ನಾಗರಿಕತೆಯ ಬೆಳವಣಿಗೆಯಲ್ಲಿ ಆಯುಧಗಳ ಪಾತ್ರ ಪ್ರಾಮುಖ್ಯವಾಗಿದೆ. ಅಂತೆಯೇ ಅವುಗಳ ವಿಕಾಸವೂ ಬಹಳ ಆಸಕ್ತಿಯಿಂದ ಕೂಡಿದ್ದು, ಮಾನವ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಮಾನವನು ವಿವಿಧ ಆಯುಧಗಳನ್ನು ಹಿಡಿದಿರುವ ವಿವಿಧ ದೇವ ದೇವತೆಗಳನ್ನು ಪೂಜಿಸುತ್ತಿದ್ದಾನೆ. ಈ ಆಯುಧಗಳನ್ನು ಆಧಾರವಾಗಿಟ್ಟುಕೊಂಡು ದೇವರುಗಳನ್ನು ಗುರುತಿಸಲಾಗುತ್ತಿದೆ. ಈ ರೀತಿ ಪುರಾಣಗಳಲ್ಲಿ ಮತ್ತು ಇತಿಹಾಸದಲ್ಲಿ ತಮ್ಮದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡ ಆಯುಧಗಳನ್ನು ಸಾಂಪ್ರದಾಯಿಕವಾಗಿ ಗುರುತಿಸಲಾಗುತ್ತಿದೆ. ಈ ದಿಕ್ಕಿನಲ್ಲಿ ಪ್ರಾಚೀನ ಗ್ರಂಥಗಳಲ್ಲಿ ಕಾಣಸಿಗುವ ಇಂದ್ರನ ವಜ್ರಾಯುಧ ಮತ್ತು ಪಾಶ, ವಿಷ್ಣವಿನ ಗದೆ ಮತ್ತು ಚಕ್ರ, ಶಿವನ ತ್ರಿಶೂಲ ಮತ್ತು ಪರಶುರಾಮನ ಕೊಡಲಿ (ಪರಶು) ಇವುಗಳನ್ನು ಇಂದಿಗೂ ಒಂದಲ್ಲ ಒಂದು ವಿಧದಲ್ಲಿ ಕಾಣಸಿಗುತ್ತವೆ.

ವಿಜಯನಗರ ಕಾಲದ ಆಯುಧ ಕಲೆಯನ್ನು ಆಧ್ಯಯನ ಮಾಡಲು ಶಾಸನಗಳು, ಶಿಲ್ಪಗಳು, ನಾಣ್ಯಗಳು, ವರ್ಣಚಿತ್ರಗಳು, ಸಾಹಿತ್ಯ ಮತ್ತು ವಿದೇಶಿಯರ ಬರಹ ಮುಖ್ಯ ಆಕರಗಳಾಗಿವೆ.

ಶಾಸನಗಳು

ಆಯುಧ ಕಲೆಯನ್ನು ತಿಳಿಯಲು ಶಾಸನಗಳ ಪಾತ್ರ ಗಣನೀಯವಾಗಿರುವುದು. ಕನ್ನಡ ಶಾಸನಗಳಲ್ಲಿ ನೂರಾರು ಆಯುಧಗಳ ಹೆಸರುಗಳು ಬರುತ್ತವೆ. ಆದರೆ ಅವುಗಳ ಸ್ವರೂಪ ವೇನೆಂಬುದನ್ನು ತಿಳಿಯಲು ಕಷ್ಟದಾಯಕವಾದರೂ ಪ್ರಮುಖವಾದ ಆಯುಧಗಳನ್ನು ಗುರುತಿಸಬಹುದು. ಬಾಣದ ಪ್ರಭೇದಗಳಲ್ಲಿ ಬಿಳಿಯಂಬು, ಕೋಲಂಬು, ಸುಂಗಲಂಬು ಮುಂತಾದವುಗಳ ಹೆಸರುಗಳು ದೊರೆಯುತ್ತವೆ. ಖಡ್ಗ ಅಥವಾ ಕತ್ತಿಗೆ ಕರವಾಳ್ ಇಲ್ಲವೆ ತೋಳಬಾಳ್ ಎಂಬ ಹೆಸರುಗಳೂ ಇದ್ದವು. ಕಡಿತಲೆ, ಅಲಗು, ಗೇಣ್, ಕೊಂತ, ಶಲ್ಯ, ಭಲ್ಯ, ಕಣೆಯ, ಕರ್ಕಡೆ, ಸುರಿಗೆ, ಮುಸಲ, ತೀರಿಕೆ, ಜಟ್ಟಿಗೆ, ಭಿಂಡಿವಾಳ, ಪಂಚರಾಯುಧ, ಮುದ್ಗರ ಮುತಾದವುಗಳನ್ನು ಹೆಸರಿಸಬಹುದಾಗಿದೆ.

