ವಿಜಯನಗರ ಕಾಲದ ಶಿಲಾಶಿಲ್ಪಗಳನ್ನು ಕುರಿತಂತೆ ಈಗಾಗಲೇ ಹೆಚ್ಚಿನ ಅಧ್ಯಯನಗಳು ನಡೆದಿವೆ. ಗಾರೆ ವಸ್ತುವೊಂದನ್ನು ಬಿಟ್ಟರೆ ಉಳಿದಂತೆ ಶಿಲಾ ಶಿಲ್ಪಗಳ ಶೈಲಿ ಮತ್ತು ಲಕ್ಷಣಗಳನ್ನು ಗಾರೆಶಿಲ್ಪಗಳಲ್ಲೂ ಕಾಣಬಹುದು. ನೋಡಲು ಶಿಲಾಶಿಲ್ಪಗಳಿಗಿಂತ ಹೆಚ್ಚು ಅಲಂಕರಣಗಳಿಂದ ಕೂಡಿ ಸುಂದರವಾಗಿ ಕಂಡುಬರುತ್ತವೆ. ಅಂದರೆ ಬೆಡಗು ಬಿನ್ನಾಣಗಳಿಂದ ಕೂಡಿದ ಕೆಲವು ಗಾರೆಶಿಲ್ಪಗಳು ಹೊಯ್ಸಳ ಶಿಲ್ಪಗಳನ್ನು ನೆನಪಿಸುತ್ತವೆ. ಗಾರೆ ಹಸಿ ಹಿಟ್ಟಿನಂತಿರುವುದರಿಂದ ಶಿಲ್ಪಿಯು ತನ್ನೆಲ್ಲ ಕುಶಲತೆಯನ್ನು ಪ್ರಯೋಗಿಸಲು ಅವಕಾಶವಿದ್ದು, ಶಿಲ್ಪಗಳು ಅತ್ಯಂತ ಮನೋಜ್ಞವಾಗಿ ಮೂಡಿಬರಲು ಸಾಧ್ಯವಾಗಿದೆ. ಒಂದು ವೇಳೆ ರಚನೆಯು ಸರಿ ಬರದಿದ್ದರೆ, ಪುನಃ ಅದರ ಮೇಲೆ ಗಾರೆಯನ್ನು ಲೇಪಿಸಿ ಸುಂದರಗೊಲಿಸಬಹುದಾಗಿತ್ತು. ಹೀಗಾಗಿ ಗಾರೆಶಿಲ್ಪಗಳಲ್ಲಿ ತಿಳಿದೋ, ತಿಳಿಯದೆಯೋ ಸೃಜನಶೀಲ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕೆ ಗಾರೆ ಮಾಧ್ಯಮಕ್ಕಿರುವ ಗುಣವೆ ಕಾರಣ.

ಈ ಕಾಲದ ಗಾರೆಶಿಲ್ಪಗಳು ನಾನಾ ಭಂಗಿಗಳಲ್ಲಿದ್ದು, ನೀಳ ರಚನೆಗಳಾಗಿವೆ. ಶಿಲ್ಪಗಳು ಉದ್ದವಾಗಿದ್ದು, ತೆಳುವಾಗಿ ಬಳುಕುವ ಲಕ್ಷಣಗಳಿಂದ ಕೂಡಿವೆ. ಈ ಲಕ್ಷಣಗಳನ್ನು ಆ ಕಾಲದ ಶಿಲಾ ಶಿಲ್ಪಗಳಲ್ಲೂ ಕಾಣಬಹುದು. ಶಿಲ್ಪಗಳಿಗೆ ವಸ್ತ್ರದ ಅಲಂಕರಣವಿದ್ದು, ಕಸೂತಿ ಕೆಲಸವನ್ನು ಮಾಡಲಾಗಿದೆ. ಮಣಿಸರಗಳು ಪ್ರಧಾನ ಆಭರಣಗಳಾಗಿ ಎದ್ದು ಕಾಣುತ್ತವೆ. ಈ ಗಾರೆಶಿಲ್ಪಗಳು ಗೋಡೆಯ ಒರಗಿ ನಿಂತ ಬಿಡಿ ಶಿಲ್ಪಗಳಂತೆ ರಚನೆಗೊಂಡಿವೆ. ಆದರೆ ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣಗೊಂಡ ಗಾರೆಶಿಲ್ಪಗಳು ಉಬ್ಬು ರಚನೆಗಳಾಗಿದ್ದು, ಒರಟುತನವನ್ನು ಪ್ರದಶಿಸುತ್ತವೆ. ಈ ರೀತಿಯ ಶಿಲ್ಪಗಳು ವಿರೂಪಾಕ್ಷ ದೇವಾಲಯದ ಗೂಡುಗಳಲ್ಲಿ (ವೈಷ್ಣವ ಶಿಲ್ಪಗಳು) ಮತ್ತು ಮಹಾದ್ವಾರ ಗೋಪುರದಲ್ಲಿ ಕಂಡುಬರುತ್ತವೆ. ಈ ಶಿಲ್ಪಗಳು ಕೇವಲ ಗೋಡೆಗಂಟಿದ ತೆಳು ಉಬ್ಬು ಶಿಲ್ಪಗಳಂತೆ ಕಂಡುಬರುತ್ತವೆ. ವಸ್ತು ಮತ್ತು ಆಭರಣಗಳ ಅಲಂಕರಣದಲ್ಲಿ ವಿಜಯನಗರ ಕಾಲದ ಶಿಲ್ಪಗಳನ್ನು ಅನುಸರಿಸಿದ್ದರೂ ಶಿಲ್ಪಗಳಲ್ಲಿ ಒರಟು ಲಕ್ಷಣಗಳು ಎದ್ದುಕಾಣುತ್ತವೆ.

ರಚನಾ ಕಾಲ

ಸಾಮಾನ್ಯವಾಗಿ ಗಾರೆಶಿಲ್ಪಗಳು ಜೀರ್ಣೋದ್ಧಾರ ಮತ್ತು ಸುಣ್ಣ ಬಣ್ಣಗಳ ಕ್ರಿಯೆಗೆ ಒಳಗಾಗುವುದರಿಂದ ಅವುಗಳ ಕಾಲಮಾನವನ್ನು ಗುರುತಿಸುವಲ್ಲಿ ಸ್ವಲ್ಪ ಗೊಂದಲವುಂಟಾಗುವುದು ಸಹಜ. ಹಂಪೆಯ ದೇವಾಲಯಗಳಲ್ಲಿ ಕಂಡುಬರುವ ಗಾರೆಶಿಲ್ಪಗಳು ಮುಖ್ಯವಾಗಿ ಎರಡು ಕಾಲ ಘಟ್ಟದವು. ಅಂದರೆ ವಿಜಯನಗರ ಮತ್ತು ವಿಜಯನಗರೋತ್ತರ ಕಾಲದ ರಚನೆಗಳು. ಗಾರೆಶಿಲ್ಪಗಳ ರಚನಾ ಸ್ವರೂಪವೆ ಕಾಲ ವಿಂಗಡಣೆಗೆ ಸಹಾಯಕವಾಗಿದೆ. ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ಗಾರೆಶಿಲ್ಪಗಳು ಬಿಡಿ ಶಿಲ್ಪಗಳಂತೆ ಕಂಡು ಬರುತ್ತವೆ. ಪ್ರತಿಮಾಶಾಸ್ತ್ರದ ಲಕ್ಷಣಗಳನ್ನೊಳಗೊಂಡ ಈ ಶಿಲ್ಪಗಳು ಅಂಗಾಗ ಪ್ರಮಾಣ ಬದ್ಧತೆಯನ್ನು ಕಾಯ್ದುಕೊಂಡಿವೆ. ವಿಶೇಷ ಅಲಂಕಾರಗಳಿಂದ ಕೂಡಿರುವ ಈ ಶಿಲ್ಪಗಳು ನುರಿತ ಶಿಲ್ಪಿಗಳ ಅನುಭವದ ಸಾಕಾರ ಮೂರ್ತಿಗಳಂತೆ ಕಂಡುಬರುತ್ತವೆ. ಸಮಕಾಲೀನ ಲೋಹ, ಶಿಲೆ ಮತ್ತು ಮರದ ಪ್ರತಿಮೆಗಳಿಗೆ, ರಚನೆಯಲ್ಲಿ ಸರಿಸಮನಾಗಿ ನಿಲ್ಲುವ ಸಾಮರ್ಥ್ಯ ಮತ್ತು ಗುಣ ವಿಜಯನಗರ ಕಾಲದ ಗಾರೆಶಿಲ್ಪಗಳಿವೆ. ಇವುಗಳ ರಚನೆಗೆ ಮರದ ಗೂಟ ಮತ್ತು ಕಬ್ಬಿಣದ ಕಡ್ಡಿಗಳನ್ನು ಹಗೂ ಸಾಂಪ್ರದಯಿಕವಾಗಿ ತಯಾರಿಸಿದ ನುಣ್ಣಗಿನ ಗಾರೆಯನ್ನು ಬಳಸಲಾಗಿದೆ. ಜೊತೆಗೆ ಬಣ್ಣವನ್ನು ಲೇಪಿಸಲಾಗುತ್ತಿತ್ತು. ಹೀಗಾಗಿ ಶಿಲ್ಪಗಳು ಬಿಡಿ ರಚನೆಗಳಂತೆ ಸ್ಫುಟವಾಗಿ ಎದ್ದು ಕಾಣುತ್ತವೆ. ವಿರೂಪಾಕ್ಷ ದೇವಾಲಯದ ಕಿರಿಯ ಗೋಪುರ, ಕೃಷ್ಣ ದೇವಾಲಯ ಮತ್ತು ಮಾಲ್ಯವಂತ ರಘುನಾಥ ದೇವಾಲಯಗಳಲ್ಲಿರುವ ಗಾರೆಶಿಲ್ಪಗಳು ಗೋಪುರ ಮತ್ತು ಶಿಖರಗಳ ರಚನೆಯ ಜೊತೆಯಲ್ಲೇ ನಿರ್ಮಾಣಗೊಂಡಿವೆ. ಇದೇ ಕಾಲಕ್ಕೆ ಮೇಲುಕೋಟೆ (ಮಂಡ್ಯ ಜಿಲ್ಲೆ), ಕನಕಗಿರಿ (ರಾಯಚೂರು ಜಿಲ್ಲೆ) ಮುಂತಾದೆಡೆಗಳಲ್ಲಿನ ರಾಯಗೋಪುರಗಳಲ್ಲಿ ಹಾಗೂ ಕೈಪಿಡಿ ಗೋಡೆಯಲ್ಲಿನ ಗೂಡುಗಳಲ್ಲಿ ಗಾರೆಶಿಲ್ಪಗಳು ನಿರ್ಮಾಣಗೊಂಡಿರುವುದನ್ನು ಕಾಣಬಹುದು.

ಕೆಲವು ಗಾರೆಶಿಲ್ಪಗಳು ನಂತರದ ಶತಮಾನದ ಜೀರ್ಣೋದ್ಧಾರಗೊಂಡಿರುವುದರಿಂದ ಇವುಗಳ ಕಾಲಮಾನಕ್ಕೆ ಸಂಬಂಧಿಸಿದಂತೆ ಸಂಶೋಧಕರಲ್ಲಿ ಗೊಂದಲವುಂಟಾಗುವುದು ಸಾಮಾನ್ಯ. ಆದರೆ ಅದೇ ಕಾಲದ ಇತರ ಮಾಧ್ಯಮದ ಶಿಲ್ಪಾವಶೇಷಗಳನ್ನು ಗಮನಿಸಿದಾಗ ಮೇಲೆ ಹೇಳಿದ ಗೊಂದಲಗಳು ನಿವಾರಣೆಯಾಗುವ ಸಾಧ್ಯತೆಯುಂಟು. ಹಂಪೆಯಲ್ಲಿ ವೈಷ್ಣವ ಮಂದಿರಗಳು ನಿರ್ಮಾಣಗೊಂಡಂತೆ ಗಾರೆಶಿಲ್ಪಗಳು ಸಹ ನಿರ್ಮಾಣಗೊಂಡಿವೆ. ಅದರಂತೆ ವಿರೂಪಾಕ್ಷ ದೇವಾಲಯದ ಕೈಪಿಡಿ  ಗೋಡೆಯಲ್ಲಿನ ಗೂಡುಗಳಲ್ಲಿ ಶೈವ ಮತ್ತು ವೈಷ್ಣವ ಶಿಲ್ಪಗಳು ರಚನೆಗೊಂಡವು. ಆದರೆ ೧೫೬೫ರ ಯುದ್ಧದ ಸಂದರ್ಭದಲ್ಲಿ ಹಂಪೆಯ ಪ್ರಮುಖ ವೈಷ್ಣವ ದೇವಾಲಯಗಳು ಹಾಳಾದವೆಂದು ಚರಿತ್ರೆಯಿಂದ ತಿಳಿದುಬರುತ್ತದೆ. ಇದೇ ಸಂದರ್ಭದಲ್ಲಿ ವಿರೂಪಾಕ್ಷ ದೇವಾಲಯದ ಗೂಡುಗಳಲ್ಲಿದ್ದ ವೈಷ್ಣವ ಶಿಲ್ಪಗಳನ್ನು ಸಹ ಹಾಳು ಮಾಡಿದ ಸೂಚನೆಗಳು ಸುಸ್ಪಷ್ಟವಾಗಿ ಕಂಡುಬರುತ್ತವೆ. ಅವುಗಳನ್ನು ವಿಜಯನಗರೋತ್ತರ ಕಾಲದಲ್ಲಿ ಆಯಾಯ ಗೂಡುಗಳಲ್ಲೇ ಪುನರ್ರಚಿಸಲಾಯಿತು. ಹೀಗಾಗಿ ವಿರೂಪಾಕ್ಷ ದೇವಾಲಯದ ಗೂಡುಗಳಲ್ಲಿರುವ ಶೈವ ಮತ್ತು ವೈಷ್ಣವ ಶಿಲ್ಪಗಳು ಭಿನ್ನ ರಚನೆಗಳಂತೆ ಕಂಡುಬರುತ್ತವೆ.

