ನೀರು ಪಂಚಭೂತಗಳಲ್ಲಿ ಒಂದು. ಇದು ವಿಶ್ವದಲ್ಲಿರುವ ಕೋಟ್ಯಂತರ ಜೀವರಾಶಿಗಳಾದ ಸಸ್ಯ ಮತ್ತು ಪ್ರಾಣಿವರ್ಗಗಳಿಗೆ ಅತ್ಯಂತ ಅವಶ್ಯ. ಇಂದು ಕಾಣಸಿಗುವ ಅನೇಕ ಜೀವರಾಶಿಗಳು, ಪ್ರಮುಖವಾಗಿ ಪ್ರಾಣಿಗಳು ನೀರಿನಿಂದಲೇ ಉಗಮ ಹೊಂದಿವೆ. ಇದನ್ನು ಪ್ರಾಣಿ ಶಾಸ್ತ್ರಜ್ಞರೂ ಒಪ್ಪುತ್ತಾರೆ. ವಿಶ್ವದ ಬಹುತೇಕ ಪಾಲು ನೀರಿನಿಂದ ಆವೃತಗೊಂಡಿದೆಯಷ್ಟೇ. ಭೂ. ಭಾಗವು ಕೇವಲ ೧/೩ ರಷ್ಟಿದೆ. ಅದರಂತೆಯೇ ಮಾನವನ ದೇಹದಲ್ಲಿ ಸುಮಾರು ಶೇ. ೭೦ರಷ್ಟು ನೀರಿನಿಂದ ಕೂಡಿರುವುದು ಸಹಜ. ಇಂತಹ ವಸ್ತುವಾದ ನೀರು ಮಾನವನ ದೈನಂದಿನ ಚಟುವಟಿಕೆಗಳಲ್ಲಿ ಹಾಸುಹೊಕ್ಕಿದೆ.

ಮಾನವನ ಉಗಮ ಮತ್ತು ವಿಕಾಸದ ಸುದೀರ್ಘ ಇತಿಹಾಸವನ್ನು ಗಮನಿಸಿದಾಗ ತಿಳಿಯುವ ವಿಷಯವೆಂದರೆ ಮಾನವ ತನ್ನ ಪೂರ್ವಜರಾದ ಮಂಗನಿಂದ ಕಾಲಕ್ರಮದಲ್ಲಿ ಸುಮಾರು ೨೦ ಲಕ್ಷ ವರ್ಷಗಳಿಂದ ವಿಕಾಸ ಹೊಂದುತ್ತಾ ಬಂದಿದ್ದಾನೆ. ಅವನು ಭೌತಿಕವಾಗಿ ಹಾಗೂ ಮಾನಸಿಕವಾಗಿ ವಿಕಾಸ ಹೊಂದುವುದರೊಂದಿಗೆ ಪರಿಸರದಲ್ಲಿ ಆಗುತ್ತಿರುವ ಕಾಠಿಣ್ಯತೆಗಳನ್ನು ಸಹ ಎದುರಿಸುತ್ತಾ ಬಂದಿದ್ದಾನೆ. ಮೊದಲಿಗೆ ಮಾನವನು ಚತುಷ್ಪಾದಿಯಾಗಿದ್ದ. ಅವನಿಗೆ ಕೈಗಳು ಇರಲಿಲ್ಲ. ಅನಂತರ ತನ್ನ ಎರಡು ಮುಂಗಾಲುಗಳನ್ನು ಸತತವಾಗಿ ಉಪಯೋಗಿಸುತ್ತಾ ಇದ್ದು, ಅವು ಕೈಗಳಾಗಿ ಮಾರ್ಪಟ್ಟವು. ಅಂತೆಯೇ ಅವನು ದ್ವಿಪಾದಿಯಾದ. ತನ್ನ ಕೈಗಳನ್ನು ಬಳಸುವಂತವನಾದ. ಈ ಮಾರ್ಪಾಡನ್ನು ಹೊಂದಲು ಅನೇಕ ಲಕ್ಷ ವರ್ಷಗಳು ಬೇಕಾದವು. ಹೀಗೆ ತನ್ನ ಕೈಗಳನ್ನು ಬಳಸಿಕೊಂಡು ವಿವಿಧ ನಮೂನೆಯ ಕಲ್ಲಿನ ಆಯುಧಗಳನ್ನು ತಯಾರಿಸಲು ಪ್ರಾರಂಭಿಸಿದನು. ಇಂತಹ ಆಯುಧಗಳಿಂದ ಪ್ರಾಣಿಗಳನ್ನು ಬೇಟೆಯಾಡಿ, ಕೊಂದು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳತೊಡಗಿದನು. ಈ ಶಿಲಾಯುಧಗಳನ್ನು ಅವುಗಳ ಗಾತ್ರ, ರಚನೆ, ವಿನ್ಯಾಸ ಮತ್ತು ಉಪಯುಕ್ತತೆಯನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನು ಪುರಾತತ್ವ ವಿದ್ವಾಂಸರು ಆದಿ, ಮಧ್ಯ, ಅಂತ್ಯ ಹಾಗೂ ಸೂಕ್ಷ್ಮ ಶಿಲಾಯುಧಗಳೆಂದು ವರ್ಗೀಕರಿಸುತ್ತಾರೆ.

[1] ಆದಿ ಮಾನವನ ಈ ಎಲ್ಲಾ ಬಗೆಯ ಚಟುವಟಿಕೆಗಳ ಕಾರ್ಯಕ್ಷೇತ್ರವು ಸರೋವರ, ಕೆರೆ, ನದಿ, ತೊರೆಗಳ ಸಮೀಪದಲ್ಲಿಯೇ ಕೇಂದ್ರೀಕೃತವಾಗಿತ್ತು. ಇವಕ್ಕೆ ಪೂರಕವಾಗಿ ನಡೆಸಿದಂತಹ ಅನೇಕ ಸಂಶೋಧನೆಗಳು ವಿಶ್ವದಾದ್ಯಂತ ನಡೆದಿದ್ದು, ಅನೇಕ ಸಾಕ್ಷ್ಯಾಧಾರಗಳು ದೊರೆತಿವೆ. ಇದರಿಂದ ನೀರು ಮಾನವನಿಗೆ ಎಷ್ಟು ಉಪಯೋಗವೆಂಬುದು ವೇದ್ಯವಾಗುತ್ತದೆ.

ಸರಿಸುಮಾರು ಇಂದಿನಿಂದ ಏಳುಸಾವಿರ ವರ್ಷಗಳ ಪೂರ್ವದಲ್ಲಿ ಮಾನವ ತನ್ನ ಅಲೆಮಾರಿ ಜೀವನವನ್ನು ಬಿಟ್ಟು ಒಂದು ಸ್ಥಳದಲ್ಲಿ ನಿರಂತರವಾಗಿ ಇರಲು ಪ್ರಾರಂಭಿಸಿದ. ಈ ಕಾಲಘಟ್ಟವನ್ನು ಪ್ರಾಕ್ತನಕಾರರು `ನವಶಿಲಾಯುಗ ಕ್ರಾಂತಿ’ ಎಂದು ಕರೆಯುತ್ತಾರೆ. ಈ ಕ್ರಾಂತಿಯು ಮಾನವನ ಜೀವನದ ಮೇಲೆ ಅತ್ಯಂತ ಗಂಭೀರವಾದ ಪರಿಣಾಮವನ್ನು ಬೀರಿತು. ಈ ಕ್ರಾಂತಿಯ ಮುಖ್ಯ ಪರಿಣಾಮಗಳನ್ನು ಮೂರು ನೆಲೆಗಳಲ್ಲಿ ವಿವರಿಸಬಹುದು. (೧) ಮಾನವನು ಒಂದೆಡೆಯಲ್ಲಿ ನಿರಂತರವಾಗಿ ವಾಸಿಸಲು ಪ್ರಾರಂಭಿಸಿದ್ದು ; (೨) ತನ್ನ ಆಯುಧಗಳಲ್ಲಿ ಬಹಳಷ್ಟು ಸುಧಾರಣೆಗಳನ್ನು ಮಾಡಿದ್ದು ಮತ್ತು (೩) ಕೃಷಿಕ ಜೀವನವನ್ನು ಪ್ರಾರಂಭಿಸಿದ್ದು[2], ಈ ಕೃಷಿಕ ಜೀವನವು ತೀರಾ ಶೈಶವಾವಸ್ಥೆಯಲ್ಲಿದ್ದು ಅದನ್ನು ಕಾಲಕ್ರಮೇಣ ಸುಧಾರಣೆಗೆ ಒಳಪಡಿಸಿದನೆಂಬುದಕ್ಕೆ ಭಾರತದಲ್ಲಿ ಹಾಗೂ ವಿಶ್ವದ ಕೆಲವೊಂದು ಪುರಾತನ ನೆಲೆಗಳಲ್ಲಿ ಪುರಾವೆಗಳು ದೊರೆತಿವೆ.

ಈ ರೀತಿಯಾಗಿ ಒಂದೆಡೆ ಮಾನವನು ಸ್ಥಿರವಾಗಿ ನೆಲೆ ನಿಲ್ಲುವಂತಹ ಪ್ರಯತ್ನವು ಅವನ ಜೀವನದಲ್ಲಿ ಬಂದದ್ದು ವ್ಯವಸಾಯದಿಂದಲೇ. ಈ ವ್ಯವಸಾಯ ಪದ್ಧತಿಯು ಅವನ ಜೀವನದಲ್ಲಿ ಒಂದು ಕ್ರಮಬದ್ಧತೆಯನ್ನು ತಂದಿತು. ಮಾನವನ ಸರ್ವತೋಮುಖ ಅಭಿವೃದ್ಧಿ ಮತ್ತು ವಾಣಿಜ್ಯ ವ್ಯವಹಾರಗಳೆಲ್ಲವೂ ವ್ಯವಸಾಯದ ಆವಿಷ್ಕಾರದಿಂದಲೇ ಪ್ರಾರಂಭವಾಯಿತು. ಒಂದು ಸಂಸ್ಕೃತಿಯ ಉಗಮ ಮತ್ತು ವಿಕಾಸಕ್ಕೆ ವ್ಯವಸಾಯವು ತಳಹದಿಯಾಯಿತು. ಮಾನವನು ಕೃಷಿಯನ್ನು ಅಂದಿನಿಂದ ಇಂದಿನವರೆಗೆ ತನ್ನ ಪ್ರಮುಖ ವೃತ್ತಿಯನ್ನಾಗಿಸಿಕೊಂಡು ಬಂದಿರುವುದು ಸರಿಯಷ್ಟೇ. ಭಾರತವು ಪ್ರಮುಖವಾಗಿ ಕೃಷಿಕ ರಾಷ್ಟ್ರವಾಗಿದ್ದು, ಇಂದಿಗೂ ಭಾರತೀಯರ ಪ್ರಮುಖ ವೃತ್ತಿ ವ್ಯವಸಾಯವೇ ಆಗಿದೆ. ಸತತವಾಗಿ ಏಳುಸಾವಿರ ವರ್ಷಗಳಿಂದ ಮಾನವನು ಎಡೆಬಿಡದೆ ವ್ಯವಸಾಯ ಪದ್ಧತಿಗಳನ್ನು ಸುಧಾರಿಸುತ್ತಲೇ ಬಂದಿದ್ದಾನೆ. ಈ ಪ್ರಕ್ರಿಯೆಯಲ್ಲಿ ಅವನು ಪರಿಸರದ ಎಲ್ಲಾ ಅಂಶಗಳನ್ನೂ ಗಮನಿಸಿ, ಅಭ್ಯಯಿಸಿ ವ್ಯವಸಾಯವನ್ನು ಕರಗತ ಮಾಡಿಕೊಂಡಿದ್ದಾನೆ [3].

