ಸಸ್ಯ ಜ್ಞಾನ ಜನಪದರಿಗೆ ಬದುಕಿನ ಭಾಗವಾಗಿದೆ. ಕೃಷಿ ಸಂಸ್ಕೃತಿಯ ಕಾಲಘಟ್ಟದಲ್ಲಿ ಸಸ್ಯಜ್ಞಾನ ಗಾಢವಾಗಿ ಎಲ್ಲ ಕಡೆ ಬೆಳೆದಿದೆ. ಅನುಭವವೇ ಸಸ್ಯಜ್ಞಾನದ ಮೂಲಬೇರು. ಜನಪದರು ಎಲ್ಲ ಜ್ಞಾನ ಕ್ರಮಗಳನ್ನು ಅನುಭವದ ತಳಪಾಯದಿಂದಲೇ ಕಂಡುಕೊಂಡದ್ದು. ನಿಸರ್ಗನಿಷ್ಟ ಬದುಕಿನ ಅನಿವಾರ್ಯ ಕ್ರಿಯೆಗಳ ನಿರಂತರ ಅನುಸಂಧಾನದಿಂದ ಹುಟ್ಟುವ ಹಸಿರು ತಿಳಿವಳಿಕೆಯು ಜೈವಿಕ ಸಂಬಂಧಗಳ ಬೇರಿನಿಂದ ವ್ಯಕ್ತವಾಗುತ್ತದೆ. ಬೇಟೆ ಸಂಸ್ಕೃತಿಯಲ್ಲಿ ಸಸ್ಯಜ್ಞಾನ ಅಷ್ಟಾಗಿ ಇರಲಿಲ್ಲ. ಆ ಹಂತದಲ್ಲಿ ಪ್ರಾಣಿ ಜ್ಞಾನವೇ ಹತ್ತಿರವಾಗಿದ್ದುದು. ಬೇಟೆ ಆಡುವುದು ಕೇವಲ ಬಿಲ್ಲುಬಾಣ ಹಿಡಿದು ಗುರಿ ಇಟ್ಟರೆ ಆಯಿತು ಎಂದಲ್ಲ. ಗುರಿಗಿಂತಲೂ ಆಯುಧಗಳಿಗಿಂತಲೂ ಮಿಗಿಲಾಗಿ ಇರಬೇಕಾಗಿದ್ದುದು ಆ ಪ್ರಾಣಿಯ ಬದುಕಿನ ರೀತಿ ನೀತಿ. ಹಾಗೆಯೆ ಹೇಗೆ ಆ ಪ್ರಾಣಿ ಪರಿಸರದಲ್ಲಿ ಅಸ್ತಿತ್ವ ಬೆಳೆಸಿಕೊಂಡಿದೆ ಎಂಬುದು. ಪರಿಸರದ ಅರಿವಿಲ್ಲದೆ ಯಾವುದೇ ಪ್ರಾಣಿಯ ಬೇಟೆ ಸಾಧ್ಯವಿಲ್ಲ. ಹೀಗಾಗಿ ಬೇಟೆ ಸಂಸ್ಕೃತಿಯ ಕಾಲವು ಪ್ರಾಣಿಗಳ ಬಗೆಗಿನ ತಿಳುವಳಿಕೆಯನ್ನು ವಿಸ್ತರಿಸಿದ ಹಂತ. ಬೇಟೆ ಹಂತದಿಂದ ಮುಂದೆ ಬಂದು ಪಶುಪಾಲನ ಸಂಸ್ಕೃತಿಗೆ ಸೇರಿದಾಗ ಪಶು ಸಂಪತ್ತಿನ ರೀತಿ ನೀತಿಗಳು ಬೆಳೆದು ಪ್ರಾಣಿ ಲೋಕದ ವಿವೇಚನೆ ಮತ್ತಷ್ಟು ವಿಸ್ತೃತವಾಯಿತು. ಪರಿಸರದ ಯಾವ ಆಹಾರವನ್ನು ಪಶುಗಳು ಆಶ್ರಯಿಸಿವೆ ಎಂಬುದರ ಮೂಲಕ ತಮ್ಮ ಸಾಕು ಪ್ರಾಣಿಗಳ ಆಹಾರದ ಬಗೆಗೂ ತಿಳಿದುಕೊಳ್ಳಬೇಕಾಯಿತು. ಇದು ಜೀವಜಾಲದ ಸರಪಳಿಯ ಸಂಬಂಧ ಹೇಗೆ ಸಂಸ್ಕೃತಿಯ ರೂಪಾಂತರಗಳಾಗಿ ಮಾರ್ಪಟ್ಟಿತು ಎಂಬುದನ್ನು ತೋರುತ್ತದೆ.

ಪಶುಗಳ ಆಹಾರದಲ್ಲಿ ಯಾವ ಹುಲ್ಲು, ಗಿಡ, ಕಾಯಿ, ಹಣ್ಣು, ಕಾಳು, ಸೊಪ್ಪು, ಗೆಡ್ಡೆಗೆಣಸು ಅತ್ಯುಪಯುಕ್ತ ಎಂದು ತಿಳಿದುಕೊಳ್ಳಲು ಪಶುಪಾಲಕ ಸಮಾಜಗಳು ಮುಂದಾದವು. ಇದರ ಪರಿಣಾಮವೇ ಸಸ್ಯ ಜ್ಞಾನದ ಶಾಖೆ ಜನಪದರಲ್ಲಿ ಬೆಳೆಯಲು ದಾರಿ ಮಾಡಿತು. ಪ್ರಾಣಿಗಳನ್ನು ಹೇಗೆ ಬೇಟೆ ಆಡಬೇಕು ಎಂಬ ತಂತ್ರ ತಿಳಿಯುತ್ತಿದ್ದಂತೆ ಅದು ಆಹಾರ ಸಂಸ್ಕೃತಿಗೆ ಅವಕಾಶ ಮಾಡಿದರೆ ಅದೇ ತಿಳುವಳಿಕೆ ಬೆಳೆದು ಪಶುಪಾಲಕ ಜೀವನ ಕ್ರಮದಲ್ಲಿ ಪಶುಪಾಲಕ ಸಂಸ್ಕೃತಿ ವಿಸ್ತರಿಸಲು ಅನುಕೂಲ ಮಾಡಿತು. ಇದೇ ಹಂತವು ಮತ್ತೆ ರೂಪಾಂತರಗೊಂಡು ಕೃಷಿ ಸಂಸ್ಕೃತಿಯನ್ನು ರೂಪಿಸಿತು. ಹೀಗಾಗಿ ಪ್ರಾಣಿ ಜಾನಪದದ ಮತ್ತೊಂದು ಸ್ವರೂಪ ಸಸ್ಯ ಜಾನಪದ. ಪ್ರಾಣಿ ಮತ್ತು ಸಸ್ಯ ಸಂಪತ್ತು ಎರಡೂ ಮಾನವರ ಅಸ್ತಿತ್ವಕ್ಕೆ ಅನಿವಾರ್ಯವಾಗಿದ್ದರಿಂದ ಈ ಬಗೆಯ ಜೀವಜಾಲವೇ ಮನುಷ್ಯ ಸಮಾಜಗಳ ವ್ಯವಸ್ಥೆಯನ್ನು ರೂಪಿಸಿರುವದು. ಬದುಕುವ ಅವಕಾಶ ಮತ್ತು ಕಾಲವನ್ನು ನಿಸರ್ಗದ ಈ ಸಂಪತ್ತು ಒದಗಿಸಿದ ಮೇಲೆ ಸ್ಥಳೀಯವಾದ ವೈವಿಧ್ಯ ಸಂಸ್ಕೃತಿಗಳು ವಿಸ್ತರಿಸಿದವು. ಚರಿತ್ರೆಗೆ ಸಂಬಂಧ ಇಲ್ಲದಿರಲಿ ಬಿಡಲಿ ಈ ಬಗೆಯ ಜೀವ ವಿಕಾಸದ ಅವ್ಯಕ್ತ ಬೇರುಗಳು ವರ್ತಮಾನ ಅಥವಾ ನೆನ್ನೆಯವರ ವರ್ತಮಾನವನ್ನು ನಿರ್ಧರಿಸಿರುತ್ತವೆ. ಅಂದರೆ ನೆನ್ನೆಯವರ ಪಾಲಿಗಿದ್ದ ವರ್ತಮಾನವೂ ಮತ್ತೊಬ್ಬರಿಗೆ ಗತಕಾಲವಾಗಿರಬಹುದು. ಆದರೆ ನಮ್ಮ ವರ್ತಮಾನವು ನೆನ್ನೆಯವರ ವರ್ತಮಾನವೂ ಆಗಿರಬಲ್ಲದು.

ಗತಕಾಲದ ನೈಸರ್ಗಿಕ ತಿಳುವಳಿಕೆಯು ಚರಿತ್ರೆಯನ್ನು ರೂಪಿಸಬಲ್ಲುದೇ ವಿನಃ ಅದೇ ಚರಿತ್ರೆ ಆಗಲು ತೊಡಗುವುದಿಲ್ಲ. ಒಂದು ಗಿಡ ಮರ ಸಸ್ಯ ಮನುಷ್ಯರ ಅಸ್ತಿತ್ವವನ್ನು ರೂಪಿಸಲು ಯತ್ನಿಸುತ್ತವೆಯೇ ಹೊರತು ಆ ಸಸ್ಯ ಲೋಕವೇ ಮಾನವ ರೂಪವಾಗಲು ಸಾಧ್ಯವಿಲ್ಲ. ಹೀಗೆಯೆ ನಿಸರ್ಗ ಮಾನವ ಸಮಾಜವನ್ನು ರೂಪಿಸಿ ಅದರ ವಿಭಿನ್ನ ನೆಲೆಗಳನ್ನು ವ್ಯವಸ್ಥೆಗೊಳಿಸಿದೆ. ಇದು ನಿಸರ್ಗದ ಜೀವಜಾಲದ ಸಂಬಂಧ. ಪಶುಪಾಲಕ ಸಮುದಾಯಗಳಿಗೆ ಹಂಪಿಯ ನಿಸರ್ಗ ನೆಲೆ ನೀಡಿತು ಎಂಬುದು ಗೊತ್ತಿರುವ ಸಂಗತಿ. ಹಾಗೆಯೇ ಈ ಸಮುದಾಯಗಳೇ ವಿಜಯನಗರ ಸಾಮ್ರಾಜ್ಯದ ಅಸ್ತಿತ್ವಕ್ಕೂ ಕಾರಣವಾದವು. ಒಂದು ಬೇರಿನಂತಿದ್ದರೆ, ಇನ್ನೊಂದು ಬೇರಿನ ಹೊರಮೈ ಮರದ ಸ್ವರೂಪವಾಗಿರುತ್ತದೆ. ಈ ಬಗೆಯ ತಾತ್ವಿಕ ನೆಲೆಯು ಜೀವಜಾಲದ ಜಾನಪದರಲ್ಲಿ ಅಡಗಿದೆ. ಆ ನಿಟ್ಟಿನಲ್ಲಿ ಹಂಪಿ ಪರಿಸರದ ಜೀವಜಾಲದ ಸಸ್ಯ ಜಾನಪದವನ್ನು ಹಂಪಿ ಜನಪದರ ಅನುಭವ ತಿಳುವಳಿಕೆಯ ಮೂಲಕ ಹೇಗೆ ಅವ್ಯಕ್ತ ನೈಸರ್ಗಿಕ ಸಂಸ್ಕೃತಿಯು ರೂಪುಗೊಂಡಿದೆ ಎಂಬುದನ್ನು ಪರಿಶೀಲಿಸುವ.

ಜನಪದರು ಸಸ್ಯ ಜಾನಪದವನ್ನು ಬದುಕಿನ ಭಾಗವಾಗಿ ಪರಿಗಣಿಸಿರುವುದರಿಂದ ಅವರ ವಿವರಗಳು ಸಸ್ಯಶಾಸ್ತ್ರಜ್ಞರ ರೀತಿಯಲ್ಲಿಲ್ಲ. ಜನಪದ ಸಸ್ಯಜ್ಞಾನಿಗೂ ವೈಜ್ಞಾನಿಕ ನೆಲೆಯ ಸಸ್ಯಶಾಸ್ತ್ರಜ್ಞನಿಗೂ ತುಂಬ ಅಂತರಗಳಿವೆ. ಜನಪದ ಸಸ್ಯಜ್ಞಾನಿಯದು ಅನುಭವದ ಆಧಾರದ ನಿರೂಪಣೆಯಾದರೆ ಸಸ್ಯಶಾಸ್ತ್ರಜ್ಞನದು ವೈಜ್ಞಾನಿಕವಾಗಿ ಜೀವ ವಿಕಾಸದ ನೆಲೆಯ ತಿಳುವಳಿಕೆ. ಇವೆರಡೂ ಒಂದೇ ಆಗಿಲ್ಲದಿರುವುದೇ ವಿಶೇಷ. ಜನಪದ ಸಸ್ಯಜ್ಞಾನಿಯು ವಿಜ್ಞಾನಗಳ ಪೂರ್ವದ ಜ್ಞಾನಿಯಾದ್ದರಿಂದ ಸಸ್ಯಗಳ ಬಗೆಗಿನ ಜನಪದರ ತಿಳುವಳಿಕೆಯ ಸಮಷ್ಠಿಯಾದುದು. ಇದು ಮನುಷ್ಯರ ಸಂಸ್ಕೃತಿಯ ಅಂತರಂಗದ ನಿರೂಪಣೆಯಾದ್ದರಿಂದ ವಿಜ್ಞಾನಿಯ ನಿರ್ಧಿಷ್ಟ ಸ್ಪಷ್ಟ ಖಚಿತ ಪ್ರಜ್ಞೆ ಇಲ್ಲಿಲ್ಲ. ಅಸ್ತಿತ್ವದ ತಿಳುವಳಿಕೆಯು ಜನಪದ ಸಸ್ಯ ಜ್ಞಾನಿಯ ನಿರೂಪಣೆಯನ್ನು ರೂಪಿಸಿದೆ. ತಾನು ಬದುಕುಳಿಯಲು ಈ ಸಸ್ಯ ಲೋಕದಲ್ಲಿ ಯಾವುದು ಮುಖ್ಯ ಎಂಬುದನ್ನು ತಿಳದಿದ್ದರಿಂದಲೇ ನಾಗರೀಕತೆಗಳು ಅಸ್ತಿತ್ವವನ್ನು ನಿಸರ್ಗದಲ್ಲಿ ಪಡೆಯಲು ಸಾಧ್ಯವಾದದ್ದು.

ಹಂಪಿ ಪರಿಸರದ ಸಸ್ಯ ಜಾನಪದವು ಕೂಡ ಇದೇ ಬಗೆಯ ತಿಳುವಳಿಕೆಯ ಬೇರುಗಳಿಂದ ನಿರೂಪಣೆಯ ಆಕಾರವನ್ನು ಪಡೆದಿದೆ. ಉಷ್ಣವಲಯದ ಜೀವಜಾಲದ ಸ್ವರೂಪ ಕರ್ನಾಟಕದಲ್ಲಿ ಸಾಮಾನ್ಯ. ದಟ್ಟ ಕಾಡಿನ ಪರಿಸರದ ಸಸ್ಯ ಜಾನಪದವೇ ಬೇರೆ. ಹಂಪಿಯ ಬೆಟ್ಟಗುಡ್ಡಗಳು ದಟ್ಟ ಕಾಡಿನ ಪರಿಸರವನ್ನು ಪಡೆದಿಲ್ಲ. ಬಯಲು ಪ್ರದೇಶದ ಗುಣಗಳು ಇಲ್ಲಿ ಸಾಮಾನ್ಯ ಬಳಕೆಯ ಹಿನ್ನೆಲೆಯಲ್ಲಿ ಹಂಪಿ ಜನಪದರು ಸಸ್ಯಲೋಕವನ್ನು ವಿಂಗಡಿಸುವರು. ಅನೇಕ ಬಗೆಯ ಸೊಪ್ಪಿನ ಗಿಡಗಳನ್ನು ತಮ್ಮ ಆಹಾರದ ಜೊತೆಯೂ ದನಕುರಿ ಮೇಕೆಗಳ ಮೇವಿನ ನೆಲೆಯಲ್ಲೂ ವಿವರಿಸುವರು.

