ಹಂಪಿಯ ಪರಿಸರ ಪಕ್ಷಿಗಳಿಗೆ ಸೂಕ್ತವಾದ ರಕ್ಷಣೆ, ಆಹಾರ, ವೈವಿಧ್ಯ ಜೀವಜಾಲ ಸೌಲಭ್ಯಗಳನ್ನು ಒದಗಿಸಿರುವುದರಿಂದ ಉಷ್ಣವಲಯದ ಈ ಪ್ರದೇಶದಲ್ಲಿ ವೈವಿಧ್ಯ ಪಕ್ಷಿಗಳನ್ನು ಗಮನಿಸಬಹುದು. ದಟ್ಟಕಾಡಿನ ಪರಿಸರದ ಪಕ್ಷಿಗಳು ಸ್ವಭಾವತಃ ರೂಪ ಬಣ್ಣ ಆಕಾರ ಜೀವನ ಶೈಲಿಯಲ್ಲಿ ಬಯಲು ಪ್ರದೇಶಗಳ ಹಕ್ಕಿಗಳಿಗಿಂತ ಭಿನ್ನವಾಗಿರುತ್ತವೆ. ಸಮುದ್ರ ತೀರದ ಹಕ್ಕಿಗಳ ಜೀವನವಂತು ಸ್ಪಷ್ಟವಾಗಿ ಕಡಲಿನ ಆಧಾರದಲ್ಲಿ ನಿರ್ಧಾರಿತವಾಗುತ್ತದೆ. ಮರುಭೂಮಿಯ ಹಕ್ಕಿಗಳು ಪರಿಸರದ ಬರ್ಬರ ವಾತಾವರಣವನ್ನು ಕೂಡ ಮೀರಿ ಬದುಕಬಲ್ಲವು. ಗುಡ್ಡಗಾಡು ಪ್ರದೇಶಗಳ ಪಕ್ಷಿಗಳು ಬಣ್ಣ ಮತ್ತು ಆಕಾರಗಳಲ್ಲಿ ಬಹಳ ಆಕರ್ಷಕವೇನಲ್ಲ. ಆಯಾಯ ಪರಿಸರ ಆಯಾಯ ಪ್ರಾಣಿಪಕ್ಷಿಗಳ ಒಟ್ಟು ಸ್ಥಿತಿಯನ್ನು ರೂಪಿಸಿರುತ್ತವೆ. ಪರಿಸರದ ಪಭಾವದಿಂದ ಯಾವ ಜೀವಿಯೂ ಪ್ರತ್ಯೇಕ ಅಸ್ತಿತ್ವ ರೂಪಿಸಿಕೊಳ್ಳಲಾರದು. ಹೀಗಾಗಿಯೆ ನಿಸರ್ಗ ನಿರ್ಮಿತ ಪರಿಸರವೆ ವಿಕಾಸದ ನಿರ್ಣಾಯಕ ಶಕ್ತಿ. ಪಕ್ಷಿಗಳು ಮಾನವರಿಗಿಂತಲೂ ಪೂರ್ವಕಾಲದವು. ಸರೀಸೃಪಗಳು ಅವನತಿ ಕಾಣುತ್ತಿದ್ದ ಕಾಲದಲ್ಲಿ ಅವುಗಳಿಗಿಂತ ಭಿನ್ನವಾಗುಳಿದು ಬಾವಲಿಯಂತೆ ಹಾರುವ ರೆಕ್ಕೆಗಳನ್ನು ರೂಪಿಸಿಕೊಂಡ ಪ್ರಭೇದ ’ಆರ್ಕಿಯೋ ಪೆಟ್ರಿಕ್ಸ್’ ನಿಂದ ಜಗತ್ತಿನ ಎಲ್ಲ ಬಗೆಯ ಪಕ್ಷಿಗಳು ವಿಕಾಸಗೊಂಡವೆಂದು ಹೇಳುವರು. ಡಾರ್ವಿನ್ ಪಕ್ಷಿಗಳು ಹೇಗೆ ವಿವಿಧ ಪರಿಸರದಲ್ಲಿ ಆಹಾರ ಮೂಲದಿಂದ ವಿಕಾಸವಾದವು ಎಂಬುದನ್ನು ತೋರಿಸಿದ್ದಾರೆ. ಸಲೀಂ ಆಲಿಯವರು ಭಾರತದ ಎಲ್ಲ ಬಗೆಯ ಪಕ್ಷಿಗಳ ಅಧ್ಯಯನ ಮಾಡಿದ್ದು ಹೇಗೆ ನಿಸರ್ಗ ನಿರ್ಮಿತ ಪರಿಸರ ಆಯಾಯ ಪಕ್ಷಿಯ ಸ್ವರೂಪವನ್ನು ನಿರ್ಧರಿಸಿವೆ ಎಂಬುದನ್ನು ಸಮರ್ಥವಾಗಿ ಮಂಡಿಸಿದ್ದಾರೆ.

ಜನಪದರು ಪಕ್ಷಿಗಳ ಬಗ್ಗೆ ರೂಪಿಸಿಕೊಂಡಿರುವ ವಿಚಾರಗಳಿಗೂ ಪಕ್ಷಿವಿಜ್ಞಾನಿಗಳ ತಿಳುವಳಿಕೆಗಳಿಗೂ ಭಿನ್ನತೆ ಇದೆ. ಜನಪದರು ಪಕ್ಷಿಗಳನ್ನು ತಮ್ಮ ಬದುಕಿನ ಕನ್ನಡಿಗಳ ಮೂಲಕ ನೋಡುವರು. ತಾವೇ ಆ ಪಕ್ಷಿಗಳ ಪ್ರಾಣಪಕ್ಷಿಯನ್ನು ಎದೆಗೂಡಲಿ ಬಚ್ಚಿಟ್ಟುಕೊಳ್ಳುವರು. ಪ್ರಾಣ ಎಂಬ ಕಲ್ಪನೆ ಜನಪದರಲ್ಲಿ ಪಕ್ಷಿಯಾಗಿ ಅರ್ಥೈಸಲ್ಪಟ್ಟಿದೆ. ಪ್ರಾಣಪಕ್ಷಿ ಹಾರಿ ಹೋಯಿತು ಎಂಬ ನಂಬಿಕೆಯು ಸಾಮಾನ್ಯವಾದುದಲ್ಲ. ವ್ಯಕ್ತಿಯ ಪ್ರಾಣವೇ ಪಕ್ಷಿ. ಆತನ ಎದೆಗೂಡಲ್ಲಿ ಅದು ಇರಬೇಕಾದಷ್ಟು ಕಾಲ ನೆಲೆಸಿರುತ್ತದೆ ಎಂಬುದು ವಿಧಿನಿಯಮ. ಹಂಸಪಕ್ಷಿಯೂ ಆತ್ಮವಾಗಿ ಕಂಡಿದೆ. ಪ್ರಾಣದ ಇನ್ನೊಂದು ಮುಖ ಆತ್ಮ. ’ತನುವಿನೊಳಗೆ ಅನುದಿನವು ಇದ್ದು ಎನ್ನ ಮನಕೆ ಒಂದು ಮಾತ ಹೇಳದೆ ಹೋದೆಯಾ ಹಂಸ’ ಎಂಬ ತತ್ವಪದ ಇದೇ ಅರ್ಥವನ್ನು ಬಿಂಬಿಸುತ್ತದೆ.

ಪಕ್ಷಿರೂಪಿ ಮಾನವ ಕಲ್ಪನೆ ಆದಿಮ ಸಂಸ್ಕೃತಿಯ ಪ್ರತೀಕ. ರಾಮಾಯಣದಲ್ಲಿ ಬರುವ ಕ್ರೌಂಚ ಪಕ್ಷಿಯ ದುರಂತವೇ ಮಹಾಕಾವ್ಯ ರಚನೆಗೆ ದಾರಿ ತೋರಿತು. ರಾವಣನಿಗೆ ಎದುರಾಗಿ ಹೋರಾಡುವ ಮಾನವ ರೂಪಿ ಜಟಾಯು ಪಕ್ಷಿಯು ಯಾರ ಮನದಲ್ಲೂ ಬಂದು ಹೋಗುವಂತದ್ದೇ. ಗರುಡ ಪುರಾಣದ ಬಗ್ಗೆ ದೈವಿಕವಾಗಿ ಹೇಳುವವರಿದ್ದಾರೆ. ಶಿಷ್ಟ ಪರಂಪರೆಗಳು ಪಕ್ಷಿಗಳನ್ನು ಅತ್ಯುನ್ನತ ಸ್ಥಾನದಲ್ಲಿ ಕಂಡು ಪೂಜಿಸಿವೆ. ಕಾಗೆಯಂತಹ ಪಕ್ಷಿಯನು ಶನಿಮಹಾತ್ಮೆಯಲ್ಲಿ ತೋರಲಾಗಿದೆ. ಪಕ್ಷಿಗಳನ್ನು ನಮ್ಮ ಕುಲವೆಂದು ಒಪ್ಪಿಕೊಂಡ ಎಷ್ಟೋ ಸಮುದಾಯಗಳು ಜಗತ್ತಿನ ಉದ್ದಕ್ಕೂ ಇವೆ. ಹಕ್ಕಿಪಕ್ಕಿಯವರು ಪಕ್ಷಿ ಜನಾಂಗ. ಪಶುಪಾಲಕರಿಗಿಂತಲೂ ಭಿನ್ನವಾದ ಸಮುದಾಯ ಹಕ್ಕಿಪಿಕ್ಕಿಯವರು. ಇಡೀ ಒಂದು ಜನಾಂಗವನ್ನೆ ಪಕ್ಷಿಗಳಿಗಾಗಿ ಮೀಸಲಿಟ್ಟಿರುವ ಕ್ರಮವನ್ನು ಪ್ರಶ್ನಿಸಬಹುದಾದರೂ, ಆ ಜನಾಂಗವು ಪಕ್ಷಿಗಳನ್ನು ಹೇಗೆ ಕಂಡಿದೆ ಎಂಬುದನ್ನು ವಿವರ್ಶಿಸಬಹುದಾದರೂ ಹೇಗೆ ಒಂದು ಸಮುದಾಯವೇ ಹಕ್ಕಿಗಳ ಜೊತೆಯೇ ಜೈವಿಕವಾದ ಸಂಬಂಧವನ್ನು ಸಾಧಿಸಿಕೊಳ್ಳಲು ಸಾಧ್ಯವಾಯಿತು ಎಂಬುದನ್ನು ಗಾಢವಾಗಿ ಪರಿಶೀಲಿಸಬಹುದು. ಇವತ್ತಿನ ಹಕ್ಕಿಪಿಕ್ಕಿಗಳು ಹಕ್ಕಿ ಬೇಟೆ ಮಾಡಿ ಬದುಕುವುದು ಅಪರಾಧ ನಿಜ. ಒಂದು ಕಾಲಕ್ಕೆ ಹಾಗೆಯೆ ಅನೇಕ ಸಮುದಾಯಗಳೇಕೆ; ಇಡೀ ಮಾನವ ಜನಾಂಗವೇ ಬೇಟೆಯಿಂದಲೆ ಬದುಕಿದ್ದೂ ಇದೆ. ಆದರೆ ಹಕ್ಕಿಪಿಕ್ಕಿಗಳ ಸಾಂಸ್ಕೃತಿಕ ಚರಿತ್ರೆಯನ್ನು ಗಮನಿಸಿದರೆ ಕೇವಲ ಪಕ್ಷಿ ಬೇಟೆಗಾಗಿಯೇ ಅವರು ಸೀಮಿತವಾಗಿದ್ದರು ಎಂದು ಹೇಳಲಾಗದು. ಹಕ್ಕಿಪಿಕ್ಕಿಗಳೂ ಕೂಡ ಪಕ್ಷಿ ವಿಜ್ಞಾನವನ್ನು ತಮ್ಮದೇ ತಿಳುವಳಿಕೆಯಿಂದ ವಿಸ್ತರಿಸಿದವರೇ ಆಗಿದ್ದಾರೆ. ಈ ಪರಿಯಿಂದ ಭಾವಿಸಿದರೆ ಪಕ್ಷಿ ಜಾನಪದ ಪರಿಕಲ್ಪನೆಯನ್ನು ವಿಭಿನ್ನವಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಪಕ್ಷಿ ಜಾನಪದವು ಮಾನವರ ಸಹಜೀವ ಸಂಬಂಧವನ್ನು ತಿಳಿಸುವ ನಿಸರ್ಗನಿಷ್ಟ ಜ್ಞಾನವಾಗಿದೆ. ಪರಿಸರದ ಜೀವಜಾಲದ ಕೊಂಡಿಗಳನ್ನು ಬೆಸುಗೆ ಮಾಡಿಕೊಂಡ ಮಾನವ ಸಮೂಹಗಳು ಪಕ್ಷಿ ಪ್ರಜ್ಞೆಯನ್ನು ದೈಹಿಕವಾಗಿ ಭಾವಿಸುತ್ತಲೇ ತಮಗಿಂತಲೂ ಲೋಕದ ಸೆಳೆತವನ್ನು ಮೀರಿದ ಸಾಮರ್ಥ್ಯವನ್ನು ಗಳಿಸಿರುವ ಜೀವಗಳು ಎಂದು ತಿಳಿದಿದ್ದಾರೆ. ಸ್ವರ್ಗಕ್ಕೂ ಕೂಡ ಹಾರಿ ಹೋಗಿ ಬರುವ ಶಕ್ತಿ ಹಂಸಪಕ್ಷಿಗಳಿಗೆ ಇದೆ ಎಂದು ತಿಳಿಯುವ ಭಾವನೆ ನಿಸರ್ಗದ ಆಗಾಧ ನಿಗೂಢ ಶಕ್ತಿಯನ್ನು ಪಕ್ಷಿಗಳು ಸಾಧಿಸಿಕೊಂಡಿವೆ ಎಂಬುದನ್ನು ಸೂಚಿಸುತ್ತದೆ. ಲೌಖಿಕ ಅಲೌಖಿಕ ಎರಡೂ ನೆಲೆಗಳಿಂದ ಪಕ್ಷಿಗಳನ್ನು ತಮ್ಮ ಜೀವನ ವಿಧಾನದಲ್ಲಿ ಸಂಸ್ಕೃತಿಯು ನಿರೂಪಣೆಗಳಲ್ಲಿ ಮೌಖಿಕ ಪರಂಪರೆಗಳಲ್ಲಿ ಅರ್ಥೈಸಿ ಅಳವಡಿಸಿಕೊಂಡಿರುವ ಕ್ರಮವು ಜೈವಿಕವಾದ ವಿಕಾಸದ ಒಪ್ಪಂದಗಳನ್ನೇ ಧ್ವನಿಸುತ್ತದೆ. ಪಕ್ಷಿ ಪುರಾಣಗಳು, ಐತಿಹ್ಯಗಳು, ಕಥನ ಕಾವ್ಯಗಳು ಹೇರಳವಾಗಿ ಎಲ್ಲ ಪರಿಸರದಲ್ಲು ಜೀವಜಾಲದ ನೆಂಟಸ್ತಿಕೆಯಾಗಿ ಬೆಸೆದುಕೊಂಡಿರುವುದು ನಿಸರ್ಗವೇ ಸಂಸ್ಕೃತಿಯಾಗಿ ಮಾರ್ಪಟ್ಟಿದ್ದರ ಕಾರಣದಿಂದ. ಈ ನೆಲೆಯಿಂದ ಗ್ರಹಿಸಿದರೆ ಪಕ್ಷಿ ಜಾನಪದವು ಪ್ರಾಚೀನ ಜೀವ ಜಾಲದ ಹೊಂದಾಣಿಕೆಯ ಮಾನವ ಕಥನವಾಗಿದೆ. ಪಕ್ಷಿಗಳಿಂದಲೇ ಮಾನವ ಎಷ್ಟೋ ಸಂಗತಿಗಳನ್ನು ಕಲಿತಿದ್ದಾನೆ. ಪುಷ್ಪಕ ವಿಮಾನದ ಕಲ್ಪನೆ ಕೃತಕವಾಗಿ ಕಂಡರೂ ಜೀವಜಾಲದ ವಿಕಾಸದ ಆದಿ ಹಂತದಲ್ಲಿ ಮಾನವರು ದೈತ್ಯ ಪಕ್ಷಿಗಳ ಮೇಲೆ ಹಾರಾಡಿದ್ದರೆ ಆಶ್ಚರ್ಯವಿಲ್ಲ. ಗರುಡ ಪುರಾಣದ ಕಥೆ ಇದನ್ನೇ ಧ್ವನಿಸುತ್ತದೆ. ದೇವಾನುದೇವತೆಗಳೆಲ್ಲ ಪಕ್ಷಿಗಳನ್ನು ಜೊತೆಯಲ್ಲೇ ಇಟ್ಟುಕೊಂಡವರು.

