೧೬. ಚಿಕ್ಕರಾಂಪುರ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೭ ಕಿ.ಮೀ. ದೂರದಲ್ಲಿದ್ದು, ನವಶಿಲಾ/ಶಿಲಾ ತಾಮ್ರಯುಗ ಮತ್ತು ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಶಿಲಾ ತಾಮ್ರಯುಗದ ಗವಿ ವರ್ಣ ಚಿತ್ರಗಳು ದೊರೆತಿವೆ. ಗವಿಗಳ ಎದುರು ಭಾಗದಲ್ಲಿ ವಸತಿ ನೆಲೆ ಇದ್ದು, ಗವಿಯಲ್ಲಿ ನೂತನ ಶಿಲೋಪಕರಣಗಳು, ಕಂದು-ಕೆಂಪು  ವರ್ಣದ ಚಿತ್ರದ ಮಡಕೆಗಳು ಸಿಕ್ಕಿವೆ. ಇವು ಮಸ್ಕಿ ಮಾದರಿಯಲ್ಲಿವೆ. ಕೆಂಪು ವರ್ಣದ ಮಡಕೆಗಳು ಅಭ್ರಕ ಮಿಶ್ರಣವನ್ನೊಳ ಗೊಂಡಿವೆ. ಇಲ್ಲಿಯ ಗವಿಯಲ್ಲಿ ಮೂರು ವರ್ಣಚಿತ್ರಗಳನ್ನು ಗುರುತಿಸಲಾಗಿದೆ. ಬೃಹತ್ ಶಿಲಾಯುಗ ಕಾಲದ ಮಡಕೆ ಮತ್ತು ಶಿಲಾಗೋರಿಗಳು ಇಲ್ಲಿ ದೊರತಿದ್ದು, ಅವು ಅವಸಾನದ ಅಂಚಿನಲ್ಲಿವೆ.[1] ಇವುಗಳ ಆಧಾರದ ಮೇಲೆ ಇದು ಆದಿಮಾನವನ ನೆಲೆಯೆಂದು ಹೇಳಬಹುದು.

೧೭. ಜಂಗಮರ ಕಲ್ಗುಡಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೯.೫ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಶಿಲಾವೃತ್ತಗಳು ಮತ್ತು ಇತರೆ ಮಾದರಿಯ ಶಿಲಾಗೋರಿ ಹಾಗು ಮಡಕೆ ಚೂರುಗಳು ದೂರೆತಿದ್ದು, ಆದಿಮಾನವನ ಜೀವನಕ್ರಮದ ಮೇಲೆ ಬೆಳಕು ಚೆಲ್ಲುತ್ತವೆ.[2]

೧೮. ತಿಪ್ಪನಹಾಳು : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೮ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಆದಿಮಾನವನ ನೆಲೆಯಾಗಿದೆ. ಇಲ್ಲಿ ಕಂದು ವರ್ಣದ ಮಡಕೆ ಭಾಗಗಳು ಹಾಗೂ ನೀಳ ಚಕ್ಕೆ ಮತ್ತು ಹಾಳಾಗಿರುವ ಶಿಲಾಗೋರಿಗಳು ದೊರೆತಿದ್ದು, ಅಧ್ಯಯನ ಯೋಗ್ಯವಾಗಿವೆ.[3]

೧೯. ತಿಮ್ಮಾಪುರ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೯.೫ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಆದಿಮಾನವನ ನೆಲೆಯಾಗಿದೆ. ಇಲ್ಲಿ ಈ ಕಾಲದ ಶಿಲಾವೃತ್ತಗಳು ಮತ್ತು ಇತರೆ ಮಾದರಿಯ ಶಿಲಾ ಗೋರಿ ಹಾಗು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಆದಿಮಾನವನ ಜೀವನಕ್ರಮದ ಮೇಲೆ ಬೆಳಕು ಚೆಲ್ಲುತ್ತವೆ.[4]

೨೦.  ತಿಮ್ಮಲಾಪುರ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೨ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[5] ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೨೧. ನಂದಿಹಳ್ಳಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೨ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಕುಟ್ಟು, ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[6] ಇದರಿಂದ ಇಲ್ಲಿನ ಆದಿಮಾನವನ ಮತ್ತು ಪ್ರಾಗೈತಿಹಾಸಿಕ ಸಂಸ್ಕೃತಿಕ ಕುರಿತು ಅಧ್ಯಯನ ಮಾಡುಲು ಸಹಾಯಕವಾಗಿದೆ.

೨೨. ನಾರಾಯಣಾಪುರ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೩೪ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಗವಿ  ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[7] ಇದರಿಂದ ಇದು ಅಂದಿನ ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ.

೨೩. ಪನ್ನಪುರ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೭ ಕಿ.ಮೀ. ದೂರದಲ್ಲಿದ್ದು, ನವಶಿಲಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ.[8]ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಕೊರೆದ ಹಾಗು ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ. ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೨೪. ಬಿಳೇಭಾವಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೬ ಕಿ.ಮೀ. ದೂರದಲ್ಲಿದ್ದು,  ಬೃಹತ್ ಶಿಲಯುಗ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಡಮರುವಿನಂತಹ ಕೆಮ್ಮಣ್ಣಿನ ವರ್ಣ ಚಿತ್ರವಿದೆ. ಈ ಚಿತ್ರದ ಸಮೀಪ ವಿವಿಧ ನಮೂನೆಯ ಕಲ್ಗೋರಿಗಳ ಅವಶೇಷಗಳು ದೊರೆತಿವೆ.[9] ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೨೫. ಬೆನಕಲ್ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೧ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಆದಿಮಾನವನ ನೆಲೆಯಾಗಿದೆ. ಇಲ್ಲಿ ಬೃಹತ್ ಶಿಲಾಯುಗದ ಕಿಡಿಕೋಣೆ ಮಾದರಿ ಗೋರಿಗಳು ದೊರೆತಿವೆ. ಮತ್ತು ಇಲ್ಲಿಯೇ ಇತಿಹಾಸ ಆರಂಭಯುಗಕ್ಕೆ ಸೇರಿದ ಕೆಂಪು ಲೇಪನದಡ್ಡಿಯಲ್ಲಿ, ಬಿಳಿಯ ವರ್ಣಚಿತ್ರಗಳುಳ್ಳ ಮಡಕೆ ಭಾಗಗಳು ದೊರೆತಿವೆ.[10] ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೨೬. ಬಸರಿಹಾಳ್ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೯ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಆದಿಮಾನವನ ನೆಲೆಯಾಗಿದೆ. ಇಲ್ಲಿ ಈ ಕಾಲದ ಶಿಲಾವೃತ್ತಗಳು ಮತ್ತು ಇತರೆ. ಮಾದರಿಯ ಶಿಲಾಗೋರಿ ಹಾಗು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಆದಿಮಾನವನ ಜೀವನಕ್ರಮದ ಮೇಲೆ ಬೆಳಕು ಚೆಲ್ಲುತ್ತವೆ.[11]

೨೭ ಬಂಡಿ ಹರಾಪುರ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೩೨ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಕೊರೆದ ಹಾಗೂ ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[12] ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೨೮. ಬಂಡರಹಾಳ್ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೯ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಆದಿಮಾನವನ ನೆಲೆಯಾಗಿದೆ. ಇಲ್ಲಿ ಈ ಕಾಲದ ಶಿಲಾವೃತ್ತಗಳು ಮತ್ತು ಇತರೆ ಮಾದರಿಯ ಶಿಲಾಗೋರಿ ಹಾಗು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಆದಿ ಮಾನವನ ಜೀವನಕ್ರಮದ ಮೇಲೆ ಬೆಳಕು ಚೆಲ್ಲುತ್ತವೆ.[13]

೨೯. ಮರಕುಂಬಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೯ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಆದಿಮಾನವನ ನೆಲೆಯಾಗಿದೆ. ಇಲ್ಲಿ ಈ ಕಾಲದ ಮೂರು ಗವಿವರ್ಣಚಿತ್ರಗಳು ಮತ್ತು ವಿವಿಧ ಮಾದರಿಯ ಶಿಲಾಗೋರಿ ಹಾಗು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು,[14] ಆದಿಮಾನವನ ಜೀವನಕ್ರಮದ ಮೇಲೆ ಬೆಳಕು ಚೆಲ್ಲುತ್ತವೆ.

