ಹಂಪಿ ಪ್ರದೇಶವು (ವಿಶೇಷವಾಗಿ ಕೊಪ್ಪಳ, ಗಂಗಾವತಿ ಮತ್ತು ಹೊಸಪೇಟೆ ತಾ.) ಬೆಟ್ಟ ಸಾಲುಗಳಿಂದ ತುಂಬಿದೆ. ತುಂಗಭದ್ರಾನದಿ ತೀರದ ಈ ಪ್ರದೇಶದಲ್ಲಿ ಆಸಾಮಾನ್ಯ ಕಂದು ಇಲ್ಲವೇ ಬೂದು ವರ್ಣದ ಗ್ರಾನೈಟ್ ಶಿಲೆಯ ಬೆಟ್ಟಗಳಿವೆ. ವಿಪರೀತ ಉಷ್ಣ-ಶೀತಗಳ ವೈಪರೀತ್ಯದಿಂದ ಸಾಮಾನ್ಯವಾಗಿ ಈ ಶಿಲೆಯ ದೊಡ್ಡ ಬಂಡೆಗಳು ತಾನಾಗಿಯೇ ಸೀಳಿ ಹೋಗುವುದರಿಂದ ಮತ್ತು ಸವಕಳಿಯಿಂದ ಗವಿ ಕಲ್ಲಾಸರೆಗಳು ಉಂಟಾಗಿವೆ. ಇಂತಹ ಕಲ್ಲಾಸರೆ, ಗವಿಗಳಲ್ಲಿ ವಿರಳವಾಗಿ ವರ್ಣಚಿತ್ರಗಳಿವೆ. ಈ ಪ್ರದೇಶದಲ್ಲಿ ಶಿಲಾ-ತಾಮ್ರಯುಗ (ಕ್ರಿ.ಪೂ.ಸು. ೨೦೦೦-೨೦೦) ಕಬ್ಬಿಣಯುಗದ ಬೃಹತ್ ಶಿಲಾಯುಗ (ಕ್ರಿ.ಪೂ.ಸು. ೧,೨೦೦-೨೦೦) ಮತ್ತು ಇತಿಹಾಸ ಆರಂಭ ಕಾಲ (ಕ್ರಿ.ಪೂ.ಸು. ೨೦೦ ಕ್ರಿ.ಶ. ೨ನೇ ಶತಮಾನ)ದ ಸಾಂಸ್ಕೃತಿಕ ಅವಶೇಷಗಳುಳ್ಳ ನೆಲೆಗಳು, ಕೊಪ್ಪಳ, ಹೀರೇಬೆಣಕಲ್ ಮೊದಲಾದೆಡೆ ಬೆಳಕಿಗೆ ಬಂದಿದ್ದವು. ಆದರೆ ಇಲ್ಲಿಯ ಬೆಟ್ಟ ಗುಡ್ಡಗಳಲ್ಲಿ ಪ್ರಾಗಿತಿಹಾಸ ಕಾಲದ ಕಲಾಸಂಪತ್ತು ಅಜ್ಞಾತವಾಗಿ ಉಳಿದಿತ್ತು. ೧೯೩೫ರಲ್ಲಿ ಆಂಗ್ಲ ಭೂಗರ್ಭ ತಜ್ಞರಾದ ಲಿಯೊನಾರ್ಡ್ ಮನ್ ರವರು ಪ್ರಥಮವಾಗಿ ಹಿರೇಬೆಣಕಲ್ಲ್‌ನಲ್ಲಿ ಮೂರು ಚಿತ್ರಿತ ಗವಿಗಳನ್ನು ಬೆಳಕಿಗೆ ತಂದರು. ನಂತರ ಪುರಾತತ್ವಜ್ಞ ಡಾ. ಅ. ಸುಂದರರವರು ಮತ್ತಷ್ಟು ಚಿತ್ರಿತ ಗವಿಗಳನ್ನು ಶೋಧಿಸಿದರು ಹಾಗೂ ಲಕ್ಷ್ಮಣ್ ತೆಲಗಾವಿಯವರು, ಆರ್. ಎಂ. ಷಡಕ್ಷರಯ್ಯ, ಬಿ.ಸಿ. ಪಾಟೀಲ್, ಶಂಭುಲಿಂಗಪ್ಪನವರು ಕೆಲವು ನೆಲೆಗಳನ್ನು ಶೋಧಿಸಿದ್ದಾರೆ. ಪ್ರಸ್ತುತ ಅಧ್ಯಯನದ ಸಂದರ್ಭದಲ್ಲಿ ಕೈಗೊಂಡ ಅನ್ವೇಷಣೆಯಲ್ಲಿ ಮತ್ತೇ ೭೨ ಗವಿ ಕಲ್ಲಾಸರೆ / ಬಂಡೆ ಚಿತ್ರ ನೆಲೆಗಳು ಶೋಧವಾದವು. ಅವುಗಳಲ್ಲಿ ಗವಿವರ್ಣ ಚಿತ್ರಗಳು ಅಧಿಕವಾಗಿದ್ದರೆ, ಬಯಲು ಬಂಡೆ ಚಿತ್ರಗಳು ವಿರಳವಾಗಿವೆ. ಮತ್ತು ವರ್ಣಚಿತ್ರಗಳಲ್ಲಿ ಕೆಲವು ಇತಿಹಾಸ ಕಾಲದ ನೆಲೆಗಳು ಕಂಡುಬಂದಿದ್ದು, ಚಿತ್ರಗಳ ಪರಂಪರೆಯ ಅಧ್ಯಯನ ಹಿನ್ನೆಲೆಯಲ್ಲಿ ಅವನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಪೂರ್ವಶೋಧಿತ ಮತ್ತು ಪ್ರಸ್ತುತ ಶೋಧಿತ ಗವಿ ಕಲ್ಲಾಸರೆಗಳ ವಿವರ ಈ ಕೆಳಗಿನಂತಿವೆ.

ಕಮಲಾಪುರ

ನೆಲೆ : ಒಂದು

ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಂದೆ ಈ ನೆಲೆ ಇದೆ. ಇಲ್ಲಿ ವಿಶಾಲ ಬಂಡೆಯ ಪಶ್ಚಿಮ ಇಳಿಜಾರಿನ ಮೇಲೆ ರೇಖಾಚಿತ್ರಗಳನ್ನು ಕೊರೆಯಲಾಗಿದೆ. ಒಟ್ಟು ಎಂಟು ಚಿತ್ರಗಳು ಕಂಡು ಬರುತ್ತವೆ. ಅವುಗಳಲ್ಲಿ ಆರು ಎತ್ತಿನ ಚಿತ್ರಗಳಿವೆ. ಎರಡು ಎತ್ತು ಮತ್ತು ಅವುಗಳ ಮೇಲೆ ಕುಳಿತ ಮನುಷ್ಯನ ಚಿತ್ರಗಳಾಗಿವೆ. ಕೆಳಗಿನ ಎತ್ತುಗಳ ರಚನೆ ವಿಶಿಷ್ಟವಾಗಿದೆ. ಒಂದೇ ದೊಡ್ಡ ಕೋಡು, ದೊಡ್ಡದಾದ ಇಣಿ, ಉದ್ದವಾದ ಬಾಲ, ಕಣ್ಣುಗಳಿದ್ದು, ಚಿತ್ರದಲ್ಲಿ ಪೂರ್ಣತೆ ಇದೆ. ಕೇವಲ ಮೂರು ಸರಳ ರೇಖೆಯಲ್ಲಿ ಎತ್ತಿನ ಚಿತ್ರವನ್ನು ಕೊರೆಯಲಾಗಿದೆ. ಒಂದೇ ರೇಖೆಯಲ್ಲಿ ಮುಂದಿನ ಮೊದಲ ಕಾಲು, ಕತ್ತು, ಬಾಯಿ, ಮುಖ, ಕೋಡು, ಇಣಿ, ಬೆನ್ನುಗಳನ್ನು ಮೂಡಿಸಲಾಗಿದೆ. ಹಿಂದಿನ ಮೊದಲ ಕಾಲನ್ನು ಎರಡನೇ ರೇಖೆಯಲ್ಲಿ ಚಿತ್ರಿಸಲಾಗಿದೆ. ಮೂರನೆಯದು ಬಾಲ ಅದು ಕಾಲಿನಷ್ಟೆ ಉದ್ದವಾಗಿದೆ. ತೀರ ಕೆಳಗೆ ಇರುವ ಎರಡು ಎತ್ತುಗಳು ಉಳಿದವುಗಳಿಗಿಂತ ಆಳತೆಯಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿವೆ (೦.೬೭ ಮೀ ಅಗಲ x೦.೫೩ ಎತ್ತರ ಮತ್ತು ೦.೩೫ ೦.೫೮ ಮೀ). ಮೇಲಿನ ಚಿತ್ರಗಳು ಸ್ವಲ್ಪ ಅಸ್ಪಷ್ಟವಾಗಿವೆ.

