ವಿಜಯನಗರದಲ್ಲಿ ಕುಸ್ತಿಯ ಕಲೆಯು ಮಲ್ಲಕಾಳಗ, ಬಾಹುಯುದ್ಧ, ಗರಡಿ ವಿದ್ಯೆ ಮುಂತಾದ ಹೆಸರುಗಳಿಂದ ಅತ್ಯಂತ ಜನಪ್ರಿಯವಾಗಿತ್ತು. ಇದು ಸಮರ ಕಲೆಯ ಒಂದು ಭಾಗವಾಗಿ, ಮನರಂಜನೆಯ ಕ್ರೀಡಾ ಪ್ರದರ್ಶನವಾಗಿ ರಾಜರ ಮತ್ತು ಜನರ ಮನ್ನಣೆಗೆ ಪಾತ್ರವಾಗಿತ್ತು. ಅಬ್ದುಲ್ ರಜಾಕ್, ನ್ಯೂನಿಜ್, ಪಯಸ್  ಬಾರ್ಬೋಸಾ ಮುಂತಾದ ವಿದೇಶಿ ಪ್ರವಾಸಿಗರು ಕುಸ್ತಿಯಾಟವನ್ನು ಕಣ್ಣಾರೆ ಕಂಡು, ಹಲವು ಸನ್ನಿವೇಶಗಳನ್ನು ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ. ಕನ್ನಡದ ಮಹಾಕವಿಗಳಾದ ಕುಮಾರವ್ಯಾಸ, ರತ್ನಾಕರವರ್ಣಿ, ಷಡಕ್ಷರದೇವ, ನಂಜುಂಡ ಮುಂತಾದ ಕವಿಗಳು ತಮ್ಮ ಕಾವ್ಯ ಕೃತಿಗಳಲ್ಲಿ ಕುಸ್ತಿಕಾಳಗದ ಸಂದರ್ಭಗಳನ್ನು ಜೀವಂತವಾಗಿ ಚಿತ್ರಿಸಿದ್ದಾರೆ. ಹಜಾರರಾಮ ದೇವಾಲಯ, ವಿಜಯವಿಠ್ಠಲ ಸ್ವಾಮಿ ದೇವಾಲಯ, ಅಚ್ಯುತರಾಯ ದೇವಾಲಯ, ವಿರೂಪಾಕ್ಷ ದೇವಾಲಯ, ಮಹಾನವಮಿ ದಿಬ್ಬ, ಕೋಟೆಯ ಹೆಬ್ಬಾಗಿಲು ಇತ್ಯಾದಿ ಕಟ್ಟಡ, ಗೋಡೆ ನಿರ್ಮಾಣಗಳಲ್ಲಿ, ಪಟ್ಟಿಕೆಗಳಲ್ಲಿ ಕೆತ್ತಲಾಗಿರುವ ಉಬ್ಬು ಶಿಲ್ಪಗಳಲ್ಲಿ ಕುಸ್ತಿಯಾಟದ ನಾನಾ ಸನ್ನಿವೇಶಗಳು ಸೇರಿಕೊಂಡಿವೆ. ಮಹಾನವಮಿ ಉತ್ಸವ ಹಬ್ಬ ಹರಿದಿನ ಇತ್ಯಾದಿ ಕೆಲವು ವಿಶೇಷ ಸಂದರ್ಭಗಳಲ್ಲಿ ಕುಸ್ತಿ ಪಂದ್ಯಾಟವನ್ನು ಏರ್ಪಡಿಸುತ್ತಿದ್ದರು. ರಾಜರು ಪ್ರಜೆಗಳು ಇತ್ಯಾದಿಯಾಗಿ ಎಲ್ಲರೂ ಇಂತಹ ಪಂದ್ಯಾಟಗಳನ್ನು ನೊಡಿ ಸಂತೋಷಪಡುತ್ತಿದ್ದರು, ಜಟ್ಟಿಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ವಿಜಯನಗರದ ಕುಸ್ತಿಯ ಕುರಿತು ಶಾಸನಗಳಲ್ಲಿ ಏನಾದರೂ ಉಲ್ಲೇಖಗಳು ಸಿಗುತ್ತವೆಯೇ ಎಂದು ನೋಡಿದಾಗ, ಮಾಹಿತಿಗಳು ದೊರೆಯುವುದಿಲ್ಲ. ಜನಜೀವನದ ಒಂದು ಭಾಗವಾಗಿದ್ದ ಈ ಕಲೆಯ ಬಗೆಗೆ ಆಧಾರ ನೀಡಬಲ್ಲ ಶಾಸನಗಳು ಬಹಳಷ್ಟು ಇಲ್ಲ. ಲಭ್ಯವಾಗಿರುವ ಶಾಸನಗಳ ಪೈಕಿ ಅಪರೂಪ ಎನ್ನುವಂತೆ ಎರಡು ಶಾಸನಗಳು ಮುಖ್ಯವಾಗಿ ಗಮನ ಸೆಳೆಯುತ್ತವೆ. ಮಾಲ್ಯವಂತ ಬೆಟ್ಟದಿಂದ ತಳವಾರಘಟ್ಟದ ಕಡೆಗೆ ಹೋಗುವ ರಸ್ತೆಯಲ್ಲಿ ಅಸಂಖ್ಯಾತ ಗೋರಿಗಳನ್ನು ವಸತಿ ವಿನ್ಯಾಸಗಳನ್ನು ಒಳಗೊಂಡಿರುವ ಒಂದು ಬೆಟ್ಟದ ತಪ್ಪಲು ಪ್ರದೇಶದಲ್ಲಿ ಒಂದು ಶಾಸನ ದೊರೆತಿದೆ. ವಿಜಯನಗರದ ಪ್ರಜೆಗಳಾಗಿದ್ದ ಮುಸ್ಲಿಮರು ವಾಸವಾಗಿದ್ದ ನೆಲೆಯಿದು. ಇಲ್ಲಿರುವ ಅಸಂಖ್ಯಾತ ಕುರುಹುಗಳನ್ನು ಆಧರಿಸಿ ನಡೆದಿರುವ ಶೋಧನೆಗಳು ಇದನ್ನು ಸ್ಪಷ್ಟಪಡಿಸಿವೆ. ಇಲ್ಲಿರುವ ಅಹಮದ್ ಖಾನ್ ಧರ್ಮಶಾಲೆ (ಮಸೀದಿ) ಹತ್ತಿರದಲ್ಲಿರುವ ಮಂಟಪದ ಗುಮಡಿನಲ್ಲಿ ಶಾಸನವೊಂದನ್ನು ಕೆತ್ತಲಾಗಿದೆ.

ಒಂದನೇ ಶಾಸನ : ಕುಸ್ತಿಯಲ್ಲಿ ಮುಸ್ಲಿಮರು

ಕ್ರಿ.ಶ. ೧೪೪೧ರ ಕಾಲದ ಈ ಶಾಸನವು ಮುಸ್ಲಿಮ್ ಪೈಲ್ವಾನನೊಬ್ಬನ ಬಗ್ಗೆ ಉಲ್ಲೇಖ ನೀಡುತ್ತದೆ. “ಶ್ರೀಮತು ಹಾಮಾದಿಮ ಮೀರಿಪಾಲುವನನು ದಾವಿಮಯನ ಮಗ ಬರಿಯಮ ಕೊಟ್ಟ ಮನೆಯ ಕ್ರಯ ಗ(ದೆ) ಅಕ್ಷಾರದಲು ಆರುವರಾಹಕೆ ಬಿಟ್ಟ ಶಾಸನ ಮಲುಖಾನವ ಪಾಗೆ…..”[1]. ಹಾಮಾದಿ ಮಮೀರಿ ಪಾಲುವಾನನು (ಮೀರ‍್ಪಹಿಲ್ ವಾನ್?) ಮತ್ತು ದಾವಿಮಯನ ಮಗ ಬರಿಯಮನು ಮಲುಖಾನನಿಗೆ ಮನೆಯೊಂದನ್ನು ಆರು ವರಾಹಗಳಿಗೆ ಕೊಂಡು ದಾನವಾಗಿ ಕೊಟ್ಟಿದ್ದು ಈ ಶಾಸನದ ಸಾರಾಂಶ.

