ಭಾಸ್ಕರ ಕ್ಷೇತ್ರ, ಕಿಷ್ಕಿಂದ, ಪಂಪಾತೀರ್ಥ, ವಿಜಯನಗರ ಎಂದೆಲ್ಲ ಕರೆಯಿಸಿಕೊಳ್ಳುವ ಹಂಪಿ ಬಹುಪ್ರಾಚೀನ ಕಾಲದಿಂದಲೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ದೇಶದ ಇತರೆಡೆಯಂತೆ ಹಂಪಿ ಪರಿಸರದಲ್ಲೂ ಬಹುಪ್ರಾಚೀನ ಕಾಲದಿಂದಲೂ ಮನುಷ್ಯ ವಾಸಿಸಿದ್ದಕ್ಕೆ ಸಾಕಷ್ಟು ಪುರಾವೆಗಳಿವೆ. ಇಲ್ಲಿನ ಮೊಸಳಯ್ಯನಗುಡ್ಡ, ಕಿಷ್ಕಿಂದ, ವಾಲಿಕಾಷ್ಠ, ವಾಲಿಭಂಡಾರ ಎನ್ನುವ ಹೆಸರುಗಳೇ ಹಂಪಿಯ ಪ್ರಾಚೀನತೆಯನ್ನು ಸೂಚಿಸುತ್ತವೆ. ಕೇವಲ ಹಂಪಿಯಲ್ಲಿ ಅಲ್ಲದೆ ಅದರ ಸುತ್ತಲಿನ ಹಲವಾರು ಪ್ರದೇಶಗಳಲ್ಲಿ ನಡೆಸಿದ ಹಲವಾರು ಅನ್ವೇಷಣೆ ಮತ್ತು ಕೆಲ ಉತ್ಖನನದ ಫಲವಾಗಿ ಆದಿಮಾನವನ ಹಲವಾರು ತಾಣಗಳು ಬೆಳಕಿಗೆ ಬಂದಿವೆ.

ಶಿಲಾಯುಗದ ಮಾನವನು ಹಂಪಿ ಪರಿಸರವನ್ನು ತನ್ನ ನಿವಾಸಕ್ಕಾಗಿ ಆರಿಸಿಕೊಳ್ಳಲು ಇಲ್ಲಿಯ ನಿಸರ್ಗದತ್ತ ಪರಿಸರವೇ ಮುಖ್ಯ ಕಾರಣ. ಈ ಭಾಗವನ್ನು ದೊಡ್ಡ, ಚಿಕ್ಕ ಬಂಡೆಗಳು, ಗುಂಡುಗಳು, ಬೆಟ್ಟಗಳು ಆವರಿಸಿವೆ. ಇಲ್ಲಿನ ವಿಸ್ತಾರವಾದ ಹಾಸು ಬಂಡೆಗಳ ನಡುವೆ ಗುಹೆಗಳಿದ್ದು, ಆ ಕಾಲದ ಮಾನವನಿಗೆ ಅನುಕೂಲಕರವಾದ ನೆರಳಾಶ್ರಯವನ್ನು ಒದಗಿಸಿದ್ದವು. ಅಲ್ಲದೇ ಎಂದೂ ಬತ್ತದೇ ಸತತವಾಗಿ ಹರಿಯುವ, ನೀರಿನಿಂದ ಇರುವ ತುಂಗಭದ್ರಾ ನದಿ ಮತ್ತು ಅದನ್ನು ಕೂಡಿಕೊಳ್ಳುವ ಚಿಕ್ಕ ಚಿಕ್ಕ ಹಳ್ಳ, ತೊರೆಗಳಿಂದ ಅವನಿಗೆ ಜೀವನಾವಶ್ಯದಲ್ಲೊಂದಾದ ನೀರು ಸಾಕಷ್ಟು ದೊರೆಯುತ್ತಿತ್ತು. ಹಳ್ಳ, ಕೊಳ್ಳ, ಕಣಿವೆ, ಗುಡ್ಡ, ಗುಹೆ ಮುಂತಾದವುಗಳಲ್ಲಿ ಶಿಲಾಯುಗದ ಮಾನವನು ಬದುಕಲು ಅವಶ್ಯವಾಗಿ ಬೇಕಾದ ಮರ, ಬಳ್ಳಿ ಎಲೆ, ಗಡ್ಡೆ, ಗೆಣಸು, ಹಣ್ಣು, ನೀರು ಮುಂತಾದವು ವಿಪುಲವಾಗಿ ಹಾಗೂ ಸುಲಭವಾಗಿ ದೊರೆಯುತ್ತಿದ್ದವು. ಮತ್ತು ತನ್ನ ಉಪಯೋಗಕ್ಕೆ ಬೇಕಾದ ಕಲ್ಲಿನ ಆಯುಧಗಳನ್ನು ನಿರ್ಮಿಸಲು ಬೇಕಾದ ಗಟ್ಟಿಯಾದ ಕಲ್ಲುಗಳು, ಬೆಣಚುಕಲ್ಲುಗಳು, ಡೈಕ್ ಹಾಗು ಆಯುಧಗಳ ತಯಾರಿಕೆಗೆ ಬೇಕಾದ ವಿವಿಧ ಲೋಹ, ಅದಿರು (ಕಬ್ಬಿಣ, ತಾಮ್ರ ಇತರೆ) ಮುಂತಾದವುಗಳು ಹೇರಳವಾಗಿ ಇದೇ ಸ್ಥಳದಲ್ಲಿ ಸಮೀಪದಲ್ಲಿಯೇ ಲಭಿಸುತ್ತಿದ್ದವು. ಅಲ್ಲಲ್ಲಿ ಕಂಡುಬರುವ ಚಾವಣಿಯ ರೂಪದ ಬಂಡೆಗಳು ಅವನನ್ನು ಮಳೆ, ಗಾಳಿ, ಬಿಸಿಲುಗಳಿಂದ ರಕ್ಷಿಸುತ್ತಿದ್ದವು. ಮತ್ತು ವಿಶ್ರಾಂತಿ ಸಮಯದ ಚಟುವಟಿಕೆಗಳಿಗೆ ಅನುಕೂಲ ತಾಣಗಳಾಗಿದ್ದವು. ಈ ಎಲ್ಲ ಕಾರಣಗಳಿಂದಾಗಿ ಹಂಪಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಆದಿ ಮಾನವನ ಚಟುವಟಿಕೆಯ ಕೇಂದ್ರವಾಗಲು / ಮುಖ್ಯ ಕಾರಣವಾದವು. ಆದರೆ ಈ ಸಂಸ್ಕೃತಿಯ ಕುರುಹುಗಳು ನಿರೀಕ್ಷಿಸಿದಷ್ಟು ಹೇರಳವಾಗಿ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬರುತ್ತಿಲ್ಲ. ಶಿಲಾಯುಗದ ನಂತರ ಆದಿ ಮತ್ತು ಪ್ರಾಚೀನ ಹಾಗೂ ಮಧ್ಯಮ ಯುಗಗಳಲ್ಲಿ ಹಂಪಿಯನ್ನೊಳಗೊಂಡಂತೆ ಇತರೆ ನೆಲೆಗಳು ಧಾರ್ಮಿಕ ಮತ್ತು ರಾಜಕೀಯ ಕೇಂದ್ರವಾಗಿ ಪ್ರಗತಿ ಹೊಂದಿದವು. ಪರಿಣಾಮವಾಗಿ ಮಾನವನ ಚಟುವಟಿಕೆಗಳು ಅಧಿಕವಾದವು. ಇದರಿಂದಾಗಿ ಶಿಲಾಯುಗದ ಸಂಸ್ಕೃತಿಯ ಅವಶೇಷಗಳು ಅನೇಕ ವೇಳೆ ಸ್ಥಳ ಪಲ್ಲಟವಾಗಿ ಹಾಳಾಗಿರಬೇಕು ಅಥವಾ ಮಣ್ಣಿನ ಪದರುಗಳಲ್ಲಿ ಹೂತು ಹೋಗಿರಬೇಕು. ಇಲ್ಲವೇ ಮಾನವನ ನಿಧಿ ಶೋಧದ ದಾಹದಿಂದಾಗಿ, ಆದಿಮಾನವನಿಗೆ ಸಂಬಂಧಿಸಿದ ಹಲವಾರು ಅವಶೇಷಗಳು ಕಣ್ಮರೆಯಾದವು. ಕೆಲವು ನೆಲೆಗಳು ಅವಸಾನಗೊಂಡವು. ಆದರೂ ಪುರಾತತ್ವವಿದರ ನಿರಂತರ ಅನ್ವೇಷಣೆ ಮತ್ತು ಉತ್ಖನನ ಕಾರ್ಯಕೈಗೊಂಡು ಅಳಿದುಳಿದ ಅವಶೇಷಗಳನ್ನು ಆಧಾರವಾಗಿಟ್ಟುಕೊಂಡು ಹಲವು ನಿವೇಶನಗಳನ್ನು ಬೆಳಕಿಗೆ ತಂದಿದ್ದಾರೆ. ಇನ್ನೂ ಹೆಚ್ಚಿನ ಸಂಶೋಧನೆಯನ್ನು ಈ ಪರಿಸರದಲ್ಲಿ ನಡೆಸಿದರೆ ಮತ್ತಷ್ಟು ನೆಲೆಗಳು ದೊರೆಯುವ ಸಾಧ್ಯತೆ ಇದೆ.

ಹಂಪಿ ಪರಿಸರ ಎನ್ನುವುದು ಕೇವಲ ಹಂಪಿಗಷ್ಟೇ ಸೀಮಿತವಾಗಿರದೆ, ಅದರ ಸುತ್ತಲಿನ ಸು.೧೦೦ ಕಿ.ಮೀ.ವರೆಗಿನ ಪ್ರದೇಶವನ್ನು ಅಧ್ಯಯನಕ್ಕಾಗಿ ಗುರುತಿಸಿಕೊಳ್ಳಲಾಗಿದೆ. ಅಧ್ಯಯನದ ಅನುಕೂಲಕ್ಕಾಗಿ ಈ ಒಟ್ಟು ಪ್ರದೇಶ ಮತ್ತು ಅದರಲ್ಲಿನ ಎಲ್ಲ ನೆಲೆಗಳನ್ನು ಒಟ್ಟುಗೂಡಿಸಿ ಕೋರ್, ಬಪ್ಪರ್ ಎಂಬ ಎರಡು ಜೋನ್(ವಲಯ)ಗಳನ್ನಾಗಿ ವಿಭಾಗಿಸಿ ಅಧ್ಯಯನ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ ಬಳ್ಳಾರಿ, ಕೊಪ್ಪಳ ಹಾಗೂ ಚಿತ್ರದುರ್ಗ ಜಿಲ್ಲೆಯ ಕೆಲ ನೆಲೆಗಳು ಬರುತ್ತವೆ. ಈ ಪರಿಸರದಲ್ಲಿ ಸು. ೧೨೦ಕ್ಕಿಂತಲೂ ಅಧಿಕ ನೆಲೆಗಳಲ್ಲಿ ಆದಿಮಾನವ ಬಿಟ್ಟು ಹೋದ ಅವಶೇಷಗಳು ಪ್ರಾಪ್ತವಾಗಿದ್ದು, ಇವು ಆದಿಮಾನವನ ಈ ಅನ್ವೇಷಿತ ಮತ್ತು ಉತ್ಖನನ ಹಾಗು ಕಲಾತ್ಮಕ ನೆಲೆಗಳು ಸೇರಿದ್ದು ಅವು ಕೋರ್ ಮತ್ತು ಬಪ್ಪರ್ ವಲಯಗಳ ಮಿತಿಯಲ್ಲಿ ಬರುತ್ತವೆ. ಆ ಎಲ್ಲ ನೆಲೆಗಳನ್ನು ಈ ಮುಂದಿನಂತೆ ವಿಭಾಗಿಸಿಕೊಂಡು ಅಧ್ಯಯನ ಮಾಡಬಹುದಾಗಿದೆ.

೧. ಅನ್ವೇಷಣಾ ನೆಲೆಗಳು, ೨. ಉತ್ಖನನ ನೆಲೆಗಳು, ೩. ಕಲಾತ್ಮಕ ನೆಲೆಗಳು.

