ನೀರುಗೋಳಿ: ಹಳ್ಳಿಗಳ ಕೆರೆಕಟ್ಟೆಗಳ ಆಶ್ರಯದಲ್ಲಿ ಇರುವ ನೀರು ಹಕ್ಕಿಗಳಿಂದ ಹೊರಬಂದು ಊರ ಒಳಗೇ ಇರುವ ಹೊಂಡ ತಿಪ್ಪೆಗುಂಡಿ, ಹಿತ್ತಿಲು, ನೀರಾಡುವ ಮೂಲೆ ಗುಂಪುಗಳಲ್ಲಿ ನೀರುಗೋಳಿಯು ಸಾಮಾನ್ಯವಾಗಿ ಅಡ್ಡಾಡುವುದನ್ನು ಕಾಣಬಹುದು. ಪೊದೆ ಮರೆಯಲ್ಲೇ ಯಾವತ್ತೂ ಬದುಕುವ ನೀರುಗೋಳಿಯು ಕೋಳಿಯ ಒಂದು ಪ್ರಬೇಧ. ಪುಟ್ಟದಾದ ನೀರುಗೋಳಿಯನ್ನು ಯಾರೂ ಸಾಕುವುದಿಲ್ಲವಾದರೂ ಕೈಗೆ ಸಿಕ್ಕರೆ ತಿನ್ನದೆ ಬಿಡುವುದಿಲ್ಲ. ಹಿತ್ತಿಲುಗಳ ತಿಪ್ಪೆಗುಂಡಿಯ ನೀರಿನ ಪೊದೆ ಮರೆಯಲ್ಲೆ ಮರಿ ಮಾಡಿ ವರ್ಷಪೂರ್ತಿ ಅಲ್ಲೆ ಇರಬಲ್ಲ ಹಕ್ಕಿ,ವಲಸೆ ಹಕ್ಕಿಯಲ್ಲ. ಅಪಾಯ ಬಂದಾಗ ಹಾರಿ ಜಿಗಿಯಬಲ್ಲ ಹಕ್ಕಿ, ಮರಗಳನ್ನು ಏರಬಲ್ಲ ಹಕ್ಕಿ. ಕೊಂಬೆಯಿಂದ ಕೊಂಬೆಗೆ ತಿರುಗಾಡುತ್ತ ಬಚಾವಾಗಬಲ್ಲದು. ಕೆಲವೊಮ್ಮೆ ಹಿತ್ತಿಲ ಮರೆಯ ಮರಗಳು ಅಂಬುಗಳಿಂದ ಆವೃತವಾಗಿ ಗುಂಪಾಗಿದ್ದರೆ ಅಲ್ಲೇ ಕಡ್ಡಿ ಜೋಡಿಸಿ ಮೊಟ್ಟೆ ಇಟ್ಟು ಮರಿ ಮಾಡಿ ಅನಂತರ ಬೆಳೆದ ಮರಿಗಳಿಗೆ ಹುಳು ಉಪ್ಪಟೆ ತಿನಿಸಿ ಬಲಿತಾಗ ಕೆಳಗಿಳಿಸಿಕೊಳ್ಳಬಲ್ಲ  ಚಾಣಾಕ್ಷ ಹಕ್ಕಿ ಈ ನೀರುಗೋಳಿ. ಹಂಪಿಯ ಹಳ್ಳಿಗಳಲ್ಲಿಯೂ ನದಿತೀರದಲ್ಲಿಯೂ ಈ ನೀರುಗೋಳಿಯು ಸಾಮಾನ್ಯವಾಗಿ ಕಾಣುವುದು. ಇದರ ಸಣ್ಣ ಕಾಲುಗಳು ಉದ್ದವಾಗಿವೆ. ಬೂದುಬಣ್ಣದ ಪಕ್ಕಗಳಲ್ಲಿ ಬಿಳಿಚುಕ್ಕಿಗಳಿವೆ. ಹಿಂಬದಿಯ ಪುಕ್ಕ ಬಿಳಿಯಾಗಿದೆ. ಮುಖದ ಆಚೀಚೆ ಕೆಂಪು ಪಟ್ಟಿಯಿದೆ. ಈ ನೀರುಗೋಳಿಯು ಬಯಲುಸೀಮೆಯ ಹಳ್ಳಿಗಳ ತಿಪ್ಪೆಗುಂಡಿ ಹಾಗು ನೀರಾಡುವ ಜಾಗಗಳಲ್ಲಿ ಸಾಮಾನ್ಯ. ಹಂಪಿ ಪರಿಸರದಲ್ಲೂ ಈ ಹಕ್ಕಿ ಇದೆ. ನದಿ ತೀರದ ಅನೇಕ ಜಲಪಕ್ಷಿಗಳಂತೆ ಈ ನೀರುಗೋಳಿ ಇಲ್ಲ. ಇದು ಕೋಳಿಯ ಸಹೋದರ ಸಂಬಂಧಿ ಅಷ್ಟೆ. ಇದರ ಕೂಗು ರಾತ್ರಿವೇಳೆ ಕೇಳಿಸಿದರೆ ಅಪಶಕುನ ಎಂದು ತಿಳಿಯುವರು. ನೀರುಗೋಳಿಯಲ್ಲೆ ಮೂರು ಬಗೆಯಿವೆ. ಒಂದು ಬೂದು ಗಪ್ಪು ಬಣ್ಣದ್ದು. ಇನ್ನೊಂದು ಕಂದುಗೆಂಪು ಬಣ್ಣದ್ದು. ಮೂರನೆಯದು ನೀಲಿ ಮಿಶ್ರಿತ ಹಸಿರು ಬಣ್ಣದ ನೀರುಗೋಳಿ. ಈ ಮೂರು ಬಗೆಯ ನೀರುಗೋಳಿಗಳ ಬಗ್ಗೆ ಜನಪದರು ಪ್ರೀತಿಯಿಟ್ಟುಕೊಂಡು ತಮ್ಮ ಪರಿಸರದ ಸಂಗಾತಿ ಎಂದೇ ಭಾವಿಸಿದ್ದಾರೆ.

ಬಾತುಕೋಳಿ : ಹಂಪಿಯ ಪರಿಸರದಲ್ಲಿ ನೀರಿನ ನೆಲೆಗಳಿಗೆ ಕೊರತೆ ಇಲ್ಲ. ಹಳ್ಳಿಕೆರೆ, ಕಮಲಾಪುರ ಕೆರೆ, ಢಣಾಯಕನ ಕೆರೆಗಳಿಗೆ ಬಹಳ ದೂರಗಳಿಂದ ಪಕ್ಷಿಗಳು ವಲಸೆ ಬರುತ್ತವೆ. ಜಲಪಕ್ಷಿಗಳನ್ನು ಜನಪದರು ಬಾತುಕೋಳಿ ಎಂಬ ಸಾಧಾರಣ ಗುರುತಿನಿಂದ ಕರೆಯುವುದಿದೆ. ಬಾತು ಕೋಳಿಗಳನ್ನು ಬೇಟೆ ಆಡುವುದಿದೆ. ಬಾತುಕೋಳಿಗಳನ್ನು ಹಿಂಡಾಗಿ ಸಾಕುವುದು ಬೇರೆ. ಹಿಂದಿನಿಂದಲೂ ಪಳಗಿಸಿಕೊಂಡು ಬಂದ ಬಾತುಕೋಳಿಗಳನ್ನು ಕುಟುಂಬವೊಂದು ಅಲೆಮಾರಿಯಾಗಿಯೇ ಆಹಾರ ಸಿಕ್ಕುವ ಕಡೆ ಮೇಯಿಸಿಕೊಂಡು ತಿರುಗುವುದೂ ಉಂಟು. ಗದ್ದೆಗಳ ಕೊಯ್ಲು ಮುಗಿದಾಗ ಗದ್ದೆಗಳಿಗೆ ಬಿಟ್ಟು ಮೇಯಿಸುವುದಿದೆ. ಅಪರೂಪಕ್ಕೆ ತೋಟದ ಮನೆಗಳಲ್ಲಿ ರೈತರು ಬಾತುಕೋಳಿಗಳನ್ನು ಸಾಕುವರು. ಬಾತುಕೋಳಿಗಳಲ್ಲಿ ಹಲವಾರು ಬಗೆಗಳಿವೆಯಾದರೂ ಆ ಪ್ರತ್ಯೇಕತೆಯನ್ನು ಹಂಪಿ ಜನಪದರು ಕೂಡ ಮಾಡಿದಂತಿಲ್ಲ. ಸಾಕು ಬಾತುಕೋಳಿಗಳು ಹಾರಾಟವನ್ನೆ ಮರೆತಿವೆ. ನೀರಾಶ್ರಯದ ಬಾತುಕೋಳಿಗಳ ಬಗ್ಗೆ ವಿಶೇಷ ನಂಬಿಕೆಗಳು ಅಷ್ಟಾಗಿ ಕಂಡುಬರುವುದಿಲ್ಲ. ಹಂಪಿಯ ನೈಸರ್ಗಿಕ ಜೀವ ಜಾಲದ ನಡುವೆ ಬಾತುಕೋಳಿಗಳು ಪ್ರಾಚೀನ ಕಾಲದಿಂದಲೂ ವಲಸೆ ಬರುವ ಮೂಲಕ ಸಂಬಂಧ ಸಾಧಿಸಿಕೊಂಡಿವೆ.

ಬುಂಡು ಬುಳಕ: ಕೆರೆಗಳಲ್ಲಿ ಸಾಧಾರಣವಾಗಿ ಕಾಣುವ ಪಕ್ಷಿ. ಜಲಪಕ್ಷಿಗಳು ಮೀನನ್ನೇ ತಿಂದು ಬದುಕಬೇಕಾದ್ದರಿಂದ ಹಾಗು ಜಲಚರಗಳೇ ಪ್ರಧಾನ ಆಹಾರವಾದ್ದರಿಂದ ಜೀವಜಾಲದ ವೈವಿಧ್ಯ ಆಹಾರ ಕಡ್ಡಾಯವಾಗಿ ಇರಲೇಬೇಕಾಗುತ್ತದೆ. ಬಯಲು ಪ್ರದೇಶಗಳ ಹಕ್ಕಿಗಳಿಗೆ ಜಲಚರಗಳ ಅವಶ್ಯಕತೆ ಇಲ್ಲ. ಹಾಗಾಗಿ ಅವು ಮುನುಷ್ಯ ಸಮಾಜದ ಸಮೀಪದಲ್ಲೆ ಬದುಕಬೇಕಾಯಿತು. ಮನುಷ್ಯರಿಗೆ ಹತ್ತಿರವಾದ್ದರಿಂದಲೇ ಆ ಬಗೆಯ ಹಕ್ಕಿಗಳಿಗೆ ಜನಪದ ಪರಂಪರೆ ವಿಭಿನ್ನವಾಗಿ ಪ್ರತಿಕ್ರಿಯಿಸಬೇಕಾಯಿತು. ಮನುಷ್ಯರ ಸಂಬಂಧ ಪಡೆದ ಹಕ್ಕಿಗಳ ಜೀವನ ವಿಧಾನವೂ ರೈತರ ಸಂಸ್ಕೃತಿಯ ಭಾಗವಾಯಿತು. ಜಲಪಕ್ಷಿಗಳು ದೂರದಲ್ಲಿದ್ದವು. ಹಾಗಾಗಿ ಅವುಗಳ ಬಗ್ಗೆ ಭಾವನಾತ್ಮಕವಾದ ನಿರೂಪಣೆಗಳು ಸಾಧ್ಯವಾಗಲಿಲ್ಲ. ಹಕ್ಕಿಪಿಕ್ಕಿ ಜನಾಂಗ ಮಾತ್ರ ಎಲ್ಲ ಬಗೆಯ ಪಕ್ಷಿಗಳ ಬಗ್ಗೆ ತಿಳುವಳಿಕೆ ಪಡೆದಿತ್ತು. ಹಕ್ಕಿಪಿಕ್ಕಿಗಳೆಂದರೆ ಪಕ್ಷಿ ಜನಾಂಗ ಎಂದೇ ಕರೆಯಬೇಕಾಗುತ್ತದೆ. ಬೇಡ, ಗೊಲ್ಲ, ಕುರುಬರು ಹೇಗೆ ಪಶುಪಾಲಕರಾಗಿ ಪ್ರಾಣಿಗಳ ಜೊತೆ ಸಂಬಂಧ ಸಾಧಿಸಿಕೊಂಡರೊ ಅಂತದೇ ಸಂಬಂಧವನ್ನು ಹಕ್ಕಿಪಿಕ್ಕಿಗಳು ರೂಪಿಸಿಕೊಳ್ಳಲು ಆಗಲಿಲ್ಲ. ಪಕ್ಷಿ ಸಂಕುಲವು ಅಷ್ಟು ಸುಲಭವಾಗಿ ಪಶುಸಂಪತ್ತಿನ ಹಾಗೆ ಮನುಷ್ಯರಿಗೆ ಹೊಂದಿಕೊಳ್ಳುವಂತದಾಗಿರಲಿಲ್ಲ. ಹಾಗೆಯೆ ಎಲ್ಲ ಪಕ್ಷಿಗಳನ್ನು ನಿಸರ್ಗದಲ್ಲಿ ಮನುಷ್ಯರು ಪಳಗಿಸುವುದು ಸಾಧ್ಯವಿಲ್ಲ. ಈ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಹಂಪಿಯ ಪಕ್ಷಿ ಜಾನಪದವನ್ನು ನೋಡಿದರೆ ಜಲಪಕ್ಷಿಗಳ ಅಗ್ಗೆ ಅಷ್ಟಾಗಿ ಮಾಹಿತಿ ಸಿಕ್ಕುವುದಿಲ್ಲ.

