ಕೆರೆಗಳನ್ನು ಕಟ್ಟಿಸುವುದಕ್ಕೆ ಒಂದು ಪ್ರಮುಖ ಕಾರಣ ಜಲವನ್ನು ಸಂಗ್ರಹಿಸಿ ತಮಗೆ ಬೇಕೆಂದಾಗ ಬಳಸಿಕೊಂಡು ವ್ಯವಸಾಯವನ್ನು ಮಾಡುವುದಾದರೆ, ಕೆರೆಗಳನ್ನು ಕಟ್ಟಿಸುವುದು ಪ್ರಜಾಹಿತಾತ್ಮಕ ಕಾರ್ಯವೆಂದು ಪರಿಗಣಿಸಿ ಈ ಕಾರ್ಯವನ್ನು ಮಾಡಿದವನಿಗೆ ಇಹದಲ್ಲಿ ಮತ್ತು ಪರಲೋಕದಲ್ಲಿ ಸದ್ಗತಿಯು ದೊರೆಯುವುದೆಂದು ಪ್ರಾಚೀನ ಭಾರತದ ಜನರಲ್ಲಿ ಇದ್ದ ನಂಬಿಕೆಯೇ ಮತ್ತೊಂದು ಕಾರಣವಾಗಿದೆ. ಕೆರೆ ಕಟ್ಟುವುದು ಹಲವು ಪುಣ್ಯ ಕೆಲಸಗಳಲ್ಲಿ ಒಂದು ಎಂದು ಅಂದಿನ ಜನಸಾಮಾನ್ಯರ ಮನಸ್ಸಿನಲ್ಲಿ ಬೇರೂರಿದ್ದ ವಿಷಯ. ಆದುದರಿಂದ ಜನರು ಈ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು, ಈ ಕಾರಣಗಳಿಂದಾಗಿ ಧರ್ಮದ ಜಾಡಿನೆಡೆಯಲ್ಲಿ ಜನರು ನಡೆಯುತ್ತಿದ್ದು, ಅವರಿಗೆ ಅರಿವಿಲ್ಲದೆಯೇ ಕೆಲವು ನಂಬಿಕೆಗಳು ಮತ್ತು ಆಚರಣೆಗಳು ಅವರ ದೈನಂದಿನ ಜೀವನದಲ್ಲಿ ಹೊಸೆದುಕೊಂಡಿರುವುದನ್ನು ಅಂದಿನ ಸಾಮಾಜಿಕ ಮತ್ತು ಧಾರ್ಮಿಕ ಜೀವನವನ್ನು ಗಮನಿಸಿದಾಗ ನಮಗೆ ತಿಳಿದುಬರುತ್ತದೆ. ವಿಜಯನಗರ ಕಾಲದಲ್ಲಿಯೂ ಸಹ ಕೆರೆಗಳನ್ನು ಕುರಿತಂತೆ ಕೆಲವು ನಂಬಿಕೆ ಮತ್ತು ಆಚರಣೆಗಳು ಇದ್ದವು. ಅಂತಹ ಕೆಲವು ನಂಬಿಕೆ ಮತ್ತು ಆಚರಣೆಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಕೆರೆಯ ಬಗೆಗೆ ಇರುವ ಭಾರತದ ಅತ್ಯಂತ ಪ್ರಾಚೀನವಾದ ಉಲ್ಲೇಖವು ಸಂಖ್ಯಾಯನ ಗೃಹ್ಯಸೂತ್ರದಲ್ಲಿದೆ. ಬಾವಿಯನ್ನು ಅಥವಾ ಕೊಳವನ್ನು ಬಳಸುವ ಮುನ್ನ ವೈದಿಕ ಆಚರಣೆಗಳನ್ನು ನಡೆಸಿ ಋಗ್ವೇದದ ಮಂತ್ರಗಳನ್ನು ಉಚ್ಚರಿಸಿ ಮಳೆಯ ಅಧಿದೇವತೆಯಾದ ವರುಣನನ್ನು ಮತ್ತು ಇತರ ದೇವತೆಗಳನ್ನು ಸ್ತುತಿಸಿದ ನಂತರದಲ್ಲಿಯೇ ಕೊಳ ಮತ್ತು ಬಾವಿಗಳನ್ನು ಉಪಯೋಗಿಸಬೇಕು ಎಂದು ಗ್ರಂಥವು ತಿಳಿಸುತ್ತದೆ. ಅಗ್ನಿ ಪುರಾಣವು ಸಹ ಈ ಅಭಿಪ್ರಾಯವನ್ನು ಅನುಮೋದಿಸುತ್ತದೆ ಹಾಗೂ ಕೆಲವು ವಿಧಿಗಳನ್ನು ಮತ್ತು ಆಚರಣೆಗಳನ್ನು ಕುರಿತ ಮಾಹಿತಿಗಳನ್ನು ನೀಡುತ್ತದೆ. ಅದರಂತೆ ಕೆರೆ, ಬಾವಿ ಮುಂತಾದ ಜಲಕ್ಕೆ ಸಂಬಂಧಿಸಿದ ರಚನೆಗಳನ್ನು ಕೈಗೆತ್ತಿಕೊಂಡಾಗ, ಅಂತಹ ಜಾಗದಲ್ಲಿ ಎಂಟು ಮಡಕೆಗಳಲ್ಲಿ ಎಂಟು ಬಗೆಯ ನೀರನ್ನು ತುಂಬಿಸಿ, ಎಂಟು ದಿಕ್ಕುಗಳಲ್ಲಿ ಅವುಗಳನ್ನು ಸ್ಥಾಪಿಸಬೇಕು. ಅಷ್ಟದಿಕ್ಪಾಲಕರುಗಳನ್ನು ಪೂಜಿಸಿ, ಅಷ್ಟದಿಕ್ಪಾಲರಲ್ಲಿ ಒಬ್ಬನಾದ ಮಳೆಯ ಅಧಿದೇವತೆ ವರುಣನಮೂರ್ತಿಯನ್ನು ಊರಿನಲ್ಲಿ ಮೆರವಣಿಗೆ ಮಾಡಿ ನಂತರ ಕೊಳದ ನೀರಿನಲ್ಲಿ ಮುಳುಗಿಸಬೇಕು (ಸ್ಥಾಪಿಸಬೇಕು) ಎಂದು ತಿಳಿಸುತ್ತದೆ.

