ಕುಂಚಗಳು

ಬಣ್ಣದ ದ್ರವದಲ್ಲಿ ಅದ್ದಿ ಬರೆಯಲು ಪ್ರಾಚೀನ ಜನರ ಒಂದು ರೀತಿಯ ಕುಂಚಗಳನ್ನು ಮಾಡಿಕೊಳ್ಳುತ್ತಿದ್ದರು. ಗಿಡದ ರೆಂಬೆಯ ತುದಿಯನ್ನು ಸರಿಯಾಗಿ ಜಜ್ಜಿ ತೊಗಡೆಯು ಹೋಗುವಂತೆ ಮಾಡಿ ಕೂದಲಿನಂತಹ ನರುಗಳನ್ನು ಬಿಡಿಸಿ ಅದನ್ನು ಕುಂಚದಂತೆ ಬಣ್ಣದ ರೇಖೆಗಳನ್ನು ಎಳೆಯಲು ಉಪಯೋಗಿಸಿದ್ದಿರಬೇಕು.[1] ಚಿತ್ರಗಳ ಪ್ರಮಾನಕ್ಕನುಗುಣವಾಗಿ ಬೇರೆ ಬೇರೆ ಅಳತೆಯ ಕುಂಚಗಳನ್ನು ಮಾಡಿಕೊಳ್ಳುತ್ತಿದ್ದರು. ಹಿರೇಬೆಣಕಲ್ಲಿನ ೧೭ನೇ ಗವಿಯ ಚಿತ್ರಗಳ ರೇಖೆಗಳು ಸುಮಾರು ಮೂರು ಸೆಂ.ಮೀ. ದಪ್ಪವಿದ್ದು, ಆ ಆಳತೆಯ ಕುಂಚಗಳಿಂದ ಹಿಡಿದು ಸುಮಾರು ೧/೨ ಸೆಂ.ಮೀ. ವರೆಗಿನ ದಪ್ಪದ ಕುಂಚಗಳನ್ನು ಮಾಡಿಕೊಂಡಿರಬೇಕು. ಅರ್ಧ ಸೆಂ.ಮೀ. ಒಳಗಿನ ಚಿತ್ರಗಳಿಗಾಗಿ ಕಡ್ಡಿಗಳ ಇಲ್ಲವೇ ಪಕ್ಷಿಗಳ ಪುಕ್ಕದ ಕಡ್ಡಿಯನ್ನು ತುದಿಯಲ್ಲಿ ಸ್ವಲ್ಪ ಜಜ್ಜಿ ಕುಂಚಗಳನ್ನು ಮಾಡಿಕೊಂಡಿರಬೇಕೆನಿಸುತ್ತದೆ. ಹಿರೇಬೆನಕಲ್ಲಿನ ೧,೧೧, ಮತ್ತು ೧೨ನೇ ಗವಿಗಳ, ಚಿಕ್ಕರಾಂಪುರದ ೧ನೇ ಗವಿಯ ಚಿತ್ರಗಳ ಗುಂಪಿನಲ್ಲಿರುವ ಸಣ್ಣ ಸಣ್ಣ ನಾಯಿ, ಮನುಷ್ಯ, ನವಿಲುಗಳು ಚಿತ್ರಗಳನ್ನು ಇಂಥ ಕುಂಚಗಳಿಂದ ಮಾತ್ರ ರಚಿಸಲು ಸಾಧ್ಯ. ಹಾಗೆ ಕೆಲವು ವ್ಯಕ್ತಿಚಿತ್ರಗಳ ತಲೆಯ ಸುತ್ತಲೂ ಹರಡಿದ ಕೂದಲುಗಳನ್ನು ತೋರಿಸಲಾಗಿದೆ. ಇವುಗಳನ್ನು ಬಿಡಿಸಲು ಕಡ್ಡಿಗಳನ್ನು ಬಳಸಿಕೊಂಡಿರಬೇಕು.

ಹಿರೇಬೆಣಕಲ್ಲಿನ ೧,೬,೧೧,೧೨ ಚಿಕ್ಕಂರಾಂಪುರದ ೧ನೇ ಗವಿಯ ಚಿತ್ರ ಫಲಕದಲ್ಲಿ ದೊಡ್ಡ, ಮಧ್ಯಮ, ಚಿಕ್ಕ ಮತ್ತು ಸೂಕ್ಷ್ಮ ಪ್ರಮಾಣದ ಛಾಯಾ ಹಾಗೂ ಬಾಹ್ಯರೇಖಾ  ಚಿತ್ರಗಳಿವೆ. ಇಂಥ ಚಿತ್ರಫಲಕದ ರಚನೆಗಾಗಿ ಹಲವು ಅಳತೆಯ ಕುಂಚಗಳು ಅವಶ್ಯವಾಗಿರುತ್ತವೆ. ಹಾಗಾಗಿ ಏಕಕಾಲದಲ್ಲಿ ಅವುಗಳನ್ನು ಸಿದ್ಧಮಾಡಿಕೊಂಡು ಚಿತ್ರರಚನೆಯಲ್ಲಿ ತೊಡಗುತ್ತಿದ್ದರೆಂದು ತರ್ಕಿಸಬಹುದು. ಸಿದ್ಧವಾದ ವರ್ಣವನ್ನು ಮಡಕೆಯ ಪಾತ್ರೆಯಲ್ಲಿ ಹಾಕಿಕೊಂಡು ಅದರಲ್ಲಿ ಕುಂಚಗಳನ್ನು ಅದ್ದಿಕೊಂಡು ಚಿತ್ರ ಬಿಡಿಸುತ್ತಿದ್ದರು. ಹಿರೇಬೆಣಕಲ್ಲಿನ ೧ನೇ ಕಲ್ಲಾಸರೆಯು ಒಂದು ಬೃಹತ್ ಬಂಡೆಯಾಗಿದ್ದು. ಅದರ ಪೂರ್ವಬದಿಯ ಮುಖದಲ್ಲಿ ಚಿತ್ರಗಳಿವೆ. ದೊಡ್ಡ ಬಂಡೆಯ ಮುಂದೆ ಮತ್ತೊಂದು ಚಿಕ್ಕ ಗುಂಡು ಇದೆ. ಅದರ ಮೇಲ್ಭಾಗ ಸಮವಾಗಿದ್ದು, ಅದರ ಮೇಲೆ ನಿಂತು ಚಿತ್ರಗಳನ್ನು ಬಿಡಿಸಲಾಗಿದೆ. ಹಾಗೂ ಆ ಗುಂಡಿನ ಮಧ್ಯದಲ್ಲಿ ಆಳವಲ್ಲದ ಸುಮಾರು ೨೦ ಸೆಂ.ಮೀ. ವ್ಯಾಸದ ಒಂದು ಕುಳಿ ಇದೆ. ಇಡೀ ಬಂಡೆಯಲ್ಲಿ ಕುಳಿ ಮಾತ್ರ ಕೆಂಪುವರ್ಣದಲ್ಲಿದೆ. (ಛಾಯಾಚಿತ್ರ ಸಂಖ್ಯೆ ೭೩) ಅದರ ಬಣ್ಣ ಮತ್ತು ಬೃಹತ್ ಬಂಡೆಯ ಚಿತ್ರಗಳ ಬಣ್ಣ ಒಂದೇ ಆಗಿದೆ. ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ, ಕೆಲವು ಸಲ ಚಿತ್ರಗಳನ್ನು ಬಿಡಿಸುವಾಗ ನಿಲ್ಲುವ ಗುಂಡಿನ ಮೇಲೆ (ಕುಳಿಯಲ್ಲಿ) ಬಣ್ಣವನ್ನು ಸುರುವಿಕೊಂಡು ಕೂಡ ಚಿತ್ರಗಳನ್ನು ಬಿಡಿಸುತ್ತಿರೆಂದು ಸ್ಪಷ್ಟವಾಗುತ್ತದೆ.

ಹಸ್ತಗಳು

ತನ್ನ ಕೈಯ ಹಸ್ತವನ್ನು ಕೂಡ ಚಿತ್ರರಚನಾ ಸಾಮಗ್ರಿಯಾಗಿ ಪ್ರಾಚೀನ ಮಾನವ ಉಪಯೋಗಿಸಿದ್ದಾನೆ. ಹಸ್ತದ ಚಿತ್ರಗಳನ್ನು ಬಿಡಿಸಬೇಕಾದ ಸಂದರ್ಭದಲ್ಲಿ ತನ್ನ ಹಸ್ತಗಳನ್ನು ಬಣ್ಣದ ದ್ರಾವಣದಲ್ಲಿ ಅದ್ದಿ ನೇರವಾಗಿ ಗೋಡೆಗೆ ಮುದ್ರೆ ಒತ್ತಿ ಚಿತ್ರಗಳನ್ನು ಮೂಡಿಸುತ್ತಿದ್ದನು. ಇಂಥ ಹಸ್ತಮುದ್ರಿಕೆಗಳು ತಾಮ್ರಯುಗದ ನವಶಿಲಾಸಂಸ್ಕೃತಿ ಮತ್ತು ಕಬ್ಬಿಣ ಯುಗದ ಬೃಹತ್ ಶಿಲಾಸಂಸ್ಕೃತಿಯ ನೆಲೆಯಾದ ಅಗೋಲಿಯಲ್ಲಿ ಕೆಂಪು ವರ್ಣದಲ್ಲದೆ. ಈಗಲೂ ಈ ಪ್ರದೇಶದಲ್ಲಿ ಮದುವೆಯ ಸಂದರ್ಭದಲ್ಲಿ ಮನೆಯ ಸುತ್ತ ಹಸ್ತಮುದ್ರಿಕೆಗಳನ್ನು (ಚಟ್ಟು ಬಡಿಯುವುದು) ಇದೇ ಪ್ರಕಾರದಲ್ಲಿ ಹಾಕುತ್ತಾರೆ.

