ತುರ್ತು ಅಣೆಕಟ್ಟು ವಿವರಗಳು

ಈ ಅಣೆಕಟ್ಟು ಹಂಪೆಯ ಬಳಿಯಿಂದ ಪ್ರಾರಂಭವಾಗುತ್ತದೆ.

[1] ಇದರ ಒಟ್ಟು ಕಟ್ಟಲ್ಪಟ್ಟ ಭಾಗದ ಉದ್ದವು ಸುಮಾರು ೧,೧೦೦ ಅಡಿಗಳಷ್ಟು ಮಾತ್ರವೇ. ಇದು ಒಟ್ಟು ಹದಿನೈದು ಭಾಗಗಳಲ್ಲಿದೆ. ನೈಸರ್ಗಿಕ ಬಂಡೆ, ಕಲ್ಲು ಮತ್ತು ನದಿಪಾತ್ರದ ಕಲ್ಲುಗಳನ್ನು ಬಳಸಿಕೊಂಡು ಕಟ್ಟಲಾಗಿದೆ. ಈ ಅಣೆಕಟ್ಟು ನೇರವಾಗಿರದೆ ಅಂಕುಡೊಂಕಾಗಿದ್ದು, ಇದರ ಬಲದಂಡೆಯಿಂದ ಒಂದು ಕಾಲುವೆಯು ಪ್ರಾರಂಭವಾಗುತ್ತದೆ. ಇದನ್ನು ತುರ್ತು ಕಾಲುವೆಯೆಂದು ಕರೆಯುತ್ತಾರೆ. ಈ ಅಣೆಕಟ್ಟಿನ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಇರುವ ರಚನೆ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಕೋಷ್ಟಕ

ರಚನಾ ವಿಧಾನ

ಉದ್ದ (ಅಡಿಗಳಲ್ಲಿ)

೧. ಒರಟುಕಲ್ಲುಗಳ ಸಮೂಹ ೨೦ (ಬಲದಂಡೆಯಿಂದ)
೨. ಒರಟು ಕಲ್ಲುಗಳ ಹಿಂಭಾಗದ ಗೋಡೆ ೫೩
೩. ನದಿಪಾತ್ರದ ಕಲ್ಲು ೧೬
೪. ಒರಟುಕಲ್ಲು ಗೋಡೆ (ಹಿಂಬದಿಯಿಂದ ಒರಟು ಕಲ್ಲುಗಳನ್ನು ಹೊಂದಿದೆ) ೫೩
೫. ಚಿಕ್ಕ ಗುಡ್ಡ ೧೩
೬.ಚಿಕ್ಕ ಗುಡ್ಡ ಮತ್ತು ಒರಟುಕಲ್ಲು ಗೋಡೆ ಮತ್ತು ಬಂಡೆಗಲ್ಲು ೨೧೦
೭.ದೊಡ್ಡ ಬಂಡೆಗಳು ಮತ್ತು ಒರಟುಕಲ್ಲು ಗೋಡೆ ೧೫
೮. ದೊಡ್ಡ ಕಲ್ಲು ಮತ್ತು ಒರಟು ಬಂಡೆಗಳ ಗೋಡೆ ೪೦
೯. ದೊಡ್ಡ ಹಾಸುಕಲ್ಲು ಮತ್ತು ಒರಟುಕಲ್ಲು ಹಿಂಬದಿಯಲ್ಲಿ (ಚಂದ್ರಾಕೃತಿಯ ಗೋಡೆ) ೧೫೦
೧೦. ದೊಡ್ಡ ಬಂಡೆ ಹಾಸುಗಲ್ಲು ಮತ್ತು ಒರಟುಕಲ್ಲು ಗೋಡೆಯ ಎಪ್ರಿನ್ ೮೩
೧೧. ಬಂಡೆ ಹಾಸುಗಲ್ಲು ೭.೫
೧೨. ಒರಟುಕಲ್ಲು ಮತ್ತು ಒರಟುಕಲ್ಲು ಗೋಡೆ ೧೫.೫
೧೩. ಒರಟುಕಲ್ಲು ಮತ್ತು ಒರಟುಕಲ್ಲು ಗೋಡೆ ಹಿಂಬದಿಯಲ್ಲಿ ೨೧೩
೧೪. ಬಂಡೆ ಹಾಸುಗಲ್ಲು ೪೪.೫
೧೫. ಬಂಡೆಕಲ್ಲು ಗೋಡೆ ೪೮
೧೬. ಬಂಡೆ ಹಾಸುಗಲ್ಲು ೪೫
೧೭. ಒರಟುಕಲ್ಲು ಗೋಡೆ ೪೦
೧೮. ಹಾಸುಗಲ್ಲು
೧೯. ಹಾಸುಗಲ್ಲು
೨೦. ಒರಟುಕಲ್ಲುಗಳು ೧೨
೨೧. ದೊಡ್ಡ ಗುಡ್ಡ ಮತ್ತು ಒರಟುಕಲ್ಲುಗಳ ಗೋಡೆ ೧೦೯ (ಎಡದಂಡೆ)

