೧. ಸಂಪ್ರದಾಯ ಮತ್ತು ನಂಬಿಕೆಗಳು

ಹಂಪಿ ಪರಿಸರದ ಪ್ರಾಗೈತಿಹಾಸ ಮತ್ತು ಇತಿಹಾಸ ಕಾಲದ ನೆಲೆಗಳೊಂದಿಗೆ ಕೆಲವು ನಂಬಿಕೆ, ಸಂಪ್ರದಾಯಗಳು ಹೆಣೆದುಕೊಂಡಿವೆ. ವೆಂಕಟಾಪುರ ಮತ್ತು ಕುಡತಿನಿ ಬೂದಿದಿಬ್ಬಗಳಿಗೆ ರಾಮಾಯಣದ ವ್ಯಕ್ತಿಗಳನ್ನು ತಳಕು ಹಾಕುವ ಪದ್ಧತಿ ಇದೆ. ವೆಂಕಟಾಪುರದ ಬೂದಿದಿಬ್ಬ ವಾಲಿಯನ್ನು ಸುಟ್ಟಿದ್ದರಿಂದ ಉಂಟಾಯಿತೆಂದು ಹೇಳುತ್ತಾರೆ. ಕುಡತಿನಿಯ ಬೂದಿದಿಬ್ಬ ರಾಮ ಕಾರ್ತೀಕೆಯ ವನದಿಂದ ಕಿಷ್ಕಿಂಧೆಗೆ ಬರುವಾಗ ತನ್ನನ್ನು ತಡೆದ ರಾಕ್ಷಸನನ್ನು ಬಾಣಗಳಿಂದ ಹತ್ಯೆಗೈದು ಸುಟ್ಟಿದ್ದರಿಂದ ಉಂಟಾಯಿತೆಂಬ ನಂಬಿಕೆ ಬೆಳೆದು ಬಂದಿದೆ. ಇದೇ ರೀತಿಯ ನಂಬಿಕೆ ಸಂಪ್ರದಾಯಗಳು ಆನೆಗುಂದಿ ಮತ್ತು ವೆಂಕಟಾಪುರದಲ್ಲಿರುವ ಬೂದಿದಿಬ್ಬಗಳ ಕುರಿತು ಹೆಣೆದುಕೊಂಡಿರುವುದು ಗಮನಾರ್ಹವಾಗಿದೆ.

ದೊಡ್ಡ ದೊಡ್ಡ ವ್ಯಕ್ತಿಗಳನ್ನೊ, ರಾಕ್ಷಸರನ್ನೋ ಸುಟ್ಟ ಸ್ಮಾರಕಗಳಾಗಿ ಕಾಣುವ ಈ ಬೂದಿದಿಬ್ಬಗಳು, ವೈಜ್ಞಾನಿಕವಾಗಿ ಅಲ್ಲದಿದ್ದರೂ, ಪ್ರಾಚೀನ ಕಾಲದ ಘಟನೆಗಳು ಈ ಅವಶೇಷಗಳೊಂದಿಗೆ ಬೆರೆತು ನೆನಪಿನಲ್ಲಿ ಉಳಿದು ಬಂದಿರುವುದು ಆಶ್ಚರ್ಯವನ್ನು ಉಂಟುಮಾಡುತ್ತದೆ. ಇಲ್ಲಿಯ ಬೃಹತ್ ಶಿಲಾಯುಗದ ಗೋರಿಗಳಿಗೆ ಮೋರಿಯರ ಮನೆಗಳೆಂದೇ ಕರೆಯುವ ರೂಢಿ ಬೆಳೆದು ಬಂದಿದೆ. ಈ ಪ್ರದೇಶದಲ್ಲಿದ್ದ ಮೌರ್ಯರ ಆಡಳಿತ ಜನಮನದಲ್ಲುಳಿದು ಬಾಯಿಯಿಂದ ಬಾಯಿಗೆ ಹರಿದು ಬಂದಿರುವುದನ್ನು ಸೂಚಿಸುತ್ತದೆ. ಹುಲಿಕುಂಟೆಯ ಮಾನವಾಕೃತಿಯ ಬಂಡೆಗಳಿಗೆ ರಾಕ್ಷಸ ಇಲ್ಲವೆ ರಕ್ಕಸ ಕಲ್ಲುಗಳೆಂದೂ, ಆ ಸ್ಥಳವನ್ನು ರಕ್ಕಸರ ಗೊಂದಿ ಎಂದೂ ಕರೆಯಲಾಗುತ್ತದೆ. ಕುಮತಿಯ ಮಾನವಾಕೃತಿ ನಿಲಿಸುಗಲ್ಲುಗಳನ್ನು ಪಾಂಡವರ ಕಲ್ಲು ಇಲ್ಲವೆ ರಕ್ಕಸರ ಕಲ್ಲುಗಳೆಂದು ಕರೆಯಲಾಗುತ್ತಿದೆ.

ಈ ಪ್ರದೇಶದ ಜನರಿಗೆ ಹಬ್ಬ ಹರಿದಿನಗಳಂದು ಇವುಗಳನ್ನು ಪೂಜಿಸುವ ಸಂಪ್ರದಾಯವಿದೆ. ಅನಂತನ ಹುಣ್ಣಿಮೆಗೆ ವಿಶೇಷ ಪೂಜೆ ಮಾಡಿ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಇವುಗಳೊಂದಿಗೆ ಹೆಣೆದುಕೊಂಡು ಬಂದಿರುವ ಕಥೆ ಆಶ್ಚರ್ಯಕರವಾಗಿದೆ. ಹಿಂದೆ ಶ್ರೀ ನುಂಕೆ ಭೈರವೇಶ್ವರ ಎಂಬ ದೇವತಾಪುರುಷನಿದ್ದು ಅವನು ಬೇಟೆಗಾಗಿ ಬಂದಾಗ ರಕ್ಕಸರು ಅಡ್ಡಿಯನ್ನುಂಟು ಮಾಡುತ್ತಾರೆ. ಆಗ ಆ ರಕ್ಕಸರು ಕಲ್ಲುಗಳಾಗುವಂತೆ ಶಾಪವೀಯುತ್ತಾನೆ. ಅಂದಿನಿಂದ ಅವು ರಕ್ಕಸರ ಕಲ್ಲುಗಳೆಂದು ಹೆಸರು ಪಡೆದವೆಂಬ ಹೇಳಿಕೆ ಇದೆ.

ಇದಕ್ಕೆ ಪ್ರಚಲಿತವಿರುವ ಕಥೆಯೊಂದಿದೆ. ಮೊಳಕಾಲ್ಮುರು ತಾಲೂಕಿನ ಯರೇನಹಳ್ಳಿ (ಚಿತ್ರದುರ್ಗ. ಜಿ) ಗ್ರಾಮದ ಶ್ರೀ ಅಜ್ಜಮುನಿ ವಿರಚಿತ ಶ್ರೀ ಕಾಲಭೈರವೇಶ್ವರ ಅರ್ಥಾತ್ ಶ್ರೀ ನುಂಕೇಮಲೆ ಸಿದ್ಧೇಶ್ವರ ಎಂಬ ಯಕ್ಷಗಾನ ಬಯಲಾಟದಲ್ಲಿ ಇವುಗಳ ನಿಮಾಣದ ಬಗ್ಗೆ ಉಲ್ಲೇಖ ಬರುತ್ತದೆ. (ಶ್ರೀ ಅಜ್ಜಮುನಿ, ಶ್ರೀ ನುಂಕೇಮಲೆ ಸಿದ್ಧೇಶ್ವರ ಅರ್ಥಾತ್ ಕಾಲಭೈರವೇಶ್ವರ (ಯಕ್ಷಗಾನ) ನಾಟಕ (ಅಪ್ರಕಟಿತ), ಉಲ್ಲೇಖ ಇ.ದ. ೧೪, ಪು. ೧೯-೨೨)

ಅದರಲ್ಲಿ “ಭಲ..ಲಲ..ಅಹೋ ಅಕ್ಕಯ್ಯ ಬೆಂದದಿಂದ ಹಿಂದಕ್ಕೆ ರಕ್ಕಸರೊಡಗೂಡಿ ಬರುವಾಗ ಸಂಧಿಸಿದ ದುರ್ಗಟನೆ ಏನೆಂದರೆ ಭಳಿರೇ…. ಆಕುಲ್ಲ ದಾನವರನ್ನು ಹುಲ್ಲೇಗಳಂ ಕೊಲ್ಲುವ ಸಮಯದಿ ಯಮ್ಮನ್ನು ತಲ್ಲಣಿಸುವಂತೆ ಮಾಡಿದರು. ಅದರಿಂದಲೆ ಭಳಿರೇ…. ಆ ರಕ್ಕಸರನ್ನು ಕುಮ್ತಿ ರೇವಿನಲ್ಲಿಯೇ ಕಲ್ಲಾಗಿ ಬೀಳುವಂತೆ ಬಲ್ಲಿದ ಶಾಪವಂ ಕೊಟ್ಟು ಬಂದೆನು. ಅಲ್ಲಿಂದ ಬರಲು ತಡವುಂಟಾಯಿತಮ್ಮ ಶಿವನ ಪುತ್ರಿ ಸದಮಲಗಾತ್ರಿ” ಎಂದು ತನ್ನ ಅಕ್ಕನಿಗೆ ಶ್ರೀ ಭೈರವೇಶ್ವರನು ತಡವೇಕೆಂದು ಕೇಳಿದ್ದಕ್ಕೆ ಉತ್ತರ ಹೇಳುತ್ತಾನೆ. ಈ ರೀತಿಯಾಗಿ ಅನೇಕ ಕಥೆಗಳು ಇಂತಹ ಅವಶೇಷಗಳೊಂದಿಗೆ ಹೆಣೆದು ಅವುಗಳ ನೆನಪು ನಿರಂತರವಾಗಿ ಮುಂದುವರಿಯಲೆಂದು ನಾಟಕ, ಬಯಲಾಟಗಳಲ್ಲಿ ಬಳಸಿಕೊಂಡಿದ್ದು ಕಂಡುಬರುತ್ತದೆ. ಇದೇ ರೀತಿಯ ಸಂಪ್ರದಾಯ, ನಂಬಿಕೆ, ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವುದನ್ನು ಗುರುತಿಸಬಹುದಾಗಿದೆ.

