ಪೀಠಿಕೆ

ವಿಶ್ವವಿಖ್ಯಾತ “ಹಂಪಿ” ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ. ಇದು ಉತ್ತರ ಅಕ್ಷಾಂಶ ೧೫.೧೮.೫ಯಿಂದ ೧೫.೨೧ಯವರೆಗೆ ಮತ್ತು ಪೂರ್ವ ರೇಖಾಂಶ ೭೮.೨೭೫ಯಿಂದ ೭೮.೩೦ಯಲ್ಲಿದೆ. ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ, ಅಂದಿನ ಆಡಳಿತದ ಕೇಂದ್ರವಾಗಿ ಮೆರೆದಿದೆ. ಪುರಾಣ ಕಾಲದಿಂದ ಪ್ರಸಿದ್ಧವಾಗಿರುವ ಇದು ಹಲವು ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಭೌಗೋಳಿಕ ಪರಿಸರವು ಪ್ರಾಗೈತಿಹಾಸಿಕ ಕಾಲದಿಂದ ಮಾನವನ ವಾಸಕ್ಕೆ ಅವಕಾಶ ಮಾಡಿಕೊಟ್ಟಿದೆ. ಹಂಪಿ ಮತ್ತು ಅದರ ಸುತ್ತಮುತ್ತ ಹಲವಾರು ಆದಿಮಾನವರ ನೆಲೆಗಳಿವೆ. ಇವುಗಳಲ್ಲಿ ದೊರೆಯುವ ಕೈಕೊಡಲಿ, ಮಡಕೆ ಚೂರು, ರೇಖಾ, ಕುಟ್ಟಿದ, ಕೊರೆದ ಹಾಗೂ ವರ್ಣಚಿತ್ರಗಳು ಮತ್ತು ಕಲ್ಗೋರಿ ಮುಂತಾದವುಗಳು ಅಂದಿನ ಜೀವನ ಕ್ರಮ ಮತ್ತು ಸಂಸ್ಕೃತಿಯನ್ನು ಅರಿಯಲು ಏಕಮೇವ ಆಧಾರಗಳಾಗಿವೆ. ಇವುಗಳ ಸಹಾಯದಿಂದ ಆಣಮಾನವನ ಸಾಮಾಜಿಕ ಮತ್ತು ಧಾರ್ಮಿಕ ವಿವರಗಳನ್ನು ಅರಿಯಬಹುದಾಗಿದೆ.

