ಬಳ್ಳಾರಿ ಜಿಲ್ಲೆಯ ಪ್ರಮುಖ ತಾಲೂಕುಗಳಲ್ಲಿ ಹೊಸಪೇಟೆ ತಾಲೂಕು ಒಂದಾಗಿದೆ. ಈ ತಾಲೂಕಿನ ಕೇಂದ್ರ ಸ್ಥಳವು ಹೊಸಪೇಟೆಯಾಗಿದ್ದು, ಇಂದು ಇದು ಒಂದು ಮುಖ್ಯ ವಾಣಿಜ್ಯ ಕೇಂದ್ರವಾಗಿದೆ. ಹೊಸಪೇಟೆಯು ಚಾರಿತ್ರಿಕವಾಗಿ ಅತ್ಯಂತ ಮಹತ್ವ ಪಡೆದ ಸ್ಥಳವೇ ಆಗಿದೆ. ಹೊಸಪೇಟೆಯ ಸಮೀಪದಲ್ಲಿಯೇ ಹದಿಮೂರು ಕಿ.ಮೀ.ಗಳ ದೂರದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಹಂಪೆಯಿದ್ದು ಅನೇಕ ಪ್ರವಾಸಿಗಳನ್ನು ಆಕರ್ಷಿಸುತ್ತಲಿದೆ. ಹೊಸಪೇಟೆಯ ಇತಿಹಾಸದತ್ತ ನೋಡಿದಾಗ, ಈ ಗ್ರಾಮವು ವಿಜಯನಗರ ಪೂರ್ವಕಾಲದಲ್ಲಿಯೇ ಇದ್ದಿತೆಂಬುದು ಇಲ್ಲಿಯ ಸಣ್ಣಕ್ಕಿ ವೀರಭದ್ರ ದೇವಾಲಯದ ಹಿಂಭಾಗದಲ್ಲಿ ದೊರೆತಿರುವ ಕಲಚುರಿ ಬಿಜ್ಜಳದೇವನ ಕಾಲಕ್ಕೆ ಸೇರಿದ ತ್ರುಟಿತವಾದ ಒಂದು ಶಾಸನದಿಂದ ತಿಳಿದುಬರುತ್ತದೆ.

[1] ತಿರುಮಲಾದೇವಿ ಹಾಗೂ ಚಿನ್ನಾದೇವಿಯರು ಶ್ರೀಕೃಷ್ಣದೇವರಾಯನ ಇಬ್ಬರು ಪತ್ನಿಯರು. ಇವರುಗಳ ಹೆಸರಿನಲ್ಲಿ ತಿರುಮಲಾದೇವಿಪಟ್ಟಣ ಹಾಗೂ ನಾಗಲಾಪುರ ಎಂಬ ಎರಡು ಪಟ್ಟಣಗಳನ್ನು ನಿರ್ಮಿಸಿದರೆಂದು, ಆ ನಂತರದ ಕಾಲದಲ್ಲಿ, ಸಮೀಪದಲ್ಲಿರುವ ಗ್ರಾಮಗಳಾದ ಜಗಳೀಕಟ್ಟಿ, ವಿರೂಪಾಕ್ಷಪುರ, ವಿಜಯಪುರ, ನಾಗಲಾಪುರ ಮತ್ತು ಹಂದಿಗನೂರು ಪ್ರದೇಶಗಳೆಲ್ಲವೂ ಸೇರಿಕೊಂಡು ಇಂದಿನ ಹೊಸಪೇಟೆಯಾಗಿ ಪರಿವರ್ತಿತವಾಯಿತು ಎಂದು ಮಹದೇವ ಅವರು ಅಭಿಪ್ರಾಯಪಡುತ್ತಾರೆ.[2]

ಹೊಸಪೇಟೆ ತಾಲೂಕಿನಲ್ಲಿ ಅನೇಕ ಐತಿಹಾಸಿಕ ನೆಲೆಗಳಿದ್ದು, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಹಂಪೆಯಿಂದ (ವಿಜಯನಗರ ಪಟ್ಟಣ) ಇಂದು ಪ್ರಸಿದ್ಧಿಯನ್ನು ಪಡೆದಿದೆ. ದಕ್ಷಿಣೋತ್ತರವಾಗಿ ತುಂಗಭದ್ರಾ ನದಿಯು ಹರಿದು ಈ ತಾಲೂಕು, ರಾಯಚೂರು ಜಿಲ್ಲೆಯಿಂದ ಬೇರ್ಪಟ್ಟಿರುತ್ತದೆ. ಈ ತಾಲೂಕಿನ ದಕ್ಷಿಣ ಪೂರ್ವ ದಿಕ್ಕಿನಲ್ಲಿ ಸಂಡೂರು ಬೆಟ್ಟಗಳ ಶೃಂಖಲೆಯು ನುಸುಳುತ್ತದೆ. ಈ ಬೆಟ್ಟಗಳು ಸಮುದ್ರ ಮಟ್ಟದಿಂದ ಸುಮಾರು ೯೦೦ ಮೀಟರ್ ಗಳಷ್ಟು ಎತ್ತರಕ್ಕೆ ಏರುತ್ತವೆ. ಸಂಡೂರು ಬೆಟ್ಟಗಳಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆಯು ಸಾಗುತ್ತ ಬಂದಿದೆ. ಈ ತಾಲೂಕಿನ ಸುತ್ತಲೂ ಬಳ್ಳಾರಿ, ಹಗರಿಬೊಮ್ಮನಹಳ್ಳಿ, ಸಿರಗುಪ್ಪ ತಾಲೂಕುಗಳಿವೆ.

ಈ ತಾಲೂಕಿನ ಹವಾಮಾನವು ಬಳ್ಳಾರಿ ಜಿಲ್ಲೆಯ ಇತರ ತಾಲೂಕುಗಳ ಹವಾಮಾನವನ್ನು ಅನುಸರಿಸುತ್ತದೆ. ತಾಲೂಕಿನಲ್ಲಿ ಬಿಸಿಲಿನ ತಾಪವು ಹೆಚ್ಚಾಗಿದ್ದು, ಸಾಮಾನ್ಯವಾಗಿ ೩೨ರಿಂದ ೩೫0 ಸೆಲ್ಷಿಯಸ್ ಗಳಷ್ಟು ಇರುತ್ತದೆ. ಜುಲೈ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಮಳೆಗಾಲವು ಇರುತ್ತದೆ. ಈ ತಾಲೂಕಿನಲ್ಲಿ ಸರಾಸರಿ ಮಳೆಯು ವಾರ್ಷಿಕವಾಗಿ ೨೫೦ ಮಿ.ಮೀ.ಗಳಷ್ಟು ಬೀಳುತ್ತದೆ. ಸಾಧಾರಣವಾಗಿ ಒಣ ಹವೆಯನ್ನು ಹೊಂದಿರುವ ಈ ತಾಲೂಕಿನಲ್ಲಿ ಹವಾಮಾನಕ್ಕನುಗುಣವಾಗಿ ಕಬ್ಬು, ಭತ್ತ, ಜೋಳ, ಗುರೆಳ್ಳು ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ತಾಲೂಕಿನಲ್ಲಿ ಅಧಿಕವಾಗಿ ಜೋಳ ಬೆಳೆಯುವುದನ್ನು ನೋಡಬಹುದು. ನೀರಾವರಿ ಸೌಕರ್ಯವಿರುವ ಪ್ರದೇಶಗಳಲ್ಲಿ, ಪ್ರಮುಖವಾಗಿ ತುಂಗಭದ್ರಾ ನದಿಯ ಆಸುಪಾಸಿನಲ್ಲಿ ವಾಣಿಜ್ಯ ಬೆಳೆಗಳಾದ ಕಬ್ಬು ಮತ್ತು ಬಾಳೆಯನ್ನು ಬೆಳೆಯುತ್ತಾರೆ. ಸುಮಾರು ಇನ್ನೂರು ವರ್ಷಗಳ ಹಿಂದೆ ಹೊಸಪೇಟೆಯು ಬೆಲ್ಲಕ್ಕೆ ಪ್ರಸಿದ್ಧಿಯನ್ನು ಪಡೆದ ಸ್ಥಳವಾಗಿದ್ದಿತು.

