ನೀರು ವಿಶ್ವದಲ್ಲಿರುವ ಕೋಟ್ಯಂತರ ಜೀವರಾಶಿಗಳಿಗೆ ಅತ್ಯಂತ ಅವಶ್ಯವು. ನೀರು ಎಲ್ಲ ಜೀವರಾಶಿಗಳಿಗೆ ಜೀವಾಧಾರವು. ಇಂತಹ ವಸ್ತುವು ದೈನಂದಿನ ಚಟುವಟಿಕೆಗಳಲ್ಲಿ ಅತೀ ಮುಖ್ಯವು. ಮಾನವನು ಮೊಟ್ಟಮೊದಲಿಗೆ ಈ ಭುವಿಯಲ್ಲಿ ಕಾಣಿಸಿಕೊಂಡಂದಿನಿಂದ ನೀರಿನೊಡನೆ ನಿಕಟ ಸಂಬಂಧವನ್ನು ಹೊಂದಿದ್ದಾನೆ. ಅಂದಿನಿಂದ ಇಂದಿನವರೆಗೂ ಮಾನವನ ಎಲ್ಲ ಚಟುವಟಿಕೆಗಳು ನೀರಿನ ಸಮೀಪವೇ ಕೇಂದ್ರೀಕೃತವಾಗಿರುವುದನ್ನು ನಾವು ನೋಡಬಹುದು. ಪ್ರಾಗೈತಿಹಾಸಿಕ ಕಾಲದಿಂದಲೂ ಮಾನವ ಶಿಲಾಯುಧಗಳನ್ನು ತಯಾರಿಸುವ ಕಾರ್ಯವನ್ನು ನದಿಯ ಅಥವಾ ನೀರಿನ ಸೆಲೆಯ ಹತ್ತಿರಬೇ ಮಾಡಿರುವುದನ್ನು ಅನೇಕ ಪ್ರಾಕ್ತನ ಸಂಶೋಧನೆಗಳಿಂದ ದೃಢಪಟ್ಟಿದೆ. ಮಾನವನು ಒಂದೆಡೆ ನೆಲೆಯಾಗಿ ನಿಂತು ಕೃಷಿಕ ಜೀವನವನ್ನು ಪ್ರಾರಂಭಿಸಿರುವುದು ನೀರಿನ ಆಶ್ರಯವಿರುವಲ್ಲಿಯೇ. ವ್ಯವಸಾಯವನ್ನು ಪ್ರಾರಂಭಿಸಿದ ದಿನಗಳಿಂದ ಮಾನವನ ಜೀವನದಲ್ಲಿ ಒಂದು ಕ್ರಮಬದ್ಧತೆಯು ಬಂದಿದೆ. ವ್ಯವಸಾಯಕ್ಕೆ ನೀರು ಬೇಕಾದ್ದರಿಂದ ನೀರಿಗೆ, ಮಾನವನು ಮಳೆ ಮತ್ತು ನದಿಯನ್ನು ಆಶ್ರಯಿಸಿದ್ದನೆಂಬುದು ನಿರ್ವಿವಾದ. ಮಳೆಯ ವೈಫಲ್ಯತೆಯು ಮಾನವನಿಗೆ ಕೃತಕ ಜಲ ಸಂಗ್ರಾಹಕಗಳನ್ನು ರಚಿಸಲು ಪ್ರಚೋದಿಸಿದವು. ಇದರಿಂದ ನೀರನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಬೇಕೆಂದಾಗ ಬೇಸಾಯ ಮಾಡಿ ಫಸಲನ್ನು ತೆಗೆಯಲು ಪ್ರಾರಂಭಿಸಿದ. ಮಾನವನ ಮೊಟ್ಟಮೊದಲ ಪ್ರಯತ್ನವು ನಿಸರ್ಗವು ನಿರ್ಮಿಸಿದಂತಹ ಅನೇಕಾನೇಕ ಸ್ವಾಭಾವಿಕ ಕೆರೆಗಳ ಸಮೀಪದಲ್ಲಿಯೇ ಇರುವುದು ಗಮನಿಸತಕ್ಕ ವಿಷಯ. ಸಣ್ಣ ಕಟ್ಟೆಗಳನ್ನು ಅಂತಹ ಜಾಗಗಳಲ್ಲಿ ನಿರ್ಮಿಸಿ, ಮಳೆಯ ಅಥವಾ ನದಿಯ ನೀರನ್ನು ಸಂಗ್ರಹಿಸತೊಡಗಿದ. ಇವುಗಳ ಜೊತೆಯಲ್ಲಿ ಮಾನವನ ಸಂತತಿಯು ಬೆಳೆಯತೊಡಗಿದ್ದು, ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಕೃಷಿ ಉತ್ಪನ್ನಗಳನ್ನು ಅಧಿಕರಿಸತೊಡಗಿದ. ಅದುದರಿಂದ ಕೃತಕ ಜಲಸಂಗ್ರಾಹಕಗಳ ಅವಶ್ಯಕತೆಯು ಇದ್ದಿತು. ಆದಿ ಶಿಲಾಯುಗ ಕಾಲಕ್ಕಿಂತಲೂ ನವಶಿಲಾಯುಗ ಹಾಗೂ ಚಾರಿತ್ರಿಕ ಯುಗದಲ್ಲಿ ಜನಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದ್ದಿತು.