ಸಾಹಿತ್ಯ

ಕನ್ನಡ ಸಾಹಿತ್ಯ ಕೃತಿಗಳಲ್ಲಿ ಸಮರಗಳ ಬಗ್ಗೆ ಮತ್ತು ಆಯುಧಗಳ ಬಗ್ಗೆ ಉಲ್ಲೇಖವಿರುವುದನ್ನು ನೋಡಬಹುದು. ಸಾಮಾನ್ಯವಾಗಿ ಕವಿಗಳು ಕೋಟೆ ಕೊತ್ತಲಗಳ ಮತ್ತು ಯುದ್ಧದ ವರ್ಣನೆಯನ್ನು ಕೊಡುವುದರ ಜೊತೆಗೆ ಆಯುಧಗಳ, ಸೈನಿಕರ, ಉಡಿಗೆ ತೊಡಿಗೆ, ಸೈನಿಕರ, ಉಡಿಗೆ ತೊಡಿಗೆ, ಸೈನಿಕರ ರಕ್ಷಾಕವಚಗಳು, ಆನೆ ಕುದುರೆಗಳ ಸಂರಕ್ಷಕ ಸಾಧನಗಳು, ಸಿಡಿಮದ್ದು, ರಣವಾದ್ಯ ಮುಂತಾದವುಗಳ ವರ್ಣನೆಯನ್ನು ಕೊಡುವರು.

ಕನ್ನಡ ಕೃತಿಗಳಾದ ನಂಜುಂಡ ಕವಿಯ ರಾಮನಾಥಚರಿತೆ, ಕಂಠೀರವ ನರಸರಾಜ ವಿಜಯ, ಕೆಳದಿ ನೃಪವಿಜಯ ಮತ್ತು ವೀರಶೈವ ಹಾಗೂ ಜೈನ ಪ್ರರಾಣಗಳಲ್ಲಿ ಕೋಟೆ ಕಾಳಗ ಮತ್ತು ಆಯುಧಗಳ ಚಿತ್ರ ಅದ್ಭುತವಾಗಿದೆ. ವಿರೂಪಾಕ್ಷ ಪಂಡಿತನ ಕ್ರಿ.ಶ. ೧೫೮೫ ಚೆನ್ನಬಸವ ಪುರಾಣದಲ್ಲಿ ಕೋಟೆ ಕಾಳಗಗಳ ವರ್ಣನೆಯು ನೈಜ ಚಿತ್ರಣವನ್ನು ಕೊಡುವದು. ಪುರಾಣ ವಿಷಯಗಳ ಮಧ್ಯದಲ್ಲಿ ಹುದುಗಿರುವ ಇಂತಹ ಅನೇಕ ವಿಷಯಗಳನ್ನು ನೋಡ ಬಹುದು. ಹಾಗೆಯೇ ಪುಷ್ಪದಂತ ಪುರಾಣ, ಪಾರ್ಶ್ವನಾಥ ಪುರಾಣ, ನೇಮಿನಾಥಪುರಾಣ, ಚಂದ್ರಪ್ರಭ ಪುರಾಣ, ಅನಂತನಾಥಪುರಾಣ, ಜಗನ್ನಾಥ ವಿಜಯ ಮುಂತಾದವುಗಳು ಕೋಟೆ  ಹಾಗೂ ಸಮರೋಪಕರಣಗಳು, ಸೈನಿಕರ ಆಯುಧಗಳು ರಕ್ಷಾಕವಚಗಳು, ಆನೆ ಕುದುರೆಗಳ ಸಂರಕ್ಷಕ ಸಾಧನಗಳು, ಸಿಡಿಮದ್ದು, ರಣವಾದ್ಯಗಳು, ಸೇನಾಬಲ, ಗಜಾಶ್ವದಳ, ಸೈನಿಕರ ಉಡುಗೆ ತೊಡುಗೆಗಳು, ಸಮರ ಕಾರ್ಯಾಚರಣೆ, ಕೋಟೆಗಳಿಗೆ ದಂಡಯಾತ್ರೆ, ಸಮರ ಸಿಬ್ಬಂದಿ ಮುಂತಾದವುಗಳ ವರ್ಣನೆಯನ್ನು ಕೊಡುವವು.