ಮಾನವನು ಮೊದಲಿಗೆ ವ್ಯವಸಾಯವನ್ನು ಪ್ರಾರಂಭಿಸಿದಾಗ ಅವನು ಮಳೆಯನ್ನೇ ನಂಬಿದ್ದ, ಅವನು ವಿಪುಲವಾಗಿ ನೀರು ಸಿಗುವ ಜಾಗವಾಗಿದ್ದ ನದಿಯನ್ನು ಆಶ್ರಯಿಸಿದ್ದನು. ಪರಿಸರದಲ್ಲಿ ಆಗುತ್ತಿದ್ದ ಬದಲಾವಣೆಗಳು ಮತ್ತು ಸಕಾಲದ ಮನೆಯ ವೈಫಲ್ಯತೆಯು ಅವನನ್ನು ಆಗಿಂದಾಗ್ಗೆ ಕಷ್ಟಕ್ಕೆ ಒಳಪಡಿಸುತ್ತಿತ್ತು. ಇದರಿಂದ ಅವನು ನೀರನ್ನು ಸಂಗ್ರಹ ಮಾಡಿ, ತನ್ನ ಹತೋಟಿಯಲ್ಲಿಟ್ಟುಕೊಳ್ಳುವ ಪ್ರಯತ್ನದಲ್ಲಿ ತೊಡಗಿದ. ಮಳೆಗಾಲವು ವರ್ಷದಲ್ಲಿ ಕೆಲವು ಮಾಸಗಳು ಮಾತ್ರ ಸಿಗುತ್ತಿತ್ತು. ಅದರಂತೆಯೇ ನದಿಯಿಂದ ಕೆಲವು ಸಾವಿರ ಎಕರೆಗಳಷ್ಟು ಭೂ ಪ್ರದೇಶವು ವ್ಯವಸಾಯಕ್ಕೆ ಒಳಪಟ್ಟಿದ್ದವು, ಆದುದರಿಂದ ಅವನು ಎಲ್ಲ ಮೂಲಗಳಿಂದ ನೀರನ್ನು ಸಂಗ್ರಹಿಸಿಟ್ಟುಕೊಂಡು, ಅಗತ್ಯವಿದ್ದಾಗ ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳತೊಡಗಿದನು. ಇಂತಕ ಕೃತಕ ಸಂಗ್ರಾಹಕಗಳೇ ಇಂದಿನ ಕೆರೆಗಳು ಮತ್ತು ಕುಂಟೆಗಳು. ಕೆರೆಗಳ ನಿರ್ಮಾಣದಿಂದ ಮಾನವ ತನಗೆ ಬೇಕೆಂದಾಗ ನೀರನ್ನು ಉಪಯೋಗಿಸಿಕೊಂಡು ವ್ಯವಸಾಯ ಮಾಡತೊಡಗಿದನು. ಈ ಬಗೆಯ ಕೆರೆಗಳ ನಿರ್ಮಾಣ ಕಾರ್ಯದ ಪ್ರಯತ್ನವನ್ನು ನವಶಿಲಾಯುಗ ಕಾಲದ ಆರಂಭದಿಂದ ಕಾಣಬಹುದು. ಮಳೆಯ ನೀರು ತಗ್ಗಾದ ಪ್ರದೇಶದಲ್ಲಿ ಕೂಡಿಕೊಳ್ಳುತ್ತಿತ್ತು. ಅಂತಹ ಜಾಗಗಳಲ್ಲಿ ನೀರು ಹರಿದು ಹೋಗದಂತೆ ಸಣ್ಣ ಕಟ್ಟೆಗಳನ್ನು ನಿರ್ಮಿಸಿ ಆ ಪ್ರದೇಶಗಳ ಆಸುಪಾಸಿನಲ್ಲಿ ನವಶಿಲಾಯುಗ ಕಾಲದ ಮಾನವ ವ್ಯವಸಾಯವನ್ನು ಮಾಡತೊಡಗಿದ. ಇದು ನಿಸರ್ಗವು ಮಾನವನಿಗೆ ಕಲಿಸಿದ ಪಾಠ. ಕಾಲಾನುಕ್ರಮದಲ್ಲಿ ಮಾನವನ ಸಂತಾನ ಬೆಳೆಯತೊಡಗಿತ್ತು. ಆದಿಶಿಲಾಯುಗ ಕಾಲದಲ್ಲಿದ್ದ ಜನಸಂತತಿಗಿಂತಲೂ ನವಶಿಲಾಯುಗ ಕಾಲದಲ್ಲಿ ಗಣನೀಯವಾಗಿ ಹೆಚ್ಚಿದ್ದಿರಬೇಕು. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪೂರೈಕೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಇರಲು, ಹೆಚ್ಚುವರಿ ಭೂ ಭಾಗಗಳನ್ನು ವ್ಯವಸಾಯಕ್ಕೆ ಒಳಪಡಿಸಬೇಕಾಯಿತು. ಆ ಹೆಚ್ಚುವರಿ ವ್ಯವಸಾಯ ಕ್ಷೇತ್ರಕ್ಕೆ ನೀರನ್ನು ಕೃತಕ ಮೂಲವಾದ ಕೆರೆಗಳಿಂದ ಪೂರೈಸಿಕೊಳ್ಳುತ್ತಿದ್ದನು.

ಈ ದಿಸೆಯಲ್ಲಿ ವಿಶ್ವದಾದ್ಯಂತ ಅನೇಕ ಸಂಶೋಧನೆಗಳು ನಡೆದಿವೆ ಹಾಗೂ ನಡೆಯುತ್ತಲಿವೆ. ಕೆಲವು ಪ್ರಾಕ್ತನಾನ್ವೇಷಣೆಯಿಂದ ದೊರಕಿರುವ ಮಾಹಿತಿಗಳು ನಿಜಕ್ಕೂ ರೋಚಕವಾಗಿವೆ. ಈಜಿಪ್ಟ್ ದೇಶದಲ್ಲಿ ದೊರೆತಿರುವ ರೇಖಾ ಚಿತ್ರಗಳಲ್ಲಿ ಮಾನವನು ನೀರನ್ನು ಸಂಗ್ರಹಿಸಿ ಬಳಸಿಕೊಂಡಿರುವುದನ್ನು ಚಿತ್ರಿಸಲಾಗಿದೆ. ಇದರಿಂದಾಗಿ ಆ ದೇಶದಲ್ಲಿಯೇ ಮೊಟ್ಟಮೊದಲಿಗೆ ಕೆರೆ-ನೀರಾವರಿ ಪದ್ಧತಿಯನ್ನು ಬಳಕೆಗೆ ತಂದರೆಂದು ಪುರಾತತ್ವಜ್ಞರು ಅಭಿಪ್ರಾಯಪಡುತ್ತಾರೆ [4].

ಭಾರತವು ಸಹ ಈಜಿಪ್ಟನಷ್ಟೇ ಪ್ರಾಚೀನತೆಯನ್ನು ಹೊಂದಿರುವ ದೇಶ. ಭಾರತದಲ್ಲಿಯೂ ಸುಮಾರು ಆರು ಸಾವಿರ ವರ್ಷಗಳಷ್ಟು ಹಿಂದೆಯೇ, ಅಂದರೆ ಈಜಿಪ್ಟಗೆ ಸಮಕಾಲೀನವಾಗಿ ಕೃಷಿಕ ಜೀವನದ ಕುರುಹುಗಳನ್ನು ನೋಡಬಹುದು. ಇಲ್ಲಿ ಇನ್ನೂ ಪೂರ್ಣಪ್ರಮಾಣದಲ್ಲಿ ಅಧ್ಯಯನವಾಗದ ಕಾರಣ ಖಚಿತತೆಯಿಂದ ಹೇಳಲು ಸಾಧ್ಯವಾಗದಿದ್ದರೂ, ಅಲ್ಲಲ್ಲಿ ದೊರೆತಿರುವ ಪುರಾವೆಗಳ ಆಧಾರದಿಂದ ಭಾರತದಲ್ಲಿ ಆರು ಸಾವಿರ ವರ್ಷಗಳ ಹಿಂದೆಯೇ ಕೃಷಿ ಜೀವನ ಪ್ರಾರಂಭವಾಯಿತು ಎಂದು ಹೇಳಬಹುದು. ಸಿಂಧೂ ನದಿಕೊಳ್ಳದ ಸಂಸ್ಕೃತಿಯ ಜನರು ಮಾಡಿಕೊಂಡಿರುವ ನೀರಿನ ವ್ಯವಸ್ಥೆಯು ನಿಜಕ್ಕೂ ಶ್ಲಾಘನೀಯ. ಸಿಂಧೂನದಿ ಕೊಳ್ಳದ ಸಂಸ್ಕೃತಿಯ ಅನೇಕ ನೆಲೆಗಳಲ್ಲಿ ಇಂತಹ ನೀರಾವರಿ ವ್ಯವಸ್ಥೆಯ ಪುರಾವೆಗಳು ದೊರಕಿವೆ. ರಾಜಸ್ತಾನದ ಗಂಗಾನಗರ್ ಜಿಲ್ಲೆಯಲ್ಲಿರುವ ಕಾಳಿಬಂಗಾನ್ ಎಂಬ ಸಿಂಧೂ ನದಿಕೊಳ್ಳ ಸಂಸ್ಕೃತಿಯ ನೆಲೆಯಲ್ಲಿ ನಡೆಸಿದ ಉತ್ಖನನದಲ್ಲಿ ಉತ್ತಿರುವ ಜಮೀನು ದೊರೆತಿದೆ.[5] ಅತ್ಯಂತ ಸಮರ್ಪಕವಾದ ನೀರು ಸರಬರಾಜು ಪದ್ಧತಿಯು ಇತ್ತೆಂಬುದು ಗುಜರಾತಿನಲ್ಲಿರುವ ದೋಲವೀರಾ ಎಂಬ ಗ್ರಾಮದಲ್ಲಿ ಕೈಗೊಂಡ ಉತ್ಖನನದಿಂದ ತಿಳಿದುಬಂದಿದೆ. ಇದು ಸಹ ಸಿಂಧೂ ನದಿ ಕೊಳ್ಳ ಸಂಸ್ಕೃತಿಯ ಒಂದು ನೆಲೆಯೇ ಆಗಿದೆ.[6] ಈ ಸಂಸ್ಕೃತಿಯು ಸುಮಾರು ನಾಲ್ಕೂವರೆ ಸಾವಿರ ವರ್ಷಗಳಷ್ಟು ಪ್ರಾಚೀನವಾದದ್ದು.

ಕ್ರಿಸ್ತ ಪೂರ್ವದ ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ತಮಿಳುನಾಡಿನಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಜನರು ವಾಸಿಸುತ್ತಿದ್ದರು. ಇವರ ಕಾಲಮಾನ ಕ್ರಿ. ಪೂ. ೮೦೦ ರಿಂದ ಕ್ರಿ. ಶ. ೨ ಶತಮಾನ. ಉತ್ತರ ತಮಿಳುನಾಡಿನಲ್ಲಿ ಸ್ವಾಭಾವಿಕವಾಗಿಯೇ ಅನೇಕ ತಗ್ಗು ಪ್ರದೇಶಗಳು ಕಂಡುಬರುತ್ತವೆ. ಈ ಪ್ರದೇಶಗಳಲ್ಲಿ ಮಳೆಯ ನೀರು ಸಂಗ್ರಹಗೊಳ್ಳುತ್ತದೆ. ಈ ಸಂಸ್ಕೃತಿಯ ಜನರು ಅಂತಹ ಸ್ವಾಭಾವಿಕವಾಗಿ ಉಂಟಾದಂತಹ ಕೆರೆಯ ನೀರನ್ನು ಬಳಸಿಕೊಂಡು ಮೊಟ್ಟಮೊದಲಿಗೆ ದಕ್ಷಿಣ ಭಾರತದಲ್ಲಿ ನೀರಾವರಿ ಕೃಷಿ ಪದ್ಧತಿಯನ್ನು ಪ್ರಾರಂಭಿಸಿದರೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಭಾರತದ ಬೃಹತ್ ಶಿಲಾಯುಗದ ಸಮಾಧಿ ನೆಲೆಗಳ ಉತ್ಖನನ ನಡೆದಿದ್ದು ಕೆಲವು ನೆಲೆಗಳಲ್ಲಿ ಅಕ್ಕಿ, ರಾಗಿ, ಮುಂತಾದ ಧಾನ್ಯಗಳು ದೊರೆತಿವೆ. ಆದ್ದರಿಂದ ಈ ಸಂಸ್ಕೃತಿಯ ಜನರು ಅಕ್ಕಿ, ರಾಗಿ ಮುಂತಾದ ಧಾನ್ಯಗಳನ್ನು ಬೆಳೆಯುತ್ತಿದ್ದರೆಂಬುದು ಇದರಿಂದ ದೃಢವಾಗುತ್ತದೆ.[7]

ಆದಿಇತಿಹಾಸ ಕಾಲದ ಕೆಲವು ನೆಲೆಗಳು ಭಾರತದಾದ್ಯಂತ ಪತ್ತೆಯಾಗಿವೆ. ಉತ್ತರ ಭಾರತದ ಕೆಲವು ಆದಿಇತಿಹಾಸ ಕಾಲದ ನೆಲೆಗಳಾದ ಶೃಂಗವೇರ್ಪುರ, ಬಿಸನಗರ, ಕುಮ್ರಹಾರ (ಇಂದಿನ ಪಟ್ನಾ), ಉಜ್ಜಯಿನಿ, ಮಥುರಾ ಮೊದಲಾದೆಡೆಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಅನೇಕ ಬಗೆಯ ನಿರ್ಮಾಣಗಳನ್ನು ಮಾಡಿ ಬೇಸಾಯಕ್ಕೆ ನೀರನ್ನು ಬಳಸಿಕೊಳ್ಳುತ್ತಿದ್ದರೆಂಬುದು ಅಲ್ಲಿ ನಡೆದಂತಹ ಉತ್ಖನನಗಳಿಂದ ತಿಳಿದುಬಂದಿದೆ.[8] ಇಂದಿನ ಆಂಧ್ರಪ್ರದೇಶದಲ್ಲಿರುವ ನಾಗಾರ್ಜುನಕೊಂಡದಲ್ಲಿ ನಡೆದಿರುವ ಉತ್ಖನನದಲ್ಲಿಯೂ ಸಹ ಅಂದಿನ ಕಾಲದ ಜನರು ನೀರಾವರಿ ಸೌಲಭ್ಯಗಳನ್ನು ಹೊಂದಿದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳು ದೊರಕಿವೆ.[9]

ಭಾರತದ ಆದಿಇತಿಹಾಸದ ಕಾಲದಲ್ಲಿ ಅನೇಕ ಸಾಹಿತ್ಯ ಕೃತಿಗಳು ರಚಿತವಾದವು. ಅವುಗಳು ಧಾರ್ಮಿಕ, ಸಾಮಾಜಿಕ, ಕಥಾನಕ, ರಾಜಕೀಯ, ಪುರಾಣ, ಔಪಯೋಗಿಕ ಬರಹಗಳು ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿ ಇದ್ದಂತಹ ವ್ಯವಸಾಯ ಪದ್ಧತಿ, ನೀರಾವರಿ ವ್ಯವಸ್ಥೆ ಮುಂತಾದವುಗಳ ಬಗ್ಗೆ ತಿಳಿಸುತ್ತವೆ. ಇವುಗಳು ಕೆರೆಗಳ ನಿರ್ಮಾಣ, ಅವುಗಳ ಬಳಕೆ, ರಕ್ಷಣೆ. ಪೋಷಣೆ ಇವೇ ಮುಂತಾದ ವಿಷಯಗಳನ್ನು ಕುರಿತು ಚರ್ಚಿಸಿವೆ.

