ವಿಜಯನಗರದರಸರ ಕಾಲಕ್ಕೆ ಚಿತ್ರಕಲೆಗೆ ಸಾಕಷ್ಟು ಪ್ರೋತ್ಸಾಹ ದೊರೆತುದರಿಂದ ಅನೇಕ ದೇವಾಲಯಗಳಲ್ಲಿ ಚಿತ್ರಕಾರರು ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸಲು ಸಾಧ್ಯವಾಯಿತು. ವಿಜಯನಗರ ಕಾಲದ ಚಿತ್ರಕಲೆಯನ್ನು ಹಂಪೆಯ ವಿರೂಪಾಕ್ಷ, ಲೇಪಾಕ್ಷಿಯ ವೀರಭದ್ರ, ಸೋಮಪಾಲಯಂನಲ್ಲಿಯ ಚೆನ್ನಕೇಶವ, ಆನೆಗೊಂದಿಯ ಹುಚ್ಚಪ್ಪಯ್ಯಮಠ, ಕಾಂಚಿಯ ವರದರಾಜ, ತಿಳಿವಿಳಿದುಳಲೈನ ಶಿವದೇವಾಲಯ, ತಿರುಪರುತ್ತಿಕುನ್ರಮ್ ದ ಜೈನ ಬಸದಿ, ತಂಜಾವೂರಿನ ಬೃಹದೇಶ್ವರ, ಚಿದಾಂಬರಂನ ಶಿವಕಾಮ ಸುಂದರಿ, ತಿರುಮಲೈನ ಕುಂದಾಣಿ ಜಿನಾಲಯ ಮುಂತಾದ ದೇವಾಲಯಗಳಲ್ಲಿ ನೋಡಬಹುದು. ಈ ದೇವಾಲಯಗಳಲ್ಲದೇ ಈ ಕಾಲದ ಚಿತ್ರಕಲೆಯನ್ನು ಚಿಪ್ಪಗಿರಿ, ತಿರುಪತಿ, ಕದಿರಿ, ರಾಯಚೋಟಿ, ಕುಂಭಕೋಣಂ, ಶ್ರೀರಂಗಂ, ತಿರುವಣ್ಣಾಮಲೈ, ಕಾಳಹಸ್ತಿ, ಮಾಚರಲ್ಲ, ಗಂಡಿಕೋಟಿ ಮತ್ತು ತಾಡಪತ್ರಿಯ ದೇವಾಲಯಗಳಲ್ಲಿ ಕಾಣಬಹುದು. ಹಂಪೆಯ ವಿರೂಪಾಕ್ಷ ಮತ್ತು ಲೇಪಾಕ್ಷಿಯ ವೀರಭದ್ರ ದೇವಾಲಯಗಳಲ್ಲಿಯ ಚಿತ್ರಗಳು ಅಷ್ಟೇನು ಚೆನ್ನಗಿ ಉಳಿದು ಕೊಂಡು ಬಂದಿವೆ ಎಂದು ಹೇಳಲಾಗದು. ತಿರುಪರುತ್ತಿಕುನ್ರಮ್ ದ ಜೈನ ಬಸದಿಯಲ್ಲಿ ಕಾಣಸಿಗುವ ತೀರ್ಥಂಕರರ ಜೀವನಕ್ಕೆ ಸಂಬಂಧಿಸಿದ ಚಿತ್ರಗಳೂ ಸ್ವಲ್ಪ ಹಾಳಾಗಿವೆ.

ಹಂಪೆಯ ವಿರೂಪಾಕ್ಷ ದೇವಾಲಯದ ರಂಗಮಂಟಪದ ಭುವನೇಶ್ವರಿ ಮತ್ತು ತೊಲೆಗಳ ಮೇಲೆ ವರ್ಣ ಚಿತ್ರಗಳಿವೆ. ಲೇಪಾಕ್ಷಿಯ ವೀರಭದ್ರ ದೇವಾಲಯ ಸಂಕೀರ್ಣದ ವಿವಿಧ ಭಾಗಗಳಲ್ಲಿ ವರ್ಣಚಿತ್ರಗಳಿವೆ. ಲೇಪಾಕ್ಷಿಯ ದೇವಾಲಯವನ್ನು ಅಚ್ಯುತರಾಯನ ಅಧಿಕಾರಿ ವಿರೂಪಣ್ಣನು ಕಟ್ಟಿಸಿದ್ದನು.[1] ಇಲ್ಲಿಯ ವರ್ಣಚಿತ್ರಗಳು ಅಚ್ಯುತರಾಯನ ಕಾಲದವು ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿಯ ವರ್ಣಚಿತ್ರಗಳು ಲೇಪಾಕ್ಷಿಯ ಅನಂತರದವು.