೨. ಪ್ರಮುಖ ಪೌರಾಣಿಕ ಮತ್ತು ತೀರ್ಥಕ್ಷೇತ್ರಗಳು

ಹಂಪಿ ಪರಿಸರದ ಆದಿಮಾನವನ ನೆಲೆಗಳಾದ ಪಂಪಾಕ್ಷೇತ್ರ ಅಥವಾ ಕಿಷ್ಕಿಂಧ, ಕಾರ್ತಿಕೇಯ ಕ್ಷೇತ್ರ, ಉಚ್ಚಂಗಿದುರ್ಗ ಮತ್ತು ಬಳ್ಳಾರಿ ಮೊದಲಾದ ಸ್ಥಳಗಳ ಸುತ್ತ ಅನೇಕ ಪೌರಾಣಿಕ ಕಥನಕಗಳು ಹುಟ್ಟಿಕೊಂಡಿವೆ. ಅವುಗಳ ಹೆಸರು ಮತ್ತು ಮಹತ್ವದ ಕುರಿತು ದಂತಕಥೆ, ಮಹಾಕಾವ್ಯ, ಸ್ಥಳಪುರಾಣ, ಶಾಸನಗಳಲ್ಲಿ ಉಲ್ಲೇಖವಾಗಿರುವುದು ಗಮನಾರ್ಹ. ಆ ಕುರಿತ ವಿವರ ಮುಂದಿನಂತಿದೆ.

ಅ. ಪಂಪಾಕ್ಷೇತ್ರ- ಕಿಷ್ಕಿಂಧ

ಹಂಪಿ ಪ್ರಾಚೀನ ಕಾಲದಿಂದಲೂ ಪಂಪಾ ವಿರೂಪಾಕ್ಷರ ವಾಸಸ್ಥಾನವೆಂಬ ಹೇಳಿಕೆ ಪ್ರಸಿದ್ದವಾಗಿದೆ. ಅಲ್ಲಿ ಪಂಪಾದೇವಿ ಶಿವನನ್ನು ಕುರಿತು ತಪಸ್ಸು ಕೈಗೊಂಡು ಲಗ್ನವಾದಳೆಂಬ ನಂಬಿಕೆ ಬೆಳೆದು ಬಂದಿದೆ. ಶಾಸನಗಳು ಇದನ್ನು ಪಂಪಾಕ್ಷೇತ್ರ, ಭಾಸ್ಕರ ಕ್ಷೇತ್ರವೆಂದು ಕರೆದಿವೆ. ಬಾದಮಿ ಚಾಲುಕ್ಯ ಅರಸ ವಿನಯಾದಿತ್ಯನ ಕ್ರಿ.ಶ. ೬೮೬ರ ತಾಮ್ರಪಟ ಶಾಸನದಲ್ಲಿ (I.A.VI, P. ೮೫) “ಪಂಪಾತಟ ಮಧಿವಸಾತಿ ವಿಜಯಸ್ಕಂಧಾವಾರ” ಎಂದಿದೆ. ಇದರಿಂದ ವಿಜಯದ ಬಿಡಾರವನ್ನು ಪಂಪಾನದಿಯ ದಂಡೆಯ ಮೇಲೆ ಬಿಡಲಾಗಿತ್ತೆಂದು ತಿಳಿಯುತ್ತದೆ. ಕ್ರಿ.ಶ. ೧೪೦೬ರ ಮೋರಗೆರಿ ಶಾಸನದಲ್ಲಿ (S.I.I.IX (i), ೧೦೪, ೧೦೪೬, ಮೋರಗೆರೆ (ಹಗರಿಮೊಮ್ಮನಹಳ್ಳಿ ತಾ.) ಈ ಪ್ರದೇಶದ ಪ್ರಮುಖ ದೇವತೆಯಾದ ವಿರೂಪಾಕ್ಷ ದೇವನ ಉಲ್ಲೇಖವಿದೆ. ಹಂಪಿಯ ದುರ್ಗಾ ದೇವಾಲಯದ ಹತ್ತಿರವಿರುವ ಎರಡನೆಯ ರಾಚಮಲ್ಲದ ಶಾಸನದಲ್ಲಿ (ಅದೇ.IV ೨೬೦, ೧೧೯೯, ಹಂಪಿ (ಹೊಸಪೇಟೆ ತಾ.) ಪಂಪಾತೀರ್ಥದ ‘ಹಂಪಾದೇವಿ’ ವಿರೂಪಾಕ್ಷ ದೇವ ‘ಭೈರವ ದೇವರಿಗೆ‘ ದಾನ ಕೊಟ್ಟ ವಿಷಯವಿದೆ. ಕ್ರಿ.ಶ. ೧೧೬೪ರ ಕಲಚೂರಿ ಬಿಜ್ಜಳನ ಶಾಸನದಲ್ಲಿ (Sundar A. Hampi: Ancient Kishkinda, P. 34-38) ವಿರೂಪಾಕ್ಷನ ಸನ್ನಿಧಿಯಲ್ಲಿ ಕುಕನೂರಿನ ಮಲ್ಲಿಕಾರ್ಜುನ ದೇವರಿಗೆ ಗ್ರಾಮವನ್ನು ದತ್ತಿ ಬಿಡಲಾಗಿದೆ. ಕ್ರಿ.ಶ. ೧೨೩೭ರ ಸೋಮೇಶ್ವರ ದೇವರ ಶಾಸನದಿಂದ (Rajasekhara S., Inscriptions of Vijayanagar, Vijayanagar City and Empire, Vol.I) ವಿರೂಪಾಕ್ಷನ ಆರಾಧನೆಗಾಗಿ ಹಣ ದಾನ ಮಾಡಿದ ವಿಷಯ ತಿಳಿಯುತ್ತದೆ. ಇವುಗಳಿಂದ ಕ್ರಿ.ಶ. ೭ನೆಯ ಶತಮಾನದ ಮುಂಚಿನಿಂದಲೇ ಪಂಪಾಕ್ಷೇತ್ರದ ‘ವಿರೂಪಾಕ್ಷ ಹಂಪಾದೇವಿ’ಯರ ಆರಾಧನೆ ನಡೆದು ಬಂದಿತೆಂದು ಸ್ಪಷ್ಟವಾಗುತ್ತದೆ.

ಪಂಪಾಕ್ಷೇತ್ರದೊಂದಿಗೆ ಈ ಸ್ಥಳಕ್ಕೆ ಕಿಷ್ಕಿಂಧ ಎಂಬ ಹೆಸರು ಬಹು ಹಿಂದಿನಿಂದಲೇ ಪ್ರಚಲಿತವಿತ್ತು. ಪ್ರಾಗೈತಿಹಾಸ ಕಾಲದಿಂದ ೧೫ನೆಯ ಶತಮಾನದವರೆಗೆ ನಡೆದು ಬಂದ ಚಟುವಟಿಕೆಗಳಿಂದ ಇದು ಪ್ರಾಚೀನ ಕಾಲದ ಕಿಷ್ಕಿಂಧವಾಗಿತ್ತೆಂದು ತಿಳಿಯುತ್ತದೆ. ಈ ಭಾಗದಲ್ಲಿ ಅನೇಕ ವರ್ಷಗಳವರೆಗೆ ಸಂಸೋಧನೆ ಅಧ್ಯಯನ ಮಾಡಿದ ಅ. ಸುಂದರ ಅವರು ಇದಕ್ಕೆ ಸಂಬಂಧಿಸಿದ ಕೆಲವು ಆಕರಗಳನ್ನು ಒದಗಿಸಿದ್ದಾರೆ. ಇಲ್ಲಿಯ ಪಂಪಾಸರೋವರ, ಋಷ್ಯ ಮುಖ ಪರ್ವತ, ವಾಲಿಭಂಡಾರ, ಮತಂಗಪರ್ವತ, ಅಂಜನಾದ್ರಿ, ಇದಕ್ಕೆ ಹತ್ತಿರವಿದ್ದ ಕಾರ್ತೀಕೆಯವನ (ಕುಡತಿನಿ), ಋಷ್ಯಶೃಂಗಮುನಿ ಆಶ್ರಮ (ಸಿರಸಂಗಿ) ಇತಿಹಾಸ ಕಾಲದ ಅನೇಕ ಶಾಸನಗಳು ರಾಮಾಯಣದ ಕಿಷ್ಕಿಂದವಾಗಿತ್ತೆಂಬುದನ್ನು ಪುಷ್ಟೀಕರಿಸುತ್ತವೆ.

ಶಿರಸಂಗಿ ಕಾಳಮ್ಮ ದೇವಾಲಯದಲ್ಲಿರುವ ಶಾಸನದಲ್ಲಿ “..ಹಿಮವತ್ಪರ್ಬ್ಭತ ವಿಂಧ್ಯಶೈಳಪತಿ ಕಿಷ್ಕಿಂಧಾದ್ರಿ ಈ ಮೂಮಿ ಭೂದ್ರಮೆ ಪೂವ್ವಾಂಪರ ವಾರ್ದ್ಧಿಯಾಂಕೆ ನಿಜ ವಿಸ್ತಾರಕ್ಕೆನಲು ನೀಳ್ದವಾ ಹಿಮವದ್ವಿಂಧ್ಯಧರಾಧರಂಗಳೆಂರಡಕ್ಕಂ ತಾನೇ ಮೇಲಾದೆದೆ(ದುದು)ತ್ತಮ ಕಿಷ್ಕಿಂಧಗಿರೀಂದ್ರವೆ (ಉ)ತ್ತಮ ಜನೌಘಂ ತಂನೊಳೊಪುತ್ತಿರಲು ಅವರಾರೆನೆ ತರದಿಂ ಬಾಲಿಮರತ್ಸುತಾಂಗದದಿನೇಶಾಪತ್ಯತಾರಾ  ಮನೋಹರಿ ವಿಪ್ರರ್ಷಿ ಮತಂಗ ಹಂಸ ಕಪಿಲ ಶ್ರೀಶೌನಕಾಗಸ್ತ್ಯ ಸಚ್ಚರಿತೋದ್ಭಾಸಿ ವಿಭಾಂಡಕ ಪ್ರಿಯಸುತ ಶ್ರೀರಿಶ್ಯಶ್ರೀಂಗ ಬ್ರತೀಶ್ವರರ್ಗಾಯಿತಾಶ್ರಯವಂತ ದೆಂಬೆನ ವಿ ಯೆಂ ಕಿಷ್ಕಿಂಧಮಂ ಬಣ್ಣಿಸಲು” ಎನ್ನುವುದರಿಂದ.

