ಕೆರೆಗಳನ್ನು ಕಟ್ಟಿಸುವುದು ಎಷ್ಟು ಮುಖ್ಯವಾಗಿದ್ದಿತೋ, ಅವುಗಳನ್ನು ಸಂರಕ್ಷಿಸುವುದೂ ಅಷ್ಟೇ ಮುಖ್ಯವಾಗಿದ್ದಿತೆಂಬುದು ವಿಜಯನಗರ ಕಾಲದ ಅನೇಕ ಶಾಸನಗಳಿಂದ ತಿಳುದುಬರುವ ವಿಷಯವಾಗಿದೆ. ಕೆರೆಗಳನ್ನು ಕೆಲವು ದಾತರು ನಿರ್ಮಿಸಿದರೆ ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಮತ್ತೆ ಕೆಲವರು ವಹಿಸಿಕೊಳ್ಳುತ್ತಿದ್ದರು. ಈ ದಿಸೆಯಲ್ಲಿ ಕೆರೆಗಳನ್ನು ರಕ್ಷಿಸುವವರಿಗೆ ಅನೇಕ ಸವಲತ್ತುಗಳನ್ನು ನೀಡಿರುವುದು ಕಂಡುಬರುತ್ತದೆ. ಇಂತಹ ರಕ್ಷಕರಿಗೆ, ಧನ, ಧಾನ್ಯ, ದಾನ, ದತ್ತಿ, ಭೂಮಿ ಮುಂತಾದ ಅನೇಕ ರೀತಿಯ ಕೊಡುಗೆಗಳನ್ನಿತ್ತು ಉತ್ತೇಜಿಸುತ್ತಿದ್ದರು. ಇದರ ಮೂಲಕ ಪ್ರಜಾಹಿತಾತ್ಮಕ ಕಾರ್ಯದಲ್ಲಿ ಜನರನ್ನು ತೊಡಗಿಸಿದ್ದಾದರೆ, ಮತ್ತೊಂದು ದೃಷ್ಟಿಕೋನದಿಂದ ನೋಡಿದ ಪಕ್ಷದಲ್ಲಿ, ಕೆರೆಯ ಆಯಕಟ್ಟಿನ ಪ್ರದೇಶಗಳಿಂದ ಹೆಚ್ಚು ಇಳಿವರಿಯನ್ನು ಪಡೆಯುತ್ತಿದ್ದರು ಎಂಬುದೇ ನಿಜವಾದ ಕಾರಣ. ಇದರ ಫಲಿತವಾಗಿ ಕೆರೆಯು ಯಾವಾಗಲೂ ಸುಸ್ಥಿತಿಯಲ್ಲಿ ಇರುತ್ತಿದ್ದವು ಎಂಬುದು ನಿರ್ವಿವಾದ. ವಿಜಯನಗರ ಕಾಲದ ಇತಿಹಾಸವನ್ನು ಗಮನಿಸಿದಾಗಿ ಕೆಲವು ಕುತೂಹಲಕಾರಿಯಾದ ಸಂಗತಿಗಳು ಕಂಡುಬಂದಿವೆ. ಇವರ ಕಾಲದ ಬಹುತೇಕ ಶಾಸನಗಳಲ್ಲಿ, ಕೆರೆಗಳ ರಕ್ಷಣೆ, ಪೋಷಣೆ ಮತ್ತು ತತ್ಸಂಬಂಧವಾದ ವಿಷಯಗಳು ಒಳಗೊಂಡಿವೆ. ಇದು ವಿಜಯನಗರ ಕಾಲದಲ್ಲಿ ಕೆರೆ ನೀರಾವರಿ ಪದ್ಧತಿಗೆ ಇದ್ದಂತಹ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಕನ್ನಡಿಯಂತಿದೆ. ವಿಜಯನಗರದರಸರು ಮಾಡಿದಂತಹ ಈ ಏರ್ಪಾಡುಗಳು ಅತ್ಯಂತ ಸಮರ್ಪಕವಾಗಿಯೂ ಮತ್ತು ಯಶಸ್ವಿಯಾಗಿಯೂ ಸಾಗುತ್ತಾ ಬಂದಿರುವುದನ್ನು ನಾವು ವಿಜಯನಗರ ಕಾಲದ ಕೆರೆ ನೀರಾವರಿ ಪದ್ಧತಿಯನ್ನು ಅಭ್ಯಸಿಸಿದಾಗ ತಿಳಿದುಬರುತ್ತದೆ. ಈ ಅಧ್ಯಾಯದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಕೆರೆಗಳ ರಕ್ಷಣಾ ಕಾರ್ಯಕ್ಕೆ ನೀಡಿದ ಪ್ರೋತ್ಸಾಹ ಮತ್ತು ಕೆಲವು ಕೆರೆ ತೆರಿಗೆ ಪದ್ಧತಿಯನ್ನು ಕುರಿತು ಚರ್ಚಿಸಲಾಗಿದೆ.

ವಿಜಯನಗರದರಸರ ಕಾಲದಲ್ಲಿಯೂ ಹಿಂದಿನಿಂದ ನಡೆದು ಬಂದಂತಹ ಪದ್ಧತಿಯಂತೆಯೇ ಕೆರೆ ನಿರ್ಮಿಸುವಾತನಿಗೆ ಆ ಕೆರೆಯ ಆಯಕಟ್ಟು ಪ್ರದೇಶದಲ್ಲಿಯೇ ಕೆಲವು ಅಳತೆಯ ಭೂಮಿಯನ್ನು ದಾನವಾಗಿ ನೀಡಲಾಗುತ್ತಿತ್ತು.

[1] ಈ ರೀತಿಯಾಗಿ ನೀಡಿದಂತಹ ಭೂಮಿಯು ಆ ಕೆರೆಯನ್ನು ಕಟ್ಟಿಸುವುದಕ್ಕೆ ತಗುಲಿದ ವೆಚ್ಚಕ್ಕೆ ಸಮನಾಗಿರುತ್ತಿದ್ದವು. ಕೆಲವೊಮ್ಮೆ ಆ ಕೆರೆಗೆ ತಗುಲಿದ ವೆಚ್ಚವಲ್ಲದೇ ಮುಂದೆ ಆ ಕೆರೆಯ ರಕ್ಷಣೆ ಮತ್ತು ಪೋಷಣೆಗೆ ತಗುಲುವ ಖರ್ಚುಗಳನ್ನು ಭರಿಸುವ ಮಟ್ಟಿಗೆ ನೀಡಲಾಗಿರುವಂತಹ ನಿದರ್ಶನಗಳು ಇಲ್ಲದಿಲ್ಲ.[2] ಇಂತಹ ದಾನಗಳಿಗೆ ದಶವಂದ (ದಸವಂದ)ವೆಂದು ಶಾಸನಗಳಲ್ಲಿ ಉಲ್ಲೇಖಿತವಾಗಿವೆ. ಇದರೊಂದಿಗೆ ಇದಕ್ಕೆ ಸಮಾನಾರ್ಥವಾದ ಮತ್ತೆ ಕೆಲವು ಪದಗಳು ಕಾಣಬರುತ್ತವೆ. ಅವುಗಳಲ್ಲಿ ಕಟ್ಟುಕೊಡುಗೆ, ಕೆರೆ-ಕಟ್ಟುಮಾನ್ಯ, ಕಟ್ಟುಮಾನ್ಯ, ಕೆರೆ ಬಿತ್ತುವತ್ತ, ಬಿತ್ತುವತ್ತ ಮುಂತಾದವುಗಳೇ ಆಗಿವೆ. ಇವೆಲ್ಲವೂ ಕೆರೆಗೆ ಸಂಬಂಧಿಸಿದ ಕೆಲವು ದಾನ ಮತ್ತು ತೆರಿಗೆಗಳನ್ನು ಸೂಚಿಸುವ ಪದಗಳಾಗಿವೆ. ಇವೆಲ್ಲವುಗಳೂ ಸಾಮಾನ್ಯವಾಗಿ ಒಂದೇ ಆಗಿದ್ದರೂ ಕೆಲವು ಮೂಲಭೂತ ವ್ಯತ್ಯಾಸಗಳಿವೆ.

ಈ ಮೇಲೆ ವಿವರಿಸಿದ ಪದ್ಧತಿಯಲ್ಲದೇ ದೇವಾಲಯಗಳು ಸಹ ಈ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದವು. ಕೆರೆಯ ರಕ್ಷಣೆಯ ಜವಾವ್ದಾರಿಯನ್ನು ದೇವಾಲಯವು ಹೊತ್ತಿರುತ್ತಿದ್ದವು. ದೇವಾಲಯಗಳಿಗೆ ಸಲ್ಲುವ ಅನೇಕ ದಾನ ದತ್ತಿಗಳು ಮತ್ತು ಧನವನ್ನು ಕೆರೆಯ ರಕ್ಷಣೆಗೆ ತೊಡಗಿಸಿ ಕೆರೆಯ ಆಯಕಟ್ಟಿನಿಂದ ಬರುವಂತಹ ಕೃಷಿ ಆದಾಯವನ್ನು ದೇವಾಲಯ ಪಡೆದು ದೇವಾಲಯದ ಆಡಳಿತ ಮತ್ತು ನಿರ್ವಹಣಾ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿತ್ತು. ದೇವಾಲಯಗಳು ನಾಲೆ ಮತ್ತು ಕಾಲುವೆಗಳ ರಕ್ಷಣೆ ದುರಸ್ತಿ ಕಾರ್ಯಗಳಲ್ಲಿ ತೊಡಗುತ್ತಿದ್ದವೆಂಬುದು ಶಾಸನೋಕ್ತ ವಿಷಯ.

