ದೃಶ್ಯ ಚಿತ್ರಗಳು

ಪ್ರಾಗಿತಿಹಾಸ ಕಾಲದ ಚಿತ್ರಕಲೆಗಳು ಅನೇಕ ವೈಯಕ್ತಿಕ, ಬಿಡಿ ಚಿತ್ರಗಳ ಜೊತೆಗೆ ಆ ಕಾಲದ ಜೀವನದ ಕೆಲವು ಅಂಶಗಳನ್ನು ಬಿಂಬಿಸುವ ದೃಶ್ಯ ಚಿತ್ರಗಳು ಇವೆ. ಸಾಲು ಕುಣಿತ, ಬೇಟೆಗಾರಿಕೆ, ಪಶುಪಾಲನೆ, ಮಾಂತ್ರಿಕ ಆರಾಧನೆ (?), ಲೈಂಗಿಕ ಕ್ರಿಯೆ, ಶವಸಂಸ್ಕಾರ ಮತ್ತಿತರ ಘಟನೆಗಳ ಚಿತ್ರಗಳನ್ನು ಗುರುತಿಸಬಹುದು. ಆ ಕಾಲದ ಜೀವನ ವಿಧಾನದ ಕೆಲವು ಸಂಗತಿಗಳನ್ನು ಅರಿತುಕೊಳ್ಳಲು ಇಂಥ ಚಿತ್ರಗಳಿಂದ ಸಾಧ್ಯವಾಗುತ್ತದೆ.

ಸಾಲು ಕುಣಿತ

ಕೈ-ಕೈ ಹಿಡಿದು ಸಾಲಾಗಿ ಕುಣಿಯುತ್ತಿರುವ ಮನುಷ್ಯರ ಚಿತ್ರಗಳು ಮುಖ್ಯವಾಗಿ ಹಿರೇಬೆಣಕಲ್ ಮತ್ತು ಚಿಕ್ಕರಾಂಪುರದ ಗವಿ ಚಿತ್ರಗಳಲ್ಲಿ ಕಂಡುಬರುತ್ತವೆ. ಸಾಲು ಮನುಷ್ಯ ಚಿತ್ರಗಳು ಎರಡು ರೀತಿಯಲ್ಲಿವೆ. ಒಂದು ಛಾಯಾರೂಪವಾದರೆ ಮತ್ತೊಂದು ರೀತಿ ದೇಹದ ರೇಖಾರೂಪದವು. ಮೊದಲ ರೀತಿಯವು ಹಿರೇಬೆಣಕಲ್ಲಿನ ೧,೧೧ ಮತ್ತು ೧೨ನೇ ಗವಿಗಳಲ್ಲಿ ಹಾಗೂ ಚಿಕ್ಕ ರಾಂಪುರದ ೧ನೇ ಗವಿಯಲ್ಲಿ ಕಂಡುಬರುತ್ತವೆ. ಎರಡನೆಯ ರೀತಿಯವು ಹಿರೇಬೆಣಕಲ್ಲಿನ ಆರು ಮತ್ತು ಚಿಕ್ಕರಾಂಪುರದ ಅದೇ ಗವಿಯಲ್ಲಿ ಇವೆ. ಛಾಯಾರೂಪದ ಚಿತ್ರಗಳಲ್ಲಿ ದಪ್ಪ ಕಾಲಿನ ಮನುಷ್ಯ ತಂಡಗಳು ಮತ್ತು ತೆಳು ಕಾಲಿನ ಮನುಷ್ಯ ತಂಡಗಳಿವೆ. ತಂಡಗಳಲ್ಲಿ ಕೆಲವು ವ್ಯಕ್ತಿಗಳ ತಲೆಯ ಸುತ್ತಲೂ ಕೆದರಿದ ರೀತಿಯ ತಲೆಯ ಕೂದಲು ಹರಡಿದ್ದು ಅವನ್ನು ಸ್ತ್ರೀ ಚಿತ್ರಗಳೆಂದು ಗುರುತಿಸಬಹುದು.

ಹಿರೇಬೆಣಕಲ್ಲಿನ ಒಂದನೇ ಕಲ್ಲಾಸರೆಯಲ್ಲಿ ೨,೩,೪,೧೦ ಜನರ ಎರಡು ಮತ್ತು ೧೩ ಜನರನ್ನು ಒಳಗೊಂಡಿರುವ ೬ ಸಾಲು ಕುಣಿತದ ತಂಡಗಳಿವೆ. ೨ ಮತ್ತು ೩ ಜನರ ತಂಡ ಸ್ತ್ರೀಯರವು. ಆದರೆ ಮೂರರಲ್ಲಿ ಕೊನೆಯ ವ್ಯಕ್ತಿ ತಲೆಯಲ್ಲಿ ಕೂದಲಿಲ್ಲ. ಆದರೆ ತಲೆ ಸ್ವಲ್ಪ ಎತ್ತರದಲ್ಲಿದೆ. ಕೈಯಲ್ಲಿ ಕೊಡಲಿ ಇದೆ. ಇದು ಕೂದಲನ್ನು ಮೇಲಕ್ಕೆ ಕಟ್ಟಿಕೊಂಡ ಸ್ತ್ರೀ ಅಥವಾ ಪುರುಷನ ಚಿತ್ರವಿರಬೇಕು. ೪.೧೦ರ ಒಂದು ತಂಡ ಮತ್ತು ೧೩ ಜನರ ತಂಡದ ಕಾಲ ಕೆಳಗೆ ತಂಡ ನಿಂತ ರೀತಿಯಲ್ಲಿ ಗೆರೆಯನ್ನು ಹಾಕಲಾಗಿದೆ. ಅಗಲವಾಗಿ ನಿಂತಿರುವ ಹತ್ತು ಜನರ ಮತ್ತೊಂದು ತಂಡದಲ್ಲಿಯ ಕೊನೆಯ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಆಯುಧಗಳನ್ನು ಹಿಡಿದಿದ್ದಾರೆ. ಒಂದು ಕೊಡಲಿ ಇನ್ನೊಂದು ಸ್ಪಷ್ಟವಾಗುವುದಿಲ್ಲ. ನಾಲ್ಕನೆಯ ಗವಿಯಲ್ಲಿ ೩ ಜನರ ತಂಡವಿದೆ.

೧೧ ಮತ್ತು ೧೨ನೇ ಗವಿಗಳಲ್ಲಿ ನೇರ ಹಾಗೂ ವೃತ್ತ ಸಾಲು ಕುಣಿತದ ತಂಡಗಳಿವೆ. ೧೨ರಲ್ಲಿ ೬,೭,೧೨ ಮತ್ತು ಜನರ ತಂಡಗಳಿವೆ. ೧೨ ಜನರ ತಂಡ ವೃತ್ತಸಾಲಿನಲ್ಲಿದೆ. ೧೭ ಜನರ ತಂಡದಲ್ಲಿ ಬಲಕ್ಕಿರುವ ವ್ಯಕ್ತಿ ಹುಡುಗನೆಂದು ಹೇಳಬಹುದು. ಇವೆರಡು ಸಾಲಿನ ಮನುಷ್ಯ ಚಿತ್ರಗಳು ಶೈಲಿಯಲ್ಲಿ ಭಿನ್ನವಾಗಿವೆ. ಮೊದಲನೆಯದರಲ್ಲಿ ಚಿತ್ರಗಳು ಹೆಚ್ಚು ದೃಢಕಾಯದವರಂತೆ ಇವೆ. ವಿಶಾಲ ಭುಜ, ಅಗಲ ಎದೆ, ಪುಷ್ಟವಾದ ತೊಡೆ ಕಾಲುಗಳು ಎತ್ತರ ಸು.೨೭ ಸೆಂ.ಮೀ. ಹುಡುಗನ ಎತ್ತರ ಸು. ೧೪ ಸೆಂ.ಮೀ. ಹೆಚ್ಚು ಕಡಿಮೆ ನೇರವಾದ ಸಾಲು (೧.೫೨ ಉದ್ದ). ಬಣ್ಣವೂ ಕೂಡ ಕಪ್ಪು ನೇರಳೆ, ಎರಡನೆಯದರಲ್ಲಿ ವ್ಯಕ್ತಿಗಳ ಎತ್ತರ ನೀಳ ಮುಂಡದ ಭಾಗ ತೆಳ್ಳಗೆ, ಕಾಲುಗಳು ಕಡ್ಡಿಯ ಹಾಗೆ ತೊಡೆಯ ಭಾಗ ಮಾತ್ರ ಸ್ಥೂಲ. ಸಾಲು ಸ್ವಲ್ಪ ವೃತ್ತವಾಗಿದ್ದು ಜನರು ವರ್ತುಲಾಕಾರದಲ್ಲಿ ನಿಂತಿದ್ದಾರೆ ಎಂಬುದನ್ನು ಸುಲಭವಾಗಿ ಚಾಣಾಕ್ಷತನದಿಂದ ತೋರಿಸಲಾಗಿದೆ.

ಚಿತ್ರರಾಂಪುರದಲ್ಲಿ ೬,೭ ಮತ್ತು ೧೯ ಜನರ ತಂಡಗಳ ಛಾಯಾರೂಪದ ಚಿತ್ರಗಳಿವೆ. ಮನುಷ್ಯ ಚಿತ್ರಗಳು ದ್ವಿಕೋನಾಕೃತಿಯ ಮುಂಡವನ್ನು ಒಳಗೊಂಡಿವೆ. ಇಲ್ಲಿಯೇ ೧೫ ಜನರ ೧ ಸಾಲು ಮತ್ತು ಹಿರೇಬೆನಕ್ಲಲಿನ ೬ನೇ ಗವಿಯಲ್ಲಿ ೬ ಮತ್ತು ೮ ಜನರ ೨ ಸಾಲು ಚಿತ್ರಗಳು, ಮುಂಡವನ್ನು ಒಳಗೊಂಡ ರೇಖಾರೂಪದವು. ಹಿರೇಬೆಣಕಲ್ ಗವಿಯ ಚಿತ್ರಗಳು ವಿಶೇಷವಾಗಿವೆ. ಗಂಡು ಹೆಣ್ಣಿನ ಸಾಲು ಪರಸ್ಪರ ಎದುರುಬದುರಾಗಿ ಕುಣಿಯುತ್ತಿರುವಂತಿದೆ. ೮ ಜನರ ಸಾಲಿನಲ್ಲಿ ಎಲ್ಲರ ತಲೆಯಲ್ಲಿ ಕೂದಲುಗಳಿವೆ. ಹಾಗಾಗಿ ಅವು ಸ್ತ್ರೀಯರ ಸಾಲೆನ್ನಬಹುದು.