ಭಾರತವು ಮಿಕ್ಕ ರಾಷ್ಟ್ರಗಳಂತೆಯೇ ಅತ್ಯಂತ ಪ್ರಾಚೀನತೆಯನ್ನು ಹೊಂದಿರುವ ದೇಶ. ಭಾರತದಲ್ಲಿ ಇಲ್ಲಿಯವರೆಗೆ ದೊರಕಿರುವ ಪ್ರಾಕ್ತನ ನೆಲೆಗಳೆಲ್ಲವೂ ನದಿ ಅಥವಾ ನೀರಿನ ಆಶ್ರಯವಿರುವಂತಹ ಜಾಗಗಳಲ್ಲಿಯೇ ದೊರೆತಿದ್ದು, ಈ ವಾದವನ್ನು ಸಮರ್ಥಿಸುತ್ತವೆ. ಆದಿ ಇತಿಹಾಸ ಕಾಲದ ಪ್ರಾಚೀನ ನೆಲೆಗಳಾದ ಶೃಂಗವೇರ್‌‌ಪುರ, ಬೆಸನಗರ, ಕುಮ್ರಹಾರ್ (ಇಂದಿನ ಪಾಟ್ನಾ), ಮಥುರಾ, ನಾಗಾರ್ಜುನಕೊಂಡ ಮುಂತಾದ ನೆಲೆಗಳು ನದಿಯ ಪಕ್ಕದಲ್ಲಿಯೇ ಬೆಳೆದು ಬಂದಂತಹವುಗಳೇ ಆಗಿವೆ. ಅಂದಿನ ಸಮಕಾಲೀನ ಸಾಹಿತ್ಯಗಳಲ್ಲಿಯೂ ಸಹ ನೀರಾವರಿ ವ್ಯವಸ್ಥೆಯ ಚಿತ್ರಣವು ನಮಗೆ ಹೇರಳವಾಗಿ ದೊರೆಯುತ್ತವೆ. ವೇದಗಳಾದ ಋಗ್ವೇದ, ಅಥರ್ವಣ ವೇದಗಳು, ಕೆರೆ ನೀರಾವರಿ ಪದ್ಧತಿಯನ್ನು ಕುರಿತು ಉಲ್ಲೇಖಿಸುತ್ತವೆ. ಧರ್ಮಸೂತ್ರ, ಪುರಾಣಗಳು, ಮಹಾಭಾರತ, ರಾಮಾಯಣ, ಅರ್ಥಶಾಸ್ತ್ರಗಳು ಸಹ ಕೆರೆ ನೀರಾವರಿ ಪದ್ಧತಿಯನ್ನು ಕುರಿತು ವಿಶದವಾಗಿ ತಿಳಿಸುತ್ತವೆ.

