ಬ್ಯಾಲದ ಗಿಡ: ವಸಂತ ಕಾಲದಲ್ಲಿ ಇಡೀ ಮರವೇ ಹೂವಾಗಿ ಬಿಟ್ಟಿರುತ್ತದೆ. ಹಂಪಿ ಪರಿಸರದ ಬಹುಪಾಲು ಗಿಡ ಮರಗಳಲ್ಲಿ ಹೂ ಬಿಟ್ಟು ಸಿಂಗರಿಸಿ ಕೊಳ್ಳುವಂತವೇ ಆಗಿದ್ದು, ಬ್ಯಾಲದ ಗಿಡ ಸಮೃದ್ಧವಾಗಿ ಕಾಣುತ್ತದೆ. ಇದರ ತೊಗಟೆಯನ್ನು ಬಟ್ಟಿಸಾರಾಯಿ ಮಾಡಲು ಬಳಸುವರು. ಇದರ ಚಕ್ಕೆಯು ವಿಪರೀತ ನಿಶೆ ತರಿಸುವ ಶಕ್ತಿ ಹೊಂದಿದೆ ಎನ್ನಲಾಗಿದೆ. ಸಣ್ಣ ಪುಟ್ಟ ಗೃಹೋಪಯೋಗಿ ವಸ್ತುಗಳಿಗೂ ಈ ಮರವನ್ನು ಬಳಸಿಕೊಳ್ಳುವರು. ಉರುವಲುವಾಗಿಯೂ ಉಪಯುಕ್ತವಾದ ಮರ.

ಬೆಳೆವನ ಗಿಡ: ಬಳೆವ, ಚೊರ್ರ, ಸೋರೆ ಎಂದು ಕರೆಸಿಕೊಳ್ಳುವ ಹಕ್ಕಿ ಯಾವಾಗಲೂ ಈ ಮರದಲ್ಲೇ ಕಾಲ ಕಳೆಯುತ್ತದೆ. ಈ ಮರದ ಹೆಸರನ್ನು ಬೆಳವನಿಂದಲೇ ಕರೆಯಲಾಗಿದೆ. ಎತ್ತರದ ಮರವಲ್ಲ. ಸರಳವಾದ ಮರ, ಹೆಚ್ಚು ರೆಂಬೆ ಕೊಂಬೆಗಳು ಚಾಚಿಕೊಳ್ಳುವುದಿಲ್ಲ. ಉರುವಲಿಗೆ ಒಳ್ಳೆಯ ಮರವಾಗಿದೆ. ಹಂಪಿ ಪರಿಸರದ ಬೆಟ್ಟಗುಡ್ಡಗಳಲ್ಲಿ ಇದು ಸಾಮಾನ್ಯವಾಗಿದೆ.

ಹುಣಸೆ ಮರ: ದೆವ್ವಭೂತ ಪಿಶಾಚಿಗಳು ಈ ಮರದಲ್ಲಿ ವಾಸಿಸುತ್ತವೆ ಎಂಬ ಜನಪ್ರಿಯ ನಂಬಿಕೆಯಿದೆ. ಹಂಪಿ ಪರಿಸರದ ಹುಣಸೆ ಮರಗಳಿಗೂ ಸಲ್ಲುತ್ತದೆ. ಯಾವ ಮಂಗಳ ಕಾರ್ಯದಲ್ಲೂ ಹುಣಸೆ ಮರವನ್ನು ಸುತ್ತಿಕೊಂಡು ಹೋಗಬಾರದು. ಹುಣಸೆ ಮರಕ್ಕೆ ಇಂತಹ ಅಪಖ್ಯಾತಿ ಇದ್ದರೂ ಹುಣಸೆ ಹಣ್ಣಿನ ಹುಳಿಗೆ ಮಾತ್ರ ಜನಪದರು ಬಾಯೂರಿಸದೆ ಇರಲಾರರು. ಹುಣಸೆ ಕಾಯಿ ಚಟ್ನಿ ಹಂಪಿ ಪರಿಸರದಲ್ಲಿ ಬಹಳ ಪ್ರಸಿದ್ಧಿ. ಹೂ ಬಿಡುವ ಕಾಲದಲ್ಲಿ ಅವುಗಳ ಹೂವಿನಿಂದ ಮಾಡುವ ಚಟ್ನಿ ಖ್ಯಾತಿ ಪಡೆದಿದೆ. ಹುಣಸೆ ಮರವಿಲ್ಲದ ಊರು ಒಂದು ಊರೇ ಅಲ್ಲ ಎಂಬ ಅಭಿಪ್ರಾಯವೂ ಇದೆ. ಹುಣಸೆ ಮರ ಇರೋ ತನಕ ಬಹಳ ಗಟ್ಟಿ. ಆನೆಯೇ ಅದರ ಕೊಂಬೆಯನ್ನು ಮುರಿಯಲಾರದು. ಆದರೆ ಅದು ಉರುಳಿ ಬಿದ್ದ ಮೇಲೆ ಮೂರೂ ಕಾಸಿಗೂ ಬೇಡ. ಅದು ಆಷ್ಟು ಸಲೀಸಾಗಿ ಟೊಳ್ಳಾಗಿ ಬಿಡುತ್ತದೆ. ಯಾವ ಮರಮುಟ್ಟಿನ ಸಾಮಗ್ರಿಗಳನ್ನು ಮಾಡಲಾಗದು. ಮನುಷ್ಯನ ಬಾಳುಕೂಡ ಹೀಗೆ ಬದುಕಿರೊ ತನಕ ಗಟ್ಟಿ ಆ ಮೇಲೆ ಮಣ್ಣುಪಾಲು ಎಂಬ ಹೋಲಿಕೆಯನ್ನು ಹುಣಸೆ ಮರದ ಜೊತೆ ಮಾಡುವರು. ಮುಪ್ಪಾದರೂ ಹುಳಿ ಮುಪ್ಪೆ ಎಂಬ ಮಾತಿದೆ. ಮನುಷ್ಯರಿಗೂ ಹುಣಸೆ ಮರಕ್ಕೂ ತಕ್ಕ ಸಾಮ್ಯತೆ ಇದೆ. ಹಂಪಿ ಪರಿಸರದಲ್ಲಿ ಹುಣಸೆ ಮರದ ಗುಣ ನೋಡಿದರೆ ಅದು ತುಂಬ ಗಿಡ್ಡಕ್ಕೆ ಬೆಳೆಯಬೇಕಿತ್ತು. ಆದರೂ ಈ ಪರಿಸರದ ರೀತಿಯನ್ನು ಹೊಂದಿಸಿಕೊಂಡು ಹುಣಸೆ ಮರಗಳು ಚೆನ್ನಾಗಿ ಬೆಳೆದುಕೊಂಡಿವೆ. ಜನರು. ಈ ಮರವನ್ನು ಬಳಸಿಕೊಳ್ಳುವ ರೀತಿ ಮಾತ್ರ ಅತ್ಯುತ್ತಮವಾಗಿದೆ. ಅದರ ಬಗೆಗಿನ ನಂಬಿಕೆಗಳು ಮಾತ್ರ ತಕ್ಕುದಾಗಿಲ್ಲ. ಹುಣೆಸೆ ಬೀಜಗಳನ್ನು ಯುಗಾದಿ ಹಬ್ಬದಂದು ಮನೆಗಳ ಮೇಲೆ ಎರಚಿ ಸರಸ ಸಂಬಂಧಗಳನ್ನು ಪ್ರದರ್ಶಿಸುವುದಿದೆ. ಹೆಣ್ಣುಮಕ್ಕಳು ಹುಣಸೆ ಬೀಜಗಳಿಂದ ಚನ್ನೆ ಮಣೆ ಆಟವಾಡುವುದಿದೆ. ಅನೇಕ ರೀತಿಯಲ್ಲಿ ಗ್ರಾಮ ಸಂಸ್ಕೃತಿಯ ರುಚಿಯ ಭಾಗವೇ ಆಗಿಬಿಟ್ಟಿರುವ ಹುಣಸೆ ಮರಗಳು ಸಂಸ್ಕೃತಿಯ ನಿರೂಪಣೆಗಳಿಗೆ ತಕ್ಕುದಾಗಿವೆ.

ಹಿಪ್ಪೆ ಮರ: ಹಿಪ್ಪೆ ಹೂ ಬಹಳ ಕಟು ವಾಸನೆ ಬೀರುತ್ತವೆ. ಬಾವಲಿಗಳಿಗೆ ಹಿತವಾದ ಮರ. ಹಿಪ್ಪೆ ಕಾಯಂತೂ ಬಾವಲಿಗಳಿಗೆ ಪರಮ ರುಚಿಯೇ ಇರಬೇಕೇನೊ. ಹಿಪ್ಪೆ ಹೂ ಬಿಟ್ಟ ಕಾಲದಲ್ಲಿ ಈ ಮರಗಳ ಕೆಳಗೆ ಕೂಡಲು ಸಾಧ್ಯವೇ ಇಲ್ಲ. ಅಷ್ಟೊಂದು ಘಾಟು ಕಂಪು ಮತ್ತು ತರಿಸುವಂತಿರುತ್ತದೆ. ಹಿಪ್ಪೆಕಾಯಿಗಳಿಂದ ಹಿಪ್ಪೆ ಎಣ್ಣೆಯನ್ನು ತಯಾರಿಸಲಾಗುವುದು. ಅನೇಕ ಔಷಧಿ ತಯಾರಿಕೆಯಲ್ಲಿ ಹಿಪ್ಪೆ ಹೂ, ಎಲೆ ತೊಗಟೆ, ಕಾಯಿಗಳನ್ನು ಹೆಚ್ಚಾಗಿ ಬಳಸುವರು. ಹಿಪ್ಪೆ ತೋಪುಗಳು ಪ್ರತಿ ಊರಿಗೂ ಇರಬೇಕಾಗಿದ್ದ ಒಂದು ಕಾಲವಿತ್ತು. ದೇವರ ಗುಡಿಯ ಬಳಿಯೇ ಊರಾಚೆ ಹಿಪ್ಪೆ ಮಾಳ, ಹಿಪ್ಪೆ ತೋಪುಗಳು ನಿರ್ಮಾಣವಾಗುತ್ತಿದ್ದವು. ಇವುಗಳಿಂದ ಆ ಗ್ರಾಮದ ಸೌಂದರ್ಯ ಮಾತ್ರವಲ್ಲದೆ ಅನೇಕ ನೈಸರ್ಗಿಕ ಉಪಯೋಗಗಳು ಆಗುತ್ತಿದ್ದವು. ಹಿಪ್ಪೆ ತೋಪುಗಳು ದಣಿವಾರಿಸಿಕೊಳ್ಳುವ ಸ್ಥಳಗಳೂ ಆಗಿರುತ್ತಿದ್ದವು. ಗೃಹೋಪಯೋಗಿ ವಸ್ತುಗಳಿಗೆ ಹಿಪ್ಪೆ ಮರಗಳನ್ನೆ ಹೆಚ್ಚಾಗಿ ಬಳಸುವರು. ಹಂಪಿ ಪರಿಸರದಲ್ಲಿ ಈಗ ಹಿಪ್ಪೆ ಮರಗಳು ಅಪರೂಪ ಎಂದೇ ಹೇಳಬೇಕು.

ನುಗ್ಗೆ ಗಿಡ: ಪ್ರಾಚೀನ ಗ್ರಾಮ ಪರಂಪರೆಗಳ ಅವಧಿಯಿಂದಲೂ ನುಗ್ಗೆ ಮರವನ್ನು ಮನೆಯ ಹಿತ್ತಿಲಲ್ಲಿಯೊ ಮುಂದೆಯೊ ಬೆಳೆಸಿಕೊಂಡು ಬರಲಾಗುತ್ತಿದೆ. ನುಗ್ಗೆ ಕಾಯಿಲ್ಲದೆ ಮದುವೆ ಮನೆಯಲ್ಲಿ ಸಾಂಬಾರು ಮಾಡಲಾಗದು ಎಂಬಷ್ಟು ಬಳಕೆ ಈ ಕಾಲದಲ್ಲಿದೆ. ಭಾಗಶಃ ಹಿಂದಿನ ಕಾಲದಲ್ಲಿ ನುಗ್ಗೆ ಕಾಯಿಗೆ ಇಷ್ಟೊಂದು ಬೇಡಿಕೆ ಇರಲಿಲ್ಲ ಎನಿಸುತ್ತದೆ. ಹಂಪಿಯ ಪರಿಸರದಲ್ಲಿ ಇದರ ಮಹತ್ವ ಕಡಿಮೆ ಇತ್ತೆಂದು ಕಾಣುವುದು. ಇಲ್ಲಿನ ಆಹಾರ ಕ್ರಮದಲ್ಲಿ ನುಗ್ಗೆ ತಡವಾಗಿ ಪ್ರವೇಶಿಸಿದೆ. ನುಗ್ಗೆ ತುಂಬ ಉಪಯುಕ್ತವಾದ ಗಿಡ. ಆಹಾರ ಕ್ರಮದಲ್ಲಿ ಇದರ ಬಳಕೆ ಎಷ್ಟಿದ್ದರೂ ಯಾವ ಲೋಪವೂ ಇಲ್ಲ. ಹಂಪಿ ಪರಿಸರದ ಜನಪದರು ನುಗ್ಗೆ ಸೊಪ್ಪನ್ನು ಆಷ್ಟಾಗಿ ತಿನ್ನುವುದಿಲ್ಲ. ಪುಂಡೆಪಲ್ಲೆಯನ್ನು ಇಷ್ಟ ಪಡುವ ಕಾರಣ ನುಗ್ಗೆ ಸೊಪ್ಪು ವಿಶೇಷ ಎನಿಸಿಲ್ಲವೇನೊ. ನುಗ್ಗೆಯ ಮುರಿದು ಬೆಳಸು ಮಕ್ಕಳ ಹೊಡೆದು ಸಾಕು ಎಂಬ ಹಳೆ ಮೈಸೂರಿನ ಗಾದೆ ಈ ಭಾಗದಲ್ಲಿ ಪರಿಚಿತವಿಲ್ಲ. ನುಗ್ಗೆ ಟೊಳ್ಳಾದ ಮರ. ಮುರಿದಂತೆಲ್ಲ ಬೆಳೆಯಬಲ್ಲದು. ನುಗ್ಗೆಗಿಡದಲ್ಲಿ ದೆವ್ವಗಳಿರುತ್ತವೆ ಎಂಬ ಪ್ರತೀತಿ ಇದೆ.

ಲಕ್ಕಿ ಗಿಡ: ಹೊಳೆ ದಂಡೆಯಲ್ಲಿ ವಿಶೇಷವಾಗಿ ಬೆಳೆವ ಗಿಡ. ಸೊಂಪಾಗಿ ಸೊಪ್ಪು ತುಂಬಿಕೊಂಡು ಕೋಲಿನಂತೆ ನೆಟ್ಟಿಗೆ ಬೆಳೆವ ಲಕ್ಕಿ ಮರ ಸೌದೆಗೆ ಒಳ್ಳೆಯ ಮರವೇ. ಹಾಗೆಯೆ ಇದರ ಸೊಪ್ಪನ್ನು ಹೊಲಗದ್ದೆಗಳಿಗೆ ಹಾಕಿ ಗೊಬ್ಬರವಾಗಿಸುವರು. ಲಕ್ಕಿ ಕಡ್ಡಿಯ ಏಟು ಬಹಳ ಚುರುಕಾಗಿರುತ್ತದೆಯಂತೆ. ಹುಣಸೆ ಚಬ್ಬೆ ಅಥವಾ ಲಕ್ಕಿ ಕಡ್ಡಿ ಏಟಿನಿಂದ ತಪ್ಪಿತಸ್ಥರ ಬಾಯಿಬಿಡಿಸುವ ರೂಢಿ ಹಳೆಕಾಲದ ಪಂಚಾಯಿತಿಗಳಲ್ಲಿ ಇತ್ತು. ಹಂಪಿ ಪರಿಸರವು ತುಂಗಭದ್ರಾ ನದಿಯನ್ನು ಆವರಿಸಿಕೊಂಡಿರುವುದರಿಂದ ಈ ಭಾಗಗಳಲ್ಲಿ ಲಕ್ಕಿ ಗಿಡಗಳು ಬೆಳೆದಿವೆ. ಎತ್ತಿನಗಾಡಿಯ ತಡಿಕೆ ಅಥವಾ ಜಲ್ಲಿ ಕಟ್ಟಲು ಈ ಗಿಡದ ರೆಂಬೆಕೊಂಬೆಗಳನ್ನು ಬಳಸುವರು. ಕಸದ ಬುಟ್ಟಿ, ಎಣೆಯಲೂ ಕೂಡ ಇದರ ಕಡ್ಡಿಗಳು ಬಳಕೆ ಆಗುತ್ತವೆ. ಉತ್ತಮ ಬೇಲಿಯಾಗಿಯೂ ರೈತರಿಗೆ ಲಕ್ಕಿ ಬೇಲಿ ಸಹಕರಿಸುತ್ತದೆ. ಹಾಗೆಯೇ ಹನುಮಂತ ದೇವರ ಹರಕೆ ತೀರಿಸುವಾಗ ಮಕ್ಕಳಿಗೆ ಲಕ್ಕಿ ಕಡ್ಡಿಗಳ ಸೊಂಟಕ್ಕೆ ಕಟ್ಟು (ಬೆತ್ತಲೆ ರೂಪವನ್ನು ಮರೆ ಮಾಡಲು)ವರು.

