೪.೩. ಕಲಾತ್ಮಕ ನೆಲೆಗಳು

ಪ್ರಾಗೈತಿಹಾಸಿಕ ಕಾಲದ ಮಾನವ ಇಂದಿನ ಆಧುನಿಕ ಮಾನವನಷ್ಟು ಸುಧಾರಿಸಿದ ಕಲೆಯನ್ನು ಅಳವಡಿಸಿಕೊಳ್ಳದೇ ಇದ್ದರೂ ಸಹಾ ಅದರ ಪೂರ್ವಭಾವಿ ಹಂತವನ್ನು ಸೂಚಿಸುವ ಕಲಾಪರಂಪರೆಯನ್ನು ರೂಢಿಸಿಕೊಂಡಿದ್ದನು ಎಂದರೆ ತಪ್ಪಾಗುವುದಿಲ್ಲ. ತನಗೆ ಬೇಸರವಾದಾಗ, ತನಗೆ ಸಂತೋಷವಾದಾಗ, ತಾನು ಹಿಡಿದ ಕೆಲಸ ನೆರವೇರಿದಾಗ, ಬೇಟೆಯಂತಹ ದಿಟ್ಟ ಕಾರ್ಯಗಳಿಗೆ ಹೋಗುವಾಗ, ಇಲ್ಲವೇ ತಾನು ನಂಬಿದ ದೈವಗಳ ಸಂತೃಪ್ತಿಗಾಗಿ ಈ ರೀತಿಯ ಹಲವು ಉದ್ದೇಶಗಳಿಗಾಗಿ ಇಲ್ಲವೇ ತನ್ನ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಆತ ಕಲೆಯನ್ನು ಆಯ್ಕೆ ಮಾಡಕೊಂಡನು. ಮಾನವನು ಆಹಾರ ಸಂಗ್ರಹಣೆ ಹಂತದಲ್ಲಿ ಗವಿ-ಬಂಡೆಗಳ ಆಶ್ರಯದಲ್ಲಿ ವಾಸಮಾಡುವ ಕಾಲಕ್ಕಾಗಲೇ ಕಲಾಭಿರುಚಿ ಬೆಳೆಸಿಕೊಂಡನು. ತನ್ನ ನಿರಂತರ ಜೀವನದಲ್ಲಿ ನಡೆಯುವ ಘಟನೆಗಳನ್ನಾಧರಿಸಿ ಪ್ರಚಲಿತವಿದ್ದ ಪ್ರಾಣಿ, ಪಕ್ಷಿ ಬೇಟೆ, ನೃತ್ಯಭಂಗಿ ಮೊದಲಾದ ಅಂಶಗಳನ್ನು ಬಣ್ಣದಲ್ಲಿ ಇಲ್ಲವೇ ಗೀರುಚಿತ್ರಗಳ ಮೂಲಕ ಅಭಿವ್ಯಕ್ತಪಡಿಸುತ್ತ ಬಂದನು.

ಹಂಪಿ ಪರಿಸರದ ಆದಿಮಾನವನ ಕಲಾತ್ಮಕ ನೆಲೆಗಳ ಶೋಧನೆ ಆಕಸ್ಮಿಕವಾಗಿ ನಡೆಯಿತು. ೧೮೮೦ರ ಸುಮಾರಿಗೆ ಹೂಬರ್ಟ್‌ನೆಕ್ಸ್ ಕಪ್ಪುಗಲ್ಲ್ ನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಬಂಡೆ ಚಿತ್ರಗಳನ್ನು ಸೋಧಿಸಿದನು. ಆನಂತರ ಈ ಪರಿಸರದಲ್ಲಿ ರಾಬಟ್ ಬ್ರೂಸ್ ಪ್ರೊಟ್ ನ್ಯೂ ಬೋಲ್ಡ್ ಮನ್ ಡಾ. ಎಂ.ಎಸ್. ಕೃಷ್ಣಮೂರ್ತಿ, ಅಸುಂದರ, ಡಬ್ಲೂ, ವಿ.ಎಸ್. ನರಸಿಂಹಮ ಮೂರ್ತಿಹಾಗು ಕನ್ನಡ ವಿಶ್ವವಿದ್ಯಾಲಯಗಳ ವಿದ್ವಾಂಸರು ಹಾಗು ತರುಣ ಸಂಶೋಧಕರ ಮತ್ತು ವಿದೇಶಿ ವಿದ್ವಾಂಸರ ಶೋಧನೆಯ ಫಲವಾಗಿ ಇಂದು ಹಲವಾರು ಕಲಾತ್ಮಕ ನೆಲೆಗಳು ಬೆಳಕಿಗೆ ಬಂದಿವೆ. ಅವುಗಳನಲ್ಲಿ ಆನೆಗುಂದಿ, ಸಂಗಾಪುರ, ಕಡೆಬಾಗಿಲು, ಮಲ್ಲಾಪುರ, ಹಿರೇಬೆನಕಲ್, ಬಂಡಿಹರ್ಲಾಪುರ, ಕುರುಗೋಡು, ತೆಕ್ಕಲಕೋಟೆ, ಕಪ್ಪಗಲ್ಲು, ಭೈರನಾಯಕನಹಳ್ಳಿ, ರಾಜಾಪುರ, ಬೆಳಗಲ್ಲು, ಹಳಕುಮಡಿ, ಅಯ್ಯಪ್ಪನಹಳ್ಳಿ, ಅಂಜನಹಳ್ಳಿ, ಸಂಗನಕಲ್ಲು, ನಾಗೇನಹಳ್ಳಿ, ಕಮಲಾಪುರ, ಜಂತಕಲ್ಲು, ತಿಮ್ಮಲಾಪುರ, ನಂದಿಬಂಡೆ, ಇಂದರ್ಗಿ, ಮಲ್ಲಾಪುರ, ಹರಳಾಪುರ, ಹೊಸಕೆರೆ, ಬಿಳೆಬಾವಿ, ಬುಕ್ಕಸಾಗರ, ಹಂಪಿ, ವೆಂಕಟಾಪುರ ಮೊದಲಾದವು ಪ್ರಮುಖವಾಗಿವೆ. ಇಲ್ಲಿ ಸೂಕ್ಷ್ಮ ಶಿಲಾಯುಗದಿಂದ ಆದಿ ಇತಿಹಾಸ ಕಾಲದವರೆಗಿನ ಕಲಾತ್ಮಕ ನೆಲೆಗಳು ಕಂಡುಬರುತ್ತವೆ.

ಹಂಪಿ ಪರಿಸರದಲ್ಲಿ ಅಂದು ಜೀವಿಸಿದ್ದ ಆದಿಮಾನವ ಕಲೆಯನ್ನು ತನ್ನ ಜೀವನದ ಒಂದು ಭಾಗ ಎಂದು ಪರಿಗಣಿಸಿದ ಪರಿಣಾಮವಾಗಿ ಅಂದು ಬಗೆಬಗೆಯ ಚಿತ್ರಗಳಿರುವ ಕಲಾತ್ಮಕ ನೆಲೆಗಳು ಆಸ್ತಿತ್ವಕ್ಕೆ ಬಂದವು. ಆದಿಮಾನವನ ಈ ರೀತಿಯ ಚಿತ್ರರಚನೆಯ ಉದ್ದೇಶಗಳೇನು? ಈ ರಚನೆಗಳಿಗಾಗಿ ಯಾವ ರೀತಿಯ ನೆಲೆಗಳನ್ನು ಅಂದಿನ ಮಾನವ ಆಯ್ಕೆ ಮಾಡಿಕೊಂಡ ಹಾಗೂ ಅವುಗಳನ್ನು ರಚಿಸಲು ಬೆಳಸಿಕೊಂಡ ಸಾಮಗ್ರಿಗಳೇನು? ಅಂದಿನ ವಿವಿಧ ನೆಲೆಗಳಲ್ಲಿನ ಚಿತ್ರಗಳ ವೈಶಿಷ್ಠತೆ ಮತ್ತು ಮಹತ್ವಗಳ ಕುರಿತ ಈ ಮುಂದೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

೪.೩.೧. ಕಲಾತ್ಮಕ ಚಿತ್ರರಚನೆಯ ಕಾರಣಗಳು

ಪ್ರಾಗೈತಿಹಾಸ ಕಾಲದ ಮಾನವನ ಚಿತ್ರರಚನೆಗೆ ಹಲವಾರು ಕಾರಣಗಳನ್ನು ನೀಡ ಬಹುದು. ಈ ಕುರಿತಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಇವು ಪ್ರಾಚೀನ ಕಾಲದ ಸಾಮಾನ್ಯ ಜನತೆಯ ಭಾವಾನಾತ್ಮಕ ಅಭಿವ್ಯಕ್ತಿಯ ಫಲವಾಗಿ ಇಲ್ಲವೇ ಸೌಂದರ್ಯ ಪ್ರಜ್ಞೆಯುಳ್ಳ ಕೆಲವು ಜನರು ನಿಸರ್ಗದ ಚೆಲುವಿನಿಂದ ಪ್ರೇರಣೆ ಪಡೆದು ಅಲಂಕರಣೆಯ ಉದ್ದೇಶಕ್ಕಾಗಿ ರಚಿಸಿದವೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ಇನ್ನೂ ಕೆಲವರು ಈ ಚಿತ್ರಗಳು ಯಶಸ್ವಿ ಬೇಟೆಯ ಸ್ಮರಣಾರ್ಥ ಉದ್ದೇಶಕ್ಕಾಗಿ ರಚಿಸಿದವೆಂದೂ ಮತ್ತು ನಿರಂತರ ಆಹಾರ ದೊರಕಿಸಿಕೊಳ್ಳುವ ಉದ್ದೇಶದ ಮಾಂತ್ರಿಕ ಸಂಬಂಧಿ ಚಿತ್ರಗಳೆಂದು ಹೇಳಿದ್ದಾರೆ. ಹಂಪಿ ಪರಿಸರಕ್ಕೆ ಸಂಬಂಧಿಸಿದಂತೆ ಇಲ್ಲಿನ ಚಿತ್ರ ರಚನೆಯ ಕಾರಣ, ಉದ್ದೇಶವನ್ನು ಈ ರೀತಿ ಗುರುತಿಸಬಹುದು. ೧. ಭಾವಾನಾತ್ಮಕ ಪ್ರೇರಣೆ ೨. ಅಲಂಕರಣೆ ಮತ್ತು ೩. ಮಾಂತ್ರಿಕ ಕಟ್ಟಳೆ.