[1] ಈ ರೀತಿಯಾಗಿ ವಿಧಿಗಳನ್ನು ಆಚರಿಸಿದವನಿಗೆ ಅಶ್ವಮೇಧಯಾಗವನ್ನು ಮಾಡಿದ ಫಲವು ಲಭಿಸುತ್ತದೆ ಎಂದು ಪರಿಗಣಿಸಲಾಗಿತ್ತು.[2]

ಭಾರತದಲ್ಲಿ ಅಂದಿನಿಂದ ಇಂದಿನವರೆಗೆ ಯಾವುದೇ ಮುಖ್ಯ ಕೆಲಸವನ್ನು ಮಾಡಬೇಕಾದಲ್ಲಿ ಪ್ರಶಸ್ತ ದಿನ ಮತ್ತು ಸಮಯವನ್ನು ಆಯ್ಕೆ ಮಾಡಿ, ಕೆಲಸವನ್ನು ಕೈಗೊಳ್ಳುವುದು ವಾಡಿಕೆಯಲ್ಲಿದೆ. ಕೆರೆಗಳನ್ನು ಕಟ್ಟಲು ಮತ್ತು ಅದನ್ನು ಬಳಸಲು ಸಹ ಒಳ್ಳೆಯ ದಿನ ಮತ್ತು ಮುಹೂರ್ತವನ್ನು ನೋಡುತ್ತಿದ್ದರು. ಈ ವಿಷಯವನ್ನು ಕುರಿತು ಉಲ್ಲೇಖಿಸುವ ಎರಡು ಶಾಸನಗಳನ್ನು ಇಲ್ಲಿ ಉದಾಹರಿಸಬಹುದು. ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿರುವ ಪೊರುಮಾಮಿಲ್ಲ ಕೆರೆಯನ್ನು ಮೊದಲನೆಯ ಬುಕ್ಕರಾಯನ ಕಾಲದಲ್ಲಿ (ಕ್ರಿ.ಶ.೧೩೬೯) ಕಟ್ಟಲಾಯಿತು. ಈ ಶಾಸನವು ಕೆಲವು ಅತ್ಯಂತ ಮುಖ್ಯ ವಿಚಾರಗಳನ್ನು ತಿಳಿಸುತ್ತದೆ. ಅವುಗಳಲ್ಲಿ ಕೆರೆಯನ್ನು ಒಂದು ಪ್ರಶಸ್ತ ದಿನದ ಶುಭ ಮುಹೂರ್ತದಲ್ಲಿ ಕಟ್ಟಲಾಯಿತು. ಸೌಮ್ಯ ಸಂವತ್ಸರ, ಕಾರ್ತಿಕ ಶುದ್ಧ ೧೪ ನೆಯ ದಿನ ಗುರುವಾರದ ಪುಷ್ಯ ನಕ್ಷತ್ರ, ಕರ್ಕಾಟಕ ಲಗ್ನದ ದಿನದಂದು, ಎಲ್ಲಾ ಗ್ರಹಗಳು ಅನುಕೂಲಕರವಾಗಿರುವಂದು ಈ ಕೆರೆಯನ್ನು ಕಟ್ಟಲಾಯಿತು ಎಂದು ಶಾಸನವು ದಾಖಲಿಸಿದೆ.[3] ಈ ವಿವರಗಳು ಬಹುಶಃ ಕೆರೆಯನ್ನು ಬಳಸಲು ಪ್ರಾರಂಭಿಸಿದ ದಿನವಿರಲಿಕ್ಕೂ ಸಾಧ್ಯತೆಗಳುಂಟು.

ಎರಡನೆಯ ಹರಿಹರನ ಕಾಲದ ಒಂದು ಶಾಸನವು ತುಮಕೂರು ಜಿಲ್ಲೆಯಲ್ಲಿ ದೊರೆತಿದ್ದು ಕುಣಿಗಲ್ಲು ಕೆರೆಯ ತೂಬನ್ನು ಕ್ರಿ.ಶ. ೧೩೯೪ರಲ್ಲಿ ಮಂತ್ರಿವರ್ಯನಾದ ಇರುಗಪ್ಪ ದಣ್ಣಾಯಕನು ಕಟ್ಟಿಸಿದನೆಂದು ಉಲ್ಲೇಖಿಸುತ್ತದೆ. ಈ ತೂಬಿನ ಕಲ್ಲನ್ನು ಪ್ರಶಸ್ತವಾದ ಶುಭಲಗ್ನದಲ್ಲಿ ಸ್ಥಾಪಿಸಲಾಯಿತು ಎಂದು ತಿಳಿಸುತ್ತಾ ಅದರ ವಿವರಗಳನ್ನು ಈ ರೀತಿಯಾಗಿ ನೀಡುತ್ತದೆ. ಶಕವರ್ಷ ೧೩೧೬ರ ಭಾವನಾಮ ಸಂವತ್ಸರದ ಭಾದ್ರಪದ ಶುಕ್ಲಪಕ್ಷದ ಮೊದಲ ದಿನದಂದು ಸೂರ್ಯೋದಯವಾಗಿ ಏಳು ಘಟಕ ಸಂದ ನಂತರ ಧನುರ್ ಲಗ್ನದಲ್ಲಿ ತೂಬನ್ನು ಸ್ಥಾಪಿಸಲಾಯಿತು ಎಂದು ದಾಖಲಿಸಿದೆ. ಈ ಶಾಸನವು ತೂಬಿರುವ ಕಲ್ಲಿನ ಮೇಲೆಯೇ ಇರುವುದು ಅತ್ಯಂತ ಕುತೂಹಲಕಾರಿಯಾದ ಸಂಗತಿ.[4]