ಈ ಮೇಲೆ ವಿವರಿಸಿದ ರೀತಿಯಲ್ಲಿ ಅಣೆಕಟ್ಟನ್ನು ಕಟ್ಟಿರುವ ಕಾರಣ ಈ ಅಣೆಕಟ್ಟನ್ನು ಒಂದು ದಡದಿಂದ ಯಾರೂ ಸಂಪೂರ್ಣವಾಗಿ ನೋಡಲು ಆಗುವುದಿಲ್ಲ.

ಸಾಮಾನ್ಯವಾಗಿ ಅಣೆಕಟ್ಟುಗಳು ಎರಡರಿಂದ ಐದು ಅಥವಾ ಐದೂವರೆ ಅಡಿಗಳಷ್ಟು ಎತ್ತರವಾಗಿರುತ್ತವೆ. ಇದಕ್ಕೂ ಎತ್ತರವಾದ ಗೋಡೆಗಳನ್ನು ನಿರ್ಮಿಸಿರುವುದಿಲ್ಲ. ಮತ್ತೊಂದು ವಿಶೇಷವಾದ ಸಂಗತಿಯೆಂದರೆ, ನಿಸರ್ಗದ ಕೊಡುಗೆಯನ್ನು ಉಪಯೋಗಿಸಿ ಕೆಲವು ಕಡೆಗಳಲ್ಲಿ ಎರಡು ಅಡಿಗಳಷ್ಟು ಗೋಡೆಯನ್ನು ಮಾತ್ರವೇ ನಿರ್ಮಿಸಿದ್ದಾರೆ.ಇದರಿಂದ ಪ್ರವಾಹ ಬಂದಾಗ ಸಹ ಅಣೆಕಟ್ಟು ನಾಶವಾಗದಂತೆ ಇಂದಿಗೂ ಉಳಿದಿದೆ. ಎರಡು ಸಾವಿರ ಎಕರೆಗಳಷ್ಟು ಪ್ರದೇಶವು ನೀರಾವರಿಗೊಳಪಟ್ಟಿದೆ.

