ಪ್ರಾಣಿ ಪಕ್ಷಿ ಸಸ್ಯಗಳ ಹಾಗೆಯೆ ಕೀಟಗಳು ಕೂಡ ಮಾನವರ ಬದುಕನ್ನು ರೂಪಿಸುವಲ್ಲಿ ಪರೋಕ್ಷವಾಗಿ ಉಪಕರಿಸಿವೆ. ವಕ್ಕಲು ಸಂಸ್ಕೃತಿಯ ವಿವಿಧ ಬೆಳೆಗಳಿಗೆ ಕೀಟಗಳು ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನು ನಿಸರ್ಗದ ಭಾಗವಾಗಿ ಮಾಡಿವೆ. ನಿಸರ್ಗದ ಸೃಷ್ಟಿಯಲ್ಲಿ ಹುಳ ಉಪ್ಪಟ್ಟೆ ಕೀಟಾದಿಗಳಿಗೆ ಮಹತ್ವದ ಸ್ಥಾನವಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ ಜೀವಜಾಲ ಎಲ್ಲವನ್ನು ಸಮನಾಗಿಯೆ ಸೃಷ್ಟಿಸಿರುತ್ತದೆ. ಹುಲ್ಲು ಕಡ್ಡಿಯೂ ಒಂದು ಶಕ್ತಿ ಎಂದು ಜನ ನಂಬುವುದು. ಇಂತಹ ನೆಲೆಯಿಂದಲೇ, ಹುಳ ಉಪ್ಪಟ್ಟೆಗಳೇ ವೈವಿಧ್ಯ ಸಂಖ್ಯೆಯಲ್ಲಿ ಹೆಚ್ಚಿರುವುದು. ಪ್ರಾಣಿ ಪಕ್ಷಿಗಳನ್ನು ಸುಲಭವಾಗಿ ಹೆಸರಿಸಬಹುದು. ಕೀಟ ಲೋಕ ಸಂಕೀರ್ಣವಾದುದು. ನಮ್ಮ ಜೊತೆಯೇ ಇದ್ದರೂ ನಾವು ಅವುಗಳ ಬಗ್ಗೆ ಏನನ್ನೂ ತಿಳಿದುಕೊಳ್ಳಲಾರದಷ್ಟು ಕೊರತೆ ಹಾಗೇ ಉಳಿದಿರುತ್ತದೆ. ಮನೆಯ ಒಳಗೆ ಬಂದು ಹಾರಾಡಿ ಹೋಗುವ ಹುಳು ಉಪ್ಪಟ್ಟೆ ಚಿಟ್ಟೆಗಳ ಬಗ್ಗೆ ತಕ್ಕ ಮಾಹಿತಿಯೆ ನಮಗಿರುವುದಿಲ್ಲ. ಕೀಟಗಳ ಜೀವನ ಕ್ರಮವನ್ನು ಅಭ್ಯಾಸ ಮಾಡಿ ಅವುಗಳು ಹೇಗೆ ಜೀವ ಪರಿಸರದಲ್ಲಿ ಬದುಕಿವೆ ಎಂದು ನಿಖರವಾಗಿ ಹೇಳುವ ವಿಜ್ಞಾನಿಗಳು ಕೀಟಲೋಕದ ವಿಸ್ಮಯಗಳನ್ನು ಸಮರ್ಥವಾಗಿ ಮಂಡಿಸುತ್ತಾರೆ. ಪಕ್ಷಿ ವಿಜ್ಞಾನಿಗಳೂ ಹಾಗೆಯೆ ಖಚಿತ ವೈಜ್ಞಾನಿಕ ತರ್ಕ ಶೋಧದಲ್ಲಿ ಪಕ್ಷಿಗಳ ಜೀವನವನ್ನು ತಿಳಿಸುವರು. ಸಸ್ಯ ವಿಜ್ಞಾನಿಯಂತು ಒಂದೊಂದು ಸಸ್ಯಗಳ ಭಿನ್ನತೆಯನ್ನು ನಿರ್ಧರಿಸಿ ಅವು ಹೇಗೆ ನಿಸರ್ಗದಲ್ಲಿ ಅಸ್ತಿತ್ವರೂಪಿಸಿ ಕೊಂಡಿವೆ ಹಾಗು ಹೇಗೆ ಮನುಷ್ಯ ಲೋಕದ ಸಂಬಂಧ ಅವುಗಳಿಗೆ ಸಾಧ್ಯವಾಗಿದೆ ಎಂಬುದನ್ನು ವಿಶ್ಲೇಷಿಸಿ ತಿಳಿಸುವರು. ಜಲಚರಗಳ ವಿಜ್ಞಾನಿಯೂ ಇದೇ ಹಾದಿಯಲ್ಲಿದ್ದರೆ ಭೋಗೋಳ ಶಾಸ್ತ್ರಜ್ಞರು ಕೂಡ ತಮ್ಮ ವೈಜ್ಞಾನಿಕ ಹಾದಿಯಲ್ಲಿ ಜೀವಜಾಲದ ಅಸ್ತಿತ್ವವನ್ನು ವಿವರಿಸುತ್ತಾರೆ.

ಜೀವಜಾಲವನ್ನು ವಿಶ್ಲೇಷಿಸುವ ಪ್ರತಿಯೊಬ್ಬರೂ ಚಾರ್ಲ್ಸ್ ಡಾರ್ವಿನ್ನನ ವಿಕಾಸವಾದದ ನೆಲೆಯಿಂದಲೇ ತಮ್ಮ ನಿರೂಪಣೆಗಳನ್ನು ಆರಂಭಿಸಿ ಉನ್ನತ ತಿಳುವಳಿಕೆಯ ಧ್ಯಾನದಲ್ಲಿ ಬಹಳ ದೂರ ಹೋಗಿ ಚಿಂತಿಸುವರು. ಆ ಮೂಲಕ ಭೂಮಿಯ ಮೇಲಿನ ಎಲ್ಲರ ಅಸ್ತಿತ್ವದ ವಿಕಾಸದ ಅನೇಕ ಕೊಂಡಿಗಳನ್ನು ಹುಡುಕುವರು. ಕೀಟ ಲೋಕದ ಸಂಬಂಧಕ್ಕೂ ಮಾನವ ಲೋಕದ ಸಂಬಂಧಗಳಿಗೂ ಯಾವ ಬಗೆಯ ಒಪ್ಪಂದಗಳಾಗಿವೆ ಎಂಬುದು ಅಪರಿಚಿತವಾಗಿಯೆ ಉಳಿದಿರುವ ವಿಚಾರ. ಜನಪದರು ಹುಳು ಉಪ್ಪಟ್ಟೆ ಕೀಟಾದಿಗಳ ಬಗ್ಗೆ ಹೇಳುವ ಅಂಶಗಳನ್ನು ಮುಂದಿಟ್ಟುಕೊಂಡು ಹಂಪಿ ಪರಿಸರದ ಕೀಟ ಜಾನಪದವನ್ನು ವಿಶ್ಲೇಷಿಸಲು ಸಾಧ್ಯ. ಜನಪದ ಕೀಟ ವಿಜ್ಞಾನಿಗಳು ಜೀವನಾನುಭವದಲ್ಲಿ ಕಂಡ ಸತ್ಯವನ್ನೆ ನಿಸರ್ಗದ ಸತ್ಯವೆಂದು ಭಾವಿಸುವರು. ವಕ್ಕಲು ಮಕ್ಕಳು ಕೀಟ ಲೋಕವನ್ನು ಉಪೇಕ್ಷಿಸಿ ಬದುಕುವಂತಿರಲಿಲ್ಲ. ಬೆಳೆ ತಿನ್ನಲು ಬರುವ ಕಾಡು ಪ್ರಾಣಿಗಳನ್ನು ಎದುರಿಸಿದಷ್ಟು ಸುಲಭವಾಗಿ ಕೀಟಗಳನ್ನು ಹೊಡೆದೋಡಿಸಲು ಸಾಧ್ಯವಿರಲಿಲ್ಲ. ಮಣ್ಣಿನ ಒಳಗೇ ಅಡಗಿರುವ ಹುಳುಗಳು ಯಕಶ್ಚಿತ್ ಎನಿಸಿದರೂ ಅವು ಮಾನವರ ಶಕ್ತಿಯನ್ನು ಮೀರಿಸುವಂತಿವೆ. ಇವತ್ತಿಗೂ ಬೆಳೆಗೆ ಬೀಳುವ ಹಲವಾರು ನುಸಿ ಹುಳಗಳನ್ನು ನಾಶಪಡಿಸಲು ಸಾಧ್ಯವಿಲ್ಲದ ರೈತ ಆತ್ಮಹತ್ಯೆಗೆ ಒಳಪಡಬೇಕಾದಷ್ಟರ ಮಟ್ಟಿಗೂ ಪರೋಕ್ಷವಾಗಿ ಬಲಿಷ್ಟವಾಗಿವೆ. ಗತಕಾಲದ ವಕ್ಕಲುತನದಲ್ಲಿ ಮತ್ತಿನ್ನೆಷ್ಟು ಕೀಟಬಾದೆಗಳಿದ್ದವೊ ಅವನ್ನೆಲ್ಲ ವಕ್ಕಲು ಸಮುದಾಯಗಳು ಹೇಗೆ ಹದ್ದು ಬಸ್ತಿಗೆ ತಂದುಕೊಂಡವೊ ಎಂಬುದು ಕುತೂಹಲಕಾರಿಯಾಗಿದೆ. ಬಹುಶಃ ನಿಸರ್ಗಸ್ನೇಹಿ ಬೇಸಾಯದಿಂದಾಗಿ ಆ ಕೀಟಗಳು ಸಮತೋಲನದಲ್ಲಿರಲು ಸಾಧ್ಯವಾಗಿರಬಹುದು. ಡಾರ್ವಿನ್ ತನ್ನ ವಿಕಾಸವಾದದಲ್ಲಿ ಎಲ್ಲೆಲ್ಲಿ ಹೆಚ್ಚಾಗಿ ಕೀಟಗಳು ಹೇರಳವಾಗಿದ್ದವೊ ಅದಕ್ಕೆ ತಕ್ಕಂತೆಯೆ ಅವುಗಳನ್ನು ತಿನ್ನುವ ಪ್ರಾಣಿ ಪಕ್ಷಿಗಳು ಕೂಡ ವಿಪುಲವಾಗಿ ಬೆಳೆದು ನೈಸರ್ಗಿಕ ಸಮತೋಲನಕ್ಕೆ ಬೇಕಾದ ಜೀವನೋಪಾಯಗಳು ಸಾಧ್ಯವಾಗಿವೆ ಎಂಬುದನ್ನು ವೈವಿಧ್ಯತೆಯ ನಡುವೆಯೇ ನಿಯಂತ್ರಣ ಸ್ವರೂಪವನ್ನು ವಿವರಿಸಿದ್ದಾರೆ. ಉಷ್ಣವಲಯದ ಪರಿಸರದ ಕೀಟಗಳು ಬಲವಾದ ಪ್ರತಿರೋಧ ಶಕ್ತಿಯನ್ನೆ ಪಡಿದಿರುತ್ತವೆ. ಹಂಪಿಯ ಪರಿಸರದಲ್ಲಿ ಹುಳು ಉಪ್ಪಟ್ಟೆಗಳು ಮಳೆಗಾಲದಲ್ಲಿ ವಿಪರೀತ ಹೆಚ್ಚುತ್ತವೆ.

