ಹಂಪೆ ವಿರೂಪಾಕ್ಷ ದೇವಾಲಯದ ಮಹಾರಂಗಮಂಟಪದ ಒಳಮಾಳಿಗೆಯಲ್ಲಿರುವ ಚಿತ್ರಗಳು ಆ ಕಾಲದ ಅತ್ಯಂತ ಪ್ರಮುಖ ಉದಾಹರಣೆಗಳಾಗಿವೆ. ವಿಜಯನಗರ ಕಾಲದಲ್ಲಿ ಅಂದರೆ ಕ್ರಿ.ಶ. ೧೬ನೇ ಶತಮಾನದ ಮೊದಲೆರಡು ದಶಕಗಳಲ್ಲಿ ರಚನೆಯಾಗಿರಬಹುದಾದ ಈ ಚಿತ್ರಗಳು ಹಲವಾರು ಅಂಶಗಳಿಂದ ಅತ್ಯಂತ ಮುಖ್ಯವಾಗಿವೆ. ಚಿತ್ರಕಲಾ ಇತಿಹಾಸದ ದೃಷ್ಟಿಯಿಂದ ಈ ಚಿತ್ರಗಳು ವಿಜಯನಗರದ ಕಾಲದಲ್ಲಿ ರಚಿತವಾದ ಅಪೂರ್ವ ಐತಿಹಾಸಿಕ ದಾಖಲೆಗಳಾಗಿವೆ. ಪ್ರಸ್ತುತ ಪ್ರಬಂಧದಲ್ಲಿ ಇವುಗಳಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಅಭ್ಯಾಸ ಮಾಡಲಾಗಿದೆ.

ಈ ಚಿತ್ರಗಳನ್ನು ಕುರಿತಂತೆ ಹಲವಾರು ವಿದ್ವಾಂಸರು ಈಗಾಗಲೇ ಅಭ್ಯಾಸ ಮಾಡಿದ್ದಾರೆ ಮತ್ತು ಇವುಗಳ ರಚನಾ ಕಾಲದ ಬಗ್ಗೆ ವಿಭಿನ್ನವಾದ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇವುಗಳಲ್ಲಿ ರಚಿತವಾಗಿರುವ ಹಲವಾರು ವಿಷಯ ವಸ್ತುಗಳನ್ನು ವಿಭಿನ್ನವಾಗಿ ತಮ್ಮದೇ ಆದ ದೃಷ್ಟಿಕೋನದಲ್ಲಿ ಗುರುತಿಸಿದ್ದಾರೆ. ಚಿತ್ರಕಲಾ ಇತಿಹಾಸದ ದೃಷ್ಟಿಯಿಮದ ನಾವು ಈ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಚಿತ್ರಗಳ ಬಗ್ಗೆ ಇದುವರೆಗೂ ಆಗಿರುವ ಅಧ್ಯಯನಗಳು ಅಪೂರ್ಣವೆನಿಸುತ್ತವೆ. ಮಹಾರಂಗಮಂಟಪದಲ್ಲಿನ ಚಿತ್ರಗಳು ಬೆಳವಣಿಗೆ ಹೊಂದಿರಬಹುದಾದ ರೀತಿ, ಚಿತ್ರಗಳ ಶೈಲಿ, ವರ್ಣವಿನ್ಯಾಸ, ಕಥಾ ಸಂಯೋಜನೆ, ಆಕೃತಿಗಳ ಸಂಯೋಜನೆ ಹಾಗೂ ಇಡಿಯಾದ ಚಿತ್ರಸ್ಥಳದ ಬಳಕೆ ಮತ್ತು ಇವುಗಳ ರಚನಾ ಕಾಲವನ್ನು ಒಂದೆಡೆ ಗಮನಿಸಿರುವುದು, ಈ ಚಿತ್ರಗಳ ಕಾಲದಲ್ಲಿದ್ದ ಸಮಕಾಲೀನ ಚಿತ್ರಶೈಲಿಗಳೊಂದಿಗೆ ಇವುಗಳಿಗಿದ್ದಿರಬಹುದಾದ ಸಂಬಂಧ – ಪ್ರಭಾವ ಅಥವಾ ಕೊಡು ಕೊಳ್ಳುವಿಕೆಯ ಕುರಿತು ವಿಮರ್ಶಾತ್ಮಕವಾಗಿ ನೋಡುವ ಪ್ರಯತ್ನವು ಅವಶ್ಯಕವಾಗಿ ಆಗಬೇಕಾಗಿದೆ.[1] ಇದರಿಂದ ಪ್ರಸ್ತುತ ಚಿತ್ರಗಳ ಬಗ್ಗೆ ಒಂದು ಪೂರ್ಣ ಚಿತ್ರ ದೊರೆದಂತಾಗುತ್ತದೆ.

ಹಿನ್ನೆಲೆ

ಮಹಾರಂಗಮಂಟಪದ ಚಿತ್ರಗಳ ಕಾಲದ ಹಿನ್ನೆಲೆಯನ್ನು ಗಮನಿಸಿದಾಗ, ಪ್ರಾಚೀನ ಭಾರತದ ಭಿತ್ತಿ ಚಿತ್ರ ಪರಂಪರೆಯ ಮುಂದುವರೆದ ಶೈಲಿ ಅಥವಾ ಚಿತ್ರ ಪರಂಪರೆಯದು ಎನ್ನಬಹುದು. ಅಜಂತಾ (ಮಹಾರಾಷ್ಟ್ರ), ಬಾಗ್ (ಮಧ್ಯಪ್ರದೇಶ)ಗಳಲ್ಲಿರುವ ಬೌದ್ಧಾಲಯಗಳಲ್ಲಿನ ಭಿತ್ತಿಚಿತ್ರಗಳ ರಚನೆಯ ನಂತರ ಈ ಪರಂಪರೆ ಮುಂದುವರೆದು ಕೊಂಡು ಒಂದದ್ದು ಬಾದಾಮಿ ಚಾಲುಕ್ಯರ ಕಾಲದಲ್ಲಿ. ಬಾದಾಮಿಯ ವೈಷ್ಣವ ಲಯಣದಲ್ಲಿ ಮತ್ತು ಐಹೋಳೆಯ ರಾವಣಪಹಾಡಿ ಲಯಣಗಳಲ್ಲಿ ಇಂದಿಗೂ ಒಳಮಾಳಿಗೆಯಲ್ಲಿ ಹಲವಾರು ಭಿತ್ತಿಚಿತ್ರಗಳ ಅವಶೇಷಗಳು ಕಂಡುಬರುತ್ತವೆ. ಇದರಿಂದ ನಂತರದ ಕಾಲದಲ್ಲಿ ಅಂದರೆ ರಾಷ್ಟ್ರಕೂಟದ ಕಾಲದಲ್ಲಿ ಎಲ್ಲೋರ ಮತ್ತು ಧಾರಾಶಿವ (ಮಹಾರಾಷ್ಟ) ಲಯಣಗಳಲ್ಲಿ, ಇತ್ತ ದಕ್ಷಿಣದಲ್ಲಿ ಪಲ್ಲವರ ಕಾಲದಲ್ಲಿನ ಕಾಂಚಿಪುರಂ ಮತ್ತು ಚೋಳರ ಕಾಲದ ಸಿತ್ತನವಾಸಲ್ ಹಾಗೂ ತಂಜಾವೂರು ಬೃಹದೀಶ್ವರ ದೇವಾಲಯಗಳಲ್ಲಿ ಭಿತ್ತಿಚಿತ್ರಗಳ ರಚನೆಯಾದ ಬಗ್ಗೆ ದಾಖಲೆಗಳಿವೆ ಮತ್ತು ಅವಶೇಷಗಳಿವೆ.[2] ಹಂಪೆಯಲ್ಲಿ ಚಿತ್ರಗಳ ರಚನೆಯ ಪ್ರಾರಂಭವಾಗುವುದಕ್ಕೆ ಮೊದಲೇ ಈ ಮೇಲೆ ಹೆಸರಿಸಿದ ಸ್ಥಳಗಳಲ್ಲಿ ಚಿತ್ರಕಲೆ ಆಯಾ ಕಾಲದ ಸಂವೇದನೆಗಳಿಗೆ ಅನುಗುಣವಾಗಿ ಪ್ರವರ್ಧಮಾನಕ್ಕೆ ಬಂದಿತ್ತು ಮತ್ತು ಬೆಳವಣಿಗೆ ಹೊಂದಿತ್ತು. ಆದರೆ ಕರ್ನಾಟಕದಲ್ಲಿ ವಿಶೇಷವಾಗಿ ಆ ಕಾಲದ ಚಿತ್ರಕಲೆಯ ಉದಾಹರಣೆಗಳನ್ನು ಕುರಿತು ಹುಡುಕಾಟ ಮಡಿದಾಗ ನಮಗೆ ಅಷ್ಟು ತೃಪ್ತಿಕರವಾದ ಪುರಾವೆಗಳು ದೊರೆಯುವುದಿಲ್ಲ. ಬಹುಶಃ ಇದರಿಂದಲೇ ನಮ್ಮ ಹಲವು ವಿದ್ವಾಂಸರಿಗೆ ಹಂಪೆಯ ಚಿತ್ರಗಳ ಕಾಲದ ಬಗ್ಗೆ ಸಂಶಯಗಳು ಇರುವುದು.