ಲಾಳದ ಗಿಡ: ಹೊಳೆದಂಡೆಯಲ್ಲಿ ಮಾತ್ರ ಉಸುಕಿನ ದಂಡೆಗೆ ಹೊಂದಿಕೊಂಡಂತೆ ಬೆಳೆವ ಸಾಮೂಹಿಕ ಗಿಡ ವಿಶೇಷವಾಗಿ ಉಪಯೋಗಕ್ಕೆ ಬರುವುದಿಲ್ಲ. ಉದ್ದವಾಗಿ ಜೋಳದ ಕಡ್ಡಿಯಂತೆ ಬೆಳೆವ ಗಿಡವು ಬಿದಿರಿನಲ್ಲೇ ಒಂದು ಪುಟ್ಟ ಪ್ರಭೇದ. ಲಾಳದ ಕಡ್ಡಿಗಳು ಬಿದಿರನ್ನೆ ಹೋಲುತ್ತವೆ. ಗುಡಿಸಲು ನಿರ್ಮಿಸಲು ಬಳಸುವರು. ಇವುಗಳ ಕಡ್ಡಿಯಿಂದ ಕೊಳಲು ಮಾಡಿ ಜಾತ್ರೆಗಳಲ್ಲಿ ಮಾರುವರು. ಗೆಣ್ಣಿನಿಂದ ಚಿಗುರಿ ಹಬ್ಬಿ ಬೆಳೆವ ಲಾಳದ ಗಿಡಗಳು ದಟ್ಟ ಹಸುರಿನಿಂದ ಹೊಳೆದಂಡೆಗೆ ಚೆಲುವು ನೀಡುವುದಲ್ಲದೆ ಪುಟ್ಟಹಕ್ಕಿಗಳಿಗೆ ಆಶ್ರಯ ತಾಣವೂ ಆಗಿವೆ.

ಶಿಬಾಬುಲ್ ಗಿಡ: ಉರುವಲಿಗೆ ಹೆಚ್ಚು ಬಳಕೆಯಾಗುವ ಮರ. ಕಡ್ಡಿಯಂತೆ ನೇರ ಬೆಳದು ಬಿಡಬಲ್ಲದು. ಮಳೆ ಗಾಳಿಗೆ ಸುಲಭವಾಗಿ ಮುರಿದು ಬೀಳುವುದು. ಗೊಬ್ಬರವಾಗಿ ಇದರ ಸೊಪ್ಪನ್ನು ಬಳಸುವರು. ಕುರಿ ಮೇಕೆಗಳಿಗೆ ಶಿಬಾಬುಲ್ ಒಳ್ಳೆಯ ಮೇವು. ಬೇಲಿ ಸಾಲಿನಲ್ಲೇನಾದರೂ ಬೆಳೆಯಿತೆಂದರೆ ಇಡೀ ಬೇಲಿಯನ್ನೇ ತನ್ನ ಗಿಡಗಳ ನೆಲೆಯಾಗಿ ಮಾಡಿಕೊಂಡು ಬಿಡಬಲ್ಲದು. ಹೊಲಗಳ ನಡುವೆ ಇದನ್ನು ಬೆಳಸುವುದಿಲ್ಲ. ವಿಪರೀತ ಬೀಜ ಪ್ರಸರಣ ಮಾಡಿ ಹೊಲವನ್ನೆಲ್ಲ ಆವರಿಸಿಬಿಡಬಲ್ಲದು. ಆಗಿಂದಾಗೆ ಮುರಿದು ಬಳಸಿಕೊಳ್ಳುವರು.

ಬಳ್ಳಾರಿ ಜಾಲಿ: ಹಂಪಿ ಪರಿಸರದಲ್ಲಿ ಇದು ಸಾಮಾನ್ಯ ಗಿಡ. ಕಳೆಯಂತೆ ಹಬ್ಬಬಲ್ಲದು. ಇದು ಬಡವರ ಸೌದೆಯ ಗಿಡ. ಕಡಿದಂತೆಲ್ಲ ಮತ್ತೆ ಮತ್ತೆ ಚಿಗುರುತ್ತಲೆ ಇರುತ್ತದೆ. ಮುಳ್ಳಿನ ಗಿಡವಾದ್ದರಿಂದ ಉಪಾಯವಾಗಿ ಕಡಿದು ಉಪಯೋಗಿಸುವರು. ಮುಳ್ಳಿನಲ್ಲಿ ವಿಷವಿದೆ ಎಂದು ಹೇಳುವರು. ಯಾವ ಮಳೆಯೂ ಗೊಬ್ಬರವೂ ಆರೈಕೆಯೂ ಇಲ್ಲದೆ ಇದು ಬೆಳೆಯಬಲ್ಲದು. ಇದೊಂದು ಬೇಕಾಬಿಟ್ಟಿಯಾಗಿ ಬೆಳೆದು ಕೊಳ್ಳುವುದರಿಂದ ಬುಡ ಸಮೇತ ಕಿತ್ತು ಹಾಕಿ ಆ ಬುಡಕ್ಕೆ ಬೆಂಕಿ ಇಟ್ಟು ಹದ್ದುಬಸ್ತಿನಲ್ಲಿಡುವರು. ಬಳ್ಳಾರಿ ಜಾಲಿ ಎಂದೇ ಪ್ರಸಿದ್ಧವಾದ ಈ ಜಾಲಿ ಗಿಡ ಹೊರಗಿನಿಂದ ಬಂದುದಾಗಿದೆ. ಉರುವಲಿಗೆ ಬಹಳ ಕಷ್ಟ ಇದ್ದಿದ್ದರಿಂದ ಈ ಒಣ ಪ್ರದೇಶಗಳಲ್ಲಿ ಏನೂ ಇಲ್ಲದೆಯೂ ಬೆಳೆಯಬಲ್ಲುದಾದ್ದರಿಂದ ಜನತೆಗೆ ಇದು ಉರುವಲಾಗಿ ಬಳಕೆ ಆಗಲಿ ಎಂದೇ ಬಿತ್ತರಿಸಲಾಯಿತಂತೆ. ಈಗ ಇದೊಂದು ಕಳೆ ಎಂಬಂತೆ ಹಂಪಿಯ ಗತ ಸಾಮ್ರಾಜ್ಯದ ನೆಲೆಯನ್ನು ಕೂಡ ಆವರಿಸಿಕೊಳ್ಳುತ್ತಿದೆ. ಪರಂಪರಾಗತವಾದ ಯಾವ ನಂಬಿಕೆಗಳು ಈ ಗಿಡಕ್ಕೆ ಇಲ್ಲ.

ನೇರಳೆ ಮರ: ಫಲಕೊಡುವ ಮರಗಳಲ್ಲಿ ಮುಖ್ಯವಾದುದು. ಭೂಮಿತಾಯಿಯೇ ತಮ್ಮ ಮಕ್ಕಳಿಗಾಗಿ ಹಣ್ಣು ಕೊಡಲು ಈ ಮರಗಳನ್ನು ಬೆಳೆಸಿದ್ದಾಳೆ ಎಂಬುದು ಜನಪದ ನಂಬಿಕೆ. ಜಂಜು ನೇರಳೆ, ನಾಯಿ ನೇರಳೆ ಎಂಬ ಎರಡು ಜಾತಿಯ ನೇರಳೆ ಮರಗಳು ಹಂಪಿಯಲ್ಲಿ ಕಂಡುಬರುತ್ತವೆ. ನಾಯಿ ನೇರಳೆ ತಿಂದರೆ ನಾಯಿ ಕೆಮ್ಮು ಬರುವುದೆಂದು ಉಪೇಕ್ಷಿಸುವರು. ಆದರೂ ಈ ನೇರಳೆ ಹಣ್ಣನ್ನು ಆಯ್ದು ತಂದು ನೀರಲ್ಲಿ ನೆನೆಸಿ ಉಪ್ಪಲ್ಲಿ ಒಂದಿಷ್ಟು ಹೊತ್ತು ಬಿಟ್ಟು ತಿಂದರೆ ಬಹಳ ರುಚಿಯಾಗಿರುತ್ತದೆ. ಔಷಧಿಯ ಹಣ್ಣೆಂದು ಜನ ಮಾನ್ಯ ಮಾಡುವರು. ಪಶು ಪಕ್ಷಿಗಳಿಗೆ ಒಂದು ಬಗೆಯ ಹಣ್ಣುಗಳನ್ನು ಭೂತಾಯಿ ಕೊಟ್ಟಿದ್ದರೆ, ಮನುಷ್ಯರಿಗೆಂದೇ ಆಕೆ ಹಲವಾರು ಹಣ್ಣುಗಳನ್ನು ನೀಡಿದ್ದಾಳೆಂದು ಜನ ಹೇಳುವರು. ರಕ್ತಹೀನತೆ ಇರುವವರು ಜಂಬು ನೇರಳೆ ತಿನ್ನುವುದರಿಂದ ರಕ್ತ ಹೆಚ್ಚುತ್ತೆ ಹಾಗೂ ಶುದ್ಧವಾಗುತ್ತೆ ಎನ್ನುವರು. ಅತಿಯಾಗಿ ತಿಂದರೆ ಗಂಟಲು ಕೆಡುವುದು. ಬೇಧಿಗೂ ಜಂಬು ನೇರಳೆ ಉಪಯುಕ್ತ ಔಷಧ. ಇದರ ಬೀಜಗಳನ್ನು ಪುಡಿಮಾಡಿ ಔಷಧಿಗಳಲ್ಲಿ ಬೆರೆಸುವರು. ಜಂಬು ನೇರಳೆ ಮರಗಳು ಹಂಪಿಯ ಪರಿಸರದಲ್ಲಿ ಅಪರೂಪ.

ಸೀತಾ ಫಲ: ಹಂಪಿಯ ಬೆಟ್ಟಗುಡ್ಡಗಳ ಸಾಮಾನ್ಯ ಹಣ್ಣಿನ ಗಿಡಗಳಲ್ಲಿ ಇದೂ ಒಂದು. ಇದರಲ್ಲಿ ಎರಡು ಬಗೆಗಳಿವೆ. ಮತ್ತೊಂದು ರಾಮಫಲ. ಇವೆರಡೂ ರಾಮಸೀತೆಯರು ಕೊಟ್ಟಿರುವ ಫಲಗಳೆಂದು ಜನ ನಂಬುವರು. ಕರಡಿಗಳಿಗೆ ಈ ಹಣ್ಣುಗಳು ಬಹಳ ಪ್ರಿಯವಾದವು. ಹಂಪಿ ಪರಿಸರದಲ್ಲಿ ಈ ಫಲ ವೃಕ್ಷಗಳಿಂದಾಗಿಯೆ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಳಿಯಲು ಕಾರಣವಾದದ್ದು. ಕರಡಿಗಳು ಈ ಹಣ್ಣುಗಳಿಗಾಗಿ ಬೆಟ್ಟಗುಡ್ಡಗಳನ್ನೆಲ್ಲ ಬಳಸುತ್ತವೆ. ಈ ಫಲಗಳನ್ನು ಸಂಗ್ರಹಿಸಲು ಬೆಟ್ಟಗುಡ್ಡಗಳಿಗೆ ಹೋಗುವವರು ಕರಡಿಗಳ ಭಯದಿಂದಲೇ ಫಲ ಕೊಯ್ಲು ಮುಗಿಸಿಕೊಂಡು ಬರುವರು. ಬಹಳ ಪ್ರಾಚೀನ ಫಲವಾದ ಸೀತಾ ರಾಮ ಫಲಗಳು ಬಹಳ ಸಿಹಿರುಚಿಯಾಗಿವೆ.

ಕರಕೀಲೆ ಗಿಡ: ಪೊದೆಗಿಡವಾಗಿದ್ದು ಮುಳ್ಳಿನಿಂದ ಕೂಡಿದೆ. ದೊಡ್ಡ ಮರವೇನಲ್ಲ. ಅತ್ತ ಪುಟ್ಟ ಗಿಡವೂ ಅಲ್ಲ. ಒಳಗೆ ನುಸುಳಲಾಗದಂತೆ ಹಬ್ಬಬಲ್ಲ ಗಿಡವಾಗಿದೆ. ಕರಡಿ ಹಾಗೂ ಪಕ್ಷಿಗಳಿಗೆ ಇಷ್ಟವಾಗುವ ಹಣ್ಣುಗಳನ್ನು ಬಿಡುತ್ತದೆ. ರುಚಿಯಾದ ಕಾಡು ಹಣ್ಣುಗಳ ಕರಕೀಲೆ ಗಿಡದಲ್ಲಿಯು ಎರಡು ವಿಧ. ಚಿಕ್ಕ ಕರಕೀಲೆ ದೊಡ್ಡ ಕರಕೀಲೆ ಗಿಡಗಳೆರೆಡೂ ಒಂದೇ ಬಗೆಯ ಹಣ್ಣುಗಳನ್ನು ಬಿಡುತ್ತವೆ. ಸೌದೆಯಾಗಿ ಬಳಸಲಾಗದು. ದನಕರು ಮೇಕೆ ಕುರಿಗಳು ಮೇಯುವುದಿಲ್ಲ. ಕಾಡು ಪಕ್ಷಿ ಪ್ರಾಣಿಗಳಿಗೆ ಬೇಕಾದ ಹಣ್ಣನ್ನು ಕೊಡುವ ಕರಕೀಲೆ ಗಿಡಗಳನ್ನು ಕಡಿಯದೆ ಜನಪದರು ಬಿಟ್ಟುಬಿಡುವರು. ಜೀವರಾಶಿಯ ಜೀವಕ್ಕೆ ಬೇಕಾದ್ದನ್ನು ಅನವಶ್ಯಕವಾಗಿ ಕಡಿದು ಸುಡಬಾರದು ಎಂಬ ಪ್ರಜ್ಞೆ ಹಂಪಿ ಪರಿಸರದಲ್ಲಿದೆ.