ಋಗ್ವೇದ ಮತ್ತು ಯಜುರ್ವೇದಗಳು ಕೋಟೆ, ಊರ ಹೆಬ್ಬಾಗಿಲು ಮತ್ತು ಅಣೆಕಟ್ಟು (ಕೆರೆಗಳನ್ನು ಸಹ ಒಳಗೊಂಡು) ಕಟ್ಟುವಾಗ ನರಬಲಿಯನ್ನು ನೀಡಿ, ಬಲಿಯಾದ ವ್ಯಕ್ತಿಯ ದೇಹವನ್ನು ಅಂತಹ ರಚನೆಗಳ ಅಡಿಪಾಯದಲ್ಲಿಯೇ ಹೂಳಬೇಕು ಎಂದು ತಿಳಿಸುತ್ತವೆ.[5]

ಜನಪದರಲ್ಲಿ ಇಂತಹ ನಂಬಿಕೆಗಳು ಮತ್ತು ಆಚರಣೆಗಳು ಇದ್ದವು. ಅವುಗಳು ಸಾಹಿತ್ಯ ರೂಪವನ್ನು ಪಡೆದು ಜನಪದಗೀತೆಗಳಾಗಿ ಇಂದಿಗೂ ಉಳಿದುಬಂದಿವೆ. ಕನ್ನಡದ ಒಂದು ಜನಪದಗೀತೆಯಂತೆ ಕಲ್ಲನಕೇರಿಯ ಮಲ್ಲನಗೌಡನೆಂಬುವನು ಒಂದು ಕೆರೆಯನ್ನು ಕಟ್ಟಿಸುತ್ತಾನೆ. ಆದರೆ ಆ ಕೆರೆಯ ಏರಿಯು ಬಲವಾಗಿ ನಿಲ್ಲದೆ ಒಡೆದುಹೋಗುತ್ತದೆ. ಪ್ರತಿ ಬಾರಿಯೂ ಸರಿಪಡಿಸಿದ ನಂತರವೂ ಏರಿಯು ಒಡೆಯುತ್ತಲೇ ಇರುತ್ತದೆ. ಈ ಕಾರಣದಿಂದ ಮಲ್ಲನಗೌಡನು ಒಬ್ಬ ಜೋತಿಷ್ಯನನ್ನು ಕಂಡು ಇದಕ್ಕೆ ಪರಿಹಾರವನ್ನು ಸೂಚಿಸಲು ಕೋರುತ್ತಾನೆ. ಜೋತಿಷ್ಯನು ಕೆರೆಗೆ ನರಬಲಿಯನ್ನು ನೀಡಿದ ಪಕ್ಷದಲ್ಲಿ ಈ ಕೆರೆಯ ಏರಿಯು ಭದ್ರವಾಗಿರುತ್ತದೆ ಎಂದು ತಿಳಿಸುತ್ತಾನೆ. ಈ ಕಾರ್ಯಕ್ಕೆ ಊರ ಜನರು ಮುಂದೆ ಬರುವುದಿಲ್ಲ. ಆಗ ಎಲ್ಲರ ಒಳಿತನ್ನು ಗಮನದಲ್ಲಿರಿಸಿಕೊಂಡು ಮಲ್ಲನಗೌಡನ ಕಿರಿಯ ಸೊಸೆ ಭಾಗೀರಥಿ ಕೆರೆಗೆ ಆಹುತಿಯಾಗುತ್ತಾಳೆ. ನಂತರದಲ್ಲಿ ಕೆರೆ ಏರಿಯು ಭದ್ರವಾಗಿ ನಿಲ್ಲುತ್ತದೆ. ಜನರು ಆಹುತಿಯಾದ ಭಾಗೀರಥಿಗೆ ಒಂದು ಚಿಕ್ಕ ಗುಡಿಯನ್ನು ಕೆರೆಯ ಸಮೀಪದಲ್ಲಿ ಕಟ್ಟಿ ಅವಳ ಮೂರ್ತಿಯನ್ನು ಸ್ಥಾಪಿಸಿ ಪೂಜಿಸುತ್ತಾರೆ ಎಂಬುದು ಜನಪದಗೀತೆಯ ಸಾರವು.[6]