೩೦. ಮಲ್ಲಾಪುರ :  ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೨ ಕಿ.ಮೀ. ದೂರದಲ್ಲಿದ್ದು, ಸೂಕ್ಷ್ಮ ಶಿಲಾಯುಗ, ನವಶಿಲಾಯುಗ, ಶಿಲಾ ತಾಮ್ರಯುಗ ಹಾಗೂ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮಹತ್ವದ ಆದಿಮಾನವನ ನೆಲೆಯಾಗಿದೆ. ಇಲ್ಲಿ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಕಾಲದ ಗವಿ ವರ್ಣಚಿತ್ರಗಳು ದೊರೆತಿವೆ. ಅವು ಕಂದು ಬಣ್ಣವನ್ನು ಹೊಂದಿದ್ದು, ಜಿಂಕೆ, ಹೋರಿ ಹಾಗೂ ಇತರೆ ಚಿತ್ರಗಳು ಕಂಡುಬಂದಿವೆ. ಇಲ್ಲಿ ಶಿಲೋಪಕರಣಗಳನ್ನು ಕ್ವಾರ್ ಶಿಲೆಯಲ್ಲಿ ರೂಪಿಸಿದ್ದು, ಅವುಗಳಲ್ಲಿ ಹೆರೆಚಕ್ಕೆ ಮತ್ತು ಅರ್ಧಚಂದ್ರಾಕೃತಿ ಉಪಕರಣಗಳು ಮುಖ್ಯವಾಗಿ ದೊರೆತಿವೆ. ಇಲ್ಲಿ ನೂತನ ಶಿಲಾಯುಗದ ಕೈಕೂಡಲಿ, ಮಡಕೆಚೂರು ಮತ್ತು ಶಿಲಾ ತಾಮ್ರಯುಗ ಸಂಸ್ಕೃತಿಯ ವರ್ಣಚಿತ್ರಗಳನ್ನು ಗುರುತಿಸಲಾಗಿದೆ. ಇಲ್ಲಿಯೂ ವಿವಿಧ ಮೃಗಗಳು ಹಾಗೂ ಮಾನವರು ಚಿತ್ರಿತರಾಗಿರುವುದನ್ನು ನೋಡಬಹುದು. ಇದೇ ಪ್ರದೇಶದಲ್ಲಿ ಇನ್ನೂ ಕೆಲವಡೆ ಮೇಲಿನ ಕಾಲದ ಚಿತ್ರಗಳನ್ನು ಗಮನಿಸಲಾಗಿದೆ. ಅಲ್ಲಿಯೂ ವಿಶೇಷ ಆಕರ್ಷಕ ರೀತಿಯಲ್ಲಿ ಎತ್ತುಗಳು ಮತ್ತು ಇತರ ವನ್ಯಮೃಗಗಳ ಚಿತ್ರಗಳನ್ನು ಬಿಡಿಸಲಾಗಿದೆ. ಇವುಗಳಲ್ಲಿ ಕೆಲವು ಕಂದು ಕೆಂಪು ಬಣ್ಣಗಳಲ್ಲಿ ಚಿತ್ರಿಸಲ್ಪಟ್ಟಿದ್ದರೆ ಇನ್ನುಳಿದವು ಬಿಳಿಸುಣ್ಣದಿಂದ ಚಿತ್ರಿತವಾಗಿದೆ. ಇವು ನವಶಿಲಾಯುಗದ ಮಾನವನು ನೆಲೆಸಿದ್ದ ಸ್ಥಳಗಳು, ಅವನು ನಡೆಸುತ್ತಿದ್ದ ಜೀವನ ಪ್ರವೃತ್ತಿ ಅವನು ರೂಢಿಸಿಕೊಂಡ ಸಂಸ್ಕೃತಿ, ಆ ದಿಶೆಯಲ್ಲಿ ಅವನು ಸಾಧಿಸಿದ ಪ್ರಗತಿ ಮೊದಲಾದ ಅಂಶಗಳನ್ನು ಸೂಚಿಸುತ್ತವೆ.

ಅಲ್ಲದೆ ಇದೇ ನೆಲೆಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ವಾಸ್ತವ್ಯದ. ನೆಲೆ ಇದ್ದು, ಅದರಲ್ಲಿ ಕಪ್ಪು ಮತ್ತು ಕೆಂಪು ವರ್ಣದ ಮೃತ್ಪಾತ್ರೆಗಳು  ಮತ್ತು ಶಿಲಾಗೋರಿ, ಕಬ್ಬಿಣದ ಕಿಟ್ಟಗಳು ದೊರೆತಿವೆ.[15] ಇದರಿಂದ ಈ ಕಾಲಘಟ್ಟದಲ್ಲಿ ಈ ನೆಲೆಯು ವಹಿಸಿರಬಹುದಾದ ಪಾತ್ರವನ್ನು ಗ್ರಹಿಸಬಹುದಾಗಿದೆ.

೩೧. ಮುಸಲಾಪುರ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೭ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಪ್ರಮುಖ ಮನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಬೂದಿದಿಬ್ಬ ಮತ್ತು ಮಡಕೆಚೂರು ಮತ್ತು ಕೊರೆದ ಹಾಗೂ ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[16] ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೩೨. ಎಮ್ಮಿಗುಡ್ಡ (ಹೇಮಗುಡ್ಡ) : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೯ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮುಖ್ಯ ನೆಲೆಯಾಗಿದೆ. ಇಲ್ಲಿ ಈ ಕಾಲದ ಕಿಂಡಿಕೋಣೆ, ಕಲ್ಮನೆ ಮಾದರಿಯ ಶಿಲಾಗೋರಿ ಹಾಗು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು,[17] ಆದಿಮಾನವನ ಜೀವನಕ್ರಮದ ಮೇಲೆ ಬೆಳಕು ಚೆಲ್ಲುತ್ತವೆ.

೩೩. ರಾಜನ್ ಕೋಲಾರ್ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೩೧ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮುಖ್ಯ ನೆಲೆಯಾಗಿದೆ. ಇಲ್ಲಿ ಈ ಕಾಲದ ಕಿಂಡಿಕೋಣೆ, ಕಲ್ಮನೆ ಮಾದರಿಯ ಶಿಲಾಗೋರಿ ಹಾಗು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಆದಿಮಾನವನ ಜೀವನಕ್ರಮದ ಮೇಲೆ ಬೆಳಕು ಚೆಲ್ಲುತ್ತವೆ.[18]

೩೪. ರಾಮದುರ್ಗ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೨ ಕಿ.ಮೀ. ದೂರದಲ್ಲಿದ್ದು, ಸೂಕ್ಷ್ಮ ಶಿಲಾಯುಗ, ನವಶಿಲಾಯುಗ ಮತ್ತು ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮುಖ್ಯ ನೆಲೆಯಾಗಿದೆ. ಇಲ್ಲಿ ಸೂಕ್ಷ್ಮ ಶಿಲಾ ಉಪಕರಣಗಳು, ಉಜ್ಜಿ ನಯಗೊಳಿಸಿದ ಕೊಡಲಿ ಹಾಗು ಕಿಂಡಿಕೋಣೆ, ಕಲ್ಮನೆ ಮಾದರಿಯ ಶಿಲಾಗೋರಿ ಹಾಗು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಅಂದಿನ ಆದಿಮಾನವನ ಜೀವನಕ್ರಮ ಅರಿಯಲು ಏಕಮೇವ ಆಧಾರಗಳಾಗಿವೆ.[19]

೩೫. ವೆಂಕಟಾಪುರ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೯ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ ಮತ್ತು ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮುಖ್ಯ ನೆಲೆಯಾಗಿದೆ. ಇಲ್ಲಿ ಉಜ್ಜಿ ನಯಗೊಳಿಸಿದ ಕೈಕೊಡಲಿ ಮತ್ತು ಬೂದಿದಿಬ್ಬ ಹಾಗೂ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಗವಿ ವರ್ಣಚಿತ್ರಗಳು, ಕಿಂಡಿಕೋಣೆ, ಕಲ್ಮನೆ ಮಾದರಿಯ ಶಿಲಾಗೋರಿ ಹಾಗು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಅಂದಿನ ಆದಿಮಾನವನ ಜೀವನಕ್ರಮ ಅರಿಯಲು ಆಧಾರಗಳಾಗಿವೆ.[20]

