ದಣ್ಣಾಯಕನ ಕೆರೆ

ಇದು ಹೊಸಪೇಟೆಯ ತಾಲೂಕಿನಲ್ಲಿರುವ ಒಂದು ದೊಡ್ಡ ಕೆರೆಯಾಗಿದೆ. ಇಂದಿಗೂ ಅದು ಸುಸ್ಥಿತಿಯಲ್ಲಿದ್ದು, ಅದರ ಪ್ರಯೋಜನವನ್ನು ಜನರು ಪಡೆಯುತ್ತಿದ್ದಾರೆ. ಇದು ಹೊಸಪೇಟೆಯ ದಕ್ಷಿಣಕ್ಕೆ ಸುಮಾರು ೨೦ ಕಿ. ಮೀ. ದೂರದಲ್ಲಿದೆ. ಈ ಕೆರೆಯನ್ನು ಮುದ್ದಾ ಎಂಬುವವನು ಕಟ್ಟಿಸಿದನೆಂದು ನಂತರ ಆತನು ದಣ್ಣನಾಯಕ ಅಥವಾ ದಂಡನಾಯಕನಾದನೆಂದು ತಿಳಿದುಬರುತ್ತದೆ. ಈ ಕೆರೆಯ ಜಲಾನಯನ ಪ್ರದೇಶವು ೪೭.೭೭ ಮೈಲುಗಳು ಮತ್ತು ಅಚ್ಚುಕಟ್ಟು ಪ್ರದೇಶವು ೧೫೦೭.೫ ಎಕರೆಗಳು. ಈ ಕೆರೆ ಪ್ರದೇಶದ ಮೇಲ್ಭಾಗದಲ್ಲಿ ಸುಮಾರು ೧೫ ಕ್ಕೂ ಹೆಚ್ಚು ಕೆರೆಗಳು ಇದ್ದು ಅವುಗಳ ಹೆಚ್ಚುವರಿ ನೀರು ಕೆರೆಯಲ್ಲಿ ಸಂಗ್ರಹಗೊಳ್ಳುತ್ತದೆ. ಈ ಕೆರೆ ಏರಿಯ ಉದ್ದ ೨೬.೨೫ ಮೀಟರ್, ಎತ್ತರ ೭.೯೬ ಮೀ. ಮತ್ತು ಏರಿಯ ಮೇಲ್ಭಾಗದ ಅಗಲ ೭.೯೬ ಮೀ. ಮತ್ತು ೪.೫೭ ಮೀ. ಇದರ ಮೇಲೆ ಒಂದು ಎತ್ತಿನಗಾಡಿ ಹೋಗಬಹುದು. ಕೆರೆಗೆ ಎರಡು ಕಾಲುವೆಗಳಿದ್ದು, ಅವುಗಳು ೨೧೦೦ ಮೀ. ಉದ್ದವಾಗಿದೆ. ಇದಕ್ಕೆ ಪಿಸ್ಟನ್ ಮಾದರಿಯ ಎರಡು ತೂಬುಗಳು ಇವೆ. ಅವುಗಳು ವಿವಿಧ ಎತ್ತರಗಳಲ್ಲಿ ಸುಮಾರು ಇಪ್ಪತ್ತು ಮೀಟರ್ ಅಂತರಗಳಲ್ಲಿವೆ. ತೂಬುಗಳನ್ನು ಹೊರಭಾಗದ ಇಳಿಜಾರಿನಲ್ಲಿ ಕಾಲುವೆಗೆ ಸೇರಿಸುವುದು ಈ ಕೆರೆಯ ವಿಶೇಷ. ಇದರಿಂದಾಗಿ ಆಯಕಟ್ಟು ಪ್ರದೇಶಕ್ಕೆ ನೀರು ಸಮರ್ಪಕವಾಗಿ ಹರಿದುಹೋಗುತ್ತದೆ.

ಈ ಕೆರೆಯನ್ನು ಕುರಿತಂತೆ ಇರುವ ಪ್ರಚಲಿತ ದಂತ ಕಥೆಯಂತೆ ಕುರುಬ ಹುಡುಗನಾಗಿದ್ದ ಮುದ್ದನು ಬ್ರಾಹ್ಮಣರ ಪೋಷಣೆಯಲ್ಲಿ ದೊಡ್ಡವನಾದ. ಆ ಬ್ರಾಹ್ಮಣನು ದೊಡ್ಡ ಜೋತಿಷ್ಯನಾಗಿದ್ದ. ಒಂದು ದಿನ ಮುದ್ದನು ಮಲಗಿರುವಾಗ ಒಂದು ಸರ್ಪವು ಹೆಡೆಯೆತ್ತಿ ಮುದ್ದನಿಗೆ ನೆರಳು ಕೊಡುತ್ತಿತ್ತು. ಅದನ್ನು ನೋಡಿದ ಬ್ರಾಹ್ಮಣನು, ಈ ಬಾಲಕನು ಮುಂದೆ ದೊಡ್ಡ ವ್ಯಕ್ತಿಯಾಗಿ ಪ್ರಜೆಗಳಿಗೆ ಹಿತಾತ್ಮಕ ಕಾರ್ಯಗಳನ್ನು ಮಾಡುತ್ತಾನೆ ಎಂದು ಭವಿಷ್ಯವನ್ನು ನುಡಿಯುತ್ತಾನೆ. ಮುದ್ದನೇ ಮುಂದೆ ಕೆರೆಯನ್ನು ಕಟ್ಟಿಸಿದನೆಂದು ಜನರು ನಂಬಿದ್ದಾರೆ. ಅವನು ಮಡಿದ ನಂತರ ಅವನ ದೇಹವನ್ನು ಇಂದಿನ ರಾಯರ ಕೆರೆಯ ಏರಿಯಲ್ಲಿ ಸಮಾಧಿ ಮಾಡಲಾಯಿತು ಎಂದು ನಂಬಿಕೆ ಇದೆ.

ದರೋಜಿ ಕೆರೆ

ಹೊಸಪೇಟೆಯ ಪೂರ್ವಕ್ಕೆ ಸುಮಾರು ೨೫ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಬಳ್ಳಾರಿ ರಸ್ತೆಯಲ್ಲಿ ದರೋಜಿ ಗ್ರಾಮವಿದೆ. ಇದು ಸಂಡೂರು ತಾಲೂಕಿನಲ್ಲಿದೆ. ಈ ಗ್ರಾಮದಲ್ಲಿ ಒಂದು ಕೆರೆ ಇದ್ದು, ಇದನ್ನು ಆ ಗ್ರಾಮನಾಮವಾದ ದರೋಜಿಯಿಂದ, ದರೋಜಿ ಕೆರೆಯೆಂದು ಕರೆಯಲಾಗುತ್ತಿದೆ. ಈ ಕೆರೆಯನ್ನು ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಖಚಿತವಾದ ಮಾಹಿತಿಯು ದೊರೆಯುವುದಿಲ್ಲ. ಗ್ರಾಮದ ಜನರು ಪ್ರಚಲಿತ ನಂಬಿಕೆಗಳಂತೆ ಈ ಕೆರೆಯನ್ನು ಟೀಪುಸುಲ್ತಾನನು ಕಟ್ಟಿಸಿದ.

ದರೋಜಿಕೆರೆ, ದರೋಜಿ, ಸಂಡೂರು ತಾಲೂಕು.

ದರೋಜಿಕೆರೆ, ದರೋಜಿ, ಸಂಡೂರು ತಾಲೂಕು.