ಇದೇ ರೀತಿಯಾದ ಕಥೆಗಳು ಬಳ್ಳಾರಿ ಜಿಲ್ಲೆಯ ಕೆಲವೆಡೆಗಳಲ್ಲಿ ಪ್ರಚಲಿತವಿರುವುದನ್ನು ಕಾಣಬಹುದು. ಹಣಸಿಯ ಕೆರೆ ಸಮೀಪ ಒಂದು ಚಿಕ್ಕ ಗುಡಿಯನ್ನು ಕನ್ಯಾವೀರಮ್ಮನ ಗುಡಿಯೆನ್ನುತ್ತಾರೆ. ಈಕೆ ಕನ್ಯೆಯಾಗಿದ್ದು, ಕೆರೆಯ ಉಳಿವಿಗೆ ತನ್ನ ಪ್ರಾಣವನ್ನು ನೀಡಿದಳೆಂದು ಜನಪದರು ತಿಳಿಸುತ್ತಾರೆ. ಅಲ್ಲಿ ವಾರ್ಷಿಕ ಉತ್ಸವವನ್ನು ಆಚರಿಸುತ್ತಾರೆ. ಕೆರೆಯು ತುಂಬಿದಾಗ ಈ ಉತ್ಸವವನ್ನು ತಪ್ಪದೆ ಆಚರಿಸುತ್ತಾರೆ. ಹೊಸಪೇಟೆ ತಾಲೂಕಿನಲ್ಲಿರುವ ದಣ್ಣಾನಾಯಕನ ಕೆರೆಯನ್ನು ಕುರಿತು ಸಹ ಇದೇ ರೀತಿಯಾದ ಕಥೆಯನ್ನು ಅಲ್ಲಿಯ ಜನರು ತಿಳಿಸುತ್ತಾರೆ.[7] ಕೆರೆಯ ಸಮೀಪದಲ್ಲಿ ಒಂದು ಚಿಕ್ಕ ಗುಡಿಯಿದ್ದು, ಇದನ್ನು ಕನ್ನೇರಮ್ಮ ಎಂದು ತಿಳಿಸಿ, ವರ್ಷದಲ್ಲಿ ಒಮ್ಮೆ ಕನ್ನೇರಮ್ಮನಿಗೆ ಉತ್ಸವ ನಡೆಸುವುದಾಗಿ ತಿಳಿಸುತ್ತಾರೆ. ಈ ಊರಿನಲ್ಲಿ ಕನ್ನೇರಮ್ಮನ ವಂಶಜರು ಎಂಬುದಾಗಿ ಒಂದು ಕುಟುಂಬವು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಆ ಕುಟುಂಬದವರೇ ವಾರ್ಷಿಕ ಉತ್ಸವವನ್ನು ಆಚರಿಸುತ್ತಾರೆ. ಕನ್ನೇರಮ್ಮನನ್ನು ಕುರಿತ ಒಂದು ಜನಪದಗೀತೆಯನ್ನು ಸಹ ಇವರು ಹಾಡುತ್ತಾರೆ.