ವಿಜಯನಗರದ ರಾಜ್ಯ ಸ್ಥಾಪನೆಯಾದ ಸಮಯದಲ್ಲಿ ಮತ್ತು ಆ ಕಾಲಕ್ಕಿಂತಲೂ ಮೊದಲು, ಅಂದರೆ ಬಾದಾಮಿ ಚಾಲುಕ್ಯ ನಂತರದ ಕಾಲದಲ್ಲಿ, ಹಾಗೂ ಇಂದಿನ ಕರ್ನಾಟಕ್ಕೆ ಸೀಮಿತವಾದಂತೆ ಹೆಚ್ಚಿನ ಪ್ರೋತ್ಸಾಹ ವಾಸ್ತು ಮತ್ತು ಶಿಲ್ಪಕಲೆಗೆ ದೊರೆತಿತ್ತು ಎಂಬ ಅಂಶವನ್ನು ನಾವು ವಿಶೇಷವಾಗಿ ಗಮನಿಸಬೇಕು. ಈ ಕಾಲಗಳಲ್ಲಿ ಚಿತ್ರಕಲೆಯ ಪ್ರಚಲಿತತೆಯ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ. ಈ ಕಾಲದಲ್ಲಿ ಚಿತ್ರಕಲೆಯ ಅಂಗವಾಗಿ ಪ್ರಾರಂಭವಾದ ’ಜೈನ ಮಾನಸ ಪ್ರತಿಗಳಲ್ಲಿ’ ಕಂಡುಬರುವ ತೀರ್ಥಂಕರರ ಮತ್ತು ಜೈನ ಯಕ್ಷ ಯಕ್ಷಣಿಯರ ಹಾಗು ಅಚಾರ್ಯರ ರೇಖಾಚಿತ್ರಗಳನ್ನು ಇಲ್ಲಿ ಉದಾಹರಿಸ ಬಹುದು.[3] ಆದರೆ ಭಿತ್ತಿಚಿತ್ರಗಳ ರಚನೆಯ ಬಗ್ಗೆ ಯಾವುದೇ ದಾಖಲೆಗಳು ಈ ಕಾಲದಲ್ಲಿ ದೊರೆಯುವುದಿಲ್ಲ. ಚಿತ್ರಕಲೆಗೆ ಪ್ರಾಯಶಃ ಹೆಚ್ಚಿನ ಪ್ರೋತ್ಸಾಹ  ಮತ್ತೊಂದು ಬಾರಿ ದೊರೆತದ್ದು ವಿಜಯನಗರದ ಕಾಲದಲ್ಲಿಯೇ ಎಂದು ಹೇಳಬೇಕು. ಈ ಕಾಲದಲ್ಲಿಯೇ ಚಿತ್ರಕಲೆಗೆ ಅತ್ಯಂತ ಪ್ರಾಮುಖ್ಯತೆ ದೊರೆತು, ದೇವಾಲಯಗಳ ಗೋಡೆಗಳ ಮೇಲೆ ಒಳಮಾಳಿಗೆಯ ಮೇಲೆ ಹಾಗೂ ಅಂದಿನ ಅರಮನೆಗಳಲ್ಲಿ ಚಿತ್ರಗಳ ರಚನೆಯಾದ ಬಗ್ಗೆ ಅವುಗಳ ವರ್ಣಸಂಯೋಜನೆಯ ಬಗ್ಗೆ ತಿಳಿದುಬರುತ್ತದೆ. ಆದರಲ್ಲೂ ವಿಶೇಷವಾಗಿ ಹಂಪೆಗೆ ಆ ಕಾಲದಲ್ಲಿ ಬಂದಿದ್ದ ಹಲವು ವಿದೇಶಿ ಪ್ರವಾಸಿಗರು ದಾಖಲಿಸಿರುವಂತೆ ಅರಮನೆಗಳಲ್ಲಿ, ಮುಖ್ಯ ಬೀದಿಗಳಲ್ಲಿನ ಮನೆಗಳಲ್ಲಿ ಹಾಗೂ ರತಿಗೃಹಗಳಲ್ಲಿ, ಹಲವಾರು ಚಿತ್ರಗಳಿದ್ದ ಬಗ್ಗೆ ವಿವರಣೆಗಳು ದೊರೆಯುತ್ತವೆ.[4] ದುರದೃಷ್ಟವಶಾತ್, ಇಂದು ಈ ಯಾವ ಚಿತ್ರಗಳು ಅಥವಾ ಅವಶೇಷಗಳು ಉಳಿದುಕೊಂಡು ಬಂದಿಲ್ಲ. ಆದರೆ ಇಂದು ನಮ್ಮೆದುರು ಆ ಕಾಲದ ಉದಾಹರಣೆಗಳಾಗಿ ಹಂಪೆಯಲ್ಲಿ ಉಳಿದಿರುವ ಚಿತ್ರಗಳೆಂದರೆ ವಿರೂಪಾಕ್ಷ ದೇವಾಲಯದ ಮಹಾರಂಗ ಮಂಟಪದ ಒಳಮಾಳಿಗೆಯ್ಲಲಿ ಉಳಿದುಕೊಂಡು ಬಂದಿರುವ ಭಿತ್ತಿಚಿತ್ರಗಳು ಮಾತ್ರ ಮತ್ತು ಪಕ್ಕದ ಆನೆಗೊಂದಿಯ ಉಚ್ಛಪ್ಪಯ್ಯ ಮಠದ ಚಿತ್ರಗಳ ಅವಶೇಷಗಳು. ಈಗ ನೇರವಾಗಿ ಮಹಾರಂಗ ಮಂಟಪದಲ್ಲಿನ ಚಿತ್ರಗಳನ್ನು ಕುರಿತು ತಿಳಿಯುವುದು ಅವಶ್ಯಕವಾಗಿದೆ.

ಚಿತ್ರಗಳ ವಿವರ

ಮಹಾರಂಗಮಂಟಪದ ಒಳಮಾಳಿಗೆಯ ಆಯಾತಾಕಾರವಾಗಿದ್ದು ಸಂಪೂರ್ಣವಾಗಿ ಚಿತ್ರರಚನಾ ಅವಕಾಶವನ್ನು ಯಾವ ರೀತಿ ವಿಭಾಗಿಸಬೆಕು, ಎಲ್ಲೆಲ್ಲಿ ಯಾವ ಚಿತ್ರಗಳು ಬರಬೇಕೆಂಬುದು, ಇಷ್ಟು ವಿಶಾಲವಾದ ಚಿತ್ರಗಳ ಸಂಯೋಜನೆ, ವರ್ಣವಿನ್ಯಾಸ, ಈ ಎಲ್ಲಾ ಅಂಶಗಳು ಪೂರ್ವ ನಿಯೋಜಿತವಾಗಿವೆ ಎಂದು ಹೆಳಬಹುದು. ಇದರಿಂದ ನಿರ್ದಿಷ್ಟ ಆಕೃತಿಯಲ್ಲಿ ಮತ್ತು ಸ್ಥಳದಲ್ಲಿ ಉದ್ದೇಶಿತ ವಿಷಯದ ನಿರೂಪಣೆ ಕಂಡುಬರುತ್ತದೆ. ಪ್ರಸ್ತುತ ಚಿತ್ರಗಳನ್ನು ನಾವು ಕೊಂಚ ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲೂ ಚಿತ್ರ ರಚನೆಯ ತಾಂತ್ರಿಕತೆ, ರಚನೆಯನ್ನು ಪ್ರಾರಂಭಿಸಿರುವ ವಿಧದಲ್ಲಿ ಕುರಿತು ಚಿಂತಿಸಿದರೆ ಬಹುಶಃ ಈ ಚಿತ್ರಗಳ ರಚನೆಯ ಬಗ್ಗೆ ಒಂದು ಉತ್ತಮ ಚಿತ್ರ ದೊರೆಯಲು ಸಾಧ್ಯವಾಗುತ್ತದೆ. ಇಲ್ಲಿ ಕಲಾವಿದ ನೆರವಾಗಿ ಚಿತ್ರರಚನೆ ಪ್ರಾರಂಭಿಸಿಲ್ಲ. ಸಂಯೋಜನೆಗೆ ಚಿತ್ರವಿನ್ಯಾಸದ ಚೌಕಟ್ಟನ್ನು ಹಾಕಿಕೊಂಡು ಅದರಲ್ಲಿ ಮತ್ತು ವಿಷಯ ವ್ಯಾಪ್ತಿಗೆ ಸರಿಹೊಮದುವ ರೀತಿಯಲ್ಲಿ ಆಕೃತಿಗಳನ್ನು ದುಡಿಸಿಕೊಂಡಿದ್ದಾನೆ. ಕಲಾವಿದ ಈ ಚಿತ್ರಗಳನ್ನು ಚಿತ್ರಿಸಿರುವ ರೀತಿಯನ್ನು ಗಮನಿಸಿದರೆ, ಪ್ರಾಯಶಃ ಎಂಥ ಸಾಮಾನ್ಯನಿಗಾದರೂ ಸಂಪೂರ್ಣವಾಗಿ ಚಿತ್ರದ ಮೂಲ, ರೇಖಾಚಿತ್ರ ರಚನೆಯಾದ ಮೇಲೆಯೇ ಅಲ್ಪಸ್ವಲ್ಪ ಬದಲಾವಣೆಗಳೊಡನೆ ಚಿತ್ರಗಳನ್ನು ವರ್ಣಸಂಯೋಜನೆಯೊಡನೆ ಪೂರ್ತಿಗೊಳಿಸಿರಬಹುದೆಂದು ತಿಳಿಯುತ್ತದೆ.

ಚಿತ್ರಗಳ ಸಾಮಾನ್ಯವಾದ ಒಂದು ವಿವರವನ್ನು ಈ ಕೆಳಗೆ ನಾವು ಈಗ ನೋಡಬಹುದುದಾಗಿದೆ. ಚಿತ್ರಗಳಿರುವ ಒಳಮಾಳಿಗೆಯನ್ನು ಮೂರು ಮುಖ್ಯಭಾಗಗಳನ್ನಾಗಿ ವಿಂಗಡಿಸಿದೆ. ಇವುಗಳಲ್ಲಿ ಒಟ್ಟು ಎಂಟು ಉಪಭಾಗಗಳಿವೆ. ಪ್ರತಿಯೊಂದು ಭಾಗದಲ್ಲಿ ಚೌಕ, ಆಯತ ಹೀಗೆ ವಿಭಿನ್ನ ಅವಕಾಶಗಳಲ್ಲಿ ಚಿತ್ರಗಳನ್ನು ರಚಿಸಲಾಗಿದೆ. ದೇವಾಲಯದ ನವರಂಗದ ಕಡೆಗೆ ಹೊಂದಿಕೊಂಡಂತೆ ಇರುವ ಅವಕಾಶದಲ್ಲಿ ಕ್ರಮವಾಗಿ ವಿಷ್ಣು, ಲಕ್ಷ್ಮೀಯರು ಬಲಗಡೆ ಗರುಡ ಮತ್ತು ಎಡಗಡೆ ಹನುಮಂತರಿಂದ ಜೊತೆಗೂಡಿ ಚಿತ್ರಿಸಲ್ಪಟ್ಟಿದ್ದಾರೆ. ಮಧ್ಯದ ಚೌಕದಲ್ಲಿ ಶಿವಪಾರ್ವತಿಯರನ್ನು ನಾರದ ಮತ್ತು ತುಂಬುರರನ್ನು ಚಿತ್ರಿಸಿದ್ದಾನೆ. ಕೊನೆಯದಾಗಿ, ಬ್ರಹ್ಮ ಮತ್ತು ಅವನ ಎಡತೊಡೆಯ ಮೇಲೆ ಕುಳಿತ ಸರಸ್ವತಿಯನ್ನು ಚಿತ್ರಿಸಲಾಗಿದೆ. ಇವರ ಎರಡೂ ಬದಿಯಲ್ಲಿ ಈರ್ವರು ದ್ವಾರಪಾಲಕರನ್ನು ತೋರಿಸಿದೆ. ಈ ಮೂರು ಚಿತ್ರಗಳಿಗೆ ಮತ್ತು ಸಾಮಾನ್ಯವಾಗಿ ಕೊನೆಯ ೨-೩ ಚಿತ್ರಗಳನ್ನು ಬಿಟ್ಟು ಈ ಭಿತ್ತಿಯ ಉಳಿದ ಬಹುತೇಕ ಎಲ್ಲ ಚಿತ್ರಗಳಿಗೆ ವಾಸ್ತುಕೃತಿಯ ಅಲಂಕಾರವಿದೆ. ಚಿತ್ರದ ಮುಖ್ಯವಸ್ತವನ್ನು ಕಮಾನಿನಲ್ಲಿ ಚಿತ್ರಿಸುವುದು, ಚಿತ್ರದ ಸಂಯೋಜನಯ ಮೇಲೆ ಹಣೆಪಟ್ಟಿ ಯಂತಿರುವ ಮತ್ತೊಂದು ಚಿತ್ರ ಅವಕಾಶದಲ್ಲಿ ಗೋಪುರಗಳನ್ನು ಕಲಾವಿದ ಚಿತ್ರಿಸಿದ್ದಾನೆ. ಚಿತ್ರಗಳ ಮೇಲೆ ಇರುವ ಗೋಪುರಗಳು ಸಾಂಕೇತಿಕವಾಗಿ ಆಯಾ ಸಂಯೋಜನೆಯಲ್ಲಿ ಇರುವ ದೇವಾನುದೇವತೆಗಳಿಗೆ ದೇವಾಲಯಗಳಂತೆ ಕಾಣುತ್ತವೆ.

