹೋಲಿಕೆಯಿಂದ ಗುರುತಿಸಬಹುದು. ಮತ್ಸ್ಯಕನ್ಯೆಯರ ಚಿತ್ರಗಳು ಇವೆ. ನಾಗಲೋಕದಲ್ಲಿ ಮತ್ಸ್ಯಕನ್ಯೆಯರು ಇದ್ದ ಬಗ್ಗೆ ಪುರಾಣ ಹೇಳಿದರೆ ಮತ್ಸ್ಯಗಂಧಿಯ ಪ್ರಸಂಗ ಬರುತ್ತದೆ. ವ್ಯಾಸ ಮುನಿಗಳು ಈ ಮತ್ಸ್ಯ ಕನ್ಯೆಯನ್ನು ಕೂಡಿದ ನಂತರವೇ ಆಕೆ ಯೋಜನಗಂಧಿ ಆದಂತೆ. ಬೆಸ್ತರ ಹೆಣ್ಣುಮಗಳು ಈಕೆ ಎಂದು ಹೇಳುವರು. ಇವನ್ನೆಲ್ಲ ಹಂಪಿ ಪರಿಸರದ ಬೆಸ್ತ ಸಮುದಾಯವು ತನ್ನ ಗತಕಾಲದ ಬೇರುಗಳೆಂದು ಒಪ್ಪಿಕೊಳ್ಳುತ್ತದೆ. ಮತ್ಸ್ಯಕನ್ಯೆಯರ ರಮ್ಯ ಕಲ್ಪನೆಯು ಜಗತ್ತಿನಾದ್ಯಂತ ಇದೆ. ಹಂಪಿಯ ಹೊಳೆಯಲ್ಲಿ ಅಂತಹ ಕಲ್ಪನೆಗಳು ತೇಲಿಲ್ಲ ಎಂಬುದು ಸಮಾಧಾನವೆನಿಸುವ ಸಂಗತಿ ಆಗಲಿಲ್ಲ. ಜನಪದರ ಇಂದಿನ ಕಷ್ಟಕಾರ್ಪಣ್ಯದ ಬದುಕಿನಲ್ಲಿ ಮತ್ಸ್ಯ ಪುರಾಣದ ವಿವರಗಳೂ ಇಲ್ಲ. ಹೊಳೆಯಲ್ಲಿ ಮೀನಿನ ಪ್ರಮಾಣವೇ ಇಳಿಮುಖವಾಗುತ್ತಿದೆ. ಸಮುದ್ರದಿಂದ ಮಾರುಕಟ್ಟೆಗೆ ತರಲ್ಪಡುವ ಮೀನುಗಳು ಸ್ಥಳೀಯ ಮೀನುಗಳ ಬೇಡಿಕೆಯನ್ನು ಹಿಂದೆ ಸರಿಸಿವೆ. ಗತಕಾಲದ ಹಂಪಿಯ ಮೀನುಗಳ ಬಗೆಗಿನ ಜಾನಪದ ಪರಿಸರವೂ ಅಳಿವಿನ ಅಂಚಿನಲ್ಲಿದೆ.

ಏಡಿಗಳು: ಏಡಿಗಳು ಉಭಯವಾಸಿಗಳು ಹಂಪಿ ಪರಿಸರದಲ್ಲಿ ಮೂರು ಬಗೆಯ ಏಡಿಗಳನ್ನು ಜನಪದರು ಗುರುತಿಸುತ್ತಾರೆ. ಮಾಂಸಾಹಾರದ ವಿಶಿಷ್ಟ ಬಗೆಯಲ್ಲಿ ಏಡಿಗಳ ರುಚಿಯೂ ಒಂದು. ಸಮುದ್ರದ ಏಡಿಗಳ ರುಚಿಯೇ ಬೇರೆ. ಸಿಹಿ ನೀರಿನ ಏಡಿಗಳು ತುಂಬ ರುಚಿಕರ. ತುಂಗಭದ್ರಾನದಿಯ ನೀರಿನಲ್ಲಿ ದೊಡ್ಡಗಾತ್ರದ ಏಡಿಗಳು ಸಿಗುತ್ತವೆ. ಅಣೆಕಟ್ಟು ನಿರ್ಮಾಣ ಆದ ಮೇಲೆ ಕಾಲುವೆಗಳಲ್ಲಿ ನೀರು ಹರಿದು ಗದ್ದೆಗಳಲ್ಲೂ ಏಡಿಗಳು ವ್ಯಾಪಕವಾಗಿವೆ. ಏಡಿಗಳನ್ನು ತಿನ್ನುವವರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಆಹಾರ ಶ್ರೇಣಿಯಲ್ಲಿ ಏಡಿಗಳಿಗೆ ಕೆಳಗಿನ ಸ್ಥಾನ ನೀಡಲಾಗಿದೆ. ಆದರೂ ತಳಜಾತಿಗಳು ಏಡಿಗಳನ್ನು ಔಷಧಿಯುಕ್ತ ಆಹಾರವಾಗಿ ಬಳಸುವರು. ಕಲ್ಲೇಡಿ. ಹಾಲೇಡಿ, ಹುಲ್ಲೇಡಿ ಎಂಬ ಈ ಮೂರು ಬಗೆಯ ಏಡಿಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಕಲ್ಲೇಡಿಯ ಕೊಕ್ಕೆಗಳಿಗೇನಾದರೂ ಬೆರಳು ಸಿಕ್ಕಿಕೊಂಡಾವೊ ತುಂಡಾಗುವ ತನಕ ಬಿಡುವುದಿಲ್ಲ. ಬಹಳ ಗಟ್ಟಿ ಕವಚ ಹೊಂದಿದೆ. ಕವಚ ಕಿತ್ತು ಹಾಕಿದರೆ ಒಳಗಿನ ದೇಹದಲ್ಲಿ ಗಟ್ಟಿ ಮಾಂಸವೇ ಸಿಗುತ್ತದೆ. ರುಚಿಯಾಗಿಯೂ ಇರುತ್ತದೆ. ಕಲ್ಲುಗಳ ಸಂದಿಯಲ್ಲಿರುತ್ತದೆ. ಹಾಗಾಗಿಯೇ ಕಲ್ಲೇಡಿ ಎಂಬ ಹೆಸರು. ಕಲ್ಲೇಡಿಯನ್ನು ಸುಟ್ಟುಕೊಂಡೂ ತಿನ್ನುವರು. ಕಲ್ಲೇಡಿಯ ಮುಂಗಾಲಿನ ಎರಡರಲ್ಲಿ ತುಪ್ಪ ಇರುತ್ತದೆ. ಇದರೆ ಕೊಕ್ಕೆಗಳನ್ನು ಸುಟ್ಟು ತುಪ್ಪ ಬಸಿದುಕೊಳ್ಳುವರು. ಇದರ ತುಪ್ಪವು ಅಪ್ಪಟ ಔಷಧಿ ಎಂದೇ ತಿಳಿಯುವರು. ಕ್ಯಾನ್ಸರ್ ಗೆ ಏಡಿ ಒಳ್ಳೆಯ ಔಷಧಿಯಂತೆ. ಹಾಲೇಡಿಯು ಮೃದುವಾಗಿರುತ್ತದೆ. ಇದರ ಕಾಲುಗಳನ್ನು ಮುರಿದರೆ ಹಾಲಿನಂತೆ ದ್ರವ ಬರುತ್ತದೆ. ಆದ್ದರಿಂದಲೇ ಇದು ಹಾಲೇಡಿ. ತುಂಬ ಮೃದುವಾದ ಇದನ್ನು ಬಾಣಂತಿಯರಿಗೆ ಔಷಧಿಯಾಗಿಯೂ ಉಣಿಸುವರು. ಹಾಲೇಡಿ ತಿಂದರೆ ಬಾಣಂತಿಯರಲ್ಲಿ ಹಾಲು ಹೆಚ್ಚುವುದು ಎಂದು ನಂಬುವರು. ಹುಲ್ಲೇಡಿ ಸಣ್ಣದು. ಗದ್ದೆಗಳಲ್ಲೂ ಕೆರೆಗಳಲ್ಲೂ ಸಿಗುತ್ತದೆ. ಅಷ್ಟೇನೂ ಮೃದವೂ ಅಲ್ಲ ಗಟ್ಟಿಯೂ ಅಲ್ಲ.

ಏಡಿ ಕಷಾಯ ತುಂಬ ರುಚಿಯಾಗಿರುತ್ತದೆ. ಏಡಿಗಳನ್ನು ಹಿಡಿದು ತಂದು ಕಾಲು ಮುರಿದು ಅದರ ಹೊಟ್ಟೆಯನ್ನು ತುದ್ಧ ಮಾಡಿ ಚೆನ್ನಾಗಿ ಕುದಿಸುವರು. ಹೀಗೆ ಕುದಿದ ಮೇಲೆ ಕೆನೆ ಮೇಲೆ ಎಣ್ಣೆಯಂತೆ ಬರುವುದು. ಇದರ ಕಾಲುಗಳು ದೇಹದ ಕವಚ ಎಲ್ಲವನ್ನು ಚೆನ್ನಾಗಿ ಜಜ್ಜಿ ಕುದಿಸಿರುವುದರಿಂದ ಅದರ ದೇಹದ ರಸೌಷಧವೆಲ್ಲ ಹದವಾಗಿ ಹೆಪ್ಪುಗಟ್ಟಿ ಬರುವುದು. ಇದನ್ನು ಬಟ್ಟಿಯಿಂದ ಸೋಸಿ ಟೊಮಟೊ, ಕೊತ್ತಂಬರಿ, ದನಿಯಾ, ಮೆಣಸು, ಹುಣಸೆಹಣ್ಣು, ಕೊಬ್ಬರಿ ಹಾಕಿ ಮತ್ತೆ ಕುದಿಸುವರು. ಇದೇ ಏಡಿ ಕಷಾಯ. ಶೀತಜ್ವರಕ್ಕೆಲ್ಲ ಇದು ಅತ್ಯುತ್ತಮ ಔಷಧ ಎಂದು ಮಕ್ಕಳಿಗೆ ಕುಡಿಸುವರು.

ಕಪ್ಪೆಗಳು: ನಾಲ್ಕು ಬಗೆಯ ಕಪ್ಪೆಗಳನ್ನು ಹಂಪಿ ಜನಪದ ಗುರುತಿಸುತ್ತದೆ. ಕಪ್ಪೆಯನ್ನು ಹೆಣ್ಣಿನ ರೂಪಕವಾಗಿಯೂ ಕಾಣುವರು. ಮಂಡೋದರಿ, ಮಂಡೋಕುಪನಿಷತ್ತುಗಳ ಹಳೆಯ ಕಥೆಗಳಿವೆ. ಕಪ್ಪೆಗಳು ಮಳೆ ತರಿಸುತ್ತವೆ ನಂಬಿಕೆ ಇದೆ. ಕಪ್ಪೆಗಳಿಗೆ ಮದುವೆ ಮಾಡಿಸುವುದು ಮಳೆ ಬರಲೆಂದು. ಹೆಬ್ಬುಗಪ್ಪೆ, ವಂಡರುಗಪ್ಪೆ, ಬಿಳಿಕಪ್ಪೆ, ಸಾದಾಕಪ್ಪೆಗಳು ಹಂಪಿ ಪರಿಸರದಲ್ಲಿವೆ. ಹೆಬ್ಬುಗಪ್ಪೆ ಬಾರಿ ಗಾತ್ರದ್ದು. ನೀರಿನ ಬದಿಯಲ್ಲಿ ಬಿದ್ದಿರುತ್ತದೆ. ವಂಡರುಗಪ್ಪೆ ಕಲ್ಲುಸಂದುಗಳಲ್ಲಿ ಕೂತು ಗೊಟ್ರುಕ್ ವಟ್ರುಕ್ ಎಂದು ಸದ್ದು ಮಾಡುತ್ತಿರುತ್ತದೆ. ಇದುಕೂಗಿದರೆ ಮಳೆ ಬರುತ್ತದೆ ಎಂದು ನಂಬುವರು. ಕಪ್ಪೆಗಳು ಹಾವಿಗೆ ಒಳ್ಳೆಯ ಆಹಾರ. ಮಳೆಗಾಲದಲ್ಲಿ ಕಪ್ಪೆಗಳ ಮೇಳ ಹಳ್ಳಿಗಳೆ ಮೊಳಗುವಂತೆ ಮಾಡಿಬಿಟ್ಟಿರುತ್ತದೆ. ಇದು ಸಮೃದ್ಧಿಯ ಬೆಳೆಯ ಸಂಕೇತವಂತೆ. ದೇವಲೋಕವೇ ಕಪ್ಪೆಗಳ ತಮಟೇ ಮೇಳಕ್ಕೆ ತಲೆಬಾಗುತ್ತಂತೆ. ಕಂದು ಗೆಂಪು, ಬೂದಿ ಬಿಳಿಕಪ್ಪೆಗಳು ಕೂಡ ಕಂಡುಬರುತ್ತವೆ.

