ಪ್ರತಿಯೊಂದು ಪ್ರದೇಶಕ್ಕೂ ಸ್ಥಳೀಯ ಜನಪದಗಳು ತಮ್ಮದೇ ಚಹರೆಯ ನಿರೂಪಣೆಗಳನ್ನು ಅಭಿವ್ಯಕ್ತಿಸುತ್ತವೆ. ತಮ್ಮ ಜೀವನ ಕ್ರಮವನ್ನು ತಮ್ಮ ಪರಿಸರದ ಜೊತೆ ಬೆರೆಸಿಕೊಳ್ಳುವುದು ಜನಪದರ ಭೌಗೋಳಿಕ ಸ್ವಭಾವ. ಪ್ರತಿಯೊಂದು ಪ್ರದೇಶವೂ ನಿರ್ಧಿಷ್ಟ ಗುರುತನ್ನು ಪಡೆದುಕೊಳ್ಳುವುದು ಅದರ ವಿಶಿಷ್ಟತೆಯನ್ನು ಸಾರುವ ಸಲುವಾಗಿಯೆ, ವಾಸದ ಎಲ್ಲ ನೆಲೆಗಳೂ ಸಂಸ್ಕೃತಿಯ ಕುರುಹನ್ನು ಬಿತ್ತರಿಸುತ್ತವೆ. ಜನಪದರು ಪರಿಸರವನ್ನು ಭೌಗೋಳಿಕವಾಗಿ ಗುರುತಿಸುವುದು ಸಂಸ್ಕೃತಿಯ ಬೇರುಗಳಿಂದ. ಹಾಗೆ ಚಹರೆಗೊಳಪಡುವ ಎಲ್ಲ ಭೌತಿಕ ವಿವರಗಳೂ ಸಂಸ್ಕೃತಿಯ ಕ್ರಿಯೆಗಳೇ ಆಗಿಬಿಡುತ್ತವೆ. ನಿಸರ್ಗವನ್ನು ಹೀಗೆಯೇ ಜನಪದಗಳು ಸಂಸ್ಕೃತಿಯನ್ನಾಗಿ ರೂಪಾಂತರಿಸುವುದು. ತಾವು ಕಾಣುವ ಬೆಟ್ಟಗುಡ್ಡ ಹುಲ್ಲುಗಾವಲು ಕಣಿವೆ ನದಿ ಬಯಲು ದುರ್ಗಮ ಶಿಖರ ಪ್ರಪಾತ ಪ್ರತಿಯೊಂದು ಭೂ ಸ್ವರೂಪವನ್ನು ಕಥನ ಒಂದಕ್ಕೆ ಹೊಂದಿಸಿಯೆ ಜನಪದರು ಅದರೊಡನೆ ತಮ್ಮ ಸಂಬಂಧವನ್ನು ಕಟ್ಟಿಕೊಳ್ಳುವುದು. ಸಂಸ್ಕೃತಿಗಳು ಇಂತಹ ಭೌತಿಕ ಗುರುತುಗಳಿಂದಲೆ ತುಂಬಿ ಹೋಗಿವೆ. ಒಂದೊಂದು ಊರಿನ ಸ್ಥಳ ಪುರಾಣಗಳೆಲ್ಲ ಸ್ಥಳೀಯ ಸಂಸ್ಕೃತಿಯ ನಿರೂಪಣೆಗಳೇ ಆಗಿದ್ದು ಅವು ಆ ವ್ಯಕ್ತಿಗೆ ಅಥವಾ ಆ ಪರಿಸರಕ್ಕೆ ಕೊಟ್ಟ ಗುರುತುಗಳೂ ಆಗಿರುತ್ತವೆ. ಹಾಗೆಯೆ ಸ್ಥಳೀಯವಾದ ವಾಸದ ನೆಲೆಯ ಪ್ರತಿಪಾದನೆಯ ಕಥನಗಳು ಆಗಿರುತ್ತವೆ. ಸ್ಥಳನಾಮಗಳ ವಿವರವೂ ಇಂತವೇ. ವ್ಯಕ್ತಿ ಒಂದು ನಿರ್ದಿಷ್ಟ ಸ್ಥಳಕ್ಕೆ ಬದ್ದವಾಗಿಯೆ ಬೇರು ಬಿಟ್ಟೇ ತನ್ನ ವ್ಯಕ್ತಿತ್ವದ ಜೊತೆಗೆ ಒಂದು ಪ್ರಾದೇಶಿಕ ಗುಣವನ್ನು ಅಳವಡಿಸಿಕೊಳ್ಳುವನು. ಸಮುದಾಯಗಳೂ ಹೀಗೆಯೆ. ಭಾಷಿಕ ಸ್ವರೂಪಗಳೂ ಇಂತವೇ. ಸಂಸ್ಕೃತಿಗಳು ತಮ್ಮ ಪರಿಸರವನ್ನು ವಿವರಿಸಿಕೊಳ್ಳುವ ಮೂಲಕ ತಮ್ಮ ಅನನ್ಯತೆಯನ್ನೂ ಹಾಗು ಹಕ್ಕುಸ್ವಾಮ್ಯವನ್ನೂ, ಭಾವನಾತ್ಮಕವಾದ ನೈಸರ್ಗಿಕ ಸಂಬಂಧವನ್ನು, ಸಾಂಸ್ಕೃತಿಕ ಹಾಗು ಸಾಮಾಜಿಕ ಚಹರೆಗಳನ್ನೂ ಬಿಂಬಿಸುತ್ತವೆ.

ತನ್ನ ನಿರ್ದಿಷ್ಟ ವಾಸದ ನೆಲೆಯ ಬೇರಿನ ಕುರುಹುಗಳನ್ನು ನಿಸರ್ಗದ ಜೊತೆ ಗುರುತಿಸಿಕೊಳ್ಳುವ ಜನಪದರ ನಿರೂಪಣೆಗಳೇ ಭೌಗೋಳಿಕ ಜಾನಪದ. ಇದು ಆದಿಮ ಕಾಲದಿಂದಲೂ ನಡೆದು ಬಂದ ಸ್ವಭಾವ. ತಮ್ಮ ನೆಲೆಯ ಹಕ್ಕನ್ನು ಕೂಡ ಭೌಗೋಳಿಕ ಜಾನಪದವು ಪ್ರತಿಪಾದಿಸುತ್ತಿರುತ್ತದೆ. ಕೇವಲ ವಾಸದ ನೆಲೆಯ ಗುರುತನ್ನು ಜನಪದರು ಭೌಗೋಳಿಕವಾಗಿ ಬಿಂಬಿಸುವುದಿಲ್ಲ. ತನ್ನ ಅಸ್ತಿತ್ವವನ್ನು ಸಾಧಿಸುವ ಬಗೆಯಾಗಿಯೂ ಪರಿಸರದ ಹೊರಗಿನ ಲಕ್ಷಣಗಳನ್ನು ವಿವರಿಸುತ್ತಾರೆ. ಮನುಷ್ಯನಿಗೆ ಹೇಗೆ ಒಂದು ಊರು ಕೇರಿ ಮನೆ ಅನಿವಾರ್ಯವೊ ಹಾಗೆಯೇ ತಮ್ಮ ಪರಿಸರದ ವಿಶೇಷ ಲಕ್ಷಣಗಳು ಕೂಡ ಜನಪದರಿಗೆ ಮಹತ್ವದ್ದಾಗಿರುತ್ತವೆ. ಊರು ಕೇರಿ ಮನೆಯ ವಿಸ್ತೃತ ಸ್ವರೂಪವೇ ಸ್ಥಳೀಯ ಭೂ ವಿವರಗಳಾಗಿರುತ್ತವೆ. ಹೀಗಾಗಿ ಭೌಗೋಳಿಕ ಜನಪದವು ವಿಶಾಲವಾದ ನೆಲೆಯಲ್ಲಿ ರಾಷ್ಟ್ರೀಯ, ಸ್ಥಳೀಯ, ಸೀಮೆಯ, ನಾಡಿನ ಪ್ರಜ್ಞೆಯನ್ನು ಸ್ಥಾಪಿಸುವ ಕಥನವಾಗಿರುತ್ತದೆ. ಪಶುಪಾಲಕ ಸಮುದಾಯಗಳು ಪಶು ಆಹಾರದ ನೆಲೆಗಳನ್ನು ಆರಂಭದಲ್ಲಿ ಗುರುತಿಸಿಕೊಂಡದ್ದು ಹೀಗೆಯೆ. ಇಂತಿಷ್ಟು ಬಯಲು ಪ್ರದೇಶಗಳ ಹುಲ್ಲುಗಾವಲುಗಳು ತಮ್ಮ ವ್ಯಾಪ್ತಿಯವು ಎಂದು ಗಡಿಯನ್ನು ಗುರುತಿಸಿಕೊಳ್ಳುವುದಿತ್ತು. ಎಷ್ಟೋ ಸಮುದಾಯಗಳು ವಾಸದ ಗಡಿಗಳನ್ನು ಕೂಡ ಹೀಗೆ ಅಲೆಮಾರಿ ಬದುಕಿನಲ್ಲಿ ರೂಢಿಸಿಕೊಂಡಿವೆ. ಆರ್ಥಿಕವಾದ ಗಡಿಗಳಾಗಿಯೂ ಭೌಗೋಳಿಕ ಜಾನಪದದ ಕಥನಗಳು ಕೆಲಸ ಮಾಡುತ್ತವೆ. ಮಧ್ಯಕಾಲೀನ ಸಮಾಜದಲ್ಲಿ ಪಾಳೆಗಾರರು ಹಳ್ಳಿಗಳನ್ನು ಹಂಚಿಕೊಂಡು ಆಳ್ವಿಕೆ ನಡೆಸುವಾಗ ಪ್ರಾಕೃತಿಕವಾದ ಸಂಪತ್ತಿನ ಐತಿಹ್ಯದ ಕಥನಗಳನ್ನು ತಮ್ಮ ಅಸ್ತಿತ್ವದ ಭಾಗವಾಗಿ ನಿರೂಪಿಸಿಕೊಂಡಿವೆ. ಸಗರನಾಡು, ಕೆಂಪೇಗೌಡನ ನಾಡು, ಮದಕರಿಯನಾಯಕನ ನಾಡು, ತುಳುನಾಡು ಎಂಬ ಕಲ್ಪನೆಗಳು ಭೌಗೋಳಿಕ ಜಾನಪದದ ಗಡಿಯ ಪ್ರಾದೇಶಿಕ ರೂಪಗಳೂ ಆಗಿದ್ದವು.