ಲೇಪಾಕ್ಷಿಯ ವೀರಭದ್ರ ದೇವಾಲಯದಲ್ಲಿ ವರ್ಣಚಿತ್ರಗಳನ್ನು ನಾಟ್ಯಸ ಮಂಟಪ, ಸುಕನಾಸಿ, ವರಾಂಡದಲ್ಲಿ ಮತ್ತು ವಿಷ್ಣುವಿನ ಚಿಕ್ಕಗುಡಿಯಲ್ಲಿ ಕಾಣಬಹುದು. ನಾಟ್ಯ ಮಂಟಪದಲ್ಲಿಯ ಭುವನೇಶ್ವರಿಗಳಲ್ಲಿ ಮಹಾಭಾರತ, ವೀರಭದ್ರನಿಗೆ  ಸಂಬಂಧಿಸಿದ ದೃಶ್ಯಗಳು, ಮನುಚೋಳನ ಕಥೆ, ರಾಮಾಯಣ, ಕಿರುತಾರ್ಜುನೀಯ ಮುಂತಾದ ಘಟನೆಗಳಿಗೆ ಸಂಬಂಧಿಸಿದ ವರ್ಣಚಿತ್ರಗಳಿವೆ. ವರ್ಣಚಿತ್ರವೊಂದರಲ್ಲಿ ದೇವಾಲಯದ ಕೃರ್ತಗಳಾದ ವಿರೂಪಣ್ಣ ಮತ್ತು ಅವನ ಸಹೋದರ ವೀರಣ್ಣರು ಸೇವಕ ಪರಿವಾರ ದೊಡನಿರುವುದನ್ನು ಚಿತ್ರಿಸಲಾಗಿದೆ. ಈ ದೇವಾಲಯದ ಇತರ ಮನಮೆಚ್ಚುವ ವರ್ಣಚಿತ್ರಗಳಲ್ಲಿ ಚಂಡೇಶಾನುಗ್ರಹಮೂರ್ತಿ, ಗಿರಿಜಾ ಕಲ್ಲಾಣ್ಯ, ಅಂಧಕಾಸುರ ಸಂಹಾರಮೂರ್ತಿ, ದಕ್ಷಿನಾಮೂರ್ತಿ, ಲಿಮಗೋದ್ಭವ ಶಿವ, ಭಿಕ್ಷಾಟನ ಶಿವ, ಅರ್ಧನಾರೀಶ್ವರ ಮತ್ತು ತ್ರಿಪುರಾಂತಕ ಮೂರ್ತಿ ಶಿವನ ಚಿತ್ರಗಳು ಸೇರಿವೆ.

ಲೇಪಾಕ್ಷಿಯ ವರ್ಣಚಿತ್ರಗಳಲ್ಲಿ ಹೆಚ್ಚಾಗಿ ಕಿರಿಮಂಜಿ, ಕರಿ, ಬೂದಿಬಣ್ಣ ಮತ್ತು ಹಸಿರು ಬಣ್ಣಗಳನ್ನು ಹೆಚ್ಚಾಗಿ ಬಳಸಲಾಗಿದೆ. ಮನುಷ್ಯ, ದೇವತಾ ಪುರುಷರನ್ನು ಈ ವಣಚಿತ್ರಗಳಲ್ಲಿ ಸಾಮಾನ್ಯವಾಗಿ ನಿಂತಂತೆ ಚಿತ್ರಿಸಲಾಗಿದೆ. ಒಂದು ವರ್ಣಚಿತ್ರವನ್ನು ಮತ್ತೊಂದರಿಂದ ಬೇರ್ಪಡಿಸಲು ಈ ಚಿತ್ರಗಳನ್ನು ಚೌಕಟ್ಟುಗಳಲ್ಲಿ ಚಿತ್ರಿಸಲಾಗಿದೆ.

