ಶಿಲಾಯುಗದ ಆದಿಮಾನವನ ನೆಲೆಗಳು ಹೆಚ್ಚಾಗಿ ನದಿಗಳ ಅಥವಾ ಉಪನದಿಗಳ ದಂಡೆ ಮೇಲೆ ಅಥವಾ ಸಮೀಪದಲ್ಲಿ ಹೆಚ್ಚಾಗಿ ಇರುವುದು ಕಂಡುಬರುತ್ತವೆ. ಇಲ್ಲಿನ ಬೆಟ್ಟಗಳು ಹಾಗು ಅಲ್ಲಿನ ಕಣಿವೆಯಲ್ಲಿ ಹರಿಯುವ ಸಣ್ಣ ಹಳ್ಳಗಳು ಸದಾ ಇಲ್ಲವೇ ಬೇಸಿಗೆಯನ್ನು ಹೊರತುಪಡಿಸಿ ಉಳಿದಂತೆ ನೀರಿಗೆ ಬಹಳವಾಗಿ ಅನುಕೂಲವಾಗಿದ್ದವು. ಇಲ್ಲಿನ ಫಲವತ್ತಾದ ಭೂಪ್ರದೇಶ ವ್ಯವಸಾಯಕ್ಕೆ ಯೋಗ್ಯವಾಗಿತ್ತು. ದನಕರುಗಳಿಗೆ ಬೇಕಾದ ಹುಲ್ಲುಗಾವಲು ಸಾಮಾನ್ಯವಾಗಿ ದೊರೆಯುತ್ತಿತ್ತು. ಹಾಗು ಆಯುಧೋಪಕರಣಗಳನ್ನು ತಯಾರಿಸಲು ಬೇಕಾದ ಕಚ್ಚಾವಸ್ತಗಳು ಸನಿಹದಲ್ಲಿ ದೊರೆಯುತ್ತಿತ್ತು. ಇದರಿಂದಾಗಿ ಬೆಟ್ಟದ ತಪ್ಪಲು ಇಲ್ಲವೇ ಕಲ್ಲಾಸರೆ, ಗುಹೆಗಳು ಆದಿಮಾನವನ ವಾಸಕ್ಕೆ ಯೋಗ್ಯವಾದ ಪ್ರದೇಶಗಳಾಗಿದ್ದವು. ಬೆಟ್ಟ ಗುಡ್ಡಗಳ ಮಧ್ಯೆ ಬಯಲಿನಲ್ಲಿ ಅನೇಕ ಕಡೆ ನೀರಿನ ಅವಶ್ಯಕತೆಗೆ ಬೇಕಾಗುವ ನೀರಿನ ದೋಣಿಗಳಿದ್ದು, ಸುತ್ತಲಿರುವ ಬೃಹತ್ ಕಲ್ಲುಗಳ ಕೋಟೆಯಂತಹ ಪ್ರದೇಶವು ಅವನ ವಾಸಕ್ಕೆ ಸೂಕ್ತ ರಕ್ಷಣೆ ಒದಗಿದ್ದವು. ಈ ಬೆಟ್ಟ ಗುಡ್ಡದಲ್ಲಿ ಕಾಣಬರುವ ಅನೇಕ ಪ್ರಾಣಿಗಳನ್ನು ಆ ಜನರು ತಮ್ಮ ಆಹಾರಕ್ಕಾಗಿ ಬೇಟೆಯಾಡಿರಬೇಕು. ಬೆಟ್ಟಗಳ ಬುಡದಲ್ಲಿರುವ ಮಣ್ಣಿನ ಫಲವತ್ತಾದ ಭೂಮಿ ವ್ಯವಸಾಯಕ್ಕೆ ಅಗತ್ಯವಾದ ಭೂಮಿಯಾಗಿದೆ. ಈ ಪ್ರದೇಶಗಳ ಹತ್ತಿರದಲ್ಲೇ ವಸತಿಗೆ ಯೋಗ್ಯವಾದ ಸ್ಥಳಗಳನ್ನು ಜನರು ಆಯ್ದುಕೊಂಡು ಸೂಕ್ತ ರಕ್ಷಣಾ ವ್ಯವಸ್ಥೆಯಲ್ಲಿ ಬದುಕು ನಡೆಸುತ್ತಿದ್ದರು ಎಂಬದು ಗಮನಾರ್ಹವಾಗಿದೆ. ಇಲ್ಲಿನ ಕೆಲವು ನೆಲೆಗಳು ಸಣ್ಣ ಪುಟ್ಟ ಗುಂಡಿಗಳ ಬಳಿ ಇವೆ. ಇಲ್ಲಿ ಮಳೆಗಾಲದ ನಂತರ ನೀರು ಕಡಿಮೆಯಾಗುತ್ತಿದ್ದರೆ ಚಳಿಗಾಲದಲ್ಲಿ ಸುತ್ತಲಿನ ಪ್ರದೇಶದಿಂದ ನೀರು ಬಸಿದು ಸಹಸಿರು ಬೆಳೆಯುವುದಕ್ಕೆ ಸಹಕಾರಿಯಾಗಿತ್ತು. ಪ್ರಾಣಿಗಳ ಆಹಾರಕ್ಕೆ ಇದು ಉತ್ತಮ ತಾಣವಾಗಿದ್ದು, ಆದಿಮಾನವನು ಬೇಟೆಯಾಡುವುದಕ್ಕೂ ಸಾಕಷ್ಟು ಸಹಕಾರಿಯಾಗಿತ್ತು. ಈ ಎಲ್ಲ ಸೂಕ್ತ ವ್ಯವಸ್ಥೆಗಳು ಹಂಪಿ ಪರಿಸರದಲ್ಲಿ ಸಹಜವಾಗಿಯೇ ದೊರೆತಿದ್ದರಿಂದ ಆದಿಮಾನವನು ಇಲ್ಲಿನ ವಿವಿಧ ನೆಲೆಗಳಲ್ಲಿ ವಾಸಿಸಿ ಹಲವಾರು ಕುರುಹುಗಳನ್ನು ಬಿಟ್ಟು ಹೋಗಿದ್ದು, ಅವು ಅಂದಿನ ಜನಜೀವನ ಮತ್ತು ಸಂಸ್ಕೃತಿಯನ್ನು ಅರಿಯಲು ಸಹಕಾರಿಯಾಗಿವೆ.