ಅಧ್ಯಯನದ ಉದ್ದೇಶ

ಸೂರ್ಯ, ಒಂಬತ್ತು ಗ್ರಹಗಳು, ಕ್ಷುದ್ರಗ್ರಹಗಳು, ಉಲ್ಕೆ, ಉಪಗ್ರಹಗಳು, ಧೂಮಕೇತು ಇವೆಲ್ಲವನ್ನು ಒಂದು ಕುಟುಂಬವೆಂದು ಪರಿಗಣಿಸಿ ಅದನ್ನು ‘ಸೌರಮಂಡಲ’ ಎನ್ನುತ್ತೇವೆ. ಒಂಬತ್ತು ಗ್ರಹಗಳಲ್ಲಿ ಭೂಮಿಯೂ ಒಂದು ಗ್ರಹ. ಸುಮಾರು ಹದಿನೈದು ಬಿಲಿಯನ್ ವರ್ಷಗಳ ಹಿಂದೆ ವಿಶ್ವವು ದೂಳು ಮತ್ತು ಅನಿಲಗಳ ಮಹಾರಾಶಿಯಾಗಿತ್ತು. ಈ ರಾಶಿಯು ಅಧಿಕ ಸಾಂದ್ರತೆಯಿಂದ ಕುಸಿಯಲು ಪ್ರಾರಂಭಿಸಿದಾಗ ಕೇಂದ್ರ ಬಿಂದುವಿನಲ್ಲಿ ಶಾಖ ಹೆಚ್ಚಾಗಿ ಅದು ಸ್ಫೋಟಿಸತೊಡಗಿತು. ಇದನ್ನೇ ಮಹಾಸ್ಫೋಟ (ಬಿಗ್ ಬ್ಯಾಂಗ್) ಎಂದು ಕರೆಯುತ್ತೇವೆ. ಇದು ಸುಮಾರು ೪೬೦ ಕೋಟಿ ವರ್ಷಗಳ ಹಿಂದೆ ಘಟಿಸಿರಬೇಕೆಂಬ ಊಹೆ ಇದೆ. ಇಂತಹದೊಂದು ಪ್ರಕ್ರಿಯೆಯಲ್ಲಿ ದೂಳು, ಅನಿಲ ಕಣಗಳ ಮುದ್ದೆಯಾಗಿ ಹೊರಬಿದ್ದ ಕಾಯವೇ ಭೂಮಿಯಾಗಿ ರೂಪುಗೊಂಡಿತು. ಪ್ರಾರಂಭದಲ್ಲಿ ಕುದಿಯುತ್ತಿದ್ದ ಅನಿಲರಾಶಿ ಕ್ರಮೇಣ ತಂಪಾಗತೊಡಗಿದಾಗ ಭೂಮಿಯ ಕಕ್ಷೆ ರಚಿತವಾಯಿತು. ಇದರಲ್ಲಿದ್ದುದು ಲೋಹಗಳು. ಅವುಗಳ ತೂಕಕ್ಕನುಗುಣವಾಗಿ ಭೂಮಿಯಲ್ಲಿ ಸಂಗ್ರಹಗೊಂಡವು. ಅನಿಲಗಳು ಸೋರುತ್ತಾ ವಾತಾವರಣ ಸೃಷ್ಟಿಸಿದವು. ವಾತಾವರಣವು ಅನಿಲದ ಕವಚವಾಗಿ ನೈಟ್ರೋಜನ್, ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೋನಾಕ್ಸೈಡ್, ಮೀಥೇನ್, ಅಮೋನಿಯ, ನೀರು ಮುಂತಾದ ಸಂಯುಕ್ತಗಳುಂಟಾದವು. ಹೀಗೆ ರೂಪವಾದ ಭೂಮಿ ಸತತವಾಗಿ ಬಾಹ್ಯ ಮತ್ತು ಆಂತರಿಕ ಬದಲಾವಣೆಗಳನ್ನು ಹೊಂದುತ್ತಾ ತನ್ನ ರಚನೆಯಲ್ಲಿ ಅನೇಕ ಮಾರ್ಪಾಡುಗಳನ್ನು ಹೊಂದುತ್ತಾ ಸಾಗಿದೆ. ಭೂಮಿ ಹುಟ್ಟಿದ ಅನೇಕ ಕೋಟಿ ವರ್ಷಗಳ ನಂತರ ಇದರ ಮೇಲೆ ಜೀವಿಯ ಉಗಮವಾಯಿತು.[1] ಜೀವದ ಉತ್ಪತ್ತಿ ಅಥವಾ ಉಗಮದ ಬಗ್ಗೆ ವಿವಿಧ ಧಾರ್ಮಿಕ ಗ್ರಂಥಗಳಲ್ಲಿ ವಿಭಿನ್ನ ಬಗೆಯ ವಿವರಗಳಿವೆ. ಹೆಚ್ಚಿನ ವಿವರಣೆಗಳಲ್ಲಿ ಇಡೀ ಜೀವರಾಶಿಯನ್ನು ಭಗವಂತ ಪ್ರತ್ಯೇಕವಾಗಿ ಸೃಷ್ಟಿಸಿದ್ದಾನೆಂದು ಬಣ್ಣಿಸಲಾಗಿದೆ. ಧರ್ಮದ ಆಧಾರ ಅದಕ್ಕೆ ಇದ್ದಿದ್ದರಿಂದ ಪ್ರಶ್ನಾತೀತವಾಗಿ ಸಮಾಜ ಅದನ್ನು ಅಲ್ಲಗಳೆಯದೇ ಅಂಗೀಕರಿಸುತ್ತ ಬಂದಿದೆ. ಆದರೆ ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಜೀವ ವಿಕಾಸದ ಬಗ್ಗೆ ಹೊಸ ಹೊಸ ವಿವರಗಳನ್ನು ನೀಡಿವೆ. ಭೂಮಿ ಹುಟ್ಟಿ ೪೬೦ ಕೋಟಿ (೪.೬ ಮಿಲಿಯನ್) ವರ್ಷಗಳಾಗಿದ್ದರೂ, ಜೀವಿ ಹುಟ್ಟಿರುವುದು ಸುಮಾರು ೩೫೦ ಕೋಟಿ (೩.೫ ಮಿಲಿಯನ್) ವರ್ಷಗಳ ಹಿಂದೆ. ಅನಿಲ ಕೂಪವಾಗಿದ್ದ, ಭೂಮಿಯಲ್ಲಿನ ಅತಿ ಸಣ್ಣ ಸಜೀವ ಪರಮಾಣುಗಳಿಂದ ಅತ್ಯಂತ ಸಂಕೀರ್ಣ ವ್ಯವಸ್ಥೆಯಲ್ಲಿ ಮಾನವ ಉಗಮವಾಗಿರಬೇಕೆಂದು ಅಭಿಪ್ರಾಯ ಪಡೆಯಲಾಗಿದೆ.[2]

