“ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತ ಸಂಸ್ಕೃತಿಯ ಪ್ರತೀಕ” ಎಂಬ ಬಾರ್ಬೋಸ ಹೇಳಿಕೆಯನ್ನು ಗಮನಿಸಿದರೆ, ಅಂದಿನ ಕಲೆ, ಸಾಹಿತ್ಯ ಮುಂತಾದವು ಎಷ್ಟು ಔನ್ನತ್ಯದಲ್ಲಿತ್ತೆಂಬುದು ತಿಳಿಯುತ್ತದೆ. ಸಂಗೀತ, ಸಾಹಿತ್ಯ, ವಾದ್ಯಗಾರಿಕೆ, ನೃತ್ಯ, ಮಾರ್ಗ, ದೇಶೀ – ಎಲ್ಲ ಪ್ರಕಾರಗಳೂ ಆ ಕಾಲದಲ್ಲಿ ಸಮೃದ್ಧವಾಗಿ, ಬೆಳಗೆದಿರುವುದನ್ನು ಕಾಣುತ್ತೇವೆ. ವಿಜಯನಗರ ಸಾಮ್ರಾಜ್ಯವನ್ನು ಕುರಿತಂತೆ ವಿವಿದ ನಿಟ್ಟಿನಲ್ಲಿ ರಚಿತವಾದ ಹಲವಾರು ಗ್ರಂಥಗಳು ಲಭ್ಯ. ಆದಾಗ್ಯೂ ಸಂಗೀತವನ್ನು ಕುರಿತ ಗಮನ ಅಧ್ಯಯನ ಉಂಬಾ ಕಡಿಮೆಯೆಂದೇ ಹೆಳಬೇಕು. ಈ ನಿಟ್ಟಿನಲ್ಲಿ ಇದೊಂದು ಪುಟ್ಟ ಪ್ರಯತ್ನ.

ಸಂಗೀತ ದೃಷ್ಟೀಯಿಂದ ಗಮನಿಸುವುದಾದರೆ, ವಿಜಯನಗರದ ಕೊಡುಗೆ ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಲಕ್ಷ್ಯಸಂಗೀತ ಹಾಗೂ ಲಕ್ಷಣಗಳೆರಡೂ ವಿಭಾಗಗಳ ಬೆಳವಣಿಗೆಯನ್ನು ಆ ಕಾಲದಲ್ಲಿ ಕಾಣುತ್ತೇವೆ. ಅಂದು ಗೀತ, ವಾದ್ಯ, ನೃತ್ಯ ಈ ಮೂರು ಸೇರಿ ಸಂಗೀತವೆನಿಸಿದ್ದಕ್ಕೆ ವಿಪುಲ ಉದಾಹರಣೆಗಳಿವೆ. ಹಬ್ಬ, ಉತ್ಸವ, ಹಾಗೂ ಆಚರಣೆಗಳ ಸಂದರ್ಭದಲ್ಲೂ ಸಂಗೀತದ ಬಳಕೆಯಾಗುತ್ತಿತ್ತು. ಪ್ರಮುಖವಾಗಿ ಸ್ತ್ರೀಯರು ಗಾಯನ, ವಾದನ, ನೃತ್ಯ ಈ ಎಲ್ಲದರಲ್ಲೂ ಪ್ರಾವೀಣ್ಯತೆಯನ್ನು ಪಡೆದಿದ್ದರು.[1] ಕೆಲವು ಸ್ತ್ರೀಯರು ಕಹಳೆ, ಕೊಳಲು,[2]ತುತ್ತೂರಿ, ಮದ್ದಲೆ, ಪಿಟೀಲು[3]ಇನ್ನು ಮುಂತಾದ ವಾದ್ಯಗಳನ್ನು ನುಡಿಸುತ್ತಿದ್ದರೆಂಬುದಾಗಿ ತಿಳಿದುಬರುತ್ತದೆ.ದ ವಿಜಯನಗರ ಸಾಮ್ರಾಜ್ಯದ ಪ್ರಮುಖ ದೊರೆಯಾದ ಶ್ರೀ ಕೃಷ್ಣದೇವರಾಯನ ಹೆಂಡತಿಯರಾದ ಚಿನ್ನಾದೇವಿ ಹಾಗೂ ತಿರುಮಲ ದೇವಿಯರು ಒಳ್ಳೆಯ ಕಂಠಸಿರಿ ಹೊಂದಿ ಸೊಗಸಾಗಿ ಹಡುತ್ತಿದ್ದರು. ದೊರೆ ರಾಮರಾಯನು ಹಾಡುಗಾರಿಕೆಯ ಜೊತೆಗೆ ವೀಣೆಯನ್ನು ನುಡಿಸುತ್ತಿದ್ದನೆಂಬುದಾಗಿ ತಿಳಿದುಬರುತ್ತದೆ.[4]

ಹೀಗೆ ವಿಜಯನಗರದ ಅವಧಿಯಲ್ಲಿ ಪ್ರೌಢ ಹಾಗೂ ಜನಪದ ಸಂಗೀತಗಳೆರಡೂ ಸಮೃದ್ಧಿಯಾಗಿ ಬೆಳದವು ಈ ಎರಡೂ ಸಮಗೀತಗಳ ನಡುವೆ ಕೊಳುಕೊಡುಗೆಗಳಾದವು. ವ್ಯಷ್ಟಿ ಗಾಯನ ಹಾಗೂ ಸಮಷ್ಟಿ ಗಾಯನಗಳು ತಮ್ಮ ವೈವಿಧ್ಯವಯ ನಾದಸಂಪನ್ನತೆಯಿಂದ ಜನರಿಗೆ ರಸದೌತಣವನ್ನು ನೀಡಿದವು. ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಸಂಗೀತಕ್ಕೆ ಅತಿಯಾದ ಪ್ರಾಮುಖ್ಯತೆ, ಮನ್ನಣೆ, ಪೋಷಣೆಗಳು ದೊರೆತವು. ಶ್ರೀ ವ್ಯಾಸರಾಯರು, ಪುರಂದರದಾಸರು, ಕನಕದಾಸರೇ ಮುಂತಾದ ಪ್ರಮುಖರು ಈ ಅವಧಿಯಲ್ಲಿದ್ದರು. ಶ್ರೀ ವ್ಯಾಸರಾಯರು ಕೃಷ್ಣದೇವರಾಯನ ಆಸ್ಥಾನ ಗುರುಗಳಾಗಿದ್ದರು. ಹೀಗೆ ವಿಜಯನಗರ ಕಾಲದಲ್ಲಿ ಸಂಗೀತವು ವೈವಿಧ್ಯಮಯವಾಗಿ ಬೆಳೆಯಿತು. ಸಂಗೀತದ ಬೆಳವಣಿಗೆಯ ದೃಷ್ಟಿಯಿಂದ ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಕೊಡುಗೆ ಅತ್ಯಂತ ಮಹತ್ವಪೂರ್ಣವಾದುದು. ಇದಕ್ಕೆ ಕಾರಣರಾದ ಕೆಲವು ಪ್ರಮುಖ ಲಾಕ್ಷಣಿಕರು ಹಾಗೂ ಸಮಗೀತಗಾರರ ಸಂಕ್ಷಿಪ್ತ ಪರಿಚಯ ಸಂಗೀತಕ್ಕೆ ಇವರ ಕೊಡುಗೆಯ ಬಗೆಗೆ ಇಲ್ಲಿ ವಿವರಿಸಲಾಗಿದೆ.

