ಮುದ್ರೆಗಳು ಸಿಂಧೂಕಂದರ ನಾಗರೀಕತೆಗಳ ಕಾಲದಷ್ಟು ಪ್ರಾಚೀನ. ಈ ಮುದ್ರೆಗಳ ಉಪಯೋಗ ಮತ್ತು ಅದರ ಮೇಲಿನ ಲಿಪಿಯ ಬಗ್ಗೆ ಅನೆಕ ವಾದ-ವಿವಾದಗಳಿದ್ದರೂ ಇವು ಆ ಕಾಲದ ಇತಿಹಾಸದ ಪುನರ್ರಚನೆಯಲ್ಲಿ ತಮ್ಮದೇ ಆದ ಕೀಲಕ ಪಾತ್ರವನ್ನು ನಿರ್ವಹಿಸಿದ್ದು, ಮುಖ್ಯ ಆಕರ ಸಾಮಗ್ರಿಗಳೆನ್ನುವ ಅಂಶ ಮಾತ್ರ ನಿರ್ವಿವಾದದ್ದು. ಉತ್ತರ ಭಾರತದಲ್ಲಿ ಇತಿಹಾಸ ಯುಗದ ಆರಂಭ ಕಾಲದಿಂದ ಸುಮಾರು ಹತ್ತನೆಯ ಶತಮಾನದವರೆಗೆ ವಿವಿಧ ರೀತಿಯಲ್ಲಿ ಉಪಯೋಗಿಸಲಾಗಿರುವ ಮುದ್ರೆಗಳು ಬೆಳಕಿಗೆ ಬಂದಿದ್ದರೂ, ದಕ್ಷಿಣ ಭಾರತದಲ್ಲಿ ಇವು ತೀರ ಕಡಿಮೆ. ಪ್ರಾಮಾಣ್ಯದ ಖಾತರಿಗಾಗಿ ವಿವಿಧ ರೀತಿಯಲ್ಲಿ ಉಪಯೋಗಿಸಲಾಗಿರುವ ಮುದ್ರೆಗಳು ಬಹುಮುಖ್ಯವಾಗಿದ್ದರೂ, ವಿಜಯನಗರದ ಕಾಲಕ್ಕೆ ಸಂಬಂಧಿಸಿದಂತೆ ಇವುಗಳ ಲಭ್ಯ ಬೆರಳೆಣಿಕೆಯಷ್ಟು.

ಹಂಪಿ ರಾಷ್ಟ್ರೀಯ ಯೋಜನೆಯ ಅಂಗವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು, ಹಂಪಿಯ ’ರಾಜಾಂಗಣ’ ಪ್ರದೇಶದಲ್ಲಿ ನಡೆಸಲಾದ ಸುಮಾರು ಒಂದು ದಶಕಕ್ಕೂ ಹೆಚ್ಚಿನ ಕಾಲದ ಉತ್ಖನನದಲ್ಲಿ ಇದುವರೆವಿಗೂ ೫೯,೦೦೦ ಚ.ಮೀ.ಗಳ ಸ್ಥಳವನ್ನು ವೈಜ್ಞಾನಿಕ ರೀತ್ಯ ಪರಿಶೋಧಿಸಲಾಗಿದೆ. ಈ ಉತ್ಖನನದಿಂದಾಗಿ ಅನೇಕ ರೀತಿಯ ಕಟ್ಟಡಗಳ ತಲವಿನ್ಯಾಸವು ತಿಳಿಯುವಂತಿದ್ದು ನಿಖರವಾಗಿ ಗುರುತಿಸಬಹುದಾದ ಅರಮನೆಯ ಸಂಕೀರ್ಣ, ಕಾವಲುಗಾರರ ಮನೆ, ಉಗ್ರಾಣಗಳಲ್ಲದೇ ಜಲ ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ ಇತ್ಯಾದಿಗಳನ್ನು ಕುರಿತಂತೆ ಸೂಕ್ತ ಮಾಹಿತಿ ದೊರೆತಿದೆ. ಜೊತೆಗೆ ವಿವಿಧ ರೀತಿಯ ಶಿಲೆ, ಸುಟ್ಟ ಮಣ್ಣು, ಗಚ್ಚು-ಗಾರೆ ಮುಂತಾದ ಮಾಧ್ಯಮಗಳಲ್ಲಿ ರೂಪಿಸಲಾದ ನೂರಾರು ಪ್ರಾಚ್ಯ ಅವಶೇಷಗಳು ಬಗೆ ಬಗೆಯ ನಾಣ್ಯಗಳು, ಒಡವೆ ಮತ್ತು ವೈವಿಧ್ಯಮಯವಾದ ಮಣ್ಣಿನ ಪಾತ್ರೆಗಳೂ ದೊರೆತಿವೆ. ಇಂತಹ ಅನೇಕ ಪ್ರಾಚ್ಯವಸ್ತ್ರ ವಿಶೇಷಗಳಲ್ಲಿ ಸುಟ್ಟ ಮಣ್ಣಿನ ಹಾಗೂ ಕಲ್ಲಿನ ಮುದ್ರೆಗಳು ಮಹತ್ವದ್ದಾಗಿವೆ.

