ಸುಮಾರು ೧೯೮೭ರ ಫೆಬ್ರವರಿಯಲ್ಲಿ ಹಂಪೆಯ ಬಳಿ ಇರುವ ಕಮಲಾಪುರದಲ್ಲಿ ಚಿತ್ರದುರ್ಗದ ಶ್ರೀ ವೆಂಕಟೇಶ ಐತಾಳ ಅವರು ಸಂಗ್ರಹಿಸಿದ ಎರಡು ಬಿಳಿಯ ಜೇಡಿಮಣ್ಣಿನ ಗೊಂಬೆಗಳು ಪ್ರಾಚೀನ ಇತಿಹಾಸ ದೃಷ್ಟಿಯಿಂದ ಗಮನೀಯವಾಗಿವೆ. ಅವುಗಳನ್ನು ಶ್ರೀ ಐತಾಳ ಅವರು ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ವಸ್ತುಸಂಗ್ರಹಾಲಯಕ್ಕೆ ಅರ್ಪಿಸಿರುವರು. ನಾನು ಈ ಹಿಂದೆ, ಅಂದರೆ ೧೯೮೮ರ ಮೇ ತಿಂಗಳಲ್ಲಿ, ಧರ್ಮಸ್ಥಳಕ್ಕೆ ಶ್ರೀ ಹೆಗ್ಗಡೆಯವರ ಆಹ್ವಾನದ ಮೇಲೆ ಹೋಗಿದ್ದೆ. ಅಲ್ಲಿ ಪ್ರದರ್ಶಿತವಾದ ಎಲ್ಲ ಶಿಲ್ಪಗಳ, ಅವಶೇಷಗಳ ಪರಿಶೀಲನೆ ನಡೆಸುತ್ತಿದ್ದಾಗ ಕಮಲಾಪುರದ ಎರಡು ಬಿಳಿಯ ಜೇಡಿಮಣ್ಣಿನ (Stucco) ಗೊಂಬೆಗಳು ನನ್ನ ಗಮನವನ್ನು ವಿಶೇಷವಾಗಿ ಸೆಳೆದವು. ಇವೆರಡೂ ಗೊಂಬೆಗಳಲ್ಲಿ ಪ್ರಾಚೀನ ವೈಶಿಷ್ಟ್ಯತೆಗೆ ಪ್ರಸಿದ್ಧವಾದ ಗಾಂಧಾರ ಶೈಲಿಯ ಲಕ್ಷಣಗಳು ಕಂಡುಬಂದವು ಕ್ರಿಸ್ತಶಕ ಸುಮಾರು ಒಂದು ಮತ್ತು ಎರಡನೆಯ ಶತಮಾನದಲ್ಲಿ ಇಂದಿನ ವಾಯವ್ಯ ಗಡಿಪ್ರದೇಶದ ಭಾಗವಾಗಿದ್ದ ಗಾಂಧಾರದ ಕಲೆಯ ಬಗೆಗೆ ಈಗಾಗಲೇ ಸಾಕಷ್ಟು ಪರಿಚಯವಾಗಿದೆ. ಆದರೆ ದಕ್ಷಿಣಭಾರತದ ಹಂಪೆಯ ಪ್ರದೇಶದಲ್ಲಿ ದೊರೆತಿರುವ ಗಾಂಧಾರ ಲಕ್ಷಣವೆತ್ತಿರುವ ಬಿಳಿಯ ಜೇಡಿಮಣ್ಣಿನ ಗೊಂಬೆಗಳು ಅತ್ಯಂತ ಪ್ರಮುಖವಾದುವಾಗಿವೆ. ಈ ಗೊಂಬೆಗಳು ಗುರುತಿಸಲಾಗದಷ್ಟು ಮುರಿದು ಸವೆದಿದ್ದು, ಈ ಪ್ರಬಂಧದಲ್ಲಿ ಅವುಗಳ ಸಂಶೋಧನಾತ್ಮಕ ಅಧ್ಯಯನವನ್ನು ಮಾಡಲಾಗಿದೆ.

