ಮಾನವನ ಉಗಮ, ವಿಕಾಸ ಹಾಗು ಅಭಿವೃದ್ಧಿಯಲ್ಲಿ ಪರಿಸರ ಗಮನಾರ್ಹ ಪಾತ್ರವಹಿಸಿದೆ. ಅಷ್ಟೇ ಅಲ್ಲದೆ ಇಡೀ ಜೀವಸಂಕುಲದ ಉಳಿವು ಅಲ್ಲಿನ ಪರಿಸರವನ್ನು ಅವಲಂಬಿಸಿರುತ್ತದೆ ಎಂಬುದು ಅದರ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಹಂಪಿ ಪರಿಸರದ ಮಾನವ ಆದಿಕಾಲದಿಂದ ಅನೇಕ ಬದಲಾವಣೆಗಳೊಂದಿಗೆ ನಾಗರಿಕತೆಯತ್ತ ಸಾಗಲು ಇಲ್ಲಿನ ಸುತ್ತಮುತ್ತಲಿನ ಭೌಗೋಳಿಕ ಪರಿಸರವೇ ಕಾರಣ. ಈ ಪರಿಸರ ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ. ಆದಿಮಾನವ ಇಲ್ಲಿನ ನಿಸರ್ಗದತ್ತವಾದ ಸಂಪತ್ತನ್ನು ತನ್ನ ನಿತ್ಯ ಬಳಕೆಗಾಗಿ ಬಳಸಿಕೊಂಡು ತಾನು ಬೆಳವಣಿಗೆ ಹೊಂದಿದ್ದನ್ನು ಕಾಣಬಹುದಾಗಿದೆ.

ಭೌಗೋಳಿಕ ಲಕ್ಷಣಗಳು

ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿಗೆ ಸೇರಿದ ಹಂಪಿ ೧೪.೩೦೦-೧೫.೧೫೦ ಉ. ಅಕ್ಷಾಂಶ ಮತ್ತು ೨೫.೪೦೦-೭೭.೧೧೦ ರೇಖಾಂಶಗಳ ನಡುವೆ ಇದೆ. ಇದರ ಪೂರ್ವಕ್ಕೆ ಬಳ್ಳಾರಿ ತಾಲೂಕು (ನಂತರ ಮುಂದುವರಿದು ಆಂಧ್ರ ಪ್ರದೇಶದ ಅನಂತಪುರ ಹಾಗೂ ಕರ್ನೂಲ್) ಪಶ್ಚಿಮಕ್ಕೆ ದಾವಣಗೆರೆ, ಗದಗ, ದಕ್ಷಿಣಕ್ಕೆ ಚಿತ್ರದುರ್ಗ, ಉತ್ತರಕ್ಕೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು ಗಡಿಗಳಾಗಿವೆ.

[1]

ಹಂಪಿಯ ಕೇಂದ್ರಭಾಗದಿಂದ ೬೦ ಕಿ.ಮೀ. ವ್ಯಾಪ್ತಿಯ ಇಲ್ಲಿನ ಭೂ-ಭಾಗವನ್ನು ಹಂಪಿ ಪರಿಸರ ಎಂದು ಇಲ್ಲಿ ಪರಿಗಣಿಸಲಾಗಿದ್ದು, ಇಂದು ಇದರಲ್ಲಿ ಬರಬಹುದಾದ ವಿವಿಧ ತಾಲೂಕುಗಳ ಭೂಭಾಗದ ಲಕ್ಷಣಗಳನ್ನು ಈ ಮುಂದಿನಂತೆ ವಿವರಿಸಲಾಗಿದೆ.

೧. ಭೂರಚನೆ ಮತ್ತು ಶಿಲಾಸಂಪತ್ತು

ಇಲ್ಲಿನ ಭೌಗೋಳಿಕ ಪರಿಸರವು ಬೆಟ್ಟ, ಖನಿಜಗಳಿಂದ ಮತ್ತು ಗ್ರಾನೈಟ್‌ ಶಿಲೆಗಳಿಂದ ಕಂಗೊಳಿಸುತ್ತಿದೆ. ಸಾಮಾನ್ಯವಾಗಿ ಕ್ರಿಸ್ಟಸ್ ಲೈನ್‌ಸಿಸ್ಟ್ (ಸ್ಫಟಿಕಾತ್ಮಕ ಪದರು ಶಿಲೆ), ಎಪಿಡಿಯೋರಾಯಿಟ್ಸ ಗ್ರಾನೈಟ್ (ಜಂಬಿಟ್ಟಿಗೆ) ಮತ್ತು ಲೇಟರ್ ಗ್ರಾನೈಟ್ಸ್ ಶಿಲಾಪದರುಗಳಿಂದ ಕೂಡಿದೆ. ಅಲ್ಲಲ್ಲಿ ಡೈಕ್ ಶಿಲೆ ಕಂಡುಬರುತ್ತದೆ. ಕ್ರಿಸ್ಟಲೈನ್‌ಸಿಸ್ಟ್, ಎಪಿಡೊರಾಯಿಟ್ಸ್, ಗ್ರಾನೈಟ್ ಮೊದಲಾದ ಶಿಲೆಗಳು ಇಲ್ಲಿ ದೊರೆಯುತ್ತವೆ. ಇವುಗಳನ್ನು ಧಾರವಾಡ ಪ್ರದೇಶದಲ್ಲಿರುವಂತೆ ಹಳೇ ಮಾದರಿಯೆಂದು ಗುರುತಿಸಲಾಗಿದೆ.