೪.೧ ಅನ್ವೇಷಣಾ ನೆಲೆಗಳು

ರಾಜ್ಯದ ವಿಶ್ವವಿದ್ಯಾಲಯಗಳ ಸಂಶೋಧಕರು, ವಿದ್ವಾಂಸರು ಹವ್ಯಾಸಿ ಸಂಶೋಧಕರು ಹಂಪಿ ಪರಿಸರದಲ್ಲಿ ಸು. ೯೮ಕ್ಕಿಂತಲೂ ಹೆಚ್ಚು ನೆಲೆಗಳನ್ನು ಗುರುತಿಸಿ ಬೆಳಕಿಗೆ ತಂದಿದ್ದಾರೆ. ಅವರೆಲ್ಲರ ಕಾರ್ಯ ಇಲ್ಲಿ ಶ್ಲಾಘನೀಯ. ಸುಮಾರು ೧೦೦ ಕಿ.ಮೀ. ವ್ಯಾಪ್ತಿಯಲ್ಲಿ ಆದಿಮಾನವ ಹಿಂದೆ ವಾಸಿಸಿ ಬಿಟ್ಟು ಹೋಗಿದ್ದ ಹಲವು ಅವಶೇಷಗಳನ್ನು ಗುರುತಿಸಿದ್ದಾರೆ. ಅಲ್ಲದೆ ಈ ಯೋಜನಾವಧಿಯಲ್ಲಿ ೧೦ ಹೊಸ ಪ್ರದೇಶಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡು, ಅಲ್ಲಿ ಆದಿಮಾನವನ ಅವಶೇಷಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಬಳ್ಳಾರಿ ಜಿಲ್ಲೆಗೆ ಸೇರಿದ ಹಂಪಿ, ಕಮಲಾಪುರ, ಕುಮತಿ, ಹುಲಿಕುಂಟೆ, ಕುರುಗೋಡು, ಮೈಲಾರ, ಹಳೆನಲ್ಲುಡಿ, ಕುಡತಿನಿ, ವೆಂಕಟಾಪುರ, ಬುಕ್ಕಸಾಗರಗಳು ಮತ್ತು ಅದೇ ರೀತಿ ಇಂದಿನ ಕೊಪ್ಪಳ ಜಿಲ್ಲೆಯ ಆನೆಗುಂದಿ, ಕಡೆಬಾಗಿಲು, ಹಿರೇಬೆನಕಲ್, ಮಲ್ಲಾಪುರ, ಲಕ್ಷ್ಮೀಪುರ, ಅಂಜನಹಳ್ಳಿ, ರಾಂಪುರ ಮೊದಲಾದವು ಪ್ರಮುಖವಾಗಿವೆ. ಈ ಪ್ರತಿ ನೆಲೆಗಳಲ್ಲಿ ದೊರೆತ ಅವಶೇಷಗಳನ್ನು ಹಾಗು ಅವುಗಳ ಮಹತ್ವವನ್ನು ಬಳ್ಳಾರಿ ಜಿಲ್ಲೆಯ ಮತ್ತು ಕೊಪ್ಪಳ ಜಿಲ್ಲೆಯ ನೆಲೆಗಳೆಂದು ಪ್ರತ್ಯೇಕವಾಗಿ ವಿಭಾಗಿಸಿಕೊಂಡು ಮುಂದಿನಂತೆ ಅಧ್ಯಯನ ಮಾಡಲಾಗಿದೆ.

ಎ. ಬಳ್ಳಾರಿ ಜಿಲ್ಲೆಯ ನೆಲೆಗಳು : ಜಿಲ್ಲೆಯ ವಿವಿಧೆಡೆ ಆದಿಮಾನವನ ಹಲವು ನೆಲೆಗಳಿದ್ದು, ಅವುಗಳನ್ನು ಸಂಕ್ಷಿಪ್ತವಾಗಿ ಅಧ್ಯಯನ ಮಾಡಲಾಗಿದ್ದು, ಆ ವಿವರ ಮುಂದಿದೆ.

೧. ಹಂಪಿ : ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇದನ್ನು ಭಾಸ್ಕರ ಕ್ಷೇತ್ರ, ಪಂಪಾತೀರ್ಥ, ದಕ್ಷಿಣಕಾಶಿ ಮುಂತಾಗಿ ಕರೆಯುತ್ತಾರೆ. ಇಲ್ಲಿ ಶಿಲಾಯುಗದ ಮಾನವನ ಕೆಲವು ಅವಶೇಷಗಳು ದೊರೆತಿದ್ದು, ಅವನು ಇಲ್ಲಿ ವಾಸಿಸಿದ್ದ ಎಂಬುದಕ್ಕೆ ಸ್ಪಷ್ಟ ಪುರಾವೆಗಳಾಗಿವೆ. ಕ್ರಿ.ಶ. ೧೮೮೨ರಲ್ಲಿ ರಾಬರ್ಟ್‌ಬ್ರೂಸ್‌ಪೂಟ್ ಎಂಬ ಆಂಗ್ಲ ಅಧಿಕಾರಿಯು ಹಂಪಿಯು ನವಶಿಲಾಯುಗದ ಮನುಷ್ಯನ ನಿವಾಸಗಳಲ್ಲೊಂದಾಗಿತ್ತೆಂದು ಬರೆದಿದ್ದಾನೆ. ಹಂಪಿಯ ವಿವಿಧ ನೆಲೆಗಳಲ್ಲಿ ಆದಿಮಾನವನಿಗೆ ಸಂಬಂಧಿಸಿದ ಅವಶೇಷಗಳು ದೊರೆತಿದ್ದು, ಅವುಗಳನ್ನು ಮುಂದಿನಂತೆ ಅಧ್ಯಯನ ಮಾಡಬಹುದು.

ಅ. ಮೊಸಳಯ್ಯನಗುಡ್ಡ : ಇದು ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಹಂಪಿಯ ವಿಠ್ಠಲ ದೇವಸ್ಥಾನದ ಸಮೀಪದಲ್ಲಿದೆ. ಇಲ್ಲಿ ಕೈಯಿಂದ ಮಾಡಿದ ಮಡಕೆಗಳ ಚೂರುಗಳು ಸಹ ದೊರೆತಿವೆ. ಅವು ಒಂದು ವಿಧವಾದ ಕಂದು ಬಣ್ಣದಲ್ಲಿದ್ದು ವಿವಿಧ ಆಕಾರಗಳಲ್ಲಿವೆ. ಬಾಚಿಗಳು, ಕೊಡಲಿಗಳು ಮತ್ತು ಕುಟ್ಟುವ ಸಾಧಾನಗಳು ವಿವಿಧ ನಿರ್ಮಾಣದ ಹಂತಗಳಲ್ಲಿರುವ ಆಯುಧಗಳು ಸಹ ದೊರೆತಿವೆ. ಇದೇ ನೆಲೆಯ ಸಮೀಪ ತುಂಗಭದ್ರಾ ನದಿಯ ಆಚೆ ದಂಡೆಯಲ್ಲಿಯ ಆನೆಗುಂದಿಯಲ್ಲಿಯೂ ಸಹ ನವಶಿಲಾಯುಗದ ಅವಶೇಷಗಳು ದೊರೆತಿದ್ದು, ಈ ಸಂಸ್ಕೃತಿಯನ್ನು ಅರಿಯಲು ಪೂರಕವಾಗಿವೆ. ಇಲ್ಲಿಯೇ ವರ್ಣಚಿತ್ರಗಳನ್ನು ಗುರುತಿಸಲಾಗಿದೆ. ಈ ಚಿತ್ರಗಳನ್ನು ಕಂದು, ಕೆಂಪು ಬಣ್ಣಗಳಲ್ಲಿ ಬರೆಯಲಾಗಿದೆ. ಇಲ್ಲಿ ಮಾನವನ ಹಾಗೂ ವನ್ಯಮೃಗಗಳ ಚಿತ್ರಗಳಿವೆ. ವನ್ಯಮೃಗಗಳೆಂದರೆ ಕಾಡುಕೋಣ, ಹುಲಿ, ಚಿಗರೆ, ಚಿರತೆ ಮುಂತಾದವುಗಳಿವೆ. ಪಕ್ಕದಲ್ಲಿಯೇ ಕೆಲವು ಮಾನವರು ಒಂದು ವಿಧವಾದ ಸಮೂಹ ನೃತ್ಯದಲ್ಲಿ ಭಾಗಿಗಳಾಗಿರುವುದನ್ನು ನೋಡಬಹುದು. ಇತರೆ ಚಿತ್ರಗಳ ವಿನ್ಯಾಸಗಳೆಂದರೆ ಬೇಟೆಯಾಡುವ ದೃಶ್ಯ. ಒಂದು ರೀತಿಯ ಆರಾಧನಾ ನೃತ್ಯ, ಮತ್ತಿತರ ವನ್ಯಮೃಗಗಳ ಚಿತ್ರಗಳಿದ್ದು, ಅತ್ಯಂತ ಮಹತ್ವವಾಗಿವೆ. ಈ ವರ್ಣಚಿತ್ರಗಳು ಆಕೃತಿ, ವಿನ್ಯಾಸ, ಬಳಸಲಾದ ಬಣ್ಣಗಳು, ಕಥಾವಸ್ತು ಮತ್ತು ರೂಪ ನಿರೂಪಣಾ ದೃಷ್ಟಿಯಿಂದ ಇತರೆಡೆ ದೊರೆತ ಚಿತ್ರಗಳಿಗೆ ಹೋಲಿಕೆಯಾಗುತ್ತವೆ.[1]

ಆ. ಚಕ್ರತೀರ್ಥ : ಇಲ್ಲಿನ ಬಂಡೆ ಚಾವಣಿಗಳ ಒಳಭಾಗದ ಮೇಲೆ ಶಿಲಾಯುಗದ ಮಾನವನು ತನ್ನ ವಿರಾಮ ಸಮಯದಲ್ಲಿ ಬಿಡಿಸಿರುವ ವರ್ಣ ಚಿತ್ರಗಳಿವೆ. ಇವುಗಳನ್ನು ನವಶಿಲಾಯುಗದ ಮಾನವನು ತನ್ನ ಮನರಂಜನೆಗಾಗಿಯೋ ಅಥವಾ ತನ್ನ ಭಾವನೆಗಳಿಗೆ ಒಂದು ರೂಪು ಕೊಡಲು ಚಿತ್ರಿಸಿದ್ದಿರಬೇಕು. ಇವುಗಳಲ್ಲಿ ಒಂದು ಕಡೆ ಬೃಹದಾಕಾರದ ಪಕ್ಷಿಯೊಂದು, ಬೃಹಾದಾಕಾರದ ಮಾನವ ದೇಹವನ್ನು ತನ್ನ ಚುಂಚುವಿನಿಂದ ಕುಕ್ಕುತ್ತಿರುವಂತೆ ತೋರಿಸಲಾಗಿದೆ. ಇವುಗಳ ದೇಹದ ಭಾಗವನ್ನು ಅಡ್ಡಡ್ಡಗೆರೆಗಳಿಂದ ಕಂದು, ಕೆಂಪು ಬಣ್ಣಗಳಲ್ಲಿ ತುಂಬಲಾಗಿದೆ. ಇಲ್ಲಿಯೇ ಕಠಾರಿ ರೀತಿಯ ಚಿತ್ರವೊಂದನ್ನು ಬಿಡಿಸಿರುವುದು ವಿಶೇಷವಾಗಿದೆ.

ಇ. ಗಾಯತ್ರಿಪೀಠ : ಪ್ರಕಾಶನಗರದಿಂದ ಗಾಯತ್ರಿಪೀಠಕ್ಕೆ ಹೋಗುವ ದಾರಿಯ ಬಲಭಾಗಕ್ಕಿರುವ ಬಂಡೆಯ ಮೇಲೆ ಕಂದು, ಕೆಂಪು ಬಣ್ಣದಿಂದ ಚಿತ್ರಿಸಿದ ವರ್ಣ ಚಿತ್ರಗಳಿವೆ. ಇದರಲ್ಲಿ ಕಡವೆ, ಜಿಂಕೆಯಂತಹ ಪ್ರಾಣಿ, ಮನುಷ್ಯರ ಚಿತ್ರಗಳಿವೆ.

ಉ. ಭರಮದೇವರ ಬಂಡೆ : ಪ್ರಕಾಶನಗರದಿಂದ ವಾಟರ್ ಫಾಲ್ಸ್‌ಗೆ ಹೋಗುವ ದಾರಿಯ ಬಲಭಾಗಕ್ಕಿರುವ ಭರಮದೇವರ ಬಂಡೆಯ ಸಮೀಪದ ತುಂಗಭದ್ರಾನದಿ ದಡದ ಮೇಲಿರುವ ಬಂಡೆಯ ಮೇಲೆ ಕಂದು, ಕೆಂಪು ಬಣ್ಣದಿಂದ ಚಿತ್ರಿಸಿದ ವರ್ಣ ಚಿತ್ರಗಳಿವೆ. ಇದರಲ್ಲಿ ಜಿಂಕೆ, ಮೊಸಳೆ ಮತ್ತು ಮನುಷ್ಯರ ಚಿತ್ರಗಳಿವೆ. ಇಲ್ಲಿರುವ ಚಿತ್ರಗಳಲ್ಲಿ ಗುಂಪು ನೃತ್ಯ ಮಾಡುವ ಚಿತ್ರಗಳು ಗಮನ ಸೆಳೆಯುತ್ತವೆ.[2]

ಕೃಷ್ಣ ದೇವಾಲಯದ ಬಳಿಯ ಬೆಟ್ಟದಲ್ಲಿ ಮತ್ತು ಮತಂಗಪರ್ವತದ ಬಳಿ ಇದೇ ರೀತಿಯ ವರ್ಣಚಿತ್ರಗಳಿವೆ. ಮೇಲೆ ವಿವರಿಸಿದ ಶಿಲಾಯುಗದ ಮಾನವ ಸಂಸ್ಕೃತಿಯ ಅವಶೇಷಗಳಲ್ಲದೆ, ಹಂಪಿಯಲ್ಲಿ ಕೆಲವಡೆ ಹಾಸುಬಂಡೆಗಳ ಮೇಲೆ ಚಿಕ್ಕಚಿಕ್ಕ ಕುಳಿಗಳು ಕಂಡುಬರುತ್ತವೆ. ಅವು ಲಂಬಾಕಾರದ ವರ್ತುಳದಂತಿರುವ ಕುಳಿಗಳಾಗಿವೆ. ಇವು ೮ ರಿಂದ ೬ ಅಂಗುಲ ಉದ್ದವಾಗಿದೆ. ಈಗಾಗಲೇ ತಿಳಿಸಿರುವಂತೆ ಈ ಕುಳಿಗಳು ಶಿಲಾಯುಗದ ಮಾನವನಿಂದ ನಿರ್ಮಿತವಾಗಿದ್ದು. ಆ ಮಾನವನು ತಾನು ತಯಾರಿಸಿದ ಕಲ್ಲಿನ ಕೈಕೊಡಲಿ ಮತ್ತು ಕಡಿಗತ್ತಿಗಳನ್ನು ಹರಿತಗೊಳಿಸಲೋಸುಗ ಹಾಸುಬಂಡೆಯ ಮೇಲೆ ಆಗಾಗ್ಗೆ ಮಸೆಯುತ್ತಿದ್ದುದರ ಪರಿಣಾಮವಾಗಿ ಈ ಕುಳಿಗಳು ಏರ್ಪಟ್ಟಿರಬೇಕು ಅನಿಸುತ್ತದೆ. ಅನೇಕಬಾರಿ ಹೊಸ ಹೊಸ ಶಿಲಾಯುಧಗಳನ್ನು ಸಿದ್ಧಪಡಿಸಿದಾಗ ಉಪಯೋಗಿಸಿದ್ದರಿಂದ ಸ್ವಲ್ಪ ಆಳದ ಕುಳಿಗಳಾದವು. ಹರಿತಗೊಳಿಸುವುದರೊಂದಿಗೆ ಈ ಆಯುಧಗಳಿಗೆ ಒಂದು ರೀತಿಯ ಹೊಳಪು ದೊರೆಯುತ್ತಿತ್ತು. ಆ ಮಾನವನು ತನಗೆ ಅವಶ್ಯವಿದ್ದ ಶಿಲಾಯುಧಗಳನ್ನು ಇಂತಹ ನೆಲೆಗಳಲ್ಲಿಯೇ ತಯಾರಿಸಿಕೊಳ್ಳುತ್ತಿದ್ದನು ಮತ್ತು ದೀರ್ಘಕಾಲದವರೆಗೆ ಇಲ್ಲಿಯೇ ವಾಸವಾಗಿದ್ದನು ಎಂಬ ವಿಷಯವನ್ನು ಈ ಕುಳಿಗಳು ಸೂಚಿಸುತ್ತವೆ.