ಲೇಪಾಕ್ಷಿಯ ಈ ದೇವಾಲಯದಲ್ಲಿ ವೀರಭದ್ರನ ಗರ್ಭಗುಡಿಯ ಮುಂದಿನ ಮಂಟಪದ ಭುವನೇಶ್ವರಿಯಲ್ಲಿ ಸುಮಾರು ೧೫ ಅಡಿ x ೧೪ ಅಡಿ ಪ್ರಮಾಣದ ವೀರಭದ್ರನ ವರ್ಣಚಿತ್ರವಿದೆ. ಇಲ್ಲಿಯ ಈ ವರ್ಣಚಿತ್ರವನ್ನು ಪ್ರಮಾಣದಲ್ಲಿ ದಕ್ಷಿಣ ಭಾರತದ ಯಾವ ವರ್ಣಚಿತ್ರವೂ ಸರಿಗಟ್ಟುವುದಿಲ್ಲ. ಈ ವರ್ಣಚಿತ್ರದ ಕೆಳಭಾಗದಲ್ಲಿ ವಿರೂಪಣ್ಣನು ತನ್ನ ಪತ್ನಿಯೊಂದಿಗೆ ವೀರಭದ್ರನನ್ನೂ ಆರಾದಿಸುತ್ತಿರುವಂತೆ ತೋರಿಸಲಾಗಿದೆ.

ಹಂಪೆಯ ವಿರೂಪಾಕ್ಷ ದೇವಾಲಯದ ರಂಗಮಂಟಪದ ಭುವನೇಶ್ವರ ಮತ್ತು ತೊಲೆಗಳ ಮೇಲೆ ವರ್ಣಚಿತ್ರಗಳಿವೆ. ಶೈವ ಪ್ರಧಾನವಾದ ಈ ಚಿತ್ರಗಳು ವಿವರವಾಗಿ ಚಿತ್ರಿತವಾಗಿವೆ.[2] ಶಿವಪುರಾಣಗಳಿಂದ, ರಾಮಾಯಣ, ಮಹಾಭಾರತದಿಂದ ಆಯ್ದ ದೃಶ್ಯಗಳು ಭುವನೇಶ್ವರಿಯಲ್ಲಿ ಚಿತ್ರಿತವಾಗಿದ್ದರೆ ತೊಲೆಗಳ ಮೇಲೆ ಪುರಾಣ ಪುರುಷರ, ದೇವತೆಗಳ ಮತ್ತು ಸಮಕಾಲೀನ ಜೀವನವನ್ನು ಚಿತ್ರಿಸುವ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಈ ಚಿತ್ರಗಳು ಪ್ರಮಾಣದಲ್ಲಿ ಚಿಕ್ಕವು. ಇಂತಹ ೬೭ ಸಣ್ಣ ಚಿತ್ರಗಳಿವೆ.

ಹಂಪೆಯ ವರ್ಣಚಿತ್ರಗಳಲ್ಲಿ ಎದ್ದುಕಾಣುವ ಲಕ್ಷಣಗಳಿವೆ. ಆಕೃತಿಗಳನ್ನು ಸಾಮಾನ್ಯವಾಗಿ ಪಾರ್ಶ್ವಮುಖಚ್ಛಾಯೆಯಲ್ಲಿ ಚಿತ್ರಿಸಿದ್ದಾರೆ. ಬ್ರಹ್ಮನನ್ನು ಚಿತ್ರಿಸುವಾಗ, ಅವನ ನಾಲ್ಕು ಮುಖಗಳನ್ನು ತೋರಿಸಿದ್ದಾರೆ. ಈವರ್ಣಚಿತ್ರಗಳಲ್ಲಿ ಎದ್ದು ಕಾಣುವ ವರ್ಣಗಳೆಂದರೆ ಹಸಿರು, ಬೂದುಬಣ್ಣ ಮತ್ತು ಟೆಮ್ಯಾಟೋ ಹಣ್ಣಿನ ಕೆಂಪು, ಪ್ರಾಣಿಗಳ ಕಣ್ಣುಗಳನ್ನು ಮನುಷ್ಯರ ಕಣ್ಣಿನಂತೆಯೇ ಚಿತ್ರಿಸಲಾಗಿದೆ. ಪ್ರತಿಯೊಂದು ದೃಶ್ಯವನ್ನು ಚೌಕುಗಳಲ್ಲಿ ಚಿತ್ರಿಸಲಾಗಿದೆ. ಈ ಚೌಕಗಳಿಗೆ ಹೂಬಳ್ಳಿಗಳ ಪಟ್ಟಿ ಇದೆ. ಹೆಣ್ಣಿನ ಚಿತ್ರಗಳಲ್ಲಿ ಮೂಗುತಿ ಪ್ರಾಮುಖ್ಯವಾಗಿ ಎದ್ದು ಕಾಣಿಸುತ್ತಿದೆ.

