ಮುದಿ ಎತ್ತುಗಳು

ಕೊಪ್ಪಳದ ಮೂರನೇಯ ಕಲ್ಲಾಸರೆಯಲ್ಲಿ ಎತ್ತಿನ ಅಪರೂಪದ ರೇಖಾಚಿತ್ರಗಳಿವೆ. ಇಡೀ ಪ್ರದೇಶದಲ್ಲೇ ಭಿನ್ನವಾದ ರೇಖಾಕೃತಿಗಳಿವು. ಇಲ್ಲಿ ಐದು ಪ್ರಾಣಿಗಳಿವೆ. ಅವುಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತಿರುವ ಎರಡು ಎತ್ತುಗಳು ಗಮನ ಸೆಳೆಯುತ್ತವೆ. ಸರಳ ರೇಖೆಯಲ್ಲಿಯೇ ಕೋಡು, ಮುಂಡ, ಬಾಲಮುಖ, ಕಾಲು, ಇಣಿಗಳನ್ನು ಒಳಗೊಂಡ ಎತ್ತಗಳನ್ನು ಬಿಡಿಸಲಾಗಿದೆ. ಅವುಗಳ ಭಂಗಿ, ಶೈಲಿಯಲ್ಲಿ ಗಮನಿಸಿದಾಗ ಮುದಿ ಎತ್ತುಗಳಂತೆ ತೋರುತ್ತವೆ. ಜೋತುಬಿದ್ದ ಕೋಡುಗಳು, ಎಲುಬುಗಳು ಎದ್ದು ಕಾಣುತ್ತಿರುವ ಸಣಕಲಾದ ದೇಹ, ಒಳಸೇರಿದ ಹೊಟ್ಟೆ ಈ ಅಭಿಪ್ರಾಯಕ್ಕೆ ಸಾಕ್ಷಿಯಾಗಿವೆ. ಇದೊಂದು ವಿಶೇಷ ಚಿತ್ರ.

ಹಸುವಿನ ಚಿತ್ರಗಳು

ಇಣಿಯಿರುವ ಮತ್ತು ಶಿಶ್ನ ಇರುವ, ಇಲ್ಲದಿರುವ ಚಿತ್ರಗಳನ್ನು ಎತ್ತಗಳೆಂದು ಗುರುತಿಸಿದಂತೆ ಹಸುವಿನ ಚಿತ್ರಗಳನ್ನು ಗುರುತಿಸುವುದು ಕಷ್ಟ. ಕೆಚ್ಚಲು ಇದ್ದರೆ ಈ ಸಮಸ್ಯೆ ಇರಲಾರದು. ಆದರೆ ಕೆಲವು ಚಿತ್ರಗಳಿಗೆ ಇಣಿಯು ಇರುವುದಿಲ್ಲ. (ಉದಾ: ಆನೆಗುಂದಿ, ಅಗೋಲಿ) ಕೋಡುಗಳು ಇರುತ್ತವೆ. ಕೆಲವು ದನಗಳ ಗುಂಪಿನಲ್ಲಿ ಇಣಿ ಮತ್ತು ಶಿಶ್ನವಿರುವ ಎತ್ತುಗಳ ಜೊತೆಯಲ್ಲಿ ಈ ರೀತಿಯ ದನಗಳಿರುತ್ತವೆ. ಹಾಗಾಗಿ ಇಂಥವನ್ನು ಆಕಳುಗಳ ಚಿತ್ರವೆಂದು ಗುರುತಿಸಬಹುದು. ಇವು ಶೈಲಿ ಭಂಗಿಯಲ್ಲಿ ಎತ್ತಳಂತೆ ಇರುತ್ತವೆ. ಹಿರೇಬೆನಕಲ್ಲಿನ ೧ನೇ ಕಲ್ಲಾಸರೆಯಲ್ಲಿ ಎತ್ತುಗಳ ಜೊತೆಗೆ ಮೂರು ರೇಖಾ ರೀತಿಯ ದನಗಳ ಚಿತ್ರಗಳಿವೆ. ಅವುಗಳ ಕೋಡು ಅಷ್ಟು ದೊಡ್ಡದಿಲ್ಲ. ಇವುಗಳನ್ನು ಖಂಡಿತವಾಗಿ ಹಸುಗಳೆಂದು ಹೇಳಬಹುದು. ಅದೇ ರೀತಿ ಆನೆಗುಂದಿಯ ೧ ಮತ್ತು ೨ರಲ್ಲಿ ಚಿಕ್ಕರಾಂಪುರದ ೧ನೇ ಗವಿ, ಅಗೋಲಿಯ ೨ನೇ ಕಲ್ಲಾಸರೆಗಳಲ್ಲಿ ಈ ರೀತಿಯ ಹಸುವಿನ ಚಿತ್ರಗಳಿವೆ. ಇದೇ ಆಕಾರದಲ್ಲಿದ್ದು ದೊಡ್ಡ ದೊಡ್ಡ ಕೋಡುಗಳಿದ್ದಲ್ಲಿ ಅವನ್ನು ಎಮ್ಮೆಗಳೆಂದು ಗುರುತಿಸಬಹುದು.

ಹಿರೇಬೆಣಕಲ್ (೬ನೇ ಗವಿ), ಆನೆಗುಂದಿ (ಕಲ್ಲಾಸರೆ ೨) ಮತ್ತು ಕೊಪ್ಪಳ (೧ನೇ ಗವಿ)ಗಳಲ್ಲಿ ಕೆಚ್ಚಲುಳ್ಳ ಹಸುವಿನ ಚಿತ್ರಗಳಿವೆ. ಆನೆಗುಂದಿಯದು ಚಿಕ್ಕ ಆಕಾರದಲ್ಲಿದ್ದು ಮುಖ ಮೇಲೆಕ್ಕೆತ್ತಿದೆ. ಕೆಚ್ಚಲನ್ನು ಅದಕ್ಕೆ ಮೊಲೆ ತೊಟ್ಟುಗಳನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಇದು ಆಡಿನ ಚಿತ್ರವೇ ಎಂಬ ಅನುಮಾನ ಉಂಟಾಗುತ್ತದೆ. ಹಿರೆಬೆಣಕಲ್ಲಿನ ಆಕಳು ಸ್ಪಷ್ಟವಿದೆ. ಆದರೆ ಕೊಪ್ಪಳದ ಚಿತ್ರ ವಿಚಿತ್ರವಾಗಿದೆ. ಕೆಚ್ಚಲಿನಲ್ಲಿ ಒಂದೇ ತೊಟ್ಟಿದೆ ಹಗೂ ಇದಕ್ಕೆ ಎತ್ತರವಾದ ಇಣಿ ಇರುವುದು ಅಸಹಜವೆನಿಸುತ್ತದೆ.

ಕಾಡು ಕೋಣ, ಎಮ್ಮೆಯ ಚಿತ್ರಗಳು

ಕೋಣದ ಚಿತ್ರಗಳು ಮಲ್ಲಾಪುರ(೩) ಬಂಡಿಹರ್ಲಾಪುರ (೨, ೩) ಹಂಪಿ (೨) ಕೊಪ್ಪಳ (೧) ಚಿಕ್ಕಬೆಣಕಲ್ (೩)ಗಳಲ್ಲಿ ಎಮ್ಮೆ ಚಿತ್ರಗಳು ಎಮ್ಮೆಗುಡ್ಡ (೧) ಹಿರೆಬೆಣಕಲ್) (೬) ಸಂಗಾಪುರ (೬)ಗಳಲ್ಲಿ ಇವೆ.

ಬಂಡಿ ಹರ್ಲಾಪುರ (೨ನೇ ಚಿತ್ರ) ಹಂಪಿ, ಕೊಪ್ಪಳಗಳ ಕೋಣಗಳ ಚಿತ್ರಗಳು ಚಿಕ್ಕ ಅಳತೆಯವು. ಉಳಿದವು ಬೃಹತ್ ಪ್ರಮಾಣದಲ್ಲಿವೆ. ವಿಶೇಷವಾಗಿ ಮಲ್ಲಾಪುರ ಚಿಕ್ಕಬೆಣಕಲ್ ಮತ್ತು ಬಂಡಿಹರ್ಲಾಪುರದಲ್ಲಿ ಪೂರ್ಣ ಪ್ರಮಾಣದ ಬೃಹತ್ ಕೋಣಗಳ  ಚಿತ್ರಗಳು ಇದ್ದು, ಗಮನಾರ್ಹವೆನಿಸುತ್ತವೆ. ಮಲ್ಲಾಪುರದಲ್ಲಿ ೩,೧೦ ಮೀ. ಎತ್ತರ ಮತ್ತು ೨.೧೫ ಮೀ. ಉದ್ದ ಪ್ರಮಾಣದಲ್ಲಿದೆ. ಬಲಿಷ್ಟವಾದ ದೇಹ, ಶಿಶ್ನ ಚಿಕ್ಕ ಚೂಪಾದ ಕಿರಿದಾದ ಕೋಡುಗಳಿವೆ. ಮೈಮೇಲೆ ರೇಖಾಕೃತಿಗಳಿವೆ.