ಈಗಾಗಲೇ ಉಲ್ಲೇಖಿಸಿದಂತೆ ಈ ತಾಲೂಕಿನಲ್ಲಿ ಅನೇಕ ಪ್ರಾಗೈತಿಹಾಸಿಕ ಮತ್ತು ಐತಿಹಾಸಿಕ ನೆಲೆಗಳಿವೆ. ಪ್ರಾಗೈತಿಹಾಸಿಕ ನೆಲೆಗಳಲ್ಲಿ ವೆಂಕಟಾಪುರ, ಮಲಪನಗುಡಿ, ಹಂಪೆಯ ಬಳಿಯ ಮೊಸಳಯ್ಯನಗುಡ್ಡ ಮುಂತಾದವುಗಳು ಸೇರಿವೆ. ಅವುಗಳಲ್ಲಿ ಹಂಪೆಯ ಬಳಿಯ ಬೆಟ್ಟಗಳ ಬಂಡೆಗಳಲ್ಲಿ ಇಂದಿಗೂ ನವಶಿಲಾಯುಗ ಮತ್ತು ಸೂಕ್ಷ್ಮ ಶಿಲಾಯುಗ ಕಾಲಕ್ಕೆ ಸೇರಬಹುದಾದ ಕೆಲವು ರೇಖಾ ಚಿತ್ರಗಳಿವೆ. ಕಂಪ್ಲಿ, ಕಮಲಾಪುರ, ಹಂಪೆ, ತಿಮ್ಮಲಾಪುರ, ಕುರುಗೋಡು, ನಾಗಲಾಪುರ, ಅನಂತಶಯನಗುಡಿ, ರಾಮಸಾಗರ, ಬುಕ್ಕಸಾಗರ ಮುಂತಾದವುಗಳು ಚಾರಿತ್ರಿಕವಾಗಿ ಮಹತ್ವವನ್ನು ಪಡೆದ ಸ್ಥಳಗಳಾಗಿವೆ.

ಈ ತಾಲೂಕಿನಲ್ಲಿ ಅನೇಕ ಕೆರೆಗಳು, ಅಣೆಕಟ್ಟುಗಳು, ಕಾಲುವೆ ಮತ್ತು ಕುಂಟೆಗಳು ಇವೆ. ಇವುಗಳಲ್ಲಿ ಬಹುಪಾಲು ಪ್ರಾಚೀನ ಕಾಲದಲ್ಲಿ ನಿರ್ಮಿಸಿದಂತಹವುಗಳೇ ಆಗಿದೆ. ಇವುಗಳಲ್ಲಿನ ಅನೇಕ ಕೆರೆ, ಕಾಲುವೆ ಮತ್ತು ಅಣೆಕಟ್ಟುಗಳು ಇಂದಿಗೂ ಇಲ್ಲಿಯ ವ್ಯವಸಾಯಗಳಿಗೆ ನೀರನ್ನು ಪೂರೈಸುತ್ತಿದ್ದು, ಕೃಷಿ ಕಾರ್ಯಗಳಿಗೆ ಅನುವು ಮಾಡಿಕೊಟ್ಟಿವೆ. ನೀರಾವರಿ ವ್ಯವಸ್ಥೆಗೆ ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದಲ್ಲಿ ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರೆಂಬುದು ಸ್ಪಷ್ಟವಾಗಿದೆ. ಈ ಅಧ್ಯಾಯದಲ್ಲಿ ಒಂದು ನಿರ್ದಿಷ್ಟ ಭೌಗೋಳಿಕ ಪರಿಸರವನ್ನು ಮಾಡಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಕೆರೆಗಳನ್ನು ಕುರಿತಂತೆ ಅಧ್ಯಯನವನ್ನು ನಡೆಸಲಾಗಿದೆ.

ಹೊಸಪೇಟೆ ತಾಲೂಕಿನಲ್ಲಿ ಸುಮಾರು ೬೦ಕ್ಕೂ ಮಿಗಿಲಾದ ಕೆರೆಗಳಿವೆ,. ಇವುಗಳಲ್ಲಿ ಸುಮಾರು ೫೫ಕ್ಕೂ ಅಧಿಕವಾದ ಕೆರೆಗಳು ವಿಜಯನಗರ ಕಾಲದಲ್ಲಿ ನಿರ್ಮಿಸಿದಂತಹ ಕೆರೆಗಳೇ ಆಗಿವೆ. ಅವುಗಳಲ್ಲಿ ಕೆಲವು ಕೆರೆಗಳು ವಿಜಯನಗರ ಪೂರ್ವದಲ್ಲಿಯೇ ಇದ್ದವು. ಅಂತಹ ಕೆಲವು ಕೆರೆಗಳನ್ನು ವಿಜಯನಗರ ಅರಸರ ಕಾಲದಲ್ಲಿ ವಿಸ್ತರಿಸಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹಾಗೂ ಲಭ್ಯವಿರುವ ಮಾಹಿತಿ ಮತ್ತು ಆಧಾರಗಳನ್ನು ಪರಿಶೀಲಿಸಿ ಅಧ್ಯಯನವನ್ನು ನಡೆಸಲಾಗಿದೆ. ಹೊಸಪೇಟೆ ತಾಲೂಕಿನಲ್ಲಿ ಕ್ಷೇತ್ರಕಾರ್ಯವನ್ನು ಕೈಗೊಂಡು ಅನೇಕ ಮಾಹಿತಿಗಳನ್ನು ಸಂಗ್ರಹಿಸಿ ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ವಿಜಯನಗರ ಕಾಲದ ಕೆರೆಗಳನ್ನು ಹೇಗೆ ಗುರುತಿಸಬೇಕು ಎಂಬ ಪ್ರಶ್ನೆಯು ಸಾಮಾನ್ಯವಾಗಿ ಎಲ್ಲರಲ್ಲಿಯೂ ಉದ್ಭವಿಸುವುದು ಸಹಜವಷ್ಟೇ. ಈ ಕಾಲದ ಕೆರೆಗಳನ್ನು ೧) ಶಾಸನಾಧಾರ ೨) ತೂಬಿನ ಮೇಲಿರುವ ಗಜಲಕ್ಷ್ಮಿ ಉಬ್ಬುಶಿಲ್ಪ ೩) ಕೈಫಿಯತ್ತುಗಳ ಆಧಾರ ಮತ್ತು ೪) ಕಟ್ಟುವಾಡಗಳ ರಚನಾ ವಿಧಾನಗಳಿಂದ ಗುರುತಿಸಬಹುದು. ಹೊಸಪೇಟೆ ತಾಲೂಕಿನಲ್ಲಿ ವಿಜಯನಗರ ಕಾಲದ ಕೆರೆಗಳು ಸುಮಾರು ೫೫ ಕ್ಕೂ ಮಿಗಿಲಾಗಿದೆಯೆಂದು ಈ ಮುಂಚೆಯೇ ಉಲ್ಲೇಖಿಸಲಾಗಿದೆ. ಈ ಕೆರೆಗಳನ್ನು ವೈಜ್ಞಾನಿಕವಾಗಿ ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು.ಅದರಂತೆ ಮೊದಲ ಕೆರೆಗಳ ಸಮೂಹವು ಸಮುದ್ರ ಮಟ್ಟದಿಂದ ಸುಮಾರು ೫೦೦ ಮೀಟರ್ ಗಳಷ್ಟು ಎತ್ತರದಲ್ಲಿರುವಂತಹವುಗಳು ಮತ್ತು ಎರಡನೆಯ ಗುಂಪು ೪೦೦-೫೦೦ ಮೀಟರ್ ಗಳಷ್ಟು ಎತ್ತರದಲ್ಲಿರುವಂತಹವುಗಳೇ ಆಗಿವೆ. ಇವುಗಳಲ್ಲಿ ಒಂದು ಅಂಶವು ಅತ್ಯಂತ ಕುತೂಹಲಕಾರಿಯಾಗಿದೆ. ಬಹುತೇಕ ಕೆರೆಗಳು ಸುಮಾರು ೫೦೦ ಮೀಟರ್ ನಷ್ಟು ಎತ್ತರದ ಪ್ರದೇಶಗಳಲ್ಲಿಯೇ ನಿರ್ಮಿಸಲಾಗಿದೆ. ಎಲ್ಲ ಕೆರೆಗಳು ಒಂದೇ ಕಾಲದಲ್ಲಿ ನಿರ್ಮಾಣಗೊಂಡಿಲ್ಲ. ಅವುಗಳನ್ನು ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರ್ಮಿಸಿರುತ್ತಾರೆ. ಆದರೂ ಈ ಎಲ್ಲ ಕೆರೆಗಳ ಸರಾಸರಿ ಎತ್ತರವನ್ನು ನಾವು ಗಣನೆಗೆ ತೆಗೆದುಕೊಂಡರೆ, ಇವು ಸುಮಾರು ೫೦೦ ಮೀಟರ್ ಗಳ ವ್ಯಾಪ್ತಿಯಲ್ಲಿಯೇ ಬರುತ್ತವೆ. ಮತ್ತೊಂದು ಸಂಗತಿಯೆಂದರೆ ತುಂಗಭದ್ರಾ ನದಿಯು ಸಹ ಸಮುದ್ರಮಟ್ಟದಿಂದ ೫೦೦ ಮೀಟರ್ ನಷ್ಟು ಎತ್ತರದಲ್ಲಿ ಹರಿಯುತ್ತದೆ. ಆ ನದಿಯ ಪಾತ್ರದ ಎತ್ತರ ಮತ್ತು ವಿಜಯನಗರ ಕಾಲದ ಕೆರೆಗಳ ಎತ್ತರವೂ ಒಂದೇ ಆಗಿದೆ. ವಿಜಯನಗರ ಕಾಲದಲ್ಲಿ ಕೆರೆ ಕಟ್ಟುವುದರಲ್ಲಿ ಇದ್ದ ನೈಪುಣ್ಯತೆ ಹಾಗೂ ಉನ್ನತ ತಾಂತ್ರಿಕ ಜ್ಞಾನಮಟ್ಟವು ಎಷ್ಟರಮಟ್ಟಿಗೆ ಇತ್ತೆಂದು ತಿಳಿಸುವುದರೊಂದಿಗೆ ಆ ಕಾಲದಲ್ಲಿ ಇಂತಹ ರಚನೆಗಳಿಗೆ ಅವರು ನೀಡುತ್ತಿದ್ದ ಪ್ರಾಮುಖ್ಯತೆಯನ್ನು ನಮಗೆ ಪರಿಚಯಿಸಿಕೊಡುತ್ತದೆ.