ಲಕ್ಷಣ ಸಂಗೀತ

೧. ಶ್ರೀ ವಿದ್ಯಾರಣ್ಯರು

ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ವಿದ್ಯಾರಣ್ಯರು ೧೪ನೆಯ ಶತಮಾನದಲ್ಲಿ ಸಂಗೀತಕ್ಕೆ ಸಂಬಂಧಿಸಿದಂತೆ “ಸಂಗೀತ ಸಾರ” ವೆಂಬ ಗ್ರಂಥವನ್ನು ರಚಿಸಿದರು. ಲಕ್ಷ್ಯ ಲಕ್ಷಣಗಳೆರಡರ ಸಾರ ಮೇಳೈಸಿದ್ದ ಈ ಕೃತಿ ಈಗ ಉಪಲಬ್ಧವಿಲ್ಲ. “ಸಂಗೀತ ಸುಧಾ” ರಚಿಸಿದ ಗೋವಿಂದ ದೀಕ್ಷಿತರು “ಸಂಗೀತ ಸಾರ” ದಿಂದ ಒಂಬತ್ತು ಭಾಗಗಳನ್ನು ಉಲ್ಲೇಖಿಸಿ, ವಿದ್ಯಾರಣ್ಯರನ್ನು ಶ್ರೀ ಚರಣರೆಂದು ಗೌರವಿಸಿದ್ದಾರೆ. ಇದೇ “ಸಂಗೀತ ಸಾರ” ಗ್ರಂಥದ ಬಗೆಗಿನ ಪ್ರಮುಖ ಹಾಗೂ ಏಕೈಕ ಆಕರವಾಗಿದೆ. “ಐವತ್ತು ರಾಗಗಳ ಲಕ್ಷಣಗಳನ್ನು ತಾನು ವಿದ್ಯಾರಣ್ಯರಿಂದಲೇ ಪಡೆದುಕೊಂಡುದಾಗಿ ಹೇಳಿದ್ದಾನೆ. ಅವರ ಮತದಲ್ಲಿ ಮೇಳಗಳು ಹದಿನೈದು ಎಂದು ಹೇಳಿದ್ದಾನೆ. ವಿದ್ಯಾರಣ್ಯರು ರೂಢಿಯಲ್ಲಿದ್ದು ಐವತ್ತು ರಾಗಗಳನ್ನು ಹದಿನೈದು ಮೇಳಗಳಲ್ಲಿ ಅಡಕಗೊಳಿಸಿ ವರ್ಗೀಕರಿಸಿದ್ದರು ಎಂದು ತಿಳಿದುಬರುತ್ತದೆ. ವಿದ್ಯಾರಣ್ಯರು ರೂಢಿಯಲ್ಲಿದ್ದು ಐವತ್ತು ರಾಗಗಳನ್ನು ಹದಿನೈದು ಮೇಳಗಳಲ್ಲಿ ಅಡಕಗೊಳಿಸಿ ವರ್ಗೀಕರಿಸಿದ್ದರು ಎಂದು ತಿಳಿದುಬುರುತ್ತದೆ. ಇದಲ್ಲದೆ ಸಂಗೀತ ಸಾರವು ವಾಗ್ಗೇಯಕಾರ ಗುಣದೋಷಗಳು, ಗಾಯಕ ಪಂಚಭೇದಗಳು ಮುಂತಾದವುಗಳನ್ನು, ಪ್ರಬಂಧಾಧ್ಯಾಯವೊಂದನ್ನು ಒಳಗೊಂಡಿತ್ತೆಂದು ತಿಳಿದುಬರುತ್ತದೆ. ವಿದ್ಯಾರಣ್ಯರು ಹೇಳಿದ ಹದಿನೈದು ಮೇಳಗಳು ಯಾವುವೆಂದರೆ, ನಟ್ಟಾ, ಗುರ್ಜರೀ, ವರಾಟೀ, ಶ್ರೀರಾಗ, ಭೈರವೀ, ಶಂಕರಾ ಭರಣ, ಆಹರೀ, ವಸಂತ ಭೈರವಿ, ಸಮಂತ, ಕಾಂಬೋಧಿ, ಮುಖಾರಿ, ಶುದ್ಧರಾಮಶ್ರೀ, ಕೇದಾರಗೌಳ, ಹೆಜ್ಜುಜ್ಜೀ, ದೇಶಾಕ್ಷೀ”[5]ಹದಿನೈದು ಮೇಳರಾಗಗಳನ್ನು ಐವತ್ತು ರಾಗಗಳನ್ನು ಅಡಕಗೊಳಿಸಿದ ಶ್ರೀ ವಿದ್ಯಾರಣ್ಯರು ಕರ್ನಾಟಕ ಸಂಗೀತದಲ್ಲಿನ ಜನಕ ಜನ್ಯ ಪದ್ಧತಿಗೆ ಉತ್ತಮ ಮಾರ್ಗದರ್ಶಕರಾಗಿದ್ದಾರೆ.

೨. ಕಲ್ಲಿನಾಥ

ವಿಜಯನಗರದ ದೊರೆ ಎರಡನೇ ದೇವರಾಯನಿಂದ ಪ್ರೋತ್ಸಾಹ ಪಡೆದು ಶಾರ್ಙ್ಗದೇವನ “ಸಂಗೀತ ರತ್ನಾಕರ”ಕ್ಕೆ ತನ್ನ” ಸಂಗೀತ ಕಲಾನಿಧಿ”ಯಲ್ಲಿ ವ್ಯಾಖ್ಯಾನವನ್ನು ಬರೆದು ಚತುರ ಕಲ್ಲಿನಾಥರು ಸಂಗೀತಕ್ಕೆ ಸಂಬಂಧಿಸಿದಂತೆ ಒಂದು ಮಹತ್ತರ ಕೆಲಸ ಮಾಡಿದ್ದಾರೆ. ವಿದ್ವತ್ ಪೂರ್ಣವಾದ ಈ ಗ್ರಂಥ ಸಂಗೀತದ ವಿಶ್ವಕೋಶದಂತಿದೆ. ಕಲ್ಲಿನಾಥರ ವಿವರವಾದ ವ್ಯಾಖ್ಯಾನ ಇರದಿದ್ದರೆ ನಾವು “ಸಂಗೀತ ರತ್ನಾಕರ”ವನ್ನು ಅರ್ಥೈಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಕಲ್ಲಿನಾಥರಿಗೆ ಹಲವಾರು ಶಾಸ್ತ್ರಗಳಲ್ಲಿ ಅನುಪಮ ಪರಿಣತಿ ಇದ್ದಿತೆಂಬುದಕ್ಕೆ ಅವರು ಬರೆದ “ಸಂಗೀತ ಕಲಾನಿಧಿ” ವ್ಯಖ್ಯಾನದ ಪ್ರತಿ ಪುಟವೂ ಸಾಕ್ಷಿಯಾಗಿದೆ.

ಶಾರ್ಙ್ಗದೇವನ “ಸಂಗೀತ ರತ್ನಾಕರ”ವು ಭಾರತೀಯ ಸಂಗೀತದ ಒಂದು ಪ್ರಮುಖ ಮೈಲಿಗಲ್ಲು. ಇದರ ಬಗೆಗೆ ಅನೇಕರು ವ್ಯಖ್ಯಾನ ಬರೆದಿದ್ದಾರೆ. ಆದರೆ ಇವರೆಲ್ಲರೂ ಕಲ್ಲಿನಾಥ ಮೊದಲಿಗರಾಗುತ್ತಾರೆ. ರತ್ನಾಕರಕ್ಕೆ ಸಂಬಂಧಿಸಿದಂತೆ  “ಮೂಲ ಗ್ರಂಥದಲ್ಲಿ ಎಲ್ಲೆಲ್ಲಿ ಸಂದೇಹಕ್ಕೆ ಎಡೆಯಿದೆಯೋ ಅಲ್ಲೆಲ್ಲ ಅವುಗಳನ್ನು ತರ್ಕಶುದ್ಧಿ, ಅನುಭವದ ಅಧಿಕಾರ, ಪೂರ್ವಪಕ್ಷದ ಪ್ರಮಾಣಿಕ, ಪ್ರಬಲ ಮಂಡಲ, ಮನಃರ್ಪೂರ್ವಕವಾಗಿ ಒಪ್ಪಿಕೊಳ್ಳುವಂತಹ ಅದರ ಖಂಡನೆ ಹಾಗೂ ಸ್ವಮತಖಂಡನೆ ಇವುಗಳಿಂದ ಪರಿಹರಿಸಿದ್ದಾನೆ. ಮೂಲಗ್ರಂಥದ ಜಟಿಲ ಭಾಗವನ್ನು ಸರಳಗೊಳಿಸುವುದು, ಕಠಿಣ ಶಬ್ದಗಳಿಗೆ ನೇರವಾದ, ಸ್ಪಷ್ಟವಾದ ಅರ್ಥಗಳನ್ನು ಒದಗಿಸುವುದು, ಪ್ರಾಚೀನ, ಸಂಸ್ಕೃತ ಪರಿಭಾಷಾ ಶಬ್ದಗಳಿಗೆ ತನ್ನ ಕಾಲದಲ್ಲಿ ಪ್ರಚಾರದಲ್ಲಿದ್ದ ದೇಶೀ ಶಬ್ದ ದೇಶೀ ಪ್ರಯೋಗಗಳನ್ನು ಸೂಚಿಸುವುದು, ತಾತ್ಪರ್ಯ, ತಾರತಮ್ಯ, ಮಾತಾಂತರ, ಧ್ವನಿ ಮುಂತಾದವುಗಳನ್ನು ಆಯಾ ಸಂದರ್ಭಕ್ಕೆ  ಅನುಸಾರವಾಗಿ ಸಂಗ್ರಹಿಸುವುದು ಇತ್ಯಾದಿಗಳಲ್ಲಿ ಅವನ ವ್ಯಾಖ್ಯನವು ನಮ್ಮ ಸಂಗೀತಶಾಸ್ತ್ರ ಗ್ರಂಥರಾಶಿಯಲ್ಲಿ ಮನೋನ್ನತಿಯನ್ನು ಪಡೆದಿದೆ[6] ಎಂಬ ಮಾತಿನಲ್ಲಿ ಕಲ್ಲಿನಾಥರ ವ್ಯಾಖ್ಯಾನಕ್ಕೆ ಅಗ್ರಸ್ಥಾನ ಏಕೆ ಎಂಬ ಪ್ರಶ್ನೆಗೆ ಪುತ್ತರವಿದೆ. ಒಟ್ಟಿನಲ್ಲಿ ಕಲ್ಲಿನಾಥರ ವ್ಯಾಖ್ಯಾನ ಇತರ ವ್ಯಾಖ್ಯಾನಗಳಿಗೆ ಮಾದರಿಯಾಗಿದೆ.