೨. ಕಮಲಾಪುರ : ಹೊಸಪೇಟೆ ತಾಲೂಕಿನಲ್ಲಿರುವ ಈ ಗ್ರಾಮ ಹಿಂದೆ ವಿಜಯನಗರ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ಇದರ ನೈರುತ್ಯ ದಿಕ್ಕಿನಲ್ಲಿ ಸುಮಾರು ೬ ಕಿ.ಮೀ. ದೂರದ ಒಂದು ಚಿಕ್ಕ ಹಳ್ಳದಲ್ಲಿ ಪ್ರಾಚೀನ ಶಿಲಾಯುಗದ ಕಲ್ಲಿನಾಯುಧಗಳು ದೊರೆತಿವೆ. ಈ ಕಾಲದಲ್ಲಿ ಮಾನವನು ತನಗೆ ಬೇಕಾದ ದುಂಡಾದ ಕಲ್ಲುಗಳನ್ನು, ಒಡೆದೋ, ಕೆತ್ತಿಯೋ ಆಯುಧಗಳನ್ನು ತಯಾರಿಸಿಕೊಳ್ಳುತ್ತಿದ್ದನು. ಇಲ್ಲಿ ದೊರೆತ ಶಿಲಾಯುಧಗಳು ಒಂದು ವಿಧವಾದ ಗಟ್ಟಿ ಕಲ್ಲಿನಿಂದ ತಯಾರಿಸಲ್ಪಟ್ಟಿದ್ದು, ಒಮ್ಮೆ ಒಂದು ಕಡೆ ಹರಿತವಾಗಿದ್ದರೆ ಇನ್ನು ಕೆಲವೊಮ್ಮೆ ಎರಡೂ ಕಡೆ ಹರಿತವಾಗಿರುವಂತೆ ಹಿಮ್ಮುಖಗಳೊಂದಿಗೆ ತಯಾರಿಸಲಾಗಿದೆ, ಇವುಗಳಲ್ಲದೆ ಉಳಿಗಳು, ಕೆತ್ತುವ ಸಾಧನಗಳು, ಅವುಗಳ ಜೊತೆಗೆ ಅಪೂರ್ಣವಾಗಿರುವ ಕೆಲ ಶಿಲಾಯುಧಗಳು ಮತ್ತು ಕೆಲವು ಬೇಡವಾದ ಭಾಗಗಳು ಸಹ ದೊರೆತಿವೆ. ಅಲ್ಲದೆ ಇಲ್ಲಿಯೇ ಆದಿ ಹಳೇಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಗುರುತಿಸಿದ್ದು, ಇಲ್ಲಿ ಆ ಕಾಲದ ಕೈಕೊಡಲಿ, ಹೆರೆಗತ್ತಿ, ಮಚ್ಚುಗತ್ತಿ ಮೊದಲಾದ ಉಪಕರಣಗಳು ದೊರೆತಿದ್ದು, ಇವುಗಳನ್ನು ಡಾಲರೈಟ್ ಶಿಲೆಯಲ್ಲಿ ರೂಪಿಸಲಾಗಿದೆ. ಒಮ್ಮುಖ ಹಾಗೂ ಇಮ್ಮುಖದ ನೀಳಚಕ್ಕೆ, ಸೂಕ್ಷ್ಮ ಶಿಲೋಪಕರಣಗಳು ಇಲ್ಲಿ ದೊರೆತಿವೆ. ಅಲ್ಲದೆ ಕನ್ನಡ ವಿಶ್ವವಿದ್ಯಾಲಯ ಗಿರಿಸೀಮೆಯ ಬಂಡೆ ಮತ್ತು ಇಲ್ಲಿನ ಅತಿಥಿಗೃಹದ ಪೂರ್ವದ ಬಂಡೆಯ ಮೇಲೆ ಹಾಗು ಅಳ್ಳಿಕೆರೆಯ ಉತ್ತರಕ್ಕಿರುವ ಬೆಟ್ಟದ ಬಂಡೆಗಳ ಮೇಲೆ ನವಶಿಲಾಯುಗ ಕಾಲಕ್ಕೆ ಸೇರಿದ ಕುಟ್ಟು ಚಿತ್ರಗಳಿದ್ದು, ಅವುಗಳಲ್ಲಿ ಗೂಳಿ, ಮನುಷ್ಯ, ಜಿಂಕೆ, ಕಡವೆ ರೀತಿಯ ಚಿತ್ರಗಳು ಪ್ರಮುಖವಾಗಿದೆ. ಅವು ಅಂದಿನ ಸಂಸ್ಕೃತಿಯನ್ನು ಅರಿಯಲು ಸಹಾಯಕವಾಗಿವೆ.[3]

೩. ನಿಂಬಾಪುರ : ಹೊಸಪೇಟೆ ತಾಲೂಕಿನ ಹಂಪಿಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಒಂದು ಚಿಕ್ಕ ಬೂದಿಗುಡ್ಡ ಅಥವಾ ಮರಡಿ ಕಾಣಬರುತ್ತದೆ. ಅದನ್ನು ಸ್ಥಳೀಯರು ‘ವಾಲಿಕಾಷ್ಠ’ ಎಂದು ಕರೆಯುವ ವಾಡಿಕೆ ಇದೆ. ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಈ ಭಾಗಕ್ಕೆ ನಿಂಬಾಪುರವೆಂದು ಹೆಸರಿತ್ತು. ಆಗ ಕೆಲ ದೇವಸ್ಥಾನಗಳು, ಮಠಮಾನ್ಯಗಳು ಈ ಭಾಗದಲ್ಲಿ ಅಸ್ತಿತ್ವ ಪಡೆದುಕೊಂಡಿದ್ದವು. ಇಲ್ಲಿನ ಬೂದಿಗುಡ್ಡವನ್ನು ಕ್ಯಾಪ್ಟನ್ ನ್ಯೂಬೋಲ್ಡ್ ಎಂಬುವನು ಕ್ರಿ.ಶ. ೧೮೭೨ರಲ್ಲಿಯೇ ಗುರುತಿಸಿದ್ದನು. ಆಗ ಅದು ೪೫ ಅಡಿ ಉದ್ದವಿದ್ದು ೧೦ ರಿಂದ ೧೪ ಅಡಿ ಎತ್ತರವಾಗಿತ್ತು. ಆದರೂ ಶಿಲಾಯುಗದ ಅವಶೇಷಗಳು ಅಷ್ಟಾಗಿ ಕಾಣಬರಲಿಲ್ಲ. ಇದು ಕುಡತಿನಿಯ ಹತ್ತಿರವಿರುವ ಬೂದಿಕಣಿವೆಯನ್ನು ಹೋಲುತ್ತದೆ.[4]ಆದರೆ ಇದು ಅದಕ್ಕಿಂತಲೂ ಚಿಕ್ಕ ಪ್ರಮಾಣದಲ್ಲಿದೆ. ಮತ್ತು ಕುಡತಿನಿಯಲ್ಲಿ ದೊರೆತಂಥ ಶಿಲಾಯುಗದ ಅವಶೇಷಗಳು ಇಲ್ಲಿ ಇನ್ನೂ ದೊರೆತಿಲ್ಲ. ಈ ಕುರಿತು ಇಲ್ಲಿ ಇನ್ನೂ ಸಂಶೋಧನೆ ನಡೆಯಬೇಕಾಗಿದೆ. ಸದ್ಯಕ್ಕೆ ಬಳ್ಳಾರಿ ಮತ್ತು ಪಕ್ಕದ ರಾಯಚೂರು ಜಿಲ್ಲೆಗಳಲ್ಲಿ ಅನೇಕ ಕಡೆ ಕಾಣಬರುವ ಬೂದಿಗುಡ್ಡಗಳಂತೆ ಇದು ಇದ್ದು, ನವಶಿಲಾಯುಗದ ಕೊನೆಯ ಹಂತಕ್ಕೆ ಸೇರಿದೆ.

ಮೇಲೆ ವಿವರಿಸಲಾದ ಆಧಾರಗಳ ಮೇಲೆ ಹಂಪಿಯ ಪ್ರಾಂತವು ಶಿಲಾಯುಗದ ಮಾನವನ ಚಟುವಟಿಕೆಗಳ ಮತ್ತು ಸಂಸ್ಕೃತಿಯ ಕ್ಷೇತ್ರವಾಗಿತ್ತು ಎಂದು ಹೇಳಬಹುದಾಗಿದೆ. ಇವು ನವಶಿಲಾಯುಗದ ಕೊನೆಯ ಹಂತಕ್ಕೆ ಸೇರಿದವುಗಳೆಂದು ಕೆಲವರಿಂದ ತರ್ಕಿಸಲಾಗಿದೆಯಾದರೂ ಇವುಗಳ ಕಾಲವನ್ನು ನಿರ್ದಿಷ್ಟವಾಗಿ ಹೇಳಬೇಕಾದರೆ ಈ ಭಾಗದಲ್ಲಿ ವ್ಯವಸ್ಥಿತ ಹಾಗೂ ಸಮಗ್ರ ರೀತಿಯಲ್ಲಿ ಸರ್ವೇಕ್ಷಣಾ ಮತ್ತು ಉತ್ಖನನ ಕಾರ್ಯಗಳು ಜರುಗಿಸಿದಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಾಗಬಹುದು.

೪. ಕುರುಗೋಡು : ಸಿರಗುಪ್ಪ ತಾಲೂಕು ಕೇಂದ್ರದಿಂದ ೧೯ ಕಿ.ಮೀ. ದೂರದಲ್ಲಿರುವ ಈ ಪ್ರದೇಶದ ಪ್ರಾಚೀನ ಕಾಲದ ಕುರುಹುಗಳು ಹರಡಿಕೊಂಡಿವೆ. ಈ ಕುರುಹುಗಳಲ್ಲಿ ಮಧ್ಯೆ ಹಳೇಶಿಲಾಯುಗದಿಂದ ಇಂದಿನವರೆಗೆ ಬದುಕಿನ ಅನೇಕ ಅಂಶಗಳು ಕಾಣಸಿಗುತ್ತವೆ. ಅವುಗಳಲ್ಲಿ ಮಧ್ಯ ಹಳೇ ಶಿಲಾಯುಗ, ನೂತನ ಶಿಲಾಯುಗ, ಕಬ್ಬಿಣ ಯುಗದ (ಬೃಹತ್ ಶಿಲಾಯುಗ) ಮತ್ತು ಆದಿಚಾರಿತ್ರಿಕ ಮತ್ತು ಚಾರಿತ್ರಿಕ ಯುಗದ ಕುರುಹುಗಳು ಪ್ರಮುಖವಾಗಿ ದೊರೆತಿವೆ. ಒಟ್ಟಾರೆ ಕುರುಗೋಡಿನ ಸುಮಾರು ೨೦ ಚ.ಕಿ.ಮೀ. ಪ್ರದೇಶದಲ್ಲಿ ಸಾಂಸ್ಕೃತಿಕ ಕುರುಹುಗಳು ದೊರಕುತ್ತವೆ. ಅಲ್ಲದೇ ಪ್ರಾಚೀನ ಸಂಸ್ಕೃತಿಯ ಅವಶೇಷಗಳು ಹರಡಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ನಗರೀಕರಣದಿಂದ ಅನೇಕ ಕುರುಹುಗಳು ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿವೆ. ಈ ಪ್ರದೇಶದಲ್ಲಿ ದೊರೆತ ಪ್ರಾಗೈತಿಹಾಸಿಕ ಅವಶೇಷಗಳನ್ನು ಮುಂದಿನಂತೆ ಗಮನಿಸಬಹುದು.