ಪಕ್ಷಿಗಳು ಹಾರಾಡುವ ಶಕ್ತಿಯನ್ನು ಪಡೆದಿರುವುದರಿಂದಲೇ ಮಾನವರ ಪ್ರಜ್ಞೆಯಲ್ಲಿ ಅವು ಅತೀತವಾದ ಕಲ್ಪನೆಗಳಿಗೂ ದಾರಿ ಮಾಡಿರುವುದು. ಜನಪದ ಕಥೆ ಕಾವ್ಯ ಐತಿಹ್ಯ ಪುರಾಣ ನಂಬಿಕೆ ಆಚರಣೆ ಎಲ್ಲೆಲ್ಲು ಪಕ್ಷಿಗಳು ಪ್ರವೇಶ ಪಡೆದಿವೆ. ದೇವಾನುದೇವತೆಗಳೆಲ್ಲ ಹಾರಾಡುವ ಸಾಮರ್ಥ್ಯ ಹೊಂದಿದವರೇ. ಹೀಗೆ ಹಾರುವ ರೂಪಕವನ್ನು ದೈವಿಕ ಆವರಣದಲ್ಲಿ ಸೃಜಿಸಿಕೊಂಡಿದ್ದು ಪಕ್ಷಿಗಳ ಹಾರಾಟದ ಪ್ರಭಾವದಿಂದಲೇ. ಮನುಷ್ಯನಿಗೆ ಹಾರಬೇಕೆಂಬ ಪ್ರಜ್ಞೆ ಬೆಳೆದು ನಂತರ ಅದು ಹಾರುವ ಉಕ್ಕಿನ ಹಕ್ಕಿಯಾದ ಕಥೆ ಬೇರೆ. ದೇವತೆಗಳು, ಮತ್ಸ್ಯಕನ್ನೆಯರು, ಗಂದರ್ವರು, ಕಿನ್ನರು, ಪುರುಷರು, ರಾಕ್ಷಸರು, ದೈವಿಕ ಮಹಾಮಹಿಮರು ಹಾರಾಡುವ ಮಾಂತ್ರಿಕ ರಮ್ಯತೆಯಿಂದಲೆ ಸಂಸ್ಕೃತಿಗಳಲ್ಲಿ ಧುತ್ತೆಂದು ಪ್ರತ್ಯಕ್ಷವಾಗುವುದು. ಹಂಪಿಯ ಪರಿಸರದಲ್ಲೂ ಈ ಮೂಲ ತಿಳುವಳಿಕೆ ದಟ್ಟವಾಗಿದೆ. ಪಶುಗಳು ಪಶುಪಾಲಕ ಸಮಾಜಗಳಿಗೆ ಸೀಮಿತವಾಗಿದ್ದರೆ ಪಕ್ಷಿಗಳು ಎಲ್ಲ ಮಾನವ ಸಮೂಹಗಳನ್ನು ಗಾಢವಾಗಿ ಪ್ರಭಾವಿಸಿವೆ, ಒತ್ತಾಯಿಸಿವೆ, ಅತೀವವಾದ ರಮ್ಯಕಲ್ಪನೆಗಳಲ್ಲಿ ತೇಲಿಸಿ ಹಾರಾಡುವ ಕನಸುಗಳನ್ನು ಬಿತ್ತಿವೆ. ಪಕ್ಷಿ ಸಂವೇದನೆಗೆ ಸೀಮಿತ ಗಡಿಗಳಿಲ್ಲ. ಅಯಾಯ ಪರಿಸರದ ಪಕ್ಷಿಗಳು ಅಲ್ಲಲ್ಲಿನ ಬದುಕಿನಲ್ಲಿ ತಮ್ಮ ರೆಕ್ಕೆ ಬೀಸಿಯೇ ಭಾವನೆಗಳನ್ನು ಮೀಟಿವೆ. ಒಳ್ಳೆಯದಕ್ಕೆ ಕೆಟ್ಟದ್ದಕ್ಕೆ ಎಲ್ಲ ರೀತಿಯಲ್ಲೂ ಅರ್ಥಕ್ಕೆ ಒಗ್ಗಿಕೊಂಡ ಪಕ್ಷಿಗಳು ಪುರಾತನರ ಆತ್ಮವನ್ನು ಆಕಾಶದ ಹಾದಿಯಲ್ಲಿ ಕೊಂಡೊಯ್ದು  ಸ್ವರ್ಗಕ್ಕೆ ತಲುಪಿಸಿ ಬರುತ್ತವಂತೆ. ಎಂತಹ ಅದ್ಭುತ ಕಲ್ಪನೆ. ವ್ಯಕ್ತಿ ಮುಟ್ಟಲಾಗದ ಎತ್ತರವನ್ನು ಆತ್ಮದ ಮೂಲಕ ಮುಟ್ಟಿಸುವ ಈ ರಮ್ಯ ದಿವ್ಯ ಕಲ್ಪನೆಯು ಎಲ್ಲ ಮಿತಿಗಳನ್ನು ಮೀರಿ ಅತೀತವಾದ ಯಾವುದೊ ಮರೆಯ ಶಕ್ತಿಯಲ್ಲಿ ಲೀನವಾಗುವ ಹೆಬ್ಬಯಕೆಯದು. ಭಾಗಶಃ ಇದು ಜೀವಜಾಲದ ಅಖಂಡ ವಿಕಾಸದ ವಿಶ್ವಾಸವನ್ನು ಧ್ವನಿಸುತ್ತದೆಯೇನೊ.

ಪಕ್ಷಿಗಳು ಮಾನವರ ಅನಂತತೆಯ ದಾಹವನ್ನು ತಣಿಸಲ್ಪಡಬಲ್ಲವು. ಪ್ರಾಣವೇ ಪಕ್ಷಿಗಳಾದ್ದರಿಂದ ಸತ್ತ ಮೇಲೆ ತಮ್ಮ ಪ್ರಾಣವಾದರೂ ಹಾರಿ ಹೋಗುತ್ತದಲ್ಲವೇ? ಆಗಲಾದರೂ ಹಾರುವ ಸ್ವಂತ ಸುಖ ದಕ್ಕುತ್ತದಲ್ಲವೆ ಎಂಬ ಹೆಮ್ಮೆ ಅನಂತವಾದ ದಾಹದಿಂದ ಬರುವಂತದು. ಬುಡಕಟ್ಟು ಸಂಸ್ಕೃತಿಗಳು ಪಕ್ಷಿಗಳಲ್ಲೆ ತಮ್ಮ ಪ್ರಾಣ ಅಡಗಿದೆ ಎಂದು ನಂಬುವರು. ಸೋಲಿಗರು ತಮ್ಮ ಹಿರಿಯರು ಗತಿಸಿದ ಮೇಲೆ ಅದು ಕಾಡಿನ ಯಾವುದೊ ಒಂದು ಪಕ್ಷಿಯ ಪ್ರಾಣದಲ್ಲಿ ಹೋಗಿ ಸೇರುವುದು ಎಂದು  ನಂಬುವರು. ಪ್ರಾಣವೂ ಪಕ್ಷಿಯೆ ಆದ್ದರಿಂದ ಪಕ್ಷಿಯೇ ತಾವೂ ಕೂಡ ಎಂಬ ವಿಶ್ವಾಸ ಅವರಲ್ಲಿದೆ. ಹಕ್ಕಿಯಾಗಿ ಹಾರಿಹೋಗುವ ಹರೆಯದ ಚೆಂದದ ಕನಸಿನ ಕನ್ನೆಯರ ಕಲ್ಪನೆಗಳಿಗೆ ಕೊನೆಮೊದಲಿಲ್ಲ. ಜನಪದ ಕಥೆಗಳಲ್ಲಿ ಬರುವ ರಮ್ಯ ಪುರುಷನು ಗಿಣಿಯಾಗಿಯೊ  ಹಂಸವಾಗಿಯೊ ಬಂದು ರೆಕ್ಕೆ ಮೇಲೆ ಕೂರಿಸಿಕೊಂಡು ಹೊರಟುಹೋಗುವ ರಮ್ಯ ಸಂಭ್ರಮವು ಮನುಷ್ಯರ ಉತ್ಕಟ ಸಂಗಮದ ಪ್ರತೀಕದಂತಿದೆ. ಹಾಗೆಯೇ ಕೇಡು ಕೂಡ ಮೋಸದ ವೇಷ ಹಾಕಿ ಸುಂದರ ಹಕ್ಕಿಯಾಗಿ ಬರುವುದೆಂಬ ಭಯವೂ ಪಕ್ಷಿಗಳ ಬಗೆಗಿದೆ. ಪಕ್ಷಿಗಳ ಹಾಡುಗಾರಿಕೆ, ಅವುಗಳ ಸೌಂದರ್ಯ, ಜೀವಿಸುವ ಬಗೆ, ಹಾರುವ ರೀತಿ, ಜೀವಜಲದ ಮತ್ಯಾವ ಜೀವಿಗಳಿಗೂ ಸಾಧ್ಯವಿಲ್ಲ. ನಿಸರ್ಗದಲ್ಲಿ ಪಕ್ಷಿಗಳು ವಿಶೇಷ ಸೌಲಭ್ಯವನ್ನು ಪಡೆದಿವೆ. ಮನುಷ್ಯರು ಉಳಿದೆಲ್ಲ ಜೀವಿಗಳಿಗಿಂತ ಎತ್ತರದಲ್ಲಿದ್ದೇವೆಂದು ಬೀಗಿದರೆ ಪಕ್ಷಿಗಳು ಕೂಡ ಇಂತಹ ಹೆಮ್ಮೆಯನ್ನು  ತೋರಬಲ್ಲವು. ಗುರುತ್ವಾಕರ್ಷಣ ಶಕ್ತಿಗೆ ವಿರುದ್ದವಾಗಿ ಹಾರುವ ಅವುಗಳ ಬಗೆ ಮನುಷ್ಯನ ವಿವೇಕಕ್ಕಿಂತಲೂ ಹಿರಿದಾದುದುದಿರಬಹುದು. ಹಂಪಿಯ ಪರಿಸರದ ಪಕ್ಷಿಜಾನಪದವನ್ನು ಕೂಡ ಈ ಬಗೆಯ ಹಿನ್ನೆಲೆಗಳಿಂದಲೆ ಪರಿಭಾವಿಸಬೇಕು. ಹಂಪಿಯ ಜೀವಜಾಲ ಕೂಡ ಇಂತಹ  ವಿಚಾರಗಳ ಸಂಯೋಗವನ್ನೆ ಪ್ರತಿಫಲಿಸುತ್ತದೆ.

ಬೆಟ್ಟ ಗುಡ್ಡ ಕೆರೆಕಟ್ಟೆ ನದಿಗಳಿಂದಲೂ ಹುಲ್ಲುಗಾವಲುಗಳಿಂದಲೂ ತೋಟ ಹೊಲ ಗದ್ದೆಗಳಿಂದಲೂ  ಎತ್ತರವಾದ ಬಂಡೆ ಸಾಲುಗಳಿಂದಲೂ ಆವೃತ್ತವಾಗಿರುವ ಹಂಪಿ ಪರಿಸರವು ಉಷ್ಣವಲಯದ ದಟ್ಟ ಪರಿಸರವನ್ನು ಬಿಂಬಿಸುತ್ತದೆ ಉಷ್ಣವಲಯದ ಹಕ್ಕಿಗಳು ಸಾಮಾನ್ಯ ಗಾತ್ರದವಾಗಿರುತ್ತವೆ. ದೊಡ್ಡ ಗಾತ್ರದ ಹಕ್ಕಿಗಳು ಇಲ್ಲಿಲ್ಲ. ಮರುಭೂಮಿಯ ಹಾರಲಾರದ ಬೃಹತ್ ಹಕ್ಕಿಗಳು ಬೇರೆ. ಹಂಪಿಯಲ್ಲಿ ಕಂಡುಬರುವ ಪಕ್ಷಿಗಳು ವೈವಿಧ್ಯ ಬಣ್ಣದವಲ್ಲ. ಹುಲ್ಲುಗಾವಲಿನ ಉತ್ಪನ್ನಗಳನ್ನೆ ತಿಂದು ಬದುಕುವ ಹಕ್ಕಿಗಳು ಒಣ ಹುಲ್ಲು ಕಸಕಡ್ಡಿಯಂತೆಯೆ ಕಾಣಬಲ್ಲವು. ನೀರಾವರಿಯಿಂದ ಹಂಪಿ ಪರಿಸರ ಬದಲಾದ್ದರಿಂದ ಜಲಪಕ್ಷಿಗಳು ಕೂಡ ಈಗ ಪ್ರವೇಶಿಸಿವೆ. ಪಶುಪಾಲಕ ಸಮಾಜಗಳ ಗತಕಾಲದ ನೆನಪು ಹಂಪಿ ಪರಿಸರದಲ್ಲಿ ದಟ್ಟವಾಗಿರುವುದರಿಂದ ಪಕ್ಷಿಗಳ ಬಗೆಗಿನ ವಿವರಗಳು ಆ ಕಾಲದ ನಂಬಿಕೆಗಳನ್ನೆ ಬಿಂಬಿಸುತ್ತವೆ. ಬೇಟೆ ಸಂಸ್ಕೃತಿಯ ಚಹರೆಗಳು ಉಳಿದಿರುವ ಪರಿಣಾಮವೂ ಪಕ್ಷಿಗಳ ಮೇಲಾಗಿದೆ. ಪಕ್ಷಿಪರಂಪರೆಯ ಭಾಗವಾದ ಹಕ್ಕಿಪಿಕ್ಕಿಗಳು ಈ ಭಾಗದಲ್ಲಿ ನೆಲೆಸಿದ್ದು ಆಗಾಗ ಪಕ್ಷಿಗಳ ಬೇಟೆಗೆ ತೊಡಗುವುದೂ ಇದೆ. ವಕ್ಕಲು ಸಂಸ್ಕೃತಿಯಿಂದಲೂ ಪಕ್ಷಿಗಳ ಮಾನವ ಸಂಬಂಧದಲ್ಲಿ ವ್ಯತ್ಯಾಸ ಉಂಟಾಗಿದೆ. ಪಶುಪಾಲಕ ವರ್ಗಗಳು ಹಿಂದೆ ಹಕ್ಕಿಗಳಿಗೆ ತೊಡಕಾಗಿರಲಿಲ್ಲ. ವಕ್ಕಲುತನದಿಂದ ಪಕ್ಷಿಗಳಿಗೆ ಉಪಯೋಗವಾಯಿತಾದರೂ ಮಾನವರು ನಿಸರ್ಗದ ಮೇಲೆ ಅಧಿಪತ್ಯವನ್ನು ವಿಸ್ತರಿಸುತ್ತ ಭೂಮಿಯನ್ನು ಖಾಸಗಿಯಾಗಿಸಿದಂತೆಲ್ಲ ಜೀವಜಾಲದ ಮೇಲೆ ಒತ್ತಡ ಹೆಚ್ಚಿತು. ಅವುಗಳ ಬದುಕಿನ ಅವಕಾಶ ಕಿರಿದಾಯಿತು. ಹಾಗೆಯೆ ಅವುಗಳ ನೈಸರ್ಗಿಕ ಆಹಾರದಲ್ಲೂ ವ್ಯತ್ಯಯವಾಗಿ ಕೃಷಿಯ ಕ್ರಮಗಳು ಜೈವಿಕವಾದ ಎಷ್ಟೋ ಸಂಬಂಧಗಳನ್ನು ಪ್ರಾಣಿಪಕ್ಷಿಗಳಿಗೆ ತುಂಡರಿಸಿತು. ಪಕ್ಷಿಗಳು ಕೂಡ ಮಾನವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸವಾಲುಗಳನ್ನು ಎದುರಿಸುತ್ತಲೆ ಬಂದಿವೆ. ಕೃಷಿ ಸಂಸ್ಕೃತಿಯ ಏಳುಬೀಳುಗಳನ್ನು ಪ್ರಾಣಿಪಕ್ಷಿಗಳ ಜೊತೆ ಆಗಿರುವ ಮುಖಾಮುಖಿ ಸಹಜವಾದುದೇ. ಇದರ ಕಷ್ಟ ಸುಖದಲ್ಲಿ ಇಬ್ಬರೂ ಸಮಭಾಗಿಗಳೇ. ಆಗಬೇಕಾದದ್ದು ನಿಸರ್ಗದ ನಿಯಮ.