ನೆಲೆ : ಎರಡು

ಕನ್ನಡ ವಿಶ್ವವಿದ್ಯಾಲಯದ ಪೂರ್ವಬದಿಯ ಬಯಲಿನ ಒಂಟಿಕಲ್ಲು ಗುಂಡಿನಲ್ಲಿದೆ ಒಂಟಿಕಲ್ಲು ಗುಂಡಿನ ಕಲ್ಲಾಸರೆಯಲ್ಲಿ ಕಡವೆಯ ವರ್ಣಚಿತ್ರವಿದೆ. ಆ ಗುಂಡಿನ ಕೆಳಗಿನ ಬಂಡೆಗಲ್ಲಿನಲ್ಲಿ ಒಂದು ಆಕೃತಿ ಮತ್ತು ಎರಡು ಎತ್ತು ಒಟ್ಟು ಮೂರು ಚಿತ್ರಗಳು ಕೊರೆಯಲ್ಪಟ್ಟಿವೆ. ಒಂದರ ಹಿಂದೆ ಒಂದರಂತೆ ಸಾಲಾಗಿ ನಿಂತಿರುವ ಎರಡು ಎತ್ತುಗಳ ಮುಂಭಾಗದಲ್ಲಿ ಒಂದು ವಿಶಿಷ್ಟ ಚಿತ್ರವನ್ನು ಕೊರೆಯಲಾಗಿದೆ. ಒಂದು ವೃತ್ತವಿದ್ದು, ಅದರ ಸರಿ ಸಮ ಅರ್ಧಭಾಗದಲ್ಲಿ ಮೇಲಿನಿಂದ ಒಂದು ಸರಳ ರೇಖೆ ಎಳೆಯಲಾಗಿದೆ. ಆ ರೇಖೆ ವೃತ್ತವನ್ನು ದಾಟಿ ಸು. ೧೦ ಸೆ.ಮೀ. ಕೆಳಗಿನವರೆಗೆ ಇದೆ. ವೃತ್ತದ ಮೇಲಿನ ಬಲ ಮೂಲೆಯ ರೇಖೆಗೆ ತಾಗಿ ಆರೆ ವೃತ್ತಾಕಾರ ಇದೆ.

ಎತ್ತಿನ ಚಿತ್ರಗಳು ಸರಳ ರೇಖೆಯಲ್ಲಿವೆ. ಮುಖ ತ್ರಿಕೋನಾಕಾರದಲ್ಲಿದೆ. ಅದರ ಮೇಲ್ಗಡೆ ಕೋಡುಗಳನ್ನು ತೋರಿಸಲಾಗಿದೆ. ಇಣಿ ಬಾಲ ಸಹಜವಾಗಿವೆ. ಕಾಲುಗಳು ರಚನೆ ವಿಶೇಷವಾಗಿದೆ. ಮುಮದಿನ ಮೊದಲ ಕಾಲು ಕತ್ತಿನಿಂದ ಒಂದು ನೇರ ರೇಖೆಯನ್ನು ಎಳೆದು ತೋರಿಸಿದ್ದಾರೆ. ಹಿಂದಿನ ಕಾಲು ಬೆನ್ನಿನ ರೇಖೆಯ ಮುಂದುವರಿದ ಕಾಲಾಗಿದೆ. ಮುಂದಿನ ಎರಡನೆಯ ಮತ್ತು ಹಿಂದಿನ ಮೊದಲನೆಯ ಕಾಲನ್ನು ಒಂದೇ ರೇಖೆಯಲ್ಲಿ ಮೂಡಿಸಲಾಗಿದೆ. ಅದೇ ಕೆಳಹೊಟ್ಟೆಯನ್ನೂ ಕೂಡ ಸಂಕೇತಿಸುತ್ತದೆ.

ನಾಗೇನಹಳ್ಳಿ

ನೆಲೆ : ಒಂದು

ಇಲ್ಲಿಯ ದರಮರ ಗುಡ್ಡದಲ್ಲಿ ವರ್ಣಚಿತ್ರಗಳು, ಕುಳಿ ಆಕೃತಿಗಳು ಮತ್ತು ಒಂದು ಕೆತ್ತಿ ಮಾಡಿದ ದೊಡ್ಡ ಕುಳಿ ಇದೆ. ಚಿತ್ರಿತ ಕಲ್ಲಾಸರೆಯ ಪಶ್ಚಿಮಕ್ಕಿರುವ ಕಲ್ಲಾಸರೆಯಲ್ಲಿ ನೆಲಬಂಡೆಯ ಮೇಲೆ ೨ ಸ್ಥಳದಲ್ಲಿ ಕುಳಿ ಆಕೃತಿಗಳಿವೆ. ಅವು ಹಿರೇಬೆಣಕಲ್ಲಿನ ಕುಳಿ ಆಕೃತಿಗಳಂತೆ ಇವೆ. ಬೆಟ್ಟದ ದಕ್ಷಿಣದ ಇಳಿಜಾರಿನ ಒಂದು ಬಂಡೆಯ ಮೇಲೆ ಒಂದು ವೃತ್ತಾಕಾರದ ದೊಡ್ಡ ಕುಳಿ ಇದೆ. ಇದು ಸುಮಾರು ೧೦ ಸೆಂ.ಮೀ. ವ್ಯಾಸದ ಆಳತೆಯನ್ನು, ೧ ಸೆಂ.ಮೀ. ಆಳವನ್ನು ಹೊಂದಿದೆ. ಕೊರೆದು ಇವನ್ನು ಮಾಡಲಾಗಿದೆ.

ನೆಲೆಯ ಆಯ್ಕೆ (ಗವಿ / ಕಲ್ಲಾ ಸರೆಗಳ ಸ್ವರೂಪ)

ಪ್ರಾಗಿತಿಹಾಸ ಕಾಲದ ಕಲೆಯ ಒಂದು ಪ್ರಕಾರವಾದ ವರ್ಣ, ಕೊರೆದ ಮತ್ತು ಕುಟ್ಟಿದ ಚಿತ್ರಗಳು ನಿರ್ದಿಷ್ಟವಾದ ನೆಲೆಗಳಲ್ಲಿರುತ್ತವೆ. ಅಂದರೆ ಸಾಮಾನ್ಯವಾಗಿ ವರ್ಣಚಿತ್ರಗಳು ಗವಿ ಮತ್ತು ಕಲ್ಲಾಸರೆಗಳಲ್ಲಿ ಹಾಗೂ ಕೊರೆದ/ಕುಟ್ಟಿದ ಚಿತ್ರಗಳು ಬಯಲು ಬಂಡೆಗಳಲ್ಲಿ ಇರುತ್ತವೆ. ಈ ಗವಿ ಮತ್ತು ಕಲ್ಲಾಸರೆಗಳನ್ನು ಅಲ್ಲಿಯ ಚಿತ್ರಿತ ಭಾಗಗಳನ್ನು ಗಮನಿಸಲಾಗಿ ಚಿತ್ರಕ್ಕಾಗಿಯೇ ಅವುಗಳನ್ನು ಆಯ್ದುಕೊಂಡಿರುವುದು ಸ್ಪಷ್ಟವಾಗುತ್ತದೆ. ಕೊರೆದ/ಕುಟ್ಟು ಚಿತ್ರಗಳನ್ನು ಕೂಡ ಆಯ್ದ ಬಂಡೆಗಳಲ್ಲಿ ಮೂಡಿಸಲಾಗಿದೆ.

ಗವಿ/ಕಲ್ಲಾ ಸರೆಗಳು ನೈಸರ್ಗಿಕ ರಚನೆಗಳಾಗಿರುತ್ತವೆ. ಮಳೆಗಾಳಿಯಿಂದ ರಕ್ಷಿಸಿಕೊಳ್ಳಲು ಉತ್ತಮ ಆಶ್ರಯ ತಾಣಗಳಾಗಿದ್ದು, ಶಿಲಾಯುಗದ ಜನರು ಗವಿಗಳನ್ನು ಖಾಯಂ ವಾಸಕ್ಕಾಗಿ ಕಲ್ಲಾಸರೆಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಅವರು ಇಂಥ ಗವಿ/ಕಲ್ಲಾಸರೆಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ಚಿತ್ರಕ್ಕಾಗಿ ಅವರು ಎಲ್ಲಾ ರೀತಿಯ ಗವಿ/ಕಲ್ಲಾಸರೆಗಳನ್ನು ಬಳಸಿಕೊಂಡಿಲ್ಲ. ಯಾವ ಗವಿ/ಕಲ್ಲಾಸರೆಗಳ ಒಳಗೋಡೆಗಳೋ ಛಾವಣಿಯೋ ಒರಟಲ್ಲದೇ ತಕ್ಕಮಟ್ಟಿಗೆ ನುಣುಪಾಗಿದ್ದು ಮಳೆ ನೀರಿನಿಂದ ತೋಯಲ್ಪಡುವುದಿಲ್ಲವೋ ಅಂಥ ಗವಿ/ಕಲ್ಲಾಸರೆಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ತೀರ ಆಳವಲ್ಲದ ಕಲ್ಲಾಸರೆಗಳು ಇದಕ್ಕೆ ಅಪವಾದ ಎನ್ನಬಹುದು. ಇಂಥ ಕಲ್ಲಾಸರೆಯ ಚಿತ್ರಗಳು ಮಳೆ, ಗಾಳಿ, ಬಿಸಿಲಿಗೆ ಸಿಲುಕಿ ತೀರಾ ಮಾಸಿ ಹೋಗಿವೆ. ಪ್ರಾಗಿತಿಹಾಸ ಕಾಲದ ಜನ ತಾವು ವಾಸಿಸಿದ ಎಲ್ಲಾ ಗವಿಗಳಲ್ಲಿ ಚಿತ್ರಗಳನ್ನು ಬಿಡಿಸಿಲ್ಲ. ಚಿತ್ರಕ್ಕೆ ಸೂಕ್ತವಾದ ಭಾಗವಿದ್ದಲ್ಲಿ ಮಾತ್ರ ಬಿಡಿಸಿದ್ದಾರೆ. ಸಂಗಾಪುರದ ಕರಡಿವಟ್ಲ ಬೆಟ್ಟದಲ್ಲಿ ಅನೇಕ ಚಿಕ್ಕ ದೊಡ್ಡ ಗವಿಗಳಿವೆ. ಅವುಗಳಲ್ಲಿ ಪ್ರಾಗಿತಿಹಾಸ ಕಾಲದ ಮಡಕೆ ಚೂರುಗಳು, ಶಿಲಾಯುಧಗಳು ದೊರೆತಿವೆ. ಆದರೆ ಅವುಗಳಲ್ಲಿ ಒಂದೆರಡು ಗವಿಗಳಲ್ಲಿ ಮಾತ್ರ ಚಿತ್ರಗಳಿವೆ. ಚಿತ್ರತ ಭಾಗವು ಬಹಿರಂಗವಾಗಿ ಕಾಣುವಂತಿದ್ದರೂ ಮಳೆ, ಗಾಳಿ, ಬಿಸಿಲಿನಿಂದ ಸಂಪೂರ್ಣ ರಕ್ಷಿತಗೊಂಡು ಉತ್ತಮ ಸ್ಥಿತಿಯಲ್ಲಿವೆ.