ಮೊಸಳೆ: ಮೊಸಳಯ್ಯನ ಗುಡ್ಡವೊಂದು ಹಂಪಿಯಲ್ಲಿದೆ. ಚಿಕ್ಕಗಾತ್ರದ ಮೊಸಳೆಗಳು ಜಲಚರಗಳನ್ನೆ ನಂಬಿ ಬದುಕಿವೆ. ಮನುಷ್ಯರ ಮೇಲೆ ದಾಳಿ ಮಾಡುವ ಪ್ರಸಂಗಗಳು ಕೇಳಿ ಬಂದಿಲ್ಲ. ದಾರಿ ತಪ್ಪಿ ಕಾಲುವೆಗಳಿಗೆ ಬಂದ ಮೊಸಳೆಯನ್ನು ಸುಮ್ಮನೆ ಬಿಡುವುದಿಲ್ಲ. ಮೊಸಳೆಯನ್ನು ಕೂಡ ದೈವಿಕವಾಗಿ ಕಾಣುವುದಿದೆ. ನೀರು ನಾಯಿ ಅಪರೂಪಕ್ಕೆ ನದಿಯಲ್ಲಿ ಕಂಡು ಬರುತ್ತವೆ. ತುಂಗಭದ್ರಾ ನದಿಯಲ್ಲಿ ಇವು ಆಗಾಗ ಕಾಣಿಸಿಕೊಳ್ಳುತ್ತವೆ. ನೀರು ನಾಯಿ ಮುಂಗುಸಿಯಂತೆ ಕಾಣುವ ಪ್ರಾಣಿ ಇದೊಂದು ವಿಚಿತ್ರ ಜೀವಿ ಎಂಬ ಕಲ್ಪನೆಗಳು ಜನಪದರಲ್ಲಿವೆ. ಇದನ್ನೇನು ಬೇಟೆ ಆಡುವುದಿಲ್ಲ. ಆಮೆಗಳು ಹಂಪಿಯ ಪರಿಸರದಲ್ಲಿ ಆದಿ ಕಾಲದಿಂದಲೂ ನೆಲೆಕಂಡುಕೊಂಡಿವೆ. ಮೂರು ಬಗೆಯ ಆಮೆಗಳಿವೆ ಎಂದು ಜನ ಗುರುತಿಸುವರು. ತಾಬಲಿ, ಟಿಸುಮುರುಗ, ಆಲುವೆ ಎಂಬ ಈ ಆಮೆಗಳು ಮಾಂಸಕ್ಕಾಗಿ ಅಷ್ಟೇನು ಬಲಿ ಆಗುವುದಿಲ್ಲವಾದರೂ ಔಷಧಿಯ ಬೇರೆ ಬೇರೆ ಉದ್ದೇಶಗಳಿಗೆ ಕ್ರೂರವಾಗಿ ಬೇಟೆಗೀಡಾಗುತ್ತವೆ. ಬಂಗಾಳದಿಂದ ಬರುವ ಬೇಟೆಗಾರರು ಆಮೆಗಳನ್ನು ಹಿಡಿಯುವರು. ಇವರು ಹಿಡಿಯುವುದು ವಿಶೇಷವಾಗಿ ಒಂದು ಟನ್ ತೂಕದಷ್ಟಿರುವ ಆಲುವ ಎಂಬ ಆಮೆಗಳನ್ನು. ಇದರ ಕವಚ ಬಾಲ ಮೂತಿ ಕಾಲುಗಳನ್ನು ಕತ್ತರಿಸಿಕೊಂಡು ಅದರ ಮಾಂಸವನ್ನು ಬಿಟ್ಟುಬಿಡುವರು. ಅವುಗಳನ್ನು ಪುಡಿ ಮಾಡಿ ಕುದಿಸಿ ಎಣ್ಣೆ ತೆಗೆದು ಔಷಧಿಗೆ ಬಳಸುವರಂತೆ. ಬಿಸಾಡಿದ ಮಾಂಸವನ್ನು ಸ್ಥಳೀಯರು ಬಳಸುವರು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇವು ಇವೆ ಎನ್ನುವರು. ಇವುಗಳು ಸುಲಭವಾಗಿ ಬೇಟೆಗೆ ಸಿಗುವುದಿಲ್ಲವಂತೆ. ಟಿಸುಮುರಗ ಐದರಿಂದ ಹತ್ತು ಕೇಜಿ ತೂಕವಿರುವಂತದ್ದು. ಮಾಂಸಕ್ಕಾಗಿ ಬೇಟೆ ಆಡುವರು. ತಾಬಲಿ ಹೊಳೆ ಬಂದಾಗ ಹೆಚ್ಚು ಸಿಗುತ್ತದೆ. ಸೀಗಡಿಗಳು ಕೂಡ ಜನಪ್ರಿಯವಾಗಿದೆ. ಇವುಗಳಲ್ಲಿ ಬಣ್ಣದ ಸೀಗಡಿ ವಿಶೇಷವಾಗಿದೆ. ಇದರ ಕೈಕಾಲುಗಳು ಬಹಳ ಉದ್ದ, ನವಿಲು ಬಣ್ಣದಂತೆಯೂ ಕಾಣುವುದು. ಹತ್ತಾರು ಬಗೆಯ ಎಲ್ಲ ವರ್ಣಗಳು ಈ ಸೀಗಡಿಗಿವೆ. ಅತ್ಯಾಕರ್ಷಕವಾದದ್ದು. ಸಣ್ಣಸೀಗಡಿಗಳು ಕೆರೆಯಲ್ಲಿ ಸಿಗುತ್ತವೆ. ಮಿಶ್ರಬಣ್ಣದ ದಪ್ಪ ಸೀಗಡಿ ತುಂಗಭದ್ರಾ ನದಿಯಲ್ಲಿ ಅಪರೂಪಕ್ಕೆ ಸಿಗುವುದು. ಇದು ಸಿಕ್ಕರೆ ಅದೃಷ್ಟವಂತೆ. ನದಿಯ ಪೊಟರೆಗಳ ಆಳದಲ್ಲಿ ಬಚ್ಚಿಟ್ಟುಕೊಂಡಿರುತ್ತದೆ. ಹೀಗೆ ಒಟ್ಟಾರೆ ಹಂಪಿಯ ಜಲಚರಗಳನ್ನು ಗಮನಿಸಬಹುದು. ಹಂಪಿಯ ಜನಪದರು ಈ ಜಲಜೀವಿಗಳನ್ನು ತಮ್ಮ ಅಸ್ತಿತ್ವಕ್ಕೆ ತಕ್ಕಂತೆ ಕಂಡುಕೊಂಡಿದ್ದಾರೆ. ಒಣ ಮೀನಿಗೂ ಕೆರೆಗಳಲ್ಲಿ ಪುಟ್ಟಮೀನುಗಳನ್ನು ಹಿಡಿದು ಮಾರಾಟ ಮಾಡುವರು.

ಉರಗ: ಉರಗಗಳು ಪೂರ್ಣಪ್ರಮಾಣದ ಜಲಚರಗಳಲ್ಲ. ಉರಗ ಜಾನಪದ ಎಂದೇ ಈ ಬಗೆಯ ಜೀವಿಗಳನ್ನು ಗುರುತಿಸಬಹುದು. ಆದರೆ ಉರಗಗಳಲ್ಲಿ ಅನೇಕವು ಉಭಯ ವಾಸಿಗಳು. ಹಾಗಾಗಿ ಜಲಚರ ಜಾನಪದದ ಜೊತೆಯಲ್ಲೇ ಉರಗಗಳ ವಿವರಗಳನ್ನು ಜೋಡಿಸಲಾಗಿದೆ. ಹಂಪಿಯು ಪ್ರಾಚೀನ ಭೂ ಪದರುಗಳಲ್ಲಿ ಒಂದು. ಭೂಮಿಯ ಮೇಲಿನ ವಿಶಿಷ್ಟ ಜೀವಿಗಳಾದ ಉರಗಗಳು ಜೀವಜಾಲದ ಆದಿಕಾಲದ ಜೀವಿಗಳಾಗಿದ್ದವು. ರೋಗ ತರುವ ನೆನ್ನೆ ಮೊನ್ನೆಯ ಕೃಷಿ ಕೀಟಗಳಂತೆ ಇವು ಹುಟ್ಟಿಕೊಂಡವಲ್ಲ. ಮನುಷ್ಯ ಹುಟ್ಟುವ ಲಕ್ಷಾಂತರ ವರ್ಷಗಳ ಪೂರ್ವದಲ್ಲಿಯೆ ಉರಗಗಳು ಜನ್ಮವೆತ್ತಿ ಪರಿಸರದ ಅನೇಕ ಸವಾಲುಗಳನ್ನು ಎದುರಿಸಿ ಈ ಕಾಲದ ವಿಕಾಸ ಪ್ರಕ್ರಿಯೆಯಲ್ಲೂ ತಮ್ಮ ಅಸ್ತಿತ್ವವನ್ನು ಸಾಧಿಸಿಕೊಂಡಿವೆ. ಇಡೀ ಭೂ ಮಂಡಲವನ್ನು ವ್ಯಾಪಿಸಿದ್ದ ಉರಗಗಳು ಖಂಡಾಂತರ ಚಲನೆಯಲ್ಲಿ ಭಿನ್ನ ಪರಿಸರಕ್ಕೆ ಹೊಂದಿಕೊಂಡು ರೂಪಾಂತರ ಹೊಂದಿವೆ. ಉರಗಗಳು ಬಹು ನಿಗೂಢ ವಾಸದ ನೆಲೆಗಳನ್ನು ಕಂಡುಕೊಂಡು ಮನುಷ್ಯನ ಶಬ್ಧತರಂಗಗಳನ್ನು ಗುರುತಿಸಿಯೇ ಬಹು ಬೇಗನೆ ಕಣ್ಮರೆಯಾಗಿ ಬಿಡಬಲ್ಲ ಚಾಣಾಕ್ಷತೆಯನ್ನು ಗಳಿಸಿಕೊಂಡಿವೆ. ಹಂಪಿ ಪರಿಸರವು ನಾಗಾರಾಧನೆಗೆ ಒಂದು ಕಾಲಕ್ಕೆ ಪ್ರಸಿದ್ಧ ಭೂಮಿಕೆಯಾಗಿತ್ತು. ಮಹಾನವಮಿ ದಿಬ್ಬದ ಹಿಂಭಾಗದ ಬೆಟ್ಟ ಗುಡ್ಡಗಳಲ್ಲಿ ಆಳೆತ್ತರದ ನಾಗಶಿಲ್ಪಗಳಿವೆ. ನಾಗ ಪಂಥದ ಕುರುಹುಗಳು ಸಾಕಷ್ಟಿವೆ. ಅರಮನೆಯ ಒಳಾಂಗಣದಲ್ಲೆ ನಾಗರ ಎಡೆಯ ಶಿಲ್ಪದಲ್ಲಿ ಅಲಂಕೃತವಾದ ಎತ್ತರದ ಗೋಡೆ ಇದೆ. ವಿಶ್ವ ಪರಂಪರೆಯ ಗ್ರಾಮಗಳ ಯಾವ ಮನೆಗೆ ಹೋದರೂ ನಾಗರಕಲ್ಲುಗಳು ಬಹಳ ಸಾಮಾನ್ಯವಾಗಿ ಕಾಣುತ್ತವೆ. ಊರ ಮುಂದಿನ ಯಾವುದೆ ಗುಡಿಗಳಿಗೂ ಹೊಂದಿಕೊಂಡಂತೆ ನಾಗರಕಲ್ಲುಗಳು ಕೂಡಿಕೊಂಡಿವೆ. ನಾಗರ ಪಂಚಮಿಯ ಹಬ್ಬ ಜನಪ್ರಿಯವಾಗಿದೆ. ಹುತ್ತಕ್ಕೆ ಹಾಲೆರೆದು ಪೂಜಿಸುವ ಆಚರಣೆ ಜೀವಂತವಾಗಿದೆ. ನಾಗಮ್ಮನ ಗುಡಿ ಹಂಪಿಯ ಕೇಂದ್ರದಲ್ಲೇ ಇದೆ. ನಾಗದೇವತೆಯ ಪ್ರಾಚೀನ ಗುಡಿ ಇದು. ಈಗ ಅದು ಜನಪದರ ಬಾಯಲ್ಲಿ ನಾಗಮ್ಮನ ಗುಡಿಯಾಗಿ ಪರಿವರ್ತನೆಗೊಂಡಿದೆ. ಆದರೆ ಈ ಪ್ರಾಚೀನ ನಾಗದೇವತೆಯ ಗುಡಿ ಯಾವ ಪೂಜೆಯೂ ಇಲ್ಲದೆ ಗಿಡ ಬಳ್ಳಿಗಳಿಂದ ಆವೃತ್ತವಾಗಿದೆ.