ಆದಿ ಇತಿಹಾಸ ಕಾಲದಿಂದ ಶಾಸನಗಳು ನಮಗೆ ದೊರೆಯುತ್ತವೆ. ಈ ಶಾಸನಗಳು ಸಹ ಕೃಷಿ, ಕೆರೆ, ನೀರಾವರಿ ಪದ್ಧತಿಗಳನ್ನು ಕುರಿತ ಅನೇಕ ಮಾಹಿತಿಗಳನ್ನು ನೀಡುವದು ಗಮನಾರ್ಹ. ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ಚಂದ್ರಗುಪ್ತಮೌರ್ಯನ ಕಾಲದಿಂದಲೂ ಸಹ ಕೆರೆಗಳ ನಿರ್ಮಾಣ ಕಾರ್ಯವು ಇತ್ತೆಂದು ಶಾಸನಗಳ ಆಧಾರದಿಂದ ತಿಳಿದುಬರುತ್ತದೆ. ಕ್ರಿಸ್ತಪೂರ್ವದಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆಯು ಅವ್ಯಾಹತವಾಗಿ ಸಾಗುತ್ತಲೇ ಬಂದಿದೆ. ಸುಮಾರು ಎರಡು ಸಾವಿರ ವರ್ಷಗಳಲ್ಲಿ ಈ ಪ್ರಕ್ರಿಯೆಯನ್ನು ಅನೇಕ ಅರಸು ಮನೆತನಗಳವರು ಸಾಗಿಸುತ್ತಾ ಬಂದಿದ್ದು, ವಿಜಯನಗರ ಅರಸರ ಕಾಲದಲ್ಲಿ ಒಂದು ಹಂತವನ್ನು ತಲುಪಿತು. ವಿಜಯನಗರ ಅರಸರ ಕಾಲದಲ್ಲಿ ಕೃಷಿಗೆ ಮತ್ತು ನೀರಾವರಿಗೆ ಬಹಳ ಮಹತ್ವವನ್ನು ನೀಡಿದ್ದರೆಂಬುದಕ್ಕೆ ಸಾಕ್ಷಿಯಾಗಿ ಅವರು ನಿರ್ಮಿಸಿದ ಅನೇಕ ನೀರಾವರಿ ರಚನೆಗಳು ದೊರಕಿವೆ. ಇದರೊಂದಿಗೆ ಅವರ ಕಾಲದ ಶಾಸನಗಳು ಇದನ್ನು ಕುರಿತು ಉಲ್ಲೇಖಿಸುತ್ತವೆ. ಕೆರೆಗಳನ್ನು ಕಟ್ಟುವುದಕ್ಕೆ ಇದ್ದ ಇನ್ನೊಂದು ಪ್ರಮುಖ ಕಾರಣವು ಸುಮಾರು ಎರಡು ಸಾವಿರ ವರ್ಷಗಳಿಂದಲೂ ಬದಲಾಗುತ್ತಿರುವ ಹವಾಮಾನವಾಗಿದೆ. ಮತ್ತೊಂದು ಕಾರಣವು ಜನರಲ್ಲಿ ಬೆಳೆದ ಹಾಗೂ ಬೆಳೆಯುತ್ತಿರುವ ಧಾರ್ಮಿಕ, ಸಾಮಾಜಿಕ ನಂಬಿಕೆಗಳು ಎನ್ನುವುದನ್ನು ಎಲ್ಲರೂ ಗಮನಿಸಬಹುದು. ಕರ್ನಾಟಕದಲ್ಲಿ ಮಿಕ್ಕೆಲ್ಲಾ ರಾಜ್ಯಗಳಿಗಿಂತ ಅತ್ಯಧಿಕವಾದ ನೀರಾವರಿ ರಚನೆಗಳಿರುವುದು ಮತ್ತೊಂದು ವಿಶೇಷವಾದ ಸಂಗತಿ.

