ಪ್ರಸ್ತಾವನೆ

ದಕ್ಷಿಣ ಭಾರತದ ಕಲಾ ಇತಿಹಾಸದಲ್ಲಿ ವಿಜಯನಗರ ಕಾಲದ ಕಲೆಗೆ ಒಂದು ವಿಶಿಷ್ಟ ಸ್ಥಾನವಿದೆ. ಆ ಕಾಲದಲ್ಲಿನ ಅಗಾಧವಾದ ಕಲಾ ಚಟುವಟಿಕೆಗಳು ವಿಜಯನಗರ ಕಲೆಯ ವಿವಿಧ ಹಂತಗಳನ್ನು ಪ್ರಸ್ತುತಪಡಿಸುತ್ತವೆ. ಚಾಲುಕ್ಯ, ಹೊಯ್ಸಳ ಕಲಾಶೈಲಿಯ ಮತ್ತು ವಾಸ್ತುಶೈಲಿಯ ಹಿನ್ನೆಲಯಿಂದ ಪ್ರಾರಂಭವಾದ  ಚಟುವಟಿಕೆಗಳು ಸಮಕಾಲೀನ ಇಸ್ಲಾಮಿಕ್ ಕಲಾಶೈಲಿಯನ್ನು ಅವಶ್ಯವಿದ್ದಲ್ಲಿ ಉಪಯೋಗಿಸಿಕೊಂಡು ವಿಜಯನಗರದ್ದೇ ಎನ್ನುವಂತಹ ಒಂದು ವಿಶಿಷ್ಟವಾದ ಶೈಲಿಯಲ್ಲಿ ಅಭಿವೃದ್ಧಿಪಡಿಸಿದವು.

ವಿಜಯನಗರ ಕಾಲದಲ್ಲಿ ರಾಜ್ಯವ್ಯಾಪ್ತಿಯಿರುವಷ್ಟು ಉದ್ದಗಲಕ್ಕೂ ಕಲಾ ಚಟುವಟಿಕೆಗಳು ನಡೆದೇ ಇದ್ದವು. ವಿಜಯನಗರವನ್ನು ಆಳಿದ ವಿಭಿನ್ನ ರಾಜಮನೆತನಗಳು ದೇವಾಲಯಗಳ, ಶಿಲ್ಪಗಳ, ಅರಮನೆಗಳ, ಕೋಟೆ ಕೊತ್ತಲಗಳ ಮತ್ತು ಕೆರೆ ಬಾವಿಗಳ ನಿರ್ಮಾಣಕ್ಕೆ ಪೋಷಕವಾಗಿದ್ದುದು ದಾಖಲೆಗಳಿಂದ ತಿಳಿದುಬರುತ್ತದೆ. ಆ ಕಾಲದ ಕಲಾವಿದ ಕಟ್ಟಡಗಳ ನಿರ್ಮಾಣದ ತೀವ್ರತೆ ಮತ್ತು ಇರುವ ಕಾಲಾವಕಾಶದಲ್ಲಿ ಇವುಗಳನ್ನು ‌ಸಂಪೂರ್ಣ ಗೊಳಿಸುವುದಕ್ಕಾಗಿ ಹೊಸ ಹೊಸ ಮಾಧ್ಯಮಗಳನ್ನು ರೂಢಿಸಿಕೊಳ್ಳಬೇಕಾಯಿತು. ಇದಕ್ಕಾಗಿ ಶಿಖರ, ಗೋಪುರಗಳ ನಿರ್ಮಾಣಗಳಲ್ಲಿ ಹೊಸ ಮಾಧ್ಯಮವನ್ನು ಪ್ರಯೋಗಿಸಲಾಯಿತು. ವಿಜಯನಗರ ದೇವಾಲಯಗಳ ಮುಖ್ಯ ಆಕರ್ಷಣೆಗಳಾದ ಮಹಾದ್ವಾರದ ಮೇಲಿನ ಆಕಾಶದೆತ್ತರಕ್ಕೆ ಚಾಚಿದೊಂಡಿರುವ ಗೋಪುರ, ದೇವಸ್ಥಾನದ ಕಲ್ಯಾಣಮಂಟಪಗಳು ಮತ್ತು ಮುಖಮಂಟಪಗಳು ಮೇಲಿನ ಪ್ರಸ್ತರಗಳ ಸಾಲು ಹೀಗೆ ದೇವಾಲಯದ ಆಲಂಕರಣಕ್ಕೆ ಕಲ್ಲಿನಲ್ಲಿ ಕೆತ್ತಲು ಬೇಕಾಗುವ ಕಾಲಾವಕಾಶವನ್ನು ಗಮನಿಸಿದರೆ ಪ್ರಾಯಶಃ ಯೋಚಿಸಲು ಸಾಧ್ಯವಾಗದಷ್ಟು ಸಮಯಬೇಕಾಗುತ್ತದೆ. ಅದಕ್ಕೆಂದೇ ವಿಜಯನಗರ ಕಾಲದಲ್ಲಿ ಕಲಾವಿದ ಅಂದು ಪ್ರಚಲಿತದಲ್ಲಿದ್ದ ಹೊಸ ಮಾಧ್ಯಮವನ್ನು ತನ್ನದಾಗಿಸಿಕೊಂಡಿರಬೇಕು. ಈ ಹೊಸ ಮಾಧ್ಯಮವೇ ಪ್ರಸ್ತುತ ಚರ್ಚೆಯಲ್ಲಿರುವ ಗಾರೆ. ಗಾರೆ ಕಾಲ ಮಾಧ್ಯಮವಾಗಿ ವಿಜಯನಗರ ಕಾಲದಲ್ಲಿ ಒಮ್ಮಿಂದೊಮ್ಮೆಲೆ ಉಪಯೋಗವಾಗಿಲ್ಲ. ಶಿಲೆ, ಕಾಷ್ಠಗಳಿಗಿರುವಂತೆ ಇದಕ್ಕೂ ದೀರ್ಘವಾದ ಇತಿಹಾಸವಿದೆ. ಅದೇನೇ ಇರಲಿ ವಿಜಯನಗರ ಕಾಲದಲ್ಲಿ ಗಾರೆ ಶಿಲಯಷ್ಟೇ  ಪ್ರಮುಖವಾದ ಮಾಧ್ಯಮವಾಯಿತು. ಯಾವುದೇ ದೇವಾಲಯದ ನಿರ್ಮಾಣವಿರಲಿ, ಮಂಟಪ, ಪುಷ್ಕರಿಣಿಗಳಾಗಲೀ ಅಥವಾ ಇನ್ನಾವುದೋ ಖಾಸಗಿ ಕಟ್ಟಡದ ನಿರ್ಮಾಣವಿರಲಿ ಇಟ್ಟಿಗೆ ಮತ್ತು ಗಾರೆ ಅಲ್ಲಿ ಉಪಯೋಗವಾಗಿರಲೇ ಬೇಕು.

ಗಾರೆಯೊಂದಿಗೆ ಇಟ್ಟಿಗೆ ಕೂಡ ವಿಜಯನಗರ ಕಾಲದ ದೇವಾಲಯಗಳ ಅಲಂಕರಣಗಳಲ್ಲಿ ಅಷ್ಟೇ ಮುಖ್ಯವಾದ ವಸ್ತ್ರವಾಗಿದೆ. ಗೋಪುರ, ಶಿಖರ ಮತ್ತು ಕಿರು ವಿಮಾನಗಳ ನಿಮಾಣದಲ್ಲಿ ಮತ್ತು ಆಕೃತಿಗಳು ವಿಭಿನ್ನ ವಿನ್ಯಾಸಗಳ ಹಾಗೂ ಯಾವುದೇ ಸೂಕ್ಷ್ಮವಾಗದ ಅಲಂಕಾರಿಕ ವಸ್ತುಗಳ ರಚನೆಯಲ್ಲಿ ಗಾರೆ ಮತ್ತು ಇಟ್ಟಿಗೆಗೆ ಸಮನಾಗಿ ಉಪಯೋಗವಾಗಿವೆ.

ಗಾರೆಯ ಕಲಾ ಹಿನ್ನೆಲೆ

ಗಾರೆಯು ಕಲಾ ಮಾಧ್ಯಮವಾಗಿ ಬೆಳೆದುದನ್ನು ಸ್ಥೂಲವಾಗಿ ಗಮನಿಸಿದರೆ ಅದರ ಕಲಾ ಇತಿಹಾಸ ನಮ್ಮನ್ನು ಪ್ರಾಚೀನ ಕಾಲದತ್ತ ಕೊಂಡೊಯ್ಯುತ್ತದೆ. ಗಾರೆಯನ್ನು ಪ್ರಾಚೀನ ನಾಗರಿಕತೆಗಳಲ್ಲಿ ಉಪಯೋಗಿಸಿರುವುದನ್ನು ಈಜಿಪ್ತ, ಸುಮೇರಿಯನ್ ಮತ್ತು ಸಿಂಧೂ ನದಿ ಕೊಳ್ಳದ ಹರಪ್ಪ, ಮೆಹೆಂಜೋದಾರೋಗಳ ಉದಾಹರಣೆಗಳಿಂದ ಸ್ಪಷ್ಟಪಡಿಸಬಹುದು. ಈಜಿಪ್ತಿನ ಪಿರಮಿಡ್ಡುಗಳಲ್ಲಿನ ಒಳಕೋಣೆಗಳಲ್ಲಿ ಕಂಡುಬರುವ ಭಿತ್ತಿಚಿತ್ರಗಳ ಹಿನ್ನೆಲೆಯಾಗಿ ಗಾರೆ ಉಪಯೋಗವಾಗಿದೆ. ಸುಮೇಯನ್ ಸಂಸ್ಕೃತಿಯಲ್ಲಿ ಜಿಗುರಾಟ್‌ಗಳ ನಿರ್ಮಾಣದಲ್ಲಿ ಮತ್ತು ಬಿಡಿ ಆಕೃತಿಗಳ ನಿರ್ಮಾಣದಲ್ಲಿ ಗಾರೆ ಉಪಯೋಗವಾಗಿದೆ. ಗ್ರೀಕೋ ರೋಮನ್ ನಾಗರಿಕತೆಗಳಲ್ಲಿ ಕಟ್ಟಡಗಳ ನಿರ್ಮಾಣದಲ್ಲಿ ಮತ್ತು ಕಲಾತ್ಮಕವಾದ ಶಿಲ್ಪಾಕೃತಿಗಳ ರಚನೆಗಾಗಿ ಗಾರೆ ಮಾಧ್ಯಮವಾಗಿದೆ. ಗಾರೆಗೆ ಸ್ವತಂತ್ರವಾದ ಕಲಾಮಾಧ್ಯಮದ ಸ್ಥಾನ ದೊರೆತಿದ್ದು ಗ್ರೀಕೋ ರೋಮನ್ ಕಾಲದಲ್ಲಿಯೇ ಎನ್ನಬಹುದು.

ಇತ್ತ ಭಾರತದಲ್ಲಿ ಕುಷಾಣರ ಕಾಲದಲ್ಲಿ ಗಾಂಧಾರ ಶೈಲಿಯಲ್ಲಿ ರಚಿಸಲ್ಪಟ್ಟ ಹಲವಾರು ಬಿಡಿ ಆಕೃತಿಗಳು ಮತ್ತು ಕಥಾನಕ ಆಕೃತಿಗಳು ಕಂಡುಬರುತ್ತವೆ. ಇವು ಮುಖ್ಯವಾಗಿ ಬೌದ್ಧಧರ್ಮಕ್ಕೆ ಸೇರಿವೆ.[1] ಶಾತವಾಹನರ ಕಾಲದ ಲಯಣಗಳಲ್ಲಿ ಹಾಗೂ ಗುಪ್ತ, ವಾಕಾಟಕ ರಾಜ ಮನೆತನದವರು ನಿರ್ಮಿಸಿರುವ ಬೌದ್ಧ ಚೈತ್ಯವಿಹಾರಗಳಲ್ಲಿನ ಭಿತ್ತಿಚಿತ್ರಗಳ ಹಿನ್ನೆಲೆಯ ಲೇಪನವಾಗಿ ಗಾರೆಯನ್ನು ಉಪಯೋಗಿಸಿದೆ. ಅಲ್ಲದೆ ಐಹೊಳೆಯಲ್ಲಿನ ಚಾಲುಕ್ಯ ಪೂರ್ವಕಾಲದ ಇಟ್ಟಿಗೆಯ ಕಟ್ಟಡವನ್ನು ಗಾರೆಯನ್ನು ಉಪಯೋಗಿಸಿಯೆ ಕಟ್ಟಿದೆ. ನಂತರದ ಕಾಲದಲ್ಲಿ ಗಾರೆಯ ಉಪಯೋಗವಾಗಿದ್ದರೂ ಅದು ಸ್ವಲ್ಪ ವಿರಳವೆಂದೆ ಹೇಳಬೇಕು. ಏಕೆಂದರೆ ದೇಶದ ಉದ್ದಗಲಕ್ಕೂ ಅಂದು ಪ್ರಭಾವಕಾರಿಯಾಗಿ ಪ್ರಚಲಿತದಲ್ಲಿದ್ದ ಭವ್ಯವಾದ ಲಯಣಗಳ ಕೆತ್ತನೆ, ದೇಗುಲಗಳ ನಿರ್ಮಾಣ, ಶಿಲ್ಪಗಳ ಕೆತ್ತನೆ ಎಲ್ಲವೂ ಶಿಲೆಯನ್ನು ಆಧರಿಸಿದವುಗಳೆ. ಹೀಗಾಗಿ ಅಂದು ಶಿಲೆ ಪ್ರಮುಖ ಮಾಧ್ಯಮವಾಯಿತು. ಆದರೆ, ಗಾರೆಯ ವಿಶೇಷವಾದ ಸ್ಥಾನಮಾನ ಮತ್ತೊಮ್ಮೆ ದೊರೆತದ್ದು ೧೩-೧೪ನೇ ಶತಮಾನದಲ್ಲಿ ಅನ್ನಬಹುದು.

