ಪೀಠಿಕೆ

ಶತ-ಶತಮಾನ ಪ್ರಾಚೀನ ವರ್ಣಚಿತ್ರಗಳು ಈಗೀಗ ಹೆಚ್ಚಾಗಿ ಬೆಳಕಿಗೆ ಬರುತ್ತಲಿರುವುದು ಅಭಿಮಾನದ ವಿಷಯ, ಹಾಗೆಯೇ ಪುರಾತತ್ವಾನ್ವೇಷಕರು, ಚರಿತ್ರಕಾರರು, ಕಲಾಭ್ಯಾಸಿಗಳು, ಕಲಾವಿಮರ್ಶಕರು ಈ ವರ್ಣರಂಜಿತ ಕಲಾ ಸಂಪತ್ತನ್ನು ವಿವಿಧ ದೃಷ್ಟಿಕೋನಗಳಿಂದ ನೋಡಿ, ತುಲನೆ ಮಾಡಿ, ಅಭ್ಯಸಿಸಿ, ಅವುಗಳ ಹಿರಿಮೆಗಳನ್ನು ಪ್ರಕಟಿಸುತ್ತಿರುವುದು ಮತ್ತೊಂದು ಸ್ತುತ್ಯಕಾರ್ಯ. ಇಲ್ಲಿ ಹಂಪೆಯ ಶ್ರೀ ವಿರೂಪಾಕ್ಷ ಸ್ವಾಮಿಯ ದೇವಸ್ಥಾನದಲ್ಲಿ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿಯ ವರ್ಣಚಿತ್ರಗಳ ವಿವರಣೆಗಳನ್ನು ಪ್ರಸ್ತುತ ಪಡಿಸಲಾಗಿದೆ.

ಪರಂಪರೆ

ಅನೇಕ ಮೂಲಗಳಿಂದ ಈಗಾಗಲೇ ತಿಳಿದಿರುವಂತೆ ವರ್ಣಚಿತ್ರ ಕಲೆಯ ಸಾವಿರಾರು ವರ್ಷಗಳಿಂದಲೂ ಪ್ರಚುರದಲ್ಲಿತ್ತು. ಎಂದರೆ, ಮಾನವನು ಶಿಲಾಯುಗದ ಕಾಲದಲ್ಲಿಯೇ, ಸಾವಿರಾರು ವರ್ಷಗಳಿಗಿಂತ ಮೊದಲೇ, ತನ್ನ ಭಾವನೆಗಳನ್ನು, ತನ್ನ ಮನಸ್ಸಿನಲ್ಲಿ ಮೂಡಿದ ರೂಪುಗಳನ್ನು, ತನಗೆ ಅನ್ಯೋನ್ಯವಾದ ಪರಿಸರಗಳ ದೃಶ್ಯಗಳನ್ನು ವರ್ಣಗಳಿಂದ ಚಿತ್ರಿಸುವಲ್ಲಿ ತೊಡಗಿದ್ದನೆಂಬುದಕ್ಕೆ ಅನೇಕ ನಿದರ್ಶನಗಳು ದೊರೆತಿವೆ. ಶಿಲಾಯುಗಗಳ ಮಾನವನು, ತಾನು ನೆಲೆಸಿದ್ದ ನಿವೇಶನಗಳಲ್ಲಿ, ಮುಖ್ಯವಾಗಿ ಗುಹೆಗಳಲ್ಲಿ, ಬೆಟ್ಟಗಳ ಅಥವಾ ಬಂಡೆಗಳ ಆಸರೆಗಳಲ್ಲಿ ಚಿತ್ರಿಸುತ್ತಿದ್ದನು. ತನ್ನ ಮನಸ್ಸಿನ ಭಾವನೆಗಳಿಗೆ ಆಕರಗಳನ್ನು ತನ್ನದೇ ಆದ ಶೈಲಿಯಲ್ಲಿ ಕೊಡುತ್ತಿದ್ದನೆಂಬುದನ್ನು ಗುಹಾಚಿತ್ರಗಳಿಂದ ತಿಳಿಯಬಹುದು. ಅಲ್ಲದೆ ಇವು ಬಹಳವಾಗಿ ಸರಳವಾದ ಶೈಲಿಯಲ್ಲಿದ್ದು ಕಂದು, ಕಾವಿ ಅಥವಾ ಬಿಳಿಯ ಬಣ್ಣಗಳಲ್ಲಿ ಮಾತ್ರ ಚಿತ್ರಿತವಾಗಿವೆ  ಮತ್ತು ಇವು ಚಪ್ಪಟೆಯಾದ ಅಥವಾ ರೇಖಾ ವಿನ್ಯಾಸದ ಚಿತ್ರಗಳಾಗಿರುತ್ತವೆ. ಇವು ಸಾಮಾನ್ಯವಾಗಿ ಬೇಟೆಯಲ್ಲಿ ನಿರತನಾದ ಮಾನವನನನ್ನೋ ಅಥವಾ ಬೇಟೆಯಾಡಲ್ಪಡುತ್ತಿದ್ದ ಪ್ರಾಣಿಗಳನ್ನೋ ನಿರೂಪಿಸುವಂತೆ ಚಪ್ಪಟೆಯಾಗಿ ಚಿತ್ರಿತವಾಗಿರುತ್ತವೆ. ಮತ್ತೆ ಕೆಲವು ರೇಖಾವಿನ್ಯಾಸಗಳಲ್ಲಿ ಮಾತ್ರ ಕಾಣಬರುತ್ತವೆ.

ಶಿಲಾಯುಗಕ್ಕೆ ಸೇರಿದ ಕಂದು ಬಣ್ಣದ ಚಿತ್ರಗಳನ್ನು ಹಂಪೆಯ ‘ಸಿಂತಾ ಸೆರಗು’ ಪ್ರದೇಶದ ಹತ್ತಿರ ಕೆಲವು ಬಂಡೆ ಆಸರೆಗಳ ಮೇಲೆ ಈಗಲೂ ಕಾಣಬಹುದು. ಮತ್ತು ಇದೇ ಜಿಲ್ಲೆಯ ಬಳ್ಳಾರಿಯ ಹತ್ತಿರದ ಸಂಗನಕಲ್ಲು ಗುಡ್ಡದಲ್ಲಿ, ಕುರುಗೋಡಿನ ಹತ್ತಿರದ ಗುಡ್ಡಗಳಲ್ಲಿಯೂ ಸಹ ಇಂತಹ ಚಿತ್ರಗಳು ಕಾಣಬರುತ್ತವೆ. ಹಂಪೆಗೆ ಸಮೀಪದಲ್ಲಿರವ ಆನೆಗೊಂದಿ, ಹಿರೇಬೆಣಕಲ್ಲು, ಗುಡ್ಡಗಳಲ್ಲಿ ಸಹ ಇವು ಕಾಣಸಿಗುತ್ತವೆ.

ಇದೇ ರೀತಿ, ಎಂದರೆ ಚಪ್ಪಟೆಯಾಗಿ ಒಂದೇ ರಂಗಿನಲ್ಲಿ ಚಿತ್ರಿಸುವ ಕಲೆ ಬಹುಪುರಾತನ ಕಾಲದಿಂದಲೂ ಪ್ರಚಲಿತದಲ್ಲಿದ್ದುದಾಗಿ, ಆ ಕಾಲದ ಮಣ್ಣಿನ ಪಾತ್ರೆಗಳ ಅಧ್ಯಯನದಿಂದಲೂ ತಿಳಿಯುತ್ತದೆ. ಉತ್ತರ ಭಾರತದಲ್ಲಿ ಹರಪ್ಪಾ ಮೊಹೆಂಜೋದಾರೋ ಸಂಸ್ಕೃತಿಯ ನಿವೇಶನಗಳಲ್ಲಿ ವಿಪುಲವಾಗಿ ದೊರೆಯುವ ಮಡಕೆ ಅಥವಾ ಮಣ್ಣಿನ ಪಾತ್ರೆಗಳನ್ನು ಪರಿಶೀಲಿಸಿದರೆ, ಅವುಗಳ ಮೇಲೆ ವರ್ಣಚಿತ್ರಗಳನ್ನು ಬಿಡಿಸುವ ಕಲೆಯು ಬಹು ಜನಾದರಣೀಯವಾಗಿದ್ದಿತೆಂದು ತಿಳಿದುಬರುತ್ತದೆ. ಇವುಗಳಾದರೋ ನಾಲ್ಕೂವರೆ ಸಾವಿರ ವರ್ಷಗಳಷ್ಟು ಹಿಂದಿನವೆಂಬುದು ಖಚಿತವಾಗಿ ತಿಳಿದುಬಂದಿದೆ. ಇವುಗಳ ವಿಷಯಗಳೋ ಬಹು ವೈವಿಧ್ಯಮಯವಾಗಿವೆ. ಇವೆಲ್ಲವೂ ಚಪ್ಪಟೆಯಾಗಿದ್ದು ಮತ್ತು ಒಂದೇ ಬಣ್ಣದಲ್ಲಿ, ಸಾಮಾನ್ಯವಾಗಿ ಕಪ್ಪು ಕಂದು ಬಣ್ಣದಲ್ಲಿ, ಚಿತ್ರಿತವಾಗಿರುತ್ತವೆ. ಆನಂತರದ ಪುರಾಣಗಳ ಕಾಲದಲ್ಲಿ  (ರಾಮಾಯಣ ಮತ್ತು ಮಹಾಭಾರತಗಳ ಕಲ ಆರ್ಯಸಂಸ್ಕೃತಿಯ ಕಾಲವೆಂದು ಸಾಮಾನ್ಯ ವಾಡಿಕೆ) ಚಿತ್ರಿತ ವಿಷಯಗಳು ಮೊದಲಿನಂತೆ ವೈವಿಧ್ಯಮಯವಾಗಿರದೇ ಇದ್ದರೂ, ವಿವಿಧ ರೀತಿಯ ಜ್ಯಾಮಿತಿ ರೇಖಾವಿನ್ಯಾಸಗಳಲ್ಲಿ ಮಾತ್ರ ಕಾಣಬರುತ್ತವೆ. ಇವು ಸಾಮಾನ್ಯವಾಗ ಕಪ್ಪು ಬಣ್ಣದಲ್ಲಿರುತ್ತವೆ. ದಕ್ಷಿಣದಲ್ಲಿಯೂ ಸಹ ಶಾತವಾಹನರ ಕಾಲದ ನಿವೇಶನಗಳಲ್ಲಿ (ಕ್ರಿ.ಪೂ.೩೦೦ ರಿಂದ ಕ್ರಿ.ಶ. ೩೦೦ರವರೆಗಿನ ಕಾಲ) ದೊರೆಯುವ ಮಡಿಕೆಗಳ ಮೇಲೆಯೂ ಬಿಳಿಯ ಅಥವಾ ನಸು ಹಳದಿ ಬಣ್ಣಗಳಲ್ಲಿ ಮಾಡಿರುವ ರೇಖಾ ವಿನ್ಯಾಸಗಳನ್ನು ಕಾಣ ಬಹುದು. ಮುಸಲ್ಮಾನರ ಆಗಮನದಿಂದ ಬಳಕೆಗೆ ಬಂದ ಪಿಂಗಾಣಿ ಪಾತ್ರೆಗಳ ಮೇಲೆ ವೈವಿಧ್ಯಮಯ ಚಿತ್ರಗಳಿಂದ ಮತ್ತು ವಿವಿಧ ಬಣ್ಣಗಳಲ್ಲಿ, ಬೇರೆ ರೀತಿಯ ತಾಂತ್ರಿಕ ಪದ್ಧತಿಯಲ್ಲಿ, ಅಲಂಕರಿಸುವುದು ಸಾಮಾನ್ಯ ವಿಷಯವಾಯಿತು. ಆನಂತರದ ಇಂಗ್ಲೀಷರು ಮತ್ತು ಇತರ ಯುರೋಪಿಯನ್ನರ ಕಾಲದಲ್ಲಿ ಪಿಂಗಾಣಿ ಪಾತ್ರೆಗಳ ಅವರ ಅಭಿರುಚಿಗಳಿಗನು ಗುಣವಾಗಿ ಅನೇಕ ಬಗೆಯ ಚಿತ್ರಗಳಿಂದ ಅಲಂಕರಿಸಲ್ಪಟ್ಟುವು. ಅಲ್ಲದೆ ಮಧ್ಯಯುಗದಲ್ಲಿ ಬಳಕೆಯಲ್ಲಿದ ತಾಳೆಓಲೆಯ ಗ್ರಂಥಗಳಲ್ಲಿ, ಅನಂತರದ ಕರಡು ಕಾಗದದ ಗ್ರಂಥಗಳಲ್ಲಿ, ಪೀಠೋಪಕರಣಗಳ ಮೇಲೆ, ವಿವಿಧ ವರ್ಣಗಳಿಂದ ಚಿತ್ರಗಳ ಮೇಲೆಯೂ ಸಹ ವರ್ಣ ಚಿತ್ರಕಲೆಯ ಮೊದಲಿನಿಂದಲೂ ಜನಪ್ರಿಯವಾಗಿತ್ತು.

ಇನ್ನು ಭಿತಿ ಚಿತ್ರಗಳ ಪರಂಪರೆಯ ಬಗ್ಗೆ ಹೇಳುವಾಗ ಜಗತ್ತಿನಲ್ಲೇ ಪ್ರಸಿದ್ಧವಾಗಿರುವ ಅಜಂತಾ ವರ್ಣ ಚಿತ್ರಗಳು ಮನಃಪಟಲದ ಮೇಲೆ ಮೂಡುತ್ತವೆ. ಈ ಚಿತ್ರಗಳು ಬುದ್ಧನ ಜೀವನ ಚರಿತ್ರೆ, ಬುದ್ಧನ ಜಾತಕ ಕಥೆಗಳು ಮುಂತಾದ ವಿಷಯಗಳನ್ನು ನಿರೂಪಿಸುತ್ತಾ ಬೌದ್ಧ ಸಂಪ್ರದಾಯದಲ್ಲಿ ಚಿತ್ರಿತವಾದವುಗಳಾಗಿವೆ. ಇವು. ಕ್ರಿ.ಶ. ೬ನೆಯ ಶತಮಾನದಿಂದ ಕ್ರಿ.ಶ. ೮ನೆಯ ಶತಮಾನದವರೆಗಿನವು. ಭಾರತದಲ್ಲಿ ವರ್ಣಚಿತ್ರ ಕಲೆಯು ಅತ್ಯುನ್ನತ ಪ್ರೌಢತ್ವವನ್ನು ಪಡೆದಿರುವುದನ್ನು ಈ ಅಜಂತಾ ವರ್ಣಚಿತ್ರಗಳಲ್ಲಿ ಕಾಣಬಹುದು.

