೩. ನೂತನ ಶಿಲಾಯುಗ ಸಂಸ್ಕೃತಿ (Neolittic Culture) (ಕ್ರಿ.ಪೂ. ೩೦೦೦-೧೫೦೦)

ಗ್ರೀಕ್ ಭಾಷೆಯಲ್ಲಿ ನಿಯೋ ಎಂದರೆ ನವೀನ/ಹೊಸದು ಎಂದು, ಲಿತಿಕ್ ಎಂದರೆ ಸ್ಪೋನ್ ಎಂಬ ಅರ್ಥವಿದೆ. ಈ ಹಂತದಲ್ಲಿ ಮನುಷ್ಯ ಜೀವನದ ರೀತಿ ನೀತಿಗಳು ಸಾಕಷ್ಟು ಬದಲಾವಣೆಗೊಂಡವು. ಅಲ್ಲದೆ ಈ ಕಾಲಘಟ್ಟದಲ್ಲಿ ಶಿಲಾಯುಧಗಳನ್ನು ಉಜ್ಜಿ ನಯಗೊಳಿಸಿ ತಯಾರಿಸುತ್ತಿದ್ದರಿಂದಾಗಿ ಈ ಯುಗವನ್ನು ನೂತನ ಶಿಲಾಯುಗ ಸಂಸ್ಕೃತಿ (ನಿಯೋಲಿತಿಕ್ ಕಲ್ಚರ್) ಎಂದು ಕರೆಯಲಾಗುತ್ತದೆ. ಈ ಸಂಸ್ಕೃತಿಯ ಹಂತವನ್ನು ಗುರುತಿಸುವಾಗ ಉಜ್ಜಿ ನಯಗೊಳಿಸಿದ ಮೇಲ್ಮೈಯುಳ್ಳ ಕೊಡಲಿಗಳು ಹಾಗೂ ಬೂದುವರ್ಣದ ಮಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಉಪಕರಣಗಳು ಪ್ರಾಚೀನ ಶಿಲಾಯುಧಗಳಂತೆ ಒರಟಾಗಿರದೆ, ಉಜ್ಜಿ ನಯಗೊಳಿಸಿದ ಶಿಲಾಯುಧಗಳಾಗಿವೆ. ಅಲ್ಲದೆ ಈ ಹಿಂದಿನ ಕಾಲದಲ್ಲಿ (ಸೂಕ್ಷ್ಮ ಶಿಲಾಯುಗ) ಆರಂಭವಾಗಿದ್ದ ಪಶುಪಾಲನೆ ಮತ್ತು ಕೃಷಿ ಪದ್ಧತಿಗಳು ಈ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದವು. ಬೂದುವರ್ಣದ ಪಾತ್ರೆಗಳ ತಯಾರಿಕೆ, ವ್ಯವಸ್ಥಿತವಾದ ವಾಸದ ಮನೆಗಳ ನಿರ್ಮಾಣ ಈ ಕಾಲದ ನವೀನತೆಗಳಾಗಿವೆ. ಒಂದು ರೀತಿಯ ಪರಸ್ಪರ ಅವಲಂಬನೆಯ ಆಧಾರದ ಮೇಲೆ ಒಟ್ಟಾಗಿ ವಾಸಿಸುವ ಜನರು, ತಮ್ಮ ವೈಶಿಷ್ಟಗಳಾಗಿವೆ. ಇದನ್ನು ಆರಂಭಿಕ ಸಂಘಟಿತ ಸಮಾಜವೆಂದು ಕರೆಯಬಹುದಾಗಿದೆ. ಈ ಕಾರಣಕ್ಕಾಗಿಯೇ ಈ ಎಲ್ಲ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡ ಬ್ರೈನ್ ಎಂ.ಪ್ರಾಗನ್ ಅವರು ಈ ಕಾಲಘಟ್ಟವನ್ನು “ಕ್ರಾಂತಿಕಾರಕ ಕಾಲಘಟ” (ಎ ರೆವಲ್ಯೂಶನರಿ ಪೀರಿಯಡ್) ಎಂದು ಕರೆದಿದ್ದಾರೆ.

ಕರ್ನಾಟಕದಲ್ಲಿ ನೂತನ ಶಿಲಾಯುಗದ ಸಂಸ್ಕೃತಿಗೆ ಸಂಬಂಧಿಸಿದ ಶೋಧನೆಗಳು ಪ್ರಥಮವಾಗಿ ೧೮೭೨ರಲ್ಲಿ ಶೋಧಿತವಾದವು. ಫ್ರೇಸರ್ ಅವರು ಬಳ್ಳಾರಿ ಜಿಲ್ಲೆ ಕಪ್ಪಗಲ್ಲು ಬೆಟ್ಟದಲ್ಲಿ ನೂತನ ಶಿಲೋಪಕರಣ ಹಾಗೂ ವಾಸ್ತವ್ಯದ ನೆಲೆಯೊಂದನ್ನು ಗುರುತಿಸಿದರು. ರಾಬರ್ಟ್‌ ಬ್ರೂಸ್‌ಪೂಟ್ ಅವರು ಕೋಲಾರ ಜಿಲ್ಲೆ ಶ್ರೀನಿವಾಸಪುರ ಮತ್ತು ಬೇತಮಂಗಲ ನೆಲೆಗಳನ್ನು ಶೋಧಿಸಿದರು. ಮೈಸೂರು ಜಿಲ್ಲೆ ಲಕ್ಷ್ಮೀಪುರ ಮತ್ತು ಟಿ.ನರಸೀಪುರ, ಮಂಡ್ಯ ಜಿಲ್ಲೆಯ ಫ್ರೆಂಚ್ ಹಿಲ್ಸ್ ಮುಂತಾದೆಡೆಗಳಲ್ಲಿಯೂ ನೂತನ ಶಿಲಾಯುಗದ ಸಂಸ್ಕೃತಿಯ ನೆಲೆಗಳು ಶೋಧಿತವಾದವು.

ಕರ್ನಾಟಕದಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ಕುರಿತು ಇಲ್ಲಿ ನಡೆದ ಹಲವು ಉತ್ಖನನಗಳು ಮಹತ್ವದ ವಿವರಗಳನ್ನು ಒದಗಿಸಿವೆ. ಅವುಗಳೆಂದರೆ ಬ್ರಹ್ಮಗಿರಿ[1]ಮಸ್ಕಿ[2] ಪಿಕ್ಲೆಹಾಳ್[3]. ತೆಕ್ಕಲಕೋಟೆ[4] ಹಳ್ಳುರು[5] ಕಪ್ಪಗಲ್[6]ತಿ. ನರಸೀಪುರ[7]ಕೊಡೆಕಲ್[8]ಹೆಮ್ಮಿಗೆ[9]. ಇತ್ತೀಚೆಗೆ ನಡೆದ ಕೋಲಾರ ಜಿಲ್ಲೆಯ ಬನಹಳ್ಳಿ[10], ಮಂಜ್ರಾ, ಕಾರಂಜಾ ನದಿ ಕಣಿವೆಗಳ ಕ್ಷೇತ್ರ ಕಾರ್ಯದಿಂದ ನೂತನ ಶಿಲಾಯುಗದ ನೆಲೆಗಳನ್ನು ಗುರುತಿಸಲಾಗಿದೆ.[11]ಮಲೆನಾಡು ಅರೆಮಲೆನಾಡಿನ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿಯೂ ಕೆಲವು ನೆಲೆಗಳು ಕಂಡುಬಂದಿವೆ.[12]ಪನ್ನಾರ್ ನದಿ ಪಾತ್ರವು ನೂತನ ಶಿಲಾಯುಗ ಸಂಸ್ಕೃತಿಯ ನೆಲೆಯಾಗಿತ್ತೆಂದು ತಿಳಿಯುತ್ತದೆ.[13] ಈ ನಿವೇಶನಗಳ ಅಧ್ಯಯನದಿಂದಾಗಿ ಕರ್ನಾಟಕದಲ್ಲಿ ಈ ಸಾಂಸ್ಕೃತಿಕ ಹಂತವು ಉಚ್ಛ್ರಾಯ ಸ್ಥಿತಿಯಲ್ಲಿದ್ದುದು ತಿಳಿಯುತ್ತದೆ. ಮುಖ್ಯ ಅವಶೇಷವಾದ ವೈವಿಧ್ಯ ಶಿಲೋಪಕರಣಗಳು, ಮಣ್ಣಿನ ಪಾತ್ರೆಗಳು, ಶವಸಂಸ್ಕಾರ ಪದ್ಧತಿ, ಕಲೆಗಾರಿಕೆ ಮುಂತಾದ ಅನೇಕ ವಿಷಯಗಳ ಕುರಿತು ಮಹತ್ವದ ಮಾಹಿತಿಗಳು ತಿಳಿದು ಬಂದಿವೆ.

ನೂತನ ಶಿಲಾಯುಗ ಸಂಸ್ಕೃತಿಯ ಶಿಲೋಪಕರಣಗಳಲ್ಲಿ ವೈವಿಧ್ಯತೆಯಿದ್ದು ಕೊಡಲಿ, ಬಾಚಿಕ, ಉಳಿ, ಸುತ್ತಿಗೆ, ಕೆತ್ತುಳಿ, ಉಜ್ಜುಗ ಅಥವಾ ಅರೆಯುವ ಕಲ್ಲು, ಕವಣೆ ಕಲ್ಲು ಮತ್ತು ಉಂಗುರ ಕಲ್ಲು ಮೊದಲಾದವು ಪ್ರಮುಖವಾಗಿವೆ. ಇವುಗಳನ್ನು ವಿಶೇಷ ತಂತ್ರಗಾರಿಕೆ ಬಳಸಿ ನಾಲ್ಕು ಹಂತಗಳಲ್ಲಿ ಸಿದ್ಧಗೊಳಿಸಲಾಗುತ್ತಿತ್ತು. ಮೊದಲು ಚಕ್ಕೆ ಎಬ್ಬಿಸುವುದು, ನಂತರ ಉಬ್ಬುಗಳನ್ನು ಕುಟ್ಟಿ ತೆಗೆಯುವುದು, ಅನಂತರ ಉಜ್ಜಿ ನಯಗೊಳಿಸುವುದು ಹಾಗೂ ಕೊನೆಯದಾಗಿ ಹೊಳಪು ನೀಡಲಾಗುತ್ತಿತ್ತು. ಇಂತಹ ಉಪಕರಣಗಳನ್ನು ಹೊಳಪು ನೀಡಲು ಪ್ರಾಣಿಗಳ ಕೊಬ್ಬಿನಂತಹ ಜಿಡ್ಡುಳ ವಸ್ತುಗಳನ್ನು ಜೊತೆಗೆ ರಂಗೋಲಿಯಂತಹ ಕಲ್ಲಿನ ನುಣುಪು ಪುಡಿಯನ್ನು ಉಪಯೋಗಿಸಲಾಗುತ್ತಿತ್ತೆಂದು ತಿಳಿಯುತ್ತದೆ. ಇಂತಹ ಉಪಕರಣಗಳು ಸಾಮಾನ್ಯವಾಗಿ ತ್ರಿಭುಜಾಕಾರದಲ್ಲಿರುತ್ತವೆ. ಉಪಕರಣಗಳು ಸಂಯುಕ್ತ ಉಪಕರಣಗಳಾಗಿದ್ದು ಮೂಳೆ, ಮರದ ಮಾಧ್ಯಮಗಳಿಗೆ ಸಿಕ್ಕಿಸಿ ಉಪಯೋಗಿಸಲಾಗುತ್ತಿತ್ತು. ಡೈಕ್, ಡಾಲರೈಟ್, ಕಣಶಿಲೆ ಮತ್ತು ಬಳಪದ ಕಲ್ಲುಗಳನ್ನು ಬಳಸಿ ಉಪಕರಣಗಳನ್ನು ರೂಪಿಸಿರುವುದು ಕಂಡುಬಂದಿದೆ.