ಇನ್ನು ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣಗೊಂಡ ಗಾರೆಶಿಲ್ಪಗಳೆಂದರೆ, ಮೇಲೆ ತಿಳಿಸಿದ ವಿರೂಪಾಕ್ಷ ದೇವಾಲಯದ ವೈಷ್ಣವ ಶಿಲ್ಪಗಳು. ಇವು ಇಲ್ಲಿನ ಶೈವ ಶಿಲ್ಪಗಳಿಗಿಂತ ಅಲಂಕರಣದಲ್ಲಿ ಭಿನ್ನವಾಗಿದ್ದು, ಒರಟುತನವನ್ನು ಮತ್ತು ಮೊಂಡು ಲಕ್ಷಣಗಳನ್ನು ಪ್ರಕಟಮಾಡುತ್ತವೆ. ವೇಷ ಭೂಷಣಗಳಲ್ಲಿ ವಿಜಯನಗರ ಕಾಲದ ಶಿಲ್ಪಗಳನ್ನೇ ಅನುಕರಣೆ ಮಾಡಿದಂತೆ ಕಂಡುಬಂದರೂ, ಅಂಗಾಗ ರಚನೆಯಲ್ಲಿ ಹಾಗೂ ಪ್ರಮಾಣದಲ್ಲಿ ಜನಪದ ಶೈಲಿಯನ್ನು ಅನುಸರಿಸಿದಂತೆ ಕಂಡುಬರುತ್ತವೆ. ಇದೇ ಸ್ವರೂಪದ ಗಾರೆಶಿಲ್ಪಗಳನ್ನು ವಿರೂಪಾಕ್ಷ ದೇವಾಲಯದ ಮುಂದಿನ ಮಹಾದ್ವಾರ ಗೋಪುರದ ಮೊದಲ ಹಂತದಲ್ಲಿ ಕಾಣಬಹುದು. ಇವು ಸಹ ವಿಜಯನಗರೋತ್ತರ ಕಾಲದ ರಚನೆಗಳು. ಹೀಗಾಗಿ ಲಭ್ಯವಿರುವ ಗಾರೆಶಿಲ್ಪಗಳಲ್ಲಿ ಭಿನ್ನ ರಚನೆಗಳನ್ನು ಸುಸ್ಪಷ್ಟವಾಗಿ ಗುರುತಿಸಬಹುದು. ಈ ಭಿನ್ನ ರಚನೆಗಳೇ ಗಾರೆಶಿಲ್ಪಗಳ ಕಾಲವನ್ನು ನಿರ್ಧರಿಸಲು ಸಹಾಯಕವಾಗಿವೆ.

ಸ್ಥಾನ ಮತ್ತು ವಸ್ತು

ವಿಶೇಷವಾಗಿ ಗಾರೆಶಿಲ್ಪಗಳನ್ನು ದೇವಾಲಯದ ಗೋಪುರ, ಶಿಖರ ಮತ್ತು ಮಂಟಪಗಳ ಮೇಲಿನ ಕೈಪಿಡಿ ಗೋಡೆಯಲ್ಲಿರುವ ಗೂಡುಗಳಲ್ಲಿ ಕಾಣುತ್ತೇವೆ. ವೈವಿಧ್ಯಮಯವಾದ ಸೌಂದರ್ಯ ಸೃಷ್ಟಿಗಾಗಿ, ವಾಸ್ತು ರಚನೆಗಳ ನಡುವೆ ಗಾರೆಶಿಲ್ಪಗಳನ್ನು ನಿರ್ಮಿಸುವುದರ ಮೂಲಕ ಒಟ್ಟು ಕಟ್ಟಡದ ಅಲಂಕರಣವನ್ನು ಹೆಚ್ಚಿಸುವುದಾಗಿತ್ತು. ಮಹಾದ್ವಾರ ಗೋಪುರಗಳು ಒಂದು, ಎರಡು ಮತ್ತು ಮೂರಕ್ಕಿಂತಲೂ ಹೆಚ್ಚು ಹಂತಗಳಿಂದ ಕೂಡಿದ್ದು, ಪ್ರತಿಯೊಂದು ಹಂತದಲ್ಲಿಯೂ ಅರ್ಧಕಂಬ ಮತ್ತು ದೇವಕೋಷ್ಟಗಳ ಅಲಂಕಾರಿಕ ರಚನೆಗಳಿಂದ ಕೂಡಿವೆ. ಈ ರಚನೆಗಳಿಗೆ ಹೊಂದಿಕೊಂಡಂತೆ, ಮೊದಲ ಹಂತದಲ್ಲಿ ದೇವಾಲಯಕ್ಕೆ ಸಂಬಂಧಿಸಿದ ಪಂಥದ ದೆವತೆಗಳ ಮತ್ತು ಘಟನಾವಳಿಗಳನ್ನು ನಿರೂಪಿಸುವ ಗಾರೆಶಿಲ್ಪಗಳನ್ನು ನಿರ್ಮಿಸಿದ್ದಾರೆ. ಈ ದೇವತಾ ಪ್ರತಿಮೆಗಳ ಜೊತೆ ಪರಿವಾರ ದೇವತೆಗಳ, ಪ್ರಾಣಿ ಪಕ್ಷಿಗಳು, ರಾಜ ಮತ್ತು ರಾಣಿ ಪರಿವಾರದವರು, ಯತಿಗಳು, ಭಕ್ತರು, ಶಿಷ್ಯರು ಮತ್ತು ಮಿಥುನ ಶಿಲ್ಪಗಳು ಕಂಡುಬರುತ್ತವೆ. ಅಪರೂಪಕ್ಕೆ ರಾಜನ ದಂಡಯಾತ್ರೆಯನ್ನು ಪ್ರತಿಬಿಂಬಿಸುವ ಗುಂಪು ಶಿಲ್ಪಗಳು ಸಹ ರಚನೆಗೊಂಡಿವೆ.

ಮಂಟಪಗಳ ಮೇಲೆ ಚಾವಣಿಯ ಅಂಚಿನಲ್ಲಿ ಕೈಪಿಡಿ ಗೋಡೆಯಿದ್ದು, ನಡುವೆ ಗೋಪುರ, ಅಲಂಕರಣವಿರುವ ಕಮಾನಿನ ಗೂಡುಗಳನ್ನು ನಿರ್ಮಿಸಿದ್ದಾರೆ. ಈ ಗೂಡುಗಳಲ್ಲಿರುವ ಗಾರೆಶಿಲ್ಪಗಳಿಗೆ ಮಳೆ, ಗಾಳಿ ಮತ್ತು ಬಿಸಿಲುಗಳಿಂದ ಅಲ್ಪ ಸ್ವಲ್ಪ ರಕ್ಷಣೆ ಸಿಗಬಹುದು. ಆದರೆ ಗೋಪುರ ಮತ್ತು ಶಿಖರಗಳಲ್ಲಿರುವ ಗಾರೆಶಿಲ್ಪಗಳು ಯಾವುದೇ ರಕ್ಷಣೆ ಇಲ್ಲದೆ ಹಾಳಾಗುವ ಸಾಧ್ಯತೆಗಳೇ ಹೆಚ್ಚು. ಈ ಗಾರೆಶಿಲ್ಪಗಳು ಪದೇ ಪದೇ ಜೀರ್ಣೋದ್ಧಾರಗೊಂಡು ರೂಪಾಂತರ ಹೊಂದುತ್ತವೆ. ಹೀಗಾಗಿ ಅವುಗಳ ಕಾಲಮಾನ ಸಂದೇಹಕ್ಕೊಳಗಾಗಿದೆ. ಆದರೆ ಕೈಪಿಡಿ ಗೋಡೆಯ ಗೂಡುಗಳಲ್ಲಿರುವ ಶಿಲ್ಪಗಳು ತಮ್ಮ ಮೂಲಶೈಲಿ ಮತ್ತು ಲಕ್ಷಣಗಳನ್ನು ಉಳಿಸಿಕೊಂಡಿರುವುದರಿಂದ ಅವುಗಳ ಕಾಲಮಾನವನ್ನು ಸರಿಸುಮಾರಾಗಿ ನಿರ್ಧರಿಸಬಹುದು. ಈ ಗೂಡುಗಳಲ್ಲಿರುವ ಶಿಲ್ಪಗಳು ದೇವಾಲಯವು ಯಾವ ಪಂಥಕ್ಕೆ ಸೇರಿದೆ ಎಂಬುದನ್ನು ಸೂಚಿಸುತ್ತವೆ. ಉದಾಹರಣೆಗೆ, ವಿರೂಪಾಕ್ಷ ದೇವಾಲಯದಲ್ಲಿ ಶೈವ ಮತ್ತು ವೈಷ್ಣವ ಶಿಲ್ಪಗಳಿದ್ದು, ದೇವಾಲಯವು ಮೊದಲಿನಿಂದಲೂ ಅದ್ವೈತ ಪಂಥಕ್ಕೆ ಸೇರಿರುವುದನ್ನು ಸ್ಪಷ್ಟಪಡಿಸುತ್ತವೆ.

ಗೂಡುಗಳ ರಚನೆ

ವಿಜಯನಗರ ಕಾಲದಲ್ಲಿ, ಹೊಸತಾಗಿ ಕೆಲವು ವಾಸ್ತು ರಚನೆಗಳು ನಿರ್ಮಾಣಗೊಂಡು ದೇವಾಲಯಕ್ಕೆ ಸೇರ್ಪಡೆಗೊಂಡವು. ಅವುಗಳೆಂದರೆ ಮುಖಮಂಟಪ, ಕಲ್ಲಾಣ ಮಂಟಪ, ಉತ್ಸವ ಮಂಟಪ, ಉಯ್ಯಾಲೆ ಮಂಟಪ ಮತ್ತು ಮಹಾದ್ವಾರ ಗೋಪುರಗಳು. ವಿಶೇಷವಾಗಿ ಮಂಟಪಗಳ ಮೇಲ್ತುದಿಯಲ್ಲಿ ಅಲಂಕರಣದ ದೃಷ್ಟಿಯಿಂದ ನಿರ್ಮಾಣಗೊಂಡ ಕೈಪಿಡಿ ಗೋಡೆಗಳಲ್ಲಿ, ಗಾರೆಶಿಲ್ಪಗಳಿಗಾಗಿ ಸುಂದರವಾದ ಗೂಡುಗಳನ್ನು ನಿರ್ಮಿಸುವಲ್ಲಿ ಮುಂದಾದರು. ಇವು ಮಂಟಪದ ಅಥವಾ ಕಟ್ಟಡ ಸೌಂದರ್ಯಕ್ಕೆ ಕಿರೀಟ ಪ್ರಾಯವಾಗಿದ್ದವು. ಇದರಿಂದ ಕೈಪಿಡಿ ಗೋಡೆ ಗೌಣವಾಗಿ ಗೋಪುರ ರಚನೆಗಳಿಂದ ಅಲಂಕೃತಗೊಂಡ ಗೂಡುಗಳೇ ಪ್ರಧಾನವಾಗಿ ಎದ್ದು ಕಾಣುವಂತಾದವು. ಗೂಡುಗಳು ಸಾಮಾನ್ಯವಾಗಿ ೪ ರಿಂದ ೬ ಅಡಿ ಎತ್ತರವನ್ನು ಹೊಂದಿವೆ. ಕಮಾನು ಅಲಂಕರಣವಿರುವ ಈ ಗೂಡುಗಳನ್ನು ನಿರ್ಮಿಸಲು ಚಪ್ಪಟೆ  ಇಟ್ಟಿಗೆ, ಗಾರೆ ಮತ್ತು ಮರದ ಹಲಗೆಗಳನ್ನು ಬಳಸಲಾಗಿದೆ. ಇಟ್ಟಿಗೆಯಿಂದ ನಿರ್ಮಿಸಿದ ಗೋಡೆಗಳ ಮೇಲೆ ಅಡ್ಡವಾಗಿ ಮರದ ಸಣ್ಣ ಹಲಗೆಗಳನ್ನು ಇಟ್ಟು ಗೂಡುಗಳನ್ನು ನಿರ್ಮಿಸುತ್ತಿದ್ದರು. ಗೂಡುಗಳು ಕಮಾನುಗಳು ವಿವಿಧ ಆಕೃತಿಯಲ್ಲಿವೆ.  ಕೆಲವು ಅರ್ಧವೃತ್ತಾಕಾರದಲ್ಲಿದ್ದರೆ, ಮತ್ತೆ ಕೆಲವು ಮೇಲ್ ಮೂಲೆ ಮುರಿದ ಆಯತಾಕಾರದಲ್ಲಿವೆ. ಇನ್ನೂ ಕೆಲವು ಉಪಕಮಾನುಗಳ ಅಲಂಕರಣದಿಂದ ಕೂಡಿದೆ. ಈ ವೈವಿಧ್ಯಮವಾದ ಕಮಾನುಗಳು ಅಂಚಿನಲ್ಲಿ ಹಂಸ, ಗಿಳಿ, ಹೂ, ಲತಾ ಬಳ್ಳಿ ಮುಂತಾದ ಸಾಲು ರಚನೆಗಳ ಸೂಕ್ಷ್ಮ ಅಲಂಕರಣವಿದ್ದು, ಮೇಲಿನ ಕೀರ್ತಿಮುಖದಲ್ಲಿ ಕೊನೆಗೊಳ್ಳುತ್ತವೆ. ಗೂಡುಗಳ ಮೇಲಿರುವ ಕಿರುಹಂತದ ಗೋಪುರಗಳೂ, ತುದಿಯಲ್ಲಿ ಸ್ತೂಪಿಯನ್ನು ಅಥವಾ ಶೃಂಗಗಳನ್ನು ಅಥವಾ ಸ್ತೂಪಿ ಮತ್ತು ಕಳಸಗಳನ್ನು ಒಳಗೊಂಡಿವೆ. ಈ ಕಿರು ಗೋಪುರಗಳ ದ್ರಾವಿಡ ಶೈಲಿಯಲ್ಲಿವೆ. ಗೂಡುಗಳ ಹಿಂಭಾಗದ ಗೋಡೆ ಮಟ್ಟವಾಗಿದ್ದು, ನಿರಾಡಂಬರವಾಗಿದೆ.

ಗೂಡುಗಳ ಹೊರಗೆ ಇಕ್ಕೆಲಗಳಲ್ಲಿ ಪರಿವಾರ ದೇವತೆಗಳು, ನೃತ್ಯಗಾರರು, ಸಂಗೀತಗಾರರು, ಯತಿಗಳು, ಶಿಷ್ಯರು, ಭಕ್ತರು ಮತ್ತು ಮಿಥುನ ಶಿಲ್ಪಗಳು ಕಂಡುಬರುತ್ತವೆ. ಪ್ರತಿಯೊಂದು ಗೂಡು ಸುಮಾರು ೧.೫ ಅಡಿ ಒಳ ಉದ್ದವನ್ನು ಹೊಂದಿದೆ. ಗೂಡುಗಳಲ್ಲಿ ಹೂಬಳ್ಳಿಗಳ ವರ್ಣಚಿತ್ರಗಳನ್ನು ಬಿಡಿಸುವ ಮೂಲಕ, ಅವುಗಳ ಅಲಂಕರಣವನ್ನು ಹೆಚ್ಚಿಸಲಾಗುತ್ತಿತ್ತು. ಆದರೂ ಗಾರೆಶಿಲ್ಪಗಳ ಪ್ರಧಾನವಾಗಿ ಎದ್ದು ಕಾಣುತ್ತಿದ್ದವು. ಶಿಲ್ಪಗಳು ಎತ್ತರವಾಗಿದ್ದು, ಗೂಡಿನ ತಳದಿಂದ ತುದಿಯವರೆಗೂ ನಿಂತ ಅಥವಾ ವೇದಿಕೆ ಮೇಲೆ ಕುಳಿತ ಭಂಗಿಯಲ್ಲಿ ರಚನೆಗೊಂಡಿವೆ.