ದೇವಾಲಯಗಳಲ್ಲದೇ ಪ್ರಭುತ್ವದ ಆಡಳಿತಾಂಗ ಸಮಿತಿಗಳು, ಪ್ರಭುತ್ವದ ಪ್ರತಿನಿಧಿಗಳು ಸಹ ಕೆರೆಗಳ ಸಂರಕ್ಷಣಾ ಕೆಲಸದಲ್ಲಿ ನಿರತರಾಗಿದ್ದರು ಎಂಬ ವಿಷಯವು ಗಮನಾರ್ಹ. ಅರಸರು, ಮಾಂಡಲಿಕರು ಮತ್ತು ಅರಸರ ಪ್ರತಿನಿಧಿಗಳು ಕೆರೆಗಳ ರಕ್ಷಕರಿಗೆ ತೆರಿಗೆಯಲ್ಲಿ ವಿನಾಯ್ತಿಯನ್ನು ನೀಡಿ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಇವುಗಳಲ್ಲದೇ ಕೆರೆಯನ್ನು ನಿರ್ಮಿಸುವ ಒಡ್ಡರು ಮತ್ತು ಉಪ್ಪಾರರಿಗೆ ಅನೇಕ ದಾನಗಳನ್ನು ನೀಡುವುದರೊಂದಿಗೆ ತೆರಿಗೆಗಳಲ್ಲಿಯೂ ವಿನಾಯ್ತಿಯನ್ನು ನೀಡಿರುವುದು ಶಾಸನಗಳಿಂದ ತಿಳಿದುಬರುವ ಅಂಶ.[3]

ಕೆರೆಗಳ ರಕ್ಷಣೆ ಎಂದರೇನು? ಕೆರೆಗಳಿಗೆ ಮೂಲತಃ ಎರಡು ಮೂಲಗಳಿಂದ ಅಪಾಯಗಳು ಒದಗುತ್ತವೆ. ಮೊದಲನೆಯದಾಗಿ ಅತಿಯಾದ ನೀರು, ಪ್ರವಾಹ, ಭಾರಿ ಮಳೆ ಮತ್ತು ಪ್ರವಾಹದಲ್ಲಿ ಕೊಚ್ಚಿಬರುವಂತಹ ವೃಕ್ಷಗಳು ಕೆರೆಗೆ ಧಕ್ಕೆಯನ್ನು ತರುತ್ತವೆ. ಇದನ್ನು ನೈಸರ್ಗಿಕ ಧಕ್ಕೆಯೆಂದು ಹೆಸರಿಸಬಹುದು. ಮತ್ತೊಂದು ಅಪಾಯವು ಮಾನವನು ಮಾಡುವಂತಹ ವಿನಾಶ ಕಾರ್ಯಗಳು. ಈ ಕಾರ್ಯವು ನೈಸರ್ಗಿಕ ಮೂಲದಿಂದ ಆಗುವ ನಷ್ಟಕ್ಕಿಂತ ಅಧಿಕ ಅಪಾಯಕಾರಿಯಾಗಿರುತ್ತವೆ. ಮಾನವನ ನೀಚ ಕಾರ್ಯವು ಬಯಲಾದ ಪಕ್ಷದಲ್ಲಿ ಅಂತಹವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು ಎಂಬುದನ್ನು ಈ ಹಿಂದೆಯೇ ಗಮನಿಸಿದ್ದೇವೆ.[4] ಕೆರೆಗಳ ನಿರ್ವಹಣೆ ಎಂದರೆ ನಾಲೆ, ಕಾಲುವೆಗಳನ್ನು ಸುಸ್ಥಿತಿಯಲ್ಲಿ ಇಡುವುದು, ಹೂಳನ್ನು ಕಾಲಕಾಲಕ್ಕೆ ತೆಗೆದು ಕೆರೆಯ ಆಳವನ್ನು ಹೆಚ್ಚಿಸುವುದು, ಕೆರೆ ಏರಿಯನ್ನು ಬಲಪಡಿಸುವುದು, ಕೋಡಿಯನ್ನು ಎಲ್ಲಾ ರೀತಿಯಿಂದ ರಕ್ಷಿಸುವುದು, ಇವೇ ಮುಂತಾದ ಕಾರ್ಯಗಳು ಆಗಿರುತ್ತವೆ. ಈ ಕೆಲಸಗಳೆಲ್ಲವೂ ಧಾರ್ಮಿಕ ನಂಬಿಕೆಯ ಜಾಡಿಯಲ್ಲಿ ನಡೆಯುತ್ತಿದ್ದವು ಎಂಬುದನ್ನು ಈಗಾಗಲೇ ಉಲ್ಲೇಖಿಸಲಾಗಿದೆ.

ಆದಿ ಕವಿಯಾದ ಪಂಪನು ರಚಿಸಿದ ಪಂಪ ಭಾರತದಲ್ಲಿ ಪಾಂಡವರು ಒಂದೆಡೆಯಿಂದ ಮತ್ತೊಂದು ಕಡೆಗೆ ವನವಾಸಿಗಳಾಗಿ ಅಲೆಯುತ್ತಿರುವಾಗ, ಅನೇಕ ದಾನ ಧರ್ಮಗಳನ್ನು ಮಾಡುವುದರೊಂದಿಗೆ ಕರೆಗಳ ಜೀರ್ಣೋದ್ಧಾರಕ್ಕೂ ಸಹ ಅವರು ಧನವನ್ನು ನೀಡಿರುವುದಾಗಿ ವಿವರಿಸುವುದು ಸ್ವಾರಸ್ಯಕರ ಸಂಗತಿಯೇ ಸರಿ.[5] ಕೆರೆಗಳ ನಿರ್ಮಾಣ, ರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯಗಳಿಂದ ದಾತನಿಗೆ ಹಾಗೂ ರಕ್ಷಕನಿಗೆ ಪುಣ್ಯವು ದೊರೆಯುತ್ತದೆಂದು ಒಂದು ಶಾಸನ ತಿಳಿಸುತ್ತದೆ.[6]

ಕೆರೆಯ ರಕ್ಷಣೆಗೆ ಬಿಟ್ಟುಕೊಟ್ಟಂತಹ ಭೂಮಿಯನ್ನು ಕಾಯ್ದು ಕೆರೆಯನ್ನು ರಕ್ಷಿಸುವವನಿಗೆ ಪುಣ್ಯವು ದೊರಕುವುದರೊಂದಿಗೆ ಅಶ್ವಮೇಧ ಯಾಗವನ್ನು ಮಾಡಿದಂತಹ ಪುಣ್ಯವು ಲಭಿಸುವುವೆಂದು ಕೋಲಾರ ಜಿಲ್ಲೆಯ ಕುರುಬರಹಳ್ಳಿಯಲ್ಲಿ ದೊರೆತ ಶಾಸನವು ತಿಳಿಸುತ್ತದೆ.[7] ಕೆರೆಗಳ ರಕ್ಷಣೆಯನ್ನು ಪ್ರಭುತ್ವದ ಅನೇಕ ಪ್ರತಿನಿಧಿಗಳು ಅಥವಾ ಸಮಿತಿಯವರು ನೋಡಿಕೊಳ್ಳುತ್ತಿದ್ದರೆಂದು ಈ ಮೊದಲೇ ಉಲ್ಲೇಖಿಸಲಾಗಿದೆ. ಇಂತಹ ಅನೇಕ ಉದಾಹರಣೆಗಳನ್ನು ನಾವು ದಕ್ಷಿಣ ಭಾರತದಲ್ಲಿ ವಿಜಯನಗರ ಪೂರ್ವಕಾಲದಲ್ಲಿಯೇ ಇದ್ದುದನ್ನು ಗಮನಿಸಬಹುದು. ಕೊಟ್ರಯ್ಯನವರು ಈ ವಿಷಯವನ್ನು ಕುರಿತು ದೀರ್ಘವಾಗಿ ಚರ್ಚಿಸಿರುತ್ತಾರೆ.[8] ತಮಿಳುನಾಡಿನಲ್ಲಿ ವಾರಿಯಂ ಎಂಬ ಸಮಿತಿಯು ಇರುತ್ತಿತ್ತು. ಇದರ ಉಪಸಮಿತಿಯಾದ ಏರಿವಾರಿಯಂ ಕೆರೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿತ್ತು ಎಂಬುದು ತಿಳಿದ ವಿಷಯವೇ ಆಗಿದೆ.[9]