ಯಶಸ್ವಿ ಬೇಟೆಯ ನಂತರ ಅಥವಾ ವಿಶೇಷ ಸಂತೋಷದ ಸಂದರ್ಭದಲ್ಲಿ ಪ್ರಾಗಿತಿಹಾಸ ಕಾಲದ ಜನತೆ ಈ ರೀತಿ ಕೈ ಕೈ ಹಿಡಿದು ಸಾಲಾಗಿ ನೃತ್ಯದಲ್ಲಿ ತೊಡಗುತ್ತಿರಬೇಕೆಂದು ಊಹಿಸಬಹುದು. ನೃತ್ಯದಲ್ಲಿ ಸ್ತ್ರೀಯರೂ ಮಕ್ಕಳೂ ಪಾಲ್ಗೊಳ್ಳುತ್ತಿದ್ದರು. ಸ್ತ್ರೀಯರೂ ತಮ್ಮದೇ ಪ್ರತ್ಯೇಕ ಸಾಲಿನಲ್ಲಿ ಇಲ್ಲವೇ ಪುರುಷರ ಸಾಲಿನಲ್ಲಿ ಸೇರಿ ಕುಣಿತದಲ್ಲಿ ತೊಡಗುತ್ತಿದ್ದುದು ವಿಶೇಷ. ಕೆಲವು ಸಲ ಸಾಲು ಕುಣಿತಗಾರರ ಕೈಯಲ್ಲಿ ಕೊಡಲಿಯಂತಹ ಆಯುಧಗಳಿರುವುದರಿಂದ ಈ ನೃತ್ಯ ಬೇಟೆಗೆ ಸಂಬಂಧಿಸಿರಬಹುದೆಂದು (ಯಶಸ್ವಿ ಬೇಟೆಗಾಗಿ) ತರ್ಕಿಸಬಹುದು.

ಬೇಟೆಗಾರಿಕೆ

ಬೇಟೆ ಆದಿ ಜನರ ಮುಖ್ಯ ಕಸುಬಾಗಿತ್ತು. ಜೀವನ ನಿರ್ವಹಣೆಗಾಗಿ ಪ್ರಾಣಿಗಳ ಬೇಟೆಯಾಡುತ್ತಿದ್ದರು. ಈ ಬೇಟೆಗೆ ಸಂಬಂಧಿಸಿದ ಸಂಗತಿಗಳ ಚಿತ್ರಕಲೆಯ ವಿಷಯ ವಸ್ತುವಾಗಿ ಅಲ್ಲಲ್ಲಿ ಕೆಲವು ಬೇಟೆಯ ಅಪರೂಪದ ದೃಶ್ಯಗಳು ಕಂಡುಬರುತ್ತವೆ.

ಹಿರೇಬೆಣಕಲ್ಲಿನ ಹತ್ತನೇ ಕಲ್ಲಾಸರೆಯಲ್ಲಿ ಬಿಲ್ಲು ಬಾಣಗಳನ್ನು ಹಿಡಿಕೆಯುಳ್ಳ ಉದ್ದಕತ್ತಿಗಳನ್ನು ಹಿಡಿದುಕೊಂಡು ನಿಂತ ಮನುಷ್ಯರ ಚಿತ್ರಗಳಿವೆ. ೧,೬ ಮತ್ತು ಚಿಕ್ಕರಾಂಪುರದ ೪ನೇ ಗವಿ ಅಗೋಲಿ (೨) ಗಳಲ್ಲಿ ಕೊಡಲಿ ಭರ್ಚಿ ಕತ್ತಿ ಬಿಲ್ಲು ಬಾಣಗಳನ್ನು ಹಿಡಿದು ನಿಂತ ವ್ಯಕ್ತಿಗಳ ಚಿತ್ರಗಳಿವೆ. ಇವೆಲ್ಲಾ ಕಬ್ಬಿಣ ಯುಗದ ಬೃಹತ್ ಶಿಲಾಯುಗ ಕಾಲದಲ್ಲಿ ಬಳಕೆಯಲ್ಲಿದ್ದ ಆಯುಧಗಳೆಂದು ತಿಳಿಯಬಹುದು. ಬೇಟೆಯಲ್ಲಿ ಈ ಆಯುಧಗಳು ಪ್ರಮುಖವಾಗಿ ಬಳಕೆಯಾಗುತ್ತಿರಬೇಕೆಂದು ತರ್ಕಿಸಬಹುದು.

ಗಡ್ಡಿ (೧)ಯಲ್ಲಿ ವ್ಯಕ್ತಿಯೊಬ್ಬ ಉದ್ದವಾದ ಭರ್ಚಿಯಿಂದ ಪ್ರಾಣಿಯೊಂದಕ್ಕೆ (ಸ್ಪಷ್ಟವಿಲ್ಲ)ಬೆನ್ನಿನಲ್ಲಿ ಚುಚ್ಚಿದ ಚಿತ್ರವಿದೆ. ಆ ಅಘಾತಕ್ಕೆ ಪ್ರಾಣಿ ಮುಗ್ಗರಿಸಿ ಬಿದ್ದಿದೆ. ಕೊಪ್ಪಳದ (೨) ಬೇಟೆ ಚಿತ್ರ ಅಪರೂಪದ್ದು. ಬೇಟೆಗಾರನೊಬ್ಬ ಜಿಂಕೆಗಳ ಬೇಟೆಯಾಡುತ್ತಿದ್ದಾನೆ. ಅವನ ಬಾಣಕ್ಕೆ ಎರಡು ಜಿಂಕೆಗಳು ಬಲಿಯಾಗಿ ನೆಲಕ್ಕೆ ಬಿದ್ದಿವೆ. ಮತ್ತೊಂದಕ್ಕೆ ಬಾಣ ಪ್ರಯೋಗಿಸಿದ್ದಾನೆ. ಆನೆಗುಂದಿಯಲ್ಲಿ (೬-೨) ಮತ್ತೊಂದು ವಿಶೇಷ ದೃಶ್ಯವಿದೆ. ಪಕ್ಷಿ ಯೊಂದನ್ನು ಬೇಟೆಯಾಡಿದ ಇಬ್ಬರು ವ್ಯಕ್ತಿಗಳು ಅದರ ಎರಡೂ ರೆಕ್ಕೆಗಳನ್ನು ಒಂದೊಂದು ಕೈಯಲ್ಲಿ ಹಿಡಿದು ಹೊರಟಿದ್ದಾರೆ.

ಹಿರೇಬೆಣಕಲ್ಲಿನ ೧ ಮತ್ತು ೬ನೇ ಗವಿಯಲ್ಲಿ ಅಶ್ವ ಸವಾರರು ಬೇಟೆಯಲ್ಲಿ ತೊಡಗಿದ ದೃಶ್ಯಗಳನ್ನು ಗುರುತಿಸಬಹುದು. ಅಶ್ವ ಸವಾರರು ತಮ್ಮ ಕೈಯಲ್ಲಿರುವ ಭರ್ಚಿಯನ್ನು ಜಿಂಕೆಯೆಡೆಗೆ ಎಸೆಯುತ್ತಿರುವಂತಿದೆ. ೬ರಲ್ಲಿ ಜಿಂಕೆಯ ಮೇಲೆ ಅಕ್ರಮಣ ಮಾಡಲು ಸಿದ್ಧವಾಗಿರುವ ಹುಲಿಯ ಮೇಲೆ ಅಶ್ವ ಸವಾರನೊಬ್ಬ ಭರ್ಚಿಯನ್ನು ಎಸೆಯುತ್ತಿರುವಂತೆ ಒಂದು ಚಿತ್ರವಿದೆ. ಹಿರೇಬೆಣಕಲ್ಲಿನ ೫ ಮತ್ತು ಮಲ್ಲಾಪುರದ ೬ನೇ ಕಲ್ಲಾಸರೆಗಳಲ್ಲಿ ಎತ್ತು, ಆಕಳು, ಜಿಂಕೆ ಈ ಪ್ರಾಣಿಗಳ ಗುಂಪಿನ ಮಧ್ಯ ನಿಂತ ವ್ಯಕ್ತಿಗಳ ಚಿತ್ರಗಳಿವೆ. ಇವರು ಕೋಡುಗಳುಳ್ಳ ಮುಖವಾಡವನ್ನು ಬಾಲವನ್ನು ಧರಿಸಿದ್ದಾರೆ. ಪ್ರಾಯಶಃ ಇವರು ಜಿಂಕೆ, ಹಸು ಮುಂತಾದ ಸಾಧುಪ್ರಣಿಗಳನ್ನು ಹಿಡಿಯಲು ಸತ್ತ ಆ ಪ್ರಾನಿಯ ಚರ್ಮವನ್ನು ಹೊದ್ದುಕೊಂಡು ಅದರಂತೆ ನಟಿಸಿ ಹಿಡಿಯಲು ಈ ರೀತಿ ವೇಷ ಹಾಕುತ್ತಿದ್ದರೆಂದು ತರ್ಕಿಸಬಹುದು. ಆನೆಗುಂದಿಯಲ್ಲಿ (೨) ಅಶ್ವಸವಾರರು ಮತ್ತು ಕೋಲು ಹಿಡಿದ ವ್ಯಕ್ತಿಗಳು ಜಿಂಕೆಗಳನ್ನು ಹಿಡಿಯಲು ಪ್ರಯತ್ನಿಸುತ್ತಿರುವಂತೆ ಚಿತ್ರಗಳಿವೆ.

ಚಿಕ್ಕರಾಂಪುರ (೪)ರಲ್ಲಿ ಬಿಲ್ಲು ಬಾಣ ಹಿಡಿದ ಆಶ್ವಸವಾರರು ಎತ್ತು ಆಕಳುಗಳನ್ನು ಹಿಡಿಯುತ್ತಿರುವಂತಹ ಚಿತ್ರವಿದೆ. ಎಮ್ಮಿ ಗುಡ್ಡದ ೨ನೇ ಕಲ್ಲಾಸರೆಯಲ್ಲಿ ಪ್ರಾಣಿಯೊಂದನ್ನು ಕೋಲು ಅಥವಾ ಭರ್ಚಿ ಹಿಡಿದ ವ್ಯಕ್ತಿಗಳು ಸುತ್ತುವರಿದ ಚಿತ್ರವಿದೆ. ಇದು ಬಿಳಿ ವರ್ಣದ್ದು.

