ಲವನ್ನು ಮಾತೆಯಾಗಿ ಭಾವಿಸುವ ಆದಿಮ ಪ್ರಜ್ಞೆ ಹಂಪಿ ಪರಿಸರದಲ್ಲೂ ಸಾಮಾನ್ಯವಾಗಿದೆ. ಮಳೆಯ ಅಭಾವವಿರುವ ಹಂಪಿ ಪರಿಸರ ಬರಗಾಲದ ಸೀಮೆಯಂತೆ ಕಾಣುವುದು. ಬೀಳುವ ಕೆಲವೇ ಮಳೆಗಳಿಗೆ ಪರಿಸರ ದಟ್ಟ ಹಸಿರಾಗಿ ಕಂಗೊಳಿಸುವುದು. ತುಂಗಭದ್ರಾ ನದಿ ಹರಿಯುವುದರಿಂದ ಹಾಗು ಅದಕ್ಕೆ ಅಣೆಕಟ್ಟು ನಿರ್ಮಿಸಿ ಕಾಲುವೆಗಳಲ್ಲಿ ನೀರು ಹರಿಸುವುದರಿಂದ ಹಸಿರು ವಾತಾವರಣ ಕಾಣುವುದಿದೆ. ಇಂತಹ ಕೃತಕ ನೀರ ಹರಿವು ಪರಂಪರೆಯ ಭಾವನೆಗಳ ಜೊತೆ ಗಾಢವಾದ ಸಂಬಂಧವನ್ನೇನು ಸಾಧಿಸಿಕೊಂಡಿಲ್ಲ. ಕಾಲುವೆ ನೀರಾವರಿಯಿಂದ ಕೆಲವೊಂದು ದೈನಂದಿನ ಬದುಕಿನ ಕ್ರಿಯೆಗಳಿಗೆ ಅನುಕೂಲವಾಗಿದ್ದರೂ ಜಲದ ಬಗ್ಗೆ ತನ್ನದೇ ಆದ ಜಾನಪದವನ್ನು ಈ ಬಗೆಯ ಕಾಲುವೆಗಳು ರೂಪಿಸಿಕೊಳ್ಳಲಾಗಿಲ್ಲ. ಹಂಪಿಯ ಗ್ರಾಮ ಪರಂಪರೆಗಳಿಗೆ ತುಂಗಭದ್ರಾ ನದಿಯು ಪವಿತ್ರವಾದದ್ದು. ಹಂಪಿಯ ಜಾತ್ರೆ, ಫಲಪೂಜೆಗಳು ಈ ಪರಿಸರದ ಜನಪದರ ಜಲ ಸಂಬಂಧವನ್ನು ಅರ್ಥಪೂರ್ಣವಾಗಿ ಧ್ವನಿಸುತ್ತವೆ. ಯಾವುದೇ ಉತ್ಸವ, ಜಾತ್ರೆ, ನಿಸರ್ಗದ ಆರಾಧನೆಗೆ ಹಳ್ಳಹೊಳೆ ಕೆರೆ ನದಿ ತೊರೆಗಳು ಮುಖ್ಯವಾಗಿರಬೇಕು. ಜಲದೇವಿಯ ಪೂಜೆಯು ನಿಸರ್ಗವನ್ನು ಯಾವತ್ತೂ ನೆನೆಯುವ ಕ್ರಿಯೆ. ಹಳ್ಳಿಯ ಬಾಳಿನಲ್ಲಿ ನೀರು ಜೀವನಾಡಿ. ಹಂಪಿಯ ಪರಿಸರದಲ್ಲಿ ತುಂಗಭದ್ರ ನದಿ ಹರಿದೇ ಇರಲಿಲ್ಲ ಎಂದರೆ ಇಲ್ಲಿನ ಜನವಸತಿಯು ಈ ಸ್ವರೂಪದಲ್ಲಿ ಬೆಳೆಯಲು ಸಾಧ್ಯವೇ ಇರಲಿಲ್ಲ. ವಿಜಯನಗರ ಸಾಮ್ರಾಜ್ಯವೂ ಸ್ಥಾಪನೆ ಆಗುತ್ತಿರಲಿಲ್ಲ.

ಜೀವ ಜಲ, ಜಲ ಮಾತೆ, ಗಂಗಾ ಮಾತೆ, ಗಂಗಮ್ಮ, ಗಂಗೆ ಇವೆಲ್ಲವೂ ಜಲಸಂಸ್ಕೃತಿಯ ರೂಪಕಗಳು, ಮಾತೃತ್ವದ ಪ್ರತೀಕಗಳು. ಜೀವದ ಉಗಮವು ನೀರಿನಲ್ಲೇ ಆದದ್ದು ಎಂದು ವಿಜ್ಞಾನ ಖಚಿತ ಪಡಿಸಿದರೆ ಜನಪದರು ಕೂಡ ತಮ್ಮ ಪುರಾಣಗಳ ಮೂಲಕ ಜಲವೇ ನಮ್ಮ ಮೂಲ ಎಂದು ಕರೆದು ಈ ಜಲ ಮಾತೆಯನ್ನು ಕುಡಿಯದೆ ಜೀವ ಬದುಕಿರಲಾರದು ಎಂದು ಜಲವೇ ಜೀವ ಎಂದು ದೈವಿಕವಾಗಿ ನೆನೆಯುವರು. ಸತ್ತವರ ಆತ್ಮವು ಹಿಂತಿರುಗಿ ಬಂದು ತಾನು ಬದುಕಿದ್ದ ಜಾಗವನ್ನು ಕೊನೆಯ ಬಾರಿಗೆ ಒಮ್ಮೆ ನೋಡಿಕೊಂಡು ಹೋಗುತ್ತದೆ ಎಂಬ ನಂಬಿಕೆಯಲ್ಲಿ ಜನಪದರು ಹಾರಿ ಹೋದ ಜೀವಕ್ಕೆ ನೀರಿಡುವರು. ಸತ್ತವರು ಬಂದು ತಮ್ಮ ಕೊನೆಯ ಜಲವನ್ನು ಕುಡಿದು ಹೋಗುವರು. ಹಾಗೆ ನೀರು ಕುಡಿದು ಹೋದರೆ ಸ್ವರ್ಗದ ದಾರಿಯಲ್ಲೊ ನರಕದ ದಾರಿಯಲ್ಲೊ ಪ್ರಾಣಕ್ಕೆ ದಾಹ ಆಗುವುದಿಲ್ಲವಂತೆ. ಸತ್ತವರಿಗೆ ನೀರಿಡುವ ಪದ್ಧತಿ ಆದಿ ಜಾನಪದದ ಆಚರಣೆಯಾಗಿದೆ. ಸಾಯುವ ಕೊನೆಗಳಿಗೆಯಲ್ಲಿ ಬಾಯಿಗೆ ನೀರು ಬಿಡುವುದು ಕೂಡ ಕೊನೆಯ ಋಣದ ಸಂಬಂಧವನ್ನು ತಿಳಿಸುವ ಆಚರಣೆಯಾಗಿದೆ. ಪ್ರಾಣಿಗಳನ್ನು ಗ್ರಾಮ ದೈವಗಳಿಗೆ ಬಲಿ ಕೊಡುವಾಗಲೂ ನೀರು ಕುಡಿಸಿಯೊ ತಲೆ ಮೇಲೆ ನೀರು ಚಿಮುಕಿಸಿಯೊ ಆ ಕ್ರಿಯೆ ಮುಗಿಸುವರು. ಯಾವುದೇ ಸೂತಕ ಕಳೆಯಲು ಪೂಜೆ ಮಾಡಿ ಹೊಸ ಮಡಕೆಯಲ್ಲಿ ತಂದ ನೀರೇ ಬೇಕು. ಶವ ಸಂಸ್ಕಾರ ಮುಗಿಸಿ ಬಂದವರು ತಲೆ ಮೇಲೆ ನೀರು ಎರಚಿಕೊಳ್ಳಬೇಕು. ಇಲ್ಲವೇ ಸ್ನಾನ ಮಾಡಿ ಒಳಗೆ ಪ್ರವೇಶಿಸಬೇಕು. ಕೆಲವರು ಅಸ್ಥಿಯನ್ನು ಹೊಳೆಯಲ್ಲಿ ಬಿಡುವರು.

ಬದುಕುಳಿಯಲು ಅಗತ್ಯವಾದ ನಿಸರ್ಗದ ವಿಶಿಷ್ಟವಾದ ಜೀವಜಲದ ಸಂಬಂಧವನ್ನು ವಿವರಿಸುವುದೇ ಜಲ ಜಾನಪದ. ಜಲ ಸಂಸ್ಕೃತಿ ಯಾವತ್ತು ಕೂಡ ಜೀವ ಸಂರಕ್ಷಣೆಯ ನೀತಿಯನ್ನು ಪಾಲಿಸುತ್ತದೆ. ಅಗ್ನಿ ಸಂಸ್ಕೃತಿ ಆಕ್ರಮಣಶೀಲವಾದರೂ ಜಲಸಂಸ್ಕೃತಿ ನಿಸರ್ಗದ ಮೂಲಕ್ಕೆ ಹಿಂತಿರುಗುತ್ತದೆ. ಅಗ್ನಿ ಸಂಸ್ಕೃತಿ ಆಕಾಶದ ಸ್ವರ್ಗವನ್ನು ಧ್ಯಾನಿಸವಂತದ್ದು. ಇವೆರಡೂ ಕೂಡ ಜನಪದ ಪರಂಪರೆಗಳಲ್ಲಿ ಬೆರೆತು ಹೋಗಿವೆ. ನೀರೊಳಗೇ ಬೆಂಕಿ ಅಡಗಿರಬಲ್ಲುದು. ಬೆಂಕಿಯ ಒಳಗೆ ನೀರು ಇರಲಾರದು. ಶಿವ ಸಂಸ್ಕೃತಿಯ ಅರ್ಥವು ಇಂತಹ ಉದಕದೊಳಗಣ ಬೆಂಕಿಯಂತೆ ಜನಪದರಲ್ಲಿ ಲೀನವಾಗಿದೆ. ಗಂಗೆಯನ್ನು ಶಿವ ನೆತ್ತಿಯಲ್ಲಿ ತುಂಬಿಕೊಂಡಿದ್ದಾನೆ. ಸ್ವತಃ ಶಿವನೆ ಬೆಂಕಿಯ ಪ್ರಳಯಕಾರ, ಲಯಕಾರನಾದ ಅವನಲ್ಲೇ ಗಂಗೆ ತುಂಬಿ ಹರಿಯುವಳು. ಇದು ಸೃಷ್ಟಿ ಲಯಗಳ ಸಂಯುಕ್ತ ಅಭಿವ್ಯಕ್ತಿ. ಜಲ ಜಾನಪದವು ನಿಸರ್ಗದ ಜೀವಜಲವನ್ನು ನಿರೂಪಿಸುವ ಕಥನ. ನೀರಿನ ಬಗ್ಗೆ ಜನಪದರು ನೂರಾರು ನಂಬಿಕೆಗಳನ್ನು ರೂಢಿಸಿಕೊಂಡಿದ್ದಾರೆ. ಅವೆಲ್ಲವೂ ಅಖಂಡವಾಗಿ ಜಲವಿಲ್ಲದೆ ಜಗವಿಲ್ಲ ಎಂಬ ತತ್ವವನ್ನು ಸಾರುವಂತವೇ ಆಗಿವೆ. ಅನುಭವದ ಸತ್ಯವಿದು. ಚಂದ್ರನ ಮೇಲೆ ಜಲವಿಲ್ಲದ್ದರಿಂದ ಜೀವಿಗಳ ಅಸ್ತಿತ್ವವಿಲ್ಲ ಎಂದು ವಿಜ್ಞಾನಿಗಳು ಹೇಳುವುದಕ್ಕಿಂತಲೂ ಸುಲಭವಾಗಿ ಜನಪದರು ಜಲಜೀವದ ಸಂಬಂಧವನ್ನು ಬಿಂಬಿಸುವರು.

ಬಡವರ ಜೀವ ನೀರು. ಹಸಿದವರಿಗೆ ಗುಟುಕು ನೀರು ಸಿಕ್ಕರೆ ಸಾಕು. ಏನೂ ಊಟವಿಲ್ಲ ಎಂದರೆ ಬೊಗಸೆ ನೀರು ಕುಡಿದು ಮಲಗಿ ಬಿಟ್ಟರೆ ಆಯಿತು. ದೇವರು ಕಾಪಾಡುವನು ಎಂದು ಜಲವನ್ನೆ ನಂಬಿ ಜಲದಿಂದಲೇ ಬದುಕುಳಿಯುವರು. ’ಹೊಟ್ಟೆಗೆ ತಣ್ಣೀರ್ ಬಟ್ಟೆನೆ ಗತಿ’ ಎಂಬ ನುಡಿಗಟ್ಟು ಎಲ್ಲೆಡೆ ಚಾಲ್ತಿಯಲ್ಲಿದೆ. ಊಟವೇ ಇಲ್ಲದೆ ಹಸಿವು ತಾಳಲಾರದೇ ಸಂಕಟವಾದಾಗ ಹೊಟ್ಟೆಗೆ ತಣ್ಣೀರ ಬಟ್ಟೆ ಕಟ್ಟಿಕೊಂಡಾರೆ ಹಸಿವು ನೀಗುತ್ತದೆ ಎಂದು ಬಡವರು ಹೇಳುವರು. ತಲೆಯ ಪಕ್ಕ ರಾತ್ರಿವೇಳೆ ನೀರಿನ ತಂಬಿಗೆ ಇಟ್ಟುಕೊಳ್ಳಬಾರದೆಂಬ ನಿಷೇಧವಿದೆ. ಹಾಗೆ ಇಟ್ಟರೆ ಪ್ರಾಣ ನೀರಿನ ಆಸೆಯಲ್ಲಿ ನೀರು ಕುಡಿದು ಹೊರಟು ಹೋಗುವುದು ಎಂಬ ನಂಬಿಕೆ ಇದೆ. ನೀರು ನೆರಳು ಎರಡೂ ಇದ್ದಲ್ಲೇ ಜೀವನ ಎಂಬ ಸಾಮಾನ್ಯ ತಿಳುವಳಿಕೆಯಿಂದಲೇ ನಾಗರೀಕತೆಗಳು ಬೆಳೆದದ್ದು. ನೀರಿನ ಆಶ್ರಯವಿದ್ದಲ್ಲೆ ಗ್ರಾಮಗಳು ಕೂಡ ವಿಕಾಸವಾದದ್ದು. ಹೊಳೆ, ಹಳ್ಳ, ತೊರೆ, ನದಿ ಇವು ಗ್ರಾಮ ಸಂಸ್ಕೃತಿಯ ಜೀವ ಕೇಂದ್ರಗಳು. ನೀರು ನೆರಳಿಲ್ಲದ ಕಡೆ ಊರು ಮಾಡಬಾರದು ಹಾಗೆಯೆ ಹೆಣ್ಣುಕೊಡಬಾರದು ಎಂಬ ಗಾದೆ ಮಾತಿದೆ. ಹಳೆ ಕಾಲದಲ್ಲಿ ವಿವಾಹ ಸಂಬಂಧ ಮಾಡುವಾಗ ಆ ಊರಿನ ನೀರಿನ ಗುಣವನ್ನು ನೋಡಿ ಮುಂದುವರಿಯುತ್ತಿದ್ದರಂತೆ. ನೀರಿಗೆ ಬರವಿರುವ ಊರಿಗೆ ಹೆಣ್ಣು ಕೊಡಲು ಜನ ಮುಂದಾಗುತ್ತಿರಲಿಲ್ಲ. ಹಂಪಿಯ ಪರಿಸರ ನದಿಯಿಂದ ಕೂಡಿದ್ದರೂ ಇಂದು ನೀರಿಗೆ ಬರವಿದೆ. ಆದರೆ ಜನರ ಜಲ ಪ್ರೀತಿಗೆ ಮಾತ್ರ ಯಾವ ಬರವೂ ಇಲ್ಲ. ದೈವಿಕವಾದ ಎಲ್ಲ ಆಚರಣೆಗಳು ಪವಿತ್ರವಾಗಬೇಕಾದರೆ ಜಲದೇವತೆಯ ಪ್ರವೇಶ ಇರಲೇಬೇಕು. ಪ್ರತಿಯೊಂದು ದೈವಾಚರಣೆಯು ಜಲದಿಂದಲೆ ಶುದ್ಧಿಯಾಗಿ ಪವಿತ್ರ ಜಲದಿಂದಲೆ ಮುಕ್ತಿ ಕಾಣಬೇಕು.