ವಿಜಯನಗರ ಅರಸರ ಕಾಲದಲ್ಲಿ ಆಡಳಿತವನ್ನು ವಿಕೇಂದ್ರೀಕೃತಗೊಳಿಸಿ ನೀರಾವರಿ ವ್ಯವಸ್ಥೆಗೆ ಮತ್ತಷ್ಟು ಪ್ರೋತ್ಸಾಹವನ್ನು ನೀಡಿದರೆಂದು ಅಧ್ಯಯನದಿಂದ ತಿಳಿದುಬರುತ್ತದೆ. ಇವರ ಕಾಲದಲ್ಲಿ ಅಮರನಾಯಕ ಪದ್ಧತಿಯು ಬಳಕೆಗೆ ಬಂದಿದ್ದು, ಸ್ಥಳೀಯ ಅಧಿಕಾರಿಗಳು (ನಾಯಕರು ಅಥವಾ ಅಮರನಾಯಕರು) ಶೇ. ೨೯.೯೦ ರಷ್ಟು ನೀರಾವರಿ ವ್ಯವಸ್ಥೆಗೆ ಕಾರಣೀಭೂತರಾಗಿದ್ದಾರೆ. ಇವರೊಂದಿಗೆ ಶ್ರೀ ಸಾಮಾನ್ಯರು ಮತ್ತು ಸಾಮಂತರು ಗಣನೀಯವಾಗಿ ತಮ್ಮ ಕೊಡುಗೆಯನ್ನು ನೀಡಿರುವುದು, ವಿಜಯನಗರ ಕಾಲದ ಶಾಸನಗಳಿಂದ ವ್ಯಕ್ತವಾಗಿರುವ ಅಂಶ. ಇವರ ಕಾಲದ ಶಾಸನಗಳು ಕೆರೆಗಳನ್ನು ಹೇಗೆ ಕಟ್ಟಬೇಕು, ಯಾವ ಸ್ಥಳವನ್ನು ಆಯ್ಕೆ ಮಾಡಬೇಕು, ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸುವುದರೊಂದಿಗೆ, ಕೆರೆಗೆ ಯಾವ ಸಾಮಗ್ರಿಗಳನ್ನು ಬಳಸಲಾಗಿತ್ತು ಎಂಬುದರ ವಿವರಗಳನ್ನು ಸಹ ನೀಡುತ್ತವೆ. ಇವರ ಕಾಲದಲ್ಲಿ, ಹಿಂದೆ ಇದ್ದಂತೆಯೇ, ಕೆರೆ ಕಟ್ಟುವ ನಿಪುಣರುಗಳು ಇದ್ದರೆಂಬುದು ವೇದ್ಯವಾಗುತ್ತದೆ.

ವಿಜಯನಗರ ಕಾಲದಲ್ಲಿ ಕೆರೆ ಕಟ್ಟಿಸುವುದರೊಂದಿಗೆ, ಅದರ ರಕ್ಷಣೆ ಮತ್ತು ನಿರ್ವಹಣೆಯ ಬಾಧ್ಯತೆಗಳನ್ನು ಬಹು ಸಮರ್ಪಕವಾಗಿ ಮಾಡುತ್ತಿದ್ದರು. ಈ ದಿಸೆಯಲ್ಲಿ ರಾಜರ ಆಳ್ವಿಕೆಯಲ್ಲಿಯೇ ಹಲವಾರು ನೀತಿ- ನಿಯಮಗಳನ್ನು ಅಳವಡಿಸಿಕೊಂಡಿರುವುದನ್ನು ಆ ಕಾಲದ ತೆರಿಗೆ ಪದ್ಧತಿಯಿಂದ ವ್ಯಕ್ತವಾಗುತ್ತದೆ. ಕೆರೆ ಕಟ್ಟುವವನಿಗೆ ಕಟ್ಟುಮಾನ್ಯ, ಕಟ್ಟುಕೊಡುಗೆ, ಬಿತ್ತುವತ್ತ, ದಸವಂದ ಹಾಗೂ ಇನ್ನಿತರ ತೆರಿಗೆಗಳಿಂದ ವಿನಾಯ್ತಿಗೊಳಿಸಿ ಕೆರೆಯ ರಕ್ಷಕನಿಗೆ ವಿಶೇಷ ಸವಲತ್ತುಗಳನ್ನು ನೀಡಿರುವುದು ಸಹ ತಿಳಿದುಬರುತ್ತದೆ. ಈ ಕಾರ್ಯವನ್ನು ವ್ಯಕ್ತಿ, ಸಂಘ ಸಂಸ್ಥೆಗಳು, ರಾಜ, ರಾಜನ ಪ್ರತಿನಿಧಿಗಳು ಹಾಗೂ ದೇವಾಲಯಗಳು ಸಹ ನಿರ್ವಹಿಸುತ್ತಿದ್ದವು. ಆಂಧ್ರಪ್ರದೇಶದಲ್ಲಿರುವ ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಸಲ್ಲಿಸುತ್ತಿದ್ದ ಆದಾಯವು ಬಹುತೇಕವಾಗಿ ಧನರೂಪದಲ್ಲಿರುತ್ತಿದ್ದು, ಆ ಧನವನ್ನು ಕೃಷಿಯ ಸುಧಾರಣೆಗೆ ತೊಡಗಿಸಲಾಗುತ್ತಿತ್ತೆಂದು ತಿರುಪತಿಯ ದೇವಸ್ಥಾನಗಳಲ್ಲಿ ದೊರೆತಿರುವ ಶಾಸನಗಳು ದಾಖಲಿಸಿವೆ. ಕೆರೆಗಳ ನಿರ್ವಹಣೆಗೆ ಕೆರೆ ಬಂಡಿಗಳನ್ನು ಸಹ ನಿಯೋಜಿಸಲಾಗಿದ್ದವು. ಇದರೊಂದಿಗೆ ಮೇಲೆ ಉಲ್ಲೇಖಿಸಿದ ತೆರಿಗೆಗಳಲ್ಲದೇ ಅನೇಕ ಇತರೆ ತೆರಿಗೆಗಳು ಸಹ ಪ್ರಚಲಿತದಲ್ಲಿದ್ದವು.