೧. ಭಾವನಾತ್ಮಕ ಪ್ರೇರಣೆ

ಕೆಲವು ಚಿತ್ರಗಳು ಭಾವನಾತ್ಮಕ ಪ್ರೇರಣೆ ಫಲವಾಗಿ ರಚಿತವಾಗಿವೆ. ಚಿತ್ರದ ನೆಲೆ ವಿಷಯ ಹಾಗೂ ಸ್ವರೂಪವನ್ನು ಗಮನಿಸಿ ಇಂಥ ಚಿತ್ರಗಳನ್ನು ಗುರುತಿಸಬಹುದು. ಮನುಷ್ಯ ಭಾವನಾಜೀವಿ. ಭಾವನೆಗಳ ತೀವ್ರ ಅಭಿವ್ಯಕ್ತಿಯ ಪ್ರೇರಣೆಯಾದಾಗ ಅದನ್ನು ವಿವಿಧ ಮಾಧ್ಯಮದ ಮೂಲಕ ಅಭಿವ್ಯಕ್ತಿಸುತ್ತಾನೆ. ಇದು ಕ್ಷಣಿಕವಾದ ಮತ್ತು ತಕ್ಷಣವಾದ ಪ್ರೇರಣೆ. ಹಾಗಾಗಿ ಅದನ್ನು ಸ್ಥಳದಲ್ಲೇ ಲಭ್ಯವಿದ್ದ ವಸ್ತುಗಳಿಂದಲೇ ಯಾವುದಾದರೂ ಆಕೃತಿಯನ್ನು, ಚಿತ್ರವನ್ನು ಬಿಡಿಸಿ ಆ ಮೂಲಕ ತನ್ನ ಭಾವನೆಯನ್ನು ಪ್ರಕಟಪಡಿಸುತ್ತಾನೆ. ಅದೇ ರೀತಿಯಲ್ಲಿ ಪ್ರಾಗೈತಿಹಾಸ ಕಾಲದ ಚಿತ್ರ ರಚನೆಗೆ ಇಂಥ ತಕ್ಷಣದ ಭಾವನಾತ್ಮಕ ಅಭಿವ್ಯಕ್ತಿಯ ಪ್ರೇರಣೆಯನ್ನು ಗುರುತಿಸಬಹುದು. ಇಂಥ ಪ್ರೇರಣೆ ಸಾರ್ವತ್ರಿಕವಾದುದು. ಯಾವ ಸಾಮಾನ್ಯ ವ್ಯಕ್ತಿಗಾದರೂ ಮೂಡಬಹುದು. ಆ ವ್ಯಕ್ತಿ ಕಲಾಪ್ರಜ್ಞೆಯುಳ್ಳವನಾಗಿದ್ದರೆ ಅಭಿವ್ಯಕ್ತಿಗೊಂಡ ಯಾವುದೇ ಮಾಧ್ಯಮ ಅಥವಾ ಚಿತ್ರ ರಚನೆ ಮತ್ತು ಭಾವ ಪ್ರಕಟಣೆಯ ದೃಷ್ಟಿಯಿಂದ ಉತ್ತಮವಾಗಿರುತ್ತದೆ.  ಸಾಮಾನ್ಯ ರಚನೆಗಳಾಗಿದ್ದರೇ ಅವು ರಚನೆಯಲ್ಲಿ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಆದರೆ ಭಾವ ಪ್ರಕಟನೆಯಲ್ಲಿ ಪ್ರಬಲವಾಗಿರುತ್ತದೆ. ಹಂಪಿ ಪರಿಸರದ ಮಲ್ಲಾಪುರ, ಹಂಪಿ, ಸಂಗಾಪುರ ತಾಂಡ ಕುರುಗೋಡು ಮುಂತಾದೆಡೆಗಳಲ್ಲಿನ ಕೆಲವು ಚಿತ್ರಗಳನ್ನು ಮಾಂತ್ರಿಕ ಉದ್ದೇಶದಿಂದ ರಚಿಸಿದವೆಂದು ಹೇಳಲಾಗದು ಅಶ್ವ ಸವಾರಿ, ಕತ್ತೆಕಿರುಬ, ಬಿಡಿಯಾದ ಗೂಳಿ, ಹುಲಿ ವಿವಿಧ ರೀತಿಯ ಪ್ರಾಣಿಗಳ ಸಮೂಹ, ಆನೆ ಸವಾರಿ, ಆನೆ, ಅಲಂಕೃತ ಎತ್ತುಗಳು, ಎದುರು ಬದುರಾಗಿರುವ ಜೋಡಿ ಎತ್ತುಗಳು, ಅವುಗಳ ಕೊಂಬಿನ ತುದಿಯಲ್ಲಿ ಹೂವಿನ ಅಲಂಕರಣೆ, ಹೂ ಗಿಡಗಳ ಚಿತ್ರಗಳು ಮತ್ತು ವಿಶೇಷವಾಗಿ ಬಯಲು ಬಂಡೆಯಲ್ಲಿ ಕೊರೆದ, ಕೆತ್ತಿದ ಎತ್ತಿನ, ಎತ್ತಿನ ಸವಾರನ, ಅಶ್ವಸವಾರನ ಮತ್ತು ಪಶುಗಳ ಚಿತ್ರಗಳು ಖಂಡಿತವಾಗಿ ತಕ್ಷಣದ ಅಭಿವ್ಯಕ್ತಿಯ ಉದ್ದೇಶದಿಂದ ರಚಿಸಲಾದವುಗಳೆಂದು ಹೇಳಬಹುದು.

೨. ಅಲಂಕರಣೆ

ಕೆಲವು ಚಿತ್ರಗಳು ಅಲಂಕರಣೆಯ ಉದ್ದೇಶದಿಂದ ರಚಿತವಾದವೆಂದು ಹೇಳಬಹುದು. ಮನುಷ್ಯ ಮೂಲತಃ ನಿಸರ್ಗಜೀವಿ. ಅವನಲ್ಲಿ ಸೌಂದರ್ಯಪ್ರಜ್ಞೆ ಸುಪ್ತವಾಗಿರುತ್ತದೆ. ಆದರೆ ಎಲ್ಲರಲ್ಲೂ ಜಾಗೃತವಾಗಿರುವುದಿಲ್ಲ. ಆ ರೀತಿಯ ಕಲಾವಂತಿಕೆಯ ಕೆಲವು ಪ್ರಾಗಿತಿಹಾಸ ಕಾಲದ ಜನರು ತಮ್ಮ ವಾಸದ ನೆಲೆಗಳನ್ನು ಅಲಂಕರಿಸುವ ಉದ್ದೇಶದಿಂದ ಚಿತ್ರಗಳನ್ನು ಬಿಡಿಸಿದ್ದಾರೆನ್ನಬಹುದು. ಹಳೆಯ ಶಿಲಾಯುಗದ ಒರಟು ಆಯುಧಗಳನ್ನು ನವಶಿಲಾಯುಗದಲ್ಲಿ ಸುಂದರವಾಗಿ ಮಾಡಿಕೊಂಡಿರುವುದು ನಿತ್ಯ ಬಳಕೆಯ ಮಡಕೆಗಳನ್ನು ಅಲಂಕರಿಸಿಕೊಂಡಿರುವುದು ಅವನ ಕಲಾಪ್ರಜ್ಞೆಗೆ ಸಾಕ್ಷಿ.

ಅದೇ ರೀತಿ ಅಲಂಕರಣೆಯ ಉದ್ದೇಶದಿಂದ ಕೆಲವು ಚಿತ್ರಗಳನ್ನು ಬಿಡಿಸಿದ್ದಾರೆನ್ನ ಬಹುದು. ಸಾಮಾನ್ಯವಾಗಿ ಸ್ವಬಳಕೆಯ ಆಯುಧ, ಮಡಕೆ ಪಾತ್ರೆಗಳನ್ನು ಅಲಂಕರಿಸಿ ಕೊಂಡಂತೆ ಪ್ರಾಗೈತಿಹಾಸ ಕಾಲದ ಮಾನವ ಸ್ವವಾಸದ ಗವಿ ಕಲ್ಲಾಸರೆಗಳಲ್ಲೂ ಚಿತ್ರಗಳನ್ನು ಬರೆದಿದ್ದಾರೆ. ಅಲ್ಲಿಯ ಚಿತ್ರಗಳು ಸಾಮಾನ್ಯವಾಗಿ ಅವನ ಜನ ಪಶು ಪ್ರಾಣಿಗಳಿಗೆ ಸಂಬಂಧಿಸಿರುತ್ತವೆ. ತನ್ನ ಎತ್ತು ಮುಂತಾದ ಸಾಕುಪ್ರಾಣಿಗಳನ್ನು ಕೂಡ ಅವನು ಚಿತ್ರಗಳ ಮೂಲಕ ಅಲಂಕರಿಸಿ ಸಂತಸಪಟ್ಟಿದ್ದಾನೆ. ಇಂಥ ಅನೇಕ ಚಿತ್ರಗಳನ್ನು ಕಾಣಬಹುದು.

ಹಂಪಿ ಪ್ರದೇಶದ ಸಂಗಾಪುರದ ೧ನೇ ಗವಿಯ ಮುಖಭಾಗ ಮತ್ತು ಒಳಭಾಗದಲ್ಲಿ ವಿವಿಧ ರೀತಿಯ ಚಿತ್ರಗಳಿವೆ. ಇಲ್ಲೆಲ್ಲ ಆದಿಮಾನವ ವಾಸಿಸಿದ್ದ. ಇವೆಲ್ಲ ಅಲಂಕರಣೆಯ ಉದ್ದೇಶವೆಂದು ಸ್ಪಷ್ಟವಾಗಿ ಹೇಳಬಹುದು. ಈಗಲೂ ಹಳ್ಳಿಗಳಲ್ಲಿ ಕೆಲವು ಜನ ತಮ್ಮ ಮನೆಗಳುನ್ನು ಸಾರಿಸಿದಾಗ ಮನೆಯ ಗೋಡೆಗಳ ಬಾಗಿಲುಗಳ ಮೇಲೆ ಅಲಂಕಾರಕ್ಕಾಗಿ ಅಲ್ಲಲ್ಲಿ ಕೆಮ್ಮಣ್ಣು ಇಲ್ಲವೇ ಸುಣ್ಣದಿಂದ ಚಿತ್ರಗಳನ್ನು ಬಿಡಿಸುತ್ತಾರೆ. ಆನೆಗುಂದಿಯ ೧, ೨, ೩ನೇ ಕಲ್ಲಾಸರೆ ಗವಿಗಳು ಪ್ರಾಚೀನ ಮಾನವನ ವಾಸಸ್ಥಾನಗಳಾಗಿದ್ದವು. ಅಲ್ಲಿಯ ಚಿತ್ರಗಳಲ್ಲಿ ಒಂದು ಎತ್ತಿನ ಚಿತ್ರವಿದೆ. ಅದರ ಮೈಮೇಲೆ ವಿಶಿಷ್ಟವಾದ ರೇಖೆಗಳಿಂದ ಅಲಂಕರಿಸಲಾಗಿದೆ. ಸ್ಪಷ್ಟವಾಗಿ ಅಲಂಕರಣೆಯ ಉದ್ದೇಶವು ಇಲ್ಲಿ ಪ್ರಧಾನವಾಗಿರುವದನ್ನು ಗುರುತಿಸಬಹುದು.

ಸಂಗಾಪುರದ ೬ನೇ ಕಲ್ಲಾಸರೆಯಲ್ಲಿ ಎದುರುಬದುರಾಗಿ ನಿಂತ ಜೋಡಿ ಎತ್ತಿನ ಚಿತ್ರಗಳಿವೆ. ಕೆಲವು ಎತ್ತಿನ ಕೋಡಿನ ತುದಿಯಲ್ಲಿ ಹೂಗಳನ್ನಿಟ್ಟಿರುವಂತಹ ಅಲಂಕರಣೆಗಳು ಮತ್ತು ಹಿರೇಬೆನಕಲ್ಲಿನ ೧೬ನೇ ಕಲ್ಲಾಸರೆಯ ೫ ಉಡಗಳ ಚಿತ್ರಗಳು ವಿಶೇಷ ರೀತಿಯ ಅಲಂಕರಣೆಗಳನ್ನು ಹೊಂದಿದ್ದು ಗಮನ ಸೇಳೆಯುತ್ತವೆ. ಅದೇ ರೀತಿ ಕುರುಗೋಡಿನ ೭, ೯, ೧೨ ನೇ ಕಲ್ಲಾ ಸರೆಯಲ್ಲಿನ ಚಿತ್ರಗಳು ಅಲಂಕಾರ ದೃಷ್ಟಿಯಿಂದ ಗಮನ ಸೆಳೆಯುತ್ತವೆ. ಇಲ್ಲಿ ಸೌಂದರ್ಯಪ್ರಜ್ಞೆ ಕ್ರಿಯಾಶೀಲರಾಗಿರುವದನ್ನು ಗುರುತಿಸಬಹುದು. ಚಿತ್ರಗಳನ್ನು ಬಿಡಿಸುವುದಷ್ಟೇ ಉದ್ದೇಶವಾಗಿದ್ದಲ್ಲಿ ಈ ರೀತಿಯ ಅಲಂಕರಣೆ ಅಗತ್ಯವಿರಲಿಲ್ಲ. ಹಾಗಾಗಿ ಚಿತ್ರ ರಚನೆಯ ಅಲಂಕರಣೆ (ಸೌಂದರ್ಯ ಪ್ರಜ್ಞೆ) ಉದ್ದೇಶವನ್ನು ಗುರುತಿಸಬಹುದು.