ಈ ಶಾಸನದಲ್ಲಿ ಉಲ್ಲೇಖಗೊಂಡಿರುವ ‘ಮೀರಿಪಾಲುವಾನ’ಎಂಬ ವ್ಯಕ್ತಿಯ ಹೆಸರು ‘ಮೀರ್ ಪಹೀಲ್ ವಾನ್’ ಆಗಿರಬಹುದೆ ಎಂದು ‘ಹಂಪಿ ಶಾಸನ’ ಸಂಪುಟದ ಸಂಪಾದಕರು ‘ಕಂಸದಲ್ಲಿ ಈ ಹೆಸರಿನ ಮುಂದೆ ಪ್ರಶ್ನಾರ್ಥಕ ಚಿಹ್ನೆ’ಯಿಟ್ಟು ಸಮದೇಹ ವ್ಯಕ್ತಪಡಿಸಿದ್ದಾರೆ[2]. ಇದನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಕನ್ನಡ ಮತ್ತು ತೆಲಗು ಶಾಸನಗಳ ಮಾಧ್ಯಮಕ್ಕೆ ವಿಜಯನಗರ ರಾಜಧಾನಿಯ ಮುಸ್ಲಿಮ್ ಪ್ರಜೆಗಳ ಹೆಸರುಗಳು ದಾಖಲೆಗೆ ಒಗ್ಗಿ ಕೊಳ್ಳುತ್ತಿದ್ದ ಪ್ರಾರಂಭಿಕ ಪ್ರಕ್ರಿಯೆ ಆಗತಾನೆ ಶುರುವಾಗಿದ್ದಂತೆ ತೋರುತ್ತದೆ. ಮುಸ್ಲಿಮ್ ಜನಪದರ ವಸ್ತುವಾಚಕ, ನಾಮವಾಚಕ ಪದಗಳನ್ನು ಉಚ್ಚಾರಕ್ಕೆ ತಕ್ಕಂತೆ ಬರೆಹಕ್ಕೆ ಇಳಿಸುವಾಗ ಅಲ್ಪಸ್ವಲ್ಪ ಕಾಗುಣಿತ ಬದಲವಣೆಗಳನ್ನು ಶಾಸನದ ಲಿಪಿಕಾರರು ಮಾಡಿಕೊಂಡಂತಿದೆ. ಆಹಮುದಖಾನ (ಅಹಮದ್ ಖಾನ್), ಮಸೂಜಿ (ಮಸೀದಿ), ಮಲುಖಾನ (ಮೌಲಾ ಖಾನ್), ಕಬಿರುರಾವುತ (ಕಬೀರ‍್ರಾಹುತ), ಗುಂಮಥ (ಗುಮ್ಮಟ), ಮುರಿದ (ಮುರೀದ್), ಮುಖಾತೀರ್ಥ (ತೀರ್ಥಸ್ಥಳ ಮಕ್ಕಾ), ಕಲಾಬನಾಣೆ (ಕರ್ಬಲಾ ಆಣೆ). ಇದೇ ರೀತಿ ‘ಮೀರಿಪಾಲುವಾನ’ ಎಂಬ ಬರೆಹದ ಉಚ್ಛಾರವು ಮೀರ‍್ಪಹಿಲ್ವಾನ್, ಮೀರ‍್ಪೈಲ್ವಾನ್ ಆಗಿದೆ. ಪೈಲ್ವಾನ್ ಎಂಬ ಪದವು ಆತನ ವೃತ್ತಿಗೆ ಅಥವಾ ಕರಗತ ಮಾಡಿಕೊಂಡಿದ್ದ ಕಲೆಗೆ ದ್ಯೋತಕವಾಗಿ, ಗುಣವಾಚಕ ಪದವಾಗಿ ಹೆಸರಿನ ಮುಮದೆ ಲಿಪಿಕಾರ ಸೇರಿಸಿದ್ದಾನೆ. ಆದ್ದರಿಂದ ಖಂಡಿತ ಈತ ಮಲ್ಲ ಕಲೆಯಲ್ಲಿ ಪಳಗಿದವನಾಗಿರಬೇಕೆಂದು ಇತ್ಯರ್ಥಕ್ಕೆ ಬರಬಹುದಾಗಿದೆ.

ಇದನ್ನು ಇನ್ನಷ್ಟು ಆಧಾರಗಳ ಮೂಲಕ ಸಮರ್ಥಿಸಿ ನೋಡಬಹುದು. ಹಂಪಿ ಪರಿಸರದಲ್ಲಿ ದೊರೆತಿರುವ ಶಾಸನಗಳ ಪೈಕಿ ಸುಮಾರು ಹತ್ತು ಶಾಸನಗಳು, ಮುಸ್ಲಿಮರು ವಿಜಯನಗರದಲ್ಲಿ ಸಮೃದ್ಧ ಬದುಕು ಸಾಗಿಸಿದರೆಂಬುದನ್ನು ಉಲ್ಲೇಖಿಸುತ್ತವೆ. ಪ್ರಭುತ್ವದ ಆಡಳಿತಕ್ಕೆ, ಸಂಬಂಧಪಟ್ಟ ಕೆಲವು ಸೇವೆಗಳಲ್ಲಿ, ಜನಜೀವನದ ವಿವಿಧ ಕ್ಷೇತ್ರಗಳಲ್ಲಿ ಅವರು ಎಲ್ಲರಂತೆ ಪರಿಶ್ರಮ ಹೊಂದಿದ್ದರೆಂದು ತಿಳಿಯುತ್ತದೆ. ಮುಖ್ಯವಾಗಿ ಸೈನ್ಯಬಲದಲ್ಲಿ ಅವರಿಗೆ ಪ್ರಾಮುಖ್ಯತೆ ನೀಡಲಾಗಿತ್ತು. ವಿಜಯನಗರದ ಸೈನ್ಯವನ್ನು ಬಲಪಡಿಸುವುದಕ್ಕಾಗಿ ಎರಡನೇ ದೇವರಾಯನು ಅಶ್ವದಳ, ಪದಾತಿದಳ ಮತ್ತು ಬಿಲ್ಲುಪಡೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಕೊಂಡಿದ್ದನೆಂದು ತಿಳಿಯುತ್ತದೆ. ಈ ಮೂರು ವಿಧದ ಸಮರಕಲೆಗಳಲ್ಲಿ ಮುಸಲ್ಮಾನರು ಹೆಚ್ಚಿನ ಪರಿಶ್ರಮ ಹೊಮದಿರುವುದನ್ನ ಅರಿತಿದ್ದ ಆತನು ತನ್ನ ಸೈನ್ಯ ಸಂಘಟನೆಯಲ್ಲಿ ಅವರು ಸೇರುವುದಕ್ಕೆ ಉತ್ತೇಜನ ನೀಡಿದ್ದನು. “ಕ್ರಿ.ಶ. ೧೪೩೦ರ ಶ್ರೀರಂಗಪಟ್ಟಣದ ಶಾಸನವೊಂದರ ಪ್ರಕಾರ ಎರಡನೇ ದೇವರಾಯನು ಸೈನ್ಯ ವ್ಯವಸ್ಥೆಯಲ್ಲಿ ೧೦ ಸಾವಿರ ಮುಸ್ಲಿಮರ ಕುದುರೆಪಡೆಯನ್ನು ಹೊಂದಿದ್ದನು. ಯುದ್ಧ ಕಲೆಯಲ್ಲಿ ಪರಿಣತರಾದ ಮುಸ್ಲಿಮರನ್ನು ಸೇರಿಸಿಕೊಳ್ಳವುದರ ಮೂಲಕ ಆತ ಸೈನ್ಯ ಸಂಘಟನೆಯನ್ನು ಬಲಪಡಿಸಿದನು. ಅವರಿಗೆ ಅನೇಕ ಜಾಗೀರುಗಳನ್ನು ನೀಡಿದನು. ವಿಜಯನಗರದಲ್ಲಿ ಮಸೀದಿಗಳನ್ನು ನಿರ್ಮಿಸುವುದಕ್ಕೆ ಮತ್ತು ಮುಸಲ್ಮಾನರು ತಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಹೋಗುವುದಕ್ಕೆ ತನ್ನ ಅಧಿಕಾರಿಗಳಿಂದಾಗಲಿ, ಇತರ ಪ್ರಜೆಗಳಿಂದಾಗಲಿ ಅಡ್ಡಿಯಾಗಲಿ, ಅಪಚಾರವಾಗಲಿ ಆಗಕೂಡದೆಂದು ಆಜ್ಞೆ ಮಾಡಿದ್ದನು. ಅಲ್ಲದೆ ತನ್ನ ಸಿಂಹಾಸನದ ಮುಂದುಗಡೆ ಒಂದು ಉನ್ನತ ಪೀಠದಲ್ಲಿ ಪವಿತ್ರ ಕುರಾನಿನ ಪ್ರತಿಯನ್ನು ಇಡಬೇಕೆಂದು ಆಜ್ಞೆ ಮಾಡಿದ್ದನು. ಈ ಪವಿತ್ರ ಗ್ರಂಥಕ್ಕೆ ನಮಿಸುವುದರ ಮೂಲಕ ವಿಧೇಯರಾಗಿರುವಂತೆ ತನ್ನಲ್ಲೂ ವಿಶ್ವಾಸವನ್ನು ತೋರಬೇಕೆಂದು ಬಯಸಿದ್ದನು.”[3]