ಇಡೀ ಜೀವಸಂಕುಲದ ವಿಕಾಸ ಕ್ರಮದಲ್ಲಿ ಮಾನವನಿಗೆ ಒಂದು ವಿಶೇಷ ಸ್ಥಾನವಿದೆ. ದೀರ್ಘಾವಧಿಯ ಭೂ ಇತಿಹಾಸಕ್ಕೆ ಹೋಲಿಸಿದರೆ ಮಾನವನ ಪೂರ್ವಜರ ಹುಟ್ಟು ಕೇವಲ ೬೫ ಮಿಲಿಯನ್ ವರ್ಷಗಳ ಹಿಂದಷ್ಟೇ ಆದ ದಾಖಲೆ ಸಿಗುತ್ತದೆ. ಆದಿ ಮಾನವನ ಉಗಮವಾಗಿ ಸರಿ ಸುಮಾರು ೧೪ ಮಿಲಿಯನ್ ವರ್ಷಗಳಾಗಿದ್ದರೆ, ಆಧುನಿಕ ಮಾನವನ ಉಗಮ ಕೇವಲ ೨ ಮಿಲಿಯನ್ ವರ್ಷಗಳ ಹಿಂದಷ್ಟೇ ಆಗಿದೆ ಎನ್ನಬಹುದು.[3]

ಇಡೀ ಮನುಕುಲದ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡುವುದು ಕಷ್ಟಸಾಧ್ಯ. ಆದರೆ ಮಾನವನ ಜೀವನಕ್ರಮವನ್ನು ಬಿಡಿಬಿಡಿಯಾಗಿ ತೋರಿಸುವ ನಿಟ್ಟಿನಲ್ಲಿ ಅದನ್ನು ವಿವಿಧ ದೃಷ್ಟಿಕೋನಗಳಿಂದ ವಿಶ್ಲೇಷಣೆ ಮಾಡಲಾಗುತ್ತದೆ. ಇಲ್ಲಿಯ ವರೆಗೆ ಅಧ್ಯಯನ ಮಾಡಿರುವ ವಿದ್ವಾಂಸರ ಪ್ರಯತ್ನವನ್ನು ಗಮನಿಸಿದರೆ ಪ್ರಮುಖವಾಗಿ ಮೂರು ವಿಧಗಳು ಕಂಡುಬರುತ್ತವೆ.

೧. ಕಾಲವನ್ನು ಆಧಾರವಾಗಿ ಇಟ್ಟುಕೊಂಡು ರಚಿತವಾದ ಮಾನವನ ಇತಿಹಾಸ.

೨. ಆಯಾ ಪ್ರದೇಶದ ಭೌಗೋಳಿಕ ಪರಿಸರ ಮತ್ತು ಮಾನವನ ನೆಲೆಗಳನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ಮಾನವನ ಇತಿಹಾಸ.

೩. ಮಾನವನ ವಿವಿಧ ನೆಲೆಗಳನ್ನು ಪ್ರತ್ಯೇಕವಾಗಿ ಅಂದರೆ ಆಯಾ ನೆಲೆಗಳ ಹೆಸರಿನಲ್ಲಿ ಮಾಡಿರುವ ಅಧ್ಯಯನಗಳು.