ಹಾಗೆಯೇ ಹಿಂದೂ ಧರ್ಮದ ಸಂಪ್ರದಾಯದಲ್ಲಿ ರೂಪುಗೊಂಡಿರುವ ವರ್ಣಚಿತ್ರಗಳು, ಬಿಜಾಪುರ ಜಿಲ್ಲೆಯ ಬಾದಾಮಿಯ ಗುಹಾಂತರ್ಗತ ದೇವಾಲಯಗಳಲ್ಲಿ ಕಾಣಬರುತ್ತವೆ. ಈ ವರ್ಗದ ಚಿತ್ರಗಳಲ್ಲಿ ಇದುವರೆಗೂ ತಿಳಿದು ಬಂದಿರುವಂತೆ ಇವೇ ಬಹು ಪುರಾತನವಾದವುಗಳು. ಇವುಗಳಲ್ಲಿ ‘ಶಿವ-ಪಾರ್ವತಿಯರ ಕಲ್ಯಾಣ ನಿಶ್ಚಿತಾರ್ಥವು’ ಬಹುಮುಖ್ಯ ದೃಶ್ಯವಾಗಿದೆ.[1] ತದನಂತರದ ರಾಷ್ಟ್ರಕೂಟ ಅರಸರ ಕಾಲದಲ್ಲಿ ನಿರ್ಮಿತವಾದ ಎಲ್ಲೋರಾದ ಗುಹಾಂತರ್ಗತ ದೇವಾಲಯಗಳಲ್ಲಿ ನಟರಾಜ, ಲಕ್ಷ್ಮೀನಾರಾಯಣ ಮುಂತಾದ ವಿಷಯಗಳನ್ನು ನಿರೂಪಿಸಲು ವರ್ಣಚಿತ್ರಗಳು ಚಿತ್ರಿತವಾಗಿವೆ.[2] ಹೊಯಿಸಳರ ಕಾಲದಲ್ಲಿಯೂ ಸಹ ದೇವಾಲಯಗಳ ಒಳಮಾಳಿಗೆಗಳಲ್ಲಿ ವರ್ಣಚಿತ್ರಗಳನ್ನು ಬರೆಯುವುದು ಸಾಮಾನ್ಯ ವಾಗಿತ್ತೆಂದು ತಿಳಿದುಬರುತ್ತದೆ.[3]

ಇಷ್ಟೊಂದು ಜನಾನುರಾಗಕ್ಕೆ ಪಾತ್ರವಾಗಿದ ವರ್ಣಚಿತ್ರ ಕಲೆಯನ್ನು ಕುರಿತು ಅವಶ್ಯವಿದ್ದ ಸಾಹಿತ್ಯವೂ ಸಹ ನಿರ್ಮಿತವಾಯಿತೆಂದರೆ ಅಚ್ಚರಿಪಡಬೇಕಾದುದೇನೂ ಇಲ್ಲ. ವಿಷ್ಣು ಧರ್ಮೋತ್ತರ ಪುರಾಣ, ಅಭಿಲಷಿತಾರ್ಥ ಚಿಂತಾಮಣಿ, ಕಾಮಸೂತ್ರ ಮುಂತಾದ ಪುರಾತನ ಗ್ರಂಥಗಳು, ವರ್ಣಚಿತ್ರಗಳನ್ನು ನಿರ್ಮಿಸುವಾಗ ಅನುಸರಿಸಬೇಕಾದ ನಿಬಂಧನೆಗಳು, ತಾಂತ್ರಿಕತೆ ಮುಂತಾದವುಗಳ ಒಗ್ಗೆ ಅನೇಕ ವಿವರಣೆಗಳನ್ನು ನೀಡುತ್ತವೆ. ಇಂತಹ ಗ್ರಂಥಗಳು ಬಹು ಹಿಂದೆಯೇ ಬಳಕೆಯಲ್ಲಿದ್ದರಬಹುದಾದರೂ, ಅವು ಗುಪ್ತವಂಶದ ಅರಸರ ಕಾಲದಲ್ಲಿ ಒಂದು ವ್ಯವಸ್ಥಿತ ರೂಪವನ್ನು ಹೊಮದಿ, ಚಿತ್ರಕಾರರಿಗೆ ಮಾರ್ಗದರ್ಶಿಗಳಾದುವು.

ವಿಜಯನಗರ ಕಾಲದಲ್ಲಿ

ವಿಜಯನಗರದ ಅರಸರು, ಅವರ ಅಧಿಕಾರಿಗಳು ಮತ್ತು ಪ್ರಜೆಗಳು, ಕಲೆಗಳು ವಿಷಯದಲ್ಲಿ ಅಭಿರುಚಿ ಮತ್ತು ಪ್ರಜ್ಞೆಯುಳ್ಳವರಾಗಿದ್ದರೆಂಬುದು ಸರ್ವವಿದಿತವಷ್ಟೇ? ಅವರು ನಿರ್ಮಿಸಿಸ ಸಾವಿರಾರು ದೇವಮಂದಿರಗಳು, ಮಠಗಳು, ಶಿಲಾಮೂರ್ತಿಗಳು, ಪಂಚಲೋಹ ಮೂರ್ತಿಗಳು ದಕ್ಷಿಣ ಭಾರತಾದ್ಯಂತ ಈಗಲೂ ಕಾಣಬರುತ್ತಿದ್ದು, ಅವರ ಆ ಹೆಗ್ಗಳಿಕೆಯನ್ನು ಇಂದಿಗೂ ಸಾರಿ ಹೇಳುತ್ತಿವೆ. ಅಂತೆಯೇ ವಿಜಯನಗರದ  ಅರಸರ ಆಳ್ವಿಕೆಯ ಸಮಯದಲ್ಲಿ ವರ್ಣಚಿತ್ರಕಲೆಯೂ ಸಹ ಸಮಾನ ಪ್ರೋತ್ಸಾಹವನ್ನು ಪಡೆದಿತ್ತಲ್ಲದೆ ಬಹು ಜನಪ್ರಿಯವಾಗಿದ್ದುದರ ಕುರುಹಾಗಿ ಈಗಲೂ ಅನೇಕ ಕಡೆಗಳಲ್ಲಿ ಆ ಕಾಲದ ವರ್ಣಚಿತ್ರಗಳು ಕಾಣಬರುತ್ತವೆ. ಅಲ್ಲದೆ, ಇದೇ ವಿಷಯವು, ಅನೇಕ ಸಮಕಾಲೀನ ಸಾಹಿತ್ಯ ಗ್ರಂಥಗಳಲ್ಲಿರುವ ಉಲ್ಲೇಖನಗಳಿಂದ ಮತ್ತು ವಿದೇಶಿ ಪ್ರವಾಸಿಗಳು ಬರೆದಿರುವ ಟಿಪ್ಪಣಿಗಳಿಂದ ಖಚಿತವಾಗುತ್ತದೆ.[4] ಈಗ ಲಭ್ಯವಿರುವ ಈ ಚಿತ್ರಗಳನ್ನು ನೋಡಿ, ವಿಜಯನಗರದ ಕಾಲದಲ್ಲಿ ವರ್ಣಚಿತ್ರಗಳನ್ನು ದೇವಾಲಯಗಳ ಒಳಮಾಳಿಗೆಗಳ ಮೇಲೆ,[5] ಹೊರ ಗೋಡೆಗಳ ಮೇಲೆ[6] ಚಿತ್ರಿಸುತ್ತಿದ್ದರೆಂಬುದು ತಿಳಿಯುತ್ತದೆ. ಅಲ್ಲದೆ ಶಿಖರ ಮತ್ತು ಗೋಪುರಗಳ ಮೇಲಿನ ಇಟ್ಟಿಗೆ ಗಾರೆಗಳಿಮದ ನಿರ್ಮಿಸಿದ ಮೂರ್ತಿಗಳನ್ನು ಸಹ ವಿವಿಧ ಬಣ್ಣಗಳಿಂದ ಅಲಂಕರಿಸುವುದು ಪ್ರಚುರದಲ್ಲಿತ್ತು.[7] ಕೆಲವು ಬಾರಿ ಶಿಲಾಮೂರ್ತಿಗಳನ್ನು ಸಹ ವಿವಿಧ ಬಣ್ಣಗಳಿಂದ ಲೇಪಿಸುತ್ತಿದ್ದರೆಂಬುದು ಅವಶೇಷಗಳಿಂದ ತಿಳಿದುಬರುತ್ತದೆ.[8] ಮತ್ತು ಇದೇ ಕಾಲದಲ್ಲಿ ಬಿಳಿಯ ಕಲ್ಲಿನಲ್ಲಿ ಕಡೆಯಲಾಗುತ್ತಿದ್ದ ಶಿಲಾಮೂರ್ತಿಗಳು ಕೆಲವೊಂದು ಬಾರಿ, ಶಿಲ್ಪಿಯು ಕಲ್ಪಿಸಿಕೊಂಡ ಭಾವ ಲಕ್ಷಣಗಳನ್ನು ಬೇಕಾದ ಮತ್ತು ಪರಿಣಾಮಕಾರಿ ರೀತಿಯಲ್ಲಿ ರೂಪಿಸುವುದು ಸಾಧ್ಯವಾಗುತ್ತಿತ್ತು.[9]

ವಿಜಯನಗರದ ಪತನಾನಂತರವೂ ಸಹ ವರ್ಣಚಿತ್ರ ಕಲೆಯ ಪರಂಪರೆಯು ರಾಜಪ್ರೋತ್ಸಾಹದೊಂದಿಗೆ ಮುಂದುವರೆಯಿತು. ಆ ಸಮಯಕ್ಕಾಗಲೇ ಭಾರತಕ್ಕೆ ಬಂದ ಪಾಶ್ಚಿಮಾತ್ಯ ಕಲಾಕಾರರ ತಾಂತ್ರಿಕತೆ, ಶೈಲಿ, ಭಾವನಿರೂಪಣಾಕ್ರಮ ಮುಂತಾದವುಗಳ ಪ್ರಭಾವಗಳಿಗೆ ಒಳಗಾಯಿತು.[10] ಅಲ್ಲದೇ ಮೈಸೂರಿನ ಒಡೆಯರರು, ತಂಜಾವೂರಿನ ರಾಜರು, ಕೊಚ್ಚಿ ತಿರುವಾಂಕೂರಿನ ಅರಸರು, ಮುಸಲ್ಮಾನ ಸುಲ್ತಾನರ ಪ್ರೋತ್ಸಾಹಗಳಿಂದಾಗಿ ಪ್ರಾಂತೀಯ ಶೈಲಿಗಳು ರೂಪುಗೊಂಡವು. ಆದರೂ ಇವುಗಳಲ್ಲೆಲ್ಲ ಪಾಶ್ಚಿಮಾತ್ಯ ಶೈಲಿಯ ಪ್ರಭಾವವನ್ನು ಗಮನಾರ್ಹ ರೀತಿಯಲ್ಲಿ ಕಾಣಬಹುದು.