ಚಿಕ್ಕ ಬೆಣಕಲ್ (೨ ಮೀ ಉದ್ದ ಮತ್ತು ೨ ಮೀ ಎತ್ತರ) ಮತ್ತು ಬಂಡಿ ಹರ್ಲಾಪುರಗಳ (೨,೮೦ ಮೀ ಉದ್ದ ಮತ್ತು ೧.೮೯ ಎತ್ತರ) ಕೋಣಗಳ ಗಮನಾರ್ಹ ಪ್ರಮಾಣದಲ್ಲದಿವೆ. ಇವು ಅತ್ಯಂತ ಬಲಿಷ್ಟವಾದ ಒಳಬಾಗಿದ ಕಿರಿದಾದ ದಪ್ಪ ಕೋಡುಗಳು, ಬಲಿಷ್ಟ ದೇಹ, ೨ ಕಿವಿಗಳು, ಬಾಲ ಶಿಶ್ನಗಳನ್ನು ಹೊಂದಿದೆ. ಬಂಡಿ ಹರ್ಲಾಪುರದ ೧ನೇ ಕಲ್ಲಾಸರೆಯಲ್ಲಿ ಮತ್ತೊಂದು ಬಲಿಷ್ಟ ಕೋಣದ ಮುಖ ಭಾಗದ ಚಿತ್ರವಿದೆ. ಈ ಕೋಣಗಳು ಗೂಳಿಯಂತೆ ದಷ್ಟಪುಷ್ಟವಾಗಿದ್ದು, ಗಾಂರ್ಭಿರ್ಯಕ್ಕೆ ಸಂಕೇತಗಳಾಗಿವೆ. ಈ ಚಿತ್ರಗಳು ಪ್ರಾಗಿತಿಹಾಸ ಕಾಲದ ಕಲೆಯ ಕೌಶಲ್ಯಕ್ಕೆ ಸಾಕ್ಷಿಯಾಗಿವೆ.

ಹಿರೇಬೆಣಕಲ್, ಸಂಗಾಪುರಗಳಲ್ಲಿಯ ಎಮ್ಮೆ ಚಿತ್ರಗಳು ಚಿತ್ರ ಸಮೂಹದಲ್ಲಿದ್ದು ಬೃಹತ್ ಕೋಡುಗಳನ್ನು ಹೊಂದಿವೆ. ಇವುಗಳಲ್ಲಿ ಎಮ್ಮೆ ಗುಡ್ಡದ ಎಮ್ಮೆಯದು ಉತ್ತಮ ಚಿತ್ರವಾಗಿದೆ.

ಜಿಂಕೆ ಚಿಗರೆಯ ಚಿತ್ರಗಳು

ಗೂಳಿ, ಕೋಣ, ಎತ್ತಿನಂತೆ ಜಿಂಕೆ ಕೂಡ ಆದಿ ಮಾನವನಿಗೆ ಪ್ರಿಯವಾದ ವಸ್ತು, ಈ ಮುಗ್ಧ ಪ್ರಾಣಿ ಅವನ ಕಲೆಯಲ್ಲಿ ಅಪೂರ್ವ ಸ್ಥಾನ ಪಡೆದಿದೆ. ಬಿಡಿ ಬಿಡಿಯಾಗಿ, ಗುಂಪಾಗಿ, ಸಾಲು ಸಾಲಾಗಿ ಜಿಂಕೆಗಳನ್ನು ಚಿತ್ರಸಿದ್ದಾನೆ. ಜಿಂಕೆ ಚಿಗರೆಯ ಚಿತ್ರಗಳು ಹಿರೇಬೆಣಕಲ್ (೧,೪,೫,೬,೧೧,೧೩,೧೪) ಎಮ್ಮಿಗುಡ್ಡ (೧) ಗೂಗಿಬಂಡಿ, ಅಂಜನಹಳ್ಳಿ (೧), ಆನೆಗುಂದಿ (೨,೬) ಮಲ್ಲಾಪುರ (೩,೬,೮) ಸಂಗಾಪುರ (೨), ಕೊಪ್ಪಳ (೧, ೨) ನಾರಾಯಣಪೇಟೆ (೪), ಹೊಸಬಂಡಿಹರ್ಲಾಪುರ (೨), ಹಂಪಿ (೨,೪) ಮತ್ತು ಚಿಕ್ಕ ರಾಂಪುರ (೧) ಗಳಲ್ಲಿ ಇವೆ. ಇವುಗಳಲ್ಲಿ ಕವಲಿನ ಕೋಡುಳ್ಳ ಜಿಂಕೆಗಳು ಕೊಪ್ಪಳದಲ್ಲಿ ಮತ್ತು ಅವುಗಳ ಗುಂಪುಗಳು ಆನೆಗುಂದಿ ಮತ್ತು ಹಿರೇಬೆಣಕಲ್ಲಿನ ೬ನೇ ಗವಿಯಲ್ಲಿವೆ. ಬಂಡಿ ಹರ್ಲಾಪುರದಲ್ಲಿ ಕವಲಿನ ಕೋಡಿನ ಜಿಂಕೆಯ ಸಾಲು ಮನಮೋಹಕವಾಗಿದೆ. ಪ್ರಮಾಣಬದ್ಧ ದೇಹ, ದೊಡ್ಡ ಕವಲಿನ ಕೊಂಬುಗಳಿಂದ ಕೂಡಿದ್ದು, ಉತ್ತಮ ಚಿತ್ರಗಳಾಗಿವೆ. ಆನೆಗುಂದಿಯಲ್ಲಿ ಒಂದು ಗುಂಪಿನ ಜಿಂಕೆಗಳ ಮೈಮೇಲೆ ಅಡ್ಡಗೆರೆ ಹಕಿ ಅದರ ಎರಡು ಬದಿಯಿಂದ ವಕ್ರವಾಗಿ ರೇಖೆ ಎಳೆಯಲಾಗಿದೆ. ಕೊಂಬುಗಳ ಕವಲುಗಳನ್ನು ಕೂಡ ಅದೇ ರೀತಿಯಲ್ಲಿ ತೋರಿಸಲಾಗಿದೆ. ಸಂಗಾಪುರ ಮತ್ತು ಮಲ್ಲಾಪುರ (೬)ಗಳ ಜಿಂಕೆಗಳ ಮೈಮೇಲೆ ವಕ್ರವಾಗಿ ರೇಖೆಗಳಲ್ಲಿ ಹಾಕಲಾಗಿದೆ. ಇವೆಲ್ಲಾ ಅಲಂಕಾರ ದೃಷ್ಟಿಯಿಂದ ಮಾಡಿರಬಹುದೆನಿಸುತ್ತದೆ. ಮಲ್ಲಾಪುರದ ಮೂರನೇ ಗವಿಯಲ್ಲಿ ಜಿಂಕೆಯ ದೊಡ್ಡ ಚಿತ್ರವೆನ್ನಬಹುದು. ಇದರ ಮೈಮೇಲೆ ಮೂರು ಸಾಲಿನಲ್ಲಿ ಪಟ್ಟೆಗಳಿವೆ.

ಹಿರೇಬೆಣಕಲ್ಲಿನ ೫ ಮತ್ತು ಹಂಪಿಯಲ್ಲಿ ಉದ್ದ ಕೊಂಬಿನ ಜಿಂಕೆಗಳಿವೆ. ಹಿರೇಬೆಣಕಲ್ಲಿನ ೧೧ ಮತ್ತು ೧೨ನೇ ಗವಿಗಳಲ್ಲಿ ಜಿಂಕೆ ಸಾಲುಗಳ ಅಪೂರ್ವ ಚಿತ್ರಗಳಿವೆ ೧೧ನೇ ಗವಿಯಲ್ಲಿಯ ಸಾಲು ಜಿಂಕೆಗಳು ತೀರಾ ಗಮನಾರ್ಹವಾದದ್ದು. ಮರ ಇಲ್ಲವೆ ಚರ್ಮದಲ್ಲಿ ಪ್ರಾಣಿಯ ಚಿತ್ರವನ್ನು ಕತ್ತರಿಸಿಕೊಂಡು ಅದನ್ನು ಬಂಡೆಯ ಮೇಲಿಟ್ಟು ಒಂದು ಪಕ್ಕದಲ್ಲೊಂದರಂತೆ ಸಾಲು ಚಿತ್ರಗಳನ್ನು ತೆಗೆದಂತಿದೆ. ಕ್ರಮವಾಗಿ ಸಾಲಿನ ಎಲ್ಲಾ ಜಿಂಕೆಗಳನ್ನು ಪ್ರಮಾಣದಲ್ಲಿಯೂ, ಆಕಾರದಲ್ಲಿಯೂ, ಅವುಗಳ ಭಂಗಿಯಲ್ಲಿಯೂ ಏಕಪ್ರಕಾರವಾಗಿ ಬಿಡಿಸಿರುವುದು ವಿಶೇಷವೇ ಸರಿ. ಶೈಲಿಯಲ್ಲಿ ದೇಹ ಉದ್ದ ಹಾಗೂ ತೆಳ್ಳಗಿದ್ದು, ಕಾಲುಗಳು ಕಡ್ಡಿಯಂತೆ, ಕೋಡುಗಳು ಕವಲೊಡಿದ ರೆಂಬೆಯಂತಿವೆ. ಬಾಲ ಸಣ್ಣದಿದ್ದು ಮೇಲೆಕ್ಕೆತ್ತಿದೆ. ಕುತ್ತಿಗೆ ನೀಳ, ಸಣ್ಣ ಹಾಗೂ ನೆಟ್ಟಗಿದ್ದು ತಲೆ ಎತ್ತಿ ನೋಡುತ್ತಿರುವ ಹಾಗಿವೆ. ಸಮಾನ್ಯವಾಗಿ ಎಲ್ಲಾ ಜಿಂಕೆಗಳು ಇದೇ ಶೈಲಿಯಲ್ಲಿರುತ್ತವೆ.

ನಾರಾಯಣಪೇಟೆಯ ೪ನೇ ಕಲ್ಲಾಸರೆಯಲ್ಲಿ ೧೭ ಪ್ರಾಣಿಗಳ ಚಿತ್ರಗಳಿವೆ. ಇವು ಜಿಂಕೆಗಳೂ ಅಥವಾ ಪಶುಗಳೋ ಸ್ಪಷ್ಟವಾಗುವುದಿಲ್ಲ. ಬಾಲ ಹಸುವಿನಂತಿವೆ. ಅದರ ಮೈಮೇಲೆ ಅಡ್ಡರೇಖೆ ಇದ್ದು ಪ್ರಾಯಶಃ ಪಟ್ಟೆಯಾಗಿರಬೇಕು. ಹಾಗಾಗಿ ಇವು ಜಿಂಕೆಗಳಾಗಿರಬಹುದು. ಚಿಕ್ಕರಾಂಪುರದಲ್ಲಿ (೧) ಸಾಲಾಗಿ ನಿಂತ ಜಿಂಕೆಗಳಿವೆ.

ಕಡವೆ

ವಿರಳವಾಗಿ ಈ ಪ್ರಾಣಿಗಳ ಚಿತ್ರಗಳು ಅಲ್ಲಲ್ಲಿ ಕಂಡುಬರುತ್ತವೆ. ಇವುಗಳನ್ನು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟ. ಮಲ್ಲಾಪುರದ ೩ನೇ ಗವಿಯಲ್ಲಿ ಒಂದು ಪ್ರಾಣಿಯ ಚಿತ್ರವಿದೆ. ಅದಕ್ಕೆ ಮುಖಭಾಗವಿಲ್ಲ. ರೇಖಾಚಿತ್ರವಿದು ೧.೨೪ ಮೀ. ಉದ್ದವಿದೆ. ಬೆನ್ನ ಮೇಲೆ ವಕ್ರವಾಗಿ ಕೂದಲನ್ನು ತೋರಿಸಲಾಗಿದೆ. ತುಂಡು ಬಾಲವಿರುತ್ತದೆ. ಇದೇ ರೀತಿ ಅರ್ದ ದೇಹ ಚಿತ್ರ ಹಂಪಿಯ ೫ನೇ ಕಲ್ಲಾಸರೆಯಲ್ಲಿದೆ. ಇಲ್ಲಿ ಉದ್ದ ಕತ್ತು, ನಿಮಿರಿ ನಿಂತ ೨ ಕಿವಿಗಳ ಪ್ರಾಣಿಯ ಮುಖ ಚಿತ್ರಗಳಿವೆ. ಇಂತಹದೇ ಅಲ್ಲಿಯ ೭ನೇ ಕಲ್ಲಾಸರೆಯಲ್ಲೂ ಇದೆ. ಈ ಮುಖಗಳು ಕಡವೆ ತರಹ ಇವೆ. ಅರ್ಧ ದೇಹದ ಪ್ರಾಣಿಗೆ ಇವೇ ಮುಖಗಳಿರಬೇಕೆನಿಸುತ್ತದೆ. ಹಾಗಾದಲ್ಲಿ ಇವು ಕಡವೆಗಳೆನ್ನಬಹುದು. ಕಮಲಾಪುರದ ಒಂಟಿ ಗುಂಡಿನಲ್ಲಿ ಇದೇ ರೀತಿ ದೇಹದ ಒಂದು ಪ್ರಾಣಿಯ ರೇಖಾಚಿತ್ರವಿದೆ. ಗಡ್ಡಿಯಲ್ಲಿ (೩ನೇ ಕಲ್ಲಾಸರೆ) ಇದರಂತೆ ಪ್ರಾಣಿಯ ಮುಖಭಾಗದ ಚಿತ್ರವಿದೆ. ಇವು ಚಿಕ್ಕ ಕೋಡುಗಳಿವೆ.

ಕುದುರೆ

ಕುದುರೆ ಚಿತ್ರಗಳು ಹಿರೇಬೆಣಕಲ್ (೩) ಗಡ್ಡಿ (೨) ಮಲ್ಲಾಪುರ (೨) ಕೊಪ್ಪಳ (೧) ಮತ್ತು ಹೊಸ ಬಂಡಿಹರ್ಲಾಪುರಗಳಲ್ಲಿವೆ. ಇವೆಲ್ಲ ಬಿಡಿ ಚಿತ್ರಗಳು. ಹಿರೆಬೆಣಕಲ್ಲಿನಲ್ಲಿ ೨ ಕುದುರೆ ಚಿತ್ರಗಳಿವೆ. ಗಡ್ಡಿಯಲ್ಲಿ ಮುಖ ಬಗ್ಗಿಸಿ ನಿಂತ ಕುದುರೆಯ ಚಿತ್ರವಿದ್ದು, ಮೈಮೇಲೆ  ಅನೇಕ ಕ್ರಮಬದ್ಧ ರೇಖೆಗಳಿವೆ. ಇದೇ ರೀತಿ ರೇಖೆಗಳಿರುವ ಕುದುರೆ ಹೊಸ ಬಂಡಿಹರ್ಲಾಪುರದಲ್ಲಿದೆ. ಮಲ್ಲಾಪುರದ ಕುದುರೆ ಚಿತ್ರ ಗಮನಾರ್ಹವಾಗಿದೆ. ಎತ್ತರವಾದ ಕಾಲುಗಳು, ಎತ್ತರವಾದ ಕತ್ತಿದೆ. ತಲೆಯ ಮೇಲೆ ಸಾಲಾಗಿ ತುರಾಯಿ ರೀತಿ ಕೂದಲು ಅಥವಾ ಅಲಂಕರಣೆ ಇದೆ. ಕೊಪ್ಪಳದ ಕುದುರೆ ಚಿತ್ರದ ಮುಖ ಪಕ್ಷಿಯಂತೆ ಮೂತಿ ಚೂಪಾಗಿ ವಿಶೇಷವೆನಿಸುತ್ತದೆ. ಕುದುರೆಗಳ ಪ್ರಮಾಣಬದ್ಧ ಆಕೃತಿಗಳು ಸವಾರರನ್ನೊಳಗೊಂಡ ಚಿತ್ರಗಳಲ್ಲಿವೆ. ಇಂಥವು ಅಧಿಕ ಸಂಖ್ಯೆಯಲ್ಲಿ ಹಿರೇಬೆಣಕಲ್, ಚಿಕ್ಕರಾಂಪುರ, ಆನೆಗುಂದಿಗಳಲ್ಲಿ ಕಂಡುಬರುತ್ತವೆ.