ವಿಜಯನಗರ ಕಾಲದಲ್ಲಿ ‘ನಾಯಕ’ ಅಥವಾ ‘ಅಮರನಾಯಕ’ ಪದ್ಧತಿಯು ಬಳಕೆಯಲ್ಲಿದ್ದು, ಇವುಗಳು ಗ್ರಾಮದ ಅಥವಾ ಒಂದು ಮಂಡಲದ ಕೆಲಸ ಕಾರ್ಯಗಳನ್ನು ದಕ್ಷ ರೀತಿಯಲ್ಲಿ ನಿಭಾಯಿಸುತ್ತಿದ್ದವು ಎಂದು ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ.[10] ಒಂದು ಕೆರೆಯ ತೂಬುಗಳು ಹಾಳಾಗಿ ಕೆರೆಯು ನಿರುಪಯುಕ್ತವಾಗಿದ್ದಿತು. ಅದನ್ನು ಸರಿಪಡಿಸಲು ಹಣವು ಸಾಲದೆ ಉಕ್ಕಲ್ ಗ್ರಾಮದ ಸಭೆಯವರು ಪಿಡಾರಿತಾಂಗಲ್ ಎಂಬ ಗ್ರಾಮವನ್ನು ೨೦೦ ಗುಳಿಗೆ (ಚಿನ್ನದ ನಾಣ್ಯ)ಗಳಿಗೆ ಮಾರಿ, ಆ ಹಣದಿಂದ ಕೆರೆಯ ಜೀರ್ಣೋದ್ಧಾರ ಮಾಡಿದರೆಂದು ಒಂದು ಶಾಸನವು ದಾಖಲಿಸಿದೆ.[11] ಕೆರೆಯ ಜೀರ್ಣೋದ್ಧಾರವನ್ನು ಮಾಡಲು ಆರ್ಥಿಕ ಮುಗ್ಗಟ್ಟು ಇರಲಾಗಿ ಆ ಸಂದರ್ಭದಲ್ಲಿ ದೇವಾಲಯದ ಭೂಮಿಯನ್ನು ಮಾರಿ ಬಂದ ಹಣದಿಂದ ಕೆರೆಯನ್ನು ಬಲಪಡಿಸಲಾಯಿತು ಎಂದು ವಿರೂಪಾಕ್ಷನ ಕಾಲದ ಕ್ರಿ. ಶ. ೧೩೮೧ರ ಶಾಸನವು ಉಲ್ಲೇಖಿಸಿದೆ.[12]

ಹಾಸನ ಜಿಲ್ಲೆಯ ತಿಮ್ಮನಹಳ್ಳಿಯಲ್ಲಿ ದೊರೆತಿರುವ ಶಾಸನಗಳು, ಕೆರೆಯ ರಕ್ಷಣೆಯನ್ನು ಕುರಿತು ಹೊಸ ಬೆಳಕನ್ನು ಚೆಲ್ಲುತ್ತವೆ. ನೇರಲಗಿಲ್ಲಿರುವ ಹಿರಿಯ ಕಟ್ಟೆಯನ್ನು ರಕ್ಷಿಸುವುದಕ್ಕಾಗಿ ಭೂಮಿಯನ್ನು ನೀಡಲಾಗಿತ್ತು, ಆ ದಾನವನ್ನು ಪಡೆದಾತನು ಕೆರೆಯ ಹೂಳನ್ನು ಎತ್ತಿ ಏರಿಯನ್ನು ಬಲಪಡಿಸಿದನೆಂದು ಕ್ರಿ.ಶ. ೧೪೨೯ ರ ಶಾಸನವು ದಾಖಲಿಸಿದೆ.[13] ಇದರಿಂದಾಗಿ ಕೆರೆಯು ಆಳಗೊಂಡಿತು. ಕೆರೆ ಏರಿಯು ಹೀಗಿದ್ದರೂ ಸಹ ಮೂರು ವರ್ಷಗಳ ನಂತರ ಈ ವ್ಯವಸ್ಥೆಯು ಸಮರ್ಪಕವಾಗಿ ನಡೆಯದಿದ್ದ ಕಾರಣ, ಕ್ರಿ.ಶ. ೧೪೩೨ರಲ್ಲಿ ಮತ್ತಷ್ಟು ದಾನ ದತ್ತಿಗಳನ್ನು ನೀಡಿ ಆ ಕಾರ್ಯವನ್ನು ಪೂರ್ಣಗೊಳಿಸಲಾಯಿತೆಂದು ಶಾಸನವು ಉಲ್ಲೇಖಿಸುವುದು ಗಮನಾರ್ಹ.[14] ಈ ಎರಡೂ ಸಂದರ್ಭಗಳಲ್ಲಿ ದಾನ ನೀಡಿದ ವ್ಯಕ್ತಿಗಳು ಬೇರೆಯಾಗಿರುವುದು ಸಹ ಗಮನಿಸತಕ್ಕ ವಿಷಯ.

ಕೆಲವೊಮ್ಮೆ ಪ್ರಭುತ್ವಕ್ಕೆ ಸಲ್ಲಿಸಬಹುದಾದ ತೆರಿಗೆಯನ್ನು ವಿನಾಯ್ತಿಗೊಳಿಸಿ, ಆ ತೆರಿಗೆಯನ್ನು ಕೆರೆಯ ಪುನರ್ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೃಷಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿತ್ತು. ತಮಿಳುನಾಡಿನ ದಕ್ಷಿಣ ಅರ್ಕಾಟ್ ಜಿಲ್ಲೆಯಲ್ಲಿರುವ ತಿರುವಾಮತ್ತೂರು ಗ್ರಾಮದ ಕೆರೆಯು ದುಸ್ಥಿತಿಯಲ್ಲಿದ್ದ ಕಾರಣ ಜನರು ವಲಸೆ ಹೋಗತೊಡಗಿದರು. ಇದನ್ನು ಗಮನಿಸಿದ ಆ ಭಾಗದ ಮಾಂಡಲೀಕನು ವಿಭೂತಿ-ಕಾಣಿಕೆ, ಜೋಡಿ ಸಲುವರಿ ರೇಖೈ ಮುಂತಾದ ತೆರಿಗೆಗಳನ್ನು ವಿನಾಯ್ತಿಗೊಳಿಸಿ ಆ ತೆರಿಗೆಗಳನ್ನು ಕೆರೆಯ ಜೀರ್ಣೋದ್ಧಾರಕ್ಕೆ ಬಳಸಿದನೆಂದು ಆ ಗ್ರಾಮದಲ್ಲಿ ದೊರೆತಿರುವ ಶಾಸನವು ಉಲ್ಲೇಖಿಸುತ್ತದೆ.[15] ಇದೇ ರೀತಿಯಾಗಿ ತಮಿಳುನಾಡಿನ ತಿರುವತ್ತಿಯೂರು ಎಂಬಲ್ಲಿ ತೆರಿಗೆಗಳನ್ನು ವಿನಾಯ್ತಿಗೊಳಿಸಿದ ಉಲ್ಲೇಖವು ಶಾಸನದಿಂದ ತಿಳಿದುಬರುತ್ತದೆ.[16]

ಬಳ್ಳಾರಿ ಜಿಲ್ಲೆಯಲ್ಲಿರುವ ದೊಡ್ಡವಂಟೆ ಗ್ರಾಮದ ಜನರು ನೀರಾವರಿ ಸೌಲಭ್ಯವಿಲ್ಲದೇ ಇರಲಾಗಿ ಕಷ್ಟಗಳನ್ನು ಅನುಭವಿಸುತ್ತಿದ್ದರು. ಹೀಗಿರುವಾಗ ಆ ಗ್ರಾಮಸ್ಥರು ಮದ್ದಣ ನಾಯಕನಿಗೆ ಮೊರೆಯಿಟ್ಟು, ಕೆರೆಯ ದುರಸ್ಥಿಗೆ, ಮಲೆಸಾನಿ ಎಂಬಾತನಿಗೆ ಕೆಲವು ಅಳತೆಗಳಷ್ಟು ಭೂಮಿಯನ್ನು ನೀಡಿ, ಕೆರೆಯನ್ನು ಸುಸ್ಥಿತಿಗೆ ತಂದರು ಎಂಬುದು ದೊಡ್ಡವಂಟೆ ಗ್ರಾಮದ ಶಾಸನವು ಸೂಚಿಸುತ್ತದೆ.[17]

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯದ ಪಾತ್ರವು ಅತ್ಯಂತ ಮಹತ್ವವಾದದ್ದು. ಈ ದೇವಸ್ಥಾನಕ್ಕೆ ಬರುತ್ತಿದ್ದ ಆದಾಯವು ಧನರೂಪದಲ್ಲಿ ಇರುತ್ತಿದ್ದು, ಆ ಹಣವನ್ನು ಸಾಮಾನ್ಯವಾಗಿ ಕೆರೆ ಮತ್ತು ನಾಲೆಗಳನ್ನು ದುರಸ್ಥಿ ಮಾಡಲು ಮತ್ತು ಕೃಷಿಗೆ ಬಳಸಲಾಗುತ್ತಿತ್ತು. ಈ ಕಾರಣದಿಂದ ಆ ದೇವಾಲಯದ ಬಹುಪಾಲು ಹಣವು ಕೃಷಿ ಮತ್ತು ನೀರಾವರಿ ಸುಧಾರಣೆಗೆ ಬಳಸುತ್ತಿದ್ದುದು ಗಮನಾರ್ಹ.[18]

