ಭಾರತದಲ್ಲಿ ಪ್ರಚಲಿತವಿದ್ದ ಅರವತ್ನಾಲ್ಕು ವಿದ್ಯೆಗಳಲ್ಲಿ ಈ ಗರಡಿಕಲೆಯೂ ಒಂದು. ಸಮರ ಕಲೆಗಳಲ್ಲಿ ಒಂದೆಂದು ಪರಿಗಣಿಸಲಾಗುವ ಮಲ್ಲಯುದ್ಧ ಎನ್ನುವುದು ಈ ಕುಸ್ತಿಕಲೆಯೇ ಆಗಿದೆ. ಯಾವುದೇ ಆಯುಧ ಆಧಾರಗಳಿಲ್ಲದೆ, ತನ್ನ ದೈಹಿಕಶಕ್ತಿ ಮತ್ತು ಯುಕ್ತಿಗಳಿಂದ ನಡೆಸುವ ಕ್ರಿಯೆಯೇ ಈ ಮಲ್ಲಯುದ್ಧ. ಸಮರದ ವೇಳೆಯಲ್ಲಿ ಯುದ್ಧದ ಅಂಗವಾಗಿ ಬಳಕೆಗೊಳ್ಳುವ ಈ ಕಲೆ, ಸಾಮಾನ್ಯ ವೇಳೆಯಲ್ಲಿ ಕ್ರೀಡೆಯಾಗಿ ಬಳಕೆಗೊಳ್ಳುತ್ತದೆ. ಎಲ್ಲಾ ಸಮರ ಕಲೆಗಳ ತಾಯಿ ಬೇರಾಗಿರುವ ಈ ಕಲೆ ಪ್ರಾಚೀನ ಕಾಲದಿಂದಲೂ ಗೌರವಕ್ಕೆ ಪಾತ್ರವಾಗುತ್ತಲೇ ಬಂದಿದೆ.

ವಿಜಯನಗರ ಕಾಲದಲ್ಲಿ ಈ ಕಲೆ ಶ್ರೀಮಂತವಾಗಿ ಬೆಳೆದದ್ದನ್ನು ವಿದೇಶೀ ಪ್ರವಾಸಿಗಳು ವರ್ಣಿಸಿರುವುದನ್ನು ಗಮನಿಸಬಹುದು. ಗ್ರಾಮೀಣ ಭಾರತದ ಒಂದು ಅಂಗವೇನೋ ಎನ್ನುವಂತೆ ನಂಟನ್ನು ಹೊಂದಿದ್ದ ಕ್ರೀಡೆ ಎಂದರೆ ಕುಸ್ತಿ ಎನ್ನಬಹುದು. ದೈಹಿಕ ಶಕ್ತಿ ಮತ್ತು ಯುಕ್ತಿಗಳ ಪ್ರತೀಕವಾಗಿ ಈ ಗರಡಿಕಲೆ ಇದೆ. ಇದರ ಬಗ್ಗೆ ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಹಲವಾರು ಉಲ್ಲೇಖಗಳು ದೊರೆಯುತ್ತವೆ.

ಮಲ್ಲಯುದ್ಧ, ಮೃಗಯಾ ವಿನೋದಗಳು ಆಗಿನ ಕಾಲಕ್ಕೆ ಜನರ ಬಹು ಪ್ರಿಯವಾದ ವಿನೋದಗಳಾಗಿದ್ದವೆಂದು ತೋರುತ್ತದೆ. ನಂಜುಂಡ ಕವಿ ಹೊಸಮಲೆ ದುರ್ಗವನ್ನು ವರ್ಣಿಸುವಾಗ ಪುರದ ಹೊರವಲಯದೊಳಗೆ ಎಂಟು ದಿಕ್ಕಿನಲ್ಲಿ ಗರಡಿಗಳಿದ್ದವೆಂದು ಅಲ್ಲಿನ ಬಿರುದಿನ ಬಂಟರಿಗೆ ಪಾಡುಗಳನ್ನು ಭರಿಸುವ ಅಭ್ಯಾಸಗಳಿದ್ದವೆಂದೂ ಹೇಳುತ್ತಾನೆ. ಆ ಹೊಸಲಮಲೆ ದುರ್ಗದ ಹೊರವಲಯದಲ್ಲಿ ಬಿಲ್ಲಾಳು ಗುಲ್ಪುಗಳೆನಿಸುವ ಬಯಲು ಬಲುಮಲ್ಲರು ಹೆಣಗುವ ಬಯಲು ಪಲ್ಲವ / ಮಿಯ ಸಾಧನೆಯು ಬಯಲು ಕಣ್ಣಲ್ಲಲ್ಲಿ ಕರೆದೆಸೆದಿಹುದು.

ವಿಜಯನಗರದ ಕಾಲದಲ್ಲಿ ಕ್ರೀಡೆಗಳಿಗೆ ಸಾರ್ವತ್ರಿಕ ಪ್ರಾಮುಖ್ಯ ದೊರಕಿತ್ತು. ಆಗಿನ ಜನರ ಶಕ್ತಿ ಸಾಹಸ ಪ್ರದರ್ಶನಕ್ಕೆ ದ್ವಂದ್ವಯುದ್ಧ, ಜಟ್ಟಿಕಾಳಗ, ಮಲ್ಲಯುದ್ಧ, ಕತ್ತಿ ಸಾಧನೆ ಮತ್ತು ಬೇಟೆ ಇವು ಮುಖ್ಯ ಸಾಧನಗಾಗಿದ್ದವು. ರಾಜರೇ ಪ್ರದರ್ಶನಗಳಲ್ಲಿ ಭಾಗಿಗಳಾಗಿ ಮಾರ್ಗದರ್ಶಕರಾಗಿದ್ದರು. ಕೃಷ್ಣದೇವರಾಯನ ಬೆಳಗಿನ ವ್ಯಾಯಾಮವನ್ನು ಕುರಿತು ಪಾಯೇಸ ಕೊಡುವ ವರ್ಣನೆ ಸುಂದರವಾಗಿದೆ.

ಮಲ್ಲರು ಒಂದು ಜನಾಂಗವಾಗಿದ್ದು ಸಮಾಜದಲ್ಲಿ ಒಂದು ಗಣ್ಯಸ್ಥಾನವನ್ನು ಪಡೆದು ರಾಜರಿಂದ ಆಗಾಗ ಸಾರ್ವತ್ರಿಕ ಮನ್ನಣೆಯನ್ನು ಪಡೆದಿದ್ದರು. ರಾಜ ಸಭೆಗಳಲ್ಲಿ ಶೋಭಿಸುತ್ತಿದ್ದ ಕಲಾವಿದರಲ್ಲಿ ಮಲ್ಲರೂ ಕಠಾರಿ ವೀರರೂ ಇರುತ್ತಿದ್ದರು. ರಾಜರು ವಿಶೇಷ ಸಂದರ್ಭಗಳಲ್ಲಿ ಏರ್ಪಡಿಸುತ್ತಿದ್ದ ವಿನೋದ ಪ್ರದರ್ಶನಗಳಲ್ಲಿ ಜಟ್ಟಿ ಕಾಳಗವೂ ಇರುತ್ತಿತ್ತು.

ಕನಕದಾಸರು ದ್ವಾರಾಕಾನಗರಿಯಲ್ಲಿದ್ದ ನಾನಾ ಬಗೆಯ ಜನರನ್ನು ವರ್ಣಿಸುತ್ತ ಅಲ್ಲಿ ತೋರಿಯ ಭುಜವೆತ್ತು ಜಗಜಟ್ಟಿ ಮಸೆದ ಕಠಾರಿ ಬಂಡೆಯದ ಮಸಾಳು (ಶೂರ)ಗಳು ಇದ್ದುದಾಗಿ ಹೇಳುವರು. ಈ ಮಲ್ಲರಿಂದ ಆಗಾಗ ಸಾರ್ವಜನಿಕ ಪ್ರದರ್ಶನಗಳೂ ನಡೆಯುತ್ತದ್ದವು. ಹೀಗೆ ನಡೆಯುತ್ತಿದ್ದ ಸಾರ್ವಜನಿಕ ಪ್ರದರ್ಶನಗಳನ್ನು ಕಳೆಗಟ್ಟಿಸಲು ಸುಪ್ರಸಿದ್ಧ ಮಲ್ಲರನ್ನು ಎದುರಿಸಿ ಹೋರಾಡಲು ಮಾಸಾಳುಗಳನ್ನು ದುಡ್ಡು ಕೊಟ್ಟು ಕರೆಸುತ್ತಿದ್ದರೆಂದು ತೋರುತ್ತದೆ. ಹೊಟ್ಟೆ ಪಾಡಿಗಾಗಿ ನಾನಾ ವೃತ್ತಿಯನ್ನು ಅವಲಂಬಿಸಿ ಹಣ ಸಂಪಾದಿಸುವಂತೆ ಮಲ್ಲಯುದ್ಧದಲ್ಲಿ ಭಾಗವಹಿಸಿ ಹಣ ಸಂಪಾದಿಸುತ್ತಿದ್ದರೆಂದು ತೋರುತ್ತದೆ. “ಪಲ್ಲಕ್ಕಿ ಹೊರುವುದು ಹೊಟ್ಟೆಗಾಗಿ ದೊಡ್ಡ ಮಲ್ಲರೊಡನಾಡುವುದು ಹೊಟ್ಟೆಗಾಗಿ” ಎಂಬ ದಾಸರ ಕೀರ್ತನೆ ಇದಕ್ಕೆ ನಿದರ್ಶನ.

ಕುಮಾರವ್ಯಾಸ ತನ್ನ ಕಾವ್ಯ ಕರ್ನಾಟ ಭಾರತ ಕಥಾಮಂಜರಿಯಲ್ಲಿ ಗರುಡಿ, ಗರುಡಿಮನೆ, ಮಲ್ಲರ ಪಟ್ಟುಗಳ ಬಗೆಗೆ ವಿವರವಾದ ಉಲ್ಲೇಖಗಳನ್ನು ಕೊಡುತ್ತಾ ಹೋಗುತ್ತಾನೆ. ಗರುಡಿಮನೆಯ ಆರಂಭಿಸುವ ಮುನ್ನ ಆಚರಿಸುತ್ತಿದ್ದ ಆಚರಣೆಯನ್ನು ಆದಿಪರ್ವದಲ್ಲಿ ಕೊಡುತ್ತಾನೆ.

ಗರುಡಿಯ ಕಟ್ಟಿತು ನೂರು ಯೋಜನ
ವರೆಯ ವಿಸ್ತಾರದಲಿ ಸಾವಿರ
ಕುರಿಯ ಹೊಯ್ದರು ಪೂಜಿಸಿದರಾ ಚದುರ ಚಂಡಿಕೆಯ
(ಆದಿಪರ್ವ, ಸಂಧಿ ೭.೪)

ಎನ್ನುತ್ತಾನೆ. ಇಲ್ಲಿ ಗರುಡಿಯ ಆರಂಭದಲ್ಲಿ ಪೂಜಿಸುತ್ತಿದ್ದುದು ಚಂಡಿಯನ್ನು, ಹನುಮನನ್ನಲ್ಲ.