ಕೀಟಗಳ ಬಗೆಗಿನ ಜನಪದ ಜ್ಞಾನ ವಿಶೇಷವಾಗಿ ಕೃಷಿಪ್ರಧಾನ ಸಮಾಜದ ಸಂಬಂಧಗಳಿಂದ ವ್ಯಕ್ತವಾಗುತ್ತದೆ. ನಿಸರ್ಗದ ಮಾನವ ಸಂಬಂಧಗಳ ಕೊಂಡಿಗಳನ್ನು ದೈವಿಕವಾಗಿ ಪರಿಚಯಿಸುವ ಸ್ವಭಾವ ಆದಿಮವಾದದ್ದು. ಸೃಷ್ಠಿಯಲ್ಲಿ ಮಾನವ ಒಬ್ಬನೇ ಬದುಕಿರಲು ಸಾಧ್ಯವಿಲ್ಲ ಎಂಬ ಸತ್ಯಕ್ಕೆ ನಿಸರ್ಗವೇ ಸಾಕ್ಷಿ. ಕೀಟಗಳ ಬಗೆಗಿನ ತಿಳುವಳಿಕೆಯು ಜೀವ ಪರಿಸರವನ್ನು ಗ್ರಹಿಸಿರುವ ರೀತಿಯನ್ನು ಬಿಂಬಿಸುತ್ತದೆ. ಮಾನವರ ಜೊತೆಗಿನ ಸಹ ಸಂಬಂಧಿಯಾದ ಕೀಟಗಳು ಅನೇಕ ಬಗೆಯ ನೈಸರ್ಗಿಕ ಪಾಠಗಳನ್ನು ಕಲಿಸಿವೆ. ಎಲ್ಲ ಬಗೆಯ ಕೀಟಾದಿಗಳನ್ನು ಮಾನವೀಕರಣ ಗೊಳಿಸಿರುವ ಸ್ವಭಾವವು ಸರ್ವಚೇತನದ ಮೂಲ ಒಂದೇ ಎಂಬ ನಂಬಿಕೆಯಿಂದ ಬಂದುದಾಗಿದೆ. ಜೀವಜಾಲ ಜಾನಪದ ವಿಕಾಸ ಪಥದಲ್ಲಿ ಮಾನವ ಮತ್ತು ನಿಸರ್ಗದ ಜೈವಿಕ ಒಪ್ಪಂದವನ್ನು ನಿರೂಪಿಸುತ್ತದೆ. ಹಾಗೆಯೆ ಅಂತಹ ಸಂಬಂಧಗಳನ್ನು ದೈವಿಕವಾಗಿ ಆಚರಿಸುತ್ತದೆ. ಕೀಟ ಜಾನಪದವು ವಿಶೇಷವಾಗಿ ವಕ್ಕಲು ಸಂಸ್ಕೃತಿಯ ಪ್ರಜ್ಞೆ ಜನಪದರ ಜೀವನ ಪ್ರೀತಿಯ ಪ್ರತೀಕ. ಎಲ್ಲ ಜೀವಿಗಳಲ್ಲೂ ಜೀವವಿದೆ ಎಂಬ ನಂಬಿಕೆಯನ್ನು ಕೀಟಗಳಿಗೂ ಅನ್ವಯಿಸುವುದರಿಂದ ಅಖಂಡವಾಗಿ ಜೀವಜಾಲ ಎಲ್ಲವೂ ನಿಸರ್ಗದ ಒಂದೇ ತೊಟ್ಟಿಲಲ್ಲಿ ಬೆಳೆದು ಬಂದಿದೆ ಎಂಬುದನ್ನು ನಿರೂಪಿಸುತ್ತದೆ. ಕೀಟಗಳ ಬಗೆಗಿನ ಜಾನಪದವು ಕೃಷಿ ಜಾನಪದದ ಒಂದು ಭಾಗವೂ ಹೌದು. ಕೆಲವು ಸಮುದಾಯಗಳು ಕೀಟಗಳನ್ನು ಭಕ್ಷಿಸುತ್ತವೆ. ಇದು ಅಪರಾಧವೇನಲ್ಲ. ದೊಡ್ಡ ಆನೆಗಳನ್ನೆ ತಿಮಿಂಗಿಲಗಳನ್ನೆ ತಿಂದು ತೇಗುವ ಮಾನವ ಸಮಾಜಗಳಲ್ಲಿ ಕೀಟ ಹುಳ ಉಪ್ಪಟ್ಟೆಗಳು ಆಹಾರ ಧ್ಯಾನಗಳನ್ನು ತಿನ್ನುವುದು ತಪ್ಪಾಗಲಾರದು. ಆಹಾರಗಳ ಅವಿಷ್ಕಾರಗಳಲ್ಲಿ ಮನುಷ್ಯ ಯತ್ನಗಳು ಸಾವಿರಾರು ದಾರಿಗಳನ್ನು ಹುಡುಕಿರುವುದು ಜೀವಜಾಲದ ಬೇರೆ ಬೇರೆ ಸಂಬಂಧಗಳನ್ನೆ ಹೇಳುತ್ತಿವೆ. ಎಲ್ಲ ಪರಿಸರಗಳಲ್ಲೂ ಈ ಬಗೆಯ ದಾರಿಗಳು ನಿರಂತರವಾಗಿ ಸಾಗಿ ಬಂದಿವೆ. ಹಂಪಿ ಪ್ರದೇಶವೂ ಇದರಿಂದ ಹೊರತಾದುದೇನಲ್ಲ. ಇಲ್ಲಿನ ಪರಿಸರದಲ್ಲಿ ಕಂಡುಬರುವ ಕೀಟ ಲೋಕವನ್ನು ಕೆಳಗಿನಂತೆ ಪಟ್ಟಿ ಮಾಡಬಹುದು.

ಕಕ್ಕೆ ದುಂಬಿ, ಗೌರಿಹುಳ, ಮಿಡತೆ ಜೀರುಂಡೆ, ಚಿಟ್ಟೆ, ದುಂಬಿ, ಸಗಣಿ ಹುಳ, ಕುಂಬಾರುಳ, ನುಸಿಹುಳ, ಬೆಂಕಿ ರೋಗದ ಹುಳ, ಕರೆ ಹುಳ, ರಂಗೋಲಿ ಹುಳ, ಕಿರೀಟದ ಹುಳ, ವಾಸ್ನೆಹುಳ, ಸೀಮೆಣ್ಣೆ ಹುಳ, ಚಿಕ್ಕಾರೆ ಹುಳ, ಬಿಳಿರೆಕ್ಕೆ ದಾಮೆ ಹುಳ, ಇಸುಬಿನ ಹುಳ, ಕಂಬಳಿಹುಳ, ಗೊದ್ದ, ಬಸವನ ಹುಳ, ಬಿಳಿಉಣ್ಣೆ ಹುಳ,ಗೊಣ್ಣೆ ಹುಳ, ಕರೆ ಹುಳ, ಮರಳೆ, ಮಳೆ ಹುಳ, ಪತಂಗ, ಜೇನು ಹುಳ, ಹೂಸುಳ, ಜೀರಂಬೆ, ಸುಳಿಕೊರಕನ ಹುಳ, ಗೆದ್ದಲು ಹುಳ, ಚುಕ್ಕಿ ಹುಳ, ಕಡಜ, ಕರಿಹೇನು, ಬಿಳಿಹೇನು ಹುಳ, ಇವಿಷ್ಟು ಮುಖ್ಯವಾಗಿ ಕಂಡು ಬರುವ ಹುಳು ಉಪ್ಪಟ್ಟೆಗಳು. ಇವುಗಳ ಬಗ್ಗೆ ದೀರ್ಘ ವಿವರಗಳಿಲ್ಲ. ಕನಿಷ್ಟ ವಿವರಗಳು ಮಾತ್ರ ಕಂಡು ಬರುತ್ತವೆ.

ಕಕ್ಕೆ ದುಂಬಿ ಎಲ್ಲ ಬಯಲು ಹುಲ್ಲುಗಾವಲು ಪ್ರದೇಶಗಳಲ್ಲಿ ಕಂಡುಬರುತ್ತದೆ. ತೊಗರಿ ಬೆಳೆಗೆ ಇದು ಉಪಕಾರಿ. ಪರಾಗಸ್ಪರ್ಷ ಮಾಡುವ ಮೂಲಕ ಕಾಳು ಕಟ್ಟಲು ಅವಕಾಶ ಮಾಡುತ್ತದೆ. ಮಕ್ಕಳು ಇದನ್ನು ಹಿಡಿದು ಆಟ ಆಡುವರು. ವಾಲಿ ಸುಗ್ರೀವರನ್ನು ರಾವಣನ ತಾಯಿ ಕಕ್ಕೆ ದುಂಬಿ ಮಾಡಿ ತೊಟ್ಟಿಲಿಗೆ ಕಟ್ಟಿದ್ದಳಂತೆ. ಅಪಾಯಕಾರಿ ಕೀಟಗಳಲ್ಲ. ಹಿಡಿದರೆ ದ್ರವ ಸ್ರವಿಸಿ ಬಿಡಿಸಿಕೊಳ್ಳುತ್ತವೆ. ಮಕ್ಕಳು ದಾರಕಟ್ಟಿ ಆಡಿಸುವರು. ವಕ್ಕಲು ಕಾಲದ ಹೊಲಗಳಲ್ಲಿ ಕಕ್ಕೆ ದುಂಬಿಗಳು ರಾರಾಜಿಸುತ್ತಿರುತ್ತವೆ. ಹೊಲದಲ್ಲಿ ಕಕ್ಕೆ ದುಂಬಿ ಹಾರಾಡಿದರೆ ಒಳ್ಳೆಯದು ಎಂಬ ನಂಬಿಕೆ. ಗೌರಿ ಹುಳ ಮಳೆಗಾಲದ ಮೊದಲ ಮಳೆಗಳ ವೇಳೆ ಭೂಮಿಯ ಒಳಗಿನಿಂದ ಹೊರಬರುತ್ತವೆ. ಗೌರಮ್ಮನ ಹೆಸರಿನಿಂದ ಈ ಹುಳವನ್ನು ಕರೆಯುವರು. ಗೌರಿಯೇ ಈ ವೇಷದ ಹುಳುವಾಗಿ ಬರುವಳು ಎನ್ನುವ ಕಥೆಯಿದೆ. ಪಾಂಡವರ ಹುಳ ಎಂತಲೂ ಕರೆಯುವರು. ಬಹಳ ಸುಂದರ ಹುಳ, ವೆಲ್ ವೆಟ್ ಬಟ್ಟೆಯಂತೆ ನುಣುಪು ಮೈ, ಕಡು ಕೆಂಪು ಬಣ್ಣದ್ದು. ನೆಲದಲ್ಲಿ ಹರಿದಾಡುವುದೇ ಒಂದು ಚೆಂದ. ಮಕ್ಕಳು ಹಿಡಿದು ಆಟವಾಡುವರು. ಧರ್ಮರಾಯ ಎಲೆ ಆಡಿಕೆ ಜಗಿದು ಉಗಿದಾಗ ಉಂಟಾದ ತಾಂಬೂಲದ ಕೆಂಪಿನಿಂದ ಇವು ಹುಟ್ಟಿದವೆಂತಲೂ ಹೇಳುವರು. ಅತ್ಯಂತ ಸುಂದರವಾದ ಈ ಗೌರಿ ಹುಳುಗಳು ಕೆಲವು ದಿನ ಮಾತ್ರ ಕಂಡು ಮತ್ತೆ ಮಾಯವಾಗಿ ಬಿಡುತ್ತವೆ. ಸಂತಾನೋತ್ಪತ್ತಿಯ ಕಾಲಕ್ಕೆ ಹಾಗೆ ಭೂಮಿಯ ಆಳದಿಂದ ಬಂದು ಮತ್ತೆ ಭೂಮಿಯ ಒಳಕ್ಕೆ ಹೋಗಬಹುದು ಎಂದು ಅಂದಾಜು ಮಾಡಬಹುದು. ಗೌರಿ ಹುಳ ಹೊಲದಲ್ಲಿ ಹೆಚ್ಚಾಗಿ ಕಂಡಷ್ಟು ಉತ್ಪತ್ತಿ ಹೆಚ್ಚುವುದು ಎಂಬ ನಂಬಿಕೆ ಇದೆ. ಈ ಹುಳುಗಳನ್ನು ಯಾರೂ ಸಾಯಿಸುವುದಿಲ್ಲ. ಮಕ್ಕಳು ಆಟ ಆಡಿದ ಮೇಲೆ ಗೌರಿ ಹುಳಗಳನ್ನು ಬಿಟ್ಟುಬಿಡುವರು.