ಈ ವರ್ಣಚಿತ್ರಗಳಲ್ಲಿ ಗಿರಿಜಾಕಲ್ಯಾಣ, ರಾಮ ಸೀತೆಯರ ವಿವಾಹ, ಮನ್ಮಥ ವಿಜಯ, ತ್ರಿಪುರಸಂಹಾರ, ದ್ರೌಪದೀ ಸ್ವಯಂವರ, ಗೋಪಿಕಾವಸ್ತ್ರಾಪಹರಣ, ಅಷ್ಟದಿಕ್ಪಾಲಕರು, ವಿಷ್ಣುವಿನ ದಶಾವತಾರಗಳು, ತ್ರಿಮೂರ್ತಿಗಳನ್ನು ಚಿತ್ರಿಸಿದ್ದಾರೆ.[3] ಇವುಗಳಲ್ಲಿ ಮನ್ಮಥ ವಿಜಯ, ತ್ರಿಪುರ ಸಂಹಾರ ಮತ್ತು ಗಿರಿಜಾಕಲ್ಯಾಣದ ದೃಶ್ಯಗಳು ಮನಂಬುಗುವಂತೆ ಚಿತ್ರಿತವಾಗಿವೆ. ಇಲ್ಲಿಯ ತ್ರಿಪುರ ಸಂಹಾರದ ವರ್ಣಚಿತ್ರ ಲೇಪಾಕ್ಷಿಯ ತ್ರಿಪುರ ಸಂಹಾರದ ವರ್ಣಚಿತ್ರಕ್ಕಿಂತಲೂ ಭವ್ಯವಾಗಿ ಚಿತ್ರಿತವಾಗಿದೆ. ಶಿವನು ತಾರಕಾಸುರನ ಮಕ್ಕಳಾದ ಕಮಾಕ್ಷ, ಮಕರಾಕ್ಷ ಮತ್ತು ವಿದ್ಯುನ್ಮಾಲಿಯರ ತ್ರಿಪುರಗಳನ್ನು ಸಂಹರಿಸುವ ದೃಶ್ಯದ ಸಂಯೋಜನೆ ಚಿತ್ರಕಾರನ ನಿರೂಪಣಾಶಕ್ತಿಗೆ ಒರೆಯಿಟ್ಟಂತಿದೆ. ಶಿವನ ನಿಂತಭಂಗಿ ಅಸುರರನ್ನು ದಮನಮಾಡುವ ಛಲವನ್ನು ಎತ್ತಿತೋರಿಸುತ್ತದೆ. ಇಲ್ಲಿ ಶಿವನು ಅಜೇಯ ಯೋಧ.

ಹಂಪಿಯ ಈ ವರ್ಣಚಿತ್ರಗಳು ಸಿ.ಟಿ.ಎಂ. ಕೊಟ್ರಯ್ಯನವರ ಪ್ರಕಾರ ಕ್ರಿ.ಶ. ೧೫೦೯ರ ನಂತರ ಮತ್ತು ಕ್ರಿ.ಶ. ೧೫೬೫ರ ಒಳಗೆ ಚಿತ್ರಿತವಾಗಿವೆ.[4] ಏಕೆಂದರೆ ವರ್ಣಚಿತ್ರಗಳಿರುವ ರಂಗಮಂಟಪವನ್ನು ಕೃಷ್ಣದೇವರಾಯನು ಕ್ರಿ.ಶ. ೧೫೧೦ರಲ್ಲಿ ಕಟ್ಟಿಸಿದನು. ಮತ್ತು ಕ್ರಿ.ಶ. ೧೫೬೫ರಲ್ಲಿ ನಡೆದ ಕದನದಲ್ಲಿ ವಿಜಯನಗರದ ಪರಾಭವವುಂಟಾಯಿತು. ಅಂದರೆ ಈ ವರ್ಣಚಿತ್ರಗಳು ಕ್ರಿ.ಶ. ೧೫೬೫ರ ಮುಂಚೆ ಮೂಡಿರಬೇಕೆಂದು ಅವರ ಅಭಿಪ್ರಾಯ. ಸಿ. ಶಿವರಾಮಮೂರ್ತಿಯವರು ಈ ವರ್ಣಚಿತ್ರಗಳನ್ನು ಲೇಪಾಕ್ಷಿಯ ವರ್ಣಚಿತ್ರಗಳಿಗಿಂತಲೂ ಹಳೆಯವೆನ್ನುವ ಅಭಿಪ್ರಾಯ ಮೂಡಿಸುತ್ತಾರೆ.[5] ಈ ವರ್ಣಚಿತ್ರಗಳು ಯಾವ ಕಾಲಕ್ಕೆ ಸೇರಿದವುಗಳೆನ್ನುವುದನ್ನು ಇಲ್ಲಿ ವಿವೇಚಿಸುವುದು ಒಳಿತು.