ಹುಲಿ, ಚಿರತೆ

ಹುಲಿ ಚಿರತೆಯಂತಹ ಕ್ರೂರ ಪ್ರಾಣಿಗಳು ಆದಿ ಮಾನವನ ಕಲೆಯ ವಿಷಯವಾಗಿದೆ. ಹಿರೇಬೆಣಕಲ್ಲಿನಲ್ಲಿ ೬ನೇ ಗವಿಯಲ್ಲಿ ಅಶ್ವ ಸವಾರನೊಬ್ಬ ಹುಲಿಯೆಡೆಗೆ ಬಾಣ ಹೂಡಿರುವ ದೃಶ್ಯ  ಗಮನಾರ್ಹ. ಇಲ್ಲಿಯೇ (೮) ಮತ್ತು (೯) ನೇ ಗವಿಗಳಲ್ಲಿ ಮೂರು ಹುಲಿ ಚಿತ್ರಗಳಿವೆ. ಇವುಗಳ ಮೇಲೆ ಸಮನಾಂತರ ಗೆರೆಹಾಕಿ ಪಟ್ಟೆಗಳನ್ನು ತೋರಿಸಲಾಗಿದೆ. ಹಂಪಿಯ ಎರಡನೆಯ ಕಲ್ಲಾಸರೆಯ ಹುಲಿಯ ಚಿತ್ರ ರಚನೆ, ಶೈಲಿ, ಭಂಗಿಯಿಂದ ಉತ್ತಮ ಚಿತ್ರವಾಗಿದೆ. ಬಾಲ ಎತ್ತಿಕೊಂಡು ಹೊರಟಿರುವ ಭಂಗಿ ಅತ್ಯಂತ ಸಹಜವಾಗಿದೆ. ಮೈಮೇಲೆ ವಕ್ರನೇರ ಪಟ್ಟೆಗಳಿವೆ. ಕೊಪ್ಪಳದಲ್ಲಿ ಮೇಲೆಕ್ಕೆ ನೆಗೆದಿರುವ ಹುಲಿಯ ಚಿತ್ರವಿದೆ. ಇದರ ಮೈಮೇಲೆ ಬಾಗಿದ ವಕ್ರ ರೇಖೆಗಳಿರುವುದು ವಿಶೇಷ. ವೆಂಕಟಾಪುರದಲ್ಲೂ ಹುಲಿ ಚಿತ್ರವಿದೆ. ಈಚಿನ ಹುಲಿ ಚಿತ್ರಗಳಿಗೆ ಬಂಡಿ ಹರ್ಲಾಪುರದವು ಒಳ್ಳೆಯ ಮಾದರಿಗಳಾಗಿವೆ. ರಾಂಪುರದ ಎರಡನೆಯ ಗವಿಯಲ್ಲಿ ಚಿರತೆಯ ರುಂಡ ಭಾಗದ ಚಿತ್ರವಿದೆ. ಹಿರೇಬೆನಕಲ್ಲಿನ ೧ನೇ ಕಲ್ಲಾಸರೆಯಲ್ಲಿ ಮತ್ತು ಚಿಕ್ಕರಾಂಪುರದ ೧ನೇ ಗವಿಯಲ್ಲಿ ಚಿರತೆಯ ಚಿಕ್ಕ ಚಿತ್ರಗಳಿವೆ.

ಆನೆ

ಆನೆ ಚಿತ್ರಗಳು ಹಿರೇಬೆಣಕಲ್ (೩), ಅಂಜನಹಳ್ಳಿ (೨), ಆನೆಗುಂದಿ (೭,೮) ಮತ್ತು ಸಂಗಾಪುರ (೭,೮) ಮತ್ತು ೧೦) ಗಳಲ್ಲಿವೆ. ಆನೆಗುಂದಿಯಲ್ಲಿಯ ಆನೆ ಚಿತ್ರಗಳು ಒಂದು ರೀತಿಯಲ್ಲಿದ್ದರೆ, ಸಂಗಾಪುರದ ಚಿತ್ರಗಳು ಮತ್ತೊಂದು ರೀತಿಯಲ್ಲಿವೆ. ಮೊದಲಿನವು ಉದ್ದವಾದ ದೇಹವನ್ನು ಹೊಂದಿವೆ. ದಪ್ಪವಾದ ನಾಲ್ಕು ಕಾಲುಗಳು ಸಾಲಾಗಿವೆ. ದೇಹ, ಕಾಲುಗಳ ಪ್ರಮಾಣ ಬದ್ಧತೆ ಇಲ್ಲ. ಇವನ್ನು ಕಡುಕೆಂಪು ವರ್ಣದಲ್ಲಿ ಬಿಡಿಸಲಾಗಿದೆ. ಸಂಗಾಪುರದವು ಬೆನ್ನು ಮೇಲಕ್ಕೆ ಎತ್ತರಿಸಿ ಸ್ವಲ್ಪ ನೈಜ ರೀತಿಯಲ್ಲಿವೆ. ಸೊಂಡಿಲು ಸಪೂರವೆನಿಸುತ್ತದೆ. ಇವು ತಿಳಿ ಕೆಂಪು ವರ್ಣದವು. ಆನೆಗುಂದಿಯ ಕಲ್ಲಾಸರೆ ಮತ್ತು ಸಂಗಾಪುರದ (೮)ನೇ ಕಲ್ಲಾಸರೆಯ ಆನೆಗಳ ಮೇಲೆ ಸವಾರರಿದ್ದಾರೆ.

ಹಂದಿ

ಮಲ್ಲಾಪುರದ ೩ನೇಯ ಗವಿಯಲ್ಲಿ ಎರಡು ಹಂದಿಯ ಚಿತ್ರಗಳಿವೆ. ದೊಡ್ಡದು (೧,೩೯ ಮೀ. ಎತ್ತರ, ೨.೦೬ ಮೀ. ಉದ್ದ). ಪಾರ್ಶ್ವ ಭಂಗಿಯಲ್ಲಿ ನಿಂತ ಹಂದಿಯದು ರೇಖಾಚಿತ್ರವಿದ್ದು. ಮುಖ, ಕಿವಿ, ದೇಹ, ಕಾಲು ಪ್ರಮಾಣಬದ್ಧವಾಗಿವೆ. ಕಣ್ಣನ್ನು ಗುರುತಿಸಿಲ್ಲ. ಮೈಮೇಲಿ ರೇಖಾಕೃತಿಗಳಿವೆ. ಇದು ಸಹಜವಾದ ರೇಖಾಚಿತ್ರವಾಗಿದೆ. ಇನ್ನೊಂದು ಇದರಂತೆ ಚಿಕ್ಕ ಚಿತ್ರವಿದೆ. ೫ನೇ ಕಲ್ಲಾಸರೆಯಲ್ಲೂ ಹಂದಿಯ ಮುಖಚಿತ್ರವಿದೆ. ಚಿಕ್ಕ ಬೆಣಕಲ್ (೩) ಹಿರೇಬೆಣಕಲ್ (೨) ಗಳಲ್ಲೂ ಹಂದಿಯ ದೊಡ್ಡ ಚಿತ್ರಗಳಿವೆ.

ನಾಯಿ

ನಾಯಿಯ ಚಿತ್ರಗಳು ದನಗಳ, ಮನುಷ್ಯ ಚಿತ್ರಗಳೆಡೆಯಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಕಡ್ಡಿಯಂತೆ ರೇಖಾಕೃತಿಯಲ್ಲಿ ನಾಯಿ ಚಿತ್ರಗಳನ್ನು ಬಿಡಿಸಲಾಗಿರುತ್ತದೆ. ತೆಳು ಉದ್ದ ದೇಹ, ಕಡ್ಡಿಯಂತೆ ಕಾಲು, ಬಾಲ ಮೇಲೆಕ್ಕೆತ್ತಿರುತ್ತದೆ. ನಾಯಿಯ ಚಿತ್ರಗಳು ಹಿರೇಬೆಣಕಲ್ (೧) ಚಿಕ್ಕರಾಂಪುರ (೧) ಹಂಪಿ (೪) ರಾಂಪುರ (೩) ಮಲ್ಲಾಪುರ (೪,೬) ಹೊಸ ಬಂಡಿಹರ್ಲಾಪುರ (೧) ಮತ್ತು ಆನೆಗುಂದಿ  (೨)ಯ ಚಿತ್ರಗಳಲ್ಲಿ ಕಂಡುಬಂದಿದೆ.

ಉಡ

ಉಡದ ಚಿತ್ರಗಳು ಗಡ್ಡಿ (೩) ಮತ್ತು ಹಿರೇಬೆಣಕಲ್ಗಳಲ್ಲಿವೆ. ಗಡ್ಡಿಯಲ್ಲಿ ಹಲ್ಲಿಯ ಆಕಾರದಲ್ಲಿದ್ದು ಛಾಯಾರೂಪದಲ್ಲಿದೆ. ಚೂಪಾದ ಮುಖ, ತೆಳುವಾದ ಕತ್ತು, ಅರೆ ವೃತ್ತಾಕಾರದ ಹೊಟ್ಟೆ ನಾಲ್ಕು ಕಾಲು ಉದ್ದವಾದ ಬಾಲವನ್ನು ಹೊಂದಿದೆ. ನಾಲಗೆಯನ್ನು ಹೊರಚಾಚಿದೆ. ನಾಲಿಗೆ ತುದಿ ಗುಂಡಾಗಿದೆ.