ಮತ್ತೊಂದು ಮುಖ್ಯವಾದ ಅಣೆಕಟ್ಟು ರಾಮಸಾಗರದ ಬಳಿಯಲ್ಲಿದೆ. ಇದು, ಬುಕ್ಕಸಾಗರ ಗ್ರಾಮದ ಬಳಿಯಲ್ಲಿ ತುಂಗಭದ್ರೆಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟೆ, ಇದನ್ನು ಸಹ ತುರ್ತು ಅಣೆಕಟ್ಟು ಕಟ್ಟಿರುವ ರೀತಿಯಲ್ಲಿಯೇ ಕಟ್ಟಿದ್ದಾರೆ. ಮತ್ತೊಂದು ಅಣೆಕಟ್ಟು ಇಂದಿನ ರಾಯಚೂರು ಜಿಲ್ಲೆಯ ಹಿರೇಜಂತಕಲ್ಲು ಎಂಬಲ್ಲಿ ಕಟ್ಟಲಾಗಿದೆ. ಇವೆರಡೂ ಕಟ್ಟೆಗಳು ನದಿಯ ಅರ್ಧಕ್ಕೆ ಬಂದು ನಿಲ್ಲುತ್ತವೆ. ಇದರಿಂದಾಗಿ ಅವುಗಳು ಪೂರ್ಣವಾಗಿ ನೀರುನ್ನು ತಡೆಹಿಡಿಯುವುದಿಲ್ಲ. ಈ ಕಾರಣದಿಂದ ಇಲ್ಲಿ ಹೂಳು ಶೇಖರವಾಗುವುದಿಲ್ಲ. ಮತ್ತು ಕಟ್ಟೆಗೆ ಯಾವುದೇ ವಿಧದಲ್ಲಿ ಧಕ್ಕೆ ಉಂಟಾಗುವುದಿಲ್ಲ. ಈ ಕಟ್ಟೆಯು ೨.೨೫೦ ಅಡಿಗಳಷ್ಟು ಉದ್ದವಾಗಿದೆ. ಬಳ್ಳಾರಿ ಜಿಲ್ಲೆಯ ಕಡೆಯಿಂದ ೩.೬೦೦ ಅಡಿಗಳಷ್ಟು ಉದ್ದ ಹಾಗೂ ರಾಯಚೂರು ಕಡೆಯಿಂದ ಇದರ ಅಗಲವು ೪ ಅಡಿಗಳಾಗಿವೆ. ಅಣೆಕಟ್ಟಿನಿಂದ ಹೊರಡುವ ಕಾಲುವೆಗೆ ಗಂಗಾವತಿ ಮೇಲ್ದಂಡೆ ಕಾಲುವೆಯೆಂದು ಕರೆಯುತ್ತಾರೆ. ಇದು ಸುಮಾರು ಐದು ಹಳ್ಳಿಗಳಿಗೆ ಮತ್ತು ೨,೦೭೫ ಎಕರೆಗಳಿಗೆ ನೀರನ್ನು ಪೂರೈಸುತ್ತದೆ.

ಬಯಕಾರ ರಾಮಪ್ಪ ಸಾಧನೆಗಳು

ಹೊಸಪೇಟೆ ತಾಲೂಕಿನ ಕೆರೆಗಳನ್ನು ಕುರಿತು ಚರ್ಚಿಸುವಾಗ ಈ ದಿಸೆಯಲ್ಲಿ ಬಯಕಾರ ರಾಮಪ್ಪನ ಸಾಧನೆಗಳನ್ನು ಉಲ್ಲೇಖಿಸದಿದ್ದರೆ ಚರ್ಚೆಯು ಅಪೂರ್ಣವಾಗುತ್ತದೆ. ಬಯಕಾರ ರಾಮಪ್ಪನು ವಿಜಯನಗರದ ಅರಸನಾದ ಅಚ್ಯುತದೇವರಾಯನ ಕಾಲದಲ್ಲಿ ಕೊಂಡವೀಡು ರಾಜ್ಯದ ಅಧಿಪತಿಯಾಗಿದ್ದನು. ಈತ ಮೂಲತಃ ಆಂಧ್ರಪ್ರದೇಶದವನಾಗಿರಬೇಕು. ರಾಮಪ್ಪನು ಕೊಂಡವೀಡು ರಾಜ್ಯದ ಅಧಿಪತಿಯಾಗಿದ್ದರೂ ಹಂಪೆಯ ಬಳಿಯ ತಿಮ್ಮಲಾಪುರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಅವನ ಕಾರ್ಯಚಟುವಟಿಕೆಗಳು ಇದ್ದವು. ರಾಮಪ್ಪನು ಕೆಲವು ಅಗ್ರಹಾರಗಳನ್ನು ಸ್ಥಾಪಿಸಿ ದೇವಾಲಯಗಳನ್ನು ನಿರ್ಮಿಸಿ, ಕೆರೆಗಳನ್ನು ಕಟ್ಟಿಸಿದನೆಂದು ತನ್ನ ಶಾಸನಗಳಲ್ಲಿ ಹೇಳಿಕೊಂಡಿದ್ದಾನೆ.[2]