ಹಂಪೆಯ ವರ್ಣಚಿತ್ರಗಳು

ಹಂಪೆಯು ಬಹುಪುರಾತನ ಕಾಲದಿಂದಲೂ ಯಾತ್ರಾಕ್ಷೇತ್ರವೆಂದು ಪ್ರಸಿದ್ಧಿಯಾಗಿದ್ದರೂ, ಅದು ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುದು ವಿಜಯನಗರದ ಅರಸರ ರಾಜ್ಯಭಾರದ ಕಾಲದಲ್ಲಿ (ಕ್ರಿ.ಶ. ೧೩೩೬ ರಿಂದ ಕ್ರಿ.ಶ. ೧೫೬೫ರವರೆಗೆ). ಈ ಹಂಪೆಯಲ್ಲಿ, ಇಂದಿಗೂ ಸಹ, ಪ್ರಧಾನ ದೆವತೆಯಾಗಿರುವ ಶ್ರೀ ವಿರೂಪಾಕ್ಷ ಸ್ವಾಮಿಯು, ವಿಜಯನಗರದ ಅರಸರ ಕುಲದೇವತೆಯಾಗಿದ್ದು, ಅವರು ತಮ್ಮನ್ನು ವಿರೂಪಾಕ್ಷ ಸ್ವಾಮಿಯ ಪ್ರತಿನಿಧಿಗಳೆಂದು ಭಾವಿಸಿಕೊಂಡು ರಾಜ್ಯಭಾರವನ್ನು ನಡೆಯಿಸಿದರು. ತತ್ಪರಿಣಾಮವಾಗಿ, ಈ ಅರಸರು ಹೊರಡಿಸಿದ ತಾಮ್ರ ಶಾಸನಗಳ ಕೊನೆಯಲ್ಲಿ ರಾಜನ ಹೆಸರಿನ ಅಂಕಿತವಿರದೆ ‘ಶ್ರೀ ವಿರೂಪಾಕ್ಷ’ ಎಂಬ ಅಂಕಿತವು ಕಾಣಬರುತ್ತದೆ. ಅಲ್ಲದೆ ಆರಂಭದಲ್ಲಿ ಆಳಿದ ಸಂಗಮ ವಂಶದ ಅರಸರು ಹೊರಡಿಸಿದ ನಾಣ್ಯಗಳ ಮುಮ್ಮುಖದ ಮೇಲೆ ಶಿವ ಪಾರ್ವತಿಯರ ರೂಪುಗಳು ಕಾಣಬರುತ್ತದೆ. ಅರ್ಥಾತ್ ಇವು ಶ್ರೀ ವಿರೂಪಾಕ್ಷ ಮತ್ತು ಪಂಪಾಂಬಿಕೆಯರನ್ನು ನಿರೂಪಿಸುತ್ತವೆ. ನಂತರ ವಿಜಯನಗರದ ಬಹು ಖ್ಯಾತಿವೆತ್ತ ಅರಸರಲ್ಲೊಬ್ಬನಾದ ತುಳು ವಂಶದ ಕೃಷ್ಣದೇವರಾಯನು ತಾನು ರಾಜ್ಯ ಪಟ್ಟಕ್ಕೆ  ಬಂದ ಸಂದರ್ಭದಲ್ಲಿ ಒಂದು ಶಾಸನವನ್ನು ಹೊರಡಿಸಿ, ಇದೇ ವಿರೂಪಾಕ್ಷ ಸ್ವಾಮಿಗೆ ಅನೇಕ ದತ್ತಿಗಳನ್ನು ಕೊಟ್ಟಿರುವುದು ತಿಳಿಯುತ್ತದೆ. ಆ ಶಾಸನವು ಪೂರ್ವದ್ವಾರದ ಮೆಟ್ಟಲುಗಳ ಹತ್ತಿರ ಈಗಲೂ ಕಾಣಬರುತ್ತದೆ. ಹೀಗೆ ಹಂಪೆಯ ಶ್ರೀ ವಿರೂಪಾಕ್ಷಸ್ವಾಮಿ ದೇವಸ್ಥಾನವು, ರಾಜರ ಅಭಿಮಾನ, ಮನ್ನಣೆ, ಮತ್ತು ಪ್ರೋತ್ಸಾಹಗಳಿಗೆ ಪಾತ್ರವಾಗಿದ್ದಿತು. ಇವುಗಳ ಇನ್ನೊಂದು ಕುರುಹಾಗಿ, ಈ ದೇವಸ್ಥಾನದಲ್ಲಿಯೇ ಮುಂದೆ ವಿವರಿಸಲಾಗಿರುವ ವರ್ಣಚಿತ್ರಗಳು ಕಾಣಬರುತ್ತವೆ. ಈಗ ಲಭ್ಯವಿರುವಂತೆ ಹಂಪೆಯ ಇನ್ನಾವ ದೇವಸ್ಥಾನದಲ್ಲೂ ಇಷ್ಟೊಂದು ವಿವರವಾದ ಮತ್ತು ವ್ಯಾಪಕ ರೀತಿಯಲ್ಲಿ ನಿರ್ಮಿಸಲಾಗಿರುವ ವರ್ಣಚಿತ್ರಗಳು ಕಾಣಬರುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ, ಈ ಅರಸರ ಕಾಲದಲ್ಲಿ ಹಂಪೆಯ ಶ್ರೀ ವಿರೂಪಾಕ್ಷ ಸ್ವಾಮಿಯ ದೇವಸ್ಥಾನಕ್ಕೆ ಸಲ್ಲುತ್ತಿದ್ದ ಪ್ರಧಾನತೆಯು ವ್ಯಕ್ತವಾಗುತ್ತದೆ. ಆದುದರಿಂದ ಈ ದೇವಸ್ಥಾನದಲ್ಲಿ ಕಾಣಬರುವ ವರ್ಣಚಿತ್ರಗಳು ಬಹು ಮುಖ್ಯವಾದವುಗಳು. ಉತ್ತಮ ಗುಣಮಟ್ಟದವುಗಳೂ ಹಾಗೂ ಅರ್ಥ ಗರ್ಭಿತವಾದವುಗಳಾಗಿರಬೇಕೆಂದಾಯಿತು.

ಈ ವರ್ಣಚಿತ್ರಗಳು, ಹಂಪೆಯ ಶ್ರೀ ವಿರೂಪಾಕ್ಷ ಸ್ವಾಮಿಯ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮಹಾರಂಗಮಂಟಪದ ನಡುವಣ ಅಂಕಣದ ಒಳಮಾಳಿಗೆ ಅಥವಾ ಮುಚ್ಚಿಗೆಯ ಮೇಲೆ ಚಿತ್ರಿತವಾಗಿದೆ. ಎಂದರೆ, ಕತ್ತನ್ನು ಮೇಲಕ್ಕೆತ್ತಿ ಇವುಗಳನ್ನು ನೋಡುಬೇಕಾಗುತ್ತದೆ. ಆದರೆ ಒಂದು ದೊಡ್ಡ ಕನ್ನಡಿಯನ್ನು ಅವುಗಳ ಕೆಳಗೆ ಹಿಡಿದು ನೇರವಾಗಿ ಅವುಗಳ ಪ್ರತಿಬಿಂಬಗಳನ್ನು ನೋಡಬಹುದು. ಆದರೂ ಇವುಗಳ ಶ್ರೇಷ್ಠ ವಿನ್ಯಾಸ, ವರ್ಣಗಳ ಹೊಂದಾಣಿಕೆ, ರೂಪುಗಳ ಆಕಾರ, ಭಂಗಿ, ಹಾವ ಮತ್ತು ಭಾವಗಳನ್ನು, ಅಲಂಕಾರಿಕ ವಿವರಣೆಗಳನ್ನೂ ನೋಡಿ ಆನಂದಿಸಬೇಕಾದಲ್ಲಿ, ಕತ್ತಿಗೆ ತೊಂದರೆ ತಪ್ಪಿದುದಲ್ಲ. ಈ ಚಿತ್ರಗಳನ್ನು ಉತ್ತರ-ದಕ್ಷಿಣವಾಗಿ ಹದಿಮೂರು ಸಾಲುಗಳನ್ನು ಚಿತ್ರಿಸಲಾಗಿದೆ. ಅಲ್ಲದೆ ಇವುಗಳ ಸುತ್ತಲೂ ಇರುವ ಕಲ್ಲಿನ ಪಟ್ಟಿಕಾಭಾಗದಲ್ಲಿ ಸಹ ನಿಲುಚಿತ್ರಗಳನ್ನು ಬಿಡಿಸಲಾಗಿದೆ. ಡಾ. ಪರಮಶಿವನ್ ಎಂಬ ಪುರಾತತ್ವ ರಸಾಯನಶಾಸ್ತ್ರ ಪರಿಣಿತರ ಅಭಿಪ್ರಾಯದಲ್ಲಿ, ಈ ಹಂಪೆಯ ಚಿತ್ರಗಳು ವಿಜಯನಗರದ ಕಾಲದಲ್ಲಿ ಪ್ರತಿಭಾವಂತ ಚಿತ್ರಕಾರರ ಕುಂಚಗಳಿಂದ ಮೂಡಿಬಂದ ಅತ್ಯುತ್ತಮ ಚಿತ್ರಗಳಾಗಿವೆ.[11] ಅವರು  ಮುದುವರಿದು, ಈ ಚಿತ್ರಗಳು ಮತ್ತು ಆನೆಗೊಂದಿನ ಹುಚ್ಚಪ್ಪಯ್ಯನ ಮಠದಲ್ಲಿ ಕಾಣಬರುತ್ತಿದ್ದ ವರ್ಣಚಿತ್ರಗಳು[12] ಚಿತ್ರಕಲಾಭ್ಯಾಸಿಗಳಿಗೆ ಬಹುಮುಖ್ಯವಾದವೂ ಮತ್ತು ಪೂರಕವಾದವುಗಳೂ ಎಂದು ಹೇಳಿರುತ್ತಾರೆ. ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮಾಡುವ ಚಿತ್ರಕಲಾಭ್ಯಾಸವು ಅಪೂರ್ಣವಾಗುವುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.[13]

ಈ ಹಂಪೆಯ ಚಿತ್ರಗಳನ್ನು ಎರಡು ಹಂತಗಳಲ್ಲಿ ಚಿತ್ರಿಸಿದಂತೆ ಕಾಣುತ್ತದೆ. ಏಕೆಂದರೆ ಪಶ್ಚಿಮದ ಅರ್ಧಭಾಗದಲ್ಲಿ ಕಪ್ಪು ಬಣ್ಣವು ಪ್ರಧಾನವಾಗಿ ಬಳಕೆಯಾಗಿದ್ದರೆ, ಇನ್ನುಳಿದ ಪೂರ್ವದ ಭಾಗದಲ್ಲಿ ಒಂದು ವಿಧವಾದ ಕೆಂಪು ಪ್ರಧಾನವಾಗಿ ಕಾಣಬರುತ್ತದೆ. ಇವು ಹಿಂದೂ ಧರ್ಮದ ಪುರಾಣಗಳಲ್ಲಿನ ದೃಶ್ಯಗಳನ್ನು ಮತ್ತು ಸಮಕಾಲೀನ ಸಾಮಾಜಿಕ ದೃಶ್ಯಗಳನ್ನು ನಿರೂಪಿಸುತ್ತವೆ. ಇವು ಶೈವ ಮತ್ತು ವೈಷ್ಣವ ಪುರಾಣಗಳಿಂದ ಆರಿಸಿಕೊಂಡ ದೃಶ್ಯಗಳಾಗಿವೆ. ಹಂಪೆಯ ಸ್ಥಳ ಪುರಾಣಕ್ಕೆ ಸಂಬಂಧಿಸಿದ ಮನ್ಮಥವಿಜಯ ಮತ್ತು ಶಿವ ಪಾರ್ವತಿಯರ ಕಲ್ಯಾಣದ ದೃಶ್ಯಗಳು ಬಹುರಮ್ಯವಾಗಿ ವರ್ಣಗಳಲ್ಲಿ ಹೊಮ್ಮಿಬಂದಿವೆ. ಈ ದೃಶ್ಯಗಳು ಮತ್ತು ಅವುಗಳಲ್ಲಿ ಕಾಣಬರುವ ಇತರ ದೇವಾನುದೇವತೆಗಳು, ಆಗಮ ಶಾಸ್ತ್ರಗಳ ನಿರೂಪಣೆಗಳ ಪ್ರಕರ ಮೂಡಿ ಬಂದಂತಹವುಗಳಾಗಿವೆ.

ಇವುಗಳ ಕಾಲ

ಈ ಚಿತ್ರಗಳು, ವಿಜಯನಗರದ ಆರಂಭದ ಕಾಲದಲ್ಲಿ ಚಿತ್ರಿತವಾದವುಗಳೆಂದು ಕೆಲವರ ಅಭಿಪ್ರಾಯವಾಗಿದೆ. ಆದರೆ ಆ ಸ್ಥಳದಲ್ಲಿಯೇ, ಈಗಲೂ ಕಾಣಬರುವ, ಕೃಷ್ಣದೇವರಾಯ ಮಹಾರಾಯನು (ಕ್ರಿ.ಶ. ೧೫೦೯ ರಿಂದ ಕ್ರಿ.ಶ. ೧೫೨೯ರ ವರೆಗೆ) ತಾನು ಪಟ್ಟಕ್ಕೆ ಬಂದ ಸಮಯದಲ್ಲಿ ಹೊರಡಿಸಿದ ಶಿಲಾಶಾಸನವನ್ನು ಪರಿಗಣಿಸುವುದರಿಂದ ಈ ಚಿತ್ರಗಳು ಕ್ರಿ.ಶ. ೧೬ನೆಯ ಶತಮಾನದವುಗಳೆಂದು ನಿರ್ಧರಿಸಬಹುದು. ಆ ಶಾಸನ ಒಂದು ಭಾಗವು ಈ ಕೆಳಗಿನಂತೆ ಇದೆ :

‘…..ಶಾಲಿವಾಹನ ಶಕವರುಷ ೧೪೩೦ ಸಂದು
ಮೇಲೆನಡೆವ ಶುಕ್ಲ ಸಂವತ್ಸರದ ಮಾಘ ಶು. ೧೪ ಲು ಶ್ರೀಮ
ನ್ಮಹಾರಾಜಾಧಿರಾಜ ಪರಮೇಶ್ವರ ಶ್ರೀವೀರ ಪ್ರತಾಪ
ಶ್ರೀ ವೀರ ಕೃ
ಷ್ಣರಾಯ ಮಹಾರಾಯರು ಪಟ್ಟಾಭಿಷೇಕೋತ್ಸವ ಪುಂಣ್ಯ ಕಾಲದಲು
ಶ್ರೀ ವಿರುಪಾಕ್ಷ ದೇವರ ಅಮೃತ ಪಡಿ ನೈವೇದ್ಯಕೆ ಸಿಂ
ಗಿ ನಾಯಕನ ಹಳಿಯನೂ ಸಮರ್ಪಿಸಿ ದೇವ ಸಂಮುಖದ
ಮಹಾರಂಗ ಮಂಟಪವನೂ ಆ ಮುಂದಣ ಗೋಪುರವ
ನೂ ಕಟಿ
ಸಿ…… ಮಂಗಳ ಮಹಾಶ್ರೀ ಶ್ರೀ ಶ್ರೀ,[14]