ಹಂಪಿ ಪ್ರಾಚೀನ ಕಾಲದಿಂದಲೂ ಉತ್ತಮ ಭೌಗೋಳಿಕ ಪರಿಸರ ಹೊಂದಿದೆ. ಇದರಿಂದಾಗಿ ಆದಿಮಾನವ ಹಂಪಿ ಪರಿಸರದ ವಿವಿಧ ನೆಲೆಗಳಲ್ಲಿ ಹಿಂದಿನಿಂದಲೂ ವಾಸಿಸುತ್ತಾ ಬಂದಿದ್ದಾನೆ. ಇಲ್ಲಿ ನೆಲೆಯೂರಿದ ಆದಿಮಾನವ ತನ್ನ ಹಲವು ಕುರುಹುಗಳನ್ನು ಇಲ್ಲಿ ಬಿಟ್ಟು ಹೋಗಿದ್ದಾನೆ. ಇವು ಅಂದಿನ ಸಂಸ್ಕೃತಿಯನ್ನು, ಅವನ ಜೀವನ ಶೈಲಿಯನ್ನು ಅರಿಯಲು ಏಕಮೇವ ಆಧಾರಗಳಾಗಿವೆ. ಈ ಹಿನ್ನೆಲೆಯಲ್ಲಿ ಹಂಪಿ ಪರಿಸರದ ಪ್ರಾಗೈತಿಹಾಸಿಕ ಕಾಲದ ಆದಿಮಾನವನ ನೆಲೆಗಳನ್ನು ಮತ್ತು ಅವುಗಳ ಮಹತ್ವವನ್ನು ಪುರಾತತ್ವ ಮತ್ತು ಮಾನವಶಾಸ್ತ್ರ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವುದು ಈ ಸಂಶೋಧನೆಯ ಮುಖ್ಯ ಉದ್ದೇಶಗಳಾಗಿವೆ.