ಕಟ್ಟುಕೊಡುಗೆ

ಕಟ್ಟು-ಕೊಡುಗೆಯನ್ನು ಪ್ರಸ್ತಾಪಿಸುವ ಅನೇಕ ಶಾಸನಗಳು ದೊರಕಿವೆ. ತಿರುಮಡಿಹಳ್ಳಿಯಲ್ಲಿನ ಕೆರೆಯ ಮೂರು ಬಿರುಕುಗಳನ್ನು ಸರಿಮಾಡಿದ ವ್ಯಕ್ತಿಗೆ ಕಟ್ಟು ಕೊಡುಗೆಯಾಗಿ ಒಂದು ಖಂಡುಗದಷ್ಟು ಭೂಮಿಯನ್ನು ನೀಡಲಾಯಿತು ಎಂದು ಒಂದು ಶಾಸನವು ತಿಳಿಸುತ್ತದೆ.[19] ಕ್ರಿ.ಶ. ೧೫೪೮ ರಲ್ಲಿ ಪಳ್ಳಿಪಾಡು ಗ್ರಾಮದ ಕೆರೆಯನ್ನು ಜೀರ್ಣೋದ್ಧಾರ ಮಾಡಿದ್ದಕ್ಕೆ ಗುಡ್ಡದ ಗಿರಿಗೌಡ ಎಂಬುವವನಿಗೆ ಕಟ್ಟುಕೊಡುಗೆ ಮಾನ್ಯವನ್ನು ನೀಡಲಾಯಿತು ಎಂದು ಮತ್ತೊಂದು ಶಾಸನವು ಉಲ್ಲೇಖಿಸುತ್ತದೆ. ಇಂತಹ ಅನೇಕ ಶಾಸನಗಳು ಕಟ್ಟುಕೊಡುಗೆಯ ಬಗೆಗೆ ತಿಳಿಸುತ್ತವೆ.[20]

ಕಟ್ಟುಕೊಡುಗೆಯ ರೀತಿಯೇ ಮೇರಾ,[21] ಕುಂಚೇಡು,[22] (ರಾಯಪುಟ್ಟಿ) ಪುಟ್ಟಿ[23]ಮುಂತಾದ ತೆರಿಗೆಗಳು ಕೆರೆಗೆ ಸಂಬಂಧಿಸಿದ್ದವು ಎಂದು ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ. ಪಾಶಿ, ಕೂಡಿಮರಾಯತ್ ಮತ್ತು ಅಳಮಂಜಿ ಎಂಬ ತೆರಿಗೆಗಳನ್ನು ಸೂಚಿಸುವ ಪದಗಳು ತಮಿಳುನಾಡಿನ ವಿಜಯನಗರ ಕಾಲದ ಶಾಸನಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.[24]

ದಸವಂದ

ದಸವಂದ ಎಂಬ ಪದದ ಉಲ್ಲೇಖವು ವಿಜಯನಗರ ಕಾಲದ ತೆಲುಗು ಮತ್ತು ಕನ್ನಡ ಶಾಸನಗಳಲ್ಲಿ ಅಧಿಕವಾಗಿ ಕಂಡುಬರುತ್ತವೆ. ಈ ಎರಡೂ ಪ್ರದೇಶಗಳ ಶಾಸನಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿದಾಗ ದಸವಂದ ಮತ್ತು ಕಟ್ಟು- ಕೊಡುಗೆಯು ಒಂದೇ ಆಗಿದ್ದು, ಮತ್ತಷ್ಟು ಆಳವಾದ ಅಧ್ಯಯನವನ್ನು ಮಾಡಿದಾಗ, ದಸವಂದ ಮತ್ತು ಕಟ್ಟುಕೊಡುಗೆಯಲ್ಲಿ ಸ್ವಲ್ಪ ವ್ಯತ್ಯಾಸವಿರುವುದು ಕಂಡುಬರುತ್ತದೆ. ಕೆರೆಯನ್ನು ಕಟ್ಟಿಸಿದವನಿಗೆ ನೀಡಿದ ಮಾನ್ಯವು ಕೆರೆ- ಕಟ್ಟುಮಾನ್ಯ ಅಥವಾ ಕೊಡುಗೆಯು ಆಗಿರುತ್ತದೆ.

ದಸವಂದ ಪದದ ನಿಷ್ಪತ್ತಿಯನ್ನು ಕೊಟ್ರಯ್ಯನವರು ಸಮರ್ಥವಾಗಿ ವಿಶ್ಲೇಷಿಸಿದ್ದಾರೆ. ಹಣಕ್ಕೆ ದಸವಂದ ಎಂದು ಮನುವಿನ ಧರ್ಮಶಾಸ್ತ್ರ ತಿಳಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.[25] ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ದಸವಂದ ಎಂದರೆ ಹತ್ತನೆಯ ಒಂದು ಭಾಗವೆಂತಲೂ, ಆ ಭಾಗದಷ್ಟು ಕೃಷಿ ಉತ್ಪನ್ನವನ್ನು ಜಮೀನ್ದಾರ ಮತ್ತು ಒಕ್ಕಲಿಗ ಹಂಚಿಕೊಳ್ಳಬೇಕು ಎಂದು ತಿಳಿಸುತ್ತಾನೆ. ಇನ್ನೂ ಕೆಲವು ಶಾಸನಗಳು ಮತ್ತು ಉಲ್ಲೇಖಗಳಿಂದ ದಸವಂದ ಎಂದರೆ ೧:೧೦ ಅಂಶ ಎಂದು ದೃಢಪಡಿಸುತ್ತವೆ.[26] ದಸವಂದ ಎಂಬ ಪದವು ದಶವಂದ ಅಥವಾ ದಸಬಂದ ಎಂಬ ಪದಗಳ ಪರ್ಯಾಯಗಳೇ ಆಗಿವೆ. ಇವುಗಳು ಪ್ರಾಚೀನ ಭಾರತದಲ್ಲಿಯೂ ಬಳಕೆಯಲ್ಲಿದ್ದ ಪದಗಳಾಗಿದ್ದು, ವಿಜಯನಗರ ಕಾಲದವರವಿಗೂ ಬಳಕೆಯಾಗಿ ಬಂದಿರುವುದು ಗಮನಾರ್ಹ ವಿಷಯ. ದೀಕ್ಷಿತರು ಸಹ ಇದನ್ನು ಒಂದು ಶಾಸನದ ಮೂಲಕ ಸಮರ್ಥಿಸಿರುತ್ತಾರೆ.[27] ದಕ್ಷಿಣ ಭಾರತದಲ್ಲಿ ವಿಜಯನಗರ ಕಾಲದ ಶಾಸನಗಳು ದಸವಂದ ಎಂಬ ಪದವನ್ನು ಬಳಸಿರುವುದು, ಕೆರೆ ಅಥವಾ ನೀರಾವರಿ ಪದ್ಧತಿಯ ಸಂದರ್ಭದಲ್ಲಿಯೇ ಎಂಬುದು ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ.

ಕೋಲಾರ ಜಿಲ್ಲೆಯಲ್ಲಿ ದೊರೆತಿರುವ ಒಂದು ಶಾಸನದಂತೆ ಕೆರೆಯ – ಕಟ್ಟು-ಕೊಡುಗೆಯು ಕೆರೆಯನ್ನು ಕಟ್ಟಿಸಿದಾತನಿಗೆ ನೀಡಿದ ಭೂಮಿಯು ೨:೧೦ ಮತ್ತು ೧:೫ ರಷ್ಟು ಇತ್ತು ಎಂದು ತಿಳಿದುಬರುತ್ತದೆ. ಇಲ್ಲಿ ಎರಡು ಕೆರೆಗಳಿದ್ದು, ಆ ಎರಡು ಕೆರೆಗಳ ಆಯಕಟ್ಟಿನ ಪ್ರದೇಶದ ಜಮೀನಿಗೆ ಸಂಬಂಧಿಸಿದಂತೆ, ೨:೧೦ ಮತ್ತು ೧:೫ ರ ಭಾಗದಷ್ಟು ಭೂಮಿಯನ್ನು ಕೊಡುಗೆಯಾಗಿ ನೀಡಿದರೆಂದು ದೃಢಪಡಿಸುತ್ತದೆ.[28]

ಆಂಧ್ರಪ್ರದೇಶದ ನೆಲ್ಲೂರಿನ ಒಂದು ಶಾಸನವು ದಸವಂದವನ್ನು ಕುರಿತಂತೆ ಹೆಚ್ಚು ಮಾಹಿತಿಯನ್ನು ನೀಡುತ್ತದೆ. ಉದಯಗಿರಿ ರಾಜ್ಯದಲ್ಲಿರುವ ಬೋಯವೀಡು ಮತ್ತು ಕುಡಿಚಲಪಾಡು ಎಂಬ ಗ್ರಾಮಗಳ ಬಳಿ ಇರುವ ದಸಬಂದದ ಕೆರೆಯನ್ನು ಬಯಿಚನ ಬೋಯನೆಂಬುವನು ಮಾರಿದನೆಂದು ತಿಳಿಯಬರುತ್ತದೆ. ಒಂದು ಕೆರೆಯು ಒಬ್ಬ ವ್ಯಕ್ತಿಯ ಸ್ವಂತ ಆಸ್ತಿಯಾಗಿದ್ದು, ಅದನ್ನು ಮಾರಲು ಅವನಿಗೆ ಹಕ್ಕು ಇತ್ತೆಂಬುದು ಸ್ಪಷ್ಟವಾಗುತ್ತದೆ.[29]