ಮರದ ಎಲೆ ಅಥವಾ ಚರ್ಮ

ಹಿರೇಬೆಣಕಲ್ಲಿನ ೧೧ನೇ ಗವಿಯಲ್ಲಿ ಮತ್ತು ಹೊಸ ಬಂಡಿಹರ್ಲಾಪುರದ ೧ನೇ ಕಲ್ಲಾಸರೆಯಲ್ಲಿ ಜಿಂಕೆಗಳ ಸಾಲು ಚಿತ್ರಗಳಿವೆ. ಸಾಲಿನ ಪ್ರತಿಯೊಂದು ಜಿಂಕಿಯು ಒಂದೇ ಪ್ರಮಾಣ ಮತ್ತು ರೀತಿಯಲ್ಲಿವೆ. ಇಂಥ ಚಿತ್ರಗಳನ್ನು ಮರದ ದಪ್ಪ ಎಲೆಯಲ್ಲಿಯೇ, ಚರ್ಮದಲ್ಲಿಯೋ, ಚಿತ್ರವನ್ನು ಕತ್ತರಿಸಿಕೊಂಡು ಅದನ್ನು ಬಂಡೆಯ ಮೇಲಿಟ್ಟು ಕತ್ತರಿಸಿದ ಭಾಗದಲ್ಲಿ ಬಣ್ಣವನ್ನು ತುಂಬುತ್ತಿದ್ದರಬೇಕೆಂದು ಆ ಸುಂದರವರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರಗಳು ಅಷ್ಟು ಸರಿಯಾಗಿ ಒಂದೇ ಪ್ರಕಾರದಲ್ಲಿ ಇರುವುದರಿಂದ ಅವರ ಅಭಿಪ್ರಾಯ ಸಮಂಜಸವೆನ್ನ ಬಹುದು.

ಬೆರಳುಗಳು

ಈಚಿನ ಕಾಲದ ಕೆಲವು ಬಿಳಿಬಣ್ಣದ ಚಿತ್ರಗಳಲ್ಲಿ ಬೆರಳಿನ ರೇಖೆಗಳೂ ಮೂಡಿರುವುದರಿಂದ ಬೆರಳುಗಳಿಂದಲೂ ರೇಖೆಗಳನ್ನು ಎಳೆಯಲಾಗುತ್ತಿತ್ತೆಂದು ತಿಳಿಯಬಹುದು. ವಿಶೇಷವಾಗಿ ಕಡ್ಡಿಯಾಕಾರದ ಸಣ್ಣ ಮನುಷ್ಯಾಕೃತಿಗಳನ್ನು ಬೆರಳುಗಳಿಂದ ಮೂಡಿಸಲಾಗಿದೆ. ಇಂಥ ಚಿತ್ರಗಳು ತೆಂಬಾದ ೧,೨ ಹಂಪಸದುರ್ಗ ೧, ಎಮ್ಮಿಗುಡ್ಡ ೨ ಮತ್ತು ತಿರುಮಲಾಪುರದ ಕಲ್ಲಾಸರೆಗಳಲ್ಲಿವೆ.

ಹಿರೇಬೆಣಕಲ್ (೨ನೇ ಕಲ್ಲಾಸರೆ), ಗಡ್ಡಿ (೧) ನಾರಾಯಣಪೇಟೆ (೧) ಮತ್ತು ಚಿಕ್ಕರಾಂಪುರ (೫)ದ ಕಲ್ಲಾಸರೆಗಳ ಚಿತ್ರಿತ ಸ್ಥಳಗಳು ನೆಲದಿಂದ ಸುಮಾರು ೮ ರಿಂದ ೧೦ ಮೀಟರ್ ಎತ್ತರದಲ್ಲಿವೆ. ಇಂಥ ಎಡೆಗಳಲ್ಲಿ ಚಿತ್ರಗಳನ್ನು ಬಿಡಿಸುವಾಗ ಪ್ರಾಯಶಃ ಅಟ್ಟಣಿಗೆಗಳನ್ನು ಕಟ್ಟಿಕೊಂಡಿರಬೇಕೆಂದು ತರ್ಕಿಸಬಹುದು.

ಬಂಡೆ ಚಿತ್ರಗಳ ಉಪಕರಣಗಳು

ಬಂಡೆ ಚಿತ್ರಗಳಲ್ಲಿ ಕೊರೆದ, ಕುಟ್ಟಿದ, ಚಿಕ್ಕ ಕುಳಿಯ ಹಾಗೂ ತಿರುಗುಳಿ (Cup marks)ಗಳು ಕಂಡುಬಂದಿವೆ. ಇಂಥ ಚಿತ್ರಗಳನ್ನು ಕೊರೆಯಲು ಲೋಹದ ಉಳಿ ಇಲ್ಲವೇ ಗಟ್ಟಿಶಿಲೆಯ ದಪ್ಪಚೂಪಾದ ಆಯುಧಗಳನ್ನು ಬಳಸಿದ್ದಾರೆಂದು ಹೇಳಬಹುದು. ಸಣ್ಣ ಸಣ್ಣ ಕುಳಿಗಳನ್ನು ಒಂದರ ಪಕ್ಕ ಒಮದರಂತೆ ಹಾಕಿ ಕೆಲವು ಚಿತ್ರಗಳನ್ನು ಮೂಡಿಸಲಾಗಿದೆ. ಅಂಥವನ್ನು ಕೂಡ ಲೋಹದ ಆಯುಧದಿಂದ ಮೂಡಿಸಿರಬಹುದು. ತಿರುಗುಳಿಗಳನ್ನು ಚೂಪಾದ ಉಳಿಯಂತಹ ಉಪಕರಣದಿಂದ ಸತತವಾಗಿ ಒಂದೇ ಕಡೆ ತಿರುಗಿಸಿ ಮೂಡಿಸಲಾಗಿದೆ.

ಚಿತ್ರಗಳ ಶೈಲಿ ಮತ್ತು ಪ್ರಮಾಣ

ಪ್ರಾಗಿತಿಹಾಸ ಕಾಲದ ಚಿತ್ರಗಳು ಮೊದಲ ನೋಟಕ್ಕೆ ಚಿಕ್ಕಮಕ್ಕಳ ರಚನೆಗಳಂತೆ ತೋರಿದರೂ, ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಅವು ಶೈಲಿ, ಭಾವ ಮತ್ತು ಭಂಗಿಯ ದೃಷ್ಟಿಯಿಂದ ಸಮರ್ಥವಾದ ರಚನೆಗಳೆಂದು ತಿಳಿಯುತ್ತದೆ. ಚಿತ್ರಗಳಲ್ಲಿ ಕೇವಲ ಆಕೃತಿಯಷ್ಟೆ ಮುಖ್ಯವಾಗಿಲ್ಲ. ಜೀವಂತಿಕೆ ಎದ್ದು ಕಾಣುತ್ತದೆ. ಮನುಷ್ಯ ಮತ್ತು ಪ್ರಾಣಿಯ ಬಿಡಿ ಚಿತ್ರಗಳಾಗಲಿ, ನೃತ್ಯ ಬೇಟೆ ಮುಂತಾದ ದೃಶ್ಯ ಚಿತ್ರಗಳಾಗಲಿ ಅವುಗಳ ರಚನಾ ಉದ್ದೇಶ ಸಶಕ್ತವಾಗಿ ಚಿತ್ರಗಳಲ್ಲಿ ಬಿಂಬಿತವಾಗಿದೆ. ಸಾಮಾನ್ಯವಾಗಿ ಕಣ್ಣು, ಮೂಗು, ಬಾಯಿ, ಕಿವಿ, ಹಸ್ತ, ಪಾದಗಳಂತಹ ಸೂಕ್ಷ್ಮ ಅಂಗಗಳ ರಚನೆಯ ಗೋಜಿಗೆ ಪ್ರಾಗಿತಿಹಾಸ ಕಾಲದ ಕಲಾವಿದ ಹೋಗದೆ ಇದ್ದರೂ ಚಿತ್ರಗಳು ಬಾವ ಪ್ರಧಾನವಾಗಿವೆ ಎಂದು ಹೇಳಬಹುದು. ಕೇವಲ ಬಾಹ್ಯ ರೇಖಾ ಇಲ್ಲವೇ ಛಾಯಾರೂಪದಲ್ಲೇ ಅವನು ಚಿತ್ರಗಳಿಗೆ ಜೀವಂತಿಕೆಯನ್ನು ತುಂಬಿದ್ದಾನೆ ಎನ್ನಬಹುದು. ಎಲ್ಲ ಚಿತ್ರಗಳು ಈ ದೃಷ್ಟಿಯಿಂದ ಉತ್ತಮ ರಚನೆಗಳೆಂದು ಹೇಳಲಾಗದು. ಆದರೆ ಕೆಲವಂತೂ ರಚನಾ ಶೈಲಿಯ ದೃಷ್ಟಿಯಿಂದ ಉತ್ತಮ ಮಟ್ಟದ್ದಾಗಿವೆ. ಕೊಪ್ಪಳ-ಹಂಪಿ ಪ್ರದೇಶದ ಕೆಲವು ಚಿತ್ರಗಳ ಶೈಲಿಯನ್ನು ಈ ಮುಂದಿನಂತೆ ಗುರುತಿಸಬಹುದು.

ಮನುಷ್ಯ ಚಿತ್ರಗಳು

ಅನೇಕ ಬಿಡಿ ಇಲ್ಲವೇ ಸಮೂಹದ ಮನುಷ್ಯ ಚಿತ್ರಗಳಿರುವುದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಮನುಷ್ಯ ಚಿತ್ರಗಳಲ್ಲಿ ಕೆಲವು ಶೈಲಿಯ ದೃಷ್ಟಿಯಿಂದ ಕ್ರಿಯಾಶೀಲತೆಯನ್ನು ಬಿಂಬಿಸುವಲ್ಲಿ ಸಮರ್ಥವಾಗಿವೆ ಎಂದು ಗುರುತಿಸಬಹುದು.