ಜನಪದರು ಹೀಗಾಗಿಯೆ ಮಳೆಯ ಬಗ್ಗೆ ವಿಶಿಷ್ಟ ಆಚರಣೆಗಳನ್ನು ರೂಢಿಸಿ ಕೊಂಡಿರುವುದು. ಒಂದೊಂದು ಮಳೆಯ ಬಗ್ಗೆಯೂ ಜನಪದರು ಒಂದೊಂದು ವಿವರ ನೀಡುವರು. ವಕ್ಕಲುತನ ನಿಂತಿರುವುದೇ ಮಳೆಯ ಆಧಾರದಲ್ಲಿ. ಮಳೆ ನಕ್ಷತ್ರಗಳನ್ನು ಜನಪದರು ಒಪ್ಪಿಕೊಂಡಿದ್ದಾರೆ. ಮುಖ್ಯವಾಗಿ ಅಶ್ವಿನಿ ಮಳೆ, ಭರಣಿ ಮಳೆ, ಪುಷ್ಯ ಮಳೆ, ಆಶ್ಲೇಷಾ ಮಳೆ, ಮಕ್ಕೆ ಮಳೆ, ಪುಬ್ಬ ಮಳೆ, ಉತ್ತರೆ ಮಳೆ, ಹಸ್ತ ಮಳೆ, ಚಿತ್ತೆ ಮಳೆ, ಸ್ವಾತಿ ಮಳೆ, ವಿಶಾಖ ಮಳೆ, ಅನುರಾಧಾ ಮಳೆ, ಜ್ಯೇಷ್ಠ ಮಳೆ, ಮೂಲಾ ಮಳೆ, ಉತ್ತರಾಷಾಡ ಮಳೆ, ಶ್ರಾವಣ ಮಳೆ ಹೀಗೆ ಇಪ್ಪತ್ತನಾಲ್ಕು ಮಳೆಗಳನ್ನು ಒಂದು ವರ್ಷಾವಧಿಯಲ್ಲಿ ರೈತರು ಗುರುತಿಸಿಕೊಂಡಿದ್ದಾರೆ. ಈ ಒಂದೊಂದು ಮಳೆಗೂ ಪ್ರಾದೇಶಿಕ ವ್ಯತ್ಯಾಸಗಳಲ್ಲಿ, ಹೆಸರುಗಳಲ್ಲಿ ಕರೆಯಲ್ಪಡುತ್ತವೆ. ಹಂಪಿಯ ಪರಿಸರದಲ್ಲಿ ಹಿಂಗಾರಿ ಮಳೆಗಳೇ ಹೆಚ್ಚು. ಯುಗಾದಿ ವೇಳೆಗೆ ಒಂದು ಮಳೆ ಆಗಲೇಬೇಕೆಂಬ ಆಶಯವಿದೆ. ಮಳೆಯ ವಿವರಗಳನ್ನೆಲ್ಲ ನಕ್ಷತ್ರಗಳ ಮೂಲಕ ಹೇಳುವರು. ಒಂದೊಂದು ನಕ್ಷತ್ರವೂ ಒಂದೊಂದು ಬಗೆಯ ಮಳೆ ತರುವುದೆಂದು ನಂಬುವರು. ಭರಣಿ ಮಳೆ ಧರೆತುಂಬ ಹೊಳೆ ಹರಿಸುವುದೆಂದು ಹೇಳಿದರೆ ಸ್ವಾತಿ ಮಳೆ ಸ್ವಾತಿ ಮುತ್ತು ಹುಟ್ಟುವುದಕ್ಕೆ ದಾರಿ ಮಾಡುವುದಂತೆ. ಸ್ವಾತಿ ಮಳೆಯ ಹನಿ ಮುತ್ತಿನ ಚಿಪ್ಪಿನಲ್ಲೆ ಬಿದ್ದಾಗ ಅದು ಮುತ್ತಾಗಿ ಪರಿವರ್ತನೆಯಾಗುವುದೆಂದು ನಂಬುವರು. ಈ ಮಳೆಗಳೆಲ್ಲವೂ ಸಂಸ್ಕೃತ ಮೂಲ ಪಂಚಾಂಗ ಆಧಾರಿತವಾಗಿದ್ದರೂ ಜನಪದರು ತಮ್ಮವನ್ನಾಗಿ ಸ್ವೀಕರಿಸಿದ್ದಾರೆ. ಮಳೆಗೂ, ನಕ್ಷತ್ರಗಳಿಗೂ, ಜಲ ಸಮೃದ್ಧಿಗೂ, ಬೆಳೆಗೂ, ಜೀವ ಜಾಲದ ಜೀವಕ್ಕೆ ಅವಿನಾಭಾವ ಸಂಬಂಧವನ್ನು ಈ ಮಳೆಗಳ ಮೂಲಕ ಜನಪದರು ಕಂಡುಕೊಂಡಿರುವುದು ವಿಶಿಷ್ಟವಾಗಿದೆ. ನಿಸರ್ಗದ ಈ ಸರಪಳಿಯನ್ನು ಅನುಸರಿಸಿಯೆ ವಕ್ಕಲು ಸಂಸ್ಕೃತಿ ಬೆಳೆದಿರುವುದು. ಮಳೆಗಾಲವಿಲ್ಲದೆ ಹೋದರೆ ಕೃಷಿ ಆಚರಣೆಗಳೆಲ್ಲ ಬರಪೀಡಿತವಾಗಿ ನೆಲಕಚ್ಚುತ್ತವೆ. ಸಮೃದ್ಧ ಮಳೆಯಾದರೆ ಹಳ್ಳಿಗಳು ಸಮೃದ್ಧವಾಗಿರುತ್ತವೆ. ಮಳೆ ಕೈಕೊಟ್ಟರೆ ಜನಪದರು ನಿಸರ್ಗವನ್ನೇ ದೂರುವುದು. ಕೆರೆಕಟ್ಟೆ ಬಾವಿಗಳು ನೀರಿಲ್ಲದೆ ಬತ್ತಿ ಹೋದರೆ ಜಲ ಪೂಜೆಗೆ ತೊಡಗುವರು. ಮಳೆಗಾಗಿ ಪ್ರಾರ್ಥಿಸುವರು. ಕಪ್ಪೆಗಳಿಗೆ, ಕತ್ತೆಗಳಿಗೆ ಪೂಜಿಸಿ ಮೆರವಣಿಗೆಯೊ ಮದುವೆಯೊ ಮಾಡಿ ಮಳೆರಾಯನನ್ನು ಕರೆಯುವರು.

ಭೀಕರ ಬರಗಾಲದಿಂದ ನರಳಿ ಸತ್ತವರ ನೆನಪಿಗೆ ಮಳೆರಾಯನ ಹಾಡನ್ನು ಕಟ್ಟಿರುವ ಜನಪದರು ’ಮಳೆರಾಯ ನೀ ಜವರಾಯ’ ಎಂಬಂತೆ ದೂರಿದ್ದಾರೆ. ಎಲ್ಲರೂ ಸತ್ತುಹೋದ ಮೇಲೆ ನೀ ಯಾಕೆ ಬಂದೆಯೊ ಮಳೆರಾಯಾ ಎಂದು ಜನಪದರು ವಿಷಾದವನ್ನು ’ಬಣ್ಣದ ಗುಬ್ಬಿಯಾರು ಮಳೆರಾಯ’ ಪದದಲ್ಲಿ ಹಾಡಿದ್ದಾರೆ. ಹಂಪಿ ಪರಿಸರದ ಮಳೆಯ ಸಮೃದ್ದಿಯಲ್ಲಿ ತೋಯದೆ ಪ್ರತಿ ಬಾರಿಯೂ ಅರೆಬರೆ ಮಳೆ ನೀರ ಕುಡಿದೇ ಬದುಕಿದೆ. ಇಲ್ಲಿನ ಬೆಟ್ಟಗುಡ್ಡಗಳು ನೀರನ್ನು ಬಸಿದು ಬಂಡೆಗಳ ತಳದಲ್ಲಿರಿಸಿಕೊಂಡು ಅಂತರ್ಜಲವನ್ನು ಹೆಚ್ಚಾಗಿ ಸಂಗ್ರಹಿಸಿ ಇಟ್ಟುಕೊಂಡಿವೆ. ಅದೃಷ್ಟವೆಂದರೆ ತುಂಗಾಭದ್ರಾ ನದಿಯು ಈ ಭಾಗದಲ್ಲಿ ಅಂತರ್ಜಲವನ್ನು ವೃದ್ಧಿಸುವಲ್ಲಿ ಸಹಕರಿಸಿದೆ. ಜಲ ಕ್ಷಾಮದ ಬಗ್ಗೆ ಹತ್ತಾರು ಕಥನಗಳುಂಟು. ನೀರಿಗಾಗಿ ಹಿಂದಿನ ಕಾಲದಲ್ಲಿ ಬಹಳ ಕಷ್ಟ ಪಡಬೇಕಿತ್ತಾದರೂ ಕೆರೆ ಕಟ್ಟೆಗಳೇ ಪ್ರಮುಖ ಜಲ ಮೂಲಗಳಾಗಿ ಜನಪದರಿಗೆ ಅನೂಕೂಲಕರವಾಗಿದ್ದವು. ಹಂಪಿಯ ಬೆಟ್ಟಗುಡ್ಡಗಳಲ್ಲಿ ಅನೇಕ ನೀರಿನ ನೆಲೆಗಳಿವೆ. ಈಗ ಆ ನೀರಿನ ನೆಲೆಗಳನ್ನೇನು ಬಳಕೆ ಮಾಡುವುದಿಲ್ಲ. ವಿಜಯನಗರದ ರಾಜಧಾನಿಯಾಗಿದ್ದ ಹಂಪಿಗೆ ಅನೇಕ ನೀರಿನ ಕಾಲುವೆಗಳಿದ್ದವು. ಅವೆಲ್ಲ ನಗರ ಧ್ವಂಸವಾದದ್ದರ ಜೊತೆಯೇ ನಾಶವಾಗಿವೆ. ಹಂಪಿಯ ಮಹಾನಗರಕ್ಕೆ ನದಿಯ ನೀರು ಸುಲಭವಾಗಿ ಸಿಗುತ್ತಿತ್ತು. ಆದರೆ ಗ್ರಾಮಗಳಿಗೆ ನೀರಿನ ಸೌಲಭ್ಯ ಸೂಕ್ತವಾಗಿತ್ತೆಂದು ಭಾವಿಸಲು ಆಧಾರಗಳಿಲ್ಲ. ಹಳ್ಳಿಯ ಸಂಸ್ಕೃತಿಯಲ್ಲಿ ಕಲ್ಯಾಣಿಗಳು ಮುಖ್ಯ ಪಾತ್ರ ವಹಿಸುತ್ತಿದ್ದವು. ಹಾಗೆಯೇ ನೋಡಿದರೆ ಹಂಪಿಯ ಗ್ರಾಮಗಳಲ್ಲಿ ಕಲ್ಯಾಣಿಗಳಿಲ್ಲ. ಅರವಿಟ್ಟಿಗೆಗಳು ರಾಜ ಮಾರ್ಗದಲ್ಲಿ ಇದ್ದವೆಂಬುದಕ್ಕೆ ಸಾಕ್ಷಿಗಳಿವೆ. ಅದು ನಗರದ ಪ್ರವಾಸಿಗಳಿಗೆ ಹೊರಗಿನಿಂದ ಬಂದವರಿಗೆ ವಿಶೇಷವಾಗಿ ಇದ್ದ ವ್ಯವಸ್ಥೆ. ವಿಜಯನಗರ ಸಾಮ್ರಾಜ್ಯದ ನೀರಾವರಿ ಬಗ್ಗೆ ಸಾಕಷ್ಟು ತಿಳುವಳಿಕೆ ಇದ್ದರೂ ಆ ಕಾಲದ ಜಲ ನಿರ್ವಹಣೆಯ ಗ್ರಾಮೀಣ ಸಂದರ್ಭ ಹೇಗಿತ್ತು ಎಂಬುದರ ಬಗ್ಗೆ ತಕ್ಕ ವಿವರಗಳಿಲ್ಲ. ಜಲಕ್ರೀಡೆಯ ವರ್ಣನೆಗೆ ಸಂಬಂಧಿಸಿದ ವಿಜಯನಗರ ಕಾಲದ ಆಸ್ಥಾನ ಗ್ರಂಥಗಳ ವಿವರ ಬೇರೆ. ವೇಷ್ಯೆಯರು ಕೆರೆಕಟ್ಟೆ ಕಾಲುವೆ ಭಾವಿಗಳನ್ನು ರೂಪಿಸುತ್ತಿದ್ದರೆಂಬ ನೂರಾರು ಐತಿಹ್ಯಗಳು ಸಿಗುತ್ತವೆ. ಪ್ರಜೆಗಳಿಗೆ ನೀರು ನೆರಳು ನೀಡುವ ಮೂಲಭೂತ ಸೌಕರ್ಯಗಳನ್ನು ದೇವದಾಸಿಯರು ಮಾಡುತ್ತಿದ್ದರೆಂದಾದ ಮೇಲೆ ರಾಜರಾದವರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಬಡವರ ನೀರಿನ ಪಾಡು ಎಂತದೆಂಬುದು ವೇಷ್ಯೆಯಂತಹ ಮಹಿಳೆಯರಿಗೆ ಚೆನ್ನಾಗಿ ಗೊತ್ತಿರುತ್ತದೆ. ಒಂದು ಹೊತ್ತು ಅನ್ನವಿಲ್ಲದಿದ್ದರೂ ಒಂದು ಬೊಗಸೆ ನೀರಾದರೂ ಸಿಕ್ಕಿದರೆ ಅವರ ಹೊಟ್ಟೆ ತಣ್ಣಗಿರುತ್ತದೆ ಎಂಬ ಹೆಣ್ಣಿನ ಭಾವನೆ ರಾಜರ ರಾಜತಾಂತ್ರಿಕ ವಿವೇಕಕ್ಕಿಂತ ಸಾವಿರ ಪಾಲು ದೊಡ್ಡದು. ನೀರಿನ ಬವಣೆ ನೀಗಿಸಲು ಪ್ರಾಚೀನ ಕರ್ನಾಟಕದ ಗ್ರಾಮ ಸಂಸ್ಕೃತಿ ಕೆರೆಕಟ್ಟೆಗಳ ಕಡೆ ವಿಶೇಷವಾಗಿ ಗಮನ ಹರಿಸಿದೆ. ಕೆರೆಗಳು ಈ ಅರ್ಥದಲ್ಲಿ ಗ್ರಾಮೀಣ ನಾಗರೀಕತೆಗಳು ವಿಕಾಸವಾಗಲು ಇದ್ದ ಜೀವನದ ನೆಲೆಗಳೇ ಆಗಿವೆ. ಕೆರೆಗೆ ಹಾರವಾದ ಭಾಗೀರಥಿಯ ಕಥನದ ಚರಿತ್ರೆ ಏನಾದರೂ ಇರಲಿ, ಅದರ ಹಿಂದಿನ ನೀರಿನ ನೆಲೆಯ ದಾಹ ಮಾತ್ರ ಜನಪದರ ಜಲತತ್ವದ ಪರಮ ಪಾಡೇ ಆಗಿದೆ ಎಂಬುದಂತು ಸ್ಪಷ್ಠ. ಕೆರೆ ಕಟ್ಟೆ ನಿರ್ಮಿಸುವುದೆಂದರೆ ಜಲ ಸಂಸ್ಕೃತಿಯನ್ನು ಕಟ್ಟುವುದೆಂದು ಅರ್ಥ. ಊರಿಗೊಂದು ಕೆರೆ ಇಲ್ಲ ಎಂದರೆ ಪ್ರಾಚೀನ ಕರ್ನಾಟಕದಲ್ಲಿ ಅದಕ್ಕೆ ಯಾವ ಮಹತ್ವವೂ ಇರುತ್ತಿರಲಿಲ್ಲ. ಕೆರೆ ಕಟ್ಟೆಗಳ ತಾಂತ್ರಿಕ ತಿಳುವಳಿಕೆಗೆಂದೇ ನೀರಗಂಟಿಗಳು, ವಡ್ಡರು ಇರುತ್ತಿದ್ದರು. ಜಲ ನಿರ್ವಹಣೆ ಜಲ ಸಂಗ್ರಹಣೆಗಾಗಿ ವಡ್ಡರ ಸಮುದಾಯಗಳು ತಲೆಮಾರುಗಳನ್ನೇ ಗ್ರಾಮೀಣ ಸಂಸ್ಕೃತಿಗಳ ವಿಕಾಸಕ್ಕೆ ಅರ್ಪಿಸಿವೆ. ವಡ್ಡರು ಈ ಅರ್ಥದಲ್ಲಿ ಗ್ರಾಮೀಣ ನೀರು ನಿರ್ವಹಣೆಯನ್ನು ಮಾತ್ರವಲ್ಲದೆ ಆ ಕಾಲಘಟ್ಟದ ಗ್ರಾಮಗಳ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ, ನೈಸರ್ಗಿಕ ಮೌಲ್ಯಗಳನ್ನು ಕೂಡ ಕಟ್ಟಿದ್ದಾರೆ. ಕೆರೆಕಟ್ಟೆ ಕಟ್ಟುವುದೆಂದರೆ ಗ್ರಾಮ ಸಂಸ್ಕೃತಿಯನ್ನು ಕಟ್ಟುವುದೆಂದರ್ಥ.