೩೬. ಸಾಣಾಪುರ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೨ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಪ್ರಮುಖ ನೆಲೆಯಾಗಿದೆ. ಇಲ್ಲಿ ಈ ಕಾಲದ ಕಲ್ಗುಪ್ಪೆ, ಕಿಂಡಿಕೋಣೆ, ಕಲ್ಮನೆ ಮಾದರಿಯ ಶಿಲಾಗೋರಿಗಳು ಹಾಗು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಆದಿಮಾನವನ ಜೀವನಕ್ರಮವನ್ನು ಗ್ರಹಿಸಲು ಸಹಾಯಕವಾಗಿವೆ.[21]

೩೭. ಸಿಂಗನಹಾಳ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೭ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಪ್ರಮುಖ ಮಾನವ ನೆಲೆಯಾಗಿದೆ. ಇಲ್ಲಿ ಮಡಕೆಚೂರು ಮತ್ತು ಕೊರೆದ  ಹಾಗು ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ. ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.[22]

೩೮. ಹರಳಾಪುರ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೭ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಪ್ರಮುಖ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಕೊರೆದ ಹಾಗು ಮೂರು ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ. ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.[23]

೩೯. ಹಿರೆಜಂತ್ಕಲ್ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೬ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಪ್ರಮುಖ ಮಾನವ ನೆಲೆಯಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ. ಇವುಗಳ ಆಧಾರದ ಮೇಲೆ ಅಂದಿನ ಆದಿಮಾನವನ ಪ್ರಾಗೈತಿಹಾಸಿಕ ಜೀವನಕ್ರಮ ಅರಿಯಬಹುದಾಗಿದೆ.[24]

೪೦. ಹೊಸಕೆರೆ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೭ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಪ್ರಮುಖ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಕಂದು ಬಣ್ಣದ ಮಡಕೆಚೂರು ಮತ್ತು ನೀಳಚಕ್ಕೆಯ ಉಪಕರಣಗಳನ್ನು ಶೋಧಿಸಲಾಗಿದೆ. ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೪೧. ಹಿರೇಬೆನಕಲ್ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೬ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ ಮತ್ತು ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮಹತ್ವದ ನೆಲೆಯಾಗಿದೆ. ಇಲ್ಲಿ ಉಜ್ಜಿ ನಯ ಗೊಳಿಸಿದ ಕೈಕೊಡಲಿ ಮತ್ತು ಕಪ್ಪು,  ಬೂದು ಬಣ್ಣದ ಮಡಕೆಚೂರುಗಳು ಹಾಗೂ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಗವಿ ವರ್ಣಚಿತ್ರಗಳು, ಕಿಂಡಿಕೋಣ, ಕಲ್ಮನೆ, ಆಯತಾಕಾರದ, ಹಲವು ಕೋಣೆಗಳ ಶಿಲಾಗೋರಿಗಳು ಹಾಗು ಕಪ್ಪು, ಕೆಂಪು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಅಂದಿನ ಆದಿಮಾನವನ ಜೀವನಕ್ರಮ ಅರಿಯಲು ಆಧಾರಗಳಾಗಿವೆ. ಇಲ್ಲಿಯೇ ಇತಿಹಾಸ ಆರಂಭಯುಗ ಹಂತದ ಅವಶೇಷಗಳು ದೊರೆತಿದ್ದು ಕಬ್ಬಿಣವನ್ನು ಕರಗಿಸಿದ ಕುರುಹುಗಳು ಇಲ್ಲಿ ದೊರೆತಿವೆ.

ಇಲ್ಲಿನ ಬೆಟ್ಟದಲ್ಲಿ ಚಿತ್ರಿತ ೧೨ ಗವಿಬಂಡೆಗಳನ್ನು ಗುರುತಿಸಲಾಗಿದೆ. ನೃತ್ಯದಲ್ಲಿ ತೊಡಗಿರುವ ಚಿತ್ರ ೧೨ನೇಯ ಗವಿಬಂಡೆಯಲ್ಲಿದೆ. ದುರ್ಗದ ಗಡಿ ಎಂದು ಸ್ಥಳೀಯವಾಗಿ ಕರೆಯುವ ಇದರ ಸುತ್ತಮುತ್ತಲಿರುವ ಬಂಡೆಗಳ ಮೇಲೆ ಅನೇಕ ಬಗೆಯ ಚಿತ್ರಗಳನ್ನು ಬಿಡಿಸಲಾಗಿದೆ. ಈ ಗವಿಬೆಟ್ಟದ ಸುಮಾರು ಮಧ್ಯ ಅಂತರದಲ್ಲದಿ ಒಂದು ಬಯಲು ಪ್ರದೇಶವಿದೆ. ಇದು ಬೃಹತ್ ಶಿಲಾಸಂಸ್ಕೃತಿಯ ವಾಸ್ತವ್ಯದ ನೆಲೆ. ಬೂದು ಮಿಶ್ರಿತ ಮಣ್ಣಿನಲ್ಲಿ ಕೆಂಪು, ಕೆಂಪು-ಕಪ್ಪು ದ್ವಿವರ್ಣದ ಮತ್ತು ಕಪ್ಪು ಬಣ್ಣದ ಮೃತ್ ಪಾತ್ರೆಗಳು ಹೇರಳವಾಗಿವೆ. ಅಲ್ಲದೆ ಸುಟ್ಟಮಣ್ಣಿನ ಮಣಿ, ಬಳೆಚೂರುಗಳು ಕಂಡುಬರುತ್ತವೆ.

೪೨. ಹೆಬ್ಬಾಳ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೯ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ/ತಾಮ್ರ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮುಖ್ಯ ನೆಲೆಯಾಗಿದೆ. ಇಲ್ಲ ಉಜ್ಜಿ ನಯಗೊಳಿಸಿದ ಕೈಕೊಡಲಿ ಮತ್ತು ಬೂದಿದಿಬ್ಬ ಗವಿ ವರ್ಣಚಿತ್ರಗಳು ಕಪ್ಪು, ಕಂದುದ ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಅಂದಿನ ಆದಿಮನವನ ಜೀವನಕ್ರಮ ಅರಿಯಲು ಏಕಮೇವ ಆಧಾರಗಳಾಗಿವೆ.

೪೨. ಹೇರೂರು : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೯ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ತಾಮ್ರ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮುಖ್ಯ ನೆಲೆಯಾಗಿದೆ. ಇಲ್ಲಿ ಉಜ್ಜಿ ನಯಗೊಳಿಸಿದ ಕೈಕೊಡಲಿ ಮತ್ತು ಬೂದಿದಿಬ್ಬ ಗವಿ ವರ್ಣಚಿತ್ರಗಳು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಅಂದಿನ ಆದಿಮಾನವನ ಜೀವನಕ್ರಮ ಅರಿಯಲು ಏಕಮೇವ ಆಧಾರ ಗಳಾಗಿವೆ.

೪೩. ಹೇರೂರು : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೯ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ತಾಮ್ರ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮುಖ್ಯ ನೆಲೆಯಾಗಿದೆ. ಇಲ್ಲ ಉಜ್ಜಿ ನಯಗೊಳಿಸಿದ ಕೈಕೊಡಲಿ ಮತ್ತು ಬೂದಿದಿಬ್ಬ ಗವಿ ವರ್ಣಚಿತ್ರಗಳು ಕಪ್ಪು, ಕಂದು ಒಣ್ಣದ ಮಡಕೆ ಚೂರುಗಳು ದೊರೆತಿದ್ದು, ಅಂದಿನ ಆದಿಮಾನವನ ಜೀವನಕ್ರಮ ಅರಿಯಲು ಏಕಮೇವ ಆಧಾರಗಳಾಗಿವೆ.

೪೪. ಹೊಸಕೆರಾ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೯ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮುಖ್ಯ ನೆಲೆಯಾಗಿದೆ. ಇಲ್ಲಿ ಉಜ್ಜಿ ನಯಗೊಳಿಸಿದ ಕೈಕೊಡಲಿ ಮತ್ತು ಬೂದಿದಿಬ್ಬ ಗವಿ ವರ್ಣಚಿತ್ರಗಳು ಕಪ್ಪು, ಕಂದು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಅಂದಿನ ಆದಿಮಾನವನ ಜೀವನಕ್ರಮ ಅರಿಯಲು ಆಧಾರಗಳಾಗಿವೆ.

