ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೇ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀ ಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಭಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿಕ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡ ಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು ಸಮರಸಗೊಂಡು ಸಾಕ್ಷತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡ ಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿನ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತದೆ.

ಕನ್ನಡ ವಿಶ್ವವಿದ್ಯಾಲಯ ಅಖಂಡ ಕರ್ನಾಟಕದ ಭಾಷೆ, ಸಾಹಿತ್ಯ, ಸಂಶೋಧನೆ, ಜನ ಜೀವನಗಳನ್ನು ತನ್ನ ಕಕ್ಷೆಯನ್ನು ತೆಗೆದುಕೊಂಡು ಸಂಶೋಧನೆ ಮತ್ತು ಪ್ರಕಟಣೆಗಳನ್ನು ಮಾಡುತ್ತಿರುವಂತೆಯೇ ತಾನು ಅಸ್ತಿತ್ವದಲ್ಲಿರುವ ಪರಿಸರಕ್ಕೂ ಮುಖ್ಯ ಗಮನವನ್ನು ಕೊಡುತ್ತಿದೆ. ಆದ್ದರಿಂದ ಕನ್ನಡ ವಿಶ್ವವಿದ್ಯಾಲಯವು ಜನ್ಮ ತಳೆದಿರುವ ಹಂಪಿಯ ಸಮಗ್ರ ಮುಖಗಳ ಅಧ್ಯಯನ ಮತ್ತು ಸಂಶೋಧನೆಗಳನ್ನು ಗಂಭೀರವಾಗಿ ಕೈಗೆತ್ತಿಕೊಂಡಿರುವ ಕಾರಣ ಇದುವರೆಗೆ ಇಲ್ಲಿನ ಸಾಹಿತ್ಯ, ಇತಿಹಾಸ, ಶಾಸನ ಮತ್ತಿತರ ಅಂಶಗಳ ಬಗ್ಗೆ ಹಲವು ಮೌಲಿಕ ಕೃತಿಗಳನ್ನು ಇದುವರೆಗೆ ಪ್ರಕಟಿಸುವ ಮೂಲಕ ಈ ವಿಶಿಷ್ಟ ಪರಿಸರದ ಅಜ್ಞಾತ ಮುಖಗಳನ್ನು ಬೆಳಕಿಗೆ ಒಡ್ಡುವಲ್ಲಿ ಸಫಲವಾಗಿದೆ. ಅಂತೆಯೇ ಪ್ರಸ್ತುತ ಕೃತಿ ಹಂಪಿ ಪರಿಸರದ ಕೆರೆಗಳು ಈ ಮಾಲೆಗೆ ಒಂದು ವಿಶಿಷ್ಟ ಸೇರ್ಪಡೆಯಾಗಿದೆ. ವಿಶ್ವವಿದ್ಯಾಲಯದ ಸಂಶೋಧಕರ ವೈಯಕ್ತಿಕ ಯೋಜನೆಯ ಅಡಿಯಲ್ಲಿ ಕೈಗೊಳ್ಳಲಾದ ಸಂಶೋಧನಾ ಯೋಜನೆಯ ಫಲಿತವಿದು.