ಹಂಪೆಯ ವರ್ಣಚಿತ್ರಗಳಿಗೂ ಮತ್ತು ಲೇಪಾಕ್ಷಿಯ ವರ್ಣಚಿತ್ರಗಳಿಗೂ ಸಾಕಷ್ಟು ಭೇದಗಳಿವೆ. ಶೈಲಿಯಲ್ಲಿ, ಸಂಯೋಜನೆಯಲ್ಲಿ ಭಿನ್ನವಾಗಿವೆ. ಲೇಪಾಕ್ಷಿಯ ವರ್ಣಚಿತ್ರಗಳು ಚೌಕಗಳಲ್ಲಿವೆ. ಅಂತೆಯೇ ಹಂಪೆಯ ವರ್ಣಚಿತ್ರಗಳೂ. ಆದರೆ ಹಂಪೆಯ ವರ್ಣಚಿತ್ರಗಳು ಚೌಕಗಳಲ್ಲಿದ್ದರೂ ಇಲ್ಲಿ ಕೆಲವು ಚಿತ್ರಗಳ ಮೇಲ್ಭಾಗದಲ್ಲಿ ತೋರಣದಂತಹ ಅಲಂಕರಣೆ ಇದೆ. ಇಂತಹ ತೋರಣದಂತಹ ಅಲಂಕರಣೆ ಲೇಪಾಕ್ಷಿಯಲ್ಲಿ ಕಾಣಸಿಗುವುದಿಲ್ಲ. ಇಂತಹ ತೋರಣ ೧೭ನೇ ಶತಮಾನದ ವರ್ಣಚಿತ್ರಗಳಲ್ಲಿ ಮೊದಲು ಕಾಣಸಿಗುತ್ತದೆ. ಹಂಪೆಯ ವರ್ಣಚಿತ್ರಗಳಲ್ಲಿ ತೋರಣದ ಮೇಲ್ಗಡೆ ಮೂಲೆಗಳಲ್ಲಿ ಗಂಡಭೇರುಂಡ, ಗಿಳಿ ಮುಂತಾದ ಪಕ್ಷಿಗಳ ಚಿತ್ರಗಳಿವೆ. ಅಲ್ಲದೆ ಅನೇಕ ವರ್ಣಚಿತ್ರಗಳಲ್ಲಿ ದೇವಾಲಯಗಳ ಚಿತ್ರಗಳು ಮತ್ತು ಈ ದೇವಾಲಯಗಳ ಎರಡೂ ಬದಿಗಳಲ್ಲಿ ತೆಂಗಿನಮರದ ಚಿತ್ರಗಳನ್ನು ಬಿಡಿಸಿದ್ದಾರೆ. ಈ  ರೀತಿದ ವರ್ಣಚಿತ್ರದ ಅಂಚಿನಲ್ಲಿ ದೇವಾಲಯ-ಶಿಖರಗಳು ಲೇಪಾಕ್ಷಿಯಲ್ಲಿ ಕಾಣಸಿಗುವುದಿಲ್ಲ. ಹಾಗೆಯೇ ಹಕ್ಕಿಗಳ, ತೆಂಗಿನ ಜಮರಗಳ ಚಿತ್ರಗಳೂ ಕೂಡ. ಈ ರೀತಿ ದೇವಾಲಯಗಳನ್ನು, ತೆಂಗಿನ ಮರಗಳನ್ನು ಚಿತ್ರಿಸುವ ಸಂಪ್ರದಾಯ ೧೬ನೇ ಶತಮಾನದಲ್ಲಿರಲಿಲ್ಲ. ಇಲ್ಲಿ ಒಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿರುವ ಕರೂನುಲು ಜಿಲ್ಲೆಯ ಆಲೂರು ತಾಲ್ಲೂಕಿನ ಹೊಳಲಗುಂದದಲ್ಲಿರುವ ಸಿದ್ಧೇಶ್ವರ ದೇವಾಲಯದಲ್ಲಿರುವ ವರ್ಣಚಿತ್ರಗಳನ್ನು ವಿವೇಚಿಸುವುದು ಉಪಯುಕ್ತ. ಇಲ್ಲಿಯ ವರ್ಣಚಿತ್ರಗಳು ೧೫ನೇ ಶತಮಾನದ ಅಂತ್ಯ ಭಾಗದಲ್ಲಿ ಇಲ್ಲವೇ ೧೯ನೇ ಶತಮಾನದಲ್ಲಿ ಬರೆದವುಗಳು.[6] ಇಲ್ಲಿಯ ಸಮುದ್ರಮಂಥನ, ಉಷಾ ಪರಿಣಯ, ವೀರೇಶ ವಿಜಯ, ಗಿರಿಜಾ- ಕಲ್ಯಾಣ, ತಾರಕ ಸಂಹಾರ, ತ್ರಿಪಯುರ ಸಂಹಾರ, ಸೀತಾ ಸ್ವಯಂವರ ಮುಂತಾದ ವರ್ಣಚಿತ್ರಗಳಲ್ಲಿ ತೋರಣಗಳ, ಪಕ್ಷಿಗಳ ಮತ್ತು ದೇವಾಲಯ, ಶಿಖರಗಳ ಬಳಕೆ ಸಾಮಾನ್ಯವಾಗಿದೆ.[7] ಇವು ಹಂಪೆಯ ವರ್ಣಚಿತ್ರಗಳಿಂದ ಪ್ರಭಾವಿತವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ, ಈ ಎಲ್ಲಾ ಅಲಂಕಾರಿಕ ಚಿಹ್ನೆಗಳು ವಿಜಯನಗರ ಕಾಲದ ಅಂದರೆ ಕ್ರಿ.ಶ. ೧೫೬೫ರವರೆಗೆ  ಚಿತ್ರಿತ ವರ್ಣಚಿತ್ರಗಳಲ್ಲಿ ಕಾಣಬರುವುದಿಲ್ಲ. ಹಂಪೆಯ ವರ್ಣಚಿತ್ರಗಳು ನಿಶ್ಚಯವಾಗಿಯೂ ಕ್ರಿ.ಶ. ೧೫೬೫ರ ನಂತರ ಬಹುಶಃ ೧೭ನೇ ಶತಮಾನದ ಮಧ್ಯಭಾಗದಲ್ಲಿ ಚಿತ್ರಿತವಾದಂತೆ ಕಂಡುಬರುತ್ತವೆ.