ಆದಿ ಹಳೇಶಿಲಾಯುಗದ ಅವಶೇಷಗಳು

ಈ ಕಾಲದ ಕೆಲವು ಮುಖ್ಯ ಅವಶೇಷಗಳು ಇಲ್ಲಿ ದೊರೆತಿವೆ. ಅವುಗಳಲ್ಲಿ ಟ್ರಾಪ್ ಶಿಲೆ ಮತ್ತು ಬೆಣಚುಕಲ್ಲಿನಿಂದ ತಯಾರಿಸಿದ ಕೈಕೊಡಲಿ ಮೊದಲಾದ ಆಯುಧಗಳು ಪ್ರಮುಖವಾಗಿವೆ.

ಸೂಕ್ಷ್ಮ ಶಿಲಾಯುಗದ ಅವಶೇಷಗಳು

ಶಿಲಾಯುಗದ ಅನೇಕ ಉಪಕರಣಗಳು ಇಲ್ಲಿನ ವಜ್ರದುಂಡಿ ಬಸಪ್ಪನ ದೇಗುಲದ ಎದುರಿನ ಜಾಗದಲ್ಲಿ ದೊರೆತಿವೆ. ಈ ಪ್ರದೇಶದಲ್ಲಿ ದೊಡ್ಡ ಕಲ್ಲಿನ ಉಪಕರಣಗಳಲ್ಲದೆ ದ್ವಿಮುಖ, ಅಲಗಿನ ನೀಳ ಚಕ್ಕೆಗಳು ಮತ್ತು ಚಕ್ಕೆಗಳನ್ನು ತೆಗೆದ ತಿರುಳುಗಲ್ಲುಗಳು ಇಲ್ಲಿ ದೊರಕಿವೆ. ಈ ಆಲಗುಗಳು ಚಾಲ್ಸಿ ಡೆನಿ, ಜಾಸಪರ್, ಚರ್ಟ್, ಅಗೆಟ್ ಮುಂತಾದ ಶಿಲೆಗಳನ್ನು ಉಪಯೋಗಿಸಿ ಆಲಗುಗಳನ್ನು ಸಿದ್ಧಪಡಿಸಿದ್ದಾರೆ. ನೀಳ ಚಕ್ಕೆಗಳನ್ನು ಅದರ ತುದಿ ಹಾಗೂ ಒಂದು ಮಗ್ಗಲಿನಲ್ಲಿ ಮಾತ್ರ ಸಣ್ಣ ಚಕ್ಕೆಗಳನ್ನು ಎಬ್ಬಿಸಿ ಅರ್ಧ ಚಂದ್ರಾಕೃತಿಯ ಚತುಷ್ಕಾರದ ತ್ರಿಕೋಣಾಕೃತಿಯ ಉಪಕರಣಗಳನ್ನು ಸಿದ್ಧಪಡಿಸಿ ಉಪಯೋಗಿಸಿರುವುದು ಇಲ್ಲಿ ಕಂಡುಬರುತ್ತದೆ. ವಜ್ರದುಂಡಿ ಬಸಪ್ಪ ದೇವಾಲಯದ ಮುಂಭಾಗದ ದಿಣ್ಣೆಯಲ್ಲಿ ವ್ಯಾಪಕವಾಗಿ ಆಲಗಿನ ತುಂಡುಗಳು ನಿಷ್ಪ್ರಯೋಜಕವೆಂದು ನಿರಾಕರಿಸಿದ ತುಂಡುಗಳು ಉಪಕರಣಕ್ಕೆ ಬೇಕಾದ ಮೂಲಶಿಲೆಗಳನ್ನು ಗುರುತಿಸಬಹುದು. ಕೋರ್ಗಳು ಹೀಗೆ ಜಿಂಕಲಕೊಂಡ ಗುಡ್ಡದ ಬಳಿಯೂ ಹೆಚ್ಚಿನ ಅಲಗಿನ ತುಂಡುಗಳು ದೊರಕುತ್ತವೆ. ಇಲ್ಲಿ ಕಣ್ಣು ಕೋರೈಸುವಷ್ಟು ಬಿಳಿಕಲ್ಲಿನ ಸಣ್ಣ ತುಣುಕುಗಳನ್ನು ಕಾಣಬಹುದು. ಇವು ತಯಾರಿಕೆಯಲ್ಲಿ ಉಂಟಾದ ಪುಡಿ ಚಕ್ಕೆಗಳು. ಈ ಅನುಪಯುಕ್ತ ಕಲ್ಲು ಚೂರುಗಳು, ಅರೆ ಉಪಕರಣಗಳು, ಸಿದ್ಧ ಉಪಕರಣಗಳು. ಈ ಪ್ರದೇಶವು ಉಪಕರಣಗಳನ್ನು ತಯಾರಿಸುವ ಕಾರ್ಯಾಗಾರದ ಮೊದಲನೆಯ ಹಂತದ್ದೆಂದು ತೋರುತ್ತದೆ. ಜಿಂಕಲಕೊಂಡದ ಹಿಂಭಾಗದಲ್ಲಿ ದೊರೆಯುವ ಆಲಗುಗಳನ್ನು ಜಾಸ್ಪರ್ ಅಗೇಟ್ ಚರ್ಟ್‌ನಿಂದ ಸಿದ್ಧಪಡಿಸಲಾಗಿದೆ.

ನೂತನ ಶಿಲಾಯುಗದ ಅವಶೇಷಗಳು : ಇಲ್ಲಿ ಈ ಕಾಲಕ್ಕೆ ಸೇರಿದ ಮಡಕೆಚೂರು, ವರ್ಣಚಿತ್ರ, ಉಜ್ಜಿ ನಯಗೊಳಿಸಿದ ಕೊಡಲಿ, ಕೈಕೊಡಲಿ, ಕೆಲ ಸುಟ್ಟಮಣ್ಣಿನ ಗೊಂಬೆ ಮೊದಲಾದವು ದೊರೆತಿವೆ.

ವಜ್ರದುಂಡಿಯಲ್ಲಿ ಕಲ್ಲುಗಳನ್ನು ಉಪಯೋಗಿಸಿ ಆಯುಧಗಳನ್ನು ತಯಾರಿಸುತ್ತಿದ್ದರು. ಆಯುಧಕಲ್ಲನ್ನು ಒಂದು ಆಕಾರಕ್ಕೆ ತರುವುದು, ನಂತರ ಸಣ್ಣ ಸಣ್ಣ ಚಕ್ಕೆಗಳನ್ನು ತೆಗೆದು ಸಮತಲ ಮಾಡುವುದು. ಇದಾದ ನಂತರ ಉಜ್ಜಿ ನಯ ಮಾಡುವುದು, ನಂತರ ಇಡೀ ಭಾಗವನ್ನು ತಿಕ್ಕಿ ತಿಕ್ಕಿ ಹೊಳೆಯುವಂತೆ ಮಾಡುವುದನ್ನು ಗುರುತಿಸಬಹುದಾಗಿದೆ. ಈ ರೀತಿಯ ಹಂತಗಳು ಸಂಗನ ಕಲ್ಲು, ತೆಕ್ಕಲಕೋಟೆ ಮುಂತಾದ ಕಡೆ ಕಂಡುಬಂದಿವೆ. ಕುರುಗೋಡಿನ ಪಂಚಮುಖಿ ವೀರಭದ್ರ ಹಾಗೂ ಬಾಳೇಕೊಳ್ಳದಲ್ಲಿ ಸಣ್ಣ ಗುಂಡಿಗಳನ್ನು ದೊಡ್ಡ ಬಂಡೆಗಳ ಹರುವಿನ ಮೇಲೆ ಆಯುಧಗಳನ್ನು ಸಿದ್ಧಪಡಿಸಿ ಅಲ್ಲಿ ಕೈಕೊಡಲಿಗಳನ್ನು ಉಜ್ಜಿ ಹೊಳಪಾಗುವಂತೆ ಮಾಡಿರುವುದನ್ನು ಗುರುತಿಸಬಹುದು. ನೂತನ ಶಿಲಾಯುಗದ ಆಯುಧಗಳನ್ನು ಸ್ಥಳೀಯವಾಗಿ ತಯಾರಿಸಲಾಗಿದೆ. ಪಂಚಮುಖಿ ವೀರಭದ್ರನ ಎದುರು ಬೆಟ್ಟದಲ್ಲಿ ನೂತನ ಶಿಲಾಯುಗದ ಕೊಡಲಿಗಳನ್ನು ಹರಿತವಾಗಿ ಮಾಡಲು ಗ್ರಾನೈಟ್ ಕಲ್ಲಿನಲ್ಲಿ ಸಣ್ಣ ತಗ್ಗನ್ನು ಮಾಡಿ ಸತತವಾಗಿ ಉಜ್ಜಿರುವುದನ್ನು ಅಲ್ಲಲ್ಲಿ ಕಾಣಬಹುದು. ಇಂತಹ ತಗ್ಗನ್ನು ಪಂಚಮುಖಿ ವೀರಭದ್ರನ ಗುಡಿಯ ಮುಂದಿನ ಬೆಟ್ಟಗಳಲ್ಲಿಯೂ ಕಾಣಬಹುದು. ತಯಾರಿಕೆಯ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ಕೆಲವು ಕೊಡಲಿಗಳು ಮುರಿದು ಹಾಳಾಗಿರುವುದನ್ನು ಹಾಗೂ ತಯಾರಿಕೆಯ ವಿವಿಧ ಹಂತಗಳಲ್ಲಿರುವ ಕೆಲವು ಕೊಡಲಿಗಳು ಇಲ್ಲಿ ಕಂಡುಬಂದಿವೆ. ಕೈಕೊಡಲಿಗಳನ್ನು ತಯಾರಿಸುವ ಬೃಹತ್ ತಯಾರಿಕಾ ಪ್ರದೇಶ ಇದಾಗಿಲ್ಲದಿದ್ದರೂ, ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬೇಕಾಗುವ ಕೊಡಲಿಗಳನ್ನು ಇಲ್ಲಿ ಸಿದ್ಧಪಡಿಸಿಕೊಂಡಿರುವುದಕ್ಕೆ ಅನೇಕ ನಿದರ್ಶನಗಳನ್ನು ಬಾಳೆಯ ಕೊಳ್ಳದಲ್ಲಿ ಗುರುತಿಸಬಹುದಾಗಿದೆ. ನೆಲದ ಮೇಲ್ಭಾಗದಲ್ಲಿ ಅಲ್ಲಲ್ಲಿ ಅಂದರೆ ಸಂಗಮೇಶ್ವರ ಗುಡಿ, ಉಜಾಳೇಶ್ವರಪೇಟೆಯ ಅಸುಪಾಸಿನಲ್ಲಿ ಅನೇಕ ಅಳತೆಯ ಕೈಕೊಡಲಿಗಳು ದೊರಕಿವೆ. ಈ ಎಲ್ಲ ಉಪಕರಣಗಳು ಉತ್ತಮ ರೀತಿಯಲ್ಲಿವೆ.

ಇದೇ ನೆಲೆಯಲ್ಲಿ ಮೃತ್ಪಾತ್ರೆಗಳನ್ನು ಗುರುತಿಸಲಾಗಿದೆ. ಇವುಗಳನ್ನು ಸಂಗನಕಲ್ಲು ಮತ್ತು ಮಸ್ಕಿ ರೀತಿಯಲ್ಲಿ ಕೈಯಿಂದಲೇ ಸಿದ್ಧಪಡಿಸಲಾಗಿದೆ. ಇವು ನಸುಕಂದು ಬಣ್ಣ ಹಾಗೂ ಕಪ್ಪೊತ್ತಿದ ಪಾತ್ರೆಗಳು. ಇವುಗಳ ಮೇಲೆ ತೆಳ್ಳನೆಯ ಲೇಪನವಿದ್ದು ಕೆಲವು ಒರಟಾದ ಮೇಲ್ಮೈಯನ್ನು ಹೊಂದಿವೆ. ಇಲ್ಲಿ ದೊಡ್ಡ ಗುಡಾಣಗಳು, ಮಧ್ಯದ ಆಕಾರದ ಉಬ್ಬು ಹೊಟ್ಟೆಯ ಗಡಿಗೆಗಳು ಬಟ್ಟಲು ಮುಚ್ಚಳ ಮುಂತಾದ ಆಕಾರಗಳಲ್ಲಿ ಉಪಯೋಗವಾಗುತ್ತಿದ್ದವು. ಗುಡಾಣಗಳನ್ನು ಶವಸಂಸ್ಕಾರಕ್ಕೂ ಉಪಯೋಗಿಸಿರುವುದು ತೆಕ್ಕಲಕೋಟೆಯ ಉತ್ಖನನದಲ್ಲಿ ಕಂಡುಬಂದಿದೆ. ಈ ಮೃತ್ಪಾತ್ರೆಗಳು ನೂತನ ಶಿಲಾಯುಗ, ತಾಮ್ರ ಶಿಲಾಯುಗಕ್ಕೆ ಸೇರಿವೆ. ಇಲ್ಲಿನ ಕೆಲವು ಮೃತ್ಪಾತ್ರೆಗಳ ಮೇಲೆ ರೇಖಾಚಿತ್ರಗಳನ್ನು ಬಿಡಿಸಲಾಗಿದೆ. ಕೆಲ ಮೃತ್ಪಾತ್ರೆಯ ಬಾಯಿಯ ಭಾಗಕ್ಕೆ ಬೆರಳನ್ನು ಒತ್ತಿ ಉದ್ದಕ್ಕೂ ಮಣಿಗಳ ಹಾಗೆ ಸಿಂಗರಿಸಿರುವುದು ಕಂಡುಬರುತ್ತದೆ. ಅದೇ ರೀತಿ ಚಿವುಟುವುದರ ಮೂಲಕವೂ ಸಿಂಗರಿಸಲಾಗಿದೆ. ಇಲ್ಲಿನ ಕೆಲವು ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ಇವುಗಳಿಗೆ ಕೆಲವು ರೀತಿಯ ಚಿಕ್ಕ ಆಕಾರಗಳನ್ನು ಅಂಟಿಸಿರುವುದು ಕಂಡುಬರುತ್ತದೆ. ಇವು ಮನುಷ್ಯಾಕೃತಿಯನ್ನು ಹೋಲುತ್ತವೆ.