ವಿಜಯನಗರ ಕಾಲದಲ್ಲಿಯೂ ನರಬಲಿಯು ಪ್ರಚಲಿತವಿತ್ತೆಂಬುದು ಕೆಲವು ಮೂಲಗಳಿಂದ ತಿಳಿದುಬರುತ್ತದೆ. ಕ್ರಿ.ಶ. ೧೩೬೪ರಲ್ಲಿ ಬುಕ್ಕರಾಯನ ಮಂತ್ರಿಯಾದ ಚಿಕ್ಕ ಒಡೆಯನು ಕೆರೆಯ ಏರಿಯನ್ನು ನಿರ್ಮಿಸುವ ಸಮಯದಲ್ಲಿ ಒಬ್ಬ ಬಾಲಕಿಯನ್ನು ಬಲಿ ಕೊಟ್ಟಿರುವುದಾಗಿ ದಾಖಲಾಗಿದೆ.[8] ವಿಜಯನಗರ ಕಾಲದಲ್ಲಿ ಅಂಧ್ರಪ್ರದೇಶದಲ್ಲಿಯೂ ಕೆರೆಗಳಿಗೆ ಜನರನ್ನು ಬಲಿಕೊಡಲಾಗುತ್ತಿತ್ತು ಎಂದು ಅಲ್ಲಿಯ ಅನೇಕ ಜನಪದಕತೆಗಳು ತಿಳಿಸುತ್ತವೆ. ಕೃಷ್ಣದೇವರಾಯನು ನಿರ್ಮಿಸಿದಂತಹ ಬಹುದೊಡ್ಡ ಕೆರೆಯಾದ ರಾಯರಕೆರೆಯನ್ನು ನಿರ್ಮಿಸುವಾಗ ಕೆರೆಯ ಏರಿಯು ಪದೇ ಪದೇ ಒಡೆಯುತ್ತಿರಲು ಅವನು ಬ್ರಾಹ್ಮಣರನ್ನು ಕಾರಣವೇನೆಂದು ವಿಚಾರಿಸುತ್ತಾನೆ. ಅದಕ್ಕೆ ಅವರು ನರಬಲಿ, ಕುದುರೆ ಮತ್ತು ಎಮ್ಮೆಗಳನ್ನು ಬಲಿ ನೀಡಬೇಕೆಂದು ತಿಳಿಸುತ್ತಾರೆ. ಅದರಂತೆ ರಾಜನು ೬೦ ಜನರನ್ನು, ಕುದುರೆ ಹಾಗೂ ಎಮ್ಮೆಗಳನ್ನು ಬಲಿಕೊಡುತ್ತಾನೆ ಎಂಬ ವಿಷಯ ವಿದೇಶಿಯರ ಬರಹಗಳಲ್ಲಿ ದಾಖಲಾಗಿದೆ.[9]

ಹಂಪಿಯಲ್ಲಿ (ವಿಜಯನಗರ ಪಟ್ಟಣ) ಗಚ್ಚುಗಾರೆಯ ಸಾರ್ವಜನಿಕ ಸ್ನಾನಗೃಹವಿದೆ. ಅಲ್ಲಿ ಕೈಗೊಂಡ ಉತ್ಖನನದಲ್ಲಿ ಮಾನವನ ಕೆಲವು ಮೂಳೆಗಳು ಮತ್ತು ತಲೆಬುರುಡೆಯು ದೊರೆಯಿತೆಂದು ಅಲೆಕ್ಸಾಂಡರ್ ರಿಯಾ ತನ್ನ ೧೯೦೪-೦೫ ರ ವಾರ್ಷಿಕ ವರದಿಯಲ್ಲಿ ಬರೆದಿದ್ದಾರೆ ಮತ್ತು ಮೂಳೆಗಳ ಆಧಾರದಿಂದ ಆ ವ್ಯಕ್ತಿಯು ಸಾಧಾರಣ ಎತ್ತರದವನಾಗಿದ್ದು, ಬಹುಶಃ ಅವನನ್ನು ಕೊಳ ಕಟ್ಟುವ ಸಮಯದಲ್ಲಿ ಬಲಿ ನೀಡಲಾಗಿರಬೇಕು ಎಂದು ಅಭಿಪ್ರಾಯಪಡುತ್ತಾರೆ.[10]

ಹೊಸಪೇಟೆ ತಾಲೂಕಿನಲ್ಲಿ ಈಗಲೂ ಕೆಲವು ಆಚರಣೆಗಳು ಬಳಕೆಯಲ್ಲಿವೆ. ಒಂದು ಕೆರೆಯು ತುಂಬಿದಾಗ ಆ ಊರಿನ ಜನರು ಕೆರೆಯ ನೀರಿಗೆ ಪೂಜೆಯನ್ನು ಸಲ್ಲಿಸಿ ಒಂದು ಕುರಿಯನ್ನು ಬಲಿ ಕೊಡುತ್ತಾರೆ. ಈ ಆಚರಣೆಯನ್ನು ಗಂಗಮ್ಮನನ್ನು ಮಾಡುವುದು ಎಂದು ಕರೆಯುತ್ತಾರೆ. ತಿಮ್ಮಲಾಪುರದ ಗ್ರಾಮಸ್ಥರು ಈ ಆಚರಣೆಯನ್ನು ವಾರ್ಷಿಕವಾಗಿ ಮಾಡುವುದಿಲ್ಲ. ಕೆರೆಯು ತುಂಬಿದಾಗ ಮಾತ್ರವೇ ಗಂಗಮ್ಮನನ್ನು ಮಾಡುತ್ತಾರೆ. ಸುಮಾರು ಹತ್ತು ವರ್ಷಗಳ ಹಿಂದೆ ಈ ಆಚರಣೆ ಮಾಡಲಾಗಿತ್ತು ಮತ್ತು ಇತ್ತೀಚಿನ ದಿನಗಳಲ್ಲಿ ಗಂಗಮ್ಮನನ್ನು ಮಾಡಲಿಲ್ಲವೆಂದು ಕ್ಷೇತ್ರಕಾರ್ಯ ಕೈಗೊಂಡಾಗ ಜನರು ತಿಳಿಸಿರುವರು.