ಮುಕರಿ ಹಣ್ಣಿನ ಗಿಡ:  ಕಾಡಿನ ಪ್ರಾಣಿ ಪಕ್ಷಿಗಳಿಗೆ ಬೇಕಾದ ಹಣ್ಣಿನ ಗಿಡ. ಪೊದೆಯಂತೆ ಬೆಳೆದು ಮುಳ್ಳುಗಳಿಂದ ಕೂಡಿದೆ. ಮನುಷ್ಯರು ಈ ಹಣ್ಣನ್ನು ಬಳಸುವುದು ಬಹಳ ಕಡಿಮೆ. ಸೌದೆಗೆ ಬಳಸಲ್ಪಡುವುದಿಲ್ಲ. ಕುರುಚಲು ಕಾಡಿನ ಸಹಜ ಗಿಡ ಬಳ್ಳಿಯಂತೆ ಹಬ್ಬಿ ಕೊಂಡಿರುತ್ತದೆ. ಜನಪದರ ಆಚರಣೆಗಳಲ್ಲಿ ವಿಶೇಷ ಸ್ಥಾನವನ್ನೇನು ಪಡೆದಿಲ್ಲ. ಇಂತದೇ ಮತ್ತೊಂದು ಉಲ್ಪಿ ಹಣ್ಣಿನ ಗಿಡ: ದನಗಾಹಿಗಳು ತಿನ್ನುವ ಹಣ್ಣಾದರೂ ವಿಶೇಷವಾಗಿ ಕರಡಿಗಳಿಗೆ ಅಚ್ಚು ಮೆಚ್ಚಾದ ಹಣ್ಣು. ಬೇರೆ ಪ್ರಾಣಿ ಪಕ್ಷಿಗಳು ಈ ಹಣ್ಣಿಗೆ ಆಸಕ್ತಿ ವಹಿಸುವುದಿಲ್ಲ. ಕರಡಿ ಹಣ್ಣಿನ ಗಿಡ ಎಂತಲೂ ಈ ಗಿಡವನ್ನು ಗುರುತಿಸುವರು. ಪೊದೆಯಂತೆ ಹಬ್ಬಿರುವ ಈ ಗಿಡಕ್ಕೆ ಮುಳ್ಳುಗಳಿಲ್ಲ. ಆದರೆ ಮುಳ್ಳಿನಂತಹ ಚೂಪು ರಚನೆಗಳಿವೆ. ಮರವಾಗದ ಈ ಗಿಡ ಸೌದೆಗೂ ಉಪಯುಕ್ತವಲ್ಲ. ಕರಡಿಗಳಿಗೆ ಈ ಹಣ್ಣೆಂದರೆ ಬಹಳ ಇಷ್ಟವಂತೆ. ಜನಪದರು ಉಲ್ಪಿ ಗಿಡಗಳ ಬಳಿ ಹೋಗಲು ಭಯ ಪಡುವರು. ಆ ಗಿಡಗಳ ಪೊದೆಗಳಡಿ ಕರಡಿಗಳು ವಿಶ್ರಾಂತಿ ಪಡೆಯುತ್ತವೆ. ಹಂಪಿ ಪರಿಸರದಲ್ಲಿ ಉಲ್ಪಿಗಿಡಗಳು ಹೇರಳವಾಗಿ ಹಬ್ಬಿವೆ.

ಕವಳೆ ಹಣ್ಣಿನ ಗಿಡ: ಇದು ಹಂಪಿ ಪರಿಸರದಲ್ಲಿ ಯಥೇಚ್ಛವಾಗಿ ಬೆಳೆವ ಮುಳ್ಳುಗಿಡ ಮೈತುಂಬ ಕಪ್ಪು ಹಣ್ಣು ಬಿಟ್ಟು ಕೆಲವೇ ದಿನಗಳಲ್ಲಿ ಬರಿದಾಗುತ್ತದೆ. ಕರಡಿಗಳಿಗೆಂದೇ ಈ ಹಣ್ಣುಗಳು ಹಂಪಿ ಪರಿಸರದಲ್ಲಿ ಬೆಳೆದಿವೆ ಏನೊ ಎಂಬಂತೆ ಕರಡಿಗಳು ಈ ಕವಳೆ ಹಣ್ಣಿಗೆ ಚಪ್ಪರಿಸುತ್ತವೆ. ಪುಟ್ಟ ಮುಳ್ಳಿನ ಪೊದೆಗಿಡವಾದ ಇದರ ಬುಡವನ್ನೊ ರೆಂಬೆಯನ್ನೊ ಹಿಡಿದು ಕರಡಿ ಅಲುಗಾಡಿಸಿ ಹಣ್ಣುಗಳನ್ನು ಉದುರಿಸಿ ಕ್ಷಣದಲ್ಲಿ ಬೊಸ್ಸೆಂದು ಉಸಿರೆಳೆದು ಕೊಳ್ಳುತ್ತ ಹಾಗೇ ಬಾಯಿಂದಲೇ ಸೊರೆದುಕೊಂಡಂತೆ ನೊಣೆಯುತ್ತದೆ. ಕವಳೆ ಹಣ್ಣಿನ ಗಿಡಗಳ ಬಳಿ ಬೆಳಗಿನ ಜಾವ ಹೋಗುವುದು ಅಪಾಯವನ್ನು ಮೈಮೇಲೆ ತಂದುಕೊಂಡಂತೆ ಎಂದು ಹೇಳುವರು. ಈ ಹಣ್ಣು ಬಡಪಾಯಿ ಜನಪದರಿಗೂ ಹಿತವಾದುದೇ. ಬಡ ಹೆಂಗಸರು ಇವುಗಳನ್ನು ಕೊಯ್ದು ಶಾಲೆಗಳ ಬಳಿ ಮಾರುವರು. ರಕ್ತ ಹೀನತೆ ಇರುವವರಿಗೆ ಈ ಹಣ್ಣು ಉತ್ತಮ. ವೀರ್ಯ ವೃದ್ಧಿಸುವುದಿದೆ ಎಂದೂ ಹೇಳುವರು. ಅನೇಕ ರೋಗಗಳು ಈ ಹಣ್ಣು ತಿನ್ನುವುದರಿಂದ ವಾಸಿಯಾಗುತ್ತವೆಂಬ ನಂಬಿಕೆ ಇದೆ. ಹಂಪಿ ಪರಿಸರದ ಹಕ್ಕಿಗಳಿಗೂ ಈ ಹಣ್ಣು ಬೇಕೆ ಬೇಕು. ಜೀವಜಾಲದ ಸಮತೋಲನ ಕಾಯುವಲ್ಲಿ ಈ ಹಣ್ಣು ಪರೋಕ್ಷವಾಗಿ ಕಾರ್ಯ ನಿರ್ವಹಿಸುತ್ತದೆ. ಕವಳೆ ಹಣ್ಣಿನ ಗಿಡವನ್ನು ಜನಪದರು ಕಡಿಯದೆ ಬಿಟ್ಟು ಬಿಡುವರು. ಕವಳೆ ಹಣ್ಣಿನ ಕಾಯಿಗಳಿಂದ ತುಂಬಾ ರುಚಿಕರವಾದ ಚಟ್ನಿಯನ್ನು ಈ ಭಾಗದ ಜನಪದರು ಮಾಡುತ್ತಾರೆ. ಮುಸಿಯಗಳಂತು ಕರಡಿಗಳಿಗಿಂತಲೂ ಒಂದು ಕೈಮಿಗಿಲಾಗಿ ಕವಳೆ ಹಣ್ಣುಗಳನ್ನು ತಿನ್ನುತ್ತವೆ. ಜೀವಜಾಲದ ಒಪ್ಪಂದವೇನೊ ಎಂಬಂತೆ ಕರಡಿ ಹಾಗು ಮುಸಿಯಗಳಿಗೆ ಕವಳೆ ಹಣ್ಣು ರೂಪುಗೊಂಡಂತಿವೆ.

ಕಾರೆ ಹಣ್ಣಿನ ಗಿಡ: ಇದು ಪೊದೆಯಂತೆ ಹಬ್ಬುವುದು. ಕರಡಿಗಳು ಕೂಡ ಕಾರೆ ಹಣ್ಣನ್ನು ತಿನ್ನುತ್ತವೆ. ದನಗಾಹಿಗಳಿಗೆ ಸಾಮಾನ್ಯ ಹಣ್ಣು. ಬಡವರೇ ಈ ಬಗೆಯ ಹಣ್ಣುಗಳನ್ನು ತಿನ್ನುವುದು. ಕಾರೆ ಕಾಯನ್ನು ಕಿತ್ತು ಸಣ್ಣ ಕಲ್ಲುಗಳ ಜೊತೆ ಬಟ್ಟೆಯಲ್ಲಿ ಬಿಗಿಯಾಗಿ ಕಟ್ಟಿಟ್ಟು ಬೆಳಗ್ಗೆ ನೋಡಿದರೆ ಕೊಳೆತ ಹಣ್ಣಾಗಿರುತ್ತವೆ. ಬರಿ ಕಾಯಿ ಒಗರಾಗಿರುತ್ತವೆ. ಕಾರೆ ಮುಳ್ಳು ತುಂಬ ಚೂಪಾಗಿದ್ದು ಮೈ ತುಂಬ ಮುಳ್ಳನ್ನೆ ಆಯುಧದಂತೆ ರಚಿಸಿಕೊಂಡಿರುವುದರಿಂದ ಯಾವ ಪಶುವೂ ಇದರ ಸಹವಾಸಕ್ಕೆ ಹೋಗುವುದಿಲ್ಲ. ಬಾಯಿ ತಡೆಯದ ಕೆಲವು ಮೇಕೆಗಳು ಮಾತ್ರ ಕಾರೆಗಿಡಗಳು ಚಿಗುರಿದ್ದಾಗ ಚಿಗುರನ್ನು ಮಾತ್ರ ಕುರುಕಿ ಮುಂದೆ ಹೋಗುವವು. ಕಾರೆ ಗಿಡದ ಉದ್ದ ಕಡ್ಡಿಯನ್ನು ಕಡಿದು ಒಣಗಿಸಿ ಕೃಷಿ ಉಪಕರಣವನ್ನಾಗಿ ಮಾಡಿಕೊಳ್ಳುವರು. ವಕ್ಕಲು ಸಮುದಾಯದಲ್ಲಿ ಹುಲ್ಲುಕಡ್ಡಿ ಹಾಗೂ ಕಾಳನ್ನು ಬೇರ್ಪಡಿಸಲು ಈ ಕಡ್ಡಿಯನ್ನು ಬಳಸುವರು. ಕಾರೆ ಗಿಡಗಳ ಬುಡದಲ್ಲಿ ಹಾವುಗಳು ನೈಸರ್ಗಿಕ ರಕ್ಷಣೆಯನ್ನು ಪಡೆಯುತ್ತವೆ. ಕೆಲವು ಹಾವುಗಳು ಈ ಮುಳ್ಳಿನ ಗಿಡದ ತಳದ ಕಸಕಡ್ಡಿಗಳ ಮರೆಯಲ್ಲೆ ಮೊಟ್ಟೆ ಇಟ್ಟು ಮರಿಮಾಡಿಕೊಳ್ಳುತ್ತವೆ. ಹೀಗಾಗಿ ಕಾರೆ ಗಿಡದ ಬಳಿ ಕಾಲಿಡುವಾಗ ಬಹಳ ಎಚ್ಚರಿಕೆಯನ್ನು ವಹಿಸುವರು. ಇದರ ಮುಳ್ಳು ತಾಗಿದರೆ ಬಹಳ ಸಮಯ ಉರಿ ಬಾಧಿಸುವುದು. ಹಂಪಿಯ ಬೆಟ್ಟಗುಡ್ಡಗಳಲ್ಲಿ ಇದು ಸಾಮಾನ್ಯ ಮುಳ್ಳಿನ ಹಣ್ಣಿನ ಗಿಡ.

ಬಾರೆ ಹಣ್ಣಿನ ಗಿಡ: ಬಾರೆ ಹಣ್ಣಿನ ರುಚಿ ಒಗರು ಹುಳಿ ಸಿಹಿಯ ಮಿಶ್ರಣವಾಗಿದ್ದು ತುಂಬಾ ಜನಪ್ರಿಯ ಹಣ್ಣೆಂದು ಹಂಪಿ ಪರಿಸರದಲ್ಲಿ ಕರೆಸಿಕೊಂಡಿದೆ. ಬಾರೆ ಹಣ್ಣಿನ ಗಿಡಗಳು ಗೀಜುಗನ ಹಕ್ಕಿಗಳಿಗೆ ಪ್ರಿಯವಾದ ಮರ. ಎತ್ತರವಾಗಿಯೂ ಬೆಳೆಯಬಲ್ಲದು. ಹಾಗೆಯೆ ಅದರ ಕೊಕ್ಕಿನ ಮುಳ್ಳುಗಳು ಎಂತವರನ್ನೂ ಎದುರಿಸಬಲ್ಲವು. ಬಾರೆ ಹಣ್ಣಿನ ಮರಗಳು ಹೇರಳವಾಗಿ ಕಾಣಸಿಗುತ್ತವೆ. ಹಂಪಿ ಪರಿಸರದಲ್ಲಿ ಇವು ತಂತಾನೆ ಹುಟ್ಟಿ ತಂತಾನೆ ಮೈ ತುಂಬಿ ಹಣ್ಣು ತುಂಬಿ ಸುರಿಸುತ್ತವೆ. ಕರಡಿಗಳಿಗೆ ಈ ಹಣ್ಣು ಪ್ರಿಯ ಎಂದು ಪ್ರತ್ಯೇಕವಾಗಿ ಹೇಳಬೇಕಾದ್ದಿಲ್ಲ. ಬಳ್ಳಾರಿಯ ಕೆಲ ಭಾಗಳಲ್ಲಿ ಬಾರೆಯ ಹಣ್ಣಿನ ತೋಪುಗಳಿವೆ. ವ್ಯಾಪಾರಾತ್ಮಕವಾಗಿಯೂ ಈ ಹಣ್ಣಿಗೆ ಬೇಡಿಕೆ ಇದೆ. ಬಳ್ಳಾರಿಯ ಭಾಗದಲ್ಲಿ ವೈಶ್ಯ ಜನಾಂಗದಲ್ಲಿ ಮಕ್ಕಳ ತಲೆಯ ಮೇಲೆ ಬಾರೆ ಹಣ್ಣನ್ನು ಎರೆಯುವ ಆಚರಣೆಯನ್ನು ಮಾಡಲಾಗುತ್ತದೆ. ಮೊಹರಂನ ಕಡೆಯ ದಿನ ಅಲಾಯಿ ಕುಣಿ ಮುಚ್ಚಿದಾಗ ಅದರ ಮೇಲೆ ಬಾರೆ ಬೇಲಿಯ ಕೊಂಬೆಯನ್ನು ನೆಟ್ಟು, ಅದಕ್ಕೆ ಕೆಂಪು ಬಣ್ಣದ ಲಾಡಿಗಳನ್ನು ಸುತ್ತುವರು. ’ನಿನ್ ಮನಿಗೆ ಬಾರೆ ಬೇಲಿ ಬಡಿಯಾ’ ಎನ್ನುವ ಶಾಪಾರ್ಥವೂ ಈ ಭಾಗದ ಜನಪದರಲ್ಲಿ ಬಳಕೆಯಲ್ಲಿದೆ.

ತಲೆಬೂಲಿ ಗಿಡ: ಪೊದೆಗಿಡ. ದಪ್ಪ ಕಾಂಡವಲ್ಲ. ಸಣ್ಣ ರೆಂಬೆ ಕಡ್ಡಿಗಳು ಉದ್ದವಾಗಿ ಅಂಬಿನಂತೆ ಬೆಳೆದಿರುತ್ತವೆ. ಚುಕ್ಕಿ ಎಲೆಗಳೇ ವಿಶೇಷವಾದರೂ ಹಣ್ಣುಗಳನ್ನು ಬಿಟ್ಟಾಗ ಇಡೀ ಗಿಡವೇ ಬಿಳಿ ಜೋಳದ ಕಾಳನ್ನೆ ಮೈತುಂಬ ಅಂಟಿಸಿಕೊಂಡಂತೆ ಕಾಣುತ್ತದೆ. ತಲೆಬೂಲಿಗಿಡದ ಹಣ್ಣುಗಳನ್ನು ಮನುಷ್ಯರು ತಿನ್ನಲಾಗದು. ಮೇಕೆಗಳಿಗೆ ಮಾತ್ರ ಈ ಹಣ್ಣುಗಳು ರುಚಿಕರ. ಜನ ಈ ಗಿಡದ ಬಿಳಿಕಾಳನ್ನು ಕಂಡು ಬಿಳಿ ಕಾಳಿನ ಗಿಡ ಎಂತಲೂ ಕರೆಯುವರು. ಇದೇ ಬಗೆಯಲ್ಲಿ ಕಾಣುವ ಮತ್ತೊಂದು ಸಮಾನಾಂತರ ಗಿಡವೂ ಇದೆ. ಅದನ್ನು ಉಗುಲಿಗಿಡ ಎಂದು ಕರೆಯುವರು. ಇದು ಬಾಯಿ ಹುಣ್ಣಿಗೆ  ಸಿದ್ದೌಷದ. ಉಗುಲಿ ಗಿಡದ ಎಲೆಗಳ ಅಗಿದು ತಿಂದರೆ ಗಾಯ ವಾಸಿಯಾಗುವುದು. ಇದರ ಹಣ್ಣುಗಳು ಜೋಳದಂತೆಯೆ ಕಾಣುತ್ತವೆ. ತಲೆ ಬೂಲಿಗಿಡದ ಮತ್ತೊಂದು ಪ್ರಭೇದವಾಗಿಯೇ ಉಗುಲಿ ಗಿಡ ಕಂಡುಬರುತ್ತದೆ. ಇದೇ ಬಗೆಯ ಇನ್ನೊಂದು ಪ್ರಭೇದವನ್ನು ಬಿಳಿಜಾಲಿಗಿಡ ಎಂತಲೂ ಕರೆವರು.