ನೂತನ ಶಿಲೋಪಕರಣಗಳ ಜೊತೆಗೆ ಅತಿ ಸೂಕ್ಷ್ಮ ಚಕ್ಕೆ ಕಲ್ಲಿನ ಉಪಕರಣಗಳ ಬಳಕೆಯಾಗಿರುವುದು ತಿಳಿಯುತ್ತದೆ. ದ್ವಿಮುಖ ಅಲಗುಳ್ಳ, ತೆಳು ನೀಳ ಚಕ್ಕೆ, ಮೊನೆ, ಒಬ್ಬದಿ ಮತ್ತು ಇಬ್ಬದಿ ಹೆರೆಚಕ್ಕೆ, ಒಳಬಾಗಿದಂಚಿನ ಹೆರೆಚಕ್ಕೆ, ಮೂಲಗಟ್ಟಿ ಹೆರೆಚಕ್ಕೆ, ಕೊರೆಗ, ಅರ್ಧಚಂದ್ರಾಕೃತಿ, ಮೊದಲಾದ ಉಪಕರಣಗಳು ಬಳಕೆ ಇದ್ದದು ತಿಳಿಯುತ್ತದೆ. ಇವುಗಳನ್ನು ರೂಪಿಸಲು ಉತ್ತಮ ಜಾತಿಯ ಚಾಲ್ಸಿ ಡೋನಿ, ಕಾರ್ನಿಲಿಯನ್, ಆಗೇಟಾ, ಚರ್ಟ್, ಜಾಸ್ಪರ್ ಮೊದಲಾದ ಕಲ್ಲನ್ನು ಉಪಯೋಗಿಸಲಾಗುತ್ತಿತ್ತು.

ಈ ಸಂಸ್ಕೃತಿಯ ಮತ್ತೊಂದು ಪ್ರಾತಿನಿಧಿಕ ಅವಶೇಷ ಮಣ್ಣಿನ ಮಡಿಕೆಗಳು. ಆರಂಭ ಹಂತದಲ್ಲಿ ಇವನ್ನು ಕೈಯಲ್ಲಿ ರೂಪಿಸಲಾಗುತ್ತಿತ್ತು. ಇದಕ್ಕೆ ಬದಲಾಗಿ ನಂತರದಲ್ಲಿ ತಿರುಗಿಸಲ್ಪಡುವ ಮೇಜು, ಮಂದಗತಿಯಲ್ಲಿ ತಿರುಗಿಸಲ್ಪಡುವ ಚಕ್ರ, ಪರಿಷ್ಕೃತ ಚಕ್ರಗಳಲ್ಲಿ ತಯಾರಿಸಲಾದ ಹೆಚ್ಚು ತೆಳ್ಳನೆಯ ಮೃತ್ ಪಾತ್ರೆಗಳು ಕಂಡುಬಂದಿವೆ. ಕಂದು ಮತ್ತು ಬೂದು ಬಣ್ಣದ ಮಡಿಕೆಗಳೂ ಪ್ರಾತಿನಿಧಿಕವಾಗಿದ್ದು ಕೆಲವು ಪ್ರಾದೇಶಿಕ ವಿಭಿನ್ನತೆಯೂ ಕಂಡುಬರುತ್ತದೆ. ಇಂತಹ ಮಡಿಕೆಗಳು ವಿವಿಧ ಆಕಾರ ಮತ್ತು ಗಾತ್ರದಲ್ಲಿದ್ದು ಬಟ್ಟಲುಗಳು ಮತ್ತು ಒಳೆಲೆಯಾಕಾರದ ಬೋಗುಣಿ ಅಗಲತಳದ ಕಡಿಮೆ ಎತ್ತರದ ಬೋಗುಣಿ, ಹಿಡಿಕೆಯುಳ್ಳ ಮುಚ್ಚಳ ಸಣ್ಣ ಹಾಗೂ, ಮಧ್ಯಮ ಗಾತ್ರದ ಕೊಡಗಳು, ಕಮಂಡಲಾಕಾರದ ಹೂಜಿಗಳು, ತಳದಲ್ಲಿ ರಂಧ್ರವುಳ್ಳ ಪಾತ್ರೆಗಳು ಮತ್ತು ಬೋಗುಣಿಗಳು ಸಾಧಾರಣವಾಗಿ ಕಂಡುಬರುವ ಆಕೃತಿಗಳಾಗಿವೆ. ಕೆಲವೊಮ್ಮೆ ಅಲಂಕಾರಗಳನ್ನು ರೂಪಿಸಿರುತ್ತಾರೆ. ಮಣ್ಣಿನ ತಿಳಿಯ ಲೇಪನವನ್ನು ಮಾಡಿರುವುದು ಕಂಡುಬಂದಿದೆ. ಇವುಗಳ ಜೊತೆಗೆ ಈ ಸಂಸ್ಕೃತಿಯ ಜನರ ವಾಸ್ತವ್ಯದ ನೆಲೆಗಳನ್ನು ನಿರ್ಮಿಸಿಕೊಂಡಿದ್ದು ಪ್ರಾಣಿ ಸಾಕಣೆ, ಅಲಂಕಾರ ಸಾಧನಗಳನ್ನು ಬಳಸಿದ್ದು, ಕಲೆಯ ಪ್ರದರ್ಶನ, ಧಾರ್ಮಿಕ ನಂಬಿಕೆ, ಶವಸಂಸ್ಕಾರ ಪದ್ಧತಿಗಳು ಮೊದಲಾದ ವಿವಿಧ ಪದ್ಧತಿಗಳನ್ನೇ ರೂಢಿಸಿಕೊಂಡು ಸುಸಂಸ್ಕೃತ ಜೀವನ ಕ್ರಮವನ್ನು ನಡೆಸಿದ್ದು. ಈ ಜನರ ವೈಶಿಷ್ಟ್ಯಗಳಾಗಿವೆ.

ಈ ಸಾಂಸ್ಕೃತಿಕ ಹಂತದ ವಿವಿಧ ಉತ್ಖನನದ ಫಲಿತಾಂಶ ಹಾಗು ದೊರೆತ ವಿವಿಧ ವೈಜ್ಞಾನಿಕ ಕಾಲಮಾನದನ್ವಯದಂತೆ ಮೂರು ಹಂತಗಳೆಂದು ತಿಳಿಯಲಾಗಿದ್ದು, ಮೊದಲನೆಯ ಹಂತ ಕ್ರಿ.ಪೂ. ೨೦೦೦-೧೭೦೦, ಎರಡನೆಯ ಹಂತ ಕ್ರಿ.ಪೂ. ೧೭೦೦-೧೪೦೦ ಮತ್ತು ಮೂರನೆಯ ಹಂತ ಕ್ರಿ.ಪೂ. ೧೪೦೦-೧೦೦೦೦ದವರೆಗೆ ಇದ್ದಿತ್ತೆಂದು ತಿಳಿಯಲಾಗಿದೆ.

ಹಂಪಿ ಪರಿಸರದ ಕಕ್ಕಬೇವಿನಹಳ್ಳಿ, ಕುಡತಿನಿ, ಕಪಗಲ್ಲು, ಬೆಳಗಲ್ಲು, ಸಂಗನಕಲ್ಲು, ಹಳಕುಂದಿ, ಹಳೆನೆಲ್ಲುಡಿ (ಬಳ್ಳಾರಿ ತಾ.)[14]ಇಂಗಳಗಿ, ಕಾಕುಬಾಳ, ಗಾದಿಗನೂರು, ತಿಮ್ಮಲಾಪುರ, ಡಣಾಪುರ, ಬೆಳಗೋಡುಹಾಳ, ಬುಕ್ಕಸಾಗರ, ವೆಂಕಟಾಪುರ (ಹೊಸಪೇಟೆ ತಾ.)[15]ಕೊಂಚಗೇರಿ, ಕೋಟೆಕಲ್ಲು ದುರ್ಗ, ತೆಕ್ಕಲಕೋಟೆ, ನಿಟ್ಟೂರು, ಸನವಾಸಪುರ, ಹಚ್ಚೋಳ್ಳಿ (ಸಿರಗುಪ್ಪ ತಾ.)[16] ಇಂಗಳ್ಗಿ, ಕುರೆಕುಪ್ಪಗುಡ್ಡ, ತೋರಣಗಲ್ಲು, ದರೋಜಿ, ರಾಜಾಪುರ, ಲಿಂಗದಹಳ್ಳಿ (ಸಂಡೂರು ತಾ.),[17]ಬೆಳಗಟ್ಟ, ರಾಮದುರ್ಗ, ಜರಿಮಲೆ (ಕೂಡ್ಲಿಗಿ ತಾ.)[18]. ಅಲ್ಲೀಪುರ, ಮಾಗಳ, ಮೈಲಾರ, ರಾಜವಾಳ (ಹೂವಿನ ಹಡಗಲಿ ತಾ.)[19]ಮಾಡಲಗೇರಿ (ಹರಪನಹಳ್ಳಿ ತಾ.)[20]ಆನೆಗುಂದಿ, ಚಿಕ್ಕರಾಂಪುರ, ಕಮ್ಮಟ ದುರ್ಗ, ಹಿರೇಬೆನಕಲ್, ಮಲ್ಲಾಪುರ, ಕಡೆಬಾಗಿಲು (ಗಂಗಾವತಿ ತಾ.) ಮೊದಲಾದೆಡೆ ಈ ಸಂಸ್ಕೃತಿಯ ಕುರುಹುಗಳು ಪತ್ತೆಯಾಗಿವೆ. ಇಲ್ಲಿಯ ಕುಡತಿನಿ, ಕಪ್ಪಗಲ್ಲು, ಸಂಗನಕಲ್ಲು, ಕತ್ತಳಿ, ತೆಕ್ಕಲಕೋಟೆ, ನಿಟ್ಟೂರು, ದರೋಜಿ, ಕುರುಗೋಡು, ಕಾಕುಬಾಳು, ತಿಮ್ಮಾಪುರ, ಬೆಳಗಟ್ಟಿ ಮೊದಲಾದ ನೆಲೆಗಳಲ್ಲಿ ಉಜ್ಜಿ ನಯಗೊಳಿಸಿದ ಶಿಲೋಪಕರಣಗಳು ಕಂಡು ಬಂದಿವೆ. ಸಂಗನಕಲ್ಲು, ಕಾಕುಬಾಳುಗಳಲ್ಲಿ ಇವುಗಳೊಂದಿಗೆ ಬೂದುವರ್ಣದ ಮಡಿಕೆಗಳು, ಬೆಳಗಟ್ಟದಲ್ಲಿ ಅರೆಯುವ ಕಲ್ಲು, ಹೆರೆಚಕ್ಕೆ ಶಂಖದ ಅಭರಣಗಳು ದೊರೆತಿವೆ.

