ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ ಗಟ್ಟಿಗೊಳಿಸುವ ಹರಡುವ ಕಾಯಕವನ್ನು ಕಳೆದ ಹದಿನಾಲ್ಕು ವರುಷಗಳಲ್ಲಿ ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ  ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಕರ್ನಾಟಕ ಸರ್ಕಾರವು ಪ್ರತಿವರ್ಷ ನೆವೆಂಬರ್ ತಿಂಗಳಿನಲ್ಲಿ ನಡೆಸುತ್ತಿರುವ ಹಂಪಿ ಉತ್ಸವದಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ತನ್ನ ಸಾಂಸ್ಕೃತಿಕ ಶರೀರದ ಭಾಗವನ್ನಾಗಿಸಿ ಹಂಪಿಗೆ ಸಂಬಂಧಿಸಿದ ಸಾಹಿತ್ಯ ಕೃತಿಯೊಂದನ್ನು ಪ್ರಕಟಿಸುವ ಸತ್ಪರಂಪರೆಯಲ್ಲಿ ಈಗಾಗಲೇ ಬೃಹದ್ದೇಶಿ, ಹರಿಹರನ ರಗಳೆಗಳು, ಸಾವಿರ ಕೀರ್ತನೆಗಳು, ರಾಘವಾಂಕನ ಸಮಗ್ರಕಾವ್ಯ ಮತ್ತು ಕಳೆದ ವರ್ಷ ಪ್ರಕಟಿಸಿದ ಪ್ರವಾಸಿ ಕಂಡ ವಿಜಯನಗರ ಕೃತಿಗಳು ಪ್ರಕಟವಾಗಿವೆ. ಈ ವರ್ಷದ ಹಂಪಿ ಉತ್ಸವದಲ್ಲಿ ಹಂಪಿಗೆ ಸಂಬಂಧಿಸಿದ ಕಲೆ, ಕ್ರೀಡೆ ಮತ್ತು ಕೌಶಲ ಕ್ಷೇತ್ರಗಳಲ್ಲಿ ಈಗಾಗಲೇ ಪ್ರಕಟಗೊಂಡಿರುವ ಆಯ್ದ ಲೇಖನಗಳ ಒಂದು ಮಹಾ ಸಂಪುಟವನ್ನು ಹೊರತರಲಾಗುತ್ತಿದೆ.

ಹಂಪಿಗೆ ಸಂಬಂಧಿಸಿದ ಕಲೆ, ಕ್ರೀಡೆ ಮತ್ತು ಕೌಶಲಗಳನ್ನು ಒಳಗೊಂಡ ಇಂಥ ಮಹಾ ಸಂಪುಟವೊಂದು ಪ್ರಕಟವಾಗುತ್ತಿರುವುದು ಕನ್ನಡ ವಿಶ್ವ ವಿದ್ಯಾಲಯಕ್ಕೆ ಗೌರವದ ಸಂಗತಿ. ಇಂಥದೊಂದು ಗ್ರಂಥದ ಅಗತ್ಯವಿದೆಯೆಂದು ಸೂಚಿಸಿದವರು ಸನ್ಮಾನ್ಯರಾದ ಶ್ರೀ ಎಂ.ಪಿ. ಪ್ರಕಾಶ ಅವರೇ. ಅವರ ಸೂಚನೆಯನ್ನು ಅನುಸರಿಸಿ ಈ ಸಂಪುಟವನ್ನು ಸಿದ್ಧಪಡಿಸಲಾಗಿದೆ. ಇಂಥದೊಂದು ಮಹತ್ವದ ಸಾರ್ವಕಾಲೀನ ಪ್ರಕಟಣೆಗೆ ಅವಕಾಶ ಕಲ್ಪಿಸಿದ ಮತ್ತು ಸಂಪೂರ್ಣ ಆರ್ಥಿಕ ನೆರವು ನೀಡಿದ ಕರ್ನಾಟಕ ಸರ್ಕಾರಕ್ಕೆ ಮತ್ತು ವಿಶೇಷವಾಗಿ ಹಂಪಿ ಉತ್ಸವ ಸಮಿತಿಯ ಅಧ್ಯಕ್ಷರೂ ಸಾಹಿತಿಗಳು ಸಂಸ್ಕೃತಿಪ್ರಿಯರೂ ಆಗಿರುವ ನಮ್ಮ ನೆಚ್ಚಿನ ಸನ್ಮಾನ್ಯ ಗೃಹ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಎಂ.ಪಿ. ಪ್ರಕಾಶ್ ಅವರಿಗೆ ನಮ್ಮ ವಿಶೇಷ ಕೃತಜ್ಞತೆಗಳು. ಈ ಪ್ರಕಟಣೆಗೆ ನೆರವು ದೊರೆಯಲು ಸಹಕರಿಸಿದ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಐ.ಎಂ. ವಿಠ್ಠಲಮೂರ್ತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಯುಕ್ತರಾದ ಶ್ರೀ ನಿರಂಜನ್, ನಿರ್ದೇಶಕರಾದ ಶ್ರೀ ವೆಂ. ಶ್ರೀನಿವಾಸ್ ಜಂಟಿ ನಿರ್ದೇಶಕರಾದ ಶ್ರೀ ಕಾ.ತ. ಚಿಕ್ಕಣ್ಣ ಇವರೆಲ್ಲರಿಗೆ ನಮ್ಮ ವಂದನೆಗಳು.

ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸುತ್ತಿರುವ ಹಂಪಿ ಸಂಪುಟವು ಹಂಪಿಗೆ ಸಂಬಂಧಿಸಿದ ಕಲೆ, ಕ್ರೀಡೆ ಮತ್ತು ಕೌಶಲ ಕ್ಷೇತ್ರಗಳಲ್ಲಿ ಈಗಾಗಲೇ ಪ್ರಕಟಗೊಂಡಿರುವ ಆಯ್ದ ಲೇಖನಗಳ ಸಂಕಲನವಾಗಿದೆ. ಹಂಪಿಯು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರವಾಗಿ ಇತಿಹಾಸದಲ್ಲಿ ಮತ್ತು ವರ್ತಮಾನದಲ್ಲಿ ಬಹುರೂಪಿ ಆಯಾಮಗಳನ್ನು ಹೊಂದಿದೆ. ಹೀಗಾಗಿ ‘ಕಲೆ’ ಎನ್ನುವುದು ಪರಂಪರಾಗತ ಕಟ್ಟಡ ನಿರ್ಮಾಣದಿಂದ ತೊಡಗಿ ದೇಸಿ ತಂತ್ರಜ್ಞಾನವನ್ನು ಒಳಗೊಂಡ ತಾಂತ್ರಿಕ ಪರಿಣತಿಯ ನೀರಾವರಿ ಕಾಲುವೆಗಳು, ವಸತಿಗೃಹಗಳು, ಸ್ನಾನಗೃಹಗಳು, ದಿಬ್ಬಗಳು ಮುಂತಾದ ಅನೇಕ ರಚನೆಗಳನ್ನು ಒಳಗೊಂಡಿದೆ. ಚಿತ್ರಕಲೆಗೆ ಸಂಬಂಧಿಸಿದಂತೆ ಪ್ರಾಗೈತಿಹಾಸಿಕ ರೇಖಾಚಿತ್ರಗಳು ದೊರೆಯುವ ಒಂದು ಅಪೂರ್ವ ಕೇಂದ್ರವಾಗಿ ಹಂಪಿಗೆ ವಿಶೇಷ ಮಹತ್ವವಿದೆ. ವಿಜಯನಗರ ಕಾಲದ ಭಿತ್ತಿಚಿತ್ರಗಳವರೆಗೆ ಕರ್ನಾಟಕದ ಚಿತ್ರಕಲೆಯ ಇತಿಹಾಸದ ಅನೇಕ ನೆಲೆಗಳಿಗೆ ಇಲ್ಲಿ ಸಾಕ್ಷಿಗಳು ದೊರೆಯುತ್ತವೆ. ದೇಸಿತಂತ್ರಜ್ಞಾನ ಎಂದು ಕರೆಯಲಾಗುವ ಸ್ಥಳೀಯ ಕೌಶಲಗಳಿಗೆ ಸಂಬಂಧಿಸಿದ ಅಧ್ಯಯನಾತ್ಮಕ ಲೇಖನಗಳು ಇಲ್ಲಿ ಸೇರ್ಪಡೆಯಾಗಿವೆ ನೀರಾವರಿ, ನಗರರಚನೆ, ಸಾರಿಗೆ ವ್ಯವಸ್ಥೆ, ರಕ್ಷಣಾವಾಸ್ತು ಹೀಗೆ ಆಧುನಿಕ ತಾಂತ್ರಿಕ ಪರಿಣತಿಗೆ ಪೂರ್ವದಲ್ಲಿಯೇ ಕರ್ನಾಟಕದಲ್ಲಿ ಕ್ರಿಯಾಶೀಲವಾಗಿದ್ದ ಕೌಶಲಗಳು ಇಲ್ಲಿಯ ಲೇಖನಗಳಲ್ಲಿ ಅನಾವರಣಗೊಂಡಿವೆ. ವಿಜಯನಗರ ಪೂರ್ವದಲ್ಲಿ ಮತ್ತು ಸಮಕಾಲೀನ ಸಂದರ್ಭದ ಹಂಪಿ ಪರಿಸರದಲ್ಲಿ ಕ್ರಿಯಾತ್ಮಕವಾಗಿದ್ದ ಅನೇಕ ಜನಪದ ಕ್ರೀಡೆಗಳಿಗೆ ಸಂಬಂಧಿಸಿದ ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ಇಂತಹ ಸಂಪುಟವು ಅತಿವ್ಯಾಪ್ತಿಯ ಅವಕಾಶಗಳು ಹೊಂದುವುದರಿಂದಾಗಿ ಇದಕ್ಕೆ ಒಂದು ಮಿತಿಯನ್ನು ಕಲ್ಪಿಸಿಕೊಂಡು ಪ್ರಸ್ತುತ ಸಂಪುಟವನ್ನು ಸಿದ್ಧಪಡಿಸಲಾಗಿದೆ. ಸಾವಿರಾರು