‘‘ಸೌರ ಮಂಡಲ’’ದ ಒಂಭತ್ತು ಗ್ರಹಗಳಲ್ಲಿ ಭೂಮಿಯೂ ಒಂದು ಗ್ರಹವಾಗಿದೆ. ಸುಮಾರು ಹದಿನೈದು ಬಿಲಿಯನ್ ವರ್ಷಗಳ ಹಿಂದೆ ವಿಶ್ವವು ಧೂಳು ಮತ್ತು ಅನಿಲಗಳ ಮಹಾರಾಶಿಯಾಗಿತ್ತು. ಈ ರಾಶಿಯ ಅಧಿಕ ಸಾಂದ್ರತೆಯಿಂದ ಕುದಿಯಲು ಪ್ರಾರಂಭಿಸಿದಾಗ ಕೇಂದ್ರ ಬಿಂದುವಿನಲ್ಲಿ ಶಾಖ ಹೆಚ್ಚಾಗಿ ಅದು ಸ್ಫೋಟಿಸತೊಡಗಿತು. ಇದನ್ನು ಮಹಾಸ್ಫೋಟ (ಬಿಗ ಬ್ಯಾಂಗ್) ಎಂದು ಕರೆಯಲಾಗುತ್ತದೆ. ಇಂದು ಸುಮಾರು ೪೬೦ ಕೋಟಿ ವರ್ಷಗಳ ಹಿಂದೆ ಘಟಿಸಿರಬೇಕೆಂಬ ಊಹೆ ಇದೆ. ಇಂತಹದೊಂದು ಪ್ರಕ್ರಿಯೆಯಲ್ಲಿ ಧೂಳು, ಅಖಿಲ ಕಣಗಳ ಮುದ್ದೆಯಾಗಿ ಹೊರಬಿದ್ದ ಕಾಯವೇ ಭೂಮಿಯಾಗಿ ರೂಪುಗೊಂಡಿತು. ಪ್ರಾರಂಭದಲ್ಲಿ ಕುದಿಯುತ್ತಿದ್ದ ಅನಿಲರಾಶಿ ಕ್ರಮೇಣಾ ತಂಪಾಗ ತೊಡಗಿದಾಗ ಭೂಮಿಯ ಕಕ್ಷೇ ರಚಿತವಾಯಿತು. ಇದರಲ್ಲಿದ್ದ ಲೋಹಗಳು ಅವುಗಳ ತೂಕಕ್ಕನುಗುಣವಾಗಿ ಭೂ-ಚಿಪ್ಪಿನಲ್ಲಿ ಸಂಗ್ರಹಗೊಂಡವು. ಅನಿಲಗಳು ಸೋರುತ್ತಾ ವಾತಾವರಣ ಸೃಷ್ಟಿಸಿದವು. ವಾತಾವರಣವು ಅನಿಲದ ಕವಚವಾಗಿ ನೈಟ್ರೋಜನ್, ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೋನಾಕ್ಲೈಡ್, ಮೀಥೇನ್, ಅಮೋನಿಯಂ, ನೀರು ಮುಂತಾದ ಸಂಯುಕ್ತಗಳುಂಟಾದವು ಹೀಗೆ ರೂಪಿತವಾದ ಭೂಮಿ ಸತತವಾಗಿ ಬಾಹ್ಯ ಮತ್ತು ಆಂತರಿಕ ಬದಲಾವಣೆ ಮತ್ತು ಮಾರ್ಪಾಡುಗಳಿಗೆ ಒಳಗಾಗುತ್ತಾ ಸಾಗಿದೆ. ಭೂಮಿ ಹುಟ್ಟಿದ ಅನೇಕ ಕೋಟಿ ವರ್ಷಗಳ ನಂತರ ಇದರ ಮೇಲೆ ಜೀವಿಯ ಉಗಮವಾಯಿತು. ಇತ್ತೀಚಿನ ಹೊಸ ವೈಜ್ಞಾನಿಕ ಸಂಶೋಧನೆಗಳು ಭೂಮಿ ಹುಟ್ಟು ೪೬೦ ಕೋಟಿ (೪.೬ ಮಿಲಿಯನ್) ವರ್ಷಗಳಾಗಿದ್ದರೂ, ಜೀವ ವಿಕಾಸ ಕ್ರಮದಲ್ಲಿ ಜೀವಿ ಹುಟ್ಟಿರುವುದು ಸುಮಾರು ೩೫೦ ಕೋಟಿ (೩.೫ ಮಿಲಿಯನ್) ವರ್ಷಗಳ ಹಿಂದೆ ಮಾತ್ರ ಎಂದು ಸಾಬೀತು ಮಾಡಿವೆ. ೩ ಮಿಲಿಯನ್ ವರ್ಷಗಳ ಹಿಂದೆ ಭೂಮಿಯನ್ನು ಮೇಲೆ ಮೊಟ್ಟಮೊದಲಿಗೆ ಜೀವಿಗಳು ಕಾಣಿಸಿಕೊಂಡವು.