ಪ್ರತಿಯೊಂದು ಸ್ಥಳೀಯ ಸಂಸ್ಕೃತಿಯು ತನ್ನ ಬದುಕಿನ ಪರಿಸರದಲ್ಲಿರುವ ಗಿಡ ಮರಗಳನ್ನು ತನ್ನದೇ ತಿಳುವಳಿಕೆಯ ಮೂಲಕ ಗುರುತಿಸುವ, ಬಳಸುವ, ನಿರೂಪಿಸುವ ರೀತಿನೀತಿಗಳನ್ನು ಹೊಂದಿರುತ್ತದೆ. ಜೀವ ವೈವಿಧ್ಯ ಹೇಗೆ ನಿಸರ್ಗ ಸಹಜವೊ ಹಾಗೆಯೇ ವೈವಿಧ್ಯವಾದ ಸ್ಥಳೀಯ ನಿರೂಪಣೆ ಕೂಡ. ವಿಜಯನಗರದ ರಾಜಧಾನಿ ಹಂಪಿಯ ಕುರಿತು ಪ್ರವಾಸಿಗರು ಕೊಡುವ ವಿವರಗಳಲ್ಲಿ ದಟ್ಟ ಕಾಡಿನ ರೀತಿಯ ಎತ್ತರದ ಗಿಡ ಮರಗಳು ಬರುತ್ತವೆ. ಆ ಕಾಲದ ಪರಿಸರ ಈಗ ಇಲ್ಲ.  ಭೂವಿಕಾಸದ ಹಂತದಲ್ಲಿ ಪರಿಸರ ಬದಲಾಗುತ್ತಾ ಹೋಗುವುದು ಅನಿವಾರ್ಯ. ಆದರೆ ಹಂಪಿ ಪರಿಸರ ಉಷ್ಣವಲಯದ ವಾತಾವರಣವನ್ನೆ ಹೊಂದಿರುವುದರಿಂದ ಈ ಪರಿಸರದಲ್ಲಿ ಅತಿ ಎತ್ತರದ ಮರಗಿಡಗಳು ಸಾಧ್ಯವಿಲ್ಲ. ಕುರುಚಲು ಕಾಡಿನ ಎಲ್ಲ ಸ್ವರೂಪ ಹಂಪಿಯ ಗಿಡಮರಗಳಿಂದ ಕಾಣುತ್ತದೆ. ಬೆಟ್ಟಗುಡ್ಡಗಳು ಬಂಡೆಗಳಿಂದಲೆ ತುಂಬಿರುವುದರಿಂದ ಫಲವತ್ತಾಗಿ ಗಿಡಮರಗಳು ಹಬ್ಬಲು ಸಾಧ್ಯವಿಲ್ಲ. ತೀವ್ರವಾದ ಉರಿ ಬೇಸಿಗೆಯು ಕಾಡಿನ ಪರಿಸರಕ್ಕೆ ಅವಕಾಶ ನೀಡದು. ಹಂಪಿಯ ಭೂಭಾಗವು ಮರುಭೂಮಿಯ ಅನೇಕ ಲಕ್ಷಣಗಳನ್ನು ಕೂಡ ಹೊಂದಿದೆ. ಅಪಾರ ಪ್ರಮಾಣದ ಲಾವಾದ ಹೊಳೆಗಳು ಉಕ್ಕಿ ಹರಿದು ಬೆಟ್ಟಗುಡ್ಡ ಬಂಡೆಗಳನ್ನು ರೂಪಿಸಿರುವುದರಿಂದ ಇಲ್ಲಿ ಬೃಹತ್ ಮಣ್ಣಿನ ಪದರುಗಳೇ ಇಲ್ಲ. ಭೂಮಿಯ ಕೆಳಗೆ ಶಿಲೆಗಳ ಪದರುಗಳು ಚಾಚಿವೆ. ಹೀಗಾಗಿ ಹಂಪಿ ಪ್ರದೇಶವು ಬಹಳ ಸಮೃದ್ಧವಾದ ಮಣ್ಣನ್ನು ಮೇಲು ಹೊದಿಕೆಯಾಗಿ ಪಡೆದಿಲ್ಲ. ಭೂಸವೆತದಿಂದ ಪಲವತ್ತು ಮಣ್ಣು ಅಲ್ಲಲ್ಲಿರುವ ಬಯಲುಗಳಲ್ಲಿ ಶೇಖರವಾಗಿ ಉಳಿದಂತೆ ಭೂಮಿ ಕಲ್ಲುಗಳಿಂದಲೇ ತುಂಬಿ ಹೋಗಿವೆ. ಇದರಿಂದಾಗಿ ಈ ಕಲ್ಲುಮಯ ಪರಿಸರದಲ್ಲಿ ರೂಪುಗೊಳ್ಳುವ ಗಿಡಮರಗಳು ಸಮೃದ್ಧವಾಗಿ ಬೆಳೆಯಲಾರವು. ಹಂಪಿಯ ಜನಪದರಿಗೆ ಈ ಬಗ್ಗೆ ಸೂಕ್ತ ತಿಳುವಳಿಕೆ ಇರುವುದರಿಂದಲೇ ಇಲ್ಲಿರುವ ಗಿಡಮರಗಳಿಗೆ ಸಾಕಷ್ಟು ಮಣ್ಣು ಇಲ್ಲ, ಮಳೆಯೂ ಇಲ್ಲ ಎಂದು ಹೇಳುವರು. ಆದರೆ ಹಂಪಿಯ ಮಣ್ಣು ಬಹಳ ಫಲವತ್ತಾದುದು ಎಂದು ಒಪ್ಪಿಕೊಳ್ಳುವರು. ಇಂತಹ ಮಣ್ಣಿಗೆ ಒಂದೇ ಒಂದು ಮಳೆ ಆದರೂ ಕೂಡ ಹಸಿರು ಹಬ್ಬುವುದು. ಮರುಭೂಮಿಯ ಗುಣವೂ ಹೀಗೆಯೆ. ಬಿದ್ದ ಒಂದಿಷ್ಟು ಮಳೆಗೆ ಅಲ್ಲಿನ ಕಲ್ಲು ಮಣ್ಣು ತಟ್ಟನೆ ಸ್ಪಂದಿಸಿ ಅನೇಕ ಬಗೆಯ ಸಸ್ಯಗಳಿಗೆ ಜೀವ ತುಂಬುವುದು. ಬೇಸಿಗೆಯಲ್ಲಿ ರುದ್ರ ಭೀಕರ ಮರುಭೂಮಿಯಂತೆ ಕಾಣುವ ಹಂಪಿಯು ಮಳೆಗಾಲದಲ್ಲಿ ನಿತ್ಯ ಹರಿದ್ವರ್ಣ ಕಾಡಿನಷ್ಟೇ ಹಸಿರು ಹೊದಿಕೆಯಿಂದ ಕಂಗೊಳಿಸುವುದು. ಜನಪದರು ಹಂಪಿಯ ಈ ಪರಿಯ ನಿಸರ್ಗವನ್ನು ದೇವರ ಮಹಿಮೆ ಎಂದು ಕೊಂಡಾಡುವರು. ಪಶುಪಾಲಕ ಸಮುದಾಯಗಳು ಪರಿಸರದ ಈ ಗುಣವನ್ನು ಆಶ್ರಯಿಸಿಯೆ ಹಂಪಿಯಲ್ಲಿ ತಮ್ಮ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ರೀತಿಗಳನ್ನು ಬೆಳೆಸಿಕೊಂಡದ್ದು.

ಹಂಪಿಯ ಸಸ್ಯ ಜಾನಪದ ಎಂದರೆ ಪಶುಪಾಲಕ ಸಂಸ್ಕೃತಿಯ ನೈಸರ್ಗಿಕ ಸಂಪತ್ತಿನ ಆವರಣ ಎಂದೇ ಹೇಳಬೇಕು. ಹಂಪಿಯ ಜೀವಜಾಲ ಕೂಡ ಸಸ್ಯ ಜಾನಪದದ ಭಾಗವಾಗಿಯೆ ಬೆಳೆದಿದೆ. ಸಸ್ಯ ಸಮೃದ್ಧಿ, ಪಶುಪಾಲಕ ಸಮಾಜ, ಪ್ರಾಣಿ ಪರಿಸರ ಇವೆಲ್ಲ ಒಂದಕ್ಕೊಂದು ಕೂಡಿಕೊಂಡಿರುವುದರಿಂದಲೇ ಹಂಪಿಯ ಸಸ್ಯ ಜಾನಪದವು ಮಾನವ ಹಾಗೂ ಪ್ರಾಣಿ ಪಕ್ಷಿಗಳ ಜೀವನ ಸಂಬಂಧದ ಆಹಾರ ಕ್ರಮವಾಗಿರುವುದು. ಹಂಪಿಯ ಪ್ರಾಣಿ ಪಕ್ಷಿಗಳ ಜಾನಪದವು ಹಂಪಿಯ ಸಸ್ಯಜಾನಪದವೇ ಆಗಿಬಿಡುತ್ತದೆ. ಹಾಗೆಯೇ ಹಂಪಿಯ ಜೀವಜಾಲ ಸಂಬಂಧವೆ ಮಾನವ ಸಂಸ್ಕೃತಿಯ ಒಟ್ಟು ಬಂಧವಾಗುತ್ತದೆ. ರಾಜರ ಇತಿಹಾಸಕ್ಕೆ ಜೀವಜಾಲದ ಹಸಿರು ವಿವೇಕದ ಸಂಬಂಧವೇ ಇಲ್ಲದಂತಿದೆ. ಸಾಮ್ರಾಜ್ಯಗಳ ವೈಯಕ್ತಿಕ ಇತಿಹಾಸವೇ ಜನತೆಯ ಜೀವಜಾಲದ ಇತಿಹಾಸವಲ್ಲ. ಆದ್ದರಿಂದ ಜನಪದರ ಸಸ್ಯ, ಪ್ರಾಣಿ, ಪಕ್ಷಿ, ಗ್ರಹ ತಾರೆ, ಸೂರ್ಯ, ಚಂದ್ರ, ಉಲ್ಕೆಗಳ ಅಸಂಖ್ಯ ವಿವರಗಳು, ನಂಬಿಕೆಗಳು, ಆಚರಣೆಗಳು, ಮೌಲ್ಯಗಳು, ತಿಳುವಳಿಕೆಗಳು ವೈಯಕ್ತಿಕವಾದ ಸಾಮ್ರಾಜ್ಯಗಳ ಹಂಗಿನಿಂದ ಆಚೆ ಇದ್ದು ಸಮಷ್ಟಿಯಾಗಿ ನಿಸರ್ಗದ ಪ್ರಭುತ್ವಕ್ಕೆ ಬದ್ಧವಾಗಿರುತ್ತವೆ. ಹೀಗಾಗಿ ಜನಪದರ ನಿಸರ್ಗ ಜಾನಪದವು ನಿಸರ್ಗದ ಪರಮಾಧಿಕಾರಕ್ಕೆ ಬದ್ಧವಾದುದೇ ವಿನಃ ಅದು ಸಾಮ್ರಾಜ್ಯಗಳ ಅಧಿಕಾರಕ್ಕೆ ಬದ್ಧವಲ್ಲ.

ಈ ಹಿನ್ನೆಲೆಯಿಂದ ನೋಡಿದರೆ ಹಂಪಿಯ ಜೀವಜಾಲದಲ್ಲಿ ಬಗೆಗಿನ ನಂಬಿಕೆಗಳು ನಿಸರ್ಗದ ತತ್ವವನ್ನು ಸಂಸ್ಕೃತಿಯ ತತ್ವವನ್ನಾಗಿಸಿಕೊಂಡಿರುವುದನ್ನು ಕಾಣಬಹುದು. ಸಸ್ಯ ಜಾನಪದವನ್ನು ಪ್ರಧಾನವಾಗಿ ಎರಡು ರೀತಿ ವಿಂಗಡಿಸಿಕೊಳ್ಳಬಹುದು. ಮೊದಲಿನದು ಹಂಪಿಯ ಗಿಡಮರಗಳು, ಎರಡನೆಯದು ಹಂಪಿಯ ಕಾಡು ಬಳ್ಳಿಗಳು ಹಾಗೂ ಸಸ್ಯಗಳು, ಈ ಎರಡೂ ಗುಂಪಿನ ಸಸ್ಯ ಲೋಕವನ್ನು ಮುಂದಿನ ಹಂತಗಳಲ್ಲಿ ವಿವರಿಸುವ.

ಹಂಪಿಯ ಪರಿಸರ ಹೆಮ್ಮರಗಳ ನೆಲೆ ಅಲ್ಲ. ಇಲ್ಲಿ ಕಂಡುಬರುವ ಗಿಡಮರಗಳ ಜನಪದ ವಿವರಗಳನ್ನು ವೃಕ್ಷಜಾನಪದ ಎಂದು ವಿಂಗಡಿಸಿ ವಿವರಿಸಬಹುದು. ಗುಡ್ಡಗಾಡು, ಹುಲ್ಲುಗಾವಲು, ಬೆಟ್ಟಕಣಿವೆ, ಬಯಲು ಪ್ರದೇಶಗಳಲ್ಲಿ ವಿರಳವಾಗಿ ಮರಗಿಡಗಳು ಹಂಪಿಯಲ್ಲಿ ಬೆಳೆದಿವೆ. ಹಂಪಿಯ ಮರಗಳು ಗಿಡ್ಡ ಸ್ವರೂಪದವು. ಪೊದೆಯಿಂದ ಚಾಚಿಕೊಂಡಿರುವಂತವು. ಬಹುತೇಕ ಮರಗಿಡಗಳು ಮಂದಗತಿಯ ಬಳವಣಿಗೆಯವು. ಆದರೆ ಬಲಿಷ್ಠ ಶಕ್ತಿಯನ್ನು ಹೊಂದಿರುವಂತೆಯೇ ಕಾಡಿನ ರೋಗಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲಂತವು. ಪಶುಪಾಲಕರೇ ಪ್ರಧಾನವಾಗಿ ಹಂಪಿ ಪರಿಸರದಲ್ಲಿ ನೆಲೆಸಿದ್ದರಿಂದ ಬೃಹತ್ ನಗರ ಸ್ವರೂಪಿ ಗೃಹ ನಿರ್ಮಾಣಗಳಿಗೆ ಅವರು ಬದ್ಧರಾಗಿಲ್ಲದ್ದರಿಂದ ಮರಗಳನ್ನು ಕಡಿದು ಬಳಸಿಕೊಳ್ಳಲು ಮುಂದಾಗಲಿಲ್ಲ. ಹೆಚ್ಚಾಗಿ ಕಲ್ಲುಗಳನ್ನೆ ಬಳಸಿ ಹಂಪಿಯ ಗ್ರಾಮ ನಿರ್ಮಾಣಗಳು ರೂಪುಗೊಂಡಿದ್ದರಿಂದ ಮರಮುಟ್ಟುಗಳ ಕಡೆ ಗಮನ ಹರಿಸಲಿಲ್ಲ. ಹಂಪಿ ಪ್ರದೇಶದ ಹಳೆಯ ಸಾಧಾರಣ ಶೈಲಿಯ ಮನೆಗಳು ಮರ ಮುಟ್ಟುಗಳನ್ನು ಅತ್ಯಂತ ಮಿತವಾಗಿ ಬಳಸಿ ನಿರ್ಮಾಣಗೊಂಡಿವೆ. ಮನೆ ವಿನ್ಯಾಸ ಕೂಡ ಕಲ್ಲುಮಣ್ಣಿನ ಬಳಕೆಯಿಂದ ಸರಳವಾಗಿದೆ. ವಿಜಯನಗರ ಸಾಮ್ರಾಜ್ಯ ಕೂಡ ತನ್ನ ನಿರ್ಮಾಣಗಳಲ್ಲಿ ಹೆಬ್ಬಂಡೆಗಳನ್ನೆ ಕಡಿದು ಬಳಸಿಕೊಂಡಿತೇ ಹೊರತು ಅದು ವಿಶೇಷವಾಗಿ ಮರಗಳನ್ನು ಬಳಸಿದ್ದು ಕಡಿಮೆ. ವಿಫುಲ ಕಲ್ಲಿನ ಸೌಲಭ್ಯ ಹಾಗೆಯೇ ವಿರಳ ಮರಗಳ ಪೂರೈಕೆ ವಿಜಯನಗರ ಗ್ರಾಮ ಹಾಗೂ ನಗರ ಎರಡೂ ನಿರ್ಮಾಣಗಳಲ್ಲಿ ತಮ್ಮ ಸ್ವರೂಪವನ್ನು ತೋರಿವೆ. ಒಂದು ಸಮಾಜ ನೆಲೆ ನಿಲ್ಲುವಾಗ ಬೇಕಾದ ನೈಸರ್ಗಿಕ ಸೌಲಭ್ಯಗಳು ಆ ನೆಲೆಯ ಹಾಗೂ ಪರಿಸರದ ಸ್ವರೂಪ ಮತ್ತು ಸೌಲಭ್ಯಗಳನ್ನೇ ಅವಲಂಬಿಸಿ ರೂಪುಗೊಳ್ಳಬೇಕಾಗುತ್ತದೆ. ಹಂಪಿಯ ಸ್ವಾಭಾವಿಕ ಮೇಲ್ಮೈಲಕ್ಷಣ ಹೇಗೆ ಸರಳ ಹಾಗು ಗಿಡ್ಡ ಸ್ವರೂಪದ ಭೌತಿಕತೆಯನ್ನು ಹೊಂದಿದೆಯೊ ಅದರಂತದೇ ಆಕೃತಿಯನ್ನು ವಿಜಯನಗರ ಕಾಲದ ನಿರ್ಮಾಣಗಳು ಪಡೆದಿದ್ದವೆಂದು ಊಹಿಸಬಹುದು.