ಒಂದು ದೇಶದ ಕಲ್ಪನೆ ಅಖಂಡವಾದರೂ ನಾಡಿನ ಸ್ಥಳೀಯ ಗ್ರಾಮ ಕಲ್ಪನೆಯು ಆಯಾ ಸಮುದಾಯದ ಬದುಕಿನ ಪ್ರಾಥಮಿಕ ಘಟಕ. ಗೋವುಗಳ ಹುಲ್ಲುಗಾವಲುಗಳಿಗಾಗಿ ಹಿಂದೆ ಕದನಗಳೆ ನಡೆಯುತ್ತಿದ್ದವು. ತುರುಗಳ ಹೆಸರಿನ ಶಾಸನಗಳು ಇಂತಹ ಆರ್ಥಿಕ ಗಡಿಯನ್ನು ಹೇಳುತ್ತಲೇ ಪಶುಪಾಲಕ ಹಾಗೂ ಕೃಷಿ ಸಮುದಾಯಗಳ ನಡುವಿನ ಅಸ್ತಿತ್ವದ ಪೈಪೋಟಿಯನ್ನು ಒಪ್ಪಂದವನ್ನು ಬಿಕ್ಕಟ್ಟನ್ನು ಧ್ವನಿಸುವಂತಿವೆ. ಜನಪದರು ಆಳವಾದ ಬೇರನ್ನು ಬಿಟ್ಟುಕೊಳ್ಳುವುದು ತಮ್ಮ ಬದುಕಿಗೆ ಹತ್ತಿರವಾದ ಬೆಟ್ಟ, ಗುಡ್ಡ, ಕೆರೆಕಟ್ಟೆ, ಹೊಳೆಗಳಿಗೇ ಹೊರತು ದೂರದ ಸಮುದ್ರಗಳ ಬಗೆಗಲ್ಲ. ’ದೂರದ ನೀರು ದಾಹಕ್ಕಿಲ್ಲ’ ಎಂಬ ಜನಪದರ ಗಾದೆ ಮಾತು ಅರ್ಥಪೂರ್ಣವಾಗಿದೆ. ನಾವು ಯಾವುದೇ ಭಾಷೆ, ಜಾತಿ, ವರ್ಗ, ಲಿಂಗ, ದೇಶಕ್ಕೆ ಸಂಬಂಧ ಪಟ್ಟವರಾದರೂ ಸ್ಥಳೀಯವಾದ ಒಂದು ನಿರ್ಧಿಷ್ಟ ಗುರುತನ್ನು ಸ್ಥಳೀಯ ನೆಲೆಯ ಜೊತೆ ಹೊಂದಿರಲೇ ಬೇಕಾಗುತ್ತದೆ. ಅದು ನಗರವಾಗಿರಬಹುದು, ಕಾಡಾಗಿರಬಹುದು, ಗ್ರಾಮವಾಗಿರಬಹುದು, ದ್ವೀಪವಾಗಿರಬಹುದು, ಪೇಟೆ ಪಟ್ಟಣ ಯಾವುದೇ ಆಗಿರಬಹುದು. ಇವೆಲ್ಲವೂ ಭೌಗೋಳಿಕವಾದ ಸ್ಥಳೀಯ ಜನ ಜೀವನದ ಕಥನಗಳನ್ನು ತನಗಾಗಿಯೆ ಕಟ್ಟಿಕೊಂಡಿರುತ್ತವೆ. ಮನುಷ್ಯರಿಗೆ ತನ್ನದೆನ್ನುವ ಖಾಸಗೀ ಗುರುತು ಬೇರೆ ಬೇಕಿರುತ್ತದೆ. ಅದು ಸಿಗದಿದ್ದವರು ಬೇಕೇ ಇಲ್ಲದವರಂತೆ ಪರಿತಪಿಸುವರು. ಅಂದರೆ ಭೌಗೋಳಿಕವಾದ ನಿರ್ಧಿಷ್ಟ ಗುರುತಿಲ್ಲದವರು ಸಮಾಜದ ಪೂರ್ಣ ಸದಸ್ಯತ್ವವನ್ನು ಪಡೆದಂತಾಗಿರುವುದಿಲ್ಲ. ವ್ಯಕ್ತಿ ಇಂತಹ ಊರವನು ಎಂಬ ಗುರುತೇ ಆ ವ್ಯಕ್ತಿಯ ಸಾಮಾಜಿಕ ಸದಸ್ಯತ್ವದ ಒಂದು ಅರ್ಹತೆಯಾಗಿರುತ್ತದೆ.

ಜನಪದ ಸಂಸ್ಕೃತಿಗಳು ತಮ್ಮ ಸ್ವಂತ ಕುರುಹುಗಳಿಂದಲೇ ಅನನ್ಯತೆಯನ್ನು ಸಾಧಿಸಿಕೊಳ್ಳುವುದು. ನಾವು ಹಳೆ ಮೈಸೂರಿನವರು, ಅವ್ರು ಹೈದ್ರಾಬಾದ್ ಕರ್ನಾಟಕದವರು, ಇವರು ದಕ್ಷಿಣ ಕನ್ನಡದವರು ಅವ್ರು ಧಾರವಾಡದ ಕಡೆಯವರು ಎಂದು ವಿಭಜಿಸುವುದು ಸಮುದಾಯಗಳ ಪ್ರಜ್ಞೆಯಿಂದಾದರೂ ಇದಕ್ಕೆ ಮೂಲವಾಗಿರುವುದು ಅಲ್ಲಲ್ಲಿನ ಪರಿಸರವೇ ಎಂಬುದನ್ನು ನಿರಾಕರಿಸಲಾಗದು. ಜನವಸತಿಯ ಭೌಗೋಳಿಕ ಚಹರೆಗಳಿಂದಲೇ ಸಂಸ್ಕೃತಿಗಳೂ ನಾಡಿನ ಪ್ರಜ್ಞೆಗಳು ಬೆಳೆದಿರುವುದು. ಭೌಗೋಳಿಕ ಜಾನಪದವು ಇಡೀ ಗ್ರಾಮ ಸಮಾಜದ ರಚನೆಯನ್ನು ವಿವರಿಸುತ್ತದೆ. ಹಳ್ಳಿಯೊಂದು ಯಾವ ಆಧಾರದ ಮೇಲೆ ನೆಲೆಗೊಂಡಿದೆ, ಆ ಹಳ್ಳಿಯ ದೈವದ ನಂಬಿಕೆಗಳು ಹೇಗೆ ಆ ಪರಿಸರದಿಂದ ಹುಟ್ಟಿವೆ, ಹಳ್ಳಿಯ ಕೇರಿಗಳು ಹೇಗೆ ರೂಪಿಸಲ್ಪಟ್ಟಿವೆ. ಆ ಹಳ್ಳಿಯ ಭೂಮಿಯ ಸಂಬಂಧ ಹೇಗೆ ನಿರ್ಧಾರವಾಗಿದೆ. ಆ ಪರಿಸರದ ಜೀವಜಾಲದ ಸಂಬಂಧ ಹೇಗೆ ಅವಿನಾಭಾವನಾಗಿ ಬೆಸುಗೆಯಾಗಿದೆ: ಯಾವ ದಿಕ್ಕಿಗೆ ಯಾವ ದಾರಿ ಇರಬೇಕು; ಪರ ಊರಿಗೂ ತಮಗೂ ಎಂತಹ ಭಿನ್ನತೆ ಇರಬೇಕು; ಯಾರು ಆ ಊರಿನ ಮುಂದಾಳಾಗಬೇಕು; ಅಲ್ಲಿನ ವೃತ್ತಿಗಳು ಹೇಗೆ ಅಸ್ತಿತ್ವ ಪಡೆಯಬೇಕು ಎಂಬ ಪರ್ವ ವಿವರಗಳು ಆ ಹಳ್ಳಿಯ ಭೌಗೋಳಿಕ ವ್ಯಾಪ್ತಿಯಿಂದಲೇ ನಿರ್ಧಾರವಾಗಿರುತ್ತವೆ.

ಜನಪದರು ಸುಮ್ಮನೆ ಒಂದು ಊರನ್ನು ಕಟ್ಟಿಕೊಳ್ಳುವುದಿಲ್ಲ. ಸ್ವತಃ ವಿಜಯನಗರ ಸಾಮ್ರಾಜ್ಯ ತಲೆ ಎತ್ತಬೇಕಾದರೆ ಅದಕ್ಕೆ ಬಲವಾದ ಒಂದು ಭೌಗೋಳಿಕ ಬಲವೇ ಬೇಕಾಯಿತು. ಬೆಟ್ಟ ಗುಡ್ಡ ಬಂಡೆ ಸಾಲುಗಳಿಂದಾವೃತ್ತವಾದ ತುಂಗಭದ್ರಾ ನದಿಯು ಮಹಾನಗರ ಹಂಪಿಯನ್ನೆ ನಿರ್ಮಿಸಿತ್ತು. ನಾಗರೀಕತೆಗಳು ಬೆಳೆದದ್ದೇ ತಕ್ಕ ಭೌಗೋಳಿಕ ಪರಿಜ್ಞಾನದಿಂದ. ಮರುಭೂಮಿಯಲ್ಲಿ ಬದುಕಬೇಕಾದಾಗಲೂ ಪೂರ್ವಸಿದ್ಧತೆಗಳಿಂದಲೇ ಪರಿಸರದ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ವಾಸದ ನೆಲಯೂ ಭೌಗೋಳಿಕ ಜ್ಞಾನದ ಪರಿಣಾಮವೇ ಆಗಿರುತ್ತದೆ. ಹಂಪಿಯ ಗವಿಗಳಲ್ಲಿ ವಾಸಿಸುತ್ತಿದ್ದ ಮಾನವರು ನದಿ ದಂಡೆಗೆ ಬರುವುದೂ ಕೂಡ ಭೌಗೋಳಿಕ ವಿವೇಕದ ವಿಕಾಸದಿಂದಾಗಿ. ಹೀಗೆ ಮಾನವರ ಉಗಮ ವಿಕಾಸದಲ್ಲಿ ಭೌಗೋಳಿಕ ಪ್ರಜ್ಞೆಯು ಗಾಢವಾದ ಪರಿಣಾಮವನ್ನು ಉಂಟುಮಾಡಿದೆ. ಇದನ್ನೇ ಜನಪದ ಪರಿಸರ ವಿವೇಚನೆ ಎಂದು ಕರೆಯಬಹುದು. ವರ್ಷದ ಎಲ್ಲ ಋತುಗಳಿಗೂ ಹೊಂದುವಂತಹ ವಾಸದ ನೆಲೆಯನ್ನು ರೂಪಿಸಬೇಕಾದರೆ ಪೂರ್ವಭಾವಿ ಭೌಗೋಳಿಕ ಚಿಂತನೆ ನಡೆದಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಬೆಟ್ಟಗುಡ್ಡ ಮಾತ್ರ ಭೌಗೋಳಿಕತೆಯ ಕುರುಹು ಅಲ್ಲ. ಅಲ್ಲಿ ವಾಸಕ್ಕೆ ಅನುಕೂಲಕರವಾದ ರಕ್ಷಣೆ ಇರಬೇಕು. ವಕ್ಕಲುತನಕ್ಕೆ ತಕ್ಕ ಭೂಮಿ ಇರಬೇಕು. ಯೋಗ್ಯ ನೀರಿನ ಆಸರೆಯಿರಬೇಕು. ಪಶುಪಾಲನೆಗೆ ಎಲ್ಲ ಸೌಲಭ್ಯಗಳಿರಬೇಕು. ತಕ್ಕ ಮಟ್ಟಿನ ಕಾಡು ಕೂಡ ಇರಬೇಕು. ಇವೆಲ್ಲವೂ ಕೂಡ ಭೌಗೋಳಿಕತೆಯ ಮುಖಗಳೇ. ಜನಪದರು ಈ ಬಗೆಯ ಪರಿಸರಗಳನ್ನೇ ಆಯ್ದುಕೊಂಡು ಗ್ರಾಮ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ಹಂಪಿಯ ಪರಿಸರ ಈ ಪ್ರಕ್ರಿಯೆಗೆ ಅನ್ಯವಲ್ಲ.