ಗಾರೆಯ ಉಪಯೋಗ ಪ್ರಾಯಶಃ ಅದರ ತಾಂತ್ರಿಕ ಸರಳತೆಯನ್ನು ಅವಲಂಬಿಸಿದೆ. ಅದಕ್ಕಾಗಿಯೇ ಪರ್ಶಿಯಾದಲ್ಲಿ ಇಸ್ಲಾಮಿಕ್ ದೊರೆಗಳ ಭವ್ಯವಾದ ಮಸೀದಿಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಪ್ರಾಯಶಃ ಅದೇ ಪರಂಪರೆ ಭಾರತದಲ್ಲಿ ಇಸ್ಲಾಮಿಕ್ ಧರ್ಮದ ಅರಸರು ರಾಜ್ಯಭಾರ ಪ್ರಾರಂಭಿಸಿದ ಮೇಲೆ ಮುಮದುವರೆದುಕೊಂಡು ಬಂದಿತೆಂದು ಹೇಳಬಹುದು. ಮಹಾದ್ವಾರಗಳ ಅಲಂಕರಣ, ಮಸೀದಿಗಳ ಒಳಮಾಳಿಗೆಗಳ, ಗೋಡೆಗಳ ಅಲಂಕರಣ, ಹೀಗೆ ಪ್ರಾರಂಭವಾದ ಗಾರೆಯ ಉಪಯೋಗ ಕಾಲ ಕ್ರಮೇಣ ವಿಜಯನಗರ ಕಾಲದಲ್ಲಿ ‘ಶಿಲೆ’ಗೆ ಪರಾಯವಾಗಿ ಇಟ್ಟಿಗೆಯೊಂದಿಗೆ ಪ್ರಮುಖ ಮಾಧ್ಯಮವಾಯಿತು.

ಗಾರೆಯ ತಾಂತ್ರಿಕ ಬೆಳವಣಿಗೆ

ಗಾರೆಯನ್ನು ಅಷ್ಟು ಅಗಾಧ ರೀತಿಯಲ್ಲಿ ಬಳಸಲು ಮುಖ್ಯ ಕಾರಣ ಅದರ ಸರಳ ತಾಂತ್ರಿಕತೆ. ನವೀನ ಯುಗದ ಸಿಮೆಂಟಿನಷ್ಟೇ ಗಟ್ಟಿಯಾದ ಈ ಮಾಧ್ಯಮ ಬಳಸಲು ಸುಲಭವೂ ಆಗಿದೆ. ಸಿಮೆಂಟ್ ನೀರಿನೊಂದಿಗೆ ಬೆರೆತೊಡನೆ ಕೆಲವೇ ಗಂಟೆಗಳಲ್ಲಿ ಗಟ್ಟಿಯಾಗಿ ಬಿಡುತ್ತದೆ. ಆದರೆ ಗಾರೆಯಲ್ಲಿ ತಯಾರಿಸಿ ಕೆಲವು ದಿನಗಳವರೆಗೆ ಹಾಗೆ ಇಡಬಹುದು. ಗಾರೆಯ ಈ ಅನುಕೂಲಕರ ಮಿಶ್ರಣ ಅಂದಿನ ವಿಜಯನಗರ ಕಲಾವಿದರಿಗೆ ಅತ್ಯಂತ ಆಕರ್ಷಕವಾದ ಮಾಧ್ಯಮವಾಗಿ ಕಂಡಿರಬೇಕು.

ಗಾರೆಯನ್ನು ಮುಖ್ಯವಾಗಿ ಸುಣ್ಣ, ಮರಳು, ನೀರು ಮತ್ತು ಕೆಲವು ಅಂಟು ದ್ರಾವಣಗಳನ್ನು ಸೇರಿಸಿ ತಯಾರಿಸುತ್ತಾರೆ. ಉಪಯೋಗವನ್ನು ಅವಲಂಬಿಸಿ ಮತ್ತು ರಚಿಸಬೇಕಾದ ಆಕೃತಿಯ ಸೂಕ್ಷ್ಮತೆ, ಅಲಂಕರಣವನ್ನು ಗಮನದಲ್ಲಿರಿಸಿ ಗಾರೆಯ ಸರಿಯಾದ ಗುಣಮಟ್ಟದ ತಯಾರಿಕೆ ನಡೆಯುತ್ತದೆ. ಆಕೃತಿಗಳು ಗಾರೆಯ ಗುಣಮಟ್ಟವನ್ನು ಅವಲಂಬಿಸಿವೆ ಎಂಬುದನ್ನು ಹಲವಾರು ಉದಾಹರಣೇಗಳಿಂದ ರುಜುವಾತುಪಡಿಸಬಹುದು. ಗಾರೆಯಲ್ಲಿ ಸುಣ್ಣದ ಗುಣಮಟ್ಟ ಅತೀ ಮುಖ್ಯ. ಸೋಸಿ ತೆಗೆದ ಕಪ್ಪೆಚಿಪ್ಪಿನ ಸುಣ್ಣ, ಕಲ್ಲು ಸುಣ್ಣು ಅಥವಾ ಸುಣ್ಣ ಬುರಳಿ ಇವು ಮುಖ್ಯ ವಸ್ತುಗಳು. ಇದರೊಂದಿಗೆ ಉತ್ತಮ ಮರಳು, ಲೋಳೆಸರ, ಬಿಲ್ವಪತ್ರೆ ಕಾಯಿ, ಬೆಲ್ಲ ಅಥವಾ ಕೆಲವು ಸಲ ಮೊಟ್ಟೆಯೂ ಕೂಡಾ ಅಂಟು ದ್ರಾವಣದ ರೂಪದಲ್ಲಿ ಉಪಯೋಗವಾಗುತ್ತವೆ. ಎಲ್ಲವನ್ನು ಹದಕ್ಕೆ ತಕ್ಕಂತೆ ಹಾಕಿ ಚೆನ್ನಾಗಿ ರುಬ್ಬಬೇಕು. ರುಬ್ಬಿದ ನಂತರ ಬೆಣ್ಣೆಯ ಹಾಗೆ ಹದಕ್ಕೆ ಬಂದಾಗ ಮಾತ್ರ ಯಾವುದೇ ಆಕೃತಿಯ ರಚನೆ ಇರಲಿ ಅತ್ಯಂತ ನೈಜವಾಗಿ ಮೂಡುತ್ತದೆ. ಅಲ್ಲದೆ, ಉಪಯೋಗಕ್ಕೂ ಸಹಕಾರಿಯಾಗುತ್ತದೆ. ಪ್ರಾಚೀನ ಕಾಲದಲ್ಲಿಯೇ ವಿವಿಧವರ್ಗದ ಗುಣಮಟ್ಟದ ಗಾರೆ ಗ್ರೀಕ್ ಮತ್ತು ಇಟಲಿ ದೇಶಗಳ ಕಲೆಯಲ್ಲಿ ಉಪಯೋಗವಾಗಿರುವುದು ಕಂಡು ಬರುತ್ತದೆ. ಅಂತಹದೇ ಪ್ರಯತ್ನ ವಿಜಯನಗರ ಕಾಲದ ವಿವಿಧ ರಚನೆಗಳಲ್ಲಿ ಆಗಿರುವುದನ್ನು ಹಲವಾರು ಉದಾಹರಣೆಗಳಿಂದ ಗಮನಿಸಬಹುದು.

ವಿಜಯನಗರ ಕಾಲದಲ್ಲಿ ಗಾರೆಯು ಕಲೆಯ ಒಂದುಸ ಸಂಪೂರ್ಣವಾದ ಕಲಾಮಾಧ್ಯಮವಾಗಿ ಬೆಳೆದಿತ್ತು ಎನ್ನುವುದನ್ನು ನಾವು ಇಂದಿಗೂ ಉಳಿದಿರುವ ಆ ಕಾಲದ ದೇವಾಲಯಗಳಿಂದ ಮತ್ತು ವಿವಿಧ ಕಟ್ಟಡಗಳಿಮದ ತಿಳಿಯಬಹುದು. ವಿಜಯನಗರ ರಾಜಧಾನಿ ಹಂಪೆಯಲ್ಲಿನ ಎಲ್ಲಾ ದೇವಾಲಯಗಳಲ್ಲಿ ಒಂದಲ್ಲ ಒಂದು ವಿಧದಲ್ಲಿ ಗಾರೆಯ ಉಪಯೋಗವಿದೆ. ವಿಜಯನಗರದ ರಾಜ್ಯವ್ಯಾಪ್ತಿಯುದ್ದಕ್ಕೂ ಹರಡಿಕೊಂಡಿರುವ ಮಂಟಪಗಳಿರಲಿ ಅಥವಾ ಯಾವುದೇ ಸಾರ್ವಜನಿಕ ಕಟ್ಟಡಗಳಿರಲಿ ಗಾರೆ ಮಾಧ್ಯಮವಾಗಿ ಉಪಯೋಗವಾಗಿದೆ. ಅಂದರೆ ಗಾರೆಯ ತಯಾರಿಕೆ, ಅದನ್ನು ಉಪಯೋಗಿಸಲು ಸಿದ್ಧವಾಗಿರುತ್ತಿದ್ದ ಕಲಾವಿದರು, ಗಾರೆ ಕೆಲಸದವರು ಎಲ್ಲವನ್ನು ಲೆಕ್ಕ ಹಾಕಿದರೆ ಯೋಚನೆಗೂ ಮೀರಿದ ಬೆಳವಣಿಗೆ ಕಾಣುತ್ತದೆ. ಶಿಲೆಯನ್ನು ಬದಿಗೆ ತಳ್ಳಿ ತನ್ನನ್ನು ಮುಖ್ಯ ಮಾಧ್ಯಮವನ್ನಾಗಿ ಸ್ಥಾಪಿಸಿಕೊಳ್ಳುವಲ್ಲಿ ಗಾರೆ ಯಶಸ್ವಿಯಾಗಿದೆ ಅಥವಾ ಶಿಲೆಗೆ ಸಮಾನಾಂತರವಾದ ಸ್ಥಾನವನ್ನು ಅದು ಪಡೆದಿದೆ ಎನ್ನಬಹುದು. ದೇವಸ್ಥಾನದ ಮುಖ್ಯ ಆಕರ್ಷಣೆಗಳಾದ ಶಿಖರ, ಗೋಪುರ, ವಿಮಾನಗಳ ಗೂಡಿನ ಸಲು ಹಾಗು ಇನ್ನಿತರ ಅಲಂಕರಣಗಳಲ್ಲಿ ಆಕೃತಿಗಳು ಮುಖ್ಯವಾಗಿ ಕಂಡುಬರುತ್ತವೆ. ಸಾಮಾನ್ಯವಾಗಿ ಆಯಾ ದೇವಸ್ಥಾನಕ್ಕೆ ಸಂಬಂಧಪಟ್ಟಂತಹ ಅಂಥೀಯ ಆಕೃತಿಗಳು ಕಾಣಿಸಿಕೊಂಡಿವೆ. ವೈಷ್ಣವ, ಶೈವ ಪಂಥಕ್ಕೆ ಸೇರಿಸ ಆಕೃತಿಗಳು ಒಟ್ಟೊಟ್ಟಿಗೆ ಕಾಣಿಸಿರುವ ಉದಾಹರಣೆಗಳು ಇಲ್ಲದಿಲ್ಲ.