ಹಂಪಿ ಪರಿಸರದಲ್ಲಿ ಆದಿಮಾನವನು ನೆಲಸಿದ್ಧ ವಿವಿಧ ಪ್ರದೇಶಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡು ಅವು ಮೂಡಿಬಂದ ಪರಿಸರದ ಹಿನ್ನೆಲೆಯಲ್ಲಿ ವಿವೇಚಿಸುತ್ತಾ, ಕಾಲದಿಂದ ಕಾಲಕ್ಕೆ ಆ ನೆಲೆಗಳನ್ನು ಯಾವ ರೀತಿ ಬದಲಾವಣೆಗಳಾದವು ಮತ್ತು ಆ ಇಡೀ ಸಂಸ್ಕೃತಿ ಯಾವ ರೀತಿ ಬೆಳವಣಿಗೆಯಾಗಿ ವಿವಿಧೆಡೆ ಪಸರಿಸಿತು ಎಂಬುದನ್ನು ಮೊದಲ ಬಾರಿಗೆ ಈ ಪ್ರಬಂಧದಲ್ಲಿ ವಿವೇಚಿಸಲಾಗಿದೆ. ಈ ಅಧ್ಯಯನದ ಮೂಲಕ ಈ ಕೆಳಕಂಡ ಫಲಿತಗಳನ್ನು ಕಂಡುಕೊಳ್ಳಲಾಗಿದೆ.

೧. ಈ ಸಂಶೋಧನಾ ಅಧ್ಯಯನವು ಹಂಪಿ ಪರಿಸರದ ಆದಿಮಾನವನ ಜೀವನದ ಮೇಲೆ ಹೊಸ ಬೆಳಕನ್ನು ಚೆಲ್ಲುವಲ್ಲಿ ಯಶಸ್ವಿಯಾಗಿದೆ.

೨. ಈ ಪರಿಸರದ ಆದಿಮಾನವನ ಪ್ರಕಟಿತ ಮತ್ತು ಅಪ್ರಕಟಿತ ನೆಲೆಗಳನ್ನು ಒಂದೆಡೆ ಪ್ರಾಥಮಿಕವಾಗಿ ದಾಖಲಿಸುವಲ್ಲಿ ಈ ಅಧ್ಯಯನ ಯಶಸ್ವಿಯಾಗಿದೆ. ಇದರಿಂದ ಆ ಕಾಲಾವಧಿಯ ಆದಿಮಾನವನ ನೆಲೆಗಳ ಸಂಖ್ಯೆಯನ್ನು ಗುರುತಿಸಲು ಸಹಾಯಕವಾಗುತ್ತದೆ.
೩. ಹಂಪಿ ಪರಿಸರದಲ್ಲಿ ಆದಿಮಾನವನು ನೆಲೆ ನಿಲ್ಲಲು ಯಾವ ಅಂಸಗಳು ಕಾರಣವಾದವು ಎಂಬುದನ್ನು ಈ ಅಧ್ಯಯನ ಗುರುತಿಸಿದೆ. ಅಲ್ಲದೆ ಆದಿಮಾನವನು ಕಾಲಕ್ರಮೇಣ ತನ್ನ ಕಾರ್ಯ ವಿಸ್ತರಣೆ ಹೇಗೆ ಬೇರೆ ಬೇರೆ ಪ್ರದೇಶಗಳಿಗೆ ವಿಸ್ತರಣೆ ಮಾಡಿದನು ಎಂಬುದನ್ನು ದೊರೆತ ಪ್ರಾಚ್ಯ ಆಧ್ಯಾರಗಳಿಂದ ಹೇಳಬಹುದಾಗಿದೆ.