ಮಿಡತೆಗಳಲ್ಲಿ ಹತ್ತಾರು ಬಗೆಗಳಿವೆ. ಜನಪದರು ಹಿಡಿಯಾಗಿ ಅವನ್ನೆಲ್ಲ ದೊಡ್ಡ ಚಿಕ್ಕ ಮಿಡತೆ ಎಂದು ಗುರುತಿಸುವರು. ಹಸಿರು ಮಿಡತೆ, ಕೆಂಚು ಮಿಡತೆ, ಮುಳ್ಳು ಮಿಡತೆ, ಕಾಯಿಕೊರಕ ಮಿಡತೆ ಮುಂತಾದ ಸ್ವರೂಪಗಳಲ್ಲಿ ಮಿಡತೆಗಳನ್ನು ಗುರುತಿಸುವರು. ಮಿಡತೆಗಳೆಲ್ಲವೂ ಬಾಧೆ ನೀಡುವಂತವಲ್ಲ. ಇಡೀ ಬೆಳೆಗಳನ್ನೆಲ್ಲ ತಿಂದು ಮುಗಿಸುವ ಮಿಡತೆಗಳು ಹಂಪಿ ಪರಿಸರದಲ್ಲಿಲ್ಲ. ಹಸಿರು ಮಿಡತೆಗಳೂ ಅಪಾಯಕಾರಿಯಲ್ಲ. ಮಿಡತೆಗಳ ವೈವಿಧ್ಯವನ್ನು ಗಮನಿಸಿದರೆ ಹಂಪಿ ಪರಿಸರದಲ್ಲಿ. ಏನಿಲ್ಲವೆಂದರೂ ಇವುಗಳ ಪ್ರಭೇದಗಳ ಸಂಖ್ಯೆಯು ಮೂವತ್ತಕ್ಕಿಂತಲೂ ಮಿಗಿಲಾಗಿದೆ. ಹಸಿರು ಮೇದು ಹಸಿರನ್ನೆ ಕಕ್ಕುತ್ತಿರುತ್ತವೆ. ಹಿಡಿದರೆ ಹಸಿರು ರಸ ಸ್ರವಿಸುತ್ತವೆ. ಇವುಗಳ ದೊಡ್ಡ ಹಿಂಗಾಲುಗಳು ಹರಿತವಾದ ಮುಳ್ಳುಗಳನ್ನು ಹೊಂದಿವೆ. ಚಂಗನೆ ಜಿಗಿದು ಹಾರಲು ಹಿಂಗಾಲುಗಳನ್ನು ಬಳಸುತ್ತವೆ. ಮಿಡತೆಗಳು ಪಕ್ಷಿಗಳಿಗೆ ಬಹಳ ದೊಡ್ಡ ಆಹಾರ. ಹಂಪಿಯ ವಿವಿಧ ಹಕ್ಕಿಗಳಿಗೆ ಮಿಡತೆಗಳು ರಸಗವಳವೇ ಇರಬೇಕು. ಕೆಲವೊಮ್ಮೆ ಉಡ ಮುಸಿಯ ಮುಂಗೂಸಿಗಳು ಮಿಡತೆಗಳನ್ನು ಹಿಡಿದು ತಿನ್ನುತ್ತವೆ. ಈ ಮಿಡತೆಗಳಲ್ಲಿ ಸಕ್ಕರೆ ಗೋಪಿ ಎನ್ನುವ ದೊಡ್ಡ ಕಾಲುಗಳ ಮೀಸೆಗಳಿರುವ ಹಸಿರು ಮಿಡತೆಯೊಂದಿದೆ. ಇದು ಸಾಮಾನ್ಯವಾಗಿ ಮನೆಯ ಹಿತ್ತಿಲು ಅಂಗಳದಲ್ಲೂ ನೋಡಬಹುದು. ಮಳೆಗಾಲದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. ಇದರ ಮೂಲ ಹೆಸರು ಸಂಸ್ಕೃತದಲ್ಲಿ ಶರ್ಕರ ಗೋಪಿ ಎಂದೇ ಇರುವುದು. ಈ ಭಾಗದ ಆಡುನುಡಿಯಲ್ಲಿ ಇದು ಸಕ್ಕರೆ ಗೋಪಿ ಆಗಿ ಮಾರ್ಪಟ್ಟಿದೆ. ಜನಪದರು ಇದನ್ನು ಶ್ರೀಕೃಷ್ಣನ ಪ್ರತಿರೂಪವೆಂತಲೂ ಭಾವಿಸುವರು.

ಮರಳೆ ಮಿಡತೆ ಜಾತಿಯ ಇನ್ನೊಂದು ಹುಳ. ಮಿಡತೆಯಂತೆಯೇ ಇದ್ದರೂ ಇದು ಹುಲ್ಲು ಕಡ್ಡಿಯೊ ಯಾವುದೊ ದುರ್ಬಲ ಕಡ್ಡಿಯೊ ಇರಬೇಕೆಂದು ಕೊಂಡರೆ ಅದು ಕಡ್ಡಿ ಮಿಡತೆ ಆಗಿರುತ್ತದೆ. ಮರಳೆ ಎಂತಲೂ ಕರೆಯುವರು. ಎಲೆ ಮಿಡತೆ ಎಂಬ ಇನ್ನೊಂದು ಬಗೆಯಿದೆ. ಹಸಿರು ಎಲೆಯಂತೆಯೆ ಕಾಣುವುದು. ಹಕ್ಕಿಗಳಿಗಂತೂ ಎಲೆಮಿಡತೆ ಬಲುರುಚಿ. ತೊಟ್ಟಿಲು ಮಿಡತೆ ಎಂತಲೂ ಮರಳೆಯನ್ನು ಕರೆಯುವರು. ಈ ಮಿಡತೆ ಮನೆಗೆ ಬಂದರೆ ಶುಭವಂತೆ. ಮಕ್ಕಳು ಸತ್ತಾಗ ಅವು ಮರಳೆ ಆಗಿ ಹುಟ್ಟಿ ಬಂದಿರುತ್ತವೆ ಎಂಬ ಕಲ್ಪನೆಯಿದೆ. ಹಾಗೆಯೆ ಮರಳೆ ಬಂದರೆ ಅದನ್ನು ಗೌರವಿಸಿ ಹೊರಗೆ ಕೊಂಡೊಯ್ದು ಬಿಡುವರು. ಕೊಲ್ಲಬಾರದು. ಅದು ಒಂದು ಮನುಷ್ಯ ಜೀವಿ ಎಂದೇ ಕರೆಯುವರು. ಮಕ್ಕಳ ಫಲ ಕೂಡ ಅವುಗಳ ಆಗಮನದಿಂದಾಗುವುದೆಂಬ ವಿಶ್ವಾಸವಿದೆ. ಜೀರುಂಡೆಗಳ ದನಿ ಕೇಳದವರಿಲ್ಲ. ಹಂಪಿ ಪರಿಸರದಲ್ಲಿ ತರಾವರಿ ಜೀರುಂಡೆಗಳಿವೆ. ರಾತ್ರಿ ವೇಳೆ ಜೀರುಂಡೆ ಸದ್ದು ಸಾಮಾನ್ಯ ಆದರೆ ಮಳೆಗಾಲದ ಆರಂಭದಲ್ಲಿ ಮೊದಲಿನ ಮಳೆಗಳಲ್ಲಿ ಜೀರುಂಡೆಗಳ ನಿರಂತರ ಜೀರ್ ದನಿಯು ಸಾಕಪ್ಪ ಎನಿಸುವ ಮಟ್ಟಿಗೆ ಕೇಳಿಸುತ್ತಲೇ ಇರುತ್ತದೆ.