ಆಕರ
ವಿಜಯಕಲ್ಯಾಣ, ೧೯೮೮, ಸಂಪಾದಕ : ಸಂ.ಶಿ. ಭೂಸನೂರಮಠ, ಮಹಾಕವಿ ಹರಿಹರ ಸ್ಮಾರಕ ಸಂಶೋಧನ ಕೇಂದ್ರ, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿಮಠ, ಹಂಪಿ, ಪು. ೨೧೧-೨೧೪.

 

[1] C. Shivaramamurthi, Vijayanagara Paintings, New Delhi, 1985, p. 31.

[2] S. Rajasekhara, Master pieces of Vijayanagara Art Bombay, 1983,  p. 18-20.

[3] C. Shivaramamurthy, Opcit.pls. V to VIII.

[4] ಸಿ.ಟಿ.ಎಂ. ಕೊಟ್ರಯ್ಯ, “ಹಂಪೆ ವಿರೂಪಾಕ್ಷ ದೇವಾಲಯದ ವರ್ಣಚಿತ್ರಗಳು”, ಹೇಮಕೂಟ,

[5] C. Shivaramamurthy, Opcit.p. 29-31.

[6] S. Rajasekhara, Holalagundi Paintings, 1982, p, 3-4.

[7] Ibid, pls. 8, 14, 16, 20, 23, 24, 26: p. 4.