ಹಂಪಿಯ ಪರಿಸರದಲ್ಲಿ ನಾಗಪರಂಪರೆಗೆ ವಿಶೇಷ ಮಹತ್ವವಿದೆ. ನಾಗಾರ್ಜುನನ ಅನುಯಾಯಿಗಳು ಹಂಪಿಯಲ್ಲಿದ್ದರೆಂಬ ಅಭಿಪ್ರಾಯವಿದೆ. ಬೌದ್ಧಧರ್ಮದ ಮಹತ್ವದ ನೆಲೆಗಳಲ್ಲಿ ಹಂಪಿಯೂ ಒಂದಾಗಿತ್ತು. ನಾಗದೇವತೆಯ ಕಲ್ಪನೆಯು ಮಾತೃದೇವತೆಯರ ನಡುವೆಯೇ ಬಹಳ ಶಕ್ತಿಶಾಲಿ ದೇವತೆ. ಹಾವುಗಳನ್ನು ಹೀಗೆ ದೇವಿಯಾಗಿ ಕಾಣುವುದರ ಜೊತೆಯಲ್ಲೆ ಕಾಳಿಂಗಸರ್ಪವನ್ನು ಮಹಾಕಾಳಿಯ ಜೊತೆ ಸಮೀಕರಿಸುವರು. ಶ್ರೀಕೃಷ್ಣ ಕಾಳಿಂಗ ಸರ್ಪವನ್ನು ಮಣಿಸಿದ ವೀರಕಥೆಯೂ ಇದೆ. ಶಕ್ತಿ ದೇವತೆಗಳ ವಿವಿಧ ರೂಪದಲ್ಲಿ ನಾಗರಹಾವು ರೂಪಾಂತರಗೊಂಡು ನಂತರ ನಾಗಪ್ಪನಾಗಿ ಪುರುಷಾವತಾರ ಹೊಂದಿರುವುದು ಲಿಂಗಸಂಬಂಧಿ ಲಿಂಗಾಯತರ ಪ್ರಕ್ರಿಯೆಯನ್ನೆ ಹೇಳುತ್ತದೆ. ’ಕಲ್ಲುನಾಗರ ಕಂಡರೆ ಹಾಲ ನೆರೆವರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ’ ಎಂಬ ಮಾತು ಹಲವು ಅರ್ಥಗಳಿಗೆ ಎಡೆಯಾಗುತ್ತದೆ. ದಿಟದ ನಾಗ ಎಂದರೆ ಭಕ್ತನೊ ಭವಿಯೊ, ಯೋಗಿಯೊ ಬೌದ್ಧ ಮುನಿಯೊ ಯಾರೆಂಬುದು ನಿಗೂಢವಾಗಿಯೆ ಉಳಿಯುತ್ತದೆ. ಶಬ್ಧ ಸಹ ಅರ್ಥ ತೆಗೆದುಕೊಂಡರೆ ನಿಜವಾದ ಹಾವು ವಿಷಕಾರಿಯೇ ಎಂಬುದನ್ನು ಬಿಂಬಿಸುತ್ತದೆ. ಇವೆಲ್ಲ ಸಂಗತಿಗಳನ್ನು ಹಂಪಿ ಜನಪದವು ತನ್ನ ಸ್ಥಳೀಯ ಅವ್ಯಕ್ತ ಪರಂಪರೆಯಲ್ಲು ಹುದುಗಿಸಿಕೊಂಡಿದೆ. ಮಧ್ಯಕಾಲೀನ ಸಮಾಜದ ಪುರುಷ ಪ್ರಭುತ್ವವು ನಾಗದೇವತೆಯಲ್ಲಿ ತನ್ನ ರೂಪವನ್ನು ಸ್ಥಾಪಿಸಿದ ಮೇಲೆ ನಾಗಪ್ಪನೆ ಹೆಸರಿನ ಸ್ಥಳೀಯ ದೈವಗಳು ವಿಸ್ತರಿಸಿದವು. ಹಂಪಿ ಪರಿಸರದಲ್ಲಿ ನಾಗದೇವತೆ ಮರೆಯಾಗಿ ನಾಗಪ್ಪ ಸರ್ಪವಾಗಿ ಕಾಳಿಂಗನಾಗಿ ಕಾಣುವುದಿದೆ. ಕಾಳಿಂಗ ಎಷ್ಟೊಂದು ಬಲಶಾಲಿ ದೈವವಾಗಿ ರೂಪಾಂತರಗೊಂಡಿದೆ ಎಂದರೆ ಅದು ನಿಧಿಕಾಯುವ ಮಟ್ಟಿಗೆ ಬದಲಾಗಿ ಶಕ್ತಿ ಪಡೆದುಕೊಂಡಿದೆ. ಹೆಂಗಸರು ಪೂಜಿಸುವ ಹುತ್ತದ ನಾಗಪ್ಪನೂ ಮಹಿಳೆಯರಿಗೆ ಗೊತ್ತೇ ಆಗದಂತೆ ಅವರ ಮಹಿಳಾ ದೈವವನ್ನು ಮರೆಸಿಬಿಟ್ಟಿದ್ದಾನೆ. ಈ ಹಿನ್ನೆಲೆಗಳನ್ನೆಲ್ಲ ಗಮನಿಸಿ ಹಂಪಿ ಪರಿಸರದಲ್ಲಿರುವ ಮುಖ್ಯ ಹಾವುಗಳ ಸಂಬಂಧವನ್ನು ವಿಶ್ಲೇಷಿಸಬಹುದು. ಕೆಲವು ಹಾವುಗಳ ಸ್ಥಳೀಯ ವಿವರ ಕೆಳಕಂಡಂತಿದೆ.

೧. ಬೆಂಜರಿ ಹಾವು  ೨. ಕುರುಡು ಬೆಂಜರಿ ಹಾವು  ೩. ರಕ್ತಮಂಡಲ ಹಾವು  ೪. ಕೊಳಕು ಮಂಡಲ ಹಾವು  ೫. ನೂಲಿ ಹಾವು  ೬. ಹಸಿರಾವು  ೭. ಮಿಡಿನಾಗರ  ೮. ನಾಗರಹಾವು  ೯. ಕೆರೆ ಹಾವು  ೧೦. ಮಣ್ಣು ಮುಕ್ಕನ ಹಾವು ೧೧. ಹೆಬ್ಬಾವು ೧೨. ಎರಡು ತಲೆ ಹಾವು ೧೩. ನೀರಾವು.

ಇವಿಷ್ಟು ಸಾಮಾನ್ಯ ಹಾವುಗಳು. ಎಲ್ಲ ಹಾವುಗಳನ್ನೂ ಗುರುತಿಸಲು ಆಗಿಲ್ಲ. ಜನಪದರು ಈ ಹಾವುಗಳ ಬಗ್ಗೆ ಪ್ರಸ್ತಾಪಿಸುವುದೇ ಬೇಡ ಎನ್ನುತ್ತಾರೆ. ಹಾವುಗಳ ವಿಚಾರ ಮಾತನಾಡಿದರೆ ಕನಸಿಗೆ ಅವು ಬರುತ್ತವೆ ಎಂಬ ನಂಬಿಕೆ ಇದೆ. ಹಾವುಗಳೆಲ್ಲ ಅಪಾಯಕಾರಿ ಎಂಬ ಸಾರಾಸಗಟು ಅಭಿಪ್ರಾಯವಿದೆ. ಹಾವು ಕಚ್ಚಿ ಸಾಯುವುದು ಒಳ್ಳೆಯ ಸಾವಲ್ಲವಂತೆ. ದೈವದ ಕೋಪಕ್ಕೆ ಒಳಗಾದ ಸಾವು ಅದು ಎಂಬ ಕಲ್ಪನೆಯಿದೆ. ಹಾವುಗಳನ್ನು ಕೊಲ್ಲಬಾರದು. ಅವು ತಪ್ಪಿಸಿಕೊಂಡರೆ ಕಾದಿದ್ದು ಕಚ್ಚಿ ಸೇಡು ತೀರಿಸಿಕೊಳ್ಳುತ್ತವೆ ಎಂಬ ಸಾಮಾನ್ಯ ನಂಬಿಕೆ ಇಲ್ಲೂ ಕೂಡ ಇದೆ. ಹಾವು ಕಡಿದಾಗ ಹಲಗಲಿ ಮರದ ಎಲೆ ಅರೆದು ಚಕ್ಕೆಯನ್ನು ಪುಡಿ ಮಾಡಿ ಹಾಲಲ್ಲಿ ಸಾಧ್ಯವಾದರೆ ಮೇಕೆ ಹಾಲಲ್ಲಿ ಕಲಸಿ ಹಚ್ಚುವರು. ವಿಷಕಾರಿ ಹಾವು ಕಚ್ಚಿದಾಗ ಹಚ್ಚಬಹುದಾದ ತೊಪ್ಪಲಿನ ಗಿಡಗಳನ್ನು ಸಾಮಾನ್ಯವಾಗಿ ತೋರಿಸುವುದಿಲ್ಲ. ಹಾಗೆ ತೋರಿದರೆ ಅಪಾಯ ಎಂಬ ನಂಬಿಕೆ ಇದೆ. ಕೋಳಿಗಳ ಹಿಂಬದಿಯನ್ನು ಹಾವು ಕಚ್ಚಿದ ಜಾಗಕ್ಕೆ ಒತ್ತಿ ಹಿಡಿದು ಕೋಳಿಯು ವಿಷ ಹೀರಿಕೊಳ್ಳುವಂತೆ ಮಾಡಿ ವಿಷ ತೆಗೆಯುವರು. ಅನೇಕ ಗಿಡಮೂಲಿಕೆಗಳ ಕಷಾಯವನ್ನು ಕುಡಿಸುವರು. ಜನಪದರು ಅಂತಹ ಯಾವ ಮಸ್ತು ವಿವರವನ್ನೂ ತೋರದೆ ಹೋದದ್ದರಿಂದ ಆ ವಿವರವನ್ನು ಇಲ್ಲಿ ಕೊಡಲಾಗುತ್ತಿಲ್ಲ. ಹಾವುಗಳ ಹೆಸರನ್ನೇ ಕರೆಯಬಾರದು ಎಂಬ ನಿಷೇಧ ಇರುವಾಗ ಉಳಿದಂತೆ ಅವುಗಳ ಒಳ ವಿವರವನ್ನು ಪಡೆಯುವುದು ಬಹಳ ಕಷ್ಟವೇ. ಸಿಕ್ಕಷ್ಟು ವಿವರಗಳಲ್ಲಿ ಮೇಲೆ ಹೆಸರಿಸಿದ ಒಂದೊಂದು ಹಾವುಗಳ ಜನಪದ ವಿವರವನ್ನು ಗುರುತಿಸುವ.