೩. ರಾಮಾಮಾತ್ಯ

ರಾಮಾಮಾತ್ಯರು ಕರ್ನಾಟಕ ಸಂಗೀತ ಇತಿಹಾಸದಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ. ದೊರೆ ರಾಮರಾಯನ ಮಂತ್ರಿಯಾಗಿದ್ದ ಇವರು ರಚಿಸಿದ “ಸ್ವರಮೇಳ ಕಲಾನಿಧಿ” ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಪ್ರಮುಖ ಗ್ರಂಥ. “ಅಭಿನವ ಭರತಾ ಚಾರ್ಯ” ಎಂಬ ಬಿರುದಿಗೆ ಪಾತ್ರರಾಗಿದ್ದ ರಾಮಾಮಾತ್ಯ ದೊರೆಯ ಇಚ್ಛೆಯಂತೆ ಸಂಗೀತದ ಲಕ್ಷ್ಯ ಲಕ್ಷಣಗಳೆರಡನ್ನೂ ಸಮಸ್ವಯಗೊಳಿಸಿ “ಸ್ವರಮೇಳ ಕಲಾನಿಧಿ” ಎಂಬ ಗ್ರಂಥವನ್ನು ರಚಿಸಿದರು. ಇವರು “ಸಂಗೀತ ಕಲಾನಿಧಿ” ವ್ಯಾಖ್ಯಾನ ಬರೆದ ಚತುರ ಕಲ್ಲಿನಾಥರ ಮೊಮ್ಮಗ.

ಸ್ವರ ಪ್ರಕರಣ, ವೀಣಾ ಪ್ರಕರಣ, ಮೇಳ ಪ್ರಕರಣ, ರಾಗ ಪ್ರಕರಣ ಎಂಬ ನಾಲ್ಕು ಪ್ರಕರಣಗಳನ್ನು ಹಾಗೂ ೩೨೮ ಶ್ಲೋಕಗಳನ್ನು ಒಳಗೊಂಡ ಒಂದು ಪುಟ್ಟ ಗ್ರಂಥವಾಗಿರುವ “ಸ್ವರಮೇಲ ಕಲಾನಿಧಿ”ಯು ೨೦೦೦ ವರ್ಷಗಳ ಕಾಲದ ಸಂಗೀತದ ವಿಕಾಸವನ್ನು ಪ್ರತಿಬಿಂಬಿಸುತ್ತದೆ. ಇದು “ಆಧುನಿಕ ಕರ್ನಾಟಕ ಸಂಗೀತದ ಯುಗಕ್ಕೆ ಅತ್ಯಂತ ಸೂಕ್ತವಾದ ಪೀಠಿಕೆಯಂತಿದೆ”.[7] ಈ ಗ್ರಂಥದಲ್ಲಿ ಗೀತ ಪ್ರಶಂಸೆ, ಸ್ವರನಾಮ ಪದ್ಧತಿ, ವೀಣೆ ಅದರಲ್ಲಿ ಶುದ್ಧ ಮೇಳ ವೀಣಾ, ಮಧ್ಯಮೇಳ ವೀಣಾ, ಅಚ್ಯುತ ರಾಜೇಂದ್ರ ಮೇಳ ವೀಣಾ ಎಂಬ ವಿಧಗಳು ಹೇಳಲ್ಪಟ್ಟಿವೆ. ರಾಗಗಳ ಮೇಳ, ಜನ್ಯಪದ್ಧತಿ-  ಇಲ್ಲಿದ್ದು, ರಾಗಗಳನ್ನು ಉತ್ತಮ, ಮಧ್ಯಮ, ಅಧಮವೆಂಬುದಾಗಿ ವರ್ಗೀಕರಿಸಿರುವುದು ಕಂಡುಬರುತ್ತದೆ. ಈತ ೨೦ ಮೇಳ ರಾಗಗಳನ್ನು ಹೆಸರಿಸಿದ್ದಾರೆ. ಹಗೂ “ಶುದ್ಧ ಮೆಳರಾಗಗಳಲ್ಲಿ ಮುಖಾರಿಗೆ ಮೊದಲನೆಯ ಸ್ಥಾನವನ್ನು ಕೊಟ್ಟಿದ್ದಾರೆ”.[8]

ಲಕ್ಷ್ಯ ಸಂಗೀತ

೧. ಸ್ರೀ ಪಾದರಾಜರು

ಜನಸಾಮಾನ್ಯರ ಉದ್ಧಾರ ಹಗೂ ಸಮಾಜ ಸುಧಾರಣೆಗಾಗಿ ತಮ್ಮ ಜ್ಞಾನ ಅನುಭವಗಳ ಸಾರವನ್ನು ಶ್ರೀ ಪಾದರಾಯರು ಸರಳವಾದ ಸಾಹಿತಯ ರೂಪದಲ್ಲಿ ನೀಡಿದ್ದಾರೆ. ನರಹರಿ ತೀರ್ಥರ ತರುವಾಯ ದಾಸಕೂಟವನ್ನು ಬೆಳೆಸಿದ ಮೊದಲನೆಯವರು. ಆದುದರಿಂದ ಹರಿದಾಸರೆಲ್ಲರೂ ಪರಂಪರೆಯಿಂದ ಬಂದ “ನಮಸ್ತೋ ಶ್ರೀಪಾದರಾಜಾಯ” ಎಂಬ ಶ್ಲೋಕದಲ್ಲಿ ಇವರನ್ನು ಸ್ಮರಿಸುತ್ತಾರೆ.

ಬೆಂಗಳೂರು ಜಿಲ್ಲೆಯ ಚನ್ನಪಟ್ಟಣ ತಾಲೋಕಿಗೆ ಸೇರಿದ ಅಬ್ಬೂರು ಎಂಬ ಹಳ್ಳಿಯಲ್ಲಿ ಶ್ರೀ ಪಾದರಾಜರು ಜನಿಸಿದರು. ಇವರ ತಂದೆ ಶೇಷಗಿರಿ ಆಚಾರ್ಯ ಮತ್ತು ತಾಯಿ ಗಿರಿಜಮ್ಮ. ಇವರ ಮೊದಲ ಹೆಸರು ಲಕ್ಷ್ಮೀನಾರಾಯಣ. ಶ್ರೀರಂಗದ ಸ್ವರ್ಣವರ್ಣತೀರ್ಥರು ದೇಶ ಸಂಚಾರ ಮಾಡುತ್ತಾ ಅಬ್ಬೂರಿಗೆ ಬಂದು, ಅಲ್ಲಿ ದನಕಾಯುತ್ತಿದ್ದ ಈ ಹುಡುಗನನ್ನು ನೋಡಿ, ತಂದೆ ತಾಯಿಯರು ಒಪ್ಪಿಗೆ ಪಡೆದು ತಮ್ಮೊಡನೆ ಕರೆದುಕೊಂಡು ಬಂದು ಮಠದಲ್ಲಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿಸಿದರು. ಗುರುವಿಗೆ ತಕ್ಕ ಶಿಷ್ಯನಾಗಿ, ವಿಯನದಿಂದಿದ್ದು, ಗುರುಗಳ ವಿಶ್ವಾಸಕ್ಕೆ ಪಾತ್ರನಾಗಿ ಸನ್ಯಾಸಾಶ್ರಮ ಸ್ರೀಕರಿಸಿ ಲಕ್ಷ್ಮೀನಾರಾಯಣ ಯೋಗಿ ಎನಿಸಿದರು. ಮುಂದೆ ಉತ್ತರಾದಿ ಮಠದ ರಘನಾಥ ತೀರ್ಥರು ಇವರ ಪಾಂಡಿತ್ಯ ಕಂಡು ಮೆಚ್ಚಿ ಶ್ರೀಪಾದರಾಜರೆಂದು ಕರೆದರು. ಅಂದಿನಿಂದ ಇವರು ಈ ಹೆಸರಿನಿಂದ ಪ್ರಸಿದ್ಧರಾದರು.

ಶ್ರೀ ಪಾದರಾಯರು ಚಂದ್ರಗಿರಿಯ ದೊರೆ ಸಾಳುವ ನರಸಿಂಹನಿಗೆ ತಗುಲಿದ್ದ ಬ್ರಹ್ಮಹತ್ಯಾ ದೋಷವನ್ನು ನಿವಾರಿಸಿದರು. ಅದರಿಂದ “ರಾಜನು ಅವರನ್ನೆ ಸಿಂಹಾಸನದ ಮೇಲೆ ಕೂರಿಸಿ ಸಕಲ ಸನ್ಮಾನಗಳನ್ನು ಮಾಡಿದ”[9]ನೆಂಬುದಾಗಿ ತಿಳಿದುಬರುತ್ತದೆ. ‘ರಂಗನಾಥ’ ಎವರ ನೆಚ್ಚಿನ ಆರಾಧ್ಯ ದೈವ. ಈ ದೈವವನ್ನೊಳಗೊಮಡ ಕೆಲವು ರಚನೆಗಳ ಮೊದಲ ಸಾಲು ಇಂತಿದೆ.