ಹಾಲುಬಳ್ಳಿಗಿಡ: ಇದೊಂದು ಔಷದಿಯ ಬಳ್ಳಿ. ಗಿಡವಾಗಿ ಹಬ್ಬುವ ಈ ಬಳ್ಳಿಯನ್ನು ದನಕರುಗಳು ಜ್ವರದಿಂದ ಬಳಲುವಾಗ ತಿನಿಸುವರು. ಆಡು ಕುರಿಗಳಿಗೂ ಇದೇ ಕಾರಣಕ್ಕೆ ಬಳಸುವರು. ಅಡವಿ ಮಲ್ಲಿಗೆ ಎಂಬ ಇನ್ನೊಂದು ಬಳ್ಳಿಯಿದೆ. ಇದನ್ನು ಕೂಡ ಪಶು ಔಷಧಿಯಾಗಿ ತಿನಿಸುವರು. ಜನ ಬಳಸುವುದಿಲ್ಲ. ಹಂಪಿಯ ತುಂಬ ಈ ಎರಡೂ ಬಗೆಗಿನ ಗಿಡ ಬಳ್ಳಿಗಳು ಸಾಮಾನ್ಯವಾಗಿ ಸಿಗುತ್ತವೆ. ಗ್ಯಾನಿಗಿಡ ಎಂಬ ಬಳ್ಳಿಯಂತಹ ಇನ್ನೊಂದು ಸಸ್ಯವಿದೆ. ಇದನ್ನು ಹಸು ದನಕರುಗಳ ಖಾಯಿಲೆಗೆ ಔಷಧಿಯಾಗಿ ಬಳಸುವರು. ಬಳ್ಳಿಗಳು ಅನೇಕ ಬಗೆಯ ಔಷಧೀಯ ಗುಣವನ್ನು ಪಡೆದಿವೆ ಎಂದು ಹೇಳುತ್ತಾರೆ. ಆದರೆ ಆ ಸಸ್ಯಗಳ ವಿವರಗಳನ್ನು ಹೇಳಲು ಹಿಂದೆ ಮುಂದೆ ನೋಡುವರು. ಔಷಧೀಯ ಸಸ್ಯಗಳ ಗುಟ್ಟನ್ನು ಬಿಡಬಾರದು ಎಂಬ ನಿಷೇಧವಿರುವುದರಿಂದ ಆ ಬಗೆಗಿನ ಸೂಕ್ತ ಮಾಹಿತಿ ಸಿಕ್ಕುವುದಿಲ್ಲ. ಆ ಗಿಡ ಬಳ್ಳಿಗಳ ಹೆಸರನ್ನು ಮಾತ್ರ ಹೇಳುವಷ್ಟಕ್ಕೆ ಅವರ ವಿವರಗಳು ಸೀಮಿತವಾಗುತ್ತವೆ. ತಿನ್ನಬಹುದಾದ ಬಳ್ಳಿ ಹಾಗೂ ತಿನ್ನಬಾರದ ಬಳ್ಳಿ ಎಂಬ ವಿಂಗಡನೆಗೂ ಕೂಡ ಸರಿಯಾದ ಕಾರಣ ನೀಡುವುದಿಲ್ಲ. ಗ್ವಾನಿಗಿಡ ಕೂಡ ಬಳ್ಳಿಯಂತಹದೇ. ದನಗಳಿಗೂ ತಿನ್ನಿಸುವ ಮೂಲಕ ಖಾಯಿಲೆ ಗುಣಪಡಿಸಬಹುದೆನ್ನುವರು. ಕೊಬ್ಬರಿ ತಪ್ಪಲು ಎಂಬ ಸೊಪ್ಪಿನ ಗಿಡ ಮೇಕೆಗಳಿಗೆ ಬಲು ರುಚಿಯಂತೆ. ಕೊಬ್ಬರಿಯಷ್ಟು ಶಕ್ತಿ ಹಾಗೂ ಅದೇ ಬಗೆಯ ಸ್ವಾಧ ಮೇಕೆಗಳಿಗೂ ಸಿಗಬಹುದು ಎಂದು ಅಂದಾಜು ಮಾಡುವರು. ಕಾಯಿಗಳಿರುವ ಕೊಬ್ಬರಿ ತಪ್ಪಲು ಬಳ್ಳಿಯಂತೆ ಹಬ್ಬುತ್ತದೆ. ಇದರ ಕಾಯಿಗಳು ಗುಂಡಾಗಿದ್ದು ಮೇಕೆಗಳು ನಿಜಕ್ಕೂ ಹಾತೊರೆದು ತಿನ್ನುತ್ತವೆ. ಈ ಬಳ್ಳಿ ಸಹಜವಾಗಿ ಔಷಧೀಯ ಗುಣ ಹೊಂದಿದೆ ಎನ್ನುವರು. ಹೊಲ ಮಲ್ಲಿಗಿ ಗಿಡ ಗಾಯಗಳಿಗೆ ಉಪಯುಕ್ತ. ಚಿಕ್ಕ ಬಿಳಿ ಹೂ ಬಿಡುವ ಹೊಲ ಮಲ್ಲಿಗೆ ನೆಲದಲ್ಲಿ ಹರಡಿಕೊಂಡು ಬೆಳೆಯುವುದು. ಇದರ ಎಲೆಗಳ ಅರದು ಹಚ್ಚುವರು. ಕಾಕಿ ಹಣ್ಣಿನ ಗಿಡದ ಹಣ್ಣುಗಳನ್ನು ತಿನ್ನುವುದಿಲ್ಲ. ಇದು ಸಹ ಪಶು ಆಹಾರ ಗಿಡ. ಇಲಿ ಕಿವಿ ಬಳ್ಳಿಗೂ ಇದೇ ಅಭಿಪ್ರಾಯವಿದೆ. ಪಶು ಆಹಾರ ಹಾಗೂ ಔಷಧಿಗಳ ತಯಾರಿಯಲ್ಲಿ ಬಳಸುವರು. ಹಾಲಲುಬಿನ ಗಿಡವೂ ಇಂಥದ್ದೇ ಉದ್ದೇಶಗಳಿಗೆ ಬಳಕೆ ಆಗುತ್ತದೆ. ದೊಡ್ಡದಾಗಿಡಿ ಬಳ್ಳಿ ಚಿಕ್ಕದಾಗಿಡಿ ಬಳ್ಳಿಗಳು ಸಹ ಪಶುಗಳಿಗೆ ಆಹಾರ ಔಷಧಿ ಬಳ್ಳಿಗಳಾಗಿರುವಂತೆ ಪಕ್ಷಿಗಳಿಗೆ ಹಣ್ಣಿನ ಮೂಲವೂ ಆಗಿವೆ. ದನದ ಕೊಟ್ಟಿಗೆಯ ಕಸ ಬಳಿಯಲು ದಾಗಿಡಿ ಬಳ್ಳಿಯ ಕಡ್ಡಿಗಳಿಂದ ಪೊರಕೆ ತಯಾರಿಸುವರು.

ಬಾದಿ ಹುಲ್ಲು: ಹುಲ್ಲಿನ ಜಾತಿಯ ಸಸ್ಯ. ಇದರಿಂದ ಗುಡಿಸಲು ನಿರ್ಮಿಸುವರು. ದರ್ಬೆ ಹುಲ್ಲು ಇದನ್ನು ಔಷಧಿಗೆ ಬಳಸುವರು. ಸುಗಂಧಿ ಹುಲ್ಲು ಔಷಧಕ್ಕೆ ಉಪಯುಕ್ತ. ಪೊರಕೆ ಹುಲ್ಲು ಕಸಗುಡಿಸುವ ಪೊರಕೆಗಳಿಗೆ ಅನುಕೂಲ. ಹಂಪಿ ಪರಿಸರದಲ್ಲಿ ಸಲೀಸಾಗಿ ಮಳೆಗಾಲದಲ್ಲಿ ಬೆಳೆದು ಬೇಸಿಗೆಯಲ್ಲಿ ಕೊಯ್ಲಿಗೆ ಸಿಗುತ್ತದೆ. ದಾಗಿಡಿ ಬಳ್ಳಿಯಿಂದ ವಕ್ಕಲು ಕೆಲಸಗಳಿಗೆ ಬೇಕಾದ ಪೊರಕೆ ಮಾಡುವರು. ಹಾಗೆಯೆ ಇದೇ ಗಿಡದ ಅಂಬುಗಳನ್ನು ನುಲಿದು ಸಿಂಬಿ ಮಾಡುವರು. ಕಸ ಸುರಿಯುವ ಮಂಕರಿ ಕೂಡ ಮಾಡಲು ಸಾಧ್ಯ. ಕೃಷಿ ಕೆಲಸಗಳಲ್ಲಿ ಕಟ್ಟಾಗಿ ಬಿಗಿಯಲು ಇದನ್ನು ಹೆಚ್ಚು ಬಳಸುವರು.

ಕತ್ತಾಳೆ: ರೈತರ ಅಗತ್ಯಗಳಿಗೆ ಕತ್ತಾಳೆಯನ್ನು ಬಳಸುವರು. ಹಗ್ಗ ಮಾಡಲು ವಿಶೇಷವಾಗಿ ಬಳಸಲಾಗುತ್ತದೆ. ನೀರಿನಲ್ಲಿ ಕೊಳೆಸಿದ ಕತ್ತಾಳೆ ಪಟ್ಟೆಗಳನ್ನು ನಂತರ ತೊಗಟೆಯಂತಹ ಚರ್ಮವನ್ನು ಎಡೆದು ನಾರನ್ನು ಬೇರ್ಪಡಿಸಿ ಚೆನ್ನಾಗಿ ತೊಳೆದು ಒಣಗಿಸಿ ಹಗ್ಗ ಮಾಡುವರು. ಗ್ರಾಮೀಣರಿಗೆ ಉಪಯುಕ್ತವಾದ ಗಿಡವಿದು. ಸೌದೆಗೂ ಕೂಡ ಇದರ ಪಟ್ಟಿಗಳನ್ನು ಬಳಸುವರು. ಹಂಪಿ ಪರಿಸರದಲ್ಲಿ ಕತ್ತಾಳೆ ಸಾಮಾನ್ಯವಾಗಿದೆ. ಇದರಲ್ಲು ಎರಡು ವಿಧ. ಒಂದು ಬೂದು ಬಣ್ಣದ ಕತ್ತಾಳೆ ಮತ್ತೊಂದು ರಾಕ್ಷಸ ಕತ್ತಾಳೆ ಇದು ದಪ್ಪ ಪಟ್ಟಿಗಳ ಮೊನಚು ಮುಳ್ಳುಗಳ ಗಿಡ. ಎತ್ತರವಾಗಿ ಕಂಬದಂತೆ ಬೆಳೆದು ಎರಡೂ ಕತ್ತಾಳೆಗಳು ಹೂ ಬಿಡಬಲ್ಲವು. ಕತ್ತಾಳೆ ತಾಳಿನಲ್ಲಿ ಹಾವುಗಳಿರುತ್ತವೆ ಎಂಬ ಭಯ ಜನಪದರಿಗೆ ಇದೆ. ಈ ಕತ್ತಾಳೆಯ ಪೊದೆಯಲ್ಲಿಟ್ಟ ಜೇನನ್ನು ಬಿಡಿಸಿ ತಿಂದರೆ ಹೊಟ್ಟೆಯಲ್ಲಿ ಸಂಕಟವಾಗುತ್ತದೆಯಂತೆ.

ತುಳಸಿ: ಹಂಪಿ ಪರಿಸರದ ಎಲ್ಲೆಲ್ಲೂ ಕಾಲುಕಾಲಿಗೆ ಸಿಗುವಷ್ಟು ಸಲೀಸಾಗಿ ಬೆಳೆದಿರುವ ಗಿಡ ತುಳಸಿ. ದೈವಿಕ ನಂಬಿಕೆ ಬೇರೆ. ತುಳಸಿ ಸೊಪ್ಪನ್ನು ತಿಂದರೆ ಕ್ಷಯ ವಾಸಿಯಾಗುವುದೆಂದು ಹೇಳುವರು. ರಕ್ತ ಶುದ್ಧಿಗಾಗಿ ಇದು ಪ್ರಯೋಜನಕಾರಿ. ತುಳಸಿ ತಿಂದು ನೀರು ಕುಡಿದರೆ ಕೆಟ್ಟಿರುವ ಹೊಟ್ಟೆ ವಾಸಿ ಆಗುತ್ತದೆನ್ನುವರು. ತುಳಸಿಯನ್ನು ಪೂಜೆಗಳಲ್ಲು ಬಳಸುವರು. ನಾಯಿ ತುಳಸಿ ಎಂಬ ಜಾತಿಯೊಂದನ್ನು ಗುರುತಿಸುವರು. ಇದು ಕೂಡ ಔಷಧಿ ಗಿಡ. ಕುಡಿಯುವ ನೀರಿಗೆ ನಾಲ್ಕೈದು ಎಸಳು ತುಳಸಿಯನ್ನು ಹಾಕಿ ಕೊಂಚ ಕಾಲ ಬಿಟ್ಟರೆ ನೀರು ಶುದ್ಧಿಯಾಗುತ್ತದೆಂಬ ನಂಬಿಕೆಯಿದೆ. ಕಾಮಕಸ್ತೂರಿಯಿಂದ ವೀರ್ಯವೃದ್ಧಿಸುವುದೆಂದು ಹೇಳುವರು. ಪ್ರಾಣಿಗಳು ಜ್ವರದಿಂದ ಬಳಲುವಾಗಲೂ ಈ ಕಸ್ತೂರಿಯನ್ನು ಮಿಶ್ರಮಾಡಿ ತಿನ್ನಿಸುವರು. ಅಮರೇಗಿಡ ಕೂಡ ಉಪಕಾರಿ. ಚಹಾಪುಡಿಯಾಗಿ ಇದರ ಹೂ ಎಲೆಗಳನ್ನು ಬಳಸುವರು. ಇದರ ಚಕ್ಕೆಗಳು ಟೀಗೆ ಪರ್ಯಾಯ. ಸುಗಂಧ ಸ್ವಾದವನ್ನು ತಂದುಕೊಡುತ್ತದೆ. ಮಧು ಮೇಹದವರಿಗೆ ಇದರ ಎಲೆ ಹಾಗೂ ಹೂಗಳ ಕಷಾಯ ಪ್ರಯೋಜನಕಾರಿ. ಇದರಂತೆಯೇ ಮಧುನಾಶಿನಿ ಎಂಬ ಗಿಡವೂ ಹಂಪಿಯಲ್ಲಿ ಧಾರಾಳವಾಗಿ ಸಿಗುತ್ತದೆ. ಇದರ ಬಳಕೆ ಜನಪದರಲ್ಲಿ ಸಾಮಾನ್ಯವಾಗಿದೆ. ಇದನ್ನು ತಿಂದ ನಂತರ ಏನೇ ತಿಂದರೂ ನಾಲಿಗೆ ಸಿಹಿಯಾಗಿರುತ್ತದೆ. ಇದೊಂದು ಸಿಹಿ ಬಳ್ಳಿ ಎಂತಲೂ ಕರೆಸಿಕೊಂಡಿದೆ. ತೊಟ್ಟಿಲಬಳ್ಳಿ ಕೆಂಪು ಕಾಯಿ ಬಿಡುತ್ತದೆ. ಔಷಧಿಯಲ್ಲಿ ಬಳಸಲಾಗುತ್ತದೆ.