೪೫. ಕಡೆಬಾಗಿಲು : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೦ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ ಮತ್ತು ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮಹತ್ವದ ನೆಲೆಯಾಗಿದೆ. ಇಲ್ಲಿ ಉಜ್ಜಿ ನಯಗೊಳಿಸಿದ ಕೈಕೊಡಲಿ ಮತ್ತು ಕಪ್ಪು, ಬೂದು ಬಣ್ಣದ ಮಡಕೆಚೂರುಗಳು ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಗವಿ ವರ್ಣಚಿತ್ರಗಳು, ಕಿಂಡಿಕೋಣೆ, ಕಲ್ಮನೆ, ಆಯಾತಾಕಾರದ, ಹಲವು ಕೋಣೆಗಳ ಶಿಲಾಗೋರಿಗಳು ಹಾಗು ಕಪ್ಪು, ಕೆಂಪು ಬಣ್ಣದ ಮಡಕೆ ಚೂರುಗಳು ದೊರೆತಿದ್ದು, ಅಂದಿನ ಆದಿಮಾನವನ ಜೀವನಕ್ರಮ ಅರಿಯಲು ಆಧಾರಗಳಾಗಿವೆ.

೪೬. ಸಂಗಾಪುರ : ಸಂಗಾಪುರ ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೯ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ ಮತ್ತು ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮತ್ತೊಂದು ಆದಿಮಾನವನ ಮಹತ್ವದ ನೆಲೆಯಾಗಿದೆ. ಇಲ್ಲಿನ ಕರಡಿಬೆಟ್ಟದಲ್ಲಿ ಅನೇಕ ಚಿಕ್ಕ ದೊಡ್ಡ ಗವಿಗಳಿವೆ. ಅವುಗಳಲ್ಲಿ ಪ್ರಾಗತಿಹಾಸ ಕಾಲದ ಮಡಕೆ ಚೂರುಗಳು, ಶಿಲಾಯುಧಗಳು ದೊರೆತಿವೆ. ಇಲ್ಲಿನ ಒಂದೆರಡು ಗವಿಗಳಲ್ಲಿ ಮಾತ್ರ ಚಿತ್ರಗಳಿವೆ. ಚಿತ್ರಿತ ಭಾಗವು ಬಹಿರಂಗವಾಗಿ ಕಾಣುವಂತಿದ್ದರೂ ಮಳೆ, ಗಾಳಿ, ಬಿಸಿಲಿನಿಂದ ಸಂಪೂರ್ಣ ರಕ್ಷಿತಗೊಂಡು ಉತ್ತಮ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಇದೊಂದು ಆದಿಮಾನವನ ನೆಲೆಯೆಂದು ಹೇಳಬಹುದಾಗಿದೆ.

೪.೨. ಉತ್ಖನನ ನೆಲೆಗಳು

ಹಂಪಿ ಪರಿಸರದಲ್ಲಿ ಆದಿಮಾನವನ ಹಲವಾರು ನೆಲೆಗಳಿದ್ದು, ಅವು ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಡಾ.ಅ. ಸುಂದರ, ಡಾ. ನಾಗರಾಜರಾವ್, ಡಾ. ಪದ್ದಯ್ಯ, ಡಾ. ಸಂಕಾಲಿಯ, ಡಾ. ಅನ್ಸಾರಿ ಮೊದಲಾದ ವಿದ್ವಾಂಸರು ಇಲ್ಲಿನ ಕೆಲ ಪ್ರದೇಶಗಳಲ್ಲಿ ಉತ್ಖನನ ನಡೆಸಿ ಪ್ರಾಗೈತಿಹಾಸಿಕ ಮಾನವನ ಜನಜೀವನದ ಮೇಲೆ ವಿಶೇಷ ಬೆಳಕನ್ನು ಬೀರಿದ್ದಾರೆ. ತೆಕ್ಕಲಕೋಟೆ, ಸಂಗನಕಲ್ಲು, ಕಪ್ಪಗಲ್ಲು ಮೊದಲಾದಡೆ ಉತ್ಖನನಗಳು ನಡೆದಿವೆ. ಆ ಕುರಿತ ಸಂಕ್ಷಿಪ್ತ ವಿವರ ಈ ಮುಂದೆ ಇದೆ.

೧. ತೆಕ್ಕಲಕೋಟೆ : ಇದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿದೆ. ಬಳ್ಳಾರಿಯಿಂದ ದಕ್ಷಿಣಕ್ಕೆ ೪೨ ಕಿ.ಮೀ., ಆದೋನಿಯಿಂದ ಆರು ಕಿ.ಮೀ., ದೂರದಲ್ಲಿದೆ. ನವಶಿಲಾಯುಗ, ಶಿಲಾ ತಾಮ್ರಯುಗ ಸಂಸ್ಕೃತಿಯ ಕಾಲಘಟ್ಟಕ್ಕೆ ಸೇರಿದ ಈ ನೆಲೆಯಲ್ಲಿ ೧೯೧೬ರಲ್ಲಿ ರಾಬರ್ಟ್ ಬ್ರೂಸ್ ಪೂಟ್ ಆದಿಮಾನವನಿಗೆ ಸಂಬಂಧಿಸಿದ ಕೆಲ ಅವಶೇಷಗಳನ್ನು ಶೋಧಿಸಿದ್ದರು. ನಂತರ ೧೯೬೩ರಲ್ಲಿ ಇಲ್ಲಿ ಕೆ.ಸಿ.ಮಲ್ಹೋತ್ರ, ಎಂ.ಎಸ್. ನಾಗರಾಜರಾವ್ ನಿರ್ದೇಶನದಲ್ಲಿ ಉತ್ಖನನ ನಡೆಸಿ ಮಡಕೆಗಳು, ಬ್ಲೇಡ್ ಮೊದಲಾದ ಶಿಲಾಯುಧಗಳನ್ನು ಮತ್ತು ಆದಿಮಾನವನ ವಾಸಸ್ಥಾನವನ್ನು ಗುರುತಿಸಿದರು. ತರುವಾಯ ೧೯೬೩-೬೪ ರಲ್ಲಿ ಸಂಕಾಲಿಯ ಸ್ನಾತಕೋತ್ತರ ಪರಿಶೋಧನಾ ಸಂಸ್ಥೆ, ಪುಣೆ ಮತ್ತು ಕನ್ನಡ ಅಧ್ಯಯನ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಉತ್ಖನನ ನೆಡಸಿದರು. ಈ ನೆಲೆಯಲ್ಲಿ ತಾಮ್ರದ ಸುರುಳಿ, ಕಲ್ಲಿನ ಕೊಡಲಿ, ಜಿಂಕೆಯ ಕವಲುಕೊಂಬು, ಮೇಗಿಗಳು, ಬ್ಲೇಡುಗಳು, ಸ್ಫಟಿಕದ ಶಿಲೆ ಹಾಗೂ ಚಿನ್ನದ ಮಗ್ರಿ ಪಟ್ಟಿ, ಕಲ್ಲು ಮುಳ್ಳುಗಳು, ಬೂದು ಬಣ್ಣದ ಮಡಕೆ, ಹಳದಿ ಬಣ್ಣದ ಮಡಕೆಗಳು, ಕಪ್ಪು-ಕೆಂಪು, ಕಂದುಬಣ್ಣದ ಕಪ್ಪು ಮಿಶ್ರಿತ ಮಡಕೆಗಳು ದೊರೆತಿದ್ದು, ಅಂದಿನ ಜೀವನಕ್ರಮ ಅರಿಯಲು ಸಹಾಯಕವಾಗಿವೆ.

ಈ ನೆಲೆ ನೂತನ ಶಿಲಾಯುಗ ಸಂಸ್ಕೃತಿಗೆ ವಾಸದ ನೆಲೆಯಾಗಿತ್ತು. ಈ ಸಂಸ್ಕೃತಿಯ ಜನರ ದೈನಂದಿನ ಜೀವನದ ಸ್ವರೂಪ ಮತ್ತು ಲಕ್ಷಣಗಳನ್ನು ತಿಳಿಯುವ ಉದ್ದೇಶವನ್ನು ಇಟ್ಟುಕೊಂಡು ಈ ಉತ್ಖನನ ಕೈಗೊಳ್ಳಲಾಗಿತ್ತು. ಉತ್ಖನನದ ನಂತರ ಈ ಶಿಲಾಯುಗ ಸಂಸ್ಕೃತಿಯ ಬೆಳವಣಿಗೆಯಲ್ಲಿ ಎರಡು ಹಂತಗಳನ್ನು ಗುರುತಿಸಲಾಯಿತು.