ಒಂದು ಕಾಲಕ್ಕೆ ಗ್ರಾಮಜೀವನದ ಕೇಂದ್ರಬಿಂದುವಾಗಿದ್ದ, ಹಲವು ಸಾಂಸ್ಕೃತಿಕ ಸಂಗತಿಗಳ ಸ್ಫೂರ್ತಿಯ ನೆಲೆಯಾಗಿದ್ದ ಮತ್ತು ಬೇಸಾಯ ಹಾಗೂ ಕುಡಿಯುವ ನೀರಿನ ಜೀವಸೆಲೆಯಾಗಿದ್ದ ಈ ಕೆರೆಗಳು ಸಂಪೂರ್ಣವಾಗಿ ಅದೃಶ್ಯವಾಗುತ್ತಿರುವ ಕಾಲದಲ್ಲಿ ನಾವಿದ್ದೇವೆ. ಆದರೆ, ಪ್ರಾಚೀನ ಸಂಪ್ರದಾಯದ ಪ್ರಕಾರ ಮರಗಳನ್ನು ನೆಡೆಸುವುದು, ಬಾವಿಗಳನ್ನು ತೆಗೆಸುವುದು, ದೇವಾಲಯಗಳನ್ನು ನಿರ್ಮಿಸುವುದು, ಶಾಲೆಗಳನ್ನು ಸ್ಥಾಪಿಸುವುದು ಮುಂತಾದವು ಹೇಗೆ ದಾನ ಜೀವನದ ಪ್ರಮುಖ ಅಂಗಗಳಾಗಿದ್ದವೋ ಹಾಗೆಯೇ ಕೆರೆಯನ್ನು ಕಟ್ಟಿಸುವುದು ಸಹ ನಮ್ಮ ಜನತೆಯ ಔದಾರ್ಯ ಮತ್ತು ದಾನಶೀಲತೆಗಳಿಗೆ ಸಂಕೇತವಾಗಿತ್ತು. ಮನುಷ್ಯನಿಗೆ ಮಾತ್ರವಲ್ಲದೆ ಇತರ ಎಲ್ಲ ಜೀವಜಂತುಗಳಿಗೆ ನೀರುಣಿಸುವುದು ಒಂದು ಬಗೆಯಾದರೆ, ರೈತರ ಬಗೆಬಗೆಯ ಬೆಳೆಗಳಿಗೆ ಈ ಕೆರೆಯ ಈರು ಪ್ರಾಣದಾನವಾಗಿರುತ್ತಿತ್ತು. ಆದ್ದರಿಂದ ಕೆರೆ ಎಂಬುದು ಕೇವಲ ನೀರು ತುಂಬಿದ ಹಳ್ಳವಾಗದೆ ನಮ್ಮ ಗ್ರಾಮಜೀವನದ ಅವಿಭಾಜ್ಯ ಜೀವಾಂಗವಾಗಿತ್ತು. ಇದರ ಸುತ್ತ ಹಲವು ಶಾಸನಗಳು, ಐತಿಹ್ಯಗಳು, ಕಲ್ಪನೆಗಳು, ನಂಬಿಕೆಗಳು ಹುಟ್ಟಿ ಕೆರೆ ಜನಪದ ಎನ್ನುವಷ್ಟು ವ್ಯಾಪಕತೆಯನ್ನು ಪಡೆದಿದ್ದವು. ರಾಜ ಮಹಾರಾಜರುಗಳು ಮತ್ತು ಶ್ರೀಮಂತ ದಾನಿಗಳು ಈ ಕಾರ್ಯವನ್ನು ಒಂದು ಪ್ರಮುಖ ಧಾರ್ಮಿಕ ಕಾರ್ಯವೆಂದು ಮತ್ತು ತಮ್ಮ ಮೋಕ್ಷ ಸಾಧಕವೆಂದು ಭಾವಿಸಿದ್ದರು. ಈ ಕೆರೆಗಳ ಸುತ್ತ ಹಳ್ಳಿ, ಪಟ್ಟಣಗಳು ಹಬ್ಬಿಕೊಂಡಿದ್ದವು. ಅಗ್ರಹಾರಗಳು ನಿರ್ಮಿತವಾಗಿದ್ದವು. ಶಿಕ್ಷಣ ಸಂಸ್ಕೃತಿಗಳೂ ಹರಡಿಕೊಂಡಿದ್ದವು ಮಾತ್ರವಲ್ಲದೆ ಇದೊಂದು ರೀತಿಯಲ್ಲಿ ಗ್ರಾಮಜೀವನದ ಸಂಗಮ ಕ್ಷೇತ್ರವೇ ಅಗಿರುತ್ತಿತ್ತು. ಆದರೆ, ಅಣೆಕಟ್ಟುಗಳು ಆರಂಭವಾದಂತೆಲ್ಲ ಗ್ರಾಮ ಜೀವನದ ಅವಿಭಾಜ್ಯ ಅಂಗವಾಗಿದ್ದ ಕೆರೆಗಳು ನಿರ್ನಾಮವಾಗಿ ಅವುಗಳ ಒಡಲು ನಮ್ಮ ರೈತರ ಬಕಾಸುರ ಹಸಿವಿಗೆ ತುತ್ತಾದವು. ಹಾಗೆಯೇ ಅದರ ಸುತ್ತ ಹಬ್ಬಿದ್ದ ಜೀವಂತ ಕಲ್ಪನೆಗಳು ಮಾಯವಾದವು. ಆದರೆ, ಈ ಕೆರೆಗಳ ನಿರ್ಮಾಣದ ಹಿಂದೆ ಎಂಥ ಕೈಗಳು ಕೆಲಸ ಮಾಡಿವೆ ಮತ್ತು ಆ ಕೆರೆಗಳು ಕೃಷಿ ಮತ್ತು ಇತರ ಬದುಕಿಗೆ ಎಷ್ಟು ನೆರವಾಗಿವೆ ಎಂಬ ಮಾಹಿತಿಗಳು ಬಹಳಷ್ಟು ಮಟ್ಟಿಗೆ ಕಾಲಗರ್ಭದಲ್ಲಿ ಲೀನವಾಗಿವೆ. ಈ ಒಂದೊಂದು ಕೆರೆಯ ಮೂಲಚೂಲಗಳನ್ನು ನೆಲೆ-ಬೆಲೆಗಳನ್ನು ಶೋಧಿಸುತ್ತಾ ಹೋದಂತೆ ಗ್ರಾಮ ಸಂಸ್ಕೃತಿಯ ರೋಚಕ ಅಧ್ಯಾಯಗಳು ಬಿಚ್ಚಿಕೊಳ್ಳುತ್ತವೆ. ಇವುಗಳ ಅಧ್ಯಯನ, ಪುರಾಣ, ಇತಿಹಾಸ, ಜಾನಪದಗಳ ಸಮ್ಮಿಳಿತವಾಗಿವೆ. ಹಂಪಿಯ ಪರಿಸರದಲ್ಲಿ ಇರುವ ಇಂತಹ ಕೆರೆಗಳ ಅಧ್ಯಯನ ಇತಿಹಾಸದ ಪುಟಗಳಿಗೆ ಮತ್ತಷ್ಟು ಹೊಸ ವಿಷಯಗಳ ಪುಟಗಳನ್ನು ಜೋಡಿಸುತ್ತದೆ ಮತ್ತು ದಾಟು ಸಂಪ್ರದಾಯದ ಸ್ಥೂಲ ಇತಿಹಾಸಕ್ಕೆ ದಕ್ಕದ ಸೂಕ್ಷ್ಮ ಒಳಮಗ್ಗಲುಗಳನ್ನು ಅನಾವರಣ ಮಾಡುತ್ತದೆ. ಈ ದಿಸೆಯಲ್ಲಿ ನಮ್ಮ ಡಾ. ಸಿ.ಎಸ್. ವಾಸುದೇವನ್ ಅವರು ವೈಯಕ್ತಿಕ ಸಂಶೋಧನೆಯ ಅಡಿಯಲ್ಲಿ ಕೈಗೊಂಡ ಸೂಕ್ಷ್ಮ ಕ್ಷೇತ್ರ ಕಾರ್ಯ, ಸಂಶೋಧನೆ ಮತ್ತು ವಿಶ್ಲೇಷಣೆಗಳ ಪ್ರತೀಕವಾಗಿ ಈ ಕೃತಿ `ಹಂಪಿ ಪರಿಸರದ ಕೆರೆಗಳು’ ನಿರ್ಮಾಣಗೊಂಡಿದೆ. ಡಾ. ವಾಸುದೇವನ್ ಅವರು ಅತ್ಯಂತ ಗಂಭೀರವಾದ ಕ್ಷೇತ್ರಕಾರ್ಯ ಮತ್ತು ಸೂಕ್ಷ್ಮ ಅಧ್ಯಯನಗಳ ಫಲವಾಗಿ ಈ ಕೃತಿಯನ್ನು ರಚಿಸಿದ್ದಾರೆ. ಪ್ರಕೃತಿಯಲ್ಲಿ ಬೆಟ್ಟಗಳು ಎಷ್ಟು ಮುಖ್ಯವೋ ಗುಹೆ-ಕಣಿವೆಗಳು ಅಷ್ಟೇ ಮುಖ್ಯ, ಹಾಗೆಯೇ ಸಾಗರ ಮತ್ತು ನದಿಗಳ ಪಾತ್ರ, ಕಥನಗಳು ನಮ್ಮ ನಾಗರೀಕತೆಯ, ಸಂಸ್ಕೃತಿಯ ರೂಪಣೆ ಮತ್ತು ನಿರೂಪಣೆಯಲ್ಲಿ ಮಹತ್ತರವಾದ ಪಾತ್ರ ವಹಿಸುವಂತೆಯೇ ನಮ್ಮ ಈ ಕೆರೆಗಳೂ ಸಹ ಅಂತಹ ಪಾತ್ರವನ್ನು ವಹಿಸಿವೆ. ಇಲ್ಲಿ ಹಂಪಿಯ ಪರಿಸರದ ೨೫ಕ್ಕೂ ಹೆಚ್ಚು ಕೆರೆಗಳ ಪರಿಚಯ ಮಾತ್ರವಲ್ಲದೆ ಇವುಗಳಿಂದ ಹೊರಹೊಮ್ಮುವ ಪ್ರಾಚೀನ ಕಾಲದ ಕೆರೆ ನೀರಾವರಿಯ ಪದ್ಧತಿಗಳು ವಿವರವಾಗಿ ಪರಿಚಯಿಸಲ್ಪಟ್ಟಿವೆ. ಪ್ರಾಚೀನ ಭಾರತದ ಹಾಗೂ ಕರ್ನಾಟಕದ ಮತ್ತು ವಿಶೇಷವಾಗಿ ವಿಜಯನಗರ ಕಾಲದ ಕೆರೆ ನೀರಾವರಿಯ ಅಪರೂಪದ ವಿವರಗಳು ಮೊದಲ ಬಾರಿಗೆ ಇಲ್ಲಿ ಉಲ್ಲೇಖಿತವಾಗಿವೆ. ಹಾಗೆಯೇ ವಿಜಯನಗರ ಕಾಲದಲ್ಲಿ ವಿಧಿಸಲಾಗಿದ್ದ ಕೆರೆ ತೆರಿಗೆ ಪದ್ಧತಿಯ ಅಂಶಗಳನ್ನೂ ದತ್ತ ಸಾಮಗ್ರಿಗಳಿಂದ ಹೊರತೆಗೆದು ಲೇಖಕರು ಇಲ್ಲಿ ನಿರೂಪಿಸಿದ್ದಾರೆ. ಕೆರೆಗಳಿಗೆ ಸಂಬಂಧಿಸಿ ಆ ಕಾಲದಲ್ಲಿ ರೂಢಿಯಲ್ಲಿದ್ದ ನಂಬಿಕೆಗಳು, ಆಚರಣೆಗಳು ಸಹ ಇಲ್ಲಿ ಉಲ್ಲೇಖಗೊಂಡಿವೆ.

ಒಟ್ಟಿನಲ್ಲಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳಿಗಾಗಿ ನಮ್ಮ ಹಿರಿಯರು ನಿರ್ಮಿಸಿದ್ದ ಕೆರೆಗಳು ಆ ಕಾಲದ ನಿಸರ್ಗದ ಅಧ್ಯಯನಕ್ಕೆ, ಸೂಕ್ಷ್ಮವಾದ ಚಿಂತನೆಗೆ ಮತ್ತು ಪರಿಸರಾನುಗುಣವಾದ ನೀರಾವರಿ ರಚನಾ ಕೌಶಲ್ಯಕ್ಕೆ ಇಲ್ಲಿನ ವಿವರಗಳು ಸಾಕ್ಷಿ ನುಡಿಯುತ್ತವೆ. ಹಿಂದಿನವರ ಸರಳ ತಂತ್ರಜ್ಞಾನದಿಂದ ಲಭ್ಯವಾದ ಅಧಿಕ ಲಾಭಗಳನ್ನು ಇಂದಿನ ತಂತ್ರಜ್ಞಾನದ ಮೋಹದಿಂದಾಗಿ ನಾವು ಕಳೆದುಕೊಂಡಿದ್ದೇವೇನೋ ಎಂಬ ಭಾವನೆಯನ್ನು ಈ ಕೆರೆಗಳ ಅಧ್ಯಯನ ಉಂಟು ಮಾಡುತ್ತದೆ. ನಮ್ಮ ಗ್ರಾಮಜೀವನಕ್ಕೆ ತಕ್ಕುದಾದ ಸರಳ ತಂತ್ರಜ್ಞಾನದ ಚೌಕಟ್ಟಿನಲ್ಲಿ ನಿಸರ್ಗವನ್ನು ನಾಶಪಡಿಸದೆ ಹೇಗೆ ನಮ್ಮ ದಿನನಿತ್ಯದ ಬದುಕಿಗೆ ನಿಸರ್ಗದ ಈ ಸತ್ವಗಳನ್ನು ಬಳಸಿಕೊಳ್ಳಬಹುದು ಎಂಬುದನ್ನು ಈ ದಾಖಲೆಗಳು ಆಧುನಿಕರ ಕಿವಿಯಲ್ಲಿ ಪಿಸುಗುಡುತ್ತವೆ. ಚಿಕ್ಕದಾದರೂ ಇಂತಹ ಕೃತಿಯೊಂದನ್ನು ತಮ್ಮ ಆಳವಾದ ಸಂಶೋಧನೆಯಿಂದ ರಚಿಸಿಕೊಟ್ಟಿರುವ ಡಾ. ಸಿ. ಎಸ್. ವಾಸುದೇವನ್ ಅವರಿಗೆ ವಿಶ್ವವಿದ್ಯಾಲಯದ ಪರವಾಗಿ ಅಭಿನಂದನೆಗಳು

ಡಾ. ಎಚ್. ಜೆ. ಲಕ್ಕಪ್ಪಗೌಡ
ಕುಲಪತಿಗಳು