ನಿಸರ್ಗದ ವೈವಿಧ್ಯ ಮರಗಿಡಗಳು ಆ ಸಮಾಜಗಳ ಬೇರು ಕೂಡ ಆಗಬಲ್ಲವು. ಹಂಪಿ ಪ್ರದೇಶದಲ್ಲಿರುವ ಬಹುಪಾಲು ಗಿಡಮರ ಸಸ್ಯಗಳೆಲ್ಲವೂ ಪಶುಪಾಲನ ಸಂಸ್ಕೃತಿಗೆ ಪೂರಕವಾಗಿದ್ದವು. ಅಷ್ಟೇ ಅಲ್ಲದೆ ಹಂಪಿಯ ಪ್ರಾಣಿ ಪಕ್ಷಿಗಳಿಗಂತು ವಿಪುಲವಾದ ಆಹಾರವನ್ನೊದಗಿಸುತ್ತಿದ್ದವು. ಜೊತೆಗೆ ಮನುಷ್ಯರ ಆಹಾರದಲ್ಲೂ ಗಿಡ ಮರ ಸಸ್ಯಗಳ ಪಾಲು ಇತ್ತು. ಪ್ರಾಣಿ ಪಕ್ಷಿ, ಕೀಟ ಹಾಗೂ ಮಾನವರ ಬದುಕಿಗೆ ಅವಶ್ಯವಿದ್ದ ಗಿಡ ಮರಗಳು ಹಂಪಿ ಪರಿಸರದಲ್ಲಿ ವಿಕಾಸಗೊಂಡಿವೆ. ಹಂಪಿಯ ಮರಗಿಡಗಳಿಗೆ ಸ್ಥಳೀಯ ಹೆಸರಿವೆ. ಗೃಹ ಬಳಕೆಯ ಮರಗಿಡಗಳು, ಕೃಷಿ ಉಪಕರಣಕ್ಕೆ ಬರುವ ಮರಗಿಡಗಳು, ಸೌದೆಗೆ ಉಪಯೋಗಿಸುವ ಮರಗಿಡಗಳು ಹಾಗೂ ದೈವಿಕ ನಂಬಿಕೆಗೆ ಒಳಪಡುವ ಮರಗಿಡಗಳು ಎಂದು ನಾಲ್ಕು ಭಾಗವಾಗಿ ಜನಪದರು ವೃಕ್ಷ ಜಾನಪದವನ್ನು ವಿಂಗಡಿಸಿಕೊಂಡಿದ್ದಾರೆ. ಪ್ರಮುಖವಾದ ಮರಗಿಡಗಳ ವಿವರಗಳನ್ನು ಗಮನಿಸುವ.

ಮುತ್ತುಗೇರಿ: ಇದು ಮುಳ್ಳಿರುವ ಗೀಡ, ಎತ್ತರವಾದದ್ದಲ್ಲ, ಆಳೆತ್ತರ ಬೆಳೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುವುದು. ಗಿಡ್ಡಗೆ ಪೊದೆಯಂತೆ ಚಾಚಿಕೊಳ್ಳುವುದು. ಇದನ್ನು ದೈವಿಕ ಗಿಡ ಮರವಾಗಿ ಭಾವಿಸುವರು. ಮುಖ್ಯವಾಗಿ ದೇವಿಗೆ ಬೆತ್ತ ಮಾಡಲು ಈ ಮರವನ್ನು ಬಳಸುವರು. ವಿಜಯನಗರದ ನೂರಾರು ದೇವಾನುದೇವತೆಗಳಿಗೆ, ದೇವಾಲಯಗಳಿಗೆ, ಗ್ರಾಮದೈವಗಳಿಗೆ ಈ ಮರದ ಕಾಂಡದಿಂದಲೆ ಬೆತ್ತ ಮಾಡಿಕೊಡಲಾಗುತ್ತಿತ್ತಂತೆ. ವಿಶೇಷವಾಗಿ ಕಾಣಲ್ಪಡುವ ಈ ಮರವನ್ನು ಯಾರೂ ಕೂಡ ಲೌಖಿಕದ ಕಾರಣಕ್ಕೆ ಕಡಿಯುವಂತಿಲ್ಲ. ವೈಯಕ್ತಿಕವಾಗಿ ಬಳಸುವಂತಿಲ್ಲ. ಸೌದೆಗೂ ಕೂಡ ಬಳಸಬಾರದು. ದೇವರ ಮರವಾದ ಮುತ್ತುಗೇರಿಯ ಕಾಂಡ ದಪ್ಪವೇನಲ್ಲ. ಬೆತ್ತದ ಕೋಲುಗಳು ಗಡುಸಾಗಿ ಗಟ್ಟಿಯಾಗಿ ಇರುತ್ತವೆ. ನೂರಾರು ವರ್ಷ ಇಟ್ಟಿದ್ದರೂ ಮುತ್ತುಗೇರೆ ಬೆತ್ತಕ್ಕೆ ಯಾವ ಹುಳುವೂ ಬೀಳದು. ಹಂಪಿಯ ಹತ್ತಾರು ನೂರಾರು ಸಾಧುಸಂತರು ಈಗಲೂ ಈ ಮುತ್ತುಗೇರೆ ಮರಕ್ಕೂ ಪೂಜೆ ಮಾಡಿ ಬೇಕಾದ ಕಾಂಡವನ್ನು ಕಡಿದುಕೊಳ್ಳುವರು.

ಕಲ್ಲತ್ತಿ ಮರ: ಬಂಡೆಗಳ ಸಂದುಗಳಲ್ಲಿ ಬೆಳೆಯುವ ಅತಿ ಪ್ರಾಚೀನ ಮರಗಳಲಿ ಇದೂ ಕೂಡ ಒಂದು. ಹಂಪೆಯ ಪಾಳು ಮಂಟಪ ಗುಡಿ ಗೋಪುರ ಬಂಡೆಯ ಸೀಳುಗಳಲ್ಲಿ ಬೇರು ಬಿಟ್ಟು ಗುಂಪಾಗಿ ಚದುರಿದಂತೆ ಬೆಳೆವ ಈ ಮರ ಕೂಡ ದೈವಿಕವಾದುದೇ. ಕಲ್ಲತಿ ಮರ ಹತ್ತಿ ಮರದ ಅತಿ ಪ್ರಾಚೀನ ರೂಪದಂತಿದೆ. ಇದರ ಎಲೆ ಹಣ್ಣು ಕಾಯಿಗಳನ್ನು ಚರ್ಮ ರೋಗಗಳಲ್ಲಿ ಅರೆದು ಹಚ್ಚಿ ಬಳಸುವರು. ಹಂಪಿಯ ಉದ್ದಕ್ಕೂ ಸಿಗುವ ಕಲ್ಲತ್ತಿ ಮರಗಳ ವಿಶೇಷ ಏನೆಂದರೆ ಇವು ನೆಲೆದ ಮೇಲೆ ಸ್ವತಃ ಮರವಾಗಿ ನಿಂತಿದ್ದನ್ನು ಎಲ್ಲೂ ಕಾಣಲಾಗದು. ಬಂಡೆಗಳ ಸಂದನ್ನು ಆಶ್ರಯಿಸಿಯೇ ಬೆಳೆಯುವುದರಿಂದ ಜನಪದರು ಈ ಮರವನ್ನು ಕಲ್ಲತ್ತಿಮರ ಎಂದು ಕರೆದಿದ್ದಾರೆ. ಇದನ್ನು ಯಾವುದೇ ಬಗೆಯಲ್ಲೂ ಯಾರೂ ತುಚ್ಛವಾಗಿ ಕಾಣಬಾರದು. ಹಾಗೆ ಕಂಡಿದ್ದೇ ಆದರೆ ಅಂತವರ ವಂಶ ಹಾಳಾಗುವುದೆಂದು ಹೇಳುವರು. ಕಲ್ಲತ್ತಿ ಮರಗಳನ್ನು ಹಂಪಿಯ ಆಶ್ರಮಗಳ ಪರಿಸರದಲ್ಲಿ ವಿಶೇಷವೆಂದು ಮಾನ್ಯಮಾಡಿ ರಕ್ಷಿಸುವರು. ಪಾಳು ಮಂಟಪಗಳಿಗಿಂತಲೂ ಜನಪದರಿಗೆ ಕಲ್ಲತ್ತಿ ಮರ ಶ್ರೇಷ್ಠ. ಕಲ್ಲತ್ತಿ ಮರವು ಶುಭ ತರುವ ಫಲಕೊಡುವ ಮರವಾಗಿ ಹಂಪಿಯ ಜನಪದರಿಗೆ ಕಂಡಿದೆ.

ಬನ್ನಿಮರ: ಇದೊಂದು ಪುರಾಣ ವೃಕ್ಷ. ಪಾಂಡವರು ವನವಾಸ ಕಾಲದಲ್ಲಿ ತಮ್ಮ ಆಯುಧಗಳನ್ನು ಬನ್ನಿಮರದಲ್ಲಿ ಬಚ್ಚಿಟ್ಟಿದ್ದರಂತೆ. ಈಗಲೂ ಹಂಪಿಯಲ್ಲಿ ಆ ಕಾರಣಕ್ಕೆ ಆಯುಧ ಪೂಜೆಯ ಕಾಲದಲ್ಲಿ ಬನ್ನಿ ಮರದ ಪೂಜೆಯನ್ನು ನೆರವೇರಿಸುವರು ’ಬನ್ನಿ ಕೊಟ್ಟು ಬಂಗಾರದಂತೆ ಬದುಕಿ’ ಎಂಬ ಗಾದೆಯೇ ಇದೆ. ಬನ್ನಿ ಮರಕ್ಕೆ ಸೀರೆ ಉಡಿಸಿ ಅದನ್ನೊಂದು ಗ್ರಾಮ ದೇವತೆಯ ಸ್ವರೂಪದಲ್ಲಿ ಪೂಜಿಸಲಾಗುವುದು. ಬನ್ನಿ ಪೂಜೆ ಮಹಾನವಮಿ ಹಬ್ಬದ ವಿಶೇಷಗಳಲ್ಲಿ ಒಂದು. ವಿಜಯನಗರದ ವಿಜಯದಶಮಿಯ ಸಂಕೇತ ಈ ಮರವಾಗಿತ್ತು. ಸಾಮ್ರಾಜ್ಯವೊಂದು ಹೀಗೆ ಒಂದು ವೃಕ್ಷವನ್ನು ಆಯ್ದುಕೊಳ್ಳುವುದು ಸರಳ ವಿಚಾರವಲ್ಲ. ವನದೇವತೆಯ ಪ್ರತಿಮೆಯನ್ನೆ ಜನಪದರು ಬನ್ನಿ ಮಹಾಂ ಕಾಳಿ ರೂಪದಲ್ಲಿ ಬದಲಿಸಿಕೊಂಡು ಬನ್ನಿ ಮರವನ್ನು ಮಾತೃ ದೇವತೆಯಾಗಿಯೆ ಪೂಜಿಸುವರು. ಶಕ್ತಿ ದೇವತೆಯಾಗಿ ಸಾಮ್ರಾಜ್ಯಗಳು ಕೂಡ ಬನ್ನಿ ಮರವನ್ನು ಭಾವಿಸಿದ್ದವು. ವೃಕ್ಷ ದೈವದ ಪ್ರಜ್ಞೆಯು ಆದಿಮವಾದದ್ದು. ಮಾತೃತ್ವದ ಆರಾಧನೆಗೆ ಬನ್ನಿ ಮರ ಒಳ್ಳೆಯ ಉದಾಹರಣೆ. ಈ ಮರವನ್ನು ಉರುವಲಾಗಿ ಬಳಸಬಾರದು. ಯಾರೂ ಕೂಡ ಅದನ್ನು ನೆಟ್ಟು ಬೆಳಸಬಾರದು. ಅದು ಸ್ವಯಂ ಶಕ್ತಿದೇವತೆಯ ರೂಪವಾದ್ದರಿಂದ ಅದು ತಂತಾನೆ ಹುಟ್ಟಿ ಬೆಳೆಯಲು ಬಿಟ್ಟುಬಿಡಬೇಕು. ಹೊಲ ಮಾಳಗಳಲ್ಲಿ ಬನ್ನಿ ಮರಗಳು ಬೆಳದರೆ ಅವನ್ನು ರಕ್ಷಿಸಿ ತಮ್ಮ ಮನೆದೈವದ ರೂಪದಲ್ಲಿ ಮರಕ್ಕೆ ಸೀರೆ ಉಡಿಸಿ ವರ್ಷಕ್ಕೊಮ್ಮೆ ಸುಗ್ಗಿಯಲ್ಲಿ ಪೂಜಿಸುವರು.

ಅರಳಿಗಿಡ : ಅರಳಿ ಮರ ದೊಡ್ಡದಾಗಿಯೆ ಹಂಪಿ ಪರಿಸರದಲ್ಲಿ ಬೆಳೆಯಬಲ್ಲದು. ಆದರೂ ಜನಪದರು ಅರಳಿ ಮರವನ್ನು ಗಿಡವಾಗಿಯೂ ಕರೆಯಬಲ್ಲರು. ಗಿಡ ಮರಗಳೆರಡರ ನಡುವೆ ಸಾಮಾನ್ಯವಾಗಿ ಜನಪದರಿಗೆ ಅಂತಹ ವ್ಯತ್ಯಾಸವೇನಿಲ್ಲ. ಅರಳಿಗಿಡ ಕೂಡ ದೈವಿಕ ಮರ, ಕಡಿದು ಬಳಸಬಾರದು. ಕಡಿದರೆ ಅಂತವರ ಆಯಸ್ಸು ಕುಗ್ಗುವುದೆಂದು ನಂಬಿಕೆ. ಅರಳಿಮರವನ್ನು ಫಲ ಸಂತಾನ ಭಾಗ್ಯಕ್ಕಾಗಿ ಹಂಪಿ ಪರಿಸರದಲ್ಲಿ ಪೂಜಿಸಲಾಗುವುದು. ಇದು ಕೂಡ ಒಂದು ಕಾಲದ ಮಾತೃ ಆಚರಣೆಯ ವೃಕ್ಷವೇ ಆಗಿತ್ತೆಂಬುದನ್ನು ಗ್ರಹಿಸಬಹುದು. ಊರ ಗ್ರಾಮ ದೈವಗಳ ಆಸುಪಾಸಿನಲ್ಲೆ ಗುಡಿಯ ಮುಂದೆಯೆ ಅರಳಿಕಟ್ಟೆ ಇರಬೇಕೆಂಬುದು ಹಂಪಿ ಜನಪದರ ಆಶಯ ಕೂಡ ಉಳಿದೆಡೆ ಇರುವಂತೆಯೆ ಇದೆ. ಅರಳಿ ಕಟ್ಟೆಯು ಪವಿತ್ರವಾದುದು. ಗ್ರಾಮಗಳ ಮುಖ್ಯ ತೀರ್ಮಾನಗಳಿಗೆ ಅರಳಿ ಮರದ ಸಾಕ್ಷಿ ಇರಲೇಬೇಕು. ಆ ಮರದ ಎದಿರು ಸುಳ್ಳು ಹೇಳುವಂತಿಲ್ಲ. ಅರಳಿ ಕಟ್ಟೆಯೇ ಒಂದು ನ್ಯಾಯ ಕಟ್ಟೆ. ಇಲ್ಲಿ ಸತ್ಯ ನ್ಯಾಯ ನೀತಿ ಆಡಿದವರನ್ನು ಅರಳಿ ಮರವು ಕಾಪಾಡುವುದೆಂದು ನಂಬಲಾಗುವುದು. ಅರಳಿಮರದ ಕಟ್ಟೆಗಳನ್ನು ಗಮನಿಸಿದರೆ ಈ ಅರಳಿ ಕಟ್ಟೆಗಳು ಗತಿಸಿ ಹೋದ ನಾಗಾರಾಧನೆಯ ಪಳೆಯುಳಿಕೆಯ ಹಾಗೆಯೂ ಕಾಣುತ್ತವೆ. ಈ ಹಿನ್ನೆಲೆಯಿಂದ ಗಮನಿಸಿದರೆ ಅರಳಿಕಟ್ಟೆಗಳು ಬೌದ್ಧ ಧರ್ಮದ ಚಟುವಟಿಕೆಗೂ ಸಂಬಂಧ ಪಡುತ್ತಿದ್ದವೇನೊ ಪ್ರಾಚೀನ ಕರ್ನಾಟಕದಲ್ಲಿ.