ಪೂರ್ವ ಪಶ್ಚಿಮ ಹಾಗೂ ಸಮುದ್ರ ಪರ್ಯಂತ ವಿಸ್ತಾರವಾದ ಭೂಮಿಗೆ ಹಿಮವತ್ಪರ್ವತ, ವಿಂಧ್ಯ ಹಾಗೂ ಕಿಷ್ಕಿಂಧ ಈ ಮೂರು ಪರ್ವತಗಳು ಉನ್ನತವಾದವು. ಮೂರು ಪರ್ವತಗಳಲ್ಲಿ ಅತ್ಯಂತ ಶ್ರೇಷ್ಠವಾದುದು, ಉತ್ತಮವಾದುದು ಎಂದರೆ ಕಿಷ್ಕಿಂಧಾಗಿರಿಯೇ. ಇದು ಜನನಿಬಿಡ ನಗರವಾಗಿತ್ತು. ಅದರಲ್ಲಿ ವಾಲಿ, ಮರುತ್ಸುತ, ಅಂಗದ, ದಿನೇಶ, ಮತಂಗ, ಹಂಸ, ಕಪಿ, ಶೌನಕ, ಅಗಸ್ತ್ಯ, ವಿಭಾಂಡಕನ ಪುತ್ರ ಋಷ್ಯಶೃಂಗ ಮೊದಲಾದ ಋಷಿಗಳಿಗೆ ಆಶ್ರಮಸ್ಥಾನವಾಗಿತ್ತೆಂದು ವರ್ಣಿಸುತ್ತದೆ. ಹಂಪಿಯಿಂದ ೧೦ ಕಿ.ಮೀ. ದೂರದಲ್ಲಿ ದೇವಿಘಾಟ್ ಎಂಬಲ್ಲಿ ಕ್ರಿ.ಶ. ೧೦೭೯ರ ಶಾಸನದಲ್ಲಿ. (Sundar A., “New light Trnds in Anegondi Region during Vijayanagara priod” Early Vijayanagar) ‘ತುಂಗಭದ್ರಾ ತಟದ ಬಡಗ ಕಿಷ್ಕಿಂಧಾಮಿಪರ್ವತಂ’ ಎಂದು ಉಲ್ಲೇಖವಿದೆ. ಸುಮಾರು ೧೦೦೦ ವರ್ಷಗಳಿಂದ ಶಾಸನಗಳಲ್ಲಿ ಉಲ್ಲೇಖವಾಗುತ್ತ ಬಂದಿರುವ ಈ ಸ್ಥಳವು ಅಂದಿನ ಜನರಿಗೆ ಹಿಂದಿನಿಂದಳು ಪರಿಚಯವಿರುವುದುನ್ನು ತೋರಿಸುತ್ತದೆ.

ಯಾವುದೇ ಒಂದು ಘಟನೆಗೆ ಮೂಲ ಪ್ರೇರಣೆ ಇದ್ದೇ ಇರುತ್ತದೆ. ಇದರಿಂದ ಬಾಯಿಂದ ಬಾಯಿಗೆ  ಕಥೆಯ ರೂಪದಲ್ಲಿ ಬಂದಂಥ ಈ ಕಾವ್ಯಗಳು ನಂತರ ಇಡೀ ಭಾರತದ ಜನಸಾಮಾನ್ಯರನ್ನು ತಲುಪಲು ಸಾಧ್ಯವಾಯಿತು. ಭವಭೂತಿ, ಭಾಸ, ಕಾಳಿದಾಸ ಮೊದಲಾದ ಕವಿಗಳು, ಶಿಲ್ಪಿಗಳು, ಚಿತ್ರಕಾರರು, ಸಂಗೀತಗಾರರು ಇತಿಹಾಸದುದ್ದಕ್ಕೂ ತಮ್ಮ ಕೃತಿಗಳಲ್ಲಿ ಬಳಸಿಕೊಳ್ಳಲು ಕಾರಣವಾಯಿತು.

ಆ. ಕಾರ್ತಿಕೇಯ ಕ್ಷೇತ್ರ

ಕುಡತಿನಿ ಮತ್ತು ಸಂಡೂರು ಪ್ರದೇಶವನ್ನು ಕಾರ್ತಿಕೇಯ ಕ್ಷೇತ್ರವೆಂದು ಕರೆಯಲಾಗುತ್ತದೆ. ಸ್ಥಳಪುರಾಣದ ಉಲ್ಲೇಖದಂತೆ ಈ ಪರ್ವತಕ್ಕೆ ಕೃತಯುಗದಲ್ಲಿ ‘ದೇವಗಿರಿ’  ಎಂದೂ ತ್ರೇತಾಯುಗದಲ್ಲಿ ‘ಸ್ವರ್ಣಗಿರಿ’ಯೆಂದೂ ದ್ವಾಪರಯುಗದಲ್ಲಿ ‘ದ್ವಿವ್ಯಾಚಲ’ವೆಂದೂ ಕಲಿಯುಗದಲ್ಲಿ ‘ಲೋಹಾಚಲ’ವೆಂದೂ ಕರೆಯಲಾಗುತ್ತಿತ್ತು. (ಬ್ರಹ್ಮಶ್ರೀ ಬಾಲಚಂದ್ರ ಶಾಸ್ತ್ರೀ, ಶ್ರೀ ಸ್ಕಂದ ಕ್ಷೇತ್ರ ಮಹಾತ್ಮೆ, ಪು. ೩) ತಾರಕಾದಿ ಅಸುರರ ಸಂಹಾರಕ್ಕಾಗಿ ಸ್ವಾಮಿ ಕಾರ್ತಿಕೇಯನು ಬ್ರಹ್ಮಾದಿ ದೇವತೆಗಳಿಂದ ಪ್ರಾರ್ಥನೆ ಮಾಡಿಸಿ ಕೊಂಡು ದೇವಸೇನಾಧಿಪತ್ಯವನ್ನು ವಹಿಸಿ ಒಂದು ಈ ಪರ್ವತದಲ್ಲಿ ನೆಲೆನಿಂತನೆಂಬ ಪ್ರತೀತಿ ಇದೆ. ರಾಮಾಯಣ ಕಾಲದಲ್ಲಿ ರಾಮಾಯಣ ಕಾಲದಲ್ಲಿ ರಾಮ, ಮಹಾಭಾರತದ ಕಾಲದಲ್ಲಿ ಪಾಂಡವರು ಮತ್ತು ಅಗಸ್ತ್ಯ ಋಷಿ ಮೊದಲಾದವರು ಈ ಸ್ಥಳಕ್ಕೆ ಭೇಟಿ ನೀಡಿದರೆಂಬ ನಂಬಿಕೆ ಇದೆ. ಕಾರ್ತಿಕೇಯ ದೇವಾಲಯದ ಮುಂಭಾಗದಲ್ಲಿರುವ ಪಂಚಲಿಂಗಗಳು ಪಂಚಪಾಂಡವರಿಂದ ಸ್ಥಾಪಿಸಲ್ಪಟ್ಟವೆಂದೂ, ಭೀಮತೀರ್ಥ ಭೀಮನ ಗದೆಯಿಮದ ಉಂಟಾದುದೆಂದೂ ಹೇಳಿಕೆಯಿದೆ. ಆದಿಕಾಲದಿಂದ ಅನೇಕ ನಂಬಿಕೆ, ಸಂಪ್ರದಾಯಗಳಿಗೆ ಒಳಗಾದ ಈ ಪ್ರದೇಶದಲ್ಲಿ ಉಲ್ಲೇಖಿತ ಕೈಫಿಯತ್ತನ್ನೇ ಆಧಾರವನ್ನಿಟ್ಟುಕೊಮಡು ಕ್ಷೇತ್ರಕಾರ್ಯ ಕೈಗೊಂಡಾಗ ಕೆಲವು ಮಾಹಿತಿಗಳು ಲಭ್ಯವಾದವು.

ಕೈಫಿಯತ್ತಿನ ಪ್ರಕಾರ (ಕಲಬುರ್ಗಿ ಎಂ.ಎಂ. (ಸಂ), ಕರ್ನಾಟಕದ ಕೈಫಿಯತ್ತುಗಳು, ಪು. ೫೪೦-೫೫೧) ‘ಷಣ್ಮುಖನು ಕೈಲಾಸದಿಂದ ಒಂದು ಪಂಪಾಕ್ಷೇತ್ರಕ್ಕೆ ಅಗ್ನಿ ಭಾಗದಲ್ಲಿ ಹತ್ತು ಹರದಾರಿಯ ಮೇಲೆ ಕೆಲವು ಅರಣ್ಯವಾದ ಸ್ಥಳದ ಮಧ್ಯದಲ್ಲೊಂದು ಪಾತಾಳಗೃಹದ ಒಳಗೆ ಕುಳಿತು ಇರಲಾಗಿ, ಪಾರ್ವತಿ ಪ್ರತ್ರಮೋಹದಿಂದಾಗಿ ಹುಡುಕುತ್ತ ಬರಲಾಗಿ, ಆ ಷಣ್ಮುಖನು ತಾಯಿನ ಕಂಡು, ಗೃಹದ ಒಳಗಿಂದಾ ಇಲ್ಲಿ ನೈರುತ್ಯ ಭಾಗದಲ್ಲಿ ಏಳು ಹರದಾರಿಯಲ್ಲಿ ಇರುವಂತಾ ಅರಣ್ಯ ಪ್ರದೇಶಕ್ಕೆ ಹೋಗಿ, ಅಲ್ಲೊಂದು ಪರ್ವತದ ಮೇಲೆ ನಿಂತರು, ಇಲ್ಲಿಂದಾ ಷಣ್ಮುಖಸ್ವಾಮಿ ಬಿಲದ್ವಾರದಿಂದಾ ಹೋಗಿ ಆ ಬೆಟ್ಟದ ಮೇಲೆ ಹೋಗಿ ನಿಂತ ಕಾರಣ ಆ ಬೆಟ್ಟಕ್ಕೆ ದೇವದ್ವಾರ ಪರ್ವತವೆಂದು ನಾಮ ಪ್ರಸಿದ್ಧಿಯಾಗಿ ಇದೆ. ಅದಕ್ಕೆ ಸಾಮಾನ್ಯ ಜನರು ಅವರ ಅಜ್ಞಾನತತ್ವದಿಂದ ದೇವದಾರಿ ಬೆಟ್ಟವೆಂದು ಹೇಳಿಕೊಳ್ಳುತ್ತಿದ್ದಾರೆ. ಅದೇ ಜಾಗಕ್ಕೆ ಕೆಲವು ಜನರು ಪಾದ ಗಟ್ಟೆಯೆಂಬುವ ನಾಮವೆಂದು ಹೇಳಿಕೊಳ್ಳುತ್ತಾಯಿದ್ದಾರೆ.

ಅಲ್ಲಿ ನಿಂತವನಾಗಿ ಅಷ್ಟದಿಕ್ಕನ್ನು ನೋಡಿ ನಾನು ಇರುವುದಕ್ಕೆ ಆ ಪರ್ವತಕ್ಕೆ ದಕ್ಷಿಣ ಭಾಗದಲ್ಲೂ ಎರಡು ಹರದಾರಿ ಪರ್ವತದ ಅಗಸ್ತ್ಯ ಆಶ್ರಮಕ್ಕೆ ಪಶ್ಚಿಮ ಭಾಗಕ್ಕೆ ನಿಮ್ಮನ್ನು ಪಾರ್ವತಿ ಪರಮೇಶ್ವರನು ಆ ಪರ್ವತದ ಒಳಗೆ ಬಂದಲ್ಲಿ ಈ ಸ್ಥಳದಲ್ಲಿ ಪಾರ್ವತಿಗೆ ಮೊಲಿಯ ತೋರುತ್ತಾ ಈ ಸಾರೋಧಾರವಾಗಿ ಕ್ಷೀರವನ್ನು ಸುರಿಯಲಾಗಿ, ಆ ಸ್ಥಳ ಶ್ವೇತವರ್ಣವು ಇದ್ದುದರಿಂದ ಜನರು ವಿಭೂತಿ ಬೆಟ್ಟವೆಂದು ಪ್ರಸಿದ್ಧಿಯಾಯಿತು.