ಹಂಪಿ ಪರಿಸರದಲ್ಲಿ ಆದಿಮಾನವನಿಗೆ ಸೇರಿದ ಸುಮಾರು ೨೮೦ಕ್ಕೂ ಹೆಚ್ಚು ನೆಲೆಗಳಿವೆ. ಅವುಗಳಲ್ಲಿ ಮುಖ್ಯವಾಗಿ ಹಿರೇಬೆನಕಲ್, ಚಿಕ್ಕ ಜಂತಕಲ್, ಆನೆಗುಂದಿ, ಮಲ್ಲಾಪುರ (ಗಂಗಾವತಿ ತಾಲೂಕು), ಕಮಲಾಪುರ, ಕಾಳಗಟ್ಟಿ, ಕಾರಿಗನೂರು, ಸಂಕ್ಲಪುರ, ವೆಂಕಟಾಪುರ, ಧರ್ಮಸಾಗರ, ಬೈಲುವದ್ದಿಗೇರಿ, ನಲ್ಲಾಪುರ, ಮೆಟ್ರಿ, ಕಂಪ್ಲಿ (ಹೊಸಪೇಟೆ ತಾಲೂಕು), ಹುಲಿಕುಂಟೆ, ಕುಮತಿ ಜರಿಮಲೆ, ಸಿಡೆಗಲ್ಲು, ಜಿ.ಬಿ.ಹಳ್ಳಿ, ಹಂಪಿ, ಬುಕ್ಕಸಾಗರ (ಕೂಡ್ಲಿಗಿ ತಾಲೂಕು), ಪಿಕ್ಕಿಹಾಳ್, ಸಂಗನಕಲ್ಲು, ನಿಟ್ಟೂರು, ಉದೇಗುಳಂ, ಕಪ್ಪಗಲ್ಲು, ಬ್ರೂಸ್ ಪೇಟ್ ಬೆಟ್ಟ (ಬಳ್ಳಾರಿ ತಾಲೂಕು), ಕುಡಿತಿನಿ, ದರೋಜಿ (ಸಂಡೂರು ತಾಲೂಕು), ನುಂಕೆಮಲೆ, ಜಟ್ಟಿಂಗರಾಮೇಶ್ವರ, ಬ್ರಹ್ಮಗಿರಿ, ಸಿದ್ದಾಪುರ, ಮೊಳಕಾಲ್ಮುರು (ತಾಲೂಕು) ಅಲ್ಲದೆ ನೀಲಗುಂದ, ಬಾಗಳಿ, (ಹೂವಿನ ಹಡಗಲಿ ತಾಲೂಕು), ಅರಿಷಿಣಗೊಂದಿ, ಆಸಗೋಡು, ಚಿಪ್ಪನಕೆರೆ (ಚಿತ್ರದುರ್ಗ ತಾಲೂಕು)ಗಳಲ್ಲಿ ಪ್ರಮುಖ ಆದಿಮಾನವ ನೆಲೆಗಳು ಕಂಡುಬರುತ್ತವೆ. ಕೆಲವು ಕಡೆ ಈ ನೆಲೆಗಳು ಸಾಕಷ್ಟು ದುಃಸ್ಥಿತಿಯಲ್ಲಿ ಇದ್ದರೆ, ಇನ್ನೂ ಕೆಲವು ಕಡೆ ಕಾಲನ ತುಳಿತಕ್ಕೆ ಸಿಕ್ಕು ಅವನತಿಯತ್ತ ಮುಖ ಮಾಡಿರುವ ನೆಲೆಗಳು ಈ ಭೌಗೋಳಿಕ ಪರಿಸರದಲ್ಲಿರುವುದು ವಿರ್ಪಯಾಸ. ಹಂಪಿ ಪರಿಸರದ ಆದಿಮಾನವನ ಕುರಿತು ಅಲ್ಲಲ್ಲಿ ಕೆಲವು ಅಧ್ಯಯನಗಳು ನಡೆದಿದ್ದರೂ ಎಲ್ಲಿಯೂ ಸಮಗ್ರವಾದ ಅಧ್ಯಯನ ನಡೆದಿಲ್ಲ. ಈ ಕೊರತೆಯನ್ನು ತುಂಬಲು ವ್ಯವಸ್ಥಿತ ಅಧ್ಯಯನದ ಅವಶ್ಯಕತೆ ಇದೆ. ಇಲ್ಲಿನ ಆದಿಮಾನವನ ನೆಲೆಗಳು ಅವುಗಳ ಭೌಗೋಳಿಕ ಸ್ಥಾನ, ಆ ನೆಲೆಗಳ ವೈಶಿಷ್ಟ್ಯ. ಆ ನೆಲೆಯಲ್ಲಿ ದೊರೆಯುವ ಪ್ರಾಕ್‌ಚಾರಿತ್ರಿಕ ಕುರುಹುಗಳ ವಿಶೇಷತೆ. ಮುಂತಾದವುಗಳನ್ನು ಇಲ್ಲಿ ಗಮನದಲ್ಲಿ ಇಟ್ಟುಕೊಳ್ಳಲಾಗಿದೆ. ಇವುಗಳನ್ನು ಸ್ಥೂಲವಾಗಿ ಚರ್ಚಿಸಿ ಒಂದು ಚಿತ್ರಣ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ನಾಗರಾಜರಾವ್ ಎಂ.ಎಸ್‌., ‘ಪ್ರೋಟೋ ಹಿಸ್ಟಾರಿಕ್ ಕಲ್ಚರ್ ಆಫ್ ದಿ ತುಂಗಭದ್ರಾ ವ್ಯಾಲಿ’ ಎನ್ನುವ ಕೃತಿಯಲ್ಲಿ ಈ ಭಾಗದ ಕೆಲವು ಆದಿಮಾನವನ ನೆಲೆಗಳ ಕುರಿತು ದಾಖಲಿಸಿದ್ದಾರೆ. ಕೆ.ಬಿ. ಶಿವತಾರಕ ಅವರು “ಕರ್ನಾಟಕ ಪುರಾತತ್ವ ನೆಲೆಗಳು” ಎನ್ನುವ ಕೃತಿಯಲ್ಲಿ ಆದಿಮಾನವನ ಇಲ್ಲಿನ ಕೆಲವು ನೆಲೆಗಳನ್ನು ದಾಖಲೆ ಮಾಡಿದ್ದಾರೆ. ಹಾಗೇ ಸಂಗನಕಲ್ಲು, ಪಿಕ್ಲಿಹಾಳ್, ಕಪ್ಪಗಲ್ಲಿನಲ್ಲಿ ನಡೆದ ಉತ್ಖನನ ನೆಲೆಗಳ ಮಹತ್ವವನ್ನು ಸುಬ್ಬಾರಾವ್, ಪೆದ್ದಯ್ಯ, ಆಲ್‌ಚಿನ್‌. ಬಿ. ಮತ್ತು ಎಫ್‌.ಆ. ಅಲ್‌ಚಿನ್‌, ಅನ್ಸರಿ. ಜೆಡ್‌.ಡಿ. ಮಜುಂದಾರ್, ಮೊದಲಾದ ವಿದ್ವಾಂಸರು ತಮ್ಮ ವಿವಿಧ ಉತ್ಖನನ ವರದಿಗಳಲ್ಲಿ ಆ ನೆಲೆಗಳ ಮಹತ್ವವನ್ನು ದಾಖಲಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಡಾ.ವಾಸುದೇವ ಬಡಿಗೇರ್, ಡಾ. ಸೋಮಶೇಖರ್, ಡಾ.ಕೊಟ್ರೇಶ್, ಡಾ.ಬಾಲಸುಬ್ರಮಣ್ಯ, ಡಾ.ಲಕ್ಷ್ಮಣ ತೆಲಗಾವಿ, ಡಾ.ಎಚ್‌.ತಿಪ್ಪೇಸ್ವಾಮಿ ಇವರು ಅಲ್ಲಲ್ಲಿ ಬಿಡಿ ಲೇಖನಗಳನ್ನು ಈ ಪರಿಸರದ ಕುರಿತು ಪ್ರಕಟಿಸಿದ್ದಾರೆ. ಇನ್ನೂ ಕೆಲ ಲೇಖನಗಳು ಸಂಸ್ಮರಣ ಗ್ರಂಥಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಹಂಪಿ ಪರಿಸರದ ಆದಿಮಾನವನ ಕುರಿತು ಅಧ್ಯಯನ ಮಾಡುವವರಿಗೆ ಮೂಲ ಸಾಮಗ್ರಿಗಳು ಸಾಕಷ್ಟು ಇವೆ. ಇವು ಕಾಲಾಂತರದಲ್ಲಿ ರೂಪಾಂತರಗೊಂಡು, ಇಲ್ಲವೇ ಮೂಲ ರೂಪದಲ್ಲಿಯೇ ಇಂದಿಗೂ ಉಳಿದು ಬಂದಿವೆ. ಇವುಗಳ ವ್ಯಾಪಕ ಸಮೀಕ್ಷೆ ನಡೆಯಬೇಕಿದೆ. ಇಲ್ಲಿನ ನೆಲೆಗಳ ವೈಶಿಷ್ಟ್ಯತೆ ಹಾಗೂ ಕರ್ನಾಟಕದ ಇತರೆಡೆ ದೊರೆಯುವ ಆದಿಮಾನವನ ನೆಲೆಗಳಿಗೂ ಇರುವ ಸಂಬಂಧ, ಹೋಲಿಕೆ, ವ್ಯತ್ಯಾಸ ಮತ್ತು ಪ್ರಭಾವವೇನು ಎಂಬುದನ್ನು ಪರಿಶೀಲಿಸಬೇಕಿದೆ. ಅಲ್ಲದೇ ಈ ಸಂಸ್ಕೃತಿಯ ಪಸರುವಿಕೆಯಲ್ಲಾದ ಬದಲಾವಣೆ, ಅವುಗಳ ವಿಸ್ತಾರದ ಕುರಿತು ತಾರ್ಕಿಕವಾಗಿ ವಿಶ್ಲೇಷಿಸಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಂಶೋಧನೆಯು ಕೆಳಕಂಡ ಉದ್ದೇಶಗಳನ್ನು ಹೊಂದಿದೆ.

