ಚಿಕ್ಕ ಪ್ರಮಾಣದ ಚಿತ್ರಗಳು

ಸಾಮಾನ್ಯವಾಗಿ ಬಿಡಿ ಚಿತ್ರಗಳಿಗಿಂತ ಗುಂಪಿನ ಚಿತ್ರಗಳು ಚಿಕ್ಕ ಪ್ರಮಾಣದಲ್ಲಿವೆ. ಒಂದೇ ಎಡೆಯಲ್ಲಿ ಅನೇಕ ಚಿತ್ರಗಳನ್ನು ಬಿಡಿಸುವ ಉದ್ದೇಶವಿರುವುದರಿಂದ ಚಿತ್ರಗಳನ್ನು ಸಣ್ಣ ಪ್ರಮಾಣದಲ್ಲಿ ಯೋಜಿಸಿಕೊಳ್ಳಲಾಗಿದೆ. ಬಿಡಿಚಿತ್ರಗಳು ಸ್ವತಂತ್ರವಾಗಿರುವುದರಿಂದ ಅವು ದೊಡ್ಡ ಇಲ್ಲವೇ ಮಧ್ಯಮ ಪ್ರಮಾಣದಲ್ಲಿರುತ್ತವೆ. ಚಿಕ್ಕ ಪ್ರಮಾಣದ ಚಿತ್ರಗಳು ಹಿರೇಬೆನಕಲ್ ನ ೧, ೬. ೧೧ ಮತ್ತು ೧೨ ನೇ ಗವಿಗಳಲ್ಲಿ ಚಿಕ್ಕರಾಂಪುರದ ೧ನೇ ಗವಿಯಲ್ಲಿ ಇವೆ. ಇಲ್ಲಿ ಒಂದೇ ಕಡೆ ಸಾಲು ಕುಣಿತಗಾರರ ನಾಲ್ಕೈದು ತಂಡಗಳು, ಬಿಡಿ ಮನುಷ್ಯರು, ಜಿಂಕೆಗಳ ಸಾಲು, ಗುಂಪುಗಳು ಏಕಪ್ರಕಾರವಾಗಿರದೇ ಚೆಲ್ಲಾಪಿಲ್ಲಿ ಯಾಗಿವೆ. ಪ್ರಾಯಶಃ ಇವು ಬೇರೆ ಬೇರೆ ಅವಧಿಯಲ್ಲಿ ರಚಿತವಾಗಿರಬಹುದೆಂದು ತೋರುತ್ತದೆ. ಇಲ್ಲಿ ಕೆಲವು ಸಣ್ಣ ಪ್ರಮಾಣದ ಬಿಡಿ ಚಿತ್ರಗಳಿವೆ. ನಂತರ ಕಾಲದ ಬಿಳಿ ವರ್ಣದ ಚಿತ್ರಗಳಲ್ಲಿ ಕಡ್ಡಿಯಾಕಾರದ ಮನುಷ್ಯ ಕೃತಿಗಳು ಮತ್ತು ಇತರ ಚಿತ್ರಗಳು ಕೂಡ ಸಣ್ಣ ಪ್ರಮಾಣದಲ್ಲಿವೆ. ಮಲ್ಲಾಪುರ, ವೆಂಕಟಾಪುರ, ಹಂಪಿಗಳಲ್ಲಿ ಸಣ್ಣ ಪ್ರಮಾಣದ ಚಿತ್ರಗಳಿವೆ. ಬಣ್ಣ ಚಿತ್ರಗಳು ಸಾಮಾನ್ಯವಾಗಿ ೧ ಸೆಂ.ಮಿ. ನಿಂದ ಹಿಡಿದು ೩೦ ಸೆಂ.ಮೀ.ವರೆಗೆ ವಿವಿಧ ಅಳತೆಯಲ್ಲಿವೆ.

ಮಧ್ಯಮ ಪ್ರಮಾಣದ ಚಿತ್ರಗಳು

ಮಧ್ಯಮ ಪ್ರಮಾಣದ ಚಿತ್ರಗಳು ಸಾಮಾನ್ಯವಾಗಿ ಅಧಿಕವಾಗಿವೆ. ಎರಡು ಅಥವಾ ನಾಲ್ಕು ಚಿತ್ರಗಳಿದ್ದಲ್ಲಿ ಅವು ಮಧ್ಯಮ ಪ್ರಮಾಣದಲ್ಲಿರುತ್ತವೆ. ಸಂಗಾಪುರ, ಕೊಪ್ಪಳ, ಚಿಕ್ಕರಾಂಪುರ, ರಾಂಪುರ, ಮಲ್ಲಾಪುರಗಳಲ್ಲಿ ಈ ಪ್ರಮಾಣದ ಚಿತ್ರಗಳಿವೆ. ಸಾಮಾನ್ಯವಾಗಿ ೨೦ ಸೆಂ.ಮೀ. ನಿಂದ ೧ ಮೀಟರ‍್ವರೆಗಿನ ಚಿತ್ರಗಳನ್ನು ಈ ಪ್ರಮಾಣದಲ್ಲಿ ಗುರುತಿಸ ಬಹುದು. ರಾಂಪುರ(೧) ಆನೆಗುಂದಿ (೧)ಯ ವಾನರ ರೀತಿಯ ಮನುಷ್ಯ ಚಿತ್ರಗಳು ಕ್ರಮವಾಗಿ ೦.೮೯ ಮೀ. ಮತ್ತು ೦.೫೮ ಮೀ. ಎತ್ತರ ಇವೆ. ಸಂಗಾಪುರದ ಚಿತ್ರಗಳಲ್ಲಿ ಹೆಚ್ಚಿನವು ೨೦ ಸೆಂ.ಮೀ.ನಿಂದ ೪೫ ಸೆಂ.ಮೀ. ವರೆಗೆ ಇವೆ.

ದೊಡ್ಡ ಪ್ರಮಾಣದ ಚಿತ್ರಗಳು

೧ ಮೀಟರಿನಿಂದ ೫ ಮೀಟರ‍್ವರೆಗಿನ ಚಿತ್ರಗಳನ್ನು ದೊಡ್ಡ ಪ್ರಮಾಣದ ಚಿತ್ರಗಳೆನ್ನಬಹುದು. ಇವು ವಿರಳವಾಗಿವೆ. ಸಾಮಾನ್ಯವಾಗಿ ಬಿಡಿ ಮನುಷ್ಯ ಅಥವಾ ಪ್ರಾಣಿಗಳವು ಈ ಅಳತೆಯಲ್ಲಿರುತ್ತವೆ. ಮಲ್ಲಾಪುರದ ೩ನೇ ಗವಿಯಲ್ಲಿ (ಖಾನಾಸಾಬನ) ಈ ಅಳತೆಯ ಅನೇಕ ಚಿತ್ರಗಳಿವೆ. ಅವುಗಳ ಪ್ರಮಾಣ ಇಂತಿವೆ. ಮನುಷ್ಯ ಚಿತ್ರಗಳು ೧ ಮೀ., ೧.೩೫ ಮೀ., ೧.೬೬ ಮೀ., ೧.೭೬ ಮೀ.,೨.೪೫ ಮೀ., ಮತ್ತು ೧.೮೦  ಮೀ. ಅಳತೆಯಲ್ಲಿದೆ. ಹಂದಿಯ ಚಿತ್ರ ೧.೩೯  ಮೀ. ಎತ್ತರ ಮತ್ತು ೨.೬ ಮೀ. ಉದ್ದ. ಕಾಡುಕೋಣ ೩.೧೦ ಮೀ. ಉದ್ದ ಮತ್ತು ೨.೧೫ ಮೀ. ಎತ್ತರ ಇದೆ. ನವಿಲು ೨.೫ ಮೀ.ಉದ್ದವಾಗಿದೆ. ಹಾಗೇ ಮರದ ಕಾಂಡವೊಂದರ ಚಿತ್ರ ೪ ಮೀ. ಎತ್ತರವಿದೆ. ನಾರಾಯಣಪೇಟೆಯ ಮನುಷ್ಯ ಚಿತ್ರವು ಸುಮಾರು ೪ ಮೀ. ಎತ್ತರವಿದ್ದು ಹಿರೇಬೆನಕಲ್ಲಿನ ೧೭ನೇ ಗವಿಯ ವಿಚಿತ್ರ ಮನುಷ್ಯ ಕೃತಿಯು ೫ ಮೀ. ಉದ್ದವಿದೆ. ಚಿಕ್ಕಬೆನಕಲ್ಲಿನ ೩ನೇ ಕಲ್ಲಾಸರೆಯ ಕೋಣದ ಚಿತ್ರ ಸುಮಾರು ೩ ಮೀ. ಉದ್ದವಿದೆ. ರಾಮದುರ್ಗ ಮತ್ತು ಬೊಮ್ಮಸಾಗರ ತಾಂಡದ ಎತ್ತುಗಳ ಹಾಗೂ ನವಿಲಿನ ಚಿತ್ರಗಳು ಸುಮಾರು ೩ ಮೀಟರ್ ಉದ್ದ ಇವೆ. ಹೊಸಬಂಡಿ ಹರ್ಲಾಪುರದ ಕೋಣದ ಚಿತ್ರ ೨.೮೦ ಮೀ ಉದ್ದ ಮತ್ತು ೧.೮೯ ಮೀ. ಎತ್ತರವಾಗಿದೆ.

ಬೃಹತ್ ಪ್ರಮಾಣದ ಚಿತ್ರಗಳು

೫ ಮೀ.ಗಿಂತ ದೊಡ್ಡ ಪ್ರಮಾಣದ ಚಿತ್ರಗಳು ವಿರಳವಾಗಿವೆ. ಕೊಪ್ಪಳ-ಹಂಪಿ ಪ್ರದೇಶದಕ್ಕೆ ಸಂಬಂಧಿಸಿದಂತೆ ಹಿರೇಬೆನಕಲ್ ಮತ್ತು ಅಂಜನಹಳ್ಲಿಯಲ್ಲಿ ಈ ಪ್ರಮಾಣದ ಚಿತ್ರಗಳಿವೆ. ಹಿರೇಬೆನಕಲ್ಲಿನ ೩ನೇ ಕಲ್ಲಾಸರೆಯ ೧೨.೫೦ ಮೀ. ಅಗಲ ಹಾಗೂ ಸುಮಾರು ೧೦ ಮೀ. ಎತ್ತರದ ವಿಶಾಲ ಅಳತೆಯಲ್ಲಿ ಎರಡು ಹೆಬ್ಬಾವಿನ ಚಿತ್ರಗಳಿವೆ. ಪ್ರತಿಯೊಂದ ಸುಮಾರು ೧೨ ಮೀ. ಉದ್ದವಾಗಿವೆ. ಇಲ್ಲಿಯವರೆಗೆ ತಿಳಿದಂತೆ ಮಧ್ಯಪ್ರದೇಶದ ರೈಸಿನ್ ಜಿಲ್ಲೆಯ ಗೋರಾಗೂಜ್ ತಹಶೀಲ್ ನ ಸನಕುದ್ ಮತ್ತು ಭಾಗವಾನಿ ನದಿಗಳು ಮಧ್ಯದಲ್ಲಿರುವ ಜಾಹೋರಾ ಕಲ್ಲಾಸರೆಗಳಲ್ಲಿಯ ದ್ವಿವರ್ಣದ (ಬಿಳಿ, ಕೆಂಪು) ಕೋಣದ ಚಿತ್ರವನ್ನು (೩.೬೦ ಮೀ. ಉದ್ದ ೧೯೫ ಮೀ. ಎತ್ತರ) ಭಾರತದ ಗವಿ ಪ್ರಾಣಿ ಚಿತ್ರಗಳಲ್ಲಿಯೇ ಅತ್ಯಂತ ದೊಡ್ಡದೆಂದು ಭಾವಿಸಲಾಗಿತ್ತು.

ಆದರೆ ಅದಕ್ಕೂ ದೊಡ್ಡದಾದ ಚಿತ್ರಗಳು ಇವಾಗಿದ್ದು, ಭಾರತದ ಗವಿವರ್ಣ ಚಿತ್ರಗಳಲ್ಲೇ ಅತೀ ದೊಡ್ಡ ಪ್ರಮಾಣದ ಚಿತ್ರಗಳೆಂದು ಹೇಳಬಹುದು. ಈ ಚಿತ್ರಗಳನ್ನು ಒಳಗೊಂಡ ಕಲ್ಲಾಸರೆ ಕೂಡ ಅತೀ ದೊಡ್ಡ ಚಿತ್ರಿತ ಕಲ್ಲಾಸರೆಯಾಗಿದೆ.

ಇಲ್ಲಿಯೇ ೧೭ ನೇ ಗವಿಯಲ್ಲಿ ಒಂದು ವಿಚಿತ್ರ ಆಕೃತಿಯು ೭ ಮೀ. ಉದ್ದವಾಗಿದೆ. ಹಾಗೂ ಅಂಜನಹಳ್ಳಿಯ ಹಡಗಿನ ಚಿತ್ರವು ೬.೬೯ ಮೀ. ಉದ್ದ ಮತ್ತು ೧ ಮೀ. ಎತ್ತರವಿದೆ. ಹಾಗೂ ಪ್ರಾಣಿಗಳ ಚಿತ್ರಗಳನ್ನು ಕೊಪ್ಪಳ-ಹಂಪಿ ಪ್ರದೇಶ ಒಳಗೊಂಡಿದೆ ಎಂದು ಹೇಳಬಹುದು.

ಹಂಪಿ ಪ್ರದೇಶದ ಪ್ರಾಗೈತಿಹಾಸ ಕಾಲದ ಚಿತ್ರಗಳು ಮುಖ್ಯವಾಗಿ ಮನುಷ್ಯ ಪ್ರಾಣಿ ಪಕ್ಷಿಗಳಿವೆ ಸಂಬಂಧಿಸಿವೆ. ಒಂದೆರಡು ಬೇರೆ ವಿಷಯದ ಚಿತ್ರಗಳು ಇವೆ. ಮನುಷ್ಯ ಪ್ರಾಣಿ ಪಕ್ಷಿ ಚಿತ್ರಗಳಲ್ಲಿ ಅವುಗಳ ರಚನೆ ಮತ್ತು ಭಂಗಿಯ ವಿಷಯದಿಂದ ವೈವಿಧ್ಯ ವಿಧಗಳಿವೆ. ಒಟ್ಟಾರೆ ಚಿತ್ರಗಳ ವಿಷಯ, ವಿಧಗಳು ಮತ್ತು ಭಂಗಿಗಳು ಮಂಡಲ ರೇಖಾಚಿತ್ರಗಳ ಚಿತ್ರಣ ವಿವರ ಈ ಮುಂದಿನಂತಿದೆ.