ನಂತರದ ಸಾಲಿನಲ್ಲಿ ಪಾರ್ವತಿ ಕಲ್ಯಾಣದ ಚಿತ್ರವೇ ಚಿತ್ರಣದ ಪ್ರಮುಖ ಕಥಾವಸ್ತು. ಚಿತ್ರದ ಮಧ್ಯದಲ್ಲಿ ಶಿವನು ಪಾರ್ವತಿಯ ಕೈಯನ್ನು ಹಿಡಿದು ನಿಂತಿದ್ದಾನೆ. ಈ ಚಿತ್ರಪಟ್ಟಿಕೆಯ ಪ್ರಾರಂಭದಲ್ಲಿ ಶಿವಪಾರ್ವತಿಯ ಆಕೃತಿಗಳ ಜೊತೆಗೆ, ಭೈರವ, ನಾರದ, ತುಂಬುರ, ವಾಣಿ, ಬ್ರಹ್ಮ, ಹಿಮವತ್ ಮತ್ತು ಇನ್ನಿತರರು ಇದ್ದಾರೆ. ಇಲಲಿ ಬ್ರಹ್ಮನೆ ಈ ದಿವ್ಯ ಮದುವೆಯ ಪುರೋಹಿತ, ಹಿಮವತ್ನು ಕನ್ಯಾದಾನ ಮಾಡುತ್ತಿದ್ದಾನೆ. ಈ ಚಿತ್ರಸಂಯೋಜನೆಯ ಕೆಳಗಡೆ ಚಿಕ್ಕ ಚಿತ್ರಪಟ್ಟಿಕೆ ಇದೆ. ಇದರಲ್ಲಿ ಗಣ ಮತ್ತು ಮಧ್ಯದಲ್ಲಿ ಶಿವನ ವಾಹನ ನಂದಿಯನ್ನು ಚಿತ್ರಿಸಿದೆ. ಇಲ್ಲೂ ಕೂಡ ಕಲಾವಿದನ ಸಮಯಪ್ರಜ್ಞೆಯನ್ನು ನಾವು ಗುರುತಿಸಬಹುದು. ನಂದಿಯು ಮುಖವನ್ನು ಮೇಲಕ್ಕೆತ್ತಿ ಮದುವೆಯನ್ನು ವೀಕ್ಷಿಸುತ್ತಿರುವಂತೆ ಕುಳಿತಿದ್ದಾನೆ.[5] ಈ ವಿವಾಹ ದೃಶ್ಯವನ್ನು ಸ್ಥಳೀಯ ದೇವತೆ ವಿರೂಪಾಕ್ಷ ಮತ್ತು ಪಂಪಾಂಬಿಕೆಯರ ವಿವಾಹಕ್ಕೆ ಹೋಲಿಸಲಾಗಿದೆ. ಇಲ್ಲೂ ಕೂಡ ಚಿತ್ರ ಸಂಯೋಜನೆಯ ಮೇಲ್ಭಾಗದಲ್ಲಿ ಗೋಪುರಗಳ ಸಾಲು ಮತ್ತು ತಾಳೆಮರಗಳನ್ನು ತೋರಿಸುವ ಚಿತ್ರಗಳಿವೆ. ಶಿವಪಾರ್ವತಿಯರ ಕಲ್ಯಾಣದ ದೃಶ್ಯದ ಕೆಳಗಡೆಯ ಸ್ಥರದಲ್ಲಿ ಅಷ್ಟದಿಕ್ಪಾಲಕರನ್ನು ಚಿತ್ರಿಸಲಾಗಿದೆ. ಇವರುಗಳಲ್ಲಿ ಇಂದ್ರ, ವರುಣ, ಅಗ್ನಿ, ವಾಯು, ಈಶಾನ, ಯಮ, ನೈರುತಿ, ಕುಬೇರ ಈ ದಿಕ್ಪಾಲಕರು ತಮ್ಮ ವಾಹನಗಳಿಂದ ಇರುವುದು ಕೂಡಾ ಕಂಡುಬರುತ್ತದೆ.

ಅಷ್ಟದಿಕ್ಪಾಲಕರ ನಂತರದ ಎರಡು ಮುಖ್ಯ ಸಂಯೋಜನೆಗಳೆಂದರೆ ಮನ್ಮಥವಿಜಯನ ಅಥವಾ ಶಿವನ ತಪಸ್ಸನ್ನು ಮನ್ಮಥನು ಮುರಿಯುವುದು ಮತ್ತು ತ್ರಿಪುರ ಸಂಹಾರಿ ಶಿವ. ಮನ್ಮಥ ವಿಜಯ ಚಿತ್ರದ ಸಂಯೋಜನೆಯಲ್ಲಿ ಕಲಾವಿದ ಅತ್ಯಂತ ಕ್ರಿಯಾತ್ಮಕವಾಗಿ ದೃಶ್ಯ ಸಂಯೋಜನೆಯನ್ನು ದುಡಿಸಿಕೊಂಡಿದ್ದಾನೆ.

ಇಲ್ಲಿ ಚಿತ್ರದ ಒಂದು ಭಾಗದಲ್ಲಿ ಜಟಾಧಾರಿ ಶಿವ ತಪಸ್ಸನ್ನು ಮಾಡುತ್ತಾ ಕುಳಿತಿದ್ದಾನೆ. ಇತ್ತ ಕಾಮರತಿಯರು ಗಿಳಿಯೆ ವಾಹನವಾಗಿರುವ ರಥವನ್ನು ಏರಿ, ಕಬ್ಬಿನ ಜಲ್ಲೆಯಿಂದ ಮಾಡಿದ ಬಿಲ್ಲಿನಿಂದ ಶಿವನತ್ತ ಸುಮಬಾಣ ಬಿಡುತ್ತಿದ್ದಾನೆ. ಕಾಮನ ನಿಂತ ಭಂಗಿಯಲ್ಲಿ ಮುಮ್ಮುಖವಾದ ಚಾಲನೆ ಇದೆ ಮತತು ನೈಜತೆ ಇದೆ.[6] ಕಾಮನ ಆಕೃತಿಯಲ್ಲೂ ಕೂಡ ಪ್ರೌಢತೆ ಕಣುತ್ತದೆ. ಶಿವನು ಕುಳಿತು ಭಂಗಿ ಎದುರಿನಿಮದ ನೋಡಿದಾಗ ಇರುವಂತೆ ಇದೆ. ಇಲ್ಲಿ ಶಿವನನ್ನು ಧ್ಯಾನಮಗ್ನನಾಗಿ ಇರುವಂತೆ ತೋರಿಸದೇ ಅಗಲವಾದ ಕಣ್ಣುಗಳನ್ನು ಬಿಟ್ಟು ದಿಟ್ಟಿಸಿ ನೋಡುತ್ತಿರುವಂತೆ ಕುಳಿತಿದ್ದಾನೆ.[7] ಚಿತ್ರದ, ತೀರ ಕೆಳಸ್ತರದಲ್ಲಿ ಜಲಾವೃತವಾದ ಭಾಗವನ್ನು ವಿವಿಧ ಆಕಾರದ ಮೀನುಗಳನ್ನು ಚಿತ್ರಿಸಿ ಚಿತ್ರದಲ್ಲಿ ಮತ್ತಷ್ಟು ನೈಜತೆಯನ್ನು ಕಲಾವಿದ ತುಂಬಿದ್ದಾನೆ.[8]

ಶಿವನು ತ್ರಿಪುರಾಸುರನನ್ನು ಕೊಲ್ಲುವ ದೃಶ್ಯದಲ್ಲಿಯೂ ಕಲಾವಿದ ಮೇಲಿನ ಚಿತ್ರದಂತೆಯೇ ಜಾಣ್ಮೆ ಮೆರೆದಿದ್ದಾನೆ. ತ್ರಿಪುರಾಸುರರನ್ನು ಮೂರು ಬೇರೆ ಬೇರೆ ವೃತ್ತಗಳಲ್ಲಿ ಚಿತ್ರಿಸಿದ್ದಾನೆ.