ಒಂದನೆಯ ಬಿಳಿಯ ಜೇಡಿಮಣ್ಣಿನ ಗೊಂಬೆ

ಇದು ಬಹುಮಟ್ಟಿಗೆ ಬುದ್ಧ ಅಥವಾ ಬೋಧಿಸತ್ವ (ಅಥವಾ ಸೈನಿಕ?)ನ ಅಭಿವ್ಯಕ್ತತೆ ಎನ್ನಬಹುದು. ಆದರೆ ಈ ವಿಗ್ರಹವು ತಲೆ, ಕೈ-ಕಾಲುಗಳನ್ನು ಕಳೆದುಕೊಂಡು ಭಿನ್ನವಾಗಿದೆ. ಇದರ ಈಗಿನ ಗಾತ್ರವು ೯.೦ ಸೆ.ಮೀ. ಎತ್ತರ, ೪.೦೬ ಸೆಂ.ಮೀ. ಅಗಲ ಹಾಗೂ ೨.೦೩ ಸೆಂ.ಮೀ. ದಪ್ಪವಾಗಿದೆ. ಈ ಗೊಂಬೆಯ ಅಧೋವಸ್ತ್ರದ ಸರಳ ನೆರಿಗೆಗಳು ಮಂಡಿಯ ಕೆಳಭಾಗದವರೆಗೂ ಜೋತು ಬಿದ್ದಿದ್ದು, ಎಡಭುಜದ ಮೇಲಿನಿಂದ ಹೊದೆಯಲಾಗಿರುವ ಹಾಗೂ ಕೆಳಕ್ಕೆ ಜೋಲಾಡುತ್ತಿರುವ ಉತ್ತರೀಯವು ನವಿರಾದ ನೆರಿಗೆಗಳಿಂದ ಕೂಡಿ ಆ ಕಾಲದ ವಸ್ತ್ರನೈಜತನೆಯನ್ನು ವ್ಯಕ್ತಪಡಿಸುತ್ತವೆ. ಈ ಗೊಂಬೆಯ ಸೊಂಟದ ಬಲಭಾಗದಲ್ಲಿ ಕತ್ತಿಯನ್ನು ತೂಗು ಹಾಕಿಕೊಳ್ಳಲು ಒರೆಯ ಹಿಡಿಯನ್ನು ಅಲವಡಿಸಿರುವಂತೆ ತೋರುತ್ತದೆ. ಈ ಅಭಿಪ್ರಾಯವು ಪೂರಕವಾಗುವುದಾದರೆ, ಇದು ಯಾವುದೋ ಯೋಧನ ಪ್ರತಿಕೃತಿಯಾಗಿದೆ ಎನ್ನಬಹುದು. ಆದರೆ ಅದರ ವಸ್ತ್ರಾಲಂಕಾರವು ಯೋಧನದಾಗಿರದೆ ಬುದ್ಧ ಅಥವಾ ಬೋಧಿಸತ್ವನ ಗಾಂಧಾರ ವಿಗ್ರಹಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹದಾಗಿದೆ. ಪ್ರಸ್ತುತ ಮಣ್ಣಿನ ಬೊಂಬೆಯ ಬಗೆಗೆ ಈಗ ನಮಗೆ ದೊರೆತಿರುವ ಸ್ಥಿತಿಯಲ್ಲಿಯೇ ಸ್ಪಷ್ಟವಾಗಿ ಹೇಳಬರುವಂತಿಲ್ಲ. ಅತ್ಯಂತ ಸೂಕ್ಷ್ಮ ಮತ್ತು ಶುದ್ಧವಾದ ಹಾಗೂ ಮುರಿಯುವಂತಹ ಬಿಳಿ ಜೇಡಿಮಣ್ಣಿನಲ್ಲಿ ದಂತಕಪ್ಪು  ವರ್ಣದ ಲೇಪನದೊಡನೆ ಈ ಗೊಂಬೆಯನ್ನು ತಯಾರಿಸಿರುವುದು ಗಮನೀಯವಾಗಿದೆ.