ಈ ತಾಲೂಕಿನ ವಿಜಯನಗರ ಕಾಲದ ಕೆರೆಗಳ ಏರಿಗಳು ಸಹ ಒಂದು ನಿರ್ದಿಷ್ಟವಾದ ದಿಕ್ಕಿಗೆ ಇರುವುದು ಸಹ ಗಮನಾರ್ಹ ಸಂಗತಿ. ಬಹುತೇಕ ಕೆರೆಗಳ ಏರಿಗಳು ಉತ್ತರ ದಿಕ್ಕಿನಲ್ಲಿ ಇವೆ. ತಾಲೂಕಿನ ದಕ್ಷಿಣ ಭಾಗವು ಎತ್ತರವಾಗಿದ್ದು, ಈ ಪ್ರದೇಶದಲ್ಲಿ ಬೀಳುವ ಮಳೆಯು ಸಣ್ಣ ತೊರೆಗಳಾಗಿ ಉತ್ತರ ಭಾಗಕ್ಕೆ ಹರಿಯುತ್ತವೆ ಮತ್ತು ತುಂಗಭದ್ರಾ ನದಿಯನ್ನು ಸೇರುತ್ತದೆ. ಆದ್ದರಿಂದ ಅಂತಹ ಸಣ್ಣ ತೊರೆಗಳ ಸಹಾಯದಿಂದ ಕೆರೆಗೆ ನೀರನ್ನು ಹಾಯಿಸಿಕೊಂಡು ನೈಸರ್ಗಿಕ ಕ್ಷಿತಿಜ ಭೂ ಮಟ್ಟಕ್ಕೆ (Cortour)ಅನುಗುಣವಾಗಿ ಆಯಕಟ್ಟಿನ ಕಾಲುವೆಗಳನ್ನು ನಿರ್ಮಿಸಿರುತ್ತಾರೆ. ಆದುದರಿಂದ ಕೆರೆ ಏರಿಗಳನ್ನು ಸಹ ಉತ್ತರ ದಿಕ್ಕಿಗೆ ಕಟ್ಟಲಾಗಿದೆ.

ವಿಜಯನಗರ ಕಾಲದಲ್ಲಿ ಹವಾಮಾನವು ಇಂದಿನ ಹವಾಮಾನದಂತೆಯೇ ಇದ್ದು, ಇಂದು ಬೆಳೆಯಲಾಗುತ್ತಿರುವ ಮುಖ್ಯ ಬೆಳೆಗಳಾದ ಭತ್ತ, ಜೋಳ, ಕಬ್ಬು ಮತ್ತು ಬಾಳೆಗಳನ್ನು ಬೆಳೆಯುತ್ತಿದ್ದರು. ಆ ಕಾಲಕ್ಕೆ ಸೇರಿದ ಅನೇಕ ಶಾಸನಗಳು ಮುಖ್ಯ ಬೆಳೆಗಳನ್ನು ಕುರಿತು ತಿಳಿಸುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಕೃಷಿ ಹವಾಮಾನದತ್ತ ಗಮನಹರಿಸಿ, ವಿಜಯನಗರ ಕಾಲದಲ್ಲಿ ಏಕೆ ನೂರಾರು ಕೆರೆಗಳು, ಕಟ್ಟೆಗಳು, ಕುಂಟೇಗಳೇ ಮುಂತಾದ ನೀರಾವರಿ ರಚನೆಗಳು ನಿರ್ಮಾಣಗೊಂಡವೆಂದು ಅರಿಯುವ ಪ್ರಯತ್ನವನ್ನು ಮಾಡಬಹುದು. ಕೆರೆಗಳ ನಿರ್ಮಾಣ ಕಾರ್ಯಗಳಿಗೆ ಮತ್ತು ಕೃಷಿ ಮಾಡುವುದಕ್ಕೆ ನೀರು ಅತ್ಯವಶ್ಯ. ಇವುಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲು ಕರ್ನಾಟಕ ರಾಜ್ಯದ ಹವಾಮಾನವನ್ನು ಗಮನಿಸುವುದು ಅಷ್ಟೇ ಮುಖ್ಯ. ಹವಾಮಾನಕ್ಕೆ ಮತ್ತು ಮೊದಲು ಹೇಳಿದ ನೀರಾವರಿ ರಚನೆಗಳ ನಡುವೆ ನೇರವಾದ ಸಂಬಂಧವಿರುವ ಕಾರಣ ಕರ್ನಾಟಕದ ಕೃಷಿ ಹವಾಮಾನದತ್ತ ದೃಷ್ಟಿ ಹರಿಸೋಣ.[3] ಲಂಬಾತ್ಮವಾಗಿ ಕರ್ನಾಟಕ ರಾಜ್ಯವನ್ನು ವಿಭಜಿಸಿದಾಗ ಐದು ಪ್ರಮುಖ ಕೃಷಿ ಹವಾಮಾನ ಪ್ರದೇಶಗಳು ಕಂಡುಬರುತ್ತವೆ. ಅವುಗಳು ಯಾವುವೆಂದರೆ-

೧. ಕರಾವಳಿ ಪ್ರದೇಶ

೨. ಮಲೆನಾಡು ಪ್ರದೇಶ

೩. ಮಧ್ಯಂತರ ಪ್ರದೇಶ

೪. ಬಯಲುಸೀಮೆ ಅಥವಾ ಮೈದಾನ ಪ್ರದೇಶ ಮತ್ತು

೫. ಈಶಾನ್ಯ ಪ್ರದೇಶ.