ಪ್ರಾಚೀನ ಕರ್ನಾಟಕದ ಮಾತೃ ಮೌಲ್ಯ ವ್ಯವಸ್ಥೆಯ ಕುರುಹುಗಳಲ್ಲಿ ಅರಳಿ ಕಟ್ಟೆಯೂ ಒಂದು. ಪ್ರವಾಸಿಗರು ಹಂಪಿ ಪ್ರದೇಶದ ಬನ್ನಿ, ಅರಳಿ, ಬೇವು, ತೆಂಗು, ಆಲ ಮುಂತಾದ ಮರಗಿಡಗಳ ಪ್ರಸ್ತಾಪವನ್ನೂ ಮಾಡುವರು. ಊರ ಮುಂದೆ ಅರಳಿಮರ ಇಲ್ಲ ಎಂದರೆ ಆ ಊರಿನ ಸ್ಥಾನಮಾನಕ್ಕೆ ಕೊರತೆ ಉಂಟಾಗುತ್ತಿದ್ದ ಒಂದು ಕಾಲವಿತ್ತು. ಅರಳಿ ಮರವು ಸಂತಾನ ಫಲ ನೀಡುವ ಮರವೂ ಹೌದು. ಅರಳಿಮರವನ್ನು ವೈಯಕ್ತಿಕವಾಗಿ ಬಳಸುವಂತಿಲ್ಲ. ಒಂದು ವೇಳೆ ಆ ಮರ ಮುಪ್ಪಾಗಿ ಉರುಳಿ ಬಿದ್ದರೆ ಅದನ್ನು ಹಾಗೇ ಬಿಟ್ಟುಬಿಡುವರು. ಅರಳಿಮರದ ಹಣ್ಣುಗಳಿಗಾಗಿ ಪಕ್ಷಿಗಳು ಅಪಾರವಾಗಿ ತುಂಬಿಕೊಳ್ಳುವವು. ವಿಶೇಷವಾಗಿ ಗೊರವಂಕ ಪಿಕಳಾರ (ಜುಟ್ಟಕ್ಕೆ), ಕುಟ್ರ, ಪಕ್ಷಿಗಳು ಅರಳಿಮರದ ಹಣ್ಣಿಗೆ ಹಾತೊರೆಯುವವು. ಮರ ಹಣ್ಣು ಬಿಟ್ಟ ಕಾಲದಲ್ಲಿ ಅದರ ಕೆಳಗೆ ಕೂಡಲಾಗದು. ಆಷ್ಟು ಪ್ರಮಾಣದಲ್ಲಿ ಅದು ಹಣ್ಣು ಬಿಟ್ಟು ಉದುರಿಸುತ್ತಿರುತ್ತದೆ. ಹಾಗಾಗಿ ಆ ಕಾಲದಲ್ಲಿ ತಾಯಿ ಫಲ ತುಂಬಿ ಹಕ್ಕಿ ಪಕ್ಷಿಗಳಿಗೆ ತಿನಿಸುತ್ತಿರುವಾಗ ನಾವು ಅಲ್ಲಿ ಹೋಗಿ ತೊಂದರೆ ಕೊಡಬಾರದು ಎಂದು ಹೇಳುವರು. ಇದೇ ಮರವನ್ನು ಅಶ್ವಥ್ಥ ಮರ ಎಂತಲೂ ಕರೆಯುವರು. ವಿಜಯನಗರ ಸಾಮ್ರಾಜ್ಯದ ಕಾಲದ ಅರಳಿಮರಗಳು ಈಗಲೂ ಅಪರೂಪಕ್ಕೆ ಹಂಪಿಯಲ್ಲಿ ಕಾಣಸಿಗುತ್ತವೆ. ಬೇರೆ ಮರಗಳಿಗೆ ಹೋಲಿಸಿದರೆ ಇಲ್ಲಿನ ಅರಳಿ ಮರಗಳು ಬೃಹತ್ತಾಗಿಯೆ ಬೆಳೆಯುತ್ತವೆ.

ಬೇವಿನ ಮರ : ಅರಳಿ ಮರದ ಜೊತೆಯೇ ಬೇವಿನ ಮರವನ್ನು ಕೂಡಿಸಲಾಗುತ್ತದೆ. ಅಶ್ವಥ್ಥಮರ ಎಂಬುದು ಪುರುಷಸೂಚಿ. ಅರಳಿ ಮರದ ಪ್ರಾಚೀನ ಫಲವಂತಿಕೆ ಆಚರಣೆಗಳನ್ನು ಗಮನಿಸಿದರೆ ಅದು ಸ್ತ್ರೀ ಸಂಕೇತವನ್ನು ಬಿಂಬಿಸುತ್ತದೆ. ಒಂದೇ ಮರಕ್ಕೆ ಹೆಣ್ಣು ಗಂಡಿನ ಎರಡೂ ಅರ್ಥ ಆರೋಪಿಸಿರುವುದು ವಿಶೇಷವೇ. ಬೇವಿನ ಮರವನ್ನು ಹೆಣ್ಣು ಎಂದು ಅರಳಿಮರವನ್ನು ಗಂಡು ಎಂದು ಗುರುತಿಸಿದ ಈ ಅರ್ಥ ಪಲ್ಲಟವು ಕುತೂಹಲಕಾರಿಯಾಗಿದೆ. ಗ್ರಾಮ ಸಮಾಜದಲ್ಲಿ ಪುರುಷಪ್ರಧಾನ ಶಕ್ತಿ ಮುಂದಾದಾಗ ಹೆಣ್ಣನ್ನು ಕಹಿಯಾದ ಮರಕ್ಕೆ ಹೋಲಿಸಿ ಆಕೆಗೆ ಆ ಮರದ ಸ್ವರೂಪವನ್ನು ಕೊಟ್ಟಿರಬಹುದು. ಅರಳಿಮರದ ಬೃಹತ್ ಸ್ವರೂಪದಲ್ಲಿ ಬೇವಿನ ಮರ ಸೊರಗಿ ಹೋಗುತ್ತದೆ. ಅಲ್ಲದೆ ಅರಳಿಮರ ಸುಲಭವಾಗಿ ತನ್ನ ಅಕ್ಕಪಕ್ಕದ ಯಾವುದೇ ಗಿಡಮರ ತಲೆ ಎತ್ತಲು ಬಿಡುವುದಿಲ್ಲ. ಪುರುಷಪ್ರಧಾನ ವ್ಯವಸ್ಥೆಯು ತಕ್ಕುದಾಗಿಯೇ ಮಾತೃ ಪ್ರಧಾನ ಸಂಕೇತವಾಗಿದ್ದ ಅರಳಿ ಮರವನ್ನು ಸ್ವಯಾರ್ಜಿತ ಗೊಳಿಸಿಕೊಂಡು ಬೇವಿನ ಮರವನ್ನು ತನ್ನ ಅಧೀನವಾಗಿಸಿಕೊಂಡಿದೆ. ಪುರುಷ ಪ್ರಕೃತಿಯ ಸಂಬಂಧವೇನೂ ಈ ಎರಡು ಮರಗಳ ಸಂಯೋಗದಲ್ಲಿ ನಡೆದಿಲ್ಲ. ಇವೆರಡೂ ಮರಗಳಿಗೂ ಮದುವೆ ಮಾಡಿಸಿ ಆ ಮೇಲೆ ಅವು ಬೆಳೆದು ಮರವಾದ ನಂತರ ಅದೇ ಅರಳಿ ಕಟ್ಟೆಯಲ್ಲೆ ಮದುವೆ ಕಾರ್ಯವನ್ನು ಕೂಡ ಜನ ಮಾಡಿಕೊಳ್ಳುತ್ತಿದ್ದರು. ಇದೆಲ್ಲವೂ ಗ್ರಾಮೀಣ ಸಮಾಜಗಳ ಗತಕಾಲದ ಚರಿತ್ರೆಯನ್ನು ಬಿಂಬಿಸುವ ವೃಕ್ಷ ವಿವರವಾಗಿದೆ. ಇದಕ್ಕೂ ಹಿಂದಿದ್ದ ನಾಗಾರಾಧನೆಯ ಚಹರೆ ಅಳಿದು ಶೇಷ ಶಯನನ ಹಾಸಿಗೆಗೆ ಸಂಬಂಧಿಸಿದ ಸಂಗತಿ ಆದದ್ದು ಕೂಡ ಅದೇ ಅರಳಿ ಮರದ ಬುಡದಲ್ಲಿ ಲೀನವಾಗಿದೆ.

ಹೀಗೆ ಅರಳಿ ಮರದ ಜೊತೆ ಬೇವಿನ ಮರವನ್ನು ಲೀನಗೊಳಿಸಿದ ಮೇಲೆ ಅರಳಿಮರದ ಘನತೆ ದೊಡ್ದದಾಗಿ ಕಾಣುವುದೇ ವಿನಃ ಬೇವಿನ ಮರದ ಅಸ್ತಿತ್ವವೇ ಕಾಣದು. ಅರಳಿಕಟ್ಟೆಯ ಸಂಬಂಧದಲ್ಲಿ ಬೇವಿನ ಮರದ ಸ್ಥಾನ ಏನೆಂದು ಹುಡುಕಿದರೆ ಜನಪದರು ಆ ಬಗ್ಗೆ ತಕ್ಕ ವಿವರ ಕೊಡಲಾರರು. ಪಿತೃಪ್ರಧಾನ ವ್ಯವಸ್ಥೆ ಮಾತೃ ಪ್ರಧಾನ ವ್ಯವಸ್ಥೆಯನ್ನು ಮರೆಸಿದ್ದರಿಂದ ಆ ವಿವರಗಳು ಹೊರ ಬರಲಾರವು. ಅರಳಿ ಮರವೇ ಬೇವಿನ ಮರದ ವಿವರಗಳನ್ನು ತಡೆಯುವಂತೆ ಅದೇ ಮುಂದಾಗಿ ಆವರಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಬೇವಿನ ಮರ ಕೂಡ ಮಾತೃತ್ವದ ಸಂಕೇತ. ಬೇವಿನಟ್ಟಿ ಕಾಳಮ್ಮ ಎಂದು ಹಳೆ ಮೈಸೂರಿನಲ್ಲಿ ಮಾದೇಶ್ವರ ಕಾವ್ಯದಲ್ಲಿ ಬರುವ ಸ್ತ್ರೀ ಮಹದೇಶ್ವರನಿಗೆ ಕಹಿಯಾಗಿ ಕಾಡುವಳು. ಸವಾಲಾಗಿ ನಿಲ್ಲುವಳು. ಆ ವಿವರ ಒಂದು ಮರೆತು ಹೋದ ಮಾತೃತ್ವದ ವೃಕ್ಷ ಸಂಕೇತವನ್ನು ಬಿಂಬಿಸಿದರೆ ತುಂಗಭದ್ರಾ ನದಿಯ ಈಚೆಗಿನ ಪರಿಸರದಲ್ಲಿ ಬೇವಿನಕಟ್ಟೆ ಅರಳಿಕಟ್ಟೆಗೆ ಭಿನ್ನವಾಗಿ ಸ್ವತಂತ್ರವಾಗಿ ಕಾಣುತ್ತದೆ. ಬೇವಿನಕಟ್ಟೆ ಮಾತೃ ಪ್ರಧಾನ ಸಂಸ್ಕೃತಿಯ ಪಳೆಯುಳಿಕೆ ಮಾತ್ರವಾಗಿದೆ. ಬೇವಿನ ಮರಕ್ಕೂ ಕೆಲವೆಡೆ ಪೂಜಿಸುವುದಿದೆ. ಬೇವಿನ ಮರವನ್ನು ಕೃಷಿ ಉಪಕರಣಗಳ ತಯಾರಿಕೆಗೆ ಬಳಸುವರು. ಗೃಹೋಪಯೋಗಿ ಮರವಾಗಿಯೂ ಬೇವಿನ ಮರ ಪ್ರಾಶಸ್ತ್ಯ ಪಡೆದಿದೆ. ಹಂಪಿ ಪರಿಸರದಲ್ಲಿ ಸಮೃದ್ಧವಾಗಿ ಬೇವಿನ ಮರಗಳು ಬೆಳೆಯುತ್ತವೆ. ಈ ಮರಗಳ ಬೀಜಗಳನ್ನು ಗೊಬ್ಬರವಾಗಿಯೂ ಬಳಸುವರು. ಇತ್ತೀಚೆಗೆ ಬೀವಿನ ಗೊಬ್ಬರ ಸಾವಯವ ಕೃಷಿಯಲ್ಲಿ ಹೆಚ್ಚು ಬಳಕೆಯಾಗುತ್ತಿದ್ದು ಬೇವಿನ ಹಿಂಡಿಯು ಲಾಭದಾಯಕವೂ ಹೌದು. ಬೇವಿನ ಎಣ್ಣೆ ಉಪಯುಕ್ತ ಕೀಟನಾಶಕವೂ ಆಗಿದೆ. ಇವೆಲ್ಲವೂ ವರ್ತಮಾನದ ಮಾರುಕಟ್ಟೆಯಲ್ಲಿ ಏನಾದರೂ ಆಗಿರಲಿ ಆದರೆ ಹಂಪಿ ಪರಿಸರವು ಬೇವಿನ ಗಿಡಮರಗಳಿಗೆ ಅತ್ಯಂತ ಪ್ರಶಸ್ತವಾದ ನೆಲೆ. ಇದರ ಅವಶ್ಯಕತೆ ಜೀವಜಾಲದ ಯಾವ ಅಗತ್ಯಕ್ಕೊ ಎಂಬುದು ನಮ್ಮ ಅರಿವಿಗೆ ಬಾರದಿರುವ ಸಂಗತಿ. ಇಷ್ಟೊಂದು ಬೇವಿನ ಮರಗಳು ಯಾಕೆ ಸಲೀಸಾಗಿ ಇಲ್ಲಿ ಬೆಳೆಯುತ್ತವೊ ಎಂಬುದಕ್ಕೆ ಪರಿಸರ ತಕ್ಕುದಾಗಿದೆ ಎಂದು ಹೇಳುವುದು ಸೂಕ್ತ ಉತ್ತರವಾಗಲಾರದು. ಹಂಪಿ ಪರಿಸರದ ತಾಪಮಾನವನ್ನು ಸಮತೋಲನದಲ್ಲಿಡಲು ಹಾಗೂ ಕೀಟಗಳಿಗೆ ಪಕ್ಷಿಗಳಿಗೆ ಯಾವುದೊ ಔಷಧೀಯ ಶಕ್ತಿಯನ್ನು ತಂದು ಕೊಡಲು ಹೇರಳವಾಗಿ ಬೆಳೆದಿವೆ ಎನಿಸುತ್ತದೆ.