ಮನುಷ್ಯನ ಚಿತ್ರಗಳು

ಮನುಷ್ಯ ಚಿತ್ರಗಳಲ್ಲಿ ಅನೇಕ ವಿಧಗಳಿವೆ. ಅವು ನಗ್ನಚಿತ್ರಗಳು, ಉಬ್ಬು ಮೂರ್ತಿಯ ಚಿತ್ರಗಳು, ಸಾಮಾನ್ಯ ಚಿತ್ರಗಳು, ಕಡ್ಡಿ ರೂಪದ ಚಿತ್ರಗಳು, ಬಾಲವುಳ್ಳ ಚಿತ್ರಗಳು ಈ ಪರಿಸರದಲ್ಲಿ ಕಂಡುಬರುತ್ತಿದ್ದು, ಆ ವಿವರ ಇಂತಿದೆ.

ನಗ್ನ ಮನುಷ್ಯ ಚಿತ್ರಗಳು

ಮೈ ಮೇಲೆ ವಿವಿಧ ರೀತಿಯ ಗೆರೆಗಳುಳ್ಳ ಬೇರೆ ಬೇರೆ ಭಂಗಿಯ ಕೆಲವು ಬೃಹತ್, ಮಧ್ಯಮ ಮತ್ತು ಚಿಕ್ಕ ಪ್ರಮಾಣದ ಏಕ ವ್ಯಕ್ತಿಯ ಚಿತ್ರಗಳು ಮಲ್ಲಾಪುರ, ಹಿರೇಬೆನಕಲ್, ಚಿಕ್ಕಬೆನಕಲ್, ಹಂಪಿ, ನಾರಾಯಣಪೇಟೆ, ಹೊಸಬಂಡಿ ಹರ್ಲಾಪುರಗಳಲ್ಲಿವೆ. ಎರಡು ಕಾಲುಗಳನ್ನು ಅಗಲಿಸಿ ಕೈಗಳನ್ನು ಮೇಲೆಕ್ಕೆತ್ತಿ ನಿಂತಿರುವ ಮನುಷ್ಯನ ಬೃಹತ್ ಪ್ರಮಾಣದ ಚಿತ್ರ ಮಲ್ಲಾಪುರದ ಎರಡನೇ ಗವಿ (ಖಾನಸಾಬ ಗವಿ) ಯಲ್ಲಿದೆ. ಇದು ೧೬೬ ಮೀ. ಎತ್ತರ, ೧ ಮೀ. ಅಗಲ) ಹಸ್ತಗಳು ವೃತ್ತಾಕಾರದಲ್ಲಿವೆ. ಅದಕ್ಕೆ ಸುತ್ತಲೂ ಐದಾರು ಬೆರಳುಗಳಿವೆ. ಅದವನ್ನು ಚಿಕ್ಕ ರೇಖೆಗಳಲ್ಲಿ ತೋರಿಸಲಾಗಿದೆ  ಮತ್ತು ತಲೆಯ ಸುತ್ತಲೂ ಕಿರಣಗಳಂತೆ ರೇಖೆಗಳಿವೆ. ಮತ್ತೊಂದು ಚಿತ್ರದಲ್ಲಿ (೦.೪೩ ಮೀ. ೧ ಮೀ. ಎತ್ತರ) ವ್ಯಕ್ತಿಯ ಕೈಗಳು ಸೊಂಟದ ಮೇಲೆ ಇರಿಸಿದಂತಿವೆ. ಕಾಲುಗಳು ತೀರ ಸಣ್ಣಗೆ ಕಡ್ಡಿಯಂತಿವೆ. ಇದೇ ರೀತಿಯ ಒಂದು ಚಿತ್ರ ಹಂಪಿಯ ಐದನೇ ಕಲ್ಲಾಸರೆ (ಭರಮದೇವರ ಗುಂಡು)ಯಲ್ಲಿ ಇದೆ. ಇದೇ ಭಂಗಿಯಲ್ಲಿ ಶಿಶ್ನಗಳನ್ನು ಹೊಂದಿರುವ ಚಿತ್ರಗಳು ಮಲ್ಲಾಪುರ, ಹಿರೇಬೆನಕಲ್ ಮತ್ತು ರಾಂಪುರಗಳಲ್ಲಿವೆ. ಇವು ತೊಡೆಗಳನ್ನು ಅಗಲಿಸಿ ಸೊಟ್ಟ ಮಾಡಿ ನಿಂತ ಭಂಗಿಯಲ್ಲಿರುತ್ತವೆ. ಸಣ್ಣ ತಲೆ ತೋಳುಗಳು ಅಡ್ಡವಾಗಿದ್ದು ಕೈಗಳು ಮೇಲಕ್ಕೆತ್ತಲ್ಲಟ್ಟಿರುತ್ತವೆ. ಹಸ್ತ ಪಾದಗಳನ್ನು ಬಿಡಿಸಿರುವುದಿಲ್ಲ. ನಗ್ನ ದೇಹ, ಶಿಶ್ನವನ್ನು ಸ್ಪಷ್ಟವಾಗಿ ಬಿಡಿಸಲಾಗಿದ್ದು ಮುಖ, ಮೈ, ಕಾಲು, ತೊಡೆಗಳ ಮೇಲೆಲ್ಲ ರೇಖೆಗಳಿರುತ್ತವೆ. ದೊಡ್ಡ ಪ್ರಮಾಣದಲ್ಲಿ ಈ ಚಿತ್ರಗಳು ಹಿರೇಬೆಣಕಲ್‌ನ ೩ನೇ ಗವಿ (೨ ಮೀ. ಎತ್ತರ) ಮಲಾಪುರದ ೧ನೇ ಕಲ್ಲಾಸರೆ (೨.೭೦ ಮೀ. ಎತ್ತರ)ಗಳಲ್ಲಿವೆ. ಚಿಕ್ಕ ಪ್ರಮಾಣದಲ್ಲಿ ಮಲ್ಲಾಪುರದ ಅದೇ ಕಲ್ಲಾಸರೆಯ ೨ನೇ ಬದಿಯಲ್ಲಿ ಮತ್ತು ಮೂರನೇ ಗವಿಯಲ್ಲಿ ಇವೆ. ಮೊದಲನೆಯದರಲ್ಲಿ ಶಿಶ್ನ ಭಾಗ ಎರಡೂ ಕಾಲುಗಳ ನಡುವೆ ದೇಹದ ಅಗಲದಷ್ಟೇ ಇದ್ದರೆ ಎರಡನೆಯ ಚಿತ್ರ (೦.೫೫ ಮೀ. ಎತ್ತರ) ದಲ್ಲಿ ಅದು ಸ್ವಲ್ಪ ಉದ್ದವಾಗಿದ್ದು ಬಾಲದಂತೆ ತೋರುತ್ತದೆ. ವ್ಯಕ್ತಿಯ ಮುಖ ತ್ರಿಕೋನಾಕಾರದಲ್ಲಿ ದೇಹ ಚೌಕಾಕಾರದಲ್ಲಿರುವುದು ವಿಶೇಷ. ನಗ್ನ ಪುರುಷನ ಮತ್ತೊಂದು ವಿಶೇಷ ಚಿತ್ರ ರಾಂಪುರದ ೨ನೇ ಗವಿಯಲ್ಲಿದೆ. ನೀಳ ಆಯತಾಕಾರದ ದೇಹ, ಮುಂದಾದ ತಲೆ, ಕಾಲುಗಳನ್ನು ಅಗಲಿಸಿ ಕೈಗಳನ್ನು ಮೇಲಕ್ಕೆತ್ತಿದೆ. ಹಸ್ತ, ಪಾದ, ಮೈಮೇಲೆ ರೇಖೆಗಳಲ್ಲಿ ಎರಡೂ ಕಾಲುಗಳ ಮಧ್ಯ ಉದ್ದವಾದ ಶಿಶ್ನವಿದೆ. ಅದಕ್ಕೆ ಶಿಶ್ನ ಮಣಿಯನ್ನು ತೋರಿಸಲಾಗಿದೆ. ಈ ಚಿತ್ರ ಮೈಮೇಲಿನ ರೇಖೆಗಳಿರುವ ಚಿತ್ರಗಳಿಗಿಂತ ನಂತರ ಕಾಲದ ರಚನೆಯಾಗಿವೆ. ಕೆಲವು ಚಿತ್ರಗಳು ಕೈಗಳನ್ನು ಮೇಲಕ್ಕೆತ್ತಿರುವ ಬದಲು ಕೆಳಗೆ ಇಳಿಸಿದ ಭಂಗಿಯಲ್ಲಿವೆ. ಕೈಗಳನ್ನು ಭುಜದ ಸಮಾನಾಂತರದಲ್ಲಿ ಚಾಚಿ ಮೊಣಕೈ ಭಾಗವನ್ನು ಕೆಳಗೆ ಇಳಿಬಿಟ್ಟ ವ್ಯಕ್ತಿಯ ಚಿತ್ರಗಳು ಚಿಕ್ಕಬೆನಕಲ್ ನ ಮೂರನೇ ಗವಿ ಮತ್ತು ಮಲ್ಲಾಪುರದ ೪ನೇ ಕಲ್ಲಾಸರೆ ಹಾಗು ಕುರುಗೋಡಿನ ೫ ಮತ್ತು ೭ನೇ ಕಲ್ಲಾಸರೆಗಳಲ್ಲಿವೆ.

ಇವುಗಳ ಕಾಲಿನ ಭಂಗಿಯಂತೂ ಭಿನ್ನವಾಗಿರುವುದು ವಿಶೇಷ. ಮೊದಲನೆಯದಕ್ಕೆ ಒಂದು ಕಾಲು ವಕ್ರ ನೇರವಾಗಿ ಮತ್ತೊಂದು ಡೊಂಕಾಗಿದ್ದು ಎರಡನೆಯದಕ್ಕೆ ೨ ಕಾಲುಗಳು ಡೊಂಕಾಗಿರದೆ ವಕ್ರ ನೇರವಾಗಿವೆ.

ಎರಡೂ ಕಾಲುಗಳನ್ನು ಅಗಲಿಸಿ ಸ್ವಲ್ಪ ವಕ್ರವಾಗಿ ನಿಂತ ಭಂಗಿಯ ಚಿತ್ರಗಳು ಇವೆ. ಇವಕ್ಕೆ ಒಂದೇ ಕೈ ಇರುತ್ತವೆ. (ಗೋಚರವಾಗುತ್ತದೆ). ಹಿರೇಬೆನಕಲ್ (೨ನೇ ಗವಿ) ಮತ್ತು ನಾರಾಯಣಪೇಟೆ (೧ನೇ ಗವಿ) ಗಳಲ್ಲಿ ಇವೆ. ಸು. ೪ ಮೀ.ಗಿಂತಲೂ ಎತ್ತರವಿರುವ ನಾರಾಯಣಪೇಟೆ ಮನುಷ್ಯ ಚಿತ್ರದಲ್ಲಿ ಸಣ್ಣ ತಲೆ, ತಲೆಯಲ್ಲಿ ಕೂದಲನ್ನು ಸೂಚಿಸುವ ಸಣ್ಣ ಸಮಾನಾಂತರ ಗೆರೆಗಳಿವೆ. ತಲೆ ಬಲಕ್ಕೆ ಸ್ವಲ್ಪವಾಗಿದೆ. ಎಡಗೈ ಇಲ್ಲ. ಮುಂಡದ ಉದ್ದಗಲಗಳು ಪ್ರಮಾಣಬದ್ಧವಾಗಿವೆ ಪುಷ್ಟವಾದ ತೊಡೆಗಳು ಯಥಾಪ್ರಕಾರ ಮುಖ, ದೇಹ ತೊಡೆಯ ಮೇಲೆ ರೇಖಾಚಿತ್ರಗಳಿವೆ.

ಮೈಮೇಲೆ ರೇಖೆಗಳನ್ನು ಹೊಂದಿರುವ ಪಾರ್ಶ್ವ ಭಂಗಿಯಲ್ಲಿ ನಿಂತಿರುವ ವ್ಯಕ್ತಿ ಚಿತ್ರಗಳು ಮಲ್ಲಾಪುರ (೧ನೇ ಗವಿ) ಹೊಸಬಂಡಿ ಹರ್ಲಾಪುರ (೧ನೇ ಗವಿ) ಹಂಪಿ (೧, ೫, ೭) ಮತ್ತು ಹಿರೇಬೆನಕಲ್ ಗಳಲ್ಲಿವೆ. ಇದಕ್ಕೆ ಒಂದೇ ಕಾಲು ಒಂದೇ ಕೈ ಇರುತ್ತದೆ. (ಪಾರ್ಶ್ವ ಭಂಗಿಯಲ್ಲಿ ಒಂದೇ ಕಾಣುತ್ತದೆ). ಕಾಲನ್ನು ಮುಂದಕ್ಕೆ ಡೊಂಕು ಮಾಡಿ ನಿಂತು ಕೈಗಳನ್ನು ಚಿತ್ರ ಛಾಯಾ ರೂಪದಲ್ಲಿದೆ. ಹಾಗಾಗಿ ಇದರ ಮೈಮೇಲೆ ರೇಖೆಗಳಲ್ಲಿ ಹಂಪಿಯ ೫ನೇ ಕಲ್ಲಾಸರೆಯಲ್ಲಿ ಕೈಗಳನ್ನು ಭುಜದ ಸಮಾನಾಂತರದಲ್ಲಿ ಮುಂದಕ್ಕೆ ಚಾಚಿದ ಚಿತ್ರವಿದೆ. ಹಿರೇಬೆನಕಲ್ ನ ೧೬ ಮತ್ತು ೧೭ನೇ ಗವಿಗಳಲ್ಲಿ ಈ ರೀತಿಯ ಚಿಕ್ಕ ಚಿಕ್ಕ ಆಕೃತಿಗಳಿವೆ. (೩೭ ಸೆಂ.ಮೀ. ಎತ್ತರ ೧೭ ಸೆಂ.ಮೀ. ಅಗಲ) ಇವುಗಳ ದೇಹದ ಮೇಲೆ ಸಮಾನಾಂತಾರದಲ್ಲಿ ಅಡ್ಡ ರೇಖೆಗಳಿವೆ.