ಹಂಪಿ ಪ್ರದೇಶವು ದಕ್ಷಿಣದಿಂದ ಉತ್ತರಕ್ಕೆ ಇಳಿಜಾರಾಗಿದ್ದು ಬೆಟ್ಟದಿಂದಾವರಿಸಿದೆ. ಸಂಡೂರು, ಕೂಡ್ಲಿಗಿ, ಹರಪನಹಳ್ಳಿ, ಗುಡೇಕೋಟೆ, ಹೊಸಪೇಟೆ, ಕಂಪ್ಲಿ, ದರೋಜಿ, ಕುರುಗೋಡು, ಬಳ್ಳಾರಿ ಮುಂತಾದ ಸ್ಥಳಗಳಲ್ಲಿ ದೊಡ್ಡ ದೊಡ್ಡ ಬೆಟ್ಟಗಳಿವೆ. ಸಂಡೂರು ಕುಮಾರಸ್ವಾಮಿ ಬೆಟ್ಟ (೧.೩೬ ಮೀ.) ರಾಮನಮಲೈ ಬೆಟ್ಟ (೯೯೨ ಮೀ.) ಜಂಬುನಾಥ ಗುಡ್ಡ (೯೦೮ ಮೀ.) ಎತ್ತರದ ಶಿಖರಗಳನ್ನು ಹೊಂದಿವೆ. ಕೂಡ್ಲಿಗಿ ಬೆಟ್ಟಗಳು ಎರಡು ಸಾಲುಗಳಲ್ಲಿವೆ. ಅವುಗಳಲ್ಲಿ ಒಂದು ಶ್ರೇಣಿ ಆನೆಕಲ್ಲುದುರ್ಗ (೭೨೪ ಮೀ.) ಇನ್ನೊಂದು ಜರಿಮಲೆ ಗುಡ್ಡ (೮೩೮ ಮೀ.) ಹಾಗೂ ಆನೆಗುಂದಿ ಬೆಟ್ಟ, ಹಿರೇಬೆನಕಲ್ ಮತ್ತು ಕಮ್ಮಟದುರ್ಗಗಳ ಬೆಟ್ಟಗಳು ಸಹಾ ಎತ್ತರದ ಶಿಖರಗಳನ್ನು ಹೊಂದಿವೆ. ಗುಡೇಕೋಟೆಯಿಂದ ಈಶ್ಯಾನಕ್ಕೆ ಹರಡಿರುವ ಗುಡೇಕೋಟೆ ಬೆಟ್ಟ ಚಿನ್ನ ಹಗರಿನದಿ ದಾಟಿ ಚಿತ್ರದುರ್ಗ ಜಿಲ್ಲೆಯ ಸೆರಗಿನಲ್ಲಿ ಹಾದು ಹೋಗುತ್ತದೆ. ಹಡಗಲಿ, ಹರಪನಹಳ್ಳಿ ತಾಲೂಕುಗಳ ಮಲ್ಲಪ್ಪನಗುಡ್ಡ (೯೨೮ ಮೀ.) ತುಂಗಭದ್ರಾ ನದಿ ದಂಡೆಯ ಹೊನ್ನೂರಿನ ಬಳಿ ಪ್ರಾರಂಭವಾಗಿ ಆಗ್ನೇಯ ಕಡೆಗೆ ಹಬ್ಬಿದೆ. ಮಲ್ಲಪ್ಪನ ಗುಡ್ಡದ ನೈರುತ್ಯಕ್ಕಿರುವ ಕಲ್ಲಪ್ಪನ ಗುಡ್ಡ ವಾಯುವ್ಯದಿಂದ ಈಶಾನ್ಯಕ್ಕೆ ಸಾಗಿದ್ದು ಇದರಲ್ಲಿ ನರಸಿಂಹದೇವರ ಗುಡ್ಡ ಸೇರಿದಂತೆ ಉಚ್ಚಂಗಿಯಲ್ಲಿ ಕೊನೆಗೊಳ್ಳುತ್ತದೆ.[2] ಪೂರ್ವ ಹಾಗೂ ಪಶ್ಚಿಮದ ನಡುವೆ ಸಂಡೂರು ಬೆಟ್ಟಗಳ ಶ್ರೇಣೆಯಿದೆ. ಇವು ಈಶಾನ್ಯದಿಂದ ಆಗ್ನೇಯದವರೆಗೂ ಹರಡಿವೆ. ಸಿರುಗುಪ್ಪ ಹಾಗೂ ಬಳ್ಳಾರಿ ಜಿಲ್ಲೆಯ ಪೂರ್ವದ ಭಾಗ ಬಯಲು ಪ್ರದೇಶವಾಗಿವೆ. ಈ ಭಾಗ ಸಮತಟ್ಟಾಗಿರುವುದರಿಂದ ನೀರಿನ ಶೇಖರಣೆಗೆ ಕಣಿವೆಗಳು ವಿರಳವಾಗಿವೆ. ಅಲ್ಲಲ್ಲಿ ಇರುವ ತಗ್ಗಿನಿಂದಾಗಿ ಮಳೆಗಾಲದ ನೀರು ಇಂಗುವಂಥ ವ್ಯವಸ್ಥೆಯಿದೆ. ಈ ಪ್ರದೇಶವು ಸಮತಟ್ಟಾಗಿರುವುದರಿಂದ ಯಾವುದೇ ಹೆಚ್ಚಿನ ಮರಗಿಡಗಳು ಇರುವುದಿಲ್ಲ. ಅಲ್ಲಲ್ಲಿ ಸಣ್ಣಬೆಟ್ಟಗಳ ಸಾಲುಗಳನ್ನು ಕಾಣಬಹುದು. ಈ ಸಾಲು ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಅಂದರೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಕ್ಕೆ ಹಬ್ಬಿವೆ. ಇವು ಅಲ್ಲಲ್ಲಿ ಸಣ್ಣ ದ್ವೀಪಗಳ ರೀತಿಯಾಗಿ ಮೇಲೆದ್ದಿರುವುದನ್ನು ಕಾಣಬಹುದು. ಈ ರೀತಿ ಅಲ್ಲಲ್ಲಿ ಬೆಟ್ಟಗಳು ಗುಂಪುಗಳಾಗಿರುವುದನ್ನು ಸಾಮಾನ್ಯವಾಗಿ ದಖ್ಖನ್ ಪ್ರಸ್ಥಭೂಮಿಯ ಹಲವೆಡೆ ಕಾಣಬಹುದು. ಈ ಲಕ್ಷಣಗಳು ಹಂಪಿಯ ಪೂರ್ವದಿಕ್ಕಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಹಡಗಲಿಯ ಭಾಗದಲ್ಲಿ ಮೇಲ್ಕಂಡ ಲಕ್ಷಣಗಳು ಸ್ವಲ್ಪ ಭಿನ್ನವಾಗಿವೆ. ಇಲ್ಲಿಯ ಬೆಟ್ಟ ಗುಡ್ಡಗಳು ಪೂರ್ವದಲ್ಲಿ ಕಂಡುಬರುವ ಭೂಪ್ರದೇಶಕ್ಕಿಂತ ಭಿನ್ನವಾಗಿವೆ. ಬೆಟ್ಟ ಗುಡ್ಡಗಳಿರುವುದರಿಂದ ಇಲ್ಲಿ ಮಳೆ ಜಾಸ್ತಿ ಬೀಳುತ್ತದೆ. ಒರಟಾದ ನೆಲ ಹಾಗೂ ಎತ್ತರದ ದಿಣ್ಣೆಗಳು ಇಲ್ಲಿವೆ. ಇವು ಇಳಿಜಾರನ್ನು ಉತ್ತರದ ಕಡೆ ಹೊಂದಿವೆ. ಇದರಿಂದಾಗಿ ಮಳೆಯ ನೀರು ಉತ್ತರದಲ್ಲಿರುವ ಜೀವನದಿ ತುಂಗಭದ್ರೆಗೆ ಹರಿಯುತ್ತದೆ. ಪಶ್ಚಿಮದಲ್ಲಿ ಭೂ ಮೇಲ್ಮೈ ಎತ್ತರದಲ್ಲಿರುವುದರಿಂದ ಕುರುಚಲು ಗಿಡದ ಸಣ್ಣ ಕಾಡುಗಳಿವೆ. ಸಂಡೂರು ಬೆಟ್ಟಗಳ ಶ್ರೇಣಿಯು ಮಧ್ಯದಲ್ಲಿರುವುದರಿಂದ ಜಿಲ್ಲೆಯಲ್ಲಿ ಎದ್ದು ಕಾಣುತ್ತದೆ. ಅಲ್ಲದೆ ಅದು ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಅಗಾಧ ಭಂಡಾರವನ್ನು ಹೊಂದಿದೆ. ಆದುದರಿಂದ ಈ ಪ್ರದೇಶ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರಿನ ಗಣಿಗಾರಿಕೆಗೆ ಹೆಸರುವಾಸಿಯಾಗಿದೆ. ಮೇಲೆ ತಿಳಿಸಿದ ಬೆಟ್ಟಗಳ ಸಾಲುಗಳಲ್ಲದೆ ಈ ಜಿಲ್ಲೆಯಲ್ಲಿ ಕೆಲವು ಬಿಡಿ ಬಿಡಿಯಾದ ಬೆಟ್ಟಗಳ ಗುಂಪುಗಳಿವೆ. ಸಂಡೂರು ಬೆಟ್ಟಗಳ ಎತ್ತರಕ್ಕೆ ದರೋಜಿ ಬೆಟ್ಟಗಳಿವೆ. ಇದು ದರೋಜಿ ಗ್ರಾಮದ ಬಳಿ ಇದೆ. ದರೋಜಿ ಹಾಗು ಸಂಡೂರು ಬೆಟ್ಟಗಳ ನಡುವೆ ಕಣಿವೆ ಪ್ರದೇಶವಿದ್ದು ವ್ಯವಸಾಯಕ್ಕೆ ಅನುಕೂಲವಾಗಿದೆ. ಅಲ್ಲದೆ ಫಲವತ್ತಾದ ಭೂಮಿಯನ್ನು ಹೊಂದಿದೆ. ನೀರಾವರಿಯಿಂದಾಗಿ ಹಸಿರು ಕಂಗೊಳಿಸುತ್ತಿದೆ. ದರೋಜಿ ಬೆಟ್ಟಗಳ ಉತ್ತರಕ್ಕೆ ಕಂಪ್ಲಿ ಬೆಟ್ಟಗಳ ಸಾಲುಗಳಿವೆ. ಈ ಎರಡೂ ಬೆಟ್ಟಗಳ ಸಾಲಿನ ನಡುವಿನ ಭೂಪ್ರದೇಶದ ಕಣಿವೆಯಲ್ಲಿ ವ್ಯವಸಾಯಕ್ಕೆ ಅನುಕೂಲವಾಗಿದೆ. ಅಲ್ಲದೆ ಫಲವತ್ತಾದ ಭೂಮಿಯನ್ನು ಹೊಂದಿದೆ. ನೀರಾವರಿಯಿಂದಾಗಿ ಹಸಿರು ಕಂಗೊಳಿಸುತ್ತಿದೆ. ದರೋಜಿ ಬೆಟ್ಟಗಳ ಉತ್ತರಕ್ಕೆ ಕಂಪ್ಲಿ ಬೆಟ್ಟಗಳ ಸಾಲುಗಳಿವೆ. ಈ ಎರಡೂ ಬೆಟ್ಟಗಳ ಸಾಲಿನ ನಡುವಿನ ಭೂಪ್ರದೇಶದ ಕಣಿವೆಯಲ್ಲಿ ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯಿದೆ. ಕಂಪ್ಲಿ ಬೆಟ್ಟಗಳ ಸಾಲಿನಂತೆ ಇನ್ನೊಂದು ಬೆಟ್ಟಗಳ ಸಾಲು ಕುರುಗೋಡು ಪ್ರದೇಶದಲ್ಲಿ ಕಂಡುಬರುತ್ತದೆ. ಇವುಗಳನ್ನು ಕುರುಗೋಡು ಬೆಟ್ಟಗಳು ಎಂದು ಕರೆಯಲಾಗುತ್ತದೆ. ಇದು ಉತ್ತರ ಪೂರ್ವ ದಿಕ್ಕಿಗಿದೆ. ಈ ಬೆಟ್ಟಗಳ ಸಾಲು ಸ್ವಲ್ಪ ದೂರದವರೆಗೆ ಮಾತ್ರ ಹರಡಿದೆ. ಹೀಗೆಯೇ ಕೆಲವು ಬೆಟ್ಟಗಳು ಎಂದರೆ ಬಳ್ಳಾರಿಯಲ್ಲಿರುವ ಬೆಟ್ಟಗಳ ಸಾಲು ಈ ಬೆಟ್ಟಗಳು ಗುಂಪುಗಳ ರೀತಿಯಿದ್ದು ಎತ್ತರವಾಗಿ ಕಂಡುಬರುತ್ತವೆ.