೧. ಹಂಪಿ ಪರಿಸರದಲ್ಲಿ ಕಂಡುಬರುವ (ವಿವಿಧ ತಾಲೂಕುಗಳಲ್ಲಿ) ಆದಿಮಾನವ ನೆಲೆಗಳನ್ನು ಒಂದೆಡೆ ಪ್ರಾಥಮಿಕವಾಗಿ ದಾಖಲಿಸುವುದು (ಅನ್ವೇಷಣೆ, ಉತ್ಖನನಗೊಂಡ ನೆಲೆಗಳು).

೨. ವಿಶ್ವ ಪ್ರಸಿದ್ಧಿ ಪಡೆದ ಹಂಪಿಯನ್ನು ಕೇಂದ್ರವಾಗಿಟ್ಟುಕೊಂಡು ಅದರ ಸುತ್ತಲಿನ ೧೦೦ ಕಿ.ಮೀ. ವ್ಯಾಪ್ತಿಯನ್ನು ಕೋ ಮತ್ತು ಬಪ್ಪರ್ ಜೋನ್ ಎನ್ನುವ ಎರಡು ವಿವಿಧ ವಲಯಗಳನ್ನಾಗಿ (ತಲಾ ೫೦ ಕಿ.ಮೀ. ವ್ಯಾಪ್ತಿಯಲ್ಲಿ) ವಿಭಾಗಿಸಿಕೊಂಡು ಇಲ್ಲಿ ಕಾಣಬರುವ ನೆಲೆಗಳ ವೈಶಿಷ್ಟ್ಯತೆಯನ್ನು ದಾಖಲಿಸುವುದು.