ಇವಲ್ಲದೆ ಇತರ ಕೆಲವು ನಗ್ನ ಚಿತ್ರಗಳು ಇವೆ. ಹಿರೇಬೆನಕಲ್ಲಿನ ೫ನೇ ಗವಿಯಲ್ಲಿನ ದ್ವಿರೇಖೆಯ ನಗ್ನ ಪುರುಷನ ಚಿತ್ರವಿದೆ. ಕೈಗಳನ್ನು ಕೆಳಗೆ ಇಳಿಬಿಟ್ಟಿದ್ದಾನೆ. ಒಂದು ಕೈಯಲ್ಲಿ ಹಸ್ತ ಮತ್ತು ಬೆರಳುಗಳಿವೆ. ಶಿಶ್ನವನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಇಂದರಗಿಯಲ್ಲಿಯ ಚಿತ್ರ (೦.೬೧ ಮೀ. ಎತ್ತರ ೦.೪೪ ಮೀ.) ವಿಶಿಷ್ಟವಾದ ರಚನೆ. ಇದು ಕಾಲುಗಳನ್ನು ಅಗಲಿಸಿ ಕೈಗಳನ್ನು ಮೇಲಕ್ಕೆತ್ತಿ ನಿಂತ ಭಂಗಿಯ ರೇಖಾಚಿತ್ರವಾಗಿದ್ದು, ತಲೆ ಅರೆತ್ರಿಕೋನ ಆಕಾರದ್ಲಲಿದೆ. ಮುಂಡ ಕೂಡ ಸಂಪೂರ್ಣ ತ್ರಿಕೋನ ರೀತಿಯದು. ಭುಜದಿಂದ ಸಮಾನಾಂತರದಲ್ಲಿ ಕೈಗಳನ್ನು ಬದಿಗೆ ಚಾಚಿ ಮೊಣಕೈಯಿಂದ ಮೇಲಕೆತ್ತಿದೆ. ಕೈತುದಿಯಲ್ಲಿ ಎರಡು ಬೆರಳುಗಳನ್ನು ತೋರಿಸಲಾಗಿದೆ. ತ್ರಿಕೋನ ರೀತಿಯ ದೇಹದ ಕೆಳವ್ಯಾಸದಲ್ಲಿ ಎರಡು ಬದಿಗೆ ಚಿಕ್ಕ ಕಾಲುಗಳಿವೆ. ಅವೆರಡರ ನಡುವೆ ವೃಷಣ ಮತ್ತು ಶಿಶ್ನವನ್ನು ತೋರಿಸಲಾಗಿದೆ.

ಹಂಪಿಯ ಆರು ಸ್ಥಳಗಳಲ್ಲಿ ಶೋಧವಾದ ಗವಿವರ್ಣ ಚಿತ್ರಗಳಲ್ಲಿ ಭರಮದೇವರ ಗುಂಡಿನ ಚಿತ್ರ ಅತ್ಯಂತ ವಿಸ್ಮಯಕಾರಿಯಾದದ್ದು. ಸ್ವಲ್ಪ ಹಿಂಜರಿತ ಅರ್ಧ ಗೋಲಾಕೃತಿಯಲ್ಲಿರುವ ಕಲ್ಲಿನ ಮೇಲೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕುಣಿತದಲ್ಲಿ ತೊಡಗಿರುವ ದೊಡ್ಡ ದೊಡ್ಡ ಮನುಷ್ಯಾಕೃತಿಗಳಿವೆ. ವ್ಯಕ್ತಿಗಳು ಈ ಗೋಲಾಕೃತಿಯ ರಂಗಮಂಟಪದಲ್ಲಿದ್ದಂತೆ ಗೋಚರಿಸುತ್ತದೆ. ಮೊದಲನೆಯ ಎರಡು ಚಿತ್ರಗಳಲ್ಲಿ ಸ್ಪಷ್ಟವಾಗಿ ಉಬ್ಬಿದ ಸ್ತನಗಳು ಕಾಣಿಸುವುದರಿಂದ ಸ್ತ್ರೀ ಆಕೃತಿಗಳೆಂದು ತಿಳಿಯುತ್ತದೆ. ಮೂರನೆಯದು ಸಣ್ಣ ಆಕೃತಿ ಪುರುಷನದು. ಬಹುಶಃ ಹುಡುಗನಿರಬೇಕು. ನೆಟ್ಟಗೆ ಮುಂಚಾಚಿದ ಕೈಗಳು ಮತ್ತು ಬೆರಳುಗಳನ್ನು ಸ್ಪಷ್ಟವಾಗಿ ಬಿಡಿಸಲಾಗಿದೆ. ಇಂಥ ಮನುಷ್ಯರ ಚಿತ್ರಗಳು ಹಿರೇಬೆನಕಲ್ಲು, ಮಲ್ಲಾಪುರ, ತೆಕ್ಕಲಕೋಟೆಗಳಲ್ಲಿವೆ.

ಸ್ತ್ರೀ ಚಿತ್ರಗಳು

ಪುರುಷ ಚಿತ್ರಗಳಂತೆ ಮೈಮೇಲೆ ರೇಖೆಯುಳ್ಳ ಸ್ತ್ರೀ ಚಿತ್ರಗಳು ಪುರುಷ ಚಿತ್ರಗಳ ಜೊತೆಯಲ್ಲೇ ಕಂಡುಬರುತ್ತವೆ. ಹಂಪಿಯ ೫ನೇ ಗವಿಯಲ್ಲಿ ಎರಡು, ಮಲ್ಲಾಪುರದ ೩ನೇ ಗವಿಯಲ್ಲಿ ಎರಡು ಮತ್ತು ಹಿರೇಬೆನಕಲ್ಲಿನ ೫ನೇ ಕಲ್ಲಾಸರೆಯಲ್ಲಿ ಎರಡು ಚಿತ್ರಗಳಿವೆ. ಸಾಮಾನ್ಯವಾಗಿ ಪಾರ್ಶ್ವಾಭಂಗಿಯವು ಕಾಲುಗಳನ್ನು ಸ್ವಲ್ಪ ಮುಂದಕ್ಕೆ ಭಾಗಿಸಿ ವಕ್ರವಾಗಿ ನಿಂತಿರುತ್ತವೆ. ಕೈಗಳು ಭುಜದ ಸಮಾನಾಂತರದಲ್ಲಿ ನೇರವಾಗಿ ಇರುತ್ತವೆ. ಮಲ್ಲಾಪುರದ ಒಂದು ಸ್ತ್ರೀ ಚಿತ್ರ ಮಾತ್ರ ಕೈ ಮೇಲಕ್ಕೆತ್ತಿದೆ. ತಲೆ ಚಿಕ್ಕದಾಗಿದೆ. ಸ್ತನಗಳನ್ನು ಸ್ಪಷ್ಟವಾಗಿ ತೋರಿಸಲಾಗಿರುತ್ತದೆ. ಪುಷ್ಪಗಳು ಸ್ವಲ್ಪ ದೊಡ್ಡದಿರುತ್ತವೆ. ಮಲ್ಲಾಪುರದ ಒಂದು ಸ್ತ್ರೀ ಚಿತ್ರ (೧.೭೬ ಮೀ. ಎತ್ತರವಾಗಿದೆ) ನಾರಾಯಣಪೇಟೆ (ಒಂದನೇ ಕಲ್ಲಸರೆ) ಯಲ್ಲಿದ್ದು. ಎರಡು ಕೈಗಳನ್ನು ಚಾಚಿ ಕಾಲುಗಳನ್ನು ಅಗಲಿಸಿ ಕುಳಿತ ಛಾಯಾರೂಪದ ಈ ಚಿತ್ರದಲ್ಲಿ ತಲೆಯ ಮೇಲಿನ ಉದ್ದ ಕೂದಲು ಎರಡು ಕಡೆ ಸೆಟೆದು ನಿಂತಿವೆ. ಹೊಟ್ಟೆ ಸ್ವಲ್ಪ ಉಬ್ಬಿದೆ. ಸೊಂಟದ ಕೆಳಭಾಗ ತ್ರಿಕೋನ ಕೃತಿಯಂತೆ ಕೆಳಚಾಚಿದೆ. ತಲೆಯು ಸೆಟೆದಿರುವುದು ಗರ್ಭಿಣಿಯಂತೆ ಉಬ್ಬು ಹೊಟ್ಟೆ, ಪ್ರಾಯಶಃ ಯೋನಿಯನ್ನು ಸೂಚಿಸುವ ಸೊಂಟದ ಕೆಳಗಿನ ತ್ರಿಕೋನಕಾರ ಈ ಚಿತ್ರವು ಸ್ತ್ರೀಯದೆಂಬುದನ್ನು ಸೂಚಿಸುತ್ತವೆ.

ಇತರ ಮನುಷ್ಯ ಚಿತ್ರಗಳು

ಸಮದೇಹದ ಮನುಷ್ಯ ಚಿತ್ರ ಚಿಕ್ಕರಾಂಪುರದ ಐದನೆಯ ಕಲ್ಲಾಸರೆಯಲ್ಲಿದೆ. ಈ ಕಲ್ಲಾಸರೆ ಸುಮಾರು ೧೦ ಮೀ. ಎತ್ತರದಲ್ಲಿ ಚಾವಣಿಯಂತೆ ಅಡ್ಡ ಚಾಚಿರುವ ಬಂಡೆಯ ಒಳ ಮೈಮೇಲೆ ಇದೆ. ಈ ಮನುಷ್ಯ ಚಿತ್ರ ಸಂಪೂರ್ಣ ಛಾಯಾರೂಪದ್ದು ಸು.೨ ಮೀ. ಎತ್ತರವಿರಬಹುದು. ದುಂಡುತಲೆ, ಪ್ರಮಾಣಬದ್ಧ ದೇಹ, ನಿಂತ ಭಂಗಿಯಲ್ಲಿಯೂ ಒಂದು ವೈಶಿಷ್ಟ್ಯವಿದೆ. ತೊಡೆಗಳು ನೇರವಾಗಿವೆ. ಕೈಗಳು ಮೇಲಕ್ಕೆತ್ತಿ ನೆಟ್ಟಗೆ ನಿಂತ ಭಂಗಿಯಲ್ಲಿವೆ.

ಉಬ್ಬಿದ ಮೂತಿಯ ಮನುಷ್ಯ ಚಿತ್ರಗಳು

ಒಂದು ಕೈಯನ್ನು ಭುಜದ ಸಮಾನಾಂತರದಲ್ಲಿ ತೋರು ರೀತಿಯಲ್ಲಿ ಹಿಡಿದು ನಿಂತಿರುವ ಕೆಲವು ವಿಶೇಷ ಮನುಷ್ಯ ಚಿತ್ರಗಳು ಆನೆಗುಂದಿ (೧ನೇ ಕಲ್ಲಾಸರೆ), ರಾಂಪುರ (೧ನೇ ಕಲ್ಲಾಸರೆ) ಮತ್ತು ಗೂಗಿಬಂಡಿಗಳಲ್ಲಿವೆ. ಇವುಗಳ ಮೂತಿ ಮಂಗನ ಮುಖದಂತೆ ಉಬ್ಬಿರುತ್ತದೆ. ಆನೆಗುಂದಿಯ ಚಿತ್ರ ರೇಖಾರೂಪದ್ದು, ಕೆಳಗೆ ಹಿಡಿದಿರುವ ಕೈ ಸಂಪೂರ್ಣ ಛಾಯಾರೂಪದಲ್ಲಿದೆ. ವಿಶಾಲವಾದ ಎದೆ, ಸಣ್ಣ ಕಟ್ಟಿ, ಹಸ್ತ, ಪಾದಗಳನ್ನು ಮುಖ ವಿಶಿಷ್ಟವಾಗಿದೆ. ಕತ್ತಿನ ಮೇಲೆ ಮುಖ ಭಾಗದಲ್ಲಿ ಚೂಪಾದ ಮೂತಿಯಿದೆ. ತಲೆ ವೃತ್ತಾಕಾರವಾಗಿರದೇ ಗರಗಸದ ಹಲ್ಲಿನಂತಿದೆ. ಕಣ್ಣು, ಕಿವಿ, ಮೂಗಿನ ಬದಿಯಲ್ಲಿ ಮನುಷ್ಯ ಮತ್ತು ಪ್ರಾಣಿಯ ಚಿತ್ರಗಳಿವೆ.

೦.೮೯ ಮೀ. ಎತ್ತರವಿರುವ ರಾಂಪುರದ ಮನುಷ್ಯ ಚಿತ್ರವು ಇದೇ ರೀತಿಯಲ್ಲಿದ್ದರೂ ಸ್ವಲ್ಪ ಭಿನ್ನವಾದ ಶೈಲಿಯಲ್ಲಿದೆ. ಇದು ಸಂಪೂರ್ಣ ಛಾಯಾರೂಪದ ಚಿತ್ರ. ಬಹಳ ಸುಂದರವಾಗಿ ಚಿತ್ರಿಸಲಾಗಿದೆ. ನಿಂತ ಭಂಗಿಯಲ್ಲಿದೆ. ಬಲಗೈ ಭುಜದ ಸಮಾನಾಂತರದಲ್ಲಿ ತೋರು ರೀತಿಯಲ್ಲಿವೆ. ಇನ್ನೊಂದು ಕೈಯಲ್ಲಿ ಮೊಣಕೈವರೆಗೆ ಕೆಳಕ್ಕಿಳಿದು ಅಲ್ಲಿಂದ ಮೇಲಕ್ಕೆ ಎತ್ತಲಾಗಿದೆ. ವಿಶಾಲವಾದ ಭೂಜ ಸಣ್ಣ ಕಟ್ಟಿ ಮತ್ತು ಅದಕ್ಕೆ ಪ್ರಮಾಣಬದ್ಧವಾದ ಪುಷ್ಠ ಮತ್ತು ತೊಡೆ ಕಾಲುಗಳಿವೆ. ಪಾದಗಳನ್ನು ತೋರಿಸಿಲ್ಲ. ಹಸ್ತದ ಐದು ಬೆರಳುಗಳನ್ನು ಅತ್ಯಂತ ಸ್ಪಷ್ಟವಾಗಿ ತೋರಿಸಲಾಗಿದೆ. ಮುಖ ಬಲಗಡೆ ವಾಲಿದ್ದು (ತೋರು ಕೈ ನಂತೆ) ಕಿರಿ ತಲೆ, ಕಣ್ಣಿನ ಮೇಲೆ ಉಬ್ಬು ಉಬ್ಬಿನ ಮೂತಿ ಸ್ಪಷ್ಟವಾಗಿದೆ. ಕಣ್ಣು ಕಿವಿಗಳನ್ನು ತೋರಿಸಲು ಕತ್ತು, ಕತ್ತಿನ ಕೆಳಗೆ ಗರಗಸದ ಹಲ್ಲಿನ ರೀತಿಯ ಆಭರಣ (ಸಿರ)ದ ಅಲಂಕರಣ ಇರುವುದು ಗಮನಾರ್ಹ. ಮುಖ, ಕತ್ತು, ಕೊರಳಸರ ಇಡೀ ದೇಹ ಮತ್ತು ಎಡಗೈಯಲ್ಲಿ ಮೊಣಕೈಯಿಂದ ಮುಂದಿನ ಕೈ ಹೀಗೆ ಐದು ಭಾಗಗಳು ಪ್ರತ್ಯೇಕವಿದೆ. ಈ ವ್ಯಕ್ತಿಯ ಬಲಭಾಗದಲ್ಲಿ ಇದೇ ರೀತಿಯ ಇನ್ನೊಂದು ಚಿಕ್ಕ ಪ್ರಮಾಣದ (೦.೫೨ ಮೀ.) ಚಿತ್ರ ಮತ್ತು ಎಡಭಾಗದಲ್ಲಿ ನವಿಲಿನ ಚಿತ್ರಗಳಿವೆ.