ದರೋಜಿ ಗ್ರಾಮದ ಕೈಫಿಯತ್ತು ಈ ಕೆರೆಯನ್ನು ಯಾರು ಕಟ್ಟಿಸಿದರು ಎಂಬುದರ ಬಗೆಗೆ ಕೆಲವು ವಿವರಗಳನ್ನು ನೀಡುತ್ತದೆ. ಇದಲ್ಲದೆ ಸದರಿ ಕೈಫಿಯತ್ತ ಕೆರೆಯನ್ನು ಕುರಿತ ಅನೇಕ ವಿವರಗಳನ್ನು ನೀಡಿರುವುದು ಗಮನಾರ್ಹ. ಕಂಪಿಲರಾಯನ ಮಗನಾದ ಕುಮಾರ ರಾಮನು ಈ ಪ್ರದೇಶದಲ್ಲಿ ರಾಜ್ಯವಳಾತ್ತಿರುವಾಗ ಸುಲ್ತಾನರು (ಪಾಛೆಯವರು) ಸುಮಾರು ಹನ್ನೆರಡು ಲಕ್ಷ ಫೌಜು ತೆಗೆದುಕೊಂಡು ದಾಳಿ ನಡೆಸಿ ಕುಮಾರರಾಮನನ್ನು ಹತ್ಯೆ ಮಾಡಿ ರಾಜ್ಯವನ್ನು ತಮ್ಮದಾಗಿಸಿಕೊಂಡು ತಮ್ಮ ದೇಶಕ್ಕೆ ಹಿಂತಿರುಗುವಾಗ ಗೆದ್ದ ರಾಜ್ಯದಲ್ಲಿ ಅವರ ಗುರುತು ಇರಬೇಕೆಂದು ಸರದಾರರನ್ನು ಕರೆಸಿ ಅವರ ಪಾಲಿನ ಭೂ ಪ್ರದೇಶಗಳಲ್ಲಿ ಒಂದು ಕೆರೆಯನ್ನು ನಿರ್ಮಿಸಲು ಅಪ್ಪಣೆ ಮಾಡುತ್ತಾನೆ. ಆ ಕೆರೆಗಳು ಸಮುದ್ರಕ್ಕೆ ಹೋಲುವಂತಹವುಗಳಾಗಿ ಇರಬೇಕು ಎಂದು ಸಹ ತಿಳಿಸುತ್ತಾನೆ.

[1]

ಅವರ ಆದೇಶದಂತೆಯೇ ಮೂವರು ಸರದಾರರು ಮೂರು ಕೆರೆಗಳನ್ನು ದರೋಜಿಯ ಸಮೀಪದಲ್ಲಿಯೇ ಕಟ್ಟುತ್ತಾರೆ. ಸಿಂಗಸರದಾರನು ಸಿಂಗನಕೆರೆ, ಹಗಲಾಭತ್ತಾಖಾನನು ಕಟ್ಟಿಸಿದ ಕೆರೆಗೆ ಹಗಲಾಭತ್ತಾನಕೆರೆ ಮತ್ತು ಇನ್ನೊಂದು ಕೆರೆಗೆ ಖಾನ್ ಕೆರೆಯೆಂದು ಹೆಸರಿಸಿದ್ದಾರೆ. ಮೂರನೆಯ ಕೆರೆಯನ್ನು ಬಾಹಾಳ ಸರದಾರ ಕಟ್ಟಿಸಿದನೆಂದು ತಿಳಿದುಬರುತ್ತದೆ. ಈ ಕೆರೆಯು ಸಮುದ್ರದಂತೆಯಿದ್ದು `ದರಿಯ ತಲಾಉ ಎಂದು ಹೆಸರಿಸಿದ್ದಾರೆ. ದರಿಯ ತಲಾವು ಎಂದರೆ ನೀರಿರುವ ಕೆರೆಯೆಂದು ಪರ್ಷಿಯನ್ ಮತ್ತು ಹಿಂದಿ ಭಾಷೆಗಳಲ್ಲಿ ಅರ್ಥ. ಕನ್ನಡದಲ್ಲಿ ದರಿಯ ಕೆರೆಯೆಂದು ಕರೆಯಲ್ಪಟ್ಟು, ನಂತರದಲ್ಲಿ ದರೋದಿಯಾಗಿ ನಂತರ ದರೋಜಿಯಾಯಿತು ಎಂದು ಕೈಫಿಯತ್ತು ತಿಳಿಸುತ್ತದೆ.[2]

ಈ ಕೆರೆಯ ಕೋಡಿಯು ಪಶ್ಚಿಮಕ್ಕೆ ಇದ್ದುದಾಗಿ ತಿಳಿಸುತ್ತಾ ಅಲ್ಲಿ ವೀರಭದ್ರ ದೇವಾಲಯವಿರುವುದನ್ನು ಉಲ್ಲೇಖಿಸುತ್ತದೆ. ಇಂದಿಗೂ ಅಲ್ಲಿ ಒಂದು ವೀರಭದ್ರ ದೇವಾಲಯವಿದ್ದು, ಅದನ್ನು ಕೋಡಿವೀರಭದ್ರ ದೇವಾಲಯವೆಂದು ಜನರು ಕರೆಯುತ್ತಾರೆ. ಈ ಕೆರೆಯು ಒಮ್ಮೆ ಒಡೆದುಹೋದುದರ ಉಲ್ಲೇಖವು ಕೈಫಿಯತ್ತಿನಲ್ಲಿದೆ. ಬಹುಶಃ ಸಂಡೂರು ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ಅಲ್ಲಿರುವ ಕೆಲವು ಕೆರೆಗಳು ಒಡೆದು, ಆ ನೀರು ಈ ಕೆರೆಗೆ ಹರಿದುಬಂದು, ದರೋಜಿಕೆರೆಯು ಒಡೆದಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.[3] ಈ ಕೆರೆಯು ಒಡೆದ ನಂತರ ಅದನ್ನು ಸರಿಪಡಿಸಲು ಸಾಕಷ್ಟು ಕಾಲವಾಯಿತು ಎಂಬುದು ಕೈಫಿಯತ್ತಿನಿಂದ ತಿಳಿಯಬಹುದಾಗಿದೆ. ಕೆರೆಯನ್ನು ಕಟ್ಟುವುದರಲ್ಲಿ ಟೀಪುಸುಲ್ತಾನನು ಸಹಾಯ ಮಾಡಿರುವುದು ಸ್ಪಷ್ಟವಾಗುತ್ತದೆ. ಇವುಗಳಲ್ಲದೇ ಇನ್ನೆರಡು ಸಂಗತಿಗಳು ಸಹ ತಿಳಿದುಬರುತ್ತವೆ. ಅವುಗಳೆಂದರೆ, ಈ ಕೆರೆಯು ಒಡೆದ ಕಾರಣ ಹಳೇ ದರೋಜಿ ಗ್ರಾಮವು ಕೊಚ್ಚಿಕೊಂಡು ಹೋಯಿತು ಎಂಬುದೇ ಆಗಿದೆ. ಮತ್ತೊಂದು ವಿಷಯವು ಕೆರೆಯನ್ನು ಜೀರ್ಣೋದ್ಧಾರ ಮಾಡುವ ಕಾಲಕ್ಕೆ ಪಶ್ಚಿಮದ ಕೋಡಿಯ ಎತ್ತರವನ್ನು ತಗ್ಗಿಸಿದರು ಎಂಬುದಾಗಿದೆ. ಬಹುಶಃ ಇದಕ್ಕೆ ಮುಂಚೆ ಕೋಡಿಯು ಎತ್ತರವಾಗಿದ್ದು, ಕೆರೆಯಲ್ಲಿ ಈಗಿರುವ ನೀರು ಸಂಗ್ರಹ ಸಾಮರ್ಥ್ಯಕ್ಕಿಂತ ಅಧಿಕವಾಗಿತ್ತೆಂದು ಸುಲಭವಾಗಿ ಊಹಿಸಬಹುದು. ದರೋಜಿ ಕೆರೆಗೆ ನಾಲ್ಕು ತೂಬುಗಳಿದ್ದು, ಅವುಗಳಲ್ಲಿ ಮೂರು ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದವು ಎಂದು ಕೈಫಿಯತ್ತಿನಲ್ಲಿ ದಾಖಲಾಗಿದೆ.[4] ಇಂದಿಗೂ ಮೂರು ತೂಬುಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿವೆ. ಮಾಗಣಿಗಳಿಗೆ ದರೋಜಿ ಕೆರೆಯಿಂದ ಎಷ್ಟು ನೀರು ಉಣಿಸುತ್ತಿದ್ದವು ಎಂಬುದನ್ನು ಮಾಗಣಿಗಳು ಹೆಸರಿನೊಂದಿಗೆ ಕೈಫಿಯತ್ತು ನೀಡಿದೆ.