ಶಿಲ್ಪಗಳ ರಚನೆ

ಶಿಲ್ಪಗಳನ್ನು ರಚಿಸಲು ಬೇಕಾದ ಗಾರೆಯನ್ನು ಸಾಂಪ್ರದಾಯಿಕವಾಗಿ ಇಂದು ಸಹ ರೂಢಿಯಲ್ಲಿರುವಂತೆ ಒಂದು ಭಾಗ ಸುಣ್ಣ, ಎರಡು ಭಾಗ ಮರಳು, ಒಂದು ಭಾಗ ಬೆಲ್ಲ ಮತ್ತು ಅರ್ಧ ಭಾಗಹ ಅಂಟುವಾಳಕಾಯಿ ಮಿಶ್ರಣಗಳನ್ನು ನುಣ್ಣಗೆ ಅರೆದು ತಯಾರಿಸಲಾಗುತ್ತಿತ್ತು. ನಂತರ ಶಿಲ್ಪಗಳನ್ನು ನಿರ್ಮಿಸುವ ಗೋಡೆಯಲ್ಲಿ ಶಿಲ್ಪಗಳ ಭಂಗಿಯನ್ನು ಅನುಲಕ್ಷಿಸಿ, ಮರದ ಗೂಟ ಮತ್ತು ಕಬ್ಬಿಣದ ಕಡ್ಡಿಗಳನ್ನು ಅಳವಡಿಸುತ್ತಿದ್ದರು. ಹೀಗೆ ಅಳವಡಿಸಿದ ಗೂಟ ಮತ್ತು ಕಬ್ಬಿಣದ ಕಡ್ಡಿಗಳ ಮೇಲ್ಮೈಗೆ ಗಾರೆಯನ್ನು ಹಂತಹಂತವಾಗಿ ಬಳಿದು, ಒರಟು ಆಕೃತಿಯನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿತ್ತು. ನಂತರ ಅದರ ಓರೆ ಕೋರೆಗಳನ್ನು ತಿದ್ದಿ, ವಿಶೇಷವಾಗಿ ಅರೆದ ನುಣ್ಣಗಿನ ಗಾರೆಯನ್ನು ಲೇಪಿಸಿ ಅಂತಿಮವಾದ ರೂಪವನ್ನು ಕೊಡುತ್ತಿದ್ದರು. ಕೊನೆಯಲ್ಲಿ ಬಣ್ಣವನ್ನು ಲೇಪಿಸಲಾಗುತ್ತಿತ್ತು. ದೇವಾಲಯದ ಒಳಗಿರುವ ಲೋಹ ಮತ್ತು ಶಿಲಾ ಶಿಲ್ಪಗಳು ಪೂಜಾವಿಧಿಗಳಿಗೆ ಬಳಕೆಗೊಂಡರೆ, ಹೊರಗಿರುವ ಗಾರೆ ಶಿಲ್ಪಗಳು ದೇವತೆಗಳ ಕಥೆ ಮತ್ತು ಮಹಿಮೆಗಳನ್ನು ತಳಿಸುವ ಅಲಂಕಾರಿಕ ಪ್ರದರ್ಶನ ಶಿಲ್ಪಗಳಾಗಿದ್ದವು.

ಪೂಜಾವಿಧಿಗಳಿಂದ ಮುಕ್ತವಾಗಿದ್ದ ಗಾರೆಶಿಲ್ಪಗಳು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿ. ಭಕ್ತರ ಮನಸ್ಸಿಗೆ ಮುದವನ್ನು ನೀಡುತ್ತಿದ್ದವು. ಶಿಲೆ, ಮರ, ಲೋಹ, ಮತ್ತಿತರ ವಸ್ತುಗಳಿಗಿಂತ ಗಾರೆಶಿಲ್ಪಗಳ ರಚನೆ, ಕಾಲ ಮತ್ತು ಹಣದಲ್ಲಿ ಮಿತವ್ಯಯಕಾರಿ. ಬಹುಶಃ ಇದರಿಂದಲೇ ಗಾರೆಶಿಲ್ಪಗಳ ರಚನೆ ಜನಪ್ರಿಯಗೊಂಡಿರಬಹುದು. ಶಿಲ್ಪಗಳನ್ನು ರಚಿಸುವಾಗ ಪರಿಷ್ಕರಣೆಗಳಿಗೆ ವಿಪುಲವಾದ ಅವಕಾಶವಿದ್ದುದರಿಂದ, ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಶಿಲ್ಪಗಳನ್ನು ಸುಂದರಗೊಳಿಸಬಹುದಾಗಿತ್ತು. ಇನ್ನು ಗಾರೆಶಿಲ್ಪಗಳ ಬಗೆಗೆ ಸ್ವಲ್ಪ ಮಾಹಿತಿ ಇಲ್ಲ. ವಿಜಯನಗರ ಕಾಲದ ಗಾರೆಶಿಲ್ಪಗಳನ್ನು, ಶಿಲ್ಪಶಾಸ್ತ್ರದಲ್ಲಿ ಪರಿಣತಿ ಪಡೆದ ಶಿಲ್ಪಿಗಳೇ ನಿರ್ಮಿಸಿರಬೇಕು. ಏಕೆಂದರೆ ಆ ಕಾಲದ ಮರ, ಶಿಲೆ, ಲೋಹ ಮತ್ತು ಗಾರೆಶಿಲ್ಪಗಳು ರಚನೆಯಲ್ಲಿ ಒಂದೇ ತೆರನಾಗಿ ಕಂಡುಬರುತ್ತವೆ. ಅಂದರೆ ವಿಜಯನಗರ ಕಾಲದಲ್ಲಿ ಗಾರೆ ಕುಶಲ ಕಲೆಯಲ್ಲಿ ನುರಿತ ಶಿಲ್ಪಗಳ ಒಂದು ವರ್ಗವೇ ಇತ್ತೆಂಬುದು ಸ್ಪಷ್ಟವಾಗುತ್ತದೆ. ಹೀಗೆ ಮಧ್ಯಕಾಲದಲ್ಲಿ ಗಾರೆಶಿಲ್ಪಗಳ ರಚನೆ ಒಂದು ಜನಪ್ರಿಯ ಶಿಲ್ಪಕಲಾ ಮಾಧ್ಯಮವಾಗಿತ್ತು.

ದೇವತಾ ಶಿಲ್ಪಗಳು

ವಿಜಯನಗರ ಕಾಲದ ಗಾರೆಶಿಲ್ಪಗಳಲ್ಲಿ ಹೆಚ್ಚಿನವು ದೇವತಾ ಶಿಲ್ಪಗಳು. ಅವುಗಳನ್ನು ಶೈವ ಮತ್ತು ವೈಷ್ಣವ ಶಿಲ್ಪಗಳೆಂದು ವಿಂಗಡಿಸಿಕೊಳ್ಳಲಾಗದೆ. ಹಂಪೆ ಮತ್ತು ಪರಿಸರದ ಶಿವಾಲಯಗಳಲ್ಲಿ ಎರಡೂ ಪಂಥದ ಶಿಲ್ಪಗಳು ಕಂಡುಬರುತ್ತವೆ. ಆದರೆ ವೈಷ್ಣವ ದೇವಾಲಯಗಳಲ್ಲಿ ತಮ್ಮ ಪಂಥದ ಶಿಲ್ಪಗಳು ಮಾತ್ರ ರಚನೆಗೊಂಡಿವೆ.

ಶೈವ ಶಿಲ್ಪಗಳು

ವಿರೂಪಾಕ್ಷ ದೇವಾಲಯದ ಒಳ ಸಾಲು ಮಂಟಪಗಳ ಮೇಲಿರುವ ಕೈಪಿಡಿ ಗೋಡೆಯಲ್ಲಿನ ಗೂಡುಗಳಲ್ಲಿ ಹೆಚ್ಚಿನ ಸಂಖ್ಯೆಯ ಶೈವ ಶಿಲ್ಪಗಳಿವೆ. ಈ ಗಾರೆಶಿಲ್ಪಗಳು ಪ್ರತಿಮಾಶಾಸ್ತ್ರದ ರೀತ್ಯಾ ರಚನೆಗೊಂಡಿದ್ದು, ಪ್ರಮಾಣ ಬದ್ಧವಾಗಿವೆ. ಪೀಠದ ಮೇಲೆ ಕುಳಿತಿರುವ ಪಾರ್ವತಿ ಪರಮೇಶ್ವರರ ಮೂರ್ತಿಗಳಂತೂ ಮನಮೋಹಕವಾಗಿವೆ. ಬಹುತೇಕ ಶಿಲ್ಪಗಳು ಭಗ್ನಗೊಂಡಿದ್ದರೂ, ತಮ್ಮ ರಚನಾ ಶ್ರೇಷ್ಠತೆಯಿಂದಾಗಿ ನೋಡುಗರ ಗಮನವನ್ನು ಸೆಳೆಯುತ್ತವೆ. ಜಟಮುಕುಟಧಾರಿ ಶಿವನ ತೊಡೆಯ ಮೇಲೆ ಕುಳಿತ ಪಾರ್ವತಿ, ನಂದಿಯನ್ನು ಒರಗಿ ನಿಂತ ಶಿವ, ಸಮಭಂಗಿಯಲ್ಲಿರುವ ಶಿವ, ನಾಟ್ಯಭಂಗಿಯಲ್ಲಿರುವ ಗಣಪ, ತ್ರಿಭಂಗಿಯಲ್ಲಿರುವ ಶಿವ, ಅಭಂಗಿಯಲ್ಲಿರುವ ಶಿವ ಪಾರ್ವತಿ, ನಂದಿ ಮೇಲೆ ಕುಳಿತ ಶಿವಪಾರ್ವತಿ, ಧ್ಯಾನ ಮುದ್ರೆಯಲ್ಲಿರುವ ಶೈವಯತಿ, ಗಣ ಸಮೂಹ, ಚಾಮರಧಾರಿ ಸ್ತ್ರೀಯರು, ಭಕ್ತವೃಂದ ಮುಂತಾದ ಗಾರೆಶಿಲ್ಪಗಳು ಪ್ರಮುಖವಾಗಿವೆ. ಈ ಶಿಲ್ಪಗಳಲ್ಲಿ ಕಸೂತಿ ಅಲಂಕರಣವಿರುವ ವಸ್ತ್ರಗಳನ್ನು ಬಿಡಿಸಲಾಗಿದೆ. ಸುಣ್ಣ ಬಣ್ಣಗಳ ಲೇಪನದಿಂದಾಗಿ ಈ ಗಾರೆಶಿಲ್ಪಗಳ ಸೌಂದರ್ಯ ಮಸುಕಾಗಿದೆ. ಆಭರಣಗಳ ಸೂಕ್ಷ್ಮ ಅಲಂಕರಣಗಳ ಮುಚ್ಚಿ ಹೋಗಿವೆ. ಕೆಲವು ಗಾರೆಶಿಲ್ಪಗಳು  ಜೀರ್ಣೋದ್ಧಾರಗೊಂಡಿದ್ದು, ಮೂಲ ರಚನೆಯ ಭಾಗಗಳಿಗೂ ಸೇರ್ಪಡೆ ಗೊಂಡ ಭಾಗಗಳಿಗೂ ವ್ಯತ್ಯಾಸ ಸುಸ್ಪಷ್ಟ. ಇನ್ನೂ ಕೆಲವು ಗೂಡುಗಳಲ್ಲಿ ಯಾವುದೇ ಶಿಲ್ಪಗಳು ಕಾಣಬರುವುದಿಲ್ಲ. ಆದರೆ ಹೊರಭಾಗದಲ್ಲಿ ಪರಿವಾರ ಶಿಲ್ಪಗಳಿರುವುದರಿಂದ, ಗೂಡುಗಳಲ್ಲಿದ್ದ ಪ್ರಧಾನ ಶಿಲ್ಪಗಳು ಹಾಳಾಗಿರಬಹುದೆಂದು ಗ್ರಹಿಸಬಹುದು. ಕೆಲವು ಶಿಲ್ಪಗಳು ಹೆಚ್ಚು ಭಗ್ನಗೊಂಡಿರುವುದರಿಂದ ಅವು ಯಾವುವೆಂದು ಗುರುತಿಸಲಾಗುವುದಿಲ್ಲ.

ವಿರೂಪಾಕ್ಷ ದೇವಾಲಯದ ಬಲಭಾಗದ ಕೈಸಾಲೆ ಮಂಟಪದ ಮೇಲೆ ಉತ್ತರಾಭಿಮುಖವಾಗಿರುವ ಗೂಡುಗಳು ಸಣ್ಣ, ಮಧ್ಯಮ ಮತ್ತು ಬೃಹದಾಕೃತಿಗಳಲ್ಲಿವೆ. ಇಲ್ಲಿರುವ ಶೈವ ಶಿಲ್ಪಗಳಲ್ಲಿ ವೀರಭದ್ರ ಮತ್ತು ಕಮಲದ ಮೊಗ್ಗನ್ನು ಹಿಡಿದ ಸ್ತ್ರೀ ದೇವತೆ ಶಿಲ್ಪಗಳು ತೆಳು ಉಬ್ಬು ಶಿಲ್ಪಗಳಂತೆ ಕಂಡುಬರುತ್ತವೆ. ಅಂದರೆ ಈ ಗೂಡಿನಲ್ಲಿದ್ದ ವಿಜಯನಗರ ಕಾಲದ ವೈಷ್ಣವ ಪ್ರತಿಮೆಯು ಹಾಳಾದ ನಂತರ, ಮೇಲೆ ಹೇಳಿದ ವೀರಭದ್ರ ಮತ್ತು ಸ್ತ್ರೀ ದೇವತೆಯ ಶಿಲ್ಪಗಳು ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಇದೇ ಸ್ವರೂಪದಲ್ಲಿವೆ. ಸರಸ್ವತಿ ಸಮೇತನಾದ ಬ್ರಹ್ಮನ ಪ್ರತಿಮೆಯ ಭಗ್ನಗೊಂಡಿದೆ. ನಂದಿಯನ್ನು ಒರಗಿ ನಿಂತ ಶಿವನ ಕೈಗಳು ಒರಟಾಗಿ ಜೀರ್ಣೋದ್ಧಾರಗೊಂಡಿವೆ. ಜಟಾಧಾರಿ ಶಿವನ ಶಿಲ್ಪವೊಂದರ ಎರಡು ಕೈಗಳು ಭಗ್ನಗೊಂಡಿದ್ದು, ಉಳಿದೆರಡು ಕೈಗಳಲ್ಲಿ ಕ್ರಮವಾಗಿ ತ್ರಿಶೂಲ ಮತ್ತು ಢಮರುಗಳಿವೆ. ಹೊರಗೆ ಇಕ್ಕೆಲಗಳಲ್ಲಿ ಕೊಂಬು ಮತ್ತು ಮೃದಂಗ ವಾದಕರ ಮತ್ತು ಭಕ್ತರ ಗುಂಪು ಶಿಲ್ಪಗಳಿವೆ. ಜೊತೆಗೆ ಮಿಥುನ ಶಿಲ್ಪಗಳಿವೆ. ಧ್ಯಾನದಲ್ಲಿರುವ ಯತಿಯ ಎರಡೂ ಕೈಗಳು ಭಗ್ನಗೊಂಡಿದ್ದು, ಹೊರಗೆ ಶಿಷ್ಯರ ಮತ್ತು ಭಕ್ತರ ಶಿಲ್ಪಗಳುಂಟು. ಶಿಷ್ಯರು ಸರಳವಾದ ದೋತಿಗಳನ್ನು ಧರಿಸಿದ್ದರೆ, ಭಕ್ತರು ಕಿರೀಟ, ಆಭರಣ ಮತ್ತು ಅಲಂಕಾರಿಕ ವಸ್ತುಗಳನ್ನು ಧರಿಸಿದ್ದಾರೆ. ಮೋಹಕ ಭಂಗಿಯಲ್ಲಿರುವ ಶಿವಪಾರ್ವತಿಯರ ಶಿಲ್ಪಗಳು ಸುಸ್ಥಿತಿಯಲ್ಲಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಇವು ನುರಿತ ಗಾರೆಶಿಲ್ಪಿಯೊಬ್ಬನ ಕಲಾ ಪ್ರೌಢಿಮೆಗೆ ಜೀವಂತ ಸಾಕ್ಷಿ. ಈ ಗಾರೆಶಿಲ್ಪದಲ್ಲಿ, ವಿಜಯನಗರ ಕಾಲದ ಶಿಲಾ ಅಥವಾ ಲೋಹ ಪ್ರತಿಮೆಗಳ ಗಾಂಭೀರ್ಯ, ಸೌಂದರ್ಯ ಮತ್ತು ಅಲಂಕರಣಗಳನ್ನು ಕಾಣಬಹುದು. ಹೀಗೆ ಜಟಾಮುಕುಟಧಾರಿ ಶಿವ ಮತ್ತು ಒನಪು ವಯ್ಯಾರದ ಪಾರ್ವತಿ ಶಿಲ್ಪ ಶ್ರೇಷ್ಠ ರಚನೆಯಾಗಿದೆ.

