ಪ್ರಸ್ತಾವನೆ

ಭಾರತೀಯ ಸಂಸ್ಕೃತಿಯ ಮುಕುಟದಲ್ಲಿ ಅತ್ಯಂತ ಜಾಜ್ವಲ್ಯ ಮಾನವಾದ ರತ್ನದಂತಿರುವುದು ಸಂಗೀತ. ಇದರ ಮೂಲವು ಸಾಮವೇದ. ಅದ್ದರಿಂದ ವಿಶ್ವದ ಸಂಗೀತ ಪದ್ಧತಿಗಳಲ್ಲಿ ಅತ್ಯಂತ ಪ್ರರಾತನವಾದುದು. ಇದು ನಾದ ವಿದ್ಯೆ, ಧ್ವನಿಯ ವಿಜ್ಞಾನ, ಒಂದು ಉಪವೇದ. ಭಾರತೀಯ ಸಂಗೀತದ ಸಪ್ತ ಸ್ವರಗಳಾದ ಸ, ರಿ, ಗ, ಮ, ಪ, ದ, ನಿ ನಾರದ ಪರಿವ್ರಾಜಕ ಉಪನಿಷತ್ತಿನಲ್ಲಿ ಮೊಟ್ಟಮೊದಲನೆಯ ಸಲ ಉಕ್ತವಾಗಿವೆ. ತ್ರಿಸ್ಥಾಯಿಗಳು, ಸ್ವರದ ಗಮಕಗಳನ್ನು ಋಕ್ ಪ್ರತಿಶಾಖ್ಯದಲ್ಲಿ ಹೆಳಿರುವುದು ಅತ್ಯಂತ ಪ್ರರಾತನವಾದುದು.

ಸಂಗೀತ ಸಾಹಿತ್ಯದಲ್ಲಿ ಭರಿತ ಮುನಿಯ ನಾಟ್ಯಶಾಸ್ತ್ರವೆಂಬ ಗ್ರಂಥವು ಅತ್ಯಂತ ಹಿಂದಿನದು. ಇದರಲ್ಲಿ ಸಂಗೀತವನ್ನು ನಾಟ್ಯ ಮತ್ತು ನಾಟಕದ ಒಂದು ಪೋಷಕಾಂಗವಾಗಿ ಪರಿಗಣಿಸಲಗಿದೆ. ಇದು ವೇದದ ಸಂಗೀತದಿಮದ ಉಂಟಾದ ಮೊದಲ ಬದಲಾವಣೆಯನ್ನು ಸೂಚಿಸುತ್ತದೆ. ಭರತನ ಗ್ರಂಥದ ನಂತರ ಅತಿ ಮುಖ್ಯವಾದ ಶಾಸ್ತ್ರ ಗ್ರಂಥವೆಂದರೆ ಮತಂಗ ಮುನಿಯ ಬೃಹದ್ದೇಶಿ (೯ನೇ ಶತಮಾನ). ಇದರಲ್ಲಿ ಪ್ರಥಮ ಬಾರಿ ರಾಗದ ವಿವೇಚನೆಯನ್ನು ಮಾಡಲಾಗಿದೆ. ತರುವಾಯ ಅತಿ ಮುಖ್ಯವಾದ ಗ್ರಂಥ ಶಾರ್ಙ್ಗದೇವನ ಸಂಗೀತ ರತ್ನಾಕರ (೧೩ನೇ ಶತಮಾನ). ಈ ಗ್ರಂಥವನ್ನು ಭಾರತೀಯ ಸಂಗೀತದ ಅಧಿಕೃತವಾದ ಪ್ರಮುಖ ಗ್ರಂಥವೆಂದು ಇಂದಿಗೂ ಪರಿಗಣಿಸಲಾಗಿದೆ. ಇದು ೨೬೪ ರಾಗಗಳನ್ನೂ ಪ್ರಸಿದ್ಧವಾಗಿದ್ದ ದೇಶೀ ರಾಗಗಳನ್ನೂ, ೧೨೦ ತಾಳಗಳನ್ನೂ, ಒಂದು ರಾಗವನ್ನು ಹಾಡುವಾಗ ಅನುಸರಿಸಬೇಕಾದ ನಿಯಮಗಳನ್ನೂ ಕುರಿತು ವಿವರಿಸಿದೆ.

೧೩ನೇ ಶತಮಾನದವರೆಗೂ ಭಾರತಾದ್ಯಂತ, ಸ್ಥಳೀಯ ವ್ಯತ್ಯಾಸಗಳನ್ನು ಬಿಟ್ಟರೆ, ಒಂದೇ ವಿಧವಾದ ಸಂಗೀತ ಪದ್ಧತಿ ಇದ್ದಿತು. ದೆಹಲಿಯು ಪರಕೀಯ ಮುಸ್ಲಿಮರ ವಶವಾದ ನಂತರ, ಉತ್ತರ ಭಾರತದಲ್ಲಿ ಪರ್ಷಿಯಾ ಮತ್ತು ಅರಬ್ಬಿಯಿಂದ ಪ್ರಭಾವಿತವಾಗಿ ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತಗಳೆಂಬ ಎರಡು ಪದ್ಧತಿಗಳಾಗಿ ವಿಭಾಗವಾಯಿತು. ದಕ್ಷಿಣ ಭಾರತದಲ್ಲಿ ವಿದೇಶೀ ಆಕ್ರಮಣಗಳಿಗೆ ಒಳಗಾಗಿ ಅಲ್ಲೋಲಕಲ್ಲೋಲವಾಗದೆ, ಸಂಗೀತವು ಪರಂಪರೆಗೆ ಹೊಂದಿಕೊಂಡು ಮುಂದುವರಿಯಿತು. ಇದೇ ಕಾಲಾನುಕ್ರಮದಲ್ಲಿ ದಾಕ್ಷಿಣಾತ್ಯ ಅಥವಾ ಕರ್ನಾಟಕ ಸಂಗೀತ ಪದ್ಧತಿ ಎನಿಸಿಕೊಂಡಿತು. ಪ್ರಬಂಧ ಅಥವಾ ರಚನೆಗಳು, ಪ್ರಮೇಯ ಅಥವ ನಿಯಮಗಳು, ಸಂಶೋಧನೆ ಮತ್ತು ಸಂಗೀತ ವಾದ್ಯಗಳು ಈ ಎಲ್ಲಾ ಕ್ಷೇತ್ರಗಳಲ್ಲಿ ಕರ್ನಾಟಕದವರು ಮೂಲಭೂತವಾದ ಕೊಡುಗೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿದ್ದವರು ಮತ್ತು ಬೇರೆ ರಾಜ್ಯಗಳಲ್ಲಿ ನೆಲೆಸಿದ ಕರ್ನಾಟಕದ ಜನರ ಕೊಡುಗೆಯ ವಿಶೇಷವಾದುದು. ಇದಲ್ಲದೆ, ಹೊಯ್ಸಳ ಸಾಮ್ರಾಜ್ಯ ಮತ್ತು ವಿಜಯನಗರ ಸಾಮ್ರಾಜ್ಯಗಳು ದಕ್ಷಿಣದ ಶ್ರೀರಂಗದವರೆಗೆ ವಿಸ್ತಾರವಾಗಿದ್ದುವು. ತತ್ಕಾರಣ ದಕ್ಷಿಣ ಭಾರತದ ಸಂಗೀತವನ್ನು ಕರ್ನಾಟಕ ಸಂಗೀತವೆಂದು ಕರೆಯುವುದು ರೂಢಿಗೆ ಬಂದಿದೆ.

ವಿಜಯನಗರ ಕಾಲ

ಹರಿಹರ ಮತ್ತು ಬುಕ್ಕರಾಯನ ಗುರು ಮತ್ತು ಶೃಂಗೇರಿ ಮಠಾಧೀಶರಾಗಿದ್ದ ವಿದ್ಯಾರಣ್ಯ ಶ್ರೀಚರಣರು, ಒಬ್ಬ ಮಹಾವಿದ್ವಾಂಸರೂ ಸಂಗೀತದಲ್ಲಿ ಘನವಿದ್ವಾಂಸರೂ ಆಗಿದ್ದರು. ಇವರು ಸಂಗೀತಸಾರವೆಂಬ ಲಕ್ಷಣಗ್ರಂಥವನ್ನು ರಚಿಸಿದರು. ಈ ಗ್ರಂಥವು ಇಲ್ಲಿಯವರೆಗೆ ದೊರೆತಿಲ್ಲವಾದರೂ ಗೋವಿಂದ ದೀಕ್ಷಿತರ ಸಂಗೀತ ಸುಧಾ ಎಂಬ ಗ್ರಂಥದಲ್ಲಿ ಶ್ರೀ ವಿದ್ಯಾರಣ್ಯರನ್ನೂ ಅವರ ಸಂಗೀತಸಾರದಿಂದ ಸ್ವಲ್ಪ ಭಾಗವನ್ನೂ ಉಲ್ಲೇಖಿಸಿರುವುದರಿಂದ  ಈ ಗ್ರಂಥದ ವಿಚಾರವಾಗಿ ತಿಳಿದುಬುರುತ್ತದೆ. ಉಲ್ಲೇಖವು ಹೀಗಿದೆ.