ಈಗಾಗಲೇ ನಮಗೆ ತಿಳಿದಿರುವಂತೆ ಮುದ್ರೆಯು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ರಚನೆಗೆ ಪ್ರಾಥಮಿಕ ಆಕರಗಳಾಗಿ ಕಲೆ, ಪ್ರತಿಮಾ ಲಕ್ಷಣ, ವ್ಯಾಪಾರ ಮತ್ತು ವಾಣಿಜ್ಯ, ಅರಸರ ಕಾಲ ಹಗೂ ಆಡಳಿತಗಳ ಮೇಲೆ ಸಾಕಷ್ಟು ಬೆಳಕನ್ನು ಚೆಲ್ಲಿದೆ. ‘ರಾಜಾಂಗಣ’. ಮತ್ತು ರಾಜಾಂಗಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಉತ್ತರದ ಕಡೆ ನಡೆಸಿದ ಉತ್ಖನನದಲ್ಲಿ ಮೂರು ಮುದ್ರೆಗಳು ದೊರೆತಿವೆ. ಈ ಮುದ್ರೆಗಳು ಶಂಖುವಿನಾಕಾರದಲ್ಲಿದ್ದು, ಕಪ್ಪು ಮತ್ತು ಬೂದು ಬಣ್ಣಗಳ ಮಿಶ್ರಣದವಾಗಿದ್ದು, ಅಧಿಕ ಉಷ್ಣೋಗ್ರತೆಯಲ್ಲಿ ಸುಡಲಾಗಿದೆ. ಇವುಗಳು ೧೦ ಸೆಂ. ಮೀ. ನಿಂದ ೧ ೧/೨ ಮೀಟರಿನ ಆಳದಲ್ಲಿ ದೊರೆತಿದ್ದು ಮುದ್ರೆಗಳ ತಳಭಾಗದಲ್ಲಿ ೧ ಸೆಂ.ಮೀ.ನಿಂದ ೪ ಸೆಂ.ಮೀ.ಗಳ ವ್ಯಾಸವನ್ನು ಹೊಂದಿವೆ. ಸಾಮಾನ್ಯವಾಗಿ ಮುದ್ರೆಗಳ ತಳಭಾಗವು ಸಮತಟ್ಟಾಗಿದ್ದು ಅದರ ಹಿಡಿಯು ಮೇಲ್ತುದಿಯಲ್ಲಿದೆ. ಈ ಕಠಾರಿಯ ಇಕ್ಕೆಲಗಳಲ್ಲಿ ಸೂರ್ಯ ಮತ್ತು ಚಂದ್ರರ ಕೆತ್ತನೆಯಿದ್ದು ವಿಜಯನಗರದ ಅರಸರ ರಾಜ ಲಾಂಛನವನ್ನು ಹೋಲುತ್ತದೆ. ಎರಡನೆಯ ಅಥವಾ ಮಧ್ಯಭಾಗವು ‘ಶ್ರೀವಿರಬು’ ಎಂಬ ಅಕ್ಷರಗಳನ್ನು ಹೊಂದಿದ್ದು ತಳಭಾಗವು ಅಥವಾ ಕೊನೆಯ ‘ಕರಾಯ’ ಎಂಬ ಅಕ್ಷರಗಳನ್ನು ಹೊಂದಿದ್ದು; ಕೂಡಿಸಿದಾಗ ‘ಶ್ರೀವಿರಬುಕರಾಯ’ ಎಂಬುದಾಗಿ ಓದಬಹುದಾಗಿದ್ದು ವಿಜಯನಗರದ ಅರಸರ ಕಾಲದ ನಾಣ್ಯಗಳ ಒಂದು