ಬಯಕಾರ ರಾಮಪ್ಪನು ತನ್ನ ರಕ್ತ ಸಂಬಂಧಿಗಳಿಗೆ ಪುಣ್ಯವಾಗಬೇಕೆಂದು ಅವರ ಹೆಸರಿನಲ್ಲಿ ಒಟ್ಟು ಹದಿನಾರು ಕೆರೆಗಳನ್ನು ಕಟ್ಟಿಸಿದ್ದಾನೆ. ಇವನ ಶಾಸನಗಳು ಬೇರೆ ಶಾಸನಗಳಿಗಿಂತ ಭಿನ್ನವಾಗಿದ್ದು, ಶಾಸನದ ಮೊದಲ ಭಾಗವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು ಕೆರೆಯನ್ನು ಯಾರ ಹೆಸರಿನಲ್ಲಿ ಕಟ್ಟಿಸಿದನೆಂದು ದಾಖಲಿಸುತ್ತದೆ. ಶಾಸನದ ಎರಡನೆಯ ಭಾಗವು ಕನ್ನಡ ಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿದ್ದು ಅವನ ವಂಶಾವಳಿ ಧರ್ಮ ಕಾರ್ಯಗಳ ವಿವರಣೆಯನ್ನು ನೀಡುತ್ತದೆ.

ಹುಲಿಕುಂಟೆ ಕೆರೆ, ಹುಲಿಕುಂಟೆ, ಕೂಡ್ಲಗಿ ತಾಲೂಕು

ಹುಲಿಕುಂಟೆ ಕೆರೆ, ಹುಲಿಕುಂಟೆ, ಕೂಡ್ಲಗಿ ತಾಲೂಕು

ಬಯಕಾರ ರಾಮಪ್ಪನು ಕಟ್ಟಲಾದ ಹದಿನಾರು ಕೆರೆಗಳು ಈ ರೀತಿಯಾಗಿವೆ.[3]

೧) ಬಾಚ ಸಮುದ್ರಂ ೨) ರಾಮ ಸಮುದ್ರಂ ೩) ಅಕ್ಕ ಸಮುದ್ರಂ ೪) ಕಾಮ ಸಮುದ್ರಂ ೫) ಅಮ್ಮ ಸಮುದ್ರಂ ೬) ವೀರ ಸಮುದ್ರಂ ೭) ಅಚ್ಯುತೇಂದ್ರ ಸಮುದ್ರಂ ೮) ವೆಂಕಟೇಂದ್ರ ಸಮುದ್ರಂ ೯) ಪಿನಲಕ್ಕ ಸಮುದ್ರಂ ೧೦) ಚಿನತಿಪ್ಪ ಸಮುದ್ರಂ ೧೧) ಪೇದಲಕ್ಕ ಸ

ಪೋತಲಕಟ್ಟಿ ಕೆರೆ, ಪೋತಲಕಟ್ಟಿ

ಪೋತಲಕಟ್ಟಿ ಕೆರೆ, ಪೋತಲಕಟ್ಟಿ

ಮುದ್ರಂ ೧೨) ಅಚ್ಯುತಮ್ಮ ಸಮುದ್ರಂ ೧೩) ಲಿಂಗಾಲಯ್ಯ ತಟಾಕಂ ೧೪) ವೆಂಕಟಯ್ಯ ತಟಾಕಂ ೧೫) ಪೆದತಿಮ್ಮ ಸಮುದ್ರಂ ೧೬) ಚಿನಬಾಚ ಸಮುದ್ರಂ