ಇಡೀ ಜೀವಸಂಕುಲದ ವಿಕಾಸ ಕ್ರಮದಲ್ಲಿ ಮಾನವನಿಗೆ ಒಂದು ವಿಶೇಷ ಸ್ಥಾನವಿದೆ. ಅನಿಲಾವೃತವಾಗಿದ್ದ ಭೂಮಿಯಲ್ಲಿನ ಅತಿ ಸಣ್ಣ ಸಜೀವ ಪರಮಾಣುಗಳಿಂದ ಅತ್ಯಂತ ಸಂಕೀರ್ಣ ವ್ಯವಸ್ಥೆಯಲ್ಲಿ ಮಾನವ ಉಗಮವಾಗಿರಬೇಕೆಂಬ ಅಭಿಪ್ರಾಯವಿದೆ. ದೀರ್ಘಾವಧಿಯ ಭೂ ಇತಿಹಾಸಕ್ಕೆ ಹೋಲಿಸಿದರೆ ಮಾನವನ ಪೂರ್ವಜರ ಹುಟ್ಟು ಕೇವಲ ೬೫ ಬಿಲಿಯನ್ ವರ್ಷಗಳಷ್ಟೇ ಆದ ದಾಖಲೆ ಸಿಗುತ್ತದೆ. ಅಂದರೆ ಆದಿ ಮಾನವನ ಉಗಮವಾಗಿ ಸರಿ ಸುಮಾರು ೧೪ ಮಿಲಿಯನ್ ವರ್ಷಗಳಾಗಿದ್ದರೆ ಆಧುನಿಕ ಮಾನವನ ಉಗಮ ಕೇವಲ ೩ ಮಿಲಿಯನ್ ವರ್ಷಗಳ ಹಿಂದಷ್ಟೇ ಆಗಿದೆ ಎನ್ನಬಹುದು. ಇಷ್ಟೊಂದು ಸುದೀರ್ಘ ಇತಿಹಾಸ ಹೊಂದಿರುವ ಮಾನವನ ಇತಿಹಾಸ ಮತ್ತು ಅವನ ಸಂಸ್ಕೃತಿಯ ಕುರಿತು ಇಲ್ಲಿಯವರೆಗೆ ಅಭ್ಯಸಿಸಿದ ಎಲ್ಲಾ ಮಾನವಿಕ ವಿಷಯಗಳು (Humanities) ತಮ್ಮದೇ ಆದ ದೃಷ್ಟಿಕೋನದಲ್ಲಿ ಇಡೀ ಮನುಷ್ಯ ಕುಲದ ಸಾಂಸ್ಕೃತಿಕ ಇತಿಹಾಸವನ್ನು ವಿಭಿನ್ನವಾಗಿ ಅರ್ಥೈಸಿವೆ. ಆದರೆ ಮಾನವಶಾಸ್ತ್ರದ ಹಿನ್ನೆಲೆಯಲ್ಲಿ ಆದಿಮಾನವನ ಒಟ್ಟು ಜೀವನಕ್ರಮವನ್ನು ಮಾನವಶಾಸ್ತ್ರ ಪುರಾತತ್ವಶಾಸ್ತ್ರ ಮತ್ತು Ethnology (ಮಾನವ ಕುಲಶಾಸ್ತ್ರ) ಗಳ ಸಹಾಯದಿಂದ ನಿರೂಪಿಸಬೇಕೆಂಬುದು ನನ್ನ ಬಹುದಿನದ ಬಯಕೆ. ಈ ಹಿನ್ನಲೆಯಲ್ಲಿ ನಾನು ಮಾಡಿದ ಮೊದಲ ಪ್ರಯತ್ನವೇ “ಹಂಪಿಪರಿಸರದ ಆದಿಮಾನವನ ನೆಲೆಗಳು” ಎನ್ನುವುದು.