. ಕರಾವಳಿ

ಕರ್ನಾಟಕದ ಸಮುದ್ರ ತೀರ ಪ್ರದೇಶಕ್ಕೆ ಕರಾವಳಿ ಎಂದು ಹೆಸರಿಡಲಾಗಿದೆ. ಈ ಪ್ರದೇಶವು ಸುಮಾರು ೩೦೦ ಹೆಚ್ಚು ಕಿ.ಮೀ.ಗಳಾಗಿದ್ದು, ೨೦ ಕಿ.ಮೀ. ಅಗಲದ್ದಾಗಿದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ೩೦೦೦-೪೦೦೦ ಮಿ.ಮೀ.ಗಳಷ್ಟು ವಾರ್ಷಿಕ ಮಳೆಯಾಗುತ್ತದೆ. ಕರಾವಳಿಯ ಪ್ರದೇಶದ ಪಶ್ಚಿಮಕ್ಕೆ ಪಶ್ಚಿಮಘಟ್ಟಗಳಿವೆ. ಇಲ್ಲಿಯ ಬೆಟ್ಟಗಳು ಸಮುದ್ರಮಟ್ಟದಿಂದ ಸುಮಾರು ಸಾವಿರ ಮೀಟರ್ ಗಳಷ್ಟು ಎತ್ತರದ್ದಾಗಿವೆ. ಪಶ್ಚಿಮ ಘಟ್ಟಗಳು ಮಳೆಯ ಮೋಡಗಳನ್ನು ತಡೆದು ಮಳೆಯನ್ನು ಸುರಿಸುವುದರಲ್ಲಿ ಸಹಕಾರಿಯಾಗಿವೆ. ವರ್ಷದ ಅನೇಕ ತಿಂಗಳುಗಳಲ್ಲಿ ಮಳೆಯು ಬೀಳುವ ಕಾರಣ, ಈ ಭಾಗವು ಬಹುತೇಕವಾಗಿ ಹಸಿರು ವರ್ಣದಿಂದಲೇ ರಾರಾಜಿಸುತ್ತದೆ. ಈ ಬೆಟ್ಟಗಳ ಸಾಲುಗಳಲ್ಲಿ ಅನೇಕ ನದಿಗಳು ಹುಟ್ಟುತ್ತವೆ. ಇಲ್ಲಿ ಬೀಳುವ ಮಳೆಯು ಅರಬ್ಬಿ ಸಮುದ್ರ ಮತ್ತು ಕರಾವಳಿಯ ಪ್ರದೇಶಗಳಿಗೆ ಹರಿದು ಹೋಗುತ್ತವೆ.

. ಮಲೆನಾಡು

ಮಲೆನಾಡು ಎಂದರೆ ಮಲೆಗಳು ಅಥವಾ ಬೆಟ್ಟಗಳಿಂದ ಕೂಡಿರುವ ಪ್ರದೇಶ. ಈ ಪ್ರದೇಶವು ಕರಾವಳಿ ಪ್ರದೇಶಕ್ಕೆ ಹೊಂದಿಕೊಂಡಿದೆ. ಇಲ್ಲಿಯ ವಾರ್ಷಿಕ ಮಳೆಯು ಸರಾಸರಿ ೧೦೦೦ ದಿಂದ ೩೦೦೦ ಮಿ.ಮೀ.ಗಳಷ್ಟು ಮಲೆನಾಡು ಕರ್ನಾಟಕದ ಅನೇಕ ನದಿಗಳಿಗೆ ತವರೂರಾಗಿದೆ. ಕಾವೇರಿ, ಹೇಮಾವತಿ, ತುಂಗೆ, ಭದ್ರೆ, ಮಲಪ್ರಭ ಮುಂತಾದ ಮುಖ್ಯ ನದಿಗಳು ಇಲ್ಲಿ ಹುಟ್ಟುತ್ತವೆ. ಈ ಪ್ರದೇಶದಲ್ಲಿ ಮಳೆಯು ಅಧಿಕವಾಗಿ ಆಗುವುದರಿಂದ ನದಿಗಳಲ್ಲಿ ಯಾವಾಗಲೂ ನೀರು ಇರುತ್ತದೆ. ಇವುಗಳೆಲ್ಲವೂ ಸರ್ವಕಾಲಿಕ ನದಿಗಳಾಗಿದ್ದರಿಂದ ಕೃಷಿಗೆ ಅತ್ಯಂತ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿವೆ. ಈ ಪ್ರದೇಶದಲ್ಲಿ ಅತ್ಯಲ್ಪ ಭೂಮಿಯು ಕೃಷಿಗೆ ಯೋಗ್ಯವಾಗಿದೆ. ಇಲ್ಲಿಯ ಪ್ರದೇಶಗಳಲ್ಲಿ ಕಾಫಿ, ಚಹಾ ಮುಂತಾದ ವಾಣಿಜ್ಯ ಬೆಳೆಗಳನ್ನು ಅಲ್ಲಿಯ ಬೆಟ್ಟಗಳಲ್ಲಿ ಬೆಳೆಯಲಾಗುತ್ತದೆ.

. ಮಧ್ಯಂತರ ಪ್ರದೇಶ

ಈ ಪ್ರದೇಶವು ಮಲೆನಾಡು ಪೂರ್ವಕ್ಕೆ ಹೊಂದಿಕೊಂಡಿರುವ ಭಾಗವಾಗಿದೆ. ಇಲ್ಲಿ ಮಲೆನಾಡಿಗಿಂತ ಕಡಿಮೆ ಮಳೆಯಾಗುತ್ತದೆ. ವರ್ಷಕ್ಕೆ ಸರಾಸರಿ ೬೦೦-೧೨೦೦ ಮಿ.ಮೀ.ಯಷ್ಟು ಮಳೆ ಬೀಳುವ ಈ ಪ್ರದೇಶವು ಮೇಲೆ ಚರ್ಚಿಸಿದ ಎರಡು ಪ್ರದೇಶಗಳಿಗಿಂತಲೂ ಬೇಸಾಯಕ್ಕೆ ಯೋಗ್ಯವಾದ ಅಧಿಕ ಭೂ ಭಾಗಳನ್ನು ಹೊಂದಿವೆ.

. ಬಯಲುಸೀಮೆ ಅಥವಾ ಮೈದಾನ ಪ್ರದೇಶ

ಈ ಪ್ರದೇಶವು ಕರ್ನಾಟಕದ ಅಧಿಕ ಭೂ ಪ್ರದೇಶಗಳನ್ನು ಒಳಗೊಂಡಿದ್ದು ಶೇ. ೭೨ರಷ್ಟು ಪ್ರದೇಶವು ಕೃಷಿಗೆ ಸಹಕಾರಿಯಾಗಿದೆ. ಇಲ್ಲಿಯ ವಾರ್ಷಿಕ ಸರಾಸರಿ ಮಳೆಯು ೪೦೦ ರಿಂದ ೮೦೦ ಮಿ.ಮೀ.ಗಳಷ್ಟು ಇದ್ದು, ವಾಣಿಜ್ಯ ಬೆಳೆಗಳನ್ನು ಒಳಗೊಂಡು ಭತ್ತ, ರಾಗಿ, ಮೆಣಸಿನಕಾಯಿ ಮುಂತಾದ ಅನೇಕ ಬೆಳೆಗಳನ್ನು ಈ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಪ್ರದೇಶವು ಪದೇ ಪದೇ ಕ್ಷಾಮಕ್ಕೆ ಸಹ ಒಳಗಾಗುತ್ತದೆ. ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಈ ಭಾಗದಲ್ಲಿ ಸೇರಿದ್ದು ಇಲ್ಲಿಯ ಮಳೆಯು ಅತ್ಯಲ್ಪವಾಗಿದೆ. ಅಂಕಿ ಅಂಶದ ಪ್ರಕಾರ ಇಲ್ಲಿಯ ಮಳೆಯ ಪ್ರಮಾಣವು ಒಂದು ವರ್ಷದಲ್ಲಿ ೨೯ ರಿಂದ ೪೦ ಮಳೆಯ ದಿನಗಳಾಗಿವೆ. ಸರಾಸರಿ ಒಂದು ದಿನದಲ್ಲಿ ೨.೫ ಮಿ.ಮೀ.ಯಷ್ಟು ಮಳೆಯಾದ ದಿನವನ್ನು ಒಂದು ಮಳೆಯ ದಿನ ಎಂದು ಪರಿಗಣಿಸಲಾಗುತ್ತದೆ. ಮಳೆಯು ಕಡಿಮೆ ಇರುವ ಕಾರಣ ಬೇಸಿಗೆಯಲ್ಲಿ ತುಂಗಭದ್ರಾ ಮತ್ತು ಮಲಪ್ರಭಾದಂತಹ ನದಿಗಳು ಸಹ ಒಣಗುವ ಸಂಭವವೇ ಜಾಸ್ತಿಯಿದ್ದ ಕಾರಣವಾಗಿ ತುಂಗಭದ್ರಾ ನದಿಗೆ ಅಡ್ಡಲಾಗಿ ಅಲ್ಲಲ್ಲಿ ಕಟ್ಟೆಗಳನ್ನು ನಿರ್ಮಿಸಿ ನೀರನ್ನು ನಾಲೆಗಳ ಮೂಲಕ ಹಾಯಿಸಿ ಕೃಷಿಗೆ ಬಳಸಿಕೊಂಡಿರುವುದನ್ನು ಕಾಣಬಹುದು. ಅಂತರ್ಜಲವು ಕರಾವಳಿ ಮತ್ತು ಮಲೆನಾಡಿಗಿಂತಲೂ ಈ ಭಾಗದಲ್ಲಿ ಜಾಸ್ತಿಯಾಗಿರುತ್ತದೆ ಎಂಬುದು ಗಮನಿಸತಕ್ಕ ವಿಷಯ. ಈ ರೀತಿಯಾಗಿ ಕಟ್ಟೆಗಳನ್ನು ನಿರ್ಮಿಸುವ ಕಾರ್ಯವನ್ನು ವಿಜಯನಗರದ ಅರಸರು ಮೊಟ್ಟಮೊದಲು ೧೪ ನೆಯ ಶತಮಾನದಲ್ಲಿ ಪ್ರಾರಂಭಿಸಿದರೆಂದು ಅಧ್ಯಯನದಿಂದ ತಿಳಿದುಬರುತ್ತದೆ.

