ವಿಜಯನಗರದ ಶಾಸನಗಳ ವಿಶೇಷ ಅಧ್ಯಯನದಿಂದ ಆ ಕಾಲದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಪುನರ್ರಚನೆ ಸಾಧ್ಯ ಹಾಗೂ ಆ ಕಾಲದಲ್ಲಿ ಸಂಗೀತ ಮತ್ತು ನೃತ್ಯಕ್ಕೆ ಇದ್ದಂತಹ ಪ್ರಾಮುಖ್ಯತೆ, ಪ್ರೋತ್ಸಾಹ ಮತ್ತು ಇನ್ನು ಹಲವು ರೀತಿಯ ವಾಡಿಕೆಗಳನ್ನು ಅರಿಯಲು ಸಾಧ್ಯವಾಗಿದೆ. ವಿಜಯನಗರದ ಕಾಲದಲ್ಲಿ ಅರಸರು ಮತ್ತು ಜನರು ಸಂಗೀತ ಮತ್ತು ನೃತ್ಯಕ್ಕೆ ವಿಶೇಷವಾದ ಮಹತ್ವವನ್ನು ಕೊಟ್ಟಿದ್ದರು ಎಂಬುದಕ್ಕೆ ಅವರ ಕಾಲದ ಅನೇಕ ಶಾಸನಗಳು ಕಾರಣವಾಗಿವೆ. ಈ ನಿಟ್ಟಿನಲ್ಲಿ ನನ್ನ ಸಂಶೋಧನೆಯ ಹಲವು ವಿವರಗಳನ್ನು ಇಲ್ಲಿ ತಿಳಿಯಲು ಇಚ್ಛೆಪಡುತ್ತೇನೆ.