ಹಂಪಿ ಪರಿಸರದಲ್ಲಿರುವ ಪಕ್ಷಿಗಳು ಕರ್ನಾಟಕದ ಬೇರೆ ಬಯಲು ಪ್ರದೇಶಗಳಲ್ಲೂ ಕಂಡುಬರುವಂತವೇ ಆಗಿವೆ. ಸಾಮಾನ್ಯವಾಗಿ ವಕ್ಕಲುತನದ ಬೆಳವಣಿಗೆಯ ಜೊತೆ ಗ್ರಾಮ ಸಂಸ್ಕೃತಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಸೇರಿಕೊಂಡ ಪಕ್ಷಿಗಳು ಹೆಚ್ಚು ಕಡಿಮೆ ಒಂದೇ ಬಗೆಯ ನಂಬಿಕೆ ರಿತಿ ನೀತಿಗಳಿಗೆ ಒಳಗಾಗಿವೆ. ಅಂತಹ ಹಕ್ಕಿಗಳು ಕೂಡ ಪಶುಪಾಲನೆ, ವಕ್ಕಲು ಸಂಸ್ಕೃತಿಗಳ ಅನುಭವಗಳಿಂದ ಮಾನವ ಒಡನಾಟದ ಪರಿಸರದಲ್ಲಿ ಒಂದಾಗಿವೆ. ಅಂತಹ ಮುಖ್ಯ ಪಕ್ಷಿಗಳನ್ನು ಹೀಗೆ ಗುರುತಿಸಬಹುದು.

ಗುಬ್ಬಿ, ಕಾಗೆ, ಗೂಬೆ, ಪಾರಿವಾಳ, ನವಿಲು, ಗೌಜಲು, ಬೆಳವ, ಕೋಗಿಲೆ, ಕೆಂಭೂತ, ಗಿಳಿ, ಚಿಟ್ಟುಗಿಳಿ, ಕೋಳಿ, ಕಲ್ಲುಕೋಳಿ, ನೀರುಗೋಳಿ, ಉಂಡುಗೋಳಿ, ಬಾತುಗೋಳಿ, ಗುಳುಮುಳಕ, ಹದ್ದು, ರಣಹದ್ದು, ಗರುಡ, ಬಿಜ್ಜು, ಗೀಜುಗ, ಮುನಿಯ, ಚಿಟ್ಟಗುಬ್ಬಿ, ದೊಡ್ಡಮಿಂಚುಳ್ಳಿ, ಚಿಕ್ಕಮಿಂಚುಳ್ಳಿ, ಪಟ್ಟೆಮಿಂಚುಳ್ಳಿ, ಗೊರವಂಕ, ಜುಟ್ಟಕ್ಕಿ, ಬೆಳ್ಳಕ್ಕಿ, ತಿತ್ತೀಹಕ್ಕಿ, ಗೊಯ್ ಗೊಂಯಕ, ಕಾಜಾಣ, ಹಾಲಕ್ಕಿ, ಬಾವಲಿ, ತೋಲೆಹಕ್ಕಿ, ಹುಳಹಿಡುಕ, ಬಾನಕ್ಕಿ, ರಳ್ಳೆಹಕ್ಕಿ, ಕರೆಹಕ್ಕಿ, ಕುರುಡಹಕ್ಕಿ, ಪುರ್ಲಕ್ಕಿ, ಹರಶಿಣಮುಂಡ, ಟೊಪ್ಪಿಹಕ್ಕಿ ಹೀಗೆ ಹಲವಾರು ಬಗೆಯ ಪಕ್ಷಿಗಳನ್ನು ಹಂಪಿಯ ಪರಿಸರದಲ್ಲಿ ಕಾಣಬಹುದು. ಸಂಕ್ಷಿಪ್ತವಾಗಿ ಈ ಹಕ್ಕಿಗಳ ಬಗೆಗಿನ ಜನಪದರ ತಿಳುವಳಿಕೆಯನ್ನು ಗಮನಿಸುವ ಮೂಲಕ ಅವರ ನೈಸರ್ಗಿಕ ಪ್ರಜ್ಞೆಯನ್ನು ಗುರುತಿಸಬಹುದು. ಜನಪದ ಪರಂಪರೆಗಳು ತಮ್ಮ ಪರಿಸರದ ಎಲ್ಲ ಜೀವ ಜಾಲದ ಜೊತೆ ಒಂದಲ್ಲ ಒಂದು ವಿಧದಲ್ಲಿ ಸಂಬಂಧವನ್ನು ವ್ಯಕ್ತಪಡಿಸಿವೆ. ಮನುಷ್ಯ ಕೇಂದ್ರಿತ ನಿಸರ್ಗವನ್ನು ಜನಪದ ಸಂಸ್ಕೃತಿಗಳು ಒಪ್ಪುವುದಿಲ್ಲ. ನಿಸರ್ಗದಲ್ಲಿ ತಾನು ಎಲ್ಲದರ ಜೊತೆಯು ಸಂಪರ್ಕ ಸಾಧಿಸಿಕೊಳ್ಳಬೇಕು ಎಂಬ ವಿಶಾಲ ಮನೋಭಾವ ಅವರ ಜೀವಜಾಲ ಜಾನಪದ ಆಶಯ. ಹೀಗಾಗಿಯೆ ಮಾನವ ಅಮಾನವ ಎಂಬ ಭೇದಕಲ್ಪನೆ ಅವರ ನೈಸರ್ಗಿಕ ಪ್ರಜ್ಞೆಯಲ್ಲಿ ಇಲ್ಲದಿರುವುದು ನಿಸರ್ಗದಲ್ಲಿ ಎಲ್ಲವೂ ಒಂದೇ ಇವೆಲ್ಲವೂ ದೈವ ಸೃಷ್ಟಿ. ನಾವು ಕೂಡ ಮನುಷ್ಯರಾಗುವ ಪೂರ್ವದಲ್ಲಿ ಯಾವುದಾವುದೊ ಪ್ರಾಣಿ ಪಕ್ಷಿ ಹುಳು ಉಪ್ಪಟ್ಟೆಯ ಜನ್ಮ ಎತ್ತಿ ಬಂದಿರುತ್ತೇವೆ ಎಂಬ ನಂಬಿಕೆ ಇದೆ. ತಾವು ಕೀಳಾಗಿ ಬದುಕಿ ಪಾಪ ಕಾರ್ಯದಲ್ಲೆ ಮುಳುಗಿದ್ದರೆ ಮುಂದಿನ ಜನ್ಮದಲ್ಲಿ ನೀಚ ಪ್ರಾಣಿಯಾಗಿ ಹುಟ್ಟಿಬರಬೇಕಾಗುತ್ತದೆ ಎಂಬ ಭಯವೂ ಇದೆ. ಪಕ್ಷಿಗಳನ್ನು ಜನಪದ ಕಥೆಗಳಲ್ಲಂತು ಮಾನವೀಕರಣಗೊಳಿಸಿ ಮನುಷ್ಯರ ಬಂಧುವಾಗಿಯೇ ಮಾರ್ಪಡಿಸಿ ತೋರುವುದಿದೆ. ರಾಮಾಯಣ ಮಹಾಭಾರತಗಳಲ್ಲು ಪಕ್ಷಿಗಳು ದೈವಿಕ ಆವರಣದಲ್ಲಿ ಮಾನವರ ಪಾಡನ್ನು ಹಾಡುತ್ತಲೆ ಪಕ್ಷಿಗಳು ಮನುಷ್ಯನ ವಿಕಾಸದ ಉದ್ದಕ್ಕೂ ಕಾಡಿರುವ ಪ್ರಶ್ನೆಗಳೇ ಆಗಿವೆ. ಹಾರಾಡುವ ಅವುಗಳ ಸಾಮರ್ಥ್ಯವೇ ಸಂಸ್ಕೃತಿಗಳಲ್ಲಿ ಪಕ್ಷಿಗಳಿಗೆ ಉನ್ನತ ಸ್ಥಾನ ನೀಡಲು ಅವಕಾಶ ಮಾಡಿರುವುದು. ಪ್ರಮುಖವಾಗಿರುವ ಹಕ್ಕಿಗಳ ಜನಪದೀಯ ಪರಿಚಯವನ್ನು ಹೀಗೆ ಮಾಡಬಹುದು.

ಗುಬ್ಬಿ: ಗುಬ್ಬಿ ಮನಿ ಎಂಬ ರೂಪಕವೆ ಜನಪದರಲ್ಲಿದೆ. ಕುಟುಂಬದ ಭಾವನಾತ್ಮಕ ಸಂಬಂಧವನ್ನು ಬಿಂಬಿಸಲು ಜನಪದರು ಗುಬ್ಬಿಯ ಗೂಡನ್ನು ಗೌರವದಿಂದ ಕಾಣುವರು. ಯಾವುದೇ ಹಕ್ಕಿಯ ಗೂಡನ್ನು ನಾಶಪಡಿಸುವವರಿಗೆ ಮುಂದಿನ ಜನ್ಮದಲ್ಲಿ ಎಂದೆಂದೂ ನೆತ್ತಿಗೆ ನೆರಳು ಇರುವುದಿಲ್ಲ ಎಂದು ಹೇಳುವರು. ಹಂಪಿಯ ಜನಪದ ಕಥೆಗಳಲ್ಲಿಯೂ ಕಾಗೆ ಗುಬ್ಬಿಯ ಕಥೆ ಪ್ರಚಲಿತವಾದುದೇ. ಗುಬ್ಬಿಯು ತುಂಬ ಪರಿಶ್ರಮದ ಹಕ್ಕಿ. ಬಡವರನ್ನು ಪ್ರತಿನಿಸುವುದಕ್ಕೆ ಗುಬ್ಬಿ ಮೇಲೆ ಏಕೆ ಬ್ರಹ್ಮಾಸ್ತ್ರ ಎಂಬ ಮಾತೇ ಇದೆ. ’ಆಯ್ಕೊಂಡ್ ತಿನ್ನೊ ಗುಬ್ಬಿಯಂತೋರಿಗೆ ಯಾಕಪ್ಪಾ ಅಹಂಕಾರ’ ಅನ್ನೊ ಗಾದೆ ಮಾತು ಹಂಪಿ ಪರಿಸರದಲ್ಲಿ ಚಾಲ್ತಿಯಲ್ಲಿದೆ. ಗುಬ್ಬಿಗಳಿಗಾಗಿ ಕಾಳು ಹಾಕುವುದಿದೆ. ಮನೆ ಮುಂದೆ ಬತ್ತದ ಇಲ್ಲವೇ ಕಾಳಿನ ಗುಚ್ಚವನ್ನು ಕಟ್ಟಿ ಗುಬ್ಬಿಗಳಿಗಾಗಿ ಮೀಸಲಿಡುವರು. ಇಷ್ಟಾದರೂ ಗುಬ್ಬಿಗಳನ್ನು ಬೇಟೆ ಆಡುವುದೂ ಇದೆ. ವಿಶೇಷವಾಗಿ ಮಕ್ಕಳು ಗುಬ್ಬಿ ಹಿಡಿಯುವ ಆಟ ಆಡುವರು. ಮಂಕರಿ ಅಥವಾ ಅಗಲ ಬುಟ್ಟಿಗೆ ಒಂದು ಕಡ್ಡಿ ಸಿಕ್ಕಿಸಿ ಆ ಕಡ್ಡಿಗೆ ದಾರ ಕಟ್ಟಿ ಮರೆಯಲ್ಲಿ ಕೂತು ಗುಬ್ಬಿ ಹಿಡಿವರು. ಮಂಕರಿ ಒಳಗೆ ಚೆಲ್ಲಿರುವ ಧ್ಯಾನ್ಯ ತಿನ್ನಲು ಬರುವ ಹಕ್ಕಿಗಳು ಮೈ ಮರೆತಿರುವಾಗ ಕಡ್ಡಿ ಎಳೆದು ಮಂಕರಿ ಒಳಗೆ ಗುಬ್ಬಿಗಳನ್ನು ಸಿಲುಕುವಂತೆ ಮಾಡಿ ನಂತರ ಬುಟ್ಟಿಯನ್ನು ಮಂಕರಿ ಸುತ್ತ ಬಿಟ್ಟು ಹಿಡಿವರು. ಇದೊಂದು ಹಿಡಿಯುವ ಖುಷಿಯ ಆಟ ಅಷ್ಟೇ. ಗುಬ್ಬಿಗಳು ಮಾನವರ ಜೊತೆಯೆ ಬದುಕಿ ಅದೇ ಸ್ವಭಾವಕ್ಕೆ ಒಗ್ಗಿಹೋಗಿವೆ. ಕಾಡಿನ ಗುಬ್ಬಿಗಳಿಗಿಂತ ಊರ ಗುಬ್ಬಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಮಾನವರ ಜೊತೆಗಿನ ಸಖ್ಯದಿಂದ ಊರ ಗುಬ್ಬಿಗಳ ಸಂಖ್ಯೆ ಒಂದು ಕಾಲಕ್ಕೆ ಹೆಚ್ಚಿತ್ತು. ಮಾತು ಇನ್ನು ಸ್ಪಷ್ಟವಾಗಿ ಬಾರದಿರುವ ಮಕ್ಕಳಿಗೆ ಗುಬ್ಬಿ ಮಾಂಸವನ್ನು ತಿನ್ನಿಸುವುದುಂಟು. ಗುಬ್ಬಿಗಳು ಕೆಲವೊಮ್ಮೆ ವಿಷ ಜಂತುಗಳ ಬಗ್ಗೆ ಎಚ್ಚರಿಕೆಯನ್ನು ಕೊಡುತ್ತವೆಯಾದ್ದರಿಂದ ಅವು ಒಟ್ಟಾಗಿ ಕೂಗಾಡುವುದನ್ನು ಜನಪದರು ಗಂಭೀರವಾಗಿ ಪರಿಗಣಿಸುವರು. ಗುಬ್ಬಿಗಳು ಬಂದು ಮನೆಯ ಸೂರಿನಲ್ಲೊ ಕಿಟಕಿ ಇತ್ಯಾದಿ ಅವುಗಳಿಗೆ ಸೂಕ್ತವೆನಿಸಿದ ಸ್ಥಳದಲ್ಲೊ ಗೂಡು ಕಟ್ಟಿದರೆ ಬೇಗ ಆ ಮನೆಯಲ್ಲಿ ಸಂಸಾರವೊಂದು ಅಸ್ತಿತ್ವಕ್ಕೆ ಬರುವುದು ಎಂದು ಭಾವಿಸಲಾಗುವುದು. ಹಾಗೆಯೆ ಗುಬ್ಬಿ ಗೂಡು ಕಟ್ಟುವುದರಿಂದ ಆ ಮನೆಯಲ್ಲಿ ಸಂತಾನ ಫಲ ಸಾಧ್ಯ ಎಂತಲೂ ನಂಬುತ್ತಾರೆ. ಆದರೆ ಹಳೆ ಕಾಲದ ಗುಬ್ಬಿ. ಮುನಿಗಳ ಕಲರವವಾಗಲಿ ಈಗ ಹಂಪಿ ಪರಿಸರದಲ್ಲಿ ಮಾಯವಾಗುತ್ತಿದೆ. ತಂತ್ರಜ್ಞಾನದ ಪರಿಣಾಮದಿಂದ ಪರಿಸರದ ಕಲುಷಿತ ಸ್ಥಿತಿಯಿಂದ ಗುಬ್ಬಿಗಳು ಅಳಿವಿನಂಚಿಗೆ ಸಾಗುತ್ತಿವೆ.