ಭಾರತದ ಅತ್ಯಂತ ಪ್ರಾಚೀನ ಸಾಹಿತ್ಯವೆನಿಸಿಕೊಳ್ಳುವ ವೇದಗಳು ಕೆರೆ ಬೇಸಾಯ ಪದ್ಧತಿಯ ಬಗ್ಗೆ ಉಲ್ಲೇಖಿಸುತ್ತವೆ. ಋಗ್ವೇದ, ಯಜುರ್ವೇದ ಮತ್ತು ಅಥರ್ವಣ ವೇದಗಳು ಕೂಪ[10], ಸರಸ್, ಕೃತ್ರಿಮ ನದಿಯಾ ಎಂದು ಉಲ್ಲೇಖಿಸುತ್ತವೆ; ಕೌಶಿಕ ಸೂತ್ರವು ಬೋಧಾಯನ ಧರ್ಮಸೂತ್ರ, ಧರ್ಮಪದ ಮುಂತಾದ ಧಾರ್ಮಿಕ ಕೃತಿಗಳು ನಾಲೆಗಳ ಬಳಕೆಯನ್ನು ಕುರಿತ ಮಾಹಿತಿಯನ್ನು ನೀಡುತ್ತವೆ.[11]

ಭಾರತದ ಅತ್ಯಂತ ಪ್ರಾಚೀನ ಕೃತಿಗಳಲ್ಲಿ ಮನುಧರ್ಮಶಾಸ್ತ್ರವು ಒಂದು. ಇದನ್ನು `ಮನು’ ಎಂಬುವನು ವಿರಚಿಸಿದ್ದಾನೆ. ಈ ಕೃತಿಯಲ್ಲಿ ನಾಲೆಗಳನ್ನು ಕುರಿತು ಹೇಳುವಾಗ ಇವಕ್ಕೆ ಯಾರಾದರು, ಯಾವುದೇ ವಿಧವಾದ ಧಕ್ಕೆಯನ್ನು ಉಂಟುಮಾಡಿದಲ್ಲಿ ಅಂತಹವರಿಗೆ ಮರಣದಂಡನೆಯೇ ಶಿಕ್ಷೆ ಎಂದು ಬರೆದಿದ್ದಾನೆ. ಇದರಿಂದ ಪ್ರಾಚೀನ ಭಾರತದಲ್ಲಿ ಕೃಷಿಗೆ ಮತ್ತು ನೀರಾವರಿ ವ್ಯವಸ್ಥೆಗೆ ಎಷ್ಟರಮಟ್ಟಿನ ಮಹತ್ವವನ್ನು ನೀಡಲಾಗಿತ್ತು ಎಂಬುದು ತಿಳಿಯುತ್ತದೆ.[12]

ಈ ದೇಶದ ಎರಡು ಶಿಷ್ಟ ಮಹಾಕಾವ್ಯಗಳು ಮಹಾಭಾರತ ಮತ್ತು ರಾಮಾಯಣ. ಮಹಾಭಾರತದ ಅನುಶಾಸನಿಕ ಪರ್ವವು ಮಹಾರಾಜನಾದಂತಹವನು ಕೈಗೊಳ್ಳಬೇಕಾದ ಪ್ರಜಾಹಿತಾತ್ಮಕ ಕಾರ್ಯಗಳಲ್ಲಿ ಕೆರೆಗಳ ನಿರ್ಮಾಣವು ಒಂದು ಎಂದು ತಿಳಿಸುತ್ತದೆ. ಅದಲ್ಲದೇ ನಾಲೆಗಳ ನಿರ್ಮಾಣವು ಪ್ರಜಾಹಿತಾತ್ಮಕ ಕೆಲಸವೆಂದು ವಿವರಿಸುತ್ತದೆ. ಮತ್ತೊಂದು ಸಂದರ್ಭ ಕುತೂಹಲಕಾರಿಯಾಗಿದೆ. ಇದರಲ್ಲಿ ನಾರದನು, ಧರ್ಮರಾಜನಿಗೆ ಎಚ್ಚರಿಸಿ ‘‘ಮಳೆಯನ್ನೇ ನೆಚ್ಚಿಕೊಂಡು ಬೇಸಾಯಕ್ಕೆ ತೊಡಗಬಾರದೆಂತಲೂ ಹಾಗೂ ಕೆರೆ ಹಾಗೂ ಸರೋವರಗಳನ್ನು ನಿರ್ಮಿಸಿಕೊಂಡು ಬೇಸಾಯಕ್ಕೆ ತೊಡಗಬೇಕು” ಎನ್ನುತ್ತಾನೆ[13]. ಪ್ರಾಚೀನ ಭಾರತದಲ್ಲಿಯೂ ಹವಾಮಾನವು ಒಂದೇ ರೀತಿಯಾಗಿ ಇರದೆ ಮಳೆಯು ಕೆಲವೊಮ್ಮೆ ಬರುತ್ತಿರಲಿಲ್ಲ. ಇದರಿಂದ ನಾವು ಅಂದಿನ ಪ್ರಾಚೀನ ಹವಾಮಾನವನ್ನು ಕುರಿತಂತೆ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಬಹುದು.ಎರಡನೆಯದಾಗಿ ಮಳೆಯ ನೀರಿನ ಪರ್ಯಾಯ ವ್ಯವಸ್ಥೆಯಾಗಿ ಕೆರೆ ಮತ್ತು ಸರೋವರಗಳ ನಿರ್ಮಾಣಗಳ ಕಾರ್ಯವನ್ನು ಅಂದಿನ ರಾಜರು ಕೈಗೊಳ್ಳುತ್ತಿದ್ದರು. ಇವುಗಳು ಪ್ರಾಚೀನ ಭಾರತದ ಕೆರೆಗಳ ನಿರ್ಮಾಣವನ್ನು ಕುರಿತಂತೆ ನಮಗೆ ಸಿಗುವ ಪುರಾತನ ದಾಖಲೆಗಳು.

ಪದ್ಮ ಪುರಾಣದ ಒಂದು ಅಧ್ಯಾಯವು ಕೆರೆಗಳ ನಿರ್ಮಾಣವನ್ನು ಕುರಿತಂತೆ ಇದೆ. ವಿಷ್ಣಧರ್ಮೋತ್ತರ ಹಾಗೂ ದೇವಿಪುರಾಣಗಳು ನದಿವಾಹಕಗಳನ್ನು ಕುರಿತು ಉಲ್ಲೇಖಿಸುವುದರಿಂದ ಇವುಗಳು ಚಿಕ್ಕ ನಾಲೆಗಳಾಗಿರಬಹುದೆಂದು ಊಹಿಸಬಹುದು.

ಕೌಟಿಲ್ಯನ ಅರ್ಥಶಾಸ್ತ್ರವು ಅಂದು ಪ್ರಚಲಿತವಿದ್ದ ವಿವಿಧ ಬೇಸಾಯ ಪದ್ಧತಿ, ಮಾನವನ ಆಹಾರ ಪದ್ಧತಿ, ವಿವಿಧ ಪ್ರಕಾರಗಳ ಸಸ್ಯ, ಆಹಾರಕ್ಕೆ ಯೋಗ್ಯವಾದ ಸಸ್ಯ, ಕೃತಕ ನೀರಾವರಿ ಪದ್ಧತಿಯೇ ಮುಂತಾದ ವಿಷಯಗಳನ್ನು ಗಂಭೀರವಾಗಿ ಚರ್ಚಿಸಿರುವುದು ಗಮನಾರ್ಹ.[14]

ಈ ಕೃತಿಯ ಕರ್ತೃವಾದ ಕೌಟಿಲ್ಯನು, ಮಗಧ ರಾಜ್ಯದಲ್ಲಿ ವಾರ್ಷಿಕವಾಗಿ ಆಗುತ್ತಿದ್ದ ಮಳೆಯ ಪ್ರಮಾಣ, ಅಕಾಲಿಕ ಮಳೆಯನ್ನು ಕುರಿತು ತಿಳಿಸುತ್ತಾನೆ. ಅದಲ್ಲದೆ ಆ ರಾಜ್ಯದಲ್ಲಿ ಎಷ್ಟು ಕೆರೆಗಳು ಮತ್ತು ಸರೋವರಗಳು ಸುಸ್ಥಿತಿಯಲ್ಲಿವೆ, ಎಷ್ಟು ಹಳೆಯವು ಮತ್ತು ಎಂತಿಷ್ಟು ದುರಸ್ತಿಗೊಳ್ಳಬೇಕಾದ ಕೆರೆಗಳು ಇವೆಯೆಂಬುದಲ್ಲದೇ ಪ್ರತಿ ಗ್ರಾಮದಲ್ಲಿರುವ ಕೆರೆಗಳ ಸಂಖ್ಯಾಪಟ್ಟಿಯು ತನಗೆ ತಿಳಿದಿದೆ ಎಂದೂ ಸಹ ತಿಳಿಸುತ್ತಾನೆ. ಅವನು ಆ ದೇಶದಲ್ಲಿದ್ದ ವಿವಿಧ ಅಧಿಕಾರಿಗಳ ಹುದ್ದೆಗಳನ್ನು ಕುರಿತು ಬರೆಯುತ್ತಾ, ಅವರ ಕಾರ್ಯನಿರ್ವಹಣೆಯನ್ನು ವಿವರಿಸಿದ್ದಾನೆ. ಅವುಗಳಲ್ಲಿ ಅಧಿಕಾರಿಗಳು ಜಮೀನನ್ನು ಅಳೆಯುವುದು, ಕೆರೆಯ ತೂಬುಗಳನ್ನು ಕಾಲಕಾಲಕ್ಕೆ ಪರೀಕ್ಷಿಸಿ ಅವುಗಳನ್ನು ಸುಸ್ಥಿತಿಯಲ್ಲಿಡುವುದು ಮತ್ತು ನೀರನ್ನು ಸಮರ್ಪಕವಾಗಿ ಹಂಚುವುದು ಹಾಗೂ ಇನ್ನಿತರ ಕರ್ತವ್ಯಗಳ ಬಗೆಗೆ ಈ ಗ್ರಂಥದಲ್ಲಿ ವಿವರಿಸುವುದು ಗಮನೀಯವಾದ ಅಂಶ.

ಮೇಲೆ ಉಲ್ಲೇಖಿಸಿದ ಕೆಲವು ಅಂಶಗಳನ್ನು ಹೊರತುಪಡಿಸಿ ಈ ಕೃತಿಯು ರಾಜನ ಕರ್ತವ್ಯದ ಬಗೆಗೆ ವಿಶದವಾಗಿ ವಿವರಿಸುತ್ತದೆ. ರಾಜ್ಯದಲ್ಲಿ ರಾಜನು ಹೊಸ ಗ್ರಾಮವನ್ನು ಸ್ಥಾಪಿಸಿದಾಗ ಆ ಗ್ರಾಮದಲ್ಲಿ ಕೆರೆ ಇರಬೇಕೆಂದೂ ಆ ಕೆರೆಯ ನೀರು ಕುಡಿಯುವುದಕ್ಕೆ ಮತ್ತು ಬೇಸಾಯಕ್ಕೆ ಉಪಯೋಗಿಸಬೇಕೆಂದೂ ಮತ್ತು ಆ ಕೆರೆಯ ನಿರ್ಮಾಣ ಕಾರ್ಯದಲ್ಲಿ ಸಹಕರಿಸುತ್ತಿದ್ದ ಪ್ರಜೆಗಳಿಗೆ ತೆರಿಗೆಯಲ್ಲಿ ವಿನಾಯಿತಿಯನ್ನು ಸಹ ನೀಡಬೇಕೆಂದು ತಿಳಿಸುತ್ತದೆ.