“ಸಂಗೀತಸಾರಂ ಸಮವೇಕ್ಷ್ಯ ವಿದ್ಯಾರಣ್ಯಾಭಿದ ಶ್ರೀ ಚರಣ ಪ್ರಣೀತಮ್ I (ಪು. ೧೨೫)
ಕರ್ಣಾಟಕ ಸಿಂಹಾಸನ ಭಾಗ್ಯ ವಿದ್ಯಾರಣ್ಯಾಭಿದ ಶ್ರೀ ಚರಣಾಗ್ರಣೇಭ್ಯಃ II
ಆರಭ್ಯರಾಗಾನ್ ಪ್ರಚುರ ಪ್ರಯೋಗಾನ್ ಪಂಚಾಶತಮ್ ಚಾಕಲಯೇ
ಷಡಂಗಾನ್” II (ಅದೇ ಪು.)

ಈ ಗ್ರಂಥದಲ್ಲಿ ವಿದ್ಯಾರಣ್ಯರು ೧೫ ಜನಕರಾಗಗಳನ್ನು ಹೆಸರಿಸಿದ್ದಾರೆ. ಜನಕ-ಜನ್ಯರಾಗ ಪದ್ಧತಿಯ ರಾಗ ವರ್ಗೀಕರಣವನ್ನು ಸೂಚಿಸಿದವರಲ್ಲಿ ಇವರೇ ಮೊದಲಿಗರು. ೧೫ ರಾಗಗಳ ವರ್ಗಿಕರಣದಲ್ಲಿ ಒಳಗೊಂಡಂತೆ ೫೦ ರಾಗಗಳ ವಿವರಣೆಯನ್ನು ಕುರಿತು ವಿದ್ಯಾರಣ್ಯರು ಮುಂದಿನ ವ್ಯವಸ್ಥೆಯ ಬೆಳವಣಿಗೆಗೆ ಮಾರ್ಗದರ್ಶಿಯಾಗಿ ಕರ್ಣಾಟಕ ಸಂಗೀತ ಸಾಮ್ರಾಜ್ಯ ಸ್ಥಾಪಕರಾದರು.

ವಿಜಯನಗರದ ದೊರೆಗಳು ಸಂಗೀತ ಮತ್ತು ಇತರ ಲಲಿತ ಕಲೆಗಳ ಪೋಷಕರಾಗಿದ್ದರು. ಸಂಗೀತ ಮತ್ತು ನೃತ್ಯ ಇವು ಯಮಳಕಲೆಗಳಾಗಿ ಪರಸ್ಪರ ಪೋಷಕಗಳಾಗಿದ್ದುವು. ಇವು ಸಾರ್ವಜನಿಕ ಸಮಾರಂಭಗಳು, ಉತ್ಸವಗಳು, ಧಾರ್ಮಿಕ ಸಮಾರಂಭಗಳು, ರಾಜಾಸ್ಥಾನಗಳು ಮತ್ತು ಸಭೆಗಳ ಕಲಾಪಗಳು ಒಂದು ಅಂಗವಾಗಿದ್ದುವು. ಈ ಲಲಿತ ಕಲೆಗಳ ಪೋಷಣೆ ಮತ್ತು ವಿಕಾಸದಲ್ಲಿ ದೇವಾಲಯಗಳು ಮಹತ್ತರ ಪಾತ್ರ ವಹಿಸಿದ್ದುವು. ಅನೇಕ ಸಂಗೀತ ವಿದ್ವಾಂಸರು ಮತ್ತು ವಾದ್ಯಗಾರರು ರಾಜರು, ಶ್ರೀಮಂತರು, ರಾಜ ಪುರುಷರು ನೀಡಿದ ವೃತ್ತಿಗಳಿಂದ ಜೀವನ ಮಾಡುತ್ತಿದ್ದರು.[1]

ಸಂಗೀತಶಾಸ್ತ್ರ ಮತ್ತು ಪ್ರಯೋಗಗಳು ಈ ಕಾಲದಲ್ಲಿ ಮಹತ್ತರವಾದ ಅಧ್ಯಯನ ಮತ್ತು ಸಂಶೋದನೆಗೆ ಒಳಗಾಯಿತು ಎಂಬುದು ಹಲವು ಸಂಗೀತ ಶಾಸ್ತ್ರಗಳು ಮತ್ತು ಸಮಕಾಲೀನ ಸಾಹಿತ್ಯ ಗ್ರಂಥಗಳಿಂದ ವ್ಯಕ್ತವಾಗುತ್ತದೆ. ಸರ್ವರಿಗೂ ತಿಳಿದಿರುವಂತೆ, ವಿಜಯನಗರ ಸಾಮ್ರಾಜ್ಯವು ಹಿಂದೂ ಸಂಸ್ಕೃತಿಯ ಸರ್ವತೋಮುಖವಾದ ಬೆಳವಣಿಗೆಗೆ ಆಮೂಲ್ಯವಾದ ಸೇವೆ ಸಲ್ಲಿಸಿತು. ಸಂಗೀತ ಪ್ರೇಮವು ಸಮಾಜದ ಎಲ್ಲ ಸ್ತರಗಳಿಗೂ ವ್ಯಾಪಿಸಿತ್ತು.

ಶಾರ್ಙ್ಗದೇವನ ಸಂಗೀತ  ರತ್ನಾಕರದ ಪ್ರಸಿದ್ಧವಾದ ವ್ಯಾಖ್ಯಾನಕಾರನಾದ ಚತುರ ಕಲ್ಲಿನಾಥನು ಇಮ್ಮಡಿ ದೇವರಾಯನ ಪೋಷಣೆಯನ್ನು ಪಡೆದಿದ್ದನು. ಇವನ ಪ್ರಸಿದ್ಧ ವ್ಯಾಖ್ಯಾನ ಗ್ರಂಥವಾದ ‘ಕಲಾನಿಧಿ’ ಎಂಬುದು ಒಂದು ನಿಖರವಾದ, ಸ್ಪಷ್ಟವಾದ ಗ್ರಂಥ. ಇದು ಮುಂದೆ ರಮಾಮಾತ್ಮ, ಪುಂಡರೀಕ ವಿಠಲ, ಸೋಮನಾಥ, ವೆಂಕಟಮುಖಿ, ತುಳಜಾಜಿ ಮುಂತಾದವರಿಗೆ ಅತ್ಯಂತ ಮುಖ್ಯವಾದ ಆಕರ ಗ್ರಂಥವಾಯಿತು. ಇವನು ವೇದ, ಉಪನಿಷತ್ತು, ವ್ಯಾಕರಣ, ತರ್ಕ, ಅಲಂಕಾರ ಮತ್ತು ಅಯುರ್ವೇದಗಳಲ್ಲಿ ವಿದ್ವಾಂಸ ನಾಗಿದ್ದನು. ಇವನು ಆಧುನಿಕ ಕರ್ನಾಟಕ ಸಂಗೀತದ ಅರುಣೋದಯ ತಾರೆ. ಕನ್ನಡಿಗನಾದ ಈತನು ಸಂಗೀತದಲ್ಲಿ ಆಗಿದ್ದ ಬದಲಾವಣೆಗಳನ್ನೆಲ್ಲ ಲಕ್ಷಣದೊಡನೆ ಅನ್ವಯಿಸಿ ಅವುಗಳಿಗೆ ಶಾಸ್ತ್ರಧಿಕಾರವನ್ನು ಒದಗಿಸಿ ಆಧುನಿಕ ಸಂಗೀತದ ಕುಲದೀಪವಾಗಿದ್ದಾನೆ.