ಇಲ್ಲಿ ಚರ್ಚಿಸಲಾಗಿರುವ ಮಣ್ಣಿನ ಗೊಂಬೆಗಳಲ್ಲಿ ಕಂಡುಬರುವ ವೈವಿಧ್ಯಮಯ ನೆರಿಗೆಗಳುಳ್ಳ ಗ್ರೀಕೋ-ರೋಮನ್ನರ ಶಿಲ್ಪಗಳಲ್ಲಿಯ ವಸ್ತ್ರಾಲಂಕಾರದ ಲಕ್ಷಣಗಳು, ಈಗ ಪಾಕಿಸ್ತಾನದಲ್ಲಿರುವ ಗಾಂಧಾರ ಪ್ರದೇಶದ ಪ್ರಾಚೀನ ಬೌದ್ಧ ನಿವೇಶನಗಳಲ್ಲಿ ದೊರೆತ ಕ್ರಿ.ಶ. ೧-೨ನೆಯ ಶತಮಾನಗಳ ಶಿಲ್ಪಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಹಂಪೆಯ ಗೊಂಬೆಗಳನ್ನು ಗಾಂಧಾರ ಶೈಲಿಯ ಶಿಲ್ಪಗಳೊಂದಿಗೆ ತುಲನಾತ್ಮಕವಾಗಿ ನೋಡಿದಾಗ, ಇವುಗಳು ನಿಸ್ಸಂದೇಹವಾಗಿಯೂ ಎರಡನೆಯ ಶತಮಾನಕ್ಕೆ ಸೇರುತ್ತವೆನ್ನಬಹುದು. ಅತ್ಯಂತ ನುಣುಪಾದ ಜೇಡಿಮಣ್ಣಿನಿಂದ ಸಿದ್ಧಗೊಂಡ ಸೂಕ್ಷ್ಮ ನೆರಿಗೆಗಳೊಡನೆ ಕೂಡಿದ ಈ ಗೊಂಬೆಗಳನ್ನು ಹಂಪೆಯ ಪ್ರಾಗಿತಿಹಾಸ ಕಾಲದ ಕಲಾವಂತಿಕೆ ರಹಿತ ಗೊಂಬೆಗಳೊಡನೆ ಹೋಲಿಸಿದಾಗ, ಇವು ಸ್ಥಳೀಯವಾಗಿ ತಯಾರಾದುವಲ್ಲವೆಂಬುದು ವ್ಯಕ್ತಪಡುತ್ತದೆ. ಪ್ರಾಯಶಃ ಈ ಗೊಂಬೆಗಳು ವ್ಯಾಪಾರ-ವಾಣಿಜ್ಯ ಸಂಬಂಧದಲ್ಲಿ ಗಾಂಧಾರ ಪ್ರದೇಶದಿಂದ ಹಂಪೆಯ ಪ್ರದೇಶಕ್ಕೆ ರವಾನೆಯಾಗಿದ್ದಿರಬೇಕು.

ಗೊಂಬೆಯ ಪೀಠ

ಇನ್ನೊಂದು ಗೊಂಬೆಯ ಮುಖ್ಯ ಭಾಗವೆನ್ನಬಹುದಾದ ನಾಜೂಕಾದ ಆಯಾತಾಕಾರದ ಚಿಕ್ಕ ಪೀಠದ ಅಳತೆಯು ೮.೨. ಸೆಂ.ಮೀ. ಉದ್ದ, ೩.೦.ಸೆಂ.ಮೀ. ಎತ್ತರವಿದೆ. ಇದರ ಮುಂಭಾಗದಲ್ಲಿ ಎರಡು ಸಮಾನಾಂತರ ರೇಖೆಗಳನ್ನು ಕೊರೆಯಲಾಗಿದೆ ಹಾಗೂ ಇದರಲ್ಲಿ ಮೂರು ಉಬ್ಬು ವಿನ್ಯಾಸಗಳು ಅತ್ಯಂತ ಸುಂದರವಾಗಿ ಮೂಡಿ ಬಂದಿವೆ. ಇದರ ಮೇಲ್ಭಾಗವನ್ನು ನಸು ಕಂದುಬಣ್ಣದಿಂದ ಲೇಪಿಸಲಾಗಿದೆ.