ಕೆರೆ, ಕುಂಟೆ ಮುಂತಾದವುಗಳು ಜನರ ಹಿತಕ್ಕಾಗಿ ಇದ್ದಿದ್ದರೂ ಅವುಗಳನ್ನು ವ್ಯಕ್ತಿಯ ಸ್ವಂತ ಆಸ್ತಿಯಾಗಿಯೂ ಪರಿಗಣಿಸಲಾಗಿತ್ತು. ಮಗದೊಂದು ಶಾಸನವು ಕೋಲಾರ ಜಿಲ್ಲೆಯ ರಾಜ ಗುಂಡ್ಲಹಳ್ಳಿಯಲ್ಲಿ ದೊರೆತಿದ್ದು ಕೆರೆಯ ನೀರನ್ನು ಹೇಗೆ ಉಪಯೋಗಿಸಬೇಕು ಎಂದು ತಿಳಿಸುತ್ತಾ ಕೆರೆಯ ನೀರಿನಿಂದ ಹೆಚ್ಚುವರಿ ಪ್ರದೇಶಗಳನ್ನು ಕೃಷಿಗೆ ಒಳಪಡಿಸಿ ಆ ಪ್ರದೇಶಗಳಲ್ಲಿ ಬೆಳೆಯತಕ್ಕ ಬೆಳೆಗಳು ಮತ್ತು ಬೆಳೆಗಾರರಿಗೆ ಸಲ್ಲಬೇಕಾದ ಭಾಗಗಳನ್ನು ಸಹ ವಿಶದವಾಗಿ ತಿಳಿಸುತ್ತದೆ.[30] ಈ ಶಾಸನದಲ್ಲಿ ದಸವಂದ ಮತ್ತು ಕಟ್ಟುಕೊಡುಗೆ ಎಂಬ ಎರಡೂ ಪದಗಳನ್ನು ಒಂದೇ ಶಾಸನದಲ್ಲಿ ಬಳಸಿರುವುದು ಗಮನೀಯವಾದ ಅಂಶವು. ಈ ಶಾಸನವನ್ನು ದೀರ್ಘವಾಗಿ ಚರ್ಚಿಸಿರುವ ಕೊಟ್ರಯ್ಯನವರು, ಈ ಶಾಸನವು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಪ್ರದೇಶದಲ್ಲಿ ದೊರೆತಿರುವ ಕಾರಣದಿಂದ, ಎರಡೂ ಶಬ್ದಗಳನ್ನು ಶಾಸನದಲ್ಲಿ ಉಲ್ಲೇಖಿಸಿದ್ದಾರೆ ಎಂದು ಸರಿಯಾಗಿ ಅಭಿಪ್ರಾಯಪಟ್ಟಿರುತ್ತಾರೆ.[31] ಬಳ್ಳಾರಿ ಜಿಲ್ಲೆಯ ಹಾವಿನಹಾಳು ವೀರಾಪುರ ಗ್ರಾಮದ ಶಾಸನವು ಸಹ ದಸವಂದದ ಬಗೆಗೆ ತಿಳಿಸುತ್ತದೆ.[32]

ಕೆರೆಬಂಡಿ

ಕೆರೆಗಳ ರಕ್ಷಣೆಯಲ್ಲಿ ಅನೇಕ ವ್ಯಕ್ತಿಗಳು ಮತ್ತು ಸಾಮಗ್ರಿಗಳು ಬೇಕಾಗಿದ್ದವು,. ಅವುಗಳಲ್ಲಿ ಎತ್ತಿನ ಬಂಡಿಗಳು ಇದ್ದವೆಂಬುದು ಗಮನಿಸತಕ್ಕೆ ವಿಷಯ. ಇವುಗಳು ಕೆರೆಯ ಕೆಲಸಗಳಿಗಾಗಿಯೇ ಮೀಸಲಿಟ್ಟು ಉಪಯೋಗಿಸುತ್ತಿದ್ದ ಕಾರಣದಿಂದ ಇವುಗಳನ್ನು ಕೆರೆಬಂಡಿಗಳೆಂದು ಶಾಸನಗಳಲ್ಲಿ ದಾಖಲಾಗಿವೆ. ಮಳೆಗಾಲದ ದಿನಗಳಲ್ಲಿ ಹರಿದು ಬರುವಂತಹ ನೀರು ಅಧಿಕಾಂಶವಾಗಿ ಮಣ್ಣನ್ನು ಹೊಂದಿರುತ್ತವೆ. ಈ ಮಣ್ಣು ತೂಬಿನ ಕಾಲುವೆಗಳಲ್ಲಿ ಸೇರಿಕೊಂಡು ತೂಬುಗಳ ರಂಧ್ರವನ್ನು ಮುಚ್ಚಿಬಿಡುತ್ತದೆ. ಆದ್ದರಿಂದ ಕಾಲದಿಂದ ಕಾಲಕ್ಕೆ ಆ ಮಣ್ಣನ್ನು ತೆಗೆದು ನಾಲೆಯನ್ನು ಶುಭ್ರಗೊಳಿಸಿ ಸುಸ್ಥಿತಿಗೆ ತರುವ ಕೆಲಸದಲ್ಲಿಯೂ ಮತ್ತು ಕೆರೆಯ ತಳದಲ್ಲಿ ಸಂಗ್ರಹವಾಗುವ ಹೂಳನ್ನು ತೆಗೆದು ಏರಿಗೆ ಸಾಗಿಸಿ ಏರಿಯನ್ನು ಬಲಪಡಿಸುತ್ತಿದ್ದರು. ಈ ಕಾರ್ಯಗಳಿಗೆ ಎತ್ತಿನ ಗಾಡಿಗಳನ್ನು ಬಳಸುತ್ತಿದ್ದರು ಮತ್ತು ಅದಕ್ಕೆಂದು ಮಾನ್ಯವನ್ನು ನೀಡಲಾಗುತ್ತಿತ್ತು. ಇದಕ್ಕೆ ಕೆರೆಬಂಡಿ ಮಾನ್ಯವೆಂದು ಹೆಸರು. ಈ ಮಾನ್ಯದಲ್ಲಿ ಕೆರೆಬಂಡಿ ಮಾನ್ಯವು ಎತ್ತಿನ ಗಾಡಿಯ ಎತ್ತುಗಳು, ಕೆಲವೊಮ್ಮೆ ಎಮ್ಮೆಗಳು ಮತ್ತು ಬಂಡಿಯನ್ನು ನಡೆಸುವವರ ಜೀವನಕ್ಕೆ ಸಾಕಾಗುವಷ್ಟು ಹಣವನ್ನೋ ಅಥವಾ ಭೂಮಿಯನ್ನೋ ನೀಡಿ, ಈ ಕಾರ್ಯವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಈ ಮಾನ್ಯವು ಕೆರೆಯ ಹೂಳೆತ್ತುವ ಸಾಮಗ್ರಿಗಳು ಬಂಡಿಯ ಎಣ್ಣೆ, ಮುಂತಾದ ಅವಶ್ಯಕ ವಸ್ತುಗಳನ್ನು ಒಳಗೊಂಡಿದ್ದವು ಎಂಬುದು ಗಮನಾರ್ಹ ವಿಷಯ. ಒಂದು ಕೆರೆಯನ್ನು ಸುಸ್ಥಿತಿಯಲ್ಲಿಡಲು ಎಷ್ಟು ಬಂಡಿಗಳು ಉಪಯೋಗಿಸಲ್ಪಡುತ್ತಿದ್ದವು ಎಂಬುದು ಖಚಿತವಾಗಿ ತಿಳಿದುಬರುವುದಿಲ್ಲ. ಪ್ರಾಯಶಃ ಒಂದು ಕೆರೆಯಿಂದ ಮತ್ತೊಂದು ಕೆರೆಯ ವ್ಯತ್ಯಾಸಗಳು ಇದ್ದಿರಬಹುದು ಎಂದಷ್ಟೇ ಹೇಳಲು ಸಾಧ್ಯ.[33]

ಮೊದಲನೆಯ ಬುಕ್ಕರಾಯನ ಕ್ರಿ.ಶ. ೧೩೬೭ರ ಒಂದು ಶಾಸನವು ಹಾಸನ ಜಿಲ್ಲೆಯ ಕೆಲ್ಲಂಗೆರೆಯಲ್ಲಿ ದೊರೆತಿದೆ. ಆ ಊರಿಗೆ ಸಮೀಪದ ಕೆರೆಯನ್ನು ರಕ್ಷಿಸಿ ನಿರ್ವಹಿಸಲು ಹತ್ತು ಬಂಡಿಗಳು ಮತ್ತು ಎಮ್ಮೆಗಳನ್ನು ದಾನವಾಗಿ ನೀಡಿದುದಾಗಿ ಶಾಸನವು ಉಲ್ಲೇಖಿಸುತ್ತದೆ.[34]