೪. ಈ  ಪರಿಸರದ ಭೌಗೋಳಿಕ ಲಕ್ಷಣಗಳು ಆದಿಮಾನವನ ಜೀವನದ ಮೇಲೆ ಯಾವ ರೀತಿ ಪ್ರಭಾವ ಬೀರಿವೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಈ ಅಧ್ಯಯನ ಯಶಸ್ವಿಯಾಗಿದೆ.

೫. ದೊರೆತ ಪ್ರಾಚ್ಯ ಅವಶೇಷಗಳನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕದ ಆದಿಮಾನವನ ನೆಲೆಗಳ ಮತ್ತು ಆ ಪ್ರಾಗೈತಿಹಾಸಿಕ ಸಂಸ್ಕೃತಿಯ ವೈಶಿಷ್ಟ್ಯ ಮತ್ತು ಆ ಸಂಸ್ಕೃತಿಯ ಮೇರೆ, ಹರಿವು, ವಿಸ್ತಾರಗಳನ್ನು ಪೂರಕವಾಗಿ ಗುರುತಿಸುವಲ್ಲಿ ಈ ಸಂಶೋಧನಾ ಅಧ್ಯಯನ ಯಶಸ್ವಿಯಾಗಿದೆ.

೬. ಈ ಅಧ್ಯಯನವು ಹಂಪಿ ಪರಿಸರದ ಆದಿಮಾನವನ ನೆಲೆಗಳ ಮಹತ್ವ ಮತ್ತು ಆ ಪ್ರಾಗೈತಿಹಾಸಿಕ ಸಂಸ್ಕೃತಿಯ ವೈಶಿಷ್ಟ್ಯ, ಮತ್ತು ಆ ಸಂಸ್ಕೃತಿಯ ಮೇರೆ, ಹರಿವು, ವಿಸ್ತಾರಗಳನ್ನು ಮೊದಲಬಾರಿಗೆ ಗುರುತಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಿಲಾರದು.

೭. ಈ ಅಧ್ಯಯನವು ಹಂಪಿ ಪರಿಸರದ ಆದಿಮಾನವನ ನೆಲೆಗಳ ಮಹತ್ವವನ್ನು ಈ ಪ್ರದೇಶದಲ್ಲಿ ದೊರೆತ ಅನ್ವೇಷಣಾ ನೆಲೆಗಳು, ಉತ್ಖನನ ನೆಲೆಗಳು ಮತ್ತು ಕಲಾತ್ಮಕ ನೆಲೆಗಳನ್ನು ಆಧಾರವಾಗಿಟ್ಟುಕೊಂಡಿದೆ. ಆದಿಮಾನವನ ಪ್ರಾಗೈತಿಹಾಸಿಕ ಸಂಸ್ಕೃತಿಯ ವೈಶಿಷ್ಟ್ಯ ಮತ್ತು ಅಂದಿನ ಜನಜೀವನ ಮೊದಲಾದ ವಿವರಗಳನ್ನು ವ್ಯವಸ್ಥಿತವಾಗಿ ಪ್ರಥಮ ಬಾರಿಗೆ ಗುರುತಿಸಿದೆ. ಇದು ಈ ಅಧ್ಯಯನದ ಪ್ರಮುಖ ಉದ್ದೇಶವೂ ಆಗಿದ್ದು, ಅದರಲ್ಲಿ ಈ ಅಧ್ಯಯನ ಯಶಸ್ವಿಯಾಗಿದೆ.

೮. ಹಂಪಿ ಪರಿಸರದ ಆದಿಮಾನವನ ನೆಲೆಗಳಿಗೆ ಸಂಬಂಧಿಸಿದಂತೆ ಜನರಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವ ದಂತಕಥೆ, ಐತಿಹ್ಯ, ಪೌರಾಣಿಕ ಅಂಶಗಳು ಯಾವ ರೀತಿ ಹೆಣದುಕೊಂಡಿವೆ ಮತ್ತು ಆದಿಮಾನವನ ನೆಲೆಗಳೊಂದಿಗೆ ಯಾವ ರೀತಿ ತಳಕು ಹಾಕಿಕೊಂಡಿವೆ ಎಂಬುದನ್ನು ಈ ಅಧ್ಯಯನ ಗುರುತಿಸಿದೆ. ಇದು ಈ ಅಧ್ಯಯನದ ವಿಶೇಷತೆಯಾಗಿದೆ.