ಕುಮಾರವ್ಯಾಸ ಮಲ್ಲಯುದ್ಧದ ವರ್ಣನೆಗಳು ಬಂದಾಗ ಮನತುಂಬಿ ವರ್ಣಿಸುತ್ತಾನೆ. ಜರಾಸಂಧ – ಭೀಮ, ಭೀಮ – ದುಯೋಧನರ ನಡೆವೆ ಆದ ಮಲ್ಲಯುದ್ಧದ ವರ್ಣನೆಗಳನ್ನು ನೋಡಿದಾಗ ಅವನಿಗೂ ಸಹ ಗರುಡಿಯ ಅನುಭವ ಇದ್ದ ಹಾಗೆ ಕಂಡುಬರುತ್ತದೆ. ಉದಾಹರಣೆಗೆ ಅರಣ್ಯಪರ್ವದಲ್ಲಿ ಬರುವ ಕಿರಾತರ್ಜುನೀಯ ಪ್ರಸಂಗದಲ್ಲಿ ಶಿವ ಹಾಗೂ ಅರ್ಜುನನ ಹೋರಾಟದಲ್ಲಿ ಮಲ್ಲಯುದ್ಧದ ಹಲವಾರು ಪಟ್ಟುಗಳನ್ನು ಹಾಗೂ ಅವುಗಳ ಬಿಡಿಸುವಿಕೆಯನ್ನು ವಿವರಿಸುತ್ತಾನೆ.

ಬಿಗಿವ ಬಿಡಿಸುವ ಬಿಡಿಸಿದಾಕ್ಷಣ
ತೆಗೆವ ಕಳಚುವ ಕೊಂಬ ಲಳಿಯಲಿ
ಹೊಗುವ ಹತ್ತುವ ಲವಣಿಯಲಿ ಲಾಗಿಸುವ ಹೊರವಡುವ
ಚಿಗಿವ ಬಳಸುವ ಬಂದ ಗತಿಯಲಿ
ಗಗಡಿಸುವ ಲೋಕೈಕವೀರರು ಹೊಕ್ಕು ಹೆಣಗಿದರು
(ಅರಣ್ಯಪರ್ವ, ಸಂಧಿ ೫.೨೮)

ಇದರ ಮುಂದಿನ ಪದ್ಯದಲ್ಲಿಯೂ ಸಹ ಇದೇ ರೀತಿಯ ವರ್ಣನೆಯು ಬರುತ್ತದೆ.

ಅದೇ ರೀತಿ ಸಭಾಪರ್ವದಲ್ಲಿ ಭೀಮ ಜರಾಸಂಧರ ಕಾಳಗದಲ್ಲಿ ಬರುವ ವರ್ಣನೆಯೂ ಸಹ ಇದೆ ರೀತಿಯಲ್ಲಿದೆ.

ಸಿಕ್ಕರೊಬ್ಬರಿಗೊಬ್ಬರುರೆ ಕೈ
ಯಿಕ್ಕು ಹರಿಯರು ಕೊಂಡ ಹೆಜ್ಜೆಯ
ಠಕ್ಕಿನಲ್ಲಿ ಮೈಗೊಡರು ತಿರಿಮುರಿವುಗಳ ಮಂಡಿಗಳ
ಇಕ್ಕಿದರು ಗಳಹತ್ತದಲಿ ಸಲೆ
ಮಿಕ್ಕ ಸತ್ರಾಣದಲಿ ಮಿಗೆಸರಿ
ವೊಕ್ಕ ಹಿಡಿದರು ಬಿನ್ನಣದ ಚೊಕ್ಕೆಯಾದ ಜೋಡಿಯಲಿ
(ಸಭಾಪರ್ವ, ಸಂಧಿ ೨.೨೮)

ಕವಿ ತನ್ನ ಕಾವ್ಯದಲ್ಲಿ ಮಲ್ಲರು ತಮ್ಮ ಕೈಕಾಲು ಚಳಕಗಳಿಂದ ಹೇಗೆ ಹೋರಾಡುತ್ತಾ ಪ್ರತಿಸ್ಫರ್ಧಿಯನ್ನು ಚಿತ್ತು ಮಾಡುತ್ತಿದ್ದರು ಎಂಬುದರ ನೈಜಚಿತ್ರಣವನ್ನು ಮೂಡಿಸಿದ್ದಾನೆ.

ನಂಜುಂಡ ಕವಿಯ ಕುಮಾರರಾಮ ಸಾಂಗತ್ಯದಲ್ಲಿ ಬುರವ ಮಲ್ಲಯುದ್ಧ ಹಾಗೂ ಪಟ್ಟುಗಳು ಅಂದಿನ ಜೀವನದಲ್ಲಿ ಕಂಡು ಬರುವ ಜೀವನ ವಿಧಾನವಾಗಿದೆ. ಕಂಪಿಲೆಯ ರಾಮನೆಂದೇ ಹೆಸರು ಪಡೆದಿರುವ ಈ ವ್ಯಕ್ತಿ ೧೪ನೆಯ ಶತಮಾನದಲ್ಲಿ ಜೀವಿಸಿದ್ದ. ಅವನ ನಿಜ ಜೀವನವನ್ನೇ ಆಧಾರವಾಗಿಟ್ಟುಕೊಂಡು ಕವಿ ಕಾವ್ಯ ರಚಿಸಿದ್ದಾನೆ. ಅಲ್ಲಿ ಬರುವ ಗುಂಡು ಎತ್ತುವ ಸ್ಪರ್ಧೆಯು ಅಂದಿನ ಮಲ್ಲರ ಶಕ್ತಿಯ ಪ್ರದರ್ಶನದ ಕಲೆಯಾಗಿದೆ.

ಇದೇ ಕೃತಿ “ರಾಮನಾಥ ಚರಿತೆ” ಯಲ್ಲಿ ಗರಡಿಯ ಬಗೆಗೆ ಉಲ್ಲೇಖವಿದೆ.

ಪುರದ ಬಹಿರ್ವಳೆಯದೊಳೆಣ್ದಿಸೆಯೊಳು
ಗಡುಡಿಗಳಿಹವದ ಹೊಳಗೆ ಬಿರಿದಿನ
ಬಂಟಗಳ ಬಿಡದೆ ಪಾಡುಗಳನು ಬರಿಸುವಭ್ಯಾಸಿಗಳಿಹರು
(ರಾಮನಾಥ ಚರಿಗೆ, ಪುಟ ೬೮-೭೫)

ಎಂಬ ಪದ್ಯವೊಂದನ್ನು ಬರೆದಿದ್ದಾನೆ. ಇದು ೧೪೨೫ರಲ್ಲಿಯೇ ಗರಡಿಗಳಿದ್ದವು ಎಂಬುದನ್ನು ಸೂಚಿಸುತ್ತದೆ.

ರತ್ನಾಕರವರ್ಣಿಯ ಭರತೇಶ ವೈಭವವು ವಿಜಯನಗರೋತ್ತರದಲ್ಲಿ ರಚಿಸಲಾದ ಕಾವ್ಯ. ಇದರಲ್ಲಿ ಬರುವ ಹಲವಾರು ಸನ್ನಿವೇಶಗಳು ಅಂದಿನ ಜನಜೀವನದ ನೈಜ ಚಿತ್ರಣವಾಗಿದೆ.

ಅದೊಂದು ಕಲ್ಪಿತ ಎನ್ನಬಹುದಾದ ಕಾವ್ಯವಾದರೂ ಅಲ್ಲಿಯ ಘಟನೆಗಳು ಅಂದಿನ ಜೀವನದಲ್ಲಿ ಹಾಸುಹೊಕ್ಕಾದ ಘಟನೆಗಳೇ ಆಗಿವೆ. ಅಲ್ಲಿ ಬರುವ ಭರತ-ಬಾಹುಬಲಿಯ ಯುದ್ಧದ ವರ್ಣನೆಗಳು ಈ ರೀತಿಯಲ್ಲಿಯೇ ನೋಡಬಹುದು. ಅಲ್ಲಿ ಬರುವ ಮಲ್ಲಯುದ್ಧದ ಚಿತ್ರಣದಲ್ಲಿ ಹೀಗಿದೆ:

ಜಟ್ಟಿಗಳುಬ್ಬಿ ಕೋಯೆಂದಾಲ್ತು ಭುಜಗಳ
ಗಟ್ಟಕೊಂಡೊಡೆಯ ಜೇಯೆಂದು
ಥಟ್ಟನೆ ತಿವಿದೊಬ್ಬರೊಬ್ಬರ ಗೆಗೆ
ದಿಟ್ಟಾಡಿ ಕೆಡದರೆತ್ತಿತ್ತು

ಎನ್ನುವ ಪದ್ಯವು ಮಲ್ಲಯುದ್ದದ ವರ್ಣನೆಯೇ ಆಗಿದೆ.

ಕರಕಮದೆ ವಜ್ರ ಮುಷ್ಟಿ ಮಸ್ತಕದೊಳು
ಮೆರೆವ ಕುಂಕುಮ ರಜದಿಂದ
ಕೊರಳ ಪೂಮಾನೆ ಕಸ್ತೂರಿ ಲೇಪನದ ಮಲ್ಲ
ರುರಮಣಿಸಿದರಾಹವಕೆ

ಎನ್ನುವಲ್ಲಿ ಅಂದಿನ ಮಲ್ಲರ ಚಿತ್ರಣವನ್ನು ಕೊಡುತ್ತದೆ. ಅಲ್ಲದೆ ರಾಜನು ನೂರಾರು ಮಲ್ಲರನ್ನು ಸಾಕಿದ್ದನ್ನು ಕವಿ ತಿಳಿಸುತ್ತಾನೆ. ಚಾಟುವಿಠಲ ತನ್ನ ಕಾವ್ಯದಲ್ಲಿ ಮಲ್ಲರ ವೇಷಭೂಷಣಗಳನ್ನು ತಿಳಿಸುತ್ತಾ

ಚಲ್ಲಣ ಹೊನ್ನುಡ್ಡಿಯಾಣ ಮೇಲ್ಪಗಹಿನ ಕುಲ್ಲಾಯಿ ಕುಂಕುಮ ತಿಲಕಾ
ಗೆಲ್ಲದಿ ಪಿಡಿದ ತಾವಡೆಹೊಲ್ಲಿಗಳಿಂದಮಲ್ಲರೆದ್ದರು ಸಾಧನೆಗೆ
ಮುಗಿದುಟ್ಟ ಕಾಸೆ ಚಿಮರಿ ಬಿಟ್ಟ ಜಡೆ ಪಾದ ಸರಿವಿಟ್ಟ
ಸಾಧನೆ ಬೊಟ್ಟು ಕರದಲಿ ಸಾಣಖಂಡೆಯವೊಪ್ಪ ಕೆಲವು ಸಿಂಗರಿಸಿ, ಸಾಧನೆ ಗೆದ್ದ ಪವರು

ಡೊಮಿಂಗೊ ಪಯೋಸ್ ಸ್ವತಃ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಭೇಟಿ ನೀಡಿದ್ದು ರಾಯನ ನಡಾವಳಿಗಳನ್ನು ಅರಿತವನಾಗಿದ್ದವನು. ಅವನು ಕೃಷ್ಣದೇವರಾಯನ ನಿತ್ಯ ನೈಮಿತ್ತಿಕ ಚಟುವಟಿಕೆಗಳನ್ನು ಕುರಿತು ಹೀಗೆ ಹೇಳುತ್ತಾನೆ. “ರಾಜನು ನಿತ್ಯವು ಬೆಳಕು ಹರಿಯುವ ಮುನ್ನ ಒಂದಿಷ್ಟು ಎಳ್ಳೆಣ್ಣೆಯನ್ನು ಮೈಗೂ ತಿಕ್ಕಿಸಿಕೊಳ್ಳುತ್ತಾನೆ. ಬಟ್ಟೆ ಬರೆಗಳನ್ನು ತೆಗೆದು, ಬರೀ ಚಡ್ಡಿ ಹಾಕಿಕೊಂಡು, ಬಹಳ ತೂಕದ ಮಣ್ಣಿನ ಗುಂಡುಗಳನ್ನು ಕೈಯಲ್ಲಿ ಎತ್ತಿ ಆಡಿಸುವ ಕಸರತ್ತು ಮಾಡುತ್ತಾನೆ. ಮತ್ತು ತನ್ನ ಪೈಲ್ವಾನರಲ್ಲೊಬ್ಬನೊಂದಿಗೆ ಕುಸ್ತಿ ಆಡುತ್ತಾನೆ. ನಂತರ ಮೈದಾನದಲ್ಲಿ ಬೆಳಕು ಹರಿಯುವವರೆಗೂ ಕುದುರೆ ಸವಾರಿಮಾಡುತ್ತಾನೆ.

