‘ಬೇಟೆ’ ಆದಿಮಾನವ ಆಹಾರ ಸಂಗ್ರಹಣೆಯಲ್ಲಿ ಪ್ರಮುಖ ವೃತ್ತಿಯಾಗಿತ್ತೆಂಬುದು ಗಮನಾರ್ಹ. ಗಡ್ಡೆ-ಗೆಣಸುಗಳ ನಂತರ ಪ್ರಾಣಿಗಳನ್ನು ಕೊಂದು ತಿನ್ನುವ ವಿನೂತನ ಪ್ರವೃತ್ತಿ ಮಾನವನಲ್ಲಿ ಬೆಳೆದಂತೆ ಬೇಟೆಯ ಆಯಾಮದಲ್ಲಿ ಕ್ರಾಂತಿಕಾರಿ ಬದಲಾವಣೆಯಾಯಿತು. ದುಷ್ಟ ಮೃಗಗಳ ರಕ್ಷಣೆ, ಆಹಾರ ಸಮತೋಲನ, ಮನೋರಂಜನೆ, ಅಷ್ಟಾದಶವರ್ಣನೆ, ಆತ್ಮರಕ್ಷಣೆ,  ವ್ಯಾಪಾರ ಹೀಗೆ ನಾನಾ ಕಾರಣಗಳಿಗಾಗಿ ಬೇಟೆ ಇಂದಿಗೂ ಜೀವಂತಿಕೆ ಪಡೆದುಕೊಂಡಿದೆ. ಭಾರತದ ಹಲವು ಆಳರಸರ ಕಾಲಾವಧಿಯಲ್ಲಿ ಈ ಬೇಟೆ ಚಿತ್ರಣವನ್ನು ಕಾಣಬಹುದಾಗಿದೆ. ಮಧ್ಯಕಾಲ ಅಥವಾ ವಿಜಯನಗರ ಕಾಲದಲ್ಲಿ ಬೇಟೆ ಸಾಂಸ್ಕೃತಿಕ ಪರಿವರ್ತನೆ ಮತ್ತು ರಾಜಪ್ರಭುತ್ವಕ್ಕೆ ಮಹಾತಿರುವಾಗಿ ಪರಿಣಮಿಸಿದ್ದು, ಚರಿತ್ರೆಯಲ್ಲಿ ದಾಖಲಾಗಿಲ್ಲ. ತಕ್ಕಮಟ್ಟಿಗೆ ಶಾಸನ, ವಿದೇಶಿ ಯಾತ್ರಿಕರ ವರದಿ, ಕನ್ನಡ ಕಾವ್ಯ, ಸ್ಮಾರಕ ಶಿಲ್ಪಗಳಲ್ಲಿ ಬೇಟೆ ಉಲ್ಲೇಖಗೊಂಡಿದ್ದು, ಜನಸಾಮಾನ್ಯರಿಂದ ಆಳರಸರವರೆಗೆ ಇದು ತುಂಬಾ ಮಹತ್ವದ ಕ್ರೀಡೆ ಮತ್ತು ಹವ್ಯಾಸವಾಗಿದ್ದಿತು.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಹಿಂದೆ ಬೇಟೆ ಪ್ರಸಂಗ ಬರುವುದು ಅತಿಶಯೋಕ್ತಿಯಲ್ಲ. ಒಂದು ದಿನ ಸಂಗಮನ ಸಹೋದರರಲ್ಲಿ ಹಿರಿಯವರಾದ ಹರಿಹರ, ಬುಕ್ಕರಾಯರು ಬೇಟೆಗೆಂದು ಕಾಡಿಗೆ ಹೋದಾಗ ಮೊಲವೊಂದು ತನ್ನನ್ನು ಬೆನ್ನಟ್ಟಿ ಬರುತ್ತಿದ್ದ ನಾಯಿಗಳನ್ನೇ ಕಚ್ಚಿತು. ಈ ವಿಚಿತ್ರ ಘಟನೆ ಕಂಡ ಹರಿಹರ ಸಂನ್ಯಾಸಿಯೊಬ್ಬನ ಬಳಿ ತಿಳಿಸಿದನು. ಅವನು (ವಿದ್ಯಾರಣ್ಯ?) ಸಾಮ್ರಾಜ್ಯ ಕಟ್ಟಲು ಅದೇ ಒಳ್ಳೇಯ ಸ್ಥಾನ ಎಂದು ಉಪದೇಶ ಮಾಡಿದಂತೆ ಇವರು ಸಾಮ್ರಾಜ್ಯ ಸ್ಥಾಪಿಸಿದರಂತೆ. ಈ ಘಟನೆಯಂತೆ ಹೊಯ್ಸಳ, ಕುಮ್ಮಟದುರ್ಗ ಗುಡೇಕೋಟೆ, ಜರಿಮಲೆ, ಸೊಂಡೂರು, ತರೀಕೆರೆ, ಚಿತ್ರದುರ್ಗ ಮೊದಲಾದ ಸಂಸ್ಥಾನಗಳ ಉಗಮದೊಂದಿಗೆ ಬೇಟೆ ಪ್ರಸಂಗ ಹಾಸುಹೊಕ್ಕಾಗಿ ಬರುತ್ತದೆ. ಹಂಪೆ ಪರಿಸರವು ತಪೋಭೂಮಿ, ಪ್ರಾಚೀನ ವಾನರ ಕೇಂದ್ರ, ಕಿರಾತರ ನೆಲೆಯಗಿದ್ದ ಉಲ್ಲೇಖಗಳಿವೆ. ಹೊಯ್ಸಳರ ಕಾಲಕ್ಕೆ ಹಂಪೆ ಪರಿಸರದಲ್ಲಿ ಕೋಟೆ-ಕೊತ್ತಲುಗಳ ರಕ್ಷಣೆಗೆ ಕಿರಾತ ಪಡೆಯನ್ನು ನೇಮಿಸಲಾಗಿತ್ತು. ವಿಜಯನಗರದ ಅರಸರು ಬೇಟೆಯಲ್ಲಿ ಬಹು ನಿಪುಣರಾಗಿದ್ದರು. ಈ ಅರಸರು ಯುದ್ಧಕ್ಕೆ ಹೋರಾಡುವ ಸಂಭ್ರಮದಂತೆ ಬೇಟೆಗೂ ಹೋಗುವ ಪರಿಪಾಟ ಇಟ್ಟುಕೊಂಡಿದ್ದರು. ಶಿಕಾರಿಗೆ ಹೊರಡುವಾಗ ಹೆಚ್ಚಿನ ಸಂಖ್ಯೆಯಲ್ಲಿ ೧೦,೦೦೦ ಅಶ್ವಾಳು, ೫,೦೦,೦೦೦ ಕಾಲಾಳು ಮತ್ತು ೭೦೦ ಗಜಗಳ ಪರಿವಾರವನ್ನು ಒಯ್ಯುತ್ತಿದ್ದರೆಂದು ತಿಳಿದುಬರುತ್ತದೆ. ವಿಜಯನಗರದಲ್ಲಿ ‘ಬೇಡ ಪಡೆ’ ನಾನಾ ಕಾರಣಗಳಿಗಾಗಿ ನಿರ್ಣಾಯಕ ಪಾತ್ರ ವಹಿಸಿದ್ದಿತು. ಮೀಸಲು ಪಡೆ,  ಗುರಿಕಾರರ ನೆರವಿನೊಂದಿಗೆ ಅರಸರು ಬೇಟೆಗೆ ಹೋಗುತ್ತಿದ್ದ ಉಲ್ಲೇಖಗಳಿವೆ. ಹರಿಹರ, ೨ನೇ ದೇವರಾಯ ಮೊದಲಾದವರನ್ನು ಹೆಸರಿಸಬಹುದು. ಗಜಬೇಂಟೆಕಾರ ಎಂಬ ಬಿರುದನ್ನು ಹೊಂದಿರುವುದು ಶಾಸನಗಳಿಂದ ತಿಳಿಯಬಹುದಾಗಿದೆ.