ಹಂಪೆಯ ಮಹಾನವಮಿ ದಿಬ್ಬದ ಪರಿಸರದಲ್ಲಿ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯವು ಕಾರ್ಯ ರೂಪಗೊಳಿಸಿದ ಉತ್ಖನನದಿಂದ ಒಂದು ಬಿಳಿಯ ಜೇಡಿಮಣ್ಣಿನ ಮನುಷ್ಯನ ಶಿರಭಾರವೊಂದು ಬೆಳಕಿಗೆ ಬಂದಿದೆ.[1] ಈ ಮಣ್ಣಿನ ಗೊಂಬೆಯ ತಲೆಯುಡಿಗೆಯ ವಿನ್ಯಾಸವು ಗಾಂಧಾರಶೈಲಿಯನ್ನು ಹೋಲುತ್ತದೆ. ಗಾರೆ ಹಾಗೂ ಮಣ್ಣಿನ ಶಿಲ್ಪಗಳು ವಿಜಯನಗರ ಕಾಲದ ದೇವಾಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಉತ್ಖನನದಿಂದ ಬೆಳಕಿಗೆ ಬಂದಿರುವ ಈ ಗೊಂಬೆಯ ಭಾಗವು ವಿಜಯನಗರದ ಗಾರೆ ಶಿಲ್ಪಗಳಿಗಿಂತಲೂ ಉನ್ನತಮಟ್ಟದ್ದೆಂದು ಹೇಳಬಹುದಾಗಿದೆ. ಆದುದರಿಂದ ಇಲ್ಲಿ ದೊರೆತಿರುವ ಶಿರದ ಭಾಗವು ಅತ್ಯಂತ ಮುಖ್ಯವಾದುದಾಗಿದೆ. ಬೆಳಗಾವಿ ನಗರದ ಭಾಗವಾಗಿರುವ ವಡಗಾಂವ್-ಮಾಧವ ಪುರದ ಉತ್ಖನನ ಕಾಲದಲ್ಲಿ ದೊರೆತ ಕಪ್ಪು ಜೇಡಿಮಣ್ಣಿಗೆ ಗೊಂಬೆಯ ಶಿರಭಾಗವು ಬಹುಶಃ ಬುದ್ಧನನ್ನು ಪ್ರತಿನಿಧಿಸುತ್ತದೆ.[2] ಇದು ಸಹಾ ಗಾಂಧಾರಶೈಲಿಯನ್ನು ಹೋಲುತ್ತದೆ.