ಮಲೆನಾಡಿನ ಅಥವಾ ಪಶ್ಚಿಮ ಘಟ್ಟಗಳ ಜೀರುಂಡೆಗಳ ನಿರಂತರ ಜೀರ್ ದನಿಗೆ ಹೋಲಿಸಿದರೆ  ಉಷ್ಣವಲಯದ ಜೀರುಂಡೆಗಳ ಸದ್ದು ಹಿತವಾಗಿಯೇ ಇರುತ್ತದೆ. ದೊಡ್ಡ ಪೊದೆಗಳಲ್ಲಿರುವ ಹಂಪಿಯ ಜೀರುಂಡೆಗಳು ಅವ್ಯಾಹತವಾಗಿ ಜೀರ್ ಗರೆಯುತ್ತಲೆ ಇರುತ್ತವೆ. ಒಂದು ಕಳ್ಳಿ ಮರೆಯಲ್ಲಿ ಕೂಗು ಆರಂಭಿಸಿತೆಂದರೆ ನೂರಾರು ಜೀರುಂಡೆಗಳು ನಿರಂತರವಾದ ಸದ್ದಿನಿಂದಲೇ ಇಡೀ ಆವರಣವನ್ನು ಕೊರೆಯುತ್ತಿರುತ್ತವೆ. ಕಣ್ಣಿಗೆ ಇವು ಕಾಣವುದೇ ಇಲ್ಲ. ಪಕ್ಕದಲ್ಲೇ ಎಲ್ಲೋ ಜೀರ್ ದನಿ ಜೀರ್ ಗರೆಯುತ್ತಲೆ ಇರುತ್ತದೆ. ಇದು ಕೂಡ ಮಳೆಗಾಲದ ಜೀರುಂಡೆ. ಕಳ್ಳಿ ಜೀರುಂಡೆ ಎಂತಲೂ ಕರೆಯುವರು. ಮಳೆಗಾಲದಲ್ಲಿ ಮರಗಳ ರೆಂಬೆ ಕೊಂಬೆಗಳ ತೊಗಟೆಗೆ ಅಂಟಿಕೊಂಡಂತೆ ಜೀರ್ ದನಿ ಗರೆಯುವ ಜೀರುಂಡೆಗಳನ್ನು ಮಳೆ ಜೀರುಂಡೆ ಎನ್ನುವರು. ಉಳಿದ ಕಾಲದಲ್ಲಿ ಇವು ಕೇಳಿಬರುವುದಿಲ್ಲ. ಕೆಲವೊಮ್ಮೆ ಮರಗಳಲ್ಲಿರುವ ಜೀರುಂಡೆಗಳ ಹಿಡಿದು ಮಕ್ಕಳು ಅವಕ್ಕೆ ಕಾಟ ಕೊಡುವುದುಂಟು. ಜೀರುಂಡೆಗಳು ಎಷ್ಟು ಹೊತ್ತು ಜೀರ್ ದನಿಗರೆದರೂ ಜನಪದರು ಬೇಸರಿಸುವುದಿಲ್ಲ. ಅದು ಅವುಗಳ ಕರ್ಮ ಎನ್ನುವರು. ಜೀರುಂಡೆಗೆ ಸಾಮ್ಯವಿರುವ ಜೀರಂಗಿ ಎನ್ನುವ ಕೀಟವೂ ಇದೆ. ಇವು ಹಸಿರು ಮತ್ತು ಕೆಂಪು ಬಣ್ಣಗಳಲ್ಲಿರುತ್ತವೆ. ಎರಡೂ ಒಂದೇ ಪ್ರಭೇದಕ್ಕೆ ಸೇರಿದ ಭಿನ್ನ ಕೀಟಗಳು ಪರಂಪರಾಗತವಾಗಿ ಮಕ್ಕಳು ಇವುಗಳನ್ನು ಹಿಡಿದು ದಾರ ಕಟ್ಟಿ ಹಾರಿಸುವ ಆಟ ಆಡುತ್ತವೆ. ಇವುಗಳಲ್ಲಿ ಹಸಿರು ಜೀರಂಗಿಗಳ ರೆಕ್ಕೆಗಳನ್ನು ಬಯಲಾಟದ ಕಿರೀಟಗಳ ಅಲಂಕಾರಿಕ ವಸ್ತುವನ್ನಾಗಿ ಬಳಸಲಾಗುತ್ತಿತ್ತು.

ಚಿಟ್ಟೆಗಳು ನೂರಾರು ತರ. ಜನಪದರು ಹಿಡಿಯಾಗಿ ಚಿಟ್ಟೆಗಳನ್ನೆಲ್ಲ ದೇವರ ಸೃಷ್ಠಿ ಎಂದು ನಂಬುವರು. ಪಕ್ಷಿಗಳಂತೆ ಚಿಟ್ಟೆಗಳು ಹಾರುವುದು ಬದುಕುಳಿಯಲು ದೇವರು ತೋರಿರುವ ದಾರಿ ಎಂಬ ನಂಬಿಕೆ ಇದೆ. ಪಶುಪಾಲಕ ಸಮುದಾಯಗಳು ತಮ್ಮ ದನಕರುಗಳ ಬದುಕಿನಲ್ಲೆ ಚಿಟ್ಟೆಗಳನ್ನೇನು ಮರೆತಿಲ್ಲ. ಕಂಬಳಿ ಹುಳುವೇ ಚಿಟ್ಟೆಯಾಗಿ ಬರುವುದೆಂಬ ತಿಳುವಳಿಕೆ ಅವರಿಗೂ ಗೊತ್ತು. ಆದರೆ ಕೆಲವೊಂದು ಕಂಬಳಿ ಹುಳುಗಳು ಕೆಲ ಕಾಲದ ತನಕ ಬರಿಯ ಹುಳುವಾಗಿಯೆ ಕಂಡಿರುತ್ತವೆಯಾದರೂ ಚಿಟ್ಟೆ ಜಾತಿಗೆ ಸೇರಿದ ಕಂಬಳಿ ಹುಳುಗಳೆಲ್ಲ ಚಿಟ್ಟೆಯಾಗಿಯೇ ಹಾರಿ ಹೋಗುತ್ತವೆ. ಚಿಟ್ಟೆಗಳು ನಿಸರ್ಗದ ಸುಂದರ ಹೂಗಳೆಂತಲೂ ಭಾವಿಸುವುದಿದೆ. ಕವಿಗಳೂ ಹೀಗೆಯೇ ಕಾವ್ಯಕಟ್ಟಿರುವ ಸೌಂದರ್ಯ ಭಾವವಿದೆ. ಪತಂಗವನ್ನು ಚಿಟ್ಟೆ ಎಂದೂ ಕರೆಯುವರು. ಆನೆ ಚಿಟ್ಟೆ, ಹುಲಿಚಿಟ್ಟೆ, ಹಕ್ಕಿಚಿಟ್ಟೆ, ಕಣ್ಣುಚಿಟ್ಟೆ, ಕರಿಚಿಟ್ಟೆ, ನೀಲಿಚಿಟ್ಟೆ, ಹಳದಿ ಚಿಟ್ಟೆ, ಸಣ್ಣ ಚಿಟ್ಟೆ, ಎಮ್ಮೆ ಚಿಟ್ಟೆ, ಕೊಡತಿ ಚಿಟ್ಟೆ, ಮಳೆ ಚಿಟ್ಟೆ, ಮೈಸೂರು ಚಿಟ್ಟೆ, ಕೆಂಪ್ ಚಿಟ್ಟೆ, ಎಲೆ ಚಿಟ್ಟೆ, ಹೂ ಚಿಟ್ಟೆ ಎಂದೆಲ್ಲ ಚಿಟ್ಟೆಗಳನ್ನು ಅವುಗಳ ಬಣ್ಣ  ಮತ್ತು ಆಕಾರದಿಂದ ಗುರುತಿಸುವರು. ಪತಂಗವನ್ನು ರಂಗುರಂಗಿನ ಹೆಣ್ಣುಗಳಿಗೆ ಹೋಲಿಸುವುದಿದೆ. ಮಕ್ಕಳು ಚಿಟ್ಟೆ ಹಿಡಿದು ಸುಖ ಪಡುವುದು ಎಲ್ಲೆಡೆ ಇರುವ ಮಕ್ಕಳ ಸುಖವೇ ಪಕ್ಷಿಗಳು ಚಿಟ್ಟೆಗಳನ್ನು ಹಿಡಿದು ತಿನ್ನುತ್ತವೆ. ದೊಡ್ಡ ಮಿಂಚುಳ್ಳಿ ಚಿಟ್ಟೆ ಹಿಡಿಯುತ್ತದೆ. ದೊಣ್ಣಿ ಕಾಟಾ, ಹಾವು ರಾಣಿ ಕೂಡ ಚಿಟ್ಟೆಗಳು ಸಿಕ್ಕರೆ ಬಿಡುವುದಿಲ್ಲ.

ದುಂಬಿಗಳಲ್ಲು ಹಲವಾರು ಬಗೆಗಳಿವೆ. ಹೂವಿನಿಂದ ಹೂವಿಗೆ ಹಾರುವ ದುಂಬಿಯನ್ನು ಜನಪದರು ಕೂಡ ಗಂಡಸರಿಗೆ ಹೋಲಿಸಿರುವರು. ದುಂಬಿಗಳು ಜನಪದರನ್ನು ಅಷ್ಟಾಗಿ ಆಕರ್ಷಿಸಿಲ್ಲ. ಕೆಲವು ದುಂಬಿಗಳಂತೂ ಅಪಾಯಕಾರಿ. ಸುಳಿಕೊರೆವ ದುಂಬಿಗಳು ತೆಂಗು, ತಾಳೆ ಮರಗಳ ಸುಳಿಯನ್ನೆ ಕೊರೆದು ತಿನ್ನುತ್ತವೆ. ದೊಡ್ಡ ದುಂಬಿ ಎಂದು ಇದನ್ನು ಕರೆವರು. ಕಂಡ ಕೂಡಲೆ ಸಾಯಿಸುವರು. ರಭಸವಾಗಿ ಹಾರಿ ಬಂದು ನುಗ್ಗಿ ಕಣ್ಣಿಗೆ ಅಪಾಯವನ್ನು ತರುವಂತದೆಂದು ಹೇಳುವರು. ಒಂದು ಸುಳಿಕೊರೆವ ದುಂಬಿಯನ್ನು ಕೊಂದರೆ ಒಂದು ಮರವನ್ನು ಉಳಿಸಿದಂತೆ ಎನ್ನುವರು. ಈ ದುಂಬಿಯು ರೆಕ್ಕೆಗಳಲ್ಲಿ ಮರಿಗಳನ್ನು ಇಟ್ಟುಕೊಂಡಿರುತ್ತದೆ ಎನ್ನುವರು. ಬಣ್ಣದ ದುಂಬಿಗಳು ತುಂಬ ಆಕರ್ಷಕವಾಗಿವೆ.