ಇಂತಹ ಔಷಧಿ ಗಿಡಗಳ ನಡುವೆ ಅಲಂಕಾರಿಕ ಬೊಟ್ಟನ್ನು ಅಥವಾ ಚುಕ್ಕಿಯನ್ನು ಇಟ್ಟುಕೊಳ್ಳಲು ಜನಪದರು ಚುಕ್ಕಿಗಿಡವೊಂದನ್ನು ಹಂಪಿ ಪರಿಸರದಲ್ಲಿ ಕಂಡು ಕೊಂಡಿರುವರು. ಚುಕ್ಕಿ ಬೊಟ್ಟಿನಂತಿರುವ ಹೂ ಕಾಯನ್ನು ಈ ಗಿಡ ಬಿಡುವುದರಿಂದ ಅದಕ್ಕೆ ಚುಕ್ಕೆ ಗಿಡ, ಬೊಟ್ಟಿನಗಿಡ ಎಂದುಕರೆಯುವರು. ಹೆಣ್ಣುಮಕ್ಕಳು ಇದರ ಚುಕ್ಕಿಕಾಯಿ ಕಂಡೊಡನೆ ಹಣೆಗೆ ಹಚ್ಚಿ ಕೊಳ್ಳದೆ ಬಿಡರು. ಅಂಟಿ ಕೊಳ್ಳುವ ಈ ಬಳ್ಳಿ  ಹೂ ಕಾಯಿ ಗಿಡವಾಗಿದೆ. ಮನೆ ಮುಂದೆ ಇದನ್ನು ಬೆಳೆಸಲು ಬಯಸುವುದಿಲ್ಲ. ಗೊಜ್ಜಿಗಿಡ ಅಡವಿಯ ಗಿಡ. ಇದನ್ನು ಕುರಿಮೇಕೆ ಕಾಯುವರು ಮೆಚ್ಚಿಕೊಳ್ಳುವರು. ಮೇಕೆಗಳು ಈ ಗಿಡದ ಕಾಯಿಗಳನ್ನು ಪೈಪೋಟಿಯಿಂದ ತಿಂದು ಖುಷಿ ಪಡುತ್ತವೆ. ಕುಂದುಬಳ್ಳಿ ದನಕರುಗಳ ಔಷಧೀಯ ಬಳ್ಳಿ. ಸಾಮಾನ್ಯವಾಗಿ ಈ ಬಳ್ಳಿ ಎಲ್ಲೆಡೆ ಕಂಡುಬರುವುದು. ಹಲಗಲಿ ಮರ ಎಂಬ ಗಿಡ್ಡ ಗಿಡ ಕಣ್ಣಿಗೆ ಕಾಣುವುದು. ಹಾವು ಚೇಳು ಕಚ್ಚಿದಾಗ ಇದರ ತೊಗಟೆ ಅರೆದು ಔಷಧ ಮಾಡಿ ಹಚ್ಚುವರು. ಕೆಟ್ಟವರ ಕಣ್ಣಿಗೆ ಇದು ಕಾಣಿಸದು ಎಂಬ ನಂಬಿಕೆ ಇದೆ. ಈ ಮರವನ್ನು ಕಡಿಯುವುದಿಲ್ಲ. ಯಾವ ಸೌದೆಗೂ ಬಳಸುವುದಿಲ್ಲ. ಪ್ರಾಣ ಕಾಯುವ ಮರ ಎಂದು ಇದನ್ನು ಜನ ರಕ್ಷಿಸುವರು. ಕಕ್ಕಿ ಗಿಡ ಎಂಬುದನ್ನು ಪ್ರಾರ್ಥನೆ, ಹರಕೆ ವೇಳೆ ಪೂಜಿಸುವರು. ಕಷ್ಟ ಬಂದಾಗ ಕಕ್ಕಿಗಿಡವನ್ನು ಸ್ಮರಿಸುವರು. ಇದು ಭಾಗಶಃ ಹಳೆಕಾಲದಲಿ ಮಾತೃವೃಕ್ಷದ ಸ್ಥಾನ ಪಡೆದಿರಬೇಕು. ಈಗ ಈ ಕಕ್ಕಿಗಿಡ ಅಷ್ಟಾಗಿ ಗೌರವಿಸಲ್ಪಡುವುದಿಲ್ಲ. ದೊಡ್ಡನಲ್ಲಿ ಚಿಕ್ಕ ನೆಲ್ಲಿ ಎರಡನ್ನೂ ಆಹಾರ ಹಾಗೂ ಔಷಧಿಯಲ್ಲಿ ಬಳಸುವರು.

ಮಳಗಿನ ಗಿಡ: ವಿಶೇಷವಾದುದು. ಇದರಿಂದ ಹಗ್ಗಕ್ಕೆ ಬೇಕಾಗುವ ಕೊಂಡಿಯಂತಹ ಕಟ್ಟಿಗೆಯ ಸಾಧನ ’ಮೇಣಿ’ಯನ್ನು ಮಾಡುವರು. ತುಂಬ ಹಗುರವಾಗಿರುವಂತೆ ಕಾಂಡ ಕಂಡರೂ ತುಂಬ ಗಟ್ಟಿಯಾಗಿರುತ್ತದೆ. ನೊಗ ಮಾಡಲು ವಿಶೇಷವಾಗಿ ಬಳಸುವರು. ರೈತರಿಗೆ ಮಹತ್ವದ ಮರ. ಸೌದೆಗೆ ಬಳಸಬಾರದು ಎಂಬ ನೀತಿಯಿದೆ. ಅಂಚಿಕಡ್ಡಿ ಗಿಡ ಹೇಳಿ ಕೇಳಿ ಕರ್ನಾಟಕದ ಉದ್ದಕ್ಕೂ ಸಿಗುವಂತದಾದರೂ ಈ ಭಾಗದಲ್ಲಿ ಪೊರಕೆ ಮಾಡಲು ಬಳಸುವರು. ಅಂಚಿ ಬರಲ ಕಡ್ಡಿಗಳನ್ನು ಕೆಟ್ಟ ಕಣ್ಣನ್ನು ನಿವಾಳಿಸಲು ಬಳಸುವರು. ಅಂಚಿ ಕಡ್ಡಿಗಳನ್ನು ಮಗುವಿನ ಬಸುರಿಯ ನವ ವಧುವಿನ ಮುಖದಿಂದ ಮೂರು ಬಾರಿ ಇಳಿ ತೆಗೆದು ಮನೆಯ ಹೊರ ಮೂಲೆಯಲ್ಲಿಟ್ಟು ಸುಡುವರು. ಅದು ಹೆಚ್ಚು ಸದ್ದು ಮಾಡಿದರೆ ಕೆಟ್ಟ ಕಣ್ಣಿನ ಪ್ರಮಾಣ ಎಷ್ಟಿದೆ ಎಂಬುದನ್ನು ಗುರುತಿಸಲಾಗುವುದು. ಇದರ ಮಸಿಯಲ್ಲೇ ಹಣೆ, ಹೊಟ್ಟೆ, ಕಾಲಿಗೆ ಅಂಟಿಸುವರು. ಇದೊಂದು ಮಾಂತ್ರಿಕ ಹುಲ್ಲು ಕಡ್ಡಿ ಎಂದು ಸಹಜವಾಗಿಯೇ ಒಪ್ಪಿಕೊಳ್ಳಬಹುದು. ಗರಿವಿನಗಿಡ ಎಂಬ ವಿಶೇಷವಾದೊಂದು ಬಳ್ಳಿ ಹಂಪಿಯಲ್ಲಿದೆ. ಇದನ್ನು ಹಸಿ ಇರುವಾಗಲೆ ಉರಿಸಬಹುದು. ಬೇಟೆ ಕಾಲದಲ್ಲಿ ರಾತ್ರಿವೇಳೆ ಈ ಬಳ್ಳಿಯನ್ನು ಪಂಜಿನಂತೆ ಉರಿಸುವರು. ಇದರಲ್ಲಿ ಎಣ್ಣೆ ಇರುವುದರಿಂದ ಹಸಿಯಾಗಿದ್ದರೂ ಉರಿಯುವುದು. ಬೇಟೆಕಾಲದ ಅವಿಷ್ಕಾರಗಳಲ್ಲಿ ಈ ಬಳ್ಳಿಯೂ ಒಂದು. ಬೇಟೆಗಾರರು ಈ ಬಳ್ಳಿಯನ್ನು ಗೌರವದಿಂದ ಕಾಣುವರು. ತೊರ ಮೋತಿ ಗಿಡ ಎಂಬ ಗಟ್ಟಿಮರವನ್ನು ಕೃಷಿ ಸಲಕರಣೆಗಳಲ್ಲಿ ಬಳಸುವರು. ಇದು ಕೂಡ ಹೇರಳವಾಗಿ ಹಂಪಿಯಲ್ಲಿ ಕಂಡುಬರುತ್ತದೆ.

ಬೇಟೆ ಸಂಸ್ಕೃತಿ, ಪಶುಪಾಲನ ಸಂಸ್ಕೃತಿ, ಕೃಷಿ ಸಂಸ್ಕೃತಿ ಈ ಮೂರು ಜೀವನ ಕ್ರಮಗಳು ಹಂಪಿಯ ನೈಸರ್ಗಿಕ ಪರಿಸರವನ್ನು ಅತ್ಯುತ್ತಮವಾಗಿ ಬಳಸಿಕೊಂಡಿವೆ. ಒಂದೊಂದು ಬಳ್ಳಿ ಗಿಡ, ತೊಪ್ಪಲು, ಹಣ್ಣು, ಕಾಯಿ, ನಾರು, ಬೇರು, ಗೆಡ್ಡೆಗಳನ್ನು ಗಾಢವಾಗಿ ಬಳಸಿರುವುದು ಕಾಣುತ್ತದೆ. ಈ ಬಗೆಯು ನಿಜವಾದ ಜೈವಿಕ ತಂತ್ರಜ್ಞಾನದ ರೀತಿಯೇ ಆಗಿತ್ತೆನ್ನುವುದನ್ನು ತೋರುತ್ತಿದೆ. ಜನಪದರ ಬದುಕಿನ ಭಾಗವಾಗಿಯೇ ಸಸ್ಯ ಸಂಪತ್ತು ಬಳಕೆ ಆಗಿದೆ. ಕಣ್ ಬೀಜದ ಗಿಡದ ಕಾಯಿಗಳು ಕಣ್ಣಿನ ರೀತಿಯಲ್ಲೆ ಕಪ್ಪಗೆ ಕಾಣುತ್ತವೆ. ಔಷಧಿಯಲ್ಲಿ ಇವು ಮಹತ್ವ ಪಡೆದಿವೆ. ಇತ್ತೀಚೆಗೆ ಹಂಪಿಯಲ್ಲಿ ಈ ಪುಟ್ಟ ಗಿಡದ ಬೀಜಗಳನ್ನು ಬಡ ಹೆಂಗಸರು ಸಂಗ್ರಹಿಸಿ ಮಾರುವರು. ಇವನ್ನು ಆಯುರ್ವೇದದ ಔಷಧ ತಯಾರಿಕೆಯಲ್ಲಿ ಬಳಸುವರೆಂದು ಅಂತಹ ಹೆಂಗಸರು ಹೇಳುತ್ತಾರೆಯೆ ವಿನಃ ಅವರಿಗೆ ನಿರ್ದಿಷ್ಟ ವಿವರ ಬೀಜಗಳ ಬಗ್ಗೆ ತಿಳಿದಿಲ್ಲ. ಕುರುಡಲುಬಿನ ಗಿಡ ಕುರುಡಾಗಿ ಹೂ ಬಿಡುತ್ತೆ ಎನ್ನುವುದರಿಂದ ಅಂತಹ ಹೆಸರು ಬಂದಿದೆ. ಔಷಧಿಯಲ್ಲಿ ಇದನ್ನು ಬಳಸುವರು. ಭಾಗಶಃ ಕಣ್ಣಿನ ದೋಷಗಳಲ್ಲೇ ಇದರ ಅವಶ್ಯಕತೆ ಇರುವಂತಿದೆ. ತುಂಬೆ ಗಿಡ ಪ್ರಸಿದ್ದವಾದುದೇ. ಸತ್ತವರ ದುವ್ವೆ ಮೇಲೆ ಅಥವಾ ಸಮಾಧಿ ಮೇಲೆ ಈ ಗಿಡವನ್ನು ನೆಡುವರು. ಕಳೆಯಂತೆ ಹೊಲಗಳಲ್ಲಿ ಬೆಳೆಯುವುದು. ಔಷಧಿ ಗಿಡವಾಗಿ ಪ್ರಸಿದ್ಧ. ದೊಡ್ಡ ತುಳಸಿ ಗಿಡ ಉಳಿದ ತುಳಸಿ ಗಿಡಗಳಿಗೆಲ್ಲ ದೊಡ್ಡದಾಗಿರುವುದರಿಂದ ಈ ಹೆಸರು ಪಡೆದಿದೆ.

ಹಾದರಗಿತ್ತಿ ಮುಳ್ಳು: ಎಂಬ ಹೆಸರಲ್ಲಿ ಮುಳ್ಳಿನ ಗಿಡವೊಂದನ್ನು ಗುರುತಿಸುವರು. ಉತ್ತರಾಣಿ ಗಿಡ ಔಷಧೀಯ ಗುಣಗಳನ್ನು ಹೊಂದಿರುವ ವಿಶಿಷ್ಟ ಬಗೆಯ ಸಸ್ಯ. ಮೋಸದ ಮುಳ್ಳು ಎಂದು ಉತ್ತರಾಣಿ ಗಿಡದ ಬಗ್ಗೆ ಆರೋಪಿಸಲಾಗುವುದು. ಮೇಲೆ ಅದರ ಮುಳ್ಳು ಕಾಣುವುದಿಲ್ಲ. ತರಚಿದರೆ ವಿಷ ಏರಿದಂತೆ ಉರಿವುದು. ಬಾಡುಬಕ್ಕನ ಮುಳ್ಳು ಕೂಡ ಇದೇ ಬಗೆಯದು. ಅಂಟ್ರಿಕೆ ಗಿಡದ ಕಾಯಿಗಳು ಒಟ್ಟಿಗೆ ಅಂಟಿಕೊಳ್ಳುವುದರಿಂದ ಅಂಟ್ರಿಕೆ ಗಿಡ ಎಂದು ಕರೆಯುವರು. ಇದೊಂದು ಕಳೆಗಿಡವೇ ಆಗಿದ್ದು ಕಿತ್ತು ಬಿಸಾಕಲು ಮುಂದಾಗುವರು. ಬಿಳೇ ಮುಳ್ಳಿನ ಗಿಡ ತನ್ನ ಮುಳ್ಳಿನ ಬಿಳಿ ಬಣ್ಣದಿಂದ ಗುರುತಿಸಲ್ಪಟ್ಟಿದೆ. ಮರೆ ಮೋಸದ ಮುಳ್ಳಿನ ಗಿಡಗಳ ನಡುವೆ ಈ ಗಿಡ ಮುಕ್ತವಾಗಿ ಕಂಡಿದೆ. ಕವಡೆಕಾಯಿ ಗಿಡ ಔಷಧಕ್ಕಾಗಿ ಬಳಸಲ್ಪಡುವುದು. ದೊಡ್ಡ ಕವಡೆ ಕಾಯಿ ಗಿಡ ಎಂಬ ಇನ್ನೊಂದು ಸಸ್ಯ ಇದರ ಜೊತೆಯಲ್ಲೆ ಇದೆ. ಸೌಗಂಧಿ ಬೇರು ಕೂಡ ಔಷಧಕ್ಕೆ ಬೇಕಾದುದು. ನಾಯಿಗಂಧ ಗಿಡ ಗಂಧದ ಇನ್ನೊಂದು ಪ್ರಭೇದವಾಗಿದ್ದು ಸುವಾಸನೆ ಬೀರುವಂತದ್ದು. ಮಳೆಗಾಲದಲ್ಲಿ ಈ ಗಿಡ ಬೆಳೆದು ವಾಸನೆ ತರಿಸುವುದು. ನಿಸರ್ಗದ ಯಾವ ಸಂರಕ್ಷಣಾ ಕಾರ್ಯವನ್ನು ನಾಯಿಗಂಧ ಗಿಡ ಮಾಡುತ್ತಿದೆಯೊ ಜನಪದರಿಗೆ ಗೊತ್ತಾಗಿಲ್ಲ. ಕವಡೆಕಾಯಿ ಗಿಡದಂತೆಯೆ ಬುಡಮಕಾಯಿ ಗಿಡ ಸಹ ಔಷಧಿ ಸಸ್ಯ. ದನಕರುಗಳು ಕೂಡ ಬುಡಮ ಕಾಯಿಗಳನ್ನು ತಿನ್ನುತ್ತವೆ. ಬಳ್ಳಿಯಂತೆ ಹಬ್ಬುವ ಗಿಡವಿದು.