೧. ಶಿಲಾ ತಾಮ್ರ ಹಂತದಲ್ಲಿಯ ನೂತನ ಶಿಲಾಯುಗ ಸಂಸ್ಕೃತಿ

೨. ಈ ಸಂಸ್ಕೃತಿಯ ಅಂತ್ಯದ ಪ್ರಾಚೀನ ಹಂತ

೧. ಶಿಲಾ ತಾಮ್ರ ಹಂತದಲ್ಲಿಯ ನೂತನ ಶಿಲಾಯುಗ ಸಂಸ್ಕೃತಿ

ಆದಿ ಹಂತದಲ್ಲಿ ಬ್ರಹ್ಮಗಿರಿ ಮತ್ತು ಪಿಕ್ಲಿಹಾಳ ಮೊದಲಾದ ನೆಲೆಗಳಲ್ಲಿ ಕಂಡುಬಂದಂತೆ ಇಲ್ಲಿಯೂ ತಾಮ್ರುದ ಉಪಕರಣಗಳನ್ನು, ಆಭರಣಗಳನ್ನು ಉಪಯೋಗಿಸುತ್ತಿದ್ದ ಅಂಶ  ಸ್ಪಷ್ಟವಾಯಿತು. ಈ ಸಂಸ್ಕೃತಿಯ ಜನರು ಸಾಮಾನ್ಯವಾಗಿ ಇಂದಿನ ಸಿರುಗುಪ್ಪ ಮೊದಲಾದ ಗ್ರಾಮಗಳಲ್ಲಿಯ ‘ಬೋಯಾ’ ಜನಾಂಗದವರು ತಮ್ಮ ವಾಸಕ್ಕಾಗಿ ವೃತ್ತಾಕಾರದ ಗುಡಿಸಲು ಕಟ್ಟಿಕೊಳ್ಳುವಂತೆ ಇವರೂ ವೃತ್ತಾಕಾರವಾಗಿ ತಮ್ಮ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದರೆಂಬ ಅಂಶವನ್ನು ಉತ್ಖನನದಲ್ಲಿ ಶೋಧಿಸಲಾಯಿತು. ಇಲ್ಲಿನ ವಸತಿಗಳನ್ನು ತಳಹದಿ ಹದಗೊಳಿಸಿ ನಂತರ ಚಿಕ್ಕ ಚಿಕ್ಕ ಕಲ್ಲುಗಳನ್ನು ಹಾಕಿ ಅದರ ಮೇಲೆ ಮಣ್ಣನ್ನು ಉಜ್ಜಿ ಗಟ್ಟಿಗೊಳಿಸಲಾಗುತ್ತಿತ್ತು ಎಂಬುದನ್ನು ಮತ್ತು ಬಿದಿರು ಬೊಂಬು ಹಾಗು ತಡಿಕೆ ಬಳಸಿಕೊಂಡು ಮನೆ ನಿರ್ಮಿಸುತ್ತಿದ್ದರೆಂಬ ಅಂಶವನ್ನು ಇದೇ ಉತ್ಖನನದಲ್ಲಿ  ಗುರುತಿಸಲಾಯಿತು. ಒಂದು ಮನೆಯಲ್ಲಿ ಆಯತಾಕಾರದ ಗುಂಡಿಯಲ್ಲಿ ಶವ  ಇದ್ದರೂ ಶೋಧವಾಯಿತು. ಸಾಮಾನ್ಯವಾಗಿ ಈ ಜನರು ಶವ ಕುಣಿಗಳಲ್ಲಿ ಶವಗಳನ್ನಿಟ್ಟು ಸಂಸ್ಕಾರ ಮಾಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಆದರೆ ಸಾಮಾನ್ಯವಾಗಿ ಈ ಜನರು ಮನೆಯ ಹೊರಗಡೆ ಶವಸಂಸ್ಕಾರ ಮಾಡುವ ಪದ್ಧತಿ ಇಟ್ಟುಕೊಂಡಿದ್ದರೆಂಬ ಅಂಶವನ್ನು ಇದೇ ವೇಳೆ ಗುರುತಿಸಲಾಯಿತು. ಮನೆಯ ಸಮೀಪದಿಂದಲೇ ನಾರಿಹಳ್ಳಕ್ಕೆ ಹೋಗುವ ದಾರಿ ಮತ್ತು ಮನೆಯ ಸುತ್ತ ಇದ್ದ ಎತ್ತರದ ಗೋಡೆ ಮತ್ತು ಪ್ರವೇಶ ದ್ವಾರವನ್ನು ಇದೇ ವೇಳೆ ಶೋಧಿಸಲಾಯಿತು. ಈ ರೀತಿಯ ವಸತಿ ನೆಲೆ ಕರ್ನಾಟಕದಲ್ಲಿ ದೊರೆತಿರುವುದು ಇಲ್ಲಿನ ವಿಶೇಷವಾಗಿದೆ.

೨. ಈ ಸಂಸ್ಕೃತಿಯ ಅಂತ್ಯದ ಪ್ರಾಚೀನ ಹಂತ

ಎರಡನೇ ಹಂತದಲ್ಲಿ ಈ ನೆಲೆಯಲ್ಲಿನ ಜನರು ಹೊರಗಿನಿಂದ ಬಂದ ಜನರೊಡನೆ ಸಂಪರ್ಕವಿಟ್ಟುಕೊಂಡಿದ್ದರೆಂಬ ಅಂಶವನ್ನು ಮತ್ತು ಈ ಹಂತದ ಜನರು ಗೋದಾವರಿ ನದಿ ಪ್ರದೇಶದಲ್ಲಿನ ಶಿಲಾ ತಾಮ್ರ ಹಂತದಲ್ಲಿದ್ದ ಜನರ ವಸತಿ ನೆಲೆಗಳ ಮಾದರಿಯಲ್ಲಿ ತಮ್ಮ ವಸತಿಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಇಲ್ಲಿ ಈ ಹಂತದಲ್ಲಿ ಕಟ್ಟಿಕೊಂಡ ಮನೆಗಳಿಗೂ ನಾಸಿಕ್, ಜೋರ್ವಾ, ದಯಾಲ್ ಬಾಗ್ ಮೊದಲಾದೆಡೆ ದೊರೆತ ಮನೆಗಳಿಗೂ ಸಾಕಷ್ಟು ಹೋಲಿಕೆಗಳಿವೆ.

ಮೃತ್ಪಾತ್ರೆಗಳು : ಈ ಉತ್ಖನನದಲ್ಲಿ ಅಲಂಕೃತ ಮೃತ್ಪಾತ್ರೆಗಳು ಪ್ರಮುಖವಾಗಿ ದೊರಕಿದ್ದು, ಅವು ಇಂತಿವೆ.

೧. ಚಿತಾಭಸ್ಮವನ್ನು ಇಟ್ಟಿರುವ ಕುಂಭಗಳು

೨. ಅಸ್ಥಿ, ಮೃತ್ಪಾತ್ರೆಗಳು

೩. ಮಕ್ಕಳ ಮತ್ತು ದೊಡ್ಡವರ ಅಸ್ಥಿಗಳು

ತೆಕ್ಕಲಕೋಟೆಯ ಸ್ತರಗಳ ಅಧ್ಯಯನ : ಈ ಉತ್ಖನನದಲ್ಲಿ ಸ್ತರಗಳ ಅಧ್ಯಯನ ಕೈಗೊಳ್ಳಲಾಗಿದೆ. ಇಲ್ಲಿನ ಸ್ತರಗಳಲ್ಲಿ ದೊರೆತ ವಿವಿಧ ಅವಶೇಷಗಳ ವಿವರ ಇಂತಿದೆ.

೧. ಮೊದಲನೇ ಸ್ತರದಲ್ಲಿ ಕಂಚಿನ ಅವಶೇಷಗಳಾದ ತ್ರಾಮದ ಸುರುಳಿ ನವಶಿಲಾಯುಗ ಸಂಸ್ಕೃತಿಯ ಶಿಲಾಯುಧಗಳು ಬೂದು ಬಣ್ಣದ ಮಡಕೆ ಕಪ್ಪು ಮಿಶ್ರಿತ ಮಡಕೆಗಳು ದೊರೆತಿವೆ.