ಟೀಪುವಿನ ಸೇನಾಪಡೆಯು ಮರಾಠರೊಂದಿಗೆ ಯುದ್ಧ ಮಾಡುವಾಗ ಸುಮಾರು ಮೂವತ್ತುಸಾವಿರ ಸೈನಿಕರು ಈ ಕೆರೆಯು ಬತ್ತಿದಾಗ ಅದರಲ್ಲಿ ಅಡಗಿಕೊಂಡಿದ್ದರು ಎಂಬ ಜನಪದ ನಂಬಿಕೆ ಇದೆ. ಈ ಕೆರೆಯು ಟೀಪುವಿನ ಕಾಲದಲ್ಲಿ ಒಣಗಿತ್ತು ಮತ್ತು ಕೆರೆಯ ಭಾಗದಲ್ಲಿ ಮೂವತ್ತು ಸಾವಿರ ಸೈನಿಕರು ಅಡಗಿಕೊಳ್ಳುವಷ್ಟು ವಿಸ್ತಾರವಾಗಿತ್ತೆಂಬ ಎರಡು ಅಂಶಗಳು ತಿಳಿಯಬರುತ್ತವೆ. ಈ ಮೇಲಿನ ಅಂಶಗಳನ್ನು ಪರಿಗಣಿಸಿದಾಗ ಈ ಕೆರೆಯನ್ನು ಟೀಪುಸುಲ್ತಾನನ ಕಾಲದಲ್ಲಿ (೧೭-೧೮ ನೇ ಶತಮಾನ) ಅಥವಾ ಅದಕ್ಕೂ ಮುಂಚೆ ಕಟ್ಟಿರುವ ಸಾಧ್ಯತೆಗಳಿವೆ.

ಈ ಕೆರೆಯ ಏರಿಯ ಸುಮಾರು ೩.೫ ಕಿ.ಮೀ.ಉದ್ದ ಮತ್ತು ೪೫ ಅಡಿಗಳಷ್ಟು ಎತ್ತರವಿದೆ. ದರೋಜಿ ಕೆರೆಯ ಸುಮಾರು ೨೦೦೦ ಕ್ಕೂ ಹೆಚ್ಚು ಎಕರೆಗಳಿಗೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕೆರೆಗೆ ನಾರಿಹಳ್ಳದಿಂದ ನೀರು ಹರಿದುಬರುತ್ತದೆ.

ಕ್ರಿ.ಶ. ೧೮೫೧ರಲ್ಲಿ ಬಂದ ಪ್ರವಾಹದಿಂದ ಸಂಪೂರ್ಣವಾಗಿ ನಾಶವಾಗಿ ಅದನ್ನು ಎರಡು ವರ್ಷಗಳಲ್ಲಿ ಅಂದರೆ ಕ್ರಿ.ಶ. ೧೮೫೩ರಲ್ಲಿ ಪುನರ್ ನಿರ್ಮಾಣ ಮಾಡಲಾಯಿತು ಎಂಬುದಾಗಿ ದರೋಜಿ ಕೆರೆ ಕೋಡಿಯ ಸಮೀಪದಲ್ಲಿ ದೊರೆತ ಒಂದು ಶಾಸನವು ತಿಳಿಸುತ್ತದೆ. ಇದೇ ಶಾಸನವು ಪ್ರವಾಹಕ್ಕೆ ಕಾರಣವನ್ನು ತಿಳಿಸುವುದು ವಿಶೇಷ ಸಂಗತಿ. ಈ ಕೆರೆಯ ಮೇಲಣ ಭಾಗದಲ್ಲಿ ಇರುವ ಆವಿನಮಡುಗು ಎಂಬ ಕೆರೆಯು ತುಂಬಿ ಒಡೆಯಲಾಗಿ ಆ ಕೆರೆಯ ನೀರು ದರೋಜಿಕೆರೆಗೆ ನುಗ್ಗಿ ಬಂದು ಕೆರೆ ಒಡೆಯಲು ಕಾರಣವಾಯಿತೆಂದು ತಿಳಿಸುತ್ತದೆ.[5] ಇದಲ್ಲದೆ ದರೋಜಿ ಗ್ರಾಮವು (ಇಂದಿನ ಹಳೇ ದರೋಜಿ ಗ್ರಾಮ) ಸಹ ನಾಶವಾಯಿತು ಎಂದು ತಿಳಿದುಬರುತ್ತದೆ.[6]

ಕಮಲಾಪುರ ಕೆರೆ

ಕಮಲಾಪುರದ ಕೆರೆಯು ವಿಜಯನಗರ ಕಾಲದ ಕೆರೆಗಳಲ್ಲಿ ಒಂದಾಗಿದೆ. ಕಮಲಾಪುರ ಗ್ರಾಮವು ಹಂಪೆಯಷ್ಟೇ ಪ್ರಾಚೀನ ಗ್ರಾಮ. ವಿಜಯನಗರ ಶಾಸನಗಳಲ್ಲಿ ಈ ಗ್ರಾಮಕ್ಕೆ ಕಾಮಲಾಪುರ ಮತ್ತು ಕಮಲಾಪುರ ಎಂಬ ಎರಡೂ ಹೆಸರುಗಳನ್ನು ಬಳಸಲಾಗಿದೆ. ಕೆರೆಯು ಕಮಲಾಪುರ ಗ್ರಾಮದ ಪಶ್ಚಿಮಕ್ಕೆ ಇದೆ. ಹೊಸಪೇಟೆಗೆ ಈ ಕೆರೆ ಏರಿಯ ಮೇಲಿರುವ ರಸ್ತೆಯ ಮೂಲಕ ಹಾದುಹೋಗಬೇಕು.ಈ ಕೆರೆಯ ಏರಿಯು ಸುಮಾರು ಮೂರು ಕಿ.ಮೀ.ಗಳಷ್ಟು ಉದ್ದ ಇದ್ದು ನೀರಾವರಿ ಇಲಾಖೆಯವರು ಕೆರೆಯ ರಕ್ಷಣೆಯನ್ನು ಮಾಡುತ್ತಿದ್ದಾರೆ.

ಕಮಲಾಪುರದ ಕೆರೆ, ಕಮಲಾಪುರ

ಕಮಲಾಪುರದ ಕೆರೆ, ಕಮಲಾಪುರ

ಈ ಕೆರೆಯು, ವಿಜಯನಗರ ಪೂರ್ವಕಾಲದಲ್ಲಿ ಸಣ್ಣ ಕೆರೆಯಾಗಿದ್ದಿರಬೇಕು. ಕಾಲಕ್ರಮದಲ್ಲಿ ಈ ಪ್ರದೇಶವು ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟನಂತರ ಕೆರೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬೇಕು. ಈ ಕೆರೆಯನ್ನು ಯಾರ ನಿರ್ಮಾಣ ಮಾಡಿದರೆಂಬುದರ ವಿವರಗಳು ನಮಗೆ ದೊರೆಯದ ಕಾರಣವಾಗಿ ಮೇಲೆ ಉಲ್ಲೇಖಿಸಿದ ತೀರ್ಮಾನಕ್ಕೆ ಬರಬೇಕಾಗಿದೆ.

ಕಮಲಾಪುರದ ಕೈಫಿಯತ್ತು ಈ ಕೆರೆಯನ್ನು ಅಚ್ಯುತರಾಯ ಮಹಾರಾಜನ ಮಗನಾದ ಪ್ರೌಢದೇವರಾಯ ಮಹಾರಾಜನು ನಿರ್ಮಿಸಿದನೆಂದು ಉಲ್ಲೇಖಿಸಿದೆ.[7] ಈ ಕೆರೆಯ ಬಗೆಗೆ ನಮಗೆ ದೊರೆಯುವ ಏಕೈಕ ಆಧಾರವು ಇದಾಗಿದೆ. ಈ ಕೆರೆಗೆ ತುಂಗಭದ್ರಾ ನದಿಯಿಂದ ಬಸವಣ್ಣ ಕಾಲುವೆ ಮತ್ತು ವಿಜಯನಗರ ಕಾಲುವೆ (ರಾಯ ಕಾಲುವೆ) ಎಂಬ ಎರಡು ವಿಜಯನಗರ ಕಾಲದ ಕಾಲುವೆಗಳ ಮೂಲಕ ನೀರು ಬಂದು ಶೇಖರಣೆಗೊಳ್ಳುತ್ತದೆ. ಕಾಲುವೆಗಳ ರಚನಾತ್ಮಕ ಶೈಲಿಯು ವಿಜಯನಗರ ಕಾಲದ ಶೈಲಿಯನ್ನು ಹೋಲುತ್ತದೆ. ಈ ಕೆರೆಗೆ ನಾಲ್ಕು ತೂಬುಗಳು ಇದ್ದು, ಅವುಗಳಲ್ಲಿ ಎರಡಕ್ಕೆ ಮರದ ತುಂಡುಗಳನ್ನು ಅಳವಡಿಸಿದ್ದರೆ, ಮಿಕ್ಕೆರಡಕ್ಕೆ ಕಬ್ಬಿಣದ ಬಾಗಿಲುಗಳನ್ನು (ಷಟರ್ಸ- Shutters) ಅಳವಡಿಸಲಾಗಿದೆ. ಈ ನಾಲ್ಕೂ ತೂಬುಗಳು ವಿವಿಧ ಎತ್ತರಗಳಲ್ಲಿದ್ದು, ಅವುಗಳಿಗೆ ಅನುಗುಣವಾಗಿ ಕಾಲುವೆಗಳು ಸಹ ವಿವಿಧ ಎತ್ತರಗಳಲ್ಲಿದ್ದು ಅವುಗಳಿಗೆ ಅನುಗುಣವಾಗಿ ಕಾಲುವೆಗಳು ಸಹ ವಿವಿಧ ಎತ್ತರಗಳಲ್ಲಿ ಇರುವುದನ್ನು ಗಮನಿಸಬಹುದು. ಕೆರೆಯ ಆಯಕಟ್ಟು ಪ್ರದೇಶದಲ್ಲಿ ಕಬ್ಬು, ಭತ್ತ, ಬಾಳೆಹಣ್ಣು ಮುಂತಾದವುಗಳನ್ನು ಸರ್ವಕಾಲದಲ್ಲಿಯೂ ಬೆಳೆಯುತ್ತಾರೆ.[8]