ಮಾಧ್ವ ಯತಿವರ್ಯರಾದ ಶ್ರೀಪಾದರಾಯಸ್ವಾಮಿಯು (ಕ್ರಿ.ಶ. ೧೩೦೪-೧೫೦೨), ಸಂಗೀತದಲ್ಲಿ ಪರಿಣತಿ ಹೊಂದಿದ, ಕವಿತಾ ಪ್ರತಿಭಾ ಸಂಪನ್ನರಾಗಿದ್ದರು. ಇವರು ವಿಜಯನಗರದ ಸಾಮಂತನಾಗಿದ್ದ ಚಂದ್ರಗಿರಿಯ ಸಾಳುವ ನರಸಿಂಹರಾಯನ (ಕ್ರಿ,ಶ. ೧೪೮೭-೧೪೯೭) ಗುರುವಾಗಿದ್ದರು. ಇವರು ಶ್ರೀರಂಗದಲ್ಲಿ ಹಲವು ವರ್ಷಗಳ ಕಾಲವಿದ್ದರು. ಅಲ್ಲಿ ವಿಷ್ಣು ದೇವಾಲಯಗಳಲ್ಲಿ ಆಳ್ವಾರರ ದಿವ್ಯ ಪ್ರಬಂದಗಳನ್ನು ಹಾಡುವುದನ್ನು ಗಮನಿಸಿ ತಿಳಿಸಿದ್ದರು. ಇದು ಅವರ ಮೇಲೆ ಮಹತ್ತರವಾದ ಪ್ರಭಾವ ಬೀರಿತು ಎಂದು ಹೆಳಿದರೆ ತಪ್ಪಾಗುವುದಿಲ್ಲ. ಶ್ರೀಪಾದರಾಜರು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಿಂತ ಮೇಲೆ ಕನ್ನಡದಲ್ಲಿ ಹಾಡುಗಳನ್ನು ರಚಿಸಿ ದೇವರ ಪೂಜೆಯಲ್ಲಿ ಅವುಗಳನ್ನು ಹಾಡುವುದನ್ನು ಪ್ರಾರಂಭಿಸಿದರು. ದೇವರನಾಮಗಳು ಅಥವಾ ದಾಸರ ಪದಗಳೆಂಬ ಹಾಡುಗಳನ್ನು ವಿಜಯನಗರದಲ್ಲಿ ೧೪-೧೫ನೇ ಶತಮಾನಗಳ ಅವಧಿಯಲ್ಲಿ ಮೊಟ್ಟಮೊದಲು ರಚಿಸಲಾಯಿತು. ಇದು ನರಹರಿ ತೀರ್ಥರಿಂದ ಆರಂಭವಾಯಿತು. ನಂತರ ಇದ್ದ ಹರಿದಾಸರೆಲ್ಲರೂ ಸಾವಿರಾರು ದೇವರ ನಾಮಗಳನ್ನು ರಚಿಸಿ ಹರಿದಾಸ ಸಾಹಿತ್ಯವನ್ನು ಬೆಳೆಸಿದರು. ಸುಮಾರು ಇದೇ ಕಾಲದಲ್ಲಿ ತಿರುಪತಿಯ ತಾಳ್ಳಪಾಕಂ ಅಣ್ಣಮಾಚಾರ್ಯರು, ಪೆದ್ದ ತಿರುಮಲ, ಚಿನ್ನ ತಿರುಮಲ ತೆಲುಗಿನಲ್ಲೂ, ಕೊಳ್ಳೆಗಾಲದ ಸಮೀಪದಲ್ಲಿರುವ ಚಿಲುಕವಾಡಿಯ ನಿಜಗುಣ ಶಿವಯೋಗಿ ಮುಂತಾದವರು ದೇವರ ನಾಮಗಳ ಮದರಿಯನ್ನು ಅನುಸರಿಸಿ ಹಲವು ಕನ್ನಡದಲ್ಲೂ ಹಾಡುಗಳನ್ನು ರಚಿಸಿದರು.

ಹರಿದಾಸ ಚಳವಳಿ ಮತ್ತು ಸಾಹಿತ್ಯಕ್ಕೆ ಶ್ರೀಪಾದರಾಜಸ್ವಾಮಿಯ ಕೊಡುಗೆ ಕರ್ನಾಟಕದ ಭಕ್ತಿ ಚಳವಳಿಗೆ ಸ್ಫೂರ್ತಿದಾಯಕ ಹಾಗೂ ಮಾರ್ಗದರ್ಶಿಯಾಯಿತು. ಪ್ರತಿನಿತ್ಯ ದೇವರ ಪೂಜೆಯ ಅಂಗವಾಗಿ ದೇವರ ನಾಮಗಳನ್ನು ಹಾಡುವ ಪದ್ಧತಿಯನ್ನು ಪ್ರಾರಂಭಿಸಿದರು. ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು, ವೃತ್ತನಾಮಗಳು, ದಂಡಕಗಳು, ಗೋಪಿಗೀತ, ವೇಣುಗೀತ, ಭ್ರಮರಗೀತ, ಲಕ್ಷ್ಮೀ ನರಸಿಂಹ ಪ್ರಾದುರ್ಭಾವ ದಂಡಕ, ರುಕ್ಮಿಣಿ ಸತ್ಯಭಾಮ ವಿಲಾಸ ಮುಂತಾದ ಇವರ ವಿಶೇಷ ರಚನೆಗಳು ಹರಿದಾಸ ಸಾಹಿತ್ಯಕ್ಕೆ ಅಪರೂಪದ ಕೊಡುಗೆಗಳಾಗಿವೆ. ನಿಂದಾಸ್ತುತಿಗಳು, ಸುಳಾದಿಗಳು ಮತ್ತು ಉಗಾಬೋಗಗಳನ್ನು ರಚಿಸಿದವರಲ್ಲಿ ಇವರೇ ಮೊದಲಿಗರು ಮತ್ತು ಮಾರ್ಗದರ್ಶಿ. ಇವರ ಅಂಕಿತ ‘ರಂಗವಿಠಲ’.

ಶ್ರೀಪಾದರಾಜಸ್ವಾಮಿಯ ಶಿಷ್ಯರಲ್ಲಿ, ಕೃಷ್ಣದೇವರಾಯನ ಗುರುವಾಗಿದ್ದ ವ್ಯಾಸರಾಯ ಸ್ವಾಮಿಗಳು ವಾಗ್ಗೇಯಕಾರರೂ, ಸಂಗೀತವಿದ್ವಾಂಸರೂ ಆಗಿದ್ದರು. ಇವರು ವ್ಯಾಸಕೂಟ ಮತ್ತು ದಾಸಕೂಟಗಳನ್ನು ಸ್ಥಾಪಿಸಿದರು. ಇವರ ಹಲವು ಶಿಷ್ಯರಲ್ಲಿ ಪುರಂದರದಾಸರು, ಕನಕದಾಸರು, ವಾದಿರಾಜಸ್ವಾಮಿಗಳು ಬಹಳ ಪ್ರಸಿದ್ಧರು. ವೃತ್ತ ಪದ್ಯ, ಸಾಂಗತ್ಯ, ಸೂಳಾದಿ, ಪದಗಳು ಮತ್ತು ದೇವರ ನಾಮಗಳನ್ನು ಶ್ರೀಕೃಷ್ಣ ಎಂಬ ಅಂಕಿತದಲ್ಲಿ ಹಲವಾರು ರಚಿಸಿ ಹರಿದಾಸ ಸಾಹಿತ್ಯವನ್ನು ಸಮೃದ್ಧಗೊಳಿಸಿದರು.

ಸುಮಾರು ಇದೇ ಕಾಲದಲ್ಲಿ ನಿಜಗುಣ ಶಿವಯೋಗಿ (ಸು. ಕ್ರಿ.ಶ. ೧೫೫೦) ಮೈಸೂರು ಜಿಲ್ಲೆಯ ಕೊಳ್ಳೆಗಾಲದ ಸಮೀಪದಲ್ಲಿ ವಾಸವಾಗಿದ್ದರು. ಮೊದಲು ಇವರು ಒಂದು ಚಿಕ್ಕಸೀಮೆಯ ಅಧಿಪತಿಯಾಗಿದ್ದು, ವೈರಾಗ್ಯದಿಂದ ಐಹಿಕ ಜೀವನವನ್ನು ತ್ಯಜಿಸಿ ಯೋಗಿಯಾಗಿ ಚಿಲುಕವಾಡಿ ಬಳಿಯಿರುವ ಶಂಭುಲಿಂಗ ಬೆಟ್ಟದಲ್ಲಿ ವಾಸವಾಗಿದ್ದರು. ಶೈವ ವೇದಾಂತ, ಸಂಗೀತ, ಕನ್ನಡ ಮತ್ತು ಸಂಸ್ಕೃತದಲ್ಲಿ ಪರಿಣತರಾಗಿದ್ದರು, ಹಲವು ಗ್ರಂಥಗಳನ್ನು ರಚಿಸಿದರು. ವಿವೇಕ ಚಿಂತಾಮಣಿ ಎಂಬ ಗ್ರಂಥದ ಒಂದು ಅಧ್ಯಾಯದಲ್ಲಿ ಶ್ರುತಿ, ಸ್ವರ, ಅಲಂಕಾರ, ಜಾತಿಗಳು ಮತ್ತು ಸಂಗೀತ ವಾದ್ಯಗಳು ಮತ್ತು ರಾಗಗಳ ವರ್ಗೀಕರಣವನ್ನು ಕುರಿತು ವಿವೇಚನೆ ಮಾಡಲಾಗಿದೆ. ಪಲ್ಲವಿ ಮತ್ತು ಚರಣಗಳನ್ನುಳ್ಳ ಕನ್ನಡದ ಹಾಡುಗಳನ್ನು ರಚಿಸಿದರು. ತಮ್ಮ ಕಾಲದ ವೀಣೆಯನ್ನೂ, ರಾಗಗಳನ್ನೂ ವರ್ಣಿಸಿದ್ದಾರೆ. ಶಂಭುಲಿಂಗ ಎಂಬ ಅಂಕಿತದಲ್ಲಿರುವ ಇವರ ಹಾಡುಗಳನ್ನು ಕರ್ನಾಟಕ ಸಂಗೀತಕ್ಕೆ ಅಮೂಲ್ಯವಾದ ಕೊಡುಗೆ ಎಂದು ಪರಿಗಣಿಸಲಗಿದೆ. ಈ ಕಾಲದ ಶಿವಶರಣರು ಮಂತ್ರಗೋಪ್ಯ ಮತ್ತು ಕಾಲಜ್ಞಾನಗಳನ್ನು ರಚಿಸಿ ಕನ್ನಡದ ಸಂಗೀತ ಸಾಹಿತ್ಯವನ್ನು ಮತ್ತಷ್ಟು ಸಂಪದ್ಭರಿತವಾಗಿ ಮಾಡಿದರು.