ರಾಂಪುರದ ೧ನೇ ಕಲ್ಲಾಸರೆಯಲ್ಲಿರುವ ನಿಂತ ಮನುಷ್ಯನ ಚಿತ್ರ ಒಂದು ಅಪೂರ್ವ ಸೃಷ್ಟಿ. ದುರಾದೃಷ್ಟವಶಾತ್ ಅದರ ಕೆಳಭಾಗ ಮಳೆಗೆ ಸಿಲುಕಿ ಬಹಳಷ್ಟು ಮಾಸಿಹೋಗಿದೆ. ಚಿತ್ರ ಛಾಯಾರೂಪದ್ದು. ಕಲಾವಿದನಿಗೆ ದೇಹದ ರಚನೆಯ ಸ್ಪಷ್ಟ ಪರಿಕಲ್ಪನೆ ಇದೆ. ಅಗಲವಾದ ಭುಜ, ತೆಳುವಾದ ಸೊಂಟ, ಅಗಲ ಅಷ್ಟೆ ಸಹಜವಾದ ಪುಷ್ಠ ಎಲ್ಲವೂ ಪ್ರಮಾಣಬದ್ಧವೆನಿಸುತ್ತವೆ. ಬಳಗೈ ಭುಜದ ಸಮಾನಾಂತರದಲ್ಲಿ ಮುಂಚಾಚಿದೆ. ಎರಡಗೈ ಸ್ವಲ್ಪ ಕೆಳಕ್ಕಿಳಿಸಿ ಮೊಣಕೈಯಿಂದ ಉಳಿದ ಭಾಗವನ್ನು ಪಕ್ಕಕ್ಕೆ ಎತ್ತಿ ಹಿಡಿದಿದೆ. ತೋಳು ದಪ್ಪವಾಗಿದ್ದು, ಮೊಣಕೈವರೆಗೆ ಕಿರಿದಾಗಿ ಮುಂದೆ ಸಹಜವಾಗಿದೆ. ಹಸ್ತ ಮತ್ತು ಬೆರಳುಗಳು ಅತ್ಯಂತ ಸಹಜವಾಗಿವೆ. ಕೊರಳಲ್ಲಿ ಸರದಂತಹ ಆಭರಣವಿರುವುದು ಗಮನಾರ್ಹ. ಸರವನ್ನು ತೋರಿಸಿರುವ ರೀತಿಯು ವಿಶೇಷವಾಗಿದೆ. ಕಂಠ ಮತ್ತು ಎದೆ ಭಾಗವನ್ನು ಜೋಡಿಸದೇ ಖಾಲಿಬಿಟ್ಟು ಅಲ್ಲಿ ಸರವನ್ನು ತೋರಿಸಲಾಗಿದೆ. ಸರಖ್ಕೆ ಸುತ್ತಲೂ ತ್ರಿಕೋನಾಕಾರದ ಆರು ಎಸಳುಗಳಿವೆ. ಇವೆಲ್ಲವನ್ನು ಕೇವಲ ಬಾಹ್ಯ ರೇಖೆಯಲ್ಲಿ ತೋರಿಸಿ ಆಭರಣ. ಧರಿಸುವಿಕೆಯ ಸೌಂದರ್ಯವನ್ನು ಸಹಜವಾಗಿರಿಸಲಾಗಿದೆ. ಇದಕ್ಕೆ ಪಾದಗಳಿದ್ದವೋ ಇಲ್ಲವೋ ತಿಳಿಯುವುದಿಲ್ಲ. ಮುಖ ವಾನರನಂತಿದ್ದು, ಇದೊಂದು ಅಪರೂಪದ ಚಿತ್ರವಾಗಿದೆ. ಇದೇ ರೀತಿಯ ಚಿತ್ರಗಳು ಆನೆಗುಂದಿ (೨) ಮತ್ತು ಗೂಗಿ ಬಂಡೆಯಲ್ಲಿದ್ದು ಅವು ಕ್ರಮವಾಗಿ ಮಾಸಿ, ಪುನರ್ ತಿದ್ದುವಿಕೆಗೆ ಒಳಗಾಗಿವೆ. ಆನೆಗುಂದಿಯನ್ನು ವಾನರ ರಾಜ್ಯ ಕಿಷ್ಕಿಂದೆ ಎಂದು ನಂಬಲಾಗಿದ್ದು, ಅದರ ಹಿನ್ನೆಲೆಯಲ್ಲಿ ಈ ವಾನರ ರೀತಿಯ ಚಿತ್ರಗಳು ಗಮನಾರ್ಹವಾಗಿವೆ.

ಸಂಗಾಪುರದ ಮೂರನೆಯ ಕಲ್ಲಾಸರೆಯಲ್ಲಿ ಪಶುವಿನ ಹಿಂದೆ (ಪ್ರಾಯಶಃ ಹೊಡೆದುಕೊಂಡು ಹೊರಟಿರುವ) ಒಬ್ಬ ಮನುಷ್ಯನ ಚಿತ್ರವಿದೆ. ದೇಹ ದ್ವಿತ್ರಿಕೋನಾಕಾರ ಶೈಲಿಯಲ್ಲಿದೆ. ದೇಹದ ಆಂಗಿಕ ರಚನೆಯ ಬಗ್ಗೆ ಮೊದಲಿನ ಚಿತ್ರದ ಕಲಾವಿದನಷ್ಟು ಈ ಚಿತ್ರದ ರಚನಕಾರ ನಿಖರನಾಗಿಲ್ಲ. ಕೈ ಕಾಲುಗಳು ಕೆವಲ ಸಾಂಕೇತಿಕ ಮಾತ್ರ. ಆದರೂ ಈ ಚಿತ್ರ ಒಂದು ಕ್ರಿಯೆಯನ್ನು ಸ್ಪಷ್ಟವಾಗಿ ನಿದರ್ಶಿಸುತ್ತದೆ. ಇಲ್ಲಿ ವ್ಯಕ್ತಿ ಪಶುವನ್ನು ತೆಗೆದುಕೊಂಡು ಹೊರಟಿದ್ದು ಅವನ ಚಿತ್ರ ಕೇವಲ ಆಕೃತಿಯಾಗದೇ ನಡಿಗೆಯ ಚಲನಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ನಡೆಯುವಾಗ ಮುಂದಿನ ಕಾಲನ್ನು ಊರಿ ಹಿಂದಿನ ಕಾಲನ್ನು ಮೇಲಕ್ಕೆತ್ತಿರುವ ಭಂಗಿ ತುಂಬ ಸಹಜವಾಗಿದೆ. ದೇಹವು ಕೂಡ ಆ ಭಂಗಿಗೆ ಪೂರಕವಾಗಿದೆ. ಕಟಿಯಿಂದ ಎದೆ, ಭುಜದ ಭಾಗ ಕೆಳ ದೇಹಕ್ಕಿಂತ ಸ್ವಲ್ಪ ಮುಂದಕ್ಕೆ ಭಾಗಿದಂತೆ ರಚಿತವಾಗಿದೆ. ಇಲ್ಲಿ ಚಿತ್ರದ ರಚನಾಕಾರನಿಗೆ ಭಂಗಿಗಳ ಬಗೆಗೆ ಕಲ್ಪನೆ ಇದ್ದು, ಅದನ್ನು ಚಿತ್ರದಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದಾನೆ ಎನ್ನಬಹುದು. ಇದರಂತೆ ತೆಂಬಾದ ೪ನೇ ಕಲ್ಲಾಸರೆ ಮತ್ತು ಚಿಕ್ಕರಾಂಪುರದ ೧ನೇ ಗವಿಯ ಪಶುಪಾಲಕ ಮನುಷ್ಯ ಚಿತ್ರಗಳು ಚಲನಶೀಲ ಅಂಶದಿಂದ ಗಮನ ಸೆಳೆಯುತ್ತವೆ. ಕೈಯಲ್ಲಿ ಉದ್ದವಾದ ಕೋಲು ಅಥವಾ ಭರ್ಚಿಯನ್ನು ಹಿಡಿದುಕೊಂಡು ಪಶುಗಳನ್ನು ತೆಗೆದುಕೊಂಡು ಹೊರಟಿರುವ ಮನುಷ್ಯನ ಚಿತ್ರ (ಚಿಕ್ಕರಾಂಪುರ) ಅತ್ಯಂತ ಸಹಜವಾಗಿದೆ. ಹಿಂದಿನ ಕಾಲು ಎತ್ತಿದ ಭಂಗಿಯಲ್ಲಿದ್ದು, ಓಟದ ಶೈಲಿಯನ್ನು ತುಂಬಾ ಸಮರ್ಥವಾಗಿ ಬಿಂಬಿಸುತ್ತದೆನ್ನಬಹುದು.

ಮನುಷ್ಯ ಚಿತ್ರಗಳಲ್ಲಿ ಪುರುಷ-ಸ್ತ್ರೀ ಚಿತ್ರಗಳನ್ನು ಸ್ಪಷ್ಟವಾಗಿ ಗುರುತಿಸುವಂತೆ ಆ ಕಾಲದ ಚಿತ್ರ ರಚನೆಕಾರ ಯೋಚಿಸಿದ ರೀತಿ ಅಪೂರ್ವವಾಗಿದೆ. ಮಲ್ಲಾಪುರ, ಹಂಪಿ, ಹಿರೇಬೆಣಕಲ್, ಚಿಕ್ಕಬೆಣಕಲ್‌ಗಳ ಕೆಲವು ಗವಿ ಕಲ್ಲಾಸರೆಗಳಲ್ಲಿ ಮೈಮೇಲೆ ಗೆರೆಗಳನ್ನು ಹಾಕಿಕೊಂಡು ನಗ್ನರಾಗಿ ಕುಣಿಯುತ್ತಿರುವ ಮನುಷ್ಯ ಚಿತ್ರಗಳಿವೆ. ಇವುಗಳಲ್ಲಿ ಪುರುಷ ಹಾಗೂ ಸ್ತ್ರೀಯರಿದ್ದಾರೆ. ಸ್ತ್ರೀ ಪುರುಷರನ್ನು ಸ್ಪಷ್ಟವಾಗಿ ಗುರುತಿಸಬಹುದಾದ ರೀತಿಯಲ್ಲಿ ದೇಹದ ರಚನೆ ಇದೆ. ಪುರುಷ ನಗ್ನನಾಗಿ ಕುಣಿಯುತ್ತಿದ್ದಾನೆ ಎಂದು ತೋರಿಸುವ ಕ್ರಮ ತುಂಬ ಸರಳ. ಎರಡೂ ಕೈಗಳನ್ನು ಮೇಲೆಕ್ಕೆತ್ತಿ, ಕಾಲುಗಳನ್ನು ಅಗಲಿಸಿದ ಭಂಗಿಯ ವ್ಯಕ್ತಿ ಚಿತ್ರದಲ್ಲಿ ಕಾಲುಗಳ ನಡುವೆ ಶಿಶ್ನವನ್ನು (ಸಾಂಕೇಂತಿಕ) ತೋರಿಸಿದರಾಯ್ತು. ಆದರೆ ಈ ವಿಧಾನದ ಮೂಲಕ ನಗ್ನ ಸ್ತ್ರೀಯನ್ನು ಸಂಕೇತಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸ್ತ್ರೀಯನ್ನು ಪಾರ್ಶ್ವಭಂಗಿಯಲ್ಲಿ ಚಿತ್ರಿಸಲಾಗಿದೆ. ಇದರಿಂದ ಸಹಜವಾಗಿ ಅವಳ ಸ್ತನಗಳನ್ನು ತೋರಿಸಬಹುದು. ಇಂಥ ಚಿತ್ರಗಳು ಮಲ್ಲಾಪುರದ ಖಾನಸಾಬನ ಗವಿ (೩) ಹಿರೇಬೆಣಕಲ್ಲಿನ ರಕ್ಕಸಕುಟ್ರಿ, (ಕಲ್ಲಾಸರೆ – ೨), ಹಂಪಿಯ ಭರಮದೇವರ ಗುಂಡು (೫)ಗಳಲ್ಲಿವೆ. ನಾರಾಯಣಪೇಟೆಯ ಸ್ತ್ರೀ ಚಿತ್ರ ಮತ್ತೊಂದು ರೀತಿಯ ಅಭಿವ್ಯಕ್ತಿ. ಕಾಲುಗಳನ್ನು ಅಗಲಿಸಿ  ನಿಂತಿರುವ ವ್ಯಕ್ತಿ ಸ್ತ್ರೀ ಎಂಬುದಕ್ಕೆ ಅವಳ ಯೋನಿ ಭಾಗವನ್ನು ತ್ರಿಕೋನಾಕಾರದಲ್ಲಿ ಸ್ವಲ್ಪ ಕೆಳಕ್ಕೆ ತೋರಿಸಿ ಸಂಕೇತಿಸಲಾಗಿದೆ. ನಗ್ನ ಪುರುಷ ಗುಂಪಿನಲ್ಲಿ ಇಂಥಹ ಸ್ತ್ರೀ ಚಿತ್ರಗಳು ಗೊಂದಲಕ್ಕೆಡೆಮಾಡುವ ಸಾಧ್ಯತೆ ಇರುವುದರಿಂದ ಈ ಭಂಗಿಯ ಸ್ತ್ರೀ-ಪುರುಷ ಚಿತ್ರಗಳನ್ನು ಒಂದೇ ಕಡೆ ಚಿತ್ರಿಸಿಲ್ಲ.