ಎಂದರೆ ಮೇಲೆ ಉದ್ಧರಿಸಿರುವ ಶಾಸನದ ಪ್ರಕಾರ, ಶ್ರೀ ವಿರೂಪಾಕ್ಷ ಸ್ವಾಮಿಯ ದೇವಸ್ಥಾನಕ್ಕೆ ಹೊಂದಿರುವ ಮಹಾರಂಗ ಮಂಟಪವನ್ನು, ಕೃಷ್ಣದೇವರಾಯ ಮಹಾರಾಯನು ಕ್ರಿ.ಶ. ೧೫೦೯ರಲ್ಲಿ, ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ, ಕಟ್ಟಿಸಿದನೆಂಬುದು ಖಚಿತವಾಯಿತು. ನಾವು ಈಗ ತಿಳಿಯುತ್ತಿರುವ ವರ್ಣಚಿತ್ರಗಳು ಸಹ ಇದೇ ಮುಖಮಂಟಪದ ಒಳಮಾಳಿಗೆಯ ಮೇಲೆ ಕಾಣಬರುತ್ತವೆ. ಎಂದರೆ ಈ ಚಿತ್ರಗಳು ಕ್ರಿ.ಶ. ೧೫೦೯ರ ನಂತರ ಚಿತ್ರಿತವಾಗಿವೆ ಎಂಬುದೂ ಖಚಿತವಾಯಿತು ಮತ್ತು ಈಗಾಗಲೇ ಸರ್ವವಿದಿತವಿರುವಂತೆ ವಿಜಯನಗರದ ಅರಸರು ಕ್ರಿ.ಶ. ೧೫೬೫ರಲ್ಲಿ ರಕ್ಕಸ ತಂಗಡಿ ಕಾಳಗದಲ್ಲಿ ಪರಾಭವಗೊಂಡ ನಂತರ, ಪೆನುಗೊಂಡೆಯಲ್ಲಿ ಹೋಗಿ ನೆಲಸಿದರಷ್ಟೆ? ತದನಂತರ ವಿಜಯಿಗಳಾದ ಮುಸಲ್ಮಾನ ಸೈನಿಕರು, ವಿಜಯನಗರ ರಾಜಧಾನಿಯನ್ನು ನುಗ್ಗಿ, ನಿರಂತರವಾಗಿ ಆರು ತಿಂಗಳೂಗಳವರೆಗೆ ಧ್ವಂಸ ಕಾರ್ಯಗಳಲ್ಲಿ ನಿರತರಾಗಿದ್ದರೆಂಬುದು ತಿಳಿದಿದೆಯಷ್ಟೆ? ಆ ನಂತರ ವಿಜಯನಗರದ ಅರಸರು ವಿಜಯನಗರ ಪಟ್ಟಣಕ್ಕೆ ಹಿಂದಿರುಗುವಲ್ಲಾಗಲೀ ಅಥವಾ ಅದನ್ನು ಪುನರುಜ್ಜೀವನ ಗೊಳಿಸುವಲ್ಲಾಗಲೀ ಯಶಸ್ವಿಯಾಗಲಿಲ್ಲ. ಹೀಗಾಗಿ ವಿಜಯನಗರ ಪಟ್ಟಣವೂ ಸೇರಿದಂತೆ, ಇಂದಿಗೂ ಸಹ, ಉಳಿಯಬೇಕಯಿತು. ಈ ಎಲ್ಲ ಘಟನೆಗಳನ್ನು ಪರಿಶೀಲಿಸಿದಲ್ಲಿ, ಪ್ರಸ್ತುತ ಲೇಖನದ ವಿಷಯವಾದ, ಹಂಪೆಯ ವರ್ಣಚಿತ್ರಗಳು ಕ್ರಿ.ಶ. ೧೫೦೯ರ ನಂತರ, ಆದರೆ ಕ್ರಿ.ಶ. ೧೫೬೫ರೊಳಗೆ ರೂಪುಗೊಂಡಂಥವುಗಳಾಗಿರಬೇಕು. ಬಹುಶಃ ವಿಜಯನಗರದ ವೈಭವವು, ಎಲ್ಲಾ ವಿಭಾಗಗಳಲ್ಲಿ, ಉಚ್ಛ್ರಾಯದ ಪರಿಮಿತಿಯನ್ನು ತಲುಪಿದ ಕೃಷ್ಣದೇವರಾಯನ ಕಾಲದಲ್ಲಿ ಚಿತ್ರಿತವಾದವುಗಳಾಗಿರಲೂ ಸಾಕು. ಅಂತಿಮದಲ್ಲಿ, ಇವು ಕ್ರಿ.ಶ. ೧೬ನೆಯ ಶತಮಾನದ ಪೂರ್ವಾರ್ಧದಲ್ಲಿ ರೂಪುಗೊಂಡವುಗಳೆಂದು ಹೇಳಬಹುದು.

ಚಿತ್ರಗಳ ವಿವರಣೆಗಳು

ಈಗ ಹಂಪೆಯ ವಿರೂಪಾಕ್ಷ ಗುಡಿಯಲ್ಲಿರುವ ಚಿತ್ರಗಳ ವಿಷಯಗಳನ್ನು ಒಂದೊಂದಾಗಿ ತಿಳಿಯೋಣ. ಈಗಾಗಲೇ ಹೇಳಿರುವಂತೆ ಇವು ಮುಖ್ಯವಾಗಿ ಹದಿಮೂರು ಸಾಲುಗಳಲ್ಲಿ ಚಿತ್ರಿತವಾಗಿವೆ. ಈ ಸಾಲುಗಳು ಸಹ ಚಿಕ್ಕ ಪ್ರಮಾಣದ ಚೌಕ ಅಥವಾ ಮನೆಗಳಾಗಿ ವಿಂಗಡಿಸಲ್ಪಟ್ಟವು. ಪ್ರತಿಯೊಂದಕ್ಕೂ ಬೇರೆ ಬೇರೆ ಆಕೃತಿಗಳನ್ನೋ ಅಥವಾ ವಿಷಯಗಳನ್ನೋ ಮೀಸಲಿರಿಸಲಾಗಿದೆ. ಇವುಗಳೆಲ್ಲಗಳ ಸುತ್ತಲೂ ಅಲಂಕಾರದ ಪಟ್ಟಿಗಳಿದ್ದು, ವಿವಿಧ ಹೂಗಳು ಅಥವಾ ರೇಖಾ ವಿನ್ಯಾಸಗಳಿಂದ ಚಿತ್ರತವಾಗಿವೆ.

೧. ಮೊದಲಿನ (ಪಶ್ಚಿಮದ ತುದಿಯಿಂದ ಪೂರ್ವಕ್ಕೆ ಮುಂದುವರಿಯುತ್ತಾ) ಮೂರು ಸಾಲುಗಳನ್ನು ಒಂದೇ ಮುಖ್ಯ ವಿಷಯದ ನಿರೂಪಣೆಗಾಗಿ ಚಿತ್ರಕಾರನು ಉಪಯೋಗಿಸಿ ಕೊಂಡಿರುವುದು ತಿಳಿಯುತ್ತದೆ. ಇಲ್ಲಿ ಹಿಂದೂ ಧರ್ಮದ ಮುಖ್ಯದೇವತೆಗಳಾದ ತ್ರಿಮೂರ್ತಿ (ಬ್ರಹ್ಮ, ಮಹೇಶ್ವರ ಮತ್ತು ವಿಷ್ಣು)ಗಳನ್ನು ಚಿತ್ರಿಸಲಾಗಿದೆ. ಎಂದರೆ, ಮಧ್ಯದ ಚೌಕದಲ್ಲಿ ಶಿವ ಮತ್ತು ಪಾರ್ವತಿಯರೂ ಅಥವಾ ವಿರೂಪಾಕ್ಷ ಮತ್ತು ಪಂಪಾಂಬಿಕಾ ಇವರುಗಳ ರೂಪುಗಳನ್ನು ಚಿತ್ರಿಸಲಾಗಿದೆ. ಇವರ ಬಲಭಾಗದಲ್ಲಿರುವ ಚೌಕದಲ್ಲಿ ಬ್ರಹ್ಮ ಮತ್ತು ಸರಸ್ವತಿಯರನ್ನು ಮತ್ತು ಇನ್ನುಳಿದ ಎಡಭಾಗದಲ್ಲಿ ವಿಷ್ಣು ಮತ್ತು ಲಕ್ಷ್ಮಿಯರ ರೂಪುಗಳನ್ನು ಸುಖಾಸೀನರಾಗಿರುವ ಭಂಗಿಗಳಲ್ಲಿ ಚಿತ್ರಿಸಲಾಗಿದೆ. ಈ ದೇವತಾ ದಂಪತಿಗಳ ಇ‌ಕ್ಕೆಲಗಳಲ್ಲಿ ಅವರವರಿಗೆ ಸೇರಿದ ಪರಿವಾರ, ಪರಿಚಾರಕರ ಆಕೃತಿಗಳ ಸಮೂಹವನ್ನೇ ಚಿತ್ರಿಸಲಾಗಿದೆ. ಉದಾಹರಣೆಗೆ ಶಿವ ಪಾರ್ವತಿಯರ ಚಿತ್ರಗಳ ಎಡ ಮತ್ತು ಬಲಗಳಲ್ಲಿ ತುಂಬುರ, ಭೃಂಗಿ ಮತ್ತಿತರ ಪರಿಚಾರಿಕೆಯರನ್ನು ವಿವಿಧ ಭಂಗಿಗಳಲ್ಲಿ ಮತ್ತು ವಿಶೇಷ ಅಲಂಕಾರಗಳೊಂದಿಗೆ ರೂಪಿಸಿರುವುದು ತಿಳಿಯುತ್ತದೆ. ಅದೇ ರೀತಿಯಲ್ಲಿ ವಿಷ್ಣು ಮತ್ತು ಲಕ್ಷ್ಮಿಯರ ಜೊತೆಯಲ್ಲಿ ಗರುಡ, ಹನುಮಂತ ಮತ್ತಿತರ ಪರಿಚಾರಕರನ್ನು ಅತಿ ವಿನಮ್ರ ಭಾವನೆಗಳೊಂದಿಗೆ ಮತ್ತು ನಿಂತಿರುವ ಭಂಗಿಯಲ್ಲಿ ತೋರಿಸಲಾಗಿದೆ. ಈ ದೇವತಾ ಮೂರ್ತಿಗಳ ಆಸನಗಳ ಮುಮದೆ ಅವರವರ ವಾಹನಗಳನ್ನು ಕಾಣಬಹುದು. ಮೇಲ್ಭಾಗದಲ್ಲಿ ಶಿಖರಗಳಿಂದ ಕೂಡಿದ ಉಪ್ಪರಿಗೆಗಳನ್ನು ಚಿತ್ರಿಸಿದ್ದು, ಅವುಗಳಲ್ಲಿ ಋಷಿಗಳು, ಗಣಗಳು, ಕಿನ್ನರರು, ಗಂಧರ್ವರು ಮತ್ತಿತರ ಉಪದೇವತೆಗಳನ್ನು ಮತ್ತೆ ಕೆಲವರು ವಿವಿಧ ವಾದ್ಯವಿಶೇಷಗಳನ್ನು ನುಡಿಸುತ್ತಿರುವಂತೆಯೂ  ತೋರಿಸಲಾಗಿದೆ. ಹೀಗೆ ಚಿತ್ರಕಾರನು, ತ್ರಿಮೂರ್ತಿಗಳು ತಮ್ಮ ಪರಿವಾರ ಮತ್ತು ಇತರ ಅನುಚರರೊಂದಿಗೆ ತಮ್ಮ ಮಂದಿರಗಳಲ್ಲಿ ಆಸೀನರಾಗಿದ್ದ  ಯಾವುದೋ ಒಂದು ವಿಶೇಷ ಸಂದರ್ಭವನ್ನು ಸೂಚಿಸುವಂತೆ ಕಲ್ಪಿಸಿ ಚಿತ್ರಿಸಿರುತ್ತಾನೆ.

೨. ಮುಂದಿನ ದೃಶ್ಯವು ಈ ಕ್ಷೇತ್ರದ ಮುಖ್ಯ ದೇವತೆಗಳಾದ ವಿರೂಪಾಕ್ಷ ಮತ್ತು ಪಂಪಾಂಬಾ ಅವರೀರ್ವರ ಕಲ್ಯಾಣ ಮಹೋತ್ಸವವನ್ನು ತಿಳಿಸುತ್ತದೆ. ಎಂದರೆ, ಈ ಕ್ಷೇತ್ರದ ಸ್ಥಳಪುರಾಣವನ್ನು ಚಿತ್ರಗಳಲ್ಲಿ ನಿರೂಪಿಸುತ್ತದೆಯಾದುದರಿಂದ, ಆ ದೃಷ್ಟಿಯಿಂದ ಇದು ಬಹುಮುಖ್ಯವಾದ ದೃಶ್ಯವಾಗಿದೆ.

ಈ ಸಂದರ್ಭದಲ್ಲಿ ಹಂಪೆಯಲ್ಲಿ ಪ್ರತಿ ವರ್ಷವೂ ನಿಯತ ಕಾಲಗಳಲ್ಲಿ ತಪ್ಪದೆ ಜರುಗುವ ಕಾರ್ಯಕ್ರಮಗಳನ್ನು ಗಮನಿಸಬೇಕಾಗುತ್ತದೆ. ಶ್ರಾವಣ ಮಾಸದ ಪೌರ್ಣಮಿಯ ದಿನ (ನೂಲು ಹುಣ್ಣಿಮೆಯ ದಿನ) ವಿವಾಹ ಯೋಗ್ಯಳದ ಕನ್ಯೆಯನ್ನು (ಪಂಪಾಂಬಾ ದೇವಿಯನ್ನು)ವರನು (ವಿರೂಪಾಕ್ಷ ಸ್ವಾಮಿಯು) ನೋಡಿದಂತೆ ಕಾರ್ಯಕ್ರಮಗಳು ಜರುತ್ತಗುತ್ತವೆ. ಆನಂತರ, ಕಾರ್ತಿಕ ಮಾಸದಲ್ಲಿ ನಿಶ್ಚಿತಾರ್ಥವಾದಂತೆ ಕಾರ್ಯಕ್ರಮಗಳು ಜರುಗುತ್ತವೆ. ವೈಶಾಖ ಮಾಸದಲ್ಲಿ ಶುಕ್ಲ ಪಕ್ಷದ ಹದಿನಾಲ್ಕನೆಯ ದಿನದಂದು ಇಬ್ಬರಿಗೂ ವಿವಾಹ ಮಹೋತ್ಸವವು ಜರುಗಿ ಮಾರನೆಯ ದಿನವಾದ ಪೌರ್ಣಮಿಯಂದು ನಡೆಯುವ ರಥೋತ್ಸವವು ನವದಂಪತಿಗಳ ಮೆರವಣಿಗೆಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಎಂದರೆ, ದಕ್ಷನನ್ನು ಶಿಕ್ಷಿಸಿದ ಮತ್ತು ಮಾರನನ್ನು ಜಯಿಸಿದ ಆನಂತರದ ಘಟನೆಯಾದ ಗಿರಿಜಾ ಕಲ್ಯಾಣವು ಇಲ್ಲಿಯೇ ಜರುಗಿತೆಂಬುದು ಸ್ಥಳ ಪುರಾಣದ ಪಾಠ ಶಿವ ಪಾರ್ವತಿಯರ ಕಲ್ಯಾಣವೆಂದ ಬಳಿಕ ಬ್ರಹ್ಮ, ವಿಷ್ಣು, ಇಂದ್ರ ಮುಂತಾದ ದೇವತೆಗಳು, ಋಷಿಗಲು, ಗಣಗಳು, ಕಿನ್ನರರು, ಗಂಧರ್ವರು, ವಿವಿಧ ವಾದ್ಯಗೋಷ್ಠಿಯವರು, ಅಷ್ಟದಿಕ್ಪಾಲಕರು ಮುಂತಾದವರು ಉಪಸ್ಥಿತರಾಗಿರಲೇ ಬೇಕಲ್ಲವೇ? ಅವರೆಲ್ಲರನ್ನು ಸೂಕ್ತ ವರ್ಣಗಳಲ್ಲಿ ಮತ್ತು ಸೂಕ್ತ ಸ್ಥೂನಗಳಲ್ಲಿ ಸಾಲಂಕೃತರನ್ನಾಗಿ ಚಿತ್ರಿಸಲಾಗಿದೆ[15] ಮತ್ತು ಈ ಕಲ್ಯಾಣ ಮಹೋತ್ಸವವು ವಟ ವೃಕ್ಷದ ಕೆಳಗೆ ಜರುಗಿದಂತೆ ಪ್ರತೀತಿ ಇರುವುದರಿಮದ ವಟ ವೃಕ್ಷದ ಕೆಳಗೆ ಭಾವೀ ದಂಪತಿಗಳು, ಪ್ರಾಣಿ ಗ್ರಹಣ ಕಾರ್ಯಕ್ಕಾಗಿ ತಮ್ಮ ಕೈಗಳನ್ನು ಮುಂದೆ ಚಾಚಿದವರಾಗಿ ಸುಂದರ ಭಂಗಿಗಳಲ್ಲಿ ನಿಂತಿರುತ್ತಾರೆ. ಶಿವನ ಬೆನ್ನ ಹಿಂದೆಯೇ ಬ್ರಹ್ಮನು ನಿಂತಿದ್ದು ಕನ್ಯಾದಾನವನ್ನು ನೆರವೇರಿಸುತ್ತಿದ್ದಾನೆ. ಪಾರ್ವತಿಯ ಹಿಂದೆ ಆರು ಜನ ಹೆಂಗಳೆಯರನ್ನು ಚಿತ್ರಿಸಲಾಗಿದೆ. ಎಂದರೆ ಈ ದೃಶ್ಯವು ಸಹ ಆಗಮಗಳಲ್ಲಿ ನಿರೂಪಿಸಲಾಗಿರುವಂತೆ ಹೊಮ್ಮಿ ಬಂದಿದೆ. ಸ್ಥಳ ಪುರಾಣವನ್ನು ಹೇಳುವ ಈ ದೃಶ್ಯವು ಮನೋಹರವಾಗುವಂತೆ, ಆಕರ್ಷಕ ಬಣ್ನಗಳಿಂದ ಮತ್ತು ಸೂಕ್ತ ರೂಪುಗಳಿಂದಲೂ ಚಿತ್ರಿತವಾಗಿದೆ.

೩. ಈಗ ಮಧ್ಯದ ಸಾಲಿನಲ್ಲಿರುವ ದೃಶ್ಯಗಳನ್ನು ನೋಡೋಣ. ಈ ಸಾಲಿನಲ್ಲಿ ಮೂರು ಮುಖ್ಯ ಚೌಕ ಅಥವಾ ಮನೆಗಳಿದ್ದು, ಅವುಗಳಲ್ಲಿ ಕೊನೆಯವೆರಡು ಬಹುಮುಖ್ಯವಾಗಿವೆ. ಇವು ಸಹ ಬಹುರಮ್ಯವಾಗಿ ಚಿತ್ರಿತವಾಗಿವೆ. ಮಧ್ಯದ ಸ್ಥಳವನ್ನು ಅಲಂಕಾರಕ್ಕಾಗಿ ಬಳಸಿಕೊಳ್ಳಲಾಗಿದ್ದು, ಅದರಲ್ಲಿ ಸಂಪೂರ್ಣವಾಗಿ ಅರಳಿದ ಕಮಲವನ್ನು ತೋರಿಸಿ, ಅದರ ಸುತ್ತಲೂ ಅಲಂಕರಣದ ಚಿತ್ರಗಳು ತೋರಿಸಲಾಗಿದೆ. ಇದರ ಇಕ್ಕೆಲಗಳಲ್ಲಿರುವ ಎರಡು ಪೌರಾನಿಕ ದೃಶ್ಯಗಲಲ್ಲಿ, ದಕ್ಷಿಣದ ಕಡೆಗೆ ಇರುವುದು ತ್ರಿಪುರಗಳ ಸಂಹಾರದ ದೃಶ್ಯವನ್ನು ತೋರಿಸಿದರೆ, ಉತ್ತರ ಕಡೆಗಿರುವುದು ಮನ್ಮಥ ವಿಜಯವನ್ನು ನಿರೂಪಿಸುತ್ತದೆ. ಪುನಃ ಈ ಮನ್ಮಥ ವಿಜಯದ ದೃಶ್ಯವು ಸ್ಥಳ ಪುರಾಣಕ್ಕೆ ಸಂಬಂಧಿಸಿದುದಾಗಿದೆ.

ಅ. ಮನ್ಮಥ ವಿಜಯ : ದಾಕ್ಷಾಯಣಿಯನ್ನು ಕಳೆದುಕೊಂಡ ನಂತರ ಶಿವನು ಜಿಗುಪ್ಸೆಗೊಂಡು ಹೇಮಕೂಟದಲ್ಲಿ ಧ್ಯಾನಾಸಕ್ತಿನಾಗಿ ಕುಳಿತನು. ಈ ಮಧ್ಯೆ ಪರ್ವತರಾಜನ ಮಗಳಾಗಿ ಹುಟ್ಟಿದ ದಾಕ್ಷಾಯಣಿಯು ಶಿವನನ್ನು ಒಲಿಸಿಕೊಳ್ಳವ ಸಲುವಾಗಿ, ಧಾನ್ಯಾಸಕ್ತನಾದ ಶಿವನ ಸೇವೆಯಲ್ಲಿ ನಿರತಳಾಗಿದ್ದಳು. ಅದೇ ಸಮಯದಲ್ಲಿ ತಾರಕಾಸುರನೆಂಬ ಅಸುರನಿಂದ ಅನಂತ ಪೀಡೆಗೋಲಗಾಗಿದ್ದ ದೇವತೆಗಳು. ದೀರ್ಘ ಸಮಾಲೋಚನೆಯ ನಂತರ ಶಿವಕುಮಾರನೇ ಅ ಅಂತಕನ ನಿವಾರಕನೆಂಬ ಅರಿವಿನಿಂದಾಗಿ ಮನ್ಮಥನೊಡಗೂಡಿ ಶಿವನ ಧ್ಯಾನವನು ಕೆಡಿಸಿ ಗಿರಿಜೆಯಲ್ಲಿ ಅನುರಕ್ತನಗುವಂತೆ ಮಾಡಿದರೆಂಬುದು, ಈ ಪ್ರಯತ್ನದಲ್ಲಿ ಮನ್ಮಥನು ಶಿವನ ಕೋಪಾಗ್ನಿಯಲ್ಲಿ ಸುಟ್ಟು ಭಸ್ಮನಾದುದು ಮುಂತಾಗಿ ಸರ್ವರಿಗೂ ತಿಳಿದಿರುವ ಪುರಾಣ ಕಥೆಯಷ್ಟೆ? ಆ ದೃಶ್ಯವನ್ನೆ ಚಿತ್ರಕಾರನು ಇಲ್ಲಿ ಬಹುರಂಜಿತವಾಗಿಯೂ ಮತ್ತು ಅರ್ಥಗರ್ಭಿತವಾಗಿಯೂ ವಿವಿಧ ವರ್ಣಗಳಲ್ಲಿ ಬರೆದಿಟ್ಟಿರುತ್ತಾನೆ.

ಶಿವನು ಹೇಮಕೂಟದ ಮೇಲೆ, ತುಂಗಭದ್ರಾನದಿಯ ಮತ್ತು ಪಂಪಾ ಸರಸ್ಸುಗಳ ಪರಿಸರದಲ್ಲಿ ಧ್ಯಾನಾಸಕ್ತನಾಗಿ ಕುಳಿತಿರುತ್ತಾನೆ. ಅವುಗಳಾದರೋ ಜನಚರ ಪ್ರಾಣಿಗಳಿಂದ ಭರಿತವಾಗಿವೆ. ಶಿವನ ಸುತ್ತಲೆಲ್ಲಾ ಹುತ್ತವು ಬೆಳೆದಂತೆ ತೋರಿಸಲಾಗಿದ್ದು ಹವುಗಳು ಸುತ್ತಿಕೊಂಡಿರುತ್ತವೆ. ಶಿವನು ಪದ್ಮಾಸನನಾಗಿ ಕುಳಿತಿದ್ದು ಜಟೆಯ ಬೀಳುಗಳು ಮೊಣಕಾಲಿನವರೆಗೂ ಬಂದಿರುತ್ತವೆ. ನಂದಿಯು ಸದಾ ಸೇವೆಯಲ್ಲಿ ನಿರತನೆಂಬಂತೆ, ಪೀಠದ ಕೆಳಗೆ ನಿಂತಿದ್ದಾನೆ. ಬ್ರಹ್ಮ, ವಿಷ್ಣು, ಇಂದ್ರ ಮುಮತಾದ ದೇವತೆಗಳಿಮದ ಪ್ರೇರಿತನಾದ ಮನ್ಮಥನು ಶಿವನ ಧ್ಯಾನವನ್ನು ಭಂಗಗೊಳಿಸುವ ಸಲುವಾಗಿ ಶುಕರಥಾರೂಢನಾಗಿ ಬಂದು ಎದುರಿನಲ್ಲಿ ಕರುವಿಲ್ಲನ್ನು ಹಿಡಿದು, ಪುಷ್ಪಬಾಣವನ್ನು ಹಡಿ ನಿಂತಿದ್ದಾನೆ. ಅದೇ ಸಮಯದಲ್ಲಿ ಅವನ ಹೆಂಡತಿಯಾದ ರತಿದೇವಿಯು ಹಿಂದೆ ನಿಂತಿದ್ದು, ಆ ಅಪಾಯಕಾರಿ ಕೆಲಸದಲ್ಲಿ ತೊಡಗಬಾರದೆಂಬಂತೆ ಮನ್ಮಥನನನ್ನು ಅಂಗಾಲಾಚಿ ಬೇಡಿಕೊಳ್ಳುತ್ತಿರುವವಳಂತೆ, ಎರಡೂ ಕೈಗಳನ್ನು ಮುಂದೆ ಮಾಡಿರುತ್ತಾಳೆ. ಇದು ಬಹು ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ನಂದಿಯ ಹಿಂದೆ ಗಿರಿಜೆ ಮತ್ತು ಅವಳ ತಂದೆಯಾದ ಪರ್ವತ ರಾಜ, ಮುಂದೇನಾಗುವುದೋ ಎಂಬ ಶಂಕೆಯಿಂದ ಕೂಡಿದವರಾಗಿ ಗಂಭೀರವದನರಾಗಿ ನಿಂತಿರುವಂತೆ ಚಿತ್ರಿಸಲಾಗಿದೆ. ರತಿದೇವಿಗೆ ವಿಷಯದಲ್ಲಂತೂ ವೀಕ್ಷಕರ ಕರುಣೆಯುಕ್ಕಿ ಬರುವಂತೆ ಭಾವಗರ್ಭಿತವಾಗಿ ಚಿತ್ರಿತವಾಗಿದೆ. ಇಲ್ಲಿ ಚಿತ್ರಕಾರನು ಅತೀ ಸೂಕ್ಷ್ಮ ಭಾವನೆಗಳನ್ನು, ಸನ್ನಿವೇಶಗಳನ್ನು ಬಹುಕುಶಲತೆಯಿಂದ ಚೈತನ್ಯಯುಕ್ತವಾಗಿಯೂ ನೈಜವಾಗಿಯೂ ಚಿತ್ರಿಸಿರುತ್ತಾನೆಂದು ಹೇಳಬಹುದು.