ಬ್ರಹ್ಮಗಿರಿಯಲ್ಲಿ ಉತ್ಖನನ ಮಾಡಿದ ಮಾರ್ಟಿಮರ್ ವ್ಹಿಲರ್ ಅವರು ನವಶಿಲಾಯುಗದಿಂದ ಮೊದಲ್ಗೊಂಡು ಒಟ್ಟು ನಾಲ್ಕು ಹಂತಗಳನ್ನು ಗುರುತಿಸಿದ್ದಾರೆ.[21]ಬ್ರಹ್ಮಗಿರಿ, ಮಸ್ಕಿ, ಸಂಗನಕಲ್ಲು, ತೆಕ್ಕಲಕೋಟೆ ವಾಸ್ತವ್ಯದ ನೆಲೆಗಳಾಗಿದ್ದವು. ಉತ್ತರ-ಮಧ್ಯ ಭಾರತದಲ್ಲಿ ಸಾವಳದಾ ಸಂಸ್ಕೃತಿಯನ್ನು ಗುರುತಿಸಿದಂತೆ ದಕ್ಷಿಣ ಭಾರತದಲ್ಲಿ ಕಂಡು ಬಂದಿರುವ ಉಪಕರಣಗಳನ್ನು ಮಸ್ಕಿ ಸಂಸ್ಕೃತಿಗೆ ಹೋಲಿಸುವುದುಂಟು. ಸಂಗನಕಲ್ಲಿನ ವಸತಿ ನೆಲೆ, ಕಪ್ಪಗಲ್ಲು ಬೂದಿದಿಬ್ಬ ಮತ್ತು ತೆಕ್ಕಲಕೋಟೆಗಳಲ್ಲಿ ನಡೆದ ಉತ್ಖನನಗಳಿಂದ ಅನೇಕ ಉಪಕರಣಗಳೊಂದಿಗೆ ವಾಸಕ್ಕಾಗಿ ನಿರ್ಮಿಸಿದ್ದ ಮನೆಗಳ (ಗುಡಿಸಲುಗಳ)ಚಿತ್ರಣ ಕಂಡುಬಂತು. ಇಂಥ ಮನೆಗಳನ್ನು ಸಂಗನಕಲ್ಲು ತೆಕ್ಕಲಕೋಟೆಗಳಂತೆ, ಮಹಾರಾಷ್ಟ್ರದ ಇನಾಮಗಾಂವ, ಮಧ್ಯ ಭಾರತದ ಜೋರ್ವೆಗಳಲ್ಲೂ ಗುರುತಿಸಲಾಗಿದೆ.[22] ಇವುಗಳ ಆಕಾರ ಮತ್ತು ಪ್ರಮಾಣವನ್ನು ಗಮನಿಸಲಾಗಿ ಸುಮಾರು ೨ ರಿಂದ ೫-೬ ಹೆಕ್ಟೇರಿನವರೆಗೆ ವಾಸ್ತವ್ಯದ ನೆಲೆಗಳು ಇರುತ್ತಿದ್ದವು. ಇವರು ನಿರ್ಮಿಸುತ್ತಿದ್ದ ಗುಡಿಸಲುಗಳ ವಿನ್ಯಾಸ ವರ್ತುಳ ಇಲ್ಲವೇ ಅಪರೂಪವಾಗಿ ಆಯತಾಕಾರದಲ್ಲಿದ್ದು ಅದರ ಒಂದು ಭಾಗ ಹಿಗ್ಗಿದ ಅರ್ಧದಷ್ಟು ವಿನ್ಯಾಸದಲ್ಲಿರುತ್ತವೆ. ನೆಲದ ಅಂಚಿನಲ್ಲಿ ಕಂಬಗಳು, ಅವುಗಳಿಗೆ ಬಿದಿರಿನ ಇಲ್ಲವೇ ಬಳ್ಳಿಗಳಿಂದ ಹೆಣೆದ ತಡಿಕೆಗಳನ್ನು ಕಟ್ಟಲಾಗುತ್ತಿತ್ತು. ತಟ್ಟಿ ಗೋಡೆಯ ಎರಡೂ ಬದಿಗೆ ಕಲಸಿದ ಮಣ್ಣು ಮೆತ್ತಿ ಬುಡದಲ್ಲಿ ಕಲ್ಲುಗಳನ್ನು ಇಡಲಾಗುತ್ತಿತ್ತು. ನೆಲಕ್ಕೆ ಚಿಕ್ಕ ಕಲ್ಲುಗಳನ್ನು ಹಾಕಿ ಮೇಲೆ ಕೆಂಪುಮಣ್ಣಿನಿಂದ ಗಟ್ಟಿಗೊಳಿಸಲಾಗುತ್ತಿತ್ತು. ಇತ್ತೀಚೆಗೆ ಸಂಗನಕಲ್ಲು, ಕುರುಗೋಡು, ಕಾಕುಬಾಳು ನೆಲೆಗಳಲ್ಲಿ ಡಾ. ತಿಪ್ಪೇಸ್ವಾಮಿ ಎಚ್‌., ಡಾ. ವಾಸುದೇವ ಬಡಿಗೇರ, ಡಾ. ಸೋಮಶೇಖರ ಮೊದಲಾದ ವಿದ್ವಾಂಸರು ಕ್ಷೇತ್ರಕಾರ್ಯ ಕೈಗೊಂಡು ಅನೇಕ ಉಪಕರಣಗಳನ್ನು ಸಂಗ್ರಹಿಸಿದ್ದಾರೆ. ಸಂಗ್ರಹಿತ ಅವಶೇಷಗಳಲ್ಲಿ ಒಂದು ಅಪರೂಪದ ಕೈಕೊಡಲಿಯನ್ನು ಸಂಗನಕಲ್ಲು ನೆಲೆಯಲ್ಲಿ ಬಡಿಗೇರ ಅವರು ಗುರುತಿಸಿದ್ದಾರೆ. ಇದನ್ನು ಕಪ್ಪು ಬಿಳಿ ಮಿಶ್ರಿತ ಶಿಲೆಯಲ್ಲಿ ತಯಾರಿಸಲಾಗಿದ್ದು, ಅದರ ಮೂತಿ ೧೨.೫ ಸೆಂ.ಮೀ. ಇದೆ. ಇಂಥ ದೊಡ್ಡ ಆಯುಧವನ್ನು ಮಾನವನು ಮರಗಳನ್ನು ಕಡಿಯಲು ಇಲ್ಲವೇ ಬಲಿಷ್ಠ ಪ್ರಾಣಿಗಳನ್ನು ಬೇಟೆಯಾಡಲು ಬಳಸಿಕೊಂಡಿರಬೇಕು. ಸಂಗನಕಲ್ಲು-ಕಪ್ಪಗಲ್ಲು ಬೆಟ್ಟಗಳು ಹತ್ತಿರದಲ್ಲಿಯೇ ಇವೆ. ಕಪ್ಪಗಲ್ಲು ಬೆಟ್ಟದಲ್ಲಿ ಚಕ್ಕೆ ಎಬ್ಬಿಸಿ ನಿರ್ಮಾಣ ಹಂತದಲ್ಲಿರುವ ಒರಟಾದ ಆಯುಧಗಳು ಹೇರಳವಾಗಿವೆ. ಸಂಗನಕಲ್ಲು ಬೆಟ್ಟದಲ್ಲಿ ಉಜ್ಜಿ ನಯಗೊಳಿಸದ ಶಿಲಾಯುಧಗಳು ಹರಡಿವೆ. ಇದರಿಂದ ಕಪ್ಪಗಲ್ಲು ಬೆಟ್ಟದಲ್ಲಿ ಪ್ರಾಕೃತಿಕವಾಗಿ ಹರಡಿರುವ ಕಪ್ಪುಶಿಲೆಯಿಂದ ಆಯುಧಗಳನ್ನು ತಯಾರಿಸುವ ಬೃಹತ್‌ ಪ್ರಮಾಣದ ಕಾರ್ಯಾಗಾರ ಇತ್ತೆಂದು ತಿಳಿಯುತ್ತದೆ. ದೊಡ್ಡ ದೊಡ್ಡ ಬಂಡೆಗಳು ಮತ್ತು ಗುಹೆಗಳಿಂದ ಕುಡಿದ ಸಂಗನಕಲ್ಲು ಬೆಟ್ಟೆವನ್ನು ವಾಸ್ತವ್ಯ ಮಾಡಿಕೊಂಡಂತೆ ಕಾಣುತ್ತದೆ.