ದೊಡ್ಡ ದೊಡ್ಡ ಗವಿಗಳ ನುಣುಪಾದ ಛಾವಣಿಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ಉದಾಹರಣೆಗೆ ಮಲ್ಲಾಪುರದ ಮೂರನೇ ಗವಿ (ಖಾನಾಸಾಬನ ಗವಿ) ಹಿರೇಬೆನಕಲ್ಲಿನ ಎರಡನೇ ಗವಿ (ರಕ್ಕಸ ಗವಿ) ಮತ್ತು ಆಗೋಲಿಯ ಮೂರನೆಯ ಗವಿಗಳ ವಿಶಾಲವಾದ ಛಾವಣಿಗಳಲ್ಲಿ ದೊಡ್ಡ ಮತ್ತು ಚಿಕ್ಕ ಪ್ರಮಾಣದ ಚಿತ್ರಗಳಿವೆ. ಈ ಛಾವಣಿಗಳು ನೆಲದಿಂದ ಸುಮಾರು ೬ ರಿಂದ ೮ ಮೀ. ಎತ್ತರದಲ್ಲಿವೆ. ಕೆಲವು ಗವಿಗಳ ಮುಖಭಾಗ ಒಳಗೋಡೆ ಭಾಗ, ಛಾವಣಿಗಳಲ್ಲಿ ಚಿತ್ರಗಳಿರುತ್ತವೆ. ಚಿಕ್ಕರಾಂಪುರದ ೧ನೇ ಗವಿಯು ಇದಕ್ಕೆ ಉತ್ತಮ ಉದಾಹರಣೆ.

ಕೆಲವು ಕಲ್ಲಾಸರೆಗಳು ಚಿತ್ರಫಲಕದಂತಿದ್ದು, ಬಹಿರಂಗವಾಗಿ ಕಾಣುವಂತಿವೆ. ಕೆಲವು ಚಿತ್ರಗಳನ್ನು ಗುರುತಿಸುವುದೇ ಕಠಿಣ. ಬಂಡೆ ಮೆಲಿನ ಆಸರೆ ಕಲ್ಲಿನ ಛಾವಣಿಯಲ್ಲೊ, ಬೃಹತ್ ಬಂಡೆಯ ಸವೆದ/ಒಡೆದ ಆಸರೆಯಲ್ಲೊ, ಬೆಟ್ಟದ ಬುಡದ ಶಿಲಾ ಪೊಟರೆಗಳಲ್ಲೊ, ಇಂಥ ಚಿತ್ರಗಳನ್ನು ಬಿಡಿಸಲಾಗಿರುತ್ತದೆ. ಕೆಲವು ಕಲ್ಲಾಸರೆಗಳು ಕೂಡ ಕೈಗೆ ನಿಲುಕದಷ್ಟು ಎತ್ರರದಲ್ಲಿದ್ದು ಅದರಲ್ಲಿ ಚಿತ್ರಗಳನ್ನು ಬಿಡಿಸಿರುವುದು ವಿಶೇಷ. ಕೊರೆದ ಮತ್ತು ಕುಟ್ಟು ಚಿತ್ರಗಳಿಗಾಗಿ ಸಾಮಾನ್ಯವಾಗಿ ಕಪ್ಪುಶಿಲೆಯ ಬಂಡೆಗಳನ್ನು ಬಳಸಿಕೊಳ್ಳಲಾಗಿದೆ. ಬೆಟ್ಟದ ನಿರ್ದಿಷ್ಟ ಭಾಗದಲ್ಲಿ ಕಪ್ಪು ಶಿಲೆಯ ಬಂಡೆಗಳಿರುತ್ತವೆ. ಸುತ್ತಲೂ ಬಯಲು ಪ್ರದೇಶವಿದ್ದು ಒಂದು ರೀತಿ ಅನುಕೂಲವಿರುವ ಬಂಡೆಗಳಲ್ಲಿ ಮಾತ್ರ ಚಿತ್ರಗಳನ್ನು ಕೊರೆದು/ಕುಟ್ಟಲಾಗಿದೆ. ಬಿಳಿ ಕಣಶಿಲೆಯಲ್ಲೂ ಕುಳಿ, ತಿರುಗುಳಿಗಳನ್ನು ಕಾಣಬಹುದು.

ಕೊಪ್ಪಳ ಹಂಪಿ ಪ್ರದೇಶದ ಚಿತ್ರಿತ ಗವಿ ಕಲ್ಲಾಸರೆಗಳ ರಚನೆ ಮತ್ತು ವಿಧಗಳನ್ನು ಪರಿಶೀಲಿಸುವ ಮೂಲಕ ಈ ಪ್ರದೇಶದ ಶಿಲಾಯುಗದ ಮಾನವ ಚಿತ್ರ ರಚನೆಗಾಗಿ ಎಂಥ ನೆಲೆಗಳನ್ನು ಆಯ್ದುಕೊಂಡ ಎನ್ನುವುದನ್ನು ಇಲ್ಲಿ ಗಮನಿಸಬಹುದು.

ಗವಿಗಳು

ಹಂಪಿ ಪ್ರದೇಶದಲ್ಲಿ ಚಿತ್ರಿತ ಗವಿಗಳು ಕಲ್ಲಾ ಸರೆಯಂತೆ ಅಧಿಕ ಪ್ರಮಾನದಲ್ಲಿಲ್ಲ. ಆಗೋಲಿ (೩) ಆನೆಗುಂದಿ (೭), ಮಲ್ಲಾಪುರ (೩,೬,೮) ಚಿಕ್ಕರಾಂಪುರ (೧) ಮತ್ತು ಹಿರೇಬೆಣಕಲ್ (೯,೧೨,೧೭)ಗಳಲ್ಲಿ ಮಾತ್ರ ಕೆಲವು ಗವಿಗಳಿವೆ. ಇವುಗಳಲ್ಲಿ ಆಗೋಲಿ ಮಲ್ಲಾಪುರ (೩) ಮತ್‌ಉತ ಹಿರೇಬೆಣಕಲ್ಲಿನ ಗವಿಗಳು ದೊಡ್ಡ ಪ್ರಮಾಣದಲ್ಲಿವೆ.

ಮಲ್ಲಾಪುರದ ೩ನೇ ಗವಿ (ಖಾನಾಸಾಬ ಗವಿ) ಬೃಹತ್ ಪ್ರಮಾಣದಲ್ಲಿದೆ. ಇಡೀ ಗವಿಗೆ ಒಂದೇ ವಿಶಾಲವಾದ ಛಾವಣಿ ಬಂಡೆ ಇದ್ದು, ಒಳಭಾಗದಲ್ಲಿ ನುಣುಪಾಗಿದೆ. ಆ ಬಂಡೆಗೆ ಅನುಗುಣವಾಗಿ ಅದರ ಮೇಲೆ ಚಿತ್ರಗಳನ್ನು ಬಿಡಿಸಲಾಗಿದೆ. ೬ನೇ ಮತ್ತು ೮ನೇ ಗವಿಗಳು ಬೃಹತ್ ಬಂಡೆಗಳು ಸೀಳಿ ಮಧ್ಯದಲ್ಲಿ ಉಂಟಾಗಿದ್ದು, ಇವು ಕ್ರಮವಾಗಿ ೭ ಮತ್ತು ೫ ಮೀಟರ್ ಉದ್ದವಾಗಿವೆ. ೬ನೇ ಗವಿಯ ಎಡಗೋಡೆಯ ಹೊರಭಾಗದಲ್ಲಿ ಚಿತ್ರಗಳಿವೆ. ಆ ಭಾಗ ಹೊರಗೆ ಎದ್ದು ಕಾಣುವುದರ ಜೊತೆಗೆ ಸೂಕ್ತ ರಕ್ಷಿತ ಭಾಗವಾಗಿದೆ. ೮ನೆಯದು ಅರ್ಧವೃತ್ತಾಕಾರದಲ್ಲದಿ ಪೊಳ್ಳಾದ ಗವಿ ಅದರ ಒಳಗೋಡೆಗಳು ಅತ್ಯಂತ ನುಣುಪಗಿದ್ದು ಅಲ್ಲಿ ಚಿತ್ರಗಳಿವೆ. ಗವಿ ನೆಲದಿಂದ ಸುಮಾರು ೧೦ ಮೀಟರ್ ಎತ್ತರದಲ್ಲಿದ್ದು ವಾಸಕ್ಕೆ ಯೋಗ್ಯವಾಗಿಲ್ಲ.

ಚಿಕ್ಕರಾಂಪುರದ ಗವಿಯೂ ಬೃಹತ್ ಬಂಡೆಕಲ್ಲೊಂದರ ಕೆಳಭಾಗದಲ್ಲಿ ಉಂಟಾಗಿದೆ. ಈ ಗವಿಯ ಪ್ರವೇಶದಲ್ಲಿ ಛಾವಣಿ ಬಂಡೆಯ ಕೆಳಭಾಗ ತುಂಡಾಗಿ ಒಂದು ಸೊಗಸಾದ ಆಸರೆ ಉಂಟಾಗಿದೆ. ಆ ಭಾಗದಲ್ಲಿ ಮತ್ತು ಒಳಗೆ ಗೋಡೆಯ ಮೇಲೆ ಚಿತ್ರಗಳನ್ನು ಬಿಡಿಸಲಾಗಿದೆ. ಅಗೋಲಿ ಗವಿ ಕೂಡ ಮಲ್ಲಾಪುರದ ೩ನೇ ಗವಿಗಿಂತ ಸ್ವಲ್ಪ ಚಿಕ್ಕದಾಗಿದ್ದು ಛಾವಣಿಯ ಒಂದು ಭಾಗದಲ್ಲಿ ಮಾತ್ರ ಚಿತ್ರಗಳಿವೆ.