ಬೆಸ್ತರು ಒಂದಿಷ್ಟು ಪ್ರಮಾಣದಲ್ಲಿ ಜಲಪಕ್ಷಿಗಳ ಬಗ್ಗೆ ಸಂಬಂಧ ರೂಪಿಸಿಕೊಂಡಿದ್ದಾರೆ. ಬುಂಡು ಬುಳಕ ಹಕ್ಕಿಯು ಬಲೆಯ ತುದಿಗೆ ಗುರುತಿಗೆಂದು ಕಟ್ಟುವ ಪುಟ್ಟ ಸೋರೆ ಬುರುಡೆಯ ಹಾಗೆ ಕಾಣುವುದರಿಂದ ಬುಂಡೆ ಬುಳಕ ಎಂದು ಕರೆಯುವರು. ಪುಟ್ಟ ಸೋರೆ ಬುರುಡೆಯ ಹಾಗೆಯೆ ನೀರ ಮೇಲೆ ಅಲೆಯ ಲಯದಲ್ಲೆ ತೇಲುವ ಈ ಹಕ್ಕಿಯು ಬುಳುಕ್ ಎಂದು ಮುಳುಗಿ ಬುಳುಕ್ ಎಂದು ಮೇಲೇಳುವುದರಿಂದ ಗುಳಕ್ ಬುಳಕ್ ಹಕ್ಕಿ ಎಂತಲೂ ಕರೆಯುವರು. ಇದೇ ಪಕ್ಷಿಯ ಮತ್ತೊಂದು ಪ್ರಭೇದವಾದ ನಾಮದ ಹಕ್ಕಿಯೂ ಕೂಡ ಜನಪ್ರಿಯವಾಗಿದೆ. ಕಪ್ಪುಬಣ್ಣದ ದುಂಡನೆಯ ಈ ಹಕ್ಕಿಯ ತಲೆ ಮಾತ್ರ ಬಿಳಿ ಬಣ್ಣದಾಗಿದ್ದು ನಾಮದಂತೆ ಕಾಣುತ್ತದೆ. ಹೀಗಾಗಿ ನಾಮದ ಗುಳುಮುಳುಕ ಎಂತಲೂ ಕರೆಯುವರು.

ನೀರ್ ಕಾಗೆ: ನೀರ್ ಕಾಗೆಯ ಬಗೆಗೂ ಮಾಹಿತಿ ಇಲ್ಲ. ಉದ್ದ ಕತ್ತಿನ ಹಾವು ಕೊಕ್ಕರೆಯಾಗಲಿ, ಉದ್ದಕಾಲಿನ ಕರಿಕೋಟು ಧರಿಸಿದಂತಿರುವ ಕೊಕ್ಕರೆಯ ಬಗೆಗಾಗಲಿ, ಬಾನಕ್ಕಿಗಳ  ಕುರಿತಾಗಲಿ, ನೀರ ತಡಿಯಲ್ಲೆ ಅಲೆಯುತ್ತ ನೀರುಳಗಳ ಹಿಡಿದು ತಿನ್ನುವ ಮರಳು ಪೀಪಿಯ ಬಗ್ಗೆಯಾಗಲಿ ಅಂತಹ ಮಹತ್ವದ ವಿವರಗಳು ಕಾಣುವುದಿಲ್ಲ. ಹಂಪಿಯ ಬೆಟ್ಟಗುಡ್ಡಗಳಲ್ಲಿ ನಿಗೂಢವಾಗಿ ಕೆಲವು ಪಕ್ಷಿಗಳು ಉಳಿದಿವೆ ಎಂದು ದನಗಾಹಿಗಳು ಹೇಳುವರು. ಅಂತವುಗಳಲ್ಲಿ ಕೂಗುಮಾರಿ ಹಕ್ಕಿಯೂ ಒಂದು. ಇದು ಎಲ್ಲ ಕಾಡು ಹಾಗೂ ನಿಗೂಢ ನೆಲೆಗಳಲ್ಲೂ ಕಂಡು ಬರುವ ಹಕ್ಕಿ. ಗದ್ದೆಗಳಲ್ಲಿ ಕೊಳ, ಸರೋವರ, ನದಿದಂಡೆಗಳಲ್ಲಿ ಬದುಕುವ ಅನೇಕ ಜಲ ಪಕ್ಷಿಗಳ ತಕ್ಕ ವಿವರವೇ ಈ ಪರಿಸರದಲ್ಲಿ ವಿವರವಾಗಿ ಸಿಗುವುದಿಲ್ಲ. ಅತ್ಯಂತ ಪ್ರಾಚೀನ ವಾಸದ ನೆಲೆಯಾದ ಹಂಪಿಯ ಜೀವಜಾಲದಲ್ಲಿ ಪಕ್ಷಿ ಸಂಕುಲದ ತಿಳುವಳಿಕೆಯು ಅವ್ಯಕ್ತವಾಗಿಯೆ ಉಳಿದಿದೆ.

ಹದ್ದು : ಎತ್ತರದ ಬಂಡೆಗಳು ಹದ್ದುಗಳ ಸಾಮಾನ್ಯ ವಾಸದ ನೆಲೆಗಳು. ಹಂಪಿಯ ಬೆಟ್ಟಸಾಲುಗಳಲ್ಲಿ ಎತ್ತರದ ಮರಗಳು ಇರಲಿಲ್ಲದ್ದಕ್ಕೆ ಬಂಡೆಗಳನ್ನೇ ಸಾಮಾನ್ಯ ವಾಸದ ನೆಲೆಗಳನ್ನಾಗಿ ಆಯ್ಕೆ ಮಾಡಿಕೊಂಡಿವೆ. ಹೀಗಾಗಿಯೇ ಹಂಪಿ ಪರಿಸರದಲ್ಲಿ ’ಹದ್ದಿನ ಬಂಡೆ ’ ಎಂಬ ಐತಿಹ್ಯ ಸ್ವರೂಪದ ಗುರುತುಗಳಿವೆ. ಹದ್ದು ದೈವ ಪಕ್ಷಿಗಳಲ್ಲಿ ಒಂದು. ಎಡೆ ತಿನ್ನಲು ಹದ್ದು ಬಂದರೆ ಸತ್ತವರಿಗೆ ಸ್ವರ್ಗ ಸಿಕ್ಕಿದೆ ಎಂಬ ಸೂಚನೆಯಂತೆ. ಹದ್ದು ತಲೆ ಮೇಲೆ ಸುತ್ತು ಹಾಕಿದರೆ ಪೂಜೆ ಮಾಡಿ ಶುದ್ಧವಾಗಬೇಕೆಂದು ಹೇಳುವರು. ಹದ್ದುಗಳನ್ನು ಕೊಲ್ಲಬಾರದೆಂಬ ನಿಷೇಧವಿದೆ. ಹಾವು, ಹಲ್ಲಿ, ಕೋಳಿಮರಿ, ಪುಟ್ಟ ಹಕ್ಕಿಗಳನ್ನು ಹಿಡಿದು ಹದ್ದು ತಿನ್ನುವುದಿದೆ. ಹಂಪಿ ಪರಿಸರವು ಹದ್ದುಗಳಿಗೆ ಬಹಳ ಸುರಕ್ಷಿತವಾದ ತಾಣವಾಗಿದೆ. ಬೆಳಿಗ್ಗೆ ವೇಳೆ ಹದ್ದಿನ ಮುಖ ನೋಡಿದರೆ ಶುಭ. ಮನೆ ಮೇಲೆ ಹದ್ದು ಬಂದು ಕೂತರೆ ಸಾವಿನ ಭಯ. ವೈಷ್ಣವ ಪಂಥದ ಪ್ರಭಾವ ಹದ್ದುಗಳ ಮೇಲೂ ಆದಂತಿದೆ. ಜನಪದರು ಹದ್ದುಗಳನ್ನು ದೈವ ಹಕ್ಕಿಗಳೆಂದೇ ತಿಳಿಯುವರು.

ರಣಹದ್ದು : ರಣ ಹದ್ದುಗಳು ಹಂಪಿ ಪರಿಸರದ ಸುತ್ತ ಪ್ರಾಣಿಗಳನ್ನು ತಿಂದು ಬದುಕುತ್ತವೆ. ರಣಹದ್ದುಗಳು ಆ ಮೂಲಕ ಹಂಪಿ ಪರಿಸರದ ಸ್ವಚ್ಚತಾ ಪಕ್ಷಿಗಳೂ ಆಗಿವೆ. ಬಹುಪಾಲು ಎಲ್ಲ ಪರಿಸರದಲ್ಲೂ ರಣಹದ್ದುಗಳು ಪರಿಸರ ಸಂರಕ್ಷಣೆಯ ಕೆಲಸವನ್ನೆ ಮಾಡುತ್ತ ಬಂದಿವೆ. ರಣಹದ್ದುಗಳು ಭೀಕರವಾಗಿ ಕಾಣುವುದು ಅವುಗಳ ಆಹಾರದ ಆಯ್ಕೆಯಿಂದಲೇ ಸತ್ತದ್ದನ್ನು ತಿನ್ನುವುದೇ ರಣಹದ್ದುಗಳಿಗಿರುವ ಪಾಲು. ಈ ಬಗೆಯಲ್ಲಿ ಬದುಕುವ ಅವುಗಳ ಪರಿಯನ್ನು ಮನುಷ್ಯ ಸಲೀಸಾಗಿ ಒಪ್ಪಲಾರ. ಹೆಣಗಳನ್ನು ತಿನ್ನುವ ರಣಹದ್ದುಗಳೆಂದು ಜರಿಯುವುದಿದೆ. ಸತ್ತ ಯಾವುದನ್ನೇ ಆದರೂ ರಣಹದ್ದುಗಳು ತಿಂದುಬಿಡುತ್ತವೆ. ಜೈನ ಶವಸಂಸ್ಕಾರದಲ್ಲಿ ಹಿಂದೆ ಶವಗಳನ್ನು ರಣಹದ್ದುಗಳಿಗೆ ದಾನ ಮಾಡುತ್ತಿದ್ದರೆಂದು ಹೇಳುವುದಿದೆ. ವಿಜಯನಗರದ ನಿರ್ಜನ ಪ್ರದೇಶಗಳ ಮರೆಯಲ್ಲಿರುವ ರಣಹದ್ದುಗಳ ಬಗ್ಗೆ ದನಗಾಹಿಗಳು ಭಯಪಡುವರು.