ವಾಸನೆ ಹುಳ ಇವುಗಳಲ್ಲು ಅನೇಕವಿದೆ. ಕೆಟ್ಟ ವಾಸನೆ ಬಿಡುವ ಹುಳಗಳನ್ನೆಲ್ಲ ಮುಟ್ಟಿಸಿಕೊಳ್ಳುವುದಿಲ್ಲ. ಅವುಗಳ ಸಹವಾಸ ಸರಿ ಇಲ್ಲ ಎಂದು ಅವುಗಳನ್ನು ಜಾಡಿಸಿ ದೂಡುವರು.ಮೈಮೇಲೆ ಕಪ್ಪು ಕಲೆ ಮಾಡುವಷ್ಟು ತೀವ್ರತರವಾದ ಕೆಲವು ವಾಸನೆ ಹುಳು ಇವೆ. ವಿಚಿತ್ರ ವಾಸನೆಗಳನ್ನು ಹೊರಡಿಸುವ ಹುಳುಗಳಿಂದಾಗಿ ಅಲರ್ಜಿ ಕೂಡ ಆಗುವುದು ಹೂಸುಳುವನ್ನು ತುಳಿದರೆ ಸಾಕು ಅದು ಬುಸ್ ಎಂದು ಗಾಳಿ ಬಿಟ್ಟು ಕಂದು ಬಣ್ಣದ ಗುರುತನ್ನೆ ಕಾಲಿಗೆ ಮಾಡುವುದು. ಇದನ್ನು ಹೂಸುಳ ಎಂದು ಮಕ್ಕಳು ತುಳಿದಂತೆ ನಾಟಕವಾಡಿ ಅದು ಹೂಸುವಂತೆ ಮಾಡಿ ತಮ್ಮ ಕಾಲಿಗೆ ಅವು ಮಾಡಿದ ಗುರುತನ್ನು ನೋಡಿ ಸಂತೋಷ ಪಡುವರು. ಮನೆಗಳ ಮುಂದಿನ ಕಲ್ಲು ಚಪ್ಪಡಿ ಅಥವಾ ಕಸಕಡ್ಡಿಗಳ ಮರೆಯಲ್ಲೆ ಇವು ಆಡಗಿರುತ್ತವೆ. ಅಪಾಯಕಾರಿ ಹುಳುಗಳಲ್ಲ. ಸೀಮೆ ಎಣ್ಣೆ ಹುಳ ಸೀಮೆ ಎಣ್ಣೆಯಂತಹ ವಾಸನೆ ಸೂಸುವುದು. ಸೀಮೆಣ್ಣೆ ಹುಳುವನ್ನು ಹಿಡಿದು ಮಕ್ಕಳು ಅದಕ್ಕೆ ಕಡ್ಡಿ ಚುಚ್ಚಿ ಹಿಂಸೆ ಕೊಟ್ಟು ಆಟ ಆಡಿಸುವರು. ಬೆಂಕಿ ಪೆಟ್ಟಿಗೆಯಲ್ಲು ಇಟ್ಟು ಸಂತೋಷ ಪಡುವುದಿದೆ. ಹಳದಿ, ಹಸಿರು ಕೆಂಪು ಬಣ್ಣದ ಸೀಮೆಣ್ಣೆ ಹುಳುಗಳು ಹಂಪಿ ಪರಿಸರದಲ್ಲಿವೆ. ಬೆಳೆಗಳಿಗೆ ಇವುಗಳಿಂದ ಯಾವ ನಷ್ಟವೂ ಇಲ್ಲ. ಅಲಂಕಾರಿಕ ಕೀಟಗಳಾಗಿ ಇವನ್ನು ಮೆಚ್ಚುವರು. ಮಕ್ಕಳ ಬಾಲ್ಯದ ಜೊತೆ ಬಂದು ಹೋಗುವ ಕೀಟಗಳು ಚಿಟ್ಟೆಗಳು ಎಷ್ಟೋ. ಅವೆಲ್ಲವು ಪರೋಕ್ಷವಾಗಿ ನಿಸರ್ಗದ ಸಂಬಂಧವನ್ನು ಮಕ್ಕಳಿಗೆ ತಂದುಕೊಟ್ಟಿರುತ್ತವೆ. ಎಮ್ಮೆ ಚಿಟ್ಟೆಗಳು ಎಮ್ಮೆಗಳ ತಲೆ ಮೇಲೆ ಹಾರಾಡಿದರೆ, ಹುಲಿ ಚಿಟ್ಟೆಗಳು ಹುಲಿಗಳ ಪಟ್ಟೆಯಂತೆ ಆಕಾರವನ್ನು ರೆಕ್ಕೆ ಮೇಲೆ ಹೊಂದಿವೆ. ಎಲೆ ಚಿಟ್ಟೆ ಎಲೆಯ ಆಕಾರದಲ್ಲಿದ್ದರೆ ಹೂ ಚಿಟ್ಟೆ ಹಳದಿ ಹೂವಂತೆ ಕಾಣುತ್ತವೆ. ಮೈಸೂರು ಚಿಟ್ಟೆ ಕೆಂಪು ಬಣ್ಣದಲ್ಲಿದ್ದರೆ ಕೊಡತಿ ಚಿಟ್ಟೆಯು ಮುಂಗಾರು ಮಳೆಯ ವೇಳೆ ಹೆಚ್ಚಿಗೆ ಕಾಣುತ್ತವೆ. ಮಳೆ ಚಿಟ್ಟೆಗಳು ಮಳೆ ತರಿಸುತ್ತವೆ ಎನ್ನುವರು.

ರಂಗೋಲಿ ಹುಳ ನೀರಲ್ಲಾಡುವ ಹುಳ. ಅಕ್ಷರದ ಹುಳ ಎಂತಲೂ ಕರೆಯುವರು. ಹಳ್ಳ ಕೆರೆಕಟ್ಟೆ ಕಾಲುವೆಗಳಲ್ಲಿ ರಂಗೋಲಿ ಹುಳುಗಳು ಸಿಗುತ್ತವೆ. ಮಕ್ಕಳಿಗೆ ಇವನ್ನು ತೋರಿಸಿ ’ನೋಡು ಆ ಹುಳುಗಳೇ ಅಕ್ಷರ ಬರೀತಾ ಇವೆ, ರಂಗೋಲಿ ಬಿಡ್ತಾ ಇವೆ. ನೀವೂ ಅಕ್ಷರ ಕಲೀರಿ, ರಂಗೋಲಿ ಬಿಡೋದನ್ನ ತಿಳಕೊಳ್ಳಿ’ ಎಂದು ಬುದ್ಧಿ ಹೇಳುವರು. ನುಣುಪಾದ ಈ ಹುಳುಗಳು ನಿರಂತರವಾಗಿ ನೀರಲ್ಲಿ ನಿರ್ಧಿಷ್ಟ ಜಾಗದಲ್ಲಿ ವೃತ್ತಾಕಾರವಾಗಿ ಸುತ್ತುತ್ತಲೆ ಇರುತ್ತವೆ. ಕಂಬಾರ ಹುಳ ಮನೆ ಮುಂದಿನ ಬಚ್ಚಲು ಕಲ್ಲು ಚಪ್ಪಡಿಗಳ ಕಡೆ ನೆಲೆಸಿರುತ್ತದೆ. ಕಚ್ಚಿದರೆ ಮೈಯಲ್ಲಿ ಗಂಟಾಗುತ್ತವೆ ಎನ್ನುವರು. ದುರ್ಬಲ ಹುಳ. ರಾತ್ರಿ ವೇಳೆ ಜಿರ್ಕ್ ಜಿರ್ಕ್ ಎಂದು ಸದ್ದು ಮಾಡುತ್ತಲೇ ಇರುತ್ತದೆ. ಕಡಜಗಳು ಮನೆಗೇ ಬಂದು ಗೂಡುಕಟ್ಟಿ ಕೊಳ್ಳುತ್ತವೆ. ಮನೆ ಕಡಜ ಹೆಚ್ಚು ಅಪಾಯಕಾರಿ ಅಲ್ಲ. ಮನೆಯಲ್ಲಿ ಗೂಡು ಕಟ್ಟಿದರೆ ಒಳ್ಳೆಯದು ಎನ್ನುವರು. ಬಸುರಿ ಹೆಂಗಸರು ಬಂದು ತಾಯಿ ಮನೆಯಲ್ಲಿದ್ದಾಗ ಕಡಜ ಮನೆಯಲ್ಲಿ ಗೂಡು ಕಟ್ಟಿದರೆ ಹೆಣ್ಣೊ ಗಂಡೊ ಎಂಬುದನ್ನು  ನಿರ್ಧರಿಸಬಹುದೆಂದು ನಂಬಲಾಗಿದೆ. ಗಂಡು ಕಡಜ ಎಣ್ಣೆ ಗೂಡು ಕಟ್ಟುವುದು. ತನ್ನ ಎಂಜಲಿನ ವಿಶೇಷತೆಯಿಂದ ಗಟ್ಟಿಯಾದ ಗೂಡಾಗುವುದು. ಹೆಣ್ಣು ಕಡಜ ಬರಿ ಮಣ್ಣಿನ ಗೂಡು ಕಟ್ಟುವುದು. ಹೀಗೆ ಯಾವ ಗೂಡು ಕಟ್ಟಿದೆಯೊ ಅಂತಹ ಮಗು ಆಗುವುದು ಎನ್ನುವರು. ಕಡಜ ಜೇನು ಹುಳುಗಳ ಸಮೀಪ ಬಂಧು. ಆದರೂ ಜೇನಿಗಿಂತ ಇದು ಬೇರೆ. ಜೇನುಗಳೂ ಕಡಿಯುವುದುಂಟು. ಹೆಜ್ಜೇನು ಕಡಿದರೆ ಸಾಯುವರೆಂಬ ಭೀತಿ ಇದೆ. ಹಂಪಿ ಪರಿಸರದಲ್ಲಿ ಜೇನು ಬೇಟೆಯೂ ಪ್ರಸಿದ್ದವಾದುದೇ. ಹಂಪಿಯ ಬೆಟ್ಟಗುಡ್ಡಗಳಲ್ಲಿ ಜೇನಿಗೆ ಬೇಕಾದ ಸಾಕಷ್ಟು ಕಾಡು ಹೂ ಸಮೃದ್ದಿಯಿದೆ. ಪೊದೆಗಾಡಿನ ಗಿಡಗಳೆಲ್ಲವೂ ಹೂ ಬಿಟ್ಟು ಜೇನುಗಳನ್ನು ಆಕರ್ಷಿಸುತ್ತವೆ. ಕರಡಿಗಳು ಜೇನಿಗಾಗಿ ಬೆಟ್ಟಗುಡ್ಡಗಳಲ್ಲಿ ಹುಡುಕಾಡುತ್ತವೆ. ಹಂಪಿಯ ಎತ್ತರವಾದ ಬಂಡೆಗಳ ತುದಿಯಲ್ಲಿ ಯಾರೂ ಮುಟ್ಟಲಾಗದಂತೆ ಹೆಜ್ಜೇನುಗಳು ತೊಟ್ಟಿಲು ಜೇನು ಕಟ್ಟುತ್ತವೆ. ಮುಟ್ಟಾದ ಹೆಂಗಸರು ಅಥವಾ ಸೂತಕ ಇರುವವರು ಹೆಜ್ಜೇನಿನ ಬಳಿಸುಳಿಯಲೇ ಬಾರೆದೆನ್ನುವರು. ಹಾಗೆ ಹೋದರೆ  ಖಂಡಿತ ದಾಳಿ ಮಾಡಿ ಕಚ್ಚುತ್ತವೆ ಎಂಬ ನಂಬಿಕೆ ಇದೆ. ಹೆಜ್ಜೇನು, ಕಿರುಜೇನು ಎಂಬ ಎರಡು ಮುಖ್ಯ ವಿಧಗಳು ಹಂಪಿ ಪರಿಸರದಲ್ಲಿವೆ. ಮನೆಯ ಗೋಡೆ ಬಿರುಕು, ಚಪ್ಪಡಿ ಕಲ್ಲಿನ ಸಂದಿಗಳಲ್ಲಿ ಕಟ್ಟುವ ಜೇನನ್ನು ಮರಿಜೇನು ಎಂದು ಗುರುತಿಸುವರು. ಮೇಣವಾಗಿಯೂ ಜೇನುಗೂಡಿನ ಅಂಟನ್ನು ಬಳಸುವುರು. ಜೇನುತುಪ್ಪ ಅಪ್ಪಟ್ಟ ಔಷಧಿ ಎಂದು ತಿಳಿಯುವರು. ತೀರ ಚಿಕ್ಕ ಜೇನನ್ನು ಪುಟ್ಟ ಜೇನು ಎಂತಲೂ ಕರೆಯುವರು. ಇದರ ಜೇನು ತುಪ್ಪವನ್ನು ತಿನ್ನುವಲ್ಲಿ ಹೆಚ್ಚು ಆಸಕ್ತಿ ತೋರುವುದಿಲ್ಲ. ಮೇಣಕ್ಕೆ ಹಿಂದೆ ಬಳಸುತ್ತಿದ್ದರು. ಹೆಜ್ಜೇನು ಬೇಟೆಯು ಪ್ರಮುಖವಾದುದು. ಹಿರೇಜೇನು ಎಂತಲೂ ಇದನ್ನು ಕರೆಯುವರು.