ಹಂಪೆಯ ಉತ್ಖನನ ಕಾರ್ಯದಲ್ಲಿ ಸಿಕ್ಕಿರುವ ಕ್ರಿ.ಶ. ೧ ಮತ್ತು ೨ನೆಯ ಶತಮಾನದ ಸುಣ್ಣದ ಹಲಗೆಯ ಮೇಲಿರುವ ಬ್ರಾಹ್ಮಿ ಶಾಸನವನ್ನು “ತರಸಾ ಪುತಸಾ ದಾನಮ್” ಎಂದು ಅರ್ಥೈಸಲಾಗಿದೆ.[3] ಹಜಾರರಾಮಸ್ವಾಮಿ ದೇವಾಲಯದ ಸಮೀಪದಲ್ಲಿ ಉತ್ಖನನ ನಡೆಸಿದಾಗ ದೊರೆತ ಅವಶೇಷಗಳಲ್ಲಿ ಶಾಸನ ಬರಹವುಳ್ಳ ಬೌದ್ಧ ಜಾತಕ ಕಥೆಗಳನ್ನು ಪ್ರತಿನಿಧಿಸುವ ಕೆತ್ತನೆಯುಳ್ಳ ಫಲಕಗಳು ಮತ್ತು ‘ಆಯಕ’ ಸ್ತಂಭವು (ಎಲ್ಲವೂ ಸುಣ್ಣ ಕಲ್ಲಿನಲ್ಲಿ ತಯಾರಿಸಲ್ಪಟ್ಟಿವೆ.) ಅತ್ಯಂತ ಗಮನೀಯವಾಗಿವೆ. ವಿಜಯವಿಠ್ಠಲಸ್ವಾಮಿ  ದೇವಾಲಯ ಪರಿಸರದ ಪುರಾತನ ನಿವೇಶನವೆಂದು ತೀರ್ಮಾನಿಸಲಾಗಿರುವ ಮೊಸಳಯ್ಯನ ಗುಡ್ಡದ ಮೇಲ್ಭಾಗದ ಮತ್ತು ೧೯೮೨ರಲ್ಲಿ ನಾನೇ ಪರಿಶೋಧಿಸಿದಾಗ ಮಾತಂಗ ಪರ್ವತದ ತಪ್ಪಲಲ್ಲಿ ದೊರೆತ ಅವಶೇಷಗಳು ಹೊಸ ಶಿಲಾಯುಗ (ಕ್ರಿ.ಪೂ.ಸು. ೨೦೦೦-೧೦೦೦) ಮತ್ತು ಪ್ರಾಗ್ ಇತಿಹಾಸಯುಗ (ಕ್ರಿ.ಪೂ. ೩೦೦-ಕ್ರಿ.ಶ. ೨೦೦) ಸಂಸ್ಕೃತಿಗಳ ಪ್ರತೀಕಗಳಾಗಿವೆ. ಈ ಉದಾಹರಣೆಗಳಿಂದ ಹಂಪೆಯ ಪರಿಸರವು ಹೊಸ ಶಿಲಾಯುಗದಲ್ಲಿಯೇ ಜನನಿಬಿಡ ಪ್ರದೇಶವಾಗಿದ್ದುದಲ್ಲದೆ ಮಾನವನ ಚಟುವಟಿಕೆಗಳ ಕೇಂದ್ರವಾಗಿ ವಿಕಾಸ ಪಡೆಯುತ್ತಿದ್ದಿತೆಂದು ವ್ಯಕ್ತಪಡುತ್ತದೆ.

ಈ ಪ್ರಾಗ್‌ಇತಿಹಾಸ ಕಾಲದಲ್ಲೆ ಬೌದ್ಧಸ್ತೂಪವೊಂದು ಇಲ್ಲಿ ನಿರ್ಮಾಣಗೊಂಡು, ನಂತರ ಮಧ್ಯಕಾಲದ ವೇಳೆಗೆ ಅಲಕ್ಷ್ಯಕ್ಕೊಳಪಟ್ಟು ಅದು ನಿರುಪಯುಕ್ತವಾಯಿತು. ಅನಂತರವೂ ಈ ಪ್ರದೇಶದಲ್ಲಿ ಚುರುಕಾಗಿ ನಡೆದ ರಾಜಧಾನಿಯ ನಿರ್ಮಾಣದಲ್ಲಿ, ಸಹಜವಾಗಿಯೇ ಅಲಕ್ಷಿಸಲ್ಪಟ್ಟಿದ್ದ ಬೌದ್ಧಸ್ತೂಪದ ಇಂತಹ ಅವಶೇಷಗಳನ್ನೂ ಬಳಸಿರಬಹುದಾಗಿದೆ. ಇಲ್ಲಿರುವ ಅತಿ ಉಬ್ಬು ಶಿಲ್ಪಗಳುಳ್ಳ ಫಲಕಗಳು ಅನಂತರದ ಅಮರಾವತಿ ಅಥವಾ ಇಕ್ಷ್ವಾಕು ಶೈಲಿಯನ್ನು ಹೋಲುತ್ತವೆ. ಉಡೆ ಗೋಲಮ್ ಮತ್ತು ನಿಟ್ಟೂರುಗಳಲ್ಲಿ ದೊರೆತಿರುವ ಅಶೋಕ ಸಾಮ್ರಾಟನ ವೈಯಕ್ತಿಕ ಹೆಸರನ್ನು ಸೂಚಿಸುವ ಬಂಡೆಶಾಸನಗಳು ಮತ್ತು ಅಲ್ಲಿಯ ಇತರೆ ಪ್ರಾಚ್ಯ ನಿವೇಶನಗಳು ಹಂಪೆಯಿಂದ ಸ್ವಲ್ಪ ಅಂತರದಲ್ಲಿ ಇವೆ.