ಕಾಗೆ : ಹಿಮಾಲಯದ ತುದಿಯಲ್ಲೂ ಕಾಗೆಗಳನ್ನು ಪರ್ವತಾರೋಹಿಗಳು ಕಂಡಿದ್ದಾರೆ. ಜಗತ್ತಿನ ಉದ್ದಕ್ಕೂ ಇವುಗಳು ಪಸರಿಸಿವೆ. ಹಿಮಖಂಡದಲ್ಲಿ ಕಾಗೆಗಳು ಜೀವನ ರೂಪಿಸಿಕೊಂಡಿವೆ. ಕಾಗೆ ಕೂಡ ಮಾನವರ ಅವಲಂಬಿ ಪಕ್ಷಿ. ಮನುಷ್ಯರ ಉಗಮ ವಿಕಾಸದ ಉದ್ದಕ್ಕೂ ಹಿಂಬಾಲಿಸಿಕೊಂಡು ಬರುತ್ತಿರುವ ಕಾಗೆಯ ಭಾರತೀಯರ ಮನದಲ್ಲಂತು ಉಗ್ರ ದೈವದ ಸ್ವರೂಪವನ್ನೆ ಪಡೆದಿದೆ. ಶನಿದೇವರ ವಾಹನ ಕಾಗೆ. ಪಾಪಿಗಳು ಕಾಗೆಯಾಗಿ ಹುಟ್ಟಿ ಬರುವರೆಂಬ ಕಲ್ಪನೆಯೂ ಇದೆ. ಪವಿತ್ರ ಅಪವಿತ್ರ ಎರಡೂ ಸಂಗತಿಗಳಿಗೆ ಕಾಗೆಗಳು ಅರ್ಥೈಸಲ್ಪಟ್ಟಿವೆ. ಕಾಗೆ ಮನೆ ಒಳಗೆ ಪ್ರವೇಶಿಸಿದರೆ ಹಿಂದಿನ ಕಾಲದಲ್ಲಿ ಆರು ತಿಂಗಳು ಆ ಮನೆ ಬಿಟ್ಟು. ಬೇರೆಡೆಗೆ ಹೋಗಬೇಕಾಗಿತ್ತು. ಕಾಗೆ ತಲೆ ಮೇಲೆ ಹೇಸಿಗೆ ಮಾಡಿದರೆ ಸ್ನಾನ ಮಾಡಿ ಅಪಶಕುನ ಕಳೆದುಕೊಳ್ಳಬೇಕು. ಕಾಗೆ ಮನೆ ಮುಂದೆ ಬಂದು ಕೂಗುತ್ತಿದ್ದರೆ ನೆಂಟರು ಬರುವರು ಎಂತಲೂ ಹಾಗೆಯೇ ಯಾರೋ ಆಗಂತುಕರು ಬರುವರು ಎಂತಲೂ ಎರಡೂ ಬಗೆಯ ನಂಬಿಕೆಗಳಿವೆ. ಕಾಗೆ ಹೆಚ್ಚಾಗಿ ಅಪಶಕುನದ ಹಕ್ಕಿ. ಮಾಂತ್ರಿಕ ಶಕ್ತಿ ಆ ಹಕ್ಕಿಗೆ ಇದ್ದು ಅದು ದುಷ್ಟ ಶಕ್ತಿಯ ಜೊತೆ ಸಂಪರ್ಕ ಇಟ್ಟುಕೊಂಡಿದೆ ಎಂದು ಹೇಳಲಾಗುತ್ತದೆ. ಕಾಕರಾಜ ಎಂಬ ನುಡಿಗಟ್ಟು ಕಾಗೆಯ ಜಾಣ್ಮೆ ಕುಯುಕ್ತಿ ತಂತ್ರಕ್ಕೆ ರೂಪಕವಾಗಿದೆ. ಕಾಗೆ ತಲೆ ಮೇಲೆ ಎಡಭಾಗದಿಂದ ಹಾರಿ ಹೋದರೆ ಅಪಾಯ ಸೂಚನೆ. ಹಾಗೆಯೇ ಬಲಭಾಗಕ್ಕೆ ಹಾರಿಬಂದರೆ ಲಾಭ. ಕಾಗೆಯು ಕುರೂಪಿಯಾದ್ದರಿಂದ ನವಿಲಿನ ಮುಂದೆ ಅದರ ಸೌಂದರ್ಯವನ್ನು ಗೇಲಿ ಮಾಡುವುದಿದೆ. ’ಕಾಗೆ ಕಾಲು’ ಎಂದು ಕಪ್ಪು ಕಾಲಿನವರಿಗೆ ಸೂಚಿಸುವುದೂ ಉಂಟು. ಕಾಗೆ ವಿಪರೀತ ಅರಚುತ್ತಿದ್ದರೆ ಊರಿಗೆ ಏನೊ ಕೇಡು ಬಂದಿದೆ ಎಂತಲೊ ಯಾರೊ ಸಾಯುವರು ಎಂದೊ ಭಾವಿಸಲಾಗುತ್ತದೆ. ಕಾಗೆಗೆ ಜನಪದರು ಇಷ್ಟೆಲ್ಲ ನಕರಾತ್ಮಕ ಭಾವನೆಗಳನ್ನು ಹೇಳುವರಾದರೂ ಅದು ರೈತರಿಗೆ ಕೆಲವಾರು ವಿಷಯಗಳಲ್ಲಿ ಸ್ನೇಹಿತ ಕೂಡ. ಕೋಗಿಲೆಗಳ ಮರಿಗಳನ್ನು ತಾವೇ ಸಾಕುವುದರಿಂದ ಕಾಗೆಯ ಉಪಕಾರವನ್ನು ಸ್ಮರಿಸುವರಾದರೂ ಅದು ತಮ್ಮ ಕೋಳಿ ಮರಿಗಳನ್ನು ಕದಿಯುವುದರಿಂದ ಅದೇ ಪ್ರಮಾಣದ ತಿರಸ್ಕಾರವೂ ಕಾಗೆ ಬಗ್ಗೆ ಇದೆ. ಒಟ್ಟಿನಲ್ಲಿ ಹಂಪಿ ಜನಪದ ಕೂಡ ಕಾಗೆಯನ್ನು ಕೆಟ್ಟಪಕ್ಷಿ ಎಂದೇ ಪರಿಗಣಿಸಿದೆ. ಜಗತ್ತಿನಾದ್ಯಂತ ಕಾಗೆಗೆ ಒದಗಿ ಬಂದಿರುವ ಕೇಡು ಹಕ್ಕಿಯ ಪಟ್ಟವು ಅದರ ರೂಪ ಮತ್ತು ದನಿಯಿಂದಾಗಿ ಮತ್ತು ಅದು ಮಾನವರ ಮಧ್ಯೆ ಅನಪೇಕ್ಷಿತ ಅಥಿತಿಯಾಗಿರುವುದರಿಂದ.

ಗೂಬೆ: ಗೂಬೆ ಕೂಡ ಕೇಡು ಪಕ್ಷಿಯ ಪದವಿಯನ್ನೆ ಪಡೆದಿದೆ. ಮನೆ ಮೇಲೆ ರಾತ್ರಿ ವೇಳೆ ಗೂಬೆ ಕೂತರೆ ಆ ಮನೆಯಲ್ಲಿ ಸಧ್ಯವೇ ಯಾರಾದರೂ ಸಾಯುವರೆಂದು ತಿಳಿಯಲಾಗುವುದು. ವಿಶೇಷವಾಗಿ ಗೂಬೆಯು ಸಾವನ್ನು ಕರೆತರುವ ಹಕ್ಕಿ ಎಂದು ಭಾವಿಸುವರು. ಅಮವಾಸ್ಯೆ ವೇಳೆ ಊರ ಬಳಿ ಬಂದು ಗೂಬೆಯು ಕೂಗಿದ್ದೇ ಆದ ಪಕ್ಷದಲ್ಲಿ ಕಡ್ಡಾಯವಾಗಿ ಯಾರಾದರೂ ಸಾಯುವರೆಂದು ನಂಬಲಾಗುತ್ತದೆ. ಗೂಬೆಯು ಮಾಂತ್ರಿಕ ಆಚರಣೆಗೂ ಬಳಕೆಯಾಗುವ ಹಕ್ಕಿ. ಮಂತ್ರದಿಂದ ಗೂಬೆಯನ್ನು ದೂರ ಓಡಿಸಬಹುದು ಇಂದು ತಿಳಿಯಲಾಗುತ್ತದೆ. ಗೂಬೆ ಮಾಂಸವನ್ನು ತಿನ್ನುವುದೂ ಉಂಟು. ಲೈಂಗಿಕ ಶಕ್ತಿ ಇದರಿಂದ ಹೆಚ್ಚುವುದು ಎಂಬ ಪ್ರತೀತಿ ಇದೆ. ಹಂಪಿ ಪರಿಸರದಲ್ಲಿ ಅತಿ ಪ್ರಾಚೀನವಾದ ಕೊಂಬಿನ ಗೂಬೆಗಳು ಹೇರಳವಾಗಿವೆ. ರಾತ್ರಿ ವೇಳೆ ಹಂಪಿಯ ಕಲ್ಲುಬಂಡೆಗಳ ಮರೆಯಲ್ಲಿ ಮಲಗಿ ಆಲಿಸಿದರೆ ಗೂಬೆಗಳ ಸರಣಿ ಕೂಗು ಗಾಢವಾಗಿ ಯಾರ ಮನಸ್ಸನ್ನಾದರೂ ಗಲಿಬಿಲಿಗೆ ಒಳಪಡಿಸಬಲ್ಲದು. ಹಂಪಿ ಪರಿಸರದಲ್ಲಿ ಗೂಬೆಗಳಿಗೆ ಆಹಾರದ ಬರವೇ ಇಲ್ಲ. ಹಾವು ಹಲ್ಲಿ ಇಲಿ ಮುಂತಾದ ಜೀವಿಗಳು ವಿಪುಲವಾಗಿ ಸಿಗುತ್ತವೆ. ಗೂಬೆಗಳ ಬಗ್ಗೆ ಜನಪದರು ಭೀತಿ ಹೊಂದಿರುವುದರಿಂದ ಅವನ್ನು ಬೇಟೆಗೆ ಒಳಪಡಿಸುವುದಿಲ್ಲ. ದೊಂಬರು ಗೂಬೆ ಬೇಟೆ ಮಾಡುವರು ಎಂದು ಹೇಳಲಾಗುತ್ತದೆ. ಗೂಬೆ ಕಲ್ಲು’ ಎಂದು ಹಂಪಿಯ ಬೆಟ್ಟಗುಡ್ಡಗಳ ಕೆಲವೊಂದು ಸ್ಥಳಗಳನ್ನು ಗುರುತಿಸುವುದಿದೆ. ಹಂಪಿಯ ವಿಜಯನಗರ ಸಾಮ್ರಾಜ್ಯ ಪತನವಾದ ಮೇಲೆ ಹಂಪಿಯ ಕೋಟೆ ಕೊತ್ತಲ ಮಂಟಪ ಅರಮನೆ ಗುಡಿ ಗೋಪುರಗಳೆಲ್ಲ ಗೂಬೆಗಳಿಗೆ ಪ್ರಶಸ್ತ ವಾಸದ ನೆಲೆಗಳಾಗಿದ್ದವು. ಈಗಲೂ ಹಂಪಿಯ ಎತ್ತರದ ಬಂಡೆ ಸಾಲುಗಳ ಪೊಟರೆಗಳಲ್ಲಿ ಗೂಬೆಗಳು ಬೀಡುಬಿಟ್ಟಿವೆ. ಕೆಲವರ ಪ್ರಕಾರ ಈ ಗೂಬೆಗಳು ವಿಜಯನಗರ ಕಾಲದಲ್ಲಿ ಬಚ್ಚಿಟ್ಟಿರುವ ಸಂಪತ್ತನ್ನು ಕಾಯುವ ಪಕ್ಷಿಗಳು ಎಂತಲೂ ಹೇಳುವುದಿದೆ. ಹಾಗಾಗಿಯೇ ನಿಧಿಗಳ್ಳರು ಅವಮಾಸ್ಯೆ ಹುಣ್ಣಿಮೆಗಳಂದು ಗೂಬೆಗಳ ಚಲನವಲನವನ್ನು ಗಮನಿಸಿಯೆ ಕಳ್ಳತನಕ್ಕೆ ಇಳಿಯುವರಂತೆ.