ಅಳ್ಳಿಕೆರೆ ಕೆರೆ

ಅಳ್ಳಿಕೆರೆಯು ಕಮಲಾಪುರದ ಪೂರ್ವಕ್ಕೆ ಇರುವ ಪಾಪಿನಾಯಕನಹಳ್ಳಿಗೆ ಹೋಗುವ ಮಾರ್ಗದಲ್ಲಿದೆ. ಇದು ತುಂಗಭದ್ರಾ ನದಿಯಾಶ್ರಿತ ವಿಜಯನಗರ ಕಾಲದ ಕೆರೆಯಾಗಿದೆ. ಕಮಲಾಪುರ ಊರಿನಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಬೆಟ್ಟಗಳ ಸಾಲಿನ ಮಧ್ಯೆ ಇದ್ದು ಪಾಪಿನಾಯಕನಹಳ್ಳಿ ಹಾಗೂ ಕಮಲಾಪುರ ನಿವಾಸಿಗಳು ಇದರ ಪ್ರಯೋಜನವನ್ನು ಹೊಂದುತ್ತಿದ್ದಾರೆ. ಈ ಕೆರೆಗೆ ತುಂಗಭದ್ರಾ ನದಿಯ ಉನ್ನತ ಮಟ್ಟದ ಕಾಲುವೆಯಿಂದ ನೀರು ಬಂದು ಸಂಗ್ರಹಗೊಳ್ಳುತ್ತದೆ. ಅಳ್ಳಿಕೆರೆ ಕೆರೆಯು ಸಹ ನೀರಾವರಿ ಇಲಾಖೆಯವರ ಅಧೀನದಲ್ಲಿಯೇ ಇದೆ. ಸಾಕಷ್ಟು ಆಧಾರಗಳು ದೊರೆಯದ ಕಾರಣ ಈ ಕೆರೆಯ ನಿರ್ಮಾತೃ ಕಮಲಾಪುರದ ಕೆರೆಯಂತೆಯೇ ಯಾರೆಂಬುದನ್ನು ಖಚಿತತೆಯಿಂದ ಹೇಳಲು ಸಾಧ್ಯವಿಲ್ಲ. ಆದರೆ ಈ ಕೆರೆಯು ವಿಜಯನಗರ ಕಾಲದಲ್ಲಿಯೇ ಇತ್ತೆಂಬುದಕ್ಕೆ ಆಧಾರಗಳಿವೆ.

ಡಾಮಿಂಗೋ ಪಯಾಸ್, ಶ್ರೀಕೃಷ್ಣದೇವರಾಯನು ಆಳ್ವಿಕೆಯಲ್ಲಿ (ಕ್ರಿ.ಶ. ೧೫೦೯-೩೦) ವಿಜಯನಗರಕ್ಕೆ ಭೇಟಿಯನ್ನಿತ್ತ ವಿದೇಶಿ ಪ್ರವಾಸಿಗರಲ್ಲಿ ಒಬ್ಬನು. ಈತ ವಿಜಯನಗರ ಪಟ್ಟಣಕ್ಕೆ ಬಂದಾಗ ಅಂದಿನ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ವಿಷಯಗಳನ್ನು ದಾಖಲಿಸುವಾಗ ಈ ಕೆರೆಯನ್ನು ಕುರಿತಂತೆ ಪ್ರಸ್ತಾಪಿಸಿದ್ದಾನೆ.[9] ಅದರಂತೆ ನವರಾತ್ರಿ ಅಥವಾ ಮಹಾನವಮಿಯ ಹಬ್ಬಗಳು ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಒಂಬತ್ತು ದಿನಗಳಾದ ನಂತರ ಹತ್ತನೆಯ ದಿನದಂದು ರಾಜನು ಆನೆಯ ಅಂಬಾರಿ ಮೇಲೆ ವಿಜಯನಗರ ಪಟ್ಟಣದ ಕೋಟೆ ಗೋಡೆಗಳ ಹೊರಗೆ ಸುಮಾರು ಒಂದು ಲೀಗ್ ನಷ್ಟು ದೂರ ಪೂರ್ವಕ್ಕೆ ಬರುತ್ತಾನೆ. ಅಲ್ಲಿ ಒಂದು ವಿಶೇಷವಾದ ಗುಡಾರದಲ್ಲಿ ಒಂದು ದೇವತೆಯ ಪೂಜೆಯನ್ನು ಮಾಡುತ್ತಾನೆ. ದಾರಿಯ ಇಕ್ಕೆಲಗಳಲ್ಲಿಯೂ ಸೈನಿಕರು, ವಿವಿಧ ಅಧಿಕಾರಿಗಳು ಮತ್ತು ಜನಸಮೂಹವೇ ಇರುತ್ತದೆ. ರಾಜನು ದಾರಿಯಲ್ಲಿ ಈ ಸ್ಥಳವನ್ನು ತಲುಪುವಾಗ ಒಂದು ಕೆರೆಯನ್ನು ಹಾದುಹೋಗುತ್ತಾನೆ ಎಂದು ಬರೆದಿದ್ದಾನೆ.

ಜಾನ್ ಫ್ರಿಟ್ಜ್‌ರವರು,ಪಯಾಸ್ ವರ್ಣಿಸಿ ವಿವರಿಸಿರುವ ಸ್ಥಳದ ಪರಿವೀಕ್ಷಣೆಯನ್ನು ನಡೆಸಿ ಪಯಾಸ್ ವರ್ಣಿಸಿರುವ ಕೆರೆಯು ಅಳ್ಳಿಕೆರೆಯೆಂದು ಸರಿಯಾಗಿ ಗುರುತಿಸಿರುತ್ತಾರೆ.[10]

ಅಳ್ಳಿಕೆರೆ ಕೆರೆ, ಕಮಲಾಪುರ

ಅಳ್ಳಿಕೆರೆ ಕೆರೆ, ಕಮಲಾಪುರ

ಈ ಕೆರೆಯ ಸಮೀಪವೇ ದೇವತೆಯ ಪೂಜೆಗೆಂದು ಗುಡಾರವನ್ನು ಹಾಕಲಾಗುತ್ತಿತ್ತು ಎಂದು, ಆ ಗುಡಾರವು ಪಯಾಸ್ ವರ್ಣಿಸಿರುವಂತೆ ಬಟ್ಟೆಯದಲ್ಲವೆಂದು ಆದರೆ ಕಲ್ಲಿನಿಂದ ರಚಿಸಲ್ಪಟ್ಟ ಕಟ್ಟಡ ಎಂದು ಅಭಿಪ್ರಾಯಪಡುತ್ತಾರೆ. ಇಂದಿಗೂ ಒಂದು ಮಂಟಪವು ಕಮಲಾಪುರದ ಪೂರ್ವಕ್ಕೆ ಕೆರೆಯ ಪಶ್ಚಿಮಕ್ಕೆ ಇದೆ. ಈ ಮಂಟಪದ ಸಮೀಪವೇ ಒಂದು ಚಿಕ್ಕ ಗುಡಿಯೂ ಇದೆ. ಈ ಮಂಟಪಕ್ಕೆ ಯಾವುದೇ ಮೆಟ್ಟಿಲುಗಳು ಇಲ್ಲದ ಕಾರಣ ಬಹುಶಃ ಎತ್ತರ ವಾಹನ / ಸವಾರಿಗಳ ಮೇಲಿನಿಂದ ಮಂಟಪಕ್ಕೆ ಪ್ರವೇಶ ಮಾಡುತ್ತಿದ್ದರು ಎಂದು ತಿಳಿಸುತ್ತಾರೆ.