ಗರುಡ: ಹದ್ದುಗಳಲ್ಲೇ ಇರುವ ಒಂದು ವಿಶೇಷ ಪ್ರಭೇದ ಗರುಡ. ಗರುಡ ಪಕ್ಷಿಯನ್ನು ಪೂಜಿಸಲಾಗುವುದು. ಪವಿತ್ರ ಪಕ್ಷಿಯ ಸ್ಥಾನ ಗುರುಡನಿಗಿದೆ. ವಿಷ್ಣುವಿನ ವಾಹನ ಗರುಡ. ಗರುಡ ಪುರಾಣವೇ ಇದೆ. ಬೆಳಿಗ್ಗೆ ಎದ್ದು ಗರುಡನ ಮುಖ ನೋಡಿದರೆ ಪುಣ್ಯ. ಕಂದು ಕೆಂಪು ಬಣ್ಣದ ಗುರುಡನ ತಲೆ  ಕತ್ತು ಬೆಳ್ಳಗಿದೆ. ಗರುಡ ಪಕ್ಷಿ ಏನಾದರೂ ಶವ ಸಂಸ್ಕಾರದಲ್ಲಿ ಅಥವಾ ತಿಥಿಯ ವೇಳೆ ಸ್ಮಶಾನದಲ್ಲಿ ಕಂಡರೆ ದೇವರು ಶುಭ ಹಾರೈಸಲು ಬಂದಿರುವನು ಎಂದೇ ಭಕ್ತಿಯಿಂದ ಕೈ ಮುಗಿಯುವರು. ಗರುಡ ಪೂಜೆಯನ್ನು ವಿಶೇಷ ಫಲಗಳಿಗಾಗಿ ಮಾಡಲಾಗುವುದು. ಹಂಪಿಯ ಪರಿಸರದಲ್ಲಿ ಗರುಡ ಪಕ್ಷಿಯ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಗರುಡ ಕೂಡ ಬೇಟೆಗಾರ ಹಕ್ಕಿಯೇ. ಇಲಿ ಹಾವುರಾಣಿ ಕಪ್ಪೆ ಏಡಿ ಮೀನು ಹಾವು ಮೊಲ ಮುಂತಾದವನ್ನು ಹಿಡಿದು ತಿನ್ನುವುದು. ಸಾಮಾನ್ಯವಾಗಿ ಬೆಟ್ಟಗುಡ್ಡಗಳ ಎತ್ತರದ ಮರಗಳಲ್ಲಿ ಗೂಡುಕಟ್ಟಿ ಮರಿಮಾಡಿ ಉಳಿದ ವೇಳೆ ಮರಗಳ ಮರೆಯಲ್ಲೆ ಕಾಲ ಕಳೆಯುವುದು. ಊರೊಳಗೆ ಸಲೀಸಾಗಿ ಬರುವುದಿಲ್ಲ. ನದಿ ದಂಡೆಗಳಲ್ಲಿ ಆಹಾರಕ್ಕೆ ವಿಶೇಷವಾಗಿ ಹಾರಾಡುವುದು. ರಣಹದ್ದುಗಳಂತು ದೂರವೇ ಇರುತ್ತವೆಯೆ ವಿನಃ ಜನ ವಾಸದ ಸಮೀಪ ಬರಲಾರವು. ವಾಸನೆಯನ್ನು ಅತ್ಯಂತ ದೂರದಿಂದಲೆ ಗ್ರಹಿಸಿ ಸತ್ತದ್ದನ್ನು ತಿಂದು ಮುಗಿಸಿ ಮಾಯವಾಗುವ ರಣಹದ್ದುಗಳ ನಡುವೆ ಗರುಡ ಪಕ್ಷಿಯು ಬಹಳ ಸುಂದರವಾಗಿ ಕಾಣುತ್ತದೆ. ವಿಜಯನಗರ ಕಾಲದ ಪ್ರಮಾಸಿಗರ ಬರಹಗಳಲ್ಲಿ ಗರುಡ, ಹದ್ದುಗಳನ್ನು ಪಳಗಿಸಿ ಸಂದೇಶ ರವಾನೆಗೂ ಕ್ರೀಡೆಗೂ ಬಳಸುತ್ತಿದ್ದರು ಎಂಬ ಅಂಶವನ್ನು ಕಾಣಬಹುದು. ಮಾನವ ಪರಿಸರದ ಹೊರಗೇ ಉಳಿದಿರುವ ಹದ್ದು ರಣಹದ್ದು ಗರುಡಗಳು ಗುಪ್ತ ಪಕ್ಷಿಗಳೇ ಸರಿ. ಮಾನವರ ಆಸರೆಯಲ್ಲಿ ಇರಬೇಕಾದ ಅನಿವಾರ್ಯತೆ ಇವುಗಳಿಗೆ ಇಲ್ಲವಾದ್ದರಿಂದ ಜೀವಜಾಲದಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ಪಡೆದಿರುವ ಹಕ್ಕಿಗಳಾಗಿವೆ. ಬಿಜ್ಜು ಎಂಬ ಮತ್ತೊಂದು ಹಕ್ಕಿಯು ಹದ್ದಿನ ಜಾತಿಯ ಇನ್ನೊಂದು ಬೇಟೆಗಾರ ಹಕ್ಕಿ. ಚಿಕ್ಕ ಗಾತ್ರದ ಈ ಹಕ್ಕಿ ರೈತ ಮಿತ್ರ ಹೆಚ್ಚಾಗಿ ಇಲಿಗಳನ್ನೆ ತಿನ್ನುವುದು ಇದರ ವಿಶೇಷ. ಕೆಲವೊಮ್ಮೆ ಪುಟ್ಟ ಹಕ್ಕಿಗಳನ್ನು ಬಿಜ್ಜು ಹಿಡಿಯುವುದು. ಚಾಣಾಕ್ಷತೆಯಲ್ಲಿ ಬಿಜ್ಜು ಎತ್ತರದಲ್ಲಿ ಒಂದೇ ಸಮನೆ ರೆಕ್ಕೆ ಬಡಿಯದೆ ಹಾಗೆ ಬೇಟೆಯನ್ನು ಗುರುತಿಸಿ ತಟ್ಟನೆ ಬಡಿದಂತೆ ಬಿದ್ದು ದಾಳಿ ಮಾಡಿ ಹಿಡಿಯಬಲ್ಲದು. ಹಂಪಿ ಪರಿಸರದಲ್ಲಿ ಈ ನಾಲ್ಕೂ ಬಗೆಯ ಬೇಟೆಗಾರ ಹಕ್ಕಿಗಳು ಸುರಕ್ಷಿತವಾಗಿವೆ ಎಂದೇ ಹೇಳಬಹುದು.

ಗೀಜುಗ: ಎಲ್ಲ ಪ್ರದೇಶಗಳಲ್ಲಿರುವಂತೆಯೇ ಹಂಪಿಯಲ್ಲೂ ಕೂಡ ಗೀಜುಗ ಪಕ್ಷಿಗೆ ಜನಪದರ ಭಾವನಾತ್ಮಕ ಸಂಬಂಧವು ಒಂದೇ ಆಗಿದೆ. ಗೀಜುಗ ಅದ್ಬುತವಾಗಿ ಗೂಡು ಕಟ್ಟುವ ಹಕ್ಕಿ. ಭಾಗಶ: ಮನುಷ್ಯರಿಗೆ ಸೂರಿನ ಕಲ್ಪನೆ ಗೀಜುಗನಿಂದಲೆ ಬಂದಿರಬೇಕು. ಸುಂದರವಾಗಿಯೂ ಇರುವ ಗೀಜುಗ ಸುಂದರ ಪ್ರಣಯ ಗಾನವನ್ನೂ ಗೂಡನ್ನೂ ನಿರ್ಮಿಸಿ ಹೆಣ್ಣಿನ ಮನ ಗೆಲ್ಲುವ ಹಕ್ಕಿಯಾಗಿದೆ. ಹಳ್ಳ ಹೊಳೆ ಕೆರೆ ಮರಗಳ ನೀರಿನಾಶ್ರಯದ ರಕ್ಷಣೆಯಲ್ಲಿ ಗೂಡು ನಿರ್ಮಿಸುವ ಗೀಜುಗಗಳು ನಿರಂತರವಾಗಿ ದನಿಗೈಯ್ಯುತ್ತ ಇಡೀ ಪರಿಸರವನ್ನು ಇಂಪಿನಿಂದ ಆಕ್ರಮಿಸಿಕೊಂಡಿರುತ್ತವೆ. ಕಾಡಿನಲ್ಲಿರುವುದಕ್ಕಿಂತ ಊರಿನ ಆಸುಪಾಸಿನಲ್ಲಿರುವುದೇ ಗೀಜುಗಗಳಿಗೆ ಈಗ ಹಿತವಾಗಿದೆ. ಕೃಷಿ ಬೆಳೆಗಳನ್ನೆ ಅವಲಂಬಿಸಿರುವ ಅನೇಕ ಹಕ್ಕಿಗಳಂತೆ ಗೀಜುಗ ಕೂಡ ರೈತರ ಹತ್ತಿರದಲ್ಲೆ ಇರಲು ಬಯಸುವ ಹಕ್ಕಿ. ಮನೆ ಮುಂದೆ ಅಲಂಕಾರಕ್ಕಾಗಿ ಮಕ್ಕಳು ಗೀಜುಗನ ಗೂಡನ್ನು ತಂದು ಕಟ್ಟಿಕೊಳ್ಳುವುದುಂಟು. ಮಕ್ಕಳಿಗಂತು ಗೀಜುಗ ಬಹಳ ಪ್ರಿಯವಾದ ಹಕ್ಕಿ. ಕಾಳು ಕಟ್ಟುವ ವೇಳೆ ಅಥವಾ ಹಾಲುದುಂಬಿದ ಜೋಳ, ಸಜ್ಜೆ, ಭತ್ತ ಮುಂತಾದವನ್ನು ಮೇಯಲು ಗೀಜುಗಗಳು ಹಿಂಡಾಗಿ ದಾಳಿಯಿಡುವುದುಂಟು. ಇವುಗಳ ಕಾಟ ತಾಳದವರು ಹೊಲಗಳಲ್ಲಿ ಮಚಾನಿನಂತೆ ಅಟ್ಟೆ ನಿರ್ಮಿಸಿ ಕಾದು ಕುಳಿತು ಡಬ್ಬ ಬಡಿದು ಹಾ… ಹೋ… ಎಂದು ಕೂಗು ಹಾಕಿ ಓಡಿಸುವರು ಜನಪದ ಸಾಹಿತ್ಯದಲ್ಲಿ ಗೀಜುಗನ ಹಕ್ಕಿಯ ಚಿತ್ರಗಳು ಸುಂದರವಾಗಿವೆ. ಗೀಜುಗನಾಗಿ ತನ್ನ ನಲ್ಲ ಬರಲಿ ಎಂಬ ಆಶಯ ಜನಪದ ಕಥೆ ಕಾವ್ಯಗಳಲ್ಲಿ ಬರುವುದುಂಟು.

ಹಾವುಗಳು ಗೀಜುಗನ ಹಕ್ಕಿಗಳಿಗೆ ದೊಡ್ಡ ಶತ್ರು. ಅಲಂಕಾರಿಕ ಹಕ್ಕಿಗಳಾಗಿ ಗೀಜುಗವನ್ನು ಪ್ರಣಯ ಪಕ್ಷಿಗಳೇ ಎಂದು ಭಾವಿಸಿ ಅವುಗಳನ್ನು ಸಾಕುವ ಕ್ರಮವು ಹಳೆ ಮೈಸೂರಿನ ಭಾಗದಲ್ಲಿತ್ತು. ಗೀಜುಗ ಹಕ್ಕಿಯು ಮೂಲತಃ ಗುಬ್ಬಿಯ ಸಹೋದರ ಪಕ್ಷಿ, ಗೀಜುಗದಲ್ಲೇ ಇನ್ನೊಂದು ಪ್ರಭೇದದ ಹಕ್ಕಿಯಿದೆ. ಅದನ್ನು ಮುನಿಯ ಎಂದು ಗುರುತಿಸಲಾಗಿದೆ. ಗೀಜುಗ ಗುಬ್ಬಿಗಳಿಗಿಂತಲು ಪುಟ್ಟವಾದ ಮುನಿಯ ಅಳಿವಿನ ಅಂಚಿನಲ್ಲಿರುವ ಹಕ್ಕಿ. ಹೆಚ್ಚೆಂದರೆ ಎಂಟತ್ತು ಸಂಖ್ಯೆಯಲ್ಲಿ ಗುಂಪಾಗಿ ಹೊಲಗಳಲ್ಲಿ ಆಹಾರ ಹೆಕ್ಕಿಕೊಂಡು ಬದುಕಿರುವ ಮುನಿಯಗಳು ಒಂದು ಕಾಲಕ್ಕೆ ಹೇರಳವಾಗಿದ್ದವೆಂದು ಜನಪದ ಕಥೆಗಳಲ್ಲಿ ಬರುವ ವಿವರಗಳ ಆಧಾರದಿಂದ ಹೇಳಬಹುದು. ಈ ಮೂರರಲ್ಲೇ ಇನ್ನೊಂದು ಪ್ರಭೇದವಿದೆ. ಅದನ್ನು ಚಟಗುಬ್ಬಿ ಎಂದು ಕರೆವರು. ಇದು ಊರ ಹೊರಗಿನ ಹೊಲ ಮಾಳಗಳಲ್ಲಿ ಅಪರೂಪಕ್ಕೆ ಕಾಣುವುದು. ಪುಟ್ಟ ಹಕ್ಕಿಗಳ ಬಗ್ಗೆ ಜನಪದರು ದೊಡ್ಡ ಪ್ರಮಾಣದ ನಿರೂಪಣೆಗಳನ್ನು ಮಾಡಿಲ್ಲ.

ಮಿಂಚುಳ್ಳಿ : ಮೂಲತಃ ಮಿಂಚುಳ್ಳಿಯು ಜಲ ಪಕ್ಷಿಯ ಗುಣಗಳಿಗೆ ಹೆಚ್ಚು ಸಮೀಪವಾದುದೇ ಆದರೂ ಪೂರ್ಣ ಪ್ರಮಾಣದಲ್ಲಿ ಜಲ ಪಕ್ಷಿಯಲ್ಲ. ಭೂಮಿಯ ಮೇಲಿನ ಕೀಟಗಳು ಹುಳು ಉಪ್ಪಟ್ಟೆಗಳನ್ನು ಕೂಡ ನಂಬಿ ಜನ ವಸತಿಗಳ ಸಮೀಪಕ್ಕೂ ಬಂದು ಬದುಕನ್ನು ರೂಢಿಸಿಕೊಂಡಿರುವ ಹಕ್ಕಿ ಮಿಂಚುಳ್ಳಿ. ಮಿಂಚಿನಂತೆ ನೀರಿಗೆ ಬಿದ್ದು ಚಂಗನೆ ಬೆಳ್ಳಿ ಮೀನನ್ನೆ ಹಿಡಿದು ಹಾರಿ ಹೋಗಿ ಕುಕ್ಕಿ ಕಬಳಿಸುವ ಇದರ ಸ್ವಭಾವಕ್ಕೆ ತಕ್ಕಂತೆ ಮಿಂಚುಳ್ಳಿ ಎಂಬ ಹೆಸರು ಬಂದಿದೆ. ಮಿಂಚುಳ್ಳಿ ಯಾವುದೇ ಬರಗಾಲವನ್ನು ಸಮರ್ಥವಾಗಿ ಎದುರಿಸಬಲ್ಲ ಶಕ್ತಿಯನ್ನು ಪಡೆದುಕೊಂಡಿದೆ. ಹಂಪಿ ಪರಿಸರದಲ್ಲಿ ಮಿಂಚುಳ್ಳಿಗೆ ಅಗತ್ಯವಾದ ಎಲ್ಲ ಸವಲತ್ತುಗಳಿವೆ. ಮಿಂಚುಳ್ಳಿಯಲ್ಲೇ ಮತ್ತೆ ಎರಡು ವಿಭಿನ್ನ ಪ್ರಬೇಧಗಳಿವೆ. ಅವೆರಡನ್ನು ಕೂಡ ಜನಪದರು ಮಿಂಚುಳ್ಳಿ ಎಂಬ ಒಂದೇ ಹೆಸರಿನಲ್ಲಿ ಗುರುತಿಸುವರು. ದಪ್ಪ ಗಾತ್ರದ ಮಿಂಚುಳ್ಳಿ ಹಳ್ಳಿಗರಿಗೆ ಹೆಚ್ಚು ಸಮೀಪವಾಗಿದ್ದರೆ ಅದರಂತೆಯೇ ಆಕಾರದಲ್ಲಿರುವ ಆದರೆ ಪುಟ್ಟಗಾತ್ರದ ಮಿಂಚುಳ್ಳಿಯು ಹೆಚ್ಚಾಗಿ ನೀರಿನ ಆಶ್ರಯದಿಂದಲೇ ಆಹಾರ ಸಂಪಾದಿಸಿಕೊಳ್ಳುತ್ತದೆ. ಇವೆರಡರ ನಡುವೆ ಬರುವ ಮಿಂಚುಳ್ಳಿಯು ಕಪ್ಪು ಬಿಳಿ ಪಟ್ಟೆಗಳಲ್ಲಿರುವ ಹಕ್ಕಿಯಾಗಿದ್ದು ನೀರಿಗೆ ಧುಮುಕಿ ಮೀನು ಹಿಡಿವ ಪರಿಯು ಉಳಿದೆರಡು ಮಿಂಚುಳ್ಳಿಗಿಂತಲೂ ವಿಶಿಷ್ಟವಾದುದಾಗಿದೆ. ಇದನ್ನು ಪಟ್ಟೆ ಮಿಂಚುಳ್ಳಿ ಎಂದು ಗುರುತಿಸುವರು. ದೊಡ್ಡ ಮಿಂಚುಳ್ಳಿ ಊರಾಚೆಯ ತಿಪ್ಪೆಗಳ ಬಳಿಯೊ ಹೊಂಡಗಳ ಸಮೀಪವೊ ಹುಳುಗಳಿಗಾಗಿ ಕಾಯುತ್ತ ಕೂರುವುದನ್ನು ಸಾಮಾನ್ಯವಾಗಿ ಕಾಣಬಹುದು. ಮೂರು ಬಗೆಯ ಮಿಂಚುಳ್ಳಿಗಳು ಭಿನ್ನ ರೀತಿಯಲ್ಲಿ ಶಬ್ದ ಹೊರಡಿಸುವುದಾದರೂ ತಕ್ಷಣಕ್ಕೆ ಒಂದೇ ರೀತಿಯಾಗಿ ಕೇಳಿಸುವುದಿದೆ. ಮಿಂಚುಳ್ಳಿಗಳ ಕೂಗು ಮರಕುಟಿಗ ಹಕ್ಕಿಗಳಂತೆ ಒಮ್ಮೊಮ್ಮೆ ಕೇಳಿಸಬಲ್ಲದು. ಆದರೆ ಮಿಂಚುಳ್ಳಿಯ ಕೂಗು ಹಿತವಾಗಿಯೇ ಇದೆ.