ಹಿರೇಬೆನಕಲ್ಲಿನ ೯ ಮತ್ತು ೧೭ನೇ ಗವಿಗಳನ್ನು ಎರಡನೆಯ ಪ್ರಕಾರದವೆಂದು ಗುರುತಿಸಬಹುದು. ಇವುಗಳಿಗೆ ಎರಡೂ ಬದಿ ಪ್ರವೇಶಗಳುಂಟು. ಇವುಗಳಲ್ಲಿ ೧೭ನೇ ಗವಿ ಗಮನಾರ್ಹವಾಗಿದೆ. ಅಡ್ಡವಾಗಿರುವ ಭಾರೀ ಬಂಡೆಯ ಕೆಳಭಾಗದಲ್ಲಿ ಈ ಬೃಹತ್ ಗವಿ ಉಂಟಾಗಿದೆ. ಇದಕ್ಕೆ ರಕ್ಕಸ ಗವಿ ಎಂದು ಹೆಸರು. ಛಾವಣಿ ತಕ್ಕಮಟ್ಟಿಗೆ ನುಣುಪಾಗಿದೆ. ಇಲ್ಲಿ ಕೇವಲ ಎರಡೇ ಚಿತ್ರಗಳಿದ್ದರೂ ಅವು ಒಂದು ೫ ಮೀಟರ್ ಮತ್ತೊಂದು ೭ ಮೀಟರ್ ಉದ್ದವಾಗಿದ್ದು ಗವಿಗೆ ತಕ್ಕ ಪ್ರಮಾಣದಲ್ಲಿವೆ. ಗವಿ ನೆಲಕ್ಕಿಂತ ಸ್ವಲ್ಪ ಕೆಳಮಟ್ಟದಲ್ಲದಿದು ವಿಶಾಲವಾದ ಸಭಾಂಗಣ (ಹಾಲ್) ದಂತಿದೆ. ಈ ಗವಿಗಳ ಚಿತ್ರಗಳು ಸಂಖ್ಯೆ ಮತ್ತು ವೈವಿಧ್ಯತೆ ದೃಷ್ಟಿಯಿಂದ ಶ್ರೀಮಂತವಾಗಿದೆ.

ಕಲ್ಲಾಸರೆಗಳು

ಗವಿಗಳಿಗಿಂತ ಕಲ್ಲಾಸರೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಮೇಲೆ ಉಲ್ಲೇಖಿಸಿದ ಕೆಲವು ಗವಿಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಚಿತ್ರಿತ ನೆಲೆಗಳು ಕಲ್ಲಾಸರೆಗಳೆನ್ನಬಹುದು. ಕೊಪ್ಪಳ ಹಂಪಿ ಪ್ರದೇಶದ ಚಿತ್ರಿತ ಕಲ್ಲಾಸರೆಗಳನ್ನು ಅವುಗಳ ನೈಸರ್ಗಿಕ ರಚನೆಯ ದೃಷ್ಠಿಯಿಂದ ಈ ರೀತಿಯಲ್ಲಿ ವರ್ಗೀಕರಿಸಬಹುದು.

೧. ಮುಂಚಾಚಿದ ತಲೆಬಂಡೆ ಆಸರೆ

ಕೆಳಗೆ ದೊಡ್ಡ ಬಂಡೆಯಿದ್ದು ಅದರ ತೆಲೆಯ ಮೇಲೆ ಕೆಳಗಿನ ಬಂಡೆಯಿಂದ ಮುಂಚಾಚಿದ ಮತ್ತೊಂದು ಬಂಡೆ ಇರುತ್ತದೆ. ಮುಂಚಾಚಿದ ಬಂಡೆಯ ಛಾವಣಿಯಲ್ಲಾಗಲಿ (ಹಿರೇಬೆಣಕಲ್ ೧೬, ಚಿಕ್ಕರಾಂಪುರ ೪, ನಾರಾಯಣಪೇಟೆ ೧) ಇಲ್ಲವೇ ಮುಂಚಾಚಿದ ಬಂಡೆಯ ಆಶ್ರಯ ಪಡೆದ ಕೆಳಗಿನ ಕಲ್ಲಿನ ಮುಖಭಾಗದಲಲ್‌ಇ (ಗಡ್ಡಿ ೪, ಹೊಸಬಂಡಿ ಹರ್ಲಾಪುರ ೧) ಚಿತ್ರಗಳಿರುತ್ತವೆ. ಹಿರೇಬೆಣಕಲ್ಲಿನ ೨ನೇ ಕಲ್ಲಾಸರೆಯು ಈ ಪ್ರಕಾರದಲ್ಲಿ ಒಂದು ಅಪರೂಪವಾದ ಕಲ್ಲಾಸರೆಯಾಗಿದೆ. ಒಂದೇ ಬೃಹತ್ ಬಂಡೆಯೊಂದರಲ್ಲಿ ಮೇಲಿನ ಸುಮಾರು ೨ ಮೀಟರ್ ಭಾಗ ಆಸರೆಯಾಗಿ ಉಳಿದಂತೆ ಸುಮಾರು ೧೦ ಮೀಟರ್ ಭಾಗ ಒಳಸರಿದ ಚಿತ್ರ ಫಲಕವಾಗಿದೆ. ಇದು ಸುಮಾರು ೧೩ ಮೀಟರ್ ಅಗಲ ಮತ್ತು ೧೦ ಮೀಟರ್ ಎತ್ತರವಾಗಿದೆ. ಇಡೀ ಫಲಕದ ಅಳತೆಗೆ ತಕ್ಕಂತೆ ಅಲ್ಲಿ ದೊಡ್ಡ ಚಿತ್ರವನ್ನು ಬಿಡಿಸಲಾಗಿದೆ. ಕಲ್ಲಾಸರೆ ಆಳವಾಗಿಲ್ಲದಿರುವುದರಿಂದ ಚಿತ್ರಗಳು ಬಹಳಷ್ಟು ಮಾಸಿವೆ.

ಚಿಕ್ಕರಾಂಪುರ (೪) ಮತ್ತು ನಾರಾಯಣಪೇಟೆ (೧) ಕಲ್ಲಾಸರೆಗಳಲ್ಲಿ ಛಾವಣಿ ಕಲ್ಲಿನಲ್ಲಿ ಚಿತ್ರಗಳಿದ್ದು ನೆಲದಿಂದ ಸುಮಾರು ೫ ಮೀಟರ್ ಎತ್ತರದಲ್ಲಿವೆ. ಆಸರೆಯ ಕೆಳಗಿನ ನೆಲ ನಿಲ್ಲಲು ಕೂಡ ಸಾಧ್ಯವಾಗದಷ್ಟು ಇಳಿಜಾರಾಗಿದೆ. ಮಲ್ಲಾಪುರದ ೨ನೇ ಕಲ್ಲಾಸರೆ ಕೂಡ ಇದೇ ರೀತಿಯದು. ಆದರೆ ಇಲ್ಲಿ ಛಾವಣಿ ಕೈಗೆ ನಿಲುಕುವಷ್ಟು ಹತ್ತಿರದಲ್ಲಿದೆ.

೨. ಸೀಳು ಬಂಡೆ ಆಸರೆ

ಸಾಮಾನ್ಯವಾಗಿ ಈ ಪ್ರಕಾರದ ಕಲ್ಲಾಸರೆಗಳು ಅಧಿಕವಾಗಿವೆ. ಬೃಹತ್ ಅಥವಾ ಮಧ್ಯಮ ಗಾತ್ರದ ಬಂಡೆಗಳಲ್ಲಿ ಮೂಲೆಭಾಗದಲ್ಲೊ ಬದಿಯಲ್ಲೊ ಒಂದು ಭಾಗ ಸೀಳಿ ತುಂಡು ಕೆಳಬಿದ್ದು ಆಸರೆ ಉಂಟಾಗಿರುತ್ತದೆ. ಈ ಆಸರೆ ಭಾಗದಲ್ಲಿ ಚಿತ್ರಗಳನ್ನು ಬಿಡಿಸಲಾಗಿರುತ್ತದೆ. ಇಂದರಗಿ (೧), ಚಿಕ್ಕ ಬೆಣಕಲ್ (೧), ಆಗೋಲಿ (೨), ನಾಗೇನಹಳ್ಳಿ (೧), ಕೊಪ್ಪಳ (೪), ಹೊಸಬಂಡಿಹರ್ಲಾಪುರ (೧) ಗಳಲ್ಲಿ ಮೂಲೆ ಕಲ್ಲಾಸರೆಗಳು ಎಮ್ಮಿಗುಡ್ಡ (೨), ತೆಂಬಾ (೪) ಗಡ್ಡಿ (೪), ಹಿರೇಬೆಣಕಲ್ (೧), ಹಂಪಿ (೫) ಕಮಲಾಪುರ (೧) ಹಾಗೂ ಇತರ ನೆಲೆಗಳಲ್ಲಿ ಬದಿಯ ಕಲ್ಲಾಸರೆಗಳಿವೆ. ಮೂಲೆ ಆಸರೆಗಳಿಗಿಂತ ಬದಿಯ ಆಸರೆಗಳು ಚಿತ್ರ ರಚನೆಗೆ ಪ್ರಶಸ್ತವಾಗಿವೆ. ಆನೆಗುಂದಿಯ ೬ನೇ ನೆಲೆಯಲ್ಲಿ ೩ ಸ್ವತಂತ್ರ ಗುಂಡುಗಳಿವೆ. ಅವುಗಳ ಮೂಲೆ ಭಾಗದಲ್ಲಿ ಒಡೆದ ಸಣ್ಣ ಕಲ್ಲಾಸರೆಗಳಿದ್ದು ಅದರಲ್ಲೂ ಚಿಕ್ಕ ಪ್ರಮಾಣದ ಚಿತ್ರಗಳಿವೆ.