ಬೆಂಜರಿ ಹಾವು: ಮಚ್ಚೆಗಳಿರುವ ಹಾವು. ಅಪಾಯಕಾರಿಯಾದುದು. ಇದು ಕಚ್ಚಿದರೆ ಮೈಯೆಲ್ಲ ಉರುಪಾಗುತ್ತದೆ. ನವೆಯೂ ಉಂಟಾಗುತ್ತದೆ. ಹೊಲಗಳಲ್ಲಿ ಹಿತ್ತಿಲುಗಳಲ್ಲಿ ಸಾಮಾನ್ಯವಾಗಿ ಸಂಜೆ ವೇಳೆ ಈ ಹಾವು ಕಾಣಿಸಿಕೊಳ್ಳುತ್ತದೆ. ಕುರುಡು ಬೆಂಜರಿ ಕೂಡ ಬೆಂಜರಿ ಹಾವಿನ ಸಹೋದರಿ ಸಂಬಂಧಿ. ಕಸಕಡ್ಡಿ ಪೊದೆಗಳಲ್ಲಿ ಕಸದಂತೆ ಸುತ್ತಿಕೊಂಡು ಬಿದ್ದಿರುತ್ತದೆ. ಕಣ್ಣು ಕಾಣದ ಕುರುಡನಂತೆ ಇದು ತೆವಳಾಡುತ್ತಿರುತ್ತದೆ. ಹಾಗಾಗಿ ಇದಕ್ಕೆ ಕುರುಡು ಬೆಂಜರಿ ಹಾವು ಎಂಬ ಹೆಸರಾಗಿದೆ. ರಕ್ತಮಂಡಲ ಹಾವು ರಕ್ತ ಕಾರುವಂತೆ ಮಾಡುತ್ತದೆ. ಇದು ಕಚ್ಚಿದ ಕೆಲವೇ ಕ್ಷಣಗಳಲ್ಲಿ ಬಾಯಿ ಮೂಗು ಕಣ್ಣು ಉಗುರುಗಳೆಲ್ಲೆಲ್ಲ ರಕ್ತ ಜಿನುಗತೊಡಗಿ ಹೆಪ್ಪುಗಟ್ಟಿದ ರಕ್ತವನ್ನೆ ಕಾರಿ ಸಾಯಬೇಕಾಗುತ್ತದೆ. ಅತ್ಯಂತ ಭಯಾನಕ ಸಾವು ತರುವ ಹಾವೆಂದು ಇದರ ಬಗ್ಗೆ ವಿಶೇಷ ಎಚ್ಚರವನ್ನು ವಹಿಸುವರು. ನೂಲಿ ಹಾವು ತೆಳ್ಳಗಿದೆ. ನೆಗೆದು ಬರುವಂತದು. ಯಾವಾಗಲೂ ಮರಗಳ ಮೇಲೆಯೆ ಇರುತ್ತೆ. ಮರದಿಂದ ಮರಕ್ಕೆ ಹಾರಿ ಹೋಗಬಲ್ಲದ್ದು.  ವೇಗವಾಗಿ ಚಲಿಸುತ್ತದೆ. ಕಚ್ಚಿದರೆ ಸಾಯುವರು. ಹೀಗಾಗಿ ಮರ ಏರಿ ಸೊಪ್ಪು ಸೌದೆ ಕಡಿಯುವಾಗ ಮೊದಲೇ ಈ ಹಾವಿನ ಬಗ್ಗೆ ಎಚ್ಚರ ವಹಿಸುವರು. ಹಂಪಿಯ ಗಿಡ ಮರಗಳಲ್ಲಿ ಈ ಹಾವು ಇದ್ದೇ ಇರುತ್ತದೆ ಎಂಬ ಭಯವಿದೆ. ಹಸಿರಾವು ನೂಲಿಹಾವಿನ ಇನ್ನೊಂದು ಪ್ರಭೇದ. ಸಣ್ಣ ಹಸಿರು ಬಳ್ಳಿಯಂತೆ ಹಸಿರು ಗಿಡ ಮರಗಳಲ್ಲಿ ಆಶ್ರಯ ಪಡೆದಿರುವ ಹಾವಿದು. ಕಚ್ಚಿದರೆ ಸಾಯುವುದಿಲ್ಲ. ಆದರೂ ಕಚ್ಚಿಸಿಕೊಂಡ ಭಯಕ್ಕೇ ಸಾಯುವರೆಂಬ ಎಚ್ಚರ ವಹಿಸುವರು.

ನಾಗರಹಾವು: ಇವುಗಳು ಉಳಿದೆಲ್ಲ ಹಾವುಗಳಿಗಿಂತಲೂ ಭೀಕರ ಪರಿಣಾಮ ಉಂಟುಮಾಡಬಲ್ಲವು. ಇವುಗಳನ್ನು ಹೊಡೆಯಲು ಎಲ್ಲರೂ ಮುಂದಾಗಲು ಸಾಧ್ಯವಿಲ್ಲ. ನಾಗರಮಚ್ಚೆ ಇರುವವರನ್ನು ಕಂಡರೆ ಈ ಹಾವುಗಳೇ ಮರೆಯಾಗುತ್ತವಂತೆ. ವಿಷದ ಹಾವುಗಳ ಪೊರೆಯನ್ನು ಜೂಜಾಡುವ ಕೋಳಿಗಳಿಗೆ ತಿನ್ನಿಸಿದರೆ ಹೋರಾಡುವ ರೋಷ ಹೆಚ್ಚುವುದೆಂದು ಹೇಳುವರು. ನಾಗರ ಹಾವುಗಳು ಹಂಪಿಯಲ್ಲಿ ಹೇರಳವಾಗಿವೆ. ಹಂಪಿಯ ಪಾಳು ಮಂಟಪಗಳಲ್ಲಿ ಅಲ್ಲಲ್ಲೆ ಕಲ್ಲು ಸರಿಸಿ ಸಲೀಸಾಗಿ ನೋಡಬಹುದು. ವಿಪರೀತವಾಗಿ ಹಂಪಿಯ ಬೆಟ್ಟಗುಡ್ಡಗಳಲ್ಲಿ ನಾಗರಹಾವುಗಳಿವೆ. ನೈಸರ್ಗಿಕ ಶತ್ರುಗಳು ನಾಗರ ಹಾವುಗಳಿಗೆ ಇಲ್ಲವೇ ಇಲ್ಲ ಎನ್ನಬಹುದು. ದೊಡ್ಡ  ನಾಗರಹಾವನ್ನು ಕಂಡಾಗ ಭಕ್ತಿಯಿಂದ ಕೈ ಮುಗಿದು ದೇವರ ದರ್ಶನ ಎಂದು ಹೇಳುವುದೂ ಉಂಟು. ವಿಷ್ಣು ಏಳು ಎಡೆ ಸರ್ಪಗಳ ಮೇಲೆ ಮಲಗಿರುವ ಶಿಲ್ಪ ಸಾಕ್ಷ್ಯ ಮೈ ಜುಂ ಎನಿಸುವಂತಿದೆ. ಹೀಗಾಗಿ ನಾಗರಹಾವನ್ನು ಯಾರೂ ಹೊಡೆಯಲು ಬಯಸುವುದಿಲ್ಲ. ಸರ್ಪದೋಷ ಎಂಬ ನಂಬಿಕೆಯೂ ನಾಗರಹಾವಿನ ವಿಷಯದಲ್ಲಿದೆ. ಸರ್ಪದೋಷ ಕಳೆಯಲು ಮಾಟಮಂತ್ರದ ಆಚರಣೆಗಳೂ ಇವೆ. ಬಸುರಿ ಹೆಂಗಸರ ಸೂತಕದಿಂದ ನಾಗರಹಾವುಗಳು ಬಂದು ಮೂಲೆ ಸೇರುತ್ತವೆ ಎಂಬ ನಂಬಿಕೆಯೂ ಇದೆ. ಆ ಬಸುರಿಗೆ ಹೆರಿಗೆ ಆಗುವ ತನಕ ಅದು ಬೇರೆ ಎಲ್ಲೂ ಹೋಗದು ಎಂದು ಹೇಳುವರು. ನಾಗಮಂಡಲದ ಕಥೆಯ ಬೇರೊಂದು ರೂಪ ಈ ನಂಬಿಕೆಯ ಹಿಂದಿರುವಂತಿದೆ.