ಮಂಟಪವಿರುವ ಸ್ಥಳವು ವಿಜಯನಗರ ಪಟ್ಟಣದಿಂದ ಒಂದು ಲೀಗ್ ದೂರದಲ್ಲಿದೆ ಎಂದು ಪಯಾಸ್ ಬರೆದಿದ್ದಾನೆ. ಈ ದೂರವು ಪೋರ್ಚುಗೀಸ್ ಭಾಷೆಯ ಲೇಗಾವ್ ಇರಬಹುದು. ಇದು ಸುಮಾರು ೬.೨೦ ಕಿ.ಮೀ.ಯಷ್ಟು ದೂರವೆಂದು, ೧೮ ನೆಯ ಶತಮಾನದ ಸ್ಪಾನಿಶ್ ಭಾಷೆಯಲ್ಲಿ ಒಂದು ಲೀಗ್‌ವು ೪.೨೪ ಕಿ.ಮೀ. ದೂರಕ್ಕೆ ಸಮನಾಗಿರುತ್ತದೆ ಎಂದು ಜಾನ್ ಫ್ರಿಟ್ಜ್ ಅಭಿಪ್ರಾಯಪಡುತ್ತಾರೆ. ಪಾಯಸ್ ನು ಬಳಸಿರುವ ಲೀಗ್ (೪.೨೪ ಅಥವಾ ೬.೨೦) ಯಾವುದೆಂದು ಸ್ಪಷ್ಟವಿಲ್ಲ ಮತ್ತು ಈ ದೂರವು ರಾಜಧಾನಿಯಾದ ವಿಜಯನಗರ ಪಟ್ಟಣಕ್ಕೆ ಸುಮಾರು ನಾಲ್ಕರಿಂದ ಐದು ಕಿ.ಮೀ.ಗಳಷ್ಟು ದೂರದಲ್ಲಿರುವುದರಿಂದ ಈ ಮಂಟಪವು ಪಯಾಸ್ ವಿವರಿಸುವ ಸ್ಥಳವೆಂದೇ ಜಾನ್ ರವರು ಅಭಿಪ್ರಾಯಪಡುತ್ತಾರೆ.[11] ಪಯಾಸ್‌ನು ಉಲ್ಲೇಖಿಸಿದ ಕೆರೆಯು ಇದುವೇ ಆಗಿತ್ತೆಂದು ಮೇಲಿನ ಆಧಾರಗಳಿಂದ ಯಾವುದೇ ಅನುಮಾನವಿಲ್ಲದೇ ಹೇಳಬಹುದು. ಮೇಲೆ ವಿವರಿಸಿದ ಸ್ಥಳದಲ್ಲಿ ಕಬ್ಬಿಣದ ಅಂಶವಿರುವ ಪದಾರ್ಥ (Slag) ಇಂದಿಗೂ ದೊರಕುತ್ತದೆ.

ಈ ಕೆರೆಗೆ ಎರಡು ತೂಬುಗಳಿವೆ. ನೀರಾವರಿ ಇಲಾಖೆಯವರು ಯಾಂತ್ರಿಕ ಸಲಕರಣೆಯನ್ನು ಪ್ರಾಚೀನ ತೂಬಿಗೆ ಜೋಡಿಸಿ ಉಪಯೋಗಿಸುತ್ತಿದ್ದಾರೆ. ಅದರಲ್ಲಿ ಮರವನ್ನು ಅಳವಡಿಸಲಾಗಿದೆ. ಮತ್ತೊಂದು ತೂಬನ್ನು ಉಪಯೋಗಿಸದೆ, ಹೊಸ ಮಾದರಿಯ ತೂಬನ್ನು ಏರಿಗೆ ಅಳವಡಿಸಿದ್ದಾರೆ. ಈ ಕೆರೆಯ ಏರಿಯು ಸುಮಾರು ೧.೫ ಕಿ.ಮೀ.ಯಷ್ಟು ಉದ್ದವಿದೆ. ಇದರ ನೀರು ಸಂಗ್ರಹಣ ಸಾಮರ್ಥ್ಯವು ೧.೫ ಟಿ.ಎಂ.ಸಿ.ಯು (೪೫೭ ಅಡಿಗಳು) ಈ ಕೆರೆಯು ಸುಮಾರು ಮುನ್ನೂರ ಐವತ್ತು ಎಕರೆಗೆ ನೀರುಣಿಸುತ್ತದೆ. ಕಬ್ಬು, ಬಾಳೆ, ಭತ್ತವನ್ನು ಇಲ್ಲಿ ಬೆಳೆಯಲಾಗುತ್ತಿದೆ.

ಇತ್ತೀಚೆಗೆ ಬಯಲುವದ್ದಿಗೇರಿಯ ಕೆರೆ ಏರಿಯಲ್ಲಿ ಒಂದು ಶಾಸನವು ಪತ್ತೆಯಾಗಿದೆ. ಕೃಷ್ಣದೇವರಾಯನ ಕಾಲದಲ್ಲಿ ಆ ಕೆರೆಯನ್ನು ನಿರ್ಮಿಸಲಾಯಿತೆಂದು ಅದು ತಿಳಿಸುತ್ತದೆ.[12] ಅದರಂತೆಯೇ ಹೊಸಪೇಟೆಯ ಹೃದಯ ಭಾಗವಾದ ಬಸವಣ್ಣ ಬಡಾವಣೆಯಲ್ಲಿ ಶಾಸನ ಮತ್ತು ತೂಬು ಪತ್ತೆಯಾಗಿದೆ. ಈ ಭಾಗವು ವಿಜಯನಗರ ಕಾಲದಲ್ಲಿ ಕೆರೆಯಾಗಿತ್ತೆಂದು ಸಾಬೀತು ಪಡಿಸುತ್ತದೆ.[13]

ಅಣೆಕಟ್ಟುಗಳು

ಕೆರೆಗಳನ್ನು ಅಧ್ಯಯನ ನಡೆಸುವುದರೊಂದಿಗೆ ವಿಜಯನಗರ ಕಾಲದ ಕೆಲವು ಇನ್ನಿತರ ಮುಖ್ಯ ನೀರಾವರಿ ಪದ್ಧತಿಗಳನ್ನು ಪರಿಚಯಿಸಿಕೊಳ್ಳುವುದು ಅಷ್ಟೇ ಮುಖ್ಯ. ಕೆರೆಗಳಷ್ಟೇ ಉತ್ತಮವಾಗಿ ಕೆಲವು ಅಣೆಕಟ್ಟುಗಳು ವ್ಯವಸಾಯಕ್ಕೆ ನೀರನ್ನು ಒದಗಿಸುವ ಮೂಲಕ ಅಂದಿನ ಕಾಲದ ಕೃಷಿ ವ್ಯವಸ್ಥೆಗೆ ತನ್ನ ಕೊಡುಗೆಯನ್ನು ನೀಡಿವೆ. ವಿಜಯನಗರ ಕಾಲದ ಅಂತಹ ಕೆಲವು ಮುಖ್ಯ ಕಾಲುವೆಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.