ಕನ್ನಡೇತರ ಕೃತಿಗಳಾದ ಸಾಳವಾಭ್ಯುದಯಂ ಮತ್ತು ಗಂಗಾಂಬಿಕೆಯ ಮಧುರಾ ವಿಜಯಂ ಕಾವ್ಯಗಳು ಶಸ್ತ್ರ (ಬಾಕು, ಕತ್ತಿ), ಶರಾಸನ (ಬಿಲ್ಲು), ಅಸಿ, ಕರ್ಪಣ, ಕಥಾರಿಕಾಸ್ತ್ರಮ್ (ಒಂದು ಬಗೆಯ ಬಾಣ೦, ಕಾರ್ಮುಕಂ, ಕೋದಂಡಂ, ಮುದ್ಗರ (ಚಮ್ಮಟಿಗೆಯಂತಹ ಆಯುಧ), ಪ್ರಾಸ (ಕ್ಷಿಪಣಿ) ಮುಂತಾದ ಆಯುಧಗಳ ಹೆಸರನ್ನು ಹೇಳುತ್ತವೆ. ಶತ್ತುಗಳ ಬಾಣದಿಂದ ರಕ್ಷಿಸಿಕೊಳ್ಳಲು ಸೈನಿಕರು ಫಲಕಗಳನ್ನು, ಕೆಲವು ಸಮಯದಲ್ಲಿ ಚರ್ಮದ ಫಲಕವನ್ನೂ (ಕರ್ಮಧಾರಣ) ಸಹ ಉಪಯೋಗಿಸುತ್ತಿದ್ದರು.

ವಿದೇಶಿ ಪ್ರವಾಸಿಗರ ವರದಿ
ವಿದೇಶಿ ಪ್ರವಾಸಿಗಳ ವರದಿಗಳು ಸಹ ಆಯುಧಗಳ ವಿವರಗಳನ್ನು ಕೊಡುವವು. ರಾಯಚೂರು ಯುದ್ಧಕ್ಕೆ ಹೊರಟ ವಿಜಯನಗರ ಸೈನ್ಯವನ್ನು ವರ್ಣಿಸುವ ನ್ಯೂನಿಜನು, “He (the king) left the city of Bisnage with all his troops; and they marched in the following order. The chief of the guard led the advance with thirty thousand infantry-archers, men with shields, and musqueteers, and speamen and a thousand horse, and his elephants.” ವಿಜಯನಗರ ಕಾಲದ ವಿವಿಧ ಆಯುಧಗಳ ವರ್ಣನೆಯನ್ನು ಇಲ್ಲಿ ಕಾಣಬಹುದು.

ಶಿಲ್ಪಗಳು

ನಾವು ಸಾಮಾನ್ಯವಾಗಿ ಯಾವುದೇ ವೀರಗಲ್ಲು ಮತ್ತು ಶಿಲ್ಪಗಳನ್ನು ಕಂಡಾಗ ಅವುಗಳಲ್ಲಿ ಆಯುಧಗಳನ್ನು ಕಾಣಬಹುದು. ದೇವಾಲಯಗಳ ಅಧಿಷ್ಠಾನದ ಮೇಲಿನ ಯುದ್ಧ ದೃಶ್ಯಗಳಲ್ಲಿ ಸೈನಿಕರು ಹಿಡಿದಿರುವ ಆಯುಧಗಳು, ಅವರ ವೇಷಗಳನ್ನು ಗಮನಿಸಬಹುದು. ಶಿಲ್ಪಗಳಲ್ಲಿಯ ಪೌರಾಣಿಕ ದೃಶ್ಯಗಳಲ್ಲಿ ಆಯುಧ ಕಲೆಗೆ ಒತ್ತು ಕೊಡಲಾಗಿದೆ.