ಕುಸ್ತಿಪಂದ್ಯದ ಇತಿಹಾಸವನ್ನು ನೋಡಲಾಗಿ ಭಾರತ ಇದರ ಮೂಲ ಎಂದು ತಿಳಿದುಬರುತ್ತದೆ. ಭಾರತದ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳಲ್ಲಿಯೇ ಕುಸ್ತಿಪಂದ್ಯದ ಬಗೆಗೆ ಮಹತ್ವದ ವಿವರಗಳು ಸಿಗುತ್ತವೆ. ಪುರಾಣಗಳಲ್ಲಿಯೂ ಕೂಡ ಕುಸ್ತಿಯ ಉಲ್ಲೇಖವಿದೆ. ಇದರಿಂದ ಕುಸ್ತಿಯ ಇತಿಹಾಸವನ್ನು ೫೦೦೦ ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದು. ಭೀಮ – ಜರಾಸಂಧ, ಭೀಮ – ದುಯೋಧನ, ಶ್ರೀಕೃಷ್ಣ – ಬಲರಾಮ, ಭರತ – ಬಾಹುಬಲಿ, ಹಿಡಂಬ, ಜೀಮೂತ, ಶಲ್ಯ, ಬಕಾಸುರರೇ ಮೊದಲಾದ ಕುಸ್ತಪಟುಗಳ ಇತಿಹಾಸ ಮಹಾಕಾವ್ಯಗಳಲ್ಲಿ ಉಲ್ಲೇಖಿತಗೊಂಡಿವೆ.

ವಿಜಯನಗರ ಅರಸರಲ್ಲಿಯೇ ಪ್ರಸಿದ್ಧನಾದ ದೊರೆ ಕೃಷ್ಣದೇವರಾಯನು ಸ್ವತಃ ಗರಡಿ ಪಟುವಾಗಿದ್ದ ಎನ್ನುವುದನ್ನು ಆತನ ಕಾಲದಲ್ಲಿ ವಿಜಯನಗರಕ್ಕೆ ಬಂದ ವಿದೇಶೀ ಪ್ರವಾಸಿಗರು ತಿಳಿಸಿದ್ದಾರೆ. ಹಂಪೆಯ ಕೃಷ್ಣದೇವಾಲಯ ಹಾಗೂ ಕಮಲ ಮಹಲಿನ ಆವರಣದೊಳಗೆ ಗರಡಿಮನೆಗಳು ಇವೆ.

ವಿಜಯನಗರ ಅರಸರ ಆತಳಿತಕ್ಕೆ ಒಳಪಟ್ಟ ಪ್ರದೇಶಗಳಲ್ಲೆಲ್ಲಾ ಗರಡಿಮನೆಗಳು ಕಂಡುಬರುತ್ತವೆ. ಹಾಗೂ ಅವುಗಳಲ್ಲಿ ಬಹುತೇಕ ಗರಡಿಮನೆಗಳು ಇಂದಿಗೂ ಸುಸ್ಥಿತಿಯಲ್ಲಿ ಉಳಿದುಕೊಂಡಿವೆ. ಹಾಗೆ ವಿಜಯನಗರ ಅರಸರ ಆಡಳಿತಕ್ಕೊಳಪಟ್ಟ ಸಾಮಂತ ರಾಜ್ಯಗಳಾದ ಚಿತ್ರದುರ್ಗ, ಶಿವಮೊಗ್ಗ, ಪ್ರಾಂತಗಳಲ್ಲೆಲ್ಲಾ ಗರಡಿಮನೆಗಳಿದ್ದು, ಇಂದಿಗೂ ಗರಡಿಕಲೆ ಅಲ್ಲಿ ಉಳಿದುಕೊಂಡು ಬಂದಿರುವುದು ಕಂಡುಬರುತ್ತದೆ.

ಕ್ರಿ.ಶ. ೧೫೨೦-೨೨ರ ಸುಮಾರಿನಲ್ಲಿ ಹಂಪಿಗೆ ಭೇಟಿ ನೀಡಿ ಪೋರ್ಚುಗೀಸ್ ಪ್ರವಾಸಿ ಡೊಮಿಂಗೊ ಪಯಸ್‌ನು ‘ವಿಜಯನಗರ’ ರಾಜಧಾನಿಯಲ್ಲಿ ನಡೆಯುತ್ತಿದ್ದ ‘ನವರಾತ್ರಿ ಉತ್ಸವವನ್ನು’ ವರ್ಣಿಸುತ್ತ ಕುಸ್ತಿ ಆಟದ ಕುರಿತು ಉಲ್ಲೇಖಿಸುತ್ತಾನೆ.

“ನಮ್ಮ ಕುಸ್ತಿಯಂತೆ ಅವರು ಕುಸ್ತಿ ಮಾಡುವುದಿಲ್ಲ. ಅವರು ಗುದ್ದುಗಳನ್ನು ಕೊಡುತ್ತಾರೆ. ಆ ಗುದ್ದುಗಳು ಎಷ್ಟು ಭಯಂಕರವಾಗಿರುತ್ತವೆಂದರೆ ಒಮ್ಮೊಮ್ಮೆ, ಕಣ್ಣು, ಕಿವಿ, ಮುಖಗಳನ್ನು ನಾಶಪಡಿಸುತ್ತವೆ. ಕೆಲವು ಸಾರಿ ಅವರ ಸ್ನೇಹಿತರು ಪೈಲ್ವಾನರನ್ನು ಅಖಾಡದಿಂದ ಹೊತ್ತು ಹೊರದೊಯ್ಯುತ್ತಾರೆ. ನ್ಯಾಯ ನಿರ್ಣಯ ಮಾಡಲು, ಕುಸ್ತಿ ಆಡಿಸಲು ಅಲ್ಲಿ ನುರಿತ ಸರದಾರರಿರುತ್ತಾರೆ. ಈ ದಿವಸ ಕುಸ್ತಿ ಮತ್ತು ನೃತ್ಯವನ್ನು ಬಿಟ್ಟು ಬೇರೇನೂ ಇರುವುದಿಲ್ಲ (ಮರೆತುಹೋದ ಸಾಮ್ರಾಜ್ಯ ವಿಜಯನಗರ, ಕ.ವಿ.ವಿ. ಹಂಪಿ, ಪುಟ ೧೮೫).

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮಹಿಳೆಯರಿಗೂ ಮಲ್ಲಯುದ್ಧ ತಿಳಿದಿತ್ತು ಎನ್ನುವುದನ್ನು ದಾಖಲಿಸುವ ವೀರಗಲ್ಲು ಶಾಸನವೊಂದು ಶಿಕಾರಿಪುರದಲ್ಲಿದೆ. ಕ್ರಿ. ಶ. ೧೪೪೬ರ ಈ ಶಾಸನದಲ್ಲಿ ನಾಗನಗೌಡನ ಮಗ ಮಾದಿಗೌಡನು ಕುಸ್ತಿಯಾಡುತ್ತಿರುವಾಗ ಮರಣ ಹೊಂದಿ ಸ್ವರ್ಗ ಸೇರಿದನು. ಆತನ ಮಗಳು ಹರಿಯಕ್ಕ ತನ್ನ ತಂದೆಯನ್ನು ಕೊಂದ ಕುಸ್ತಿಪಟುಗಳೊಂದಿಗೆ ಕಾದು ತಾನೂ ಸ್ವರ್ಗ ಸೇರುತ್ತಾಳೆ. ಈ ಶಾಸನವನ್ನು ಆಕೆಯ ಚಿಕ್ಕಪ್ಪ ಚನ್ನಪ್ಪನು ಕಟ್ಟಿಸಿದನು. ಈ ವೀರಗಲ್ಲು ಶಾಸನದಲ್ಲಿ ಒಬ್ಬ ಜಟ್ಟಿ ನಿಂತಿದ್ದಾನೆ. ಅವನ ಜುಟ್ಟನ್ನು ಹಿಡಿದ ಮಹಿಳೆ ಕತ್ತಿಯ ಮೊನೆಯಿಂದ ಜಟ್ಟಿಯನ್ನು ತಿವಿಯುತ್ತಿದ್ದಾಳೆ (ಕರ್ನಾಟಕ ಶಾಸನ ಶಿಲ್ಪ, ೧೯೯೯, ಪುಟ ೨೫೦).

ಪ್ರಾಚೀನ ಭಾರತದ ಕ್ರೀಡಾ ಜೀವನವನ್ನು ಅರ್ಥ ಮಾಡಿಕೊಳ್ಳಲು ಮಹಾ ಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನು ಗಮನಿಸಬಹುದು. ರಾಮಾಯಣದಲ್ಲಿ ಮಲ್ಲಯುದ್ಧ, ಮುಷ್ಟಿ ಯುದ್ಧಗಳ ಪ್ರಸ್ತಾಪ ಕಂಡುಬರುತ್ತದೆ. ಮಹಾಭಾತದಲ್ಲಿ ದುಷ್ಯಂತರ ಮೃಗಯಾ ವಿಹಾರ, ಭೀಮ-ಜರಾಸಂಧರ ದ್ವಂದ್ವ ಯುದ್ಧ, ಭೀಮ-ದುರ್ಯೋಧನರ ಮುಷ್ಟಿಯುದ್ಧ ಮುಂತಾದವುಗಳು ಪ್ರಸ್ತಾಪನೆಗೊಂಡಿದೆ.

ನಂಜುಂಡ ಕವಿ ತನ್ನ ಕುಮಾರರಾಮನ ಕಾವ್ಯದಲ್ಲಿ ಗರಡಿಗಳ ಬಗ್ಗೆ ವಿವರಿಸುತ್ತ ಹೊಸ ಮಲೆದುರ್ಗದಲ್ಲಿ ಎಂಟು ದಿಕ್ಕುಗಳಿಗೂ ಎಂಟು ಗರಡಿಗಳಿದ್ದ ಅದರಲ್ಲಿ ಗರಡಿ ಆಳುಗಳು ಸಾಧನೆ ಮಾಡುತ್ತಿದ್ದರು ಎಂದು ತಿಳಿಸುತ್ತಾನೆ. ಹಾಗೆ ಬಯಲಿನಲ್ಲಿ ಮಾಡುವ ಸಾಧನೆಯು ನೋಡಲು ಕಣ್ಣಿಗೆ ಆನಂದವನ್ನುಂಟು ಮಾಡುತ್ತಿತ್ತು ಎಂದು ವರ್ಣಿಸುತ್ತಾನೆ.