ನಂಜನಾಥಪುರ ಬಿನ್ ಹೆಬ್ಬಾಳೆಯ ಹಿರಿಯಕೆರೆಯನ್ನು ಕಾಪಾಡುವುದಕ್ಕೆ ನಾಲ್ಕು ಕೆರೆಬಂಡಿಗಳನ್ನು ನೀಡಲಾಗಿತ್ತು ಎಂಬುದಾಗಿ ತಿಳಿಸಿ, ಕಿರಮತ್ತು, ಕಬ್ಬಿಣದ ಸಲಾಕೆಗಳು, ಎಣ್ಣೆ ಮುಂತಾದ ಸಾಮಗ್ರಿಗಳಿಗೆ ಸಹ ಸೌಲಭ್ಯಗಳನ್ನು ಒದಗಿಸಲಾಗಿತ್ತು ಎಂದು ಹಾಸನ ಜಿಲ್ಲೆಯ ಬೋಲಕ್ಯಾತನಹಳ್ಳಿಯ ಶಾಸನವು ಉಲ್ಲೇಖಿಸಿರುವುದು ವಿಶೇಷವಾದ ಸಂಗತಿ. ಇವಲ್ಲದೆ ಆ ಗ್ರಾಮಕ್ಕೆ ಸಲ್ಲುವ ತೆರಿಗೆಗಳಾದ ಅಳಿವು, ಅನ್ಯಾಯ, ಕಡ್ಡಾಯ, ಸೊಲಗೆ, ಮುಂತಾದವುಗಳಿಂದ ಮೇಲಿನ ಖರ್ಚುಗಳನ್ನು ಭರಿಸಬೇಕೆಂದು ನಿಬಂಧಿಸಲಾಗಿರುವುದು ಗಮನಾರ್ಹ.[35]

ಕ್ರಿ.ಶ. ೧೫೧೩ರಲ್ಲಿ ಚೆನ್ನಪಟ್ಟಣ ತಾಲೂಕಿನ ಕೂಡಲೂರು ಮತ್ತು ಮೊಗೇಹಳ್ಳಿಯ ಎರಡು ಕೆರೆಗಳಿಗೆ ಮೇಲಣ ಹೊಸಹಳ್ಳಿ ಎಂಬ ಗ್ರಾಮವನ್ನು ದಾನವಾಗಿ ನೀಡಿ, ಅದರಿಂದ ಬರುವ ಆದಾಯವನ್ನು ಕೆರೆಯ ರಕ್ಷಣೆ ಮತ್ತು ನಿರ್ವಹಣೆಗೆ ಬಳಸಿಕೊಳ್ಳಬೇಕೆಂದು ಮತ್ತು ಆ ಕೆರೆಗಳಿಗೆ ಆರು ಬಂಡಿಗಳನ್ನು ನಿಯೋಜಿಸಲಾಗಿತ್ತೆಂದು ಶಾಸನದಿಂದ ತಿಳಿದುಬರುತ್ತದೆ.[36]

ಅಚ್ಯುತರಾಯ ಮಹಾರಾಜನ ಕಾಲದ ಶಾಸನಗಳಲ್ಲಿ ಬರುವಂತಹ ಇನ್ನೊಂದು ತೆರಿಗೆಯು ಕೆರೆಬಂಡಿಯ ಹಣ. ಇದು ಒಂದು ತೆರಿಗೆಯಾಗಿದ್ದು, ಅದನ್ನು ಸ್ಥಳೀಯವಾಗಿ ಸಂಗ್ರಹಿಸುತ್ತಿದ್ದರೆಂದು ಅಭಿಪ್ರಾಯಪಡಬಹುದು. ಕೆರೆಬಂಡಿಯ ಹಣವನ್ನು ಗ್ರಾಮಸ್ಥರಿಂದ ಸಂಗ್ರಹಿಸಿ ಕೆರೆಯ ರಕ್ಷಣಾ ಕೆಲಸಗಳಿಗೆ ಬಳಸುತ್ತಿದ್ದರು ಎಂದು ಅಭಿಪ್ರಾಯಪಡಬಹುದು.[37]

ಕೆಲವು ತೆರಿಗೆಗಳೊಂದಿಗೆ ತಿಪ್ಪೆಸುಂಕವನ್ನು ಸಹ ಕೆರೆಬಂಡಿಯ ಉಪಯೋಗಕ್ಕೆ ಮೀಸಲಿಡಲಾಗಿತ್ತು ಎಂದು ಬಡದ ಒಂದು ಶಾಸನವು ತಿಳಿಸುವುದು ಕುತೂಹಲಕಾರಿಯಾದ ಸಂಗತಿ.[38] ಕೆರೆಗಳನ್ನು ಸಕ್ರಮವಾಗಿ ಇಟ್ಟುಕೊಳ್ಳುವಲ್ಲಿ ಸಣ್ಣ ದೋಣಿಗಳನ್ನು ಹೊಂದಿದಂತೆ ಮೀನುಗಾರರ ಪಾತ್ರವನ್ನು ನಾವು ಅಲ್ಲಗಳೆಯುವಂತಿಲ್ಲ. ಇವರುಗಳು ಕೆರೆಯಲ್ಲಿ ಇದ್ದ ಹೂಳು, ಜೊಂಡು ಮತ್ತು ಇತರ ಕಲ್ಮಶಗಳನ್ನು ನೀರಿನಿಂದ ದೋಣಿಗಳ ಮೂಲಕ ದಡಕ್ಕೆ ಸಾಗಿಸುವ ಕಾರ್ಯನಿರ್ವಹಿಸಿದ್ದರೆಂದು ಕೆಲವು ಶಾಸನಗಳಿಂದ ತಿಳಿದುಬರುತ್ತದೆ. ಈ ಅಂಬಿಗರು ಮಿಕ್ಕವರಂತೆ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ತಮ್ಮ ಯಥಾಶಕ್ತಿಯಷ್ಟು ಪರಿಶ್ರಮವನ್ನು ಪಟ್ಟಿಯಿರುವುದು ವಿಜಯನಗರ ಕಾಲದಲ್ಲಿ ಕಂಡುಬರುತ್ತದೆ.[39]

ಕೆರೆಬಂಡಿಯಷ್ಟೇ ಪ್ರಮುಖವಾದ ಮತ್ತೊಂದು ಕೆರೆ ತೆರಿಗೆಯು ಕೆರೆಯ ನೀರಿನ ಮೀನುಗಳ ಮೇಲೆ ವಿಧಿಸಲಾಗಿದ್ದವು. ಸಣ್ಣ ಪ್ರಮಾಣದ ಮೀನುಗಾರರು ಕೆರೆಯ ಹೂಳೆತ್ತುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಹಿಡಿದ ಮೀನುಗಳಿಗೆ ಸುಂಕವನ್ನು ತೆರಬೇಕಾಗಿತ್ತು. ಈ ಪದ್ಧತಿಯು ವಿಜಯನಗರ ಕಾಲದ ಪೂರ್ವದಲ್ಲಿಯೂ ಇದ್ದುದನ್ನು ಕಾಣಬಹುದು.[40] ಈ ಪದ್ಧತಿಯು ವಿಜಯನಗರ ಕಾಲದಲ್ಲಿ ಮುಂದುವರಿದುದರಲ್ಲಿ ಆಶ್ಚರ್ಯವಿಲ್ಲ. ಇವುಗಳಿಗೆ ಪೂರಕವಾಗಿ ತಮಿಳುನಾಡಿನಲ್ಲಿ ದೊರಕಿರುವಂತಹ ಅನೇಕ ಶಾಸನಗಳಲ್ಲಿ ಮೀನು ಗುತ್ತಿಗೆಯ ಉಲ್ಲೇಖವಿದೆ. ಕೆರೆಯಲ್ಲಿ ಮೀನುಗಳನ್ನು ಹಿಡಿಯಲು ಕೆಲವರಿಗೆ ಗುತ್ತಿಗೆಯನ್ನು ನೀಡಲಾಗುತ್ತಿತ್ತು.[41] ಆ ಹಣವನ್ನು ಕೆರೆಯ ದುರಸ್ತಿ ಮತ್ತು ರಕ್ಷಣೆಯಲ್ಲಿ ಉಪಯೋಗಿಸಲಾಗುತ್ತಿತ್ತು ಎಂದು ಹೇಳಬಹುದು. ಇವುಗಳನ್ನು `ಏರಿಮೀನ್- ವಿಲೈ- ಪಣಮ್’ ಎಂದು ಕೆಲವು ಶಾಸನಗಳು ಉಲ್ಲೇಖಿಸುತ್ತವೆ.[42]