ಮುಖವನ್ನು ಹೋಲುತ್ತವೆ. ಆದರೆ ವಿಜಯನಗರದ ಕಾಲದ ನಾಣ್ಯಗಳಂತೆ ಮುದ್ರೆಗಳು ಕಲಾತ್ಮಕ ಅಂಚನ್ನು ಹೊಂದಿರುವುದಿಲ್ಲ. ಅಕ್ಷರಗಳು ನಾಗರ ಲಿಪಿಯಲ್ಲಿದ್ದು ಶೈಲಿಯ ದೃಷ್ಟಿಯಿಂದ ಕ್ರಿ.ಶ. ೧೪ನೆಯ ಶತಮಾನದ ಲಿಪಿಯಂತಿದ್ದು ಒಂದನೇ ಬುಕ್ಕರಾಯನ ಕಾಲದ ಚಿನ್ನದ ಮತ್ತು ತಾಮ್ರದ ನಾಣ್ಯಗಳ ಮೇಲ್ಮುಖದಲ್ಲಿ ಕಾಣುವ ಆಖ್ಯಾಯಿಕೆಯನ್ನು ಹೋಲುತ್ತದೆ.

ಅಂದಿನ ದಿನಗಳಲ್ಲಿ ಅರಮನೆಯ ಪ್ರವೇಶ ಅಥವಾ ಕಾರ್ಯಸದನದ ಪ್ರವೇಶ ಬಹಳ ಪ್ರಯಾಸಕರವಾಗಿತ್ತೆಂದು ನಮ್ಮ ದೇಶದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದಲ್ಲಿಯೂ ಮತ್ತು ಕೌಟಿಲನ್ಯ ಅರ್ಥಶಾಸ್ತ್ರದಲ್ಲೂ ಉಲ್ಲೇಖಿಸಲಾಗಿದೆ. ಅದರಲ್ಲೂ ದ್ವಿತೀಯ ಆಯಾಮದಲ್ಲಿ ಪ್ರವೇಶ ಬಯಸುವುದು ಇನ್ನೂ ಕಷ್ಟಕರವಾಗಿತ್ತು. ಆಡಳಿತಾತ್ಮಕ ದೃಷ್ಟಿಯಿಂದಲೂ ಮತ್ತು ರಕ್ಷಾಣಾತ್ಮಕ ದೃಷ್ಟಿಯಿಂದಲೂ ಅಂತಹ ಪ್ರವೇಶ ಬಯಸುವ ಯಾರನ್ನೇ ಆಗಲಿ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸುತ್ತಿದ್ದರು. ತುರ್ತು ಪರಿಸ್ಥಿತಿಯಲ್ಲಂತೂ  ಈ ತಪಾಸಣೆಯು ಮತ್ತಷ್ಟು ಬಿಗಿಯಿಂದ ಕೂಡಿರುತ್ತಿತ್ತು. ಈ ಬಗ್ಗೆ ವಿದೇಶಿ ಯಾತ್ರಿಕರಾದ  ನ್ಯೂನಿಜ್, ಅಬ್ದುಲ್ ರಜಾಕ್, ಡಾಮಿಂಗೊ ಪಾಯೆಶ್ ಮುಂತಾದವರ ಬರವಣಿಗೆಗಳಲ್ಲಿ ಉಲ್ಲೇಖವಿದ್ದು, (ತಡೆಗೋಡೆ) ಪರದೆ ಗೋಡೆಗಳ ವಂಕಿಯಾದ ಪ್ರವೇಶದ್ವಾರದಿಂದ ಈ ವಿಷಯಕ್ಕೆ ಉತ್ತಷ್ಟು ಪುಷ್ಟಿ ದೊರೆತಿದೆ.