ಜಂಬಿ ಮರ: ಪೊದೆಯಂತಹ ಗಿಡ್ದ ಮರವೇ ಆಗಿರುವ ಜಂಬಿ ಮರವು ದುರ್ಗಮ್ಮ, ಕಾಳಮ್ಮರ ಮರಗಳೆಂದು ಹಂಪಿಯ ಜನ ಹೇಳುವರು. ಅನಾಕರ್ಷಕವಾಗಿರುವ ಈ ಮರ ಶಕ್ತಿ ಪೂಜೆಯ ಕಾಲದಲ್ಲಿ ಹೆಚ್ಚಿನ ಮಾನ್ಯತೆ ಪಡೆದಿತ್ತೆನಿಸುತ್ತದೆ. ಈಗ ಈ ಮರಗಳೇ ಬಹಳ ಅಪರೂಪ ಎನ್ನಲಾಗುವುದು. ಬನ್ನಿ ಮರಕ್ಕೆ ದೊಡ್ಡ ಗೌರವ ಸಿಕ್ಕಿದಂತೆ ಜಂಬಿ ಮರಕ್ಕೆ ಸಿಗದಿರುವುದು ಯಾಕೆ ಎಂದು ಕೇಳಿದರೆ ಜನಪದರು ನಿಖರ ಉತ್ತರ ನೀಡಲಾರರು. ’ಅದು ಒಂದು ತಾಯಿ, ಅದಕ್ಕೂ ಪೂಜಿಸುತ್ತೇವೆ. ಎಲ್ಲ ಮರಾನೂ ಹೆಚ್ಚಿನದಾಗಿ ಕಾಣೋದಕ್ಕೆ ಆಗೋದಿಲ್ಲ’ ಎಂಬ ಅಭಿಪ್ರಾಯವನ್ನು ಉಪೇಕ್ಷೆಯಲ್ಲಿ ಹೇಳುವರು. ಈ ಮರ ಕೂಡ ಬಳಕೆಗೆ ನಿಷಿದ್ದವಾದದ್ದು. ಬೇವಿನ ಮರ ಒಂದು ಕಾಲಕ್ಕೆ ಮಾತೃ ಸಂಕೇತವಾದದ್ದು ನಂತರ ಮಾನವ ಬಳಕೆಗಾದರೂ ಯೋಗ್ಯವಾಗಿ ಬಳಕೆ ಆಯಿತು. ಜಂಬಿ ಮರ ಬೇವಿನ ಗಿಡದಷ್ಟೇ ಉಪಯುಕ್ತವಲ್ಲವಾದ್ದರಿಂದ ಜನಪದರು ಬದಲಾದ ಕಾಲದಲ್ಲಿ ಉಪೇಕ್ಷಿಸಿದ್ದಾರೆ.

ಆಲದ ಮರ : ಬೌದ್ಧ ಧರ್ಮದಲ್ಲಿ ಆಲದ ಮರ ಬುದ್ಧನ ಸಂಕೇತವಾಗಿದ್ದರೆ ಜನಪದರಲ್ಲಿ ಆಲದ ಮರ ಸಮೃದ್ದವಾದ ಸ್ತ್ರೀ ಸಂಕೇತವಾಗಿದೆ. ಆಲದ ಮರದ ಕೆಂಪನೆಯ ದಪ್ಪ ಹಣ್ಣುಗಳು ಆ ಮರಕ್ಕೆ ಜನಪದರಲ್ಲಿ ವಿಶೇಷ ಗಮನ ತರುವಂತೆ ಮಾಡಿದೆ. ಪಕ್ಷಿಗಳಿಗೆ ಪ್ರಿಯವಾದ ಮರ. ಆಲದ ಮರವನ್ನು ಸೌದೆಗೂ ಬಳಸುವರು. ಗೃಹೋಪಯೋಗಿ ವಸ್ತುಗಳಿಗೆ ಉಪಯುಕ್ತವಲ್ಲ. ಆಲದ ಮರದ ಬೀಳಲುಗಳ ಬಗ್ಗೆ ಇರುವ ಜನಪದ ಕಥೆಯ ವಿವರ ಹಂಪಿ ಪರಿಸರದಲ್ಲಿ ಕಂಡು ಬರುವುದಿಲ್ಲ.ಹಂಪಿ ಪರಿಸರದ ಆಲದ ಮರಗಳ ವಿಶೇಷ ಏನೆಂದರೆ ಅವು ಬಂಡೆಗಳ ಬಿರುಕಿನಲ್ಲೆ ಬೇರುಬಿಟ್ಟು ದೊಡ್ಡ ಮರವಾಗಿಯೆ ವ್ಯಾಪಿಸಿ ಬಿಡುವುದು. ಹಳೆ ಸಮಾಧಿಗಳು, ಬಂಡೆ ಸಂದುಗಳು ಆಲದ ಮರಗಳಿಗೆ ಅದು ಹೇಗೆ ಸೂಕ್ತವಾಗಿ ಕಂಡಿದೆಯೊ ಪರಿಸರ ತಜ್ಞರೆ ಪರಿಶೀಲಿಸಬೇಕು. ಬಯಲನ್ನು ಬಿಟ್ಟು ಕಲ್ಲು ಸಂಧುಗಳಲ್ಲಿ ಮೊಳೆತು ಬಂಡೆಗೇ ಸವಾಲಾಗಿ ತನ್ನ ಬೇರಿನ ಅತಿ ಸೂಕ್ಷ್ಮ ಮೊನೆಯಿಂದಲೆ ಭಾಗಶಃ ಒತ್ತೊತ್ತಿ ಬಂಡೆಯನ್ನೆ ಸೀಳಿ ಬಿಡುವ ಪರಿ ಪರಿಸರದ ನಿಗೂಢಗಳಲ್ಲಿ ಒಂದು. ಕಲ್ಲತ್ತಿ ಮರದಂತೆ ಆಲದ ಮರಗಳು ಕೂಡ ಇವೆಯಾದರೂ ಆಲದ ಮರ ಮೇವಿಗೂ, ಸೌದೆಗೂ ಬಳಸಲ್ಪಡುವಂತದಾಗಿವೆ. ಮರದ ಕಾಂಡ ಗಟ್ಟಿ ಅಲ್ಲವಾದ್ದರಿಂದ, ಒಣಗಿದ ಮೇಲೆ ಕುಟ್ಟೆ, ಹುಳದ ಕಾಟವಿರುವುದರಿಂದ ಮತ್ತು ಈ ಮರಗಳ ಹಲಗೆಗಳು ಮಳೆಗಾಲದಲ್ಲಿ ಉಬ್ಬಿಕೊಂಡು ಬೇಸಿಗೆಯಲ್ಲಿ ತೆಳ್ಳಗಾಗುವುದರಿಂದ ಅಷ್ಟಾಗಿ ಬಹು ಉಪಯೋಗಿಯಲ್ಲ ಅಂತೆಯೆ ಕೃಷಿ ಸಲಕರಣೆಗಳಿಗೂ ಗಟ್ಟಿ ಅಲ್ಲ.

ಕಣಗಿಲೆ ಗಿಡ: ಪೂಜೆಯ ಹೂವಿಗೆಂದೇ ತೀರ್ಮಾನಿಸಲ್ಪಟ್ಟಿರುವ ಹೂ ಮರ. ಹಂಪಿ ದೈವಿಕ ತಾಣವಾದ್ದರಿಂದ ಕಣಗಿಲೆ ಗಿಡ ಪವಿತ್ರವೆನಿಸಿದೆ. ವಿಜಯನಗರ ಸಾಮ್ರಾಜ್ಯದ ವಿಜಯದಶಮಿಯ ಪೂಜಾಲಂಕಾರಗಳ ವರ್ಣನೆಯಲ್ಲಿ ಕಣಗಿಲೆ ಹೂಗಳ ವಿವರವಿದೆ. ಧರ್ಮರಗುಡ್ಡದಲ್ಲಿ ಗತಕಾಲದ ಹೂ ಸಂಭ್ರಮವನ್ನು ನೆನಪಿಸುವಂತೆ ಬೃಹತ್ತಾಗಿ ಚಾಚಿಕೊಂಡಿರುವ ಕಣಗಿಲೆ ಮರಗಳು ಇವೆ. ಬಿಳಿ ಹಳದಿ ಮಿಶ್ರಿತ ಕಣಗಿಲೆ ಗಿಡಗಳು ಹಂಪಿ ಪರಿಸರದಲ್ಲಿ ಸಾಮಾನ್ಯವಾದರೂ ಕಂದುಗೆಂಪು ಕಣಗಿಲೆ ಗಿಡಗಳು ವಿಶೇಷವಾಗಿವೆ. ಬಿಳಿ ಕಣಗಿಲೆ ಗಿಡಗಳು ಕೂಡ ಆಕರ್ಷಕವಾಗಿವೆ. ಈ ಬಗೆಯ ಬಿಳಿ ಕಣಗಿಲೆ ಹೊರಗಿನಿಂದ ಬಂದಂತೆ ಕಾಣುವುದು. ಗ್ರಾಮದೇವತೆಯ ಹಬ್ಬಗಳಲ್ಲಂತೂ ಕಣಗಿಲೆ ಹೂಗಳು ಇದ್ದೇ ಇರಬೇಕೆಂಬಷ್ಟು ಅಗತ್ಯವೆನಿಸಿವೆ. ಗಟ್ಟಿ ಅಲ್ಲದ ಕಣಗಿಲೆ ಗಿಡಗಳು ಮರದಂತೆ ಬೆಳೆಯಬಲ್ಲವಾದರೂ ಬಲಿಷ್ಟ ಮರಗಳೂ ಅಲ್ಲ. ಹಾಗೆಯೇ ಪುಟ್ಟಗಿಡಗಳಂತೆಯೂ ಅಲ್ಲ. ಕಣಗಿಲೆ ಹೂಗಳನ್ನು ಮುಡಿಯುವಂತಿಲ್ಲ. ದೇವರಿಗೆ ಮಾತ್ರ ಅರ್ಪಿಸತಕ್ಕುದ್ದಾಗಿದೆ. ಯಾರೂ ಈ ಹೂಗಳನ್ನು ಮಾರುವಂತೆಯೂ ಇಲ್ಲ. ಗ್ರಾಮ ದೈವಗಳ ಆಚರಣೆಗಳಲ್ಲಿ ಮಾತ್ರ ವಿಶೇಷವಾಗಿ ಕಾಣಿಸಿಕೊಳ್ಳುವ ಕಣಗಿಲೆ ಬಡವರ ಹೂ. ಕೆಳಜಾತಿಯವರೇ ಹೆಚ್ಚಾಗಿ ತಮ್ಮ ಆಚರಣೆಗಳಲ್ಲಿ ಬಳಸುವರು.

ಮೇಲಿನವರು ಈ ಹೂಗಳನ್ನು ಬಳಸುವಲ್ಲಿ ಹಿಂದು ಮುಂದು ನೋಡುವರು. ಪರೋಕ್ಷವಾಗಿ ಕಣಗಿಲೆ ಕೆಳಜಾತಿಗಳ ಭಕ್ತಿಯ ಜೊತೆ ಗುರುತಿಸಿ ಕೊಂಡಿರುವಂತಿದೆ. ಈ ಕಾರಣಕ್ಕಾಗಿಯೇ ಈ ಹೂ ಎಲ್ಲ ಹೂಗಳ ನಡುವೆ ಇದ್ದು ಇಲ್ಲದ್ಲಂತಾಗಿರುವುದು. ಸಾಮಾಜಿಕ ವ್ಯವಸ್ಥೆಯ ಅಂತರ, ತಾರತಮ್ಯ, ಪೂರ್ವಾಗ್ರಹಕ್ಕೆ ಒಳಗಾದ ಹೂವುಗಳ ದೊಡ್ಡ ಪಟ್ಟಿಯೇ ಇದೆ. ಗ್ರಾಮೀಣ ಸಮಾಜದಲ್ಲಿ ಕೆಳಜಾತಿಗಳ ಗುಡಿಗಳ ಬಳಿಯೆ ಈ ಕಣಗಿಲೆ ಬೆಳೆಯುತ್ತಿದ್ದುದಿರಬೇಕು. ಈಗಲೂ ಗ್ರಾಮೀಣ ಕರ್ನಾಟಕದ ದೇವಾಲಯಗಳ ಆವರಣದಲ್ಲಿ ಕಣಗಿಲೆ ಮರಗಿಡಗಳು ಯಾವುದೊ ಕಾಲದ ಕಳಚಿದ ಕೊಂಡಿಯಂತಿರುವುದನ್ನು ಗಮನಿಸಬಹುದು. ಹಂಪಿ ಪರಿಸರದಲ್ಲಿ ಒಂದು ಕಾಲಕ್ಕೆ ಅತಿ ಮುಖ್ಯವೆನಿಸಿದ್ದಿರಬಹುದಾದ ಕಣಗಿಲೆ ಮರಗಳೀಗ ತುಂಬ ಅಪರೂಪವೆನಿಸಿವೆ. ಕಣಗಿಲೆ ಗಿಡ ನೆಟ್ಟರೆ ಪುಣ್ಯ ಎಂಬ ನಂಬಿಕೆಯೂ ಉಳಿದುಕೊಂಡಿವೆ.

ಬಿಲ್ಪತ್ರೆ ಗಿಡ: ಪ್ರಾಚೀನ ಕಾಲದ ಧಾರ್ಮಿಕ ಆಚರಣೆಗಳಿಂದಲೂ ಬಿಲ್ಪತ್ರೆ ಮರಕ್ಕೆ ದೈವಿಕ ಮಾನ್ಯತೆ ಇದೆ. ವೇದಗಳ ಕಾಲದ ಕ್ರಿಯಾವಿಧಿಯ ಆಚರಣೆಗಳಲ್ಲೆ ಬಿಲ್ಪತ್ರೆಯನ್ನು ಬಳಸಲಾಗುತ್ತಿತ್ತು. ದೇವಾಲಯಗಳು ಅಂಗಳದಲ್ಲಿ ಬಿಲ್ಪತ್ರೆ ಮರ ಇರಲೇ ಬೇಕಿತ್ತು. ಮಾತೃಸಂಸ್ಕೃತಿಯನ್ನು ಪುರುಷಪ್ರಧಾನ ವ್ಯವಸ್ಥೆ ಪೂರ್ಣವಾಗಿ ಕಳೆದುಕೊಳ್ಳಲು ಸಾಧ್ಯವಿರಲಿಲ್ಲ ಎಂಬುದನ್ನು ಬಿಲ್ಪತ್ರೆ ಮರ ಬಿಂಬಿಸುತ್ತದೆ. ಹಂಪಿಯ ಶೈವ ದೇವಾಲಯಗಳ ಒಳ ಆವರಣದಲ್ಲಿ ಈಗಲೂ ಬಿಲ್ಪತ್ರೆ ಮರಗಳಿವೆ. ದೇವಾಲಯ ಸಂಸ್ಕೃತಿಯ ಪ್ರತೀಕ ಬಿಲ್ಪತ್ರೆ ಮರವಾಗಿತ್ತು. ಪೂಜೆಗೆ ಹೇಗೊ ಹಾಗೆಯೆ ಬಿಲ್ಪತ್ರೆ ಕಾಯಿ ಅತ್ಯುತ್ತಮ ಔಷಧಿಯಾಗಿಯೂ ಬಳಸಲ್ಪಡುತ್ತದೆ. ತಲೆ ತೊಳೆದು ಕೊಳ್ಳಲು ಬಿಲ್ಪತ್ರೆ ಕಾಯಿ ಒಂದು ಕಾಲಕ್ಕೆ ಅನಿವಾರ್ಯವಾಗಿತ್ತು. ಮನೆಯ ಹಿತ್ತಿಲಲ್ಲಿ ಬಿಲ್ಪತ್ರೆ ಗಿಡವಿದ್ದರೆ ಕೇಡು ಬರುವುದಿಲ್ಲ ಎಂಬ ನಂಬಿಕೆ. ವೈಷ್ಣವ ಹಿನ್ನೆಲೆಯವರು ತಮ್ಮ ಮನೆ ಅಂಗಳದಲ್ಲಿ ತುಳಸಿಯ ಜೊತೆ ಬಿಲ್ಪತ್ರೆ ಮರವನ್ನು ಬೆಳಸುವುದಿತ್ತು. ಹಂಪಿ ಪರಿಸರದಲ್ಲೀಗ ಅಂತಹ ಗ್ರಾಮ ವಾತಾವರಣವಿಲ್ಲ. ಬಿಲ್ಪತ್ರೆ ಎಲೆಗಳನ್ನು ಪೂಜೆಯಲ್ಲೂ ಹೂ ಮಾಲೆ ಕಟ್ಟುವಲ್ಲು ಬಳಸುವರು.