ಈ ಕೃತಿಯು ಅಂದಿನ ಕಾಲದ ತೆರಿಗೆ ಪದ್ಧತಿಯನ್ನು ಕುರಿತು ಸಹ ಉಲ್ಲೇಖಿಸುತ್ತದೆ. ಅದರಂತೆ ಒಂದು ಕೆರೆಯು ಹೊಸದಾಗಿ ನಿರ್ಮಾಣವಾದಾಗ ಆ ಕೆರೆಯ ನೀರನ್ನು ಕೃಷಿಗೆ ಬಳಸುವವರಿಗೆ ಐದು ವರ್ಷಗಳ ಕಾಲ ತೆರಿಗೆಯಿಂದ ವಿಮುಕ್ತರನ್ನಾಗಿಸಬೇಕು ಎಂದೂ; ಕೆರೆಯು ಒಮ್ಮೆ ದುರಸ್ತಿಯಾಗಿದ್ದರೆ ಅವುಗಳ ಬಳಕೆದಾರರಿಗೆ ನಾಲ್ಕು ವರ್ಷ ತೆರಿಗೆಯಿಂದ ವಿನಾಯ್ತಿಗೊಳಿಸಬೇಕೆಂದು ತಿಳಿಸುತ್ತದೆ. ಕೆರೆಯಲ್ಲಿನ ಜೊಂಡು ಮುಂತಾದವುಗಳನ್ನು ತೆಗೆದು ಕೆರೆಯನ್ನು ಬಲಪಡಿಸಿದವರಿಗೆ ಮೂರು ವರ್ಷವೂ ; ಹೊಸ ಬಂಜರು ಭೂಮಿಯನ್ನು ಸಾಗುವಳಿಗೆ ಒಳಪಡಿಸಿದ ರೈತರಿಗೆ ಎರಡು ವರ್ಷಗಳ ತೆರಿಗೆ ವಿನಾಯ್ತಿಯನ್ನು ನೀಡಬೇಕೆಂದು ಸಾರುತ್ತದೆ. ಇವಲ್ಲದೆ ಜಮೀನಿನ ಮಾಲಿಕರು ಕೆರೆಯ ನೀರನ್ನು ಸತತವಾಗಿ ಐದು ವರ್ಷ ಬಳಸದೇ ನಿರ್ಲಕ್ಷ್ಯಕ್ಕೊಳಪಡಿಸಿದ ಪಕ್ಷದಲ್ಲಿ ಅವರ ಜಮೀನಿನ ಮಾಲಿಕತ್ವವನ್ನು ಕಳೆದುಕೊಳ್ಳುತ್ತಾರೆಂದು ತಿಳಿಸುವುದು ಗಮನಿಸಬೇಕಾದ ಸಂಗತಿ. ಇದರೊಂದಿಗೆ ರೈತರು ಕೆರೆಯ ಸುಸ್ಥಿತಿಯನ್ನು ಕಾಪಾಡುವುದು ಅವರ ಕರ್ತವ್ಯವಾಗಿತ್ತು. ಕೆರೆಯ ಸುಸ್ಥಿತಿಯನ್ನು ಕಾಪಾಡದಿದ್ದವರಿಗೆ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಇವುಗಳ ಜೊತೆಗೆ ರೈತರು ಯಾವ ವಿಧವಾಗಿ ಕೃಷಿ ಮಾಡುವರೋ ಅದಕ್ಕೆ ಅನುಗುಣವಾಗಿ ಶ್ರೇಣೀಕೃತ ತೆರಿಗೆಯನ್ನು ನೀಡಬೇಕೆಂದು ಈ ಕೃತಿಯು ನಿರೂಪಿಸುತ್ತದೆ. ಪ್ರಾಚೀನ ಭಾರತದಲ್ಲಿ ಇಂತಹ ಪದ್ಧತಿಯು ಇದ್ದು, ನಮಗೆ ವಿಶ್ವದ ಬೇರೆಯೆಲ್ಲಿಯೂ ಈ ವಿಧದ ಮಾಹಿತಿಯು ದೊರೆಯುವುದಿಲ್ಲ. ಅರ್ಥಶಾಸ್ತ್ರವು ಅತ್ಯಂತ ಮಹತ್ತರವಾದ ಒಂದು ಸಂಗತಿಯನ್ನು ತಿಳಿಸುತ್ತದೆ. ಕೃಷಿ, ನೀರಾವರಿ ಮುಂತಾದವುಗಳು ಜನಹಿತಾತ್ಮಕ ಕಾರ್ಯವಾಗಿದ್ದು ಅವುಗಳ ರಕ್ಷಣೆಯ ಬಾಧ್ಯತೆ ರಾಜ ಮತ್ತು ಪ್ರಜೆಗಳಿಗೆ ಇತ್ತೆಂದು ವಿವರಿಸುತ್ತದೆ. ಯಾರಾದರೂ ಕೆರೆ ಕಟ್ಟೆಯನ್ನು ನಾಶಮಾಡಿದಲ್ಲಿ ಅಂತಹವರನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಬೇಕೆಂದು ಮತ್ತುಪುರಾತನ ಕೆರೆಯನ್ನು ನಿರ್ಲಕ್ಷಿಸಿ ಹಾನಿ ಮಾಡಿದವರಿಗೆ ದಂಡ ಹಾಕುವ ಮೂಲಕ ಶಿಕ್ಷೆ ನೀಡಬೇಕೆಂದು ತಿಳಿಸುತ್ತದೆ.[15]

ಜಾತಕ ಕಥೆಗಳು ಕೆರೆ ಮತ್ತು ಬೇಸಾಯದ ಬಗೆಗೆ ಕೆಲವು ಉಪಯುಕ್ತ ಮಾಹಿತಿಗಳನ್ನೊದಗಿಸುತ್ತವೆ. ಕುನಾಲಜಾತಕಕಥೆಗಳಲ್ಲಿ ಬರುವ ಒಂದು ಕಥೆ ಗಮನಿಸುವಂತಿದೆ. ಎರಡು ಬುಡಕಟ್ಟು ಜನಾಂಗದವರು`ಹೋಯಿನಿ’ (ಹೊಹಿನಿ) ಎಂಬ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟೆಯಿಂದ ಕೆರೆಯ ನೀರನ್ನು ಹಂಚಿಕೊಳ್ಳುವಲ್ಲಿ ಜಗಳವಾಗುತ್ತದೆ ಎಂಬ ಅಂಶವು ಜಾತಕಕಥೆಯಲ್ಲಿರುವುದು ಒಂದು ವಿಶೇಷ.[16]

ವಿದೇಶಿಯರ ಬರಹಗಳಲ್ಲಿ ಮೆಗಾಸ್ತನಿಸ್‌ ಬರಹವು ಮುಖ್ಯವಾದುದು. ಮೆಗಾಸ್ತನಿಸ್ ಎಂಬುವವನು ಗ್ರೀಕ್ ದೇಶದ ರಾಯಭಾರಿಯಾಗಿ ಚಂದ್ರಗುಪ್ತಮೌರ್ಯನ ಓಲಗಕ್ಕೆ ಬಂದಿದ್ದ. ಚಂದ್ರಗುಪ್ತನ ಆಳ್ವಿಕೆಯ ಕಾಲದಲ್ಲಿ ಅನೇಕ ಅಧಿಕಾರಿಗಳಿದ್ದು, ಅವರುಗಳು ಜಮೀನನ್ನು ಅಳೆದು ಕೆರೆಯ ನೀರನ್ನು ಸಮರ್ಪಕವಾಗಿ ವಿತರಿಸುವುದು ಮತ್ತು ನಾಲೆಗಳ ತೂಬುಗಳನ್ನು ದುರಸ್ತಿ ಮಾಡಿ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದರೆಂದು ಅವನು ಬರೆದಿದ್ದಾನೆ. ಇದಲ್ಲದೇ ನೀರಿನ ವಿತರಣೆಯಲ್ಲಿ ಯಾವ ಲೋಪವು ಬರದಂತೆ ಎಲ್ಲರಿಗೂ ಸಮಪಾಲಾಗಿ ಹಂಚುತ್ತಿದ್ದರೆಂದೂ ತನ್ನ ಪ್ರವಾಸದ ಅನುಭವಗಳನ್ನು ದಾಖಲಿಸಿದ್ದಾನೆ. ಈ ಸಂಗತಿಯು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿತವಾಗಿರುವ ವಿಷಯಕ್ಕೆ ಪೂರಕವಾಗಿದೆ.[17]

ಶುಕ್ರನು ರಚಿಸಿದ ನೀತಿ ಗ್ರಂಥವಾದ ಶುಕ್ರನೀತಿಯು ಕೆರೆ ಮತ್ತು ನಾಲೆಗಳ ಬಗೆಗೆ ತಿಳಿಸುತ್ತದೆ. ಜನಸಾಮಾನ್ಯರಿಗೆ ನೀರಾವರಿ ಸೌಕರ್ಯ ಒದಗಿಸಿಕೊಟ್ಟ ಪ್ರತಿಫಲವಾಗಿ ತೆರಿಗೆಯನ್ನು ವಿಧಿಸಬೇಕೆಂದು ತಿಳಿಸುವುದು ವಿಶೇಷವಾದ ಸಂಗತಿ. ಕಲ್ಪಿತ ಸೌಂದರ್ಯಕ್ಕೆ ಅನುಗುಣವಾಗಿ ತೆರಿಗೆಯನ್ನು ಸಂಗ್ರಹಿಸಬೇಕು ಹಾಗೂ ಯಾವುದೇ ವ್ಯಕ್ತಿಯಾಗಲಿ ಅಥವಾ ಸಂಘಸಂಸ್ಥೆಗಳಾಗಲಿ, ಕೆರೆ ಮತ್ತು ನಾಲೆಗಳ ನಿರ್ಮಾಣ ಮಾಡಿದ ಪಕ್ಷದಲ್ಲಿ ಅಂತಹವರಿಗೆ ತೆರಿಗೆಯಲ್ಲಿ ವಿನಾಯ್ತಿಯನ್ನು ನೀಡಬೇಕೆಂದು ತಿಳಿಸುತ್ತದೆ.

ಅಮರಕೋಶವು (ನಾಮಲಿಂಗಾನುಶಾಸನ) ಎರಡು ಪ್ರಕಾರದ ಸಾಗುವಳಿ ಭೂಮಿಯನ್ನು ಕುರಿತು ಉಲ್ಲೇಖಿಸುತ್ತದೆ. ಮೊದಲನೆಯ ಪ್ರಕಾರದಲ್ಲಿ ಮಳೆಯ ನೀರನ್ನು ಅವಲಂಬಿಸಿ ಕೃಷಿ ಮಾಡುವ ಪದ್ಧತಿಗೆ ದೇವಮಾತ್ರಕವೆಂದು[18] ಎರಡನೆಯ ಪ್ರಕಾರದಲ್ಲಿ ನದಿಮಾತ್ರನೆಂದು ತಿಳಿಸುತ್ತದೆ. ನದಿಮಾತ್ರಿಕವೆಂದರೆ ನದಿಯ ನೀರನ್ನು ಅವಲಂಬಿಸಿ ಕೃಷಿ ಮಾಡುವುದು ಎಂದೇ ಆಗಿದೆ.[19] ನದಿಯ ನೀರನ್ನು ಕಾಲುವೆಗಳ ಮುಖಾಂತರ ಹಾಯಿಸಿ ಬೇಸಾಯ ಮಾಡುತ್ತಿದ್ದರು ಎಂದು ನಾವು ಊಹಿಸಬಹುದು.