ಅರಸನ ಕಾರ್ಯಕಾರಿ ಸದನದಲ್ಲಿ ರಾಜಾಜ್ಞೆಗಳನ್ನು ಅಥವಾ ಶಾಸನಗಳನ್ನು ಅಧಿಕೃತವಾಗಿ ವಿಧಿವತ್ತಾಗಿ ಹೊರಡಿಸಲು ಮುದ್ರೆಗಳನ್ನು ವಿಶೇಷವಾಗಿ ಬಳಸುತ್ತಿದ್ದರು. ಉತ್ಖನನದಲ್ಲಿ ದೊರೆತ ಅಪಾರ ಸಂಖ್ಯೆಯ ಬಳಪದ ಕಲ್ಲಿನ ಕಡ್ಡಿಗಳನ್ನು ‘ಕಡಿತ’ಗಳನ್ನು ಬರೆಯಲು ಉಪಯೋಗಿಸುತ್ತಿದ್ದರು. ಸಹಜವಾಗಿಯೇ ಪ್ರತಿಯೊಂದು ಕಡಿತವು ‘ದೊರೆ’ ಅಥವಾ ಆತನ ಪ್ರತಿನಿಧಿ ಅಧಿಕಾರಿಗೂ ಪರಿಶೀಲನೆಗೊಳಪಟ್ಟಿದ್ದುದರ ಕುರುಹಾಗಿ ರಾಜಮುದ್ರೆಯನ್ನು ಹೊಂದಿರುತ್ತಿದ್ದುವು.

ಈ ಮುದ್ರೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಿಶೇಷವಾಗಿ ಶಂಖುವಿನಾಕಾರದ ಮುದ್ರೆಗಳ ಹಿಡಿಯು ಮರದ ಅಥವಾ ದಂತದ ಕೈಪಿಡಿಯನ್ನು ಹೊಂದಿತ್ತೆಂಬುದಾಗಿ ತಿಳಿಯಬಹುದಾಗಿದೆ. ಬಳೆಗಳು, ಮಣಿಗಳು, ಬೊಟ್ಟುಗಳು, ಮೂಗುತಿ ಇತ್ಯಾದಿಗಳು ಚಿನ್ನದ ಹಾಳೆಗಳ ಹೊದಿಕೆಯಿರುವ ಆಭರಣಗಳು ಸಾಕಷ್ಟು ಸಂಖ್ಯೆಯಲ್ಲಿ ದೊರೆತಿರುವುದರಿಂದ ಮುದ್ರೆಗಳ ಕೈಪಿಡಿಗೆ ತೆಳುವಾದ ಚಿನ್ನದ ಹೊದಿಕೆಯೊಂದಿಗೆ ಉಪಯೋಗಿಸುತ್ತಿದ್ದರೆಂಬ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಈ ರಾಜ ಮುದ್ರೆಗಳು ಮೇಲೆ ತಿಳಿಸಿದ ಸ್ಥಳದಲ್ಲಿ ದೊರೆತಿವೆಯಾದ್ದರಿಂದ ಅಲ್ಲಿದ್ದಂತಹ ಆಡಳಿತಾತ್ಮಕ ಹಾಗೂ ರಕ್ಷಣಾತ್ಮಕ ಕಟ್ಟಡಗಳ ಕಲ್ಪನೆಯನ್ನು ಸ್ಪಷ್ಟ ಪುರಾವೆಯೊಂದಿಗೆ ಪಡೆಯಬಹುದಾಗಿದೆ.

ಆಕರ
ಇತಿಹಾಸ ದರ್ಶನ, ಸಂ. ೮, ೧೯೯೩, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು, ಪು. ೧-೨