ದಣ್ಣಾಯಕನು ಮಡಿದಾಗ ಅವನ ಕೋರಿಕೆಯಂತೆ ಅವನ ಭೌತಿಕ ದೇಹವನ್ನು ರಾಯರ ಕೆರೆಯ ಏರಿಯಲ್ಲಿ ಹೂಳಲಾಗಿದೆ ಎಂದು ಜನಪದರು ನಂಬುತ್ತಾರೆ. ಇದರ ಬಗೆಗೆ ಯಾವುದೇ ವಿಧದ ಆಧಾರಗಳು ಅಥವಾ ಪುರಾವೆಗಳಾಗಲಿ ರಾಯರಕೆರೆಯ ಸುತ್ತಮುತ್ತ ಕಂಡುಬರುವುದಿಲ್ಲ. ಭಾರತದ ವಿವಿಧ ರಾಜ್ಯಗಳಲ್ಲಿಯೂ ಕೆರೆ, ಕುಂಟೆ, ಬಾವಿ ಮುಂತಾದ ಜಲಸಂಗ್ರಾಹಕಗಳನ್ನು ಕುರಿತ ಆಚರಣೆಗಳು ಇದ್ದವೆಂದು ಅಧಿಕವಾಗಿ ಜಾನಪದ ಮೂಲಗಳಿಂದಲೇ ತಿಳಿದುಬರುತ್ತವೆ.[11][1] ಐಎಸ್‌ವಿಇ, ಪು. ೧೩೧

[2] ಅದೇ

[3] ಎಪ್ ಇಂಡ್ ಸಂ. XIV, ಪು. ೧೦೮

[4] ಐಎಸ್‌ವಿಇ, ಪು. ೧೩೨, ಎಂಎಆರ್, ೧೯೧೯, ಪು. ೩೩

[5] ಐಎಸ್‌‌ವಿಇ, ಪು. ೧೩೨

[6] ಅದೇ, ಪು. ೧೩೨-೩೩

[7] ನೋಡಿ, ಪುರುಷೋತ್ತಮ ಬಿಳಿಮಲೆ (ಸಂ), ಹೊಸಪೇಟೆ ತಾಲೂಕು ದರ್ಶನ, ಕನ್ನಡ ವಿಶ್ವವಿದ್ಯಾಲಯ, ಹಂಪಿಗೆ ಸಲ್ಲಿಸಿರುವ ಯೋಜನೆ.

[8] ಐಎಸ್‌ವಿಇ, ಪು. ೧೩೩

[9] ವಸುಂಧರಾ ಫಿಲಿಯೋಜ್, ದಿ ವಿಜಯನಗರ ಎಂಪೈರ್ (ಡಿ. ಪಯಾಸ್ ಅಂಡ್ ಎಫ್, ನ್ಯೂನಿಜ್), ಪು. ೨೭

[10] ಅಲೆಕ್ಸಾಂಡರ್ ರಿಯಾ (ಸಂ), ಆನ್ಯುವೆಲ್ ರಿಪೋರ್ಟ ಆಫ್ ದಿ ಅರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ೧೯೦೪-೦೫, ಪು. ೩

[11] ನ್ಯೂಬಾರರ್, ಜೆ. ಜೆ. ದಿ ಸ್ಟೆಪ್ ವೆಲ್ಸ್ ಆಫ್ ಗುಜರಾತ್