ಈ ಕಾಲಘಟ್ಟದಲ್ಲಿ ಸುಟ್ಟಮಣ್ಣಿನಿಂದ ತಯಾರಿಸಿದ ಗೂಳಿ, ಪಕ್ಷಿಗಳು ದೊರತಿದ್ದು, ಇವುಗಳ ಕಾಲ ಕ್ರಿ.ಪೂ. ೩೫೦೦ ಎಂದು ಗುರುತಿಸಲಾಗಿದೆ. ಇವು ಈ ಹಂತದ ಮಹತ್ವದ ಅಂಶಗಳಾಗಿದ್ದು, ಈ ನೆಲೆಯ ಭೂ-ಮೇಲ್ಮೈಗಳಲ್ಲಿ ದೊರಕಿವೆ. ಅವುಗಳಲ್ಲಿ ಕೆಲವು ಸಾಕಷ್ಟು ಹಾಳಾಗಿರುವುದರಿಂದ ಕಾಲಮಾನವನ್ನು ಸ್ಪಷ್ಟವಾಗಿ ನಿರ್ಧರಿಸುವುದು ಕಷ್ಟಕರವಾಗಿದೆ.

ಕುರುಗೋಡಿನ ಪೂರ್ವಕ್ಕೆ ಬೂದಿದಿನ್ನೆಗಳು ಇದ್ದ ಪ್ರದೇಶ ಕಂಡುಬರುತ್ತದೆ. ಬೂದಿಗುಡ್ಡಗಳು ಬಾಳೆ ಮುಳ್ಳಿನ ಬುಡ ಉಜಾಳೇಶ್ವರ ದೇವಾಲಯದ ಬಳಿ ಕಂಡು ಬಂದಿದೆ. ಹಾಗೆ ಬಾದನಹಳ್ಳಿಯಲ್ಲೂ ಕಂಡುಬಂದಿದೆ.

ಇಲ್ಲಿ ಗವಿ ವರ್ಣಚಿತ್ರಗಳನ್ನು ಸಹಾ ಶೋಧಿಸಲಾಗಿದೆ. ಅವುಗಳಲ್ಲಿ ಗವಿ ರೇಖಾಚಿತ್ರಗಳಲ್ಲಿ ಆಕಳು, ಜಿಂಕೆ, ಹುಲಿ ಮನುಷ್ಯರ ಛಾಯಾಕೃತಿಗಳು ಕೈಹಿಡಿದು ನರ್ತಿಸುವ ನೃತ್ಯ ಸಮೂಹದ ಬೇಟೆ ಚಿತ್ರಣಗಳಿವೆ. ಇಲ್ಲಿಯ ಗೂಳಿಯ ಚಿತ್ರ, ಸಮೂಹ ನೃತ್ಯ ಚಿತ್ರಗಳು ಪಿಕ್ಲಿಹಾಳು. ತೆಕ್ಕಲಕೋಟೆ ಹಾಗೂ ವಟಗಲ್‌ನಲ್ಲಿರುವ ವರ್ಣಚಿತ್ರಗಳಿಗೆ ಹೋಲಿಕೆಯಾಗುತ್ತವೆ.[5]ಇವು ನವಶೀಲಾ, ಶಿಲಾ ತಾಮ್ರಯುಗದ ಕಾಲಘಟಕ್ಕೆ ಸೇರಿದವುಗಳೆಂದು ನಿರ್ಧರಿಸಲಾಗಿದೆ. ಈ ರೀತಿಯ ಚಿತ್ರಗಳು ಇಲ್ಲಿನ ಪಂಚಮುಖಿ ವೀರಭದ್ರ, ಬಾಳೇಕೊಳ್ಳಗಳಲ್ಲಿದ್ದು, ಅವು ಶಿಲಾತಾಮ್ರಯುಗಕ್ಕೆ ಸೇರಿವೆ.

ಕಬ್ಬಿಣ ಯುಗದ (ಬೃಹತ್ ಶಿಲಾಸಂಸ್ಕೃತಿ) ಅವಶೇಷಗಳು

ಕಲ್ಲುಬಂಡೆಗಳು, ಚಪ್ಪಡಿಗಳು ದೊರೆಯುವ ಬೆಟ್ಟ ಗುಡ್ಡಗಳ ಬಳಿ ಶಿಲಾ ಗೋರಿಗಳಿರುವುದು ಸಹಜ. ಬೆಟ್ಟಗುಡ್ಡಗಳ ತಪ್ಪಲಲ್ಲಿ ಬೆಟ್ಟಗಳ ಸಮತಟ್ಟಾದ ಪ್ರದೇಶದಲ್ಲಿ ಶಿಲಾಮಯವಾದ ಬರಡು ಭೂಮಿಗಳಲ್ಲಿ ಇಂತಹ ನಿರ್ಮಿತಿಗಳಾಗುತ್ತಿದ್ದವೇ ಹೊರತು ಫಲವತ್ತಾದ ಭೂಮಿಗಳಲ್ಲಿ ಅಲ್ಲ. ಕಬ್ಬಿಣದ ನಿಕ್ಷೇಪದ ಪ್ರದೇಶ ಹಾಗು ಆಲಂಕಾರಿಕ ವಸ್ತುಗಳಾದ ಮಣಿಗಳ ತಯಾರಿಕೆ ಪ್ರದೇಶಗಳಲ್ಲಿ ಕಲ್ಗೋರಿ ನೆಲೆಗಳು ಹೆಚ್ಚಾಗಿವೆ. ಕಲ್ಲುಗಳನ್ನು ವಿವಿಧ ಆಕಾರದಲ್ಲಿ ಕೆತ್ತಿರುವುದು, ಉಪಕರಣಗಳನ್ನು ಬಳಸಿ ವಿಶಿಷ್ಟ ವಾಸ್ತು ರಚನೆಯ ಕಲ್ಗೋರಿಗಳ ನಿರ್ಮಾಣ ಮಾಡುವುದು, ಈ ಕಾಲದ ಜನರಿಗೆ ಚೆನ್ನಾಗಿ ಪರಿಚಯವಿದ್ದಿರಬೇಕು. ಕಬ್ಬಿಣದ ವಿವಿಧ ಗೃಹೋಪಯೋಗಿ ವಸ್ತುಗಳು ಮತ್ತು ದಿನನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳನ್ನು ತಯಾರಿಸುವುದರಲ್ಲಿ ಇವರು ನಿಪುಣರಾಗಿದ್ದರು.

ಈ ಸಂಸ್ಕೃತಿಯ ಜನ ಲೇಪನವುಳ್ಳ ಪಾತ್ರೆಗಳನ್ನು ಬಳಸುತ್ತಿದ್ದರು. ಈ ನಮೂನೆಯ ಮೃತ್ಪಾತ್ರೆಗಳು ಇಲ್ಲಿಯ ವಿವಿಧ ಭಾಗಗಳಲ್ಲಿ ದೊರತಿವೆ. ಇವುಗಳನ್ನು ತಿರುಗಣಿ ಚಿತ್ರದ ಮೇಲೆ ಮಾಡಿದ್ದರೆ ದೊಡ್ಡ ಪಾತ್ರೆಗಳು, ಕೆಂಪು ಕೆಂಪು ಬಣ್ಣದ ಪಾತ್ರೆಗಳ ಚೂರುಗಳು, ಅದರಲ್ಲೂ ಬೋಗುಣಿಯ ತರದ ದೊಡ್ಡ ಚೂರುಗಳು ಕಾಣಿಸುತ್ತವೆ. ಕೆಲವು ಇಲ್ಲಿ ಕಪ್ಪು, ಕೆಂಪು ಪಾತ್ರೆಗಳ ಬಳಿ ಬಣ್ಣದ ರೇಖಾ ಚಿತ್ರಗಳಿವೆ. ಇವು ಸರಳವಾದವು. ವಿರುದ್ಧ ದಿಕ್ಕಿನಲ್ಲಿ ಬೇರೆಯಾಗಿರುವ ಸಮಾನಾಂತರದ ನಾಲ್ಕೈದು ಸಿಡಿ ರೇಖೆಗಳನ್ನು ಜೋಡಿಸಿ ಇವುಗಳನ್ನು ತಯಾರಿಸಲಾಗಿದೆ. ಒಂದೆರಡು ಪಾತ್ರೆಗಳ ಮೇಲೆ ಗೀಚಿದ ಚಿತ್ರಗಳಿವೆ. ಆದರೆ ಈ ಪ್ರದೇಶದಲ್ಲಿ ಬೃಹತ್ ಶಿಲಾಸಂಸ್ಕೃತಿಯ ಮೃತ್ಪಾತ್ರೆಗಳು ಹೇರಳವಾಗಿ ದೊರಕುತ್ತವೆ. ಕಪ್ಪು ಕೆಂಪು ಬಣ್ಣದ ದ್ವಿವರ್ಣದ ಪಾತ್ರೆಗಳು ಹೇರಳವಾಗಿ ದೊರಕುತ್ತವೆ. ಬೃಹತ್ ಶಿಲಾಯುಗದ ಸಂಸ್ಕೃತಿಯ ಜನರು ಸಾಮಾನ್ಯವಾಗಿ ಬಳಸುತ್ತಿದ್ದ ಈ ಬಗೆಯ ಪಾತ್ರೆಗಳ ಚೂರು ಈ ಪ್ರದೇಶದಲ್ಲಿ ದೊರಕಿವೆ. ಸಾಮಾನ್ಯವಾಗಿ ಕೆಲವು ಕಲ್ಗೋರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತ್ಪಾತ್ರೆಗಳಿರುತ್ತವೆ. ಬೃಹತ್ ಶಿಲಾ ಗೋರಿಗಳು ಹಾಳಾದರೆ ಹೂತಿಟ್ಟ ಪಾತ್ರೆಗಳನ್ನು ಹೊರತೆಗೆದು ಹಾಕಿದಾಗ ಸಣ್ಣ ಸಣ್ಣ ಚೂರುಗಳಾಗಿರುವುದನ್ನು ಕಾಣಬಹುದು.

ವೃತ್ತಾಕಾರದ ಶವಕುಣಿಗಳು ಸಂಗಮೇಶ ದೇವಾಲಯದಲ್ಲಿ ಹಾಗೂ ಬೆಟ್ಟದ ಮೇಲೆ ಇತ್ತೆಂದು ಗುರುತಿಸಲಾಗಿದೆ. ಈ ಸ್ಥಳದಲ್ಲಿದ್ದ ಮೂಲ ವೃತ್ತಾಕಾರದ ಶವಕುಣಿಯನ್ನು ವ್ಯವಸಾಯ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ. ಶವಸಂಸ್ಕಾರಕ್ಕಾಗಿ ನಾನಾ ಪ್ರಕಾರದ ಗೋರಿಗಳನ್ನು ಈ ಜನರು ನಿರ್ಮಿಸುತ್ತಿದ್ದರು. ದಾರಿಕೋಣೆ, ಕಂಡಿಕೋಣೆ, ಜಂಬಿಟ್ಟಿಗೆ ಪ್ರಸ್ಥಭೂಮಿಯ ಆಳವಾಗಿ ಕೊರೆದಕೋಣೆ, ಮಣ್ಣಿನ ಶವಪೆಟ್ಟಿಗೆಗಳು, ದುಂಡು ವೃತ್ತಗಳು ನಿಲುವುಗಲ್ಲುಗಳು, ಕಲ್ಲುಕುಪ್ಪಿಗಳು ಪ್ರಮುಖವಾಗಿದೆ. ಕೆಲವು ಗೋರಿಗಳಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ಅಸ್ಥಿಪಂಜರ, ಕಬ್ಬಿಣದ ಮತ್ತು ಕಲ್ಲಿನ ಆಯುಧಗಳು, ಮಣಿಗಳು ದೊರಕಿವೆ. ಇದೇ ರೀತಿಯ ಬೃಹತ್ ಶಿಲಾಗೋರಿಗಳು ಹಾಳುಬಾವಿ ಬಳಿ ದೊರೆತಿದ್ದು, ಅಧ್ಯಯನ ಯೋಗ್ಯವಾಗಿವೆ.