ಪಶುಪಾಲನೆ

ಪಶುಪಾಲನೆ ಶಿಲಾಯುಗದ ಜನತೆಯ ಮುಖ್ಯ ಕಸುಬಾಗಿತ್ತು. ಪಶುಪಾಲನೆಯ ದೃಶ್ಯಗಳನ್ನು ಪ್ರಾಗಿತಿಹಾಸ ಕಾಲದ ಚಿತ್ರಕಲೆಯಲ್ಲಿ ಗುರುತಿಸಬಹುದು. ಚಿಕ್ಕರಾಂಪುರದ ೧ನೇ ಕಲ್ಲಾಸರೆಯಲ್ಲಿ ಎತ್ತು ಮತ್ತಿತರ ಸಾಕುಪ್ರಾಣಿಗಳನ್ನು ಹೊಡೆದುಕೊಂಡು ಹೊರಟ ವ್ಯಕ್ತಿಯ ಚಿತ್ರವಿದೆ. ಅವನ ಕೈಯಲ್ಲಿ ಉದ್ದವಾದ ಭರ್ಚಿಯಿದೆ. ಪಶುಗಳ ಗುಂಪಿನಲ್ಲಿ ನಾಯಿ ಇದೆ. ಅದೇ ರೀತಿ ಅಗೋಲಿ ತೆಂಬಾ ಮತ್ತು ಹಿರೇಬೆಣಕಲ್ಲಿನ ಒಂದು ಕಲ್ಲಾಸರೆಯಲ್ಲಿ ಪಶುಪಾಲಕರ ಚಿತ್ರಗಳಿವೆ. ಅಗೋಲಿ (೨) ಯಲ್ಲಿ ಪಶುಗಳ ಗುಂಪಿನ ಮಧ್ಯ ಪಶುಪಾಲಕನಿದ್ದು ಅವನ ಕೈಯಲ್ಲಿ ಬಿಲ್ಲು ಬಾಣಗಳಿವೆ. ತೆಂಬಾದಲ್ಲಿ ನಾಲ್ಕು ಎತ್ತುಗಳನ್ನು ಹೊಡೆದುಕೊಂಡು ಹೊರಟ ವ್ಯಕ್ತಿಯ ಚಿತ್ರವಿದೆ. ಎಲ್ಲಾ ಎತ್ತುಗಳ ಕೊರಳಲ್ಲಿ ಗಂಟೆಯಾಕಾರದ ವಸ್ತುವನ್ನು ಕಟ್ಟಿರುವುದು ಗಮನಾರ್ಹ. ವ್ಯಕ್ತಿಯ ಕೈಯಲ್ಲಿ ಕತ್ತಿಯಂತಹ ಆಯುಧವಿದೆ. ಹಿರೇಬೆಣಕಲ್ಲಿನಲ್ಲಿ ಹತ್ತು ಪಶುಗಳನ್ನು ಹೊಡೆದುಕೊಂಡು ಹೊರಟ ವ್ಯಕ್ತಿಯ ಚಿತ್ರವಿದೆ. ಅವನ ಕೈಯಲ್ಲಿ ಕೋಲು ಬಿಲ್ಲು ಬಾಣ ಸೊಂಟದಲ್ಲಿ ಕತ್ತಿಗಳಿವೆ. ಇದರಿಂದ ಪಶುಪಾಲಕರು ತಮ್ಮ ಪಶುಗಳನ್ನು ಕ್ರೂರ ಪ್ರಾಣಿಗಳಿಂದ ರಕ್ಷಿಸಲು ಬಿಲ್ಲು ಬಾಣ ಖಡ್ಗಗಳನ್ನು ತಮ್ಮ ಜೊತೆ ಇಟ್ಟುಕೊಳ್ಳುತ್ತಿದ್ದರೆಂದು ತಿಳಿಯಬಹುದು.

ಲೈಂಗಿಕ ಕ್ರಿಯೆ

ಲೈಂಗಿಕ ಕ್ರಿಯೆಯೂ ಕೂಡ ಚಿತ್ರದ ವಸ್ತುವಾಗಿದೆ. ಸಂಭೋಗ ಕ್ರಿಯೆಯನ್ನು ಚಿತ್ರಗಳಲ್ಲಿ ಸಾಂಕೇಂತಿಕವಾಗಿ ತೋರಿಸಲಾಗಿದೆ. ಹಂಪಿಯ ನಾಲ್ಕನೇ ಕಲ್ಲಾಸರೆಯಲ್ಲಿ ಹಿರೇಬೆಣಕಲ್ಲಿನ ೧೧ ಮತ್ತು ೧೨ನೇ ಗವಿಗಳಲ್ಲಿ ಗಂಡು ಹೆಣ್ಣಿನ ಲೈಂಗಿಕ ಕ್ರಿಯೆಯ ಚಿತ್ರಗಳಿವೆ. ಹಂಪಿಯಲ್ಲಿ ಎರಡು ವ್ಯಕ್ತಿಗಳ ಚಿತ್ರಗಳು ಒಂದರ ಪಕ್ಕ ಒಂದಿವೆ. ಅವೆರಡರ ಗುಹ್ಯ ಸ್ಥಾನವನ್ನು ಅರೆ ವೃತ್ತಾಕಾರದ ರೇಖೆಯಿಂದ ಸೇರಿಸಿದೆ. ಇದು ಆ ಇಬ್ಬರ ಮಧ್ಯ ಲೈಂಗಿಕ ಕ್ರಿಯೆಯ ಸೂಚಕ ರೀತಿ. ಹಿರೇಬೆಣಕಲ್ಲಿನಲ್ಲಿ ಕೈಗಳನ್ನು ಮೇಲೆಕ್ಕೆತ್ತಿ ತೊಡೆಗಳನ್ನು ಅಗಲಿಸಿರುವ ಜೋಡಿಯ ಮರ್ಮಾಂಗಗಳಿರುವ ಸ್ಥಾನಗಳನ್ನು ಒಂದು ಗೆರೆಯಿಂದ ಸೇರಿಸಿದೆ. ಇದು ಕೂಡ ಸಂಭೋಗದ ಸ್ಥಿತಿಯನ್ನು ತೋರಿಸುವ ರೀತಿ.

ಎಮ್ಮಿಗುಡ್ಡದ ೨ನೇ ಕಲ್ಲಾಸರೆಯಲ್ಲಿ ಬಿಳಿವರ್ಣದ ಕಡ್ಡಿ ಯಾಕಾರದ ಹೆಣ್ಣುಗಂಡಿನ ಜೋಡಿ ಇದೆ. ಇದರಲ್ಲಿ ಸ್ತ್ರೀ ಚಿತ್ರ ಸ್ಪಷ್ಟವಾಗಿದೆ. ಎದೆ ಸ್ಥಾಣದಲ್ಲಿ ಎರಡು ಚುಕ್ಕೆಗಳನ್ನು ಇಟ್ಟು ಸ್ತನಗಳನ್ನು ಸೂಚಿಸಲಾಗಿದೆ. ಈ ಜೋಡಿಯ ಮರ್ಮಾಂಗಗಳಿರುವ ಸ್ಥಾನವನ್ನು ನೇರ ಗೆರೆಯಿಂದ ಸೇರಿಸಿ ಸಂಭೋಗ ಸ್ಥಿತಿಯನ್ನು ತೋರಿಸಲಾಗಿದೆ.

ಆರಾಧನೆ

ಹಂಪಿ, ಹಿರೇಬೆಣಕಲ್, ಚಿಕ್ಕಬೆಣಕಲ್, ನಾರಾಯಣ ಪೇಟೆ ಮತ್ತು ಮಲ್ಲಾಪುರಗಳಲ್ಲಿ ನಗ್ನರಾದ ಸ್ತ್ರೀಪುರುಷರು ದಂಪತಿಗಳು ಮೈಮೇಲೆ ವಿಚಿತ್ರಾಕಾರದಲ್ಲಿ ರೇಖೆಗಳನ್ನು ಬರೆದು ಕೊಂಡು ನರ್ತಿಸುತ್ತಿರುವಂತೆ ಕಾಣುವ ಚಿತ್ರಗಳಿವೆ. ಇವು ಮಾಂತ್ರಿಕ ಆರಾಧನೆಗೆ ಸಂಬಂಧಿಸಿದವು.

ಮಲ್ಲಾಪುರ, ಚಿಕ್ಕಬೆಣಕಲ್ ಗಳಲ್ಲಿ ಇಂಥ ವ್ಯಕ್ತಿ ಚಿತ್ರಗಳ ಜೊತೆಯಲ್ಲಿ ಕಾಡು ಕೋಣ, ಹಂದಿ, ಜಿಂಕೆ, ನವಿಲು ಮುಂತಾದ ಪ್ರಣಿಗಳ ಮುಖದ ಅರೆದೇಹದ ಮತ್ತು ಪೂರ್ಣ ದೇಹದ ಚಿತ್ರಗಳಿವೆ. ಇವುಗಳ ಮೇಲೂ ಮನುಷ್ಯ ಚಿತ್ರಗಳ ಮೇಲಿರುವಂತೆ ರೇಖಾಕೃತಿಗಳಿವೆ. ಪ್ರಾಯಶಃ ಮಾಂತ್ರಿಕ ಆರಾಧನೆಯಲ್ಲಿ ಈ ಪ್ರಾಣಿಗಳು ಬಳಕೆಯಾಗಿರಬಹುದೆಂದು ತೋರುತ್ತದೆ. ಅಂದರೆ ಇಂತಹ ಪ್ರಾಣಿಗಳನ್ನು ಬಲಿ ಕೊಟ್ಟಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಇಂತಹ ಚಿತ್ರಗಳು ದೊಡ್ಡ ಪ್ರಮಾಣದಲ್ಲಿವೆ. ಹಿರೇಬೆಣಕಲ್ಲಿನ ೨ ಮತ್ತು ೧೬ನೇ ಗವಿಯ ಪ್ರಾಣಿ ಮಾನವಾಕೃತಿಗಳ ಮೇಲೂ ರೇಖಾಕೃತಿಗಳಿರುವುದು ವಿಶೇಷ.

ಹಂಪಿಯ ಬರಮ ದೇವರ ಗುಂಡಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಕುಣಿತದಲ್ಲಿ ತೊಡಗಿದ ನಾಲ್ಕು ಸ್ವಲ್ಪ ದೊಡ್ಡ ದೊಡ್ಡ ಮನುಷ್ಯಾಕೃತಿಗಳಿವೆ. ವ್ಯಕ್ತಿಗಳು ಈ ಗೋಲಾಕೃತಿಯ ರಂಗಮಂಟಪದಲ್ಲಿರುವಂತೆ ಕಾಣುತ್ತವೆ. ಎಡಗಡೆಯಿಂದ ಮೊದಲನೇ ಮೂರು ಬಲಬದಿ ನೋಟದಲ್ಲಿವೆ. ಕೊನೆಯದು ಮುಂಬದಿ ನೋಟದಲ್ಲಿದೆ. ಮೊದಲನೇ ಎರಡು ಚಿತ್ರಗಳಲ್ಲಿ ಸ್ತ್ರೀ ಆಕೃತಿಗಳು ಅವುಗಳಿಗೆ ಸ್ಪಷ್ಟವಾಗಿ ಉಬ್ಬಿದ ಸ್ತನಗಳಿವೆ. ಮೂರನೆಯದು ಸಣ್ಣ ಪುರುಷಾಕೃತಿ. ತಲೆಯ ಭಾಗ ಅಳಿಸಿ ಹೋಗಿದೆ. ಈ ಮೂರು ಸ್ವಲ್ಪ ಕುಗ್ಗಿ ನಿಂತ ಭಂಗಿಯಲ್ಲಿವೆ. ಮುಂಡದ ಭಾಗವು ಸ್ವಲ್ಪ ಮುಂದೆ ಬಾಗಿದೆ. ಕೈಗಳನ್ನು ನೆಟ್ಟಗೆ ಮುಂಚಾಚಿದೆ. ಬೆರಳುಗಳನ್ನು ಬಿಡಿಸಲಾಗಿದೆ. ಮುಖವನ್ನು ಬಳಕ್ಕೆ ತಿರುಗಿಸಿದೆ. ಮೈಮೇಲೆಲ್ಲಾ ರೇಖಾಚಿತ್ರಗಳಿವೆ. ಮುಖದ ಮೇಲೆ ಗುಣಾಕಾರ ಆಕೃತಿಯಿದ್ದು ಪ್ರತಿಯೊಂದೂ ಕವಲಿನಲ್ಲಿಯೂ ಒಂದೊಂದು ಅರ್ಧ ಕಂಸವಿದೆ. ನಾಲ್ಕನೆಯ ವ್ಯಕ್ತಿಯ ಎರಡೂ ಕೈಗಳು ಆ ಕಡೆ ಈ ಕಡೆ ಮುಂಚಾಚಿವೆ. ತಲೆ ಸ್ಪಷ್ಟವಿಲ್ಲ. ಎದೆಯ ಭಾಗ ತೀರ ಸಣ್ಣಸಾಗಿದ್ದು ಹೊಟ್ಟೆಯ ಭಾಗ ಅತಿರೇಕವಾಗಿ ಉಬ್ಬಿದೆ. ಕಾಲುಗಳು ಅಗಲಿಸಿದ್ದು ಕೈಗಳಂತೆ ತೆಳ್ಳಗಿವೆ. ಇದು ಗರ್ಭಿಣಿ ಸ್ತ್ರೀ ಚಿತ್ರದ್ದಾಗಿರಬಹುದು.