ಶಿಲಾ ತಾಮ್ರಯುಗ ಸಂಸ್ಕೃತಿ (ಕ್ರಿ.ಪೂ. ೨,೨೦೦-೮೦೦)

ನೂತನ ಶಿಲಾಯುಗದ ಒಂದು ಘಟ್ಟದಿಂದ ತಾಮ್ರದ ಬಳಕೆ ಆರಂಭವಾಯಿತು. ತಾಮ್ರದ ಅದಿರಿನಿಂದ ಲೋಹವನ್ನು ತಯಾರಿಸಿ ಅದರಿಂದ ಆಭರಣ, ಗೊಂಬೆ, ಆಯುಧ, ಮೊದಲಾದವುಗಳನ್ನು ಮಾಡಲಾಗುತ್ತಿತ್ತು. ಈ ಹಂತಹ ಜನಜೀವನದಲ್ಲಿ ಕಾಣುವ ಖಚಿತ ಬೆಳವಣಿಗೆಯಂದರೆ ಶಿಲಾಯುಧಗಳ ಜೊತೆಗೆ ತಾಮ್ರ ಅಥವಾ ಕಂಚಿನ ಉಪಕರಣಗಳ ನಿರ್ಮಾಣ. ಆದ್ದರಿಂದ ಈ ಸಂಸ್ಕೃತಿಯನ್ನು ಶಿಲಾ ತಾಮ್ರಯುಗ (ಚಾಲ್ಕೋಲಿತಿಕ್‌ ಪಿರಿಯಡ್‌) ವೆಂದು ಕರೆಯಲಾಗುತ್ತದೆ.

ಭಾರತದಾದ್ಯಂತ ಇಂಥ ಅನೇಕ ನೆಲೆಗಳು ಕಂಡುಬಂದಿವೆ. ಹರಪ್ಪ ಸಂಸ್ಕೃತಿಯಲ್ಲಿ ತಾಮ್ರದಿಂದ ತಯಾರಿಸಿದ ವಿವಿಧ ನಮೂನೆಯ ಆಯುಧೋಪಕರಣಗಳು ದೊರೆತಿವೆ. ಕರ್ನಾಟಕದಲ್ಲಿ ಕೆಲವು ಕಡೆ ಈ ಸಂಸ್ಕೃತಿಯ ಕುರುಹುಗಳು ದೊರೆತಿದ್ದು, ಅಧ್ಯಯನಕ್ಕೆ ಯೋಗ್ಯವಾಗಿವೆ. ತಾಮ್ರದ ಅದಿರಿನಿಂದ ಲೋಹವನ್ನು ತೆಗೆದು ಅದರಿಂದ ವಿವಿಧ ಉಪಕರಣಗಳನ್ನು ಮಾಡುತ್ತಿದ್ದರು. ಸಂಶೋಧನೆಗೊಂಡ ಈ ಹಂತದ ಎಲ್ಲಾ ನೆಲೆಗಳಲ್ಲಿ ಇಂಥ ಪ್ರಯೋಗ ನಡೆದಿರುವುದು ವಿರಳ. ಅತಿ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿರುವ ಈ ಆಯುಧಗಳಲ್ಲಿ ತಾಮ್ರ ಇಲ್ಲವೇ ಕಂಚಿನ ಚಪ್ಪಟೆ ಕೊಡಲಿ, ತಂತಿ ನೀರಿನ ಗಾಳ ಮತ್ತು ತೆಲ್ಲನೆ ಬಾಯುಳ್ಳ ಅಲಗಿನ ಉಪಕರಣಗಳು ಕೃಷ್ಣಾನದಿ ಪ್ರದೇಶದ ಕೆಲವು ನೆಲೆಗಳಲ್ಲಿ ದೊರೆತಿವೆ. ದಕ್ಷಿಣ ಭಾರತದ ಅತ್ಯಂತ ಗಮನಾರ್ಹವಾದ ಉಪಕರಣವೆಂದರೆ ರಾಯಚೂರು ಹತ್ತಿರ ಕಲ್ಲೂರು ಗ್ರಾಮದಲ್ಲಿ ಶಿಲಾತಾಮ್ರಯುಗದ ನೆಲೆಯಲ್ಲಿ ದೊರೆತ ಉದ್ದನೆಯ ಖಡ್ಗಗಳು ಪ್ರಮುಖವಾದವು. ಇದೇ ರೀತಿ ಸಣ್ಣ ಮದರಿಯ ಕಠಾರಿಯಂಥ ಉಪಕರಣ ಭೀಮಾನದಿ ಉಗಮ ಪ್ರದೇಶದ ಚಂದೋಳಿ ಗ್ರಾಮದಲ್ಲಿ ಮತ್ತು ಬ್ರಹ್ಮಗಿರಿಯಲ್ಲಿ ಒಂದು ಚಿಕ್ಕ ಚಾಕು ದೊರೆತಿವೆ.[23]

ನೂತನ ಶಿಲಾಯುಗದ ಸಂಸ್ಕೃತಿಯ ನಂತರ ವಿಕಸನಗೊಂಡ ಈ ಹಂತದಲ್ಲಿ ತಾಮ್ರದ ಆಯುಧಗಳ ಬಳಕೆ, ಸುಟ್ಟ ಮಣ್ಣಿನ ಪತ್ರೆಗಳ ಬಳಕೆ, ಸುಧಾರಿಸಿದ ಬೇಸಾಯ ಪದ್ಧತಿಯ ಅಳವಡಿಕೆ ಈ ಸಾಂಸ್ಕೃತಿಕ ಹಂತದ ಮುಖ್ಯ ಲಕ್ಷಣಗಳು. ಕರ್ನಾಟಕಕ್ಕೆ ಸಂಬಂಧಿಸಿದಂತೆ ಸುಧಾರಿತ ಮಣ್ಣಿನ ಪಾತ್ರೆಗಳ ಬಳಕೆ, ಅದರೊಂದಿಗೆ ಅಲ್ಪಪ್ರಮಾಣದ ಲೋಹದ ಬಳಕೆ ಜೊತೆಗೆ ಶಿಲೋಪಕರಣಗಳನ್ನು ಗಳಸಿಕೊಂಡಿರುವುದನ್ನು ವಿಶೇಷವಾಗಿ ಗಮನಿಸಬಹುದಾಗಿದೆ. ಭೀಮಾ ಮತ್ತು ಕೃಷ್ಣಾನದಿ ಪಾತ್ರವು ಉತ್ತಮ ಕರಿಮಣ್ಣಿನ ಪ್ರದೇಶವಾದುದರಿಂದ ಉತ್ತರ ಕರ್ನಾಟಕದ ಪ್ರದೇಶವನ್ನು ತಮ್ಮ ವಾಸ್ತವ್ಯಕ್ಕೆ ಆರಿಸಿಕೊಂಡು ಸುತ್ತಮುತ್ತಲಿನ ಪ್ರದೇಶಕ್ಕೆ ಪ್ರಸರಣವಾಗಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಅಲ್ಪಪ್ರಮಾಣದಲ್ಲಿ ಪಾತ್ರಿನಿಧಿಕ ನೆಲೆಗಳನ್ನು ದಕ್ಷಿಣ ಕರ್ನಾಟಕದ ಭಾಗದಲ್ಲಿಯೂ ಗುರುತಿಸಬಹುದಾಗಿದೆ.

ನೂತನ ಶಿಲಾಯುಗ ಸಂಸ್ಕೃತಿಯ ಶಿಲೋಪಕರಣಗಳ ಬಳಕೆಯೂ ಈ ಹಂತದಲ್ಲಿಯೂ ಇದ್ದಿತ್ತೆಂದು ತಿಳಿಯುತ್ತದೆ. ಮಡಿಕೆಯ ಮದರಿಯು ವಿಶಿಷ್ಟವಾಗಿದ್ದು ಕಂಡುಬರುತ್ತದೆ. ಇವುಗಳಲ್ಲಿ ವರ್ಣರೇಖಾ ಚಿತ್ರಮಯವಾದ ಪಾತ್ರೆಗಳು ಕಂಡುಬಂದಿವೆ. ಕೆಲವೊಮ್ಮೆ ಪ್ರಾಣಿಗಳ ಚಿತ್ರಗಳನ್ನು ಬಿಡಿಸಲಾಗಿದೆ. ಇಂತಹ ಮಣ್ಣಿನ ಪಾತ್ರೆಗಳನ್ನು ಜೋರ್ವೆ ಮತ್ತು ಸಾವಳದ ಮಡಿಕೆ ಮಾದರಿಗಳೆಂದು ಕರೆಯಲಾಗುತ್ತದೆ.

ಶಿಲಾ ತಾಮ್ರಯುಗದ ಜನರು ಸೌಂದರ್ಯ ಪ್ರಜ್ಞೆಯುಳ್ಳವರಾಗಿದ್ದರೆಂದು, ಅವರು ಮಣ್ಣಿನ ಗೊಂಬೆ ಹಾಗೂ ದೊರೆತ ವರ್ಣಚಿತ್ರಗಳಿಂದ ತಿಳಿಯಬಹುದಾಗಿದೆ. ರಾಯಚೂರು, ಬಳ್ಳಾರಿ, ಚಿತ್ರದುರ್ಗ ಪ್ರದೇಶದಲ್ಲಿಯ ಬೆಟ್ಟಗಳಲ್ಲಿ ಹಾಗೂ ಬಯಲು ಬಂಡೆಗಳ ಮೇಲೆ ಚಿತ್ರಗಳು ದೊರೆತಿವೆ. ನೂತನ ಶಿಲಾಯುಗ, ಶಿಲಾತಾಮ್ರಯುಗ ಅಥವಾ ಬೃಹತ್‌ ಶಿಲಾಯುಗ ಸಂಸ್ಕೃತಿಯ ಹಂತಕ್ಕೆ ಸೇರಿದವುಗಳೆಂದು ತಿಳಿಯುವ ಬೂದಿದಿಬ್ಬಗಳು ಕರ್ನಾಟಕದ ಉತ್ತರ ಭಾಗಗಳಲ್ಲಿ ಹೆಚ್ಚಾಗಿಯೂ ನಂತರದ ಭಾಗದಲ್ಲಿ ಪ್ರತಿನಿಧಿಕವಾಗಿಯೂ ಇರುವುದು ಕಂಡುಬರುತ್ತವೆ. ಈ ಸಂಸ್ಕೃತಿಯ ಕಾಲಮಾನವನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ ವಿವಿಧ ಕಾಲಮಾನವೆಂದು ನಿರ್ಧರಿಸಲಾಗಿದೆ. ಅದರಂತೆ ಕೃಷ್ಣಾ ಮೇಲ್ಕಂಡೆಯ ಶಿಲಾ ತಾಮ್ರಯುಗ ಸಂಸ್ಕತಿಯು ಸುಮಾರು ಕ್ರಿ.ಪೂ. ೨೩೦೦-೧೦೦೦ ಎಂದು ತಿಳಿಯಲಾಗಿದೆ. ಭೀಮಾ ಮತ್ತು ಕೃಷ್ಣಾ, ತುಂಗಭದ್ರಾ ಪ್ರದೇಶಕ್ಕೆ ಪ್ರಸರಿದಿ ಜೋರ್ವೆ ಮದರಿಯ ಕಪ್ಪು ವರ್ಣಚಿತ್ರದ ಮೃತ್‌ ಪಾತ್ರೆಗಳ್ಳುಳ್ಳ ಶಿಲಾತಾಮ್ರಯುಗ ಸಂಸ್ಕೃತಿಯ ಕಾಲಮಾನವು ಸುಮಾರು ಕ್ರಿ.ಪೂ. ೧೩೦೦-೮೦೦ ಎಂದು ನಿರ್ಧರಿಸಲಾಗಿದೆ.