ವಿಜಯನಗರಪಟ್ಟಣವು ವಿಜಯನಗರ ಅರಸರ ರಾಜಧಾನಿಯಾಗಿದ್ದಿತು. ಅದು ಇಂದಿನ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿರುವ ಹಂಪೆಯೇ ಆಗಿದೆ. ಈ ತಾಲೂಕಿನಲ್ಲಿ ಇವರ ಕಾಲದ ಅರವತ್ತಕ್ಕೂ ಹೆಚ್ಚು ಕೆರೆಗಳು ದೊರಕಿವೆ. ಕೆರೆಗಳಲ್ಲದೆ ಅಣೆಕಟ್ಟುಗಳು, ಬಾವಿಗಳು ಮತ್ತು ಅರವಟ್ಟಿಗೆಗಳು ಸಹ ಈ ತಾಲೂಕಿನಲ್ಲಿ ಹೇರಳವಾಗಿದೆ. ಕೆರೆಯನ್ನು ಕುರಿತಂತೆ ಹೇಳುವುದಾದರೆ, ಇವರು ನಿರ್ಮಿಸಿದಂತಹ ಕೆರೆಗಳು, ಸಮುದ್ರಮಟ್ಟದಿಂದ ಸುಮಾರು ೫೦೦ ಮೀಟರ್‌ಗಳಷ್ಟು ಎತ್ತರದಲ್ಲಿವೆ. ಇವರ ಕಾಲದ ಕಾಲುವೆಗಳು ಸಹ ಒಂದು ನಿರ್ಧಾರಿತ ಮಟ್ಟದಲ್ಲಿಯೇ (ಭೂ ಕ್ಷಿತಿಜ ಮಟ್ಟ-Contour) ಸಾಗುವುದು. ಇವುಗಳು ಅವರ ಅಂದಿನ ಉನ್ನತ ಮಟ್ಟದ ತಾಂತ್ರಿಕ ಜ್ಞಾನವನ್ನು ನಮಗೆ ಪರಿಚಯಿಸಿಕೊಡುತ್ತದೆ. ಕೆರೆಯನ್ನು ನಿರ್ಮಾಣ ಮಾಡುವುದರೊಂದಿಗೆ, ತೂಬು, ಕೋಡಿ ಮತ್ತು ಕಾಲುವೆಗಳನ್ನು ಅತ್ಯಂತ ಕಲಾತ್ಮಕವಾಗಿ ರಚಿಸಿರುವುದು ಅವರ ಕಲಾಪ್ರಜ್ಞೆಯನ್ನು ನಮಗೆ ಪರಿಚಯಿಸುತ್ತದೆ.

ಕೆರೆಗಳನ್ನು ಕುರಿತಂತೆ ಕೆಲವು ನಂಬಿಕೆಗಳು ಮತ್ತು ಆಚರಣೆಗಳು ಅನಾದಿ ಕಾಲದಿಂದಲೂ ಇವೆ. ವಿಜಯಗರ ಕಾಲವು ಸಹ ಇದಕ್ಕೆ ಹೊರತಾಗಿರಲಿಲ್ಲ. ಒಂದು ಕೆರೆಯನ್ನು ನಿರ್ಮಿಸುವ ಕಾಲದಲ್ಲಿ ಆದ ಆಚರಣೆಗಳನ್ನು ನಿವಾರಿಸಲು, ನರಬಲಿ, ಪ್ರಾಣಿಬಲಿಗಳನ್ನು ನೀಡಿರುವುದು ಜನಪದ ಕತೆಯಾಗಿ ಜೀವಂತವಾಗಿರುವುದರೊಂದಿಗೆ, ವಿದೇಶೀಯ ಪ್ರವಾಸಿಗರ ಬರಹಗಳಲ್ಲಿಯೂ ಉಲ್ಲೇಖಿತವಾಗಿದೆ. ಹೊಸಪೇಟೆ ತಾಲೂಕಿನಲ್ಲಿಯೂ ಸಹ ಕೆರೆಗಳನ್ನು ಕುರಿತ ಅನೇಕ ಜನಪದ ನಂಬಿಕೆಗಳು ಮತ್ತು ಆಚರಣೆಗಳೂ ಇಂದಿಗೂ ಜೀವಂತವಾಗಿವೆ.