ಗೂಗಿ ಬಂಡಿಯಲ್ಲಿ ಇದೇ ರೀತಿಯ ಚಿತ್ರವಿದೆ. ಆದರೆ ಈಚೆಗೆ ಅದನ್ನು ಬೇರೆ ಆಕಾರದಲ್ಲಿ ಪುನಃ ಬರೆಯಲಾಗಿದೆ. ಮಲ್ಲಾಪುರದ ೪ನೇ ಕಲ್ಲಾಸರೆಯಲ್ಲಿ ಎರಡೂ ಕೈಗಳನ್ನು ಅಗಲಿಸಿ ನಿಂತ ವ್ಯಕ್ತಿಯ ಅಪೂರ್ಣ ಚಿತ್ರವಿದೆ. ಆದರೆ ಈ ಮೂತಿಯು ಚೂಪಾಗಿದೆ. ಕೋಡಿನ ಮುಖವಾಡ ಹಾಗೂ ಬಾಲ ಧರಿಸಿದ ಮನುಷ್ಯ ಚಿತ್ರಗಳು. ತಲೆಯಲ್ಲಿ ಕೋಡು ಮತ್ತು ಬಾಲವುಳ್ಳ ಕೆಲವು ಮನುಷ್ಯನ ಚಿತ್ರಗಳು. ಹಿರೇಬೆನಕಲ್ಲಿನ ೫ನೇ ಗವಿ ಮತ್ತು ಮಲ್ಲಾಪುರದ ೬ನೇ ಗವಿಯಲ್ಲಿ ನಾರಾಯಣಪೇಟೆಯ ೩ನೇ ಗವಿಯಲ್ಲಿ ಇವೆ. ಇವು ಸಂಪೂರ್ಣ ಛಾಯಾರೂಪದ ಚಿತ್ರಗಳು. ಪ್ರಾಣಿಗಳ ಸಮೂಹದ ಮಧ್ಯೆ ನಿಂತ ಭಂಗಿಯಲ್ಲಿವೆ. ಹಿರೇಬೆನಕಲ್ಲಿನ ಗವಿಯಲ್ಲಿ ಎರಡು ಚಿತ್ರಗಳಿವೆ. ಅದರಲ್ಲಿ ದೊಡ್ಡ ವ್ಯಕ್ತಿ ಕೈಗಳನ್ನು ಎರಡೂ ಬದಿಗೆ ಅಗಲಿಸಿ ನಿಂತಿದ್ದಾನೆ. ಕೈಯಲ್ಲಿ ಹಸ್ತ, ಬೆರಳುಗಳನ್ನು ತೋರಿಸಲಾಗಿದೆ. ಮುಖಕ್ಕೆ ಕೋಡುಳ್ಳ ಮುಖವಾಡವನ್ನು ಧರಿಸಿದಂತಿವೆ. ಕೋಡುಗಳು ಎರಡೂ ಕಡೆಗೆ ಎತ್ತರದಲ್ಲಿ ಬಾಗಿವೆ. ಸೊಂಟದಲ್ಲಿ ಬಾಲವಿದೆ. ಪಕ್ಕದಲ್ಲಿ ಇನ್ನೊಂದು ಸಣ್ಣ ಚಿತ್ರವಿದ್ದು ಅದರ ಕೋಡುಗಳು ದೊಡ್ಡದಾಗಿವೆ.

ಒಂದು ಕೈಯಲ್ಲಿ ದುಂಡಾದ ವಸ್ತುವನ್ನು ಹಿಡಿದಿದೆ. ಮಲ್ಲಾಪುರದ ಮನುಷ್ಯ ಅನೇಕ ಪ್ರಾಣಿಗಳ ಗುಂಪಿನ ಮಧ್ಯೆ ಇದ್ದು ಎರಡು ಕಾಲುಗಳನ್ನು ಕೈಗಳನ್ನು ಅಗಲಿಸಿ ನಿಂತಿದ್ದಾನೆ. ಮುಖವಾಡ ಧರಿಸಿ ನಿಂತಿದ್ದು ತಲೆಯಲ್ಲಿ ಒಂದರ ಮೇಲೊಂದರಂತೆ ಎರಡು ಕೋಡುಗಳಿವೆ. ಎರಡು ಕಾಲುಗಳ ಮಧ್ಯೆ ಬಾಲ ಇಳಿ ಬಿದ್ದಿದೆ. ಇಲ್ಲಿಯೇ ೯ನೇ ಗವಿಯಲ್ಲಿ ಮುಖವಾಡ ಧರಿಸಿ ನಿಂತ ಮನುಷ್ಯನ ಚಿತ್ರವಿದೆ. ಆದರೆ ಬಾಲ ವಿಲ್ಲ. ನಾರಾಯಣಪೇಟೆಯ ಚಿತ್ರವು ಮನುಷ್ಯ ಚಿತ್ರವೆನ್ನುವುದರ ಬಗ್ಗೆ ಗೊಂದಲ ಉಂಟುಮಾಡುತ್ತದೆ. ಕಾಲು ಕೈಗಳನ್ನು ಅಗಲಿಸಿ ನಿಂತ ಮುಖಕ್ಕೆ ಕೋಡುಳ್ಳ ಮುಖ ವಾಡವನ್ನು, ಮೈಮೇಲೆ ಉಡುಪನ್ನು ಧರಿಸಿದಂತಿದೆ. ತಲೆಯ ಸುತ್ತಲೂ ಕಿರಣದಂತೆ ರೇಖೆ ಅಥವಾ ಕೂದಲಿರುವ ಮನುಷ್ಯ ಚಿತ್ರಗಳು, ತಲೆಯ ಸುತ್ತಲೂ ಗೆರೆಗಳಿರುವ ಎರಡು ರೀತಿಯ ಮನುಷ್ಯ ಚಿತ್ರಗಳು ಕಂಡುಬರುತ್ತವೆ. ಅವುಗಳಲ್ಲಿ ಎಮ್ಮೆಗುಡ್ಡ (೧ನೇ ಕಲ್ಲಾಸರೆ) ಮತ್ತು ಆನೆಗುಂದಿ (೧ನೇ ಕಲ್ಲಾಸರೆ) ಯ ಚಿತ್ರಗಳು ರೀತಿಯವು. ಇಲ್ಲಿ ವ್ಯಕ್ತಿಯ ಕೈಗಳನ್ನು ದೇಹದಿಂದ ಸ್ವಲ್ಪ ಅಂತರದಲ್ಲಿ ಅಗಲಿಸಿ ಕೆಳಗೆ ಹಿಡಿದಿದ್ದಾನೆ. ವಿಶಾಲ ಎದೆ, ಸಣ್ಣ ಕಟಿ, ಅಗಲವಾದ ಪೃಷ್ಠಗಳಿವೆ. ಹಸ್ತ ಪಾದಗಳಿರುವುದಿಲ್ಲ. ವೃತ್ತಾಕಾರದ ತಲೆಯ ಸುತ್ತಲೂ ಸಮಾನಾಂತರದಲ್ಲಿ ರೇಖೆಗಳಿರುತ್ತವೆ. ಎಮ್ಮೆಗುಡ್ಡದಲ್ಲಿ ವ್ಯಕ್ತಿಯು ಬಂದು ಜಿಂಕೆಯ ಮೇಲೆ ನಿಂತಿದ್ದಾನೆ. ವ್ಯಕ್ತಿಚಿತ್ರ ಛಾಯಾರೂಪದ್ದಾದರೆ, ಜಿಂಕೆಯದು ರೇಖಾಚಿತ್ರ. ಈ ಮನುಷ್ಯರ ತಲೆಯ ಸುತ್ತಲಿನ ರೇಖೆಗಳು ಸಮಾನಾಂತರದಲ್ಲಿರುವುದು. ದೇಹವು ಸಮ ಪ್ರಮಾಣದಲ್ಲಿ ಚಿತ್ರಿಸಲ್ಪಟ್ಟಿರುವುದು ಮತ್ತು ಚಿಗರೆಯ ಮೇಲೆ ನಿಂತ ಸಂದರ್ಭವನ್ನು ಗಮನಿಸಿ ಇದು ವಿಶೇಷ ವ್ಯಕ್ತಿಯ ಚಿತ್ರವೆನ್ನಬಹುದು. ಹಾಗಾಗಿ ತಲೆ ಸುತ್ತಲಿನ ರೇಖೆಗಳು ಕೂದಲುಗಳಲ್ಲವೆಂದು ಹೇಳಬಹುದು. ಎರಡನೇ ರೀತಿಯ ಮನುಷ್ಯ ಚಿತ್ರಗಳಲ್ಲಿ ತಲೆಯ ಸುತ್ತಲಿನ ರೇಖೆಗಳನ್ನು ಖಂಡಿತವಾಗಿ ಕೂದಲುಗಳೆನ್ನಬಹುದು. ಆನೆಗುಂದಿಯ ೬ನೇ ನೆಲೆಯ ೩ನೇ ನೆಲೆಯ ಗುಂಡಿನಲ್ಲಿ ಒಂದು ಮನುಷ್ಯ ಚಿತ್ರವಿದೆ. ಅದರ ತಲೆ ಮತ್ತು ಕತ್ತು ಪೂರ್ಣ ಛಾಯಾರೂಪದ್ದು. ತಲೆಯ ಸುತ್ತಲು ದೊಡ್ಡದಾಗಿ ಹರಡಿದ ರೇಖೆಗಳಿವೆ. ಇವು ಕೂದಲುಗಳಂತೆ ಸ್ಪಷ್ಟವಾಗಿ ತೋರುತ್ತವೆ. ಅದೇ ರೀತಿ ಅಗೋಲಿಯ ೨ನೇ ಕಲ್ಲಾಸರೆಯಲ್ಲಿ ಒಬ್ಬ ಬೇಟೆಗಾರ, ಇನ್ನೊಬ್ಬ ವ್ಯಕ್ತಿಯ ತಲೆಯಲ್ಲಿ ರೇಖೆಗಳಿವೆ. ಅವು ಕೂಡ ಕೂದಲುಗಳೆನ್ನ ಬಹುದು.

ಕೆಲವು ಕಡೆ ಮನುಷ್ಯನನ್ನು ವಿಶಿಷ್ಟವಾದ ರೀತಿಯಲ್ಲಿ ಚಿತ್ರಿಸಲಾಗಿದೆ. ಇವುಗಳ ಮುಖ, ದೇಹ, ಕೈ, ಕಾಲು ವಿಚಿತ್ರವಾದ ಸಂಕೇತ ರೂಪದಲ್ಲಿರುತ್ತವೆ. ಈ ಚಿತ್ರಗಳು ಇಂತಿವೆ.

ನಾರಾಯಣಪೇಟೆಯ ೩ನೇ ಕಲ್ಲಾಸರೆಯಲ್ಲಿ ಎರಡೂ ಚಿತ್ರಗಳಿವೆ. ಒಂದು ವ್ಯಕ್ತಿಯ ಹಿಂಬದಿಯನ್ನು ಒಂದು ಕೈಯನ್ನೆತ್ತಿ ಯಾರನ್ನೋ ಕರೆಯುತ್ತಿರುವಂತಿದೆ. ಹಸ್ತದ ಬೆರಳು ಮತ್ತೊಂದು ಕೈ ಕಾಲು ಇಲ್ಲಿ ಕೇವಲ ಸಂಕೇತಿಕ. ಇನ್ನೊಂದು ಚಿತ್ರ (೦೩೦ ಮೀ. ೦೩೭ಮೀ.) ರಾಕೆಟ್ ಮಾದರಿಯ ದೇಹ, ಕೈ ಬೆರಳು, ಕಾಲು ಸಾಂಕೇತಿಕವಾಗಿವೆ. ಅದೇ ರೀತಿ ಗಡ್ಡ (೧ನೇ ಕಲ್ಲಾಸರೆ) ಯಲ್ಲಿ ಮನುಷ್ಯನ ಒಂದು ರೇಖಾಚಿತ್ರವಿದೆ. ಕೈಗಳನ್ನೆತ್ತಿ ನಿಂತಿರುವ ಮನುಷ್ಯ ರಚನೆ ತುಂಬಾ ಸರಳವಾಗಿದೆ. ಸಂಗಾಪುರ ೫ನೇ ಕಲ್ಲಸರೆಯಲ್ಲಿ ಒಂದು ವ್ಯಕ್ತಿ ಚಿತ್ರ ಈಗಿನ ಅಂಗಿ ಮತ್ತು ಧೋತಿಯನ್ನು ಧರಿಸಿದ ರೀತಿಯಲ್ಲಿ ಚಿತ್ರಿಸಿರುವುದು ವಿಶೇಷ. ಇದರ ಹಾಗೆ ನಗ್ನವ್ಯಕ್ತಿಯ ಕೂಡ ಭಿನ್ನವಾಗಿದೆ. ತಲೆ ಮತ್ತು ದೇಹ ತ್ರಿಕೋನಾಕಾರದಲ್ಲಿದೆ. ಕೈ ಮತ್ತು ಕಾಲು ಕೇವಲ ಸಣ್ಣ ಕಟಿಯಂತಹ ರೇಖೆಗಳು  ಮಲ್ಲಾಪುರ ಒಂದನೇ ಕಲ್ಲಸರೆಯಲ್ಲಿ ಮತ್ತೊಂದು ರೀತಿಯ ಚಿತ್ರವಿದೆ. ಇದು ರೇಖೆ ಕೃತಿಯಾದರೂ ಅದರ ಕೈ, ಕೋಡು, ಕಾಲುಗಳನ್ನು ದಪ್ಪವಾಗಿ ತೋರಿಸಲಾಗಿದೆ. ರಾಂಪುರದಲ್ಲಿ ತಲೆಯಲ್ಲಿ ಕೋಡಿದ್ದು, ಮೈಮೇಲೆ ಏನೇನೋ ಹೊದ್ದುಕೊಂಡಿರುವ ಎರಡು ಕೈಗಳನ್ನು ಮೇಲೆತ್ತಿ ಬಾಲವನ್ನು ಹೊಂದಿರುವ ವ್ಯಕ್ತಿಚಿತ್ರಗಳಿವೆ. ಈ ಚಿತ್ರಗಳು ರಚನೆಯಲ್ಲಿ ಸರಳವಾಗಿದ್ದರೂ ಮನುಷ್ಯ ಕಲ್ಪನೆಯನ್ನು ಸೂಕ್ತವಾಗಿ ಅಭಿವ್ಯಕ್ತಿಗೊಳಿಸುತ್ತವೆನ್ನಬಹುದು.