ಕುರುಗೋಡು ಪ್ರದೇಶವು ಹಲವು ಬೆಟ್ಟ ಗುಡ್ಡಗಳಿಂದ ಕೂಡಿದೆ. ಇಲ್ಲಿನ ಅತಿ ಗರಿಷ್ಠವಾದ ಬೆಟ್ಟದ ಎತ್ತರ ೫೯೯ ಮೀ.ಗಳು ಇಡೀ ಬೆಟ್ಟಗಳು ಗ್ರಾನೈಟ್ ನೈಸ್‌ಶಿಲೆಗಳಿಂದ ಕೂಡಿವೆ. ಇದರಲ್ಲಿ ಕೋಳಿಗುಡ್ಡದ ಕಲ್ಲಿನ ಸಮೂಹ ಒಂದು ಒತ್ತಾದ ರೀತಿ ಹರಡಿದೆ. ಇಲ್ಲಿನ ಪ್ರತಿ ಬೆಟ್ಟಕ್ಕೂ ಒಂದೊಂದು ಹೆಸರಿದೆ. ಅವುಗಳನ್ನು ಕಂದಾಯ ಇಲಾಖೆಯ ದಾಖಲೆಯಲ್ಲಿ ಜಿಲೆಲಿಕೊಂಡ, ಹನುಮನಕೊಂಡ, ನಿಶಾನಿಕೊಂಡ, ಅಲಬಾವಿಕೊಂಡ, ರಾಮನಕೊಂಡ, ಬೆಂಕನಕೊಂಡ, ಬೈರಿಕಲ್ಲು ಮುಂತಾಗಿ ಗುರುತಿಸಲಾಗಿದೆ.[3]ಬೆಟ್ಟಗಳ ನಡುವೆ ಅಲ್ಲಲ್ಲಿ ಸಣ್ಣ ಬಯಲುಪ್ರದೇಶವಿದೆ. ಅಲ್ಲಿಯ ತಗ್ಗು ಸಮೂಹವನ್ನು ಅತಿ ಎತ್ತರದಿಂದ ಸುಮಾರು ೧೦೦೦ ಅಡಿಯಿಂದ ನೋಡಿದರೆ ಪೂರ್ವಾಭಿಮುಖವಾಗಿ ಕುಳಿತ ಬಸವನ ರೀತಿ ಕಾಣುತ್ತದೆ.