. ಈಶಾನ್ಯ ಪ್ರದೇಶ

ದಕ್ಷಿಣ ಮಹಾರಾಷ್ಟ್ರ ಮತ್ತು ಪಶ್ಚಿಮ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಈ ಭಾಗದಲ್ಲಿ ಸರಾಸರಿ ೮೦೦-೯೦೦ ಮಿ.ಮೀ. ಗಳಷ್ಟು ಮಳೆಯು ಬೀಳುತ್ತದೆ. ಈ ಪ್ರದೇಶವು ಕಪ್ಪು ಮಣ್ಣಿನಿಂದ ಕೂಡಿರುವ ದ್ವಿದಳಗಳು, ಜೋಳ ಮುಂತಾದ ಬೆಳೆಗಳನ್ನು ಬೆಳೆಯುವಲ್ಲಿ ಸಹಕಾರಿಯಾಗಿದೆ.

ರಾಜ್ಯದ ಕೃಷಿ ಹವಾಮಾನವನ್ನು ಅರಿತ ಹಿನ್ನೆಲೆಯಲ್ಲಿ ವಿಜಯನಗರ ಕಾಲದ ಕೆರೆಗಳತ್ತ ಗಮನಹರಿಸೋಣ. ಬಹು ಪ್ರಾಚೀನ ಕಾಲದಿಂದಲೂ ಕೆರೆಗೆ ಅನೇಕ ಪರ್ಯಾಯ ನಾಮಗಳು ಇವೆ. ಪರ್ಯಾಯ ನಾಮಗಳಾದ ಕಟ್ಟೆ, ಸಾಗರ, ತಟಾಕ, ಸಮುದ್ರ ಕೊಳ, ಕುಂಟೆ ಇವೇ ಮುಂತಾದ ಪದಗಳು ನಮಗೆ ವಿಜಯನಗರ ಕಾಲದ ನೂರಾರು ಶಾಸನಗಳಿಂದ ತಿಳಿದುಬರುತ್ತದೆ. ಇವುಗಳೊಂದಿಗೆ ಕೆರೆಯ ವಿಸ್ತೀರ್ಣತೆಯನ್ನು ಸೂಚಿಸುವ ಕೆಲವೊಂದು ಪದಗಳು ಸಹ ಕೆರೆಯ ಹೆಸರಿನ ಜೊತೆಯಲ್ಲಿ ಉಲ್ಲೇಖಿಸಿರುವುದನ್ನು ಗಮನಿಸಬಹುದು. ಅವುಗಳಲ್ಲಿ ಮುಖ್ಯವಾಗಿ ಹಿರಿಯಕೆರೆ ಅಥವಾ ಪಿರಿಯಕೆರೆ, ಚಿಕ್ಕಕೆರೆ, ಹೆಗ್ಗೆರೆ, ರಾಮಸಾಗರ ಎಂಬ ಹೆಸರುಗಳಲ್ಲಿ ಹಿರಿಯ, ಪಿರಿಯ, ಚಿಕ್ಕ, ಸಾಗರ ಇತ್ಯಾದಿ ಗುಣವಾಚಕಗಳನ್ನು ಬಳಸಲಾಗಿದೆ. ಹಿರಿಯ ಅಥವಾ ಪಿರಿಯ ಎಂದರೆ ದೊಡ್ಡದು ಎಂದು ಅರ್ಥ. ಹಿರಿಯ ಕೆರೆ ಅಥವಾ ಪಿರಿಯ ಕೆರೆ ಎಂದರೆ ದೊಡ್ಡ ಕೆರೆ ಎಂದೂ ಮತ್ತು ಚಿಕ್ಕ ಕೆರೆಯೆಂದರೆ ಕೆರೆಯು ಚಿಕ್ಕದು ಎಂದು ಅರ್ಥ.

ಒಂದು ಕೆರೆಯ ವಿಸ್ತೀರ್ಣ, ಅಳತೆ, ಅಗಾಧತೆ ಮತ್ತು ಆಳವನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನು ವರ್ಗೀಕರಿಸಿರುತ್ತಾರೆ. ಕೆರೆಯ ಆಯಕಟ್ಟು ಪ್ರದೇಶಗಳಿಗೆ ನೀರುಣಿಸುವ ಸಾಮರ್ಥ್ಯವನ್ನು ಮುಖ್ಯ ಅಳತೆಗೋಲನ್ನಾಗಿಸಿಕೊಂಡು ಕೆರೆಗೆ ಹಿರಿಯ, ಪಿರಿಯ, ಚಿಕ್ಕ ಇವೇ ಮುಂತಾದ ಗುಣವಾಚಕಗಳನ್ನು ಜೋಡಿಸಿರುವುದನ್ನು ಕಂಡುಕೊಳ್ಳಬಹುದಾಗಿದೆ. ಉದಾಹರಣೆಗೆ, ಹಿರಿಯಕೆರೆಯ ನೀರಿನಿಂದ ಇನ್ನೂರಕ್ಕೂ ಹೆಚ್ಚು ಎಕರೆಗಳನ್ನು ಕೃಷಿಗೆ ಒಳಪಡಿಸಿದರೆ, ಚಿಕ್ಕ ಕೆರೆಯ ನೀರಿನಿಂದ ಐವತ್ತು ಎಕರೆಗಳಷ್ಟು ಭೂಮಿಯನ್ನು ಕೃಷಿಗೆ ಒಳಪಡಿಸಿರಬಹುದು. ಆದ್ದರಿಂದ ಕೆರೆಯ ನೀರು-ಸಂಗ್ರಹ ಸಾಮರ್ಥ್ಯವನ್ನು ಮತ್ತು ಆ ಕೆರೆಯ ಅಚ್ಚುಕಟ್ಟು ಪ್ರದೇಶವನ್ನು ಮುಖ್ಯ ಅಳತೆಗೋಲನ್ನಾಗಿಸಿಕೊಂಡು ಕೆರೆಗೆ ಹಿರೀಕೆರೆ, ಹಿರಿಯ ಕೆರೆ, ಚಿಕ್ಕ ಕೆರೆ ಇತ್ಯಾದಿಯಾಗಿ ಹೆಸರಿಸಿರುತ್ತಾರೆ.

ಮತ್ತೊಂದು ಸಾಧ್ಯತೆಯೆಂದರೆ ಒಂದು ಗ್ರಾಮದಲ್ಲಿ ಒಂದಕ್ಕಿಂತ ಅಧಿಕವಾದ ಕೆರೆಗಳಿದ್ದಲ್ಲಿ, ಅವುಗಳ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳಲು ಮೇಲೆ ಹೇಳಿದ ಗುಣವಾಚಕಗಳು ಬಳಕೆಗೆ ಬಂದಿರುವ ಸಾಧ್ಯತೆಗಳಿವೆ. ಈ ರೀತಿಯಾಗಿ ಕೆರೆಗಳನ್ನು ಹೆಸರಿಸುವ ಪದ್ಧತಿಯು ಜನಪದರಲ್ಲಿ ಇಂದಿಗೂ ಪ್ರಚಲಿತವಾಗಿದೆ. ಆದ್ದರಿಂದ ಇಂತಹ ಗುಣವಾಚಕ ಶಬ್ದಗಳನ್ನು ಒಳಗೊಂಡ ಕೆರೆಗಳನ್ನು ಹೆಸರಿನ ಮೂಲಕ ವಿಶ್ಲೇಷಿಸುವಾಗ ಕೆರೆಗಳನ್ನು ಪ್ರತ್ಯಕ್ಷವಾಗಿ ನೋಡದೆ ತೀರ್ಮಾನಿಸುವುದು ಅಷ್ಟು ಸಮಂಜಸವಾಗುವುದಿಲ್ಲ. ಮತ್ತೊಂದು ಉದಾಹರಣೆಯನ್ನು ರಾಮಸಾಗರ ಎಂಬ ಹೆಸರಿನಿಂದ ನೀಡಬಹುದು. ಸಾಗರ ಎಂದರೆ ಸಮುದ್ರವೆಂದು ಅರ್ಥ. ಒಂದು ಕೆರೆಯು ಆಗಾಧವಾಗಿದ್ದರೆ ಅದನ್ನು ಸಾಗರಕ್ಕೆ ಹೋಲಿಸಿ ಈ ರೀತಿಯ ಹೆಸರನ್ನು ಕೆರೆಗೆ ನೀಡಲಾಗಿದೆ ಎಂದು ದೃಢವಾಗಿ ಹೇಳಬಹುದು.