ಉಮಾಮಹೇಶ್ವರ ಶಿಲ್ಪಗಳಲ್ಲಿ ವಸ್ತ್ರ ಮತ್ತು  ಆಭರಣಗಳ ಅಲಂಕರಣ ಎದ್ದು ಕಾಣುವುದು. ಶಿವನ ಪ್ರತಿಮೆಯಲ್ಲಿ ಕರ್ಣಾಭರಣ, ಮಣಿಗಳ ಹಾರ, ಕೀರ್ತಿಭುಜ, ಜಟಾಮುಕುಟ, ಕಿರೀಟ, ಗಂಗೆಯ ಸೂಕ್ಷ್ಮ ಅಲಂಕರಣ, ಕಡಗ ಹಾಗೂ ನಡುಪಟ್ಟಿಗಳನ್ನು ಬಿಡಿಸಿದೆ. ಪಾರ್ವತಿ ಪ್ರತಿಮೆಯಲ್ಲಿ ಕೊರಳಹರ, ತೋಳ್ಬಂದಿ, ಕಡಗ, ಡಾಬು ಮತ್ತು ಕಿರೀಟ ಮುಕುಟಗಳ ಅಲಂಕರಣಗಳುಂಟು. ಈ ಎಲ್ಲಾ ಗಾರೆಶಿಲ್ಪಗಳಲ್ಲಿ, ಪುರುಷ ದೇವತೆಯನ್ನು ದೊಡ್ಡದಾಗಿಯೂ ಸ್ತ್ರೀ ದೇವತೆಯನ್ನು ಚಿಕ್ಕದಾಗಿಯೂ ರಚಿಸಲಾಗಿದೆ. ಹೀಗೆ ಶಿಲ್ಪಗಳ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ, ಎರಡೂ ರಚನೆಗಳು ಇಡಿಯಾಗಿ ಎದ್ದುಕಾಣುತ್ತವೆ. ಇದು ಇಲ್ಲಿನ ಗಾರೆಶಿಲ್ಪಗಳ ಪ್ರಮುಖ ಲಕ್ಷಣ.

ಇದೇ ದೇವಾಲಯದ ಮುಖಮಂಟಪದಲ್ಲಿನ ಮಧ್ಯದ ಒಳ ಛಾವಣಿಯಲ್ಲಿ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಈ ಭಾಗವನ್ನು ಹೊತ್ತ ಕಿರು ಭಿತ್ತಿಯ ಶಿಲಾ ಫಲಕಗಳಲ್ಲಿ ನೃತ್ಯಗಾರ್ತಿಯರ ಸಾಲು ಉಬ್ಬು ಶಿಲ್ಪಗಳನ್ನು ಬಿಡಿಸಲಾಗಿದೆ. ಇವುಗಳ ಮೇಲೆ ವಿಜಯನಗರೋತ್ತರ ಕಾಲದಲ್ಲಿ ಗಿರಿಜಾ ಕಲ್ಯಾಣ, ಅನಂತಶಯನ ಮತ್ತು ದಶಾವತಾರದ ಗಾರೆ ಶಿಲ್ಪಗಳನ್ನು ನಿರ್ಮಿಸಲಾಗಿದೆ. ಇದೇ ರೀತಿ ಮಾರ್ಕಂಡೇಯ, ಮಹಿಷಮರ್ದಿನಿ, ಶಿವ ಪಾರ್ವತಿ, ಗಣಪತಿ ಮತ್ತು ಕಾರ್ತಿಕೇಯ ಶಿಲ್ಪಗಳನ್ನು ಇತ್ತೀಚೆಗೆ ಸಿಮೆಂಟಿನಿಂದ ರಚಿಸಿದ್ದಾರೆ. ಕನಕಗಿರಿ ಗೋಪುರದ ಮೊದಲ ಹಂತದ ಸಣ್ಣ ಗುಡೂಗಳಲ್ಲಿ ರುಂಡ ಭಾಗಗಳನ್ನು ಬಿಡಿಸಲಾಗಿದೆ. ಇವಲ್ಲದೆ ದ್ವಾರಪಾಲಕರ, ಕುದುರೆ ಸವಾರರ, ಹಂಸಗಳ ಮತ್ತು ಗಿಳಿಗಳ ರಚನೆಗಳನ್ನು ಕಾಣಬಹುದು.

ಕ್ರಿ.ಶ. ೧೫೧೦ರಲ್ಲಿ ಕೃಷ್ಣದೇವರಾಯನು ನಿರ್ಮಿಸಿದ ಕಿರಿಯ ಮಹಾದ್ವಾರ ಗೋಪುರದಲ್ಲಿ  ಗಣಪತಿ, ಲಿಂಗ, ನಾಗದೇವತೆ, ಶೈವತಪೋಧನರು, ಶಿವಪಾರ್ವತಿ, ನಂದಿ ಮತ್ತು ರುಂಡ ಶಿಲ್ಪಗಳು ಸುಣ್ಣ  ಬಣ್ಣಗಳಲ್ಲಿ ಮುಚ್ಚಿಹೋಗಿವೆ. ಮುಂದಿರುವ ಹಿರಿಯ ಮಹಾದ್ವಾರ ಗೋಪುರವು ಎರಡನೆ ದೇವರಾಯನ ಕಾಲದ್ದು. ಆದರೆ ಅಲ್ಲಿ ರಚನೆ ಗೊಂಡಿರುವ ಗಾರೆಶಿಲ್ಪಗಳು ವಿಜಯನಗರೋತ್ತರ ಕಾಲದವು. ಅವುಗಳಲ್ಲಿ ಗಿರಿಜಾ ಕಲ್ಯಾಣ, ನಂದಿ, ವಾಹನಸಹಿತ ಶಿವ, ಗಣಪತಿ, ಲಿಂಗ ಮುಂತಾದ ಶೈವ ಶಿಲ್ಪಗಳು ಪ್ರಮುಖವಾಗಿವೆ. ಹಂಪೆಯ ಚಂದ್ರಶೇಖರ ದೇವಾಲಯ, ಮಲಪನಗುಡಿಯ ಮಲ್ಲಿಕಾರ್ಜುನ ದೇವಾಲಯ ಮತ್ತು ತಿಮ್ಮಲಾಪುರ (ಹೊಸಪೇಟೆ ತಾ.) ತ್ರಿಕೂಟ ಶಿವಾಲಯಗಳ ಗೋಪುರ ಮತ್ತು ಶಿಖರಗಳಲ್ಲಿ ಶೈವ ಶಿಲ್ಪಗಳನ್ನು ಕಾಣಬಹುದು. ಹೀಗೆ ವಿಜಯನಗರ ಕಾಲದ ಶೈವ ಶಿಲ್ಪಗಳಲ್ಲಿ ಲಿಂಗ, ಗಣೇಶ, ಶಿವಪಾರ್ವತಿ, ನಂದಿ, ಶೈವ ಯತಿ ಮತ್ತುದ್ವಾರಪಾಲಕರ ಶಿಲ್ಪಗಳು ಪ್ರಧಾನವಾಗಿ ನಿರ್ಮಾಣಗೊಂಡಿವೆ. ವಿಜಯನಗರ ಪೂರ್ವ ಕಾಲದಲ್ಲಿ ಶಿವ ಪಾರ್ವತಿಯರ ಶಿಲ್ಪಗಳು ಹೆಚ್ಚಾಗಿ ಶಿಲೆಯಲ್ಲಿ ರಚನೆಗೊಂಡಿರುವುದನ್ನು ಕಾಣಬಹುದು. ಆದರೆ ವಿಜಯನಗರ ಕಾಲದಲ್ಲಿ ಶಿಲಪಗಳು, ದೇವಾಲಯ ಸೌಂದರ್ಯ ನಿಮಿತ್ತ ಶಿಲೆಯ ಬದಲಿಗೆ ಗಾರೆಯಲ್ಲಿ ನಿರ್ಮಾಣಗೊಂಡಂತೆ ಕಂಡುಬರುತ್ತವೆ. ಶಿಷ್ಟ ಪರಂಪರೆಯಲ್ಲಿ ಸಾಮಾನ್ಯವಾಗಿ ದೇವತಾ ಶಿಲ್ಪಗಳನ್ನು ದೀರ್ಘಕಾಲ ಬಾಳಿಕೆ ಬರುವ ಸಾಮಗ್ರಿಗಳಾದ ಶಿಲೆ ಮತ್ತು ಲೋಹಗಳಲ್ಲಿ ರಚಿಸುವ ಒಲವನ್ನು ಕಾಣುತ್ತೇವೆ. ಇಂತಹ ಒಲವು ಸಡಿಲಗೊಂಡು ದೇವತಾಶಿಲ್ಪಗಳನ್ನು ಪ್ರದರ್ಶನ ಗೊಮಬೆಗಳಂತೆ ಗಾರೆಯಲ್ಲಿ ರಚಿಸಲು ಮುಂದಾದದ್ದು ಗಮನಾರ್ಹ. ಹಂಪೆಯ ಧಾರ್ಮಿಕ ಆಚರಣೆಗಳಲ್ಲಿ ಹಾಗೂ ಸ್ಥಳ ಪುರಾಣದಲ್ಲಿ ಗಿರಿಜಾ ಕಲ್ಯಾಣಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಇದನ್ನು ವಿರೂಪಾಕ್ಷ ದೇವಾಲಯದಲ್ಲಿರುವ ಗಿರಿಜಾ ಕಲ್ಯಾಣದ ಗಾರೆ ಶಿಲ್ಪಗಳು ಸಮರ್ಥಿಸುತ್ತವೆ. ಗೂಡುಗಳ ಹೊರಗೆ ಇಕ್ಕೆಲಗಳಲ್ಲಿರುವ ಪರಿವಾರ ದೇವತೆಗಳು, ಯತಿಗಳು, ಶಿಷ್ಯರು ಮತ್ತು ಭಕ್ತರುಗಳ ಕುಬ್ಜ ಶಿಲ್ಪಗಳಿಂದಾಗಿ, ಗೂಡಿನೊಳಗಿರುವ ಪ್ರಧಾನ ಶಿಲ್ಪವು ಎದ್ದು ಕಾಣುವಂತಿದ್ದು, ನೋಡುಗನ ಗಮನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ಈ ಎಲ್ಲಾ ಶಿಲ್ಪಗಳು, ಸಮಕಾಲೀನ ಉಡುಗೆತೊಡುಗೆ ಮತ್ತು ಧಾರ್ಮಿಕ ಆಸಕ್ತಿಯನ್ನು ಸವಿವರವಾಗಿ ಪರಿಚಯಿಸುತ್ತವೆ. ಗಾರೆಶಿಲ್ಪಿಯು, ಸಣ್ಣ ಶಿಲ್ಪಗಳ ರಚನೆಯಲ್ಲೂ ಹೆಚ್ಚಿನ ಆಸಕ್ತಿ ವಹಿಸಿರುವುದನ್ನು ಕಾಣಬಹುದು.

ವೈಷ್ಣವ ಶಿಲ್ಪಗಳು

ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳಲ್ಲಿ, ವೈಷ್ಣವ ದೇವಾಲಯಗಳ ಸಂಖ್ಯೆಯೇ ಹೆಚ್ಚು. ಈ ಮಾತು ಹಂಪಿಗೂ ಅನ್ವಯಿಸುತ್ತದೆ. ಅದರಲ್ಲೂ ತುಳುವ ಮನೆತನದ ಆಳ್ವಿಕೆ ಕಾಲದಲ್ಲಿ ಬೃಹತ್ ದೇವಾಲಯಗಳು ನಿಮಾಣಗೊಂಡವು. ಈ ದೇವಾಲಯಗಳ ಶಿಖರ ಮತ್ತು ಗೋಪುರಗಳಿಗೆ ನಡೆದ ಅಲಂಕರಣದಲ್ಲಿ ವಿಷ್ಣುವಿನ ಅವತಾರಗಳಿಗೆ ಸಂಬಂಧಿಸಿದ ಶಿಲ್ಪಗಳು ರೂಪುಗೊಂಡವು. ಜೊತೆಗೆ ಯತಿಗಳು, ಶಿಷ್ಯರು ಮತ್ತು ದ್ವಾರಪಾಲಕರ ಶಿಲ್ಪಗಳನ್ನು ರಚಿಸಲಾಗಯಿತು. ಹಂಪೆ, ಅನಂತಶಯನಗುಡಿ, ತಿಮ್ಮಲಾಪುರ, ಮೇಲುಕೋಟೆ, ಕನಕಗಿರಿ ಮುಂತಾದ ಸ್ಥಳಗಳಲ್ಲಿರುವ ದೇವಾಲಯಗಳಲ್ಲಿ ವೈಷ್ಣವ ಪಂಥದ ಶಿಲ್ಪಗಳು ಕಂಡುಬರುತ್ತವೆ.