೩. ಮಾಂತ್ರಿಕ ಕಟ್ಟಳೆ

ಪ್ರಾಗೈತಿಹಾಸ ಕಾಲದ ಹೆಚ್ಚಿನ ಚಿತ್ರರಚನೆಗೆ ಮತ್ತೊಂದು ಮಹತ್ವದ ಉದ್ದೇಶವೆಂದರೆ ಒಂದು ರೀತಿಯ ಮಾಂತ್ರಿಕ ಕಟ್ಟಳೆ ಅಥವಾ ಆಚರಣೆ ಕಾರಣವೆನ್ನಬಹದು. ಬೇಟೆ, ಪಶುಪಾಲನೆ, ಸಮೂಹ ಕುಣಿತ. ನಗ್ನ ಕುಣಿತ ಮಂಡಲಿ ಇವೆಲ್ಲ ಮಾಂತ್ರಿಕ ಕಟ್ಟಳೆ ಉದ್ದೇಶಿತ ರಚನೆಗಳೆಂದು ಹೇಳಬಹುದು. ಸೂಕ್ಷ್ಮವಾಗಿ ಗಮನಿಸಿದಲ್ಲಿ ಇವೆಲ್ಲ ಪ್ರಾಚೀನ ಮಾನವನ ಆಹಾರ ಸಂಬಂಧಿ ವಿಷಯದ ಸುತ್ತ ಕೇಂದ್ರಿಕೃತವಾಗಿರುವುದನ್ನು ಗುರುತಿಸಬಹುದು. ಅಂದರೆ ಮನುಷ್ಯ ತನಗೆ ಆಹಾರವಾಗುವ ಪ್ರಾಣಿಗಳ ಅಭಿವೃದ್ಧಿ, ಇವುಗಳ ಯಶಸ್ವಿ ಬೇಟೆಯ ಉದ್ದೇಶಿತ ಮಾಂತ್ರಿ ಕಟ್ಟಳೆಗಳನ್ನು ಮಾಡಿ ಅವುಗಳ ವಿಧಿಯನ್ವಯ ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿದ್ದಾನೆನ್ನಬಹುದು. ಒಬ್ಬ ಮನುಷ್ಯ ಅಥವಾ ಪ್ರಾಣಿಯ ಚಿತ್ರಗಳನ್ನು ತೆಗೆದು ಮಂತ್ರಿಸಿದರೆ ಅವನು ಅಥವಾ ಅದು ತನ್ನ ವಶವಾಗುವುದೆಂದು ಅಥವಾ ಆವನು ಶತ್ರುವಾಗಿದ್ದರೆ ನಾಶವಾಗುವನೆಂಬ ನಂಬಿಕೆ ಬಹು ಪುರಾಣಕಾಲದಿಂದ ಉಳಿದು ಬಂದಿರುವಂತಹದು. ತನ್ನ ಶತ್ರುವಿನ ನಾಶಕ್ಕಾಗಿ ಅವನ ಗೊಂಬೆಯನ್ನು ಮಾಡಿ ಅದಕ್ಕೆ ಮಂತ್ರಪೂರಿತ ಸೂಜಿಗಳನ್ನು ಚುಚ್ಚುವುದು ಮೊದಲಾದ ಮಾಟ ಮಂತ್ರಗಳ ಆಚರಣೆ ಇಂದು ವ್ಯವಹಾರದಲ್ಲಿದೆ. ಇದರಿಂದ ಆ ಶತ್ರುವು ಕಷ್ಟ ನಷ್ಟ ಸಂಕಟವನ್ನು ಅನುಭವಿಸುವನು ಎಂಬ ಬಲವಾದ ನಂಬಿಕೆಯಿದೆ. ಹಾಗಾಗಿ ಬಹುಮಟ್ಟಿನ ಚಿತ್ರಗಳು ಈ ಉದ್ದೇಶಕ್ಕೆ ಸಂಬಂಧಿಸಿದವು ಎಂದು ಹೇಳಬಹುದು.

ಮಲ್ಲಾಪುರದ ೧, ೨ ಮತ್ತು ೪ ಚಿಕ್ಕಬೆನಕಲ್ಲಿನ ೩, ಹಿರೇಬೆನಕಲ್ಲಿನ ೨, ೩ ಮತ್ತು ಹಂಪಿಯ ೫ನೇ ಕಲ್ಲಾಸರೆಯಲ್ಲಿ ಮೈಮೇಲೆ ವಿಶಿಷ್ಟ ರೇಖೆಗಳನ್ನು ಹಾಕಿಕೊಂಡ ನಗ್ನ ಗರ್ಭಿಣಿ ಸ್ತ್ರೀ, ಪುರುಷರ ನೃತ್ಯಭಂಗಿಯ ಚಿತ್ರಗಳಿವೆ. ಅವುಗಳ ಮೇಲು ರೇಖೆಗಳಿವೆ. ಇವೆಲ್ಲ ಇಷ್ಟಾರ್ಥ ಸಿದ್ಧಿಗಾಗಿ  ಕೆಲ ಜನ ಮಾಂತ್ರಿಕರೊಡಗೂಡಿ ನಡೆಸಿದ ಮಾಂತ್ರಿಕ ಆಚರಣೆಗೆ ಸಂಬಂಧಿಸಿದ ಚಿತ್ರಗಳೆಂದು ಹೇಳಬಹುದು. ಪ್ರಾಣಿಗಳ ಚಿತ್ರಗಳು ಆಚರಣೆಯಲ್ಲಿ ಬಳಿಕೂಟ್ಟ ಪ್ರಾಣಿಗಳಿವು ಎಂದು ತರ್ಕಿಸಬಹುದು. ಈಗಲೂ ಕೆಲವು ಮಂತ್ರವಾದಿಗಳು ನಗ್ನರಾಗಿ ಪ್ರಾಣಿಬಲಿಗಳೊಂದಿಗೆ ಮಾಂತ್ರಿಕ ಕಟ್ಟಳೆಗಳನ್ನು ಮಾಡುವ ಆಚರಣೆ ರೂಢಿಯಲ್ಲಿದೆ. ಇಂಥ ಆಚರಣೆಗಳಲ್ಲಿ ಗರ್ಭಿಣಿ ಸ್ತ್ರೀಗೆ ವಿಶೇಷ ಮಹತ್ವ ಉಂಟು. ಕೆಲವು ವಿಶೇಷ ಇಷ್ಟಾರ್ಥ ಸಿದ್ಧಿಗೆ ಅಂಥವನ್ನು ಬಲಿ ಕೊಟ್ಟ ಉದಾಹರಣೆಗಳು ಈಗಲೂ ದೊರೆಯುತ್ತವೆ.

ಇವಲ್ಲದೆ ಸಂಭೋಗ ಕ್ರಿಯೆ, ಬಹುಶಃ ಬೇಟೆಗೆ ಹೋಗುವ ಮುನ್ನ ಇಲ್ಲವೇ ಬೇಟೆ ನಂತರದ ಸಾಮೂಹಿಕ ನೃತ್ಯ ಮೊದಲಾದ ಚಿತ್ರಗಳನ್ನು ಬಿಡಿಸುತ್ತಿದ್ದರು. ತನಗೆ ಆಹಾರವನ್ನು ಒದಗಿಸುವ ಜಿಂಕೆ, ಗೂಳಿ, ಕೋಣ ಹಾಗೂ ವಂಶಾಭಿವೃದ್ದಿಗೋಸ್ಕರ ಇಂತಹ ಪ್ರಾಣಿಗಳ ವೈರಿಯಾದ ಹುಲಿ, ಚಿರತೆ ಮೊದಲಾದ ಪ್ರಾಣಿಗಳ ನಾಶಕ್ಕೋಸ್ಕರ ಮತ್ತು ಬೇಟೆಯಲ್ಲಿ ಈ ಪ್ರಾಣಿಗಳು ವಶವಾಗುವುದಕ್ಕೋಸ್ಕರ ಇಂತಹ ಚಿತ್ರಗಳನ್ನು ಬರೆದು ಮಂತ್ರೋದ್ದೇಶಿತವಾಗಿದ್ದರು. ಇವು ಶೈಲಿ ಮತ್ತು ನಿರೂಪಣೆಯಲ್ಲಿ ಶಕ್ತಿಶಾಲಿ ಯಾಗಿವೆ. ಹಂಪಿ ಪ್ರದೇಶದ ಪ್ರಾಗೈತಿಹಾಸ ಕಾಲದ ಚಿತ್ರಗಳು ಮುಖ್ಯವಾಗಿ ಮನುಷ್ಯ, ಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿವೆ. ಒಂದೆರಡು ಬೇರೆ ವಿಷಯದ ಚಿತ್ರಗಳು ಇವೆ.

೪.೩.೨. ಚಿತ್ರರಚನೆಯ ತಾಣಗಳು

ಆದಿಮಾನವ ಕೆಲ ವಿಶೇಷ ತಾಣಗಳಲ್ಲಿ ಮಾತ್ರ ಚಿತ್ರ ರಚಿಸಿದ್ದಾನೆ. ಅದಕ್ಕಾಗಿ ಅವನು ಸಾಮಾನ್ಯವಾಗಿ ತಾನು ವಾಸಿಸುತ್ತಿದ್ದ ತಾಣಗಳನ್ನು ಇಲ್ಲವೆ ಸುರಕ್ಷಿತ ತಾಣಗಳನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಗವಿ, ಕಲ್ಲಾಸರೆಗಳು ನೈಸರ್ಗಿಕ ರಚನೆಗಳಾಗಿರುತ್ತವೆ. ಮಳೆಗಾಳಿಯಿಂದ ರಕ್ಷಿಸಿಕೊಳ್ಳಲು ಉತ್ತಮ ಆಶ್ರಯ ತಾಣಗಳಾಗಿದ್ದು, ಶಿಲಾಯುಗದ ಜನರು ಗವಿಗಳನ್ನು ಖಾಯಂ ವಾಸಕ್ಕಾಗಿ, ಕಲ್ಲಾಸರೆಗಳನ್ನು ತಾತ್ಕಾಲಿಕವಾಗಿ ಬಳಸಿ ಕೊಳ್ಳುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಅವರು ಇಂಥ ಗವಿ/ಕಲ್ಲಾಸರೆಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ಚಿತ್ರಕ್ಕಾಗಿ ಅವರು ಎಲ್ಲ ರೀತಿಯ ಗವಿ, ಕಲ್ಲಾಸರೆಗಳನ್ನು ಬಳಸಿಕೊಂಡಿಲ್ಲ. ಯಾವ ಗವಿ, ಕಲ್ಲಾಸರೆಗಳ ಒಳಗೋಡೆಗಳೋ ಚಾವಣಿಯೋ ಒರಟಿಲ್ಲದೇ ತಕ್ಕಮಟ್ಟಿಗೆ ನುಣುಪಾಗಿದ್ದು, ಮಳೆ ನೀರಿನಿಂದ ತೋಯಲ್ಪಡುವುದಿಲ್ಲವೋ ಅಂತಹ ಗವಿ, ಕಲ್ಲಾಸರೆಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ತೀರ ಆಳವಲ್ಲದ ಕಲ್ಲಾಸರೆಗಳು ಇದಕ್ಕೆ ಅಪವಾದ ಎನ್ನಬಹುದು. ಎಂಥ ಕಲ್ಲಾಸರೆಯ ಚಿತ್ರಗಳು ಮಳೆ, ಗಾಳಿ, ಬಿಸಿಲಿಗೆ ಸಿಲುಕಿ ತೀರಾ ಮಾಸಿ ಹೋಗಿವೆ. ಪ್ರಾಗೈತಿಹಾಸ ಕಾಲದ ಜನ ತಾವು ವಾಸಿಸಿದ ಎಲ್ಲ ಗವಿಗಳಲ್ಲಿ ಚಿತ್ರಗಳನ್ನು ಬಿಡಿಸಿಲ್ಲ. ಚಿತ್ರಕ್ಕೆ ಸೂಕ್ತವಾದ ಭಾಗವಿದ್ದಲ್ಲಿ ಮಾತ್ರ ಬಿಡಿಸಿದ್ದಾರೆ. ಸಂಗಾಪುರದ ಕರಡಿಬೆಟ್ಟದಲ್ಲಿ ಅನೇಕ ಚಿಕ್ಕ ದೊಡ್ಡ ಗವಿಗಳಿವೆ. ಅವುಗಳ ಒಂದೆರಡು ಗವಿಗಳಲ್ಲಿ ಮಾತ್ರ ಚಿತ್ರಗಳಲ್ಲಿ. ಚಿತ್ರಿತ ಭಾಗವು ಬಹಿರಂಗವಾಗಿ ಕಾಣುವಂತಿದ್ದರೂ ಮಳೆ, ಗಾಳಿ, ಬಿಸಿಲಿನಿಂದ ಸಂಪೂರ್ಣ ರಕ್ಷಿತಗೊಂಡು ಉತ್ತಮ ಸ್ಥಿತಿಯಲ್ಲಿವೆ.

ದೊಡ್ಡ ದೊಡ್ಡ ಗವಿಗಳ ನುಣುಪಾದ ಚಾವಣಿಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ಉದಾಹರಣೆಗೆ ಮಲ್ಲಾಪುರದ ಮೂರನೇ ಗವಿ (ಖಾನಾಸಾಬನ ಗವಿ), ಹಿರೇಬೆನಕಲ್ಲಿನ ಎರಡನೇ ಗವಿ (ರಕ್ಕಸ ಗವಿ) ಮತ್ತು ಅಗೋಲಿಯಾ ಮೂರನೆಯ ಗವಿಗಳ ವಿಶಾಲವಾದ ಚಾವಣಿಗಳಲ್ಲಿ ದೊಡ್ಡ ಮತ್ತು ಚಿಕ್ಕ ಪ್ರಮಾಣದ ಚಿತ್ರಗಳಿವೆ.ಈ ಚಾವಣಿಗಳು ನೆಲದಿಂದ ಸುಮಾರು ೬ ರಿಂದ ೮ ಮೀ. ಎತ್ತರದಲ್ಲಿವೆ. ಕೆಲವು ಗವಿಗಳ ಮುಖಭಾಗ ಒಳಗೋಡೆ ಭಾಗ, ಚಾವಣಿಗಳಲ್ಲಿ ಚಿತ್ರಗಳಿರುತ್ತವೆ. ಚಿಕ್ಕರಾಂಪುರದ ೧ನೇ ಗವಿಯು ಇದಕ್ಕೆ ಉತ್ತಮ ಉದಾಹರಣೆ.