ಭೋವಿಗಳ ಈ ಯತ್ನ ಗ್ರಾಮ ಸಮಾಜಗಳ ಜಲ ಕ್ಷಾಮವನ್ನು ಹೋಗಲಾಡಿಸಿದೆ. ಕೆರೆಗೆ ಹಾರವಾದವರು ಕೂಡ ಸಮಷ್ಠಿಯ ಜಲ ದಾಹಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಂಡಿರುವುದು ಕೂಡ ಜಲ ಸಮಸ್ಯೆಯ ಬೇರೆ ಬೇರೆ ಸ್ವರೂಪವನ್ನು ಬಿಂಬಿಸುತ್ತದೆ. ಸಾಮ್ರಾಜ್ಯಗಳು ನೀರಾವರಿ ಕಾಮಗಾರಿಗಳನ್ನು ಮಾಡಿದ್ದರೂ ಕೂಡ ಇಂತಹ ಕಾರ್ಯಗಳನ್ನು ಸ್ಥಳೀಯ ಗ್ರಾಮಾಡಳಿತವೇ ರೂಪಿಸಿಕೊಳ್ಳುತ್ತಿತ್ತು. ದಾನ ದತ್ತಿಗಳನ್ನು ನೀಡಿದವರು ಕೆರೆಕಟ್ಟೆ ನಿರ್ಮಿಸುವ ಮೂಲಕ ಜಲ ಸಂಸ್ಕೃತಿಯ ನಿಸರ್ಗ ಪ್ರೀತಿಯನ್ನು ತೋರಿಕೊಂಡಿದ್ದಾರೆ. ಇಂತಹ ಘನತೆಗಳ ನಡುವೆಯೂ ಕೆರೆಕಟ್ಟೆ, ಕೊಳ ಬಾವಿಗಳ ನೀರನ್ನು ಕೆಲವರು ಮಾತ್ರ ನೇರ ಬಳಸಬಾರದು ಎಂಬ ನಿಷೇಧವು ಮಧ್ಯ ಕಾಲೀನ ಕರ್ನಾಟಕದ ಗ್ರಾಮ ಸಮಾಜದಲ್ಲಿ ಉಗ್ರವಾಗಿತ್ತು. ಇದು ನೆನ್ನೆ ಮೊನ್ನೆ ತನಕ ಕ್ರೂರವಾಗಿ ಆಚರಣೆಯಲ್ಲಿತ್ತು. ಈಗಲೂ ಹಂಪಿಯ ಪರಿಸರದಲ್ಲಿ ದಲಿತರು ನೇರವಾಗಿ ಸವರ್ಣೀಯರ ನೀರಿನ ನೆಲೆಗಳಿಗೆ ಪ್ರವೇಶಿಸುವಂತಿಲ್ಲ. ಇದು ಜನಪದರ ಜಲನೀತಿಯಲ್ಲಿ ಮನ್ನಿಸಲಾಗದ ಲೋಪ. ಜಾತಿಯ ತಾರತಮ್ಯದಿಂದ ಗಂಗೆಯನ್ನು ಮುಟ್ಟಿ ಅಪವಿತ್ರ ಮಾಡಬಾರದು ಎಂಬ ನೀತಿಯ ದಂಡನೆಯಿಂದ ಅಸ್ಪೃಷ್ಯರನ್ನು ಜಲಮಾತೆಯಿಂದ ದೂರವಿರಿಸಿದ್ದರು. ದಲಿತರು ಮೇಲಿನವರಿಂದ ನೀರು ಬಿಡಿಸಿಕೊಳ್ಳಬೇಕಿತ್ತು. ಅವರ ಕೆರೆಕಟ್ಟೆಗಳಿಗೆ ಹೋಗಿ ನೀರು ಮುಟ್ಟಿದರೆ ದಂಡಕ್ಕೆ ಬಹಿಷ್ಕಾರಕ್ಕೆ ಒಳಪಡಬೇಕಿತ್ತು. ಹಂಪಿಯ ಅಂಚಿನಲ್ಲಿರುವ ಕೊಪ್ಪಳ ಜಿಲ್ಲೆಯಲ್ಲೇ ಇಂತಹ ಬಹಿಷ್ಕಾರಗಳು ಇತ್ತೀಚೆಗಷ್ಟೇ ಘಟಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸಾಕ್ಷ್ಯವಿದೆ.

ಜಲಮಾತೆಗೆ ಭೇದವಿಲ್ಲ. ಗಾಳಿಬೆಳಕು ನೀರು ಸರ್ವರಿಗೂ ಒಂದೇ ಎಂದು ಒಪ್ಪಿದರೂ ಜಾತಿಯ ವಿಷಯವು ಜಲವನ್ನು ವಿಷ ಮಾಡಬಲ್ಲದು. ಹಂಪಿಯ ಪರಿಸರದ ಗ್ರಾಮಗಳಲ್ಲಿ ಈಗಲೂ ಸವರ್ಣೀಯರ ಕೇರಿಗಳ ನೀರನ್ನು ಅಸ್ಪೃಷ್ಯರು ಬಳಸುವಂತಿಲ್ಲ. ಜಲ ಸಂಸ್ಕೃತಿಯ ವೈರುಧ್ಯ ಹೇಗಿರುತ್ತದೆ ಎಂದರೆ, ಗಂಗೆಯೇ ತಮ್ಮ ಮೂಲ ತಾಯಿ ಎಂದು ಅಸ್ಪೃಷ್ಯರು ವಾದಿಸುವುದಿದೆ. ಗಂಗೆ ಮಕ್ಕಳು ನಾವೆಂದು ಹೇಳುತ್ತಾ ಪವಿತ್ರಾ ಗಂಗಾನದಿಯು ತಮ್ಮ ಮೂಲದವಳೇ ಎಂದು ಸಮರ್ಥಿಸಿಕೊಳ್ಳುವರು. ಕರ್ನಾಟಕದ ಉದ್ದಕ್ಕೂ ದಲಿತರು ಇಂತಹ ಪುರಾಣದ ಆಧಾರವನ್ನು ನೀಡುವ ಅಚ್ಚರಿ ಇದೆ. ಬದುಕಲು ಅಗತ್ಯವಾಗಿ ಬೇಕಾದ ನೀರಿನಿಂದಲೇ ತಮ್ಮನ್ನು ದೂರ ಮಾಡುವ ಕ್ರೂರ ನಿಯಮ ಹೇರಿದಾಗ ಆ ನೀರಿಗೆ ಇವರು ಅರ್ಹರಲ್ಲ ಅಧಿಕಾರವಿಲ್ಲ ಸಂಬಂಧವಿಲ್ಲ ಎಂದು ಬಹಿಷ್ಕರಿಸಿದರೆ ದಲಿತರು ಆ ಮೂಲ ಜಲದೇವಿ ಗಂಗೆಯನ್ನೇ ತಮ್ಮ ಮಗಳು ಎಂದು ಗುರುತಿಸಿಕೊಳ್ಳುವುದು ಬದುಕುಳಿಯುವ ಪುರಾಣವಾಗಿದೆ. ವಿಶೇಷವಾಗಿ ಮಾದಿಗರಲ್ಲೇ ತಳ ಸಮುದಾಯವಾದ ದಕ್ಕಲಿಗರು ಗಂಗೆಯನ್ನು ತಮ್ಮ ಮಗಳೆಂದು ಸಾರುವರು. ಗಂಗೆ ಗೌರಿ ನಾಟಕದಲ್ಲೂ ಗಂಗೆಯ ತಿರಸ್ಕೃತರ ಪರವಾದ ಹೆಣ್ಣು ಮಗಳಂತೆ ಕಾಣುವುದಿದೆ. ಗಂಗೆಗೌರಿ ಇಬ್ಬರೂ ಜಗಳವಾಡುವ ವೇಳೆ ಗಂಗೆಯನ್ನು ಕೀಳಾಗಿ ಧ್ವನಿಸುವುದಿದೆ. ಜನಪದರ ಗ್ರಾಮೀಣ ಬದುಕಿನಲ್ಲಿ ಇಂತಹ ಅಂತರಗಳಿಂದಾಗಿಯೆ ಒಂದೊಂದು ಕೇರಿಗೂ ಒಂದೊಂದು ಬಾವಿಕಟ್ಟಿಕೊಳ್ಳುವ ರೂಢಿ ಬೆಳೆದದ್ದು. ಅವರವರ ಕೇರಿಯಲ್ಲಿ ಅವರವರೆ ನೀರು ಕುಡಿಯಬೇಕೆಂಬ ನೀತಿಯಿಂದಾಗಿ ಜಾತಿಯ ಜಲಸಮಸ್ಯೆ ಬಗೆಹರಿದಿದೆ. ಆದರೆ ಗ್ರಾಮಗಳ ಹಬ್ಬದಲ್ಲಿ ಕೆರೆ ಕಟ್ಟೆಗಳಿಂದ ನೀರನ್ನು ಪೂಜಿಸಿ ಬರಬೇಕಾದಾಗಲೂ ಇದು ಮರುಕಳಿಸಿ ಒಂದೊಂದು ಕೋಮಿನವರು ಒಂದೊಂದು ದಿಕ್ಕಿನಲ್ಲಿ ನೀರು ಪೂಜಿಸಿ ಆ ದಿನ ಮಾತ್ರ ಬಳಸಬಹುದು ಎಂಬ ಕ್ರಮ ಅಳವಡಿಸಲಾಗಿತ್ತು.

ಇದೆಲ್ಲವೂ ಜಲದ ಬಗೆಗಿನ ವಿಷಾದದ ಸಂಗತಿಗಳೇ. ಹಂಪಿಯ ಜನಪದ ಇವುಗಳಿಂದ ಹೊರತಾದುದಲ್ಲ. ವಿಜಯನಗರ ಸಾಮ್ರಾಜ್ಯದ ಕಾಲದ ಹಳ್ಳಿಗಳಲ್ಲಿ ಜೀವಂತವಾಗಿರುವ ಅನಂತಶಯನ ಗುಡಿ, ಮಲಪನಗುಡಿ, ಕಮಲಾಪುರ, ನಾಗೇನಹಳ್ಳಿ, ಕಡ್ಡಿರಾಂಪುರಗಳಲ್ಲೂ ಈ ಬಗೆಯ ಸೂಕ್ಷ್ಮಭೇದ ಈಗಲೂ ಜೀವಂತವಿದೆ. ಜಲಭೇದವನ್ನು ಮಾಡಬಾರ‍ದು ಎಂಬ ಸಾಂಸ್ಕೃತಿಕ ನಿಯಮ ಇದ್ದೂ ಅದು ಜಾರಿಗೆ ಬರದಂತಿದೆ. ಬಹಿಷ್ಕಾರ ಹಾಕುವಾಗ ನೀರು ಕೊಡಬಾರದು ಎಂಬುದೇ ಪ್ರಧಾನವಾಗಿದೆ. ನೀರನ್ನು ಮುಟ್ಟಿ ಮೈಲಿಗೆ ಮಾಡಿದಾಗ ಇಡೀ ಊರೇ ಒಂದಾಗಿ ಕೆರೆಕಟ್ಟೆ ಕಾಲುವೆಗಳನ್ನು ಪವಿತ್ರೀಕರಿಸಿದ್ದ ನೂರಾರು ಪ್ರಕರಣಗಳು ನಡೆದಿವೆ. ಅಂತಹ ಪವಿತ್ರ ನೀರಿನ ಕೊಳಗಳಾಗಿ ಒಂದು ಕಾಲಕ್ಕೆ ಹಂಪಿಯ ಮಹಾಪ್ರಜೆಗಳಿಗೆ ನೀರುಣಿಸಿದ್ದ ಬಾವಿಗಳೀಗ ಹಂಪಿಯಲ್ಲಿ ಗತ ಕೊಳೆಯ ತುಂಬಿಕೊಂಡು ಮುಚ್ಚಿಹೋಗಿವೆ. ಹಂಪಿಯ ಕೋಟೆ ಕೊತ್ತಲಗಳಲ್ಲಿ ಈಗಲೂ ಇಂತಹ ಬಾವಿಗಳಿವೆ. ದೇವಾಲಯಗಳ ಒಳಗೇ ಇರುತ್ತಿದ್ದ ನೀರಿನ ಬಾವಿಗಳು ಮುಚ್ಚಿ ಹೋಗಿದ್ದು ಕೆಲವರು ಹೇಳುವಂತೆ ಯಾರನ್ನಾದರೂ ಕೊಂದು ಇಂತಹ ಪುಣ್ಯಾರ್ಚನೆಯ ಬಾವಿಗಳಲ್ಲಿ ಎಸೆದು ಹೊರಟು ಹೋಗಬಹುದಂತೆ. ಒಂದು ಕಾಲದ ದೇವರ ಸೇವೆಯ ಪವಿತ್ರ ಜಲದ ಬಾವಿಗಳಲ್ಲೀಗ ಎಂತಹ ಪುಣ್ಯ ಕಾರ್ಯವೋ! ಒಟ್ಟಿನಲ್ಲಿ ಹಂಪಿಯ ಆ ಕಾಲದ ನೀರಿನ ಬಾವಿಗಳು ಪಾಚಿಗಟ್ಟಿ ಹೂಳುತುಂಬಿ ಕಸವಾಗಿ ಹೋಗಿವೆ. ಈ ಬಾವಿಗಳದು ಯಾವ ತಪ್ಪೂ ಇಲ್ಲ. ಅವುಗಳನ್ನು ದುರ್ಬಳಕೆ ಮಾಡಿಕೊಂಡವರ ತಪ್ಪನ್ನು ಮರೆತೊ ನಿರ್ಲಕ್ಷಿಸಿಯೊ ಈ ಬಗೆಯ ಬಾವಿಗಳನ್ನು ನವೀಕರಿಸಬೇಕಾದದ್ದು ಮುಖ್ಯ. ಈಗಲೂ ಇವು ಜನರಿಗೆ ಬೇಕಾದ ನೀರನ್ನು ಬೆಟ್ಟಗುಡ್ಡಗಳಲ್ಲಿ ಬೇಸಿಗೆ ಇದ್ದಾಗಲೂ ಒದಗಿಸಬಲ್ಲವಾಗಿವೆ.