ಕರ್ನಾಟಕ ಪ್ರಸಿದ್ಧ ರಾಜ ಮನೆತನಗಳಲ್ಲಿ ಒಂದಾದ ವಿಜಯನಗರದ ವಾಸ್ತು ಶಿಲ್ಪಗಳಲ್ಲಿ – ಹಜಾರರಾಮ ದಿಬ್ಬಗಳಲ್ಲಿ ಉಬ್ಬು ಶಿಲ್ಪಗಳಿದ್ದು, ಅವು ಹಲವಾರು ಪಟ್ಟುಗಳನ್ನು ಹಾಕಿದ ಗರಡಿಯಾಳುಗಳ ಶಿಲ್ಪವನ್ನು ಒಳಗೊಂಡಿವೆ.

ಹೊಸಪೇಟೆ ತಾಲ್ಲೂಕಿನ ಗರಡಿಮನೆಗಳ ಕುಸ್ತಿಗೂ ಪುರಾತನ ನಂಟು. ಕೆದಕುತ್ತಾ ಹೋದರೆ ಇಲ್ಲಿನ ಹಿರಿಯರಿಗೆ ರಾಜ ಮಹಾರಾಜರ ಹಾಗೂ ಪ್ರಸಿದ್ಧ ವಿಜಯನಗರ ಅರಸರಲ್ಲಿ ಶ್ರೀಕೃಷ್ಣದೇವರಾಯನು ಕುಸ್ತಿಪಟುವಾಗಿದ್ದನು ಎಂಬುದು ನೆನಪಾಗುತ್ತದೆ. ದೇವರಾಯನು ತನ್ನ ಗರಡಿಮನೆಯಲ್ಲಿ ಮೈಗೆ ಎಳ್ಳೆಣ್ಣೆ ಹಚ್ಚಿಕೊಂಡು ಸಾಧಕ ಮಾಡುತ್ತಿದ್ದನು. ದಮ್ಮನ್ನ ಕಳೆಯಲು ಅನೇಕ ಸಲ ಕಷ್ಟಕರ ಸಾಧಕಗಳನ್ನು ಮಾಡುತ್ತಿದ್ದನು ಎಂದು ಇತಿಹಾಸ ಹೇಳುತ್ತದೆ. ದೇವರಾಯನು ತನ್ನ ವಿಜಯದ ಸಂಕೇತವಾಗಿ ದಸರಾ ಹಬ್ಬದಲ್ಲಿ ಹಲ ಕ್ರೀಡೆಗಳೊಂದಿಗೆ ಪ್ರಮುಖವಾದ ಕುಸ್ತಿ ಕ್ರೀಡೆ ನಂಟು ಸಹ ಬೆಳೆಯಿತು. ಇವತ್ತು ದಸರಾ ಎಂದರೆ ಬೇರೆಲ್ಲ ಕ್ರೀಡೆಗಳಿದ್ದರೂ ಮೊದಲು ನೆನಪಿಗೆ ಬರುವುದೇ ಕುಸ್ತಿ.

ಆಗ ಹಳ್ಳಿಗಳಲ್ಲಿ ಪೋಲಿಸರೂ ಇರಲಿಲ್ಲ. ಊರಿಗೊಂದು ಗರಡಿಮನೆ. ಆ ಮನೆಯೇ ಊರಿನ ಕಾವಲು ಕೋಟೆ. ಊರೊಳಗೆ ಯಾವ ಸಮಸ್ಯೆ ಬಂದರೂ ಗರಡಿಮನೆಯ ಮುಖ್ಯಸ್ಥರೇ ಸಮಸ್ಯೆ ಪರಿಹಾರ ಮಾಡಬೇಕು. ಹಬ್ಬ ಹರಿದಿನಗಳಲ್ಲಿ ಗಲಾಟೆ ಆಗದಂತೆ ಯಜಮಾನರು, ಉಸ್ತಾದರು, ಪೈಲ್ವಾನರು ಊರಿನ ರಕ್ಷಣೆಗೆ ನಿಲ್ಲುತ್ತಿದ್ದರು. ಪ್ರತಿ ಊರಲ್ಲಿ ಹೇಗೆ ಗುಡಿಗಳಿದ್ದವೋ ಹಾಗೆಯೇ ಗರಡಿಮನೆಗಳೂ ಇದ್ದವು. ಊರಿನ ರಕ್ಷಣೆಯ ಹೊಣೆ ಹೊತ್ತಿದ್ದ ಗರಡಿಮನೆಗಳು ಇಂದು ಪಾಳು ದೇಗುಲವಾಗಿವೆ. ಹೊಸಪೇಟೆ ತಾಲೂಕಿನ ಗರಡಿಮನೆಗಳು ತೀರಾ ನಿಕೃಷ್ಟ ಸ್ಥಿತೆಗೆ ಹೋಗದೆ ಇದ್ದರೂ ಸಹ, ಅವು ತಮ್ಮ ಪೂರ್ವದ ವೈಭವದಿಂದ ವಂಚಿತವಾಗಿವೆ ಎನ್ನುವುದಂತೂ ಸತ್ಯ. ಹೊಸಪೇಟೆ ತಾಲೂಕು ಕುಸ್ತಿ ಕಲೆಗೆ ಬಹಳ ಪ್ರಸಿದ್ಧ. ಇಲ್ಲಿ ಆಡಳಿತ ನಡೆಸಿದ ವಿಜಯನಗರ ಅರಸರು ಸ್ವತಃ ಕುಸ್ತಿಪಟುಗಳಾಗಿದ್ದರು. ಅವರ ಕುರಿತು ಹಿಂದಿನ ಆಧ್ಯಾಯಗಳಲ್ಲಿ ಗಮನಿಸಲಾಗಿದೆ. ವಿಜಯನಗರ ಅರಸರ ಪೋಷಣೆ ಹಾಗೂ ರಕ್ಷಣೆಗಳಿಂದ ಈ ತಾಲೂಕಿನ ಪ್ರತಿ ಊರಿನಲ್ಲಿ ಮತ್ತು ಪಟ್ಟಣಗಳಲ್ಲಿ ಗರಡಿಮನೆಗಳು ಎಲ್ಲಿ ನೋಡಿದರೂ ಸಿಗುತ್ತವೆ. ಇವುಗಳಲ್ಲಿ ಎಷ್ಟೋ ಗರಡಿಗಳು ಇಂದು ಸರಿಯಾದ ಮೇಲ್ವಿಚಾರಣೆ ಇಲ್ಲದೆ ನಶಿಸಿ ಹೋಗಿವೆ. ಆದರೆ ಇರುವ ಗರಡಿಗಳು ತಮ್ಮ ಮೂಲ ವೈಭವವನ್ನು ತಿಳಿಸುತ್ತಾ ಇನ್ನು ಜೀವಂತವಾಗಿ ಉಳಿದಿವೆ.

“ರಾಜ ಪ್ರಭುತ್ವವು ಹೋಗಿ ಪ್ರಜಾಪ್ರಭುತ್ವ ಅಸ್ತಿತ್ವಗೊಂಡ ತರುವಾಯ ಪ್ರಜೆಗಳೇ ಪ್ರಭುಗಳಾದುದು, ಈ ನಡುವೆ ಪುರುಷತ್ವಕ್ಕೆ ಸಂಕೇತವಾಗಿದ್ದ ಗರಡಿಮನೆಗಳು ನಿರ್ಲಕ್ಷ್ಯಕ್ಕೊಳಗಾದವು. ಇವುಗಳ ಮಧ್ಯೆ ಅನೇಕ ಸಂಘಟನೆಗಳ ಮಧ್ಯೆ ವೈಮನಸ್ಸು ಮೂಡಿ ಅಧಿಕಾರಕ್ಕಾಗಿ ಕಚ್ಚಾಡುವ ಸ್ಥಿತಿಗೆ ಅವು ಬಂದವು. ಇದರಿಂದ ಅಷ್ಟೋ ಇಷ್ಟೋ ಉಸಿರಾಡುತ್ತಿದ್ದ ಗರಡಿಕಲೆ ಉಸಿರುಗಟ್ಟುವಂತೆ ಮಾಡಿದರು.”

ಸಾಂಸ್ಕೃತಿಕ ಕಾರಣಗಳಿಗಾಗಿ ಇಂದು ಗರಡಿಕಲೆ ಮೂಲೆ ಗುಂಪಾಗುತ್ತಿದೆ. ಅದಕ್ಕೆ ಸರಿಯಾದ ಪ್ರೋತ್ಸಾಹ ಆರ್ಥಿಕ ಸಹಾಯ ಹಾಗೂ ಆಧುನಿಕ ಬದುಕಿಗೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾವಣೆಗಳನ್ನು ತಂದರೆ, ಇಂದಿಗೂ ಗರಡಿಕಲೆ ತನ್ನತನವನ್ನು ಮೆರೆಯಲು ಸಾಧ್ಯವಾಗುತ್ತದೆ.

ನಾಡಹಬ್ಬ, ಹಂಪಿ ಉತ್ಸವದಲ್ಲಿ ಪ್ರಮುಖ ಆಕರ್ಷಣೆ ಎಂದರೆ ಕುಸ್ತಿ. ಆದ್ದರಿಂದಲೇ ಸಾಂಸ್ಕೃತಿಕ ಹೊಸಪೇಟೆ ತಾಲ್ಲೂಕಿನ ಕೇರಿಗೊಂದು ಗರಡಿಮನೆಗಳಿರುತ್ತಿದ್ದವು. ಹಂಪಿ ಉತ್ಸವ ಸಮೀಪಿಸುತ್ತಿದ್ದಂತೆ ಗರಡಿಗಳಲ್ಲಿ ಮಲ್ಲರೆಲ್ಲರೂ ಸೇರಿ ಮುಂಜಾನೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೆ ಕಸರತ್ತು ನಡೆಸುತ್ತಿದ್ದರು.

ಹೊಸಪೇಟೆಯ ಗರಡಿಗಳೂ ಇಂದು ಜೀವಂತವಾಗಿ ಉಸಿರಾಡುತ್ತಿದ್ದರೆ ಅದಕ್ಕೆ ಬಹುಷಃ  ಸ್ಥಳೀಯ ಬೇಡ ಜನಾಂಗವೆಂದರೆ ತಪ್ಪಾಗಲಾರದು.