ಹಂಪಿ ಪರಿಸರದಲ್ಲಿ ಕುಡಿತಿನಿ, ಸಂಗನಕಲ್ಲು, ಕಪ್ಪಗಲ್ಲು, ಕುರುಗೋಡು, ಬಳ್ಳಾರಿ, (ಬಳ್ಳಾರಿ ತಾ.)[24], ಗಾದಿಗನೂರು, ಗುಡಿ ಓಬಳಾಪುರ, ಹಂಪಿ (ಚಕ್ರ ತೀರ್ಥ), ನಿಂಬಾಪುರ, ಬೆಳಗಲ್ಲು, ಬೆಳಗೋಡಹಾಳು, ವೆಂಕಟಾಪುರ, ಹಳಕುಂಡಿ (ಹೊಸಪೇಟೆ ತಾ.)[25], ತೆಕ್ಕಲಕೋಟೆ (ಸಿರುಗುಪ್ಪ ತಾ.)[26], ದರೋಜಿ ಭೈರನಾಯಕನಹಳ್ಳಿ, ರಾಜಾಪುರ (ಸಂಡೂರು ತಾ.)[27], ಅಪ್ಪೇನಹಳ್ಳಿ (ಕೂಡ್ಲಿಗಿ ತಾ.)[28], ಹಂಪಸಾಗರ (ಹಗರಿಬೊಮ್ಮನಹಳ್ಳಿ ತಾ.)[29], ಅಲ್ಲೀಪುರ (ಹೂವಿನಹಡಗಲಿ),[30] ಚಿಕ್ಕರಾಂಪುರ, ಆನೆಗೊಂದಿ, ಹಿರೇಬೆನಕಲ್‌ (ಗಂಗಾವತಿ ತಾ.) ಮೊದಲಾದಡೆ ಈ ಸಂಸ್ಕೃತಿಯ ಕೆಲ ಕುರುಹುಗಳು ದೊರೆತಿದ್ದು, ಅವುಗಳ ಆಧಾರದ ಮೇಲೆ ಅಂದಿನ ಜನಜೀವನ ಅರಿಯಬಹುದಾಗಿದೆ. ಕುಡಿತಿನಿ, ಕಪ್ಪಗಲ್ಲು ನೆಲೆಗಳಲ್ಲಿ ಸೂಕ್ಷ್ಮ ಶಿಲೋಪಕರಣಗಳು, ಚಕ್ಕೆ ಕಲ್ಲಿನ ಮೂಲ ಶಿಲಾಗಟ್ಟಿಗಳು ಮತ್ತು ಇವುಗಳೊಂದಿಗೆ ಮಸುಕಾದ ಕೆಂಫುವರ್ಣದ ಮಡಕೆ ಅವಶೇಷಗಳು, ಅಲ್ಲೀಪುರದಲ್ಲಿ ಕಂಡುಬಂದಿವೆ. ಇದಕ್ಕೆ ಆನೆಗುಂದಿ ಸಮೀಪದ ಚಿಕ್ಕರಾಂಪುರದಲ್ಲಿ ಕೆಂಪುವರ್ಣದ ಮಡಿಕೆಗಳು ಆಭ್ರಕ ಮಿಶ್ರಣಗೊಂಡಿವೆ. ಹೊಸಕೇರಿಯಲ್ಲಿ ಕಂದುವರ್ಣದ ಮಡಿಕೆಗಳೊಂದಿಗೆ ನೀಳಚಕ್ಕೆ ಹಾಗೂ ಹಿರೇಬೆನಕಲ್ಲಿನಲ್ಲಿ ಕಂದು ಚಿತ್ರಿತ ಕೆಂಪು ಮಡಕೆ ಭಾಗ ಮತ್ತು ನೀಳಚಕ್ಕೆ, ಗೆರೆಗಳುಳ್ಳ ಮೂಲ ಶಿಲಾಗಟ್ಟಿಗಳು ದೊರೆತಿದ್ದು, ಅಧ್ಯಯನಕ್ಕೆ ಯೋಗ್ಯವಾಗಿದೆ.

ಕಬ್ಬಿಣಯುಗ ಅಥವಾ ಬೃಹತ್‌ ಶಿಲಾಯುಗ ಸಂಸ್ಕೃತಿ (Megalittic or Iron Age Culture) (ಕ್ರಿ.ಪೂ. ೧೨೦೦-೨೦೦)

ಬೃಹತ್‌ ಶಿಲಾಯುಗ ಸಂಸ್ಕೃತಿಯ ಜನರು ಕುತೂಹಲಕರವಾದ ವಿವಿಧ ಮಾದರಿಯ ಬೃಹತ್‌ ಕಲ್ಗೋರಿ (ಶಿಲಾ ಗೋರಿ) ಗಳನ್ನು ನಿರ್ಮಿಸುತ್ತಿದ್ದರಿಂದ ಈ ಸಂಸ್ಕೃತಿಯನ್ನು ಬೃಹತ್‌ ಶಿಲಾಯುಗ ಸಂಸ್ಕೃತಿ (ಮೆಗಾಲಿತಿಕ್‌ ಕಲ್ಚರ್‌) ಎಂದು ಕರೆಯಲಾಗುತ್ತಿದೆ. ಜೊತೆಗೆ ಈ ಹಂತದಲ್ಲಿ ಕಬ್ಬಿಣದ ಬಳಕೆ ಆರಂಭಗೊಂಡಿದ್ದರಿಂದ ಈ ಕಾಲವನ್ನು ಕಬ್ಬಿಣಯುಗವೆಂತಲೂ (ಐರನ್‌ ಏಜ್‌) ಕರೆಯಲಾಗುತ್ತದೆ. ಈ ಕಾಲದ ಕಲ್ಲು ಗೋರಿಗಳು ಈ ಜನರ ಪಾರಂಪರಿಕ ನಂಬಿಕೆಗಳ ತಳಹದಿಯ ಮೇಲೆ ರೂಪಿತವಾಗಿದ್ದು, ಅತ್ಯಂತ ಮಹತ್ವ ಪಡೆದಿವೆ. ಸಂಸ್ಕೃತಿಯ ಜನರು ಜೀವಿಸುತ್ತಿದ್ದ ಪ್ರದೇಶಗಳನ್ನು ವಾಸ್ತವ್ಯದ ನೆಲೆಗಳೆಂದೂ ಹಾಗೂ ಶವಸಂಸ್ಕಾರದ ಕೇಂದ್ರಗಳನ್ನು ಗೋರಿ ನೆಲೆಗಳೆಂದು ಪ್ರತ್ಯೇಕವಾಗಿ ಅಧ್ಯಯನ ನಡೆಸಲಾಗಿದೆ. ದೇಶಿಯ, ವಿದೇಶಿಯ ಪುರಾತತ್ವಜ್ಞರಿಂದ ಇವುಗಳ ಮೇಲೆ ಸಾಕಷ್ಟು ಅಧ್ಯಯನ ನಡೆದು, ಹಲವು ಹೊಸ ವಿವರಗಳು ಬೆಳಕಿಗೆ ಬಂದಿವೆ. ಕಲ್ಗೋರಿಗಳ ನಿರ್ಮಾತೃಗಳು ಅವುಗಳ ಕಾಲಮಾನ, ಅವುಗಳ ನಿರ್ಮಾತೃಗಳ ವಸತಿಗಳ ಅವರ ಸಾಮಾಜಿಕ, ಆರ್ಥಿಕ ಹಾಗೂ ಧಾಮಿಕ ಪದ್ಧತಿಗಳು ಆ ಕಾಲದ ಪ್ರಾಚ್ಯವಸ್ತುಗಳು ಹಾಗೂ ವೈವಿಧ್ಯ ಸಮಾಧಿ ನಿರ್ಮಿತಿಗಳು ಅಲ್ಲದೆ ಅನೇಕ ವಿವರಗಳು ಪ್ರಕಟವಾಗುತ್ತಲೇ ಇದೆ. ಹಾಗಿದ್ದರೂ ಈ ಸಂಸ್ಕೃತಿಯ ಉಗಮ ಪ್ರಸಾರ ಹಾಗೂ ವೈವಿಧ್ಯತೆಗಳ ಬಗೆಗೆ ವಿದ್ವಾಂಸರಲ್ಲಿ ಇಂದಿಗೂ ಒಮ್ಮತದ ಅಭಿಪ್ರಾಯಗಳಿಲ್ಲ.

ಭಾರತದಲ್ಲಿ ಇತರ ಸಂಸ್ಕೃತಿಗಳಂತೆ ಬೃಹತ್ ಶಿಲಾಯುಗ ಸಂಸ್ಕೃತಿಯು ಸವಿಸ್ತಾರವಾಗಿ ಹರಡಿದ್ದು ವಿವಿಧ ಕಾಲಘಟ್ಟಗಳಲ್ಲಿ ಅನೇಕ ಪ್ರಾದೇಶಿಕ ಲಕ್ಷಣಗಳನ್ನೊಳಗೊಂಡು ಪ್ರಸಾರವಾಗಿದೆ.