ವ್ಯಾಸರಾಯಸ್ವಾಮಿಯ ಪ್ರಸಿದ್ಧ ಶಿಷ್ಯರಲ್ಲಿ ಒಬ್ಬರಾದ ಪುರಂದರದಾಸರು ಭಕ್ತಿ, ತತ್ವನೀತಿಮಯವಾದ ಸಾವಿರಾರು ಹಾಡುಗಳನ್ನು ಸುಲಭವಾಗಿ, ಅರ್ಥವಾಗುವಂಥ, ಎಲ್ಲರ ಮೆಚ್ಚಿಗೆಗೆ ಪಾತ್ರವಾಗುವಂಥ ಕನ್ನಡದಲ್ಲಿ ರಚಿಸಿದರು. ಅವರ ರಚನೆಗಳು ಸಂಗೀತ ಮತ್ತು ಕವಿತ್ವದ ಮಧುರ ಸಮ್ಮಿಳನವಾಗಿವೆ. ಅವರು ಕೇವಲ ಕವನಗಳ ಕವಿಯಾಗಿರಲಿಲ್ಲ. ಸರಿಯಾದ ಅರ್ಥದಲ್ಲಿ ವಾಗ್ಗೇಯಕರರಾಗಿದ್ದರು. ತತ್ಕಾರಣ, ಇವರ ವಿವಿಧ ರಚನೆಗಳನ್ನು ನಂತರದ ವಾಗ್ಗೇಯಕಾರರಾದ ಷಾಹಜಿ ಮತ್ತು ಶಾಸ್ತ್ರ ರಚನಕಾರರಾದ ತುಳಜಾಜಿ ಮುಂತಾದವರು ಹಲವು ರಾಗಗಳಿಗೆ ಲಕ್ಷ್ಯವಾಗಿ ಪರಿಗಣಿಸಿದ್ದಾರೆ. ತುಳಜಾಜಿಯು ತನ್ನ ಸಂಗೀತ ಸಾರಾಮೃತವೆಂಬ ಗ್ರಂಥದಲ್ಲಿ ರಾಗಗಳು ಮತ್ತು ಪ್ರಬಂಧಗಳ ಸಂಬಂದವಾಗಿ ಇವರ ೫೦ ರಚನೆಗಳನ್ನು ಲಕ್ಷ್ಯವಾಗಿ ಉಲ್ಲೇಖಿಸಿದ್ದಾನೆ. ತ್ಯಾಗರಾಜ ಸ್ವಾಮಿಯ ರಚನೆಗಳು ದಾಸರಿಂದ ಹೇಗೆ ಎಷ್ಟರಮಟ್ಟಿಗೆ ಪ್ರಭಾವಿತವಾಗಿದ್ದವು ಎಂಬುದನ್ನು ತೋರಿಸುತ್ತವೆ. ತ್ಯಾಗರಾಜಸ್ವಾಮಿಯು ತಮ್ಮ ಪ್ರಹಲ್ಲಾದ ಭಕ್ತಿ ವಿಜಯವೆಂಬ ಸಂಗೀತ ರೂಪಕದಲ್ಲಿ ಪುರಂದರದಾಸರನ್ನು ನಮಿಸಿದ್ದಾರೆ. ಕಮಲಾಪುರದಲ್ಲಿ ದೊರಕಿರುವ ತಾಮ್ರ ಸಾಸನಗಳು ಪುರಂದರದಾಸರ ಮತ್ತು ಅವರ ಪ್ರತ್ರರ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸುತ್ತವೆ.[2] ಇದಲ್ಲದೆ, ಪೆದ್ದತಿರುಮಲಾಚಾರ್ಯನು ತನ್ನ ತಾತ ತಿರುಪತಿಯ ತಾಳ್ಳಪಾಕಂ ಅಣ್ಣಮಾಚಾರ್ಯರೂ ಪುರಂದರದಾಸರೂ ಭೇಟಿಯಾಗಿದ್ದರು ಎಂದು ಬರೆದಿದ್ದಾರೆ.

ಪುರಂದರದಾಸರನ್ನು ಕರ್ನಾಟಕ ಸಂಗೀತ ಪಿತಾಮಹರೆಂದು ಗೌರವದಿಂದ ಸ್ಮರಿಸುವುದುವಾಡಿಕೆ. ಹೀಗೆ ಕೊಂಡಾಡುವುದು ಮೊದಲು ತಮಿಳುನಾಡಿನಲ್ಲಿ ಪ್ರಾರಂಭವಾಗಿ ನಂತರ ಭಾರತದ ಇತರ ಭಾಗಗಳಲ್ಲಿ ಹರಡಿ ರೂಡಿಗೆ ಬಂದಿತು ಗಮನಾರ್ಹ. ಇವರು ಮಾಯಾ ಮಾಳವ ಗೌಳ ಮೇಳವನ್ನು ಶುದ್ಧಮೇಳವೆಂದು ಆರಿಸಿಕೊಮಡು ಅದರ ಜನ್ಯವಾದ ಮಲಹರಿ ರಾಗದಲ್ಲಿ ಸಂಗೀತಾಭ್ಯಾಸಕ್ಕಾಗಿ ವೈಜ್ಞಾನಿಕವಾದ ಪಾಠಗಳನ್ನು ರಚಿಸಿದರು. ಇವರ ಲಕ್ಷ್ಯಗೀತೆಗಳಾದ ಪಿಳ್ಳಾರಿಗೀತೆಗಳನ್ನು ಪ್ರತಿಯೊಬ್ಬ ಕರ್ನಾಟಕದ ಸಂಗೀತದ ವಿದ್ಯಾರ್ಥಿಯು ಇಂದಿಗೂ ಅಭ್ಯಾಸ ಮಾಡುತ್ತಾನೆ. ದಾಸರು ಕೃತಿಗಳು, ಕೀರ್ತನೆಗಳು, ಪದಗಳು ಸುಳಾದಿಗಳು, ಉಗಾಬೋಗಗಳೇ ಮುಂತಾದ ಹಲವು ರೀತಿಯ ರಚನೆಗಳನ್ನು ರಚಿಸಿ ಹರಿದಾಸ ಸಾಹಿತ್ಯವನ್ನು ವಿಪುಲವಾಗಿ ಸಮೃದ್ಧಗೊಳಿಸಿದ್ದಾರೆ. ತಮ್ಮ ಮೂರು ರಚನೆಗಳಲ್ಲಿ ಆಗ ಪ್ರಚಲಿತವಿದ್ದ ೩೨ ರಾಗಗಳನ್ನು ಹೆಸರಿಸಿದ್ದಾರೆ. ಆಡಿದನೋ ರಂಗ ಎಂಬ ಕೆಲವು ಹಾಡುಗಳನ್ನು ರಚಿಸುವುದರಲ್ಲಿ ಸಾಂಪ್ರದಾಯಿಕವಾದ ಭರತನಾಟ್ಯ ಪದ್ಧತಿಯನ್ನು ಅನುಸರಿಸಿದ್ದಾರೆ. ಭಯಸಮಯದೇವ ಎಂಬ ಭಾಂಡೀರ ಭಾಷೆಯ ಅವರ ರಚನೆಯನ್ನು ನೋಡಿದರೆ ಭಾಂಡೀರ ಭಾಷೆಯಲ್ಲಿಯೂ ಕೃತಿ ರಚನೆ ಮಾಡಿದ್ದರು ಎಂದು ತಿಳಿದುಬರುತ್ತದೆ. ಅವರ ಅಂಕಿತವಿರುವ ದೇಶಾಕ್ಷಿ ರಾಗದ ಗೀತೆಯೊಂದು ಅಪರೂಪ ಬಳಕೆಯಲ್ಲಿದೆ. ಪಿಳ್ಳಾರಿ ಗೀತಗಳಲ್ಲದೆ ಬೇರೆ ಬೇರೆ ತೀತಗಳನ್ನೂ ರಚಿಸಿದ್ದರು ಎಂದು ಇದರಿಂದ ತಿಳಿಯುತ್ತದೆ. ಇದಲ್ಲದೆ ದಾಸರು ಲಕ್ಷಣ ಗೀತಗಳು, ತಾನವರ್ಣಗಳು ಮತ್ತು ತಿಲ್ಲಾನಗಳನ್ನೂ ರಚಿಸಿದ್ದಾರೆಂದು ಹೇಳಲಾಗಿದೆ. ಆದರೆ ಇವು ಯಾವುದೂ ಲಬ್ಧವಿಲ್ಲ. ಇವರ ಅನೇಕ ರಚನೆಗಳು ಮಧ್ಯಮ ಕಾಲದಲ್ಲಿವೆ. ಆದಿತಾಳ, ಛಾಪುತಾಳ ಮತ್ತು ಝಂಪೆತಾಳಗಳ ಬಗ್ಗೆ ಅವರಿಗೆ ವಿಶೇಷ ಒಲವು ಇದ್ದಿತು ಎಂದು ತೋರುತ್ತದೆ. ಅವರ ಶೃಂಗಾರ ಭಾವವವಿರುವ ರಚನೆಗಳು ಪದಗಳ ವಾಗ್ಗೇಯಕಾರರಾದ ಕ್ಷೇತ್ರಜ್ಞರಿಗೆ ಮಾದರಿಗಳಾದುವು. ಹರಿದಾಸರು ಕರ್ನಾಟಕ ಸಂಗೀತದ ತಾಳ ಪದ್ಧತಿಯಲ್ಲಿ ಮಹತ್ತರ ಬದಲಾವಣೆ ಉಂಟುಮಾಡಿದರು. ನೂರಾರು ದೇಶೀ ತಾಳಗಳ ಸ್ಥಾನದಲ್ಲಿ ಒಂಬತ್ತು ಅಥವಾ ಹತ್ತು ತಾಳಗಳನ್ನು ರೂಢಿಗೆ ತಂದರು. ಸುಳಾದಿ ಸಪ್ತತಾಳಗಳನ್ನು ಬಳಕೆಗೆ ತಂದು ಕರ್ನಾಟಕ ಸಂಗೀತದ ತಾಳಪದ್ಧತಿಯಲ್ಲಿ ಕ್ರಾಂತಿಯನ್ನು ಉಂಟುಮಾಡಿದರು.