ಪಾರಿವಾಳ : ವಿಜಯನಗರ ಕಾಲದಲ್ಲಿ ಪಾರಿವಾಳವು ಜೂಜಾಟದ ಹಕ್ಕಿಯಾಗಿತ್ತು. ಹಾಗೆಯೆ ಇದೇ ಹಕ್ಕಿಯನ್ನು ಟಪಾಲು ರಮಾನೆಗಾಗಿಯು ಯುದ್ಧದಲ್ಲಿ ಹಾಗು ರಾಜತಾಂತ್ರಿಕ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಮೋಜಿನ ಸಲುವಾಗಿಯು ಅಲಂಕಾರಿಕ ಹಕ್ಕಿಯಾಗಿಯು ರಾಜರ ಕಾಲದಲ್ಲಿ ಪಾರಿವಾಳವನ್ನು ಸಾಕಲಾಗುತ್ತಿತ್ತು. ಈಗಲೂ ಹಂಪಿ ಪರಿಸರದಲ್ಲಿ ಸಾಕು ಪಾರಿವಾಳಗಳ ಸಂಪ್ರದಾಯ ಉಳಿದಿದ್ದು ಪಾರಿವಾಳಗಳ ಜೂಜಾಟ ಮುಂದುವರೆದಿದೆ. ಲಕ್ವ ಹೊಡೆದವರಿಗೆ  ಪಾರಿವಾಳ ತಿನಿಸಿದರೆ ರೋಗ ವಾಸಿಯಾಗುವುದೆಂಬ ನಂಬಿಕೆ ಈ ಪರಿಸರದಲ್ಲೂ ಸಮಾನವಾಗಿದೆ. ಪಾರಿವಾಳವನ್ನು ಗೂಡಿನಲ್ಲಿ ಸದಾ ಮುಚ್ಚಿಟ್ಟು ರಕ್ಷಿಸಿ ದಿನದಲ್ಲಿ ಕೆಲವು ಸಮಯ ಮಾತ್ರ ಹೊರಬಿಟ್ಟು ರಕ್ಷಿಸಲಾಗುತ್ತದೆ. ಸಾಕಿರುವ ಪಾರಿವಾಳಗಳನ್ನು ದೂರ ಕೊಂಡೊಯ್ದು ಬಿಟ್ಟು ಯಾರ ಪಾರಿವಾಳ ಮೊದಲು ನಿರ್ಧಿಷ್ಟ  ಗುರಿಯನ್ನು ಮುಟ್ಟಿತು ಎಂಬುದರಿಂದ ಸೋಲು ಗೆಲುವನ್ನು ನಿರ್ಧರಿಸಲಾಗುವುದು. ಜೊತೆಗೆ  ಆ ಪಾರಿವಾಳಗಳ ಜೊತೆ ಜೂಜು ಕಟ್ಟುವವರು ಕೂಡ ಪಾರಿವಾಳಗಳು ಬಂದು ಸೇರಬೇಕಾದ ಡಬ್ಬಿಯ ಬಳಿ ಓಡಿ ಬಂದು ಮೊದಲು ತಲುಪಬೇಕು. ಹಾಗೆ ಮೊದಲು ಬಂದವರು ಗೆದ್ದಂತೆ ಹಾಗು ಜೂಜಿಗಾಗಿ ಕಟ್ಟಿರುವ ಹಣವನ್ನು ಪಡೆಯಲು ಸಾಧ್ಯವಾಗುವುದು. ಸಾಮಾನ್ಯ ನೂರು ರೂಗಳಷ್ಟು ಬಾಜಿಯನ್ನು ಕಟ್ಟುವರು. ಗಂಡು ಪಾರಿವಾಳಗಳನ್ನು ಜೂಜಿಗೆ ಬಿಟ್ಟಾಗ ಅವು ಹೆಣ್ಣು ಪಾರಿವಾಳಗಳ ಪೆಟ್ಟಿಗೆಗೆ ಬಂದು ಕೂಡುವುವು. ಪಾರಿವಾಳಗಳು ಬೆದೆಗೆ ಬಂದಾಗಲೇ ಈ ಜೂಜಾಟ ವಿಶೇಷವಾಗುವುದು. ಹೆಣ್ಣು ಪಾರಿವಾಳಗಳ ಪ್ರೀತಿಗಾಗಿ ಗಂಡು ಪಾರಿವಾಳಗಳು ವೇಗವಾಗಿ ಬಂದು ಆ ಹೆಣ್ಣು ಹಕ್ಕಿಗಳನ್ನು ಕೂಡಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.

ಜೂಜಿಗೆಂದೇ ಕೆಲವು ನಿರ್ಧಿಷ್ಟ ಪಾರಿವಾಳಗಳಿವೆ. ಅಂತಹ ಪಾರಿವಾಳಗಳನ್ನು ವಿಶೇಷವಾಗಿ ಸಾಕುವುದುಂಟು. ಜೂಜಿನ ಪಾರಿವಾಳಗಳ ಜೋಡಿಗೆ ಸಾವಿರ ರೂಪಾಯಿಗಳ ತನಕ ಬೆಲೆ ಇದೆ. ಹಿಂದೆ ಪಾರಿವಾಳದ  ಜೂಜಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಇದೊಂದು ಕ್ರೀಡೆಯೂ ಆಗಿತ್ತು. ಬಾಜಿ ಕಟ್ಟಿ ಆಡುವವರ ಮೇಲೆ ಬಾಜಿ  ಕಟ್ಟಿ ದೊಡ್ಡ ಸಂಖ್ಯೆಯಲ್ಲಿ ಪಾರಿವಾಳದ ಜೂಜಾಟದಲ್ಲಿ ಜನ ಸೇರುತ್ತಿದ್ದರು. ಜೂಜು ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಭಾವನೆಗಳು ಬೆರೆತು ಈ ಆಟವು ಮನರಂಜನೆಯನ್ನೂ ಜನರಿಗೆ ನೀಡುತ್ತಿತ್ತು. ಮೊಘಲರ ಕಾಲದಲ್ಲಿ ಪಾರಿವಾಳಗಳು ಪ್ರೇಮದ ಸಂಕೇತವೂ ಆಗಿದ್ದವು. ಮೊಘಲರೇ  ವಿಶೇಷವಾಗಿ ಪಾರಿವಾಳಗಳನ್ನು ಸಾಕುವ ಪರಿಯನ್ನು ಬೆಳೆಸಿದ್ದರು. ಮೊಘಲರ ಕಡೆಯಿಂದ ವಿಜಯನಗರ ಸಾಮ್ರಾಜ್ಯಕ್ಕೆ ಪಾರಿವಾಳಗಳನ್ನು ಸಾಕುವ, ಜೂಜಿಗೆ ಬಿಡುವ ಪ್ರೇರಣೆ ಉಂಟಾಗಿರಬಹುದು. ಬಹಮನಿ ಸುಲ್ತಾನರ ಕಡೆಯಿಂದಲೂ ಇಂತಹ ಪಾರಿವಾಳದ ಜೂಜಾಟದ ಪ್ರಭಾವ ಆಗಿರುವಂತೆ ಕಾಣುತ್ತದೆ. ಹಂಪಿಯ ಬೇಡ ಸಮುದಾಯ ಪಾರಿವಾಳಗಳ ಬಗ್ಗೆ ಗಾಢವಾದ ಪ್ರೀತಿಯನ್ನು ಉಳಿಸಿಕೊಂಡಿದೆ. ಬೆಕ್ಕು ಪಾರಿವಾಳಗಳಿಗೆ ದೊಡ್ಡ ಶತ್ರು. ಬೆಕ್ಕಿನಿಂದ ಕಾಯಲು ಕೂಡ ಪಾರಿವಾಳಗಳನ್ನು ಡಬ್ಬಿಯಲ್ಲಿ ಕೂಡಿಟ್ಟು ಮುಚ್ಚಲಾಗುವುದು. ಕಾಡು ಪಾರಿವಾಳಗಳೂ ಸಹ ಹಂಪಿಯಲ್ಲಿ ಸಾಕಷ್ಟಿವೆ. ಬೆಟ್ಟಗುಡ್ಡಗಳಲ್ಲಿರುವ ಗುಡ್ಡಗಾಡು ಪಾರಿವಾಳಗಳು ಅಪಾಯದಲ್ಲಿವೆ. ಬೇಟೆಗಾರರು ಈ ಪಾರಿವಾಳಗಳನ್ನು ಕೂಡಾ ಬೇಟೆ ಆಡುವರು.

ನವಿಲು :  ಹಂಪಿ ಬೆಟ್ಟಗುಡ್ಡ ಕಣಿವೆ ಸಾಲುಗಳಲ್ಲಿ ನವಿಲುಗಳು ಹೇರಳವಾಗಿ ಕಂಡು ಬರುತ್ತವೆ. ಎತ್ತರದ ಬಂಡೆಗಳ ಮರೆಯಲ್ಲಿ ನವಿಲುಗಳು ಹಿಂಡಾಗಿ ವಾಸಿಸುತ್ತವೆ. ಹಂಪಿ ಜನಪದವು ನವಿಲುಗಳನ್ನು ದೈವಿಕ ಪಕ್ಷಿಯಾಗಿ ಕಾಣುವಂತೆಯೆ ಬೇಟೆ ಮೂಲಕ ಮಾಂಸಕ್ಕಾಗಿ ದೇವರೇ ತಮಗೆ ಕೊಟ್ಟಿರುವ ಕೊಡುಗೆ ಎಂದೂ ಭಾವಿಸುತ್ತಾರೆ. ನವಿಲುಗರಿಗಳು ಅಲಂಕಾರಿಕ ವಿನ್ಯಾಸಗಳಲ್ಲಿ ಬೇಕಾದ್ದರಿಂದಲು ನವಿಲುಗರಿಗೆ ಬೇಡಿಕೆ ಹೆಚ್ಚಿದೆ. ಚಾಮರ ತಯಾರಿಕೆಯಲ್ಲಿ ನವಿಲುಗರಿಗೆ ಮೊದಲ ಸ್ಥಾನವಿದೆ. ನವಿಲಿನ ಮಾಂಸವನ್ನು ತಿನ್ನುವುದರಿಂದ ಮುಪ್ಪನ್ನು ಮುಂದೂಡಬಹುದೆಂದು ಹೇಳುವರು. ಅಂತೆಯೇ ಲೈಂಗಿಕ ಶಕ್ತಿಯೂ ವೃದ್ಧಿಸುವುದೆಂಬ ಮೂಢನಂಬಿಕೆಯಿದೆ. ಹಂಪಿ ಪರಿಸರಕ್ಕೆ ತಮಿಳುನಾಡಿನಿಂದ ಬಂದ ಜನಪದರ ಹಿನ್ನೆಲೆಯಲ್ಲಿ ನವಿಲುಗಳಿಗೆ ಮತ್ತಷ್ಟು ದೈವಿಕ ನಂಬಿಕೆ ವಿಸ್ತರಿಸಿದೆ. ಹಂಪಿಯಲ್ಲಿ ನವಿಲು ಹಿಂಡಿನಿಂದ ಸುತ್ತುವರಿದ ಷಣ್ಮುಖ ಗುಡಿಯೇ ಇದೆ. ತಮಿಳುನಾಡಿನಿಂದ ಬಂದ ರೈತರೊಬ್ಬರು ಇದರ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ನವಿಲುಗಳು ಕಂಡರೆ ಶುಭವೆಂದು ಹೇಳುವರು. ನವಿಲುಗಳ ಮೊಟ್ಟೆ ತಂದು ತಮ್ಮ ಊರು ಕೋಳಿಗಳಲ್ಲಿ ಕಾವು ಕೂತ ಕೋಳಿಯ ಮೊಟ್ಟೆ ಜೊತೆ ಇಟ್ಟು ಮರಿ ಮಾಡಿಸಿ ಸಾಕುವುದೂ ಇದೆ. ನವಿಲುಗಳು ನರ್ತಿಸಿದರೆ ಮಳೆಯಾಗುವುದೆಂಬ ಸಾಮಾನ್ಯ ನಂಬಿಕೆಯಿದೆ.

ನವಿಲುಗಳು ಗತ ಸಾಮ್ರಾಜ್ಯದ ನಿಧಿಕಾಯುವ ಪಕ್ಷಿಗಳೆಂತಲೂ ಕರೆಯುವುದಿದೆ. ನಿಧಿಗಳ್ಳರು ಅಮವಾಸ್ಯೆ ದಿನಗಳಂದು ಗಂಡು ನವಿಲು ಕೊಂದು ಅದರ ಮಾಂಸ ಉಂಡು ಹುಡುಕಿದರೆ ನಿಧಿ ಸಿಗುವುದೆಂಬ ಮೂಢನಂಬಿಕೆ ಇದೆ. ಅಲ್ಲದೆ ನವಿಲು ಗರಿಯ ತುದಿಯಲ್ಲಿ ಅತ್ಯಂತ ಅಪರೂಪಕ್ಕೆ ಎರಡು ಕಣ್ಣಿರುವ ಗರಿಗಳು ಸಿಕ್ಕಿದರೆ ಅದನ್ನು ಹಿಡಿದು ನಿಧಿ ಶೋಧನೆಗೆ ನಡೆದರೆ ದಾರಿ ತಿಳಿಯುವುದು ಎಂಬ ವಿಶ್ವಾಸ ಹಂಪಿಯ ಜನಪದರಿಗಿದೆ. ಹೆಣ್ಣಿನ ಸೌಂದರ್ಯವನ್ನು ನವಿಲುಗಳಿಗೆ ಅನ್ವಯಿಸುವುದು ಸಾಮಾನ್ಯವಾಗಿದೆ. ನವಿಲುಗಳನ್ನು ಸಾಕುವುದು ಒಳ್ಳೆಯದಲ್ಲ ಎಂಬ ಭಯವೂ ಇದೆ. ನವಿಲುಗಳ ಪ್ರಭೇದದಲ್ಲೇ ಒಂದಾದ ಕೋಳಿಗಳು ಮಾನವರ ಸಖ್ಯ ಸಾಧಿಸಿ ಕಾಡಿಗೆ ಹಿಂತಿರುಗಲಾರದಷ್ಟು ಹೊಂದಾಣಿಕೆಯನ್ನು ಮಾಡಿಕೊಂಡವು. ಆದರೆ ಅದೇ ನವಿಲುಗಳು ಮಾನವರ ಜೊತೆ ಬಾಳಲಾರದಾದವು. ಪಳಗಿಸಿದರೂ ಕೂಡ ನವಿಲುಗಳು ಮಾನವರ ನಡುವೆ ಸಹಜವಾಗಿರಲಾರವು. ಅವುಗಳ ಜೀವನ ವಿಧಾನವನ್ನು ಮನುಷ್ಯ ಪರಿಸರಕ್ಕೆ ಹೊಂದಿಸುವುದು ಬಹಳ ಕಠಿಣ. ಕೋಳಿಗಳು ಮಾತ್ರ ನಮ್ಮ ಜೊತೆ ಅಂತಹ ಸಖ್ಯಜೀವನ ಸಾಧಿಸಿಕೊಂಡಿವೆ.