ಹಿರೇಬೆಣಕಲ್ಲಿನ ೧೬ನೇ ಕಲ್ಲಾಸರೆಯಲ್ಲಿ ೫ ಉಡಗಳ ಗುಂಪಿನ ಚಿತ್ರವಿದೆ. ಚಿತ್ರಗಳು ಬಹಳಷ್ಟು ಮಾಸಿವೆ. ಇವುಗಳ ಮೈ ತುಂಬಾ ವಕ್ರವಾಗಿ ಪರಸ್ಪರ ಛೇದಿಸುವ ರೇಖೆಗಳಿದ್ದು ಬಹಳ ಸುಂದರವಾಗಿ ಕಾಣುತ್ತದೆ.

ಮಂಗ

ಮಂಗದ ಚಿತ್ರಗಳು ತೀರ ವಿರಳ. ಅದರಲ್ಲೂ ಬಿಳಿ ಬಣ್ಣದ ಚಿಕ್ಕ ಚಿಕ್ಕ ಕಡ್ಡಿ ರೀಇತಯ ಆಕೃತಿಗಳು ಎಮ್ಮಿಗುಡ್ಡ (೨) ಆನೆಗುಂದಿ (೮)ಗಳಲ್ಲಿವೆ. ಇವು ವಿವಿಧ ಭಂಗಿಯಲ್ಲಿವೆ. ಚಿಕ್ಕರಾಂಪುರ (೧) ಮತ್ತು ಚಿಕ್ಕಬೆಣಕಲ್‌ಗಳಲ್ಲಿ ಕೆಂಪುವರ್ಣದ ಚಿತ್ರಗಳಿವೆ. ಕಡ್ಡಿಯಂತೆ ಉದ್ದ ದೇಹ ಮೂತಿ ಚೂಪಾದ ಮುಖ (ಅಥವಾ ತ್ರಿಕೋನಾಕಾರದ ಮುಖ) ಕೈಕಾಲು ಬಾಲಗಳಿರುತ್ತವೆ.

ಹಾವು

ಹಾವಿನ ಚಿತ್ರಗಳು ಹೆಚ್ಚಿಲ್ಲ. ಹಿರೇಬೆಣಕಲ್ಲಿನಲ್ಲಿ ಎರಡನೆಯ ಕಲ್ಲಾಸರೆಯಲ್ಲಿ ಎರಡು ಬೃಹತ್ ಹೆಬ್ಬಾವುಗಳ ಚಿತ್ರಗಳಿವೆ. ಅವುಗಳ ಮೈಮೇಲೆ ರೇಖಾಚಿತ್ರಗಳಿವೆ. ಇವನ್ನು ಹೊರತುಪಡಿಸಿ ಸಣ್ಣ ಪ್ರಮಾಣದಲ್ಲಿ ಹಾವಿನ ಚಿತ್ರಗಳೇ ಇಲ್ಲ. ಚಿಕ್ಕರಾಂಪುರದಲ್ಲಿ ಇತಿಹಾಸ ಕಾಲದ ದೊಡ್ಡ ನಾಗಸರ್ಪದ ಚಿತ್ರವಿದೆ.

ಮೀನ

ಮೀನಿನ ೪ ಅಪರೂಪದ ಚಿತ್ರಗಳು ಹಂಪಿ (೩) ಮಲ್ಲಾಪುರ (೩) ಮತ್ತು ಹಿರೇಬೆಣಕಲ್ (೧೬) ಗಳಲ್ಲಿವೆ. ಹಂಪಿಯಲ್ಲಿಯ ಒಂದು ಬಾಹ್ಯ ರೇಖೆಯಲ್ಲಿದ್ದು, ಸಹಜ ರೂಪದಲ್ಲಿವೆ. ಇದು ಉದ್ದವಾಗಿದ್ದು ಮಧ್ಯದಲ್ಲಿ ಅಗಲಿರುವುದರಿಂದ ಒಂದು ವಿಶೇಷ ಜಾತಿಯ ಮೀನೆನ್ನಬಹುದು. ಬಾಲ U ಆಕಾರದಲ್ಲಿದೆ. ಇನ್ನೊಂದು ಮೀನಿನ ಮೇಲೆ ಉದ್ದ ರೇಖೆಗಳಿವೆ. ಇವೆರಡು ಬೇರೆ ಬೇರೆ ಜಾತಿಯವು. ಮಲ್ಲಾಪುರದಲ್ಲಿಯ ಮೀನು ಮತ್ತೊಂದು ವಿಶೇಷ ಜಾತಿಯದು. ಸಮುದ್ರದಲ್ಲಿ ವಿರಳವಾಗಿ ದೊರೆಯುವ ಕೊಡೆಯಾಕಾರದ ಮೀನಿನಂತಿದೆ. ಅರೆ ವೃತ್ತಾಕಾರದ ದೇಹ ಅದಕ್ಕೆ ಅನೇಕ ಎಳೆಯಾಕಾರದ ಬಾಲಗಳಿವೆ. ಹಿರೇಬೆಣಕಲ್ಲಿನಲ್ಲಿ ದೊಡ್ಡ ಪ್ರಮಾಣದಲ್ಲಿದೆ. (೦.೫ ಮೀ. ಅಗಲ ಮತ್ತು ೦.೮೩ ಮೀ. ಉದ್ದ) ಮೊಟ್ಟೆಯಾಕಾರದ ಉದ್ದ ದೇಹ. ದಪ್ಪ ಬಾಲ ಮತ್ತು ದೇಹದ ಎರಡೂ ಕಡೆ ರೆಕ್ಕೆಗಳಿವೆ. ಮೈ ಮತ್ತು ದ್ವಿರೇಖೆಯ ಬಾಲದ ಮೇಲೆ ಸಮನಾಂತರದಲ್ಲಿ ಅಡ್ಡ ರೇಖೆಗಳಿವೆ. ಈ ಪ್ರದೇಶದಲ್ಲಿ ಅಪರೂಪದ ಜಾತಿಯ ಮೀನುಗಳ ಚಿತ್ರಗಳಿರುವುದು ಗಮನಾರ್ಹ.

ಇತರ ಪ್ರಾಣಿಗಳು

ಹೋತು, ಆಡು (ಆನೆಗುಂದಿ ೨), ಮೊಸಳೆ (ಹಂಪಿ-೧) ಟಗರು ಮತ್ತು ತೋಳ (ಕೊಪ್ಪಳ-೧) ಗಳ ಒಂದೊಂದು ಚಿತ್ರಗಳಿವೆ. ಕೊಪ್ಪಳ (೧) ಹಿರೇಬೆಣಕಲ್ (೧) ಗಳಲ್ಲಿ ಮೊಲದ ಚಿತ್ರಗಳಿವೆ. ಆನೆಗುಂದಿಯಲ್ಲಿ ಆಡು ಮುಖ ಮೇಲೆಕ್ಕೆತ್ತಿ ನಿಂತಿದೆ. ಅದಕ್ಕೆ ಕೆಚ್ಚಲನ್ನು ತೋರಿಸಲಗಿದೆ. ಹಂಪಿಯಲ್ಲಿ ಮೊಸಳೆ ಉಡದಂತೆ ತೋರುತ್ತಿದ್ದರೂ ಅದು ಮೊಸಳೆ ಎನ್ನುವುದು ಸ್ಪಷ್ಟ. ಕೊಪ್ಪಳದ ಒಂದನೆಯ ಗವಿಯ ಪ್ರಾಣಿ ಸಮುಹದ ಚಿತ್ರಗಳಲ್ಲಿ ಟಗರು, ಮೊಲ ಮತ್ತು ತೋಳದ ಚಿತ್ರಗಳು ಸಹಜವಾಗಿವೆ.

ಪಕ್ಷಿ ಚಿತ್ರಗಳು

ನವಿಲು ಚಿತ್ರಗಳು

ನವಿಲು ಅತ್ಯಂತ ಸುಂದರವಾದ ಪಕ್ಷಿ. ಹಾಗಾಗಿ ಅದು ಆದಿ ಮಾನವನಿಗೆ ಪ್ರಿಯವಾದ ಪಕ್ಷಿಯಾಗಿರಲಿಕ್ಕೂ ಸಾಕು. ಬೇರೆಲ್ಲ ಪಕ್ಷಿಗಳಿಗಿಂತ ನವಿಲನ್ನು ಅವನ್ನು ತನ್ನ ಚಿತ್ರಗಳಲ್ಲಿ ಸುಂದರವಾಗಿ ಮೂಡಿಸಿದ್ದಾನೆ. ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ನವಿಲಿನ ಚಿತ್ರಗಳು ಈ ಪ್ರದೇಶದಲ್ಲಿವೆ. ದೊಡ್ಡ ಚಿತ್ರಗಳು ಬಿಡಿಯಾಗಿದ್ದರೆ ಸಣ್ಣವು ಮನುಷ್ಯ ಪ್ರಾಣಿಗಳ ಚಿತ್ರ ಸಮೂಹದಲ್ಲಿದೆ. ಹೆಣ್ಣು ಗಂಡು ಎರಡೂ ನವಿಲುಗಳಿವೆ.