ಪುಂಡೆ ಪಲ್ಲೆ: ಮೂಲತಃ ಕಾಡು ಸೊಪ್ಪು. ತೆಲುಗಲ್ಲಿ ಇದಕ್ಕೆ ಗೊಂಗೂರಿ ಎಂದು ಕರೆಯಲಾಗಿದೆ. ಈ ಸೊಪ್ಪಿನಿಂದ ಉಪ್ಪಿನಕಾಯಿ ತರಹದ ನಂಜಿಕೆಯನ್ನು ಮಾಡಲಾಗುತ್ತದೆ. ಆಂಧ್ರಪ್ರದೇಶದಲ್ಲಂತೂ ಇದರ ಬಳಕೆ ಗಣನೀಯವಾಗಿದ್ದು ಈ ಗೊಂಗೂರವಿಲ್ಲದ ಅಡುಗೆಯೇ ಇಲ್ಲವೆನ್ನಬಹುದು. ಬೇಯಿಸಿದ ಪುಂಡಿಪುಲ್ಲೆಯನ್ನು ವಾರಗಳಗಟ್ಟಲೆ ಕೆಡದಂತೆ ಇಟ್ಟುಕೊಳ್ಳಬಹುದು. ಎಲ್ಲ ವರ್ಗದವರೂ ಇದನ್ನು ಇಷ್ಟಪಡುತ್ತಾರೆ. ಹೆಚ್ಚಾಗಿ ನಾರಿನ ಅಂಶವನ್ನು ಹೊಂದಿದ ಇದು ಕಬ್ಬಿಣಾಂಶವನ್ನು ಸಹ ಹೇರಳವಾಗಿ ಹೊಂದಿದೆ. ವಿಶೇಷವಾಗಿ ಬಯಲು ಸೀಮೆಯಲ್ಲಿ ಬಳಕೆಯಿರುವ ಸೊಪ್ಪು. ಚವಳೆ ಕಾಯಿ. ಸಹ ಹಂಪಿ ಪರಿಸರದಲ್ಲಿ ಸುಲಭವಾಗಿ ಬೆಳೆಯಬಲ್ಲದು. ಕೇವಲ ತರಕಾರಿ ಮಾತ್ರವಾಗಿರದೆ ಹೊಟ್ಟೆಯ ಅನೇಕ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇವೆರಡಕ್ಕೂ ಇದೆ ಎಂದು ಜನ ಹೇಳುವರು. ಅಣ್ಣೆ ಪಲ್ಲೆಯನ್ನು ಬೆರಕೆ ಸೊಪ್ಪಿನಲ್ಲೆ ಬಳಸುವರು. ನೂರಾರು ಬಗೆಯ ಸೊಪ್ಪನ್ನು ಹಂಪಿ ಪರಿಸರದಲ್ಲಿ ಬಳಸುವರು. ಅವನ್ನೆಲ್ಲ ವಿವರವಾಗಿ ಜನಪದರು ವಿವರಿಸಲು ಆಸಕ್ತಿ ತೋರುವುದಿಲ್ಲ. ಪಲ್ಲೆಯಾಗಿ ಬಳಸುವುದು ಮಾತ್ರ ಗೊತ್ತೆಂದು ಅವುಗಳ ಹೆಸರನ್ನು ಹೇಳುವರು. ಗುಪ್ಪಟ್ಟೆ ಗಿಡದಿಂದ ಕ್ಷಯ ವಾಸಿ ಆಗುವುದೆಂದು ಅದರ ಹಣ್ಣನ್ನು ಸಂಗ್ರಹಿಸುವರು. ಕೆಂಪು ಗಣಕೆ ಹಣ್ಣು ಕಪ್ಪು ಗಣಕೆ ಹಣ್ಣು ಹಂಪಿಯಲ್ಲಿ ಸಲೀಸಾಗಿ ಸಿಗುತ್ತವೆ. ಗುಪಟ್ಟೆ ಹಣ್ಣುಗಳನ್ನು ಕಂಡ ಕೂಡಲೆ ಮಕ್ಕಳು ಇಷ್ಟ ಪಟ್ಟಿ ತಿನ್ನುವರು. ಕೋಳಿ ಸೊಪ್ಪಿನ ಗಿಡವೆಂದು ಕರೆಯುವ ಚಿಕ್ಕ ಎಲೆಯ ಗಿಡ ನೆಲದಲ್ಲೆ ಹಬ್ಬಿರುತ್ತದೆ. ಕಾಡು ಕೋಳಿಗಳು ಇದನ್ನು ತಿನ್ನುತ್ತವೆಂದು ಹೇಳುವರು. ಸೀಗೆ ಸೊಪ್ಪನ್ನು ಅಪರೂಪಕ್ಕೆ ಬಳಸುವರು. ಬೇಯಿಸುವಾಗ ಇದು ವಾಸನೆಯಾದರೂ ಅಡುಗೆ ಮಾಡಿದ ಮೇಲೆ ಬಹಳ ರುಚಿ ಎನ್ನುವರು. ಕಾಡು ಈರುಳ್ಳಿಯನ್ನು ಬಳಸುವುದಿಲ್ಲ. ಹಾಗಲ ಬಳ್ಳಿಯನ್ನು ಬೇಯಿಸಿ ತಿಂದರೆ ಬಾಣಂತಿಯರಿಗೆ ಹಾಲು ಹೆಚ್ಚುವುದೆಂದು ಹೇಳುವರು. ಗಜನಿಂಬೆ ರಸ ಕುಡಿದರೆ ಕಾಮಾಲೆ ರೋಗ ವಾಸಿ ಆಗುವುದೆಂಬ ನಂಬಿಕೆ ಇದೆ. ಅವರೆ ಗಿಡ ,ಚಪ್ಪರದ ಅವರೆ,ಅಮೃತಬಳ್ಳಿ, ಕುಂಬಳ ಕಾಯಿ, ಸೋರೆಕಾಯಿ, ತುಪ್ಪೀರೆಕಾಯಿ, ಈರೇಕಾಯಿ ಮುಂತಾದ ಕಾಯಿಪಲ್ಲೆಗಳು ಹಂಪಿ ಪರಿಸರದ ಹಿತ್ತಿಲುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಕಾಡುಮೆಣಸಿನ ಗಿಡ, ಕಾಡುಬದನೆ, ಮುಳ್ಳು ಬದನೆಗಳು ಹಂಪಿ ಪರಿಸರದ ಬೆಟ್ಟಗುಡ್ಡಗಳಲ್ಲಿ ಕಂಡುಬರುತ್ತವೆ. ಕಾಡು ಹುಣಿಸೆ ಮರಗಳು ಸಾಮಾನ್ಯ ಉಣಿಚಿಕ್ಕ ಎಂಬ ಕಾಡು ಪಲ್ಲೆ ಬಡವರ ಆಯ್ಕೆಯಾಗಿದೆ. ಹೀಗೆ ದೊಡ್ಡ ಪಟ್ಟಿಯನ್ನೆ ಮಾಡಬಹುದು. ಜನಪದರು ಆಹಾರದ ಬಗೆಯಾಗಿ ಕಾಯಿಪಲ್ಲೆಯನ್ನು ಬಳಸಿಕೊಂಡು ಬಂದಿರುವುದು ಬೇಟೆ ಸಂಸ್ಕೃತಿಯ ಆಹಾರ ಕ್ರಮಕ್ಕಿಂತ ಭಿನ್ನವಾದುದು.

ಪಶುಪಾಲಕ ಜೀವನ ಕ್ರಮವು ನಿಸರ್ಗದಲ್ಲಿರುವ ಅನೇಕ ಬಗೆಯ ಆಹಾರ ಸಂಪತ್ತನ್ನು ಮನುಷ್ಯರಿಗೆ ತಿಳಿಸಿಕೊಟ್ಟಿದೆ. ಪಶುಗಳ ಸೌಮ್ಯ ಹಸಿರು ಆಹಾರವು ಮನುಷ್ಯರ ಕೆಂಪು ಆಹಾರದ ಅನಿವಾರ್ಯತೆಯನ್ನು ಹೋಗಲಾಡಿಸಿದೆ.ಬೇಟೆಯಿಂದ ಸಿಗುತ್ತಿದ್ದ ಕೆಂಪು ಆಹಾರ ಮನುಷ್ಯರಿಗೆ ಕಠಿಣವಾದ ಆಹಾರವಾಗಿತ್ತೇ ವಿನಃ ಅದು ಅತ್ಯುತ್ತಮ ಆಹಾರವಾಗಿ ಇರಲಿಲ್ಲ. ಮೂಲತಃ  ಮನುಷ್ಯ ಮಾಂಸ ಭಕ್ಷಕ ಜೀವಿ ಆಗಿರಲಿಲ್ಲ. ಆತ ಅನಿವಾರ್ಯವಾಗಿ ಬೇಟೆ ಸಂಸ್ಕೃತಿಯ ಹಲವು ಕ್ರಮಗಳಲ್ಲಿ ಮಾಂಸಾಹಾರವನ್ನು ರೂಢಿಸಿಕೊಂಡ ನಿಸರ್ಗದಲ್ಲಿ ಬದುಕುಳಿಯಲು ಮಾಂಸಾಹಾರವು ದೀರ್ಘಕಾಲೀನವಾದುದಾಗಿರಲಿಲ್ಲ ಎಂಬುದನ್ನು ಗಮನಿಸಬೇಕು ನಿಸರ್ಗದಲ್ಲಿದ್ದ ಹಸಿರು ಆಹಾರವನ್ನು ಕಂಡುಕೊಳ್ಳಲು ಮಾನವರಿಗೆ ಬಹಳ ಸಮಯ ಬೇಕಾಯಿತು. ಬೇಟೆ ಸಂಸ್ಕೃತಿ ರೂಪಾಂತರವಾಗುತ್ತಿದ್ದಂತೆ, ಆಹಾರ ಸಂಗ್ರಹಣೆಯ ಹೊಣೆಗಾರಿಕೆ ಮಹಿಳೆಯ ಮೇಲೆ ವಿಶೇಷವಾಗಿ ಬಿದ್ದಂತೆ ಆಕೆ ಕಾಡಿನ ಅನೇಕ ಗೆಡ್ಡೆ ಗೆಣಸು ಹಣ್ಣು ಕಾಯಿ ಪಲ್ಲೆಗಳನ್ನು ಆಹಾರಕ್ಕಾಗಿ ಹುಡುಕಿ ಹೊಸ ಆಹಾರ ಪಟ್ಟಿಯೊಂದನ್ನು ಕಂಡುಕೊಂಡಳು. ಈ ಹಸಿರು ಆಹಾರ ಮಹಿಳೆಯರ ಕಾಣ್ಕೆಯಾದರೆ ಕೆಂಪು ಆಹಾರ ಪುರುಷರ ಮೂಲದ್ದು.

ಆದರೆ ಹಸಿರು ಆಹಾರವು ಕಾಡಿನ ಸಂಬಂಧದಿಂದ ಹೊರಬಂದ ನಂತರವೇ ವಿಶೇಷವಾಗಿ ಬೆಳದಿದೆ. ಕೃಷಿ ಸಂಸ್ಕೃತಿಯು ಹಸಿರು ಆಹಾರ ಕ್ರಮದಲ್ಲಿ ಕ್ರಾಂತಿಯನ್ನೇ ಮಾಡಿದೆ. ಪಶುಪಾಲಕ ಸಮುದಾಯಗಳು ಹಸಿರು ಆಹಾರಕ್ಕೆ ಒಗ್ಗಿಕೊಳ್ಳುವಲ್ಲಿ ಹಿಂದೆ ಮುಂದೆ ನೋಡಿಲ್ಲ. ತಮ್ಮ ಪಶುಗಳು ಬಳಸುವ ಆಹಾರವನ್ನು ತಾವೂ ಬಳಸುವ ಮೂಲಕ ಆಹಾರ ಸಂಸ್ಕೃತಿಯಲ್ಲಿ ನೈಸರ್ಗಿಕತೆಯನ್ನು ಗಾಢವಾಗಿ ತುಂಬಿಕೊಂಡಿದ್ದಾರೆ. ಗಿಡ ಮರ ಪ್ರಾಣಿ ಪಕ್ಷಿ ಗೆಡ್ಡೆಗೆಣಸು ಕೀಟಾದಿಗಳನ್ನೆಲ್ಲ ಉಪಯುಕ್ತವಾಗಿ ಹೇಗೆ ಬಳಸಿಕೊಳ್ಳಬಹುದೆಂಬ ತಿಳುವಳಿಕೆಗೆ ಸಾವಿರಾರು ವರ್ಷಗಳೆ ಬೇಕಾಗಿವೆ. ಈ ಆಹಾರ ಚರಿತ್ರೆಯಲ್ಲಿ ನಿಸರ್ಗವೇ ದೊಡ್ಡ ಶಕ್ತಿ. ನಿಸರ್ಗದ ವೈವಿಧ್ಯತೆ ಅನುಭವವೇ ಅದರ ನಿಗೂಢ ಜೀವಜಾಲದ ಸಂಬಂಧವೇ ಆಹಾರ ಸಂಸ್ಕೃತಿಯನ್ನು ರೂಪಿಸಿದೆ. ಸ್ತ್ರೀ ಪುರುಷರಿಬ್ಬರೂ ಸಮನಾಗಿ ಆಹಾರ ಸಂಸ್ಕೃತಿಯ ವಿವಿಧ ಧಾರೆಗಳನ್ನು ಪರಿಶೀಲಿಸಿ ವಿಷಯುಕ್ತ ಆಹಾರವನ್ನು ಕಂಡು ಕೊಂಡಿರುವುದು ಸಾಧಾರಣ ಸಂಗತಿ ಅಲ್ಲ. ಆಹಾರ ಮೂಲದ ವಿಕಾಸದ ಚರಿತ್ರೆಯು ಜೀವಜಾಲದ ಅಸಂಖ್ಯಾತ ತಿಳುವಳಿಕೆಯನ್ನು ತಂದುಕೊಟ್ಟಿದೆ. ಪಶುಪಾಲಕ ಸಮುದಾಯಗಳು ಜಗತ್ತಿನ ಉದ್ದಕ್ಕೂ ಇಂತಹ ಆಹಾರ ಸಂಸ್ಕೃತಿಯನ್ನು ಆಯಾಯ ಪರಿಸರದ ಜೀವ ಜಾಲದ ಜೊತೆ ಬೆಳೆಸಿವೆ. ಅದರಂತೆಯೆ ಹಂಪಿ ಪರಿಸರದಲ್ಲಿ ಪಶುಪಾಲಕ ಸಮುದಾಯಗಳು ತಮಗೇ ವಿಶೇಷವಾದ ಸಸ್ಯ ಮೂಲ ಆಹಾರವನ್ನು ಪರಿಚಯಿಸಿವೆ. ಹಂಪಿ ಪರಿಸರದ ಸಸ್ಯ ಸಂಪತ್ತು ಹತ್ತಾರು ರೀತಿಯಲ್ಲಿ ಜೀವಜಾಲದ ಆಹಾರ ಸರಪಳಿಗೆ ತಕ್ಕಂತೆಯೆ ಬಳಕೆಯಾಗುತ್ತ ಬಂದಿರುವುದು ಗಮನಾರ್ಹ. ಸಸ್ಯ ಜಾನಪದದ ಮಾನದ ಸಂಬಂಧಗಳು ವೈವಿಧ್ಯವಾಗಿವೆ. ಸಸ್ಯಗಳನ್ನು ಪ್ರಧಾನವಾಗಿ ಔಷಧಿಯಾಗಿ, ಆಹಾರವಾಗಿ, ಸಾಂಸ್ಕೃತಿಕವಾಗಿ ಭಾವಿಸುವುದು ಒಂದು ರೀತಿಯಾದರೆ ಧಾರ್ಮಿಕವಾಗಿ, ಆಚರಣಾತ್ಮಕವಾಗಿ ನಿಷೇದಾತ್ಮಕವಾಗಿ ನೋಡಿರುವ ಮತ್ತೊಂದು ಸ್ವರೂಪ ಭಿನ್ನವಾಗಿದೆ. ಹಾಗೆಯ ಭಾವನಾತ್ಮಕವಾಗಿ, ಅಲಂಕಾರಿಕವಾಗಿ ಸೌಂದರ್ಯ ಪ್ರಜ್ಞೆಯಲ್ಲಿ ಸಸ್ಯ ಜಾನಪದವನ್ನು ರೂಪಿಸುವ ಕ್ರಮವು ಮತ್ತೊಂದು ತೆರನಾದದ್ದು. ಪಶುಪಾಲಕ ಸಮಾಜಗಳು ಸಸ್ಯ ಜಾನಪದವನ್ನು ಕೇವಲ ಆಹಾರ ವರ್ತಲವಾಗಿ ಮಾತ್ರ ಗ್ರಹಿಸಿಲ್ಲ. ಜೀವಜಾಲದ ಅವ್ಯಕ್ತ ಸಂಬಂಧಗಳ ವಿಕಾಸದ ನೀತಿಯಾಗಿ ಭಾವಿಸಿದ್ದರಿಂದಲೆ ಸಸ್ಯ ಸಂಕುಲವನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಬೆರಕೆ ಸೊಪ್ಪಿನ ಬಳಕೆ ಹಂಪಿ ಪರಿಸರದಲ್ಲಿ ಕಡಿಮೆ ಎನಿಸಿದರೂ ಇಲ್ಲಿನ ವಿಶೇಷ ಎಂದರೆ; ಪಶುಪಾಲಕ ಸಮಾಜಗಳ ಹಿನ್ನೆಲೆಯಲ್ಲಿ ಸಸ್ಯ ಸಂಕುಲಗಳನ್ನು ಅರ್ಥೈಸಿಕೊಳ್ಳಲಾಗಿದೆ.