ಇ. ತ್ರಿಪುರಗಳ ಸಂಹಾರ : ಈ ದೃಶ್ಯವು ಸ್ಥಳ ಪುರಾಣಕ್ಕೆ ಸಂಬಂಧಿಸಿದಲ್ಲವಾದರೂ, ಹಿಂದೂ ದೇವಾಲಯಗಳಲ್ಲಿ ಸಾಮಾನ್ಯವಾಗಿ ವರ್ಣಗಳಲ್ಲಿ ಚಿತ್ರಿತವಾಗಿರುವ ದೃಶ್ಯಗಳಲ್ಲೊಂದು. ಇಲ್ಲಿ ಚಿತ್ರಕಾರನ ಕುಂಚಗಳ ಕುಶಲತೆ, ಅವನ ಭಾವನಾ ನಿರೂಪಣೆಯ ಜಾಣ್ಮೆ ಮತ್ತು ವಸ್ತು ನಿರ್ದೇಶನದ ಚತುರತೆಗಳು ಬಹುಪರಿಣಾಮಕಾರಿಯಾಗಿ ವ್ಯಕ್ತವಾಗಿವೆ, ಎಂದು ಹೇಳದರೆ ಅತಿಶಯೋಕ್ತಿಯಾಗಲಾರದು. ಈ ದೃಶ್ಯದಲ್ಲಿ ಶಿವನು ತನ್ನ ರಥದಲ್ಲಿ ವೀರ ಭಂಗಿಯಲ್ಲಿ ನಿಂತು ತ್ರಿಪುರಗಳ ರಾಕ್ಷಸರನ್ನು ಎದುರಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಶಿವನು ಪೃಥ್ವಿಯನ್ನೇ ತನ್ನ ರಥವನ್ನಾಗಿ, ಸೂರ್ಯಚಂದ್ರರೇ ಅದರ ಚಕ್ರಗಳಾಗಿ, ನಾಲ್ಕು ವೇದಗಳೇ ಆ ರಥದ ಕುದುರೆಗಳಾಗಿ (ಇಲ್ಲಿ ಐದು ಕುದುರೆಗಳನ್ನು ತೋರಿಸಲಾಗಿದೆ) ಬ್ರಹ್ಮನೇ ಸಾರಥಿಯಾಗಿ, ಮಂದಾರ ಪರ್ವತವೇ ಧನಸ್ಸಾಗಿ, ಆದಿಶೇಷನೇ ಅದರ ಸಿಂಜಿನಿಯಾಗಿ, ವಿಷ್ಣುವೇ ಬಾಣವಾಗಿ ಉಪಯೋಗಿಸಿಕೊಂಡ ಕಥೆಯನ್ನು ಇಲ್ಲಿ ಸ್ಮರಿಸಿಕೊಳ್ಳ ಬಹುದು. ಈ ಎಲ್ಲಾ ವಿಷಯಗಳು ಬಹು ಕುಶಲತೆಯಿಂದ ಮೇಲೆಯೇ ವಿವರಿಸಿರುವಂತೆ ಚಿತ್ರಿತವಾಗಿವೆ.

ಮುಕ್ಕಣ್ಣನೂ, ಚತುರ್ಭುಜಕ್ಕೂ, ಕಿರೀಟ ಮುಕುಟಧಾರಿಯೂ, ಸರ್ವಾಲಂಕರಣ ಭರಿತನೂ, ರುಂಡಮಾಲಾಧರನೂ ಆದ ಶಿವನು ವೀರ ಭಂಗಿಯಲ್ಲಿ ತ್ರಿಪುರದ ರಾಕ್ಷಸರ ಎದುರಿನಲ್ಲಿ ನಿಂತಿದ್ದರೂ, ಆ ರಾಕ್ಷಸರು ತನಗೆ ಸಾಟಿಯಲ್ಲವೆಂಬ ಭಾವನೆಯ ದ್ಯೋತಕವಾಗಿ ಶಂತಚಿತ್ರದಿಂದ ನಿಂತಿರುವಂತೆ ತೋರಿಸಲಾಗಿದೆ.

ತ್ರಿಪುರಗಳನ್ನು ನಿರ್ಮಿಸಿಕೊಂಡಿದ್ದ ಅಸುರರಾದ ಕಾಮಾಕ್ಷ, ಮಕರಾಕ್ಷ ಮತ್ತು ವಿದ್ಯುನ್ಮಾಲಿಗಳು ಅನೇಕ ವರಗಳನ್ನೂ, ಆಯುಧಗಳನ್ನೂ ಹೊಂದಿದವರಾಗಿ ದೇವತೆಗಳಿಗೂ ಕೊಡುತ್ತಿದ್ದ ಉಪಟಳಗಳನ್ನು ಕೊನೆಗೊಳಿಸಲು, ಬೇರಾರಿಂದಲೂ ಸಾಧ್ಯವಾಗದಂತೆ ಇರಲು, ಸರ್ವಶಕ್ತನಾದ ಶಿವನೇ ಯುದ್ಧಕ್ಕೆ ತೊಡಗಬೇಕಾಯಿತೆಂಬುದು ಪುರಾಣಾಂತರ್ಗತ ಕಥೆ.[16] ಆ ಶಿವನೂ ಸಹ ಇತರೆ ಎಲ್ಲಾ ದೇವತೆಗಳ ಸಹಾಯದಿಂದ ಮಾತ್ರವೇ ಅವರನ್ನು ಜಯಿಸಲು ಸಾಧ್ಯವಾಯಿತು. ಈ ರಾಕ್ಷಸರನ್ನು ಶಿವನ ಎದುರಿನಲ್ಲಿ, ಆಕಾಶದಲ್ಲೆಂಬಂತೆ ಮೂರು ವೃತ್ತಗಳ, ತೋರಿಸಲಾಗಿದ್ದು, ಅವುಗಳು ಅಕಾಶದಲ್ಲಿಯೇ ಒಂದನ್ನೊಂದು ಹೊಂದಿಕೊಂಡಿದ್ದು ಯಾವಾಗಲೂ ತಮ್ಮ ಸುತ್ತತಿರುಗುತ್ತಿದ್ದವೆಂಬ ವಿಷಯವನ್ನು ಸಹ ಚಮತ್ಕಾರದಿಂದ ನಿರೂಪಿಸಲಾಗಿದೆ. ಈ ಮೂರು ವೃತ್ತಗಳು, ಅಸುರರು ವರವಾಗಿ ಪಡೆದಿದ್ದ ಅಜೇಯವಾದ ಕೋಟೆಗಳನ್ನು ಪ್ರತಿನಿಧಿಸುತ್ತೆ.[17] ಆ ವೃತ್ತಗಳೊಳಗೆ ಅಸುರರ, ಅವರ ಅನುಯಾಯಿಗಳ ಭೀಕರ ಆಕೃತಿಗಳನ್ನು ಎರಡರಲ್ಲಿ ತೋರಿಸಲಾಗಿದ್ದು, ಮೂರನೆಯದರಲ್ಲಿ ವಿಷ್ಣುವು ಆಗಲೇ ಬಂದಿಳಿದು, ಆಸುರ ಪತ್ನಿಯರ ಮನೋಸ್ಥೈರ್ಯವನ್ನು ನಿರ್ವೀರ್ಯಗೊಳಿಸುವುದರ ಮೂಲಕ ತ್ರಿಪುರ ಸಂಹಾರ ಕಾರ್ಯದಲ್ಲಿ ನಿರತನಾಗಿರುವಂತೆ ತೋರಿಸಲಾಗಿದೆ. ಇಲ್ಲಿ ವಿಷ್ಣುವು ಇಬ್ಬರ ಅಸುರ ಪತ್ನಯರ ಮಧ್ಯದಲ್ಲಿ ಬೆತ್ತಲೆಯಾಗಿ ನಿಂತಿರುವಂತೆ ಚಿತ್ರಿಸಲಾಗಿದೆ.

ಈ ಯುದ್ಧವು ನಡೆದ ಪರಿಸರದ ದೃಶ್ಯವು ಸಮಕಾಲೀನ ಯುದ್ಧಭೂಮಿಯ ಸನ್ನಿವೇಶವನ್ನು ನೆನಪು ಮಾಡಿಕೊಡುವಂತಹುದಾಗಿದೆ. ಎಂದರೆ ಆ ಕಾಲದಲ್ಲಿ ಯುದ್ಧಗಳು ಜನವಸತಿಯಿಮದ ದೂರದಲ್ಲಿದ್ದ ಬಯಲುಗಳಲ್ಲಿ ಜರುಗುತ್ತಿದ್ದುವು. ಈ ಅಂಶವು ಈ ಚಿತ್ರದ್ಲಲಿ ಕಾಣಿಸಿರುವ ಗಿಡಗಳು, ಪೊದೆಗಳು, ನರಿ ಮುಂತಾದ ಕಾಡುಮೃಗಗಳ, ರಣಹದ್ದು ಮುಂತಾದ ಪಕ್ಷಿಗಳಿಂದ ವ್ಯಕ್ತವಾಗುತ್ತದೆ.[18] ಹೀಗೆ ಈ ದೃಶ್ಯವು ಸಂದರ್ಭೋಚಿತವಾಗಿಯೂ ಮತ್ತು ಪರಿಣಾಮಕಾರಿಯಾದ ವಿವರಣೆಗಳೊಂದಿಗೂ, ಚಿತ್ರಕಾರನ ಕುಶಲ ಕುಂಚಗಳಿಂದ ಮೂಡಿ ಬಂದಿದೆ.

೪. ನಂತರದ ಸಾಲಿನಲ್ಲಿಯೂ ಮೂರು ಭಾಗಗಳನ್ನು ಕಾಣಬಹುದು. ಮಧ್ಯದಲ್ಲಿರುವ ಭಾಗದಲ್ಲಿ ವಿಷ್ಣುವಿನ ದಶಾವತಾರಗಳನ್ನು ಚಿತ್ರಸಲಾಗಿದೆ. ಇವುಗಳೂ ಸಹ ಆಗಮ ಗ್ರಂಥಗಳಲ್ಲಿರುವ ನಿರ್ದೇಶನಗಳ ಮೇರೆಗೆ ಪ್ರಸ್ತುತಪಡಿಸಲಾಗಿವೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಬುದ್ಧನ ಅವತಾರದ ಚಿತ್ರವು. ಇಲ್ಲಿ ಬುದ್ಧಾವತಾರದ ವಿಷ್ಣುವನ್ನು ಬೆತ್ತಲೆಯಾಗಿಯೂ ಮತ್ತು ಸಮಭಂಗಿಯಲ್ಲಿ ನಿಂತಿರುವಂತೆ ತೋರಿಸಿರುವುದಲ್ಲದೆ, ವಿವಿಧ ಆಭರಣಗಳನ್ನು ಧರಿಸಿರುವಂತೆಯೂ ಚಿತ್ರಿಸಲಾಗಿದೆ. ಈ ಚಿತ್ರವು ಹೆಚ್ಚಾಗಿ ಬಾಗಿ ಕೃಷ್ಣನನ್ನೋ ಅಥವಾ ಬಾಲ ಬಲರಾಮನನ್ನೋ ಹೋಲುವಂತಿದೆ. ಅತೀ ಸಮೀಪದಿಂದ ಪರೀಕ್ಷಿಸಿದಲ್ಲಿ, ಅವನ ಹಣೆಯ ಮೇಲೆ ವೀರ ರೇಖೆಗಳೂ ಕಾಣಲಿಕ್ಕುಂಟು.[19] ಎಂದರೆ ಬುದ್ಧನನ್ನು ಸಂಪೂರ್ಣವಾಗಿ ಹಿಂದೂ ದೇವತೆಗಳ ಸಾಲಿಗೆ ಸೇರಿಸಿಕೊಂಡಂತೆ ತೋರಿಸಲಾಗಿದೆ.

ಮೇಲಿನ ದಶಾವತಾರದ ಒಂದು ಕೊನೆಯಲ್ಲಿರುವ ಚೌಕದಲ್ಲಿ ಬಿಲ್ಲು ಬಾಣಗಳನ್ನು ಹಿಡಿದಿರುವ ಅಸಾರನೊಬ್ಬನು ಆನೆಯ ಮೇಲೆ ಕುಳಿತಿರುವಂತೆ ಚಿತ್ರಿಸಲಾಗಿದೆ. ಆ ಆನೆಯ ದೇಹಭಾಗವೆಲ್ಲವೂ ಹೆಂಗಳೆಯರ ಚಿತ್ರಗಳಿಂದ ತುಂಬಲಾಗಿದೆ. ಹೊರನೋಟಕ್ಕೆ ಅದು ಒಂದು ವಿಧದ ಕಸರತ್ತಿನ ಆಟವೋ ಎಂಬಂತೆ ಇದೆ. ಅದೇ ರೀತಿಯಲ್ಲಿ ಇನ್ನೊಂದು ಕೊನೆಯಲ್ಲಿರುವ ಕುದುರೆಯ ಮೇಲಿರುವ ಸವಾರನದು ಸಹ ಚಿತ್ರಿತವಾಗಿದೆ.[20] ಈ ತರದ ಚಿತ್ರಗಳು, ಬಹುಶಃ ಅಲಂಕಾರಕ್ಕಾಗಿ ಚಮತ್ಕಾರದಿಂದ ಬಳಸಲಾಗಿದ್ದು, ಬೇರೆಡೆಗಳಲ್ಲಿಯೂ ಸಹ ಇಂತಹ ಚಿತ್ರಗಳು ಕಾಣಬರುತ್ತವೆ.

೫. ಈಗ ಪರಿಶೀಲಿಸಲಾಗುತ್ತಿರುವ ಸಾಲಿನಲ್ಲಿ ರಾಮಯಣ ಮತ್ತು ಮಹಾಭಾರತಗಳ ಎರಡು ಮುಖ್ಯ ಘಟನೆಗಳನ್ನು ನಿರೂಪಿಸಲಾಗಿದೆ. ಎಂದರೆ ಜನಕ ಮಹಾರಾಜನು ಸೀತಾ ಸ್ವಯಂವರದ ಸಂದರ್ಭದಲ್ಲಿ ಏರ್ಪಡಿಸಿದ್ದ ಶಿವಧನುಸ್ಸನ್ನು ಶ್ರೀ ರಾಮನು ಎದಗೇರಿಸಿ ಸಿಂಜಿನಿಯನ್ನು ಬಿಗಿಯುವ ದೃಶ್ಯವು.