ಈ ಹಿನ್ನೆಲೆಯಲ್ಲಿ ನೋಡಿದರೆ ಹಂಪಿಯ ನೀರಿನ ಬವಣೆಯನ್ನು ನೀಗಿಸಲು ತುಂಗಭದ್ರಾ ನದಿ ಮುಖ್ಯವಾಗಿದ್ದರೆ ನೈಸರ್ಗಿಕವಾಗಿದ್ದ ಜಲ ಮೂಲಗಳು ಮತ್ತೊಂದು ರೀತಿಯಲ್ಲಿ ಜಲ ಸಮಸ್ಯೆಯನ್ನು ಬಗೆಹರಿಸಿವೆ. ವಿಜಯನಗರ ಸಾಮ್ರಾಜ್ಯವು ತುಂಗಭದ್ರಾ ನದಿಯ ಆಸುಪಾಸಿನಲ್ಲೇ ನಿರ್ಮಾಣವಾಗಿತ್ತು. ಬಸವಣ್ಣನ ಕಾಲುವೆಯಿಂದ ಕಮಲಾಪುರ ಕೆರೆಗೆ ನದಿಯ ನೀರು ತಂದು ನಂತರ ಕೆರೆಯಿಂದ ಆ ನೀರನ್ನು ವಿಜಯನಗರದ ಒಟ್ಟು ವ್ಯಾಪ್ತಿಗೆ ಹರಿಸಿಕೊಳ್ಳಲಾಗುತ್ತಿತ್ತು. ಕೃಷಿ ಮತ್ತು ಜೀವನಾವಶ್ಯಕತೆಗಳಿಗೆ ನೀರೊದಗಿಸುತ್ತಿದ್ದ ಕಮಲಾಪುರದ ಕೆರೆ ಈಗಲೂ ನಿರಂತರವಾಗಿ ಹಂಪಿಯ ಕೇಂದ್ರ ಭಾಗಕ್ಕೆ ನೀರುಣಿಸುತ್ತಿದೆ. ಈ ಕಾಲದ ಹಂಪಿಯ ಜನಪದಕ್ಕೆ ತುಂಗಭದ್ರಾ ನದಿಯ ಅಣೆಕಟ್ಟೆಯಿಂದಾಗಿ ಕುಡಿಯಲು ಹಾಗು ಬೆಳೆಯಲು ನೀರು ಸಮನಾಗಿ ದೊರೆಯುತ್ತಿದೆ. ಕಾಲ ಬದಲಾದ್ದರಿಂದ ಈ ಹೊಳೆ ನೀರಿಗೆ ದಲಿತರು ಹಿಂಜರಿಯಬೇಕಾಗಿಲ್ಲ. ನದಿ ಮುಕ್ತವಾಗಿದೆ. ಯಾರು ಬೇಕಾದರೂ ಈ ಹೊಳೆಯಲ್ಲಿ ಪವಿತ್ರ ಸ್ನಾನ ಮಾಡಬಹುದು. ’ತುಂಗಾಪಾನ ಗಂಗಾಸ್ನಾನ’ ಎಂಬ ಗಾದೆಯೆ ಹುಟ್ಟಿದೆ. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆಯೆ’ ಎಂಬ ನುಡಿಯಂತು ಅಸ್ಪೃಷ್ಯರಿಂದಲೇ ಹುಟ್ಟಿರಬೇಕು. ಮತ್ತೊಂದು ಗಾದೆಯಿದೆ, ’ಕೊಕ್ಕರೆಗೆ ಒಂದು ಊರೊ ಒಂದು ಕೆರೆಯೊ’ ಎಂದು. ಇದು ಕೂಡ ಪರೋಕ್ಷವಾಗಿ ಅಲೆಮಾರಿಗಳ ಪ್ರತಿಭಟನಾತ್ಮಕ ದನಿಯೇ ಇರಬೇಕು. ’ಏಳೂರು ಕೆರೆಯ ನೀರು ಕುಡಿದ ಮಗಾ ನಾನು’ ಎಂಬ ಧೀರೊದ್ಧಾತ ಮಾತು ಅಷ್ಟೂ ಊರುಗಳ ಜೈಸಿದವನು ಎಂಬ ಜಲ ಗರ್ವವನ್ನು ತೋರುವಂತಾಗಿದೆ. ಇವೆಲ್ಲ ದನಿಗಳೂ ಹಂಪಿಯ ಜನಪದರಲ್ಲೂ ಕೀಳಿಸುತ್ತವೆ. ನೀರು ಅತ್ಯಂತ ಮುಖ್ಯವಾಗಿದ್ದರಿಂದ ಹಾಗು ಸಮಾನ ಅವಶ್ಯಕತೆ ಹಾಗು ಸಮಸ್ಯೆ ಆಗಿದ್ದರಿಂದ ಎಲ್ಲೆಡೆ ಒಂದೇ ಬಗೆಯ ಜಲ ಅಭಿವ್ಯಕ್ತಿ ಕಂಡುಬರುತ್ತದೆ.

ದಾನ ಧರ್ಮ ಮಾಡುವುದು ಸಾಮಾನ್ಯ ಕರ್ಮ ನಿಜ, ಆದರೆ ಕೆರೆಕಟ್ಟೆ ಕಟ್ಟಿಸುವುದು ಮಹಾಪುಣ್ಯ ಎಂದು ಕಾವ್ಯಗಳ ನಾಯಕರು ಸಾರುವುದಿದೆ. ಜನರಿಗೆ ಇದು ನಿಜವಾದ ಉಪಕಾರ ಎಂಬ ಪ್ರಜ್ಞೆ ಇದ್ದಿದ್ದರಿಂದಲೇ ಕನ್ನಡ ನಾಡಿನ ತುಂಬ ಕೆರೆಗಳು ರೂಢಿಗೊಂಡದ್ದು. ಮಳೆಯ ರಾಯನ ಹಾಡುಗಳಂತು ಬರಗಾಲದ ಜನರ ಬವಣೆಯನ್ನು ಕಣ್ಣಿಗೆ ಕಟ್ಟುತ್ತವೆ. ಕೆರೆಯನ್ನು ಕಟ್ಟಿಸುವುದು, ಸಾಲುಮರಗಳ ಬೆಳೆಸುವುದು ಉತ್ತಮ ಪ್ರಭುವಿನ ಗುಣ ಎಂದು ಸೂಚಿಸಿರುವುದು ಜಲ ಸಂಪತ್ತಿನ ಹಿನ್ನೆಲೆಯಲ್ಲೇ. ಜನಪದರು ತಮ್ಮ ಜೀವನವನ್ನೇ ವಕ್ಕಲು ತನದಲ್ಲೇ ಕಳೆಯಬೇಕಾದ್ದರಿಂದ ಅವರಿಗೆ ನಿಸರ್ಗದಲ್ಲಿ ಅಮೂಲ್ಯವಾದ ಸಂಪತ್ತೆಂದರೆ ಜಲವೇ ಆಗಿತ್ತು. ಅಂತರ್ಜಲವನ್ನು ಶೋಧಿಸುವಲ್ಲಿ ಜನಪದರು ವಿಶಿಷ್ಟ ಪರಿಣತಿಯನ್ನು ಪಡೆದುಕೊಂಡಿದ್ದರು. ಈಗಲೂ ಹಂಪಿ ಪರಿಸರದ ಅಂತರ್ಜಲ ಶೋಧಕರು ತೆಂಗಿನ ಎಳನೀರೊಂದನ್ನು ಕೈಯಲ್ಲಿ ಹಿಡಿದು ಮೂರು ಸುತ್ತು ಹಾಕಿ ಅಂಗೈಯಲ್ಲಿ ಎಳೆ ತೆಂಗಿನ ಕಾಯನ್ನು ನೇರವಾಗಿ ಇಟ್ಟು ನೀರಿನ ದಿಕ್ಕನ್ನು ಗುರುತಿಸುವರು. ಎಳನೀರು ಭೂಮಿಯ ಒಳಗಿನ ನೀರನ್ನು ಸೆಳೆಯುವುದಂತೆ. ಆ ಸೆಳೆತವನ್ನು ಅನುಸರಿಸಿ ಅಂತರ್ಜಲದ ತಾವಿನೆಡೆಗೆ ಹೋಗುವರು. ತೀರಾ ಹೆಚ್ಚು ನೀರು ಬುಗ್ಗೆಯಂತೆ ಭೂಮಿಯಲ್ಲಿ ಸಾಗುತ್ತಿದ್ದರೆ ಎಳನೀರು ಅಂಗೈಯಲ್ಲೆ ತಿರುಗುವುದು ಎನ್ನುವರು. ಮತ್ತೆ ಕೆಲವರು ಅಂತರ್ಜಲ ಕಡ್ಡಿಯಿಂದ ನೀರಿನ ನೆಲೆ ಗುರುತಿಸುವರು. ಜಲಕಡ್ಡಿ ಅಥವಾ ಜಲಕೋಲು ನೀರಿನ ಆಸರೆಯನ್ನು ತೋರುವುದೆಂದು ಹೇಳಲಾಗುವುದು. ಮನಸ್ಸು ಶುದ್ಧವಾಗಿದ್ದರೆ ಸರಿಯಾದ ಅಂತರ್ಜಲ ಕಾಣುವುದಂತೆ. ಕಬ್ಬಿಣದ ತುಂಡೊಂದನ್ನು ದಾರದಲ್ಲಿ ಕಟ್ಟಿ, ಅದನ್ನು ಗಿರಿ ಗಿರಿ ಸುತ್ತಿಸುತ್ತಾ ಹೋಗುವರು. ಯಾವ ಜಾಗದಲ್ಲಿ ಸುತ್ತುತ್ತಿರುವ ಕಬ್ಬಿಣ ನಿಲ್ಲುವುದೊ ಆ ಜಾಗದಲ್ಲಿ ನೀರಿದೆ ಎಂದು ಗುರುತಿಸುವರು. ಇಂತದೇ ಹಲವು ಬಗೆಯ ಜಲದ ಸೆಳೆತವನ್ನು ಕಣ್ಣು ಮುಚ್ಚಿ ಧ್ಯಾನಿಸಿ ಹುಡುಕುವರು. ಗಂಗಮ್ಮನನ್ನು ಭಕ್ತಿಯಿಂದ ನೆನೆದು ’ತಾಯೀ ನೀನೆಲ್ಲೆಲ್ಲಿ ಹರಿದು ಹೋಗುತ್ತಿರುವೆಯೊ ದಾರಿ ತೋರವ್ವಾ’ ಎಂದು ನಡೆದರೆ ಆಕೆಯೇ, ’ಇಲ್ಲಿದ್ದೇನೆ ಬಾರಪ್ಪಾ ಎಂದು ಸೆಳೆದುಕೊಳ್ಳುವಳು. ಆಕೆ ಹೇಗೇಗೆ ದಾರಿ ತೋರುವಳೋ ಅದರಂತೆ ತಂತಾನೆ ಕಾಲುಗಳು ಹೆಜ್ಜೆ ಹಾಕುತ್ತವೆ. ಕೈ ಹಿಡಿದು ಆಕೆಯೇ ನಡೆಸಿದಂತಾಗುತ್ತದೆ. ಹೊಲದವರ ಪಾಪಪುಣ್ಯಗಳ ಲೆಕ್ಕ ಹಾಕಿ ಆಕೆ ಅಷ್ಟಷ್ಟು ನೀರು ತೋರುವಳು’ ಎಂದು ಜಲ ಶೋಧಕರು ಹೇಳುವರು. ಭಾಗಶಃ ಭೂಮಿಯ ಒಳಗಿನ ಆಯಸ್ಕಾಂತೀಯ ಸೆಳೆತ ಜಲ ಶೋಧಕರ ಮೆದುಳಿನ ಮೇಲೆ ಪರಿಣಾಮ ಉಂಟು ಮಾಡಬಲ್ಲದು. ನಿಸರ್ಗದ ಮರೆಯಲ್ಲಿರುವ ಜಲ ಸ್ಪಂದನಕ್ಕೂ ಮನಸ್ಸಿನ ಒಳಗಿರುವ ಆಯಸ್ಕಾಂತೀಯ ಚಲನೆಗೂ ಎಲ್ಲಿಯೊ ಒಂದು ಬಿಂದುವಿನ ಸಂಬಂಧವಿರಬೇಕು. ಆ ಬಿಂದುವೇ ಜಲ ಬಿಂದುವಾಗಿ ಅವರಿಗೆ ಕಂಡಿರಬೇಕು.

ಜಲ ಶೋಧಕರ ಬಗ್ಗೆ ಗೌರವ ಭಾವನೆ ಇದೆ. ಹಣಕ್ಕಾಗಿ ಜಲ ಶೋಧಿಸುವುದು ತಪ್ಪು, ಪ್ರೀತಿಯಿಂದ ಪ್ರಸಾದವೊ ವೀಳ್ಯವೊ ಪುಟ್ಟ ದಕ್ಷಿಣೆ ಕಾಣಿಕೆಯೊ ಕೊಟ್ಟರೆ ಅಷ್ಟೇ ಸಾಕೆಂದು ಹೇಳುವರು. ಅಂತರ್ಜಲದ ವಿಪರೀತ ಅವಲಂಬನೆಯಿಂದ ಹಂಪಿ ಪರಿಸರದ ವ್ಯವಸಾಯವು ಹೆಚ್ಚು ಹಸಿರಾಗಿದ್ದರೂ ಅನೇಕ ಬಗೆಯ ಪರಿಸರದ ತೊಡಕಿನಿಂದ ಅಂತರ್ಜಲವು ಕಡಿಮೆ ಆಗುತ್ತಿದೆ. ಕೊಳವೆ ಬಾವಿಗಳು ಹೆಚ್ಚಿದಂತೆಲ್ಲ ಭೂಮಿಯ ಒಳಗಿನ ಜಲದ ಹರಿವು ಕಡಿಮೆ ಆಗಿದೆ. ಇದಕ್ಕಿಂತಲೂ ಮುಖ್ಯವಾಗಿ ಗಣಿಗಾರಿಕೆಯಿಂದ ಭೂಮಿಯ ಒಳಗಿನ ಬಂಡೆ ಸಂಧುಗಳು ಅಲುಗಾಡಿ ಅಲ್ಲಿಂದ ಹರಿಯುತ್ತಿದ್ದ ಜಲ ದಾರಿಗಳು ಮುಚ್ಚಿ ಹೋಗಿವೆ. ನೀರಾವರಿಯ ಮೂಲಕ ವ್ಯವಸಾಯ ಮಾಡುವವರು ನೀರನ್ನು ಯಥೇಚ್ಚವಾಗಿ ಬಳಸಿ ನೀರು ಪೋಲಾಗುತ್ತಿರುವುದೂ ಇದೆ. ಹಂಪಿಯ ಜನಪದ ನೀರಿನ ನೀತಿಯಲ್ಲಿ ಬಳಕೆಯಲ್ಲಿ ಒಂದೇ ಬಗೆಯಾಗಿಲ್ಲ. ಕೆಲವರು ನೀರಿಗಾಗಿ ಪರದಾಡಿದರೆ ಮತ್ತೆ ಕೆಲವರು ನೀರನ್ನು ಸ್ವೇಚ್ಛೆಯಾಗಿಯೂ ಬಳಸುವುದಿದೆ. ಹಂಪಿ ಪರಿಸರದ ಭೂಮಿಯ ಒಳಗಿನ ರಚನೆ ಬಂಡೆಗಳಿಂದ ಆವೃತ್ತವಾಗಿದ್ದು ಬೆಟ್ಟಗುಡ್ಡಗಳ ಸಂದಿಯಿಂದ ಮಳೆಗಾಲದಲ್ಲಿ ನೀರು ಸಂಗ್ರಹಗೊಂಡು ಝರಿಯಂತೆ ಜಿನುಗಿ ಹರಿಯುವುದಿದೆ. ಹಂಪಿಯ ಕೇಂದ್ರ ಭಾಗದಲ್ಲೇ ಇಂತಹ ನೀರಿನ ಝರಿಗಳಿವೆ. ಮಳೆಗಾಲ ಮುಗಿದ ಸುಮಾರು ದಿನಗಳ ತನಕ ಈ ಝರಿಗಳು ನೀರಿನ ತಾಣಗಳಾಗಿರುತ್ತವೆ. ವ್ಯಾಸತೀರ್ಥ ಎಂಬ ಝರಿಯೊಂದು ವಿಶೇಷವಾಗಿದ್ದು ಇದರ ನೀರು ಪವಿತ್ರ ಎಂದು ಭಾವಿಸಲಾಗಿದೆ.