ಕೆರೆ, ಕಟ್ಟೆ, ಕುಂಟೆ ಇವುಗಳ ನಡುವಿನ ವ್ಯತ್ಯಾಸವನ್ನು ಸ್ಥೂಲವಾಗಿ ವಿಂಗಡಿಸಬಹುದು. ಕರ್ನಾಟಕದ ಕೆಲವು ಭಾಗಗಳಲ್ಲಿರುವ ವಾಡಿಕೆಯಂತೆ ಕೆರೆ ಎಂದರೆ ದೊಡ್ಡದು; ಕಟ್ಟೆ ಎಂಬುದು ಕೆರೆಗಿಂತ ಚಿಕ್ಕದಾಗಿದ್ದು, ಕುಂಟೆಯು ಮೇಲೆ ಹೇಳಿದ ಎರಡಕ್ಕಿಂತ ಅತೀ ಚಿಕ್ಕದು ಎಂದು ಜನಪದರು ಪ್ರತ್ಯೇಕಿಸುತ್ತಾರೆ. ಕೆರೆಯ ನೀರನ್ನು ಕೃಷಿಗೆ ಮತ್ತು ಕಟ್ಟೆಯ ನೀರನ್ನು ದನಕರುಗಳಿಗಾಗಿ ಉಪಯೋಗಿಸುತ್ತಾರೆ. ಈ ಅಭಿಪ್ರಾಯವನ್ನು ಫ್ರಾನ್ಸಿಸ್ ಬುಕಾನನ್ ತನ್ನ ದಿನಚರಿಯಲ್ಲಿ ಬರೆದಿರುತ್ತಾನೆ. ಹೊಸಪೇಟೆ ತಾಲೂಕಿನಲ್ಲಿ ಕ್ಷೇತ್ರಕಾರ್ಯವನ್ನು ಕೈಗೊಂಡಾಗ ಕೆರೆ, ಕುಂಟೆ ಮತ್ತು ಕಟ್ಟೆಗಳ ನಡುವಿನ ವ್ಯತ್ಯಾಸವನ್ನು ಗ್ರಾಮಸ್ಥರು ಮೇಲಿನಂತೆ ತಿಳಿಸಿರುವರು.

ಕೆರೆಗಳನ್ನು ಮತ್ತೊಂದು ಬಗೆಯಾಗಿ ವರ್ಗೀಕರಿಸಬಹುದು.ಈ ವರ್ಗೀಕರಣವು ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದುದನ್ನು ಈಗಾಗಲೇ ಗಮನಿಸಲಾಗಿದೆ. ಈ ವರ್ಗೀಕರಣದಂತೆ ಕೆರೆಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು. ಮೊದಲ ಪ್ರಕಾರದಂತೆ ನದಿ ಆಶ್ರಿತ ಕೆರೆಗಳು ಮತ್ತೊಂದು ಮಳೆ ಆಶ್ರಿತ ಕೆರೆಗಳು. ಕರ್ನಾಟಕದಲ್ಲಿ ಕಂಡುಬರುವಂತಹ ಬಹುತೇಕ ಕೆರೆಗಳು ಮಳೆಯನ್ನೇ ಆಶ್ರಯಿಸಿವೆ. ಕೆಲವೇ ಕೆಲವು ಕೆರೆಗಳು ನದಿಯ ನೀರನ್ನು ಆಶ್ರಯಿಸಿವೆ, ಇಂದು ಬಳಕೆಯಲ್ಲಿರುವ ಕೆಲವು ಪ್ರಾಚೀನ ಕೆರೆಗಳು ಪ್ರಮುಖವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಇರುವಂತಹ ಕೆರೆಗಳು ಈಗ ನದಿಯ ನೀರನ್ನು ಆಶ್ರಯಿಸಿವೆ. ಸರ್ಕಾರದ ನೀರಾವರಿ ಇಲಾಖೆಯವರು ನದಿಯಿಂದ ನಾಲೆಗಳ ಮುಖಾಂತರ ನೀರನ್ನು ಹಾಯಿಸಿ, ಎಲ್ಲಾ ಕೆರೆಗಳಲ್ಲದಿದ್ದರೂ, ಕೆಲವು ಪ್ರಾಚೀನ ಕೆರೆಗಳನ್ನು ಜೀವಂತವಾಗಿರಿಸಿದ್ದಾರೆ.

ಮಳೆಯ ನೀರನ್ನು ಆಶ್ರಯಿಸಿರುವಂತಹ ಕೆರೆಗಳನ್ನು ನಿರ್ಮಿಸುವಾಗ ಪರಿಸರಕ್ಕನುಗುಣವಾಗಿ ಮೂರು ಅಥವಾ ನಾಲ್ಕು ಕೆರೆಗಳನ್ನು ಸಮೀಪದಲ್ಲಿಯೇ, ಒಂದಕ್ಕೊಂದು ಹೊಂದಿಕೊಂಡಿರುವಂತೆ ಕಟ್ಟಿರುವುದನ್ನು ಗಮನಿಸಬಹುದು. (ನೋಡಿ ನಕಾಶೆ ಸಂ. ೧,೨,೩ ಮತ್ತು ೪) ಈ ರೀತಿಯಾದ ವ್ಯವಸ್ಥೆಯಿಂದ ಎರಡು ಪ್ರಯೋಜನಗಳಿವೆ. ಮೊದಲನೆಯದಾಗಿ ಒಂದು ಕೆರೆ ತುಂಬಿದಾಗ, ಹೆಚ್ಚುವರಿ ನೀರು ಮತ್ತೊಂದು ಕೆರೆಗೆ ಹರಿದುಬರುತ್ತದೆ. ಇದರಿಂದಾಗಿ ಎತ್ತರದಲ್ಲಿರುವ ಕೆರೆಗೆ (ಮೊದಲನೆಯ ಕೆರೆ) ಹೆಚ್ಚುವರಿ ನೀರು ಬಂದ ಪಕ್ಷದಲ್ಲಿಯೂ ಏರಿಗೆ ಯಾವುದೇ ವಿಧದ ಅಪಾಯವುಂಟಾಗುವುದಿಲ್ಲ. ಆ ಕೆರೆಯು ಸುರಕ್ಷಿತವಾಗಿರುತ್ತದೆ. ಎರಡನೆಯ ಪ್ರಯೋಜನವು ಏನೆಂದರೆ ಹೆಚ್ಚುವರಿ ನೀರು, ವ್ಯರ್ಥವಾಗದಂತೆ ಎರಡನೆಯ ಕೆರೆಯಲ್ಲಿ ಶೇಖರಗೊಳ್ಳುತ್ತದೆ. ಇದು ನಮ್ಮ ಪೂರ್ವಜರು ತಮ್ಮ ದೀರ್ಘ ಅನುಭವದಿಂದ ಈ ವಿಷಯಗಳನ್ನು ಕಂಡುಕೊಂಡು ಅತ್ಯಂತ ವೈಜ್ಞಾನಿಕವಾಗಿ ತಮ್ಮ ದೈನಂದಿನ ಜೀವನದಲ್ಲಿ ಬಳಕೆಗೆ ತಂದಿರುವುದು ನಿಜಕ್ಕೂ ಶ್ಲಾಘನೀಯ. ಹೊಸಪೇಟೆ ತಾಲೂಕಿನಲ್ಲಿ ಇಂತಹ ಮಳೆ ಆಶ್ರಿತ ಕೆರೆಗಳ ಸಮುಚ್ಛಯವನ್ನು ಇಂದಿಗೂ ನಾವು ಕಾಣಬಹುದು.

ಕೆರೆಗೆ ಸಂಬಂಧಿಸಿದಂತೆ ಕೆಲವು ಮುಖ್ಯ ಭಾಗಗಳು ಈ ರೀತಿಯಾಗಿವೆ.