೩. ದೊರೆಯುಬಹುದಾದ ಅವಶೇಷಗಳನ್ನು ಆಧಾರವಾಗಿಟ್ಟುಕೊಂಡು ಆದಿಮಾನವನ ಜೀವನಕ್ರಮ, ವೈಶಿಷ್ಟ್ಯತೆ ಮೊದಲಾದ ವಿವರಗಳನ್ನು ವಿಶ್ಲೇಷಿಸುವುದು.

೪. ಈ ಭಾಗದ ನೆಲೆಗಳ ಜೊತೆ ಕರ್ನಾಟಕದ ಇತರೆ ಭಾಗದ ಆದಿಮಾನವನ ನೆಲೆಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸುವುದು ಈ ಯೋಜನೆಯ ಮತ್ತೊಂದು ಉದ್ದೇಶವಾಗಿದೆ.

೫. ಪ್ರಕಟಿತ ಮತ್ತು ಅಪ್ರಕಟಿತ ಮಾಹಿತಿಗಳನ್ನು ಅನುಸರಿಸಿ ಈ ಭಾಗದ ಆದಿಮಾನವ ನೆಲೆಗಳು, ಅವುಗಳಲ್ಲಿನ ಮಹತ್ವ, ಅವುಗಳ ಆಧಾರದ ಮೇಲೆ ಈ ಸಂಸ್ಕೃತಿಯ ಹರಿವು ವಿಸ್ತಾರಗಳನ್ನು ದಾಖಲಿಸುವುದು.

೬. ದೊರೆತ ಅವಶೇಷಗಳನ್ನು ಆಧಾರವಾಗಿಟ್ಟುಕೊಂಡು ಅಂದಿನ ಜೀವನ ಕ್ರಮ ನಿರೂಪಿಸುವುದು.

೭. ಈ ನೆಲೆಗಳ ಕುರಿತು ಜನರಲ್ಲಿ ಮನೆ ಮಾಡಿಕೊಂಡಿರುವ ದಂತಕಥೆ, ಐತಿಹ್ಯಗಳನ್ನು ಪೂರಕವಾಗಿ ದಾಖಲಿಸುವುದು ಈ ಸಂಶೋಧನೆಯ ಮತ್ತೊಂದು ಉದ್ದೇಶವಾಗಿದೆ.