ಇದೇ ನೆಲೆಯಲ್ಲಿ ಆದಿಮಾನವ ಬಳಸಿ ಬಿಟ್ಟುಹೋದ ಆಲಂಕಾರಿಕ ಸಾಧನಗಳು ದೊರೆತಿವೆ. ಇಲ್ಲಿ ಅನೇಕ ಬಗೆಯ ಮಣಿಗಳನ್ನು ಅಗೇಟ್, ಜಾಸ್ಫರ್ ಮುಂತಾದ ಶಿಲೆಗಳಿಂದ ತಯಾರಿಸಿದ್ದಾರೆ. ಕೆಲವೊಮ್ಮೆ ಶಂಖದ ಬಳೆಯನ್ನು ತಯಾರಿಸಿ ತೊಟ್ಟಿರಬೇಕು. ಕುರುಗೋಡಿನ ಬಾಳೇಕೊಳ್ಳದ ಪೂರ್ವಕ್ಕಿರುವ ಇಳಿಜಾರಿನಲ್ಲಿ ಕತ್ತರಿಸಿದ ಶಂಖದ ಬಳೇ ಚೂರುಗಳು ಕಂಡುಬಂದಿವೆ. ಅಂದರೇ ಇತರ ನೆಲೆಗಳಂತೆ ಇವರೂ ಶಂಖವನ್ನು ಉಪಯೋಗಿಸಿದ್ದಾರೆ. ಇಲ್ಲಿಯ ಜನರು ಅನೇಕ ಮಣಿಗಳು ಹಾಗು ಬಳೆಗಳನ್ನು ಉಪಯೋಗಿಸಿರಬೇಕು. ಹರಳುಗಳನ್ನು ಅಗೇಟ್, ಚರ್ಟ್‌, ಜಾಸ್ಪರ್ ಮುಂತಾದ ಶಿಲೆಗಳನ್ನು ಉಪಯೋಗಿಸಿ ತಯಾರಿಸಿದ್ದಾರೆ. ಇದೇ ಶಿಲೆಗಳಿಂದ ಮಣಿಗಳನ್ನು ವಿವಿಧ ಆಕಾರದಲ್ಲಿ ಮಾಡಿರುವುದು ಪಕ್ಕದ ತೆಕ್ಕಲಕೋಟೆ ಹಾಗೂ ಸಂಗನಕಲ್ಲಿನಲ್ಲಿ ಕೂಡ ಕಾಣಬಹುದು. ಇಲ್ಲಿ ವಿವಿಧ ರೀತಿಯ ಶಿಲೆಗಳನ್ನು ಉಪಯೋಗಿಸಿ ಅಲಗುಗಳನ್ನು ತಯಾರಿಸಿರುವುದು ಕಂಡುಬರುತ್ತದೆ. ಅಲಗುಗಳನ್ನು ಸಿದ್ಧಪಡಿಸಲು ವಿವಿಧ ಶಿಲೆಗಳನ್ನು ಉಪಯೋಗಿಸಿರಬೇಕು.

ಈ ಮೇಲಿನ ವಿವರದಿಂದ ಪ್ರಾಗೈತಿಹಾಸಕಾಲದಿಂದ ಇಂದಿನವರೆಗೂ ಕುರುಗೋಡು ವಿವಿಧ ಸಂಸ್ಕೃತಿಗಳ ಬೀಡಾಗಿತ್ತು ಎನ್ನುವುದನ್ನು ಅರಿಯಬಹುದಾಗಿದೆ.

೫. ಕುಮತಿ :  ಕುಮತಿ ಗ್ರಾಮವು ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ಸುಮಾರು ೪೦ ಕಿ.ಮೀ. ದೂರದಲ್ಲಿ ಇದೆ. ಬಯಲು ಪ್ರದೇಶವಾಗಿದ್ದು ಸಣ್ಣ ಪುಟ್ಟ ಮಣ್ಣಿನ ಗುಡ್ಡಗಳನ್ನು ಗ್ರಾಮದ ಸುತ್ತ ಕಾಣಬಹುದಾಗಿದೆ. ಮಳೆಯ ಪ್ರಮಾಣ ಅಷ್ಟೇನೂ ಹೆಚ್ಚಲ್ಲ. ಹಾಗೆಯೇ ಚಿನ್ನಹಗರಿ ನದಿಯು ಗ್ರಾಮದ ಸಮೀಪದಲ್ಲಿ ಹರಿದು ಹೋಗುತ್ತದೆ. ೧೯೯೬ರಲ್ಲಿ ಪುರಾತತ್ವ ಇಲಾಖೆಯ ಬೆಂಗಳೂರು ಶಾಖೆಯವರು ಕೆ.ವಿ.ಪೂಣಚ್ಚ ಇವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗ್ರಾಮಾಂತರ ಸಮೀಕ್ಷಾ ಕಾರ್ಯದ ಸಂದರ್ಭದಲ್ಲೂ ಈ ನೆಲೆಯನ್ನು ಅನ್ವೇಷಿಸಿ ವರದಿ ಮಾಡಿತು. ಇಲ್ಲಿ ಬೃಹತ್ ಶಿಲಾಯುಗದ ಒಂದು ಕಂಡಿಕೋಣೆಯ ಕಲ್ಗೋರಿ, ಭಾರತದಲ್ಲೇ ಅಪರೂಪವಾದ ಏಳು ಮಾನವಾಕಾರದ ಏಕಶೀಲಾ ಸಮುಚ್ಚಯಗಳಿವೆ. ಈ ಗ್ರಾಮದ ಕೆರೆದಂಡೆಯ ಉತ್ತರಕ್ಕೆ ಸುಮಾರು ೩೦೦ ಮೀ. ದೂರದಲ್ಲಿನ ಕೆ.ಎಂ.ತಿಪ್ಪೇರುದ್ರಯ್ಯ ಎಂಬುವರ ಜಮೀನಿನಲ್ಲಿ ಈ ಸಮುಚ್ಚಯಗಳಿವೆ. ಈ ಸಮುಚ್ಚಯಗಳಲ್ಲಿ ಏಳು ಸ್ಮಾರಕ ಶಿಲ್ಪಗಳಿದ್ದು, ಇವುಗಳಲ್ಲಿ ಎರಡು ಮಾತ್ರ ಸುಸ್ಥಿತಿಯಲ್ಲಿವೆ. ಸ್ಥಳೀಯವಾಗಿ ದೊರೆಯುವ ಗ್ರಾನೈಟ್ ಶಿಲೆಯ ಅಗಲವಾದ ಶಿಳಾಫಲಕನ್ನು ಉಪಯೋಗಿಸಿ ದಕ್ಷಿಣೋತ್ತರವಾಗಿ ಇವುಗಳನ್ನು ಯೋಜಿಸಲಾಗಿದೆ. ಪೂರ್ವಾರ್ಧಮುಖವಾಗಿರುವಂತೆ ನಿಲ್ಲಿಸಲಾಗಿದ್ದು, ಈ ಶಿಲ್ಪಗಳ ಅಳತೆ ಈ ಕೆಳಗಿನಂತಿವೆ. ಎಡಭಾಗದ ಶಿಲ್ಪವು ೩.೦೨ ಮೀ. ಎತ್ತರವಿದ್ದು ಅದರ ಎದೆಭಾಗದ ಅಗಲ ೨.೪೨ ಮೀ. ಇದೆ. ಅಗಲ ಅಲ್ಲದೆ ಇದರ ತಳಭಾಗ ೧.೪೬ ಮೀ. ಅಳತೆಯನ್ನು ಹೊಂದಿದೆ. ಅದೇ ರೀತಿ ಬಲಭಾಗದ ಶಿಲ್ಪ ೩.೦೭ ಮೀ. ಎತ್ತರ ೩.೩೬ ಮೀ. ಅಗಲವನ್ನು ಹೊಂದಿದೆ. ಹಾಗೇ ಇವೆರಡು ಶಿಲ್ಪಗಳ ನಡುವಿನ ಅಂತರ ೫.೭೪ ಮೀ. ಇದೆ.[6]

೬. ಹುಲಿಕುಂಟೆ : ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ಸುಮಾರು ೩೧ ಕಿ.ಮೀ. ದೂರದಲ್ಲಿರುವ ಈ ಗ್ರಾಮದ ಸುತ್ತಲೂ ಅರಣ್ಯ ಮತ್ತು ಬೆಟ್ಟಗುಡ್ಡಗಳಿವೆ. ಇದರ ಸಮೀಪ ಗುಡೇಕೋಟೆ ಬೆಟ್ಟಸಾಲು ಹಾದುಹೋಗುತ್ತದೆ. ಈ ಬೆಟ್ಟದ ಬಳಿ ಕೆರೆಹಳ್ಳಗಳಿದ್ದು ಇಲ್ಲಿನ ಗವಿಗಳು ಪ್ರಾಚೀನ ಮಾನವ ವಾಸಕ್ಕೆ ಯೋಗ್ಯನೆಲೆ ಎಂಬುದನ್ನು ಸಾಬೀತುಪಡಿಸುತ್ತವೆ.

೧೯೯೯ರಲ್ಲಿ ಕನ್ನಡ ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ಎಚ್‌.ತಿಪ್ಪೇಸ್ವಾಮಿ ತನ್ನ ಗೆಳೆಯರಾದ ಭೀಮಸಮುದ್ರದ ರಂಗನಾಥ ಮತ್ತು ಡಿಸ್ಕವರಿಟ್ರೂಪ್ ಇತರೆ ಸದಸ್ಯರ ನೆರವಿನೊಂದಿಗೆ ಹಮ್ಮಿಕೊಂಡಿದ್ದ ಗ್ರಾಮ ಸರ್ವೇಕ್ಷಣಾ ಸಮಯದಲ್ಲಿ ಭಾರತದಲ್ಲೇ ಮೊದಲಬಾರಿಗೆ ಬೃಹತ್ ಶಿಲಾಯುಗಕ್ಕೆ ಸೇರಿದ ಶಿಲಾವೃತ್ತದೊಳಗಿರುವ ಮೂರು ಮಾನವಾಕೃತಿಯ ಏಕಶಿಲಾ ಸಮುಚ್ಚಯಗಳನ್ನು ಶೋಧಿಸಿದರು. ಇಲ್ಲಿಯೇ ಮಡಕೆಚೂರು, ಕಬ್ಬಿಣ ತಯಾರಿಸುವ ಅವಶೇಷಗಳನ್ನು ಸಹ ಗುರುತಿಸಿದರು.

ಹುಲಿಕುಂಟೆ ಗ್ರಾಮದ ವಾಯವ್ಯ ಭಾಗಕ್ಕೆ ಸುಮಾರು ೨ ಕಿ.ಮೀ. ದೂರದಲ್ಲಿರುವ ಹರಿಜನ ಬೋರಕ್ಕ ಎಂಬುವವರ ಜಮೀನಿನಲ್ಲಿ ಈ ಮಾನವಾಕಾರದ ಮೂರು ಏಕಶಿಲಾ ಕೃತಿಗಳಿವೆ. ಇವುಗಳಲ್ಲಿ ಒಂದು ಮಾತ್ರ ಸುಸ್ಥಿತಿಯಲ್ಲಿದ್ದು, ಉಳಿದವು ಭಗ್ನವಾಗಿವೆ. ಇಲ್ಲಿಯ ಸ್ಥಳೀಯರು ಇವುಗಳನ್ನು ರಕ್ಷಸಕಲ್ಲು, ರಾಕ್ಷಸಕಲ್ಲು, ರಕ್ಕಸಗಲ್ಲು, ರಕ್ಷಿಸಿಕಲ್ಲು(ಕಲ್ಲು)ಗಳೆಂದು, ಈ ಪ್ರದೇಶವನ್ನು ರಕ್ಷಸಮಟ್ಟಿ, ರಕ್ಷಸಿಮಟ್ಟಿಯೆಂದು ಕರೆಯುತ್ತಾರೆ.[7]ಇವುಗಳಿಗೆ ಹುಲಿಕುಂಟೆ ಜನರು ಯಾವುದೇ ಪೂಜೆ ಪುನಸ್ಕಾರಗಳು ಮಾಡಿದಂತೆ ಕಾಣುವುದಿಲ್ಲ. ಆದರೆ ಕುಮತಿ ಪ್ರದೇಶದ ಜನರು ಪ್ರಮುಖ ಹಬ್ಬ ಹರಿದಿನಗಳಂದು ಮೊದಲು ಎಡೆ ಇಟ್ಟು ಪೂಜಿಸುವ ಸಂಪ್ರದಾಯವಿಟ್ಟುಕೊಂಡಿದ್ದಾರೆ. ಜೊತೆಗೆ ಅನಂತನ ಹುಣ್ಣಿಮೆಯಿಂದ ವಿಶೇಷ ಪೂಜೆ ನಡಿಸಿ ಜನರಿಗೆ ಅನ್ನ ಸಂತರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಪಾಯಸ, ಅನ್ನದ ಎಡೆ ಹಾಕಿ ಪೂಜಿಸುವ ಪರಿಪಾಠವಿದೆ. ಮೇಲಿನ ಎರಡು ಪ್ರದೇಶಗಳಲ್ಲಿಯೂ ಇವುಗಳ ನಿರ್ಮಾಣದ ಬಗ್ಗೆ ಅನಾದಿಕಾಲದಿಂದಲೂ ಜನಪದರಲ್ಲಿ ನಂಬಿಕೆಯ ಹೇಳಿಕೆಯೊಂದು ಉಳಿದುಕೊಂಡು ಬಂದಿದೆ.