ನಮ್ಮ ಪುತ್ರನು ಇದ್ದಾನೆಂದು ನಿಶ್ಚಿಯಿಸಿ, ಹುಡುಕುತ್ತಾ ಇರಲಾಗಿ ಗುಪ್ತಾ ಗುಹ್ಯ ವೆಂಬುದರಲ್ಲಿ ಕಾಣಲಾಗಿ ಗುಪ್ತಸ್ವಾಮಿಯೆಂಬುವ ನಾಮಯಿಟ್ಟು…. ದೈತ್ಯರ ಸಂಹಾರ ಮಾಡಲಾಗಿ ಅವರ ಶ್ರೋಣಿತವನ್ನು ಹರಿಯಲಾಗಿ, ನದಿ ಪ್ರವಾಹವಾಗಿ ಹರಿಯಲಾಗಿ ಶ್ರೋಣಿಪುರ ಎಂಬುವವನಿದ್ದ ಪಟ್ಟಣ ಪ್ರದೇಶಕ್ಕೆ ನಾಮವಾಯಿತು. ಕುಮಾರಸ್ವಾಮಿ ಇದ್ದ ಕಾರಣ ಸ್ಕಂದ ಪುರಾಯಂಬೊ ನಾಮವೂ ಪ್ರಬಲವಾಯಿತು.

ಈ ಸ್ಥಳದಲ್ಲಿ ಕುಮಾರಸ್ವಾಮಿ ಕುಲಿತು ಹೋದ ತರಿವಾಯ, ಕಲಿಯುಗದಲ್ಲಿ ಕಲ್ರಿ(ರಿ)ರಿ ಚೋಳಮಹಾರಾಜರು… ಅರಸನ ಮಗಳಿಗೆ, ಬ್ರಹ್ಮರಾಕ್ಷಸನ ಘಟನೆಯಾದ್ದರಿಂದ, ಎಷ್ಟು ಸಮರ್ಥರಾಗಿದ್ದ ಮಂತ್ರದಿಂದ ಅಸಾಧ್ಯ ಆದುದರಿಂದ…ಯಿದೆ (ವೈದ್ಯ) ರಾದವರನ ಕರೆಸಿ ಇದಕ್ಕೆ ಸಾಧನವೇನೆಂದು ಕೇಳಲಾಗಿ ಅವರು ಹೇಳಿದ್ದು ‘ದೇವರ ಸೇವೆಯಿಂದಲೇ ನಿರ್ವಾಹಕವಾಗಬೇಕೇ’ ಹೊರತು ಮನುಷ್ಯ ಮಾತ್ರದವರ ಕೈಯಿಂದಾ ನಿರ್ವಾಹವಾಗಲಿಕ್ಕಿಲ್ಲ. ಆದ್ದರಿಂದ ಒಂದು ದಿವಸಕ್ಕೆ ಈಶ್ವರ ದೇವಾಲಯವೊಂದು ಬಾವಿಯನ್ನು ಈ ಪ್ರಕಾರ ಕಟ್ಟಿಸಿದರೆ ಬ್ರಹ್ಮರಾಕ್ಷಸ ಬಿಟ್ಟುಹೋದಿತೆಂದು ಹೇಳಿದ ಕಾರಣ ದೇವಾಲಯಗಳು ಬಾವಿಗಳು ಕಟ್ಟಿಕೊಳ್ಳುತ್ತ ಈ ಸ್ಥಳಕ್ಕೆ ಬಂದು, ಈ ಸ್ಥಳದಲ್ಲೂ ಆ ವೇಳೆಗೆ ಇದ್ದ ಋಷಿಗಳನ್ನು ಕಂಡು ನಮಸ್ಕಾರ ಮಾಡಿ ಈ ಸ್ಥಳದ ಮಹತ್ವಯೇನು? ‘ಎಂದು ವಿಚಾರಿಸಲಾಗಿ ಅವರು ಹೇಳಿದ್ದು, ಈ ಸ್ಥಳದಲ್ಲೊಂದು ಪಾತಾಳಗೃಹವಿದ್ದಿತು. ಅಲ್ಲಿ ಪೂರ್ವದಲ್ಲಿ ಈಶ್ವರನ ಪುತ್ರನಾದ ಕುಮಾರಸ್ವಾಮಿ ಬಂದು ಕುಳಿತನು. ಆದ್ದರಿಂದ ಈ ಸ್ಥಳಕ್ಕೆ ಕೊಮಾರ ಕ್ಷೇತ್ರವೆಂದು ತಪ್ಪಸ್ಸು ಮಾಡಿಕೊಳ್ಳುತ್ತ ಇದ್ದೇವೆ’… ಇದು ಮಹಾಕ್ಷೇತ್ರವೆಂದು ತಿಳಿದು ನೂರೊಂದು ದೇವಾಲಯಗಳ ಕಟ್ಟಿ ಆ ದೇವಾಲಯಗಳಿಗೆ ಈಶ್ವರಲಿಂಗ ಪ್ರತಿಷ್ಠೆ ಮಾಡಿಸಿ ಹಾಗೆ ನೂರೊಂದು ಬಾವಿಗಳನ್ನು ಕಟ್ಟಿಸಿ, ಆ ದೇವರುಗಳಿಗೆ ಧೂಪ, ದೀಪ ನೈವೇದ್ಯ ಅಮೃತಪಡಿ ನಂದಾದೀಪಾದಿಗಳು ನಡೆಸುವ ಹಾಗೆ ಭೂಸ್ವಾಸ್ತಿಯನ್ನು ನಿರ್ಣಯಿಸಿ ಹಾಗೆ ಕೆಲವು ಅಗ್ರಹಾರಗಳ ಏರ್ಪಾಡು ಮಾಡಿ ಬ್ರಹ್ಮರಿಗೆ ಧಾರಾಪೂರ್ವಕ ಮಾಡಿಬಿಟ್ಟರು…. “ಪೂರ್ವದಲ್ಲಿ ಕೊಮಾರಸ್ವಾಮಿ ಇಲ್ಲಿ ಕುಳಿತಾ” ಎಂದು ಋಷಿಗಳು ಹೇಳಿದ ಕಾರಣ ಕುಳಿತನೋಯೆಂಬ ಅಗ್ರಹಾರವೆಂದು ಗ್ರಾಮಕ್ಕೆ ವ್ಯವಹಾರ ನಾಮವೆಂದು ಪ್ರಸಿದ್ಧಿಯಾಯಿತು.

ಮೇಲಿನ ವಿಷಯವನ್ನು ಗಮನಿಸಿದಾಗ ಕುಡತಿನಿ ಗ್ರಾಮದ ಮೂಲ ಹೆಸರು ಕುಳಿತನೋಯೆಂಬ ಅಗ್ರಹಾರವಾಗಿದ್ದು, ರಾಷ್ಟ್ರಕೂಟರಿಂದ ವಿಜಯನಗರ ಕಾಲಾವಧಿಯಲ್ಲಿ ಅಗ್ರಹಾರ ಕೊಟ್ಟಿತೊನೆ ನಂತರ ಕುಡತಿನಿ (ಕುಳಿತನೋ> ಕೊಟ್ಟಿತೊನೆ>ಕುಡತಿನಿ) ಎಂದಾಯಿತು.

ಈ ಕೈಫಿಯತ್ತಿನಲ್ಲಿ ಹೆಸರಿಸಲಾದ ಸ್ಥಳಗಳನ್ನು ಪರಿಶಶೀಲಿಸಿದಾಗ, ಈ ಕೆಳಗಿನ ಅಂಶಗಳು ಕಂಡುಬರುತ್ತವೆ.

೧. ಕುಮಾರನು ಕೈಲಾಸದಿಂದ ಬಂದು ಪಂಪಾಕ್ಷೇತ್ರದಿಂದ ಹತ್ತು ಹರದಾರಿ ಆಗ್ನೇಯಕ್ಕೆ ಅರಣ್ಯ ಪ್ರದೇಶದಲ್ಲಿ ಪಾತಾಳಗೃಹದಲ್ಲಿ ಕುಳಿತುಕೊಳ್ಳುತ್ತಾನೆ. ಈ ಗ್ರಾಮದ ಮಧ್ಯದಲ್ಲಿರುವ ಕುಮಾರಸ್ವಾಮಿ ದೇವಾಲಯದಲ್ಲಿ ಒಂದೇ ಸಾಲಿನಲ್ಲಿ ಮೂರು ಗರ್ಭಗೃಹಗಳಿವೆ. ಅವುಗಳಲ್ಲಿ ಬಲಭಾಗ ಗಣೇಶ, ಮಧ್ಯೆ ಕುಮಾರಸ್ವಾಮಿ ಮತ್ತು ಎಡಭಾಗ ವಿಷ್ಣು ಅಥವಾ ನಾರಾಯಣನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಕುಮಾರಸ್ವಾಮಿ ಮತ್ತು ವಿಷ್ಣುವಿನ ಗರ್ಭಗೃಹಗಳ ಮಧ್ಯದ ಗೋಡೆಯಲ್ಲಿ ಒಂದು ಚಿಕ್ಕ ಕಿಂಡಿಯನ್ನು ಬಿಡಲಾಗಿದೆ. ಈ ಕಿಂಡಿಯನ್ನು ಪ್ರವೇಶಿಸಿದರೆ ಒಂದು ಚೌಕಾಕಾರದ ಗವಿ. ಅದರ ದಕ್ಷಿಣ ಭಾಗದಲ್ಲಿ ಅಂದರೆ ಕುಮಾರಸ್ವಾಮಿ ಗರ್ಭಗೃಹದ ತಳಭಾಗ ಅದು ಪಾತಾಳಕ್ಕೆ ಮುಂದುವರೆದುಕೊಂಡು ಹೋಗಿದೆ. ಸ್ಥಳೀಯ ಜನರು ಈ ಗವಿಯಲ್ಲಿ ಋಷಿಗಳು ತಪಸ್ಸು, ಮಾಡುತ್ತಿದ್ದರೆಂದು ಹೇಳುತ್ತಾರೆ. ಈ ಗವಿಯ ಮೇಲೆ ಕ್ರಿ.ಶ. ೯೬೭ರಲ್ಲಿ ಗದಾಧರನು ಒಂದು ಚಿಕ್ಕ ದೇವಾಲಯವನ್ನು ಕಟ್ಟಿಸಿ ಅದರಲ್ಲಿ ಸ್ಕಂದನ ಮೂರ್ತಿ ಪ್ರತಿಷ್ಠಾಪಿಸಿದನು. ನಂತರ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಮೂರು ಗರ್ಭಗೃಹಗಳನ್ನು ಹೊಂದಿದ ವಿಶಾಲವಾದ ದೇವಾಲಯವನ್ನು ಪುನಃ ನಿರ್ಮಿಸಲಾಯಿತು. ಈ ದೇವಾಲಯದ ಎರಡು  ಗರ್ಭಗೃಹಗಳ ಪ್ರವೇಶ ದ್ವಾರದ ದ್ವಾರಪಾಲಕರ ಕೈಗಳಲ್ಲಿ ತ್ರಿಶೂಲ ಡಮರುಗಳಿದ್ದರೆ, ಒಂದು ಗರ್ಭಗೃಹದ ಪ್ರವೇಶದ್ವಾರದ ದ್ವಾರಪಾಲಕರ ಕೈಗಳಲ್ಲಿ ಶಂಕ, ಚಕ್ರಗಳಿವೆ. ಈಗ ಗರ್ಭಗೃಹದಲ್ಲಿ, ಗಣೇಶನ ಮೂರ್ತಿ ಇದ್ದು, ಮೊದಲಿದ್ದ ಕಾರ್ತಿಕೇಯ, ವಿಷ್ಣುವಿನ ಮೂರ್ತಿಗಳು ಹಾಳಾಗಿವೆ.