ಸಂಡೂರು ಬೆಟ್ಟಗಳಲ್ಲಿ ಮಲ್ಲಪ್ಪನಗುಡ್ಡ ಮತ್ತು ಕಲ್ಲಹಲಿಗುಂದ, ಧಾರವಾಡ ನಿಶ್ಚಾ ಶಿಲಾಶ್ರೇಣಿಯನ್ನು ಹೊಂದಿದೆ. ದರೋಜಿ, ಕಂಪ್ಲಿ, ಕುರುಗೋಡು, ಹಂಪಿಯ ಬೆಟ್ಟಗಳನ್ನು ಸೇರಿಸಿಕೊಂಡು ಎಲ್ಲವೂ ಗ್ರಾನೈಟ್‌ಶಿಲೆಗಳನ್ನು ಹೊಂದಿವೆ. ಇಲ್ಲಿನ ನಿಶ್ಚಾ ಶಿಲಾವರ್ಗದ ಶ್ರೇಣಿಗಳಲ್ಲಿ ಎತ್ತರದ ಕೋಡು ಬೆಟ್ಟಗಳನ್ನು ಕಾಣಬಹುದು. ಅದರೊಡನೆ ದೊಡ್ಡ ಕೋರಕಲ್ಲಿನ ಕಣಿವೆಗಳು ಇವೆ. ಸಾಮಾನ್ಯವಾಗಿ ಈ ಗ್ರಾನೈಟ್ ಬೆಟ್ಟಗಳಲ್ಲಿ ಕಲ್ಲುಗಳ ಕುಪ್ಪಿಗಳು, ದೊಡ್ಡ ದೊಡ್ಡ ರಾಶಿಯಾಗಿದ್ದು ಇಲ್ಲಿ ಬೆಟ್ಟಗಳ ಗುಂಪನ್ನು ಕಾಣಬಹುದಾಗಿದೆ. ಈ ರೀತಿಯ ಬೆಟ್ಟಗಳ ಗುಂಪನ್ನು ರಾಯಚೂರು-ಚಿತ್ರದುರ್ಗ ಮತ್ತು ಬಳ್ಳಾರಿಯ ಕೆಲವು ಪ್ರದೇಶಗಳಲ್ಲಿ ಕಾಣಬಹುದು. ಈ ಬೆಟ್ಟಗಳ ವಿಶೇಷತೆ ಎಂದರೆ ಇವು ಅಸಾಮಾನ್ಯ ಕಂದು ಇಲ್ಲವೆ ಬೂದು ವರ್ಣದಲ್ಲಿದ್ದು, ಈಗಾಗಲೆ ತಿಳಿಸಿರುವ ಗ್ರಾನೈಟ್ ಶಿಲಾವರ್ಗಕ್ಕೆ ಸೇರಿವೆ.[4]ಈ ಪ್ರದೇಶದಲ್ಲಿ ಸಾಮಾನ್ಯವಾಗಿ ದೊಡ್ಡ ಬಂಡೆಗಳು ಸೀಳಿವೆ. ಹೀಗೆ ಬಿರುಕು ಬಿಟ್ಟು ಸೀಳಿದವುಗಳಲ್ಲಿ ಕೆಲವು ಮುಂಚಾಚಿ ಕಲ್ಲಾಸರೆಗಳಾದರೆ, ಕೆಲವು ಗುಹೆಗಳಾಗಿವೆ. ಸಹಸ್ರಾರು ವರ್ಷಗಳ ನಿರಂತರವಾದ ಸವಕಳಿಯಿಂದ ಗುಹೆಗಳು ಇಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವು ಆದಿಮಾನವನ ವಸತಿಗೆ ಆಸರೆಯಾಗಿದ್ದವು.

ಈ ಬೆಟ್ಟ ಗುಡ್ಡಗಳಲ್ಲಿನ ಗುಹೆಗಳು, ಕಲ್ಲಾಸರೆಗಳು ಆದಿಮಾನವನ ವಾಸಕ್ಕೆ ಒಂದೆಡೆ ಸಹಕಾರಿಯಾದರೆ, ಇನ್ನೊಂದಡೆ ಇಲ್ಲಿನ ಶಿಲೆ ಆಯುಧೋಪಕರಣಗಳನ್ನು ತಯಾರಿಸಿಕೊಳ್ಳಲು ಸಹಕಾರಿಯಾಗಿದ್ದರಿಂದ ಈ ಪರಿಸರದಲ್ಲಿ ಅಂದಿನ ಮಾನವ ನೆಲೆ ನಿಲ್ಲಲ್ಲು ಸಹಕಾರಿಯಾಯಿತು.

೨. ಮಣ್ಣು ಮತ್ತು ಖನಿಜ ಸಂಪತ್ತು

ಈ ಪ್ರದೇಶದಲ್ಲಿ ಮರಳು ಮಿಶ್ರಿತ ಕೆಂಪುಮಣ್ಣು ಮತ್ತು ಫಲವತ್ತಾದ ಜೇಡಿಮಣ್ಣು ಹರಡಿದೆ. ಮರಳು ಮಿಶ್ರಿತ ಕೆಂಪುಮಣ್ಣು ಸಾಮಾನ್ಯವಾಗಿ ತುಂಗಭದ್ರಾ-ಹಗರಿನದಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕಪ್ಪು ಜೇಡಿಮಣ್ಣು ಹಡಗಲಿ ತಾಲೂಕು ಪ್ರದೇಶದಲ್ಲಿದೆ. ಈ ಭಾಗದಲ್ಲಿ ಹೇರಳವಾದ ಖನಿಜ ಸಂಪತ್ತು ದೊರೆಯುತ್ತದೆ. ಈ ಭೂಭಾಗವನ್ನು “ಖನಿಜಗಳ ನಿಧಿ” ಎಂದರೂ ತಪ್ಪಲ್ಲ. ಖನಿಜಗಳಲ್ಲೆಲ್ಲ ಅತಿ ಮುಖ್ಯವಾದುದೆಂದರೆ ಕಬ್ಬಿಣದ ಅದಿರು. ಪ್ರಾಚೀನ ಕಾಲದಿಂದಲೂ ಇದರ ಉಪಯೋಗದಿಂದ ಮಾನವನು ನಗರೀಕೃತ ಸಂಸ್ಕೃತಿಯೆಡೆಗೆ ಹೆಜ್ಜೆ ಹಾಕಿದನು. ಇಲ್ಲಿ ದೊರೆಯುವ ವಿವಿಧ ಬಗೆಯ ಖನಿಜಗಳ ವಿವರ ಇಂತಿದೆ. [5]

೧. ಕಬ್ಬಿಣದ ಅದಿರು ಸಂಡೂರು, ನಂದಿಹಳ್ಳಿ, ಹೊಸಪೇಟೆ ಸುತ್ತಮುತ್ತ
೨. ಮ್ಯಾಂಗನೀಸ್ ದೇವಗಿರಿ, ಸುಬ್ರಾಯನಹಳ್ಳಿ, ರಾಮಘಡ.
೩. ತಾಮ್ರ ಹರಪನಹಳ್ಳಿ, ಚಿನ್ನಾಪುರ, ರಾಮಘಡ, ತಾಮ್ರಪರ್ವತ.
೪. ಸತು ಮೆಟ್ರಿ.
೫. ಮ್ಯಾಗ್ನಸೈಟ್ ತೋರಣಗಲ್ಲು.
೬. ಬಂಗಾರ ಶೃಂಗಮರಡಿ, ಬೆಟಗೇರಿ, ತಾರಾನಗರ, ಕಂಚೂರು.
೭. ಜೆಪ್ಸಮ್ ತಾಳುರು, ಉತ್ತನೂರು, ಹಿರೆಹಡಗಲಿ, ಚಿನ್ನಹಳ್ಳಿ,
೮. ಜೇಡಿಮಣ್ಣು ಹಲವಾಗಲು, ಸುಬ್ರಾಯನಹಳ್ಳಿ, ಯರನಹಳ್ಳಿ, ಬೆನಕಲ್, ತುಂಬರಗುಡ್ಡ.
೯. ಸುಣ್ಣಕಲ್ಲು ತೋರಣಗಲ್ಲು, ಮೆಟ್ರಿ, ಉಬ್ಬಲಗಂಡಿ, ದೇವಲಾಪುರ, ಮಲ್ಲಪ್ಪನಗುಡ್ಡ.
೧೦. ಬಳಪದ ಕಲ್ಲು ಅರಸಾಪುರ, ನೀಲಗುಂದ.
೧೧. ಹಳದಿ ಓಕರ್ ತಮರಿ, ರಾಮಘಡ, ಬಲದಗುಡ್ಡ.
೧೨. ರೆಡ್ ಓಕರ್ ಜಾನಿಕುಂಟೆ, ಜಂಬುನಾಥಹಳ್ಳಿ, ವ್ಯಾಸನಕೆರೆ, ಕರಡಿಕೊಳ್ಳ
೧೩. ಬೆಣಚಕಲ್ಲು ನಾಗಲಾಪುರ, ರಾಜಾಪುರ, ಗಾದಿಗನೂರು, ಅಂಕಮನಾಳ, ರಾಮದುರ್ಗ, ಕಡೆಬಾಗಿಲು.[6]
೧೪. ಮಿನರಲ್ ವಾಟರ್ ಹರಿಶಂಕರ, ಜೋಗಿಕೊಳ್ಳ.
೧೫. ವಜ್ರ ದೇವಗೊಂಡನಹಳ್ಳಿ.
೧೬. ಬೆಸಾಲ್ಟ್ ತಿಮ್ಮಾಪುರ.