ನಾಗರ ಹಾವು ಮನೆ ಒಳಗೆ ಬಂದರೆ ಕೆಲ ಕಾಲ ಮನೆ ಬದಲಾಯಿಸಬೇಕೆಂಬ ನಂಬಿಕೆ ಹಿಂದಿನ ಕಾಲದಲ್ಲಿತ್ತು. ಈಗ ಅದು ಚಾಲ್ತಿಯಲ್ಲಿಲ್ಲ. ಬದಲಿಗೆ ನಾಗಪ್ಪನ ಪೂಜೆ ಮಾಡಿಸಿದರಾಯಿತು, ಮನೆಯವರೆಲ್ಲ ಸ್ವಚ್ಛಗೊಂಡು ಮನೆಯನ್ನೆಲ್ಲ ಗುಡಿಸಿ ಸಾರಿಸಿ ಪೂಜೆ ಮಾಡಿ ’ಮುನಿ ’ ಮಾಡುವ ಒಂದು ಕ್ರಮ ಹಳೆ ಮೈಸೂರಿನ ಹಳ್ಳಿಗಳಲ್ಲಿದೆ. ಇದು ಫಲ ತುಂಬಿ ಬರಲಿ ಎಂಬ ಆಶಯದ ಪೂಜೆ. ಕೆಟ್ಟದ್ದನ್ನು ಮಾಡಿದ್ದರೆ ಕ್ಷಮಿಸು ಎಂಬುದರ ಆಶಯವೂ ಇದರಲ್ಲಿದೆ. ಇಂತಹ ಅಸಂಖ್ಯ ನಾಗಾರಾಧನೆಯ ಕ್ರಮಗಳಿವೆ. ಹಂಪಿ ಪರಿಸರವಂತು ನಾಗರ ಹಾವುಗಳ ಸಾಮ್ರಾಜ್ಯದಂತಿದೆ. ಮಿಡಿನಾಗರ ಹಾವು ಕಚ್ಚಿದ ಕೂಡಲೆ ವ್ಯಕ್ತಿ ಸಾಯುವನು ಎನ್ನುವರು. ವಾಸ್ತವದಲ್ಲಿ ಇದು ನಿಜವು ಹೌದು. ಕಾಳಿಂಗ ಸರ್ಪವನ್ನಂತು ಹೆಸರಿಸುವುದೇ ಬೇಡ ಎಂದು ಜನ ಮೌನ ವಹಿಸುವರು. ಕಾಳಿಂಗ ಸರ್ಪವು ಮನುಷ್ಯರಷ್ಟೇ ಎತ್ತರವಾಗಿ ನಿಂತು ವಿಷ ಕಾರುವುದಂತೆ. ಹಂಪಿ ಪರಿಸರದಲ್ಲಿ ಮಹಾ ಕಾಳಿಂಗಗಳ ಸರ್ಪಗಳಿವೆ ಎಂದು ಜನಪದರು ನಂಬುತ್ತಾರೆ. ಯಾರೊಬ್ಬರೂ ಕಣ್ಣಾರೆ ನೋಡಿದ್ದಾಗಿ ಹೇಳುವುದಿಲ್ಲ. ವೈಜ್ಞಾನಿಕವಾಗಿ ಕಾಳಿಂಗ ಸರ್ಪಗಳು ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಮಾತ್ರ ಬದುಕಬಲ್ಲವು. ಕಾಳಿಂಗ ಅತ್ಯಂತ ಚುರುಕಾದ ಹಾವು. ಬಂಡೆಯ ಸಂದಿಯ ಕತ್ತಲಲ್ಲಿ ಅವು ಕಾಣಿಸುವುದೇ ಇಲ್ಲವೆಂದೂ ಅಕಸ್ಮಾತ್ ಅವುಗಳ ಸಮೀಪ ಸುಳಿದರೆ ಸಾವು ಒಂದರೆಗಳಿಗೆಯಲ್ಲೆ ಬಂದು ಹೊರಟು ಹೋಗಿರುತ್ತದೆ ಎಂದು ವಿವರಿಸುತ್ತಾರೆ. ಒಟ್ಟಿನಲ್ಲಿ ಹಂಪಿಯ ಜನಪದರು ತಮ್ಮ ಗತಕಾಲದ ಸಮುದಾಯಗಳ ಜೈವಿಕತೆಯ ಮೂಲಕ ಹೊತ್ತು ತಂದಿರುವ ಭಯದ ನೆನಪನ್ನು ವರ್ತಮಾನದಲ್ಲೂ ಕಾಣದ ಕಾಳಿಂಗಗಳ ಬಗ್ಗೆ ಇಟ್ಟುಕೊಂಡಿದ್ದಾರೆ.

ಹಂಪಿಯ ಬೆಟ್ಟಗುಡ್ಡಗಳಲ್ಲಿ ಗತಕಾಲದ ಈ ಜೀವಿಗಳು ಅಳಿದುಳಿದಿರುವುದು ಆಶ್ವರ್ಯಕರವಾಗಿದೆ. ಕಮಲಾಪುರದ ಕೆರೆಯ ದಂಡೆಯ ರಸ್ತೆ ದಾಟುವಾಗ ಹೆಬ್ಬಾವುಗಳು ವಾಹನಗಳಿಗೆ ಸಿಕ್ಕಿ ಸತ್ತಿರುವ ಹಲವಾರು ಸಂದರ್ಭಗಳಿವೆ. ಹೆಬ್ಬಾವುಗಳು ಈಗ ಹಂಪಿ ಪರಿಸರದಲ್ಲಿರಲು ಬೇಕಾದ ಆಹಾರ ಹೇರಳವಾಗಿ ಸಿಗುವುದರಿಂದ ಅವು ತಮ್ಮ ಕಾಲವನ್ನು ಇನ್ನೂ ಉಳಿಸಿಕೊಂಡಿವೆ. ಜನ ಹೆಬ್ಬಾವುಗಳನ್ನು ಹೊಡೆದು ಸಾಯಿಸುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ವಕ್ಕಲು ಸಮುದಾಯಗಳಿಗೆ ಹೆಬ್ಬಾವು ಉಪಕಾರಿಯಾಗಿದೆ. ಸಾಧಾರಣ ಗಾತ್ರದ ಹೆಬ್ಬಾವುಗಳು ಅಪಾಯಕಾರಿಯಲ್ಲ. ಬೃಹತ್ ಗಾತ್ರದ ಹೆಬ್ಬಾವಿಗೆ ಬೇಕಾದ ಪರಿಸರವೂ ಹಂಪಿಯದಲ್ಲ. ಮಣ್ಣುಮುಕ್ಕನ ಹಾವು ಮಣ್ಣಲ್ಲೆ ಸತ್ತಂತೆ ಬಿದ್ದಿರುತ್ತದೆ. ಮಣ್ಣಿನ ಬಣ್ಣವೇ ಅದರ ಮೈಬಣ್ಣವಾಗಿರುತ್ತದೆ. ಇನ್ನೇನೋ ತುಳಿದೇ ಬಿಟ್ಟೆವೇನೊ ಎನ್ನುವವರೆಗೂ ಹಾಗೆ ಮಣ್ಣಲ್ಲೇ ಮುದುರಿಕೊಂಡಿರುತ್ತದೆ. ತಕ್ಷಣ ಕದಲಿ ಗಾಬರಿ ಹುಟ್ಟಿಸುತ್ತದೆ. ಬಾರಿಗಾತ್ರದ ಹಾವೇನು ಅಲ್ಲ. ಇದು ಕಚ್ಚುವುದಿಲ್ಲ. ಆದರೆ ನೆಕ್ಕುತ್ತದೆ. ಹಾಗೆ ನೆಕ್ಕಿದ್ದರಿಂದಲೇ ಕಾಲು ಕೊಳೆಯ ತೊಡಗುತ್ತದೆ. ಕೊಳಕು ಮಂಡಲ ಹಾವಿನ ಒಳಜಾತಿಯ ಹಾವಿದು. ಕೊಳಕು ಮಂಡಲ ಹಾವು ನೇರವಾಗಿ ಕಚ್ಚುತ್ತದೆ. ನಿಧಾನ ದೇಹವೇ ಕೊಳೆಯಬಲ್ಲಷ್ಟು ಭಯಾನಕ ಕೇಡನ್ನು ಈ ಹಾವು ತರಬಲ್ಲದು. ಕೊಳಕು ಮಂಡಲ ಹಾವನ್ನು ಕೊಂದ ಮೇಲೆ ಅದರ ಇಡೀ ದೇಹವನ್ನು ಸುಡಬೇಕು. ಅದರ ಮುಳ್ಳು ಆಕಸ್ಮಾತ್ ತಾಕಿದರೂ ಕೊಳೆಯ ತೊಡಗುವುದು. ರಕ್ತಮಂಡಲದ ಮತ್ತೊಂದು ಕೊಳಕು ರೂಪ ಕೊಳಕು ಮಂಡಲದ ಹಾವು. ನಾಗರಹಾವನ್ನು ಕೊಂದ ಮೇಲೆ ಅದನ್ನು ಸಂಸ್ಕಾರ ಮಾಡಿ ಸುಡಬೇಕು ಎಂಬ ವೈಷ್ಣವ ನಂಬಿಕೆ ಹಂಪಿಯಲ್ಲು ಇದೆ.

ಕೇರೆ ಹಾವು: ಅಪಾಯಕಾರಿಯಲ್ಲ. ಬಹಳ ಉದ್ದವಾಗಿದ್ದು ಸುಂದರವಾಗಿದೆ. ಮಳೆಗಾಲದಲ್ಲಿ ಕೊಬ್ಬಿ ಬೆಳೆಯುತ್ತದೆ. ಕಪ್ಪೆಗಳು ಇದರ ಪ್ರಿಯವಾದ ಆಹಾರ. ಕೇರೆ ಹಾವು ವಿಷಕಾರಿಯಲ್ಲ. ವೇಗವಾಗಿ ಹರಿದು ಹೋಗಬಲ್ಲದು. ಕೇರೆ ಹಾವನ್ನೂ ಹಾವಾಡಿಗರು ಹಿಡಿದು ಇದರ ತುಪ್ಪವನ್ನು ಔಷಧಿಯಾಗಿ ಕೊಡುವರು. ಕಾಮಾಲೆ ರೋಗಕ್ಕೂ ಉಳುಕಿಗೂ ಬರುವುದಂತೆ. ಮಾಂಸವಾಗಿಯೂ ಕೇರೆ ಹಾವನ್ನು ಕೆಲವರು ತಿನ್ನುವರಂತೆ. ಎಲ್ಲೆಡೆ ಕಾಣಸಿಗುವ ಕೇರೆ ಹಾವು ತಟ್ಟನೆ ನಾಗರಹಾವಿನಂತೆ ಕಾಣುವುದಾದರೂ ಕೇರೆ ಹಾವು ಸೆಡೆ ತೆರೆಯಲಾರದು. ಬರಿಗೈಯಲ್ಲೆ ಸಲೀಸಾಗಿ ಹಿಡಿಯಬಹುದೆಂದು ಹಾವಾಡಿಗರು ಹೇಳುವರು. ಹಾವಾಡಿಗರು ಎಂತಹ ಹಾವುಗಳನ್ನೂ ಹಿಡಿದು ಅವುಗಳ ಹಲ್ಲು ಕೀಳಬಹುದು. ಪಶುಪಾಲಕ ಸಮಾಜದಂತೆ ಹಾವಾಡಿಗರು ಒಂದು ಕಾಲಕ್ಕೆ ಹಾವಾಡಿಸಿಕೊಂಡು ಜೀವಜಾಲದ ಸಂಬಂಧ ಸಾಧಿಸಿದ್ದರು. ಈ ಕಾಲದಲ್ಲಿ ಸಿನಿಮಾಗಳ ನಕಲಿಗಾಗಿ ಹಾವುಗಳನ್ನು ಬಾಡಿಗೆ ಕೊಡುವ ಮಟ್ಟಕ್ಕೆ ತಲುಪಿರುವ ಹಾವಾಡಿಗರ ಪುಂಗಿಗಳಿಗೆ ಯಾರೂ ತಲೆ ಆಡಿಸುವುದಿಲ್ಲ. ಹಾವು ಹಿಡಿದು ಆಡಿಸುವುದು ಅಪರಾಧ. ಹಂಪಿ ಪರಿಸರದಲ್ಲಿ ಈಗ ಹಾವಾಡಿಗರಿಲ್ಲ. ಇದ್ದರೂ ಹಾವಾಡಿಸುವುದಿಲ್ಲ. ಅಲೆಮಾರಿಗಳು ಇದನ್ನೊಂದು ಹೊಟ್ಟೆ ಪಾಡಾಗಿಸಿಕೊಂಡಿದ್ದರು. ವಿಜಯನಗರ ಸಾಮ್ರಾಜ್ಯದಲ್ಲಿ  ವಿಷ ಪ್ರಾಶನಕ್ಕೆ ಇಂತಹ ಹಾವುಗಳನ್ನು ಹಿಡಿದು ಬಳಸುತ್ತಿದ್ದರೇನೊ ಸಾಮ್ರಾಜ್ಯಗಳ ಆ ಬಗೆಯ ಕ್ರೌರ್ಯಕ್ಕೂ ನಾಗರಹಾವುಗಳು ಬಳಕೆಯಾಗಿವೆ.