ವಿಜಯನಗರ ಕಾಲದಲ್ಲಿ ಕೆರೆ, ಕುಂಟೆ ಮತ್ತು ಬಾವಿಗಳ ನಿರ್ಮಾಣಗೊಂದಿಗೆ ಚಿಕ್ಕ ಚಿಕ್ಕ ಅಣೆಕಟ್ಟುಗಳನ್ನು ನದಿಗಳಿಗೆ ಮತ್ತು ತೊರೆಗಳಿಗೆ ನಿರ್ಮಿಸಿ ನೀರನ್ನು ಅತ್ಯಂತ ಸಮರ್ಪಕವಾಗಿ ಉಪಯೋಗಿಸುತ್ತಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ಪ್ರಮುಖವಾಗಿ ಹೊಸಪೇಟೆ ತಾಲೂಕಿನಲ್ಲಿ ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸಿ ಆ ನೀರನ್ನು ಕೃಷಿಗೆ ಮತ್ತು ಕುಡಿಯುವ ಸಲುವಾಗಿ ಬಳಸುತ್ತಿದ್ದರು. ಈ ತಾಲೂಕಿನಲ್ಲಿಯೇ ತುಂಗಭದ್ರಾ ನದಿಗೆ ಅಡ್ಡಲಾಗಿ ಹನ್ನೆರಡು ಅಣೆಕಟ್ಟುಗಳನ್ನು ಕಟ್ಟಿರುವುದು ವಿಶೇಷ ಸಂಗತಿಯೇ ಸರಿ. ಇದಕ್ಕೆ ಮತ್ತೊಂದು ಬಲವಾದ ಕಾರಣವೂ ಇದೆ. ಇದು ವಿಜಯನಗರದ ಪಟ್ಟಣ ಅಥವಾ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯಾಗಿದ್ದು, ಇದು ಇಂದಿನ ಹೊಸಪೇಟೆ ತಾಲೂಕಿನಲ್ಲಿದೆ. ರಾಜಧಾನಿಗೆ ನೀರಿನ ವ್ಯವಸ್ಥೆಯನ್ನು ಪೂರೈಸುವ ಸಲುವಾಗಿ ತಾಲೂಕಿನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಅಲ್ಲಲ್ಲಿ ಕಟ್ಟೆಗಳನ್ನು ನಿರ್ಮಿಸಿರುವುದನ್ನು ಕಾಣಬಹುದಾಗಿದೆ. ವಿಜಯನಗರ ಕಾಲದ ತಂತ್ರಜ್ಞರು ಕಟ್ಟೆಗಳನ್ನು ನಿರ್ಮಿಸುವುದರಲ್ಲಿ ಅದ್ವಿತೀಯ ನಿಪುಣತೆಯನ್ನು ಹೊಂದಿದ್ದರೆಂಬುದಕ್ಕೆ ಸಾಕ್ಷಿಯಾಗಿ ಅವರುಗಳು ಕಟ್ಟೆ ಕಟ್ಟುವುದಕ್ಕೆ ಆಯ್ಕೆ ಮಾಡಿರುವಂತಹ ಪ್ರದೇಶವನ್ನು ಗಮನಿಸಿದಾಗ ತಿಳಿದುಬರುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಬಹು ಸಮರ್ಪಕವಾಗಿ ಕಟ್ಟಿರುವುದು ನಿಜಕ್ಕೂ ಶ್ಲಾಘನೀಯ. ನೈಸರ್ಗಿಕವಾಗಿ ದೊರೆಯುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಪರಿಸರ, ನದಿಯ ನೀರಿನ ವೇಗ, ನದಿಯ ಪಾತ್ರ ಮತ್ತು ನದಿ ಪಾತ್ರದಲ್ಲಿರುವ ನೈಸರ್ಗಿಕ ರಚನೆಗಳನ್ನು ಗಮನಿಸಿ ಆಯಾ ಪ್ರದೇಶಗಳಲ್ಲಿ ಕಟ್ಟೆಗಳನ್ನು ನಿರ್ಮಿಸಿ ಕಾಲುವೆಗಳನ್ನು ಕ್ಷಿತಿಜ ಭೂಮಟ್ಟ ರೇಖೆಗೆ (ಕಾಂಟೂರ್- Contour) ಅನುಗುಣವಾಗಿ ನೀರು ಹಾಯಿಸಿರುವುದು ಅಂದಿನ ಕಾಲದ ಅವರ ಉನ್ನತ ಮಟ್ಟದ ತಾಂತ್ರಿಕ ಜ್ಞಾನವನ್ನು ಪರಿಚಯಿಸಿಕೊಡುತ್ತದೆ.

ವಿಜಯನಗರ ಕಾಲದಲ್ಲಿ ಅಣೆಕಟ್ಟುಗಳನ್ನು ಬಹಳ ಕಡಿಮೆ ಖರ್ಚಿನಲ್ಲಿ ಕಟ್ಟುತ್ತಿದ್ದರು. ಈ ಕೆಲಸಕ್ಕೆ ಬಂಡೆಗಲ್ಲು ಆಕಾರ ಕೊಟ್ಟ ಕಲ್ಲುಗಳನ್ನು (Dressed Stone) ಆಯತಾಕಾರ ಮತ್ತು ಚೌಕಾಕಾರ ಮಾದರಿಯಾಗಿ ರೂಪಿಸಿ ಅವುಗಳನ್ನು ನದಿಯ ಪಾತ್ರದಲ್ಲಿ ಒಂದರ ಮೇಲೊಂದರಂತೆ ಜೋಡಿಸುತ್ತಿದ್ದರು. ಇವುಗಳಿಗೆ ಅಡಿಪಾಯವಾಗಿ ನದಿ ಪಾತ್ರದಲ್ಲಿರುವಂತಹ ನೈಸರ್ಗಿಕ ಕಲ್ಲುಬಂಡೆಗಳನ್ನೇ ಉಪಯೋಗಿಸಿಕೊಳ್ಳುತ್ತಿದ್ದರು. ನದಿಯ ತಿರುವುಗಳಲ್ಲಿಯೂ ಇಂತಹ ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ಈ ರೀತಿಯಾಗಿ ಪೇರಿಸಿಟ್ಟ ಕಲ್ಲಿನ ಗೋಡೆಗೆ ಯಾವುದೇ ವಿಧವಾದ ಗಚ್ಚು ಗಾರೆಗಳನ್ನು (ಮಾರ್ಟರ್-Morter) ಬಳಸುತ್ತಿರಲಿಲ್ಲ. ಕಲ್ಲುಗಳನ್ನು ಜಾಗರೂಕತೆಯಿಂದ ಜೋಡಿಸುತ್ತಿದ್ದರು. ಇದರಿಂದಾಗಿ ಕಲ್ಲುಗಳ ನಡುವೆ ಯಾವುದೇ ವಿಧವಾದ ಜೋಡಣೆಯ ಸಾಧನಗಳ ಅವಶ್ಯಕತೆ ಇರುತ್ತಿರಲಿಲ್ಲ. ತೀರಾ ಅವಶ್ಯಕತೆ ಇದ್ದಲ್ಲಿ ಮಾತ್ರವೇ ಗಾರೆಯನ್ನು ಉಪಯೋಗಿಸುತ್ತಿದ್ದರು. ನದಿಯಲ್ಲಿ ಹರಿದು ಬರುವಂತಹ ಮಣ್ಣು, ಕಲ್ಮಶಗಳು ಮತ್ತು ಇನ್ನಿತರ ವಸ್ತುಗಳು ಬಂಡೆಗಲ್ಲಿನ ಸಂದುಗಳಲ್ಲಿ ಸೇರಿಕೊಂಡು ಕಲ್ಲು ಗೋಡೆಯನ್ನು ಭದ್ರಗೊಳಿಸುತ್ತಿದ್ದವು. ಇಂತಹ ಸಂಧಿಗಳಿಂದ ನೀರು ಸದಾ ಕಾಲವೂ ಸ್ರವಿಸುತ್ತಿತ್ತು. ಇಂದಿಗೂ ನೀರು ಸ್ರವಿಸುವುದನ್ನು ಕಾಣಬಹುದು. ಇವುಗಳಿಂದ ಎರಡು ರೀತಿಯ ಪ್ರಯೋಜನಗಳಿವೆ. ಮೊದಲನೆಯದಾಗಿ ನೀರು ಹೆಚ್ಚಾಗಿ ಹರಿದುಬಂದಾಗ ಈ ಸಂಧಿಗಳ ಮೂಲಕ ಹಾದುಹೋಗುತ್ತದೆ. ಪರಿಣಾಮವಾಗಿ ಕಟ್ಟೆಯಲ್ಲಿ ನೀರು ಯಾವಾಗಲೂ ಒಂದೇ ಮಟ್ಟದಲ್ಲಿ ನಿಲ್ಲುತ್ತದೆ. ಮತ್ತು ಕಟ್ಟೆಗೆ ಯಾವುದೇ ವಿಧವಾದ ಧಕ್ಕೆ ಉಂಟಾಗುವುದಿಲ್ಲ. ಎರಡನೆಯ ಪ್ರಯೋಜನವು ಸ್ರವಿಸಿದ ನೀರು ಹರಿದುಹೋಗಿ ಜನಸಾಮಾನ್ಯರಿಗೆ ಹಾಗೂ ಪಶುಪಕ್ಷಿಗಳಿಗೆ ನೀರು ದೊರಕುತ್ತದೆ. ಇದು ಅಂದಿನ ಕಾಲದ ಜನರ ದೂರದೃಷ್ಟಿ ಮತ್ತು ತಂತ್ರಜ್ಞಾನದ ಔನ್ನತ್ಯವನ್ನು ಸೂಚಿಸುತ್ತದೆ.