ಕ್ರಿ.ಶ. ೧೫೬೫ರ ಯುದ್ಧದ ಸಂದರ್ಭದಲ್ಲಿ ಹಂಪೆಯಲ್ಲಿನ ಪ್ರಮುಖ ವೈಷ್ಯವ ದೇವಾಲಯಗಳು ದಾಳಿ ಮತ್ತು ಲೂಟಿಗೆ ಒಳಗಾದವು. ಇದೇ ಸಂದರ್ಭದಲ್ಲಿ ವಿರೂಪಾಕ್ಷ ದೇವಾಲಯದ ಕೈಪಿಡಿ ಗೋಡೆಯ ಗೂಡುಗಳಲ್ಲಿದ್ದ ವೈಷ್ಣವ ಗಾರೆಶಿಲ್ಪಗಳು ಸಹ ಹಾನಿಗೊಳಗಾದ ಬಗೆಗೆ ಸ್ಪಷ್ಟ ಸೂಚನೆಗಳಿವೆ. ಅಂದರೆ ಅಕ್ಕಪಕ್ಕದ ಗೂಡುಗಳಲ್ಲಿರುವ ಶೈವ ಶಿಲ್ಪಗಳು ವಿಜಯನಗರ ಕಾಲದ ರಚನೆಗಳಾಗಿದ್ದು, ಸುಸ್ಥಿತಿಯಲ್ಲಿವೆ. ಆದರೆ ವೈಷ್ಣವ ಶಿಲ್ಪಗಳು ಮಾತ್ರ ಸಾಮಾನ್ಯ ಉಬ್ಬು ಶಿಲ್ಪಗಳಂತೆ ರಚನೆಗೊಂಡಿರುವುದು ಗಮನಾರ್ಹ. ಅಂದರೆ ವಿಜಯನಗರೋತ್ತರ ಕಾಲದಲ್ಲಿ ವೈಷ್ಣವ ದೇವತೆಗಳ ಗಾರೆಶಿಲ್ಪಗಳನ್ನು ಪುನರ್ರಚಿಸಲಾಯಿತು. ಹೀಗೆ ರಚನೆಗೊಂಡ ವೈಷ್ಣವ ಗಾರೆಶಿಲ್ಪಗಳು ಗೋಡೆಗಂಟಿದ ತೆಳು ಉಬ್ಬು ಶಿಲ್ಪಗಳಂತೆ ಕಂಡುಬರುತ್ತವೆ. ಇವುಗಳಲ್ಲಿ ಶೈವ ಶಿಲ್ಪಗಳಲ್ಲಿರುವ ಲಕ್ಷಣಗಳಾಗಲಿ ಅಥವಾ ಅಲಂಕರಣಗಳಾಗಲಿ ಕಂಡುಬರುವುದಿಲ್ಲ. ಶೈವ ಶಿಲ್ಪಗಳು ಬಿಡಿ ರಚನೆಗಳಂತೆ ಕಂಡುಬಂದರೆ, ವೈಷ್ಣವ ಶಿಲ್ಪಗಳು ತೆಳು ಉಬ್ಬು ಶಿಲ್ಪಗಳಿಂತಿವೆ. ಈ ಶಿಲ್ಪಗಳಲ್ಲಿ ಯಜ್ಞೋಪವಿತವಾಗಲಿ, ಉಪವೀತವಾಗಲಿ ಕಂಡುಬರುವುದಿಲ್ಲ. ಹೀಗೆ ರಚನಾ ವ್ಯತ್ಯಾಸಗಳೆ ಅವುಗಳ ಕಾಲ ನಿರ್ಣಯಕ್ಕೆ ಸಹಾಯಕವಾಗಿದೆ. ಹಗೂ ಮೂಲ ವೈಷ್ಣವ ಶಿಲ್ಪಗಳನ್ನು ಹಾಳು ಮಾಡಿದ ಬಗೆಗೂ ಸ್ಪಷ್ಟ ಸೂಚನೆಗಳು ದೊರೆಯುತ್ತವೆ.

ಕ್ರಿ.ಶ. ೧೫೦೦ರ ನಂತರ ವೈಷ್ಣವ ಧರ್ಮ ಮತ್ತು ಸಂಸ್ಕೃತಿಗೆ ವಿಶೇಷವಾದ ರಾಜಾಶ್ರಯ ದೊರೆಯಲಾಗಿ, ಹಂಪೆಯಲ್ಲಿ ಭವ್ಯ ದೇವಾಲಯಗಳು ನಿರ್ಮಾಣಗೊಂಡವು. ಈ ಬೆಳವಣಿಗೆ ಅಂತಿಮವಾಗಿ ಯುದ್ಧದ ಸಂದರ್ಭದಲ್ಲಿ ಸೈವ ಮತ್ತು ವೈಷ್ಣವರ ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಿತು. ಈ ರೀತಿ ದಾಳಿಗೆ ತುತ್ತಾದ ದೇವಾಲಯಗಳಲ್ಲಿ ಹಂಪೆಯ ಲಕ್ಷ್ಮೀನರಸಿಂಹ, ಹಜಾರರಮ ದೇವಾಲಯ, ಕೃಷ್ಣ ದೇವಾಲಯ, ಅಚ್ಯುತರಾಯ ದೇವಾಲಯ (ತಿರುವೆಂಗಳನಾಥ), ವಿಠಲದೇವಾಲಯ, ಪಟ್ಟಾಭಿರಾಮ ದೇವಾಲಯ, ಅನಂತಶಯನ ಗುಡಿಯ ಅನಂತಶಯನ ದೇವಾಲಯ, ತಿರುಮಲಾದೇವಿಯರ ಪಟ್ಟಣದ ತಿರುವೆಂಗಳನಾಥ ದೇವಾಲಯ (ಹೊಸಪೇಟೆ) ಮುಂತಾದವು ಪ್ರಮುಖವಾಗಿವೆ. ದಾಳಿಗೆ ತುತ್ತಾಗದೆ ಉಳಿದ ವೈಷ್ಣವ ದೇವಾಲಯವೆಂದರೆ ಕಂಪ್ಲಿ ರಸ್ತೆಯಲ್ಲಿರುವ ಮಾಲ್ಯವಂತ ರಘನಾಥ ದೇವಾಲಯ. ಇದು ಹಂಪಿಯ ಹೊರವಲಯದ ಗುಡ್ಡದಲ್ಲಿರುವುದರಿಂದ ದಾಳಿಯ ಒಳಗಾಗಿಲ್ಲವೆಂದು ಹೇಳಬಹುದಾದರೂ, ಬಿಜಾಪುರ ಸೈನ್ಯದ ಪ್ರವೇಶ ಮಾರ್ಗದಲ್ಲಿ ಹಾಗೂ ವಿಜಯನಗರದ ಮುಸ್ಲಿಂ ವಸತಿ ನೆಲೆಗೆ ಅತೀ ಸಮೀಪವಿದ್ದ ಈ ದೇವಾಲಯವು ದಾಳಿಗೊಳಗಾದಿರುವುದು ಆಶ್ಚರ್ಯದ ಸಂಗತಿ. ಇದು ಬೇರೆ ರೀತಿಯ ವಿಶ್ಲೇಷಣೆಗೆ ಅವಕಾಶ ಮಾಡಿಕೊಡುತ್ತದೆ. ಹಾಗೂ ವೈಷ್ಣವ ದೇವಾಲಯಗಳ ನಾಶದ ಬಗೆಗೆ ಹೊಸ ಬೆಳಕನ್ನು ಚೆಲ್ಲುತ್ತದೆ.

ವಿರೂಪಾಕ್ಷ ದೇವಾಲಯದಲ್ಲಿರುವ ವೈಷ್ಣವ ಪ್ರತಿಮೆಗಳಿಗೂ, ಕೃಷ್ಣ ಮತ್ತು ಮಾಲ್ಯವಂತ ರಘುನಾಥ ದೇವಾಲಯಗಳಲ್ಲಿರುವ ಶಿಲ್ಪಗಳಿಗೂ ಇರುವ ವ್ಯತ್ಯಾಸ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ವಿರೂಪಾಕ್ಷ ದೇವಾಲಯದಲ್ಲಿ ಕಂಡುಬರುವ ವೈಷ್ಣವ ಶಿಲ್ಪಗಳಲ್ಲಿ ಲಕ್ಷ್ಮಿನರಸಿಂಹ, ರಾಮ, ಲಕ್ಷಣ, ಸೀತೆ, ಲಕ್ಷ್ಮೀನಾರಾಯಣ, ನಾರಾಯಣ, ಶ್ರೀದೇವಿ, ಭೂದೇವಿ ಸಹಿತ ವಿಷ್ಣು, ಮತ್ಸ್ಯಾವತಾರ ಮುಂತಾದವು ಪ್ರಮುಖವಾಗಿವೆ. ಕೆಲವು ಶಿಲ್ಪಗಳು ಭಗ್ನಗೊಂಡಿರುವುದರಿಂದ, ಶಿಲ್ಪಗಳ ರಚನೆಯಲ್ಲಿ ಬಳಸಿರುವ ಮರದ ಗೂಟಗಳು ಹಾಗೂ ಕಬ್ಬಿಣದ ಕಡ್ಡಿಗಳು ಹೊರಕಾಣುತ್ತವೆ. ಈ ಮೊದಲೇ ತಿಳಿಸಿದಂತೆ ಶಿಲ್ಪಗಳನ್ನು ರಚಿಸಲು ಭಿತ್ತಿಯಲ್ಲಿ ರಂಧ್ರ ಕೊರೆದು ಮರದ ಗೂಟುಗಳನ್ನು ಅಳವಡಿಸಿ ನಂತರ ಗಾರೆಯನ್ನು ಹಂತಹಂತವಾಗಿ ಮೆತ್ತುವುದರ ಮೂಲಕ ಶಿಲ್ಪದ ಒರಟು ರಚನೆಯನ್ನು ಮಾಡಿ ಕೊಳ್ಳುತ್ತಿದ್ದರು. ಕೊನೆಯಲ್ಲಿ ನುಣ್ಣಗೆ ಅರೆದ ಗಾರೆಯನ್ನು ಲೇಪಿಸಿ ಅಂತಿಮ ರೂಪ ಕೊಡುತ್ತಿದ್ದರು. ಅಭಯ ಮತ್ತು ವರದ ಹಸ್ತಗಳನ್ನು ರಚಿಸುವಾಗ ಒಳಭಾಗದಲ್ಲಿ ಕಬ್ಬಿಣದ ಕಡ್ಡಿಗಳನ್ನು ಬಳಸುತ್ತಿದ್ದರು. ಹೀಗೆ ಶಿಲೆಯಲ್ಲಿ ಅಸಾಧ್ಯವಾದ ಅಲಂಕರಣಗಳನ್ನು ಗಾರೆಯಲ್ಲಿ ಸಾಧ್ಯಮಾಡಲಾಗಿದೆ ಎಂಬರ್ಥದಲ್ಲಿ ಕೆಲವು ಶಿಲ್ಪಗಳು ರೂಪುಗೊಂಡಿವೆ. ಗೂಡುಗಳ ಹೊರಭಾಗದಲ್ಲಿ ಸಂಗೀತಗಾರರು ಮತ್ತು ಭಕ್ತರ ಗುಂಪು ಪ್ರತಿಮೆಗಳಿವೆ. ಶೈವ ಶಿಲ್ಪಗಳಂತೆ ವೈಷ್ಣವ ಶಿಲ್ಪಗಳಲ್ಲೂ ಪುರುಷ ದೇವತೆಗಳನ್ನು ದೊಡ್ಡದಾಗಿಯೂ, ಸ್ತ್ರೀ ದೇವತೆಗಳನ್ನು ಚಿಕ್ಕದಾಗಿಯೂ ರಚಿಸಲಾಗಿದೆ.

ಕೃಷ್ಣದೇವರಾಯನ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡ ಕೃಷ್ಣ ದೇವಾಲಯ ಹಂಪೆಯ ಮಹತ್ವದ ದೇವಾಲಯಗಳನ್ನು ಒಂದು. ಉದಯಗಿರಿ ಯುದ್ಧದಲ್ಲಿ ಗೆದ್ದು, ಅಲ್ಲಿಂದ ತಂದ ಕೃಷ್ಣ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸುತ್ತಾನೆ. ಇದು ಈಗ ಮದ್ರಾಸ್ ವಸ್ತು ಸಂಗ್ರಹಾಲಯದಲ್ಲಿದೆ. ದೇವಾಲಯದ ಮಹದ್ವಾರಗೋಪುರವು ಭಗ್ನಗೊಂಡಿದ್ದು, ಪೂರ್ವ, ಉತ್ತಮ ಮತ್ತು ದಕ್ಷಿಣ ಮುಖಗಳಲ್ಲಿ ಕೃಷ್ಣ ಲೀಲೆಗಳಿಗೆ ಸಂಬಂಧಿಸಿದ ಗಾರೆಶಿಲ್ಪಗಳಿವೆ. ಪಶ್ಚಿಮ ಮುಖದಲ್ಲಿ ಉದಯಗಿರಿ ಯುದ್ಧದಲ್ಲಿ ಪಾಲ್ಗೊಂಡ ಸೈನ್ಯದ ವಿಜಯೋತ್ಸವವನ್ನು ನಿರೂಪಿಸುವ ಗುಂಪು ಶಿಲ್ಪಗಳನ್ನು ರಚಿಸಲಾಗಿದೆ. (ಮುಂದೆ ವಿವರಿಸಲಗುವುದು). ತೀರಾ ಭಗ್ನ ಸ್ಥಿತಿಯಲ್ಲಿರುವ ಇಲ್ಲಿಯ ಶಿಲ್ಪಗಳ ಜೀನೋದ್ಧಾರ ಕಾರ್ಯ ನಡೆಯುತ್ತಿದೆ.