ಈ ಮೇಲಿನ ರೀತಿಯ ಮಣ್ಣು ಮಾನವರು ಕೃಷಿ ಚಟುವಟಿಕೆಗಳನ್ನು ಮಾಡಲು ಸಹಕಾರಿಯಾಯಿತು. ಇಲ್ಲಿ ದೊರೆಯುವ ಖನಿಜ ಸಂಪತ್ತು ಅಂದಿನಿಂದ ಇಂದಿನವರೆಗೆ ವಿವಿಧ ರೀತಿಯಲ್ಲಿ ಉಪಯುಕ್ತವಾಗಿದೆ.

೪. ಅರಣ್ಯ ಮತ್ತು ನದಿಗಳು

ಈ ಪರಿಸರದ ಭೌಗೋಳಿಕ ವಿಸ್ತೀರ್ಣ ೨೯,೫೬,೭೯೨ ಹೆಕ್ಟೇರುಗಳು. ಅದರಲ್ಲಿ ಅರಣ್ಯ ಪ್ರದೇಶ ೧೮,೧೯,೨೦೭ ಹೆಕ್ಟೇರುಗಳಿದೆ. ಇಲ್ಲಿನ ತಾಲೂಕುಗಳಲ್ಲಿ ಶೇ. ೪೦ರಷ್ಟು ಅರಣ್ಯವಿದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣ ಅಂದರೆ ೧,೦೪,೯೭೯ ಹೆಕ್ಟೇರು ಅರಣ್ಯ ಪ್ರದೇಶ ಹೊಸಪೇಟೆ, ಕೂಡ್ಲಿಗಿ, ಸಂಡೂರು ತಾಲೂಕುಗಳಲ್ಲಿದೆ.

ಈ ಪ್ರದೇಶವು ಮುಂಗಾರು ಹಾಗು ಹಿಂಗಾರು ಮಳೆಯ ಸೆರಗಿನ ಪ್ರದೇಶವಾಗಿದೆ. ಆದುದರಿಂದ ಇಲ್ಲಿ ಅಲ್ಬೇಜಿಯ, ಅಕೇಶಿಯ, ಅರಾಬಿಕ್, ಯುಪೋರ್, ಬಿಯಾಸ ಜಾತಿಗಳಿಗೆ ಸೇರಿದ ಕುರಚಲು ಮರಗಿಡಗಳು ಹೆಚ್ಚಾಗಿ ಬೆಳೆಯುತ್ತವೆ. ಇಂತಹ ಮರಗಿಡದ ಪ್ರದೇಶವನ್ನು ಅವಲಂಬಿಸುವ ಪ್ರಾಣಿಗಳಾದ ಮೊಲ, ಜಿಂಕೆಯಂತಹ ಸಣ್ಣ ಸಸ್ತನಿ ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ. ಇದಕ್ಕೆ ಪೂರಕವಾಗಿ ಹೇಳುವುದಾದರೆ ತೆಕ್ಕಲಕೋಟೆ, ಸಂಗನಕಲ್ಲು ಹಳ್ಳೂರಿನಲ್ಲಿ ಆಲ್ವಿಯುಯಾ ಆಕಾಹಿಯ ಗುಂಪಿಗೆ ಸೇರಿದ ಸಸ್ಯಗಳು ಬೆಳೆಯುತ್ತಿದ್ದವು. ತೆಕ್ಕಲಕೋಟೆ ಸಂಗನಕಲ್ಲು, ಹಳ್ಳೂರಿನಲ್ಲಿ ದೊರೆತಿರುವ ಇದ್ದಿಲಿನಿಂದ ಈ ಸಸ್ಯಗಳನ್ನು ಗುರುತಿಸಲಾಗಿದೆ.[7]ಇಂದಿಗೂ ಸಹ ಉರುವಲು ಬೇಸಾಯದ ಉಪಕರಣಗಳಿಗೆ ಇವನ್ನು ಬಳಸುತ್ತಾರೆ. ಈ ಪ್ರದೇಶವು ಕಪ್ಪು ಎರೆಮ್ಟಣಿನಿಂದ ಕೂಡಿದೆ.

ಇಲ್ಲಿ ಹರಿಯುವ ನದಿಗಳಲ್ಲಿ ತುಂಗಭದ್ರ ಮುಖ್ಯವಾದುದು. ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತಿರುವ ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಬೆಟ್ಟಸಾಲಿನ ವರಹ ಪರ್ವತದಲ್ಲಿ ಉಗಮವಾಗುವ ಎರಡು ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಬಂದು ಸೇರುತ್ತವೆ. ಅವುಗಳಲ್ಲಿ ಒಂದು ತುಂಗಾ ಇನ್ನೊಂದು ಭದ್ರಾ. ಎರಡೂ ಕಲೆತು ಮುಂದೆ ಸಾಗಿದಾಗ ತುಂಗಭದ್ರಾ ಎಂದು ಕರೆಯಲಾಗುತ್ತದೆ.

ಈ ನದಿ ಪಶ್ಚಿಮದಲ್ಲಿ ಧಾರವಾಡ, ಉತ್ತರದಲ್ಲಿ ಕೊಪ್ಪಳ ಹಾಗು ರಾಯಚೂರು ಜಿಲ್ಲೆಗಳಿಗೆ ಗಡಿಯಾಗಿ ಪರಿಣಮಿಸಿದೆ. ತುಂಗಭದ್ರಾ ನದಿಗೆ ಬಂದು ಸೇರುವ ಹಗರಿ, ಚಿಕ್ಕಹಗರಿ ನದಿಗಳು ಪ್ರಾಚೀನ ಕಾಲದಿಂದಲೂ ಕೃಷಿ ಅಭಿವೃದ್ಧಿಗೆ ನೀರನ್ನೊದಗಿಸುತ್ತಿವೆ.