ಜಲಾನಯನ ಪ್ರದೇಶ (ಕ್ಯಾಚ್ಮೆಂಟ್ ಪ್ರದೇಶ)

ಈ ಪ್ರದೇಶವು ಸಾಮಾನ್ಯವಾಗಿ ಕೆರೆಯ ಭಾಗಕ್ಕಿಂತ ಎತ್ತರದಲ್ಲಿರುತ್ತದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತದೆ ಮತ್ತು ಇಲ್ಲಿ ಬೀಳುವ ಮಳೆಯ ನೀರು ಹರಿದುಬಂದು ಕೆರೆಯನ್ನು ಸೇರುತ್ತದೆ. ಸಾಮಾನ್ಯವಾಗಿ ಗುಡ್ಡಗಳ ನಡುವಿನ ಕಣಿವೆ ಪ್ರದೇಶಕ್ಕೆ ಜಲಾನಯನ ಪ್ರದೇಶವೆಂದು ಹೆಸರು. ಇಲ್ಲಿರುವ ಕಾಡುಗಳು ಮತ್ತು ಸಸ್ಯರಾಶಿಗಳು, ಮಳೆಯ ನೀರನ್ನು ತಮ್ಮ ಬೇರುಗಳಲ್ಲಿ ಹಾಗೂ ಒಣಗಿದ ಎಲೆಗಳ ನಡುವಿನ ಪದರುಗಳಲ್ಲಿ ಮತ್ತು ಮಣ್ಣಿನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಕಾಲಕ್ರಮದಲ್ಲಿ ಈ ಪ್ರದೇಶದಲ್ಲಿ ಸಂಗ್ರಹಗೊಂಡ ನೀರು ಸಣ್ಣ ಝರಿಯಂತೆ ಹರಿದುಬಂದು ನದಿಗಳಾಗಿ ಮಾರ್ಪಾಡಾಗುತ್ತವೆ; ಕೆಲವು ಝರಿಗಳು ಹಳ್ಳಗಳಾಗಿ ಕೆರೆಯ ಪ್ರದೇಶಕ್ಕೆ ಬಂದು ಸೇರುತ್ತದೆ.

ಸಾಮಾನ್ಯವಾಗಿ ಈ ರೀತಿಯಾಗಿ ಹರಿದುಬಂದಂತಹ ನೀರಿಗೆ ಅಡ್ಡಲಾಗಿ ಕಟ್ಟೆಯನ್ನು ನಿರ್ಮಿಸಿ ಕೆರೆಯನ್ನು ಕಟ್ಟುತ್ತಾರೆ. ಇದರಲ್ಲಿ ಮುಖ್ಯವಾಗಿ ಗಮನದಲ್ಲಿರಿಸಿಕೊಳ್ಳಬೇಕಾರ ಸಂಗತಿಯೆಂದರೆ, ಮಳೆ ಬೀಳುವ ಪ್ರದೇಶ ಮತ್ತು ಕೆರೆಗೆ ಹರಿದುಬಂದು ಸೇರುವ ನೀರಿನ ಪ್ರಮಾಣಗಳು ಪರಸ್ಪರ ಸಂಬಂಧವನ್ನು ಹೊಂದಿರುತ್ತದೆ.

ಕೆರೆಯ ತಳ (ಟ್ಯಾಂಕ್ ಬೆಡ್)

ಗೌರಮ್ಮನಕೆರೆ, ಮುದ್ದಲಾಪುರ (೨)

ವಿಠ್ಠಲಾಪುರ ಕೆರೆ, ರಾಮಸಾಗರ

ವಿಠ್ಠಲಾಪುರ ಕೆರೆ, ರಾಮಸಾಗರ

 

ಒಂಟಿಕೋಡು ಕೆರೆ, ಒಂಟಿಗೋಡು

ಒಂಟಿಕೋಡು ಕೆರೆ, ಒಂಟಿಗೋಡು

ನಾಗಸಮುದ್ರ ಕೆರೆ, ನಾಗೇನಹಳ್ಳಿ

ನಾಗಸಮುದ್ರ ಕೆರೆ, ನಾಗೇನಹಳ್ಳಿ

 

ಕೆರೆಯ ತಳ ಎಂದು ಗುರುತಿಸುವ ಭಾಗವು ಸಾಮಾನ್ಯ ಭೂ ಪ್ರದೇಶವಾಗಿದ್ದು, ಇಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಕೆರೆಯ ಈ ಭಾಗದಲ್ಲಿ ಚಿಕ್ಕ ಹಳ್ಳಗಳಿಂದ ನೀರು ಹರಿದುಬಂದು ಶೇಖರಗೊಳ್ಳುತ್ತದೆ. ಹೆಚ್ಚು ಮಳೆಯಾಗಿ ಅಧಿಕ ನೀರು ಬಂದಂತೆ, ನೀರಿನ ಹರವು ವಿಸ್ತಾರಗೊಳ್ಳುವುದರೊಂದಿಗೆ, ಕೆರೆಯು ತುಂಬುತ್ತಾ ಹೋಗುತ್ತದೆ. ಭೂಮಟ್ಟದಿಂದ ಕೆರೆ ಕಟ್ಟೆಯ ಗರಿಷ್ಠ ಮಟ್ಟ ಮುಟ್ಟಿದೆಯೆನ್ನುತ್ತಾರೆ. ಕನಿಷ್ಠ ಮಟ್ಟದ ನೀರು ನಿಲ್ಲುವ ಕೆರೆಯ ಭೂ ಭಾಗಕ್ಕೆ ಕೆರೆಯ ತಳ ಎಂದು ಹೆಸರು. ಕೆರೆಯಲ್ಲಿ ಒಬ್ಬ ವ್ಯಕ್ತಿಯ (ಆಳೆತ್ತರ) ಎತ್ತರದಷ್ಟೇ ನೀರು ಇರಬೇಕು ಮತ್ತು ತುಂಬಬೇಕು. ಅದಕ್ಕಿಂತ ಹೆಚ್ಚಿನ ನೀರು ಬಂದ ಪಕ್ಷದಲ್ಲಿ ಆ ನೀರು ಕೋಡಿಯ ಮೂಲಕ ಹರಿದು ಹೋಗಬೇಕು ಎಂದು ತಿಮ್ಮಲಾಪುರದ ಕೆರೆಯ ಸಮೀಪದಲ್ಲಿ ದೊರೆತಿರುವ ಶಾಸನವು ದಾಖಲಿಸಿರುವುದು ಪ್ರಶಂಸನಾರ್ಹ[4]ಇದರಿಂದ ಒಂದು ಕೆರೆಯಲ್ಲಿ ಗರಿಷ್ಟ ಮಟ್ಟದ ನೀರಿನ ಪ್ರಮಾಣ ಎಷ್ಟಿರಬೇಕು ಎಂಬುದರ ಬಗೆಗೆ ತಿಳಿದುಬರುತ್ತದೆ. ಮತ್ತೊಂದು ಅಂಶವು, ಆ ಗರಿಷ್ಠ ಮಟ್ಟಕ್ಕಿಂತ (ಆಳೆತ್ತರ) ಅಧಿಕ ನೀರು ಬಂದಲ್ಲಿ ಕೆರೆ ಏರಿಗೆ ಅಪಾಯವಾಗಬಹುದು. ಈ ಪ್ರದೇಶದಲ್ಲಿ ಮೂರು ಕೆರೆಗಳು ಇದ್ದು, ಅವುಗಳು ಒಂದಕ್ಕೊಂದು ಹೊಂದಿಕೊಂಡಿವೆ. ಹೆಚ್ಚುವರಿ ನೀರು ಒಂದು ಕೆರೆಗೆ ಹರಿದುಬಂದರೆ ಆ ನೀರು ಎರಡನೆಯ ಕೆರೆಯಲ್ಲಿ ಸಂಗ್ರಹವಾಗುತ್ತದೆ.