೨. ಎರಡನೇ ಪದರ ಮಧ್ಯ ಶಿಲಾಯುಗ ಸಂಸ್ಕೃತಿಯ ಶಿಲಾಯುಧಗಳು ದೊರತಿವೆ.

೩. ಮೂರನೇ ಪದರಿನಲ್ಲಿ ಕಲ್ಲಿನ ಕೈಕೊಡಲಿ, ಸಜ್ಜೆ, ನೆಲ್ಲು ಮೊದಲಾದ ಧಾನ್ಯಗಳು.

೪. ನಾಲ್ಕನೇ ಪದರಿನಲ್ಲಿ ನವಶಿಲಾಯುಗ ಸಂಸ್ಕೃತಿಯ ಬ್ಲೇಡುಗಳು, ತಾಮ್ರದ ಕೊಡಲಿ, ಮಚ್ಚುಗಳು ದೊರೆತಿವೆ.

೫. ಐದನೇ ಪದರಿನಲ್ಲಿ ಮಡಕೆಗಳು, ಶಿಲಾಯುಧಗಳು, ಕೈಕೊಡಲಿಗಳು ಜಿಂಕೆಯ ಕೋಡು, ಎಲುಬುಗಳು ದೊರೆತಿವೆ.

ಇವರು ವಿಶೇಷವಾಗಿ ತಾಮ್ರದ ಆಯುಧೋಪಕರಣಗಳನ್ನು ಮತ್ತು ರೇಖಾ ಚಿತ್ರಗಳಿಂದ ಅಲಂಕರಿಸಲ್ಪಟ್ಟ ಕೆಂಪು ವರ್ಣದ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು. ಈ ಸಂಸ್ಕೃತಿಯ ನೆಲೆಗಳಾದ ಇನಾಂಗವಾ ಮೊದಲಾದೆಡೆ ಸಾಮಾನ್ಯವಾಗಿ ಶವಸಂಸ್ಕಾರಕ್ಕೆ ಉಪಯೋಗಿಸುತ್ತಿದ್ದ ಕಪ್ಪು, ಕೆಂಪು, ದ್ವಿವರ್ಣ ಪಾತ್ರೆಗಳನ್ನು ಶವಸಂಸ್ಕಾರಕ್ಕಾಗಿ ಬಳಸುತ್ತಿದ್ದರು. ಈ ರೀತಿಯ ಶವಕುಣಿಗಳು ಅಲ್ಲಲ್ಲಿ ದೊರಕಿವೆ. ಇದೇ ರೀತಿಯ ಪದ್ಧತಿಯನ್ನು ಇಲ್ಲಿ ಅನುಸರಿಸುತ್ತಿದ್ದರು. ಇಲ್ಲಿನ ಮಣ್ಣಿನ ಪಾತ್ರೆಗಳ ಮೇಲೆ ಬಿಳಿಬಣ್ಣದ ರೇಖಾಚಿತ್ರಗಳು ಇರುತ್ತಿದ್ದವು. ಒಂದು ಶವ ಕೋಣೆಯಲ್ಲಿ ಬಿಳಿಬಣ್ಣದ ರೇಖಾಚಿತ್ರಗಳಿಂದ ಕೂಡಿದ ಮಣ್ಣಿನ ಪಾತ್ರೆ ಅವಶೇಷಗಳು ಮತ್ತು ಮನೆಯೊಳಗೆ ಉಪಯೋಗಿಸುತ್ತಿದ್ದ ಪಾತ್ರೆಗಳಲ್ಲಿ ವರ್ಣಚಿತ್ರಗಳಿಂದ ಅಲಂಕೃತವಾದ ಮಣ್ಣಿನ ಪಾತ್ರೆಗಳ ಅವಶೇಷಗಳು ದೊರೆತವು. ಇವಲ್ಲದೇ ಇವರ ಶವಸಂಸ್ಕಾರ ಪದ್ಧತಿಯ ಹಲವಾರು ವಿಧಾನಗಳಿದ್ದವು. ಅವುಗಳಲ್ಲಿ  ಒಂದು ರೀತಿ ದೊಡ್ಡ ದೊಡ್ಡ ಗುಡಾಣಗಳಂತ್ತಿದ್ದ ಪ್ರಾತ್ರೆಗಳನ್ನು ಒಡೆದು ಒಂದನ್ನೊಂದು ಜೋಡಿಸಿ, ಅವುಗಳಲ್ಲಿ ಶವದ ಅಸ್ಥಿ ಅವಶೇಷಗಳನ್ನು ಇಟ್ಟು ಶವಸಂಸ್ಕಾರ ಮಾಡುವ ವಿಧಾನ ಉತ್ಖನನದಲ್ಲಿ  ಗೋಚರವಾಯಿತು.

ನೆವಾಸದಲ್ಲಿನ ಶವಸಂಸ್ಕಾರ ಪದ್ಧತಿಗೂ ಇಲ್ಲಿಗೂ ಸಾಕಷ್ಟು ಸಾಮ್ಯತೆಗಳಿವೆ. ಇಲ್ಲಿ ದೊರೆತ ನಾಲ್ಕು ಅಸ್ಥಿಪಾತ್ರೆಗಳಲ್ಲಿ ಒಂದು ಶವಕೋಣೆಯಲ್ಲಿ ಇದ್ದಿತು. ಹೀಗೆ ತೆಕ್ಕಲಕೋಟೆಯಲ್ಲಿ ಸುಧಾರಿಸಿದ ನೂತನ ಶಿಲಾಯುಗದ ಸಂಸ್ಕೃತಿಯ ಕೆಲವು ಹೊಸ ಅಂಶಗಳನ್ನು ಗುರುತಿಸಲಾಗಿದೆ. ಗಮನಾರ್ಹವಾದ ವಿಶೇಷವೆಂದರೆ ಇಲ್ಲಿನ ಒಂದು ಮಣ್ಣಿನ ಮುಚ್ಚಳದ ಮೇಲೆ ಚೂಪಾದ ಕಡ್ಡಿಯಿಂದ ಚುಚ್ಚಿ ಚುಚ್ಚಿ ಮಾಡಿದ ಜಿಂಕೆ, ಗೂಳಿ ಮೊದಲಾದ ನಾಲ್ಕು ಪ್ರಾಣಿಗಳ ಚಿತ್ರಗಳಿವೆ. ಚಿತ್ರ ರಚನೆಯಲ್ಲಿ ಇವರು ನಾನಾ ತಂತ್ರಗಳನ್ನು ಬಳಸುತ್ತಿದ್ದರು. ತೆಕ್ಕಲಕೋಟೆಯಲ್ಲಿ ಈ ಒಂದು ಹೊಸ ವಿಧಾನ ಬಳಕೆಯಲ್ಲಿದ್ದುದನ್ನು ದೊರೆತ ಮೇಲಿನ ಅವಶೇಷಗಳಿಂದ ಸ್ಪಷ್ಟವಾಗಿದೆ. ಇಲ್ಲಿ ಉತ್ಖನನದ ಗುಂಡಿ ತೆಗೆದಾಗ ಅದರ ೩ ಅಡಿ ಆಳದಲ್ಲಿ Pharcolul, Vugan’s, Dalichos, Biblowrai ಸುಟ್ಟು ಕರಕಲಗಿರುವ ಬೀಜಗಳು ಮತ್ತು ನವಣೆ, ಹುರುಳಿ ಮೊದಲಾದವು ಇಲ್ಲಿ ದೊರೆತಿವೆ. ಇದರಿಂದ ಅಂದಿನ ಆದಿಮಾನವನ ಜೀವನಕ್ರಮ ಅರಿಯಲು ಇವು ಸ್ಪಷ್ಟ ಆಕರಗಳಾಗಿವೆ.