ಗುಂಪು ವ್ಯಕ್ತಿಗಳಲ್ಲಿ ತಲೆಯ ಸುತ್ತಲೂ ಕೂದಲುಗಳನ್ನು ಚಿತ್ರಿಸಿ ಸ್ತ್ರೀಯನ್ನು ಸೂಚಿಸಲಾಗಿದೆ. ಈ ರೀತಿಯ ಚಿತ್ರಗಳು ಹಿರೇಬೆಣಕಲ್ಲಿನ ೧, ೬ನೇ ಗವಿಯಲ್ಲಿವೆ. ೬ನೇ ಗವಿಯಲ್ಲಿ ಪರಸ್ಪರ ಎದುರುಬದುರಾಗಿ ಕುಣಿಯುತ್ತಿರುವ ೨ ಸಾಲಿನ ಮನುಷ್ಯ ಚಿತ್ರಗಳಲ್ಲಿ ಒಂದು ಸಾಲಿನ ಎಲ್ಲರ ತಲೆಯಲ್ಲೂ ಕೂದಲನ್ನು ತೋರಿಸಲಾಗಿದೆ. ಹಾಗಾಗಿ ಅದು ಸ್ತ್ರೀಯರ ಸಾಲು ಎನ್ನುವುದು ಸ್ಪಷ್ಟ.

ಪ್ರಾಣಿ ಚಿತ್ರಗಳು

ಪಶು-ಪಕ್ಷಿಗಳ ಚಿತ್ರ ರಚನೆಯೂ ಕೂಡ ಸಹಜವಾಗಿರುವುದನ್ನು ಕಾಣಬಹುದು. ಇವು ಕೂಡಾ ಛಾಯಾ ಹಾಗೂ ಬಾಹ್ಯ ರೇಖಾ ರೂಪದಲ್ಲಿವೆ. ಕೆಲವು ಸಹಜ ರೂಪದ ಚಿತ್ರಗಳು ಇಂತಿವೆ.

ಮಲ್ಲಾಪುರದ ೯ನೇ ಕಲ್ಲಸರೆಯಲ್ಲಿಯ ಗೂಲಿಯಚಿತ್ರ ರಚನೆಯ ದೃಷ್ಟಿಯಿಂದ ಒಂದು ಉತ್ತಮ ಕಲಾಕೃತಿ ಎನ್ನಬಹುದು. ಇದು ಛಾಯಾರೂಪದಲ್ಲಿದೆ. ಮುಂಡ, ಕಾಲು, ಮುಖ, ಕತ್ತು, ಕೋಡು, ಕಿವಿ ಎಲ್ಲವೂ ಪ್ರಮಾಣಬದ್ಧವಾಗಿವೆ. ಬಲಿಷ್ಟ ಗೂಳಿಯ ದಷ್ಟಪುಷ್ಠತೆಯನ್ನು ಚಿತ್ರದಲ್ಲಿ ನೈಜವಾಗಿ ಬಿಂಬಿಸಲಾಗಿದೆ. ಕೊಪ್ಪಳ-ಹಂಪಿ ಪ್ರದೇಶದ ಗೂಳಿ ಚಿತ್ರಗಳಲ್ಲಿಯೇ ಇದು ಶ್ರೇಷ್ಠ ಚಿತ್ರವೆನ್ನಬಹುದು.

ಮಲ್ಲಾಪುರದ ೨ನೇ ಗವಿ ಮತ್ತು ಅಂಜನಹಳ್ಳಿಯ ಗೂಲಿಯ ಚಿತ್ರಗಳು ದೇಹದಲ್ಲಿ ಪ್ರಮಾಣಬದ್ಧವಾಗಿರದಿದ್ದರೂ ಗೂಲಿಯ ಬಲಿಷ್ಠತೆ ಗಾಂಭೀರ್ಯವನ್ನು ಪ್ರಕಟಿಸುವಲ್ಲಿ ಯಶಸ್ವಿಯಾಗಿವೆ. ಅದೇ ರೀತಿ ಕೋಣದ ಚಿತ್ರಗಳು ಗಮನ ಸೆಳೆಯುತ್ತವೆ. ಹೊಸಬಂಡಿ  ಹರ್ಲಾರ. ಚಿಕ್ಕಬೆಣಕಲ್ ಮತ್ತು ಮಲ್ಲಾಪುರದ ಕೋಣ ಚಿತ್ರದ ಮೈಮೇಲೆ ರೇಖೆಗಳಿವೆ. ಈ ಚಿತ್ರಗಳು ಪ್ರಬುದ್ಧ ಕಲಾವಿದನ ರಚನೆಗಳಂತೆ ಇವೆ. ಕೋಣದ ಬಲಿಷ್ಟತೆ ಚಿತ್ರದಲ್ಲಿ ನೈಜವಾಗಿದೆ. ಹೀಗೆ ಈ ಚಿತ್ರಗಳು ಭಂಗಿ ಮತ್ತು ಭಾವವನ್ನು ಸಮರ್ಪಕವಾಗಿ ಅಭಿವ್ಯಕ್ತಿಸುತ್ತಿವೆ.

ಹಂಪಿಯ ೨ನೇ ಕಲ್ಲಾಸರೆಯ ಹುಲಿ ಮತ್ತು ಗೂಲಿಯ ಚಿತ್ರಗಳು ಕೂಡ ರಚನಕಾರನ ಚಿತ್ರ ಪರಿಜ್ಞಾನಕ್ಕೆ ಸಾಕ್ಷಿಯಾಗಿವೆ. ಬಾಲವನ್ನು ಅರೆ ಎತ್ತಿ ಸಂಚಾರಕ್ಕೆ ಹೊರಟಂತಿರುವ ಹುಲಿಯ ಭಾವ ಮತ್ತು ಶೈಲಿ ಚಿತ್ರದಲ್ಲಿ ಸಹಜವಾಗಿ ವ್ಯಕ್ತವಾಗಿದೆ. ಅದೇ ರೀತಿ ಬಾಲವನ್ನು ಮೇಲೆಕ್ಕೆತ್ತಿ ತಲೆ ಬಗ್ಗಸಿರುವ ಗೂಲಿಯ ಇರಿವ ಭಂಗಿಯ ಭಾವ ಚಿತ್ರದಲ್ಲಿ ನೈಜವಾಗಿ ಮೂಡಿದೆ.

ಹಿರೇಬೆಣಕಲ್ಲಿನ ೧ನೇ ಕಲ್ಲಾಸರೆಯಲ್ಲಿ ೨ ನವಿಲಿನ ಚಿತ್ರಗಳಿವೆ. ಅವು ಛಾಯಾ ರೂಪದಲ್ಲಿದ್ದು, ಯಾವುದೇ ದೃಷ್ಟಿಯಿಂದ ಅವುಗಳ ಬಾಹ್ಯ ಆಕಾರ ಸ್ವಲ್ಪವೂ ಬದಲಾಗದಂತೆ ಅಪೂರ್ವವಾಗಿ ಮೂಡಿ ಬಂದಿವೆ. ಅವುಗಳಲ್ಲಿ ಒಂದು ನವಿಲಿನ ಮೇಯುವ ಭಂಗಿ ತುಂಬಾ ಸಹಜವಾಗಿದೆ.

ಹೊಸ ಬಂಡಿಹರ್ಲಾಪುರದ ೨ನೇ ಕಲ್ಲಾಸರೆಯ ಕವಲಿನ ಕೋಡುಗಳ (ಗಂಡು) ಜಿಂಕೆಗಳು ಕೂಡ ಸುಂದರವಾದ ರಚನೆಗಳು. ಅವುಗಳ ದೇಹವಿನ್ಯಸ, ಭಂಗಿ ಮತ್ತು ರಚನೆ ನೈಜವಾಗಿದೆ. ಎಮ್ಮೆ, ಎತ್ತು ಮತ್ತು ಹಸು ಒಂದೇ ರೀತಿ ಕಾಣುತ್ತವೆಯಾದರೂ ಸುತ್ತಲಿನ ಚಿತ್ರಗಳು ಅವಲೋಕನದಿಂದ ಅವುಗಳ ಪ್ರತ್ಯೇಕತೆಯನ್ನು ಗುರುತಿಸಬಹುದು. ಕೊಪ್ಪಳದ ೧ನೇ ಗವಿಯಲ್ಲಿ ಜಿಂಕೆ, ಗೂಲಿ, ಹಸು, ಟಗರು, ಮೊಲ ಮುಂತಾದ ಪ್ರಾನಿಗಳ ಚಿತ್ರಗಳಿವೆ. ನೋಡಿದ ತಕ್ಷಣ ಆ ಪ್ರಾಣಿಗಳನ್ನು ಗುರುತಿಸಬಹುದು. ಟಗರಿನ ಕೊಂಬನ್ನು ಹೊರಭಾಗದಲ್ಲಿ ಸುರುಳಿಯಾಗಿ ಸುತ್ತಿರುವ ರೀತಿಯಲ್ಲಿ ತೋರಿಸಿರುವುದು ವಿಶೇಷ. ಹೀಗೆ ಪ್ರಾಗಿತಿಹಾಸ ಕಾಲದ ಚಿತ್ರಗಳು ಶೈಲಿ ಮತ್ತು ಬಂಗಿಯಲ್ಲಿ ಸಮರ್ಥ ರೂಪಕಗಳಾಗಿವೆ ಎನ್ನಬಹುದು.