ಸಾಮಾನ್ಯ ಮನುಷ್ಯ ಚಿತ್ರಗಳು

ಮೇಲೆ ಗಮನಿಸಿದಂತೆ ಕೆಲವು ವಿಶಿಷ್ಟ ರೀತಿಯ ಮನುಷ್ಯ ಚಿತ್ರಗಳು ಒಂದು ರೀತಿಯದಾದರೆ, ಬಹು ಸಂಖ್ಯೆಯಲ್ಲಿ ಕಾಣಬಹುದಾದ ಮನುಷ್ಯನ ಚಿತ್ರಗಳು ಇನ್ನೊಂದು ರೀತಿಯವು, ಈಟಿ, ಬಿಲ್ಲು, ಬಾಣ, ಖಡ್ಗ, ಕೋಲು, ಕೊಡಲಿ ಮತ್ತಿತರ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡಿರುವ ಯಾವುದೋ ಕ್ರಿಯೆಯಲ್ಲಿ ತೊಡಗಿರುವ, ಸಾಲಾಗಿ ಕುಣಿಯುತ್ತಿರುವ, ಅಶ್ವ ಸವಾರಿ ಮಾಡುತ್ತಿರುವ ಸಣ್ಣ ಅಳತೆಯ ಮನುಷ್ಯ ಚಿತ್ರಗಳು ಸಾಮಾನ್ಯವಾಗಿವೆ. ಇಂಥದೇ ಚಿತ್ರಗಳ ರಚನೆ ಸರಳವಾಗಿರುತ್ತದೆ. ಇದರಲ್ಲಿ ನಾಲ್ಕು ರೀತಿಯನ್ನು ಗುರುತಿಸಬಹುದು. ಕೋನಗಳನ್ನು ಪರಸ್ಪರ ಎದುರಾಗಿ ಒಂದರ ಮೇಲೆ ಒಂದು ಇರಸಿದಂತಹ ಮುಂಡದ (ದೇಹದ) ಮನುಷ್ಯ ಚಿತ್ರಗಳು ಒಂದು ರೀತಿಯ ಛಾಯಾರೂಪವಾಗಿರಬಹುದು. (ಗಡ್ಡಿ, ಆನೆಗುಂದಿ, ವುಲ್ಲಾಪುರ, ಹಿರೇಬೆನಕಲ್, ವೆಂಕಟಾಪುರ, ಮತ್ತು ಚಿಕ್ಕರಾಂಪುರ) ಇಲ್ಲವೇ ಬಾಹ್ಯ ರೇಖಾತಲವಾಗಿರಬಹುದು. (ಆಗೋಲಿ, ಹಂಪಿ, ಮಲ್ಲಾಪುರ) ಎರಡನೇ ರೀತಿಯ ಚಿತ್ರಗಳು ವಿಶಾಲವಾದ ದ್ವಿರೇಖೆಯ ಕರತಿಗಳು. ಉದ್ದವಾದ ಮುಂಡದಲ್ಲಿ ಸಣ್ನ ಕಟ್ಟಿ, ದೊಡ್ಡ ಪೃಷ್ಠ ಮತ್ತು ದಪ್ಪ ಕಾಲುಗಳಿರುತ್ತವೆ. ಈ ರೀತಿಯವು ಹೆಚ್ಚು ನೈಜ ಆಕಾರದಲ್ಲಿರುತ್ತವೆ. ಎನ್ನಬಹುದು. ವಿಶೇಷವೆಂದರೆ ಬೃಹತ್ ಶಿಲಾಯುಗದ ಕಾಲದಲ್ಲಿ ನಿಲ್ಲಿಸುತ್ತಿದ್ದ ಬೃಹತ್ ಮಾನವ ಬೊಂಬೆಗಳನ್ನು ಹೋಲುವುವು. ಇವು ಛಾಯಾರೂಪದಲ್ಲಿ ಇರುತ್ತವೆ. ಆನೆಗುಂದಿ ೨, ಮಲ್ಲಾಪುರ, ಹಿರೇಬೆನಕಲ್, ೧, ೭, ೧೧, ೧೨ ಆನೆಗುಂದಿಯಲ್ಲಿಯ ಈ ತರಹದ ಚಿತ್ರಗಳಲ್ಲಿ ತಲೆಯ ಕೂದಲನ್ನು ಹಿಂದೆ ಜುಟ್ಟು ಕಟ್ಟಿಕೊಂಡಂತಿವೆ. ಮೂರನೆಯ ರೀತಿಯ ಚಿತ್ರಗಳೆಂದರೆ ಮುಂಡ ಲಂಬವಾಗಿ ಆಯತಾಕಾರದಲ್ಲಿರುವುದು. ಆದರೆ ಮೇಲೆ ಎರಡು ಮೂಲೆಗೆ ಕೈಗಳನ್ನು ಕೆಳ ಮೂಲೆಗಳಿಂದ ಕಾಲುಗಳನ್ನು ಬಿಡಿಸಲಾಗಿದೆ. ಕೈಕಾಲುಗಳ ಕೇವಲ ರೇಖೆ ಮತ್ತು ತಲೆ ದುಂಡಾಗಿರುತ್ತದೆ. ಇವು ಛಾಯಾ ೬, ಆನೆಗುಂದಿ ೮, ಮಲ್ಲಾಪುರ ೭, ಇಲ್ಲಿಯೇ ರೇಖಾ (ಆನೆಗುಂದಿ) ಅಗೋಲಿ ೮, ರೂಪದಲ್ಲಿರುತ್ತದೆ. ನಲ್ಕನೆಯ ರೀತಿಯ ಚಿತ್ರ ನಾಲ್ಕನೇ ಕಲ್ಲಾಸರೆಯಲ್ಲಿದೆ. ಪಶುಗಳನ್ನು ಕಾಯುತ್ತಿರುವ ಮನುಷ್ಯನ ಚಿತ್ರವಿದು.

೪.೨.೪. ಕಲಾತ್ಮಕ ನೆಲೆಗಳ ಚಿತ್ರರಚನಾ ಸಾಮಗ್ರಿಗಳು ಮತ್ತು ವಿಧಾನ ಆದಿಮಾನವ ಚಿತ್ರರಚನೆಗಾಗಿ ಹಲವು ಬಣ್ಣ ಹಾಗು ಕೆಲವಸ್ತುಗಳನ್ನು ಬಳಸಿಕೊಂಡು ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಂಡಿರುವುದನ್ನು ಗುರುತಿಸಬಹುದು. ಇಲ್ಲಿನ ಗವಿ ಮತ್ತು ಕಲ್ಲಾಸರೆಗಳ ಚಿತ್ರಗಳನ್ನು ಬಣ್ನಗಳಿಂದ ರಚಿಸಲಾಗಿದೆ. ವಿಶ್ವದಾದ್ಯಂತ ಪ್ರಧಾನವಾಗಿ ಕೆಮ್ಮಣ್ಣು ವರ್ಣ (Red ochre) ವನ್ನು ಬಳಸಲಾಗಿದೆ. ಫ್ರಾನ್ಸ್ ಮತ್ತು ಸ್ಪೇನಿನ ಮೂರ್ ಸಾಲಾಸ್, ಅಲ್ ಮೀರಾ ನ್ಸೌಕ್ಸ್, ಲಾಸ್ಕಾಕ್ಸ್, ಇಟಲಿಯ ಲಾಪಿಲೇಟಾ, ಎಲೆಕ್ಯಾಸ್ಟಿಲೋ ಲಾ ರೋಶೆ ಬೋರ್ತಿಯಾಕ್ಸ್, ಬ್ಲಾಂಚಾರ್ಡ್ ಮುಂತಾದ ಗವಿಗಳ ಚಿತ್ರಗಳನ್ನು ಕೆಂಪು, ಕಪ್ಪು, ಹಳದಿ, ಕಂದು ಮುಂತಾದ ವರ್ಣಗಳಿಂದ ಚಿತ್ರಿಸಲಾಗಿದೆ. ಭಾರತದ ಗವಿ, ಕಲ್ಲಾಸರೆಗಳಲ್ಲಿ ಬೇರೆ ಬೇರೆ ವರ್ಣಗಳ ಬಳಕೆಗಳನ್ನು ಕಾಣಬಹುದು. ಗಿಳಿಕೆಂಪು (ಹೊಸಂಗಾಬಾದ್, ಭೂಪಾಲ್, ರೈಸಿನ್), ಕೆಂಪು (ಸಾಗರ್, ಫನ್ನಾ, ಮಿರ್ಜಾಪುರ, ಆಗ್ರಾ), ಕಡುಗೆಂಪು (ಸಿಂಗನ್ ಪುರ), ಭಿಂಬೇಟ್ಕಾ, IIA.೧. IIA,೨, ಕಾನ್ವಮದಕಲ್ ಬುಗ್ಗ (ಅ.ಪ್ರ.ಪಿಕ್ಲಿಹಾಳ, ಮಸ್ಕಿ), ಕಂದು (ಭೂಪಾಲ-೧೭), ಕರ್ನೂಲ್ ನ ಬಿಲ್ಲಾಸುರಂಗಾಂ, ಆಗ್ರಾ), ಹಳದಿ (ಫನ್ನಾ-ಬೃಹಸ್ಪತೀಕುಂಡ, ಭೂಪಾಲ-೧೭), ಕಿತ್ತಳೆ (ಸಿಂಗನ್ಪುರ, ಭೂಪಾಲ-೨ ರೈಸಿನ್, ಫತಾನಿ ಕಿ ಪಹಾರಿ, ಭಿಂಬೇಟ್ಕಾ IIA, ೫, ಮಿರ್ಜಾಪುರ), ತಿಳಿಗೆಂಪಿನ ಕಿತ್ತಳೆ (ಕಾನ್ವಮದಗಲ್), ಬುಗ್ಗ (ಆ.ಪ್ರ.) ನೇರಳೆ (ರಾಯಘರ್, ಪಾಚಮಾರಿ, ಮಿರ್ಜಾಪುರ), ಹಸಿರು (ಭೂಪಾಲ್ ೨ ಸಾಗರ್, ಫನ್ನಾ, ಭಿಬೇಂಟ್ಕಾ), ಬಣ್ಣಗಳು ಬಳಕೆಯಾಗಿವೆ. ಬಹುಮಟ್ಟಿಗೆ ಎಲ್ಲೆಡೆ ಬಿಳಿ ಬಣ್ಣದ ಚಿತ್ರಗಳನ್ನು ಕಾಣಬಹುದು. ವಿವಿಧ ಕಾಲಘಟ್ಟಗಳಲ್ಲಿ ಬೇರೆ ಬೇರೆ ವರ್ಣಗಳು ಬಳಕೆಯಾಗಿರುವುದು ಕಂಡು ಬರುತ್ತದೆ. ಸೂಕ್ಷ್ಮ ಶಿಲಾಯುಗದಲ್ಲಿ ಕೆಂಪು ಅಥವಾ ಕಂದು, ಕಪ್ಪು ಬಣ್ಣಗಳು, ನವ ಶಿಲಾಯುಗ ಶಿಲಾ ತಾಮ್ರಯುಗದಲ್ಲಿ ಕೆಂಪು ಅಥವಾ ಕಂದು, ಕೆಂಪು, ಬಿಳುಪು, ತಿಳಿಹಳದಿ, ಹಳದಿಮಿಶ್ರತ ಬಿಳುಪು ಬಣ್ಣದ ಚಿತ್ರಗಳು, ಇತಿಹಾಸ ಆರಂಭಕಾಲದಲ್ಲಿ ಕೆಂಪು ಬಿಳುಪು ಅಪರೂಪಕ್ಕೆ ಹಸಿರು ಅಥವಾ ಹಳದಿ ವರ್ಣಗಳು, ಮಧ್ಯಕಾಲೀನ ಯುಗದಲ್ಲಿ ಬುಡಕಟ್ಟು ಚಿತ್ರಗಳು ಕೆಂಪು, ಬಿಳುಪು, ಕಿತ್ತಳೆ ನಂತರದಲ್ಲಿ ಕೆಂಪು, ಕಂದು, ಬಳಪದ ಬಣ್ಣಗಳಲ್ಲಿ ರಚಿತವಾಗಿವೆ.