ಬೆಟ್ಟದ ಎತ್ತರದಲ್ಲೂ ಬಾವಿಗಳಿವೆ ಬಂಡೆಗಳ ಸಂದಿಯಿಂದ ಜಲ ಹರಿದು ಇಂತಹ ಬಾವಿಗಳಿಗೆ ತಂಪಾದ ಸಿಹಿ ನೀರು ಸೇರುತ್ತದೆ. ಬೇಸಿಗೆಯಲ್ಲು ಈ ಕಲ್ಲು ಬಾವಿಗಳಲ್ಲಿ ನೀರಿರುತ್ತದೆ. ಸಹಜ ನೈಸರ್ಗಿಕ ಜಲ ನೆಲೆಗಳೆಂದು ಇವು ಪ್ರಸಿದ್ಧಿ ಪಡೆದಿವೆ. ಪ್ರಸಿದ್ಧವಾದ ಪಂಪಾ ಸರೋವರವು ಒಂದು ಕಾಲಕ್ಕೆ ಬಂಡೆಗಳ ಬೃಹತ್ ಕೋಟೆಯ ನಡುವೆ ನೈಸರ್ಗಿಕವಾಗಿ ನಿರ್ಮಾಣವಾಗಿದ್ದ ಸರೋವರ ಎನಿಸುತ್ತದೆ. ಈ ಪಂಪಾಸರೋವರದ ಪಾವಿತ್ರ್ಯವನ್ನು ಹಂಪಿಯ ಸ್ಥಳ ಪುರಾಣಗಳು ಕೊಂಡಾಡುತ್ತವೆ. ಆದಿಮ ಯುಗದ ವಾಸದ ನೆಲೆಯಾಗಿದ್ದ ಈ ಸ್ಥಳವು ತನ್ನ ನೀರಿನ ನೆಲೆಯಿಂದಾಗಿಯೇ ಮಾನವ ನೆಲೆಯೂ ಆಗಿತ್ತೆಂದು ಊಹಿಸಬಹುದು. ಗುಹಾ ಚಿತ್ರಗಳು ಈ ಭಾಗದಲ್ಲಿ ಅಂತಹ ಕುರುಹುಗಳನ್ನು ದಟ್ಟವಾಗಿ ಬಿಂಬಿಸುತ್ತವೆ. ಪಂಪ ಮಹಾತ್ಮೆ ವಿಜಯನಗರ ಸಾಮ್ರಾಜ್ಯದ ಹೆಮ್ಮೆಯಾಗಿತ್ತು. ಪ್ರಾಚೀನ ಕರ್ನಾಟಕದ ಸಾಂಸ್ಕೃತಿಕ ನೆಲೆಯಾಗಿದ್ದ ಪಂಪಾ ಸರೋವರವು ಕನ್ನಡನಾಡಿನ ಪೂರ್ವಿಕರ ಆದಿ ಬೀಡಾಗಿತ್ತು ಎಂದು ಊಹಿಸಬಹುದು. ಕರ್ನಾಟಕದ ಚರಿತ್ರೆಯ ಅನೇಕ ಮುಖಗಳಿಗೆ ಸಾಕ್ಷಿಯಾಗಿರುವ ಪಂಪಾ ಸರೋವರವು ತನ್ನ ಜಲ ಮೂಲದಿಂದಾಗಿ ಪ್ರಸಿದ್ಧವಾಗಿದೆ. ಇಂತಹ ಹಿನ್ನೆಲೆಯನ್ನು ಹೊಂದಿಲ್ಲದಿದ್ದರೂ ಕನ್ನೇರಮ್ಮನ ಬಾವಿ ಕೂಡ ಆನೆಗೊಂದಿಯ ದುರ್ಗಾಬೆಟ್ಟದಲ್ಲಿ ಗಮನ ಸೆಳೆಯುತ್ತದೆ. ಜನಪದರು ಈ ಎರಡೂ ನೆಲೆಗಳಿಗೆ ಭಕ್ತಿಯಿಂದ ನಡೆದುಕೊಳ್ಳುವರು. ಕನ್ನೇರಮ್ಮನ ಬಾವಿಯ ನೀರನ್ನು ಪೂಜೆ ಪುನಸ್ಕಾರಗಳಿಗೆ ಮಾತ್ರ ಬಳಸಲಾಗುತ್ತಿತ್ತಂತೆ. ವಿಜಯದಶಮಿಯಂದು ದುರ್ಗಾದೇವಿಗೆ ಈ ಬಾವಿಯ ನೀರನ್ನು ಬಳಸಿ ಪೂಜಿಸಲಾಗುತ್ತಿತ್ತಂತೆ. ಈ ಬಾವಿಯ ಬಗ್ಗೆ ಗಮನಾರ್ಹ ಕಥೆಯೊಂದನ್ನು ಜನಪದರು ನಿರೂಪಿಸುತ್ತಾರೆ. ಅದೊಂದು ಕಿನ್ನರ ಲೋಕದ ರಮ್ಯ ಕಥೆ. ಜನಪದರು ಈಗಲೂ ಈ ಕಥೆಯನ್ನು ನಡೆದ ಘಟನೆ ಎಂಬಂತೆ ವಿವರಿಸುವರು.

ದುರ್ಗಾದೇವಿಯ ಪೂಜೆಗೆಂದೇ ನಿರ್ಮಾಣವಾಗಿದ್ದ ಬಾವಿಯಲ್ಲಿ ದೇವಕನ್ನಿಕೆಯರು ಬಂದು ಮಜ್ಜನ ಮಾಡಿ ಹೋಗುತ್ತಿದ್ದರಂತೆ. ಸೂರ್ಯ ಮೂಡುವ ಮುನ್ನ ಮತ್ತು ಸೂರ್ಯ ಮುಳುಗಿದ ನಂತರ ದೇವಲೋಕದಿಂದ ಬಂದವರು ಜಲಕ್ರೀಡೆ ಮುಗಿಸಿ ಹೋಗುವುದನ್ನು ತಿಳಿದ ಒಬ್ಬ ಯುವಕ ಇದು ಹೇಗೆ. ನಿಜವೆ, ತಾಳು ನೋಡೋಣ ಎಂದು ಕಾದು ಕೂತನಂತೆ. ಮಧ್ಯರಾತ್ರಿ ವೇಳೆಗೆ ದೇವಕನ್ಯೆಯರು ಬಂದು ಬಟ್ಟೆ ಬಿಚ್ಚಿ ಸ್ನಾನಕ್ಕಿಳಿದರು, ಯುವಕ ದೇವಗನ್ನೆಯರ ಬಟ್ಟೆ ಕದ್ದು ಅವರ ಮುಂದೆ ಸುಳಿದನಂತೆ. ಶಾಪವಿತ್ತ ದೇವಗನ್ನೆಯರು ಮಾಯವಾದರು. ಆತ ಅಲ್ಲೆ ರಕ್ತ ಕಾರಿ ಸತ್ತ. ಅಂದಿನಿಂದ ಆ ಬಾವಿಗೆ ದೇವಗನ್ನೆಯರ ಹಿನ್ನೆಲೆಯಲ್ಲಿ ಕನ್ನೇರಮ್ಮನ ಬಾವಿ ಎಂದು ಹೆಸರಾಯಿತು. ಇಂತಹ ನಿರೂಪಣೆಗಳು ಜಲದೇವತೆಯ ಭಿನ್ನ ಸ್ವರೂಪವನ್ನು ಬಿಂಬಿಸಲು ಕಟ್ಟಲ್ಪಟ್ಟವು. ಹಾಗೆಯೆ ದುರ್ಗಾದೇವಿಯ ಮಹಿಮೆಯನ್ನು ಪ್ರಚಾರಪಡಿಸಲು ಮಾಡಿಕೊಂಡ ಕಥನಗಳು. ಹಂಪಿಯಲ್ಲಿ ಬಾವಿ ಕಟ್ಟಿಸುವುದು ಪುಣ್ಯದ ಕೆಲಸವಾಗಿತ್ತು. ಆ ಕಾಲದ ನೀರಿನ ನೆಲೆಗಳನ್ನೆಲ್ಲ ಪವಿತ್ರವಾಗಿಯೆ ಭಾವಿಸಲಾಗುತ್ತಿತ್ತು. ಚಕ್ರತೀರ್ಥವಂತೂ ಕರ್ನಾಟಕ ಸಂಸ್ಕೃತಿಯ ಪ್ರಾಚೀನ ಕುರುಹುಗಳಲ್ಲಿ ಒಂದು. ಚಕ್ರತೀರ್ಥದಲ್ಲಿ ಸ್ನಾನ ಮಾಡಿದರೆ ಪುಣ್ಯವೆಂಬ ಪ್ರತೀತಿಯಿಂದಾಗಿ ಫಲ ಪೂಜೆಯ ದಿನ ಇಲ್ಲಿ ಸ್ನಾನ ಪೂಜೆ ಮುಂತಾದ ಪವಿತ್ರ ಕಾರ್ಯಗಳು ಜರುಗುವವು.

ಹೊಳೆಗೆ ಬಾಗಿನ ಅರ್ಪಿಸುವುದು ಹಂಪಿಯಲ್ಲಿ ಮಾಮೂಲು. ಹಾಗೆಯೆ ಹೊಸ ನೀರಿನಲ್ಲಿ ಸ್ನಾನ ಮಾಡಿದರೆ ಕರ್ಮಗಳು ಕಳೆಯುತ್ತವೆಂದು ನಂಬುವರು. ಹೊಸದಾಗಿ ಮದುವೆ ಆದ ಹೆಣ್ಣು ಮಗಳು ಫಲ ಪೂಜೆಯ ವೇಳೆ ಇಲ್ಲಿಗೆ ಬಂದು ಸ್ನಾನ ಮಾಡಿದರೆ ಫಲ ನಿಲ್ಲುವುದು ಎನ್ನುವರು. ತುಂಗಭದ್ರಾ ನದಿಯ ಉದ್ದಕ್ಕೂ ಪವಿತ್ರ ಸ್ನಾನದ ನೆಲೆಗಳಿವೆ. ಪುರಂದರ ಮಂಟಪ ಈಗ ಸ್ನಾನ ಮಂಟಪವಾಗಿ ರೂಪಾಂತರಗೊಂಡಿದೆ. ನದಿಯ ನಡುಗಡ್ಡೆಗಳು ಸುತ್ತುವರಿದ ನೀರಿನ ಮೂಲಕವೇ ತಮ್ಮ ಸ್ವರೂಪವನ್ನು ಹೊಂದಿಸಿಕೊಂಡಿವೆ. ವಿರುಪಾಪುರ ಗಡ್ಡೆಯಂತು. ದ್ವೀಪವಾಗಿ ಮಾರ್ಪಟ್ಟು ವಿದೇಶಿಯರಿಗೆ ಆಹ್ಲಾದಕರ ತಂಗುದಾಣವಾಗಿ ಬೆಳೆದಿದೆ. ನದಿಯ ನೀರಿನ ಪ್ರವಾಸೋಧ್ಯಮಕ್ಕೆ ವಿರುಪಾಪುರಗಡ್ಡೆ. ಜಂಗ್ಲಿ, ತಳವಾರಘಟ್ಟ ಮುಂತಾದವು ಪ್ರಸಿದ್ಧ ನೆಲೆಗಳಾಗಿವೆ. ಸಾಂಪ್ರದಾಯಿಕವಾಗಿ ತುಂಗಭದ್ರಾ ನದಿಯ ಬಗ್ಗೆ ಹಂಪಿ ಜನಪದವು ಭಾನಾತ್ಮಕವಾಗಿ ರೂಪಿಸಿಕೊಂಡಿರುವ ಎಲ್ಲ ಆಚರಣೆಗಳಲ್ಲು ಮಾತೃಪ್ರಧಾನ ಜಲ ನಂಬಿಕೆಗಳೇ ವಿಶೇಷವಾಗಿ ಕಾಣುತ್ತವೆ. ನೀರು ಎಲ್ಲೆಲ್ಲಿ ಹರಿದಿದೆಯೊ ಅಲ್ಲೆಲ್ಲ ನಿಸರ್ಗದ ಸಿರಿಯೂ ಹಬ್ಬಿರುವಂತೆಯೆ ಜಲ ಸಂಸ್ಕೃತಿಯೂ ವ್ಯಾಪಿಸಿಕೊಂಡಿದೆ. ಹಂಪಿಯ ಜನಪದ ಪರಂಪರೆಯಲ್ಲಿ ಹನುಮನ ಸೆಳೆವು ಕೂಡ ಮುಖ್ಯವಾದುದು. ಅಂಜನಾದೇವಿ ಹನುಮಂತನಿಗೆ ಜನ್ಮ ನೀಡಿದ ನಂತರ ಸ್ನಾನ ಮಾಡಬೇಕಾಯಿತು. ಆಗ ತಾನೆ ಹುಟ್ಟಿದ್ದ ಬಾಲ ಹನುಮ ಹರಿಯುತ್ತಿದ್ದ ನದಿಯನ್ನೇ ತಡೆದು ಅಂಜನಾದ್ರಿ ಪರ್ವತದ ಕಡೆಗೆ ತಿರುಗಿಸಿದನಂತೆ. ಆಗಿನಿಂದಲೂ ನದಿ ಕವಲೊಡೆದು ಹನುಮನ ಸೆಳವಾಗಿ ಮಾರ್ಪಟ್ಟಿದೆ ಎಂದು ಜನಪದರು ಹೇಳುವರು. ನದಿಯ ನೈಸರ್ಗಿಕ ಸೆಳೆವೆಗೆ ಜನಪದರು ಹನುಮ ಪ್ರಭಾವಳಿಯನ್ನು ಅನ್ವಯಿಸಿರುವುದು ಸಹಜವಾದುದೇ.

ವಿಜಯನಗರದ ಕಾಲದಲ್ಲಿ ಬೆಟ್ಟ ಗುಡ್ಡಗಳ ಆಯಕಟ್ಟಿನ ಜಾಗದಲ್ಲೇ ಹಲವಾರು ಕೆರೆ ಕಟ್ಟೆಗಳು ನೈಸರ್ಗಿಕವಾಗಿ ನಿರ್ಮಾಣವಾಗಿದ್ದವು. ಅವುಗಳಿಂದಲೇ ಆ ಕಾಲದ ಜನಪದವು ನೀರನ್ನು ಪಡೆಯುತ್ತಿದ್ದುದು. ವಿಜಯನಗರದ ಸಾಮ್ರಾಜ್ಯ ಮುಳುಗಿದಂತೆ ಈ ಕೆರೆ ಕಟ್ಟೆಗಳೂ ಅಳಿದಿವೆ. ಆದರೆ ಅಂತಹ ಕೆರೆ ಕಟ್ಟೆಗಳಿದ್ದವೆಂಬುದನ್ನು ಸಹಜವಾಗಿಯೆ ಬೆಟ್ಟಗುಡ್ಡಗಳ ಆ ಆಯಕಟ್ಟಿನ ನೆಲೆಗಳಿಗೆ ಹೋಗಿ ನಿಂತರೆ ತಂತಾನೆ ಇಲ್ಲಿ ಹಿಂದೆ ಕಟ್ಟೆ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಎಷ್ಟೋ ನೀರಿನ ನೆಲೆಗಳು ಹೂಳು ತುಂಬಿ ಮುಚ್ಚಿ ಹೋಗಿವೆ. ನೀರಾವರಿ ಕಾಲುವೆ ಬಂದ ನಂತರ ಹಳೆಯ ಕೆರೆಗಳು ರೈತರ ಜಮೀನುಗಳಾಗಿ ಮಾರ್ಪಟ್ಟಿವೆ. ಅವತ್ತಿನ ಕೆರೆಗಳು ಗದ್ದೆ, ಬಾಳೆ ತೋಟವಾಗಿ ಬದಲಾಗಿದ್ದರೂ ಏರಿಯ ದಿಬ್ಬಗಳು ಸಂಬಂಧವಿಲ್ಲದಂತೆ ಅಳಿದುಳಿದಿವೆ. ಇಂತಹ ನೈಸರ್ಗಿಕ ನೀರಿನ ಕಟ್ಟೆಗಳು ಪಶುಪಾಲಕ ಸಮುದಾಯಗಳ ನೀರಿನ ನೆಲೆಗಳಾಗಿದ್ದವು ಎಂಬುದು ವಿಶೇಷ. ಈಗಲೂ ಮಳೆಗಾಲದಲ್ಲಿ ಈ ನೆಲೆಗಳಲ್ಲಿ  ನೀರು ನಿಲ್ಲುವುದುಂಟು. ಇಂತಹ ನೀರಿನ ನೆಲೆಗಳ ದಿಬ್ಬಗಳಲ್ಲೆ ನವ ಶಿಲಾಯುಗದ ಆಯುಧಗಳು ಹೇರಳವಾಗಿ ಸಿಗುತ್ತವೆ. ಆಗಿನ ಪಶುಪಾಲಕರ ನೀರಿನ ನೆಲೆಗಳಾಗಿದ್ದ ಇವು ಮುಂದೆ ವಿಜಯನಗರ ಸಾಮ್ರಾಜ್ಯದ ಸೇವಕ ಗ್ರಾಮಗಳ ನೀರಿನ ತಾಣಗಳೂ ಆಗಿದ್ದವು. ಕಾಲ ಬದಲಾದಂತೆ ಈಗ ಈ ಬಗೆಯ ನೀರಿನ ಸ್ಥಳಗಳು ಗತ ಕಾಲದ ಜೀವ ಹಿಡಿದು ಕೊನೆ ದಿನಗಳ ಎಣಿಸುತ್ತಿವೆ. ಹಂಪಿಯ ಪರಿಸರದ ಪ್ರಾಣಿ ಪಕ್ಷಿಗಳಿಗೆ, ದನಕರುಕುರಿಗಳಿಗೆ ಇವುಗಳ ನೀರು ಜೀವದಾಯಿಯಾಗಿವೆ. ಪ್ರಾಚೀನ ಪಶುಪಾಲಕರ ಪಳೆಯುಳಿಕೆಯಂತಿರುವ  ಅಲೆಮಾರಿ ಕುರುಬರು ತಮ್ಮ ಕುರಿ ಮಂದೆಗಳನ್ನು ಪ್ರತಿ ವರ್ಷ ಮೇವಿಗಾಗಿ ಹಂಪಿಗೆ ಕರೆತರುವಾಗ ಇಂತಹ ನೀರಿನ ನೆಲೆಗಳಲ್ಲೆ ಬೀಡು ಬಿಡುವರು. ಹಾಗೆಯೇ ಕೆಲವೊಮ್ಮೆ ತುಪ್ಪಳವನ್ನು ಕತ್ತರಿಸಿ ಕುರಿಗಳ ಸ್ವಚ್ಚತಾ ಕೆಲಸವನ್ನು ಮಾಡುವರು.