ಎಕ್ಕದ ಗಿಡ: ಮಾಟ ಮಂತ್ರಗಳಲ್ಲಿ ವಿಶೇಷವಾಗಿ ಬಳಸಲ್ಪಡುವ ಮಾಂತ್ರಿಕ ಗಿಡ ಇದು. ಸ್ವೇಚ್ಛೆಯಾಗಿ ಬೆಳೆಯಲು ಬಿಟ್ಟರೆ ವಿಶಾಲವಾಗಿ ಹಬ್ಬಿ ಎತ್ತರಕ್ಕೆ ಕವಲುಗಳು ಕಡ್ಡಿಯಂತೆ ಚಾಚಿಕೊಳ್ಳಬಲ್ಲವು. ಅಮವಾಸ್ಯೆ ದಿನ ಎಕ್ಕದ ಗಿಡವನ್ನು ಪೂಜಿಸಿದರೆ ಬಯಸಿದ ಕಾರ್ಯ ಕೈಗೂಡುವುದು ಎಂಬ ವಿಶ್ವಾಸವಿದೆ. ಬಿಳಿ ಎಕ್ಕದ ಗಿಡ ಬಹಳ ಪವಿತ್ರ. ಅದರ ಬಳಿ ಯಾವತ್ತೂ ನಾಗಪ್ಪ ನೆಲೆಯೂರಿರುತ್ತಾನೆ ಎಂಬ ನಂಬಿಕೆ ಇದೆ. ಎಕ್ಕದ ಗಿಡಗಳಲ್ಲಿ ಎರಡು ವಿಧ. ಕರಿ ಎಕ್ಕ, ಬಿಳಿ ಎಕ್ಕ ಎಂದು ವಿಂಗಡಿಸುವರಾದರೂ ಎರಡೂ ಎಕ್ಕಗಳು ಅಪ್ಪಟ್ಟ ಕರಿಯೂ ಅಲ್ಲ ಬಿಳಿಯೂ ಅಲ್ಲ. ಬಿಳಿ ಎಕ್ಕ ಮನೆ ಬಳಿ ಬೆಳೆದರೆ ಅದೃಷ್ಟ. ನೀಲಿ ಮಿಶ್ರಿತ ಬಿಳಿ ಎಕ್ಕದ ಬಳ್ಳಿ ಹುಟ್ಟಿದರೆ ಅದು ಕೇಡು. ಕಿತ್ತು ಬಿಸಾಕುವುದೆ ವಾಸಿ ಎಂಬ ತಿಳುವಳಿಕೆ ಇದೆ. ಚರ್ಮದ ಗಾಯಗಳಿಗೆ ಎಕ್ಕದ ಹಾಲನ್ನು ಹಾಕುವರು. ಹಂಪಿ ಪರಿಸರದಲ್ಲಿ ಎಕ್ಕದ ಬಳ್ಳಿಗಳು ಅಪರೂಪಕ್ಕೆ ಕಂಡು ಬರುತ್ತವೆ. ಬಿಳಿ ಎಕ್ಕದ ಬುಡದಲ್ಲಿ ನಿಧಿ ಇರುತ್ತದೆ ಎಂಬ ಮೂಢನಂಬಿಕೆ ಇರುವುದರಿಂದ ದುಷ್ಟರು ಈ ಗಿಡದ ಬುಡವನ್ನೆ ಶೋಧಿಸಿ ಕಿತ್ತು ಹಾಕುವರು. ಹಳೆ ಮೈಸೂರಿನ ಗ್ರಾಮ ಪರಂಪರೆಗಳು ಎಕ್ಕದ ಗಿಡಗಳನ್ನು ಭಯಭೀತಿಯಿಂದ ಕಂಡರೆ ಹಂಪಿ ಪರಿಸರದಲ್ಲಿ ಎಕ್ಕದ ಗಿಡಗಳನ್ನು ಬೆಳಸಿ ನಿತ್ಯ ಪೂಜೆ ಮಾಡುವರು.

ಸಂಪಿಗೆ ಮರ: ಹಂಪಿಯು ದೇವಾಲಯಗಳ ನಗರವಾಗಿದ್ದರಿಂದ ದೇವಾಲಯ ಸಂಸ್ಕೃತಿಯು ಸಮೃದ್ಧವಾಗಿ ಹಿಂದೆ ಬೆಳೆದಿತ್ತು. ಈ ಕಾಲದ ಹಂಪಿಯು ಪಾಳು ಗುಡಿ ಗೋಪುರಗಳ ಆಗರ. ದೇವಾಲಯ ಸಂಸ್ಕೃತಿಯು ತನ್ನ ಪೂಜೆ ಉತ್ಸವ ಮುಂತಾದ ಕ್ರಿಯೆಗಳಿಗೆ ಮಂಗಳಕರ ಗಿಡಮರಗಳನ್ನು ದೇವಾಲಯದ ಆವರಣದಲ್ಲಿ ಬೆಳೆಸಿಕೊಳ್ಳಬೇಕಾಗಿತ್ತು. ಜನಪದರು ಕೂಡ ಅಂತಹ ಮರಗಿಡಗಳನ್ನು ಪೋಷಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂಪಿಗೆ ಮರವು ದೈವಿಕ ಮರವೂ ಆಗಿದ್ದು ಸೌಂದರ್ಯ ಪ್ರಜ್ಞೆಯನ್ನು ಹಬ್ಬಿಸುವ ಮರವೂ ಆಗಿತ್ತು. ಸುಗಂಧ ಮರಗಳ ಪಟ್ಟಿಯಲ್ಲಿ ಸಂಪಿಗೆ ಮರಕ್ಕೆ ಉನ್ನತ ಸ್ಥಾನವಿದೆ. ಗತಕಾಲದಲ್ಲಿ ಗ್ರಾಮನಾರಿಯರ ಸುಗಂಧ ವೃಕ್ಷವಾಗಿ ಪ್ರೇಮ ಕಾಮ ಪ್ರಣಯ ಭಾವನೆಗಳ ಭಾಗವಾಗಿ ಸಂಪಿಗೆ ಮರವು ಸ್ತ್ರೀ ಸಮಾಜದಲ್ಲಿ ಬೆರೆತು ಹೋಗಿತ್ತು. ಜನಪದ ಶೃಂಗಾರ ನಿರೂಪಣೆಗಳಲ್ಲಿ ಸಂಪಿಗೆಗೆ ರಾಣಿಯ ಸ್ಥಾನವೇ ಇದೆ. ಮಲ್ಲಿಗೆಯ ಕಂಪು ತಾನೇ ಮುಂದೆಂದು ಘೋಷಿಸಿಕೊಂಡರೂ ಸಂಪಿಗೆಯು ಸದ್ದಿಲ್ಲದೆ ಕಂಪು ಸೂಸುವಂತದ್ದು. ಕೆಂಡ ಸಂಪಿಗೆ ಮರ ಹಳದಿ ಸಂಪಿಗೆ ಮರ ಎರಡೂ ಕೂಡ ಸುಗಂಧವನ್ನು ಚೆಲ್ಲುವಂತವು. ದೇವರ ಮುಡಿಗಿಂತಲೂ ಭಕ್ತರ ಮುಡಿಯಲ್ಲಿಯೆ ಸಂಪಿಗೆ ರಾರಾಜಿಸುವುದು. ಸಂಪಿಗೆ ವನಗಳೇ ಹಿಂದೆ ಹಂಪಿ ಪರಿಸರದಲ್ಲಿ ಇದ್ದವಂತೆ. ತಂಪಾದ ಹವೆಯಲ್ಲಿ ಸಂಪಿಗೆ ಮರ ಬೆಳೆಯಬಲ್ಲವು. ಬೇಸಿಗೆಯ ತೀವ್ರತೆಯನ್ನು ಇವು ತಾಳಲಾರವು. ಪ್ರಿಯಕರನೇ ಸಂಪಿಗೆ ಹೂವಾಗಿಯಾದರೂ ಬಂದು ನನ್ನ ತುರುಬಿನಲ್ಲಿ ಅಡಗಿ ಕೂತುಬಿಡ ಬಾರದೇ ಎಂದು ನಲ್ಲೆಯರು ಹಾಡುತ್ತಿದ್ದುದುಂಟು. ಸಂಪಿಗೆ ಹೂ ಮುಡಿದವರನ್ನು ಈ ಕಾಲದಲ್ಲಿ ಹಳ್ಳಿ ಹುಡುಗಿ ಎಂದು ಭಾವಿಸುವರು ನಿಜ. ಒಂದು ಕಾಲಕ್ಕೆ ಸಂಪಿಗೆ ಹೂ ಪ್ರಾಚೀನ ಗ್ರಾಮ ಸಂಸ್ಕೃತಿಯ ಸೌಂದರ್ಯ ಪುಷ್ಪವಾಗಿತ್ತು. ಹೆಣ್ಣಿನ ಕೋಮಲತೆ, ಶೃಂಗಾರ, ಸುವಾಸನೆ, ಮೋಹಕ ಗುಣಗಳನ್ನೆಲ್ಲ ಸಂಪಿಗೆ ಹೂ ಮೂಲಕ ಗುರುತಿಸುವುದಿತ್ತು. ಒಟ್ಟಿನಲ್ಲಿ ಸುಗಂಧ ಹೂವಾದ ಸಂಪಿಗೆ ಮರವನ್ನು ತಾಯಿ ತವರಿಗೆ ಜನಪದ ಮಹಿಳೆಯರು ಹೋಲಿಸುವರು. ತವರು ಮನೆಯ ಹಿತ್ತಲಲ್ಲಿ ತಾವೇ ನೆಟ್ಟು ಬೆಳಸಿದ್ದ ಸಂಪಿಗೆ ಮರವನ್ನು ನೆನೆವ ಅನೇಕ ತ್ರಿಪದಿಗಳು ಹಂಪಿಯಲ್ಲೂ ಸಿಗುತ್ತವೆ. ಸಂಪಿಗೆ ಮರದಲ್ಲಿ ಮಾಯದ ಗಿಳಿಗಳು ಬಂದು ಕೂತು ಮಾತನಾಡುವ ಕಿನ್ನರ ಕಥೆಯ ವಿವರ ಅನೂಹ್ಯವಾಗಿವೆ. ಹಂಪಿ ಪರಿಸರದಲ್ಲಿ ಅಪರೂಪಕ್ಕೆ ಈಗ ಸಂಪಿಗೆ ಮರಗಳು ಕಾಣುತ್ತವೆ.

ಕೇದಿಗೆ: ಕೇದಿಗೆ ಹೂ ಪ್ರಸಿದ್ದವೇನಲ್ಲ. ಹೂವುಗಳಲ್ಲೆಲ್ಲ ಭಾಗಶಃ ಈ ಕೇದಿಗೆ ಹೂ ಅಸ್ಪೃಶ್ಯ ಹೂವಿರಬೇಕು. ಮೇಲು ಜಾತಿಯವರು ಕೇದಿಗೆ ಹೂವನ್ನು ಮುಡಿಯುವಂತಿಲ್ಲ. ಸಾಮಾನ್ಯವಾಗಿ ಕರ್ನಾಟಕದ ಉದ್ದಕ್ಕೂ ಕೇದಿಗೆ ಹೂ ಮುಡಿವ ಬಗ್ಗೆ ಹಲವು ಅಭಿಪ್ರಾಯಗಳಿವೆ. ಕೆಳ ಜಾತಿಯವರು ವಿಶೇಷವಾಗಿ ಈ ಹೂ ಮುಡಿಯುವರು. ಗುಂಪು ಗುಂಪಾಗಿ ಹಬ್ಬಿದಂತೆ ಕಾಣುವ ಈ ಕೇದಿಗೆ ಮರ ಸಾಮಾನ್ಯವಾಗಿ ಹಳ್ಳ ನದಿ ಕೆರೆ ತೊರೆಗಳ ದಂಡೆಯಲ್ಲಿ ಬೆಳೆಯುತ್ತದೆ. ದೇವರಿಗೆ ಈ ಹೂವನ್ನು ಸಲ್ಲಿಸುವಂತಿಲ್ಲ. ಪೂಜೆಗೆ ಈ ಹೂವನ್ನು ಬಳಸಬಾರದು. ಹರಿತವಾದ ಮುಳ್ಳಿನಂತೆ ಉದ್ದವಾದ ಎಲೆಗಳನ್ನು ಹೊಂದಿರುವ ಈ ಮರದಲ್ಲಿ ನಾಗರ ಹಾವುಗಳು ಇದ್ದೆ ಇರುತ್ತವೆ ಎಂದು ಹೇಳುವರು. ಕೇದಿಗೆ ಮರದ ಹೂ ಎಷ್ಟೊಂದು ಗಾಟು ಸುಗಂಧವನ್ನು ಬೀರುವುದೆಂದರೆ ಕೇದಿಗೆ ಹೂ ಬಿಟ್ಟಾಗ ಅದು ಆ ಮರದ ಆಸುಪಾಸಿನ ಸುಮಾರು ದೂರವನ್ನೆಲ್ಲ ಆವರಿಸಿರುತ್ತದೆ. ಭಾಗಶಃ ಕೇದಿಗೆ ಹೂ ಕೀಳುವಾಗ ನಾಗರ ಹಾವು ಕಚ್ಚಿ ಆ ಹೂವಿನ ಬಗ್ಗೆ ಜನ ನಕರಾತ್ಮಕ ಭಾವನೆಯನ್ನು ಹೊಂದಿರಬಹುದು. ಆದರೆ ಹೊಲೆಯರು ಮಾತ್ರ ಈ ಹೂವನ್ನು ಮುಡಿಯಬೇಕಾದ್ದೇನಿದೆ ಎಂಬುದಕ್ಕೆ ತಕ್ಕ ವಿವರ ಹಂಪಿ ಪರಿಸರದಲ್ಲಿ ಸಿಗುವುದಿಲ್ಲ. ಹಳೆ ಮೈಸೂರಿನ ಕಡೆ ಕೇದಿಗೆ ಮರದ ಹೂವಿನ ನಿಷೇಧ ಕುರಿತಂತೆ ಒಂದು ಕಥೆಯಿದೆ. ಹೊಲೆಯರ ಹುಡುಗನೊಬ್ಬ ಬ್ರಾಹ್ಮಣ ಹೆಣ್ಣು ಮಗಳನ್ನು ಪ್ರೇಮಿಸಿದನಂತೆ ಆ ಪ್ರೇಮದ ಸಿರಿಯಲ್ಲಿ ಕೇದಿಗೆ ಮರದ ವನದಲ್ಲಿ ಅವರಿಬ್ಬರು ಕೂಡಿರುವಾಗ ಕೇದಿಗೆ ಹೂವಿನ ಸುಗಂಧ ಅವರಿಬ್ಬರನ್ನೂ ಹುಚ್ಚೆಬ್ಬಿಸಿ ಆಕೆಗೆ ಕೇದಿಗೆ ಹೂ ಬೇಕೆನಿಸಿ ಕಿತ್ತು ಕೊಡಲು ಕೇಳಿದಳಂತೆ. ಹೂ ಕಿತ್ತು ಕೊಟ್ಟಿದ್ದೂ ಆಯಿತು. ಆಕೆ ಮುಡಿದಿದ್ದೂ ಆಯಿತು. ಆದರೆ ಸ್ವಲ್ಪ ವೇಳೆಯಲ್ಲೆ ಆಕೆ ಕೇದಿಗೆ ಹೂವಿನ ಮರೆಯಲ್ಲಿದ್ದ ಮಿಡಿನಾಗರದಿಂದ ಸಾಯಬೇಕಾಯಿತು. ಸುದ್ದಿ ತಿಳಿದವರು ಈತನ ಜೊತೆ ಸೇರೆ ಈ ಹೂವಿನ ಮೋಹದಲ್ಲಿ ತಮ್ಮ ಮಗಳು ಸತ್ತದ್ದರಿಂದ ಈ ಹೂವನ್ನು ಎಂದೆಂದೂ ಈ ಹೊಲೆಯರನ್ನು ಹೊರತುಪಡಿಸಿ ಯಾರೂ ಮುಡಿಯಬಾರದು ಎಂದು ಶಾಪಕೊಟ್ಟರಂತೆ. ಅಂದಿನಿಂದ ಕೇದಿಗೆ ಹೂವನ್ನು ಯಾರೂ ಮಾನ್ಯ ಮಾಡಲಿಲ್ಲವಂತೆ. ಹಳೆ ಮೈಸೂರಿನ ಕಡೆ ಕೇದಿಗೆಯನ್ನು ತಾಳೆ ಹೂ ಮರ ಎಂದು ಕರೆವರು. ಈ ಕಥೆಯು ನಿಜವಿರಲೇ ಬೇಕು. ಹೇಗೆ ಜಾತಿಧರ್ಮ ವರ್ಗ ಲಿಂಗಬೇಧಗಳು ಪರಿಸರದ ಮೇಲೂ ನಿಸರ್ಗದ ಮರಗಿಡ ಹೂ ಮುಂತಾದ ಎಲ್ಲ ಸಂಗತಿಗಳ ಮೇಲೂ ಪ್ರಭಾವ ಬೀರಿದೆ ಎಂಬುದನ್ನು ತಿಳಿಸುವಂತಿದೆ ಈ ವಿವರ.