೨. ಸಂಗನಕಲ್ಲು : ಹಂಪಿ ಪರಿಸರದಲ್ಲಿ ಆದಿಮಾನವನಿಗೆ ಸಂಬಂಧಿಸಿದ ನೆಲೆಗಳಲ್ಲಿ ಸಂಗನಕಲ್ಲು ಒಂದು ಪ್ರಮುಖ ನೆಲೆಯಗಿದೆ. ಬಳ್ಳಾರಿಯ ಜಿಲ್ಲೆಯ ಬಳ್ಳಾರಿ ತಾಲೂಕಿನಲ್ಲಿರುವ ಈ ನೆಲೆ ಬಳ್ಳಾರಿಯಿಂದ ೧೨ ಕಿ.ಮೀ. ದೂರದಲ್ಲಿದೆ. ಇಲ್ಲಿ ಬಿ. ಸುಬ್ಬಾರಾವ್ ಅವರು ಉತ್ಖನನ ನಡೆಸಿದರು. ಇದು ಬ್ರಹ್ಮಗಿರಿ ಮತ್ತು ಇತರೆ ನೆಲಗಳಿಗಿಂತಲೂ ಮಿಗಿಲಾಗಿ ಕೆಲವು ಕುರುಹುಗಳನ್ನು ನಮಗೆ ನೀಡಿದೆ. ಉತ್ಖನನದಲ್ಲಿ ದೊರೆತ ಇಲ್ಲಿನ ಮೇಲಿಂದ ಕೆಳಗಿನ ಸ್ತರಗಳನ್ನು ಆಧಾರವಾಗಿಟ್ಟುಕೊಂಡು ಅಂದಿನ ಸಾಂಸ್ಕೃತಿಕ ಹಂತಗಳನ್ನು ಅಧ್ಯಯನ ಮಾಡಬಹುದು. ಮೊದಲನೆಯದು ಬೃಹತ್ ಶಿಲಾಯುಗ. ಇದು ಕೈಕೊಡಲಿ ಸಂಸ್ಕೃತಿಯೊಡನೆ ಮಿಲನವಾಗಿರುವುದನ್ನು ಕಾಣಬಹುದು. ಇದರ ಕೆಳಭಾಗದಲ್ಲಿ ನೂತನ ಶಿಲಯುಗದ ಕೈಕೊಡಲಿಗಳನ್ನು ಗುರುತಿಸಲಾಗಿದೆ. ಇದರ ತಳಭಾಗದಲ್ಲಿ ಯಾವುದೇ ಮೃತ್ ಪಾತ್ರೆಗಳು ದೊರಕದೆ, ಹೇರಳವಾಗಿ ದೊರೆತ ಸೂಕ್ಷ್ಮ ಶಿಲಾಯುಗದ ಆಯುಧಗಳನ್ನು ಗಮನಿಸಿ ಇದನ್ನು ನೂತನ ಶಿಲ ಯುಗದ ಉಪಕರಣಗಳನ್ನು ತಯಾರಿಸುವ ತಾಣವಾಗಿತ್ತೆಂದು ಗುರುತಿಸಲಾಗಿದೆ.ಇಲ್ಲಿ ತಯಾರಿಸಲಾದ ಅಲಗುಗಳ, ವಿವಿಧ ಅಳತೆಯದಾಗಿವೆ. ಅರ್ಧ ಚಂದ್ರಾಕೃತಿ ಮತ್ತು ಕೊಳವೆ ಆಕಾರ, ಸೀಳುಗಳನ್ನು ತೆಗೆದ ಉಂಡೇಕಲ್ಲುಗಳು ಇಲ್ಲಿ ಹೇರಳವಾಗಿ ದೊರಕಿವೆ. ಇವುಗಳ ಆಧಾರದ ಮೇಲೆ ಇದು ಅಂದಿನ ಆದಿಮಾನವನ ತಾಣವಾಗಿತ್ತೆಂಬುದು ಸ್ಪಷ್ಟವಾಗುತ್ತದೆ.

೩. ಕಪ್ಪಗಲ್ಲು : ಬಳ್ಳಾರಿ ತಾಲೂಕು ಕೇಂದ್ರದಿಂದ ೯ ಕಿ.ಮೀ. ದೂರದಲ್ಲಿರುವ ಈ ನೆಲೆ ಹಂಪಿ ಪರಿಸರದ ಆದಿಮಾನವನ ನೆಲೆಗಳಲ್ಲಿ ಪ್ರಮುಖವಾದ ಒಂದು ನೆಲೆಯಾಗಿದೆ. ಇಲ್ಲಿನ ಬೂದಿದಿಬ್ಬದಿಂದಾಗಿ ಇದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಬೂದಿದಿಬ್ಬದ ಉತ್ಖನನದ ನೆಲೆಯು ಬಳ್ಳಾರಿಯಿಂದ ಮೇಲಕ್ಕೆ ಹೋಗುವ ದಾರಿ ಹಗರಿ ನದಿಯ ಪಶ್ಚಿಮ ನೆವಲಿ ಬೆಟ್ಟದ ಬಳಿ ಇದ್ದು, ಇಲ್ಲಿ ಮೂರು ಬೂದಿ ದಿಬ್ಬಗಳಿವೆ.

ನವಶಿಲಾಯುಗ ಸಂಸ್ಕೃತಿಗೆ ಸೇರಿದ ಈ ನೆಲೆಯಲ್ಲಿ ಕುಲಶಾಸ್ತ್ರಜ್ಞ ಕ್ಯಾಬೇಲ್ಡರ್ ೧೮೪೩ರಲ್ಲಿ ಮೊದಲ ಬಾರಿಗೆ ಉತ್ಖನನ ಮಾಡಿದನು. ನಂತರ ಅಲ್ಲಿಯೇ Majumdar G.G. & Rajguru, S.N., ಅವರು ಹೆಚ್ಚಿನ ಶೋಧನೆಯನ್ನು ಮಾಡಿದರು. ಇದು ಸಂಗನಕಲ್ಲು ಗ್ರಾಮದ ಸಮೀಪದಲ್ಲಿರುವ ಒಂದು ಹಳ್ಳಿ. ಸಂಗನಕಲ್ಲಿನ ಪ್ರಾಚೀನ ನೆಲೆಯಿರುವ ಸಣ್ಣರಸಮ್ಮ ಗುಡ್ಡದ ಒಂದು ಬದಿಯ ಬಯಲು ಭೂಮಿಯಲ್ಲಿ ಎರಡು ಬೂದಿ ಗುಡ್ಡಗಳಿದ್ದವು. ಇವುಗಳನ್ನು ಮತ್ತು ಬಂಡೆಗಳ ಮೇಲಿನ ಕುಟ್ಟಿ ಮಾಡಿಸಿದ್ದ ಹಾಗೂ ಬಳೆಯಂತಿರುವ ಉಪಕರಣಗಳಿಂದ ತೆಗೆದ ರೇಖಾಚಿತ್ರಗಳುಳ್ಳ ಬಂಡೆಗಳನ್ನು ಸುಮಾರು ೧೮೪೦ರ ದಶಕದಲ್ಲಿ ನಾಕ್ಸ್ ಎನ್ನುವವರು ಪತ್ತೆ ಮಾಡಿ, ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದರು. ತರುವಾಯ ಬ್ರೂಸ್ಪ್ ಪೂಟ್ ಅವರು ಆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ತಾವು ತೆಗೆದ ಛಾಯಾಚಿತ್ರಗಳನ್ನು ಅವರಿಗೆ ತೋರಿಸಿದರು. ಬೂದಿಗುಡ್ಡವನ್ನು ಕುತೂಹಲದಿಂದ ಅಗೆಸಿದ್ದ ಪೋಚ್ ಅವರು ೧೯೬೪ರ ನಂತರ ಅಲ್ಲಿಯ ಬೂದಿಗುಡ್ಡೆಗಳನ್ನು ಪರಿಶೀಲಿಸಿ ಅವುಗಳ ಬಗ್ಗೆ ಟಿಪ್ಪಣಿಯನ್ನು ತಮ್ಮ ಪುಸ್ತಕದಲ್ಲಿ ಸೇರಿಸಿದ್ದಾರೆ. ಆ ಚಿತ್ರಗಳಲ್ಲಿ ಕೆಲವನ್ನು ತಮ್ಮ ಪುಸ್ತಕಗಳಲ್ಲಿ ಪ್ರಕಟಿಸಿದರು. ಅವರ ಅಧ್ಯಯನದ ಪ್ರಕಾರ ಬೂದಿಗುಡ್ಡಗಳು ಕಿಟ್ಟದಂತಹ ಬೂದಿಯ ಸಗಣಿಯನ್ನು ಸುಮಾರು ೮೦೦-೧೨೦೦ ಸೆಂಟಿಗ್ರೇಡ್ ಸುಟ್ಟಾಗ ನಿರ್ಮಾಣವಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದರು.