ವಿಜಯನಗರದ ಅರಸರಿಗೆ ತಮ್ಮ ಪೂರ್ವಜರು ಸೈನಿಕರಾಗಿ ಕಾರ್ಯನಿರ್ವಹಿಸುತ್ತದ್ದರೆಂದು ಹೊಸಪೇಟೆಯ ಬೇಡರು ನಂಬುತ್ತಾರೆ. ಬೇಡರು ಸ್ವಭಾವತಃ ದೈಹಿಕವಾಗಿ ಬಲಾಢ್ಯರು. ಹೋರಾಟದಲ್ಲಿ ನಿಪುಣರೂ ಆಗಿದ್ದ ಬೇಡ ಹಾಗೂ ಇತರ ಜನಾಂಗದ ಪೈಲ್ವಾನರನ್ನು ವಿಜಯನಗರ ಅರಸರು ವಿಶೇಷವಾಗಿ ಗೌರವಿಸುತ್ತಿದ್ದರು. “ಗರಡಿಮನೆಗಳಲ್ಲಿ ಸಹಜವಾಗಿ ಬೇಡ ಸಮುದಾಯದವರೇ ತುಂಬಿಕೊಂಡಿರುತ್ತಿದ್ದರಂತೆ, ಇಂದಿಗೂ ಹಂಪಿಯ ರಥೋತ್ಸವದಲ್ಲಿ ಬೇಡರೆ ಮೊದಲು ರಥ ಎಳೆಯುವ ಗೌರವ ಇದೇ ಕಾರಣದಿಂದಲೇ ಅವರಿಗೆ ಲಭಿಸಿದೆಯಂತೆ.” (ಹಂಪಿ ಜಾನಪದ: ೧೯೯೭: ಪುಟ ೧೦೬)

ಈ ರೀತಿ ಕುಮಾರರಾಮ ಹಾಗೂ ವಿಜಯನಗರ ಕಾಲದಲ್ಲಿ ಹೊಸಪೇಟೆ ತಾಲೂಕಿನಲ್ಲಿ ಗರಡಿಕಲೆಗೆ ಒಂದು ಭದ್ರ ಬುನಾದಿ ಹೊರೆಯಿತು. ತರುವಾಯ ಕೆಲವು ಸಮುದಾಯಗಳಲ್ಲಿ ಗರಡಿಕಲೆ ಎನ್ನುವುದು ಒಂದು ಧಾರ್ಮಿಕ ವಿಧಿಯಾಚರಣೆಆಯಾಗಿ ಬಳಕೆಗೊಳ್ಳುತ್ತಿತ್ತು. ಹಾಗೆ ಅದು ಧಾರ್ಮಿಕ ವಿಧಿಯಾಚರಣೆಗೆ ಬಳಗಾಗುವ ಮೂಲಕ ಹಲವಾರು ಸಂಪ್ರದಾಯ, ವಿಧಿ-ನಿಷೇಧಗಳನ್ನು ತನ್ನೊಂದಿಗೆ ರೂಢಿಸಿಕೊಂಡಿತು. ಗರಡಿಕಲೆಯನ್ನು ವಿಶೇಷವಾಗಿ ಕಲಿತ ಸಮುದಾಯಗಳು, ತಮ್ಮ ಮೂಲ ವ್ಯವಸ್ಥೆಯಿಂದ ದೂರಾಗಿ ತಮ್ಮದೇ ಆದ ಒಂದು ಸಮುದಾಯವಾಗಿ ಬೆಳೆಯುವಷ್ಟು ಶಕ್ತವಾದವು (ಮಲ್ಲ ಸಮುದಾಯ, ಜಟ್ಟಿ ಸಮುದಾಯ, ಬಂಟ ಸಮುದಾಯ). ಆದರೆ ಕಾಲಮಾನದ ಬದಲಾವಣೆಯಿಂದಾಗಿ ಇಂದು ‘ಮಲ್ಲ’ ಸಮುದಾಯವು ಪೂರ್ಣ ನಾಶಗೊಂಡಿದ್ದರೆ, ಜಟ್ಟಿ ಸಮುದಾಯವು ಕೇವಲ ಮೈಸೂರು ಹಾಗೂ ಸುತ್ತಮುತ್ತಲು ಇದೆ. ಅದು ಇನ್ನು ಕೆಲವೇ ವರ್ಷಗಳಲ್ಲಿ ಮರೆಮಾಚಿ ಹೋಗುವ ಸಾಧ್ಯತೆಯೂ ಇದೆ. ಹಾಗೆ ಬಂಟ ಸಮುದಾಯವು ಕೇವಲ ಮಂಗಳೂರು ಪ್ರಾಂತಕ್ಕೆ ಮಾತ್ರ ಸೀಮಿತಗೊಂಡಿದ್ದು, ತಮ್ಮ ಪೂರ್ವಜರ ಮೂಲ ವೃತ್ತಿ-ಪ್ರವೃತ್ತಿಗಳನ್ನೇ ಮರೆತು ಬಿಟ್ಟಿವೆಯೇನೋ ಎನ್ನುವಷ್ಟು ಬದಲಾವಣೆಗೆ ಒಳಗಾಗಿದೆ.

ಹೀಗೆ ನಿರಂತರವಾಗಿ ಬದಲಾವಣೆಗಳಿಗೆ ಒಳಗಾಗುತ್ತಲೇ ಬಂದಿರುವ ಗರಡಿಕಲೆ ಆಧುನಿಕ ಜಗತ್ತಿನಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವುದು ಇಂದು ಕಂಡು ಬರುತ್ತದೆ.

ಕುಸ್ತಿಕಲೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ವಿಚಾರ ಮಾಡುತ್ತ ಅದು ಅಸ್ತಿತ್ವ ಕಳೆದುಕೊಳ್ಳಲು ಕಾರಣಗಳೇನಿರಬಹುದು ಎನ್ನುವುದನ್ನು ಗಮನಿಸಬೇಕಾಗಿದೆ.

ಗರಡಿಕಲೆ ಪೂರ್ವದಲ್ಲಿ ಸಮರ ಕಲೆಗೆ ಪೂರಕವಾಗಿರುವ ಕಲೆಯಾಗಿದ್ದಿತು. ಸಮರ ಕಲೆ ರಾಜತ್ವವನ್ನು ಕಾಪಾಡುವ ಉದ್ದೇಶಕ್ಕೆ ಬಳಕೆಗೊಳ್ಳುತ್ತಿತ್ತು. ಆದರೆ ಇಂದು ಹಿಂದೆ ಇದ್ದ ರಾಜ ಮನೆತನಗಳು ಇಲ್ಲ.

ಗರಡಿ ಕಲೆಯೆನ್ನುವುದು ಸಮರ ಕಲೆಗೆ ಪೂರಕವಾಗಿರುವಂಥದು. ಇಂತಹ ಗರಡಿಕಲೆ ವಿಜಯನಗರ ಅರಸರ ಕಾಲದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದಿತು. ಹಾಗೆ ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸರಾದ ಮೈಸೂರಿನ ಒಡೆಯರು ಸಹ ಗರಡಿಕಲೆ ಬೆಳೆಯಲು ತುಂಬಾ ಪ್ರೋತ್ಸಾಹ ಕೊಟ್ಟರು. ವಿಜಯನಗರ ಸಾಮ್ರಾಜ್ಯದ ಪಳೆಯುಳಿಕೆಯಿಂದ ಇಂದು ಹೊಸಪೇಟೆ ತಾಲೂಕಿನಲ್ಲಿ ಗರಡಿಮನೆಗಳು ಉಳಿದಕೊಂಡು ಬಂದಿವೆ. ಆದರೆ ಈ ಗರಡಿಮನೆಗಳ ಬಳಕೆ ಮಾತ್ರ ತುಂಬಾ ಕ್ವಚಿತ್ತಾಗಿ ಕಂಡುಬರುತ್ತದೆ. ಇಂದು ಗರಡಿಮನೆಗಳ ಸ್ಥಾನವನ್ನು ಆಧುನಿಕ ಜಿಮ್‌ಗಳು ಆಕ್ರಮಿಸುತ್ತಿವೆಯೆನ್ನುವುದು ಎಲ್ಲರಿಗೂ ತಿಳಿದ ವಿಚಾರ.

ನಮ್ಮ ಪರಂಪರೆಯ ಪ್ರತಿಬಿಂಬದಂತಿರುವ ಸಿರಿವಂತರ ಗರಡಿಕಲೆಯನ್ನು ನಿರ್ಲಕ್ಷಿಸಲು ಕಾರಣಗಳು ಏನಿರಬಹುದು. ಈ ಕಲೆಯನ್ನು ಕಾಪಾಡುವುದಿರಲಿ ಇದರ ಕುರಿತು ಕನ್ನಡದಲ್ಲಿ ಒಂದು ಅಧ್ಯಯನಪೂರ್ಣ ಗ್ರಂಥವೂ ದೊರೆಯದಿರುವುದು ತುಂಬಾ ಶೋಚನೀಯ ವಿಷಯವೇ ಸರಿ. ಮೈಸೂರಿನ ನಗರದ ಗರಡಿಗಳ ಕುರಿತು ಅಧ್ಯಯನ ನಡೆಯುವುದರ ಹೊರತಾಗಿ ಈ ರೀತಿಯ ಬೇರೆ ಅಧ್ಯಯನಗಳು ನಡೆದಿರುವುದು ಕಂಡು ಬರುವುದಿಲ್ಲ.

ಗರಡಿಕಲೆ ಎಂದರೆ ಕೇವಲ ಹಳೇ ಮೈಸೂರಿನ ಪ್ರಾಂತದಲ್ಲಿ ಮಾತ್ರ ಇರುವುದು ಎನ್ನುವುದು ಇಲ್ಲಿವರೆಗೆ ರೂಢಿಯಲ್ಲಿತ್ತು. ಆದರೆ ಹಳೇ ಮೈಸೂರು ಪ್ರಾಂತದ ಹೊರತಾಗಿಯೂ ಉತ್ತರಕರ್ನಾಟಕ ಹಾಗೂ ಹೈದಾಬಾದ್ ಕರ್ನಾಟಕ ಪ್ರಾಂತಗಳಲ್ಲಿಯೂ ಸಹ ಗರಡಿಕಲೆ ಜೀವಂತವಾಗಿದ್ದಿತು. ಇಂದಿಗೂ ಪೂರ್ಣವಾಗಿ ಕೊನೆಗಾಣದೆ ಅಲ್ಪ ಮಟ್ಟಿಗಾದರೂ ಜೀವಂತವಾಗಿದೆ ಎಂಬುದನ್ನು ಈ ಅದ್ಯಯನವು ಗುರುತಿಸಿದೆ.