೩. ವಾರೆ ಸವಕಳಿ ಬಂಡೆ ಆಸರೆ

ಸಾಮಾನ್ಯವಾಗಿ ಇವು ಸ್ವತಂತ್ರವಾಗಿರುವ ಬೃಹತ್ ಬಂಡೆಗಳೂ ಈ ಬಂಡೆಗಳು ತುದಿಯಲ್ಲಿ ಒಂದೆರಡು ಮೀಟರ್ ಹೊರತುಪಡಿಸಿ ಉಳಿದಂತೆ ಭಾಗವು ಮೆಲಿನಿಂದ ಕೆಳಕ್ಕೆ ವಾರೆಯಾಗಿ ಸವೆದಂತಿರುತ್ತದೆ. ಈ ವಾರೆ ಸವೆದ ಭಾಗವು ನುಣುಪಾಗಿದ್ದರೂ ಚಿತ್ರಗಳಿಗೆ ಹೆಚ್ಚು ರಕ್ಷಿತವಲ್ಲ. ಈ ರೀತಿಯ ಕಲ್ಲಾಸರೆಗಳೂ ಹೊಸ ಬಂಡಿಹರ್ಲಾಪುರ (೫) ತೆಂಬಾ (೬) ಚಿಕ್ಕಬೆಣಕಲ್ (೨) ಮತ್ತು ಹಂಪಸದುರ್ಗ (೨) ಗಳಲ್ಲಿವೆ. ಈ ನಾಲ್ಕರಲ್ಲಿ ರೇಖಾ ಸಂಕೇತ ಚಿತ್ರಗಳಿರುವುದು ಕುತೂಹಲದಾಯಕ.

೪. ಹಾಸಲು ಬಂಡೆ ಆಸರೆ

ಬೃಹತ ಬಂಡೆ(ಗುಂಡು)ಗಳು ಚಿಕ್ಕ ಗುಂಡುಗಳ ಮೇಲೆ ಉದ್ದವಾಗಿ ಹಸಿದಂತಿರುತ್ತದೆ. ಈ ಹಾಸಲು ಬಂಡೆಯ ಕೆಳಭಾಗದಲ್ಲಿ (ಛಾವಣಿಯಲ್ಲಿ) ಚಿತ್ರಗಳಿರುತ್ತವೆ. ಮಲ್ಲಾಪುರ (೫) ತೆಂಬಾ (೭) ಮತ್ತು ಅಗೋಲಿ (೨) ಗಳಲ್ಲಿ ಈ ರೀತಿಯ ಕಲ್ಲಾಸರೆಗಳಿವೆ. ಇಲ್ಲಿಯ ಚಿತ್ರಿತ ಭಾಗವು ಅಷ್ಟು ನುಣುಪಾಗಿರುವುದಿಲ್ಲ. ಮತ್ತು ಚಿತ್ರಗಳ ಸಂಖ್ಯೆಯೂ ಕಡಿಮೆ ಇರತುತ್ತದೆ.

೫. ವಾರೆ ಬಂಡೆ ಆಸರೆ

ಎರಡು ಬಂಡೆಗಳ ಪರಸ್ಪರ ಒಂದಕ್ಕೊಂದು ವಾರೆಯಾಗಿ ನಿಂತು ಜೋಪಡಿ ಆಕಾರದಲ್ಲಿ  ಆಸರೆ ಉಂಟಾಗಿರುತ್ತದೆ. ಎರಡೂ ಬಂಡೆಗಳ ಒಳ ಭಾಗದ ಮುಖದಲ್ಲಿ ಚಿತ್ರಗಳಿರುತ್ತವೆ. ಅಥವಾ ಒಂದು ಎತ್ತರವಾದ ಗುಂಡಿನ ಮೇಲೆ ಬೃಹತ್ ಬಂಡೆಯೊಂದು ವಾರೆಯಾಗಿ ಮಲಗಿದಂತಿರುತ್ತದೆ. ವಾರೆ ಬಂಡೆಯ ಆಸರೆಯಲ್ಲಿ ಚಿತ್ರಗಳಿರುತ್ತವೆ. ಚಿಕ್ಕ ಬೆಣಕಲ್ (೩) ಹಂಪಿ (೪), ಸಂಗಾಪುರ (೭) ಬೃಹತ್ ವಾರೆ ಬಂಡೆ ಆಸರೆಗಳು ಇವೆ. ಕಾಲಕ್ರಮೇಣ ತುದಿಯಲ್ಲಿ ಸೀಳುಗಳುಂಟಾಗಿ ಮಳೆಯ ನೀರು ಇಳಿದಿರುವುದರಿಂದ ಇಂಥ ಆಸರೆಗಳ ಚಿತ್ರಗಳು ಸಾಕಷ್ಟು ಮಾಸಿವೆ. ಚಿಕ್ಕ ಬೆಣಕಲ್ಲಿನ ಕಲ್ಲಾಸರೆಯಲ್ಲಿ ಕೈಗೆ ನಿಲುಕದಷ್ಟು ಎತ್ತರದಲ್ಲಿ ಚಿತ್ರಗಳಿವೆ.

೬. ಬೆಟ್ಟದ ಪೊಟರೆ ಆಸರೆ

ಇವು ಬೆಟ್ಟದ ಬುಡದಲ್ಲಿ ಇರುತ್ತವೆ. ಕೊರಕಲಿನಂತೆ ಸುಮಾರು ೪೦ ಮೀಟರ್ವರೆಗೂ ಬೆಟ್ಟದಲ್ಲಿ ಪೊಟರೆಗಳುಂಟಾಗಿರುತ್ತವೆ. ಇದು ಉದ್ದಕ್ಕೂ ಮುಂಬದಿಯಲ್ಲಿ ತೆರೆದಿರುತ್ತದೆ. ಈ ಪೊಟರೆಗಳಲ್ಲಿ ಚಿತ್ರಗಳಿರುತ್ತವೆ. ತಿರುಮಲಾಪುರ (೧) ಆನೆಗುಂದಿ (೫) ಹೊಸ ಬಂಡಿಹರ್ಲಾಪುರ (೩) ಮತ್ತು ನಾರಾಯಣಪೇಟೆಗಳಲ್ಲಿ (೨) ಇಂಥ ಕಲ್ಲಾಸರೆಗಳಿವೆ. ತಿರುಮಲಾಪುರದಲ್ಲಿ ಬೇರೆ ಬೇರೆ ಕಾಲದಲ್ಲಿ ರಚಿತವಾದ ಹೆಚ್ಚು ಚಿತ್ರಗಳಿದ್ದರೆ ಉಳಿದೆರಡು ಕಡೆ ಒಂದೆರಡು ಚಿತ್ರಗಳು ಮಾತ್ರ ಇವೆ.

೭. ಪೊಳ್ಳು ಬಂಡೆ ಆಸರೆ

ಇವು ಕೂಡ ವಿಶಿಷ್ಟವಾದ ರಚನೆಗಳು ಬೆಟ್ಟದ ಮೇಲಿರುವ ಬೃಹತ್ ಬಂಡೆಗಳು ಬಳಭಾಗ ಪೊಳ್ಳಾಗಿ ಸೊಗಸಾದ ಆಸರೆ ಉಂಟಾಗಿರುತ್ತದೆ. ಇದಕ್ಕೆ ಒಂದು ಅಥವಾ ಎರಡು ಕಡೆ ಅರೆ ವೃತ್ತಾಕಾರದ ಭಾಗಿಲುಗಳಿರುತ್ತವೆ. ಈ ಪೊಳ್ಳಿನ ಒಳ ಗೋಡೆಗಳ ಮೇಲೆ ಚಿತ್ರಗಳಿರುತ್ತವೆ. ರಾಂಪುರ (೨) ಕಳ್ಳರ ಗವಿ ಮತ್ತು ತೆಂಬಾದ (೮) ಚಿತ್ರ ಪಡಿ ಇಂಥ ಕಲ್ಲಾಸರೆಗಳು ಚಿತ್ರಪಡಿಯ ಇಡೀ ಭಾಗದಲ್ಲಿ ಪಕ್ಷಿಗಳು ಮಣ್ಣಿನ ಗೂಡು ಕಟ್ಟಿರುವುದರಿಂದ ಚಿತ್ರಗಳು ಗೋಚರಿಸುವುದಿಲ್ಲ. ನಾರಾಯಣಪೇಟೆಯ ಈ ರೀತಿಯ ಬಂಡೆಯ ಪೊಳ್ಳು ಎತ್ತರದಲ್ಲಿಲ್ಲ. ಮಲಗಿಕೊಂಡೇ ಮಾತ್ರ ಚಿತ್ರಗಳನ್ನು ನೋಡಬಹುದು.