೧.  ಕಂಗಳಿದ್ಯಾತಕೋ – ಕಾವೇರಿ ರಂಗನ ನೋಡದ

೨. ಇಕ್ಕೋ ನೋಡೆ ರಂಗನಾಥನ ಚಿಕ್ಕ ಪಾದವ

೩. ನೀನೇ ಬಲ್ಲಿದನೋ ರಂಗ – ನಿನ್ನ ದಾಸರು ಬಲ್ಲಿದರೋ

೪. ಪೋಪು ಹೋಗೋಣ ಬಾರೋ ರಂಗ

೫. ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ -ಇತ್ಯಾದಿ

“ರಂಗ ವಿಠಲ” ಎಂಬ ಅಂಕಿತದಲ್ಲಿ ಇವರು ತಮ್ಮದ ಕೃತಿರಚನೆ ಮಾಡಿದ್ದಾರೆ. ಕೀರ್ತನೆ, ಸುಳಾದಿ, ಉಗಾಭೋಗ, ವೃತ್ತನಾಮ, ದಂಡಕಗಳ ಜೊತೆಗೆ, ಗೋಪೀಗೀತ, ವೇಮುಗೀತ, ಭ್ರಮರಗೀತ, ಲಕ್ಷ್ಮೀನರಸಿಂಹ ಪಾದುರ್ಭಾವ ದಂಡಕ, ರುಕ್ಷ್ಮಿಣೀ ಸತ್ಯಭಾಮಾ ವಿಲಾಸ ಮುಂತಾದವುಗಳನ್ನು ರಚಿಸಿದ್ದಾರೆ. ತಮ್ಮ ಕೊನೆಯ ದಿನಗಳನ್ನು ಮುಳಬಾಗಿಲಿನಲ್ಲಿ ಕಲೆದ ಇವರ ರಚನೆಗಳು ಕನ್ನಡ ಹರಿದಾಸ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆ.

೨. ಶ್ರೀ ವ್ಯಾಸರಾಯರು

ದಾಸ ಪರಂಪರೆಯಲ್ಲಿ ಶ್ರೀ ಪಾದರಾಜರ ಶಿಷ್ಯರಾಗಿದ್ದ ವ್ಯಾಸರಾಯರು ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಜನಿಸಿದರು. ಇವರ ತಂದೆ ರಾಮಾಚಾರ್ಯ ಹಾಗೂ ತಾಯಿ ಸೀತಾಬಾಯಿ. ಇವರನ್ನು ಬ್ರಹ್ಮಣ್ಯತೀರ್ಥರ ಶ್ರೀಮಠದವರು ಬೆಳೆಸಿ. ವಿದ್ಯಾಭ್ಯಾಸ ಮಾಡಿಸಿದರು. ನಂತರ ಶ್ರೀ ಪಾದರಾಜರಲ್ಲಿ ಪ್ರೌಢ ವಿದ್ಯಾಭ್ಯಾಸವನ್ನು ಮಾಡಿ ಅದ್ವಿತೀಯ ವಿದ್ವಾಂಸರಾದರು. ಬಾಲ್ಯದಲ್ಲೇ ಸನ್ಯಾಸಾಶ್ರಮ ಸ್ವೀಕರಿಸಿ ವ್ಯಾಸತೀರ್ಥರಾದ ಇವರು ಗುರುವಿನ ಮಾತಿನಂತೆ ಚಂದ್ರಗಿರಿಯ ದೊರೆ ಸಾಳುವ ನರಸಿಂಹನಿಮದ ವಿಶೇಷವಾಗಿ ಸನ್ಮಾನಿತರಾದರು.

ವಿಜಯನಗರ ಸಾಮ್ರಾಜ್ಯದ ಪ್ರಮುಖ ದೊರೆ ಸ್ರೀ ಕೃಷ್ಣದೇವರಾಯನ ಆಸ್ಥಾನ ಗುರುಗಳಾಗಿದ್ದ ಶ್ರೀ ವ್ಯಾಸರಾಯರು ರಾಜನಿಗೆ ಒದಗಿದ್ದ ಕುಹೂ ಯೋಗವನ್ನು ನಿವಾರಿಸಿದ ಕಾರಣಕ್ಕಾಗಿ ಸಿಂಹಾಸನಾರೋಹಣ ಮಾಡಿದ್ದರೆಂಬುದಾಗಿ ತಿಳಿದುಬರುತ್ತದೆ. ವಿಜಯನಗರದಲ್ಲಿ ವಿದ್ಯಾಪೀಠವನ್ನು ಸ್ಥಾಪಿಸಿ, ಸಹಸ್ರಾರು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಉಣಬಡಿಸಿದರು. ಇವರ ಆರಾಧ್ಯದೈವ ಶ್ರೀ ಕೃಷ್ಣ. ಇವರು ಕೃಷ್ಣ, ಶ್ರೀ ಕೃಷ್ಣ, ಸಿರಿಕೃಷ್ಣ. ಎಂಬ ಅಂಕಿತದಲ್ಲಿ ತಮ್ಮ ಕೃತಿರಚನೆ ಮಾಡಿದ್ದಾರೆ. ಇವರು ತತ್ವಶಾಸ್ತ್ರ ಸಂಬಂಧವಾದ ಕರ್ತತಾಂಡವ, ನ್ಯಾಯಾಮೃತ ಹಾಗೂ ತಾತ್ಪರ್ಯಚಂದ್ರಿಕಾ ಎಂಬ ಮೂರು ಪ್ರೌಢಗ್ರಂಥಗಳನ್ನು ಸಂಸ್ಕೃತದಲ್ಲಿ ರಚಿಸಿದರು. ಇವು ವ್ಯಾಸತ್ರಯವೆಂದು ಪ್ರಸಿದ್ಧಿ ಪಡೆದಿವೆ. ಈ ಕಾರಣ ಇವರಿಗೆ “ಚಂದ್ರಿಕಾಚಾರ್ಯ” ಎಂಬ ಬಿರುದು ಸಂದಿದೆ.

ವ್ಯಾಸರಾಯರು ಸಂಸ್ಕೃತದಲ್ಲಷ್ಟೇ ಅಲ್ಲದೆ, ಕನ್ನಡದಲ್ಲಿ ಹಲವು ಪದಗಳು, ಉಗಾಭೋಗ, ಸುಳಾದಿಗಳು, ವೃತ್ತಿನಾಮಗಳು ಹಾಗೂ ಕೀರ್ತನೆಗಳನ್ನು ರಚಿಸಿದ್ದಾರೆ. ಜ್ಞಾನ, ಭಕ್ತಿ, ವೈರಾಗ್ಯ ಎಲ್ಲವನ್ನೂ ಒಳಗೋಂಡಂತೆ ಇವರ ರಚನೆಗಳು ಸರಳವಾಗಿವೆ.

೧. ಮಹಿಮೆ ಸಾಲದೆ ಇಷ್ಟೆ ಮಹಿಮೆ ಸಾಲದೆ

೨. ದಾಸರೆಂದರೆ ಪುರಂದರದಾಸರಯ್ಯ – ಇತ್ಯಾದಿ

ಮೊದಲ ಹಾಡಿನಲ್ಲಿ ೧. ಗುರುವಿನ ಮಹಿಮೆಯನ್ನು ಹಾಡಿ ಹೊಗಳಿದರೆ, ನಂತರದ ಹಾಡಿನಲ್ಲಿ ೨. ಶಿಷ್ಯನ ಬಗೆಗಿನ ಮೆಚ್ಚುಗೆ ಇದೆ. ಇದಲ್ಲದೆ ಇವರ ಗುರುಗಳಾದ ಶ್ರೀ ಪಾದರಾಜರು ಸಹ ತಮ್ಮ ಒಂದು ರಚನೆಯಲ್ಲಿ “ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು. ವ್ಯಾಸಮುನಿರಾಯರ ಸನ್ಯಾಸದಿರವ” ಎಂಬುದಾಗಿ ಹೊಗಳಿದ್ದಾರೆ. “ಕೃಷ್ಣಾ ನೀ ಬೇಗನೆ ಬಾರೋ” ಎಂಬುಂದು ಇವರ ಪ್ರಸಿದ್ಧ ರಚನೆ.

ಹೀಗೆ, ದಾಸ ಸಾಹಿತ್ಯವು ಉನ್ನತ ಮಟ್ಟವನ್ನು ಮುಟ್ಟಿದ ಕಾಲದಲ್ಲಿದ್ದ ಶ್ರೀ ವ್ಯಾಸರಾಯರು ಪುರಂದರದಾಸರು, ಕನಕದಾಸರೇ ಮುಂತಾದ ಪ್ರಮುಖ ಹರಿದಾಸರಿಗೆ ಗುರುಗಳಾಗಿದ್ದರು. ಇವರ ನಿಧನದ ನಂತರ ಇವರ ವೃಂದಾವನವನ್ನು ಆನೆಗೊಂದಿಯ ಹತ್ತಿರವಿರುವ ನವಬೃಂದಾವನದಲ್ಲಿ ನೆಲಗೊಳಿಸಲಾಗಿದೆ.