ಇನ್ನು ಶಿವನನ್ನು ಅವನ ರಥ ಹಾಗೂ ಬಿಲ್ಲುಬಾಣಗಳನ್ನು, ಕಥೆಯಲ್ಲಿಬರುವ ನಿರೂಪಣೆಗೆ ತಕ್ಕಂತೆ ನೈಜವಾಗಿ ಚಿತ್ರಿಸಿದ್ದಾನೆ. ಇಲ್ಲಿ ಭೂಮಿಯೇ ರಥ, ಬ್ರಹ್ಮನೇ ಸಾರಥಿ, ಸುರ್ಯ ಚಂದ್ರರೇ ರಥದ ಗಾಲಿಗಳು, ಇಂದ್ರ, ವರುಣ ಯಮ, ಕುಬೇರರೇ ರಥಾಶ್ವಗಳು. ಆದರೆ ಇಲ್ಲಿ ಕಲಾವಿದ ಐದು ಕುದುರೆಗಳನ್ನು ಮಾತ್ರ ಚಿತ್ರಿಸಿದ್ದಾನೆ. ಇವನ ಕೈಯಲ್ಲಿರುವ ಬಿಲ್ಲು ಮಂದಾರ ಪವತ, ವಾಸುಕೀಯೇ ಬಿಲ್ಲಿನ ದಾರ, ಅಗ್ನಿ, ವಿಷ್ಣು, ವಾಯು ಇವರು ಬಾಣಗಳಾಗಿದ್ದಾರೆ. ಇದರಿಂದಲೇ ಶಿವನು ತ್ರಿಪುರಾಸುರರನ್ನು ಧ್ವಂಸ ಮಾಡುವ ಕೆಲಸ ಅತ್ಯಂತ ಸುಗಮವಾಗುತ್ತದೆ. ಈ ಸಂಯೋಜನೆಯಲ್ಲಿನ ಎಲ್ಲ ಆಕೃತಿಗಳ ಮಧ್ಯೆ ಆಂತರಿಕವಾದ ಸಂಬಂಧವಿದೆ. ಪ್ರತಿಯೊಮದು ಆಕೃತಿಗಳು ಚಾಲನೆಯಿಂದ ಕೂಡಿವೆ. ಶಿವನ ಆಕೃತಿಯ ಮತ್ತು ಮನ್ಮಥನ ಆಕೃತಿಗಳಲ್ಲಿ ನಿಂತಿರುವ ಭಂಗಿಯನ್ನು ಗಮನಿಸಿದರೆ, ಎರಡೂ ಒಂದೇ ತೆರನಾಗಿ ಇರುವುದನ್ನು ಗಮನಿಸಬಹುದು. ಅಲ್ಲದೆ, ಆಕೃತಿಗಳಲ್ಲಿ ಮುಂದೆ ಬಾಗಿದಂತಿರುವ ಚಾಲನೆ ಕೂಡಾ ಒಂದೇ ತೆರನಾಗಿ ಇದೆ. ಈ ಎಲ್ಲ ಆಕೃತಿಗಳು ಒಂದೇ ಕಲಾವಿದನಿಂದ ರಚನೆ ಆಗಿರಬಹುದೆಂದು ತೋರುತ್ತದೆ.

ಮನ್ಮಥ ವಿಜಯ ಮತ್ತು ತ್ರಿಪುರ ಸಂಹಾರದ ಚಿತ್ರಸಂಯೋಜನೆಗಳ ಕೆಳಗಿನ ಪಟ್ಟಿಕೆಯಲ್ಲಿ ದಶಾವತಾರದ ಆಕೃತಿಗಳಿವೆ. ಈ ಆಕೃತಿಗಳ ಕೊನೆಯ ಭಾಗದಲ್ಲಿ ಕಾಮರತಿಯರನ್ನು ಬೇರೆಬೇರೆಯಾಗಿ ಒಂದೊಂದು ಚೌಕದಲ್ಲಿ ಚಿತ್ರಿಸಲಾಗಿದೆ.

ಇಲ್ಲಿ ಕಾಮ ಗಜಾರೂಢನಾಗಿ ಮತ್ತು ರತಿ ಅಶ್ವಾರೂಢಳಾಗಿದ್ದಲೆ. ವಿಶೇಷವೆಂದರೆ ಈ ಎರಡೂ ವಾಹನಗಳು ಮಾನವಾಕೃತಿಗಳಿಂದ ಚಿತ್ರಿತವಾಗಿವೆ. ಅಂದರೆ, ಇಲ್ಲಿ ಮಾನವಾ ಕೃತಿಗಳೇ ಗಜದ ಮತ್ತು ಅಶ್ವದ ರೂಪದಲ್ಲಿ ಚಿತ್ರಿತವಾಗಿವೆ. ದಶಾವತಾರದ ಚಿತ್ರಗಳಲ್ಲಿ ವಿಷ್ಣುವಿನ ಹತ್ತು ಅವತಾರದ ಚಿತ್ರಗಳು ವೈವಿಧ್ಯಮಯವಾಗಿ ಮತ್ತು ನೈಜವಾಗಿ ಮೂಡಿಬಂದಿವೆ. ಇಲ್ಲೂ ಕೂಡಾ ಪ್ರತಿಯೊಮದು ಆಕೃತಿಯ ಚೌಕವಾದ ದೃಶ್ಯಾವಕಾಶದಲ್ಲಿ ಚಿತ್ರಿತವಾಗಿದ್ದು ಮೇಲ್ಭಾಗದಲ್ಲಿ ಕಮಾನಿನ ಚಿತ್ರಣವೂ ಇದೆ.

ದಶಾವತಾರದ ಚಿತ್ರಗಳ ನಂತರದಲ್ಲಿ ಬರುವುದು ಆಯತಾಕೃತಿಗಳಲ್ಲಿ ಚಿತ್ರಿತವಾಗಿರುವ ರಾಮಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ ಚಿತ್ರಗಳು ಇವು ಒಟ್ಟು ಮೂರು ಚಿತ್ರಗಳಿದ್ದು, ಇವುಗಳಲ್ಲಿ ಎರಡು ಚಿತ್ರಗಳು ಸೀತಾಸ್ವಯಂವರಕ್ಕೆ ಮತ್ತು ರಾಮಸೀತೆಯರ ಕಲ್ಯಾಣಕ್ಕೆ ಸಂಬಂಧಿಸಿದ್ದು, ಮೂರನೆಯದು ದ್ರೌಪದಿಯ ಸ್ವಯಂವರದಲ್ಲಿ ಅರ್ಜುನನು ಮತ್ಸಯಂತ್ರವನ್ನು ಭೇದಿಸುತ್ತಿರುವ ದೃಶ್ಯವಿದೆ. ಈ ಎರಡೂ ಚಿತ್ರಗಳು ಸ್ವಯಂವರಕ್ಕೆ ಸಂಬಂಧಿಸಿದವೇ ಆಗಿದ್ದು ಇದರಲ್ಲಿ ರಾಮಸೀತೆಯರ ಕಲ್ಯಾಣದ ಒಂದೇ ಒಂದು ಚಿತ್ರಣವಿದೆ. ಈ ಚಿತ್ರಗಳಲ್ಲೂ ಕೂಡಾ ಮೇಲಿನ ಹಾಗೆಯೇ ಸಂಯೋಜನೆ ಇದ್ದು ಕೆಳಸ್ತರಗಳಲ್ಲಿ ಹಲವಾರು ಜನರನ್ನು ನೈಜವಾಗಿ ತೋರಿಸಲಾಗಿದೆ. ಸೀತಾಸ್ವಯಂವರದಲ್ಲಿ ರಾಮನು ಸಂಯೋಜನೆಯ ಮಧ್ಯದಲ್ಲಿ ನಿಂತು ಶಿವಧನಸ್ಸಿಗೆ ಹೆದೆ ಏರಿಸುವ ಭಂಗಿಯಲ್ಲಿ ಇದ್ದಾನೆ. ಸೀತೆ ಹಿಂಭಾಗದಲ್ಲಿ ರಾಮನನ್ನು ವರಿಸಲು ಸಿದ್ಧಳಾಗಿ ನಿಂದಿದ್ದಾಳೆ. ಕೆಳಸ್ತರದಲ್ಲಿ ಕೂಡ ಸ್ವಯಂವರದಲ್ಲಿ ಭಾಗವಹಿಸಲು ಬಂದ ರಾಜರುಗಳೇ ಆಗಿರಬೇಕು. ನಂತರದ ಸಂಯೋಜನೆಯ, ಸೀತಾ ರಾಮರ ಕಲ್ಯಾಣದ ಚಿತ್ರ, ಇದರ ಮಧ್ಯದಲ್ಲಿ ಸೀತಾ ರಾಮರನ್ನು ತೋರಿಸಲಾಗಿದೆ.

ಅವರ ಪಕ್ಕದಲ್ಲಿ ಸೀತೆಯ ತಂದೆತಾಯಿಗಳ ಮತ್ತು ರಾಮನ ತಂದೆತಾಯಿಗಳು ವಧುವರರನ್ನು ಆಶೀವರ್ದಿಸುವ ತೆರದಲ್ಲಿ ನಿಂತಿದ್ದಾರೆ. ಈ ಕಲ್ಯಾಣ ಚಿತ್ರದಲ್ಲಿ ವಶಿಷ್ಟ ಮತ್ತು ವಿಶ್ವಾಮಿತ್ರ ಋಷಿಗಳನ್ನು ಕೂಡಾ ಗಮನಿಸಬಹುದು. ಅಲ್ಲದೇ ಇನ್ನು ಹಲವಾರು ಕಿರು ಆಕೃತಿಗಳನ್ನು ಕೂಡಾ ನೋಡಬಹುದು. ಉಳಿದ ಚಿತ್ರಗಳಂತೆ ಚಿತ್ರದ ಮೇಲ್ಭಾಗದಲ್ಲಿ ಗೋಪುರಗಳು ಮತ್ತು ತಾಳೆಯ ಗಿಡಗಳು ಚಿತ್ರಕ್ಕೆ ಕಲಶಪ್ರಾಯವಾಗಿ ಚಿತ್ರಿತವಾಗಿವೆ.

ಪ್ರಾಯಶಃ ಹೊಯ್ಸಳ, ವಿಜನಗರ ಮತ್ತು ವಿಜಯನಗರೋತ್ತರ ಕಾಲದಲ್ಲಿ ಅತ್ಯಂತ ಜನಪ್ರಿಯವಾದ ಚಿತ್ರವೆಂದರೆ ಅರ್ಜುನ ಮತ್ಸ್ಯ ಯಂತ್ರವನ್ನು ಭೇದಿಸುವ ಚಿತ್ರ. ಈ ಚಿತ್ರ ಇಲ್ಲಿ ದ್ರೌಪದಿಯ ಸ್ವಯಂವರಕ್ಕೆ ಪೂರಕವಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಕೊಪ್ಪರಿಗೆಯಲ್ಲಿ ಮೇಲೆ ತಿರುಗುತ್ತಿರುವ ಮತ್ಸ್ಯದ ಪ್ರತಿಬಿಂಬವನ್ನು ನೋಡುತ್ತ, ಮೇಲಕ್ಕೆ ಬಿಲ್ಲಿನಿಂದ ಗುರಿ ಇಟ್ಟಿರುವ ಅರ್ಜುನನ ಆಕೃತಿ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.[9] ಹಿನ್ನೆಲೆಯಲ್ಲಿ ದ್ರೌಪದಿಯ ಕೈಯಲ್ಲಿ ಹೂಮಾಲೆ ಹಿಡಿದು ನಿಂತಿದ್ದು ಅವಳ ಪಕ್ಕದಲ್ಲಿ ದ್ರುಪದನೂ ಕೂಡಾ ನಿಂತಿದ್ದಾನೆ. ಹಿನ್ನೆಲೆಯಲ್ಲೂ ಕೆಲವು ಆಕೃತಿಗಳನ್ನು ಗಮನಿಸಬಹುದು. ಒಟ್ಟಾರೆಯಾಗಿ ಈ ಚಿತ್ರ ಸಂಯೋಜನೆ ಮನೋಜ್ಞವಾಗಿ ಮೂಡಿಬಂದಿದೆ. ಈ ಮೂರು ಚಿತ್ರಗಳ ಕೆಳಗಿನ ಚಿತ್ರಪಟ್ಟಿಕೆಗಳಲ್ಲಿ ರಥಗಳಲ್ಲಿ ಸಾಗುತ್ತಿರುವ ಪ್ರಮುಖರು ಮತ್ತು ಸೈನಿಕರು ನಾವು ಗಮನಿಸಬಹುದು. ಇವುಗಳಲ್ಲಿ ಕುದುರೆಗಳು, ರಥಗಳು, ಆನೆಗಳು ಮತ್ತು ಸೈನಿಕರು ಮುಂದೆ ಮುಂದೆ ಹೋಗುತ್ತಿರುವ ರೀತಿಯನ್ನು ಗಮನಿಸಿದರೆ ಇವೆಲ್ಲವು ರಾಜಕೀಯ ಪ್ರಮುಖರ ಚಿತ್ರಗಳೆನ್ನಬಹುದು.[10]