೧. ಕುಮಾರನು ಪಾತಾಳಗೃಹದ ಒಳಗಿಂದ ನೈರುತ್ಯ ಭಾಗದಲ್ಲಿ ಏಳು ಹರದಾರಿಯಲ್ಲಿರುವ ಪರ್ವತದ ಮೇಲೆ ನಿಂತುಕೊಳ್ಲುತ್ತಾನೆ. ಸಂಡೂರಿನ ಈಶಾನ್ಯ ಭಾಗದಲ್ಲಿರುವ ದೇವದಾರಿ ಬೆಟ್ಟ ಅಥವಾ ಪಾದಗಟ್ಟೆ ಎಂದು ಕರೆಯುವ ಪರ್ವತದ ಮೇಲೆ ದೊಡ್ಡ ದೊಡ್ಡ ಬಂಡೆಗಳ ಮೇಲೆ ಪಾದಗಳನ್ನು ಕೊರೆಯಲಾಗಿದೆ. ಮೂರು ದಿಕ್ಕುಗಳಲ್ಲಿರುವ ಪಾದಗಳ ಮೇಲೆ ದೇವಾಲಯಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ಪಾದಗಳು ಕುಮಾರಸ್ವಾಮಿಯವೆಂದು ಸ್ಥಳೀಯ ಜನರು ಕರೆಯುತ್ತಾರೆ. ಕೈಫಿಯತ್ತಿನಲ್ಲಿ ಉಲ್ಲೇಖಿಸಿದಂತೆ ಕುಮಾರನು ಪರ್ವತದ ಮೇಲೆ ನಿಂತು ಅಷ್ಟದಿಕ್ಕುಗಳನ್ನು ವೀಕ್ಷಿಸಿದನು ಎಂಬುದಕ್ಕೆ ನಾಲ್ಕು ದಿಕ್ಕುಗಳಿಗಿರುವ ಪಾದಗಳು ಸರಿಹೊಂದುತ್ತವೆ.

೨. ದೇವದಾರಿ ಬೆಟ್ಟದಿಂದ ಎರಡು ಹರದಾರಿ ದಕ್ಷಿಣಕ್ಕೆ ಪರ್ವತದ ಮೇಲೆ ನಿಂತು ಪಾರ್ವತಿಗೆ ಮೊಲೆ ತೋರುತ್ತ ಸಾರೋಧಾರವಾಗಿ ಕ್ಷೀರವನ್ನು ಸುರಿಯುತ್ತಾನೆ. ಪಾರ್ವತಿ, ಪರಮೇಶ್ವರರು ಕುಮಾರನಿಗೆ ಲಗ್ನವಾಗಲು ಹೇಳುತ್ತಾರೆ. ಅದಕ್ಕೆ ಕುಮಾರನು ಒಪ್ಪದಿದ್ದಾಗ ಪಾರ್ವತಿ ‘ಎಲೈ ಕುಮಾರ, ಚಿಕ್ಕಂದಿನಿಂದ ನಿನಗೆ ಸ್ತನ್ಯಪಾನ ಮಾಡಿಸಿ ಹಾಲು-ಬೆಣ್ಣೆ ಕೊಟ್ಟು ಪೋಷಿಸಿದ್ದಕ್ಕೆ ಚೆನ್ನಾಗಿ ಉಪಕಾರ ತೀರಿಸಿದೆ ಎಂದಳು. ಇದಕ್ಕೆ ಸ್ಕಂದನು, ತೆಗೆದುಕೋ ನಿನ್ನ ಹಾಲು-ಬೆಣ್ಣೆ ಎಂದು ವಾಂತಿ ಮಾಡಿಕೊಳ್ಳುತ್ತಾನೆ. ಈ ಸ್ಥಳವು ಸಂಡೂರು ಕುಮಾರಸ್ವಾಮಿ ಬೆಟ್ಟದಲ್ಲಿ ಅಗಸ್ತ್ಯ ತೀರ್ಥದಿಂದ ಒಂದು ಮೈಲು ಪೂರ್ವಭಾಗದಲ್ಲಿದೆ. ಕುಮಾರನು ಹಾಲು ವಾಂತಿ ಮಾಡಿಕೊಂಡಿದ್ದರಿಂದ ಕೆಂಪು-ಬಿಳಿ ಬಣ್ಣದ್ದಾಗಿದೆ ಎಂದು ನಂಬಿಕೆ ಮತ್ತು ಜನರು ಇದನ್ನು ವಿಭೂತಿ ಬೆಟ್ಟವೆಂದು ಕರೆಯುತ್ತಾರೆ.

೩. ಪಾರ್ವತಿ ಪರಮೇಶ್ವರರು ಕುಮಾರನನ್ನು ಹುಡುಕುತ್ತ ಇದ್ದಾಗ ಗುಪ್ತಗುಹೆಯಲ್ಲಿ ಕಾಣಿಸಿಕೊಂಡಿದ್ದರಿಂದ ಗುಪ್ತಸ್ವಾಮಿ ಎಂದು ಹೆಸರನ್ನಿಡುತ್ತಾರೆ ಕುಮಾರಸ್ವಾಮಿ ದೇವಾಲಯದಿಂದ ಸುಮಾರು ನಾಲ್ಕು ಮೇಲು ವಾಯವ್ಯಕ್ಕೆ ಒಂದೇ ಸ್ಥಳದಲ್ಲಿ ಪ್ರಕಟಸ್ವಾಮಿ ಮತ್ತು ಗುಪ್ತಸ್ವಾಮಿಯ ಗುಹೆಗಳಿವೆ. ಪಾರ್ವತಿಗೆ ಕುಮಾರನು ಇಲ್ಲಿ ಸಿಕ್ಕಿ (ಪ್ರಕಟ)ದ್ದರಿಂದ ಪ್ರಕಟಸ್ವಾಮಿ ಮತ್ತು ಗುಹೆಯಲ್ಲಿ ಕುಳಿತದ್ದರಿಂದ ಗುಪ್ತಸ್ವಾಮಿ ಎಂಬ ಹೆಸರುಗಳು ಬಂದವು. ಹೊರಮಲೈ ಸೀಮೆಯವರು ಈ ದೇವರುಗಳನ್ನು ಗುಪ್ತಸ್ವಾಮಿ, ಪ್ರಕಟಸ್ವಾಮಿಗಳೆಂದೇ ಕರೆಯುತ್ತಾರೆ. ಈಗಲೂ ಮಳೆ ಬರದೇ ಇದ್ದಾಗ ಈ ದೇವರುಗಳಿಗೆ ಪರವು ಮಾಡಿದರೆ ಗುಡ್ಡ ಇಳಿದು ಬರುವುದರೊಳಗೆ ಮಳೆ ಬರುತ್ತದೆಂದು ಅಲ್ಲಿಯ ಜನರ ನಂಬಿಕೆ.

೪. ಕುಮಾರ ದೈತ್ಯರನ್ನು ಸಂಹಾರ ಮಾಡಿದಾಗ ಅವರ ಶ್ರೋಣಿತವು ನದಿ ಪ್ರವಾಹವಾಗಿ ಹರಿಯುತ್ತದೆ ಈ ನದಿ ಸಂಡೂರು ಮತ್ತು ಕುಮಾರಸ್ವಾಮಿ ಬೆಟ್ಟದ ಮಧ್ಯದಲ್ಲಿದೆ. ಇದನ್ನು ಶ್ರೋಣಿತ ನದಿ ಎಂದು ಕರೆಯುತ್ತಾರೆ. ಇದನ್ನು ಗಮನಿಸಿದರೆ ದಂತಕಥೆ ಮತ್ತು ಪೌರಾಣಿಕ ಕಥೆಗಳಿಂದ ಕೂಡಿದ ಇವು ಮುಂದೆ ಚಾರಿತ್ರಿಕ ಸ್ಥಳಗಳಾಗಿ ಮಾರ್ಪಾಡುಗೊಂಡಿದ್ದು ಗಮನಾರ್ಹವಾಗಿದೆ.

ಇ. ಶತಕೋಟಿ ತೀರ್ಥ

ಕುಡತಿನಿ ಶಾಸನಗಳಲ್ಲಿ ಉಲ್ಲೇಖವಾದ ಶತಕೋಟಿ ತೀರ್ಥವು ಕುಮಾರ ಸ್ವಾಮಿ ದೇವಾಲಯದ ಅಂತರಾಳದಲ್ಲಿರುವ ತೀರ್ಥವೇ ಆಗಿದೆ. ಈ ತೀರ್ಥವನ್ನು ಸೇವಿಸಿದವರು ರೋಗಗಳಿಂದ ಮತ್ತು ಪಾಪಗಳಿಂದ ಮುಕ್ತರಾಗುವರೆಂಬ ನಂಬಿಕೆಯೂ ಕೂಡ ಇತ್ತು.

ಕರಿಕಾಲ ಜೋಳ ಮಹಾರಾಜನು ಇದು ಮಹಾಕ್ಷೇತ್ರವೆಂದು ತಿಳಿದು ನೂರೊಂದು ದೇವಾಲಯ ಮತ್ತು ಬಾವಿಗಳನ್ನು ಕಟ್ಟಿಸಿದನು. ಕರಿಕಾಲ ಚೋಳ ಮಹಾರಾಜನು ತಪೋವನದ ಋಷಿಗಳನ್ನು ಭೇಟಿಯಾದದ್ದು ಕುಡತಿನಿಯಲ್ಲಿ. ಈ ಪ್ರದೇಶದಲ್ಲಿಯೇ ನೂರೊಂದು ದೇವಾಲಯ ಮತ್ತು ಬಾವಿಗಳನ್ನು ಕಟ್ಟಿಸಿದನು. ಕುಡತಿನಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ನೂರಾ ಮೂವತ್ತಕ್ಕಿಂತಲೂ ಹೆಚ್ಚು ದೇವಾಲಯ ಮತ್ತು ನೂರಕ್ಕಿಂತಲೂ ಹೆಚ್ಚು ಬಾವಿಗಳಿದ್ದವೆಂದು ಸ್ಥಳೀಯ ಜನರಿಂದ ತಿಳಿದುಬರುತ್ತದೆ. ಈಗಲೂ ಕುಡತಿನಿ ಗ್ರಾಮದಲ್ಲಿ ಬಹಳಷ್ಟು ದೇವಾಲಯ ಮತ್ತು ಬಾವಿಗಳು ಇವೆ. ಅಲ್ಲದೆ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಹಾಳಾದ ದೇವಾಲಯ, ಅದರ ಅವಶೇಷಗಳು ಕಂಡುಬರುತ್ತವೆ.