ವಿಜಯನಗರ ಕಾಲದಲ್ಲಿ ಪ್ರಚಲಿತವಿದ್ದ ಬೇಟೆಯ ಬಗ್ಗೆ ಹಂಪೆಯ ವಿರೂಪಾಕ್ಷ ದೇವಾಲಯ, ಹಜಾರರಾಮ, ವಿಜಯವಿಠಲ, ಕೃಷ್ಣ, ಅಚ್ಯುತ, ಮಾಲ್ಯವಂತ ರಘುನಾಥ, ಪಟ್ಟಾಭಿರಾಮ,  ಮಹಾನವಮಿ ದಿಬ್ಬಗಳಲ್ಲಿ ನೋಡಬಹುದು. ಹಂಪೆಯ ಹೊಲರಗೂ ಬೇಟೆಯ ಉಲ್ಲೇಖಗಳ ನೆಲೆಗಳನ್ನು ಗುರುತಿಸಬಹುದು: ಶೃಂಗೇರಿ, ಮೇಲುಕೋಟೆ, ನಂದಿಬೆಟ್ಟ, ಭಾಗಮಂಡಲ, ಕಲ್ಲೂರು, ಹಿರಿಯೂರು, ಶ್ರೀಶೈಲಂ, ಯಗಂಟಿ, ಲೇಪಾಕ್ಷಿ, ಪುಷ್ಪಗಿರಿ ಮತ್ತು ಶಂಕರಗಿರಿಗಳ ದೇವಾಲಯಗಳ ವಾಸ್ತುಶಿಲ್ಪದಲ್ಲಿ ಬೇಟೆ ಚಿತ್ರಣವಿದೆ. ಈ ಬೇಟೆ ಲೌಕಿಕ ಅಲೌಕಿಕ ಲಕ್ಷಣಗಳನ್ನು ಹೊಂದಿದೆ. ವಿಜಯನಗರ ವಾಸ್ತುಶಿಲ್ಪದಲ್ಲಿ ಬೇಟೆ ಚಿತ್ರಣವು ಆರಾಧನಾ ವೃತ್ತಿಯಾಗಿದ್ದಿತೆಂದು ಹೇಳಬಹುದು. ಬೇಟೆಗಾರರ ಹೆಬ್ಬಾಗಿಲು ಸಹ ಬೇಟೆಯ ಔನ್ನತಿಗೆ ಸಾಕ್ಷಿ. ಇಲ್ಲಿ ಹುಲಿಬೇಟೆ (ವಿಠಲ), ಜಿಂಕೆ ಬೇಟೆ (ಮಹಾನವಮಿ ದಿಬ್ಬ), ಹಂದಿ ಬೇಟೆ, ಆನೆ ಇತರ ಪ್ರಾಣಿಗಳ ಬೇಟೆ ಚಿತ್ರಣವು ಅದ್ಭುತವೆನಿಸುತ್ತದೆ. ಲೌಕಿಕ ಬೇಟೆಯನ್ನು ಮಹಾನವಮಿ ದಿಬ್ಬದಲ್ಲಿ ಕಾಣಬಹುದು. ಅಲೌಕಿಕ ಬೇಟೆಗೆ ಕಿರಾತಾರ್ಜುನೀಯ ಪ್ರಸಂಗವನ್ನು ಉದಾಹರಿಸಬಹುದು. ಅರ್ಜುನನ ಮತ್ಸಬೇಧ, ಲೇಪಾಕ್ಷಿ ವೀರಭದ್ರ ದೇವಾಲಯ (ಕಿರಾತಾರ್ಜುನೀಯ ಪ್ರಸಂಗ) ಇತರ ಸ್ಥಳಗಳಲ್ಲಿ ಕಮಲಾಪುರ, ಮರಿಯಮ್ಮನಹಳ್ಳಿ, ಗುಡೇಕೋಟೆಗಳಲ್ಲಿಯೂ ಮೇಲಿನಂತೆ ಕಾಣಬಹುದು. ವಿಜಯನಗರ ಕಾಲದಲ್ಲಿನ ಬೇಟೆ ಉದ್ಯೋಗವಾಗಿತ್ತೇ ಅಥವಾ ಲಾಭದಾಯಕ ಉದ್ದಿಮೆಯಾಗಿತ್ತೆ ತಿಳಿಯುತ್ತಿಲ್ಲ.