ಸೈನ್ಯ ದಕ್ಷತೆಯನ್ನು ಹೆಚ್ಚಿಸುವ, ಸುಧಾರಿಸುವ, ವಿಶೇಷ ತರಬೇತು ನೀಡುವ ಪ್ರಕ್ರಿಯೆ ಮೊದಲನೇ ದೇವರಯನ ಕ್ರಿ.ಶ. (೧೪೦೬-೧೪೨೨) ಕಾಲದಲ್ಲೇ ಆರಂಭವಾದಂತೆ ಕಾಣುತ್ತದೆ. “ಒಂದನೇ ದೇವರಾಯನು ಅಶ್ವದಳದ ಮೌಲ್ಯವನ್ನು ಅರಿತವನಾಗಿದ್ದುದರಿಂದ ಅರೇಬಿಯಾ ಮತ್ತು ಪರ್ಶಿಯಾ ದೇಶಗಳಿಂದ ಕುದುರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಂಡುಕೊಂಡು ಅವುಗಳನ್ನು ಪಳಗಿಸಲು ಸಿಬ್ಬಂದಿಯನ್ನು ನಿಯಮಿಸಿದನು. ಅವನು ವಿದೇಶಿಯರನ್ನು ತನ್ನ ಸೇನೆಗೆ ನೇಮಕ ಮಾಡಿಕೊಂಡನು.”[4]ಇದರಿಂದ ವಿಜಯನಗರದ ಸೈನಿಕ ವ್ಯವಸ್ಥೆಯಲ್ಲಿ ಸಮರ ಕಲೆಗಳನ್ನು ಕರಗತ ಮಾಡಿಕೊಂಡಿದ್ದ ಮುಸ್ಲಿಮರು ಅಸಂಖ್ಯಾತರಾಗಿದ್ದರು. ಅವರಲ್ಲಿ ಹಲವರು ಅಧಿಕಾರಿಗಳು ಆಗಿದ್ದರು. ಅಂತಹ ಅಧಿಕಾರಿಯೊಬ್ಬನ ಹೆಸರು ಕ್ರಿ.ಶ. ೧೪೩೯ನೇ ಅವಧಿಯ ಹಂಪಿ ಶಾಸನವೊಂದರಲ್ಲಿ ಕಾಣಿಸುತ್ತದೆ. “ಶ್ರೀ ವೀರಪ್ರತಾಪ ದೇವರಾಯ ಮಹಾರಾಯರ ಶ್ರೀಪಾದ ಸೇವೆಯ ಕಟಿಗೆಯ ಆಮುದಖಾನನು ರಾಯರಿಗೆ ಧರ್ಮವಾಗಬೇಕೆಂದು ಕಟ್ಟಿಸಿದ ಧರ್ಮಸಾಲೆ ಬಾವಿ……”[5] ಇಲ್ಲಿ ಉಲ್ಲೇಖಿಸಲಾಗಿರುವ ‘ಧರ್ಮಸಾಲೆ’ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಮಸೀದಿ ಎಂಬುದು ವಾಸ್ತುನಿರ್ಮಾಣದ ಒಳಲಕ್ಷಣದಿಂದ ದೃಢಪಟ್ಟಿದೆ. ಈ ಮಸೀದಿಯ ತೊಲೆಯ ಮೇಲೆ ಈ ಶಾಸನ ಕೆತ್ತಿಸಿದ ವ್ಯಕ್ತಿ ಬಹುಶಃ ದಂಡವನ್ನು ಹಿಡಿಯುತ್ತಿದ್ದ ಒಬ್ಬ ಅಧಿಕಾರಿ ಅಹಮದ್ ಖಾನ್”[6] ಎಂದೂ ಡಾ. ಚನ್ನಬಸಪ್ಪ ಎಸ್. ಪಾಟೀಲರು ಮತ್ತು “ಕಟ್ಟಿಗೆ ಅಹಮದ್ ಖಾನ್ ಇಮ್ಮಡಿ ದೇವರಾಯನ ಅಂಗರಕ್ಷಕನಾಗಿದ್ದ. ಮಹಾರಾಜನಿಗೆ ಒಳ್ಳಯದಾಗಲೆಂದು ಆತ ಒಂದು ಅನ್ನಛತ್ರ ಕಟಟಿಸಿದ. ಈಗಲೂ ಅದನ್ನು ನೋಡಬಹುದು. ಅದರ ಪಕ್ಕದಲ್ಲೇ ಆತನ ಗೋರಿಯೂ ಇದೆ”[7] ಎಂದು ಡಾ. ವಸುಂಧರಾ ಫಿಲಿಯೋಜಾ ಅವರು ತಿಳಿಸುತ್ತಾರೆ. ಇವರಿಬ್ಬರ ಉಲ್ಲೇಖಗಳನ್ನು ಅನುಸರಿಸಿ ಹೇಳುವುದಾದರೆ ಅಹಮದ್ ಖಾನ್ ಒಬ್ಬ ಸಾಮಾನ್ಯ ಪ್ರಜೆಯಾಗಿರದೆ ಇಮ್ಮಡಿ ದೇವರಾಯನ ಸೈನ್ಯದಲ್ಲಿ ಒಂದು ಪ್ರಮುಖ ಸ್ಥಾನ ಪಡೆದಿದ್ದನೆಂಬುದು ಖಚಿತವಾಗುತ್ತದೆ.

ಸಮರಕಲೆಯಲ್ಲಿ ನಿಷ್ಣಾತರಾದ ಮುಸ್ಲಿಮ್ ವೀರರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಕನ್ನಡದ ಗಂಡುಗಲಿ, ಕುಮ್ಮಟದುರ್ಗ-ಹೊಸಮಲೆದುರ್ಗದ ವೀರ ಕುಮಾರರಾಮನ ಕಾಲಕ್ಕೂ ಹೋಗಬಹುದು. ಕುಮಾರರಾಮನಿಗೆ ಆಪ್ತರಾಗಿದ್ದ, ಅಂಗರಕ್ಷಕರಾಗಿದ್ದ ಆತನವಾರಗೆಯ ಸುಮಾರು ೧೦೦ ರಷ್ಟು ಸ್ನೆಹಿತರ ಪಡೆಯಲ್ಲಿ ಬಾದೂರಖಾನ (ಕುಮಾರರಾಮನ ಆಶ್ರಯ ಪಡೆದವ), ಮಹಿಮಯ ಖಾನ, ಅಬ್ದುಲ್ಖಾನ ಎಂಬುವರೂ ಇದ್ದರು. ಪಳಗಿದವರಾಗಿದ್ದ ಆವರು ಕುಮಾರರಾಮನ ನಡೆಸಿದ ಯುದ್ಧಗಳಲ್ಲಿ ಪಾಲ್ಗೊಂಡು ವೀರತನ ಮರೆದಿದ್ದನ್ನು ನಾವು ಕಾಣುತ್ತೇವೆ.[8]

ಈ ಮೇಲಿನ ಎಲ್ಲ ವಿಚಾರಗಳನ್ನು ತಾಳೆಹಾಕಿ ನೋಡಿದಾಗ, ವಿಜಯನಗರದ ಸೈನ್ಯದಲ್ಲಿದ್ದ ಯೋಧರಿಗೆ ಸಮರಕಲೆಯ ಒಂದು ಪ್ರಕಾರವಾಗಿದ್ದ ಕುಸ್ತಿಕಲೆ ಕರಗತವಾಗಿತ್ತು. ಈ ಪಡೆಯಲ್ಲಿರಬಹುದಾದ ಮೀರ್ ಪೈಲ್ವಾನನು ಶಾಸನದ ಮಾಧ್ಯಮಕ್ಕೆ ದಾಖಲಾದ ಆ ಕಾಲದ ಓರ್ವ ಶ್ರೇಷ್ಠ ಕುಸ್ತಿಪಟು ಎಂದು ತೀರ್ಮಾನಕ್ಕೆ ಬರಬಹುದಾಗಿದೆ.