ವಿಜಯನಗರ ಸಾಮ್ರಾಜ್ಯದ ಪೂರ್ವದಲ್ಲಿದ್ದ ಹಂಪಿಯ ಗ್ರಾಮಗಳ ವಿವರಗಳು ಈಗ ಅನೇಕರಿಗೆ ತಿಳಿದಿಲ್ಲ. ಪಶುಪಾಲಕ ಮೂಲ ಸ್ಥಳವಾಗಿದ್ದ ಹಂಪಿಯ ಬಯಲು ಪ್ರದೇಶಗಳು ಗ್ರಾಮಗಳ ಕೃಷಿ ಭೂಮಿಯಾಗಿ ಮಾರ್ಪಟ್ಟಿವೆ. ಕಾಲ ಬದಲಾದಂತೆ ಭೌಗೋಳಿಕ ನೆಲೆಯನ್ನು ಕೂಡ ರೂಪಾಂತರಿಸಿಕೊಳ್ಳುವುದಿದೆ. ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿದರೆ ಹೇಗೆ ಹಳ್ಳಿಗಳೇ ಮುಳುಗಿ ಹೋಗುತ್ತವೊ ಅಂತೆಯೆ ಭೌಗೋಳಿಕ ನೆಲೆಗಳು ಆಧುನಿಕತೆಯ ಬೇರೆ ಬೇರೆ ಒತ್ತಡಗಳಿಂದ ಸ್ವರೂಪವನ್ನೇ ಕಳೆದುಕೊಳ್ಳಬಲ್ಲವು. ವಿಜಯನಗರ ಸಾಮ್ರಾಜ್ಯದ ಕಾಲ ಕೂಡ ಹಂಪಿಯ ಭೌಗೋಳಿಕ ಸ್ವರೂಪದಲ್ಲಿ ಅನೇಕ ಮಾರ್ಪಾಟುಗಳನ್ನು ಮಾಡಿದೆ. ಅಂದರೆ ಎಲ್ಲ ಕಾಲದ ಸಮಾಜಗಳು ಕೂಡ ತಮ್ಮ ವಾಸದ ಭೌಗೋಳಿಕತೆಯಿಂದ ಬೇಕಾದ ಸೌಲಭ್ಯಗಳನ್ನೆಲ್ಲ ಪಡೆದುಕೊಳ್ಳಲು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಲೇ ಇರುತ್ತವೆ. ಇದು ಪರಿಸರದ ಮೇಲಿನ ದಾಳಿಯೂ ಆಗಿರಬಹುದು. ಜನಪದರ ಮನಸ್ಸಿನಲ್ಲಿ ಯಾವತ್ತು ಕೂಡ ಸ್ಥಳೀಯತೆಯೇ ಗಾಢವಾಗಿ ಪ್ರೇರೇಪಿಸಿರುತ್ತದೆ. ಈಗಲೂ ಹಂಪಿಯ ಗ್ರಾಮಗಳ ಪರಂಪರೆಗಳನ್ನು ಹಿಡಿದಿಟ್ಟಿರುವುದು ಅಲ್ಲಲ್ಲಿನ ಪರಿಸರವೇ. ಒಂದೊಂದು ಬೆಟ್ಟಗುಡ್ಡಗಳಿಗೂ ಸ್ಥಳಗಳಿಗೂ ಜನಪದರ ವಿವರಗಳು ಸಾಂಸ್ಕೃತಿಕ ನಂಬಿಕೆಗಳಿಂದ ಕೂಡಿವೆ.ಇಲ್ಲಿನ ಪ್ರಸಿದ್ಧವಾದ ಭೂ ವೈದೃಶ್ಯಗಳು ವಿಜಯನಗರ ಸಾಮ್ರಾಜ್ಯದ ಚರಿತ್ರೆಗೆ ಹೆಚ್ಚಾಗಿ ಬೆಸೆದು ಕೊಂಡಿವೆ. ಅಂತಹ ನೆಲೆಗಳನ್ನು ಕೆಳಕಂಡಂತೆ ಗುರುತಿಸಬಹುದು. ಡಾ.  ಪುರುಷೋತ್ತಮ ಬಿಳಿಮಲೆ ಹಾಗೂ ಡಾ. ಚೆಲುವರಾಜ ಅವರು ’ಹಂಪಿ ಜಾನಪದ’ ಕೃತಿಯಲ್ಲಿ ಹಂಪಿಯ ಪ್ರಮುಖ ನೆಲೆಗಳನ್ನು ಉಪಯುಕ್ತವಾಗಿ ಗುರುತಿಸಿದ್ದಾರೆ. ಬಿಳಿಮಲೆ ಅವರು ಅತ್ಯಂತ ವ್ಯಾಪಕ ನೆಲೆಯಿಂದ ಮೊದಲ ಬಾರಿಗೆ ಹಂಪಿಯ ಮೌಖಿಕ ಚರಿತ್ರೆಯನ್ನು ಗಾಢವಾಗಿ ವಿಶ್ಲೇಷಿಸಿದ್ದಾರೆ. ಚೆಲುವರಾಜ ಒದಗಿಸಿರುವ ಮಾಹಿತಿಗಳಿಗೆ ಸಂವೇದನಾ ಶೀಲವಾದ ಬೌದ್ಧಿಕ ಒಳನೋಟಗಳನ್ನು ನೀಡುವ ಮೂಲಕ ಸ್ಥಳೀಯ ಚರಿತ್ರೆಯ ಅತ್ಯುತ್ತಮ ಮಾದರಿಯೊಂದನ್ನು ರೂಪಿಸಿದ್ದಾರೆ. ಬಹುರೂಪಿ ಅಧ್ಯಯನ ವಿಧಾನವನ್ನು ಕೂಡ ಪ್ರತಿನಿಧಿಸುವ ಈ ಕೃತಿಯು ಬಿಳಿಮಲೆ ಅವರ ಅಂತರ್ ಶಿಸ್ತೀಯ ಆಲೋಚನಾ ಕ್ರಮಕ್ಕೆ ತಕ್ಕ ಉದಾಹರಣೆಯಾಗಿದೆ. ಬಿಳಿಮಲೆ ಅವರು ನಾಲ್ಕು ಪ್ರಮುಖ ನೆಲೆಗಳಲ್ಲಿ ಹಂಪಿಯ ಪರಿಸರದ ಭೌಗೋಳೀಕತೆಯನ್ನು ಪರಿಚಯಿಸುತ್ತಾರೆ. ಅವುಗಳೆಂದರೆ. ಪ್ರಮುಖ ದೇವಾಲಯಗಳ ಆವರಣ, ಗ್ರಾಮದೇವತೆಗಳ ಗುಡಿಗಳು, ಹಳೆಯ ಪಟ್ಟಣ ಕುರುಹುಗಳು, ಪ್ರಮುಖ ಮಠಗಳು, ಊರುಗಳು, ಪರ್ವತಗಳು, ನದಿಕೆರೆ ಹೊಂಡಗಳು ಹಾಗು ಹಂಪಿಯ ಸುತ್ತಮುತ್ತಲಿನ ಪ್ರದೇಶಗಳು. ಈ ಎಲ್ಲ ಸೂಚಿತ ನೆಲೆಗಳಲ್ಲೂ ಈ ಇಬ್ಬರು ವಿದ್ವಾಂಸರು ಮತ್ತೆ ಒಳವಿವರಗಳ ನೆಲೆಗಳನ್ನು ತೋರುತ್ತಾರೆ. ವಿವರವಾದ ಒಂದು ಮೇಲ್ಮೈ ಚಿತ್ರಣವೇ ಅವರ ಈ ಬಗೆಯ ವಿಂಗಡನೆಯಿಂದ ತಿಳಿದು ಬರುತ್ತದೆ.

ಆದರೆ ಈ ವಿದ್ವಾಂಸರು ಭೌಗೋಳಿಕವಾದ ನೈಸರ್ಗಿಕ ನೆಲೆಗಳು ಹೇಗೆ ಜೀವಜಾಲ ಜಾನಪದವನ್ನು ಭೌಗೋಳಿಕವಾಗಿ ರೂಪಿಸುತ್ತದೆ ಎಂಬುದರ ಕಡೆಗೆ ಲಕ್ಷ್ಯವಹಿಸಿಲ್ಲ. ಪ್ರಾಥಮಿಕವಾದ ಅನೇಕ ಒಳವಿವರಗಳನ್ನು ಮೊದಲ ಬಾರಿಗೆ ಲಿಖಿತಗೊಳಿಸಿದ್ದರಿಂದ ಈ ವಿದ್ವಾಂಸರ ಶ್ರಮ ಸಾರ್ಥಕವಾದುದೇ ಆಗಿದೆ. ಹಂಪಿಯ ಭೌಗೋಳಿಕ ನೆಲೆಗಳನ್ನು ಕೆಳಗಿನಂತೆ ಗುರುತಿಸಬಹುದು. ಈ ವಿಂಗಡನೆ ಅಪ್ಪಟ ಭೌಗೋಳಿಕ ಜಾನಪದದ ಕ್ರಮ ಅಲ್ಲ. ವಿಜಯನಗರ ಸಾಮ್ರಾಜ್ಯದ ಹಿನ್ನೆಲೆಯ ವಿಂಗಡನೆ ಇದು.