ಮಲ್ಲಾಪುರದ ಮೂರನೇ ಗವಿಯಲ್ಲಿ ೨.೫ ಮೀ ಉದ್ದದ ದೊಡ್ಡ ಚಿತ್ರವಿದೆ. ಇದಕ್ಕೆ ಪುಕ್ಕವಿಲ್ಲ. ಕತ್ತು ಉದ್ದವಾಗಿದೆ. ದೇಹ ಕತ್ತಿಗಿಂತ ಸ್ವಲ್ಪ ದಪ್ಪವಿದ್ದು ಅದೂ ಉದ್ದವಿದೆ. ಇದರಿಂದ ಮೇಲು ನೋಟಕ್ಕೆ ಇದು ಹೆಬ್ಬಾವಿನಂತೆ ತೋರುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಲ್ಲಿ ರುಂಡ ತಲೆಯ ಮೇಲೆ ತುರಾಯಿ, ಕಾಲುಗಳಿರುವುದು ಕಾಣುತ್ತದೆ. ಹಾಗಾಗಿ ಇದು ದೊಡ್ಡ ಪ್ರಮಾಣದ ನವಿಲು ಎನ್ನುವುದು ಸ್ಪಷ್ಟ. ಮೈಮೇಲೆ ವಕ್ರವಾಗಿ ಪರಸ್ಪರ ಛೇದಿಸುವ ರೇಖೆಗಳಿವೆ. ಬೊಮ್ಮು ಸಾಗರ ತಾಂಡದ ಮೂರು ನವಿಲುಗಳು ತಮ್ಮ ಗಾತ್ರದಿಂದ ಗಮನ ಸೆಳೆಯುತ್ತವೆ. ಸುಮಾರು ೧ ಮೀಟರ್ ಉದ್ದವಾಗಿವೆ. ಒಂದರ ಹಿಂದೆ ಒಂದರಂತೆ ಮೂರು ಎಡೆಬಿಡದೆ ಇವೆ. ಹಾಗಾಗಿ ಮೂರನೆಯದು ಮಾತ್ರ ಪೂರ್ಣ ರೂಪದಲ್ಲಿ ಗೋಚರಿಸುತ್ತದೆ. ರಾಂಪುರ (೧) ಮಲ್ಲಾಪುರ (೬) ಅಂಜನಹಳ್ಳಿ (೧) ಚಿಕ್ಕರಾಂಪುರ (೧) ಮತ್ತು ಹಿರೇಬೆಣಕಲ್ಲಿನ ೧,೪, ೫,೬ ಮತ್ತು ೭ಬೇ ಗವಿಗಳಲ್ಲಿ ನವಿಲಿನ ಚಿತ್ರಗಳಿವೆ. ಇವುಗಳಲ್ಲಿ ರಾಂಪುರ ಮತ್ತು ಮಲ್ಲಾಪುರಗಳವು ಮಧ್ಯಮ ಪ್ರಮಾಣದವು. ರಾಂಪುರದ್ದು ನೈಜವಾಗಿದೆ. ಮಲ್ಲಾಪುರದಲ್ಲಿ ಪ್ರಾಣಿಗಳ, ಮನುಷ್ಯರ ಗುಂಪಿನ ಮಧ್ಯ ಇದೆ. ಇಡೀ ಪ್ರಾಣಿ ಸಮೂಹದಲ್ಲಿ ನವಿಲೊಂದನ್ನು ಮಾತ್ರ ಛಾಯಾರೂಪದಲ್ಲಿ ಬಿಡಿಸಲಾಗಿದೆ. ಹಿರೇಬೆಣಕಲ್, ಚಿಕ್ಕರಾಂಪುರಗಳ ಹೆಣ್ಣ ಗಂಡಿನ (ಗರಿ ಇರುವ) ಸಣ್ಣ ಸಣ್ಣ ಸುಂದರೆ ಚಿತ್ರಗಳಿವೆ. ಅಂಜನಹಳ್ಳಿಯಲ್ಲಿ ಹಡಗಿನ ಚಿತ್ರದ ಮೇಲೆ ಅಲಂಕಾರ ರೂಪದಲ್ಲಿ ಮೂರು ಚಿಕ್ಕ ನವಿಲುಗಳಿವೆ.

ಇತರ ಪಕ್ಷಿಗಳು

ನವಿಲನ್ನು ಹೊರತು ಬೇರೆ ವಿಧದ ಪಕ್ಷಿಗಳು ಹೆಚ್ಚಿಗಿಲ್ಲ. ಹಂಪಿ (೬)ಯಲ್ಲಿ ಒಂದು ದೊಡ್ಡ ಪಕ್ಷಿಯ ಚಿತ್ರವಿದೆ. ಅದು ಯಾವುದೆಂದು ಸ್ಪಷ್ಟವಾಗುವುದಿಲ್ಲ. ದಪ್ಪ ದೇಹ, ಉದ್ದ ಕತ್ತಿನ ಪಕ್ಷಿಯೊಂದು ಅಂಜನಹಳ್ಳಿ (೧) ಯಲ್ಲಿದೆ. ಆನೆಗುಂದಿಯ ೬ನೇ ನೆಲೆಯ ೧ನೇ ಗುಂಡಿನಲ್ಲಿ ಸಾಲಾಗಿರುವ ಐದು ಪಕ್ಷಿಗಳಿವೆ. ಇವು ಹಿಂದಿನಿಂದ ಮುಂದಕ್ಕೆ ಕ್ರಮವಾಗಿ ಒಂದಕ್ಕಿಂತ ಒಂದು ದೊಡ್ಡದಿವೆ. ದಪ್ಪ ದೇಹ ಸಣ್ಣಪುಕ್ಕಗಳಿವೆ. ಕಾಡು ಕೋಳಿ ರೀತಿ ಕಾಣುತ್ತವೆ. ಇಲ್ಲಿಯ ತಿಮ್ಮಯ್ಯ ಗುಂಟೆಯಲ್ಲೂ ಸಾಲಾಗಿ ಹಾರುತ್ತಿರುವ ಪಕ್ಷಿ ಚಿತ್ರಗಳಿವೆ.

ಸಂಯುಕ್ತ (ಮನುಷ್ಯ-ಪ್ರಾಣಿ) ಚಿತ್ರಗಳು

ಅಶ್ವಸವಾರರು

ಸಂಯುಕ್ತ ಚಿತ್ರಗಳಲ್ಲಿ ಅಶ್ವಸವಾರರ ಚಿತ್ರಗಳ ಹೆಚ್ಚಿಗೆ ಇವೆ. ಅವುಗಳಲ್ಲಿ ಹಿರೇಬೆಣಕಲ್ಲಿನ ೧,೪,೬ ಮತ್ತು ೧೨ನೆ ಗವಿಗಳಲ್ಲಿಯ ಚಿತ್ರಗಳು ಸಂಖ್ಯಾತ್ಮಕವಾಗಿ ಮತ್ತು ವೈವಿಧ್ಯತೆಯಿಂದ ಗಮನಾರ್ಹವಾಗಿವೆ.

ಇವು ಛಾಯಾರೂಪ (೧) ಇಲ್ಲವೇ ಬಾಹ್ಯರೇಖಾರೂಪ (೬) ದಲ್ಲಿವೆ. ಕೈಯಲ್ಲಿ ಕೊಡಲಿ ಹಿಡಿದ (೧,೬,೧೨) ಭರ್ಚಿ ಹಿಡಿದ (೧,೬) ಸವಾರರಿರುತ್ತಾರೆ. ಕುದುರೆಗಳ ಕತ್ತು ಮತ್ತು ಬಾಲದಲ್ಲಿ ರೋಮಗಳನ್ನು ತೋರಿಸಲಾಗಿರುತ್ತದೆ. ಚಾವಟಿ ಅಥವಾ ಕೋಲು ಹಿಡಿದ ಸವಾರರು ಇದ್ದಾರೆ. (೧,೪) ೧೨ನೇ ಗವಿಯಲ್ಲಿ ೧೩ ಕುದುರೆ ಸವಾರರ ಚಿತ್ರಗಳಿವೆ. ೬ನೇ ಗವಿಯಲ್ಲಿ ವ್ಯಕ್ತಿಯೊಬ್ಬ ಭರ್ಚಿ ಹಿಡಿದು ಕುದುರೆ ಮೇಲೆ ನಿಂತಿದ್ದು ಆ ಕುದುರೆಗೆ ಉದ್ದವಾದ ಹಗ್ಗ (?)ವನ್ನು ಕಟ್ಟಿ ವ್ಯಕ್ತಿಯೊಬ್ಬ ಎಳೆಯುತ್ತಿರುವ ರೀತಿಯ ಮೂರು ಚಿತ್ರಗಳು ಗಮನಾರ್ಹ.