೮. ಅರೆ ವೃತ್ತಾಕಾರ (ಕಮಾನಿನಾಕಾರ) ಬಾಗಿದ ಬಂಡೆ ಆಸರೆ

ಬಂಡೆಯೊಂದರ ಎರಡು ತುದಿಗಳು ನೆಲಕ್ಕೆ ತಾಗಿ ಮಧ್ಯ ಭಾಗದಲ್ಲಿ ಅರೆ ವೃತ್ತಾಕಾರದಲ್ಲಿ ಮೇಲೆದ್ದಿರುತ್ತದೆ. ಆದರ ಒಳಭಾಗದಲ್ಲಿ ಚಿತ್ರಗಳನ್ನು ಇಂಥ ಕಲ್ಲಾಸರೆಗಳು ಕೊಪ್ಪಳ(೨) ಬಿಳಿಭಾವಿ (೧) ಹಿರೇಬೆಣಕಲ್ (೮ ಮತ್ತು ೧೩) ಗಳಲ್ಲಿವೆ. ಬಿಳಿಭಾವಿಯಲ್ಲಿ ಹೆಚ್ಚು ಚಿತ್ರಗಳಿದ್ದರೆ, ಹಿರೇಬೆಣಕಲ್ಲಿನ (೧೩)ಲ್ಲಿ ಕೇವಲ ಮೂರು ಚಿತ್ರಗಳಿವೆ.

ಬಯಲು ಬಂಡೆ ಚಿತ್ರ ನೆಲೆಗಳು

ಬಯಲು ಬಂಡೆ ಚಿತ್ರಗಳು ಮುಖ್ಯವಾಗಿ ಪಶುಪಾಲಕರ ರಚನೆಗಳೆಂದು ಹೇಳಬಹುದು. ಅವು ಪಶುಪಾಲನೆಯ ಸಂದರ್ಭದಲ್ಲಿ ರಚಿತವಾಗಿರುವ ಸಾಧ್ಯತೆಯನ್ನು ಚಿತ್ರನೆಲೆಗಳ ಹಿನ್ನೆಲೆಯಲ್ಲಿ ತರ್ಕಿಸಬಹುದು.

ಕೊಪ್ಪಳ-ಹಂಪಿ ಪ್ರದೇಶಕ್ಕೆ ಸಂಬಂಧಿಸಿದಂತೆ ಬಂಡೆ ಚಿತ್ರಗಳು ಎರಡು ರೀತಿಯ ನೆಲೆಗಳಲ್ಲಿ ರಚಿತವಾಗಿರುವುದನ್ನು ಗುರುತಿಸಬಹುದು. ಅವುಗಳೆಂದರೆ ಮೊದಲನೆಯ ನೆಲೆ ನೀರು ಸಂಗ್ರಹಣೆಯ ಕೆರೆಗಳು (ನೈಸರ್ಗಿಕ) ಬದಿಯ ಬಂಡೆಗಳಲ್ಲಿ ಇರುವುದು. ಉದಾಹರಣೆಗೆ ಕಮಲಾಪುರ (ವಿದ್ಯಾರಣ್ಯ) ಮತ್ತು ಬಸಾಪಟ್ಟಣ. ವಿಶೇಷವೆಂದರೆ ಈ ಎರಡೂ ನೆಲೆಗಳ ಚಿತ್ರಗಳು ಒಂದೇ ಬಗೆಯಾಗಿರುವುದು (ಎತ್ತರ ಇಣಿಯ ಎತ್ತುಗಳು ಮತ್ತು ಅಶ್ವಸವಾರರ ಚಿತ್ರಗಳು).

ಎರಡನೇ ನೆಲೆಗಳು ಸುತ್ತಲೂ ಹಲ್ಲುಗಾವಲಿದ್ದು ಮಧ್ಯದಲ್ಲಿ ಬಂಡೆಗಳ ಮೇಲೆ ರಚಿತವಾಗಿರುವುದು. ಉದಾಹರಣೆಗೆ ಮಲ್ಲಾಪುರ ೧ ಮತ್ತು ೨ನೇ ನೆಲೆಗಳು. ಇಲ್ಲಿ ಕೊರೆದ ಮತ್ತು ಕುಟ್ಟು ಚಿತ್ರಗಳು ಎರಡೂ ಇವೆ. ಇವು ಕಪ್ಪುಬಂಡೆಗಳು. ಕಮಲಾಪುರದ ೨ನೇ ನೆಲೆಯಲ್ಲಿ (ಒಂಟಿಕಲ್ಲು ಗುಂಡು) ವರ್ಣಚಿತ್ರದ ಜೊತೆಗೆ ಕೊರೆದ ಚಿತ್ರಗಳಿರುವುದು ವಿಶೇಷ. ಇದು ಕಣಶಿಲೆಯ ಬಂಡೆಯಾಗಿದೆ.

ಚಿತ್ರರಚನಾ ಸಾಮಗ್ರಿಗಳು ಮತ್ತು ವಿಧಾನ

ಪ್ರಾಚೀನ ಜನರ ಚಿತ್ರ ರಚನಾ ತಂತ್ರ ಸಾಮಗ್ರಿಗಳು ಕುತೂಹಲದಾಯಕವಾಗಿದೆ. ಗವಿವರ್ಣ ಮತ್ತು ಬಂಡೆ ಚಿತ್ರಗಳ ರಚನೆಯಲ್ಲಿ ಬಳಕೆಯಾದ ಸಾಮಗ್ರಿಗಳನ್ನು ಆಯಾ ಚಿತ್ರ ಪ್ರಕಾರಗಳು ಸ್ವರೂಪಕ್ಕನುಗುಣವಾಗಿ ತರ್ಕಿಸಬಹುದು.

ವರ್ಣಚಿತ್ರಗಳು
ಬಣ್ಣಗಳು

ಗವಿ ಮತ್ತು ಕಲ್ಲಾಸರೆಗಳ ಚಿತ್ರಗಳನ್ನು ಬಣ್ಣಗಳಿಂದ ರಚಿಸಲಾಗಿದೆ. ವಿಶ್ವದಾದ್ಯಂತ ಪ್ರಧಾನವಾಗಿ ಕೆಮ್ಮಣ್ಣು ವರ್ಣ (Red ochre) ವನ್ನು ಬಳಸಲಾಗಿದೆ. ಫ್ರಾನ್ಸ್ ಮತ್ತು ಸ್ಪೇನಿನ ಮೂರ್ ಸಾಲಾಸ್, ಅಲ್ ಮೀರಾ ನ್ಸೌಕ್ಸ್, ಲಾಸ್ಕಾಕ್ಸ್, ಇಟಲಿಯ ಲಾಪಿಲೇಟಾ, ಎಲೆಕ್ಯಾಸ್ಟಿಲೋ ಲಾ ರೋಶೆ ಬೋರ್ತಿಯಾಕ್ಸ್, ಬ್ಲಾಂಚಾರ್ಡ್ ಮುಂತಾದ ಗವಿಗಳ ಚಿತ್ರಗಳನ್ನು ಕೆಂಪು ಕಪ್ಪು ಹಳದಿ ಕಂದು ಮುಂತಾದ ಬಣ್ಣಗಳಿಂದ ಚಿತ್ರಿಸಲಾಗಿದೆ. ಭಾರತದ ಗವಿ, ಕಲ್ಲಾಸರೆಗಳಲ್ಲಿ ಬೇರೆ ಬೇರೆ ಬಣ್ಣಗಳ ಬಳಕೆಯನ್ನು ಕಾಣಬಹುದು. ತಿಳಿಕೆಂಪು (ಹೊಸಂಗಾಬಾದ್, ಭೂಪಾಲ್, ರೈಸಿನ್) ಕೆಂಪು (ಸಾಗರ್, ಫನ್ನಾ, ಮಿರ್ಚಾಪುರ, ಆಗ್ರಾ), ಕಡುಕೆಂಪು (ಸಿಂಗನ್ ಪುರ) ಭಿಂಬೇಟ್ಕಾ IIA.೧. IIA. ೨, ಕಾನ್ವಮದಕಲ್ ಬುಗ್ಗ (ಅ.ಪ್ರ.ಪಿಕ್ಲಿಹಾಳ, ಮಸ್ಕಿ) ಕಂದು (ಭೂಪಾಲ್ ೧೭), ಕರಿಗಂದು (ಹೊಸಂಗಾಬಾದ್ VI, ವಾರಾಣಾಸಿ) ಕಪ್ಪು (ರೈಸಿನ್, ಭೂಪಾಲ-೧೭, ಕರ್ನೂಲ್ನ ಬಿಲ್ಲಾಸುರಗಾಂ, ಆಗ್ರಾ), ಹಳದಿ (ಫನ್ನಾ-ಬೃಹಸ್ಪತೀಕುಂಡ, ಭೂಪಾಲ-೧೭), ಕಿತ್ತಳೆ (ಸಿಂಗನ್ ಪುರ, ಭೂಪಾಲ-೨), ರೈಸಿನ್, ಫತಾನಿ ಕಿ ಪಹಾರಿ, ಭಿಂಬೇಟ್ಕಾ IIA.೫. ಮಿರ್ಜಾಪುರ), ತಿಳಿಗಂಪಿನ ಕಿತ್ತಳೆ (ಕಾನ್ವಮದಕಲ್ ಬುಗ್ಗ (ಆ.ಪ್ರ) ನೇರಳೆ (ರಾಯಘರ್, ಪಾಚಮಾರಿ ಮಿರ್ಜಾಪುರ) ಹಸಿರು (ಭೂಪಾಲ್ ೨ ಸಾಗರ್, ಫನ್ನಾ, ಭಿಂಬೇಟ್ಕಾ) ಬಣ್ಣಗಳು ಬಳಕೆಯಾಗಿವೆ. ಮತ್ತು ಬಹುಮಟ್ಟಿಗೆ ಎಲ್ಲೆಡೆ ಬಿಳಿ ಬಣ್ಣದ ಚಿತ್ರಗಳನ್ನು ಕಾಣಬಹುದು.[1]

ವಿವಿಧ ಕಾಲಘಟ್ಟಗಳಲ್ಲಿ ಬೇರೆ ಬೇರೆ ಬಣ್ಣಗಳು ಬಳಕೆಯಾಗಿರುವುದು ಕಂಡುಬರುತ್ತದೆ. ಸೂಕ್ಷ್ಮ ಶಿಲಾಯುಗದಲ್ಲಿ ಕೆಂಪು, ಕಂದು, ಕಪ್ಪು ಬಣ್ಣಗಳು, ನವಶಿಲಾಯುಗ ಶಿಲಾತಾಮ್ರಗದಲ್ಲಿ ಕೆಂಪು ಅಥವಾ ಅಥವಾ ಕಂದು, ಕೆಂಪು, ಬಿಳುಪು, ತಿಳಿಹಳದಿ, ಹಳದಿಮಿಶ್ರಿತ ಬಿಳುಪು ಬಣ್ಣದ ಚಿತ್ರಗಳು ಇತಿಹಾಸ ಆರಂಭಕಾಲದಲ್ಲಿ ಕೆಂಪು ಬಿಳುಪು ಅಪರೂಪಕ್ಕೆ ಹಸಿರು ಅಥವಾ ಹಳದಿ ಬಣ್ಣಗಳು ಮಧ್ಯಕಾಲೀನ ಯುಗದಲ್ಲಿ ಬುಡಕಟ್ಟು ಚಿತ್ರಗಳು ಕೆಂಪು ಬಿಳುಪು ಕಿತ್ತಳೆ ನಂತರದಲ್ಲಿ ಕೆಂಪು ಕಂದು ಬಳಪದ ಬಣ್ಣಗಳಲ್ಲಿ ರಚಿತವಾಗಿವೆ.