ತುಂಗಭದ್ರಾ ನದಿಯ ಉಲ್ಲೇಖ ರಾಮಾಯಣ ಮತ್ತು ಪುರಾಣಗಳಲ್ಲಿ ಬಂದಿದೆ. ಮಹಾಭಾರತದಲ್ಲಿ ಜಾಹ್ನವಿ, ಕೃಷ್ಣವೇಣಿಗಳ ಜೊತೆಗೆ ತುಂಗಾವೇಣಿ ಎಂಬ ಹೆಸರು ಬರುತ್ತದೆ. ಇಂದಿಗೂ ಪವಿತ್ರ ಕ್ಷೇತ್ರವಾದ ಹಂಪಿಯಲ್ಲಿ ಈ ನದಿಗೆ ’ಪಂಪಾತೀರ್ಥ’ವೆಂದೇ ಕರೆಯಲಾಗುತ್ತದೆ. ಇದರ ನೀರು ರುಚಿಕರವಾಗಿದೆ, ಇದರಿಂದ ‘ಗಂಗಾಸ್ನಾನ, ತುಂಗಾಪಾನ’ ಎಂಬ ನಾಣ್ಣುಡಿಯೇ ಈ ಪರಿಸರದಲ್ಲಿ ಬೆಳೆದು ಬಂದಿರುವುದು ಗಮನಾರ್ಹ.

ತುಂಗಭದ್ರಾ ನದಿ ಬಳ್ಳಾರಿ ಜಿಲ್ಲೆಯನ್ನು ಹರಪನಹಳ್ಳಿ ತಾಲೂಕಿನ ಕಡತಿ ಎಂಬ ಗ್ರಾಮದಲ್ಲಿ ಪ್ರವೇಶಿಸಿ ಹಗರಿಬೊಮ್ಮನಹಳ್ಳಿ, ಹೊಸಪೇಟೆ ಮತ್ತು ಸಿರುಗುಪ್ಪ ತಾಲೂಕುಗಳನ್ನೊಳಗೊಂಡಂತೆ ೩೨೦ ಕಿ.ಮೀ. ಚಲಿಸಿ ಆಲೂರು ತಾಲೂಕಿನ ಚಲ್‌ಕೂಡಲೂರು ಬಳಿ ಆಂಧ್ರ ಪ್ರದೇಶವನ್ನು ಸೇರುತ್ತದೆ.[8]

ತುಂಗಭದ್ರಾ ನದಿಗೆ ಬಂದು ಸೇರವು ಹಗರಿ, ಚಿಕ್ಕಹಗರಿಗಳಲ್ಲದೆ ಚಿನ್ನ ಹಗರಿಯನ್ನೊಳಗೊಂಡಂತೆ ಅನೇಕ ಹಳ್ಳಗಳು ಈ ಪ್ರದೇಶದಲ್ಲಿ ಹರಿಯುತ್ತವೆ. ತುಂಗಭದ್ರಾ ನದಿಯಂತೆ ಹಗರಿಯೂ ಚಿಕ್ಕಮಗಳೂರು ಜಿಲ್ಲೆಯ ಮಲ್ಲಯ್ಯನಗರಿ ಮತ್ತು ತಂಗಲಿಯಲ್ಲಿಯ ಎರಡು ನದಿಗಳನ್ನು ವೇದ ಮತ್ತು ಆವತಿ ಎಂದು ಕರೆಯಲಾಗಿದೆ. ಇವೆರಡೂ ಚಿತ್ರದುರ್ಗ ಜಿಲ್ಲೆಯಲ್ಲಿ ಸೇರಿ ವೇದಾವತಿ ಎಂದು ಕರೆಸಿಕೊಂಡು ನಂತರ ಬಳ್ಳಾರಿ ಜಿಲ್ಲೆಯನ್ನು (ರೂಪನಗುಡಿಯಲ್ಲಿ) ಪ್ರವೇಶಿಸುತ್ತದೆ. ಈ ಪ್ರದೇಶದ ಶಾಸನಗಳು ಇದನ್ನು ‘ಅಹರಿ’ ‘ಅಗ-ಹರಿ’ (ಅಘಹರಿ) (ಪಾಪವನ್ನು ತೊಳೆಯುವ) ಎಂದು ಕರೆದಿವೆ. ಈ ಪ್ರದೇಶದಲ್ಲಿ ೯೨.೮ ಕಿ.ಮೀ. ಸಾಗಿ ಸಿರುಗುಪ್ಪ ತಾಲೂಕಿನ ಸಿದ್ಧರಗಡ್ಡೆ ಹಳ್ಳಿಯಲ್ಲಿ ತುಂಗಭದ್ರಾ ನದಿಯನ್ನು ಸೇರುತ್ತದೆ. ವಿಶಾಲವಾಗಿ ಹರಿದಿರುವ ಈ ನದಿ ನೀರನ್ನು ಪ್ರಾಚೀನ ಕಾಲದಿಂದಲೂ ತೋಟ ಗದ್ದೆಗಳಿಗೆ ಬಳಸಿಕೊಳ್ಳಲಾಗಿದೆ.[9]

ತುಂಗಭದ್ರೆಯ ಇನ್ನೊಂದು ಉಪನದಿ ಚಿಕ್ಕಹಗರಿ ಚಿತ್ರದುರ್ಗ ಜಿಲ್ಲೆಯಲ್ಲಿ ಉಗಮವಾಗಿ, ಹರಪನಹಳ್ಳಿ ತಾಲೂಕಿನ ಅಂಜಿಗೇರಿಯಲ್ಲಿ ಪ್ರವೇಶಿಸುತ್ತದೆ. ಹರಪನಹಳ್ಳಿ ಹಡಗಲಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕಗಳಲ್ಲಿ ಹರಿಯುವ ಇದು ಒಟ್ಟು ೪೦ ಕಿ.ಮೀ. ಸಾಗಿ ತುಂಗಭದ್ರೆಯನ್ನು ಸೇರುತ್ತದೆ.

ಅದೇ ರೀತಿ ಚಿನ್ನಹಗರಿ ನದಿಯು ಚಿತ್ರದುರ್ಗ ಜಿಲ್ಲೆಯಲ್ಲಿ ಉಗಮಗೊಂಡು ಕೂಡ್ಲಿಗಿಯ ದಕ್ಷಿಣಕ್ಕೆ ಕಲ್ಲಹಳ್ಳಿ ಪ್ರದೇಶವನ್ನು ಪ್ರವೇಶಿಸುತ್ತದೆ. ಇದನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಜಿನಗಿಹಳ್ಳ ಎಂದು ಕರೆಯಲಾಗುತ್ತದೆ. ಬಳ್ಳಾರಿ-ಚಿತ್ರದುರ್ಗ ಜಿಲ್ಲೆಗಳ ಗಡಿಯಾಗಿ ಪರಿಣಮಿಸಿರುವ ಇದು ಆಂಧ್ರ ಪ್ರದೇಶದ ರಾಯದುರ್ಗ ತಾಲೂಕಿನ ಉತ್ತರದಲ್ಲಿ ಹಗರಿ ನದಿಗೆ ಬಂದು ಕೂಡುತ್ತದೆ. ಪೆದ್ದವಂಕಾ ಎಂದು ಕರೆಯುವ ಒಂದು ನೀರಿನ ಹರಿಯು ತಾಮ್ರಪರ್ವತದಲ್ಲಿ ಹುಟ್ಟಿ ಕುಮತಿಯಲ್ಲಿ ಈ ಚಿನ್ನಹಗರಿ ಉಪನದಿಗೆ ಬಂದು ಸೇರುತ್ತದೆ.[10]