ವಿದೇಶಿ ಪ್ರವಾಸಿಗರಾದ ವೇರ್ಥಮ, ಬಾರ್ಬೊಸ, ಅಬ್ದುಲ್‌ರಜಾಕ್‌, ಪೆರ್ನಾಂವೊ ನೂನಿಜ್‌ಇತರರು ಬೇಟೆಯ ಸ್ವರ್ಗವೇ ಹಂಪಿ, ಇಲ್ಲಿ ಒಳ್ಳೆಯ ಬೇಟೆಗಾರರಿದ್ದಾರೆ, ಆನೆ ಬೇಟೆ, ಹಂಪೆಯಲ್ಲಿ ದೇವಾಲಯ ಕಟ್ಟಲು ಬೇಟೆಯೇ ಕಾರಣವೆಂದು ತಿಳಿಸುವಾಗ ಬೇಟೆಯ ಧಾರ್ಮಿಕ ಮಹತ್ವಕ್ಕೆ ಇವರು ಗಮನಹರಿಸಿದ್ದರು. ಬೇಟೆ ವಿಧಾನ, ಬಗೆಗಳಲ್ಲಿ ಹುಲಿ, ಆನೆ, ಜಿಂಕೆ, ಮೊಲ, ಹಂದಿಗಳ ಚಿತ್ರಣ ಬಹುವಿಧದಲ್ಲಿ ಉಲ್ಲೇಖಗೊಂಡಿದೆ. ಬೇಟೆಗಾರನೊಂದಿಗೆ ಬೇಟೆ ನಾಯಿಗಳು ಸಹ ಸಹಕರಿಸಿದ್ದು ಕಂಡುಬರುತ್ತದೆ. ಹಂಪಿ ಆನೆಗೊಂದಿ ಪರಿಸರದಲ್ಲಿ ಮೇಲಿನಂತೆ ವನ್ಯಜೀವಿಗಳೊಂದಿಗೆ ಮಾನವನ ಚಿತ್ರಣವನ್ನು ಅರಾಧನಾ ನೃತ್ಯವೆಂಬಂತೆ ಚಿತ್ರಿಸಲಾಗಿದೆ. ಜನಸಾಮಾನ್ಯರಿಂದ ಅಳಿದುಳಿದು ಬಂದ ಬೇಟೆಗೆ ರಾಜ ಮನ್ನಣೆ ದೊರೆತಾಗ ಅದು ಆರಾಧನೆ, ಧಾರ್ಮಿಕ ಸ್ವರೂಪಕ್ಕೆ ಸಿಲುಕಿ ಆಚರಣೆ ಸಂಪ್ರದಾಯಗಳು ತಲೆಮಾರುಗಳಿಂದ ಚಾಲನೆಗೆ ಬಂದವು. ಇವುಗಳ ನಡುವೆಯೂ ಬೇಟೆಯನ್ನಾಡಲು ವಿಧಿ-ಆಚರಣೆ, ನಂಬಿಕೆ-ನಿಷೇಧ ಇತರ ಕಟ್ಟುಪಾಡುಗಳಿದ್ದವೆಂಬುದು ಸ್ಪಷ್ಟ. ಮೇಲೆ ಹೇಳಿದ ಪ್ರಾಣಿಗಳಲ್ಲದೆ, ಇತರ ಪ್ರಾಣಿಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಕೆಲವು ಪ್ರಾಣಿಗಳಿಗೆ ನಿಷೇಧ ಹೇರಿದ್ದು, ಗೌರವದಿಂದ ಅವುಗಳ ವಧೆಯನ್ನು ಖಂಡಿಸಲಾಗುತ್ತಿತ್ತೆಂದು ತಿಳಿಯಬಹುದು. ಸಿಕ್ಕ ಬೇಟೆಯನ್ನು ಹಂಚಿಕೊಳ್ಳುವಾಗ ಅವರು ಪಡುವ ಸಡಗರ-ಸಂಭ್ರಮದಲ್ಲಿ ಆಹಾರ ವಿನಿಯಮಯವಲ್ಲದೆ, ಸಂತೋಷವಾಗಿ ಸಾಮೂಹಿಕವಾಗಿ ಕುಣಿಯುವ ‘ಬೇಟೆ ನೃತ್ಯ’ವನ್ನು ಪ್ರದರ್ಶಿಸುತ್ತಿದ್ದರು. ಇದು ರಾಜನಿಗೂ ಪ್ರಜೆಗಳಿಗೂ ತುಂಬಾ ಇಷ್ಟವಾದ ಔಚಿತ್ಯ ಕಾರ್ಯಕ್ರಮವು ಆಗಿದ್ದಂತಿದೆ. ಇಂತಹ ಉತ್ಸವವನ್ನು ಇಂದು ಯುಗಾದಿ ಸಂದರ್ಭದಲ್ಲಿ ಮಾತ್ರ ನೋಡಲು ಸಾಧ್ಯ. ಆದರೆ ವಿಜಯನಗರದಲ್ಲಿ ಸಂದರ್ಭಕ್ಕೆ ತಕ್ಕಂತೆ ಆಯೋಜಿಸಲಾಗಿತ್ತು. ಹಂಪೆಯ ಮಹಾನವಮಿ ಹಬ್ಬವನ್ನು ಆಚರಿಸುವ ಪೂರ್ವದಲ್ಲಿ ಬೇಟೆ ಹಬ್ಬವನ್ನು ಆಚರಿಸುತ್ತಿದ್ದರು. ಈ ಬೇಟೆ ಹಬ್ಬವು ಸಾರ್ವತ್ರಿಕವಾಗಿ ನಡೆಯುತ್ತಿತ್ತಲ್ಲದೆ, ಇಂಥ ಹಬ್ಬದಿಂದಲೇ ಮಹಾನವಮಿ ಹಬ್ಬಕ್ಕೆ ಪ್ರಾಶಸ್ತ್ಯ ಬಂದಂತಿದೆ. ಇನ್ನು ಕೆಲವು ಆಚರಣೆಗಳ ಮೂಲಕ ನೋಡುವುದಾದರೆ ಬೇಟೆಗಾರರು ತಮ್ಮ ಆಯುಧಗಳನ್ನು ಪೂಜಿಸುವುದು ಈ ಹಬ್ಬದಲ್ಲಿ ಮತ್ತು ಬೇಟೆಯನ್ನು ಆಯುಧಗಳಿಗೆ ಬಲಿ ಕೊಡಲಾಗುತ್ತದೆ.

ವಿಜಯನಗರ ಕಾಲದ ಮಹಾಯಾತ್ರಾಸ್ಥಳ, ಧಾರ್ಮಿಕ ನೆಲೆಯಾದ ತಿರುಪತಿಯಲ್ಲಿ ಬೇಟೆ ಹಬ್ಬವು ನಡೆಯುತ್ತಿದ್ದುದು ಮೊದಲ ಉದಾಹರಣೆ. ಇಲ್ಲಿರುವ ಮಹಾನವಮಿ ದಿಬ್ಬದಲ್ಲಿ ಶೇ. ೭೫ ಭಾಗ ವನ್ಯಜೀವಿಗಳ ಬಗ್ಗೆ, ಬೇಟೆ ದೃಶ್ಯಗಳ ಬಗ್ಗೆ ಇರುವ ಶಿಲ್ಪ ಪಟ್ಟಿಕೆಗಳನ್ನು ಅವಲೋಕಿಸಿದರೆ, ಬೇಟೆ ನೃತ್ಯ, ಬೇಟೆ ಹಬ್ಬ ಆಚರಿಸುವ ಬೇಟೆ ದಿಬ್ಬಣವಾಗಿರಬೇಕೆಂದು ನಂಬಬಹುದಾಗಿದೆ. ತಿರುಪತಿ ತಿರುಮಲೆಯಲ್ಲಿ ಬೇಟೆ ಹಬ್ಬವನ್ನು ಬ್ರಹ್ಮೋತ್ಸವದ ಆದ ಮೇಲೆ ೨ ದಿನ ದೀಪಾವಳಿ , ೧ ದಿನ ಕಾರ್ತಿಕ ಹಬ್ಬ, ೧ ದಿನ ಬೇಟೆ ಹಬ್ಬ ಮತ್ತು ೧ ದಿನ ಕಣುವ ಹಬ್ಬ ಮಾಡುತ್ತಿದ್ದರು.  