ಚಿತ್ರಗಳ ಪ್ರಮಾಣ

ಕೊಪ್ಪಳ-ಹಂಪಿ ಪ್ರದೇಶದ ಚಿತ್ರಗಳು ಪ್ರಮಾಣದಲ್ಲಿ ವೈವಿಧ್ಯಮಯವಾಗಿವೆ. ಚಿಕ್ಕ, ಮಧ್ಯಮ, ದೊಡ್ಡ ಮತ್ತು ಬೃಹತ್ ಪ್ರಮಾಣದಲ್ಲಿವೆ.

ಚಿಕ್ಕ ಪ್ರಮಾಣದ ಚಿತ್ರಗಳು

ಸಾಮಾನ್ಯವಾಗಿ ಬಿಡಿ ಚಿತ್ರಗಳಿಗಿಂತ ಗುಂಪಿನ ಚಿತ್ರಗಳು ಸಣ್ಣ ಪ್ರಮಾಣದಲ್ಲಿವೆ. ಒಂದೇ ಎಡೆಯಲ್ಲಿ ಅನೇಕ ಚಿತ್ರಗಳನ್ನು ಬಿಡಿಸುವ ಉದ್ದೇಶವಿರುವುದರಿಂದ ಚಿತ್ರಗಳನ್ನು ಸಣ್ಣ ಪ್ರಮಾಣದಲ್ಲಿ ಯೋಜಿಸಿಕೊಳ್ಳಲಾಗಿದೆ. ಬಿಡಿ ಚಿತ್ರಗಳು ಸ್ವತಂತ್ರವಾಗಿರುವುದರಿಂದ ಅವು ದೊಡ್ಡ ಇಲ್ಲವೇ ಮಧ್ಯಮ ಪ್ರಮಾಣದಲ್ಲಿರುತ್ತವೆ. ಚಿಕ್ಕ ಪ್ರಮಾಣದ ಚಿತ್ರಗಳು ಹಿರೇಬೆಣಕಲ್ ೧,೬,೧೧ ಮತ್ತು ೧೨ನೇ ಗವಿಗಳಲ್ಲಿ ಚಿಕ್ಕರಾಂಪುರದ ೧ನೇ ಗವಿಯಲ್ಲಿ ಇವೆ. ಇಲ್ಲಿ ಒಂದೇ ಎಡೆ ಸಾಲು ಕುಣಿತಗಾರರ ನಾಲ್ಕೈದು ತಂಡಗಳು, ಬಿಡಿ ಮನುಷ್ಯರು, ಜಿಂಕೆಗಳ ಸಾಲು, ಗುಂಪುಗಳು, ಪಶು-ಪಕ್ಷಿಗಳು, ಅಶ್ವ ಸವರರು ಮುಂತಾದ ಚಿತ್ರಗಳಿವೆ. ಇಲ್ಲಿಯ ಚಿತ್ರಗಳು ಏಕಪ್ರಕಾರವಾಗಿರದೇ ಚೆಲ್ಲಾಪಿಲ್ಲಿಯಾಗಿವೆ. ಪ್ರಾಯಶಃ ಇವು ಬೇರೆ ಬೇರೆ ಅವಧಿಯಲ್ಲಿ ರಚಿತವಾಗಿರಬಹುದೆಂದು ತೋರುತ್ತದೆ. ಇಲ್ಲಿ ಕೆಲವು ಸಣ್ಣ ಪ್ರಮಾಣದ ಬಿಡಿ ಚಿತ್ರಗಳಿವೆ. ನಂತರ ಕಾಲದ ಬಿಳಿವರ್ಣದ ಚಿತ್ರಗಳಲ್ಲಿ ಕಡ್ಡಿಯಾಕಾರದ ಮನುಷ್ಯಾ ಕೃತಿಗಳು ಮತ್ತು ಇತರ ಚಿತ್ರಗಳು ಕೂಡ ಸಣ್ಣ ಪ್ರಮಾಣದಲ್ಲಿವೆ. ಮಲ್ಲಾಪುರ, ವೆಂಕಟಾಪುರ, ಹಂಪಿಗಳಲ್ಲಿ ಸಣ್ಣಪ್ರಮಾಣದ ಚಿತ್ರಗಳಿವೆ. ಬಣ್ಣ ಚಿತ್ರಗಳು ಸಾಮಾನ್ಯವಾಗಿ ೧ ಸೆಂ.ಮೀ. ನಿಂದ ಹಿಡಿದು ೨೦ ಸೆಂ.ಮೀ.ವರೆಗೆ ವಿವಿಧ ಅಳತೆಯಲ್ಲಿವೆ.

ಮಧ್ಯಮ ಪ್ರಮಾಣದ ಚಿತ್ರಗಳು

ಮಧ್ಯಮ ಪ್ರಮಾಣದ ಚಿತ್ರಗಳು ಸಾಮಾನ್ಯವಾಗಿ ಅಧಿಕವಾಗಿವೆ. ಎರಡು ಅಥವಾ ಮೂರ್ನಾಲ್ಕು ಚಿತ್ರಗಳಿದ್ದಲ್ಲಿ, ಅವು ಮಧ್ಯಮ ಪ್ರಮಾಣದಲ್ಲಿರುತ್ತವೆ. ಸಂಗಾಪುರ, ಕೊಪ್ಪಳ, ಚಿಕ್ಕರಾಂಪುರ, ರಾಂಪುರ, ಮಲ್ಲಾಪುರಗಳಲ್ಲಿ ಈ ಪ್ರಮಾಣದ ಚಿತ್ರಗಳಿವೆ. ಸಾಮಾನ್ಯವಾಗಿ ೨೦ ಸೆಂ.ಮೀ ನಿಂದ ೧ ಮೀಟರವರೆಗೆ ಚಿತ್ರಗಳನ್ನು ಈ ಪ್ರಮಾಣದಲ್ಲಿ ಗುರುತಿಸಬಹುದು. ರಾಂಪುರ (೧), ಆನೆಗುಂದಿ (೧)ಯ ವಾನರ ರೀತಿಯ ಮನುಷ್ಯ ಚಿತ್ರಗಳು ಕ್ರಮವಾಗಿ ೦.೮೯ ಮೀ. ಮತ್ತು ೦.೫೮ ಮೀ ಎತ್ತರ ಇವೆ. ಸಂಗಾಪುರದ ಚಿತ್ರಗಳಲ್ಲಿ ಹೆಚ್ಚಿನವು ೩೦ ಸೆಂ.ಮೀ.ನಿಂದ ೪೫ ಸೆಂ.ಮೀ.ವರೆಗೆ ಇವೆ.

ದೊಡ್ಡ ಪ್ರಮಾಣದ ಚಿತ್ರಗಳು

೧ ಮೀ.ನಿಂದ ೫ ಮೀಟರ‍್ವರೆಗಿನ ಚಿತ್ರಗಳನ್ನು ದೊಡ್ಡ ಪ್ರಮಾಣದ ಚಿತ್ರಗಳೆನ್ನಬಹುದು. ಇವು ವಿರಳವಾಗಿವೆ. ಸಾಮಾನ್ಯವಾಗಿ ಬಿಡಿ ಮನುಷ್ಯ ಅಥವಾ ಪ್ರಾಣಿಗಳವು. ಈ ಅಳತೆಯಲ್ಲಿರುತ್ತವೆ. ಮಲ್ಲಾಪುರದ ೩ನೇ ಗವಿಯಲ್ಲಿ (ಖಾನಾಸಾಬನ) ಈ ಅಳತೆಯ ಅನೇಕ ಚಿತ್ರಗಳಿವೆ. ಅವುಗಳ ಪ್ರಮಾಣ ಇಂತಿದೆ. ಮನುಷ್ಯ ಚಿತ್ರಗಳು ೧ಮೀ ೧.೩೫ ಮೀ. ೧.೬೬ ಮೀ. ೧.೭೬ ಮೀ. ೨.೪೫ ಮೀ. ಮತ್ತು ೧.೮೦ ಮೀ ಅಳತೆಯಲ್ಲಿದೆ. ಹಂದಿಯ ಚಿತ್ರ ೧.೩೯ ಮೀ ಎತ್ತರ ಮತ್ತು ೨.೬ ಮೀ. ಉದ್ದ, ಕಾಡುಕೋಣ ೩.೧೦ ಮೀ. ಉದ್ದ ಮತ್ತು ೨.೧೫ ಮೀ. ಎತ್ತರವಿದೆ. ನವಿಲು ೨.೫ ಮೀ. ಉದ್ದವಾಗಿದೆ. ಹಾಗೇ ಮರದ ಕಾಂಡವೊಂದರ ಚಿತ್ರ ೪ ಮೀ. ಎತ್ತರವಿದೆ.

ನಾರಾಯಣಪೇಟೆಯ ಮನುಷ್ಯ ಚಿತ್ರವು ಸು. ೪ ಮೀ ಎತ್ತರವಿದ್ದು ಹಿರೇಬೆಣಕಲ್ಲಿನ ೧೭ನೇ ಗವಿಯ ವಿಚಿತ್ರ ಮನುಷ್ಯಾಕೃತಿಯು ೫ಮೀ ಉದ್ದವಿದೆ. ಚಿಕ್ಕಬೆಣಕಲ್ಲಿನ ೩ನೇ ಕಲ್ಲಾಸರೆಯ ಕಾಡು ಕೋಣದ ಚಿತ್ರ ಸು.೨ಮೀ ಉದ್ದವಿದೆ. ರಾಮದುರ್ಗ ಮತ್ತು ಬೊಮ್ಮಸಾಗರ ತಾಂಡದ ಎತ್ತುಗಳು ಹಾಗೂ ನವಿಲಿನ ಚಿತ್ರಗಳು ಸುಮಾರು ೨ ಮೀಟರ್ ಉದ್ದ ಇವೆ. ಹೊಸಬಂಡಿಹರ್ಲಾಪುರದ ಕೋಣದ ಚಿತ್ರ ೨.೮೦ ಮೀ. ಉದ್ದ ಮತ್ತು ೧.೮೯ ಮೀ. ಎತ್ತರವಾಗಿದೆ.

ಬೃಹತ್ ಪ್ರಮಾಣದ ಚಿತ್ರಗಳು

೫ ಮೀ. ಗಿಂತ ದೊಡ್ಡ ಪ್ರಮಾಣದ ಚಿತ್ರಗಳು ತೀರ ವಿರಳವಾಗಿವೆ. ಕೊಪ್ಪಳ-ಹಂಪಿ ಪ್ರದೇಶಕ್ಕೆ ಸಂಬಂಧಿಸಿದಂತೆ ಹಿರೇಬೆಣಕಲ್ ಮತ್ತು ಅಂಜನಹಳ್ಳಿಯಲ್ಲಿ ಈ ಪ್ರಮಾಣದ ಚಿತ್ರಗಳಿವೆ.

ಹಿರೇಬೆನಕಲ್ಲಿನ ೨ನೇ ಕಲ್ಲಾಸರೆಯ ೨೩.೫೦ ಮೀ. ಅಗಲ ಹಾಗೂ ಸು. ೧೦ ಮೀ. ಎತ್ತರದ ವಿಶಾಲ ಅಳತೆಯಲ್ಲಿ ೨ ಹೆಬ್ಬಾವಿನ ಚಿತ್ರಗಳಿವೆ. ಪ್ರತಿಯೊಂದು ಸು. ೧೨ ಮೀ. ಉದ್ದವಾಗಿವೆ. ಇಲ್ಲಿಯವರೆಗೆ ತಿಳಿದಂತೆ ಮಧ್ಯಪ್ರದೇಶದ ರೈಸಿನ್ ಜಿಲ್ಲೆಯ ಗೋರಾಗಂಜ್ ತಹಶೀಲ್‌ನ ಸನಕುದ್ ಮತ್ತು ಭಾಗವಾನಿ ನದಿಗಳ ಮಧ್ಯದಲ್ಲಿರುವ ಜಾಹೋರಾ ಕಲ್ಲಾಸರೆಗಳಲ್ಲಿಯ ದ್ವಿವರ್ಣದ (ಬಿಳಿ,ಕೆಂಪು) ಕೋಣದ ಚಿತ್ರವನ್ನು (೩.೬೦ ಮೀ. ಉದ್ದ ೧.೯೫ ಎತ್ತರ) ಭಾರತದ ಗವಿ ಪ್ರಾಣಿ ಚಿತ್ರಗಳಲ್ಲಿಯೇ ಅತ್ಯಂತ ದೊಡ್ಡದೆಂದು ತಿಳಿದುಬಂದಿದೆ.[2] ಆದರೆ ಅದಕ್ಕೂ ದೊಡ್ಡದಾದ ಚಿತ್ರಗಳು ಇವಾಗಿದ್ದು, ಭಾರತದ ಗವಿವರ್ಣ ಚಿತ್ರಗಳಲ್ಲೇ ಅತೀ ದೊಡ್ಡ ಪ್ರಮಾಣದ ಚಿತ್ರಗಳೆಂದು ಹೇಳಬಹುದು. ಈ ಚಿತ್ರಗಳನ್ನು ಒಳಗೊಂಡ ಕಲ್ಲಾಸರೆ ಕೂಡ ಅತೀ ದೊಡ್ಡ ಚಿತ್ರತ ಕಲ್ಲಾಸರೆಯಾಗಿದೆ.

ಇಲ್ಲಿಯೇ ೧೭ನೇ ಗವಿಯಲ್ಲಿಯ ಒಂದು ವಿಚಿತ್ರ ಆಕೃತಿಯ ೭ಮೀ ಉದ್ದವಾಗಿದೆ. ಹಾಗೂ ಅಂಜನಹಳ್ಳಿಯ ಹಡಗಿನ ಚಿತ್ರವು ೬.೯೨ ಮೀ. ಉದ್ದ ಮತ್ತು ೧ ಮೀ. ಎತ್ತರವಿದೆ. ಒಟ್ಟಿನಲ್ಲಿ ಕರ್ನಾಟಕ ಹಾಗೂ ಭಾರದಲ್ಲಿಯೇ ದೊಡ್ಡ ದೊಡ್ಡ  ಪ್ರಮಾಣದ ಮನುಷ್ಯ ಹಾಗೂ ಪ್ರಾಣಿಗಳ ಚಿತ್ರಗಳನ್ನು ಕೊಪ್ಪಳ-ಹಂಪಿ ಪ್ರದೇಶ ಒಳಗೊಂಡಿದೆ ಎಂದು ಹೇಳ ಬಹುದು.

ಚಿತ್ರ ರಚನೆಯ ಉದ್ದೇಶ

ಪ್ರಾಗಿತಿಹಾಸ ಕಾಲದ ಚಿತ್ರರಚನೆಯ ಉದ್ದೇಶಗಳ ಬಗೆಗೆ ಬೇರೆ ಬೇರೆ ಅಭಿಪ್ರಾಯಗಳಿವೆ.[3] ಇವು ಪ್ರಾಚೀನ ಕಾಲದ ಸಾಮಾನ್ಯ ಜನತೆಯ ಭಾವಾನಾತ್ಮಕ ಅಭಿವ್ಯಕ್ತಿಯ ಫಲವಾಗಿ ರಚಿತವಾದವುಗಳೆಂದು, ಸೌಂದರ್ಯ ಪ್ರಜ್ಞೆಯುಳ್ಳ ಕೆಲವು ಜನರು ನಿಸರ್ಗದ ಚೆಲುವಿನಿಂದ ಪ್ರೇರಣೆ ಪಡೆದು ಅಲಂಕರಣೆಯ ಉದ್ದೇಶಕ್ಕಾಗಿ ರಚಸಿದವೆಂದು ಅಭಿಪ್ರಾಯ ಪಡಲಾಗಿದೆ. ಹಾಗೇ ಈ ಚಿತ್ರಗಳು ಯಶಸ್ವಿ ಬೇಟೆಯ ಸ್ಮರಣಾರ್ಥ ಉದ್ದೇಶಕ್ಕಾಗಿ ರಚಿಸಿದವೆಂದು ಮತ್ತು ನಿರಂತರ ಆಹಾರ ದೊರಕಿಸಿಕೊಳ್ಳುವ ಉದ್ದೇಶದ ಮಾಂತ್ರಿಕ ಸಂಬಂಧಿ ಚಿತ್ರಗಳೆಂದು ಹೇಳಲಾಗಿದೆ. ಕೊಪ್ಪಳ-ಹಂಪಿ ಪ್ರದೇಶಕ್ಕೆ ಸಂಬಂಧಿಸಿಸಂತೆ ಈ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಮೂರು ಉದ್ದೇಶಗಳನ್ನು ಗುರುತಿಸಬಹುದು. ಅವು ೧. ಭಾವಾನಾತ್ಮಕ ಪ್ರೇರಣೆ. ೨ ಅಲಂಕರಣೆ ಮತ್ತು ೩ ಮಾಂತ್ರಕ ಕಟ್ಟಳೆ.

೧. ಭಾವಾನಾತ್ಮಕ ಪ್ರೇರಣೆ

ಕೆಲವು ಚಿತ್ರಗಳು ಭಾವನಾತ್ಮಕ ಪ್ರೇರಣೆ ಫಲವಾಗಿ ರಚಿತವಾಗಿವೆ. ಚಿತ್ರದ ನೆಲೆ ವಿಷಯ ಹಾಗೂ ಸ್ವರೂಪವನ್ನು ಗಮನಿಸಿ ಇಂಥ ಚಿತ್ರಗಳನ್ನು ಗುರುತಿಸಬಹುದು. ಮನುಷ್ಯ ಭಾವನಾಜೀವಿ, ಭಾವನೆಗಳ ತೀವ್ರ ಅಭಿವ್ಯಕ್ತಿಯ ಪ್ರೇರಣೆಯಾದಾಗ ಅದನ್ನು ವಿವಿಧ ಮಾಧ್ಯಮದ ಮೂಲಕ ಅಭಿವ್ಯಕ್ತಿಸುತ್ತಾನೆ. ಇದು ಕ್ಷಣಿಕವಾದ ಮತ್ತು ತಕ್ಷಣವಾದ ಪ್ರೇರಣೆ. ಹಾಗಾಗಿ ಅವನು ಸ್ಥಳದಲ್ಲೇ ಲಭ್ಯವಿದ್ದ ವಸ್ತುಗಳಿಂದಲೇ ಯಾವುದಾದರೂ ಆಕೃತಿಯನ್ನೊ, ಚಿತ್ರವನ್ನೋ ಬಿಡಿಸಿ ಆ ಮೂಲಕ ತನ್ನ ಭಾವನೆಯನ್ನು ಪ್ರಕಟಪಡಿಸುತ್ತಾನೆ. ಅದೇ ರೀತಿಯಲ್ಲಿ ಪ್ರಾಗಿತಿಹಾಸಕಾಲದ ಚಿತ್ರರಚನೆಗೆ ಇಂಥ ತಕ್ಷಣದ ಭಾವನಾತ್ಮಕ ಅಭಿವ್ಯಕ್ತಿಯ ಪ್ರೇರಣೆಯನ್ನು ಗುರುತಿಸಬಹುದು. ಇಂಥ ಪ್ರೇರಣೆ ಸಾರ್ವತ್ರಿಕವಾದುದು. ಯಾವ ಸಾಮಾನ್ಯ ವ್ಯಕ್ತಿಗಾದರೂ ಮೂಡಬಹುದು. ಆ ವ್ಯಕ್ತಿ ಕಲಾಪ್ರಜ್ಞೆಯುಳ್ಳವನಾಗಿದ್ದರೆ ಅಭಿವ್ಯಕ್ತಗೊಂಡ ಯಾವುದೇ ಮಾಧ್ಯಮ ಅಥವಾ ಚಿತ್ರರಚನೆ ಮತ್ತು ಭಾವ ಪ್ರಕಟಣೆಯ ದೃಷ್ಟಿಯಿಂದ ಉತ್ತಮವಾಗಿರುತ್ತವೆ. ಅದರ ಸಾಮಾನ್ಯ ವ್ಯಕ್ತಿಯ ರಚನೆಗಳಾಗಿದ್ದರೇ ಅವು ರಚನೆಯಲ್ಲಿ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಆದರೆ ಭಾವ ಪ್ರಕಟಣೆಯಲ್ಲಿ ಪ್ರಬಲವಾಗಿರುತ್ತವೆ.