ಹಂಪಿ ಪರಿಸರವು ತುಂಗಭದ್ರಾ ಕಾಲುವೆಯ ಮೂಲಕ ಹಸಿರಾದದ್ದರಿಂದ ಹಾಗೂ ವಿಶೇಷವಾಗಿ ಜೀವಜಾಲವು ಭಿನ್ನ ಸ್ವರೂಪ ಪಡೆದಿದ್ದರಿಂದ ಮಿಂಚುಳ್ಳಿಗಳಿಗೆ ಸಾಕಷ್ಟು ಆಹಾರ ಸಿಗುತ್ತದೆ. ಸದ್ಯ ಮಿಂಚುಳ್ಳಿಗಳನ್ನು ಬೇಟೆ ಆಡುವುದಿಲ್ಲ. ಒಂದು ಕಾಲಕ್ಕೆ ಅವುಗಳ ಆಕರ್ಷಕ ರೆಕ್ಕೆ ಪುಕ್ಕಕ್ಕಾಗಿ ಕೊಲ್ಲಲಾಗುತ್ತಿತ್ತಂತೆ. ಅಲಂಕಾರಿಕ ಹಕ್ಕಿಯಾಗಿ ಮಿಂಚುಳ್ಳಿಗಳನ್ನು ಪಳಗಿಸಿ ಸಾಕಲು ಮನುಷ್ಯರು ಪ್ರಯತ್ನಿಸಿ ವಿಫಲವಾಗಿರಲೇಬೇಕು. ಯಾಕೆಂದರೆ ಅವುಗಳ ಆಹಾರವೇ ಅವನ್ನು ಪಳಗಿಸಿ ಸಾಕಲು ಆಗದಂತೆ ಮಾಡಿರುವುದು. ಅಲ್ಲದೆ ಮಿಂಚುಳ್ಳಿಗಳು ಮೊಟ್ಟೆ ಇಕ್ಕಿ ಮರಿ ಮಾಡುವುದು ಮಣ್ಣು ಕೊರೆದು ಮಾಡಿದ ಗೂಡುಗಳಲ್ಲಿ. ಯಾರೂ ಅಂತಹ ಮಣ್ಣಿನ ದಿಬ್ಬದ ಗೋಡೆ ತನಕ ಸುಳಿಯದಂಥ ಸ್ಥಳದಲ್ಲಿ ಗೂಡು ಮಾಡಿ ಸಂತಾನ ಬೆಳೆಸಿಕೊಳ್ಳುತ್ತವೆ. ನಿತ್ಯವೂ ಮಿಂಚುಳ್ಳಿಗಳಿಗೆ ಮಿಡತೆ, ಹುಳು ಉಪ್ಪಟ್ಟೆ, ಮೀನು ಉಣಿಸಲು ಯಾರಿಂದಲೂ ಸಾಧ್ಯವಾಗದ ಕೆಲಸ.

ಗೊರವಂಕ: ಗ್ರಾಮ ಸಮಾಜದಲ್ಲಿ ಗೊರವಂಕಗಳು ಇದ್ದೇ ಇರಬೇಕು ಎಂಬಷ್ಟು ಸಲೀಸಾಗಿ ಗೊರವಂಕಗಳ ಬಗ್ಗೆ ಆತ್ಮೀಯತೆಯನ್ನು ತೋರಲಾಗುವುದು. ಪಶುಪಾಲಕರಿಗೆ ಗೊರವಂಕಗಳು ಉಪಕಾರಿ ಹಕ್ಕಿಗಳಾಗಿದ್ದವು. ಗೊರವಂಕಗಳು ದನ ಎಮ್ಮೆಗಳಿಗೆ ಪೀಡಿಸುವ ಉಣ್ಣೆಗಳನ್ನು ಹಿಡಿದು ತಿನ್ನುವ ಕಾಯಕ ಮಾಡುವುದರಿಂದ ಪ್ರಾಣಿಗಳು ಕೂಡ ಗೊರವಂಕಗಳಿಗೆ ಪ್ರೀತಿಯಿಂದ ಸ್ಪಂದಿಸುತ್ತವೆ. ಗೊರವಂಕಗಳಲ್ಲಿ ಉಣ್ಣೆ ಗೊರವಂಕವೇ ಒಂದು ಪ್ರತ್ಯೇಕವಾದ ಗುಂಪು. ಇವು ಹೆಚ್ಚಾಗಿ ರಾಸುಗಳ ಹಿಂಡಿನ ಜೊತೆ ಬದುಕುತ್ತವೆ. ದನಕರುಗಳು ಮೇಯುವಾಗ ಹುಲ್ಲಿನ ಮರೆಯಲ್ಲಿರುವ ಹುಳು ಉಪ್ಪಟ್ಟೆಗಳು ಮೇಲ್ಹಾರುವುದು ಸಹಜ. ಆಗ ಈ ಗೊರವಂಕಗಳು ಅವನ್ನು ಹಿಡಿದು ತಿನ್ನುತ್ತವೆ. ಆಹಾರ ಸಂಬಂಧ ದನಕರುಗಳು ಮೇಯುವ ರೀತಿಯಲ್ಲಿ ಒದಗಿ ಬರುವುದರಿಂದ ಗೊರವಂಕಗಳು ಈ ಪ್ರಾಣಿಗಳನ್ನೆ ಅವಲಂಬಿಸುವುದಿದೆ. ಉಳಿದಂತೆ ಸಾಮಾನ್ಯವಾಗಿರುವ ಗೊರವಂಕಗಳು ಕಾಡು ಗಿಡದ ಹಣ್ಣುಗಳನ್ನು ತಿಂದೂ ಬದುಕಬಲ್ಲವು. ಸಸ್ಯ ಹಾಗೂ ಮಾಂಸಹಾರಿಯಾದ ಎರಡೂ ಆಹಾರ ಬಗೆಗಳನ್ನು ಗೊರವಂಕಗಳು ರೂಢಿಸಿಕೊಂಡಿವೆ. ಹೊಲದಲ್ಲಿ ಬೆಳೆಗಳಿಗೆ ಕಾಡುವ ಹುಳುಗಳನ್ನು ಕೂಡ ಗೊರವಂಕ ಹಿಡಿದು ತಿನ್ನುತ್ತವೆ. ಗೊರವಂಕಗಳು ಗದ್ದಲದ ಹಕ್ಕಿಗಳೇ. ಸಂಜೆ ಮುಂಜಾವಾದ ಕೂಡಲೆ ಸಾಮೂಹಿಕ ಕೂಗಾಟ ಇಡೀ ಊರನ್ನೆ ಎಚ್ಚರಿಸಬಲ್ಲದು. ಮನುಷ್ಯರಿಗೆ ಸಮೀಪವಾಗಿಯೆ ಗೊರವಂಕಗಳು ಬದುಕಲಿಚ್ಚಿಸುತ್ತವೆ. ಯಾವುದೇ ಹಳ್ಳಿಗೆ ಹೋದರೂ ಅವುಗಳ ಸದ್ದು ಕೇಳಿಯೇ ಕೇಳಿಸುತ್ತದೆ. ಗೊರವಂಕಗಳು ಸಾಕು ಪ್ರಾಣಿಗಳ ಗಾಯವನ್ನು ಸ್ವಚ್ಛಗೊಳಿಸುತ್ತವೆ. ಕೀವು ತುಂಬಿದ್ದನ್ನು ತಿಂದು ಗಾಯ ಹಬ್ಬುವುದನ್ನು ತಡೆವ ಅವುಗಳ ಕಾಯಕ ಅಮೂಲ್ಯವಾದುದು. ಹಂಪಿ ಪರಿಸರದಲ್ಲಿ ಗೊರವಂಕಗಳು ಸಾಮಾನ್ಯ ಜೀವಜಾಲದ ಸಂಬಂಧವನ್ನು ಸೂಕ್ತವಾಗಿ ರೂಪಿಸಿಕೊಂಡಿರುವ ಗೊರವಂಕಗಳು ಬದುಕಿರುವ ತನಕ ಜೋಡಿ ಹಕ್ಕಿಯಾಗಿಯೆ ಉಳಿದಿರುತ್ತವೆ. ಗಾಢವಾಗಿ ಸಾಂಸಾರಿಕ ಪ್ರೀತಿ ಗಂಡು ಹೆಣ್ಣು ಪಕ್ಷಿಗಳೆರಡರಲ್ಲೂ ಇದೆ. ಯಾವುದಾದರೂ ಒಂದು ಹಕ್ಕಿ ಸತ್ತರೂ ಉಳಿದ ಹಕ್ಕಿ ಮತ್ತೆ ಸಂಸಾರ ಮಾಡುವುದಿಲ್ಲ. ಇದ್ದಷ್ಟು ದಿನ ಅಥವಾ ಬೇಗನೆ ಒಂಟಿಯಾಗಿದ್ದು ಕಳೆದು ಹೋಗುತ್ತದೆ. ಪಕ್ಷಿ ಜೀವನದಲ್ಲಿ ಗೊರವಂಕಗಳು ಈ ಪರಿಯ ಭಾವನಾತ್ಮಕ ಸಂಬಂಧ ತುಂಬ ಅಪರೂಪವಾದದ್ದು.

ಜುಟ್ಟಕ್ಕಿ: ಈ ಹಕ್ಕಿಯ ಸಾಮಾನ್ಯ ಹೆಸರು ಬುಲ್ ಬುಲ್ ಹಕ್ಕಿ ಎನ್ನಲಾಗುವುದು. ತಲೆಯ ಮೇಲೆ ಜುಟ್ಟಿನಂತಿರುವುದರಿಂದ ಇದನ್ನು ಸ್ಥಳೀಯವಾಗಿ ಜುಟ್ಟಕ್ಕಿ ಎಂದು ಕರೆವರು. ಪಿಕಳಾರ ಎಂತಲೂ ಇದನ್ನೆ ಕರೆಯುವುದಿದೆ. ಸದಾ ಚುರುಕಾಗಿರುವ ಈ ಹಕ್ಕಿಯು ಹುಳು ಉಪ್ಪಟ್ಟೆ ತಿಂದು ಬದುಕುವುದರ ಜೊತೆಗೆ ಹೆಚ್ಚಾಗಿ ಕಾಡು ಹಣ್ಣುಗಳ ತಿಂದು ಬದುಕುವ ಹಕ್ಕಿ ಬಾಲದ ತಳದಲ್ಲಿ ಹಿಂಭಾಗವು ಕೆಂಪಾಗಿದ್ದು ಆಕರ್ಷಕವಾಗಿದೆ. ವಾತಾವರಣಕ್ಕೆ ಈ ಹಕ್ಕಿಯ ಸದ್ದು ಹಿತಕರವಾಗಿದ್ದು ದನಗಾಹಿಗಳಿಗೆ ಪ್ರೀತಿಯ ಹಕ್ಕಿಯಾಗಿದೆ. ಪೊದೆಗಳ ಮರೆಯ ತಳದಲ್ಲಿ ಗೂಡು ಕಟ್ಟುವ ಈ ಹಕ್ಕಿ ಸುಲಭವಾಗಿ ಹಾವುಗಳಿಗೆ ಆಹಾರ ಒದಗಿಸುವ ಪರಿಸ್ಥಿತಿಯನ್ನು ತಂದುಕೊಂಡಿದೆ. ಕೆಲವೊಮ್ಮೆ ಮನೆಗಳ ಬಳಿಯ ಗಿಡ ಮರಗಳ ಪೊದೆಗಳಲ್ಲೆ ಗೂಡುಕಟ್ಟಿ ಆ ಮೂಲಕ ಮನುಷ್ಯರ ರಕ್ಷಣೆಯನ್ನು ಪಡೆದುಕೊಳ್ಳುತ್ತವೆ. ಗೂಡುಕಟ್ಟಿ ಮರಿ ಮಾಡುವ ಜವಾಬ್ದಾರಿಯನ್ನು ಗಂಡು ಹೆಣ್ಣು ಎರಡೂ ಹಕ್ಕಿಗಳು ಸಮನಾಗಿ ಮಾಡುತ್ತವೆ. ಮರಿಗಳಿಗೆ ಕೀಟ ಆಹಾರವನ್ನು ಸರದಿಯಂತೆ ಎರಡೂ ಹಕ್ಕಿಗಳು ಒದಗಿಸುವವು. ಕಾಜಾಣ ಹಕ್ಕಿಯ ದೂರದ ಸಂಬಂಧಿಗಳು ಈ ಜುಟ್ಟಕ್ಕಿಗಳು. ಹಳೆ ಮೈಸೂರಿನ ಪರಿಸರದ ಇದೇ ಹಕ್ಕಿಗಳಿಗೆ ಮುಖದ ಎರಡೂ ಬದಿಯಲ್ಲಿ ಕೆಂಪು ಬಣ್ಣದ ಗುರುತುಗಳಿದ್ದರೆ ಹಂಪಿ ಪರಿಸರದ ಜುಟ್ಟಕ್ಕಿಗಳಿಗೆ ಆ ಬಗೆಯ ಕೆಂಪು ಗುರುತುಗಳಿಲ್ಲ.

ಬೆಳ್ಳಕ್ಕಿ: ಕೊಕ್ಕರೆ ಎಂತಲೂ ಬೆಳ್ಳಕ್ಕಿಯನ್ನು ಎಲ್ಲೆಡೆ ಸಾಮಾನ್ಯವಾಗಿ ಕರೆಯುವರು. ಹಂಪಿ ಪರಿಸರದಲ್ಲಿ ಬೆಳ್ಳಕ್ಕಿಗಳು ಸರ್ವೇ ಸಾಧಾರಣ ಹಕ್ಕಿಗಳು. ಒಂದು ಕಾಲಕ್ಕೆ ಬೃಹತ್ ಪಶುಪಾಲಕ ಸಮಾಜಗಳ ಮಂದೆಯ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಬೆಳ್ಳಕ್ಕಿಗಳು ಈಗ ಅಂತಹ ಸಂಬಂಧವನ್ನು ಕಡಿದುಕೊಂಡಿವೆ. ಹಂಪಿ ಪರಿಸರದ ನೀರಾವರಿಯಿಂದಾಗಿ ಬೆಳ್ಳಕ್ಕಿಗಳು ಜನಪದರ ಕಣ್ಣಲ್ಲಿ ಸುಂದರ ಪಕ್ಷಿಗಳೇ. ಆಕಾಶದಲ್ಲಿ ಹಾರಿ ಹೋಗುವ ಬೆಳ್ಳಕ್ಕಿಗಳ ಕಂಡು ಎಂತಹ ಅರಸಿಕರೂ ಒಂದು ಕ್ಷಣ ಸೌಂದರ್ಯ ಲಹರಿಗೆ ಸ್ಪಂದಿಸದೇ ಇರಲಾಗದು. ಮಕ್ಕಳು ಹಾಗೆ ಹಾರಿ ಹೋಗುವ ಬೆಳ್ಳಕ್ಕಿಗಳನ್ನು ಕೂಗಿ ಕರೆದು ಕೊಕ್ಕರೆ ಕೊಕ್ಕರೆ ನನಗೂ ಹೂ ಕೊಡು ಎಂದು ಕೋರುವವರು. ಕೈ ಬೀಸಿ ಹಾಗೆ ಕರೆದ ಮೇಲೆ ತಮ್ಮ ಉಗುರುಗಳನ್ನು ನೋಡಿಕೊಂಡು ಹರ್ಷ ಚಿತ್ತರಾಗುವರು. ಬೆಳ್ಳಕ್ಕಿಗಳ ಬೇಟೆ ಬಹಳ ಹಿಂದೆ ಇತ್ತು. ಈಗಲೂ ಆಗಾಗ ಬರಗಾಲದಲ್ಲಿ ಆ ಬೇಟೆ ನಡೆಯುವುದುಂಟು. ಬೆಳ್ಳಕ್ಕಿಗಳನ್ನು ಬಾಣಂತಿಯರಿಗೆ ತಿನಿಸಿದರೆ ಶೀತಮೈ ಕರಗುವುದೆಂದು ನಂಬಲಾಗುವುದು. ಇವುಗಳ ಮಾಂಸ ಚುಂಗು ವಾಸನೆಯಿಂದ ಕೂಡಿದ್ದು ಉಪ್ಪು ಕಾರ ಸರಿಯಾಗಿ ಹಿಡಿಯುವುದಿಲ್ಲ ಎಂಬುದು ತಿಂದವರ ಅಭಿಪ್ರಾಯವಾಗಿದೆ. ಬೆಳ್ಳಕ್ಕಿಗಳಲ್ಲೆ ಹಲವಾರು ಪ್ರಭೇದಗಳಿವೆಯಾದರೂ ಅವನ್ನೆಲ್ಲ ಒಟ್ಟಿಗೆ ಸೇರಿಸಿ ಬೆಳ್ಳಕ್ಕಿ ಎಂದು ಕರೆಯುವರು. ಇವುಗಳಲ್ಲೇ ವಿಶೇಷವಾಗಿರುವ ಕೊಕ್ಕರೆ ಒಂದಿದೆ. ಅದು ಭತ್ತದ ಗದ್ದೆಗಳಲ್ಲಿ, ಕಾಲುವೆಗಳಲ್ಲಿ ಅಮಾಯಕವಾಗಿ ಗುಪ್ತವಾಗಿ ಮರೆಯಲ್ಲಿ ನಿಂತಿದ್ದು ಯಾರಾದರೂ ಕಂಡ ಕೂಡಲೆ ತಕ್ಷಣ ಹಾರಿ ಹೋಗುವುದರಿಂದ ಬೆದರಿಕೆ ಉಂಟು ಮಾಡುವುದು. ಇದನ್ನು ಗದ್ದೆ ಗುಮ್ಮ ಎಂತಲೂ ಕರೆಯುವರು. ಕೆಲವೊಮ್ಮೆ ಉದ್ದಕತ್ತಿನ ಕೊಕ್ಕರೆಗಳು ಹಳ್ಳಿಯ ಹಿತ್ತಿಲುಗಳ ಮರಗಳಲ್ಲೆ ಗೂಡುಕಟ್ಟಿ ವಾಸ ಮಾಡಬಲ್ಲವು. ಇಲ್ಲವೇ ಊರ ಮುಂದಲ ಹಾಗೂ ಊರ ಮಧ್ಯದ ದೊಡ್ಡ ಮರಗಳಲ್ಲು ಕೊಕ್ಕರೆಗಳು ಸಾಮೂಹಿಕವಾಗಿ ವಾಸ ಮಾಡಬಲ್ಲವು. ಜನರ ಸಹವಾಸದಲ್ಲಿ ಬದುಕುವ ಬೆಳ್ಳಕ್ಕಿಗಳನ್ನು ಜನಪದರು ಅದೃಷ್ಟ ಎಂಬಂತೆ ಕೊಕ್ಕರೆಗಳನ್ನು ಮಾನ್ಯ ಮಾಡುವರು. ಊರೊಳಗೆ ಹೀಗೆ ಬಂದು ನೆಲಸಿದರೆ ಆ ಊರಿಗೆ ಒಳ್ಳೆಯದು ಎಂಬ ನಂಬಿಕೆ ಹಂಪಿ ಪರಿಸರದಲ್ಲು ದಟ್ಟವಾಗಿದೆ.

ತಿತ್ತಿ ಹಕ್ಕಿ: ಜನಪ್ರಿಯವಾಗಿ ಎಲ್ಲ ಕಡೆ ಟಿಟ್ಟಿಬಾ ಹಕ್ಕಿ ಎಂದು ಕರೆಯುವುದಿದೆ. ತಿತ್ತೀಹಕ್ಕಿಯನ್ನು ಅದರ ಕೂಗಿನಿಂದ ಗುರುತಿಸಿರುವುದರಿಂದ ಆ ಹಕ್ಕಿಗೆ ಈ ಹೆಸರು ಬಂದಿದೆ. ರೈತ ಮಿತ್ರ ಹಕ್ಕಿ ಇದು. ರಾತ್ರಿ ವೇಳೆ ಹೊಲಗಳ ಬೆಳೆಗಳನ್ನು ಕಾಯುವ ಹಕ್ಕಿ ಎಂದು ತಿತ್ತಿ ಹಕ್ಕಿಯನ್ನು ಗೌರವಿಸಲಾಗುವುದು. ಮನುಷ್ಯರು ಕಂಡ ಕೂಡಲೆ ಟಿಟ್ಟಿಬಾಗಳು ಗದ್ದಲ ಮಾಡುತ್ತವೆ. ಇವುಗಳ ಗದ್ದಲವನ್ನು ಶುಭ ಅಶುಭವೆಂದು ಎರಡೂ ಬಗೆಯಲ್ಲಿ ತಿಳಿಯಲಾಗಿದೆ. ಅಪರಿಚಿತರು ಕಂಡರಂತೂ ಅವರು ದೂರ ಸರಿಯುವ ತನಕ ಕಾಟ ಕೊಡುವಂತೆ ಕೂಗಿ ದೂರ ಕಳಿಸುತ್ತವೆ. ಇವುಗಳ ಅಬ್ಬರಕ್ಕೆ ಎಚ್ಚರಗೊಂಡ ರೈತ ಕಳ್ಳರನ್ನು ಎದುರಿಸಲು ಮುಂದಾಗುವನು. ’ಕಳ್ಳ ಬಂದವ್ನೆ ಎದ್ದೇಳು, ಕಳ್ಳ ಬಂದವನೆ ಬಳಸಿಕೊಂಡು ಬಾ ’ ಎಂದು ಕೂಗುತ್ತಿದೆ ಎಂದು ಈ ಹಕ್ಕಿಯ ಕೂಗಾಟದ ಲಯವನ್ನು ಹೊಂದಿಸಿ ಜನಪದರು ಹೇಳುವರು. ಹಾಗೆಯೇ ’ನನ್ನ ಮೊಟ್ಟೆ ಕದ್ದವರ ವಟ್ಟೆ ಸಿಡಿಯಾ’ ಎಂತಲೂ ಶಾಪ ಹಾಕುತ್ತದೆ ಎಂದು ಕೂಗಿನ ಸದ್ದನ್ನು ಮನುಷ್ಯರ ಭಾಷೆಗೆ ಅನುವಾದ ಮಾಡುವರು. ಪಕ್ಷಿ ಭಾಷೆಯ ಅನುವಾದ ಕೂತೂಹಲಕರವಾದುದೇ. ಎಲ್ಲ ಪಕ್ಷಿಗಳ ಕೂಗನ್ನು ಒಂದೊಂದು ರೀತಿಯಲ್ಲಿ ಅರ್ಥೈಸುವುದಿದೆ. ಇದು ಭಾಷಾಂತರವಲ್ಲದೆ ಮತ್ತೇನೂ ಅಲ್ಲ. ಗೂಬೆಗಳ ಕೂಗಿಗೂ ನಿಗೂಢ ಭಯದ ಅರ್ಥವಿದೆ. ಪಕ್ಷಿಗಳ ಭಾಷೆಯನ್ನು ಅನುಕರಿಸಿಯೇ ಅವುಗಳನ್ನು ಹಿಡಿಯಲು ಮುಂದಾಗುವ ಹಕ್ಕಿ ಪಿಕ್ಕಿಗಳು ಪಕ್ಷಿ ಭಾಷೆಯ ಅತ್ಯುತ್ತಮ ಅನುವಾದಕರು. ಹಾಗೆಯೇ ಆ ಪಕ್ಷಿ ಭಾಷೆಯ ಶ್ರೇಷ್ಟ ಅನುಕರಣ ಶೀಲರೂ ಹೌದು.