೪. ನಿಟ್ಟೂರು : ಹಂಪಿ ಪರಿಸರದಲ್ಲಿ ಆದಿಮಾನವನಿಗೆ ಸಂಬಂಧಿಸಿದ ನೆಲೆಗಳಲ್ಲಿ ನಿಟ್ಟೂರು ಒಂದು ಪ್ರಮುಖ ನೆಲೆಯಾಗಿದೆ. ಬಳ್ಳಾರಿಯ ಜಿಲ್ಲೆಯ ಬಳ್ಳಾರಿ ತಾಲೂಕಿನಲ್ಲಿರುವ ಈ ನೆಲೆ, ಬಳ್ಳಾರಿಯಿಂದ ೧೮ ಕಿ.ಮೀ. ದೂರದಲ್ಲಿದೆ. ಜೆಡ್.ಡಿ. ಅನ್ಸಾ ಇಲ್ಲಿ ಉತ್ಖನನ ನಡೆಸಿದರು. ಇವರೊಂದಿಗೆ ಸಂಕಾಲಿಯ ಎಚ್.ಡಿ. ಅವರು ಸಹಾ ಇದ್ದರು. ಇದು ಕಪ್ಪಗಲ್ಲು ಮತ್ತು ಇತರೆ ನೆಲೆಗಳಿಗಿಂತ ಆದಿಮಾನವನಿಗೆ ಸಂಬಂಧಿಸಿದ ಕೆಲವು ಮಹತ್ವದ ಕುರುಹುಗಳನ್ನು ನಮಗೆ ನೀಡಿದೆ. ಇಲ್ಲಿನ ಉತ್ಖನನದ ಸ್ತರಗಳನ್ನು ಆಧಾರವಾಗಿಟ್ಟುಕೊಂಡು ಅಂದಿನ ಸಾಂಸ್ಕೃತಿಕ ಹಂತಗಳನ್ನು ಅಧ್ಯಯನ ಮಾಡಬಹುದು. ಮೊದಲನೆಯದು ಬೃಹತ್ ಶಿಲಾಯುಗ. ಇದು ಕೈಕೊಡಲಿ ಸಂಸ್ಕೃತಿಯೊಡನೆ ಮಿಲನವಾಗಿರುವುದನ್ನು ಕಾಣಬಹುದು. ಇದರ ಕೆಳಭಾಗದಲ್ಲಿ ನೂತನ ಶಿಲಾಯುಗದ ಕೈಕೊಡಲಿಗಳನ್ನು ಗುರುತಿಸಲಾಗಿದೆ. ಇದರ ತಳಭಾಗದಲ್ಲಿ ಯಾವುದೇ ಮೃತ್ ಪಾತ್ರೆಗಳು ದೊರಕದೆ, ಹೇರಳವಾಗಿ ದೊರೆತ ಸೂಕ್ಷ್ಮ ಶಿಲಾಯುಗದ ಆಯುಧಗಳನ್ನು ಗಮನಿಸಿ ಇದನ್ನು ಸೂಕ್ಷ್ಮ ಶಿಲಾಯುಗದ ಉಪಕರಣಗಳನ್ನು ತಯಾರಿಸುವ ತಾಣವಾಗಿತ್ತೆಂದು ಗುರುತಿಸಲಾಗಿದೆ.  ನಂತರದ ಸ್ತರದಲ್ಲಿ ಆದಿ ಹಳೇಶಿಲಾಯುಗಕ್ಕೆ ಸಂಬಂಧಿಸಿದ ಕೈಕೊಡಲಿ ಮುಂತಾದ ಅವಶೇಷಗಳು ಇಲ್ಲಿ ದೊರೆತಿವೆ. ಇಲ್ಲಿ ತಯಾರಿಸಲಾದ ಅಲಗುಗಳು ವಿವಿಧ ಅಳತೆಯದಾಗಿವೆ. ಅರ್ಧ ಚಂದ್ರಾಕೃತಿ ಮತ್ತು ಕೊಳವೆ ಆಕಾರ, ಸೀಳುಗಳನ್ನು ತೆಗೆದ ಉಂಡೆಕಲ್ಲುಗಳು ಇಲ್ಲಿ ಹೇರಳವಾಗಿ ದೊರಕಿವೆ. ಇವುಗಳ ಆಧಾರದ ಮೇಲೆ ಇದು ಅಂದಿನ ಆದಿಮಾನವನ ತಾಣವಾಗಿತ್ತೆಂಬುದು ಸ್ಪಷ್ಟವಾಗುತ್ತದೆ.

 

[1] ಇ.ದ. ೮ ೧೯೩

ಸುಂದರ ಅ. ೧೯೯೮, ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ, ಬೆಂಗಳೂರು ೬೭-೬೯.

[2] ಕರ್ನಾಟಕ ಭಾರತಿ

ಕರ್ನಾಟಕ ಭಾರತಿ

[3] ಕರ್ನಾಟಕ ಭಾರತಿ

೧. ಇಂ.ಅ.ರಿ. ೧೯೭೭-೭೮

೨. ಇ.ದ.-೮. ೧೯೯೩.

[4] Archalogical Studies

Sundara. A 1975 Early Chamber Tombs of India, Delhi.

ಇಂ.ಅ.ರಿ. ೧೯೭೭-೭೮

ಇಂ.ಅ.ರಿ. ೧೯೮೪-೮೫

[5] A.R. Hyderabad Arch Dept. 1937-78

[6] ಅ.ಇ. ೪. ೧೯೪೭

[7] ಇಂ.ಅ.ರಿ. ೧೯೬೫

[8] ಇಂ.ಅ.ರಿ. ೧೯೭೭

[9] ಸುಂದರ ಅ. ೧೯೯೮, ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ, ಬೆಂಗಳೂರು.

[10] ಇಂ.ಅ.ರಿ. ೧೯೬೨

[11] ೧. ಇಂ.ಅ.ರಿ. ೧೯೭೦

೨. ಕರ್ನಾಟಕ ಭಾರತಿ

[12] ಇಂ.ಅ.ರಿ. ೧೯೭೭-೭೮

[13] ಇಂ.ಅ.ರಿ. ೧೯೭೦

ಕರ್ನಾಟಕ ಭಾರತಿ

[14] ಇಂ.ಅ.ರಿ. ೧೯೭೦-೭೧

[15] A.R. Hyderabad Arch Dept. 1935

೧. ಇಂ.ಅ.ರಿ. ೧೯೬೫

೨. ಇಂ.ಅ.ರಿ. ೧೯೬೮

೩. Journal Geological Survey of Hyderabed

೪. Journal Indian History 52-1

೫. Man 55

೬. Sundara A. 1975 Early Chamber Tombs of India, Delhi.

[16] ಇಂ.ಅ.ರಿ. ೧೯೬೨

೧. ಇಂ.ಅ.ರಿ. ೧೯೭೦

೨. ಕರ್ನಾಟಕ ಭಾರತಿ

[17] ಇಂ.ಅ.ರಿ. ೧೯೭೦

ಕರ್ನಾಟಕ ಭಾರತಿ

[18] ಇಂ.ಅ.ರಿ. ೧೯೬೭

ಕರ್ನಾಟಕ ಭಾರತಿ

[19] ತಿಪ್ಪೇಸ್ವಾಮಿ ಎಚ್., ಹಂಪಿ ಪರಿಸರದ ಸ್ಮಾರಕಗಳು,

[20] Nagaraj Rao M.S., & Malhotra K.C., The stone Age Hill Dwellers of Tekkalakota

[21] Subba Rao B., Stone age Culture of Bellary and Sankalia H.D. Mesolithic and premesolithic Industries from Excavations at Sanganakalu, Bellary.

[22] Mujumdar G.G. & Rajguru, S.N., Ash Mound Excavations at Kupgal P.67-69 A.I-4, 1947-78

[23] ನಿಟ್ಟೂರು : Ansari Z.D., Indian Antiquary 3rd Series, Sankalia, H.D., Pre-Proto. India & pakistan

[24] ಸುಂದರ ಅ., ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ.