ಭೂಮಿಯ ಹುಟ್ಟು ಸುಮಾರು ೬ ಕೋಟಿ (ಮಿಲಿಯನ್‌) ವರ್ಷಗಳಷ್ಟು ಹಿಂದೆ ಆಯಿತು. ನಂತರ ಮೊದಲ ಜೀವಿ ಸುಮಾರು ೩೫೦-೪೦೦ ಕೋಟಿ (೩.೫-೪) ಮಿಲಿಯನ್‌ ವರ್ಷಗಳ ಹಿಂದೆ ಸಂಭವಿಸಿರಬಹುದಾದ ಊಹೆ ಇದೆ.[1] ಮಾನವ ಈ ಜೀವವಿಕಾಸದ ಏಣಿಯಲ್ಲಿ ಎತ್ತರಕ್ಕೆ ಏರಿರುವ ಒಂದು ಜೀವಿ. ಈ ದೀರ್ಘಾವಧಿ ಭೂ ಇತಿಹಾಸಕ್ಕೆ ಹೋಲಿಸಿದರೆ ಮಾನವನ ಪೂರ್ವಜರ ಹುಟ್ಟು ಕೇವಲ ೬೫ ಮಿಲಿಯನ್‌ ವರ್ಷಗಳ ಹಿಂದಷ್ಟೆ ಆಗಿರುವ ದಾಖಲೆ ಸಿಗುತ್ತದೆ. ಆದಿಮಾನವ ಉಗಮವಾಗಿ ಸರಿ ಸುಮಾರು ೧೪ ಮಿಲಿಯನ್‌ ವರ್ಷಗಳಾಗಿದ್ದರೆ, ಆಧುನಿಕ ಮಾನವನ ಉಗಮ ಕೇವಲ ೨ ಮಿಲಿಯನ್‌ ವರ್ಷಗಳ ಹಿಂದಷ್ಟೇ ಆಗಿದೆ ಎನ್ನಬಹುದು.[2] ಮಾನವ ಕೋತಿ, ವಾನರನ್ನೊಳಗೊಂಡ ಪ್ರೈಮೋಟ ಗಣಕ್ಕೂ, ಸಸ್ತನಿ ವರ್ಗಕ್ಕೂ ಸೇರಿದ್ದಾನೆ. ಇಡೀ ಪ್ರಾಣಿ ಜಗತ್ತಿನಲ್ಲಿ ಮಾನವನಿಗೆ ಒಂದು ವ್ಯವಸ್ಥಿತ ಸ್ಥಾನವಿದೆ.

ಭಾರತದಲ್ಲಿ ಆದಿಮಾನವ ಪ್ರಾಗೈತಿಹಾಸಿಕ ಕಾಲದ ವಿವಿಧ ಕಾಲಘಟ್ಟಗಳಲ್ಲಿ ಜೀವಿಸಿದ್ದ ಹಲವಾರು ಉದಾಹರಣೆಗಳು ದೊರೆತಿವೆ. ಕರ್ನಾಟಕವು ಇದಕ್ಕೆ ಹೊರತಾಗಿಲ್ಲ. ದಖನ್‌ಪ್ರಸ್ಥಭೂಮಿಗೆ ಸೇರಿದ ಕರ್ನಾಟಕವು ಭೌಗೋಳಿಕವಾಗಿ ಆಯಕಟ್ಟಿನ ಭಾಗದಲ್ಲಿದೆ. ಇಲ್ಲಿನ ಪರಿಸರವು ಮಾನವನ ವಾಸಕ್ಕೆ ಅತ್ಯಂತ ಅನುಕೂಲಕರವಾಗಿದ್ದರಿಂದ ಅತಿ ಪ್ರಾಚೀನ ಕಾಲದಿಂದಲೂ ಇವನ ಜೀವನೋಪಾಯದ ಚಟುವಟಿಕೆಗಳು ಇಲ್ಲಿ ಆರಂಭವಾಗಿರುವುದನ್ನು ಗುರುತಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ ಹಾಗೂ ಕರ್ನಾಟಕ, ಮೈಸೂರು, ಬೆಂಗಳೂರು, ಕನ್ನಡ ವಿಶ್ವವಿದ್ಯಾಲಯಗಳ ಸಂಶೋಧಕ ವಿದ್ವಾಂಸರು ಮತ್ತು ಕೆಲ ಸಂಘ ಸಂಸ್ಥೆಗಳು,[3] ಹವ್ಯಾಸಿ ಸಂಶೋಧಕರು, ವಿದ್ವಾಂಸರು ನಡೆಸಿದ ಉತ್ಖನನ, ಅನ್ವೇಷಣಾ ಕಾರ್ಯದಿಂದ ಕರ್ನಾಟಕದಲ್ಲಿ ಹಲವಾರು ಆದಿಮಾನವನ ನೆಲೆಗಳು ಬೆಳಕಿಗೆ ಬಂದಿವೆ. ಮಾನವ ಆದಿಮ ಹಂತದಿಂದ ನಾಗರಿಕ ಹಂತಕ್ಕೆ ತಲುಪುವವರೆಗಿನ ಕಾಲವನ್ನು ಇಲ್ಲವೇ ಮಾನವ ಅಕ್ಷರ ಜ್ಞಾನವನ್ನು ಕಂಡುಕೊಳ್ಳದೆ ಇದ್ದ ಕಾಲವನ್ನು ಪ್ರಾಗೈತಿಹಾಸಿಕ ಕಾಲವೆಂದು ಅಥವಾ ಇತಿಹಾಸ ಪೂರ್ವಕಾಲವೆಂದು ಕರೆಯುತ್ತಾರೆ.[4]ಮಾನವನ ಅಕ್ಷರ ಜ್ಞಾನವನ್ನು ಕಂಡುಕೊಂಡು ನಂತರದ ಕಾಲವನ್ನು ಚಾರಿತ್ರಿಕ ಕಾಲ ಎನ್ನುತ್ತಾರೆ. ಪ್ರಾಗೈತಿಹಾಸಿಕ ಕಾಲದ ಈ ಕಾಲಘಟ್ಟವನ್ನು ಶಿಲಾಯುಗ, ಲೋಹಯುಗ ಎಂಬ ಎರಡು ವಿಭಾಗಗಳನ್ನಾಗಿ ಮಾಡಲಾಗಿದೆ.

ಈ ಎರಡು ಯುಗಗಳಲ್ಲಿ ಹಳೇಶಿಲಾಯುಗ, ಸೂಕ್ಷ್ಮಶಿಲಾಯುಗ, ನವ ಶಿಲಾಯುಗ, ಶಿಲಾತಾಮ್ರಯುಗ, ಬೃಹತ್‌ ಶಿಲಾಯುಗ (ಕಬ್ಬಿಣಯುಗ) ಎಂದು ವಿಭಾಗಿಸಲಾಗಿದೆ.[5] ಸುಮಾರು ೫ ಲಕ್ಷ ವರ್ಷಗಳ ಹಿಂದಿನಿಂದ ಆದಿ ಇತಿಹಾಸ ಕಾಲದವರೆಗಿನ ಬೆಳವಣಿಗೆಯನ್ನು ಕರ್ನಾಟಕ ಅದರ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿಯ ಕ್ಷೇತ್ರ ಶೋಧನೆ ಮತ್ತು ಉತ್ಖನನಗಳಲ್ಲಿ ದೊರೆತ ಅವಶೇಷಗಳು ದೃಢಪಡಿಸಿವೆ. ಇವುಗಳ ಆಧಾರದ ಮೇಲೆ ಕೆಲವರು ಈ ಕಾಲಗಳನ್ನು ೭ ಘಟ್ಟಗಳಾಗಿ ವಿಭಾಗಿಸಿದ್ದಾರೆ.[6]ಕರ್ನಾಟಕದಲ್ಲಿ ಆದಿಮಾನವ ಸಂಸ್ಕೃತಿ ಹೇಗೆ ಬೆಳವಣಿಗೆ ಹೊಂದಿತು ಎಂಬುದನ್ನು ಈ ಮುಂದಿನಂತೆ ಗಮನಿಸಬಹುದಾಗಿದೆ.

೧. ಹಳೇಶಿಲಾಯುಗ (Paleolittaic): ಗ್ರೀಕ್‌ಭಾಷೆಯಲ್ಲಿ ಪ್ಯಾಲಿಯೋ ಎಂದರೆ ಹಳೆಯ ಎಂದು, ಲಿತಿಕ್‌ಎಂದರೆ ಶಿಲೆ ಎಂದು ಅರ್ಥ. ಈ ಕಾಲದಲ್ಲಿ ಮಾನವ ಶಿಲೆಯಿಂದ ಮಾತ್ರ ಬಹುತೇಕ ಉಪಕರಣಗಳನ್ನು ತಯಾರಿಸಿಕೊಂಡು ಅವುಗಳನ್ನು ತನ್ನ ಬಳಕೆಗೆ ಬಳಸಿಕೊಂಡಿದ್ದರಿಂದ ಮತ್ತು ಅವನ ರೀತಿ ನೀತಿಗಳೂ ಸಾಕಷ್ಟು ಸುಧಾರಿಸದೇ ಇನ್ನೂ ಆದಿಮ ಹಂತದಲ್ಲಿ ಇದ್ದಿದ್ದರಿಂದ ಈ ಕಾಲಘಟ್ಟವನ್ನು ಹಳೇ ಶಿಲಾಯುಗ ಸಂಸ್ಕೃತಿ (ಪ್ಯಾಲಿಯೋಲಿತಿಕ್‌ ‍ಕಲ್ಚರ್‌) ಎಂದು ಕರೆಯಲಾಗುತ್ತದೆ. ಅಧ್ಯಯನದ ಅನುಕೂಲಕ್ಕಾಗಿ ಆದಿಮಾನವನ ಈ ಜೀವನ ಕ್ರಮವನ್ನು ಪುನಃ ಮೂರು ಭಾಗಗಳಾಗಿ ಮುಂದಿನಂತೆ ವಿಭಾಗಿಸಲಾಗಿದೆ.

೧. ಆದಿ ಹಳೇಶಿಲಾಯುಗ (೭ ಲಕ್ಷ ಅಥವಾ ಅದಕ್ಕೂ ಮುಂಚೆ)

೨. ಮಧ್ಯ ಹಳೇಶಿಲಾಯುಗ (ಕ್ರಿ.ಪೂ. ೭೦,೦೦೦ ೩೦,೦೦೦)

೩. ಅಂತ್ಯ ಹಳೇಶಿಲಾಯುಗ (ಕ್ರಿ.ಪೂ. ೪೦,೦೦೦ ೧೦,೦೦೦)

೧. ಆದಿ ಹಳೇಶಿಲಾಯುಗ (ಅಪ್ಪರ್‌ ಪ್ಯಾಲಿಯೋಲಿತಿಕ್‌ )

ಸುಮಾರು ೭ ಲಕ್ಷದಿಂದ ೧.೨೫ ಲಕ್ಷ ವರ್ಷಗಳಷ್ಟು ಹಳೆಯದೆಂದು ಗುರುತಿಸಲಾದ ಆದಿ ಹಳೇಶಿಲಾಯುಗದ ಅವಶೇಷಗಳು ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ ಕಂಡು ಬಂದಿವೆ. ಕರ್ನಾಟಕದಲ್ಲಿ ಈ ಸಂಸ್ಕೃತಿಗೆ ಸೇರಿದ ಸ್ಥಳಗಳು ವಿವಿಧೆಡೆ ದೊರೆಕಿವೆ. ಅವುಗಳಲ್ಲಿ ಕೃಷ್ಣಾ ಮೇಲ್ದಂಡೆ ಮತ್ತು ಘಟಪ್ರಭಾದ ೧೫ ಸ್ಥಳಗಳಲ್ಲಿ ಹಾಗೂ ಕಲಾದಗಿ, ಅನಗವಾಡಿ (ಬಿಜಾಪುರ), ಗುಲಬಾಳ್‌ ಕಿಬ್ಬನಹಳ್ಳಿ (ತುಮಕೂರು ಜಿಲ್ಲೆ), ಸುರಪುರ (ಗುಲ್ಬರ್ಗಾ, ತಾಲೂಕು ಜಿಲ್ಲೆ) ನಿಟ್ಟೂರು (ಸಿರುಗುಪ್ಪ ತಾ. ಬಳ್ಳಾರಿ ಜಿ.), ಹುಣಸಗಿ (ಸುರಪುರ ತಾ. ಗುಲ್ಬರ್ಗಾ ಜಿ.) ನೆಲೆಗಳು ಪ್ರಮುಖವಾಗಿವೆ. ಬಿಜಾಪುರ ಜಿಲ್ಲೆಯ ಅನಗವಾಡಿ ಈ ಸಂಸ್ಕೃತಿಗೆ ಸೇರಿದ ಪ್ರಮುಖ ನೆಲೆ. ಇಲ್ಲಿ ಆದಿ, ಮಧ್ಯ, ಅಂತ್ಯ ಶಿಲಾಯುಗದ ಅವಶೇಷಗಳು ದೊರಕಿವೆ. ಇಲ್ಲಿ ನಡೆದ ಉತ್ಖನನದಿಂದ ಹಿಮಯುಗದ ಕೊನೆಯ ಕಾಲಕ್ಕೆ ಹೋಲುವಂತಹ ಹಲವು ಉಪಕರಣಗಳು ದೊರೆತಿವೆ. ಅವುಗಳಲ್ಲಿ ಕೊಡಲಿ ಮಚ್ಚುಗತ್ತಿ. ಸೀಳುಗತ್ತಿ, ಹೆರೆಯುವ ಚಕ್ಕೆ ಇವುಗಳಲ್ಲಿ ಕೈಕೊಡಲಿಗಳು ಹೇರಳ ಪ್ರಮಾಣದಲ್ಲಿದ್ದವು. ಸೀಳುಗತ್ತಿಗಳು ಮತ್ತು ಮಚ್ಚುಗತ್ತಿಗಳು ಇಳಿಮುಖ ಪ್ರಮಾಣದಲ್ಲಿವೆ. ‘ಯು’ ಆಕಾರದ ಸೀಳುಗತ್ತಿಗಳು ಹೆಚ್ಚಾಗಿವೆ. ಫ್ರಾನ್ಸ್‌ದೇಶದ ಆದಿ ಹಳೆಶಿಲಾಯುಗದ ಮಾದರಿ ನೆಲೆಯಾದ ಸ್ಟೆಂಟ್‌ ಅಶೂಲ್‌ನಲ್ಲಿ ದೊರೆತ ಆಯುಧಗಳಿಗೆ ಇಲ್ಲಿನ ಆಯುಧಗಳು ಹೋಲಿಕೆಯಾಗುತ್ತವೆ. ಇದು ಬಹುಮಟ್ಟಿಗೆ ಯುರೋಪಿನ ಆಶೋಲ್‌ ಹಂತಕ್ಕೆ ತುಂಬ ಸಮೀಪವಾಗಿದೆ. ದೊಡ್ಡ ದೊಡ್ಡ ಚಕ್ಕೆಗಳನ್ನು ಉಪಕರಣಗಳ ಸ್ಥೂಲ ರೂಪರೇಖೆಗೆ ಬೇಕಾದ ಆಕೃತಿಗಳನ್ನು ಮತ್ತು ಅವುಗಳನ್ನು ಬೇಕಾದೆಡೆಗಳಲ್ಲಿ ಸರಿಪಡಿಸಿ ಸರಿಯಾಗಿ ರೂಪಿಸುವುದಕ್ಕೋಸ್ಕರ ಕಲ್ಲನ್ನು ಕಲ್ಲಿಗೆ ಹೊಡೆದು ತೆಗೆಯುವ, ಕಡಿಮೆ ಭಾರದ, ಉದ್ದನೆಯ ಆಕಾರದ ಕಲ್ಲನ್ನು ಸುತ್ತಿಗೆಯಂತೆ ಬಳಸುವಂಥ ತಾಂತ್ರಿಕ ವಿಧಾನಗಳನ್ನು ಉಪಯೋಗಿಸಲಾಯಿತು. ಬಹಳಷ್ಟು ಚಕ್ಕೆಗಳನ್ನು ಕ್ಲಾಕ್ಟೋನಿಯನ್‌ ಎಂಬ ತಾಂತ್ರಿಕ ವಿಧಾನದಿಂದ ತೆಗೆಯಲಾಯಿತೆಂಬುದು ಇಲ್ಲಿನ ಅವಶೇಷಗಳಿಂದ ಹೇಳಬಹುದಾಗಿದೆ. ಅಲ್ಲದೆ ಇಲ್ಲಿಯೇ ತಾತ್ಕಾಲಿಕವಾಗಿ ಅಡ್ಡ ಮರೆ ಮಾಡಿಕೊಂಡಿದ್ದ ಗುರುತು ಮತ್ತು ತನ್ನ ದೈನಂದಿನ ಜೀವನಕ್ಕೆ ಬೇಕಾದ ಕಲ್ಲಿನ ಉಪಕರಣಗಳನ್ನು ಮಾಡಲು ಉಪಯೋಗಿಸಿದ ಅಡಿಗಲ್ಲು ಉತ್ಖನನದಲ್ಲಿ ಶೋಧವಾಗಿದೆ. ಅಲ್ಲದೆ ಬಲುದೂರದಿಂದ ಬುದ್ಧಿಪೂರ್ವಕವಾಗಿ ತಂದ ಕೆಮ್ಮಣ್ಣು ಗಟ್ಟಿಗಳು ಇಲ್ಲಿ ದೊರೆತಿವೆ. ಇದನ್ನು ಬಣ್ಣ ಹಾಕುವುದಕ್ಕೆ ಅಥವಾ ಬರೆಯುವುದಕ್ಕೆ ಬಳಸಿಕೊಂಡಿರಬಹುದು.[7]