ಆಯಕಟ್ಟು ಅಥವಾ ಅಚ್ಚುಕಟ್ಟು ಪ್ರದೇಶ

ಕೆರೆಯ ಅಥವಾ ನೀರು ಸಂಗ್ರಹವಾಗುವ ವಿರುದ್ಧ ದಿಕ್ಕಿನ ಪ್ರದೇಶಕ್ಕೆ ಆಯಕಟ್ಟು ಅಥವಾ ಅಚ್ಚುಕಟ್ಟು ಪ್ರದೇಶವೆಂದು ಹೆಸರು. ಸಾಮಾನ್ಯವಾಗಿ ಈ ಪ್ರದೇಶದಲ್ಲಿಯೇ ವ್ಯವಸಾಯವನ್ನು ಮಾಡುತ್ತಾರೆ. ಕೆರೆಯ ನೀರಾವರಿಗೊಳಪಟ್ಟ, ಅಂದರೆ ಕೃಷಿ ಮಾಡಲ್ಪಡುವ, ಪ್ರದೇಶಕ್ಕೆ ಆಯಕಟ್ಟು ಅಥವಾ ಅಚ್ಚುಕಟ್ಟು ಪ್ರದೇಶವೆಂದು ಹೆಸರು. ಆಯಕಟ್ಟು ಮತ್ತು ಅಚ್ಚುಕಟ್ಟು ಎಂಬ ಪದಗಳ ಬಳಕೆಯನ್ನು ವಿಜಯನಗರ ಕಾಲದ ಅನೇಕ ಶಾಸನಗಳಲ್ಲಿ ಕಾಣಬಹುದು. ಕೆರೆಯ ಆಯಕಟ್ಟು ಪ್ರದೇಶವನ್ನು ಮತ್ತು ಅದರ ಗುಣಮಟ್ಟವನ್ನು ಒಂದು ಶಾಸನವು ದಾಖಲಿಸುತ್ತದೆ. ಈ ಶಾಸನದ ತೇದಿಯು ಕ್ರಿ.ಶ. ೧೪೯೭ ಆಗಿದ್ದು, ಇದು ಗುಂಡನಹಳ್ಳಿಯಲ್ಲಿರುವ ಹಿರಿಯ ಕೆರೆಯನ್ನು ಕುರಿತು ಪ್ರಸ್ತಾಪಿಸುತ್ತಾ, ಆ ಕೆರೆಯ ಹೆಸರು ಕನ್ಯಾಕೆರೆಯೆಂದು ತಿಳಿಸುತ್ತದೆ. ಈ ಕೆರೆಯನ್ನು ನರಸಿಂಹದೇವನೆಂಬುವನು ತನ್ನ ಸ್ವಂತ ಖರ್ಚಿನಲ್ಲಿ ಕಟ್ಟಿಸಿದನು. ಕೆರೆಗೆ ಬೇಕಾಗುವ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಿ, ಅವುಗಳನ್ನು ಅಲ್ಲಿ ಬಳಸಿದ್ದಾನೆಂದು ತಿಳಿಸಿರುವುದು ವಿಶೇಷವಾದ ಸಂಗತಿ. ಅವನು ಕೆರೆಯ ಏರಿಯನ್ನು ಮಣ್ಣಿನಿಂದ ಬಲಪಡಿಸುವುದರೊಂದಿಗೆ ಕಲ್ಲಿನ ಕಟ್ಟುವಾಡವನ್ನು ಸಹ ನಿರ್ಮಿಸಿ ತೂಬಿಗೆ ಒಳ್ಳೆಯ ಕಲ್ಲುಗಳನ್ನು ಬಳಸಿ ಅದನ್ನು ಇಟ್ಟಿಗೆ ಮತ್ತು ಗಚ್ಚು ಗಾರೆಯಿಂದ ಮತ್ತಷ್ಟು ಭದ್ರಪಡಿಸಿದನೆಂದು ಶಾಸನವು ಉಲ್ಲೇಖಿಸುತ್ತದೆ.[5]

ಚಿಕ್ಕಕೆರೆಯಾಗಿನ ಕೆರೆ, ಚಿಕ್ಕಕೆರೆಯಾಗಿನ ಹಳ್ಳಿ

ಚಿಕ್ಕಕೆರೆಯಾಗಿನ ಕೆರೆ, ಚಿಕ್ಕಕೆರೆಯಾಗಿನ ಹಳ್ಳಿ

ಜಂಭಯ್ಯನ ಕೆರೆ, ತಿಮ್ಮಲಾಪುರ

ಜಂಭಯ್ಯನ ಕೆರೆ, ತಿಮ್ಮಲಾಪುರ

ಈ ಶಾಸನವು ಮತ್ತಷ್ಟು ಕುತೂಹಲಕಾರಿಯಾದ ಸಂಗತಿಗಳನ್ನು ಹೊರಗೆಡುವುತ್ತದೆ. ಆಯಕಟ್ಟಿನ ಪ್ರದೇಶವನ್ನು ಸಮಾನಾಗಿಸುವ ಕಾರ್ಯದಿಂದ ಕೆರೆಯ ನೀರು ಆಯಕಟ್ಟಿಗೆ ಸಮರ್ಪಕವಾಗಿ ಒದಗುತ್ತದೆ ಎಂದು ಸಹ ತಿಳಿಸುತ್ತದೆ. ಇದಲ್ಲದೆ ಆಯಕಟ್ಟಿನ ಪ್ರದೇಶವನ್ನು ಅದರ ಗುಣದಂತೆ ಉತ್ತಮ, ಮಧ್ಯಮ ಮತ್ತು ಅಧಮ ಎಂದು ವಿಂಗಡಿಸಿ ಆ ಕೆರೆಯ ನೀರನ್ನು ಸಮರ್ಪಕವಾಗಿ ಹಂಚಿಕೊಳ್ಳಬೇಕು ಎಂದು ಈ ಶಾಸನವು ಹೇಳುತ್ತದೆ.[6] ಕಣಿವೆ ತಿಮ್ಮಲಾಪುರದ ಹಿರೇಕೆರೆ ಆಯಕಟ್ಟಿನ ಪ್ರದೇಶವನ್ನು ಕುರಿತು ಹೇಳುವುದಾದರೆ ಅದು ಮಧ್ಯದ ವರ್ಗದ ಆಯಕಟ್ಟು ಎಂದು ಹೇಳಬಹುದು. ಏಕೆಂದರೆ ಆಯಕಟ್ಟು ಪ್ರದೇಶದ ಸಮೀಪವೇ ಒಂದು ಚಿಕ್ಕಗುಡ್ಡವಿದೆ. ಪೊರಮಾಮಿಲ್ಲ ಮತ್ತು ಗುಂಡನಹಳ್ಳಿಯ ಶಾಸನಗಳಂತೆ ಆಯಕಟ್ಟು ಪ್ರದೇಶವು ಸಮತಟ್ಟಾಗಿರಬೇಕು. ಹಿರೇಕೆರೆ ಆಯಕಟ್ಟಿನಲ್ಲಿ ಸಮನಾದ ಭೂ ಭಾಗವು ಇಲ್ಲದ ಕಾರಣ, ನಾವು ಈ ಆಯಕಟ್ಟು ಪ್ರದೇಶವನ್ನು ಮಧ್ಯಮ ವರ್ಗವೆಂದು ನಿಸ್ಸಂಶಯವಾಗಿ ಗುರುತಿಸಬಹುದು. ಈ ಕೆರೆಯು ಅತ್ಯಂತ ದೊಡ್ಡದಾಗಿದ್ದು, ಇಂದು ಅತ್ಯಂತ ದುಸ್ಥಿತಿಯಲ್ಲಿದೆ.[1] ಎಆರ್‌ಎಫ್ ೧೯೮೦ -೮೧ ; ಸಂ.ಬಿ. ೧೨೨, ಡಾಮನಿಕ್‌ ಜೆ. ಡೇವಿಸನ್, ಜೆನ್. ಕಿನ್ಸ್, ದಿ ಇರಿಗೇಶನ್ ಅಂಡ್ ವಾಟರ್ ಸಪ್ಲೆ ಸಿಸ್ಟಮ್ಸ್ ಆಫ್ ವಿಜಯನಗರ, ಪು. ೯-೧೧

[2] ಮಹದೇವ, ಸಿ., “ತಿರುಮಲಾ ದೇವಿಯರ ಪಟ್ಟಣ – ನಾಗಲಾಪುರ- ಹೊಸಪೇಟೆ ; ಇಂದು ಪರಿಶೀಲನೆ”, ಇತಿಹಾಸ ದರ್ಶನ, ಸಂ. ೧೦, ಪು. ೧೩೨-೫೭.

[3] ದೀಕ್ಷಿತ್, ಜಿ.ಎಸ್. ಮತ್ತು ಇತರರು, ಟ್ಯಾಂಕ್ ಇರಿಗೇಶನ್ ಇನ್ ಕರ್ನಾಟಕ ಪು. ೨೨-೨೯

[4] ಎಪ್ ಕಾರ್ನ (ಹಳೆಯ), ಸಂ. VII ಸಂ. ಎಸ್. ಎಚ್. ೩೫

[5] ಅದೇ, ಸಂ. X ಸಂ. ಎಂಬಿ ೧೭೨

[6] ಅದೇ