ಈ ಭಿತ್ತಿ ಚಿತ್ರಗಳಲ್ಲಿಯೇ ಪ್ರಾಯಶಃ ಅತ್ಯಂತ ಚರ್ಚಾ ವಸ್ತುವಾದ ಚಿತ್ರವೆಂದರೆ, ಯತಿಗಳ ಮೆರವಣಿಗೆಯ ಚಿತ್ರ. ಈ ಚಿತ್ರ ಈ ಚಿತ್ರಗಳ ಸಮೂಹದ ಕೊನೆಯ ಸ್ತರದಲ್ಲಿದೆ. ಚಿತ್ರದ ಎರಡೂ ಕೊನೆಯ ಬದಿಯಲ್ಲಿ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳಿವೆ. ಒಂದೆಡೆ, ಕೃಷ್ಣನು ಗೋಪಿಕೆ ವಸ್ತ್ರಾಪಹರಣ ಮಾಡಿದ ದೃಶ್ಯವಿದ್ದರೆ ಇನ್ನೊಂದೆಡೆ ವಿರೂಪಾಕ್ಷ ದೇವಾಲಯವನ್ನು ತೋರಿಸುವ ಲಿಂಗರೂಪಿ ವಿರೂಪಾಕ್ಷನ ಚಿತ್ರವಿದೆ.

ನಂದಿಯನ್ನು ಕೂಡಾ ಕಲಾವಿದ ಇಲ್ಲಿ ತೋರಿಸಿದ್ದಾನೆ. ಈ ಎರಡೂ ಚಿತ್ರಗಳ ಮಧ್ಯದಲ್ಲಿ ವಿರೂಪಾಕ್ಷನ ಕಡೆ ಮುಖಮಾಡಿ, ಯತಿಗಳನ್ನು ತೆರೆದ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಸಕಲ ರಾಜಮರ್ಯಾದೆಯಿಂದ ಕರೆದೊಯ್ಯುತ್ತಿರುವ ದೃಶ್ಯವಿದೆ. ಈ ಚಿತ್ರದ ಸಂಯೋಜನೆ, ಒಂದು ಉದ್ದವಾದ ಪಟ್ಟಿಕೆಯಂತೆ ಇದ್ದು ಮಧ್ಯದಲ್ಲಿ ಯತಿಗಳನ್ನು ತೆರೆದ ಪಲ್ಲಕ್ಕಿಯಲ್ಲಿ ಕೂಡಿಸಲಾಗಿದೆ. ಅವರ ಸುತ್ತಲೂ ಪರಿಚಾರಕರು, ರಾಜಭಟರು ಮತ್ತು ಪ್ರಮುಖರು, ಸೈನಿಕರು ಯತಿಗಳನ್ನು ರಾಜಮರ್ಯಾದೆಯಿಂದ ಮೆರವಣಿಗೆಯಲ್ಲಿ ಕರೆದೊಯ್ಯುತ್ತಿದ್ದಾರೆ. ಈ ಮೆರವಣಿಗೆಯ ಮುಂಭಾಗದ ಕೊನೆಯ ಭಾಗದಲ್ಲಿ ಶಿವಲಿಂಗದ (ವಿರೂಪಾಕ್ಷ ಲಿಂಗ ಚಿತ್ರಣ ಇರುವುದನ್ನು ಈ ಮೇಲೆ ಹೇಳಿದೆ. ಈ ಮೆರವಣಿಗೆಯ ಪಥವನ್ನು ಕುರಿತು ಒಂದು ಕ್ಷಣ ಸ್ಮೃತಿಪಟಲದ ಮೇಲೆ ಚಿತ್ರವನ್ನು ತಂದುಕೊಂಡರೆ ಹಂಪೆಯಲ್ಲಿನ ಈಗಿನ ಎದುರು ಬಸವಣ್ಣನ ಮಂಟಪದ ಕಡೆಯಿಂದ ವಿರೂಪಾಕ್ಷ ದೇವಾಲಯದ ಕಡೆಗೆ ಅಂದರೆ ವಿರೂಪಾಕ್ಷ ಬಜಾರ್ನಲ್ಲಿ ಈ ಮೆರವಣಿಗೆ ಹೊರಟಿದೆಯೋ ಎಂಬ ಚಿತ್ರಣ ಬರುತ್ತದೆ. ಈ ಮೆರವಣಿಗೆ ಚಿತ್ರದ ಕೇಂದ್ರಬಿಂದುವಾದ ಯತಿಗಳನ್ನು ಇದುವರೆಗೂ ಹಲವಾರು ವಿದ್ವಾಂಸರು, ವಿದ್ಯಾರಣ್ಯರು ಎಂದು ಗುರುತಿಸಿದ್ದಾರೆ. ಆದರೆ ಈ ಯತಿಗಳ ಚಿತ್ರವನ್ನು ಕೃಷ್ಣ ದೇವರಾಯನ ಕಾಲದಲ್ಲಿ ಹಂಪೆಯಲ್ಲಿದ್ದು ಅವನ ರಾಜಗುರುಗಳೂ, ಮಾರ್ಗದರ್ಶಕರೂ ಮತ್ತು ದಾಸಸಾಹಿತ್ಯದ ಹರಿಕಾರರೂ ಆಗಿದ್ದ ವ್ಯಾಸರಾಯರದು ಎಂದು ಹಲವಾರು ದಾಖಲೆಗಳ ಸಹಿತ ಈ ಹಿಂದೆ ನಾವು ಪ್ರತಿಪಾದಿಸಿದ್ದೇನೆ.[11]

ಇನ್ನು ಕೊನೆಯದಾಗಿ – ಈ ಭಿತ್ತಿಗಳು ಸುತ್ತಲೂ ಇರುವ ಕಂಬಗಳ ಬೋದಿಗೆಯ ಮೇಲಿರುವ ಪಟ್ಟಿಕೆಗಳ (ಹಾರದ ಭಾಗ) ಮೇಲೆ ಹಲವಾರು ಚಿತ್ರಗಳಿವೆ. ಇವುಗಳಲ್ಲಿ ಕೆಲವು ಮಹಾಭಾರತದ ವಿರಾಟಪರ್ವಕ್ಕೆ ಸಂಬಂಧಿಸಿದ ಗೋಗ್ರಹಣ ಘಟನೆಯ ಚಿತ್ರಗಳಿವೆ.[12] ನವರಂಗದ ಹೊರಭಾಗದ ಪಟ್ಟಿಕೆಯ ಮೇಲೆ ಬಾಗಿಲಿಗೆ ನೇರವಾಗಿ ಮೇಲೆಡೆಗೆ ಚೌಕಾಕಾರದ ಸಂಯೋಜನೆಯಲ್ಲಿ ಲಿಂಗರೂಪಿ ವಿರೂಪಾಕ್ಷನ ಚಿತ್ರಣವಿದ್ದು ಪಕ್ಕದಲ್ಲಿ ಅರ್ಚಕರು (ಯತಿಗಳು?) ಮತ್ತು ರಾಜಪೋಷಾಕಿನಲ್ಲಿರುವ ಈರ್ವರು ಪುರುಷಾಕೃತಿಗಲೀವೆ. ಬಹುಶಃ ಈ ಎರಡು ಆಕೃತಿಗಳು ಕೃಷ್ಣದೇವರಾಯ ಮತ್ತು ಅಚ್ಯುತರಾಯನದಾಗಿರಬಹುದೆಂದು ತೋರುತ್ತದೆ. ಆದಾಗ್ಯೂ, ಇವುಗಳ ಕುರಿತು ಸದ್ಯದ ಅಧ್ಯಯನ ಅಪೂರ್ಣವಾಗಿದೆ[13]