ಕರ್ನಾಟಕದಲ್ಲಿ ಬಾದಾಮಿ ಹತ್ತಿರದ ಹಿರೇಗುಡ್ಡ ಮತ್ತು ಅರೆಗುಡ್ಡದ ಪ್ರಾಯಶಃ ಸೂಕ್ಷ್ಮ ಶಿಲಾಯುಗದ ಚಿತ್ರಗಳಿಂದ ಹಿಡಿದು ನವಶಿಲಾ-ಶಿಲಾತಾಮ್ರಯುಗದ ಮಸ್ಕಿ, ಪಿಕ್ಲಿಹಾಳದ ಚಿತ್ರಗಳಿಂದ ಹಿಡಿದು ನವಶಿಲಾ-ಶಿಲಾತಾಮ್ರಯುಗದ ಮಸ್ಕಿ, ಪಿಕ್ಲಿಹಾಳದ ಚಿತ್ರಗಳು ಕಬ್ಬಿಣ ಹುಗ ಬೃಹತ್ ಶಿಲಾಯುಗದ ಹಿರೇಬೆಣಕಲ್ ನ ಚಿತ್ರಗಳು ಹಾಗೂ ಇತಿಹಾಸ ಆರಂಭಕಾಲ ಮತ್ತು ಇತಿಹಾಸ ಕಾಲದಲ್ಲಿ ಪ್ರಧಾನವಾಗಿ ಕೆಮ್ಮಣ್ಣಿನ ಬಣ್ಣವನ್ನು ಬಳಸಲಾಗಿದೆ. ಬಣ್ಣದ ಛಾಯೆಯ ಕಾಲಮಾನದ ವೈಪರೀತ್ಯದಿಂದಾಗಿ ಹಾಗೂ ಇತರ ಕಾರಣಗಳಿಂದಾಗಿ ಒಂದೇ ಸಮನಾಗಿರುವುದಿಲ್ಲ. ಅಪರೂಪವಾಗಿ ಕಾಡಿಗೆ, ಕಪ್ಪು ಹಾಗೂ ಮಿಶ್ರಿತಹಳದಿ ಮುಸುಕು ಬಿಳಿಯ ದ್ವಿವರ್ಣಗಳನ್ನು ಬಳಸಲಾಗಿದೆ. ಬಾದಾಮಿಯ ೩ನೇ ಗವಿಯ ಚಿತ್ರಗಳು ದ್ವಿವರ್ಣದಲ್ಲಿವೆ. ಮಧ್ಯಯುಗೀನ ಕಾಲದ ಚಿತ್ರಗಳು ಸುಣ್ಣದಂತಹ ಬಿಳಿಯ ಬಣ್ಣದಲ್ಲಿವೆ. ಬ್ರಹ್ಮಗಿರಿ ಮತ್ತು ಚಿತ್ರದುರ್ಗದ ಹಲವಾರು ಚಿತ್ರಗಳೂ ಬಿಳಿಯ ಬಣ್ಣದಲ್ಲಿವೆ.[2]

ಕೊಪ್ಪಳ-ಹಂಪಿ ಪ್ರದೇಶದಲ್ಲಿ ಮುಖ್ಯವಾಗಿ ಕೆಮ್ಮಣ್ಣು ಬಣ್ಣದ ಚಿತ್ರಗಳು ಸಾಮಾನ್ಯವಾಗಿವೆ. ಜೊತೆಗೆ ದಟ್ಟಕೆಂಪು, ನೇರಳೆ ಕೆಂಪು ಮತ್ತು ಕಿತ್ತಳೆಗಂಪಿನ ಚಿತ್ರಗಳೂ ಇವೆ. ವಿರಳವಾಗಿ ಬಿಳಿಬಣ್ಣಗಳನ್ನು ಅಲ್ಲಲ್ಲಿ ಬಳಸಲಾಗಿದೆ.

ಕೆಂಪುಬಣ್ಣ

ಕೆಂಪುವರ್ಣ ಸಾಮಾನ್ಯವಾಗಿದ್ದು ಅದರಲ್ಲಿ ನೇರಳೆಗಂಪಿನ ಬಣ್ಣವನ್ನು ಹಿರೇಬೆಣಕಲ್ಲಿನ ೧೭ನೇ ಗವಿ ಚಿಕ್ಕಬೆಣಕಲ್ಲಿನ ಮೂರನೇ ಕಲ್ಲಾಸರೆ, ಮಲ್ಲಾಪುರದ ೬ನೇ ಕಲ್ಲಾಸರೆಗಳ (ಮಂಡಲ ಚಿತ್ರ ಮಾತ್ರ) ಚಿತ್ರ ರಚನೆಯಲ್ಲಿ ಬಳಸಲಾಗಿದೆ. ಕುಂಕುಮದಂತಹ ದಟ್ಟ ಕೆಂಪುವರ್ಣವನ್ನು ಚಿಕ್ಕರಾಂಪುರದ ೫ನೇ ಕಲ್ಲಾಸರೆ ನಾಗೇನಹಲ್ಲಿ ಮತ್ತು ತಿರುಮಲಾಪುರದ ಕಲ್ಲಾಸರೆಗಳಲ್ಲಿ ಕಿತ್ತಳೆ ಕೆಂಪುವರ್ಣವನ್ನು ಸಂಗಾಪುರದ ೮ನೇ ಕಲ್ಲಾಸರೆ ಬಿಳೇಭಾವಿಯ ೨ನೇ ಕಲ್ಲಾಸರೆ ಮತ್ತು ಆನೆಗುಂದಿಯ ೭ನೇ ಗವಿ (ಆನೆ ಚಿತ್ರ)ಗಳಲ್ಲಿ ಚಿತ್ರಕ್ಕಾಗಿ ಬಳಸಲಾಗಿದೆ.

ಬಿಳಿಬಣ್ಣ

ಸುಣ್ಣದಂತಹ ಬಿಳಿ ಬಣ್ಣವನ್ನು ಚಿತ್ರಗಳಿಗೆ ಬಳಸಲಾಗಿದೆ. ಆದರೆ ಇದು ಕೆಂಪು ಬಣ್ಣದಷ್ಟು ವ್ಯಾಪಕವಾಗಿ ಬಳಕೆಯಾಗಿಲ್ಲ. ಇತಿಹಾಸ ಕಾಲದಲ್ಲಿ ಇದರ ಬಳಕೆಯಾಗಿದೆ. ಹಂಪಸದುರ್ಗ (೧), ಅಗೋಲಿ (೧), ತೆಂಬಾ (೧,೨), ಕೊಪ್ಪಳ (೮), ಬಂಡಿಹರ್ಲಾಪುರ (೧, ಸಮಕಾಲೀನ)ಗಳಲ್ಲಿ ಬಿಳಿಬಣ್ಣದ ಚಿತ್ರಗಳಿವೆ. ತಿರುಮಲಾಪುರ (೧), ಎಮ್ಮಿಗುಡ್ಡ (೨), ಆನೆಗುಂದಿ (೪,೫) ಮತ್ತು ಚಿಕ್ಕರಾಂಪುರ (೩)ಗಳಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಚಿತ್ರಗಳು ಇವೆ.

ದ್ವಿವರ್ಣ

ತೀರ ವಿರಳವಾಗಿ ದ್ವಿವರ್ಣದ ಚಿತ್ರಗಳು ಈ ಪ್ರದೇಶದಲ್ಲಿ ಕಂಡುಬರುತ್ತವೆ. ಕೆಂಪು-ಬಿಳಿ ಮಿಶ್ರದ ಮನುಷ್ಯ ಚಿತ್ರಗಳು ಆನೆಗುಂದಿಯ ೪ನೇ ಮತ್ತು ೮ನೇ ಕಲ್ಲಾಸರೆ ಮತ್ತು ಕೊಪ್ಪಳದ ೯ನೇ ಕಲ್ಲಾಸರೆ (ಸ್ತ್ರೀ ಚಿತ್ರ?)ಗಳಲ್ಲಿ ಇವೆ. ಇದೇ ರೀತಿ ಹಳದಿ ಮಿಶ್ರೀತ ತಿಳಿ ಬಣ್ಣದ ಗಂಡು ಹೆಣ್ಣೆನ ಚಿತ್ರ ಕೊಪ್ಪಳದ ೫ನೇ ಕಲ್ಲಾಸರೆಯಲ್ಲಿದೆ.