ಉತ್ತರ ಅರ್ಕಾಟ್ ಜಿಲ್ಲೆಯ ತಿರುಮಲೈ ಎಂಬ ಗ್ರಾಮದ ನಾಲ್ಕು ಕೆರೆಗಳನ್ನು ಜೀರ್ಣೋದ್ಧಾರ ಮಾಡಲು ಮೀನು ಗುತ್ತಿಗೆಯನ್ನು ನೀಡಲಾಯಿತು ಎಂದು ಮತ್ತೊಂದು ಶಾಸನವು ತಿಳಿಸುತ್ತದೆ.[43] ಇಂತಹ ಅನೇಕ ಉದಾಹರಣೆಗಳು ನಮಗೆ ದೊರಕುತ್ತವೆ.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಮೀನು ಗುತ್ತಿಗೆಯ ಉಲ್ಲೇಖಗಳು ನಮಗೆ ತಮಿಳುನಾಡಿನ ವಿಜಯನಗರ ಕಾಲದ ಶಾಸಗಳಲ್ಲಿ ಉಲ್ಲೇಖಿತವಾಗದಿರುವ ಕಾರಣವಾಗಿ, ನಾವು ಈ ಭಾಗದಲ್ಲಿ ಅಂತಹ ಪದ್ಧತಿಯು ಇರಲಿಲ್ಲವೆಂದು ಹೇಳಲಾಗದು. ಬಹುಶಃ ಈ ಪದ್ಧತಿಯು ತಮಿಳುನಾಡಿನ ಭಾಗದಲ್ಲಿ ಹೆಚ್ಚು ಪ್ರಚಲಿತವಾಗಿದ್ದಿರಬೇಕು ಎಂದು ಊಹಿಸಲು ಸಾಧ್ಯವಷ್ಟೇ. ಈ ದಿಸೆಯಲ್ಲಿ ಮುಂದೆ ನಮಗೆ ದೊರಕಬಹುದಾದ ಶಾಸನಗಳು ಇವುಗಳ ಮೇಲೆ ಸಾಕಷ್ಟು ಬೆಳಕನ್ನು ಚೆಲ್ಲಬಹುದೆಂದು ಆಶಿಸಬಹುದು.

ಇತರೆ ತೆರಿಗೆಗಳು

ಈ ಮುಂಚೆಯೇ ತೆರಿಗೆಗಳ ಬಗೆಗೆ ಚರ್ಚಿಸಲಾಗಿದೆ. ತೆರಿಗೆಗಳನ್ನು ವಿವಿಧ ಮೂಲಗಳಿಂದ ತೆರಿಗೆ ಹಣವನ್ನು ಸಂಗ್ರಹಿಸಿ, ಪ್ರಜಾಹಿತಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದರು. ಅಂತಹ ಕೆಲವು ತೆರಿಗೆಗಳನ್ನು ಕೆರೆಯ ರಕ್ಷಣೆ ಮತ್ತು ಅವುಗಳಿಗೆ ಸಂಬಂಧಿಸಿದಂತಹ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿತ್ತು ಎಂಬುದಕ್ಕೆ ಶಾಸನಾಧಾರಗಳು ದೊರಕಿವೆ. ಅಂತಹ ಕೆಲವು ತೆರಿಗೆಗಳನ್ನು ಕುರಿತ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕೆರೆಗಳಿಗೆ ಸಂಬಂಧಿಸಿದ ತೆರಿಗೆಗಳಲ್ಲಿ ಏರಿ ವಾರಿಯಂ, ಏರಿ ಆಯ (ತಮಿಳು), ಚೆರುವು, ಕುಂಚಲು (ತೆಲುಗು), ನೀರ-ಬಿರಾಡ, ಕೆರೆ-ಬಂಡಿ ಮುಂತಾದವುಗಳೇ ಆಗಿವೆ. ಈ ತೆರಿಗೆಗಳು ರಾಜಭಂಡಾರಕ್ಕೆ ಸಲ್ಲುತ್ತಿದ್ದವು. ಇವುಗಳನ್ನು ವಿನಾಯ್ತಿಗೊಳಿಸುವ ಹಕ್ಕು ಮತ್ತು ಅಧಿಕಾರವು ರಾಜನಿಗೆ ಮಾತ್ರವೇ ಇರುತ್ತಿದ್ದವು ಹಾಗೂ ಅವನು ನಿಯಮಿಸಿದ ಪ್ರತಿನಿಧಿಗೆ ಇರುತ್ತಿದ್ದವು. ಈ ತೆರಿಗೆಗಳನ್ನು ವಿನಾಯ್ತಿ ಮಾಡಿ ರಾಜಭಂಡಾರದ ಬದಲಿಗೆ ಕೆರೆಯ ರಕ್ಷಣೆಗೆ ಮತ್ತು ಇತರ ಕೆಲಸಗಳಿಗೆ ಬಳಸುತ್ತಿದ್ದರು.

ಕೃಷ್ಣದೇವರಾಯನು ಕಟ್ಟಿಸಿದ ರಾಯರಕೆರೆಯನ್ನು ಕುರಿತು ವಿದೇಶಿ ಪ್ರವಾಸಿಗನಾದ ನ್ಯೂನಿಜ್ ತನ್ನ ಪ್ರವಾಸ ಕಥಾನಕದಲ್ಲಿ ಕೆಲವು ಕುತೂಹಲಕಾರಿಯಾದ ಅಂಶಗಳನ್ನು ಬರೆದಿದ್ದಾನೆ. ಈ ಕೆರೆಯನ್ನು ಕಟ್ಟಿಸಿದ ನಂತರ ಕೆರೆಯ ನೀರನ್ನು ಉಪಯೋಗಿಸುವ ವ್ಯವಸಾಯಗಳಿಗೆ ಒಂಭತ್ತು ವರ್ಷಗಳ ಕಾಲದವರೆಗೆ ತೆರಿಗೆಯಿಂದ ವಿಮುಕ್ತಿಗೊಳಿಸಿದ್ದನೆಂದು ಮತ್ತು ಕೆರೆಯಿಂದ ಸುಮಾರು ೨೦,೦೦೦ ಪರಡೋಸ್ (Pardos) (ಚಿನ್ನದ ನಾಣ್ಯಗಳು) ನಷ್ಟು ಹೆಚ್ಚುವರಿ ಆದಾಯ ಬರುತ್ತಿತ್ತು ಎಂದು ಸಹ ದಾಖಲಿಸಿದ್ದಾನೆ.[44] ಕೆಲವೊಮ್ಮೆ ತೆರಿಗೆ ವಿನಾಯ್ತಿಯ ಕೆಲವು ವರ್ಷಗಳಿಗೆ ಮಾತ್ರ ಸೀಮಿತಗೊಂಡಿದ್ದರೆ ಮತ್ತೆ ಕೆಲವು ನಿದರ್ಶನಗಳಲ್ಲಿ ಪೂರ್ತಿಯಾಗಿ ವಿನಾಯ್ತಿಗೊಳಿಸಲ್ಪಟ್ಟಿದ್ದವು.

ವಿವಿಧ ತರಿಗೆಗಳು ವಿಜಯನಗರ ಕಾಲದಲ್ಲಿ ಪ್ರಚಲಿತವಾಗಿದ್ದವು. ಅವುಗಳನ್ನು ವಿಶದವಾಗಿ ಕೊಟ್ರಯ್ಯನವರು ಚರ್ಚಿಸಿರುತ್ತಾರೆ.[45] ಅವುಗಳಲ್ಲಿ ನೀರ್ ಕುಳಿ,[46] ಚೆರುವು- ಕುಂಚಲು,[47] ಮೇರ, ಕಾಲುವೆಯ ನೀರ-ಬಿರಾಡ,[48] ವಿಭೂತಿ-ಕಾಣಿಕೆ, ಜೋಡಿ, ಬಿರಾಡ, ಸಲುವರಿ ಮುಂತಾದವುಗಳು ಸೇರಿವೆ.[49] ಹಂಪೆಯಲ್ಲಿ ದೊರೆತಿರುವ ಕೃಷ್ಣದೇವರಾಯನ ಕ್ರಿ. ಶ. ೧೫೧೩ ರ ಶಾಸನವು ಕಾಲುವೆಯ ನೀರ ಬಿರಾಡವನ್ನು ಹಂಪೆಯ ಶ್ರೀ ವಿರೂಪಾಕ್ಷ ದೇವರಿಗೆ ದಾನವಾಗಿ ನೀಡಿದನೆಂದು ದಾಖಲಿಸಿದೆ.[50] ಬಹುಶಃ ಹಂಪೆಯ ಬಳಿಯಲ್ಲಿ ಇದ್ದಂತಹ ಅನೇಕ ಕಾಲುವೆಗಳ ನೀರ- ಬಿರಾಡವನ್ನು ದೇವರಿಗೆ ಬಿಟ್ಟಿರಬಹುದೆಂದು ಊಹಿಸಬಹುದು.[1] ದೀರ್ಘವಾದ ಚರ್ಚೆಯನ್ನು ಮೂರನೆಯ ಅಧ್ಯಾಯದಲ್ಲಿ ಮಾಡಲಾಗಿದೆ.