ಅಧ್ಯಯನದ ಉದ್ದೇಶ ವ್ಯಾಪ್ತಿಗಳನ್ನು ತಿಳಿಸುವುದರೊಂದಿಗೆ ಗರಡಿ ಎನ್ನುವ ಪದ ಹೇಗೆ ಬಂದಿರಬಹುದು. ಗರಡಿಗೂ ಹಿಂದೆ ರಾಜರ ಸೇವಕರಾದ ಗರುಡರಿಗೂ ಏನಾದರೂ ಸಂಬಂಧವಿರಬಹುದೇ ಎಂದು ಗುರುತಿಸುವ ಪ್ರಯತ್ನ ಮಾಡಲಾಗಿದೆ. ಹಾಗೆ ಗರಡಿಮನೆಗಳ ಸ್ವರೂಪ, ಗರಡಿ ಪಟುಗಳು, ಅವರು ಹಾಕುವ ಪಟ್ಟುಗಳುಕ ಪಟ್ಟುಗಳನ್ನು ಬಿಡಿಸಿಕೊಳ್ಳಲು ತಿರುಗಿ ಹಾಕುವ ಪಟ್ಟುಗಳು (ತೋಡುಗಳು), ಗರಡಿ ಪಟುಗಳ ಆಹಾರ ಕ್ರಮ, ಅವರು ಜೀವಿಸು ಪರಿಸರ, ಉಡುಗೆ, ಗೊಡುಗೆ, ಸಾಂಸಾರಿಕ ಸಂಬಂಧಗಳು, ಅವರ ಆರ್ಥಿಕ ಸ್ಥಿತಿಗತಿ, ಇತರ ಸಮುದಾಯಗಳಿಗೂ ಗರಡಿಪಟುಗಳ ನಡುವಿನ ಸಂಬಂಧ, ಸಾಮಾಜಿಕವಾಗಿ ಯಾವ ಸ್ಥಾನದಲ್ಲಿರುವ ವ್ಯಕ್ತಗಳು ಗರಡಿ ಪಟುಗಳಾಗುತಗತಾರೆ, ಕುಸ್ತಿಯಾಡಲು ಅವಶ್ಯಕವಿರುವ ವೇದಿಕೆ, ಆ ವೇದಿಕೆಗೆ ಏನೆಂದು ಕರೆಯಲಾಗುತ್ತದೆ, ಅದನ್ನು (ಮಟ್ಟಿಮಣ್ಣು) ತಯಾರಿಸುವ ಕ್ರಮ ಎಂಥದ್ದು, ಅದಕ್ಕೂ ಏನಾದರು ವೈಜ್ಞಾನಿಕ ಕಾರಣಗಳಿರಬಹುದೇ ಮುಂತಾದ ವಿಚಾರಗಳನ್ನು ಗುರುತಿಸಲಾಗಿದೆ.

ಆಧುನಿಕ ಜಗತ್ತಿನಲ್ಲಿ ಗರಡಿಕಲೆ ಎದುರಿಸಬೇಕಾದ ಸಮಸ್ಯೆಗಳು ಏನೇನಿವೆ. ಅದಕ್ಕೆ ಪರಿಹಾರ ಏನಿರಬಹುದು ಮುಂತಾಗಿ ಆಧುನಿಕ ಜಗತ್ತು ಮತ್ತು ಗರಡಿಕಲೆ ಎನ್ನುವಲ್ಲಿ ಗಮನಿಸಲಾಗಿದೆ. ಹಾಗೆ ಹೊಸಪೇಟೆಯಲ್ಲಿ ಒಟ್ಟಿ ಎಷ್ಟು ಗರಡಿಮನೆಗಳಿವೆ. ನಾಶಗೊಂಡ ಗರಡಿ ಮನೆಗಳು ಎಷ್ಟಿವೆ. ಚಾಲ್ತಿಯಲ್ಲಿರುವ ಗರಡಿಮನೆಗಳು ಎಷ್ಟಿವೆ ಮುಂತಾಗಿ ಗರಡಿ ಮನೆಗಳ ಸ್ಥಿತಿಗಳನ್ನು ಈ ಅಧ್ಯಯನದಲ್ಲಿ ಗಮನಿಸಲಾಗಿದೆ. ಹಾಗೆ ಹೊಸಪೇಟೆ ತಾಲೂಕಿನ ಪ್ರಮುಖ ಗರಡಿ ಪಟುಗಳು ಯಾರ್ಯಾರಿದ್ದಾರೆ, ಅವರ ಜೀವನ ಕ್ರಮ ಸಾಧನೆಗಳು ಹೇಗಿವೆ ಎಂಬುದನ್ನು ವಿವರಿಸಲಾಗಿದೆ.

ವಿಜಯನಗರದರಸರ ಕಾಲದಲ್ಲಿ ಇದು ಶ್ರೀಮಂತವಾಗಿ ಬೆಳೆದಿದ್ದನ್ನು ವಿದೇಶಿ ಪ್ರವಾಸಿಗರು ವರ್ಣಿಸಿರುವರು. ಒಂದು ಕಾಲದಲ್ಲಿ ನಮ್ಮ ಜನಪದರ ದೈನಂದಿನ ಬದುಕಿನೊಂದಿಗೆ ಬಿಡಿಸಲಾಗದ ನಂಟು ಹೊಂದಿದ್ದ ಕ್ರೀಡೆ ಎಂದರೆ ಕುಸ್ತಿ ಎಂದು ಹೇಳಬಹುದು. ದೈಹಿಕ ಶಕ್ತಿ ಯುಕ್ತಿ ಪ್ರತಿಯುಕ್ತಿಗಳ ಸಂಗಮವಾದ ಕುಸ್ತಿಯ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಿವಿದೆ. ನಮ್ಮ ಹಿಂದಿನವರೆಗೆ ಅರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ ಎಂಬ ಸ್ಪಷ್ಟವಾದ ತಿಳಿವಳಿಕೆ ಇತ್ತು. ಅಂತೆಯೇ ಅವರು ದೈಹಿಕ ಸಂಪತ್ತನ್ನು ವೃದ್ಧಿಸುವ ಕ್ರೀಡೆಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದರು. ಅವುಗಳಲ್ಲಿ ವ್ಯಕ್ತಿಯ ದೇಹ ದಾರ್ಢ್ಯದ ಬಲವರ್ಧನೆಗೆ ಪೂರಕವಾಗುವ ಗರಡಿ ಕಲೆಯಾದ ಕುಸ್ತಿ ಕಲೆಯು ಒಂದಾಗಿದೆ.

ತಿಪ್ಪಮ ನಾಯಕನು ಸಾಹಸ ಪ್ರವೃತ್ತಿಯುಳ್ಳವನಾಗಿದ್ದು ಕರ್ನಾಟಕ ದಕ್ಷಿಣ ಭಾಗದಲ್ಲಿ ಸೂಕ್ತನಾದ ಪ್ರದೇಶವನ್ನು ಹುಡುಕುತ್ತಾ ವಲಸೆ ಬಂದಿರುವ ಸಾಧ್ಯತೆಗಳು ಇರಬಹುದು. ಈ ಸಮಯದಲ್ಲಿ ಅವನು ಮಾರ್ಗ ಮಧ್ಯದಲ್ಲಿ ವಿಜಯನಗರಕ್ಕೆ ಭೇಟಿ ನೀಡಿದನು. ಇದೇ ಸಮಯದಲ್ಲಿ ಮಲ್ಲಿಕ್ ಎಂಬ ಪೈಲ್ವಾನನು ಹಿಂದುಸ್ಥಾನದ ಅನೇಕ ಪ್ರಾಂತ್ಯಗಳಲ್ಲಿ ಕುಸ್ತಿ ಮಾಡಿ ವಿಜಯದುಂದುಭಿ ಮೊಳಗಿಸಿ ವಿಜಯನಗರಕ್ಕೆ ಬಂದಿದ್ದನು. ಅವನು ವಿಜಯನಗರ ಚಕ್ರವರ್ತಿಗಳ ಬಳಿಗೆ ಹೋಗಿ ತನ್ನ ಶಕ್ತಿ ಸಾಮರ್ಥ್ಯಗಳ ಬೆಗೆ ಹೇಳಿಕೊಂಡನು. ಅಲ್ಲದೆ ತನಗೆ ವಿಜಯನಗರ ಪೈಲ್ವಾನರೊಂದಿಗೆ ಶಕ್ತಿ ಪ್ರದರ್ಶಿಸಲು ಅನುಮತ ನೀಡಿ, ಇಲ್ಲವೆ ತನಗೆ ತಮ್ಮ ರಾಜಧಾನಿಯಲ್ಲಿ ವಿಜಯ ಸ್ತಂಭವನ್ನು ಸ್ಥಾಪಿಸಲು ಅಪ್ಪಣೆ ಕೊಟ್ಟು ೪೪ ಗರಡಿಗಳ ಮೇಲಿರುವ ಕಲಶ ತೆಗೆಸಿ ಎಂಬ ದುರಹಂಕಾರದ ಮಾತುಗಳನ್ನಾಡಿದನು. ಚಕ್ರವರ್ತಿ ಕೋಪ ಬಂದರೂ ಅದನ್ನು ತೋರ್ಪಡಿಸಿಕೊಳ್ಳದೆ ಜನರತ್ತ ಗಮನಹರಿಸಿದನು. ಯಾರು ಮುಂದೆ ಬರದಿದ್ದಾಗ ಅದೇ ಸಮಯದಲ್ಲಿ ತಿಪ್ಪನಾಯಕ ಮುಂದೆ ಬಂದು ದೊರೆಗಳ ಅನುಮತಿಯನ್ನು ಬೇಡಿದನು. ಅವರು ಆ ಯುವಕನ ಶೌರ್ಯದ ಬಗೆಗೆ ಸಂದೇಹ ವ್ಯಕ್ತಪಡಿಸಿದಾಗ ತಿಪ್ಪನಾಯಕ ತನ್ನ ಸಾಧನೆಯನ್ನು ರಾಜನ ಮುಂದೆ ಹೇಳಿ ಅನುಮತಿ ಪಡೆದನು. ತಿಪ್ಪನಾಯಕ ತನ್ನ ಕೈಯಲ್ಲಿದ್ದ ಕತ್ತಿಯ ಮೊನೆಗೆ ಕಸ್ತೂರಿ ಹಚ್ಚಿಕೊಂಡು ಚಮತ್ಕೃತಿಯಿಂದ ಅವನ ತಲೆಯ ಮೇಲೆ ಹೊಡೆದು ಕೊಲೆಗೈದನು. ಇದರಿಂದ ಸಂತೋಷಗೊಂಡ ಚಕ್ರವರ್ತಿ ಅವನಿಗೆ ಭೂ ಚಕ್ರದ ಕೊಡೆ ನೀಲಿಕೊಡೆ, ಪಂಚವರ್ಣದ ಛಢಾಸು, ಧವಳ, ಶಂಖ, ಚಕ್ರ ನೀಡಿ ಕಸ್ತೂರಿ ಕೋಲಾಹಲ ಕಟಾರಿ ಚಲ್ಯರಗಂಡ, ಬರ್ದರ ಮೂಲಕ ಸಪ್ತಾಂಗ ಹರಣ ಎಂಬು ಬಿರುದನ್ನು ದಯಪಾಲಿಸಿದನು. ರಾಜಕಾಲದಲ್ಲಿ ಕತ್ತಿವರಸೆ, ಕುಸ್ತಿ ಮುಂತಾದ ಶೌರ್ಯದ ಕ್ರೀಡೆಗಳು ಇದ್ದವು ಎಂಬುದನ್ನು ಇತಿಹಾಸದ ಮೂಲಕ ತಿಳಿಯುತ್ತದೆ.

ವಿಜಯನಗರದ ಸಂಸ್ಥಾನದ ಸೈನ್ಯದಲ್ಲಿ ಬೇಡರದ್ದೇ ದೊಡ್ಡ ಪಡೆಯೊಂದಿತ್ತು ಎಂದು ಬೇಡರು ಇಂದಿಗೂ ನಂಬುತ್ತಾರೆ. ಬಹಳ ಶಕ್ತಿಶಾಲಿಗಳೂ, ಹೋರಾಟದಲ್ಲಿ ನಿಪುಣರೂ ಆಗಿದ್ದ ಬೇಡರನ್ನು ಆ ಕಾಲದ ದೊರೆಗಳು ವಿಶೇಷವಾಗಿ ನಂಬುತ್ತಿದ್ದರಂತೆ, ಗರಡಿ ಮನೆಗಳಲ್ಲಿ ಯಾವಾಗಲೂ ಬೇಡರೇ ತುಂಬಿಕೊಂಡಿರುತ್ತಿದ್ದರಂತೆ, ಹಂಪಿ ರಥೋತ್ಸವದಂದು ಬೇಡರೇ ಮೊದಲು ರಥ ಎಳೆಯುವ ಗೌರವೂ ಅವರಿಗೆ ಆ ಕಾರಣದಿಂದಲೇ ಲಭಿಸಿದೆಯಂತೆ. ರಾಜರ ಗೌರವದ ಸಂಕೇತವಾಗಿ ಈವತ್ತಿಗೂ ಹೊಸಪೇಟೆ ಸುತ್ತಮುತ್ತಲಿನ ಊರುಗಳಲ್ಲಿ ರಾಜರ ಕೊಡುಗೆಯಾಗಿ ಉಳಿದಿವೆ ಎಂದರೆ ತಪ್ಪಗಾಲಿಕ್ಕಿಲ್ಲ.