ಬೇಟೆ ಹಬ್ಬ ಬಹುತೇಕ ಬೇಸಿಗೆಯ ದಿನಗಳಿಂದಲೇ ಕೂಡಿರುತ್ತದೆ. ತಿರುಪತಿಯಲ್ಲಿ ನಡೆಯುವ ಬೇಟೆ ಹಬ್ಬಕ್ಕೆ ೧೦೦ ಹಣ್ಣು, ಕಬ್ಬು, ಬೆಲ್ಲ, ತೆಂಗಿನಕಾಯಿ, ಎಲೆ ಅಡಿಕೆ, ಹೂವು, ಪತ್ರೆ ಮೊದಲಾದ ವಸ್ತುಗಳನ್ನು ಪೂಜೆಗೆ ಬಳಸುತ್ತಿದ್ದರು . ಭಕ್ತಾದಿಗಳು ಈ ಹಬ್ಬಕ್ಕೆ ಉದಾರವಾಗಿ ದಾನಕೊಟ್ಟ ಉದಾಹರಣೆಗಳಿವೆ. ತಿಮ್ಮಪ್ಪ ದೇವರಿಗೆ ತಿಲ್ಲಪ್ಪನಾಯಕರ್ ದೇಣಿಗೆ ನೀಡಿದ್ದು ಸ್ಮರಣೀಯ. ಈ ಹಬ್ಬದಲ್ಲಿ ಸಂಪ್ರದಾಯದಂತೆ ಬೆಲ್ಲ, ಎಲೆ-ಅಡಿಕೆ, ಕಾಯಿ, ೫೦ ಅಡಿಕೆ, ೧೦೦ ಎಲೆ ಮೊದಲಾದ ವಸ್ತುಗಳನ್ನು ತಪ್ಪದೆ ಗೋವಿಂದನಿಗೆ ಅರ್ಪಿಸಿದ ಭಕ್ತಾದಿಗಳ ದೇಣಿಗೆಗೆ ಲೆಕ್ಕವಿಲ್ಲ. ಬೇಟೆ ಹಬ್ಬದ ದಿನ ಶ್ರೀ ವೆಂಕಟೇಶ್ವರನನ್ನು ಹೊರಗೆ ಆಹ್ವಾನಿಸುವ ಪ್ರಸಂಗವಿದೆ. ಬೇಸಿಗೆ ಅಥವಾ ಸುಗ್ಗಿಯ ಹಬ್ಬದಂತೆ ಬೇಟೆ ಹಬ್ಬವನ್ನು ತಿರುಪತಿ ಗೋವಿಂದರಾಜನ ಹೆಸರಿನಲ್ಲಿ ಉದಯ ಕಾಲದಿಂದ ಆಚರಿಸುತ್ತಾರೆ . ಅಲಂಕಾರ ಮಾಡಿ ದೇವಾಲಯದ ಸೌಂದರ್ಯ ಇಮ್ಮಡಿಗೊಳಿಸಿ ಬೇಟೆ ಹಬ್ಬದಂದು ೨ ಮೊರ ಅಕ್ಕಿ, ತುಪ್ಪ, ಹಣ್ಣು, ಕಾಯಿ, ೨೦೦ ಕಬ್ಬಿಣದಂಟು-ಎಲೆಗಳು, ಮೆಣಸು, ೧೦೦ ಯಾಲಕ್ಕಿ, ಲವಂಗ, ೨೦೦ ಎಲೆ-ಅಡಿಕೆ,  ೪ ತಾಳೆಗರಿಗಳನ್ನು ಹಂಚಲಾಗುತ್ತದೆ. ಮಂಟಪದಲ್ಲಿ ಆ ದಿನ ಕೊಳದ ಹತ್ತಿರ ಬೇಟೆ ಹಬ್ಬ. ಅಮವಾಸ್ಯೆ ಆದ ಮೇಲೆ ಬಂಡಿಹಬ್ಬ ಆಗುತ್ತದೆ. ತೆಲುಗಿನಲ್ಲಿ ಬೇಟೆ ಹಬ್ಬಕ್ಕೆ ‘ಪಾಡಿಯವೆಟ್ರೈ’ ಎಂದು ಕರೆಯುತ್ತಾರೆ. ವಿಜಯನಗರದ ಕೇಂದ್ರವಾದ ಹಂಪೆಯಲ್ಲಿ ಇತರ ಪ್ರದೇಶಗಳಲ್ಲಿ ಬುಡಕಟ್ಟು ಜನರು ಬೇಟೆ ದಿಬ್ಬ, ವೆಂಕಟಗಿರಿಪುರ ಎಂದು ಕರೆದು ಆರಾಧಿಸುತ್ತಾರೆ. ಅಡವಿಂಚೆಂಚರು ೧ ದಿನ ತಿರುಪತಿಯಲ್ಲಿ ನಡೆಸಿದಂತೆ ಬೇಟೆ ಹಬ್ಬವನ್ನು ತಾವು ಆಚರಿಸಿಕೊಂಡು ಬಂದಿರುತ್ತಾರೆ. ಹಂಪೆಯ ಬೇಟೆಕಾರರ ಹೆಬ್ಬಾಗಿಲು ಬಳಿ ತಿರುಪತಿ ಗುಡ್ಡವಿದ್ದು, ಇಲ್ಲಿ ಸಾಂಕೇತಿಕವಾಗಿ ಬೇಟೆ ಹಬ್ಬವನ್ನು ಮಾಡುತ್ತಿದ್ದರಂತೆ. ಕಾಲ ಬದಲಾದಂತೆ ಬೇಟೆ ಹಬ್ಬ ಕಣ್ಮರೆಯಾಗುವ ಬದಲು ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ ಎಂದು ಹೇಳಬಹುದು. ಇಂದು ಯುಗಾದಿ ಅಮವಾಸ್ಯೆ ದಿನ ಕಮಲಾಪುರ ಇತರ ಗ್ರಾಮಗಳ ಬೇಡರು ಆನೆಗೊಂದಿ ರಾಜರ ಅನುಮತಿ ಮೇರೆಗೆ (ಸಮಕ್ಷಮ) ಬೇಟೆಗೆ ಹೋಗುತ್ತಾರೆ . ವಿಜಯನಗರ ಸಾಮ್ರಾಜ್ಯದಲ್ಲಿದ್ದ ಈ ಬೇಟೆ ಹಬ್ಬ ಇಂದು ಯುಗಾದಿ ಹಬ್ಬದೊಂದಿಗೆ ಸೇರಿಕೊಂಡು ಕ್ಷತ್ರಿಯ ಧರ್ಮದ ಜೀವ ಕಳೆ ತರುವುದಾಗಿದೆ ಎಂಬ ಪ್ರಾಶಸ್ತ್ಯವಿದೆ. ಇಂದಿಗೂ ಈ ಪರಿಸರದಲ್ಲಿ ಬ್ಯಾಟಿಮರದ ಆಚರಣೆಯನ್ನು ಮಾಡುತ್ತಾರೆ. ಬೇಟೆಗಾರರ ಉಡುಗೆ ತೊಡುಗೆ ಬದಲಾಗಿವೆ.

ಒಟ್ಟಾರೆ ಹೇಳುವುದಾದರೆ, ವಿಜಯನಗರ ಸಾಮ್ರಾಜ್ಯದಲ್ಲಿ ಬೇಟೆ ಕಾರ್ಯಕ್ರಮವಿತ್ತು ಎಂಬುದು ಪ್ರಮುಖ ಸಂಗತಿ. ಬೇಟೆಯಿಂದ ರಾಜಪ್ರಭುತ್ವಗಳ ಸಮೃದ್ಧತೆ ಆದದ್ದು ಆಕಸ್ಮಿಕ ೩ ರೀತಿಯಲ್ಲಿ ಇದನ್ನು ಗುರುತಿಸಬಹುದು. ಸಾಮ್ರಾಜ್ಯ ಸ್ಥಾಪನೆ, ರಾಜ್ಯಾಳ್ವಿಕೆಯಲ್ಲಿ ಬೇಟೆಗಾರರು ಮತ್ತು ಅರಸರು ನಡೆಸಿದ ಬೇಟೆ ಜೀವನ ಮತ್ತು ಸ್ವಾಭಾವಿಕವಾಗಿ ಬೇಟೆಗಾರರು ಆಹಾರಕ್ಕಾಗಿ ನಡೆಸಿದ ಬೇಟೆ ಜೀವನ. ವಿಜಯನಗರ ಪೂರ್ವದಲ್ಲಿ ಶಬರಿ, ಕಿರಾತರ, ನೆಲೆಯಾದ ಹಂಪೆಯಲ್ಲಿ ಬೇಟೆ ಇದ್ದಿತು.  ಬೇಟೆ ಹಬ್ಬ ಆದ ಬಗ್ಗೆ ವರದಿಗಳಿಲ್ಲ. ಈ ಕಾಲಘಟ್ಟದಲ್ಲಿ ಬಹುಭಾಗದ ಜನರು ಬೇಟೆಯನ್ನು ವಿವಿಧ ಬಗೆಯಲ್ಲಿ ಅವಲಂಬಿಸಿದ್ದರು.  ರಾಜಪ್ರಭುತ್ವದಲ್ಲಿ ಕಾರ್ತಿಕ ಹಬ್ಬದ ನಂತರ ಬೇಟೆ ಹಬ್ಬವಾದರೆ, ವಿಜಯನಗರ ಅವನತಿ ನಂತರ ಯುಗಾದಿ ಅಮವಾಸ್ಯೆಯಂದು ಆಗುತ್ತದೆ. ಅನೇಕ ನಾಯಕ-ಪಾಳೆಯಪಟ್ಟುಗಳು, ಬೇಡರು ಇಂದು ಯುಗಾದಿಯಲ್ಲಿಯೇ ಹಂದಿ ಬೇಟೆಗೆ ಹೋಗುವುದು ಗಮನಾರ್ಹ. ಹಂದಿ ಹುಲುಸು, ಇದರಿಂದ ಅಭಿವೃದ್ಧಿ ಸಂಪತ್ತು ಲಭಿಸುತ್ತದೆಂಬ ಪಾರಂಪರಿಕ ನಂಬಿಕೆಯಿದೆ.