ತಾಳೆ ಮರ: ಎಂಡ ತಯಾರಿಕೆಯಲ್ಲಿ ಈ ಮರಗಳು ಅತ್ಯುಪಯುಕ್ತವಾಗಿದ್ದವು. ಕಾಯಿಯ ನೀರು ತುಂಬ ರುಚಿಯಾದದ್ದು. ಔಷದೀಯ ಗುಣವಿರುವುದರಿಂದ ಜನ ಸೇವಿಸುವರು. ಎತ್ತರಕ್ಕೆ ಉಷ್ಣವಲಯದ ಪರಿಸರದಲ್ಲೂ ಬೆಳೆಯುವ ತಾಳೆ ಮರಗಳು ಫಲವಂತಿಕೆಯ ದೇವತೆಯನ್ನು ನೆನಪಿಸುತ್ತವೆ. ವೃಕ್ಷ ದೈವಗಳಲ್ಲಿ ತಾಳೆ ಮರವೂ ಒಂದು. ಬೇಸಿಗೆಯ ಉರಿ ಬಿಸಿಲಿಗೆ ತಾಳೆ ಮರದ ತೋಳೆಗಳು ತಂಪೆಂದು ಜನ ಸೇವಿಸುವರು. ಪ್ರಾಚೀನ ಕಾಲದಲ್ಲಿ ಬಲಿತ ತಾಳೆ ಕಾಯಿಂದ ಎಣ್ಣೆ ತಯಾರಿಸಲಾಗುತ್ತಿದ್ದರೆಂದು ಹೇಳುವುದಿದೆ. ಇದೇ ತಾಳೆ ಮರಗಳಲ್ಲಿ ದೆವ್ವಗಳು ಕೂಡ ವಾಸಿಸುತ್ತವೆ ಎಂಬ ಆರೋಪವೂ ಇದೆ. ಹಂಪಿ ಪರಿಸರವು ತಾಳೆ ಮರಗಳಿಗೆ ಸೂಕ್ತವಾದ ವಾತಾವರಣವನ್ನು ಕಲ್ಪಿಸಿದೆ. ತೆಂಗಿನ ಮರದ ಪ್ರಭೇದಗಳಲ್ಲಿ ಒಂದಾಗಿರುವಂತೆ ಕಂಡು ಬರುವ ತಾಳೆ ಮರವು ಬಹು ಉಪಯೋಗಿ ಅಲ್ಲ. ಆದರೆ ತಾಳೆ ಮರಗಳು ಒಂದು ಕಾಲಕ್ಕೆ ಆರ್ಥಿಕ ಮೂಲವೂ ಆಗಿದ್ದಂತೆ ಕಾಣುತ್ತವೆ. ತಾಳೆ ತೋಪು ಹಂಪಿ ಪರಿಸರದಲ್ಲಿ ಇದ್ದವೆಂಬುದರ ಪಳೆಯುಳಿಕೆಯಂತೆ ಈಗಲೂ ಈ ಪ್ರದೇಶಗಳ ಹೊರವಲಯಗಳಲ್ಲಿ ತಾಳೆ ತೋಪುಗಳಿವೆ. ಗುಡಿಸಲು ಕಟ್ಟಲೂ ಇದರ ಗರಿಗಳನ್ನು ಬಳಸುವರು. ಹಾಗೆಯೆ ದೊಡ್ಡ ತೊಲೆಯ ದಿಮ್ಮಿಯಾಗಿಯೂ ಈ ಮರ ಜನಪದರಿಗೆ ಉಪಯುಕ್ತ.

ಮುತ್ತುಗದ ಮರ: ಮುತ್ತುಗದ ಮರಕ್ಕೆ ರಾಮಾಯಣ ಕಾಲದ ಅಪಖ್ಯಾತಿ ಅಂಟಿದೆ. ರಾಮ ಸೀತೆಯ ಶೀಲ ಶಂಕಿಸಿ ಅವಳ ರುಂಡ ಕಡಿದು ಬಾ ಎಂದು ಆದೇಶಿಸಿದಾಗ ಲಕ್ಷ್ಮಣ ಮುತ್ತುಗದ ಮರ ಕಡಿದನಂತೆ. ಆಗ ಆ ಮರದಿಂದ ನೆತ್ತರು ಹರಿಯಿತಂತೆ. ಆ ನೆತ್ತರ ಕಲೆಯ ತೋರಿಸಿ ಲಕ್ಷ್ಮಣ ಹತ್ಯೆಯ ಪಾಪದಿಂದ ಪಾರಾದನಂತೆ. ಎಲ್ಲೆಡೆ ಕೇಳಿ ಬರುವ ಈ ಕಥೆಯು ಹಂಪಿಯ ಮುತ್ತುಗದ ಮರಗಳ ಸಂದರ್ಭದಲ್ಲೂ ಕೇಳಿಸುತ್ತವೆ. ಹಾಗಾಗಿ ಮುತ್ತುಗದ ಮರವು ಜನಪದರ ಬಾಯಲ್ಲಿ ಪಾಪಕೃತ್ಯವನ್ನು ತಡೆಯಲು ಉಪಕರಿಸಿದ ಮರವಾಗಿದೆ. ಮುತ್ತುಗದ ಮರದ ಎಲೆಗಳನ್ನು ಊಟ ಮಾಡಲು ಬಳಸುವರು. ಒಂದು ಕಾಲಕ್ಕೆ ಮುತ್ತುಗದ ಎಲೆಗಳಿಂದ ಮಾಡಿದ ಇಸ್ತ್ರಿಗಳೇ ತಟ್ಟೆಗಳಾಗಿದ್ದವು. ಭಾಗಶಃ ವಿಜಯನಗರ ಕಾಲದ ಹಂಪಿಯ ಮಹಾನಗರಿಗೆ ಈ ಮರಗಳು ಎಲೆ ಒದಗಿಸಿ ಬಹು ಉಪಕಾರಿ ಆಗಿದ್ದವೆನಿಸುತ್ತದೆ. ಹಂಪಿ ಪರಿಸರದಲ್ಲಿ ಇಂದಿಗೂ ಮುತ್ತುಗದ ಮರಗಳು ವ್ಯಾಪಿಸಿವೆ. ಕೆಲವು ಕಡೆಗಳಲ್ಲಿ ಈ ಮರಗಳು ತೋಪಿನಂತೆ ಹಬ್ಬಿವೆ. ಬಣ್ಣದ ಗೊಂಬೆಗಳ ತಯಾರಿಯಲ್ಲೂ ಮುತ್ತುಗದ ಮರಗಳ ಬಳಕೆ ಇತ್ತು. ಮೃದುವಾದ ಕಾಂಡಗಳಿಂದ ಗೊಂಬೆ ಮಾಡಲು ಸುಲಭವಾಗಿ ಬಳಸಬಹುದು.

ಉದೇದ್ ಮರ: ಹಂಪಿಯ ಬೆಟ್ಟಗುಡ್ಡಗಳಲ್ಲಿ ಸಹಜವಾಗಿ ಬೆಳೆವ ಕಾಡು ಮರ, ಶುಭದಾಯಕವಾದ ಮರ. ಅಪರೂಪಕ್ಕೆ ಮನೆಯ ಹಿತ್ತಿಲಲ್ಲಿ ಬೆಳೆಸುವುದುಂಟು. ಬೆಳಿಗ್ಗೆ ಎದ್ದು ಈ ಮರವನ್ನು ನೋಡಿದರೆ ದಿನ ಒಳ್ಳೆಯ ರೀತಿ ಆರಂಭವಾಗುವುದೆಂಬ ನಂಬಿಕೆ. ಉದಯ ಕಾಲದ ಮರ ಎಂಬ ನಂಬಿಕೆ ಇದಕ್ಕಿದೆ. ತಂಪಾದ ಮರ. ಸೌಮ್ಯ ಸ್ವರೂಪದಲ್ಲಿದೆ. ನೋಡಿದರೆ ಹಿತವಾದ ಭಾವನೆ ಬರುವುದು. ಹೀಗಾಗಿಯೆ ಜನಪದರು ಈ ಮರವನ್ನು ಸೌಮ್ಯವಾಗಿ ಭಾವಿಸಿರುವುದು. ಮನೆಯ ಸಣ್ಣ ಪುಟ್ಟ ಉಪಕರಣಗಳಲ್ಲಿ ಬಳಸುವರು. ವಿಶೇಷವಾದ ಗೌರವ ಪಡೆದಿರುವ ಈ ಮರವನ್ನು ಕಡಿದು ಉರುವಲಿಗೆ ಬಳಸುವುದಿಲ್ಲ. ಉದೇದ್ ಮರ ಇದ್ದ ಜಾಗ ಪವಿತ್ರ ಎಂದು ನಂಬುವರು. ಆದರೆ ಈ ನಂಬಿಕೆ ಆಚರಣೆಗಳನ್ನು ಸೃಷ್ಟಿಸಿಲ್ಲ. ಒಂದು ಮರದ ಬಗೆಗಿನ ನಂಬಿಕೆಗಳೇ ಕೆಲವು ಆಚರಣೆಗಳಿಗೆ ದಾರಿ ಮಾಡಬಲ್ಲವು. ಉದೇದ್ ಮರ ಪೂರ್ವ ಪ್ರಮಾಣದ ಪ್ರತ್ಯೇಕ ಆಚರಣೆಗಳನ್ನು ಜನಪದರಿಂದ ರೂಪಿಸಿಕೊಂಡಿಲ್ಲ. ಭಾಗಶಃ ಈ ಮರದ ಬಗೆಗಿನ ಭಾವನೆಗಳು ಬೆಳಗಿನ ಜಾವದ ಶುಭ್ರ ಮನಸ್ಥಿತಿಗೆ ಮಾತ್ರ ಸಾಕೆನಿಸಿರಬಹುದು. ಹಂಪಿ ಪರಿಸರದಲ್ಲಿ ಉದೇದ್ ಮರ ನಿರಾತಂಕವಾಗಿದೆ. ಜನಪದರು ಈ ಮರಗಳ ಮೇಲೆ ವಕ್ರದೃಷ್ಟಿ ಬೀರಿಲ್ಲ.

ನಿದ್ದೆ ಮರ: ಸಂಜೆ ಆಗುತ್ತಿದ್ದಂತೆ ತನ್ನ ಬಿಡಿಯಾದ ಎಲೆಗಳನ್ನೆಲ್ಲ ಮಡಿಚಿಕೊಂಡು ಗಪ್ಪಾದಂತೆ ಕಾಣುವ ಮರವೇ ಜನಪದರ ಪರಿಭಾಷೆಯಲ್ಲಿ ನಿದ್ದೆ ಮರ. ನಿದ್ದೆ ಮಾಡಲು ಮರ ಹಾಗೆ ಕಣ್ಣು ಮುಚ್ಚಿದಂತೆ ಎಲೆಗಳನ್ನು ಮುಚ್ಚಿಕೊಳ್ಳುತ್ತದೆ ಎಂದು ಹೇಳುವರು. ಈ ಮರದ ಸೌಮ್ಯತೆಯಿಂದಾಗಿಯೇ ಜನಪದರು ಅದನ್ನುವಿಪರೀತ ಕಡಿದು ಬಳಸಲು ಮುಂದಾಗಿಲ್ಲ. ಈ ಮರ ನಿದ್ದೆಗೆ ಇಳಿಯುವಾಗ ಅಂದರೆ ಸಂಜೆ ವೇಳೆ ಕಡಿಯಬಾರದು ಎಂದು ಹೇಳುವರು. ಮರದ ಜೀವ ನಿದ್ದೆಯಲ್ಲಿರುವಾಗ ಅದನ್ನು ಕೊಲ್ಲುವುದು ಪಾಪ. ಅದರಿಂದ ಮರ ಕಡಿದವರನ್ನು ಕೂಡ ನಿದ್ದೆಯಲ್ಲಿ ಕೊಲ್ಲವರು ಎಂಬ ಭಯವಿದೆ. ಉರುವಲಿಗೆ ಬಳಸುವರು. ಹಂಪಿಯ ಕುರುಚಲು ಕಾಡಿನ ಲಕ್ಷಣವನ್ನು ಹೆಚ್ಚಿಸುವಲ್ಲಿ ಈ ಮರವೂ ಸಹಕರಿಸಿದೆ. ನಿದ್ದೆ ಮರವು ಮಳೆ ಮರದ ಹೋಲಿಕೆಯನ್ನು ಪಡೆದಿದೆ. ಆದರೆ ಬಹಳ ಎತ್ತರಕ್ಕೇನು ಬೆಳೆಯುವುದಿಲ್ಲ.

ಹತ್ತಿ ಮರ: ಹತ್ತಿಯ ಹಣ್ಣು ಬಡಪಾಯಿ ಜನಪದರ ಹಣ್ಣುಗಳಲ್ಲಿ ಒಂದು. ಕಲ್ಲತ್ತಿ ಮರದ ಸಹೋದರಿ ಇದು. ಮೈ ತುಂಬ ಹಣ್ಣು ಬಿಡುವುದು. ಹಣ್ಣು ಕೆಂದುಗೆಂಪಿನಲ್ಲಿ ಸುಂದರವಾಗಿರುತ್ತವೆ. ಈ ಹಣ್ಣನ್ನು ನಡೆತೆಗೆಟ್ಟ ಹೆಣ್ಣಿಗೆ ಹೋಲಿಸುವರು. ’ಮೇಲೆಲ್ಲ ಥಳಕು ಒಳಗೆಲ್ಲ ಹುಳುಕು’ ಎಂಬ ಗಾದೆಯನ್ನು ಹತ್ತಿ ಹಣ್ಣಿನ ಹಿನ್ನೆಲೆಯಲ್ಲಿ ಕಟ್ಟಲಾಗಿದೆ. ಹತ್ತಿ ಹಣ್ಣಿನ ಒಳಗೆ ಅತ್ಯಂತ ಸಣ್ಣ ಹುಳುಗಳು ಸೇರಿ ಅಲ್ಲೇ ಬೆಳೆದು ತಮ್ಮ ಮುಂದಿನ ದಾರಿ ಕಂಡುಕೊಳ್ಳುವುದು ನಿಸರ್ಗ ಕ್ರಮ. ದನಕರು ಕುರಿ ಮೇಕೆಗಳಿಗೆ ಈ ಮರ ತಾಯಂತೆಯೇ ಹಣ್ಣು ನೀಡುವ ಮರವಾಗಿದೆ. ಪಶು ಆಹಾರಗಳಲ್ಲಿ ಹತ್ತಿ ಹಣ್ಣು ಮುಖ್ಯವಾಗಿದೆ. ಹತ್ತಿ ಮರ ಟೊಳ್ಳಾದ್ದರಿಂದ ಮನೆ ಬಳಕೆಯ ವಸ್ತುಗಳಿಗೆ ಬಳಸುವುದಿಲ್ಲ. ಹಂಪಿಯ ಪರಿಸರ ಹತ್ತಿ ಮರಗಳಿಗೆ ಸೂಕ್ತವಾಗಿದೆ. ಊರ ಮುಂದೆ ಒಂದು ಹತ್ತಿ ಮರ ಇರಲೇಬೇಕೆಂಬ ಪ್ರಾಚೀನ ಗ್ರಾಮ ಸಮಾಜದ ನಂಬಿಕೆ ಈಗ ಇಲ್ಲ. ಹತ್ತಿಮರ ಫಲ ಸಮೃದ್ಧಿಯ ಸಂಕೇತವಾಗಿಯೂ ಕಂಡಿತ್ತು. ಹತ್ತಿಮರ ನೆಟ್ಟು ಬೆಳೆಸಿದರೆ ಪುಣ್ಯ ಎಂದು ಹಿರಿಯರು ಹೇಳುತ್ತಿದ್ದುದನ್ನು ಈಗಿನ ಜನಪದ ಕೇವಲ ನೆನಪಿಸಿಕೊಳ್ಳುತ್ತದೆ ಅಷ್ಟೆ. ಪಶುಪಕ್ಷಿಗಳಿಗೆ ಆಹಾರ ನೀಡುವ ಹತ್ತಿಮರ ನಿಸರ್ಗದ ಯಾವುದೊ ಸಮತೋಲನವನ್ನು ಕಾಯುವಂತೆ ಕಾಣುತ್ತದೆ. ಹತ್ತಿಮರ ಹೂ ಬಿಡುವುದಿಲ್ಲ. ಆದರೆ ಹತ್ತಿ ಮರ ಹೂ ಬಿಡುವುದು ಎಂದೊ ಒಮ್ಮೆಗೆ. ಅದನ್ನು ನೋಡುವುದು ಮಹಾಪುಣ್ಯ ಎಂದು ಹೇಳುವರು. ಜನಪದರ ನಿಸರ್ಗಪ್ರಜ್ಞೆಯು ದೈವಿಕ ನೆಲೆಯಲ್ಲೆ ಬೆಳೆದಿರುವುದರಿಂದ ಇಂತಹ ನಂಬಿಕೆಗಳು ಸಹಜ.