ನೀರಾವು: ಕೇರೆ ಹಾವಿನಂತದೇ. ಸಣ್ಣ ಹಾವುಗಳಿವು. ಅಪಾಯಕಾರಿ ಅಲ್ಲ. ಗದ್ದೆಗಳಲ್ಲೂ ಸಿಗುತ್ತವೆ. ಸಣ್ಣಪುಟ್ಟ ಮೀನುಗಳನ್ನು ತಿಂದು ಬದುಕುತ್ತವೆ. ತುಂಗಭದ್ರಾ ಕಾಲುವೆಯ ನೀರಾವರಿಯಿಂದ ನೀರಾವುಗಳ ಸಂಖ್ಯೆ ಹೆಚ್ಚಿದೆ. ಎರಡು ತಲೆ ಹಾವು ಪುರಾಣ ಪ್ರಜ್ಞೆಯ ಹಾವು. ಇಬ್ಬಗೆಯ ನೀತಿಗೂ ಅದು ಸೂಚಕ. ಮೋಸಗಾರರಿಗೆ ಎರಡು ತಲೆ ಹಾವು ಎಂದು ಸಮೀಕರಿಸುವರು. ಕೆಲವೊಮ್ಮೆ ನಿಸರ್ಗದಲ್ಲಿ ಎರಡು ತಲೆಯ ಹಾವುಗಳು ಸೃಷ್ಟಿಯಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಇದೊಂದು ಕಲ್ಪಿತ ಹಾವೇ ಇರಬೇಕು. ಸಹಜವಾಗಿ ಇಂತಹ ಹಾವುಗಳು ಹಂಪಿ ಪರಿಸರದಲ್ಲಿಲ್ಲ. ಆದರೂ ಜನಪದರು ಅಂತಹ ಹಾವುಗಳ ಇರುವಿಕೆಯನ್ನು ನಂಬುವರು. ಹಂಪಿಯ ವಾಸ್ತುಶಿಲ್ಪದಲ್ಲಿ ಎರಡು ತಲೆಯ ಹಾವುಗಳ ಚಿತ್ರಗಳನ್ನು ಕಾಣಬಹುದು. ಇದು ಕೂಡ ಮೇಲಿನಂತಹ ನಂಬಿಕೆಗೆ ಕಾರಣವಾಗಿರಬಹುದು. ನಾಗರಹಾವೇ ಎಲ್ಲೆಡೆ ಪವಿತ್ರ ಎನಿಸಿದರೂ ಅದರ ವಿಷ ಮಾತ್ರ ಯಾರಿಗೂ ಮೆಚ್ಚುಗೆಯಲ್ಲ. ಇಂತಹ ಹಾವಿನ ಬಗ್ಗೆ ಒಳ್ಳೆಯ ಕೆಟ್ಟ ಎಲ್ಲ ಭಾವನೆಗಳು ಸಮನಾಗಿವೆ. ಹಂಪಿ ಪರಿಸರದಲ್ಲಂತು ನಾಗರ ಪಂಚಮಿಯನ್ನು ಬಹಳ ಶ್ರದ್ಧೆಯಿಂದ ಆಚರಿಸುವರು. ಹಲವಾರು ಬಗೆಯ ನಾಗರಶೈಲಿಯ ರಂಗೋಲಿಗಳನ್ನು ನಾಗರ ಪಂಚಮಿಯಂದು ಮನೆಗಳ ಮುಂದೆ ತರುಣಿಯರು ಬಿಡಿಸಿ ಆರಾಧಿಸುವರು. ಹುತ್ತಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಹಂಪಿ ಪರಿಸರದಲ್ಲಿ ಸರ್ವೇ ಸಾಮಾನ್ಯ. ಹಿಂದೆ ಈ ಪ್ರದೇಶದಲ್ಲಿ ನಾಗಾರಾಧನೆ ವಿಶೇಷವಾಗಿ ಇತ್ತೆಂಬುದರ ಸೂಚಕವಾಗಿ ಈ ಬಗೆಯ ಆಚರಣೆಗಳಿವೆ.

ಚೇಳು: ಚೇಳಿನಲ್ಲಿ ಎರಡು ಬಗೆ. ಎರಡೂ ವಿಷಕಾರಿ ಉರಿ ತರಿಸುವಂತವು. ಹಂಪಿ ಪರಿಸರ ಚೇಳುಗಳಿಗೆ ಸ್ವರ್ಗವೇ ಸರಿ. ಉಷ್ಣವಲಯದಲ್ಲಿ ಸಮೃದ್ದವಾಗಿ ವಿಕಾಸಗೊಳ್ಳುವ ಚೇಳುಗಳಿಗೆ ಅಂತಹ ಶತ್ರುಗಳ ಕಾಟವಿಲ್ಲ. ಮನುಷ್ಯರ ಕಣ್ಣಿಗೆ ಬಿದ್ದವೆಂದರೆ ಆ ಕ್ಷಣವೇ ಹೊಡೆದೊ ನಜ್ಜಿಯೋ ಪ್ರಾಣ ತೆಗೆದು ಬಿಸಾಡುವರು. ಚೇಳು ಮಾಂತ್ರಿಕರಿಗೆ ಬೇಕಾದ ಜೀವಿ. ಮೋಡಿಯಾಟದಲ್ಲಿ ಚೇಳುಗಳನ್ನೇ ಸೃಷ್ಟಿಸಿಬಿಡಬಲ್ಲರು. ಬೇವಿನ ಸೊಪ್ಪು ಎಸೆದಾಗ ಎಲೆ ತಲೆ ಕೆಳಕಾಗಿ ಬಿದ್ದವು ಮಾತ್ರ ಚೇಳಾಗುತ್ತವೆ ಎನ್ನುವರು. ಚೇಳುಗಳನ್ನೆ ಹಿಡಿದು ತಿನ್ನುವ ರಾಜ ಮೋಡಿ ಆಟವು ಹಂಪಿ ಪರಿಸರದಲ್ಲಿದೆ. ಚೇಳನ್ನು ಜುಂಜಪ್ಪ ಎಂತಲೂ ಕರೆಯುವರು. ಭಿಕ್ಷೆಗೆ ಬರುವ ಜುಂಜಪ್ಪಗಳಿಗೆ ಭಿಕ್ಷೆ ನೀಡದಿದ್ದರೆ ಜುಂಜಪ್ಪ ಪ್ರತಿನಿಧಿಗಳಾದ ಚೇಳುಗಳು ಕಚ್ಚುತ್ತವೆ. ಎಂಬ ಪ್ರತೀತಿ ಇದೆ. ಚೇಳಿನ ವಿಷದ ಕೊಂಡಿಯನ್ನು ಔಷಧಕ್ಕೆ ಬಳಸುವರಂತೆ. ಮಂತ್ರ ಹೊಡೆದರೆ ಚೇಳು ಮೆತ್ತಗಾಗಿ ಚಲನೆಯನ್ನೆ ಕಳೆದುಕೊಳ್ಳುತ್ತವಂತೆ. ದೊಡ್ಡ ಚೇಳು ಕಪ್ಪಗೆ ಭಯ ಹುಟ್ಟಿಸುವಂತಿರುತ್ತದೆ. ಹಂಪಿಯ ಚೇಳುಗಳು ಉಳಿದೆಡೆಯ ಕಪ್ಪು ಚೇಳುಗಳಿಗಿಂತಲೂ ದೊಡ್ಡ ಗಾತ್ರದವು. ಬಿಳಿ ಚೇಳು, ಕೆಂಚು ಚೇಳುಗಳು ಗಾತ್ರದಲ್ಲಿ ಬಹಳ ಚಿಕ್ಕವು. ಇವು ಕಲ್ಲಿನ ಪೊಟರೆಯಲ್ಲೇ ಹೆಚ್ಚಾಗಿ ಸಿಗುತ್ತವೆ. ಮನೆಯ ಸೂರು ಸಂದಿ ಕಸಕಡ್ಡಿಗಳಲ್ಲಿ ಆರಾಮವಾಗಿರುತ್ತದೆ. ಇವು ಕಚ್ಚಿದರೆ ವಿಪರೀತ ಉರಿ, ಉರಿಗೆ ಮಂತ್ರ ಹಾಕುವವರಿದ್ದಾರೆ. ಹಲಗಲಿ ಮರದ ಎಲೆ ಚಕ್ಕೆಗಳನ್ನು ಅರೆದು ಹಚ್ಚಿದರೆ ಯಾವುದೆ ಬಗೆಯ ಚೇಳಿನ ವಿಷ ಕರಗುವುದು ಎಂದು ಹೇಳುವರು. ಚೇಳನ್ನು ಕೂಡ ಜನಪದರು ದೈವಿಕವಾಗಿ ಹಂಪಿ ಪ್ರದೇಶದಲ್ಲಿ ಕಾಣುವರು. ಆದರೆ ಬದಲಾದ ಕಾಲದಲ್ಲಿ ಈ ನಂಬಿಕೆಯು ಕರಗುತ್ತಿದ್ದು ವಿಷಜಂತುಗಳ ಪಟ್ಟಿಯಲ್ಲಿ ಚೇಳನ್ನು ಸೇರಿಸಿದ್ದಾರೆ.