ಜೀವಜಾಲವನ್ನು ಮಾನುಷ ಸ್ವಭಾವದಿಂದ ನೋಡುವುದರಿಂದಲೇ ಅವುಗಳ ಬಗ್ಗೆ ಭಾವನಾತ್ಮಕ ಕಥನಗಳು ಉಂಟಾಗಿರುವುದು. ಮಾತೃಪ್ರಧಾನ, ಪಿತೃಪ್ರಧಾನ ಚಹರೆಗಳು ಜೀವಜಾಲದ ಸಂದರ್ಭದಲ್ಲಿ ಜೈವಿಕ ಸ್ವಭಾವಗಳನ್ನು ಬೆಳೆಸಿವೆ. ಬೇಟೆಯಿಂದ ಕೆಂಪು ಆಹಾರವನ್ನು ಪಿತೃಪ್ರಧಾನ ಸಮಾಜ ಕಂಡುಕೊಂಡದ್ದು ನಿಸರ್ಗದ ಜೀವಜಾಲದ ಮೇಲೆ ಪ್ರಭುತ್ವವನ್ನು ಸಾಧಿಸಲು ಹೆಚ್ಚು ಅನುಕೂಲ ಮಾಡಿದೆ. ಮಾತೃಪ್ರಧಾನ ಸಮಾಜವು ಸಸ್ಯ ಸಂಕುಲದ ಜೊತೆ ಗಾಢವಾದ ಸಂಬಂಧ ಮಾಡಿದೆ ಎಂಬುದನ್ನು ನಂಬಲೇಬೇಕು. ಆಹಾರ ತಯಾರಿಕೆಯಲ್ಲಿ ಮಹಿಳೆಯರು ಜೀವವಿಕಾಸದ ಭಾಗವಾಗಿ ತೊಡಗಿದ್ದರಿಂದ ಅವರಿಗೆ ಕೆಂಪು ಆಹಾರಕ್ಕಿಂತಲು ಹಸಿರು ಆಹಾರವೇ ಹೆಚ್ಚು ಉಪಯುಕ್ತವಾಗಿ ಕಂಡಿರಲೇ ಬೇಕು. ಸಸ್ಯ ಸಂಪತ್ತನ್ನು ಮಾನವರ ಆಹಾರದ ಸರಪಳಿಗೆ ಹೊಂದಿಸಿದ್ದು ಮಹಿಳೆಯರೇ. ಹಂಪಿ ಪರಿಸರದ ಸಸ್ಯ ಜಾನಪದವು ಪಶುಪಾಲಕ ಸಮಾಜಗಳ ಸಮ್ಮಿಶ್ರ ಭಾವನೆಗಳನ್ನು ಹೊಂದಿದೆ. ಪಶು ಆಹಾರಕ್ಕಾಗಿ ಸಸ್ಯ ಸಂಮೃದ್ಧಿಯನ್ನು ಭಾವಿಸುವ ಯಾವುದೇ ಜನಪದ ತಂತಾನೆ ಸಸ್ಯ ವೈವಿಧ್ಯದ ಗುಣಾವಗುಣಗಳನ್ನು ಸಲೀಸಾಗಿ ಗ್ರಹಿಸುತ್ತದೆ.

ಹಂಪಿಯ ಸಸ್ಯ ಸಂಪತ್ತನ್ನು ಇಲ್ಲಿನ ಜನಪದರು ಅರ್ಥಪೂರ್ಣವಾಗಿ, ಬಳಸಿದ್ದಾರೆ ತಮ್ಮ ಪಶುಪಾಲನೆಗೆ ಪೂರಕವಾದ ಔಷಧೀಯ ಗಿಡಗಳಾಗಿ ಕಂಡದ್ದು ಒಂದು ಬಗೆಯಾದರೆ ಇಲ್ಲಿನ ಪಶುಪಕ್ಷಿಗಳಿಗೆ ಹಣ್ಣು ಕೊಡುವ ಸೊಪ್ಪು ಕೊಡುವ ಮೇವಾಗಿ ಕಂಡದ್ದು ಇನ್ನೊಂದು ಕ್ರಮವಾಗಿದೆ. ಮೂರನೆ ಹಂತದಲ್ಲಿ ಸ್ವತಃ ತಾವೇ ಈ ಸಸ್ಯ ವೈವಿಧ್ಯವನ್ನುತಮ್ಮ ಆಹಾರ ಹಾಗೂ ಔಷಧಿಯಲ್ಲಿ ಹೇಗೆ ವಿನಿಯೋಗಿಸಿ ಕೊಳ್ಳಬೇಕು ಎಂಬುದರ ಭಾಗವಾಗಿ ತಿಳಿಯಲಾಗಿದೆ. ಅಲ್ಲದೆ ಕೃಷಿ ಉಪಕರಣ, ಮನೆ ಉಪಕರಣಗಳಿಗೂ ಹೇಗೆಲ್ಲ ಇವನ್ನು ಬಳಸಿಕೊಳ್ಳಬಹುದೆಂಬ ಕ್ರಮವೂ ಸಸ್ಯ ಗಿಡ ಮರಗಳ ಸಂಬಂಧವನ್ನು ಜೈವಿಕ ಸರಪಳಿಯಂತೆ ಬೆಸೆದಿದೆ. ಸಂಸ್ಕೃತಿಯ ಭಾಗವಾಗಿಯೆ ಈ ಎಲ್ಲ ಸಂಬಂಧ ತಿಳುವಳಿಕೆ ಸಾಧ್ಯವಾಗಿರುವುದು. ಆಹಾರ ಸಂಸ್ಕೃತಿಯ ವೈವಿಧ್ಯಕ್ಕೆ ಹಾಗೂ ಅರ್ಥಪೂರ್ಣ ವಿಕಾಸಕ್ಕೆ ದಾರಿ ಮಾಡಿದೆ. ಪಶು ಆಹಾರವನ್ನು ಸಂರಕ್ಷಿಸುವುದಕ್ಕೂ ಈ ಬೆಳವಣಿಗೆ ಉಪಕರಿಸಿದೆ. ಹಾಗೇ ಕೆಂಪು ಆಹಾರದ ಮೇಲಿದ್ದ ಒತ್ತಡವನ್ನೂ ಕಡಿಮೆ ಮಾಡಿದೆ. ಬೇಟೆ ಸಂಸ್ಕೃತಿಯು ಹಿನ್ನೆಡೆಗೆ ಬಂದದ್ದು ಕೂಡ ಕೆಂಪು ಆಹಾರದ ಕೊರತೆಯಿಂದ. ಆಗಲೇ ಹಸಿರು ಆಹಾರದ ಅನಿವಾರ್ಯತೆ ಬೇಟೆ ಸಂಸ್ಕೃತಿಗಳಿಗೆ ಕಂಡದ್ದು. ವಕ್ಕಲು ಚಟುವಟಿಕೆಗಳು ಕಾಡಿನ ಸಂಬಂಧವನ್ನು ಬಿಡಿಸಿದವು. ಆದಿವಾಸಿಗಳು ಪಶುಪಾಲನೆಗೆ ಕೃಷಿಗೆ ಹೊಂದದೆ ಕಾಡಿನಲ್ಲೆ ಉಳಿದರು. ಸಿಕ್ಕ ಕಾಡಿನ ಆಹಾರದಲ್ಲೇ ತಮ್ಮ ಅಸ್ತಿತ್ವವನ್ನು ಸಾಧಿಸಿಕೊಂಡರು. ಜೀವಜಾಲದ ಹೊಂದಾಣಿಕೆಯಲ್ಲಿ ಬೇಟೆ ಸಂಸ್ಕೃತಿ ಪಶುಪಾಲನ ಸಂಸ್ಕೃತಿ ವಕ್ಕಲು ಸಂಸ್ಕೃತಿ ಹಾಗೂ ಬುಡಕಟ್ಟು ಜೀವನ ಕ್ರಮಗಳು ತಮ್ಮದೇ ಆದ ಕೊಡುಗೆ ನೀಡಿವೆ. ಈ ಬಗೆಯ ಜೀವನ ನಿಸರ್ಗದ ಸಮತೋಲನಕ್ಕೆ ಅನಿವಾರ್ಯವಾಗಿತ್ತು. ಈ ಒಂದೊಂದು ಹಂತಗಳು ಕೂಡ ಮಾನವ ಮತ್ತು ನಿಸರ್ಗದ ಸಮತೋಲನಕ್ಕೆ ಕಾರಣವಾಗಿದ್ದವು. ಹಂಪಿ ಪರಿಸರದಲ್ಲಿ ಈ ನಾಲ್ಕು ಬಗೆಯ ಜೀವನ ಕ್ರಮಗಳ ಪಳೆಯುಳಿಕೆಗಳು ಈಗಲೂ ಜೀವಂತವಾಗಿದೆ. ಇದನ್ನು ಬೇರ್ಪಡಿಸಲು ಆಗದಂತೆ ಇಲ್ಲಿನ ಪರಿಸರವು ಜೈವಿಕ ಸಂಸ್ಕೃತಿಯನ್ನೆ ರೂಪಿಸಿದೆ. ಮೇಲೆ ಹೇಳಿದ ನಾಲ್ಕೂ ಬಗೆಯ ಜೀವನ ಕ್ರಮಗಳನ್ನು ಆಹಾರದ ವಿವಿಧ ಬಗೆಯ ಅವಿಷ್ಕಾರಗಳನ್ನು ಮಾಡಿಕೊಂಡ ಒಟ್ಟು ಕ್ರಮವನ್ನೆ ಜೈವಿಕ ಸಂಸ್ಕೃತಿ ಎಂದು ಕರೆಯಬಹುದು. ಕೇವಲ ಸಸ್ಯ ಜಾನಪದ ಎಂದ ಈ ಸಂಗತಿಗಳನ್ನೆಲ್ಲ ಸರಳೀಕರಿಸಲಾಗದು. ಆಹಾರ ಪರಂಪರೆಗಳು ಅಸ್ತಿತ್ವದ ದಾರಿಗಳಾಗಿದ್ದವು. ಈ ದಾರಿಗಳೇ ವಿಕಾಸದ ಬೇರೆ ಬೇರೆ ಕಾಲಘಟ್ಟದ ಜೀವಜಾಲದ ಪಯಣವನ್ನು ತೋರುತ್ತದೆ.

ಹಂಪಿಯ ಜೀವಜಾಲ ಜಾನಪದ ಇಂತಹ ಜೈವಿಕ ಸಂಬಂಧವನ್ನು ಪಡೆದಿರುವುದರಿಂದಲೇ ಗಿಡ ಮರ ಬಳ್ಳಿಗಳ ಬಗ್ಗೆ ಅಸಂಖ್ಯಾತ ವಿವರಗಳು ಸಿಗುವಂತೆ ಮಾಡಿರುವುದು. ವೇದಕಾಲೀನ ಕಾಡಿನ ಋಷಿಗಳು ಕೂಡ ಗಿಡ ಮರಗಳ ಔಷಧೀಯ ತಿಳುವಳಿಕೆಯನ್ನು ಮಾನ್ಯಮಾಡಿದ್ದಾರೆ. ಅವರಿಗೆ ಕಾಡಿನ ಜನ ಸಮೂಹ ಮಾತ್ರ. ಇಂತಹ ತಿಳುವಳಿಕೆಯನ್ನು ಹೇಳಿಕೊಟ್ಟಿರಬೇಕು. ಜನಪದರ ಅಥವಾ ಆದಿವಾಸಿಗಳ, ಇಲ್ಲವೇ, ಪಶುಪಾಲಕರ, ಬುಡಕಟ್ಟಿನವರ ಹೀಗೆ ಈ ಯಾವುದೇ ಹೆಸರಿನಿಂದ ಕರೆಯಬಹುದಾದ ಆದಿಮರಿಂದಲೇ ವೇದಕಾಲೀನ ಋಷಿಗಳು ಕೂಡ ಜೀವಜಾಲದ ತಿಳುವಳಿಕೆಯನ್ನು ಪಡೆದಿರಲು ಸಾಧ್ಯ. ಆದಿಮ ಜಾನಪದ ವೇದ ಜಾನಪದ ಇವೆರಡೂ ಅತ್ಯುತ್ತಮವಾಗಿ ಅನುಸಂಧಾನವನ್ನು ನೈಸರ್ಗಿಕ ಒಪ್ಪಂದಗಳಿಂದ ಮಾಡಿರುವುದರಿಂದಲೇ ಈ ಎರಡೂ ಜ್ಞಾನ ಪರಂಪರೆಗಳ ಸಂಗತಿಗಳಲ್ಲಿ ವೈರುಧ್ಯಗಳಿಲ್ಲ. ಶುಶ್ರುತನಿಗೂ ಆದಿವಾಸಿಗೂ ಅಲೆಮಾರಿಗಳಿಗೂ ಪಶುಪಾಲಕರಿಗೂ ಇಂತಹ ಮೂಲಭೂತ ತಿಳುವಳಿಕೆಗಳಲ್ಲಿ ವಿಶ್ವಾತ್ಮಕ ಸಾಮ್ಯತೆ ದಟ್ಟವಾಗಿದೆ. ಜ್ಞಾನದ ಬೇಲಿಯೇ ಇಲ್ಲಿಲ್ಲ. ಗಿಡ ಮರ ಸಸ್ಯ ಸಂಮೃದ್ಧಿಗೆ ಬೇಲಿ ಎಂಬುದಿಲ್ಲ. ಬೇಲಿ ಹಾಕಿದರೂ ಅದು ಜೀವಜಾಲದ ಒಂದು ಗುರುತಾಗಿರುತ್ತದೆಯೇ ವಿನಃ ಜೈವಿಕತೆಯ ನಿರಾಕರಣೆ ಅಲ್ಲ. ಬೇಲಿಗಳು ಕೂಡ ಕೃಷಿ ಸಂಸ್ಕೃತಿಯಲ್ಲಿ ಸಕಾರಾತ್ಮಕ ಬೆಳವಣಿಗೆ ಆಗಿದ್ದವೇ ಹೊರತು ಅವುಗಳಿಂದ ಪ್ರಾಣಿ ಪಕ್ಷಿಗಳಿಗೆ ಯಾವ ತೊಂದರೆಯೂ ಆಗುತ್ತಿರಲಿಲ್ಲ. ಬೇಲಿಗಳೇ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳಿಗೆ ರಕ್ಷಣೆಯ ನೆಲೆಯಾಗಿದ್ದವು.