ನಡುವಲ ಕೆರೆ, ತಿಮ್ಮಲಾಪುರ

ನಡುವಲ ಕೆರೆ, ತಿಮ್ಮಲಾಪುರ

ಚಿಕ್ಕಕೆರೆಯಾಗಿನ ಕೆರೆ ಸಮೀಪ ನೆಟ್ಟಿರುವ ಶಾಸನದ ಕಲ್ಲು

ಚಿಕ್ಕಕೆರೆಯಾಗಿನ ಕೆರೆ ಸಮೀಪ ನೆಟ್ಟಿರುವ ಶಾಸನದ ಕಲ್ಲು

ಜಂಭಯ್ಯನ ಕೆರೆ ಏರಿಯಲ್ಲಿ ಬಿದಸ್ದಿರುವ ಶಾಸನದ ಕಲ್ಲು ತಿಮ್ಮಲಾಪುರ

ಜಂಭಯ್ಯನ ಕೆರೆ ಏರಿಯಲ್ಲಿ ಬಿದಸ್ದಿರುವ ಶಾಸನದ ಕಲ್ಲು ತಿಮ್ಮಲಾಪುರ

ಪೋತಲಕಟ್ಟೆ ಕೆರೆ ಏರಿಯಲ್ಲಿ ಬಿದ್ದಿರುವ ಶಾಸನದ ಕಲ್ಲು

ಪೋತಲಕಟ್ಟೆ ಕೆರೆ ಏರಿಯಲ್ಲಿ ಬಿದ್ದಿರುವ ಶಾಸನದ ಕಲ್ಲು

ಮೇಲೆ ಉಲ್ಲೇಖಿಸಿದ ಕೆರೆಗಳಲ್ಲಿ ಕೆಲವೊಂದು ಇಂದಿಗೂ ಬಳಕೆಯಲ್ಲಿದೆ. ಕೆರೆಯ ಸಮೀಪವೇ ದೊರೆತ ಶಾಸನಗಳ ಆಧಾರದಿಂದ ಶಾಸನಗಳಲ್ಲಿ ಹೆಸರಿಸಿರುವ ಕೆರೆಗಳನ್ನು ಗುರುತಿಸಲು ಸಾಧ್ಯವಾಗಿದೆ. ಇತ್ತೀಚೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಪುರಾತತ್ವಜ್ಞರಾದ ನರಸಿಂಹಮ್ ಅವರು ಬಯಕಾರ ರಾಮಪ್ಪನ ಹೊಸ ಶಾಸನಗಳನ್ನು ಸಂಶೋಧಿಸಿದ್ದಾರೆ.[4] ಅವರು ಕೆರೆಗಳನ್ನು ಶಾಸನಗಳ ಆಧಾರದಿಂದ ಸರಿಯಾಗಿ ಗುರುತಿಸಿರುತ್ತಾರೆ. ಈಗಾಗಲೆ ಪ್ರಕಟವಾಗಿರುವ ಸಂಡೂರು ತಾಲೂಕಿನ ಚಿಕ್ಕ ಕೆರೆಯಾಗಿನ ಹಳ್ಳಿಯ ಕೆರೆಯನ್ನು ಬಯಕಾರ ರಾಮಪ್ಪನ ತಾಯಿ ಹಿರಿಯ ಲಕ್ಕರಸಮ್ಮನಿಗೆ ಪುಣ್ಯವಾಗಬೇಕೆಂದು ಕ್ರಿ. ಶ. ೧೫೩೯ರಲ್ಲಿ ಕಟ್ಟಿಸಿದ್ದಾನೆ.[5] ಈ ಕೆರೆಯೇ ಹಿರಿಯಲಕ್ಕ (ಪೆದಲಕ್ಕ) ಸಮುದ್ರ ಕೆರೆ. ಇದೇ ತಾಲೂಕಿನ ಹುಲಿಕುಂಟೆ ಗ್ರಾಮದ ಕೆರೆಯನ್ನು ಅವನ ಮಗಳಾದ ಅಚ್ಯುತಮ್ಮನ ಹೆಸರಿನಲ್ಲಿ ನಿರ್ಮಿಸಲಾಗಿದೆ.[6] ಈ ಕೆರೆಯೇ ಅಚ್ಯುತಮ್ಮ ಸಮುದ್ರಂ. ಹೊಸಪೇಟೆಯ ತಾಲೂಕಿನ ಮಗಿಮಾವಿನ ಹಳ್ಳಿಯ ಶಾಸನವು ಅವನ ಇನ್ನೊಬ್ಬ ಮಗಳಾದ ಕಾಮಮ್ಮನ ಹೆಸರಿನಲ್ಲಿ ಕ್ರಿ.ಶ.೧೫೪೪ ರಲ್ಲಿ ಕಾಮಸಮುದ್ರವನ್ನು ನಿರ್ಮಿಸಿದನೆಂದು ಉಲ್ಲೇಖಿಸುತ್ತದೆ.