ಭೀಮ ಕೃಷ್ಣ ಸಂಗಮ ಪ್ರದೇಶದಲ್ಲಿಯ ಗುಲಬಾಳು (ಸುರಪುರ ತಾಲೂಕು) ಎರಡು ನೆಲೆಗಳಲ್ಲಿ ಫ್ರಾನ್ಸ್‌ ದೇಶದ ಅಶ್ಯೂಲ್ ಎಂಬ ಹಳ್ಳಿಯಲ್ಲಿ ಶಿಲಾಯುಧಗಳನ್ನು ತಯಾರಿಸಲು ಬಳಸಿಕೊಂಡ ವಿಧಾನಗಳನ್ನೇ ಇಲ್ಲಿ ಬಳಸಿಕೊಳ್ಳಲಾಗಿದೆ. ಈ ಸಂಸ್ಕೃತಿಯ ಮಾದರಿಯಲ್ಲಿ ತಯಾರಿಸಿದ ಮೇಲೆ ಹೇಳಿದ ಎಲ್ಲ ಉಪಕರಣಗಳು ಇಲ್ಲಿ ದೊರೆತ್ತಿದ್ದು ಅವುಗಳನ್ನು ಸಣ್ಣಕಲ್ಲುಗಳಿಂದ ತಯಾರಿಸುವುದು ಗಮನಾರ್ಹ. ಕಲಾದಗಿ ಸಮೀಪವಿರುವ ಖ್ಯಾಡ್ ಮತ್ತು ಡಾಣಕಶಿರೂರುಗಳಲ್ಲಿ ಇದೇ ಮಾದರಿಯ ಉಪಕರಣಗಳು ದೊರೆತಿವೆ. ಅದೇ ರೀತಿ ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿಯು ಈ ಸಂಸ್ಕೃತಿಗೆ ಸೇರಿದ ಮತ್ತೊಂದು ಮುಖ್ಯ ಆದಿಮಾನವನ ನೆಲೆಯಾಗಿದೆ. ಇಲ್ಲಿ ಮುಖ್ಯವಾಗಿ ಬೆಣಚು ಕಲ್ಲಿನಿಂದ ಮತ್ತು ತಿರುಳುಗಲ್ಲಿನಿಂದ ತಯಾರಿಸಿದ ಕೈಕೊಡಲಿ, ಸೀಳುಗತ್ತಿ, ಚಕ್ರದಂತಹ ಆಯುಧಗಳು ಮುಖ್ಯವಾಗಿದ್ದು ಕೊಕ್ಕಿನ ಆಕೃತಿಯ ಆಯುಧವೊಂದು ಮಾತ್ರ ಇಲ್ಲಿ ದೊರೆತಿದ್ದು ಮುಖ್ಯವಾಗಿದೆ.

ಹಂಪಿ ಪರಿಸರದ ಬಾದನಹಟ್ಟಿಗುಡ್ಡ, ಬಳ್ಳಾರಿ, ಬೆಳಗಲ್ಲು (ಬಳ್ಳಾರಿ ತಾ.) ದರೋಜಿ, ಕಮಲಾಪುರ, ಗಾದಿಗನೂರು (ಹೊಸಪೇಟೆ ತಾ.)[8], ನಿಟ್ಟೂರು (ಸಿರುಗುಪ್ಪ ತಾ.)[9], ಕುರೆಕುಪ್ಪ, ಜೋಗ, ಮಲ್ಲಾಪುರ (ಸಂಡೂರು ತಾ.)[10], ಕುರುವತ್ತಿ (ಹಡಗಲಿ ತಾ.)[11] ಮೊದಲಾದ ಸ್ಥಳಗಳಲ್ಲಿ ಈ ಕಾಲಘಟ್ಟದಲ್ಲಿ ಮಾನವನು ಬಳಸಿ ಬಿಟ್ಟುಹೋದ ಶಿಲಾ ಉಪಕರಣ ಮತ್ತು ಇತರೆ ಅವಶೇಷಗಳು ಕಂಡುಬಂದಿದೆ.

ಕಮಲಾಪುರದಲ್ಲಿ ಡಾಲರೈಟ್ ಶಿಲೆಯಲ್ಲಿ ತಯಾರಿಸಿದ ಹೆರೆಗತ್ತಿ ಮಚ್ಚುಗತ್ತಿಗಳನ್ನು ಶೋಧಿಸಲಾಗಿದೆ.[12] ತುಂಗಭದ್ರಾ ನದಿ ದಡದ ನಿಟ್ಟೂರು ಇನ್ನೊಂದು ಪ್ರಮುಖ ನೆಲೆ. ಇಲ್ಲಿ ಕಪ್ಪು, ಹಸಿರು ಶಿಲೆಯಿಂದ ತಯಾರಿಸಿದ ಏಕಮುಖ ಹಾಗೂ ದ್ವಿಮುಖ ಮಚ್ಚು ಗತ್ತಿ ದುಂಡುಕಲ್ಲನ್ನು ಬಳಸಿ ಅದರಲ್ಲಿ ಬುಡದಿಂದ ಮೇಲ್ಮುಖವಾಗಿ ಚಕ್ಕೆಗಳನ್ನು ಎಬ್ಬಿಸುವ ಉಪಕರಣಗಳು ಕೈಕೊಡಲಿ, ಸೀಳುಗತ್ತಿಗಳು ಮೊದಲಾದ ವಿಶೇಷ ಆಯುಧಗಳು ಇಲ್ಲಿ ದೊರೆತಿವೆ. ಅಲ್ಲದೇ ಸಸ್ತನೀ ಪ್ರಾಣಿಗಳಾದ ಆಕಳು ಎತ್ತುಗಳ ಆನೆಗಳ ಪಡಿಯಚ್ಚುಗಳು ಇಲ್ಲಿ ದೊರೆತಿರುವುದು ವಿಶೇಷ. ಇಲ್ಲಿ ದೊರೆತ ಎರಡು ಪ್ರಕಾರದ ಆಯುಧಗಳು ದಕ್ಷಿಣ ಭಾರತದ ಕೈಕೊಡಲಿ ಮತ್ತು ಹೆರೆಯುವ ಉಪಕರಣಗಳ ವರ್ಗಕ್ಕೆ ಸೇರಿದ್ದು, ಈ ಉಪಕರಣಗಳೊಂದಿಗೆ ಅಪರೂಪಕ್ಕೆ ಬಾಸ್‌ನೊಮಡಿಸ್ ಎಂಬ ಪ್ರಾಣಿಯ ಪಳೆಯುಳಿಕೆ ಕೂಡ ದೊರೆತಿದೆ.[13]

ಈ ಮೇಲಿನ ನೆಲೆಗಳಲ್ಲಿ ದೊರೆತ ಆಯುಧೋಪಕರಣಗಳು ಫ್ರಾನ್ಸ್, ದಕ್ಷಿಣ ಆಫ್ರಿಕಾದ ವಿವಿಧ ನೆಲೆಗಳಲ್ಲಿ ಮತ್ತು ಮಹಾರಾಷ್ಟ್ರ(ಚರ್ಕಿ) ಮತ್ತು ಪಂಜಾಬಿನ (ಸೋನಾರಗಾಂ) ವಿವಿಧ ನೆಲೆಗಳಲ್ಲಿ ದೊರೆತ ಆಯುಧಗಳಿಗೆ ಹೋಲಿಕೆಯಾಗುತ್ತವೆ.

ಇಲ್ಲಿ ದೊರೆತ ಉಪಕರಣಗಳನ್ನು ವಿವಿಧ ಕೆಲಸ ಕಾರ್ಯಗಳಿಗಾಗಿ ಆದಿಮಾನವ ಉಪಯೋಗಿಸಿಕೊಂಡಿದ್ದಾನೆ. ಒಂದು ಉದ್ದನೆಯ ಕೋಲಿಗೆ ಕೈಕೊಡಲಿಯನ್ನು ಗಟ್ಟಿಯಾಗಿ ಕಟ್ಟಿ ಅದನ್ನು ಗಡ್ಡೆ ಗೆಣಸು ಅಗೆಯುವುದಕ್ಕೆ, ಇಲ್ಲವೇ ಪ್ರಾಣಿಗಳನ್ನು ಬೇಟೆಯಾಡುವುದಕ್ಕೆ ಉಪಯೋಗಿಸಿರಬಹುದು. ಅಲ್ಲದೇ ಚಕ್ಕೆ ಕಲ್ಲಿನ ದುಂಡು ಕಲ್ಲನ್ನು ಚಕ್ರ ಎಸೆತದ ಹಾಗೆ ಪ್ರಾಣಿಗಳಿಗೆ ಗುರಿ ಇಟ್ಟು ಹೊಡೆಯಲು ಉಪಯೋಗಿಸಿ ಕೊಂಡಿದ್ದಾನೆ. ಮಚ್ಚು ಮತ್ತು ಸೀಳುಗತ್ತಿಗಳು ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನು ತುಂಡು ತುಂಡು ಮಾಡಲು, ಎಲುಬುಗಳನ್ನು ಸೀಳಿ ಅವುಗಳಲ್ಲಿಯ ಮಜ್ಜೆಯನ್ನು ಸಂಗ್ರಹಿಸಲು ಉಪಯೋಗಿಸರಬಹುದು.

ಈ ಕಾಲದ ಆದಿಮಾನವ ನಿಸರ್ಗದಲ್ಲಿ ದೊರೆಯುವ ಆಹಾರ ಸಂಪಾದನೆಯ ಹಂತದಲ್ಲಿದ್ದರೂ ನೈಸರ್ಗಿಕ ಗವಿ ಮುಂತಾದ ರಕ್ಷಣೆಯ ಸ್ಥಳಗಳಲ್ಲಿ ಇರುತ್ತಿದ್ದನೆಂಬುದು ಮಾತ್ರ ತಿಳಿದುಬಂದಿದೆ. ಅವರ ನಡುವಿನ ಜೀವನಕ್ರಮದ ಬಗ್ಗೆ ಇದುವರೆಗೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ಕಾಲದ ಆದಿಮಾನವನ ಆಸ್ತಿ, ಅವಶೇಷಗಳು ಇದುವರೆಗೂ ಭಾರತದ ಯಾವ ಭಾಗದಲ್ಲೂ ದೊರೆಯದೇ ಇರುವುದರಿಂದ ಆ ಜನರ ವಿಶಿಷ್ಟ ದೈಹಿಕ ಲಕ್ಷಣಗಳಾಗಲೀ ವಿಕಾಸಗಳಾಗಲೀ ಇಲ್ಲಿಯವರೆಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಹಂತದ ಮಾನವನ ದೈನಂದಿನ ಕಾರ್ಯಚಟುವಟಿಕೆಯನ್ನು ಆಹಾರ ಸಂಗ್ರಹಣೆ ಮತ್ತು ಬೇಟೆಗಾರಿಕೆ ಸಂಸ್ಕೃತಿಯೆಂದು ಕರೆಯಲಾಗಿದೆ. ಈ ಕುರಿತಂತೆ ಹೆಚ್ಚಿನ ಶೋಧನೆಯಾದಲ್ಲಿ ಮಾತ್ರ ಹೆಚ್ಚು ಸ್ಪಷ್ಟ ಆಧಾರಗಳು ದೊರಕಬಹುದು.