೧. ಹೇಮಕೂಟ, ೨. ರತ್ನಕೂಟ, ೩. ಋಷಿ ಮುಖ ಪರ್ವತ, ೪. ಮತಂಗ ಪರ್ವತ, ೫. ಅಂಜನಾದ್ರಿ ಬೆಟ್ಟ, ೬. ಮಾಲ್ಯವಂತ ಪರ್ವತ, ೭. ಸೀತೆ ಸೆರಗು, ೮. ತಾರಾದೇವಿ ಬೆಟ್ಟ, ೯. ದುರ್ಗಾಬೆಟ್ಟ, ೧೦.ಧರ್ಮರಗುಡ್ಡ, ೧೧. ಮೊಸಳಯ್ಯನಗುಡ್ಡ ೧೨. ಏಡಿಗುಡ್ಡ, ೧೩. ಮನ್ಮಥಕೊಂಡ, ೧೪. ತಳವಾರ ಘಟ್ಟ, ೧೫. ಕೋತಿ ಇನಾಮ್, ೧೬. ಅಕ್ಕತಂಗಿಯರ ಗುಂಡು, ೧೭. ಪಂಪಾಸರೋವರ, ೧೮. ಸುಗ್ರೀವ ಗುಹೆ, ೧೯. ವಾಲಿಕಾಷ್ಟ, ೨೦. ವಾಲಿಭಂಡಾರ, ೨೧. ದುಂದುಬಿಗುಹೆ, ೨೨ ಹನುಮನ ಸೆಳವು, ೨೩. ಕೋಣನ ಹರಿವು. ೨೪. ಪುರಂದರ ಮಂಟಪ, ೨೫. ತಳವಾರಪ್ಪನಕಲ್ಲು, ೨೬. ಕಾಳಘಟ್ಟ, ೨೭.ಬಿದಿರುಕಲ್ಲುಗುಡ್ಡ, ೨೮. ಮೇಲಘಟ್ಟ, ೨೯. ಕೆಳಘಟ್ಟ, ೩೦. ಎಲ್ಲಮ್ಮನಗವಿ, ೩೧. ವಿಷ್ಣು ಪಾದ, ೩೨. ಸೋಮನಾಥಬೆಟ್ಟ.

ಹೀಗೆ ಬಹುರೂಪಿಯಾಗಿ ಹಂಪಿಯ ಭೌಗೋಳಿಕ ಜಾನಪದ ಸ್ವರೂಪವನ್ನು ಪಟ್ಟಿ ಮಾಡಬಹುದು. ಹೀಗೆ ಮಾಡಿರುವುದು ಅಪೂರ್ಣವಷ್ಟೇ. ಇದೇ ನೆಲೆಗಳಲ್ಲಿ ಹಂಪಿಯ ಪಟ್ಟಣದ ಉಪಕೇಂದ್ರಗಳಾಗಿದ್ದ ತಿರುಮಲಾಪುರ, ನಾಗೇನಹಳ್ಳಿ, ಆನೆಗೊಂದಿ, ನಾಗಲಾಪುರ, ಕಮಲಾಪುರ, ಅನಂತಶಯನ ಗುಡಿ, ಕೊಂಡನಾಯ್ಕನಹಳ್ಳಿ, ಮಲ್ಲಪ್ಪನ ಗುಡಿ, ಕಡ್ಡೀರಾಂಪುರ ಈಗಲೂ ಜೀವಂತವಾಗಿದ್ದು ರೂಪಾಂತರಗೊಂಡಿವೆ. ಹಾಗೆಯೇ ಜನವಸತಿ ಇಲ್ಲದ ವಿಠಲಪುರ, ತಳವಾರಘಟ್ಟ, ದುರ್ಗ, ಗೋರಿ ಕೆಳಗಣ ಗ್ರಾಮ, ಪಂಪಾ ಸರೋವರ, ಅಚ್ಯುತಪುರ ಮುಂತಾದವು ಹಂಪಿಯಲ್ಲೇ ಲೀನವಾಗಿವೆ. ಅನೇಕ ಕೆರೆಗಳು ಹೂಳು ತುಂಬಿ ಕಣ್ಮರೆಯಾಗಿವೆ. ವಿಜಯನಗರ ಕಾಲದ ಪಟ್ಟಣವಾಗಿದ್ದ ಹಂಪಿಯ ಒಳಗೇ ಇದ್ದ ಅನೇಕ ಜನವಸತಿ ಪುರಗಳು ಗತವಾದ ಗುರುತುಗಳನ್ನು ಮಾತ್ರ ಉಳಿಸಿ ಮೂಲ ರೂಪವನ್ನು ಅಳಿಸಿಕೊಂಡಿವೆ. ಪಟ್ಟಣದ ಉಪ ಪಟ್ಟಣಗಳು ಧ್ವಂಸವಾಗಿವೆ. ಇವೆಲ್ಲವೂ ಭೌಗೋಳಿಕ ಸ್ವರೂಪದಲ್ಲಿ ಕಾಲದ ಹೊಡೆತಗಳಿಗೆ ಹೀಡಾಗಿದ್ದರೂ ಅವುಗಳು ಪರಿಸರದ ಬೇರೆ ಬೇರೆ ಸಂಗತಿಗಳನ್ನು ಧ್ವನಿಸುತ್ತವೆ. ಗ್ರಾಮದೈವಗಳು ಹಂಪಿಯಲ್ಲಿ ಈಗಲೂ ಪೂಜೆಗೊಳ್ಳುವುದಿದೆ. ಒಂದು ಪ್ರದೇಶದ ದೈವಿಕ ಆವರಣವು ಭೌಗೋಳಿಕತೆಯ ವೈಶಿಷ್ಟ್ಯವಲ್ಲದೆ ಬೇರೇನಲ್ಲ. ಜನಪದರು ಭೂಗೋಳಶಾಸ್ತ್ರಜ್ಞರಿಗಿಂತ ಬೇರೆಯಾಗುವುದು ಅವರು ಆ ನಿರ್ದಿಷ್ಟ ನೆಲೆಯನ್ನು ತಮ್ಮ ಅಸ್ತಿತ್ವದಲ್ಲಿ ಗುರುತಿಸಿಕೊಳ್ಳುವ ಮೂಲಕ. ಭೂಸ್ತರಗಳ ರಚನೆಯ ವಿಕಾಸದ ವಿವರಣೆಗಳು ಸ್ಥಳೀಯರ ತತ್ ಕ್ಷಣದ ಬದುಕಿನ ವಿವರಗಳ ಜೊತೆ ಸಂಬಂಧ ಸಾಧಿಸಿಕೊಳ್ಳಲಾರವು. ಅಂತಹ ವೈಜ್ಞಾನಿಕ ನಂಬಿಕೆಗಳು ಸ್ಥಳೀಯ ದೈವಿಕತೆಗೆ ಭಂಗಪಡಿಸುವಂತಿರುತ್ತದೆ. ಆದ್ದರಿಂದ ಜನಪದರು ಪರಿಸರದ ಒಟ್ಟು ಸ್ವರೂಪವನ್ನೇ ಮಾನವೀಕರಿಸಿರುತ್ತಾರೆ. ಬೆಟ್ಟ ಗುಡ್ಡಗಳು ಅವರಿಗೆ ಬಂಧುಗಳಾಗಿ ಕಂಡಿರುತ್ತವೆ. ನದಿ ಮಾತೆಯಾಗಿದ್ದರೆ ಕೆರೆಕಟ್ಟೆಗಳು ಗ್ರಾಮದೈವಗಳಾಗಿ ಮಾರ್ಪಟ್ಟಿರುತ್ತವೆ. ಅವರ ಪರಿಸರವೇ ಆವರ ಬದುಕಾಗಿರುತ್ತದೆ. ನೈಜ ಬದುಕಿಗೂ ನೈಸರ್ಗಿಕ ಸಂಬಂಧಕ್ಕೂ ವಿಕಾಸದ ನೆನ್ನೆಯ ಅತಿ ದೂರದ ಸಂಬಂಧ ಬೇಡವಾದ್ದರಿಂದ ಜನಪದರು ಜೀವಂತವಾಗಿ ಸಮೀಪವಾಗಿ ನಿಸರ್ಗವನ್ನು ತಮ್ಮದೇ ಜೀವನಾಡಿಯಾಗಿ ಮಾರ್ಪಡಿಸಿಕೊಳ್ಳುವರು. ಇದು ಜೀವ ಜಾಲ ಜಾನಪದದ ವಿಶಿಷ್ಟತೆ. ಹೀಗಾಗಿ ಪರಿಸರ ಎಂದರೆ ಅದು ಮಾನವರ ಅತೀತವಾದ ಸಂಬಂಧಗಳನ್ನು ಬೆಸುಗೆ ಮಾಡಿಕೊಳ್ಳಲು ಇರುವ ಅವಕಾಶವೂ ಹೌದು. ಇಂತಹ ಭೂ ಅವಕಾಶದಲ್ಲಿ ದೈವವು ಎಲ್ಲವನ್ನು ಸೃಷ್ಠಿಸಿರುತ್ತದೆ. ಈ ಭೂಮಿಯ ಪ್ರತಿಯೊಂದು ಜೀವಿಯಲ್ಲೂ ಬೆಟ್ಟ ಗುಡ್ಡದಲ್ಲೂ ದೈವಾಂಶವಿರುತ್ತದೆ. ಹೀಗೆ ಜನಪದರ ದೈವ ಭಾವ ಬೇರೆ ಅಲ್ಲ ಅವರ ಬದುಕಿನ ಪರಿಸರ ಬೇರೆ ಅಲ್ಲ. ಐತಿಹ್ಯಗಳೆಲ್ಲ ಭೌಗೋಳಿಕ ವಿವರಣೆಯ ವೈವಿಧ್ಯ ನಿರೂಪಣೆಗಳೂ ಆಗಿವೆ. ಹಂಪಿಯ ಭೌಗೋಳಿಕ ವಿಶೇಷತೆಯಲ್ಲಿ ದೈವಿಕ ಆವರಣವೇ ಪ್ರಧಾನವಾಗಿದೆ. ನದಿಗಳು ಹರಿವ ನೆಲೆಗಳೆಲ್ಲ ದೈವಿಕ ಸ್ವರೂಪದ ಭೌತಿಕತೆಯನ್ನು ಪಡೆವುದು ಸಹಜವಾದುದೇ.