ಹಲವು ಶಾಸನಗಳು ಸಂಗೀತ ರಚನೆಕಾರರ ಬಗ್ಗೆ ತಿಳಿಸುತ್ತ ಅವರನ್ನು ಸಂಗೀತ ವಾಗ್ಗೇಯಾಕಾರರನ್ನಾಗಿ ಸಂಬೋಧಿಸುತ್ತವೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಚಿಕ್ಕೆಕೇರಿಯ ಮತ್ತು ಹುಲಿಗುಂಟ ಊರುಗಳ ಕ್ರಿ.ಶ. ೧೫೩೯ರ ಅಚ್ಚುತರಾಯನ ಕಾಲದ ಶಾಸನವು ಒಂದು ವಿಶೇಷತೆಯಿಮದ ಕೂಡಿದೆ.[1] ಇದರಲ್ಲಿ ಬಾಯಕಾರ ರಾಮಪ್ಪಯನ ವಂಶಾವಳಿಯನ್ನು ಶಾಸನದಲ್ಲಿ ಕೊಟ್ಟದಲ್ಲದೆ ಅವರನ್ನು ಸಂಗೀತ ವಾಗ್ಗೇಯಕಾರರನ್ನಾಗಿ ಸಂಬೋಧಿಸಿ, ಅವರು ರಾಜನಿಂದ ಪಡೆದ ದಾನಗಳಿಂದ ಕಟ್ಟಿಸಿದಂತಹ ಹಲವಾರು ಕೆರೆಕಟ್ಟೆಗಳ ಬಗ್ಗೆ ಮತ್ತು ರಾಜದನಿಂದ ಮುಖ್ಯ ದಳಪತಿಯಾಗಿ ನೇಮಕಗೊಂಡ ವಿವರಗಳನ್ನು ನೀಡುತ್ತವೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು, ದೇವವೃಂದ ಗ್ರಾಮದ, ಬುಕ್ಕರಾಯ ಕ್ರಿ.ಶ. ೧೩೭೧ರ ಕಾಲದ ಶಾಸನವು[2] ಆ ಗ್ರಾದ ರಾಮೇಶ್ವರ ದೇವಸ್ಥಾನದ ನೃತ್ಯಗಾರ್ತಿಯರ ನಿರ್ವಹಣೆಗಾಗಿ ದತ್ತಿಯನ್ನು ಕೊಟ್ಟ ಬಗ್ಗೆ ಉಲ್ಲೇಖಿಸುತ್ತವೆ. ಇದೇ ಜಿಲ್ಲೆಯ ಹಾಗೂ ತಾಲ್ಲೂಕಿನ ಕರುವಂಮಗಿ ಗ್ರಾಮದ ಕ್ರಿ.ಶ. ೧೫೪೯ರ ಸದಾಶಿವರಾಯನ ಕಾಲದ ಶಾಸನವು,[3] ಆ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಅನೇಕ ವಿಧವಾದ ಹಬ್ಬಗಳ ಆಚರಣೆಯಲ್ಲಿ ಹಾಗೂ ವಿಶೇಷ ಹಬ್ಬಗಳಾದ ಶಿವರಾತ್ರಿಯಲ್ಲಿ, ಕರಾಡೆ, ಕಹಳೆ ಮತ್ತು ಜಾನಪದ ಸಂಗೀತದ ಕಂಸಾಳೆ ಬಾರಿಸುವವರಿಗೆ ದತ್ತಿಗಳನ್ನು ಕೊಟ್ಟ ಬಗ್ಗೆ ವಿವರವನ್ನು ಕೊಡುತ್ತವೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಹಂಪಿಯಲ್ಲಿ ತುಳುವ ಅಚ್ಯುತರಾಯನ ಕ್ರಿ.ಶ. ೧೫೬೩ರ ಶಾಸನದಲ್ಲಿ[4] ಹಂಪಿಯ ವಿಠಲ ದೇವಸ್ಥಾನದಲ್ಲಿ ಮುಂಜಾನೆ ದೇವರ ಪೂಜಾಕಾರ್ಯಕ್ರಮಗಳ ಅವಧಿಯಲ್ಲಿ ಸಂಗೀತಕಾರರ ಒಂದು ಸಮೂಹವೆ ನೇಮಕ ಗೊಂಡಿತ್ತು ಎಂದು ಉಲ್ಲೇಖಿಸುತ್ತದೆ. ಇದೇ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ದೇವಲಪುರದ, ಸದಾಶಿವರಾಯನ ಕಾಲದ ಶಾಸನವು[5] ಮುಖವೇಣಾ ಮಸಿಯ ರಾವುತ ಎಂಬುವನ ಬಗ್ಗೆ ಬರೆಯುತ್ತಾ ಅವನು ಎರಡು ನಾಗಸ್ವರ ಮತ್ತು ಎರಡು ತಬಲಗಳನ್ನು ಒಂದೇ ಬಾರಿಗೆ ಬಾರಿಸುತ್ತಿದ್ದ ಚಾತುರ್ಯಕ್ಕಾಗಿ, ಅವನಿಗೆ ವಿಶೇಷವದ ದಾನ ಕೊಟ್ಟಿದ್ದನ್ನು ವಿವರಿಸುತ್ತದೆ.

ಬುಕ್ಕರಾಯನ ಕಾಲದ ಕ್ರಿ.ಶ. ೧೩೬೮ರ ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕು ಕಲ್ಪಾಗ್ರಾಮದ ಶಾಸನವು[6] ಶ್ರೀವೈಷ್ಣವ ಮತ್ತು ಜೈನರಿಬ್ಬರು ಪಂಚವಾದ್ಯಗಳನ್ನು ಅಂದರೆ ಕಳಸ, ಜಾಗಟೆ, ಜಾಗಲಾ ಮುಂತಾದವುಗಳನ್ನು ನುಡಿಸುತ್ತಿದ್ದ ವಾದ್ಯಗಾರರನ್ನು ಎರಡು ಧರ್ಮದವರು ನೇಮಕ ಮಾಡಿಕೊಂಡು ದಾನಕೊಟ್ಟ ಬಗ್ಗೆ ವಿವರವನ್ನು ಕೊಡುತ್ತವೆ.