ಕೆಲವು ಕಲ್ಲಾಸರೆಗಳು ಚಿತ್ರಫಲಕದಂತಿದ್ದು, ಬಹಿರಂಗವಾಗಿ ಕಾಣುವಂತಿವೆ. ಕೆಲವು ಚಿತ್ರಗಳನ್ನು ಗುರುತಿಸುವುದೇ ಕಠಿಣ. ಬಂಡೆ ಮೇಲಿನ ಆಸರೆ ಕಲ್ಲಿನ ಚಾವಣಿಯಲ್ಲೋ, ಬೃಹತ್ ಬಂಡೆಯ ಸವೆದ, ಬಡೆದ ಆಸರೆಯಲ್ಲೋ, ಬೆಟ್ಟದ ಬುಡದ ಶಿಲಾ ಪೊಟರೆಗಳಲ್ಲೋ ಇಂಥ ಚಿತ್ರಗಳನ್ನು ಬಿಡಿಸಲಾಗಿರುತ್ತದೆ. ಕೆಲವು ಕಲ್ಲಾಸರೆಗಳು ಕೂಡ ಕೈಗೆ  ನಿಲುಕದಷ್ಟು ಎತ್ತರದಲ್ಲಿದ್ದು, ಅದರಲ್ಲಿ ಚಿತ್ರಗಳನ್ನು ಬಿಡಿಸಿರುವುದು ವಿಶೇಷ. ಕೊರೆದ ಮತ್ತು ಕುಟ್ಟು ಚಿತ್ರಗಳಿಗಾಗಿ ಸಾಮಾನ್ಯವಾಗಿ ಕಪ್ಪು ಶಿಲಯ ಬಂಡೆಗಳನ್ನು ಬಳಸಿಕೊಳ್ಳಲಾಗಿದೆ. ಬೆಟ್ಟದ ನಿರ್ದಿಷ್ಟ ಭಾಗದಲ್ಲಿ ಕಲ್ಲುಶಿಲೆಯ ಬಂಡೆಗಳಿರುತ್ತವೆ. ಸುತ್ತಲೂ ಬಯಲು ಪ್ರದೇಶವಿದ್ದು, ಒಂದು ರೀತಿ ಅನುಕೂಲವಿರುವ ಬಂಡೆಗಳಲ್ಲಿ ಮಾತ್ರ ಚಿತ್ರಗಳನ್ನು ಕೊರೆದು, ಕುಟ್ಟಲಾಗಿದೆ. ಬಿಳಿ ಕಣಶಿಲೆಯಲ್ಲೂ ಕುಳಿ, ತಿರುಗುಳಿಗಳನ್ನು ಕಾಣಬಹುದು.

ಈ ಪರಿಸರದಲ್ಲಿ ಅಂದಿನ ಆದಿಮಾನವನು ತನ್ನ ಕಲೆಯನ್ನು ನಾಲ್ಕು ರೀತಿಯಲ್ಲಿ ವ್ಯಕ್ತಪಡಿಸಿರುವುದನ್ನು ಈ ಮುಂದಿನಂತೆ ಗುರುತಿಸಬಹುದು.

೧. ಗವಿಗಳಲ್ಲಿ ರಚಿಸಿದ ಚಿತ್ರಗಳು.

೨. ಕಲ್ಲಾಸರೆಗಳಲ್ಲಿ ರಚಿಸಿದ ಚಿತ್ರಗಳು.

೩. ಬಯಲು ಬಂಡೆಗಳ ಮೇಲೆ ಕೋರೆದ ಚಿತ್ರಗಳು.

೪. ಬಯಲು ಬಂಡೆಗಳ ಮೇಲೆ ಕುಟ್ಟಿದ ಚಿತ್ರಗಳು.

ಹಂಪಿ ಪರಿಸರದಲ್ಲಿ ಕಾಣಬರುವ ಕಲಾತ್ಮಕ ನೆಲೆಗಳ ಮಹತ್ವವನ್ನು ಈ ಮುಂದಿನಂತೆ ಅಧ್ಯಯನ ಮಡಬಹುದಾಗಿದೆ.

೧. ಗವಿಗಳಲ್ಲಿ ರಚಿಸಿದ ಚಿತ್ರಗಳು

ಹಂಪಿ ಪರಿಸರ ಪ್ರದೇಶದ ಚಿತ್ರಿತ ಗವಿ, ಕಲ್ಲಾಸರೆಗಳ ರಚನೆ ಮತ್ತು ವಿಧಗಳನ್ನು ಪರಿಶೀಲಿಸುವ ಮೂಲಕ ಈ ಪ್ರದೇಶದ ಶಿಲಾಯುಗದ ಆದಿ ಮಾನವನ ಚಿತ್ರರಚನೆಗಾಗಿ ಎಂಥ ನೆಲೆಗಳನ್ನು ಆಯ್ದುಕೊಂಡ ಎನ್ನುವುದನ್ನು ಇಲ್ಲಿ ಗಮನಿಸಬಹುದು.

ಹಂಪಿ ಪ್ರದೇಶದಲ್ಲಿ ಚಿತ್ರತ ಗವಿಗಳು ಕಲ್ಲಾಸರೆಯಂತೆ ಅಧಿಕ ಪ್ರಮಾಣದಲ್ಲಿಲ್ಲ. ಅಗೋಲಿ (೨), ಆನೆಗುಂದಿ (೭), ಕುರಗೋಡು  (೭, ೯, ೧೨),  ಮಲ್ಲಾಪುರ (೩, ೬, ೮), ಚಿಕ್ಕರಾಂಪುರ (೧) ಮತ್ತು ಹಿರೇಬೆನಕಲ್ (೯, ೧೨, ೧೭) ಗಳಲ್ಲಿ ಮಾತ್ರ ಕೆಲವು ಗವಿಗಳಿವೆ. ಇವುಗಳಲ್ಲಿ ಅಗೋಲಿ ಮಲ್ಲಾಪುರ (೩) ಮತ್ತು ಹಿರೇಬೆನಕಲ್ಲಿನ ಗವಿಗಳು ದೊಡ್ಡ ಪ್ರಮಾಣದಲ್ಲಿವೆ.

ಮಲ್ಲಾಪುರದ ೩ನೇ ಗವಿ (ಖಾನಾಸಾಬ ಗವಿ) ಬೃಹತ್ ಪ್ರಮಾಣದಲ್ಲಿದೆ. ಇಡೀ ಗವಿಗೆ ಒಂದೇ ವಿಶಾಲವಾದ ಚಾವಣಿ ಬಂಡೆ ಇದ್ದು, ಒಳಭಾಗದಲ್ಲಿ ನುಣುಪಾಗಿದೆ. ಆ ಬಂಡೆಗೆ ಅನುಗುಣವಾಗಿ ಅದರ ಮೇಲೆ ಚಿತ್ರಗಳನ್ನು ಬಿಡಿಸಲಾಗಿದೆ. ೬ನೇ ಮತ್ತು ೮ನೇ ಗವಿಗಳು ಬೃಹತ್ ಬಂಡೆಗಳು ಸೀಳಿ ಮಧ್ಯದಲ್ಲಿ ಉಂಟಾಗಿದ್ದು, ಇವು ಕ್ರಮವಾಗಿ ೭ ಮತ್ತು ೫ ಮೀಟರ್ ಉದ್ದವಾಗಿವೆ. ೬ನೇ ಗವಿಯ ಎಡಗೋಡೆಯ ಹೊರಭಾಗದಲ್ಲಿ ಚಿತ್ರಗಳಿವೆ. ಆ ಭಾಗ ಹೊರಗೆ ಎದ್ದು ಕಾಣುವುದರ ಜೊತೆಗೆ ಸೂಕ್ತ ರಕ್ಷಿತ ಭಾಗವಾಗಿದೆ. ೮ನೆಯದು ಅರ್ಧವೃತ್ತಾಕಾರದಲ್ಲಿ ಪೊಳ್ಳಾದ ಗವಿ ಅದರ ಒಳಗೋಡೆಗಳು ಅತ್ಯಂತ ನುಣುಪಾಗಿದ್ದು, ಅಲ್ಲಿ ಚಿತ್ರಗಳಿವೆ. ಗವಿ ನೆಲದಿಂದ ಸುಮಾರು ೧೦ ಮೀಟರ್ ಎತ್ತರದಲ್ಲಿದ್ದು, ವಾಸಕ್ಕಾಗಿ ಯೋಗ್ಯವಾಗಿಲ್ಲ.

ಚಿಕ್ಕರಾಂಪುರ ಗವಿಯು ಬೃಹತ್ ಬಂಡೆಕಲ್ಲೊಂದರ ಕೆಳಭಾಗದಲ್ಲಿ ಉಂಟಾಗಿದೆ. ಈ ಗವಿಯು ಪ್ರವೇಶದಲ್ಲಿ ಚಾವಣಿ ಬಂಡೆಯ ಕೆಳಭಾಗ ತುಂಡಾಗಿ ಒಂದು ಸೊಗಸಾದ ಆಸರೆ ಉಂಟಾಗಿದೆ. ಆ ಭಾಗದಲ್ಲಿ ಮತ್ತು ಒಳಗೆ ಗೋಡೆಯ ಮೇಲೆ ಚಿತ್ರಗಳನ್ನು ಬಿಡಿಸಲಾಗಿದೆ. ಅಗೋಲಿ ಗವಿ ಕೂಡ ಮಲ್ಲಾಪುರದ ೩ನೇ ಗವಿಗಿಂತ ಸ್ವಲ್ಪ ಚಿಕ್ಕದಾಗಿದ್ದು, ಚಾವಣಿಯ ಒಂದು ಭಾಗದಲ್ಲಿ ಮಾತ್ರ ಚಿತ್ರಗಳಿವೆ.

ಹಿರೇಬೆನಕಲ್ಲಿನ ೯ ಮತ್ತು ೧೦ ನೇ ಗವಿಗಳನ್ನು ಎರಡನೆಯ ಪ್ರಕಾರದವೆಂದು ಗುರುತಿಸಬಹುದು. ಇವುಗಳಿವೆ ಎರಡೂ ಬದಿ ಪ್ರವೇಶಗಳುಂಟು. ಇವುಗಳಲ್ಲಿ ೧೭ನೇ ಗವಿ ಗಮನಾರ್ಹವಾಗಿದೆ. ಅಡ್ಡವಾಗಿರುವ ಭಾರೀ ಬಂಡೆಯ ಕೆಳಭಾಗದಲ್ಲಿ ಈ ಬೃಹತ್ ಗವಿ ಉಂಟಾಗಿದೆ. ಇದಕ್ಕೆ ರಕ್ಕಸ ಗವಿ ಎಂದು ಹೆಸರು. ಚಾವಣಿ ತಕ್ಕಮಟ್ಟಿಗೆ ನುಣುಪಾಗಿದೆ. ಇಲ್ಲಿ ಕೇವಲ ಎರಡೇ ಚಿತ್ರಗಳದ್ದರೂ ಅವು ಒಂದು ೫ ಮೀಟರ್ ಮತ್ತೊಂದು ೭ ಮೀಟರ್ ಉದ್ದವಾಗಿದ್ದು, ಗವಿಗೆ ತಕ್ಕ ಪ್ರಮಾಣದಲ್ಲಿವೆ. ಗವಿ ನೆಲಕ್ಕಿಂತ ಸ್ವಲ್ಪ ಕೆಳಮಟ್ಟದಲ್ಲಿದ್ದು ವಿಶಾಲವಾದ ಸಭಾಂಗಣ(ಹಾಲ್)ದಂತಿದೆ. ಈ ಗವಿಗಳ ಚಿತ್ರಗಳ ಸಂಖ್ಯೆ ಮತ್ತು ವೈವಿಧ್ಯತೆ ದೃಷ್ಟಿಯಿಂದ ಶ್ರೀಮಂತವಾಗಿವೆ.