ಕರ್ನಾಟಕದಲ್ಲಿ ಬಾದಾಮಿ ಹತ್ತಿರದ ಹಿರೇಗುಡ್ಡ ಮತ್ತು ಅರೆಗುಡ್ಡದ ಪ್ರಾಯಶಃ ಸೂಕ್ಷ್ಮ ಶಿಲಾಯುಗದ ಚಿತ್ರಗಳಿಮದ ಹಿಡಿದು ನವಶಿಲಾಯುಗ-ತಾಮ್ರ ಶಿಲಾಯುಗದ ಮಸ್ಕಿ, ಪಿಕ್ಲಿಹಾಳದ ಚಿತ್ರಗಳು ಕಬ್ಬಿಣಯುಗ ಬೃಹತ್ ಶಿಲಾಯುಗದ ಹಿರೇಬೆನಕಲ್ ನ ಚಿತ್ರಗಳು ಹಾಗೂ ಇತಿಹಾಸ ಆರಂಭಕಾಲ ಮತ್ತು ಇತಿಹಾಸ ಕಾಲದಲ್ಲಿ ಪ್ರಧಾನವಾಗಿ ಕೆಮ್ಮಣ್ಣಿನ ಬಣ್ಣವನ್ನು ಬಳಸಲಾಗಿದೆ. ಬಣ್ಣದ ಛಾಯೆಯ ಕಾಲಮಾನದ ವೈಪರೀತ್ಯದಿಂದಾಗಿ ಹಾಗೂ ಇತರೆ ಕಾರಣಗಳಿಂದಾಗಿ ಒಂದೇ ಸಮನಾಗಿರುವುದಿಲ್ಲ. ಅಪರೂಪವಾಗಿ ಕಾಡಿಗೆ ಕಪ್ಪು ಹಾಗೂ ಮಿಶ್ರಿತಹಳದಿ ಮುಸುಕು ಬಿಳಿಯ ದ್ವಿವರ್ಣಗಳನ್ನು ಬಳಸಲಾಗಿದೆ. ಬಾದಾಮಿಯ ೩ನೇ ಗವಿಯ ಚಿತ್ರಗಳು ದ್ವಿವರ್ಣದಲ್ಲಿವೆ. ಮಧ್ಯಯುಗೀನ ಕಾಲದ ಚಿತ್ರಗಳು ಸುಣ್ಣದಂತಹ ಬಿಳಿಯ ವರ್ಣದಲ್ಲಿವೆ. ಬ್ರಹ್ಮಗಿರಿ ಮತ್ತು ಚಿತ್ರದುರ್ಗದ ಹಲವಾರು ಚಿತ್ರಗಳೂ ಬಿಳಿಯ ಬಣ್ಣದಲ್ಲಿವೆ.

ಹಂಪಿ ಪ್ರದೇಶದಲ್ಲಿ ಮುಖ್ಯವಾಗಿ ಕೆಮ್ಮಣ್ಣು ಬಣ್ಣದ ಚಿತ್ರಗಳು ಸಾಮಾನ್ಯವಾಗಿವೆ. ಜೊತೆಗೆ ದಟ್ಟಕೆಂಪು, ನೇರಳೆ ಕೆಂಪು ಮತ್ತು ಕಿತ್ತಳೆಗೆಂಪಿನ ಚಿತ್ರಗಳೂ ಇವೆ. ವಿರಳವಾಗಿ ಬಿಳಿಬಣ್ಣಗಳನ್ನು ಅಲ್ಲಲ್ಲಿ ಬಳಸಲಾಗಿದೆ.

ಕೆಂಪು ಬಣ್ಣ

ಕೆಂಪುವರ್ಣ ಸಾಮಾನ್ಯವಾಗಿದ್ದು, ಅದರಲ್ಲಿ ನೇರಳೆಗೆಂಪಿನ ಬಣ್ಣವನ್ನು ಹಿರೇಬೆ ಕಲ್ಲಿನ ೧೭ನೇ ಗವಿ ಚಿಕ್ಕಬೆನಕಲ್ಲಿನ ಮೂರನೇ ಕಲ್ಲಾಸರೆ, ಮಲ್ಲಾಪುರದ ೬ನೇ ಕಲ್ಲಾಸರೆಗಳ (ಮಂಡಲ ಚಿತ್ರ ಮಾತ್ರ) ಚಿತ್ರ ರಚನೆಯಲ್ಲಿ ಬಳಸಲಾಗಿದೆ. ಕುಂಕುಮ ದಂತಹ ದಟ್ಟಕೆಂಪು ವರ್ಣವನ್ನು ಚಿಕ್ಕರಾಂಪುರದ ೫ನೇ ಕಲ್ಲಾಸರೆ ನಾಗೇನಹಳ್ಳಿ ಮತ್ತು  ತಿರುಮಲಾಪುರ ಕಲ್ಲಾಸರೆಗಳಲ್ಲಿ ಕಿತ್ತಳೆ ಕೆಂಪು ವರ್ಣಗಳನ್ನು ಸಂಗಾಪುರದ ೮ನೇ ಕಲ್ಲಾಸಕಿ ಬಿಳೇಬಾವಿಯ ೨ನೇ ಕಲ್ಲಾಸರೆ ಮತ್ತು  ಆನೆಗುಂದಿಯ ೬ನೇ ಗವಿ (ಆನೆ ಚಿತ್ರ)ಗಳಲ್ಲಿ ಚಿತ್ರಕ್ಕಾಗಿ ಬಳಸಲಾಗಿದೆ.

ಬಿಳಿ ಬಣ್ಣ

ಸುಣ್ಣದಂತಹ ಬಿಳಿ ಬಣ್ಣವನ್ನು ಚಿತ್ರಗಳಿಗೆ ಬಳಸಲಾಗಿದೆ. ಆದರೆ ಇದು ಕೆಂಪು ಬಣ್ಣದಷ್ಟು ವ್ಯಾಪಕವಾಗಿ ಬಳಕೆಯಗಿಲ್ಲ. ಇತಿಹಾಸ ಕಾಲದಲ್ಲಿ ಇದರ ಬಳಕೆಯಾಗಿದೆ. ಹಂಪಸದುರ್ಗ (೧) ಅಗೋಲಿ (೧) ತೆಂಬಾ (೧,೨) ಕೊಪ್ಪಳ (೮) ಬಂಡಿಹರ್ಲಾಪುರ (೧,ಸಮಕಾಲೀನ)ಗಳಲ್ಲಿ ಬಿಳಿ ಬಣ್ಣದ ಚಿತ್ರಗಳಿವೆ. ತಿರುಮಲಾಪುರ (೧) ಎಮಿಗುಡ್ಡ (೨), ಅನೇಗುಂದಿ (೪,೫) ಮತ್ತು ಚಿಕ್ಕರಾಂಪುರ (೩) ಗಳಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಚಿತ್ರಗಳು ಇವೆ.

ದ್ವಿ ವರ್ಣ

ತೀರ ವಿರಳವಾಗಿ ದ್ವಿ ವರ್ಣದ ಚಿತ್ರಗಳು ಈ ಪ್ರದೇಶದಲ್ಲಿ ಕಂಡುಬರುತ್ತವೆ. ಕೆಂಪು ಬಿಳಿ ಮಿಶ್ರಿತ ಮನುಷ್ಯ ಚಿತ್ರಗಳು ಆನೆಗುಂದಿಯ ೪ನೇ ಮತ್ತು ೮ನೇ ಕಲ್ಲಾಸರೆ ಮತ್ತು ಕೊಪ್ಪಳದ ೯ನೇ ಕಲ್ಲಾಸರೆ (ಸ್ತ್ರೀಚಿತ್ರ?)ಗಳಲ್ಲಿ ಇವೆ. ಇದೇ ರೀತಿ ಹಳದಿ ಮಿಶ್ರಿತ ತಿಳಿ ಬಣ್ಣದ ಗಂಡು ಹೆಣ್ಣಿನ ಚಿತ್ರ ಕೊಪ್ಪಳದ ೫ನೇ ಕಲ್ಲಾಸರೆಯಲ್ಲಿದೆ.

ಬೂದಿ ಬಣ್ಣ

ಮಲ್ಲಾಪುರದ ೧೩ನೇ ಕಲ್ಲಾಸರೆಯಲ್ಲಿ ಬೂದಿಬಣ್ಣದಲ್ಲಿ ಅದ್ದಿ ಮೂಡಿಸಿದ ಹಸ್ತ ಮುದ್ರೆಗಳಿವೆ.

ಬಣ್ಣದ ತಯಾರಿಕೆ. ಪ್ರಾಚೀನ ಜನರು ಬಣ್ಣಗಳನ್ನು ನೈಸರ್ಗಿಕವಾಗಿ ದೊರೆಯುವ ವಸ್ತ್ರಗಳಿಂದ, ಖನಿಜ ಶಿಲೆಗಳಿಂದ ತಯಾರಿಸಕೊಳ್ಳುತ್ತಿದ್ದರು. ನೇರಳೆ ಬಣ್ಣಕ್ಕಾಗಿ ಮ್ಯಾಂಗನೀಸ್ ಆಕ್ಸೈಡನ್ನು, ಕಪ್ಪು ಬಣ್ಣಕ್ಕೆ ಪ್ರಾಣಿಗಳ ಎಲುಬಿನ, ಮರದ ಕಾಂಡದ ಇದ್ದಿಲುಗಳನ್ನು ಹಾಗೂ ಕಲ್ಲಿದ್ದಲುಗಳನ್ನು ಕಂದು, ಕೆಂಪು, ಹಳದಿ, ಕಿತ್ತಳೆ ಬಣ್ಣಗಳಿಗೆ ಕಬ್ಬಿಣದ ಆಕ್ಸೈಡನ್ನು ಬಳಸುತ್ತಿದ್ದರೆಂದು ಹೇಳಲಾಗಿದೆ.

ಈ ಖನಿಜಗಳಿಗೆ ಪ್ರಾಣಿಗಳ ರಕ್ತ, ಕೊಬ್ಬು ಮತ್ತು  ಮೂತ್ರಗಳನ್ನು ಕೆಲವು ಸಸ್ಯರಸಗಳನ್ನು ಕಲಸಿ ಬಣ್ಣಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಕೊಪ್ಪಳ ಹಂಪಿ ಪ್ರದೇಶದ ಗವಿ ಚಿತ್ರಗಳನ್ನು (ಕೆಂಪು ವರ್ಣದ) ಸ್ಥಳೀಯ ಗ್ರಾಮಾಂತರ ಜನತೆ ಸುರಮದ ಚಿತ್ರಗಳೆಂದು ಹೇಳುತ್ತಾರೆ. ಸುರಮ ಎಂಬುದು ಒಂದು ಖನಿಜ. ಅದಕ್ಕೆ ವೈಜ್ಞಾನಿಕವಾಗಿ ಅಂಟಿಮನಿ ಎಂದು ಕರೆಯುತ್ತಾರೆ. ಸ್ಟಿಬೆನೈಟ್ ಎನ್ನುವುದು ಅಂಟಿಮನಿಯ ಒಂದು ಅದಿರು. ಇದು ಉಕ್ಕಿನ ಅಥವಾ ಬೂದು ಬಣ್ನದಲ್ಲಿರುವ ಮೆದುವಿನ ಖನಿಜ. ಇದು ತ್ರಿಜ್ಯಾಕಾರದ ಎಸಳುಗಳಂತೆ ದೊರೆಯುತ್ತದೆ. ಇದನ್ನು ಈಗಲೂ ವರ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಈ ಸುರಮವನ್ನು ಕೆಂಪು ವರ್ಣಕ್ಕಾಗಿ ಬಳಸಿರಬಹುದು. ಅಂಟಿಮನಿ ಸಲ್ಫೈಡ್ ಅದಿರಿನ ಕಣಗಳು ಬಳ್ಳಾರಿ ಜಿಲ್ಲೆಯ ರಾಮನದುರ್ಗ ಪ್ರದೇಶದಲ್ಲಿ ಇರುವುದಾಗಿ ವರದಿಯಾಗಿದೆ. ಅಲ್ಲದೇ ಬೆಟ್ಟಗಳನ್ನು ಅಲ್ಲಲ್ಲಿ ಕೆಮ್ಮಣ್ಣಿನ ಹಳದಿ ಬಣ್ಣದ ಮಟ್ಟಿಗಳಿವೆ. ಈಗಲೂ ಹಳ್ಳಿಯ ಜನ ಹಬ್ಬ, ಉತ್ಸವಗಳ ಸಂದರ್ಭದಲ್ಲಿ ಮನೆ ಗುಡಿಸಲುಗಳನ್ನು ಸಹ ಅಲಂಕರಿಸಲು ಇಂಥ ಮಟ್ಟಿಯ ಮಣ್ಣನ್ನು ಬಳಸುತ್ತಾರೆ ಪ್ರಾಚೀನ ಕಾಲದಲ್ಲೂ ಈ ಮಣ್ಣುಗಳನ್ನು ಬಣ್ಣಕ್ಕಾಗಿ ಬಳಸಿದ್ದಾರೆಂದು ತರ್ಕಿಸಬಹುದು. ಕೆಲವು ಹಳ್ಳಿಯ ಜನ ಈ ಚಿತ್ರಗಳನ್ನು ಹೆಣ್ಣಿನ ಹೆರಿಗೆ ಸಮಯದಲ್ಲಿ ರಕ್ತವನ್ನು ಕೆಮ್ಮಣ್ಣಿಗೆ ಬೆರೆಸಿ ತಯಾರಿಸಿ ಕೆಂಬಣ್ಣದಿಂದ ಬರೆಯಲಾಗಿದೆ ಎಂದು ಹೇಳುತ್ತಾರೆ. ಹಂಪಿ ಮಲ್ಲಾಪುರಗಳಲ್ಲಿ ಮೈಮೇಲೆ ಗೆರೆಗಳಿರುವ ವ್ಯಕ್ತಿಗಳ ನಗ್ನ ಚಿತ್ರಗಳಿವೆ. ಇವರಲ್ಲಿ ಗರ್ಭಿಣಿ ಸ್ತ್ರೀಯರು ಇರುವುದುಂಟು. ಇವು ಒಂದು ರೀತಿಯ ಮಾಂತ್ರಿಕ ಕಟ್ಟಳೆಗೆ ಸಂಬಂಧಿಸಿದ ಚಿತ್ರಗಳೆಂದು ತೋರುತ್ತದೆ.ದ ಇಂಥ ಚಿತ್ರಗಳನ್ನು ಮೇಲೆ ಹೇಳಿದ ರಕ್ತ ಬಳಸಿ ಬಿಡಿಸಿರಬಹುದಾದ ಸಾಧ್ಯತೆ ಇದೆ. ಬಿಳಿ ಬಣ್ಣಕ್ಕಾಗಿ ಸುಣ್ಣವನ್ನು (ಸುಣ್ಣದ ಕಲ್ಲು) ಬಳಸಲಾಗಿದೆ. ಸುಣ್ಣದಲ್ಲಿ ಬೂದಿಯನ್ನು ಬೆರೆಸಿ ಕೆಲವು ಚಿತ್ರಗಳನ್ನು ಬಿಡಿಸಲಾಗಿದೆ. ಟಾಲ್ಕ್ ಎಂದು ಕೆರಯುವ ಒಂದು ರೀತಿಯ ಮೆದು ಬಿಳಿ ಸಿಲೆಯು ಈ ಪ್ರದೇಶದಲ್ಲಿ ಅಲ್ಲಲ್ಲಿ ದೊರೆಯುತ್ತದೆ. ಅದನ್ನು ಬಿಳಿ ಬಣ್ಣಕ್ಕಾಗಿ ಬಳಸಿರುವ ಸಾಧ್ಯತೆಯು ಇದೆ.