ಕರ್ನಾಟಕದಲ್ಲಿ ಈ ಸಂಸ್ಕೃತಿಯು ವಿಶಿಷ್ಟವಾಗಿರುವುದನ್ನು ಕಾಣಬಹುದು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಲ್ಗೋರಿಗಳು ಮತ್ತು ವಸತಿನೆಲೆಗಳು ಕಂಡುಬಂದಿವೆ. ಹಲವು ನೆಲೆಗಳ ಉತ್ಖನನವೂ ನಡೆದಿದೆ. ಬ್ರಹ್ಮಗಿರಿ, ನುಂಕೆಮಲೆ, ಜಟ್ಟಿಂಗರಾಮೇಶ್ವರ, ಕಪ್ಪಗಲ್ಲು, ಸಂಗನಕಲ್ಲು, ಹಿರೇಬೆನಕಲ್, ಕುಮತಿ, ಹುಲಿಕುಂಟೆ, ವಟಗಲ್, ಮೊದಲಾದವು ಈ ಕಾಲದ ಪ್ರಮುಖ ನೆಲೆಗಳಾಗಿವೆ. ದಕ್ಷಿಣ ಕರ್ನಾಟಕದ ನೆಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ನೆಲೆಗಳು ಅಧ್ಯಯನಕ್ಕೆ ಆಶಾದಾಯಕವಾಗಿವೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅ. ಸುಂದರ ಮೊದಲಾದ ವಿದ್ವಾಂಸರು ಸ್ಥಳ ಪರಿಶೋಧನೆ ನಡೆಸಿ, ಕೆಲವು ನೆಲೆಗಳಲ್ಲಿ ಉತ್ಖನನ ಕೈಗೊಂಡು ಈ ಸಂಸ್ಕೃತಿಯ ಮೇಲೆ ಹೆಚ್ಚಿನ ಬೆಳಕನ್ನು ಬೀರಿದ್ದಾರೆ. ಇಡೀ ಭಾರತದಲ್ಲಿಯೇ ವಿಶಿಷ್ಟಪೂರ್ಣವೆನಿಸಿರುವ ಶಿಲುಬೆಯಾಕಾರದ ಕಲ್ಗೋರಿಯನ್ನು ಅ. ಸುಂದರ ಅವರು ಬೆಳಕಿಗೆ ತಂದು, ಈ ಸಂಸ್ಕೃತಿಯನ್ನು, ಅದರಲ್ಲಿಯೂ ಮುಖ್ಯವಾಗಿ ಕಲ್ಗೋರಿಗಳ ವಿನ್ಯಾಸವನ್ನು ಗುರುತಿಸುವಲ್ಲಿ ಪ್ರಾದೇಶಿಕ ಭೌಗೋಳಿಕ ಸನ್ನಿವೇಶ, ಅಲ್ಲಿ ದೊರೆಯುವ ಶಿಲಾಮಾದರಿಗಳು, ಲೋಹ ನಿಕ್ಷೇಪಕಗಳು ಹೇಗೆ ಪಾತ್ರವಹಿಸುತ್ತವೆ ಎಂಬುದನ್ನು ಅವರು ನಿರೂಪಿಸಿದ್ದಾರೆ.

ಶವಸಂಸ್ಕಾರದ ಈ ಕಲ್ಗೋರಿಗಳು ಈ ಸಂಸ್ಕೃತಿಯ ವೈಶಿಷ್ಟ್ಯವನ್ನು ತಿಳಿಸುತ್ತವೆ. ಅನ್ವೇಷಣೆ, ಉತ್ಖನನಗಳಿಂದ ವಿವಿಧ ಪ್ರಕಾರದ ಗೋರಿಗಳನ್ನು ಕರ್ನಾಟಕದಲ್ಲಿ ವಿದ್ವಾಂಸರು ಗುರುತಿಸಿದ್ದಾರೆ. ಇವುಗಳಲ್ಲಿ ದಾರಿಕೋಣೆ, ಕಂಡಿಕೋಣೆ, ಆಯಾತಾಕಾರದ ಕೊರೆದು ತಯಾರಿಸಿದ ಶವಕುಣಿಗಳು, ಮಡಕೆಯ ಶವಪೆಟ್ಟಿಗೆಗಳುಳ್ಳ ದುಂಡುವೃತ್ತಗಳು, ನಿಲಿಸುಗಲ್ಲುಗಳು, ಶಿಲಾವೃತ್ತ, ಶವಕುಳಿ, ಅಸ್ಥಿ ಪಾತ್ರೆ, ಕಲ್ಲುಗುಂಪೆಗಳು ಮೊದಲಾದ ಪ್ರಕಾರಗಳನ್ನು ವಿದ್ವಾಂಸರು ಗುರುತಿಸಿ ಬೆಳಕಿಗೆ ತಂದಿದ್ದಾರೆ.

ಕರ್ನಾಟಕದ ಅತಿ ಹೆಚ್ಚು ಸಂಖ್ಯೆಯ ನೆಲೆಗಳು ಇದೇ ಸಾಂಸ್ಕೃತಿಕ ಹಂತಕ್ಕೆ ಸೇರಿದವುಗಳಾಗಿದ್ದು, ಈ ಹಂತದಲ್ಲಿ ಕಬ್ಬಿಣದ ಜೊತೆಗೆ ಅತಿ ಹೆಚ್ಚು ಪ್ರಮಾಣದಲ್ಲಿ ಕಪ್ಪು ವರ್ಣದ, ಪೂರ್ಣ ಕಪ್ಪು ಮತ್ತು ಪೂರ್ಣ ಕೆಂಪು ವರ್ಣದ ಮಡಕೆಗಳ ಉಪಯೋಗವಿದ್ದುದನ್ನು ಗುರುತಿಸಲಾಗಿದೆ. ಹಂಪಿ ಪರಿಸರದಲ್ಲಿ ಕಪ್ಪಗಲ್ಲು, ಕುರುಗೋಡು, ಸಂಗನಕಲ್ಲು, (ಬಳ್ಳಾರಿ ತಾ.)[31], ಹಳಕುಂಡಿ, ಹಂಪಿ (ಹೊಸಪೇಟೆ ತಾ.)[32], ನಿಟ್ಟೂರು, (ಸಿರುಗುಪ್ಪ ತಾ.)[33], ಮಲ್ಲಾಪುರ (ಸಂಡೂರು ತಾ.)[34], ಅಯ್ಯಪ್ಪನಹಳ್ಳಿ, ಕುಮತಿ, ಹಳಸಗ್ರಾಮ, ಹುಲಿಕುಂಟೆ (ಕೂಡ್ಲಗಿ ತಾ.)[35], ಕೋಗಳಿ (ಹಗರಿಬೊಮ್ಮನಹಳ್ಳಿ ತಾ.)[36], ಅಲ್ಲೀಪುರ, ಕೊಟ್ನಕಲ್ಲು, ನವಲಿ, ಮೈಲಾರ, ರಾಜವಾಳ, ಹುಲಿಗುಡ್ಡ (ಹೂವಿನಹಡಗಲಿ ತಾ.)[37], ತೆಲಗಿ, ನೀಲಗುಂದ, ಮಾಡಲಗೇರಿ (ಹರಪನಹಳ್ಳಿ ತಾ.)[38], ಗಂಗಾವತಿ ತಾಲೂಕಿನ ಹಿರೇಬೆನಕಲ್, ಚಿಕ್ಕಬೆನಕಲ್, ಕಡೆಬಾಗಿಲು, ರಾಮದುರ್ಗ ಮೊದಲಾದಡೆ ಈ ಸಂಸ್ಕೃತಿಯ ಕುರುಹುಗಳು ದೊರೆತಿದ್ದು, ಈ ಸಂಸ್ಕೃತಿಯ ಮೇಲೆ ಹೆಚ್ಚಿನ ಬೆಳಕು ಬೀರಿವೆ.

ಸಂಗನಕಲ್ಲು, ಮೈಲಾರ, ಮಾರ್ಗಗಳಲ್ಲಿ ಈ ಹಂತದ ವಾಸ್ತವ್ಯದ ನೆಲೆಗಳನ್ನು ಗುರುತಿಸಲಾಗಿದೆ. ಹೂವಿನಹಡಗಲಿಯಲ್ಲಿ ಕಂಡುಬಂದ ಕಲ್ಗೋರಿಗೆ ವೃತ್ತ ಆಕಾರದ ಕಿಂಡಿ ಇದೆ.[39] ನವಲಿಯಲ್ಲಿ ಕಲ್ಮನೆ ಮಾದರಿಯ ಗೋರಿಗಳು, ಹಂಪಸಾಗರದಲ್ಲಿ ಸುಟ್ಟ ಮಣ್ಣಿನ ಶವಪೆಟ್ಟಿಗೆಗೆ ನಾಲ್ಕು ಕಾಲುಗಳಿವೆ.[40] ಮಲ್ಲಾಫುರ ಕಳಸ ಗ್ರಾಮಗಳಲ್ಲಿ ಕಿಂಡಿಕೋಣೆ ಮಾದರಿ, ನಿಟ್ಟೂರಿನಲ್ಲಿ ಶವಕುಣಿಗಳು, ಕಪ್ಪಗಲ್ಲಿನಲ್ಲಿ ಶಿಲಾವೃತ್ತಗಳು ಕಂಡುಬಂದಿವೆ. ಹಿರೇಬೆನಕಲ್ಲು ಬೆಟ್ಟದ ಮೇಲಿರುವ ವಿವಿಧ ಆಕಾರದ ಗೋರಿಗಳಿಂದಾಗಿ ಅದು ಒಂದು ಹಾಳು ಗ್ರಾಮದಂತೆ ಗೋಚರಿಸುತ್ತದೆ. ಈ ಕಲ್ಗೋರಿಗಳಲ್ಲಿ ಅಲ್ಲೊಂದು ಇಲ್ಲೊಂದು ಅಪರೂಪವಾಗಿ ಬೃಹದಾಕಾರದ ಕಲ್ಲಿನ ಗೊಂಬೆಗಳಿವೆ. ಚಪ್ಪಟೆ ಕಲ್ಲಿನಲ್ಲಿ ಮನುಷ್ಯಾಕೃತಿಯನ್ನು ಹೋಲುವ ಗೊಂಬೆಗಳನ್ನು ಬಿಡಿಸಲಾಗಿದೆ. ಇಂಥ ಗೊಂಬೆಗಳು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಸುಮಾರು ೧೬ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿವೆ.[41]

ಹಿರೇಬೆನಕಲ್ಲು, ಕುಮತಿ, ಹುಲಿಕುಂಟೆಗಳಲ್ಲಿರುವ ಇಂಥ ಗೊಂಬೆಗಳಿಗೆ ಸಾಮಾನ್ಯವಾಗಿ ಅರ್ಧಗೋಲಾಕೃತಿಯ ತಲೆ, ಕಿರಿದಾದ ಕಂಠ, ಮುಂಚಾಚಿದ ಮೊಂಡು ಭುಜಗಳು, ನೀಳವಾದ ಮುಂಡವಿದೆ. ಬುಡವು ಚೂಪಾಗಿರುತ್ತದೆ. ಹಿರೇಬೆನಕಲ್ಲಿನ ಗೊಂಬೆಯ ತಲೆ ದೊಡ್ಡದು. ಅದರ ಮೂರನೆಯ ಎರಡು ಭಾಗ ಭೂಮಿಯಲ್ಲಿ ಹುದುಗಿದೆ. ಒಬ್ಬ ಮನುಷ್ಯ ರಟ್ಟೆಗಳನ್ನು ಅಡ್ಡಚಾಚಿ ಕೈಗಳನ್ನು ಮೇಲೆತ್ತಿ ನಿಂತಂತಿದೆ.

ಕುಮತಿಯ ಎರಡು ಗೊಂಬೆಗಳು ಒಂದರ ಪಕ್ಕದಲ್ಲೊಂದು ನಿಂತಿವೆ. ಇವುಗಳ ಬದಿಯಲ್ಲಿ ಮತ್ತೆ ಮೂರು ಗೊಂಬೆಗಳಿದ್ದ ಗುರುತುಗಳಿವೆ. ಅಲ್ಲಿಯ ಎಡಭಾಗದ ಶಿಲ್ಪ ೩.೦೨ ಮೀ. ಎತ್ತರ ೨.೪೨ ಮೀ. ಅಗಲ (ಎದೆಭಾಗ), ತಳಭಾಗ ೧.೪೬ ಮೀ.ಅಳತೆಯನ್ನು ಹೊಂದಿದೆ. ಬಲಭಾಗದ ಶಿಲ್ಪ ೩೦೭ ಮೀ. ಉದ್ದ, ೨.೩೯ ಅಗಲ (ಎದೆಭಾಗ), ತಳಭಾಗ ೦.೭೫ ಮೀ. ಅಳತೆಯಲ್ಲಿದೆ. ಅಲ್ಲದೆ ಇವೆರಡರ ನಡುವಿನ ಅಂತರ ೫.೭೫ ಮೀ. ಇದೆ. ಹುಲಿಕುಂಟೆಯಲ್ಲಿ ಕಂಡುಬಂದ ಮೂರು ಮಾನವಾ ಕೃತಿಯ ಗೊಂಬೆಗಳಲ್ಲಿ ಒಂದು ಸುಸ್ಥಿತಿಯಲ್ಲಿದ್ದು, ಇನ್ನೊಂದರ ಅರ್ಧಭಾಗ ಭೂಮಿಯಲ್ಲಿ ಅಡಗಿದೆ. ಸುಸ್ಥಿತಿಯಲ್ಲಿರುವ ಗೊಂಬೆ ೧.೮೨ ಮೀ. ಎತ್ತರ, ೧.೧೯ ಮೀ. ಅಗಲ ಹಾಗೂ ೧೫ ಸೆ.ಮೀ. ದಪ್ಪವಾಗಿದೆ. ಹಡಗಲಿ ಹತ್ತಿರದ ಕೊಟ್ನಕಲ್ಲಿನಲ್ಲಿ ಕಲ್ಗೋರಿಯ ಜೊತೆ ಸುಮಾರು ಎರಡೂವರೆ ಅಡಿ ಎತ್ತರದ ಮಾನವಾಕೃತಿ ಶಿಲೆ ಕಂಡುಬಂದಿದೆ.

ಈ ಸಂಸ್ಕೃತಿಯ ಕಾಲಮಾನವು ಉತ್ತರ ಕರ್ನಾಟಕದಲ್ಲಿ ಕ್ರಿ.ಪೂ. ೧೨೦೦-೧೦೦೦ ಸುಮಾರಿಗೆ ಆರಂಭವಾಗಿ ಕ್ರಿ.ಪೂ. ೨ನೇ ಶತಮಾನದವರೆಗೆ ಪ್ರವರ್ಧಮಾನದಲ್ಲಿ ಇದ್ದಿತ್ತೆಂದು ತಿಳಿಯುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಈ ಸಂಸ್ಕೃತಿಯು ಕಿ.ಪೂ. ೧೨೦೦-೨೫೦ರ ವರೆಗೆ ಪ್ರವರ್ಧಮಾನ ಹೊಂದಿದ್ದಿತೆಂದು ಗುರುತಿಸಲಾಗಿದೆ.

ಬೃಹತ್ ಶಿಲಾಯುಗ ಹಂತದಿಂದ ಮಾನವನ ಪ್ರಮುಖ ಬೆಳವಣಿಗೆಯಲ್ಲಿ ಕಬ್ಬಿಣ ತಯಾರಿಕೆಯೂ ಒಂದು. ಅಂದಿನಿಂದ ಕಬ್ಬಿಣ ಉತ್ಪಾದನೆ ಕಂಡುಕೊಂಡ ನಂತರ ಸಾಮಾಜಿಕವಾಗಿ ಕ್ರಾಂತಿಕಾರಿ ಬದಲಾವಣೆಯಾಗುತ್ತ ನಡೆಯಿತು. ಜಗತ್ತಿನಾದ್ಯಂತ ಆರಂಭವಾದ ಈ ಕಬ್ಬಿಣ ಉತ್ಪಾದನೆಯ ಕಾಲನಿರ್ಣಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಬೃಹತ್ ಶಿಲಾಯುಗದ ಅವಧಿಯನ್ನು ಇದಕ್ಕೆ ಕೊಡಲಾಗಿದೆ. ಇದು ಉತ್ತರ ಭಾರತದಿಂದ ದಕ್ಷಿಣಕ್ಕೆ ಹರಡಿತ್ತೆಂದು ನಂಬಲಾಗಿದೆ. ಆದರೆ ಬ್ರಹ್ಮಗಿರಿಯಲ್ಲಿ ಉತ್ಖನನ ಕೈಗೊಂಡ ಮಾರ್ಟಿಮರ್ ವ್ಹಿಲರ್ ಅವರು ಉತ್ತರ ಭಾರತದಲ್ಲಿ ಬಳಕೆಯಲ್ಲಿರುವ ಮೊದಲೇ ಇಲ್ಲಿ ಕಬ್ಬಿಣದ ಉತ್ಪಾದನೆ ನಡೆಯುತ್ತಿತ್ತೆಂದು ಹೇಳಿದ್ದಾರೆ.

ಈ ಪ್ರದೇಶದ ಹೊಸಪೇಟೆ, ಬಳ್ಳಾರಿ, ಸಂಡೂರು ಬೆಟ್ಟಗಳು ಹೇರಳವಾಗಿ ಕಬ್ಬಿಣದ ಅದಿರನ್ನು ಹೊಂದಿವೆ. ಬೃಹತ್ ಶಿಲಾಯುಗದ ಹಂತದಿಂದಲೇ ಇಲ್ಲಿ ಕಬ್ಬಿಣದ ಬಳಕೆ ಆರಂಭವಾದಂತೆ ತೋರುತ್ತದೆ. ಹಿರೇಬೆನಕಲ್ಲಿನ ಕಲ್ಗೋರಿಗಳಲ್ಲಿ ಕಂಡುಬಂದ ಕಬ್ಬಿಣದ ಉಪಕರಣ ಮತ್ತು ಆನೆಗುಂದಿಯಲ್ಲಿ ದೊರೆತ ಕಬ್ಬಿಣದ ಕಿಟ್ಟ ಇದಕ್ಕೆ ಪುಷ್ಟಿ ನೀಡುತ್ತವೆ. ಹಿರೇಬೆನಕಲ್ಲಿನ ಉಪಕರಣವನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಅದು ಸಂಡೂರು ಅದಿರಿನಿಂದ ಕ್ರಿ.ಪೂ. ೧೧೦೦ರಲ್ಲಿ ತಯಾರಾದುದೆಂದು ನಿರ್ಧರಿಸಲಾಗಿದೆ.

ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಿತ ಕಾರ್ತಿಕೇಯ ವನ ಶಸ್ತ್ರಾಸ್ತ್ರ ನಿರ್ಮಾಣ ಕಾರ್ಯದಲ್ಲಿ ಪ್ರಮುಖವಾಗಿದ್ದಂತೆ ತೋರುತ್ತದೆ. ಅಲ್ಲದೆ ನಂತರದ ಕುಡಿತಿನಿ ಶಾಸನಗಳೂ ಇದಕ್ಕೆ ಪುರಾವೆ ನೀಡುತ್ತವೆ. ಈ ಪ್ರದೇಶದ ಗೊಲ್ಲರಹಳ್ಳಿ, ನಂದಿಬಂಡಿಗಳಲ್ಲಿ ದೊರೆತ ಅವಶೇಷಗಳು ನಿರಂತರವಾಗಿ ಕಬ್ಬಿಣದ ಉತ್ಪಾದನೆ ನಡೆದ ಬಂದಿರುವುದನ್ನು ಸೂಚಿಸುತ್ತವೆ. ಗೊಲ್ಲರಹಳ್ಳಿಯಲ್ಲಿ ಕ್ರಿ.ಶ. ೧೪-೧೭ನೆಯ ಶತಮಾನ ಇಲ್ಲವೇ ಅದಕ್ಕೂ ಪೂರ್ವದಲ್ಲಿ ನಡೆದ ಕಬ್ಬಿಣ ಉತ್ಪಾದನೆಯಿಂದ ದೊಡ್ಡ ದಿಬ್ಬವೇ ಉಂಟಾಗಿದೆ. ನಂದಿಬಂಡಿಯಲ್ಲಿ ಕಬ್ಬಿಣದ ಅದಿರು ಕರಗಿಸಿ ಲೋಹದ ರಸವನ್ನು ಸಂಗ್ರಹಿಸುತ್ತಿದ್ದ ಬಟ್ಟಲುಗಳು ಮತ್ತು ಕುಲುಮೆ ಅವಶೇಷಗಳು ಕಂಡುಬಂದಿವೆ. ಇದರಿಂದ ಬೆಟ್ಟದ ಆಶ್ರಯದಲ್ಲಿ ಅಲ್ಲಲ್ಲಿ ಕಬ್ಬಿಣದ ಉತ್ಪಾದನೆ ಆಗುತ್ತಿರುವುದು ಇಲ್ಲಿಯ ಅನೇಕ ನೆಲೆಗಳಿಂದ ಕಂಡುಕೊಳ್ಳಬಹುದು.