ಇದಕ್ಕೆ ಪೂರಕವಾಗಿ ಇನ್ನಷ್ಟು ಆಧಾರಗಳನ್ನು ಸಮೀಕರಿಸಿ ನೋಡಬಹುದು. ವಿಜಯನಗರ ಪರಂಪರೆಯ ಭಾಗವಾಗಿ ಬೆಳೆದು ಬಂದಿರುವ ಮತ್ತು ಉಳಿದುಕೊಂಡಿರುವ “ಹೊಸಪೇಟೆ ತಾಲೂಕಿನ ಗರಡಿಮನೆಗಳಲ್ಲಿ ಆಂಜನೇಯ, ಮೌಲಾಲಿ ಮತ್ತು ಕುಮಾರ ರಾಮರನ್ನು ಗರಡಿದೈವಗಳೆಂದು ಭಾವಿಸಿದ್ದಾರೆ. ಹಿಂದೂ-ಮುಸ್ಲಿಮ್ ಎಂಬ ಭೇದ ಭಾವನೆ ಇಲ್ಲದೆ ಇಲ್ಲಿ ಸಾಧನೆ ಮಾಡುತ್ತಾರೆ” ಎಂದು ಗರಡಿ ಸಂಪ್ರದಾಯದ ಬಗ್ಗೆ ಅಧ್ಯಯನ ನಡೆಸಿದ ಪಿ.ಹೆಚ್.ಡಿ.  ಮಹಾಪ್ರಬಂಧದಲ್ಲಿ ತಿಳಿಸಲಾಗಿದೆ.”[9]ಆಂಜನೇಯ,  ಕುಮಾರ ರಾಮರು ವೀರತನಕ್ಕೆ ಪ್ರತೀಕವಾದಂತೆ ಮೌಲಾಲಿ ಸಹ ಆದರ್ಶಪ್ರಾಯರಾಗಿದ್ದಾರೆ. ಮಹಮ್ಮದ್ ಪೈಗಂಬರರ ಅಳಿಯರಾದ ಮತ್ತು ಹಸನ್-ಹುಸೇನರ ತಂದೆಯವರಾದ ಹಜ್ರತ್ ಅಲಿಯವರನ್ನು ಮುಸ್ಲಿಮರು ‘ಶಕ್ತಿಯ ಸಂಕೇತ (Symbol of Power)ವೆಂದು ಭಾವಿಸುತ್ತಾರೆ. ಹೀಗಾಗಿ ಗರಡಿ ಕಲೆಗೆ ಮತ್ತು ವೀರತನಕ್ಕೆ ಜನಪದರು ಇವರನ್ನು ಆದರ್ಶವಾಗಿ ಪರಿಗಣಿಸಿರುವುದರಲ್ಲಿ ವಿಶೇಷಾರ್ಥವೂ ಅನನ್ಯತೆಯೂ ಪ್ರತಿಬಿಂಬಿತವಾಗುತ್ತದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಹಂಪಿಯ ಗುಂಡುಕಲ್ಲಿನ ಮೇಲೆ ಶಾಶ್ವತವಾಗಿ ಶಾಸನದ ರೂಪದಲ್ಲಿ ಉಳಿದುಕೊಂಡು ‘ಮೀರಿಪಾಲುವಾನನು’ ಮಲ್ಲಕಲೆಯಲ್ಲಿ ಅನುಭವ ಹೊಂದಿದ ಆ ಕಾಲದ ಪ್ರಸಿದ್ಧ ಪೈಲ್ವಾನಾಗಿರಬೇಕು ಎಂಬುದರ ಬಗ್ಗೆ ಅನುಮಾನ ಉಳಿಯಲಾರದು. ಮುಸ್ಲಿಮರನ್ನು ಉಲ್ಲೇಖಿಸುವ ಇತರ ಶಾಸನಗಳಾದರೂ (ಇವು ಹಂಪಿಯ ಶಾಸನಗಳು) ಏನನು ಹೇಳುತ್ತವೆ – ಮಿಯಾರಾವುತನಿಗೆ ಪುಣ್ಯವಾಗಬೇಕೆಂದು ಬಸವ….. ನಾಯಕನು ‘ಗೋರಿ’ ‘ಮಸೂಜಿ’ಯನ್ನು ಕಟ್ಟಿಸಿದ್ದಾನೆ. ಪಿಲಿಕುಂಚಲಕ ಎಂಬುವನು ಬಯಿರಾವುತನಿಗೆ ಬಾಯಿಯನ್ನು ದಾನ ಮಾಡಿದ್ದಾನೆ. ಚಿಕ್ಕರಾಯರಿಗೆ ಪುಣ್ಯವಾಗಲೆಂದು ಶಕಲಜರಾವುತನು ‘ಗುಂಮತ’ ಕಟ್ಟಿಸಿದ್ದಾನೆ. ವೀರಪ್ರತಾಪದೇವರಾಯನಿಗೆ ಒಳ್ಳೆಯದಾಗಲೆಂದು ಕಟ್ಟಿಗೆಯ ಆಮುದಖಾನನು ಧರ್ಮಸಾಲೆ (ಮಸೀದಿ) ಮತ್ತು ಬಾವಿಯನ್ನು ಕಟ್ಟಿಸಿದ್ದಾನೆ. ಹೀಗೆ ಈ ಶಾಸನಗಳಲ್ಲಿ ಉಲ್ಲೇಖಗೊಂಡಿರುವ ಹೆಸರುಗಳು, ಮಾಡಿರುವ ದಾನಗಳು, ಕಟ್ಟಿಸಿರುವ ಗುಮ್ಮಟ ಮಸೀದಿಗಳ ಹಿನ್ನೆಲೆಯಲ್ಲಿ ಜಾತ್ಯಾತೀತ ಮನೋಭಾವವನ್ನು, ವಿಶೇಷ ಸಾಧನೆಗಳನ್ನು ಎತ್ತಿಹಿಡಿದಿವೆ. ಅದೇ ರೀತಿ ಮನೆಯನ್ನು ದಾನ ಮಾಡಿರುವ ವ್ಯಕ್ತಿ ‘ಮೀರಿಪಾಲುವಾನ’ ಹೆಸರಿನಲ್ಲಿನ ವಿಶೇಷತೆಯೇನೆಂದರೆ ಆತ ಪೈಲ್ವಾನಾಗಿದ್ದನೆಂಬುದೇ ಆಗಿದೆ.

ಇನ್ನು ಎರಡನೆಯ ಶಾಸನದ ಬಗ್ಗೆ ಪರಿಶೀಲಿಸುವಾ.