ಬೂದಿ ಬಣ್ಣ

ಮಲ್ಲಾಪುರದ ೧೩ನೇ ಕಲ್ಲಾಸರೆಯಲ್ಲಿ ಬೂದಿಬಣ್ಣದಲ್ಲಿ ಅದ್ದಿ ಮೂಡಿಸಿದ ಹಸ್ತಮುದ್ರೆಗಳಿವೆ.

ಬಣ್ಣದ ತಯಾರಿಕೆ

ಪ್ರಾಚೀನ ಜನರ ಬಣ್ಣಗಳನ್ನು ನೈಸರ್ಗಿಕವಾಗಿ ದೊರೆಯುವ ವಸ್ತುಗಳಿಂದ ವಿಶೇಷವಾಗಿ ಖನಿಜ ಶಿಲೆಗಳಿಂದ ತಯಾರಿಸಿಕೊಳ್ಳುತ್ತಿದ್ದರು. ನೇರಳೆ ಬಣ್ಣಕ್ಕಾಗಿ ಮ್ಯಾಂಗನೀಸ್ ಆಕ್ಸೈಡ್ ನ್ನು ಕಪ್ಪುಬಣ್ಣಕ್ಕೆ ಪ್ರಾಣಿಗಳ ಎಲುಬಿನ ಮರದ ಕಾಂಡದ ಇದ್ದಿಲುಗಳನ್ನು ಹಾಗೂ ಕಲ್ಲಿದ್ದಲುಗಳನ್ನು, ಕಂದು, ಕೆಂಪು, ಹಳದಿ, ಕಿತ್ತಳೆ ಬಣ್ಣಗಳಿಗೆ ಕಬ್ಬಿಣದ ಆಕ್ಸೈಡನ್ನು ಬಳಸುತ್ತಿದ್ದರೆಂದು ಹೇಳಲಾಗಿದೆ.[3]

ಈ ಖನಿಜಗಳಿಗೆ ಪ್ರಾಣಿಗಳ ರಕ್ತ ಕೊಬ್ಬು ಮತ್ತು ಮೂತ್ರಗಳನ್ನು ಕೆಲವು ಸಸ್ಯರಸಗಳನ್ನು ಕಲಸಿ ಬಣ್ಣಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.[4] ಕೊಪ್ಪಳ ಹಂಪಿ ಪ್ರದೇಶದ ಗವಿ  ಚಿತ್ರಗಳನ್ನು (ಕೆಂಪುವರ್ಣದ) ಸ್ಥಳೀಯ ಗ್ರಾಮಾಂತರ ಜನತೆ ಸುರಮದ ಚಿತ್ರಗಳೆಂದು ಹೇಳುತ್ತಾರೆ. ಸುರಮ ಎಂಬುದು ಒಂದು ಖನಿಜ ಅದಕ್ಕೆ ವೈಜ್ಞಾನಿಕವಾಗಿ ಆಂಟಿಮನಿ ಎಂದು ಕರೆಯುತ್ತಾರೆ. ಸ್ಟಿಬೆನ್ಯಟ್ ಎನ್ನುವುದು ಆಂಟಿಮನಿಯ ಒಂದು ಅದುರು. ಇದು ಉಕ್ಕಿನ ಅಥವಾ ಬೂದು ಬಣ್ಣದಲ್ಲಿರುವ ಮೆದುವಿನ ಖನಿಜ. ಇದು ತ್ರಿಜ್ಯಾಕಾರದ ಎಳಸುಗಳಂತೆ ದೊರೆಯುತ್ತದೆ. ಇದನ್ನು ಈಗಲೂ ಬಣ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಈ ಸುರಮವನ್ನು ಕೆಂಪುವರ್ಣಕ್ಕಾಗಿ ಬಳಸಿರಬಹುದು. ಆಂಟಿಮನಿ ಸಲ್ಫೈಡ್ ಅದುರಿನ ಕಣಗಳು ಬಳ್ಳಾರಿ ಜಿಲ್ಲೆಯ ರಾಮನದುರ್ಗ ಪ್ರದೇಶದಲ್ಲಿ ಇರುವುದಾಗಿ ವರದಿಯಾಗಿದೆ.[5] ಇದರ ಒಂದು ಎಳಸು ನನ್ನ ಕ್ಷೇತ್ರಕಾರ್ಯದ ಸಮಯದಲ್ಲಿ ತೆಂಬಾದ ೮ನೇ ಕಲ್ಲಾ ಸರೆಯಲ್ಲಿ ಮಡಕೆಚೂರುಗಳು ಮತ್ತು ಚರ್ಟಶಿಲೆಯ ಚಕ್ಕೆಗಳೊಂದಿಗೆ ದೊರೆತಿದೆ. ಇದು ತ್ರಿಜ್ಯಾಕಾರದಲ್ಲಿದ್ದು ೨ ಸೆಂ.ಮೀ. ಅಳತೆಯಲ್ಲಿದೆ. ಆದರೆ ಆ ಕಲ್ಲಾಸರೆಯಲ್ಲಿ ಯಾವುದೇ ಚಿತ್ರಗಳಿಲ್ಲವಾದರೂ ಈ ಪ್ರದೇಶದ ಚಿತ್ರಗಳಿಗಾಗಿ ಸುರಮವನ್ನು ಬಳಸಿರುವ ಸಾಧ್ಯತೆ ಇದೆ. ಅಲ್ಲದೇ ಬೆಟ್ಟಗಳಲ್ಲಿ ಅಲ್ಲಲ್ಲಿ ಕೆಮ್ಮಣ್ಣಿನ ಹಳದಿ ಬಣ್ಣದ ಮಟ್ಟಿಗಳಿವೆ. ಈಗಲೂ ಹಳ್ಳಿಯ ಜನ ಹಬ್ಬ ಉತ್ಸವಗಳ ಸಂದರ್ಭದಲ್ಲಿ ಮನೆ ಗುಡಿಸಲುಗಳನ್ನು ಸಾರಿಸಿ ಅಲಂಕರಿಸಲು ಇಂಥ ಮಟ್ಟಿಯ ಮಣ್ಣನ್ನು ಬಳಸುತ್ತಾರೆ. ಪ್ರಾಚೀನ ಕಾಲದಲ್ಲೂ ಈ ಮಣ್ಣುಗಳನ್ನು ಬಣ್ಣಕ್ಕಾಗಿ ಬಳಸಿದ್ದಾರೆಂದು ತರ್ಕಿಸಬಹುದು. ಕೆಲವು ಹಳ್ಳಿಯ ಜನ ಈ ಚಿತ್ರಗಳನ್ನು ಹೆಣ್ಣಿನ ಹೆರಿಗೆ ಸಮಯದ ರಕ್ತವನ್ನು ಕೆಮ್ಮಣ್ಣಿಗೆ ಬೆರೆಸಿ ತಯಾರಿಸಿ ಕೆಂಬಣ್ಣದಿಂದ ಬರೆಯಲಾಗಿದೆ ಎಂದು ಹೇಳುತ್ತಾರೆ. ಹಂಪಿ ಮಲ್ಲಾಪುರಗಳಲ್ಲಿ ಮೈ ಮೇಲೆ ಗೆರೆಗಳಿರುವ ವ್ಯಕ್ತಿಗಳ ನಗ್ನ ಚಿತ್ರಗಳಿವೆ. ಇವರಲ್ಲಿ ಗರ್ಭೀಣಿ ಸ್ತ್ರೀಯರು ಇರುವುದುಂಟು. ಇವು ಒಂದು ರೀತಿಯ ಮಾಂತ್ರಿಕ ಕಟ್ಟಳೆಗೆ ಸಂಬಂಧಿಸಿದ ಚಿತ್ರಗಳೆಂದು ತೋರುತ್ತವೆ. ಇಂಥ ಚಿತ್ರಗಳನ್ನು ಮೇಲೆ ಹೇಳಿದ ರಕ್ತ ಬಳಸಿ ಬಿಡಿಸಿರಬಹುದಾದ ಸಾಧ್ಯತೆ ಇದೆ. ಬಿಳಿ ಬಣ್ಣಕ್ಕಾಗಿ ಸುಣ್ಣವನ್ನು (ಸುಣ್ಣದ ಕಲ್ಲು) ಬಳಸಲಗಿದೆ. ಸುಣ್ಣದಲ್ಲಿ ಬೂದಿಯನ್ನು ಬೆರೆಸಿ ಕೆಲವು ಚಿತ್ರಗಳನ್ನು ಬಿಡಿಸಲಾಗಿದೆ. ಟಾಲ್ಕ್ ಎಂದು ಕರೆಯುವ ಒಂದು ರೀತಿಯ ಮೆದು ಬಿಳಿ ಶಿಲೆಯು ಈ ಪ್ರದೇಶದಲ್ಲಿ ಅಲ್ಲಲ್ಲಿ ದೊರೆಯುತ್ತದೆ. ಅದನ್ನು ಬಿಳಿ ಬಣ್ಣಕ್ಕಾಗಿ ಬಳಸಿರುವ ಸಾಧ್ಯತೆಯು ಇದೆ.

 

[1] ಮಟಪಲ್, ವಾಯ್, ೧೯೮೪, ಪೂರ್ವೋಕ್ತ.

[2] ಸುಂದರ ಅ.ಸಂ. ೧೧೯೭, ಪೂರ್ವೋಕ್ತ,

[3] ಸುಬ್ರಮಣ್ಯಂ ಕೆ.ವಿ., ೧೯೯೨, ಪೂರ್ವಕ್ತ, ಪು. ೬.

[4] ದಿ ಗ್ಯ್ರಾಂಡ್ ಕ್ಸನನ್ಸ್, ಹಿಡನ್ ಆರ್ಟ್ ಗ್ವಾಲರೀಸ್, ೨೦೦೦, ಎನ್.ಜಿ., ಸಂ. ೧೬೭, ನಂ.೪.

[5] ಗವಿಶೆಟ್ಟಿ, ಕೆ., ೧೯೯೫, ಅದೇ.