ಆಯುಧಗಳನ್ನು (೧) ಆಕ್ರಮಣಕಾರಕ ಆಯುಧಗಳು ಮತ್ತು (೨) ರಕ್ಷಣಾತ್ಮಕ ಆಯುಧಗಳು ಎಂದು ವಿಂಗಡಿಸಬಹುದು. ಆಕ್ರಮಣಕಾರಕ ಆಯುಧಗಳಲ್ಲಿ (i) ಚುಚ್ಚುವ ಆಯುಧಗಳು, (ii) ಹೊಡೆಯುವ ಆಯುಧಗಳು, (iii) ಕತ್ತರಿಸುವ ಆಯುಧಗಳು ಮತ್ತು (iv) ಧ್ವಂಸ ಮಾಡುವ ಆಯುಧಗಳು ಎಂದು ವಿಂಗಡಿಸಬಹುದು. ರಕ್ಷಣಾತ್ಮಕ ಆಯುಧಗಳಲ್ಲಿ ಗುರಾಣಿಗಳು ಪ್ರಮುಖವಾಗಿರುವವು.

೧. ಆಕ್ರಮಣಕಾರಕ ಆಯುಧಗಳು

(i) ಚುಚ್ಚುವ ಆಯುಧಗಳಲ್ಲಿ ಸಾಮಾನ್ಯವಾಗಿ ಭರ್ಚಿಗಳು ಮತ್ತು ಕಾಠಾರಿಗಳು, ಬಿಲ್ಲು ಮತ್ತು ಬಾಣಗಳು, ಬತ್ತಳಿಕೆಗಳು, ಅಂಕುಶಗಳು ಪ್ರಾಮುಖ್ಯವಾಗಿರುವವು. ಭರ್ಚಿಗಳನ್ನು ಹಿಡಿದ ಕುದುರೆದಳ ಮತ್ತು ಕಾಲ್ದಳಗಳನ್ನು ವಿಜಯನಗರದ ಹಜಾರರಾಮ ದೇವಸ್ಥಾನ ಮತ್ತು ತಿರುವೆಂಗಳನಾಥ ದೇವಾಲಯದ ಪ್ರಕಾರ ಗೋಡೆಯ ಮೇಲಿರುವ ಶಿಲ್ಪಗಳಲ್ಲಿ ಕಾಣಬಹುದು. ಕಠಾರಿಗಳನ್ನು ಹೆಚ್ಚಾಗಿ ವೀರಗಲ್ಲುಗಳ ಮೇಲೆ ಮತ್ತು ಯೋಧರ ಶಿಲ್ಪಗಳಲ್ಲಿ ಕಾಣಬಹುದು. ವಿಜಯನಗರ ತಿರುವೆಂಗಳನಾಥ ದೇವಾಲಯದಲ್ಲಿ ವಿಜಯನಗರ ಅರಸರ ಲಾಂಛನದಲ್ಲಿ ಕಠಾರಿಯನ್ನು ನೋಡಬಹುದು. ಬಿಲ್ಲು, ಬಾಣ ಮತ್ತು ಬತ್ತಳಿಕೆಗಳ ಸಾಮಾನ್ಯವಾಗಿ ಪೌರಾಣಿಕ ಕಥೆಗಳ ಶಿಲ್ಪಗಳಲ್ಲಿ ಮತ್ತು ವೀರಗಲ್ಲುಗಳಲ್ಲಿ ಕಂಡುಬರುವವು. ವಿಜಯನಗರದಲ್ಲಿ ಹಜಾರರಾಮ, ತಿರುವೆಂಗಳನಾಥ, ವಿರೂಪಾಕ್ಷ ಮತ್ತು ಪಟ್ಟಾಭಿರಾಮ ದೇವಾಲಯಗಳಲ್ಲಿ ರಾಮಾಯಣ ದೃಶ್ಯಗಳು ಶಿಲ್ಪಗಳಲ್ಲಿ ಕಾಣುತ್ತವೆ. ಅಂಕುಶಗಳನ್ನು ಸಾಮಾನ್ಯವಾಗಿ ಆನೆಗಳನ್ನು ಪಳಗಿಸಲು ಮಾವುತರು ಉಪಯೋಗಿಸುತ್ತಿದ್ದುದನ್ನು ಶಿಲ್ಪಗಳಲ್ಲಿ ಕಾಣಬಹುದು.