ಇದುವರೆಗೆ ಹಲವಾರು ವಿದ್ವಾಂಸರು ಅಧ್ಯಯನ ನಡೆಸಿರುವ ಹಾದಿಯಲ್ಲಿಯೇ ಮುಂದುವರೆದು, ಹಂಪಿ ಪರಿಸರದ ಆದಿಮಾನವನ ನೆಲೆಗಳು ಮತ್ತು ಅವುಗಳ ವೈಶಿಷ್ಟ್ಯವನ್ನು ಗುರುತಿಸುವಲ್ಲಿ ಪ್ರಸ್ತುತ ಅಧ್ಯಯನ ಯಶಸ್ವಿಯಾಗಿದೆ. ಹಾಗೆಯೇ ಆದಿಮಾನವನ ನೆಲೆಗಳ ಅನಿವಾರ್ ಅಂಗಗಳಾದ ಆ ನೆಲೆಗಳಲ್ಲಿ ದೊರೆತ ವಿವಿಧ ಅವಶೇಷಗಳ ಕುರಿತು ಚರ್ಚಿಸಿರುವುದು ಈ ಪ್ರಬಂಧದ ವಿಶೇಷವಾಗಿದೆ.

ಈ ಕಾಲದ ನೆಲೆಗಳು ದೊರೆಯುವ ಬಹುತೇಕ ಪ್ರದೇಶಗಳಲ್ಲಿ ವಿಭಿನ್ನ ರೀತಿಯ ಐತಿಹ್ಯಗಳಿವೆ. ಅನೇಕ ಸ್ಥಳೀಯರು ಅವುಗಳ ಬಳಿ ನಿಧಿ ಇದೆ, ಇವುಗಳನ್ನು ಸರ್ಪ ಕಾಯುತ್ತಿದೆ ಹಾಗೂ ಇದನ್ನು ಮೋರಿಯರು ಇಲ್ಲವೇ ಅತಿಕುಳ್ಳ (ಸೀಮೆ) ಮನುಷ್ಯರು ನಿರ್ಮಿಸಿದ್ದಾರೆಂಬ ಅನೇಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೆ ಇಲ್ಲಿನ ಪ್ರದೇಶಗಳನ್ನು ಬೂದಿಗುಂಡಿ, ಹಾಳೂರು, ವಾಲಿಕಾಷ್ಠ, ವಾಲಿಕಿಲ, ವಾಲಿದಿಬ್ಬ, ರಕ್ಕಸಮಟ್ಟಿ ಎಂತಲೂ ಕರೆಯುತ್ತಾರೆ. ವಿಶೇಷವಾಗಿ ಬೃಹತ್ ಶಿಲಾಯುಗದ ನೆಲೆಗಳಲ್ಲಿನ ಕಲ್ಗೋರಿಗಳನ್ನು ಮೋರಿಯರ ಮನೆ, ಕುಳ್ಳರಮನೆಗಳೆಂದು ಕರೆಯುವ ಪರಿಪಾಠವಿದೆ. ಈ ರೀತಿಯ ಐತಿಹ್ಯಗಳ ಕುರಿತು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನ ಮಾಡಬೇಕಾದ ಅಗತ್ಯತೆ ಇದೆ. ಅಲ್ಲದೇ ಇಲ್ಲಿನ ಆದಿಮಾನವನ ನೆಲೆಗಳ ಕುರಿತು ಸುದೀರ್ಘವಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಧ್ಯಯನ ಮಾಡಲು ಅವಕಾಶವೂ ಇದೆ.

ಹಂಪಿ ಪರಿಸರದ ಆದಿಮಾನವನ ನೆಲೆಗಳ ಕುರಿತು ಇಲ್ಲಿಯವರೆಗೆ ನಡೆದಿರುವ ಕೆಲ ವಿರಳವಾದ ಅಧ್ಯಯನಗಳ ಕುರಿತು ಈ ಹಿಂದೆಯೇ ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪರಿಸರದ ಆದಿಮಾನವನ ನೆಲೆಗಳು ಮಹತ್ವದ ಕುರಿತು ಒಂದೆಡೆ ಇಡಿಯಾಗಿ ಮಾಹಿತಿ ಲಭ್ಯವಾಗುವಂತೆ ಮೊದಲಬಾರಿಗೆ ಈ ಅಧ್ಯಯನದಲ್ಲಿ ಮಾಡಲಾಗಿದೆ. ಆದರೂ ಈ ನೆಲೆಗಳ ಕುರಿತು ವಿವಿಧ ದೃಷ್ಟಿಕೋನಗಳಿಂದ ಮತ್ತಷ್ಟು ಅಧ್ಯಯನ ನಡೆಸುವುದಕ್ಕೆ ಹೇರಳವಾದ ಅವಕಾಶಗಳಿವೆ.