ಕೊಪ್ಪಳ-ಹಂಪಿ ಪ್ರದೇಶದ ಮಲ್ಲಾಪುರ, ಹಂಪಿ, ಕೊಪ್ಪಳ, ಸಂಗಾಪುರ, ತೆಂಬಾ ಮುಂತಾದೆಡೆಗಳಲ್ಲಿನ ಕೆಲವು ಚಿತ್ರಗಳನ್ನು ಮಾಂತ್ರಿಕ ಉದ್ದೇಶದಿಂದ ರಚಿಸಿದವೆಂದು ಹೇಳಲಾಗದು. ಅಶ್ವ ಸವಾರ, ಬಿಡಿಯಾದ ಗೂಲಿ, ಹುಲಿ ವಿವಿಧ ರೀತಿಯ ಪ್ರಣಿಗಳ ಸಮೂಹ, ಆನೆ ಸವಾರ, ಅಲಂಕೃತ ಎತ್ತುಗಳು, ಎದುರುಬಹುರಾಗಿರುವ ಜೋಡಿ ಎತ್ತುಗಳು, ಅವುಗಳ ಕೊಂಬಿನ ತುದಿಯಲ್ಲಿ ಹೂವಿನ ಅಲಂಕರಣೆ, ಹೂ ಗಿಡಗಳ ಚಿತ್ರಗಳು ಮತ್ತು ವಿಶೇಷವಾಗಿ ಬಯಲು ಬಂಡೆಯಲ್ಲಿ ಕೊರೆದ / ಕುಟ್ಟಿದ ಎತ್ತಿನ, ಎತ್ತಿನ ಸವಾರನ, ಆಶ್ವಸವಾರನ ಮತ್‌ಉತ ಪಶುಗಳ ಚಿತ್ರಗಳು ಖಂಡಿತವಾಗಿ ತಕ್ಷಣದ ಅಭಿವ್ಯಕ್ತಿಯ ಉದ್ದೇಶದಿಂದ ರಚಿತವಾದವುಗಳೆಂದು ಹೇಳಬಹುದು.

೨. ಅಲಂಕರಣೆ

ಕೆಲವು ಚಿತ್ರಗಳು ಅಲಂಕರಣೆಯ ಉ‌ದ್ದೇಶದಿಂದ ರಚಿತವಾದವೆಂದು ಹೇಳಬಹುದು. ಮನುಷ್ಯ ಮೂಲತಃ ನಿಸರ್ಗ ಜೀವಿ ಅವನಲ್ಲಿ ಸೌಂದರ್ಯಪ್ರಜ್ಞೆ ಸುಪ್ತವಾಗಿರುತ್ತದೆ. ಆದರೆ ಎಲ್ಲರಲ್ಲೂ ಜಾಗೃತವಾಗಿರುವುದಿಲ್ಲ. ಆ ರೀತಿಯ ಕಲಾವಂತಿಕೆಯ ಕೆಲವು ಪ್ರಾಗಿತಿಹಾಸ ಕಾಲದ ಜನರು ತಮ್ಮ ವಾಸದ ನೆಲೆಗಳನ್ನು ಅಲಂಕರಿಸುವ ಉದ್ದೇಶದಿಂದ ಚಿತ್ರಗಳನ್ನು ಬಿಡಿಸಿದ್ದಾರೆನ್ನಬಹುದು. ಹಳೆಯ ಶಿಲಾಯುಗದ ಒರಟು ಆಯುಧಗಳನ್ನು ನವಶಿಲಾಯುಗದಲ್ಲಿ ಸುಂದರವಾಗಿ ಮಾಡಿಕೊಂಡಿರುವುದು, ನಿತ್ಯ ಬಳಕೆಯ ಮಡಕೆಗಳನ್ನು ಅಲಂಕರಿಸಿಕೊಂಡಿರುವುದು ಅವನ ಕಲಾಪ್ರಜ್ಞೆಗೆ ಸಾಕ್ಷಿ.

ಅದೇ ರೀತಿ ಅಲಂಕರಣೆಯ ಉದ್ದೇಶದಿಂದ ಕೆಲವು ಚಿತ್ರಗಳನ್ನು ಬಿಡಿಸಿದ್ದಾನೆನ್ನಬಹುದು. ಸಾಮಾನ್ಯವಾಗಿ ಸ್ವಬಳಕೆಯ ಆಯುಧ, ಮಡಕೆ ಪಾತ್ರೆಗಳನ್ನು ಅಲಂಕರಿಸಿಕೊಂಡಂತೆ ಪ್ರಾಗಿತಿಹಾಸ ಕಾಲದ ಮಾನವ ಸ್ವವಾಸದ ಗವಿ ಕಲ್ಲಾಸರೆಗಳನ್ನು ಚಿತ್ರಗಳನ್ನು ಬರೆದಿದ್ದಾರೆ. ಅಲ್ಲಿಯ ಚಿತ್ರಗಳು ಸಾಮಾನ್ಯವಾಗಿ ಅವನ ಜನ, ಪಶುಪ್ರಾಣಿಗಳಿಗೆ ಸಂಬಂಧಿಸಿರುತ್ತವೆ. ಮತ್ತು ತನ್ನ ಎತ್ತು ಮುಂತಾದ ಸಾಕುಪ್ರಾಣಿಗಳನ್ನು ಕೂಡ ಅವನು ಚಿತ್ರಗಳ ಮೂಲಕ ಅಲಂಕರಿಸಿ ಸಂತಸಪಟ್ಟಿದ್ದಾನೆ. ಇಂಥ ಅನೇಕ ಚಿತ್ರಗಳನ್ನು ಕಾಣಬಹುದು.

ಕೊಪ್ಪಳ ಹಂಪಿ ಪ್ರದೇಶದ ಚಿಕ್ಕರಾಂಪುರದ ೧ನೇ ಗವಿ, ಸಂಗಾಪುರದ ೧ನೇ ಗವಿಯ ಮುಖಭಾಗ ಮತ್ತು ಒಳಭಾಗದಲ್ಲಿ ವಿವಿಧ ರೀತಿಯ ಚಿತ್ರಗಳಿವೆ. ಇಲ್ಲೆಲ್ಲಾ ಆದಿ ಮಾನವ ವಾಸಿಸಿದ್ದ. ಇವೆಲ್ಲಾ ಅಲಂಕರಣೆಯ ಉದ್ದೇಶವೆಂದು ಸ್ಪಷ್ಟವಾಗಿ ಹೇಳಬಹುದು. ಈಗಲೂ ಹಳ್ಳಿಗಳಲ್ಲಿ ಕೆಲವು ಜನ ತಮ್ಮ ಮನೆಗಳನ್ನು ಸಾರಿಸಿದಾಗ ಮನೆಯ ಗೋಡೆಗಳ, ಬಾಗಿಲುಗಳ ಮೇಲೆ ಅಲಂಕಾರಕ್ಕಾಗಿ ಅಲ್ಲಲ್ಲಿ ಕೆಮ್ಮಣ್ಣು ಇಲ್ಲವೇ ಸುಣ್ಣದಿಂದ ಚಿತ್ರಗಳನ್ನು ಬಿಡಿಸುತ್ತಾರೆ.

ಆನೆಗುಂದಿಯ ೧, ೨, ೩ನೇ ಕಲ್ಲಾಸರೆ ಗವಿಗಳು ಪ್ರಾಚೀನ ಮಾನವನ ವಾಸಸ್ಥಾನಗಳಾಗಿದ್ದವು. ಅಲ್ಲಿಯ ಚಿತ್ರಗಳಲ್ಲಿ ಒಂದು ಎತ್ತಿನ ಚಿತ್ರವಿದೆ. ಅದರ ಮೈಮೇಲೆ ವಿಶಿಷ್ಟವಾದ ರೇಖೆಗಳಿಂದ ಅಲಂಕರಿಸಲಾಗಿದೆ. ಸ್ಪಷ್ಟವಾಗಿ ಅಲಂಕರಣೆಯ ಉದ್ಧೇಶವೇ ಇಲ್ಲಿ ಪ್ರಧಾನವಾಗಿರುವುದನ್ನು ಗುರುತಿಸಬಹುದು. ಸಂಗಾಪುರದ ೬ನೇ ಕಲ್ಲಾಸರೆಯಲ್ಲಿ ಎದುರುಬದುರಾಗಿ ನಿಂತ ಜೋಡಿ ಎತ್ತಿನ ಚಿತ್ರಗಳಿವೆ. ಕೆಲವು ಎತ್ತಿನ ಕೋಡಿನ ತುದಿಯಲ್ಲಿ ಹೂಗಳನ್ನಿಟ್ಟಿರುವಂತಹ ಅಲಂಕರಣೆಗಳು ಮತ್ತು ಹಿರೇಬೆಣಕಲ್ಲಿನ ೧೬ನೇ ಕಲ್ಲಾಸರೆಯ ೫ ಉಡಗಳ ಚಿತ್ರಗಳು ವಿಶೇಷ ರೀತಿಯ ಅಲಂಕರಣೆಗಳನ್ನು ಹೊಂದಿದ್ದು, ಗಮನ ಸೆಳೆಯುತ್ತವೆ. ಇಲ್ಲಿ ಸೌಂದರ್ಯಪ್ರಜ್ಞೆ ಕ್ರಿಯಾಶೀಲವಾಗಿರುವುದನ್ನು  ಗುರುತಿಸಬಹುದು. ಚಿತ್ರಗಳನ್ನು ಬಿಡಿಸುವುದಷ್ಟೇ ಉದ್ದೇಶವಾಗಿದ್ದಲ್ಲಿ, ಈ ರೀತಿಯ ಅಲಂಕರಣೆ ಅಗತ್ಯವಿರಲಿಲ್ಲ. ಹಾಗಾಗಿ ಚಿತ್ರ ರಚನೆಯಲ್ಲಿ ಅಲಂಕರಣೆ (ಸೌಂದರ್ಯ ಪ್ರಜ್ಞೆ) ಉದ್ದೇಶವನ್ನು ಗುರುತಿಸಬಹುದು.