ಎರಡನೇ ಶಾಸನ: ಕುಸ್ತಿಯಲ್ಲಿ ಮಹಿಳೆಯರು

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕ್ರಿ.ಶ. ೧೪೪೬ರ ಶಾಸನವೊಂದು ಕುಸ್ತಿ ಕಾಳಗಕ್ಕೆ ಇನ್ನೊಂದು ಆಧಾರವನ್ನು ಒದಗಿಸುತ್ತದೆ  ಮತ್ತು ಈ ಕ್ಷೇತ್ರದಲ್ಲಿ ಮಹಿಳೆಯರು ಸಹ ಪರಿಶ್ರಮ ಹೋಂದಿದ್ದರೆಂಬ ವಿಚಾರದ ಮೇಲೆ ಬೆಳಕು ಚೆಲ್ಲುತ್ತದೆ. ‘ಎಪಿಗ್ರಾಫಿಯಾ ಕರ್ನಾಟಕ‘ದ ೭ನೇ ಸಂಪುಟದಲ್ಲಿ ಸೇರಿರುವ ಈ ಶಾಸನವನ್ನು ಉಲ್ಲೇಖಿಸುತ್ತಾ ಎನ್. ಸರಸ್ವತಿ ನಾಣಯ್ಯ ಅವರು ‘ನಾಗನಗೌಡನ ಮಗ ಮಾದಿಗೌಡನು ಕುಸ್ತಿ ಯಾಡುತ್ತಿರುವಾಗ ಮರಣ ಹೊಂದಿ ಸ್ವರ್ಗ ಸೇರಿದನು. ಆತನ ಮಗಳು ಹರಿಯಕ್ಕ ತನ್ನ ತಂದೆಯನ್ನು ಕೊಂದ ಕುಸ್ತಿ ಪಟುವಿನೊಂದಿಗೆ ಕಾದು ತಾನೂ ಸ್ವರ್ಗ ಸೇರಿದಳು. ಈ ವೀರಗಲ್ಲನ್ನು ಅವರ ಚಿಕ್ಕಪ್ಪ ಚೆನ್ನ ನಿಲ್ಲಿಸಿದನು. ವೀರಗಲ್ಲಿನ ಮೇಲಿನ ಭಾಗದಲ್ಲಿ ಒಬ್ಬ ಕುಸ್ತಿಪಟ್ಟು ನಿಂತಿದ್ದಾನೆ. ಅವನ ಎದುರಿಗೆ ನಿಂತಿರುವ ಹರಿಯಕ್ಕ ಎಡಗೈಯಲ್ಲಿ ಅವಮ ಜುಟ್ಟು  ಹಿಡಿದು ಬಲಗೈಯಲ್ಲಿ ಖಡ್ಗದಿಮದ ಅವನನ್ನು ಇರಿಯುತ್ತಿದ್ದಾಳೆ. ಇದರಿಂದ ಹಿರಿಯಕ್ಕ ವಿಜಯನಗರ ಕಾಲದಲ್ಲಿ ಪ್ರಖ್ಯಾತ ಕುಸ್ತಿಪಟುವಾಗಿದ್ದಳು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.”[10] ‘ವಿಜಯನಗರದ ಕಾಲದ ಶಿಲ್ಪದಲ್ಲಿ ಮಹಿಳೆಯರು’ ಕುರಿತು ಲೇಖನ ಬರೆದಿರುವ ಎನ್. ಸರಸ್ವತಿ ಅವರು ಈ ಮೇಲಿನ ಪ್ರತಿಪಾದನೆಯನ್ನು ಸಮರ್ಥಿಸಿದ್ದಾರಲ್ಲದೆ, ಹಿರಿಯಕ್ಕ ಆ ಕಾಲದ ಪ್ರಸಿದ್ದ ಕುಸ್ತಿಪಟು ಎಂಬುದನ್ನು ಒಪ್ಪಿಕೊಂಡಿದ್ದಾರೆ.[11] ಆದರೆ, ‘ವಿಜಯನಗರ ಕಾಲದ ಸೈನ್ಯ ವ್ಯವಸ್ಥೆ ಮತ್ತು ಯುದ್ಧನೀತಿ’ಯ ಕುರಿತು ಸಂಶೋಧನ ಅಧ್ಯಯನ ನಡೆಸಿದ ಎಸ್.ವೈ. ಸೋಮಶೇಖರ್ ಅವರು ಹಿರಿಯಕ್ಕನನ್ನು ಕುಸ್ತಿಪಟುವಾಗಿ ಕಂಡೇ ಇಲ್ಲ. ಶತ್ರುವಿನೊಂದಿಗೆ ಹೋರಾಡಿದ ವೀರಮಹಿಳೆ. ಮಧ್ಯಯುಗದ ವೀರಮಹಿಳೆಗೆ ನೈಜ ದಾಖಲೆಯಾಗಿದೆ ಈ ಶಿಕಾರಿಪುರದ ವೀರಗಲ್ಲು ಎಂದು ತಮ್ಮ ಪ್ರಬಂಧದಲ್ಲಿ ಅಭಿಪ್ರಾಯ ಮಂಡಿಸಿದ್ದಾರೆ.”[12]

ಮೇಲಿನ ಇಬ್ಬರ ಅಭಿಪ್ರಾಯಗಳಿಗೆ ಸೋಮಶೇಖರ್ ಅವರ ಅಭಿಪ್ರಾಯ ಸ್ವಲ್ಪ ಭಿನ್ನವಾಗಿದೆ. ಹಿರಿಯಕ್ಕನನ್ನು ವೀರಮಹಿಳೇಯ ಸ್ಥಾನದಲ್ಲಿ ನಿಲ್ಲಿಸುವುದೊಂದೇ ಅವರ ದೃಷ್ಟಿಯಾದಂತಿದೆ. ತನ್ನ ತಂದೆಯನ್ನು ಕುಸ್ತಿಯಾಟದಲ್ಲಿ ಕೊಂದ ಪ್ರತಿಸ್ಪರ್ಧಿ ಕುಸ್ತಿಪಟುವನ್ನು ಕಣದಲ್ಲಿ ಹಾರಾಡಿ ಅವನ ಜುಟ್ಟನ್ನು ಹಿಡಿದು ಮಣಿಸುವಷ್ಟು ಮಟ್ಟಕ್ಕೆ ಬರಬೇಕಾದರೆ ಆಕೆ ಕುಸ್ತಿಪಟ್ಟುಗಳನ್ನು ಅರಿತವಳೆ ಆಗಿರಬೇಕು. ವೀರಗಲ್ಲಿನ ಚಿತ್ರ ಮತ್ತು ಇದಕ್ಕೆ ಸಂಬಂಧಿಸಿದ ವಿವರವು ಸರಿಯಾಗಿ ತಾಳೆಯಾಗುತ್ತದೆ. ಆದ್ದರಿಂದ ಕುಸ್ತಿ ಅಖಾಡಕ್ಕೆ ಇಳಿದು ತನ್ನ ವಿರೋಧಿ ಕುಸ್ತಿಯಾಳನ್ನು ಮುಗಿಸುವ ಹಂತಕ್ಕೆ ತಲುಪಿದ ಹರಿಯಕ್ಕ ಪಳಗಿದ ಓರ್ವ ಕುಸ್ತಿಪಟುವೂ ಹೌದು, ಈ ದಿಶೆಯಲ್ಲಿ ಹೋರಾಡಿ ಮಡಿದ ವೀರಮಹಿಳೆಯೂ ಹೌದೆಂದು ಸ್ಪಷ್ಟವಾಗುತ್ತದೆ.