ವಿಜಯನಗರ ಪ್ರಪ್ರಥಮ ರಾಜ್ಯಮನೆತನದ ಅರಸರ ಕಾಲದಲ್ಲಿ ನಿರ್ಮಿಸಿದ ದೇವಾಲಯಗಳಲ್ಲಿ ಗಾರೆ ಕೆಲಸ ಇದ್ದಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲಾ.[2] ನಂತರದ ಕಾಲದಲ್ಲೂ ಹಲವಾರು ಹೊಸ ಜೋಡಣೆಗಳೂ ಆಗಿರುವ ಸಾಧ್ಯತೆ ಇದೆ. ಗಾರೆಯು ಇದ್ದಕ್ಕಿದ್ದಂತೆ ಅಷ್ಟು, ವೇಗವಾಗಿ ಮತ್ತು ಶಿಲೆಗೆ ಪರ್ಯಯವಾಗಿ ಉಪಯೋಗಗೋಳ್ಳಲು ಕಾರಣಗಳು ಹಲವಾರು ಇರಬಹುದು. ಸಮರೋಪಾದಿಯಲ್ಲಿ ನಿರ್ಮಾಣಗೊಂಡ ವಿಶಾಲ ದೇವಾಲಯಗಳು ಮೂಲತಃ ಮಳಿಗಿಯವರೆಗೂ ಗಟ್ಟಿಯಾಗಿ ಕಣಶಿಲೆಯಲ್ಲಿ (ಗ್ರಾನೈಟ್)ಯೇ ನಿರ್ಮಾಣವಾದವು. ಕಂಬಗಳ ಅಲಂಕರಣ, ಹೊರ ಭಿತ್ತಿಗಳ ಅಲಂಕರಣ ಹೀಗೆ ವಿವಿಧ ಆಕೃತಿಗಳನ್ನು ಕೆತ್ತುವ ಕೆಲಸಕ್ಕೆ ಸಾಮಾನ್ಯವಾಗಿ ಹೆಚ್ಚು ಸಮಯ ಬೇಕಾಗುತ್ತಿತ್ತು. ಬಹುಶಃ ತಾಂತ್ರಿಕವಾಗಿ ಇದನ್ನೇ ಮೇಲ್ಕಟ್ಟಡಕ್ಕೆ ಮುಂದುವರಿಸಿದರೆ ಉದ್ದೇಶಿತ ಸಮಯದಲ್ಲಿ ನಿರ್ಮಾಣಕಾರ್ಯ ಸಂಪೂರ್ಣಗೊಳ್ಳದೆ ಇರುವ ಸಂಭವ ಹೆಚ್ಚು. ಹೀಗಾಗಿ ಮೂಲ ನಕ್ಷೆಯಲ್ಲಿರುವ ಆಕೃತಿಗಳನ್ನು ಈ ಹೊಸ ಇಟ್ಟಿಗೆ, ಗಾರೆಯನ್ನು ಮೂಲವಸ್ತುವನ್ನಾಗಿ ಮಾಡಿಕೊಂಡು ನಿರ್ಮಿಸಿದರು ಎಂದೆನಿಸುತ್ತದೆ. ದೇವಸ್ಥಾನಕ್ಕಾಗಿಯೇ ವಿವಿಧ ಆಕಾರದ ಇಟ್ಟಿಗೆಯ ತಯಾರಿಕಾ ಕೇಂದ್ರಗಳು ಕಾರ್ಖಾನೆ ಮಾದರಿಯಲ್ಲಿ ಪ್ರಾರಂಭವಾಗಿದ್ದಿರ ಬಹುದು, ಇದರ ಜೊತೆಯಲ್ಲಿಯೇ ಗಾರೆಯೂ ಕೂಡ ಸಾಕಷ್ಟು ಪ್ರಮಾಣದಲ್ಲಿ ತಯಾರಾಗುತ್ತಿತ್ತು. ಇಂದಿಗೂ ಕೂಡ ವಿಜಯನಗರ(ಹಂಪೆ)ದಲ್ಲಿ ಅಲ್ಲಲ್ಲಿ ಗಾರೆ ಅರೆಯುವ ಕಲ್ಲುಗಳನ್ನು ನೋಡಬಹುದು.

ವಿಜಯನಗರದ ಕಲಾವಿದ ಇಟ್ಟಿಗೆ ಮತ್ತು ಗಾರೆಯನ್ನು ಉಪಯೋಗಿಸಿ ಕಲಾತ್ಮಕವಾದ, ಸುಂದರವಾದ ಆಕೃತಿಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತನಾಗಿದ್ದ. ಸಾಮಾನ್ಯವಾಗಿ ಆಕೃತಿಗಳು ಶಿಲ್ಪಗಳಂತೆ ಬಿಡಿಸ ಆಕೃತಿಗಳಲ್ಲಿ, ಹಿನ್ನೆಲೆ ಅಂಟಿಕೊಂಡಂತೆ ಇವೆ. ಇದೇ ತಾಂತ್ರಿಕತೆಯನ್ನು ಶಿಲಾ ಆಕೃತಿಗಳನ್ನು ಭಿತ್ತಿಗಳ ಮೇಲೆ ಕೆತ್ತುವಾಗ ಅನುಸರಿಸಲಾಗುತ್ತಿದೆ. ವಿಜಯನಗರದುದ್ದಕ್ಕೂ ಇರುವ ಶಿಲಾ ಆಕೃತಿಗಳು ಕೆಳ ಉಬ್ಬು ಶಿಲ್ಪಗಳಾಗಿವೆ. ಹೆಚ್ಚು ಹೊರಚಾಚಿರುವ ಉಬ್ಬು ಶಿಲ್ಪಗಳಿಲ್ಲವೆಂದಲ್ಲ. ಆದರೆ ಸಾಮಾನ್ಯವಾಗಿ ಕೆಳ ಉಬ್ಬು ಶಿಲ್ಪಗಳ ಸಂಖ್ಯೆಯೇ ಹೆಚ್ಚು. ಇವುಗಳಿಗೆ ಸಮಾನಾಂತರವಾಗಿ ಗಾರೆ ಆಕೃತಿಗಳೂ ದುಂಡು ಶಿಲ್ಪಗಳಂತೆಯೇ ಹೆಚ್ಚು ಉಬ್ಬು ಆಕೃತಿಗಳಾಗಿ ಬೆಳೆದವು. ಗಾರೆ ಆಕೃತಿಗಳನ್ನು ನೋಡಿದಾಗ, ಹಿನ್ನೆಲೆಯಿಂದ ಸಂಪೂರ್ಣವಾಗಿ ಹೊರಬರುವಂತೆ, ಭಾಸವಾಗದೇ ಇರದು. ಕಲಾವಿದನಿಗೆ ಇಲ್ಲಿ ಸ್ಥಳಾವಕಾಶದ ಸಮಪೂರ್ಣ ಜ್ಞಾನವಿದೆ. ಆದ್ದರಿಂದ ಇರುವ ಅವಕಾಶಕ್ಕೆ ಅನುಗುಣವಾಗಿ ಆಕೃತಿಗಳನ್ನು ನಿರ್ದೇಶಿಸಿದ್ದಾನೆ. ಭಿತ್ತಿ ಚಿತ್ರಗಳನ್ನು ಮತ್ತು ಭಿತ್ತಿ ಆಕೃತಿ ಎಲ್ಲ ಆಕೃತಿಗಳಿಗಿಂತ ಎತ್ತರವಾಗಿದ್ದು ಮಧ್ಯದ್ಲಲಿರುತ್ತದೆ. ಉಳಿದವುಗಳು ಎರಡು ಪಕ್ಕಗಳಲ್ಲಿ ಸಮಾನಾಂತರವಾಗಿ ರಚಿಸಲ್ಪಡುತ್ತವೆ. ಇದನ್ನೇ ನಾವು ಕಲಾ ಇತಿಹಾಸದಲ್ಲಿ ಸಮಾನಾಂತರವಾದ ಸಂಯೋಜನೆ ಎನ್ನುವುದು.

ಹಂಪೆಯಲ್ಲಿ, ಕನಕಗಿರಿಯಲ್ಲಿ, ಇತ್ತ ಹಳೆ ಮೈಸೂರು  ಭಾಗದಲ್ಲಿ ನಿರ್ಮಾಣವಾದ ಬಹುತೇಕ ಎಲ್ಲ ದೇವಾಲಯಗಳಲ್ಲೂ ಹೆಚ್ಚು ಕಡಿಮೆ ಒಂದೇ ತೆರನಾದ ಗಾರೆ ಕೆಲಸವಿದೆ. ಹಂಪೆಯಲ್ಲಿಯ ದೇವಾಲಯಗಳಲ್ಲಿ ಕೆಲವನ್ನು ಗಾರೆ ಕಲೆಯ ದೃಷ್ಟಿಯಿಂದ ಅಭಾಸ  ಮಾಡಿದಾಗ ಹಲವಾರು ಹೊಸ ವಿಷಯಗಳು ಹೊರಬರುತ್ತವೆ. ಮೊದಲನೆಯದಾಗಿ ಅವುಗಳ ರಚನಾ ವಿಧಾನದಲ್ಲಿ ಸಾಧಿಸಿದ ಪ್ರಗತಿ ಹಾಗೂ ರಚನೆಯಲ್ಲಿ ಕಂಡುಕೊಂಡ ತಾಂತ್ರಿ ಪರಿಣತಿ. ವಿಜಯವಿಠಲ ದೇವಾಲಯ, ವಿರೂಪಾಕ್ಷ ದೇವಾಲಯ, ಕೃಷ್ಣ, ಹಜಾರರಾಮ ದೇವಾಲಯಗಳು ಹಾಗೂ ಅಚ್ಯುತಾಪುರದಲ್ಲಿಯ ಕಿರು ದೇವಾಲಯಗಳು ಗಾರೆ ಕಲೆಗೆ ಉತ್ತಮ ಉದಾಹರಣೆಗಳಾದರೆ ಇತ್ತ ರಾಜ ರಾಣಿಯರ ಖಾಸಗಿ ಕಟ್ಟಡಗಳಾದ ಕಮಲ್ ಮಹಲ್ (ರಾಣಿ ಮಹಲ್) ಮತ್ತು ರಾಣಿಯರ ಸ್ನಾನಗೃಹಗಳು ಉತ್ತಮ ಗುಣಮಟ್ಟದ ಮತ್ತು ಅತ್ಯಂತ ಆಕರ್ಷಕವಾದ ಗಾರೆ ಕಲೆಯನ್ನು ಹೊಂದಿವೆ. ಹಂಪೆಯ ಭೌಗೋಳಿಕ ವ್ಯಾಪ್ತಿಯಲ್ಲಿರುವ ಕನಕಗಿರಿಯಲ್ಲಿನ ಎಲ್ಲಾ ದೇವಾಲಯಗಳೂ ಗಾರೆ ಕಲೆಯ ಉತ್ತಮ ಉದಾಹರಣೆಗಳಾಗಿವೆ.

ಗಾರೆ ಆಕೃತಿಗಳ ಬೆಳವಣಿಗೆಯನ್ನು ಈಗಿನ ಆಂಧ್ರಪ್ರದೇಶದ ಹಲವಾರು ಸ್ಥಳಗಳಲ್ಲಿಯೂ ನೋಡಬಹುದು. ತಿರುಪತಿ ಹತ್ತಿರವಿರುವ ಕಾಳಹಸ್ತಿಯಲ್ಲಿ ಕೃಷ್ಣದೇವರಾಯ ನಿರ್ಮಿಸಿದ ರಾಯಗೋಪುರ, ಹಿಂದುಪುರದ ಹತ್ತಿರವಿರುವ ಲೇಪಾಕ್ಷಿಯಲ್ಲಿ ವೀರಣ್ಣ, ವಿರುಪಣ್ಣ ನಿರ್ಮಿಸಿದ ವೀರಭದ್ರೇಶ್ವರ ದೇವಸ್ಥಾನ, ತಾಡಪತ್ರಿ ಹಾಗೂ ಕಡಪಾ ಜಿಲ್ಲೆಯ ಪುಷ್ಟಗಿರಿಯಲ್ಲಿನ ಸಂತಾನ ಮಲ್ಲೇಶ್ವರ ದೇವಾಲಯದಲ್ಲಿನ ಅಪರೂಪದ ಕಥಾನಕ ಆಕೃತಿಗಳು. ಹೀಗೆ ಅಗಾಧವಾದ ರೀತಿಯಲ್ಲಿ ಗಾರೆ ಆಕೃತಿಗಳು ಬೆಳವಣಿಗೆ ಹೊಂದಿ ಉತ್ಕೃಷ್ಟ ಪರಂಪರೆಗೆ ನಾಂದಿ ಹಾಡಿದವು.