ಬೆಂಗಳೂರು ಜಿಲ್ಲೆಯ ಬೆಂಗಳೂರು ತಾಲ್ಲೂಕು ಕೂಡಿಗೆ ಹಳ್ಳಿಯ ದೇವರಾಯನ ಕಾಲದ ಕ್ರಿ.ಶ. ೧೩೫೩ರ ಶಾಸನವು[7] ಏಳು ಜನ ಪಾತ್ರದ ಜನರೆಂದರೆ, ಸಂಗೀತ ಮತ್ತು ನೃತ್ಯದವರನ್ನು ಅಲ್ಲಿನ ಸೋಮದೇವ ದೇವಸ್ಥಾನದಲ್ಲಿ ದಿನನಿತ್ಯದ ಸಂಗೀತ ಸೇವೆಗೋಸ್ಕರ ಮತ್ತು ಆ ಜನರ ನಿರ್ವಹಣೆಗೋಸ್ಕರ ದಾನ ಕೊಟ್ಟ ವಿವರವನ್ನು ನಿಡುತ್ತವೆ. ಆ ಏಳು ಜನ ಸಮಗೀತಗಾರರಲ್ಲಿ ಇಬ್ಬರು ನೃತ್ಯಗಾರ್ತಿಯರು, ಒಬ್ಬ ನೃತ್ಯ ಕಲಿಸುವ ನಟುವಾಂಗ, ಒಬ್ಬ ತಬಲ ಅಥವಾ ನಗಾರಿ ಬಾರಿಸುವ, ಒಬ್ಬ ಸೀತಾರವಾದಕ, ಒಬ್ದಬ ಉಪಾಂಗ, ಒಬ್ಬ ಕಂಸಾಳೆ ಬಾರಿಸುವವ ಎಂದು ವಿವರಣೆಯನ್ನು ಕೊಡುತ್ತವೆ. ಇನ್ನೊಂದು ಉಡುಪಿ ಜಿಲ್ಲೆಯ ಉಡುಪಿ ತಾಲ್ಲೂಕಿನ ಬಾರಕೂರು ಗ್ರಾಮದ, ಹರಿಯಪ್ಪನ ಕಾಲದ ಕ್ರಿ.ಶ. ೧೩೮೨ರ ಶಾಸನವು[8] ನೃತ್ಯಗಾರ್ತಿಯರಿಗೆ ಭೂಮಿಯನ್ನು ಕೊಡುಗೆಯಾಗಿ ಕೊಟ್ಟ ವಿವರಣೆ ನೀಡುತ್ತದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳದ ಶಾಸನ[9] ಒಂದರಲ್ಲಿ ಐದು ಮುಖ್ಯ ವಾದ್ಯಗಳನ್ನು ಉಲೇಖಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕು, ಮಾವಳ್ಳಿ ದೇವರಾಯನ ಕಾಲದ ಶಾಸನವೊಂದರಲ್ಲಿ[10] ಅಲ್ಲಿನ  ವಿಶೇಷ ಸೇವೆಗಳಲ್ಲಿ, ಸಂಗೀತವಾದ್ಯಗಳಾದ ಡೋಲು, ಜಾಗಟೆ ಮತ್ತು ಶಂಖರಗಳು ಮುಂತಾದ ಸಂಗೀತ ಉಪಕರಣಗಳ ಉಪಯೋಗವನ್ನು ತಿಳಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೂಕು ಕೊಲ್ಲೂರಿನ ಮೂಕಾಂಬಿಕ ದೇವಸ್ಥಾನದಲ್ಲಿ ವಿರೂಪಾಕ್ಷನ ಕಾಲದ ಶಾಸನ[11]ವೊಂದದರಲ್ಲಿ, ವಾದ್ಯಕಾರ, ಮದ್ದಲೆ ಮತ್ತು ಹಲಗೆಗಳನ್ನು ನುಡಿಸುತ್ತಿದ್ದ ಸಂಗೀತ ವಾದ್ಯಗಾರರಿಗೆ ದಾನಕೊಟ್ಟಿರುವುದನ್ನು ಉಲ್ಲೇಖಿಸುತ್ತವೆ ಮತ್ತು ನಿತ್ಯವೂ ಕೂಡ ದೇವಸ್ಥಾನದಲ್ಲಿ ಸಲ್ಲುತ್ತಿದ್ದ ಪೂಜಾ ವಿವರಗಳನ್ನು ಕೊಡುತ್ತವೆ.