೨. ಮಧ್ಯ ಹಳೇಶಿಲಾಯುಗ (Middle paleolattic)

ಕರ್ನಾಟಕದ ಕೃಷ್ಣ, ತುಂಗಭದ್ರಾ ಪ್ರದೇಶಗಳಲ್ಲಿ ಈ ಸಂಸ್ಕೃತಿಗೆ ಸೇರಿದ ನಿವೇಶನಗಳು ದೊರೆತಿವೆ. ಅವುಗಳಲ್ಲಿ ಸಂಗನಕಲ್ಲು, ಬ್ರಹ್ಮಗಿರಿ, ನಿಟ್ಟೂರು, ಸಾಲ್ವಡಗಿ, ಮಟಕದೇವನ ಹಳ್ಳಿ (ಬುಡಪನಹಳ್ಳಿ), ಮತ್ತು ಕೂಚುಬಾಳು, ಕೋವಳ್ಳಿ (ಮುದ್ದೇಬಿಹಾಳು ತಾಲೂಕು ಈಗ ಬಾಗಲಕೋಟೆ ಜಿಲ್ಲೆ), ಮೊದಲಾದೆಡೆ ದೊರೆತಿವೆ. ಈ ಕಾಲದಲ್ಲಿ ಆದಿ ಹಳೇ ಶಿಲಾಯುಗ ಕಾಲಕ್ಕಿಂತಲೂ ಭಿನ್ನವಾಗಿ ಉತ್ತಮ ಜಾತಿಯ ಜಾಸ್ಪರ್, ಚರ್ಟ್‌ ಮೊದಲಾದ ಶಿಲೆಗಳನ್ನು ಬಳಸಿ ವಿವಿಧ ಆಯುಧೋಪಕರಣಗಳನ್ನು ತಯಾರಿಸಲಾಗಿದೆ. ಸ್ವಲ್ಪ ದಪ್ಪನಾದ ಸಣ್ಣ ಚಕ್ಕೆಗಳನ್ನು ಉಪಕರಣಗಳನ್ನಾಗಿ ರೂಪಿಸಲಾಗಿದೆ. ಅವುಗಳಲ್ಲಿ ಅಂಚುಗಳಿಂದ ಹೆರೆಯಬಹುದಾದ ಬಹೋಪಯೋಗಿ ಚಕ್ಕೆಗಳು ಮುಖ್ಯವಾಗಿವೆ. ಆದಿ ಹಳೇಶಿಲಾಯುಗದ ಹಾಗೂ ಈ ಕಾಲದಲ್ಲಿಯ ಈ ಉಪಕರಣಗಳನ್ನು ಯಾವ ರೀತಿ ಉಪಯೋಗಿಸುತ್ತಿದ್ದರೆಂಬುದು ಸ್ವಲ್ಪವಾದರೂ ತಿಳಿದಿಲ್ಲ. ಆದರೂ ಅನೇಕ ಬದಲಾವಣೆಗಳನ್ನು ಈ ಹಂತದಲ್ಲಿ ಆದಿಮಾನವ ಮಾಡಿಕೊಂಡಿದ್ದನ್ನು ವಿದ್ವಾಂಸರು ಗುರುತಿಸಿದ್ದಾರೆ.

೧. ಈ ಕಾಲದ ಆದಿಮಾನವ ನದಿಯಂಚಿನಲ್ಲಿ ಅಷ್ಟೇಯಲ್ಲದೇ ಬಯಲುಗಳಲ್ಲಿ ವಾಸ ಮಾಡಲು ರೂಢಿಸಿಕೊಂಡನು.

೨. ವೇಗವಾಗಿ ಓಡಬಲ್ಲ ಪ್ರಾಣಿಗಳನ್ನು ಬೇಟೆಯಾಡಲು ಬಿಲ್ಲು ಬಾಣಗಳ ಪ್ರಯೋಗ.

೩. ಮೈಮುಚ್ಚಿಕೊಳ್ಳಲು ಮರದ ತೊಗಟೆ ಇಲ್ಲವೆ ಪ್ರಾಣಿಗಳ ಚರ್ಮವನ್ನು ಬಳಸಿಕೊಳ್ಳುತ್ತಿದ್ದ.

೪. ನದಿ, ಹಳ್ಳಗಳನ್ನು ದಾಟಲು ಬುಟ್ಟಿಯಾಕಾರದ ಕಿರು ದೋಣಿಗಳನ್ನು ಈ ಕಾಲದಲ್ಲೂ ಮಾಡಿಕೊಂಡಿರಬಹುದೆಂದು ಊಹಿಸಲಾಗಿದ್ದು, ಇವೆಲ್ಲವನ್ನೂ ಆದಿಮಾನವನು ತನ್ನ ಜೀವನಕ್ರಮದಲ್ಲಿ ಮಾಡಿಕೊಂಡ ಕೆಲವು ಸುಧಾರಣೆ / ಬದಲಾವಣೆಗಳನ್ನು ಸೂಚಿಸುತ್ತದೆ.

೩. ಅಂತ್ಯ ಹಳೇಶಿಲಾಯುಗ ಸಂಸ್ಕೃತಿ (Lower Paleolittic)

ಹಳೇಶಿಲಾಯುಗ ಸಂಸ್ಕೃತಿಯ ಕೊನೆಯ ಹಂತವೇ ಅಂತ್ಯ ಹಳೆಯ ಶಿಲಾಯುಗ. ತುಲನಾತ್ಮಕ ಪರಿಶೋಧನೆಯಂತೆ ಈ ಹಂತದ ನೆಲೆಗಳು ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಮೊಟ್ಟ ಮೊದಲಿಗೆ ೧೯೫೯ರಲ್ಲಿ ಸಾಳವಾಡಗಿಯಲ್ಲಿ ಉಪಕರಣ ಉತ್ಪಾದನಾ ನೆಲೆಯನ್ನು ಅ. ಸುಂದರ ಅವರು ಗುರುತಿಸಿದರು. ಇದೇ ನಿವೇಶನದಲ್ಲಿ ಸಂಗ್ರಹಿಸಿದ ಉಪಕರಣಗಳ ವಿಷಯವಾಗಿ ಎಂ.ಶೇಷಾದ್ರಿ ಅವರು ವಿವರಣಾತ್ಮಕ ಅಧ್ಯಯನವನ್ನು ಮಾಡಿದ್ದಾರೆ. ಮಾಂಜ್ರಾ, ದೋಣ, ಕೃಷ್ಣ, ತುಂಗಾ, ಶಿಂಷಾ ಹಾಗೂ ಪೆನ್ನಾರ್ ನದಿ ಕೊಳ್ಳಗಳಲ್ಲಿ ಈ ನೆಲೆಗಳು ಹೆಚ್ಚಾಗಿ ಕಂಡುಬಂದಿವೆ.

ನೀಳ ಅಲಗುಗಳು ಹೆರೆಯುವ ವಿವಿಧ ಮಾದರಿಗಳು, ಮೊನೆ ಹೊಂದಿರುವ ಮಾದರಿಗಳು, ಚೂರಿ ತರಹದ ಚಕ್ಕೆ, ಪೊರೆಯುಳಿ, ಕೊರಗ ಮೊದಲಾದ ಮಾದರಿಯ ಆಯುಧಗಳು ಈ ಹಂತದ ವೈಶಿಷ್ಟ್ಯ ಉಪಕರಣಗಳಾಗಿವೆ. ಇವುಗಳಲ್ಲಿ ಅಲಗು, ಮೊನೆ, ಹೆರೆಯುವ ಮಾದರಿ ಉಪಕರಣಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಕೇವಲ ಶಿಲಾಯುಧಗಳೇ ಅಷ್ಟೆ ಅಲ್ಲದೇ ಎಲುಬು, ದಂತ ಮತ್ತು ಜಿಂಕೆಯ ಕವಲು ಕೊಂಬು ಮೊದಲಾದವುಗಳಿಂದ ಉಪಕರಣಗಳನ್ನು ತಯಾರಿಸಿ ಬಳಸಿದ ಉದಾಹರಣೆಗಳಿವೆ. ಈ ಹಂತದಲ್ಲಿ ಮೂರು ತಂತ್ರಗಳನ್ನು ಅಳವಡಿಸಿಕೊಂಡು ಉಪಕರಣಗಳನ್ನು ತಯಾರಿಸುತ್ತಿದ್ದರು. ಅವುಗಳೆಂದರೆ ೧) ಪರೋಕ್ಷ ಒತ್ತಡ ತಂತ್ರ ೨) ವೃಕ್ಷ ಸ್ಥಳ ಒತ್ತಡ ೩) ನೇರ ಒತ್ತಡ ತಂತ್ರ ಈ ಹಂತದ ಉಪಕರಣಗಳ ಗಾತ್ರ ಚಿಕ್ಕದು. ಈ ಉಪಕರಣಗಳನ್ನು ಹಲವು ಕಾರ್ಯಗಳಿಗಾಗಿ ಬಳಸುವಂತೆ ರೂಪಿಸಿಕೊಳ್ಳಲಾಗುತ್ತಿತ್ತು. ಈ ಹಂತದ ತಂತ್ರ ಜ್ಞಾನವು ಹೆಚ್ಚು ಸುಧಾರಿಸಿತ್ತು.