ಮನುಷ್ಯರು ಪಕ್ಷಿ ಭಾವನೆಯನ್ನು ಅರಿಯಲು ಮಾಡಿರುವ ಯತ್ನಗಳ ಬಗ್ಗೆ ಸೂಕ್ತವಾದ ಅಧ್ಯಯನವಾಗಿಲ್ಲ ತಿತ್ತೀ ಹಕ್ಕಿಯ ಉಚ್ಚಾರದಲ್ಲಿ ಮನುಷ್ಯ ಭಾಷೆಯ ಏನನ್ನು ಬೇಕಾದರೂ ಪಕ್ಷಿಯ ಲಯಕ್ಕೆ ಅನುಗುಣವಾಗಿ ಹೊಂದಿಸಿ ನುಡಿಸಬಹುದು. ನೆಲೆದ ಮೇಲೆ ಮೊಟ್ಟೆ ಇಟ್ಟು ಬಟಾಬಯಲಲ್ಲೆ ಬಿಟ್ಟು ಯಾರ ಕಣ್ಣಿಗೂ ಕಾಣದಂತೆ ಯೋಜಿಸಿ ಬದುಕುವ ತಿತ್ತೀ ಹಕ್ಕಿಗಳು ನೋಡಲು ಸುಂದರವಾಗಿಯೂ ಇವೆ. ಇವುಗಳ ಕಾಲಿನ ರಚನೆಯನ್ನು ನೋಡಿದರೆ ಇವು ಪೂರ್ವದಲ್ಲಿ ಜಲಚರ ಪಕ್ಷಿಗಳೇ ಆಗಿದ್ದವೆನಿಸುತ್ತವೆ. ಜನಪದರು ಆ ಬಗ್ಗೆ ಏನನ್ನು ಹಂಪಿ ಪರಿಸರದಲ್ಲಿ ಹೇಳಲಾರರು. ಒಟ್ಟಿನಲ್ಲೆ ಟಿಟ್ಟಿಬಾ ಹಕ್ಕಿಯು ಶುಭ ಹಕ್ಕಿ ರೈತರ ಹಿತ ಕಾಯುವ ಹಕ್ಕಿ. ಕ್ರೂರ ಪ್ರಾಣಿಗಳ ಬಗ್ಗೆಯೂ ಮನುಷ್ಯರಿಗೆ ಎಚ್ಚರಿಕೆ ಕೊಡುವ ರಕ್ಷಕ ಹಕ್ಕಿ. ಕಳ್ಳರು ಟಿಟ್ಟಿಬಾ ಹಕ್ಕಿಗಳ ಬಗ್ಗೆ ಭಯ ಪಟ್ಟುಕೊಳ್ಳುವುದು ಇದರಿಂದಾಗಿಯೇ. ತಿತ್ತೀ ಹಕ್ಕಿಗಳ ಬಗ್ಗೆ ಮತ್ತೊಂದು ಜನಪ್ರಿಯ ವಿವರ ಇದೆ. ವಿಪರೀತ ಕೂಗಾಡಿ ಗದ್ದಲ ಎಬ್ಬಿಸುವ ಈ ಹಕ್ಕಿಯ ಅಂತಹ ಪರಿಗೆ ಜನಪದರು ವ್ಯಂಗ್ಯವಾಗಿ ಕಥೆ ಒಂದನ್ನು ಹೆಣೆದಿದ್ದಾರೆ. ’ಆಕಾಶವು ಭೂಮಿಯ ಮೇಲೆ ಬಿದ್ದು ಹೋಗುತ್ತಿದೆ. ಹಾಗಾಗಿ ಕೆಳೆಗೆ ಬಿದ್ದುಕೊಂಡು ತನ್ನ ಕಾಲುಗಳಿಂದ ಆಕಾಶವನ್ನು ಬೀಳದಂತೆ ತಡೆದು ನಿಲ್ಲಿಸಲು ಪ್ರಯತ್ನಿಸುತ್ತಿರುವೆ’ ಎಂದು ಈ ಹಕ್ಕಿಯು ಕೂಗಾಡುವುದಂತೆ. ನಿಜಕ್ಕೂ ಅಂತಹ ಒಂದು ಪುಟ್ಟ ಹಕ್ಕಿ ಆ ತರದ ಆಸೆಯನ್ನು ಹೊಂದಿದೆಯೊ ಏನೊ ಎಂಬಂತೆ ಜನ ಮೆಚ್ಚುವುದೂ ಇದೆ.

ಗೊಯ್ ಗೊಯಕ: ತನ್ನ ದನಿಯಿಂದಲೆ ಗುರುತಿಸಿಕೊಂಡಿರುವ ಹಕ್ಕಿಯಿದು. ಟಿಟ್ಟಿಬಾದ ಹಾಗೆಯೇ ಈ ಹಕ್ಕಿ ಕೂಡ ಜೋರು ಸದ್ದಿನ ಪಕ್ಷಿ. ಗುಂಪಾಗಿ ಬದುಕುವ ಈ ಹಕ್ಕಿಗಳು ಪರಿಸರದ ಯಾವುದೇ ಅಪಾಯವನ್ನು ಮೊದಲಿಗೆ ಸಾರಿ ಹೇಳುತ್ತವೆ. ಭೂ ಕಂಪದಂತಹ ಅಪಾಯವನ್ನು ಇವು ತಿಳಿಸದಿದ್ದರೂ ಹಗಲಿನ ವೇಳೆ ಯಾವುದೇ ವಿಷ ಜಂತುವಿನ ಬಗ್ಗೆ ತಕ್ಷಣ ಜಾಗೃತವಾಗುತ್ತವೆ. ಹಾವುಗಳು ಕಂಡ ಕೂಡಲೆ ಅವುಗಳ ಮೇಲೆ ಒಟ್ಟಾಗಿ ದಾಳಿಗೆ ಇಳಿಯುತ್ತವೆ. ಮನುಷ್ಯರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಕಿರುಚಾಡುತ್ತವೆ. ಉಡ, ಹಾವು, ಚಿರತೆ, ಬೆಕ್ಕು ಮುಂತಾದ ಅಪಾಯ ಎನಿಸಿದ ಏನನ್ನಾದರೂ ಕಂಡರು ಗೊಯ್ ಗೊಯಕಗಳು ಗೊಯ್ ಗೊಯ್ ಎಂದು ನಿರಂತರವಾಗಿ ಬೆನ್ನಟ್ಟುತ್ತವೆ. ಅಪಾಯ ಎನಿಸಿರುವ ಆ ಪ್ರಾಣಿಯ ತಲೆ ಕಣ್ಣುಗಳನ್ನು ಕುಕ್ಕಲು ಜೀವವನ್ನೆ ಪಣಕಿಟ್ಟು ಮುಂದಾಗುತ್ತವೆ. ಕೆಲವೊಮ್ಮೆ ಅಪರಿಚಿತರು ಕಂಡಾಗಲೂ ಹೀಗೆ ಮಾಡುತ್ತವೆ. ಗುಂಪು ಗುಂಪಾಗಿ ಎಲ್ಲ ಪಕ್ಷಿಗಳನ್ನು ಕೂಡಿಸಿಕೊಂಡು ಯುದ್ಧವನ್ನೆ ಸಾರುತ್ತವೆ. ಹಂಪಿ ಪರಿಸರದಲ್ಲಿ ಈ ಹಕ್ಕಿಗಳು ವಿಶೇಷವಾಗಿವೆ. ಬಯಲು ಸೀಮೆಯಲ್ಲಿ ಇವು ಸಾಮಾನ್ಯ ಎನಿಸಿದರೂ ಇವುಗಳ ಎಚ್ಚರದ ಕಾರ್ಯ ಸಾಮಾನ್ಯವಾದುದಲ್ಲ. ಅಮಾಯಕವಾಗಿ ಸುಮ್ಮನೆ ಪೊದೆಗಳಲ್ಲೊ ಪುಟ್ಟಗಿಡ ಮರಗಳಲ್ಲೊ ಕೂತಿರುವ ಈ ಹಕ್ಕಿಗಳು ಎಲ್ಲೆಲ್ಲಿ ಏನೇನು ಅಪಾಯಕಾರಿ ಪರಿಸ್ಥಿತಿ ಎದುರಾಗುತ್ತಿರಬಹುದು ಎಂಬುದನ್ನೆ ಯೋಚಿಸುತ್ತ ಕಾಯುತ್ತಿರುವಂತೆ ಕಾಣುತ್ತವೆ. ಈ ಹಕ್ಕಿಗಳನ್ನು ಹಳೆ ಮೈಸೂರಿನ ಕಡೆ ಸುಡಗಾಡ ಹಕ್ಕಿ ಎಂತಲೂ ಕರೆಯುವರು. ಗೆದ್ದಲು ಸಿಕ್ಕರೆ ಈ ಹಕ್ಕಿಗಳಿಗೆ ಪರಮಾನಂದ. ಕೇಡನ್ನು ಎದುರಿಸುವ ಈ ಹಕ್ಕಿಗಳನ್ನು ಜನ ಪ್ರೀತಿಯಿಂದ ನೋಡುವರು. ಬೇಟೆಗಾರರು ಈ ಹಕ್ಕಿಗಳನ್ನು ಕೊಲ್ಲುವುದಿಲ್ಲ.

ಕಾಜಾಣ: ಕಾಜಾಣವನ್ನು ಕರೀಹಕ್ಕಿ, ಬಾಲದ ಹಕ್ಕಿ ಎಂದು ಸ್ಥಳೀಯವಾಗಿ ಕರೆಯುವರು. ಕಾಜಾಣ ಕನ್ನಡ ಕಾವ್ಯ ಪ್ರಿಯರಿಗೆ ಕುವೆಂಪು ಕವಿತೆಗಳ ಮೂಲಕ ಬಹು ಪರಿಚಿತ ಹಕ್ಕಿಯೇ. ಅಲ್ಲದೆ ಕಾಜಾಣ ಪಕ್ಷಿಯನ್ನು ಸ್ವತಃ ಪಂಪ ಮಹಾ ಕವಿಯೆ ಹೊಗಳುವುದಿದೆ. ಅಪ್ಪಟ್ಟ ರೈತ ಮಿತ್ರ ಪಕ್ಷಿಗಳಲ್ಲಿ ಕಾಜಾಣವೂ ಒಂದು. ಹೊಲಗದ್ದೆ ತೋಟಗಳನ್ನು ಸದಾ ಕಾಯುವ ಹಕ್ಕಿ ಎಂದು ಯಾರಾದರೂ ಸಲೀಸಾಗಿ ಒಪ್ಪಿಕೊಳ್ಳಬಲ್ಲರು. ಬೆಳೆಗಳಿಗೆ ದಾಳಿ ಮಾಡುವ ಹುಳು ಉಪ್ಪಟ್ಟೆಗಳನ್ನು ಹಿಡಿದು ಭಕ್ಷಿಸುವ ಕಾಜಾಣ ಸುಂದರ ಹಾಡುಗಾರ ಹಕ್ಕಿಯೂ ಹೌದು. ಆಕರ್ಷಕವಾಗಿರುವ ಕಪ್ಪು ಕಾಜಾಣ ಕಾಗೆಗಳನ್ನೇ ಎದುರಿಸಬಲ್ಲದು. ಪುಟ್ಟ ಹಕ್ಕಿಯಾದರೂ ಈ ಒಂದೇ ಹಕ್ಕಿಯೂ ಹದ್ದುಗಳ ಮೇಲೆಯೇ ಎರಗಲು ಹಿಂದು ಮುಂದು ನೋಡುವುದಿಲ್ಲ. ಹಾಗಾಗಿ ಈ ಹಕ್ಕಿ ಕಾವಲುಗಾರ ಹಕ್ಕಿ ಎನ್ನುವುದಕ್ಕಿಂತಲೂ ಅಪಾರ ಧೈರ್ಯವಿರುವ ಹಕ್ಕಿ ಎಂದೇ ಕರೆಯಬೇಕಾಗುತ್ತದೆ. ಕಾಜಾಣದ ಧೈರ್ಯದ ಮೇಲೆಯೇ ಅನೇಕ ಪುಟ್ಟ ಹಕ್ಕಿಗಳು ಕಾಜಾಣದ ಗೂಡಿನ ಬಳಿಯೆ ತಮ್ಮ ಗೂಡುಗಳನ್ನು ಕಟ್ಟಿ ಮರಿ ಮಾಡಿಕೊಳ್ಳಬಲ್ಲವು. ಹಂಪಿ ಪರಿಸರದಲ್ಲಿ ಕಾಜಾಣಗಳು ವಿಪುಲವಾಗಿದೆ. ಇವುಗಳನ್ನೇನು ಬೇಟೆ ಆಡಲು ಬಯಸುವುದಿಲ್ಲ. ಬೇಟೆಗೆ ಸಿಕ್ಕಿ ಹಾಕಿಕೊಳ್ಳುವ ಮುಗ್ದ ಪಕ್ಷಿಗಳೂ ಇವಲ್ಲ. ಇವು ನೆಲದ ಮೇಲೆ ನಡೆದಾಡುವುದಿಲ್ಲ. ಬಲೆ ಒಡ್ಡಿದರೂ ಆ ಪರಿಸ್ಥಿತಿಯಿಂದ ಚಾಣಾಕ್ಷತನದಲ್ಲಿ ದೂರ ಹೋಗುತ್ತವೆ. ಅಷ್ಟೇ ಅಲ್ಲದೆ ಬಲೆ ಹಾಕಿರುವ ಬಗೆ ಎಚ್ಚರಿಕೆಯನ್ನು ಕೊಡುತ್ತವೆ. ಕಾಜಾಣಗಳಲ್ಲೆ ಕಂದುಗೆಂಪು ಬಣ್ಣದ ಕಾಜಾಣಗಳು ಕೂಡ ಹಂಪಿ ಪರಿಸರದಲ್ಲಿವೆ. ಅಲ್ಲದೆ ಅಪರೂಪದ ಬಿಳಿ ಬಣ್ಣದ ಕಾಜಾಣಗಳು ಕೂಡ ಹಂಪಿ ಪರಿಸರದಲ್ಲಿವೆ. ಇವನ್ನೆಲ್ಲ ಬಾಲದ ಚಹರೆಯಿಂದ ಗುರುತಿಸುವರು. ಬಿಳಿಬಣ್ಣದ ಕಾಜಾಣ ವಲಸೆ ಬರುವ ಹಕ್ಕಿಯಾಗಿದ್ದು ಬೆದೆಗಾಲಕ್ಕೆ ಹಂಪಿ ಪರಿಸರಕ್ಕೆ ಬರಲಿದೆ.