೨. ಕಲ್ಲಾಸರೆಗಳಲ್ಲಿ ರಚಿಸಿದ ಚಿತ್ರಗಳು

ಗವಿಗಳಿಗಿಂತ ಕಲ್ಲಾಸರೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಮೇಲೆ ಉಲ್ಲೇಖಿಸಿದ ಕೆಲವು ಗವಿಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಚಿತ್ರಿತ ನೆಲೆಗಳು ಕಲ್ಲಾಸರೆಗಳೆನ್ನಬಹುದು. ಕೊಪ್ಪಳ, ಹಂಪಿ ಪರಿಸರದ ಚಿತ್ರಿತ ಕಲ್ಲಾಸರೆಗಳನ್ನು ಅವುಗಳ ನೈಸರ್ಗಿಕ ರಚನೆಯ ದೃಷ್ಟಿಯಿಂದ ಈ ಮುಂದಿನಂತೆ ವರ್ಗೀಕರಿಸಬಹುದು.

೧. ಮುಂಚಾಚಿದ ತಲೆಬಂಡೆ ಆಸರೆ

ಕೆಳಗೆ ದೊಡ್ಡ ಬಂಡೆಯನ್ನು ಅದರ ತಲೆಯ ಮೇಲೆ ಕೆಳಗಿನ ಬಂಡೆಯಿಂದ ಮುಂಚಾಚಿದ ಮತ್ತೊಂದು ಬಂಡೆ ಇರುತ್ತದೆ. ಮುಂಚಾಚಿದ ಬಂಡೆಯ ಚಾವಣಿಯಲ್ಲಾಗಲಿ (ಹಿರೇಬೆನಕಲ್ ೧೬, ಚಿಕ್ಕರಾಂಪುರ ೪, ನಾರಾಯಣಪೇಟೆ ೧) ಇಲ್ಲವೇ ಮುಂಚಾಚಿದ ಬಂಡೆಯ ಆಶ್ರಯ ಪಡೆದ ಕೆಳಗಿನ ಕಲ್ಲಿನ ಮುಖಭಾಗದಲ್ಲಿ (ಗಡ್ಡಿ ೪, ಹೊಸಬಂಡಿ ಹರ್ಲಾಪುರ ೧) ಚಿತ್ರಗಳಲ್ಲಿರುತ್ತವೆ. ಹಿರೇಬೆನಕಲ್ಲಿನ ೨ನೇ ಕಲ್ಲಾಸರೆಯು ಈ ಪ್ರಕಾರದಲ್ಲಿ ಒಂದು ಅಪರೂಪವಾದ ಕಲ್ಲಾಸರೆಯಾಗಿದೆ. ಒಂದೆ ಬೃಹತ್ ಬಂಡೆಯೊಂದರಲ್ಲಿ ಮೇಲಿನ ಸುಮಾರು ೨ ಮೀಟರ್ ಭಾಗ ಆಸರೆಯಾಗಿ ಉಳಿದಂತೆ ಸುಮಾರು ೧೦ ಮೀಟರ್ ಭಾಗ ಒಳಸರಿದ ಚಿತ್ರಫಲಕವಾಗಿದೆ. ಇದು ಸುಮಾರು ೧೩ ಮೀಟರ್ ಅಗಲ ಮತ್ತು ೧೦ ಮೀಟರ್ ಎತ್ತರವಾಗಿದೆ. ಇಡೀ ಫಲಕದ ಅಳತೆಗೆ ತಕ್ಕಮತೆ ಅಲ್ಲಿ ದೊಡ್ಡ ಚಿತ್ರವನ್ನು ಬಿಡಿಸಲಾಗಿದೆ. ಕಲ್ಲಾಸರೆ ಆಳ ವಾಗಿಲ್ಲದಿರುವುದರಿಂದ ಚಿತ್ರಗಳು ಬಹಳಷ್ಟು ಮಾಸಿವೆ.

ಚಿಕ್ಕರಾಂಪುರ (೪) ಮತ್ತು ನಾರಾಯಣಪೇಟೆ (೧) ಕಲ್ಲಾಸರೆಗಳಲ್ಲಿ ಚಾವಣಿ ಕಲ್ಲಿನಲ್ಲಿ ಚಿತ್ರಗಳಿದ್ದು, ನೆಲದಿಂದ ಸುಮಾರು ೫ ಮೀಟರ್ ಎತ್ತರದಲ್ಲಿವೆ. ಆಸರೆಯ ಕೆಳಗಿನ ನೆಲ ನಿಲ್ಲುಲ್ಲು ಕೂಡ ಸಾಧ್ಯವಾಗದಷ್ಟು ಇಳಿಜಾರಾಗಿದೆ. ಮಲ್ಲಾಪುರದ ೨ನೇ ಕಲ್ಲಾಸರೆ ಕೂಡ ಇದೇ ರೀತಿಯದು. ಆದರೆ ಇಲ್ಲಿ ಕೈಗೆ ನಿಲುಕುವಷ್ಟು ಹತ್ತಿರದಲ್ಲಿದೆ. ಅಲ್ಲದೆ ಕುರಗೋಡಿನ ೮ ನೇ ಕಲ್ಲಾಸರೆಯೂ ಇಲ್ಲಿ ಪ್ರಮುಖವೆನಿಸುತ್ತದೆ.

೨. ಸೀಳು ಬಂಡೆ ಆಸರೆ

ಸಾಮಾನ್ಯವಾಗಿ ಈ ಪ್ರಕಾರದ ಕಲ್ಲಾಸರೆಗಳು ಅಧಿಕವಾಗಿದೆ. ಬೃಹತ್ ಅಥವಾ ಮಧ್ಯಮ ಗಾತ್ರದ ಬಂಡೆಗಳಲ್ಲಿ ಮೂಲೆಭಾಗದಲ್ಲೋ, ಬದಿಯಲ್ಲೋ ಒಂದು ಭಾಗ ಸೀಳಿ ತುಂಡು ಕೆಳಬಿದ್ದು ಆಸರೆ ಉಂಟಾಗಿರುತ್ತದೆ. ಈ ಆಸರೆ ಭಾಗದಲ್ಲಿ ಚಿತ್ರಗಳನ್ನು ಬಿಡಿಸಲಾಗಿರುತ್ತದೆ. ಇಂದರಗಿ (೧), ಚಿಕ್ಕಬೆನಕಲ್ (೧), ಅಗೋಲಿ (೨), ನಾಗೇನಹಳ್ಳಿ (೧), ಕೊಪ್ಪಳ (೪), ಹೊಸಬಂಡಿ ಹರ್ಲಾಪುರ (೧)ಗಳಲ್ಲಿ ಮೂಲೆ ಕಲ್ಲಾಸರೆಗಳು ಎಮ್ಮಿಗುಡ್ಡ (೨), ತೆಂಬಾ (೪), ಗಡ್ಡಿ (೪), ಹಿರೇಬೆನಕಲ್ (೧), ಹಂಪಿ (೫), ಕಮಲಾಪುರ (೧) ಹಾಗೂ ಇತರ ನೆಲಗಳಲ್ಲಿ ಬದಿಯ ಕಲ್ಲಾಸರೆಗಳಿವೆ. ಮೂಲೆ ಅಸರೆಗಳಿಗಿಂತ ಬದಿಯ ಆಸರೆಗಳು ಚಿತ್ರ ರಚನೆಗೆ ಪ್ರಶಸ್ತವಾಗಿವೆ. ಆನೆಗುಂದಿಯ ೬ನೇ ನೆಲೆಯಲ್ಲಿ ೩ ಸ್ವತಂತ್ರ ಗುಡುಗಳಿವೆ. ಅವುಗಳ ಮೂಲೆ ಭಾಗದಲ್ಲಿ ಒಡೆದ ಸಣ್ಣ ಸಲ್ಲಾಸರೆಗಳಿದ್ದು ಅದರಲ್ಲೂ ಚಿಕ್ಕ ಪ್ರಮಾಣದ ಚಿತ್ರಗಳಿವೆ.

೩. ವಾರೆ ಸವಕಳಿ ಬಂಡೆ ಆಸೆರೆ

ಸಾಮಾನ್ಯವಾಗಿ ಇವು ಸ್ವತಂತ್ರವಾಗಿರುವ ಬೃಹತ್ ಬಂಡೆಗಳು. ಈ ಬಂಡೆಗಳ ತುದಿಯಲ್ಲಿ ಒಂಡೆರಡು ಮೀಟರ್ ಹೊರತುಪಡಿಸಿ ಉಳಿದ ಭಾಗವು ಮೇಲಿನಿಂದ ಕೆಳಕ್ಕೆ ವಾರೆಯಾಗಿ ಸವೆದಂತಿರುತ್ತವೆ. ಈ ವಾರೆ ಸವೆದ ಭಾಗವು ನುಣುಪಾಗಿದ್ದರೂ ಚಿತ್ರಗಳಿಗೆ ಹೆಚ್ಚು ರಕ್ಷಿತವಾಗಿಲ್ಲ. ಈ ರೀತಿಯ ಕಲ್ಲಾಸರೆಗಳು ಹೊಸಬಂಡಿ ಹರ್ಲಾಪುರ (೫) ಕುರಗೋಡು (೮.೯) ತೆಂಬಾ (೬) ಚಿಕ್ಕಬೆನಕಲ್ (೨) ಮತ್ತು ಹಂಪನದುರ್ಗ (೨) ಗಳಲ್ಲಿವೆ. ಈ ನಾಲ್ಕರಲ್ಲಿ ರೇಖಾ ಸಂಕೇತ ಚಿತ್ರಗಳಿರುವುದು ಕುತೂಹಲದಾಯಕ.

೪. ಹಾಸಲು ಬಂಡೆ ಆಸರೆ

ಬೃಹತ್ ಬಂಡೆ(ಗುಂಡು)ಗಳು ಚಿಕ್ಕ ಗುಂಡುಗಳ ಮೇಲೆ ಉದ್ದವಾಗಿ ಹಾಸಿದಂತಿರುತ್ತದೆ. ಈ ಹಾಸಲು ಬಂಡೆಯ ಕೆಳಭಾಗದಲ್ಲಿ (ಚಾವಣಿಯಲ್ಲಿ) ಚಿತ್ರಗಳಿರುತ್ತವೆ. ಮಲ್ಲಾಪುರ (೫) ತೆಂಬಾ (೭) ಕುರಗೋಡು (೧೨) ಮತ್ತು ಅಗೋಲಿ (೨) ಗಳಲ್ಲಿ ಈ ರೀತಿಯ ಕಲ್ಲಾಸರೆಗಳವೆ. ಇಲ್ಲಿಯ ಚಿತ್ರಿತ ಭಾಗವು ಅಷ್ಟು ನುಣುಪಾಗಿರುವುದಿಲ್ಲ. ಮತ್ತು ಚಿತ್ರಗಳ ಸಂಖ್ಯೆಯೂ ಕಡಿಮೆ ಇರುತ್ತದೆ.

೫. ವಾರೆ ಬಂಡೆ ಆಸರೆ

ಎರಡು ಬಂಡೆಗಳ ಪರಸ್ಪರ ಒಂದಕ್ಕೊಂದು ವಾರೆಯಾಗಿ ನಿಂತು ಜೋಪಡಿ ಆಕಾರದಲ್ಲಿ ಆಸರೆ ಉಂಟಾಗಿರುತ್ತದೆ. ಎರಡೂ ಬಂಡೆಗಳ ಒಳ ಭಾಗದ ಮೂಖದಲ್ಲಿ ಚಿತ್ರಗಳಿರುತ್ತವೆ. ಅಥವಾ ಒಂದು ಎತ್ತರವಾದ ಗುಂಡಿನ ಮೇಲೆ ಬೃಹತ್ ಬಂಡೆಯೊಂದು ವಾರೆಯಾಗಿ ಮಲಗಿದಂತಿರುತ್ತದೆ. ವಾರೆ ಬಂಡೆಯ ಆಸರೆಯಲ್ಲಿ ಚಿತ್ರಗಳಿರುತ್ತವೆ. ಚಿಕ್ಕಬೆನಕಲ್ (೩) ಹಂಪಿ (೪) ಸಂಗಾಪುರ (೭) ಬೃಹತ್ ವಾರೆ ಆಸರೆಗಳು ಇವೆ. ಕಾಲಕ್ರಮೇಣ ತುದಿಯಲ್ಲಿ ಸೀಳುಗಳುಂಟಾಗಿ ಮಳೆಯ ನೀರು ಇಳಿದಿರುವುದರಿಂದ ಇಂಥ ಆಸರೆಗಳ ಚಿತ್ರಗಳು ಸಾಕಷ್ಟು ಮಾಸಿವೆ. ಚಿಕ್ಕ ಬೆನಕಲ್ಲಿನ ಕಲ್ಲಾಸರೆಯಲ್ಲಿ ಕೈಗೆ ನಿಲುಕದಷ್ಟು ಎತ್ತರದಲ್ಲಿ ಚಿತ್ರಗಳಿವೆ.