ಈ ಕಾಲಕ್ಕೆ ಸೇರಿದ ಅವಶೇಷಗಳನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇಂಗಾಲ ೧೪ ಪರೀಕ್ಷೆಯಂತೆ ಈ ಹಂತದ ಕಾಲಮಾನವು ಇಂದಿಗೆ ಸುಮಾರು ೧೦,೦೦೦ ವರ್ಷಗಳಿಂದ ೨೫,೦೦೦ ವರ್ಷಗಳಷ್ಟು ಪೂರ್ವದಲ್ಲಿ ಇದ್ದಿತೆಂದು ತಿಳಿಯುತ್ತದೆ.

೪. ಸೂಕ್ಷ್ಮ ಶಿಲಾಯುಗ ಸಂಸ್ಕೃತಿ (Mesolittic Culture) (ಕ್ರಿ.ಪೂ. ೭,೦೦೦-೩,೦೦೦)

ಹಳೆಯ ಶಿಲಾಯುಗ ಮತ್ತು ನೂತನ ಶಿಲಾಯುಗದ ನಡುವಿನ ಸಾಂಸ್ಕೃತಿಕ ಹಂತವನ್ನು ಮಧ್ಯ ಇಲ್ಲವೇ ಸೂಕ್ಷ್ಮ ಶಿಲಾಯುಗವೆಂದು ಕರೆಯಲಾಗಿದೆ. ಗ್ರೀಕ್ ಭಾಷೆಯಲ್ಲಿ ಮೆಸೋ ಎಂದರೆ ಸೂಕ್ಷ್ಮ ಎಂದು, ಲಿತಿಕ್ ಎಂದರೆ ಶಿಲೆ ಎಂಬ ಅರ್ಥಗಳಿವೆ. ಈ ಕಾಲದಲ್ಲಿ ಮಾನವ ಶಿಲೆಯಿಂದ ಬಹಳ ಸೂಕ್ಷ್ಮ ಉಪಕರಣಗಳನ್ನು ತಯಾರಿಸಿಕೊಂಡು ಅವುಗಳನ್ನು ತನ್ನ ಬಳಕೆಗೆ ಬಳಸಿಕೊಂಡಿದ್ದರಿಂದ ಈ ಕಾಲಘಟ್ಟವನ್ನು ಸೂಕ್ಷ್ಮ ಶಿಲಾಯುಗ ಸಂಸ್ಕೃತಿ (ಮೆಸೋಲಿತಿಕ್ ಕಲ್ಚರ್) ಎಂದು ಕರೆಯಲಾಗುತ್ತದೆ. ಮಾನವ ಜೀವನದ ಸಾಂಸ್ಕೃತಿಕ ಮುನ್ನಡೆಯಲ್ಲಿ ಈ ಹಂತದ ಪಾತ್ರ ಗಮನಾರ್ಹವಾದುದು. ಈ ಅವಧಿಯಲ್ಲಿ ಬೇಟೆಯಾಡುವುದು, ಮೀನು ಹಿಡಿಯುವುದು. ಆಹಾರ ಸಂಗ್ರಹಣೆ ಜೀವನದ ಅಂದಿನ ವ್ಯವಸ್ಥೆಯಾಗಿತ್ತು. ಇದರಲ್ಲಿ ಮುಖ್ಯ ಬೆಳವಣಿಗೆಯೆಂದರೆ ಬೇಸಾಯ ಮಾಡುವುದು, ಇದು ನಂತರದ ನೂತನ ಶಿಲಾಯುಗದಲ್ಲಿ ಅಭಿವೃದ್ಧಿಯಾಯಿತು. ಈ ಕಾಲದ ಆಹಾರೋತ್ಪಾದನೆಯ ಬೆಳವಣಿಗೆಯಿಂದಾಗಿ ಈ ಕಾಲವನ್ನು ಸ್ಥಿತ್ಯಂತರ (Mesolithic) ಹಂತವೆಂದು ಗುರುತಿಸಲಾಗಿದೆ.

ಭಾರತದ ಹಲವಾರು ಸ್ಥಳಗಳಲ್ಲಿ ಇದರ ಕುರುಹುಗಳು ಶೋಧಿತವಾಗಿವೆ. ಕರ್ನಾಟಕದಲ್ಲಿ ಈ ಕಾಲದ ನಿವೇಶನಗಳು ೧೮೮೯ರ ವೇಳೆಗೆ ಬೆಳಕಿಗೆ ಬಂದಿದ್ದರೂ ಅಲ್ಲಿ ದೊರೆತ ಉಪಕರಣಗಳ ವೈಜ್ಞಾನಿಕ ಅಧ್ಯಯನ ಆರಂಭವಾದುದು ೧೯೫೬ರ ನಂತರವೇ. ಬ್ರಹ್ಮಗಿರಿ ಉತ್ಖನನದಲ್ಲಿ[14] ಈ ಹಂತದ ಉಪಕರಣಗಳು ಗಮನಾರ್ಹ ಪ್ರಮಾಣದಲ್ಲಿ ದೊರಕಿದ್ದರೂ ಅವುಗಳನ್ನು ನಿರ್ದಿಷ್ಟ ಹಾಗೂ ಪ್ರತ್ಯೇಕ ಸ್ಥಳದಲ್ಲಿದ್ದುದನ್ನು ಗುರುತಿಸದೆ ನೂತನ ಶಿಲಾಯುಗಕ್ಕೆ ಸೇರಿದವೆಂದು ಆರಂಭದಲ್ಲಿ ಭಾವಿಸಲಾಗಿತ್ತು.

ಈ ಸಂಸ್ಕೃತಿಯ ಶಿಲೋಪಕರಣಗಳು ಸುರಪುರ ದೋಆಬ್,[15]ಬೆಂಗಳೂರು ಮತ್ತು ಚಿತ್ರದುರ್ಗ ಜಿಲ್ಲೆ,[16]ಕೃಷ್ಣಾ ನದಿ ಪಾತ್ರ[17]ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಮತ್ತು ಉಪ್ಪಿನಂಗಡಿ,[18]ಬೀದರ್ ಜಿಲ್ಲೆಯ ಮಾಂಜ್ರ ಮತ್ತು ಕಾರಂಜಾಕಣಿವೆ ಪ್ರದೇಶ,[19]ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆ[20]ಹಾಗೂ ತುಮಕೂರು ಜಿಲ್ಲೆಯ ಶಿಂಷಾ ಮತ್ತು ಪೆನ್ನಾರ್ ನದಿಪ್ರಾಂತ[21]ಗಳಲ್ಲಿ ದೊರೆತಿರುವ ನೆಲೆಗಳು ಈ ಸಂಸ್ಕೃತಿಯ ವಿಸ್ತೃತ ಬೆಳವಣಿಗೆಗೆ ಹಾಗೂ ಪ್ರಸರಣದ ಬಗೆಗೆ ತಿಳಿಯಲು ಸಹಾಯಕವಾಗಿವೆ.