ಈ. ಪಂಪಾ ಸರೋವರ

ಪಂಪಾ ಸರೋವರ ನಿಸರ್ಗ ನಿರ್ಮಿತ ಗುಹೆಗಳಲ್ಲಿ ಎರಡು ಸಾವಿರ ವರ್ಷಗಳ ಪೂರ್ವದ ವರ್ಣಚಿತ್ರಗಳಿವೆ. ಆನೆಗುಂದಿ ಹತ್ತಿರ ಗವಿಯೊಂದರಲ್ಲಿ ಮನುಷ್ಯನಿಗೆ ಉದ್ದ ಬಾಲವಿರುವುದು ಗಮನಾರ್ಹ. ಇಂಥ ಬಾಲವುಳ್ಳ ಮನುಷ್ಯರ ಚಿತ್ರಗಳು ಇದಕ್ಕೆ ಹತ್ತಿರದಲ್ಲಿ ಹಿರೇಬೆನಕಲ್ಲು, ಮಲ್ಲಾಪುರಗಳಲ್ಲೂ ಕಂಡುಬರುತ್ತವೆ. ವಾಲಿಭಂಡಾರದ ಬಂಡೆಯ ಮೇಲೆ ಹಲವಾರು ವಾನರರು ಹಣ್ಣುಗಳನ್ನು ಕೀಳುವುದು ಮತ್ತು ತಿನ್ನುತ್ತಿರುವುದನ್ನು ಚಿತ್ರಿಸಲಾಗಿದೆ. ಇದು ತಕ್ಕಮಟ್ಟಿಗೆ ಹನುಮಂತನು ಸೀತೆಯನ್ನು ಹುಡುಕಿ ಸಂತೋಷದಿಂದ ಹಣ್ಣುಹಂಪಲುಗಳಿಂದ ನಿಬಿಡಲಾದ “ಮಧುವನ”ವನ್ನು ಪ್ರವೇಶಿಸಿದ ಸಂದರ್ಭವನ್ನು ಸೂಚಿಸುತ್ತದೆ. ನವ ಬೃಂದಾವನ ಸಮೀಪ ನದಿ ದಂಡೆಯ ಮೆಲೆ ಚಿಂಚಲಕೋಟೆ ಇದೆ. ನಂತರದ ಅವಧಿಯಲ್ಲಿ ಒಂದುವರೆ ಮೀಟರ‍್ನಷ್ಟು ಎತ್ತರ, ಒಂದು ಮೀಟರ‍್ನಷ್ಟು ಅಗಲವಾಗಿರುವ ಗೋಡೆಯನ್ನು ಕೆತ್ತಿದ ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿ ನಿರ್ಮಿಸಿದ ಇದನ್ನು ಅದೇ ಹೆಸರಿನಿಂದ ಕರೆಯಲಾಗುತ್ತಿತ್ತೆಂದು “ಕಿಷ್ಕಿಂಧೆ ಹನುಮನ ತವರು” ಎನ್ನುವ ಲೇಖನದಲ್ಲಿ ಅ.ಸುಂದರ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬಲಶಾಲಿಯಾದ ವಾಲಿಗೆ ಹೆದರಿ ಸುಗ್ರೀವ-ಹನುಮಂತಾದಿಗಳು ಆತಂಕದಿಂದ ಕಾಲಕಳೆಯುತ್ತಿದ್ದಾಗ, ದುಃಖತಪ್ತರಾದ ರಾಮ-ಲಕ್ಷ್ಮಣರು, ಸೀತೆಯ ಶೋಧನೆಗೆ ಬರುತ್ತಿರುವುದನ್ನು ಕಂಡು ಇವರು ವಾಲಿಯ ಕಡೆಯ ಗುಪ್ತಚಾರರಿರಬಹುದೆಂದು  ಸಂದೇಹಗೊಂಡ ಮನಸ್ಸು ಚಂಚಲವಾಯಿತು. ಇದರಿಂದ ಚಿ(ಚ)ಚಲ ಕೋಟೆ ಎಂದು ಹೆಸರು ಬಂತೆಂದು ಸ್ಥಳೀಯರ ಪ್ರತೀತಿ. ಈ ಕಣಿವೆ ಪ್ರದೇಶದಲ್ಲಿ ಸುಮಾರು ೨೦೦೦ ವರ್ಷಗಳ ಹಿಂದೆ ಜನವಸತಿ ಇದ್ದ ಕುರುಹುಗಳಿವೆ. ರಾಮ-ಲಕ್ಷ್ಮಣ, ಸುಗ್ರೀವರ ಮೊದಲ ಭೇಟಿ ಮತಂಗ ಪರ್ವತದಲ್ಲಾಗುತ್ತದೆ. ಹೆಚ್ಚುಕಾಲ ಸುಗ್ರೀವ ಈ ಪರ್ವತದಲ್ಲಿಯೇ ಕಳೆಯುತ್ತಿದ್ದ ಕಾರಣ ವಾಲಿ, ದುಂದುಭಿ ಎಂಬ ಅಸುರನನ್ನು ಕೊಂದಾಗ, ಅವನ ರುಂಡ ಈ ಪರ್ವತದಲ್ಲಿ ತಪಸ್ಸು ಮಾಡಿಕೊಂಡಿದ್ದ ಮಾತಂಗ ಮುನಿಯ ಆಶ್ರಮದಲ್ಲಿ ಬಂದು ಬೀಳುತ್ತದೆ. ಕೋಪಗೊಂಡ ಮುನಿ ವಾಲಿ ಮರಳಿ ಇಲ್ಲಿಗೆ ಬಂದರೆ ಬದುಕಲಾರ ಎಂದು ಶಾಪಕೊಡುತ್ತಾನೆ. ಇದರಿಂದ ವಾಲಿ ಇಲ್ಲಿಗೆ ಬರುವಂತಿರಲಿಲ್ಲ ಎಂದು ಬೆನಕಲ್ ರಾಮರಾವ್ ‘ಪುರಾಣನಾಮ ಚೂಡಾಮಣಿ’ ಎಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ.

ರಾಮ-ಲಕ್ಷ್ಮಣ, ಸುಗ್ರೀವರ ನಡುವೆ ನಡೆದ ಒಪ್ಪಂದದಂತೆ ವಾಲಿಯನ್ನು ಹತ್ಯೆಗೈಲು ರಾಮ ಒಪ್ಪಿಕೊಂಡನು. ಆದರೆ ಸುಗ್ರೀವನಿಗೆ ಬಲಿಷ್ಠನಾದ ವಾಲಿಯನ್ನು ಕೊಲ್ಲಲು ರಾಮನಲ್ಲಿರುವ ಶಸ್ತ್ರಾಸ್ತ್ರಗಳ ಬಗ್ಗೆ ಸಂದೇಹ ಉಂಟಾಗುತ್ತದೆ. ಅದಕ್ಕೆ ರಾಮನು ತನ್ನಲ್ಲಿರುವ ಶಕ್ತಿ ಸಾಮರ್ಥ್ಯವನ್ನು ಹೊಂದಿದ ಶಸ್ತ್ರಾಸ್ತ್ರಗಳ ಬಗ್ಗೆ ಅವನಿಗೆ ತಿಳಿಸುವಾಗ ತನ್ನ ಬಾಣಗಳು ಕಾರ್ತಿಕೇಯ ವನದಲ್ಲಿ ಸಿದ್ಧವಾದವು. ಅವು ಹೇಮವಿಭೂಷಿತಾ…. ಮಹೇಂದ್ರಾಶನಿಸನ್ನಿಭಾಃ… ಸುಪವರ್ಣ ಸುತೀಕ್ಷ್ಣಾಗ್ರಾಃ ಎಂದು ಹೇಳುತ್ತಾನೆ. ಇದು ರಂಗನಾಥ ಶರ್ಮಾ ಎನ್. ಸಂಪಾದಿಸಿರುವ “ಕಿಷ್ಕಿಂಧ ಕಾಂಡ” ಕೃತಿಯಲ್ಲಿ ಉಲ್ಲೇಖ ವಿದೆ.

ಹಂಪಿ-ಆನೆಗುಂದಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿಯ ಪ್ರಾಗೈತಿಹಾಸ ಕಾಲದ ಅವಶೇಷಗಳು ಮತ್ತು ಕ್ರ.ಪೂ. ೩-೨ನೆಯ ಶತಮಾನದ ಅಶೋಕನ ಶಾಸನಗಳು ಹಾಗೂ ಹಂಪಿಯಲ್ಲಿ ಕಂಡುಬಂದಿರುವ ೨ನೇಯ ಶತಮಾನದ ಬೌದ್ಧಫಲಕಗಳಿಂದ ಕ್ರಿ.ಶ. ೧ನೇಯ ಶತಮಾನದ ವೇಳೆಗೆ ಒಂದು ನಗರವಾಗಿ ಪರಿಣಮಿಸಿದಂತೆ ಕಾಣುತ್ತದೆ. ಇದರಿಂದ ಕನಿಷ್ಠ ೪೦೦೦ ವರ್ಷಗಳ ಹಿಂದಿನಿಂದಾದರೂ ರಾಮಾಯಣ ಮಹಾಕಾವ್ಯದ ಕಿಷ್ಕಿಂದ ಎಂಬ ಹೆಸರಿಗೆ ಈ ಪ್ರದೇಶ ಒಳಪಟ್ಟಿರಬಹುದು.