ವಿಜಯನಗರದ ಮಹಿಳೆಯರು ಮಲ್ಲಕಲೆಯಲ್ಲಿ ಪರಿಣತರಾಗಿದ್ದರೆ? ಅನ್ನುವುದಕ್ಕೆ ಶಾಸನಗಳು ಸಿಕ್ಕುವುದಿಲ್ಲ. ಶಿಕಾರಿಪುರದ ಶಾಸನವೊಂದೇ ಏಕೈಕ ಆಧಾರವಾಗಿ ನಿಲ್ಲುತ್ತದೆ. ಆದರೆ ಗರಡಿ ಸಾಧನೆಯ ಕ್ಷೇತ್ರದಲ್ಲಿ ವಿಜಯನಗರದ ಮಹಿಳೆಯರು ಪಾಲ್ಗೊಳ್ಳುತ್ತಿದ್ದರು ಎಂಬುದನ್ನು ವಿದೇಶಿ ಪ್ರವಾಸಿಗರ ಉಲ್ಲೇಖಗಳಿಂದ, ಕೆಲವು ಸಾಹಿತ್ಯ ಕೃತಿಗಳಿಂದ ನಾವು ಗ್ರಹಿಸಬಹುದಾಗಿದೆ. ಕೃಷ್ಣದೇವರಾಯನ ಕಾಲಕ್ಕೆ ವಿಜಯನಗರಕ್ಕೆ ಭೇಟಿ ನೀಡಿದ್ದ ಪೋರ್ಚುಗೀಸ್ ಪ್ರವಾಸಿ ಡೊಮಿಂಗೋ ಪಯಸ್ ನು ಅರಮನೆ ಪ್ರದೇಶದಲ್ಲಿ ಸುತ್ತಾಡುವಾಗ “ಈ ಆವರಣದೊಳಗೆ ಸುಮಾರು ೧೨,೦೦೦ ಪರಿಚಾರಿಕೆಯರಿರುವರೆಂದು ಹೇಳುತ್ತಾರೆ. ಖಡ್ಗ ಗುರಾಣಿಯನ್ನು ಉಪಯೋಗಿಸಬಲ್ಲ, ಕುಸ್ತಿಯಾಡಿಬಲ್ಲ, ಅನೇಕ ತರದ ವಾದ್ಯಗಳನ್ನು ನುಡಿಸಬಲ್ಲ ಹೆಂಗಸರು ಇಲ್ಲಿದ್ದಾರೆ. ಅದೇ ರೀತಿ ಪಲ್ಲಕ್ಕಿ ಹೊರುವ ಹೆಂಗಸರು, ಅಗಸಗಿತ್ತಿಯರು, ದ್ವಾರಗಳ ಕಾವಲುಗಾರರು ಹೆಂಗಸರೇ”[13] ಎಂದು ಉಲ್ಲೇಖಿಸಿದ್ದಾರೆ. ಅಚ್ಯುತದೇವರಾಯನ ಕಾಲಕ್ಕೆ ವಿಜಯನಗರಕ್ಕೆ ಬಂದಿದ್ದ ಇನ್ನೊಬ್ಬ ಪೋರ್ಚುಗೀಸ್ ಪ್ರವಾಸಿ ಫೆರ್ನಾವೋನ್ಯೂನಿಜ್ (ಈತ ಕುದುರೆ ವ್ಯಾಪಾರಿ) ಇಂತಹದೇ ಚಿತ್ರಣವನ್ನು  ನೀಡುತ್ತಾನೆ – “ಈ ರಾಜ ತನ್ನ ದ್ವಾರದೊಳಗೆ ನಲ್ಕು ಸಾವಿರಕ್ಕೂ ಹೆಚ್ಚು ಸ್ತ್ರೀಯರನ್ನು ಹೊಂದಿದ್ದಾನೆ. ಅವರೆಲ್ಲ  ಅರಮನೆಯಲ್ಲಿ ಇರುತ್ತಾರೆ. ಕೆಲವರು ನೃತ್ಯಗಾರ್ತಿಯರಾಗಿರುತ್ತಾರೆ, ಇನ್ನು ಕೆಲವರು ರಾಜನ ಹೆಂಡಂದಿರನ್ನು ಮತ್ತು ಅರಮನೆಯೊಳಗಡೆ ರಾಜನನ್ನು ತಮ್ಮ ಹೆಗಲ ಮೇಲೆ ಹೋರುವ ಬೋಯಿಗಳ ಇರುತ್ತರೆ. ಏಕೆಂದರೆ ರಾಜನ ಮನೆಗಳು ದೊಡ್ಡವಿದೆ ಮತ್ತು ಒಂದು ಮತ್ತೊಂದರ ನಡುವೆ ಬಹಳ ಅಂತರವಿರುತ್ತದೆ. ಅವನಲ್ಲಿ ಕುಸ್ತಿ ಆಡುವ ಸ್ತ್ರೀಯರೂ ಮತ್ತು ಭವಿಷ್ಯ ಹಾಗೂ ಕಣಿ ಹೇಳುವ ಇತರರು ಇದ್ದಾರೆ. ಅವನಲ್ಲಿ ದ್ವಾರದೊಳಗೆ ಮಾಡಲಾದ ಖರ್ಚುಗಳನ್ನು ಲೆಕ್ಕ ಬರೆಯುವ ಸ್ತ್ರೀಯರೂ ಮತ್ತು ರಾಜ್ಯದ ಎಲ್ಲ ಆಗುಹೋಗುಗಳನ್ನು ಬರೆದು ಹೊರಗಿನ ಲೇಖಕರೊಂದಿಗೆ ತಮ್ಮ ಪುಸ್ತಕಗಳನ್ನು ಹೋಲಿಸಿ ನೋಡುವ ಕರ್ತವ್ಯವುಳ್ಳ ಇತರರೂ ಇದ್ದರೆ. ಅವನನ್ನು ದ್ವಾರದೊಳಗೆ ಮಾಡಲಾದ ಖರ್ಚುಗಳನ್ನು ಲೆಕ್ಕ ಬರೆಯುವ ಸ್ತ್ರೀಯರೂ ಮತ್ತು ರಾಜ್ಯದ ಎಲ್ಲ ಆಗುಹೋಗುಗಳನ್ನು ಬರೆದು ಹೊರಗಿನ ಲೇಖಕರೊಂದಿಗೆ ತಮ್ಮ ಪುಸ್ತಕಗಳನ್ನು ಹೋಲಿಸಿ ನೋಡುವ ಕರ್ತವ್ಯವುಳ್ಳ ಇತರರೂ ಇದ್ದಾರೆ. ಅವನಲ್ಲಿ ಸಂಗೀತಕ್ಕೂ ಸ್ತ್ರೀಯರಿದ್ದಾರೆ. ಅವರು ವಾದ್ಯಗಳನ್ನು ನುಡಿಸುತ್ತಾರೆ ಮತ್ತು ಹಾಡುತ್ತಾರೆ. ರಾಜನ ಹೆಂಡಂದಿರೂ ಸಂಗೀತದಲ್ಲಿ ಪರಿಣಿತರಿರುವರು.”[14]

ಅರಮನೆಯೊಳಗೆ ದವಿವಿಧ ರೀತಿಯ ಸೈವೆಗೈಯ್ಯುವ ಪರಿಚಾರಿ (ದಾಸಿ)ಯರು ಮತ್ತು ಅವರ ವೃತ್ತಿ ವೈಶಿಷ್ಟ್ಯಗಳು ಇಬ್ಬರು ಪ್ರವಾಸಿಗರ ವರ್ಣನೆಯಲ್ಲಿ ಸಿಗುತ್ತವೆ. ಮಹಿಳಾ ಅಧ್ಯಯನಕ್ಕೆ ಒಂದು ವಿಶೇಷ ನೋಟ ಇಲ್ಲಿದೆ. ಅರಮನೆಯಲ್ಲಿ ಕುಸ್ತಿಯಾಡಬಲ್ಲ ದಾಸಿಯರನ್ನು ಸಹ ಅವರು ಉಲ್ಲೇಖಿಸಿದ್ದಾರೆ. ಮಹಿಳೆಯರ ಈ ಕುಸ್ತಿಯಾಟ ಅರಮನೆಯ ರಾಜ, ರಾಣಿಯರನ್ನು ಮನರಂಜಿಸುವ ಕ್ರೀಡೆಯಾಗಿತ್ತೆಂದು ಇದರಿಂದ ಗೊತ್ತಾಗುತ್ತದೆ. ಆದರೆ ಅವರು ಬಹಿರಂಗವಾಗಿ ಕುಸ್ತಿ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದರೆ ಎನ್ನುವುದು ಗೊತ್ತಾಗುವುದಿಲ್ಲ. ಇದರಿಂದ ಅರಮನೆಯ ದಾಸಿಯರಲ್ಲಿದ ಒಂದು ವರ್ಗವು ಮಲ್ಲಕಲೆಯಲ್ಲಿ ಪರಿಣತಿ ಹೊಂದಿತ್ತೆಂದು ತಿಳಿಯುತ್ತದೆ. ಹಂಪಿಯ ಹಜಾರರಾಮ, ವಿಜಯವಿಠ್ಠಲ, ಅಚ್ಯುತರಾಯ, ವಿರುಪಾಕ್ಷ ದೇವಾಲಯಗಳ, ಮಹಾನವಮಿ ದಿಬ್ಬಗಳಲ್ಲಿರುವ ಉಬ್ಬುಶಿಲ್ಪ ರಚನೆಗಳಲ್ಲಿ ಮಹಿಳೆಯರನ್ನು ಹೋರಾಟಗಾರರಾಗಿ, ಕುಸ್ತಿಪಟುಗಳಾಗಿ, ಅಂಗರಕ್ಷಕರಾಗಿ, ನೃತ್ಯಗಾರ್ತಿಯರಾಗಿ, ಸಂಗೀತಗಾರರಾಗಿ ಚಿತ್ರಿಸಿದ್ದಾರೆ. ಪ್ರವಾಸಿಗರು ನೀಡುರುವ ವರ್ಣನೆಗಳಿಗೂ ಶಿಲ್ಪಗಳು ನೀಡುವ ಚಿತ್ರಣಕ್ಕೂ ಸಾಮ್ಯತೆ ಇರುವುದು ಸ್ಪಷ್ಟವಾಗುತ್ತದೆ.