ಅದೇ ರೀತಿ, ದ್ರುಪದರಾಜನು ದ್ರೌಪದಿಯ ಸ್ವಯಂವರದ ಸಮಯದಲ್ಲಿ ಏರ್ಪಡಿಸಿದ್ದ ಯಂತ್ರಮತ್ಸ್ಯದ ಪ್ರತಿಬಿಂಬವನ್ನು ಕೆಳಗಿನ ಪಾತ್ರೆಯ ನೀರಿನಲ್ಲಿ ನೋಡಿ, ಗುರಿ ಇಟ್ಟು ಅರ್ಜುನನಿಂದ ಭೇದಿಸಲ್ಪಡುತ್ತಿರುವುದು ಇನ್ನೊಂದು ದೃಶ್ಯವು. ಈ ಎರಡು ಘಟನೆಗಳ ಜೊತೆಗೆ ಆ ಸಮಯಕ್ಕೆ ನೆರೆದ ಇತರ ರಾಜಕುಮಾರರು, ಹೆಂಗಸರು, ಋಷಿಗಳು ಮುಂತಾದವರನ್ನು ಸಹ ಸೂಕ್ತವಾಗಿ ಚಿತ್ರಿಸಲಾಗಿದೆ.

೬. ಈ ಸಾಲಿನಲ್ಲಿ ರಾಜನೊಬ್ಬನು ತನ್ನ ಅನುಚರರು ಮತ್ತು ಭಟರೊಂದಿಗೆ ಬೇಟೆಗಾಗಿ ಹೊರಟಿರುವಂತೆ ತಿಳಿಯುತ್ತದೆ. ಇದರಲ್ಲಿ ಕೆಲವು ರಥಗಳೂ ಇವೆ. ಅವುಗಳ ಮೇಲೆಲ್ಲಾ ಬೇರೆ ಬೇರೆ ಆಕಾರದ ಛಾವಣಿಗಳನ್ನು ಚಿತ್ರಸಲಾಗಿದೆ. ಅವುಗಳಡಿಯಲ್ಲಿ ರಾಜನು ಅಥವಾ ಅಧಿಕಾರಿಗಳು ಸುಖಾಸೀನರಾಗಿದ್ದು, ಕೆಲವರ ಪರಿಚಾರಕರು ಗಾಳಿ ಹಾಕುತ್ತಿರುವಂತೆ ತೋರಿಸಲಾಗಿದೆ. ಅವರೆಲ್ಲ ರಾಜನು ಮತ್ತು ಅವನ ಪ್ರಮುಖ ಅಧಿಕಾರಿಗಳಾಗಿರಬೇಕು. ಅವರು ತಾವು ಸ್ವತಃ ಬೇಟೆಯಾಡದೆ, ತಮ್ಮ ಭಟರು ಮತ್ತು ಸೈನಿಕರು ಬೇಟೆಯಾಡುವುದನ್ನು ನೋಡಿ ಆನಂದಿಸಲು ಬಂದವರಾಗಿರಬೇಕು. ಇವರ ರಥಗಳಿಗೆ ಜೋಡಿ ಜೋಡಿಯಾಗಿ ಆನೆಗಳನ್ನೋ, ಕುದುರೆಗಳನ್ನೋ ಅಥವಾ ಹೋರಿಗಳನ್ನೋ ಹೂಡಿರುವಂತೆ ಕಾಣಿಸುತ್ತದೆ. ಭಟರು ಅಥವಾ ಸೈನಿಕರು ಸಾಲು. ಗುಂಪುಗಳಲ್ಲಿ ಅಲ್ಲಲ್ಲಿ ಕಾಣಬರುತ್ತಾರೆ. ಅವರೆಲ್ಲ ಸಮಕಾಲೀನ ಉಡುಪುಗಳನ್ನು ಧರಿಸಿದ್ದು, ಕೈಗಳಲ್ಲಿ ಖಡ್ಗ, ಗುರಾಣಿ, ಭರ್ಚಿ, ಕೋಲು, ಈಟಿ ಮುಂತಾದ ಆಯುಧಗಳನ್ನು ಹೊಂದಿರುತ್ತಾರೆ. ಇವರಲ್ಲದೆ ಕೆಲವು ಪಕ್ಷಿಗಳು, ಮನುಷ್ಯನನ್ನು ಬೆನ್ನಟ್ಟಿರುವ ಹುಲಿ, ಖಡ್ಗ ಮತ್ತು ಗುರಾಣಿಗಳನ್ನು ಹಿಡಿದು ಜಿಂಕೆಯೊಂದನ್ನು ಬೆನ್ನಟ್ಟಿರುವ ಸಯನಿಕ, ಇವೇ ಇಎತ ಚಿತ್ರಗಳು. ಇವೆಲ್ಲವುಗಳ ಪರಿಶೀಲನೆಯಿಂದ, ಇದು ಬೇಟೆಯ ಚಿತ್ರವನ್ನು ನಿರೂಪಿಸುತ್ತದೆಂದು ಹೆಳಬಹುದು, ಮತ್ತು ಆಗಿನ ಕಾಲದಲ್ಲಿ ಬೇಟೆಯಾಡುವ ಪದ್ಧತಿ, ಜನರ ವೇಷ ಭೂಷಣಗಳ ಅಧ್ಯಯನಕ್ಕೆ ಬಹಳ ಅನುಕೂಲವಾದ ವಸ್ತುವಾಗಿದೆ.[21]

೭. ಕೊನೆಯ ಸಾಲಿನ ಮಧ್ಯಭಾಗದಲ್ಲಿ ಒಬ್ಬ ಗುರು ಅಥವಾ ಸ್ವಾಮಿಯನ್ನು ಪಾಲಕಿಯಲ್ಲಿ ಕುಳ್ಳಿರಿಸಿ, ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಸ್ಥಳೀಯ ವದಂತಿಯ ಪ್ರಕಾರ, ಆ ಸ್ವಾಮಿಯು ಬೇರಾರೂ ಅಲ್ಲದೆ, ವಿಜಯನಗರ ಸಾಮ್ರಾಜ್ಯದ ಸ್ಥಾಪನಾಕಾರ್ಯದಲ್ಲಿ ಮುಖ್ಯ ಕಾರಣಕರ್ತರಾಗಿ, ಪ್ರೋತ್ಸಾಹಕರಾಗಿ, ಪೋಷಕರಾಗಿ ಪಾತ್ರವಹಿಸಿದ ವಿದ್ಯಾರಣ್ಯ ಸ್ವಾಮಿಯವರೆಂದು ಪ್ರತೀತಿ. ಅಂಥ ಪ್ರಮುಖ ಯತಿವರೇಣ್ಯರನ್ನು, ವಿಜಯನಗರದ ಅರಸರು ಈ ವಿರೂಪಾಕ್ಷ ಸ್ವಾಮಿಯ ದೇವಾಲಯದಲ್ಲಿ ವರ್ಣಚಿತ್ರಗಳಲ್ಲಿ ತೋರಿಸಿರುವುದರಿಂದ ಅವರಿಗೆ ಗೌರವವನ್ನು ಸಲ್ಲಿಸಿದಂತಾಗಿದೆ ಎಂದು ಹೇಳಬಹುದು. ಈ ಮೆರವಣಿಗೆಯಲ್ಲಿ ಅನೇಕ ಪರಿಚಾರಕರು, ಸೇವಕರು ವಂದಿಮಾಗಧರು, ಶಿಷ್ಯರು ಮುಂತಾದವರಿದ್ದಾರೆ.

ಶ್ರೀ ವಿದ್ಯಾರಣ್ಯ ಸ್ವಮಿಗಳ ಮೆರವಣಿಗೆಯ ಚಿತ್ರದ ಎರಡೂ ಕೊನೆಗಳಲ್ಲಿ ಚಿಕ್ಕ ಚೌಕ ಮನೆಗಳಿದ್ದು, ಒಂದರಲ್ಲಿ ಬಾಲಕೃಷ್ಣನಿಂದ ಗೋಪಿಕಾವಸ್ತ್ರಾಪಹರಣದ ಪ್ರಸಂಗವನ್ನು ಚಿತ್ರಿಸಲಾಗಿದೆ. ಇನ್ನೊಂದರಲ್ಲಿ ಶ್ರೀ ಪಂಪಾ ವಿರೂಪಕ್ಷ ಲಿಂಗಕ್ಕೆ ಮುಖ ಕವಚವನ್ನು ಧರಿಸಿದಂತೆಯೂ ಮತ್ತು ಎದುರಿನಲ್ಲಿ ನಂದಿಯನ್ನು ತೋರಿಸಿದಂತೆಯೂ ಚಿತ್ರವನ್ನು ರೂಪಿಸಲಾಗಿದೆ.

೮. ಈ ಮೇಲೆ ವಿವರಿಸಿದ ಚಿತ್ರಗಳಿರುವ ಒಳಮಾಳಿಗೆಗೆ ಸುತ್ತಲೂ ಇರುವ ಕಲ್ಲಿನ ಪಟ್ಟಿಕೆಗಳ ಮೇಲೆಯೂ ಸಹ ವರ್ಣಚಿತ್ರಗಳನ್ನು ಬರೆಯಲಾಗಿದೆ. ಎಂದು ಹಿಂದೆಯೇ ಹೇಳಿದೆ. ಇವು ನಿಲುಚಿತ್ರಗಳು ಮತ್ತು ಬಹು ಚಿಕ್ಕ ಪ್ರಮಾಣದಲ್ಲಿವೆ. ಇವುಗಳಲ್ಲಿ ಹೆಚ್ಚಿನವು, ಸುಣ್ಣ ಬಳಿಯುವವರ ಅಜ್ಞಾನದಿಂದಾಗಿ, ಹಾಳಾಗಿವೆ. ಆದರೂ ಉಳಿದಿರುವ ಕೆಲವು ಪ್ರಸ್ತುತ ಪಡಿಸುವ ವಿಷಯಗಳು ಅನೆಕವಾಗಿದ್ದು, ಸುಮಾರು ೬೭ ಚೌಕಗಳಲ್ಲಿ ಚಿತ್ರಿತವಾದಂತೆ ತಿಳಿಯುತ್ತದೆ. ಉದಾಹರಣೆಗೆ, ಹಿಂದೂ ಪಂಥದ ದೇವತೆಗಳು, ಮತ್ಸೇಂದ್ರನಾಥ, ವಿವಿಧ ವಾದ್ಯಗಳನ್ನು ನುಡಿಸುವವರು, ಗೋಗ್ರಹಣ, ಕಾಲಧೇನು, ಕಿನ್ನರರು, ಗಂಧರ್ವರು, ಋಷಿಗಳು ಮುಂತಾದವುಗಳೇ ಅವುಗಳ ವಿಷಯಗಳು.

ಅಂಕಣದ ಪಶ್ಚಿಮದ ಕೊನೆಯಲ್ಲಿ ಕೆಲವು ರಾಜಮನೆತನದ ಭಕ್ತರು ಶ್ರೀ ವಿರೂಪಾಕ್ಷ ಸ್ವಾಮಿಗೆ ಪೂಜೆ ಸಲ್ಲಿಸುತ್ತಿರುವಂತೆ ತೋರಿಸಲಾಗಿದೆ. ರಾಸಾಯನಿಕ ರೀತಿಯಲ್ಲಿ ಇವುಗಳನ್ನು ತೊಳೆದಾಗ, ಅಕ್ಷರಗಳೇನಾದರೂ ಕಂಡುಬಂದರೆ, ಇವು ಬಹುಮುಖ್ಯವಾದ ವರ್ಣಚಿತ್ರಗಳೆಂದು ಪರಿಗಣಿಸಲ್ಪಡುವಲ್ಲಿ ಸಂದೇಹವೇ ಇರದು.[22] ಪ್ರಸ್ತುತದಲ್ಲಿ ಅವುಗಳೆಲ್ಲಾ ಬೆಳಕು. ಹೊಗೆ, ಧೂಳು, ಸುಣ್ಣಗಳ ದುಷ್ಟರಿಣಾಮಗಳಿಂದಾಗಿ ಮಸಕಾಗಿವೆಯಾದುದರಿಂದ ಅವುಗಳ ಬಗೆಗೆ ಏನೂ ತಿಳಿದುಬರುತ್ತಿಲ್ಲ.