ಶಾತವಾಹನರ ಕಾಲಕ್ಕೆ ಸೇರಿದ್ದೆಂದು ವಿದ್ವಾಂಸರಿಂದ ಪರಿಗಣಿಸಲ್ಪಟ್ಟಿರುವ ಗಾಹಸತ್ತಸಿ (ಗಾಥಾಸಪ್ತಶತಿ) ಎಂಬ ಪ್ರಾಕೃತ ಭಾಷೆಯ ಕೃತಿಯನ್ನು ಹಾಲಿ ಎಂಬಾತನು ರಚಿಸಿದ್ದು, ಅದರಲ್ಲಿ ಕೃಷಿ, ನೀರಾವರಿ, ಏತಗಳು ಹಾಗೂ ಇವಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಒದಗಿಸುತ್ತದೆ. ಇದಲ್ಲದೆ ಬಾವಿಗಳಿಂದ ನೀರನ್ನು ರಹತ್ತಗಡಿಯ (ಕನ್ನಡದಲ್ಲಿ ರಾಟೆ- ಗಡಿಗೆ) ಮೂಲಕ ಎತ್ತುತ್ತಿದ್ದರು ಎನ್ನುವುದು ಈ ಗ್ರಂಥದಿಂದ ತಿಳಿದುಬರುವ ವಿಷಯ.[20]

ಪ್ರಾಚೀನ ದಕ್ಷಿಣ ಭಾರತದ ತಮಿಳು ಸಾಹಿತ್ಯವನ್ನು ಸಂಗಮ್ ಸಾಹಿತ್ಯವೆಂದು ಕರೆಯುತ್ತಾರೆ. ಸಂಗಮ್ ಸಾಹಿತ್ಯವಾದ ಶಿಲಪ್ಪದಿಕಾರಂ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ. ಕಾವೇರಿ ನದಿಗೆ ಅಡ್ಡವಾಗಿ ಒಂದು ಕಟ್ಟೆಯನ್ನು ಕಟ್ಟಿ, ಯಾವುದೇ ಪ್ರಯಾಸವಿಲ್ಲದೆ ನೀರನ್ನು ಕೃಷಿಗೆ ಬಳಸಿಕೊಂಡ ಬಗೆಗೆ ಈ ಕೃತಿಯು ತಿಳಿಸುತ್ತದೆ. ಸಂಗಮ್ ಸಾಹಿತ್ಯವು ಮತ್ತೊಂದು ಸಂದರ್ಭದಲ್ಲಿ ಚೋಳರಾಜನಾದ ಕರಿಕಾಲನು ಕ್ರಿ.ಶ. ಸು. ೧ನೆಯ ಶತಮಾನದಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಕಟ್ಟೆಯನ್ನು ನಿರ್ಮಾಣ ಮಾಡಿ ಅದರ ನೀರನ್ನು ಕೃಷಿಗೆ ಮತ್ತು ಕುಡಿಯುವುದಕ್ಕೆ ಉಪಯೋಗಿಸಿದನೆಂದು ತಿಳಿಸುತ್ತದೆ. ಈ ರಾಜನು ಇಂತಹ ಜನಕಲ್ಯಾಣ ಕಾರ್ಯದಿಂದಾಗಿ ಅನೇಕ ಬಿರುದುಗಳನ್ನು ಸಹ ತನ್ನದಾಗಿಸಿಕೊಂಡಿದ್ದಾನೆ. ಮತ್ತೊಂದು ಕುತೂಹಲಕಾರಿಯಾದ ಸಂಗತಿಯೆಂದರೆ ಈ ಕಟ್ಟೆಯ ನಿರ್ಮಾಣಕ್ಕೆ ಅವನು ಗೆದ್ದು ಬಂದಂತಹ ರಾಜ್ಯಗಳ ಕೆಲಸಗಾರರನ್ನು ಮತ್ತು ಇನ್ನಿತರ ವ್ಯಕ್ತಿಗಳನ್ನು ಬಳಸಿಕೊಂಡು ಕಟ್ಟೆಯನ್ನು ನಿರ್ಮಿಸಿದನೆಂದು ಶಾಸನ ತಿಳಿಸುತ್ತದೆ.[21]

ಆದಿ ಇತಿಹಾಸಕಾಲದ ಕೆಲವು ಮುಖ್ಯ ಶಾಸನಗಳು ಕೆರೆಗಳನ್ನು ಕುರಿತು ಉಲ್ಲೇಖಿಸುತ್ತವೆ. ಗುಜರಾತ್ ರಾಜ್ಯದಲ್ಲಿರುವ ಜುನಾಗಡ್‌‌ ನಲ್ಲಿ ದೊರೆತಿರುವ ಮಹಾಕ್ಷತ್ರಪ ರುದ್ರದಾಮನ (ಕ್ರಿ.ಶ. ೧೫೦) ಶಾಸನವು ಸುದರ್ಶನ ಕೆರೆಯನ್ನು ಉಲ್ಲೇಖಿಸುತ್ತದೆ.[22] ಈ ಶಾಸನವು ಬಹುಶಃ ಭಾರತದಲ್ಲೇ ಇಲ್ಲಿಯವರೆಗೆ ದೊರೆತ ಶಾಸನಗಳಲ್ಲಿ ಬಹಳ ಅಪರೂಪವಾಗಿದ್ದು, ಕೆರೆಗೆ ಸಂಬಂಧಿಸಿದ ಅನೇಕ ವಿವರಗಳನ್ನು ನೀಡುತ್ತದೆ. ಒಂದು ಕೆರೆಯ ಮಹತ್ವಪೂರ್ಣ ಇತಿಹಾಸವನ್ನು ನೀಡುವುದು ಈ ಶಾಸನದ ವೈಶಿಷ್ಟ್ಯ. ಶಾಸನದ ತೇದಿಯು, ಅರಸನ ೭೨ ನೆಯ ವರ್ಷದಲ್ಲಿ ಹೊರಡಿಸಿದ್ದು ಕ್ರಿ. ಶ. ಸುಮಾರು ೧೫೦ ಕ್ಕೆ ಸರಿ ಹೊಂದುತ್ತದೆ. ಅದರ ವಿವರ ಇಂತಿದೆ.

ಕ್ರಿ.ಪೂ. ೪ ನೆಯ ಶತಮಾನದಲ್ಲಿ ಚಂದ್ರಗುಪ್ತ ಮೌರ್ಯನು (ಕ್ರಿ.ಪೂ. ೩೨೪-೩೦೦) ಪಶ್ಚಿಮ ಭಾರತದ ಮಾಂಡಲಿಕನಾಗಿದ್ದಾಗ ವೈಶ್ಯ ಪುಷ್ಯಗುಪ್ತನು ಆ ಕೆರೆಯನ್ನು ಕಟ್ಟಿಸಿದನೆಂದು ತಿಳಿದುಬರುತ್ತದೆ. ಚಂದ್ರಗುಪ್ತನ ತರುವಾಯ ಅಶೋಕನ (ಕ್ರಿ.ಪೂ. ೨೭೩-೩೬) ಅಧಿಕಾರಿಯಾಗಿದ್ದ ಯುವರಾಜ ತುಷಾಸ್ಪನು ಆ ಕೆರೆಯನ್ನು ಮತ್ತಷ್ಟು ಸುಧಾರಿಸಿ, ಆ ಕೆರೆಗೆ ಬರುವ ನಾಲೆಯಲ್ಲಿ ಸೇರಿಸಿಕೊಳ್ಳುವ ಜೊಂಡು ಮತ್ತು ಇತರ ಕಲ್ಮಶಗಳನ್ನು ತೆಗೆಯಿಸಿ ಕೆರೆಯನ್ನು ದುರಸ್ತಿಗೊಳಿಸಿದನು.[23]

ಕಾಡಿನಲ್ಲಿ ಹುಟ್ಟಿ ಹರಿದು ಬರುವ ಸರ್ವಣಸಿಕತಾ (ಇಂದಿನ ಸುವರ್ಣರೇಖಾ ; ಸುವರ್ಣಸಿಕತಾ ಎಂದರೆ ಹೊಂಬಣ್ಣದ ಉಸುಕು) ನದಿಗೆ ಅಡ್ಡಕಟ್ಟೆಯನ್ನು ಕಟ್ಟಿ ಕೆರೆಯನ್ನು ನಿರ್ಮಿಸಿದ ಉಲ್ಲೇಖವು ಶಾಸನದಲ್ಲಿದೆ. ಸುವರ್ಣಸಿಕತಾ ನದಿಗೆ ಮತ್ತೆರಡು ಚಿಕ್ಕ ತೊರೆಗಳು ಸೇರುತ್ತವೆಂದು ಹಾಗೂ ಕೆರೆಯು ಬಹಳ ಸುಭದ್ರ ಸ್ಥಿತಿಯಲ್ಲಿದ್ದು ಅದನ್ನು ಒಂದು ಪರ್ವತಕ್ಕೆ ಹೋಲಿಸುತ್ತಾ ಅದನ್ನು ಕೆಲವು ಅಪಾಯಗಳಿಂದ ರಕ್ಷಿಸಲು ಎಲ್ಲ ವಿಧದ ರಕ್ಷಣಾತ್ಮಕ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗಿತ್ತೆಂದು ಶಾಸನವು ತಿಳಿಸುತ್ತದೆ. ಇವೆಲ್ಲವೂ ಇದ್ದಾಗ್ಯೂ ಮಹಾಕ್ಷತ್ರಪ ರುದ್ರದಾಮನ ಆಳ್ವಿಕೆಯ ಕಾಲದಲ್ಲಿ ಪ್ರಕೃತಿಯ ವಿಕೋಪದಿಂದ ವಿಪರೀತ ಮಳೆಯಾಗಿ ಸುವರ್ಣಸಿಕತಾ ನದಿಯಲ್ಲಿ ನೆರೆಬಂದು ಆ ನೀರು ಸುದರ್ಶನ ಕೆರೆಯ ಏರಿಯನ್ನು ಒಡೆದು ಹಾಕಿತು. ಸುಮಾರು ೪೨೦ `ಹಸ್ತ’ಗಳಷ್ಟು ಉದ್ದವಾಗಿಯೂ ೭೫ `ಹಸ್ತ’ಗಳಷ್ಟು ಅಗಲವಾಗಿಯು ಕೆರೆಯ ಏರಿ ಒಡೆಯಿತು ಎಂದೂ, ಸುದರ್ಶನ ಕೆರೆಯು ನೋಡಲು ದುರ್ದರ್ಶನವಾಯಿತೆಂದು ಶಾಸನವು ವರ್ಣಿಸುತ್ತದೆ. ಕೆರೆಯ ಈ ದುಸ್ಥಿತಿಯಿಂದ ಜನರಿಗೆ ಮತ್ತು ಜಾನುವಾರುಗಳಿಗೆ ಅತೀವ ಕಷ್ಟವಾಯಿತೆಂದು ಬಣ್ಣಿಸುತ್ತ ರಾಜನಾದ ರುದ್ರದಾಮನು ಮತ್ತು ಅವನ ಆಸ್ಥಾನಿಕರು ಆ ಕೆರೆಯ ದುರಸ್ತಿಗೆ ವಿಪರೀತ ವೆಚ್ಚ ತಗಲುವ ಸಂಭವವಿದೆ ಎಂದು, ಜೀರ್ಣೋದ್ಧಾರ ಕಾರ್ಯವನ್ನು ಕೈಬಿಡಬೇಕೆಂದು ಒತ್ತಾಯಿಸಿ ವಿರೋಧಿಸಿದಾಗ ಅವುಗಳನ್ನು ಲಕ್ಷಿಸದೆ ಬೊಕ್ಕಸದಿಂದ ಹಣವನ್ನು ವ್ಯಯಿಸಿ ಕೆರೆಯ ಜೀರ್ಣೋದ್ಧಾರ ಮಾಡಿದನೆಂದು ಶಾಸನವು ಉಲ್ಲೇಖಿಸುತ್ತದೆ. ಆ ಕೆರೆಯ ದುರಸ್ಥಿ ಕೆಲಸವನ್ನು ಅನರತದ ಮಾಂಡಲಿಕನಾದ ಸುವಿಶಾಖನು ಮುಂದೆ ನಿಂತು ಪೂರೈಸಿದುದಾಗಿ ತಿಳಿಯಬರುತ್ತದೆ.

ಇದಾದ ಕೆಲವು ಶತಮಾನಗಳ ನಂತರ ಕ್ರಿ.ಶ. ೫ ನೆಯ ಶತಮಾನದಲ್ಲಿ ಅಂದರೆ ಗುಪ್ತರ ಕಾಲದಲ್ಲಿ ಆ ಕೆರೆಯು ಮತ್ತೊಮ್ಮೆ ಒಡೆದಾಗ ಸ್ಕಂದಗುಪ್ತನ ಮಾಂಡಲಿಕನಾದ ಚಪಲಿಕನು ಕ್ರಿ. ಶ. ಸುಮಾರು ೪೫೬-೫೭ ರಲ್ಲಿ ಎರಡು ತಿಂಗಳ ಅವಧಿಯಲ್ಲಿ ದುರಸ್ತಿಗೊಳಿಸಿದುದಾಗಿ ಜುನಾಗಡದ ಮತ್ತೊಂದು ಶಾಸನದಿಂದ ತಿಳಿದುಬರುತ್ತದೆ. ಈ ಕೆರೆಯು ಕ್ರಿ.ಪೂ, ೪ ನೆಯ ಶತಮಾನದಿಂದ ಸುಮಾರು ಕ್ರಿ.ಶ. ೫ ನೆಯ ಶತಮಾನದವರೆಗೆ ಬಳಕೆಯಲ್ಲಿದ್ದು, ಅದು ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿತ್ತೆಂಬುದು ನಿರ್ವಿವಾದ ಅಂಶವು.[24]

ಕಳಿಂಗ ದೇಶದ ರಾಜನಾದ ಖಾರವೇಲನ ಹಾತಿಗಂಫ ಶಾಸನವು ಅವನ ಮೊದಲ ವರ್ಷದ ಆಳ್ವಿಕೆಯಲ್ಲಿಯೇ ಒಂದು ಕೆರೆಯನ್ನು ನಿರ್ಮಿಸಿದನೆಂದು[25] ಮತ್ತು ನಂದರು ನಿರ್ಮಿಸಿದಂತಹ ಕಾಲುವೆಗಳನ್ನು ಸಹ ದುರಸ್ಥಿಗೊಳಿಸಿದುದಾಗಿ ಉಲ್ಲೇಖಿಸುತ್ತದೆ. ಇವುಗಳಲ್ಲದೇ ರಾಜನು ರಾಜ್ಯದಲ್ಲಿರುವ ಅನೇಕ ಕೆರೆಗಳನ್ನು ಜೀರ್ಣೋದ್ಧಾರ ಮಾಡುವುದರೊಂದಿಗೆ ಕೆರೆಗಳನ್ನು ಸಹ ನಿರ್ಮಿಸಿದ ಎಂಬುದು ಶಾಸನೋಕ್ತ ವಿಷಯವೇ ಆಗಿದೆ. ಇವುಗಳಿಂದ ಪ್ರಾಚೀನ ಭಾರತದಲ್ಲಿ ಕೆರೆಗಳಿಗೆ ಬಹಳ ಮಹತ್ವವಿದ್ದುದು ಸ್ಪಷ್ಟವಾಗಿ ತಿಳಿಯಬರುತ್ತದೆ.