ಈ ಮೂರು ಉಪನದಿಗಳೊಂದಿಗೆ ಆಯಾ ಸ್ಥಳಗಳಲ್ಲಿ ಅನೇಕ ಹಳ್ಳಗಳು ಉಗಮವಾಗಿ ತುಂಗಭದ್ರಾ ನದಿ ಇಲ್ಲವೆ ಈ ಉಪನದಿಗಳನ್ನು ಕೂಡಿಕೊಳ್ಳುತ್ತವೆ. ಹಗರನೂರು ಹಳ್ಳ, ಪಂಪಸಾಗರ ಹಳ್ಳ, ಗುರಿಪುರ ಹಳ್ಳ, ನಾರಿಹಳ್ಳ (ಇದನ್ನು ಕ್ರಿ.ಶ. ೧೫೪೧ ರ ಶಾಸನ “ನಾರಾಯಣಿ” ಎಂದು ಕರೆದಿದೆ)[11]ಹರವನಮಹಳ್ಳ (ಕಾಜ್ರಿವಂಕ), ಮಾದಿಹಳ್ಳ, ತೆಲಗಿಹಳ್ಳ, ಇಟ್ಟಗಿಹಳ್ಳ ಮಾರಹಳ್ಳ (ಹರಪನಹಳ್ಳಿ) ತಿಪ್ಪಾಪುರಹಳ್ಳ, ಹಿರೇಹಳ್ಳ(ಹಡಗಲಿ) ಮೊದಲಾದವು ಪ್ರಮುಖವಾದವು. ಇಲ್ಲಿನ ಅರಣ್ಯ ಮನುಷ್ಯನಿಗೆ ಅವಶ್ಯಕವಾದ ಹಣ್ಣು ಹಂಪಲು, ಮರಮುಟ್ಟು, ಉರುವಲು, ಔಷಧಿಗೆ ಉಪಯುಕ್ತವಾದ ಗಿಡ, ನಾರು-ಬೇರುಗಳನ್ನು ಒದಗಿಸಿದೆ. ಅಲ್ಲದೆ ಇಲ್ಲಿನ ನದಿ, ಹಳ್ಳಗಳು ಮನುಷ್ಯನಿಗೆ ಅವಶ್ಯಕವಾಗಿಬೇಕಾದ ಜೀವಸೆಲೆ(ನೀರು) ಯನ್ನು ಒದಗಿಸಿ ಅವನ ಅವಶ್ಯಕತೆಗಳನ್ನು ಪೂರೈಸಿದೆ.

೫. ವಾಯುಗುಣ ಮತ್ತು ಪ್ರಾಣಿ-ಪಕ್ಷಿ ಹಾಗೂ ಮುಖ್ಯ ಬೆಳೆಗಳು

ಬೇಸಿಗೆ ಕಾಲವು ಫೆಬ್ರವರಿ ಅಂತ್ಯದಿಂದ ಆರಂಭವಾಗಿ ಜೂನ್‌ತಿಂಗಳವರೆಗೆ ಇರುತ್ತದೆ. ಆಗ ಉಷ್ಣಾಂಶ ಸರಾಸರಿ ೧೬೭ ಸೆ.ವರೆಗೆ ಇರುತ್ತದೆ. ಕೆಲವು ಸಲ ಇದು ೪೫ ರಿಂದ ೪೯ ಸೆ. ವರೆಗೆ ಏರುತ್ತದೆ. ಜುಲೈ ತಿಂಗಳಲ್ಲಿ ಆರಂಭವಾಗುವ ಮಳೆಗಾಲ ನವೆಂಬರ್‌ ತಿಂಗಳವರೆಗೆ ಇರುತ್ತದೆ. ಮಳೆಯ ವಾರ್ಷಿಕ ಸರಾಸರಿ ೫೭೪.೯ ಮಿ.ಮೀ. ಇರುತ್ತದೆ. ನವೆಂಬರ್‌ ಕೊನೆಯಿಂದ ಫೆಬ್ರವರಿಯವರೆಗೆ ಚಳಿಗಾಲವಿರುತ್ತದೆ. ಶುಷ್ಕ ವಾತಾವರಣವಿರುವ ಈ ಪ್ರದೇಶ ಮನುಷ್ಯನ ವಾಸಕ್ಕೆ ಅತ್ಯಂತ ಯೋಗ್ಯವಾಗಿದೆ.

ಈ ಪ್ರದೇಶದ ಕಾಡು ಹಾಗೂ ಬೆಟ್ಟಗುಡ್ಡಗಳಲ್ಲಿ ಚಿರತೆ, ಕರಡಿ, ಕಾಡುಹಂದಿ, ಮುಳ್ಳುಹಂದಿ, ನರಿ, ಜಿಂಕೆ, ತೋಳ ಮೊದಲಾದ ಕಾಡುಪ್ರಾಣಿಗಳು ಹಾಗೂ ನವಿಲು, ಕಾಗೆ, ಗೂಗೆ, ನೀರುಕೋಳಿ, ನೀರುಹಂದಿ, ಗುಬ್ಬಿ, ಕಿಂಗ್‌ಫಿಷ್‌ರ್‌ ಮುಂತಾದ ಪಕ್ಷಿಗಳು ಕಂಡುಬರುತ್ತವೆ. ತುಂಗಭದ್ರಾ ನದಿ ನೀರಿನಲ್ಲಿ ಮೊಸಳೆಗಳಿವೆ.[12]

ತುಂಗಭದ್ರಾ ಮತ್ತು ಅದರ ಉಪನದಿಗಳ ಹಾಗೂ ಹಳ್ಳ, ಕೆರೆಗಳ ನೀರನ್ನು ಬಳಸಿಕೊಂಡು ಇಲ್ಲವೆ ಮಳೆಯಾಶ್ರಿತ ನೀರಿನ ಸಹಾಯದಿಂದ ಭತ್ತ, ಗೋದಿ, ಜೋಳ, ಗೋವಿನಜೋಳ, ರಾಗಿ, ತೊಗರಿ, ಕಡಲೆ ಮೊದಲಾದ ಧಾನ್ಯಗಳು ಹಾಗೂ ಕಬ್ಬು, ಹತ್ತಿ, ಬಾಳೆ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ.

ಈ ರೀತಿಯ ಎಲ್ಲ ಸವಲತ್ತುಗಳು ಈ ಭೂಭಾಗದಲ್ಲಿ ಇದ್ದಿದ್ದರಿಂದ ಹಂಪಿ, ಆನೆಗುಂದಿ, ನಿಟ್ಟೂರು, ತೆಕ್ಕಲಕೋಟೆ, ಸಂಗನಕಲ್ಲು, ಕಪ್ಪಗಲಲ್ಲು, ಕುಡತಿನಿ, ಕಾಕುಬಾಳ, ಹಿರೇಬೆನಕಲ್ಲು, ಮಲ್ಲಾಪುರ ಮೊದಲಾದ ಸ್ಥಳಗಳಲ್ಲಿ ಆದಿಶಿಲಾಯುಗದಿಂದ ಆದಿಮಾನವನು ವಾಸಿಸಿದ್ದಾನೆ. ಮುಂದೆ ಈ ಭೂ ಭಾಗದಲ್ಲಿ ಪ್ರಬಲ ರಾಜ್ಯಗಳನ್ನು ಕಟ್ಟಲು ಇಲ್ಲಿನ ಭೌಗೋಳಿಕ ಪರಿಸರವು ಸಹಕಾರಿಯಾಯಿತು. ಇದರಿಂದಾಗಿಯೇ ಹಂಪಿ-ಆನೆಗುಂದಿ ಮುಂತಾದ ನೆಲೆಗಳಲ್ಲಿ ಮನುಷ್ಯ ಪ್ರಾಗೈತಿಹಾಸಿಕ ಕಾಲದಿಂದ ಇತಿಹಾಸ ಕಾಲದಲ್ಲಿ ವಾಸಿಸುತ್ತ ಆ ಪರಂಪರೆ ಇಂದಿಗೂ ಮುಂದುವರಿಯಲು ಕಾರಣವಾಗಿದೆ.