ಜರಿಗಳು: ಕೂಡ ಮಕ್ಕಳಿಗೆ ಭಯ ಹುಟ್ಟಿಸುವ ವಿಷದ ಹುಳುವೇ ಆಗಿದೆ. ದೊಡ್ಡ ಹಾಗೂ ಚಿಕ್ಕಗಾತ್ರದ ಜರಿಗಳು ಸಾಮಾನ್ಯವಾಗಿವೆ. ಚೇಳು ಹಾಗೂ ಜರಿಗಳು ತಂಪಿನ ಜಾಗವನ್ನೆ ಆಯ್ದುಕೊಳ್ಳುತ್ತವೆ. ಬೇಸಿಗೆಯಲ್ಲಿ ಬಿಸಿ ತಡೆಯಲಾರದೆ ಹೊರ ಬಂದು ಅಪಾಯ ತಂದುಕೊಳ್ಳುತ್ತವೆ. ಜರಿಗಳು ಕಿವಿಗೆ ನುಗ್ಗುತ್ತವೆ ಎಂಬ ಪ್ರತೀತಿ ಇದೆ. ಭಯದಿಂದ ಅವು ದೇಹದ ಮೇಲೆ ಸರಿದಾಡುವಾಗ ಆಕಸ್ಮಿಕವಾಗಿ ಕತ್ತು ಬಳಸಿ ಕಿವಿ ಸಂದಿಗೆ ಹರಿದು ಕಿವಿಯ ಒಳಕ್ಕೆ ನುಸುಳುವ ಪ್ರಯತ್ನ ಮಾಡಿರಬಹುದು. ಅದು ತನ್ನ ಜೀವ ಉಳಿಸಿಕೊಳ್ಳುವ ಸಲುವಾಗಿ ಮಾಡಿಕೊಳ್ಳುವ ಅಂತಹ ಹುಡುಕಾಟದಲ್ಲಿ ಕಿವಿಯು ತಕ್ಕ ಬಿಲದಂತೆ ಕಂಡಿರಬಹುದು. ಜರಿಗಳನ್ನು ಹಳೆ ಮೈಸೂರಿನ ಕಡೆ ಸಾವಿರ ಕಾಲು ಎಂದು ಕರೆಯುವರು. ಮಾಟಮಂತ್ರದಲ್ಲೂ ಜರಿಗಳಿಗೆ ಸ್ಥಾನವಿದೆ. ಭಯ ತರಿಸುವ ಎಲ್ಲಾ ಪ್ರಾಣಿಪಕ್ಷಿ ಹುಳುಗಳನ್ನು ಮಾಂತ್ರಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡಿರುವುದರಿಂದಲೂ ಇಂತಹ ಪ್ರತೀತಿಗಳು ಬೆಳೆದಿವೆ. ವನಕೆ ಮುಂಡಿ ತುಂಬ ಅಸಹಾಯಕವಾದ ಹುಳ. ಹಳೆ ಮೈಸೂರಿನ ಕಡೆ ಇದನ್ನು ಕಪುರ ಚಟ್ಟಿ ಎನ್ನುವರು. ತುಟಿಗಳ ಆಕಾರವನ್ನು ಹೋಲುವುದರಿಂದ ಕಪರು ಚಟ್ಟಿಯ ಧ್ವನಿತಾರ್ಥ ಪ್ರಾಪ್ತವಾಗಿರಬಹುದು. ಕಪರು ಮೂಗು ಕಪರು ತುಟಿ ಎರಡೂ ಹಳೆ ಮೈಸೂರಿನ ನುಡಿಗಟ್ಟುಗಳು. ಕಪರು ಆಕಾರ ಸೂಚಿಸಿದರೆ ಚಟ್ಟಿ ಎನ್ನುವುದು ತುಟಿಯ ಅಪಭ್ರಂಶವಾಗಿರಬಹುದು. ಹೀಗಾಗಿ ಕಪರುಚಟ್ಟಿ ಕೆಟ್ಟ ತುಟಿಯ ಆಕೃತಿಯಲ್ಲಿರುವುದರಿಂದ ಮೈಸೂರಿನ ಪ್ರಾಂತ್ಯದಲ್ಲಿ ಈ ಹೆಸರಿಗೆ ಒಳಪಟ್ಟಿದೆ. ಹಂಪಿ ಪರಿಸರದ ವನಕೆ ಮಂಡಿಗಳು ವನಕೆಯ ಆಕಾರದಲ್ಲಿವೆ. ಮುಂಡಿ ಎಂಬುದು ಹಿಡಿಕೆಗೆ ಸಂಬಂಧಪಟ್ಟದ್ದು. ಪೊರಕೆ ಮುಂಡಿ, ಬರಲು ಮುಂಡಿ ಎಂಬ ಶಬ್ದ ಪ್ರಯೋಗಗಳು ಹಳೆ ಮೈಸೂರಿನ ಜನಪದದಲ್ಲಿ ಸಾಮಾನ್ಯ. ಹೀಗಾಗಿ ಒನಕೆಯಂತೆ ಕಾಣುವ ಈ ಹುಳದ ತುದಿತಾಳು ಕೂಡ ಹಿಡಿಕೆ ಅಥವಾ ಮುಂಡಿಯ ಸ್ವರೂಪವನ್ನು ಪಡೆದಿದೆ.

ದೊಣ್ಣೆಕಾಟ: ಹಂಪಿ ಪರಿಸರದಲ್ಲಿ ವಿಶಿಷ್ಟವಾಗಿವೆ. ಬಂಡೆ ಸಂದುಗಳಲ್ಲಿ ಇವು ಹೇರಳವಾಗಿವೆ. ಬೆದೆಗಾಲದಲ್ಲಿ ಗಂಡು ದೊಣ್ಣೆಕಾಟ ಹಳದಿ ಮಿಶ್ರಿತ ಕಂದುಗೆಂಪು ಬಣ್ಣಕ್ಕೆ ಬರುವುದು. ಈ ಬಣ್ಣದ ಜೊತೆ ಕಪ್ಪುಬಣ್ಣವನ್ನೂ ಕೂಡ ಪಡೆದಿದೆ. ಉಷ್ಣವಲಯದ ಈ ವಿಶೇಷ ದೊಣ್ಣೆಕಾಟಗಳು ಹಂಪಿ ಪರಿಸರದಲ್ಲಿ ಅಪರೂಪದವು. ಹೆಣ್ಣು ಚಿಕ್ಕದು. ಅನಾಕರ್ಷಕವಾಗಿದೆ. ಕಂದು ಬಂಡೆ ಬಣ್ಣದಲ್ಲೇ ಇರುವುದರಿಂದ ಅದರ ಇರುವಿಕೆ ತಟ್ಟನೆ ಕಾಣದು. ಬೆದೆಗಾಲದಲ್ಲಿ ಗಂಡಿನ ಜೊತೆ ಕೂಡಿದ ಮೇಲೆ ನೆಲದಲ್ಲಿ ಬಿಲ ತೆಗೆದು ಮೊಟ್ಟೆ ಇಡುತ್ತದೆ. ಆಗಾಗ ತನ್ನ ಮೊಟ್ಟೆಗಳನ್ನು ಕಾಯುವುದು. ಕಾವಿಗೆ ಮೊಟ್ಟೆಗಳು ತಾವಾಗಿಯೆ ಮರಿಯಾಗಿ ಹೊರಬರುತ್ತವೆ. ದೊಣ್ಣೆಕಾಟಗಳಲ್ಲೆ ಪುಟ್ಟ, ಜಾತಿಯ ಇನ್ನೊಂದು ವರ್ಗವಿದೆ. ಇದು ತೀರ ಸಣ್ಣದು. ನೆಲದ ಮೇಲೆ ಓಡಾಡಿಕೊಂಡಿರುತ್ತದೆ. ದೊಣ್ಣೆಕಾಟಗಳು ಗೆದ್ದಲು, ಇರುವೆ, ಕ್ರಿಮಿಕೀಟ ಇಂತಹ ಅತಿ ಚಿಕ್ಕ ಹುಳುಗಳನ್ನೆ ತಿಂದು ಬದುಕುತ್ತವೆ. ಆಹಾರದಲ್ಲಿ ಅಕಸ್ಮಾತ್ ಇವು ಬಿದ್ದು ಸತ್ತರೆ ಆಹಾರ ವಿಷಕಾರಿ ಆಗುವುದು. ’ಮದ್ದು’ ಹಾಕಲು ದೊಣ್ಣೆಕಾಟಗಳನ್ನು ಬಳಸುವರು ಎಂಬ ಪ್ರತೀತಿ ಇದೆಯಾದರೂ ಹಂಪಿ ಪರಿಸರದಲ್ಲಿ ಇದು ಇಲ್ಲ. ಹಳೆ ಮೈಸೂರಿನ ಜನ ದೊಣ್ಣೆಕಾಟಗಳನ್ನು ಕೊಂದು ಅವುಗಳಿಂದ ವಿಷ ತೆಗೆದು ಊಟದಲ್ಲೊ ತಿನ್ನುವ ಯಾವುದರಲ್ಲೊ ಹಾಕಿ ಸಂಚುಮಾಡುವರು ಎನ್ನುವರು. ಇದೆಷ್ಟು ನಿಜವೊ ಪರಿಶೀಲಿಸಬೇಕಾದ ವಿಷಯ. ಹಿಂದು ಮುಸ್ಲಿಂ ದಾಳಿಗಳ ಹಿನ್ನೆಲೆಯಲ್ಲಿ ಸೃಷ್ಟಿಯಾದ ಧಾರ್ಮಿಕ ದ್ವೇಷ ದೊಣ್ಣೆಕಾಟಗಳ ಮೇಲೂ ಹರಿಹಾಯ್ದಿದೆ. ದೊಣ್ಣೆಕಾಟಗಳಲ್ಲೇ ಮಧ್ಯಮ ಗಾತ್ರದ ಮತ್ತೊಂದು ದೊಣ್ಣೆಕಾಟವನ್ನು ಕಂಡ ಕೂಡಲೆ ಹುಡುಗರು ಅದನ್ನು ಕೊಲ್ಲುವರು. ದೊಣ್ಣೆಕಾಟಗಳ ಬೇಟೆಯು ಒಂದು ಕ್ರೀಡೆಯೂ ಹೌದು. ಇದು ಮುಸ್ಲಿಮರ ಪರವಾಗಿ ಹಿಂದು ಸೈನಿಕರ ವಿರುದ್ದವಾಗಿ ನಡೆದುಕೊಂಡು ಹಿಂದುಗಳ ಅಡಗುದಾಣ ಗೊತ್ತಾಗಲು ಅವಕಾಶ ಮಾಡಿತಂತೆ. ಈ ಪ್ರತೀತಿಯ ಹಿಂದೆ ಏನೊ ಆಕಸ್ಮಿಕ ಘಟನೆ ನಡೆದು ಯುದ್ಧದಲ್ಲಿ ತೊಂದರೆ ಎದುರಾಗಿರಬಹುದು. ಅದನ್ನೆ ನೆನಪಾಗಿಟ್ಟುಕೊಂಡು ದೊಣ್ಣೆಕಾಟಗಳ ಮೇಲೆ ಸಿಟ್ಟು ತೀರಿಸಿಕೊಳ್ಳಲು ಅವಕಾಶವಾಗಿದೆ. ಹಳೆ ಮೈಸೂರಿನ ಕಡೆ ಇವನ್ನು ಅಂಟೆಗೊದ್ದ ಎಂದು ಕರೆಯುವರು. ಇರುವೆಗಳನ್ನು ಗೊದ್ದ ಎಂತಲೂ ಕರೆಯುವುದಿದೆ. ಅವುಗಳನ್ನು ತಿನ್ನುವುದರಿಂದ ಈ ಹೆಸರು ಬಂದಿದೆ. ಅಂಟೆ ಎಂಬುದು ಅದರ ಆಕಾರವನ್ನು ಧ್ವನಿಸುವ ಶಬ್ಧವಾಗಿದೆ.