ವ್ಯಾಸರಾಯಸ್ವಾಮಿಯ ಮತ್ತೊಬ್ಬ ಪ್ರಮುಖ ಶಿಷ್ಯರೂ ಪುರಂದರದಾಸರ ಒಡನಾಡಿಗಳೂ ಆದ ವಾದಿರಾಜರು ಮತ್ತು ಬೇಲೂರು ವೈಕುಂಟದಾಸರ ಮಿತ್ರರಾಗಿದ್ದರು. ಇವರು ವಿದ್ವಾಂಸರು, ಕವಿ, ಸಂಗೀತ ವಿದ್ವಾಂಸರು ಮತ್ತು ವಾಗ್ಗೇಯಕಾರರಾಗಿದ್ದರು. ಇವರು ಎಲ್ಲಾ ವಿಧವಾದ ರಚನೆಗಳು ಮತ್ತು ದೀರ್ಘವಾದ ಸಂಗೀತ ಪ್ರಕಾರಗಳನ್ನು ರಚಿಸಿದರು. ದ್ವೈತಸಿದ್ಧಾಂತವನ್ನು ಪ್ರತಿಪಾದಿಸುವ, ವಿವರಿಸುವ ಹಲವು ವಿದ್ವತ್ಪೂರ್ಣವಾದ ಸಂಸ್ಕೃತ ಗ್ರಂಥಗಳನ್ನು ರಚಿಸಿದರು. ಇವರು ೩೧೩ ಹಾಡುಗಳು ಹಯವದನ ಎಂಬ ಅಂಕಿತದಲ್ಲಿರುವುದು ಲಭ್ಯವಾಗಿದೆ. ಇದು ೨೯೧ ಕೃತಿಗಳು, ೧೦ ಸುಳಾದಿಗಲು ಮತ್ತು ೧೩ ಉಗಾಭೋಗಗಳನ್ನು ಒಳಗೊಂಡಿದೆ. ಇವರು ಭ್ರಮರಗೀತ, ಗುಂಡಕ್ರಿಯ, ವೈಕುಂಠವರ್ಣನೆ, ಸ್ವಪ್ನಗದ್ಯ ಲಕ್ಷ್ಮೀಶೋಭಾನೆ, ನಾರದ ಕುರವಂಜಿ ಮತ್ತು ತತ್ವಸುವ್ವಾಲಿ ಎಂಬ ವಿಶಿಷ್ಟವಾದ ದೀರ್ಘ ರಚನೆಗಳನ್ನು ರಚಿಸಿದ್ದಾರೆ. ನಾರದ ಕುರವಂಜಿಯು ಸಂಗೀತ ಸಾಹಿತ್ಯ ರಚನೆಗಳನ್ನು ವಾದಿರಾಜರು ಸಾಧಿಸಿದ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಜಾನಪದ ನೃತ್ಯ ನಾಟಕವಾಗಿದೆ. ಬಹುಶಃ ಇಡೀ ಭಾರತದಲ್ಲೇ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಷೇತ್ರದಲ್ಲಿ ಇದು ಪ್ರಥಮ ರಚನೆ ಎನ್ನಲು ಅಡ್ಡಿಯಿಲ್ಲ.

ಈ ಕಾಲದ ಮತ್ತೊಂದು ವಿಶಿಷ್ಟ ಗ್ರಂಥ ಸ್ವರಮೇಳ ಕಳಾನಿಧಿ. ಇದನ್ನು ರಾಮರಾಯನ ಮಂತ್ರಿ ವಿದ್ವಾಂಸ ಮತ್ತು ಸಂಗೀತ ಕಲಾಕೋವಿದನಾಗಿದ್ದ ರಾಮಾಮಾತ್ಯನು ರಾಜನ ಅಣತಿಯಂತೆ ಆಗಿನ ಕಾಲದ್ಲಲಿ ಗೊಮದಲವನ್ನು ಪರಿಹರಿಸಿ ಸಂಪ್ರದಾಯ ಮತ್ತು ಪ್ರಯೋಗಗಳ ಸಮನ್ವಯ ಮಾಡಲು ರಚಿಸಿದನು. ಇವನು ಚತುರ ಕಲ್ಲಿನಾಥನ ಮೊಮ್ಮಗ. ಬಯಕಾರ ರಾಮಪ್ಪಯ್ಯ ಎಂದೂ ಇವನ ಹೆಸರು. ಇವನು ಈ ಗ್ರಂಥವನ್ನು ರಚಿಸಿ ಸುಭದ್ರ ಸುಂದರವಾದ ಆಣೆಕಟ್ಟನ್ನು ನಿರ್ಮಿಸಿ ಉಪಕರಿಸಿದ್ದಾನೆ. ಈ ಗ್ರಂಥವು ೫ ಅಧ್ಯಾಯಗಳಲ್ಲಿ ಒಟ್ಟು ೩೨೮ ಸಂಸ್ಕೃತ ಶ್ಲೋಕಗಳುಳ್ಳ ಗ್ರಂಥ. ಗ್ರಂಥವು ಪುಟ್ಟದಾದರೂ ಅದು ೨೦೦೦ ವರ್ಷಗಳ ಕಾಲದ ಸಂಗೀತದ ವಿಕಾಸವನ್ನು ಪ್ರತಿಬಿಂಬಿಸುತ್ತದೆ. ವಿಷಯದ ಸಂಗ್ರಹವು ವಿಶಿಷ್ಟವಾದ ಸೂಚ್ಯಾರ್ಥ ಕೊಡುತ್ತದೆ. ಇದು ದಕ್ಷಿಣ ಭಾರತದ ಸಂಗೀತದ ಇತಿಹಾಸದಲ್ಲಿ ಆಧುನಿಕ ಯುಗಕ್ಕೆ ಸೂಕ್ತವಾದ ಪೀಠಿಕೆಯಾಗಿದೆ. ವೀಣೆ, ಮೇಳ ಮತ್ತು ರಾಗದ ವಿವೇಚನೆಯು ಎಷ್ಟು ಸ್ಪಷ್ಟ ಮತ್ತು ಕರಾರುವಕ್ಕಗಿದೆ ಎಂದರೆ ನಮ್ಮನ್ನು ಅದು ಹಠಾತ್ತನೆ ಈಗಿನ ಕಾಲಕ್ಕೆ ಕರೆದೊಯ್ಯುವಂತೆ ಭಾವನೆ ಉಂಟಾಗುತ್ತದೆ. ಪರಿಭಾಷಿಕ ಶಬ್ದಗಳ ಬಗ್ಗೆ ತಲೆದೋರಿದ್ದ ಗೊಂದಲವನ್ನು ನಿವಾರಿಸುತ್ತದೆ. ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ ರಾಗಗಳನ್ನು ವೈಜ್ಞಾನಿಕವಾಗಿ ಅವುಗಳಲ್ಲಿಯ ಸ್ವರಗಳ ಸಂಖ್ಯೆ ಮತ್ತು ಮೈತ್ರಿಯ ಆಧಾರದ ಮೇಲೆ ವರ್ಗೀಕರಣ ಮಾಡಿ ೨೦ ಜನಕರಾಗಗಳ ಪಟ್ಟಿ ಕೊಟ್ಟಿದ್ದಾನೆ. ಒಂದೇ ಸ್ವರ ಸ್ಥಾನದಲ್ಲಿ ನೆರೆಹೊರೆಯ ಎರಡು ಸ್ವರಗಳು ಪ್ರಕಟವಾಗಬಹುದೆಂಬ ಪ್ರಮೇಯವನ್ನು ವಿವೇಚಿಸಿ ಆರಂಭಿಸಿ ಆಧುನಿಕ ಜನಕರಾಗಗಳ ಜನಕನಾಗಿ, ಆದುನಿಕ ಸಂಗೀತದ ಅರುಣೊದಯವಾಗಿದ್ದಾನೆ. ರಾಗ ಮತ್ತು ಮೇಳಗಳ ಬಗ್ಗೆ ಅವನ ವಿಶ್ಲೇಷಣೆಯು ಸಂಗೀತ ಪದ್ಧತಿಯ ವೈಜ್ಞಾನಿಕ ವಿಕಾಸ ಮತ್ತು ವರ್ಗೀಕರಣದಲ್ಲಿ ಒಂದು ಮೈಲಿಗಲ್ಲು ಆಗಿದೆ. ಇವನು ಕೊಟ್ಟಿರುವ ಮೇಳಗಳು ಈಗಿನ ಮೇಳಕರ್ತ ಪದ್ಧತಿಯ ಒಂದು ಅಂಗವಾಗಿವೆ. ಇವನ ಮೇಳಗಳು ಹಳೆಯದಾಗಿದ್ದರೂ ಕೆಲವು ಆಧುನಿಕ ರಾಗಗಳ ವಿವರಣೆಗೆ ಸಹಾಯಕವಾಗಿವೆ.