ಗೋಪುರದ ಪೂರ್ವ ಮುಖದ ಮೊದಲ ಹಂತದಲ್ಲಿ, ಕೃಷ್ಣನ ತನ್ನ ಬಲಗೈಯ್ಲಲಿ ಗೋವರ್ಧನಗಿರಿಯನ್ನು ಎತ್ತಿಹಿಡಿದಿರುವ ಶಿಲ್ಪವು ಸೊಗಸಾಗಿ ಮೂಡಿಬಂದಿದೆ. ಇದೇ ಮುಖದ ಮೊದಲನೆ ಮತ್ತು ಎರಡನೆ ಹಂತಗಳಲ್ಲಿ ಆಳೆತ್ತರದ ದ್ವಾರಪಾಲಕರ ಶಿಲ್ಪಗಳುಂಟು. ಸುಮಾರು ಸುಸ್ಥಿತಿಯಲ್ಲಿರುವ ಇವು ವಿಜಯನಗರ ಕಾಲದ ಗಾರೆಶಿಲ್ಪಗಳ ಅಧ್ಯಯನಕ್ಕೆ ಅತ್ಯುತ್ತಮ ಮಾದರಿಗಳು. ಇದೇ ಗೋಪುರದ ದಕ್ಷಿಣ ಮುಖದಲ್ಲಿ ವಸ್ತ್ರಗಳನ್ನು ಅಪಹರಿಸಿಕೊಂಡು ಮರದ ಮೇಲೆ ಕುಳಿತ ಕೃಷ್ಣ ಮತ್ತು ಕೆಳಗಡೆ ವಸ್ತ್ರಗಳ ನಿರೀಕ್ಷೆಯಲ್ಲಿರುವ ನಗ್ನ ಸ್ತ್ರೀಯರ ಪ್ರತಿಮೆಗಳಲ್ಲಿ ಶಿಲ್ಪಿಯು ಜೀವಂತಿಕೆಯನ್ನು ತುಂಬಿದ್ದಾನೆ. ಸ್ತ್ರೀಯರ ಅಂಗಾಂಗಗಳನ್ನು ವಿವರ ಸಹಿತ ಸೂಕ್ಷ್ಮವಾಗಿ ಬಿಡಿಸಲಾಗಿದೆ. ಇವು, ಶಿಲ್ಪಿಯ ಆಸಕ್ತಿ ಮತ್ತು ಕಾರ್ಯಮಗ್ನತೆಯನ್ನು ಸೂಚಿಸುವುದರ ಜೊತೆಗೆ, ಕಾವ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ಅವನಲ್ಲಿದ್ದ ಸೌಂದರ್ಯದೃಷ್ಟಿ ಹಾಗೂ ಪರಿಣತಿಗಳನ್ನು ಪರಿಚಯಿಸುತ್ತವೆ. ಸಾಮಾನ್ಯ ನೋಡುಗನನ್ನು ಸಹ ವಿಸ್ಮಯಗೊಳಿಸುವ ಸಾಮರ್ಥ್ಯ ಇಲ್ಲಿನ ಶಿಲ್ಪಗಳಿಗುಂಟು.

ಇದೇ ದೇವಾಲಯದ ಉತ್ತರ ದ್ವಾರದ ಗೋಪುರದಲ್ಲಿ ಕೆಲವು ಶಿಲ್ಪಗಳಿವೆ. ಮುಖಮಂಟಪದ ಈಶಾನ್ಯ ಮೂಲೆಯಲ್ಲಿರುವ ಬಿಡಿ ಕೊಠಡಿಯ ಮೇಲೆ ಏಕತಲ ಶಿಖರವಿದ್ದು, ಇತ್ತೀಚೆಗೆ ಜೀಣೋದ್ಧಾರಗೊಂಡಿದೆ. ವಿಷ್ಣು, ಗರುಡ ಮತ್ತು ಕೀರ್ತಿ ಮುಖಗಳ ಅಲಂಕರಣವುಂಟು. ಆವರಣದಲ್ಲಿರುವ ಅಮ್ಮನವರ ಗುಡಿ ಹಾಗೂ ಇದಕ್ಕೆ ಹೊಂದಿಕೊಂಡು ದಕ್ಷಿಣಾಭಿಮುಖವಾಗಿರುವ ಕೊಠಡಿಯ ಮೇಲೆ ಶಿಖರಗಳಿವೆ. ಈ ಶಿಖರಗಳಲ್ಲಿ ವಿಷ್ಣು, ಕಾಳಿಂಗ ಮರ್ದನ ಕೃಷ್ಣ, ಲಕ್ಷ್ಮಿ ಮುಂತಾದ ಶಿಲ್ಪಗಳನ್ನು ಬಿಡಿಸಲಾಗಿದೆ. ಕೃಷ್ಣ ದೇವಾಲಯದ ಮೇಲಿರುವ ಶಿಖರದಲ್ಲಿ ನರಸಿಂಹ ಮತ್ತು ನಾರಾಯಣ ಶಿಲ್ಪಗಳು ಕಂಡುಬರುತ್ತವೆ. ಆವರಣದ ನೈಋತ್ಯ ಮೂಲೆಯಲ್ಲಿರುವ ಬಿಡಿಕೊಠಡಿ ಮತ್ತು ದಕ್ಷಿಣ ಭಾಗದ ಬಿಡಿ ಕೊಠಡಿಗಳ ಮೇಲಿರುವ ಶಿಖರಗಳಲ್ಲಿನ ಬ್ರಹ್ಮನ ಪ್ರತಿಮೆಗಳುಂಟು. ಈ ಎಲ್ಲಾ ಗಾರೆಶಿಲ್ಪಗಳು ಶೈಲಿ ಮತ್ತು ಆಲಂಕರಣಗಳಲ್ಲಿ ವಿರೂಪಾಕ್ಷ ದೇವಾಲಯ ಕೈಪಿಡಿ ಗೋಡೆಯ ಗೂಡುಗಳಲ್ಲಿರುವ ಶೈವ ಪ್ರತಿಮೆಗಳಿಗಿಮತ ಮೊದಲು ನಿರ್ಮಾಣಗೊಂಡಿದ್ದು, ಜೊತೆಯಲ್ಲೆ ಗಾರೆಶಿಲ್ಪಗಳ ರಚನೆ ನಡೆದಿರುವುದು ಸುಸ್ಪಷ್ಟ. ಹೀಗೆ ಕೃಷ್ಣ ದೇವಾಲಯದಲ್ಲಾದ ಗಾರೆಶಿಲ್ಪಗಳ ರಚನೆ ಮತ್ತು ಅಲಂಕರಣಗಳಿಂದ ಸ್ಪೂರ್ತಿಗೊಂಡು, ನಂತರ ವಿರೂಪಾಕ್ಷ ದೇವಾಲಯದಲ್ಲಿ ಶೈವ ಮತ್ತು ವೈಷ್ಣವ ಶಿಲ್ಪಗಳನ್ನು ರಚಿಸಿರಬೇಕು.

ತುರ್ತಾ ಕಾಲುವೆ ದಡದಲ್ಲಿರುವ ಸರಸ್ವತಿ ದೇವಾಲಯದಲ್ಲಿ ಕೆಲವು ಭಗ್ನ ಗಾರೆಶಿಲ್ಪಗಳು ಕಂಡುಬರುತ್ತವೆ. ಪ್ರದಕ್ಷಿಣಾ ಮಂಟಪದ ಮೇಲಿರುವ ದಕ್ಷಿಣದ ಗೂಡಿನಲ್ಲಿ ಅಂಬೆಗಾಲು ಕೃಷ್ಣನ ಭಗ್ನ ಪ್ರತಿಮೆಯಿದೆ. ಜೊತೆಯಲ್ಲಿ ಭಗ್ನಗೊಂಡ ಸ್ತ್ರೀ ಪ್ರತಿಮೆಯುಂಟು. ಕೃಷ್ಣನ ಪ್ರತಿಮೆಯಲ್ಲಿ ಅಂಗಾಂಗಗಳನ್ನು ದಷ್ಟಪುಷ್ಟವಾಗಿ ಬಿಡಿಸಲಾಗಿದೆ. ಪ್ರತಿಮೆಯ ರಚನೆಯಲ್ಲಿ ಶಿಲ್ಪಿಯ ಕಲ್ಪನೆಗಳಿಗಿಂತ ಭಾಗವತದ ಕಲ್ಪನೆಗಳೇ ವಿಜೃಂಭಿಸಿವೆ. ಹಾಲು, ಮೊಸರು ಮತ್ತು ಬೆಣ್ಣೆಗಳನ್ನು ತಿಂದ ಕೃಷ್ಣನ ವರ್ಣನೆಯ ಅನುಸಾರ ಪ್ರತಿಮೆಯನ್ನು ಬಿಡಿಸಿರುವುದು  ಗಮನಾರ್ಹ. ಆದರೆ ಶಿರಭಾಗ ಹಾಳಾಗಿರುವುದರಿಮದ ನೋಡಗರಿಗೆ ಸಾಮಾನ್ಯ ರಚನೆಯಂತೆ ಕಾಣುವುದು. ಇದೇ ದೇವಾಲಯದ ಮುಖಮಂಟಪದ ಕಂಬಗಳಿಗೆ ಮತ್ತು ಚಾವಣಿಗೆ ಗಾರೆ ಲೇಪಿಸಿ, ಹೊರಮೈಯನ್ನು ನಯಗೊಳಿಸಲಗಿದೆ. ಸಾಸಿವೆ ಕಾಳು ಗಣಪತಿ ಮಂಟಪದಲ್ಲೂ ಗಾರೆ ಲೇಪನದ ಕುರುಹುಗಳನ್ನು ಕಾಣಬಹುದು. ಸರಸ್ವತಿ ದೇವಾಲಯದ ಕಂಬಗಳ ಮೇಲೆ, ಗೋಪುರದ ಅಲಂಕರಣವಿರುವ ಕಮಾನು ಮತ್ತು ಶಿಲ್ಪಗಳ ಉಬ್ಬು ರಚನೆಗಳಿವೆ. ಇವುಗಳನ್ನು ನಿರ್ಮಿಸಲು ಗಾರೆಯೊಡನೆ ಇಟ್ಟಿಗೆ ಚೂರುಗಳನ್ನು ಬಳಸಲಾಗಿದೆ. ಕಂಬಗಳಲ್ಲಿ ಗಾರೆ ಉಬ್ಬು ಶಿಲ್ಪಗಳು ಮೂಡಿಬರಲು, ಉಬ್ಬು ಪ್ರತಿಮೆಗಳಿರುವ ಶಿಲಾ ಕಂಬಗಳೇ ಸ್ಪೂರ್ತಿ. ವಿದ್ವಾಂಸರು ಈಗಾಗಲೇ ವಿಜಯನಗರ ಶೈಲಿಯ ಕಂಬಗಳನ್ನು ಗುರುತಿಸಿದ್ದು, ಆವುಗಳಲ್ಲಿ ಗಾರೆ ಲೇಪಿತ ಕಂಬಗಳನ್ನು ಗುರುತಿಸಿಲ್ಲ. ಆದ್ದರಿಂದ ಪ್ರಸ್ತುತ ಅಧ್ಯಯನದಲ್ಲಿ ಈ ಗಾರೆ ಲೇಪಿತ ಕಂಬಗಳು ವಿಜಯನಗರಶೈಲಿಯ ಕಂಬಗಳ ಗುಂಪಿಗೆ ಹೊಸ ಸೇರ್ಪಡೆಯಾಗಿವೆ. ಇಂತಹ ಕಂಬಗಳನ್ನು ಅರಮನೆಗಳಂತಹ ಕಟ್ಟಡಗಳಲ್ಲಿ ಬಳಸಿರುವುದಕ್ಕೆ ಸೂಚನೆಗಳಿವೆ. ಅಂದರೆ ಲೌಕಿಕ ವಾಸ್ತು ರಚನೆಗಳನ್ನು, ಅನೇಕ ಶತನಮಾನಗಳ ನಂತರ ದೇವಾಲಯಗಳಲ್ಲಿ ಅಳವಡಿಸಿಕೊಳ್ಳುವ ಪದ್ಧತಿ ವಿಜಯನಗರ ಕಾಲದಲ್ಲಿ ಪುನರಾವರ್ತಿ ಸಿರುವುದು ಗಮನಾರ್ಹ. ಇಂತಹ ಕಂಬಗಳ ಅಳವಡಿಕೆಯ ನವ್ಯ ಮತ್ತು ಸೌಂದರ್ಯ ದೃಷ್ಟಿಯದಾಗಿದ್ದು, ಸಣ್ಣ ಪ್ರಮಾಣದ ದೇವಾಲಯಗಳಲ್ಲಿ ಮಾತ್ರ ಕಂಡುಬರುತ್ತವೆ. ಇದೇ ರೀತಿ ವಿಜಯನಗರ ಕೊನೆಗಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳಲ್ಲಿ ಗರ್ಭಗೃಹಗಳ ಛಾವಣಿ ನಿರ್ಮಾಣದಲ್ಲಿ ಮರದ ತೊಲೆಗಳನ್ನು ಬಳಸಿರುವುದು ದೇವಾಲಯದ ರಚನೆಯಲ್ಲಾದ ಬದಲಾವಣೆಗಳನ್ನು ಸೂಚಿಸುತ್ತವೆ.

ಪ್ರಸಿದ್ಧ ಹಜಾರರಾಮ ದೇವಾಲಯ, ವಿಠಲ ದೇವಾಲಯ, ಅಚ್ಯುತರಾಯ ದೇವಾಲಯ (ತಿರುಮಂಗಳನಾಥ), ಪಟ್ಟಾಭಿರಾಮ ದೇವಾಲಯ ಮತ್ತು ಮಾಲ್ಯವಂತ ರಘುನಾಥ ದೇವಾಲಯಗಳ ಗೋಪುರ ಮತ್ತು ಶಿಖರಗಳಲ್ಲಿ ವೈಷ್ಣವ ಶಿಲ್ಪಗಳು ಕಂಡುಬರುತ್ತವೆ. ವಿಠಲ ದೇವಾಲಯದ ಗೋಪುರದಲ್ಲಿ ವಿಷ್ಣುವಿನ ಅವತಾರಗಳ ಶಿಲ್ಪಗಳನ್ನು ಬಿಡಿಸಲಾಗಿದೆ. ಮಾಲ್ಯವಂತ ರಘುನಾಥ ದೇವಾಲಯದ ಗೋಪುರಗಳಲ್ಲಿ ಕೃಷ್ಣ, ಆಂಜನೇಯ, ವಿಷ್ಣು, ದ್ವಾರಪಾಲಕರು, ಯತಿಗಳು ಮುಂತಾದ ಶಿಲ್ಪಗಳನ್ನು ರಚಿಸಿ, ಬಣ್ಣವನ್ನು ಲೇಪಿಸಲಾಗಿದೆ. ಬಣ್ಣಗಲ್ಲಿ ಗಿಳಿ ಹಸಿರು ಮತ್ತು ಕಾವಿ ಕೆಂಪು ಮುಖ್ಯವಾದವು. ಈಗಲೂ ಶಿಲ್ಪಗಳಲ್ಲಿ ಆಳಿದುಳಿದ ಬಣ್ಣಗಳನ್ನು ಕಾಣಬಹುದು. ಒಳ ಆವರಣದಲ್ಲಿರುವ ಗುಡಿಗಳ ಮೇಲಿನ ಶಿಖರಗಳಲ್ಲಿ ಮತ್ತು ಕೈಪಿಡಿ ಗೋಡೆಯ ಗೂಡುಗಳಲ್ಲಿ ಶಿಲ್ಪಗಳಿದ್ದು, ಭಗ್ನಗೊಂಡಿವೆ. ಹಂಪೆಯಲ್ಲದೆ ಹಳೆಯ ಮೈಸೂರು ಪ್ರದೇಶದ ರಾಯಗೋಪುರಗಳಲ್ಲಿ ಹಾಗೂ ಕೈಪಿಡಿ ಗೋಡೆಯ ಗೂಡುಗಳಲ್ಲಿ  ಗಾರೆ ಶಿಲ್ಪಗಳು ಆಧಿಕ ಸಂಖ್ಯೆಯ್ಲಲಿ ರಚನೆಗೊಂಡಿವೆ. ಅವುಗಳಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯ ತಿರುನಾರಾಯಣಸ್ವಾಮಿ ದೇವಾಲಯದಲ್ಲಿನ ಕೈಪಿಡಿ ಗೋಡೆಯ ಗೂಡುಗಳಲ್ಲಿ ಗಾರೆಶಿಲ್ಪಗಳಿದ್ದು, ಬಹಳಷ್ಟು ಭಗ್ನಗೊಂಡಿವೆ. ಆದರೂ ಈ ಪ್ರತಿಮೆಗಳು ಇಂದಿಗೂ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿ, ಇತರ ಮಾಧ್ಯಮದ ಶಿಲ್ಪಗಳಿಗಿಂತ ಭಿನ್ನವಾದ ಕಲಾನುಭವವನ್ನು ನೀಡುವುದರಲ್ಲಿ ಯಶಸ್ವಿಗೊಂಡಿವೆ.