ವಿಶ್ವವಿಖ್ಯಾತ ಹಂಪಿ ಮತ್ತು ಅದರ ಸುತ್ತಲಿನ ಭೌಗೋಳಿಕ ಪರಿಸರವು ಪ್ರಾಗೈತಿಹಾಸಿಕ ಕಾಲದಿಂದ ಮಾನವನ ವಾಸಕ್ಕೆ ಅವಕಾಶ ಮಾಡಿಕೊಟ್ಟಿದೆ. ಇಲ್ಲಿನ ಮಾನವ ಅನಾಗರಿಕ ಸ್ಥಿತಿಯಿಂದ ನಾಗರಿಕ ಸ್ಥಿತಿಗೆ ಕಾಲಿಟ್ಟವರೆಗಿನ ಕಾಲಾವಧಿ ಅತ್ಯಂತ ವೈವಿಧ್ಯ ಮತ್ತು ವೈಶಿಷ್ಟ್ಯತೆಯಿಂದ ಕೂಡಿದ್ದು, ಅಧ್ಯಯನಕ್ಕೆ ಯೋಗ್ಯವಾಗಿದೆ. ಆದಿಮಾನವನ ವಿಕಸನದ ಹಂತಗಳನ್ನು ಮತ್ತು ಅವನ ಅಂದಿನ ಆದಿಮ ಸಾಂಸ್ಕೃತಿಕ ಬದುಕನ್ನು ಈ ಪರಿಸರದಲ್ಲಿ ದೊರೆಯುವ ಹಲವು ಪ್ರಾಚ್ಯ ಅವಶೇಷಗಳ ಸಹಾಯದಿಂದ ದೃಢಪಡಿಸಬಹುದು. ಇಲ್ಲಿನ ವಿವಿಧ ನೆಲೆಗಳು, ಗುಹೆ, ಕಲ್ಲಾಸರೆಗಳು ಕೈಗೊಡಲಿ, ಮಡಕೆಚೂರು, ರೇಖಾ, ಕುಟ್ಟಿದ, ಕೊರೆದ ಹಾಗೂ ವರ್ಣಚಿತ್ರಗಳು ಮತ್ತು ಕಲ್ಗೋರಿಯಂಥಹ ವ್ಯಕ್ತ ಆಧಾರಗಳು ಅಂದಿನ ಆದಿಮಾನವನ ಜೀವನ ಕ್ರಮ ಮತ್ತು ಅಂದಿನ ಆದಿಮ ಸಂಸ್ಕೃತಿಯನ್ನು ಅರಿಯಲು ಏಕಮೇವ ಆಧಾರಗಳಾಗಿವೆ. ಇವುಗಳ ಸಹಾಯದಿಂದ ಅಂದಿನ ಆದಿಮಾನವನ ಜೀವನ, ಸಮಾಜಿಕ ಮತ್ತು ಧಾರ್ಮಿಕ ವಿಧಿ, ವಿಧಾನಗಳ ವಿವರಗಳು ನಮಗೆ ಸ್ಪಷ್ಟವಾಗುತ್ತವೆ. ಈ ಪರಿಸರದಲ್ಲಿನ ಆದಿಮಾನವನ ನೆಲೆಗಳಲ್ಲಿನ ಮೇಲಿನ ಎಲ್ಲಾ ಮಹತ್ವದ ಮಾಹಿತಿಗಳನ್ನು ಈ ಕೃತಿ ಒಳಗೊಂಡಿದ್ದು, ಇದೊಂದು ವಿಶೇಷ ಅಧ್ಯಯನ ಎಂಬುದಕ್ಕೆ ಸಾಕ್ಷಿಯಾಗಿದೆ.