ರಾಮಾಯಣದ ಕಥನಗಳ ಅನೇಕ ಆಶಯಗಳು ಹಂಪಿಯ ಭೌಗೋಳಿಕ ಜಾನಪದದಲ್ಲಿ ದಟ್ಟವಾಗಿ ಬಿಂಬಿತವಾಗಿವೆ. ಮೌಲ್ಯವಂತ ಪರ್ವತದಲ್ಲಿ ರಾಮ ಲಕ್ಷ್ಮಣರು ತಂದೆ ದಶರಥನನಿಗೆ ಶ್ರಾಧ್ದ ತಿಥಿಯನ್ನು ಮಾಡಬೇಕಾಗಿ ಬಂದಾಗ ಅವರು ಇಲ್ಲೇ ಪಿಂಡಗಳನ್ನು ಇಟ್ಟರಂತೆ. ಅವುಗಳೇ ಮುಂದೆ ಕಲ್ಲುಗಳಾದವಂತೆ. ಹಂಪಿಯ ಜನ ಈ ಪಿಂಡ ಕಲ್ಲುಗಳನ್ನು ಭಕ್ತಿಯಿಂದ ಕಾಣುವರು. ರಾಮ ಲಕ್ಷ್ಮಣ ಸೀತೆಯರು ಮಾಲ್ಯವಂತ ಪರ್ವತದಲ್ಲಿ ವನವಾಸ ಕಾಲವನ್ನು ಕಳೆದಿದ್ದರಂತೆ. ಕಿಷ್ಕಿಂದೆಯು ಹನುಮಂತನ ನೆಲೆಯಾಗಿದ್ದನ್ನು ಜನ ಸ್ಮರಿಸುವರು. ವಾಲಿ ಸುಗ್ರೀವರ ಕುರುಹುಗಳನ್ನು ತೋರುವರು. ಸೀತೆಯ ಸೆರಗನ್ನು ಗುರುತಿಸುವರು. ಕೋಟಿ ಲಿಂಗದ ಸಾಕ್ಷ್ಯ ಸಾಮಾನ್ಯವಾದದ್ದೇ. ಹಂಪಿಯ ಬಂಡೆಗಳಲ್ಲೆಲ್ಲ. ದಶಾವತಾರವನ್ನು ಕೆತ್ತಲಾಗಿದೆ. ಧರ್ಮರ ಗುಡ್ಡದಲ್ಲಿ ಧರ್ಮರಾಯರ ಕುರುಹುಗಳಿವೆ. ಋಷ್ಯಮುಖ ಪರ್ವತದಲ್ಲಿ ಮಹಾ ಋಷಿಗಳಾದ ಕಷ್ಯಪ, ಅತ್ರಿ, ಭಾರಧ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠರು ತಪಸ್ಸು ಮಾಡಿದ್ದರ ಉಲ್ಲೇಖವನ್ನು ಕಾಣಬಹುದು. ಮತಂಗ ಮುನಿಯ ಮತಂಗ ಪರ್ವತ ಮತ್ತೊಂದೆಡೆಗಿದೆ. ಅಂಜನಾದ್ರಿಬೆಟ್ಟ, ಹನುಮಂತನ ಮಾತೆಯ ಬೆಟ್ಟ. ದುರ್ಗಾದೇವಿ ಶಕ್ತಿ ಆರಾಧನೆಯ ನೆಲೆ. ಹೀಗೆ ಪ್ರತಿಯೊಂದು ಭೌಗೋಳಿಕ ಸ್ವರೂಪದಲ್ಲೂ ಹಂಪಿಯ ಜನಪದವು ದೈವವನ್ನೂ ಮಹಾಕಾವ್ಯಗಳ ಮಹಾತ್ಮರನ್ನು ಸಪ್ತ ಋಷಿಗಳನ್ನು ಮಹಾ ಸಂತರನ್ನೂ ಶಕ್ತಿ ಆರಾಧನೆಯ ಗ್ರಾಮದೈವಗಳನ್ನೂ ನಾಗಾರಾಧನೆಯ ನೆಲೆಗಳನ್ನೂ ವಿವರವಾಗಿ ಕಂಡಿದೆ.

ಹೀಗೆ ಯಾಕೆ ಹಂಪಿಯ ಭೌಗೋಳಿಕತೆಯಲ್ಲಿ ಅಪಾರವಾದ ದೈವಿಕತೆಯನ್ನು ಕಾಣಲಾಯಿತು? ಅದರ ಪ್ರಾಕೃತಿಕ ಸೊಬಗಿಗೆ ಯಾಕೆ ಜನಪದರು ರಮ್ಯಭಾವವನ್ನು ವ್ಯಕ್ತಪಡಿಸಲಿಲ್ಲ? ಹಂಪಿಯ ದೈವಿಕತೆಯಲ್ಲಿ ವಿಶೇಷವಾಗಿ ಯಾಕೆ ರಾಮಾಯಣದ ಕಥನ ಬೆಸೆದುಕೊಂಡಿದೆ? ಶೈವ ಮತ್ತು ವೈಷ್ಣವ ಪಂಥಗಳು ಈ ಪರಿಸರದ ಭೌಗೋಳಿಕತೆಯನ್ನು ವಿಶೇಷವಾಗಿ ಯಾಕೆ ಆಶ್ರಯಿಸಿದವು? ಶಕ್ತಿ ಆರಾಧನೆಯ ಬೇರೆ ಬೇರೆ ಮುಖಗಳು ಇಲ್ಲಿ ವೈವಿಧ್ಯವಾಗಿ ಬೆಳೆಯಲು ಅದರ ಭೌಗೋಳಿಕತೆಯ ಪಾತ್ರವೇನು? ಇಂತಹ ಅನೇಕ ಸಂಗತಿಗಳೆನ್ನೆಲ್ಲ ವಿಶ್ಲೇಷಿಸಿದರೆ ತಿಳಿದು ಬರುವ ಅಂಶವೆಂದರೆ ನಿಸರ್ಗದ ಎಲ್ಲ ಅತೀತ ಕಲ್ಪನೆಗಳು ದೈವಿಕವಾದ ಸೆಳೆತದ ಕಡೆಗೇ ಮನುಷ್ಯರ ಭಾವನೆಗಳನ್ನು ಕೊಂಡೊಯ್ಯುತ್ತವೆ ಎಂಬುದು. ಅಲ್ಲದೆ ಹಂಪಿಯು ಆದಿಮ ಕಾಲದಿಂದಲೂ ಬೌದ್ದ, ಜೈನ ಧರ್ಮಗಳಿಗೂ ನೆಲೆಯಾಗಿತ್ತು. ಇವನ್ನೆಲ್ಲ ಗಮನಿಸಿದರೆ ಹಂಪಿಯ ಭೌಗೋಳಿಕತೆಯೆ ಆದ್ಯಾತ್ಮಕ್ಕೆ ಹೆಚ್ಚು ಸಮೀಪವಾದ ನೆಲೆ ಎಂಬುದು ಸ್ಪಷ್ಟ. ಇಲ್ಲಿ ಸಾಮ್ರಾಜ್ಯಗಳು ಬೆಳೆದು ಅಳಿದಿದ್ದರೂ ಆಧ್ಯಾತ್ಮದ ದಾಹ ಮಾತ್ರ ಈಗಲೂ ಹಂಪಿಯಲ್ಲಿ ಗಾಢವಾಗಿ ಹಾಗೇ ಇದೆ. ಆಧ್ಯಾತ್ಮಕ್ಕೆ ಬೇಕಾದ ಎಲ್ಲ ಭೌಗೋಳಿಕ ಗುಣಗಳನ್ನೂ ಸೌಲಭ್ಯಗಳನ್ನೂ ಹಂಪಿಯ ಪರಿಸರವು ನೀಡಿದೆ. ಭಕ್ತಿ ಪಂಥ ಚಳುವಳಿಯೂ ವಚನಕಾರರ ನುಡಿಯೂ ಮಧ್ಯಕಾಲೀನ ದೈವಾಚರಣೆಗಳ ವಿರಾಟ್ ಸ್ವರೂಪವೂ ಹಂಪಿಯಲ್ಲಿ ಬೆಳೆದು ಅನಂತರ ಕಾಲದ ಯಾವುದಾವುದೋ ಒತ್ತಡಗಳಲ್ಲಿ ವಿಘಟನೆಗೆ ಈಡಾಗಿವೆ. ಇವನ್ನೆಲ್ಲ ಗಮನಿಸಿದರೆ ಭೌಗೋಳಿಕವಾದ ಅಂಶಗಳು ಮನುಷ್ಯರ ಧಾರ್ಮಿಕತೆಯನ್ನು ವಿಶೇಷವಾಗಿ ಬೆಳೆಸುತ್ತವೆ. ಅಂದರೆ ನಿಸರ್ಗದ ಅನಂತತೆಯನ್ನು ಅರಿಯಲು ಭೌಗೋಳಿಕವಾದ ರೂಪಧಾರೆಗಳು ವಿಶಿಷ್ಟವಾಗಿ ಮನಸ್ಸನ್ನು ರೂಪಿಸುತ್ತವೆ. ಪರ್ವತ ಪ್ರದೇಶಗಳು ಅಡಗುದಾಣವಾಗಿಯೂ ಮಾರ್ಪಡಬಲ್ಲವು. ವಿಜಯನಗರ ಸಾಮ್ರಾಜ್ಯವು ಬೆಟ್ಟಗಳ ಮರೆಯಲ್ಲಿ ಸುರಕ್ಷಿತವಾಗಿತ್ತೆಂದರೆ ಅದೇನು ವಿಶೇಷವಲ್ಲ. ನಿಸರ್ಗದ ಸೌಂದರ್ಯ ಹಾಗು ರೌದ್ರತೆಯು ಸಂಸ್ಕೃತಿಗಳಿಗೆ ಅತೀತವಾದ ಗುಣಗಳನ್ನು ತಂದು ಕೊಡುತ್ತದೆ.

ಗ್ರಾಮದೈವಗಳು ಪ್ರಕೃತಿಯ ಪ್ರತೀಕಗಳು. ನಿಸರ್ಗ ಕೂಡ ಈ ಭಾವನೆಗೆ ಬೇಕಾದ ಒತ್ತಾಸೆಯನ್ನು ತಂದುಕೊಟ್ಟಿದೆ. ಪಶುಪಾಲಕ ಹಾಗೂ ವಕ್ಕಲು ಸಮುದಾಯಗಳ ಆರ್ಥಿಕ ಸಂಸ್ಕೃತಿಯು ಪಿತೃಪ್ರಧಾನ ವ್ಯವಸ್ಥೆಗೆ ದಾರಿ ಮಾಡಿದ್ದು ತಿಳಿದಿರುವ ಸಂಗತಿಯೇ. ಈ ಎರಡೂ ಬಗೆಯ ಜೀವನ ವಿಧಾನಗಳು ಹಂಪಿ ಪರಿಸರದಲ್ಲಿ ಬೆಳೆಯಲು ಇಲ್ಲಿನ ಭೌಗೋಳಿಕ ಸ್ವರೂಪಗಳೇ ಕಾರಣವಾಗಿವೆ.

ಲೌಖಿಕವಾದ ಸ್ಥಳೀಯ ವಿವರಗಳು ಹಿಂದೆ ನಡೆದ ಘಟನೆಗಳ ಮೇಲೆ ರೂಪುಗೊಂಡು ಭೌಗೋಳಿಕ ಚಹರೆಯಾಗಿ ಮಾರ್ಪಡುತ್ತವೆ. ಮೊಸಳಯ್ಯನ ಗುಡ್ಡ ಅಂತಾದ್ದರಲ್ಲಿ ಒಂದಾಗಿದೆ. ಗುಗ್ಗರಿ ಗುಂಡಯ್ಯನ ಬಂಡೆ, ಅಕ್ಕತಂಗಿ ಗುಂಡು, ಒನಕೆ ಕಿಂಡಿ, ಗಂಡ ಹೆಂಡಿರ ಗುಂಡು, ಅಂಬಿಗರ ಕಲ್ಲು, ಕಡೆ ಬಾಗಿಲು, ಮದ್ದಿನ ಮನೆ, ಕರಡಿ ಮಟ್ಟಿ, ಬಡವಿ ಲಿಂಗ, ಫಾತೀಮನ ದುರ್ಗ, ಹದ್ದಿನ ಬಂಡೆ, ಕೋತಿ ಬಂಡೆ, ದೋಣಿಕಲ್ಲು, ಕರಿಮಟ್ಟೆ, ಚಲ್ಲಯ್ಯನ ಮಾಳ, ಮುಂತಾದ ನೆಲೆಗಳೆಲ್ಲವು ಐತಿಹ್ಯ ಪ್ರಧಾನವಾಗಿ ಭೂ ಪ್ರದೇಶಗಳನ್ನು ಗುರುತಿಸುತ್ತವೆ. ಹೀಗೆ ವ್ಯಕ್ತಿ  ಪ್ರಧಾನ ಚಹರೆಗಳು ಕೂಡ ಆ ಪ್ರದೇಶದ ವಿಶಿಷ್ಟ ಘಟನೆಯೊಂದಕ್ಕೆ ದೈವಿಕವಾಗಿ ಅಂಟಿಕೊಂಡಿರುತ್ತವೆ.