ಕುಂಚಗಳು

ಬಣ್ಣದ ದ್ರವದಲ್ಲಿ ಅದ್ದಿ ಬರೆಯಲು ಪ್ರಾಚೀನ ಜನರ ಒಂದು ರೀತಿಯ ಕುಂಚಗಳನ್ನು ಮಾಡಿಕೊಳ್ಳುತ್ತಿದ್ದರು. ಮರದ ರೆಂಬೆಯ ತುದಿಯನ್ನು ಸರಿಯಾಗಿ ಜಜ್ಜಿ ತೊಗಟೆಯು ಹೋಗುವಂತೆ ಮಾಡಿ ಕೂದಲಿನಂತಹ ನಾರುಗಳನ್ನು ಬಿಡಿಸಿ, ಅದನ್ನು ಕಂಚದಂತೆ ವರ್ಣದ ರೇಖೆಗಳನ್ನು ಎಳೆಯಲು ಉಪಯೋಗಿಸಿದ್ದಿರಬೇಕು. ಚಿತ್ರಗಳ ಪ್ರಮಾಣಕ್ಕನುಗುಣವಾಗಿ ಬೇರೆ ಬೇರೆ ಅಳತೆಯ ಕುಂಚಗಳನ್ನು ಮಾಡಿಕೊಳ್ಳುತ್ತಿದ್ದರು. ಹಿರೇಬೆನಕಲ್ಲಿನ ೧೩ನೇ ಗವಿಯ ಚಿತ್ರಗಳ ರೇಖೆಗಳು ಸುಮಾರು ಮೂರು ಸೆಂ.ಮೀ. ವರೆಗಿನ ದಪ್ಪವಿದ್ದು, ಆ ಅಳತೆಯ ಕುಂಚಗಳಿಂದ ಹಿಡಿದು ಸುಮರು ೧/೨ ಸೆಂ.ಮೀ. ವರೆಗಿನ ದಪ್ಪದ ಕುಂಚಗಳನ್ನು ಮಾಡಿಕೊಂಡಿರಬೇಕು. ಅರ್ಧ ಸೆ.ಮೀ. ಒಳಗಿನ ಚಿತ್ರಗಳಿಗಾಗಿ ಕಡ್ಡಿಗಳ ಇಲ್ಲವೇ ಪಕ್ಷಿಗಳ ಪುಕ್ಕದ ಕಡ್ಡಿಯನ್ನು ತುದಿಯಲ್ಲಿ ಸ್ವಲ್ಪ ಜಜ್ಜಿ ಕುಂಚಗಳನ್ನು ಮಾಡಿಕೊಂಡಿರಬೇಕಿನ್ನಿಸುತ್ತದೆ. ಹಿರೇಬೆನಕಲ್ಲಿನ ೧, ೧೧ ಮತ್ತು ೧೨ನೇ ಗವಿಗಳ, ಚಿಕ್ಕರಾಂಪುರದ ೧ನೇ ಗವಿಯ ಚಿತ್ರಗಳ ಗುಂಪಿನಲ್ಲಿರುವ ಸಣ್ಣ ಸಣ್ಣ ನಾಯಿ, ಮನುಷ್ಯ, ನವಿಲುಗಳ ಚಿತ್ರಗಳನ್ನು ಇಂಥ ಕುಂಚಗಳಿಂದ ಮಾತ್ರ ರಚಿಸಲು ಸಾಧ್ಯ. ಹಾಗೆ ಕೆಲವು ವ್ಯಕ್ತಿಚಿತ್ರಗಳ ತಲೆಯ ಸುತ್ತಲೂ ಹರಡಿದ ಕೂದಲುಗಳನ್ನು  ತೋರಿಸಲಾಗಿದೆ. ಇವುಗಳನ್ನು ಬಿಡಿಸಲು ಕಡ್ಡಿಗಳನ್ನು ಬಳಸಿಕೊಂಡಿರಬಹುದು.

ಹಿರೇಬೆನಕಲ್ಲಿನ ೧, ೬, ೧೧, ೧೨ ಚಿಕ್ಕರಾಂಪುರದ ೧ನೇ ಗವಿಯ ಚಿತ್ರ ಫಲಕದಲ್ಲಿ ದೊಡ್ಡ, ಮಧ್ಯಮ, ಚಿಕ್ಕ ಮತ್ತು ಸೂಕ್ಷ್ಮ ಪ್ರಮಾಣದ ಛಾಯಾ ಹಾಗೂ ಬಾಹ್ಯ ರೇಖಾ ಚಿತ್ರಗಳಿವೆ. ಇಂಥ ಚಿತ್ರಫಲಕದ ರಚನೆಗಾಗಿ ಹಲವು ಅಳತೆಯ ಕುಂಚಗಳು ಅವಶ್ಯವಾಗಿರುತ್ತವೆ. ಹಾಗಾಗಿ ಏಕಕಾಲದಲ್ಲಿ ಅವುಗಳನ್ನು ಸಿದ್ಧಮಾಡಿಕೊಂಡು ಚಿತ್ರ ರಚನೆಯಲ್ಲಿ ತೊಡಗುತ್ತಿದ್ದರೆಂದು ತರ್ಕಿಸಬಹುದು. ಸಿದ್ಧವಾದ ವರ್ಣವನ್ನು ಮಡಕೆಯ ಪಾತ್ರೆಯಲ್ಲಿ ಹಾಕಿಕೊಂಡು ಅದರಲ್ಲಿ ಕುಂಚಗಳನ್ನು ಅದ್ದಿಕೊಂಡು ಚಿತ್ರ ಬಿಡಿಸುತ್ತಿದ್ದರು. ಹಿರೇಬೆನಕಲ್ಲಿನ ೧ನೇ ಕಲ್ಲಾಸರೆಯು ಒಂದು ಬೃಹತ್ ಬಂಡೆಯಾಗಿದ್ದು, ಅದರ ಪೂರ್ವಬದಿಯ ಮುಖದಲ್ಲಿ ಚಿತ್ರಗಳಿವೆ. ದೊಡ್ಡ ಬಂಡೆಯ ಮುಂದೆ ಮತ್ತೊಂದು ಚಿಕ್ಕ ಗುಂಡು ಇದೆ. ಅದರ ಮೇಲ್ಭಾಗ ಸಮನಾಗಿದ್ದು, ಆಳವಲ್ಲದ ಸುಮಾರು ೨೦ ಸೆಂ.ಮೀ. ವ್ಯಾಸದ ಒಂದು ಕುಳಿ ಇದೆ. ಇಡೀ ಬಂಡೆಯಲ್ಲಿ ಕುಳಿ ಮಾತ್ರ ಕೆಂಪು ವರ್ಣದಲ್ಲಿದೆ. (ಛಾಯಾಚಿತ್ರ ಸಂಖ್ಯೆ ೭೩) ಅದರ ಬಣ್ಣ ಮತ್ತು ಬೃಹತ್ ಬಂಡೆಯ ಚಿತ್ರಗಳ ಬಣ್ಣ ಒಂದೇ ಆಗಿದೆ. ಇದರಿಂದ ಸ್ಪಷ್ಟವಾಗುವ ಸಂಗತಿಯೇನೆಂದರೆ, ಕೆಲವು ಸಲ ಚಿತ್ರಗಳನ್ನು ಬಿಡಿಸುವಾಗ ನಿಲ್ಲುವ ಗುಂಡಿನ ಮೇಲೆ (ಕುಳಿಯಲ್ಲಿ) ಬಣ್ಣ ಸುರುವಿಕೊಂಡು ಕೂಡ ಚಿತ್ರಗಳನ್ನು ಬಿಡಿಸುತ್ತಿದ್ದರೆಂದು ಸ್ಪಷ್ಟವಾಗುತ್ತದೆ.

ಹಸ್ತಗಳು

ತನ್ನ ಹಸ್ತವನ್ನು ಕೂಡ ಚಿತ್ರ ರಚನಾ ಸಾಮಗ್ರಿಯಾಗಿ ಪ್ರಾಚೀನ ಮಾನವ ಉಪಯೋಗಿಸಿದ್ದಾನೆ. ಹಸ್ತದ ಚಿತ್ರಗಳನ್ನು ಬಿಡಿಸಬೇಕಾದ ಸಂದರ್ಭದಲ್ಲಿ ತನ್ನ ಹಸ್ತಗಳನ್ನು ಬಣ್ಣದ ದ್ರಾವಣದಲ್ಲಿ ಅದ್ದಿ ನೇರವಾಗಿ ಗೋಡೆಗೆ ಮುದ್ರೆ ಒತ್ತಿ ಚಿತ್ರಗಳನ್ನು ಮೂಡಿಸುತ್ತಿದ್ದನು. ಇಂಥ ಹಸ್ತಮುದ್ರಿಕೆಗಳು ತಾಮ್ರಯುಗದ ನವಶಿಲಾಸಂಸ್ಕೃತಿ ಮತ್ತು ಕಬ್ಬಿಣ ಯುಗದ ಬೃಹತ್ ಶಿಲಾಸಂಸ್ಕೃತಿಯ ನೆಲೆಯಾದ ಅಗೋಲಿಯಲ್ಲಿ ಕೆಂಪು ವರ್ಣದಲ್ಲಿದೆ. ಈಗಲೂ ಈ ಪ್ರದೇಶದಲ್ಲಿ ಮದುವೆಯ ಸಂದರ್ಭದಲ್ಲಿ ಮನೆಯ ಸುತ್ತ ಹಸ್ತಮುದ್ರಿಕೆಗಳನ್ನು (ಚಟ್ಟು ಬಡಿಯುವುದು) ಇದೇ ಪ್ರಕಾರದಲ್ಲಿ ಹಾಕುತ್ತಾರೆ.

ಮರದ ಎಲೆ ಅಥವಾ ಚರ್ಮ

ಹಿರೇಬೆನಕಲ್ಲಿನ ೧೧ ನೇ ಗವಿಯಲ್ಲಿ ಮತ್ತು ಹೊಸಬಂಡಿ ಹರ್ಲಾಪುರದ ೧ನೇ ಕಲ್ಲಾಸರೆಯಲ್ಲಿ ಜಿಂಕೆಗಳು ಸಾಲು ಚಿತ್ರಗಳಿವೆ. ಸಾಲಿನ ಪ್ರತಿಯೊಂದು ಜಿಂಕೆಯು ಒಂದೇ ಪ್ರಮಾಣ ಮತ್ತು ರೀತಿಯಲ್ಲಿವೆ. ಇಂಥ ಚಿತ್ರಗಳನ್ನು ಮರದ ದಪ್ಪ ಎಲೆಯಲ್ಲಿಯೋ, ಚರ್ಮದಲ್ಲಿಯೋ ಚಿತ್ರವನ್ನು ಕತ್ತರಿಸಿಕೊಂಡು ಅದನ್ನು ಬಂಡೆಯ ಮೇಲಿಟ್ಟು, ಕತ್ತಿರಿಸಿದ ಭಾಗದಲ್ಲಿ ಬಣ್ಣವನ್ನು ತುಂಬುತ್ತಿರಬೇಕೆಂದು ಅ.ಸುಂದರ ಅವರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರಗಳು ಅಷ್ಟು ಸರಿಯಾಗಿ ಒಂದೇ ಪ್ರಕಾರದಲ್ಲಿ ಇರುವುದರಿಂದ ಅವರ ಅಭಿಪ್ರಾಯ ಸಮಂಜಸವೆನ್ನಬಹುದು.

ಬೆರಳುಗಳು

ಈಚಿನ ಕಾಲದ ಕೆಲವು ಬಿಳಿ ಬಣ್ಣದ ಚಿತ್ರಗಳಲ್ಲಿ ಬೆರಳಿನ ರೇಖೆಗಳೂ ಮೂಡಿರುವುದರಿಂದ ಬೆರಳುಗಳಿಂದಲೂ ರೇಖೆಗಳನ್ನು ಎಳೆಯಲಾಗುತ್ತಿತ್ತೆಂದು ತಿಳಿಯಬಹುದು. ವಿಶೇಷವಾಗಿ ಕಡ್ಡಿಯಾಕಾರದ ಸಣ್ಣ ಮನುಷ್ಯಾಕೃತಿಗಳನ್ನು ಬೆರಳುಗಳಿಂದ ಮೂಡಿಸಲಾಗಿದೆ. ಇಂಥ ಚಿತ್ರಗಳು ತೆಂಬಾದ ೧, ೨, ಹಂಪಸದುರ್ಗ ೧, ಎಮ್ಮಿಗುಡ್ಡ ೨ ಮತ್ತು ತಿರುಮಲಾಪುರದ ಕಲ್ಲಾಸರೆಗಳಲ್ಲಿವೆ.

ಹೀರೇಬೆನಕಲ್ (೨ನೇ ಕಲ್ಲಾಸರೆ), ಗಡ್ಡಿ (೧) ನಾರಾಯಣಪೇಟೆ (೧) ಮತ್ತು ಚಿಕ್ಕರಾಂಪುರ (೫)ದ ಕಲ್ಲಾಸರೆಗಳ ಚಿತ್ರಿತ ಸ್ಥಳಗಳು ನೆಲದಿಂದ ಸುಮಾರು ೮ರಿಂದ ೧೦ ಮೀಟರ್ ಎತ್ತರದಲ್ಲಿವೆ. ಇಂಥ ಎಡೆಗಳಲ್ಲಿ ಚಿತ್ರಗಳನ್ನು ಬಿಡಿಸುವಾಗ ಪ್ರಾಯಶಃ ಅಟ್ಟಣಿಗೆಗಳನ್ನು ಕಟ್ಟಿಕೊಂಡಿರಬೇಕೆಂದು ತರ್ಕಿಸಬಹುದು.