ಅದೇನೆಂದರೆ ಹಿಂದೆ “ಶ್ರೀ ಭೈರವೇಶ್ವರ ಎಂಬ ದೇವತಾ ಪುರುಷನು ಬೇಟೆಗಾಗಿ ಬಂದ ಸಂದರ್ಭದಲ್ಲಿ ರಕ್ಕಸರು ಅಡ್ಡಿ ಮಾಡಿದ್ದರಿಂದ ಅವರನ್ನು ಕಲ್ಲುಗಳಾಗುವಂತೆ ಆ ದೇವತಾಪುರುಷನು ಶಾಪ ಕೊಟ್ಟಿದ್ದರಿಂದಾಗಿ ಅವು ಕಲ್ಲುಗಳಾಗಿವೆ” ರಾಕ್ಷಸರಿಗೆ ಶಾಪ ಕೊಟ್ಟಿದ್ದರಿಂದಾಗಿ ಅವು ಕಲ್ಲುಗಳಾಗಿ, ಜನಮನದಲ್ಲೂ ‘ರಾಕ್ಷಸಕಲ್ಲು’ ಎಂದು ಹೆಸರು ಪಡೆದುಕೊಂಡು ಅಸ್ತಿತ್ವದಲ್ಲಿವೆ ಎಂಬುದು ಜನರ ನಂಬಿಕೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕು ಯರ್ರೇನಹಳ್ಳಿ ಗ್ರಾಮದ ಶ್ರೀ ಅಜ್ಜನಮುನಿ ವಿರಚಿತ ಶ್ರೀ ಕಾಲಭೈರವೇಶ್ವರ ಅರ್ಥಾತ್ ಶ್ರೀ ನುಂಕೇಮಲೆ ಸಿದ್ಧೇಶ್ವರ ಎಂಬ ಯಕ್ಷಗಾನ ಬಯಲಾಟದಲ್ಲಿ ಇವುಗಳ ನಿರ್ಮಾಣದ ಬಗ್ಗೆ ಉಲ್ಲೇಖ ಬರುತ್ತದೆ. ಅದರಲ್ಲಿ “ಭಲ..ಲಲ..ಅಹೋ ಅಕ್ಕಯ್ಯ ಚೆಂದದಿಂದ ಹಿಂದಕ್ಕೆ ರಕ್ಕಸರೊಡಗೂಡಿ ಬರುವಾಗ ಸಂಧಿಸಿದ ದುರ್ಘಟನೆ ಏನೆಮದರೆ ಭಳಿರೇ….. ಆಕುಲ್ಲ ದಾನವರನ್ನು ಹುಲ್ಲೇಗಳಂ ಕೊಲ್ಲುವ ಸಮಯದಿ ಯಮ್ಮನ್ನು ತಲ್ಲಣಿಸುವಂತೆ ಮಾಡಿದರು. ಆದರಿಂದಲೇ ಭಳಿರೇ….. ಆ ರಕ್ಕಸರನ್ನು ಕುಮ್ತಿ ರೇವಿನಲ್ಲಿಯೇ ಕಲ್ಲಾಗಿ ಬೀಳುವಂತೆ ಬಲ್ಲಿದ ಶಾಪವಂ ಕೊಟ್ಟು ಬಂದೆನು. ಅಲ್ಲಿಂದ ಬರಲು ತಡವುಂಟಾಯಿತಮ್ಮ ಶಿವನ ಪುತ್ರಿ ಸದಮಲಗಾತ್ರಿ” ಎಂದು ತನ್ನ ಅಕ್ಕನಿಗೆ ಶ್ರೀ ಭೈರವೇಶ್ವರನು ತಡವೇಕೆಂದು ಕೇಳಿದ್ದಕ್ಕೆ ಉತ್ತರ ಹೇಳುತ್ತಾನೆ.[8] ಕುಮತಿಯ ಗೊಂಬೆಗಳು ಪಂಚಪಾಂಡವರನ್ನು ನಿರ್ದೇಶಿಸುತ್ತವೆಂದು ಅ. ಸುಂದರ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರೇ ಮುಂದುವರಿದು ಈ ಗೊಂಬೆಗಳು ಬೃಹತ್ ಶಿಲಾಸಂಸ್ಕೃತಿಯ ಧಾರ್ಮಿಕ ನಂಬಿಕೆ. ಭಾವನೆ ಮತ್ತು ಪರಂಪರೆಯನ್ನು ಸೂಚಿಸುವ ಇದುವರೆಗೂ ಪರಿಶೀಲಿಸಿದ ಬೃಹತ್ ಶಿಲಾ ಗೋರಿಗಳಿಗಿಂತಲೂ, ಅಪರೂಪದ ನಿರ್ಮಿತಿಗಳಾಗಿವೆ. ಮತ್ತು ಈ ಗೊಂಬೆಗಳು ಆ ಜನರ ನಿರ್ಮಾಣ ರೂಪಣ ಕಾರ್ಯಗಳಲ್ಲಿನ ಸರಳ ಹಾಗೂ ಚತುರ ತಾಂತ್ರಿಕ ಕುಶಲತೆಯನ್ನು ಎತ್ತಿ ತೋರಿಸುತ್ತದೆ. ಇವು ತರುವಾಯದ ಶಿಲಾ ನಿರ್ಮಿತಿಗಳಿಗೆ ನಾಂದಿಯಾಗಿವೆ ಎಂದಿದ್ದಾರೆ.

ಶ್ರೀ ನುಂಕೇಶ್ವರ ದೇವರ ಶಾಪದಿಂದಾಗಿಯೇ ರಾಕ್ಷಸರು ಕಲ್ಲುಗಳಾಗಿ ನಿಂತಿರುವುದು ಎಂಬ ಅಭಿಪ್ರಾಯವು ಸಮಂಜಸವಲ್ಲ. ಕಾರಣ ಶ್ರೀ ನುಂಕೇಶ್ವರ (ಶ್ರೀ ನುಂಕೇಮಲ್ಲೇಶ್ವರ)/ಭೈರವೇಶ್ವರ ದೇವಾಲಯ ಇಂದಿಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಸಮೀಪದ ನುಂಕೆಮಲೆ ಬೆಟ್ಟದಲ್ಲಿದ್ದು, ಈ ಪ್ರದೇಶದ ಸುತ್ತಲಿನ ಜನ ಈ ದೇವರನ್ನು ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಶ್ರೀ ನುಂಕೇಮಲೇಶ್ವರ ಮತ್ತು ಮಲ್ಲಿಕಾರ್ಜುನ ಮೊದಲಾದ ದೇವಾಲಯಗಳನ್ನು ಕದಂಬರಾಜರು ನಿರ್ಮಿಸಿ ಆ ದೇವಾಲಯಗಳಿಗೆ ದತ್ತಿ ಬಿಟ್ಟ ಬಗ್ಗೆ ಶಾಸನಗಳು ಮತ್ತು ಕೆಲ ಚರಿತ್ರೆ ಗ್ರಂಥಗಳಿಂದ ತಿಳಿದುಬರುತ್ತದೆ. ಆದ್ದರಿಂದ ಶ್ರೀನುಂಕೇ ಭೈರವೇಶ್ವರ ಕದಂಬರ ಆರಾಧ್ಯ ದೈವವೆಂದು ತಿಳಿದುಬರುತ್ತದೆ. ಪ್ರಸ್ತುತ ದೇವತಾ ಪುರುಷನ ಶಾಪದಿಂದಾಗಿ ಅಥವಾ ಬಾಣ ಪ್ರಯೋಗದಿಂದಾಗಿ ಅವು ನಿರ್ಮಾಣ ಆಗಿಲ್ಲ. ಬದಲಾಗಿ ನುಂಕಪ್ಪ ಬೃಹತ್‌ ಶಿಲಾಯುಗ ಕಾಲದ ಪ್ರಮುಖನಾಗಿರಬೇಕು. ಕುಮತಿ, ಹುಲಿಕುಂಟೆ ಪ್ರದೇಶಗಳಿಗೆ ಆತ ಬೇಟೆಗಾಗಿ ಬಂದಿರಬೇಕು. ಅಲ್ಲಿರುವ ಜನರು ಹೊಸ ಮನುಷ್ಯನೊಡನೆ ಹೋರಾಟಕ್ಕೆ ಇಳಿದಿರಬೇಕು. ಪ್ರಾಯಶಃ ಶ್ರೀ ನುಂಕೇಶ್ವರ ಬಹಳ ಬಲಿಷ್ಠನಿದ್ದು, ಈ ಎರಡು ಪ್ರದೇಶಗಳಲ್ಲೂ ತನ್ನ ವಿರುದ್ಧ ಯುದ್ಧಕ್ಕೆ ಬಂದವನನ್ನು ಕೊಂದಿರಬೇಕು (ಆದಿಮ ಸಮಾಜಗಳಲ್ಲಿ ತಮ್ಮ ಜನರನ್ನು ಹೊರತುಪಡಿಸಿ ಅಂದರೆ ಹೊಸ ಮನುಷ್ಯರು ತಾವಿದ್ದ ಪ್ರದೇಶಕ್ಕೆ ಬಂದರೆ ಅವರೊಡನೆ ಯುದ್ಧಕ್ಕಿಳಿಯುವುದು ಸಾಮಾನ್ಯವಾಗಿತ್ತು). ಹಾಗಾಗಿ ಅಲ್ಲಿ ಎಷ್ಟು ಜನ ಸತ್ತರೋ ಅವರೆಲ್ಲರ ಸ್ಮರಣೆಗೆ ಮಾನವಾಕಾರದ ಶಿಲ್ಪಗಳನ್ನು ನಿಲ್ಲಿಸಿರಬೇಕು. ಅವು ನೋಡಲು ವಿಚಿತ್ರವಾಗಿ ಕಂಡುಬಂದಿದ್ದರಿಂದ ಆ ರೀತಿ ಐತಿಹ್ಯವನ್ನು ಜನ ಹುಟ್ಟು ಹಾಕಿರಬೇಕು. ಆದರಿಂದ್ದ ಶಾಪ ಕೊಟ್ಟು ಮತ್ತು ಬಾಣ ಪ್ರಯೋಗದಿಂದ ನಿರ್ಮಾಣವಾಗಿದೆ ಎಂಬುದು ಜನರ ಐತಿಹ್ಯವೆಂದು ಹೇಳಬಹುದಾಗಿದೆ.

ಸಂಪೂರ್ಣವಾಗಿ ಮಾನವಾಕೃತಿಯ ಲಕ್ಷಣಗಳನ್ನೊಳಗೊಂಡು ಕುಮತಿ, ಹುಲಿಕುಂಟೆಯ ಶಿಲ್ಪಗಳನ್ನು ಬೇರೆ ಯಾವ ನೆಲೆಗಳ ಮಾನವಾಕೃತಿಗಳು ಸಮಗಟ್ಟಲಾರವು. ಈ ನಮೂನೆಯ ಶಿಲ್ಪಗಳು ಬೇರೆ ಪ್ರದೇಶಗಳಲ್ಲಿ ಉಗಮವಾಗಿರಬೇಕು. ಅವು ಅಂತಿಮವಾಗಿ ಕುಮತಿ, ಹುಲಿಕುಂಟೆಯಂಥ ನೆಲೆಗಳಲ್ಲಿ ಅಂತಿಮ ರೂಪ ಕಂಡಿರಬೇಕು (ಬೆಳವಣಿಗೆ ಆಗಿರಬೇಕು). ಸುಸ್ಥಿತಿಯಲ್ಲಿರುವ ಕುಮತಿಯ ಶಿಲ್ಪಗಳನ್ನು ಬಹುಸೂಕ್ಷ್ಮವಾಗಿ ಗಮನಿಸಿದರೆ ಎಡಭಾಗದಲ್ಲಿರುವ ಮಾನವಾಕೃತಿಯು ಪ್ರಾಯಶಃ ಸ್ತ್ರೀಯದು ಇರಬೇಕೆನ್ನಿಸುತ್ತದೆ. ಈ ಶಿಲ್ಪದ ಸೊಂಟದ ಭಾಗ ಚಿಕ್ಕದಾಗಿದ್ದು, ಅದರ ಕೆಳಗಿನ ಭಾಗ ದಪ್ಪವಾಗಿದೆ. ಬಲಭಾಗದ ಶಿಲ್ಪಕ್ಕಿಂತ ಇದು ಎತ್ತರದಲ್ಲಿ ಕಡಿಮೆ ಇದೆ. ಆದರೆ ಬಲಭಾಗದ ಶಿಲ್ಪವು ಎತ್ತರವಾಗಿದ್ದು, ಸೊಂಟದ ಭಾಗ ದಪ್ಪವಾಗಿದೆ. ಹೀಗಾಗಿ ಇವು ಸ್ತ್ರೀ, ಪುರುಷ ಮಾನವಾಕೃತಿಗಳಿರಬಹುದೆನಿಸುತ್ತದೆ.

ಇವು ದಕ್ಷಿಣ ಭಾರತದ ಇತರೆ ನೆಲೆಗಳಲ್ಲಿ ದೊರೆಯುವ ನಿಲುಸುಗಲ್ಲುಗಳೋಪಾದಿಯಲ್ಲಿದ್ದು, ಇವು ಮಾನವಾಕಾರ ಪಡೆದುಕೊಂಡಿವೆ. ಬೃಹತ್‌ ಶಿಲಾಯುಗ ಕಾಲದ ಜನರು ಸತ್ತಾಗ ಸಮಾಧಿ ಮಾಡುವ ವಿಧಾನಗಳಲ್ಲಿ ಇದೊಂದಾಗಿದೆ ಎಂದು ಅಂತಿಮವಾಗಿ ಹೇಳಬಹುದು. ಕರ್ನಾಟಕದ ಇತರೆ ನೆಲೆಗಳಲ್ಲಿ ದೊರೆಯುವ ಮಾನವಾಕೃತಿ ಶಿಲ್ಪಗಳಿಗಿಂತ ಕುಮತಿ, ಹುಲಿಕುಂಟೆ ಶಿಲ್ಪಗಳು ಭಿನ್ನವಾಗಿದ್ದು. ಅವು ಬಹುಶಃ ಆ ಕುಲದ ಯಜಮಾನ ಅಥವಾ ಹಿರಿಯ ಸತ್ತಾಗ ಅವನ ನೆನಪಿನ ಸ್ಮಾರಕವಾಗಿ ಅದೇ ಆಕಾರದಲ್ಲಿ ಮಾಡಿ ನಿಲ್ಲಿಸಿರಬೇಕು. ಪ್ರಾಯಶಃ ಅಂದಿನ ಜನತೆಯ (ಕಬ್ಬಿಣ ಯುಗದ) ಧಾರ್ಮಿಕ ಹಾಗೂ ಸಾಮಾಜಿಕ ನಂಬಿಕೆಗಳಲ್ಲಿ ಇದೂ ಒಂದಾಗಿರಬೇಕು. ಪ್ರಸ್ತುತ ಈ ಎರಡು ನೆಲೆಗಳಲ್ಲಿ ಉತ್ಖನನ ನಡೆಸಿದರೆ ಅನೇಕ ಹೊಸ ಅಂಶಗಳು ಬೆಳಕಿಗೆ ಬರುತ್ತವೆ ಎಂಬುದರಲ್ಲಿ ಸಂಶಯವಿಲ್ಲ.