ಗಾರೆ ಆಕೃತಿಗಳ ಚರ್ಚೆ

ಪ್ರಸ್ತುತ ಚರ್ಚೆಯಲ್ಲಿ ಮೊಅಟ್ಟಮೊದಲು ಹಂಪೆಯಲ್ಲಿನ ದೇವಾಲಯಗಳನ್ನು ಮತ್ತು ಖಾಸಗಿ ಕಟ್ಟಡಗಳನ್ನು ನೋಡಬಹುದು.

ಸಾಮಾನ್ಯವಾಗಿ, ಈ ಮೊದಲೇ ವಿವರಸಿದಂತೆ, ದೇವಾಲಯದ ಕಿರೀಟಪ್ರಾಯವಾದ ಗೋಪುರ, ಶಿಖರ ಹಾಗೂ ದೇವಾಲಯದ ಸುತ್ತಲೂ ಇರುವ ಪೌಳಿಮಂಟಪದ, ರಂಗಮಂಟಪ ಮತ್ತು ಕಲ್ಯಾಣ ಮಂಟಪಗಳ ಮೇಲಣ ಸ್ತರಗಳಲ್ಲಿ ಗಾರೆ ಆಕೃತಿಗಳು ಕಂಡುಬರುತ್ತವೆ. ಗೋಪುರ ಶಿಖರಗಳಲ್ಲಿ ಬಿಡಯಾಗಿ ವಿಭಿನ್ನ ಸ್ತರಗಳಲ್ಲಿ ಹಾಗೂ ಕಿರುದ್ವಾರಗಳ ಎರಡು ಬದಿಗಳಲ್ಲಿ ದ್ವಾರಪಾಲಕರಾಗಿ ಮತ್ತೂ ಮೂಲೆಗಳಲ್ಲಿ ಕಿರುವಿಮಾನಗಳಲ್ಲಿ ಹೊರಚಾಚಿರುವ ನಾಸಿಕಗಳಲ್ಲಿದ ಅಲಂಕಾರಿಕ ವಿಗ್ರಹಗಳಂತೆ ಆಕೃತಿಗಳು ಕಂಡು ಬರುತ್ತವೆ. ಮಂಟಪಗಳ ಮೇಲಿರುವ ಗೂಡುಗಳಲ್ಲಿ ಮತ್ತು ಕಿರು ವಿಮಾನಗಳಲ್ಲಿ ಹಲವಾರು ದೇವಾನುದೇವತೆಗಳ ಆಕೃತಿಗಳ ರಚನೆಗಳು ಇವೆ. ಅಲ್ಲದೆ ಅತ್ಯಂತ ನಾಜೂಕಾದ ಸುರುಳಿ ಯಂತಹ ಬಳ್ಳಿಗಳ ವಿನ್ಯಾಸ, ಮಕರ, ವ್ಯಾಳ ಮುಖಗಳು, ಪಕ್ಷಿಗಳ ಸಾಲುಗಳ ವಿನ್ಯಾಸ ಹೀಗೆ ಹಲವಾರು ಹೊಸ ನಮೂನೆಗಳು ಗಾರೆಯಲ್ಲಿ ಮತ್ತು ಇಟ್ಟಿಗೆಯಲ್ಲಿ ಅರಳ ತೊಡಗಿದವು.

ವಿರೂಪಾಕ್ಷ ದೇವಾಲಯದಲ್ಲಿನ ಪಕ್ಕದ ಮಂಟಪದ ಮೇಲೆ ಇರುವ ಆಕೃತಿಗಳು ಒಂದೇ ತೆರನಾದ ಶೈಲಿಯನ್ನು ಹೊಂದಿವೆ. ಪ್ರಾಯಶಃ ಈ ಎಲ್ಲಾ ಆಕೃತಿಗಳು ಒಂದೇ ಗುಂಪಿನ ಕಲಾವಿದರ ಕೆತ್ತನೆಯಾಗಿರಬೇಕು. ಉಮಾಮಹೇಶಮೂರ್ತಿ ಮತ್ತು ಲಕ್ಷ್ಮೀ ನರಸಿಂಹ, ವೃಷಭವಾಹನ ಶಿವ ಮತ್ತು ಪಾರ್ವತಿ ಎಲ್ಲವೂ ಆಸನ ಕೃತಿಗಳೇ. ಉಮಾಮಹೇಶ ಮೂರ್ತಿ ಮತ್ತು ಲಕ್ಷ್ಮೀನರಸಿಂಹ ಆಕೃತಿಗಳಲ್ಲಿ ಅತ್ಯಂತ ಸಾಮ್ಯತೆ ಇದೆ. ಎರಡೂ ಆಕೃತಿಗಳಲ್ಲಿ ಸ್ತ್ರೀ ಅಂದರೆ ಪಾರ್ವತಿ ಮತ್ತು ಲಕ್ಷ್ಮೀ ಕ್ರಮವಾಗಿ ತಮ್ಮ ಪುರುಷರ ಎಡ ತೊಡೆಯ ಮೇಲೆ ಕುಳಿತಿದ್ದಾರೆ. ಆಕೃತಿಗಳಲ್ಲಿ ಶಿವ ಮತ್ತು ನರಸಿಂಹ ಪೀಠಗಳ ಮೇಲೆ ಮಹಾರಾಜ ಲೀಲಾಸನದಲ್ಲಿ ಕುಳಿತಿದ್ದಾರೆ. ಚತುರ್ಚುಜರಾಗಿರುವ ಈ ಆಕೃತಿಗಳಲ್ಲಿ ದೈಹಿಕ ನೈಜತೆ ಸ್ಪಷ್ಟವಾಗಿ ಕಾಣುತ್ತದೆ. ಸರ್ವ ಅಲಂಕಾರ ಭೂಷಣವಾದ ಆಕೃತಿಗಳಲ್ಲಿ ಸ್ವಾಭಾವಿಕ ನಾಜೂಕುತನ ಎದ್ದುಕಾಣುತ್ತದೆ.

ಆಕೃತಿಗಳ ಮುಖ್ಯ ಭಾಗವನ್ನು ಮತ್ತು ಪೀಠಗಳನ್ನು ಚಿಕ್ಕ ಚಿಕ್ಕ ಇಟ್ಟಿಗೆಗಳಲ್ಲಿ ಆಕೃತಿಯ ಆಕಾರಕ್ಕೆ ತಕ್ಕಂತೆ ಕಟ್ಟಿಕೊಂಡು ನಂತರ ಕೈ, ಕಾಲು, ಮುಖ ಹಾಗೂ ವಿವಿಧ ಭಾಗಗಳನ್ನು ಗಾರೆಯಿಂದ ನಿಧಾನವಾಗಿ ಹಂತ ಹಂತವಾಗಿ ರಚಿಸಲಾಗುತ್ತದೆ. ಕಲವೊಮ್ಮೆ ಹೊರಚಾಚಿರುವ ಭಾಗಗಳನ್ನು / ಭಾಗವನ್ನು ಹಿಡಿಯಲು ಒಳಗಿನಿಂದ ಬಿದಿರು ಅಥವಾ ಕಬ್ಬಿಣದ ತಂತಿಗಳನ್ನು ಬಳಸಿದ್ದಾರೆ. ಇದನ್ನೆ ಆರ್ಮೇಚರ್ ಎನ್ನುವುದು. ಗಾರೆ ಅಥವಾ ಸಿಮೆಂಟಿನ ಆಕೃತಿಗಳನ್ನು ಇಡಿಯಾಗಿ ಅದೇ ಮಾಧ್ಯಮದಿಂದ ಮಾಡಿದರೆ ಸಂಪೂರ್ಣವಾಗಿ ಆರ್ಮೇಚರ್ ಎನ್ನುವುದು. ಗಾರೆ ಅಥವಾ ಸಿಮೆಂಟಿನ ಆಕೃತಿಗಳನ್ನು ಇಡಿಯಾಗಿ ಅದೇ ಮಾಧ್ಯಮದಿಂದ ಮಾಡಿದರೆ ಸಂಪೂರ್ಣವಾಗಿ ಆರ್ಮೇಚರ್ ಬಳಸಬೇಕಾಗುತ್ತದೆ. ಅಂದರೆ ಆಕೃತಿಗಳ ಭದ್ರತೆ ಮತ್ತು ಬಳಕೆಗೆ ಅದು ಅವಶ್ಯಕವಾಗಿದೆ. ವಿಜಯನಗರದ ಹಲವಾರು ಆಕೃತಿಗಳಲ್ಲಿ ಈ ತಾಂತ್ರಿಕತೆಗಳನ್ನು ಉಪಯೋಗಿಸಿರುವುದನ್ನು ನಾವು ಪ್ರಸ್ತುತವಾಗಿ ಗಮನಿಸಬಹುದು.

ವೃಷಭವಾಹನ ಶಿವ ಪಾರ್ವತಿ ಆಕೃತಿಯಲ್ಲಿ ಶಿವ ಪಾರ್ವತಿ ವೃಷಭದ ಮೇಲೆ ಎರಡೂ ಕಾಲುಗಳನ್ನು ಸವಾರಿ ಮಾಡುವ  ಹಾಗೆ ಹರಡಿ ಕುಳಿತಿದ್ದಾರೆ. ಸರ್ವಾಲಂಕರಣ ಭೂಷಿತವಾದ ನಂದಿ ಮತ್ತು ಶಿವ ಪಾರ್ವತಿಯರು ಅತ್ಯಂತ ಸ್ವಾಭಾವಿಕವಾಗಿ ಮೂಡಿಬಂದಿದ್ದಾರೆ. ಎರಡೂ ಪಕ್ಕಗಳಲ್ಲಿ ಗಣಗಳು ಭಕ್ತಿಯಿಮದ ಕೈಮುಗಿದು ನಿಂತಿದ್ದಾರೆ. ಇಲ್ಲಿ ನಾವು ನಂದಿಯನ್ನು ವಿಶೇಷವಾಗಿ ಗಮನಿಸಬೇಕು. ಗೂಡಿನ ಅಳತೆಗೆ ಮತ್ತು ನಂದಿಯ ದೇಹದ ಅಡ್ಡಲಾಗಿ ಚಾಚಿಕೊಂಡಿರುವ ಅಳತೆಯನ್ನು ಗಮನಿಸಿದರೆ ಸ್ಥಳದ ಅವಕಾಶದ ಹೊಂದಾಣಿಕೆಯನ್ನು ಗಮನಿಸಬಹುದು. ನಂದಿ ಹಿಂಭಾಗದಲ್ಲಿ ಕೊಂಚ ಮಣಿದಂತೆ ಹಿಂಗಾಲುಗಳನ್ನು ಮಡಚಿದೆ. ಮೇಲೆ ಕುಳಿತ ಪಾರ್ವತಿ ಪರಮೇಶ್ವರರು ಅತ್ಯಂತ ಆರಾಮವಾಗಿ ಹಾಗೂ ಆಕರ್ಷಕವಾಗಿ ಕಾಣುತ್ತಾರೆ. ಇದೇ ದೇವಾಲಯದಲ್ಲಿನ ವೃಷಭವಾಹನ ಶಿವ ಹಾಗೂ ಬ್ರಹ್ಮ ಮತ್ತು ನರ್ತನ ಭಂಗಿಯಲ್ಲಿರುವ ಗಣಪತಿ ಗಾರೆ ಕಲೆಗೆ ಉತ್ತಮ ಉದಾಹರಣೆಗಳಾಗಿವೆ. ಶೈಲಿಯಲ್ಲಿ ಹಾಗೂ ರಚನೆಯಲ್ಲಿ ಒಂದೇ ಗುಂಪಿಗೆ ಸೇರುವ ಈ ಆಕೃತಿಗಳು ಶೈಲಿಯಲ್ಲಿ ಪ್ರೌಢಿಮೆಯನ್ನು ಬಿಂಬಿಸುತ್ತವೆ. ಪುರುಷಾಕೃತಿಗಳಲ್ಲಿ ಸಾಮಾನ್ಯವಾಗಿ ಕುಸುರಿನಿಂದ ಕೂಡಿ ಕಂಠಹಾರಗಳು, ಮಾಲೆಗಳು, ಸ್ಕಂದಾಲಂಕಣಗಳು ಹಾಗೂ ಕಿರೀಟಗಳು ಆಕರ್ಷಕವಾಗಿ ಮೂಡಿಬಂದಿವೆ. ಉಡುಗೆ ತೊಡುಗೆ ಕೂಡಾ ನೈಜತೆಯನ್ನು ಹೊಂದಿವೆ. ಇನ್ನು ಪ್ರತಿಮಾ ಲಕ್ಷಣಕ್ಕನುಗುಣವಾಗಿ ಆಯಾ ಆಕೃತಿಗಳು ತಮ್ಮ ಆಯುಧಗಳನ್ನು ಹಿಡಿದಿವೆ. ನರ್ತನ ಗಣಪತಿಯು ಬಹುಶಃ ನರ್ತನ ಆಕೃತಿಗಳ ಮಧ್ಯೆ ಇದೆ ಎನಿಸುತ್ತದೆ. ಎರಡೂ ಬದಿಯಲ್ಲಿರುವ ನರ್ತಿಸುತ್ತಿರುವ ಸ್ತ್ರೀ ಆಕೃತಿಗಳು ಇದಕ್ಕೆ ಸಾಕ್ಷಿಯಾಗಿವೆ.