ಕರ್ನಾಟಕದ ಕೆಲವು ಪ್ರಮುಖ ರಾಜಮನೆತನಗಳಲ್ಲಿ ಕದಂಬರು, ಗಂಗರು, ಕಲ್ಯಾಣ ಚಾಲುಕ್ಯರು ಮತ್ತು ಹೊಯ್ಸಳರು. ಈ ಎಲ್ಲ ಅರಸು ಮನೆತನಗಳು ಹಾಗೂ ಇತರ ಅರಸು ಮನೆತನಗಳವರು ಕರ್ನಾಟಕದಲ್ಲಿ ಅನೇಕ ಕೆರೆ, ಕಾಲುವೆ, ಅಣೆಕಟ್ಟುಗಳನ್ನು ನಿರ್ಮಿಸಿರುತ್ತಾರೆ. ಈ ಕಾರ್ಯಗಳು ಕುಡಿಯುವ ನೀರಿನ ಸೌಲಭ್ಯದ ಜೊತೆಗೆ ಬೇಸಾಯಕ್ಕೆ ಸಹ ಸಹಾಯಕವಾಗಿದ್ದವು.

ಪುಲುಮಾವಿಯ ಮೇಕೆದೋಣ ಶಾಸನವು (ಮ್ಯಾಕದೋಣಿ ಎಂದು ಸಹ ಕರೆಯುತ್ತಾರೆ).ಮೊಟ್ಟಮೊದಲ ಬಾರಿಗೆ ಕರ್ನಾಟಕದ ಕೆರೆಯ ಬಗೆಗೆ ಉಲ್ಲೇಖಿಸುತ್ತದೆ. ಅಂತಯೇ ತಾಳಗುಂದದಲ್ಲಿ ಲಭ್ಯವಿರುವ ಶಾಂತಿವರ್ಮನ ಶಾಸನವು ಕಾವೇರಿ ಮತ್ತು ಅದರ ಉಪನದಿಗಳಿಗೆ ಅಣೆಕಟ್ಟನ್ನು ನಿರ್ಮಿಸಿದುದಾಗಿ ತಿಳಿಸುತ್ತದೆ.[26]

ಕರ್ನಾಟಕದ ಅತ್ಯಂತ ಪ್ರಾಚೀನ ಕೆರೆಗಳಲ್ಲಿ ಚಂದ್ರವಳ್ಳಿಯ ಸಮೀಪದಲ್ಲಿರುವ ಚಂದ್ರವಳ್ಳಿ ಕೆರೆಯು ಒಂದಾಗಿದೆ. ಈ ಕೆರೆಯನ್ನು ರಾಜನಾದ ಮಯೂರವರ್ಮನು ನಿರ್ಮಿಸಿದನೆಂಬುದನ್ನು ಅವನ ಒಂದು ಶಾಸನವು ತಿಳಿಸುತ್ತದೆ. ಈ ಕೆರೆಯು ಹುಲೆಗುಂದಿ ಎಂಬಲ್ಲಿದ್ದು ಆ ಪ್ರದೇಶವು ಭಾರಿ ಕಣಿವೆಯಿಂದ ಕೂಡಿದ್ದು, ಎರಡು ಬೆಟ್ಟಗಳ ನಡುವಿನ ಕಣಿವೆಯಲ್ಲಿ ನಡೆಸಿದ ಉತ್ಖನನದಿಂದ ಸಹ ಕೆರೆಯು ಪ್ರಾಚೀನವಾಗಿದ್ದುದಾಗಿ ದೃಢಪಟ್ಟಿದೆ.[27]

ತಮಿಳುನಾಡಿನಲ್ಲಿ ಪಲ್ಲವರು ಕ್ರಿ. ಶ. ೫-೬ ನೆಯ ಶತಮಾನದಿಂದ ಆಳ್ವಿಕೆಯನ್ನು ಪ್ರಾರಂಭಿಸಿದ್ದು ಅವರ ಕಾಲದಲ್ಲಿಯೂ ಅನೇಕ ಕೆರೆ, ಕಾಲುವೆಗಳು ಬಳಕೆಯಲ್ಲಿ ಇದ್ದವೆಂಬುದಕ್ಕೆ ಪೂರಕವಾಗಿ ಶಾಸನಾಧಾರಗಳಿವೆ. ಈ ಶಾಸನಗಳು ಆ ಕಾಲದ ಕೆರೆಗೆ ಸಂಬಂಧಿಸಿದಂತಹ ಕೆಲವು ಪದಗಳು ಮತ್ತು ಕುತೂಹಲಕಾರಿಯಾದ ವಿಷಯಗಳನ್ನು ತಿಳಿಯಪಡಿಸುತ್ತವೆ. ಕೆಲವು ವ್ಯಕ್ತಿನಾಮಗಳ ಜೊತೆಯಲ್ಲಿ ಕೆರೆಯನ್ನು ಸೂಚಿಸುವ ಪದಗಳ ಜೋಡಣೆಗಳಿವೆ. ಅಂದರೆ ಕೆರೆಯನ್ನು ವ್ಯಕ್ತಿನಾಮಗಳ ಜೊತೆಯಲ್ಲಿ ಸೇರಿಸಿ ಸಂಬೋಧಿಸಲಾಗುತ್ತಿತ್ತು. ಉದಾಹರಣೆಗೆ ಪರಮೇಶ್ವರ ತಟಾಕ, ಚಿತ್ರಮೇಘ ತಟಾಕ ಮುಂತಾದವುಗಳೆ ಆಗಿವೆ.[28]

ಗಂಗರು ಸುಮಾರು ೫ ನೆಯ ಶತಮಾನದಿಂದ ಹತ್ತನೆಯ ಶತಮಾನದವರೆಗೆ ಕರ್ನಾಟಕದ ಕೆಲವು ಭಾಗಗಳನ್ನು ಆಳಿದರು. ಇವರುಗಳು ಸ್ವತಂತ್ರವಾಗಿಯೂ ಕೆಲವೊಮ್ಮೆ ಸಾಮಂತರಾಗಿಯೂ ಇದ್ದು, ದೀರ್ಘ ಕಾಲದವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರ ಕಾಲಕ್ಕೆ ಸಂಬಂಧಿಸಿದ ಅನೇಕ ಶಿಲಾಶಾಸನಗಳು, ತಾಮ್ರಪಟ ಶಾಸನಗಳು ಅವರ ರಾಜ್ಯದಲ್ಲಿ ಪ್ರಚಲಿತವಾಗಿದ್ದ ನೀರಾವರಿ ಪದ್ಧತಿಯನ್ನು ಕುರಿತ ಮಾಹಿತಿಗಳನ್ನು ನೀಡುತ್ತವೆ. ಕೆಲವು ಶಾಸನಗಳು ಕೆರೆ, ಮಡುವು, ದೋಣೆ, ಗುಂಡು, ಜಲಸಯ, ಕೊಳ ಎಂದು ಉಲ್ಲೇಖಿಸಿ[29] ಕೆರೆಗೆ ಇದ್ದಂತ ಪರ್ಯಾಯ ಪದಕೋಶವನ್ನು ನಮ್ಮ ಮುಂದಿಡುತ್ತವೆ. ಇವಲ್ಲದೆ ಕೆರೆಯ ಆಕಾರವನ್ನು ಬಾಲಚಂದ್ರಾರ್ಕ ಕೊಳವೆಂದು, ಅರ್ಧ ಚಂದ್ರಾಕಾರ ಕೊಳವೆಂದು ಪರಿಚಯಿಸುತ್ತವೆ.[30]

ಕನ್ನಡದ ಆದಿಕವಿಯಾದ ಪಂಪನು ವಿಕ್ರಮಾರ್ಜುನ ವಿಜಯವನ್ನು ಬರೆದುದಕ್ಕೆ ತನಗೆ ಅರಿಕೇಸರಿಯು ಧರ್ಮಪುರ ಎಂಬ ಅಗ್ರಹಾರವನ್ನು ದತ್ತಿಯಾಗಿ ಬಿಟ್ಟುಕೊಟ್ಟಂತೆ ತನ್ನ ಕೃತಿಯಲ್ಲಿ ಹೇಳಿಕೊಂಡಿದ್ದಾನೆ. ಈ ವಿಷಯವನ್ನು ಕುರಿಕ್ಯಾಲ ಅಥವಾ ಕುರ್ಕಿಯಾಲ ಶಾಸನವು ಹೇಳುತ್ತದೆ.[31] ಈ ಧರ್ಮಪುರ ಯಾವುದು ಮತ್ತು ಎಲ್ಲಿತ್ತು? ಎಂಬ ಬಗೆಗೆ ವಿದ್ವಾಂಸರುಗಳು ಅನೇಕ ಚರ್ಚೆಗಳನ್ನು ನಡೆಸಿದ್ದಾರೆ. ಚಿದಾನಂದಮೂರ್ತಿಯವರು ಈ ಊರಲ್ಲಿ ಕ್ಷೇತ್ರಕಾರ್ಯ ಕೈಗೊಂಡು ಕೆರೆಯನ್ನು ಸರಿಯಾಗಿ ಗುರುತಿಸಿದ್ದಾರೆ.[32] ಜಿನವಲ್ಲಭ ತನ್ನ ಅಣ್ಣನ ಹೆಸರಿನಲ್ಲಿ ಕವಿತಾಗುಣಾರ್ಣವ ಎಂಬ ಕೆರೆಯನ್ನು ಕಟ್ಟಿಸಿದನೆಂದು ಶಾಸನದಲ್ಲಿ ಉಲ್ಲೇಖಿತವಾಗಿದೆ. ಪಂಪಭಾರತದಲ್ಲಿ ಧರ್ಮಪುರವನ್ನು ವರ್ಣಿಸುವಾಗ ಅಲ್ಲಿ ಒಂದು ಕೆರೆ ಇತ್ತೆಂದು ಪಂಪಭಾರತದ ಪದ್ಯವೊಂದರಿಂದ ಚಿದಾನಂದಮೂರ್ತಿಯವರು ಗುರುತಿಸಿದ್ದಾರೆ.[33] ಪಂಪನ ವರ್ಣನೆ ಹೀಗಿದೆ ;

ಬೀರದಳವಿಯ ನನ್ನಿಯ ಚಾಗದ ಶಾಸನ ಚಂದ್ರಾರ್ಕತಾರಂಬರಂ |
ಮೇರು ನಿಲ್ವಿನಂ ನೀಲವೇಱ್ಕುಂ ಕಾವ್ಯಕ್ಕೆ ತಾನಿತ್ವಂ ಶಾಸನದಗ್ರಹಾರಂ |
ಸಾರಮೆಂಬಿನಂ ಪೆಸರಿಟ್ಟು ತಾನೀಯೆ ಹರಿಗನ ಧರ್ಮ ಭಂಡಾರದಂತೆ |
ಸಾರಮಾದುದು ಬಿಟ್ಟಗ್ರಹಾರಮಾ ಬಚ್ಚೆಸಾಸಿರದೊಳಂ ಧರ್ಮಪುರಂ ||

ದೆಸೆ ಮುಖಧೂಮದಿಂ ದ್ವಿಜರ ಹೋಮದಿನೊಳ್ಗೆಱೆ ಹಂಸ ಕೋಕ ಸಾ |
ರಸ ಕಳೆನಾದದಿಂದೊಳಗೆ ವೇದನಿನಾದದಿನೆತ್ತ ಮೆಯ್ದೆ ಶೋ |
ಭಿಸೆ ಸುರಮಥ್ಯಮಾನವನಧಿ ಕ್ಷುಭಿತಾರ್ಣವ ಘೋಷದಂತೆ ಘೂ |
ರ್ಣಿಸುತರಲೀ ಗುಣಾರ್ಣವನ ಧರ್ಮದ ಧರ್ಮವುರಂ ಮನೋಹರಂ ||