 

೩. ಬೂದಿದಿಬ್ಬಗಳು

ನೂತನ ಶಿಲಾಯುಗ, ಶಿಲಾ ತಾಮ್ರಯುಗ ಮತ್ತು ಕಬ್ಬಿಣ ಬೃಹತ್ ಶಿಲಾಯುಗ ಕಾಲಗಳಲ್ಲಿ ಕಂಡುಬರುವ ಪ್ರಮುಖ ಅವಶೇಷವೆಂದರೆ ಬೂದಿದಿಬ್ಬಗಳು. ಈ ಹಂತದಲ್ಲಿ ಕೃಷಿಯಂತೆ ಪಶುಪಾಲನೆ ವೃತ್ತಿ ಆಭಿವೃದ್ಧಿ ಹೊಂದಿತ್ತು. ದನಗಳ ಸಗಣಿಯನ್ನು ಸುಡುವಿಕೆಯಿಂದ ನಿರ್ಮಾಣವಾದ ಬೃಹದಾಕಾರದ ಬೂದಿದಿಬ್ಬಳು ಪಶುಸಾಕಾಣಿಕೆಯ ಪ್ರಮಾಣವನ್ನು ಸೂಚಿಸುತ್ತವೆ. ಇವು ಕರ್ನಾಟಕ ಆಂಧ್ರ ಭಾಗಗಳಲ್ಲಿ ಅಂದರೆ ಭೀಮಾ, ಕೃಷ್ಣಾ, ತುಂಗಭದ್ರಾ ನದಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಪ್ರದೇಶದಲ್ಲಿ ಕಪ್ಪಗಲ್ಲು, ಸಂಗನಕಲ್ಲು, ಹಳೆನೆಲ್ಲುಡಿ, ಇಂಗಳಗಿ, ಕುರೆಕುಪ್ಪ, ಕುಡತಿನಿ, ಕಾಕುಬಾಳು, ಗಾದಿಗನೂರು, ನಿಂಬಾಪುರ, ಇದಕ್ಕೆ ಹೊಂದಿಕೊಂಡಂತೆ ತುಂಗಭದ್ರಾ ನದಿ ಎಡ ಪ್ರದೇಶದಲ್ಲಿ ಇಂದರ್ಗಿ, ಹಿರೇಬೆನಕಲ್ಲು, ಮುಸಲಾಪುರ, ವೆಂಕಟಾಪುರ ಮೊದಲಾದ ನೆಲೆಗಳಲ್ಲಿ ಕಾಣಸಿಗುತ್ತವೆ. ಅತಿ ಬೃಹದಾಕಾರ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸುಟ್ಟ ಬೂದಿಕಿಟ್ಟ ದಿನ್ನೆಗಳಾದ ಇವುಗಳಲ್ಲಿ ಬಹಳಷ್ಟು ಹಾಳಾಗಿವೆ. ಕೆಲವು ಸ್ವಲ್ಪಮಟ್ಟಿಗೆ ಮೊದಲಿನ ರೂಪದಲ್ಲಿರುವುದರಿಂದ ಅವು ಎಷ್ಟು ದೊಡ್ಡದಾಗಿದ್ದವು ಎಂದು ತಿಳಿಯಲು ಸಾಧ್ಯವಾಗಿದೆ. ಕುಡತಿನಿ (ಬಳ್ಳಾರಿ ಜಿಲ್ಲೆ) ಸಮೀಪ ಮತ್ತು ಹಟ್ಟಿಯಲ್ಲಿರುವ ಬೂದಿದಿನ್ನೆಗಳು ಈಗಲೂ ದೊಡ್ಡದಿವೆ. ೧೮೪೦ರ ದಶಕದಿಂದ ೧೯೯೩ರ ತನಕ ಸುಮಾರು ೭೦-೭೫ ನೆಲೆಗಳ್ಲಲಿ ಇಂಥ ಬೂದಿದಿನ್ನೆಗಳ ಅವಶೇಷಗಳು ಶೋಧವಾಗಿವೆ. ರಾಬರ್ಟ್ ಬ್ರೂಸ್ಪೂಟ್ ಅವರು ಕೆಲವು ಬೂದಿದಿನ್ನೆಗಳನ್ನು ಮತ್ತು ಸುತ್ತಮುತ್ತಲಿನ ನೂತನ ಶಿಲಾಸಂಸ್ಕೃತಿಗಳ ಅವಶೇಷಗಳನ್ನು ಪರಿಶೀಲಿಸಿ ಅವುಗಳನ್ನು India Pre-Proto. Antiquitesಎಂಬ ತಮ್ಮ ಕೃತಿಯಲ್ಲಿ ದಾಖಲಿಸಿ ಅವು ಅದೇ ಕಾಲದವೆಂದು ಅಭಿಪ್ರಾಯಪಟ್ಟಿದ್ದಾರೆ. ಅವರು ಒಬ್ಬ ರಸಾಯನಶಾಸ್ತ್ರಜ್ಞನ ಸಹಾಯದಿಂದ ಸಗಣಿಯನ್ನು ಅತಿ ಹೆಚ್ಚಿನ ಶಾಖದಲ್ಲಿ ಅಂದರೆ ಸುಮಾರು ೧೨೦೦ ಸೆಂಟಿಗ್ರೇಡ್‌ನಲ್ಲಿ ಸುಟ್ಟಿದ್ದರಿಂದ ಇವು ಇಂಥ ಬೂದಿಕಿಟ್ಟದ ದಿನ್ನೆಗಳಾಗಿವೆ ಎಂದು ಸಿದ್ಧಮಾಡಿದರು. ಇವುಗಳ ಹುಟ್ಟು ಮತ್ತು ಸಗಣಿಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಸುಡುವ ಉದ್ದೇಶ ಮತ್ತು ಇವುಗಳ ಕಾರಣಕರ್ತರ ಬಗ್ಗೆ ೧೯೯೫ ಮತ್ತು ನಂತರದಲ್ಲೂ ಅಧ್ಯಯನ ಮುಂದುವರಿದಿದೆ. ಉತ್ತನೂರಿನ ಒಂದು ಬೂದಿದಿನ್ನೆಯನ್ನು ವೈಜ್ಞಾನಿಕವಾಗಿ ಉತ್ಖನನ ಮಾಡಲಾಗಿದೆ. ಇದಕ್ಕೂ ಮುಂಚೆ ಮಜುಮದಾರ ಮತ್ತು ರಾಜಗುರು ಅವರು ಸಂಗನಕಲ್ಲಿನ ಬೂದಿದಿಬ್ಬ ಹಾಗೂ ರಾಮರೆಡ್ಡಿ ಪಾಳ್ಯದಲ್ಲಿಯ ಬೂದಿದಿಬ್ಬಗಳನ್ನು ಉತ್ಖನನ ಮಾಡಿ ತಮ್ಮ ತಮ್ಮ ಅಧ್ಯಯನ ಆಧಾರಿತ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.  ಈ ನಿಟ್ಟಿನಲ್ಲಿ ೧೯೯೨-೯೫ನೇ ಸಾಲಿನಲ್ಲಿ ಪದ್ದಯ್ಯ ಬೂದಿಹಾಳದಲ್ಲಿಯ ಬೂದಿದಿಬ್ಬವನ್ನು ಉತ್ಖನನ ಮಾಡಿದ್ದಾರೆ. ಇದರ ಫಲಿತಾಂಶವನ್ನು ಸಂಕ್ಷಿಪ್ತವಾಗಿ ಅ.ಸುಂದರ ಅವರು ಸಂಪಾದಿಸಿರುವ ಕರ್ನಾಟಕ ಚರಿತ್ರೆ ಸಂ.೧ರಲ್ಲಿ ಈ ಮುಂದಿನಂತೆ ದಾಖಲಿಸಿದ್ದಾರೆ.

೧. ಆಲ್ಚಿನ್ ಅವರ ಪ್ರಕಾರ, ಈ ಬೂದಿದಿನ್ನೆಗಳ ನೆಲೆಗಳು ಮೂಲತಃ ದನಕರುಗಳ ದೊಡ್ಡಿಗಳು. ಇಲ್ಲಿ ಕ್ರಮೇಣ ದೊಡ್ಡ ಪ್ರಮಾಣದಲ್ಲಿ ಸಗಣಿ ಸಂಗ್ರಹ ವಾಗುತ್ತಿತ್ತು. ಒಂದು ಹಂತದಲ್ಲಿ ಈ ದೊಡ್ಡ ಸಗಣಿ ರಾಶಿಯನ್ನು ತಮ್ಮ ಸಮಾಜದ ವಿಧಿ ವಿಧಾನದಂತೆ ಸುಡಲಾಗುತ್ತಿತ್ತು. ಮತ್ತೆ ಅದೇ ಸ್ಥಳದಲ್ಲಿ ದೊಡ್ಡಿಯನ್ನು ಕಟ್ಟಿ ಸಗಣಿ ಸಂಗ್ರಹಕ್ಕೆ ಎಡೆ ಮಾಡುತ್ತಿದ್ದರು. ಅದನ್ನು ಮತ್ತೆ ಸುಡಲಾಗುತ್ತಿತ್ತು. ಈ ದಹನಕ್ರಿಯೆ ಅತಿ ನಿಧಾನವಾಗಿ ಒಳಗೊಳಗೆ ನಡೆಯುತ್ತಿದ್ದರಿಂದ ಕ್ರಮೇಣ ಅಲ್ಲಿ ಬೂದಿ ಕಿಟ್ಟದ ಎರಡು ಮೂರು ಪದರುಗಳು ರಚನೆಯಾಗುತ್ತಿದ್ದವು. ಈ ಒಂದು ಧಾರ್ಮಿಕ ಕಟ್ಟಳೆ ಇಂದಿಗೂ ಉಳಿದು ಬಂದಿದ್ದು, ಅದನ್ನು ಹೋಳಿ, ದೀಪಾವಳಿ ಹಬ್ಬಗಳಲ್ಲಿ ಕಾಣಬಹುದು.

೨. ರಾಮಿರೆಡ್ಡಿ ಅವರ ಪ್ರಕಾರ, ಈ ಬೂದಿದಿನ್ನೆಗಳು ಮೂಲದಲ್ಲಿ ಕಬ್ಬಿಣ ಅದಿರನ್ನು ಸಂಗ್ರಹಿಸಿ ಲೋಹ ಮಾಡುವುದಕ್ಕೋಸ್ಕರ ಸುಟ್ಟಿದ್ದರಿಂದ ಉಂಟಾದವು.

೩. ಮಜುಮದಾರ ಮತ್ತು ರಾಜಗುರು ಅವರ ಪ್ರಕರ, ಇವು ಮೂಲತಃ  ದೊಡ್ಡಿಗಳಲ್ಲ. ದೊಡ್ಡಿಗಳಿಂದ ಸಗಣಿಯನ್ನು ಸಂಗ್ರಹಿಸಿ ಬೇರೆಡೆಯಲ್ಲಿ ಒಟ್ಟುತ್ತಿದ್ದರು. ಅಂತಹ ಒಟ್ಟಿನ ನೆಲೆಗಳು ಇವು.