ಲೌಕಿಕ ಶಿಲ್ಪಗಳು

ವಿಜಯನಗರ ಕಾಲದ ಗಾರೆಶಿಲ್ಪಗಳಲ್ಲಿ ಲೌಕಿಕ ಶಿಲ್ಪಗಳನ್ನು ಸಹ ಬಿಡಿಸಲಾಗಿದೆ. ವಿರೂಪಾಕ್ಷ ದೇವಾಲಯದ ಗೂಡುಗಳ ಹೊರಭಾಗದಲ್ಲಿ ಕೈಪಿಡಿಗೋಡೆಗೆ ಒರಗಿ ನಿಂತ ಸಂಗೀತ ವಾದಕರು, ನೃತ್ಯಗಾರರು, ಹಾಸ್ಯಗಾರರು, ಭಕ್ತರು ಮತ್ತು ಶಿಷ್ಯರ ಗಾರೆಶಿಲ್ಪಗಳನ್ನು ಬಿಡಿಸಲಾಗಿದೆ. ಇವು ಸಮಕಾಲೀನ ಜನರ ವೇಷಭೂಷಣಗಳ ಬಗೆಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಜೊತೆಗೆ ಸಂಗೀತ ವಾದ್ಯಗಳು ಹಾಗೂ ನರ್ತನದ ವಿವಿಧ ಪ್ರಕಾರಗಳನ್ನು ಪರಿಚಯಿಸುತ್ತವೆ. ಉತ್ತರ ಭಾಗದ ಗೂಡೊಂದರಲ್ಲಿ, ತಲೆಗೆ ರುಮಾಲನ್ನು ಸುತ್ತಿದ ವ್ಯಕ್ತಿಯೊಬ್ಬನ ಪ್ರತಿಮೆಯುಂಟು. ಇದು ಬುಕ್ಕರಾಯನ ಪ್ರತಿಮೆ ಎಂದು ಸ್ಥಳೀಯರು ಕರೆಯುತ್ತಾರೆ. ಇದರ ಜೊತೆಯಲ್ಲಿದ್ದ ಮತ್ತೊಂದು ಪ್ರತಿಮೆ ಸಂಪೂರ್ಣವಾಗಿ ಹಾಳಾಗಿದ್ದು, ಅದು ಹಕ್ಕನ ಪ್ರತಿಮೆಯಾಗಿತ್ತೆಂದು ತಿಳಿಸುತ್ತಾನೆ. ಅಂದರೆ ಮೊದಲಿನಿಂದಲೂ ಈ ಪ್ರತಿಮೆಗಳನ್ನು ಹಕ್ಕಬುಕ್ಕರೆಂದು ಸ್ಥಳೀಯರು ಗುರುತಿಸಿರುವುದು ಗಮನಾರ್ಹ. ಗಾಂಭೀರ್ಯವನ್ನು ಪ್ರದರ್ಶಿಸುವ ಪ್ರತಿಮೆಯು, ಗಣ್ಯವ್ಯಕ್ತಿಯ ವೇಷಭೂಷಣಗಳನ್ನು ಒಳಗೊಂಡಿದೆ. ಕನಕಗಿರಿ ಗೋಪುರದಲ್ಲಿ ಕುದುರೆ ಸವಾರರ ಪ್ರತಿಮೆಗಳಿದ್ದು, ಗೋಪುರದ ಅಲಂಕರಣಕ್ಕೆ ನೆರವಾಗಿವೆ. ಮುಂದಿರುವ ಹಿರಿಯ ಮಹಾದ್ವಾರ ಗೋಪುರದ ಪಶ್ಚಿಮಮುಖದಲ್ಲಿ ಗಂಡು ಜೋಗಮ್ಮನ ಪ್ರತಿಮೆಯೊಂದನ್ನು ಬಿಡಿಸಲಾಗಿದೆ. ಅದು ಶಿಷ್ಟವಿರಲಿ, ಪರಿಶಿಷ್ಟವಿರಲಿ, ಪರಿಸರದ ಸಾಂಸ್ಕೃತಿಕ ಚಿತ್ರಗಳನ್ನು ಗೋಪುರಗಳಲ್ಲಿ ಬಿಡಿಸುವ ಪದ್ಧತಿ ವಿಜಯನಗರೋತ್ತರ ಕಾಲದಲ್ಲಿ ಆರಂಭಗೊಂಡಂತೆ ಕಾಣುತ್ತದೆ. ಏಕೆಂದರೆ ಮೇಲೆ ಹೇಳಿದ ಮಹಾದ್ವಾರ ಗೋಪುರದ ಶಿಲ್ಪಗಳು ವಿಜಯನಗರೋತ್ತರ ಕಾಲದ ರಚನೆಗಳಾಗಿರುವುದು ಈ ಗೋಪುರದಲ್ಲಿ ಬಿಡಿಸಿರುವ ರಾಜ ಮತ್ತು ರಾಣಿಯರ ಪ್ರತಿಮೆಗಳು ನೀಳವಾಗಿದ್ದು, ಒರಟು ರಚನೆಗಳಂತೆ ಕಂಡುಬರುತ್ತವೆ.

ಕೃಷ್ಣ ದೇವಾಲಯದ ಮಹಾದ್ವಾರ ಗೋಪುರದ ಪಶ್ಚಿಮ ಭಾಗದಲ್ಲಿ, ಉದಯಗಿರಿ ಯುದ್ಧದಲ್ಲಿ ಪಾಲ್ಗೊಂಡ ಸೈನ್ಯವನ್ನು ಗಾರೆಶಿಲ್ಪಗಳಲ್ಲಿ ಬಿಡಿಸಲಾಗಿದೆ. ಗಜದಳ, ಅಶ್ವದಳ ಮತ್ತು ಕಾಲ್ದಳಗಳ ಗುಂಪು ಶಿಲ್ಪಗಳು ಸುಂದರವಾಗಿ ಮೂಡಿ ಬಂದಿವೆ. ಈ ಶಿಲ್ಪಗಳಲ್ಲಿ ಎದ್ದು ಕಾಣುವುದು ಶೌರ್ಯಗುಣ, ದಿಟ್ಟ ನಡಿಗೆಯಿಂದ ಮುನ್ನುಗ್ಗುವ ಕುದುರೆಗಳು, ಆನೆಗಳು ಮತ್ತು ವೀರಾವೇಷದಿಂದ ಕೂಡಿದ ಸೈನಿಕರ ಶಿಲ್ಪಗಳು ಜೀವಂತಿಕೆಯನ್ನು ಪ್ರದರ್ಶಿಸಿ, ವಿಜಯನಗರ ಸೈನ್ಯದ ಶಕ್ತಿ, ಸಾಮರ್ಥ್ಯಗಳ ಕಲ್ಪನೆಗಳನ್ನುನೋಡುಗನ ಸ್ಮೃತಿಪಟಲಕ್ಕೆ ತುಂಬುವಲ್ಲಿ ಸಫಲವಾಗಿವೆ. ಭಗ್ನಗೊಂಡಿರುವ ಈ ಶಿಲ್ಪಗಳನ್ನು ಜೀರ್ಣೋದ್ಧಾರಗೊಳಿಸಲಗುತ್ತಿದೆ. ಹಂಪೆಯ ಇತರ ದೇವಾಲಯಗಳಲ್ಲೂ ಕೆಲವು ಲೌಕಿಕ ಶಿಲ್ಪಗಳು ಕಂಡುಬರುತ್ತವೆ. ಲೌಕಿಕ ಶಿಲ್ಪಗಳಿಂದಾಗಿ ಚರಿತ್ರೆ ಕಾಲದ ಸ್ಪಷ್ಟ ಹಾಗೂ ಶಿಖರವಾದ ಚಿತ್ರಗಳನ್ನು ಪಡೆಯಬಹುದಾಗಿದೆ. ಪ್ರಸ್ತುತ ಸಂಸ್ಕೃತಿ ಅಧ್ಯಯನದಲ್ಲಿ ಈ ರೀತಿಯ ಶಿಲ್ಪಗಳು ಹೆಚ್ಚು ಜಿಜ್ಞಾಸೆಗೆ ಅವಕಾಶ ಮಾಡಿಕೊಡುತ್ತವೆ.

ಮಿಥನ ಶಿಲ್ಪಗಳು

ರಚನೆಯಲ್ಲಿ ಭಿನ್ನವಾಗಿರುವ ವಿಜಯನಗರ ಕಾಲದ ವಿಥುನ ಶಿಲ್ಪಗಳು ಹೆಚ್ಚಾಗಿ ಅಂಗಾಂಗ ಪ್ರದರ್ಶನದ ಉದ್ದೇಶವನ್ನು ಹೊಂದಿವೆ. ಅದರಲ್ಲೂ ಗಾರೆ ಮಿಥುನ ಶಿಲ್ಪಗಳು ಒರಟು ರಚನೆಗಳಾದರೂ ತಮ್ಮ ಉದ್ದೇಶವನ್ನು ಹೇಳುವಲ್ಲಿ ಸಫಲವಾಗಿರುವುದು ಗಮನಾರ್ಹ. ಮೀಥುನ ಶಿಲ್ಪಗಳು ಕೇವಲ ದೇಹ ಸೌಂದರ್ಯವನ್ನಲ್ಲದೆ ಮನಸ್ಸಿನ ಉಲ್ಲಾಸವನ್ನು ಸಹ ಪ್ರಕಟಮಾಡುತ್ತವೆ. ವಿಠಲ ದೇವಾಲಯದ ಮಹಾದ್ವಾರ ಗೋಪುರದಲ್ಲಿ ನಗ್ನ ಸ್ತ್ರೀ ಶಿಲ್ಪವೊಂದಿದ್ದು, ಲಜ್ಜಾಗೌರಿ ಶಿಲ್ಪವನ್ನು ಹೋಲುತ್ತದೆ. ಕೃಷ್ಣ ದೇವಾಲಯದಲ್ಲಿ ಮಹಾದ್ವಾರ ಗೋಪುರದ ಪೂರ್ವ ಮುಖದಲ್ಲಿ ನಗ್ನ ಸ್ತ್ರೀಯರ ಶಿಲ್ಪಗಳಿದ್ದು, ತುಂಬು ಯೌವ್ವನವನ್ನು ಪ್ರದರ್ಶಿಸುತ್ತವೆ. ಸ್ತ್ರೀಯರ ಕೇಶಾಲಂಕಾರ ಮನವೋಹಕವಾಗಿದ್ದು ಲೇಪಾಕ್ಷಿಯ ವರ್ಣಚಿತ್ರಗಳಲ್ಲಿರುವ ಸ್ತ್ರೀಯರ ಕೇಶಾಲಂಕಾರವನ್ನು ಹೋಲುತ್ತವೆ. ಇದೇ ಗೋಪುರದಲ್ಲಿ ಕಂಡುಬರುವ ಗೋಪಿಕಾ ಸ್ತ್ರೀಯರ ಶಿಲ್ಪಗಳು ನಗ್ನವಾಗಿದ್ದರೂ, ಸದಭಿರುಚಿಗೆ ಉತ್ತಮ ಉದಾಹರಣೆಗಳು. ಸರಸ್ವತಿ ದೇವಾಲಯದ ಕೈಪಿಡಿ ಗೋಡೆಯಲ್ಲಿರುವ ನಗ್ನ ಸ್ತ್ರೀಯ ಪ್ರತಿಮೆಯೊಂದು ಉತ್ಕೃಷ್ಟ ರಚನೆಯದು. ವಿರೂಪಾಕ್ಷ ದೇವಾಲಯದ (ಕೃಷ್ಣದೇವರಾಯನು ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ನಿರ್ಮಿಸಿದ) ಹಿರಿಯ ಮಹಾದ್ವಾರ ಗೋಪುರದಲ್ಲಿ ಕೆಲವು ಮಿಥುನ ಶಿಲ್ಪಗಲು ಕಂಡುಬರುತ್ತವೆ. ಅತಿಯಾದ ಸುಣ್ಣ ಬಣ್ಣಗಳ ಲೇಪನದಿಂದಾಗಿ ಶಿಲ್ಪಗಳು ಸ್ಪಷ್ಟವಾಗಿ ಕಂಡುಬರುವುದಿಲ್ಲ.

ಇದೇ ದೇವಾಲಯದ ಉತ್ತರ ದಿಕ್ಕಿನ ಸಾಲು ಮಂಟಪದ ಕೈಪಿಡಿ ಗೋಡೆಯಲ್ಲಿ, ರತಿಕ್ರೀಡೆಯಲ್ಲಿ ನಿರತರಾದ ಹೆಣ್ಣು ಗಂಡುಗಳು ಶಿಲ್ಪಗಳನ್ನು ಬಿಡಿಸಲಾಗಿದೆ. ಈ ಕೈಪಿಡಿ ಗೋಡೆಯು ವಿಜಯನಗರೋತ್ತರ ಕಾಲದ ರಚನೆ. ಆದ್ದರಿಂದ ಮೇಲೆ ಹೇಳಿದ ಮಿಥುನ ಶಿಲ್ಪಗಳು ಸಹ ಅದೇ ಕಾಲದವು. ಹೆಣ್ಣು ಮತ್ತು ಗಂಡಿನ ಶಿಲ್ಪವೊಂದರ ಭಂಗಿಯನ್ನು ಗಮನಿಸಿದರೆ, ಭೂಮಿ ಮತ್ತು ಬೀಜವನ್ನು ಸಂಕೇತಿಸಿ, ಸೃಷ್ಟಿಯ ಮಹತ್ವವನ್ನು ಸಾರುವಂತಿವೆ. ಜೊತೆಗೆ ಬೋಧನಾ ಉದ್ದೇಶವನ್ನು ಒಳಗೊಂಡಂತಿವೆ. ಮುಂದಿನ ಮಹಾದ್ವಾರ ಗೋಪುರದಲ್ಲಿ ಸ್ತ್ರೀಯರ ಕೆಲವು ನಗ್ನ ಶಿಲ್ಪಗಳುಂಟು. ಈ ಶಿಲ್ಪಗಳಲ್ಲಿ ಉದ್ದೇಶಪೂರ್ವಕವಾಗಿಯೇ ಗುಪ್ತಾಂಗಗಳನ್ನು ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ತೊಡೆಗಳನ್ನು ಅಗಲಿಸಿ ನಿಂತ ಸ್ತ್ರೀ ಶಿಲ್ಪಗಳು ವೈದ್ಯಶಾಸ್ತ್ರದಲ್ಲಿ ದೇಹದ ಭಾಗಗಳನ್ನು ಪ್ರದರ್ಶಿಸುವ ಚಿತ್ರಗಳಂತೆ ಕಂಡುಬರುತ್ತವೆ. ಹೀಗೆ ನೋಡುಗರಿಗೆ ಬೇರೆ ಬೇರೆ ರೀತಿಯ ಅನುಭವಗಳನ್ನು ನೀಡುವ ಮಿಥುನ ಶಿಲ್ಪಗಳು ಸಾರ್ಥಕ ರಚನೆಗಳೆನಿಸಿವೆ.