ಪುಟಗಳ ಹರಹುಳ್ಳ ಇಂತಹ ವಿಷಯಕ್ಕೆ ಸಂಬಂಧಿಸಿದ ಬರೆಹಗಳೆಲ್ಲವನ್ನು ಇಲ್ಲಿ ಸೇರಿಸುವುದು ಅಸಾಧ್ಯವಾದ ಸಂಗತಿ. ಆದರೆ, ಇಲ್ಲಿ ಸಂಕಲನಗೊಂಡಿರುವ ಲೇಖನಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾತಿನಿಧಿಕವಾಗಿವೆ ಎಂಬ ವಿಶ್ವಾಸ ನಮ್ಮದು. ಹಂಪಿಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿಯೂ ನಮ್ಮ ಮಾನಸಿಕ ರಾಜಧಾನಿಯನ್ನಾಗಿ ಕಲ್ಪಿಸಿಕೊಳ್ಳಲು ಇಲ್ಲಿಯ ಲೇಖನಗಳು ಆಕರ ಪರಿಕರಗಳಾಗುತ್ತವೆ ಎಂದು ನಾವು ನಂಬಿದ್ದೇವೆ.

ಇಂಥ ಮಹಾ ಸಂಪುಟವೊಂದನ್ನು ಸಿದ್ಧಪಡಿಸಿದ ಸಂಪಾದಕ ಸಮಿತಿಗೆ ಈ ಸಮಿತಿಯ ಸಂಪಾದಕರಾದ ಡಾ. ದೇವರಕೊಂಡಾರೆಡ್ಡಿ ಅವರ ಪರಿಶ್ರಮ ಹಾಗೂ ವಿದ್ವತ್ತನ್ನು ಈ ಸಂದರ್ಭದಲ್ಲಿ ತುಂಬು ಹೃದಯದಿಂದ ನೆನೆಯುತ್ತೇನೆ. ಸಂಪಾದಕ ಸಮಿತಿಯ ಸದಸ್ಯರಾದ ಡಾ. ಸಿ.ಎಸ್. ವಾಸುದೇವನ್, ಡಾ. ಚಲುವರಾಜು, ಡಾ. ಎಸ್.ವೈ.ಸೋಮಶೇಖರ್, ಡಾ. ಎಂ. ಕೊಟ್ರೇಶ್ ಇವರೆಲ್ಲರು ಲೇಖನಗಳನ್ನು ಆಯುವಲ್ಲಿ, ಕರಡಚ್ಚನ್ನು ತಿದ್ದುವಲ್ಲಿ ಸಂಪಾದಕರೊಡನೆ ಅವಿರತವಾಗಿ ದುಡಿದಿದ್ದಾರೆ. ಈ ಸಂಪುಟದಲ್ಲಿ ಪ್ರಕಟವಾಗಿರುವ ಛಾಯಾಚಿತ್ರಗಳನ್ನು ಡಾ. ಎಸ್.ವೈ. ಸೋಮಶೇಖರ್ ಮತ್ತು ಶ್ರೀ ಗಣೇಶ ಯಾಜಿ ಇವರು ತೆಗೆದುಕೊಟ್ಟಿದ್ದಾರೆ. ಇವರು ಪುಸ್ತಕದ ಅಂದಕ್ಕೆ ಹಾಗೂ ಗ್ರಂಥದ ಮೌಲ್ಯವನ್ನು ತಮ್ಮ ಛಾಯಾಚಿತ್ರಗಳಿಂದ ಹೆಚ್ಚಿಸಿದ್ದಾರೆ. ಕರಡಚ್ಚನ್ನು ತಿದ್ದುವಲ್ಲಿ ಸಹಕರಿಸಿದ ನಮ್ಮ ವಿಶ್ವವಿದ್ಯಾಲಯದ ಡಾ. ಶ್ರೀಧರರಾವ್ ಪಿಸ್ಸೆ- ಇವರೆಲ್ಲರ ಸಲಹೆ-ಸಹಕಾರಗಳಿಗೆ ಕೃತಜ್ಞತೆಗಳು.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಪ್ರಸಾರಾಂಗದ ವತಿಯಿಂದ ಆದಷ್ಟು ಬೇಗನೆ ಪ್ರಕಟಿಸಲು ವಿಶೇಷವಾಗಿ ಶ್ರಮಿಸಿದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಇವರ ಸಹಕಾರವನ್ನು ನಾನು ವಿಶೇಷವಾಗಿ ನೆನೆಯುತ್ತೇನೆ.

ಬಿ.ಎ.ವಿವೇಕ ರೈ
ಕುಲಪತಿ