ದಸರಾ ಹಬ್ಬ ಯಾವ ಕಾಲದಿಂದ ನಡೆಯುತ್ತ ಬಂದಿದೆ ಎಂಬುದಕ್ಕೆ ನಿಖರ ದಾಖಲೆಗಳಿಲ್ಲ. ಆದರೆ ವಿಜಯನಗರ ಅರಸರ ಕಾಲದಲ್ಲಿ ದಸರಾ ವಿಜೃಂಭಣೆಯಿಂದ ನಡೆಯುತ್ತಿತ್ತು ಎಂಬುದಕ್ಕೆ ದಾಖಲೆಗಳು ದೊರಕುತ್ತವೆ. ಪೋರ್ಚುಗೀಸರು ಪ್ರವಾಸಿ ಡೊಮಿಂಗೋ ಇಟಲಿಯ ಯಾತ್ರಿಕ ನಿಕಲಾಯ್‌ಕಾಂಟಿ ೧೪೪೨ರ ಸುಮಾರಿಗೆ ವಿಜಯನಗರದ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದು. ಪರ್ಷಿಯಾದ ಪ್ರವಾಸಿ ಅಬ್ದುಲ್ ರಜಾಕ್ ದಸರಾ ಆಚರಣೆಯನ್ನು ತಮ್ಮ ಪ್ರವಾಸ ದಾಖಲೆಗಳಲ್ಲಿ ಹಾಡಿ ಹೊಗಳಿದ್ದಾರೆ. ವಿಜಯನಗರದ ಸಾಮ್ರಾಜ್ಯದ ಪತನಾನಂತರ ದಸರಾ ಆಚರಣೆ ನಡೆಯುತ್ತಿತ್ತೇ ಇಲ್ಲವೇ ಎಂಬ ಬಗ್ಗೆ ಇತಿಹಾಸದಲ್ಲಿ ಯಾವುದೇ ದಾಖಲೆಗಳು ಸಿಗುವುದಿಲ್ಲ. ಆದರೆ ಮೈಸೂರು ಅರಸರ ಕಾಲದಲ್ಲಿ ದಸರಾ ವಿಜೃಂಭಣೆಯಿಂದ ನಡೆದ ಬಗ್ಗೆ ಮಾಹಿತಿ ದೊರಕುತ್ತದೆ. ಮೈಸೂರು ಒಡೆಯರ ಆಡಳಿತ ೧೩ನೇ ಶತಮಾನದ ಅಂತ್ಯದಲ್ಲಿ ಆರಂಭವಾದರೂ ೧೬ನೇ ಶತಮಾನದವರೆಗೆ ದಸರಾ ಆರಂಭವಾದ ಬಗ್ಗೆ ಮಾಹಿತಿ ಸಿಗುವುದಿಲ್ಲ.

ಮೈಸೂರು ಸಂಸ್ಥಾನ ಸ್ಥಾಪನೆಯಾದ ನಂತರ ೧೫೭೮ರವರೆಗೆ ಅದು ವಿಜಯನಗರ ಪತನಾನಂತರ ಮೈಸೂರು ಅರಸರು ಅಲ್ಲಿ ಆಚರಿಸುತ್ತಿದ್ದ ಕೆಲವು ಆಚರಣೆಗಳನ್ನು ಮುಂದುವರಿಸಿದರು. ಅವುಗಳಲ್ಲಿ ದಸರಾ ಕೂಡಾ ಒಂದು. ೧೬೧೦ರ ವೇಳೆಗೆ ಮೈಸೂರು ಒಡೆಯರಾಗಿದ್ದ ರಾಜ ಒಡೆಯರ್ ಕಾಲದಲ್ಲಿ ದಸರಾ ಪುನರಾರಂಭವಾದ ಬಗ್ಗೆ ಮಾಹಿತಿಗಳು ಲಭ್ಯವಿದೆ. ವಿಜಯನಗರದ ಅರಸರ ರತ್ನ ಖಚಿತ ಸಿಂಹಾಸನ ಈಗಲೂ ಮೈಸೂರು ಅರಮನೆಯಲ್ಲಿದೆ. ಈ ಸಿಂಹಾಸನವೇರಿದ ರಾಜ ಒಡೆಯರ್ ಅವರು ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಆಚರಿಸಲಾಗುತ್ತಿದ್ದ ದಸರಾ ಮಹೋತ್ಸವವನ್ನು ಪುನರಾರಂಭಿಸಿದರು ಎಂದು ತಿಳಿದು ಬಂದಿದೆ. ದಸರಾದ ಸಂದರ್ಭದಲ್ಲಿ ಕುಸ್ತಿ ಕಲೆಗೆ ಹೆಚ್ಚಿಗೆ ಮನ್ನಣೆ ಕೊಟ್ಟಿದ್ದರು ಎಂಬುದು ಸಹ ಇತಿಹಾಸದಿಂದ ತಿಳಿದುಬರುತ್ತದೆ.

ಶ್ರೀಕೃಷ್ಣದೇವರಾಯ ಸ್ವತಃ ಕುಸ್ತಿಪಟು ಅನ್ನುವುದಕ್ಕೆ ದಿನ ಬೆಳಿಗ್ಗೆ ಆತನು ಗರಡಿಯಲ್ಲಿ ತಾಲೀಮು ಮಾಡುತ್ತಿದ್ದನು. ಡೊಮಿಂಗೋ ಪಿಯಸ್ ಹೀಗೆ ವರ್ಣಿಸಿದ್ದಾನೆ. “ಪ್ರತಿದಿನ ರಾಜನು ಜಂಜಲಿ ಎಣ್ಣೆಯನ್ನು ಕುಡಿಯವ ಅಭ್ಯಾಸವಿರಿಸಿಕೊಂಡಿದ್ದನು. ನಸುಕಿನಲ್ಲಿಯೋ ಎದ್ದು ಈ ಎಣ್ಣೆಯನ್ನು ಮೈಗೆ ಸವರಿಸಿಕೊಳ್ಳುತ್ತಾನೆ. ಚಿಕ್ಕ ಅಂಗವಸ್ತ್ರ (ಕಚ್ಚೆಯಾಗಿರಬೇಕು)ವನ್ನು ಧರಿಸಿ ಬಹಳ ಭಾರವಿರುವ ಮಣ್ಣಿನ ವಸ್ತ್ರಗಳನ್ನು ಬಗಲಲ್ಲಿ ಎತ್ತಿಹಿಡಿದು, ಮೈಗೆ ಹತ್ತಿದ ಎಣ್ಣೆ ಆವಿಯಾಗುವವರೆಗೆ ಖಡ್ಗ, ಗುರಾಣಿಗಳಿರುವ ಕಸರತ್ತು ಮಾಡುತ್ತಿದ್ದನು. ಅನಂತರ ಪೈಲ್ವಾನರೊಡನೆ ಕುಸ್ತಿ ಮಾಡುತ್ತಾನೆ. ಈ ಕಸರತ್ತುಗಳಾದ ನಂತರ ಸುರ್ಯೋದಯವಾಗುವವರೆಗೆ ಕುದುರೆಯ ಸವಾರಿಯನ್ನು ಮಾಡುತ್ತಾನೆ. ನಂತರ ಸ್ನಾನ ಮಾಡುತ್ತಾನೆ.

ದಸರಾ ಉತ್ಸವದ ಸಂದರ್ಭದಲ್ಲಿ ದರ್ಬಾರ ಹಾಲಿನಲ್ಲಿ ಪೈಲ್ವಾನರು ಎಲ್ಲಿ ನಿಲ್ಲುತ್ತಿದ್ದರು, ಕುಳಿತುಕೊಳ್ಳುತ್ತಿದ್ದರು ಎನ್ನುವುದಕ್ಕೆ ಉಲ್ಲೇಖವಿದೆ. “ಮಧ್ಯಾಹ್ನ ೩ ಗಂಟೆಗೆ ಪ್ರತಿಯೊಬ್ಬರು ಹಿಂತಿರುಗುತ್ತಾರೆ, ಎಲ್ಲರನ್ನೂ ಒಳಗಡೆ ಬಿಡುವುದಿಲ್ಲ. ನಮ್ಮನ್ನು ಎರಡು ದ್ವಾರಗಳ ನಡುವಿನ ಬಯಲಿನಲ್ಲಿ ಬಿಡುತ್ತಾರೆ. ಕುಸ್ತಿ ಪೈಲ್ವಾನರು, ನರ್ತಕಿಯರು, ಅಲಂಕೃತವಾದ ಕುದುರೆಗಳು ಆನೆಗಳು, ಇವುಗಳ ಸರದಾರರು ಮೊದಲಾದವರಿಗೆ ಮಾತ್ರ ಒಳಗಡೆ ಪ್ರವೇಶವಿದೆ. ಒಳಗಡೆ ಹೋದೊಡನೆ ಇವರನ್ನೆಲ್ಲಾ ತಮ್ಮ ತಮ್ಮ ಸ್ಥಳಗಳಲ್ಲಿ ಸಾಲಾಗಿ ನಿಲ್ಲಿಸುತ್ತಾರೆ. ಭವನದ ಮಧ್ಯ ಭಾಗದಲ್ಲಿರುವ ಪಾವಟಿಗಳ ಹತ್ತಿರ ಪೈಲ್ವಾನರು ನಿಂತಿರುತ್ತಾರೆ. “ರಾಜನು ಕುಳಿಗ ನಂತರ ಪೈಲ್ವಾನರು ನೆಲದ ಮೇಲೆ ಕುಳಿತುಕೊಳ್ಳುತ್ತಾರೆ.