ಮಹಾರಂಗಮಂಟಪದ ಚಿತ್ರಗಳು ಸಂಪೂರ್ಣವಾಗಿ ಅಜಂತಾದ ಬೌದ್ಧಾಲಯಗಳಂತೆ ಒಳಮಾಳಿಗೆಯನ್ನು ಅಲಂಕರಿಸಿವೆ. ಇಲ್ಲಿ ಪ್ರತಿಯೊಮದು ಸನ್ನಿವೇಶವೂ ಅಲಂಕಾರಿಕ ಹೂಬಳ್ಳಿಗಳ ಪಟ್ಟಿಕೆಗಳಿಂದ ವಿಭಾಗಿಸಿದೆ. ಆಯಾ ಚೌಕಟ್ಟು ಆಯಾ ಚಿತ್ರಕ್ಕೆ ಮಾತ್ರ ಸೀಮಿತವಾಗಿದೆ. ಇದರಿಂದ ಇಲ್ಲಿ ಪ್ರತಿಯೊಂದು ಚಿತ್ರವು ಸ್ವತಂತ್ರವಾದುದೇ ಆಗಿದೆ. ಚಿತ್ರಗಳ ಸಂಯೋಜನೆಯ ಭಾಗವಾಗಿರುವ ಗೋಪುರಗಳ ಮತ್ತು ವಾಸ್ತುಕೃತಿಗಳ ಇತರೆ ಅಂಶಗಳು ಸಮಕಾಲೀನ ವಾಸ್ತುಕಲೆಯ ಅಂಶಗಳನ್ನು ತೋರಿಸುತ್ತವೆ. ಎಂದು ಈ ಹಿಂದೆ ಸೂಚಿಸಿದ್ದೇನೆ. ಈ ಚಿತ್ರಗಳಲ್ಲಿನ ಆಕೃತಿಗಳೆಲ್ಲವೂ ರೇಖಾಪ್ರಧಾನವಾದವುಗಳಾಗಿವೆ. ಬಾಹ್ಯ ರೇಖೆಗಳೇ ಚಿತ್ರದ ಜೀವಾಳ. ಆಕೃತಿಯ ಉಬ್ಬು ತಗ್ಗು, ಹಾವಭಾವ ಮತ್ತು ಆಕೃತಿಯಲ್ಲಿನ ಯಾವುದೇ ಅಲಂಕಾರವನ್ನು ರೇಖೆಯೇ ನಿರ್ದೇಶಿಸುತ್ತದೆ.[14] ಇಲ್ಲಿ ವರ್ಣಸಂಯೋಜನೆಯು ಕೆಲವೇ ವರ್ಣಗಳಿಗೆ ಪ್ರಧಾನವಾಗಿ ಕಂಡುಬರುತ್ತವೆ. ಆದರೆ ಈ ವರ್ಣಗಳನ್ನು ನೇರವಾಗಿ ಉಪಯೋಗಿಸಿರುವುದರಿಂದ ಇಲ್ಲಿ ವರ್ಣಗಳ ನೈಜತೆಗೆ ಅಥವಾ ಭಾವಾಭಿವ್ಯಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ಇರುವುದಿಲ್ಲ.[15] ಪ್ರಾಯಶಃ ಇದರಿಂದಲೇ ಆಕೃತಿಗಳಲ್ಲಿ ನೆರಳು ಬೆಳಕಿನ ಸಂಯೋಜನೆ ಅಷ್ಟಾಗಿ ಕಂಡುಬರುವುದಿಲ್ಲ. ಈ ಆಕೃತಿಗಳಲ್ಲಿ ಕೆಲವು ಸ್ಥಳೀಯ ಅಥವಾ ಆ ಕಾಲದ ಕೆಲವಾರು ಶಿಲ್ಪಗಳನ್ನು ಜ್ಞಾಪಕಕ್ಕೆ ತರುತ್ತವೆ. ಈ ಕುರಿತು ಕೂಡಾ ಬೇರೆಡೆ ನಾನು ಚರ್ಚಿಸಿದ್ದೇನೆ.[16]

ಮಹಾರಂಗಮಂಟಪದ ಚಿತ್ರಗಳ ರಚನಾ ಕಾಲದ ಬಗ್ಗೆ ಹಲವಾರು ವಿದ್ವಾಂಸರು ವಿಭಿನ್ನ ನಿಲುವುಗಳನ್ನು ಹೊಂದಿದ್ದಾರೆ. ಎಸ್. ಪರಮಶಿವನ್ ರವರು[17] ಇವುಗಳ ಕಾಲವನ್ನು ಕ್ರಿ.ಶ. ೧೫-೧೬ನೇ ಶತಮಾನಕ್ಕೆ ಸೇರಿಸಿರುತ್ತಾರೆ. ಅದರಂತೆ ಶ್ರೀ ಸಿ.ಟಿ.ಯಂ. ಕೊಟ್ರಯ್ಯ[18] ಅವರು ಕ್ರಿ.ಶ. ೧೫೦೮ರ ನಂತರ ಇವು ರಚನೆ ಆಗಿರಬಹುದೆಂಬ ಅಭಿಪ್ರಾಯಪಟ್ಟಿದ್ದಾರೆ. ಸಿ. ಶಿವರಾಮಮೂರ್ತಿಯವರು[19] ಕ್ರಿ.ಶ. ೧೫ನೇ ಶತಮಾನಕ್ಕೆ ಸೇರಿಸಿದ್ದಾರೆ. ಇವರಿಗಿಂತ ವಿಭಿನ್ನವಾಗಿ ಡಾ. ಎಸ್. ರಾಜಶೇಖರ,[20] ಶ್ರೀಮತಿ ಎ.ಎಲ್. ದೆಲ್ಲಾಪಿಕೋಲಾರವರು[21] ಇವುಗಳನ್ನು ಕ್ರಿ.ಶ. ೧೮-೧೯ನೇ ಶತಮಾನಕ್ಕೆ ಸೇರಿಸಿದ್ದಾರೆ. ರಾಜಶೇಖರ್ ಇವುಗಳನ್ನು ಹೊಳಲಗುಂಡಿಯ ಚಿತ್ರಗಳಿಗೆ ಹೋಲಿಸುತ್ತಾ ಈ ಚಿತ್ರಗಳಲ್ಲಿಯ ಕೆಲವು ಅಂಶಗಳು ನಂತರದ ಕಾಲದವು ಎಂದು ಪ್ರತಿಪಾದಿಸುತ್ತ ನಂತರದ ಕಾಲಕ್ಕೆ ಅಂಶಗಳು ಕ್ರಿ.ಶ. ೧೮-೧೯ನೇ ಶತಮಾನದ ಶ್ರೀರಂಗಪಟ್ಟಣ ಮತ್ತು ಮೈಸೂರು ಶೈಲಿಯ ಚಿತ್ರಗಳಿಗೆ ಹೋಲಿಸುತ್ತಾ ಇವುಗಳ ಕಾಲವನ್ನು ಕ್ರಿ.ಶ. ೧೯ನೇ ಶತಮಾನಕ್ಕೆ ಸೇರಿಸುತ್ತಾರೆ, ಅಲ್ಲದೇ, ಯತಿಗಳ ಚಿತ್ರವನ್ನು ವಿದ್ಯಾರಣ್ಯ ಎಂಬುದಾಗಿಯೂ ಹಾಗೂ ಯತಿಗಳು ಜಡೆಗಟ್ಟಿದ ಕೂದಲು ಉಳ್ಳವರಾಗಿಯೂ ಇದ್ದಾರೆಂದು ಅವರು ಬರೆಯುತ್ತಾರೆ.[22] ಆದರೆ, ವಾಸ್ತವದಲ್ಲಿ ಪ್ರಸ್ತುತ ವಿದ್ವಾಂಸರ ಅಭಿಪ್ರಾಯಗಳನ್ನು ಸಂಶಾಯಸ್ಪದ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ.[23]

ಪ್ರಸ್ತುತ ಚಿತ್ರಗಳು ಶೈಲಿಯ ದೃಷ್ಟಿಯಿಂದ ಇವುಗಳ ರಚನಾ ಕಾಲವನ್ನು ಕ್ರಿ.ಶ. ೧೫೧೦-೩೦ರ ಅವಧಿಯವರೆಗೆ ನಿರ್ಧರಿಸುವುದು ಸಮಂಜಸವಾಗಿದೆ. ಇವುಗಳು ಇರುವ ಮಹಾರಂಗಮಂಟಪದ ನಿರ್ಮಾಣವಾದದ್ದು ೧೫೦೯-೧೦ರಲ್ಲಿ.[24] ಇದೇ ದಿನಾಂಕದಲ್ಲಿ ಕೃಷ್ಣದೇವರಾಯನು ಪಟ್ಟಾಭಿಷಕ್ತನಾದ ವಿವರವು ಶಾಸನೋಕ್ತವಾಗಿದೆ. ಮಹಾರಂಗ ಮಂಟಪದ ಚಿತ್ರಗಳು ಕೃಷ್ಣದೇವರಾಯನ ಕಾಲದಲ್ಲಿಯೇ ರಚನೆ ಆಗಿರುವವು. ಇಂತಹ ದೊಡ್ಡಮಟ್ಟದ ಚಿತ್ರಗಳ ಪೋಷಕ ರಾಜ ರಾಜ ಪ್ರಮುಖನಾಗಿರಬೇಕೆಂದು ಹೇಳಬಹುದು. ಆದರೆ, ಕ್ರಿ.ಶ. ೧೮-೧೯ನೇ ಶತಮಾನದ ಇಲ್ಲಿನ ರಾಜಕೀಯ ಸ್ಥಿತಿಯನ್ನು ಗಮನಿಸಿದರೆ ಅಂತಹ ದೊಡ್ಡ ಪೋಷಕರಾರು ಕಂಡುಬರುವುದಿಲ್ಲ. ಇಲ್ಲಿ ಚಿತ್ರಿತವಾದ ವಿಷಯಗಳು ದೇವಾಲಯದ ಶಿಲ್ಪಗಳು ಆ ಕಾಲದ ಕಲಾ ಚಟುವಟಿಕೆಗಳ ಸಮನ್ವಯತೆಯನ್ನು ಪ್ರತಿಬಿಂಬಿಸುತ್ತದೆ. ಕೃಷ್ಣದೇವರಾಯನಂತಹ ಕಲಾ ಸಹೃದಯರು ಮಾತ್ರವೇ ಇಂತಹ ಚಿತ್ರಗಳ ರಚನೆಯ ಹಿನ್ನೆಲೆಯಲ್ಲಿ ಇದ್ದರೇ ಹೊರತು ಏನೊಂದು ವಿಶೇಷತೆಯನ್ನು ತೋರದ ನಂತರದ ಪ್ರಮುಖರಲ್ಲಿ. ಆದುದರಿಂದ ಚಿತ್ರಗಳು ಕೃಷ್ಣದೇವರಾಯನ ಕಾಲದಲ್ಲಿಯೇ ರಚನೆಯಾಗಿ ಸಾಧ್ಯತೆ ಹೆಚ್ಚು.[25]