ತುಂಗಭದ್ರಾ ನದಿಯ ದಂಡೆಗಳು ವಿಜಯನಗರ ಕಾಲದ ನಗರ ಜೀವನಕ್ಕೆ ಅತ್ಯಂತ ಮುಖ್ಯವಾದ ನೈಸರ್ಗಿಕ ರಕ್ಷಣೆಯನ್ನು ಒದಗಿಸಿದ್ದವು. ಹಂಪಿ ಎಂಬ ಮಧ್ಯಕಾಲೀನ ಮಾಯಾನಗರಿಯೊಂದು ವಿಖ್ಯಾತವಾಗಿ ಬೆಳೆಯಲು ಇದೇ ನದಿ ಕೂಡ ಕಾರಣವಾಗಿತ್ತು. ಧಾರ್ಮಿಕ, ಸಾಂಸ್ಕೃತಿಕ ಮಹಿಮೆಗಳು ರೂಪುಗೊಳ್ಳುವುದು ನದಿ ದಂಡೆಗಳಲ್ಲಿ ಎಂಬುದು ಸಹಜವೇ. ಹಂಪಿಯ ವಿರೂಪಾಕ್ಷ ದೇವಾಲಯ ತುಂಗಭದ್ರಾ ನದಿಯ ದಂಡೆಯಲ್ಲೆ ಇದೆ. ಹಂಪಿಯ ವ್ಯಾಪ್ತಿಗೆ ಒಳಪಡುವ ತುಂಗಭದ್ರಾ ನದಿಯ ಆಸುಪಾಸಿನ ನೆಲೆಗಳೆಲ್ಲವೂ ಧಾರ್ಮಿಕ ಆವರಣವಾಗಿ ಪರಿವರ್ತನೆಗೊಂಡಿದ್ದವು. ಕೋಟಿಲಿಂಗ, ಏಡಿಗುಡ್ಡ, ಸುಗ್ರೀವಗುಹೆ, ಪಂಪಾಸರೋವರ, ಹೇಮಕೂಟ, ಅಂಜನಾದ್ರೀ ಪರ್ವತ, ಚಕ್ರತೀರ್ಥ, ದುಂದುಬಿ ಗುಹೆ, ಸೀತೆ ಸೆರಗು, ಹನುಮನ ಸೆಳವು, ಕೋಣನ ಸೆಳವು, ದೇವರ ಮಡುಗು, ಸ್ಮಶಾನ ಮಡುಗು ಇಂತಹ ಅನೇಕ ಜಲ ಕ್ಷೇತ್ರಗಳು ಹಂಪಿಯ ಪರಿಸರವನ್ನು ಧಾರ್ಮಿಕ ಹಾಗು ಸಾಂಸ್ಕೃತಿಕ ಆವರಣವನ್ನಾಗಿ ಮಾಡಿವೆ. ನದಿಯ ಉದ್ದಕ್ಕೂ ಮಂಟಪಗಳು, ಸ್ನಾನಘಟ್ಟಗಳು, ವಿಹಾರ ಘಟ್ಟಗಳು, ದೇವಾಲಯಗಳು ನಿರ್ಮಾಣವಾಗಿವೆ. ಪುರಂದರ ಮಂಟಪದ ಬಳಿ ವಿಜಯನಗರ ಕಾಲದ ಸೇತುವೆ ಈಗಲೂ ಕಾಣುವುದುಂಟು. ಇದು ಆ ಕಾಲದ ಸಂಪರ್ಕ ಸೇತುವೆಯಾಗಿತ್ತು. ತಳವಾರಘಟ್ಟದ ತಿರುವಿನಲ್ಲು ಹಿಂದೆ ಸೇತುವೆಯೊಂದನ್ನು ಆನೆಗೊಂದಿಗೆ ನಿರ್ಮಿಸಲಾಗಿತ್ತು ಈ ಕಾಲದ ಅಗತ್ಯಕ್ಕೆ ತಕ್ಕಂತೆ ಆನೆಗೊಂದಿ ಸೇತುವೆಯನ್ನು ನಿರ್ಮಿಸಲು ಯತ್ನಿಸಿ ವಿಫಲವಾದ ದುರಂತ ಬೇರೊಂದು ಆಯಾಮದ್ದಾಗಿದೆ.

ವಿಜಯನಗರ ಕಾಲದಿಂದಲೂ ಈ ಪ್ರದೇಶದಲ್ಲಿ ಸೇತುವೆ ನಿರ್ಮಾಣದ ಯತ್ನ ನಡೆದಿತ್ತು. ಆದರೆ ಆನೆಗೊಂದಿಯ ದುರ್ಗಾದೇವಿ ಎಂಬ ದೇವತೆ ಈ ಸೇತುವೆಯ ಸಂಪರ್ಕವೆ ಬೇಡ ಎಂದು ದೈವಿಕ ತಡೆ ಒಡ್ಡಿದ್ದಳಂತೆ. ಲೆಕ್ಕಿಸದ ರಾಜರು ಸೇತುವೆಗೆ ಯತ್ನಿಸಿ ವಿಫಲವಾಗಿದ್ದರಂತೆ. ದೈವದ ವಿವೇಕ ಏನೆಂದು ಕೇಳಿದಾಗ ಇದು ದೈವಗಳು ಆಚೆ ದಂಡೆಗೂ ಈಚೆ ದಂಡೆಗೂ ಓಡಾಡುವ ನೆಲೆ. ಇಂತಲ್ಲಿ ಸೇತುವೆ ನಿರ್ಮಿಸುವುದು ತಪ್ಪು ಯಾರೂ ಇಲ್ಲಿ ಸೇತುವೆ ಕಟ್ಟಬಾರದು ಎಂದು ಹೇಳಿತಂತೆ. ಇದರಿಂದಲೇ ಆಗ ಬೇರೆಡೆ ಅಂದರೆ ತಳವಾರ ಘಟ್ಟದಲ್ಲಿಯೇ ನದಿ ಎಡಭಾಗಕ್ಕೆ ತಿರುಗಿಕೊಳ್ಳುವ ಮುಂದೆ ಸೇತುವೆ ರೂಪಿಸಲಾಯಿತಂತೆ. ಆದರೆ ಅದೂ ಕೂಡ ಉಳಿಯಲಿಲ್ಲ. ಹೀಗಾಗಿ ದೈವವೇ ಹಿಂದೆಯೆ ಇಲ್ಲೆಲ್ಲೂ ಸೇತುವೆ ನಿರ್ಮಾಣ ಬೇಡ ಎಂದು ಹೇಳಿರುವುದರಿಂದ ದೈವದ ಮಾತು ಉಳಿಯಬೇಕಾದ್ದರಿಂದ ಎಂತಹ ಸೇತುವೆ ಕಟ್ಟಿದರೂ ಇಲ್ಲಿ ಅದು ನಿಲ್ಲುವುದಿಲ್ಲ ಎಂದು ಜನಪದರು ಹೇಳುವರು. ಇಂತಹ ದೈವ ವಿವರಣೆಗಳು ನದಿಯ ಭೌಗೋಳಿಕತೆಯ ಪಾವಿತ್ರ್ಯವನ್ನು ಉಳಿಸಿಕೊಳ್ಳುವ ಸಲುವಾಗಿಯೂ ಹುಟ್ಟು ಬಂದಿರುತ್ತವೆ. ಜನತೆಯ ನಿಲುವು ಅತಿಮಾನುಷವಾಗಿಯೂ ಇಂತಹ ನೆಲೆಗಳಲ್ಲಿ ಆಕಾರ ತಳೆಯುತ್ತದೆ. ಏನೇ ಆಗಿರಲಿ ಹಂಪಿಯ ವೈಭವಕ್ಕೆ ತುಂಗಭದ್ರಾ ನದಿಯೂ ಕಾರ‍ಣವಾಗಿತ್ತು. ಒಂದು ಸಾಮ್ರಾಜ್ಯ, ಸಮಾಜ, ರಾಜಧಾನಿ, ಒಂದು ಸಂಸ್ಕೃತಿ, ನಾಗರೀಕತೆ, ಆರ್ಥಿಕ ವ್ಯವಸ್ಥೆ ಬೆಳೆಯಲು ನದಿಯ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಕರ್ನಾಟಕದ ಆದಿಮ ಜನ ವಸತಿಯ ನೆಲೆಗಳಲ್ಲಿ ಹೀಗಾಗಿಯೆ ಹಂಪಿಯ ನದಿ ದಂಡೆಯೂ ಒಂದಾಗಿರುವುದು. ಪಶುಪಾಲಕ ಸಮುದಾಯಗಳು ಈ ನದಿಯ ಮುಖಾಂತರ ರೂಪುಗೊಂಡ ಫಲವತ್ತಾದ ನೆಲೆಗಳನ್ನೆ ಮುಂದೆ ವಕ್ಕಲುತನಕ್ಕೆ ಬಳಸಿಕೊಂಡದ್ದು. ಪಶುಪಾಲಕರು ಈಗಲೂ ತುಂಗಭದ್ರಾ ನದಿ ದಂಡೆಗೂ ಬೆಟ್ಟಗುಡ್ಡಗಳಿಗೂ ತಮ್ಮ ರಾಸುಗಳ ಮೂಲಕ ಮೇವಿಗಾಗಿ ಬಂದು ಹೋಗುತ್ತಾರೆ.

ಈ ಕಾಲದಲ್ಲೂ ಕೂಡ ತುಂಗಭದ್ರಾ ನದಿಯ ಮಹಿಮೆ ಏನೇನೂ ಕಡಿಮೆ ಆಗಿಲ್ಲ. ವರ್ಷದ ಉದ್ದಕ್ಕೂ ತುಂಗಭದ್ರಾ ನದಿಯು ಹಂಪಿಯ ಜನಪದರ ಜೀವನದಲ್ಲಿ ಪವಿತ್ರವಾಗಿಯೆ ಹರಿಯುತ್ತಿದೆ. ಹಂಪಿಯ ಫಲಪೂಜೆ ಮತ್ತು ಹಂಪಿಜಾತ್ರೆ ಇವೆರಡೂ ಮೂಲತಃ ಅ ನದಿಯ ಆಚರಣೆಗಳೇ ಆಗಿವೆ. ಮೇಲು ನೋಟಕ್ಕೆ ಅವು ಲೌಖಿಕವಾಗಿ ವಿರುಪಾಕ್ಷ ಪಂಪಾಂಬಿಕೆಯ ವಿವಾಹದ ಆಚರಣೆ ಮಾಡಿದರೂ ಜಲ ಸಂಸ್ಕೃತಿಯ ನೈಸರ್ಗಿಕ ಆಚರಣೆಯನ್ನು ಅಡಗಿಸಿ ಕೊಂಡಿರುವಂತೆ ಕಾಣುತ್ತವೆ. ಒಂದು ನದಿಯ ಹರಿವು ತಂತಾನೆ ಆಯಾ ಪರಿಸರದ ಸಮಾಜವನ್ನು ಚಲನಶೀಲಗೊಳಿಸುತ್ತದೆ. ಬೆಟ್ಟಗುಡ್ಡ ಬಂಡೆ ಸಾಲುಗಳ ಮರೆಯಲ್ಲಿ ಹರಿವ ತುಂಗಭದ್ರೆಯು ಹಂಪಿ ಪರಿಸರದ ಆದಿಮ ದೈವಗಳಲ್ಲಿ ಒಂದೆನಿಸಿದೆ. ಈ ದೈವದ ಆಚರಣೆ ಕಾಲಾಂತರಗಳಲ್ಲಿ ಬೇರೆ ಬೇರೆ ಸ್ವರೂಪ ಪಡೆದುಕೊಂಡಿದೆ. ಈಗಲೂ ಹಂಪಿಯ ಜನಪದ ಸಮಾಜಗಳು ಈ ನದಿಯ ದೈವಿಕತೆಗೇ ನಡೆದುಕೊಳ್ಳುತ್ತಿವೆ. ನದಿ ದಂಡೆಯ ಉದ್ದಕ್ಕೂ ಧಾರ್ಮಿಕವಾದ ಮಠಗಳು, ರೆಸ್ಟೋರೆಂಟುಗಳು, ಸ್ವಯಂ ಸೇವಕ ಸಂಘಗಳು ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ.

ನದಿಗಳು ಸಂಸ್ಕೃತಿ ನಾಗರೀಕತೆಗಳ ಮೂಲ ಲಕ್ಷಣ. ಇದರ ಆಧಾರದಲ್ಲೇ ಆರ್ಥಿಕ ವ್ಯವಸ್ಥೆ ಕೂಡ ಬೆಳೆಯುವುದು. ಇಂದಿನ ಹಂಪಿಯ ಪರಿಸರ ಕೂಡ ಕಾಲುವೆಯ ನೀರಾವರಿಯಿಂದ ರೂಪಾಂತರಗೊಂಡಿದೆ. ಪ್ರಾಚೀನ ಕೃಷಿ ಪದ್ಧತಿ ಬದಲಾಗಿದೆ. ಹೆಚ್ಚು ನೀರು ಬಳಕೆಯ ಕ್ರಮಗಳು ವ್ಯಾಪಿಸಿವೆ. ಹಾಗೆಯೆ ನದಿ ನೀರನ್ನೂ ಮಲಿನಗೊಳಿಸುವ ನಗರೀಕರಣ ಪ್ರಕ್ರಿಯೆಗಳು ಎಗ್ಗಿಲ್ಲದೆ ಬೆಳೆಯುತ್ತಿವೆ. ಪರಿಸರದ ಸೌಂದರ್ಯ ಪ್ರಜ್ಞೆಯೇ ಭಾರತೀಯರಿಗೆ ಇಲ್ಲವೇನೊ ಎಂಬಂತೆ ಪರಿಸರವನ್ನು ಕೊಳಕು ಮಾಡಿಕೊಳ್ಳುವುದರಲ್ಲಿ ತುಂಬ ಮುಂದಿರುತ್ತಾರೆ. ಗಂಗಾ ನದಿಯು ಭಾರತೀಯ ಸಂಸ್ಕೃತಿ ನಾಗರೀಕತೆ ಧಾರ್ಮಿಕ ಸ್ವರೂಪವನ್ನು ಪ್ರತಿ ಬಿಂಬಿಸುವುದಾದರೂ ಭಾರತೀಯರು ಸ್ವತಃ ಪವಿತ್ರ ಗಂಗೆಯನ್ನು ಹೇಗೆ ಮಲಿನಗೊಳಿಸಬಲ್ಲರು ಎಂಬುದರ ಪ್ರತಿಬಿಂಬವೂ ಅದರಲ್ಲೇ ಕಾಣುತ್ತದೆ. ಇಂತಹ ವೈರುಧ್ಯ ಹಂಪಿಯ ನದಿ ದಂಡೆಗಳಲ್ಲು ಎದುರಾಗಿದೆ. ಜನಪದರು ಹಂಪಿ ಹೊಳೆ ಎಂದು ಕರೆಯುವರು. ಅದರ ಮೂಲ ಹೆಸರು ತುಂಗಭದ್ರೆ ಎಂದು ತಿಳಿದಿದ್ದರೂ ಜನ ಬಳಕೆಯಲ್ಲಿ ಹಂಪಿ ಹೊಳೆ ಎನ್ನುವುದೇ ಹೆಚ್ಚು. ಹೀಗಾಗಿಯೆ ಹಂಪಿಯ ಪರಿಸರದಲ್ಲಿ ಹರಿವ ನದಿಯ ಸ್ವರೂಪಕ್ಕೆ ತಕ್ಕಂತೆಯೂ ಸ್ಥಳೀಯವಾಗಿ ಕೆಲವು ಹೆಸರನ್ನು ಜನಪದರು ಮಾಡಿಕೊಂಡಿರುವುದು. ನದಿಯ ಒಂದೊಂದು ಪವಿತ್ರ ನೆಲೆಗೂ ಒಂದೊಂದು ಹೆಸರಿಟ್ಟು ಕರೆದಿದ್ದಾರೆ. ದೇವರ ಮಡುಗು ಎಂಬ ನದಿಯ ಒಂದು ಸ್ಥಳವಿದೆ. ಇದು ಕಾಳಘಟ್ಟದ ಮುಂದಿನ ವಿಶಾಲ ನದಿಯ ಬಯಲು ಸ್ವರೂಪದ ನೆಲೆಗೆ ಜನಪದರು ಇಟ್ಟಿರುವ ಹೆಸರು. ವಿಜಯನಗರ ಕಾಲದಿಂದಲೂ ಈ ಹೆಸರು ಸಾಗಿಬಂದಿದೆ.