೩. ಶ್ರೀ ವಾದಿರಾಜರು

ಶ್ರೀ ಪಾದರಜರ ಪ್ರಶಿಷ್ಯರೂ, ಶ್ರೀ ವ್ಯಾಸರಾಯರ ಶಿಷ್ಯರೂ ಆದ ಶ್ರೀ ವಾದಿರಾಜರು ಕುಂದಾಪುರ ತಾಲೋಕಿನ ಕುಂಭಾಸಿಯ ಹತ್ತಿರದ ಹುವಿನ ಕೆರೆ ಗ್ರಾಮದಲ್ಲಿ ಜನಿಸಿದರು. ಇವರ ತಮದೆ ರಾಮಚಾರ್ಯ ಹಾಗೂ ತಾಯಿ ಸರಸ್ವತೀದೇವಿ. ಇವರ ಮೊದಲ ಹೆಸರು ವರಾಹ. ಚಿಕ್ಕವಯಸ್ಸಿನಲ್ಲಿಯೇ ಅಸಾಧಾರಣ ಪ್ರತಿಭೇ ಹೊಂದಿದ್ದ ಇವರಿಗೆ ಮಾಧ್ವಯತಿಗಳಾದ ಶ್ರೀ ವಾಗೀಶ ತೀರ್ಥರು ಇವರ ಎಂಟನೇ ವಯಸ್ಸಿಗೆ ಸನ್ಯಾಸ ದೀಕ್ಷೆಯಿತ್ತು. “ವಾದಿರಾಜ”ರೆಂದು ಕರೆದರು. ಕೆಲಕಾಲ ಶ್ರೀ ವಿದ್ಯಾನಿಧಿ ತೀಥರಿಂದ ವಿದ್ಯಾಭ್ಯಾಸ ಮಾಡಿದರು. ನಂತರ ವ್ಯಾಸರಾಯರ ಬಳಿ ಶಿಷ್ಯತ್ವವನ್ನು ಸ್ವೀಕರಿಸಿ, ವಿದ್ಯಾರ್ಜನೆ ಮಾಡಿ ನಂತರ ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ “ಸೋದೆ” ಮಠದ ಇಪ್ಪತ್ತನೆಯ ಪೀಠಾಧಿಪತಿಗಳಾದರು.

ಶ್ರೀ ವಾದಿರಾಜರು ಸಂಸ್ಕೃತ ಹಗೂ ಕನ್ನಡದಲ್ಲಿ ಪಾಂಡಿತ್ಯ ಪಡೆದಿದ್ದರು. ಭಾರತದಾದ್ಯಂತ ಸಂಚರಿಸಿ, ಧರ್ಮಪ್ರಚಾರ ಮಾಡಿ, ತಾವು ಸಂದರ್ಶಿಸಿದ ಪುಣ್ಯಕ್ಷೇತ್ರಗಳ ಬಗ್ಗೆ ಹಾಗೂ ಅಲ್ಲಿಯ ದೇವತಾಮೂರ್ತಿಗಳನ್ನು ಕುರಿತಂತೆ ವಿವರಣೆಯನ್ನು ಒಳಗೊಮಡ “ತೀರ್ಥ ಪ್ರಬಂಧ”ವೆಂಬ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದರು. ಸಂಸ್ಕೃತದಲ್ಲಿ ಸುಮಾರು ೭೦ ಗ್ರಂಥಗಳನ್ನು ರಚಿಸಿರುವರೆಂಬುದಾಗಿ ತಿಳಿದುಬರುತ್ತದೆ. ಕನ್ನಡದಲ್ಲಿ ಇವರು ನೂರಾರು ಪದಗಳು, ಪದ್ಯ, ಸುಳಾದಿ, ಲಕ್ಷ್ಮೀ ಶೋಭಾನೆ. ವೈಕುಂಠ ವರ್ಣನೆ, ಸ್ವಪ್ನಪದ, ಗುಂಡಕ್ರಿಯಾ, ಭ್ರಮಗೀತ ಮುಂತಾವುಗಳನ್ನು ರಚಿಸಿದ್ದಾರೆ. ಇವರ ಅಂಕಿತ “ಹಯವದನ”.

ವಾದಿರಾಜರು ವಿಜಯನಗರದ ರಾಜರಿಂದ ಸನ್ಮಾನಿತರಾಗಿ “ಪ್ರಸಂಗಾಭರಣತೀರ್ಥ” ಎಂಬ ಬಿರುದನ್ನು ಪಡೆದರು. ಇವರು ಉಡುಪಿಯ ಅಷ್ಟಮಠಗಳನ್ನು ಕಟ್ಟಸಿದ್ದು, ಪರ್ಯಾಯ ಪದ್ದತಿಯ ವ್ಯವಸ್ಥೆ ಹೀಗೆ ಅನೇಕ ಕಾರ್ಯಗಳಲ್ಲಿ ತೋಡಗಿಸಿಕೊಂಡರು. ಅಷ್ಟಮಠಗಳಲ್ಲಿ ಭಾಗವತರ ಭಜನ ಪದ್ಧತಿಯನ್ನು ಆಚರಣೆಗೆ ತಂದು, ದೇವರ ಸೇವೆಗೆ ಕನ್ನಡ ಕೀರ್ತನೆಗಳನ್ನು ರಚಿಸಿ ಹಾಡಿದ ಉಡುಪಿಯ ಅಷ್ಟಮಠಗಳ ಯತಿಗಳಲ್ಲಿ ವಾದಿರಾಜರು ಮೊದಲಿಗರಾದರು. ೧೨೦ ವರ್ಷಗಳ ತುಂಬುಜೀವನ ನಡೆಸಿದ ಇವರು ತಮ್ಮ ಕೊನೆಯ ದಿನಗಳನ್ನು ‘ಸೋದೆ’ ಯಲ್ಲಿಯೇ ಕಳೆದು ಸಶರೀರರಾಗಿಯೇ ಬೃಂದಾನ ಪ್ರವೇಶಿಸಿದರೆಂಬುದಾಗಿ ತಿಳಿದುಬರುತ್ತದೆ.

ಶ್ರೀ ಪುರಂದರ ದಾಸರು

ಕರ್ನಾಟಕ ಸಂಗೀತ ಪಿತಾಮಹರೆನಿಸಿದ ಶ್ರೀ ಪ್ರರಂದರದಾಸರು ಶ್ರೀ ವ್ಯಾಸರಾಯರ ಶಿಷ್ಯಶ್ರೇಷ್ಠರಲ್ಲಿ ಒಬ್ಬರು. ಇವರು ಪುನಾದ ಪುರಂದರಗಡ ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ವರದಪ್ಪ ನಾಯಕ ಹಾಗೂ ತಾಯಿ ಕಮಲಾಂಬ. ಇವರ ಮೊದಲ ಹೆಸರು ಶ್ರೀನಿವಾಸ. ಶೀನಪ್ಪ ಎಂದು ಇವರನ್ನು ಕರೆಯುತ್ತಿದ್ದರು. ಚಿಕ್ಕಂದಿನಲ್ಲಿಯೇ ಶಿಕ್ಷಣ ಪಡೆದು ಸಂಸ್ಕೃತ, ಕನ್ನಡ, ಶಾಸ್ತ್ರ ಸಂಗೀತಗಳಲ್ಲಿ ಒಳ್ಳೆಯ ಪಾಂಡಿತ್ಯ ಪಡೆದ  ಇವರಿಗೆ ೧೬ನೆಯ ವಯಸ್ಸಿನಲ್ಲಿ ವಿವಾಹವಾಯಿತು. ಇವರ ಹೆಂಡತಿಯ ಹೆಸರಯು ಸರಸ್ವತೀಬಾಯಿ.

ರತ್ನಪಡಿ ವ್ಯಾಪಾರಿಯಾಗಿದ್ದ ಇವರ ತಂದೆಯು ಮರಣಿಸಿದ ನಂತರ ಶ್ರೀನಿವಾಸರು ತಂದೆಯ ಕಸುಬನ್ನು ಮುಂದುವರೆಸಿ, ವ್ಯಾಪರದಲ್ಲಿ ಅಪಾರ ಹಣವನ್ನು ಗಳಿಸಿ ‘ನವಕೋಟಿ ನಾರಾಯಣ’ ಎಂಬ ಬಿರುದಿಗೆ ಪಾತ್ರರಾದರು. ಶ್ರೀನಿವಾಸರು ಮಹಾಜಿಪುಣ. ಇವರ ಹೆಂಡತಿ ಮಹಾದೈವಭಕ್ತಿ. ಸರಸ್ವತೀಬಾಯಿಯವರು ಧರಿಸಿದ್ದ ಮೂಗುತಿಯೇ ಇವರ ಮನಃ ಪರಿವರ್ತಿಸಲು ಕಾರಣವಾಯಿತೆಂಬುದಾಗಿ ಪ್ರತೀತಿ. (ಮೂಗುತಿ ಕಥೆ) ನಂತರ ಶ್ರೀನಿವಾಸರು ತಮ್ಮ ಬಳಿಯಿದ್ದ  ಸರಲೈಶ್ವರ್ಯವನ್ನು ಶ್ರೀಹರಿಯ ಹೆಸರಿನಲ್ಲಿ ದಾನಮಾಡಿ, ಹರಿದಾಸರಾದರೆಂಬುದಾಗಿ ತಿಳಿದುಬರುತ್ತದೆ. ಕತೆ ಏನೇ ಇದ್ದರೂ ಶ್ರೀನಿವಾಸ ನಾಯಕರು ಪುರಂದರರಾಗುವಲ್ಲಿ ಸರಸ್ವತೀಬಾಯಿಯವರ ಪಾತ್ರವನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಪುರಂದರರ ಒಂದು ಕೃತಿಯಲ್ಲಿಯೇ ಇದಕ್ಕೆ ಉತ್ತರವಿದೆ.

ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ತಗ್ಗಿಸಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ  ಹಿಡಿಸಿದಳಯ್ಯ

ಎಂಬುದಾಗಿ ಹೆಂಡತಿಯನ್ನು ಕುರಿತಾಗಿ ಹಾಡಿದ್ದಾರೆ. ನಂತರ ಇವರು ವ್ಯಾಸರಾಯರಲ್ಲಿ ಶಿಷ್ಯತ್ವ ಪಡೆದು ಹರಿದಾಸ ಕೂಟಕ್ಕೆ ಸೇರಿ ಪುರಂದರದಾಸರೆನಿಸಿದರು. ವ್ಯಾಸರಾಯರ ಬಗೆಗೆ ಪುರಂದರರು ತಮ್ಮ ಒಂದು ರಚನೆಯಲ್ಲಿ ವ್ಯಾಸರಾಯರ ಚರಣಕಮಲ ದರುಶನವೆನಗೆ, ಏಸು ಜನ್ಮದ ಸುಕೃತಫಲದಿ ದೊರಕಿತೋ ಎನ್ನ ಎಂದು ಗುರುಸ್ಮರಣೆ ಮಾಡಿದ್ದಾರೆ.

ಪುರಂದರದಾಸರು ಭಾರತದ ಪುಣ್ಯಕ್ಷೇತ್ರಗಳ ದರ್ಶಮಾಡಿ, ಆ ಕ್ಷೇತ್ರಗಳ ದೇವರನ್ನು ಕುರಿತು ಹಾಡುಗಳನ್ನು ರಚಿಸಿದರು. ಇವರ ಜ್ಞಾನ ಸಂಪಾದನೆ ಅಪಾರವಾದುದು. ಭಕ್ತಿ ಅಗಾಧವಾದುದು. ಹರಿದಾಸ ಪಂಥದಲ್ಲಿ ಇವರದು ಅಗ್ರಸ್ಥಾನ, ಪಂಡಿತ ಪಾಮರರಾದಿಯಾಗಿ ಎಲ್ಲರ ನಾಲಗೆಯಲ್ಲೂ ಇವರ ರಚನೆಗಳು ನಲಿದಾಡುತ್ತವೆ. ತಾವು ರಚಿಸಿದ ಹಾಡುಗಳನ್ನು ಹಾಡುತ್ತಾ, ತಂಬೂರಿಯನ್ನು ಮೀಟುತ್ತಾ, ಬೀದಿ ಬೀದಿಯಲ್ಲಿ ಸಂಚರಿಸಿ ಭಗವದ್ಭಕ್ತಿಯನ್ನು ಸಾಮಾನ್ಯರಿಗೂ ತೋರಿಸದರು. ಹೀಗೆ ಇವರು ರಚಿಸಿದ ಕೃತಿಗಳು ಒಟ್ಟು ನಾಲ್ಕು ಲಕ್ಷ ಇಪ್ಪತ್ತೈದು ಸಾವಿರವೆಂದು ಅವರ ಒಂದು ಕೃತಿಯಿಂದಲೇ ತಿಳಿಯುತ್ತದೆ.

ನಾಲ್ಕು ಲಕ್ಷ ಇಪ್ಪತ್ತೈದು ಸಾವಿರ ಕೃತಿಯು
ಕಂತುಜನಕನ ನಾಮ ಘನಮಹಿಮೆ
ಸಂತಸದಿ ಶ್ರುತಿ ಸ್ಮತಿ ಸಮ್ಮತದಿಂದ
ಪುರಂದರವಿಠಲ ವ್ಯಾಸಮುನಿಗಳು ಪೇಳಿಸಿದರು

ಇವುಗಳಲ್ಲಿ ತೀರ್ಥಕ್ಷೇತ್ರ ಮಹಿಮೆ, ಮಧ್ವಮತ ಹಾಗೂ ಗುರುಪರಂಪರೆ, ಪೌರಾಣಿಕ ಕತೆಗಳು, ದೇವತಾಮೂರ್ತಿ ಧ್ಯಾನ, ಸುಳಾದಿಗಳು, ಉಗಾಭೋಗಗಳು, ದೇವರನಾಮ ಮುಂತಾದವುಗಳಿವೆ. ಇಷ್ಟಾಗಿಯೂ ಇವರ ರಚನೆಗಳು ನಮಗೆ ಲಭ್ಯವಾಗಿರುವುದು ಒಂದು ಸಾವಿರವನ್ನೂ ಮೀರಲಾರದು.

‘ಪುರಂದರ ವಿಠಲ’ ಎಂಬ ಅಂಕಿತದಲ್ಲಿ ಸಾಹಿತ್ಯ ರಚನೆ ಮಾಡಿರುವ ಇವರು ಸಂಗೀತದ ಕಡೆಗೂ ಗಮನಕೊಟ್ಟರು ತಮ್ಮ ಸಾಹಿತ್ಯ ಸಾಮನ್ಯ ಜನರನ್ನೂ ಮುಟ್ಟಬೇಕೆಂಬ ಉದ್ದೇಶದಿಂದ ತಮ್ಮ ರಚನೆಗಳಿಗೆ ಜನಪದ ಸಂಗೀತದ ಮಟ್ಟುಗಳನ್ನು ಅಳವಡಿಸಿದರು. ಬಹುಶಃ ಹರಿದಾಸರ ರಚನೆಗಳಲ್ಲಿ ಪುರಂದರರ ಕೃತಿಗಳು ಪ್ರಸಿದ್ಧಿ ಪಡೆಯಲು ಈ ಗೇಯಗುಣವೂ ಕಾರಣ. ಇವರ ಸಮಕಾಲೀನರಾದ ಕನಕದಾಸರೂ ಈ ಹಾದಿಯಲ್ಲಿ ಸಾಗಿದ್ದಾರೆ. ಬದುಕಿಗೆ ಭಗವದ್ಭಕ್ತಿ ತುಂಬಾ ಮುಖ್ಯ ಎಂದಿರುವ ಇವರು ನವವಿಧ ಭಕ್ತಿಯ ಸಂಕೀರ್ತನೆಯನ್ನು ಬೆಳೆಸಿದರು.

“ಕೇಳನೋ ಹರಿ ತಾಳೆನೋ
ತಾಳ ಮೆಳಗಳಿದ್ದು ಪ್ರೇಮವಿಲ್ಲದ ಗಾನ” ಎಂದಿದ್ದಾರೆ.

ಪುರಂದರರ ಜ್ಞಾನ ಮಾರ್ಗದೇಶಿಗಳೆರಡರ ಸಂಗಮ. ಇವರು ತಮ್ಮ ಹಾಡುಗಳಿಗೆ ಜನಪದ ಮಟ್ಟುಗಲನ್ನು ಅಳವಡಿಸುವ ಮೂಲಕ ದೇಶೀ ಮನೋಧರ್ಮವನ್ನು ಮೆರೆದಿದ್ದಾರೆ. ಇದರ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಒಂದು ಭದ್ರ ಬುನಾದಿಯನ್ನು ಹಾಕಿಕೊಡುವ ಮೂಲಕ ಮಾರ್ಗದ ಪ್ರೌಢಿಮೆಯನ್ನು ಮೆರೆದಿದ್ದಾರೆ. “ಪುರಂದರರ ಕಾಲಕ್ಕೆ ಹಿಂದೆ ಖರಹರಪ್ರಿಯ ರಾಗವನ್ನು ಶುದ್ಧ ರಾಗವನ್ನಾಗಿ ಗ್ರಹಿಸುವ ರೂಢಿಯಿದ್ದಿತು”.[10] ಆದರೆ ಪುರಂದರರು ಖರಹರಪ್ರಿಯ ರಾಗದ ಬದಲಿಗೆ ಮಾಯಮಾಳವಗೌಳ ರಾಗವನ್ನು ಶುದ್ಧಮೇಳವೆಂದು ಕರೆದು, ಈ ರಾಗದಿಂದ ಸಂಗೀತಾಭ್ಯಾಸವು ಪ್ರಾರಂಭವಾಗುವ ವ್ಯವಸ್ಥೆ ಮಾಡಿದರು. ಈ ರಾಗವು ಸಂಪೂರ್ಣ ರಾಗವಾಗಿದ್ದು, ಹಾಡಲು ಸರಳ, ಸುಲಭವೆಂದು, ಇದರಲ್ಲಿ ಸರಳವರಸೆ, ಜಂಟಿವರಸೆ, ಸಪ್ತತಾಳಗಳ ಅಲಂಕಾರಗಳ ಜೊತೆಗೆ, ಇದರಲ್ಲಿಯೇ ಜನ್ಯವಾದ ‘ಮಲಹರಿ’ ರಾಗದಲ್ಲಿ ಸರಳವಾದ ಪಿಳ್ಳಾರಿ ಗೀತೆಗಳನ್ನು ರಚಿಸಿದರು. ಕರ್ನಾಟಕ ಸಂಗೀತವು ಈ ಅಭ್ಯಾಸ ಗಾನದಿಮದಲೇ ಪ್ರಾರಂಭವಾಗುತ್ತದೆ. ಹೀಗೆ ಕರ್ನಾಟಕ ಸಂಗೀತಕ್ಕೆ ಒಂದು ಚೌಕಟ್ಟನ್ನು ನಿರ್ಮಿಸಿ, ಅದಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟ ಶ್ರೀ ಪುರಂದರದಾಸರನ್ನು “ಕರ್ನಾಟಕ ಸಂಗೀತ ಪಿತಾಮಹ” ಎಂದು ಕರೆಯಲಾಗಿದೆ.