ಚಿಕ್ಕರಾಂಪುರ (೪) ಆನೆಗುಂದಿ (೨) ಯಲ್ಲಿ ಹಿರೇಬೆಣಕಲ್ ರೀತಿ ಅಶ್ವಸವಾರರ ಚಿತ್ರಗಳಿವೆ. ಮಲ್ಲಾಪುರದ (೭) ಅಶ್ವಸವಾರರ ಚಿತ್ರ ಸಹಜವಾಗಿಲ್ಲ. ಕುದುರೆಯ ತಲೆ ಮೇಲೆ ರೋಮಗಳಿದ್ದು (ರೇಖೆ) ಅವುಗಳ ತುದಿಯಲ್ಲಿ ಸಣ್ಣ ಸಣ್ಣ ದುಂಡಾದ ರಚನೆಗಳಿವೆ.

ಕೊರೆದ ಚಿತ್ರ

ಮಲ್ಲಾಪುರದ ಎರಡನೇ ನೆಲೆ (ಬಂಡೇ ೩) ಯಲ್ಲಿ ಅಶ್ವಸವಾರನ ಒಂದು ಕೊರೆದ ಚಿತ್ರವಿದೆ. ಇದು ಆನೆಗುಂದಿಯ (೨) ವರ್ಣಚಿತ್ರಗಳನ್ನು ಹೊಲುತ್ತದೆ.

ಬಿಳಿವರ್ಣದ ಚಿತ್ರಗಳು

ಅಗೋಲಿ, ಬಿಳೇಭಾವಿಗಳಲ್ಲಿ ಅಶ್ವಸವರರ ಸುಂದರ ಚಿತ್ರಗಳಿವೆ. ವರ್ಣಚಿತ್ರಗಳಿಗಿಂತ ಇವು ಭಿನ್ನವಾದ ಶೈಲಿಯಲ್ಲಿವೆ. ಬಾಹ್ಯ ರೇಳೆಯ ಚಿತ್ರಗಳಿವೆ. ಸವಾರನ ಕೈಯಲ್ಲಿ ಖಡ್ಗ ಅಥವಾ ಕೋಲು ಇದೆ. (ಬಿಳೇಭಾವಿ) ಕುದುರೆಯ ತಲೆಮೇಲೆ ರೋಮಗಳಿವೆ. ಅಗೋಲಿಯಲ್ಲಿ ಅಲಂಕಾರದಂತೆ ರೋಮಗಳಿವೆ. ತೆಂಬಾದಲ್ಲಿ ಅಶ್ವಸವಾರರ ಕಡ್ಡಿ ಚಿತ್ರಗಳಿವೆ. ಇವೆಲ್ಲ ಇತಿಹಾಸ ಕಾಲದವು.

ದನದ ಸವಾರರು

ದನದ ಮೇಲೆ ಮನುಷ್ಯರು ಕುಳಿತಿರುವ ಕೆಲವು ಚಿತ್ರಗಳು ತಿರುಮಲಾಪುರ, ಗೂಗಿಬಂಡಿ, ತೆಂಬಾ, ಬಸಾಪಟ್ಟಣ ಮತ್ತು ಕಮಾಲಾಪುರಗಳಲ್ಲಿವೆ. ಗೂಗಿಬಂಡಿಯದು ಕೆಂಪುವರ್ಣದ ಛಾಯಾಚಿತ್ರ. ಉದ್ದವಾದ ಪಶುವಿನ ಮೇಲೆ ವ್ಯಕ್ತಿಯೊಬ್ಬ ನಿಂತಿದ್ದಾನೆ. ತಿರುಮಲಾಪುರದಲ್ಲಿ ಬಿಳಿ ಬಣ್ಣದ ರೇಖಾಚಿತ್ರವಿದ್ದು ಮೇಲಿನ ವ್ಯಕ್ತಿಯದು  ಕಡ್ಡಿ ರೂಪದ ಚಿತ್ರ. ಹಂಪಸದುರ್ಗ, ತೆಂಬಾಗಳಲ್ಲಿ ಕಡ್ಡಿ ರೂಪದ ಬಿಳಿಬಣ್ಣದ ಚಿತ್ರಗಳಿವೆ. ಬಸಾಪಟ್ಟಣ ಮತ್ತು ಕಮಲಾಪುರಗಳಲ್ಲಿ ಎತ್ತಿನ ಸವಾರರ ಕೊರೆದ ಚಿತ್ರಗಳಿವೆ.

ಆನೆ, ಜಿಂಕೆ, ಸವಾರರು

ಆನೆಗುಂದಿ (೮) ಮತ್ತು ಸಂಗಾಪುರದಲ್ಲಿ ಆನೆ ಮೇಲೆ ಕುಳಿತ ವ್ಯಕ್ತಿಗಳ ಚಿತ್ರಗಳಿವೆ. ಆನೆಗುಂದಿಯಲ್ಲಿ ಸಣ್ಣ ಮನುಷ್ಯಾಕೃತಿಗಳು ಎರಡು ಆನೆ ಮೇಲೆ ಇವೆ. ಸಂಗಾಪುರದಲ್ಲಿ ದೊಡ್ಡ ವ್ಯಕ್ತಿಯದು. ಎಮ್ಮಿಗುಡ್ಡದಲ್ಲಿ ಜಿಂಕೆಯ ಮೇಲೆ ವ್ಯಕ್ತಿಯೊಬ್ಬ ನಿಂತಿದ್ದಾನೆ. ಅವನ ತಲೆಯ ಸುತ್ತಲೂ ಕಿರಣಗಳಂತೆ ರೇಖೆಗಳಿವೆ. ಹಿರೇಬೆಣಕಲ್ಲಿನ ೧ನೇ ಗವಿಯಲ್ಲಿ ವ್ಯಕ್ತಿಯೊಬ್ಬ ಪ್ರಾಣಿಯೊಂದರ ಮೇಲೆ ಹಿಮ್ಮುಖವಾಗಿ ಕುಳಿತಂತಿದೆ.

ವಿಚಿತ್ರ ಆಕೃತಿ ಚಿತ್ರಗಳು

ವಿಚಿತ್ರ ಮನುಷ್ಯ ಆಕೃತಿಗಳು

ನಿರ್ದಿಷ್ಟವಾಗಿ ಗುರುತಿಸಲಾಗದ ಮನುಷ್ಯಾಕಾರದ ಕೆಲವು ವಿಚಿತ್ರ ಚಿತ್ರಗಳು ಕೊಪ್ಪಳ ಹಂಪಿ ಪ್ರದೇಶದಲ್ಲಿವೆ.

ಹಿರೇಬೆಣಕಲ್ಲಿನ ೧೭ನೇ ಗವಿಯಲ್ಲಿ ಎರಡು ವಿಚಿತ್ರ ಮನುಷ್ಯ ರೂಪದ ಆಕೃತಿಗಳಿವೆ. ಮೊದಲನೆಯ ಆಕೃತಿಯು ೫ ಮೀ ಉದ್ದ ಮತ್ತು ೩ ಮೀ ಅಗಲವಿದೆ. ಬೆನ್ನು ಬಾಗಿಸಿದ ಭಂಗಿಯಲ್ಲಿದೆ. ತಲೆ ತ್ರಿಕೋನಾಕಾರದಲ್ಲಿದೆ. ಬಲಕೈ ತಲೆಯ ಮುಂದೆ ಮೇಲಕ್ಕೆ ಚಾಚಿದೆ. ಅದು ದೊಡ್ಡ ಆಯತದ ಪಟ್ಟಿಯಂತಿದ್ದು ತುದಿಯಲ್ಲಿ ಚೂಪಾದ ನಾಲ್ಕು ಉಗುರು (?) ಗಳಿವೆ. ಎಡಗೈ ತೋಳಿನ ಭಾಗದಲ್ಲಿ ಕತ್ತರಿಸಿ ಸೀಳಿದಂತಿದೆ. ಕಾಲಿನ ಬದಲು ಬಾಲವಿದೆ. ಹೊಟ್ಟೆಯಲ್ಲಿ ಕೆಳಮುಖವಾಗಿ ಅದೇ ಭಂಗಿಯ ಇನ್ನೊಂದು ಚಿಕ್ಕ ಆಕೃತಿ ಇದೆ. ಈ ಎರಡೂ ಆಕೃತಿಗಳ ತಲೆ ಬೆನ್ನು ಬಾಲದ ಮೇಲೆಲ್ಲಾ ವಿಶಿಷ್ಟವಾದ ರೇಖಾಪಟ್ಟಿಗಳಿವೆ. ಕೈಮೇಲೆ ಅಡ್ಡಪಟ್ಟಿಗಳಿವೆ. ಬಾಲದ ಮೇಲೆ ವ್ಯಕ್ತಿಯೊಬ್ಬ ಎರಡು ಕೈಗಳನ್ನು ಮೇಲೆಕ್ಕೆ ಎತ್ತಿಕೊಂಡು ನಿಂತಿದ್ದಾನೆ.