ಒಂಟಿಗೋಡು ಕೆರೆಯ ಸಮೀಪ ನೆಟ್ಟಿರುವ ಶಾಸನದ ಕಲ್ಲು

ಒಂಟಿಗೋಡು ಕೆರೆಯ ಸಮೀಪ ನೆಟ್ಟಿರುವ ಶಾಸನದ ಕಲ್ಲು

ಇತ್ತೀಚೆಗೆ ಸಂಶೋಧಿತ ನಾಲ್ಕು ಶಾಸನಗಳಿಂದ ಬಯಕಾರ ರಾಮಪ್ಪನ ಕಟ್ಟಿಸಿದ ನಾಲ್ಕು ಕೆರೆಗಳನ್ನು ನಾವು ಗುರುತಿಸಬಹುದಾಗಿದೆ. ಪೋತಲಕಟ್ಟೆ ಗ್ರಾಮದ ಕೆರೆ ಕೋಡಿಯ ಸಮೀಪ ದೊರೆತ ಶಾಸನವು ಅವನ ಮಗ ಆಕಪ್ಪನಿಗೆ ಪುಣ್ಯವಾಗಬೇಕೆಂದು ಕ್ರಿ.ಶ.೧೫೩೯ ರಲ್ಲಿ ಕಟ್ಟಿಸಿದನೆಂದು ತಿಳಿಸುತ್ತದೆ.[7] ಈ ಕೆರೆಗೆ ಆಕ ಸಮುದ್ರವೆಂದು ಹೆಸರಿಡುತ್ತಾನೆ. ತಿಮ್ಮಲಾಪುರದ ಜಂಭಯ್ಯನ ಕೆರೆ ಶಾಸನದಿಂದ ಅದನ್ನು ಅವನ ಚಿಕ್ಕಪ್ಪ ಬಾಚರಸಯ್ಯನ ಹೆಸರಿನಲ್ಲಿ ಬಾಚಸಮುದ್ರ ಕೆರೆಯನ್ನು ಕ್ರಿ.ಶ. ೧೫೩೯ರಲ್ಲಿ ಕಟ್ಟಿಸಿದನು ಎಂದು ತಿಳಿಸುತ್ತದೆ.[8] ಒಂಟಿಗೋಡು ತಾಂಡದ ಕೆರೆಯ ಸಮೀಪದ ಶಾಸನದಿಂದ ಬಯಕಾರ ರಾಮಪ್ಪನು ಅವನ ಪತ್ನಿ ವೀರಮ್ಮನಿಗೆ ಪುಣ್ಯವಾಗಲೋಸುಗ ವೀರಸಮುದ್ರ ಕೆರೆಯನ್ನು ಕ್ರಿ.ಶ. ೧೫೩೯ರಲ್ಲಿ ಕಟ್ಟಿಸಿದನೆಂದು ತಿಳಿದುಬರುತ್ತದೆ.[9] ನಂದಿಬಂಡೆ ಕೆರೆಯ ಶಾಸನವು ಅವನ ತಂದೆ ತಿಮ್ಮರಸಯ್ಯನಿಗೆ ಪುಣ್ಯವಾಗಬೇಕೆಂದು ಅವರ ಹೆಸರಿನಲ್ಲಿ ತಿಮ್ಮಸಮುದ್ರ ಕೆರೆಯನ್ನು ಕ್ರಿ.ಶ. ೧೫೩೯ರಲ್ಲಿ ಕಟ್ಟಿಸಿದನೆಂದು ದಾಖಲಿಸುತ್ತದೆ.[10] ಹೊಸಪೇಟೆ ತಾಲೂಕಿನ ಹರಪನಹಳ್ಳಿಯ ಮಾರುತಿ ಕೆರೆಯ ಸಮೀಪ ಒಂದು ಶಾಸನವು ದೊರಕಿದ್ದು ಅದರ ಕೆಳಭಾಗದ ೧೯ ಸಾಲುಗಳು ಮಾತ್ರವೆ ಇವೆ.[11] ಶಾಸನದ ಮೇಲ್ಭಾಗವು ಒಡೆದಿರುವ ಕಾರಣ, ಈ ಕೆರೆಯನ್ನು ಯಾರ ಹೆಸರಿನಲ್ಲಿ ನಿರ್ಮಿಸಿದನೆಂಬುದು ತಿಳಿದುಬಂದಿಲ್ಲ.