ಬೆಟ್ಟಗಳಿಂದ ಸುತ್ತುವರಿದ ಎತ್ತರವಾದ ಈ ಭೂ ಪ್ರದೇಶ ಪ್ರಕೃತಿದತ್ತ ಸುರಕ್ಷತೆಯನ್ನು ನೀಡಿದೆ. ಇಂತಹ ಬೆಟ್ಟಗಳ ಸಾಲಿನಲ್ಲಿ ನದಿ, ಸಣ್ಣನದಿ, ಹಳ್ಳಗಳು ಹರಿಯುವುದು ಸಾಮಾನ್ಯ. ಈ ನೀರಿನ ಪ್ರದೇಶದ ಆಸುಪಾಸಿನಲ್ಲಿ ಇರುವ ಫಲವತ್ತಾದ ಮಣ್ಣಿನಿಂದಾಗಿ ಕೃಷಿಗೆ ಯೋಗ್ಯವಾದ ಪ್ರದೇಶ ದೊರಕಿದೆ. ಮಣ್ಣು ಫಲವತ್ತಾದರೂ ಇಲ್ಲಿ ಮಳೆ ಕಡಿಮೆಯಾದ್ದರಿಂದ ಇತ್ತೀಚಿನವರೆಗೂ ಈ ಪ್ರದೇಶ ಒಣ ಬೇಸಾಯಕ್ಕೆ ಒಳಪಟ್ಟಿತ್ತು. ಆದರೆ ತುಂಗಭದ್ರಾ ಆಣೆಕಟ್ಟು ನಿರ್ಮಾಣದಿಂದ, ತೋಡಿದ ಕಾಲುವೆಗಳಿಂದಾಗಿ ಇಂದು ನೀರಾವರಿ ಭೂಮಿಯಾಗಿದೆ. ಇಲ್ಲಿಯ ಭೂ ಭೌತಿಕ ಸ್ವರೂಪ ಇಲ್ಲಿ ದೊರೆಯುವ ಅದಿರು, ಖನಿಜ, ಶಿಲಾಸ್ತೋಮ, ಮಣ್ಣು, ಸಸ್ಯಗಳು ಮಾನವನಿಗೆ ಸಹಕಾರಿಯಾಗಿದ್ದವು. ಇದುವೇ ಪ್ರಾಚೀನ ಮನುಷ್ಯ ಒಕ್ಕಲು ಸಂಸ್ಕೃತಿ ಆರಂಭಿಸಲು ಪ್ರೇರಣೆಯಾಯಿತು. ಒಟ್ಟಾರೆ ಹೇಳುವುದಾದರೆ ಭೌಗೋಳಿಕವಾಗಿ ಇದು ಪ್ರಾಚೀನ ಪ್ರದೇಶವಾಗಿದ್ದು, ವಿಶಾಲವಾಗಿ ಹರಡಿಕೊಂಡಿದೆ. ಇಲ್ಲಿ ಹರಿಯುವ ತುಂಗಭದ್ರಾ ಹಲವು ರೀತಿಯಲ್ಲಿ ಜನಜೀವನದ ಮೆಲೆ ಪ್ರಭಾವ ಬೀರಿದೆ. ಅಲ್ಲದೆ ಅನೇಕ ಸಂಸ್ಕೃತಿಗಳ ಎಳ್ಗೆಗೂ ಕಾರಣವಾಗಿದೆ. ಇಲ್ಲಿನ ಬೆಟ್ಟಗುಡ್ಡಗಳಲ್ಲಿ ದೊರೆಯುವ ನೀರನ್ನು ಆಧರಿಸಿ ಆದಿಮಾನವ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡನು. ವ್ಯವಸಾಯದ ಕಸುಬನ್ನು ಆತ ಕರಗತ ಮಾಡಿಕೊಂಡ ನಂತರ ಈ ಸ್ಥಳಗಳಲ್ಲಿದ್ದ ಉತ್ತಮವಾದ ಭೂಮಿ ವ್ಯವಸಾಯಕ್ಕೆ ಆಸರೆಯಾಯಿತು. ಇದು ಮುಂದೆ ಹಲವು ಸಂಸ್ಕೃತಿಗಳ ಉಗಮಕ್ಕೆ ಕಾರಣವಾಯಿತು. ಫಲವತ್ತಾದ ಭೂಮಿ. ದೊಡ್ಡ ದೊಡ್ಡ ಬಂಡೆಗಳನ್ನು ಹೊತ್ತ ಬೆಟ್ಟಗಳು, ನಿಸರ್ಗ ನಿರ್ಮಿತ ಮತ್ತು ಕೊರೆದು ತಯಾರಿಸಿದ ಗವಿಗಳು, ತಾಮ್ರ, ಕಬ್ಬಿಣ, ಚಿನ್ನದ ಅದಿರು, ತುಂಗಭದ್ರಾ ಮತ್ತು ಅದರ ಉಪನದಿಗಳ ನೀರಿನ ಸರಬರಾಜು, ಕಾಡು ಮೊದಲಾದ ಭೌಗೋಳಿಕ ಅನುಕೂಲತೆಗಳಿಂದ ಪ್ರಾಗೈತಿಹಾಸ ಕಾಲದಿಂದಲೂ ಮಾನವನ ವಾಸಸ್ಥಾನವಾಗುವುದಕ್ಕೆ ಈ ಪ್ರದೇಶ ಕಾರಣವಾಯಿತು ಎಂದು ಹೇಳಬಹುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ನಾಯಕ ಹಾ.ಮಾ.(ಸಂ), ಕನ್ನಡ ವಿಷಯ ವಿಶ್ವಕೋಶ ಪು. ೯೮೬೫-೯೭

[2] ಅದೇ.

[3] Gazetteer of India, Bellary District

[4] ಅದೇ.

[5] ಚಂದ್ರಶೇಖರ ಟಿ.ಆರ್.ಬಳ್ಳಾರಿ ಜಿಲ್ಲೆಯ ನಿಸರ್ಗ ಸಂಪತ್ತು. ಪು. ೪೭-೭೮

[6] ರಾಯಚೂರು ಜಿಲ್ಲಾ ಗೆಜಟಿಯ್‌, ಪು. ೮-೧೨

[7] Subba Rao. B., Stone age Culture of Bellary and Sankalia H.D. Mesolithic and premesolithic Industries from Excavations at Sanganakalu, Bellary.

[8] ಅದೇ.

[9] ಚಿತ್ರದುರ್ಗ ಗೆಜಟಿಯ್‌, ಪು. ೬-೧೭

[10] ಅದೇ.

[11] S.I.I.IX (i), 104, 1046,

[12] ನೋಡಿ: ಬಳ್ಳಾರಿ ಮತ್ತು ರಾಯಚೂರು ಜಿಲ್ಲಾ ಗೆಜಟಿಯರ್‌