ಬಂಡೆ ಚಿತ್ರಗಳ ಉಪಕರಣಗಳು

ಬಂಡೆ ಚಿತ್ರಗಳಲ್ಲಿ ಕೊರೆದ ಕುಟ್ಟಿದ ಚಿಕ್ಕ ಕುಳಿಯ ಹಾಗೂ ತಿರುಗುಳಿ (Cupmarks) ಗಳು ಕಂಡುಬಂದಿವೆ. ಇಂಥ ಚಿತ್ರಗಳನ್ನು ಕೊರೆಯಲು ಲೋಹದ ಉಳಿ, ಇಲ್ಲವೇ ಗಟ್ಟಿ ಶಿಲೆ, ದಪ್ಪ ಚೂಪಾದ ಆಯುಧಗಳನ್ನು ಬಳಸಿದ್ದಾರೆಂದು ಹೇಳಬಹುದು. ಸಣ್ಣ ಸಣ್ಣ ಕುಳಿಗಳನ್ನು ಒಂದರ ಪಕ್ಕ ಒಂದರಂತೆ ಹಾಕಿ ಕೆಲವು ಚಿತ್ರಗಳನ್ನು ಮೂಡಿಸಲಾಗಿದೆ. ಅಂಥವನ್ನು ಕೂಡ ಲೋಹದ ಆಯುಧದಿಂದ ಮೂಡಿಸಿರಬಹುದು. ತಿರುಗುಳಿಗಳನ್ನು ಚೂಪಾದ ಉಳಿಯಂತಹ ಉಪಕರಣದಿಂದ ಸತತವಾಗಿ ಒಂದೇ ಕಡೆ ತಿರುಗಿಸಿ ಮೂಡಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಇಲ್ಲಿನ ಚಿತ್ರಗಳು ಅಂದಿನ ಜನರ ಜಾಣ್ಮೆಯ ಪ್ರತೀಕವಾಗಿವೆ. ಆನೆಗುಂದಿಯ ಗವಿ ವರ್ಣಚಿತ್ರ ಸೂಕ್ಷ್ಮ ಶಿಲಾಯುಗಕ್ಕೆ ಸೇರಿದ್ದು ಕೆಂಪು-ಕಂದು ಬಣ್ಣಗಳಲ್ಲಿ ಜಿಂಕೆ, ಹೋರಿ, ಮನುಷ್ಯರ ಚಿತ್ರಗಳನ್ನು ಬಿಡಿಸಲಾಗಿದೆ. ಹಿರೇಬೆನಕಲ್ಲಿನ ಬೆಟ್ಟದಲ್ಲಿ ಚಿತ್ರಿತ ೧೨ ಗವಿಬಂಡೆಗಳನ್ನು ಗುರುತಿಸಲಾಗಿದೆ. ನೃತ್ಯದಲ್ಲಿ ತೊಡಗಿರುವ ಚಿತ್ರ ೧೨ನೆಯ ಗವಿಬಂಡೆಯಲ್ಲಿದೆ. ದುರ್ಗದ ಗಡಿ ಎಂದು ಸ್ಥಳೀಯವಾಗಿ ಕರೆಯುವ ಇದರ ಸುತ್ತಮುತ್ತಲಿರುವ ಬಂಡೆಗಳ ಮೇಲೆ ಅನೇಕ ಬಗೆಯ ಚಿತ್ರಗಳನ್ನು ಬಿಡಿಸಲಾಗಿದೆ. ಈ ಗವಿಬೆಟ್ಟದ ಸುಮಾರು ಮಧ್ಯೆ ಅಂತರದಲ್ಲಿ ಒಂದು ಬಯಲು ಪ್ರದೇಶವಿದೆ. ಇದು ಬೃಹತ್ ಶಿಲಾ ಸಂಸ್ಕೃತಿಯ ವಾಸ್ತವ್ಯದ ನೆಲೆ. ಬೂದಿ ಮಿಶ್ರಿತ ಮಣ್ಣಿನಲ್ಲಿ ಕೆಂಪು, ಕೆಂಪು-ಕಪ್ಪು ದ್ವಿವರ್ಣದ ಮತ್ತು ಕಪ್ಪು ಬಣ್ಣದ ಮೃತ್ ಪಾತ್ರೆಗಳು ಹೇರಳವಾಗಿವೆ. ಅಲ್ಲದೆ ಸುಟ್ಟಮಣ್ಣಿನ ಮಣಿ, ಬಳೆಚೂರುಗಳು ಕಂಡುಬರುತ್ತವೆ.

ಇಲ್ಲಿಯ ಒಂದು ಬಂಡೆಯ ಮೇಲೆ ೨೭ ಜನರು ಕೈ ಹಿಡಿದುಕೊಂಡು ಸಾಲಾಗಿ ನಿಂತಿದ್ದಾರೆ. ಅದರಲ್ಲಿ ಒಬ್ಬ ಹುಡುಗ, ಇನ್ನೊಬ್ಬ ಕೈಯಲ್ಲಿ ಏನನ್ನೋ ಹಿಡಿದು ಕೊಂಡಂತಿದೆ. ಈ ಬಂಡೆಯ ಕೆಳಭಾಗದಲ್ಲಿ ಒಬ್ಬ ನಿಂತ ಮನುಷ್ಯನ ಚಿತ್ರ ಮತ್ತು ಅರ್ಧಚಂದ್ರಾಕೃತಿಯ ಗೆರೆಯ ಮೇಲೆ ೧೨ ಜನರು, ಇನ್ನೊಂದೆಡೆ ಜೋಡಿ ಮನುಷ್ಯರ ಚಿತ್ರಗಳಿವೆ. ಈ ಗವಿಯ ಮೇಲಿನ ದೊಡ್ಡ ಬಂಡೆ ಕೆಳಭಾಗ ಗುಂಡುಕೊಡಲಿ ಹಿಡಿದು ನಿಂತ ಮನುಷ್ಯ ಮತ್ತು ಹತ್ತು ಜಿಂಕೆಯ ಸಾಲು, ಕುದುರೆ ಸವಾರರು, ಎತ್ತು ಮೊದಲಾದ ಚಿತ್ರಗಳಿವೆ. ಅಲ್ಲಿಯ ಇತರೆ ಬಂಡೆಗಳಲ್ಲಿ ನವಿಲು, ಚಿಗರೆ, ದನಗಳ ಚಿತ್ರಗಳಿವೆ. ಕೈ ಕೈ ಹಿಡಿದು ಕುಣಿಯುತ್ತಿರುವ ಚಿತ್ರ ತೆಕ್ಕಲಕೋಟೆ ಗವಿಬಂಡೆಯಲ್ಲೂ ಇದೆ. ನಾರಾಯಣಪುರ, ವೆಂಕಟಾಪುರಗಳಲ್ಲಿ ಸು. ೪ ಮೀ. ಎತ್ತರದ ಮನುಷ್ಯ ಚಿತ್ರಗಳಿದ್ದು ಅವರ ಶರೀರವೆಲ್ಲಾ ಜ್ಯಾಮಿತಿ ಚಿತ್ರಗಳಿಂದ ಬಿಡಿಸಲಾಗಿದೆ. ಈ ರೀತಿಯ ಚಿತ್ರಗಳು ಹರಪ್ಪ ಮುದ್ರೆಗಳ ಮೇಲೆ ಕಂಡುಬರುತ್ತವೆ. ಹಿರೇಬೆನಕಲ್ಲು, ಮಲ್ಲಾಪುರ, ಆನೆಗುಂದಿಯಲ್ಲಿದ್ದ ಕೆಲವು ಮನುಷ್ಯ ಚಿತ್ರಗಳಿಗೆ ಉದ್ದನೆಯ ಬಾಲವಿದೆ.

ಚಿಕ್ಕರಾಂಪುರದಲ್ಲಿ ಪ್ರಾಕೃತಿಕವಾಗಿ ನಿರ್ಮಿತವಾದ ಒಂದು ವೃತ್ತಾಕಾರದ ಸುತ್ತಿನಲ್ಲಿ ಮನುಷ್ಯನ ಚಿತ್ರವಿದೆ. ಇದು ಕಬ್ಬಿಣ-ಬೃಹತ್ ಶಿಲಾಸಂಸ್ಕೃತಿಯ ಗೋರಿಗಳಲ್ಲೊಂದಾದ ಕಲ್ಲು ವೃತ್ತ ಗೋರಿಯಂತಿದೆ. ಆನೆಗುಂದಿಯಲ್ಲಿ ತುಂಗಭದ್ರಾ ನದಿಗೆ ಹೊಂದಿಕೊಂಡಂತಿರುವ ಒಂದು ದೋಣಿಯಾಕಾರದ ಬಂಡೆಯ ಮೇಲೆ ದೋಣಿ ಚಿತ್ರವನ್ನು ಬಿಡಿಸಲಾಗಿದೆ.

ಇನ್ನು ಪ್ರಾಣಿ-ಪಕ್ಷಿಗಳಲ್ಲಿ ಹಿರೇಬೆನಕಲ್ಲಿನ ಸಾಲು ಜಿಂಕೆಗಳು ಆಕಾರ, ಪ್ರಮಾಣದಲ್ಲಿ ಏಕಪ್ರಕಾರವಾಗಿ ಕಂಡುಬರುತ್ತವೆ. ಕುರುಗೋಡು ಗವಿವರ್ಣ ಚಿತ್ರದಲ್ಲಿ ಎರಡು ಜಿಂಕೆಗಳು ಒಂದೆಡೆ ಇದ್ದರೆ, ಇನ್ನೊಂದು ಗಬ್ಬಾದ ಜಿಂಕೆ ಚಿತ್ರವಿದೆ.ಅಲ್ಲಿ ಅಪರೂಪಕ್ಕೆ ಆನೆ, ಹುಲಿ, ಚಿರತೆ ಮತ್ತು ಆಂಜನಹಳ್ಳಿಯಲ್ಲಿ ದೊಡ್ಡ ಪ್ರಮಾಣದ ಗಾಂಭೀರ್ಯದಿಂದ ಕೂಡಿದ ಹೋರಿಯ ಚಿತ್ರಗಳಿವೆ. ತೆಕ್ಕಲಕೋಟೆಯಲ್ಲಿ ಎತ್ತು ಇತರೆ ದನಗಳು, ಹಿರೇಬೆನಕಲ್ಲಿನಲ್ಲಿ ಕೆಚ್ಚಲು ಸಹಿತ ಆಕಳು, ಹಂಪಿಯ ತುಂಗಭದ್ರಾ ನದಿ ಅಂಚಿನಲ್ಲಿ ಮೊಸಳೆ, ಕಪ್ಪಗಲ್ಲಿನಲ್ಲಿ ಎತ್ತು, ನವಿಲು, ಆನೆ, ಹುಲಿ ಮತ್ತು ಪಾನೀಯವನ್ನು ಸೇವಿಸುತ್ತಿರುವ ಮನುಷ್ಯರ ಗೀರು ಚಿತ್ರಗಳಿವೆ. ಪ್ರಾಗೈತಿಹಾಸ ಆದಿಇತಿಹಾಸ ಕಾಲದ ವರ್ಣ ಮತ್ತು ಕುಟ್ಟಿ ರಚಿಸಿದ ಅನೇಕ ಮನುಷ್ಯ, ಪ್ರಾಣಿಗಳ ಚಿತ್ರಗಳಿಂದ ಈ ಪ್ರದೇಶ ಶ್ರೀಮಂತವಾಗಿ ಗೋಚರಿಸುತ್ತದೆ. ಇದರಿಂದ ಪ್ರಾಗೈತಿಹಾಸ ಕಾಲದಲ್ಲಿಯೇ ಜೀವಿತವಿದ್ದ ಅನೇಕ ಪ್ರಾಣಿ ಪಕ್ಷಿಗಳ ಮತ್ತು ಜನಜೀವನದ ಪರಿಚಯವಾಗುತ್ತದೆ.

ಹಂಪಿ ಪರಿಸರದಲ್ಲಿ ಸುಮಾರು ೨೭ ಕಲಾತ್ಮಕ ನೆಲೆಗಳಿವೆ. ಇವುಗಳಲ್ಲಿನ ಚಿತ್ರಗಳು ಅಂದಿನ ಆದಿಮಾನವನ ಭಾವನೆಗಳ ಕಲಾ ಅಭಿವ್ಯಕ್ತಿಯ ಸಾಧನೆಗಳಾಗಿವೆ. ಇಲ್ಲಿನ ಮನುಷ್ಯ, ಪ್ರಾಣಿ, ಮೊದಲಾದ ಚಿತ್ರಗಳಿಂದ ಅಂದಿನ ಕಲಾಸಂಸ್ಕೃತಿಯಲ್ಲಿ ಅರಿಯಬಹುದಾಗಿದೆ. ಅಂದಿನ ಆದಿಮಾನವನ ಜೀವನ ವಿಧಾನ, ಅವನ ನಂಬಿಕೆ, ಆಚರಣೆ, ಅವನ ಪಶುಪಾಲನೆ, ಬೇಟೆಗಾರಿಕೆ, ಮನರಂಜನೆ, ಸಮೂಹ ಕುಣಿತ, ಮಾಂತ್ರಿಕ ಆರಾಧನೆ ಮತ್ತು ಅವನು ಬಳಸುತ್ತಿದ್ದ ಆಯುಧ ಮುಂತಾದ ವಿವರಗಳು ಇಲ್ಲಿನ ಕಲಾತ್ಮಕ ನೆಲೆಗಳಲ್ಲಿನ ಚಿತ್ರಗಳ ಮೂಲಕ ಅನಾವರಣಗೊಳ್ಳುತ್ತವೆ. ಇಲ್ಲಿನ ಚಿತ್ರಗಳಲ್ಲಿನ ಬಳಕೆ ಮಾಡಿಕೊಂಡಿರುವ ಸಂಕೇತಗಳು ಅಂದಿನ ಮಾನವನ ಮನಸ್ಸಿನ ಸುಪ್ತ ಭಾವನೆಗಳ ಪ್ರತೀಕವಾಗಿದ್ದು, ಅವನ ಕಲಾಭಿರುಚಿಯ ಕೈಗನ್ನಗಡಿಗಳಾಗಿವೆ. ಈ ಕಲಾಭಿರುಚಿಯ ಪರಿನಾಮವೇ ಮುಂದೆ ಚಾರಿತ್ರಿಕ ಕಾಲದಲ್ಲಿ ಹಲವಾರು ಕಲಾ ಕೃತಿಗಳ ಸ್ಮಾರಕಗಳ ನಿರ್ಮಾಣಕ್ಕೆ ಕಾರಣವಾಯಿತು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)