ಆದ್ದರಿಂದ ಇದುವರೆಗೆ ಚರ್ಚಿಸಲಾಗಿರುವ ಆಧಾರದ ಮೇಲೆ, ಹಂಪೆಯು ಕೂಡಾ ಉತ್ತರದಲ್ಲಿಯ ತೇರ್ ಮತ್ತು ಸನ್ನತಿ, ದಕ್ಷಿಣದಲ್ಲಿಯ ಚಂದ್ರವಳ್ಳಿ, ಪಶ್ಚಿಮದಲ್ಲಿಯ ವಡಗಾಂವ್-ಮಾಧವಪುರ ಮತ್ತು ಕೊಲ್ಲಾಪುರ ಮುಂತಾದ ಪ್ರಸಿದ್ಧ ಪ್ರಾಚೀನ ವ್ಯಾಪಾರ ವಾಣಿಜ್ಯ ಕೇಂದ್ರಗಳಂತೆಯೇ ಒಂದು ಪ್ರಮುಖ ಕೇಂದ್ರವಾಗಿದ್ದು, ದೂರ ಪ್ರದೇಶಗಳ ವರ್ತಕರನ್ನು ಆಕರ್ಷಿಸುತ್ತಿದ್ದಿತು. ಈ ವಿವರಗಳೇ ಪ್ರಸ್ತುತ ಗಾಂಧಾರಶೈಲಿಯ ಬಿಳಿಯ ಮಣ್ಣಿನ ಗೊಂಬೆಗಳ ಇರುವಿಕೆಗೆ ಕಾರಣವೆಂಬುದನ್ನು ಸ್ಪಷ್ಟಪಡಿಸುತ್ತವೆ.*

(ಕನ್ನಡಾನುವಾದ/ಎನ್.ಎ. ಜಗನ್ನಾಥ್)

ಆಕರ
ಇತಿಹಾಸ ದರ್ಶನ, ಸಂ. ೪, ೧೯೮೯, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು ಪು. ೨೯-೩೦.

 

[1] Indian archaeology, A Review, An annual Report of the Archaeological survey of India, New Delhi, 1978-79 : 45, Plate XIV.

[2] A. Sudara : ‘A Two Thousand Year Old Town and its Architecture in Vadgaon-Madhavapur (Belgaum)’, Madhu (Shri M.N. Deshpande Festschrift), Delhi, 1981, pp. 87-89, Plate XXIII.

[3] I.A.R., 1975-76, p. 20.

* ಎರಡು ಬಿಳಿಯ ಜೇಡಿಮಣ್ಣಿನ ಗೊಂಬೆಗಳ ಅಧ್ಯಯನಕ್ಕೆ ಅನುಮತಿ ನೀಡಿ ಈ ಪ್ರಬಂಧವನ್ನು ಪೂರೈಸಲು ಅವಕಾಶ ಕಲ್ಪಿಸಿಕೊಟ್ಟುದಕ್ಕೆ ನಾನು ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಆಭಾರಿಯಾಗಿದ್ದೇನೆ.