ಈ ಬಗೆಯ ವ್ಯಕ್ತಿನಿಷ್ಠ ಭೌಗೋಳಿಕ ಚಹರೆಗಳಿಗೆ ಗಾಢವಾದ ನೈಸರ್ಗಿಕ ನಂಬಿಕೆಗಳು ಇರುವುದರ ಬದಲು ಒಂದು ಪ್ರದೇಶವನ್ನು ಗುರುತಿಸಿಕೊಳ್ಳಲು ಮಾಡಿಕೊಂಡಿರುವ ಹೆಸರುಗಳು. ಇಂತಹ ಹೆಸರುಗಳಿಗೆ ಐತಿಹ್ಯದ ಗುಣ ಸ್ವಭಾವವನ್ನು ಆರೋಪಿಸುವುದಿದೆ. ಅಕ್ಕ ತಂಗಿಯರ ಗುಂಡು ನಡೆದ ಕಥೆಯನ್ನು ಹೇಳುವಂತಿದೆ. ಜನರ ಪ್ರಕಾರ. ’ಒಮ್ಮೆ ಅಕ್ಕ ತಂಗಿಯರಿಬ್ಬರು ಹಂಪಿ ನೋಡಲು ಬಂದರಂತೆ. ಬಿಸಿಲ ಜಳದಲ್ಲಿ ಸುತ್ತಾಡಿ ಸಾಕಾಗಿ ದಣಿದು ಎಲ್ಲೂ ನೀರು ನೆರಳು ಸಿಗದೆ, ಇದೆಂತಹ ಪಾಳು ಜಾಗಕ್ಕೆ ಬಂದೆವೊ’ ಎಂದು ಅಸಮಾಧಾನ ತೋರಿ ಉಸ್ಸೆಂದು ದಾರಿ ಬಳಿ ಕೂತರಂತೆ. ಹಾಗೆ ಅಂತಹ ಪವಿತ್ರ ವಿರೂಪಾಕ್ಷ ಕ್ಷೇತ್ರದ ತಟದಲ್ಲಿ ಕೂತು ಇಂತಹ ಮಾತಾಡಿದರಲ್ಲಾ ಎಂದು ದೈವವು ಅವರಿಬ್ಬರೂ ಕಲ್ಲಾಗಿ ಹೋಗಲಿ ಎಂದು ಶಾಪವಿಕ್ಕಿತಂತೆ. ಹಾಗಾಗಿ ಅವರಿಬ್ಬರು ಕಲ್ಲಾಗಿ ಕೂತಿದ್ದಾರೆ ಎಂದ ಜನಪದ ಹೇಳುತ್ತದೆ. ಗುಗ್ಗರಿ ಗುಂಡಯ್ಯನ ಬಂಡೆ ಕಾಳಘಟ್ಟದ ಬಳಿ ಇದೆ. ಇದು ದೈತ್ಯವಾದ ಬಂಡೆಯೊಂದು ಒಂಟಿಯಾಗಿ ದಾರಿ ಪಕ್ಕದಲ್ಲೆ ಇದೆ. ಈ ಬಂಡೆಯು ತಳದಲ್ಲಿ  V ಆಕಾರದ ಪುಟ್ಟ ಸಂದನ್ನು ನೈಸರ್ಗಿಕವಾಗಿ ಪಡೆದಿದೆ. ಆ ಜಾಗವು ಸಣ್ಣ ಗುಡಿಸಲಿನಂತಿದೆ. ಒಬ್ಬ ವ್ಯಕ್ತಿ ಸಲೀಸಾಗಿ ಅಲ್ಲಿ ವಾಸ ಮಾಡಬಹುದು. ಎಲ್ಲಿಂದಲೊ ಬಂದ ಗುಗ್ಗರಿ ಗುಂಡಯ್ಯ ಅಲ್ಲಿ ನೆಲೆಸಿದ್ದನಂತೆ. ಬಹಳ ಕಾಲ ಅಲ್ಲೇ ಒಂಟಿಯಾಗಿ ಇದ್ದು ಅಲ್ಲೇ ಜೀವ ಬಿಟ್ಟನಂತೆ. ಹಾಗಾಗಿ ಆತನ ಹೆಸರಲ್ಲಿ ಆ ಬಂಡೆಯು ಗುಗ್ಗರಿ ಗುಂಡಯ್ಯನ ಬಂಡೆ ಎಂದು ಕರೆಯಲ್ಪಟ್ಟಿದೆ. ಇದೇ ಬಂಡೆಯ ಅದೇ ಜಾಗದಲ್ಲಿ ಪ್ರಾಗೈತಿಹಾಸಿಕ ರೇಖಾಚಿತ್ರಗಳು ಕಾಣುತ್ತವೆ. ಭಾಗಶಃ ಈ ನೆಲೆಯು ಪಶುಪಾಲಕರಿಗೂ ಆಶ್ರಯ ನೀಡಿವೆ. ಹಂಪಿಯ ಪ್ರದೇಶದಲ್ಲಿ ಹೀಗೆ ಕಾಣುವ ಅನೇಕ ನೆಲೆಗಳಿವೆ. ಅಲ್ಲೆಲ್ಲ ನವ ಶಿಲಾಯುಗದ ಚಿತ್ರಗಳು ತಪ್ಪದೆ ಕಾಣುತ್ತವೆ. ಆದಿ ಕಾಲದವರ ವಾಸದ ನೆಲೆ ಎಂದು ಅವನ್ನು ಹಂಪಿಯ ದನಗಾಹಿಗಳು ಗುರುತಿಸುವರು. ಭಾಗಶಃ ಪಶುಪಾಲಕ ಸಮುದಾಯಗಳು ಹಂಪಿಯಲ್ಲಿ ಯಥೇಚ್ಛವಾಗಿ ಸಿಗುವ ಇಂತಹ ನೆಲೆಗಳನ್ನೆಲ್ಲ ವಾಸಕ್ಕೆ ಬಳಸಿಕೊಂಡಿರಬೇಕು. ಆದಿಮ ಜಾನಪದದ ದಟ್ಟ ಕುರುಹುಗಳಾಗಿ ಇವೆಲ್ಲವೂ ಪಳೆಯುಳಿಕೆಯಂತೆ ಉಳಿದು ಬಂದಿವೆ.

ದೋಣಿಕಲ್ಲು ಬಂಡೆಯು ಮಹಾನವಮಿ ದಿಬ್ಬದ ಪೂರ್ವಕ್ಕೆ ಸಮೀಪದಲ್ಲೇ ಇದೆ. ಬೃಹತ್ ಆಗಿ ಕಾಣುವ ಈ ದೋಣಿಕಲ್ಲು ಬಂಡೆಯು ಸಮುದ್ರದಲ್ಲಿ ನಿಂತಿರುವ ಸಾಧಾರಣ ಹಡಗಿನಂತೆಯೆ ಕಾಣುತ್ತದೆ. ಜನಪದರು ಬಂಡೆಯ ಆಕಾರ ಗಮನಿಸಿ ದೋಣಿಕಲ್ಲು ಎಂದು ಕರೆದಿದ್ದಾರೆ. ವಸ್ತು ಸ್ವರೂಪದ ಆಧಾರದ ಮೇಲೆ ಗುರುತಿಸಲ್ಪಡುವ ಹೆಸರುಗಳಿಗೆ ವಿಶೇಷವಾದ ಸಾಂಸ್ಕೃತಿಕ ಗುಣಗಳು ಇರುವುದಿಲ್ಲ. ಹಂಪಿಯು ಪರ್ವತ ಶ್ರೇಣಿಯಲ್ಲಿ ಚಿತ್ರ ವಿಚಿತ್ರ ಬಂಡೆಗಳು ಕಾಣುತ್ತವೆ. ಅವುಗಳ ಆಕಾರದಲ್ಲಿ ಬಸವಣ್ಣನ ಬಂಡೆ, ಕೋಳಿಕಲ್ಲು, ಕುದುರೆಕಲ್ಲು, ರಾಕ್ಷಸ ಬಂಡೆ, ಮ್ಯಾಕೆ ಬಂಡೆ, ಚಿರತೆ ಬಂಡೆ, ಹೆಜ್ಜೇನು ಬಂಡೆ, ಬೂತ ಬಂಡೆ, ಮುಂತಾಗಿ ಗುರುತಿಸುವರು.ಬಸವಣ್ಣನ ಬಂಡೆಯು ಗಂಗಾವತಿಗೆ ಹೋಗುವ ರಸ್ತೆಗೆ ದೂರದಿಂದ ಕಾಣುತ್ತದೆ. ’ವಿಷ್ಣು ಪಾದ’ದ ಬೆಟ್ಟ ಸಾಲಿನಲ್ಲಿ ಕಾಣುವ ಬಸವಣ್ಣನ ಬಂಡೆಯು ಥೇಟ್ ಬಸವ ಕೆಡೆದುಕೊಂಡಿರುವಂತೆ ಕಾಣುತ್ತದೆ. ಸೂರ್ಯ ಮುಳುಗುತ್ತಿರುವ ಸಂಜೆಗಂಪಿನ ಹಿನ್ನೆಲೆಯಲ್ಲಿ ದೈತ್ಯ ಬಸವನೇ ಬಂಡೆಯಾಗಿ ಕೂತಿದೆ ಎಂಬಂತೆ ಕಾಣುತ್ತದೆ. ಇದಕ್ಕೆ ಅಂತಹ ಯಾವ ಪೌರಾಣಿಕ ಹಿನ್ನೆಲೆಯೂ ಇಲ್ಲ. ವಿಷ್ಟುಪಾದ ಬೃಹತ್ ಪಾದದ ಕುರುಹನ್ನು ಹೊಂದಿರುವ ಸ್ಥಳ. ಇದು ಗೋರಿಕೆಳಗಣ ಗ್ರಾಣದ ಹಿನ್ನೆಲೆಯನ್ನೂ ಮಹತ್ವ ಪಡೆದಿದೆ. ವಿಷ್ಣುವಿನ ಪಾದದ ಗುರುತು ಇದೆಂದು ಹೆಜ್ಜೆ ಗುರುತನ್ನು ತೋರುವರು. ಇದು ದೈವಿಕವಾದ ಐತಿಹ್ಯ. ಹಾಗೆಯೇ ಮುಸ್ಲಿಮರು ಕೂಡ ’ಆದಂಕದಂ’ ಎಂದು ಅದೇ ವಿಷ್ಣು ಪಾದವನ್ನು ಇಸ್ಲಾಂ ಹಿನ್ನೆಲೆಯಲ್ಲಿ ಐತಿಹ್ಯೀಕರಿಸಿದ್ದಾರೆ. ಕೋಳಿಕಲ್ಲು ಸಾಮಾನ್ಯವಾಗಿ ಬಂಡೆಸಾಲುಗಳ ಹಿನ್ನೆಲೆಯಲ್ಲಿ ಸೂರ್ಯಾಸ್ತದ ವೇಳೆ ಕಾಣುವ ರೂಪದ ಪ್ರತೀಕವಷ್ಟೇ. ಆದರೆ ಕಲ್ಲಾಗಿ ಶಾಪಕ್ಕೀಡಾಗಿ ಹಾಗೆ ಕೋಳಿಕಲ್ಲು ಬಂಡೆಗಳ ನಡುವೆ ಸಿಲುಕಿದೆ ಎಂತಲೂ ಜನ ವಿವರಿಸುವರು. ಕೋಳಿ ಕಲ್ಲಿನ ಚಿತ್ರ ಕಲ್ಪನೆಗಳು ಹಂಪಿಯ ಬೆಟ್ಟಸಾಲುಗಳ ನಡುವೆ ಸಾಮಾನ್ಯ ನೋಟಗಳು. ಜನಪದರು ಬಂಡೆಗಳಲ್ಲೂ ಪ್ರಾಣಿ ಪಕ್ಷಿ ರೂಪಗಳನ್ನು ಕಂಡಿದ್ದಾರೆ.

