ಕೆಱಯಂ ಕಟ್ಟಿಸು ಬಾವಿಯಂ ಸವೆಸು ದೇವಾಗರಮಂ ಮಾಡಿಸ |
ಜ್ಜೆಱೆಯೊಳ್ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗ್ಗಿಂಬುಕೆಯ್ ನಂಬಿದ |
ರ್ಗ್ಗೆಱೆವೆಟ್ಟಾಗಿರು ಶಿಷ್ಟರಂ ಪೊರೆಯೆನುತ್ತಿಯೆಂತೆಲ್ಲವಂ ಪಿಂದೆ ತಾ |
ಯೆಱೆದಳ್ವಾಲೆಱೆವಂದು ತೊಟ್ಟು ಕಿವಿಯೊಳಂ ಲಕ್ಷ್ಮೀಧರಾಮಾತ್ಯನಾ ||

ಈ ಮೇಲೆ ಉಲ್ಲೇಖಿಸಿದ ಪದ್ಯವನ್ನು ವಿಜಯನಗರದ ಅರಸ ಪ್ರೌಢ ಪ್ರತಾಪ ದೇವರಾಯನ (ಕ್ರಿ.ಶ. ೧೪೦೬-೨೨) ಮಂತ್ರಿ ಲಕ್ಷ್ಮೀಧರನು ಕೂಸಾಗಿದ್ದಾಗ ಅವನ ತಾಯಿ ಹಾಡಿ ಹಾಲೆರೆಯುತ್ತಿದ್ದಳೆಂದು ಹಂಪೆಯ ಕಡಲೆಕಾಳು ಗಣೇಶನ ಗುಡಿಯ ಮುಂದಿನ ಅಗಸೆಯಲ್ಲಿರುವ ಕ್ರಿ. ಶ. ೧೪೧೧ ಶಾಸನವು ತಿಳಿಸುತ್ತದೆ. (ಎಸ್‌.ಐ.ಐ.IV ನಂ. ೨೬೭). ಇದೇ ಶಾಸನವು ದೇವರಾಯನ ಮಂತ್ರಿಗಳಾದ ಮಾದರಸ ಮತ್ತು ಸಾಯಣ್ಣರ ಬಗೆಗೆ ಈ ಕೆಳಕಂಡಂತೆ ಉಲ್ಲೇಖಿಸುತ್ತದೆ.

ತೋಡದ ಬಾವಿಯಿಲ್ಲ ಮರಕಟ್ಟದ ಪೇರ್ಗ್ಗರೆಯಲ್ಲ ಲೀಲೆಯಂ |
ಮಾಡದ ದೇವತಾಭವನಮಿಲ್ಲೊಲವಿಂ ಬಿಡದಗ್ಗ್ರಹಾರಮಿ |
ಲ್ಲಾಡಲದೇನೋ ಭೂ ಭುವನಭುಭುಕಮಾದುದು ಕೀರ್ತಿಂಬಾವು ನಾ |
ಪಾಡಿಯೆ ಸೈಪು ಮಾದರಸ ಸಾಯಣರೆಂಬ ಮಹಾಪ್ರಧಾನರಾ ||