ಮಳೆ ಹುಳ ಮಳೆಗಾಲದ ಮೊದಲ ಮಳೆಗಳ ವೇಳೆ ಭೂಮಿಯಿಂದ ಹೊರಬರುತ್ತವೆ. ಮಳೆ ಬಿದ್ದ ಮರುದಿನ ಚಿಟ್ಟೆ ಹುಳ ಹೇರಳವಾಗಿ ಹಾರಿ ಬರುತ್ತವೆ. ಚಿಟ್ಟೆ ಹುಳ ಎಂತಲೂ ಇವನ್ನು ಕರೆಯುವರು. ತಿಗಳರು ಈ ಹುಳುಗಳನ್ನು ಹಿಡಿದು ತಿನ್ನುವರು. ಗೆದ್ದಲು ಜಾತಿಯ ಹುಳುಗಳಿವು. ದುರ್ಬಲ ರೆಕ್ಕೆ ಸ್ವಲ್ಪ ವೇಳೆಗೆಲ್ಲ ಉದುರಿ ಹೋಗುತ್ತವೆ. ಕಾಗೆ ಗೊರವಂಕಗಳಿಗೆ ಮಳೆ ಹುಳ ಒಳ್ಳೆಯ ಆಹಾರ. ಮನೆಯ ಸಂದಿಗೊಂದಿಯ ಜಾಗಗಳ ಸಣ್ಣ ಬಿಲದಿಂದ ನುಗ್ಗಿ ಬರುವ ಇವು ಬೆಳಕಿಗೆ ತುಂಬ ಆಕರ್ಷಿತವಾಗುತ್ತವೆ. ತಿಗಳರು ಹೊಲಗಳಲ್ಲೊ ಅಥವಾ ಆ ಹುಳು ಎದ್ದು ಬರುತ್ತಿರುವ ಜಾಗದಲ್ಲೊ ದೀಪವೊಂದನ್ನು ಇಟ್ಟು ಬಟ್ಟೆ ಹಾಸಿ ಕೂರುವರು. ಹುಳುಗಳು ದೀಪದ ಬೆಳಕಿಗೆ ಬಂದು ರೆಕ್ಕೆ ಮುರಿದುಕೊಂಡು ಬೀಳುವವು. ತುಪ್ಪದಂತೆ ಕರಗಿ ಹೋಗುವ ಇವನ್ನು ಎಣ್ಣೆಯಲ್ಲಿ ಕರಿದು ತಿನ್ನುವರು. ಬಹಳ ಪೌಷ್ಠಿಕ ಆಹಾರ ಎನ್ನುವರು. ಇವು ಅತ್ಯಂತ ಮುಗ್ಧ ಚಿಟ್ಟೆಗಳು. ಕೆಲ ಗಳಿಗೆಯಲ್ಲೆ ರೆಕ್ಕೆ ಮುರಿದುಕೊಂಡು ಹರಿದಾಡುವ ಈ ಚಿಟ್ಟೆ ಹುಳಗಳನ್ನು ಮನೆಗಳಲ್ಲಿ ಗುಡಿಸಿ ಬಿಸಾಡುವರು. ನಾಯಿಗಳು ಕೂಡ ಈ ಹುಳುಗಳನ್ನು ಹಿಡಿದು ತಿನ್ನುತ್ತವೆ. ಗೆದ್ದಲು ಹುಳುಗಳೆ ಚಿಟ್ಟೆ ಹುಳುವಾಗಿ ಬರುತ್ತವೆ ಎಂದು ಹೇಳುವರು.

ಗೆದ್ದಲು ಹುಳುಗಳಂತು ಕಸಕಡ್ಡಿಯನ್ನೆಲ್ಲ ಕೊಳೆಸಿ ಮಣ್ಣನ್ನು ಫಲವತ್ತು ಮಾಡಿಕೊಡುತ್ತವೆ. ಗೆದ್ದಲು ಉರಗ ಜಾತಿಯ ಪ್ರಾಣಿಗಳಿಗೆ ಬಹಳ ರುಚಿ ಎನಿಸಿವೆ. ಕೋಳಿಗಳಿಗೆ ಗೆದ್ದಲು ಸಂಗ್ರಹಿಸಿ ಮೇವಾಗಿ ಬಳಸುವರು. ಈ ದೇಹ ಮಣ್ಣಾದ ಮೇಲೆ ನಮ್ಮನ್ನು ಈ ಹುಳುಗಳೇ ತಿಂದು ದೇಹವನ್ನು ಮತ್ತೊಮ್ಮೆ ಮಣ್ಣು ಮಾಡುತ್ತವೆ ಎಂದು ಹೇಳುವರು. ಗೆದ್ದಲುಗಳ ರಾಣಿ ಗೆದ್ದಲು ದಪ್ಪ ಗಾತ್ರದಲ್ಲಿ ತುಪ್ಪದ ಉಂಡೆಯಂತಿರುತ್ತದೆ. ಇದನ್ನು ರಾಣಿಹುಳ ಎಂದು ಕರೆಯುವರು. ಸಣ್ಣಕ್ಕೆ ತೆಳುವಾಗಿ ದುರ್ಬಲವಾಗಿರುವವರಿಗೆ ಈ ರಾಣಿ ಗೆದ್ದಲನ್ನು ನಿಂಗಿಸುವರು. ಹೆಚ್ಚಾಗಿ ಇವು ಹುತ್ತಗಳಲ್ಲಿರುತ್ತವೆ. ಗೆದ್ದಲು ಹತ್ತಿದ ಮನೆಯ ಹೊಸ್ತಿಲು ಅಶುಭ. ಅದನ್ನು ಬದಲಾಯಿಸಿದರೆ ಮಾತ್ರ ಕೇಡು ಕಳೆಯುವುದೆಂದು ನಂಬುವರು.

ವ್ಯವಸಾಯಕ್ಕೆ ಕಾಟ ಕೊಡುವ ಹುಳುಗಳಲ್ಲಿ ಮುಖ್ಯವಾದವು ಬಾಳೆ ಕಾಂಡವನ್ನು ಕೊರೆಯುವ ಕರಿ ಹುಳಗಳು. ಹಾಗೆಯೆ ಭತ್ತಕ್ಕೆ ಬೆಂಕಿ ರೋಗ ಹಚ್ಚುವ ಬೆಂಕಿ ರೋಗದ ಹುಳಗಳು. ದಾಮೆ ಹುಳ ಕೂಡ ಜೋಳಕ್ಕೆ ಬೀಳುತ್ತವೆ. ಕಬ್ಬಿಗೆ ಹೆಚ್ಚು. ಕರಿಹೇನು ಬಿಳಿಹೇನು, ಉಣ್ಣಿಗಳನ್ನು ನಿಯಂತ್ರಿಸಲು ಮಾನವರಿಂದ ಸಾಧ್ಯವಿಲ್ಲ. ಇಸಾತಿ ಮಳೆ ವಿಷ ಹಾಕಿ ಎಲ್ಲವನ್ನು ಕೊಂದು ಹಾಕುತ್ತವೆ ಎಂದು ಜನ ಹೇಳುವರು. ಕರಿಹುಳ ಬೆಳೆ ಬಂದ ಬಾಳೆ ಕಂಬಗಳನ್ನೆ ಕೊರೆದು ನಾಶಪಡಿಸಬಲ್ಲದು. ಕಬ್ಬಿಗೆ ದಾಮೆಹುಳ ಕಾಟ ಕೊಟ್ಟರೆ ಬೆಂಕಿರೋಗದ ಹುಳ ಅನಿಯಂತ್ರಿತ. ಬೆಂಕಿ ರೋಗದ ಹುಳ ದಿನ ನಿತ್ಯ ಸ್ಥಳ ಬದಲಿಸುತ್ತಲೇ ಇರುತ್ತವೆ. ಒಂದೆರಡು ದಿನಗಳಲ್ಲೆ ಎಕರೆ ಗಟ್ಟಲೆ ಭತ್ತದ ಗದ್ದೆಯನ್ನು ನಾಶಪಡಿಸಬಲ್ಲವು. ಕರಿಹೇನು ಹೆಚ್ಚಾಗಿ ಕಾಳುಕಡ್ಡಿಗಳಿಗೆ ಹಿಡಿಯುತ್ತವೆ. ಕಬ್ಬಿಗೆ ಬಿಳಿ ಉಣ್ಣೆ ಹುಳದ ಕಾಟವಿದೆ. ನುಸಿ ಹುಳದ ಬಾದೆಯಂತೂ ವಿಪರೀತ. ಎಲೆ ಚುಕ್ಕಿ ಹುಳ ಮತ್ತೊಂದು ಬಗೆಯಾದದ್ದು. ಎಲ್ಲಾ ಬೆಳೆಗಳಿಗೂ ಹುಳುಗಳು ಕಾಟ ಕೊಡುತ್ತವೆ. ಶೇಂಗಾ ಬೆಳೆಗೂ ಎಲೆ ಚುಕ್ಕಿ ರೋಗ ತಗುಲುವುದಿದೆ. ಇವುಗಳಿಗೆಲ್ಲ ಹತ್ತಾರು ತರದ ಕೀಟ ನಾಶಕಗಳನ್ನು ಸಿಂಪಡಿಸಿ ಕೊಲ್ಲುವರು.