ಅಧ್ಯಯನ ವ್ಯಾಪ್ತಿ ಮತ್ತು ವಿಧಾನ

ವರದಿಗಳು, ಪ್ರಕಟಿತ ಕೃತಿಗಳ ನೆರವಿನಿಂದ ಈ ಪರಿಸರದಲ್ಲಿ ಕಾಣಬರುವ ಆದಿಮಾನವ ನೆಲೆಗಳು ಪ್ರಪತ್ರವೊಂದನ್ನು ಮೊದಲಿಗೆ ಮಾಡಿಕೊಳ್ಳಲಾಯಿತು. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳಿಂದ ಈ ನೆಲೆಗಳ ಬಗ್ಗೆ ಮಾಹಿತಿ ಪಡೆದು ಕ್ಷೇತ್ರ ಕಾರ್ಯ ಮಾಡಬೇಕಾದ ಸ್ಥಳಗಳನ್ನು ಖಚಿತಪಡಿಸಿಕೊಳ್ಳಲಾಯಿತು. ನೆಲೆಗಳ ಸ್ಥಳ, ಹೆಸರು, ತಾಲೂಕು, ಜಿಲ್ಲೆ ದೊರೆಯುವ ಅವಶೇಷಗಳು ಅವುಗಳ ವಿವರ, ನಕ್ಷೆ ಇತರೆ ವಿವರ ಇರುವ ಪ್ರಪತ್ರವನ್ನು ಸಿದ್ಧಪಡಿಸಿಕೊಳ್ಳಲಾಯಿತು. ನಂತರ ಕ್ಷೇತ್ರಕಾರ್ಯ ಕೈಗೊಂಡು, ಪ್ರಪತ್ರವನ್ನು ಭರ್ತಿ ಮಾಡಿಕೊಂಡು ಬೇಕಾದ ಛಾಯಾಚಿತ್ರಗಳನ್ನು ತೆಗೆದುಕೊಂಡು ಬರಲಾಯಿತು. ಮೊದಲು ಪ್ರಕಟಿತ ಗ್ರಂಥ ಮತ್ತು ವರದಿಗಳಿಂದ ಸಂಗ್ರಹಿಸಲಾದ ಟಿಪ್ಪಣಿ, ಇತ್ಯಾದಿ ಮಾಹಿತಿಗಳನ್ನೆಲ್ಲ ಕಲೆ ಹಾಕಿ, ತಾತ್ವಿಕವಾಗಿ ಚಿಂತಿಸಿ, ಈ ವರದಿಯನ್ನು ಸಿದ್ಧಪಡಿಸಲಾಯಿತು. ಪ್ರಕಟಿತ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಕೆಲವು ಸ್ಥಳಗಳಲ್ಲಿ ಇಂದು ಆದಿಮಾನವ ನೆಲೆಯ ಯಾವುದೇ ಕುರುಹುಗಳು ದೊರೆಯುವುದಿಲ್ಲ. ಆದ ಕಾರಣ ಅಂಥ ಸ್ಥಳಗಳಲ್ಲಿ ಈ ಕಾಲದ ನೆಲೆಗಳು ಇದ್ದಿರಬಹುದೆಂದು ಊಹಿಸಲಾಗಿದೆ. ಇಲ್ಲಿನ ನೆಲೆಗಳಲ್ಲಿ ದೊರೆತ ಅವಶೇಷಗಳ ಆಧಾರದ ಮೇಲೆ ಅವುಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಕ್ಷೇತ್ರ ಪರಿವೀಕ್ಷಣಾ ಕಾರ್ಯದಲ್ಲಿ ತೆಗೆದ ಛಾಯಾಚಿತ್ರಗಳು, ನಕ್ಷೆಗಳು ಈ ಅಧ್ಯಯನಕ್ಕೆ ಪೂರಕ ಮಾಹಿತಿ ನೀಡುತ್ತವೆ. ಹೀಗೆ ಪ್ರಕಟಿತ ಮಾಹಿತಿಯ ಆಧಾರದ ಮೇಲೆ ಈ ಸಂಸ್ಕೃತಿಯನ್ನು ಗುರುತಿಸಲು ಪ್ರಯತ್ನಿಸಿದಾಗ ಅವುಗಳ ಹರಿವು ವಿಸ್ತಾರವಾಗಿರುವುದು ಕಂಡುಬರುತ್ತದೆ.

ಪ್ರಸ್ತುತ ಈ ಅಧ್ಯಯನದ ಕ್ಷೇತ್ರಕಾರ್ಯದಲ್ಲಿ ಸಂಶೋಧಿಸಿದ ಮಾಹಿತಿ ಪೂರಕ ಸಾಮಗ್ರಿಯಾಗಿದೆ. ಇಲ್ಲಿಯವರೆಗೆ ಬಂದಿರಬಹುದಾದ ಪ್ರಕಟಿತ ಕೃತಿಗಳಿಂದ, ನಿಯತಕಾಲಿಕೆ, ಸಂಸ್ಮರಣ ಗ್ರಂಥಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲದೇ ಈ ಕ್ಷೇತ್ರದ ಮೇಲೆ ರಚಿತವಾಗಿರುವ ಕೆಲ ಅಪ್ರಕಟಿತ ಲೇಖನ ಮತ್ತು ಕೃತಿಗಳನ್ನು ಅಭ್ಯಾಸ ಮಾಡಿ ಇವುಗಳ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಅಧ್ಯಯನದ ಅಂತ್ಯದಲ್ಲಿ ಇದಕ್ಕೆ ಸಂಬಂಧಿಸಿದ ಛಾಯಾಚಿತ್ರ, ರೇಖಾಚಿತ್ರ, ನಕ್ಷೆಗಳನ್ನು ನೀಡಲಾಗಿದೆ. ಹಾಗೆಯೇ ಅನುಬಂಧಗಳಲ್ಲಿ ಕೆಲ ಐತಿಹ್ಯ ಮತ್ತು ದಂತಕಥೆಗಳ ಮಾಹಿತಿಯನ್ನು ನೀಡಿದೆ.

 

[1] ಡಾ. ಲೀಲಾ ಎಸ್‌.ಎಸ್‌. ೨೦೦೩, ಜೀವವಿಕಾಸ, ಪು.೨-೩.

[2] ಅದೇ ಪು.೪೦.

[3] ಅದೇ ಪು. ೬೨.