ಚಿತ್ರಶೈಲಿಯ ದೃಷ್ಟಿಯಿಂದ ನಾವು ಇವುಗಳನ್ನು ಆ ಕಾಲದ ಸಮಕಾಲೀನ ಚಿತ್ರಗಳಿಗೆ ತುಲನಾತ್ಮಕವಾಗಿ ಹೋಲಿಸಬಹುದಾಗಿದೆ. ಕರ್ನಾಟಕದಲ್ಲಿ ಅಗಲೇ ನೆಲೆ ಕಂಡುಕೊಂಡಿದ್ದ ಇಸ್ಲಾಮಿಕ್ ದೊರೆಗಳ ಆಸ್ಥಾನದಲ್ಲಿ ಚಿಕಣಿ ಚಿತ್ರಗಕಲೆಯು ತನ್ನ ಪ್ರಾರಂಭಿಕ ಹಂತದಲ್ಲಿತ್ತು. ಮಧ್ಯಭಾರತದಲ್ಲಿ ಚೌರ ಪಂಚಾಶಿಕ ಕಥೆಗಳು ದೃಶ್ಯಮಾಧ್ಯಮದಲ್ಲಿ ಚಿತ್ರಗಳ ರೂಪದಲ್ಲಿ ರಚನೆಗೊಳ್ಳಲು ಪ್ರಾರಂಭಗೊಂಡಿದ್ದವು. ಇದೇ ಕಾಲದಲ್ಲಿ ರಾಜಸ್ಥಾನೀ ಕಲೆ ಚಿಕಣಿ ಚಿತ್ರಗಳ ರೂಪದಲ್ಲಿ ಅರಳತೊಡಗಿತ್ತು. ಇವುಗಳ ಜೊತೆಯಲ್ಲಿಯೇ ವಿಭಿನ್ನ ಕಲಾಪ್ರಕಾರಗಳಲ್ಲಿ ಚಿತ್ರಕಲೆ ತನ್ನದೇ ಆದ ಛಾಪನ್ನು ಒತ್ತತೊಡಗಿತ್ತು.[26] ಇಂತಹ ಸಂದರ್ಭದಲ್ಲಿ ಆಗಲೇ ವಾಸ್ತುಶಿಲ್ಪ, ಗಾರೆ ಶಿಲ್ಪದ್ಲಲಿ ಪ್ರೌಢಿಮೆ ಕಂಡುಕೊಂಡಿದ್ದು ವಿಜಯನಗರದ ಕಲಾವಿದನಿಗೆ ಚಿತ್ರರಚನೆ ಮಾಡುವುದು, ವಿಶೇಷವಾದ ಶ್ರಮವೆನಿಸಿರಲಿಕ್ಕಿಲ್ಲ. ಇಲ್ಲಿನ ಸ್ಥಳೀಯ ಕಲಾವಿದರೇ ಪ್ರಸ್ತುತ ಚಿತ್ರಗಳ ರಚನಾಕಾರರು. ಇವರೇ ಪೂರ್ವನಿಯೋಜಿಸಿ ಸಂಯೋಜಿಸಿ ಚಿತ್ರಿಸಿದ ಆಕೃತಿಗಳೇ ಇಲ್ಲಿ ತುಂಬಿವೆ. ಇದರೊಂದಿಗೆ ಸಮಕಾಲೀನ ಸೊಗಡನ್ನು ಭಾವಪೂರ್ಣವಾಗಿ ಇಲ್ಲಿ ಕಲಾವಿದ ದುಡಿಸಿಕೊಂಡಿದ್ದಾನೆ. ಹಂಪೆಯ ಚಿತ್ರಗಳು ಇಂದು ಹಂಪೆಯಲ್ಲಿ ಉಳಿದ ಚಿತ್ರಕಲೆಯ ಗತವೈಭವದ ದಾಖಲೆಗಳಾಗಿವೆ.

ಆಕರ
ವಿಜಯನಗರ ಅಧ್ಯಯನ, ಸಂ. ೭, ೨೦೦೩, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ, ಪು. ೧೪೮-೧೬೨.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಈ ಚಿತ್ರಗಳನ್ನು ಕುರಿತಂತೆ ಇದುವರೆಗೂ ಆಗಿರುವ ಅಧ್ಯಯನಗಳಲ್ಲಿ ಸಮಕಾಲೀನ ಚಿತ್ರಗಳ ಅಥವಾ ಚಿತ್ರಕಲಾ ಚಟುವಟಿಕೆಗಳ ವ್ಯಾಪ್ತಿಯಲ್ಲಿ ಚರ್ಚೆ ಆಗಿಲ್ಲವೆಂದೇ ಹೇಳಬಹುದು.

[2] ಅಜಂತಾ ಮತ್ತು ಬಾಗ್ ಗಳಲ್ಲಿಯ ಭಿತ್ತಿಚಿತ್ರಗಳನ್ನು ಕುರಿತಂತೆ ಹಲವಾರು ಅತ್ಯುತ್ತಮ ಅಧ್ಯಯನಗಳು ಆಗಿವೆ. ಅದರಂತೆ ಬಾದಾಮಿ, ಐಹೋಳೆ, ಎಲ್ಲೋರ ಧಾರಶಿವಗಳ ಬಗ್ಗೆ ಕೂಡಾ ಹಲವಾರು ಲೇಖನಗಳು ಪ್ರಕಟವಾಗಿವೆ. ಇವತ್ತು ದಕ್ಷಿಣದ ಪಲ್ಲವ ಚೋಳರ ಕಾಲದಲ್ಲಿನ ಚಿತ್ರಕಲಾ ಚಟುವಟಿಕೆಗಳನ್ನು ಕುರಿತಂತೆ ಕೂಡಾ ಹಲವಾರು ಪ್ರಸ್ತಕಗಳು, ಲೇಖನಗಳು ಪ್ರಕಟವಾಗಿವೆ. ಈ ಎಲ್ಲ ವಿಷಯಗಳ ಆಕರ ಗ್ರಂಥಗಳಿಗೆ ನೊಡಿ. Susan L. Huntington : The Art of Ancient India, Buddhist, Hindu, Jain, Weatherhill N.Y. 1985

[3] ಜೈನ ಮಾನಸಪ್ರತಿಗಳಲ್ಲಿನ ಚಿತ್ರಗಳು ಕರ್ನಾಟಕಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಾಚೀನವಾದದ್ದೂ ಎಂದರೆ ಮೂಡುಬಿದ್ರೆಯ ’ಧವಳ’ ತಾಲಪತ್ರಗಳ ಮೇಲೆ ಚಿತ್ರಿತವಾದ ರೇಖಾಚಿತ್ರಗಳೆಂದು ಹೇಳಬಹುದು. Vijaya Rao, 1989 : Mural Paintings at the Jain Math, Shravanabelgola (Unpublished) MF A dissertation  ಇದರಲ್ಲಿ ವಿವರವಾಗಿ ಧವಳ ಚಿತ್ರಗಳ ಬಗ್ಗೆ ಚರ್ಚೆ ಇದೆ.

[4] ಹಂಪೆಯಲ್ಲಿ ಅಂದಿನ ಕಾಲದಲ್ಲಿ ಅರಮನೆಗಳಲ್ಲಿ, ಮುಖ್ಯಬೀದಿಗಳ ಮನೆಗಳ ಗೋಡೆಗಳ ಮೇಲೆ ಮತ್ತು ಇನ್ನಿತರ ಪ್ರಮುಖ ಕಟ್ಟಡಗಳಲ್ಲಿ ಚಿತ್ರಗಳನ್ನು ನೋಡಿದ್ದ ಬಗ್ಗೆ ಹಂಪೆಗೆ ಬಂದಿದ್ದ ವಿದೇಶಿ ಪ್ರವಾಸಿಗರು ತಿಳಿಸುತ್ತಾರೆ. ಇವರಲ್ಲಿ ಮುಖ್ಯವಾಗಿ ನ್ಯೂನಿಜ್ ಮತ್ತು ಪೇಸ್ರು ಈ ಕುರಿತು ವಿವರಿಸುತ್ತಾರೆ.

[5] ಇಲ್ಲೂ ಕೂಡಾ ಕಲಾವಿದನ ಸಮಯಪ್ರಜ್ಞೆಯನ್ನು ಗಮನಿಸಬೇಕು. ಪ್ರತಿಯೊಂದು ಹಂತದಲ್ಲೂ ಸಂಯೋಜನೆಯ ಪ್ರತಿಯೊಂದು ಆಕೃತಿಗಳ ಮುಖ್ಯಕಥಾವಸ್ತುವಿಗೆ ಪೂರಕವಾಗಿ ಕಾರ್ಯತತ್ಪರವಾಗಿರಬೇಕೆಂಬುದು ಕಲಾವಿದನ ಉದ್ದೇಶ. ಇದನ್ನೇ ಆಂತರಿಕ ಸಂಬಂಧ ಎಂದು ಚಿತ್ರ ಸಂಯೋಜನೆಯಲ್ಲಿ ಹೆಳಬಹುದು.

[6] ಈ ಚಿತ್ರದಲ್ಲಿ ಕಾಮನ ಮುಖಮಾತ್ರ ಪಾರ್ಶ್ವ ಭಂಗಿಯಲ್ಲಿದೆ. ಆದರೆ ದೇಹ ಮಾತ್ರ ಮುಂದಿನಿಂದ ನೋಡಿದಾಗ ಇರುವಂತೆ ಇದೆ. ಇದು ಚಿತ್ರಗಳ ರೇಖಾಕೃತಿಯ ರಚನೆಯಲ್ಲಿ ಆಗುವ ತಾಂತ್ರಿಕವಾದ ಕ್ರಿಯೆ ಆಗಿದೆ. ಆರ್.ಎಚ್. ಕುಲಕರ್ಣಿ ೧೯೯೮ ವಿಜಯನಗರದ ಚಿತ್ರಶೈಲಿಯ ಕಿನ್ನಾಳದ ರೇಖಾಚಿತ್ರಗಳು. “ವಿಜಯನಗರ ಅಧ್ಯಯನ” ಸಂ. ೩, ಪು. ೨೫ -೩೫.

[7] ಶಿವನನ್ನು ಮನ್ಮಥವಿಜಯ ಚಿತ್ರಗಳಲ್ಲಿ ಸಾಮಾನ್ಯವಾಗಿ ಧ್ಯಾನಮುದ್ರೆಯಲ್ಲಿ ಚಿತ್ರಿಸಿರುವುದು ಹಲವಾರು ಶಿಲ್ಪಗಳಲ್ಲಿ ಚಿತ್ರಗಳಲ್ಲಿ ಕಂಡುಬರುತ್ತದೆ. ಇಲ್ಲಿ ಅವನು ಧ್ಯಾನದಿಮದ ಆಗಲೇ ಹೊರಬಂದಿರುವ ಹಂತ ಅಂದರೆ ಮನ್ಮಥನನ್ನು ತನ್ನ ನೊಸಲಕಣ್ಣಿನಿಂದ ಭಸ್ಮ ಮಾಡುವ ಪೂರ್ವ ಹಂತವನ್ನು ತೋರಿಸುತ್ತದೆ. ಅಲ್ಲದೇ ಶಿವನ ಅಗಲವಾದ ಕಣ್ಣುಗಳು ಕ್ರಿಯೆಗೆ ಪೂರಕವಾಗಿವೆ.