ಹಾಲಕ್ಕಿ : ಹಾಲಕ್ಕಿಯು ಮೂಲತಃ ಶಕುನದ ಹಕ್ಕಿಯಾಗಿ ಜನಪದರಿಗೆ ಕಂಡಿದೆ. ಸುಡುಗಾಡ ಸಿದ್ದರು ಇದನ್ನು ಸುಡುಗಾಡಕ್ಕಿ ಎನ್ನುವರು. ಬುಡಬುಡಕಿಯವರು ಶಕುನದ ಹಕ್ಕಿ ಎನ್ನುವರು. ಹಾಗೆ ನೋಡಿದರೆ ಈ ಹಾಲಕ್ಕಿಯು ಗೂಬೆಯ ಒಂದು ಪುಟ್ಟ ಪ್ರಭೇದ. ರಾತ್ರಿ ವೇಳೆ ಕಲಕಲಕಲ ಎಂದು ಕೆನೆದಂತೆ ಕೂಗುವ ಹಾಲಕ್ಕಿಯು ನೀರವತೆಯ ಮೌನದಲ್ಲಿ ಭಯ ತರಿಸುವ ಸದ್ದು ಹೊರಡಿಸುತ್ತದೆ. ಮಾಟ ಮಂತ್ರಗಳ ವಿವೇಕ ಈ ಹಕ್ಕಿಗೆ ಇದೆ ಎಂತಲೂ ಅದರ ದನಿಯ ಮೂಲಕ ಮಂತ್ರಗಾರರು ಬುಡಬುಡಕಿಯವರು ಶಾಸ್ತ್ರ ಹೇಳುವವರು. ಸುಡುಗಾಡು ಸಿದ್ದರು ಅರ್ಥಗ್ರಹಿಸಿ ಶಕುನವನ್ನು ಹೇಳುವರು ಎಂದು ಜನಪದರು ನಂಬುವರು. ಭವಿಷ್ಯ ಹೇಳುವ ಹಾಗೆಯೆ ಕಾಲಜ್ಞಾನವನ್ನು ಬೋಧಿಸುವ ಸಾಧು ಸಂತರು ಕೂಡ ಹಾಲಕ್ಕಿಯ ಕೂಗನ್ನು ಆಶ್ರಯಿಸಿಯೆ ಅರ್ಥಾನುವಾದ ಮಾಡುವರು. ಇದೊಂದು ವಿಚಿತ್ರ ಪಕ್ಷಿಭಾಷಾ ಅನುವಾದವೇ ಸರಿ. ಭಾಷೆಯ ರಚನೆಗಿಂತ ಧ್ವನಿಯ ಭಾವನಾತ್ಮಕ ಅರ್ಥವೇ ಇಲ್ಲಿ ಮುಖ್ಯವಾಗಿದೆ. ಸಂವಹನಕ್ಕೆ ರಚನೆ ಪ್ರಧಾನ ಅಲ್ಲ ಭಾವವೇ ಅಂತಿಮ ಎಂಬ ತತ್ವ ಹಾಲಕ್ಕಿ ಭಾಷೆಯ ಕಾಲಜ್ಞಾನವನ್ನು ಗ್ರಹಿಸಲು ಇರುವ ಆಧಾರ. ಇದು ಏನೇ ಇರಲಿ, ಹಾಲಕ್ಕಿಯು ಮನುಷ್ಯರ ಸುಖದುಃಖದ ಭವಿಷ್ಯವನ್ನು ಹೇಳುವ ದೈವಿಕ ಪಕ್ಷಿ ಎಂಬುದಂತೂ ಜನಪದರಿಗೆ ಮನವರಿಕೆ ಆಗಿರುವ ಸಂಗತಿ. ಜನಪದರಿಗೆ ಹಾಲಕ್ಕಿಯ ಶಕುನ ಒಂದು ಜ್ಞಾನವಾಗಿದೆ. ಉಳಿದ ಹಕ್ಕಿಗಳಂತೆ ಹಾಲಕ್ಕಿಯನ್ನು ಕಡೆಗಣಿಸುವಂತಿಲ್ಲ. ಸುಡುಗಾಡು ಸಿದ್ದರ ವೃತ್ತಿಯನ್ನು ನಿರ್ಧರಿಸಿದಂತಿರುವ ಅಥವಾ ಅವರ ಕಾಲಜ್ಞಾನದ ವಿವೇಕಕ್ಕೆ ಆಧಾರದಂತಿರುವ ಹಾಲಕ್ಕಿಯು ಸಾಂಸ್ಕೃತಿಕವಾಗಿ ಮಹತ್ವ ಪಡೆದ ಹಕ್ಕಿಯಾಗಿದೆ. ಹಾಲಕ್ಕಿಯನ್ನು ಕೊಂದವರ ಪಾಪ ಏಳು ಜನ್ಮಗಳ ತನಕ ಬಾಧಿಸುವುದು. ರೈತರ ಹಿತ ಕಾಯುವ ಬೇರೆ ಬೇರೆ ಹಕ್ಕಿಗಳು ಒಂದೊಂದು ಹೊಣೆ ಹೊತ್ತಿದರೆ ಹಾಲಕ್ಕಿಯು ಮಾನವರ ಭವಿಷ್ಯವನ್ನು ಹೇಳುವ ಹಕ್ಕಿಯಾಗಿ ಕಂಡಿರುವುದು ವಿಶೇಷವಾಗಿದೆ.

ಬಾವಲಿ: ಹಾಗೆ ನೋಡಿದರೆ ಬಾವಲಿಗಳು ಪಕ್ಷಿಗಳಲ್ಲ. ಅವು ಸಸ್ತನಿಗಳು. ಜನಪದರು ಇವುಗಳು ಹಾರಾಡುವುದರಿಂದ ನಿಶಾಚಾರಿ ಹಕ್ಕಿಗಳೆಂದೇ ಕರೆದು ಬಿಟ್ಟಿದ್ದಾರೆ. ಬಾವಲಿಗಳ ಬಗ್ಗೆ ಸಹಜವಾಗಿಯೆ ಜನಪದರು ಭಯ ಪಡುವರು. ಕಣ್ಣನ್ನು ಕುಕ್ಕಿ ರಕ್ತ ಕುಡಿಯುವ ಬಾವಲಿಗಳಿಗೆ ಎದುರಾಗಿ ರಾತ್ರಿ ವೇಳೆ ಸಿಗಬಾರದು ಎಂದು ಜನ ಹೇಳುವರು. ಇವು ಭೂತ ಪ್ರೇತ ಪಿಶಾಚಿಗಳ ಪ್ರತಿರೂಪ ಎಂತಲೂ ಆರೋಪಿಸುವರು. ಹಸುಗಳ ಕೆಚ್ಚಲಿಗೆ ಬಂದು ರಕ್ತ ಕುಡಿಯುತ್ತವೆ ಎಂಬ ಭೀತಿಯೂ ಬಾವಲಿಗಳ ಬಗ್ಗೆ ಇದೆ. ಇವುಗಳ ವಿಕಾರ ಕೀರಲು ಸದ್ದಿಗೆ ಮಕ್ಕಳು ಹೆದರುವರು. ಹಂಪಿಯ ಗುಡಿ ಗೋಪುರ ಗರ್ಭಗುಡಿಗಳಲ್ಲಂತು ಸಣ್ಣ ಗಾತ್ರದ ಬಾವಲಿಗಳು ಯಥೇಚ್ಛವಾಗಿವೆ. ಇಡೀ ಹಂಪಿಯ ಬೆಟ್ಟಗುಡ್ಡಗಳೇ ದೊಡ್ಡ ಗಾತ್ರದ ಬಾವಲಿಗಳಿಗೆ ಪ್ರಶಸ್ತವಾದ ಆವರಣವಾಗಿದೆ. ಸಣ್ಣ ಗಾತ್ರದ ಬಾವಲಿಗಳನ್ನು ತೋಲೆಹಕ್ಕಿ ಎನ್ನುವರು. ಮನೆಗಳಿಗೇ ಬಂದು ಈ ಬಾವಲಿಗಳು ಸೇರಿಕೊಳ್ಳಬಲ್ಲವು. ತೊಲೆ, ಅಟ್ಟ, ಕಂಬ, ಗೋಡೆ ಸಂದು, ಹೆಂಚಿನ ಮರೆಯಲ್ಲಿ ಅವಿತಿದ್ದು ರಾತ್ರಿ ಆದಾಗ ಹೊರ ಬರುವ ಈ ತೋಲೆಹಕ್ಕಿಗಳು ಹೆಚ್ಚು ಅಪಾಯಕಾರಿ ಅಲ್ಲ. ಮನುಷ್ಯರ ಜೊತೆ ಇವು ವಾಸಿಸುವುದನ್ನು ರೂಢಿಸಿಕೊಂಡಿವೆ. ಬಿಕ್ಕು ಅಥವಾ ಉಗ್ಗು ತೊದಲು ಇರುವ ಮಕ್ಕಳಿಗೆ ಬಾವಲಿ ಅಥವಾ ತೋಲೆ ಹಕ್ಕಿಗಳನ್ನು ತಿನಿಸಿದರೆ ತೊದಲು ನಿವಾರಣೆ ಆಗುವುದೆಂದು ಹೇಳುವರು. ದೊಡ್ಡ ಗಾತ್ರದ ಬಾವಲಿಯನ್ನು ಬಲೆ ಮೂಲಕ ಹಿಡಿದು ಮಾಂಸಕ್ಕಾಗಿ ಬಳಸುವರು.

ಬಾನಕ್ಕಿ: ಸೇತುವೆಗಳ ತಳದಲ್ಲಿ, ಗುಡಿಗಳ ತಂಪು ಮರೆಯಲ್ಲಿ, ಹಳ್ಳಗಳ ದಿಬ್ಬಗಳ ಅಂಚಿನಲ್ಲಿ ಬಂಡೆ ಸಂದುಗಳ ಸಾಲಿನಲ್ಲಿ ವಾಸವಾಗಿರುವ ಬಾನಕ್ಕಿಗಳ ಬಗ್ಗೆ ಹಂಪಿ ಪರಿಸರದ ಜನಪದರು ಅಷ್ಟಾಗಿ ಗಮನ ಹರಿಸಿದಂತೆ ಕಾಣುವುದಿಲ್ಲ. ತುಂಗಭದ್ರಾ ನದಿಯ ಹಂಪಿಯ ಪ್ರದೇಶದಲ್ಲಿ ಬಾನಕ್ಕಿಗಳು ಹೇರಳವಾಗಿವೆ. ಜನನಿಬಿಡ ಪ್ರದೇಶಗಳನ್ನು ಆಯ್ದುಕೊಂಡಿರುವ ಬಾನಕ್ಕಿಗಳು ಹಗಲಿನ ಬಹುಪಾಲು ಸಮಯವನ್ನು ಹಾರಾಡುವುದರಲ್ಲೆ ಕಳೆಯುತ್ತವೆ. ಮನುಷ್ಯರನ್ನು ಕಂಡ ಕೂಡಲೆ ಮಾಯವಾಗುತ್ತವೆ. ಮನುಷ್ಯರ ಮುಖ ನೋಡಲು ಅವುಗಳಿಗೆ ಇಷ್ಟ ಇಲ್ಲ. ಎಂದು ಜನ ಹೇಳುವರು. ಬಾನಕ್ಕಿಗಳು ಕೂಡ ರೈತ ಮಿತ್ರ ಪಕ್ಷಿಗಳು ಅತಿ ಸೂಕ್ಷ್ಮ ಹುಳು ಉಪ್ಪಟ್ಟೆಗಳನ್ನು ಹಾರಾಡುತ್ತಲೇ ಭಕ್ಷಿಸುತ್ತವೆ. ಬಾನಕ್ಕಿಗಳು ಜನಪದರ ಪ್ರಕಾರ ಮಂಜು ಅಥವಾ ಇಬ್ಬನಿ ಕುಡಿದು ಬದುಕುತ್ತವೆ. ಹಂಪಿ ಪರಿಸರದಗಲಕ್ಕೂ ಹಬ್ಬಿರುವ ತುಂಗಭದ್ರಾ ನದಿಯ ಕಾಲುವೆಗಳನ್ನು ಆಶ್ರಯಿಸಿ ಬಾನಕ್ಕಿಗಳು ವ್ಯಾಪಿಸಿವೆ. ಜೇಡಿ ಮಣ್ಣಿನಿಂದ ಜಿಗುಟಾದ ಲಾಲಾರಸ ಸುರಿಸಿ ಅಂಟು ಮಾಡಿ ಮನೆ ಮಾಡಿಕೊಂಡು ಸಾಮೂಹಿಕವಾಗಿ ಜೀವಿಸುವ ಬಾನಕ್ಕಿಗಳ ಜೀವನ ವಿಧಾನವು ತುಂಬ ಗುಪ್ತವಾಗಿದೆ. ಅವು ಹೇಗೆ ನಿಸರ್ಗದ ಜೊತೆ ಬದುಕು ರೂಪಿಸಿಕೊಂಡಿವೆ ಎಂಬ ವಿವರ ಜನಪದರಿಗೆ ತಿಳಿಯದಂತೆ ಇರುವುದರಿಂದ ಬಾನಕ್ಕಿಗಳು ಜನಪದರಿಗೆ ಅಂತರಂಗದ ಪಕ್ಷಿಯಾಗಿಲ್ಲ.