ಹಂಪಿ ಪರಿಸರದಲ್ಲಿ ಈಗ ಕಲ್ಲು ಬೇಲಿಗಳೇ ಮುಖ್ಯ. ಒಂದು ಕಾಲಕ್ಕೆ ಯಾವ ಬೇಲಿಗಳೂ ಇರಲಿಲ್ಲ. ಬಟಾಬಯಲಿನಲ್ಲಿ ರೈತರು ಗುರುತು ಹಾಕಿಕೊಳ್ಳುತ್ತಿದ್ದುದು ಕೆಲವು ಮರಗಳಿಂದಷ್ಟೇ. ಆ ಗಿಡ ಮರಗಳೇ ಗಡಿಗಳಾಗಿರುತ್ತಿದ್ದವು. ಕಲ್ಲು ಬೇಲಿಗಳು ಉರಗಗಳಿಗೆ ಸಹಕಾರಿಯಾದವೇ. ಈ ಸಂಗತಿಗಳು ಜೀವಜಾಲದ ಗಡಿಗಳಿಗೆ ಸಂಬಂಧಿಸುತ್ತವೆ. ಮಾನವ ನಿರ್ಮಿತ ಜೈವಿಕ ಜಾಲದ ಗಡಿಗಳು ಮನುಷ್ಯ ಕೇಂದ್ರಿತವಾದವು. ಇಲ್ಲೂ ಕೂಡ ಬೇಲಿ ಹಾಕುವಾಗಲೂ ತಮಗೆ ಉಪಯುಕ್ತ ಗಿಡ ಮರಗಳನ್ನೇ ಹಾಕಿಕೊಂಡಿರುವುದನ್ನು ಕಾಣಬಹುದು. ಅನೇಕ ಜಾತಿಯ ಮುಳ್ಳಿನ ಗಿಡಗಳಲ್ಲದೆ ಕಳ್ಳಿಗಳನ್ನು ಬೇಲಿಯಾಗಿ ಹಾಕಿ ಕೊಳ್ಳುವುದು ಹಂಪಿಯಲ್ಲಿ ಸಾಮಾನ್ಯ. ಕಾಡಿನ ಮುಳ್ಳು ಗಿಡಗಳನ್ನೆ ಕಡಿದು ತಂದು ಬೇಲಿ ಹಾಕುವುದು ಕ್ರೂರ ಪ್ರಾಣಿಗಳನ್ನು ತಡೆಯುವ ಉಪಾಯದಿಂದ. ಹಂಪಿಯ ಕೃಷಿ ವಿಧಾನ ಬದಲಾಗಿರುವುದರಿಂದ ಈಗಿನ ಆಹಾರ ಬೆಳೆಗಳು ಜೀವಜಾಲದ ಸಂಬಂಧಗಳು ಬದಲಾಗಿವೆ. ಕಳೆಗಿಡಗಳನ್ನು ಗೊಬ್ಬರವಾಗಿಸಿ ಕೊಳ್ಳುವುದು ಕೂಡ ಬೆಳೆಗಳಿಗೆ ನೀಡುವ ಆಹಾರವೇ ಆಗಿದೆ. ಈ ಎಲ್ಲ ಹಿನ್ನೆಲೆಗಳಿಂದ ನೋಡಿದರೆ ಹಂಪಿಯ ಸಸ್ಯಜಾನಪದವು ಪಶುಪಾಲಕರ ಹಾಗೂ ವಕ್ಕಲು ಸಂಸ್ಕೃತಿಗಳ ಜೀವನ ಸಂಬಂಧವು ಹೇಗೆ ನೈಸರ್ಗಿಕವಾಗಿತ್ತು ಎಂಬುದನ್ನು ತೋರುತ್ತಿದೆ. ಸ್ಪಷ್ಟವಾಗಿ ಈ ಬಗೆಯ ಜ್ಞಾನಕ್ರಮಗಳು ಪಶುಪಾಲಕ ಸಮುದಾಯಗಳ ಲೋಕ ದೃಷ್ಠಿಯ ಫಲವಾಗಿದೆ. ನಿಸರ್ಗವನ್ನು ಜನಪದರು ತಮ್ಮೊಬ್ಬರ ಬದುಕಿನ ಭಾಗವಾಗಿ ನೋಡುತ್ತಿಲ್ಲ. ಅಖಂಡ ಗ್ರಹಿಕೆ ಇಲ್ಲಿ ಪ್ರಧಾನವಾಗಿದೆ. ಸೃಷ್ಟಿಯಲ್ಲಿ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂಬ ವಿಶಾಲ ಭಾವನೆ ಇವರ ತಿಳುವಳಿಕೆಯಾಗಿದೆ. ಪ್ರಾಣಿ ಪಕ್ಷಿಗಳು ತಿಂದುಬಿಟ್ಟಿದ್ದು ತಮಗೆ ಎಂಬ ಭಾವನೆ ಜೈವಿಕ ಘನತೆಯದೇ ವಿನಃ ಅನುಭೋಗಿ ಲಾಲಸೆಯದಲ್ಲ. ಹಂಪಿ ಪರಿಸರದ ಸಸ್ಯ ಜಾನಪದದ ಮುಖ್ಯ ಅಂಶಗಳನ್ನು ಹೀಗೆ ಪಟ್ಟಿಮಾಡಬಹುದು.

* ಹಂಪಿಯ ಪರಿಸರದಲ್ಲಿನ ಮರಗಿಡಗಳು ಪಶುಪಾಲಕ ಸಂಸ್ಕೃತಿಯ ಆಹಾರ ಸರಪಳಿಯಾಗಿ ವಿಕಾಸ ಪಡೆದಿವೆ.

* ಹಂಪಿಯ ಸಸ್ಯಮೂಲ ಆಹಾರವು ಮಾನವರಿಗೂ ಪ್ರಾಣಿಗಳಿಗೂ ಜೈವಿಕ ಒಪ್ಪಂದವನ್ನು ಸಾಧ್ಯವಾಗಿಸಿದೆ.

* ಬದುಕುಳಿಯಲು ಗಿಡ ಬಳ್ಳಿಗಳು ಮುಳ್ಳನ್ನು ವಿಶೇಷವಾಗಿ ರೂಪಿಸಿಕೊಂಡಿದ್ದು ಪೊದೆಯಂತೆ ಬೆಳೆಯಬಲ್ಲವಾಗಿವೆ.

* ಔಷಧೀಯ ಸಸ್ಯಗಳಾಗಿ ಮಾನವರ ಹಿತಕಾಯುವ ಸ್ವರೂಪದಲ್ಲಿ ಮಾನವ ಮತ್ತು ಪ್ರಾಣಿಗಳ ನಡುವೆ ಕೊಂಡಿಯಾಗಿ ಬೆಳೆದಿದೆ.

* ವಕ್ಕಲುತನಕ್ಕೆ ಪೂರಕವಾದ ಗಿಡಮರಗಳಾಗಿ ಮಾರ್ಪಟ್ಟು ಉಪಯುಕ್ತವೆನಿಸಿವೆ.

* ಕಾಡು ಫಲವಾಗಿ ಬೆಳೆದು ಪ್ರಾಣಿ ಪಕ್ಷಿಗಳಿಗೆ ಹೇರಳವಾಗಿ ಹಣ್ಣು ನೀಡುವಂತವಾಗಿವೆ.

* ಬಹುಪಾಲು ಎಲ್ಲ ಗಿಡ ಮರ ಬಳ್ಳಿಗಳು ಹೆಚ್ಚಾಗಿ ಹಲವು ಬಗೆಯ ಹೂ ಬಿಡುವಂತವಾಗಿದ್ದು ಅನೇಕ ಕ್ರಿಮಿಕೀಟಾದಿ ಪಕ್ಷಿಗಳಿಗೆ ಪೂರಕವಾಗಿವೆ.

* ಗಿಡ್ಡದಾಗಿ ಪೊದೆಯಾಗಿ ಬೆಳೆವ ಬಹಳ ಕಾಲ ಬದುಕುಳಿಯುವ ಪ್ರತಿರೋಧ ಶಕ್ತಿಗಳಿಸಿದ್ದು ಎಂತಹ ಬೇಸಿಗೆಯನ್ನೂ ನಿಭಾಯಿಸಿ ಒಂದೆರಡು ಮಳೆಗೂ ಹಚ್ಚ ಹಸುರಾಗಿ ಬಿಡಬಲ್ಲ ಸಾಮರ್ಥ್ಯ ಗಳಿಸಿವೆ.

* ದೈವಿಕವಾದ ಗುಣಗಳನ್ನು ಪ್ರತಿನಿಧಿಸುವ ಮರಗಿಡಗಳು ಹೇರಳವಾಗಿದ್ದು ಜೀವಜಾಲದ ಸಮತೋಲನಕ್ಕೆ ಅವಕಾಶವಾಗಿದೆ. ಮಾತೃಪ್ರಧಾನ ಸಾಂಸ್ಕೃತಿಕ ಸಂಬಂಧಗಳನ್ನು ಪ್ರತಿನಿಧಿಸುವ ಗಿಡಮರಗಳು ಹೇರಳವಾಗಿವೆ.

* ಬೇಟೆ ಮತ್ತು ವಕ್ಕಲು ಸಂಸ್ಕೃತಿಗಳ ಕಾಡು ನಾಡಿನ ಸಂಬಂಧವನ್ನು ಬೆಸೆದಿವೆ.

* ಹಣ್ಣುಗಳಾಗಿ ಔಷಧಿಯಾಗಿ ಜೈವಿಕ ಸಂಬಂಧ ಸಾಧಿಸಿಕೊಂಡಿವೆ.

* ಮಾನವರ ಯಾವುದೇ ಆಕ್ರಮಣವನ್ನು ಸಹಿಸಿಕೊಳ್ಳ ಬಲ್ಲ ಶಕ್ತಿಯನ್ನು ಈ ಪರಿಸರದ ಗಿಡ ಮರಗಳು ಪಡೆದಿದ್ದು ಪ್ರಾಚೀನ ಸಸ್ಯವರ್ಗಗಳ ಪ್ರಭೇದಗಳು ಉಳಿದುಕೊಳ್ಳಲು ಸಾಧ್ಯವಾಗಿದೆ.

* ವಿಶೇಷವಾಗಿ ಆದಿಮ ಸಂಸ್ಕೃತಿಯ ಬೇರುಗಳನ್ನು ಉಳಿಸಿಕೊಂಡಿವೆ.

* ದಟ್ಟ ಮುಳ್ಳಿನ ಪೊದೆಗಳು ಒಟ್ಟಾಗಿ ಬೆಳೆದು ತಮ್ಮೊಳಗೆ ಅನೇಕ ಬಗೆಯ ಆಶ್ರಿತ ಗಿಡ ಬಳ್ಳಿಗಳು ಬೆಳೆದುಕೊಳ್ಳಲು ದಾರಿ ಮಾಡಿದ್ದು ಸಹಜವಾಗಿಯೆ ಸ್ವಸಂರಕ್ಷಣೆಯ ವ್ಯೂಹವನ್ನು ನಿರ್ಮಿಸಿಕೊಂಡಿವೆ. ಅಲ್ಲದೆ ಪ್ರಾಣಿ ಪಕ್ಷಿಗಳಿಗೆ ಆಶ್ರಯವನ್ನು ನೀಡಿವೆ.

* ಮುಸಿಯ, ಕರಡಿಯಂತಹ ಪ್ರಾಣಿಗಳಲ್ಲದೆ ಅಪರೂಪದ ಪ್ರಾಣಿ ಪಕ್ಷಿಗಳು ಬದುಕುಳಿಯಲು ಬೇಕಾದ ಹಣ್ಣು ಗೆಡ್ಡೆ ಗೆಣಸು ಹುಳು ಉಪ್ಪಟ್ಟೆ ಹಾಗೂ ಹಸಿರು ಮೇವನ್ನು ಇಲ್ಲಿನ ಗಿಡ ಮರಗಳು ಒದಗಿಸುವ ಮೂಲಕ ಜೀವಜಾಲದ ಉಳಿವಿಗೂ  ಸಮತೋಲನಕ್ಕೂ ಅವಕಾಶ ಮಾಡಿವೆ.

ಹೀಗೆ ವೈವಿಧ್ಯ ನೆಲೆಯ ಜೀವಜಾಲದ ಸಂಬಂಧವನ್ನು ಸಾಧಿಸಿಕೊಂಡಿರುವ ಹಂಪಿಯ ಸಸ್ಯ ಜಾನಪದವು ನಿಸರ್ಗ ಮತ್ತು ಮಾನವರ ನಡುವಿನ ಅರ್ಥಪೂರ್ಣ ವಿಕಾಸಕ್ಕೆ ಮಾದರಿಯಾಗಿದೆ. ಇಲ್ಲಿ ಹೆಸರಿಸಿ ವಿವರಿಸಿರುವ ಗಿಡ ಮರ ಸಸ್ಯಗಳು ಬೆರಳಣಿಕೆಯವು ಮಾತ್ರ. ಅಸಂಖ್ಯವಾದ ವಿವರಗಳನ್ನು ಜನಪದರು ವಿಭಿನ್ನವಾಗಿ ಹೇಳುವರು. ಅವನ್ನೆಲ್ಲ ದಾಖಲಿಸಲು ಇಲ್ಲಿ ಅಸಾಧ್ಯ. ಸಾವಿರಾರು ಪುಟಗಳಷ್ಟು ದೇಶೀ ಸಸ್ಯ ವಿಜ್ಞಾನದ ಮಾಹಿತಿ ಜನಪದರಲ್ಲಿದೆ. ಕೆಲವನ್ನು ಮಾತ್ರ ಇಲ್ಲೆ ಹೇಳಲಾಗಿದೆ. ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಸಸ್ಯ ಮೂಲ ಜ್ಞಾನವನ್ನು ವಿವರಿಸುವುದುಂಟು. ಆ ಬಗೆಯ ಎಲ್ಲ ವೈವಿಧ್ಯ ನಿರೂಪಣೆಗಳನ್ನು ಸಂಗ್ರಹಿಸಬೇಕಾದ ಜರೂರಿದೆ. ಜನಪದರ ನೈಸರ್ಗಿಕ ತಿಳುವಳಿಕೆಯು ಅವರ ಕಥೆ ಕಾವ್ಯ ಹಾಡುಗಳಿಗಿಂತಲೂ ಪ್ರಮುಖವಾದುದು. ಅಸ್ತಿತ್ವದ ಜೀವಜಾಲದ ಜ್ಞಾನ ಪರಂಪರೆಗಳನ್ನೆ ಲೆಕ್ಕಿಸದೆ ಅವರ ಕಾವ್ಯಗಳನ್ನು ಮಾತ್ರ ಸಂಗ್ರಹಿಸುವುದು ಉಚಿತವಲ್ಲ. ಹಂಪಿಯ ಪರಿಸರ ಒಂದರಲ್ಲೇ ಸಂಪುಟಗಳಿಗೆ ಆಗುವಷ್ಟು ಜೈವಿಕ ಮಾಹಿತಿ ಇದೆ. ಮಾಹಿತಿ ಮಾರಾಟದ ಕಾಲದಲ್ಲಿ ಅವರ ಜ್ಞಾನವನ್ನು ಮಾಹಿತಿಯಾಗಿ ಮಾರುವ ಅಪಾಯಗಳೂ ಇವೆ. ಜನಪದರಿಗೂ ಈ ಎಚ್ಚರ ಈಗಾಗಲೇ ಬಂದಿದೆ. ಮಾನವರ ವಿಕಾಸದ ಅನನ್ಯಕಥನಗಳ ಭಾಗವಾದ ನೈಸರ್ಗಿಕ ತಿಳುವಳಿಕೆಯು ಈ ಕಾಲದಲ್ಲಿ ಬಹಳ ಮುಖ್ಯವಾಗಿದೆ. ಜಗತ್ತಿನ ಎಲ್ಲ ಏಕಾಕಾರಿ ಉತ್ಪಾದನೆಗಳಲ್ಲಿ ಪರಿಸರದ ಹಸಿರು ಜೀವವನ್ನು ನಾಶ ಪಡಿಸುತ್ತಿರುವಾಗ ಜನಪದರ ವೈವಿಧ್ಯ ಜ್ಞಾನ ಪರಂಪರೆಯ ಜೀವಜಾಲದ ಸಂಬಂಧವನ್ನು ಸೂಕ್ತವಾಗಿ ಈ ಕಾಲಕ್ಕೆ ತಕ್ಕಂತೆ ಹೊಂದಿಸಿಕೊಂಡು ಬೆಳೆಯಬೇಕಾಗಿದೆ.