ಗೌಜಲ: ಕೋಳಿ ಜಾತಿಗೆ ಸೇರಿದ ಹಕ್ಕಿಗಳಲ್ಲಿ ಗೌಜಲ ಹಕ್ಕಿಯು ವಿಶೇಷವಾದುದು. ಕರ್ನಾಟಕದ ಎಲ್ಲ ಗುಡ್ಡಗಾಡು ಬಯಲು ಹುಲ್ಲುಗಾವಲುಗಳಲ್ಲಿ ಕಾಣಸಿಗುವ ಈ ಹಕ್ಕಿಯು ತನ್ನ ವಿಶಿಷ್ಟ ಕೂಗಿನಿಂದ ಗಮನ ಸೆಳೆಯುತ್ತದೆ. ಹಕ್ಕಿಪಿಕ್ಕಿ ಜನಾಂಗದವರಿಗೆ ಗೌಜಲ ಹಕ್ಕಿಯು ಉಪ ಸಂಪಾದನೆಯ ಬಹುಮುಖ್ಯ ಹಕ್ಕಿ. ಗೌಜಲ ಹಕ್ಕಿಯ ಮಾಂಸಕ್ಕೆ ಅನೇಕ ಔಷಧಿಯ ಗುಣವಿದೆ ಎಂದು ಹೇಳುವರು. ಗೌಜಲ ಹಕ್ಕಿ ಮಾಂಸ ತಿಂದರೆ ಕ್ಷಯ ವಾಸಿಯಾಗುವುದಂತೆ. ಇದು ಎಷ್ಟು ನಿಜವೋ ಸುಳ್ಳೋ ಪರೀಕ್ಷಿಸಲು ಯಾವ ವಿಜ್ಞಾನಿಗಳು ಮುಂದಾಗಿಲ್ಲ. ಗೌಜಲಕ್ಕಿಯ ಕೂಗು ಸಂಗೀತದ ಇಂಪಿನಂತಿರುತ್ತದೆ. ಜನಪದರು ಈ ಹಕ್ಕಿಯ ದನಿಗೆ ದೈವಿಕ ಮಹತ್ವ ನೀಡುವರು. ಗೌಜಲಕ್ಕಿ ದನಿಯನ್ನು ನಿದ್ದೆಯಲ್ಲಿ ಕನಸಿನ ಮೂಲಕ ಆಲಿಸಿದರೆ ಒಳ್ಳೆಯದಾಗುತ್ತದೆ ಎಂದು ತಿಳಿಯುವರು. ಗೌಜಲ ಹಕ್ಕಿಯನ್ನು ಅಪರೂಪಕ್ಕೆ ಕೆಲವ್ರು ಸಾಕುವುದುಂಟು. ಗೌಜಲ ಹಕ್ಕಿಯ ಶಿಕಾರಿಯನ್ನು ಹಕ್ಕಿಪಿಕ್ಕಿಯವರು ಬಹಳ ಸಲೀಸಾಗಿ ಮಾಡುವರು. ಉರುಳು ಹಾಕಿ ಪಕ್ಕದಲ್ಲೆ ಸಾಕಿದ ಗೌಜಲ ಹಕ್ಕಿಯ ಸಹಾಯದಿಂದ ಬಲೆಗೆ ಬೀಳುವ ಉಪಾಯ ಹೂಡುವರು. ಗಂಡು ಗೌಜಗಳು ಕೂಗಿದ ಕೂಡಲೆ ಹೆಣ್ಣು ಗೌಜಗಳು ಆಕರ್ಷಿತವಾಗಿ ಬರುವವು. ಹಾಗೆ ಬರುವ ದಾರಿಯಲ್ಲೆ ಉರುಳು ಬಲೆ ಒಡ್ಡುವರು. ಕೆಲವೊಮ್ಮೆ ಬೇಟೆಗಾರರೆ ಗೌಜಲಕ್ಕಿಗಳು ಕೂಗಿದಂತೆಯೆ ಕೂಗಿ ಕರೆವರು. ಗೂಡಿನ ಒಳಗಿನ ಗಂಡು ಹಕ್ಕಿಯ ಆಸೆಯಲ್ಲಿ ಗೂಡಿನ ಒಳ ಹೋದ ಹೆಣ್ಣುಹಕ್ಕಿಗಳು ಸಿಲುಕುವ ಹಾಗೆ ಮಾಡುವರು. ಕಾಲುಗಳಿಗೂ ಉರುಳು ಬಿಗಿಯುವಂತಹ ಬಲೆ ಒಡ್ಡುವ ವಿಧಾನವೂ ಇದೆ. ಗೌಜಲ ಹಕ್ಕಿಗಳು ಹಂಪಿ ಪರಿಸರದಲ್ಲಿ ಹೇರಳವಾಗಿವೆ. ಗೌಜಲ ಹಕ್ಕಿಗಳಲ್ಲಿ ಎರಡು ವಿಧಗಳಿವೆ. ಸಾಧಾರಣ ಗೌಜಲಕ್ಕಿಯು ಗೋಧಿ ಬಣ್ಣದಲ್ಲಿ ದುಂಡಾಗಿದ್ದರೆ ಅದರದೇ ಇನ್ನೊಂದು ಬಗೆಯ ಗೌಜವು ಕೆಂಪು ಚುಕ್ಕಿಗಳಿಂದ ಹೆಚ್ಚು ಆಕರ್ಷಿತವಾದುದಾಗಿದೆ. ದನ ಕಾಯುವ ಹುಡುಗರು ಗೌಜಲ ಹಕ್ಕಿಯ ಮೊಟ್ಟೆಗಳನ್ನು ಸೆಗಣಿಯಲ್ಲಿ ಸುಟ್ಟು ತಿನ್ನುವರು. ಮಾಯದ ಹಕ್ಕಿಗಳೆಂತಲೂ ಗೌಜಗಳನ್ನು ಕರೆಯುವರು. ಹುಲ್ಲು ಕಸ ಕಡ್ಡಿ ಮೆಳೆ ಪೊದೆಗಳಲ್ಲೆ ಗಪ್ಪಾಗಿ ಕೂತು ಬಿಡುವ ಗೌಜಗಳು ಹೇಗೆ ಕಣ್ಮರೆಯಾದವು ಎಂಬ ಮರ್ಮವೇ ತಿಳಿಯದು. ಮಣ್ಣಿನ ಬಣ್ಣದಲ್ಲಿ ಕರಗಿ ಹೋಗುವ ಗೌಜಲ ಹಕ್ಕಿಗಳು ಚಾಣಾಕ್ಷತೆಯಿಂದ ತಪ್ಪಿಸಿಕೊಳ್ಳಬಲ್ಲವು. ಮರಿಗಳನ್ನು ಹಿಡಿದು ತಂದು ಸಾಕುವುದೂ ಇದೆ. ರೆಕ್ಕೆ ಬಲಿತ ಮೇಲೆ ಅವನ್ನು ಪಂಜರದಲ್ಲೇ ಇಟ್ಟು ಸಾಕಬೇಕಾಗಿದೆ. ಕೋಳಿಗಳನ್ನು ಪಳಗಿಸಿದಂತೆ ಗೌಜಗಳನ್ನು ಪಳಗಿಸಲಾಗದು. ಹೊರಕ್ಕೆ ಬಿಟ್ಟರೆ ಮತ್ತೆ ಅವು ಮರಳಿ ಬರುವುದಿಲ್ಲ. ಗೌಜಲ ಹಕ್ಕಿಗಳು ತುಂಬ ಆಕರ್ಷಕವಾದ ಹಕ್ಕಿಗಳೇನಲ್ಲ. ಇವುಗಳ ಶತ್ರುಗಳೆಂದರೆ ಕಾಡು ಬೆಕ್ಕುಗಳು, ಕೆಲವೊಮ್ಮೆ ಚಿರತೆಗಳು, ಹಾಗು ಮನುಷ್ಯರು. ಈಗಲೂ ಗೌಜಲ ಹಕ್ಕಿಗಳ ಬೇಟೆಯು ಮುಂದುವರಿದಿದೆ. ಈ ಹಕ್ಕಿಗಳ ರಕ್ಷಣೆಗೆ ಮನುಷ್ಯ ಸಮಾಜ  ವಿಶೇಷ ಪ್ರೀತಿ ತೋರಬೇಕಾಗಿದೆ. ಜೀವಜಾಲದ ಅತ್ಯಂತ ಪ್ರಾಚೀನ ಪಕ್ಷಿಗಳಲ್ಲಿ ಗೌಜಲ ಹಕ್ಕಿಯೂ ಒಂದೆಂಬುದನ್ನು ಮರೆಯಲಾಗದು.

ಬೆಳವ: ಕರ್ನಾಟಕದ ಉದ್ದಕ್ಕೂ ಬೆಳವ ಹಕ್ಕಿ ಕಂಡುಬರುತ್ತದೆ. ಇದರ ಸ್ಥಳೀಯ ಹೆಸರುಗಳು ಬೇರೆ ಬಗೆಯಲ್ಲಿದ್ದರೂ ಸೋರೆ ಹಕ್ಕಿ, ಚೊರ್ರೆ ಹಕ್ಕಿ, ಮುತ್ತಿನ ಹಕ್ಕಿ ಮುಂತಾದ ಹೆಸರುಗಳಲ್ಲಿ ಕರೆಯುವರು. ಹೇಗೆ ಗೌಜಲ, ಕಲ್ಲುಕೋಳಿಗಳು, ನವಿಲುಗಳು, ಕೋಳಿಗಳ ವಿಭಿನ್ನ ಪ್ರಭೇದಗಳೊ ಅದರಂತೆಯೆ ಬೆಳೆವ ಕೂಡ ಪಾರಿವಾಳದ ಮೂಲ ಪ್ರಭೇದಕ್ಕೆ ಸೇರುವ ಹಕ್ಕಿಯಾಗಿದೆ. ನೋಡಲು ಕಾಡು ಪಾರಿವಾಳದ ಹಾಗೆಯೆ ಕಾಣುವ ಬೆಳವ ಜನಪದ ಸಾಹಿತ್ಯದಲ್ಲಿ ಮತ್ತೆ ಮತ್ತೆ ಬರುವ ಹಕ್ಕಿ. ಶಿಸುನಾಳ ಶರೀಫರು ಬೆಳವನ ಮೇಲೆಯೆ ತತ್ವಪದ ಒಂದನ್ನು ಕಟ್ಟಿ ಹಾಡಿದ್ದಾರೆ. ಮುತ್ತಿನ ಶೆಟ್ಟಿಯ ಹೆಸರು. ಈ ಪಕ್ಷಿಯ ಜೊತೆ ಬೆಸುಗೆ ಆಗಿದೆ. ಮುತ್ತು ಮಾರುವ ಶೆಟ್ಟಿಯೊಬ್ಬ ವ್ಯಾಪಾರ ಮುಗಿಸಿ ನದಿ ದಂಡೆಯ ತಂಪಿನ ನೆರಳಿಗೆ ಬಂದು ವಿಶ್ರಾಂತಿ ಪಡೆಯುತ್ತಿರುತ್ತಾನೆ. ಗಾಢವಾದ ನಿದ್ದೆ ಆವರಿಸುವುದು. ಅದೇ ವೇಳೆಗೆ ಮಾಮೇರಿ ಹೊಳೆ ಉಕ್ಕಿ ಬರುತ್ತಿರುತ್ತದೆ. ಮರದಲ್ಲೆ ಕೂತು ನೋಡುತ್ತಿದ್ದ ಬೆಳೆವ ಅಪಾಯವನ್ನು ತಿಳಿದು ’ಮುತ್ತಿನ ಶೆಟ್ಟಿ ನೀ ತೊರೇ ನಾ ಪುರ್ರೇ’ ಎಂದು ರಾಗಬದ್ಧವಾಗಿ ಜೋರಾಗಿ ಉಲಿಯಿತಂತೆ. ಹಕ್ಕಿಯ ವಿಚಿತ್ರ ಸದ್ದಿಗೆ ಎಚ್ಚರಗೊಂಡ ಶೆಟ್ಟಿಯು ಇದೇನಿದರ ಅರಚಾಟ ಎಂದು ನೋಡಿದನಂತೆ. ಆಗ ಹೊಳೆ ಬರುತ್ತಿರುವುದು ತಿಳಿದು ದಡಕ್ಕೆ ಎದ್ದು ಓಡಿ ಬಂದನಂತೆ ಆಗ ಆ ಬೆಳವನಿಗೆ ಕೃತಜ್ಞತೆ ಹೇಳಿ ನಿನಗೆ ನಾನು ಮುತ್ತಿನ ಸರವನ್ನೆ ಕೊರಳಿಗೆ ತೊಡಿಸಬೇಕು. ನನ್ನ ಪ್ರಾಣ ಉಳಿಸಿದೆ ಎಂದು ಶೆಟ್ಟಿಯು ಮುತ್ತಿನ ಸರ ಹಾಕಿದನಂತೆ. ’ಅಯ್ಯಾ ಮುತ್ತಿನ ಶೆಟ್ಟಿ ತೊರೆ ಬರ್ತಾ ಇದೇ ನೀನದರಲ್ಲಿ ಕೊಚ್ಚಿ ಹೋಗುವೇ ನಾನಾದರೊ ತೊರೆ ಬಂದರೂ ಪುರ್ರೆಂದು ಹಾರಿ ಹೋಗುವೆ. ಅಪಾಯದಿಂದ ಪಾರಾಗು’ ಎಂದು ಬೆಳವ ಎಚ್ಚರಿಸಿತ್ತು ಎಂಬುದು ಇಲ್ಲಿನ ಮುಖ್ಯ ಸಂಗತಿ. ಆಕಸ್ಮಿಕವಾಗಿ ಇಂತಹ ಒಂದು ಘಟನೆ ನಡೆದಿರಬಹುದು. ಹಂಪಿ ಪರಿಸರದಲ್ಲು ಬೆಳವನ ಈ ಕಥೆ ಪ್ರಚಲಿತದಲ್ಲಿದೆ. ಬೆಳವ ಕೇಡು ಪಕ್ಷಿಯಲ್ಲ. ಹೊಲಗದ್ದೆ ತೋಟಗಳಲ್ಲಿ ಅದು ಗೂಡು ಕಟ್ಟಿದರೆ ಅದೃಷ್ಟ ಎನ್ನಲಾಗುವುದು. ರೈತ ಮಿತ್ರ ಪಕ್ಷಿ ಬೆಳವನಿಂದ ಕೃಷಿ ಪೀಡಕ ಹುಳು ಉಪ್ಪಟೆಗಳಿಂದ ಪಾರಾಗಬಹುದು. ಕೀಟ ಭಕ್ಷಕವಾಗಿಯೂ ಬೆಳೆವ ಉಪಕಾರಿ. ಆದರೆ ಮುಖ್ಯವಾಗಿ ಇದು ತೃಣ ಧಾನ್ಯಗಳನ್ನೇ ಹೆಚ್ಚಾಗಿ ತಿಂದು ಬದುಕುವುದು. ಗೆದ್ದಲು ಹುಳುಗಳು ಇದಕ್ಕೂ ಪ್ರಿಯ ಆಹಾರವೇ. ಹಂಪಿ ಪರಿಸರದಲ್ಲಿ ಸೋರೆ ಹಕ್ಕಿಗಳು ಸಾಮಾನ್ಯ. ಇವುಗಳಲ್ಲೇ ಇನ್ನೊಂದು ಪ್ರಭೇದವಿದೆ. ಅದು ಗಾತ್ರದಲ್ಲಿ ಸಾಧಾರಣ ಸೋರೆಗಿಂತ ದಪ್ಪವಾಗಿದ್ದು ಬೂದು ಬಣ್ಣವನ್ನು ಹೆಚ್ಚಾಗಿ ಹೋಲುತ್ತದೆ. ತಟ್ಟನೆ ನೋಡಿದರೆ ಕಾಡು ಪಾರಿವಾಳದ ಹಾಗೆಯೆ ಕಾಣುತ್ತದೆ. ಮೂರನೆಯ ಬೆಳೆವ ಇವೆರಡರ ನಡುವಿನ ಸ್ವರೂಪದ್ದಾಗಿದ್ದು ಕತ್ತಿನ ಸುತ್ತ ಕಂದು ಮಿಶ್ರಿತ ಕೆಂಪು ಬಣ್ಣದಿಂದ ಕೂಡಿದೆ. ಬೆಳವ ಹಕ್ಕಿಯು ಕೆಲವೊಮ್ಮೆ ಮಾಂಸಾಹಾರಿ ಪಕ್ಷಿಯಾದ ಬಿಜ್ಜು ಗರುಡಗಳಿಂದಲೂ ಪ್ರಾಣ ಉಳಿಸಿಕೊಳ್ಳಬೇಕಾಗಿದೆ. ಪಶುಪಾಲಕ ಸಮುದಾಯಗಳು ಈ ಹಕ್ಕಿಯನ್ನು ಹಿಂದಿನಿಂದಲೂ ಪ್ರೀತಿಯಿಂದಲೇ ಕಂಡು ಬಂದಿರುವುದರ ಕುರುಹಾಗಿ ಬೆಳವನನ್ನು ಈಗಲೂ ಮಾನ್ಯ ಮಾಡಲಾಗಿದೆ.