ಆದಿಮ ಸಂಸ್ಕೃತಿಯು ಕಾಲದಿಂದ ಕಾಲಕ್ಕೆ ಈ ಮೇಲಿನ ರೀತಿ ವಿಕಾಸ ಹೊಂದಿತ್ತೆಂಬುದನ್ನು ಮೇಲಿನ ವಿವರಗಳಿಂದ ತಿಳಿಯಬಹುದಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ವೀಲರ್ ಆರ್.ಇ.ಎಂ. ೧೯೪೮

[2] ದಾಪುರ ೧೯೬೫

[3] ಆಲ್ಚಿನ್ ೧೯೬೦

[4] ನಾಗರಾಜರಾವ್ ಮತ್ತು ಮಲ್ಹೋತ್ರ, ೧೯೬೫

[5] ಮಂಜುಂದಾರ್ ಮತ್ತು ರಾಜಗುರು, ೧೯೬೫

[6] ನಾಗರಾಜರಾವ್, ೧೯೭೧

[7] ಶೇಷಾದ್ರಿ ಎಂ, ೧೯೭೧

[8] ಪದ್ದಯ್ಯ, ೧೯೭೩

[9] ಹನುಮಂತರಾವ್ ಮತ್ತು ನಾಗರಾಜು.ಎಸ್‌೧೯೭೪

[10] ಇಂ.ಆ.ರಿ. ೧೯೮೩-೮೪:೮೨-೪೬,೧೯೮೫-೮೬ : ಮತ್ತು ೧೯೮೬-೮೭

[11] ಪೂಣಚ್ಚ ಕೆ.ವಿ. ೧೯೯೦:೪೪೭

[12] ಶಿವತಾರಕ್ ಕೆ.ಬಿ. ೧೯೯೯:೩೪೨

[13] ಅ. ಕಕ್ಕಬೇವಿನಹಳ್ಳಿ : Paddayya K., Investigation in to the Neolithic Culture of Shorapur Doab, South India,

ಆ. ಕುಡತಿನಿ : Allchin F.R., Neolithic Cattle-Keepers of South India,

ಇ. ಕಪ್ಪಗಲ್ಲು : Mujumdar G.G. & Rajguru, S.N., Ash Mound Excavations at Kappgal P. 67-69 A.I-೪, ೧೯೪೭-೭೮.

ಈ. ಬೆಳಗಲ್ಲು : Foot R.B., Indi, Pre-Proto Ant.

ಉ. ಸಂಗನಕಲ್ಲು : Subba Rao B., Stone Age Culture of Bellary

ಊ. ಹಳಕುಂದಿ : Foot R.B., Indi, Pre-Proto Ant. And I.A.R., ೧೯೫೯-೬೦,

ಎ. ಹಳೆನೆಲ್ಲುಡಿ : ಇ.ದ. ೧೧, ೧೯೯೬

[14] ಅ. ಇಂಗಳಗಿ : I.A.R., ೧೯೯೩-೯೪

ಆ. ಕಾಕುಬಾಳು

ಇ. ಗಾದಿಗನೂರು

ಈ. ತಿಮ್ಮಲಾಪುರ : ಪತ್ರಿಕೆ ವರದಿ, ಕನ್ನಡ ಪ್ರಭ, ೧೪.೦೮.೧೯೯೮

ಉ. ಡಣಾಪುರ : I.A.R., ೧೯೯೩-೯೪

ಊ. ಬೆಳಗೋಡಹಾಳ : Foot R.B., Indi, Pre-Proto Ant. I.A.R., ೧೯೬೨-೬೩,

ಎ. ವೆಂಕಟಾಪುರ : ಅದೇ ೧೯೬೫-೬೬, ಮತ್ತು ೧೯೮೪-೮೫,

[15] ಅ. ಕೊಂಚಗೇರಿ : Foot R.B., Indi, Pre-Proto Ant.

ಆ. ತೆಕ್ಕಲಕೋಟೆ : Nagatraj Rao M.S., & Malhotra K.C., The Stone Age Hill Dwellers of Tekkalakota

ಇ. ನಿಟ್ಟೂರು : Ansari Z.D., Indian Antiquary 3rd Series, and Sankalia, H.D., Pre-Proto. India & Pakistan

ಈ. ಸನವಾಸಪುರ : Foot R.B., Ind Pre-Prot. Ant.

[16] ಅ. ಇಂಗಳ್ಗಿ : I.A.R., ೧೯೮೭-೮೮,

ಆ. ಲಿಂಗದಹಳ್ಳಿ : Foot R.B., Ind Pre-Prot. Ant.

[17] ರಾಮದುರ್ಗ : ಅದೇ ಮತ್ತು A.S.I., S.R., ೧೯೩೦-೩೪

[18] ಅಲ್ಲೀಪುರ : ಇ.ದ. ೧೪, ೧೯೯೯,

[19] ಅ. ಮಾಡಲಗೇರಿ : ೧೯೯೮,

[20] A.l. Vol. ೪

[21] ಸುಂದರ ಅ. (ಸಂ), ಕರ್ನಾಟಕ ಚರಿತ್ರೆ, ಸಂ.೧ ಪು. ೧೫೪

[22] ಅ. ಕುಡತಿನಿ : Foot R.B., Ind Pre-Prot. Ant.And Allchin F.R., Neolithic Cattle-Keepers of South India,

ಆ. ಕಪ್ಪಗಲ್ಲು : Foot R.B., Ind Pre-Prot. Ant.A.I.-೪, ೧೯೪೭-೪೮,

ಇ. ಕುಡತಿನಿ : Foot R.B., Ind Pre-Prot. Ant.

ಈ. ಬಳ್ಳಾರಿ : Foot R.B., Ind Pre-Prot. Ant.

[23] ಅ. ಗಾದಿಗನೂರು ಮತ್ತು A.I.A. ೧೯೯೩-೯೪

ಆ. ಗುಡಿಓಬಳಾಪುರ : I.A.R., ೧೯೯೩-೯೪,

ಇ. ಹಂಪಿ : ಅದೇ, ೧೯೭೬-೭೭,

ಈ. ನಿಂಬಾಪುರ : Foot R.B., Ind. Pre-Proto. Ant., Allchin F.R., Neolithic Cattle-Keepers of South India,

ಉ. ಬೆಳಗಲ್ಲು : ಸುಂದರ ಅ., ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ,

ಊ. ಬೆಳಗೋಡಹಾಳು : Foot R.B., Ind Pre-Prot. Ant.

ಎ. ವೆಂಕಟಾಪುರ : I.A.R. ೧೯೬೫-೬೬

ಏ. ಹಳಕುಂಡಿ : ಸುಂದರ ಅ., ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ,

[24] ಅ. ತೆಕ್ಕಲಕೋಟೆ : ಇ.ದ., ೧೧, ೧೯೯೬,

[25] ಅ. ದರೋಜಿ : I.A.R., ೧೯೮೭-೮೮,

ಆ. ಭೈರನಾಯಕನಹಳ್ಳಿ : ಸುಂದರ ಅ., ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ,

ಇ. ರಾಜಾಪುರ

[26] ಅಯ್ಯಪ್ಪನಹಳ್ಳಿ

[27] ಹಂಪಸಾಗರ : Foot R.B., Ind Pre-Prot. Ant.

[28] ಅಲ್ಲೀಪುರ : ಇದ., 14, 1999,

[29] ಅ. ಕಪ್ಪಗಲ್ಲು ಸುಂದರ ಅ., ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ

ಆ. ಕುರುಗೋಡು

ಇ. ಸಂಗನಕಲ್ಲು : Subba Rao B., Stone Age Culture of Bellary

[30] ಹಳಕುಂಡಿ : ಸುಂದರ ಅ., ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ,

[31] ನಿಟ್ಟೂರು : Ansari Z.D., India Antiquary 3rd Series

[32] ಮಲ್ಲಾಪುರ : I.A.R., ೧೯೮೭-೮೮,

[33] ಅಯ್ಯಪ್ಪನಹಳ್ಳಿ : ಸುಂದರ ಅ., ಕರ್ನಾಟಕ ಪ್ರಾಗಿತಿಹಾಸ ಕಾಲದ ಕಲೆ, ಕುಮತಿ : ಅದೇ, ಇ.ದ., ೧೪, ೧೯೯೯,

ಇ. ಹಳಸಗ್ರಾಮ : Tylor M., Megalithic Tombs and other remains in Decan

ಈ. ಹುಲಿಕುಂಟೆ : ಪತ್ರಿಕಾ ವರದಿ ಪ್ರಜಾವಾಣಿ ೫.೦೩.೧೯೯೮

[34] ಅ. ಕೋಗಳಿ : ಇ.ದ., ೧೩, ೧೯೯೮.

[35] ಅಲ್ಲೀಪುರ : ಇ.ದ., ೧೪, ೧೯೯೯,

ಆ. ಕೊಟ್ನಕಲ್ಲು : ಅದೇ ೧೩, ೧೯೯೯,

ಇ. ನವಲಿ

ಈ. ಮೈಲಾರ

ಉ. ರಾಜವಾಳ ೧೯೯೯,

ಊ. ಹುಲಿಗುಡ್ಡ ೧೯೯೮,

ಎ. ಹೂ.ಹಡಗಲಿ

[36] ಅ. ತೆಲಗಿ Subba Rao B., Protohistoric and Early Histortic Ballary

ಆ. ನೀಲಗುಂದ : Sundara S., Early Chember Tomb

ಇ. ಭುವನಹಳ್ಳಿ : I.A.R., ೧೯೯೩-೯೪,

[37] ಇ.ದ., ೧೩, ೧೯೯೯,

[38] Foote R.B., Ind. Pre-Proto. Ant.,

[39] ಸುಂದರ ಅ.(ಸಂ), ಕರ್ನಾಟಕ ಚರಿತ್ರೆ, ಸಂ.೧ ೧೯೯೯,

[40] A.I. Vol. ೪

[41] Mudhol M.S., A Technical Study of Matal Objects from South Indian Megalithics (ph.D. Thesis)