ಹೀಗೆ ಕೀಟ ಲೋಕದ ವಿವರ ಹಂಪಿ ಪರಿಸರದಲ್ಲಿದೆ. ಪ್ರಾಣಿಗಳನ್ನು ಬೇಟೆ ಆಡಿದಂತೆ ಕೀಟಗಳನ್ನು ಮನುಷ್ಯ ಬೇಟೆಯಾಡುವುದು ಅಸಾಧ್ಯ. ಕೀಟಗಳನ್ನು ನಾಶಪಡಿಸುವ ಪ್ರಕ್ರಿಯೆಯಲ್ಲಿ ತಾನು ಬೆಳೆದು ತಾನೇ ತಿನ್ನುವ ಆಹಾರ ಬೆಳೆಗಳಲ್ಲಿ ಮನುಷ್ಯ ವಿಷ ಬೆರೆಸಿಕೊಳ್ಳುತ್ತಿದ್ದಾನೆ. ಇದರಿಂದ ಕೊನೆಗೆ ಆಗುವ ದೊಡ್ಡ ಅನಾಹುತ ಮನುಷ್ಯರಿಗೇ. ಅಲ್ಲದೆ ಹಸಿರುಗಿಡ ಮರ ಸಸ್ಯಗಳಿಗೂ ಪರೋಕ್ಷವಾಗಿ ವಿಷ ಉಣಿಸಲಾಗುತ್ತಿದೆ. ಉತ್ತಮ ಫಸಲಿಗಾಗಿ ಹಾಕುವ ವಿಪರೀತ ರಾಸಾಯನಿಕ ಗೊಬ್ಬರಗಳು ಜೀವಜಾಲದ ಸಮತೋಲನವನ್ನೆ ಹಾಳುಮಾಡುತ್ತಿವೆ. ಒಂದೇ ಬಗೆಯ ಬೆಳೆಯಿಂದಾಗಿ ಕೀಟ ಲೋಕಕ್ಕೆ ತೊಡಕಾಗಿದೆ. ವ್ಯವಸಾಯದ ಯಾಂತ್ರಿಕ ಕ್ರಮಗಳು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಜನಪದರ ಸಾವಯವ ಕೃಷಿ ಪದ್ಧತಿಯಲ್ಲಿದ್ದ ಜೈವಿಕ ಸಂಬಂಧ ದೂರ ಸರಿಯುತ್ತಿದ್ದು ಜೀವಜಾಲದ ಸಂಬಂಧ ಕೂಡ ವಿಷಮಯವಾಗುತ್ತಿದೆ. ಈ ಸ್ಥಿತಿಯಲ್ಲಿ ಕೀಟ ಲೋಕದ ರಮ್ಯ ಸುಂದರ ಈ ಚೆಟ್ಟೆಗಳ ಕಲ್ಪನೆಗಳು ಅರ್ಥ ಹೀನವೆನಿಸುತ್ತವೆ. ಕೀಟಗಳು ಮನುಷ್ಯನ ಪರಿಸರವನ್ನು ಯಾವ ರೀತಿಯಲ್ಲೂ ನಾಶ ಪಡಿಸಲು ಮುಂದಾಗುವುದಿಲ್ಲ. ಹಾಗೊಂದು ವೇಳೆ ಕೀಟಗಳಿಗೆ ಆ ಉದ್ದೇಶ ಎದುರಾದರೆ ಮಾನವಕುಲವನ್ನು ಕೆಲವೇ ದಿನಗಳಲ್ಲಿ ದ್ವಂಸಮಾಡಿ ಬಿಡಬಲ್ಲವು. ರಾಸಾಯನಿಕ ಅಸ್ತ್ರಗಳಿಗಿಂತಲೂ ಮಿಗಿಲಾಗಿ ಕೀಟಗಳು ಮಾನವರ ಅಸ್ತಿತ್ವವನ್ನು ನಾಶಪಡಿಸಬಲ್ಲವು. ಪರಿಸರದ ಅವ್ಯಕ್ತ ಕಾವಲುಗಾರರಾಗಿ ಕೀಟ ಪ್ರಾಣಿ ಪಕ್ಷಿ ಉರಗಗಳಿವೆ ಎಂಬ ಪ್ರಾಚೀನ ಜೀವಜಾಲ ತಿಳುವಳಿಕೆ ಆಧುನಿಕ ಜೀವನ ಕ್ರಮಗಳಿಂದ ನಾಶವಾಗುತ್ತಿದೆ.

ಹಂಪಿಯ ಜನಪದರು ಅನಿವಾರ್ಯವಾಗಿ ರಾಸಾಯನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಅಂದರೆ ಅಷ್ಟರ ಮಟ್ಟಿಗೆ ಅವರು ಕೀಟ ನಾಶಕಗಳ ಪ್ರಗತಿಯಲ್ಲಿ ಮುಂದಿದ್ದಾರೆ. ಆಧುನಿಕ ಕೃಷಿಯ ವಿಧಾನಗಳು, ಮಾರುಕಟ್ಟೆಯ ವಾಣಿಜ್ಯ ಬೆಳೆಗಳು, ಪೈಪೋಟಿಗೆ ವಿರುದ್ಧವಾಗಿ ಪರಿಸರ ಪ್ರಜ್ಞೆಯನ್ನು ಭೋಧಿಸುವುದಾಗಲೀ, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದಾಗಲೀ ಎರಡೂ ಕೂಡ ನಾಟಕೀಯವಾಗಿವೆ. ಹಂಪಿ ಪರಿಸರವೇನೊ ಗಟ್ಟಿಯಾದುದೇ. ಅಂದರೆ ಆದಿಮ ಹಂತದಿಂದಲೂ ಅದು ಉಳಿದುಕೊಂಡು ಬಂದಿರಬಹುದು. ಭೂಮಿಗೂ ಒಂದು ತಾಳ್ಮೆ ಇರಬಹುದು. ಆದರೆ ಎಲ್ಲವೂ ಮಾನವ ಕೇಂದ್ರಿತ ದರೋಡೆತನದಲ್ಲಿ ನಿಸರ್ಗವನ್ನೆ ಹೇಯವಾಗಿ ದರೋಡೆ ಮಾಡಿ ಭೂಮಿಯನ್ನೆ ಅತ್ಯಾಚಾರಕ್ಕೀಡು ಮಾಡುವುದು ನೈಸರ್ಗಿಕ ಪ್ರಜ್ಞೆಯಲ್ಲ. ಅದು ನಿಸರ್ಗದ ಹತ್ಯೆ. ಇದು ಭಾರತದ ಗ್ರಾಮೀಣ ಪರಿಸರದ ಸಮಗ್ರ ಚಿತ್ರವೂ ಹೌದು. ನಿಸರ್ಗಕ್ಕೆ ಮರಳ ಬೇಕಾದ ಕಾಲದಲ್ಲಿ ನಿಸರ್ಗವನ್ನೆ ನಾಶಪಡಿಸುವ ಬುದ್ಧಿ ಬಂದದ್ದು ಸ್ಥಳೀಯ ಜನಪದಗಳ ದುರಾಸೆಯಿಂದಲ್ಲ. ಹೀಗೆ ಆದದ್ದು ಬಂಡವಾಳಶಾಹಿ ಆರ್ಥಿಕ ಜಗತ್ತಿನ ರಾಜಕಾರಣದಿಂದ. ಹಂಪಿ ಪರಿಸರಕ್ಕೆ ಈ ವಿಚಾರಗಳು ಅನ್ಯವೇನಲ್ಲ. ಆ ಬಗೆಯ ಜಾಗತಿಕ ಆರ್ಥಿಕ ಪರಿಣಾಮಗಳೇ ಹಂಪಿಯ ಜೀವ ಜಾಲದ ಮೇಲೂ ಕತ್ತಿ ಝಳಪಿಸುತ್ತಿರುವುದು.

ವಿಶ್ವ ಪರಂಪರೆಯ ಹಂಪಿಯ ಪರಿಸರ ಸಂರಕ್ಷಣೆಯು ಈ ನಿಟ್ಟಿನಲ್ಲಿ ಜೀವಜಾಲದ ಜಾನಪದದ ರಕ್ಷಣೆಯೂ ಹೌದು. ಜನಪದರು ತಂತಾನೆ ಕ್ರೂರಿಗಳಲ್ಲ. ಅವರನ್ನು ಆಳುವ ವ್ಯವಸ್ಥೆ ಆ ಸ್ಥಿತಿಗೆ ನೂಕಿರುತ್ತದೆ. ಹಂಪಿಯ ಜೀವಜಾಲ ಮೇಲು ನೋಟಕ್ಕೆ ತೀರಾ ಸಾಮಾನ್ಯವೆನಿಸಬಹುದು. ಆದರೆ ನೈಸರ್ಗಿಕ ಹಿನ್ನೆಲೆಯ ಜೀವ ಸಂಬಂಧಗಳಿಂದ ಲೆಕ್ಕ ಹಾಕಿದರೆ ಹಂಪಿಯ ಕೀಟ ವೈವಿಧ್ಯ ಬೆರಗು ಹುಟ್ಟಿಸುವಷ್ಟು ವಿಪುಲವಾಗಿದೆ. ಬರಗಾಲದ ಭೂಮಿಯಂತೆ ಬೇಸಿಗೆಯಲ್ಲಿ ಈ ಪರಿಸರ ಕಂಡರೂ ಇಷ್ಟೊಂದು ಕೀಟ ವೈವಿಧ್ಯ ಹೇಗೆ ಬದುಕುಳಿಯಲು ಸಾಧ್ಯವಾಗಿದೆ ಎಂಬ ಅಂಶ ಬೆಳಕಿಗೆ ಬರಬೇಕಾಗಿದೆ. ಜನಪದರು ತಮ್ಮ ನಿತ್ಯನರಕದ ಬದುಕಿನಲ್ಲಿ ಕೀಟ ಲೋಕವನ್ನು ಗಮನಿಸಬಹುದಾದಷ್ಟು ಪ್ರಮಾಣದಲ್ಲಿ ನೋಡಿಲ್ಲದಿರಬಹುದು. ಆದರೆ ಕೀಟಗಳನ್ನು ಕೂಡ ಮಾನವ ಬದುಕಿನ ಅನಿವಾರ್ಯ ಸಂಬಂಧಿ ಎಂದು ಒಪ್ಪಿಕೊಳ್ಳುವಲ್ಲಿ ಅವರು ಹಿಂದೆ ಮುಂದೆ ಯೋಚಿಸಿಲ್ಲ. ಸೃಷ್ಠಿಯ ವೈರುಧ್ಯ ಜೀವ ಸರಪಳಿಯೇ ಲೋಕದ ಅಖಂಡ ಅಸ್ತಿತ್ವವನ್ನು ವಿಕಾಸದ ಮಹಾಯಾನದಲ್ಲಿ ಕರೆದೊಯ್ಯುವುದು. ಇಂತಹ ತಾತ್ವಿಕ ನೀತಿ ಜನಪದರ ಬದುಕಿನಲ್ಲಿದೆ. ಈ ತತ್ವಕ್ಕೆ ಬೇಕಾದ ಸಾಕ್ಷ್ಯಾದಾರಗಳ ವಿವರಗಳಲ್ಲಿ ಜನಪದರು ತರ್ಕ ಹಾಗೂ ಸಾಕ್ಷ್ಯ ಬುದ್ಧಿಯವರಲ್ಲ. ಆದ್ದರಿಂದಲೇ ಅವರ ಬಳಿ ವೈಜ್ಞಾನಿಕ ವಿವೇಚನೆಯ ಜೀವಜಾಲದ ವಿವರಗಳಿಲ್ಲ. ಬದುಕುವ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಒಪ್ಪಂದದಲ್ಲಿ ಮಾನವ ವರ್ತನೆ ಬಹು ಹಿಂದಿನಿಂದಲೂ ಸಾಗಿ ಬಂದಿದೆ.