ಕುದುರೆಕಲ್ಲು ಕಲ್ಪನೆಯೂ ಇಂತದೇ ವಿವರಗಳಿವೆ. ಪಟ್ಟಣದ ಎಲ್ಲಮ್ಮ ವಿಜಯನಗರದ ಯುದ್ಧ ದೇವತೆ. ಆಕೆ ಶತ್ರುಗಳು ದಾಳಿ ಇಟ್ಟಾಗ ಆ ಕುದುರೆಗಳು ಕಲ್ಲಾಗಲಿ ಎಂದು ಶಾಪವಿಕ್ಕಿದ್ದಳಂತೆ. ಹಾಗಾಗಿ ಬಂಡೆ ಸಾಲುಗಳಲ್ಲಿ, ಪರ್ವತ ಕಣಿವೆಗಳ ಅಲ್ಲಲ್ಲಿ ಒಡೋಡಿ ಬರುತ್ತಿದ್ದ ಕುದುರೆಗಳು ಕಲ್ಲಾಗಿ ನಿಂತವಂತೆ. ಕುದುರೆ ಸ್ವರೂಪದ ಕಲ್ಲುಗಳು ಕಾಣುವುದು ಅಪರೂಪವಿದ್ದರೂ ಕತ್ತಲು ಬೆಳಕಿನ ಸಂಜೆ ಸೂರ್ಯನ ಬೆಳಕಿನಾಟದಲ್ಲಿ ಕುದುರೆಗಳ ಛಾಯೆ ಕಾಣಬಲ್ಲದು. ಜನಪದರು ಅಂತಹ ದೃಶ್ಯಗಳಿಗೆ ಕುದುರೆಕಲ್ಲು ಎಂದು ಹೇಳುವರು. ವಾಸ್ತವಕ್ಕೆ ಹತ್ತಿರವಾದ ಇನ್ನೊಂದು ವಿವರ ಇದೆ. ವಿಜಯನಗರ ಸಾಮ್ರಾಜ್ಯದ ಕುದುರೆ ಸೈನಿಕರು ಹಂಪಿಯ ಬೆಟ್ಟ ಸಾಲುಗಳಲ್ಲಿ ತಮ್ಮ ಕುದುರೆಗಳ ಸಹಿತ ಬೀಡು ಬಿಡುತ್ತಿದ್ದರು. ಕುದುರೆಗಳನ್ನು ಕಟ್ಟಿ ಹಾಕಲು ಬಂಡೆಗಳ ಮೇಲ್ಮೈಯನ್ನೆ ಕೊರೆದು ಬಿಲದಂತೆ ತೂತು ಮಾಡಿ ಹಗ್ಗಬಿಗಿದು ಕಟ್ಟಿಕೊಳ್ಳಲು ಸೂಕ್ತವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಅಂತಹ ಕುರುಹುಗಳು ಹಾಸು ಬಂಡೆಗಳ ಮೇಲೆ ಈಗಲೂ ಕಾಣಸಿಗುತ್ತವೆ.

ರಾಕ್ಷಸ ಬಂಡೆಗಳಿಗೂ ಇದೇ ಬಗೆಯ ಹಿನ್ನೆಲೆಗಳಿವೆ. ಭಯನಿಷ್ಟರಾದವರು ರಾತ್ರಿ ವೇಳೆ ಹಂಪಿಯಲ್ಲಿ ಸುತ್ತಾಡಿದರೆ ಖಂಡಿತ ಚಿತ್ರ ವಿಚಿತ್ರ ಭೂತಾಕಾರಗಳ ಕಂಡು ಬೆದರಿ ಹೋಗಬಲ್ಲರು. ಅಂತಹ ವಿನ್ಯಾಸದ ಅಸಂಖ್ಯಾತ ಬಂಡೆಗಳು ಕಾಣಸಿಗುತ್ತವೆ. ರಾಕ್ಷಸರೇ ಸಾಲಾಗಿ ಕೂತಿದ್ದಾರೆ ಎಂಬಂತಹ ಚಿತ್ರಗಳು ಎದುರಾಗುತ್ತವೆ. ಹಾಗೆಯೆ ಭೂತ ಬಂಡೆಗಳು ಕೂಡ ಇದೆ ಅನುಭವದ ಮೂಲಕ ಬಂದಿರುವಂತವು. ಜನಪದರ ಭಯ, ಅತಿಮಾನುಷ ಕಲ್ಪನೆಗಳು ಹೀಗೆ ಆಕೃತಿಗಳನ್ನು ಕಾಣಿಸಿರಬಹುದು. ವಿಜಯನಗರ ಹತ್ತಿ ಉರಿದು ಪತನವಾದಾಗ ಅತ್ತ ಎಷ್ಟೊ ಸೈನಿಕರು ದೆವ್ವ, ಭೂತ, ಪಿಶಾಚಿಗಳಾಗಿ ಒಂದೊಂದು ಬಂಡೆಕಲ್ಲುಗಳನ್ನು ಹಿಡಿದು ಅಲ್ಲೇ ಅವು ವಾಸವಾಗಿರುತ್ತವೆ ಎಂತಲೂ ಹೇಳುವವರಿದ್ದಾರೆ. ಹಾಳು ಹಂಪೆಯ ಬಗೆಗಿನ ಹಳೆಯ ನೆನಪುಗಳು ಇಂತಹ ವಿವರಗಳಿಗೆ ಪುಷ್ಟಿ ನೀಡಿರಬಹುದು.

ಚಿರತೆ ಬಂಡೆಗಳು ಸಾಕಷ್ಟು ಕಂಡುಬರುತ್ತವೆ. ಚಿರತೆಗಳು ಹಂಪಿ ಪ್ರದೇಶದಲ್ಲಿವೆ. ಚಿರತೆಗಳು ಬಂಡೆ ಮೇಲೇನು ಬಂದು ಕೂರುವುದಿಲ್ಲ. ಹಲವಾರು ಬಂಡೆ ಸಂದುಗಳ ಮರೆಯಲ್ಲೊ. ಅಲ್ಲಿರಬಹುದಾದ ನೈಸರ್ಗಿಕ ಗವಿಯ ಒಳಗೂ ವಾಸವಾಗಿರುವ ಸ್ಥಳವನ್ನೆ ಚಿರತೆ ಬಂಡೆ ಎಂದು ಕರೆದು ಬಿಡುವರು. ಚಿರತೆಗಳು ಮುಸಿಯಗಳನ್ನು ತಿನ್ನಲು ಹಲವು ಬಾರಿ ಬಂಡೆಗಳ ಸಾಲುಗಳಲ್ಲೆ ಅಡ್ಡಾಡಬಲ್ಲವು. ಚಿರತೆಗಳ ಭಯದಿಂದಲೇ ಮುಸಿಯ ಮಂಗಗಳು ಅತ್ಯಂತ ಎತ್ತರದ ಬಂಡೆಗಳನ್ನು ರಾತ್ರಿ ವೇಳೆ ಕಳೆಯಲು ಆಯ್ಕೆ ಮಾಡಿಕೊಳ್ಳುವುವು. ಚಿರತೆಗಳು ಅಂತಹ ಬಂಡೆಗಳನ್ನು ಸಲೀಸಾಗಿ ಏರಲಾರವು. ಕೋತಿ ಬಂಡೆಗಳು ಚಿರತೆ ಬಂಡೆಗಳ ಜೊತೆಯಲ್ಲೆ ಗುರುತಿಸಲ್ಪಡುವವು. ಕರಡಿ ಮಟ್ಟಿಗಳು ವಿಶೇಷವಾಗಿ ಕರಡಿಗಳ ವಾಸದ ನೆಲೆಯನ್ನು ಸೂಚಿಸುತ್ತವೆ. ಕರಡಿ ಗುಡ್ಡಗಳು ಹಂಪಿ ಪ್ರದೇಶದಲ್ಲಿ ಸಾಮಾನ್ಯ.