ಸಂಗೀತ ವಾದ್ಯಗಳಲ್ಲಿ ವೀಣೆಯು ಶ್ರುತಿ ಮಾಡುವ ವಿಧಾನ ಮತ್ತು ಮೆಟ್ಟಿಲು ಸಂಖ್ಯೆಯ ಅಲ್ಪ ಸ್ವಲ್ಪ ವ್ಯತ್ಯಾಸಗಳನ್ನು ಬಿಟ್ಟರೆ ವಿಜಯನಗರದ ಕಾಲದಲ್ಲಿ ಈಗಿನ ಸ್ವರೂಪವನ್ನು ಪಡೆಯಿತು. ಶಾರ್ಙ್ಗದೇವನು ಹೇಳಿರು ಕಿನ್ನರಿ ವೀಣೆಯು ವಿಜಯನಗರ ಕಾಲದ ರುದ್ರವೀಣೆಯಾಗಿ ವಿಕಾಸಗೊಂಡಿತು. ಇದು ತನ್ನ ಮೂಲ ಲಕ್ಷಣಗಳನ್ನು ಕಳೆದುಕೊಳ್ಳದೆ ಆಧುನಿಕ ವೀಣೆಯಾಗಿ ನಮಗೆ ಬಂದಿದೆ. ರಾಮಾಮಾತ್ಮನು ಅಚ್ಯುತರಾಯ ಮೇಳ ವೀಣೆಯನ್ನು ನಿರ್ಮಿಸಿದನು. ಅವನು ದೊರೆಯ ಕೃಪಾಪೋಷಿತನೂ ಸನ್ಮಾನಿತನೂ ಆಗಿದ್ದನು ಎಂಬುದನ್ನು ಇಲ್ಲಿ ಸ್ಮರಿಸಬಹುದು.[3] ಈ ಮಧ್ಯ ಮೇಳ ವೀಣೆಯ ಮುಂದೆ ತುಳಜೇಂದ್ರ ವೀಣಾ ಎಂಬ ಹೆಸರು ಪಡೆದು ಆಧುನಿಕ ವೀಣೆಗೆ ಸಮನಾಗಿದೆ.

ಇದೇ ಕಾಲದಲ್ಲಿ ರಚಿಸಲ್ಪಟ್ಟ ಮತ್ತೊಂದು ಸಂಗೀತ ಶಾಸ್ತ್ರ ಗ್ರಂಥ ಸಂಗೀತ ಸೂರ್ಯೋದಯ. ಗ್ರಂಥಕರ್ತನಾದ ಭಂಡಾರು ಲಕ್ಷ್ಮೀನಾರಾಯಣನು ಕಲ್ಲಿನಾಥನಂತೆ ರಾಯಬಯಕಾರನಾಗಿದ್ದು ತೋಡರಮಲ್ಲ ಎಂಬ ಬಿರುದಾಂಕಿತನಾಗಿ ಕೃಷ್ಣ ದೇವರಾಯನ ಕಾಲದ್ಲಲಿ ರಾಜಮನೆತನದ ನಾಟ್ಯಾಚಾರ್ಯನಾಗಿದ್ದರು. ಸಂಸ್ಕೃತದಲ್ಲಿರುವ ಈ ಗ್ರಂಥವು ಹೆಚ್ಚು ಕಡಿಮೆ ಸಂಗೀತ ರತ್ನಾಕರವನ್ನು ಅನುಸರಿಸಿ ಸ್ವರಗಳು, ಜಾತಿಗಳು, ತಾಳಗಳು, ಪ್ರಬಂಧಗಳು ಮತ್ತು ನೃತ್ಯ ಇವುಗಳ ವಿವರನೆಯನ್ನೊಳಗೊಂಡಿವೆ.

ಮತ್ತೊಬ್ಬ ಮಹಾ ಸಂಗೀತ ವಿದ್ವಾಂಸ ಮತ್ತು ಸಂಗೀತಶಾಸ್ತ್ರಜ್ಞನಾಗಿದ್ದ ಪುಂಡರೀಕ ವಿಠಲನನ್ನು (ಕ್ರಿ.ಶ. ೧೫೬೨-೧೫೯೯) ಹೆಸರಿಸಬಹುದು. ಇವನು ಬೆಂಗಳೂರು ಜಿಲ್ಲೆಯ ಶಿವಗಂಗೆಯ ಬಳಿ ಇರುವ ಸಾತನೂರಿನವನು. ಸಂಗೀತದ ಎರಡು ಪದ್ಧತಿಗಳಲ್ಲೂ ಪರಿಣತನಾಗಿದ್ದನು. ಉತ್ತರ ಭಾರತಕ್ಕೆ ಹೋಗಿ ನೆಲೆಸಿ ಸದ್ರಾಗ ಚಂದ್ರೋದಯವೆಂಬ ಗ್ರಂಥವನ್ನು ರಚಿಸಿ ಅದರಲ್ಲಿ ದಕ್ಷಿಣ ಭಾರತದ ಸಂಗೀತವನ್ನು ಕುರಿತು ಬರೆದಿದ್ದಾನೆ. ನಂತರ ಗ್ವಾಲಿಯರ‍್ನಲ್ಲಿದ್ದಾಗ ಹಿಂದೂಸ್ಥಾನಿ ಸಂಗೀತದ ಆಕರ ಗ್ರಂಥವಾಗಿರುವ ರಾಗಮಂಜರೀ ಎಂಬ ಗ್ರಂಥವನ್ನು ಬರೆದನು. ಮೊಗಲ್ ಚಕ್ರವರ್ತಿ ಅಕ್ಬರ‍್ನಿಂದ ಆಹ್ಮಾನಿತನಾಗಿ ದೆಹಲಿಗೆ ಹೋಗಿ ರಾಗಮಲಾ ಮತ್ತು ನರ್ತನ ನಿರ್ಣಯವೆಂಬ ಇತರ ಗ್ರಂಥಗಳನ್ನು ಬರೆದು ಅಕ್ಬರೀಯ ಕಾಳಿದಾಸನೆನೆಸಿಕೊಂಡನು. ಇಂದಿಗೂ ಇವನ ಗ್ರಂಥಗಳು ಹಿಂದೂಸ್ಥಾನೀ ಸಂಗೀತದ ಆಕರ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿವೆ. ಇವನು ೯೦ ಮೇಳಕತ್ ಪದ್ಧತಿಯನ್ನು ರೂಪಿಸಿದ್ದಾನೆ. ಇದು ಕ್ರಾಂತಿಕಾರಕವೂ ವೈಜ್ಞಾನಿಕವೂ ಆದ ಒಂದು ಮೇಳಕರ್ತ ಪದ್ಧತಿ. ರಾಮಮಾಲಾ ಗ್ರಂಥದಲ್ಲಿ ರಾಗಗಳನ್ನು ಪ್ರತಿ ಪುಂರಾಗವು ೫ ರಾಗಿಣಿಗಳನ್ನು ಹೊಂದಿರುವ ರಾಗ ವರ್ಗೀಕರಣವನ್ನು ಕೊಟ್ಟಿರುವುದಲ್ಲದೆ ಗಾನ ವೇಳೆಯನ್ನು ಗೊತ್ತು ಮಾಡಿದೆ.