ಈ ರೀತಿಯ ಚಿತ್ರಗಳು ಮಾಂತ್ರಿಕ ಆಚರಣೆಗೆ ಸಂಬಂಧಿಸಿದವೆಂದು ಹೇಳಬಹುದು. ಈಗಲೂ ಆದಿವಾಸಿಗಳಲ್ಲಿ ಈ ರೀತಿಯ ಆಚರಣೆಗಳಿವೆ. ಆಫ್ರಿಕಾ ದೇಶದ ಸಹರಾದಲ್ಲೂ ಮೈಮೇಲೆ ರೇಖಾಕೃತಿಗಳಿರುವ ಇದೇ ತರಹದ ಕೊರೆದ ಮನುಷ್ಯ ಚಿತ್ರಗಳು ದೊರೆತಿವೆ. ಅಲ್ಲಿಯ ಬುಡಕಟ್ಟು ಜನಾಂಗದಲ್ಲೂ ಅದೇ ರೀತಿ ಮೈಮೇಲೆ ರೇಖೆಗಳನ್ನು ಹಾಕಿಕೊಂಡು ಮಾಂತ್ರಿಕ ವಿಧಿಗಳಲ್ಲಿ ಈಗಲೂ ತೊಡಗುವ ಆಚರಣೆಗಳಿವೆ.

ಶವಸಂಸ್ಕಾರ

ಚಿಕ್ಕರಾಂಪುರದ ಒಂದನೇ ಕಲ್ಲಾಸರೆಯಲ್ಲಿ ಅತ್ಯಂತ ಅಪರೂಪದ ಬೃಹತ್ ಶಿಲಾ ಸಂಸ್ಕೃತಿಯ ಕಲ್ಲುಗುಂಡು ವೃತ್ತಾಕಾರದ ಶವಗುಣಿಯಲ್ಲಿ ಮಧ್ಯದಲ್ಲಿ ಪ್ರಾಯಶಃ ಕಲ್ಲುಗಳನ್ನಿಟ್ಟು ೨ ಭಾಗಗಳನ್ನಾಗಿ ಮಾಡಲಾಗಿದೆ. ಒಂದು ಭಾಗದಲ್ಲಿ ಶವವನ್ನು ಇರಸಿ ಪಾತ್ರೆಗಳನ್ನು (?) ಇರಿಸಲಾಗಿದೆ. ಇನ್ನೊಂದು ಭಾಗದಲ್ಲಿ ಅಲೆಯಾಕಾರದ ಗೆರೆಗಳನ್ನು ಹಾಕಲಾಗಿದೆ. ಶವ ಸುತ್ತಲೂ ೧೩ ಕಲ್ಲುಗುಂಡುಗಳನ್ನು ಇಡಲಾಗಿದೆ. ಬೃಹತ್ ಶಿಲಾಯುಗದ ಜನರ ಶವಸಂಸ್ಕಾರದ ಬಗ್ಗೆ ತಿಳಿಸುವ ಮಹತ್ವದ ಚಿತ್ರವಿದು.

ಮಂಡಲ, ವೃತ್ತ, ಹಸ್ತ ಮತ್ತು ರೇಖಾ ಸಂಕೇತ ಚಿತ್ರಗಳು

ಗವಿವರ್ಣ ಮತ್ತು ಬಯಲು ಬಂಡೆ ಚಿತ್ರಗಳನ್ನು ಅಪರೂಪದವಾಗಿ ಅಲ್ಲಲ್ಲಿ ಕುತೂಹಲ ಕಾರಿಯಾದ ಒಗಟಿನ ರೇಖಾಕೃತಿಗಳಿವೆ. ಕೆಲವು ಕೆಂಪು ಮತ್ತು ಬಿಳಿ ವರ್ಣದವು. ಮತ್ತೆ ಕೆಲವು ಬಂಡೆಯ ಮೇಲೆ ಗೀರು ಚಿತ್ರಗಳು. ಇವುಗಳಲ್ಲಿ ಮಂಡಲ, ವೃತ್ತ, ಹಸ್ತಮುದ್ರೆ, ರೇಖಾ ಸಂಕೇತಗಳು ಹಾಗೂ ಕುಳಿ ಚಿತ್ರಗಳೆಂದು ವಿಂಗಡಿಸಬಹುದು.

ಮಂಡಲಗಳು

ಮಂಡಲ ಚಿತ್ರಗಳು ಹಿರೇಬೆಣಕಲ್ (೬) ಚಿಕ್ಕಬೆಣಕಲ್ (೧) ಆನೆಗುಂದಿ (೨,೩) ಚಿಕ್ಕರಾಂಪುರದ (೬) ಬಿಳೇಭಾವಿ (೧.೨) ಮತ್ತು ಮಲ್ಲಾಪುರಗಳಲ್ಲಿ (೬) ಇವೆ. ಮಂಡಲ ಚಿತ್ರಗಳಲ್ಲಿ ಮೂರು ರೀತಿ ಇವೆ. ಚಿಕ್ಕರಾಂಪುರದಲ್ಲಿ ಎರಡು ಮತ್ತು ಬಿಳೇಭಾವಿ, ಮಲ್ಲಾಪುರದಲ್ಲಿ ಒಂದರೊಳಗೊಂದಿರುವ ನಾಲ್ಕು ಮೂಲೆ ಗಂಟಿನ, ಒಟ್ಟು ಎಂಟು ಗಂಟಿನ ರೀತಿಯವು. ಒಂದನ್ನೊಂದು ಛೇದಿಸುವ ಎರಡು ಸಮ ಚತುರ್ಭುಜಗಳು ಇವುಗಳ ಕೆಳಗೆ ನಾಲ್ಕು ಮೂಲೆಗಳಲ್ಲಿ ತಿರುಗಂಟುಗಳಿರುತ್ತವೆ. ಹೀಗಾಗಿ ಈ ರೇಖಾ ಮಂಡಲಕ್ಕೆ ಕೊನೆ ಮೊದಲಿರುವುದಿಲ್ಲ. ಮಲ್ಲಾಪುರದಲ್ಲಿ ಬಾಹ್ಯ ಮಂಡಲ ಮೂರು ರೇಖೆಯದು. ಒಳಗಿನದು ದ್ವಿರೇಖೆಯದು. ಉಳಿದವೆಲ್ಲವೂ ದ್ವಿರೇಖೆಯವು. ಚಿಕ್ಕರಾಂಪುರದ ಮಂಡಲಗಳಲ್ಲಿ ಒಂದರಲ್ಲಿ ಪುನಃ ಒಂದು ಅಸಮ ಗಂಟು ಇನ್ನೊಂದರಲ್ಲಿ ಮೂರು ಅಸಮ ಗಂಟಿನ ರೇಖೆಗಳಿವೆ. ಹಾಗೆ ಈ ಮಂಡಲದ ಸುತ್ತಲೂ ಚೌಕಗಳಿದ್ದು ಅದಕ್ಕೆ ಸುತ್ತಲೂ ಸಣ್ಣ ಸಣ್ಣ ರೇಖೆಗಳನ್ನು ಹಾಕಿ ಅಲಂಕರಿಸಲಾಗಿದೆ. ಈ ಮಂಡಲಗಳಿವೆ ಹೊಂದಿಕೊಂಡಂತೆ ಗೂಳಿಯ ಚಿತ್ರಗಳಿವೆ. ಇಲ್ಲಿಯೇ ನಾಲ್ಕು ಗಂಟಿನ ದ್ವಿರೇಖಾ ಮಂಡಲವನ್ನು ಹೊಂದಿರುವ ವೃತ್ತ ಹಾಗೂ ಇಂತಹದೇ ಮಂಡಲದಲ್ಲಿ ಪ್ರಾಯಶಃ ದಂಪತಿಗಳೆಂದು ತೋರುವ ವ್ಯಕ್ತಿ ಚಿತ್ರಗಳಿವೆ.

ಎರಡನೆಯ ರೀತಿಯ ಮಂಡಲಗಳು ಮೂಲೆ ಗಂಟಿರದ ಚೌಕ, ಆಯತ ಮಂಡಲಗಳು ಇವುಗಳ ಒಳಗೆ ಅಡ್ಡ ಉದ್ದ ಮತ್ತು ವಕ್ರವಾಗಿ ನೇರ ರೇಖೆಗಳಿರುತ್ತವೆ. ಈ ರೀತಿಯ ಮಂಡಲಗಳು ಚಿಕ್ಕಬೆಣಕಲ್, ಬಿಳೇಭಾವಿ (೨) ಹಿರೇಬೆಣಕಲ್ (೬.೯) ಮತ್ತು ಚಿಕ್ಕರಾಂಪುರಗಳಲ್ಲಿವೆ. ಬಿಳೇವಿಯಲ್ಲಿ ಒಂದು ಆಯತವಿದ್ದು ಅದರ ಮಧ್ಯ ಒಂದು ಸಣ್ಣ ವೃತ್ತವಿದೆ. ಅದರಿಂದ ಎಂಟು ದಿಕ್ಕಿಗೂ ರೇಖೆ ಎಳೆಯಲಾಗಿದೆ. ಆ ರೇಖೆಗಳ ತುದಿಯಲ್ಲಿ ಆಯತದ ಹೊರಗೆ ಚಿಕ್ಕ ಚಿಕ್ಕ ವೃತ್ತಗಳಿವೆ. ಎರಡನೆಯದು ಲಂಬ ಮತ್ತು ಉದ್ದದ ೩ ರೇಖೆಗಳು ಪರಸ್ಪರ ಛೇದಿಸಿದ ಆಯತವಿದ್ದು, ಎಲ್ಲಾ ರೇಖೆಗಳು ಆಯತದಿಂದ ಸ್ವಲ್ಪ ಹೊರಕ್ಕೆ ಚಾಚಿವೆ. ಒಳಗೆ ವಕ್ರವಾಗಿ ಎರಡು ಮೂಲೆಯಿಂದ ರೇಖೆ ಎಳೆಯಲಾಗಿದೆ. ಮತ್ತು ಆಯತದ ನಾಲ್ಕು ಭುಜಗಳನ್ನು ಸ್ಪರ್ಶಿಸುವಂತೆ ವಜ್ರಾಕೃತಿಯನ್ನು ಹಾಕಲಾಗಿದೆ. ಇನ್ನೊಂದು ಸ್ವಲ್ಪ ಚೌಕಾಕಾರವಾಗಿದೆ. ಅದರಲ್ಲಿ ಸಂಕಲನ ಮತ್ತು ಗುಣಕಾರ ಚಿನ್ಹೆ ರೀತಿ ಹಾಕಿದ್ದು ಚೌಕದ ನಾಲ್ಕು ಮೂಲೆಯಲ್ಲಿ ಹೂವಿನಂತೆ ಎರಡು ಗಂಟಿನ ಅಲಂಕರಣೆಗಳಿವೆ.

ಹಿರೇಬೆಣಕಲ್ಲಿನಲ್ಲಿ ಮೂರು ಅಡ್ಡ ಮೂರು ಉದ್ದ ಸಮಾನಾಂತರ ರೇಖೆಗಳು ೯೦ ಕೋನದಲ್ಲಿ ಛೇದಿಸಿವೆ. ಇವುಗಳ ತುದಿಯನ್ನು ಏರಿಳಿತದ ಗೆರೆಯಿಂದ ಸೇರಿಸಿದೆ. ಚಿಕ್ಕಬೆಣಕಲ್ಲಿನಲ್ಲಿ ಚೌಕ ಅಂಕಣದ ಮಂಡಲವಿದೆ. ಅದರಲ್ಲಿ ಸರಿಯಾಗಿ ಎರಡು ಅಡ್ಡ ಗೆರೆಗಳಿವೆ. ಇದರಿಂದ ಅಂಕಣವು ಮೂರು ಭಾಗವಾಗಿದೆ. ಈ ಅಡ್ಡ ರೇಖೆಗಳನ್ನು ಎರಡೂ ತುದಿಯಲ್ಲಿ ಅರೆ ತ್ರಿಕೋನಾಕಾರದ ಗೆರೆಯಿಂದ ಸೇರಿಸಲಾಗಿದೆ. ಹಾಗೂ ಚೌಕ ಅಂಕಣದ ಮಧ್ಯದ ಆಯಾತಾಕರದ ಮಧ್ಯ ಮೇಲೆ ಕೆಳಗೆ ದ್ವಿರೇಖಾ ಪಟ್ಟಿಯಿದೆ. ಇದರ ಎರಡೂ ಬದಿಯ ತುದಿಯು ಚೂಪಾಗಿದೆ.

ಚಿಕ್ಕರಾಂಪುರದಲ್ಲಿ ಒಂಭತ್ತು ವೃತ್ತಗಳ ಒಂದು ವಿಶಿಷ್ಟ ರೇಖಾ ಮಂಡಲವಿದೆ. ಮೂರು ಸಾಲಿನಲ್ಲಿ ಮೇಲೆ ಮಧ್ಯ ಕೆಳಗೆ ಸಮಾನಾಂತರದಲ್ಲಿ ಒಂಭತ್ತು ಚಿಕ್ಕ ವೃತ್ತಗಳಿವೆ. ಈ ಎಲ್ಲ ವೃತ್ತಳನ್ನು ಜೋಡಿಸುವ ಮೂರು ಲಂಭ ರೇಖೆಗಳು ಎರಡು ವಕ್ರರೇಖೆಗಳಿವೆ. ಕೊನೆಯ ನಾಲ್ಕು ವೃತ್ತಗಳನ್ನು ಬಿಟ್ಟು ಉಳಿದವುಗಳನ್ನು ಕೂಡ ರೇಖೆಯಿಂದ ಸೇರಿಸಲಾಗಿದ್ದು ಮಧ್ಯದಲ್ಲಿ ವಜ್ರಾಕೃತಿ ಉಂಟಾಗಿದೆ.

ಆನೆಗುಂದಿಯ ಒಂದು ಮೂರನೇ ಗವಿಯಲ್ಲಿ ಒಂದೇ ರೀತಿಯ ವೃತ್ತ ಮಂಡಲವಿದೆ. ವೃತ್ತದಲ್ಲಿ ಮೊದಲು ಅಡ್ಡ ಎರಡು ಉದ್ದ ರೇಖೆಗಳನ್ನು ಸಮನಾಂತರದಲ್ಲಿ ಹಾಕಲಾಗಿದೆ. ಇದರಿಂದ ಒಂಭಕತ್ತು ಅಂಕಣಗಳಗಿವೆ. ಮಧ್ಯ ಅಂಕಣದಲ್ಲಿ ಒಳಗೆ ಗುಣಾಕಾರ ಚಿನ್ಹೆ ಹಾಕಿ ಅಲ್ಲಿ ನಾಲ್ಕು ಅಂಕಣಗಳನ್ನು ಹೊರಗೆ ನಾಲ್ಕು  ಭುಜಗಳಿಂದ ತ್ರಿಕೋನಾಕಾರದ ಅಂಕಣಗಳನ್ನು ಒಟ್ಟು ಮಾಡಿ ಒಟ್ಟು ಇಪ್ಪತ್ತು ಅಂಕಣಗಳ ವೃತ್ತವನ್ನಾಗಿಸಿದೆ.

ಮೂರನೆಯ ರೀತಿಯ ಮಂಡಲಗಳು ಸಂಪೂರ್ಣ ರಂಗೋಲಿ ರೀತಿಯವು. ಆನೆಗುಂದಿಯ ೫ನೇ ಕಲ್ಲಾಸರೆಯಲ್ಲಿವೆ. ಇಡೀ ಕಲ್ಲಾಸರೆಯ ತುಂಬೆಲ್ಲಾ ಬಿಳಿ ಮತ್ತು ಕೆಂಪು ಬಣ್ಣದಲ್ಲಿ ವಿವಿಧ ರೀತಿಯ ರಂಗೋಲಿ ಚಿತ್ರಗಳಿವೆ.

ಮಂಡಲ ಚಿತ್ರಗಳಿಗೆ ಧಾರ್ಮಿಕ ಅರ್ಥಗಳಿರಬಹುದೆಂದು ಊಹಿಸಬಹುದು. ಹಾಗೂ ಇವು ಬಹುಮಟ್ಟಿಗೆ ಬೃಹತ್ ಶಿಲಾಯುಗದ ಸಂಸ್ಕೃತಿಯ ಜನರಿಗೆ ಸೇರಿದವು. ಹಿರೇಬೆಣಕಲ್ ಚಿಕ್ಕರಾಂಪುರ ಬಿಳಿಭಾವಿ ಮತ್ತು ಮಲ್ಲಾಪುರದ ಮಂಡಲ ಚಿತ್ರಗಳಿರುವ ಗವಿಗಳ ಸಮೀಪದಲ್ಲಿ ಈ ಸಂಸ್ಕೃತಿಯ ಜನ ವಾಸ್ತವ್ಯದ ನೆಲೆಗಳು ಮತ್ತು ಶಿಲಾ ಸಮಾಧಿಗಳಿವೆ.

ವೃತ್ತಗಳು

ಗವಿವರ್ಣ ಚಿತ್ರಗಳಲ್ಲಿಯೇ ಅಲ್ಲಲ್ಲಿ ವಿವಿಧ ರೀತಿಯ ವೃತ್ತಾಗಳ ಚಿತ್ರಗಳಿವೆ. ವೃತ್ತಗಳಲ್ಲಿ ಒಟ್ಟು ಹತ್ತು ರೀತಿಯ ವೃತ್ತ ಚಿತ್ರಗಳನ್ನು ಗುರುತಿಸಬಹುದು.

ಹಿರೇಬೆಣಕಲ್ಲಿನ ೪ನೇ ಕಲ್ಲಸರೆಯಲ್ಲಿ ಪರಸ್ಪರ ಛೇದಿಸುವ ೨ ವೃತ್ತಗಳ ಒಂದು ಆಕೃತಿಯಿದೆ. ಅಲ್ಲಿಯ ೫ನೇ ಗವಿಯಲ್ಲಿ ಉದ್ದ ಅಡ್ಡವಾಗಿ ಒಂದೊಂದು ಪರಸ್ಪರ ಛೇದಿಸುವ ೨ ರೇಖೆಗಳ ಸಹಿತ ೪ ರೇಖೆಗಳನ್ನು ಒಳಗೊಂಡ ವೃತ್ತಗಳಿವೆ. ಇವು ಎರಡನೆಯ ರೀತಿ. ಮೂರನೇ ಪ್ರಕಾರದವು ಅಗೋಲಿಯಲ್ಲಿ (೨) ಮತ್ತು ತಂಬಾ (೪)ದಲ್ಲಿವೆ. ಇವು ಎರಡನೆಯ ಪ್ರಕಾರದಂತಿದ್ದರೂ ವೃತ್ತದ ಮಧ್ಯದಲ್ಲಿ ಮತ್ತೊಂದು ಚಿಕ್ಕ ವೃತ್ತವಿದೆ. ಅದರ ಸುತ್ತಲೂ ರೇಖೆಗಳಿವೆ. ಇದೇ ರೀತಿಯಲ್ಲಿ ದ್ವಿಬಾಹ್ಯ ರೇಖೆಗಳನ್ನು ಒಳಗೊಂಡ ಒಂದು ವೃತ್ತ ಅಗೋಲಿಯಲ್ಲಿ (೪) ಇದೆ. ನಾಲ್ಕನೆಯ ರೀತಿಯವು ೨ ವೃತ್ತಗಳು ಮಲ್ಲಾಪುರದ ೭ನೇ ಗವಿಯಲ್ಲಿದೆ. ಇಲ್ಲಿ ಮಧ್ಯದಲ್ಲಿ ಒಂದು ವೃತ್ತವಿದ್ದು ಅದರ ಒಳಗೆ ಹಾಗೂ ಹೊರಗೆ ತ್ರಿಕೋನಾಕಾರದಲ್ಲಿ ಸುತ್ತಲೂ ಹಾಕಿರುವ ರೇಖೆಗಳಿವೆ. ೫ನೇ ವಿಧ ಬಿಳೇಭಾವಿಯಲ್ಲಿದೆ. ವೃತ್ತದ ಮಧ್ಯದಲ್ಲಿ ಚೌಕವಿದೆ. ಅದಕ್ಕೆ ಲಂಬವಾಗಿ ಮತ್ತು ಅಡ್ಡವಾಗಿ ದ್ವಿರೇಖೆಗಳು ಮತ್ತು ವಕ್ರವಾಗಿ ಏಕರೇಖೆಗಳನ್ನು ಹಾಕಲಾಗಿದೆ. ಗಡ್ಡಿಯಲ್ಲಿ (೩) ೬ನೇ ರೀತಿಯ ಒಂದು ವೃತ್ತವಿದೆ. ಅದರಲ್ಲಿ ಸ್ವಲ್ಪ ವಕ್ರವಾಗಿರುವ ೩ ಲಂಬ ರೇಖೆಗಳು ಸಮಾನಾಂತರದಲ್ಲಿವೆ. ೭ನೇ ರೀತಿಯ ವೃತ್ತ ಅಗೋಲಿಯಲ್ಲಿದೆ. ವೃತ್ತದಲ್ಲಿ ಸಂಕಲನ ಚಿನ್ಹೆಯಂತೆ ರೇಖೆ ಇದೆ. ೮ನೇ ರೀತಿಯದು ಅಗೋಲಿಯ ಕಲ್ಲಾಸರೆಯಲ್ಲಿದೆ. ದ್ವಿಬಾಹ್ಯರೇಖೆಯ ವೃತ್ತವಿದು. ಅದರಲ್ಲಿ ದ್ವಿರೇಖೆಯ ರೋಮನ್ ಲಿಪಿನಂತೆ ರೇಖಾಕೃತಿಯಿದೆ. ೯ನೇ ರೀತಿಯ ವೃತ್ತಗಳು ಕೊರೆದ ಚಿತ್ರಗಳು. ಇವು ಹಿರೇಬೆಣಕಲ್ ಮತ್ತು ಮಲ್ಲಾಪುರ (೧,೨)ಗಳಲ್ಲಿವೆ. ಒಂದರೊಳಗೊಂದು ಎರಡು ವೃತ್ತಗಳು ಮಧ್ಯದಲ್ಲಿ ಅಗಲದ ಬಿಂದು ಇರುವುದು ಇದರ ವಿಶೇಷ. ಈ ರೀತಿ ಹಿರೇಬೆಣಕಲ್ಲಿನಲ್ಲಿ ಒಂದು ವೃತ್ತಾಕಾರದ ಬಂಡೆಯಲ್ಲಿ ಕೊರೆಯಲಾಗಿದೆ. ಉಳಿದವು ಚಿಕ್ಕ ವೃತ್ತಗಳು.

ಇತರ ವೃತ್ತಾಕೃತಿಗಳು

ಮಲ್ಲಾಪುರ ೨ನೇ ಬಂಡೆ ಚಿತ್ರದ ನೆಲೆಯಲ್ಲಿ ಒಂದು ವಿಶಿಷ್ಟವಾದ ಕೊರೆದ ವೃತ್ತ ಚಿತ್ರವಿದೆ. ಅದರಲ್ಲಿ ಅಸಮವಾಗಿ ಎಳೆದ ಪರಸ್ಪರ ಛೇದಿಸುವ ಮೂರು ರೇಖೆಗಳಿವೆ. ವೃತ್ತದ ಹೊರ ಮೇಲಿನ ಮೂಲೆಯಲ್ಲಿ ಅರೆ ವೃತ್ತದ ರೇಖೆ ಅದರೊಳಗೆ ಒಂದು ಅಡ್ಡ ರೇಖೆ ಇದೆ. ಕಮಲಾಪುರದ ಒಂಟಿ ಗುಂಡಿನಲ್ಲಿ ವರ್ಣಚಿತ್ರದ ಜೊತೆಗೆ ಒಂದು ಕೊರೆದ ವೃತ್ತಚಿತ್ರವಿದೆ. ಅದರ ಮಧ್ಯದಲ್ಲಿ ಎಳೆದ ರೇಖೆಯು ವೃತ್ತದವರೆಗೆ ದೀರ್ಘವಾಗಿದೆ. ಸಿದ್ದಿಕೇರಿಯ ವೃತ್ತವು ಚಿಕ್ಕ ಕುಳಿಗಳಿಂದ ರಚಿಸಲಾಗಿದೆ. ಅದರೊಳಗೆ ಅದೇ ರೀತಿಯ ಸಂಕಲನ ಚಿನ್ಹೆ ರೀತಿ ರೇಖೆ ಇವೆ.

ಸೂರ್ಯ ಚಿನ್ಹೆಗಳು

ಕೊಪ್ಪಳ ನಾರಾಯಣ ಪೇಟೆ  ಮತ್ತು ಬಿಳೇಭಾವಿಗಳಲ್ಲಿ ಸೂರ್ಯ ಚಿನ್ಹೆಗಳಿವೆ. ಮೊದಲಿನೆರಡು ವೃತ್ತದ ಸುತ್ತಲೂ ಕಿರಣಗಳಂತೆ ರೇಖೆಗಳಿವೆ. ಬಿಳೇಭಾವಿಯಲ್ಲಿ ಮೂರು ವೃತ್ತಗಳು ಒಂದರೊಳಗೊಂದರಂತೆ ೩ ಇವೆ. ಹೊರ ವೃತ್ತಕ್ಕೆ ವಕ್ರವಾಗಿ ಎಳೆದ ರೇಖೆಗಳಿವೆ.

ಹಸ್ತ ಮುದ್ರಿಕೆಗಳು

ಅಗೋಲಿಯ ೨ನೇ ಕಲ್ಲಾಸರೆಯಲ್ಲಿ ಒಂದು ಮತ್ತು ಐದನೇ ಕಲ್ಲಾಸರೆಯಲ್ಲಿ ೧೦ ಕೆಂಪು ವರ್ಣದ ಹಸ್ತ ಮುದ್ರಿಕೆಗಳಿವೆ. ಎಮ್ಮಿಗುಡ್ಡ (೨) ದಲ್ಲಿ ೩ ಬಿಳಿ ಬಣ್ಣದ ಮಲ್ಲಾಪುರ (೧೩) ದಲ್ಲಿ ಬೂದು ಬಣ್ಣದ ಐದು ಹಸ್ತ ಮುದ್ರಿಕೆಗಳಿವೆ.

ಇತರ ಚಿನ್ಹೆ ರೇಖಾಕೃತಿಗಳು

ವಿವಿಧ ರೀತಿಯ ನಕ್ಷತ್ರಾಕಾರಗಳ (ಹಂಪಿ, ಸಂಗಾಪುರ-೧) ಆಯತಾಕಾರಗಳ ಚಿಕ್ಕಬೆಣಕಲ್ (೧) ಮಲ್ಲಾಪುರ (೮) ಆನೆಗುಂದಿ (೯) ಲಿಂಗದಳ್ಳಿ  (೧) ಮತ್ತು ಅಗೋಲಿ  (೨) ಗಳಲ್ಲಿ ಅರ್ಥವಾಗದ ಅನೇಕ ರೇಖಾಚಿನ್ಹೆಗಳು ಚಿಕ್ಕಬೆಣಕಲ್ (೨) ಎಮ್ಮಿಗುಡ್ಡ, ಹಂಪಸದುರ್ಗ (೨) ಮಲ್ಲಾಪುರ (೬) ಆನೆಗುಂದಿ (೨) ಸಿದ್ದಿಕೇರಿ, ಇದರಗಿಗಳಲಲ್ಲಿವೆ. ಕೆಲವು ಲಿಪಿಗಳಂತೆ ಕೆಲವು ಸಂಕೇತ ಚಿತ್ರಗಳಂತಿವೆ.

ಇತರ ಚಿತ್ರಗಳು

ಹಡಗು

ಕಟ್ಟಿಗೆಯ ಹಡಗಿನ ಮಾದರಿಯ  ಚಿತ್ರಗಳು ಅಂಜನಹಳ್ಳಿ ಮತ್ತು ಹಂಪಿಯಲ್ಲಿ (೧) ಕಂಡುಬಂದಿವೆ. ತುಂಗಭದ್ರಾ ನದಿಯ ದಡದಲ್ಲಿರುವ ಈ ನೆಲೆಗಳಲ್ಲಿಯ ಹಡಗಿನ ಚಿತ್ರಗಳು ಸಹಜವಾದರು ಹಡಗಿನ ಮಾದರಿ ಮಾತ್ರ ಕುತೂಹಲ ಮೂಡಿಸುತ್ತದೆ. ಅಂಜನಹಳ್ಳಿಯ ಹಡಗು ೬.೪೨ ಮೀ. ಉದ್ದ ೧ ಮೀ. ಎತ್ತರವಿದೆ. ಹಡಗಿನ ಮೇಲೆ ರೇಖೆಗಳು ನವಿಲು ಗೂಳಿಗಳು ನಾಯಿಯ ಚಿಕ್ಕ ಚಿತ್ರಗಳಿವೆ. ಅವು ಅಲಂಕರಣ ಚಿತ್ರಗಳಾಗಿರಬಹುದು. ಹಂಪಿಯಲ್ಲಿ ಇದೇ ರೀತಿಯ ಹಡಗಿನ ಅರ್ಧಭಾಗದ ಚಿತ್ರವಿದೆ.

ಗಿಡಗಳು

ಮರದ ದೊಡ್ಡ ಕಾಂಡದ ಚಿತ್ರ ಮಲ್ಲಾಪುರದ ೩ನೇ ಗವಿಯಲ್ಲಿದೆ. ಸು. ೪ ಮೀ ಎತ್ತರವಿದ್ದು ಟೊಂಗೆಗಳೂ ಇವೆ, ಎಲೆಗಳಿಲ್ಲ. ಕಾಂಡ ಟೊಂಗೆಯ ಮೇಲೆಲ್ಲಾ ರೇಖಾಚಿತ್ರಗಳನ್ನು ಬರೆಯಲಾಗಿದೆ. ಪ್ರಾಯಶಃ ಇದು ಮಾಂತ್ರಿಕ ವಿಧಿಯಲ್ಲಿ ಉರುವಲಾಗಿ ಬಳಸಿ ಕೊಂಡಿರಬಹುದಾದ ಮರದ ಚಿತ್ರವೆಂದು ತೋರುತ್ತದೆ.

ಸಂಗಾಪುರ (೭) ಮತ್ತು ಬಿಳೇಭಾವಿ (೨)ಗಳಲ್ಲಿ ಹೂ ಗಿಡಗಳ ಚಿತ್ರಗಳಿವೆ. ಸಂಗಾಪುರದಲ್ಲಿ ಆನೆ ಚಿತ್ರದ ಪಕ್ಕದಲ್ಲಿ ೩ ಹೂವಿನ ಗಿಡಗಳಿವೆ. ಹೂವಿನ ಲಕ್ಷಣದಿಂದ ಅದು ಸೂರ್ಯಕಾಂತಿ ಹೂವಿನ ಗಿಡವೆಂದು ತೋರುತ್ತದೆ. ಎತ್ತರವಾದ ಕಾಂಡ ೨ ಬದಿ ಇಳಿ ಬಿದ್ದ ಕಾಂಡಗಳ ತುದಿಯಲ್ಲಿ ಮೊಗ್ಗು ಮತ್ತು ಅರಳಿದ ಹೂವಿನ ಚಿತ್ರಗಳಿವೆ. ಒಂದೂ ಎಲೆಗಳಿಲ್ಲ. ೨ನೇ ಗಿಡದಲ್ಲಿ ಒಂದೇ ಮೊಗ್ಗು ಇದ್ದು, ಎಲೆಗಳೆಲ್ಲ. ಉದುರಿದಂತಿರುವ ಕಾಂಡಗಳಿವೆ. ಇನ್ನೊಂದು ಗಿಡ ಇದೇ ರೀತಿ ಇದೆ.

ಬಿಳೇಭಾವಿಯಲ್ಲಿ ಹೂಗುಚ್ಚದಂತೆ ತೋರುವ ೨ ಗಿಡಗಳಿವೆ. ಒಂದರಲ್ಲಿ ೫ ಮತ್ತೊಂದರಲ್ಲಿ ೬ ಉದ್ದವಾದ ಕಾಂಡಗಳಿದ್ದು ಅವುಗಳ ತುದಿಯಲ್ಲಿ ಮೊಗ್ಗು ಮತ್ತು ಅರಳಿದ ಹೂಗಳಿವೆ. ಇದೇ ರೀತಿ ಗಿಡ ತಿರುಮಲಾಪುರದಲ್ಲಿದೆ.

ಚಿತ್ರಗಳ ತಾಂತ್ರಿಕ ಅಂಶಗಳು

ಚಿತ್ರಗಳ ತಾಂತ್ರಿಕ ಅಂಶಗಳಾದ ವರ್ಣ,ಶೈಲಿ ಮತ್ತು ರಚನಾ ತಂತ್ರಗಳ ಆಧಾರದ ಮೇಲೆ ಚಿತ್ರಗಳ ಕಾಲವನ್ನು ನಿರ್ಧರಿಸಬಹುದು.

ಕೊಪ್ಪಳ-ಹಂಪಿ ಪ್ರದೇಶಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಕೆಮ್ಮಣ್ಣು ಬಣ್ಣ ಮತ್ತು ಅದರಲ್ಲೇ ನೇರಳೆ ಕೆಂಪುವರ್ಣ ಹಾಗೂ ಬಿಳಿ ಬಣ್ಣ ಮುಖ್ಯವಾಗಿ ಬಳಕೆಯಾಗಿವೆ. ಕೆಂಪು ಬಣ್ಣ ಸಾರ್ವತ್ರಿಕವಾಗಿ ಬಳಕೆಯಾಗಿದೆ. ಜಗತ್ತಿನ ವಿವಿಧ ಭಾಗಗಳ ಚಿತ್ರಗಳಲ್ಲಿ ಹೆಚ್ಚಿನವು ಇದೇ ಬಣ್ಣದಿಂದ ರಚಿತವಾಗಿವೆ. ಮತ್ತು ಪ್ರಾಚೀನ ಚಿತ್ರಗಳೆಂದು ಗುರುತಿಸಲಾಗಿರುವ ಹೆಚ್ಚಿನ ಚಿತ್ರಗಳು ಕೆಮ್ಮಣ್ಣು ಬಣ್ಣದಲ್ಲಿವೆ. ಈ ಚಿತ್ರಗಳು ಶೈಲಿಯಿಂದ ವಿಶಿಷ್ಟವಾಗ ರಚನೆಗಳಾಗಿರುತ್ತವೆ. ಸಾಮಾನ್ಯವಾಗಿ ಮನುಷ್ಯರ, ಪ್ರಾಣಿಗಳ ಬಿಡಿ ಚಿತ್ರಗಳು, ಸಮೂಹ ಚಿತ್ರಗಳಿರುತ್ತವೆ. ಇವು ಛಾಯಾ ಇಲ್ಲವೇ ರೇಖಾ ರೂಪದಲ್ಲಿರುತ್ತವೆ. ಕೆಲವು ಗವಿಗಳಲ್ಲಿ ಸಮೂಹ ನೃತ್ಯದ ಮನುಷ್ಯರ ಸಾಲುಗಳು, ಸಾಲಾಗಿ ನಿಂತ ಪ್ರಾಣಿಗಳ ಚಿತ್ರಗಳಿರುತ್ತವೆ. ಪ್ರಾಣಿ ಮತ್ತು ಮನುಷ್ಯ ಚಿತ್ರಗಳಲ್ಲಿ ಕಣ್ಣು, ಕವಿ, ಮೂಗು, ಬಾಯಿ, ಅಪರೂಪವಾಗಿ ಕೈಬೆರಳು, ಪಾದಗಳನ್ನು ಸೂಚಿಸಲಾಗಿರುತ್ತದೆ. ಇಂಥ ಚಿತ್ರಗಳು ಬೆಟ್ಟಗಳ ಒಳಭಾಗದ ಪ್ರದೇಶದಲ್ಲಿರುತ್ತವೆ. ಗವಿ, ಕಲ್ಲಾಸರೆಗಳು ಸ್ವಲ್ಪ ದುರ್ಗಮವಾದ ಸ್ಥಳದಲ್ಲಿರುತ್ತವೆ. ಈ ಚಿತ್ರ ನೆಲೆಗಳ ಸುತ್ತಮುತ್ತ ಶಿಲಾಯುಗ ಸಂಸ್ಕೃತಿಯ ಪ್ರಾಚ್ಯಾವಶೇಷಗಳ ಹೊರತು ನಂತರ ಕಾಲದ ಅವಶೇಷಗಳು ದೊರೆಯುವುದು ತೀರ ವಿರಳ. ಕೆಲವು ಚಿತ್ರಗಳು ನಿರೂಪಣೆ ದೃಷ್ಟಿಯಿಂದ ಉತ್ತಮ ಮಟ್ಟದ ಕಲಾಕೃತಿಗಳಾಗಿವೆ ಎನ್ನಬಹುದು.

ಚಿತ್ರಗಳ ಪ್ರಮಾಣ ಮತ್ತು ರಚನಾ ವಿಧಾನಗಳಿಂದ ಕೂಡ ಅವುಗಳ ಕಾಲ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಮಲ್ಲಾಪುರದ ಖಾನಸಾಬನ ಗವಿ (೩) ಹಿರೇಬೆಣಕಲ್ಲಿನ ೨ ಮತ್ತು ೧೭, ಚಿಕ್ಕಬೆಣಕಲ್ಲಿನ ೩ ನಾರಾಯಣಪೇಟೆಯ ೧, ರಾಮದುರ್ಗ ೧ ಬೋಮ್ಮಸಾಗರತಾಂಡ ೧ ಮತ್ತು ಹೊಸಬಂಡಿಹರ್ಲಾಪುರಗಳ ೩ನೆಯ ಕಲ್ಲಾಸರೆಗಳಲ್ಲಿ ಮನುಷ್ಯ ಪ್ರಾಣಿಗಳ ಚಿತ್ರಗಳ ಬೃಹತ್ ಪ್ರಮಾಣದಲ್ಲಿವೆ. ಕನಿಷ್ಟ ೨ ಮೀಟರದಿಂದ ೧೦ ಮೀಟರ‍್ವರೆಗೆ ಇವೆ. ಮತ್ತು ಇವುಗಳಲ್ಲಿ ಕೆಲವು ಚಿತ್ರಗಳು ಕೈಗೆಟುಕುವ ಸ್ಥಳದಲ್ಲಿಲ್ಲ. ಅವು ನೆಲದಿಂದ ಕನಿಷ್ಟ ೬ ಮೀಟರದಿಂದ ೧೦ ಮೀಟರ್ ಎತ್ತರದಲ್ಲಿವೆ. ಇಷ್ಟು ದೊಡ್ಡ ಅಳತೆಯ ಮತ್ತು ಎತ್ತರದ ಸ್ಥಳಗಳಲ್ಲಿ ಚಿತ್ರ ಬಿಡಿಸುವುದು ಪ್ರಯಾಸದ ಕೆಲಸವೇ ಸರಿ. ಸಾಮಾನ್ಯವಾಗಿ ಚಿತ್ರವೇ ಪ್ರಧಾನವಾದ ಅಭಿವ್ಯಕ್ತಿ ಮಾಧ್ಯಮವಾಗಿದ್ದ ಸಂದರ್ಭದಲ್ಲಿ ಮಾತ್ರ ಚಿತ್ರ ರಚನೆಕಾರರು ತಮ್ಮೆಲ್ಲ ಬೌದ್ಧಿಕ ಮತ್ತು ದೈಹಿಕ ಶ್ರಮವನ್ನು ವಿನಿಯೋಗಿಸಿ ಇಂಥ ಚಿತ್ರಗಳನ್ನು ಬಿಡಿಸಿರಲು ಸಾಧ್ಯ. ಎತ್ತರವಾದ ಸ್ಥಳದಲ್ಲಿ ಚಿತ್ರಗಳನ್ನು ಬಿಡಿಸಬೇಕಾದ ಸಂದರ್ಭದಲ್ಲಿ ಎಂತಹದೋ ಅಟ್ಟಣೆಗೆಯನ್ನು ಕಟ್ಟಿಕೊಂಡಿರಬೇಕೆಂದು ಊಹಿಸಬಹುದು. ಸಾಮಾನ್ಯವಾಗಿ ಈ ಬೃಹತ್ ಚಿತ್ರ ನೆಲೆಗಳ ಸುತ್ತಮುತ್ತ ಬೃಹತ್ ಶಿಲಾಯುಗದ ಶಿಲಾ ಸಮಾಧಿಗಳನ್ನು ಕಾಣಬಹುದು. ಅವು ಕೂಡ ಅಚ್ಚರಿಯ ನಿರ್ಮಾಣಗಳು. ದೊಡ್ಡ ದೊಡ್ಡ ಬಂಡೆಗಳನ್ನು ಎಬ್ಬಿಸಿ ನಿರ್ದಿಷ್ಟ ಆಕಾರದಲ್ಲಿ ಕತ್ತರಿಸಿ ಮನೆಯಂತೆ ನಿಲ್ಲಿಸಿರುವ ರೀತಿ ಆಶ್ಚರ್ಯದಾಯಕ. ಅವುಗಳ ನಿರ್ಮಿತಿಯ ಶ್ರಮದ ಹಿನ್ನೆಲೆಯಲ್ಲಿ, ಬೃಹತ್ ಪ್ರಮಾಣದ ಮತ್ತು ಎತ್ತರ ಸ್ಥಳದಲ್ಲಿರುವ ಚಿತ್ರಗಳು ಕೂಡ ಅದೇ ಸಂಸ್ಕೃತಿಯ ಅಂದರೆ ಕಬ್ಬಿಣ ಯುಗದ ಬೃಹತ್ ಶಿಲಾಸಂಸ್ಕೃತಿ ಕಾಲದ ಜನರ ನಿರ್ಮಾಣಗಳೆಂದು ಸ್ಪಷ್ಟವಾಗಿ ಹೇಳಬಹುದು.

ಚಿತ್ರಗಳ ರಚನಾ ಶೈಲಿಯಿಂದ ಕೂಡ ಕಾಲಮಾನವನ್ನು ಗುರುತಿಸಬಹುದು. ಮಲ್ಲಾಪುರದ ವಾನಭದ್ರೇಶ್ವರ ಬೆಟ್ಟ ಪರಿಸರದಲ್ಲಿ ಅನೇಕ ಚಿತ್ರಿತ ಗವಿಗಳಿವೆ. ದೇವಾಲಯದ ಎದುರಿನಲ್ಲಿ ಅನೇಕ ಗವಿಗಳಿವೆ. ಅಲ್ಲೆಲ್ಲಾ ಸಾಕಷ್ಟು ಸಂಖ್ಯೆಯಲ್ಲಿ ನೂತನ ಶಿಲಾಯುಗದ ನಿರ್ಮಾಣ ಹಂತದ ಆಯುಧಗಳು ಹರಡಿವೆ. ಮತ್ತು ಕೆಲವು ಪೂರ್ಣ ಸಿದ್ಧವಾದ ಆಯುಧಗಳು, ತೂತುಳ್ಳ ಮಡಕೆ ಚೂರುಗಳು, ಅರೆಯುವ ಸಾಧನಗಳು ಮತ್ತಿತರ ಉಪಕರಣಗಳು ಕಂಡು ಬಂದವು. ಇಲ್ಲಿಯ ಒಂದು ಗವಿಯ ಛಾವಣಿಯಲ್ಲಿ ದ್ವಿತ್ರಿಕೋನಾಕಾರ ಮುಂಡದ ಒಂದು ಚಿಕ್ಕ ಮನುಷ್ಯ ಚಿತ್ರವಿದೆ. (೧೫ ಸೆಂ.ಮೀ. ಎತ್ತರ) ಇದು ಛಾಯಾರೂಪದ್ದು, ಕೆಂಪು ವರ್ಣದಲ್ಲಿದೆ. ಕಾಲುಗಳನ್ನು ಅಗಲಿಸಿ ನಿಂತು ಕೈಗಳನ್ನು ಕೆಳಕ್ಕಿಳಿಸಿದೆ. ಕೈಕಾಳುಗಳು ಪೂರ್ಣರೂಪದಲ್ಲಿ ಇಲ್ಲ. ಗವಿಯಲ್ಲಿ ದೊರೆಯುವ ಮೇಲಿನ ಪ್ರಾಚ್ಯಾವಶೇಷಗಳ ಹಿನ್ನಲೆಯಲ್ಲಿ ಚಿತ್ರ ಶಿಲಾತಾಮ್ರ ಯುಗದ ಕಾಲದ್ದೆಂದು ಬಲವಾಗಿ ತರ್ಕಿಸಬಹುದು. ಬೃಹತ್ ಶಿಲಾಯುಗದ ನೆಲೆ ಹಿರೇಬೆಣಕಲ್ಲಿನ ಗವಿಗಳಲ್ಲಿರುವ ಮನುಷ್ಯ ಚಿತ್ರಗಳಿಗಿಂತ ಇದು ಭಿನ್ನ ರಚನೆಯದಾಗಿದೆ. ಹಾಗಾಗಿ ಇದರ ಆಧಾರದ ಮೇಲೆ ಈ ಶೈಲಿಯ ಮನುಷ್ಯ ಚಿತ್ರಗಳನ್ನು ಶಿಲಾತಾಮ್ರಯುಗದ ನೂತನ ಶಿಲಾಯುಗ ಸಂಸ್ಕೃತಿಯ ಕಾಲದವೆಂದು ಹೇಳಬಹುದು.

ಸಂಗಾಪುರದ ಕರಡಿವಟ್ಲ ಗುಡ್ಡದ ಚಿತ್ರಗಳು ಹೆಚ್ಚಾಗಿ ಮೇಲಿನ ಶೈಲಿಯಲ್ಲಿವೆ. ಮತ್ತು ಇಲ್ಲಿ ಶಿಲಾ ತಾಮ್ರಯುಗದ ಆಯುಧಗಳು ಮತ್ತು ಚಕ್ಕೆಗಳು ದೊರೆಯುತ್ತವೆ. ಹಾಗಾಗಿ ಇವೆಲ್ಲಾ ಆಕಾಲದ ರಚನೆಯೆಂದು ಹೆಳಬಹುದು. ಬೃಹತ್ ಶಿಲಾಯುಗದ ನೆಲೆಗಳಾದ ಹಂಪಿ (೫), ಮಲ್ಲಾಪುರ (೧,೩,೪) ಹಿರೇಬೆಣಕಲ್ (೨,೪) ಚಿಕ್ಕಬೆಣಕಲ್ (೩) ಮತ್ತು ನಾರಾಯಣಪೇಟೆಯ  (೧) ಮೈಮೇಲೆ ಗೆರೆಯುಳ್ಳ ಮನುಷ್ಯ ಚಿತ್ರಗಳು ಸ್ಪಷ್ಟವಾಗಿ ಬೃಹತ್ ಶಿಲಾಯುಗದ ಕಾಲದವೆಂದು ಹೇಳಬಹುದು. ಇಂಥ ಚಿತ್ರಗಳು ಆಫ್ರಿಕಾ ದೇಶದ ಸಹರಾ ಎಂಬಲ್ಲಿ ಕಂಡುಬಂದಿವೆ.

ಈ ಅಂಶಗಳ ಹಿನ್ನೆಲೆಯಲ್ಲಿ ಕೊಪ್ಪಳ-ಹಂಪಿ ಪ್ರದೇಶದ ಕೆಮ್ಮಣ್ಣು ವರ್ಣದ ವಿಶೇಷವಾಗಿ ಕೊಪ್ಪಳ, ಹಿರೇಬೆಣಕಲ್, ಆಗೋಲಿ, ಆನೆಗುಂದಿ, ಬಂಡಿಹರ್ಲಾಪುರ, ಹಂಪಿ ಹಾಗೂ ಅವುಗಳ ಸುತ್ತಮುತ್ತಲಿನ ಪ್ರದೇಶದ ವರ್ಣಚಿತ್ರಗಳು ಬಹುಶಃ ಶಿಲಾತಾಮ್ರದ ಕೊನೆಯ ಹಂತ (ಕ್ರಿ.ಪೂವಸು. ೧೪೦೦-೮೦೦) ಬೃಹತ್ ಶಿಲಾಸಂಸ್ಕೃತಿಯ ಆದಿ ಮಧ್ಯಭಾಗದ (ಕ್ರಿ.ಪೂ.ಸು.೧೦೦೦-೫೦೦) ಕಾಲದ್ದೆಂದು ನಿರ್ಣಯಿಸಬಹುದು.

ಬಯಲು ಬಂಡೆ ಚಿತ್ರಗಳಲ್ಲಿ ಮಲ್ಲಾಪುರದ ಎರಡನೇ ನೆಲೆಯ ಗೂಳಿ, ಎತ್ತು ಮತ್ತು ಜಿಂಕೆ ಚಿತ್ರಗಳು ಅಗೋಲಿಯ ತಿರುಗುಳಿಗಳು, ಪಾದಗಳ ಕೊರೆದ ಚಿತ್ರ, ಬಸಾಪಟ್ಟಣದ, ಕಮಲಾಪುರದ ಎತ್ತಿನ ಚಿತ್ರಗಳು, ಸಿದ್ದಿಕೇರಿಯ, ನಾಗೇನಹಳ್ಳಿ ಮತ್ತು ಹಿರೇಬೆನಕಲ್ಲಿನ ಕುಳಿ ಚಿತ್ರಗಳು ಶೈಲಿ ರಚನೆ ಮತ್ತು ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿ ಕಬ್ಬಿಣಯುಗ ಬೃಹತ್ ಶಿಲಾಯುಗ ಸಂಸ್ಕೃತಿಯ ಆದಿ ಮಧ್ಯಭಾಗದ ಕಾಲದವೆಂದು ನಿರ್ಧರಿಸಬಹುದು.

ಬಿಳಿಬಣ್ಣದ ಚಿತ್ರಗಳು ವ್ಯಾಪಕವಾಗಿಲ್ಲ, ಅಲ್ಲಲ್ಲಿ ಕೆಲವೇ ಚಿತ್ರಗಳಿವೆ. ಮತ್ತು ಶೈಲಿ, ರಚನೆಯ ದೃಷ್ಟಿಯಿಂದ ಕನಿಷ್ಟ ಮಟ್ಟದಲ್ಲಿವೆ. ಮತ್ತು ಅವು ವೈವಿಧ್ಯಮಯವಾಗಿಯೂ ಇಲ್ಲ. ಚಿತ್ರಗಳ ನೆಲೆ ಕೆಂಪುವರ್ಣದ ಚಿತ್ರಗಳಂತೆ ವಿಶಿಷ್ಟವಾಗಿಲ್ಲ. ಸಣ್ಣಪುಟ್ಟ ಕಲ್ಲಾಸರೆಗಳಲ್ಲಿ ಈ ಚಿತ್ರಗಳಿವೆ ಮತ್ತು ಕೆಲವೇ ಚಿತ್ರಗಳನ್ನು ಹೊರತುಪಡಿಸಿ ಇದರಲ್ಲಿ ಬೆರಳಿನಿಂದ ಮೂಡಿಸಿದಂತೆ ಕಡ್ಡಿರೂಪದ ಮನುಷ್ಯ ಪ್ರಾಣಿಗಳ ಚಿತ್ರಗಳಿವೆ. ಇಂಥ ಚಿತ್ರಗಳು ಬೆಟ್ಟದ ತೀರ ಒಳಭಾಗದಲ್ಲಿ ಇಲ್ಲ. ಗ್ರಾಮಗಳ ಜನಸಂಪರ್ಕದ ಪ್ರದೇಶಗಳಲ್ಲಿವೆ. ಈ ಎಲ್ಲಾ ಅಂಶಗಳಿಂದ ಕೊಪ್ಪಳ-ಹಂಪಿ ಪ್ರದೇಶದ ಬಿಳಿವರ್ಣದ ಚಿತ್ರಗಳ ಇತಿಹಾಸ ಆರಂಭಕಾಲ ಮತ್ತು ಆನಂತರದ ಇತಿಹಾಸ ಕಾಲದವೆಂದು ಹೇಳಬಹುದು.

ಆಕರ
ಕೊಪ್ಪಳ, ಹಂಪಿ ಪ್ರದೇಸ ಪ್ರಾಗಿತಿಹಾಸ ಕಾಲದ ಕಲೆ, ೨೦೦೨, ಪಿಎಚ್.ಡಿ. ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೧೪೩ ರಿಂದ ೨೦೭.