ಹೆಜ್ಜೇನು ಬಂಡೆಗಳುಆನೆಗೊಂದಿಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಎತ್ತರದ ಬಂಡೆಗಳಲ್ಲಿ ಗುಂಪು ಗುಂಪಾಗಿ ತೊಟ್ಟಿಲು ಜೇನುಕಟ್ಟುವ ಹೆಜ್ಜೇನುಗಳು ಭಯ ಹುಟ್ಟಿಸುತ್ತವೆ. ಇಂತಹ ಜೇನನ್ನು ಯಾರೂ ಮೇಲೆ ಹತ್ತಿ ಕೀಳಲಾರರು. ಕಾಡಿನ ಜೇನು ಕುರುಬರು ಕೂಡ ಈ ಅಸಾಧ್ಯ ಬಂಡೆಗಳ ಏರಿ ಜೇನು ಹುಟ್ಟಿಗೆ ಕೈಹಾಕಲಾರರು. ಹಾಗಾಗಿ ಹೆಜ್ಜೇನಿಗೆ ನೈಸರ್ಗಿಕ ರಕ್ಷಣೆ ವಿಶೇಷವಾಗಿ ಒದಗಿದೆ. ಜನಪದರು ಹೆಜ್ಜೇನಿನ ಸಹವಾಸವೇ ಬೇಡ ಎಂದು ಹಂಪಿ ಪರಿಸರದಲ್ಲಿ ಕೈಬಿಟ್ಟಿರುವುದು ಈ ಕಾರಣಕ್ಕಾಗಿಯೆ. ಹದ್ದಿನ ಬಂಡೆ  ರಣಹದ್ದುಗಳು ಎತ್ತರದ ಬಂಡೆಗಳನ್ನು ಸುರಕ್ಷಿತ ತಾಣಗಳೆಂದು ಆಯ್ದುಕೊಳ್ಳುವವು. ಹದ್ದಿನ ಬಂಡೆಗಳು ಹಂಪಿಯ ಬೆಟ್ಟಸಾಲುಗಳ ಅಲ್ಲಲ್ಲಿ ಕಾಣಸಿಗುತ್ತವೆ. ಸಾಮಾನ್ಯ ಹದ್ದುಗಳು ಕೂಡ ಆಯಕಟ್ಟಿನ ಬಂಡೆಗಳನ್ನು ವಾಸಕ್ಕೆ ಹಿಡಿದಿರುತ್ತವೆ. ಯಾಕೆ ವಿಶೇಷವಾಗಿ ಹದ್ದಿನ ಬಂಡೆ ಎಂದು ಕರೆಯಬೇಕು. ಅದರ ಹಿನ್ನೆಲೆ ಇನ್ನೇನಾದರೂ ಇದ್ದೀತೇ ಎಂದು ಕೆದಕಿದಾಗ ಬೇರೊಂದು ಬಗೆಯ ವಿವರ ದೊರೆತವು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಶವಸಂಸ್ಕಾರವನ್ನು ಕೆಲವೊಂದು ಬಂಡೆಗಳ ಮೇಲೆ ಮಾಡಲಾಗುತ್ತಿತ್ತಂತೆ. ಮೃತ ದೇಹವನ್ನು ಬಂಡೆ ಮೇಳೆ ಇಟ್ಟು ಬಂದರೆ ಆಗ ರಣಹದ್ದುಗಳು ಬಂದು ಆ ಶವವನ್ನು ತಿನ್ನುತ್ತಿದ್ದವಂತೆ. ಆ ಹಳೆಯ ಕುರುಹು ಕೂಡ ಕೆಲವೊಂದು ಸ್ಥಳಗಳ ಹದ್ದಿನ ಬಂಡೆಗಳಿಗೆ ಇದೆ. ಅಲ್ಲದೆ ವಿಜಯನಗರ ಸಾಮ್ರಾಜ್ಯದ ವಿಜಯದಶಮಿಯಂದು ಸಾವಿರಾರು ಸಂಖ್ಯೆಯಲ್ಲಿ ಕುರಿ, ಮೇಕೆಗಳನ್ನು ಕಡಿಯಲಾಗುತ್ತಿತ್ತಂತೆ. ಆ ಪ್ರಾಣಿಗಳ ಅನಗತ್ಯ ವರ್ಜ್ಯವನ್ನು ಬಂಡೆಯ ಒಂದೆಡೆ ಎಸೆಯಲಾಗುತ್ತಿತ್ತಂತೆ. ಈ ಹಿನ್ನೆಲೆಯಲ್ಲೂ ಹದ್ದುಗಳು ಬಂಡೆಗಳ ಕಡೆ ಬಂದು ಕಾದಿರುತ್ತಿದ್ದವಂತೆ.

ಮ್ಯಾಕೆ ಬಂಡೆಗಳೂ ಸಾಕಷ್ಟಿವೆ. ಅಂತೆಯೆ ಕುರಿ ಮಂದೆ ಬಂಡೆಗಳೂ ಇವೆ. ಮ್ಯಾಕೆ ಬಂಡೆಯು ಮೇಕೆಯೊಂದರ ಸಾಹಸವನ್ನು ಹೇಳುವಂತಿದೆ. ಅತಿ ಎತ್ತರದ ಬೆಟ್ಟದ ಶಿಖರದ ಒಂದು ಬಂಡೆಯೆ ಮೇಕೆ ಬಂಡೆ. ಆ ಎತ್ತರವನ್ನು ಯಾರೂ ಕ್ರಮಿಸಲಾಗದಿದ್ದರೂ ಅಂತಲ್ಲಿಗೆ ಮೇಕೆಯೊಂದು ಹತ್ತಿ ಹೋಗಿ ಆ ತುದಿಯಲ್ಲಿದ್ದ ದೈತ್ಯ ಬಂಡೆಯ ಮೇಲೂ ಹೋಗಿ ನಿಂತಿತಂತೆ. ಕೆಳಗೆ ಇಳಿಯುವುದೂ ಕೂಡ ಸಾಧ್ಯವಾಗದಿದ್ದಾಗ ಈ ಮೇಕೆ ಹೇಗೆ ಇಂತಹ ಶಿಖರದ ಬಂಡೆಯ ಮೇಲೆ ಹೋಗಿ ನಿಂತಿತು ಎಂದು ಬೆರಗಾಗಿ ಆ ಬಂಡೆಗೆ ಮೇಕೆ ಬಂಡೆ ಎಂದು ಕರೆಯಲಾಯಿತಂತೆ. ಈ ಬಂಡೆಯು ದೂರಕ್ಕೆ ಥೇಟ್ ಮನುಷ್ಯರ ಮುಖದಂತೆಯೆ ಕಾಣುತ್ತದೆ. ಕಮಲಾಪುರ ಕೆರೆ ಏರಿಯಲ್ಲಿ ನಿಂತು ಹೊಸಪೇಟೆಯ ಕಡೆಗೆ ನೋಡಿದರೆ ಬೆಟ್ಟ ಸಾಲುಗಳ ಹಿನ್ನೆಲೆಯಲ್ಲಿ ಮೇಕೆ ಬಂಡೆಯು ಕಾಣುತ್ತದೆ. ಧರ್ಮರ ಗುಡ್ಡದ ಬೆಟ್ಟ ಸಾಲಿಗೆ ಸಮೀಪದ ಬಂಡೆ ಸಾಲುಗಳಲ್ಲಿ ಮೇಕೆ ಬಂಡೆ ಕಾಣಸಿಗುತ್ತದೆ.

ಇನ್ನು ಅಂಬಿಗರಕಲ್ಲು, ನದಿ ದಾಟಿಸುವ ಅಂಬಿಗರ ನೆಲೆಯನ್ನು ಸೂಪಿಸುತ್ತಲೆ ವಿಜಯನಗರದ ಹಳೆಯ ನೆನಪನ್ನು ಬಿಂಬಿಸುವ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯದ ಅನೇಕ ಕುರುಹುಗಳು ಭೌಗೋಳಿಕವಾಗಿ ಬೆರೆತು ಹೋಗಿವೆ. ಹಂಪಿ ನಗರದ ಆ ಹಳೆಯ ಭೂ ವೈದೃಶ್ಯಗಳ ಹೆಸರು ವಿವರ ಸಲೀಸಾಗಿ ಸಿಗುವುದೂ ಇಲ್ಲ. ಸಾಮ್ರಾಜ್ಯದ ಕುರುಹುಗಳೇ ಅವುಗಳಲ್ಲಿ ಹೆಚ್ಚು. ಸಾಮ್ರಾಜ್ಯ ಅವನತಿ ಆದ ನಂತರ ಹಂಪಿಗೆ ಬಂದು ನೆಲೆಸಿದವರು ತಮಗೆ ತಿಳಿದ ರೀತಿಯಲ್ಲಿ ಇಲ್ಲಿನ ಭೌಗೋಳಿಕತೆಯನ್ನು ವ್ಯಕ್ತಿಕೇಂದ್ರಿತವಾಗಿಯೂ ಗುರುತಿಸಿಕೊಂಡಿದ್ದಾರೆ. ಚಲ್ಲಯ್ಯನ ಮಾಳ, ಕರೆಮ್ಮನಮಟ್ಟಿ ಇಂತಹ ಹೆಸರುಗಳಿಗೆ ನೈಸರ್ಗಿಕ ಸಂಬಂಧವಾಗಲಿ, ಚರಿತ್ರೆಯ ಸಂಬಂಧವಾಗಲಿ ಇಲ್ಲ. ಎಲ್ಲಿಂದಲೊ ಬಂದು ಭೂಮಿ ಹಿಡಿದು ಆ ಪ್ರದೇಶವನ್ನು ತನ್ನದನ್ನಾಗಿಸಿಕೊಂಡವರ ಹೆಸರಲ್ಲಿ ಒಂದು ಪ್ರದೇಶವನ್ನು ಗುರುತಿಸುವುದು ಇತ್ತೀಚಿನ ಸ್ವಭಾವ. ಏನೇ ಇರಲಿ, ಹಂಪಿಯ ಭೌಗೋಳಿಕ ಪರಿಚಯವನ್ನು ಇಂತಹ ಎಲ್ಲ ವಿವರಗಳು ಮಾಡಿಕೊಡುತ್ತಲೇ ಇರುತ್ತವೆ. ಅಷ್ಟರ ಮಟ್ಟಿಗೆ ಅವು ಭೌಗೋಳಿಕ ಜಾನಪದದ ಕಥನಗಳಿಗೆ ದಾರಿ ಮಾಡಿರುತ್ತವೆ. ನಿರ್ಜೀವ ಎನಿಸುವ ಬಂಡೆಗಳಲ್ಲೂ ಮನುಷ್ಯ ಸಮಾಜದ ವಿವರಗಳಿವೆ ಎಂದರೆ ಜನಪದ ಸಮಾಜದ ಜೀವಜಾಲದ ಮುಗ್ಧತೆ ಎಂತಹ ನೈಸರ್ಗಿಕ ಬದ್ಧತೆಯದು ಎಂಬುದನ್ನು ತೋರುತ್ತದೆ.

ಸಾಮ್ರಾಜ್ಯಗಳು ಒಂದು ಭೂ ಪ್ರದೇಶವನ್ನು ಕಾಣುವ ರೀತಿಯೇ ಬೇರೆ. ಜನಪದರು ಇಂತಹ ನೆಲೆಗಳನ್ನು ಹೊರತುಪಡಿಸಿ ಅವರೇ ಗುರುತಿಸಿಕೊಂಡ ಭೌಗೋಳಿಕ ವಿವರಗಳಲ್ಲೇ ಹೆಚ್ಚಿನ ಜೀವಜಾಲದ ಜಾನಪದ ಸಂಗತಿಗಳು ಇರುವುದು. ಸಾಮ್ರಾಜ್ಯವು ತನ್ನ ಸಂರಕ್ಷಣೆಗೆ ತಕ್ಕಂತೆ ಭೌಗೋಳಿಕ ಗಡಿಗಳನ್ನು ಕೋಟೆ ಕೊತ್ತಳಗಳಿಂದ ಕಂಡರೆ ಜನಪದರು ಗಡಿಗಳಿಲ್ಲದ ಮುಕ್ತಭಾವದ ನೈಸರ್ಗಿಕ ಸ್ವಭಾವಗಳಿಂದ ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ತಮ್ಮ ಸಮಷ್ಠಿ ಜೀವಜಾಲ ಬಂಧುವಾಗಿ ಪರಿವರ್ತಿಸಿಕೊಂಡಿರುತ್ತಾರೆ.