ಉಪಸಂಹಾರ

ಈಗಾಗಲೇ ವಿದ್ವಾಂಸರು ವಿಜಯನಗರ ಶಿಲಾಶಿಲ್ಪಗಳನ್ನು ಕುರಿತಂತೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಶಿಲ್ಪಗಳ ದೇಹ ಪ್ರಮಾಣ, ಮುಖಭಾವ, ಪ್ರಭಾವಳಿ, ಆಭರಣ, ವಸ್ತ್ರ ಮತ್ತು ಆಯುಧಗಳನ್ನು ಬಿಡಿಸಿರುವ ರೀತಿಯಲ್ಲೇ ಗಾರೆಶಿಲ್ಪಗಳನ್ನು ಸಹ ಬಿಡಿಸಿರುವುದು ಗಮನಾರ್ಹ. ವಿಜಯನಗರದ ಶಿಲಾಶಿಲ್ಪಗಳಲ್ಲಿ ಬಳಕುವ ದೇಹ, ಬೊಗಸೆ ಕಣ್ಣುಗಳು, ಮೇಲೇರಿದ ಹುಬ್ಬು ಹಾಗೂ ಚೂಪಾದ ಮೂಗು, ಕಸೂತಿಯಿಂದ ಕೂಡಿದ ನೆರಿಗೆಗಳುಳ್ಳ ವಸ್ತ್ರಾಲಂಕರಣ, ಉದ್ದನೆಯ ಕಿರೀಟಮುಕುಟ, ವಿವಿಧ ರೀತಿಯ ಕಿವಿಯಾಭರಣಗಳು, ಹಾರಗಳು, ಉಂಗುರಗಳು, ಹಾವಭಾವದಲ್ಲಿ ನಿಶ್ಚಲತೆ ಮುಂತಾದ ಲಕ್ಷಣಗಳನ್ನು ಗುರುತಿಸಲಾಗಿದೆ.[1] ಆದರೆ  ಗಾರೆಶಿಲ್ಪಗಳಲ್ಲಿ ಮೇಲೆ ಹೇಳಿದ ಎಲ್ಲ ಲಕ್ಷಣಗಳಿದ್ದರೂ ಹಾವಭಾವದಲ್ಲಿ ನಿಶ್ಚಲತೆಯ ಬದಲಿಗೆ ಚಲನಶೀಲತೆಯನ್ನು ಗುರುತಿಸಬಹುದಾಗಿದೆ. ಚಲನಶೀಲತೆಯ ಜೊತೆಗೆ ಗಾಂಭೀರ್ಯವನ್ನು ಸಹ ಮೈಗೂಡಿಸಿಕೊಂಡಿರುವುದು ಗಾರೆಶಿಲ್ಪಗಳ ವಿಶೇಷ ಲಕ್ಷಣ. ಬಹುತೇಕ ಗಾರೆಶಿಲ್ಪಗಳು ಸಮಭಂಗಿಯಲ್ಲಿ ರಚನೆಗೊಂಡಿವೆ. ಇದು ಆ ಕಾಲದ ಗಾರೆಶಿಲ್ಪಗಳ ಪ್ರಮುಖ ಲಕ್ಷಣ. ಶಿಲಾ ಶಿಲ್ಪಗಳಿಗಿಂತ ಹೆಚ್ಚಿನ ಅಲಂಕರಣವನ್ನು ಗಾರೆಶಿಲ್ಪಗಳಲ್ಲಿ ಕಾಣುತ್ತೇವೆ. ಹಾಗಾಗಿ ಕೆಲವು ಶಿಲ್ಪಗಳು ಹೊಯ್ಸಳರ ಶಿಲ್ಪಗಳನ್ನು  ನೆನಪಿಸುತ್ತವೆ. ಗೂಡುಗಳ ಹೊರಗಿರುವ ಪರಿವಾರ ದೇವತೆಗಳು, ದ್ವಾರಪಾಲಕರು, ಸಂಗೀತವಾದಕರು, ನೃತ್ಯಗಾರರ, ಭಕ್ತರು, ಶಿಷ್ಯರು ಮತ್ತು ಸ್ತ್ರೀ ಪರಿವಾರದವರ ಗಾರೆಶಿಲ್ಪಗಳು ರಚನೆಯಲ್ಲಿ ದೇವತಾ ಶಿಲ್ಪಗಳಿಗಿಂತ ಸ್ವಲ್ಪ ಭಿನ್ನವಾಗಿದ್ದು, ಜಾನಪದ ಶೈಲಿಯ ರಚನೆಗಳಂತೆ ಕಂಡುಬರುತ್ತವೆ.

ಮೇಲೆ ಹೇಳಿದ ಗಾರೆಶಿಲ್ಪಗಳು, ದೇವಾಲಯದ ಅಲಂಕರಣ ನಿಮಿತ್ತ ರಚನೆಗೊಂಡರೂ ಮುಖ್ಯವಾಗಿ ದೇವತೆಗಳ ಪುರಾಣ ಕಥೆಗಳನ್ನು ಜನಸಾಮಾನ್ಯರಿಗೆ ನೇರವಾಗಿ ತಿಳಿಹೇಳುವ ಉದ್ದೇಶವನ್ನು ಹೊಂದಿದ್ದವು. ವಿಜಯನಗರ ಕಾಲದ ಗಾರೆಯನ್ನು ನವ್ಯ ಶೈಲಿಯೋಪಾದಿಯಲ್ಲಿ ಕಟ್ಟಡ ಮತ್ತು ಶಿಲ್ಪಗಳಿಗೆ ಬಳಸಲಾಯಿತು. ರಚನೆಗೊಂಡು ಶಿಲ್ಪಗಳು ಪಂಥ, ಆಗಮ ಮೊದಲಾಗಿ ದೇವಾಲಯಗಳು ನಡೆದು ಬಂದ ಪಾರಂಪರಿಕ ದಾರಿಯನ್ನು ಗುರುತಿಸಲು ಸಹಕಾರಿಯಾಗಿವೆ. ದೇವರುಗಳನ್ನು ಪ್ರದರ್ಶಿಸುವ ಮಡಿವಂತಿಕೆಯನ್ನು ಕೈಬಿಟ್ಟು, ತೆರೆದ ಸ್ಥಿತಿಯಲ್ಲಿ ಗಾರೆಶಿಲ್ಪಗಳನ್ನು ರಚಿಸಿದ್ದು, ಶಿಲ್ಪಕಲಾ ಕ್ಷೇತ್ರದಲ್ಲಾದ ಒಂದು ಪ್ರಮುಖ ಬೆಳವಣಿಗೆ. ಗಾರೆ ಕೆಲಸದಲ್ಲಿ ನುರಿತ ಕುಶಲ ಕರ್ಮಿಗಳು, ತಮ್ಮ ಪರಿಣತಿ ಮತ್ತು ಪರಿಶ್ರಮಗಳ ಪ್ರತೀಕವಾದ ಗಾರೆಶಿಲ್ಪಗಳನ್ನು ರೂಪಿಸಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನೇ ನೀಡಿದ್ದಾರೆ. ಗೋಪುರ ಅಥವಾ ಶಿಖರಗಳೆಡೆಗೆ ಗಮನ ಸೆಳೆಯುವಲ್ಲಿ ಗಾರೆಶಿಲ್ಪಗಳ ಪಾತ್ರ ಮಹತ್ವದ್ದು. ಆ ಮೂಲಕ ನೋಡುಗನಲ್ಲಿ, ದೇವಾಲಯದ ಭವ್ಯತೆಯ ಅರಿವು ಉಂಟಾಗುತ್ತಿತ್ತು. ಬಿಡಿಯೂ ಅಲ್ಲದ, ಉಬ್ಬು ಅಲ್ಲದ ಗಾರೆಶಿಲ್ಪಗಳ ರಚನೆ ವಿಶಿಷ್ಟವಾದುದು.

ವಿಜಯನಗರದಲ್ಲಿ ಪರಿಶ್ರಮ ಪಡೆದ ಗಾರೆಶಿಲ್ಪಗಳ ದೊಡ್ಡ ಸಮೂಹವೇ ನೆಲೆಸಿತ್ತು. ಸಾಮ್ರಾಜ್ಯದ ಅವನತಿಯ ನಂತರ, ಇತರ ಕುಶಲಕರ್ಮಿಗಳಂತೆ ಇರುವ ಸಹ ಬದುಕಿಗಾಗಿ ಬೇರೆಡೆ ವಲಸೆ ಹೋದರು. ಉದಾಹರಣಗೆ ಕಿನ್ನಾಳದಲ್ಲಿ (ಕೊಪ್ಪಳ-ಜಿಲ್ಲೆ) ನೆಲೆಸಿರುವ ಚಿತ್ರಗಾರರು ತಾವು ವಿಜಯನಗರದಿಂದ (ಹಂಪೆ) ಬಂದವರೆಂದು ಇಂದಿಗೂ ಹೇಳಿ ಕೊಳ್ಳುತ್ತಾರೆ.[2] ಇವರು ರಥಗಳ ಅಲಂಕರಣಕ್ಕೆ ಬಳಸುವ ಮಕ್ಕಿನ ಪ್ರತಿಮೆಗಳನ್ನು ರಚಿಸುತ್ತಾರೆ.[3] ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯಗಳಲ್ಲಿ ಬಿಡಿ ಶಿಲ್ಪಗಳನ್ನಿಡಲು  ನವರಂಗದಲ್ಲಿ ಗೂಡುಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ವಿಜಯನಗರ ಕಾಲದಲ್ಲಿ ಈ ಗೂಡುಗಳ ರಚನೆಯನ್ನು ಕೈಬಿಡಲಾಯಿತು. ಬದಲಿಗೆ ಹೊರಭಾಗದ ಕೈಪಿಡಿಗೋಡೆಯಲ್ಲಿ ಗೂಡುಗಳನ್ನು ನಿರ್ಮಿಸಿ, ಗಾರೆಶಿಲ್ಪಗಳನ್ನು ರಚಿಸುವುದರ ಮೂಲಯಕ ದೇವಾಲಯವನ್ನು ಸುಂದರಗೊಳಿಸುವ ಆಸ್ಥೆಯನ್ನು ಗುರುತಿಸಬಹುದಾಗಿದೆ. ಅದೇ ರೀತಿ ಗೋಪುರ ಮತ್ತು ಶಿಖರಗಳ ನಿರ್ಮಾಣದಲ್ಲಿ ಶಿಲೆಯನ್ನು ಗೌಣ ಮಾಡಿ, ಇಟ್ಟಿಗೆ ಮತ್ತು ಗಾರೆಯನ್ನು ಬಳಸಿ ಹೊರಮೈಯನ್ನು ಗಾರೆಶಿಲ್ಪಗಳಿಂದ ಅಲಂಕರಿಸಲಾಯಿತು. ಇದು ವಾಸ್ತು ಮತ್ತು ಶಿಲ್ಪ ಕಲಾಕ್ಷೇತ್ರದಲ್ಲಿ ಹೊಸ ಆವಿಷ್ಠಾರಗಳಿಗೆ ದಾರಿ ಮಾಡಿಕೊಟ್ಟಿತು. ತತ್ವರಿಣಾಮವಾಗಿ ದೇವಾಲಯದ ನಿರ್ಮಾಣಗಳು ಹಗುರಗೊಂಡು, ಆರ್ಥಿಕವಾಗಿ ಮಿತವ್ಯಯವನ್ನು ಸಾಧಿಸಿದವು.

ಆಕರ
ವಿಜಯನಗರದ ಗಾರೆಶಿಲ್ಪ, ೨೦೦೦, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೯-೨೬.

 

[1] ಅಪರ್ಣ ಕೂ.ಸ.,೧೯೯೪, ವಿಜಯನಗರ ಕಾಲದ ಶಿಲ್ಪಕಲೆ, ಶಿಲ್ಪಕಲಾ ಪ್ರಪಂಚ, ಪು. ೨೩೭-೩೮.

[2] ಮಹದೇವ ಸಿ., ೨೦೦೦, ಮರದ ವಾಸ್ತು ಮತ್ತು ಕಲೆ – ಬಳ್ಳಾರಿ ಜಿಲ್ಲೆ.

[3] ಹಗರುರವಾದ ಹೆಬ್ಬೆವು ಮರದಿಂದ ಪ್ರತಿಮೆಗಳು ಒರಟು ರಚನೆಯನ್ನು ಮಾಡಿ ಕೊಳ್ಳುತ್ತಾರೆ. ನಂತರ ಬಟ್ಟೆಗೆ ಹುಣಸೆ ಬೀಜದ ಸರಿಯನ್ನು ಸುರಿದು ಒರಟು ಪ್ರತಿಮೆಗೆ ಸುತ್ತಿ ಅಂತಿಮ ರೂಪ ಕೊಡುತ್ತಾರೆ. ಅದು ಒಣಗಿದ ನಂತರ ಸೂಕ್ತ ಬಣ್ಣಗಳನ್ನು ಹಚ್ಚಲಾಗುವುದು. ಇದನ್ನೇ ಮಕ್ಕಿನ ಪ್ರತಿಮೆ ಎಂಬು ಕರೆಯುವರು. ಈ ಮಕ್ಕಿನ ಪ್ರತಿಮೆಗಳಲ್ಲಿ ದ್ವಾರಪಾಲಕರು, ಸ್ತ್ರೀಯರು, ಪುರುಷರು, ಪ್ರಾಣಿಗಳು, ದೇವತೆಗಳ ವಾಹನಗಳು ಮತ್ತು ಗ್ರಾಮ ದೇವತೆಗಳು ಮುಖ್ಯವಾಗಿವೆ.