ವಿಜಯನಗರ ಕಾಲದಲ್ಲಿ ವೇಶ್ಯಾವಾಟಿಕೆ ವೃತ್ತಿಗೆ ಇಳಿಯುವ ಮಹಿಳೆಯರು ಸಂಗೀತ ನೃತ್ಯಗಳ ಜೊತೆಗೆ ಮಲ್ಲವಿದ್ಯೆಯನ್ನು ಅರಿತಿರುವುದು ಅನಿವಾರ್ಯವಾಗಿತ್ತೆಂದು ಕೃಷ್ಣದೇವರಾಯನು ಬರೆದ ‘ಆಮುಕ್ತಮಾಲ್ಯ’ದಲ್ಲಿ ಕೃತಿಯಿಂದ ತಿಳಿಯುತ್ತದೆ. “ವೇಶ್ಯೆಯರು ಸಂಗೀತ ವಿದ್ಯೆಯಲ್ಲಿ ವಿಶೇಷ ಸಾಧನೆ ಮಾಡುತ್ತಿದ್ದರು. ಅವರು ತಮ್ಮ ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿ ಬಿಡುತ್ತಿದ್ದರು. ವೇಶ್ಯೆಯರೆಂದು ಸಮಾಜದಲ್ಲಿ ಅವರ ಗೌರವಗಳು ಕಡಿಮೆಯಾಗುತ್ತಿರಲಿಲ್ಲ. ಧನಿಕರು ಅವರನ್ನು ಪೋಷಿಸುತ್ತಿದ್ದರು. ಅವರು ಗುಡಿಗಳಲ್ಲಿ, ಅರಮನೆಗಳಲ್ಲಿ ನಿರಾತಂಕವಾಗಿ ಪ್ರವೇಶಿಸಬಹುದಾಗಿತತು. ನಡುರಾತ್ರಿಯಲ್ಲಿ ವೇಶ್ಯೆಯರು ಕುಸ್ತಿ ಸಹ ಕೊಟ್ಟಿದ್ದನು.[15] ‘ವಿಜಯನಗರದಲ್ಲಿ ಸೂಳೆಯರ ಸಂಖ್ಯೆ ಅಪಾರವಾಗಿತ್ತೆಂದೂ ಕೃಷ್ಣದೇವರಾಯನಿಗೆ ಆ ಸೂಳೆಗೇರಿ ಚೆನ್ನಾಗಿ ಪರಿಚಿತವಾಗಿರಬೇಕೆಂದು ‘ಆಮುಕ್ತಮಾಲ್ಯ’ದಲ್ಲಿ ಮೇಲಿಂದ ಮೇಲೆ ಬರುವ ಸೂಳೆಗೇರಿಯ ವರ್ಣನೆಗಳಿಂದ ತಿಳಿಯುತ್ತದೆ.”[16] ಇದರಿಂದ ವ್ಯಕ್ತವಾಗುವ ಸಂಗತಿಯೆಂದರೆ, ಮಹಿಳೆಯರಲ್ಲಿ ಮುಖ್ಯವಾಗಿ ವೇಶ್ಯೆಯರು ಸಂಗೀತ, ನೃತ್ಯ ಮತ್ತು ಗರಡಿ ಕಲೆಗಳನ್ನು ತಮ್ಮ ವೃತ್ತಿಗೆ ಪೂರಕವಾಗಿ ಮೈಗೂಡಿಸಿಕೊಂಡಿದ್ದರೆಂದಬುದು. ಇವರ ಬದುಕಿಗೆ ನೈತಿಕ ಮತ್ತು ಆರ್ಥಿಕ ಆಧಾರವಾಗಿ ಸೂಳೆಯಕೇರಿಗಳು ಪ್ರಮುಖ ಕೇಂದ್ರಗಳಾಗಿದ್ದವು. ವಿಜಯನಗರ ಕಾಲದಲ್ಲಿ ವ್ಯಾಪಾರದ ವಹಿವಾಟಿಗೆಂದೇ ಬಜಾರುಗಳ ವ್ಯವಸ್ಥೆ ಇದ್ದಂತೆ ವೇಶ್ಯೆಯರಿಗೆ ಸೂಳೆಬಜಾರು ಇತ್ತೆಂಬುದು ಖಚಿತ. ನರ್ತಕಿಯರನ್ನು ದೇವದಾಸಿಯರನ್ನಾಗಿ ಬಿಡುವ ಪದ್ಧತಿಗೆ ಪೂರಕವಾದ ತರಬೇತು, ತಯಾರಿಗಳು ಅಲ್ಲಿ ನಡೆಯುತ್ತಿರಬೇಕು.

ಇದಕ್ಕೆ ಪ್ರತ್ಯೇಕವಾಗಿ ಗರಡಿಸಾಧನೆ ಕುರಿತ ಉಲ್ಲೇಖವೊಂದು ಎ.ಎಸ್. ನಂಜುಂಡ ಸ್ವಮಿಯವರ ‘ವಿಜಯನಗರದ ಇತಿಹಾಸ’ ಗ್ರಂಥದಲ್ಲಿ ಸಿಕ್ಕುತ್ತದೆ. “ನೃತ್ಯ ಶಿಕ್ಷಣಕ್ಕೆ ಪೂರ್ವಭಾವಿಯಾದ ಅಂಗಸೌಷ್ಠವವನ್ನು ಬೆಳೆಸಿಕೊಳ್ಳಲು ಮಹಿಳೆಯರು ನಾನಾ ಬಗೆಯ ವ್ಯಾಯಾಮಗಳನ್ನು ಮಾಡಬೇಕಾಗಿದ್ದಿತು. ವಿಜಯನಗರದ ಅರಮನೆಯಲ್ಲಿ ಸ್ತ್ರೀಯರಿಗಾಗಿ ಪ್ರತ್ಯೇಕ ಗರಡಿಮನೆ ಇದ್ದಿತು.”[17]

ಶಿಕಾರಿಪುರದ ಶಾಸನವನ್ನು ಬೆಂಬತ್ತಿ, ಮಹಿಳೆಯರು ವಿಜಯನಗರ ಕಾಲದಲ್ಲಿ ಮಲ್ಲವಿದ್ಯೆಯಲ್ಲಿ ಪರಿಣತರಾಗಿದ್ದರೇ ಎಂಬುದರ ಕುರಿತು ಕಲೆ ಹಾಕಿದ ವಿವರಗಳು ಹೌದೆಂದು ಪುಷ್ಟಿ ನೀಡುತ್ತವೆ. ಆದರೆ, ಬಹಿರಂಗ ಪ್ರದರ್ಶನಕ್ಕೆ ಇವರ ಸಾಧನೆ ದೊರೆಯುತ್ತಿರಲಿಲ್ಲ, ಪ್ರತ್ಯೇಕವಾಗಿ ನಡೆಯುತ್ತಿತ್ತು ಎಂದು ಗೊತ್ತಾಗುತ್ತದೆ. ಉನ್ನತ ವರ್ಗಕ್ಕೆ ತೃಪ್ತಿಪಡಿಸಲೋಸುಗ ಮತ್ತು ತಮ್ಮ ಬದುಕಿಗಾಗಿ ಈ ಕಲೆಯನ್ನು ಪೂರಕವಾಗಿ ಕರಗತ ಮಾಡಿಕೊಂಡಿದ್ದರೆಂದು ಒಳನೋಟಗಳಿಂದ ತಿಳಿಯುತ್ತದೆ.

ಈ ಕುಸ್ತಿಕಲೆಗೆ ಆಧಾರವಾಗಿ ನಿಲ್ಲಬಲ್ಲ ಈ ಎರಡು ಶಾಸನಗಳು ಮತ್ತು ಇದನ್ನು ಅನುಸರಿಸಿ ಈ ಪ್ರಬಂಧದ ಟಿಪ್ಪಣಿಗಳನ್ನು ಮುಗಿಸುವಾಗ ಇನ್ನಷ್ಟು ಶಾಸನಗಳು ಅಲ್ಲಲ್ಲಿ ಇರಬಹುದೇ ಇದ್ದರೆ ಬೆಳಕಿಗೆ ಬರಿವ ಅವಶ್ಯಕತೆ ಎಂದು ಅನಿಸಿತು. ಮುಗಿಸುವ ಮುನ್ನ ಒಂದು ಮಾಹಿತಿ – “ಅತ್ಯಂತ ಬಲಿಷ್ಠರಾದ ಆನೆಗೊಂದಿ ರಾಜರ ಮರ್ಯಾದೆಗೆ ಕುಂದು ಉಂಟಾಗುವಂತೆ ಊರಬಾಗಲಿಗೆ ತನ್ನ ಇಜಾರ ಕಟ್ಟಿಸಿ ಮೆರೆಯುತ್ತಿದ್ದ ಬೀಮಾಜಟ್ಟಿ ಎಂಬುವನನ್ನು ಸೋಲಿಸಿದ ಜೋಡಿ ಮಲ್ಲಪ್ಪನಾಯ್ಕನಿಗೆ ಆನೆಗೊಮದಿ ರಾಜರಾದ ರಾಮರಾಯ ತಿರುಮಲರಾಜದೇವನು ಬುಕ್ಕಸಾಗರ ಹರಿಯಸಮುದ್ರ ಗ್ರಾಮಗಳ ನಡುವೆ ಇದ್ದ ಕಳಸಾಪುರ ಗ್ರಾಮವನ್ನು ಅದರ ಸಮೀಪವೇ ಇದ್ದ ಕಮಲಾಪುರದ ಕೆರೆಯ ಕೆಳಗಿನ ೩ ಖಂಡುಗ ಬೀಜಾವರಿ ಭೂಮಿಯನ್ನು ಉಂಬಳಿಯಾಗಿ ಕೊಟ್ಟ”[18] ಈ ವಿಚಾರವನ್ನು ತಿಳಿಸುವ ತಾಮ್ರಶಾಸನದ ಬಗ್ಗೆ ಉಲ್ಲೇಖ ಸಿಕ್ಕಿತು. ಕನ್ನಡ ಲಿಪಿಯಿರುವ ತೆಲುಗು ಭಾಷೆಯ ಈ ತಾಮ್ರಪತ್ರದ ಕುರಿತು ‘ನಾಯಕನಹಟ್ಟಿ  ಪಾಳೆಯಗಾರರು’ ಎಂಬ ಲೇಖನದಲ್ಲಿ ಮೀರಾಸಾಬಿಹಳ್ಳಿ ಶಿವಣ್ನನವರು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದ್ದಾರೆ. ಬೀಮಾಜಟ್ಟಿ ಎಂಬುವವನು ಕುಸ್ತಿ ಪೈಲ್ವಾನನಾಗಿದ್ದನೇ ಎಂಬುದು ಆತನ ಹೆಸರಿನಿಂದಷ್ಟೇ ತಿಳಿಯಬೇಕು. ವಿಜಯನಗರದ ಪಾಳೆಯಗಾರರ ಕುರಿತಾದ ಚರಿತ್ರೆಗಳನ್ನು ಅಭ್ಯಸಿಸಿದರೆ ಆ ಕುಸ್ತಿ ಕಲೆಯ ಬಗ್ಗೆ ಮಾಹಿತಿಗಳು ಲಭ್ಯವಾಗಬಹುದೇನೋ?