ಎರಡನೆಯ ಆಕೃತಿಯ ೭ಮೀ ಉದ್ದವಾಗಿದೆ. ತಲೆ, ಎರಡು ಕೈ(?) ದೇಹ ಮತ್ತು ಉದ್ದವಾದ ಬಾಲ ಇದಕ್ಕಿದೆ. ಮೇಲೆ ನೋಟಕ್ಕೆ ಹಿಂದಿನ ಕಾಲುಗಳಿಲ್ಲದ ಉಡದ ಚಿತ್ರದಂತೆ ತೋರುತ್ತದೆ. ಮೊಟ್ಟೆಯಾಕಾರದ ಸ್ವಲ್ಪ ಉದ್ದ ತಲೆ, ತಲೆಯ ಕೆಳಗೆ ಕುತ್ತಿಗೆ ಭಗದಿಂದ ಎರಡೀ ಬದಿ ಚಾಚಿದ ಪಟ್ಟಿಯಂತಿರುವ ಕೈಗಳು(?) ಉಬ್ಬಿದ ಹೊಟ್ಟೆಯ ಉದ್ದ ದೇಹ ಮತ್ತು ಉದ್ದವಾದ ಬಾಲವಿದೆ. ಕೈಯಲ್ಲಿ ತುದಿಯಲ್ಲಿ ಚೂಪಾದ ಮೂರು ಉಗುರುಗಳಿವೆ. ತಲೆ, ಕೈ, ದೇಹ ಬಾಲದ ಮೇಲೆ ರೇಖೆಗಳಿವೆ.

ಸ್ಥಳೀಯ ಜನ ಈ ಗವಿಗಳಿಗೆ ರಕ್ಕಸಗವಿ ಎಂದು ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಮೇಲಿನ ಚಿತ್ರಗಳನ್ನು ಪರಿಶೀಲಿಸಲಾಗಿ ರಾಕ್ಷಸದ ಕಲ್ಪನೆ ಹಿಂದಿನಿಂದಲೂ ಇದ್ದು, ಅವರ ಕಲ್ಪನೆಯ ರಾಕ್ಷಸ ಚಿತ್ರಗಳು ಇವಾಗಿರಬಹುದು. ಮೇಲಿನ ಆಕೃತಿ ಒಬ್ಬ ವ್ಯಕ್ತಿಯನ್ನು ನುಂಗಿದಂತಿದೆ. ಬಾಲದ ಮೇಲೆ ನಿಂತಿರುವ ವ್ಯಕ್ತಿ ಅದರ ಜೊತೆ ಹೋರಾಡುತ್ತಿರಬೇಕೆನಿಸುತ್ತದೆ.

ವಿಚಿತ್ರ ಪ್ರಾಣಿ ಆಕೃತಿಗಳು

ಕೆಲವು ವಿಚಿತ್ರ ಪ್ರಾಣಿ ಚಿತ್ರಗಳು ಸಂಗಾಪುರ ಹಿರೇಬೆಣಕಲ್ ಮತ್ತು ಬಿಳೇಭಾವಿಗಳಲ್ಲಿವೆ. ಸಂಗಾಪುರದ ೭ನೇ ಕಲ್ಲಾಸರೆಯಲ್ಲಿ ೨ ಪ್ರಾಣಿಗಳ ಚಿತ್ರಗಳಿವೆ. ಮೇಲುನೋಟಕ್ಕೆ ಕುದುರೆಗಳಂತೆ ಕಾಣುತ್ತವೆ. ಆದರೆ ಅವು ಕುದುರೆಗಳಲ್ಲಿ. ದೇಹ ಕುದುರೆಯಂತೆ ತೋರುವ ಸಿಂಹದ ದೇಹಗಳು, ಕಾಲುಗಳು ಎತ್ತರವಾಗಿದ್ದು ಕುದುರೆಯಂತಿವೆ. ಕಾಲಿನ ತುದಿಯಲ್ಲಿ ಗೊರಸುಗಳಿವೆ. ಮುಂದಿನ ಪ್ರಾಣಿಯ ಬಾಲ ದನದ ಬಾಲದಂತೆ ಉದ್ದವಿದ್ದು ಮೇಲೆಕ್ಕೆತ್ತಿದೆ. ತುದಿಯಲ್ಲಿ ರೋಮದ ದಪ್ಪ ಕುಚ್ಚ ಇದೆ. ಹಿಂದಿನ ಪ್ರಾಣಿಗೆ ಬಾಲ ಅಷ್ಟೇನೂ ಉದ್ದವಿಲ್ಲ. ಇವುಗಳ ಮುಖ ಸ್ಪಷ್ಟವಿಲ್ಲ. ಮೊದಲನೆಯದು ಮಾಸಿ ಹೋಗಿದೆ. ಆದರೆ ತಲೆಯ ಭಾಗದಿಂದ ಮೇಲೆದ್ದಿರುವ ಮೂರು ದೊಡ್ಡ ರೋಮ(?)ಗಳಿವೆ. ಹಿಂದಿನ ಪ್ರಾಣಿಯ ಮುಖ ಅಸ್ಪಷ್ಟವಿದ್ದು ಸಿಂಹದ ಮುಖದಂತೆ ತೋರುತ್ತದೆ. ಸಿಂಹ, ದೇಹ, ಕುದುರೆ, ಕಾಲು, ದನದ ಬಾಲವಿರುವ ಈ ಪ್ರಾಣಿಯನ್ನು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟ.

ಬಿಳೇಭಾವಿಯಲ್ಲಿ ಮತ್ತೊಂದು ವಿಚಿತ್ರ ಪ್ರಾಣಿಯ ಚಿತ್ರವಿದೆ. ಇದು ಪೌರಾಣಿಕ ಕಲ್ಪನೆಯ ಕಾಮದೇನು ಪ್ರಾಣಿಯಂತಿದೆ. ದೇಹ ಹಸುವಿನಂತಿದ್ದು, ಉದ್ದವಾಗಿದೆ. ಕತ್ತು ಉದ್ದವಾಗಿದೆ. ಮನುಷ್ಯ ಮುಖ ಕಿವಿಗಳಿವೆ. ಕಣ್ಣು ಬಾಯಿಗಳಿಲ್ಲ. ತಲೆಯ ಮೆಲೆ ಎರಡು ಕೋಡುಗಳಿವೆ. ಕಾಲುಗಳು ಸಣ್ಣದಿವೆ. ಬಾಲ ಉದ್ದವಿದ್ದು ಹಿಂದಿನಿಂದ ಬೆನ್ನಿನ ಮೇಲಕ್ಕೇರಿ ಹೊಟ್ಟೆ ಭಾಗದಲ್ಲಿ ಕೆಳಕ್ಕಿಳಿದಿದೆ. ತುದಿಯಲ್ಲಿ ರೋಮದ ಕುಚ್ಚು ಇದೆ. ಇದು ಕೂಡ ವಿಚಿತ್ರ ಪ್ರಾಣಿ ಚಿತ್ರವಾಗಿದೆ.

ಹಿರೇಬೆಣಕಲ್ಲಿನ ಒಂದನೇ ಕಲ್ಲಾಸರೆಯಲ್ಲಿ (ಪೂರ್ವ ಬದಿ) ಒಂದು ದನದ ಚಿತ್ರವಿದೆ. ನಾಲ್ಕು ಕಾಲು, ಚಿಕ್ಕ ಕೋಡು, ಚಿಕ್ಕ ಬಾಲ ಸ್ಪಷ್ಟವಿದೆ. ಆದರೆ ಹೊಟ್ಟೆ ಭಾಗದಲ್ಲಿ ಮತ್ತೊಂದು ಪ್ರಾಣಿಯ ಚಿತ್ರವನ್ನು ಹಿಮ್ಮುಖವಾಗಿ ಬರೆಯಲಾಗಿದೆ. ಅದರ ಬೆನ್ನು, ಪುಷ್ಠ, ಮುಖ ಮಾತ್ರವಿದೆ. ಮುಖದಲ್ಲಿ ಕಿವಿ ಕೋಡುಗಳಿವೆ. ಅವು ದೊಡ್ಡ ಪ್ರಾಣಿಯ ಬೆನ್ನಿನ ಹಿಂಭಾಗದಲ್ಲಿ ದೇಹದಿಂದೆ ಹೊರಕ್ಕೆ ಬಂದಿವೆ. ಇದೊಂದು ವಿಶೇಷ ರಚನೆಯಾಗಿದೆ.