ಪ್ರಾಚೀನ ಭಾರತದಲ್ಲಿ ಕೆರೆಯನ್ನು ನಿರ್ಮಿಸಿ, ಕೃಷಿಗೆ ಅನುವು ಮಾಡಿಕೊಟ್ಟಿರುವ ನಮ್ಮ ಪೂರ್ವಜರ ಕಾರ್ಯಗಳು, ಇಂದಿಗೂ ಜೀವಂತವಾಗಿರುವುದನ್ನು ನಾವು ಭಾರತದಾದ್ಯಂತ ನೋಡಬಹುದು. ಆದಿ ಇತಿಹಾಸ ಕಾಲದ ಆರಂಭದಿಂದಲೂ ಅನೇಕ ಅರಸು ಮನೆತನಗಳು ಕೆರೆಗಳನ್ನು ಕಟ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದು, ಒಂದು ಹೊಸ ಪರಂಪರೆಗೆ ನಾಂದಿ ಹಾಕಿದರು. ಈ ಪರಂಪರೆಯು ಅವ್ಯಾಹತವಾಗಿ ಸಾಗುತ್ತಲೇ ಬಂದಿದ್ದು, ಮಧ್ಯಕಾಲೀನ ಅರಸುಮನೆತನಗಳಲ್ಲಿ ಒಂದಾದ ವಿಜಯನಗರ ಕಾಲದವರೆಗೆ ಸಾಗಿಬಂದಿರುವುದು ಒಂದು ವಿಶೇಷ ಸಂಗತಿಯೇ ಸರಿ.

ಕೆರೆಗಳು, ಬಾವಿಗಳು, ಅಣೆಕಟ್ಟುಗಳು ಮುಂತಾದ ನೀರಾವರಿ ರಚನೆಗಳು ನಮ್ಮ ಪೂರ್ವಜರು ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಕಾರಣಗಳಿಗಾಗಿ ನಿರ್ಮಿಸಿದ್ದು, ಅವುಗಳ ಪ್ರಯೋಜನವನ್ನು ಅಂದಿನ ಜನರು ಪಡೆದಿರುವುದು ನಿರ್ವಿವಾದದ ಸಂಗತಿಯಾಗಿದ್ದು, ಅಂತಹ ಹಲವಾರು ರಚನೆಗಳು ಇಂದಿಗೂ ಬಳಕೆಯಲ್ಲಿವೆ. ನಮ್ಮ ಪೂರ್ವಜರು ನಿಸರ್ಗವನ್ನು ಅಭ್ಯಸಿಸಿ, ಅದಕ್ಕನುಗುಣವಾಗಿ ನೀರಾವರಿ ರಚನೆಗಳನ್ನು ಮಾಡುತ್ತಿದ್ದರು. ಆದರೆ, ಇಂದು ಅವರ ತಂತ್ರಜ್ಞಾನವನ್ನು ನಾವು ಅರಿಯದೇ ಹೊಸದಾದ ತಂತ್ರಜ್ಞಾನಕ್ಕೆ ಮೊರೆಹೊಕ್ಕು ಪಾರಂಪರಿಕವಾಗಿ ಬಂದಿರುವ ತಂತ್ರಜ್ಞಾನವನ್ನು ಅಲಕ್ಷಪಡಿಸಿದ್ದೇವೆಯೇ ಎಂದು ಭಾಸವಾಗುತ್ತದೆ. ಆದುದರಿಂದ ಅಂದಿನ ತಂತ್ರಜ್ಞಾನವನ್ನು ನಾವು ಇಂದಿನ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ನಮ್ಮ ಆರ್ಥಿಕ ಬೊಕ್ಕಸವನ್ನು ಬರಿದು ಮಾಡದೇ ಇರಬಹುದು ಹಾಗೂ ಪರಿಸರವನ್ನೂ ರಕ್ಷಿಸಿಕೊಳ್ಳಬಹುದು ಎಂದು ದೃಢವಾಗಿ ಹೇಳಬಹುದು.