 

[1] ಡಾ. ದೇವರಕೊಂಡಾರೆಡ್ಡಿ (ಸಂ), ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟ ೩ (ಹಂಪಿ ಶಾಸನಗಳು) (ಇನ್ನು ಮುಂದೆ ಕವಿಶಾ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೦, ಶಾಸನಸಂಖ್ಯೆ ೩೧೨, ಪು. ೨೨೫.

[2] ಕವಿಶಾ, ಅದೇ ಸಂಪುಟ, ಪ್ರಸ್ತಾವನೆ, ಪು. xvi.

[3] ಡಾ. ಎಚ್.ಎಂ. ನಾಗರಾಜ, ದೇವರಯ II ಅಂಡ್ ಹಿಜ್ ಟೈಮ್ಸ್ (ಹಿಸ್ಟರಿ ಆಪ್ ವಿಜಯನಗರ) ಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಪ್ರ. ೧೯೨.

[4] ಎ.ಎಸ್. ನಂಜುಂಡಸ್ವಾಮಿ, ವಿಜಯನಗರದ ಇತಿಹಾಸ (ಇನ್ನು ಮುಂದೆ ವಿ.ಇ.) ಸಮಾಜ ಪುಸ್ತಕಾಲಯ, ಧಾರವಾಡ, ನಾಲ್ಕನೇ ಮುದ್ರಣ,  ೧೯೯೯, ಪು. ೩೬.

[5] ಕವಿಶಾ, ಸಂ. ೩, ಶಾಸನಸಂಖ್ಯೆ ೩೧೧, ಪು. ೨೨೪.

[6] ಡಾ,ಚನ್ನಬಸಪ್ಪ ಎಸ್. ಪಾಟೀಲ, ಕಲೆ ಮತ್ತು ವಾಸ್ತುಶಿಲ್ಪ, ಕರ್ನಾಟಕ ಚರಿತ್ರೆ( ಸಂಪುಟ ೩) (ಪ್ರ.ಸಂ. ಪ್ರೋ. ಬಿ. ಷೇಕ್‌ಅಲಿ, ಸಂಪುಟ ಸಂಪಾದಕರು ಪ್ರೋ. ಕೆ.ಎಸ್. ಶಿವಣ್ಣ), ಪ್ರಸಾರಾಂಗ, ಕ.ವಿ.ಹಂ. ೧೯೯೭, ಪುಟ ೩೬೩.

[7] ಡಾ. ವಸುಂದರಾ ಫಿಲಿಯೋಜಾ, ವಿಶ್ವಪರಂಪರೆಯಾದಿಯಲ್ಲಿ ಹಂಪೆ, ಕರ್ಮವೀರ ದೀಪಾವಳಿ ವಿಶೇಷಾಂಕ ೨೦೦೦, ಪುಟ ೧೭. (ಅಹಮರ್ದಖನ್ ಕಟ್ಟಿಸಿದ ಕಟ್ಟಡವನ್ನು ‘ಧರ್ಮಸಾಲೆ’ಎಂದು ಆತ ಕರೆದಿರುವುದರಿಂದ ಫಿಲಿಯೋಜಾ ಅವರು ಅದನ್ನು ಅನ್ನಛತ್ರವಲ್ಲ; ವಾಸ್ತುನಿರ್ಮಾಣದ ಒಳಲಕ್ಷಣಗಳ ಪ್ರಕಾರ ಅದು ಮಸೀದಿ ಎಮದು ದೃಢಪಟ್ಟಿದೆ.)

[8] ಡಾ. ಎಂ.ಎಂ. ಕಲಬುರ್ಗಿ (ಸಂ.), ಕೊಮಾರರಾಮಯ್ಯುಉನ ಚರಿತ್ರೆ (ಪ್ರಸ್ತಾವನೆ, ಪು. ೨೭, ೨೯, ೩೭), ಪ್ರಸಾರಾಂಗ, ಕ.ವಿ.ಹಂ. ೨೦೦೧.

[9] ಯು. ಮಲ್ಲಿಕಾರ್ಜುನ, ಹೊಸಪೇಟೆ ತಾಲೂಕಿನ ಗರಡಿ ಸಂಪ್ರದಾಯ, ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ, ಕ.ವಿ.ಹಂ. ೨೦೦೪, ಪುಟ ೭೫.

[10] ಎನ್. ಸರಸ್ವತಿ ನಾಣಯ್ಯ, ದಿ ಪೊಜಿಷನ್ ಆಫ್ ಉಮೆನ್ ಡೂರಿಂಗ್ ವಿಜಯನಗರ ಪಿರಿಯಡ್ (೧೩೩೬-೧೬೪೬), ಮೈಸೂರು, ಸರಸ್ವತಿ ಪಬ್ಲಿಕೇಶನ್, ಮೈಸೂರು, ೧೯೯೨.

[11] ಎನ್.ಸರಸ್ವತಿ, ವಿಜಯನಗರ ಕಾಲದ ಶಿಲ್ಪದಲ್ಲಿ ಸ್ತ್ರೀಯರು, ವಿಜಯನಗರ ಅರಮನೆ (ಸಂ.೨), ಎಂ.ಎಲ್. ಶಿವಶಂಕರ, ಚನ್ನಬಸಪ್ಪ ಎಸ್. ಪಾಟೀಲ (ಸಂ.), ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ೧೯೯೭, ಪುಟ ೦೧.

[12] ಎಸ್. ವೈ. ಸೋಮಶೇಖರ್, ವಿಜಯನಗರ ಕಾಲದ ಸೈನ್ಯ ವ್ಯವಸ್ಥೆ ಮತ್ತು ಯುದ್ಧನೀತಿ, ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ, ಕ.ವಿ.ಹಂ. ೨೦೦೦, ಪುಟ ೮

[13] ಎಂ.ಪಿ. ಪ್ರಕಾಶ್ (ಅನುವಾದ) ಡೊಮಿಂಗೋಸ್ ಪಿಯಾಸ್ ಕಂಡ ಸವಿಜಯನಗರ (ಮಂಟಪಮಾಲೆ-೫೯), ಪ್ರಸಾರಾಂಗ, ಕ.ವಿ.ಹಂ. ೨೦೦೦, ಪ್ರ. ೮

[14] ಸದಾನಂದ ಕನವಳ್ಳಿ (ಅನು), ರಾಬರ್ಟ್ ಸಿವೆಲ್ (ಮೂಲ), ಮರೆತು ಹೋದ ಮಹಾಸಾಮ್ರಾಜ್ಯ ವಿಜಯನಗರ, ಪ್ರಸಾರಾಂಗ, ಕ.ವಿ.ಹಂ. ೧೯೯೨, ಪುಟ ೪೦೬.

[15] ನಿರುಪಮಾ, ಆಮುಕ್ತಮಾಲ್ಯದ (ಮಂಟಪಮಾಲೆ-೬೩), ಪ್ರಸಾರಾಂಗ, ಕವಿ. ಹಂ. ೧೯೯೯, ಪುಟ ೧೬.

[16] ಅದೇ, ಪುಟ ೧೫.

[17] ವಿ. ಇ., ಪುಟ ೧೦೬.

[18] ಮೀರಾಸಾಬಿಹಳ್ಳಿ ಶಿವಣ್ಣ, ನಾಟಕನಹಟ್ಟಿ ಪಾಳೆಯಗಾರರು, ದಕ್ಷಿಣ ಕರ್ನಾಟಕ ಅರಸು ಮನೆತನಗಳು  (ಸಂ.ಡಾ.ಎಂ.ವಿ. ವಸು), ಪ್ರಸಾರಾಂತ, ಕ.ವಿ.ಹಂ. ೨೦೦೧, ಪುಟ ೭೯-೮೦.