ಕ್ರಿ.ಶ. ೧೫೨೦-೨೨ರಲ್ಲಿ ಹಂಪಿಗೆ ಭೇಟಿ ನೀಡಿದ್ದ ಪೋರ್ಚುಗೀಸ್ ಪ್ರವಾಸಿ ಡೊಮಿಂಗೋ ಪಯಸನು ನವರಾತ್ರಿ ಉತ್ಸವವನ್ನು ಸಾಕಷ್ಟು ದಾಖಲಿಸಿದ್ದಾನೆ. ಈ ಒಂಭತ್ತು ದಿನಗಳಲ್ಲಿ ನಡೆಯುತ್ತಿದ್ದ ವಿವಿಧ ಕಾರ್ಯಕ್ರಮಗಳ ಜೊತೆಯಲ್ಲಿ ಕುಸ್ತಿ ಸ್ಪರ್ಧೆಯ ಉಲ್ಲೇಖವು ಆತನ ಬರಹದಲ್ಲಿ ಸಿಗುತ್ತದೆ. ಪಯಸನು ತಾನು ನೋಡಿದ ಕುಸ್ತಿ ಪಂದ್ಯಾವಳಿಗಳನ್ನು ಹೀಗೆ ವರ್ಣಿಸುತ್ತಾನೆ. ನಮ್ಮ (ಪೋರ್ಚುಗೀಸರಂತೆ) ಕುಸ್ತಿಯಂತೆ ಅವರು ಕುಸ್ತಿಯಾಡುವುದಿಲ್ಲ. ಅವರು ಗುದ್ದುಗಳನ್ನು ಕೊಡುತ್ತಾರೆ. ಆ ಗುದ್ದುಗಳು ಎಷ್ಟು ಭಯಂಕರವಾಗಿರುತ್ತವೆಂದರೆ ಒಮ್ಮೊಮ್ಮೆ ಕಣ್ಣುಗಳನ್ನು ಕಿವಿಗಳನ್ನು ಮುಖಗಳನ್ನು ನಾಶ ಮಾಡುತ್ತವೆ. ಕೆಲವು ಸಾರಿ ಅವರ ಸ್ನೇಹಿತರು ಪೈಲ್ವಾನರನ್ನು ಅಖಾಡದಿಂದ ಹೊತ್ತು ಹೊರಗೆ ಒಯ್ಯುತ್ತಾರೆ. ನ್ಯಾಯನಿರ್ಣಯ ಮಾಡಲು ಕುಸ್ತಿಯನ್ನು ಆಡಿಸಲು ಗೌರವವನ್ನು  ಸಲ್ಲಿಸಲು ಅಲ್ಲಿ ನುರಿತ ಸರದಾರರಿತ್ತಾರೆ. ಈ ದಿವಸ ಕುಸ್ತಿ ಮತ್ತು ನೃತ್ಯವನ್ನು ಬಿಟ್ಟು ಬೇರೇನ್ನೇನೂ ಮಾಡುವುದಿಲ್ಲ. ಸೂರ್ಯಹಸ್ತಗತನಾದೊಡನೆ ದೀವಟಿಕೆಗಳಿಂದ ದೀಪಗಳನ್ನುರಿಸುತ್ತಾರೆ. ಇವುಗಳನ್ನು ಅಖಾಡದ ಸುತ್ತ ನಿಲ್ಲುವುದರಿಂದ ಹಗಲಿನಂತೆ ಗೋಚರವಾಗುತ್ತದೆ. ಭವನಗಳ ಮೋಡಗಳ ಮೇಲೆ ರಾಜ ಕುಳಿತ ವೇದಿಕೆಯ ಸುತ್ತ ದೀವಟಿಕೆಗಳಿರುತ್ತವೆ. ದೀವಟಿಕೆಗಳನ್ನು ಹಚ್ಚಿದೊಡನೆ ನಮೂನೆಯ ಆಟಗಳನ್ನು ನಾಟಕಗಳನ್ನು ಪ್ರದರ್ಶಿಸುತ್ತಾರೆ.

ಪಯಸ್ ಈ ವರ್ಣನೆಯಲ್ಲಿ ಕುಸ್ತಿ ಸ್ಪರ್ಧೆ ಮತ್ತು ಅನಂತರ ನಡೆಯುತ್ತಿದ್ದವು. ಕಾರ್ಯಕ್ರಮಗಳ ಸೃಷ್ಟಿ ಚಿತ್ರಣ ಸಿಗುತ್ತದೆ. ದೀವಟಿಗಳ ಬೆಳಕಿನಲ್ಲಿ ಈ ಸ್ಪರ್ಧೆಗಳು ಆಟಗಳು ನಡೆಯುತ್ತಿದ್ದವೆಂದು ಮೇಲೆ ಸ್ಪರ್ಧೆಯು ದೀರ್ಘಾವಧಿ ಮನರಂಜನೆಯನ್ನು ನೋಡಿಕೊಳ್ಳಬಹುದು ಎಂದು ಪಯಸ್‌ನು ತಿಳಿಸಿದ್ದಾನೆ.

ಪೋರ್ಚುಗೀಸ್ ಪ್ರವಾಸಿ, ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದಾಗ ವಿಜಯನಗರದಲ್ಲಿ ಮಹಿಳೆಯರೂ ಪೈಲ್ವಾನರಾಗಿದ್ದರು. ಆ ಕಾಲದಲ್ಲಿ ಮಹಿಳೆಯರು ಸಹ ಸದೃಢರು, ಗಂಡಸರಂತೆ ಸಮಬಲರಾಗಿದ್ದರು ಎನ್ನುವುದಕ್ಕೆ ಈ ಉಲ್ಲೇಖವಿದೆ. ಡೊಮಿಂಗೋ ಪಿಯಸ್ ಹೀಗೆ ಉಲ್ಲೇಖಿಸುತ್ತಾನೆ. “ಪ್ರತಿಯೋರ್ವ ರಾಣಿಗೂ ತನ್ನದೇ ಆದ ಅರಮನೆ, ಊಳಿಗವರ್ಗ, ಕಾವಲು ಹೆಂಗಸರು ಮೊದಲಾದವರಿದ್ದರು. ಊಳಿಗದವರೆಲ್ಲರು ಹೇಳುತ್ತಾರೆ. ಖಡ್ಗ ಗುರಾಣಿಗಳನ್ನು ಉಪಯೋಗಿಸಬಲ್ಲ, ಕುಸ್ತಿಯಾಡಬಲ್ಲ ಅನೇಕ ತರದ ವಾದ್ಯಗಳನ್ನು ನುಡಿಸಬಲ್ಲವರು ಇದ್ದರು ಎಂದು ಹೇಳುತ್ತಾನೆ.

ಮಹಿಳೆಯರು ಮತ್ತು ಮಲ್ಲಯುದ್ಧ ಕುರಿತು ವಿಜಯನಗರಕ್ಕೆ ಭೇಟಿ ನೀಡಿದ್ದು ಇನ್ನೊಬ್ಬ ಪೋರ್ಚುಗೀಸ್ ಪ್ರವಾಸಿ ಫರ್ನಾವೊ ನ್ಯೂನಿಜನು ಮಹಿಳೆಯರಿಗೆ ಮಲ್ಲಯುದ್ಧ ಗೊತ್ತಿತ್ತೆಂದು ತಿಳಿಸುತ್ತಾನೆ.

ಗರಡಿ ಕಲೆಯು ಚಾರಿತ್ರಿಕವಾಗಿ ರಾಜ ಮಹಾರಾಜರ ಕಾಲದಿಂದ ಈ ಕಲೆಯು ವೈಭವನ್ನು ಹಲವಾರು ರಾಜರ ಚರಿತ್ರೆಯಲ್ಲಿ ಕಂಡು ಬಂದಿದೆ. ಇದಕ್ಕೆ ರಾಜರು ಮಹತ್ವವನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜರ ಗತವೈಭವನ್ನು ನೆನಪಿಸಿಕೊಳ್ಳಲು ಪ್ರತಿ ವರ್ಷವೂ ಹಂಪಿ ಉತ್ಸವದಲ್ಲಿ ಇತರ ಕಾರ್ಯಕ್ರಮಗಳೊಂದಿಗೆ ಕುಸ್ತಿಯ ಅಖಾಡವನ್ನು ನಿರ್ಮಿಸಿ, ನುರಿತ ಕುಸ್ತಿ ಪಟುಗಳಿಂದ ಕುಸ್ತಿಯಾಡಿಸಿ ಗೆದ್ದ ಪೈಲ್ವಾನರಿಗೆ ಬಹುಮಾನಗಳನ್ನು ನೀಡುತ್ತಾರೆ. ಇನ್ನೊಂದು ವಿಶೇಷವೇನೆಂದರೆ ರಾಜರ ಕಾಲದಲ್ಲಿ ಹೆಂಗಸರು ಸಹ ಕುಸ್ತಿ ಪಟುಗಳು ಇದ್ದಾರೆ. ಅದರಂತೆ ಹಂಪಿ ಉತ್ಸವದಲ್ಲಿ ವಿಶೇಷವಾಗಿ ಹೆಂಗಸರ ಕುಸ್ತಿಗಳನ್ನು ಆಡಿಸುತ್ತಾರೆ. ಅವರಿಗೆ ಸಹ ಪ್ರಶಸ್ತಿ ಬಹುಮಾನಗಳನ್ನು ನೀಡುತ್ತಾರೆ.

ಈ ರೀತಿ ಕುಸ್ತಿಯ ಕಲೆಯು ಚಾರಿತ್ರಿಕವಾಗಿ ಕಂಡು ಬಂದರೂ ಸಹ ಈ ಕಲೆಯನ್ನು ಮರೆದಂತೆ ಹೊಸಪೇಟೆ ನಗರದಲ್ಲಿ ಮತ್ತು ತಾಲೂಕಿನಲ್ಲಿ ಸಹ ಗರಡಿ ಕಲೆ ಪ್ರತಿಯೊಂದು ಕೇರಿಗಳಲ್ಲಿ ಗರಡಿ ಮನೆಗಳು ಇವೆ. ಇವುಗಳಲ್ಲಿ ಕೆಲವು ಹಾಳಾದ ಗರಡಿ ಮನೆಗಳನ್ನು ಪುನರ್ನಿರ್ಮಾಣ ಮಾಡಲು ಸರಕಾರ ಮುಂದಾಗಬೇಕು.

ಇಷ್ಟೆಲ್ಲ ಚಾರಿತ್ರಿಕವಾಗಿ ಗರಡಿ ಕಲೆಯು ನಡೆದು ಬಂದಿದೆ. ಇದಕ್ಕೆ ಸರ್ಕಾರ ಮತ್ತು ಯುವಜನಾಂಗ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿಲ್ಲ. ಗರಡಿ ಕಲೆ ಅವನತಿ ಹಾದಿ ಹಿಡಿದಿದೆ. ಪ್ರತಿ ಸಾರಿ ಹಂಪಿ ಉತ್ಸವದಲ್ಲಿ ಕುಸ್ತಿ ಅಖಾಡ ನಿರ್ಮಾಣ ಮಾಡಬೇಕೆಂದು ಜನಸಮೂಹದಲ್ಲಿ ಮಂತ್ರಿಗಳ ಘೋಷಣೆ ಮಾಡುತ್ತಾರೆ ಹೊರತು ಅದರ ಬಗ್ಗೆ ಕೆಲಸ ಕಾರ್ಯ ಮಾಡಲು ಇನ್ನೂ ಪ್ರಯತ್ನ ಮಾಡುತ್ತಿಲ್ಲ. ಸರ್ಕಾರ ಈ ಸಾರಿ ಆದರೂ ಕಾಳಜಿವಹಿಸಿ ಕುಸ್ತಿ ಅಖಾಡ ನಿರ್ಮಾಣ ಮಾಡುತ್ತಾರೆಂದು ನಂಬಿಕೆ ಇಡೋಣ.

ಆಕರ
ಹೊಸಪೇಟೆ ತಾಲೂಕಿನ ಗರಡಿ ಸಂಪ್ರದಾಯ, ೨೦೦೪, ಪಿಎಚ್.ಡಿ. ಮಹಾಪ್ರಬಂಧ ಆಯ್ದ ಭಾಗಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.