ಈ ಕಾಲದ ಮತ್ತೊಂದು ಸಂಗೀತಶಾಸ್ತ್ರ ಗ್ರಂಥ ಸಂಗೀತದರ್ಪಣ. ಇದರ ಕರ್ತೃ ಚತುರ ದಾಮೋದರ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚೆರುಕುರಿ ಎಂಬ ಸ್ಥಳದವನು. ಇವನ ತಂದೆ ಲಕ್ಷ್ಮೀಧರನು ಸಂಗೀತ ಕಲಾಕೋವಿದನಾಗಿದ್ದು ವಿಜಯನಗರದ ತಿರುಮಲ ರಾಯನ ಆಸ್ಥಾನ ಕವಿಯಾಗಿದ್ದನು. ದಾಮೋದರನು ಎರಡು ಸಮಗೀತ ಪದ್ಧತಿಗಳ ವಿದ್ವಾಂಸನಾಗಿ, ಸಂಸ್ಕೃತದಲ್ಲಿ ೭ ಅಧ್ಯಾಯಗಳುಳ್ಳ ಈ ಗ್ರಂಥವನ್ನು ಬರೆದನು. ಇದರಲ್ಲಿ ತನ್ನ ಕಾಲದಲ್ಲಿದ್ದ ಸಂಗೀತ ಶಾಸ್ತ್ರ ಮತ್ತು ಸಂಪ್ರದಾಯಗಳೆರಡನ್ನೂ ಪ್ರತಿಬಿಂಬಿಸಿದ್ದಾನೆ. ಈ ಗ್ರಂಥದ ಪ್ರತಿ ಭಾಗದಲ್ಲೂ ನಿಖರತೆ ಮತ್ತು ಸಂಗ್ರಹ ಸಾರವು ಕಂಡುಬರುತ್ತದೆ.

ಸಂಗೀತ ಮತ್ತು ನಾಟ್ಯವನ್ನು ಕುರಿತು ರಚಿಸಲಾದ ಕಾಲದ ಇತರ ಗ್ರಂಥಗಳು ರಸಿಕನೂ ಸಂಗೀತ ವಿದ್ಯಾವಿನೋದನೂ ಆಗಿದ್ದ ಕನ್ನಡಿಗ ದೊರೆ ಅಚ್ಯುತರಾಯನ ತಾಳ ಕಲಾವಾರಿಧಿ ಎಂಬ ಪ್ರೌಢ ಸಂಗೀತ ಶಾಸ್ತ್ರ ಗ್ರಂಥ, ಇವನ ಆಶ್ರಿತನಾಗಿದ್ದ ಅಷ್ಟವಧಾನ ಸೋಮನಾರ‍್ನ ನಾಟ್ಯ ಚೂಡಾಮಣಿ ಮತ್ತು ಸಂಗೀತ ಚಿಂತಾಮಣಿ-ಎರಡನೆಯದು ಸಂಗೀತ ರತ್ನಾಕರವನ್ನು ಅನುಸರಿಸಿದೆ. ದೇವಣ್ಣ ಭಟ್ಟನ ಸಂಗೀತ ಮುಕ್ತಾವಳೀ, ವೇದನ ಸಂಗೀತ ಮಕರಂದ, ಚಂದ್ರಶೇಖರನ ಪಂಪಾಪತಿ ಸ್ಥಾನವರ್ಣನಂ, ತಾನಪ್ಪನ ಚತುರ್ದಂಡಿ ಮುಂತಾದುವು.

ನೃತ್ಯ

ನೃತ್ಯವು ಮಾನವನಿಂದ ವಿಕಾಸಗೊಡ ಬಹು ಪುರಾತನ ಕಲೆ. ನಮ್ಮೊಳಗಿನ ಬಲವಾದ ಉದ್ವೇಗ ಮತ್ತು ಭಾವವು ನಾಟ್ಯದ ಮೂಲಕ ಬಹಿರಂಗವಾಗಿ ವ್ಯಕ್ತಗೋಳ್ಳುತ್ತದೆ. ನಮ್ಮ ಹೃದಯಾಂತರಾಳದಲ್ಲಿ ಹುದುಗಿರುವ ಭಾವನೆಯ ಬಹಿರ‍್ರೂಪವೇ ನೃತ್ಯ. ನಮ್ಮನ್ನು ಐಹಿಕ ಬಂದನಗಳಿಂದ ಮೇಲಕ್ಕೆ ಕೊಂಡೊಯ್ಯುವ ಸ್ಫೂರ್ತಿಯ ಸಂಕೇತವಾಗಿ, ಈ ಕಲೆಯ ತಳಹದಿ ಅಧ್ಯಾತ್ಮಿಕತೆ. ಈ ಕಲೆಗೆ ದೇಹದ ಅಂಗಾಂಗಗಳು, ಕೈಕಾಲುಗಳು, ಹಾವಭಾವಗಳು, ಮನಸ್ಸಿನ ಬದಲಾವಣೆಗಳೇ ವಾಹನ ವಸ್ತುಗಳು. ಇವೆಲ್ಲವನ್ನೂ ಒಳಗೊಂಡಿರುವ ಭರತನಾಟ್ಯವು ಅತಂಕ ಆಕರ್ಷಕ ಕಲೆಯಾಗಿ ಬಂದಿದೆ. ಸೂಚಿಸುವುದು ಮತ್ತು ಅಧ್ಯಾತ್ಮಿಕತೆ ಇವೆರಡೂ ನಾಟ್ಯ ಸರಸ್ವತಿಯ ಎರಡು ಕಣ್ಣುಗಳು. ಒಳಗಿನ ಸಂಗೀತವಿಲ್ಲದೆ ನೃತ್ಯಮಾಡಲು ಸಾಧ್ಯವಿಲ್ಲ.

ಸಂಗೀತದಂತೆಯೇ ನಾಟ್ಯವನ್ನು ರಾಜರು, ರಾಜ ಪುರುಷರು ಪೋಷಿಸುತ್ತಿದ್ದರು. ಇದು ವಿಜಯನಗರದ ಸಾಮಸ್ಕೃತಿಕ ಜೀವನದ ಒಂದು ಅವಿಭಾಜ್ಯ ಅಂಗವಾಗಿತ್ತು. ವಿದೇಶೀ ಪ್ರವಾಸಿಗಳಾದ ಪೇಯಸ್, ನ್ಯೂನಿಜ್ ಮತ್ತು ಇತರರು ನೃತ್ಯ ಮಂಟಪಗಳು ಮತ್ತು ನೃತ್ಯ ಕಲಾವಿದೆಯರನ್ನು ವರ್ಣಿಸಿದ್ದಾರೆ.[4] ರಂಗಮಂಟಪಕ್ಕೆ ನಾಟ್ಯಶಾಲಾ, ನಾಟ್ಯಮಂಟಪ ಎಂಬ ಹೆಸರುಗಳಿದ್ದವು. ದೇವಾಲಯಗಳಿಗೆ ಸೇರಿದ ದೇವದಾಸಿಯರಿಗೆ ಸಮಾಜದಲ್ಲಿ ಅಪಾರ ಗೌರವವಿದ್ದಿತು[5] ಮತ್ತು ಅವರು ಕೆಲವು ವಿಶೇಷ ಹಕ್ಕುಗಳನ್ನು ಅನುಭವಿಸುತ್ತಿದ್ದರು. ಆಗಿನ ಶಿಲ್ಪಕಲೆಯಲ್ಲಿ ಪ್ರತಿಬಿಂಬಿಸಿರುವಂತೆ ಆ ಕಾಲದಲ್ಲಿ ನೃತ್ಯಕ್ಕೆ ವಿಶೇಷವಾದ ಸ್ಥಾನಮನಗಳಿದ್ದವು. ಕೂಚಿಪುಡಿ ನೃತ್ಯ ಪದ್ಧತಿಯು ಬಹುಪ್ರಸಿದ್ಧವಾದ ನಾಟ್ಯ ಪ್ರಕಾರವಾಗಿತ್ತು. ಸಮಕಾಲೀನ ಸಾಹಿತ್ಯ ಗ್ರಂಥಗಳಲ್ಲಿ ಕವಿಗಳು ನೃತ್ಯ, ಗಾಯಕ ಮತ್ತು ವಾದ್ಯ ಮೇಳಗಳನ್ನು ವರ್ಣಿಸಿದ್ದಾರೆ.[6] ಸಾಮಾನ್ಯವಾಗಿ ದೇವದಾಸಿಯರು ಅತ್ಯಂತ ಹಿಂದಿನ ಕಾಲದಿಂದ ಸಂಗೀತ ಮತ್ತು ನೃತ್ಯ ಕಲೆಗಳ ರಕ್ಷಕರೂ, ಪರಿಣತರೂ ಆಗಿದ್ದರು. ಕೃಷ್ಣದೇವರಾಯನ ಕಿರಿಯರಾಣಿ ಚಿನ್ನಾದೇವಿಯ ಹಂಪೆಯ ವಿರೂಪಾಕ್ಷ ದೇವಾಲಯದ ಪ್ರಸಿದ್ಧ ನರ್ತಕಿಯಾಗಿದ್ದಳು. ಆಗಿನ ಗ್ರಂಥಗಳಲ್ಲಿ ಹಿಂದೆಯೇ ಹೇಳಿದಂತೆ ಅಚ್ಯುತರಾಯನ ತಾಳ ಕಲಾ ವಾರಿಧಿಯು ಆಧುನಿಕ ತಾಳದ ತತ್ವಗಳನ್ನು ನಿರೂಪಿಸುತ್ತದೆ. ಪೂಲೂರಿ ಗೋವಿಂದ ಕವಿಯ ತಾಳದಶ ಪ್ರಾಣ ದೀಪೀಕಾ ಎಂಬ ಗ್ರಂಥವು ನಂತರದ ಗ್ರಂಥವಾದರೂ ನೃತ್ಯದ ಬಗ್ಗೆ ಅಧಿಕೃತವಾದ ವಿಷಯವನ್ನು ತಿಳಿಸುತ್ತದೆ.