ಈ ಸಂಸ್ಕೃತಿಯ ನೆಲೆಗಳ ಅಧ್ಯಯನವು ಆಗಿನ ಜನರ ಆಹಾರ ಪದ್ಧತಿ, ವಸತಿ ಕ್ರಮ, ಶವಸಂಸ್ಕಾರ ಪದ್ಧತಿ ಮುಂತಾದ ಪ್ರಮುಖ ಅಂಶಗಳ ಬಗೆಗೆ ಕುತೂಹಲವಾದ ಮಾಹಿತಿಗಳನ್ನೊದಗಿಸುವುದರ ಜೊತೆಗೆ ಕೆಲವೇ ನಿರ್ಧಿಷ್ಟ ನೆಲೆಗಳಲ್ಲಿ ಬೆಳಕಿಗೆ ಬಂದಿರುವ ಆ ಕಾಲದ ಬಂಡೆಯ ಮೇಲಿನ ವರ್ಣಚಿತ್ರಗಳು ಇವರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಪದ್ಧತಿ ಹಾಗೂ ನಂಬಿಕೆಗಳ ಬಗೆಗೆ ತಿಳಿಸುವುದರ ಜೊತೆಗೆ ಅವರ ಕಲೆಗಾರಿಕೆಯ ವಿಶಿಷ್ಟತೆಯನ್ನು ತಿಳಿಯಪಡಿಸುತ್ತದೆ ಎಂದು ಅ. ಸುಂದರ ಅವರು ಅಭಿಪ್ರಾಯಪಟ್ಟಿದ್ದಾರೆ.[22]ಈ ಸಂಸ್ಕೃತಿಯ ಹಂತದಲ್ಲಿ ಮಾನವನು ತನ್ನ ಅಲೆಮಾರಿ ಜೀವನ ಕೈಬಿಟ್ಟು, ಆತ ಒಂದೆಡೆ ನೆಲೆ ನಿಂತಿದ್ದೂ ಅಲ್ಲದೆ ಬೇಟೆ, ಮೀನುಗಾರಿಕೆ ಆಹಾರ ಸಂಗ್ರಹಣೆಯ ಜೊತೆಗೆ ಆಹಾರ ಉತ್ಪಾದನೆಯನ್ನೂ ಆರಂಭಿಸಿದನು. ಆದ್ದರಿಂದ ಈ ಕಾಲಮಾನವು ಮಾನವನ ಸ್ಥಿತ್ಯಂತರದ ಹಂತವಾಗಿದೆ. ಈ ಅಲ್ಪಸಮಯದ ಮುನ್ನಡೆಯು ಮಾನವ ಇತಿಹಾಸದಲ್ಲಿ ಗಮನಾರ್ಹವಾಗಿದೆ.

ಈ ಹಂತದ ಶಿಲೋಪಕರಣಗಳು ಅತಿ ಕಿರುಗಾತ್ರದವುಗಳಾಗಿವೆ. ಇದು ಈ ಸಂಸ್ಕೃತಿಯ ವಿಶಿಷ್ಟ ಲಕ್ಷಣವಾಗಿದ್ದು ವೈವಿಧ್ಯಮಯ ಉಪಕರಣಗಳು ಕಂಡುಬಂದಿವೆ. ನೀಳ ಚಕ್ಕೆ ಮಾದರಿ, ಹೆರಚಕ್ಕೆ ಮಾದರಿ, ಮೊನೆ ಮಾದರಿ, ಬಾಣದ ಮೊನೆ, ಕೊರಗ ಕೊರೆಯುಳಿ, ಅರ್ಧಚಂದ್ರಾಕೃತಿ, ದಬ್ಬಳ ಮೊದಲಾದ ಉಪಕರಣಗಳು ಕಂಡುಬಂದಿವೆ. ಈ ಉಪಕರಣಗಳ ಮಾದರಿಯನ್ನು ಅವುಗಳ ಆಕಾರ ಗಾತ್ರ ಹಾಗು ಕಾರ್ಯನಿರ್ವಹಿಸುವ ಅಂಚು ಹಾಗೂ ಮೊನೆ ಇವುಗಳನ್ನಾಧರಿಸಿ ವಿವಿಧ ಗುಂಪು ಹಾಗೂ ಉಪ ಗುಂಪುಗಳನ್ನಾಗಿ ವಿಭಾಗಿಸಲಾಗಿದ್ದು ವಿವಿಧ ಕಾರ್ಯಗಳಿಗೆ ನಿರ್ದಿಷ್ಟ ಮಾದರಿಯ ಉಪಕರಣಗಳ ಬಳಕೆಯಾಗುತ್ತಿತ್ತೆಂದು ತಿಳಿಯುತ್ತದೆ. ಈ ಕಾಲದ ವರ್ಣಚಿತ್ರಗಳನ್ನು ಹಲವು ನೆಲೆಗಳಲ್ಲಿ ಗುರುತಿಸಲಾಗಿದೆ. ಒಟ್ಟಿನಲ್ಲಿ ಈ ವಿವಿಧ ಹಂತಗಳ ಅಧ್ಯಯನದ ಇಣುಕುನೋಟವು ತಿಳಿಯಪಡಿಸುವಂತೆ ಅಲೆಮಾರಿ ಹಂತದ ಮಾನವನ ಜೀವನಕ್ರಮವು ಕಾಲ ಕ್ರಮೇಣ ಸಹಬಾಳ್ವೆಗೆ ಎಡೆಮಾಡಿಕೊಟ್ಟಿತು. ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಹಂತದಲ್ಲಿ ಜನರು ಪರಸ್ಪರ ತಿಳುವಳಿಕೆಯಿಂದ ವ್ಯವಸ್ಥಿತ ಸಮಾಜವನ್ನು ರೂಪಿಸತೊಡಗಿದರು. ಈ ಸಂಸ್ಕೃತಿಯು ಇಂದಿಗೆ ಸುಮಾರು ೨೫೦೦ ವರ್ಷದಿಂದ ೧೦೦೦೦ ವರ್ಷಗಳಷ್ಟು ಪೂರ್ವದಲ್ಲಿದ್ದಿತ್ತೆಂದು ತಿಳಿಯುತ್ತದೆ.