ಹುಲಿಕುಂಟೆ ಕೆರೆ, ಏರಿಯಲ್ಲಿ ನಟ್ಟಿರುವ ಶಾಸನದ ಕಲ್ಲು

ಹುಲಿಕುಂಟೆ ಕೆರೆ, ಏರಿಯಲ್ಲಿ ನಟ್ಟಿರುವ ಶಾಸನದ ಕಲ್ಲು

 

ಕೋಷ್ಠಕ೩ : ಹೊಸಪೇಟೆ ತಾಲೂಕಿನಲ್ಲಿರುವ ಕೆಲವು ಮುಖ್ಯ ಕೆರೆಗಳು

ಕ್ರ ಸಂ

ಕೆರೆಯ ಹೆಸರು

ತೂಬುಗಳು

ವಿವರಣೆ

೧. ಪೋತಲಕಟ್ಟೆ ಕೆರೆ
೨. ನಡುವಲ ಕೆರೆ
೩. ಒಂಟಿಗೋಡು ತಾಂಡ ಕೆರೆ
೪. ಜಂಭಯ್ಯನ ಕೆರೆ
೫. ಚಿಕ್ಕ ಕೆರೆಯಾಗಿನಹಳ್ಳಿ ಕೆರೆ ಸಂಡೂರು ತಾಲೂಕು
೬. ಹುಲಿಕುಂಟೆ ಕೆರೆ ಸಂಡೂರು ತಾಲೂಕು
೭. ನಾಗೇನಹಳ್ಳಿ ಕೆರೆ
೮. ರಾಯರ ಕೆರೆ
೯. ಪೋತಲಕಟ್ಟೆ ಕೆರೆ ಶಿಥಿಲ
೧೦. ಗೌರಮ್ಮನ ಕೆರೆ
೧೧. ವಿಠ್ಠಲಾಪುರ ಕೆರೆ
೧೨. ದರೋಜಿ ಕೆರೆ ಸಂಡೂರು ತಾಲೂಕು
೧೩. ಹಿರೇಕೆರೆ ಸಂಡೂರು ತಾಲೂಕು
೧೪. ದೇವಸಮುದ್ರ ಕೆರೆ
೧೫. ದೇವಲಾಪುರ ಕೆರೆ
೧೬. ಕಮಲಾಪುರ ಕೆರೆ
೧೭. ಅಳ್ಳಿಕೆರೆ ಕೆರೆ
೧೮. ಅಮ್ರವತಿ ಕೆರೆ
೧೯. ಭೈಲಗುಂದಿ ಕೆರೆ
೨೦. ಕೂಡನಾಯಕನಹಳ್ಳಿ ಕೆರೆ ಕೆರೆ ಕಟ್ಟೆ
೨೧. ಬಸವನದುರ್ಗದ ಕೆರೆ
೨೨. ಗುಡಿ ಓಬಳಾಪುರ ಕೆರೆ ಇಲ್ಲ
೨೩. ಈಡಿಗರ ಕುಂಟೆ ಕೆರೆ
೨೪. ವೆಂಕಟಾಪುರ ಕೆರೆ
೨೫. ಸೀತಾರಾಂಪುರ ತಾಂಡಾ ಕೆರೆ ಇಲ್ಲ
೨೬. ನದಿಬಂಡೆ ಕೆರೆ
೨೭. ಉಪ್ಪಾರ ಹಳ್ಳಿ ಕೆರೆ
೨೮. ಮಲಪನಗುಡಿ ಕೆರೆ
೨೯. ವ್ಯಾಸನ ಕೆರೆ ಮುಳುಗಿದೆ.
೩೦. ನಾರಾಯಣದೇವನ ಕೆರೆ ಮುಳುಗಿದೆ
೩೧. ಗೊಲ್ಲರಹಳ್ಳಿ ಹಿರೇಕೆರೆ
೩೨. ಗೊಲ್ಲರಹಳ್ಳಿ ಚಿಕ್ಕಕೆರೆ
೩೩. ಬುಕ್ಕಸಾಗರ ಬೆಳ್ಳಿಕೆರೆ
೩೪. ಕಂಪ್ಲಿ ಸೋಮಪ್ಪ ಕೆರೆ
೩೫. ಗರಗ ಸಣ್ಣ ಕೆರೆ
೩೬. ಗರಗ ದೊಡ್ಡ ಕೆರೆ
೩೭. ಇಂಗಳಗಿ ಚಿಕ್ಕಕೆರೆ
೩೮. ಕಾಕಬಾಳು ಸಿಗಟ್ಟೆ ಕೆರೆ
೩೯. ಚಿಲಕನ ಹಟ್ಟಿ ಜಾಮಿಗುಡ್ಡೆ ಕೆರೆ
೪೦. ಡಣಾಯಕನ ಕೆರೆ ಅತೀ ದೊಡ್ಡ ಕೆರೆ
೪೧. ಮೆಟ್ರಿ ಈರಣ್ಣನ ಕೆರೆ
೪೨. ಬೈಲುವದ್ದಿಗೇರಿ ಗಂಜಿಗುಂಟೆ ಕೆರೆ
೪೩. ಬೈಲುವದ್ದಿಗೇರಿ ಹಿರೇಕೆರೆ
೪೪. ಬೈಲುವದ್ದಿಗೇರಿ ಚಿಕ್ಕಕೆರೆ
೪೫. ಅಯ್ಯನಹಳ್ಳಿ ಕೆರೆ
೪೬. ಕೆ. ತಿಮ್ಮಾಪುರ ಹಿರೇಕೆರೆ
೪೭. ಹಾರೋನಹಳ್ಳಿ ಕೆರೆ (ಅಮ್ಮ ಸಮುದ್ರ ಕೆರೆ)
ಮಾರಗಪಯನ ಕೆರೆ)
೪೮. ಡಾಣಪುರ ಮಾದನಾಯಕನ ಕೆರೆ
೪೯. ತಾಳೆ ಬಸಾಪುರ ಕೆರೆ
೫೦. ತಾಳೆ ಬಸಾಪುರ ಒಂಟಿಕೆರೆ
೫೧. ನಾಗಲಾಪುರ ಕಾಟ್ಟಣಕೆರೆ
೫೨. ನಾಗಲಾಪುರ ಕೆರೆ
೫೩. ಭೂಪತಿ ಕೆರೆ
೫೪. ಯಲ್ಲಪ್ಪಣ್ಣ ಕೆರೆ
೫೫. ಚಿಕ್ಕಹಂಸನ ಕೆರೆ