ಈ ಮೇಲೆ ಉಲ್ಲೇಖಿಸಿದ ಎರಡು ಪದ್ಯಗಳಿಂದ ಭಾರತದಲ್ಲಿ, ಮುಖ್ಯವಾಗಿ ಮಧ್ಯಕಾಲೀನ ಭಾರತದಲ್ಲಿ, ನೀರಾವರಿ ವ್ಯವಸ್ಥೆ, ಕೆರೆಯನ್ನು ಕಟ್ಟಿಸುವುದು ಮತ್ತು ಬಾವಿಗಳನ್ನು ತೋಡಿಸುವುದು ಅತಿ ಮುಖ್ಯವಾದ ಕೆಲಸವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಈ ಕೆಲಸವನ್ನು ಮಾಡುವುದು ಸಾಮಾಜಿಕ ಹಾಗೂ ನೈತಿಕ ಜವಾಬ್ದಾರಿಯಾಗಿತ್ತೆಂದೂ ಸಹ ತಿಳಿಯಬಹುದು. ಭಾರತದಲ್ಲಿ ಪ್ರಾಗೈತಿಹಾಸಿಕ ಕಾಲದಿಂದ ಮುಖ್ಯವಾಗಿ ತಮಿಳುನಾಡಿನಲ್ಲಿ ಕಂಡುಬರುವ ಬೃಹತ್ ಶಿಲಾಯುಗ ಸಂಸ್ಕೃತಿಯ ಕಾಲಘಟ್ಟದಿಂದ ಕೆರೆಯನ್ನು ಕಟ್ಟಿಸಿ ಜಲವನ್ನು ಸಂಗ್ರಹಿಸಿ ಬಳಸಿಕೊಳ್ಳುತ್ತಿದ್ದರೆಂಬುದು ಪುರಾತತ್ವ ಶೋಧನೆಗಳಿಂದ ತಿಳಿದುಬಂದಿದೆ. ಆದಿ ಇತಿಹಾಸ ಕಾಲದಿಂದಲೂ ಈ ಕೆಲಸವನ್ನು ಆಸ್ಥೆಯಿಂದ ನಡೆಯಿಸಿಕೊಂಡು ಬಂದಿರುವುದು ಗಮನಾರ್ಹ. ಈ ಕಾರ್ಯವು ಶತಮಾನಗಳಿಂದ ಸತತವಾಗಿ ಸಾಗುತ್ತಲೇ ಬಂದಿದ್ದು, ಮಧ್ಯಕಾಲೀನ ಭಾರತದಲ್ಲಿ ಅದು ತನ್ನ ಗರಿಷ್ಠ ಮಟ್ಟವನ್ನು ತಲುಪಿತು ಎಂದರೆ ತಪ್ಪಾಗಲಾರದು. ಅನೇಕ ಪ್ರಾಚೀನ ಕೆರೆಗಳು ಇಂದಿಗೂ ಸಹ ಅತ್ಯಂತ ಸಮರ್ಪಕವಾಗಿ ಬಳಕೆಯಾಗುತ್ತಲಿವೆ. ಇಂತಹ ಪ್ರಾಚೀನ ನೀರಾವರಿ ವ್ಯವಸ್ಥೆ ಕುರಿತಂತೆ ಅನೇಕ ಸಂಶೋಧನೆಗಳು ನಡೆದುಬಂದಿವೆ. ಈ ನಿಟ್ಟಿನಲ್ಲಿ ಹಲವಾರು ವಿದ್ವಾಂಸರುಗಳು ಪ್ರಯತ್ನವನ್ನು ನಡೆಸಿದ್ದಾರೆ. ವಿಜಯನಗರ ಕಾಲದ ನೀರಾವರಿ ಪದ್ಧತಿಯನ್ನು ಕುರಿತು ಸುಮಾರು ಮೂರು ದಶಕಗಳಿಂದಲೂ ಸಂಶೋಧನೆಗಳು ನಡೆಯುತ್ತಾ ಬಂದಿವೆ.

ಎಂ.ಎಲ್. ಸರಸ್ವತಿಯವರು ವಿಜಯನಗರ ಕಾಲದ ನೀರಾವರಿ ಪದ್ಧತಿಯನ್ನು ಕುರಿತು ಸಂಶೋಧನೆಯನ್ನು ನಡೆಸಿದ್ದಾರೆ. ಹಿರಿಯ ವಿದ್ವಾಂಸರಾದ ಜಿ.ಎಸ್. ದೀಕ್ಷೀತ್, ಜಿ. ಆರ್. ಕುಪ್ಪುಸ್ವಾಮಿ ಮತ್ತು ಎಸ್. ಕೆ. ಮೋಹನ್ ಅವರುಗಳು ಕರ್ನಾಟಕದ ಕೆರೆಗಳನ್ನು ಕುರಿತಂತೆ ಸಂಶೋಧನೆಯನ್ನು ಮಾಡಿ ಗ್ರಂಥವನ್ನು (Tank Irrigation in Karnataka- A Historical Survey) ಪ್ರಕಟಿಸಿದ್ದಾರೆ. ಈ ಪುಸ್ತಕವು ಕರ್ನಾಟಕದಲ್ಲಿ ಕೆರೆ ನೀರಾವರಿ ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಗಿದೆ. ಜಿ. ಆರ್. ಕುಪ್ಪುಸ್ವಾಮಿರವರು ವಿಜಯನಗರ ಪೂರ್ವದ ಕೆರೆಗಳು ನೀರಾವರಿ ಪದ್ಧತಿಯನ್ನು ಆಳವಾಗಿ ಅಭ್ಯಸಿಸಿದ್ದಾರೆ. ಇತ್ತೀಚೆಗೆ ಸಿ.ಟಿ.ಎಂ. ಕೊಟ್ರಯ್ಯನವರು ವಿಜಯನಗರ ಕಾಲದ ನೀರಾವರಿ ಪದ್ಧತಿ ಕುರಿತು ಸಂಶೋಧಿಸಿದ್ದಾರೆ. (Irrigation system Under Vijayanagara Empire) ಇವರ ಪುಸ್ತಕವು ಸಹ ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ ಎಂದು ಕನ್ನಡಕ್ಕೆ ಅನುವಾದಿತವಾಗಿ ಪ್ರಕಟವಾಗಿದೆ. ಕೊಟ್ರಯ್ಯನವರನ್ನು ಹೊರತುಪಡಿಸಿ ಮಿಕ್ಕೆಲ್ಲಾ ವಿದ್ವಾಂಸರು ಕರ್ನಾಟಕಕ್ಕೆ ತಮ್ಮ ಅಧ್ಯಯನವನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಕೊಟ್ರಯ್ಯನವರು ದಕ್ಷಿಣ ಭಾರತದಾದ್ಯಂತ ವ್ಯಾಪಿಸಿದ್ದ ವಿಜಯನಗರ ಕಾಲದ ನೀರಾವರಿ ವ್ಯವಸ್ಥೆಯನ್ನು ಬಹಳ ಅತ್ಯುತ್ತಮವಾಗಿ ಸಂಶೋಧಿಸಿದ್ದಾರೆ. ಡಾಮನಿಕ್ ಜೆ. ಡೇವಿಸನ್ – ಜೆನ್‌ಕಿನ್ಸ್ ರವರ ದಿ ಇರಿಗೇಶನ್ ಅಂಡ್ ವಾಟರ್ ಸಪ್ಲೆ ಸಿಸ್ಟಮ್ಸ್ ಆಫ್ ವಿಜಯನಗರ (The Irrigation and Water Supply System of Vijayanagara) ಎಂಬ ಪುಸ್ತಕದಲ್ಲಿ ವಿಜಯನಗರ ಪಟ್ಟಣದ ನೀರಾವರಿ ವ್ಯವಸ್ಥೆಯನ್ನು ಕುರಿತು `ಸೂಕ್ಷ್ಮ ಅಧ್ಯಯನ (Micro – Study) ಮುಖ್ಯವಾದುದು. ಇದರಲ್ಲಿ ಲೇಖಕರು ರಾಜಧಾನಿ ಪಟ್ಟಣಕ್ಕೆ ನೀರು ಸರಬರಾಜಿನ ಬಗೆಗೆ ಪುರಾತತ್ವೀಯವಾದ ಅಂಶಗಳನ್ನು ಒಳಗೊಂಡ ವಿಪುಲ ಮಾಹಿತಿಗಳನ್ನು ನೀಡಿದ್ದಾರೆ. ಇವುಗಳಲ್ಲದೇ ಹಲವಾರು ವಿದ್ವಾಂಸರು ಈ ನಿಟ್ಟಿನಲ್ಲಿ ಕೆಲಸವನ್ನು ಮಾಡಿ ಬಿಡಿ ಲೇಖನಗಳನ್ನು ಪ್ರಕಟಿಸಿರುತ್ತಾರೆ. ಈ ಮೇಲೆ ಉಲ್ಲೇಖಿಸಿದ ವಿದ್ವಾಂಸರುಗಳೆಲ್ಲರೂ ಬಹುತೇಕವಾಗಿ ಶಾಸನಗಳನ್ನು ಆಧರಿಸಿ ಸಂಶೋಧನೆಗಳನ್ನು ಮಾಡಿರುತ್ತಾರೆ. ಪುರಾತತ್ವ ದೃಷ್ಟಿಕೋನದಿಂದ ಕೆರೆ ನೀರಾವರಿ ಪದ್ಧತಿಯನ್ನು ಗಮನಿಸಿಲ್ಲ.