ಬಹು ಜನ ನಿರ್ಲಕ್ಷಿತ ಮತ್ತು ವ್ಯಾಪಕ ಕ್ಷೇತ್ರ ಕಾರ್ಯವನ್ನು ಅವಲಂಬಿಸಿದ ಅಧ್ಯಯನವು ನನ್ನ ಅನಿರತ ಶ್ರಮವಾಗಿದೆ. ಈ ಕೃತಿಯು ರೂಪುಗೊಳ್ಳಲ್ಲು ಎಲ್ಲಾ ರೀತಿಯ ಸಲಹೆ ಸೂಚನೆಗಳನ್ನು ನೀಡಿದ ಸಹಕರಿಸಿದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೂ, ಮಾನ್ಯ ಕುಲಸಚಿವರು ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೂ, ಪ್ರಾಧ್ಯಾಪಕರುಗಳಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರಿಗೂ ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ ಸಮಾಜ ವಿಜ್ಞಾನ ನಿಕಾಯದ ಡೀನರಾದ ಡಾ. ಟಿ.ಆರ್. ಚಂದ್ರಶೇಖರ ಅವರಿಗೆ ನನ್ನ ಕೃತಜ್ಞತೆಗಳು.

ಈ ಕೃತಿಯ ಮೊದಲು ಕರಡು ತಿದ್ದಿ ಸಲಹೆ ಸೂಚನೆಗಳನ್ನು ನೀಡಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರುಗಳಾದ ಎಚ್‌.ಬಿ. ರವೀಂದ್ರ, ಬಿ.ಸುಜ್ಞಾನಮೂರ್ತಿ ಹಾಗೂ ಜೈನುಲ್ಲಾ ಬಳ್ಳಾರಿ ಅವರಿಗೂ ಕ್ಷೇತ್ರಕಾರ್ಯದ ಸಮಯದಲ್ಲಿ ಎಲ್ಲಾ ರೀತಿಯಲ್ಲಿಯು ಸಹಕರಿಸಿದ ಗೆಳೆಯರಾದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಗೆಳೆಯ ಡಾ. ಹೆಚ್‌. ತಿಪ್ಪೇಸ್ವಾಮಿ ಅವರಿಗೂ, ಗೆಳೆಯರಾದ ನಿರ್ವಾಣಿ ಕಂಬಾರ, ಗುರುಮೂತಿ, ಕೆ.ಎಲ್‌. ರಾಜಶೇಖರ, ಹೆಚ್. ಶ್ರೀನಿವಾಸ, ಸಿ.ಸಿ. ಪೂವಯ್ಯ, ಬಿ. ವೆಂಕಟೇಶ, ಕೃಷ್ಣಕುಮಾರ್ ಬಿ.ವಿ., ಆರ್.ವಿ. ದೇಶಪಾಂಡೆ, ಈರೇಶಪ್ಪ ಅವರಿಗೂ ನನ್ನ ಸಹೋದ್ಯೋಗಿಯಾದ ಡಾ.ತಾರಿಹಳ್ಳಿ ಹನುಮಂತಪ್ಪ ಅವರಿಗೂ ವಿಭಾಗದ ಕಿರಿಯ ಸಹಾಯಕರಾದ ಗಾದಿಲಿಂಗಪ್ಪ ತಿಂದಪ್ಪ ಅವರಿಗೂ ನನ್ನ ಕೃತಜ್ಞತೆಗಳು.

ಅಂದವಾಗಿ ಅಕ್ಷರ ಜೋಡಿಸಿಕೊಟ್ಟ ಶ್ರೀಮತಿ ಎ.ನಾಗವೇಣಿ, ವೀರೇಶ, ಕು.ಸುಮ ಹಾಗೂ ಶ್ರೀನಿವಾಸ ಕೆ.ಕಲಾಲ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಡಾ. ಎಲ್‌. ಶ್ರೀನಿವಾಸ