ಕೋಗಿಲೆ: ಯಾವುದೇ ಜನಪದಕ್ಕೂ ಕೋಗಿಲೆಯ ಗಾನ ಹಿತವಾದುದೇ. ಮಹಾಕವಿಗಳೇ ಕೋಗಿಲೆಯ ಗಾನವನ್ನು ಕಾವ್ಯದಲ್ಲಿ ಹಾಡಿ ಹೊಗಳಿ ಮೈಮರೆತಿರುವಾಗ ಇನ್ನು ಸಹಜ ಕವಿಗಳಾದ ಜನಪದರು ಕೋಗಿಲೆಯನ್ನು ಕಡೆಗಣಿಸಲಾರರು. ಕೋಗಿಲೆ ವಸಂತ ಋತುವನ್ನು ಕರೆತರುವ ಹಕ್ಕಿಯೆಂದು ನಂಬಲಾಗುತ್ತದೆ. ಮಳೆ ಬರುವ ಮುನ್ಸೂಚನೆಯನ್ನು ಕೋಗಿಲೆ ಜನಪದರಿಗೆ ನೀಡುತ್ತದೆ. ವಸಂತ ಕಾಲದಲ್ಲಿ ಕೋಗಿಲೆ ಹಾಡಿದಷ್ಟೂ ಸಮೃದ್ಧಿ ಎಂಬ ಭಾವನೆ ಇದೆ. ಕೋಗಿಲೆ ಪರಪುಟ್ಟ ಹಕ್ಕಿಯಾದರೂ ಅದರ ಆ ಗುಣವನ್ನು ಜನಪದರು ಜರಿಯುವುದಿಲ್ಲ. ಮರಿ ಮಾಡಿ ಸಾಕುವ ಭಾಗ್ಯವನ್ನು ದೇವರು ಕೋಗಿಲೆಗಳಿಗೆ ನೀಡಿಲ್ಲ. ಹಾಗೆಯೆ ತಾವೇ ಮೊಟ್ಟೆ ಇಟ್ಟರೂ ಮರಿ ಮಾಡಿ ಆ ಮರಿಗಳನ್ನೆ ಪರರ ಆರೈಕೆಗೆ ಬಿಡಬೇಕಾದ ನತದೃಷ್ಟ ಹಕ್ಕಿ ಎಂತಲೂ ಭಾವಿಸುವುದಿದೆ. ಕೋಗಿಲೆಯನ್ನು ಕೊಲ್ಲಬಾರದು, ಹಾಗೊಂದು ವೇಳೆ ಹಿಡಿದು ಕೊಂದರೆ ಹಾಡುಗಾರನೊಬ್ಬನ ಕೊರಳ ಹಿಚುಕಿದಂತೆ ಎಂದು ಎಣಿಸಲಾಗುವುದು. ನಿಜಕ್ಕೂ ಜನಪದರು ಈ ಹಕ್ಕಿಯ ಬಗ್ಗೆ ಉದಾತ್ತವಾಗಿಯೆ ಇದ್ದಾರೆ.

ಕಾಗೆ ಗೂಡಿಗೆ ಕದ್ದು ಹೋಗಿ ಅದರ ಮೊಟ್ಟೆಗಳನ್ನು ಕೆಳಕ್ಕೆ ಕೆಡವಿ ತನ್ನ ಮೊಟ್ಟೆ ಇಟ್ಟು ಬರುವ ಈ ಪರಿಯನ್ನು ಕಳ್ಳ ಬುದ್ಧಿ ಎನ್ನದೆ ಬಿಡುವುದಿಲ್ಲ. ಅದರಿಂದಾಗಿಯೆ ಕೋಗಿಲೆ ತನ್ನ ಮರಿಗಳ ರಮಿಸಿ ಸುಖಿಸಲು ಆಗದೆಂಬ ಅಭಿಪ್ರಾಯವಿದೆ. ಕೋಗಿಲೆಯು ಎಲೆ ಮರೆಗಳಲ್ಲೆ ಅಡಗಿ ಬಾಳುವ ಹಕ್ಕಿಯಾದ್ದರಿಂದ ಅದು ಮಾನ ಮರ್ಯಾದೆಗಳನ್ನು ಪಾಲಿಸುವ ಹಕ್ಕಿ ಎಂದು ಹೇಳುವರು. ಅದೇ ಕಾಗೆ ಊರೊಳಗೆ ಬಂದು ವಿಪರೀತವಾಗಿ ವರ್ತಿಸುವುದರಿಂದ ಅದನ್ನು ಭಂಡತನದ ವ್ಯಕ್ತಿತ್ವಕ್ಕೆ ಹೋಲಿಸುವರು. ಕೋಗಿಲೆ ಕಾಗೆಯ ಮತ್ತೊಂದು ಪ್ರಭೇದವಷ್ಟೆ. ಹಾಗಾಗಿಯೇ ಕಾಗೆ ಕೋಗಿಲೆಯ ಮರಿಗಳನ್ನು ಸಾಕಲು ಜೈವಿಕ ಕಾರಣಗಳಿರುವುದು. ಸೌಮ್ಯ ಪಕ್ಷಿಯಾದ ಕೋಗಿಲೆ  ಕರ್ಕಶವಾಗಿ ಕೂಗಿದ್ದರೆ ಅದಕ್ಕೂ ಕಾಗೆಯ ಉಪಪಟ್ಟವೇ ಸಿಗುತ್ತಿತ್ತೇನೊ. ಕಾಗೆ ಕೋಗಿಲೆಗಳಿಗೆ ತುಂಬ ಸಾಮ್ಯಗಳಿವೆಯಾದರೂ ದನಿಯಲ್ಲಿ ಮಾತ್ರ ವಿಭಿನ್ನತೆ ಇದೆ. ಕದ್ದು ಮುಚ್ಚಿ ತನ್ನ ಮರಿಗಳನ್ನು ಪರೋಕ್ಷವಾಗಿ ಜೋಪಾನ ಮಾಡುವ ಕೋಗಿಲೆ ಕಾಗೆಯ ಆರೈಕೆಯಿಂದ ಹಾರುವ ಮಟ್ಟ ಮುಟ್ಟಿದ ತನ್ನ ಮರಿಗಳನ್ನು ಕರೆದುಕೊಂಡು ಕಾಗೆಯಿಂದ ಪಲಾಯನ ಮಾಡುತ್ತದೆ. ಕೋಗಿಲೆಗೆ ಸ್ವಂತ ಸಂಸಾರ ಹಾಗೂ ಗೂಡು ಇಲ್ಲ. ಹೆಣ್ಣು ಕೋಗಿಲೆ ಮೊಟ್ಟೆ ಇಟ್ಟು ಕದ್ದು ಹಾರಿ ಹೋಗಲು ಗಂಡು ಸಹಕಾರ ಮಾಡುತ್ತದೆ. ಮರಿಗಳನ್ನು ಸಾಕು ತಾಯಿ ಕಾಗೆ ಸಾಕುವಾಗಲೂ ಗಂಡು ಕೋಗಿಲೆ ಪ್ರಮುಖವಾಗಿ ಕಾಯುವುದು. ಕಾಗೆಗೆ ಇದು ಮೋಸ ಎಂದು ತಿಳಿಯುವ ವೇಳೆಗೆ ಹೆಣ್ಣುಗಂಡು ಎರಡೂ ಕೋಗಿಲೆಗಳು ತಮ್ಮ ಮರಿಯನ್ನು ಪಾರು ಮಾಡಿರುತ್ತದೆ. ಕೋಗಿಲೆ ಹಂಪಿ ಪರಿಸರದಲ್ಲಿ ದಟ್ಟವಾಗಿದೆ.

ಕೆಂಬೂತ: ಹಾವುಗಳನ್ನು ನುಂಗುವ ಹಕ್ಕಿ ಕೆಂಬೂತ ಎಂದು ಈ ಹಕ್ಕಿಗೆ ವಿಶೇಷವಾದ ಗುರುತನ್ನು ಜನಪದರು ನೀಡುವರು. ಸಹಜವಾಗಿ ಕೆಂಬೂತ ಸಣ್ಣಪುಟ್ಟ ಹಲ್ಲಿ ಹಾವುರಾಣಿ ಮರಿಹಾವು. ಉಳುಉಪ್ಪಟ್ಟೆ, ಮಿಡತೆ ಮುಂತಾದವನ್ನು ಹಿಡಿದು ತಿನ್ನುವುದು. ರೈತನಿಗೆ ಉಪಕಾರಿಯಾದ ಹಕ್ಕಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಇದರ ಕೂಗು ಮಾತ್ರ ಗೂಬೆ ಕೂಗಿನ ನಂತರದ ಅಪಖ್ಯಾತಿಯನ್ನು ಪಡೆದಿದೆ. ಮಾಂತ್ರಿಕ ಹಕ್ಕಿ ಎಂಬ ನಂಬಿಕೆಯೂ ಇದೆ. ಗೂಕ್ ಗೂಕ್ ಎಂದು ಕೂಗುವ ಕೆಂಬೂತ ಕೇಡಿನ ಜೊತೆ ಮಾತನಾಡುತ್ತದೆ ಎಂಬ ಕಲ್ಪನೆಯಿದೆ. ಕೆಂಬೂತದ ಮಾಂಸಕ್ಕೂ ಬೇಡಿಕೆ ಇದೆ. ಉದರ ಬೇನೆಗಳಿಗೆ ಇದರ ಮಾಂಸ ಔಷಧವಾಗಿ ಪರಿವರ್ತನೆಯಾಗುವುದೆಂದು ಹೇಳುವರು. ಕಾಗೆ ಕೆಂಬೂತ ಕೋಗಿಲೆ ಮೂರೂ ಒಂದೇ ಗುಂಪಿನವಾದರೂ ಇವುಗಳ ಆಕಾರ ಸ್ವಭಾವ ಆಹಾರ ಕ್ರಮ ಜೀವಿಸುವ ರೀತಿ ಮತ್ತು ಧ್ವನಿಯಿಂದಾಗಿ ಮೂರೂ ಬಗೆಯ ಸ್ಥಾನಮಾನಗಳಿಗೆ ಒಳಗಾಗಿವೆ. ಕೆಂಬೂತ ಮಟ ಮಟ ಮಧ್ಯಾಹ್ನ ಕಾಡಲ್ಲೊ ಹೊಲದಲ್ಲೊ ಗುಡ್ಡದಲ್ಲೊ ತನ್ನ ವಿಚಿತ್ರ ಸದ್ದು ಹೊರಡಿಸುತ್ತಿದ್ದರೆ ಯಾರಿಗಾದರೂ ಭಯವಾಗುವುದು ಸಹಜವೇ. ಇದನ್ನು ರತ್ನಪಕ್ಷಿ ಎಂತಲೂ ಕರೆಯುವುದಿದೆ. ಮರುಜೀವ ಸೃಷ್ಟಿಸುವ ಶಕ್ತಿಯೂ ಈ ಹಕ್ಕಿಗೆ ಇದೆ ಎನ್ನುವರು. ಕೆಂಬೂತವನ್ನು ಕೊಂದು ಅದನ್ನು ಮರವೊಂದರಲ್ಲಿ ತಲೆಕೆಳಕಾಗಿ ನೇತು ಹಾಕಿ, ಅದರ ಬಾಯಿಂದ ಅದರ ರಕ್ತವೊ ದೇಹದ ರಸವೊ ಹರಿದು ಬಂದು ಕೆಳಗೆ ಇಟ್ಟಿರುವ ಸತ್ತ ಪ್ರಾಣಿಗೆ ತಾಕಿದರೆ ಸತ್ತಿರುವುದೇ ಜೀವಂತವಾಗುವುದು ಎಂಬ ಪ್ರತೀತಿ ಇದೆ. ಸಾಮಾನ್ಯರು ಅದರ ದನಿಗೆ ಹೆದರಿ ಕೆಂಬೂತವನ್ನು ಭೂತಪಕ್ಷಿ ಎಂತಲೂ ಕರೆಯುವರು. ಕೆಂಬೂತದ ಕಣ್ಣು ರಕ್ತ ತುಂಬಿದಂತಿರುವುದರಿಂದ ಕೆಂಬೂತ ರಕ್ತ ಕುಡಿದ ಹಕ್ಕಿ ಎಂತಲೂ ಆರೋಪಿಸಿವುದಿದೆ. ಸಾಮಾನ್ಯವಾಗಿ ಎಲ್ಲ ಕಡೆ ಇರುವ ಭಯದ ನಂಬಿಕೆಗಳ ಕೆಂಬೂತ ಪಕ್ಷಿಗೂ ಹಂಪಿ ಪರಿಸರದ ಜನಪದರಲ್ಲೂ ಇವೆ.