ಪಂಪನಿಗೆ ದತ್ತಿಯಾಗಿ ಧರ್ಮಪುರ ಅಗ್ರಹಾರವು ಬಂದಾಗಲೇ ಅಲ್ಲಿ ಒಂದು ದೊಡ್ಡ ಕೆರೆಯಿತ್ತು. ನಂತರ ಜಿನವಲ್ಲಭ ತನ್ನ ಅಣ್ಣನ ಹೆಸರಿನಲ್ಲಿ ಕಟ್ಟಿಸಿದ್ದು ಕವಿತಾಗುಣಾರ್ಣವ ಕೆರೆ. ಧರ್ಮಪುರದಲ್ಲಿ ಎರಡು ಕೆರೆಗಳಿದ್ದು ಬೊಮ್ಮಲಗುಟ್ಟಕ್ಕೆ (ಶಾಸನ ದೊರೆತ ಸ್ಥಳ) ಅಂಟಿಕೊಂಡಂತೆ ದಕ್ಷಿಣದಲ್ಲಿ ಪಾತಚೆರುವು (ಹಳೆಯ ಕೆರೆ) ಇದ್ದು, ಧರ್ಮಪುರದ ಜಮೀನುಗಳಿಗೆ ನೀರನ್ನು ಪೂರೈಸುತ್ತಿತ್ತು ಗುಡ್ಡದ ಹಿಂಭಾಗದ ಕಣಿವೆಯಲ್ಲಿ ಉತ್ತರಕ್ಕೆ ಉಡನ್ ಚೆರುವು (ಚಿಕ್ಕ ಕೆರೆ) ಇದೆ. ಬಹುಶಃ ಈ ಕೆರೆಯನ್ನು ಜಿನವಲ್ಲಭನು ಕವಿತಾಗುಣಾರ್ಣವ ಕೆರೆಯೆಂದು ಹೆಸರಿಸಿ ನಿರ್ಮಿಸಿದ ಕೆರೆ ಎಂದು ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.[34] ಎರಡು ಕೆರೆಗಳ ತಪ್ಪಲಿನ ಬಯಲೇ ಧರ್ಮಪುರದ ನಿವೇಶನ. ಎರಡೂ ಕೆರೆಗಳ ಮತ್ತು ನಿವೇಶನದಲ್ಲಿ ದೊರಕಿರುವ ಪ್ರಾಚ್ಯ ಅವಶೇಷಗಳ ಛಾಯಾಚಿತ್ರಗಳನ್ನು ತಮ್ಮ ಲೇಖನದಲ್ಲಿ ನೀಡಿದ್ದಾರೆ.[35]

ತಮಿಳುನಾಡಿನಲ್ಲಿ ಪಲ್ಲವರ ತರುವಾಯ ಚೋಳರು ಮತ್ತು ಪಾಂಡ್ಯರು ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು. ಇವರುಗಳು ಸಹ ತಮ್ಮ ಪೂರ್ವಜರಂತೆಯೇ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಜನಕಲ್ಯಾಣ ಕಾರ್ಯಗಳನ್ನು ಸಹ ಮಾಡುತ್ತಿದ್ದರು. ಈ ಎರಡೂ ಮನೆತನಗಳಲ್ಲಿ ಕೃಷಿಗೆ ಅಧಿಕ ಪ್ರಾಮುಖ್ಯತೆಯನ್ನು ನೀಡಿದ ಚೋಳರ ಅನೇಕ ಶಾಸನಗಳಲ್ಲಿ, ಪ್ರಮುಖವಾಗಿ ತಂಜಾವೂರಿನ ಬಳಿಯಲ್ಲಿ ದೊರೆತಿರುವ ಶಾಸನಗಳು, ಅಧಿಕಾಂಶವಾಗಿ ಕೃಷಿ, ಕೃಷಿಕ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಉಲ್ಲೇಖವಿರುವುದು ಗಮನಾರ್ಹ.

ರಾಜೇಂದ್ರಚೋಳನು (ಕ್ರಿ.ಶ. ೧೦೧೨–೪೪) ಉತ್ತರ ಭಾರತದವರೆಗೆ. ಪ್ರಾಯಶಃ ದಂಡೆತ್ತಿ ಹೋಗಿ ಅಲ್ಲಿಯ ಗಂಗೆಯಿಂದ ನೀರನ್ನು ತಂದು, ಕುಂಭಕೋಣಂನ ಸಮೀಪದಲ್ಲಿ ಒಂದು ಹೊಸ ರಾಜಧಾನಿಯನ್ನು ಸ್ಥಾಪಿಸಿ ಅಲ್ಲಿ ಕೆರೆಯನ್ನು ಕಟ್ಟಿಸಿ ಆ ಗಂಗೆಯನ್ನು ಕೆರೆಯ ನೀರಿನಲ್ಲಿ ಬೆರೆಸಿದನೆಂದು ಒಂದು ಶಾಸನವು ಹೇಳುತ್ತದೆ. ಈ ಕಾರ್ಯದಿಂದ ರಾಜನು, `ಗಂಗೈಕೊಂಡಾನ್`’ ಎಂಬ ಬಿರುದಾಂಕಿತನಾಗುತ್ತಾನೆ. ಇದಲ್ಲದೆ ತನ್ನ ನೂತನ ರಾಜಧಾನಿಗೆ `ಗಂಗೈಕೊಂಡ ಚೋಳಪುರಂ’ ಎಂದು ಹೆಸರಿಡುತ್ತಾನೆ. ರಾಜನು ಗಂಗೆಯನ್ನು ತಂದುದು `ಜಲಮ್ಯ-ಸ್ತಂಭ’ ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವುದು ಅತ್ಯಂತ ಕುತೂಹಲಕಾರಿಯಾದ ಸಂಗತಿ.[36]

ಚೋಳರು ಅವರ ಆಡಳಿತಕ್ಕೆ ಬಹಳ ಹೆಸರುವಾಸಿಯಾದವರು. ಅವರು ಆಡಳಿತಾಂಗವನ್ನು ವಿಕೇಂದ್ರೀಕೃತಗೊಳಿಸಿ ಸಭೆ ಅಥವಾ ಮಹಾಸಭೆ ಎಂಬ ಸಮಿತಿಗಳನ್ನು ಆಯಾ ಗ್ರಾಮಗಳಲ್ಲಿ ರಚಿಸುತ್ತಿದ್ದರು. ಆ ಸಮಿತಿಯವರು ಉಪಸಮಿತಿಯನ್ನು ರಚಿಸಿ ಎಲ್ಲಾ ಕಾರ್ಯಭಾರಗಳನ್ನು ನಿರ್ವಹಿಸುತ್ತಿದ್ದರು. ಅಂತಹ ಹಲವು ಉಪಸಮಿತಿಗಳಲ್ಲಿ `ಏರಿವಾರಿಯಂ’ ಒಂದಾಗಿದೆ. ತಮಿಳಿನಲ್ಲಿ ಏರಿ ಎಂದರೆ ಕೆರೆ ಎಂದು ಅರ್ಥ. ಈ ಉಪಸಮಿತಿಯು ಕೆರೆಗಳ ಉಸ್ತುವಾರಿಯನ್ನು ನೋಡಿಕೊಳ್ಳುವದರೊಂದಿಗೆ ಅವಕ್ಕೆ ಸಂಬಂಧಿಸಿದ ತೆರಿಗೆಗಳನ್ನು ಸಹ ಸಂಗ್ರಹಿಸುತ್ತಿದ್ದರು ಎಂದು ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ.[37] ತಮಿಳುನಾಡಿನ ಚೆಂಗಲ್ ಪಟ್ಟು ಜಿಲ್ಲೆಯಲ್ಲಿರುವ ಉತ್ತರಮೇರೂರು ಗ್ರಾಮದ ಸಮೀಪವಿರುವ ವೈರಮೇಘ-ತಟಾಕವು ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಈ ಕೆರೆಯು ಪಲ್ಲವರ ಕಾಲದಲ್ಲಿಯೇ ಕಟ್ಟಲಾಗಿದ್ದು, ಅದು ಚೋಳರ ಕಾಲದಲ್ಲಿಯೂ ಆ ನಂತರದ ಕಾಲದಲ್ಲಿಯೂ ಉಪಯೋಗವಾಗುತ್ತಿತ್ತು. ಅವರ ಕಾಲದ ಶಾಸನಗಳು ಸದರಿ ಕೆರೆಯ ಬಗೆಗೆ ಅನೇಕ ಮಾಹಿತಿಗಳನ್ನು ಒದಗಿಸುತ್ತವೆ. ಈ ಕೆರೆಯ ಉಸ್ತುವಾರಿಗೆ `ಏರಿವಾರಿಯಂ’ ಎಂಬ ಸಮಿತಿಯು ರಚಿಸಲಾಗಿತ್ತೆಂದು ಉತ್ತರಮೇರೂರಿನ ಚೋಳರ ಶಾಸನ ಹೇಳುತ್ತದೆ.[38] ಕೆರೆಯ ಸುಸ್ಥಿತಿಯನ್ನು ಕಾಪಾಡುವುದು ಅವರ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿತ್ತು.

ಚೋಳರ ಸಮಕಾಲೀನರಾದ ಚಾಳುಕ್ಯರು ಮತ್ತು ಹೊಯ್ಸಳರು ಸಹ ಕರ್ನಾಟಕದಲ್ಲಿ ಕೆರೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರೊಂದಿಗೆ ಪ್ರಜಾಹಿತಾತ್ಮಕ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದರು. ಚಾಳುಕ್ಯರು ನಿರ್ಮಿಸಿದಂತಹ ಕೆರೆಗಳು, ವಾತಾಪಿ (ಬದಾಮಿ), ಕಲ್ಯಾಣ ಮುಂತಾದೆಡೆಗಳಲ್ಲಿದ್ದರೆ, ಹೊಯ್ಸಳರು ಕಟ್ಟಿಸಿದ ಕೆರೆಗಳು ಕರ್ನಾಟಕದ ದಕ್ಷಿಣ ಭಾಗದ ದೋರಸಮುದ್ರ (ಹಳೆಬೀಡು), ಬೇಲೂರು ಮುಂತಾದ ಕಡೆಗಳಲ್ಲಿ ಇಂದಿಗೂ ಕಾಣಬಹುದಾಗಿದೆ. ಚಾಳುಕ್ಯ ರಾಜನಾದ ಮೂರನೆಯ ಸೋಮೇಶ್ವರನು (ಕ್ರಿ.ಶ. ೧೧೨೬-೩೮)ರಲ್ಲಿ ರಚಿಸಿದ ಮಾನಸೋಲ್ಲಾಸ ಕೃತಿಯು ಕೆರೆ, ಕುಂಟೆ, ಕೊಳ, ಬಾವಿ ಮುಂತಾದವುಗಳನ್ನು ಹೇಗೆ ನಿರ್ಮಿಸುವುದೆಂಬುದನ್ನು ಸವಿಸ್ತಾರವಾಗಿ ತಿಳಿಸುತ್ತದೆ.[39]

ರಾಯಚೂರು ಜಿಲ್ಲೆಯಲ್ಲಿರುವ ಹುಲಿಗಿಯ ವಿಕ್ರಮಾದಿತ್ಯನ ಕಾಲದ ಶಾಸನವು ಕೆಲವು ಕುತೂಹಲಕಾರಿಯಾದ ಸಂಗತಿಗಳನ್ನು ಹೊರಗೆಡವುತ್ತದೆ. ಚೌವೇದಿಭಟ್ಟ (ಬಹುಶಃ ಚತುರ್ವೇಧಿಭಟ್ಟ) ಎಂಬುವನು ಒಂದು ಗ್ರಾಮವನ್ನು ಪ್ರಾಯಶಃ ಹುಲಿಗಿಯನ್ನು ದಾನವಾಗಿ ಪಡೆಯುತ್ತಾನೆ. ಆ ಗ್ರಾಮವು ತುಂಗಭದ್ರಾ ನದಿಯ ದಡದಲ್ಲಿದ್ದು ಬೇಸಾಯಕ್ಕೆ ಯೋಗ್ಯವಾಗಿರುವುದನ್ನು ಮನಗಂಡು, ಆ ಪ್ರದೇಶದಲ್ಲಿ ಸರ್ವೇಕ್ಷಣೆಯನ್ನು ನಡೆಸಿ ತುಂಗಭದ್ರೆಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸುವುದರೊಂದಿಗೆ ಕಾಲುವೆಗಳನ್ನು ಮತ್ತು ಉಪಕಾಲುವೆಗಳನ್ನು ತೋಡಿಸಿ ಬೇಸಾಯಕ್ಕೆ ಉಪಯೋಗಿಸಿಕೊಳ್ಳುತ್ತಾನೆ. ಇದು ತುಂಗಭದ್ರೆ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟೆಯನ್ನು ಕುರಿತು ಹೇಳುವ ಮೊದಲ ಶಾಸನವಾಗಿದೆ. ಈ ಶಾಸನವು ಮೇಲ್ದಂಡೆ ಮತ್ತು ಕೆಳದಂಡೆ ಕಾಲುವೆ ಎಂದು ಉಲ್ಲೇಖಿಸಿರುವುದು ಗಮನಾರ್ಹ.[40]