೬. ಬೆಟ್ಟದ ಪೊಟರೆ ಆಸರೆ

ಇವು ಬೆಟ್ಟದ ಬುಡದಲ್ಲಿ ಇರುತ್ತವೆ. ಕೊರಕಲಿನಂತೆ ಸುಮಾರು ೪೦ ಮೀಟರ‍್ವರೆಗೂ ಬೆಟ್ಟದಲ್ಲಿ ಪೊಟರೆಗಳುಂಟಾಗಿರುತ್ತವೆ. ಇದು ಉದ್ದಕ್ಕೂ ಮುಂಬದಿಯಲ್ಲಿ ತೆರೆದಿರುತ್ತದೆ. ಈ ಪೊಟರೆಗಳಲ್ಲಿ ಚಿತ್ರಗಳಿರುತ್ತವೆ. ತಿರುಮಲಾಪುರ (೧) ಆನೆಗುಂದಿ (೫) ಹೊಸಬಂಡಿ ಹರ್ಲಾಪುರ (೩) ಮತ್ತು ನಾರಾಯಣಪೇಟೆಗಳಲ್ಲಿ (೨) ಇಂಥ ಕಲ್ಲಾಸರೆಗಳಿವೆ. ತಿರುಮಲಾಪುರದಲ್ಲಿ ಬೇರೆ ಬೇರೆ ಕಾಲದಲ್ಲಿ ರಚಿತವಾದ ಹೆಚ್ಚು ಚಿತ್ರಗಳಿದ್ದರೆ ಉಳಿದೆರಡು ಕಡೆ ಒಂದೆರಡು ಚಿತ್ರ ಮಾತ್ರ ಇವೆ.

೭. ಪೊಳ್ಳು ಬಂಡೆ ಆಸರೆ

ಇವು ಕೂಡ ವಿಶಿಷ್ಟವಾದ ರಚನೆಗಳು. ಬೆಟ್ಟದ ಮೇಲಿರುವ ಬೃಹತ್ ಬಂಡೆಗಳ ಒಳಭಾಗ ಪೊಳ್ಳಾಗಿ ಸೋಗಸಾದ ಆಸರೆ ಉಂಟಾಗಿರುತ್ತವೆ. ಇದಕ್ಕೆ ಒಂದು ಅಥವಾ ಎರಡು ಕಡೆ ಅರೆ ವೃತ್ತಾಕಾರದ ಬಾಗಿಲುಗಳಿರುತ್ತವೆ. ಪೊಳ್ಳಿನ ಒಳ ಗೋಡೆಗಳ ಮೇಲೆ ಚಿತ್ರಗಳಿರುತ್ತವೆ. ರಾಂಪುರ (೨) ಕಳ್ಳರ ಗವಿ ಮತ್ತು ತೆಂಬಾದ (೮) ಚಿತ್ರ ಪಡಿ ಇಂಥ ಕಲ್ಲಾಸರೆಗಳು ಚಿತ್ರಪಡಿಯ ಇಡೀ ಭಾಗದಲ್ಲಿ ಪಕ್ಷಿಗಳು ಮಣ್ಣಿನ ಗೂಡು ಕಟ್ಟಿರುವುದರಿಂದ ಚಿತ್ರಗಳ ಗೋಚರಿಸುವುದಿಲ್ಲ. ನಾರಾಯಣಪೇಟೆಯ ಈ ರೀತಿಯ ಬಂಡೆಯ ಪೊಳ್ಳು ಎತ್ತರದಲ್ಲಿಲ್ಲ. ಮಲಗಿಕೊಂಡೇ ಚಿತ್ರಗಳನ್ನು ನೋಡಬಹುದು.

೮. ಅರೆ ವೃತ್ತಾಕಾರ (ಕಮಾನಿಕಾರ) ಬಾಗಿದ ಬಂಡೆ ಆಸರೆ

ಬಂಡೆಯೊಂದರ ಎರಡು ತುದಿಗಳು ನೆಲಕ್ಕೆ ತಾಗಿ ಮಧ್ಯ ಭಾಗದಲ್ಲಿ ಅರೆ ವೃತ್ತಕಾರದ ಮೇಲೆದ್ದಿರುತ್ತದೆ. ಆದರ ಒಳಭಾಗದಲ್ಲಿ ಚಿತ್ರಗಳನ್ನು ಬಿಡಿಸಲಾಗುತ್ತದೆ. ಇಂಥ ಕಲ್ಲಾಸರೆಗಳು ಕೊಪ್ಪಳ (೨) ಬಿಳಿಬಾವಿ (೧) ಹಿರೇಬೆನಕಲ್ (೮ ಮತ್ತು ೧೩)ಗಳಲ್ಲಿವೆ. ಬಿಳಬಾವಿಯಲ್ಲಿ ಹೆಚ್ಚು ಚಿತ್ರಗಳಿದ್ದರೆ, ಹಿರೇಬೆನಕಲ್ಲಿ (೧೩) ನಲ್ಲಿ ಕೇವಲ ಮೂರು ಚಿತ್ರಗಳಿವೆ.

೩. ಬಯಲು ಬಂಡೆಗಳ ಮೇಲೆ ಕೊರೆದ ಚಿತ್ರಗಳು

ಬಯಲು ಬಂಡೆ ಚಿತ್ರಗಳು ಮುಖ್ಯವಾಗಿ ಪಶುಪಾಲಕರ ರಚನೆಗಳೆಂದು ಹೇಳಬಹುದು. ಆವು ಪಶುಪಾಲನೆಯ ಸಂದರ್ಭದಲ್ಲಿ ರಚಿತವಾಗಿರುವ ಸಾಧ್ಯತೆಯನ್ನು ಚಿತ್ರನೆಲೆಗಳ ಹೆನ್ನೆಲೆಯಲ್ಲಿ ತರ್ಕಿಸಬಹುದು.

ಹಂಪಿ ಪರಿಸರಕ್ಕೆ ಸಂಬಂಧಿಸಿದಂತೆ ಬಂಡೆ ಚಿತ್ರಗಳು ಎರಡು ರೀತಿಯ ನೆಲೆಗಳಲ್ಲಿ ರಚಿತವಾಗಿರುವುದನ್ನು ಗುರುತಿಸಬಹುದು. ಅವುಗಳೆಂದರೆ ಮೊದಲನೆಯ ನೆಲೆ ನೀರು ಸಂಗ್ರಹಣೆಯ ಕೆರೆಗಳ (ನೈಸರ್ಗಿಕ ಬದಿಯ ಬಂಡೆಗಳಲ್ಲಿ ಇರುವುದು. ಉದಾಹರಣೆಗೆ ಕಮಲಪುರ (ವಿದ್ಯಾರಣ್ಯ) ಮತ್ತು ಬಸಾಪಟ್ಟಣ. ಕುರಗೋಡು ವಿಶೇಷ ವೆಂದರೆ ಈ ಎರಡೂ ನೆಲೆಗಳ ಚಿತ್ರಗಳು ಒಂದೇ ಬಗೆಯಾಗಿರುವುದು (ಎತ್ತರ ಭುಜದ ಎತ್ತುಗಳು ಮತ್ತು ಅಶ್ವ ಸವಾರರ ಚಿತ್ರಗಳು).

ಎರಡನೇ ನೆಲೆಗಳು ಸುತ್ತಲೂ ಹುಲ್ಲುಗಾವಲಿದ್ದು, ಮಧ್ಯದಲ್ಲಿ ಬಂಡೆಗಳ ಮೇಲೆ ರಚಿತವಾಗಿರುವುದು. ಉದಾಹರಣೆಗೆ ಮಲ್ಲಾಪುರ ೧ ಮತ್ತು ೨ನೇ ನೆಲೆಗಳು. ಇಲ್ಲಿ ಕೊರೆದ ಮತ್ತು ಕಟ್ಟು ಚಿತ್ರಗಳು ಎರಡೂ ಇವೆ. ಇವು ಕಪ್ಪು ಬಂಡೆಗಳು. ಕಮಲಾಪುರ ೨ನೇ ನೆಲೆಯಲ್ಲಿ (ಒಂಟಿಕಲ್ಲು ಗುಂಡು) ವರ್ಣಚಿತ್ರದ ಜೊತೆಗೆ ಕೊರೆದ ಚಿತ್ರಗಳಿರುವುದು ವಿಶೇಷ. ಇದು ಕಣಶಿಲೆಯ ಬಂಡೆಯಾಗಿದೆ.

೪) ಬಯಲು ಬಂಡೆಗಳ ಮೇಲೆ ಕುಟ್ಟಿದ ಚಿತ್ರಗಳು

ಹಂಪಿ ಪರಿಸರದಲ್ಲಿ ಬಯಲು ಬಂಡೆ ಚಿತ್ರಗಳು ವಿವಿಧ ನೆಲೆಗಳಲ್ಲಿ ರಚಿತವಾಗಿರುವುದನ್ನು ಗುರುತಿಸಬಹುದು. ಉದಾಹರಣಗೆಗೆ ಕಮಲಾಪುರ (ವಿದ್ಯಾರಣ್ಯ) ಮತ್ತು ಬಸಾಪಟ್ಟಣ ಹರ್ಲಾಪು, ಹಂಪಿ, ಅಂಜನಾದ್ರಿ, ಋಷ್ಯ ಮುಖ ಪರ್ವತ, ಕಡೆಬಾಗಿಲು, ಗುಡೇಕೋಟೆ, ಕುರಗೋಡು ಅಪ್ಪೇನಹಳ್ಲಿ, ತೆಕ್ಕಲಕೋಟೆ, ಸಂಗನಕಲ್ಲು ಮೊದಲಾದೆಡೆ ಪ್ರತ್ಯೇಕವಾಗಿ ಬಂಡೆಗಳ ಮೇಲೆ ಎತ್ತು, ಮನುಷ್ಯರ, ಹಲವು ಪ್ರಾಣಿಗಳ ಚಿತ್ರಗಳು ರಚನೆಯಾಗಿವೆ. ಕಪ್ಪು/ ಕಣಶಿಲೆಗಳ ಬಂಡೆಗಳ ಮೇಲೆ ಈ ಚಿತ್ರಗಳನ್ನು ಚಿತ್ರಿಸಿರುವುದು ವಿಶೇಷವಾಗಿದೆ.

೪.೩.೩. ಕಲಾತ್ಮಕ ನೆಲೆಗಳು ಚಿತ್ರಗಳ ಶೈಲಿ ಮತ್ತು ಪ್ರಮಾಣ

ಪ್ರಾಗೈತಿಹಾಸ ಕಾಲದ ಚಿತ್ರಗಳು ಮೊದಲು ನೋಟಕ್ಕೆ ಚಿಕ್ಕಮಕ್ಕಳ ರಚನೆಗಳಂತೆ ತೋರಿದ್ದರೂ, ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಅವು ಶೈಲಿ, ಭಾವ ಮತ್ತು ಭಂಗಿಯ ದೃಷ್ಟಿಯಿಂದ ಸಮರ್ಥವಾದ ರಚನೆಗಳೆಂದು ತಿಳಿಯುತ್ತದೆ. ಚಿತ್ರಗಳಲ್ಲಿ ಕೇವಲ ಆಕೃತಿಯಷ್ಟೇ ಮುಖ್ಯವಾಗಿಲ್ಲ. ಜೀವಂತಿಕೆ ಎದ್ದು ಕಾಣುತ್ತದೆ. ಮನುಷ್ಯ ಮತ್ತು ಪ್ರಾಣಿಯ ಬಿಡಿ ಚಿತ್ರಗಳಾಗಲಿ, ನೃತ್ಯ ಬೇಟೆ ಮುಂತಾದ ದೃಶ್ಯ ಚಿತ್ರಗಳಾಗಲಿ ಅವುಗಳ ರಚನಾ ಉದ್ದೇಶ ಸಶಕ್ತವಾಗಿ ಚಿತ್ರಗಳಲ್ಲಿ ಬಿಂಬಿತವಾಗಿದೆ. ಸಾಮಾನ್ಯವಾಗಿ ಕಣ್ಣು, ಮೂಗು, ಬಾಯಿ, ಕಿವಿ, ಹಸ್ತ ಪಾದಗಳಂತಹ ಸೂಕ್ಷ್ಮ ಅಂಗಗಳ ರಚನೆಯ ಗೋಜಿಗೆ ಪ್ರಾಗೈತಿಹಾಸ ಕಾಲದ ಕಲಾವಿದ ಹೋಗದೇ ಇದ್ದರೂ ಚಿತ್ರಗಳು ಭಾವ ಪ್ರಧಾನವಾಗಿವೆ ಎಂದು ಹೇಳಬಹುದು.೧೨೧ ಕೇವಲ ಬಾಹ್ಯ ರೇಖೆ ಇಲ್ಲವೇ ಛಾಯಾ ರೂಪದಲ್ಲೇ ಅವನು ಚಿತ್ರಗಳಿಗೆ ಜೀವಂತಿಕೆಯನ್ನು ತುಂಬಿದ್ದಾನೆ ಎನ್ನಬಹುದು. ಎಲ್ಲ ಚಿತ್ರಗಳು ಈ ದೃಷ್ಟಿಯಿಂದ ಉತ್ತಮ ರಚನೆಗಳೆಂದು ಹೇಳಲಾಗದು. ಆದರೆ ಕೆಲವಂತೂ ರಚನಾ ಶೈಲಿಯ ದೃಷ್ಟಿಯಿಂದ ಉತ್ತಮ ಮಟ್ಟದ್ದಾಗಿವೆ. ಹಂಪಿ ಪರಿಸರದ ಕೆಲವು ಚಿತ್ರಗಳ ಶೈಲಿಯನ್ನು ಈ ಮುಂದಿನಂತೆ ಗುರುತಿಸಬಹುದು.