ನಮ್ಮ ಅಸ್ತಿತ್ವವನ್ನು ಕೀಟಗಳೂ ಕಾಯ್ದುಕೊಂಡು ಬಂದಿವೆ. ಬೆಳೆ ಬಿತ್ತನೆ ಮಾಡಿಬಿಟ್ಟರೆ ಮಾತ್ರ ವ್ಯವಸಾಯ ಮಾಡಿದಂತಲ್ಲ. ಕೀಟಗಳು ಪ್ರಾಣಿಗಳು ಪಕ್ಷಿಗಳು ಸಹ ಸಸ್ಯಗಳು ಮರಗಿಡಗಳು ಕೂಡ ಅವುಗಳದೇ ರೀತಿಯಲ್ಲಿ ವ್ಯವಸಾಯ ಕ್ರಿಯೆಯನ್ನು ಒಂದು ಹಂತಕ್ಕೆ ತಂದಿರುತ್ತವೆ. ಎಷ್ಟೋ ಕಳೆಗಿಡಗಳು ನಮ್ಮ ಅರಿವಿಗೆ ಬಾರದಂತೆಯೆ ಭೂಮಿಯ ಫಲವತ್ತತೆಗೆ ಜೀವಾಂಶಗಳನ್ನು ಬಿಟ್ಟು ತಾವೇ ಅಳಿದು ಹೋಗಿರುತ್ತವೆ. ಅದು ನಾವು ಬಿತ್ತಿದ ಬೆಳೆಗೂ ಕೀಟಗಳಿಗೂ ಪಕ್ಷಿಗಳಿಗೂ ಆಹಾರ ನೀಡುವ ಕಾಯಕವಾಗಿ ರೂಪಾಂತರಗೊಂಡಿರುತ್ತದೆ. ಕೀಟಲೋಕ ಪ್ರಾಣಿ ಪಕ್ಷಿಗಳಿಗಿಂತಲೂ ಸೂಕ್ಷ್ಮವಾಗಿ ಮಾನವರ ಹಿತ ಕಾಯುತ್ತ ಬಂದಿದೆ. ಹಂಪಿಯಲ್ಲಿರುವ ಕೀಟಗಳು ಇಲ್ಲಿನ ಪರಿಸರವನ್ನು ರೂಪಿಸುತ್ತ ಬಂದಿವೆ. ಕೀಟಗಳು ಹಂಪಿಯ ಹೆಬ್ಬಂಡೆಗಳನ್ನು ಜರುಗಿಸಬೇಕಾದ ಹೊಣೆ ಹೊರಬೇಕಾದ್ದಿಲ್ಲ. ಆದರೆ ಇಲ್ಲಿನ ಜೀವಜಾಲವನ್ನು ನಿರಂತರವಾಗಿ ಮುಂದುವರಿಸುವ ದೊಡ್ಡ ಹೊರೆಯನ್ನು ಹೊತ್ತಿವೆ. ಇದು ಅವ್ಯಕ್ತವಾದ ಹೊರೆ ಮತ್ತು ಜೀವಜಾಲದ ನಿಗೂಢಶಕ್ತಿ.

ಈ ನಿಟ್ಟಿನಲ್ಲೆ ಹಂಪಿಯ ಕೀಟ ಜಾನಪದವು ಆದಿ ಜನವಸತಿಯ ನೆನಪುಗಳನ್ನು ಹುದುಗಿಸಿಕೊಂಡಿರುವ ಅವ್ಯಕ್ತ ಜೀವನ ದರ್ಶನ. ಹುಳು ಉಪ್ಪಟ್ಟೆಯಲ್ಲೂ ತನ್ನ ಜೀವ ಹಂಚಿ ಹೋಗಿದೆ ಎಂಬ ಜೈವಿಕ ಕಲ್ಪನೆಯು ಜನಪದರಲ್ಲಿದೆ. ಗೆದ್ದಲು ಹುಳುಗಳಿಗೆ ತಮ್ಮ ದೇಹ ಆಹಾರವಾಗುತ್ತದೆ ಎಂಬ ತಿಳುವಳಿಕೆಯು ಮತ್ತೆ ಮಣ್ಣಲ್ಲಿ ಮಣ್ಣಾಗುವ ಜೈವಿಕ ಪ್ರಕ್ರಿಯೆಯನ್ನು ಪ್ರತಿಬಿಂಬಿಸುತ್ತಿದೆ. ಜನಪದರು ಇಂತಹ ಯಾವ ಜೈವಿಕ ತತ್ವವನ್ನು ನೇರವಾಗಿ ವ್ಯಕ್ತ ಪಡಿಸುವುದಿಲ್ಲ. ಅವ್ಯಕ್ತ ಕ್ರಮವೇ ಇಂತಲ್ಲಿ ಪ್ರಧಾನ ದನಿ. ಈ ದನಿಯೂ ಕೂಡ ಕಾಣಿಸುವಂತದಲ್ಲ. ಹಾಗೆಯೆ ಕೇಳಿಸುವಂತದ್ದೂ ಅಲ್ಲ. ಅದು ಸಂವೇದನೆಯ ಭಾಗ. ಭಾವನಾತ್ಮಕವಾಗಿ ಮಿಡಿವ ಸ್ಪಂದನೆ. ಇದು ಎಲ್ಲ ಜನ ಪದಗಳ ಸ್ವಭಾವ. ಮಳೆಗಾಲ ಬಂತೆಂದರೆ ಸಾಕು ಇಡೀ ಹಂಪಿಯ ಪರಿಸರ ನಿತ್ಯಹರಿದ್ವರ್ಣದ ಕಾಡಿನ ಸ್ವರೂಪ ರಾಶಿಯ ಹಸಿರನ್ನು ಮೈದುಂಬಿ ಹೊದ್ದುಕೊಳ್ಳುತ್ತದೆ. ಆ ಕಾಲದ ಕೀಟ ಲೋಕವೇ ಒಂದು ಬಗೆ. ಬೇಸಿಗೆಯ ಉರಿ ಬಿಸಿಲಿನ ಕೀಟ ಪ್ರಪಂಚವೇ ಮತ್ತೊಂದು ಬಗೆ. ಇನ್ನು ವಸಂತ ಋತುವಿನಲ್ಲಿ ಕಂಡುಬರುವ ಕೀಟ ವೈವಿಧ್ಯ ವಿಶೇಷವಾದುದು. ಇವನ್ನೆಲ್ಲ ಜನಪದರು ಗಮನಿಸುತ್ತಲೆ ಬಂದಿದ್ದಾರೆ. ಜೀವದ ಕಾಡಿನಲ್ಲೆ ದೇವರು ಒಂದೊಂದಕ್ಕೂ ಒಂದೊಂದು ರೂಪ ಕೊಟ್ಟಿದ್ದಾನೆ. ಅವುಗಳೆಲ್ಲವೊ ಕೊನೆಗೆ ದೇವರ ಪಾದದ ಬಳಿಯೇ ಹೋಗುತ್ತವೆ. ಮನುಷ್ಯ ರೂಪ ಧರಿಸುವ ಪೂರ್ವದಲ್ಲಿ ಮಾನವ ಈ ಎಲ್ಲ ಹುಳು ಉಪ್ಪಟ್ಟೆ ಕೀಟಗಳ ರೂಪವನ್ನೆಲ್ಲ ಧರಿಸಿ ಬಂದಿರುತ್ತಾನೆ. ಹಾಗಾಗಿ ಇವೆಲ್ಲ ಜೀವ ರಾಶಿಗಳೂ ನಮ್ಮ ಪೂರ್ವಿಕರೇ ಎಂಬ ಈ ಬಗೆಯ ಭಾವನೆಗಳು ಸಾಮಾನ್ಯವಾದುವಲ್ಲ. ಜನಪದರ ಇಂತಹ ಆಧ್ಯಾತ್ಮದ ತಿಳುವಳಿಕೆಯು ಅವರ ನೈಸರ್ಗಿಕ ತಿಳುವಳಿಕೆಯೂ ಆಗಿದೆ.

ಹೀಗಾಗಿ ಕೀಟ ಜಾನಪದವು ಕೇವಲ ಕೀಟಗಳ ಬಗೆಗಿನ ಮಾನವರ ಸಾಮಾನ್ಯ ಕಟ್ಟು ಕಥೆಗಳ ವಿವರವಲ್ಲ. ಜೀವಜಾಲದ ಸಾವಯವ ಸಂಬಂಧವನ್ನು ನಿರೂಪಿಸುವ ಕಥನವೂ ಇದರಲ್ಲಿದೆ. ಹಂಪಿಯ ಜನಪದ ಪರಂಪರೆ ಬದಲಾದ ಕಾಲದಲ್ಲಿ ಗತಕಾಲದ ಹಸಿರು ಪ್ರಜ್ಞೆಯನ್ನೂ ಗಾಢವಾಗಿ ಈಗ ಹೊಂದಿಲ್ಲದಿರಬಹುದು. ಆದರೆ ಗತ ಕಾಲದ ಜೈವಿಕ ಬೇರುಗಳೆಲ್ಲ ಇನ್ನೂ ನಾಶವಾಗಿಲ್ಲ. ಉದ್ಯಮದಂತೆ ಕೃಷಿ ಇಲ್ಲಿ ಇನ್ನೂ ವ್ಯಾಪಿಸಿಲ್ಲ. ನೀರಾವರಿ ಪ್ರದೇಶಗಳನ್ನು ಹೊರತು ಪಡಿಸಿದರೆ ಹಂಪಿಯ ಅನೇಕ ಗ್ರಾಮ ಪರಂಪರೆಗಳು ಇನ್ನೂ ಜೀವಂತವಾಗಿ ವಕ್ಕಲುತನದಲ್ಲೂ ಸಂಸ್ಕೃತಿಯ ರೀತಿನೀತಿಗಳಲ್ಲು ಉಳಿದುಕೊಂಡಿವೆ. ಈ ಪರಿಸರದ ಜೀವಿಗಳು ಕೂಡ ಅಷ್ಟು ಸುಲಭವಾಗಿ ನಾಶವಾಗುವಂತವಲ್ಲ. ಹಾಗೆಂದು ಅವುಗಳ ಮೇಲಿನ ದಾಳಿಯೂ ಸೂಕ್ತವಲ್ಲ. ಪ್ರಾಣಿ ಪಕ್ಷಿ ಸಸ್ಯ ಕೀಟ ಜಲಚರ ಹಾಗೂ ಜಲ ವಿವೇಕಗಳೆಲ್ಲವೂ ಅವ್ಯಕ್ತ ಪರಂಪರೆಯ ಭಾಗವಾಗಿ ಅಳಿದುಳಿದು ತಮ್ಮ ಪರಂಪರೆಗಳನ್ನು ಭಗ್ನರೂಪಗಳಲ್ಲಿ ಪ್ರತಿಬಿಂಬಿಸುತ್ತಿವೆ. ಇವನ್ನೆಲ್ಲ ಒಂದು ನಿರ್ಧಿಷ್ಟ ವಿಚಾರಕ್ಕೆ ಒಳಪಡಿಸಲು ಬರುವುದಿಲ್ಲ. ಇವು ಒಂದನ್ನೊಂದು ಅವಲಂಬಿಸಿರುವ ಸಂಗತಿಗಳು. ಚರಿತ್ರೆ ಸಂಸ್ಕೃತಿ ನಿಸರ್ಗ ಜಾನಪದ ಇವು ಹೇಗೆ ಮಾನವರ ವಿಕಾಸದ ಜೊತೆ ಬಂದಿವೆಯೊ ಅಂತೆಯೇ ಆಧುನಿಕತೆಯೂ ಭಿನ್ನ ಕಾಲದಲ್ಲಿ ವಿವಿಧ ಸ್ವರೂಪಗಳಲ್ಲಿ ಬೆಳೆಯುತ್ತಿದೆ. ಇವನ್ನೆಲ್ಲ ಸಮಗ್ರವಾಗಿ ಭಾವಿಸಿಯೇ ನಾಳಿನ ಅಸ್ತಿತ್ವವನ್ನು ನಿರ್ಧರಿಸಿಕೊಳ್ಳಬೇಕಾಗಿದೆ.