ಆಗಿನ ಸಂಗೀತ ವಾದ್ಯಗಳಲ್ಲಿ ವೀಣೆಯು ಜನಪ್ರಿಯವಾದ ವಾದ್ಯವಾಗಿತ್ತು. ಚಿನ್ನಾದೇವಿ ಮತ್ತು ತಿರುಮಲಾದೇವಿ ಅತ್ಯುತ್ತಮ ವೀಣಾ ವಿದುಷಿಯರಾಗಿದ್ದರು. ತಂಬೂರಿ, ಕೊಂಬು, ಡೋಲು, ತಾಳಗಳು, ಶಂಖ, ದಂಡಿಗೆ, ಸ್ವರಮಂಡಲ, ಕಿನ್ನರಿ, ವೇಣು, ವಿಪಂಚಿ, ವಲ್ಲಕಿ, ಒತ್ತು, ಕರಡೆ, ಮೃದಂಗ, ಅವುಜ, ದುಂದುಭಿ, ಪಣವ, ದಮರು, ರವಳಿ, ಘಂಟೆ, ಕಿಂಕಿಣಿ, ಕಂಸಾಲ ಇವು ಆಗಿನ ಜನರು ಬಳಸುತ್ತಿದ್ದ ಇದರ ಸಂಗೀತ ವಾದ್ಯಗಳಾಗಿದ್ದುವು.[7]

ವಿಜಯನಗರದ ಸಂಗೀತ ಸಂಪ್ರದಾಯಗಳನ್ನು ತಂಜಾವೂರಿನ ನಾಯಕ ದೊರೆಗಳು ಮತ್ತು ಮೈಸೂರಿನ ಒಡೆಯರು ಮುಂದುವರಿಸಿಕೊಮಡು ಪೋಷಿಸಿದರು. ಈ ಕಾಲದಲ್ಲಿ ಹಿಂದೂಸ್ಥಾನಿ ಸಂಗೀತದೊಡನೆ ನೆರೆಯ ರಾಜ್ಯಗಳಾದ ಬಿಜಾಪುರ ಮತ್ತು ಗುಲ್ಬರ್ಗ ಮತ್ತು ವಿಜಯನಗರದ ಸಂಗೀತಕ್ಕೂ ಪರಸ್ಪರ ಸಂಪರ್ಕ ಹಾಗೂ ಪ್ರಭಾವ ಉಂಟಾಯಿತು. ಹೀಗೆ ವಿಜಯನಗರದ ಕಾಲವು ಕರ್ನಾಟಕ ಸಂಗೀತವನ್ನು ಕೈಹಿಡಿದು ನಡೆಸಿದ ಪರ್ವಯುಗ. ಕ್ರಾಂತವಾಗುತ್ತಿದ್ದ ಸಂಗೀತವನ್ನು ಅಭಿನವ ಭರತಾಚಾರ್ಯರೂ, ವಾಗ್ಗೇಯಕಾರರೂ ಆಗಿದ್ದ ವ್ಯಾಸರಾಯರು ಮತ್ತು ಅವರ ಶ್ರೇಷ್ಠ ಶಿಷ್ಯರಾಯ ಪುರಂದರದಾಸರು, ವಾದಿರಾಜರು, ಕನಕದಾಸರು ಮತ್ತು ಬೇಲೂರು ವೈಕುಂಠದಾಸರು ಅದರ ಲಕ್ಷ್ಯಮಾರ್ಗವನ್ನು ಪರಿಷ್ಕರಿಸಿ ಸಮೃದ್ಧಗೊಳಿಸಿದರು. ಶಿವಶರಣರು ನಿಜಗುಣ ಶಿವಯೋಗಿಯ ನಾಯಕತ್ವದಲ್ಲಿ ಸಂಗೀತದ ಗೇಯ ಸಂಪತ್ತನ್ನು ಬೆಳೆಸಿದರು. ರಾಮಾಮಾತ್ಯ, ಭಂಡಾರು ಲಕ್ಷ್ಮೀನಾರಾಯಣ ಮುಂತಾದವರು ಹಳೆಯದಕ್ಕೆ ಹೊಸತನವನ್ನು ಕೊಟ್ಟರು. ಕಲ್ಲಿನಾಥ, ರಾಮಾಮಾತ್ಯ, ಶ್ರೀಕಂಠ, ಪುಂಡರೀಕ ವಿಠಲ ಮುಂತಾದವರು ಸಂಗೀತಕ್ಕೆ ಹೊಸ ಆಯಾಮಗಳನ್ನು ಕಲ್ಪಿಸಿದರು. ಹೀಗೆ ವಿಜಯನಗರದ ಕಾಲವು ಕರ್ನಾಟಕ ಸಂಗೀತ ಮತ್ತು ನೃತ್ಯ ಕಲೆಗಳ ಪೋಷಣೆ, ರಕ್ಷಣೆ, ವಿಕಾಸದಲ್ಲಿ ಗುರುತರವಾದ ಪಾತ್ರವಹಿಸಿದೆ. ಕಲಾಭಿಜ್ಞರೂ, ಕಲಾರಸಿಕರೂ, ಪೋಷಕನೂ ಆಗಿದ್ದ ಅದರ ರಾಜರು ಕಲಾದೇವಿಯ ಆರಾಧಕರಾಗಿ ನಮಗೆ ಸಂಪದ್ಭರಿತವಾದ ಅಮೂಲ್ಯವಾದ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ.

ಆಕರ
ವಿಜಯನಗರ ಅಧ್ಯಯನ, ಸಂ. ೧, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು. ೧೦೯-೧೧೪.

 

[1] ಸೌಇಂಇ., ೪, ಸಂ. ೭೯೭.

[2] ಎಇಂ., ೩೧, ಪು. ೧೫೨.

[3] ಎಕ., ೫, ಅರಸೀಕೆರೆ ತಾಲೂಕು, ಸಂ. ೧೬೭.

[4] ರಾಬರ್ಟ್ ಸಿವೆಲ್, ಎ ಫಾರ‍್ಗಾಟನ್ ಎಂಪಾಯರ್, ಪು. ೨೮೮-೮೯.

[5] ಅದೇ, ಪು. ೨೪೨.

[6] ಸಿಂಗಿರಾಜ ಪುರಾಣ (ಕ್ರಿ.ಶ. ೧೫೦೦), ಅ. ೩೮, ಪು. ೩೭೯-೮೦, ಚೆನ್ನಬಸವಪುರಾಣ (೧೬ನೇ ಶತಮಾನ), ವೀರಭದ್ರ ವಿಜಯ (ಕ್ರಿ.ಶ. ೧೫೩೦), ಅ೧೦ : ಭರತೇಸ ವೈಭವ (೧೬ನೇ ಶತಮಾನ) ಹಲವು ನೃತ್ಯಗಳ ವರ್ಣನೆ.

[7] ಇಂಎ., ೨೪, ಪು. ೨೭೩.