೭. ಹಳನೆಲ್ಲುಡಿ: ಹಳನೆಲ್ಲುಡಿ ಬಳ್ಳಾರಿಯಿಂದ ೪೦ ಕಿ.ಮೀ. ಕಂಪ್ಲಿಯಿಂದ ೧೦ ಕಿ.ಮೀ. ದೂರದಲ್ಲಿದೆ. ಗ್ರಾಮದ ಉತ್ತರಕ್ಕೆ ೨ ಕಿ.ಮೀ. ದೂರದಲ್ಲಿನ ನಾರೀಹಳ್ಳದ ದಂಡೆಯ ಮೇಲಿನ ಈ ನೆಲೆಯಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಕೈಕೊಡಲಿ ಮೊದಲದ ಶಿಲಾಯುಧಗಳನ್ನು ಶೋಧಿಸಲಾಗಿದೆ.

ಹಳನೆಲ್ಲುಡಿ ನಿರುಣ್ಣಗಲ್ಲು ಎಂಬ ಶಬ್ದದಿಂದ ನಿಷ್ಪನ್ನವಾಗಿರುವುದಾಗಿಯೂ ನಿರುಣ್ಣಗಲ್ಲು > ನೆಲುಂಡ >  ನೆಲ್ಲುಡಿಯಾಗಿರುವುದಾಗಿಯೂ ನೆರುಣ್ಣ ಎಂಬುದಕ್ಕೆ ನೆಟ್ಟಗಿನ ಆಕೃತಿ, ನೇರವಾದ ಎಂಬ ಆಧಾರವಿದ್ದು ನೆಟ್ಟಗಿನ ಕಲ್ಲು ಎಂದು ಹೇಳಬಹುದಾಗಿದೆ. ಗ್ರಾಮದಲ್ಲಿ ಪ್ರಾಗೈತಿಹಾಸ ಕಾಲದ ನಿಲುವುಗಲ್ಲು ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಇದು ಆದಿಮಾನವನ ನೆಲೆಯಾಗಿತ್ತೆಂದು ಹೇಳಬಹುದು.

ಇಲ್ಲಿ ದೊರೆತಿರುವ ನಿಲುವುಗಲ್ಲು ಕರಿಯ ಕಲ್ಲಿನದು. ಮೇಲ್ಮುಖವನ್ನು ನಯವಾಗಿ ಮುಚ್ಚಲಾಗಿದೆ. ಈ ಕಲ್ಲು ಆರಾಧನೆಗೆ ಸಂಬಂಧಿಸಿದ್ದಾಗಿದೆ. ಕಲ್ಲಿನ ಎತ್ತರ ೧.೪೨ಮೀ. ಮೊಂಡಾದ ಶಿರೋಭಾಗವಿದ್ದು ೩೬ ಸೆಂ.ಮೀ. ಸರಾಸರಿ ಅಗಲ ೧ ಮೀ. ಅಗಲವಿದೆ. ಇದರ ದಪ್ಪ ತಳ ೪೨ ಸೆಂ.ಮೀ ಶಿರೋಭಾಗದಲ್ಲಿ ೨೧ ಸೆಂ.ಮೀ ವ್ಯಾಸದ ತುದಿ ೧೫ ಸೆಂ.ಮೀ. ಮಾನವ ನಿರ್ಮಿತ ಕುಳಿಗಳಿವೆ. ಇದರ ಬುಡದಿಂದ ತುದಿಯವರೆಗೆ ವಿವಿಧ ವ್ಯಾಸ ಉಳ್ಳ ಸುಮಾರು ೩೦ ಕುಳಿಗಳಿವೆ. ಈ ನಿಲುವುಗಲ್ಲು ನವಶಿಲಾಯುಗದ ಎಲ್ಲ ಪ್ರಮುಖ ಲಕ್ಷಣಗಳನ್ನು ಹೊಂದಿದೆ. ಇಂದಿಗೂ ಈ ಗ್ರಾಮದ ಕುರುಬ ಜನಾಂಗದವರು ಈ ಶಿಲೆಯನ್ನು ಪೂಜಿಸುತ್ತಾ ಬಂದಿದ್ದಾರೆ.[9]

ಹಳೇ ನೆಲ್ಲುಡಿಯ ಉತ್ತರಕ್ಕೆ ಸುಮಾರು ೨ ಕಿ.ಮೀ. ದೂರದಲ್ಲಿ ನಾರಿಹಳ್ಳದ ಪೂರ್ವ ದಂಡೆಯ ಮೇಲೆ ಶಾಂತಿನಗರದ ಸುಬ್ಬಾರವು ಕ್ಯಾಂಪ್‌ ಪರಿಸರದಲ್ಲಿ ಒಂದು ಬೂದಿದಿಬ್ಬಿವಿದೆ. ಈ ಬೂದಿದಿಬ್ಬ ಬಹಳಷ್ಟು ಅಗೆತಕ್ಕೆ ತುತ್ತಾಗಿದ್ದರೂ ಇಂದಿಗೂ ಅದು ೯ x ೬ ಮೀ. ವಿಸ್ತಾರವಿದೆ. ಇಲ್ಲಿ ಬೂದಿಯು ಬಂಡೆ ರೂಪದಲ್ಲಿ ರಾಶಿ ರಾಶಿಯಾಗಿ ಸಿಗುತ್ತದೆ. ಅಲ್ಲದೆ ಮುದ್ದಾಪುರ ಸಮೀಪ ವೆಂಕಟಕೊಂಡಪ್ಪ ಅವರ ಜಮೀನಿನಲ್ಲಿ ಇದೇ ರೀತಿಯ ಮತ್ತೊಂದು ಬೂದಿದಿಬ್ಬವನ್ನು ಗುರುತಿಸಲಾಗಿದೆ.

೮. ಅಪ್ಪಯ್ಯನಹಳ್ಳಿ: ಈ ನೆಲೆ ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ಸು. ೨೯ ಕಿ.ಮೀ. ದೂರದಲ್ಲಿದೆ. ಇಲ್ಲಿ ಶಿಲಾ ತಾಮ್ರಯುಗ ಸಂಸ್ಕೃತಿಗೆ ಸೇರಿದ ವರ್ಣಚಿತ್ರಗಳು ಅಲ್ಲಿನ ಗವಿಗಳಲ್ಲಿ ಕಂಡುಬಂದಿವೆ. ಅಲ್ಲದೆ ಇಲ್ಲಿಯೇ ಬೃಹತ್‌ ಶಿಲಾಯುಗ ಸಂಸ್ಕೃತಿಗೆ ಸೇರಿದ ಗೋರಿ ಮತ್ತು ವರ್ಣಚಿತ್ರಗಳು ಕಂಡುಬಂದಿದ್ದು ಅಂದಿನ ಸಂಸ್ಕೃತಿಯನ್ನು ಅರಿಯಲು ಸಹಕಾರಿಯಾಗಿವೆ.[10]

೯. ತಿಮ್ಮಲಾಪುರ: ಈ ನೆಲೆ ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ಸು. ೧೯ ಕಿ.ಮೀ. ದೂರದಲ್ಲಿದೆ. ಇಲ್ಲಿ ಬೃಹತ್‌ ಶಿಲಾಯುಗ ಸಂಸ್ಕೃತಿಗೆ ಸೇರಿದ ಗೋರಿ ಮತ್ತು ನೆಲೆಯನ್ನು ಸಂಶೋಧಕರು ಗುರುತಿಸಿದ್ದು, ಅಂದಿನ ಸಂಸ್ಕೃತಿಯನ್ನು ಅರಿಯಲು ಸಹಕಾರಿಯಾಗಿದೆ. [11]

೧೦ ಬೆಳಗಟ್ಟ: ಈ ನೆಲೆ ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ಸು. ೩೧ ಕಿ.ಮೀ. ದೂರದಲ್ಲಿದೆ. ನವಶಿಲಾಯುಗ ಸಂಸ್ಕೃತಿಗೆ ಸೇರಿದ ಉಜ್ಜಿ ನಯಗೊಳಿಸಿದ ಕಲ್ಲಿನ ಕೊಡಲಿ ಮತ್ತು ಅವಶೇಷಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಇದರಿಂದ ಅಂದಿನ ಸಂಸ್ಕೃತಿಯನ್ನು ಅರಿಯಲು ಸಹಕಾರಿಯಾಗಿವೆ.[12]

೧೧. ಹಾಲಸಾಗರ: ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ಪೂರ್ವಕ್ಕೆ ಸು. ೧೯ ಕಿ.ಮೀ. ದೂರದಲ್ಲಿದೆ. ಇಲ್ಲಿ ಬೃಹತ್‌ ಶಿಲಾಯುಗ ಸಂಸ್ಕೃತಿಗೆ ಸೇರಿದ ಗೋರಿ ನೆಲೆಯನ್ನು ಸಂಶೋಧಕರು ಗುರುತಿಸಿದ್ದು, ಇಲ್ಲಿ ಹಾದಿಕೋಣೆ ಗೋರಿಗಳು ವಿಶೇಷವಾಗಿ ದೊರೆತಿದ್ದು, ಅಂದಿನ ಸಂಸ್ಕೃತಿಯನ್ನು ತಿಳಿಯಲು ಸಹಕಾರಿಯಾಗಿದೆ.[13]

೧೨. ಕಾಕುಬಾಳು ಗುಡ್ಡ (ಕುಕ್ಕಿಬೇವಿನ ಹಳ್ಳಿ) : ತಾಲೂಕು ಕೇಂದ್ರವಾದ ಹೊಸಪೇಟೆಯಿಂದ ಪೂರ್ವಕ್ಕೆ ಸು. ೧೯ ಕಿ.ಮೀ. ದೂರದಲ್ಲಿದೆ. ಇಲ್ಲಿ ನವ ಶಿಲಾಯುಗ ಸಂಸ್ಕೃತಿಗೆ ಸೇರಿದ ಬೂದಿದಿಬ್ಬದ ನೆಲೆಯನ್ನು ಸಂಶೋಧಕರು ಗುರುತಿಸಿದ್ದು, ಅಂದಿನ ಸಂಸ್ಕೃತಿಯನ್ನು ಅರಿಯಲು ಸಹಕಾರಿಯಾಗಿದೆ.[14]

 

[1] ಡಾ. ಅ.ಸುಂದರ. ೧೯೯೪ ಕರ್ನಾಟಕ ಪ್ರಾಗೈತಿಹಾಸಿಕ ಕಾಲದ ಕಲೆ. ಬೆಂಗಳೂರು.

[2] ಐ.ಎ.ಆರ್. ೧೯೭೬-೭೭

[3] ಇಂ.ಅ.ರಿ ೧೯೭೬-೭೭

[4] ಡಾ. ಅ.ಸುಂದರ. ಪೂರ್ವೂಕ್ತ.

[5] ಬಾಲಸುಬ್ರಮಣ್ಯ (ಸಂ), ಕುರಗೋಡು.

[6] ಇತಿಹಾಸ ದರ್ಶನ, ಸಂ. ೧೪. ತಿಪ್ಪೇಸ್ವಾಮಿ ಎಚ್. ೧೯೯೮, “ಕೂಡ್ಲಿಗಿ ತಾಲೂಕಿನ ಅಪರೂಪದ ಮಾನವಾಕೃತಿಗಳು”,

[7] ಸುಂದರ ಅ., ೧೯೯೪, ಕರ್ನಾಟಕ ಪ್ರಾಗೈತಿಹಾಸಿಕ ಕಾಲದ ಕಲೆ, ಬೆಂಗಳೂರು.

[8] Subrao B. 1949, Prehistoric and Early historic Bellary (unpublished Ph.D Thisis)

[9] A. Foate R.B 1916 Indian Prehistoric and Protohistoric Antiquities, Madras. & A.S.I.A.R. 1930

[10] Megalithic Tombs & other Ranains in the Deccan Hyderabad 1941

[11] 1. Foovte R.B. 1916 Indian Prehistoric & Protohistoric Antiquties, Madras

2. Paddayya. K. 1973, Investigation into the Neolithic Culture of Surpur Road, South India, Leiden

[12] ೧. Foote R.B. 1916 Indian Prehistoric & Protohistoric Antiquities, Madras.

೨. Allchin F.R. 1963, Neolithic Cattle Keepers of South India, Cambridge

೩. ಪತ್ರಿಕಾ ವರದಿ, ಕನ್ನಡಪ್ರಭ -೧೪-೦೮-೯೮

೪. Exeavations at Kappagal, Pune.

೫. ಅ. ಸುಂದರ, ೧೯೯೪, ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ, ಬೆಂಗಳೂರು.

[13] Foote R.B. 1916, Indian Prehistoric & Protohistoric Antiquities, Madras.

[14] Foote R.B. 1916, Indian Prehistoric & Protohistoric Antiquities, Madras.