೪. ಪದ್ದಯ್ಯನವರ ಪ್ರಕಾರ, ದೊಡ್ಡಿ ಮತ್ತು ಸಗಣಿ ಒಟ್ಟಿದ ನೆಲೆಗಳು ಬೇರೆ ಬೇರೆ ಯಾಗಿದ್ದರೂ ಒಂದಕ್ಕೊಂದು ಹತ್ತಿರದಲ್ಲಿಯೇ ಇದ್ದವು. ಆಗಿನ ಕಾಲದಲ್ಲಿ ಕೃಷಿಗೆ ಸಗಣಿ ಗೊಬ್ಬರವನ್ನು ಉಪಯೋಗಿಸುತ್ತಿದ್ದುದಕ್ಕೆ ಪುರಾವೆಗಳಿಲ್ಲ. ಒಂದು ವೇಳೆ ಉಪಯೋಗಿಸಿದ್ದರೂ ಅದರ ಪ್ರಮಾಣ ಕಡಿಮೆ. ಆ ಜನರು ತಕ್ಕಮಟ್ಟಿಗೆ ದೊಡ್ಡ ಪ್ರಮಾಣದಲ್ಲಿ ದನಕರುಗಳನ್ನು ಸಾಕುತ್ತಿದ್ದುದರಿಂದ ಸಗಣಿಯ ಪ್ರಮಾಣ ಹೆಚ್ಚಾಗಿರುತ್ತಿತ್ತು. ಆದ್ದರಿಂದ ಉಪಯೋಗವಾಗದ ಸಗಣಿಯನ್ನು ಈ ರೀತಿ ಆಗಾಗ್ಗೆ ಸುಡಲಾಗುತ್ತಿತ್ತು. ಇದರ ಬೆಂಕಿಯು ದಿನಗಟ್ಟಲೆ ಇದ್ದುದರಿಂದ ಸಾಕಿದ ಪ್ರಾಣಿಗಳು ಹಾಗೂ ಮನುಷ್ಯರನ್ನು ಹಿಡಿಯಲು ಬರುತ್ತಿದ್ದ ಕಾಡುಪ್ರಾಣಿಗಳನ್ನು ದೂರವಿಡಲು ಇದೊಂದು ಕ್ರಮವಾಗಿತ್ತು.

೫. ಅ. ಸುಂದರ ಅವರ ಪ್ರಕಾರ, ಬಹಳ ಹಿಂದಿನ ಕಾಲದಲ್ಲಿ ಸುಡುವ ವಿಧಾನದಿಂದ ಶವಸಂಸ್ಕಾರ ಮಾಡುತ್ತಿದ್ದ ಜನವರ್ಗಗಳ ಪ್ರಸಿದ್ಧ ಶೂರರ ನೆನಪಿನಲ್ಲಿ ಆಗಾಗ್ಗೆ ಇಂಥ ದೊಡ್ಡ ಪ್ರಮಾಣದ ಸಗಣಿಯನ್ನು ಸುಡುವ ಆಚರಣೆ ಇದ್ದಿರಬೇಕು. ಕುಡತಿನಿ  ಸಮೀಪದ ಬೂದಿಗುಡ್ಡೆಯ ಮಹಾಭಾರತದ ಹಿಡಿಂಬಾಸುರನನ್ನು ಸುಟ್ಟಿದ್ದರಿಂದಾಗಿ ಉಂಟಾಯಿತೆಂದು ಸ್ಥಳೀಯರ ಹೇಳಿಕೆ. ಹಿಂದಿನಿಂದ ಬಂದ ಸ್ಥಳೀಯರ ಹೇಳಿಕೆಯಂತೆ ವೆಂಕಟಾಪುರದಲ್ಲಿಯ ಬೂದಿದಿನ್ನೆಯನ್ನು ವಾಲಿ ದಿಬ್ಬವೆಂದು ಕರೆಯಲಾಗಿದೆ. ನಾಗಲಾಪುರದ (ತುಮಕೂರು ಜಿಲ್ಲೆ) ಇಂಥ ಬೂದಿದಿನ್ನೆಯನ್ನು ‘ವಾಲಿದಿಬ್ಬ’ವೆಂದು ಹೇಳಲಾಗುತ್ತಿದೆ. ಆದ್ದರಿಂದ ಈ ದಿನ್ನೆಗಳು ದೊಡ್ಡ ಪ್ರಮಾಣದ ಸ್ಮಾರಕ ದಹನಗಳಿಂದ ಉಂಟಾದವು.

ಹೀಗೆ ಬೂದಿದಿನ್ನೆಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಆದರೆ ಇವು ಕಂಡು ಬಂದಿರುವ ಭೌಗೋಳಿಕ ಪರಿಸರವನ್ನು ಗಮನಿಸಿದರೆ, ಬಳ್ಳಾರಿ, ರಾಯಚೂರು, ಗುಲಬರ್ಗಾ, ಆಂಧ್ರ ಭಾಗದಲ್ಲಿ ಕಾಡು-ಬೆಟ್ಟ, ಶಿಲೆಗಳಿಂದ ಆವೃತಗೊಂಡ ಈ ಪ್ರದೇಶಗಳಲ್ಲಿ ಒಂದು ಕಾಲದಲ್ಲಿ ಕೃಷಿಗೆ ಯೋಗ್ಯವಾದ ಭೂಮಿ ಇರಲಿಲ್ಲವೆಂದು ತೋರುತ್ತದೆ. ಬಹಳ ಪ್ರಯತ್ನದ ಮೂಲಕ ಅದನ್ನು ಬಳಕೆ ಮಾಡಿಕೊಳ್ಳಬೇಕಾಗುತ್ತಿತ್ತು. ಇದರಿಂದ ಇಲ್ಲಿಯ ಜನವರ್ಗ ಪಶುಪಾಲನೆ ವೃತ್ತಿಯನ್ನು ಪ್ರಮುಖವಾಗಿ ಅವಲಂಬಿಸಿದಂತೆ ಕಾಣುತ್ತದೆ. ಈ ಬೆಟ್ಟ ಕಾಡುಗಳಲ್ಲಿ ಸುಮಾರು ದಿನಗಳ ಕಾಲ ವಾಸಮಾಡುತ್ತ ದೊಡ್ಡಿಗಳನ್ನು ಕಟ್ಟಿ ದನಗಳನ್ನು ಸಾಕಿರಬೇಕು. ಪ್ರತಿದಿನ ಸಂಗ್ರಹವಾಗುವ ಸಗಣಿಯನ್ನು ಪಕ್ಕದಲ್ಲಿ ಹಾಕಿ ನಿರಂತರವಾಗಿ ಅದರ ಮೇಲೆ ಚಲನವಲನಗಳು ನಡೆದು ಗಟ್ಟಿಗೊಳ್ಳುತ್ತಿತ್ತು. ನಂತರ ಈ ಸ್ಥಳವನ್ನು ಬಿಟ್ಟು ಹೋಗುವಾಗ ಬೆಂಕಿ ಹಚ್ಚುತ್ತಿದ್ದಂತೆ ಕಾಣುತ್ತದೆ. ದನಗಾಯಿಗಳು ಒಂದು ಪ್ರದೇಶದಿಂದ ಬೇರೆ ಹುಲ್ಲುಗಾವಲು ಪ್ರದೇಶವನ್ನು ಅರಸುತ್ತ ಹೋಗುವುದು ಸ್ವಾಭಾವಿಕ. ಇದು ನಿಧಾನವಾಗಿ ಸುಟ್ಟಿದ್ದರಿಂದ ಬೂದಿ ಉಂಡೆಗಳು ಉಂಟಾಗಿರಬೇಕು.

ಈ ಪ್ರದೇಶದಲ್ಲಿ ಕೈಗೊಂಡ ಅನ್ವೇಷಣೆ ಮತ್ತು ಉತ್ಖನನಗಳಲ್ಲಿ ದೊರೆತ ಪ್ರಾಗೈತಿಹಾಸ ಕಾಲದ ಅವಶೇಷಗಳಿಂದ ಆದಿಮಾನವನ ಸಾಂಸ್ಕೃತಿಕ ಬೆಳವಣೆಗೆಯಲ್ಲಿ ಬೂದಿದಿಬ್ಬಗಳ ಪಾತ್ರ ಗಮನಾರ್ಹವಾದುದು.

 

೧. ಹಂಪಿ

ಬಳ್ಳಾರಿ ಜಿಲ್ಲೆಯ ನಕ್ಷೆ

ಬಳ್ಳಾರಿ ಜಿಲ್ಲೆಯ ನಕ್ಷೆ

I. ಬಳ್ಳಾರಿ
II. ಸಿರಗುಪ್ಪ
III. ಹೊಸಪೇಟೆ
IV. ಸಂಡೂರು
V. ಕೂಡ್ಲಿಗಿ
VI. ಹಗರಿಬೊಮ್ಮನಹಳ್ಳಿ
VII. ಹೂವಿನಹಡಗಲಿ

ಕೊಪ್ಪಳ ಜಿಲ್ಲೆಯ ನಕ್ಷೆ

ಕೊಪ್ಪಳ ಜಿಲ್ಲೆಯ ನಕ್ಷೆ

 

—- = ಗಡಿ

  • = ತಾಲೂಕು ಕೇಂದ್ರ

I. = ಕೊಪ್ಪಳ
II. = ಗಂಗಾವತಿ
III. = ಯಲಬುರ್ಗಾ
IV. = ಕುಷ್ಠಗಿ

 

ರೇಖಾ ಚಿತ್ರಗಳು

ಹಂಪಿಯ ವಿರೂಪಾಕ್ಷ ದೇವಾಲಯದ ಹಿಂಬದಿ ರಸ್ತೆಯಲ್ಲಿರುವ ಬೆಟ್ಟದಲ್ಲಿನ ಚಿತ್ರಗಳು

ಹಂಪಿಯ ವಿರೂಪಾಕ್ಷ ದೇವಾಲಯದ ಹಿಂಬದಿ ರಸ್ತೆಯಲ್ಲಿರುವ ಬೆಟ್ಟದಲ್ಲಿನ ಚಿತ್ರಗಳು

ಹಂಪಿಯಿಂದ ರಘುನಂದನ ತೀರ್ಥಕ್ಕೆ (ಸುಗ್ರೀವ ಗುಹೆ ಹಿಂಬದಿ) ಹೋಗುವ ಕಾಲು ದಾರಿಯ ಬಳಿಯ ಗುಹಾಶ್ರಯದಲ್ಲಿನ ವರ್ಣಚಿತ್ರಗಳು

ಹಂಪಿಯಿಂದ ರಘುನಂದನ ತೀರ್ಥಕ್ಕೆ (ಸುಗ್ರೀವ ಗುಹೆ ಹಿಂಬದಿ) ಹೋಗುವ ಕಾಲು ದಾರಿಯ ಬಳಿಯ ಗುಹಾಶ್ರಯದಲ್ಲಿನ ವರ್ಣಚಿತ್ರಗಳು

ಹಂಪಿಯ ಬ್ರಹ್ಮದೇವರ ಬಂಡೆಯ ಬಳಿಯ ವರ್ಣಚಿತ್ರಗಳು

ಹಂಪಿಯ ಬ್ರಹ್ಮದೇವರ ಬಂಡೆಯ ಬಳಿಯ ವರ್ಣಚಿತ್ರಗಳು

ಹಂಪಿಯ ಮೊಸಳ್ಳಯ್ಯನ ಗುಡ್ಡದಲ್ಲಿನ ವರ್ಣಚಿತ್ರಗಳು

ಹಂಪಿಯ ಮೊಸಳ್ಳಯ್ಯನ ಗುಡ್ಡದಲ್ಲಿನ ವರ್ಣಚಿತ್ರಗಳು