ವಿರೂಪಾಕ್ಷ ದೇವಾಲಯದ ಆಕೃತಿಗಳಲ್ಲಿ ಗ್ರಾನೈಟ್ ಶಿಲೆಯಲ್ಲಿ ಸಾಧ್ಯವಾಗದ ನೈಜತೆ ಮೂಡಿಬಂದಿದೆ. ಅಲ್ಲದೆ ಸಂಯೋಜನೆಯಲ್ಲಿ ಪ್ರೌಢಿಮೆ ಎದ್ದುಕಾಣುತ್ತದೆ.

ಹಜಾರ ರಾಮಚಂದ್ರ ದೇವಸ್ಥಾನದಲ್ಲಿನ ಆಕೃತಿಗಳು ಸಭೆಯ ಚಿತ್ರಗಳಂತೆ[3] ಹೆಚ್ಚಿನ ಸಂಖ್ಯೆಯ ಆಕೃತಿಗಳನ್ನು ಹೊಂದಿವೆ. ಮಧ್ಯದಲ್ಲಿ ಮುಖ್ಯ ಆಕೃತಿ ಮತ್ತು ಇಕ್ಕೆಲಗಳಲ್ಲಿ ಕೈಮುಗಿದು ವಿಭಿನ್ನ ಉಡುಗೆತೊಡುಗೆಗಳೊಂದಿಗೆ ನಿಂತಿರುವ ಆಕೃತಿಗಳು ಗಮನ ಸೆಳೆಯುತ್ತವೆ. ಚಿತ್ರ ೫ರಲ್ಲಿ ನಿಂತಿರುವ ವಿಷ್ಣು ಲಕ್ಷ್ಮಿಯ ಆಕೃತಿಗಳು ಮತ್ತು ಚಿತ್ರ ೬ ರಲ್ಲಿ ಕುಳಿತ ಭಂಗಿಯಲ್ಲಿರುವ ವೈಕುಂಠ ವಿಷ್ಣು (ಲಕ್ಷ್ಮಿನಾರಾಯಣ) ವಿರೂಪಾಕ್ಷ ದೇವಾಲಯದ ಆಕೃತಿಗಳಂತೆಯೇ ಇವೆ. ಆದರೆ ಕೊಂಚ ನೀಳವಾದ ಉದ್ದವೆನಿಸುವ ದೇಹ  ಸೌಂದರ್ಯವನ್ನು ಹೊಂದಿವೆ. ಇಲ್ಲಿ ಆಕೃತಿಗಳು ಧರಿಸಿರುವ ಕಿರೀಟಗಳಲ್ಲಿ ವಿರೂಪಾಕ್ಷ ದೇವಾಲಯದವುಗಳಿಗಿಂತ ವಿಭಿನ್ನತೆಯನ್ನು ಗಮನಿಸಬಹುದು. ಶಿಲ್ಪಗಳಲ್ಲಿರುವ ಸರಳವಾದ ಹೆಚ್ಚು ಅಲಂಕಾರಿಕವಲ್ಲದ ಶೈಲಿ ಇಲ್ಲಿ ಮೂಡಿಬಂದಿದೆ. ಸಂಯೋಜನೆಯಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಆಕೃತಿಗಳನ್ನು ಜೋಡಿಸಲಾಗಿದೆ.

ಹೆಚ್ಚು ಜೀರ್ಣಾವಸ್ಥೆಯಲ್ಲಿರುವ ಕೃಷ್ಣ ದೇವಾಲಯದಲ್ಲಿ ಗಾರೆ ಆಕೃತಿಗಳು ಬಹುಶಃ ಮೂಲದಲ್ಲಿ ಅತ್ಯಂತ ಆಕರ್ಷಕವಾದ ಹಾಗೂ ಅಷ್ಟೇ ಉತ್ಕೃಷ್ಟವಾದ ಪ್ರೌಢಶೈಲಿಯನ್ನು ಹೊಂದಿದಂತೆ ತೋರುತ್ತವೆ.

ಶ್ರೀದೇವಿ ಭೂದೇವಿಯರೊಂದಿಗೆ ವಿಷ್ಣುವನ್ನು ಆಕೃತಿಯೊಂದರಲ್ಲಿ ತೋರಿಸಲಾಗಿದೆ. ಸಮಭಂಗಿಯಲ್ಲಿ ನಿಂತಿರುವ ವಿಷ್ಣುವಿನ ಎರಡೂ ಬದಿಗಳಲ್ಲಿ ದೇವಿಯರು ಲಾಲಿತ್ಯಪೂರ್ಣವಾದ ಭಂಗಿಯಲ್ಲಿ ನಿಂತಿದ್ದಾರೆ. ವಿಷ್ಣುವಿನ ಎಡಭಾಗದಲ್ಲಿ ಸ್ತ್ರೀಯರು ಸಾಲು ಆಕೃತಿಗಳಿದ್ದರೆ, ಬಲಗಡೆ ಪುರುಷರಸಾಲು ಆಕೃತಿಗಳಿವೆ. ಕೈಮುಗಿದ ಹಾಗೂ ವಿಭಿನ್ನ ಭವ ಭಂಗಿಗಳನ್ನು  ಈ ಆಕೃತಿಗಳಲ್ಲಿ ಗಮನಿಸಬಹುದು. ಆಕೃತಿಗಳಲ್ಲಿನ ನೈಜತೆ ಮತ್ತು ಸ್ವಾಭಾವಿಕ ಸಹಜತೆ ಎಲ್ಲವನ್ನು ಜೀವಂತವಾಗಿಸುತ್ತವೆ. ಆರೋಗ್ಯಭರಿತ ದೇವಸೌಂದರ್ಯ, ದೇಹದ ಕರಾರುವಕ್ಕಾದ ಉಬ್ಬುತಗ್ಗುಗಳು ಆಕೃತಿಗಳ ಸಹಜತೆಯನ್ನು ಹೆಚ್ಚಿಸುತ್ತವೆ. ಹಜಾರ ರಾಮಚಂದ್ರ ದೇವಾಲಯದಲ್ಲಿರುವ ರತಿ ಮನ್ಮಥರ ಆಕೃತಿಗಳನ್ನು ಗಮನಿಸಿದಾಗ ಮೇಲೆ ವಿವರಿಸಿದ ಭಾವನೆ ಬಾರದೆ ಇರದು. ಇದೇ ದೇವಾಲಯದ ಆವರಣದಲ್ಲಿಯ ಕಿರುದೇವಾಲಯದ ಶಿಖರದ ಮೇಲಿನ ವಿಷ್ಣು ಮತ್ತು ದಕ್ಷಿಣದ ಭಗ್ನಗೊಂಡಿರುವ ಮಹಾಗೋಪುರದ ವಿವಿಧ ಹಂತಗಳನ್ನು ಗಮನಿಸಬಹುದು. ವಿಷ್ಣು ಮತ್ತು ದೇವಿ ಹಾಗೂ ಕುಳಿತ ವಿಷ್ಣು ಮತ್ತು ದ್ವಾರಪಾಲಕರು ಶೈಲಿಯಲ್ಲಿ ಒಂದೇ ತರಹವಾಗಿವೆ. ಕೊಂಚ ಕುಳ್ಳು ಎನಿಸುವ ದೇಹದ ರಚನೆಯನ್ನುಳಿದರೆ, ಉಳಿದ ಎಲ್ಲ ಅಂಶಗಳು ಕೃಷ್ಣ ದೇವಾಲಯದ ಮುಕ್ಯ ಗಾರೆ ಆಕೃತಿಗಳಿಗೆ ಸರಿಸಮವಾಗಿವೆ.

ಕೃಷ್ಣ ದೇವಾಲಯದ ಮುಖ್ಯದ್ವಾರದ ಮೇಲೆನ ಗೋಪುರ ಹೆಚ್ಚು ಕಡಿಮೆ ಇಂದು ಭಗ್ನಾವಸ್ಥೆಯಲ್ಲಿದೆ. ಅಳದುಳಿದ ಕೆಲವು ಆಕೃತಿಗಳನ್ನು ಗಮನಿಸಿದರೆ ಅತ್ಯಂತ ಪ್ರೌಢವಾದ ಶೈಲಿಯನ್ನು ಹೊಂದಿದ ಆಕೃತಿಗಳೆಂದು ಅನ್ನಿಸದೆ ಇರದು. ಶಿಖರದ ಹೊರಕ್ಕೆ ಹರಡಿರುವ ಶಾಲದ ಮುಖ, ಅದರ ಪಕಳೆಗಳ ಹಾಗೆ ಕಾಣುವ ವಿನ್ಯಾಸ ಮತ್ತು ಮೇಲೆ  ವಿಶಾಲವಾಗಿ ಚಾಚಿರುವ ವ್ಯಾಳಮುಖ ಇವೆಲ್ಲವೂ ಗಾರೆಯಿಂದಲೇ ರಚಿಸಲ್ಪಟ್ಟಿವೆ. ಶಾಲಮುಖದ ಮೇಲಣ ಮಕರಗಳು, ಅವುಗಳಿಂದ ಕಲಾವಿದ ಯಾವ ಹಿಡಿತಕ್ಕೂ ಒಳಗಾಗದೇ ತನ್ನಲ್ಲಿ ಅಡಗಿರುವ ಕಲೆಯನ್ನು ಅಭಿವ್ಯಕ್ತಗೊಳಿಸಿರುವ ರೀತಿ ನಿಜಕ್ಕೂ ಶ್ಲಾಘನೀಯವಾಗಿದೆ.

ಇನ್ನು ಪ್ರಸಿದ್ಧ ವಿಠಲ ದೇವಸ್ಥಾನದ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಬಹುತೇಕವಾಗಿ ಈ ದೇವಾಲಯದ ಗಾರೆಯ ಕೃತಿಗಳ ಭಗ್ನಾವಸ್ಥೆಯಲ್ಲಿವೆ. ಒಂದು ಹಂತದಲ್ಲಿ ಇಲ್ಲಿನ ಶಿಖರ, ಗೋಪುರಗಳ ಮೇಲಣ ಉಪ್ಪರಿಗೆಗಳಲ್ಲಿ ಗಾರೆಯಾಕೃತಿಗಳು ರಾರಾಜಿಸಿದ್ದಿರಬಹುದು. ವಿಜಯ ವಿಠಲ ದೇವಾಲಯವನ್ನು ವಾಸ್ತುಕೃತಿ, ಶಿಲ್ಪಗಳು, ವಿಭಿನ್ನತೆ, ಶೈಲಿಯ ದೃಷ್ಟಿಯಿಂದ ಮುಖ್ಯವಾದ ಕೃತಿಯೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಇದಕ್ಕೆ  ಪೂರಕವಾಗಿ ಶಿಖರದ ಮೇಲೆ ಉಳಿದ ಕೆಲವೇ ಆಕೃತಿಗಳು ಇವೆ.