ಬಸರಿ ಮರ: ಬಸುರಿ ಹೆಂಗಸಿನ ಜೊತೆ ಈ ಮರವನ್ನು ಗುರುತಿಸಲಾಗುವುದು. ಹಳೆ ಮೈಸೂರಿನ ಸೀಮೆಯಲ್ಲೂ ಈ ಮರವಿದೆ. ಆಲದ ಮರದಂತೆಯೂ ಅರಳಿ ಮರದಂತೆಯೂ ಕಾಣುವ ಈ ಮರ ಅವೆರಡರ ನಡುವಿನ ಸಂಬಂಧಿ ಎಂದೂ ಹೇಳಬಹುದು. ಯಾರಿಗೂ ಬೇಡವಾದ ಹೆಣ್ಣೊಬ್ಬಳು ಗರ್ಭಿಣಿಯಾಗಿ ಹೊರಹಾಕಲ್ಪಟ್ಟು ಕೊನೆಗೆ ಊರಾಚೆ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಳಂತೆ. ಅಂದಿನಿಂದ ಆ ಮರಕ್ಕೆ ಬಸರಿ ಮರ ಎಂಬ ಹೆಸರಾಯಿತಂತೆ. ನಡೆದ ಘಟನೆಯೇ ಆಗಿರಬೇಕು. ಈ ಘಟನೆ ಎಲ್ಲೊ ಒಂದು ಮೂಲೆಯಲ್ಲಿ ನಡೆದಿರಬಹುದಾದರೂ ಇದರ ಕಥೆ ಮಾತ್ರ ವಿಶಾಲ ಕರ್ನಾಟಕದ ವ್ಯಾಪ್ತಿವರೆಗೂ ಹಬ್ಬಿರುವುದು ಕುತೂಹಲಕಾರಿಯಾಗಿದೆ. ಮಾತೃಪ್ರಧಾನ ಫಲವಂತಿಕೆಯ ಮರಗಳ ಕಥೆಯ ನಡುವೆ ಈ ಕಥೆಯು ಪುರುಷಪ್ರಧಾನ ದೌರ್ಜನ್ಯದ ಕಥೆಯನ್ನು ಅತ್ಯಂತ ಮೌನದಲ್ಲಿ ನಿರೂಪಿಸುತ್ತಿದೆ. ಬಾಯಿ ಬಿಟ್ಟು ಹೇಳಿದರೆ ಕಥೆಯಲ್ಲ. ಬಾಯಿ ಮುಚ್ಚಿ ಕೂತು ಬಿಡುವುದೂ ಒಂದು ಕಥೆಯೆ. ಆ ಅರ್ಥದಲ್ಲಿ ಬಸರಿ ಮರದ ಹೆಸರ ಮರೆಯಲ್ಲಿರುವ ಅಮಾಯಕ ಹೆಣ್ಣುಮಗಳು ತನ್ನ ಮೇಲಾದ ಅನ್ಯಾಯವನ್ನು ಮರವೊಂದರ ರಂಬೆಗೆ ಬಿಗಿದು ಹೋಗಿರುವುದನ್ನು ಇಂತಹ ನೆಲೆಯಲ್ಲೂ ಕಂಡುಕೊಳ್ಳಬಹುದು. ಹಂಪಿ ಪರಿಸರದಲ್ಲಿ ಬಸರಿ ಮರಗಳು ಕಾಣಸಿಗುತ್ತವೆ. ಬೇರೆ ಮರಗಳಿಗೆ ಹೋಲಿಸಿದರೆ ಈ ಪ್ರದೇಶದಲ್ಲಿ ಬಸರಿ ಮರಗಳು ಎತ್ತರವಾಗಿಯೆ ಬೆಳೆದಿವೆ. ಜನಪದರು ಈ ಮರದಿಂದ ಯಾವ ಗೃಹೋಪಯೋಗಿ ವಸ್ತುಗಳನ್ನು ಮಾಡುವುದಿಲ್ಲ. ಸೌದೆಗೆ ಸಲೀಸಾಗಿ ಬಳಸುವರು. ವಿಜಯನಗರ ಸಾಮ್ರಾಜ್ಯದ ಕಾಲದ ಬಸರಿ ಮರಗಳು ಈಗಲೂ ಹಂಪಿಯಲ್ಲಿ ಕಾಣಸಿಗುತ್ತವೆ. ಕಳೆದ ವರ್ಷ ಸುರಿದ ಬಾರಿ ಮಳೆ ಗಾಳಿಯಿಂದ ಐದು ನೂರು ವರ್ಷಗಳಷ್ಟು ಹಳೆಯ ಮರಗಳು ಸಾಕಷ್ಟು ಉರುಳಿದವು.

ತುಗ್ಗಲಿ ಗಿಡ: ಆದಿ ಶಿಲಾಯುಗದ ಜನರ ಗಿಡವೇ ಇದಾಗಿರಬೇಕೇನೊ ಎಂಬ ಅನುಮಾನ ಈ ಮರವನ್ನು ನೋಡಿದಾಗ ಬರುತ್ತದೆ. ಹಳೆ ಮೈಸೂರಿನ ಕಡೆ ಈ ಗಿಡವನ್ನು ಚುಜ್ಜಲಿ ಮರ ಎನ್ನುವರು. ಹಿತ್ತಲುಗಳಲ್ಲಿ ಹೊಲಗಳ ತೆವರಿಗಳಲ್ಲಿ ಇದು ಬೆಳೆಯುವುದು. ಕೆಲವೊಮ್ಮೆ ಗ್ರಾಮದೇವತೆಗಳ ಗುಡಿಗಳ ಆಸುಪಾಸಿನಲ್ಲು ಬೆಳೆವುದು. ಗುಡ್ಡಗಾಡುಗಿಡವೇ ಹೌದು. ಆದರೆ ಸುಂದರ ಹೂಗಳನ್ನು ಬಿಡುತ್ತದೆ. ಬಿಳಿ ಹಳದಿ ಮಿಶ್ರಿತ ಹೂಗಳು ಮನಸೂರೆಗೊಳ್ಳುತ್ತವೆ. ಸೌದೆಗಾಗಿ ಈ ಮರದ ರೆಂಬೆ ಕೊಂಬೆಗಳನ್ನು ಹೆಚ್ಚಾಗಿ ಬಳಸುವರು. ರೆಂಬೆ ಕೊಂಬೆಗಳು ಸಾಮಾನ್ಯವಾಗಿ ವಿ ಆಕಾರದಲ್ಲಿ ಟಿಸಿಲೊಡೆದಿರುವುದರಿಂದ ಹೊರೆಯನ್ನು ಕೂರಿಸಲು ತಕ್ಕುದಾಗಿದೆ. ಹಳ್ಳಿಯ ಚಿತ್ರಗಳಲ್ಲಿ ನೆನಪಾಗಿ ಉಳಿಯುವ ಈ ಮರ ಹಂಪಿ ಪರಿಸರದಲ್ಲಿ ಹೇರಳವಾಗಿವೆ.

ಆರಿಗಿಡ: ಬಹಳ ಗಟ್ಟಿಯಾದ ಮರ. ಕಬ್ಬಿಣದ ಕಂಬಕ್ಕೆ ಈ ಮರದ ಕಾಂಡವನ್ನು ಹೋಲಿಸುವರು. ಕೃಷಿ ಸಲಕರಣೆಗಳಲ್ಲಿ ಇದರ ಬಳಕೆ ಹೆಚ್ಚು. ಯಾವ ಹುಳುಗಳೂ ಈ ಮರಕ್ಕೆ ಬೀಳಲಾರವು. ರೆಂಬೆ ಕೊಂಬೆಗಳು ಆರಿಗಿಡದಲ್ಲಿ ಮುಖ್ಯವಲ್ಲ. ನೇರವಾಗಿ ಸಣ್ಣ ಕಂಬದಂತೆ ಬೆಳೆವ. ಈ ಮರದ ಒಂದೇ ಕಾಂಡವು ಎಲ್ಲ ಶಕ್ತಿಯನ್ನು ತನ್ನಲ್ಲೆ ತುಂಬಿಕೊಂಡಿರುತ್ತದೆ. ನೊಗ, ಎತ್ತಿನ ಬಂಡಿ ಮುಂತಾದವನ್ನು ಮಾಡಲು ಅತ್ಯುಪಯುಕ್ತವಾಗಿದೆ. ಇದೇ ಗಿಡವನ್ನು ಅರಗಿನ ಗಿಡ ಎಂತಲೂ ಕರೆಯುವರು.

ಶಿರ್ಸುಲ ಮರ: ಈ ಬಗೆಯ  ಹೆಸರು ಯಾಕೆ ಎಂದು ಕೇಳಿದರೆ ’ನಿನ್ನ ಸಿರಾ ಕಡೀದೆ ಬಿಡೋದಿಲ್ಲ’ ಎಂದು ಮನುಷ್ಯರಿಗೆ ಹೇಳುತ್ತದಂತೆ. ಹಾಗಾಗಿ ಈ ಮರ ಇನ್ನೂ ಗಿಡವಾಗಿರುವಾಗಲೆ ಕಡಿದು ಬಿಸಾಡುವರು. ಉರುವಲಿಗೆ ಹೆಚ್ಚು ಬಳಸುವರು. ದೆವ್ವಗಳ ಮರ ಎಂದೂ ಕರೆವರು. ಬೆಳಿಗ್ಗೆ ಎದ್ದಾಗ ಈ ಮರದ ಮುಖ ನೋಡಬಾರದು ಎನ್ನುವರು. ಇದರ ತಳದಲ್ಲಿ ಕೂತು ಉಣ್ಣಬಾರದು. ಇದರ ನೆರಳು ದುಷ್ಟಶಕ್ತಿಗೆ ಮಾತ್ರ ತಕ್ಕುದಾದುದು. ಇದಕ್ಕೆ ಯಾವ ದೈವಿಕ ಗೌರವವೂ ಇಲ್ಲ. ನೋಡಲು ಈ ಮರ ಬಾಗೇ ಮರದಂತೆ ಕೊಂಚ ಮಳೆ ಮರದಂತೆಯೂ ಕಾಣುವುದು. ವಿಶಾಲ ಮರವಾಗಲು ಇದನ್ನು ಬಿಡುವುದಿಲ್ಲ. ಮರಕ್ಕೆ ಯಾವ ರೋಗ ಬಂದರೂ ತಡೆಯಬಲ್ಲಂತದು. ಹಂಪಿಯ ಬೆಟ್ಟಗುಡ್ಡಗಳಲ್ಲಿ ಕಾಣಸಿಗುವ ಮರ. ಹಿಂದೆ ಶವಸಂಸ್ಕಾರದ ಚಟ್ಟವನ್ನು ತಾಯಾರಿಸಲು ಈ ಮರದ ಕಟ್ಟಿಗೆಯನ್ನು ಮಾತ್ರ ಬಳಸಬೇಕೆಂಬ ನಂಬಿಕೆ ಜನಪದರಲ್ಲಿತ್ತು. ಈಗ ಹಳೆಯ ಆ ನಂಬಿಕೆಗಳು ಸಡಿಲವಾಗಿದ್ದು ಕೃಷಿ ಉಪಕರಣಗಳಲ್ಲಿ ಬಳಸಲಾಗುತ್ತದೆ.

ತೆರೇದ ಗಿಡ: ವನಕೆ ಮಾಡಲು ಈ ಮರದ ಕಾಂಡವನ್ನು ಬಳಸುವರು. ಪುಟ್ಟ ಗಿಡ ಮರವೆ. ಬಲಿಷ್ಟವಾಗಿ ಹರಡಿಕೊಳ್ಳದ ಮುಳ್ಳು ಮರ. ಪೊದೆಗಳ ನಡುವೆ ಬೆಳೆಯುವುದು. ಮೇಕೆಗಳು ಮಾತ್ರ ಇದರ ಎಲೆ ಚಿಗುರನ್ನು ಕೊಂಚ ತಿನ್ನಬಲ್ಲವು. ಯಾರೂ ತನ್ನನ್ನು ಮುಟ್ಟಬಾರದು ಎಂಬಂತೆ ಬಲವಾದ ಕೊಕ್ಕೆ ಮುಳ್ಳುಗಳನ್ನು ಹೊಂದಿದೆ. ಇದರ ಬಳಿ ಸುಮ್ಮನೆ ಹೋದರೂ ಸಾಕು ಬಟ್ಟೆ ಹಿಡಿದು ಎಳೆಯುವುದು ಎಂಬ ನಂಬಿಕೆ ಇದೆ. ಈ ಮರದ ಮುಳ್ಳುಗಳು ತಟ್ಟನೆ ಬಟ್ಟೆಗೊ ಚರ್ಮಕ್ಕೊ ನಾಟಿ ಹರಿದುಬಿಡಬಲ್ಲವು. ಹೀಗಾಗಿ ಈ ಮರದ ಸಹವಾಸ ಸರಿಯಲ್ಲ ಎಂಬ ಭಾವನೆ ಇದೆ. ಆದರೆ ಉಪಾಯವಾಗಿ ಇದರ ರೆಕ್ಕೆಗಳು ಕಡಿದು ಗಟ್ಟಿಯಾದ ಕಾಂಡವನ್ನು ವನಕೆ ಮಾಡಲು ಬಳಸುವರು. ಹಾಗೆಯೇ ಇದನ್ನೆ ವನಕೆ ಮರ ಎಂತಲೂ ಕರೆಯುವರು. ಗಟ್ಟಿಯಾದ ಯಾವುದಾದರೂ ಮನೆ ಬಳಕೆಯ ವಸ್ತುಗಳ ತಯಾರಿಕೆಯಲ್ಲೂ ಉಪಯುಕ್ತವಾಗಿದೆ. ಹಂಪಿ ಪರಿಸರದಲ್ಲಿ ಈ ಗಿಡ ವ್ಯಾಪಕವಾಗಿದ್ದು ಬೆಟ್ಟಗುಡ್ಡಗಳಲ್ಲಿ ಹಬ್ಬಿದೆ. ಮಡ್ಡಿಮರ ಎಂಬ ಇನ್ನೊಂದು ಉಪಯುಕ್ತ ಗಿಡವಿದ್ದು ಇದರಿಂದ ಮುದ್ದೆ ತಿರುವುವ ಕೋಲನ್ನು ಮಾಡಿಕೊಳ್ಳುವರು. ಹಿಂದೆ ಇದೇ ಗಿಡದಿಂದಲೂ ನಾಡ ಬಂದೂಕನ್ನು ತಯಾರಿಸಲಾಗುತ್ತಿತ್ತು.