ಕ್ರಿ.ಶ. ೧೫೨೭ ಕೃಷ್ಣದೇವರಾಯನ ಕಾಲದ ಶಾಸನ[12] ವೊಂದರಲ್ಲಿ ಒಬ್ಬ ನಿಲಾಡಿ ಎಂಬ ಶ್ರೇಷ್ಠ ನೃತ್ಯಗಾತಿಗೆ ಒಂದು ಗ್ರಾಮವನ್ನು ಕೋಡುಗೆಯಾಗಿ ಕೊಟ್ಟ ಬಗ್ಗೆ ಉಲ್ಲೇಖಿಸುತ್ತದೆ.ದ ಈ ಶಾಸನವು ಧಾರವಾಡ ಸಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕು ಹೊನ್ನಾಪುರ ಗ್ರಾಮದಲ್ಲಿದೆ. ಇನ್ನೊಂದು ಹಾಸನ ಜಿಲ್ಲೆಯ ಆಲೂರು ತಾಲ್ಲೂಕು, ಪಾಳ್ಯಗ್ರಾಮದ ಕ್ರಿ.ಶ. ೧೩೬೯ರ ಬುಕ್ಕರಾಯನ ಕಾಲದ ಶಾಸನವು[13] ಓಲಗದವನಿಗೆ ಮತ್ತು ದಾವಣಿ ಬಾರಿಸುವವನಿಗೆ ಅವರ ಸೇವೆಗಾಗಿ ದತ್ತಿಯನ್ನು ಕೋಡುತ್ತಿದ್ದ ಬಗ್ಗೆ ವಿವರಣೆ ನೀಡುತ್ತವೆ.

ಅನೇಕ ದೇವಸ್ಥಾನದಲ್ಲಿ ಅನೇಕ ವಿಧವಾದ ಹಬ್ಬಗಳನ್ನು ಆಚರಣೆಯಲ್ಲಿ ತಂದಿದ್ದರು. ಅವುಗಳಲ್ಲಿ ರಂಗಪೂಜೆ ಕಾರ್ಯಕ್ರಮಕ್ಕೆ ದತ್ತಿಗಳನ್ನು ಮತ್ತು ದೇವದಾಸಿಗಳನ್ನು (ನೃತ್ಯಗಾರ್ತಿಯರು) ಸಂಗೀತ ಮತ್ತು ನೃತ್ಯಕ್ಕೆ ನೇಮಕ ಮಾಡಿಕೊಂಡಿರುವುದನ್ನು ಉಲ್ಲೇಖಿಸುತ್ತವೆ. ಚಿಕ್ಕಮಂಗಳೂರು ಜಿಲ್ಲೆಯ ಮೂಡುಗೆರೆ ತಾಲ್ಲೂಕು, ಕಲಶ ಗ್ರಾಮದಲ್ಲಿ ಕ್ರಿ.ಶ. ೧೫೫೫ರ ಸದಶಿವರಾಯನ ಕಾಲದ ಶಾಸನವು[14] ರಂಗಪೂಜೆಯ ಉಲ್ಲೇಖವನ್ನು ಮಾಡಿವೆ. ಇದೇ ಸ್ಥಳದ ಇನ್ನೊಂದು ಹರಿಯಪ್ಪ ಒಡೆಯನ ಕಾಲದ ಶಾಸನವು ಪಂಚವಾದ್ಯದವರಾದ ಭೇರಿ, ಶಂಕ, ಕದಳೆ, ಗಂಟೆ ಮತ್ತು ವೀಣಾ ಬಾರಿಸುವವರ ನಿರ್ವಹಣೆಗಾಗಿ ದಾನವನ್ನು ಕೊಡುತ್ತಿರುವ ಬಗ್ಗೆ ವಿವರ ನೀಡುತ್ತವೆ. ಹಾಗೆಯೇ ವಿಜಯನಗರ ಶಾಸನ ಸಂಪುಟ ಎರಡರ ಶಾಸನಗಳಲ್ಲಿ[15] ರಂಗಪೂಜೆ ಆಚರಣೆ ಮತ್ತು ಅಲ್ಲಿನ ಪೂಜೆಗೆ ನೇಮಕ ಹೊಂದಿದ್ದ ಸಂಗೀತ ಮತ್ತು ನೃತ್ಯಗಾರ್ತಿಯರಿಗೆ ದತ್ತಿಯನ್ನು ಕೊಟ್ಟಿದ್ದರ ಬಗ್ಗೆ ವಿವರವನ್ನು ತಿಳಿಸುತ್ತವೆ.