(ii) ಹೊಡೆಯುವ ಆಯುಧಗಳಲ್ಲಿ ವಿವಿದ ಆಕಾರ ಮತ್ತು ಗಾತ್ರದ ದೊಣ್ಣೆಗಳು ಪ್ರಮುಖವಾಗಿವೆ.

(iii) ಕತ್ತರಿಸುವ ಆಯುಧಗಳನ್ನು ಕತ್ತಿಗಳು, ಯುದ್ಧ ಕೊಡಲಿಗಳು ಅಥವಾ ಪರಶುಗಳು ಎಂದು ವಿಂಗಡಿಸಬಹುದು. ಶಿಲ್ಪಗಳಲ್ಲಿ ಕೊಡಲಿಗಳ ಪ್ರದರ್ಶನ ಕಡಿಮೆಯಾದರೆ ಕತ್ತಿಗಳ ಪ್ರದರ್ಶನ ಹೆಚ್ಚಾಗಿರುವುದು ಕಂಡುಬರುತ್ತದೆ. ಖಡ್ಗಗಳ ಉಪಯೋಗ ಪೌರಾಣಿಕ ದೃಶ್ಯಗಳಲ್ಲಿ ಹೆಚ್ಚಾಗಿರುವುದನ್ನು ಗಮನಿಸಬಹುದು.

(iv)  ಧ್ವಂಸ ಮಾಡುವ ಆಯುಧಗಳಲ್ಲಿ ಸಾಮಾನ್ಯವಾಗಿ ವಿಷ್ಣುವಿನ ಚಕ್ರವನ್ನು ಶಿಲ್ಪಗಳಲ್ಲಿ ನೋಡಬಹುದು. ಈ ಆಯುಧಗಳನ್ನು ಯುದ್ಧದಲ್ಲಿ ಉಪಯೋಗಿಸದಿದ್ದರೂ ವಿಜಯನಗರ ದೇವಾಲಯಗಳ ಶಿಲ್ಪಗಳಲ್ಲಿ ಕಾಣಬಹುದು.

೨. ರಕ್ಷಣಾತ್ಮಕ ಆಯುಧಗಳು

ರಕ್ಷಣಾತ್ಮಕ ಆಯುಧಗಳಲ್ಲಿ ಗುರಾಣಿಗಳೇ ಪ್ರಮುಖವಾಗಿವೆ. ಆಕಾರಕ್ಕನುಗುಣವಾಗಿ ಇವುಗಳನ್ನು ನಾಲ್ಕು ಪ್ರಕಾರಗಳಲ್ಲಿ ವಿಂಗಡಿಸಬಹುದು. ದುಂಡಾಕೃತಿ, ಚೌಕಾಕೃತಿ,  ಆಯತಾಕೃತಿ ಮತ್ತು ಅಂಡಾಕೃತಿ ಗುರಾಣಿಗಳನ್ನು ವಿಜಯನಗರ ದೇವಾಲಯಗಳ ಮೇಲಿನ ಪೌರಾಣಿಕ ದೃಶ್ಯಗಳ ಶಿಲ್ಪಗಳಲ್ಲಿ ಮತ್ತು ವೀರಗಲ್ಲುಗಳನ್ನು ಕಾಣಬಹುದು.

ಆಕಾರ ಗ್ರಂಥಗಳು

೧. H.T. Talwar, 1994, The Arms and Armoury of the Mysore Palace.

೨. T. Dayanand Pate, Kesava Temple at Somanathapur : A Cultural Study.

೩. ಕೆ. ಶ್ರೀಕಂಠಯ್ಯ, ೧೯೮೩, ಕನ್ನಡ ಕಾವ್ಯಗಳಲ್ಲಿ ಸಮರ ಚಿತ್ರಗಳು.

೪. ಎಂ.  ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ.

೫. G.N. Pant, 1978, Indian Arms and Armour.

೬. Robert Sewell, A Forgotten Empire.

ಆಕರ
ವಿಜಯನಗರ ಅಧ್ಯಯನ, ಸಂ. ೪, ೧೯೯೯, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು. ೨೪-೨೬.