[1] ಅದೇ, ಪು. ೫೭-೬೬

[2] ಎಸ್‌‌ಐಐ, ಸಂ. IX, ಭಾಗ II, ಸಂ. ೫೯೩ ಮತ್ತು ೬೬೦ ; ಎಆರ್‌ಎಫ್, ೧೯೧೫ ಭಾಗ II, ಪ್ಯಾರ ೫೧ ; ಶಿವರುದ್ರಸ್ವಾಮಿ, ಎಸ್.ಎನ್., ಬಯಕಾರ ರಾಮಪ್ಪ, ಪು. ೧೦-೧೨ ಇವನಿಗೆ `ಸ್ವರಮೇಳ ಕಳಾನಿಧಿ’ ಎಂಬ ಬಿರುದನ್ನು ಹೊಂದಿದ್ದ. ಅವನು ದಕ್ಷ ಆಡಳಿತಗಾರನಾಗಿ ಅನೇಕ ಪ್ರಜಾಹಿತಾತ್ಮಕ ಕೆಲಸಗಳನ್ನು ಮಾಡಿದ್ದಾನೆ.

[3] ಎಸ್‌ಐಐ, ಸಂ, IX, ಭಾಗ II, ಸಂ. ೫೯೩

[4] ಶಾಸನ ಪಾಠವನ್ನು ಶ್ರೀ ನರಸಿಂಹಮ್‌ರವರು ನನಗೆ ಒದಗಿಸಿದ್ದಾರೆ.

[5] ಎಸ್‌ಐಐ, ಸಂ. IX, ಭಾಗ II, ಸಂ. ೫೯೩

[6] ಅದೇ, ಸಂ. ೬೬೦

[7] ನರಸಿಂಹಮ್, ಡಬ್ಲ್ಯು ವಿ.ಎಸ್. ”ಬಯಕಾರ ರಾಮಪ್ಪನ ೧೬ ನೆಯ ಶತಮಾನದ ಕೆಲವು ಹೊಸ ಶಾಸನಗಳು”, ಇತಿಹಾಸ ದರ್ಶನ, ಸಂ. ೧೧, ಪು. ೧೨೫

[8] ಅದೇ

[9] ಅದೇ

[10] ಅದೇ

[11] ಹೊಸಪೇಟೆ ತಾಲೂಕನ್ನು ಆವರಿಸಿರುವ ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡರೆ, ಬಯಕಾರ ರಾಮಪ್ಪನ ಇನ್ನೂ ಕೆಲವು ಶಾಸನಗಳು ದೊರಕುವ ಸಾಧ್ಯತೆಗಳಿವೆ.