ಗಿಳಿ : ಬಣ್ಣದ  ಗಿಳಿ ಜನಪದ ಸಾಹಿತ್ಯದ ವಿಶಾಲ ಬಯಲಿನಲ್ಲಿ ಸುಂದರವಾಗಿ ಹಾರಾಡಿರುವ ಹಕ್ಕಿ. ಹಂಪಿ ಪರಿಸರದ ಬೆಟ್ಟಗುಡ್ಡಗಳ ಮರೆಯ ತಾವಿನಲ್ಲಿ ಅಪಾರ ಸಂಖ್ಯೆಯಲ್ಲಿ ಗಿಳಿಗಳಿವೆ. ಊರ ತೋಟಗಳಲ್ಲಿ ಮನೆ ಮಾಡಿಕೊಂಡಿವೆ. ಗಿಳಿಗಳನ್ನು ಬೇಟೆಯಾಡುವುದು ಬಹಳ ಕಷ್ಟ. ಮರದ ಪೊಟರೆಯಲ್ಲಿ ಕೈಹಾಕಿ ಹಿಡಿಯಲು ಮುಂದಾದರೆ ಬೆರಳುಗಳು ತುಂಡಾಗುವಂತೆ ಕಡಿಯಬಲ್ಲವು. ಗಿಣಿರಾಮ ಎಂಬ ವಿಶೇಷ ಪ್ರೀತಿ ಗಿಳಿಗಳ ಮೇಲಿದೆ. ಗಿಣಿಯಾಗಿ ಬಾರೊ ಬಾಗಿಲಿಗೆ ಎಂದು ಪ್ರೇಮದಿಂದ ಕರೆವ ಪರಿಯಿದೆ. ನಲ್ಲನನ್ನು ಗಿಣಿಯಾಗಿ ಕಾಣುತ್ತಲೆ ಗಿಣಿ ಮಾಮ ಎಂತಲೂ ಅನ್ವಯಿಸಿವುದಿದೆ. ಸೌಂದರ್ಯದ ಮಾನದಂಡವಾಗಿ ಗಿಳಿಯನ್ನು ಭಾವಿಸಲಾಗಿದೆ. ಹಂಪಿಯ ವಾಸ್ತುಶಿಲ್ಪದಲ್ಲಿ ಗಿಳಿಗಳ ಚಿತ್ತಾರಗಳು ಸಾಕಷ್ಟಿವೆ. ಪಾಳಾದ ಹಂಪಿಯು ಗಿಳಿಗಳಿಗೆ ವಿಶಾಲ ವಾಸದ ನೆಲೆಯಾಗಿದೆ. ಬೇಕಾದ ಎಲ್ಲ ಬಗೆಯ ಆಹಾರವೂ ಹಂಪಿ ಪರಿಸರದಲ್ಲಿ ಗಿಳಿಗಳಿಗೆ ಸಿಗುವುದರಿಂದ ಅವುಗಳ ಸಂಖ್ಯೆ ಗಣನೀಯವಾಗಿದೆ. ಗಿಳಿಗಳನ್ನು ಮೋಜಿಗೆ ಸಾಕುವ ಹವ್ಯಾಸ ವಿಜಯನಗರ ಸಾಮ್ರಾಜ್ಯದಲ್ಲಿ ವಿಶೇಷವಾಗಿದ್ದುದನ್ನು ಪ್ರವಾಸಿಗರು ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ಸದ್ಯದ ಹಂಪಿ ಜನಪದರು ಗಿಳಿಗಳನ್ನು ಸಾಕುವಷ್ಟು ವಿರಾಮ ಪಡೆದಿಲ್ಲ.

ಗಿಳಿಶಾಸ್ತ್ರವೇ ಬೇರೊಂದು ಮಜಲು. ಆ ರಾಜಕುಮಾರನ ಪ್ರಾಣವೊ ಆ ರಾಕ್ಷಸನ ಪ್ರಾಣವೋ ಆ ನಿಗೂಢ ಸ್ಥಳದಲ್ಲಿ ಬಚ್ಚಿಟ್ಟಿರುವ ಪಂಜರದ ಗಿಳಿಯಲ್ಲಿದೆ ಎಂದು ಹೇಳಿ ಆ ಗಿಳಿಯ ರೆಕ್ಕೆ ಮುರಿದಂತೆ ಆತನ ಕೈಗಳು ಮುರಿದು ಕೊರಳ ಮುರಿದ ಕೂಡಲೆ ಆತನ ಪ್ರಾಣಪಕ್ಷಿಯೆ ಹಾರಿಹೋಗುವಂತೆ ನಿರೂಪಿಸುವ ನೂರಾರು ಕಥನಗಳು ಹಂಪಿಯಲ್ಲೂ ಕೇಳಿಬರುತ್ತವೆ. ಮನೆಯ ಮುಂಬಾಗಿಲ ಎರಡೂ ಕಡೆ ಗಿಳಿಗಳ ಉಬ್ಬು ಚಿತ್ರವನ್ನೂ ವರ್ಣ ಚಿತ್ರವನ್ನೂ ಬಿಡಿಸುವುದು ಒಂದು ಕಾಲಕ್ಕೆ ಹೆಮ್ಮೆಯ ಗುರುತಾಗಿತ್ತು. ಗಿಣಿಗಳು ಮಹಿಳೆಯರ ಸುಖ ದುಃಖದ ಹಾಡನ್ನೆಲ್ಲ ಹಾಡಿಕೊಳ್ಳಲು ಒಂದೊಂದು ಪಾತ್ರವಾಗಿ ಹಾರಿ ಬಂದು ಹಾಗೇ ಆ ವ್ಯಕ್ತಿತ್ವವನ್ನು ಹೊತ್ತುಕೊಂಡು ಹಾರಿ ಹೋಗಿವೆ. ಜನಪದರ ಪಾಲಿಗೆ ಗಿಳಿಯು ರಮ್ಯ ಪಕ್ಷಿ. ಪ್ರೇಮ ಮೋಹದ ಮರೆಯ ಪ್ರಿಯಕರರನ್ನು ನೆನಪಿಸುವ ಹಕ್ಕಿ. ಪ್ರೇಮದ ವಿರಹವನ್ನು ಕೋಗಿಲೆಯಿಂದ ಹಾಡಿಸುವ ಜನಪದರು ಗಿಳಿಯ ಮೂಲಕ ಆ ಪ್ರಿಯಕರನೇ ಗಿಳಿಯಾಗಿ ಹಾರಿ ಬಂದು ಕದ್ದು ಮುಚ್ಚಿ ಮುದ್ದು ಮಾಡುವ ರಮ್ಯ ಪುರುಷನಾಗುವ ಸ್ವರೂಪವನ್ನು ಬಿಂಬಿಸಿದ್ದಾರೆ. ಜನಪದ ಕಥೆಗಳಲ್ಲಿ ಅಶರೀರವಾಣಿಯಾಗಿ ನಿಗೂಢವನ್ನು ಹೇಳುವ ಪಾತ್ರವನ್ನು ಗಿಳಿಗಳು ವಹಿಸುತ್ತವೆ. ಹಂಪಿ ಪರಿಸರದ ಜನಪದರ ಮೌಖಿಕ ಸಾಹಿತ್ಯದಲ್ಲೂ ಗಿಳಿಗಳು ಇಂತದೇ ಅರ್ಥಗಳನ್ನು ಪಡೆದಿವೆ. ವಿಶೇಷವೆಂದರೆ ಹಂಪಿ ಪರಿಸರದಲ್ಲೇ ಮತ್ತೊಂದು ಬಗೆಯ ಗಿಳಿ ಇವೆ. ಚಟ್ಟುಗಿಳಿ ಎಂದು ಅದನ್ನು ಕರೆಯುವರು. ಬಣ್ಣ ಆಕಾರದಲ್ಲಿ ದೊಡ್ಡ ಗಾತ್ರದ ಸಾಮಾನ್ಯ ಗಿಳಿಯನ್ನೆ ಹೋಲುವಂತಿದ್ದರೂ ಸಾಮಾನ್ಯ ಗಿಳಿಗಿಂತಲೂ ವೇಗವಾಗಿ ಮರೆಯಾಗಿ ಬಚ್ಚಿಟ್ಟುಕೊಳ್ಳುವ ಸ್ವಭಾವದ್ದಾಗಿದೆ. ಹಂಪಿ ಪರಿಸರದಲ್ಲಿ ಚಿಟ್ಟುಗಿಳಿಗಳಿಗೆ ಬೇಕಾದ ವಿವಿಧ ಬಗೆಯ ಹಣ್ಣಿನ ಗಿಡಗಳ ಯಥೇಚ್ಛ ಪೊದೆಗಳಿವೆ. ಈ ಪರಿಸರಕ್ಕೆ ವಿಶೇಷವಾದಂತಿರುವ ಈ ಚಿಟ್ಟುಗಿಳಿಗಳು ಮನುಷ್ಯರ ಸಹವಾಸವೆ ಬೇಡ ಎಂಬಂತೆ ವರ್ತಿಸುತ್ತವೆ. ಬೇವಿನ ಹಣ್ಣಿನ ಬಗ್ಗೆ ಚಿಟ್ಟುಗಿಳಿಗಳು ವಿಶೇಷ ಆಸಕ್ತಿ ತೋರುವವು.

ಕೋಳಿ: ಜನಪದರು ಕೋಳಿಗಳನ್ನು ತಮ್ಮ ಜೀವನ ಕ್ರಮದ ಭಾಗವಾಗಿ ಒಪ್ಪಿ ಎಷ್ಟೋ ಶತಮಾನಗಳೇ ಕಳೆದು ಹೋಗಿವೆ. ಕೋಳಿಗಳು ಮೂಲತಃ ಭಾರತೀಯ ಮೂಲದ ಹಕ್ಕಿಗಳು ಹಾರುವುದನ್ನು ಕಳೆದುಕೊಂಡ ಕೋಳಿಗಳು ಮನುಷ್ಯರ ಸಹವಾಸದಿಂದಲೇ ತಮ್ಮ ವಂಶಾಭಿವೃದ್ಧಿ ಸಾಧ್ಯ ಎಂದು ತಿಳಿದಂತಿವೆ. ತಮ್ಮನ್ನು ಸಾಕಿದವರನ್ನು ಬಿಟ್ಟು ಎಲ್ಲಿಯೂ ಓಡಿ ಹೋಗದ ಕೋಳಿಗಳು ನಿಷ್ಠೆಗೆ ನಿಜಕ್ಕೂ ಪಾತ್ರವಾಗಬೇಕಾದ ಹಕ್ಕಿಗಳು. ಕೋಳಿಗಳ ಸಾಕಾಣಿಕೆಯು ಪ್ರಾಚೀನ ಕಾಲದ ಅಭ್ಯಾಸ. ಸಂಸ್ಕೃತಿಗಳ ದನಿಯಾಗಿಯೂ ಕೋಳಿ ಪ್ರತಿಧ್ವನಿಸಿವೆ. ಹುಂಜಗಳ ಕಾಳಗದ ಜೂಜು ಹಂಪಿ ಪ್ರದೇಶದಲ್ಲೂ ಇದೆ. ಈ ಪಂದ್ಯದಲ್ಲಿ ಹುಂಜಗಳ ಕಾಲಿಗೆ ಚೂಪಾದ ಹರಿತ ಚಿಕ್ಕ ಚಾಕುವನ್ನು ಕಟ್ಟಿ ಜಗಳಕ್ಕೆ ಬಿಡಲಾಗುವುದು. ಅತ್ಯಂತ ಹೇಯವಾದ ಈ ಕ್ರೂರ ಜೂಜಾಟವು ಕಾನೂನಿನ ಚೌಕಟ್ಟಿನಲ್ಲಿ ಅಪರಾಧ ಎನಿಸಿದರೂ ಹಿಂಸೆಯ ಮೂಲಕ ಕೊಲ್ಲುವ ಜೂಜು ನಡೆದೇ ಇದೆ. ನಾಟಿ ಕೋಳಿಗಳ ವ್ಯಾಪಾರ ಸಂತೆಗಳಲ್ಲಿ ಮುಂದುವರಿದಿದೆ. ವಿಚಿತ್ರ ಆಕಾರದ ಮೊಟ್ಟೆ ಇಟ್ಟರೂ ತೊಂದರೆ. ರಾತ್ರಿ ವೇಳೆಯಲ್ಲಿ ಮೊಟ್ಟೆ ಇಡುವುದೂ ಕೂಡ ಅಪಶಕುನ. ನಡುರಾತ್ರಿಯಲ್ಲಿ ಕೋಳಿಗಳು ಕೂಗಿದರೆ ಅಂತಹ ಕೋಳಿಗಳು ಮನೆಗೆ ಕೇಡು ತರುತ್ತವೆ ಎಂದು ಗ್ರಾಮದ ದೈವದ ಹೆಸರಲ್ಲಿ ಬಲಿಕೊಟ್ಟು ಬಳಸಿಕೊಳ್ಳುವರು. ಕೋಳಿ ಕಾಲು ಮಾಂಸ ತಿಂದರೆ ಕಾಲುಗಳು ಗಟ್ಟಿಯಾಗಿ ನಡುಗುವುದು ತಪ್ಪುತ್ತದೆ ಎನ್ನುವರು. ಮಾಟ ಮಂತ್ರ ಬಲಿ ಹರಕೆ ಇಂತಹ ಕ್ರಿಯಾವಿಧಿಗಳಲ್ಲಿ ಕೋಳಿಗಳನ್ನೆ ವಿಶೇಷವಾಗಿ ಬಳಸುವರು. ಕರ್ನಾಟಕದ ಉದ್ದಕ್ಕೂ ಇರುವ ಸಾಮಾನ್ಯ ನಂಬಿಕೆಗಳೇ ಹಂಪಿಯಲ್ಲೂ ಕಂಡುಬರುತ್ತವೆ.

ಕಲ್ಲು ಕೋಳಿ : ಹಂಪಿ ಪರಿಸರದಲ್ಲಿ ಕಂಡುಬರುವ ಕಲ್ಲುಕೋಳಿಗಳು ವಿಶಿಷ್ಟ ಪ್ರಭೇದದ ಪಕ್ಷಿಗಳಾಗಿವೆ. ಹಂಪಿಯ ಕಲ್ಲುಬಂಡೆಗಳ ಬೆಟ್ಟೆಸಾಲುಗಳ ಮರೆಯಲ್ಲಿರುವ ಕಲ್ಲುಕೋಳಿಗಳು ಗೌಜಲು ಹಕ್ಕಿಯ ಸಹೋದರ ಸಂಬಂಧಿಯಂತೆ ಕಾಣುತ್ತವೆ. ಬಹಳ ಚುರುಕಾದ ಕಲ್ಲುಕೋಳಿಗಳು ಕಲ್ಲುಗಳ ಸಂದಿ ಮರೆಯನ್ನೆ ಆಶ್ರಯಿಸಿ ಬದುಕುವುದರಿಂದ ಹಂಪಿ ಜನಪದರು ಈ ಕೋಳಿಗಳನ್ನು ಕಾಡುಕೋಳಿ ಎಂದು ಕರೆಯುವ ಬದಲು ಕಲ್ಲುಕೋಳಿ ಎಂದು ಕರೆವರು. ಪುರಾಣ  ನಿರೂಪಣೆಯು ಹೇಳುವಂತಹ ಬೆಟ್ಟದ ಮೇಲೆ ಕಲ್ಲಾಗಿರುವ ಕಲ್ಲು ಕೋಳಿ ಜೀವಂತವಾಗಿ ಕೂಗಿದಾಗಲೇ ಪ್ರಳಯವಾಗುವುದು ಎಂಬ ಆ ಕಥೆಯ ಕಲ್ಲುಕೋಳಿ ಬೇರೆ. ಹಂಪಿಯಲ್ಲಿ ಜೀವಂತವಾಗಿ ಕಲ್ಲುಬಂಡೆಗಳ ಸಂಧಿಯಲ್ಲಿ ಕೀಟಭಕ್ಷಕನಾಗಿ ಸಣ್ಣಪುಟ್ಟ ಕಾಡು ಧಾನ್ಯಗಳ ತಿಂದು ಬದುಕುವ ಕಲ್ಲುಕೋಳಿಗಳು ಸುಲಭವಾಗಿ ಬೇಟೆಗೆ ಸಿಗುವುದಿಲ್ಲ. ಹಂಪಿಯ ಪರಿಸರವು ಈ ಬಗೆಯ ಕಲ್ಲುಕೋಳಿಗಳಿಗೆ ಸೂಕ್ತವಾಗಿದೆ. ಹಾಗಿದ್ದರೂ ಕಲ್ಲುಕೋಳಿಗಳನ್ನು ಬೇಟೆ ಆಡಿ ತಿನ್ನುವುದುಂಟು.