೩. ಮಾಂತ್ರಿಕ ಕಟ್ಟಳೆ

ಪ್ರಾಗಿತಿಹಾಸ ಕಾಲದ ಹೆಚ್ಚಿನ ಚಿತ್ರ ರಚನೆಗೆ ಮತ್ತೊಂದು ಮಹತ್ವದ ಉದ್ದೇಶವೆಂದರೆ ಒಂದು ರೀತಿಯ ಮಾಂತ್ರಿಕ ಕಟ್ಟಳೆ ಅಥವಾ ಆಚರಣೆ ಕಾರಣವೆನ್ನಬಹುದು.[4] ಬೇಟೆ, ಪಶುಪಾಲನೆ, ಸಮೂಹ ಕುಣಿತ, ನಗ್ನ ಕುಣಿತ, ಮಂಡಲ ಇವೆಲ್ಲಾ ಮಾಂತ್ರಿಕ ಕಟ್ಟಳೆ ಉದ್ದೇಶಿತ ರಚನೆಗಳೆಂದು ಹೆಳಬಹುದು. ಸೂಕ್ಷ್ಮವಾಗಿ ಗಮನಿಸಿದಲ್ಲಿ ಇವೆಲ್ಲ ಪ್ರಾಚೀನ ಮಾನವನ ಆಹಾರ ಸಂಬಂಧಿ ವಿಷಯದ ಸುತ್ತ ಕೇಂದ್ರಿಕರತವಾಗಿರುವುದನ್ನು ಗುರುತಿಸಬಹುದು. ಅಂದರೆ ಮನುಷ್ಯ ತನಗೆ ಆಹಾರವಾಗುವ ಪ್ರಾಣಿಗಳ ಅಭಿವೃದ್ಧಿ, ಇವುಗಳ ಯಶಸ್ವಿ ಬೇಟೆಯ ಉದ್ದೇಶಿತ ಮಾಂತ್ರಿಕ ಕಟ್ಟಳೆಗಳನ್ನು ಮಾಡಿ ಅವುಗಳ ವಿಧಿಯನ್ವಯ ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿದ್ದಾನೆನ್ನಬಹುದು. ಒಬ್ಬ ಮನುಷ್ಯ ಅಥವಾ ಪ್ರಾಣಿಯ ಚಿತ್ರಗಳನ್ನು ತೆಗೆದು ಮಂತ್ರಿಸಿದರೆ ಅವನು ಅಥವಾ ಅದು ತನ್ನ ವಶವಾಗುವುದೆಂದು, ಅಥವಾ ಅವನು ಶತ್ರುವಾಗಿದ್ದರೆ ನಾಶವಾಗುವನೆಂಬ ನಂಬಿಕೆ ಬಹು ಪುರಾತನ ಕಾಲದಿಂದ ಉಳಿದು ಬಂದಿರುವಂತಹದು. ತನ್ನ ಶತ್ರುವಿನ ನಾಶಕ್ಕಾಗಿ ಅವನ ಗೊಂಬೆಯನ್ನು ಮಾಡಿ ಅದಕ್ಕೆ ಮಂತ್ರಪೂರಿತ ಸೂಜಿಗಳನ್ನು ಚುಚ್ಚುಮದು ಮೊದಲಾದ ಮಾಟ ಮಂತ್ರಗಳ ಆಚರಣೆ ಇಂದೂ ವ್ಯವಹಾರದಲ್ಲಿದೆ. ಇದರಿಂದ ಆ ಶತ್ರುವು ಕಷ್ಟ, ನಷ್ಟ, ಸಂಕಟವನ್ನು ಅನುಭವಿಸುವನು ಎಂಬ ಬಲವಾದ ನಂಬಿಕೆಯಿಂದ ಹಾಗಾಗಿ ಬಹು ಮಟ್ಟಿನ ಚಿತ್ರಗಳು ಈ ಉದ್ದೇಶಕ್ಕೆ ಸಂಬಂಧಿಸಿದವು ಎಂದು ಹೇಳಬಹುದು.

ಮಲ್ಲಾಪುರದ ೧,೩  ಮತ್ತು ೪ ಚಿಕ್ಕಬೆನಕಲ್ಲಿನ ೩, ಹಿರೇಬೆನಕಲ್ಲಿನ ೨,೩ ಮತ್ತು ಹಂಪಿಯ ೫ನೇ ಕಲ್ಲಾಸರೆಯಲ್ಲಿ ಮೈಮೇಲೆ ವಿಶಿಷ್ಟ ರೇಖೆಗಳನ್ನು ಹಾಕಿಕೊಂಡ ನಗ್ನ ಗರ್ಭಿಣಿ ಸ್ತ್ರೀ-ಪುರುಷರ ನೃತ್ಯಭಂಗಿಯ ಚಿತ್ರಗಳಿವೆ. ಅವುಗಳ ಜೊತೆ ಕೆಲವು ಪ್ರಾಣಿಗಳ ಪೂರ್ಣರೂಪದ, ರುಂಡದ, ಮುಂಡದ ಚಿತ್ರಗಳಿವೆ. ಅವುಗಳ ಮೇಲೂ ರೇಖೆಗಳಿವೆ. ಇವೆಲ್ಲಾ ಇಷ್ಟಾರ್ಥ ಸಿದ್ಧಿಗಾಗಿ ಕೆಲವು ಜನ ಮಾಂತ್ರಿಕರೊಡಗೂಡಿ ನಡೆಸಿದ ಮಾಂತ್ರಿಕ ಆಚರಣೆಗೆ ಸಂಬಂಧಿಸಿದ ಚಿತ್ರಗಳೆಂದು ಹೇಳಬಹುದು. ಪ್ರಾಣಿಗಳ ಚಿತ್ರಗಳು ಆಚರಣೆಯಲ್ಲಿ ಬಲಿ ಕೊಟ್ಟ ಪ್ರಾಣಿ ಗಳವು ಎಂದು ತರ್ಕಿಸಬಹುದು. ಈಗಲೂ ಕೆಲವು ಮಂತ್ರವಾದಿಗಳು ನಗ್ನರಾಗಿ ಪ್ರಾಣಿಬಲಿಗಳೊಂದಿಗೆ ಮಾಂತ್ರಿಕ ಕಟ್ಟಳೆಗಳನ್ನು ಮಾಡುವ ಆಚರಣೆ ರೂಢಿಯಲ್ಲಿದೆ. ಇಂಥ ಆಚರಣೆಗಳಲ್ಲಿ ಗರ್ಭಿಣಿ ಸ್ತ್ರೀಗೆ ವಿಶೇಷ ಮಹತ್ವ ಉಂಟು. ಕೆಲವು ವಿಶೇಷ ಇಷ್ಟಾರ್ಥ ಸಿದ್ಧಿಗೆ ಅಂಥವಳನ್ನು ಬಲಿ ಕೊಟ್ಟ ಉದಾಹರಣೆಗಳು ಈಗಲೂ ದೊರೆಯುತ್ತವೆ.

ಇವಲ್ಲದೇ ಸಂಭೋಗ, ಕ್ರಿಯೆ ಬಹುಶಃ ಬೇಟೆಗೆ ಹೋಗುವ ಮುನ್ನ ಇಲ್ಲವೇ ಬೇಟೆ ನಂತರದ ಸಾಮೂಹಿಕ ನೃತ್ಯ ಮೊದಲಾದ ಚಿತ್ರಗಳು ತನ್ನ ಆಹಾರವನ್ನು ಒದಗಿಸುವ ಜಿಂಕೆ, ಗೂಳಿ, ಕೋಣ ಹಾಗೂ ವಂಶಾಭಿವೃದ್ಧಿಗೋಸ್ಕರ ಇಂತಹ ಪ್ರಾಣಿಗಳ ವೈರಿಯಾದ ಹುಲಿ, ಚಿರತೆ ಮೊದಲಾದ ಪ್ರಾಣಿಗಳ ನಾಶಕ್ಕೊಸ್ಕರ ಮತ್ತು ಬೇಟೆಯಲ್ಲಿ ಈ ಪ್ರಾಣಿಗಳು ವಶವಾಗುವುದಕ್ಕೋಸ್ಕರ ಇಂತಹ ಚಿತ್ರಗಳನ್ನು ಬರೆದು ಮಂತ್ರ ಪುರಸ್ಸರವನ್ನಾಗಿ ಮಾಡುವುದೇ ಈ ಚಿತ್ರಗಳ ಸೃಷ್ಟಿಗೆ ಮುಖ್ಯ ಕಾರಣ ಎನ್ನಬಹುದು. ಈ ಚಿತ್ರಗಳು ಮಾಂತ್ರಿಕೋದ್ದೇಶಿತವಾಗಿದ್ದರೂ ಶೈಲಿ ಮತ್ತು ನಿರೂಪಣೆಯಲ್ಲಿ ಶಕ್ತಿಶಾಲಿಯಾಗಿವೆ.

ಹಂಪಿ ಪ್ರದೇಶದ ಪ್ರಾಗಿತಿಹಾಸ ಕಾಲದ ಚಿತ್ರಗಳು ಮುಖ್ಯವಾಗಿ ಮನುಷ್ಯ, ಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿವೆ. ಒಂದೆರಡೂ ಬೇರೆ ವಿಷಯದ ಚಿತ್ರಗಳೂ ಇವೆ. ಮನುಷ್ಯ, ಪ್ರಾಣಿ ಪಕ್ಷಿ ಚಿತ್ರಗಳಲ್ಲಿ ಅವುಗಳ ರಚನೆ ಮತ್ತು ಭಂಗಿಯ ವಿಷಯದಿಂದ ವೈವಿಧ್ಯ ವಿಧಗಳಿವೆ. ಒಟ್ಟಾರೆ ಚಿತ್ರಗಳ ವಿಷಯ, ವಿಧಗಳು ಮತ್ತು ಭಂಗಿಗಳು, ಮಂಡಲ ರೇಖಾಚಿತ್ರಗಳ ಚಿತ್ರಣ ವಿವರ ಈ ಮುಂದಿನಂತಿದೆ.

ಮನುಷ್ಯ ಚಿತ್ರಗಳು

ಮನುಷ್ಯ ಚಿತ್ರಗಳಲ್ಲಿ ಅನೇಕ ವಿಧಗಳಿವೆ. ಅವು ನಗ್ನ ಚಿತ್ರಗಳು, ಉಬ್ಬಿದ ಮೂತಿಯ ಚಿತ್ರಗಳು, ಸಾಮಾನ್ಯ ಚಿತ್ರಗಳು, ಕಡ್ಡಿರೂಪದ ಚಿತ್ರಗಳು, ಬಾಲವುಳ್ಳ ಚಿತ್ರಗಳ ಇತ್ಯಾದಿಗಳಿವೆ.

 

[1] ಸುಂದರ, ಅ., ೧೯೯೪, ಅದೇ ಪು. ೨೪.

[2] ತಿವಾರಿ, ಎಸ್., ೧೯೭೫ ಅದೇ ಜೆ.ಪಿ.ಎನ್.ಬಿ.ಸಂ.೨, ನಂ.೨.

[3] ಬರ್ಕಿಟ್, ಎಂ.ಸಿ., ೧೯೯೨, ದಿ ಓಲ್ಡ್ ಸ್ಟೋನ್ ವೆಜ್ ಸ್ಟಡಿ ಆಪ್ ಪೆಲಿಯೋಲಿಥಿತ್ ಟೈಮ್ಸ್, ಪು. ೧೭೨-೧೭೩.

[4] ಸುಂದರ ಅ., ೧೯೯೪, ಅದೇ ಪು. ೧೮-೨೦