ವಿಠಲ ದೇವಾಲಯದ ಗಾರೆಯಾಕೃತಿಗಳ ಎರಡು ಉದಾಹರಣೆಗಳನ್ನು ಮಾತ್ರ ಇಲ್ಲಿ ತೆಗೆದುಕೊಂಡಿದೆ. ಗರ್ಭಾಗೃಹದ ಶಿಖರದ ಮೇಲಿನ ಶುಕನಾಸದ ಸ್ಥಳ ದಲ್ಲಿರುವ ವಿಷ್ಣುವಿನ ಮೂರ್ತಿ ಮತ್ತು ಅದೇ ಶಿಖರದ ದಕ್ಷಿಣ ಭಾಗದಲ್ಲಿನ ಗೋವರ್ಧನ ಕೃಷ್ಣ. ವಿಷ್ಣುವಿನ ಆಕೃತಿ ಶೈಲಿಯಲ್ಲಿ ಸಾಕಷ್ಟು ಪ್ರೌಢಿಮೆಯನ್ನು ಹೊಂದಿದೆ. ಆದರೆ ಹೆಚ್ಚು ಆಕರ್ಷಕವಾಗಿರುವುದು ಗೋವರ್ಧನ ಕೃಷ್ಣ ಕೃತಿಯಾಗಿದೆ. ಆಕೃತಿಯಲ್ಲಿ ಕೃಷ್ಣ ಬಳಗೈಯನ್ನು ಮೇಲಕ್ಕೆತ್ತಿ ಗೋವರ್ಧನಗಿರಿಯನ್ನು ಎತ್ತಿ ಹಿಡಿದಿದ್ದಾನೆ. ಎಡಗೈ ಕಟ್ಯಾವಲಂಬಿತ ಸ್ಥಿತಿಯಲ್ಲಿದೆ. ಎರಡೂ ಬದಿಯಲ್ಲಿ ಗೋವುಗಳನ್ನು ತೋರಿಸಲಾಗಿದೆ. ದಷ್ಟಪುಷ್ಟವಾದ ಕೊಂಚ ಕುಳ್ಳು ಎನಿಸುವ ಶರೀರ ಕೃಷ್ಣನನ್ನು ಬಾಲಕನೆಂಬ ಭಾವನೆ ತರಿಸುತ್ತದೆ. ಇಂತಹದೇ ಶಿಲ್ಪ ಪ್ರಪ್ರಥಮವಾಗಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ಬಾದಾಮಿಯ ಉತ್ತರ ಗುಡ್ಡದ ಮೇಲಣ ಶಿವಾಲಯ (ವೈಷ್ಣವ ದೇವಾಲಯ)ದ ದಕ್ಷಿಣ ಹೊರಗೋಡೆಯ ಮೇಲಿರುವುದನ್ನು ನೆನಪಿಸಿಕೊಳ್ಳ ಬಹುದು. ಒಂದಂತೂ ನಿಜ. ವಿಜಯನಗರದ ಕಲಾವಿದರಿಗೆ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳರ ಕಲೆಯ ಆಗಾಧವಾದ ಹಿನ್ನೆಲೆ ಇತ್ತು. ಚಾಲುಕ್ಯರ ಕಲೆಯ ಹಲವಾರು ಅಂಶಗಳೂ ಸ್ಫೂರ್ತಿದಾಯಕವಾಗಿ ಉಳಿದು, ಬೆಳೆದುಕೊಂಡು ಬಂದಿವೆ. ಪ್ರಸ್ತುತ ವಿಠಲ ದೇವಾಲಯದ ಗೋವರ್ಧನಧಾರಿ ಕೃಷ್ಣ ಮತ್ತು ಬಾದಾಮಿಯ ಮೇಲಣ ಶಿವಾಲಯದ ಶಿಲ್ಪಗಳನ್ನು ಪಕ್ಕಪಕ್ಕದಲ್ಲಿರಿಸಿ ತುಲನೆ ಮಾಡಿದಾಗ ಶೈಲಿಯ ಪ್ರಭಾವ ಮತ್ತು ಶಿಲ್ಪದ ವಸ್ತುವಿನ ಪ್ರಭಾವ ಎಷ್ಟು ಗಾಢವಾಗಿದೆ ಎಂದು ಊಹಿಸಬಹುದು. ಕಲೆಯ ಅಂಶಗಳು ಹಾಗೂ ಕಲಾತ್ಮಕ ಗುಣಗಳ ಶೈಲಿ ನಿರಂತರವಾಗಿ ಪರೋಕ್ಷವಾಗಿ ಮುಂದುವರೆಯುತ್ತಲೆ ಇರುತ್ತವೆ. ಇದಕ್ಕೆ ಮುಖ್ಯ ಕಾರಣ ಕಲಾವಿದನೆ ಆಗಿದ್ದಾನೆ.

ಹಂಪೆಯ ಪರಿಸರದ ಮತ್ತೊಂದು ಮುಕ್ಯ ಆಕರ್ಷಣೆಯಾದ ಅಂದು ರಾಜರಾಣಿಯರ ಖಾಸಗಿ ಕಟ್ಟಡವಾಗಿದ್ದ ರಾಣಿಮಹಲ್ ಅಥವಾ ಕಮಲಮಹಲ್ ಮತ್ತು ರಾಣಿಯರ ಸ್ನಾನ ಗೃಹಗಳು. ಇಸ್ಲಾಮಿಕ್ ವಾಸ್ತುಶೈಲಿಯ ಸೊಗಡಿನೊಮದಿಗೆ ಮತ್ತು ಭಾರತೀಯ ಶೈಲಿಯ ಮಿಶ್ರಣದೊಂದಿಗೆ ನಿರ್ಮಾಣಗೊಂಡ ಈ ಎರಡೂ ಕಟ್ಟಡಗಳೂ ಗಾರೆ ಕಲೆಯ ಉತ್ತಮ ಉದಾಹರಣೆಗಳಾಗಿವೆ.

ಕಮಲಮಹಲ್‌ನ ಕಮಾನಿನ ಸುತ್ತಲೂ ಐದು ಸಾಲಿನಲ್ಲಿ ವಿವಿಧ ವಿನ್ಯಾಸವಾಗಿ ರೂಪಗೊಂಡಿರುವ ಕೆಳ ಉಬ್ಬು ಚಿತ್ರಣ ಕ್ಲಿಷ್ಟಕರವಾದ, ಅಷ್ಟೇ ಸೂಕ್ಷ್ಮವಾದ ವಿನ್ಯಾಸಗಳಿಂದ ಕೂಡಿದೆ. ತೀರ ಮೇಲಣ ಸ್ಥರದಲ್ಲಿನ ವ್ಯಾಳಮುಖದಿಂದ ಈ ವಿನ್ಯಾಸ ಉಗಮವಾಗುತ್ತದೆ. ವಿವಿಧ ಬಳ್ಳಿಗಳು, ಪಕ್ಷಗಳು ಹಾಗೂ ವೃತ್ತಾಕಾರದ ವಿಭಿನ್ನ ಸುಳಿಯ ಚಿತ್ರಣ ಕಂಡುಬರುತ್ತದೆ. ಕಮಲಮಹಲ್ ನ ಮೇಲ್ಮಹಡಿಯು ಕಮಾನಿನ ವಿನ್ಯಾಸವನ್ನು ತೋರಿಸುತ್ತದೆ. ಬಳ್ಳಿಗಳು, ಎಲೆಗಳು ಹಾಗೂ ಒಂದಕ್ಕೊಂದು ಹೊಂದಿದಂತೆ ಇರುವ ಪಕ್ಷಿಗಳು ಕಮಾನಿನ ಸೌಂದರ್ಯವನ್ನು ಹೆಚ್ಚಿಸಿವೆ. ಕಮಲಮಹಲ್‌ನ ಇನ್ನೊಂದು ಕಮಾನಿನಲ್ಲಿ ರೂಪಗೊಂಡ ಹಕ್ಕಿಗಳ ಸಾಲು ಆಕರ್ಷಣೀಯವಾಗಿದೆ. ಈ ಹಕ್ಕಿಗಳನ್ನು ಮೊದಲೇ ಅಚ್ಚಿನಲ್ಲಿ ತಯಾರಿಸಿಕೊಂಡು ನಂತರ ಗೋಡೆಗೆ ಒಂದಕ್ಕೊಂದು ಹೊಂದಿಕೊಳ್ಳುವಂತೆ ಕೂಡಿಸಿದೆ.[4] ಕಮಾನು ಭಾವ ಗೀತಾತ್ಮಕವಾದ ವೃತ್ತಾಕಾರದೊಂದಿಗೆ ಹೊಂದಿಕೊಂಡಿದೆ. ವಿಜಯನಗರ ಪೂರ್ವಕಾಲದ ದೇವಾಲಯಗಳ ಭುವನೇಶ್ವರಿಯನ್ನು ಜ್ಞಾಪಕಕ್ಕೆ ತರುವ ರಾಣಿಯರ ಸ್ನಾನಗೃಹದ ಒಂದು ಒಳಮಾಳಿಗೆಯಲ್ಲಿನ ಗಾರೆ ಕೆಲಸ ಬಹುಶಃ ಕಲಾವಿದನೋರ್ವನ ಜಾಣ್ಮೆಯನ್ನು ಪ್ರದರ್ಶಿಸುತ್ತದೆ.

ಹಂಪೆಯಲ್ಲಿನ ಮುಖ್ಯ ದೇವಾಲಯಗಳು ಮತ್ತು ಖಾಸಗಿ ಕಟ್ಟಡಗಳು ಪ್ರಾಯಶಃ ರಾಜರ ಅಥವಾ ಅವರ ಮಂತ್ರಿಗಳ ಸ್ವಂತ ನಿರ್ದೇಶನದಲ್ಲಿ ಆದವುಗಳಾಗಿವೆ. ಹಂಪೆಯಲ್ಲಿ ವಾಸ್ತವಿಕವಾದ ಶಿಲ್ಪ ಮತ್ತು ಗಾರೆ ಕಲಾವಿದ ಹಾಗೂ ವಿನ್ಯಾಸಗಾರ ಶ್ರಮ ತೆಗೆದುಕೊಂಡು ಕೆಲಸ ಮಾಡಿದಷ್ಟು ಪ್ರಾಯಶಃ ಬೇರೆಲ್ಲೂ ಮಾಡಿರಲಿಕ್ಕಿಲ್ಲವೇನೋ ಎಂಬ ಭಾವನೆ ಬರುತ್ತದೆ. ಆದರೆ ಹಲವಾರು ಹೊರಗಿನ ಉದಾಹರಣೆಗಳಿಮದ ಅಲ್ಲೂ ಕೂಡ ಆಯಾ ಸ್ಥಳೀಯ ನಾಯಕರ ಮಾಂಡಲಿಕರ ಆಶ್ರಯ ಮತ್ತು ಸ್ವಂತ ಪೋಷಣೆಯಲ್ಲಿ ನಿರ್ಮಾಣವಾದ ದೇವಾಲಯಗಳು ಮತ್ತು ಅಲ್ಲಿನ ಕಲೆ ಪ್ರಾಯಶಃ ಹಂಪೆಯಷ್ಟೇ ಪ್ರಗತಿಯನ್ನು, ಪ್ರೌಢಿಮೆಯ ಶೈಲಿಯನ್ನೂ ತೋರಿಸುತ್ತವೆ.