ಹಂಪಿ ಪರಿಸರದ ಕುಡಿತಿನಿ, ಸಂಗನಕಲ್ಲು (ಬಳ್ಳಾರಿ ತಾ.)[23] ಕಾರಿಗನೂರು, ಗಾದಿಗನೂರು, ತಿಮ್ಮಲಾಪುರ, ಡಣಾಪುರ, ಭುವನಹಳ್ಳಿ, ಹಂಪಿ (ಹೊಸಪೇಟೆ ತಾ.)[24]ಅಪ್ಪಲಾಪುರ, ಅಯ್ಯನಹಳ್ಳಿ, ಕುರೆಕುಪ್ಪ, ಕೋದಾಳು, ತೋರಣಗಲ್ಲು, ಮಲ್ಲಾಪುರ, ಮಾದರಹಳ್ಳಿ, ಯಶವಂತಪುರ, ರಾಜಾಪುರ, ರಾಂಪುರ (ಸಂಡೂರು ತಾ.),[25]ಮಾಡಲಗೇರಿ (ಹರಪನಹಳ್ಳಿ ತಾ.)[26]ಮುಂತಾದ ಸ್ಥಳಗಳಲ್ಲಿ ಈ ಹಂತದ ನೆಲೆಗಳಿವೆ. ೧೯೬೫ರಲ್ಲಿ ಪುಣೆ ಡೆಕ್ಕನ್ ಕಾಲೇಜಿನ ತಂಡದವರು ಸಂಗನಕಲ್ಲು ನೆಲೆಯಲ್ಲಿ ಉತ್ಖನನ ಕೈಗೊಂಡರು.[27] ಇದರಿಂದ ಉಪಕರಣಗಳನ್ನು ತಯಾರಿಸುತ್ತಿದ್ದ ಕಾರ್ಯಗಾರವು ಬೆಳಕಿಗೆ ಬಂತು. ಅಲ್ಲದೆ ಇದೇ ತಂಡ ಬಳ್ಳಾರಿಯ ಮೋಕ ರಸ್ತೆಯಲ್ಲಿರುವ ಬಂಗಲೆ ತೋಟದ ಹತ್ತಿರ ನಡೆಸಿದ ಉತ್ಖನನದಲ್ಲಿ ಚರ್ಟ್‌, ಕ್ವಾರ್ಜ್‌, ವೈಟ್‌ಕ್ವಾರ್ಜ್‌ ಶಿಲೆಯಲ್ಲಿ ತಯಾರಿಸಿದ ಉಪಕರಣ ಮತ್ತು ಇವುಗಳ ತಯಾರಿಕೆಗಾಗಿ ಬಳಸಿದ ಶಿಲಾಗಟ್ಟಿಗಳು ಕಂಡುಬಂದವು. ಭುವನಹಳ್ಳಿಯಲ್ಲಿ ವಿವಿಧ ಮಾದರಿಯ ಉಪಕರಣಗಳನ್ನು ಚರ್ಟ್‌ ಶಿಲೆಯಲ್ಲಿ ತಯಾರಿಸಲಾಗಿದೆ. ಅವುಗಳಲ್ಲಿ ಸಮಾನಾಂತರ ಅಂಚುಗಳುಳ್ಳ ಅಲಗುಗಳು, ಚಿಕ್ಕ ಅಲಗುಗಳು, ಬಾಗಿದ ಆಲಗುಗಳು, ಮೊನೆಗಳು, ಸಣ್ಣ ಬೈರಿಗೆಗಳು, ಆಹಾರ ಕತ್ತರಿಸುವ ಚಿಕ್ಕ ಮಚ್ಚುಗಳು ಮೊದಲಾದವು ಪ್ರಮುಖವಾಗಿವೆ. ಈ ಸಂಸ್ಕೃತಿಯ ಕುರಿತು ಹೆಚ್ಚಿನ ಅಧ್ಯಯನಗಳಾದಲ್ಲಿ ಹೆಚ್ಚಿನ ಮಾಹಿತಿ ದೊರಕುತ್ತದೆ.

 

[1] ಡಾ. ಲೀಲಾ ೨೦೦೩, ಜೀವವಿಕಾಸ

[2] ಅದೇ

[3] ಚಿತ್ರದುರ್ಗದ ಪ್ರೊ. ಲಕ್ಷ್ಮಣ್ ತೆಲಗಾವಿಯವರ ಸಂಶೋಧನಾ ತಂಡ ಮತ್ತು ಡಾ.ತಿಪ್ಪೇಸ್ವಾಮಿಯವರ ಕೂಡ್ಲಿಗಿಯ ಡಿಸ್ಕವರಿ ಟ್ರೂಪ್ ಈ ನಿಟ್ಟಿನಲ್ಲಿ ಪ್ರಶಂಸನೀಯ ಕೆಲಸ ಮಾಡಿವೆ.

[4] ಪ್ರೀ-ಹಿಸ್ಟಾರಿಕ್ ಪೀರಿಯಡ್ ಎಂದು ಕರೆಯಲಾಗುತ್ತದೆ.

[5] ಸ್ಟೋನ್ & ಮೆಟಲ್ ಏಜ್ ಎಂಬ ಭಾಗಗಳು.

[6] Sundar A., `Hampi Ancient Kishkindha’, `Visvambhara’ (V.S. Patak Festscrift),

[7] ಬಾಗಳಿ : I.A.R., ೧೯೮೩-೮೪,

[8] ಅ. ಬಾದನಹಟ್ಟಿ : Foot R.B., Ind, Pre-Proto Ant. And I.A.R., ೧೯೯೩-೯೪,

[9] ಅ. ಕಮಲಾಪುರ : I.A.R., ೧೯೭೬-೭೭,

[10] ನಿಟ್ಟೂರು : Ansari Z.D. Indian Antiquary 3rd Series and Sankalia, H.D. Prehistory and Prothistory of India and Pakistan.

[11] ಅ. ಕುರೆಕುಪ್ಪೆ : Foot R.B., Indi, Pre-Proto Ant. And I.A.R., ೧೯೮೭-೮೮,

ಅ. ಜೋಗ : Foot R.B., Indi, Pre-Proto Ant.

ಇ. ಮಲ್ಲಾಪುರ : Taylor M, Journal of Bombay Branch, Royal Asiatic Society 4 and I.A.R, ೧೯೮೭-೮೮

ಈ. ದರೋಜಿ : Foot R.B., Indi, Pre-Proto Ant.

[12] ಕುರುವತ್ತಿ : Foot R.B., Indi, Pre-Proto Ant.

[13] I.A.R., ೧೯೭೬-೭೭,

[14] Ansari Z.D., Indian Antiquary 3rd Series ೧೪. ವೀಲರ್ ೧೯೮೪;೧೮೦-

[15] ಪದ್ದಯ್ಯ ಕೆ ೧೯೭೦,

[16] ಇಂ.ಆ.ರಿ. ೧೯೭೫-೭೬

[17] ಪಪ್ಪು ಆರ್.ಎಸ್‌. ೧೯೭೪

[18] ರಾಜೇಂದ್ರನ್ ವಿ. ೧೯೮೩;

[19] ಷಡಕ್ಷರಯ್ಯ ಆರ್. ಎಂ. ೧೯೯೫

[20] ಪೂಣಚ್ಚ, ಕೆ.ವಿ. ೧೯೯೦

[21] ಶಿವತಾರಕ್ ಕೆ.ಬಿ. ೧೯೯೯

[22] ಸುಂದರ ಅ. ೧೯೯೪

[23] ಕುಡತಿನಿ : Allchin F.R., Neolithic Cattle-Keepers of South India, ಸಂಗನಕಲ್ಲು : Subba Rao B., Stone age Culture of Bellary and Sankalia H.D. Mesolithic and premesolithic Industries from Excavations at Sanganakalu, Bellary

[24] ಅ. ಕಾರಿಗನೂರು : I.A.R., ೧೯೯೩-೯೪,

ಆ. ತಿಮ್ಮಲಾಪುರ : ಪತ್ರಿಕಾ ವರದಿ ಕನ್ನಡ ಪ್ರಭ, ೧೪.೦೮.೯೮,

ಇ. ಡಣಾಪುರ : I.A.R., ೧೯೯೩-೯೪,

ಈ. ಭುವನಹಳ್ಳಿ : I.A.R., ೧೯೯೩-೯೪,

[25] ಅ. ಅಪ್ಪಲಾಪುರ : I.A.R., ೧೯೮೭-೮೮

[26] ಅ. ಮಾಡಲಗೇರಿ : ೧೯೯೮,

[27] Sankalia H.D., Mesolithic and Pre Mosolithic Industries