ಅಭ್ಯಸಿಸಿದ ಗ್ರಂಥಗಳು

೧. ಕೊಟ್ರಯ್ಯ ಸಿ.ಟಿ.ಯಂ, ೧೯೯೭, ಹಂಪೆ, ಶ್ರೀ ಶರಣರ ಸುವಾಸಿನಿ ಬಳಗ, ಹೊಸಪೇಟೆ.

೨. ಚನ್ನಬಸಪ್ಪ ಎಸ್‌. ಪಾಟೀಲ್‌, ವಿನೋದಾ ಪಾಟೀಲ್‌(ಸಂ), ೧೯೯೮, ವಿಜಯನಗರ ಹಂಪೆ ಶಾಸನಗಳು.

೩. ಚೆಲುವರಾಜು, ೨೦೦೦, ಹಂಪಿಯ ಸ್ಮಾರಕಗಳಲ್ಲಿ ಜಾನಪದೀಯ ಅಂಶಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,  ಹಂಪಿ.

೪. ನರಸಿಂಹಮೂರ್ತಿ ಎ.ವಿ., ೧೯೯೬, ವಿಜಯನಗರ ನಾಣ್ಯ ಸಂಪತ್ತು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೫. ಪರಮೇಶ್ವರಪ್ಪ.ಟಿ. (ಸಂ), ೧೯೯೭, ಹಂಪಿ ಪರಿಸರ , ಶ್ರೀ ವಿ.ವಿ.ಹಂ.ಹೆ.ಟ್ರಸ್ಟ್‌, ಆನೆಗೊಂದಿ.

೬. ಪರುಷೋತ್ತಮ ಬಿಳಿಮಲೆ ಮತ್ತು ಚೆಲುವರಾಜು, ೧೯೯೬, ಹಂಪಿ ಜಾನಪದ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೭. ರಾಬರ್ಟ್ ಸಿವೆಲ್‌(ಅನು) ಸದಾನಂದ ಕನವಳ್ಳಿ, ೧೯೯೨, ಮರೆತು ಹೋದ ಸಾಮ್ರಾಜ್ಯ ವಿಜಯನಗರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೮. ವಸುಂಧರಾ ಫಿಲಿಯೋಜಾ, ೧೯೯೨, ಅಳಿದುಳಿದ ಹಂಪೆ, ಪ್ರೇಮಸಾಯಿ ಪ್ರಕಾಶನ, ಬೆಂಗಳೂರು.

 

ಆಕರ
ವಿಜಯನಗರ ಅಧ್ಯಯನ , ಸಂ.೯. ೨೦೦೪, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ, ಪು. ೬೧-೬೫.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)