ಗಂಗಾವತಿ ತಾಲ್ಲೂಕಿನ ಕನಕಗಿರಿಯಲ್ಲಿನ ಹಲವಾರು ದೇವಾಲಯಗಳಲ್ಲಿ ಪ್ರಾಯಶಃಗಾರೆ ಕಲೆಯ ಅತ್ಯುತ್ತಮ ಉದಾಹರಣೆಗಳು ಇವೆ. ಕನಕಗಿರಿಯ ಪ್ರಮುಖ ದೇವಾಲಯ ಕನಕಾಲಪತಿ ಅಥವಾ ನರಸಿಂಹ ದೇವಸ್ಥಾನದ ಕಲ್ಯಾಣ ಮಂಟಪ, ಗೋಪುರ, ಶಿಖರ ಹಾಗೂ ಪ್ರಾಕಾರದ ಒಳಗಿನ ಮಂಟಪದ ಸಾಲಿನ ಮೇಲೆ ಹಲವಾರು ಉತ್ತಮ ಉದಾಹರಣೆಗಳಿವೆ. ವಿಜಯನಗರದ ಮಾಂಡಲೀಕ ಮನೆತನವಿದ್ದ ಕನಕಗಿರಿಯಲ್ಲಿ ಹೀಗೆ ವಿಭಿನ್ನ ದೇವಾನುದೇವತೆಗಳನ್ನು ಚಿತ್ರಸುವ ಆಕೃತಿಗಳಿವೆ. ಈ ದೇವಾಲಯದಲ್ಲಿ ಕಲ್ಯಾಣ ಮಂಟಪದ ಒಳ ಭಿತ್ತಿಯಲ್ಲಿ ವಿಭಿನ್ನ ದೃಶ್ಯಗಳನ್ನು ತೋರಿಸುವ ಗಾರೆಯ ಕೃತಿಗಳಿವೆ. ವಿಶೇಷವೇನೆಂದರೆ ಎಲ್ಲಾ ಆಕೃತಿಗಳೂ ಬಣ್ಣದಿಂದ ಕೂಡಿವೆ. ಮೂಲದಲ್ಲೇ ಮಾಡಿದ ಒಣ್ಣಕ್ಕೆ ನಂತರದಲ್ಲಿ ವಾರ್ನಿಷ್ ಲೇಪನ ಮಾಡಿರುವ ಸಾಧ್ಯತೆ ಇದೆ. ವೈಕುಂಠ ವಿಷ್ಣು, ಶಿವಪಾರ್ವತಿಯರ ಕಲ್ಯಾಣ, ಶ್ರೀಕೃಷ್ಣ,  ಮತ್ತು ರಾಮರ ಕಲ್ಯಾಣದ ಭಿನ್ನ ಚಿತ್ರಣಗಳು, ಗೋಪಿಕೆಯರ ಮಧ್ಯೆ ಕೃಷ್ಣ, ರಾಮ ಲಕ್ಷ್ಮಣ ಹಾಗೂ ಇನ್ನಿತರ ಆಕೃತಿಗಳು ಇವೆ. ಶೈಲಿಯಲ್ಲಿ ಮುಖ್ಯ ಆಕೃತಿಗಳೊಂದಿಗೆ ಸಾಮ್ಯತೆ ಅಷ್ಟಾಗಿ ಕಂಡುಬರುವುದಿಲ್ಲ.  ಇಲ್ಲೂ ಕೂಡಾ ಇಟ್ಟಿಗೆ ಗಾರೆ ಆಕೃತಿಗಳ ನಿರ್ಮಾಣದಲ್ಲಿ ಮೂಲವಸ್ತುಗಳಾಗಿವೆ. ಬಹುಶಃ ಹೆಚ್ಚು ಅಳತೆಬದ್ಧವಾದ ಮತ್ತು ಅಷ್ಟೇ ಸಮರ್ಪಕವಾದ ಸಹಜವೆನಿಸುವ ಆಕೃತಿಗಳು ಇಲ್ಲಿ ಕಾಣಬರುತ್ತವೆ. ಲಕ್ಷ್ಮೀನರಸಿಂಹ ಆಕೃತಿಯಲ್ಲಿ ಪೀಠದ ಮೇಲೆ ಕುಳಿತಿರುವ ನರಸಿಂಹನ ತೊಡೆಯ ಮೇಲೆ ಲಕ್ಷ್ಮಿಯನ್ನು ಕೂಡಿಸಲಾಗಿದೆ. ಇಲ್ಲಿ ಕಲಾವಿದನು ಹೊರಕ್ಕೆ ಚಾಚಿರುವ ಕೈಗಳನ್ನು ಗಟ್ಟಿಯಾಗಿ ಕೂಡಿಸಲು ತಂತಿಯನ್ನು ಆರ್ಮೆಚರ್  ರೂಪದಲ್ಲಿ ಬಳಸಿರುವುದನ್ನು ಗಮನಿಸಬಹುದು. ಇದೇ ಆಕೃತಿಯ ಗೂಡಿನ ಮೇಲಿನ ಕಮಾನಿನಲ್ಲಿ ಹಕ್ಕಿಗಳ ಸಾಲು, ವ್ಯಾಳಮುಖಗಳು ಕೂಡ ಇವೆ. ಲಕ್ಷ್ಮೀನಾರಾಯಣ ಆಕೃತಿ ಒಂದು ಕ್ಷಣ ಹಂಪೆಯ ಕೃಷ್ಣ ದೇವಾಲಯದ ಮತ್ತು ವಿರೂಪಾಕ್ಷ ದೇವಾಲಯದ ಆಸನ ಆಕೃತಿಗಳನ್ನು ಜ್ಞಾಪಕಕ್ಕೆ ತರುತ್ತದೆ. ಆದರೆ ಇಲ್ಲಿ ಸಂಯೋಜನೆಯಲ್ಲಿ ಮುಖ್ಯ ಆಕೃತಿಯ ಇಕ್ಕೆಲಗಳಲ್ಲಿ ಹೆಚ್ಚು ನಿಬಿಡವಾದ ಆಕೃತಿಗಳಿಲ್ಲ. ಸಹಾಯಕರ ಹಾಗೆ ಎರಡೆರಡು ಆಕೃತಿಗಳು ಕೈಮುಗಿದು  ಮುಖ್ಯ ಆಕೃತಿ ಬದಿಗೆ ನಿಂತಿದ್ದಾರೆ. ಲಕ್ಷ್ಮೀನಾರಾಯಣ ಆಕೃತಿಯಲ್ಲಿ ವಿಶೇಷವಾಗಿ ಲಕ್ಷ್ಮಿ ಕುಲಿತ ವಿಧವನ್ನು (ಮುಖದ ಭಾಗ ಹಾಳಾಗಿದೆ) ಗಮನಿಸಬೇಕು. ಎಡಗಾಲನ್ನು ಮಡಿಸಿ, ಬಲಗಾಲನ್ನು ನೀಳವಾಗಿ ಕೆಳಕ್ಕೆ ಹರಡಿ ಲಕ್ಷ್ಮಿ ಕುಳಿತಿದ್ದಾಳೆ. ಯಾವ ಗ್ರಂಥಗಳಲ್ಲೂ ಕಾಣದ ಈ ತರಹದ ಹೊಂದಾಣಿಕೆ ಕೇವಲ ಕಲಾವಿದನ ಕಲ್ಪನೆಗೆ ಮಾತ್ರ ಸಾಧ್ಯ. ಇಂತಹದೇ ಇನ್ನೊಂದು ಕೃತಿ ಕೃಷ್ಣ ಕೈಯಲ್ಲಿ ಶಂಖವನ್ನು ಕಟ್ಯಾವಲಂಬಿತದಲ್ಲಿ ಹಿಡಿದಿರುವುದು. ಬಲ ಮುಂಗೈ ಹಾಳಾಗಿದೆ. ಪ್ರಾಯಶಃ ಕೊಳಲೋ ಅಥವಾ  ಬೆಣ್ಣೆ ಮುದ್ದೆಯೋ (ಸಾಲಿಗ್ರಾಮ ?) ಇರಬೇಕು. ಇಲ್ಲಿ ಕೃಷ್ಣ ಬಾಲಕೃಷ್ಣ ನಾಗಿದ್ದಾನೆ.  ದುಂಡು ದುಂಡಾದ ಎಳೆ ದೇಹ, ಅಗಲವಾದ ಮುಖ, ಬಾಚಿ ಮೇಲೆ ಕಟ್ಟಿರುವ ಕೇಶ, ಮೊಳಕಾಲ ಮೇಲೆ ಅರ್ಧ ವೃತ್ತಾಕಾರವಾಗಿ ಹರಡಿರುವ ವೈಜಯಂತಿ ಮಾಲೆ, ಮುಂಗೈ ಕಟ್ಟು, ತೊಳ್ಬಂದಿಗಳು ಹಾಗೂ ಕಂಠಹಾರ ಕೃಷ್ಣನಲ್ಲಿ ಎದ್ದುಕಾಣುವ ಅಂಶಗಳು. ಇಲ್ಲಿ ಕೃಷ್ಣ ಶಂಖವನ್ನು ಹಿಡಿದಿರುವ ರೀತಿ ಬನವಾಸಿ ಕದಂಬರ ಕಾಲದ ವಿಷ್ಣು, ಹರಿಹರ[5] ಹಾಗೂ ಬಾದಾಮಿ ಚಾಲುಕ್ಯರ ಲಯಣ ದೇವಾಲಯಗಳಲ್ಲಿನ ವಿಷ್ಣು, ಹರಿಹರ ಶಿಲ್ಪಗಳಲ್ಲಿ ಕಾಣಬರುವ ಆಯುಧ ಹಿಡಿವ ರೀತಿಯಲ್ಲಿ ಮೂಡಿಬಂದಿದೆ. ಕಲಾವಿದ ಇಲ್ಲಿ ಶಂಕವನ್ನು ಕಟ್ಯಾವಲಂಬಿತದಲ್ಲಿ ಚಿತ್ರಿಸಿರುವ ವಿಧ ಪ್ರಾಚೀನ ಅಂಶಗಳ ಮರು ಉಪಯೋಗ ಅಥವಾ ಮುಂದುವರೆಯುವಿಕೆಯನ್ನು ತೋರಿಸುತ್ತದೆ.

ಕನಕಗಿರಿಯಲ್ಲೇ ಇರುವ ಈಶ್ವರ ದೇವಾಲಯದ ಮೇಲಿರುವ ಆಸನ ಭಂಗಿಯಲ್ಲಿನ ಶಿವಪಾರ್ವತಿ ಹಾಗೂ ಗಣೆಶ್ವರ ಆಕೃತಿಗಳೂ ಕನಕಾಚಲ ದೇವಾಲಯದ ಶೈಲಿಗೆ ಅನುಗುಣವಾಗಿವೆ. ಪ್ರಾಯಶಃ ಈ ಆಕೃತಿಗಳೂ ಕೂಡ ನುರಿತ ಕಲಾವಿದನ ಕೃತಿಗಳಾಗಿವೆ. ಈಶ್ವರನ ತೊಡೆಯ ಮೇಲೆ ಕುಳಿತ ಪಾರ್ವತಿ (ಪೂರ್ತಿ ಹಾಳಾಗಿದೆ) ತನ್ನ ಕಾಲುಗಳನ್ನು ಕಮಲದ ಮೇಲೆ ಇರಿಸಿದ್ದಾಳೆ. ಹಾಗೆಯೇ ಪೀಠದ ಮೇಲೆ ಕುಳಿತ ಶಿವನ ಕೆಳಗೆ ಕಮಲದ ಆಸನವಿದೆ. ಎಡಗೈಯಲ್ಲಿ ತಂಬೂರದರನಾದ ತಂಬೂರ ಹಾಗೂ ಬಲಬದಿಯಲ್ಲಿ ಗಣನ ಆಕೃತಿ ಇದೆ. ವೃಷಭದ ಅವಶೇಷವನ್ನು ಮಾತ್ರ ಕೆಳಗಡೆ ಗಮನಿಸಬಹುದು.