ಪ್ರಸ್ತುತ ಅಧ್ಯಯನದಲ್ಲಿ ಈ ಮೇಲೆ ಉಲ್ಲೇಖಿಸಿದ ಕೊರತೆಯನ್ನು ತುಂಬಲು, ಪುರಾತತ್ವ ದೃಷ್ಟಿಕೋನದಿಂದ ವಿಜಯನಗರ ಕಾಲದ ಕೆರೆ ನೀರಾವರಿ ಪದ್ಧತಿಯನ್ನು ಸಂಶೋಧಿಸಲು ಪ್ರಯತ್ನಿಸಿದ್ದೇನೆ. ಆದುದರಿಂದ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು ಆಯ್ಕೆ ಮಾಡಿ, ವಿಜಯನಗರ ಕಾಲದ ಕೆರೆ- ನೀರಾವರಿ ಪದ್ಧತಿಯನ್ನು ಪುರಾತತ್ವೀಯವಾಗಿ ಅರಿಯುವ ಪ್ರಾಮಾಣಿಕ ಪ್ರಯತ್ನವೇ ಇದಾಗಿದೆ. ಈ ಅಧ್ಯಯನದಲ್ಲಿ ಹಳೆಯ ಪರಿಸರ, ಪ್ರಾಚೀನ ಹವಾಮಾನ ಮತ್ತು ಮಧ್ಯಕಾಲೀನ ಯುಗದ ಪ್ರಮುಖ ಬೆಳೆಗಳನ್ನು ಕೆರೆ ನೀರಾವರಿ ಪದ್ಧತಿಯ ಹಿನ್ನೆಲೆಯಲ್ಲಿ ಅಭ್ಯಸಿಸಿದ್ದೇನೆ. ಈ ಅಧ್ಯಯನವನ್ನು ಹೊಸಪೇಟೆ ತಾಲೂಕಿಗೆ ಮಾತ್ರವೇ ಸೀಮಿತಗೊಳಿಸದೆ, ದಕ್ಷಿಣ ಭಾರತದಾದ್ಯಂತ ವ್ಯಾಪಿಸಿರುವ ವಿಜಯನಗರ ಕಾಲದ ಕೆರೆಗಳನ್ನು ಅಧ್ಯಯನ ನಡೆಸಿದ್ದಾದರೆ, ಅಂದಿನ ದಕ್ಷಿಣ ಭಾರತದ ಕೃಷಿ ಮತ್ತು ನೀರಾವರಿ ವ್ಯವಸ್ಥೆಗಳ ಬಗೆಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಹುದು.