ನಗ್ನ ಮನುಷ್ಯ ಚಿತ್ರಗಳು

ಮೈಮೇಲೆ ವಿವಿಧ ರೀತಿಯ ಗೆರೆಗಳುಳ್ಳ, ಬೇರೆ ಬೇರೆ ಭಂಗಿಯ ಕೆಲವು ಬೃಹತ್, ಮಧ್ಯಮ ಮತ್ತು ಚಿಕ್ಕ ಪ್ರಮಾಣದ ಏಕವ್ಯಕ್ತಿಯ ಚಿತ್ರಗಳು ಮಲ್ಲಾಪುರ, ಹಿರೇಬೆಣಕಲ್, ಚಿಕ್ಕಬೆಣಕಲ್, ಹಂಪಿ, ನಾರಯಣಪೇಟೆ ಮತ್ತು ಹೊಸ ಬಂಡಿಹರ್ಲಾಪುರಗಳಲ್ಲಿವೆ.

ಎರಡು ಕಾಲುಗಳನ್ನು ಅಗಲಿಸಿ, ಕೈಗಳನ್ನು ಮೇಲೆಕ್ಕೆತ್ತಿ ನಿಂತಿರುವ ಮನುಷ್ಯನ ಬೃಹತ್ ಪ್ರಮಾಣದ ಚಿತ್ರ ಮಲ್ಲಾಪುರದ ೩ನೇ ಗವಿ (ಖಾನಸಾಬಗವಿ) ಯಲ್ಲಿದೆ. ಇದು ೧.೮೦ ಮೀ ಅಗಲ ಮತ್ತು ೩ ಮೀ ಎತ್ತರವಾಗಿದೆ. ಇದೇ ರೀತಿಯ ಇತಹ ಮಧ್ಯಮ ಪ್ರಮಾಣದ ಐದು ಚಿತ್ರಗಳು ಇಲ್ಲಿಯೇ ಇವೆ. ಇವುಗಳಲ್ಲಿ ಒಬ್ಬ ವ್ಯಕ್ತಿಯ ಚಿತ್ರದಲ್ಲಿ (೧.೬೬ ಮೀ. ಎತ್ತರ ೧ ಮೀ. ಅಗಲ) ಹಸ್ತಗಳು ವೃತ್ತಾಕಾರದಲ್ಲಿವೆ. ಅದಕ್ಕೆ ಸುತ್ತಲೂ ಐದಾರು ಬೆರಳುಗಳಿವೆ. ಅವನ್ನು ಚಿಕ್ಕ ರೇಖೆಗಳಲ್ಲಿ ತೋರಿಸಲಾಗಿದೆ. ಮತ್ತು ತಲೆಯ ಸುತ್ತಲೂ ಐದಾರು ಬೆರಳುಗಳಿವೆ. ಅವನ್ನು ಚಿಕ್ಕ ರೇಖೆಗಳಲ್ಲಿ ತೋರಿಸಲಾಗಿದೆ. ಮತ್ತು ತಲೆಯ ಸುತ್ತಲೂ ಕಿರಣಗಳಂತೆ ರೇಖೆಗಳಿವೆ. ಮತ್ತೊಂದು ಚಿತ್ರದಲ್ಲಿ (೦.೪೩ ಮೀ. ೧ ಮೀ. ಎತ್ತರ) ವ್ಯಕ್ತಿಯ ಕೈಗಳು ಸೊಂಟದ ಮೇಲೆ ಇರಸಿದಂತಿವೆ. ಕಾಲುಗಳು ತೀರ ಸಣ್ಣಗೆ ಕಡ್ಡಿಯಂತಿವೆ. ಇದೇ ರೀತಿಯ ಒಂದು ಚಿತ್ರ ಹಂಪಿಯ ೫ನೇ ಕಲ್ಲಾಸರೆ (ಭರಮ ದೇವರಗುಂಡು)ಯಲ್ಲಿ ಇದೆ. ಇದೇ ಭಂಗಿಯಲ್ಲಿ ಶಿಶ್ನಗಳನ್ನು ಹೊಂದಿರುವ ಚಿತ್ರಗಳು ಮಲ್ಲಾಪುರ, ಹಿರೇಬೆಣಕಲ್ ಮತ್ತು ರಾಂಪುರಗಳಲ್ಲಿವೆ. ಇವು ತೊಡೆಗಳನ್ನು ಅಗಲಿಸಿ ಸೊಟ್ಟ ಮಾಡಿ ನಿಂತ ಭಂಗಿಯಲ್ಲಿರುತ್ತವೆ. ಸಣ್ಣ ತಲೆ, ತೋಳುಗಳು ಅಡ್ಡವಾಗಿದ್ದು, ಕೈಗಳು ಮೇಲೆಕ್ಕೆತ್ತಲ್ಪಟ್ಟಿರುತ್ತವೆ. ಹಸ್ತ ಪಾದಗಳನ್ನು ಬಿಡಿಸಿರುವುದಿಲ್ಲ. ನಗ್ನ ದೇಹ, ಶಿಶ್ನವನ್ನು ಸ್ಪಷ್ಟವಾಗಿ ಬಿಡಿಸಲಾಗಿದ್ದು, ಮುಖ, ಮೈ, ಕಾಲು, ತೊಡೆಗಳ ಮೇಲೆಲ್ಲಾ ರೇಖೆಗಳಿರುತ್ತವೆ. ದೊಡ್ಡ ಪ್ರಮಾಣದಲ್ಲಿ ಈ ಚಿತ್ರಗಳು ಹಿರೆಬೆಣಕಲ್‌ನ ೩ನೇ ಗವಿ (೨ ಮೀ. ಎತ್ತರ) ಮಲ್ಲಾಪುರದ ೧ನೇ ಕ್ಲಲಾಸರೆ (೨.೭೦ ಮೀ. ಎತ್ತರ)ಗಳಲ್ಲಿವೆ. ಚಿಕ್ಕ ಪ್ರಮಾಣದಲ್ಲಿ ಮಲ್ಲಾಪುರದ ಅದೇ ಕಲ್ಲಾಸರೆಯ ೨ನೇ ಬದಿಯಲ್ಲಿ ಮತ್ತು ಮೂರನೇ ಗವಿಯಲ್ಲಿ ಇವೆ. ಮೊದಲನೆಯದರಲ್ಲಿ ಶಿಶ್ನ ಭಾಗ, ಎರಡೂ ಕಾಲುಗಳ ನಡುವೆ ದೇಹದ ಅಗಲದಷ್ಟೆ ಇದ್ದರೆ, ಎರಡನೆಯ ಚಿತ್ರ (೦.೫೫ ಎತ್ತರ) ದಲ್ಲಿ ಅದು ಸ್ವಲ್ಪ ಉದ್ದವಾಗಿದ್ದು ಬಾಲದಂತೆ ತೋರುತ್ತದೆ. ಈ ವ್ಯಕ್ತಿಯ ಮುಖ ತ್ರಿಕೋನಾಕಾರದಲ್ಲಿ, ದೇಹ ಚೌಕಾಕಾರದಲ್ಲಿರುವುದು ವಿಶೇಷ. ನಗ್ನ  ಪುರುಷನ ಮತ್ತೊಂದು ವಿಶೇಷ ಚಿತ್ರ ರಾಂಪುರದ ೨ನೇ ಗವಿಯಲ್ಲಿದೆ. ನೀಳ ಆಯತಾಕಾರದ ದೇಹ, ದುಂಡಾದ ತಲೆ, ಕಾಲುಗಳನ್ನು ಅಗಲಿಸಿ, ಕೈಗಳ್ನನು ಮೇಲೆಕ್ಕೆತ್ತಿದೆ. ಹಸ್ತ, ಪಾದ ಮೈಮೇಲೆ ರೇಖೆಗಳಿಲ್ಲ. ಎರಡೂ ಕಾಲುಗಳು ಮಧ್ಯ ಉದ್ದವಾದ ಶಿಶ್ನವಿದೆ. ಅದಕ್ಕೆ ಶಿಶ್ನ ಮಣಿಯನ್ನು ತೋರಿಸಲಾಗಿದೆ. ಈ ಚಿತ್ರ ಮೈಮೇಲಿನ ರೇಖೆಗಳಿರುವ ಚಿತ್ರಗಳಿಗಿಂತ ನಂತರ ಕಾಲದ ರಚನೆಯಾಗಿದೆ. ಕೆಲವು ಚಿತ್ರಗಳು ಕೈಗಳನ್ನು ಮೇಲೆಕ್ಕೆತ್ತಿರುವ ಬದಲು ಕೆಳಗೆ ಇಳಿಸಿದ ಭಂಗಿಯಲ್ಲಿವೆ. ಕೈಗಳನ್ನು ಭುಜದ ಸಮಾನಾಂತರದಲ್ಲಿ ಚಾಚಿ ಮೊಣಕೈ ಭಾಗವನ್ನು ಕೆಳಗೆ ಇಳಿಬಿಟ್ಟ ವ್ಯಕ್ತಿಯ ಚಿತ್ರಗಳು ಚಿಕ್ಕ ಬೆಣಕಲ್‌ನ ಮೂರನೇ ಗವಿ ಮತ್ತು ಮಲ್ಲಾಪುರದ ೪ನೇ ಕಲ್ಲಾ ಸರೆಗಳಲ್ಲಿವೆ. ಇವುಗಳ ಕಾಲಿನ ಭಂಗಿಯೂ ಭಿನ್ನವಾಗಿರುವುದು ವಿಶೇಷ. ಮೊದಲನೆಯದಕ್ಕೆ ಒಂದು ಕಾಲು ವಕ್ರ ನೇರವಗಿ ಮತ್ತೊಂದು ಡೊಂಕಾಗಿದ್ದರೆ ಎರಡನೆಯದಕ್ಕೆ ೨ ಕಾಲುಗಳು ಡೊಂಕಾಗಿರದೆ ವಕ್ರ ನೇರವಾಗಿವೆ.

ಎರಡೂ ಕಾಲುಗಳನ್ನು ಅಗಲಿಸಿ ಸ್ವಲ್ಪ ವಕ್ರವಾಗಿ ನಿಂತ ಭಂಗಿಯ ಚಿತ್ರಗಳೂ ಇವೆ. ಇವಕ್ಕೆ ಒಂದೇ ಕೈ ಇರುತ್ತದೆ (ಗೋಚರವಾಗುತ್ತದೆ). ಹಿರೇಬೆಣಕಲ್ (೨ನೇ ಗವಿ) ಮತ್ತು ನಾರಾಯಣ ಪೇಟೆ (೧ನೇ ಗವಿ)ಗಳಲ್ಲಿ ಇವೆ. ಸು. ೪ ಮೀ.ಗಿಂತಲೂ ಎತ್ತರವಿರುವ ನಾರಾಯಣ ಪೇಟೆಯ ಮನುಷ್ಯ ಚಿತ್ರದಲ್ಲಿ ಸಣ್ಣ ತಲೆ, ತಲೆಯಲ್ಲಿ ಕೂದಲನ್ನು ಸೂಚಿಸುವ ಸಣ್ಣ ಸಮಾನಾಂತರ ಗೆರೆಗಳಿವೆ. ತಲೆಯು ಬಳಕ್ಕೆ ಸ್ವಲ್ಪ ಬಾಗಿದೆ. ಎಡಗೈ ಇಲ್ಲ. ಮುಂಡದ ಉದ್ದಗಲಗಳು ಪ್ರಮಾಣ ಬದ್ಧವಾಗಿವೆ. ಪುಷ್ಟವಾದ ತೊಡೆಗಳು, ಯಥಾ ಪ್ರಕಾರ ಮುಖ ದೇಹ ತೊಡೆಯ ಮೇಲೆ ರೇಖಾಚಿತ್ರಗಳಿವೆ.

ಮೈಮೇಲೆ ರೇಖೆಗಳನ್ನು ಹೊಮದಿರುವ ಪಾರ್ಶ್ವಭಂಗಿಯಲ್ಲಿ ನಿಂತಿರುವ ವ್ಯಕ್ತಿ ಚಿತ್ರಗಳು ಮಲ್ಲಾಪುರ (೧ನೇ ಗವಿ), ಹೊಸಬಂಡಿಹರ್ಲಾಪುರ (೧ನೇ ಗವಿ), ಹಂಪಿ (೧,೫,೭) ಮತ್ತು ಹಿರೇಬೆಣಕಲ್ಗಳಲ್ಲಿವೆ. ಇವಕ್ಕೆ ಒಂದೇ ಕಾಲು ಒಂದೇ ಕೈ ಇರುತ್ತದೆ (ಪಾರ್ಶ್ವ ಭಂಗಿಯಲ್ಲಿ ಒಂದೇ ಕಾಣುತ್ತದೆ). ಕಾಲನ್ನು ಮುಂದಕ್ಕೆ ಡೊಂಕು ಮಾಡಿ ನಿಂತು ಕೈಗಳನ್ನು ಮುಖದ ಮುಂದೆ ಎತ್ತಿ ಹಿಡಿದಿರುತ್ತವೆ. ಹೊಸಬಂಡಿ ಹರ್ಲಾಪುರದ ಚಿತ್ರ ಛಾಯಾ ರೂಪದಲ್ಲಿದೆ. ಹಾಗಾಗಿ ಇದರ ಮೈಮೇಲೆ ರೇಖೆಗಳಿಲ್ಲ. ಹಂಪಿಯ ೫ನೇ ಕಲ್ಲಾಸರೆಯಲ್ಲಿ ಕೈಗಳನ್ನು ಭುಜದ ಸಮಾನಾಂತರದಲ್ಲಿ ಮುಂದಕ್ಕೆ ಬಾಚಿದ ಚಿತ್ರವಿದೆ. ಹಿರೇಬೆನಕಲ್ಲಿನ ೧೬ ಮತ್ತು ೧೭ನೇ ಗವಿಗಳಲ್ಲಿ ಈ ರೀತಿಯ ಚಿಕ್ಕ ಚಿಕ್ಕ ಆಕೃತಿಗಳಿವೆ. (೩೭ ಸೆಂ.ಮೀ. ಎತ್ತರ, ೧೭ ಸೆಂ.ಮೀ. ಅಗಲ) ಇವುಗಳ ದೇಹದ ಮೇಲೆ ಸಮಾನಾಂತರದಲ್ಲಿ ಅಡ್ಡ ರೇಖೆಗಳಿವೆ.

ಇವಲ್ಲದೇ ಇತರ ಕೆಲವು ನಗ್ನ ಚಿತ್ರಗಳು ಇವೆ. ಹಿರೇಬೆಣಕಲ್ಲಿನ ೫ನೇ ಗವಿಯಲ್ಲಿ ದ್ವಿರೇಖೆಯ ನಗ್ನ ಪುರುಷನ ಚಿತ್ರವಿದೆ. ಕೈಗಳನ್ನು ಕೆಳಗೆ ಇಳಿ ಬಿಟ್ಟಿದ್ದಾನೆ. ಒಂದು ಕೈಯಲ್ಲಿ ಹಸ್ತ ಮತ್ತು ಬೆರಳುಗಳಿವೆ. ಶಿಶ್ನವನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ತೊಲೆ ದೊಡ್ಡದಾಗಿದ್ದು, ಎದೆ ವಿಶಾಲವಾಗಿದೆ. ಇಂದರಗಿಯಲ್ಲಿಯ ಚಿತ್ರ (೦.೬೧ ಮೀ ಎತ್ತರ ೦.೪೪ ಮೀ) ಒಂದು ವಿಸಿಷ್ಟವಾದ ರಚನೆ. ಕಾಲುಗಳನ್ನು ಅಗಲಿಸಿ ಕೈಗಳನ್ನು ಮೇಲೆಕ್ಕೆತ್ತಿ ನಿಂತ ಭಂಗಿಯ ರೇಖಾಚಿತ್ರವಿದು. ತಲೆ ಅರೆ ತ್ರಿಕೋನಾಕಾರದ್ಲಲಿದೆ. ಮುಮಡ ಕೂಡ ಸಂಪೂರ್ಣ ತ್ರಿಕೋನ ರೀತಿಯದು. ಭುಜದಿಂದ ಸಮಾನಾಂತರದಲ್ಲಿ ಕೈಗಳನ್ನು ಬದಿಗೆ  ಚಾಚಿ ಮೊಣಕೈಯಿಂದ ಮೇಲಕ್ಕೆ ಎತ್ತಿದೆ. ಕೈ ತುದಿಯಲ್ಲಿ ೩ ಬೆರಳುಗಳನ್ನು ತೋರಿಸಲಾಗಿದೆ. ತ್ರಿಕೋನ ರೀತಿಯ ದೇಹದ ಕೆಳ ವ್ಯಾಸದಲ್ಲಿ ೨ ಬದಿಗೆ ಚಿಕ್ಕ ಕಾಲುಗಳಿವೆ. ಅವೆರಡರ ನಡುವೆ ವೃಷಣ ಮತ್ತು ಶಿಶ್ನವನ್ನು ತೋರಿಸಲಾಗಿದೆ.

ಸ್ತ್ರೀ ಚಿತ್ರಗಳು

ಪುರುಷ ಚಿತ್ರಗಳಂತೆ ಮೈಮೇಲೆ ರೇಖೆಯುಳ್ಳ ಸ್ತ್ರೀ ಚಿತ್ರಗಳೂ ಪುರುಷ ಚಿತ್ರಗಳ ಜೊತೆಯಲ್ಲಿಯೇ ಕಂಡು ಬರುತ್ತವೆ. ಹಂಪಿಯ ೫ನೇ ಗವಿಯಲ್ಲಿ ಎರಡು, ಮಲ್ಲಾಪುರದ ೩ನೇ ಗವಿಯಲ್ಲಿ ಎರಡು ಮತ್ತು ಹಿರೇಬೆಣಕಲ್ಲಿನ ೫ನೇ ಕಲ್ಲಾಸರೆಯಲ್ಲಿ ಎರಡು ಚಿತ್ರಗಳಿವೆ. ಸಾಮಾನ್ಯವಾಗಿ ಇವು ಪಾರ್ಶ್ವ ಭಂಗಿಯವು. ಕಾಲುಗಳನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ವಕ್ರವಾಗಿ ನಿಂತಿರುತ್ತವೆ. ಕೈಗಳು ಭುಜದ ಸಮಾನಾಂತರದಲ್ಲಿ ನೇರವಾಗಿ ಇರುತ್ತವೆ. ಮಲ್ಲಾಪುರದ ಒಂದು ಸ್ತ್ರೀ ಚಿತ್ರದಲ್ಲಿ ಮಾತ್ರ ಕೈ ಮೇಲೆಕ್ಕೆತ್ತಿದೆ. ತಲೆ ಚಿಕ್ಕದಿರುತ್ತದೆ. ಸ್ತನಗಳನ್ನು ಸ್ಪಷ್ಟವಾಗಿ ತೋರಿಸಲಾಗಿರುತ್ತದೆ. ಪುಷ್ಟಗಳು ಸ್ವಲ್ಪ ದೊಡ್ಡದಿರುತ್ತವೆ. ಮಲ್ಲಾಪುರದ ಒಂದು ಸ್ತ್ರೀ ಚಿತ್ರ ೧.೭೬ಮೀ ಎತ್ತರವಾಗಿದೆ. ನಾರಾಯಣ ಪೇಟೆ (೧ನೇ ಕಲ್ಲಾಸರೆ)ಯಲ್ಲಿಯ ಸ್ತ್ರೀ ಚಿತ್ರ ಮತ್ತೊಂದು ಪ್ರಕಾರದು. ಎರಡೂ ಕೈಗಳನ್ನು ಚಾಚಿ, ಕಾಲುಗಳನ್ನು ಅಗಲಿಸಿ ಕುಳಿತ ಸ್ತ್ರೀಯದು. ಇದು ಛಾಯಾರೂಪದ ಚಿತ್ರದ. ತಲೆಯ ಮೇಲಿನ ಉದ್ದ ಕೂದಲು ಎರಡೂ ಕಡೆ ಸೆಟೆದು ನಿಂತಿವೆ. ಹೊಟ್ಟೆ ಸ್ವಲ್ಪ ಉಬ್ಬಿದೆ. ಸೊಂಟದ ಕೆಳಭಾಗ ತ್ರಿಕೋನಾಕೃತಿಯಂತೆ ಕೆಳಚಾಚಿದೆ. ತಲೆಯ ಕೂದಲು ಸೆಟೆದಿರುವುದು, ಗರ್ಭಿಣಿಯಂತೆ ಉಬ್ಬು ಹೊಟ್ಟೆ ಪ್ರಾಯಶಃ ಯೋನಿಯನ್ನು ಸೂಚಿಸುವ ಸೊಂಟದ ಕೆಳಗಿನ ತ್ರಿಕೋನಾಕಾರ ಈ ಚಿತ್ರವು ಸ್ತ್ರೀಯದೆಂದು ಸೂಚಿಸುತ್ತವೆ.

ಇತರ ಮನುಷ್ಯ ಚಿತ್ರಗಳು

ಸಮದೇಹದ ಮನುಷ್ಯ ಚಿತ್ರಃ ಚಿಕ್ಕರಾಂಪುರದ ಐದನೆಯ ಕಲ್ಲಾಸರೆಯಲ್ಲಿ ಒಂದು ಮನುಷ್ಯ ಚಿತ್ರವಿದೆ. ಈ ಕಲ್ಲಾಸರೆ ಸುಮಾರು ೧೦ ಮೀ ಎತ್ತರದಲ್ಲಿ ಛಾವಣಿಯಂತೆ ಅಡ್ಡ ಚಾಚಿರುವ ಬಂಡೆ. ಇದರ ಒಳ ಮೈಮೇಲೆ ಇದೆ. ಈ ಮನುಷ್ಯ ಚಿತ್ರ ಸಂಪೂರ್ಣ ಛಾಯಾರೂಪದ್ದು. ಸು. ೨ ಮೀ. ಎತ್ತರವಿರಬಹುದು. ದುಂಡು ತಲೆ, ಪ್ರಮಾಣಬದ್ಧ ದೇಹ, ನಿಂತ ಭಂಗಿಯಲ್ಲಿಯೂ ಒಂದು ವೈಶಿಷ್ಟ್ಯವಿದೆ. ತೊಡೆಗಳು ನೇರವಾಗಿವೆ. ಆದರೆ ಕೈಗಳು ಮೇಲೆಕ್ಕೆತ್ತಿ ನೆಟ್ಟಗೆ ನಿಂತ ಭಂಗಿಯಲ್ಲಿವೆ.

ಉಬ್ಬಿದ ಮೂತಿಯ ಮನುಷ್ಯ ಚಿತ್ರಗಳು

ಒಂದು ಕೈಯನ್ನು ಭುಜದ ಸಮಾನಾಂತರದಲ್ಲಿ ತೋರು ರೀತಿಯಲ್ಲಿ ಹಿಡಿದು ನಿಂತಿರುವ ಕೆಲವು ವಿಶೇಷ ಮನುಷ್ಯ ಚಿತ್ರಗಳು ಆನೆಗುಂದಿ (೧ನೇ ಕಲ್ಲಾಸರೆ) ರಾಂಪುರ (೧ನೇ ಕಲ್ಲಾಸರೆ) ಮತ್ತು ಗೂಡಿಬಂಡಿಗಳಲ್ಲಿವೆ. ಇವುಗಳ ಮೂತಿ ಮಂಗನ ಮುಖದಂತೆ ಉಬ್ಬಿರುತ್ತದೆ.

ಆನೆಗುಂದಿಯ ಚಿತ್ರ ರೇಖಾರೂಪದ್ದು, ಕೆಳಗೆ ಹಿಡಿದಿರುವ ಕೈ ಮಾತ್ರ ಸಂಪೂರ್ಣ ಛಾಯಾರೂಪದಲ್ಲಿದೆ. ವಿಶಾಲವಾದ ಎದೆ, ಸಣ್ಣ ಕಟಿ, ಹಸ್ತ ಪಾದಗಳಿಲ್ಲ. ಮುಖ ವಿಶಿಷ್ಟವಾಗಿದೆ. ಕತ್ತಿನ ಮೇಲೆ ಮುಖ ಭಾಗದಲ್ಲಿ ಚೂಪಾದ ಮೂತಿಯಿದೆ. ತಲೆ ವೃತ್ತಾಕಾರ ವಾಗಿರದೇ ಗರಗಸದ ಹಲ್ಲಿನಂತಿದೆ. ಕಣ್ಣು, ಕಿವಿ, ಮೂಗುಗಳಿಲ್ಲ. ಬದಿಯಲ್ಲಿ ಮನುಷ್ಯ ಮತ್ತು ಪ್ರಾಣಿಯ ಚಿತ್ರಗಳಿವೆ.

೦.೮೯ಮೀ ಎತ್ತರವಿರುವ ರಾಂಪುರದ ಮನುಷ್ಯ ಚಿತ್ರವು ಇದೇ ರೀತಿಯಲ್ಲಿದ್ದರೂ, ಸ್ವಲ್ಪ ಭಿನ್ನವಾದ ಶೈಲಿಯಲ್ಲಿದೆ. ಇದು ಸಂಪೂರ್ಣ ಛಾಯಾರೂಪದ ಚಿತ್ರ. ಬಹಳ ಸುಂದರವಾಗಿ ಚಿತ್ರಿಸಲಾಗಿದೆ. ನಿಂತ ಭಂಗಿಯಲ್ಲಿದೆ. ಬಲಗೈ ಭುಜದ ಸಮಾನಾಂತರದಲ್ಲಿ ತೋರು ರೀತಿಯಲ್ಲಿವೆ. ಇನ್ನೊಂದು ಕೈಯಲ್ಲಿ ಮೊಣಕೈವರೆಗೆ ಕೆಳಕ್ಕಿಳಿದು ಅಲ್ಲಿಂದ ಮೇಲೆಕ್ಕೆ ಎತ್ತಲಾಗಿದೆ. ವಿಶಾಲವಾದ ಭುಜ, ಸಣ್ಣ ಕಟಿ ಮತ್ತು ಅದಕ್ಕೆ ಪ್ರಮಾನ ಬದ್ಧವಾದ ಪುಷ್ಟ ಮತ್ತು ತೊಡೆ ಕಾಲುಗಳಿವೆ. ಪಾದಗಳನ್ನು ತೋರಿಸಿಲ್ಲ. ಹಸ್ತ ಅದರ ೫ ಬೆರಳುಗಳನ್ನು ಅತ್ಯಂತ ಸ್ಪಷ್ಟವಾಗಿ ತೋರಿಸಲಾಗಿದೆ. ಮುಖ ಬಲಗಡೆ ವಾಲಿದ್ದು (ತೋರು ಕೈಕಡೆ) ಕಿರಿ ತಲೆ, ಕಣ್ಣಿನ ಮೇಲಿನ ಉಬ್ಬು, ಉಬ್ಬಿದ ಮೂತಿ ಸ್ಪಷ್ಟವಾಗಿದೆ. ಕಣ್ಣು ಕಿವಿಗಳನ್ನು ತೋರಿಸಿಲ್ಲ. ಕತ್ತು, ಕತ್ತಿನ ಕೆಳಗೆ ಗರಗಸದ ಹಲ್ಲಿನ ರೀತಿಯ ಆಭರಂ (ಸರ)ದ ಅಲಂಕರಣೆ ಇರುವುದು ಗಮನಾರ್ಹ. ಇಡೀ ಚಿತ್ರ ೫ ಭಾಗದಲ್ಲಿದೆ. ಮುಖ, ಕತ್ತು, ಕೊರಳ ಸರ, ಇಡೀ ದೇಹ ಮತ್ತು ಎಡಗೈಯಲ್ಲಿ ಮೊಣಕೈಯಿಂದ ಮುಮದಿನ ಕೈ ಹೀಗೆ ಐದು ಭಾಗಗಳು ಪ್ರತ್ಯೇಕವಿದೆ. ಈ ವ್ಯಕ್ತಿಯ ಬಳಭಾಗದಲ್ಲಿ ಇದೇ ರೀತಿಯ ಇನ್ನೊಂದು ಚಿಕ್ಕ ಪ್ರಮಾಣದ (೦.೫೩ ಮೀ) ಚಿತ್ರ ಮತ್ತು ಎಡ ಭಾಗದಲ್ಲಿ ನವಿಲಿನ ಚಿತ್ರಗಳಿವೆ.

ಗೂಗಿಬಂಡಿಯಲ್ಲಿ ಇದೇ ರೀತಿಯ ಚಿತ್ರವಿದೆ. ಆದರೆ ಈಚೆಗೆ ಅದನ್ನು ಬೇರೆ ಆಕಾರದಲ್ಲಿ ಪುನಃ ಬರೆಯಲಾಗಿದೆ. ಮಲ್ಲಾಪುರದ ೪ನೇ ಕಲ್ಲಾಸರೆಯಲ್ಲಿ ಎರಡೂ ಕೈಗಳನ್ನು ಅಗಲಿಸಿ ನಿಂತ ವ್ಯಕ್ತಿಯ ಅಪೂರ್ಣ ಚಿತ್ರವಿದೆ. ಅದರ ಮೂತಿಯು ಚೂಪಾಗಿದೆ.

ಕೋಡಿನ ಮುಖವಾಡ ಹಾಗೂ ಬಾಲ ಧರಿಸಿದ ಮನುಷ್ಯ ಚಿತ್ರಗಳು: ತಲೆಯಲ್ಲಿ ಕೋಡು ಮತ್ತು ಬಾಲವುಳ್ಳ ಕೆಲವು ಮನುಷ್ಯ ಚಿತ್ರಗಳು ಹಿರೇಬೆನಕಲ್ಲಿನ ೫ನೇ ಗವಿ ಮತ್ತು ಮಲ್ಲಾಪುರದ ೬ನೇ ಗವಿಯಲ್ಲಿ ನಾರಾಯಣಪೇಟೆಯ ೩ನೇ ಗವಿಯಲ್ಲಿ ಇವೆ. ಇವು ಸಂಪೂರ್ಣ ಛಾಯಾರೂಪದ ಚಿತ್ರಗಳು. ಪ್ರಾಣಿಗಳ ಸಮೂಹದ ಮಧ್ಯ ನಿಂತ ಭಂಗಿಯಲ್ಲಿವೆ. ಹಿರೇಬೆನಕಲ್ಲಿನಲ್ಲಿ ಎರಡು ಚಿತ್ರಗಳಿವೆ. ಅದರಲ್ಲಿ ದೊಡ್ಡ ವ್ಯಕ್ತಿಯ ಕೈಗಳನ್ನು ಎರಡೂ ಬದಿಗೆ ಅಗಲಿಸಿ ನಿಂತಿದ್ದಾನೆ. ಕೈಯಲ್ಲಿ ಹಸ್ತ ಬೆರೆಳುಗಳನ್ನು ತೋರಿಸಲಾಗಿದೆ. ಮುಖಕ್ಕೆ ಕೊಡುಳ್ಳ ಮುಖವಾಡವನ್ನು ದರಿಸಿದಂತಿದೆ. ಕೋಡುಗಳು ಎರಡೂ ಕಡೆಗೆ ಎತ್ತರದಲ್ಲಿ ಬಾಗಿವೆ. ಸೊಂಟದಲ್ಲಿ ಬಾಲವಿದೆ. ಪಕ್ಕದಲ್ಲಿ ಇನ್ನೊಂದು ಸಣ್ಣ ಚಿತ್ರವಿದ್ದು ಅದರ ಕೋಡುಗಳು ದೊಡ್ಡದಾಗಿವೆ. ಒಂದು ಕೈಯಲ್ಲಿ ದುಂಡಾದ ವಸ್ತವನ್ನು ಹಿಡಿದಿದೆ.

ಮಲ್ಲಾಪುರದ ಮನುಷ್ಯ, ಅನೇಕ ಪ್ರಾಣಿಗಳ ಗುಂಪಿನ ಮಧ್ಯ ಇದ್ದು, ಎರಡೂ ಕಾಲುಗಳನ್ನು, ಕೈಗಳನ್ನು ಅಗಲಿಸಿ ನಿಂತಿದ್ದಾನೆ. ಮುಖವಾಡ ಧರಿಸಿ ನಿಂತಿದ್ದು, ತಲೆಯಲ್ಲಿ ಒಂದರ ಮೇಲೊಂದರಂತೆ ಎರಡು ಕೋಡುಗಳಿವೆ. ಎರಡು ಕಾಲುಗಳ ಮಧ್ಯ ಬಾಲ ಇಳಿ ಬಿದ್ದಿದೆ. ಇಲ್ಲಿಯೇ ೯ನೇ ಗವಿಯಲ್ಲಿ ಮುಖವಾಡ ಧರಿಸಿ ನಿಂತ ಮನುಷ್ಯನ ಚಿತ್ರವಿದೆ. ಆದರೆ ಬಾಲವಿಲ್ಲ. ನಾರಾಯಣ ಪೇಟೆಯ ಚಿತ್ರವು ಮನುಷ್ಯ ಚಿತ್ರವೆನ್ನುವುದರ ಬಗ್ಗೆ ಗೊಂದಲ ಉಂಟುಮಾಡುತ್ತದೆ. ಕಾಲು ಕೈಗಳನ್ನು ಅಗಲಿಸಿ ನಿಂತಿದೆ. ಮುಖಕ್ಕೆ ಕೋಡುಳ್ಳ ಮುಖವಾಡವನ್ನು ಮೈಮೇಲೆ ಉಡುಪನ್ನು ಧರಿಸಿದಂತಿದೆ.

ತಲೆಯ ಸುತ್ತಲೂ ಕಿರಣದಂತೆ ರೇಖೆ ಅಥವಾ ಕೂದಲಿರುವ ಮನುಷ್ಯ ಚಿತ್ರಗಳು: ತಲೆಯ ಸುತ್ತಲೂ ಗೆರೆಗಳಿರುವ ಎರಡು ರೀತಿಯ ಮನುಷ್ಯ ಚಿತ್ರಗಳು ಕಂಡು ಬರುತ್ತವೆ. ಅವುಗಳಲ್ಲಿ ಎಮ್ಮಿಗುಡ್ಡ (೧ನೇ ಕಲ್ಲಾಸರೆ) ಮತ್ತು ಆನೆಗುಂದಿ (೧ನೇ ಕಲ್ಲಾಸರೆ)ಯ ಚಿತ್ರಗಳು ಒಂದು ರೀತಿಯವು. ಇಲ್ಲಿ ವ್ಯಕ್ತಿಯ ಕೈಗಳನ್ನು ದೇಹದಿಂದ ಸ್ವಲ್ಪ ಅಂತರದಲ್ಲಿ ಅಗಲಿಸಿ ಕೆಳಗೆ ಹಿಡಿದಿದ್ದಾನೆ. ವಿಶಾಲ ಎದೆ, ಸಣ್ಣ ಕಟಿ, ಅಗಲವಾದ ಪುಷ್ಠಗಳಿವೆ. ಹಸ್ತ ಪಾದಗಳಿರುವುದಿಲ್ಲ. ವೃತ್ತಾಕಾರದ ತಲೆಯ ಸುತ್ತಲೂ ಸಮಾನಾಂತರದಲ್ಲಿ ರೇಖೆಗಳಿರುತ್ತವೆ. ಎಮ್ಮಿಗುಡ್ಡದಲ್ಲದಿ ವ್ಯಕ್ತಿಯು ಒಂದು ಜಿಂಕೆಯ ಮೇಲೆ ನಿಂತಿದ್ದಾನೆ. ವ್ಯಕ್ತಿ ಚಿತ್ರ ಛಾಯಾ ರೂಪದ್ದಾದರೆ, ಜಿಂಕೆಯದು ರೇಖಾಚಿತ್ರ. ಈ ಮನುಷ್ಯರ ತಲೆಯ ಸುತ್ತಲಿನ ರೇಖೆಗಳು ಸಮಾನಾಂತರದಲ್ಲಿರುವುದು. ದೇಹವು ಸಮಪ್ರಮಾಣದಲ್ಲಿ ಚಿತ್ರಿಸಲ್ಪಟ್ಟಿರುವುದು. ಮತ್ತು ಚಿಗರೆಯ ಮೇಲೆ ನಿಂತ ಸಂದರ್ಭವನ್ನು ಗಮನಿಸಿ ಇದು ವಿಶೇಷ ವ್ಯಕ್ತಿಯ ಚಿತ್ರವೆನ್ನಬಹುದು. ಹಾಗಾಗಿ ತಲೆ ಸುತ್ತಲಿನ ರೇಖೆಗಳು ಕೂದಲುಗಳಲಲ್ಲವೆಂದು ಹೇಳಬಹುದು.

ಎರಡನೆಯ ರೀತಿಯ ಮನುಷ್ಯ ಚಿತ್ರಗಳಲ್ಲಿ ತಲೆಯ ಸುತ್ತಲಿನ ರೇಖೆಗಳನ್ನು ಖಂಡಿತವಾಗಿ ಕೂದಲುಗಳೆನ್ನಬಹುದು. ಆನೆಗುಂದಿಯ ೬ನೇ ನೆಲೆಯ ೩ನೇ ಗುಂಡಿನಲ್ಲಿ ಒಂದು ಮನುಷ್ಯ ಚಿತ್ರವಿದೆ. ಅದರ ತಲೆ ಮತ್ತು ಕತ್ತು ಪೂರ್ಣ ಛಾಯಾರೂಪದ್ದು. ತಲೆಯ ಸುತ್ತಲೂ ದೊಡ್ಡದಾಗಿ ಹರಡಿದ ರೀತಿಯ ರೇಖೆಗಳಿವೆ. ಇವು ಕೂದಲುಗಳಂತೆ ಸ್ವಷ್ಟವಾಗಿ ತೋರುತ್ತವೆ. ಅದೇ ರೀತಿ ಅಗೋಲಿಯ ೨ನೇ ಕಲ್ಲಾಸೆರೆಯಲ್ಲಿ ಒಬ್ಬ ಬೇಟೆಗಾರ ಮತ್ತು ಇನ್ನೊಬ್ಬ ವ್ಯಕ್ತಿಯ ತಲೆಯಲ್ಲಿ ರೇಖೆಗಳಿವೆ. ಅವು ಕೂಡ ಕೂದಲುಗಳೆನ್ನಬಹುದು.

ಕೆಲವು ವಿಶಿಷ್ಟ ಮನುಷ್ಯಾಕೃತಿಗಳುಃ ಕೆಲವು ಕಡೆ ಮನುಷ್ಯನನ್ನು ವಿಶಿಷ್ಟವಾದ ರೀತಿಯಲ್ಲಿ ಚಿತ್ರಿಸಲಾಗಿದೆ. ಇವುಗಳ ಮುಖ ದೇಹ ಕೈ ಕಾಲು ವಿಚಿತ್ರವಾದ ಸಂಕೇತ ರೂಪದಲ್ಲಿರುತ್ತವೆ. ಅಂಥ ಕೆಲವು ಚಿತ್ರಗಳು ಇಂತಿವೆ.

ನಾರಾಯಣ ಪೇಟೆಯ ಮೂರನೆಯ ಕಲ್ಲಾಸರೆಯಲ್ಲಿ ಎರಡು ಚಿತ್ರಗಳಿವೆ. ಒಂದು ವ್ಯಕ್ತಿಯ ಹಿಂಬದಿಯದು. ಒಂದು ಕೈಯನ್ನೆತ್ತಿ ಯಾರನ್ನೋ ಕರೆಯುತ್ತಿರುವಂತಿದೆ. ಹಸ್ತದ ಬೆರಳು ಮತ್ತೊಂದು ಕೈಕಾಲು ಇಲ್ಲಿ ಕೇವಲ ಸಾಂಕೇಂತಿಕ. ಇನ್ನೊಂದು ಚಿತ್ರ (೦.೩೦ ಮೀ. ೦.೩೭ ಎತ್ತರ) ರಾಕೆಟ್ ಮಾದರಿಯ ದೇಹ, ಕೈಬೆರಳು, ಕಾಲು ಸಾಂಕೇತಿಕವಾಗಿವೆ. ಅದೇ ರೀತಿ ಗಡ್ಡಿ (೧ನೇ ಕಲ್ಲಾಸರೆ) ಯಲ್ಲಿ ಮನುಷ್ಯನ ಒಂದು ರೇಖಾಚಿತ್ರವಿದೆ. ಕೈಗಳನ್ನೆತ್ತಿ ನಿಂತಿರುವ ಮನುಷ್ಯ ರಚನೆ ತುಂಬಾ ಸರಳವಾಗಿದೆ. ಸಂಗಾಪುರದ ೫ನೇ ಕಲ್ಲಾಸರೆಯಲ್ಲಿ ಒಂದು ವ್ಯಕ್ತಿಚಿತ್ರ ಈಗಿನ ಅಂಗಿ ಮತ್ತು ಧೋತಿಯನ್ನು ಧರಿಸಿದ ರೀತಿಯಲ್ಲಿ ಚಿತ್ರಿಸಿರುವುದು ವಿಶೇಷ. ಇಂದರಗಿಯ ನಗ್ನ ವ್ಯಕ್ತಿಯು ಕೂಡ ಭಿನ್ನವಾಗಿದೆ. ತಲೆ ಮತ್ತು ದೇಹ ತ್ರಿಕೋನಾಕಾರದಲ್ಲಿದೆ. ಕೈ ಮತ್ತು ಕಾಲು ಕೇವಲ ಸಣ್ಣ ಕಡ್ಡಿಯಂತಹ ರೇಖೆಗಳು ಮಲ್ಲಾಪುರದ ಒಂದನೇ ಕಲ್ಲಾಸರೆಯಲ್ಲಿ ಮತ್ತೊಂದು ರೀತಿಯ ಮನುಷ್ಯ ಚಿತ್ರವಿದೆ. ಇದು ರೇಖಾಕೃತಿಯಾದರೂ ಅದರ ಕೈ, ತೊಡೆ, ಕಾಲುಗಳನ್ನು ದಪ್ಪವಾಗಿ ತೋರಿಸಲಾಗಿದೆ. ರಾಂಪುರದಲ್ಲಿ ತಲೆಯಲ್ಲಿ ಕೋಡಿದ್ದು, ಮೈಮೇಲೆ ಏನೇನೋ ಹೊದ್ದುಕೊಂಡಂತಿರುವ ಎರಡೂ ಕೈಗಳನ್ನು ಮೇಲೆಕ್ಕೆತ್ತಿ ಬಾಲವನ್ನು ಹೊಂದಿರುವ ವ್ಯಕ್ತಿ ಚಿತ್ರಗಳಿವೆ. ಈ ಚಿತ್ರಗಳು ರಚನೆಯಲ್ಲಿ ಸರಳವಾಗಿದ್ದರೂ ಮನುಷ್ಯ ಕಲ್ಪನೆಯನ್ನು ಸಶಕ್ತವಾಗಿ ಅಭಿವ್ಯಕ್ತಿ ಗೊಳಿಸುತ್ತವೆನ್ನಬಹುದು.

ಸಾಮಾನ್ಯ ಮನುಷ್ಯ ಚಿತ್ರಗಳು

ಮೇಲೆ  ಗಮನಿಸಿದಂತೆ ಕೆಲವು ವಿಶಿಷ್ಟ ರೀತಿಯ ಮನುಷ್ಯ ಚಿತ್ರಗಳು ಒಂದು ರೀತಿಯದಾದರೆ ಬಹು ಸಂಖ್ಯೆಯಲ್ಲಿ ಸಾಮಾನ್ಯವಾಗಿ ಕಾಣಬರುವ ಮನುಷ್ಯನ ಚಿತ್ರಗಳು ಇನ್ನೊಂದು ರೀತಿಯವು. ಈಟಿ, ಬಿಲ್ಲು, ಬಾಣ, ಖಡ್ಗ, ಕೋಲು, ಕೊಡಲಿ ಮತ್ತಿತರ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡಿರುವ ‘ಯಾವುದೋ ಕ್ರಿಯೆಯಲ್ಲಿ ತೊಡಗಿರುವ’ ಸಾಲಾಗಿ ಕುಣಿಯುತ್ತಿರುವ, ಅಶ್ವಸವಾರಿ ಮಾಡುತ್ತಿರುವ ಸಣ್ಣ ಅಳತೆಯ ಮನುಷ್ಯ ಚಿತ್ರಗಳು ಸಾಮಾನ್ಯವಾಗಿವೆ. ಇಂತಹ ಮನುಷ್ಯ ಚಿತ್ರಗಳ ರಚನೆ ಸರಳವಾಗಿರುತ್ತದೆ. ಇದರಲ್ಲಿ ನಾಲ್ಕು ರೀತಿಯನ್ನು ಗುರುತಿಸಬಹುದು. (೨) ತ್ರಿಕೋನಗಳನ್ನು ಪರಸ್ಪರ ಎದುರಾಗಿ ಒಂದರ ಮೇಲೆ ಒಂದು ಇರಿಸಿದಂತಹ ಮುಂಡದ (ದೇಹದ) ಮನುಷ್ಯ ಚಿತ್ರಗಳು ಒಂದು ರೀತಿಯವು ಇವು ಛಾಯಾರೂಪವಾಗಿರಬಹುದು. (ಗಡ್ಡಿ ೧, ಅನೇಗುಂದಿ ೩ ಮಲ್ಲಾಪುರ ೧೨, ಹಿರೆಬೆಣಕಲ್ ೧,೬,೧೧,೧೨ ವೆಂಕಟಾಪುರ ೨ ಮತ್ತು ಚಿಕ್ಕರಾಂಪುರ ೪) ಇಲ್ಲವೇ ಬಾಹ್ಯ ರೇಖಾತ್ಮಕವಾಗಿರಬಹುದು. (ಅಗೋಲಿ-೨, ಹಂಪಿ-೪, ಮಲ್ಲಾಪುರ-೬)  ಎರಡನೆ ರೀತಿಯ ಚಿತ್ರಗಳು ವಿಶಾಲವಾದ ಭುಜ, ದ್ವಿರೇಖೆಯ ಕೈಗಳು, ಉದ್ದವಾದ ಮುಂಡದಲ್ಲಿ ಸಣ್ಣ ಕಟಿ, ದೊಡ್ಡ ಪುಷ್ಠ ಮತ್ತು ದಪ್ಪ ಕಾಲುಗಳಿರುತ್ತವೆ. ಈ ರೀತಿಯವು ಹೆಚ್ಚು ನೈಜ ಆಕಾರದಲ್ಲಿರುತ್ತವೆನ್ನಬಹುದು. ವಿಶೇಷವೆಂದರೆ ಇವು ಬೃಹತ್ ಶಿಲಾಯುಗದ ಕಾಲದಲ್ಲಿ ನಿಲ್ಲಿಸುತ್ತಿದ್ದ ಬೃಹತ್ ಮಾನವ ಗೊಂಬೆಗಳನ್ನು ಹೋಲುವುದು. ಇವು ಛಾಯಾರೂಪದಲ್ಲಿ ಇರುತ್ತವೆ. (ಆನೆಗುಂದಿ-೨, ಮಲ್ಲಾಪುರ-೯, ಹಿರೇಬೆಣಕಲ್-೧,೬,೧೧,೧೨) ಆನೆಗುಂದಿಯಲ್ಲಿಯ ಈ ತರಹದ ಚಿತ್ರಗಳಲ್ಲಿ ತಲೆಯಲ್ಲಿ ಕೂದಲನ್ನು ಹಿಂದೆ ಜುಟ್ಟು ಕಟ್ಟಿಕೊಂಡಂತೆ ಇವೆ.

ಮೂರನೆಯ ರೀತಿಯ ಚಿತ್ರಗಳೆಂದರೆ ಮುಂಡ ಲಂಬವಾಗಿ ಆಯಾತಾಕಾರದಲ್ಲಿರುವುದು. ಅದರ ಮೇಲಿನ ಎರಡು ಮೂಲೆಗೆ ಕೈಗಳನ್ನು, ಕೆಳಮೂಲೆಗಳಿಂದ ಕಾಲುಗಳನ್ನು ಬಿಡಿಸಲಾಗಿದೆ. ಕೈಕಾಲುಗಳು ಕೇವಲ ರೇಖೆ ಮಾತ್ರ, ತಲೆ ದುಂಡಾಗಿರುತ್ತದೆ. ಇವು ಛಾಯಾ (ಅಗೋಲಿ-೨, ಆನೆಗುಂದಿ-೮, ಮಲ್ಲಾಪುರ-೭) ಇಲ್ಲವೇ ರೇಖಾ (ಆನೆಗುಂದಿ-೮) ರೂಪದಲ್ಲಿರುತ್ತವೆ. ನಾಲ್ಕನೆಯ ರೀತಿಯ ಚಿತ್ರ ತೆಂಬಾದ ನಾಲ್ಕನೇ ಕಲ್ಲಾಸರೆಯಲ್ಲಿದೆ. ಪಶುಗಳನ್ನು ಕಾಯುತ್ತಿರುವ ಮನುಷ್ಯನ ಚಿತ್ರವಿದು. ಎದೆ ಅಗಲವಾಗಿದ್ದು ಕಟಿಯವರೆಗೂ ಸಣ್ಣದಾಗುತ್ತಾ ಬಂದು ಅಲ್ಲಿಂದ ಮೊಣಕಾಲಿನವರೆಗೆ ಉದ್ದವಾಗಿ ಒಂದೇ ರೀತಿಯಲ್ಲಿವೆ. ಕೈಕಾಲುಗಳು ಪ್ರಮಾಣಬದ್ದವಾಗಿವೆ. ಉಳಿದ ಎಲ್ಲಾ ರೀತಿಗಿಂತ ಇದು ಹೆಚ್ಚು ನೈಜ ರೂಪದಲ್ಲಿದೆ ಎನ್ನಬಹುದು.

ಕಡ್ಡಿ ಯಾಕಾರದ (ರೇಖೆಯ) ಮನುಷ್ಯ ಚಿತ್ರಗಳು

ಕೊಪ್ಪಳ ಹಂಪಿ ಪ್ರದೇಶದಲ್ಲಿ ಆನೆಗುಂದಿ (೨,೩,೪,೮) ಅಗೋಲಿ (೧) ಎಮ್ಮಿಗುಡ್ಡ (೨) ಬಿಳೆಭಾವಿ (೨) ನಾಗೇನಹಳ್ಳಿ (೧), ತೆಂಬಾ (೨) ಸಂಗಾಪುರ (೯) ಮತ್ತು ಹೊಸ ಬಂಡಿಹರ್ಲಾಪುರಗಳಲ್ಲಿ ಕಡ್ಡಿ ರೂಪದ ಮನುಷ್ಯ ಚಿತ್ರಗಳಿವೆ. ಇವುಗಳಲ್ಲಿ ಬಂಡಿ ಹರ್ಲಾಪುರ ಹೊರತುಪಡಿಸಿ ಉಳಿದವು ಬಿಳಿ ಬಣ್ಣ (ಸುಣ್ಣ)ದವಾಗಿದ್ದು ಇತಿಹಾಸ ಕಾಲದವು. ಚಿಕ್ಕ ಆಕೃತಿಗಳಾಗಿರುವ ಇವು ಸಾಮಾನ್ಯ ರೇಖೆಗಳಲ್ಲಿಯೇ ದೇಹ ಕೈಕಾಲುಗಳನ್ನು ತೋರಿಸಲಾಗಿರುತ್ತದೆ. ರೇಖೆಗಳ ವಿವಿಧ ವಿನ್ಯಾಸದಲ್ಲಿ ಬೇರೆ ಬೇರೆ ಭಂಗಿಯನ್ನು ರೂಪಿಸಲಾಗಿದೆ. ಇವುಗಳಲ್ಲಿ ಸ್ತ್ರೀ ಚಿತ್ರಗಳೂ ಇವೆ. ತಲೆಯಲ್ಲಿ ಎರಡೂ ಬದಿ ಜಡೆಯ ರೀತಿ ರೇಖೆ ಹಾಕಿರುವುದು (ಸಂಗಾಪುರ-೯) ಇಲ್ಲವೇ ಕೈಯ ಕೆಳಗೆ ಎಡ ಭಾಗದಲ್ಲಿ ೨ ಸಣ್ಣ ಬಿಂದುಗಳನ್ನಿಟ್ಟು ಸ್ತನಗಳನ್ನು ಸಂಕೇತಿಸಲಾಗಿದೆ. ಇವು ಸ್ತ್ರೀ ಚಿತ್ರಗಳೆಂದು ತಿಳಿಯುತ್ತವೆ.

ಬಾಲವುಳ್ಳ ಮನುಷ್ಯ ಚಿತ್ರಗಳು

ಇವು ಕೂಡ ಬಿಳಿ ಬಣ್ಣದವು. ಇತಿಹಾಸ ಕಾಲಕ್ಕೆ ಸೇರುತ್ತವೆನ್ನಬಹುದು. ಈ ಚಿತ್ರಗಳು ಆನೆಗುಂದಿಯಲ್ಲಿ ಹೆಚ್ಚು ಕಂಡುಬರುತ್ತವೆ. ಅಲ್ಲಿಯ ೪, ೮ನೇ ಕಲ್ಲಾಸರೆ ಮತ್ತು ಮ್ಯಾಗಲಮಠದ ಗುಡ್ಡದ ಕಲ್ಲಾಸರೆಯಲ್ಲಿ ಇಂತಹ ಚಿತ್ರಗಳಿವೆ. ೮ರಲ್ಲಿ ಮಾತ್ರ ದೊಡ್ಡ ಪ್ರಮಾಣದ್ದು ಇದೇ ಮೊದಲು ಬಿಳಿ ಬಣ್ಣದಲ್ಲಿ ಬರೆದು ಮೇಲೆ ತೆಳು ಕೆಂಪು ಬಣ್ಣದಿಂದ ಸವರಲಾರಿಗೆ. ನಿಂತ ಭಂಗಿಯಲ್ಲಿದ್ದು ಮುಖ ಮಂಗದಂತಿದೆ. ಬಲಗೈಯಲ್ಲಿ ಖಡ್ಗ ಎಡಗೈಯಲ್ಲಿ ಡಾಲುಗಳಿವೆ. ಸೊಂಟದಲ್ಲಿ ಬಾಲವಿದೆ. ಕೆಲವು ರೇಖಾ ಚಿತ್ರಗಳು ಇದೇ ರೀತಿಯಲ್ಲಿವೆ. ಆನೆಗುಂದಿ ವಾನರ ರಾಯ ಕಿಷ್ಕಿಂಧ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಈ ಮೇಲೆ ನೋಡಿದ ಕೆಂಪು ವರ್ಣದ ಉಬ್ಬು ಮೂತಿಯ ಮತ್ತು ಈ ಚಿತ್ರಗಳು ಗಮನಾರ್ಹವಾಗಿವೆ.

ಕೊರೆದು ಕುಟ್ಟಿದ ಮನುಷ್ಯ ಚಿತ್ರ

ಕೊಪ್ಪಳ ಹಂಪಿ ಪ್ರದೇಶದಲ್ಲಿ ಈ ಪ್ರಕಾರದ ಚಿತ್ರಗಳು ಬಹಳ ವಿರಳವಾಗಿವೆ. ಬಿಡಿ ವ್ಯಕ್ತಿಯ ಏಕೈಕ ಕುಟ್ಟು ಚಿತ್ರ ಮಲ್ಲಾಪುರದ ಎರಡನೇ ನೆಲೆಯಲ್ಲಿದೆ. ಬಳಗೈಯಲ್ಲಿ ಎತ್ತರವಾದ ತ್ರಿಶೂಲವನ್ನು ಹಿಡಿದು ನಿಂತ ವ್ಯಕ್ತಿಯ ಚಿತ್ರವಿದು. ಎಡಗೈಯಲನ್ನು ಸೊಂಟದ ಮೇಲಿರಿಸಿದ್ದಾನೆ. ತಲೆ ದೇಹ ಸ್ವಲ್ಪ ದಪ್ಪವಿದೆ. ಆದರೆ ಕೈಕಾಲುಗಳು ತೆಳು ರೇಖೆಯವು. ತ್ರಿಶೂಲ ಮುಖದ ಎರಡೂ ಬದಿಯಲ್ಲಿ ಸೂರ್ಯಚಂದ್ರರ ಚಿತ್ರಗಳಿವೆ.

ಪ್ರಾಣಿ ಚಿತ್ರಗಳು

ಪ್ರಾಣಿ ಚಿತ್ರಗಳಲ್ಲಿ ವಿಶೇಷವಾಗಿ ಗೂಳಿ, ಎತ್ತು, ಕಾಡು ಕೋಣ ಮತ್ತು ಚಿಗರೆ ಜಿಂಕೆಗಳು ಆ ಕಾಲದ ಮಾನವನಿಗೆ ಬಲು ಪ್ರಿಯವಾದ ಚಿತ್ರ ವಸ್ತುಗಳಾಗಿವೆ. ಹಾಗಾಗಿ ಈ ಪ್ರಾಣಿಗಳು ಅಧಿಕಾರವಾಗಿ ಕಾಣಿಸಿಕೊಂಡಿವೆ. ಉಳಿದ ಪ್ರಾಣಿ ಪಕ್ಷಿಗಳು ಕ್ವಚಿತ್ತಾಗಿ ಇವೆ.

ದನದ ಚಿತ್ರಗಳು

ಗೂಳಿ, ಎತ್ತು, ಅಧಿಕವಾಗಿ ಆಕಳು ತೀರ ಗೌಣ ಸಂಖ್ಯೆಯಲ್ಲಿವೆ. ಎತ್ತು, ಗೂಳಿ ಮತ್ತು ಆಕಳುಗಳನ್ನು ಕೆಲವು ಸಲ ಶೈಲಿಯಲ್ಲಿ ಒಂದೇ ಇರುವುದರಿಂದ ಗುರುತಿಸುವುದು ಕಷ್ಟ. ಇಣಿ  ಅಥವಾ ಶಿಶ್ನವಿರುವುದರಿಂದ ಅದು ಎತ್ತು ಆಗಿರಬಹುದು. ಇಲ್ಲವೇ ಗೂಲಿಯಾಗಿರಬಹುದು. ಅದೇ ರೀತಿ ಇಣಿ ಇಲ್ಲದ, ಕೆಚ್ಚಲು ಇಲ್ಲದ ದನದ ರೀತಿಯ ಚಿತ್ರಗಳೀವೆ. ಅವನ್ನು ಏನೆಂದು ಗುರುತಿಸುವುದು ಕಷ್ಟ. ಆದರೆ ಒಟ್ಟು ಚಿತ್ರಗಳ ಪರಿಶೀಲನೆಯಿಂದ ಬಲಿಷ್ಟವಾಗಿ ಗಾಂಭಿರ್ಯದಿಂದ ಕೂಡಿರುವ ಇಣಿ, ಕೋಡು (ಚಿಕ್ಕ, ದೊಡ್ಡ) ಕೆಲವು ಸಲ ಶಿಶ್ನ ಹೊಂದಿದವನ್ನು ಗೂಲಿಗಳೆಂದು ನಿರ್ಧರಿಸಬಹುದು. ಇಣಿ, ಶಿಶ್ನ ಇದ್ದು ತೀರ ಸರಳವಾಗಿ ಗಾಂಭಿರ್ಯತೆ ಇಲ್ಲದವನ್ನು ಎತ್ತುಗಳೆಂದು ಹಾಗೂ ಇಣಿ, ಶಿಶ್ನವಿಲ್ಲದ ಕೆಚ್ಚಲು ಇರುವ ಇಲ್ಲದಿರುವ ದನಗಳನ್ನು ಹಸುಗಳೆಂದು ಗುರುತಿಸಬಹುದು. ಈ ಹಿನ್ನೆಲೆಯಲ್ಲಿ ಕೊಪ್ಪಳ ಹಂಪಿ ಪ್ರದೇಶದ ದನದ ವಿಶ್ಲೇಷಣೆಯನ್ನು ಈ ಮುಂದಿನಂತೆ ಗಮನಿಸಬಹುದು.

ಗೂಳಿ ಚಿತ್ರಗಳು

ಗೂಳಿ ಚಿತ್ರಗಳು ಮಧ್ಯಮ ಮತ್ತು ಚಿಕ್ಕ ಪ್ರಮಾಣದಲ್ಲಿವೆ. ಛಾಯಾರೂಪದವೇ ಅಧಿಕ. ಮುಖ್ಯವಾಗಿ ಗೂಳಿ ಚಿತ್ರಗಳನ್ನು ಹಿರೇಬೆಣಕಲ್ (೫, ೭, ೧೧) ಚಿಕ್ಕಬೆಣಕಲ್ (೧,೨) ಅಂಜನಹಳ್ಳಿ (೧,೨) ಮಲ್ಲಾಪುರ (೨,೬,೯,೧೧) ಹಂಪಿ (೨) ಕೊಪ್ಪಳ (೮) ಮಲ್ಲಾಪುರ, ಬಸಾಪಟ್ಟಣ ಮತ್ತು ಕಮಲಾಪುರದ ಕೊರೆದ ಕುಟ್ಟಿದ ಚಿತ್ರ ನೆಲೆಗಳಲ್ಲಿ ಕಾಣಬಹುದು.

ಎತ್ತಿನ ಚಿತ್ರಗಳ ವೈವಿಧ್ಯತೆಯಂತೆ ಗೂಳಿಗಳ ಚಿತ್ರಗಳು ಇಲ್ಲ. ದೊಡ್ಡ ಅಥವಾ ಚಿಕ್ಕ ಆಕಾರದ ರೋಮನ್ ಲಿಪಿ  Uಅಥವಾ Vಆಕಾರದ ಕೋಡುಗಳನ್ನು (ಮಲ್ಲಾಪುರ ೨) ಹೊಂದಿರುತ್ತದೆ. ಇಣಿ ಸ್ವಲ್ಪ ದೊಡ್ಡದಿರುತ್ತದೆ. ಶಿಶ್ನವನ್ನು ಸಣ್ಣ ರೇಖೆ (ಆನೆಗುಂದಿ-೮) ಇಲ್ಲವೇ ಚೂಪಾಗಿ ದ್ವಿರೇಖೆ (ಎಮ್ಮಿಗುಡ್ಡ ೧, ಮಲ್ಲಾಪುರ) ಯಲ್ಲಿರುತ್ತವೆ. ಮುಂಡದಲ್ಲಿ ಮುಂಗಾಲು, ಹಿಂಗಾಲುಗಳು ತ್ರಿಕೋನಾಕಾರದಲ್ಲಿದ್ದು ಹೊಟ್ಟೆ ತೀರಾ ಸಣ್ಣದಾಗಿ (ಮಲ್ಲಾಪುರ ೨) ಇಲ್ಲವೇ ಸಹಜವಾಗಿ (ಚಿಕ್ಕ ರಾಂಪುರ) ಇರುತ್ತದೆ. ಮಲ್ಲಾಪುರದಲ್ಲಿ ಕೆಲವು ಗೂಳಿ ಚಿತ್ರಗಳು ವಿಶೇಷವಾಗಿದ್ದು ಗಮನಾರ್ಹವೆನಿಸುತ್ತವೆ.

ಕೆಲವು ವಿಶಿಷ್ಟ ಗೂಳಿಯ ಚಿತ್ರಗಳು

ಮಲ್ಲಾಪುರದ ಒಂಭತ್ತನೇ ಕಲ್ಲಾಸರೆಯಲ್ಲಿ ಒಂದು ಮಧ್ಯಮ ಪ್ರಮಾಣದ ಗೂಳಿಯ ಚಿತ್ರವಿದೆ. ಅದು ಛಾಯಾ ರೂಪದ ಚಿತ್ರ. ಅತ್ಯಂತ ನೈಜ ರಚನೆಯ ಚಿತ್ರವಿದಾಗಿದೆ. ಬಲಿಷ್ಠವಾದ ದೇಹ, ಮುಖ, ಕಿವಿ, ಕೋಡು, ಇಣಿ, ಕಾಲು ಪ್ರಮಾಣಬದ್ಧವಾಗಿವೆ. ಕತ್ತಿನ ದಪ್ಪ ತೊಡೆಗಳ ಬಳಿಷ್ಟತೆ ಗೂಳಿಯ ಗಾಂಭಿರ್ಯವನ್ನು ವ್ಯಕ್ತಗೊಳಿಸುತ್ತದೆ. ಇದರ ಹಿಂಭಾಗ ಮಾಸಿರುವುದು ದುರಾದೃಷ್ಟ. ಹಾಗಾಗಿ ಶಿಶ್ನ ಇತ್ತೊ ಇಲ್ಲವೋ ತಿಳಿಯುವುದಿಲ್ಲ. ಪ್ರಾಯಶಃ ಇದು ಕರ್ನಾಟಕದಲ್ಲಿ ಇಲ್ಲಿಯವರೆಗೆ ಬೆಳಕಿಗೆ ಬಂದ ಗೂಳಿಗಳ ಚಿತ್ರಗಳಲ್ಲಿಯೇ ಶ್ರೇಷ್ಠ ಮಟ್ಟದ್ದೆಂದು ಗುರುತಿಸಬಹುದು.

ಎರಡನೆಯ ಕಲ್ಲಾಸರೆಯಲ್ಲಿ ಎರಡು ಗೂಳಿಗಳ ಚಿತ್ರಗಳು ಗಮನಾರ್ಹವಾಗಿವೆ. ದ್ವಿತ್ರಿಕೋನ ಮುಂಡ ಶೈಲಿಯದು ಒಂದು ಇದಕ್ಕೆ ವಿಶಾಲವಾದ ಕೋಡು; ದೊಡ್ಡದಾದ ಬಾಲಗಳಿವೆ. ಇದು ಛಾಯಾರೂಪದ ಚಿತ್ರ. ಹೊಟ್ಟೆ ತೀರ ತೆಳುವಾಗಿದ್ದು. ಅಸಹಜವೆನಿಸುತ್ತದೆ. ಮತ್ತೊಂದು ಭಿನ್ನ ಶೈಲಿಯಲ್ಲಿದೆ. ಅದು ಕೂಡಾ ಛಾಯಾರೂಪದ್ದು. ಉದ್ದವಾದ ದೇಹ, ದೊಡ್ಡ  ಮುಂದಕ್ಕೆ ಬಾಗಿದ ಕೋಡು, ದೊಡ್ಡ ಇಣಿ, ದೊಡ್ಡದಾದ ಬಾಲಗಳಿವೆ. ಬಾಲದಲ್ಲಿ ಕುಟ್ಟು ಪ್ರಮಾಣ ಮೀರಿ ದೊಡ್ಡದಿದೆ. ದೇಹಕ್ಕೆ ಹಿಂದೆ ಮುಂದೆ ಒಂದರಬದಿ ಒಂದರಂತೆ ನಾಲ್ಕು ಕಾಲುಗಳಿವೆ. ಇವೆರಡೂ ಚಿತ್ರಗಳಲ್ಲಿ ಗೂಳಿಯ ಗಾಂಭೀರ್ಯತೆ ವ್ಯಕ್ತವಾಗುತ್ತದೆ. ಇಂತಹದೇ ಗೂಳಿಯ ಚಿತ್ರ ಅಂಜನಹಳ್ಳಿ (೨) ಯಲ್ಲಿದೆ.

ಮಲ್ಲಾಪುರದ ಹನ್ನೆರಡನೇ ಗವಿಯಲ್ಲಿಯ ಗೂಳಿಯ ಸಣ್ಣ ಸಣ್ಣ ರೇಖಾಚಿತ್ರಗಳು ಗಮನಾರ್ಹವಾಗಿವೆ. ದಪ್ಪ ಮುಂಡ ಬಲಿಷ್ಟ ಕಾಲು ದೊಡ್ಡ ಇಣಿ ಗೂಳಿಗಳ ದಷ್ಟಪುಷ್ಠತೆಯನ್ನು ಸೂಚಿಸುತ್ತದೆ. ಅಷ್ಟೇನೂ ದೊಡ್ಡದಲ್ಲದ ಕೋಡುಗಳಿವೆ. ಕಾಲುಗಳು ದ್ವಿತ್ರಿಕೋನಾ ಕೃತಿಯ ಬದಲಿಗೆ ಅವುಗಳಲ್ಲೆ ಸ್ವಲ್ಪ ಭಿನ್ನವಾದ ವಿನ್ಯಾಸದಿಂದ ಕೂಡಿವೆ. ಅದರಿಂದ ಕಾಲಿನ ಬಲಿಷ್ಟತೆ ಸಹಜವಾಗಿ ವ್ಯಕ್ತವಾಗಿದೆ. ಕೊಪ್ಪಳದಲ್ಲಿ (೮) ಕಾದಾಡುತ್ತಿರುವ ಬಲಿಷ್ಟ ಗೂಳಿಗಳ ಬಿಳಿ ವರ್ಣದ ಚಿತ್ರವಿದೆ. ಹಂಪಿಯ ಮೊಸಳಯ್ಯನ ಗುಡ್ಡದ ಗೂಳಿಯ ಚಿತ್ರವೂ ಅಪರೂಪದ್ದು. ಗೆರೆಗಳಿಂದ ಛಾಯಾರೂಪದಲ್ಲಿ ಬಿಡಿಸಲಾಗಿದೆ. ಗೂಳಿಯ ಬಲಿಷ್ಟವಾಗಿ ಗಾಂಭಿರ್ಯದಿಂದ ನಿಂತ ಭಂಗಿ ವಿಶಿಷ್ಟವಾಗಿದೆ.

ಮಲ್ಲಾಪುರದ, ಕಮಲಾಪುರದ ಮತ್ತು ಬಸಾಪಟ್ಟಣದ ಕೊರೆದ/ಕುಟ್ಟಿದ ಗೂಳಿ ಚಿತ್ರಗಳು ವರ್ಣಚಿತ್ರಗಳಂತೆ ಇವೆ. ಆದರೆ ಇವು ಬಾಹ್ಯ ರೇಖೆಯವು. ಇವುಗಳಿಗೆ ಇಣಿ ದೊಡ್ಡದಿರುವುದೇ ವಿಶೇಷ ಅಂಶ.

ಎತ್ತಿನ ಚಿತ್ರಗಳು

ಗೂಳಿಗಳಿಗಿಂತ ಎತ್ತಿನ ಚಿತ್ರಗಳು ಹೆಚ್ಚು ವೈವಿಧ್ಯಮಯವಾಗಿವೆ. ಮತ್ತು ವ್ಯಾಪಕವಾಗಿವೆ. ಇವು ಬೃಹತ್ ಪ್ರಮಾಣದಿಂದ ಹಿಡಿದು ಚಿಕ್ಕ ಪ್ರಮಾಣದವರೆಗೆ ವಿವಿಧ ಅಳತೆ, ಮತ್ತು ಶೈಲಿಯಲ್ಲಿವೆ. ಪಾರ್ಶ್ವ ಬದಿಯ ಭಂಗಿಯಲ್ಲಿ ಛಾಯಾರೂಪದ ಅಥವಾ ರೇಖಾ ರೂಪದಲ್ಲಿರುತ್ತದೆ. ರಾಮದುರ್ಗದ ಎತ್ತಿನ ಚಿತ್ರಗಳು ಸುಮಾರು ಎರಡು ಮಿ. ಉದ್ದವಿದ್ದು ದೊಡ್ಡ ಪ್ರಮಾಣದಲ್ಲಿವೆ. ಎತ್ತಿನ ಚಿತ್ರಗಳು ಮೂರು ನಮೂನೆಯ ರಚನೆಯಲ್ಲಿವೆ.

ಎರಡು ತ್ರಿಕೋನಾಕಾರದ ಕಾಲುಗಳು, ಹೊಟ್ಟೆ ತೆಳ್ಳಗೆ ಅಥವಾ ದಪ್ಪಗಿರುವ ಎತ್ತುಗಳೂ ಒಂದುರ ರೀತಿಯವು. ಇವು ಛಾಯಾರೂಪದಲ್ಲಿರುತ್ತವೆ. ಇದು ಸಾಮಾನ್ಯ ರೂಪ ಇವುಗಳಲ್ಲಿಯೇ ಸಹಜವಾದ ಹೊಟ್ಟೆ, ಇಣಿ (ಚಿಕ್ಕರಾಂಪುರ) ಬಾಲದಲ್ಲಿ ಕುಚ್ಚು, ಶಿಶ್ನ (ಆನೆಗುಂದಿ-೧,೮) ಗಳಿರುತ್ತವೆ. ಕೆಲವಕ್ಕೆ ಕೊಡು ಮೂರು ಮಡಿಕೆಯಲ್ಲಿ (ವಜ್ರಾಕೃತಿಯಂತೆ) ಒಳಬಾಗಿರುತ್ತದೆ. (ಹೊಸಬಂಡಿ ಹರ್ಲಾಪುರ-೧) ತೆಂಬಾದಲ್ಲಿ ನಾಲ್ಕು ಸುಂದರವಾದ ಎತ್ತುಗಳಿದ್ದು ಅವುಗಳ ಕೊರಳಲ್ಲಿ ಗಂಟೆಯಾಕಾರ ವಸ್ತುವನ್ನು ಕಟ್ಟಲಾಗಿರುವುದು ಗಮನಾರ್ಹ.

ಎರಡು ರೀತಿಯವು ಅಗೋಲಿ(೨) ಮಲ್ಲಾಪುರ(೫)ಗಳಲ್ಲಿವೆ. ಇದೇ ರಿತೀಯ ಕೊರೆದ ಚಿತ್ರ ಮಲ್ಲಾಪುರ ಬಂಡೆಗಳ ಚಿತ್ರಗಳ ಎರಡನೇ ನೆಲೆಯಲ್ಲಿದೆ. ಇವುಗಳು ಬಾಹ್ಯ ರೇಖೆಯಲ್ಲಿವೆ. ದೊಡ್ಡ ಅಯತಾಕಾರದ ದೇಹ, ಒಂದು (ಅಗೋಲಿ, ಮಲ್ಲಾಪುರ ಕೊರೆದ ಚಿತ್ರ) ಅಥವ ದ್ವಿರೇಖೆಯ (ಮಲ್ಲಾಪುರ) ನಾಲ್ಕು ಕಾಲುಗಳಿರುತ್ತವೆ. ಸರಿಯಾದ ಸ್ಥಾನದಲ್ಲಿ ಇಣಿ ಇರದೇ ಸ್ವಲ್ಪ ಹಿಂದಿಉರತ್ತದೆ. ಕೋಡುಗಳು ನೇರವಾಗಿ ಇಲ್ಲವೇ ವಕ್ರವಾಗಿರುತ್ತವೆ. ಅಗೋಲಿಯ ಎತ್ತಿನ ಮುಂಡದಲ್ಲಿ ಚುಕ್ಕೆಗಳ ಅಲಂಕರಣಗಳಿರುವುದು ವಿಶೇಷ.

ಮೂರನೇ ರೀತಿಯ ಚಿತ್ರ ಮಲ್ಲಾಪುರದ ೭ನೇ ಗವಿಯಲ್ಲಿದೆ. ಇದು ಬಾಹ್ಯ ರೇಖೆಯದು. ಅಸಹಜವೆನಿಸುವಷ್ಟು ಉದ್ದವಾದ ದೇಹ ಮತ್ತು ಕತ್ತುಗಳಿವೆ. ಚಿಕ್ಕ ಕೋಡು, ಇಣಿ, ಬಾಲ, ಶಿಶ್ನಗಳಿವೆ. ಮೈಮೇಲೆ ಅಡ್ಡ ರೇಖೆಗಳಿವೆ. ನಾಲ್ಕನೆಯ ರೀತಿಯದು ಚಿಕ್ಕರಾಂಪುರದ ೪ನೇ ಗವಿಯಲ್ಲಿದೆ. ಉದ್ದವಾದ ತೆಳು ಮುಂಡ, ಚಿಕ್ಕ ಕೋಡು, ಇಣಿ, ಬಾಲದ ಜೊತೆಗೆ ದ್ವಿರೇಖೆಯಂತೆ ದಪ್ಪವಾದ ನಾಲ್ಕು ಕಾಲುಗಳಿರುವುದು ಇವುಗಳ ವಿಶೇಷ. ೫ನೇ ವಿಧದ ಚಿತ್ರಗಳನ್ನು ಕೊರೆದ ಚಿತ್ರಗಳಲ್ಲಿ ಗುರುತಿಸಬಹುದು. ಕಮಲಾಪುರ ಮತ್ತು ಬಸಾಪಟ್ಟಣಗಳಲ್ಲಿವೆ. ಎರಡೂ ಕೋಡನ್ನು ಸಂಕೇತಿಸುವ ಒಂದು ದೊಡ್ಡ ಕೋಡು ಮತ್ತು ದೊಡ್ಡ ಇಣಿ ಅವುಗಳ ವಿಶೇಷ. ಈ ನಾಲ್ಕು ವಿಧಗಳಲ್ಲದೇ ಚಿಕ್ಕ ಚಿಕ್ಕ ಎತ್ತಿನ ಚಿತ್ರಗಳು ವಿನ್ಯಾಸದಲ್ಲಿ ಅಲ್ಪಸ್ವಲ್ಪ ಭಿನ್ನ ರೀತಿಯಲ್ಲಿ ಕಂಡುಬರುತ್ತವೆ.

ಕೆಲವು ವಿಶಿಷ್ಟ ಎತ್ತಿನ ಚಿತ್ರಗಳು

ದೊಡ್ಡ ಪ್ರಮಾಣದ ಎತ್ತುಗಳು

ರಾಮದುರ್ಗದಲ್ಲಿ ಕೆಂಪು ವರ್ಣದ ಎರಡು ಎತ್ತಿನ ಚಿತ್ರಗಳಿವೆ. ಅವು ಸುಮಾರು ಮೂರು ಮೀ. ಉದ್ದವಿದ್ದು ಕೊಪ್ಪಳ ಹಂಪಿ ಪ್ರದೇಶದ ಎತ್ತಿನ ಚಿತ್ರಗಳಲ್ಲಿಯೇ ದೊಡ್ಡ ಪ್ರಮಾಣದವೆಂದು ಹೇಳಬಹುದು.ಇವು ಛಾಯಾರೂಪದವು. ಪಾರ್ಶ್ವಬದಿಯ ಚಿತ್ರಗಳಾಗಿದ್ದು ಒಂದರ ಹಿಂದೆ ಇನ್ನೊಂದು ನಿಂತಿದೆ. ಮುಂದಿನ ಎತ್ತಿನ ಪುಷ್ಠ ಭಾಗದಲ್ಲಿ ಹಿಂದಿನ ಎತ್ತಿನ ಮುಖವಿದೆ. ಹಾಗಾಗಿ ಅದು ಮಾತ್ರ ಪೂರ್ಣ ಪ್ರಮಾಣದಲ್ಲಿದೆ. ಚಿಕ್ಕರಾಂಪುರ (೨ನೇ ಕಲ್ಲಾಸರೆ) ದಲ್ಲಿಯೂ ದೊಡ್ಡ ಅಳತೆಯ ಎರಡು ಎತ್ತುಗಳು ಪರಸ್ಪರ ಎದುರು ಬದುರಾಗಿ ನಿಂತಿವೆ. ಆದರ ಇವು ಬಹಳಷ್ಟು ಮಾಸಿವೆ.

ಮೈಮೇಲೆ ರೇಖಾಕೃತಿಗಳಿರುವ ಎತ್ತಿನ ಚಿತ್ರಗಳು

ಮಲ್ಲಾಪುರ (೬) ಸಂಗಾಪುರ (೨,೩,೪) ಹಿರೇಬೆಣಕಲ್ (೨) ಮತ್ತು ತೆಂಬಾ (೫)ಗಳಲ್ಲಿ ಮೈಮೇಲೆ ರೇಖೆಗಳನ್ನು ಹಾಕಿರುವ ಎತ್ತುಗಳ ಚಿತ್ರಗಳಿವೆ. ಇವುಗಳಲ್ಲಿ ಹಿರೇಬೆಣಕಲ್ಲಿನ ಎರಡನೇ ಕಲ್ಲಾಸರೆಯಲ್ಲಿ ಉಳಿದ ಸ್ತ್ರೀ, ಪುರುಷ ಚಿತ್ರಗಳ ಮೈಮೇಲಿರುವಂತೆ ಹಾಗೂ ಹಂಪಿ (೬) ಮಲ್ಲಾಪುರ (೩) ನಾರಾಯಣ ಪೇಟೆಯ ಮನುಷ್ಯ ಚಿತ್ರಗಳ (ಮಾಂತ್ರಿಕ ವಿಧಿಯ) ಮೈಮೇಲಿರುವಂತೆ ದ್ವಿವಕ್ರದ ರೇಖೆಗಳಿರುವ ಎತ್ತಿನ ಚಿತ್ರವಿದೆ. ತೆಂಬಾದ ಎತ್ತಿನ ಮೇಲೆ ಪರಸ್ಪರ ಛೇದಿಸುವ ವಕ್ರ ರೇಖೆಗಳು, ಮಲ್ಲಾಪುರದಲ್ಲಿ ಜೋಡಿ ಎತ್ತುಗಳಲ್ಲಿ ಒಂದರ ಮೇಲೆ ಸಮಾನಾಂತರ ಅಡ್ಡ ಗೆರೆಗಳು (ಲಂಬವಾಗಿ) (೩) ಮತ್ತು ಪರಸ್ಪರ ಛೇದಿಸಿದ ಗೆರೆಗಳು (೪) ಸಂಗಾಪುರದ ಎತ್ತಿನ ಚಿತ್ರಗಳ ಮೇಲೆ ಇವೆ.

ಅಲಂಕೃತ ಎತ್ತಿನ ಚಿತ್ರ

ಆನೆಗುಂದಿಯ ಎರಡನೆಯ ಕಲ್ಲಾಸರೆಯಲ್ಲಿ ಅಲಂಕೃತವಾದ ಎತ್ತಿನ ಚಿತ್ರ ಗಮನ ಸೆಳೆಯುತ್ತದೆ. ಅಲ್ಲಿಯ ಪ್ರಾಣಿಗಳ ಸಮೂಹದಲ್ಲಿ ಇದೇ ದೊಡ್ಡದು. ಅಲಂಕಾರದ ಪರಿಣಾಮವಾಗಿ ಮೇಲುನೋಟಕ್ಕೆ ಕುದುರೆಯಂತೆ ಕಾಣುತ್ತದೆ. ಆದರೆ ಕೋಡು, ಇಣಿಗಳಿರುವುದರಿಂದ ಎತ್ತು ಎನ್ನುವುದು ಸ್ಪಷ್ಟ. ಪಾರ್ಶ್ವ ಭಂಗಿಯ ರೇಖಾಚಿತ್ರವಿದು. ಕೋಡು, ಸಣ್ಣ ಇಣಿ, ಬಾಲಗಳಿವೆ. ಶಿಶ್ನ ಬಿಡಿಸಲಾಗಿದೆ. ದೇಹ, ಕಾಲು, ಬೆನ್ನು, ಕತ್ತು ಮತ್ತು ಬಾಲ ವಿಶೇಷ ರೇಖೆಗಳಿಂದ ಅಲಂಕೃತಗೊಂಡಿವೆ. ಇಣಿಯ ಹಿಂದೆ ಬೆನ್ನಿನ ಮೇಲೆ ಮತ್ತು ಕತ್ತಿನಲ್ಲಿ ಗಂಟಲ ಭಾಗದಲ್ಲಿ ತಲಾ ಮೂರು ರೇಖೆಗಳನ್ನು ಹಾಕಲಾಗಿದೆ. ಅದೇ ರೀತಿ ಬಾಲಕ್ಕೆ ಎರಡೂ ಬದಿಗೆ ವಕ್ರವಾಗಿ ರೇಖೆಗಳಿವೆ. ಇದರಿಂದ ಬಾಲ ಕುದುರೆಯ ಬಾಲದಂತೆ ತೋರುತ್ತದೆ. ಮೈಮೇಲೆ ನಡುವೆ, ಅಡ್ಡ ರೇಖೆಗಳನ್ನು ಹಾಕಿದ್ದು ಅದಕ್ಕೆ ಮೇಲೆ ಕೆಳಗೆ ವಕ್ರವಾಗಿ ರೇಖೆಗಳನ್ನು ಹಾಕಲಾಗಿದೆ. ತೊಡೆ ಕಾಲುಗಳ ಮೇಲೆ ವಜ್ರಾಕೃತಿಯಲ್ಲಿ ಹಾಕಿದ ರೇಖೆಗಳಿವೆ.

ಎದುರು ಬದುರಾಗಿ ನಿಂತ ಎತ್ತುಗಳು

ಎದರುರು ಬದುರಾಗಿ ನಿಂತ ಎತ್ತುಗಳ ಚಿತ್ರಗಳು ಗವಿವರ್ಣ ಮತ್ತು ಬಯಲು ಬಂಡೆ ಚಿತ್ರಗಳೆರಡರಲ್ಲಿ ಇವೆ. ವರ್ಣಚಿತ್ರಗಳಲ್ಲಿ ಚಿಕ್ಕರಾಂಪುರದ  ೨ನೇ ಕಲ್ಲಾಸರೆಯಲ್ಲಿ ಎದುರಾಗಿ ನಿಂತ ಜೊತೆ ಎತ್ತಿನ ಚಿತ್ರ ದೊಡ್ಡ ಪ್ರಮಾಣದಲ್ಲಿದೆ. ಅದೇ ರೀತಿ ಅಲ್ಲಿಯ ಒಂದನೇ ಗವಿಯಲ್ಲಿ ೧ ಜೋಡಿ, ಮತ್ತು ನಾಲ್ಕನೇ ಗವಿಯಲ್ಲಿ ೩ ಜೋಡಿ ಎತ್ತುಗಳಿವೆ. ಇವುಗಳಲ್ಲಿ ೧ನೇ ಗವಿಯ ಹಾಗೂ ೪ನೇ ಗವಿಯ ಒಂದು ಜೋಡಿಯ ನಡುವೆ ಮನುಷ್ಯನ ಚಿತ್ರಗಳಿವೆ. ಇವು ಛಾಯಾರೂಪದವು.

ಅಗೋಲಿ ಮತ್ತು ಮಲ್ಲಾಪುರದಲ್ಲಿ ಈ ರೀತಿಯ ಕುಟ್ಟಿದ ಚಿತ್ರಗಳಿವೆ. ಮಲ್ಲಾಪುರದಲ್ಲಿ ಎರಡು ಎತ್ತುಗಳು ಒಂದೇ ಕಡೆ ಇದ್ದು ಅವಕ್ಕೆ ವಿರುದ್ಧವಾಗಿ ಇನ್ನೊಂದು ಚಿತ್ರವಿದೆ. ಇವು ಬಾಹ್ಯ ರೂಪದವು.

ಪರಸ್ಪರ ಎದುರು ನಿಂತ ಎತ್ತಿನ ಚಿತ್ರಗಳಲ್ಲಿ ಸಂಗಾಪುರದ ೬ನೇ ಕಲ್ಲಾಸರೆಯಲ್ಲಿಯ ಚಿತ್ರಗಳು ಗಮನಾರ್ಹವಾಗಿವೆ. ಇಲ್ಲಿ ಎರಡು ಜೋಡಿಗಳಿಗೆ. ಮುಂಡ ನೀಳವಾಗಿವೆ. ಕಾಲುಗಳು (ತ್ರಿಕೋನಾಕಾರ) ಕೂಡ ನೀಳವಾಗಿವೆ. ಕೋಡು U ಆಕಾರದಲ್ಲಿ ದೊಡ್ಡದಾಗಿದೆ. ಬಾಲ ಉದ್ದವಿದ್ದು ತುದಿಯಲ್ಲಿ ಮೂರು ಕವಲಿನ ಕುಚ್ಚನ್ನು ತೋರಿಸಲಾಗಿದೆ. ಇವುಗಳ ಕೆಲವು ವಿಶೇಷ ಅಂಶಗಳೆಂದರೆ ದೊಡ್ಡದಿರುವ ಕೆಳಗಿನ ಎರಡು ಎತ್ತುಗಳ ಕೋಡಿನ ತುದಿಯಲ್ಲಿ ಹೂವನ್ನು ಇರಿಸಿದಂತೆ ಅಲಂಕರಣೆ ಇರುವುದು. ಮೇಲಿನ ಜೋಡಿಯಲ್ಲಿ ಎಡಭಾಗದ ಎತ್ತಿನ ಇಣಿ ಪೂರ್ಣ ವರ್ಣದಲ್ಲಿದ್ದು, ಅದಕ್ಕೆ ಶಿಶ್ನವಿದೆ, ಕೆಳಗಿನ ಜೋಡಿಯಲ್ಲಿಬಲ ಎತ್ತಿದೆ ಶಿಶ್ನ, ಎಡ ಎತ್ತಿನ ಇಣಿ ಪೂರ್ಣ ವರ್ಣದಲ್ಲಿದ್ದು, ಅದಕ್ಕೆ ಶಿಶ್ನವಿದೆ, ಕೆಳಗಿನ ಜೋಡಿಯಲ್ಲಿ ಬಲ ಎತ್ತಿಗೆ ಶಿಶ್ನ, ಎಡ ಎತ್ತಿನ ಇಣಿ ಪೂರ್ಣ ವರ್ಣದಲ್ಲದಿದೆ. ಬಲ ಎತ್ತಗೆ ಹೊಟ್ಟೆಯ ಕೆಳಗೆ ಎರಡು ಕಾಲುಗಳ ನಡುವೆ ಮತ್ತೊಂದು ಗೆರೆ ಎಳೆಯಲಾಗಿದೆ. ಇವೆಲ್ಲಾ ರೇಖಾ ಚಿತ್ರಗಳು.

ಸಾಮಾನ್ಯವಾಗಿ ಜೋಡಿ ಎತ್ತುಗಳ ಲಕ್ಷಣವೆಂದರೆ ಪರಸ್ಪರ ಅವು ಒಂದೇ ಅಳತೆ, ಶೈಲಿಯಲ್ಲಿರುವುದು. ಆದರೆ ಕೊಪ್ಪಳ ಹಂಪಿ ಪ್ರದೇಶದ ಸಂಗಾಪುರದ ಜೋಡಿ ಎತ್ತಿನ ಚಿತ್ರಗಳು ಭಿನ್ನ ಪ್ರಮಾಣದಲ್ಲಿದ್ದುದು ಗಮನಾರ್ಹವೆನಿಸುತ್ತವೆ.