[2] ಎಫ್ ಕಾರ್ನ್, (ಹಳೆಯ) ಸಂ. X ಸಂ. ಎಂ.ಬಿ. ೧೨೭ ; ಎಸ್‌ಐಐ, ಸಂ. IX ಭಾಗ II, ಸಂ. ೫೨೮ ಐಎಸ್‌‌ವಿಇ, ಪು. ೧೨೬.

[3] ಐಎಸ್‌ವಿಇ, ಪು. ೧೩೭

[4] ಮೂರನೆಯ ಅಧ್ಯಾಯವನ್ನು ನೋಡಿ

[5] ಚಿದಾನಂದಮೂರ್ತಿ, ಎಂ.ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ (ಕ್ರಿ.ಶ. ೪೫೦-೧೧೫೦) , ಪು. ೪೫೨

[6] ಎಪ್ ಕಾರ್ನ್ (ಹಳೆಯ), ಸಂ. VII, ಸಂ. ಎಸ್.ಎಚ್. ೩೦

[7] ಅದೇ, ಸಂ.X, ಸಂ. ಎಂಬಿ ೧೯೮

[8] ಐಎಸ್‌‌ವಿಇ, ಪು. ೧೩-೪೮

[9] ಕೃಷ್ಣಸ್ವಾಮಿ, ಎ., ತಮಿಳ್ ಕಂಟ್ರಿ ಅಂಡರ್ ವಿಜಯನಗರ ಎಂಪೈರ್, ಪು. ೭೮

[10] ನಾಯಕ ಪದ್ಧತಿಯು ಕಾಲಕ್ರಮೇಣ ಆಯಗಾರ ಪದ್ಧತಿಯಾಗಿ ಬದಲಾಯಿತು.

[11] ಕೃಷ್ಣಸ್ವಾಮಿ, ಎ., ಪೂರ್ವೋಕ್ತ, ಪು. ೮೫ ; ಎಆರ್‌ಎಪ್ ೧೯೪೦, ಸಂ. ೧೬೨

[12] ಟೋಪೋಗ್ರಾಫಿಕಲ್ ಲಿಸ್ಟ್, ನಾರ್ಥ ಅರ್ಕಾಟ್, ಸಂ. ೨೬೫, ಪು. ೬೪

[13] ಗೋಪಾಲ್ ಬಿ.ಆರ್., ವಿಜಯನಗರ ಇನ್ಸ್‌‌ಕ್ರಿಪ್ಷನ್ಸ್, ಸಂ. II, ಸಂ. ಕೆ.ಎನ್. ೭೫೧; ಎಫ್‌ ಕಾರ್ನ (ಹಳೆಯ), ಸಂ. XV, ಸಂ. ಎಕೆ ೨೩೮

[14] ಅದೇ, ಸಂ. ೭೫೨ ಮತ್ತು ಅದೇ ಸಂ. ಎಕೆ ೨೩೯

[15] ಎಆರ್‌ಎಪ್ ೧೯೨೨, ಸಂ. ೮ ಮತ್ತು ಪ್ಯಾರ ೪೯

[16] ಅದೇ, ೧೯೩೯ – ೪೦ ಸಂ. ೧೦೯

[17] ಎಸ್‌ಐಐ, ಸಂ. IX ಭಾಗ II , ಸಂ. ೫೨೮

[18] ತಿರುಮಲ ತಿರುಪತಿ ದೇವಸ್ಥಾನಂ ಇನ್ಸ್‌‌ಕ್ರಿಪ್ಷನ್ಸ್, ಸಂಪುಟಗಳು I ರಿಂದ IV

[19] ಮಹಾಲಿಂಗಂ, ಟಿ.ವಿ., ಅಡ್‌‌ಮಿನಿಸ್ಟ್ರೇಟಿವ್ ಅಂಡ್ ಸೋಶಿಯಲ್ ಲೈಫ್ ಅಂಡರ್ ವಿಜಯನಗರ, ಸಂ. II ಪು. ೮೯

[20] ಎಪ್ ಕಾರ್ನ್ (ಹಳೆಯ), ಸಂ. XI , ಸಂ. ಎಂಕೆ ೮ ಮತ್ತು ಸಂ. ೪೮

[21] ಗೋಪಾಲ್, ಬಿ.ಆರ್., ಪೂರ್ವೋಕ್ತ, ಸಂ. ಕೆಎನ್ ೬೪೧ ; ಐಎಸ್‌ವಿಇ, ಪು. ೧೪೭

[22] ಅದೇ, ಸಂ. III, ಪು. ೧೩೪-೩೫

[23] ಅದೇ

[24] ಮಹಾಲಿಂಗಂ, ಟಿ.ವಿ., ಪೂರ್ವೋಕ್ತ, ಪು. ೫೩.

[25] ಐಎಸ್‌ವಿಇ, ಪು. ೧೪೯

[26] ದೀಪಕ್ ರಂಜನ್ ದಾಸ್, ಎಕ್‌ನಾಮಿಕ್ ಹಿಸ್ಟರಿ ಆಫ್ ದಿ ಡೆಕ್ಕನ್ (೧ ಸೆಂಚುರಿ ಟು ೬ ಸೆಂಚುರಿ ಎ.ಡಿ.) ಪು. ೧೨೫

[27] ದೀಕ್ಷಿತ್, ಜಿ.ಎಸ್., ಮತ್ತು ಇತರರು ಟ್ಯಾಂಕ್ ಇರಿಗೇಶನ್ ಇನ್ ಕರ್ನಾಟಕ, ಪು. ೧೬೪

[28] ಎಪ್ ಕಾರ್ನ (ಹಳೆಯ), ಸಂ. X ಸಂ. ಎಂಬಿ ೧೩೧

[29] ಟೋಫೋಗ್ರಾಫಿಕಲ್ ಲಿಸ್ಟ್, ಸಂ. II ವೆಲ್ಲೂರು, ಸಂ. ೭೯೭

[30] ಎಪ್‌ ಕಾರ್ನ‌, (ಹಳೆಯ), ಸಂ. X. ಸಂ. ಎಂಬಿ ೧೭೨

[31] ಐಎಸ್‌ವಿಇ, ಪು. ೧೫೦-೧೫೧

[32] ಎಸ್‌ಐಐ, ಸಂ. IX, ಭಾಗ II ಸಂ. ೫೨೮ ; ಎಆರ್‌ಎಪ್, ೧೯೧೪, ಸಂ. ೧೯೪

[33] ಐಎಸ್‌ವಿಇ, ಪು. ೧೫೩-೫೫

[34] ಎಪ್‌ ಕಾರ್ನ್ (ಹಳೆಯ), ಸಂ. V. ಸಂ. ಎಕೆ ೧೧೫

[35] ಗೋಪಾಲ್, ಬಿ.ಆರ್.,ಪೂರ್ವೋಕ್ತ, ಸಂ. II, ಸಂ.೭೩೪

[36] ಮಹಾಲಿಂಗಂ, ಟಿ.ವಿ., ಪೂರ್ವೋಕ್ತ, ಪು. ೫೪

[37] ಎಪ್ ಕಾರ್ನ್, (ಹಳೆಯ), ಸಂ.XII ಚಿಕ್ಕನಾಯನಹಳ್ಳಿ ೫ ಮತ್ತು ೪೪

[38] ಅದೇ, ಸಂ. XI ಸಂ. ಡಿಜಿ ೧೪೨

[39] ಎಆರ್‌ಎಫ್, ೧೯೦೩-೦೪, ಪು. ೨೦೭ ಮತ್ತು ೧೯೪೬-, ಸಂ. ಬಿ. ೨೯

[40] ಎಆರ್‌ಎಫ್, ೧೯೦೮, ಸಂ. ೩ ಮತ್ತು ೪

[41] ಅದೇ, ೧೯೪೨-೪೩, ಸಂ. ೧೬೪

[42] ಮಹಾಲಿಂಗಂ, ಟಿ.ವಿ. ಪೂರ್ವೋಕ್ತ, ಸಂ. II. ಪು. ೮೭

[43] ಎಸ್‌ಐಐ, ಸಂ. XXIII, ಸಂ. ೬೯

[44] ಸೀವೆಲ್, ಆರ್.,ಎ. ಫರ್‌ಗಾಟೆನ್ ಎಂಪೈರ್, ಪು. ೩೬೫

[45] ಐಎಸ್‌‌ವಿಇ, ಪು. ೧೬೩-೬೪

[46] ಎಆರ್‌ಎಫ್, ೧೯೩೪-೩೫, ಸಂ. ೫೪ ; ೧೯೪೧-೪೨ ಸಂ. ೭೫

[47] ಕೃಷ್ಣಸ್ವಾಮಿ, ಎ., ಪೂರ್ವೋಕ್ತ, ಪು. ೭೮

[48] ಎಸ್‌ಐಐ, ಸಂ. IX, ಭಾಗ II, ಸಂ. ೪೯೩

[49] ಮಹಾಲಿಂಗಂ, ಟಿ.ವಿ., ಎಕ್‌ನಾಮಿಕ್ ಲೈಫ್ ಇನ್‌ ವಿಜಯನಗರ ಎಂಪೈರ್, ಪು. ೫೬

[50] ಎಸ್‌ಐಐ, ಸಂ. IX, ಭಾಗ II, ಸಂ. ೪೯೩