ಮನುಷ್ಯ ಚಿತ್ರಗಳು

ಅನೇಕ ಬಿಡಿ ಇಲ್ಲವೇ ಸಮೂಹದ ಮನುಷ್ಯ ಚಿತ್ರಗಳಿರುವುದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಮನುಷ್ಯ ಚಿತ್ರಗಳಲ್ಲಿ ಕೆಲವು ಶೈಲಿಯ ದೃಷ್ಟಿಯಿಂದ ಕ್ರಿಯಾಶೀಲತೆಯನ್ನು ಬಿಂಬಿಸುವಲ್ಲಿ ಸಮರ್ಥವಾಗಿವೆ. ಎಂದು ಗುರುತಿಸಬಹುದು.

ರಾಂಪುರದ ೧ನೇ ಕಲ್ಲಾಸರೆಯಲ್ಲಿರುವ ನಿಂತ ಮನುಷ್ಯನ ಚಿತ್ರ ಒಂದು ಅಪೂರ್ವ ಸೃಷ್ಟಿ. ದುರದೃಷ್ಟವಶಾತ್ ಅವರ ಕೆಳಭಾಗ ಮಳೆಗೆ ಸಿಲುಕಿ ಬಹಳಷ್ಟು ಮಾಸಿಹೋಗಿದೆ. ಚಿತ್ರ ಛಾಯಾರೂಪದ್ದು. ಕಲಾವಿದನಿಗೆ ದೇಹದ ರಚನೆಯ ಸ್ಪಷ್ಟ ಪರಿಕಲ್ಪನೆ ಇದೆ. ಅಗಲವಾದ ಭುಜ, ತೆಳುವಾದ ಸೊಂಟ, ಅಷ್ಟೇ ಸಹಜವಾದ ಪೃಷ್ಠ ಎಲ್ಲವೂ ಪ್ರಮಾಣಬದ್ಧವೆನಿಸುತ್ತದೆ. ಬಲಗೈ ಭುಜದ ಸಮಾನಾಂತರದಲ್ಲಿ ಮುಂಚಾಚಿದೆ. ಎಡಗೈ ಸ್ವಲ್ಪ ಕೆಳಕ್ಕಿಳಿಸಿ ಮೊಣಕೈಯಿಂದ ಉಳಿದ ಭಾಗವನ್ನು ಪಕ್ಕಕ್ಕೆ ಎತ್ತಿ ಹಿಡಿದಿದೆ. ತೋಳು ದಪ್ಪವಾಗಿದ್ದು, ಮೊಣಕೈವರೆಗೆ ಕಿರಿದಾಗಿ ಉಳಿದ ಮುಂದೆ ಸಹಜವಾಗಿದೆ. ಹಸ್ತ ಮತ್ತು ಬೆರಳುಗಳು ಅತ್ಯಂತ ಸಹಜವಾಗಿವೆ. ಕೊರಳಲ್ಲಿ ಸರದಂತಹ ಆಭರಣ ವಿರುವುದು ಗಮನಾರ್ಹ ಸರವನ್ನು ತೋರಿಸಿರುವ ರೀತಿ ವಿಶೇಷವಾಗಿದೆ. ಕಂಠ ಮತ್ತು ಎದೆ ಭಾಗವನ್ನು ಜೋಡಿಸದೇ ಖಾಲಿಬಿಟ್ಟು ಅಲ್ಲಿ ಸರವನ್ನು ತೋರಿಲಾಗಿದೆ. ಸರಕ್ಕೆ ಸುತ್ತಲೂ ತ್ರಿಕೋನಾಕಾರದ ಆರು ಎಸಳುಗಳಿವೆ. ಎಲ್ಲವನ್ನು ಕೇವಲ ಬಾಹ್ಯ ರೇಖೆಯಲ್ಲಿ ತೋರಿಸಿ ಆಭರಣ ಧರಿಸುವಿಕೆಯ ಸೌಂದರ್ಯವನ್ನು ಸಹಜವಾಗಿರಿಸಲಾಗಿದೆ. ಇದಕ್ಕೆ ಪಾದಗಳಿದ್ದವೂ ಇಲ್ಲವೋ ತಿಳಿಯುವುದಿಲ್ಲ. ಮುಖ ವಾನರರಂತಿದ್ದು, ಇದೊಂದು ಅಪರೂಪದ ಚಿತ್ರವಾಗಿದೆ. ಇದೇ ರೀತಿಯ ಚಿತ್ರಗಳು ಆನೆಗುಂದಿ (೨) ಮತ್ತು ಗೂಗಿ ಬಂಡೆಯಲ್ಲಿದ್ದು, ಅವು ಕ್ರಮವಾಗಿ ಮಾಸಿ ಪುನರ್ ತಿದ್ದುವಿಕೆಗೆ ಒಳಗಾಗಿವೆ. ಆನೆಗುಂದಿಯನ್ನು ವಾನರ ರಾಜ್ಯ ಕಿಷ್ಕಿಂದೆ ಎಂದು ನಂಬಲಾಗಿದ್ದು, ಅದರ ಹಿನ್ನೆಲೆಯಲ್ಲಿ ಈ ವಾನರ ರೀತಿಯ ಚಿತ್ರಗಳು ಗಮನಾರ್ಹವಾಗಿವೆ.

ಸಂಗಾಪುರದ ಮೂರನೇ ಕಲ್ಲಾಸರೆಯಲ್ಲಿ ಪಶುವಿನ ಹಿಂದೆ (ಪ್ರಾಯಶಃ ಹೊಡೆದು ಕೊಂಡು ಹೊರಟಿರುವ) ಒಬ್ಬ ಮನುಷ್ಯನ ಚಿತ್ರವಿದೆ. ದೇಹ ದ್ವಿತ್ರಿಕೋನಾಕಾರ ಶೈಲಿಯಲ್ಲಿದೆ. ದೇಹದ ಅಂಗಿಕ ರಚನೆಯ ಬಗ್ಗೆ ಮೊದಲಿನ ಚಿತ್ರದ ಕಲಾವಿದನಷ್ಟು ಈ ಚಿತ್ರದ ರಚನಕಾರ ನಿಖರವಾಗಿಲ್ಲ. ಕೈಕಾಲುಗಳು, ಕೇವಲ ಸಾಂಕೇತಿಕ ಮಾತ್ರ. ಆದರೂ ಈ ಚಿತ್ರ ಒಂದು ಕ್ರಿಯೆಯನ್ನು ಸ್ಪಷ್ಟವಾಗಿ ನಿದೇರ್ಶಿಸುತ್ತದೆ. ಇಲ್ಲಿ ವ್ಯಕ್ತಿ ಪಶುವನ್ನು ತೆಗೆದುಕೊಂಡು ಹೊರಟಿದ್ದು ಅವನ ಚಿತ್ರ ಕೇವಲ ಆಕೃತಿಯಾಗದೇ ನಡಿಗೆಯ ಚಲನಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ನಡೆಯುವಾಗ ಮುಂದಿನ ಕಾಲನ್ನು ಊರಿ ಹಿಂದಿನ ಕಾಲನ್ನು ಮೇಲಕ್ಕೆತ್ತಿರುವ ಭಂಗಿ ತುಂಬ ಸಹಜವಾಗಿದೆ. ದೇಹವು ಕೂಡ ಆ ಭಂಗಿಗೆ ಪೂರಕವಾಗಿದೆ. ಕಟಿಯಿಂದ ಎದೆ, ಭುಜದ ಭಾಗ ಕೆಳ ದೇಹಕ್ಕಿಂತ ಸ್ವಲ್ಪ ಮುಂದಕ್ಕೆ ಬಾಗಿದಂತೆ ರಚಿತವಾಗಿದೆ. ಇಲ್ಲಿ ಚಿತ್ರದ ರಚನಾಕಾರನಿಗೆ ಭಂಗಿಗಳ ಬಗೆಗೆ ಕಲ್ಪನೆ ಇದ್ದು, ಅದನ್ನು ಚಿತ್ರದಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದಾನೆ ಎನ್ನುಬಹುದು. ಇದರಂತೆ ತೆಂಬಾದ ೪ನೇ ಕಲ್ಲಾಸರೆ ಮತ್ತು ಚಿಕ್ಕರಾಂಪುರದ ೧ನೇ ಗವಿಯ ಪಶುಪಾಲಕ ಮನುಷ್ಯ ಚಿತ್ರಗಳು ಚಲನಶೀಲ ಅಂಶದಿಂದ ಗಮನ ಸೆಳೆಯುತ್ತವೆ. ಕೈಯಲ್ಲಿ ಉದ್ದವಾದ ಕೋಲು ಅಥವಾ ಭರ್ಜಿಯನ್ನು ಹಿಡಿದುಕೊಂಡು ಪಶುಗಳನ್ನು ತೆಗೆದುಕೊಂಡು ಹೊರಟಿರುವ ಮನುಷ್ಯನ ಚಿತ್ರ (ಚಿಕ್ಕರಾಂಪುರ) ಅತ್ಯಂತ ಸಹಜವಾಗಿದೆ. ಹಿಂದಿನ ಕಾಲು ಎತ್ತಿದ ಭಂಗಿಯಲ್ಲಿದ್ದು, ಓಟದ ಶೈಲಿಯನ್ನು ತುಂಬಾ ಸಮರ್ಥವಾಗಿ ಬಿಂಬಿಸುತ್ತದೆನ್ನಬಹುದು.