ಕೆಲವೊಂದು ಸಂದರ್ಭಗಳಲ್ಲಿ ಕಬ್ಬಿಣದ ಬಿಗಿ ಕೊಂಡಿ ಅಥವಾ ಬಿಗಿಹಿಡಿಕೆ (ಕ್ಲಾಂಪ್)ಗಳನ್ನು ಬಳಸಿ ಕಲ್ಲುಗಳನ್ನು ಜೋಡಿಸಿಡುತ್ತಿದ್ದರು. ಕಟ್ಟೆ ಗೋಡೆಯ ಇನ್ನೊಂದು ಬದಿಗೆ ಕೆಲವು ಕುಳಿಗಳನ್ನು ಬಂಡೆಗಲ್ಲಿನಲ್ಲಿ ಕೊರೆಯಲಾಗುತ್ತಿತ್ತು. ಪ್ರವಾಹ ಬಂದಾಗ ಅಣೆಕಟ್ಟೆಯ ಗೋಡೆಗಳು ಕೊಚ್ಚಕೊಂಡು ಹೋದರೂ ಈ ಕುಳಿಗಳಲ್ಲಿ ಬಂಡೆಕಲ್ಲುಗಳು ಕುಳಿತುಕೊಳ್ಳುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಮಾನ್ಯವಾಗಿ ಅಣೆಕಟ್ಟಿನ ಗೋಡೆಗಳು ನದಿಗೆ ನೇರವಾದ ಗೋಡೆಯಂತೆ ಅಡ್ಡಲಾಗಿ ನಿರ್ಮಿಸುತ್ತಿರಲಿಲ್ಲ. ಗೋಡೆಗಳನ್ನು ಡೊಂಕಾಗಿ ಅಂದರೆ ಅರ್ಧಚಂದ್ರಾಕಾರವಾಗಿ ಕಟ್ಟುತ್ತಿದ್ದರು. ಇದರಿಂದ ನೀರಿನ ಒತ್ತಡವು ಗೋಡೆಯ ಮೇಲೆ ಬೀಳುತ್ತಿರಲಿಲ್ಲ. ಗೋಡೆ ಡೊಂಕಾಗಿರುವ ಕಾರಣದಿಂದಾಗಿ ನದಿಯ ನೀರಿನ ಒತ್ತಡವು ಸಮನಾಗಿ ಹಂಚಿಹೋಗುವ ಸಲುವಾಗಿ ಈ ರೀತಿಯ ರಚನೆಯು ಅವಶ್ಯವಾಗಿದ್ದಿತು. ಅಂಕು-ಡೊಂಕು ಅಣೆಕಟ್ಟು ಗೋಡೆಗಳು ಸುಭದ್ರವಾಗಿರುವುದನ್ನು ಇಂದಿಗೂ ನಾವು ಕಾಣಬಹುದು. ಕೆಲವೊಮ್ಮೆ ಕಟ್ಟೆಯ ಗೋಡೆಯು ನದಿಗೆ ಸ್ವಲ್ಪ ದೂರ ಮಾತ್ರವೇ ಇರುತ್ತಿದ್ದವು. ಇನ್ನು ಕೆಲವು ನಿದರ್ಶನಗಳಲ್ಲಿ ನದಿಯ ಅರ್ಧಭಾಗಕ್ಕೆ ಮಾತ್ರ ಈ ಕಟ್ಟೆಯನ್ನು ನಿರ್ಮಿಸಲಾಗುತ್ತಿತ್ತು. ಇವುಗಳು ನೀರಿನ ಅವಶ್ಯಕತೆಗನುಸಾರವಾಗಿ ಇರುತ್ತಿದ್ದಂತಹ ರಚನೆಗಳು ಎಂಬುದನ್ನು ಇಲ್ಲಿ ಮರೆಯಬಾರದು. ನದಿಗೆ ಅಡ್ಡಲಾಗಿ ಕಟ್ಟಿರುವ ಕಟ್ಟೆಗಳು ಒಂದು ದೊಡ್ಡ ಕೋಡಿ; ಅವುಗಳು ಕೆರೆಯ ಕೋಡಿಗಳಂತೆಯೇ ಕೆಲಸ ನಿರ್ವಹಿಸುತ್ತಿದ್ದವು ಎಂದು ಕೊಟ್ರಯ್ಯನವರು ಸರಿಯಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಪೇಟೆ ತಾಲೂಕಿನಲ್ಲಿರುವ ಕೆಲವು ಮುಖ್ಯ ಅಣೆಕಟ್ಟು ಮತ್ತು ಕಾಲುವೆಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.

ತುರ್ತು ಅಣೆಕಟ್ಟು ಮತ್ತು ತುರ್ತು ಕಾಲುವೆ.

ತುರ್ತು ಅಣೆಕಟ್ಟು ವಿಜಯನಗರ ಕಾಲದಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಲಾದ ಒಂದು ನೀರಾವರಿ ರಚನೆ ಇತ್ತೀಚೆಗೆ ಒಂದು ಶಾಸನವು ಕಟ್ಟೆಯ ಸಮೀಪದಲ್ಲಿರುವ ಒಂದು ಬಂಡೆಯ ಮೇಲೆ ದೊರೆತಿದ್ದು. ಈ ಕಟ್ಟೆಯನ್ನು ಚಿಂತಯ್ಯಕ ದೇವಣ್ಣನೆಂಬುವನು ಕಟ್ಟಿಸಿದನು ಮತ್ತು ಆ ಕೆಲಸವನ್ನು ಬೊಮ್ಮೋಜನು ನಿರ್ವಹಿಸಿದನು ಎಂದು ದಾಖಲಿಸಿದೆ.[14] ಈ ಅಣೆಕಟ್ಟಿನಿಂದ ಒಂದು ನಾಲೆಯು ಹೊರಡುತ್ತದೆ. ಇದನ್ನು ತುರ್ತು ಕಾಲುವೆಯೆಂದು ಕರೆಯುತ್ತಾರೆ. ಈ ಕಾಲುವೆಯು ಸುಮಾರು ಇಪ್ಪತ್ತೇಳು ಕಿ.ಮೀ.ಗಳಷ್ಟು ಉದ್ದವಾಗಿದ್ದು, ಬಹುಶಃ ವಿಜಯನಗರ ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿತ್ತೆಂದು ಶೋಧಗಳಿಂದ ತಿಳಿದು ಬಂದಿದೆ. ತುರ್ತು ಕಾಲುವೆ ಅಥವಾ ಹಿರಿಯ ಕಾಲುವೆಯನ್ನು ಕಿ.ಮೀ. ೧೫೨೪ ರ ಮುಂಚೆಯೇ ನಿರ್ಮಿಸಲಾಗಿತ್ತೆಂದು ಶಾಸನಾಧಾರಗಳು ಸೂಚಿಸುತ್ತವೆ.[15]

ಈ ಕಾಲುವೆಯು ಹಂಪೆಯ ಪಶ್ಚಿಮಕ್ಕೆ ಸುಮಾರು ಮೂರು ಕಿ.ಮೀ. ದೂರದಲ್ಲಿ ಪ್ರಾರಂಭವಾಗುತ್ತದೆ. ಇದನ್ನು ಹಿರಿಯ ಕಾಲುವೆಯೆಂದು ಶಾಸನಗಳು ದಾಖಲಿಸಿವೆ. ಈ ಕಾಲುವೆಯ ಬಗೆಗೆ ಹೊಸಪೇಟೆಯ ಲೋಕೋಪಯೋಗಿ ಇಲಾಖೆಯವರ ಬಳಿಯಲ್ಲಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಕಾಲುವೆಯು ಕ್ಷಿತಿಜ ಭೂಮಟ್ಟದ ರೇಖೆಯಲ್ಲಿಯೇ (Contour Level) ಹಾಯ್ದು ನೂರಾರು ಎಕರೆ ಭೂಮಿಗೆ ನೀರುಣಿಸಿ ನಂತರ ತುಂಗಭದ್ರೆಯನ್ನು ಸೇರಿಕೊಳ್ಳುತ್ತದೆ. ಈ ಕಾಲುವೆಯ ಉದ್ದಕ್ಕೂ ಅನೇಕ ತೂಬುಗಳನ್ನು ಜೋಡಿಸಲಾಗಿದ್ದು, ಇವುಗಳಿಂದ ಆಯಕಟ್ಟು ಪ್ರದೇಶಗಳಿಗೆ ನೀರನ್ನು ಪೂರೈಸಲಾಗಿತ್ತಿದೆ. ಈಗ ಈ ಕಾಲುವೆಯ ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಯವರ ಸುಪರ್ದಿಯಲ್ಲಿ ಇದ್ದು ಹೊಸಪೇಟೆ, ಕಮಲಾಪುರ ಮತ್ತು ಹಂಪೆಯ ಕೃಷಿಕರಿಗೆ ನೀರನ್ನು ಸಮರ್ಪಕವಾಗಿ ಪೂರೈಸುತ್ತಿದೆ. ಇಂದಿಗೂ ಈ ಕಾಲುವೆಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವುದು ಅಂದಿನ ಕಾಲದ ತಂತ್ರಜ್ಞಾನವನ್ನು ಪರಿಚಯಿಸುತ್ತದೆ.