ಒಳ್ಳಾರಿ ತಾಲ್ಲೂಕಿನ ಸೋಮಸಮುದ್ರದ ಊರಿನ ಸದಾಶಿವನ ಕಾಲದ ಕ್ರಿ.ಶ. ೧೫೫೬ರ ಶಾಸನವು[16]ಜಾನಪದ ನೃತ್ಯ, ಯಕ್ಷಗಾನದ ಕಾರ್ಯಕ್ರಮವನ್ನು ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಏರ್ಪಡಿಸಿ ಆ ಕಲಾವಿದರಿಗೆ ದಾನಗಳನ್ನು ಕೊಟ್ಟ ಬಗ್ಗೆ ವಿವರಣೆ ನೀಡುತ್ತವೆ. ಹಂಪಿಯ ಸದಾಶಿವರಾಯನ ಕ್ರಿ.ಶ, ೧೫೫೯ರ ಶಾಸನವು[17] ಗ್ರಾಮಂತಾರ ಸಂಗೀತ ಮೇಳಗಳಾದ ಗಾಮಡು ಮೇಳ ಮತ್ತು ದೇಮ್ಮನು ಮೇಳಗಳ ಕಲೆಗಾರರ ಬಗ್ಗೆ ವಿವರಗಳನ್ನು ತಿಳಿಸುತ್ತವೆ.