ತಾಂತ್ರಿಕತೆ

ಕೊನೆಯಲ್ಲಿ ಇವುಗಳ ತಾಂತ್ರಿಕತೆಯ ಬಗ್ಗೆ ಎರಡು ಮಾತುಗಳನ್ನು ಹೇಳಲೇಬೇಕಾಗುತ್ತದೆ. ಇವುಗಳನ್ನು ರಾಸಾಯನಿಕ ವಿಶ್ಲೇಷಣೆಗಳಿಗೆ ಒಳಪಡಿಸುವವರಿಗೆ ಖಚಿತವಾಗಿ ಏನನ್ನೂ ಹೇಳಲಾಗದು. ಆದರೂ ಪುರಾತತ್ವ ರಾಸಾಯನಿಕ ಪರಿಣಿತರು[23] ನಾಯಕರ ಕಾಲದ (ಕ್ರಿ.ಶ. ೧೬ ಮತ್ತು ೧೭ನೇ  ಶತಮಾನ) ವರ್ಣಚಿತ್ರಗಳನ್ನು ಕುರಿತು ಹೇಳಿರುವುದನ್ನು ಇಲ್ಲಿಯೂ ಉದ್ಧರಿಸಬಹುದು. ಏಕೆಂದರೆ ವಿಜಯನಗರ ಕಾಲದ ತಾಂತ್ರಿಕತೆಯೇ, ಈ ನಾಯಕರ ಕಾಲದ ಚಿತ್ರಗಳಲ್ಲಿಯೂ ಬಳಸಲಾಗಿದೆ ಎಂಬುದು ಸ್ಥಿರವಾಗಿದೆ. ‘ತಂಜಾವೂರಿನಲ್ಲಿ ವಿಜಯನಗರದ ಕಾಲದ ವರ್ಣಚಿತ್ರಕಾರರು, ಗಾರೆಯಿಂದ ಸಿದ್ಧವಾದ ಭಿತ್ತಿ (ಗೋಡೆ)ಗಳ ಮೇಲೆ ಅಥವಾ ಒಳಮಾಳಿಗೆಗಳ ಮೇಲೆ, ಸುಣ್ಣದ ನೀರಿನಲ್ಲಿ ಕಲಿಸಿದ ಬಣ್ಣಗಳಿಂದ ಚಿತ್ರಗಳನ್ನು ಬಿಡಿಸಿರುತ್ತಾರೆ. ಈ ಸ್ಥಳದಲ್ಲಿ ಸಾಮಾನ್ಯವಾಗಿ ಮೂರು ಪದರುಗಳು ಕಾಣಸಿಗುತ್ತವೆ. ಮೊದಲು ಒರಟಾದ ಗಾರೆಯಿಂದ ಸಿದ್ಧಪಡಿಸಿದ ಪದರು, ನಯವಾಗಿ ಸಿದ್ಧಪಡಿಸಿದ ಭೂಮಿಕೆ, ಆನಂತರ ಬಣ್ಣಗಳ ಲೇಪನದಿಂದಾದ ಚಿತ್ರಗಳು ಮುಂತಾಗಿ[24] ಅವರು ಹೆಚ್ಚಾಗಿ ಮಣ್ಣಿನ ಬಣ್ಣಗಳನ್ನೇ ಉಪಯೋಗಿಸುತ್ತಿದ್ದರು. ಈ ಬಣ್ಣಗಳನ್ನು ಸುಣ್ಣದ ತಿಳಿನೀರಿನಲ್ಲಿ ಕಲಿಸಿ ಚಿತ್ರಿಸುತ್ತಿದ್ದರಷ್ಟೇ? ಹಾಗೆ ಮಾಡುವುದರಿಂದ ಸುಣ್ಣದ ಇಳಿನೀರಿನಲ್ಲಿದ್ದ ಕ್ಷಾರವು, ವಾಯುವಿನಲ್ಲಿದ್ದ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುವ ಗುಣವುಳ್ಳದ್ದಾಗಿರುವುದರಿಂದ, ಕೆಲಕಾಲದ ನಂತರ ಅವು ಗಟ್ಟಿಗೊಳ್ಳತ್ತಿದ್ದವು ಆದುದರಿಂದಲೇ ಅವು ನಮಗೆ ಇಂದಿಗೂ ಕಾಣಬರುತ್ತವೆ.

ಕೊನೆಯ ಮಾತು

ಮೇಲೆ ಪ್ರಸ್ತುತಪಡಿಸಿರುವ ವಿವರಣೆಗಳಿಂದ, ಹಂಪೆಗೆ ಶ್ರೀ ವಿರೂಪಾಕ್ಷ ಸ್ವಾಮಿಯ ದೇವಸ್ಥಾನದ ಮಹಾರಂಗ ಮಂಟಪದಲ್ಲಿ ಕಾಣಬರುವ ವರ್ಣಚಿತ್ರಗಳು ಬಹುಮುಖ್ಯವಾದವುಗಳೆಂದಾಯಿತಲ್ಲವೇ? ಮತ್ತು ಆ ಕಾರಣದಿಂದಾಗಿ ಅಭಿಮಾನಪಡಬೇಕಾದ ವಿಷಯವೂ ಆಯಿತು. ಆದುದರಿಂದ ಅವುಗಳು ಮತ್ತಷ್ಟು ಹಾಳಾಗದಂತೆ (ಈಗಾಗಲೇ ಸಾಕಷ್ಟು ಹಾಳಾಗಿವೆ) ಬೇಕಾದ ಕ್ರಮಗಳನ್ನು ಕೈಕೊಂಡು ಅವುಗಳ ರಕ್ಷಣೆಯನ್ನು, ಸಂಬಂಧಿಸಿದ ಎಲ್ಲರೂ ಅಭಿಮಾನ ಪ್ರೇರಿತರಾಗಿ ಮಾಡಬೇಕಾದುದು ಆದ್ಯ ಕರ್ತವ್ಯವಾಗಿದೆಯೆಂದು ಹೇಳಲೇಬೇಕಾಗಿದೆ. ಹುಚ್ಚಪ್ಪಯ್ಯನ ಮಠದಲ್ಲಿದ್ದ ವರ್ಣಚಿತ್ರಗಳಿಗಾದ ಗತಿಯು ಇವುಗಳಿಗೂ ಆಗಬಾರದೆಂದು ಆಶಿಸೋಣ.

ಆಕಾರ
ಹೇಮಕೂಟ, ಸಂ.೩, ಸಂಚಿಕೆ ೯, ೧೯೭೮, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿಮಠ, ಹಂಪಿ,

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] History and culture of the Indian People : Bhavan’s Publication, Vol. III, pp. 546

[2] ಡಾ. ಶಿವರಾಮ ಕಾರಂತ, ಕರ್ನಾಟಕದಲ್ಲಿ ಚಿತ್ರಕಲೆ, ಮೈಸೂರು, ಪು. ೬೩.

[3] ಹಯವದನ ರಾವ್, Mysore Gazetteer, Vol. II, pt. I, pp. 330

[4] ರತ್ನಾಕರ ವರ್ಣಿಯ ಭರತೇಶ ವೈಭವ, ಕೃಷ್ಣದೇವರಾಯನ ಪಾರಿಜಾತಾಪಹರಣ, Domingos paes, Abdur Razzak etc.

[5] ಹಂಪೆಯ ಚಿತ್ರಗಳಲ್ಲದೆ ದಕ್ಷಿಣದ ಅನೇಕ ದೇವಾಲಯಗಳಲ್ಲಿ ವರ್ಣಚಿತ್ರಗಳು ಕಾಣಬರುತ್ತವೆ. ಉದಾ. ಎಡೆಯೂರಿನ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ, ಲೇಪಾಕ್ಷಿಯ ವೀರಭದ್ರ ಸ್ವಾಮಿ ದೇವಾಲಯದಲ್ಲಿ, ಕದರಿಯ ನಾರಾಯಣ ಸ್ವಾಮಿ ದೇವಾಲಯದಲ್ಲಿ, ತಂಜಾವೂರಿನ ಬೃಹದೀಶ್ವರಸ್ವಾಮಿಯ ದೇವಾಲಯದಲ್ಲಿ ಮುಂತಾಗಿ.

[6] ಇಂಥ ಅವಶೇಷಗಳನ್ನು, ಹಂಪೆಯ ಕಮಲ ಮಹಲು (ಚಿತ್ರಾಂಗಿ ಮಹಲು) ಹತ್ತಿರದ ಅರಮನೆಯ ನೆಲಗಟ್ಟುಗಳ ಹೊರಗೋಡೆಗಳ ಮೇಲೆ ಈಗಲೂ ನೋಡಬಹುದು. ಕಮಲ ಮಹಲುಗೆ ಸ್ಥಳೀಯ ಹೆಸರು ಚಿತ್ರಾಂಗಿ ಮಹಲೆಂದು ಹೆಸರೇ ಸೂಚಿಸುವಂತೆ, ಹಿಂದೆ ಅದು ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದ್ದುದಾಗಿರಬೇಕು. ಅದು ಅಂತಃಪುರದ ಹೆಂಗಳೆಯರ ವಿಹಾರ ಮಂಟಪವಾಗಿದ್ದುದರಿಮದ, ಹಾಗೆ ವರ್ಣಚಿತ್ರಗಳಿಂದ ಕೂಡಿದ್ದರೆ ಆಶ್ಚರ್ಯವೇನೂ ಇಲ್ಲ. ರಸಾಯನ ತಜ್ಞರು ಪರಿಗಣಿಸಬೇಕಾದ ವಿಷಯವೇ ಇದು.

[7] ಹಂಪೆಯ ಕೃಷ್ಣ ದೇವಸ್ಥಾನ, ವಿರೂಪಾಕ್ಷ ದೇವಾಲಯ, ಕಮಲಾಪುರದಲ್ಲಿರುವ ಒಂದು ಹಾಳು ದೇವಾಲಯಗಳಲ್ಲಿ, ಈ ಕುರುಹುಗಳನ್ನು ಈಗಲೂ ನೋಡಬಹುದು.

[8] ಹಂಪೆಯ ವಿಠಲ ದೇವಾಲಯದಲ್ಲಿ, ತಂಜವೂರಿನ ಬೃಹದೀಶ್ವರ ದೇವಾಲಯ ಮುಂತಾದೆಡೆಗಳನ್ನು ನೋಡಬಹುದು.

[9] ಇವುಗಳ ದೃಷ್ಟಾಂತಗಳನ್ನು ಹಂಪೆಯ ಪುರಾತತ್ವ ಸಮಗ್ರಹಾಲಯದ ಎರಡು ಶಿಲ್ಪಗಳ ಮೇಲೆ ನೋಡಬಹುದು.

[10] Heras : Aravidu Dynasty, pp. 486.

[11] S. Paramasivan : Vijayanagara Sexcentinary Vol. pp. 92.

[12] ಈಗ ಇವೆಲ್ಲ ಹಾಳಾಗಿವೆ.

[13] ಟಿಪ್ಪಣಿ ೧೨ರಲ್ಲಿದ್ದಂತೆ, ಪು. ೯೩.

[14] South Indian Inscriptions, Vol. No. 259, p. 54.

[15] Gopinatha Rao : Elements of Hindu Iconography, Vol. II, pt. I.

[16] ಬಿ.ಎನ್. ರಾವ್. ಪುರಾಣನಾಮ ಚೂಡಾಮಣಿ ಮುಂತಾದ ಗ್ರಂಥಗಳಲ್ಲಿ ಈ ಕಡೆಯನ್ನು ವಿವರವಾಗಿ ಕೋಡಲಾಗಿದೆ; Gopinatha Rao, Vol. II, Part I, pp. 164.

[17] ಮಹಾಭಾರತ (ಕರ್ಣಪರ್ವ) : ಕೋಟೆಗಳು ತಿರುಗುತ್ತಿದ್ದ ವಿಷಯವಾಗಿ ವಿವರಗಳನ್ನು ಕೊಡಲಾಗಿದೆ.

[18] ಶುಕ್ರನೀತಿಸಾರ, ರಾಜ್ಯಶಾಸ್ತ್ರದ ಬಗ್ಗೆ ವಿವರಗಳನ್ನು ಕೊಡುವಾಗ ಕೋಟೆ ಮುಂತಾದವುಗಳ ಬಗ್ಗೆಯೂ ವಿಶದವಾಗಿ ಹೇಳಲಾಗಿದೆ.

[19] ಹಂಪೆಯ ಹಜಾರರಾಮನ ದೇವಾಲಯದ ಹೊರಗಡೆಯ ಗೋಡೆಯ ಮೇಲೆ ಪದ್ಮಾಸನಸ್ಥನಾಗಿರುವ ಬುದ್ಧನ ಶಿಲ್ಪವಿದೆ. ಆ ಮೂರ್ತಿಯ ಹಣೆಯ ಮೇಲೆ ವೀರ ರೇಖೆಗಳನ್ನು ಕಾಣಬಹುದು.

[20] ಗೃಹಕೃತ್ಯಗಳಿಗಾಗಿ ಉಪಯೋಗ ಮಾಡಿಕೊಳ್ಳಲಾಗುತ್ತಿದ್ದ ಪ್ರಾಣಿಗಳನ್ನು ವಿವಿಧ ಬಣ್ಣಗಳಿಂದ ಚಿತ್ರಿಸುವುದು ಸಾಮಾನ್ಯವಾಗಿತ್ತೆಂದು ಡಾಮಿಂಗೊಪೇಸೆ ಎಂಬ ಪರದೇಶೀ ಪ್ರವಾಸಿಗನು ಹೇಳಿರುತ್ತಾನೆ. ಹಾಗೆ ಚಿತ್ರಸುತ್ತಿದ್ದುದು ವಿಶೇಷ ಸಂದರ್ಭಗಳಲ್ಲಿ ಮಾತ್ರ. ಹಬ್ಬ ಹರಿದಿನಗಳಲ್ಲಿ, ಯುದ್ಧ ಅಥವಾ ಬೇಟೆಗೆ ಹೊರಟ ಸಮಯಗಳಲ್ಲಿ ಹಾಗೆ ಮಾಡಲಾಗುತ್ತಿತ್ತು. ಮತ್ತು Sewell : Forgotten exmpire, pp. 277 ನೋಡುವುದು.

[21] ಪ್ರಸ್ತುತ ಲೇಖನದ ವಿಷಯದಿಂದ ಬೇರೆಯಾದುದರಿಮದ ಈ ವಿಷಯವನ್ನು ವಿಶದೀಕರಿಸಲಾಗಿಲ್ಲ.

[22] ಆ ಕಾಲದಲ್ಲಿ ಚಿತ್ರಗಳ ಕೆಳಗೆ ಪ್ರಾಂತೀಯ ಭಾಷೆಯಲ್ಲಿ ವಿಷಯವನ್ನು ಅಥವಾ ಚಿತ್ರಿಸಲ್ಪಟ್ಟ ಆಕೃತಿಗಳ ಹೆಸರುಗಳನ್ನು ಬರೆಯುವುದೂ ಇತ್ತು ಹಾಗೆ ಹಂಪೆಯಲ್ಲೇನಾದರೂ ಬರೆದಿದ್ದಲ್ಲಿ, ಅವು ರಾಸಾಯನಿಕ ಕ್ರಿಯೆಯ ನಂತರವೇ ಬೆಳಕಿಗೆ ಬರಬೇಕು. ಪ್ರಸುತ್ತದಲ್ಲಿ ಹಂಪೆಯ ಚಿತ್ರಗಳು ಕೇಂದ್ರ ಸರಕಾರದ ಅಥವಾ ರಾಜ್ಯ ಸರಕರದ ಪುರಾತತ್ವ ಶಾಲೆಯ ಆಡಳಿತಕ್ಕೊಳಪಡದೆ ಇರುವುದರಿಂದ, ಏನೂ ಮಾಡುವಂತೆ೪ ಇಲ್ಲ.

[23] S. Paramasivan : ‘Paintings at Tanjore’ (Vijayanagara Sexcentinary Volume)

[24] ಮೇಲಿನಂತೆ