ಪುರಂದರರು ಅಂತರಂಗ ಶುದ್ಧಿಯಿಲ್ಲದ ಯಾವ ಪೂಜೆಯೂ ಮಡಿಯೂ ವ್ಯರ್ಥ ಎಂದಿದ್ದಾರೆ.

“ಕುಟಿಲದವ ಬಿಡದಿಹ ಕುಜನರು ಮಂತ್ರವ
ಪಠನೆಯ ಮಾಡಿದರೇನು ಫಲ
ಸಟಿಯನ್ನಡುವ ಮನುಜರು ಮನದಲಿ
ವಿಠಲನ ನೆನೆದರೆ ಏನು ಫಲ”

“ಮಡಿ ಮಡಿಯೆಂದು ಮುಮ್ಮೂರು ಹಾರುತಿ
ಮಡಿಯಲ್ಲಿ ಬಂದಿತೋ ಬಿಕನಾಸಿ”

ಹೀಗೆ ಇವರು ಡಾಂಭಿಕ ಭಕ್ತಿ ತೋರುವ ಮಂದಿಯನ್ನು ಯಾವುದೇ ಮೂಲಾಜಿಲ್ಲದೆ ನಿರಾಕರಸಿದ್ದಾರೆ. ಹರಿಭಕ್ತಿಯ ಜೊತೆಗೆ ಬದುಕಿನ ಎಲ್ಲ ಮಜಲುಗಳಿಗೂ ಸ್ಪಂದಿಸುವ ಇವರ ರಚನೆಗಳ ಸಮಾಜದ ಓರೆಕೋರೆಗಳನ್ನು ತಿದ್ದುವ ನಿಟ್ಟಿನಲ್ಲೂ ಸಾರ್ಥಕ್ಯವನ್ನು ಪಡೆದಿವೆ. ಹೀಗಾಗಿ ಇವರ ರಚನೆಗಳು ಇಂದಿಗೂ ಪ್ರಸ್ತುತ. ಇವರು ತಮ್ಮ ಕೊನೆಯ ದಿನಗಳನ್ನು ಹಂಪಿಯಲ್ಲಿ ಕಳೆದು, ಅಲ್ಲಿಯೇ ಕ್ರಿ.ಶ. ೧೫೬೫ರಲ್ಲಿ ಪುಷ್ಯ ಬಹುಳ ಅಮವಾಸ್ಯೆಯಂದು ನಿಧನರಾದರೆಂದು ತಿಳಿದುಬರುತ್ತದೆ. ಇವರ ನೆನಪಾಗಿ ಹಂಪೆ’ಯಲ್ಲಿ ಪುರಂದರ ಮಂಟಪವಿದೆ. ಇಂದಿಗೂ ಈ ಕ್ಷೇತ್ರದಲ್ಲಿ ‘ಪುರಂದರ ದಸರ ಆರಾಧನೆ’ ಯನ್ನು ಬಹಳ ವಿಜೃಂಭಣೆಯಿಮದ ಆಚರಿಸಲಾಗುತ್ತಿದೆ.

೫. ಶ್ರೀ ಕನಕದಾಸರು

“ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ”

ಕನಕದಾಸರೆಂದ ಕೂಡಲೇ ನೆನಪಿಗೆ ಬರುವುದು ಈ ಪ್ರಸಿದ್ಧವಾದ ಭಕ್ತಿಪೂರ್ವಕ ರಚನೆ. ಕನಕದಾಸರು ಧಾರವಾಡ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ವೀರಪ್ಪ ಹಾಗೂ ತಾಯಿ ಬುಚ್ಚಮ್ಮ. ಇವರ ತಂದೆ ಹಾಗೂ ಪೂರ್ವಿಕರು ವಿಜಯನಗರದ ಅರಸರ ಬಳಿ ದಂಡನಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಿರುಪತಿದ ತಿಮ್ಮಪ್ಪನ ವರಪ್ರಸಾದದಿಂದ ಹುಟ್ಟಿದ ಮಗನಿಗೆ ತಿಮ್ಮಪ್ಪ  ಎಂದು ಹೆಸರಿಟ್ಟರು. ನಂತರ ಚಿನ್ನದ ನಿಧಿ ಸಿಕ್ಕು, ಅದನ್ನು ಜನರಿಗೆ ಹಾಗೂ ದೇವಾಲಯ ಜೀರ್ಣೋದ್ಧಾರಕ್ಕಾಗಿ ಹಂಚಿದ್ದರಿಂದ ಕನಕಪ್ಪ ಆಗಿ, ದಂಡನಾಯಕ ಪದವಿ ಗಳಿಸಿದಾಗ ಕನಕನಾಯಕನಾಗಿ, ದಾಸ ದೀಕ್ಷೆಯನ್ನು ಪಡೆದ ನಂತರ ಕನಕದಾಸರಾಗಿ ತಮ್ಮ ಇಷ್ಟದೇವತೆಯಾದ “ಕಾಗಿನೆಲೆಯ ಆದಿಕೇಶವ”ನ ಅಂಕಿತದಲ್ಲಿ ಹರಿದಾಸ ಸಾಹಿತ್ಯವನ್ನು ರಚಿಸಿದರು.

ವ್ಯಾಸರಾಯರ ಶಿಷ್ಯಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು, ಪ್ರರಂದರರ ಸಮಕಾಲೀನ ರಾಗಿ, ಹರಿಭಕ್ತಿಯಲ್ಲಿ ಅವರಿಗೆ ಸರಿಸಮವಾಗಿ ನಿಂತು, ಅಸೂಯಾಪರರ ನಡುವೆಯೂ ಗುರುವಿನ ಅನುಗ್ರಹಕ್ಕೆ ಪಾತ್ರರಾದರು. ಕನಕರ ಭಕ್ತಿನಿಷ್ಠೆ ಎಷ್ಟಿತ್ತೆಂಬುದು ಬಾಳೇಹಣ್ಣಿನ ಪ್ರಸಂಗ ತಿಳಿಸಿದರೆ, ಮನುಷ್ಯನ ಜಾತಿ, ಬಣ್ಣಗಳಿಗಿಂತ ಅವನ ವಿಚಾರ, ಹಾಗೂ ಸನ್ನಡತೆ ಮುಖ್ಯ ಎಂಬುದನ್ನು ರಾಮಧಾನ್ಯ ಚರಿತೆಯಲ್ಲಿ ತಿಳಿಯಬಹುದು. ಅಪಾರ ಜ್ಞಾನ ಸಂಪಾದನೆ ಮಾಡಿದ್ದ ಕನಕದಾಸರು ದೇವರನಾಮಗಳಲ್ಲದೆ, ನಳಚರಿತ್ರೆ, ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ ಎಂಬ ಗ್ರಂಥಗಳನ್ನೂ, ಕನಕನ ಮಂಡಿಗೆಗಳು ಹಾಗೂ ನರಸಿಂಹ ಸ್ತೋತ್ರಗಳೂ ರಚಿಸಿದರು. ಇವರು ತಮ್ಮ ‘ಮೋಹನ ತರಂಗಿಣಿ’ಯಲ್ಲಿ ಶ್ರೀಕೃಷ್ಣನೊಂದಿಗೆ ಶ್ರೀ ಕೃಷ್ಣದೇವರಾಯನನ್ನು ಸಮೀಕರಿಸುವುದು ಜೊತೆಗೆ ದವಿಜಯನಗರದ ಜನಜೀವನವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ.

ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದಂತೆಯೂ ಕನಕದಾಸರಿಗೂ ಪಾಂಡಿತ್ಯವಿತ್ತೆಂದು ಅವರ ರಚನೆಗಳಲ್ಲಿ ಕಂಡುಬರುವ ರಾಗಗಳು, ವಾದ್ಯಗಳ, ಹೆಸರುಗಳು ಮುಂತಾದವುಗಳಿಂದ ತಿಳಿದು ಬರುತ್ತದೆ. ಜೊತೆಗೆ ಸಾಹಿತ್ಯ ಸಂಗೀತದಲ್ಲಿ ಜನಪದ ಮನೋಧರ್ಮವನ್ನು ಮೆರೆದಿದ್ದಾರೆ.

ದ್ಯಾವಿ ನಮ್ಮ ದ್ಯಾವರು ಬಂದರು
ಬನ್ನಿರೆ ನೋಡಬನ್ನಿರೆ

“ಡೊಳ್ಳಿನ ಮೇಲ್ ಕೈಯ ಭರಮಪ್ಪ ಹಾಕ್ಯಾನು
ತಾಳವ ಶಿವನಪ್ಪ ತಟ್ಟಾನ್ಮ್ಯಾ
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ ಕನಕಪ್ಪ ಕುಣಿದಾನ್ಮ್ಯ”.

ಹೀಗೆ ಜನಪದ ಮನೋಧರ್ಮ ಹಾಗೂ ಶಾಸ್ತ್ರದ ಪ್ರೌಢತೆಗಳನ್ನು ಒಳಗೊಂಡ ಇವರ ರಚನೆಗಳು ಇಂದಿಗೂ ಪ್ರಸ್ತುತ.