ಉಪಸಂಹಾರ

ಇಡಿಯಾಗಿ ಗಾರೆಯ ಕಲೆಯನ್ನು ವಿಜಯನಗರದ ರಾಜ್ಯ ವ್ಯಾಪ್ತಿಯಾಗಿ ನೋಡಿದಾಗ ಅದೊಂದು ಪರಿಪೂರ್ಣವಾದ ಮಾಧ್ಯಮವಾಗಿ ಬೆಳೆಯಿತು ಎಂದು ಹೇಳಬಹುದು. ಕೇವಲ ಕಟ್ಟಡದ ನಿರ್ಮಾಣದ ವಸ್ತುವಾಗಿರದೆ ಕಲಾ ಮಾಧ್ಯಮವಾಗಿ ವಿಕಾಸಗೊಂಡಿತು. ಕಲಾವಿದರು ಮೂಲತಃ ಗಾರೆಯಲ್ಲೇ ಪರಿಣತಿ ಪಡೆದವರೇ ಎಂಬ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ಶಿಲೆಯನ್ನು ಕೆತ್ತಿ ಶಿಲ್ಪಗಳನ್ನು ರಚಿಸುವಲ್ಲಿ ಪರಿಣತಿ ಪಡೆದ್ದು ಹಿಂದಿನಿಂದಲೂ ಬೆಳೆದು ಬಂದ ಸಂಪ್ರದಾಯ. ಒಮ್ಮಿದೊಂಮ್ಮೆಲೆ ಅಷ್ಟು ಭವ್ಯವಾಗಿ ಮತ್ತು ಅಗಾಧವಾದ ರೀತಿಯಲ್ಲಿ ದೇವಾಲಯ ನಿರ್ಮಾಣ ಮತ್ತು ಗಾರೆ ಆಕೃತಿಗಳ ನಿರ್ಮಾಣಕ್ಕೆ ಕೈಜೋಡಿಸಿದ ಕಲಾವಿದರು ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಈ ಮೊದಲು ಶಿಲೆಯಲ್ಲಿ ಕೆಲಸ ಮಾಡಿದ ಕಲಾವಿದರೇ ಗಾರೆ ಕೆಲಸದಲ್ಲಿ ಪರಿಣತಿ ಪಡೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಷ್ಟು ಸಂಖ್ಯೆಯಲ್ಲಿ ಒಟ್ಟಿಗೆ ಗಾರೆ ಕಲಾವಿದರು ಇದಕ್ಕೂ ಮೊದಲೇ ಪರಿಣತಿ ಪಡೆದಿದ್ದರೆ? ಪ್ರಾಯಶಃ ಹಾಗೆ ಆಗಿರಲು ಸಾಧ್ಯವಿರಲಿಕ್ಕಿಲ್ಲ. ಏಕೆಂದರೆ ಗಾರೆ ಕಲಾ ಮಾಧ್ಯಮವಾಗಿ ಪ್ರಾರಂಭದಿಂದಲೂ ಇತ್ತಾದರೂ ವಿಜಯನಗರ ಕಾಲದಲ್ಲಿ ರೂಪ ಗೊಂಡಷ್ಟು ದೇವಾಲಯದ ಅಲಂಕರಣ ಆಕೃತಿಗಳು ಬಹುಶಃ ಬೇರಾವ ಕಾಲದಲ್ಲೂ ಆಗಲಿಲ್ಲ. ಇದಕ್ಕೂಮೊದಲು ತಮಿಳುನಾಡು, ಕೇರಳ ಪ್ರದೇಶದ ಪಾಂಡ್ಯರ ಕಾಲದಲ್ಲಿ ದೇವಾಲಯಗಳಲ್ಲಿ ಅಲಂಕರಣಕ್ಕೆ ಗಾರೆ ಬಳಸುವ ಪರಂಪರೆ ಪ್ರಾರಂಭವಾಗಿತ್ತು. ಅದು ವಿಜಯನಗರದಷ್ಟು ಭವ್ಯತೆಯನ್ನು ಮತ್ತು ವಿಸ್ತಾರವನ್ನು ಹೊಂದಿರಲಿಲ್ಲ. ವಿಜಯನಗರ ಕಾಲದಲ್ಲಿ ಮಾತ್ರ ಹೆಚ್ಚಿನ ಕಲಾ ಚಟುವಟಿಕೆಗಳು ತಮಿಳು, ಮಲೆಯಾಳ ಪ್ರದೇಶಗಳಲ್ಲಿ  ಕಾಣಬರುತ್ತವೆ. ಅದರಲ್ಲೂ ಗಾರೆ ಕಲೆ ತಮಿಳು ಪ್ರದೇಶದಲ್ಲಿ ವಿಜಯನಗರೋತ್ತರ ಕಾಲದಲ್ಲೂ ಚಲಾವಣೆಯಲ್ಲಿತ್ತು. ಪ್ರಾಯಶಃ ಅದೇ ನಿದರ್ಶನಗಳಿಮದ ಈಗಲೂ ಮಧುರೈ ತಂಜಾವೂರು ಭಾಗಗಳ ಪರಿಣತ ಸಿಮೆಂಟ್ ಕಲಾವಿದರು ನವೀನ ಗೋಪುರ, ಶಿಖರಗಳ ನಿರ್ಮಾಣದಲ್ಲಿ ಸಿದ್ಧಹಸ್ತರಾಗಿರುವುದು. ಕಲಾವಿದರು ಮೂಲತಃ ಶಿಲೆಯಲ್ಲಿ ಕೆಲಸ ಮಾಡುತ್ತಿದ್ದಿರಬಹುದು. ಗಾರೆಯ ಉಪಯೋಗ ಪ್ರಾರಂಭವಾದ ಮೇಲೆ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಗುಂಪು ಗುಂಪುಗಳಲ್ಲಿ ಪರಿಣತರಾಗಿದ್ದಿರಬೇಕು. ಶಿಲ್ಪವನ್ನು ಕೆತ್ತುವ ಕೈ ಈಗ ತೇಪೆಗಳಿಂದ ಗಾರೆಯನ್ನು ಮಾಡುವಂತಾಯಿತು. ಅಜಂತಾದಲ್ಲಿ ಶಿಲ್ಪಗಳೆ ಚಿತ್ರಕಾರರಾಗಿದ್ದ ಉದಾಹರಣೆಗಳಿಲ್ಲವೆ ಹಾಗೆ, ಆಕೃತಿಗಳ ವಿಷಯದ ಹೊರವುಗಳನ್ನು ಅರಿತ ಕಲಾವಿದ ಅದಕ್ಕೆ ತಕ್ಕಂತೆ ಆಕೃತಿಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಈ ಗಾರೆಯ ಕೃತಿಗಳ ಶೈಲಿಗಳಲ್ಲಿ ವಿಭಿನ್ನತೆ ಎದ್ದುಕಾಣುತ್ತದೆ. ಬಹುಶಃ ಒಂದೇ ಸಮಯದಲ್ಲಿ ಬೇರೆ ಬೇರೆ ಕಲಾವಿದರ ಗುಂಪುಗಳು (ಕಲಾವಿದರ ಗಣ) ಒಂದೇ ಸ್ಥಳದಲ್ಲಿ ಆದರೆ ಬೇರೆ ಬೇರೆ ದೇವಾಲಯಗಳಲ್ಲಿ ಕೆಲಸ ಮಾಡುತ್ತಿದ್ದಿರಬೆಕು. ಬಹುಶಃ ಅದಕ್ಕಾಗಿಯೇ ವಿರೂಪಾಕ್ಷ ದೇವಾಲಯ ಮತ್ತು ಹಜಾರರಾಮ ದೇವಾಲಯಗಳ ಆಕೃತಿಗಳಲ್ಲಿನ ಶೈಲಿಯ ಭಿನ್ನತೆ ಸ್ಪಷ್ಟವಾಗಿರುವುದು. ಅದೇ ರೀತಿ ಕನಕಗಿರಿಯಲ್ಲಿನ ಆಕೃತಿಗಳು ಬಹುಶಃ ಶೈಲಿಯ ಪಕ್ವತೆಯನ್ನು ಬಿಂಬಿಸುತ್ತವೆ. ಹೀಗೆ ಶೈಲಿಗಳಲ್ಲಿನ ವಿಭಿನ್ನತೆ ಸ್ಥಳದಿಂದ  ಸ್ಥಳಕ್ಕೆ ಕಾಣುತ್ತಲೇ ಇರುತ್ತದೆ.

ಗಾರೆಯಾಕೃತಿಗಳು ದೇವಾಲಯಗಳ ನಿರ್ಮಾಣದ ಮತ್ತು ದೇವಾಲಯದ ನೀಲನಕ್ಷೆಯ ಮೂಲ ವಿನ್ಯಾಸದಲ್ಲಿ ಇದ್ದವುಗಳೇ ಆಗಿವೆ. ಅವಶ್ಯವಿದ್ದ ಸಣ್ಣಪುಟ್ಟ ಹೊಂದಾಣಿಕೆಗಳನ್ನು. ಕಲಾವಿದ ಮಾಡಿರಬಹುದು. ಪ್ರಾಯಶಃ ಇದು ಪೂರ್ವ ನಿಯೋಜಿತವಾದದ್ದು. ಒಂದು ಕಿರು ವಿಮಾನ ಜಗೂಡನ್ನು ನಿರ್ಮಿಸಲು ಪ್ರಾರಂಭಿಸಿದೊಡನೆ ಅದರಲ್ಲಿ ಯಾವ ಆಕೃತಿ ಬರಬೇಕು ಅಥವಾ ಕೆಲವೊಮ್ಮೆ ಅಕೃತಿಗಳು ಪ್ರಾಮುಖ್ಯತೆ ಮತ್ತು ಅಳತೆಗಳಿಗೆ ತಕ್ಕಂತೆಯೂ ವಿಮಾನ ಗೂಡುಗಳ ನಿರ್ಮಾಣವಾಗಿರಬೇಕು. ಒಟ್ಟಿನಲ್ಲಿ ಪ್ರಸ್ತುತ ಅಧ್ಯಯನದಿಂದ ಗಾರೆಯಾಕೃತಿಗಳು ದೇವಾಲಯದ ಮೂಲಕಲ್ಪನೆಯಲ್ಲಿ ಇದ್ದನ್ನು ಎಂದು ತಿಳಿದುಬರುತ್ತದೆ.

ಪ್ರಸ್ತುತ  ಅಧ್ಯಯನವು ಗಾರೆ ಕಲೆಯನ್ನು ಕುರಿತು ಮಾಡಿದ ಅವಲೋಕನವಷ್ಟೇ ಇನ್ನೂ ಹೆಚ್ಚಿನ ಅಧ್ಯಯನ ಇದನ್ನು ಕುರಿತಂತೆ ಹೊಸ ಹೊಸ ವಿಷಯಗಳನ್ನು ಮುಂಬರುವ ದಿನಗಳಲ್ಲಿ ಹೊರಗೆಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಆಕರ
ವಿಜಯನಗರ ಅಧ್ಯಯನ, ಸಂ. ೫, ೨೦೦೨, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು. ೧-೧೮.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಬೌದ್ಧ ಧರ್ಮಕ್ಕೆ ಸೇರಿದ ಹಲವಾರು ಗಾರೆಯಾಕೃತಿಗಳು ಅಘ್ಘಾನ್ ಪ್ರದೇಶದಲ್ಲಿ ದೊರೆತಿವೆ. ನೋಡಿ. V.A.  Smith : A History of Fine Art in India and Ceylon, Oxford, 1911, Chapter IV, The Hellenistic Sculpture of Gandhara, Photographs, P.P. 96ff.

[2] ವಿಜಯನಗರದ ಪ್ರಾರಂಭದ ಕಾಲದಲ್ಲಿ ನಿರ್ಮಿಸಿರುವ ದೇವಾಲಯದಲ್ಲಿ ಗಾರೆ ಇತ್ತೇ ಇಲ್ಲವೇ ಎಂಬುದು ಇನ್ನು ಅಸ್ಪಷ್ಟವಾಗಿದೆ. ಆದರೆ ನಂತರದ ಕಾಲದಲ್ಲಿ ಉಪಯೋಗಿಸಿದ ಮಾಹಿತಿ ಇದೆ.

[3] ಸಭಾ ಚಿತ್ರ ವಿಜಯನಗರೋತ್ತರ ಕಾಲದಲ್ಲಿ ಭಿತ್ತಿ ಚಿತ್ರಗಳಲ್ಲಿ ಪ್ರಮುಖ ಪಂಗಡವಾಗಿ ಬೆಳೆಯಿತು. ಮುಖ್ಯ ಆಕೃತಿ ಮಧ್ಯದಲ್ಲಿದ್ದು ಇಕ್ಕೆಲಗಳಲ್ಲಿ ಗಣ ಪರಿವಾರದ ಆಕೃತಿಗಳು ನಿಂತಿರುವುದು ಅಥವಾ ಕುಳಿತಿರುವುದು.

[4] ಗಾರೆಯಲ್ಲಿ ಸೂಕ್ಷ್ಮವಾದ ಅಥವಾ ನೀರ ಗಾರೆಯಿಂದ ಮಾಡಬಹುದಾದ ಯಾವುದೇ ಆಕೃತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕಾದಾಗ ಅಚ್ಚನ್ನು ಉಪಯೋಗಿಸಬಹುದಾಗಿದೆ. ಅಚ್ಚಿನಿಂದ ತೆಗೆದ ಆಕೃತಿಗಳನ್ನು ಹಸಿಯಾದ ಹಿನ್ನೆಲೆಗೆ ಜೋಡಿಸಿ ನಂತರ ಉಳಿದ ಕೆಲಸವನ್ನು ಮಾಡಬಹುದಾಗಿದೆ.

[5] ಚಿತ್ರಗಳಿಗೆ ನೋಡಿ : ಕುಲಕರ್ಣಿ ಆರ್.ಎಚ್., ೧೮೯೯೭, “ಬನವಾಸಿ ಕದಂಬರ ಕಾಲದ ಶಿಲ್ಪಕಲೆ”, ಕದಂಬ ಅಧ್ಯಯನ, ಪು. ೧೮-೩೪, ಚಿತ್ರ ೨, ೩, ೬, ೧೬, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.