ಗ್ರಾಮದೈವಗಳೆಲ್ಲವನ್ನೂ ಈ ಸ್ಥಳಕ್ಕೆ ಯುಗಾದಿ ವೇಳೆ ಕರೆತಂದು ಪೂಜಿಸಿ ದೇವರ ಗದ್ದುಗೆಗಳನ್ನು ಹೊತ್ತುಕೊಂಡು ಹೋಗುವರು. ದೇವರನ್ನು ತರಲು ಹೊಳೆಯ ಬಳಿಯೇ ಹೋಗಬೇಕು ಎಂಬ ಸಾಮಾನ್ಯ ರೂಢಿ ಎಲ್ಲೆಡೆಯು ಇದೆ. ಗ್ರಾಮದೈವಗಳ ಹಬ್ಬಗಳಲ್ಲಿ ತಮ್ಮ ದೈವಗಳನ್ನು ಕರೆತರುವುದು. ಆ ಪರಿಸರದಲ್ಲಿರುವ ನದಿ, ಹೊಳೆ ಕೆರೆ ಕಟ್ಟೆಗಳ ಜಲ ಮೂಲಗಳಿಂದಲೇ ಎಂಬುದು ಹೇಗೆ ಜಲ ಸಂಸ್ಕೃತಿ ಗಾಢವಾಗಿ ಜನಪದ ಪರಂಪರೆಯಲ್ಲಿದೆ ಎಂಬುದನ್ನು ಸೂಪಿಸುತ್ತದೆ. ದೇವರ ಮಡುವಿಗೇ ಹಂಪಿ ಪ್ರದೇಶದ ಎಲ್ಲ ಗ್ರಾಮದೈವಗಳು ಬರುತ್ತವೆ. ಪ್ರತಿವರ್ಷ ದೇವರ ಮಡುವಿನ ಜಾಗಕ್ಕೆ ದೇವರನ್ನು ತಂದು ಶುದ್ಧಿಯಾಗಿ ಹಿಂತಿರುಗದಿದ್ದರೆ ಕೇಡು ಎಂಬ ನಂಬಿಕೆ ಇದೆ. ಹಾಗೆಯೇ ದೇವರ ಮಡುಗು ಎಲ್ಲ ದೈವಗಳ ಮೂಲ ನೆಲೆಯಂತೆ. ದೈವಗಳೂ ಕೂಡ ನದಿಯನ್ನು ಬಿಟ್ಟು ಇರಲಾರವು. ಜನಪದರ ಇಂತಹ ಜಲ ಸಂಬಂಧ ನಿಸರ್ಗದ ಬೇರಿನಿಂದಲೇ ಬಂದಿದ್ದಾಗಿದೆ.

ದೇವರ ಮಡುಗು ಪ್ರದೇಶದ ಹಿಂದಕ್ಕೆ ಬಂದರೆ ಕಾಳಘಟ್ಟದ ಸಮೀಪದಲ್ಲೆ ಸ್ಮಶಾನ ಮಡುಗು ಎಂಬ ನದಿಯ ಪ್ರದೇಶವಿದೆ. ಇದರ ಬಗ್ಗೆ ಜನ ಭಯ ಪಡುತ್ತಾರೆ. ಅಲ್ಲಿಗೆ ಹೋದವರು ಸ್ಮಶಾನಕ್ಕೆ ಹೋದಂತೆ ಎಂದು ಹೆದರಿಸುವರು. ಹಂಪಿಯ ಜನಪದರಿಗೆ ನದಿಯ ಒಂದೇ ಹರಿವು ಹಲವಾರು ನೆಲೆಗಳನ್ನು ರೂಪಿಸಿ ಕೊಟ್ಟಿದೆ. ದೇವರ ನೆಲೆಯೂ ಸ್ಮಶಾನದ ನೆಲೆಯೂ ಒಂದೇ ಆಗಿ ಕಾಣುವುದು ಅಖಂಡವಾಗಿ ನಿಸರ್ಗವನ್ನು ಭಾವಿಸಿರುವುದರ ಪರಿಣಾಮ. ಒಂದೊಂದು ಅನುಕೂಲಕರ ನೆಲೆಗಳನ್ನು ಜನಪದರು ತಮ್ಮ ರೀತಿಯಿಂದಲೇ ಹೆಸರಿಟ್ಟು ಕರೆಯುವುದು ವಾಡಿಕೆ. ತಳವಾರ ಘಟ್ಟ, ಕರೆಮ್ಮನಗಡ್ಡೆ, ಕೋಣನ ಹರಿವು ಇಂತವೆಲ್ಲವೂ ನದಿಯ ಒಂದೊಂದು ಗುರುತಷ್ಟೆ. ಆ ಭಾಗದ ನದಿಯ ಭೂಮಿಯನ್ನು ಯಾರು ವ್ಯವಸಾಯ ಮಾಡುತ್ತಿದ್ದಾರೆ. ಹಿಂದೆ ಅದು ಯಾರದ್ದಾಗಿತ್ತು. ಎಂಬ ಹಿನ್ನೆಲೆಯಲ್ಲೂ ಜನಪದರು ನದಿ ಭೂಮಿಯ ಸಂಬಂಧವನ್ನು ಗುರುತಿಸುವುದಿದೆ. ಮಾಗಾಣಿ ಎಂಬ ವಿಶೇಷ ಪದವೊಂದನ್ನು ನದಿ ತೀರದ, ನಡುವಿನ, ದಂಡೆಯ ಫಲವತ್ತಾದ ಭೂಮಿಗಳಿಗೆ ಕರೆಯುವರು. ಆ ಮಾಗಾಣಿ ಯಾರದು ಎಂಬ ಹೆಸರಲ್ಲಿ ಇಂತಹ ಮಾಗಾಣಿ ಎಂದು ಕರೆಯುವರು. ಇದಕ್ಕೆ ದೈವಿಕ ಅರ್ಥ ಏನೂ ಇಲ್ಲ. ಭೂಮಿಯ ಮೇಲಿನ ಹಕ್ಕು ಹಾಗು ನದಿಯ ನೆಲೆಯ ಹತ್ತಿರದ ಸಂಬಂಧವನ್ನು ಸ್ಥಾಪಿಸಿಕೊಳ್ಳುವ ಸಲುವಾಗಿ ಅಂತಹ ಹೆಸರುಗಳನ್ನು ಬಳಸುವರು.

ಕೋಣನ ಹರಿವು ಹನುಮನ ಹರಿವು ರೀತಿಯದೇ ಆದ ಇನ್ನೊಂದು ಜನಪದ ಗುರುತು. ವಿರೂಪಾಕ್ಷ ದೇವಾಲಯದ ಮೇಲಿನ ಭಾಗದಿಂದ ನದಿಯು ಹರಿಯುವಲ್ಲಿ ನೈಸರ್ಗಿಕವಾದ ರೌದ್ರತೆಯೊಂದು ರೂಪುಗೊಂಡಿದೆ. ಈ ಭಾಗವು ಎತ್ತರದಲ್ಲಿದ್ದು ಮುಂದೆ ಲಂಬಾಕಾರವಾಗಿ ಭೂ ರಚನೆ ವಾಲಿದೆ. ಈ ಭಾಗದಲ್ಲಿ ಹೊಳೆ ತುಂಬಿ ಬಂದಾಗ ಸಹಜವಾಗಿಯೇ ಬಲಾಡ್ಯ ಸೆಳೆವಿನಿಂದ ನೀರು ದಿಕ್ಕಾಪಾಲಾಗಿ ನುಗ್ಗುತ್ತದೆ. ಇಲ್ಲೇ ನದಿ ಎರಡು ಭಾಗವಾಗಿ ಸೀಳಿಕೊಳ್ಳುತ್ತದೆ ಒಂದು ವಿರೂಪಾಕ್ಷ ದೇವಾಲಯದ ಕಡೆಗೆ ಹರಿದರೆ ಮತ್ತೊಂದು ಹನುಮನ ಸೆಳವಾಗಿ ಸೀಳಿಕೊಳ್ಳುತ್ತದೆ. ಹೀಗೆ ಈ ಎರಡು ಹರಿವುಗಳ ನಡುವೆ ಕೋಣನ ಹರಿವು ಸೃಷ್ಠಿಯಾಗಿದೆ. ವಿಶಾಲವಾಗಿ ಈ ಪ್ರದೇಶದಲ್ಲಿ ಸುತ್ತಿಕೊಂಡು ನುಗ್ಗುವ ಒಂದು ಹರಿವನ್ನು ಕೋಣನ ಹರಿವು ಎಂದು ಗುರುತಿಸುವರು. ಒಮ್ಮೆ ಹೊಳೆ ಹರಿವಾಗ ಕೋಣವೊಂದು ಈ ಸೆಳವಿಗೆ ಸಿಲುಕಿ ಬಂಡೆ ಸಂದಿಗೆ ನುಗ್ಗಿತು. ಅದು ಏನು ಮಾಡಿದರೂ ಹಿಂತಿರುಗಿ ಬರಲು ಸಾಧ್ಯವಿರಲಿಲ್ಲ. ರುದ್ರಭಯಾನಕವಾಗಿ ಕೋಣನ ಸೆಳವು ಕಾಣುವುದಿದೆ. ಬಂಡೆಗಳನ್ನೆ ಕೊರೆದುಕೊಂಡು ತೀರದ ಸಂದುಗಳಲ್ಲಿ ನುಗ್ಗುವ ನದಿಯು ಇಲ್ಲಿರುವ ಬಂಡೆಯ ನೆಲ ಹಾಸುಗಳನ್ನೆ ನೀರು ಹರಿವ ಅಲೆಗಳ ಸ್ವರೂಪದಲ್ಲೆ ನುಣುಪು ಮಾಡಿಬಿಟ್ಟಿದೆ. ಈ ಜಾಗದಲ್ಲೆ ’ಕರೇಕಲ್ಗುಂಡು, ಬೀಳೇಕಲ್ಗುಂಡು’ಎಂಬ ಎರಡು ಗುಂಡುಗಳನ್ನು ಜನಪದರು ಗುರುತಿಸುವರು. ಕೋಣನ ಹರಿವು ಅತ್ಯಂತ ಅಪಾಯಕಾರಿಯಾದ ಜಾಗ, ಬೇಸಿಗೆಯ ಕಾಲದಲ್ಲಿ ಇಲ್ಲಿ ತಿರುಗಾಡಿದರೂ ಸಾಕು ಹೇಗೆ ಇಡೀ ನದಿಯೆ ಬಂಡೆಗಳ ಬೀಡಾಗಿ ನದಿಯ ತಳವೆಲ್ಲ ಬಂಡೆಯೆ ಆಗಿ ಮಣ್ಣು ಎಲ್ಲೂ ಕಾಣದು. ಬೃಹತ್ ಬಂಡೆಗಳ ಆಳದಲ್ಲಿ ಇಡೀ ನದಿ ಹರಿಯುತ್ತಿದ್ದರೂ ನಮಗೆ ಆ ಯಾವ ಹರಿವೂ ತಿಳಿಯದು. ಪಾತಾಳ ಲೋಕದ ಸಂದುಗಳು ಕೋಣನ ಹರಿವು ಜಾಗದಲ್ಲಿವೆ ಎಂದು ಹೇಳುವರು. ಇಲ್ಲಿರುವ ಎರಡು ಕರಿ ಬಿಳಿ ಗುಂಡು ಕಲ್ಲುಗಳನ್ನೆ ಜನಪದರು ’ಬಂಗಾರ ಗುಂಡು, ಬೆಳ್ಳಿ ಗುಂಡು’ ಎಂದು ಕರೆಯುವರು. ನದಿ ದಿಢೀರನೆ ಮೇಲಿಂದ ನುಗ್ಗಿ ಬಂದಾಗ ಗುಂಡಿಯಂತಹ ತಳದಲ್ಲಿ ಸಿಕ್ಕಿ ಹಾಕಿಕೊಂಡಿರುವ ಈ ಎರಡೂ ಗುಂಡುಗಳು ಮುಂದೆ ಉರುಳಿ ಹೋಗಲಾರದೆ ಸುತ್ತಿವರಿದ ಬಂಡೆಗಳಿಗೆ ಡಿಕ್ಕಿ ಹೊಡೆದು ಸುತ್ತುತ್ತಲೆ ಇರುತ್ತವೆ. ಹೀಗೆ ಸುತ್ತಿರುವುದರಿಂದಲೇ ಈ ಬಂಡೆಗುಂಡುಗಳು ಇಷ್ಟು ನುಣುಪಾಗಿ ಸಣ್ಣವಾಗಿರುವುದು ಎಂದು ಹೇಳುವರು. ಪ್ರವಾಹ ಮುಗಿದ ಮೇಲೆ ಈ ಎರಡೂ ಗುಂಡುಗಳು ಯಾವ ದಿಕ್ಕಿಗೆ ಮುಖ ಮಾಡಿವೆ ಎಂಬುದರ ಮೇಲೆ ಆ ವರ್ಷದ ಮಳೆ ಬೆಳೆ ಪ್ರಮಾಣವನ್ನು ಗುರುತಿಸುವರು. ಈ ಪ್ರದೇಶದಲ್ಲೂ ಕೂಡ ಬಂಡೆಗಳ ಆಕಾರವನ್ನು ನೋಡಿ ದೋಣಿಕಲ್ಲು ಎಂದು ಗುರುತಿಸುವರು.