ದಾಸ್ಯ ಭಕ್ತಿ ನಿವೇದನೆಯಲ್ಲಿ ಕನಕದಾಸರದು ಅತ್ಯಂತ ಮನೋಜ್ಞರಚನೆಗಳು. ಬಹುಶಃ ಬದುಕಿನ ಅನುಭವವೂ ಇವರ ರಚನೆಗಳನ್ನು ಪುಷ್ಟಿಗೊಳಿಸಿರಲಿಕ್ಕೆ ಸಾಕು.

“ದಾಸ ದಾಸರ ಮನೆಯ ದಾಸಿಯರ ಮಗನಾನು
ಸಾಸಿರ ನಾಮದೊಡೆಯ ರಂಗಯ್ಯನ ಮನೆಯ”

“ದಾಸನಾಗಬೇಕು ಸದಾಶಿವನ
ದಾಸನಾಗಬೇಕು”

“ದಾಸನಾಗೋ ಭವಪಾಶನೀಗೋ”

“ದಾಸಾರ್ಯರ ದಾಸರದಾಸ ನಾನು ಬಾಡ
ದೀಶ ಕಾಯ್ದುಕೊಳ್ಳು”

ಹೀಗೆ ಅತ್ಯಂತ ಹೃದಯಸ್ಪರ್ಶಿಯಾಗಿ ಹರಿಯಲ್ಲಿ ಭಕ್ತಿ ನಿವೇದನೆ ಮಾಡಿಕೊಂಡ ಕನಕದಾಸರು ಸುಮಾರು ೯೯ ವರ್ಷಗಳ ತುಂಬು ಜೀವನ ನಡೆಸಿ, ತಮ್ಮ ಕೊನೆಯ ದಿನಗಳನ್ನು ಕಾಗಿನೆಲೆಯಲ್ಲಿ ಕಳೆದರೆಂಬುದಾಗಿ ತಿಳಿದುಬರುತ್ತದೆ.

ಹೀಗೆ ವಿಜಯನಗರ ಅವಧಿಯ ಲಕ್ಷ್ಯಲಕ್ಷಣ ಸಂಗೀತವು ಕರ್ನಾಟಕ ಸಂಗೀತದ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕೊಡುಗೆ. ಅಂದಿನ ೧೫-೨೦ ಮೇಳಗಳ ಸಂಗೀತವು ತದನಂತರದಲ್ಲದಿ ಬೆಳೆದು ೭೨ ಮೇಳಗಳನ್ನು ಹೊಂದಿದೆ. ಅಂದಿನ ಜನಕ ಜನ್ಯ ಪದ್ಧತಿಯೇ ಇಂದಿಗೂ ಬಳಕೆಯಲ್ಲಿದೆ. ತಾಳಗಳಿಗೆ ಸಂಬಂಧಿಸಿದಂತೆ ಅಂದಿನ ದೇಶೀ ತಾಳಗಳಾಗಿದ್ದ ೩, ೪, ೫, ೬, ೭, ೯ ಈ ರೀತಿಯ ಅಕ್ಷರ ಕಾಲಗತಿಗೆ, ಪುರಂದರರು ಹಾಕಿಕೊಟ್ಟ ಸಪ್ತತಾಳಗಳ ಪದ್ಧತಿಯೇ ಇಂದಿನ ಸಂಗೀತ ಭದ್ರ ಆಡಿಪಾಯವೆನಿಸಿದೆ. ಕರ್ನಾಟಕ ಸಂಗೀತವು ದಕ್ಷಿಣಾದಿ ಸಂಗೀತವೆಂದು ಕರೆಯಲ್ಪಟ್ಟು, ಪುರಂದರರು ಹೇಳಿದ ಮಾಯಮಾಳವ ಗೌಳ ರಾಗವೇ ಅಭ್ಯಾಸಗಾನದ ರೂಪದಲ್ಲಿ ಶುದ್ಧರಾಗವಾಗಿ ಇಂದಿಗೂ ಬಳಕೆಯಲ್ಲಿದೆ.

ಸಂಗೀತಶಾಸ್ತ್ರದ ಪ್ರೌಢತೆಯೊಡನೆ, ಸರಳವಾದ ಸಾಹಿತ್ಯಕ್ಕೆ ರಾಗ, ತಾಳಗಳ ಮೂಲಕವಾಗಿ ದೇಶೀಯತೆಯ ಮೆರುಗನ್ನು ನೀಡಿದ ಹರಿದಾಸರ ಕಾರ್ಯ ಸ್ತುತ್ಯಾರ್ಹವಾದುದು. ವಿಜನಯಗರದ ಅರಸದಿಂದ ಪ್ರೋತ್ಸಾಹಿತರಾಗಿ ಮನ್ನಣೆಗೆ ಪಾತ್ರರಾಗಿ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅತ್ಯಮೂಲ್ಯ ಕಾಣಿಕೆಯನ್ನು ನೀಡಿದ್ದಾರೆ. ತನ್ಮೂಲಕ ವೈಯಕ್ತಿಕ ಪ್ರತಿಭೆಯನ್ನು ಮೆರೆಯುವುದರ ಜೊತೆಗೆ ಸಮಾಜಕ್ಕೂ ಮುಖಾಮುಖಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಬದುಕಿನ ಎಲ್ಲ ಮಜಲುಗಳಿಗೂ ಸ್ಪಂದಿಸುವ ಇವರ ರಚನೆಗಳು ಇಂದಿಗೂ ಪ್ರಸ್ತುತ.

ಒಟ್ಟಾರೆಯಾಗಿ ಹೇಳುವುದಾದರೆ ಸಂಗೀತದ ಬೆಳವಣಿಗೆಯ ದೃಷ್ಟಿಯಿಂದ ವಿಜಯನಗರದ ಕೊಡುಗೆ ಅತ್ಯಂತ ಮೌಲಿಕವಾದುದು. ಸಂಗೀತದ ಲಕ್ಷ್ಯಲಕ್ಷಣಗಳೆರಡೂ ನಿಟ್ಟಿನ ರಚನೆಗಳನ್ನು ತಾವು ಇಲ್ಲಿ ಕಾಣುತ್ತೇವೆ. ಅದರ ಜೊತೆಗೆ ಸಾಹಿತ್ಯ ಹಾಗೂ ಸಂಗೀತಗಳೆರಡನ್ನು ಒಳಗೊಂಡು ಮಾರ್ಗ ಮತ್ತು ದೇಶೀ ಮನೋಧರ್ಮಗಳ ಸಮ್ಮಿಲನವಿದೆ. ಸಂಸ್ಕೃತ ಕನ್ನಡ ರಚನಾ ವೈವಿಧ್ಯವಿದೆ. ಗಾಯನ, ವಾದನ, ನರ್ತನಗಳನ್ನು ಒಳಗೊಂಡಂತೆ ವ್ಯಷ್ಟಿ ಪ್ರತಿಭೆಯ ಜೊತೆಯಲ್ಲಿ ಸಮಷ್ಟಿಯ ಸಂಗಮವಿದೆ. ಹೀಗಾಗಿ, ಭಾರತೀಯ ಸಂಗೀತ ಇತಿಹಾಸದಲ್ಲಿ ವಿಜಯನಗರ ಕಾಲದ ಸಂಗೀತವು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ.

 

[1] ವಿವರಕ್ಕೆ ನೋಡಿ. ಪ್ರವಾಸಿ ಕಂಡ ವಿಜಯನಗರ, ಸಂ. ಬಿ.ಎ. ವಿವೇಕ ರೈ. ಪು. ೫, ೨೨, ೪೦.

[2] ಅದೇ, ಪು. ೬೩.

[3] ಅದೇ, ಪು. ೮೨.

[4] Epigraphia Carnatica, XII, CK. 39.

[5] ಸಂಗೀತ ಪಾರಿಭಾಷಿಕ ಕೋಶ, ಡಾ. ವಿ.ಎಸ್. ಸಂಪತ್ಕುಮಾರಾಚಾರ್ಯ, ಸಂ. ೩, ಪು. ೨೭೮.

[6] ಕನಾಟಕ ಸಂಗೀತ ವಾಹಿನಿ, ಡಾ.ರಾ. ಸತ್ಯನಾರಾಯಣ, ಪು. ೧೩೨.

[7] ಸಂಗೀತ ಪಾರಿಭಾಷಿಕ ಕೋಶ, ಡಾ. ವಿ.ಎಸ್. ಸಂಪತ್ಕುಮಾರಾಚಾರ್ಯ, ಸಂ. ೩, ಪು. ೮೧೮.

[8] ಕರ್ನಾಟಕ ಸಂಗೀತ, ಎಲ್. ರಾಜಾರಾವ್, ಪು. ೧೭೨.

[9] ಸಮಗ್ರ ದಾಸ ಸಾಹಿತ್ಯ, ಸಂ. ೧, ಪು. ೨೭.

[10] ಕರ್ನಾಟಕ ಸಂಗೀತ ಸುಧಾ, ರಾನರತ್ನಂ ವಿ, ವಿ.ಎಸ್. ಸಂಪತ್ಕುಮಾರಾಚಾರ್ಯ, ಪು. ೨೪೧.