ತುರ್ತು ಆಣೆಕಟ್ಟು, ಹಂಪಿ.

ತುರ್ತು ಆಣೆಕಟ್ಟು, ಹಂಪಿ.


[1] ಕಲಬುರ್ಗಿ, ಎಂ. ಎಂ. (ಸಂ), ಕರ್ನಾಟಕದ ಕೈಫಿಯತ್ತುಗಳು, ಪು. ೫೦೮

[2] ಅದೇ, ಪು. ೫೦೯

[3] ಅದೇ, ಪು. ೫೧೧

[4] ಅದೇ, ಪು. ೫೧೭

[5] ಫ್ರಾನ್ಸಸ್, ಡಬ್ಲ್ಯು, (ಸಂ) ಮದ್ರಾಸ್ ಡಿಸ್ಟ್ರಿಕ್ಟ್ ಗ್ಯಾಸೆಟಿಯರ್, ಬಳ್ಳಾರಿ

[6] ದೀಕ್ಷಿತ್, ಜಿ.ಎಸ್. ಮತ್ತು ಇತರರು, ಪೂರ್ವೋಕ್ತ, ಪು. ೨೬೪.

[7] ಕಲಬುರ್ಗಿ, ಎಂ. ಎಂ. (ಸಂ), ಪೂರ್ವೋಕ್ತ, ಪು. ೫೧೭

[8] ಡಾಮನಿಕ್ ಜೆ. ಡೆವಿಸನ್ ಜೆನ್‌ ಕಿನ್ಸ್, ಪೂರ್ವೋಕ್ತ, ಪು. ೪೯-೫೬

[9] ಸಿವೆಲ್, ಆರ್., ಎ. ಫರಗಾಟೆನ್ ಎಂಪೈರ್, ಪು. ೨೩೬-೯೦

[10] ಜಾನ್ ಎಂ. ಫ್ರಿಟ್ಜ್ `ಎಲಿವೇಟೆಡ್ ಫ್ಲಾಟ್‌‌ಫಾರಂ ನಿಯರ್ ಕಮಲಾಪುರಂ’, ವಿಜಯನಗರ ಪ್ರೊಗ್ರೆಸ್ ಆಫ್ ರಿಸರ್ಚ್‌ – ೧೯೮೭-೮೮, ಪು. ೧೦೫-೧೧೨ ೨೫.

[11] ಅದೇ, ಪು. ೧೧೧

[12] ಈ ಶಾಸನವನ್ನು ಶ್ರೀ ಬಾಲಸುಬ್ರಹ್ಮಣ್ಯ, ಮುಖ್ಯಸ್ಥರು, ಪುರಾತತ್ವ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಇವರು ಪತ್ತೆ ಹಚ್ಚಿದ್ದಾರೆ, ಅವರು ನೀಡಿದ ಮಾಹಿತಿಗೆ ಕೃತಜ್ಞನಾಗಿದ್ದೇನೆ.

[13] ವಿಜಯ ನಗರದ ಅರಸ ಕೃಷ್ಣದೇವರಾಯನ ಶಾಸನವನ್ನು ಪತ್ತೆ ಹಚ್ಚಿ ಅದರ ಪಾಠವನ್ನು ಲಕ್ಷ್ಮಣ ತೆಲಗಾವಿಯವರು ಪ್ರಕಟಿಸಿರುತ್ತಾರೆ. ಈ ಶಾಸನಕ್ಕೆ ಗುಡಿಯನ್ನು ಕಟ್ಟಿ ಪೂಜಿಸಲಾಗುತ್ತಿದೆ. ಶ್ರೀ ಕೃಷ್ಣದೇವರಾಯನು ತಿರುಮಲದೇವಿಯರ ಪಟ್ಟಣದ ನಾಲ್ಕು ಬಾಗಿಲ ಬಳಿಯ ಶ್ರೀ ಕಾಶಿ ವಿಶ್ವೇಶ್ವರನ (ಶ್ರೀ ಕಾಶಿ ವಿಶ್ವನಾಥನ ದೇವರ) ಪ್ರತಿಷ್ಠಾ ಕಾಲದಲ್ಲಿ ಆ ದೇವರ ಪೂಜೆ- ನೈವೇದ್ಯಗಳಿಗಾಗಿ ಆ ಪಟ್ಟಣದ ಕೋಟೆ ಪಶ್ಚಿಮಕ್ಕೆಯಿದ್ದ ಯಲ್ಲಪ್ಪಣ್ಣ ಕೆರೆಯನ್ನು ಅ ದೇವರಿಗೆ ದಾರೆಯನೆರೆದು ಕೊಟ್ಟನೆಂದು ಶಾಸನ ಹೇಳುತ್ತದೆ. ಇದರಿಂದ ಈ ಕೆರೆಯು ಕೃಷ್ಣದೇವರಾಯನ ಆಳ್ವಿಕೆಯ ಪೂರ್ವದ ಕೆರೆಯಿರಬೇಕೆಂದು ಲಕ್ಷ್ಮಣ ತೆಲಗಾವಿಯವರು ಸರಿಯಾಗಿ ಅಭಿಪ್ರಾಯಪಟ್ಟಿದ್ದಾರೆ. ಶಾಸನದಂತೆ ಈ ಕೆರೆಯ ದಕ್ಷಿಣ ದಿಕ್ಕಿನ ದಂಡೆ ಮತ್ತು ಕೆರೆಯ ಹಿಂಬದಿಯ ಜಲಾವೃತ ಮೇರೆಯಲ್ಲಿ ತಿರುಮಲ ದೇವಿಯವರ ಪಟ್ಟಣದ ಕೋಟೆಯ ಅಗಳಿನವರೆಗೆ ವಿಸ್ತರಿಸಿತ್ತು. ಕೋಟೆ ಅಗಳಿಯ ಪ್ರಸ್ತಾಪವಿರುವುದರಿಂದ ಅಗಳಿಗೆ ಈ ಕೆರೆಯು ನೀರನ್ನು ಹಾಯಿಸಿಕೊಳ್ಳುತ್ತಿದ್ದಿರಬಹುದೆಂದು ಊಹಿಸಬಹುದು. ಈ ಕೆರೆಯ ತೂಬಿನ ಅವಶೇಷ ಮತ್ತು ಇತರ ರಚನೆಗಳನ್ನು ಇಂದಿಗೂ ಕಾಣಬಹುದು. ನೋಡಿ ಲಕ್ಷ್ಮಣ      ತೆಲಗಾವಿ, ` ಕೃಷ್ಣದೇವರಾಯನ ಇನ್ನೊಂದು ಹೊಸಶಾಸನ’ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಂ. ೭೫, ಸಂಚಿಕೆ ೨, ದೀಪಾವಳಿ ಸಂಚಿಕೆ, ೧೯೯೭, ಪು. ೨೨-                ೨೭,ಇದನ್ನು ನನ್ನ ಗಮನಕ್ಕೆ ತಂದ ಪ್ರೊ. ಲಕ್ಷ್ಮಣ ತೆಲಗಾವಿ, ಮುಖ್ಯಸ್ಥರು, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರಿಗೆ ಕೃತಜ್ಞನಾಗಿದ್ದೇನೆ.

[14] ವಿಜಯನಗರ ಪ್ರೊಗ್ರೆಸ್ ಆಫ್ ರಿಸರ್ಚ್‌, ೧೯೮೪-೮೭, ಶಾಸನ ಸಂ. ೧, ಪು. ೨೭.

[15] ಡಾಮ್‌ನಿಕ್ ಜೆ. ಡೆವಿಸನ್- ಜೆನ್‌ಕಿನ್ಸ್, ಪೂರ್ವೋಕ್ತ, ಪು. ೬೨