[8] ಈ ಚಿತ್ರ ಸಂಯೋಜನೆಯ ತೀರ ಕೆಳಸ್ಥರದಲ್ಲಿ ಕಂಡುಬರುವ ಲಯಬದ್ಧವಾದ ನೀರಿನ ಮತ್ತು ಜಲಚರಿಗಳ ಚಿತ್ರಣ ಅವಿಭಾಜ್ಯ ಅಂಗವಾಗಿದೆ. ಇದು ಚಿತ್ರದಲ್ಲಿ ಈ ಘಟನೆ ನಡೆದ ಸ್ಥಳಕ್ಕೆ ಪೂರಕವಾಗಿ ಸಾಂಕೇತಿಕವಾಗಿ ಚಿತ್ರಣಗೊಂಡಿದೆ. ಸಂಯೋಜನೆಯ ದೃಷ್ಟಿಯಲ್ಲಿ ಈ ಚಿತ್ರಣ ನಂತರದ ದಶಕಗಳಲ್ಲಿ ಪ್ರಾರಂಭವಾದ ಮೊಘಲ್ ರಾಜಸ್ಥಾನಿ ಚಿಕಣಿ ಚಿತ್ರಗಳಲ್ಲಿ ನೀರನ್ನು ಮುನ್ನೆಲೆಯಾಗಿ ದುಡಿಸಿಕೊಂಡಿರುವುದನ್ನು ನಾವು ಗಮನಿಸಬಹುದು. ಇಲ್ಲಿಹಲವಾರು ಕಥಾನಕ ಶಿಲ್ಪಗಳಲ್ಲಿ ಅದರಲ್ಲೂ ರಾಮಾಯಣದ ದೃಶ್ಯಗಳಲ್ಲಿ (ಹಜಾರ ರಾಮದೇವಾಲಯ ಸಂಯೋಜನೆಯಲ್ಲಿ ನೀರನ್ನು ದುಡಿಸಿಕೊಂಡಿರುವ ವಿಧ ಗಮನಾರ್ಹವಾದುದ್ದು.

[9] ಅರ್ಜುನ ಮತ್ಸ್ಯಯಂತ್ರವನ್ನು ಭೇದಿಸುವ ದೃಶ್ಯ ಮೊಟ್ಟಮೊದಲಬಾರಿಗೆ ಶಿಲ್ಪಗಳಲ್ಲಿ ಮೂಡಿಬಂದಿದೆ. ಹೊಯ್ಸಳ ಕಾಲದ ಹಜಾರರಾಮ ದೇವಾಲಯಗಳಲ್ಲಿ ಭಿತ್ತಿಯ ಸಾಲುಗಳಲ್ಲಿ ಕಥಾನಕ ಚಿತ್ರಗಳಲ್ಲಿ ಒಂದಾಗಿ ಮೂಡಿಬಂದಿದೆ. ಹಳೇಬೀಡು, ಬೇಲೂರು, ಸೋಮನಾಥಪುರ ಇತ್ಯಾದಿ ಕಡೆಗಳಲ್ಲಿ ಇದನ್ನು ಕಾಣಬಹುದು. ವಿಜಯನಗರದಲ್ಲಿ ದೇವಾಲಯ ಶಿಲ್ಪಗಳಲ್ಲಿ ಮೂಡಿಬಂದಿರುವುದು ಸ್ಪಷ್ಟವಾಗಿದೆ. ಈಗ ಈ ಭಿತ್ತಿಯಲ್ಲಿ ನಂತರದ ಕಿನ್ನಾಳ ಚಿತ್ರಗಳಲ್ಲಿ ಕೂಡಾ ಅತ್ಯಂತ ಜನಪ್ರಿಯವಾದ ಚಿತ್ರವಸ್ತು ಇದಾಗಿದೆ. ಕುಲಕರ್ಣಿ ಆರ್.ಎಚ್., ೧೯೯೮, ಅದೇ.

[10] ಈ ಚಿತ್ರಗಳ ಬಗ್ಗೆ ಸ್ಪಷ್ಟವಾದ ಗುರುತಿಸುವಿಕೆ ಇನ್ನೂ ಆಗಬೇಕಿದೆ. ಬಹುಶಃ ಅಂದಿನ ರಾಜರನ್ನೇ ಇವು ತೋರಿಸುವ ಸಾಧ್ಯತೆ ಇದೆ.

[11] ಕುಲಕರ್ಣಿ ಆರ.ಎಚ್., ೨೦೦೧, ಹಂಪೆ ವಿರೂಪಾಕ್ಷ ದೇವಾಲಯದ ಮಹಾರಂಗ ಮಂಟಪದ ಒಳಭಿತ್ತಿಯಲ್ಲಿನ ಯತಿಗಳ ಚಿತ್ರ ವಿದ್ಯಾರಣ್ಯರದೆ? ವ್ಯಾಸರಾಯರದೆ? “ಇತಿಹಾಸ ದರ್ಶನ”, ಸಂ. ೧೬, ಬೆಂಗಳೂರು, ಪು. ೧೭೮-೮೧.

[12] ದೆಲ್ಲಾಪಿಕೋಲಾ ಎ.ಎಲೊ.,೧೯೯೭, “Ceiling in the Virupaksha Temple”, Hampi. South Asian Studies, No. 13, pp. 55-56

[13] ಈ ರಾಜರ ಆಕೃತಿಗಳನ್ನು ತೀರ ಹತ್ತಿರದಿಂದ ನೋಡುವ ಅವಕಾಶ ಇದುವರೆಗೂ ನನಗೆ ದೊರೆತಿಲ್ಲ. ಪೇಟ, ಉದ್ದವಾದ ಜುಬ್ಬದಂತಹ ಮೇಲಂಗಿ ಮತ್ತು ಧೋತ್ರಗಳನ್ನು ಧರಿಸಿದ್ದು ಈ ಆಕೃತಿಗಳು ಮುಮ್ಮಖವಾಗಿ ಲಿಂಗಕ್ಕೆ ಪೂಜೆಸಲ್ಲಿಸಲು ಹೊರಟಿರುವಂತೆ ಪ್ರತ್ಯೇಕವಾದ ’ಚೌಕ’ದ ಸಂಯೋಜನೆಯಲ್ಲಿ ಚಿತ್ರಣಗೊಂಡಿವೆ. ಇವುಗಳು ಲೇಪಾಕ್ಷಿಯ ವೀರಭದ್ರ ದೇವಾಲಯದ ಕಲ್ಯಾಣಮಂಟಪದ ಭಿತ್ತಿಚಿತ್ರಗಳಲ್ಲಿ ಕಂಡುಬರುವ ವೀರಣ್ಣ ಮತ್ತು ವಿರುಪಣ್ಣರ ಚಿತ್ರಗಳಂತೆ ಈ ಸಂಯೋಜನೆಯಲ್ಲಿ ಕಂಡುಬರುತ್ತವೆ.

[14] ಕುಲಕರ್ಣಿ ಆರ್.ಎಚ್., ೨೦೦೦, ವಿಜಯನಗರ ಚಿತ್ರಶೈಲಿಯ ಕಿನ್ನಾಳದ ಮತ್ತಷ್ಟೂ ರೇಖಾ ಚಿತ್ರಗಳು, “ವಿಜಯನಗರ ಅಧ್ಯಯನ”-೬, ಪು. ೪೩-೬೨.

[15] ವರ್ಣಗಳು ಈಗ ಬಹುತೇಕವಾಗಿ ಮಾಸಿಹೋಗಿ ಕೇವಲ ಕೆಲವೇ ಕೆಲವು ವರ್ಣಗಳು ಕಾಣುತ್ತವೆ.

[16] ಕುಲಕರ್ಣಿ ಆರ್. ಎರ್ಚ., ಕಿನ್ನಾಳದ ರೇಖಾ ಚಿತ್ರಗಳು, ೧೯೯೮, ೨೦೦೦, ವಿಜಯನಗರ ಅಧ್ಯಯನ.

[17] ಪರಮಶಿವನ್, ಎಸ್., ೧೯೩೬, The Vijayanagara Paintings : late vijayanagara Paintings in Bhihadishwara Temple at Tajore “in Vijayanagara Sex centenary Association, Dhawad, pp. 326-343

[18] ಕೊಟ್ರಯ್ಯ ಸಿ.ಟಿ.ಯಂ., ೧೯೫೯, Vijayanagar Paintings at the Virupaksha Temple, Hampi, QJMS, Bangalore, pp. 228-237

[19] ಶಿವರಾಮಮೂರ್ತಿ ಸಿ., South Indian Paintings, National Museum, New Delhi.

[20] ರಾಜಶೇಖರ ಎಸ್., ೧೯೮೨, Holalagundi Paintings, Dharwad.

[21] ದೆಲ್ಲಾಪಿಕೋಲಾ ಎ.ಎಲ್., ೧೯೯೭, ಅದೇ.

[22] ಅದೇ, ಪು. ೬೩.

[23] ಕುಲಕರ್ಣಿ ಆರ್.ಎಚ್., ೨೦೦೧, ಇತಿಹಾಸ ದರ್ಶನ.

[24] ಸೌತ್ ಇಂತಿಯನ್ ಇನ್‌ಸ್ಕ್ರಿಪ್ಶನ್ಸ್, ೪, ಸಂಖ್ಯೆ ೨೫೮.

[25] ಕೃಷ್ಣದೇವರಾಯನ ಕಾಲವನ್ನು ಎಲ್ಲ ದೃಷ್ಟಿಯಿಂದಲೂ ವಿಜಯನಗರ ಕಾಲದ ಸುವರ್ಣಕಾಲವೆಂದು ಇತಿಹಾಸತಜ್ಞರು ಹೇಳುತ್ತಾರೆ. ಹಾಗಿದ್ದ ಮೇಲೆ ಈ ಚಿತ್ರಗಳು, ಕಾಲ ದೃಷ್ಟಿಯಿಂದ ರಚನೆಗೊಂಡಿರುವ ಸ್ಥಳದ ಮತ್ತು ಸಂದರ್ಭಗಳನ್ನು ಗಮನಿಸಿದರೆ ಅವನ ಕಾಲದಲ್ಲಿ ರಚನೆ ಆಗಿರಬೇಕೆಂಬುದು ರುಜುವಾಗಾದಂತಾಗುತ್ತದೆ.

[26] ಕ್ರಿ.ಶ. ೧೫೦೦ರ ಕಾಲ ಭಾರತೀಯ ಚಿತ್ರಕಲಾ ಇತಿಹಾಸದ ಪುನರುತ್ಥಾನದ ಸಮಯವೆಂದು ಕಲಾ ಇತಿಹಾಸತಜ್ಞರ ಅಭಿಮತ. ಏಕೆಂದರೆ ದೇಶದ ಇಲ್ಲೆಡೆ ಮತ್ತೊಂದು ಬಾರಿ ಚಿತ್ರಕಲೆಗೆ ವಿಶೇಷ ಪ್ರಾಮುಖ್ಯತೆ ದೊರೆತು ಚಿತ್ರರಚನೆ ವಿಭಿನ್ನ ನೆಲೆಗಟ್ಟಿನಿಂದ ಪ್ರಾರಂಭವಾಯಿತು. ಇದೇ ಸಂದರ್ಭದಲ್ಲಿ ದಕ್ಷಿಣದಲ್ಲೂ ಕೂಡಾ ಇದು ವಿಜಯನಗರದಲ್ಲಿನ ಚಿತ್ರಕಲೆಯ ರೂಪದಲ್ಲಿ ಪ್ರಾರಂಭವಾದದ್ದೇ ಪ್ರಸ್ತುತ ಚರ್ಚೆಯ ವಸ್ತು.