ವಿಜಯನಗರ ಸಾಮ್ರಾಜ್ಯದ ದೊರೆಗಳಾದ ಬುಕ್ಕರಾಯ, ಕೃಷ್ಣದೇವರಾಯ, ಅಚ್ಚುತರಾಯ, ಸದಾಶಿವರಾಯ ಮುಂತಾದವರು ಸಂಗೀತ ಮತ್ತು ನೃತ್ಯಕ್ಕೆ ವಿಶೇಷ ಪ್ರೋತ್ಸಾಹಗಳನ್ನು ಕೊಟ್ಟಂತಹ ನಿದರ್ಶನಗಳನ್ನು ಆ ಕಾಲದ ಶಾಸನಗಳು ವಿವರವಾಗಿ ತಿಳಿಸುತ್ತವೆ. ಇವುಗಳಿಂದ ರಾಜರು ಕಲೆಗಳು ಮತ್ತು ಕಲಾವಿದರಿಗೆ ಕೊಡುತ್ತಿದ್ದಂತಹ ಗೌರವ ಕೊಡುಗೆಗಳ ಬಗ್ಗೆ ಹಾಗೂ ದೇವಸ್ಥಾನಗಳಲ್ಲಿ ವಿವಿಧ ಪೂಜೆಗಳ ಪೂಜಾವಿಧಿಗಳಲ್ಲಿ ಸಂಗೀತ ಮತ್ತು ನೃತ್ಯಗಾರ್ತಿಯರ ಸೇವೆಗಳ ವಿವರಗಳು ನಮಗೆ ದೊರಕುತ್ತವೆ. ವಿವಿಧ ವಾದ್ಯಗಳಾದ ತಬಲ, ದಾವಣೆ, ನಗಾರಿ, ಸೀತಾರ, ಉಪಾಂಗ, ಕಂಸಾಳೆ, ಜಾಗಟೆ, ಡೋಲು, ಶಂಖ, ನಾಗಸ್ವರ ವಾದ್ಯಗಳ ಉಪಯೋಗ ಹಾಗೂ ಶಾಸನಗಳಲ್ಲಿ ಗ್ರಾಮಂತರ ಕಲೆಗಳಾದ ಜಾನಪದ, ತಾಳಮದ್ದಳೆ (ಯಕ್ಷಗಾನ) ಸಂಗೀತ ಮೇಳಗಳಾದ ಗಾಮಡು-ಮೇಲ ಮತ್ತು ದೆಮ್ಮನು ಮೇಳಗಳ ಬಗ್ಗೆಯು ಕೂಡ ವಿವರಗಳನ್ನು ತಿಳಿಸುತ್ತವೆ.

ಆಕರ
ವಿಜಯನಗರ ಅಧ್ಯಯನ, ಸಂ. ೬, ೨೦೦೧, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು. ೧೧೧-೧೧೩.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಬಿ.ಆರ್. ಗೊಪಾಲ, ವಿಜಯನಗರ ಶಾಸನಗಳು, ಸಂಪುಟ ೧, ಕೆ.ಎನ್. ೪೦೦ ಮತ್ತು ೪೦೨.

[2] ಅದೇ, ಸಂಪುಟ ೨, ಕೆ.ಎನ್. ೪೭೦.

[3] ಅದೇ, ಸಂಪುಟ ೨, ಕೆ.ಎನ್. ೪೩೫.

[4] ಅದೇ, ಸಂಪುಟ ೧, ಕೆ.ಎನ್. ೩೬೩.

[5] ಅದೇ, ಸಂಪುಟ ೧, ಕೆ.ಎನ್. ೪೦೧.

[6] ಅದೇ, ಸಂಪುಟ ೧, ಕೆ.ಎನ್. ೨೧೧.

[7] ಅದೇ, ಸಂಪುಟ ೧, ಕೆ.ಎನ್. ೫೯.

[8] ಅದೇ, ಸಂಪುಟ ೨, ಕೆ.ಎನ್. ೧೦೯೫.

[9] ಅದೇ, ಸಂಪುಟ ೨, ಕೆ.ಎನ್. ೮೧೪.

[10] ಅದೇ, ಸಂಪುಟ ೨, ಕೆ.ಎನ್. ೯೦೧.

[11] ಅದೇ, ಸಂಪುಟ ೨, ಕೆ.ಎನ್. ೯೭೯.

[12] ಅದೇ, ಸಂಪುಟ ೨, ಕೆ.ಎನ್. ೭೧೧.

[13] ಅದೇ, ಸಂಪುಟ ೨, ಕೆ.ಎನ್. ೭೨೭.

[14] ಅದೇ, ಸಂಪುಟ ೨, ಕೆ.ಎನ್. ೪೯೨.

[15] ಅದೇ, ಸಂಪುಟ ೨, ಕೆ.ಎನ್. ೪೮೫, ೯೫೪, ೯೮೨  ಮತ್ತು ೯೯೦.

[16] ಅದೇ, ಸಂಪುಟ ೨, ಕೆ.ಎನ್. ೨೭೯.

[17] ಅದೇ, ಸಂಪುಟ ೨, ಕೆ.ಎನ್. ೨೬೦.