ಹಾವುರಾಣಿ: ಹಾವಲ್ಲ. ಹಾವಿನಂತೆ ಕಸಕಡ್ದಿ ಮರೆಯಲ್ಲಿ ಕಾಣಬಲ್ಲದು. ಅತ್ಯಂತ ಹೊಳಪಾದ ನುಣುಪಾದ ಮೈ ಹೊಂದಿದೆ. ಇದು ಹಲ್ಲಿಯ ಜಾತಿಗೆ ಸೇರಿದ್ದಾದರೂ ಹಲ್ಲಿಗಳಂತೆ ಮನುಷ್ಯನ ಸಮೀಪ ಬರುವುದಿಲ್ಲ. ಸಂಕೋಚದಲ್ಲೆ ತಲೆ ಮರೆಸಿಕೊಳ್ಳುತ್ತದೆ. ಕಚ್ಚಿದರೆ ಮೈಯಲ್ಲಿ ಗಂಟಾಗುತ್ತವೆ. ಆಹಾರದಲ್ಲಿ ಬೆರೆತರೆ ಪ್ರಾಣಾಂತಿಕ ಸಮಸ್ಯೆ ಎದುರಾಗುತ್ತದೆ. ಹಾವುಗಳೆಗೆಲ್ಲ ಕಾಳಿಂಗ ಸರ್ಪ ಅಥವಾ ನಾಗರಹಾವು ರಾಜನಾದರೆ ಈ ಪುಟ್ಟ ಅಸಹಾಯಕ ಹಾವುರಾಣಿ ಅದು ಹೇಗೆ ರಾಣಿಯ ಪಟ್ಟವನ್ನು ಪಡೆಯಿತೊ ಕುತೂಹಲಕರವಾಗಿದೆ. ಹಾವುರಾಣಿಯ ಸೌಮ್ಯತೆಯಿಂದ ಇದನ್ನು ಹೊಡೆದು ಸಾಯಿಸುವುದಿಲ್ಲ. ಹಲ್ಲಿಯಲ್ಲಿ ಮೂರು ವಿಧದ ಹಲ್ಲಿಗಳಿವೆ. ಮನೆಗಳಲ್ಲೆ ನೆಲೆಸಿರುವ ದೊಡ್ಡ ಹಲ್ಲಿ, ಸಣ್ಣ ಹಲ್ಲಿಗಳು ವಿಷಕಾರಿಯಾದರೂ ಅವು ಮನುಷ್ಯರ ಸಹವಾಸಕ್ಕೆ ಹೊಂದಿಕೊಂಡಿವೆ. ಮಾನವರೂ ಅವುಗಳ ಸಾಮಿಪ್ಯವನ್ನು ಒಪ್ಪಿಕೊಂಡಿದ್ದಾರೆ. ಬಂಡೆಗಳ ಸಂದುಗಳಲ್ಲಿರುವ ಹಲ್ಲಿಗಳನ್ನು ಬಂಡೆಲಚ್ಚಿ ಎನ್ನುವರು. ಮನೆಯಲ್ಲಿರುವ ಹಲ್ಲಿಗಳನ್ನು ಮನೆಲಚ್ಚಿ ಎನ್ನುವರು. ಇವು ಶಕುನ ನುಡಿಯುತ್ತವೆ ಎನ್ನುವುದಿದೆ. ಯಾವ ಮಾತಿಗೆ ಯಾವ ದಿಕ್ಕಿನಲ್ಲೆ ಯಾವ ಬಗೆಯಾಗಿ ಲೊಚಲೊಚನೆ ಸದ್ದು ಹೊರಡಿಸುತ್ತವೆ ಎನ್ನುವುದರ ಮೇಲೆ ಫಲಾಫಲಗಳನ್ನು ಹೇಳುವರು. ಲಚ್ಚಿಗಳು ಮೈಮೇಲೆ ಯಾವ ಭಾಗಗಳಲ್ಲಿ ಬಿದ್ದರೆ ಏನು ಎಂಬ ಕೆಟ್ಟ ಒಳ್ಳೆಯ ಫಲಗಳನ್ನು ಗುರುತಿಸುವರು. ಹೀಗಾಗಿ ಲಚ್ಚಿಯು ಒಂದು ಅಶರೀರವಾಣಿಯೂ ಆಗಿ ಶುಭ ಅಶುಭಗಳ ಸೂಚಿಸುವ ಶಕ್ತಿಯೂ ಆಗಿ ಜನಪದರ ಬದುಕಿನಲ್ಲಿ ಸೇರಿಕೊಂಡಿವೆ. ತಲೆ ಮೇಲೆ ಬಿದ್ದರೆ ಅದು ತುಂಬ ಅಪಾಯದ ಸೂಚನೆ. ಬಲಭುಜದ ಮೇಲೆ ಬಿದ್ದರೆ ಅನುಕೂಲ. ಹಲ್ಲಿಗಳಲ್ಲೂ ದೈವಿಕತೆಯನ್ನು ಎಲ್ಲೆಡೆ ಕಂಡಿರುವಂತೆ ಹಂಪಿ ಪರಿಸರದಲ್ಲೂ ಜನಪದರು ಕಂಡಿದ್ದಾರೆ. ಹಂಪಿಯ ದೇವಾಲಯಗಳಲ್ಲಿ ಪವಿತ್ರ ಹಲ್ಲಿಯ ಉಬ್ಬು ಶಿಲ್ಪಗಳಿವೆ. ಅವನ್ನು ಮುಟ್ಟಿ ನಮಸ್ಕರಿಸುವರು. ಹಲ್ಲಿಗಳು ಇಲ್ಲದ ಮನೆಗಳೇ ಇಲ್ಲ ಎಂಬಷ್ಟು ವ್ಯಾಪಕವಾಗಿ ಲಚ್ಚಿ ಅಥವಾ ಹಲ್ಲಿಗಳು ಮನುಷ್ಯರ ಜೊತೆ ಒಂದಾಗಿವೆ. ಬಂಡೆ ಹಲ್ಲಿಗಳು ಅಷ್ಟಾಗಿ ಮನುಷ್ಯರ ನಂಬಿಕೆಗಳಿಗೆ ಒಳಪಟ್ಟಿಲ್ಲ. ಹಲ್ಲಿಗಳನ್ನು ಕೊಲ್ಲಬಾರದು ಎಂಬ ನಿಷೇಧವಿದೆ. ಬಂಡೆಹಲ್ಲಿಗಳು ದಪ್ಪಗೆ ಕಪ್ಪಗೆ ಬಂಡೆಗೆ ಅಂಟಿದಂತೆ ಕೂತಿರುತ್ತವೆ. ಜನಪದರು ಈ ಎಲ್ಲವನ್ನೂ ತಮ್ಮ ಜೀವಜಾಲದ ಅಂತರಂಗದ ಬಂಧುಗಳಂತೆ ಕಾಣುವುದಿದೆ. ಊಸರವಳ್ಳಿ ಬಗ್ಗೆ ಅಂತಹ ಗೌರವವಿಲ್ಲ. ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವ ವ್ಯಕ್ತಿತ್ವದವರನ್ನು ಊಸರವಳ್ಳಿಗೆ ಹೋಲಿಸುವರು. ಹೀಗೆ ಹತ್ತಾರು ನಂಬಿಕೆಗಳಲ್ಲಿ ಉರಗಗಳ ಬಗೆಗೆ ಜನಪದರು ತಮ್ಮದೇ ಆದ ಜೀವಜಾಲದ ಜಾನಪದವನ್ನು ಅಳವಡಿಸಿಕೊಂಡಿದ್ದಾರೆ.

ಪಶುಪಾಲಕ ಸಮಾಜ ಯಾವತ್ತೂ ಪ್ರಾಣಿಪಕ್ಷಿ ಕೀಟಾದಿಗಳನ್ನು ನಿರಾಕರಿಸಿ ಬದುಕಲು ಸಾಧ್ಯವೇ ಇಲ್ಲ ಎಂಬುದು ಮೇಲಿನ ನಂಬಿಕೆಗಳಿಂದ ತಿಳಿಯುತ್ತದೆ. ಹಾವು ಹಲ್ಲಿ ಚೇಳುಗಳ ಬಗ್ಗೆ ಮಾಂತ್ರಿಕವಾದ ಭಾವನೆಗಳೇ ಹೆಚ್ಚು. ಹಾವುಗಳ ಬಗ್ಗೆ ಭಾರತೀಯರಷ್ಟು ವೈವಿಧ್ಯ ಅಭಿಪ್ರಾಯಗಳನ್ನು ಹೊಂದಿರುವವರು ಜಗತ್ತಿನಲ್ಲಿ ಮತ್ಯಾರೂ ಇರಲಾರರು. ಇದೊಂದು ವಿಶಿಷ್ಟ ಸ್ವಭಾವ. ಸಂಸ್ಕೃತಿಗಳ ಈ ಬಗೆಯ ತಿಳುವಳಿಕೆಯು ನಿಸರ್ಗದ ಭಾವನೆಯೂ ಆಗಿ ಬೆರೆಯುವಂತೆ ಮಾಡಿದೆ. ಅವ್ಯಕ್ತ ಸಂಸ್ಕೃತಿಗಳು ನಿಸರ್ಗವನ್ನೆ ಹೆಚ್ಚು ಆಶ್ರಯಿಸಿರುತ್ತವೆ. ಜನರ ಜೀವನ ಕ್ರಮಗಳು ಪ್ರತಿಯೊಂದರಲ್ಲೂ ದೈವಿಕತೆಯನ್ನು ಕಾಣುವುದು ಲೋಕದೃಷ್ಟಿಯ ಪ್ರತಿಬಿಂಬವಷ್ಟೆ. ಇಂತಹ ಅಸಂಖ್ಯಾತ ಪ್ರತಿಬಿಂಬಗಳಲ್ಲಿ ಜನಪದ ಸಮಾಜವು ನಿರಾಳತೆಯನ್ನು ಅನುಭವಿಸುತ್ತದೆ. ಇದರ ಹೊರತು ಬೇರೆ ನಿರಾಳತೆ ಅಷ್ಟು ಸುಲಭವಾಗಿ ಅವರ ಕೈಗೆಟುಕುವುದಿಲ್ಲ. ನಿಸರ್ಗದ ಬಗೆಗಿನ ಭಯ ಆರಾಧನೆಗೆ ಎಡೆಮಾಡಿ ಭಕ್ತಿ ಮತ್ತು ದೈವಿಕತೆಯ ನಡುವೆ ನೀತಿಯನ್ನು ಬಿತ್ತಿಕೊಂಡಿರುವ ಜನಪದ ಸಂಸ್ಕೃತಿಗಳು ತನ್ನ ಸುತ್ತಲ ಪರಿಸರವನ್ನು ಅಖಂಡವಾಗಿಯೆ ಗ್ರಹಿಸುತ್ತವೆ. ಹಂಪಿ ಪರಿಸರದ ನೈಸರ್ಗಿಕ ಸ್ವರೂಪ ಕೂಡ ಈ ಎಲ್ಲ ಬಗೆಯ ನಂಬಿಕೆಗಳಿಗೆ ತಕ್ಕ ವಾತಾವರಣ ಕಲ್ಪಿಸಿದೆ. ಆದಿಮ ಸಂಸ್ಕೃತಿಯ ಎಲ್ಲ ನೆನಪುಗಳು ಪ್ರಾಣಿಗಳ ಬಗೆಗಿನ ನಡವಳಿಕೆಯಲ್ಲಿ ಕಂಡು ಬರುತ್ತದೆ. ಆಧುನಿಕ ಸಮಾಜಗಳ ಸಂಪರ್ಕವಿದ್ದರೂ ಹಂಪಿಯ ಜನಪದ ಪ್ರಜ್ಞೆಯು ಅಷ್ಟು ಸಲೀಸಾಗಿ ತನ್ನ ಕುರುಹನ್ನು ಅಳಿಸಿಕೊಳ್ಳುವಂತದಲ್ಲ. ಇದಕ್ಕೆ ಮುಖ್ಯ ಪರೋಕ್ಷ ಕಾರಣ ವಿಜಯನಗರ ಸಾಮ್ರಾಜ್ಯದ ನೆನ್ನೆಯ ಗತ ಪರಂಪರೆಯೂ ಕಾರಣ ಎಂದು ಹೇಳಬಹುದು. ಚರಿತ್ರೆಯ ಬೇರುಗಳು ಕೂಡ ನೈಸರ್ಗಿಕ ಸಂಬಂಧವನ್ನು ಸಂಸ್ಕೃತಿಯ ಜೊತೆ ಬೆಸೆದುಕೊಳ್ಳಲು ಅವಕಾಶ ಮಾಡಿರುವುದು ಹಂಪಿಯ ಪರಿಸರದಲ್ಲಿ ವಿಶೇಷವಾಗಿದೆ. ಚರಿತ್ರೆಯ ರಾಜಕೀಯ ಮುಖ ಬೇರೆಯಾದುದಾದರೂ ಅದರ ಸಾಂಸ್ಕೃತಿಕೆ ನೆಲೆಗಳು ನಿಸರ್ಗ ನಿಷ್ಠ ತತ್ವಗಳಿಗೆ ಹೊಂದಿಕೊಂಡೇ ಸಾಗಿ ಬಂದಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪಶುಪಾಲಕ ಸಮುದಾಯಗಳು, ಅವರ ನಿಸರ್ಗ ನಿಷ್ಠ ಸಂಸ್ಕೃತಿ, ಹಂಪಿಯ ಜೀವಜಾಲದ ಪರಿಸರ ಒಂದಕ್ಕೊಂದು ಅವಿನಾಭಾವ ನೇಯ್ಗೆಯಲ್ಲಿ ಅಂತರ್ಗತಗೊಂಡಿವೆ.