ಪುರ್ಲಕ್ಕಿ : ಇದು ಕಣ್ಣಿಗೆ ಕಂಡರೂ ಕಾಣದಂತಿರುವ ಪಕ್ಷಿ. ಒಣ ಎಲೆಯೊ ಗಿಡವೊ ಹುಲ್ಲು ಬಿದ್ದಿರುವಂತೆ ಮಣ್ಣಿನ ಹಾದಿಯಲ್ಲೆ ಕೂತಿರುತ್ತದೆ. ಇನ್ನೇನೂ ತುಳಿದೇ ಬಿಟ್ಟಿದ್ದೆವೆನೊ ಎನ್ನುವಷ್ಟರಲ್ಲಿ ಪುರ್ರೆಂದು ಹಾರಿ ಹೋಗಿರುತ್ತದೆ. ಭಯವೇ ಒಂದು ಕ್ಷಣ ನಮ್ಮ ಕಾಲನ್ನೆ ಸವರಿಕೊಂಡು ಹೋದಂತಾಗುವುದು. ಪುರ್ಲಕ್ಕಿಯು ಗೌಜಲ ಹಕ್ಕಿಯ ಒಂದು ಪ್ರಭೇದವಿರಬೇಕು. ನೋಡಲು ಗೋದಿ ಬಣ್ಣದ್ದಾದರೂ ಗೌಜಲುಗಳಿಗಿಂತಲೂ ಹಾರುವುದರಲ್ಲಿ ನಿಸ್ಸೀಮ. ಹಾಗೆ ಹಾರಿದ್ದಾದರೂ ಕ್ಷಣ ವೇಗದಲ್ಲಿ ಎಲ್ಲಿ ಯಾವ ದಿಕ್ಕಿಗೆ ಹಾರಿತು ಎಂಬುದೇ ತಿಳಿಯದು. ಭಾಗಶಃ ನಮ್ಮ ಕಾಲ ಬುಡದಲ್ಲೇ ಹಾಗೆ ಪೊತರುಗುಟ್ಟಿ ಹಾರುವ ಮೂಲಕ ನಮ್ಮನ್ನು ದಿಗಿಲುಗೊಳಿಸಿ ನಮ್ಮ ಪ್ರಜ್ಞೆಯನ್ನು ಅಲುಗಾಡಿಸಿ ಭೀತಿಯಲ್ಲಿ ಏನಾಯಿತು ಎಂಬುದೇ ಗೊತ್ತಾಗದಂತೆ ಮಾಡುವ ಮಾಂತ್ರಿಕ ಪರಿಯನ್ನು ಪುರ್ಲಕ್ಕಿ ರೂಢಿಸಿಕೊಂಡಿರಬೇಕು. ಪುರ್ಲಕ್ಕಿಯಲ್ಲೇ ಇನ್ನೊಂದು ಪುಟ್ಟ ಪ್ರಭೇದವಿದೆ. ಇದುಕೂಡ ಇದೇ ಬಗೆಯ ತಂತ್ರವನ್ನು ಅನುಸರಿಸುತ್ತದೆ. ಚಿಕ್ಕ ಪುರ್ಲಕ್ಕಿ, ದೊಡ್ಡ ಪುರ್ಲಕ್ಕಿ ಎಂದು ಎರಡು ಗುರುತಲ್ಲಿ ಈ ಪಕ್ಷಿಗಳನ್ನು ಗುರುತಿಸುವರು. ಗೆದ್ದಲು ಈ ಹಕ್ಕಿಗಳ ಪರಮ ಸವಿಯ ಆಹಾರ. ಹಂಪಿಯ ಪರಿಸರದ ಚರಿತ್ರೆಯನ್ನು ಗಮನಿಸಿದರೆ ಪುರ್ಲಕ್ಕಿಕೂಡ ಅತ್ಯಂತ ಪ್ರಾಚೀನ ಪಕ್ಷಿ ಎಂದೇ ಹೇಳಬಹುದು.

ಹುಳಹಿಡಕನಕ್ಕಿ : ಪ್ಲೈಕ್ಯಾಚರ್ ಎಂದು ಇಂಗ್ಲೀಷಿನಲ್ಲಿ ಈ ಹಕ್ಕಿಗೆ ಹೆಸರಿದೆ. ಜನ ಎಲ್ಲೆಡೆ ಪ್ರಾಣಿ ಪಕ್ಷಿಗಳನ್ನು ಸಮಾನ ದೃಷ್ಟಿಗಳಲ್ಲಿ ಕಾಣುವರು ಎಂಬುದು ಇಂತಹ ಸಂಗತಿಗಳಲ್ಲೂ ವ್ಯಕ್ತವಾಗುತ್ತದೆ. ಕೀಟ ಬಾದೆ ಇರುವ ಹೊಲಗದ್ದೆ ತೋಟಗಳಲ್ಲಿ ಹುಳಹಿಡುಕ ಪಕ್ಷಿಗಳು ಇರಲೇಬೇಕು. ಔಷಧಿ ಸಿಂಪಡಿಸಿ ಹುಳು ನಾಶಪಡಿಸಿರುವ ನೆಪದಲ್ಲೆ ಅನೇಕ ಸೂಕ್ಷ್ಮ ಸಕಾರಾತ್ಮಕ ಜೀವಿಗಳನ್ನು ನಾವು ಕೊಂದು ಬಿಟ್ಟಿರುತ್ತೇವೆ. ಪ್ಲೈಕ್ಯಾಚರ್‌ಗಳು ಅಂತಹ ಯಾವ ಅಪಾಯ ನೀಡದೆ ಸುಲಭವಾಗಿ ಬಿಟ್ಟಿಯಾಗಿ ಕೀಟಗಳ ತಿಂದು ತಮ್ಮ ಹೊಟ್ಟೆಯನ್ನು ತುಂಬಿಸಿಕೊಂಡು ರೈತರ ಪಾಡಿಗೂ ನೆರವಾಗುತ್ತವೆ. ನೊಣಹಿಡುಕ, ಹುಳುಹಿಡುಕ ಪಕ್ಷಿಗಳು ಸುಂದರವಾದವುಗಳೇ. ದನಿಯೂ ಹಿಂಪಾದುದೇ. ತೋಟಗಳಲ್ಲಿ ಐದಾರು ಪ್ಲೈಕ್ಯಾಚರ್‌ಗಳಿದ್ದರೆ ಸಾವಿರಾರು ರೂ.ಗಳ ಬೆಲೆಯ ನಷ್ಟವನ್ನು ಅವು ತಡೆಯಬಲ್ಲವು. ಹಂಪಿ ಪರಿಸರದಲ್ಲಿ ಪ್ಲೈಕ್ಯಾಚರ್ ಗಳು ಹೇರಳವಾಗಿವೆ. ನೀರಾವರಿ ಪ್ರದೇಶಗಳಿಂದಾಗಿ ಹೆಚ್ಚಿನ ಹುಳು ಉಪ್ಪಟ್ಟೆಗಳನ್ನು ತಿಂದು ಈ ಹಕ್ಕಿಗಳೇನೊ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದಿವೆ. ರೈತ ಮಿತ್ರ ಪಕ್ಷಿಯಾದ ಇವುಗಳನ್ನು ಮಕ್ಕಳು ಕೂಡ ಪ್ರೀತಿಯಿಂದ ಕಾಣುವರು. ಇವುಗಳನ್ನು ಪಳಗಿಸಿ ಸಾಕಲಾಗುವುದಿಲ್ಲ. ದೊಡ್ಡಗಾತ್ರದಲ್ಲಿರುವ ಹುಳ ಹಿಡಕಗಳು ಹಂಪಿ ಪ್ರದೇಶದಲ್ಲಿ ವಿಶೇಷವಾಗಿವೆ.

ಶಿಳ್ಳೆಹಕ್ಕಿ : ಬಂಡೆಗಳ ಮೇಲೊ, ಬಯಲಿನ ಯಾವುದೊ ಒಂದು ಗಿಡದ ಮರಯಲ್ಲೊ ಅಥವಾ ಮರದ ಮರೆಯಲ್ಲೊ ಕೂತು ನಿಧಾನಕ್ಕೆ ರಾಗಬದ್ಧವಾಗಿ ಶಿಳ್ಳೆ ಹೊಡೆಯುವ ಈ ಹಕ್ಕಿ ತಕ್ಷಣವೇ ಕಣ್ಣಿಗೆ ಕಾಣುವುದಿಲ್ಲ. ಗೌಪ್ಯ ಹಕ್ಕಿ ಎಂದೇ ಹೇಳಬೇಕು. ಆಕರ್ಷಕವಾದುದೇನಲ್ಲ. ಕಂದು ಬಣ್ಣದ ಪುಟ್ಟ ಹಕ್ಕಿಯಾಗಿರುವ ಇದು ಬೇಸಿಗೆಯ ಉರಿ ಬಿಸಿಲಲ್ಲಿ ಲಯ ಬದ್ಧವಾಗಿ ಶಿಳ್ಳೆ ಕೂಗುತ್ತಿದ್ದರೆ ಇಡೀ ಆ ಪರಿಸರಕ್ಕೇ ಏನೊ ಅರ್ಥವನ್ನು ಪ್ರತಿಸೃಷ್ಟಿಸುತ್ತದೆ. ಜನಪದರು ಇದನ್ನು ಶಿಳ್ಳೆ ಹಕ್ಕಿ ಎಂದು ಕರೆವರೇ ವಿನಃ ಇದರ ಬಗ್ಗೆ ಹೆಚ್ಚಿನ ಮಾಹಿತಿ ಏನನ್ನೂ ಕೊಡಲಾರರು. ಜನಪದರು ಅನೇಕ ಬಾರಿ ಆ ಹಕ್ಕಿಯು ಕೂಗುವ ಸದ್ದು, ಅದರ ಬಣ್ಣ, ಆಹಾರ, ಆಕಾರ, ಜೀವನ ಕ್ರಮಗಳನ್ನು ಅನುಸರಿಸಿ ಹೆಸರಿಟ್ಟು ಕರೆವರು. ಈ ಹಿನ್ನೆಲೆಯಿಂದ ನೋಡಿದರೆ ಕಪ್ಪು, ಹಕ್ಕಿಯನ್ನು ಕರಿಹಕ್ಕಿ ಎಂದೊ ಬಿಳಿಹಕ್ಕಿಯನ್ನು ಬಿಳಿಹಕ್ಕಿ ಎಂದೊ ಕರೆವರು.

ಹರಿಶಿಣ ಮುಂಡ : ಸುಂದರವಾದ ಹಕ್ಕಿ. ಇದರ ಎದೆಯ ಭಾಗವು ಹಳದಿಯಾಗಿದ್ದು ಉಳಿದಂತೆ ದೇಹ ಮಿಶ್ರಿತ ಹಳದಿಯಾಗಿದೆ. ಅರಗಿನ ಮರದ ತೊಗಟೆಯ ಕೊಂಬೆಯ ಕೂಡು ಜಾಗದಲ್ಲಿ ವೃತ್ತಾಕಾರದಲ್ಲಿ ಮಣ್ಣಿನ, ನಾರಿನ ಗೋರಕಗಳ ಬಲೆಯಿಂದ ಹದವಾಗಿ ಗೂಡುಕಟ್ಟಿ ಯಾರ ಕಣ್ಣಿಗೂ ಸುಲಭವಾಗಿ ಕಾಣದಂತೆ ಮರಿ ಮಾಡುವುದು. ಈ ಹಕ್ಕಿಯು ದನಗಾಹಿಗಳಿಗೆ ಪ್ರಿಯವಾದ ಹಕ್ಕಿಯಾಗಿದೆ. ಹೆಚ್ಚಾಗಿ ಹಕ್ಕಿಗಳ ಬಣ್ಣವನ್ನು ಗಮನಿಸಿಯೇ ಜನಪದರು ಅವುಗಳ ಗುರುತನ್ನು ಹೇಳುವರು.

ಹೀಗಾಗಿ ಇಲ್ಲಿ ಜನಪದರ ಆಧಾರದಲ್ಲಿ ವಿವರಿಸಿದ ಈ ಹಕ್ಕಿಗಳ ಹೆಸರೇ ಬೇರೆ. ವೈಜ್ಞಾನಿಕ ಹೆಸರೇ ಬೇರೆ. ಕೆಲವೊಮ್ಮೆ ಜನಪದರಿಗೂ ಪಕ್ಷಿ ವಿಜ್ಞಾನಿಗಳಿಗೂ ಒಂದೇ ಹೆಸರು ಬಳಕೆಯಾದರೂ ವಿವರಗಳಲ್ಲಿ ವ್ಯತ್ಯಾಸವಿದೆ. ಪಕ್ಷಿ ವಿಜ್ಞಾನಿಗಳ ನಿಖರ ವಿವರ ತಕ್ಕುದಾದುದೇ. ಅದರ ಆಚೆ ಇರುವ ವಿವರ ಜನಪದ ಪರಂಪರೆಯ ಪಕ್ಷಿ ಜ್ಞಾನದ್ದು. ಇವೆರಡನ್ನು ಒಂದಾಗಿ ಅರಿತು ಜೀವಜಾಲದ ಬಾಹ್ಯ ಹಾಗೂ ಅಂತರ್ ಸಂಬಂಧಗಳನ್ನು ತಿಳಿದಾಗ ನಮ್ಮ ತಿಳುವಳಿಕೆಯ ವಿಸ್ತರಣೆ ಸಾಧ್ಯವಾಗುತ್ತದೆ. ಪಕ್ಷಿಗಳ ಸಾಂಸ್ಕೃತಿಕ ತಿಳುವಳಿಕೆಯು ಎಷ್ಟೋ ಬಾರಿ ಪಕ್ಷಿ ವಿಜ್ಞಾನಿಗಳ ಸೀಮಿತ ತರ್ಕದ ಆಚೆಗೂ ವ್ಯಾಪಿಸಿರುತ್ತದೆ.