ಪತಕನಿ ಮಡು ಎಂಬ ಒಂದು ಚಾರಿತ್ರಿಕ ನೆಲೆಯನ್ನು ತುಂಗಭದ್ರಾ ಜಲಾಶಯದ ಒಳಗೆ ಗುರುತಿಸುವರು. ಅಣೆಕಟ್ಟು ಕಟ್ಟುವ ಮೊದಲು ನದಿಯಲ್ಲೆ  ಪತಕನಿ ಮಡುವೊಂದಿತ್ತಂತೆ. ವಿಜಯನಗರದ ಪಾಳೆಯಗಾರನಾಗಿದ್ದವನು ಇನ್ನೊಬ್ಬ ಪಾಳೆಗಾರನ ಎದುರಾಗಿ ಯುದ್ದಕ್ಕೆ ನಿಂತಾಗ ತುಂಗಭದ್ರಾ ನದಿ ದಾಟಿ ಬರಲು ಸಂಚು ರೂಪಿಸಿದ್ದಾಗ ಹೊಳೆ ಬಂದು ಎದುರಾಳಿಯ ಸೈನ್ಯವೇ ಕೊಚ್ಚಿಕೊಂಡು ಹೋಯಿತಂತೆ. ಹೀಗಾಗಿ ವಿಜಯನಗರದ ಪಾಳೆಯಗಾರ ಅಪಾಯದಿಂದ ಪಾರಾದನಂತೆ. ಎದುರಾಳಿ ಸೈನಿಕರನ್ನು ಬಲಿತೆಗೆದುಕೊಂಡ ಸ್ಥಳವನ್ನೇ ಪತಕನಿ ಮಡು ಎಂದು ಕರೆಯುವರು. ಆದರೆ ಈ ಮಡು ಈಗ ಇಲ್ಲ. ಭಾಗಶಃ ಅಣೆಕಟ್ಟಿಗೆ ಬಂದ ಗಣಿಯ ಹೂಳು ಮುಚ್ಚಿರಲೇಬೇಕು. ಇಂತಹ ಚಾರಿತ್ರಿಕ ವಿವರಗಳು ಸಹಜ ನೈಸರ್ಗಿಕ ರಕ್ಷಣೆ ನೀಡುತ್ತಿದ್ದ ನದಿಯನ್ನು ದಾಟುವುದು ಅಷ್ಟು ಸುಲಭವಾಗಿರಲಿಲ್ಲ. ಹುಲಿಗೆಮ್ಮನ ದೇವಸ್ಥಾನವು ತುಂಗಭದ್ರಾ ನದಿಯ ದಂಡೆಯಲ್ಲೆ ಇದೆ. ನದಿಯ ಪರಿಸರವೇ ಈ ಗ್ರಾಮ ದೈವಕ್ಕೆ ವಿಶಿಷ್ಟತೆಯನ್ನು ತಂದುಕೊಟ್ಟಿದೆ. ಜಲಾಶಯ ನಿರ್ಮಾಣಕ್ಕೆ ಪೂರ್ವದಲ್ಲಿ ಮರಿಯಮ್ಮನ ಹಳ್ಳಿಯ ಆಚೆವರೆಗೂ ತುಂಗಭದ್ರಾ ನದಿಯು ವಿಜಯನಗರ ಸಾಮ್ರಾಜ್ಯದ ಪ್ರಭಾವಕ್ಕೆ ಒಳಪಟ್ಟ ವ್ಯಾಪ್ತಿಯದೇ ಆಗಿತ್ತು. ರಾಯನ ಕೆರೆ ಕೂಡ ಆ ಕಾಲದ ನಿರ್ಮಾಣವಾಗಿದ್ದು. ಈಗಲೂ ಅದು ಬಳಕೆಯಲ್ಲಿದೆ. ಢಣಾಯನಕೆರೆ, ಹಳ್ಳಿಕೆರೆ, ಕಮಲಾಪುರಕೆರೆ, ತಾವರೆಕೆರೆ, ತಿಮ್ಮಲಾಪುರಕೆರೆ, ನಂದಿಬಂಡೆಕೆರೆ, ನಾರಾಯಣದೇವರ ಕೆರೆ ಮುಂತಾದವು ವಿಶೇಷ ಎನಿಸಿವೆ. ಅನೇಕ ಬಗೆಯ ಜಲಕುಂಡಗಳೂ ಇವೆ. ಸೀತಾ ಕುಂಡ, ಮನ್ಮಥ ಕುಂಡ ಪ್ರಮುಖವಾದವು. ಇವೆಲ್ಲವೂ ಜಲ ಸಂಸ್ಕೃತಿಯ ಗತ ಹಂಪಿಯ ನೆನಪಾಗಿ ಉಳಿದಿವೆ.

ತಳವಾರ ಘಟ್ಟಕ್ಕೆ ಜಾರಿತ್ರಿಕವಾದ ಮಹತ್ವ ಹೇಗಿದೆಯೊ ಹಾಗೆಯೇ ನದಿಯ ಈ ಭಾಗದ ತೆಪ್ಪದ ದಾರಿಗೂ ವಿಶೇಷ ಮಹತ್ವವಿದೆ. ವಿಜಯನಗರ ಕಾಲದಿಂದಲೂ ಇಲ್ಲಿ ತೆಪ್ಪದ ಸೌಲಭ್ಯವಿತ್ತು. ಈಗಲೂ ಆನೆಗೊಂದಿಗೆ ತೆಪ್ಪವೇ ಸಂಪರ್ಕ ಕಲ್ಪಿಸುವುದು. ತೆಪ್ಪದಿಂದಲೇ ದ್ವಿಚಕ್ರವಾಹನ, ಕುರಿ, ಆಡುಮೇಕೆಗಳನ್ನು ಕೂಡ ದಡ ಮುಟ್ಟಿಸುವರು. ಪ್ರತಿದಿನ ಆನೆಗೊಂದಿಗೆ ತಳವಾರಘಟ್ಟದ ಈ ಜಾಗದಿಂದ ಜನ ತೆಪ್ಪಗಳಲ್ಲಿ ಓಡಾಡುವರು. ಚಕ್ರತೀರ್ಥದಲ್ಲೂ ತೆಪ್ಪಗಳ ಬಳಸಿ ಪ್ರವಾಸಿಗರಿಗೆ ನೀರ ಮೇಲೆ ತೇಲಿಸಿ ಖುಷಿ ಪಡಿಸಲಾಗುವುದಿದೆ. ಗತಕಾಲದ ಸ್ನಾನ ಘಟ್ಟಗಳು ಮಂಟಪಗಳು ಅಳಿದುಳಿದು ತುಂಗಭದ್ರಾ ನದಿಯ ಸಂಬಂಧವನ್ನು ಮುಂದುವರಿಸಿವೆ. ಜಲನೆಲೆಯ ಎಲ್ಲ ಕ್ಷೇತ್ರಗಳೂ ಜನಪದರಿಗೆ ಪವಿತ್ರವಾದುವೇ. ಹಂಪಿಯ ಬೆಟ್ಟಗುಡ್ಡಗಳ ಮೇಲೆ ಸಿಗುವ ನೀರಿನ ಪುಷ್ಕರಣಿಗಳೂ ಕುಂಡಗಳೂ ದಿವ್ಯತೆಯ ಪ್ರತೀಕವಾಗಿವೆ. ಪಂಪಾಸರೋವರದ ಪವಿತ್ರ ಜಲಕ್ಕಾಗಿ ಉತ್ತರ ಭಾರತದಿಂದಲೂ ಭಕ್ತರು ಬರುವುದಿದೆ. ಮಾತೃಪ್ರಧಾನ ಸಂಸ್ಕೃತಿಗಳೆಲ್ಲ. ಜಲ ದೇವತೆಯನ್ನು ರೂಪಿಸಿಕೊಂಡಿದ್ದವು. ಆ ಬಗೆಯ ಕುರುಹುಗಳು ಹಂಪಿಯ ಪರಿಸರದಲ್ಲಿ ದಟ್ಟವಾಗಿವೆ.

ಬದಲಾದ ಪರಿಸರದಲ್ಲಿ ಅಂತರ್ಜಲದ ಅವಲಂಬನೆಯಲ್ಲಿ ನೀರು ಕೂಡ ಈಗ ವಾಣಿಜ್ಯಕರಣಗೊಳ್ಳುತ್ತಿದೆ. ಕಾಲುವೆ ನೀರು ವಾಣಿಜ್ಯದ ಇನ್ನೊಂದು ಮುಖವಾಗಿದೆ. ಮಳೆಯನ್ನೆ ನಂಬಿ ಮಾಡುತ್ತಿದ್ದ ಕೃಷಿ ಮರೆತು ಹೋಗುತ್ತಿದೆ. ನೀರಿಗಾಗಿ ಸಮುದಾಯಗಳು ತಮ್ಮಲ್ಲೆ ಮನಸ್ತಾಪಕ್ಕೆ ಹೀಡಾಗುತ್ತಿವೆ. ಭತ್ತದ ಗದ್ದೆಗಳು ಹಸಿರಾಗಿ ಸುಂದರ ಪರಿಸರವಾಗಿ ಕಂಡರೂ ಈ ನೀರಿಗೆ ಮಣ್ಣಿಗೆ ಹಾಕುತ್ತಿರುವ ವಿಷಕಾರಿ ರಾಸಾಯನಿಕಗಳು ಜಲ ಮಾಲಿನ್ಯವನ್ನು ಎಷ್ಟರಮಟ್ಟಿಗೆ ಮಾಡುತ್ತಿವೆ ಎಂದರೆ ಈ ನೀರು ಅಂತರ್ಜಲವನ್ನು ಕೂಡ ಕಲುಷಿತಗೊಳಿಸುತ್ತಿದೆ. ಬಸವಣ್ಣನ ಕಾಲುವೆ.ವಿಜಯನಗರದ ಕಾಲದ್ದಾದರೂ ಕಾಲುವೆ ಈಗಲೂ ಜೀವಂತವಾಗಿದೆ. ಆದರೆ ಈ ಕಾಲುವೆಗೆ ಹೊಸಪೇಟೆಯ ಸಕ್ಕರೆ ಕಾರ್ಖಾನೆಯ ತ್ಯಾಜ್ಯವನ್ನು ಬಿಡುತ್ತಿದ್ದು ಈ ಕಾಲುವೆಯೇ ಕೊಳೆತ ಮಲೆತ ನೀರನ್ನು ಗದ್ದೆಗಳಿಗೆ ಉಣಿಸುವಂತಾಗಿದೆ. ಗಲೀಜಾದ ನೀರನ್ನೇ ಜನ ಕ್ರಿಯೆಗಳಿಗೂ ಬಳಸುವುದು ರೂಢಿಯಾಗಿಬಿಟ್ಟಿದೆ. ಕೆರೆಕಟ್ಟೆಗಳು ಒಂದು ಕಾಲಕ್ಕೆ ಗ್ರಾಮೀಣ ಬದುಕನ್ನು ರೂಪಿಸುತ್ತಿದ್ದವು. ಅವುಗಳೀಗ ಮರೆಯಾಗಿದ್ದು ಕೊಳವೆ ಬಾವಿಗಳ ನೀರೇ ಹಳ್ಳಿಗಳ ಜಲ ಜೀವನವನ್ನು ತೀರ್ಮಾನಿಸುತ್ತಿವೆ. ಜೈನ ಧರ್ಮದ ಪ್ರಭಾವದಿಂದ ನೀರು ದಾನ ಮಾಡುವುದೂ ನಡೆದಿದೆ. ದಾನ ಮಾಡುತ್ತಲೇ ರಾಜಕಾರಣಕ್ಕೂ ನೀರನ್ನು ಬಳಸಬಲ್ಲ ಚಾಣಕ್ಷ್ಯತೆ ಈ ಕಾಲದಲ್ಲಿ ಸುಲಭವಾಗಿದೆ. ದನಕರುಗಳಿಗೆ ಬೇಸಿಗೆಯಲ್ಲಿ ನೀರು ನೆರಳು ಸಿಗಲೆಂದು ದಾನ ಮಾಡುತ್ತಿದ್ದುದಕ್ಕೂ ಇವತ್ತಿನ ನೀರಿನ ದಾನಕ್ಕೂ ಬಹಳ ವ್ಯತ್ಯಾಸವಾಗಿದೆ. ನೆಲ ಜಲ ಗಾಳಿ ಬೆಳಕು ಈ ನೈಸರ್ಗಿಕ ಸಂಪತ್ತನ್ನು ಮನುಷ್ಯ ದೈವಿಕವಾಗಿ ಕಂಡರೂ ಅದೈವಿಕವಾಗಿ ದುರ್ಬಳಕೆ ಮಾಡುವ ವಿಪರ್ಯಾಸವೂ ಇದೆ.

ಪ್ರತಿ ವರ್ಷ ತುಂಗಭದ್ರಾ ನದಿ ಪ್ರವಾಹ ತುಂಬಿ ಬರುವಾಗ ಎಷ್ಟೊಂದು ರಾಶಿ ರಾಶಿ ಕಸವನ್ನು ತೇಲಿಸಿಕೊಂಡು ಹೋಗುತ್ತದೆ ಎಂದರೆ ಇಡೀ ನದಿಯೇ ಕಸವಾಗಿ ಹರಿಯುತ್ತಿದೆಯೇನೊ ಎನಿಸುತ್ತದೆ. ನದಿಯ ಪಾವಿತ್ರ್ಯ ಎಂದರೆ ಅದರಲ್ಲಿ ಮುಳುಗೇಳುವುದಲ್ಲ. ಫಲಪೂಜೆ ಹಂಪಿ ಜಾತ್ರೆಯಂತಹ ಆಚರಣೆಗಳಲ್ಲಿ ಹಂಪಿಯ ನದಿಯೇ ಮಲಿನವಾಗಿ ಬಿಡುತ್ತದೆ. ತುಂಗಭದ್ರಾ ನದಿಯ ಅಣೆಕಟ್ಟಿನ ಕಾಲುವೆಗಳಿಗೆ ಎಸೆಯುವ ಕಸವನ್ನಂತು ಯಾವ ನಾಗರೀಕ ಸಮಾಜವೂ ಒಪ್ಪಲಾರದು. ಹಸುಗೂಸುಗಳನ್ನು ಕೂಡ ಕಾಲುವೆಗಳಲ್ಲಿ ಎಸೆಯುತ್ತಾರೆ. ನೀರಿನಲ್ಲಿ ಬೇಡವಾದ್ದನ್ನು ಎಸೆದು ಬಿಟ್ಟರೆ ಗಂಗಮ್ಮ ಎಲ್ಲವನ್ನೂ ತೊಳೆದು ಮುಕ್ತಿ ತೋರಿಸಿಬಿಡುತ್ತಾಳೆ ಎಂಬ ದೈವಿಕತೆಯು ಭಂಡತನದ್ದೇ ವಿನಃ ಭಕ್ತಿಪರವಶತೆಯದಲ್ಲ. ಈ ಬಗೆಯ ಪರಿಸರ ಮಾಲಿನ್ಯಕ್ಕೆ ತಕ್ಕುದಾದ ಎಚ್ಚರಿಕೆಯಾಗಲಿ, ಸ್ಥಳೀಯ ಆಡಳಿತ ವ್ಯವಸ್ಥೆಯ ಕ್ರಮಗಳಾಗಲಿ ಅತ್ಯಂತ ದುರ್ಬಲವಾಗಿವೆ. ಹಂಪಿಯ ಗ್ರಾಮಗಳೆಲ್ಲ ತಮ್ಮ ಗತಕಾಲದ ಬಾವಿಗಳನ್ನು ಕೂಡ ಹೀಗೆಯೇ ಕಸಕಡ್ಡಿಗಳಿಂದ ಮುಚ್ಚಿಕೊಂಡಿವೆ. ಬಾವಿ ಕಟ್ಟೆಯ ಬಳಿ ಕಷ್ಟ ಸುಖ ಮಾತನಾಡಿಕೊಳ್ಳುವ ಗತ ನೆನಪು ಕೂಡ ಈಗಿನ ಹಳ್ಳಿಗಳಲ್ಲಿ ಕಂಡು ಬರುವುದಿಲ್ಲ.

ಹಂಪಿಯ ಗ್ರಾಮಗಳು ವೇಗವಾಗಿ ಆಧುನಿಕತೆಯ ಕಡೆ ಮುಖ ಮಾಡಿವೆ. ಮೂಲದ ಹಂಪಿಯ ಜನಪದವೇ ಕಳೆದು ಹೋದ ಮೇಲೆ ಅಳಿದುಳಿದ ಗ್ರಾಮಗಳಿಗೆ ಎಲ್ಲೆಲ್ಲಿಂದಲೊ ಬಂದು ನೆಲೆಸಿದವರು ಹಳೆಯ ಪಾರಂಪರಿಕ ಕೊಂಡಿಗಳನ್ನು ರೂಢಿಸಿಕೊಳ್ಳಲಾರದೆ ರೂಪಾಂತರವೇ ಪ್ರಧಾನವಾಗಿರುವ ಜೀವನ ಕ್ರಮವನ್ನು ಅಳವಡಿಸಿ ಕೊಂಡಿದ್ದಾರೆ. ಪರಂಪರೆಯ ಸಂಬಂಧಗಳು ಹೀಗಾಗಿ ಇಲ್ಲಿ ಸಹಜವಾಗಿಲ್ಲ. ಮಿಶ್ರ ಭಾವನೆಗಳು, ಚದುರಿ ಬಂದ ಭಾವನೆಗಳು ಅರೆಬರೆ ನಂಬಿಕೆಗಳು ಹಂಪಿಯ ಪರಿಸರವನ್ನು ತಮ್ಮ ತಮ್ಮ ಅಗತ್ಯದ ಲಾಭನಷ್ಟದಲ್ಲಿ ಮಾತ್ರ ಕಂಡಿವೆ. ನೆನ್ನೆಯ ಅಳಿದುಳಿದ ಜನಪದ ನೆನಪುಗಳು ಮಾತ್ರ ಪರಿಸರದ ಆಚರಣೆಗಳನ್ನು ಜೀವಂತಗೊಳಿಸಿವೆ.