ಮನುಷ್ಯ ಚಿತ್ರಗಳಲ್ಲಿ ಪುರುಷ-ಸ್ತ್ರೀ ಚಿತ್ರಗಳನ್ನು ಸ್ಪಷ್ಟವಾಗಿ ಗುರುತಿಸುವಂತೆ ಆ ಕಾಲದ ಚಿತ್ರ ರಚನೆಕಾರ ಯೋಚಿಸಿದ ರೀತಿ ಅಪೂರ್ವವಾಗಿದೆ. ಮಲ್ಲಾಪುರ, ಹಂಪಿ, ಹಿರೇಬೆನಕಲ್, ಚಿಕ್ಕಬೆನಕಲ್‌ಗಳ ಕೆಲವು ಗವಿ, ಕಲ್ಲಾಸರೆಗಳಲ್ಲಿ ಮೈಮೇಲೆ ಗೆರೆಗಳನ್ನು ಹಾಕಿಕೊಂಡು ನಗ್ನರಾಗಿ ಕುಣಿಯುತ್ತಿರುವ ಮನುಷ್ಯ ಚಿತ್ರಗಳಿವೆ. ಇವುಗಳಲ್ಲಿ ಪುರುಷ ಹಾಗೂ ಸ್ತ್ರೀಯರಿದ್ದಾರೆ. ಸ್ತ್ರೀ ಪುರುಷರನ್ನು ಸ್ಪಷ್ಟವಾಗಿ ಗುರುತಿಸಬಹುದಾದ ರೀತಿಯಲ್ಲಿ ದೇಹದ ರಚನೆ ಇದೆ. ಪುರುಷ ನಗ್ನನಾಗಿ ಕುಣಿಯುತ್ತಿದ್ದಾನೆ ಎಂದು ತೋರಿಸುವ ಕ್ರಮ ತುಂಬ ಸರಳ. ಎರಡೂ ಕೈಗಳನ್ನು ಮೇಲಕ್ಕೆತ್ತಿ, ಕಾಲುಗಳನ್ನು ಅಗಲಿಸಿದ ಭಂಗಿಯ ವ್ಯಕ್ತಿ ಚಿತ್ರದಲ್ಲಿ ಕಾಲುಗಳ ನಡುವೆ ಶಿಶ್ನವನ್ನು (ಸಾಂಕೇತಿಕ) ತೋರಿಸಿದರಾಯ್ತು. ಆದರೆ ಈ ವಿಧಾನದ ಮೂಲಕ ನಗ್ನ ಸ್ತ್ರೀಯನ್ನು ಸಂಕೇತಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸ್ತ್ರೀಯನ್ನು ಪಾರ್ಶ್ವಭಂಗಿಯಲ್ಲಿ ಚಿತ್ರಿಸಲಾಗಿದೆ. ಇದರಿಂದ ಸಹಜವಾಗಿ ಅವಳ ಸ್ತನಗಳನ್ನು ತೋರಿಸಬಹುದು. ಇಂಥ ಚಿತ್ರಗಳು ಮಲ್ಲಾಪುರದ ಖಾನಸಾಬನ ಗವಿ (೩) ಹಿರೇಬೆನಕಲ್ಲಿನ ರಕ್ಕಸಕುಟ್ರಿ (ಕಲ್ಲಾಸರೆ-೨) ಹಂಪಿಯ ಭರಮದೇವರ ಗುಂಡು (೫) ಗಳಲ್ಲಿವೆ. ನಾರಾಯಣಪೇಟೆಯ ಸ್ತ್ರೀ ಚಿತ್ರ ಮತ್ತೊಂದು ರೀತಿಯ ಅಭಿವ್ಯಕ್ತಿ. ಕಾಲುಗಳನ್ನು ಗಲಿಸಿ ನಿಂತಿರುವ ವ್ಯಕ್ತಿ ಸ್ತ್ರೀ ಎಂಬುದಕ್ಕೆ ಅವಳ ಯೋನಿ ಭಾಗವನ್ನು ತ್ರಿಕೋನಾಕಾರದಲ್ಲಿ ಸ್ವಲ್ಪ ಕೆಳಕ್ಕೆ ತೋರಿಸಿ ಸಂಕೇತಿಸಲಾಗಿದೆ. ನಗ್ನ ಪುರುಷ ಗುಂಪಿನಲ್ಲಿ ಇಂತಹ ಸ್ತ್ರೀ ಚಿತ್ರಗಳು ಗೊಂದಲಕ್ಕೆಡೆ ಮಾಡುವ ಸಾಧ್ಯತೆ ಇರುವುದರಿಂದ ಈ ಭಂಗಿಯ ಸ್ತ್ರೀ-ಪುರುಷ ಚಿತ್ರಗಳನ್ನು ಒಂದೇ ಕಡೆ ಚಿತ್ರಿಸಿಲ್ಲ.

ಗುಂಪು ವ್ಯಕ್ತಿಗಳಲ್ಲಿ ತಲೆಯ ಸುತ್ತಲೂ ಕೂದಲುಗಳನ್ನು ಚಿತ್ರಿಸಿ ಸ್ತ್ರೀಯನ್ನು ಸೂಚಿಸಲಾಗಿದೆ. ಈ ರೀತಿಯ ಚಿತ್ರಗಳು ಹಿರೇಬೆನಕಲ್ಲಿನ ೬ನೇ ಗವಿಯಲ್ಲಿವೆ. ೬ನೇ ಗವಿಯಲ್ಲಿ ಪರಸ್ಪರ ಎದುರು ಬದುರಾಗಿ ಕುಣಿಯುತ್ತಿರುವ ೨ನೇ ಸಾಲಿನ ಮನುಷ್ಯ ಚಿತ್ರಗಳಲ್ಲಿ ಒಂದು ಸಾಲಿನ ಎಲ್ಲರ ತಲೆಯಲ್ಲೂ ಕೂದಲನ್ನು ತೋರಿಸಲಾಗಿದೆ. ಹಾಗಾಗಿ ಅದು ಸ್ತ್ರೀಯರ ಸಾಲು ಎನ್ನುವುದು ಸ್ಪಷ್ಟ.

ಪ್ರಾಣಿ ಚಿತ್ರಗಳು

ಪಶು, ಪಕ್ಷಿಗಳು ಚಿತ್ರ ರಚನೆಯು ಕೂಡ ಸಹಜವಾಗಿರುವುದನ್ನು ಕಾಣಬಹುದು. ಇವು ಕೂಡ ಛಾಯಾ ಹಾಗೂ ಬಾಹ್ಯ ರೇಖಾ ರೂಪದಲ್ಲಿವೆ. ಕೆಲವು ಸಹಜ ರೂಪದ ಚಿತ್ರಗಳು ಇಂವೆ. ಮಲ್ಲಾಪುರದ ೯ನೇ ಕಲ್ಲಾಸರೆಯಲ್ಲಿನ ಗುಹೆಯಲ್ಲಿರುವ ಗೂಳಿಯ ಚಿತ್ರ ರಚನೆಯ ದೃಷ್ಟಿಯಿಂದ ಒಂದು ಉತ್ತಮ ಕಲಾಕೃತಿ ಎನ್ನಬಹುದು. ಇದು ಛಾಯಾರೂಪದಲ್ಲಿದೆ. ಮುಂಡ, ಕಾಲು, ಮುಖ, ಕತ್ತು, ಕೋಡು, ಕಿವಿ ಎಲ್ಲವೂ ಪ್ರಮಾಣಬದ್ಧವಾಗಿವೆ. ಬಲಿಷ್ಠ ಗೂಲಿಯ ದಷ್ಟಪುಷ್ಟತೆಯನ್ನು ಚಿತ್ರದಲ್ಲಿ ನೈಜವಾಗಿ ಬಿಂಬಿಸಲಾಗಿದೆ. ಕೊಪ್ಪಳ-ಹಂಪಿ ಪ್ರದೇಶದ ಗೂಲಿ ಚಿತ್ರಗಳಲ್ಲಿಯೇ ಇದು ಶ್ರೇಷ್ಠ ಚಿತ್ರವೆನ್ನಬಹುದು. ಮಲ್ಲಾಪುರದ ೨ನೇ ಗವಿ ಅಂಜನಹಳ್ಳಿಯ ಗೂಳಿಯ ಚಿತ್ರಗಳು ದೇಹದಲ್ಲಿ ಪ್ರಮಾಣಬದ್ಧವಾಗಿರದಿದರೂ ಗೂಳಿಯ ಬಲಿಷ್ಠತೆ ಗಾಂಭೀರ್ಯವನ್ನು ಪ್ರಕಟಿಸುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ಕೋಣದ ಚಿತ್ರಗಳು ಗಮನ ಸೆಳೆಯುತ್ತವೆ. ಹೊಸಬಂಡಿ ಹರ್ಲಾಪುರ, ಚಿಕ್ಕಬೆನಕಲ್ ಮತ್ತು ಮಲ್ಲಾಪುರಗಳಲ್ಲಿ ಬೃಹತ್ ಪ್ರಮಾಣದ ಚಿತ್ರಗಳಿವೆ. ಎಲ್ಲವೂ ಬಾಹ್ಯ ರೇಖೆಯವು. ಮಲ್ಲಾಪುರದ ಕೋಣದ ಚಿತ್ರದ ಮೈಮೇಲೆ ರೇಖೆಗಳಿವೆ. ಈ ಚಿತ್ರಗಳು ಪ್ರಬುದ್ಧ ಕಲಾವಿದರ ರಚನೆಗಳಿಂತೆ ಇವೆ. ಕೋಣದ ಬಲಿಷ್ಠತೆ ಚಿತ್ರದಲ್ಲಿ ನೈಜವಾಗಿವೆ. ಹೀಗೆ ಈ ಚಿತ್ರಗಳು ಭಂಗಿ ಮತ್ತ ಭಾವವನ್ನು ಸಮರ್ಪಕವಾಗಿ ಅಭಿವ್ತಕ್ತಿಸುತ್ತವೆ.

ಹಂಪಿಯ ೨ನೇ ಕಲ್ಲಾಸರೆಯ ಹುಲಿ ಮತ್ತು ಗೂಳಿಯ ಚಿತ್ರಗಳು ಕೂಡ ರಚನೆ ಕಾರನ ಚಿತ್ರ ಪರಿಜ್ಞಾನಕ್ಕೆ ಸಾಕ್ಷಿಯಾಗಿವೆ. ಬಾಲವನ್ನು ಅರೆ ಎತ್ತಿ ಸಂಚಾರಕ್ಕೆ ಹೊರಟಂತಿರುವ ಹುಲಿಯ ಭಾವ ಮತ್ತು ಶೈಲಿ ಚಿತ್ರದಲ್ಲಿ ಸಹಜವಾಗಿ ವ್ಯಕ್ತವಾಗಿದೆ. ಅದೇ ರೀತಿ ಬಾಲವನ್ನು ಮೇಲೆಕ್ಕೆತ್ತಿ ತಲೆ ಬಗ್ಗಿಸಿರುವ ಗೂಳಿಯ ಇರಿವ ಭಂಗಿಯ ಭಾವ ಚಿತ್ರದಲ್ಲಿ ನೈಜವಾಗಿ ಮೂಡಿದೆ.

ಹಿರೇಬೆನಕಲ್ಲಿನ ೧ನೇ ಕಲ್ಲಾಸರೆಯಲ್ಲಿ ಎರಡು ನವಿಲಿನ ಚಿತ್ರಗಳಿವೆ. ಅವು ಛಾಯಾ ರೂಪದಲ್ಲಿದ್ದು ಯಾವುದೇ ದೃಷ್ಟಿಯಿಂದ ಅವುಗಳ ಬಾಹ್ಯ ಆಕಾರ ಸ್ವಲ್ಪವೂ ಬದಲಾಗದಂತೆ ಅಪೂರ್ವವಾಗಿ ಮೂಡಿ ಬಂದಿವೆ. ಅವುಗಳಲ್ಲಿ ಒಂದು ನವಿಲಿನ ಮೇಯುವ ಭಂಗಿ ತುಂಬಾ ಸಹಜವಾಗಿದೆ.

ಹೊಸಬಂಡಿ ಹರ್ಲಾಪುರದ ೩ನೇ ಕಲ್ಲಾಸರೆಯ ಕವಲಿನ ಕೋಡುಗಳ (ಗಂಡು) ಜಿಂಕೆಗಳು ಕೂಡ ಸುಂದರವಾದ ರಚನೆಗಳು. ಅವುಗಳ ದೇಹವಿನ್ಯಾಸ ಭಂಗಿ ಮತ್ತು ರಚನೆ ನೈಜವಾಗಿದೆ. ಎಮ್ಮೆ, ಎತ್ತು, ಮತ್ತು ಹಸು ಒಂದೇ ರೀತಿ ಕಾಣುತ್ತವೆಯಾದರೂ ಸುತ್ತಲಿನ ಚಿತ್ರಗಳ ಅವಲೋಕನದಿಂದ ಅವುಗಳ ಪ್ರತ್ಯೇಕತೆಯನ್ನು ಗುರುತಿಸಬಹುದು. ಕೊಪ್ಪಳದ ೧ನೇ ಗವಿಯಲ್ಲಿ ಜಿಂಕೆ, ಗೂಳಿ, ಹಸು, ಟಗರು, ಮೊಲ, ಮುಂತಾದ ಪ್ರಾಣಿಗಳ ಚಿತ್ರಗಳಿವೆ. ನೋಡಿದ ತಕ್ಷಣ ಆ ಪ್ರಾಣಿಗಳಲ್ಲಿ ಗುರುತಿಸಬಹುದು. ಟಗರಿನ ಕೊಂಬನ್ನು ಹೊರಭಾಗದಲ್ಲಿ ಸುರಳಿಯಾಗಿಸುತ್ತಿರುವ ರೀತಿಯಲ್ಲಿ ತೋರಿಸುವುದು ವಿಶೇಷ. ಹಾಗೆ ಪ್ರಾಗೈತಿಹಾಸ ಕಾಲದ ಚಿತ್ರಗಳು ಶೈಲಿ ಮತ್ತು ಭಂಗಿಯಲ್ಲಿ ಸಮರ್ಥರೂಪಗಳಾಗಿವೆ ಎನ್ನಬಹುದು.

ಹಂಪಿ ಪರಿಸರದ ಚಿತ್ರಗಳು ಪ್ರಮಾಣದಲ್ಲಿ ವೈವಿಧ್ಯಮಯವಾಗಿದ್ದವು. ಚಿಕ್ಕ, ಮಧ್ಯಮ, ದೊಡ್ಡ ಮತ್ತು ಬೃಹತ್ ಪ್ರಮಾಣದಲ್ಲಿವೆ.