ಇದರಂತೆಯೇ ಹಂಪೆಯ ಬಳಿಯಲ್ಲಿ ದೊರೆತಿರುವ ಶಾಸನವು ಹಂಪೆ-ಕಟ್ಟೆಯನ್ನು ಕುರಿತ ಮಾಹಿತಿ ನೀಡುತ್ತದೆ. ಈ ಶಾಸನದ ತೇದಿಯು ಕ್ರಿ.ಶ. ೧೧೯೯ ಆಗಿದ್ದು, ಹಂಪೆಯು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಪೂರ್ವದಲ್ಲಿಯೇ ಜನನಿಬಿಡ ಪ್ರದೇಶವಾಗಿತ್ತೆಂದು ಶಾಸನವು ಸಾಬೀತುಗೊಳಿಸುತ್ತದೆ.[41][1] ಥಾಪರ್ ಬಿ. ಕೆ., ರೀಸೆಂಟ್ ಆರ್ಕಿಯಲಾಜಿಕಲ್ ಡಿಸ್ಕವರೀಸ್ ಇನ್ ಇಂಡಿಯಾ, ಪು. ೩-೨೨

[2] ಅದೇ, ಪು. ೪೦-೪೯

[3] ಅಗ್ರವಾಲ್, ಡಿ. ಪಿ. ಆರ್ಕಿಯಲಾಜಿ ಆಫ್ ಇಂಡಿಯಾ, ಪು. ೧೬೫-೧೬೭

[4] ಎನ್ ಸೈಕ್ಲೋಪಿಡಿಯಾ ಬ್ರಿಟಾನಿಕಾ, ಸಂ.xvii ಪು. ೬೪೧ ಮತ್ತು ೬೪೩ ;          ಸಂ.xii ಪು. ೭೫೦ (ಡಿ)

[5] ಥಾಪರ್ ಬಿ.ಕೆ., ಪೂರ್ವೋಕ್ತ, ಪು. ೫೪ ; ಅಗ್ರವಾಲ್, ಡಿ.ಪಿ., ಪೂರ್ವೋಕ್ತ, ಪು. ೧೭೧ ; ರಾವ್, ಎಸ್. ಆರ್., ಲೋಥಲ್, ಪು. ೨೫೨

[6] ಬಿಸ್ತ್, ಆರ್.ಎಸ್. `ದೋಲಾವೀರಾ ಎ ಹರಪ್ಪನ್ ಸೆಟಲ್‌ಮೆಂಟ್,ನವದೆಹಲಿಯ              ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಇನ್ಸ್‌ಟಿಟ್ಯೂಟ್ ಆಫ್ ಆರ್ಕಿಯಾಲಾಜಿಯಲ್ಲಿ ನೀಡಿದ ಉಪನ್ಯಾಸವನ್ನು ಆಧರಿಸಿದೆ.

[7] ನಾಗರಾಜರಾವ್ ಎಂ.ಎಸ್., ಪ್ರೋಟೋಹಿಸ್ಟಾರಿಕ್ ಕಲ್ಚರ್ಸ್‌ ಆಫ್ ತುಂಗಭದ್ರಾ ವ್ಯಾಲಿ (ಎ ರಿಪೋರ್ಟ್‌ ಆನ್ ಹಳ್ಳೂರು ಎಕ್ಸ್‌ಕವೇಶನ್), ಪು. ೨೩ ಮತ್ತು ೧೩೪-೧೪೨

[8] ಕೊಟ್ರಯ್ಯ, ಸಿ.ಟಿ.ಎಂ., ಇರಿಗೇಶನ್ ಸಿಸ್ಟಮ್ಸ್ ಅಂಡರ್ ವಿಜಯನಗರ (ಮುಂದೆ ಐಎಸ್‌ವಿಇ), ಪು. ೩ ; ಕೊಟ್ರಯ್ಯ, ಸಿಟಿಎಂ. (ಆಂಗ್ಲಮೂಲ), ಧ್ರುವನಾರಾಯಣ (ಕನ್ನಡ ಅನುವಾದ), ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ ( ಮುಂದೆ ವಿಸಾನೀ), ಪು. ೩

[9] ಐಎಆರ್ – ೧೯೫೪-೫೫, ಪು. ೨೨-೨೩ ; ೧೯೫೮-೫೯ ; ಪು. ೮

[10] ಋಗ್ವೇದ | ಮಂಡಲ, ೧೦೫ ಸೂಕ್ತ, ೧೭ನೆಯ ಶ್ಲೋಕ.

[11] ಐಎಆರ್ – ೧೯೫೪-೫೫, ಪು. ೨೨-೨೩ ನೋಡಿ ಶರ್ಮಾ, ಬಿ. ಕೆ. ಜರ್ನಲ್ ಆಫ್ ಇಂಡಿಯನ್ ಹಿಸ್ಟರಿ, ಸಂ. XL, ಭಾಗ II, ಪು. ೩೦೨

[12] ಐಎಆರ್ -೧೯೫೪-೫೫, ಪು. ೨೨-೨೩, ನೋಡಿ ಶರ್ಮಾ., ಐ. ಕೆ. ಜರ್ನಲ್ ಆಫ್           ಇಂಡಿಯನ್‌ ಹಿಸ್ಟರಿ, ಸಂ. XL, ಭಾಗ II, ಪು. ೩೦೨

[13] ಮಹಾಭಾರತ, ಸಭಾಪರ್ವ, V, ಭಾಗ ೭೭

[14] ಕೌಟಿಲ್ಯನ ಅರ್ಥಶಾಸ್ತ್ರ II, ೨೧,೧೮

[15] ಅದೇ, II ೩೫.೨ ; III, ೯,೩,೨,III, ೯ ಮತ್ತು ೯.೮

[16] ಕಾಲ್‌ ವೆಲ್, ಇ. ಬಿ. ಜಾತಕ ಸ್ಟೋರೀಸ್, ಸಂ.I ಪು. ೧೯

[17] ಶರ್ಮಾ, ಐ. ಕೆ. ಪೂರ್ವೋಕ್ತ.

[18] ಐಎಸ್‌ವಿಇ, ಪು. ೫ ; ಭೂಮಿವರ್ಗ. ೩೨೦

[19] ಭೂಮಿವರ್ಗ, ೩.೨೦

[20] ಐಎಸ್‌ವಿಇ, ಪು.೫

[21] ದೀಪಕ್ ರಂಜನ್ ದಾಸ್, ಎಕ್‌ನಾಮಿಕ್ ಹಿಸ್ಟರಿ ಆಫ್ ಡೆಕ್ಕನ್ (೧ಸ್ಟ್ ಸೆಂಚುರಿ ಟು ೬ ಸೆಂಚುರಿ ಎ.ಡಿ.) ಪು. ೧೨೦ ;ದೀಕ್ಷಿತರ್, ವಿ. ಆರ್.ಆರ್., ಎ ಹಿಸ್ಟರಿ ಆಫ್ ಇರಿಗೇಶನ್ ಇನ್ ಸೌತ್ ಇಂಡಿಯಾ ಜರ್ನಲ್ ಆಫ್ ಇಂಡಿಯನ್ ಕಲ್ಚರ್, ಪು. ೭೧-೮೨.

[22] ಎಫ್. ಇಂಡ್., ಸಂ.VIII ಪು. ೪೦-೪೯, ಐಎ. ಸಂ.VII ಪು. ೨೫೯-೬೧

[23] ಸರ್ಕಾರ್, ಡಿ.ಸಿ., ಇನ್ಸ್‌ಕ್ರಿಪ್ಷನ್ಸ್ ಆಫ್ ಅಶೋಕ, ಪು. ೨೭ ; ಎಫ್ ಇಂಡ್, ಸಂ.VIII, ಪು.೩೬-೪೯

[24] ಸಿ.ಐ.ಐ. ಸಂ.III. (ಪರಿಷ್ಕರಿಸದ ಆವೃತ್ತಿ) ಸಂ. ೨೫; ಐಎಸ್‌‌‌ವಿಇ, ಪು. ೭.

[25] ಎಫ್. ಇಂಡ್. ಸಂ. XX, ಪು. ಪು. ೨೨ ; ಸರ್ಕಾರ್, ಡಿ.ಸಿ., ಸೆಲೆಕ್ಟ್ ಇನ್ಸ್‌‌ಕ್ರಿಪ್ಷನ್ಸ್, ಸಂ. II, ಪು. ೨೦೬

[26] ರಾವ್. ಸಿ.ಎಚ್.., ಮೈಸೂರು ಗ್ಯಾಸೆಟಿಯರ್, ಸಂ. I. ಪು.೧೦.

[27] ಎಂ.ಎ.ಆರ್., ೧೯೨೯, ಪು. ೫೦ ಮತ್ತು ಶಾಸನ ಸಂ. ೧. ಪು. ೨೧೧

[28] ಮೀನಾಕ್ಷಿ, ಸಿ. ಎಡ್ಮಿನಿಸ್ಟ್ರೇಟಿವ್ ಅಂಡ್ ಸೋಶಿಯಲ್ ಲೈಫ್ ಅಂಡರ್ ದಿ. ಪಲ್ಲವಾಸ್, ಪು. ೧೧೮-೧೨೪, ೧೨೭-೧೨೮ ಮತ್ತು ೧೩೮

[29] ಐಎಸ್‌ವಿಇ, ಪು. ೧೬ ; ನೋಡಿ ರಮೇಶ್. ಕೆ.ವಿ., ಇನ್‌ಸ್ಕ್ರಿಪ್ಷನ್ಸ್ ಆಫ್ ವೆಸ್ಟರ‍್ನ್ ಗಂಗಾಸ್

[30] ರಮೇಶ್, ಕೆ.ವಿ., ಪೂರ್ವೋಕ್ತ, ಪು. ೧೧೪- ೧೧೭

[31] ಚಿದಾನಂದಮೂರ್ತಿ, ಎಂ., ಜಿನವಲ್ಲಭನ ಕುರಿಕ್ಯಾಲ ಶಾಸನ; ಹೆಚ್ಚಿನ ಶೋಧಗಳು ಮತ್ತು ವ್ಯಾಖ್ಯಾನಗಳು’’ ಹೊಸತು ಹೊಸತು. ಪು. ೯೭-೧೨೦

[32] ಎಪಿಎಆರ್‌ಎಫ್, ೧೯೬೬, ಸಂ. ೧೭೮, ಇನ್‌ಸ್ಕ್ರಿಪ್ಷನ್ಸ್ ಆಫ್ ಆಂಧ್ರಪ್ರದೇಶ್, ಕರೀನಗರ್, ಸಂ. ೩ ; ಎಆ, ಸಂ.II, ಸಂ., ೩ ; ಜೈನಿಸಮ್ ಇನ್ ಆಂಧ್ರ, ಸಂ.   ೬೫ ; ಎಆರ್‌ಎಫ್ ೧೯೬೬ – ೬೭, ಸಂ. ಬಿ೧ ; ಭಾರತಿ, ಮಾರ್ಚ್ ೧೯೬೭, ಪು. ೧೦-೨೩ ; ವಾಸುದೇವನ್, ಸಿ.ಎಸ್. (ಸಂ.), ಕನ್ನಡ ಇನ್ಸ್‌ಕ್ರಿಪ್ಷನ್ಸ್ ಆಫ್ ಆಂಧ್ರಪ್ರದೇಶ, ಪೀಠಿಕೆ ಪು. XL ಮತ್ತು ಸಂ. ೪೨೮ ಮತ್ತು ೪೨೯

[33] ಪಂಪಭಾರತ, ೧೪, ೫೬-೫೭ ; ಚಿದಾನಂದಮೂರ್ತಿ, ಎಂ. ಪೂರ್ವೋಕ್ತ, ಪು. ೧೦೫, ೧೦೬

[34] ಚಿದಾನಂದಮೂರ್ತಿ, ಎಂ. ಪೂರ್ವೋಕ್ತ, ಪು. ೧೦೬-೧೦೮

[35] ಅದೇ, ಪು. ೧೦೮-೧೨೦ ಮತ್ತು ೧ ರಿಂದ ೭ ಛಾಯಾಚಿತ್ರಗಳು.

[36] ಶಿವರಾಮಮೂರ್ತಿ, ಸಿ., ದಿ ಚೋಳ ಟೆಂಪಲ್ಸ್, ಪು. ೫-೬

[37] ಶಾಸ್ತ್ರಿ, ಕೆ.ಎ.ಎನ್., ದಿ ಚೋಳಸ್, ಪು. ೫೮೩, ೫೮೪;, ಎ.ಆರ್.ಎಸ್.ಐಇ.-೧೯೨೩ ಪು. ೧೨೩

[38] ಅದೇ, ಪು. ೪೯೫- ೪೯೬ ಮತ್ತು ೫೮೩- ೫೮೪

[39] ಐಎಸ್‌ವಿಇ, ಪು. ೧೮-೧೯

[40] ಎಚ್‌ಎಎಸ್, ಸಂ. ೫, ಪು. ೧೦ ; ಐಎಸ್‌ವಿಇ, ಪು. ೧೯

[41] ಎಸ್‌ಐಐ, ಸಂ. IV. ಸಂ. ೨೬೦